ವಂಶವಾಹಿ ಸಂಸ್ಕಾರ (ಜೀನ್ಸ್)

ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.

ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ. ಇವೆಲ್ಲವೂ ನಮ್ಮ ಹಿರಿಯರಿಂದ ಬಂದ ಬಳುವಳಿ ಎಂದರೂ ತಪ್ಪಾಗಲಾರದು. ತಾತನಿಂದ ಅಪ್ಪಾ ಸಂಗೀತ, ಸಾಹಿತ್ಯ ಮತ್ತು ಗಮಕ ಕಲೆಯನ್ನು ಕಲಿತರೇ, ನನಗೆ ಭಗವದ್ಗೀತೆಯ ಧ್ಯಾನ ಶ್ಲೋಕ ಕಲಿಸಿದ್ದೇ ನಮ್ಮ ತಾತನವರು. ಇನ್ನು ತಾತ ಮತ್ತು ತಂದೆಯವಂತೆ ಗಮಕ ಕಲೆಯ ಪದ್ಯ ಒಲಿಯದಿದ್ದರೂ ಗದ್ಯದ ಬರವಣಿಗೆ ಬಂದಿರುವುದು ತಾತ ಮತ್ತು ಅಪ್ಪನಿಂದಲೇ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ನಾವು ಚಿಕ್ಕವರಿದ್ದಾಗ ಈಗಿನಂತೆ ಟಿವಿ ಇರಲಿಲ್ಲ. ವಿಡೀಯೋ ಗೇಮ್ ಮತ್ತು ಮೊಬೈಲ್ ಗೇಮ್ಗಳ ಕಲ್ಪನೆಯೇ ಇರಲಿಲ್ಲ.

ಸಂಜೆ 6:30 ಕ್ಕೆ ಸರಿಯಾಗಿ ಕೈ ಕಾಲು ಮುಖ ತೊಳೆದುಕೊಂಡು ಹಣೆಗೆ ಕುಂಕುಮ ಇಟ್ಟುಕೊಂಡು ದೇವರ ಮುಂದೆ ಕುಳಿತುಕೊಂಡು ಮಕ್ಕಳೆಲ್ಲರೂ ಬಾಯಿ ಪಾಠ ಒಪ್ಪಿಸಲೇ ಬೇಕಿತ್ತು. ಸಣ್ಣ ಸಣ್ಣ ಶ್ಲೋಕಗಳಿಂದ ಹಿಡಿದು, 1-20ರ ವರೆಗಿನ ಮಗ್ಗಿ, ಎಲ್ಲಾ ವಾರಗಳು, ಮಾಸಗಳು, ನಕ್ಷತ್ರಗಳು, ತಿಥಿ ಹೀಗೆ ಎಲ್ಲವನ್ನೂ ಕಂಠಸ್ಥ ಮಾಡಿಸಿದ್ದರು. ನನಗೆ ಇನ್ನೂ ಚೆನ್ನಾಗಿ ನೆನಪಿರುವಂತೆ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಹೇಳಿದ ನಂತರ ಶುಕ್ರವಾರ, ಶನಿವಾರ ಮತ್ತು ಭಾನುವಾರ ಎಂದು ಹೇಳಿ ಗುರುವಾರವನ್ನೇ ಅದೇಕೋ ಏನೋ ಮರೆತು ಬಿಡುತ್ತಿದ್ದೆ. ನನಗೆ ಗುರುವಾರವನ್ನು ನೆನಪಿಸಲು ಪಕ್ಕದ ಮನೆಯ ಗುರುವನ್ನು ನೆನಪಿಸಿಕೊಳ್ಳೋ, ನಿಮ್ಮ ಶಿಶುವಿಹಾರ ಟೀಚರ್ ನೆನಪಿಸಿಕೊಳ್ಳೋ ಎಂದು ಅದೆಷ್ಟು ಸಾರಿ ತಿದ್ದಿ ತೀಡಿ ಕಡೆಗೂ ಗುರುವಾರವನ್ನು ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಇರುವಂತೆ ಮಾಡುವುದಕ್ಕೆ ನನ್ನ ಅಪ್ಪಾ ಅಮ್ಮಾ ಪಟ್ಟ ಪರಿಶ್ರಮ ಇನ್ನೂ ಹಚ್ಚಹಸಿರಾಗಿಯೇ ಇದೆ.

ನಂತರ ಅಂದಿನ ದಿನದ ಮನೆಪಾಠವನ್ನೆಲ್ಲಾ ಮುಗಿಸಿದ ನಂತರ ರಾತ್ರಿ 9ಕ್ಕೆ ಸರಿಯಾಗಿ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿದ ನಂತರ 9.30ಕ್ಕೆ ಹಾಸಿಗೆ ಹಾಸಿ, ಪ್ರತಿದಿನವೂ ತಪ್ಪದೇ ರಾಮಾಯಣ, ಮಹಾಭಾರತ, ಮತ್ತು ದೇಶಭಕ್ತರ ಕಥೆಗಳನ್ನು ತಂದೆಯವರಿಂದ ಕೇಳಿದ ನನೆಪು ಇನ್ನು ಅಚ್ಚಳಿಯದೇ ಉಳಿದಿದೆ. ಮನುವಿನಿಂದ ರಾಮಾಯಣ ಆರಂಭವಾಗಿ ಲವಕುಶವರೆಗೂ ಮುಗಿಸುವಷ್ಟರಲ್ಲಿ ಐದಾರು ತಿಂಗಳುಗಳಾಗುತ್ತಿತ್ತು ನಂತರ ಶಂತನುವಿನಿಂದ ಆರಂಭವಾಗುವ ಮಹಾಭಾರತ ನಾನಾ ಕಥೆ ಉಪಕಥೆಗಳಿಂದ ಎಂಟು ಹತ್ತು ತಿಂಗಳವರೆಗೂ ಸಾಗುತ್ತಿತ್ತು. ಇದಾದ ನಂತರ ಮತ್ತೆ ರಾಮಾಯಣ ಆರಂಭ ಹೀಗೆ ಅದೆಷ್ಟು ಬಾರಿ ಹೇಳಿದ್ದಾರೋ ಲೆಕ್ಕವೇ ಇಟ್ಟಿರಲಿಲ್ಲ. ಅವರು ಪ್ರತೀ ಬಾರೀ ಹೇಳುವಾಗಲೂ ವಿಭಿನ್ನ ರೀತಿಯಾಗಿ ಕುತೂಹಲಕಾರಿಯಾಗಿ ಹೇಳುತ್ತಿದ್ದದ್ದಲ್ಲದೇ ಅಂದು ಕೇಳಿದ ಕಥೆಯ ಸಾರಾಂಶವನ್ನು ನಾವು ಪುಸ್ತಕವೊಂದರಲ್ಲಿ ಬರೆದಿಡಬೇಕಿತ್ತು. ಮಾರನೇಯ ದಿನ ಹಿಂದಿನ ದಿನದ ಸಾರಾಂಶ ಓದಿಸಿದ ನಂತರವೇ ಕಥೆಯನ್ನು ಮುಂದುವರೆಸುವ ಮೂಲಕ ಆ ಎಲ್ಲಾ ಕಥೆಗಳು ಪುಸ್ತಕದಿಂದ ನಮ್ಮ ಮಸ್ತಕಕ್ಕೆ ಅಚ್ಚಾಗುವಂತೆ ಮಾಡಿದ್ದರು ನಮ್ಮ ತಂದೆಯವರು.

ಇಷ್ಟೆಲ್ಲಾ ಪೀಠಿಕೆ ಏಕೆ ಹೇಳ ಬೇಕಾಯಿತೆಂದರೆ ಮೊನ್ನೆ ನಡೆದ ಸಂಕ್ರಾಂತಿಯಂದು ನಮ್ಮಕಿ ಅವರೇಕಾಯಿ, ಸಿಹಿಗೆಣಸು ಮತ್ತು ಹಸೀ ಕಡಲೇ ಕಾಯಿಯನ್ನು ಬೇಯಿಸಿಟ್ಟಿದ್ದರು. ಬೇಯಿಸಿದ ಗೆಣಸು ಮತ್ತು ಅವರೇ ಕಾಯಿಯನ್ನು ಹಬ್ಬದ ದಿನದಂದೇ ತಿಂದಿದ್ದೆನಾದರೂ ಕಡಲೇಕಾಯಿ ಬಿಡಿಸಿಕೊಂಡು ತಿನ್ನುವ ಪುರುಸೊತ್ತಿರದೇ ಹಾಗೆಯೇ ಸುಮ್ಮನಾಗಿದ್ದೆ. ಪುರುಸೊತ್ತು ಇಲ್ಲಾ ಎನ್ನುವುದಕ್ಕಿಂತಲೂ ಕಡಲೇಕಾಯಿ ಸುಲಿದು ತಿನ್ನಲು ಸೋಮಾರಿತನ ಎಂದರೂ ತಪ್ಪಾಗದು. ಜನವರಿ 15 ರಂದು ಸಂಜೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಬೈಠಕ್ ಮುಗಿಸಿ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಊಟಕ್ಕೆ ಕುಳಿತುಕೊಂಡಾಗ ಒಂದು ಬಟ್ಟಲು ಬೇಯಿಸಿದ ಬಿಡಿಸಿದ ಕಡಲೇ ಕಾಯಿ ಬೀಜಗಳನ್ನು ನನ್ನ ಮುಂದಿಟ್ಟಾಗಾ ನನಗೆ ಸಂತೋಷ ಮತ್ತು ಆಶ್ಚರ್ಯವಾಯಿತು. ಅರೇ!! ನೀನಾ ಇಷ್ಟೋಂದು ಕಡಲೇ ಕಾಯಿಬೀಜವನ್ನು ಸುಲಿದಿದ್ದು? ಎಂದು ಮಡದಿಯನ್ನು ಕೇಳಿದರೇ ಇಲ್ಲಾ, ನಿಮ್ಮಪ್ಪ ಬಿಡಿಸಿಟ್ರೂ ಎಂದಾಗ, ಅರೇ ಇದೇನಿದು ಹೀಗೆ ಬಯ್ತಾ ಇದ್ದಾಳಪ್ಪಾ ಎಂದು ಕೊಂಡೆ. ಕೂಡಲೇ ನನ್ನ ಭಾವನೆಗಳನ್ನು ಅರ್ಧ ಮಾಡಿಕೊಂಡ ನನ್ನಾಕಿ ಅವರ ತಾತನ ತದ್ರೂಪು ನಿಮ್ಮ ಮಗ ನಿಮಗೇ ಅಂತ ಬಿಡಿಸಿ ಇಟ್ಟಿದ್ದಾನೇ ನೋಡಿ ಎಂದಾಗ, ನನಗೇ ಅರಿವಿಲ್ಲದಂತೆಯೇ ಗಂಟಲು ಬಿಗಿಯಾಗಿ ಹೃದಯ ತುಂಬಿ ಹೋಗಿ ಮಾತೇ ಬಾರದಂತಾಯಿತು. ಕೂಡಲೇ ಮಗನಿಗೆ ಧನ್ಯವಾದಗಳನ್ನು ಹೇಳಿದಾಗ ಅವನಿಗೂ ಆಶ್ವರ್ಯ.

ನಿಜ ಹೇಳಬೇಕೆಂದರೆ, ನಮ್ಮನೆಯಲ್ಲಿ ಕಡಲೇಕಾಯಿ ತಂದಾಗ ಅಥವಾ ದೂರ ಪ್ರಯಾಣದ ಸಮಯದ ಮಧ್ಯದಲ್ಲಿ ಕಡಲೇ ಕಾಯಿಯನ್ನು ಕೊಂಡಾಗಲೆಲ್ಲಾ ನಮ್ಮ ತಂದೆಯವರು, ಅತ್ಯಂತ ಜತನದಿಂದ ಕಡಲೇಕಾಯಿಗಳನ್ನು ಬಿಡಿಸಿ, ವಾಹನ ಚಲಾಯಿಸುತ್ತಿದ್ದ ನನಗೇ ಮಗೂ ತಗೊಳ್ಳೋ ಎಂದು ಕೊಡುತ್ತಿದ್ದರು. ಬಹುಶಃ ತಾತನನ್ನೂ ನೋಡಿಯೋ ಇಲ್ಲವೇ ವಂಶವಾಹಿಯಾಗಿಯೋ ಅವರ ಗುಣಗಳು ನನ್ನ ಮಗನಲ್ಲೂ ಹಾಗೆಯೇ ಹರಿದು ಬಂದಿರುವುದಕ್ಕೆ ಹೃದಯಸ್ಪರ್ಶಿ ಪ್ರಸಂಗ ಸಾಕ್ಷಿಯಾಯಿತು.

ಸುಮಾರು ಹದಿನಾಲ್ಕು- ಹದಿನೈದು ವರ್ಷಗಳ ಕಾಲ ತಾತನ ಆರೈಕೆ ಪಡೆಯುವ ಅಪೂರ್ವ ಅವಕಾಶ ನಮ್ಮ ಮಕ್ಕಳಿಗೆ ಒದಗಿ ಬಂದಿದ್ದು ಅವರ ಸುಕೃತವೇ ಸರಿ. ನಮಗೆ ಪುರಾಣ ಕಥೆಗಳನ್ನು ಹೇಳಿದಂತೆಯೇ ಮೂಮ್ಮಕ್ಕಳಿಗೂ ಇಡೀ ರಾಮಾಯಣ ಮತ್ತು ಮಹಾಭಾರತ, ಭಗವದ್ಗೀತೆ ಶ್ಲೋಕಗಳಲ್ಲದೇ ಇನ್ನೂ ಹತ್ತು ಹಲವಾರು ಶ್ಲೋಕಗಳನ್ನು ಧಾರೆ ಎರೆದಿದ್ದಾರೆ. ನಮ್ಮ ಇಬ್ಬರು ಮಕ್ಕಳು ಎಂದಿಗೂ ಸಹಾ ರಾಮಾಯಣ ಮತ್ತು ಮಹಾಭಾರತದ ಯಾವುದೇ ಕಥೆ ಅಥವಾ ಅಲ್ಲಿರುವ ಪಾತ್ರಗಳನ್ನು ಥಟ್ಟನೇ ಹೇಳುತ್ತಾರೆ ಎನ್ನುವ ಹೆಮ್ಮೆ ನಮಗಿದೆ ಮತ್ತು ಅದರ ಸಂಪೂರ್ಣ ಶ್ರೇಯ ಅವರ ಅಜ್ಜಿ ಮತ್ತು ತಾತನವರಿಗೇ ಸಲ್ಲುತ್ತದೆ

ಮಗಳು ಭಾಗಶಃ ಅಜ್ಜಿಯ ಗುಣಗಳನ್ನೇ ಹೋಲುವಂತಿದ್ದರೆ, ಮಗ ಮಾತ್ರಾ ಗುಣ, ನಡವಳಿಕೆ, ಆಲೋಚನೆ ಎಲ್ಲದ್ದರಲ್ಲೂ ತಾತನದ್ದೇ ತದ್ರೂಪು. ಅವರಂತೆಯೇ, ಯಾವುದೇ ವಿಷಯವನ್ನು ಒಮ್ಮೆ ಕೇಳಿದರೆ ಸಾಕು ನೆನಪಿನಲ್ಲಿ ಇಟ್ಟು ಕೊಳ್ಳುವ, ತಂದೆಯವರ ಜೊತೆ ಮೈಸೂರಿನ ಅರಮನೆಯ ಸಂಗೀತ ಕಛೇರಿಯಲ್ಲಿ ಮೋರ್ಚಿಂಗ್ (ಅತ್ಯಂತ ಕ್ಲಿಷ್ಟಕರವಾದ ತಾಳವಾದ್ಯ) ನುಡಿಸುವುದನ್ನು ನೋಡಿ, ಆಕರ್ಷಿತರಾಗಿ ತಾವೇ ಸ್ವತಃ ಮೋರ್ಚಿಂಗ್ ನುಡಿಸುವುದನ್ನು ಕಲಿತಂತೆ ಅವರ ಮೊಮ್ಮಗ ಇಷ್ಟ ಪಟ್ಟು ಕಷ್ಟ ಪಟ್ಟು ಕೀಬೋರ್ಡ್ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ಅವನ ಆಲೋಚನಾ ಲಹರಿಗಳು, ಅವನು ಬೆನ್ನಹಿಂದೆ ಕೈ ಕಟ್ಟಿ ನಡೆಯುವುದು, ಟಿವಿ ನೋಡುವಾಗ. ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವ ಭಂಗಿ, ಸದಾ ಯಾವುದೋ ಹಾಡನ್ನು ಗುನುಗುತ್ತಿರುವುದು ಇಲ್ಲವೇ ತನ್ನಷ್ಟಕ್ಕೆ ತಾನೇ ಸಣ್ಣದಾಗಿ ವಿಸಿಲ್ ಹಾಕುವುದು ಹೀಗೆ ಎಲ್ಲದರಲ್ಲೂ ತಾತನದ್ದೇ ಅನುಕರಣೆ.

ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ತಂದೆ ತಾಯಿಯರು ಇಂದು ನಮ್ಮನ್ನಗಲಿದ್ದರೂ ಅವರನ್ನು ಅವರ ಪ್ರತಿರೂಪಗಳಾದ ಅವರ ಮೊಮ್ಮಗಳು ಮತ್ತು ಮೊಮ್ಮಗನ ರೂಪದಲ್ಲಿ ಕಾಣುತ್ತಿದ್ದೇವೆ. ಮಗಳು ಯಾವುದೋ ಸಣ್ಣ ಕಾರಣಕ್ಕೆ ಸರ್ ಎಂದು ಕೋಪ ಮಾಡಿಕೊಂಡು ಅಷ್ಟೇ ವೇಗದಲ್ಲಿ ಜರ್ ಎಂದು ಕೋಪ ತಣ್ಣಗಾದಾಗ ನಾವು ಅವಳಿಗೆ ಏನನ್ನೂ ಹೇಳದೇ, ಹಾಂ ಗೊತ್ತಾಯ್ತು, ಉಮಾಜ್ಜಿ ಮೈ ಮೇಲೆ ಬಂದು ಹೊದ್ರೂ ಅಂತಾ ರೇಗಿಸುತ್ತೇವೆ. ಅದೇ ರೀತಿ ನಮ್ಮ ಕೋಣೆಯಲ್ಲಿ ನಾನೂ ಮತ್ತು ನಮ್ಮಾಕಿ ಯಾವುದೋ ಗಹನವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದರೆ, ದೂರದ ತಾತನ ಕೋಣೆಯಲ್ಲಿಯೇ ಕುಳಿತುಕೊಂಡು ಅಲ್ಲಿಂದಲೇ ಇದ್ದಕ್ಕಿದ್ದಂತೆಯೇ ನಾವು ಮಾತನಾಡುತ್ತಿರುವ ವಿಷಯಕ್ಕೆ ತನ್ನ ಅಭಿಪ್ರಾಯವನ್ನು ಅಲ್ಲಿಂದಲೇ ತಿಳಿಸಿದಾಗ ಸಾಕು ಸಾಕು ಶಿವಮೂರ್ತಿಗಳೇ, ನೀವು ನಿಮ್ಮ ಪಾಡಿಗೆ ಓದಿಕೊಳ್ಳಿ ಎಂದು ಪ್ರೀತಿಯಿಂದ ಕಿಚಾಯಿಸುವುದೂ ಉಂಟು.

ಅದಕ್ಕೇ ಹೇಳೋದು ಒಂದು ಕುಟುಂಬ ಎಂದರೆ ಅದರಲ್ಲಿ ಕೇವಲ ಗಂಡ ಹೆಂಡತಿ ಮತ್ತು ಮಕ್ಕಳಲ್ಲದೇ, ಆ ಕುಟುಂಬದಲ್ಲಿ ಹಿರಿಯರೂ ಇದ್ದಲ್ಲಿ ನಿಜ ರೂಪದಲ್ಲಿ ಮನೆಯೇ ಮೊದಲ ಪಾಠ ಶಾಲೆಯಾಗಿ ಮಕ್ಕಳಿಗೆ ನಮ್ಮ ಸಂಪ್ರದಾಯ ಮತ್ತು ಸಂಸ್ಕಾರಗಳು ರೂಢಿಯಾಗುತ್ತದೆ. ತಂದೆ ತಾಯಿಯರಿಬ್ಬರೂ ಕೆಲಸಕ್ಕೆ ಹೋಗುವವರಾದರೆ ದಯವಿಟ್ಟು ಮಕ್ಕಳನ್ನು Day care or Play homeಗಳಿಗೆ ಸೇರಿಸಿ ಆಯಾಗಳ ಕೈಯ್ಯಲ್ಲಿ ನಮ್ಮ ಮಕ್ಕಳನ್ನು ಬೆಳಸದೇ, ನಮ್ಮದೇ ಕುಟುಂಬದ ಹಿರಿಯರ ಅಕ್ಕರೆಯಲ್ಲಿ ಬೆಳೆಯುವಂತಾದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪರೋಕ್ಷವಾಗಿ ಹೇಳಿಕೊಟ್ಟಂತಾಗುತ್ತದೆ. ಅದಕ್ಕೇ ಅಲ್ಲವೇ ನಮ್ಮ ಪೂರ್ವಜರು ಹೇಳುತ್ತಿದ್ದದ್ದು ವಂಶ ನೋಡಿ ಸಂಬಂಧ ಬೆಳೆಸು ಎಂದು.

ಏನಂತೀರೀ?
ನಿಮ್ಮವನೇ ಉಮಾಸುತ

ಜ್ಞಾನಚೂರ್ಣ ನಶ್ಯ

ಬಹುಶಃ ಇಂದಿನ ಕಾಲದಲ್ಲಿ ಯಾವುದೇ ಚಟವಿಲ್ಲದವರು ಸಿಗುವುದೇ ಅಪರೂಪ ಎಂದರೂ ತಪ್ಪಾಗಲಾರದೇನೋ?. ಇಂದಿನ ಬಹುತೇಕ ಹುಡುಗರು ಕಾಲೇಜು ಮೆಟ್ಟಿಲು ಹತ್ತುವುದರೊಳಗೇ ಬೀಡಿ ಇಲ್ಲವೇ ಸಿಗರೇಟ್ ಈ ರೀತಿ ಯಾವುದಾದರೂಂದು ತಂಬಾಕಿನ ಉತ್ಪನ್ನಕ್ಕೆ ದಾಸರಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರ ಸಂಗತಿ. ಆದರೆ ಇವೆರೆಡರ ಹೊರತಾಗಿಯೂ ತಂಬಾಕಿನಿಂದ ತಯಾರಾದ ಹೊಗೆರಹಿತ ಸಣ್ಣದಾಗಿ ನಶೆ ಏರಿಸುವ ವಸ್ತುವೇ ನಶ್ಯ ಇಲ್ಲವೇ ನಸ್ಯ ಎಂದೂ ಕರೆಯುತ್ತಾರೆ.. ಇಂತಹ ನಶ್ಯದ ಕುರಿತಾದ ಕೆಲವು ಮೋಜಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನನಗೆ ತಿಳಿದಂತೆ, ನಶ್ಯಕ್ಕೂ ನಮ್ಮ ಕುಟುಂಬಕ್ಕೂ ಸುಮಾರು ಒಂದು ಶತಮಾನಗಳ ನಂಟು. 1900-1983ರ ವರೆಗಿದ್ದ ನಮ್ಮ ತಾತ ಮತ್ತು 1937-2017ರ ವರೆಗೆ ಇದ್ದ ನಮ್ಮ ತಂದೆಯವರು ನಶ್ಯ ಹಾಕುತ್ತಿದ್ದ ಕಾರಣ ನಮ್ಮ ಇಡೀ ಕುಟುಂಬದವರಿಗೆ ನಶ್ಯ ಒಂದು ರೀತಿಯ ಕಾಫೀ ಪುಡಿ ಇದ್ದ ಹಾಗಿತ್ತು. ನಾವೆಲ್ಲರೂ ಚಿಕ್ಕವರಿದ್ದಾಗ ಪ್ರತೀ ಬಾರಿ ನಮ್ಮೂರಿಗೆ ಹೋಗುವಾಗಲೂ ಅಜ್ಜಿಯವರಿಗೆ ಹೇಗೆ ಒಂದು ಕೆಜಿ ಕಾಫೀ ಪುಡಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆವೆಯೋ ಹಾಗೆಯೇ ನಮ್ಮ ತಾತನವರಿಗೆ ಕಾಲು ಕೆಜಿ ಕೊಡೇ ಮಾರ್ಕ್ ನಶ್ಯ ತೆಗೆದುಕೊಂಡು ಹೋಗಲೇ ಬೇಕೆಂಬ ಅಲಿಖಿತ ನಿಯಮ ನಮ್ಮ ಕುಟುಂಬದಲ್ಲಿತ್ತು. ಬೆಂಗಳೂರಿನಿಂದ ಯಾರೇ ಊರಿಗೆ ಹೋದ ಕೂಡಲೇ ನಶ್ಯ ತಂದ್ಯಾ? ಅಂತಾ ಕೇಳುತ್ತಿದ್ದ ನಮ್ಮ ತಾತನವರಿಗೆ ಅಯ್ಯೋ, ಮರ್ತೇ ಹೋಯ್ತು ಅಂತಂದ್ರೇ ಸಾಕು. ಛೇ.. ಛೇ.. ಛೇ.. ಇಷ್ಟು ಚಿಕ್ಕವಯಸ್ಸಿಗೇ ಅದೆಂತಾ ಮರೆವೋ ನಿಮಗೆಲ್ಲಾ ಅಂತಾ ಬೇಸರಿಸಿಕೊಂಡು ಬಾಲ ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದವರಿಗೆ ಮೆಲ್ಲಗೇ ತೆಗೋಳ್ಳಿ ನಶ್ಯ ಎಂದು ಕಾಲು ಕೆಜಿ ಡಬ್ಬಿ ಕೈಗಿಟ್ಟೊಡನೆಯೇ ನಿಧಿ ಸಿಕ್ಕಂತಹ ಅನುಭವ ನಮ್ಮ ತಾತನವರದಾಗಿರುತ್ತಿತ್ತು. ಅಂದು ಸಂಜೆ ಮನೆಯ ಜಗಲಿಯ ಮೇಲೆ ಕುಳಿತು ಅವರ ಸಹ ವಯಸ್ಕರೊಡನೆ ಫ್ರೆಷ್ ನಶ್ಯದ ನಶೆ ಏರಿಸಿಕೊಂಡು ಸಂಭ್ರಮಿಸುತ್ತಿದ್ದ ಪರಿ ನಿಜಕ್ಕೂ ವರ್ಣಿಸಲಸದಳ.

ಇನ್ನು ಬೆಂಗಳೂರಿನ ಮಲ್ಲೇಶ್ವರ, ಚಿಕ್ಕ ಪೇಟೆ, ಇಲ್ಲವೇ ಸಿಟಿ ಮಾರ್ಕೆಟ್ ಇಲ್ಲವೇ ಮೈಸೂರಿನ ದೇವರಾಜ ಮಾರ್ಕೆಟ್ ಕಡೆಗೆ ನಾನಾಗಲೀ, ನಮ್ಮ ಚಿಕ್ಕಪ್ಪನವರಾಗಲೀ ಇಲ್ಲವೇ ನಮ್ಮ ತಂಗಿ-ಭಾವಂದಿರು ಹೋಗಿರುವ ಸುದ್ದಿ ನಮ್ಮ ತಂದೆಯವರಿಗೆ ಗೊತ್ತಾಗುತ್ತಿದ್ದಂತೆಯೇ, ನಶ್ಯಾ ತಂದ್ರಾ? ಅಂತ ಅವರ ತಂದೆಯವರಂತೆಯೇ ಕೇಳುತ್ತಿದ್ದರು. ಅಪ್ಪಿ ತಪ್ಪಿ ಅಯ್ಯೋ ಮರ್ತು ಹೋಯ್ತು ಅಂತಾನೋ ಇಲ್ಲಾ ಪುರುಸೊತ್ತೇ ಆಗ್ಲಿಲ್ಲ ಅಂತಾನೋ ಹೇಳಿದ್ರೇ ಸಾಕು. ಥೇಟ್ ನಮ್ಮ ತಾತನ ತರಹಾನೇ ಬೇಸರ ಮಾಡಿಕೊಂಡಿರುವಾಗ ಅವರ ಕೈಯಲ್ಲಿ 100 ಗ್ರಾಂ ಕೊಡೇ ಮಾರ್ಕ್ (70 Strong + 30 lite) ನಶ್ಯ ಕೈಗೆ ಕೊಟ್ಟಾಕ್ಷಣವೇ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಷ್ಟು ಸಂತೋಷ ಪಡುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಇನ್ನು ನಾವೆಲ್ಲಾ ಚಿಕ್ಕವರಿದ್ದಾಗಾ, ಬಿದ್ದು ಗಾಯ ಮಾಡಿಕೊಂಡು ರಕ್ತ ಸೋರಿಸಿಕೊಂಡು ಬಂದರೆ ನಶ್ಯವೇ ನಮಗೆಲ್ಲಾ ದಿವ್ಯೌಷಧ. ಆರಂಭದಲ್ಲಿ ಉರಿ ಹತ್ತಿದರೂ, ರಕ್ತಸ್ರಾವ ಕೂಡಲೇ ‌ನಿಂತು ಹೋಗಿ ಕೆಲವೇ ದಿನಗಳಲ್ಲಿ ಗಾಯ‌ ವಾಸಿಯಾಗುತ್ತಿತ್ತು.

ಇನ್ನು ಶಾಲಾ ಶಿಕ್ಷಕರಾಗಿದ್ದ ನಮ್ಮ ಅಮ್ಮನ ಸೋದರಮಾವ ರಾಮ ಅವರೂ ಕೂಡಾ ನಶ್ಯ ಹಾಕುತ್ತಿದ್ದರಂತೆ. ವಾರಾಂತ್ಯದಲ್ಲಿ ನಮ್ಮ ಅಜ್ಜಿ (ಅವರ ಅಕ್ಕ) ಮನೆಗೆ ಬಂದಾಗ, ಅವರ ಪ್ರೀತಿಯ ಸೋದರ ಸೊಸೆ ನಮ್ಮ ತಾಯಿಯವರಿಗೆ ಅವರಿಗಿಷ್ಟವಾದ ಸಿಹಿ ತಿಂಡಿಯನ್ನೆಲ್ಲವನ್ನೂ ತಂದು ಕೊಟ್ಟು ಸ್ವಲ್ಪ ಸಮಯದ ನಂತರ ಅವರ ನಶ್ಯದ ಕರ್ಚೀಫ್ ಕೊಟ್ಟು, ಮಣಿಯಾ ಸ್ವಲ್ಪ ಈ ಕರ್ಚೀಫ್ ಒಗೆದು ಹರವು ಹಾಕಿ ಬಿಡೋ, ನಾಳೆ ಊರಿಗೆ ಹೋಗುವಷ್ಟರಲ್ಲಿ ಒಣಗಿ ಬಿಡುತ್ತದೆ ಎನ್ನುತ್ತಿದ್ದರಂತೆ. ಅವರು ತಂದು ಕೊಟ್ಟ ಸಿಹಿ ತಿಂಡಿಗಳನ್ನು ತಿನ್ನುವುದರಲ್ಲಿ ಮಗ್ನರಾಗಿರುತ್ತಿದ್ದ ಸಣ್ಣ ವಯಸ್ಸಿನ ನಮ್ಮಮ್ಮ, ಛೀ.. ನಾನು ಒಗೆಯೋದಿಲ್ಲಪ್ಪಾ.. ಅಸಹ್ಯ ಆಗುತ್ತದೆ ಎನ್ನುತ್ತಿದ್ದರಂತೆ. ಅದಾದ ನಂತರ ಬಲವಂತದಿಂದ ಆ ಕರ್ಚೀಫನ್ನು ಕೈಯ್ಯಿಂದ ತಿಕ್ಕದೇ ಕಾಲಿನಿಂದ ಓಗೆಯುತ್ತಿದ್ದನ್ನು ಗಮನಿಸಿದ ನಮ್ಮಮ್ಮನ ರಾಮ ಮಾವಾ, ಮಣಿಯಾ.. ನಾನು ಬದುಕಿದ್ರೇ, ನಿನಗೆ ನಶ್ಯ ಹಾಕೋ ಗಂಡನನ್ನೇ ಹುಡುಕ್ತೀನಿ ನೋಡು ಎಂದು ಹಾಸ್ಯ ಮಾಡುತ್ತಿದ್ದರಂತೆ. ದುರಾದೃಷ್ಟವಶಾತ್ ನಮ್ಮ ಅಮ್ಮನ ಮದುವೆಯಾಗುವಷ್ಟರಲ್ಲಿ ಅವರ ಮುದ್ದಿನ ಸೋದರ ಮಾವ ಬದುಕಿಲ್ಲದಿದ್ದರೂ, ಕಾಕತಾಳೀಯವೋ ಎನ್ನುವಂತೆ, ರಾಮ ಮಾವನ ಆಸೆಯಂತೆಯೇ ನಮ್ಮಮ್ಮನಿಗೆ ನಶ್ಯ ಹಾಕುವ ಗಂಡ ಮತ್ತು ಮಾವನವರೇ ಸಿಕ್ಕಿದ್ದನ್ನು ಅದೆಷ್ಟೋ ಬಾರಿ ಅಮ್ಮ ನಮ್ಮೊಂದಿಗೆ ಹೇಳುತ್ತಿದ್ದಿದ್ದಲ್ಲದೇ, ಇಂತಹ ಪರಿಪಾಟಲು ನನ್ನ ಸೊಸೆಗೆ ಬಾರದಿರಲಿ ಎಂದು ನನ್ನನ್ನು ನೋಡಿ ಎಚ್ಚರಿಸುತ್ತಿದ್ದರು. ಅಮ್ಮ ಮದುವೆಯಾದ ಹೊಸದರಲ್ಲಿ ಮನೆಯ ಕೆಲಸದವಳು ನಮ್ಮ ತಂದೆಯವರ ನಶ್ಯದ ಕರ್ಚೀಫನ್ನು ಅಸಹ್ಯದಿಂದ ಕಾಲಿನಿಂದ ಒಗೆಯುತ್ತಿದ್ದನ್ನು ಗಮನಿಸಿದ ನಮ್ಮಮ್ಮ ಕೂಡಲೇ ಅವಳನ್ನು ಕೆಲಸದಿಂದ ಬಿಡಿಸಿದ್ದಲ್ಲದೇ, ಅಮ್ಮಾ ಸಾಯುವ ವರೆಗೂ ನಮ್ಮ ತಂದೆಯವರ ನಶ್ಯದ ಕರ್ಚೀಫ್ ಅನ್ನು ಅವರೇ ಒಗೆಯುತ್ತಿದ್ದರು. ಅಮ್ಮಾ ಹೋದ ನಂತರ ಸಾಯುವ ದಿನದ ವರೆಗೂ ನಮ್ಮ ತಂದೆಯವರೇ ಖುದ್ದಾಗಿ ಅವರ ನಶ್ಯದ ಕರ್ಚೀಫ್ ಒಗೆದುಕೊಳ್ಳುತ್ತಿದ್ದರು.

ನಮ್ಮ ತಂದೆ ಮತ್ತು ನಮ್ಮ ತಾತ ಇಬ್ಬರೂ ಸಹಾ ನಶ್ಯ ಮೂಗಿಗೆ ಏರಿಸುವಾಗ ತಮ್ಮ ಶರ್ಟ್ ಮೇಲೆ ಚೆಲ್ಲಿಕೊಂಡಿದ್ದ ನಶ್ಯವನ್ನು ಹಾಗೆಯೇ ಒರೆಸಿಕೊಳ್ಳುತ್ತಿದ್ದರಿಂದ ಆವರ ಬಟ್ಟೆಗಳೆಲ್ಲಾ ನಶ್ಯದ ವಾಸನೆಯಾಗಿರುತ್ತಿತ್ತು. ಅದೊಮ್ಮೆ ನವೆಂಬರ್ ಚಳಿಗಾಲ. ಅಮ್ಮಾ ಒಗೆದು ಹಾಕಿದ್ದ ನನ್ನ ಸ್ವೆಟರ್ ಇನ್ನೂ ಒಣಗಿರಲಿಲ್ಲ. ಕಾಲೇಜಿಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದ ಕಾರಣ ‍ಚಳಿ ಎಂದು ಬೇಡ ಬೇಡ ಎಂದರೂ ಅಪ್ಪನ ಸ್ವೆಟರ್ ಹಾಕಿಕೊಂಡು ಹೋಗಲು ಅಮ್ಮಾ ಒತ್ತಾಯ ಪಡಿಸಿದ ಕಾರಣ, ವಿಧಿ ಇಲ್ಲದೇ ಅಪ್ಪನ ಸ್ವೆಟರ್ ಹಾಕಿಕೊಂಡು ಕಾಲೇಜಿಗೆ ಹೋದೆ. ನಮಗೆಲ್ಲಾ ನಶ್ಯದ ವಾಸನೆ ಅಭ್ಯಾಸವಾಗಿದ್ದ ಕಾರಣ ನನಗೇನೂ ಅನ್ನಿಸುತ್ತಿರಲಿಲ್ಲ. ಆದರೇ ನನ್ನ ಸ್ನೇಹಿತರಿಗೆಲ್ಲಾ ನಶ್ಯದ ಘಮಲು ಅವರ ಮೂಗಿಗೆ ಬಡಿದು, ಇದೇನಿದು ಹೊಗೇಸೊಪ್ಪಿನ ವಾಸನೇ? ಎಂದರೆ ಮತ್ತೊಬ್ಬ ಇದು ನಶ್ಯದ ವಾಸನೆ ಹಾಗೆ ಬರುತ್ತಿದೆಯಲ್ಲಾ? ಎಂದಾಗ ನನಗೇನೂ ಗೊತ್ತಿಲ್ಲದ ಹಾಗೆ ಸುಮ್ಮನಿದ್ದು ಸ್ವಲ್ಪ ಸಮಯದ ನಂತರ ಛಳಿಯನ್ನೂ ಲೆಕ್ಕಿಸದೇ, ಸದ್ದಿಲ್ಲದೇ ಸ್ವೆಟರ್ ತೆಗೆದು ಬ್ಯಾಗಿನಲ್ಲಿ ಇಟ್ಟುಕೊಂಡು ಮನೆಗೆ ಬಂದು ಅಮ್ಮನೊಂದಿಗೆ ನಡೆದ ವಿಷಯವನ್ನೆಲ್ಲಾ ಹೇಳಿ ಅಮ್ಮನ ಮೇಲೆ ರೇಗಾಡಿದ್ದೆ.

ಇನ್ನು ನಮ್ಮ ಮನೆಗೆ ಅಡುಗೆಗೆಂದು ಬರುತ್ತಿದ್ದ ನಾಗರಾಜ್ ಆವರಿಗೂ ನಶ್ಯದ ಆಭ್ಯಾಸ. ಅವರ ಮದುವೆ ದೂರದ ವಿದುರಾಶ್ವಥದಲ್ಲಿ ನಡೆದಾಗ ಮದುವೆಗೆಂದು ಹೋಗಿದ್ದ ಐದಾರು ಜನರ ಬಳಿ ನಶ್ಯದ ಡಬ್ಬಿಯನ್ನು ಕೊಟ್ಟಿಟ್ಟು, ನಮ್ಮನ್ನು ನೋಡಿದ ತಕ್ಷಣವೇ, ಸದ್ದಿಲ್ಲದೇ ಅವರಿಗೆ ನಶ್ಯ ಕೊಟ್ಟಿದ್ದನ್ನು ನೆನಸಿಕೊಂಡರೇ ಇನ್ನೂ ನಗು ಬರುತ್ತದೆ.

ನಮ್ಮ ಭಾವನವರ ತಾತ ತೊಂಭತ್ತು ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದಾಗ ಮೂಗಿನಲ್ಲಿ‌ ನಶ್ಯ ಏರಿಸಿಕೊಳ್ಳಲು ಅಶಕ್ತರಾದಗಲೂ ಚಿಟುಕಿ ನಶ್ಯವನ್ನು‌ಬಾಯಿಗೆ ಹಾಕಿಕೊಳ್ಳುವಷ್ಟರ ಮಟ್ಟಿಗೆ ಚಟ ಬೆಳೆಸಿಕೊಂಡಿದ್ದರು.

ಅದೇ ರೀತಿ ನನ್ನ ಆಪ್ತ ಸ್ನೇಹಿತನ ತಾಯಿಯವರಿಗೂ ನಶ್ಯ ಸೇವಿಸುವ ಚಟ ಇದ್ದ ಕಾರಣ, ಅವರ ಮನೆಗೆ ಹೋಗುವಾಗ ಹೂವು ಹಣ್ಣು ತೆಗೆದುಕೊಂಡು ಹೋಗುವುದರ ಜೊತೆಗೆ ನಶ್ಯವನ್ನೂ ತೆಗೆದುಕೊಂಡು ಹೋಗುವ ರೂಢಿಯನ್ನು ಮಾಡಿಕೊಂಡಿದ್ದು ವಿಪರ್ಯಾಸ.

ನಮ್ಮ ತಂದೆಯವರು ಬಿ.ಇ.ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯೊಳಗೇ ಬೀಡೀ ಸಿಗರೇಟ್ ತೆಗೆದುಕೊಂಡು ಹೋಗುವುದು ನಿಷಿಧ್ಧವಾಗಿದ್ದರೂ ನಶ್ಯ ತೆಗೆದುಕೊಂಡು ಹೋಗಲು ಯಾವುದೇ ನಿರ್ಭಂಧವಿರಲಿಲ್ಲ. ಅದಕ್ಕೇ ನಮ್ಮ ತಂದೆ ಯಾವಾಗಲೂ ಹಾಸ್ಯವಾಗಿ ನೋಡು ಈ ಜ್ಞಾನಚೂರ್ಣಕ್ಕೆ ಎಷ್ಟೊಂದು ರಾಜ ಮರ್ಯಾದೆ. ಯಾರೂ ಕೂಡಾ ಇದನ್ನು ತಡೆಯಲಾರರು. ರಾಜರ ವಿದ್ವತ್ ಸಭೆಯಲ್ಲೂ ನಿರಾಯಾಸವಾಗಿ ನಶ್ಯವನ್ನು ಮೂಗಿಗೆ ಏರಿಸಿಕೊಳ್ಳಬಹುದು ಎಂದು ಹೇಳುತ್ತಿದ್ದರು. ತಾವೂ ನಶ್ಯ ಹಾಕುತ್ತಿದ್ದದ್ದಲ್ಲದೇ ಅವರ ಸಹೋದ್ಯೋಗಿಗಳಿಗೂ ನಶ್ಯದ ದುರಾಭ್ಯಾಸ ಮಾಡಿಸಿದ್ದರು. ಆದರೆ ಅವರ್ಯಾರು ನಮ್ಮ ತಂದೆಯಂತೆ ನಶ್ಯದ ಡಬ್ಬಿಯನ್ನು ಇಟ್ಟುಕೊಳ್ಳದೇ, ಕೇವಲ ನಮ್ಮ ತಂದೆಯವರನ್ನು ಕಂಡಾಕ್ಷಣವೇ ಅವರಿಗೆ ನಶ್ಯ ಹಾಕುವ ಖಯಾಲು ಬರುತ್ತಿತ್ತು. ಅಣ್ಣಾ ಕೋತಿ ತಾನು ಕೆಡುವುದಲ್ಲದೇ, ಇಡೀ ವನವನ್ನೆಲ್ಲಾ ಕೆಡಿಸಿತು ಎನ್ನುವಂತೆ ನೀವೂ ನಶ್ಯ ಹಾಕುವುದಲ್ಲದೇ, ನಿಮ್ಮ ಸ್ನೇಹಿತರಿಗೂ ನಶ್ಯ ದಾನ ಮಾಡಿ ಅವರನ್ನೇಕೆ ಕೆಡುಸುತ್ತೀರೀ? ಎಂದರೆ, ನೋಡು ಮಗು ಬೇರೆ ಎಲ್ಲಾ ವಸ್ತುಗಳನ್ನು ಕೊಡುವಾಗ ದಾನ ಕೊಡುವವರ ಕೈ ಮೇಲಿದ್ದರೆ, ದಾನ ತೆಗೆದುಕೊಳ್ಳುವವರ ಕೈ ಕೆಳಗಿರುತ್ತದೆ. ಆದರೆ ನಶ್ಯ ಕೊಡುವಾಗ ಮಾತ್ರಾ ತದ್ವಿರುದ್ಧವಾಗಿ ನಶ್ಯ ಕೊಡುವವರ ಕೈ ಕೆಳಗಿದ್ದರೆ, ನಶ್ಯ ತೆಗೆದುಕೊಳ್ಳುವವರ ಕೈ ಮೇಲಿರುತ್ತದೆ ಎಂದು ಹೇಳುತ್ತಾ ಈ ಶ್ಲೋಕದ ಉದಾಹರಣೆ ನೀಡುತ್ತಿದ್ದರು.

ನಸ್ಯದಾನಂ ಮಹಾದಾನಂ, ಅನ್ನ ದಾನಂ ಚ ಮಧ್ಯಮಂ|
ಅಧಮಂ ವಸ್ತ್ರದಾನಂಚ, ಕನ್ಯಾದಾನಂಚ ನಿಷ್ಪಲಂ||

ಇಬ್ಬರು ನಶ್ಯ ಹಾಕುವವರು ಎದುರು ಬದಿರಾದಾಗ ಬಲಗೈನಲ್ಲಿ ಹಸ್ತಲಾಘವ ಮಾಡಿದರೇ ಅವರಿಗೇ ಅರಿವಿಲ್ಲದಂತೆ ಅವರ ಎಡಗೈಯಲ್ಲಿರುವ ನಶ್ಯದ ಡಬ್ಬಿ ಪರಸ್ಪರ ವಿನಿಮಯವಾಗಿ ಒಂದು ಬಾರಿ ನಶ್ಯ ಏರಿಸಿಯೇ ಅವರ ನಡುವಿನ ಸಂಭಾಷಣೆ ಆರಂಭವಾಗುವುದು ಸೋಜಿಗವೆನಿಸುತ್ತದೆ.

ನಮ್ಮ ತಂದೆಯವರ ಅಪ್ತ ಸ್ನೇಹಿತರಾದ ಶೇಷಗಿರಿ ಅವರು ನಮ್ಮ ತಂದೆಯವರಿಗೆಂದೇ surgical steel ನಿಂದ ಲೇಥ್ ಮಿಷಿನ್ನಿನಲ್ಲಿ ವಿಶೇಷವಾಗಿ ಮಾಡಿಸಿದ ಎರಡು ನಶ್ಯದ ಡಬ್ಬಿಯನ್ನು ಉಡುಗೊರೆಯನ್ನಾಗಿ ನೀಡಿದ್ದರು. ಹಾಗಾಗಿ ಆ ನಶ್ಯದ ಡಬ್ಬಿ ಕರ್ಣನ ವಜ್ರ ಕವಚದಂತೆ 24 ಗಂಟೆಯೂ ದೇಹದ ಅವಿಭಾಜ್ಯ ಅಂಗವಾಗಿ ನಮ್ಮ ತಂದೆಯವರ ಜೊತೆಯಲ್ಲಿಯೇ ಸದಾಕಾಲವೂ ಇರುತ್ತಿತ್ತು. ಸಣ್ಣ ವಯಸ್ಸಿನಲ್ಲಿ ನನ್ನ ಮಗ ತಾತನನ್ನು ಆಟವಾಡಿಸ ಬೇಕಾದರೆ ಆಥವಾ ತಾತನಿಂದ ಏನಾದರೂ ಪಡೆದು ಕೊಳ್ಳಬೇಕಾದರೇ ಸದ್ದಿಲ್ಲದೇ ನಶ್ಯದ ಡಭ್ಭಿಯನ್ನು ಮುಚ್ಚಿಟ್ಟು ಬಿಡುತ್ತಿದ್ದ. ಲೋ. ಲೋ.. ಮಗೂ ನಶ್ಯದ ಡಬ್ಬಿ ಕೊಡೋ.. ನನಗೆ ಗೊತ್ತು ನೀನೇ ಎಲ್ಲೋ ಮುಚ್ಚಿಟ್ಟಿದ್ದೀಯಾ ಎಂದು ಗೋಪಿಕಾ ಸ್ತ್ರೀಯರು ದೈನೇಸಿಯಾಗಿ ತಮ್ಮ ಬಟ್ಟೆಯನ್ನು ಕೇಳುತ್ತಿರುವಂತೆ ಇದ್ದರೇ, ಇನ್ನು ತನಗೇನೂ ಸಂಬಂಧವೇ ಇಲ್ಲದಂತೇ ಇರುತ್ತಿದ್ದ ಕೃಷ್ಣನಂತೇ ನನ್ನ ಮಗ ಇರುತ್ತಿದ್ದದ್ದು ಈಗಲೂ ನೆನಪಾಗುತ್ತದೆ.

ಕೆಲ ವರ್ಷದ ಹಿಂದೆ ಅಪ್ಪನನ್ನೂ ಕರೆದುಕೊಂಡು ಕುಟುಂಬ ಸಮೇತ ಸಿಂಗಾಪೂರ್ ಮತ್ತು ಮಲೇಷ್ಯಾಗೆ ಎರಡು ವಾರಗಳ ಕಾಲ ಪ್ರವಾಸಕ್ಕೆ ಹೋಗಿದ್ದೆವು. ಎರಡು ವಾರಗಳಿಗಾಗುವಷ್ಟು ನಶ್ಯವನ್ನು ಎರಡು ಬ್ಯಾಗಿನಲ್ಲಿ ತೆಗೆದುಕೊಂಡು ಬಂದಿದ್ದರು. ಅಪ್ಪ. ಸಿಂಗಾಪೂರಿನಲ್ಲಿ Snow Worldಗೆ ಹೋಗಿದ್ದಾಗ ಅಲ್ಲಿ ಎಲ್ಲರೂ ಛಳಿಯನ್ನು ತಡೆಯುವಂತಹ ಕೋಟು ಕೈಗವಸು ಮತ್ತು ಮಂಜುಗಡ್ಡೆಯ ಮೇಲೆ ನಡೆಯಬಹುದಾದಂತಹ ಬೂಟುಗಳನ್ನು ಖಡ್ಡಾಯವಾಗಿ ಧರಿಸಲೇ ಬೇಕಿತ್ತು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ನಾವೆಲ್ಲರೂ ಚೆನ್ನಾಗಿ ಆಟವಾಡಿ ಸಂತೋಷದಿಂದ ಹೊರಬಂದು ಕೋಟು ಸೂಟುಗಳನ್ನೆಲ್ಲಾ ಬಿಚ್ಚಿಕೊಟ್ಟು ಅಲ್ಲಿಯೇ ಇದ್ದ ಕಾಫೀ ಬಾರಿನಲ್ಲಿ ಬಿಸಿ ಬಿಸಿ ಕಾಫೀ ಹೀರುತ್ತಿದ್ದಾಗ ತಂದೆಯವರಿಗೆ ಇದ್ದಕ್ಕಿದ್ದಂತಯೇ ತಮ್ಮ ನಶ್ಯದ ದಬ್ಬಿಯ ನೆನಪಾಗಿ ಚೆಡ್ಡಿಯ ಜೋಬು, ಶರ್ಟಿನ ಜೋಬನ್ನೆಲ್ಲಾ ತಡಕಾಡುತ್ತಿರುವಾಗ ನಶ್ಯದ ಡಬ್ಬಿಯನ್ನು ತಾವು ಹಾಕಿಕೊಂಡಿದ್ದ ಕೋಟಿನಲ್ಲಿ ಬಿಟ್ಟಿರುವ ನೆನಪಾಗಿದೆ. ತಿರುಪತಿಯಲ್ಲಿ ಗುಂಡು ಹೊಡೆಸಿಕೊಂಡವರನ್ನು ಹುಡುಕುವಂತೆ ಅಲ್ಲಿದ್ದ ನೂರಾರು ಕೋಟುಗಳನ್ನು ಒಂದೊಂದಾಗಿ ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ತಡಕಾಡಿದ ನಂತರ ನಶ್ಯದ ಡಬ್ಬಿ ಸಿಕ್ಕಾಗ ಅವರ ಮುಖದಲ್ಲಿ ಕಂಡ ನಗು ಇನ್ನೂ ಮರೆಯಲೇ ಆಗುತ್ತಿಲ್ಲ. ಕಡೆಗೆ ಅಲ್ಲಿದ್ದವರಿಗೆಲ್ಲಾ ಚೂರು ಚೂರು ನಶ್ಯದ ಘಮಲನ್ನು ಹತ್ತಿಸಿ ಅವರೆಲ್ಲರಿಗೂ ಸೀನು ಬರಿಸಿ ಬರುವಷ್ಟರಲ್ಲಿ ಸುಮಾರು ಅರ್ಧ ಮುಕ್ಕಾಲು ಗಂಟೆ ಕಳೆದು ಹೋಗಿದ್ದೇ ಗೊತ್ತಾಗಿರಲಿಲ್ಲ.

dun2ಎಲ್ಲೋ ತುಂಬಾ ಹಿಂದೆ ಓದಿದಂತೆ, ಖ್ಯಾತ ಸಾಹಿತಿಗಳಾದ ಕೀ. ರಂ. ನಾಗರಾಜ್ ಮತ್ತು ಚುಟುಕು ಕವಿ ದುಂಡಿರಾಜ್ ಇಬ್ಬರೂ ಗಳಸ್ಯ ಗಂಠಸ್ಯ ಸ್ನೇಹಿತರಾಗಿದ್ದರಂತೆ. ಅವರಿಬ್ಬರ ಬರವಣಿಗೆ ಶೈಲಿ ವಿಭಿನ್ನವಾಗಿದ್ದರೂ ಅವರಿಬ್ಬರ ಮಧ್ಯೆ ಸಾಮ್ಯದ ಸಂಗತಿಯೆಂದರೆ ನಶ್ಯ. ಅದೊಮ್ಮೆ ಕೀರಂ ಮಂಗಳೂರಿಗೆ ಬಂದಿದ್ದಾಗ ಡುಂಡಿಯವರು, ಅವರಿಗೆ ಕೃಷ್ಣ ನಶ್ಯದ ಡಬ್ಬಿ ಕೊಟ್ಟಿದ್ದರಂತೆ. ಕೆಲವು ದಿನಗಳ ನಂತರ ಕೀರಂ, ಡುಂಡಿಗೆ ಪತ್ರ ಬರೆದು- ಕೃಷ್ಣ ನಶ್ಯ ತುಂಬಾ ಚೆನ್ನಾಗಿತ್ತು ಎಂದು ಹೊಗಳಿದ್ದೇ ತಡಾ,. ಕೂಡಲೇ ನಶ್ಯದ ಕುರಿತೇ ಡುಂಡಿ ಹನಿಗವನವೊಂದು ಬರೆದಿದ್ದಾರೆ.

ಸಸ್ಯ ತಿನ್ನುವವ ಸಸ್ಯಾಹಾರಿ, ಮಾಂಸ ತಿನ್ನುವವ ಮಾಂಸಾಹಾರಿ
ಮೂಗಿನ ತುಂಬಾ ತಂಬಾಕಿನ ಪುಡಿ/ ತುಂಬಿಸಿಕೊಳ್ಳುವವ ನಶ್ಯಾಹಾರಿ ಎಂದಿದ್ದಲ್ಲದೇ,

ದೇಗುಲದ ಗರ್ಭಗುಡಿಯೊಳಗೆ ಸಿಗರೇಟು ಪ್ರವೇಶಿಸದು, ಮದ್ಯದ ಬಾಟಲಿಗೂ ಅನುಮತಿ ಇಲ್ಲ. ನಶ್ಯ ಮಾತ್ರ ಒಳಹೋಗಬಹುದು. ಅದಕ್ಕೆ ಪುರೋಹಿತರ ಬೆಂಬಲವೂ ಇರುತ್ತದೆ ಎಂದು ಹಾಸ್ಯಮಯವಾಗಿ ವಾಸ್ತವವನ್ನು ಡುಂಡಿಯವರು ಬರೆದಿದ್ದಾರೆ.

ಹೊಗೇ ಸೊಪ್ಪಿನ ಉತ್ಪನ್ನಗಳಾದ ಹೊಗೆಸೊಪ್ಪು, ಜರ್ದಾ, ಕಡ್ಡೀ ಪುಡಿ, ಬೀಡಿ, ಸಿಗರೇಟ್ ಸೇದುವುದನ್ನು ಇಂದೆಲ್ಲಾ ನೋಡುತ್ತೇವೆಯಾದರೂ ನಶ್ಯ ಹಾಕುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ ಎಂದೇ ಹೇಳಬಹುದು. ಒಂದಾನೊಂದು ಕಾಲದಲ್ಲಿ ನಶ್ಯ ಅತ್ಯಂತ ಜನಪ್ರಿಯವಾಗಿತ್ತು ಮತ್ತು ನಶ್ಯ ಹಾಕುವವರು ಅತ್ಯಂತ ಬುದ್ಧಿವಂತರೆಂದೇ ಪರಿಗಣಿಸಿದ್ದರಿಂದ ನಶ್ಯವನ್ನು ಜ್ಞಾನಚೂರ್ಣವೆಂದೇ ಕರೆಯುತ್ತಿದ್ದರು.

ನಮ್ಮ ತಂದೆಯವರ ವೈಕುಂಠ ಸಮಾರಾಧನೆಯಂದು ಅವರ ಅಪ್ತ ಗೆಳೆಯರಿಗೆಲ್ಲಾ ನಶ್ಯದ ದಾನವನ್ನೇ ಕೊಟ್ಟಿದ್ದೆವು. ನಮ್ಮ ತಂದೆಯವರಿಗೆ ನಶ್ಯವನ್ನು ತರುವುದಕ್ಕಾಗಿಯೇ ಪ್ರತೀವಾರವೂ ತಪ್ಪದೇ ಮಲ್ಲೇಶ್ವರಕ್ಕೆ ಹೋಗುತ್ತಿದ್ದ ನಾವು ತಂದೆಯವರು ಗತಿಸಿಹೋದ ನಂತರ ಮಲ್ಲೇಶ್ವರಕ್ಕೆ ಹೋಗುವುದೇ ನಿಲ್ಲಿಸಿಬಿಟ್ಟಿದ್ದೇವೆ. ಅಕಸ್ಮಾತ್ ಮಲ್ಲೇಶ್ವರ ನಶ್ಯದ ಅಂಗಡಿಯ ಮುಂದೆ ಹೋಗುವ ಪ್ರಮೇಯ ಬಂದರೆ, ಏನನ್ನು ಕೊಳ್ಳದೇ ಹೋದರೂ, ಸುಮ್ಮನೇ ಒಂದು ಕ್ಷಣ ಅಂಗಡಿಯ ಮುಂದೆ ನಿಂತು ಕೊಂಡರೆ, ಗತಿಸಿ ಹೋದ ನಶ್ಯ ಪ್ರಿಯರಾದ ನಮ್ಮ ತಾತ ಮತ್ತು ತಂದೆಯವರ ನೆನಪಾಗಿ ನಮಗೆ ಅರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಜಿನುಗುತ್ತದೆ.


WhatsApp Image 2022-02-21 at 8.04.36 AMಇಂದಿಗೂ ಸಹಾ ನನಗೆ ಅಪ್ಪನ ನೆನಪಾದಾಗಲೆಲ್ಲಾ ಬೀರುವಿನಲ್ಲಿ ಭದ್ರವಾಗಿ ಎತ್ತಿಟ್ಟಿರುವ ಅವರ ನಶ್ಯದ ಡಬ್ಬಿಯನ್ನು ತೆಗೆದು ಒಮ್ಮೆ ಮೂಸುತ್ತಿದ್ದಂತೆಯೇ ಅಪ್ಪನ ಘಮಲು ಮೂಗಿಗೆ ಬಡಿದು,ಅವರ ಪ್ರೀತಿಯ ಅಪ್ಪುಗೆಯ ಆಲಿಂಗನದ ಸುಖಃ ದೊರೆತು. ಅಪ್ಪಾ ಇಲ್ಲೇ ಇದ್ದಾರೆ ಎನ್ನುವ ಭಾವನೆ
ಮೂಡುತ್ತದೆ ಎಂದರೆ ಸುಳ್ಳಲ್ಲ. ಹಿರಿಯರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಲ್ಲಿ ಅದನ್ನು ನೋಡಿದಾಗಲೆಲ್ಲಾ ಅವರ ಸವಿನೆನಪುಗಳು ಕಣ್ಮುಂದೆ ಬಂದು ಮನಸ್ಸಿಗೆ ಮುದನೀಡುವುದಲ್ಲದೇ, ಅಪ್ಯಾಯಮಾನ ಎನಿಸುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಸೂಚನೆ : ನಶ್ಯ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾದ್ದರಿಂದ ಯಾವುದೇ ತಂಬಾಕು ಪದಾರ್ಥಗಳಿದ ದಯವಿಟ್ಟು ದೂರವಿರುವುದು ಉತ್ತಮ

ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಅದೊಂದು ಕುಗ್ರಾಮ. ಹೆಸರಿಗಷ್ಟೇ ಅಗ್ರಹಾರ ಎಂದಿದ್ದರೂ, ಇದ್ದದ್ದು ಎಂಕ, ನಾಣಿ, ಸೀನ ಅಂತಾ ಹತ್ತಾರು ಸಂಪ್ರದಾಯಸ್ಥರ ಮನೆ. ಕೃಷಿ ಪ್ರಧಾನವಾಗಿದ್ದ ಆ ಊರಿನಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯದ ಗಂಧವೇ ಇಲ್ಲದಿದ್ದರೂ ಜನಪದ ಸಾಹಿತ್ಯಕ್ಕೇನು ಕೊರತೆ ಇರಲಿಲ್ಲ. ಅಂತಹ ಊರಿನಲ್ಲೊಂದು ಅನರ್ಘ್ಯ ರತ್ನದಂತೆ, ತಾಯಿಯ ಕಡೆಯ ದೂರ ಸಂಬಧಿಯೊಬ್ಬರು ಮಾಡುತ್ತಿದ್ದ ಗಮಕ ವಾಚನದಿಂದ ಆಕರ್ಷಿತರಾಗಿ, ಮಹಾಭಾರತದ ಏಕಲವ್ಯನಂತೆ, ದೈವದತ್ತವಾದ ಶರೀರ ಮತ್ತು ಶಾರೀರದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿಕಥೆ, ಗಮಕ ವಾಚನ, ವ್ಯಾಖ್ಯಾನವಲ್ಲದೇ, ನಾಟಕದ ಮಟ್ಟುಗಳು ಮತ್ತು ಅನೇಕ ದೇವರ ನಾಮಗಳನ್ನು ರಚಿಸಿದ ಸರಸ್ವತೀ ಪುತ್ರರಾಗಿದ್ದ ಹರಿಕಥಾ ಸಾಮ್ರಾಟ, ಗಮಕ ವಿದ್ವಾನ್ ಬಾಳಗಂಚಿ ನಂಜುಂಡಯ್ಯನವರೇ ನಮ್ಮ ಈ ದಿನದ ಕನ್ನಡ ಕಲಿಗಳು.

ಅದು 1900ನೇ ಇಸವಿ, ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಗ್ರಾಮವಾದ ಬಾಳಗಂಚಿಯಲ್ಲಿ ನಂಜುಂಡಯ್ಯನವರು ಜನಿಸುತ್ತಾರೆ. ದುರದೃಷ್ಟವಶಾತ್ ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ತಂದೆಯವರನ್ನು ಕಳೆದುಕೊಂಡ ಶ್ರೀಯುತರು ತಮ್ಮ ತಾಯಿ ಮತ್ತು ಅಕ್ಕನ ನೆರಳಿನಲ್ಲಿಯೇ ಬೆಳೆಯುತ್ತಾರೆ. ಅವರಿಗಿನ್ನೂ ಏಳೆಂಟು ವರ್ಷ ವಯಸ್ಸಿನಲ್ಲಿದ್ದಾಗ ಅವರ ತಂದೆಯ ವೈದೀಕದಂದೇ, ಮರಣ ಹೊಂದಿ ನಂತರ ಕೆಲವು ಗಂಟೆಯೊಳಗೇ ಪುನರ್ಜನ್ಮ ಪಡೆದ ಅಪರೂಪದ ವ್ಯಕ್ತಿಯೂ ಹೌದು. (ಇದರ ಸವಿರವಾದ ಕಥೆಗೆ ಈ ಲೇಖನ ಓದಿ.) ಹೇಳೀ ಕೇಳಿ ಅವರದ್ದು ಶಾನುಭೋಗರ ಕುಟುಂಬ ಜೊತೆಗೆ ಅವರ ಪೂರ್ವಜರು ಇಷ್ಟಪಟ್ಟು ಒಪ್ಪಿಕೊಂಡು ಅಪ್ಪಿಕೊಂಡಿದ್ದ ಮನೆಯ ಹಿಂದೆಯೇ ಇದ್ದ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಅರ್ಚಕರ ವೃತ್ತಿ. ಆದಾಗಲೇ ಬೆಳೆದು ದೊಡ್ಡವರಾಗಿ ಇದ್ದ ಅವರ ಅಣ್ಣಂದಿರು ಪೂರ್ವಜರು ಮಾಡಿಟ್ಟಿದ್ದ ಆಸ್ತಿಗಳನ್ನೆಲ್ಲಾ ಕರಗಿಸಿ ನಾಲ್ಕಾರು ಮಕ್ಕಳನ್ನು ಅಕಾಲಿಕವಾದ ವಯಸ್ಸಿನಲ್ಲಿಯೇ ನಿಧನರಾಗಿದ್ದ ಕಾರಣ ಕಾರಣ, ಅರ್ಚಕವೃತ್ತಿಯ ಜೊತೆಗೆ ಶ್ಯಾನುಭೋಗತನದ ಜೊತೆ ಇಡೀ ಅವಿಭಕ್ತ ಕುಟುಂಬದ ಹೊಣೆಗಾರಿಕೆಯೂ ಚಿಕ್ಕ ವಯಸ್ಸಿನಲ್ಲಿಯೇ ನಂಜುಂಡಯ್ಯನವರ ಹೆಗಲಿಗೇರುತ್ತದೆ.

ಆಗಿನ ಕಾಲಕ್ಕೆ ಸಾವಿರದಿಂದ ಎರಡು ಸಾವಿರದೈನೂರು ಜನರು ಇದ್ದಿರಬಹುದಾದಂತಹ ಕೃಷಿಕ ಪ್ರಧಾನವಾದ ಸುಂದರವಾದ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ಸಣ್ಣ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದ್ದು, ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ ಎಂದು ಹೇಳುತ್ತಾರೆ. ಇಂತಹ ಪುರಾಣ ಪ್ರಸಿದ್ಡ ಊರಲ್ಲದೇ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಶಾನುಭೋಗರಾಗಿದ್ದ ನಂಜುಡಯ್ಯನವರು ಸ್ವಾತಂತ್ರ್ಯ ಬಂದು ಶ್ಯಾನುಭೋಗತನ ಹೋಗುವವರೆಗೂ ಅಧಿಕಾರದಲ್ಲಿ ಇದ್ದರೂ ಒಂದು ಕಳ್ಳ ಲೆಕ್ಕವಾಗಲೀ ಸುಳ್ಳು ಲೆಕ್ಕವನ್ನಾಗಲೀ ಬರೆಯದೇ, ಒಂದು ಚೂರು ದರ್ಕಾಸ್ತು ಜಮೀನನ್ನು ಮಾಡಿಕೊಳ್ಳದೇ, ದೇವಸ್ಥಾನದ ಅರ್ಚಕ ವೃತ್ತಿಯಿಂದಾಗಿ ಉಂಬಳಿಯಾಗಿ ಬಂದಿದ್ದ ಜಮೀನಿನಲ್ಲಿಯೇ ಒಟ್ಟು ಕುಟುಂಬವನ್ನು ನಡೆಸಿಕೊಂಡು ಹೋಗುತ್ತಿದ್ದರು ಎಂದರೆ ಅವರ ಪ್ರಮಾಣಿಕತೆ ಎಷ್ಟಿತ್ತು ಎಂದು ತಿಳಿಯುತ್ತದೆ.

ಅದಾಗಲೇ ಹೇಳಿದಂತೆ ಚಿಕ್ಕವಯಸ್ಸಿನಲ್ಲಿ ಅವರ ತಾಯಿಯ ಜೊತೆ ಅವರ ದೂರದ ಸಂಬಂಧಿಕರ ಮನೆಗೆ ಯಾವುದೋ ಸಭೆಗೆ ಹೋಗಿದ್ದಾಗ ಅಲ್ಲಿ ಕೇಳಿದ ಗಮಕವಾಚನದಿಂದ ಆಕರ್ಷಿತರಾಗಿ ತಾವೇ, ಸ್ವಂತ ಪರಿಶ್ರಮದಿಂದ ಗಮಕ ವಾಚನ ಮತ್ತು ವ್ಯಾಖ್ಯಾನವನ್ನು ಕರಗತ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸುತ್ತ ಮುತ್ತಲಿನ ಊರುಗಳಲ್ಲಿ ಅಗಾಗ ನಡೆಯುತ್ತಿದ್ದ ಹರಿಕಥೆಗಳನ್ನು ನೋಡಿಯೇ ಅದನ್ನೂ ಆಭ್ಯಾಸ ಮಾಡಿಕೊಂಡಿದ್ದರು. ಸುಮಾರು ಆರು ಅಡಿಗಳಷ್ಟು ಎತ್ತರ ಮತ್ತು ಅದಕ್ಕೆ ತಕ್ಕಂತೆಯೇ ಇದ್ದ ಶರೀರದ ಜೊತೆಗೆ ದೈವ ದತ್ತವಾದ ಶಾರಿರದ ಅವರ ಗಾಯನಕ್ಕೆ ಮತ್ತು ಹರಿಕಥೆಗೆ ಮರುಳಾಗದವರೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದೇನೋ? ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಿಕ್ಕಮಗಳೂರು ನಂತಹ ಇನ್ನೂ ಹಲವಾರು ಜಿಲ್ಲೆಗಳ ಪ್ರಮುಖ ಹಳ್ಳಿ, ಪಟ್ಟಣಗಳ ರಾಮೋತ್ಸವ, ಗಣೇಶೋತ್ಸವ, ಊರ ಜಾತ್ರೆಗಳಲ್ಲಿ ಶ್ರೀ ನಂಜುಂಡಯ್ಯನವರ ಹರಿಕಥೆ ಇಲ್ಲವೇ ಗಮನ ವಾಚನ ಕಡ್ಡಾಯವಾಗಿ ಇದ್ದೇ ಇರುತ್ತಿತ್ತು. ಬೇಸಿಗೆ ಮುಗಿದು, ಮಳೆ ಬಾರದಿದ್ದ ಸಮಯದಲ್ಲಿ ಇವರ ಭಕ್ತಿಯಿಂದ ನಡೆಸಿಕೊಡುತ್ತಿದ್ದ ರಾಮ ಸಂಕೀರ್ತನೆಯ ಫಲವಾಗಿ ಧಾರಾಕಾರವಾದ ಮಳೆ ಸುರಿಯುತ್ತದೆ ಎಂಬ ನಂಬಿಕೆ ಇದ್ದದ್ದರಿಂದ ಹಲವಾರು ಹಳ್ಳಿಗಳಲ್ಲಿ ಹರಿಕಥೆಗಳನ್ನು ಏರ್ಪಡಿಸಿ ತಮ್ಮ ತಮ್ಮ ಊರುಗಳಿಗೆ ಮಳೆಯನ್ನು ಸುರಿಸಿಕೊಂಡ ಹಲವಾರು ನಿದರ್ಶನಗಳಿಂದಾಗಿ ಇವರನ್ನು ಜನರು ಪ್ರೀತಿಯಿಂದ ಮಳೇ ನಂಜುಂಡಯ್ಯನವರೆಂದೇ ಕರೆಯುತ್ತಿದ್ದರು ಎನ್ನುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಹರಿಕಥೆಗೆ ಅಂದಿನ ಕಾಲದಲ್ಲಿ ಕೊಡುತ್ತಿದ್ದ ಐದರಿಂದ ಹತ್ತು ರೂಪಾಯಿಗಳಲ್ಲಿ ಮುಕ್ಕಾಲು ಪಾಲು ಹಣವನ್ನು ಪಕ್ಕವಾದ್ಯದವರಿಗೇ ಕೊಟ್ಟು ಉಳಿದ ಹಣವನ್ನು ಸ್ವಂತಕ್ಕೆ ಇಟ್ಟು ಕೊಳ್ಳುತ್ತಿದ್ದ ಮಹಾನ್ ಜನಾನುರಾಗಿಗಳಾಗಿದ್ದರು.

ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಹೆಚ್ಚಾಗಿ ಓದದಿದ್ದರೂ, ಸ್ವಕಲಿಕೆಯ ಮೇರೆಗೆ ಸಂಗೀತ ಕಲಿತುಕೊಂಡರೇ, ಸಾಹಿತ್ಯ ಎನ್ನುವುದು ಅವರಿಗೆ ಅದು ಹೇಗೆ ಒಲಿಯಿತು ಎಂದು ಆವರಿಗೇ ಗೊತ್ತಿರಲಿಲ್ಲವಂತೆ. ಪದ್ಯದ ಜೊತೆ ಗದ್ಯದಲ್ಲೂ ಅಪಾರ ಪಾಂಡಿತ್ಯ ಪಡೆದಿದ್ದ ಶ್ರೀಯುತರು ಗರಳಪುರಿ ನಂಜುಂಡ ಎಂಬ ಅಂಕಿತ ನಾಮದೊಂದಿಗೆ ಕರ್ನಾಟಕದ ಅನೇಕ ಊರುಗಳ ದೇವರುಗಳ ಮೇಲೆ ದೇವರ ನಾಮಗಳನ್ನು ಬರೆದಿರುವುದಲ್ಲದೇ ಅದಕ್ಕೆ ಸೂಕ್ತವಾದ ಸಂಗೀತವನ್ನೂ ಅವರೇ ನೀಡಿರುವುದು ಅವರ ಹೆಗ್ಗಳಿಕೆ. ಇಂದಿಗೂ ಅವರ ಅನೇಕ ಕೃತಿಗಳನ್ನು ರಾಜ್ಯದ ಅನೇಕ ದೇವಸ್ಥಾನಗಳಲ್ಲಿನ ನಾದಸ್ವರ ವಾದಕರು ನುಡಿಸುತ್ತಿದ್ದಾರೆ. ಸಂಸ್ಜೃತದಲ್ಲಿದ್ದ ಭಗವದ್ಗೀತೆಯನ್ನು ಅತೀ ಸರಳವಾದ ಕನ್ನಡಕ್ಕೆ ತರ್ಜುಮೆ ಮಾಡಿರುವುದಲ್ಲದೇ, ದೇವರ ಕೃತಿಗಳ ಹೊರತಾಗಿ ಭಗವದ್ಗೀತೆಯ ಕುರಿತಂತೆಯೇ ಗೀತೇ ಶ್ರೀಹರಿ ಮುಖ ಜಾತೇ.. ಎಂದೂ, ಕನ್ನಡದಲ್ಲಿ ಸುಲಭವಾಗಿ ಮತ್ತು ಸುಲಲಿತವಾಗಿ ಅರ್ಥವಾಗುವಂತೆ ಮಹಾಭಾರತವನ್ನು ಬರೆದ ಅವರ ಆರಾಧ್ಯ ದೈವವಾಗಿ ಕುಮಾರ ವ್ಯಾಸರ ಕುರಿತಂತೆ ಕರ್ನಾಟ ವರಚೂತ ವನಚೈತ್ರ ಲಕ್ಷ್ಮೀಶಾ.. ಎಂಬ ಕೃತಿಗಳನ್ನು ರಚಿಸಿರುವುದಲ್ಲದೇ, ಅನೇಕ ಪೌರಾಣಿಕ ನಾಟಕಗಳಿಗೆ ಸಮಯೋಚಿತ ಕಂದ ಪದ್ಯಗಳು ಮತ್ತು ಮಟ್ಟುಗಳನ್ನು ರಚಿಸಿಕೊಟ್ಟಿದ್ದು ಆ ಪದ್ಯಗಳನ್ನು ಇಂದಿಗೂ ಅನೇಕ ಪೌರಾಣಿಕ ನಾಟಕದಲ್ಲಿ ಬಳಸುತ್ತಿರುವುದು ನಂಜುಂಡಯ್ಯನವರ ಹೆಗ್ಗಳಿಗೆಯಾಗಿದೆ.

ಗಮಕ ಎಂದರೆ ಕೇವಲ ಪದ್ಯಗಳನ್ನು ಸಂಗೀತ ರೂಪದಲ್ಲಿ ಪ್ರಸ್ತುತ ಪಡಿಸದೆ ಸಾಹಿತ್ಯಕ್ಕೆ ಅನುಗುಣವಾಗಿ ರಾಗ ಸಂಯೋಜಿಸಿ ಪ್ರತೀ ಪದಗಳಿಗೆ ಅನುಗುಣವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಏರಿಳಿತಗಳೊಂದಿಗೆ ಹಾಡುತ್ತಿದ್ದದ್ದು ಇನ್ನೂ ಹಲವರ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ ಎಂದರೂ ಸುಳ್ಳಲ್ಲ. ಅರಸುಗಳಿಗಿದು ವೀ..ರಾ… ಭೂ.. ವ್ಯೋ..ಮ ಪಾತಾ..ಳ.. ಹಾಡಿರುವುದನ್ನು ಕೇಳಿದ್ದರೆ ಉಳಿದವರ ಹಾಡುವುದನ್ನು ಖಂಡಿತವಾಗಿಯೂ ಇಷ್ಟಪಡುತ್ತಿರಲಿಲ್ಲ ಎಂದೇ ಹೇಳಬಹುದು. ಕೇವಲ ತಾವೊಬ್ಬರೇ ಸಂಗೀತ, ಸಾಹಿತ್ಯದಲ್ಲಿ ಪಾರಂಗತರಾಗದೇ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಜನರಿಗೆ ಸಂಗೀತ ಮತ್ತು ದೇವರ ನಾಮಗಳನ್ನು ಹೇಳಿ ಕೊಟ್ಟಿದ್ದಾರೆ. ಇಂದಿಗೂ ಅವರಿಂದ ಸಂಗೀತ, ನಾಟಕ ಮತ್ತು ಗಮಕ ಕಲಿತ ಅನೇಕ ಶಿಷ್ಯವೃಂದ ರಾಜ್ಯದ ಹಲವಾರು ಕಡೆಗಳಲ್ಲಿ ನಮಗೆ ಕಾಣ ಸಿಗುತ್ತಾರೆ.

ಕನ್ನಡ ಪ್ರಖ್ಯಾತ ಕವಿಗಳಾಗಿದ್ದ ಗೊರೂರು ರಾಮಸ್ವಾಮಿ ಐಯ್ಯಂಗಾರರು ಮತ್ತು ಚಿಕ್ಕಮಗಳೂರಿನ ಹಿರೇಮಗಳೂರಿನ ಕೋಡಂಡರಾಮ ಸ್ವಾಮೀ ದೇವಸ್ಥಾನದ ಅರ್ಚಕರು ಮತ್ತು ವಿದ್ವಾಂಸರಾಗಿದ್ದ ಶ್ರೀ ಸವ್ಯಸಾಚಿಗಳಲ್ಲದೇ (ಕನ್ನಡದ ಪೂಜಾರಿ ಕಣ್ಣನ್ ಅವರ ತಂದೆ), ಹಿರಿಯ ಗಮಕಿಗಳಾಗಿದ್ದ ಬಿ. ಎಸ್. ಎಸ್.ಕೌಶಿಕ್ (ನಟ ನಿರ್ದೇಶಕ ಎಂ.ಡಿ. ಕೌಶಿಕ್ ಅವರ ತಂದೆ) ಮತ್ತು ಬಿಂದೂರಾಯರ ಜೊತೆ ಗಳಸ್ಯ ಗಂಟಸ್ಯ ಗೆಳೆತನ ನಂಜುಂಡ್ಯಯ್ಯನವರಿಗಿತ್ತು.

 • ಗಮಕ, ಹರಿಕಥೆ ಮತ್ತಿತರೇ ಲಲಿತಕಲೆಗಳಲ್ಲಿ ಅವರ ಈ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಎಪ್ಪತ್ತರ ದಶಕದಲ್ಲಿ ಕರ್ನಾಟಕ ರಾಜ್ಯಸರ್ಕಾರದ ಪ್ರಶಸ್ತಿಗೂ ಭಾಜರಾಗಿದ್ದಾರೆ.
 • ಕರ್ನಾಟಕ ಗಮಕಕಲಾ ಪರಿಷತ್ತು ಹೊರತಂದ ಪ್ರಖ್ಯಾತ ಗಮಕಿಗಳ ಕುರಿತಾದ ಪುಸ್ತಕದಲ್ಲಿ ಬಾಳಗಂಚಿ ನಂಜುಂಡಯ್ಯನವರ ಕುರಿತಾದ ಲೇಖನವಿದೆ
 • ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಸನ್ಮಾನಿತರಾಗಿದ್ದಾರೆ.

ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾದ ಪರಿಣಾಮ ಹಾಡುವುದಕ್ಕೂ, ಬರೆಯುವುದಕ್ಕೂ ಆಗದೇ ಪರಿತಪಿಸುತ್ತಲೇ, ತಮ್ಮ ಎಂಬತ್ಮೂರನೇ ವಯಸ್ಸಿನಲ್ಲಿ ನಿಧನರಾದರೂ ಇಂದಿಗೂ ಅವರು ರಚಿಸಿದ ಕೃತಿಗಳಿಂದಾಗಿ ಶಾಶ್ವತವಾಗಿ ಕನ್ನಡಿಗರ ಮನ ಮನೆಗಳಲ್ಲಿ ನೆಲೆಯೂರಿದ್ದಾರೆ.

ಸಂಗೀತ ಸಾಹಿತ್ಯದ ಗಂಧ ಗಾಳಿ‌ ಇಲ್ಲದ ಕುಗ್ರಾಮದ, ಕಿತ್ತು ತಿನ್ನುತ್ತಿದ್ದ ಬಡತನದ ಒಟ್ಟು ಕುಟುಂಬದ ನಡುವೆಯೂ, ಸ್ವಂತ ಪರಿಶ್ರಮದಿಂದ ಸಂಗೀತ, ಗಮಕ, ಹರಿಕಥೆಗಳಲ್ಲದೇ ವಾಗ್ಗೇಯಕಾರರಾಗಿ, ಕನ್ನಡದ ಸಾರಸ್ವತ ಲೋಕಕ್ಕೆ ಎಲೆಮರೆಕಾಯಿಯಂತೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದ, ನಾಲ್ಕಾರು ದಶಕಗಳ ಕಾಲ ನಿಸ್ವಾರ್ಥವಾಗಿ ಅರ್ಚಕರಾಗಿ ಭಗವಂತನ ಸೇವೆ ಮಾಡಿದ, ಶ್ಯಾನುಭೋಗತನ ನಡೆಸಿಯೂ ಕೈಕೆಸರು ಮಾಡಿಕೊಳ್ಳದ, ಸರಳ ಸ್ವಾಭಿಮಾನಿ ಜನಾನುರಾಗಿ, ‌ನಿಸ್ವಾರ್ಥಿಯಾಗಿದ್ದ ಬಾಳಗಂಚಿ ಶ್ರೀ ಗಮಕಿ ನಂಜುಂಡಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಏನಂತೀರೀ? ಪುಸ್ತಕ ಲೋಕಾರ್ಪಣೆ

ನನ್ನೆಲ್ಲಾ ಆತ್ಮೀಯರಿಗೂ ಈಗಾಗಲೇ ತಿಳಿದಿರುವಂತೆ, ಒಬ್ಬ ಹವ್ಯಾಸೀ ಬರಹಗಾರನಾಗಿ ರಾಜಕಾರಣದ ಆಗು ಹೋಗುಗಳನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಕಾರಣ ಬೇಕೋ ಬೇಡವೋ ಗೆಳೆಯರ ಒತ್ತಾಯದ ಮೇರೆಗೆ ಸಾಮಾಜಿಕ ಜಾಲತಾಣಗಳ ನಾನಾ ಗುಂಪುಗಳ ಭಾಗವಾಗಿ ಸುಖಾ ಸುಮ್ಮನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದಕ್ಕೇ ನನ್ನ ಬರವಣಿಗೆ ಸೀಮಿತವಾಗಿತ್ತು. ಆ ಎಲ್ಲಾ ಲೇಖನಗಳಿಂದ ಮಿತ್ರತ್ವಕ್ಕಿಂತ ಶತೃತ್ವ ಗಳಿಸಿದ್ದೇ ಹೆಚ್ಚು. ಈ ಜಿದ್ದಾ ಜಿದ್ದಿ, ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಮೀಸಲಾಗಿರದೇ, ಮನೆಯವರೆಗೂ ಬಂದು, ನನ್ನ ಕುಟುಂಬದವರು ನನ್ನ ಪರವಾಗಿ ಅದೆಷ್ಟೋ ಬಾರಿ ಕ್ಷಮೆ ಯಾಚಿಸಿದ್ದೂ ಉಂಟು.

ಕಲೆ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತನವರು ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ರಾಜ್ಯಪ್ರಶಸ್ತಿ ವಿಜೇತ ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರು. ನಮ್ಮ ತಂದೆ ದಿ.ಶಿವಮೂರ್ತಿಗಳು ಖ್ಯಾತ ಗಮಕಿಗಳು, ವ್ಯಾಖ್ಯಾನಕಾರರು ಮತ್ತು ಮೋರ್ಚಿಂಗ್ ಕಲಾವಿದರಾಗಿದ್ದರು. ಅಂತಹ ದಿಗ್ಗಜರ ವಂಶವವನಾಗಿಯೂ ಅದೇಕೋ ಏನೋ ಗಮಕ ಒಲಿಯಲಿಲ್ಲ. ಒಲಿಯಲಿಲ್ಲ ಎನ್ನುವುದಕ್ಕಿಂತ ಕಲಿಯಲು ಪ್ರಯತ್ನಿಸಲಿಲ್ಲ ಎನ್ನುವುದೇ ಸೂಕ್ತ. ಹಾಗಾಗಿ ಪದ್ಯ ಒಲಿಯದಿದ್ದರೂ ಗದ್ಯವನ್ನು ಒಪ್ಪಿಕೊಂಡೆ ಅಪ್ಪಿಕೊಂಡೆ.

ಯಾವುದೋ ಸಿದ್ಧಾಂತಗಳಿಗೆ ಕಟ್ಟುಬಿದ್ದು ಲೇಖನಗಳನ್ನು ಬರೆಯುತ್ತಾ ಸಮಯ ಕಳೆಯುವ ಬದಲು ಅದೇ ಸಮಯವನ್ನು ಧನಾತ್ಮಕವಾದ ಮತ್ತು ಸಮಾಜಮುಖಿಯಾದ ಲೇಖನಗಳಿಗೆ ಏಕೆ ಉಪಯೋಗಿಸ ಬಾರದು? ಎಂದು ಮಡದಿ ಮಂಜುಳ ಮತ್ತು ನೆಚ್ಚಿನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಯವರ ಸಲಹೆಯ ಮೇರೆಗೆ ನನ್ನ ಬರವಣಿಗೆಯನ್ನು ನನ್ನ ಕಲ್ಪನೆ ಮತ್ತು ನನ್ನ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಎಲ್ಲೆಂದರಲ್ಲಿ ಪ್ರಕಟಿಸಲಾರಂಭಿಸಿದಾಗ, ಸುಮ್ಮನೆ ಎಲ್ಲೋ ನಿಮ್ಮ ಬರಹಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಬ್ಲಾಗ್ ಒಂದನ್ನು ಏಕೆ ಆರಂಭಿಸಬಾರದು? ಎಂದು ಗೆಳೆಯ ವಾಸುದೇವರವರು ಸೂಚಿಸಿದ ಪರಿಣಾಮವಾಗಿ ಆರಂಭಿಸಿದ https://enantheeri.com/ ಬ್ಲಾಗಿನಲ್ಲಿ ಈಗ 500 ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ ಕೇವಲ ಕರ್ನಾಟಕವಲ್ಲದೇ, ದೇಶ ವಿದೇಶಗಳಲ್ಲಿ ಸಾಕಷ್ಟು ಓದುಗರಸಾಕಷ್ಟು ಜನ ಮನ್ನಣೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ.

ನನ್ನೆಲ್ಲಾ ಬರಹಗಳು ಕೇವಲ ನನ್ನ ಬ್ಲಾಗಿನಲ್ಲಿ ಲಭ್ಯವಿದ್ದರೂ, ಪುಸ್ತಕದ ರೂಪದಲ್ಲಿ ಪ್ರಕಟಿಸಿದಾಗ ಮಾತ್ರವೇ ಅದು ಇನ್ನೂ ಹತ್ತು ಹಲವಾರು ಸಾಂಪ್ರದಾಯಕ ಓದುಗರಿಗೆ ತಲುಪುತ್ತದೆ ಎನ್ನುವುದು ನಮ್ಮ ಕುಟುಂಬದ ಭಾವನೆ. ಹಾಗಾಗಿ ನನ್ನ ಪುಸ್ತಕವನ್ನು ಪ್ರಕಟಿಸಲು ಸಾಧ್ಯವೇ ಎಂದು ಹತ್ತಾರು ಪ್ರಕಾಶಕರನ್ನು ವಿಚಾರಿಸಿದಾಗ, ಹೊಸಾ ಲೇಖಕರ ಕನ್ನಡ ಪುಸ್ತಕಗಳನ್ನು ಯಾರೂ ಕೊಂಡು ಓದುವುದಿಲ್ಲ ಎಂಬ ನೆಪದಿಂದ ನಮ್ಮನ್ನು ಸಾಗ ಹಾಕಿದ್ದನ್ನು ಗಮನಿಸಿದ ನನ್ನ ಮಡದಿ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯ ತ್ಯಾಗವಿರುತ್ತದೆ ಎನ್ನುವಂತೆ, ರೀ…, ನಮ್ಮ ಪುಸ್ತಕವನ್ನು ನಾವೇ ಪ್ರಕಟಿಸೋಣ. ಈ ಪುಸ್ತಕದ ಸಂಪೂರ್ಣ ಖರ್ಚು ವೆಚ್ಚಗಳೆಲ್ಲವೂ ನನ್ನದಿರಲಿ ಎಂಬ ಧೈರ್ಯ ತುಂಬಿದ ಕಾರಣವೇ, ನಮ್ಮದೇ ಆದ ಸೃಷ್ಟಿ ಪ್ರಕಾಶನ ಆರಂಭಿಸಿ ಅದರ ಅಡಿಯಲ್ಲಿ ಚೊಚ್ಚಲು ಪುಸ್ತಕವಾಗಿ, ನನ್ನ ಬರಹದ ಜನಪ್ರಿಯವಾದ, ಆಯ್ದ 20 ಲೇಖನಗಳನ್ನು ಏನಂತೀರೀ? ಎಂಬ ಪುಸ್ತಕದ ರೂಪದಲ್ಲಿ ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇವೆ.

ನಮ್ಮೀ ಚೊಚ್ಚಲು ಕಾಣಿಕೆಯನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಸಾಹಿತ್ಯ ದಿಗ್ಗಜರ ಉಪಸ್ಥಿತಿಯಲ್ಲಿ ಬಹಳ ಅದ್ದೂರಿಯ ಸಮಾರಂಭದಲ್ಲಿ ಬಿಡುಗಡೆ ಮಾಡಬೇಕೆಂದು ಬಹಳ ಹಿಂದೆಯೇ ಯೋಚಿಸಿದ್ದರೂ, ಮಹಾಮಾರಿ ಕೋವಿಡ್ ಪರಿಣಾಮವಾಗಿ ಇಂದು ಮನೆಯಲ್ಲಿಯೇ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಲೋಕಾರ್ಪಣೆ ಮಾಡುತ್ತಿದ್ದೇವೆ.

ಈ ಪುಸ್ತಕವನ್ನು ಪ್ರಕಟಿಸುವ ಹಿಂದೆಯೂ, ನಮ್ಮ ಕುಟುಂಬಸ್ಥರ ಪ್ರೀತಿ ಮತ್ತು ವಿಶ್ವಾಸಗಳು ಅಡಗಿವೆ. ನಾನು ಹುಟ್ಟಿದ್ದು 1970ರ, ಸಾಧಾರಣ ಸಂವತ್ಸರ, ಆಶ್ವಯುಜ, ಶುಕ್ಲ ಪಂಚಮಿ ಇಂದಿಗೆ ಸರಿಯಾಗಿ ನನಗೆ 50 ವರ್ಷಗಳು ತುಂಬಿದೆ. ಹಾಗಾಗಿ ಬಹಳಷ್ಟು ಆಸ್ಥೆ ವಹಿಸಿ, ಕಷ್ಟ ಪಟ್ಟು ಇಷ್ಟು ಚೆಂದವಾಗಿ ಪುಸ್ತಕವನ್ನು ನನ್ನ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡುತ್ತಿರುವ ನನ್ನ ಕುಟುಂಬದವರಿಗೆ ಯಾವ ರೀತಿಯಾಗಿ ಪ್ರತಿಕ್ರಿಯೆ ನೀಡಬೇಕು ಎನ್ನುವುದೇ ನನಗೆ ತಿಳಿಯದಾಗಿದೆ.

ಈ ಎಲ್ಲಾ ಬೆಳವಣಿಗೆಯನ್ನು ಕಣ್ಣಾರೆ ನೋಡಲುಮತ್ತು ಸಂಭ್ರಮಿಸಲು ಇಂದು ನಮ್ಮ ತಂದೆ ತಾಯಿಯವರು ನಮ್ಮೊಂದಿಗೆ ಇಲ್ಲವಲ್ಲಾ ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ನೂರಾರು ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ದೊರೆತದ್ದು ನನ್ನ ಪೂರ್ವಜನ್ಮದ ಸುಕೃತವೇ ಸರಿ. ಹಾಗಾಗಿ, ನನ್ನ ಬರಹಗಳನ್ನು ನಿರಂತರವಾಗಿ ಓದುತ್ತಿರುವ ನಿಮ್ಮಂತಹ ಸಾಹಿತ್ಯಾಸಕ್ತರಿಗೆ ಸಾವಿರ ಶರಣು. ಅರ್ಥತ್ ಸಾವು + ಇರದ= ಸಾವಿರದ, ಅಂದರೇ ಸಾವೇ ಇರದಷ್ಟು ಚಿರಋಣಿ ಆಗಿದ್ದೇನೆ.

ನೂರು ರೂಪಾಯಿ ಮುಖ ಬೆಲೆಯ ಈ ಪುಸ್ತಕವನ್ನು ದಯವಿಟ್ಟು ಕೊಂಡು ಓದುವ ಮೂಲಕ ನಮ್ಮೀ ಚೊಚ್ಚಲು ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಮತ್ತು ಆಶೀರ್ವಾದವಿರಲಿ. ನಿಮ್ಮೀ ನಿರಂತರ ಸಹಕಾರದಿಂದ ಇಂತಹ ಹತ್ತಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅಗಾಧವಾದ ಸಾಗರದಂತಿರುವ ಕನ್ನಡ ಸಾರಸ್ವತ ಲೋಕಕ್ಕೆ ಆದ್ಭುತವಾದ ಸಾಹಿತ್ಯ ಭಂಡಾರವನ್ನು ಸಣ್ಣ ಮಟ್ಟದಲ್ಲಿ ಕೊಡುವ ಆಸೆ ನಮ್ಮದು.

ನಮ್ಮ ಹಿರಿಯರು ನಮ್ಮ ಮಸ್ತಕದಲ್ಲಿ ತುಂಬಿದ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪುಸ್ತಕ ರೂಪದಲ್ಲಿ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಯುವಂತೆ ಮಾಡೋಣ.

ಏನಂತೀರೀ?

ಇಂತಿ ನಿಮ್ಮ ವಿಶ್ವಾಸಿ

ಶ್ರೀಕಂಠ ಬಾಳಗಂಚಿ

ಶಾರ್ವರೀ ಸಂವತ್ಸರ, ಆಶ್ವಯುಜ, ಶುದ್ಧ ಪಂಚಮಿ

ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

jc3ನಾನು ಚಿಕ್ಕವನಿದ್ದಾಗ, ರಥೋತ್ಸವಕ್ಕೆಂದು ನಮ್ಮೂರು ಬಾಳಗಂಚಿಗೆ ಹೋಗುತ್ತಿದ್ದೆ. ಊರಿಗೆ ಹೋದ ತಕ್ಷಣ ಅಕ್ಷರಶಃ ನಮ್ಮ ತಾತ ಗಮಕಿ ನಂಜುಂಡಯ್ಯನವರ ಬಾಲವಾಗಿ ಬಿಡುತ್ತಿದ್ದೆ. ರಾತ್ರಿ ಒಟ್ಟಿಗೆ ಒಂದೇ ಹಾಸಿಯಲ್ಲಿ ಮಲಗಿ, ಬೆಳಿಗ್ಗೆ ಎದ್ದು ಅವರ ಕೈಯಲ್ಲೇ ಸ್ನಾನ ಮಾಡಿಸಿಕೊಂಡು ಅವರ ಜೊತೆಯಲ್ಲಿಯೇ ಪೂಜೆಗೆ ಕುಳಿತು ಕೊಂಡು ಪೂಜೆಯ ಕಡೆಯಲ್ಲಿ ಮಂಗಳಾರತಿ ಮಾಡುವಾಗ ದೇವರ ಮನೆಯಿಂದ ಹೊರಬಂದು ಹಜಾರದ ಸಣ್ಣ ಗೂಡಿನಲ್ಲಿದ್ದ ಗಣೇಶನಿಗೂ ಮತ್ತು ಅದರ ಮೇಲೆ ಸಾಲಾಗಿ ತೂಗುಹಾಕಿದ್ದ ದೇವರ ಫೋಟೋಗಳು, ಶಂಕರಾಚಾರ್ಯರುಗಳು, ಶೃಂಗೇರೀ ಜಗದ್ಗುರುಗಳ ಜೊತೆ ಕಪ್ಪು ಕನ್ನಡಕ ಹಾಕಿಕೊಂಡು ರಾಜ ಗಾಂಭೀರ್ಯದಿಂದಿದ್ದ ಪೋಟೋವಿಗೂ ಮಂಗಳಾರತಿ ಮಾಡುತ್ತಿದ್ದರು.

ಅದೊಮ್ಮೆ ಕುತೂಹಲದಿಂದ ತಾತಾ, ಆ ಫೋಟೋದಲ್ಲಿ ಕಪ್ಪು ಕನ್ನಡಕ ಹಾಕಿಕೊಂಡಿದ್ದಾರಲ್ಲಾ ಅವರು ಯಾರು? ಅವರಿಗೆ ಕಣ್ಣು ಕಾಣ್ಸೋದಿಲ್ವಾ? ಅಂತಾ ಮುಗ್ಧವಾಗಿ ಪ್ರಶ್ನಿಸಿದ್ದೆ. ಛೇ! ಛೇ! ಛೇ!! ಬಿಡ್ತು ಅನ್ನು. ಹಾಗೇಲ್ಲಾ ಹೇಳ್ಬಾರ್ದು. ಮೊದಲು ತಪ್ಪಾಯ್ತು ಅನ್ನು. ಕೈ ಮುಗಿ ಎಂದು ನನ್ನ ಪುಟ್ಟ ಕರಗಳಿಂದ ಕೈ ಮುಗಿಸಿ ಮನೆಯ ಮುಂದಿನ ಜಗುಲಿಯ ಮೇಲೆ ತಮ್ಮ ತೊಡೆಯ ಮೇಲೆ ಕುಳ್ಳರಿಸಿಕೊಂಡು ಅವರು ನಮ್ಮ ಮೈಸೂರು ಮಹಾರಾಜರು. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಎಂದು ಮೊತ್ತ ಮೊದಲಬಾರಿಗೆ ನನಗೆ ನಮ್ಮ ಮೈಸೂರು ಮಹಾರಾಜರನ್ನು ಪರಿಚಯಿಸಿದ್ದರು.

jc1ಕಂಠೀರವ ನರಸರಾಜ ಒಡೆಯರ್ ಮತ್ತು ಕೆಂಪು ಚೆಲುವಾಜಯಮ್ಮಣ್ಣಿ ಅವರ ಪುತ್ರರಾಗಿ 18.7.1919 ರಲ್ಲಿ ಮೈಸೂರಿನಲ್ಲಿ ಜನಿಸಿದ ಜಯಚಾಮರಾಜ ಒಡೆಯರ್ ಮೈಸೂರು ಸಂಸ್ಥಾನದ ಯದುವಂಶದ 25ನೆಯ ಮತ್ತು ಕಟ್ಟ ಕಡೆಯ ಮಹಾರಾಜರಾಗಿದ್ದಲ್ಲದೇ ಸದಾ ಸಮಾಜಮುಖಿ ಚಿಂತನೆಗಳಿಂದ, ಜನಪರ ಕಾರ್ಯಗಳಿಂದ ಜನರ ಮನ ಗೆದ್ದವರು. ಮೈಸೂರು ಯದುವಂಶದ ಮಹಾರಾಜರುಗಳಲ್ಲಿ ಅತ್ಯಂತ ಕಡಿಮೆ ಅವಧಿ 1940ರಿಂದ 1947ರ ವರೆಗೆ ಆಳ್ವಿಕೆ ನಡೆಸಿ, ತತ್ತ್ವಜ್ಞಾನಿ. ಸಂಗೀತಜ್ಞ, ರಾಜನೀತಿಜ್ಞ, ಉದಾರ ದಾನಿ, ರಾಜಕೀಯವಾಗಿ,ಸಾಮಾಜಿಕವಾಗಿ, ಸಾಹಿತ್ಯ ಮತ್ತು ಲಲಿತಕಲೆ ಹೀಗೆ ಎಲ್ಲದರಲ್ಲೂ ಅಗ್ರಗಣ್ಯರಾಗಿ ಮೈಸೂರು ಸಂಸ್ಥಾನದ ಹರಿಕಾರರಾಗಿದ್ದರು ಎಂದರೂ ತಪ್ಪಾಗಲಾರದು.

ಜಯಚಾಮರಾಜೇಂದ್ರ ಒಡೆಯರ್ ಮತ್ತು ಅವರ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ ಅನೇಕ ಸಾಮಾಜಿಕ ಸುಧಾರಣೆಗಳ ಮೂಲಕ ಅದಾಗಲೇ ಜಗತ್ಪ್ರಸಿದ್ಧವಾಗಿದ್ದ ಮೈಸೂರು ಸಂಸ್ಥಾನದ ಹಿರಿಮೆ ಗರಿಮೆಯನ್ನು ಮತ್ತಷ್ಟು ಮೇಲಕ್ಕೆ ತೆಗೆದುಕೊಂಡು ಹೋದರು ಎಂದರೆ ಉತ್ಪ್ರೇಕ್ಷೆಯೇನಲ್ಲ.

1940ರ ಆರಂಭದಿಂದಲೂ ರಾಜಕೀಯವಾಗಿ ಹರಿಜನರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದದ್ದಕ್ಕೆ ಸ್ಪಂದಿಸಿದ ಜಯ ಚಾಮರಾಜೇಂದ್ರ ಒಡೆಯರು ಹರಿಜನರಿಗಾಗಿ ರಾಜಕೀಯ ಆಡಳಿತ ಕ್ಷೇತ್ರದಲ್ಲಿ 30 ಸ್ಥಾನಗಳನ್ನು ಹಾಗೂ ಮೇಲ್ಮನೆಯಲ್ಲಿ 4 ಸ್ಥಾನಗಳನ್ನು ಮೀಸಲಿಟ್ಟಿದ್ದಲ್ಲದೇ, ಆಗ ಸಂಸ್ಥಾನದಲ್ಲಿದ್ದ 9 ಜಿಲ್ಲೆಗಳಿಂದಲೂ ರೋಟೆಷನ್‌ ಆಧಾರದ ಮೇಲೆ ಸದಸ್ಯರ ಆಯ್ಕೆ ಮಾಡುವಂತಹ ಕಾನೂನನ್ನು ಜಾರಿಗೆ ತಂದಿದ್ದರು. ಹರಿಜನರಲ್ಲಿಯೇ ಹಿಂದುಳಿದಿದ್ದ ಕೊರಚರು, ಬೋವಿ, ಲಂಬಾಣಿಗಳಿಗೂ ಒಂದೊಂದು ಸ್ಥಾನವನ್ನು ಮೀಸಲಿಡುವ ಮೂಲಕ, ಅಧಿಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಬೇಕೆಂಬ ಹಂಬಲ ಅವರಿಗಿತ್ತು.

ಅಪರಾಧಗಳನ್ನು ಮಾಡಿ ಸೆರೆಮನೆಗೆ ಸೇರಿದ್ದ ಖೈದಿಗಳಿಗೆ ಯುರೋಪಿನ ಮಾದರಿಯಲ್ಲಿ ಅವರ ಮನಪರಿವರ್ತನೆಗೆ ಜೈಲಿನಲ್ಲಿಯೇ ಬಟ್ಟೆ ನೇಯುವುದು, ಶೂ, ಬೆಲ್ಟ್ ತಯಾರಿಕೆ, ತಿಂಡಿ ತಿನಸುಗಳ ತಯಾರಿ ಮಾಡುವುದನ್ನು ಕಲಿಸಿಕೊಡುವ ಮೂಲಕ ಖೈದಿಗಳು ಬಿಡುಗಡೆಯಾದ ನಂತರ ಗೌರವಯುತ ಜೀವನ ನಡೆಸಲು ಪೂರಕ ವಾತಾವರಣ ನಿರ್ಮಿಸುವ ಈ ಮಹತ್ಕಾರ್ಯ ದೇಶದಲ್ಲಿಯೇ ಮಾದರಿಯಾದ ಪುನಶ್ಚೇತನ ಕಾರ್ಯಕ್ರಮ ಎನಿಸಿಕೊಂಡಿತ್ತು.

ಅಂಗವಿಕಲರು ಮತ್ತು ನಿರಾಶ್ರಿತರಿಗಾಗಿ, ನಿರಾಶ್ರಿತರ ಪರಿಹಾರ ಕೇಂದ್ರವನ್ನು ಆರಂಭಿಸಿದ್ದದ್ದು, ಆಗಿನ ಕಾಲದಲ್ಲಿ ಭಾರತ ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆಗೂ ಪಾತ್ರವಾಗಿತ್ತು

ಗೋಹತ್ಯೆ ನಿಷೇಧ ಮತ್ತು ದೇವಾಲಯಗಳಲ್ಲಿ ಹರಿಜನರಿಗೆ ಮುಕ್ತ ಪ್ರವೇಶ ನೀಡುವ ಮೂಲಕ ಮಹತ್ತರವಾದ ಸಮಾಜ ಸುಧಾರಣೆಗಳನ್ನು ತಂದಿದ್ದಲ್ಲದೇ, ಕೂಲಿ ಕಾರ್ಮಿಕರಿಗೆ ವಿಮಾ ಸೌಲಭ್ಯ, ಗರ್ಭಿಣಿಯರಿಗೆ ಹೆರಿಗೆ ಆಸ್ಪತ್ರೆ ತೆರೆದಿದ್ದರು.

ನಾವೇನೂ ಈಗ ಸ್ವಚ್ಚ ಭಾರತ ಎಂದು ಮಾತನಾಡುತ್ತಿದ್ದೇವೆ. ಈ ಕಲ್ಪನೆಯನ್ನು ಅಂದೇ ಕಂಡಿದ್ದ ಮಹಾರಾಜರು ಗ್ರಾಮ, ಪಟ್ಟಣಗಳ ಸ್ವತ್ಛತೆಗೆ ಆದ್ಯತೆ ನೀಡಿ ಪ್ರತಿಯೊಂದೂ ಹಳ್ಳಿಗಳಿಗೂ ಸರ್ಕಾರದ ವತಿಯಿಂದ ಕನ್ನಡಿ ಮತ್ತು ಬಾಚಣಿಗೆಯನ್ನು ಕೊಟ್ಟು ಎಲ್ಲರೂ ಸ್ವಚ್ಛವಾಗಿರಬೇಕೆಂದು ಆಶಿಸಿದ್ದರು ತಮ್ಮ ಪೌರಕಾರ್ಮಿಕರಿಗೆಂದೇ ಉಚಿತವಾಗಿ ಅಚ್ಚುಕಟ್ಟಾದ ಮನೆಗಳನ್ನು ಕಟ್ಟಿಸಿಕೊಟ್ಟಿದರು.

1960 ರ ದಶಕದವರೆಗೂ ಏಷ್ಯಾದ ಅತಿದೊಡ್ಡ ನಗರ ವಸಾಹತುಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದ ಬೆಂಗಳೂರಿನ ಜಯನಗರ ಮತ್ತು ಕೈಗಾರಿಕೆಗೆ ಮತ್ತು ವಸತಿಗೆಂದು ನಿರ್ಮಿಸಲಾದ ರಾಜಾಜೀನಗರ ಈ ಎರಡೂ ಬಡಾವಣೆಗಳೂ ಜಯಚಾಮರಾಜೇಂದ್ರ ಒಡೆಯರ್ ಅವರ ಕಲ್ಪನೆಯ ಕೂಸುಗಳೇ.

ವನ್ಯ ಮೃಗಗಳ ಬಗ್ಗೆ ಅಪಾರ ಕಾಳಜಿ ಇದ್ದ ಪರಿಣಾಮವಾಗಿ ಅರು ಭಾರತೀಯ ವನ್ಯಮೃಗಗಳ ಮಂಡಳಿಯ ಅಧ್ಯಕ್ಷರಾಗಿದ್ದುದಲ್ಲದೆ, ತಮ್ಮ ಸ್ವಂತ ಮೃಗಾಲಯವನ್ನು ಸರ್ಕಾರದ ಅಧೀನಕ್ಕೆ ವಹಿಸಿಕೊಟ್ಟು ಅದರ ಅಭಿವೃದ್ದಿಗೆ ಕಾರಣರಾಗಿದ್ದಲ್ಲದೇ ಅದನ್ನು ಮೈಸೂರಿನ ಪ್ರಮುಖ ಆಕರ್ಷಣೀಯ ಕೇಂದ್ರವನ್ನಾಗಿಸಿದರು.

ಮೈಸೂರು ನಗರದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಚಿತ್ರಶಾಲೆಗಾಗಿ ಇವರು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಕೊಟ್ಟರು. ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮುಂತಾದವುಗಳಿಗಾಗಿ ನಿವೇಶನ ಮತ್ತು ಕಟ್ಟಡಗಳನ್ನು ಉದಾರವಾಗಿ ದಾನ ನೀಡಿದರು.

ಇವರ ಕಾಲದಲ್ಲಿಯೇ ಮೈಸೂರಿನ ವೈಭವೋಪೇತ ದಸರಾ ಉತ್ಸವಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ತ್ವ ಬಂದಿತ್ತು.

ದಸರಾ ಸಮಯದಲ್ಲಿ ಪ್ರತಿನಿತ್ಯವೂ ಅರಮನೆಯಲ್ಲಿ ನಡೆಯುತ್ತಿದ್ದ ರಾಜಸಭೆಗಳು, ಸಂಗೀತ ಕಛೇರಿಗಳು, ಅದ್ದೂರಿಯ ಆಯುಧಪೂಜೆ ಮತ್ತು ವಿಜಯದಶಮಿಯಂದು ಸ್ವತಃ ಅಂಬಾರಿಯ ಮೇಲೆ ಕುಳಿತು ನಡೆಸುತ್ತಿದ್ದ ಜಂಬೂಸವಾರಿಗಳು ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.

ಇವರ ಆಡಳಿತಕಾಲದಲ್ಲಿಯೇ ಜಯಚಾಮರಾಜ ಗ್ರಂಥಮಾಲಾ ಎಂಬ ಯೋಜನೆ ರೂಪುಗೊಂಡು ಅದರ ಅಂಗವಾಗಿ ವೇದಶಾಸ್ತ್ರ, ಪುರಾಣ ಮುಂತಾದ ಉದ್ಗ್ರಂಥಗಳು ಪ್ರಸಿದ್ದ ಪಂಡಿತರ ಮೂಲಕ ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆ ಮಾಡಿಸಿ ಪ್ರಕಟಸಿದ್ದರು.

ಸ್ವತಃ ತಾವೇ, ದತ್ತಾತ್ರೇಯ ದಿ ವೇ ಅಂಡ್ ದಿ ಗೋಲ್, ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್, ದಿ ರಿಲಿಜಿಯನ್ ಅಂಡ್ ದಿ ಮ್ಯಾನ್, ಆತ್ಮ ಅಂಡ್ ಬ್ರಹ್ಮ ಮುಂತಾದ ಗ್ರಂಥಗಳನ್ನು ರಚಿಸಿದ್ದಲ್ಲದೇ, ಸುಮಾರು 90ಕ್ಕೂ ಅಧಿಕ ಸಂಗೀತದ ಕೃತಿಗಳನ್ನು ರಚಿಸಿದ್ದಾರೆ ಮತ್ತು ಅವುಗಳಲ್ಲಿ ಅನೇಕ ಕೃತಿಗಳು ಇಂದಿಗೂ ಜನಪ್ರಿಯವಾಗಿವೆ.

ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಅನಧಿಕೃತ ರಾಯಭಾರಿಯಾಗಿ,ದೇಶ ವಿದೇಶಗಳಲ್ಲಿ ಪ್ರವಾಸ ತಮ್ಮ ವಿದ್ವತ್ಪೂರ್ಣ ವಾಗ್ಝರಿಯಿಂದ ಎಲ್ಲರ ಮನಸೂರೆಗೊಂಡಿದ್ದವರು.

jcwಸ್ವತಃ ಅತ್ಯುತ್ತಮ ಸಂಗೀತಗಾರರಾಗಿದ್ದ ಮಹಾರಾಜರು ಮೈಸೂರು ಸಂಸ್ಥಾನದ ಪ್ರಖ್ಯಾತ ಸಂಗೀತಗಾರರನ್ನು ಲಂಡನ್‌ ಸೇರಿದಂತೆ ಯುರೋಪಿನ ಎಲ್ಲ ಪ್ರಮುಖ ನಗರಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಕರ್ನಾಟಕ ಸಂಗೀತದ ಅದ್ದೂರಿ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೇ, ಅಲ್ಲಿನ ರೇಡಿಯೋ ವಾಹಿನಿಗಳಿಗೂ ಮೈಸೂರು ಸಂಸ್ಥಾನದ ‌ ಕಲಾವಿದರುಗಳನ್ನು ಪರಿಚಯಿಸಿ ಕರ್ನಾಟಕ ಸಂಗೀತದ ಸೌರಭವನ್ನು ವಿಶ್ವಾದ್ಯಂತ ಪಸರಿಸಿದ್ದರು. ಇದಲ್ಲದೇ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಪಾಶ್ಚಾತ್ಯ ಸಂಗೀತ ಪ್ರಕಾರವು ತಿಳಿದಿದ್ದರಿಂದ ಅವರು ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತವನ್ನು ಸಂಯೋಜಿಸಿ ಜಾಝ್ ರೀತಿಯ ಕಾರ್ಯಕ್ರಮಗಳನ್ನು ಆಗಿನ ಕಾಲದಲ್ಲಿಯೇ ಪ್ರಸ್ತುತ ಪಡಿಸಿ ಅಲ್ಲಿಯ ಕಲಾರಸಿಕರ ಮನ್ನಣೆಗೆ ಪಾತ್ರರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸಾ ಮೆರಗನ್ನು ನೀಡಿದ್ದಲ್ಲದೇ, ಬಿ. ಎಂ ಶ್ರೀಕಂಠಯ್ಯನವರ ಸಾರಥ್ಯದಲ್ಲಿ ಹಳೆಯ ಮತ್ತು ಹೊಸಾ ಸಾಹಿತ್ಯದ ಪ್ರಚಾರ ಮತ್ತು ಪೋಷಣೆ, ವ್ಯಾಸಂಗ ಗೋಷ್ಠಿ, ವಿಮರ್ಶೆ, ಪರಿಶೋಧನೆ, ಸಮ್ಮೇಳನ, ವಸಂತೋತ್ಸವ, ಉಪನ್ಯಾಸ, ನಾಟಕ, ಗಮಕ ಕಲೆ, ಜನಪದ ಸಾಹಿತ್ಯ ಮಕ್ಕಳ ಸಾಹಿತ್ಯ ಎಲ್ಲವನ್ನೂ ಹಳ್ಳಿ ಹಳ್ಳಿಗಳಿಗೆ ತಲುಪುವಂತೆ ಮಾಡಿದ್ದರು.

jc21947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟಾಗ, ಸರ್ದಾರ್ ವಲ್ಲಭಾಯಿಪಟೇಲ್ ಅವರ ನೇತೃತ್ವದಲ್ಲಿ 565 ಸಂಸ್ಥಾನಗಳನ್ನು ಭಾರತ ಗಣತಂತ್ರಕ್ಕೆ ಸೇರಿಕೊಳ್ಳಲು ಕೇಳಿಕೊಂಡಾಗ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸಂತೋಷದಿಂದ ಮರು ಮಾತನಾಡದೇ, ಮೊತ್ತ ಮೊದಲಿಗರಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಕೊಳ್ಳಲು ಒಪ್ಪಿಕೊಂಡಾಗ ಸ್ವತಃ ಅಂದಿನ ಪ್ರಧಾನಿಗಳಾಗಿದ್ದ ನೆಹರರವರೇ ಖುದ್ದಾಗಿ ಮೈಸೂರಿಗೆ ಬರುತ್ತಾರೆ ಎಂದರೆ ನಮ್ಮ ಮೈಸೂರಿನ ಖ್ಯಾತಿ ಎಷ್ಟಿತ್ತು ಎಂಬುದನ್ನು ಕಂಡು ಕೊಳ್ಳಬಹುದಾಗಿದೆ. ಮುಂದೆ ಭಾಷಾವಾರು ರಾಜ್ಯಗಳ ಪುನರ್ವಿಂಗಡಣೆಯಾದಾಗ ವಿಶಾಲ ಮೈಸೂರಿನ (ಇಂದಿನ ಕರ್ನಾಟಕ) ಪ್ರಥಮ ರಾಜ್ಯಪಾಲರಾದರು (1956). ಈ ಹುದ್ದೆಯಲ್ಲಿರುವಾಗ ಅವರು ಒಂದು ರೂಪಾಯಿ ಸಂಬಳವನ್ನೂ ಸ್ವೀಕರಿಸಲಿಲ್ಲ ಎಂಬುದು ಗಮನಾರ್ಯವಾದ ಅಂಶವಾಗಿದೆ. ಮುಂದೆ 1964ರಲ್ಲಿ ಮದ್ರಾಸಿನ ರಾಜ್ಯಪಾಲರಾಗಿ ನೇಮಕಗೊಂಡು ಕೆಲವು ಕಾಲ ಆ ಹುದ್ದೆಯಲ್ಲೂ ಇದ್ದರು.

1938 ರಲ್ಲಿ ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು 1955 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯ ಡಿಲಿಟ್ ಪದವಿ, 1945ರಲ್ಲಿ ಬ್ರಿಟಿಷ್ ಸರ್ಕಾರದ ಜಿ.ಸಿ.ಎಸ್.ಐ ಬಿರುದು, 1946ರಲ್ಲಿ ಜೆ.ಸಿ.ಬಿ.ಬಿರುದು, 1947ರಲ್ಲಿ ಬನಾರಸ್ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಲಾಸ್ ಪದವಿಗಳಿಗೆ ಪಾತ್ರರಗಿದ್ದರು. ನೀಡಿ ಗೌರವಿಟ್ದವು.

ಸತ್ಯಪ್ರೇಮಕುಮಾರಿ ಮತ್ತು ತ್ರಿಪುರಸುಂದರಮ್ಮಣ್ಣಿ ಎಂಬ ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿದ್ದ ಇವರಿಗೆ ಐದು ಮಂದಿ ಹೆಣ್ಣು ಮಕ್ಕಳು ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂಬ ಮಗನಿದ್ದು, ತಮ್ಮ ಅಧಿಕಾರಾವಧಿಯ ನಂತರ ಪುರಾಣ ಮತ್ತು ಧಾರ್ಮಿಕ ಗ್ರಂಥಗಳ ಶ್ರವಣ ಮಾಡುತ್ತಾ ನೆಮ್ಮದಿಯಾಗಿ ಜೀವನ ಕಳೆಯುತ್ತಿದ್ದ ಸಂದರ್ಭದಲ್ಲಿಯೇ ಸೆಪ್ಟೆಂಬರ್ 23,1974 ರಂದು ಬೆಂಗಳೂರಿನಲ್ಲಿ ಶ್ವಾಸಕೋಶದ ಸಂಬಂಧಿತ ಖಾಯಿಲೆಗೆ ಬಲಿಯಾಗಿ ನಿಧನರಾಗುತ್ತಾರೆ.

Screenshot 2020-07-18 at 2.46.00 PMಬೆಂಗಳೂರಿನಲ್ಲಿ ಜೆ.ಸಿ ನಗರ, ಜೆ,ಸಿ ರಸ್ತೆಗಳಲ್ಲದೇ, ಜಯಚಾಮರಾಜೇಂದ್ರ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರನ್ನು ಇಡುವ ಮೂಲಕ ಇವರ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಿದ್ದಾರೆ. ಕಳೆದ ವರ್ಷ ಅವರ ಜನ್ಮಶತಾಬ್ಧಿಯ ಅಂಗವಾಗಿ ಲಾಲ್ ಬಾಗ್ ಫಲಪುಪ್ಷ ಪ್ರದರ್ಶನವನ್ನು ಮೀಸಲಿಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಗೌರವನ್ನು ಜನ್ಮಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಿದೆ.

jc1ಹೀಗೆ ಮೈಸೂರು ರಾಜ ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರ ಅಳ್ವಿಕೆಯಲ್ಲಿ ಮೈಸೂರು ಅರಸು ಸಂಸ್ಥಾನದ ಕೀರ್ತಿ ಪತಾಕೆ ವಿಶ್ವದ ಎಲ್ಲೆಡೆ ಝಗಮಗಿಸುವಂತಾದರೇ ಅದನ್ನು ಮತ್ತಷ್ಟೂ ಎತ್ತರಕ್ಕೇರಿಸಿದ ಕೀರ್ತಿಗೆ . ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಅವರು ಪಾತ್ರರಾಗಿ ರಾಜಯೋಗಿಯಾಗಿ ನಿಜಕ್ಕೂ ಪ್ರಾತಃಸ್ಮರಣೀಯರಾಗಿದ್ದಾರೆ. ಅವರ 101ನೇ ಜಯಂತಿಯಾದ ಇಂದು ಆವರು ಮಾಡಿದಂತಹ ಸಾಮಾಜಿಕ ಸುಧಾರಣೆಗಳನ್ನು ಸ್ಮರಿಸಿಕೊಂಡು ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸೋಣ.

ಏನಂತಿರೀ?

ಈ ಲೇಖನವನ್ನು ಬರೆಯಲು ಪ್ರೇರೇಪಿಸಿದ ಆತ್ಮೀಯರಾದ ಶ್ರಿಯುತ ಅರೇನಳ್ಳಿ ಧರ್ಮೇಂದ್ರ ಅವರಿಗೆ ಪ್ರೀತಿಪೂರ್ವಕ ಧನ್ಯವಾದಗಳು

ಬಾಳಗಂಚಿ  ಹೆಬ್ಬಾರಮ್ಮ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಸುಮಾರು 400-500 ಮನೆಗಳಿರುವ ಅಂದಾಜಿನ ಪ್ರಕಾರ 3000 ಜನರು ವಾಸಿಸುತ್ತಿರುವ ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದೆ. ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ.

ಹೊನ್ನಾದೇವಿ ಮತ್ತು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಗಳನ್ನು ಹೊರತು ಪಡಿಸಿದಲ್ಲಿ ಊರಿನಲ್ಲಿ ಎಲ್ಲರೂ ಭಯ ಭಕ್ತಿಗಳಿಂದ ಪೂಜಿಸುವುದೇ ಹೆಬ್ಬಾರಮ್ಮನಿಗೆ. ಹೆಬ್ಬಾರಮ್ಮ ದೇವಿಯಾದದ್ದೂ ಒಂದು ರೋಚಕವಾದ ಕಥೆಯೇ. ಹಿಂದೆ ಬಾಳಗಂಚಿ ಅಗ್ರಹಾರವೆಂದೇ ಪ್ರಸಿದ್ದವಾಗಿ ಸುಮಾರು ಬ್ರಾಹ್ಮಣರ ಮನೆಗಳು ಇದ್ದವಂತೆ ಅಲ್ಲಿಯ ಗ್ರಾಮದೇವತೆಗೆ ನವಮಾಸ ತುಂಬಿದ ಗರ್ಭಿಣಿಯನ್ನು ಬಲಿಯಾಗಿ ಕೊಡುವ ಪದ್ದತಿ ರೂಢಿಯಲ್ಲಿತ್ತು. ಅದೊಮ್ಮೆ ಊರಿನ ಶಾನುಭೋಗರ ಮನೆಯವರ ಪಾಳಿ ಬಂದಾಗ ಆಕೆಯ ಮನೆಯ ಹೆಣ್ಣುಮಗಳನ್ನು ದೇವಿಗೆ ಬಲಿಕೊಡಲು ಸಿದ್ಧವಾದಾಗ ಅದೊಂದು ಅಗೋಚರ ಶಕ್ತಿಯ ಪ್ರಭಾವದಿಂದಾಗಿ ಭಾರೀ ಪ್ರಕಾಶಮಾನವಾದ ಬೆಳಕೊಂದು ಬೀರಿ ಎಲ್ಲರೂ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಆಕೆ ಅದೃಶ್ಯಳಾಗಿ ಒಂದು ಪದಕವಾಗಿ ಮಾರ್ಪಟ್ಟು ಹೊನ್ನಾದೇವಿಯ ಕೊರಳಲ್ಲಿ ಹಾರವಾಗುತ್ತಾಳೆ. ಅಂದಿನಿಂದ ಊರಿನವರೆಲ್ಲರೂ ಸೇರಿ ಹೊನ್ನಾದೇವಿಗೆ ಯಾವುದೇ ನರ ಬಲಿಯಾಗಲೀ ಪ್ರಾಣಿಬಲಿಯಾಗಲೀ ಕೊಡುವುದನ್ನು ನಿಷೇಧಿಸುತ್ತಾರೆ. ಅದೊಂದು ದಿನ ಹೊನ್ನಾದೇವಿಯ ಅರ್ಚಕರು ಪ್ರಸಾದ ರೂಪದಲ್ಲಿ ದೇವಿಯ ಮೇಲಿನ ಹೂವನ್ನು ಭಕ್ತಾದಿಗಳಿಗೆ ಕೊಡುವ ಸಂದರ್ಭದಲ್ಲಿ ಹೂವಿನ ಜೊತೆ ಈ ಪದಕವನ್ನೂ ಊರಿನ ಹರಿಜನಕೇರಿಯ ಭಕ್ತರೊಬ್ಬರಿಗೆ ಕೊಟ್ಟು ಬಿಡುತ್ತಾರೆ. ಹೀಗೆ ಅಚಾನಕ್ಕಾಗಿ ಹರಿಜನ ಕೇರಿ ಪ್ರವೇಶಿಸಿದ ಆ ಪದಕವನ್ನು ಅವರು ಹಿಂದಿರುಗಿಸಲು ನಿರಾಕರಿಸಿ ತಮ್ಮನ್ನು ಉದ್ಧಾರ ಮಾಡಲು ಹೊನ್ನಾದೇವಿಯೇ ದೇವತೆಯಂತೆ ಈ ರೂಪದಲ್ಲಿ ಬಂದಿರುವಳೆಂದು ಭಾವಿಸಿ ಆಕೆಯನ್ನು ಹೆಬ್ಬಾರಮ್ಮನ ರೂಪದಲ್ಲಿ ಪೂಜಿಸಲಾರಂಭಿಸುತ್ತಾರೆ. ಕಾಲ ಕ್ರಮೇಣ ನಮ್ಮೂರಿನಲ್ಲಿ ಅಸ್ಪೃಶ್ಯತೆಯ ಪಿಡುಗು ಕಡಿಮೆಯಾಗಿ ಹೊಲೆಯರ ಹಟ್ಟಿ ಎಂದು ಕರೆಯುತ್ತಿದ್ದದ್ದನ್ನು ದೊಡ್ಡ ಕೇರಿ ಎಂದು ಮರುನಾಮಕರಣ ಮಾಡಿ, ವರ್ಷಕ್ಕೊಮ್ಮೆ ಊರ ಹಬ್ಬದ ಸಮಯದಲ್ಲಿ ಹೆಬ್ಬಾರಮ್ಮನನ್ನು ಹೊತ್ತಿರುವ ಪೂಜಾರಿಗಳು ಶಾನುಭೋಗರ ಮನೆಗಳಿಗೆ ಹೋಗಿ ಮಡಿಲು ತುಂಬಿಸಿಕೊಳ್ಳುತ್ತಾಳೆ. ಹೆಬ್ಬಾರಮ್ಮತಮ್ಮ ಮನೆಗಳಿಗೆ ಬರುವ ಸಮಯದಲ್ಲಿ ಶ್ಯಾನುಭೋಗರ ಮನೆಯವರು ತಮ್ಮ ಮನೆಯ ಹೆಣ್ಣು ಮಗಳಿಗೆ ಸಲ್ಲಬೇಕಾದ ಸಕಲ ಮರ್ಯಾದೆಯೊಂದಿಗೆ, ಸೀರೆ ಮತ್ತು ಕುಪ್ಪಸ ಮತ್ತು ಯಥಾ ಶಕ್ತಿ ದಕ್ಷಿಣೆಯೊಂದಿಗೆ ಹೆಬ್ಬಾರಮ್ಮನಿಗೆ ಮನೆಯ ಹೆಂಗಳೆಯರೆಲ್ಲರೂ ಮಡಿಲು ತುಂಬಿ ಆರತಿ ಬೆಳಗಿ ತಮ್ಮ ಮನೆಯಲ್ಲಿ ಸದಾಕಾಲವು ಸುಭಿಕ್ಷವಾಗಿರಲಿ ಎಂದು ಪುನಃ ಆಕೆಯ ಮಡಿಲಿನಿಂದ ನಾಲ್ಕು ಕಾಳು ಅಕ್ಕಿಯನ್ನು ಪಡೆದು ಕೊಳ್ಳುತ್ತಾರೆ ಎನ್ನುವುದು ಒಂದು ದೃಷ್ಟಾಂತ.

ಅದೇ ರೀತಿ ಮತ್ತೊಂದು ದೃಷ್ಟಾಂತದ ಪ್ರಕಾರ ಸಪ್ತಮಾತೃಕೆಯರಾದ ಹೊನ್ನಾದೇವಿ, ಹೆಬ್ಬಾರಮ್ಮ, ಚಾವಟಿಯಮ್ಮ, ಚೌಡೇಶ್ವರಿ, ಮಾರಿಯಮ್ಮ, ಮಸಣಕಮ್ಮ ಮತ್ತು ಮಣಿಯಮ್ಮ ದೇವತೆಗಳು ಭೂಲೋಕ್ಕೆ ಬಂದು ಅಲ್ಲೊಂದು ಕಡೆ ವಿಶ್ರಾಂತಿ ಪದೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವರಿಗೆಲ್ಲಾ ಹಸಿವಾಗಿ ಒಬ್ಬೊಬ್ಬರು ಒಂದೊಂದು ಪ್ರದೇಶಕ್ಕೆ ಊಟಕ್ಕೆ ಹೋಗುವುದಾಗಿ ನಿರ್ಧರಿಸಿ, ಬಾಳಗಂಚಿಯ ಅಗ್ರಹಾರದ ಕಡೆಗೆ ಹೊನ್ನಾದೇವಿ ಹೋದರೆ, ಹರಿಜನ ಕೇರಿಯ ಕಡೆಗೆ ಹೆಬ್ಬಾರಮ್ಮ ಮತ್ತು ಚಾವಟಿಯಮ್ಮ ಹೋಗುತ್ತಾರೆ. ಅದೇ ರೀತಿ ಚೌಡೇಶ್ವರಿ ಹಿರೀಸಾವೆಯಲ್ಲಿ ನೆಲೆಸಿದರೆ, ಮಾರಿಯಮ್ಮ ಹೊನ್ನಮಾರನಹಳ್ಳಿ ಗೌಡರ ಹಳ್ಳಿಯಲ್ಲಿ ಮಸಣಕಮ್ಮ(ಆಡು ಭಾಷೆಯಲ್ಲಿ ಮಶ್ಲಕಮ್ಮ) ನೆಲೆಸುತ್ತಾರೆ, ಕಡೆಯದಾಗಿ ಮಣಿಯಮ್ಮ ಮಾತ್ರ ಊರಿನ ಹೊರಗೆ ಉಳಿದು ಕೊಂಡು ಕಾಡಿನಲ್ಲಿ ಅಲ್ಲಿಲ್ಲಿ ಅಲೆದಾಡುತ್ತಾ ಇರುತ್ತಾಳೆ ಎಂಬ ಪ್ರತೀತಿ ಇದೆ. ವರ್ಷಕ್ಕೊಮ್ಮೆ ಊರಿನ ಹಬ್ಬದ ಸಮಯದಲ್ಲಿ ಹಿರೀಸಾವೆ ಚೌಡೇಶ್ವರಿ ಹೊರತು ಪಡಿಸಿ (ನಮ್ಮ ಊರಿನ ಹಬ್ಬದ ಒಂದು ದಿನ ಮುಂಚಿತವಾಗಿ ಆ ಊರಿನಲ್ಲಿ ಸ್ಥಳೀಯವಾಗಿಯೇ ಊರ ಹಬ್ಬವನ್ನು ಆಚರಿಸಲಾಗುತ್ತದೆ) ಉಳಿದೆಲ್ಲಾ ದೇವತೆಗಳನ್ನು ಒಟ್ಟಾಗಿ ಸೇರಿಸಿ ಹತ್ತು ಹದಿನಾರು ಹಳ್ಳಿಗಳ ಜನರ ಸಮ್ಮುಖದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಜಾತಿಯ ಬೇಧಭಾವವಿಲ್ಲದೆ ಅಸ್ಪೃಷ್ಯತೆಯ ತಾರತಮ್ಯತೆ ಇಲ್ಲದೇ ಭಾವೈಕ್ಯದಿಂದ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವ ಪದ್ದತಿ ನಮ್ಮೂರಿನಲ್ಲಿ ರೂಢಿಯಲ್ಲಿದೆ.

ನಮ್ಮೂರ ಹಬ್ಬದ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ಲೇಖನಗಳಿಂದ ತಿಳಿಯಬಹುದಾಗಿದೆ.

ಇಂತಹ ಇತಿಹಾಸವುಳ್ಳ ಶ್ರೀ ಹೆಬ್ಬಾರಮ್ಮನ ಗುಡಿ ಬಹಳ ಚಿಕ್ಕದಾಗಿದ್ದು ಶಿಥಿಲಾವಸ್ಥೆಗೆ ತಲುಪಿದ್ದದ್ದನ್ನು ಗಮನಿಸಿ ಊರಿನ ಎಲ್ಲರೂ ಸೇರಿ ಯಥಾಶಕ್ತಿ ಧನ ಸಹಾಯ ಮಾಡಿದ ಪರಿಣಾಮ ವಿಕಾರೀ ಸಂವತ್ಸರದ ಮಾಘ ಮಾಸದಲ್ಲಿ ಹೆಬ್ಬಾರಮ್ಮನ ದೇವಸ್ಥಾನ ಪುನರ್ನಿಮಾಣ ಮಾಡಿ 48 ದಿನಗಳ ಕಾಲದ ಮಂಡಲ ಪೂಜೆಯನ್ನು ಸಾಂಗೋಪಾಂಗವಾಗಿ ಪೂಜಾಕೈಂಕರ್ಯಗಳನ್ನು ಮಾಡಿ ಕೊನೆಯ ದಿನ ಊರಿನ ರಾಜ ಬೀದಿಯಲ್ಲಿ ಅದ್ದೂರಿಯಾಗಿ ಹೊನ್ನಾದೇವಿಯ ಮೆರವಣಿಗೆ ಮಾಡಿ ದೇವಿಯನ್ನು ಗುಡಿ ತುಂಬಿಸಲಾಯಿತು.

ಆ ಮೆರವಣಿಗೆಯ ರಸಕ್ಷಣಗಳನ್ನು ಈ ವೀಡೀಯೋ ಮೂಲಕ ಕಣ್ತುಂಬ ನೋಡಿ ಆನಂದಿಸಿ ಮತ್ತು ದೇವಿಯ ಕೃಪೆಗೆ ಪಾತ್ರರಾಗೋಣ.

ಏನಂತೀರೀ?

ಅಣ್ಣಾ, ಮತ್ತೆ ಯಾವಾಗ ಸಿಗೋಣ?

ಜಗಣ್ಣಾ, ನಮಸ್ಕಾರ. ಎಲ್ಲಿದ್ದೀಯಾ? ಹೇಗಿದ್ದೀಯಾ? ಅಂತಾ ಫೋನ್ ಮಾಡಿದ್ರೆ, ಹಾಂ!! ಹೇಳಣ್ಣಾ, ಇಲ್ಲೇ ಕೆಲ್ಸದ್ ಮೇಲೆ ಇದ್ದೀನಿ. ಅಂತಾ ಶುರುವಾಗುತ್ತಿದ್ದ ನಮ್ಮ ಫೋನ್ ಸಂಭಾಷಣೆ ಕನಿಷ್ಟ ಪಕ್ಷ ಅರ್ಧ ಘಂಟೆಯವರೆಗೂ ನಡೆದು, ನಮ್ಮಿಬ್ಬರ ಕೆಲಸಕಾರ್ಯಗಳು, ನಂತರ ನಮ್ಮಿಬ್ಬರ ಮನೆಯವರೆಲ್ಲರ ಯೋಗಕ್ಷೇಮ ಅದಾದ ನಂತರ ನಮ್ಮ ಸಂಬಂಧೀಕರು, ನಮ್ಮೂರಿನ ಕುತೂಹಲಕಾರಿ ವಿಷಯಗಳನ್ನು ವಿಚಾರಿಸಿಕೊಂಡ ನಂತರ, ಒಂದೋ ನಾನು ಆಫೀಸ್ ತಲುಪಿರಬೇಕು ಇಲ್ಲವೇ ನಮ್ಮಿಬ್ಬರಿಗೆ ಬೇರಾವುದೋ ಕರೆ ಬಂದಾಗ, ಸರಿ ಅಣ್ಣಾ ಮತ್ತೇ ಸಿಗೋಣ ಎಂದು ಮಾತು ಮುಗಿಸಿ ಮತ್ತೊಂದು ದಿನ ಇದೇ ರೀತಿಯ ಮಾತು ಕಥೆ ಮುಂದುವರೆಯುತ್ತಿತ್ತು.

ಅಣ್ಣಾ ತಮ್ಮಂದಿರ ಸಂಬಂಧ ಎಂದರೆ ಹೀಗೇ ತಾನೇ ಇರ್ಬೇಕು? ಅದು ನಿಂತ ನೀರಾಗಿರದೇ, ಸದಾ ಸ್ವಚ್ಚಂದವಾಗಿ ಹರಿಯುವ ಶುಭ್ರ, ಕಲುಶಿತವಾಗದ ಶುಧ್ಧ ನೀರಿನಂತೆ ಇರಬೇಕು. ನಮ್ಮ ತಾತ ನಂಜುಂಡಯ್ಯನವರು ಮತ್ತು ಅವರ ಅಣ್ಣ ರಾಮಯ್ಯನವರು ಒಡಹುಟ್ಟಿದವರು. ಅವರಿಬ್ಬರ ಧರ್ಮ ಪತ್ನಿಯರಾದ ಚೆನ್ನಮ್ಮ ಮತ್ತು ಸುಂದರಮ್ಮನವರು ಓರಗಿತ್ತಿಯರಾದರೂ, ಅವರಿಬ್ಬರೂ ಒಡ ಹುಟ್ಟಿದ ಅಕ್ಕ ತಂಗಿಯರಿಗಿಂತ ಅನ್ಯೋನ್ಯವಾಗಿದ್ದವರು. ಹಾಗಾಗಿಯೇ ನಮ್ಮ ತಂದೆ ಮತ್ತು ಅವರ ಒಡ ಹುಟ್ಟಿದವರು ತಮ್ಮ ದೊಡ್ಡಮ್ಮನನ್ನೇ ಅಮ್ಮಾ ಎಂದು ಮತ್ತು ಹೆತ್ತ ತಾಯಿ ಮತ್ತು ತಂದೆಯವರನ್ನು ಚಿಕ್ಕಮ್ಮ-ಚಿಕ್ಕಪ್ಪಾ ಎಂದು ಸಂಭೋದಿಸುತ್ತಿದ್ದರೆಂದರೆ ನಮ್ಮ ಅಭಿಭಕ್ತ ಕುಟುಂಬ ಹೇಗೆತ್ತೆಂಬ ಕಲ್ಪನೆ ಎಲ್ಲರಿಗೂ ಮೂಡುತ್ತದೆ. ನಮ್ಮ ತಾತನವರ ಅಣ್ಣಂದಿರು ಚಿಕ್ಕವಯಸ್ಸಿನಲ್ಲಿಯೇ ಅಕಾಲಿಕ ಮರಣ ಹೊಂದಿದ ಪರಿಣಾಮವಾಗಿ, ನಮ್ಮ ತಾತನವರು, ತನ್ನ ಆಣ್ಣಂದಿರ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆಯೇ ಪಾಲಿಸಿ ಪೋಷಿಸಿ ಅವರಿಗೆ ತಕ್ಕ ಮಟ್ಟಿಗಿನ ವಿದ್ಯಾಭ್ಯಾಸ ಕೊಡಿಸಿ ಕಾಲ ಕಾಲಕ್ಕೆ ಮದುವೆ, ಮುಂಜಿ, ಬಾಣಂತನಗಳನ್ನು ಮುಗಿಸಿ ತಮ್ಮ ಜವಾಬ್ಧಾರಿಯನ್ನು ನಿಭಾಯಿಸಿದ್ದರು.

ಇಂತಹ ಮಧುರ ಬಾಂಧವ್ಯದಿಂದಾಗಿಯೇ ನಮ್ಮ ದೊಡ್ಡಪ್ಪ ಸತ್ಯಣ್ಣ (ಸತ್ಯನಾರಾಯಣ) ಮತ್ತು ನಮ್ಮ ತಂದೆ ಇಬ್ಬರೂ ಒಡ ಹುಟ್ಟಿದವರಂತೆಯೇ ಅನ್ಯೋನ್ಯವಾಗಿದ್ದರೆ, ಅವರಿಬ್ಬರನ್ನೂ ಮೀರಿಸುವಂತೆ ಅವರಿಬ್ಬರ ಧರ್ಮಪತ್ನಿಯರಾದ ಸರೋಜಮ್ಮನವರು ಮತ್ತು ನಮ್ಮ ತಾಯಿಯವರೂ ಸಹಾ ತಮ್ಮ ಅತ್ತೆಯಂದಿರ ಸತ್ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಿ ಸ್ವಂತ ಅಕ್ಕ-ತಂಗಿ ತಂಗಿಯರಂತೇ ಇದ್ದು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಇದೇ ಕಾರಣದಿಂದಾಗಿ, ನಮ್ಮ ಮನೆಗಳಲ್ಲಿ ನಮ್ಮ ದೊಡ್ಡಪ್ಪನವರ ಮಕ್ಕಳನ್ನು ನಾವು ಸ್ವಂತ ಅಕ್ಕ- ಅಣ್ಣರಂತೆಯೇ ತಿಳಿದರೇ ಅವರೂ ಸಹಾ ನಮ್ಮನ್ನು ತಮ್ಮ ಸ್ವಂತ ತಮ್ಮ ಮತ್ತು ತಂಗಿಯರೆಂದೇ ಭಾವಿಸಿ ಇಂದಿಗೂ ಮಧುರ ಬಾಂದ್ಯವ್ಯವನ್ನು ಹೊಂದಿದ್ದೇವೆ. ಶಾಲೆಗ ರಜೆ ಬಂದಿತೆಂದರೆ, ಅಣ್ಣಂದಿರು ನಮ್ಮ ಮನೆಗೆ ಬಂದರೆ ಆಮೇಲೆ ನಾವು ಅವರ ಊರಿಗೆ ಹೋಗಿ ಮಜಾಮಾಡುತ್ತಿದ್ದದ್ದು ಇಂದಿಗೂ ನಮ್ಮೆಲ್ಲರ ಮನದಲ್ಲಿ ಹಚ್ಚಹಸಿರಾಗಿ ಉಳಿದಿದೆ. ನಮ್ಮ ಕುಟುಂಬದ ಯಾವುದೇ ಸಭೆ ಸಮಾರಂಭಗಳಿರಲಿ, ಒಬ್ಬರನ್ನೊಬ್ಬರು ಕೇಳದೇ, ವಿಚಾರಿಸದೇ ಮುಂದುವರೆದ್ದದ್ದೂ ನಮಗೆ ನೆನಪೇ ಇಲ್ಲ. ನಮ್ಮ ದೊಡ್ಡಪ್ಪನವರ ಅಕಾಲಿಕ ಮರಣಾನಂತರವಂತೂ ಇಡೀ ಕುಟಂಬದ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ದೊಡ್ಡಮ್ಮ ನಮ್ಮ ತಂದೆ-ತಾಯಿರಿಗೇ ವಹಿಸಿಬಿಟ್ಟಿದ್ದರು. ನಮ್ಮ ಅಣ್ಣಂದಿರೂ ಸಹಾ ತಮ್ಮ ಚಿಕ್ಕಪ್ಪನವರಿಗೆ ಹೇಳದೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ದೊಡ್ಡ ಅಣ್ಣಂದಿರ ಮದುವೆಯಲ್ಲಿ ನಮ್ಮ ತಂದೆ ತಾಯಿಯವರೇ ಹಸೆಮಣೆಯಲ್ಲಿ ಧಾರೆ ಎರೆಸಿಕೊಂಡರೆ ಕಡೆಯ ಅಣ್ಣನದೂ ಮತ್ತು ನನ್ನ ಮದುವೆ ಒಂದು ತಿಂಗಳ ಅಂತರದಲ್ಲೇ ಇದ್ದ ಕಾರಣ, ಎರಡು ನಾಂದಿ ಶಾಸ್ತ್ರಕ್ಕೆ ಒಬ್ಬರೇ ಕೂರಬಾರದೆಂಬ ಸಂಪ್ರದಾಯಕ್ಕೆ ಕಟ್ಟು ಬಿದ್ದು ಹಿರಿಯಣ್ಣ ಮತ್ತು ಅತ್ತಿಗೆ ಕೊನೆಯ ಅಣ್ಣನ ಮದುವೆಯಲ್ಲಿ ಧಾರೆ ಎರೆಸಿಕೊಂಡಿದ್ದರು. ನಮ್ಮ ತಂದೆಯವರು ಇರುವವರೆಗೂ ಅವರ ಮನೆಯ ಎಲ್ಲಾ ಆಹ್ವಾನ ಪತ್ರಿಕೆಗಳೂ ನಮ್ಮ ತಂದೆಯ ಹೆಸರಿನಲ್ಲಿಯೇ ಇರುವಂತಹ ಅವಿನಾಭಾವ ಸಂಬಂಧ ನಮ್ಮದು. ನಮ್ಮ ದೊಡ್ಡಪ್ಪ, ನಮ್ಮ ತಾಯಿ, ನಮ್ಮ ದೊಡ್ಡಮ್ಮ ಮತ್ತು ನಮ್ಮ ತಂದೆಯವರು ಕಾಲವಾದ ನಂತರವೂ ಈ ಮಧುರ ಬಾಂಧವ್ಯ ಇಂದಿಗೂ ನಮ್ಮ ನಡುವೆ ಹಾಗೆಯೇ ಮುಂದುವರೆಯುತ್ತಿದೆ ಮತ್ತು ಮುಂದುವರೆಯುತ್ತದೆ.

ಕೇವಲ ಹತ್ತು ದಿನಗಳ ಹಿಂದೆಯಷ್ಟೇ ನಮ್ಮ ಹಿರಿಯಣ್ಣ ಜಗದೀಶನ ಮಗಳ ಮದುವೆಯಲ್ಲಿ ನಾವೆಲ್ಲರೂ, ಹೂವಿಳ್ಯದ ದಿವಸದಿಂದ ವರಪೂಜೆ, ಧಾರೆ ಮತ್ತು ಆರತಕ್ಷತೆಯ ಮೂರೂ ದಿನಗಳಿಂದ ಸಕುಟುಂಬ ಸಮೇತರಾಗಿ ಸಂಭ್ರದಿಂದ ಓಡಾಡುತ್ತಾ ನಮ್ಮ ಕುಟುಂಬದಲ್ಲೇ ಅತ್ಯಂತ ವೈಭವೋಪೇತವಾಗಿ ಯಶಸ್ವಿಯಾಗಿ ನಡೆದ ಮದುವೆಗೆ ಸಾಕ್ಷಿಯಾಗಿದ್ದೆವು. ಮಧುಮಗಳ ಕೈಯಲ್ಲಿನ ಗೋರಂಟಿ ಕರಗುವ ಮುನ್ನವೇ, ಮದುವೆಗೆ ಮಾಡಿಸಿದ್ದ ಸಿಹಿತಿಂಡಿಗಳು ಎಲ್ಲರಿಗೂ ಹಂಚುವ ಮುನ್ನವೇ, ಮದುವೆಯ ಫೋಟೋ ಮತ್ತು ವೀಡಿಯೋಗಳು ನಮ್ಮ ಕೈ ಸೇರುವ ಮೊದಲೇ, ನಾವೆಲ್ಲಾರೂ ಇನ್ನೂ ಮದುವೆಯ ಸಂಭ್ರಮವನ್ನು ಮೆಲಕನ್ನು ಹಾಕುತ್ತಿರವಾಗಲೇ ಅದೇಕೋ ನಮ್ಮ ಕುಟುಂಬದ ಮೇಲೆ ಭಗವಂತ ಅವಕೃಪೆ ತೋರಿ ಹಠಾತ್ತನೆ ಬರಸಿಡಿಲು ಬಡಿದು ಭಾವಜೀವಿ, ಅಜನುಬಾಹು ಮತ್ತು ಅಜಾತ ಶತೃವಾಗಿದ್ದ ನಮ್ಮ ಅಣ್ಣ ಜಗದೀಶನನ್ನು ನಮ್ಮಿಂದ ದೂರಮಾಡಿ ಬಿಟ್ಟ. ಹೌದು ಜಾತಸ್ಯ ಮರಣಂ ಧೃವಂ ಎಂಬ ಗಾದೆಯೇ ಇದೆ. ಅಂದರೆ ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇ ಬೇಕೆಂಬುದು ಜಗದ ನಿಯಮ. ಆದರೆ ಸಾಯುವುದಕ್ಕೂ ಒಂದು ವಯಸ್ಸು ಇರುತ್ತದೆಯಲ್ಲವೇ? ಐವತ್ನಾಲ್ಕು ವರ್ಷ ಸಾಯುವ ವಯಸ್ಸಲ್ಲ ಅಲ್ಲವೇ? ಇನ್ನೂ ಮನೆ ಕಟ್ಟಿದ ಸಾಲ, ಮದುವೆಗೆ ಮಾಡಿದ ಸಾಲ, ಮಗಳ ಬಾಣಂತನ, ಮತ್ತೊಬ್ಬ ಮಗಳ ಮದುವೆ ಬಾಣಂತನ ಮುಗಿಸಿ ಮೊಮ್ಮಕ್ಕಳೊಂದಿಗೆ ಸ್ವಲ್ಪ ದಿನ ಆಟವಾಡುವಷ್ಟು ದಿನ ಕಾಯಲು ಆ ಯಮಧೂತರಿಗೆ ಆಗಲಿಲ್ಲವೇ? ಛೇ ಎಂತಹ ದುರ್ವಿಧಿ? ಇಂತಹ ಸಂಕಷ್ಟಗಳು ನಮ್ಮ ಶತೃಗಳಿಗೂ ಬಾರದಿರಲಿ.

ಜಗಣ್ಣಿ ನಿನ್ನ ಜೊತೆಗೆ ಕಳೆದ ಈ ಕೆಲವು ಸುಂದರ ಕ್ಷಣಗಳು ಸದಾಕಾಲವೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಉಳಿಯಲಿದೆ.

 • ನಮ್ಮ ತಾತ ನಂಜುಂಡಯ್ಯನವರು ಹರಿಕಥೆ ಮುಗಿಸಿಕೊಂಡು ಬರುವಾಗ ತಮ್ಮ ನಶ್ಯದ ಕರ್ಚೀಪಿನಲ್ಲಿ ಕಟ್ಟಿ ಕೊಂಡು ತರುತ್ತಿದ್ದ ತಿಂಡಿಗಳನ್ನು ಕಿತ್ತಾಡಿ ತಿನ್ನುತ್ತಿದ್ದದ್ದು.
 • ಅರಸೀಕೆರೆಯಲ್ಲಿ ನಡೆದ ಗೀತಕ್ಕನ ಮದುವೆಯಲ್ಲಿ ದೊಡ್ಡಪ್ಪ ನಮ್ಮೆಲ್ಲರಿಗೂ ಒಂದೇ ರೀತಿಯ ಬಟ್ಟೆಗಳನ್ನು ಹೊಲಿಸಿ ಕೊಟ್ಟದ್ದು.
 • ನಾವಿನ್ನೂ ಪ್ರೈಮರೀ, ನೀನು ಹೈಸ್ಕೂಲಿನಲ್ಲಿ ಇರುವಾಗಲೇ ಗೀತಕ್ಕನಿಗೆ ಮಕ್ಕಳಾಗಿ ಅಷ್ಟು ಸಣ್ಣ ವಯಸ್ಸಿನಲ್ಲಿಯೇ ನಾವೆಲ್ಲರೂ ಸೋದರ ಮಾವಂದಿರಾಗಿ ಭಡ್ತಿ ಹೊಂದಿದ್ದು.
 • ಭಾವನ ಗಿರಿಕನ್ಯೆ-ರಾಜಲಕ್ಷ್ಮೀ ಆಟೋದಲ್ಲಿ ನಾವೆಲ್ಲರೂ ಸುತ್ತಾಡುತ್ತಿದ್ದದ್ದು. ಅವರ ಮನೆಯಲ್ಲಿಯೇ ಮೊತ್ತ ಮೊದಲಿಗೆ ಟೇಪ್ ರೆಕಾರ್ಡರ್ ನೋಡಿ ನಲಿದದ್ದು.
 • ಕಲ್ಗುಂಡಿಯ ಕೂಲಿಮಠದಲ್ಲಿ ಕಲಿತ ಮಗ್ಗಿ, ಬಸವಾಪಟ್ಟಣದ ಕಾವೇರಿ ನದಿಯಲ್ಲಿ ಒಟ್ಟಿಗೆ ಕಲಿತ ಈಜು, ಬೇಲೂರಿನ ಚನ್ನಕೇಶವ ದೇವಸ್ಥಾನಗಳಲ್ಲಿ ಆಡಿದ ಕಣ್ಣಾಮುಚ್ಚಾಲೆ.
 • ಬಾಳಗಂಚಿ ಹೊನ್ನಮ್ಮನ ಜಾತ್ರೆಯಲ್ಲಿ ಕದ್ದು ಮುಚ್ಚಿ ಬೋಂಡ ಕೊಂಡು ತಿಂದದ್ದು.
 • ರಾಮಕೃಷ್ಣಾ ಚಿಕ್ಕಪ್ಪನ ಮದುವೆಯ ಫೋಟೋವೊಂದರಲ್ಲಿ, ಚಿಕ್ಕಮ್ಮನ ಕೈಯಲ್ಲಿ ಚಿಕ್ಕಪ್ಪನ ಫೋಟೋ ಇರುವ ಬದಲು ಅಚಾತುರ್ಯವಾಗಿ ನಿನ್ನ ಪೋಟೋ ಇದ್ದದ್ದು.
 • ನಾವೆಲ್ಲರೂ ಗಂಗೂರು ಗಾಯತ್ರಿ ಅತ್ತೆಯವರ ತೋಟದಲ್ಲಿ ಮನಸೋ ಇಚ್ಚೆ ಎಳನೀರು ಕುಡಿಯುತ್ತಾ, ಹೇಮಾವತಿ ಕಾಲುವೆಗಳಲ್ಲಿ ಗಂಟೆಗಟ್ಟಲೆ ಮೀಯುತ್ತಿದ್ದದ್ದು.
 • ಕೆಲ ಕಾಲ ನಮ್ಮ ಮನೆಯಲ್ಲಿ ನೀನು ಇದ್ದಾಗ, ನಿನ್ನ ಸೈಕಲ್ ಬಾರ್ ಮೇಲೆ ನನ್ನ ಚಿಕ್ಕ ತಂಗಿ, ಹಿಂದೆ ನನ್ನ ದೊಡ್ದ ತಂಗಿ ಮತ್ತು ನಾನು ಒಟ್ಟಿಗೆ ನಾಲ್ವರು ಕುಳಿತು ಕೊಂಡು ಶಾಲೆಗೆ ಹೋದದ್ದು.
 • ಬಿಇಎಲ್ ಇಂಡ್ರಸ್ಟ್ರಿಯಲ್ ಎಸ್ಟೇಟ್ ನಲ್ಲಿ ನೀನು ಕೆಲಸ ಮಾಡುತ್ತಿರುವಾಗ, ಮಧ್ಯಾಹ್ನದ ಶಾಲೆಗೆ ಹೋಗುವಾಗ ನಾವು ನಿನಗೆ ಊಟ ತಂದು ಕೊಡುತ್ತಿದ್ದದ್ದು. ನನಗೆ ಕಾಲಿಗೆ ಪೆಟ್ಟಾಗಿದ್ದಾಗ ನೀನು ಶಾಲೆಗೆ ಬಂದು ಕರೆದು ಕೊಂಡು ಹೋಗುತ್ತಿದ್ದದ್ದು.
 • ನಿನ್ನ ಮೊತ್ತ ಮೊದಲ ಎರಡಂಕಿಯ ಸಂಬಳ ನೋಡಿ ನಾವೆಲ್ಲರೂ ಹಿರಿ ಹಿರಿ ಹಿಗ್ಗಿದ್ದು.
 • ವಿಷ್ಣುವರ್ಧನ್ ಪರಮ ಅಭಿಮಾನಿಯಾದ ನೀನು ಅವರ ಹಾಗೇ ಅನುಕರಣೆ ಮಾಡುತ್ತಿದ್ದದ್ದು, ಅವರ ಪೋಟೋಗಳನ್ನು ಪರ್ಸ್ನಲ್ಲಿ ಇಟ್ಟಿಕೊಳ್ಳುತ್ತಿದ್ದದ್ದು.
 • ನಿನ್ನ ಪುಸ್ತಕಗಳ ಮಧ್ಯೆ ನೀನು ನಿನ್ನ ಮೊದಲ ಗೆಳತಿಯ ಹೆಸರನ್ನು ಬರೆದದ್ದನ್ನು ನಮ್ಮಪ್ಪನಿಗೆ ತಿಳಿಸಿ ನಿನಗೆ ಬುದ್ಧಿವಾದ ಹೇಳಿಸಿ, ಕೊನೆಗೆ ನಿನ್ನಿಂದ ನಾನು ಹೊಡೆಸಿಕೊಂಡಿದ್ದು.
 • ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮರಸತಾ ಸಂಗಮಕ್ಕೆ ನಮ್ಮ ಇಡೀ ಕುಟುಂಬದ ಅಬಾಲವೃದ್ಧರಾಗಿ ಪಾಲ್ಗೊಂಡದ್ದು.
 • ಬಸವೇಶ್ವರ ನಗರದಲ್ಲಿ ಅಚಾನಕ್ಕಾಗಿ ಒಮ್ಮೆ ಭೇಟಿಯಾದಾಗ ರಸಭರಿತ ದೊಡ್ಡ ದೊಡ್ಡ ಮಾವಿನ ಹಣ್ಣುಗಳನ್ನು ನೀನು ಕೊಡಿಸಿದ್ದು.
 • ಬಸವೇಶ್ವರ ನಗರದ ವ್ಯಾಸಾ ಪ್ಯಾರಡೈಸ್ ಎದುರಿಗಿದ್ದ ಮನೆಯಲ್ಲಿ ಅತ್ತಿಗೆಯವರನ್ನು ಅವರ ಮಾವನ ಮನೆಯಲ್ಲಿ ನೋಡಿ ತಾಂಬೂಲ ಬದಲಿಸಿಕೊಂಡಿದ್ದು.
 • ಮಲ್ಲೇಶ್ವರಂನ ತ್ರಿಪುರ ಸುಂದರಿ ಕಲ್ಯಾಣ ಮಂಟದಲ್ಲಿ ನಡೆದ ನಿನ್ನ ಮದುವೆ. ಕಾಕತಾಳಿಯವಾಗಿ ಅದೇ ಆ ಕಲ್ಯಾಣ ಮಂಟಪದಲ್ಲಿ ನಡೆದ ಕಡೆಯ ಮದುವೆಯಾಗಿ ಈಗ ಅಲ್ಲಿ ಭವ್ಯವಾದ ಅಪಾರ್ಟ್ಮೆಂಟ್ ಆಗಿದೆ.
 • ನಿನ್ನ ಮಗಳು ಸುರಕ್ಷಾ ಹುಟ್ಟಿ ನಮಗೆ ಮಾವನಿಂದ ಚಿಕ್ಕಪ್ಪಂದಿರಾಗಿ ಭಡ್ತಿ ಕೊಟ್ಟಿದ್ದು.
 • ನಮ್ಮ ಎಲ್ಲಾ ಶುಭ ಸಮಾರಂಭಗಳಿಗೆ ನಿನ್ನ ಆಟೋವಿನಲ್ಲಿಯೇ ಎಲ್ಲರ ಮನೆಗೂ ಹೋಗಿ ಆಹ್ವಾನ ಪತ್ರಿಕೆ ಕೊಟ್ಟು ಬರುತ್ತಿದ್ದದ್ದು.
 • ಬಾಳಗಂಚಿ ಹೊನ್ನಮ್ಮನ ಹಬ್ಬದಲ್ಲಿ ನಾವೆಲ್ಲರು ಸೇರಿ ಮಾಡಿದ ಹಬ್ಬದಲ್ಲಿ ನೀನು ಮಾಡಿದ ಬಿಸಿಬೇಳೆಬಾತ್.
 • ನಮ್ಮ ಮನೆಯ ಕಡೆ ಬಂದಾಗಲೆಲ್ಲಾ ತಪ್ಪದೇ ಮನೆಗೆ ಒಂದು ಕ್ಷಣವಾದರೂ ಬಂದು ಹೋಗುತ್ತಿದ್ದದ್ದು.
 • ನಮಗೆ ಯಾವುದೇ ಸಂಬಂಧೀಕರ ಫೋನ್ ನಂಬರ್ ಬೇಕಿದ್ದರೂ ನಾವೆಲ್ಲರೂ ನಿನ್ನನ್ನೇ ಅವಲಂಭಿಸುತ್ತಿದ್ದದ್ದು.
 • ನಮ್ಮ ಅಮ್ಮ ಮತ್ತು ಅಪ್ಪ ಹೋದಾಗ, ನನ್ನ ಜೊತೆ ಇದ್ದು ಯಾವ ಕ್ರಿಯಾಕರ್ಮಗಳಿಗೂ ಲೋಪವಾಗದಂತೆ ಮುಗಿಸಿದ್ದು.
 • ಮೊನ್ನೆ ನಿನ್ನ ಮಗಳ ಮದುವೆ ಮನೆಯಲ್ಲಿ ನೀನು ತೋರಿದ ತಾಳ್ಮೆಯನ್ನು ನೋಡಿ, ನಿಜಕ್ಕೂ ನಾನೇ ದಂಗಾಗಿ ಹೋಗಿದ್ದು.
 • ಭೌತಿಕವಾಗಿ ನೀನಿಂದು ನಮ್ಮೊಡನೆ ಇರದಿರಬಹುದು. ಆದರೆ ನೀನು ದಾನ ಮಾಡಿದ ನಿನ್ನೆರಡು ಕಣ್ಗಳಿಂದ ಎರಡು ಮನೆಯ ಜ್ಯೋತಿ ಬೆಳಗಲಿದೆ.

ನಿನ್ನ ಧೈರ್ಯ, ನಿನ್ನ ಹುಂಬತನ, ನಿನ್ನ ರಸಿಕತೆ, ನಿನ್ನ ನಗು, ನಿನ್ನ ಅತ್ಮೀಯತೆ, ನಿನ್ನ ಪ್ರೀತಿಯ ಅಪ್ಪುಗೆ, ನಮ್ಮ ಪ್ರತೀ ಸಂಭಾಷಣೆಯಾದ ನಂತರ ಒಬ್ಬರೊನ್ನಬ್ಬರು ಕೇಳಿಕೊಳ್ಳುತ್ತಿದ್ದ, ಅಣ್ಣಾ ಮತ್ತೆ ಯಾವಾಗ ಸಿಗೋಣ? ಅನ್ನೋದು ಇನ್ನು ಮುಂದೆ ಕೇವಲ ಸಿಹಿ ನೆನಪಾಗಿಯೇ ಉಳಿದು ಹೋಗಲಿದೆ. ಅಚಾನಕ್ಕಾಗಿ ನಮ್ಮನ್ನಗಲಿದ ನಿನ್ನ ಆತ್ಮಕ್ಕೆ ಆ ಭಗವಂತ ಸದ್ಗತಿಯನ್ನು ಕೊಡಲಿ. ಸದ್ಯಕ್ಕೆ ನೀನು ಯಾರ ರೂಪದಲ್ಲಾದರೂ ನಮ್ಮ ಕುಟುಂಬದಲ್ಲೇ ಮತ್ತೊಮ್ಮೆ ಹುಟ್ಟಿ ಬಾ. ಎಂದಷ್ಟೇ ನಾವು ಆ ಭಗವಂತನಲ್ಲಿ ಕೇಳಿಕೊಳ್ಳಬಹುದು.

ಏನಂತೀರೀ?

ಬಾಳಗಂಚಿ ಹೊನ್ನಾದೇವಿ ಹಬ್ಬ

ಹಿಂದಿನ ಲೇಖನದಲ್ಲಿ ನಮ್ಮೂರಿನ ಚೋಮನ ಹಬ್ಬದ ಬಗ್ಗೆ ತಿಳಿದುಕೊಂಡಿದ್ದೆವು. ಇಂದು ನಮ್ಮ ಊರಿನ ಗ್ರಾಮ ದೇವತೆ, ಹೊನ್ನಾದೇವಿ ಅಥವಾ ಹೊನ್ನಮ್ಮ ಅಥವಾ ಸ್ವರ್ಣಾಂಬಾ ದೇವಿಯ ಊರ ಹಬ್ಬದ ಬಗ್ಗೆ ತಿಳಿದುಕೊಳ್ಳೊಣ.

ಸಾವಿರಾರು ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ನಮ್ಮ ಬಾಳಗಂಚಿ ಗ್ರಾಮವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ವಂಶಸ್ಥ ನಾರಸಿಂಹದೇವ 76 ವೃತ್ತಿನಿರತ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಿದ್ದ ಎಂಬ ಬಗ್ಗೆ 1256ರಲ್ಲಿ ಬರೆಸಿದ ತಾಮ್ರ ಶಾಸನ ಸಾರುತ್ತದೆ. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಖ್ಯಾತರಾಗಿದ್ದ ಹಾಗೂ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ ಬುಕ್ಕರ ಗುರುಗಳೂ ಆಗಿದ್ದ ಶ್ರೀ ವಿದ್ಯಾರಣ್ಯರು ಕೂಡ ಭೇಟಿ ನೀಡಿ ಇಲ್ಲಿ ಮಠವನ್ನು ಸ್ಥಾಪಿಸಿದ್ದರು ಎಂದರೆ, ಶೃಂಗೇರಿಯ ಕೆಲವೊಂದು ಗ್ರಂಥದಲ್ಲಿ ಉಲ್ಲೇಖಿಸಿರುವ ಪ್ರಕಾರ ಗುರು ವಿದ್ಯಾರಣ್ಯರು ಹುಟ್ಟಿದ್ದು ನಮ್ಮ ಬಾಳಂಚಿಯಲ್ಲಿ. ಮತ್ತೆ ಕೆಲವರು ಇಲ್ಲಿಯೇ ವಿದ್ಯಾರಣ್ಯರು ತಪಸ್ಸು ಮಾಡಿದ ಸ್ಥಳ ಎಂದು ಕೆಲ ಬಲ್ಲವರು ಹೇಳುತ್ತಾರೆ. ಒಟ್ಟಿನಲ್ಲಿ ಗುರು ವಿದ್ಯಾರಣ್ಯರಿಗೂ ನಮ್ಮೂರಿಗೂ ಅವಿನಾವಭಾವ ಸಂಭಂಧವಿದೆ.

ಮುಸಲ್ಮಾನರ ಆಕ್ರಮಣದಿಂದ ಜರ್ಜರಿತವಾಗಿದ್ದ ಕಾಲದಲ್ಲಿ ,ಹಿಂದೂಗಳ ರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಲು ನಿರ್ಥರಿಸಿದ ಗುರು ವಿದ್ಯಾರಣ್ಯರು ಲೋಕರಕ್ಷಕಿಯಾದ ಪಾರ್ವತಿ ದೇವಿಯನ್ನು ಕುರಿತು ತಪವನ್ನು ಆಚರಿಸಿದಾಗ ದೇವಿ ಹೊನ್ನಿನ ಮಳೆಗರೆದಳಂತೆ. ಹೊನ್ನಿನ ಮಳೆ ಗರೆದ ಪಾರ್ವತಿಯನ್ನು ಹೊನ್ನಾದೇವಿ ಎಂದು ಸ್ತುತಿಸಿ, ವಿದ್ಯಾರಣ್ಯರು ಪೂಜಿಸಿದರೆಂದೂ, ಆ ತಾಯಿಯೇ ಇಲ್ಲಿ ನೆಲೆಸಿರುವ ಹೊನ್ನಾದೇವಿ ಎಂದೂ ಊರಿನ ಕೆಲವು ಹಿರಿಯರು ಹೇಳುತ್ತಾರೆ. ಅಂದಿನಿಂದಲೂ ಇಲ್ಲಿ ಅನೂಚಾನವಾಗಿ ಪೂಜೆ ನಡೆದು ಬಂದಿದ್ದು, ಹೊನ್ನಾದೇವಿ ಬಾಳಗಂಚಿ ಗ್ರಾಮದೇವತೆಯಾಗಿ ಬೇಡಿ ಬರುವ ಭಕ್ತರ ಇಚ್ಛೆಯನ್ನು ನೆರವೇರಿಸುತ್ತಾಳೆ, ಊರನ್ನು ಪೊರೆಯುತ್ತಿದ್ದಾಳೆ ಎಂಬುದು ಭಕ್ತರ ನಂಬಿಕೆ. ಈ ದೇವಿಗೆ ನೂರಾರು ವರ್ಷಗಳ ಹಿಂದೆ ಕಟ್ಟಿಸಿದ್ದ ಕಲ್ಲು ಕಟ್ಟಡದ ಪುಟ್ಟ ದೇವಾಲಯ ಸಂಪೂರ್ಣ ಶಿಥಿಲವಾಗಿ ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ಊರಿನ ಸಮಸ್ತ ಗ್ರಾಮಸ್ಥರೂ ಮತ್ತು ದೇಶದ್ಯಂತ ನೆಲೆಸಿರುವ ಹೊನ್ನಾದೇವಿ ಒಕ್ಕಲಿನವರು, ಹೊನ್ನಾದೇವಿ ಸೇವೆ ಹಾಗೂ ಅಭಿವೃದ್ಧಿ ಸಮಿತಿ, ಹಳೆಯ ದೇಗುಲ ಕೆಡವಿ, ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಸುಂದರ ದೇವಾಲಯ ನಿರ್ಮಾಣ ಮಾಡಿದ್ದಾರೆ.

ಪುನರ್ನಿರ್ಮಾಣಗೊಂಡ ನೂತನ ದೇವಾಲಯದಲ್ಲಿ ತಾಯಿ ಹೊನ್ನಾದೇವಿ, ಗಣಪತಿ ಹಾಗೂ ಕಾಲಭೈರವ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಕುಂಭಾಭಿಷೇಕವನ್ನು ದಕ್ಷಿಣಾಮ್ನೇಯ ಶ್ರೀಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ 2015ರ ಜೂನ್ 12ರಂದು ವಿಧ್ಯುಕ್ತವಾಗಿ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ಯುಗಾದಿ ಹಬ್ಬ ಮುಗಿದ ಮೊದಲನೇ ಗುರುವಾರ ಮೊದಲನೇ ಕಂಬ ಮತ್ತು ಎರಡನೇ ಗುರುವಾರ ಎರಡನೆಯ ಕಂಬ. ಅದಾಗಿ ಎರಡು ದಿನಗಳ ನಂತರದ ಶನಿವಾರ ಚೋಮನ ಹಬ್ಬ ಮುಗಿದ ನಂತರ ಮೂರನೇ ಗುರುವಾರವೇ ನಮ್ಮೂರ ಹೊನ್ನಮ್ಮನ ಜಾತ್ರೆ ಅರ್ಥಾತ್ ದೊಡ್ಡ ಹಬ್ಬ.

ಒಂದು ಕಾಲದಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದು ನರಸಿಂಹ ಅಗ್ರಹಾರ ಎನಿಸಿಕೊಂಡಿದ್ದ ಗರಳಪುರಿ ಎಂದು ಹೆಸರಾಗಿದ್ದ ನಮ್ಮೂರಿನಲ್ಲಿ ಇಂದು ಇರುವುದು ಐದೇ ಬ್ರಾಹ್ಮಣರ ಮನೆ ಅದರಲ್ಲಿ ಮೂರು ಮನೆ ಹೊನ್ನಾದೇವಿ ಮತ್ತು ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಅರ್ಚಕರ ಅಣ್ಣ ತಮ್ಮಂದಿರ ಮನೆಯಾದರೆ ನಾಲ್ಕನೆಯದು ಬಾಳಗಂಚಿಯ ಶಾನುಭೋಗರಾದ ನಮ್ಮ ಮನೆ ಮತ್ತೊಂದು ಪಕ್ಕದ ಊರಿನ ಶಾನುಭೋಗರಾದ ನಮ್ಮ ಬಂಧುಗಳ ಮನೆ. ಸದ್ಯಕ್ಕೆ ಐದರಲ್ಲಿ ಕೇವಲ ಮೂರು ಮನೆಯಲ್ಲಿ ಮಾತ್ರವೇ ವಾಸವಾಗಿದ್ದು, ನಮ್ಮ ಮನೆಯೂ ಸೇರಿದಂತೆ ಮತ್ತೊಂದು ಮನೆ ಕೇವಲ ಹಬ್ಬದ ಸಮಯದಲ್ಲಿ ಮಾತ್ರವೇ ದೀಪ ಹಚ್ಚುವಂತಾಗಿದೆ. ಹಿಂದೆಲ್ಲಾ, ಪ್ರತೀ ವರ್ಷ ಪರ್ಯಾಯವಾಗಿ ನಮ್ಮ ಮನೆಯಲ್ಲೋ ಇಲ್ಲವೇ ನಮ್ಮ ಬಂಧುಗಳ ಮನೆಯವರು ಹಬ್ಬದ ಹಿಂದಿನ ದಿನವಾದ ಬುಧವಾರವೇ ಹೊನ್ನಮ್ಮನ ಅರ್ಚಕರಿಗೂ ಮತ್ತು ಗುಡಿಗೌಡರಿಗೂ ತಿಳಿಸಿ ಹಬ್ಬದ ದಿನ ಬೆಳಿಗ್ಗೆ ಅಡ್ಡೆಯ ಸಮೇತ ಹೊನ್ನಾದೇವಿಯ ಉತ್ಸವಮೂರ್ತಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ತಾಯಿಗೆ ಹೊಸಾ ಸೀರೆ ಉಡಿಸಿ ಸರ್ವಲಂಕಾರಭೂಷಿತಳನ್ನಾಗಿ ಮಾಡಿ ಯತೇಚ್ಚವಾಗಿ ಹೂವಿನ ಅಲಂಕಾರ ಮಾಡುವ ಹೊತ್ತಿಗೆ ಅರ್ಚಕರು ಮನೆಗೆ ಬಂದು ಸಾಂಗೋಪಾಂಗವಾಗಿ ಪೂಜೆ ಮಾಡಿ ಮಂಗಳಾರತಿ ಮಾಡಿ ಮುಗಿಸಿದ ನಂತರ ಊರಿನಿಂದ ಹೊರಗಿರುವ ಹೊನ್ನಾದೇವಿ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ವಾದ್ಯ ಮತ್ತು ಡೋಲಿನ ಸಹಿತ, ಪತ್ತು ಮತ್ತು ಛತ್ರಿ ಚಾಮರಗಳ ಸಮೇತವಾಗಿ ಅಂದು ಮಾಡಿದ ನೈವೇದ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಹಿಂದೆಲ್ಲಾ ದೇವರ ಪಲ್ಲಕ್ಕಿ ಹೊರಲು ಸಾಕಷ್ಟು ಜನರಿದ್ದು ತಾಮುಂದು ನಾಮುಂದು ಎಂದು ಕಾಲು ಕಾಲಿಗೆ ಸಿಕ್ಕಿ ಕೊಳ್ಳುತ್ತಿದ್ದವರು ಇಂದು ವೆಂಕ, ನಾಣಿ, ಸೀನ ಎನ್ನುವ ಹಾಗೆ ಮೂರು ಮತ್ತೊಂದು ಜನರು ಮಾತ್ರ ಬೆಳಗಿನ ಉತ್ಸವದ ಸಮಯದಲ್ಲಿಉಪಸ್ಥಿತರಿರುವುದುನಿಜಕ್ಕೂ ಶೋಚನೀಯ ಮತ್ತು ಕಳವಳಕಾರಿಯಾಗಿದೆ, ಹೆಚ್ಚಿನವರು ಆಧುನಿಕತೆಯ ಜೀವನದ ಶೈಲಿಯ ಭಾಗವಾಗಿ, ನಾನಾ ರೀತಿಯ ಖಾಯಿಲೆ ಮತ್ತು ಕಸಾಲೆಗಳಿಂದಾಗಿ ದೇವರ ಪಲ್ಲಕ್ಕಿಯನ್ನೂ ಹೊರಲು ಸಾಧ್ಯವಾಗದಿರುವ ಪರಿಸ್ಥಿತಿಗೆ ಬಂದಿರುವ ಕಾರಣ, ಕಳೆದ ಮೂರು ವರ್ಷಗಳಿಂದ ಟ್ರಾಕ್ಟರ್ ಮುಖಾಂತರವೇ ದೇವರನ್ನು ತೆಗೆದುಕೊಂಡು ಹೋಗುತ್ತಿರುವುದು ನಿಜಕ್ಕೂ ವಿಷಾಧನೀಯವೇ ಸರಿ.

honnamma

ಇದೊಂದು ದಿವಸ ಮಾತ್ರವೇ, ಉತ್ಸವ ಮೂರ್ತಿಯನ್ನು ಊರ ಹೊರಗೆ ಇರುವ ಮೂಲ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನೂರಾರು ವರ್ಷಗಳ ಪುರಾತನವಾದ ನಾಲ್ಕೂವರೆ ಅಡಿ ಎತ್ತರದ ಪ್ರಭಾವಳಿ ಸಹಿತವಾದ ಕೃಷ್ಣ ಶಿಲೆಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರು ಪೂಜಿಸಿದ ಇದೊಂದು ಪರಮ ಪುಣ್ಯಕ್ಷೇತ್ರ ಎಂದು ಘೋಷಿಸಿದ ಶ್ರೀ ಹೊನ್ನಾದೇವಿಯ ಮೂಲ ವಿಗ್ರಹಕ್ಕೆ ಅಂದು ನಾನಾರೀತಿಯ ಪುಷ್ಪಗಳಿಂದ ಅಲಂಕರಿಸಿ, ಸಾಂಗೋಪಾಂಗವಾಗಿ ಪೂಜೆಗೈದು, ಜಾತ್ರೆಗೆ ಬಂದಿರುವ ಎಲ್ಲಾ ಮುತ್ತೈದೆಯರ ಲಲಿತಾ ಸಹಸ್ರನಾಮದ ಪಠಣದ ನಂತರ ನೆರೆದಿರುವ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ತಾಯಿ ಹೊನ್ನಮ್ಮನಿಗೆ ಮಂಗಳಾರತಿ ಬೆಳಗುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಆಲ್ಲಿ ಮಹಾಮಂಗಳಾರತಿ ಮುಗಿದ ನಂತರ ಸಮಸ್ತ ಭಕ್ತಾದಿಗಳೂ ಸರತಿಯಲ್ಲಿ ಬಂದು ಹಣ್ಣು ಕಾಯಿ ನೈವೇದ್ಯ ಮಾಡಿಸಿ, ದೇವಿಗೆ ಭಕ್ತಿ ಪೂರ್ವಕವಾಗಿ ಮಡಿಲಕ್ಕಿ ತುಂಬಿ ಕಣ್ತುಂಬ ದೇವಿಯ ದರ್ಶನ ಮಾಡಿಕೊಳ್ಳುತ್ತಿದ್ದರೆ, ಇನ್ನು ಹರಕೆ ಹೊತ್ತಿದ್ದರು ದೇವರಿಗೆ ತಮ್ಮ ಕೂದಲನ್ನು ಸಮರ್ಪಿಸಿ ದೇವಸ್ಥಾನದ ಮುಂದೆ ಇರುವ ಕಲ್ಯಾಣಿಯಲ್ಲಿ ಮಡಿಯುಟ್ಟು ದೇವರ ದರ್ಶನ ಪಡೆಯುತ್ತಾರೆ. ನಾವೆಲ್ಲಾ ಚಿಕ್ಕವರಿದ್ದಾಗ ಮತ್ತು ನಾವೆಲ್ಲಾ ಈಜುವುದನ್ನು ಕಲಿಯುತ್ತಿದ್ದಾಗ, ದೊಡ್ಡ ಕೆರೆಯ ನಾಲೆಯಿಂದ ಭರ್ತಿಯಾಗಿ ತುಂಬಿ ತುಳುಕುತ್ತಿದ್ದ ಕಲ್ಯಾಣಿ ಇಂದು ಮಳೆಯಿಲ್ಲರಿರುವ ಕಾರಣ, ದೊಡ್ಡ ಕೆರೆಯೂ ಬರಿದಾಗಿದೆ ಮತ್ತು ಕಲ್ಯಾಣಿಯೂ ಬರಿದಾಗಿದೆ. ಹಬ್ಬದ ಸಮಯದಲ್ಲಿ ಮೂರ್ನಾಲ್ಕು ಕೊಳವೇ ಬಾವಿಗಳಿಂದ ಕಲ್ಯಾಣಿಗೆ ನೀರನ್ನು ತುಂಬಿಸಲು ಪ್ರಯತ್ನಿಸುತ್ತಾರಾದರೂ ಹಿಂದಿನ ಗತ ವೈಭವ ಇಂದು ಇಲ್ಲದಾಗಿದೆ. ಕಳೆದ ಹತ್ತು ಹದಿನೈದು ವರ್ಷಗಳಿಂದಲೂ ಬರುವ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿರುವುದರಿಂದ ಬರುವ ಭಕ್ತಾದಿಗಳಿಗೆ ತಾಯಿ ಹೊನ್ನಮ್ಮ ಮನವನ್ನು ತಣಿಸಿದರೆ, ಇಲ್ಲಿಯ ಊಟೋಪಚಾರ ಭಕ್ತರ ಭವವನ್ನು ತುಂಬಿಸುತ್ತದೆ.

narasimha

ಪೂಜೆ ಮುಗಿದ ನಂತರ ಉತ್ಸವ ಮೂರ್ತಿಯನ್ನು ಪುನಃ ಹಿಂದಿರುಗಿ ಗುಡಿ ತುಂಬಿಸುವ ಮೊದಲು ಸದ್ಯದಲ್ಲಿ ಇರುವ ಎಲ್ಲಾ ಬ್ರಾಹ್ಮಣರ ಮನೆಗಳಿಗೂ ಹೋಗಿ ಹಣ್ಣು ಕಾಯಿ ಪೂಜೆ ಮಾಡಿಸುತ್ತಾರೆ. ಹಿಂದೆಲ್ಲಾ ಬಿಸಿಲಿನಲ್ಲಿ ದೇವರ ಅಡ್ಡೆಯನ್ನು ಹೊತ್ತು ತರುತ್ತಿದ್ದ ಕಾರಣ, ಎಲ್ಲರ ಕಾಲುಗಳನ್ನೂ ತಣ್ಣೀರಿನಲ್ಲಿ ತೊಳೆದು ಎಲ್ಲರಿಗೂ ತಂಪಾದ ಪಾನಕ ಮಾಡಿಕೊಡುತ್ತಿದ್ದರು. ಈಗೆಲ್ಲಾ ಆಧುನಿಕ ಶೈಲಿಗೆ ಮಾರುಹೋಗಿ ತರತರಹದ ಶರಬತ್ತುಗಳನ್ನು ಮಾಡಿಕೊಡುತ್ತಾರೆ. ದೇವರ ಉತ್ಸವ ಎಲ್ಲರ ಮನೆಗಳಿಗೂ ಹೋಗಿ ಕಡೆಗೆ ನಮ್ಮ ಆರಾಧ್ಯದೈವ ಗರಳಪುರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿದ ನಂತರ ಉತ್ಸವ ಮೂರ್ತಿಯನ್ನು ಗುಡಿ ತುಂಬಿಸಿದ ನಂತರ, ನರಸಿಂಹ ಸ್ವಾಮಿ ದೇವಾಸ್ಥಾನದಲ್ಲಿಯೂ ಕೂಡಾ ಸಾಂಗೋಪಾಂಗವಾಗಿ ಪೂಜೆ ನೆಡೆದು, ಬಂದಿರುವ ಎಲ್ಲಾ ಮುತ್ತೈದೆಯರಿಗೂ ಅರಿಶಿನ ಕುಂಕುಮ ಕೊಟ್ಟ ನಂತರ ನಮ್ಮ ಮನೆಯಿಂದ ಪಾನಕ ಮತ್ತು ಕಡಲೇಬೇಳೆ ಕೋಸಂಬರಿ ಮತ್ತು ನಮ್ಮ ಸಂಬಂಧೀಕರ ಮನೆಯ ಹಣ್ಣಿನ ರಸಾಯನದ ಸೇವೆ ನಡೆಯುತ್ತದೆ. ನಂತರ ಇದೇ ಚರ್ಪನ್ನು (ಹಾಸನ ಕಡೆ ದೇವರ ಪ್ರಸಾದಕ್ಕೆ ಚೆರ್ಪು ಎನ್ನುತ್ತಾರೆ) ನೆರೆದಿದ್ದ ಎಲ್ಲರಿಗೂ ಕೊಡುತ್ತಾರೆ.

ಇದಾದ ನಂತರ ನಮ್ಮ ಮನೆಯಲ್ಲೂ ಮತ್ತು ನಮ್ಮ ಸಂಬಂಧೀಕರ ಮನೆಯಲ್ಲಿ ಹಬ್ಬಕ್ಕೆ ಬಂದಿದ್ದ ಎಲ್ಲಾ ನೆಂಟರಿಷ್ಟರಿಗೂ ಮತ್ತು ಅಕ್ಕ ಪಕ್ಕದ ಊರಿನಿಂದ ಬರುವ ಎಲ್ಲಾರಿಗೂ ಅನ್ನ ಸಂತರ್ಪಣೆ ನಡೆಯುತ್ತಿತ್ತು. ಇಂದು ಹಬ್ಬಕ್ಕೆ ಬರುವವರ ಸಂಖ್ಯೆ ಬಹಳಷ್ಟು ಕಡಿಮೆ ಆಗಿರುವ ಕಾರಣ ಮತ್ತು ನಮ್ಮ ಮನೆಯೂ ಬಹಳಷ್ಟು ಪಾಳು ಬಿದ್ದಿರುವ ಕಾರಣ, ಇಂದು ನಾವು ಮತ್ತು ನಮ್ಮ ಸಂಬಂಧಿಗಳು ಒಟ್ಟಿಗೇ ಸೇರಿ ಅವರ ಮನೆಯಲ್ಲಿಯೇ ಸಂತರ್ಪಣೆ ನಡೆಯುತ್ತದೆ. ಇಂದಿಗೂ ಕೂಡ ಮಧ್ಯಾಹ್ನದ ಊಟಕ್ಕೆ ಸುಮಾರು ಐವತ್ತು ಅರವತ್ತು ಜನರು ಇದ್ದರೆ ಇನ್ನು ಸಂಜೆ ಅದರ ಸಂಖ್ಯೆ ಇನ್ನೂ ಹೆಚ್ಚಾಗಿಯೇ ಇರುತ್ತದೆ.

ಜಾತ್ರೆಯ ದಿನ ಬೆಳ್ಳಂ ಬೆಳಿಗ್ಗೆಯೇ, ದೇವಸ್ಥಾನದ ಸುತ್ತಲೂ ಬಾಳೇಹಣ್ಣು, ತೆಂಗಿನಕಾಯಿ ಊದುಕಡ್ಡಿ ಹೂವುಗಳನ್ನು ಮಾರುವವರು ಬಂದರೆ ಅವರ ಮುಂದೆ, ಕಡಲೇ ಪುರಿ,ಕಲ್ಯಾಣ ಸೇವೆ, ಬೆಂಡು ಬತ್ತಾಸುಗಳ ಜೊತೆಗೆ ಕಾರಾಸೇವೆ, ಬಾದುಶಾ, ಬಣ್ಣ ಬಣ್ಣದ ಕೊಬ್ಬರೀ ಮೀಠಾಯಿ, ಮೈಸೂರು ಪಾಕ್ ಹೀಗೆ ತರತರಹದ ಸಿಹಿತಿಂಡಿಗಳನ್ನು ಮಾರುವುವವರು ಸಾಲಾಗಿ ಅಂಗಡಿಗಳನ್ನು ಹಾಕಿಕೊಂಡಿದ್ದರೆ ಅದರ ಪಕ್ಕ ಬೊಂಡಾ ಬಜ್ಜಿ ಮಾರುವವರು ಇದ್ದರೆ, ಇಂದಿನ ಕಾಲಕ್ಕೆ ತಕ್ಕಂತೆ ಗೋಬಿ ಮಂಚೂರಿ, ಪಾನಿಪುರಿ, ಮಸಾಲೆ ಪುರಿ ಮಾರುವವರು ಬಂದಿರುತ್ತಾರೆ. ಅಲ್ಲೇ ಎಳನೀರು, ಕಬ್ಬಿನಹಾಲು ಮಾರುವವರು ಬಂದಿರುತ್ತಾರೆ. ಹೀಗೆ ತಿಂಡಿ ತಿನಿಸುಗಳ ಜೊತೆ, ಹತ್ತು ಹದಿನೈದಕ್ಕೂ ಹೆಚ್ಚಿನ ಅಂಗಡಿಯವರು ಬಣ್ಣ ಬಣ್ಣದ ಗಾಜಿನ ಬಳೆಗಳು, ಲೋಹದ ಬಳೆಗಳು, ತರತರಹದ ಸರಗಳು, ಹೆಣ್ಣು ಮಕ್ಕಳ ಮನಸೆಳೆಯುವ ಹೇರ್ಪಿನ್, ಕ್ಲಿಪ್ಗಳು, ಟೇಪುಗಳ ಜೊತೆ ಸಣ್ಣ ಮಕ್ಕಳಿಂದ ದೊಡ್ಡ ಮಕ್ಕಳಿಗೂ ಇಷ್ಟವಾಗುವಂತಹ ಪಿಸ್ತೂಲಗಳು, ಕಾರು, ಲಾರಿ, ಏರೋಪ್ಲೇನ್ ಹೀಗೆ ನಾನಾ ರೀತಿಯ ಆಟಿಕೆಗಳನ್ನು ಕೊಂಡು ತಂದು ಅದರೊಡನೆಯೇ ನಾವು ಬೆಳೆದದ್ದಲ್ಲದೇ, ನಮ್ಮ ಮಕ್ಕಳೂ ಬೆಳೆದಿದ್ದಾರೆ. ಸಂಜೆ ಮನೆಯವರೆಲ್ಲರೂ ಒಟ್ಟಾಗಿ ಮತ್ತೊಮ್ಮೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಒಟ್ಟಾಗಿ ದೇವಸ್ಥಾನದ ಅಂಗಳದಲ್ಲಿ ಕುಳಿತು ಪುರಿ, ಕಾರಾಸೇವೆ ಜೊತೆಗೆ ತೆಂಗಿನಕಾಯಿ ಚೂರನ್ನು ತಿನ್ನುವುದನ್ನು ವರ್ಣಿಸುವುದಕ್ಕಿಂತ ಅನುಭವಿಸಿದರೇ ಚೆಂದ.

ಸಂಜೆ ಸುತ್ತಮುತ್ತಲಿನ ಹೊನ್ನಾದೇವಿ ಒಕ್ಕಲಿನವರೆಲ್ಲರೂ ದೇವಸ್ಥಾನದ ಸುತ್ತಲೂ ಸಣ್ಣ ಸಣ್ಣ ಕಲ್ಲುಗಳಲ್ಲು ಜೋಡಿಸಿ ಅದರ ಮೇಲೆ ಹೊಸದಾಗಿ ಕೊಂಡು ತಂದ ಮಡಿಕೆಯಲ್ಲಿ ಮಡೆ (ಅಕ್ಕಿ, ಬೆಲ್ಲ, ಬೇಳೆ, ಮೆಣಸು, ಜೀರಿಗೆ, ತೆಂಗಿನ ತುರಿ ಎಲ್ಲವನ್ನೂ ಸೇರಿಸಿ ಮಾಡುವ ಹುಗ್ಗಿ) ಮಾಡಿ ದೇವಿಗೆ ನೈವೇದ್ಯ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಮನೆ ಮಂದಿಯೆಲ್ಲಾ ಅದನ್ನೇ ಪ್ರಸಾದ ರೂಪದಲ್ಲಿ ಸೇವಿಸುತ್ತಾರೆ.

ರಾತ್ರಿ ಸುಮಾರು ಎಂಟು ಗಂಟೆಯ ಹೊತ್ತಿಗೆ ಊರಿನ ಹೊನ್ನಮ್ಮನ ಗುಡಿಯ ಮುಂದೆ ರಾತ್ರಿಯ ಉತ್ಸವಕ್ಕೆ ಸಿದ್ಧತೆ ನಡೆಸುತ್ತಾರೆ. ಹಿಂದೆಲ್ಲಾ ಎತ್ತಿನ ಗಾಡಿಯಲ್ಲಿತ್ತಿದ ಪಲ್ಲಕ್ಕಿ ಇಂದು ತರತರಹದ ಬಣ್ಣ ಬಣ್ಣದ ವಿದ್ಯುದಾಲಂಕಾರಗಳಿಂದ ಅಲಂಕೃತವಾಗಿ ಟ್ರಾಕ್ಟರ್ ಮೇಲೆ ಭವ್ಯವಾಗಿ ಮಧ್ಯದಲ್ಲಿ ಹೊನ್ನಮ್ಮನ ಉತ್ಸವ ಮೂರ್ತಿ ಅಕ್ಕ ಪಕ್ಕದಲ್ಲಿ ಗೌಡರ ಹಳ್ಳಿಯ ಮಸ್ಣಕಮ್ಮ ಮತ್ತು ಹೊನ್ನಮಾರನಹಳ್ಳಿ ಮಾರಮ್ಮನಿಗೆ ನಾನಾರೀತಿಯ ಹೂವಿನ ಅಲಂಕಾರ ಮಾಡುತ್ತಾರೆ. ನಮ್ಮೂರಿನವರೇ ಆದರೂ ಇಂದು ನಾನಾ ಕಾರಣಗಳಿಂದಾಗಿ ನೀಲಗಿರಿ (ಊಟಿ), ಕೊಯಂಬತ್ತೂರು ಮತ್ತಿತರ ತಮಿಳುನಾಡಿನ ಪ್ರದೇಶಗಳಿಗೆ ಹೋಗಿ ನೆಲಸಿರುವವರು ಈ ಹಬ್ಬಕ್ಕೆಂದೇ ವಿಶೇಷವಾಗಿ ತಮಿಳುನಾಡಿನಿಂದ ವಿಶೇಷವಾಗಿ ತಯಾರಿಸಿಕೊಂಡು ತರುವ ಹೂವಿನ ತೋಮಾಲಗಳು ಪಲ್ಲಕ್ಕಿಗೆ ಇನ್ನೂ ಹೆಚ್ಚಿನ ಮೆರಗನ್ನು ತರುತ್ತವೆ. ಹಾಗೆ ದೇವರ ಅಲಂಕಾರ ನಡೆಯುತ್ತಿದ್ದಾಗ ಅಲ್ಲಿನೆರೆರಿರುವ ಸಹಸ್ರಾರು ಜನರರ ಮನವನ್ನು ತಣಿಸಲು, ಹಿಂದೆಲ್ಲಾ ಕೀಲು ಕುದುರೆ, ನಂದಿಕೋಲುಗಳು ಇಲ್ಲವೇ ನಮ್ಮೂರಿನವರೇ ಜಡೇ ಕೋಲು ಹುಯ್ಯುತ್ತಿದ್ದರೆ ಇಂದು ಕಾಲ ಬದಲಾಗಿ ಅದರ ಜಾಗದಲ್ಲಿ ತಮಟೆಯ ಬಗೆ ಬಗೆಯ ತಾಳಗಳೊಂದಿಗೆ ಬೀರಪ್ಪನ ಕುಣಿತವಿದ್ದರೆ, ಮತ್ತದೇ ನುಗ್ಗೇಹಳ್ಳಿಯ ಸಾಹೇಬರು ತಮ್ಮ ಕೈಯಿಂದ ತಯಾರು ಮಾಡಿದ ನಾನಾ ತರಹದ ಸಿಡಿ ಮದ್ದುಗಳು ಜಾತ್ರೆಯ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಸರಿ ಸುಮಾರು ರಾತ್ರಿ ಹತ್ತು ಗಂಟೆಗೆ ಜಾತ್ರೆಯ ನಡುವೆಯೂ ನಿಶ್ಯಬ್ಧವಾಗಿ ಹೆಬ್ಬಾರಮ್ಮ ದೊಡ್ಡಟ್ಟಿಯಿಂದ ಹೊರಟು ಊರ ಹೊರಗಿನ (ದೊಡ್ಡ ಗುಡಿ) ಹೊನ್ನಾದೇವಿ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಸರಿ ಸುಮಾರು ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ದೊಡ್ಡ ಹಟ್ಟಿಯಿಂದ ಎಲ್ಲರ ಅಲ್ಯೋ ಅಲ್ಯೋ ಎಂಬ ಹುರಿದುಂಬಿಸುವಿಕೆಯೊಂದಿಗೆ ಚಾವಟಿಯಮ್ಮನೊಂದಿಗೆ ಹೆಬ್ಬಾರಮ್ಮನೂ ಸಹಾ ಹೊರಟು ದೇವರ ಮುಂದೆ ಬರುವುದರೊಂದಿಗೆ ಅಧಿಕೃತವಾಗಿ ಉತ್ಸವಕ್ಕೆ ಚಾಲನೆ ದೊರಕುತ್ತದೆ. ದೇವರ ಪಲ್ಲಕ್ಕಿಯ ಮುಂದೆ ಗೌಡರಹಳ್ಳಿಯ ಬ್ರಹ್ಮಚಾರಿಯೇ ಹೊರುವ ಕನ್ನಾಕರಡಿಯಮ್ಮ ಅದರ ಮುಂದೆ ಹಿಮ್ಮುಖವಾಗಿಯೇ, ಡಣ್, ಡಣ್,ಡಣ್, ಡಣ್ ಡಣಣ್ಣಢನ್ ಎಂಬ ಸುಶ್ರಾವ್ಯವಾದ ತಾಳದೊಂದಿಗೆ ಚಾವಟಿಯಮ್ಮ ಮತ್ತು ಹೆಬ್ಬಾರಮ್ಮ ಊರಿನ ಒಳಗಿನಿಂದ ಹೊರಟು, ಊರ ಹೊರಗಿನ ದೊಡ್ಡ ದೇವಸ್ಥಾನ ತಲುಪುವ ವೇಳೆಗೆ ಪೂರ್ವದಲ್ಲಿ ಸೂರ್ಯ ತನ್ನ ಆಗಮನವನ್ನು ತೋರುಪಡಿಸುತ್ತಿರುತ್ತಾನೆ. ಚಾವಟಿಯಮ್ಮ ಮತ್ತು ಹೆಬ್ಬಾರಮ್ಮನಿಗೆ ದೊಡ್ಡ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿದ ನಂತರ ಪುನಃ ದೊಡ್ಡ ಹಟ್ಟಿಗೆ ಬಂದು ಸೇರುವಷ್ಟರಲ್ಲಿ ಬೆಳಗಾಗಿರುತ್ತದೆ. ಅಷ್ಟರ ಹೊತ್ತಿಗೆ ಊರ ಹೊರಗಿನ ಜಾತ್ರೆ, ಊರ ಒಳಗೆ ಬಂದಿರುತ್ತದೆ. ಅಲ್ಲಿರುವ ಬಹಳಷ್ಟು ವ್ಯಾಪಾರಿಗಳು ತಮ್ಮ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಊರ ಒಳಗಿರುವ ರಂಗ ಮಂಟಪದ ಸುತ್ತ ಮುತ್ತಲೂ ತಮ್ಮ ಅಂಗಡಿಗಳನ್ನು ಹಾಕಿಕೊಳ್ಳುವ ಮೂಲಕ ಮರಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸುತ್ತಾರೆ.

honnamma2

ಹೀಗೆ ಎರಡು ದಿನಗಳೂ ಸಂಭ್ರಮದಿಂದ ನಮ್ಮೂರ ಬಾಳಗಂಚಿಯ ಹೊನ್ನಾದೇವಿ ಜಾತ್ರೆ ಸುತ್ತ ಮುತ್ತಲಿನ ಹತ್ತು ಹದಿನಾರು ಹಳ್ಳಿಗಳ ಜನರ ಸಮ್ಮುಖದಲ್ಲಿ ಇಂದಿನ ಆಧುನಿಕ ಕಾಲದಲ್ಲೂ ಯಾವುದೇ ಜಾತಿಯ ಬೇಧಭಾವವಿಲ್ಲದೆ ಭಾವೈಕ್ಯದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಹೇಗೂ ನೀವೆಲ್ಲಾ ನಮ್ಮೂರ ಇತಿಹಾಸ ಮತ್ತು ಹಬ್ಬಗಳನ್ನು ಈಗ ಓದಿ ತಿಳಿದಿದ್ದೀರಿ. ಮುಂದಿನ ವರ್ಷ ತಪ್ಪದೇ ಪುರುಸೊತ್ತು ಮಾಡಿಕೊಂಡು ನಮ್ಮೂರ ಜಾತ್ರೆಯಲ್ಲಿ ಭಾಗಿಯಾಗಿ ಆ ತಾಯಿ ಹೊನ್ನದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಾರ್ಥನೆ. ನಿಮ್ಮ ಆಗಮನಕ್ಕಾಗಿ ನಾವು ಕಾಯುತ್ತಿರುತ್ತೇವೆ. ನೀವು ಬರ್ತೀರೀ ತಾನೇ?

ಏನಂತೀರಿ?

ನಿಮ್ಮವನೇ ಉಮಾಸುತ

ಆಧಾರ: ಕನ್ನಡರತ್ನ.ಕಾಂ

ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದ್ದು, ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ.

ಪ್ರತಿವರ್ಷ ಯುಗಾದಿ ಹಬ್ಬ ಕಳೆದ ನಂತರ ಹಾಸನ ಜಿಲ್ಲೆಯ ಸರಿಸುಮಾರು ಹಳ್ಳಿಗಳಲ್ಲಿ ಹಬ್ಬದ ವಾತಾವರಣ. ಸಂಕ್ರಾಂತಿಯ ಸುಗ್ಗಿ ಕಳೆದು, ಬೆಳೆದ ಫಸಲನ್ನು ಹದ ಮಾಡಿ ಮನೆಗೆ ಬೇಕಾದಷ್ಟನ್ನು ಉಳಿಸಿಕೊಂಡು ಹೆಚ್ಚಾಗಿದ್ದನ್ನು ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಇಟ್ಟು ಕೊಂಡಿರುತ್ತಾರೆ. ಆ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ನೀರಾವರಿಯ ಸೌಲಭ್ಯವಿಲ್ಲದ ಕಾರಣ ಹೆಚ್ಚಾಗಿ ಮಳೆಯ ನೀರನ್ನೇ ಆಶ್ರಯಿಸಿ ತಮ್ಮ ತಮ್ಮ ಜಮೀನಿನಲ್ಲಿ ಮುಂದಿನ ಬೇಸಾಯಕ್ಕೆ ಹದಗೊಳಿಸಲು ಮಳೆಯನ್ನೇ ಕಾಯುತ್ತಿರುವ ಸಂದರ್ಭದಲ್ಲಿ ತುಸು ವಿಶ್ರಾಂತರಾಗಿರುತ್ತಾರೆ. ಇಂದಿನ ಕಾಲದಂತೆ ಅಂದೆಲ್ಲಾ ದೂರದರ್ಶನ, ಚಲನಚಿತ್ರಗಳಂತಹ ಮನೋರಂಜನೆ ಇಲ್ಲದಿದ್ದ ಕಾಲದಲ್ಲಿ, ನಮ್ಮ ಪೂರ್ವಿಕರು ರಾಮನವಮಿ, ರಾಮಸಾಮ್ರಾಜ್ಯ ಪಟ್ಟಾಭಿಷೇಕ, ಹನುಮದ್ಜಯಂತಿ ಇಲ್ಲವೇ ಊರ ಹಬ್ಬಗಳ ಮುಖಾಂತರ ಎಲ್ಲರನ್ನೂ ಒಗ್ಗೂಡಿಸಿ ಅವರ ಮನಮುದಗೊಳಿಸುವಂತಹ ಭಜನೆ, ಸಂಗೀತ ಕಾರ್ಯಕ್ರಮಗಳು, ಹರಿಕಥೆ ಮತ್ತು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಸತ್ಸಂಪ್ರದಾಯವಿದೆ.

ಆದರಂತೆ ನನ್ನೂರು ಬಾಳಗಂಚಿ ಮತ್ತು ಸುತ್ತಮತ್ತಲಿನ ಹೊನ್ನಶೆಟ್ಟ ಹಳ್ಳಿ, ಹೊನ್ನಾದೇವಿಹಳ್ಳಿ, ಬ್ಯಾಡರಹಳ್ಳಿ, ಗೌಡರಹಳ್ಳಿ, ಅಂಕನಹಳ್ಳಿ, ಕಬ್ಬಳಿ, ಮೂಕಿಕೆರೆ ಮುಂತಾದ ಹದಿನಾರು ಊರುಗಳಲ್ಲಿ ಯುಗಾದಿ ಹಬ್ಬ ಕಳೆದ ನಂತರದ ಸುಮಾರು ಮೂರುವಾರಗಳ ಕಾಲ ಹಬ್ಬದ ಸಂಭ್ರಮದ ವಾತಾವರಣ. ಯುಗಾದಿ ಮುಗಿದ ಮೊದಲನೇ ಗುರುವಾರ ಸಾರಣೇ ಹಬ್ಬದ (ಮೊದಲನೇ ಕಂಬ) ಮುಖಾಂತರ ಹಬ್ಬದ ಸಂಭ್ರಮ ಶುರುವಾಗುತ್ತದೆ. ಅಂದಿನ ದಿನ ಊರಿನ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಶುಚಿಗೊಳಿಸುವುದರ ಮೂಲಕ ಇಡೀ ಊರನ್ನೂ ಶುಚಿಗೊಳಿಸಿ ಊರಿನ ಅಷ್ಟದಿಕ್ಕುಗಳಲ್ಲಿಯೂ ಮಾವಿನ ತಳಿರು ತೋರಣ ಕಟ್ಟುವ ಮೂಲಕ ಊರಿಗೆ ಹಬ್ಬದ ಕಳೆಯನ್ನು ಕಟ್ಟುತ್ತಾರೆ. ಅಂದು ಇಡೀ ಗ್ರಾಮಸ್ಥರು, ಗ್ರಾಮದೇವತೆ ಹೊನ್ನಾದೇವಿ ದೇವಾಲಯದ ಅರ್ಚಕರು ಮತ್ತು ಅರೆ, ಡೊಳ್ಳು. ತಮಟೆ ಮತ್ತು ನಾದಸ್ವರ ವಾದಕರೊಂದಿಗೆ ಊರಿನ ಈಶಾನ್ಯದಿಕ್ಕಿನಲ್ಲಿ ಸಂಪ್ರದಯದಂತೆ ಪೂಜೆ ಮಾಡಿ ಅಲ್ಲಿಂದ ಕೆಮ್ಮಣ್ಣು ತಂದು ಊರಿನ ದೇವಾಯವನ್ನು ಶುಚಿಗೊಳಿಸಿ ಸುದ್ದೆ ಕೆಮ್ಮಣ್ಣು ಸಾರಿಸಿ ಅಲಂಕರಿಸುವ ಮೂಲಕ ಅಧಿಕೃತವಾಗಿ ಊರ ಹಬ್ಬಕ್ಕೆ ನಾಂದಿ ಹಾಡಲಾಗುತ್ತದೆ. ಹಾಗೆ ಅಷ್ಟ ದಿಕ್ಕುಗಳಲ್ಲಿ ತೋರಣ ಕಟ್ಟಿದ ಮೇಲೆ ಊರಿನಲ್ಲಿ ಯಾವುದೇ ಮಡಿ ಮೈಲಿಗೆಗಳು ಆಗದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಹಬ್ಬ ಮುಗಿಯುವ ವರೆಗೂ ಇಡೀ ಊರಿನ ಒಳಗೆ ಯಾರೂ ಪಾದರಕ್ಷೆಗಳನ್ನು ಧರಿಸಿ ಓಡಾಡುವಂತಿಲ್ಲ ಮತ್ತು ಮಾಂಸಾಹಾರ ಸೇವಿಸುವಂತಿಲ್ಲ. ಅಂದಿನಿಂದ ಊರ ಹಬ್ಬ ಮುಗಿಯುವವರೆಗೂ ಪ್ರತೀ ದಿನ ಸಂಜೆ, ರಂಗ ಮಂಟಪದ ಹಿಂದೆ ಅಂದರೆ ಊರ ಒಳಗಿನ ಹೊನ್ನಮ್ಮನ ಗುಡಿಯ ಮುಂದೆ ಊರಿನ ಎಲ್ಲಾ ಗಂಡು ಮಕ್ಕಳು ಮತ್ತು ಹಿರಿಯರಾದಿ ತಮಟೆಗಳ ತಾಳಕ್ಕೆ ವಿಶೇಷ ಗತ್ತಿನಿಂದ ತಮ್ಮದೇ ಗ್ರಾಮೀಣ ಶೈಲಿಯಲ್ಲಿ ರಂಗ ಕುಣಿಯುತ್ತಾರೆ. ತಮ್ಮ ಊರಿನ ಗಂಡಸರು ಮತ್ತು ಮಕ್ಕಳು ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ರಂಗ ಕುಣಿಯುವುದನ್ನು ನೋಡಲು ಊರ ಹೆಂಗಸರು ಮಕ್ಕಳು ಸುತ್ತುವರಿದಿರುವುದನ್ನು ವರ್ಣಿಸುವುದಕ್ಕಿಂತ ಕಣ್ತುಂಬ ನೋಡಿ ಆನಂದಿಸಬೇಕು.

ಇನ್ನು ಯುಗಾದಿ ಮುಗಿದ ಎರಡನೇ ಗುರುವಾರ ಚಪ್ಪರ ಶಾಸ್ತ್ರ (ಎರಡನೇ ಕಂಬ)ದ ಹಬ್ಬ. ಅಂದು ಊರಿನ ಒಳಗಿರುವ ಹೊನ್ನಾದೇವಿ ಉತ್ಸವ ಮೂರ್ತಿಯ ಗುಡಿ ಮತ್ತು ಊರಿನ ಮಧ್ಯಭಾಗದಲ್ಲಿರುವ ರಂಗ ಮಂಟಪಗಳನ್ನು ಶುಚಿಗೊಳಿಸಿ ಅದರ ಮುಂದೆ ಚಪ್ಪರವನ್ನು ಹಾಕುತ್ತಾರೆ ಮತ್ತು ಹಸಿರು ಹೊನ್ನಮ್ಮ ಮತ್ತು ಚೋಮಗಳನ್ನು ಗದ್ದಿಗೆ ಮೇಲೆ (ಪಟ್ಟಕ್ಕೆ) ಕೂರಿಸಿ ಅಂದು ಊರಿನ ಕುಂಬಾರರು ಹೊಸದಾಗಿ ತರಾರು ಮಾಡಿದ ಎರಡು ಮಡಿಕೆಗಳಲ್ಲಿ, ರಾಗಿ, ಭತ್ತ , ಹುರಳೀ, ಅವರೇ, ಹುಚ್ಚೆಳ್ಳು ಮುಂತಾದ ಕಾಳು ಮತ್ತು ಧ್ಯಾನ್ಯಗಳನ್ನು ಬಿತ್ತಲಾಗುತ್ತದೆ ಮತ್ತು ಇಡೀ ರಾತ್ರಿ ನಾಲ್ಕು ಜಾಮಗಳ ಪೂಜಾವಿಧಿವಿಧಾನಗಳು ನೆರೆವೇರುತ್ತದೆ.

ಇನ್ನು ಎರಡನೇ ಕಂಬ ಮುಗಿದ ಎರಡು ದಿನ ಕಳೆದ ನಂತರದ ಶನಿವಾರವೇ ಚೋಮನ ಹಬ್ಬ. ಹಬ್ಬಕ್ಕೆ ಎರಡು ದಿನಗಳ ಮುಂಚೆಯೇ ರಂಗ ಮಂಟಪದ ಮೇಲಿನ ಕಳಶವನ್ನು ತೆಗೆದು ಅದನ್ನು ಚೆನ್ನಾಗಿ ಶುಚಿಗೊಳಿಸಲಾಗಿರುತ್ತದೆ. ಚೋಮನ ಹಬ್ಬದ ಸಂಜೆ ಸೂರ್ಯಾಸ್ತಕ್ಕೆ ಸರಿಯಾಗಿ ಬಾಜಾಭಜಂತ್ರಿಯ ಸಮೇತ ಹೊನ್ನಾದೇವಿಯ ಅರ್ಚಕರು ರಂಗ ಮಂಟಪಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಎಲ್ಲರ ಸಮ್ಮುಖದಲ್ಲಿ ರಂಗಮಂಟಪ ಶಿಖರಮೇಲೆ ಕಳಸವನ್ನು ಇಡುವುದರ ಮೂಲಕ ಚೋಮನ ಹಬ್ಬಕ್ಕೆ ಚಾಲನೆ ಕೊಡುತ್ತಾರೆ.

ರಂಗ ಮಂಟಪಕ್ಕೆ ಕಳಶ ಇಡುತ್ತಿದ್ದಂತೆಯೇ, ಹಿಂದೆಲ್ಲಾ ಎತ್ತಿನಗಾಡಿಗಳು ಇರುತ್ತಿದ್ದವು ಈಗ ಟ್ರಾಕ್ಟರ್ ಮೇಲೆ ಪಲ್ಲಕ್ಕಿಯನ್ನು ಕಟ್ಟಲು ಅರಂಭಿಸಿದರೆ, ಊರಿನ ದೊಡ್ಡ ಹಟ್ಟಿಯಲ್ಲಿ ( ಹರಿಜನರ ಕೇರಿಯಲ್ಲಿ ) ಹೆಬ್ಬಾರಮ್ಮ ಮತ್ತು ಚಾವಟಿಯಮ್ಮನ ಪೂಜೆ ಶುರುವಾಗಿರುತ್ತದೆ (ಈ ಕುರಿತು ವಿಸ್ತೃತವಾಗಿ ಮತ್ತೊಂದು ಲೇಖನದಲ್ಲಿ ತಿಳಿಸುತ್ತೇನೆ). ಅದೇ ರೀತಿ ಎರಡನೇ ಕಂಬದ ದಿನ ಪಟ್ಟಕ್ಕೆ ಕೂರಿಸಿದ್ದ ಚೋಮನನ್ನು ಹೊರಲು ಊರಿನ ಅಕ್ಕಸಾಲಿಗರ ಕುಟುಂಬದ ಒಬ್ಬ ಸದಸ್ಯ ಮತ್ತು ಮತ್ತೊಂದು ಚೋಮನನ್ನು ಹೊರಲು ಸವಿತಾ ಜನಾಂಗ (ಕ್ಷೌರಿಕರು)ದ ಒಬ್ಬ ಸದಸ್ಯ ಇಡೀ ದಿನ ಮಡಿಯಿಂದ ಹೊಸದಾದ ಶುಭ್ರ ವೇಷಧಾರಿಗಳಾಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಿದ್ದರಾಗಿರುತ್ತಾರೆ. ಊರಿನ ಹೊನ್ನಾದೇವಿಯ ಒಕ್ಕಲಿನ ಪ್ರತೀ ಮನೆಯವರೂ ಶ್ರಧ್ದೆಯಿಂದ ದೇವಸ್ಥಾನಕ್ಕೆ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಇಷ್ಟೆಲ್ಲಾ ಸಿದ್ಧವಾಗುವ ವೇಳೆಗೆ ಗಂಟೆ ರಾತ್ರಿ ಹನ್ನೆರಡು ಘಂಟೆಯಾಗಿರುತ್ತದೆ . ಅಷ್ಟು ಹೊತ್ತಿಗೆ ಅಕ್ಕ ಪಕ್ಕದ ಊರಿನವರೆಲ್ಲರೂ ಊಟ ಮುಗಿಸಿ ದೇವಸ್ಧಾನದ ಸುತ್ತ ಮುತ್ತ ಸೇರಲಾರಂಭಿಸಿರುತ್ತಾರೆ. ಹೆಂಗಳೆಯರು ಸೋಬಾನೇ ಹಾಡುತ್ತಿದ್ದರೆ ಇನ್ನು ಮಕ್ಕಳು ಜಾತ್ರೆಯ ಬೆಂಡು ಬತ್ತಾಸು ಈಗ ಗೋಬಿ ಮಂಚೂರಿ ತಿನ್ನುವುದರಲ್ಲಿ ಮಗ್ನರಾಗಿರುತ್ತಾರೆ. ಗಂಡು ಮಕ್ಕಳೆಲ್ಲಾ ದೊಡ್ಡ ಹಟ್ಟಿಯ ಮುಂದೆ ಚಾವಟೀ ಅಮ್ಮನ ಬರುವಿಕೆಗಾಗಿಯೇ ಕಾದು ನಿಂತು, ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುತ್ತಿರುತ್ತಾರೆ. ಅಷ್ಟು ಹೊತ್ತಿಗೆ, ಪಲ್ಲಕ್ಕಿಯ ಅಲಂಕಾರಮುಗಿದು, ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ನಾನಾ ರೀತಿಯ ಪುಷ್ಪಾಲಂಕಾರದಿಂದ ಅಲಂಕರಿಸಿ ಮೆರವಣಿಗೆ ಸಿದ್ದಗೊಳಿದ ತಕ್ಷಣ, ಊರಿನ ಮಡಿವಾಳರ ಹಿರಿಯ ಸದಸ್ಯ, ಸರ್ವೇ ಮರದ ತುಂಡಿಗೆ ಬಟ್ಟೆಯನ್ನು ಚೆನ್ನಾಗಿ ಸುತ್ತಿ ಅದನ್ನು ಎಣ್ಣೆಯಡಬ್ಬದಲ್ಲಿ ಅದ್ದಿ ಪತ್ತನ್ನು (ಪಂಜು) ಸಿದ್ದಗೊಳಿಸಿಕೊಂಡು ಉತ್ಸವ ಮೂರ್ತಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪತ್ತಿನಿಂದ ಆರತಿ ಬೆಳಗುತ್ತಿದ್ದಂತೆ ಅರ್ಚಕರು ಉತ್ಸವ ಮೂರ್ತಿಗೆ ಮಂಗಳಾರತಿ ಮಾಡುವ ಮೂಲಕ ಉತ್ಸವಕ್ಕೆ ಅಧಿಕೃತವಾಗಿ ಸಿದ್ದತೆ ದೇವರಿಗೆ ಸುಮಾರು ಮಧ್ಯರಾತ್ರಿ ಒಂದು ಗಂಟೆಯ ಹೊತ್ತಿಗೆ ಢಂ ಎಂದು ದೊಡ್ಡ ಹಟ್ಟಿಯ ಹೆಬ್ಬಾರಮ್ಮನ ಗುಡಿಯಿಂದ ಶಬ್ಧ ಬಂದಿತೆಂದರೆ ಸಾಕು ಇಡೀ ಊರು ಊರಿಗೇ ವಿದ್ಯುತ್ ಸಂಚಾರವಾದ ಹಾಗೆ ಆಗಿ ಎಲ್ಲರೂ ದಡಾ ಬಡಾ ಎಂದು ಎದ್ದು ನಿಂತು ಚಾವಟೀ ಅಮ್ಮನ ಬರುವಿಕೆಗಾಗಿ ಸಿದ್ಧರಾಗುತ್ತಾರೆ. ಜ್ವಾಲಾರ ಹೂವಿನಿಂದ ಅಲಂಕೃತಳಾದ ಚಾವಟೀ ಅಮ್ಮನನ್ನು ಎದೆಯ ಮೇಲೆ ಧರಿಸಿರುವ ಪೂಜಾರಿಯನ್ನು ನಾಲ್ಕಾರು ಜನ ಹಿಂದಿನಿಂದ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರೂ ಕಳೆದ ಹದಿನೈದು ದಿನಗಳಿಂದ ಕೇವಲ ದೇವಸ್ಥಾನದ ಮೂರು ಪಿಡಿಚೆ ಪ್ರಸಾದ ತಿಂದು ಬಹಳ ಶ್ರಧ್ಧಾ ಭಕ್ತಿಯಿಂದ ಇದ್ದರೂ, ಮೈಮೇಲೆ ಧರಿಸಿರುವ ದೇವಿಯ ಪ್ರಭಾವವೋ, ದೋಣ್ ಮತ್ತು ಡೊಳ್ಳಿನ ಶಬ್ಧಕ್ಕೋ ಅಥವಾ ಊರ ಗಂಡು ಮಕ್ಕಳ ಅಲ್ಯೋ ಅಲ್ಯೋ ಅಲ್ಯೋ ಎಂದು ಹುರಿದುಂಬಿಸುವಿಕೆಯ ಪ್ರಭಾವವೋ ಎನೋ? ಕೈಯಲ್ಲಿ ಬೆಳ್ಳಿಯ ರೇಕನ್ನು ಸುತ್ತಿದ ನಾಗರ ಬೆತ್ತವನ್ನು ಹಿಡಿದು ಝಳುಪಿಸುತ್ತಾ ಆರ್ಭಟದಿಂದ ದೊಡ್ಡ ಹಟ್ಟಿ ಬಿಟ್ಟು ಹೊನ್ನಮ್ಮನ ಗುಡಿಯ ಬಳಿ ಬರುತ್ತಿದ್ದರೆ ಎಲ್ಲರೂ ಎದ್ದೆನೋ ಬಿದ್ದೆನೋ ಎಂದು ದಿಕ್ಕಾಪಲಾಗಿ ದೇವಸ್ಥಾನದ ಮುಂದಕ್ಕೆ ಓಡಿ ಹೋಗಿ ಹೊನ್ನಮ್ಮನ್ನ ದೇವಾಲಯದ ಮುಂದೆ ರಪ್ ರಪ್ ರಪ್ ಎಂದು ನೂರಾರು ತೆಂಗಿನ ಕಾಯಿಯ ಈಡುಗಾಯಿ ಹಾಕಿ ಚಾವಟಿ ಅಮ್ಮನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರೆ, ಉಳಿದವರು ಅಲ್ಯೋ ಅಲ್ಯೋ ಅಲ್ಯೋ ಎಂದು ಮತ್ತಷ್ಟೂ ಹುರಿದುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆ ಪ್ರೇರೇಪಿತವಾಗಿ ಕೆಲವೊಂದು ಬಾರಿ ಚಾವಟಿ ಅಮ್ಮ ಜನರ ಮೇಲೆ ಏರಿ ಹೋಗಿ ತನ್ನ ಬೆತ್ತದಿಂದ ಬಾರಿಸುವುದೂ ಉಂಟು. ಒಮ್ಮೆ ಹಾಗೆ ಯಾರಿಗಾದರೂ ಚಾವಟಿ ಅಮ್ಮನಿಂದ ಪೆಟ್ಟು ಬಿದ್ದಿತೆಂದರೆ ಆತನೋ ಇಲ್ಲವೇ ಆಕೆಯೋ ಎನೋ ತಪ್ಪು ಮಾಡಿರಬೇಕು ಇಲ್ಲವೇ ಮಡಿ ಮೈಲಿಗೆ ಇಲ್ಲವೇ ಆಚಾರ ವಿಚಾರಗಳಲ್ಲಿ ಲೋಪ ಎಸಗಿರಬೇಕೆಂಬ ಭಾವನೆ ಊರಿನವರಿಗಿದ್ದು ಹಾಗೆ ಪೆಟ್ಟು ತಿಂದವರು ನಂತರ ದೇವರಲ್ಲಿ ಕ್ಷಮಾಪಣೇ ಬೇಡುವ ಪರಿಪಾಠವಿದೆ.

ಹಾಗೆ ಈಡುಗಾಯಿಯಿಂದ ಶಾಂತವಾದ ಚಾವಟಿ ಅಮ್ಮಾ ಹೊನ್ನಾದೇವಿಯ ಗುಡಿಯ ಮುಂದೆ ನಿಂತು ಆರತಿ ಮಾಡಿಸಿಕೊಂಡು ಅದರ ಮುಂದೆ ಆ ಇಬ್ಬರೂ ಚೋಮನ ವೇಷಧಾರಿಗಳು ಮತ್ತು ಹಸಿರು ಮುಖ ಹೊತ್ತ ಹೊನ್ನಮ್ಮ ಸಹಿತ ಹಿಮ್ಮುಖವಾಗಿ ನಡೆದುಕೊಂಡು ಊರ ಮುಂದಿನ ಅರಳೀ ಕಟ್ಟೆಯತ್ತ ಸಾಗಿದರೆ, ಅದರೆ ಹಿಂದೆಯೇ ಸರ್ವಾಲಂಕೃತವಾದ ಪಲ್ಲಕ್ಕಿ ಸಾಗುತ್ತದೆ. ಊರ ತುಂಬಾ ಬಣ್ಣ ಬಣ್ಣದ ಸೀರಿಯಲ್ ಸೆಟ್ ಮತ್ತು ನಾನಾ ರೀತಿಯ ದೇವಾನು ದೇವತೆಗಳಿಂದ ಕಂಗೊಳಿಸುತ್ತಿರುತ್ತದೆ. ಹಬ್ಬಕ್ಕೆಂದೇ ವಿಶೇಷವಾಗಿ ನುಗ್ಗೇಹಳ್ಳಿಯಿಂದ ಮನೆಯಲ್ಲಿಯೇ ಪಟಾಕಿ ತಯಾರಿಸಿಕೊಂಡು ಬರುವ ಸಾಬರು ನಾನಾ ರೀತಿಯ ಬಾಣ ಬಿರುಸಿಗಳನ್ನು ಗಗನಕ್ಕೇರಿಸುತ್ತಾ , ನಾನಾ ರೀತಿಯ ಬಾಂಬ್ಗಳನ್ನು ಸಿಡಿಸುತ್ತಾ ಊರ ಹಬ್ಬಕ್ಕೆ ವಿಶೇಷ ಮೆರಗನ್ನು ತರುತ್ತಾರೆ.

ಹೀಗೆ ನಿಧಾನವಾಗಿ ತಮಟೆ, ನಾದಸ್ವರದೊಂದಿಗೆ ಊರ ಮುಂದಿನ ಅರಳಿಕಟ್ಟೆಯ ಬಳಿ ತಲುಪಿ ಅಲ್ಲಿ ಮಳೆ ಬೆಳೆ ಶಾಸ್ತ್ರ ಕೇಳುವ ಪರಿಪಾಠವಿದೆ. ಎರಡನೆಯ ಕಂಬದ ದಿನ ದೇವಸ್ಥಾನದಲ್ಲಿ ಮಡಕೆಯಲ್ಲಿ ಬಿತ್ತನೆ ಮಾಡಿದ್ದ ಧವಸ ಧಾನ್ಯಗಳ ಚಿರುರುವಿಕೆಯ ಮೇಲೆ ಆ ವರ್ಷದ ಊರಿನ ಬೆಳೆ ಅವಲಂಭಿವಾಗಿರುತ್ತದೆ ಎಂಬ ನಂಬಿಕೆ ಊರಿನ ಜನರಿಗಿರುತ್ತದೆ. ಅಲ್ಲಿ ಮಳೆ ಬೆಳೆ ಶಾಸ್ತ್ರ ಮುಗಿದು ಡಣ್ ಎಂದು ಶಬ್ಧ ಕೇಳಿಸುತ್ತಿದ್ದಂತೆಯೇ ಹಸಿರು ಮುಖದ ಹೊತ್ತಿರುವ ಹೊನ್ನಮ್ಮನ ಅರ್ಚಕರು, ಅವರ ಪರಿಚಾರಕಾರೂ, ಛತ್ರಿ ಹಿಡಿದ ವೀರಶೈವರೂ ರಭಸವಾಗಿ ಒಲಂಪಿಕ್ಸ್ ಕ್ರೀಡೆಗಿಂತಲೂ ಅಧಿಕ ವೇಗದಿಂದ ಓಡಿ ಬಂದು ಗುಡಿ ಸೇರುವುದನ್ನು ನೋಡುವುದೇ ಚೆಂದ. ನಂತರ ಪಲ್ಲಕ್ಕಿಯ ಮೇಲಿದ್ದ ಉತ್ಸವ ಮೂರ್ತಿಯನ್ನು ರಂಗ ಮಂಟಪದಲ್ಲಿ ಉಯ್ಯಾಲೆಮಣೆಯಲ್ಲಿ ಇಟ್ಟರೆ, ಚಾವಟಿ ಅಮ್ಮಾ ಊರಿನ ಒಳಗಿರುವ ಲಕ್ಷ್ಮೀ ನರಸಿಂಹ, ಶಂಭು ಲಿಂಗ, ಗಾಣಿಗರ ಹಟ್ಟಿಯ ಲಕ್ಷ್ಮೀ ದೇವಿ, ರಂಗ ಮಂಟಪದ ಮುಂದಿನ ಗಣೇಶನ ಗುಡಿಯ ಮಂದೆ ಹೋಗಿ ಆರತಿ ಬೆಳಗಿಸಿಕೊಂಡು ಊರ ಶಾನುಭೋಗರಾದ ನಮ್ಮ ಮನೆಯ ಮುಂದೆ ಬರುವ ಹೊತ್ತಿಗೆ ಶಾಂತ ಸ್ವರೂಪಳಾಗಿರುತ್ತಾಳೆ. ನಮ್ಮ ಮನೆಯ ಹೆಂಗಸರು ಮನೆಯ ಹಿರಿಯ ಮುತ್ತೈದೆಯ ನೇತೃತ್ವದಲ್ಲಿ ಹೆಬ್ಬಾರಮ್ಮ, ಚಾವಟಿಯಮ್ಮ ಮತ್ತು ಚೋಮಗಳಿಗೆ ಆರತಿ ಬೆಳಗಿ ಅವರಿಗೆಲ್ಲರಿಗೂ ಎಳನೀರು ಕೊಟ್ಟು ಈಡುಗಾಯಿ ಹೊಡೆಯುತ್ತಿದ್ದಂತೆ ಚಾವಟಿಯಮ್ಮ ತನ್ನ ಗುಡಿಗೆ ಹೋಗಿ ಸೇರಿಕೊಂಡರೆ, ಚೋಮ ವೇಷಧಾರಿಗಳು ಹೊನ್ನಮ್ಮನ ಗುಡಿಗೆ ಹೋಗಿ ತಮ್ಮ ವೇಷ ಕಳಸಿ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಾರೆ.

ಇಷ್ಟೆಲ್ಲಾ ಮುಗಿಯುತ್ತಿದ್ದಂತೆಯೇ ರಂಗ ಮಂಟಪದ ಮುಂದೆ ತೆಂಗಿನ ಗರಿಯ ಸೋಗೆಗಳಿಗೆ ಬೆಂಕಿಹಾಕಿ ಚರ್ಮದ ತಮಟೆಗಳನ್ನು ಹದವಾಗಿ ಕಾಯಿಸಿ, (ಈಗೆಲ್ಲಾ ಪಾಲೀಥೀನ್ ತಮಟೆಗಲು ಬಂದಿವೆಯಾದರೂ ಚರ್ಮದ ತಮಟೆಯ ನಾದ ಮುಂದೆ ಇವುಗಳು ಏನು ಇಲ್ಲ ಎನ್ನುವಂತಿದೆ) ಟ್ರಣ ಟ್ರಣ್ ಎನ್ನುತ್ತಿದ್ದಂತೆಯೇ ಅಬಾಲಾ ವೃಧ್ಧರಾದಿಯರೂ ಕೈಯಲ್ಲಿ ಕೈಯಲ್ಲಿ ಶಲ್ಯವೋ ಇಲ್ಲವೇ ಹೆಗಲು ಮೇಲಿನ ವಸ್ತ್ರವನ್ನು ಹಿಡಿದುಕೊಂಡು ಅಲ್ಯೋ ಅಲ್ಯೋ ಅಲ್ಯೋ ಎಂದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ರಂಗ ಕುಣಿಯುವುದಕ್ಕೆ ಸಿದ್ದರಾಗಿರುತ್ತಾರೆ. ಸುಮಾರು ಹತ್ತು ಹದಿನೈದು ನಿಮಿಷ ವಿವಿಧ ಗತ್ತಿನಲ್ಲಿ ರಂಗ ಕುಣಿಯುತ್ತಿದ್ದಂತೆಯೇ ಅವರ ಆಯಸವನ್ನು ತಣಿಸಲು ಮತ್ತು ಅವರನ್ನು ಮನರಂಜಿಸಲು ವಿವಿಧ ವೇಷಗಳನ್ನು ಹೊತ್ತು ತಂದು ನಾನಾ ರೀತಿಯ ಹಾಸ್ಯ ಕುಚೇಷ್ಟೆಗಳಿಂದ ಐದು ಹತ್ತು ನಿಮಿಷ ಎಲ್ಲರನ್ನೂ ರಂಜಿಸುತ್ತಾರೆ. ಹಾಗೆ ಹಾಸ್ಯ ಕುಚೇಷ್ಟೆಗಳನ್ನು ಮಾಡುವ ಸಂಧರ್ಭದಲ್ಲಿ ಕೆಲವೊಂದು ಬಾರಿ ಗ್ರಾಮೀಣ ರೀತಿಯ ಅಶ್ಲೀಲಕ್ಕೆ ತಿರುಗಿ ಅಲ್ಲಿರುವ ಹೆಂಗಳೆಯರಿಗೆ ಮುಜುಗರ ತರುವ ಸಂದರ್ಭಗಳು ಉಂಟು ಹೀಗೆ ಸುಮಾರು ಒಂದು ಗಂಟೆಗಳ ಕಾಲ ರಂಗ ಕುಣಿಯುವುದು ಮತ್ತು ಹಾಸ್ಯಗಳನ್ನು ನೋಡುವಷ್ಟರಲ್ಲಿಯೇ ಮೂಡಣದಲ್ಲಿ ಉದಯನ ಆಗಮನದ ಸೂಚನೆಯನ್ನು ಪಕ್ಕದ ಗೌಡರ ಹಟ್ಟಿಯ ಹುಂಜ ಕೊಕ್ಕೊರುಕ್ಕೊ ಎಂದು ಸೂಚ್ಯವಾಗಿ ತೋರಿಸುತ್ತದೆ.

ಬೆಳಗಾಗುವಷ್ಟರಲ್ಲಿ ಊರಿನ ಗುಡಿಗೌಡ, ಶುಚಿರ್ಭೂತನಾಗಿ ಕಂಬಳಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಮತ್ತು ಹೊದ್ದುಕೊಂಡು ಹಣೆಗೆ ತಿಲಕ, ಕೈ ಕಾಲುಗಳಿಗೆ ಬಾಜೂ ಬಂದಿ, ಗೆಜ್ಜೆಗಳನ್ನು ಕಟ್ಟಿಕೊಂಡು ನೇಗಿಲುಧಾರಿಯಾಗಿ ರಂಗಮಂಟಪದ ಮುಂದೆ ಹೊನ್ನಾರು ಕಟ್ಟಲು ಸಿದ್ಧರಾಗುತ್ತಾರೆ. ಹಾಗೆ ತಂದ ನೇಗಿಲಿಗೆ ಊರಿನ ಬಡಿಗೇರರು ಅಂದರೆ ಮರ ಮುಟ್ಟು ಕೆಲಸ ಮಾಡುವ ಆಚಾರಿಗಳು ನೇಗಿಲನ್ನು ಬಂದೋಬಸ್ತು ಮಾಡಿದರೇ, ಊರಿನ ಕಮ್ಮಾರರು, ಅಂದರೆ ಕುಲುಮೆ ಕೆಲಸಮಾಡುವ ಆಚಾರಿಗಳು ನೇಗಿಲಿನ ತುದಿಯ ಲೋಹದ ಭಾಗವನ್ನು ಮೊನಚು ಮಾಡಿ ಸರಿಯಾದ ಉಳುಮೆಗೆ ಅನುವು ಮಾಡಿಕೊಡುತ್ತಾರೆ. ಇನ್ನು ಹಿಂದಿನ ರಾತ್ರಿ ಚೋಮನನ್ನು ಧರಿಸಿದ್ದವರು ಇಂದು ಮುಖಕ್ಕೆ ಕಪ್ಪು ಬಣ್ಣ ಬಳಿದು ಕೊಂಡು ಎತ್ತಿನ ಸಂಕೇತವಾಗಿ ನೇಗಿಲಿಗೆ ತಮ್ಮ ಹೆಗಲನ್ನು ಕೊಟ್ಟರೆ, ಗುಡಿಗೌಡ ಜೂಲ್ ಜೂಲ್ ಎಂದು ಸಾಂಕೇತಿಕವಾಗಿ ನೆಲವನ್ನು ಉತ್ತಿ ನಂತರ ಉತ್ತ ಜಾಗದಲ್ಲಿ ಲಡರ್ ಬಡರ್, ಲಡರ್ ಬಡರ್ ಎಂದು ಶಬ್ಧಮಾಡುತ್ತಾ ರಾಗಿ, ಬತ್ತ, ಅವರೇ ಕಾಳು ಹುರಳೀ ಕಾಳು ಮುಂತಾದ ಕಾಳುಗಳನ್ನು ಸಾಂಕೇತಿವಾಗಿ ಬಿತ್ತುವ ಮೂಲಕ ಅಧಿಕೃತವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮ್ಮ ಮುಂದಿನ ಬೆಳೆಗಾಗಿ ಊಳುಮೆಗೆ ಚಾಲನೆ ನೀಡುತ್ತಾರೆ. ಹೀಗೆ ಗುಡಿ ಗೌಡರಿಂದ ಸಾಂಕೇತಿಕವಾಗಿ ಅಧಿಕೃತವಾಗಿ ಉಳುಮೆಮಾಡಿದ ನಂತರವೇ ಸುತ್ತಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಬೇಸಾಯ ಆರಂಭಿಸುವ ಪರಿಪಾಠವಿದೆ.

ಹೊನ್ನಾರು ಕಟ್ಟಿದ ನಂತರ ತಮಟೆ ಮತ್ತು ನಾದಸ್ವರ ವಾದ್ಯಗಳೊಂದಿಗೆ ರಂಗಮಂಟಪಕ್ಕೆ ಮೂರು ಸುತ್ತು ಹಾಕಿ ಹೊನ್ನಮ್ಮನ ಗುಡಿಯಲ್ಲಿ ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗದೊಂದಿಗೆ ಚೋಮನ ಹಬ್ಬ ಮುಗಿಸಿ, ಅಕ್ಕ ಪಕ್ಕದ ಊರಿನಿಂದ ಬಂದವರೆಲ್ಲರೂ ತಮ್ಮ ತಮ್ಮ ಊರಿಗೆ ತೆರಳಲು ಅನುವಾದರೆ, ಈ ಉತ್ಸವಕ್ಕಾಗಿ ಮಾಡಿದ ಖರ್ಚು ವೆಚ್ಚಗಳ ಲೆಕ್ಕಹಾಕಿ ಮುಂದಿನ ವರ್ಷ ಮತ್ತಷ್ಟೂ ಅದ್ದೂರಿಯಾಗಿ ಚೋಮನ ಹಬ್ಬವನ್ನು ಆಚರಿಸುವಂತಾಗಲು ಇಂದಿನಿಂದಲೇ ಹಣ ಸಂಗ್ರಹಣ ಮಾಡುವ ಕಾಯಕ ಆರಂಭವಾಗುತ್ತದೆ.

ಇಂದು ಎಲ್ಲರೂ ಊರಿನಲ್ಲಿ ಭಾವೈಕ್ಯತೆ, ಸಾಮರಸ್ಯದ ಬಗ್ಗೆ ಮಾತನಾಡುತ್ತಿದ್ದರೆ, ನಮ್ಮ ಊರ ಹಬ್ಬದಲ್ಲಿ ಯಾವುದೇ ಜಾತಿ ಬೇಧವಿಲ್ಲದೆ, ಎಲ್ಲರೂ ಒಗ್ಗೂಡಿ ನಾಡಿನ ಹಿತಕ್ಕಾಗಿ ಜನರ ಸುಖಕ್ಕಾಗಿ ಹಬ್ಬವನ್ನು ಆಚರಿಸುವ ಪದ್ದತಿಯನ್ನು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ರೂಡಿಯಲ್ಲಿ ತಂದಿರುವುದು ಶ್ಲಾಘನೀಯವೇ ಸರಿ.

ಮುಂದಿನ ಲೇಖನದಲ್ಲಿ ದೊಡ ಹಬ್ಬ ಹೊನ್ನಾದೇವಿ ಹಬ್ಬದ ಬಗ್ಗೆ ತಿಳಿಸುತ್ತೇನೆ. ಅಲ್ಲಿಯವರೆಗೆ ಆ ತಾಯಿ ಸ್ವರ್ಣಾಂಬ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ.

ಏನಂತೀರೀ?