ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ

ಪ್ರಪಂಚದಲ್ಲಿ ಹೆಣ್ಣನ್ನು ಪರಮಪೂಜ್ಯಳೆಂದು ಗೌರವಿಸುವ  ಯಾವುದಾದರೂ ದೇಶದಲ್ಲಿ ಅದು ಖಂಡಿತವಾಗಿಯೂ ನಮ್ಮ ಭಾರತದೇಶ ಎಂದು ಹೆಮ್ಮೆಯಾಗಿ ಹೇಳಬಹುದು. ಅದಕ್ಕಾಗಿಯೇ ನಮ್ಮ ಪೂರ್ವಜರು

ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ | 
ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ ||

ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಅದೇ ರೀತಿ ಎಲ್ಲಿ  ಸ್ತ್ರೀಯರನ್ನು ದೂಷಣೆ ಮಾಡುತ್ತರೋ ಅಲ್ಲಿ ಸಮಾಜವು ನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

chdಹಿಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿ ತಂದರೆ ದ್ದರೆ, ಹೆಂಗಸರು ಮನೆಯಲ್ಲಿಯೇ ಕುಳಿತುಕೊಂಡು ಅವರಿಗಿಂತಲೂ ಹೆಚ್ಚಾಗಿಯೇ ದುಡಿಯುತ್ತಿದ್ದದ್ದಲ್ಲದೇ, ತಮ್ಮ ಮನೆಯ ಗಂಡಸರು ದುಡಿದು ತಂದ  ಸಂಪತ್ತಿನ  ಸಂಪೂರ್ಣ ನಿರ್ವಹಣೆ ಮನೆಯ ಹಿರಿಯ ಹೆಂಗಸಿನ ಕೈಯಲ್ಲಿಯೇ ಇರುತ್ತಿತ್ತು. ಹಾಗಾಗಿಯೇ ಭಾರತದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ನೂರಾರು ರಾಜ್ಯಗಳನ್ನು ಸುಮಾರು ರಾಣಿಯರು ಆಳ್ವಿಕೆ ನಡೆಸಿದ್ದಾರೆ. ಹಾಗೆ ಭಾರತದ ಇತಿಹಾಸದಲ್ಲಿಯೇ  ಅತಿ ಹೆಚ್ಚು ಕಾಲ ರಾಣಿಯಾಗಿ ರಾಜ್ಯವಾಳಿದ ಕೀರ್ತಿ  ಸಾಳ್ವ ವಂಶದ ಕಾಳುಮೆಣಸಿನ ರಾಣಿ ಎಂದೇ ಹೆಸರಾಗಿದ್ದ  ರಾಣಿ ಚೆನ್ನಭೈರಾದೇವಿಗೆ ಸಲ್ಲುತ್ತದೆ. ಆಕೆ ಕ್ರಿಶ 1552ರಿಂದ 1606 ರವರೆಗೆ ಬರೊಬ್ಬರಿ 54 ವರ್ಷಗಳಷ್ಟು ಕಾಲ ಸಂಪದ್ಭರಿತವಾಗಿ ತನ್ನ ರಾಜ್ಯವನ್ನು ಮುನ್ನಡೆಸಿದ್ದಳು.

kk2ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪಾ ಆಗಿನ ನಗರಬಸ್ತಿಕೇರಿಯನ್ನು ರಾಜಧಾನಿಯಾಗಿಸಿಕೊಂಡಿದ್ದ ವಿಜಯನಗರ ಸಾಮ್ರಾಜ್ಯದ ಒಂದು ಮಹಾಮಂಡಳೇಶ್ವರರಾಗಿ, ಸಾಮಂತ ರಾಜರಾಗಿದ್ದರು. ತುಳುವಾ-ಸಾಳುವಾ ವಂಶದವಳಾಗಿದ್ದ ರಾಣಿ ಚೆನ್ನ ಭೈರಾದೇವಿ ಧಾರ್ಮಿಕವಾಗಿ ಜೈನಧರ್ಮವನ್ನು ಆಚರಿಸುತ್ತಿದ್ದದ್ದಲ್ಲದೇ,  ಕಾನೂರು ಕೋಟೆಯನ್ನು ನಿರ್ಮಿಸುವುದರ  ಜೊತೆಗೆ ತನ್ನ ಆಡಳಿತದ ಅವಧಿಯಲ್ಲಿ ನೂರಾರು ಜೈನ ಬಸದಿಗಳನ್ನು ನಿರ್ಮಿಸಿದರು.

ಅಂದಿನ ಕಾಲದಲ್ಲಿ ಉತ್ತರಕನ್ನಡ ಸಾಂಬಾರು ಪದಾರ್ಥಗಳಿಗೆ ಹೆಸರುವಾಸಿಯಾಗಿದ್ದ ಕಾರಣ ಯುರೋಪಿಯನ್ನರು  ಇದೇ ಸಾಂಬಾರು ಪದಾರ್ಥಗಳನ್ನು ಕೊಳ್ಳುವ ಸಲುವಾಗಿ  ಅರಬ್ಬೀ ಸಮುದ್ರದ ಮಾರ್ಗವಾಗಿ  ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಬಂದು ವ್ಯಾಪಾರ ನಡೆಸುತ್ತಿದ್ದರು. ಹಾಗೆ ವ್ಯಾಪಾರಕ್ಕೆ ಬಂದ ಪೋರ್ಚುಗೀಸರು ನಂತರ ಗೋವಾವನ್ನು ವಸಾಹತು ಮಾಡಿಕೊಂಡು ದಕ್ಷಿಣ ಕೊಂಕಣಕ್ಕೆ ತಮ್ಮ ಒಡೆತನವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ಅನುವಾಗಿದ್ದಲ್ಲದೇ,  ತಮ್ಮ ನಾವೆಗಳ ನಿರ್ಮಾಣಕ್ಕೆ ಬೇಕಾದ ಮಾವು, ಗುಳಮಾವು, ಸುರಹೊನ್ನೆ, ಹೆಬ್ಬಲಸು ಮುಂತಾದ ಮರಗಳನ್ನು ಕಡಿದು ಕದ್ದೊಯ್ದು ಇಡೀ ಪಶ್ಚಿಮಘಟ್ಟದ ದಟ್ಟ ಅಡವಿಯನ್ನು ಅಂದೇ ಬೆತ್ತಲಾಗಿಸಲು ಮುಂದಾಗಿದ್ದ ಪೋರ್ಚುಗೀಸರ ಪ್ರಯತ್ನಕ್ಕೆ  ಸಿಂಹಿಣಿಯಂತೆ ತಡೆಗೋಡೆಯಾಗಿ ಅಡ್ಡ ನಿಂತು ಇಡೀ ಕರಾವಳಿ ಪ್ರದೇಶವನ್ನು ಸಂರಕ್ಷಿಸಿದ ಕೀರ್ತಿ ಚೆನ್ನಭೈರಾದೇವಿಗೆ ಸಲ್ಲುತ್ತದೆ. ಪರಂಗಿಯವರೊಡನೆ ಅಗತ್ಯವಿದ್ದಾಗ ಸ್ನೇಹ, ಅನಿವಾರ್ಯವಾದಾಗ ಸಮರ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದವಳು. ಅಪ್ಪಟ  ರಾಷ್ಟ್ರಾಭಿಮಾನದ ಚಿಲುಮೆ,  ಸ್ವಾಭಿಮಾನದ ಸಂಕೇತ, ಧೈರ್ಯ – ಸಾಹಸದ ರೂಪಕವಾಗಿದ್ದ ಚೆನ್ನ ಭೈರಾದೇವಿ. 1559 ರಿಂದ 1570 ರಲ್ಲಿ ಪೋರ್ಚುಗೀಸರ ಮೇಲಿನ ಯುದ್ಧದಲ್ಲಿ ತನ್ನ ಚಾಣಕ್ಯತನದಿಂದ ಪೋರ್ಚುಗೀಸರನ್ನು ಸೋಲಿದ್ದಲ್ಲದೇ ತನ್ನ ತನ್ನ ಜೀವನದುದ್ದಕ್ಕೂ ಪೋರ್ಚುಗೀಸರೊಂದಿಗೆ ಹೋರಾಡಿ ಒಮ್ಮೆಯೂ ಸೋಲದೇ ಸ್ವಾಭಿಮಾನಿಯಾಗಿಯೇ  ಬದುಕಿ ಬಾಳಿದ್ದು  ಆಕೆಯ ಮಹತ್ತರ ಸಾಧನೆಗಳಲ್ಲಿ ಒಂದಾಗಿದೆ.

ರಾಜಕೀಯವಾಗಿ ಪೋರ್ಚುಗೀಸರೊಂದಿಗೆ ವೈಮನಸ್ಯವಿದ್ದರೂ ವ್ಯಾವಹಾರಿಕವಾಗಿ ಅವರೊಂದಿಗೆ ಅಕ್ಕಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಬೆಲ್ಲ, ಬೆತ್ತ, ಗಂಧ, ಶುಂಠಿ, ಲವಂಗ, ದಂತ ಮುಂತಾದ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರಿಂದಲೇ ಪೋರ್ಚುಗೀಸರು ಅವಳನ್ನು Rainha Da Pimenta- The Pepper Queen ಅರ್ಥಾತ್ ಕಾಳುಮೆಣಸಿನ ರಾಣಿ ಎಂದೇ ಕರೆಯುತ್ತಿದ್ದರು. ಕೇವಲ ಪೋರ್ಚುಗೀಸರೊಂದಿಗಷ್ಟೇ ಅಲ್ಲದೇ ಅನೇಕ ದೇಶ ವಿದೇಶಗಳೊಂದಿಗೆ ಸಾಂಬಾರ ಪದಾರ್ಥಗಳ ವ್ಯಾಪಾರವನ್ನು ಅತ್ಯಂತ ಚಾಣಾಕ್ಷತನದಿಂದ ಮಾಡುತ್ತಿದ್ದಳು.

kk1ಗೇರುಸೊಪ್ಪೆಯನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿದರೂ ಪದೇ ಪದೇ ತನ್ನ ಮೇಲೆ ಪೋರ್ಚುಗೀಸರು ಧಾಳಿನಡೆಸುತ್ತಿದ್ದ ಕಾರಣ ತನ್ನ ಗುಪ್ತ ಧನ, ಗುಪ್ತ ದಳ ಮತ್ತು ಆಪತ್ತಿನ ಸಂದರ್ಭದಲ್ಲಿ ತನ್ನ ರಹಸ್ಯ ವಾಸ್ತವ್ಯಕ್ಕೆ ಆಕೆ ಅತ್ಯಂತ ಕಡಿದಾದ ಶಿಖರದ ತುದಿಯಲ್ಲಿದ್ದ ಮತ್ತು ಅತ್ಯಂತ ಸುರಕ್ಷಿತ ಎನಿಸಿಕೊಂಡಿದ್ದ ಕಾನೂರು ಕೋಟೆಯನ್ನು ತನ್ನ ಸಂಪತ್ತನ್ನು ಸಂಗ್ರಹಿಸಿಡಲು ಬಳಸಿಕೊಂಡಳು.

ಆಪತ್ಕಾಲದಲ್ಲಿ ನೆರವಾಗಲೆಂದು ಈ ಕೋಟೆಯಲ್ಲಿ ದವಸ ಧಾನ್ಯ, ಧನ ಕನಕಗಳ ಜೊತೆ ಮದ್ದು ಗುಂಡುಗಳನ್ನೂ ಈ ಕೋಟೆಯಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬುದಕ್ಕೆ  ಅನೇಕ ಸಾಕ್ಷಿಗಳು ಇಂದಿಗೂ ಲಭ್ಯವಿದೆ. ಮೂರು ದಿಕ್ಕಿನಲ್ಲಿಯೂ ಪ್ರಕೃತಿ ನಿರ್ಮಿತ ಸಾವಿರ ಅಡಿಗಳಿಗೂ ಆಳವಾದ ಕಣಿವೆಯನ್ನು ಹೊಂದಿರುವ, ಕಡಿದಾದ ಶಿಖರದೆತ್ತರದಲ್ಲಿ ಅತಿ ಸುರಕ್ಷಿತವಾಗಿದ ಕೋಟೆಯಾಗಿತ್ತು. ಆಕೆ ಮಲೆನಾಡಿನ ಪ್ರಾಂತ್ಯದಿಂದ ಕಾಳು ಮೆಣಸನ್ನು ಖರೀದಿಸಿ ಅದನ್ನು ಶರಾವತಿ ನದಿಯ ದಂಡೆಯ ಮೂಲಕ ಸಾಗಿಸುತ್ತಿದ್ದರಿಂದಲೇ ಆ ಪ್ರದೇಶಕ್ಕೆ ಮೆಣಸುಗಾರು ಎಂಬ ಹೆಸರು ಬಂದಿತ್ತು ಎಂದರೆ ಆಕೆಯ  ಕಾಳು ಮೆಣಸಿನ ವ್ಯಾಪಾರ ಎಷ್ಟರ ಮಟ್ಟಿಗೆ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎಂಬುದರ ಅರಿವಾಗುತ್ತದೆ. ಹಾಗೆ  ಸಂಗ್ರಹಿಸಿದ ಕಾಳುಮೆಣಸನ್ನು ಇದೇ ಕಾನೂರು ಕೋಟೇಯಲ್ಲಿಯೇ ಸುರಕ್ಷಿತವಾಗಿ ದಾಸ್ತಾನು  ಮಾಡುತ್ತಿದ್ದಳು.

kk4ಇದೇ ಸಾಂಬಾರು ಪದಾರ್ಥಗಳನ್ನು ಬೆನ್ನತ್ತಿಯೇ ಗೋವಾದಿಂದ ಬಂದ ಪೋರ್ಚುಗೀಸರ ಕ್ಯಾಪ್ಟನ್ ಲೂಯೀಸ್ ದೆ ಅಟಾಯ್ದೆ 1559ರಲ್ಲಿ 113 ನಾವೆ ಮತ್ತು 2500 ಯೋಧರೊಂದಿಗೆ ಹೊನ್ನಾವರವನ್ನು ಧ್ವಂಸಗೊಳಿಸಿ  ಗೇರುಸೊಪ್ಪೆಯನ್ನು ಆಕ್ರಮಿಸಲು ಬಂದಾಗ ಅಲ್ಲಿನ ನಿರ್ಜನವಾದ ಪ್ರದೇಶವನ್ನು ಕಂಡು ಆಶ್ವರ್ಯ ಚಕಿತನಾಗಿ ಕಡೆಗೆ ರಾಣಿ ಚನ್ನಭೈರಾದೇವಿ ಕಾನೂರಿನಲ್ಲಿರುವುದನ್ನು ತಿಳಿದು ಅದನ್ನು ವಶಪದಿಸಿಕೊಳ್ಳಲು ತನ್ನ ಸೈನ್ಯದೊಂದಿಗೆ ಕಡಿದಾದ ಶಿಖರವನ್ನೇರಲು ತೊಡಗಿದಾಗ ರಾಣಿಯ ಸೈನಿಕರು ಶಿಖರದ ತುದಿಯಿಂದ ಉರುಳು ಗಲ್ಲುಗಳನ್ನು ಪೋರ್ಚುಗೀಸ್  ಸೈನಿಕರ ತಲೆಯ ಮೇಲೆ ಉರುಳಿಸತೊಡಗಿದ್ದನ್ನು ಕಂಡು ಬೆಚ್ಚಿಬಿದ್ದ  ಪೋರ್ಚುಗೀಸ್  ಸೈನಿಕರು ಕಾನೂರು  ಕೋಟೆಯನ್ನು ವಶಪಡಿಸಿಕೊಳ್ಳುವ ಯೋಚನೆಯನ್ನು ಕೈಬಿಟ್ಟು  ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು  ದಿಕ್ಕಪಾಲಾಗಿ  ಪರಾರಿಯಾಗಿ ಕಡಲ ತೀರ ಬಸ್ರೂರಿಗೆ ಮುತ್ತಿಗೆ  ಹಾಕುತ್ತಾರೆ.  ಆಗ ರಾಣಿ ಚೆನ್ನಭೈರಾದೇವಿ ಕಾನೂರಿನಿಂದಲೇ ಬಸ್ರೂರು ದೊರೆಗೆ ಬೆಂಬಲಿಸಿ ಪೋರ್ಚುಗಿಸರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಳು. ಉರುಳುಗಲ್ಲಿನ  ಮೂಲಕ  ಕಾನೂರು ಕೋಟೆಯನ್ನು ರಕ್ಷಿಸಿಕೊಂಡ ಕಾರಣ ಅಂದಿನಿಂದ ಆ ಪ್ರದೇಶ ಉರುಳುಗಲ್ಲು ಎಂದೇ ಹೆಸರಾಗಿದ್ದಲ್ಲದೇ, ಇಂದಿಗೂ ಆ ಕಾನೂರು ಕೋಟೆಯು ಉರುಳುಗಲ್ಲು ಗ್ರಾಮಕ್ಕೇ ಸೇರುತ್ತದೆ.

ಹೊರಗಿನ ಶತ್ರುಗಳನ್ನು ಗುರುತಿಸಿ ಅವರೊಂದಿಗೆ  ಹೋರಾಟ ಮಾಡುವುದು ಸುಲಭ ಆದರೆ ತಮ್ಮೊಂದಿಗೆ  ಮಿತ್ರರಾಗಿದ್ದು ಕೊಂಡು ಸಮಯ ಸಾಧಕರಾಗಿ ಅದೊಂದು ದಿನ ನಮಗೇ ಅರಿವಿಲ್ಲದಂತೆ ತಮ್ಮ ಬೆನ್ನಿಗೆ ಚೂರಿ  ಇರಿಯುವ ಹಿತಶತ್ರುಗಳನ್ನು ಗುರುತಿಸುವುದು ಬಹಳ ಕಷ್ಟಕರವೇ ಸರಿ. ರಾಣಿ ಚನ್ನಬೈರಾದೇವಿಯ  ವಿಷಯದಲ್ಲೂ ಇದೇ ರೀತಿಯಾಗಿ  ಕಾಳುಮೆಣಸಿನ ವ್ಯಾಪಾರದಲ್ಲಿ ವಿದೇಶೀಯರೊಂದಿಗಿದ್ದ ರಾಣಿಯ ಏಕಸ್ವಾಮ್ಯವನ್ನು ಹತ್ತಿಕ್ಕಲು  ಕೆಳದಿ ನಾಯಕರು ಮತ್ತು ಬಿಳಗಿ ಅರಸರು ಹರಸಾಹಸ ಪಡುತ್ತಿದ್ದರು. ಹಾಗಾಗಿ  ಅವರು ವಿದೇಶಿಗರೊಂದಿಗಿನ ವ್ಯಾಪಾರದ ಕೊಂಡಿಯಾಗಿದ್ದ ಬೈಂದೂರು, ಹೊನ್ನಾವರ, ಮಿರ್ಜಾನ ಅಂಕೋಲ ಬಂದರುಗಳನ್ನು ವಶಪಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ, ಕಾನೂರು ಕೋಟೆಯ ಭದ್ರತೆ ಮತ್ತು ಚೆನ್ನಭೈರಾದೇವಿಯ ಪ್ರತಾಪದೆದುರು ಸೋಲನ್ನಪ್ಪುತ್ತಿದ್ದರು.

ಹಾಗಾಗಿ ರಾಣಿಯನ್ನು ಮಣಿಸಲೆಂದೇ, 1606ರಲ್ಲಿ ಕೆಳದಿಯ ಅರಸು ಹಿರಿಯ ವೆಂಕಟಪ್ಪ ನಾಯಕ ಮತ್ತು ಬಿಳಿಗಿಯ ಅರಸರು ಇಬ್ಬರೂ ಪರಸ್ಪರ ಒಂದಾಗಿ ದಳವಾಯಿ ಲಿಂಗಣ್ಣ ಎನ್ನುವ ಸರದಾರನಿಗೆ ಆಮಿಷವೊಡ್ಡಿ ಅವನ ಮೂಲಕ ಮೋಸದಿಂದ  ರಾಣಿಯನ್ನು ಸೆರೆ ಹಿಡಿಸಿ  ಆಕೆಯನ್ನು ಹಳೆ ಇಕ್ಕೇರಿ ಕೋಟೆಯಲ್ಲಿ ಸುಮಾರು ಕಾಲ  ಬಂಧನಲ್ಲಿ ಇಟ್ಟಿದ್ದಾಗಲೇ ಆಕೆ ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ. ಕೆಳದಿಯ ನಾಯಕರು  ಕಾನೂರು  ಕೋಟೆಯನ್ನು ವಶಪಡಿಸಿಕೊಂಡ ನಂತರ ಆದಕ್ಕೆ ಮತ್ತಷ್ಟು ಜೀರ್ಣೋಧ್ದಾರ ಮಾಡಿಸಿದ ನಂತರ ಅದು  ಕೆಳದಿ ಕೋಟೆ ಎಂದೇ ಪ್ರಸಿದ್ಧವಾಗುತ್ತದೆ.

kk5ಇಂದು ಜನಸಾಮಾನ್ಯರಿಗೆ ಕಾನೂರು ಕೋಟೆಗೆ ಹೋಗಲು  ಅರಣ್ಯ ಇಲಾಖೆಯ ಅಪ್ಪಣೆ ಬೇಕಿದ್ದರೂ, ಆ ವೀರ ಮಹಿಳೆಯ ಶಕ್ತಿಕೇಂದ್ರವಾಗಿ, ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆಗೆ ಪುರಾತತ್ವ ಇಲಾಖೆಯಿಂದ ಅವಗಣನೆಗೊಳಗಾಗಿ ವಿನಾಶದ ಅಂಚನ್ನು ತಲುಪಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅಲ್ಲೊಂದು ಭವ್ಯವಾದ ಕೋಟೆ ಇತ್ತು ಎನ್ನುವುದಕ್ಕೆ ಬಾವಿ, ಕಲ್ಲಿನ ದ್ವಜಸ್ಥಂಭ, ರಾಣಿವಾಸ, ಸುರಂಗ ಮಾರ್ಗಗಳು ಕುರುಹುಗಳಾಗಿ ಉಳಿದಿವೆ.

kk6ಆ ಕೋಟೆಯಲ್ಲಿದ್ದ ಜಿನಮಂದಿರ  ಮತ್ತು  ಶಿವಾಲಯ ಇಂದು ಕಳ್ಳ ಖದೀಮರ ಕೈಗೆ ಸಿಕ್ಕು ದಯನೀಯ ಸ್ಥಿತಿ ತಲುಪಿದೆ.  ನಿಧಿಯಾಸೆಗಾಗಿ ದ್ವಜಸ್ಥಂಭವನ್ನು ಉರುಳಿಸಿದ್ದರೆ ಅಲ್ಲಿನ ಶಿವಲಿಂಗವನ್ನು ಭಿನ್ನಗೊಳಿಸಿ ಹೊರಗೆ ಬಿಸಾಡಲಾಗಿದೆ. ಜಿನಮಂದಿರವು ಇಂದೋ ಇಲ್ಲವೇ ನಾಳೆಯೂ ಉರುಳಿ ಬೀಳಬಹುದಾದಂತಹ ದುಃಸ್ಥಿತಿಯಲ್ಲಿದ್ದರೆ  ರಾಣೀ ಚನ್ನಭೈರಾದೇವಿಯ ವಾಸಸ್ಥಾನವಿಂದು ಹಾವು ಮತ್ತು ಹಾವುರಾಣಿಗಳ ವಾಸಸ್ಥಾನವಾಗಿದ್ದು  ಅವುಗಳ ಮಧ್ಯದಲ್ಲಿ ದಟ್ಟವಾಗಿ ಮರ ಗಿಡಗಳು ಬೆಳೆದು ಅವುಗಳ ಬೇರಿನಿಂದಾಗಿ  ಗೋಡೆಗಳಲ್ಲವೂ ಶಿಥಿಲವಾಗಿ ಉದುರಿ ಹೋಗಿದೆ. ರಾಣಿ ಚನ್ನಭೈರಾದೇವಿಯ ಕಾಲದಲ್ಲಿ ಸುವರ್ಣಾವಸ್ಥೆಯಲ್ಲಿದ್ದ ಈ ಕೋಟೆಯ ನಾನಾ ಭಾಗಗಳಲ್ಲಿ ಆಕೆ ಸಾಕಷ್ಟು ನಿಧಿಯನ್ನು ಅವಿತಿಟ್ಟಿರಬಹುದು ಎಂಬ ಅಸೆಯಿಂದಾಗಿ ಇಂದಿಗೂ  ಆ ನಿಧಿಯಾಸೆಗಾಗಿ ಪುಂಡ ಪೋಕರಿಗಳು ರಾತ್ರೋರಾತ್ರಿ ಅನಧಿಕೃತವಾಗಿ  ಎಗ್ಗಿಲ್ಲದ್ದೇ ಎಲ್ಲೆಂದರಲ್ಲಿ  ಅಗೆದು ಬಿಸಾಡಿರುವುದನ್ನು ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ.

koteಪ್ರಸ್ತುತ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ವಿನಾಶದಂಚಿನಲ್ಕಿ ನಿಂತಿರುವ ಕೋಟೆಯ ಹೆಬ್ಬಾಗಿಲು,  ಶಿಥಿಲಾವಸ್ಥೆಯಲ್ಲಿದ್ದು ಬಹುತೇಕ ಉರುಳಿ ಹೋಗಿರುವ  ಕೋಟೆಯ ಗೋಡೆಗಳು,ಬಹುತೇಕ ವಿನಾಶವಾಗಿರುವ ರಾಣೀವಾಸದ ಕಟ್ಟಡ ಮತ್ತು ಅಲ್ಲಿರುವ ಬಾವಿಗಳು, ಸುರಂಗ ಮಾರ್ಗಗಳ ರಕ್ಷಣೆಗೆ ಪುರಾತತ್ವ ಇಲಾಖೆಯಾಗಲೀ, ಸ್ಥಳೀಯ  ಸಾಂಸ್ಕೃತಿಕ ಅಥವಾ ಇತಿಹಾಸ ಅಕಾಡಮಿಗಳಾಗಲೀ  ಗಮನ ವಹಿಸದೇ ಇರುವುದು ನಿಜಕ್ಕೂ  ದೌರ್ಭಾಗ್ಯದ ಸಂಗತಿಯಾಗಿದೆ.  ಇದು ಈ ದೇಶದ ಚರಿತ್ರೆಗೆ ನಾವುಗಳು ಮಾಡುತ್ತಿರುವ ಚರಿತ್ರಾರ್ಹ ಅನ್ಯಾಯವೆಂದರೂ ತಪ್ಪಾಗದು.

kk3ನಿಜ ಹೇಳಬೇಕೆಂದರೆ ಅಂತಹ ಕಗ್ಗಾಡಿನ ನಡುವಿನ ದುರ್ಗಮ ಪರ್ವತದ ನೆತ್ತಿಯಲ್ಲಿ ಇಂತಹ ಆಯಕಟ್ಟಿನ ಸ್ಥಳವೊಂದರಲ್ಲಿ ಅಭೇಧ್ಯ ಕೋಟೆಯನ್ನು ಕಟ್ಟಿ ಅದರಲ್ಲಿ ಸಾಕಷ್ಟು ಧನಕನಕಗಳನ್ನು ಆ ಕಾಲದಲ್ಲಿ ಸುರಕ್ಷಿತವಾಗಿ ಸಂಗ್ರಹಿಟ್ಟಿದ್ದರೆ, ಇಂದಿರುವ ಸಕಲ ಸೌಲಭ್ಯಗಳನ್ನು ಬಳಸಿಕೊಂಡು ಖಂಡಿತವಾಗಿಯೂ ಕಾನೂರು ಕೋಟೆಯ ಗತವೈಭವವನ್ನು ಮರಕಳಿಸಲು ಕೇವಲ ಇಚ್ಚಾಶಕ್ತಿಯ ಕೊರತೆಯಿದೆ ಅಷ್ಟೇ.

ಆಧುನಿಕ ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ಹಣವನ್ನು ಖರ್ಚುಮಾಡುತ್ತಿರುವ ಸರ್ಕಾರ, ಕಾನೂರು ಕೋಟೆಯಂತಹ ಐತಿಹಾಸಿಕ ಮಹತ್ವದ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಅಣಿಗೊಳಿಸಿದಲ್ಲಿ ನಮ್ಮ ಭವ್ಯವಾದ ಪರಂಪರೆ ಮತ್ತು ಈ ನೆಲದ  ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಪರಿಚಯಿಸುವುದರ ಜೊತೆಗೆ ಪ್ರವಾಸಿಗರ ಮನಸ್ಸಿಗೂ  ಮುದ ನೀಡಿದಂತಾಗುತ್ತದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಂಪದ ಸಾಲು ಮಾಸ ಪತ್ರಿಕೆಯ 2022ರ ಮೇ ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.ChennaBairadevi_Sampa

ಭಗವಾನ್ ಗೌತಮ ಬುದ್ಧ

ನಮ್ಮ ಸನಾತದ ಧರ್ಮದ ಪ್ರಕಾರ ಭಗವಾನ್ ವಿಷ್ಣುವಿನ ದಶಾವತಾರದ 9ನೇ ಭಾಗವಾಗಿ ಬುದ್ಧ ಈ ಭೂಲೋಕದಲ್ಲಿ ಅವತರಿಸಿದ್ದಾನೆ ಎಂಬುದೇೆ ಎಲ್ಲರ ನಂಬಿಕೆಯಾಗಿದೆ. ಅಹಿಂಸಾ ಪರಮೋ ಧರ್ಮ. ಆಸೆಯೇ ಸಕಲ ದುಃಖಕ್ಕೆ ಮೂಲ. ಹಾಗಾಗಿ ಆಸೆಯ ಹೊರತಾಗಿ ಭಗವಂತನನ್ನು ಆರಾಧಿಸಿ ಮೋಕ್ಷ ಪಡೆಯಿರಿ ಎಂದು ಉಪದೇಶಿಸಿದ್ದಲ್ಲದೇ, ನಮ್ಮ ಗೆಲುವಿಗೆ ಮತ್ತೊಬ್ಬರನ್ನು ಆಶ್ರಯಿಸುವುದರ ಬದಲು, ಮೊದಲು ನಮ್ಮ ಮೇಲೇ ನಾವೇ ನಂಬಿಕೆ ಇಟ್ಟು ಶ್ರಮವಹಿಸಿ ದುಡಿದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೇವೆ ಎಂದು ನೂರಾರು ವರ್ಷಗಳ ಹಿಂದೆಯೇ ಬೋಧಿಸಿದ ಮಹಾ ಗುರು ಬುದ್ಧ ಎಂದರೂ ತಪ್ಪಾಗದು.

ಹಿಂದೆ ಅಖಂಡಭಾರತದ ಭಾಗವಾಗಿದ್ದ ಸದ್ಯಕ್ಕೆ ನೇಪಾಳದ ಭಾಗವಾಗಿರುವ ಶಾಕ್ಯ ವಂಶದವರ ರಾಜ್ಯವಾದ ಕಪಿಲವಸ್ತುವಿನ ರಾಜನಾಗಿದ್ದ ಶುದ್ಧೋಧನನ ತುಂಬು ಬಸುರಿಯಾಗಿದ್ದ ಆತನ ಮಡದಿ ಮಾಯಾದೇವಿ ಹೆರಿಗೆಗಾಗಿ ತನ್ನ ತವರು ಮನೆಗೆ ಹೋಗುತ್ತಿದ್ದ ಮಾರ್ಗದ ಮಧ್ಯದಲ್ಲಿಯೇ ಲುಂಬಿನಿ ಎಂಬ ಗ್ರಾಮದಲ್ಲಿ ಪ್ರಸವ ವೇದನೆ ಕಾಣಿಸಿಕೊಂಡ ಪರಿಣಾಮ ಅಲ್ಲಿಯೇ ಸಮೀಪದ ಸಾಲ ವೃಕ್ಷಗಳ ನಡುವೆ ತಾತ್ಕಾಲಿಕವಾಗಿ ಹಾಕಿದ ಡೇರೆಯಲ್ಲಿ ಸುಂದರವಾದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಕ್ರಿ.ಪೂ. 623ರ ವೈಶಾಖ ಶುದ್ಧ ಪೂರ್ಣಿಮೆಯಲ್ಲಿ ಜನನವಾದ ಆ ಮಗುವಿಗೆ ಶುದ್ಧೋಧನ ದಂಪತಿಗಳು  ಗೌತಮ/ ಸಿದ್ಧಾರ್ಥ ಎಂದು ನಾಮಕರಣ ಮಾಡುತ್ತಾರೆ.

ರಾಜನು ವಿಧಿ ವಿಧಾನಗಳಂತೆ ತನ್ನ ಆಸ್ಥಾನದ ಜ್ಯೋತೀಷ್ಯರನ್ನು ಕರೆಯಿಸಿ ತಮ್ಮ ಮಗನ ಜಾತಕವನ್ನು ಬರೆಯಲು ಸೂಚಿಸುತ್ತಾರೆ. ಮಗುವಿನ ಜಾತಕದಲ್ಲಿ ಆತ ವಯಸ್ಕನಾದ ಮೇಲೆ ಇರುವ ಎಲ್ಲಾ ಆಸ್ತಿಗಳನ್ನೂ ತ್ಯಜಿಸಿ ಸನ್ಯಾಸಿಯಾಗುತ್ತಾನೆ ಎಂಬುದನ್ನು ತಿಳಿದ ರಾಜ ದುಃಖಿತನಾಗಿ, ತನ್ನ ಮಗನಿಗೆ ಬಾಹ್ಯ ಪ್ರಪಂಚವೇ ತಿಳಿಸ ಬಾರದೆಂದು ನಿರ್ಧರಿಸಿ ಆತನಿಗೆ ಸಕಲ ಐಶಾರಾಮದೊಂದಿಗೆ ತನ್ನ ಅರಮನೆಯಲ್ಲಿಯೇ ಕಳೆಯುವಂತೆ ಮಾಡುತ್ತಾನೆ.

budda5ಶಿಕ್ಷಣವೆಲ್ಲವೂ ಮುಗಿದು ವಯಸ್ಕನಾದ ನಂತರ ತನ್ನ ರಾಜಮನೆತನಕ್ಕೆ ಅನುರೂಪವಾದ ಯಶೋಧರಾ ಎಂಬ ರಾಜಕುಮಾರಿಯೊಂದಿಗೆ ಕಲ್ಯಾಣವಾಗಿ ಅವರಿಬ್ಬರ ಸುಃಖ ದಾಂಪತ್ಯದ ಕುರುಹಾಗಿ ರಾಹುಲನೆಂಬ ಮುದ್ದಾದ ಮಗುವಿನೊಂದಿಗೆ ಸಂಸಾರ ಸಾಗಿಸುತ್ತಿರುತ್ತಾನೆ.

budda3ಅದೊಮ್ಮೆ ತನ್ನ ಅರಮನೆಯ ಕಿಟಕಿಯಿಂದ ಊರ ಹೊರಗಿನ ಕಡೆ ನೋಡುತ್ತಿದ್ದಾಗ ಅಲ್ಲೊಂದು ಶವಯಾತ್ರೆ ನಡೆಯುತ್ತಿದ್ದು ಮೃತನ ಮನೆಯವರು ದುಃಖಿತರಾಗಿ ಅಳುತ್ತಾ ಹೋಗುತ್ತಿದ್ದದ್ದನ್ನು ಕಂಡು ತನ್ನ ಸೇವಕನೊಬ್ಬನನ್ನು ಕರೆದು ಅಲ್ಲೇನು ನಡೆಯುತ್ತಿದೆ? ಆ ಮಲಗಿರುವ ವ್ಯಕ್ತಿಯನ್ನು ಅವರೇಕೆ ಹೊತ್ತುಕೊಂಡು ಹೋಗುತ್ತಿದ್ದಾರೆ? ಆವನ ಸುತ್ತಾ ಜನರೇಕೆ ಅಳುತ್ತಿದ್ದಾರೆ? ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಪ್ರಭು, ಆ ಮೃತಪಟ್ಟ ವ್ಯಕ್ತಿಯನ್ನು ಚಟ್ಟದ ಮೇಲೆ ಹೊತ್ತು ಕೊಂಡು ಸ್ಮಶಾನದಲ್ಲಿ ಸುಟ್ಟು ಹಾಕಲು ತೆಗೆದುಕೊಂಡು ಹೋಗುತ್ತಿದ್ದಾರೆ. ಅವನ ಅಗಲಿಕೆಯ ದುಃಖದಿಂದಾಗಿ ಅವನ ಕುಟುಂಬದವರು ಅಳುತ್ತಿದ್ದಾರೆ ಎಂದು ಸರಳವಾಗಿ ವಿವರಿಸುತ್ತಾರೆ.

budda4ಹಾಗಾದರೆ ನಾನೂ ಒಂದು ದಿನ ಸಾಯುತ್ತೇನೆಯೇ? ನಾನು ಸತ್ತಾಗ ಹೀಗೆಯೇ ಮಾಡುತ್ತಾರೆಯೇ? ಎಂದು ಆಶ್ಚರ್ಯ ಚಕಿತನಾಗಿ ತನ್ನ ನೌಕರರನ್ನು ಪ್ರಶ್ನಿಸಿದಾಗ, ಹೌದು ಮಹಾ ಪ್ರಭು. ಈ ಪಪಂಚದಲ್ಲಿ ಜನಿಸಿರುವ ಪ್ರತಿಯೊಂದು ಜೀವರಾಶಿಗೂ ಅಂತ್ಯ ಎಂದು ಇದ್ದು ಜಾತಸ್ಯ ಮರಣಂ ಧೃವಂ. ಅಂದರೆ ಹುಟ್ಟಿದವನು ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎನ್ನುವುದು ಈ ಜಗದ ನಿಯಮ ಎಂದು ತಿಳಿಸುತ್ತಾನೆ. ಆಗ ಬುದ್ದನಿಗೆ ಒಂದು ರೀತಿಯ ಜಿಜ್ಞಾಸೆಯುಂಟಾಗಿ ಅರೇ, ಒಂದಲ್ಲಾ ಒಂದು ದಿನ ಸಾಯಲೇ ಬೇಕಾದ ನಮಗೇಗೆ ಸಂಸಾರ? ನಮಗೇಕೆ ಈ ರೀತಿಯ ಐಶಾರಾಮ್ಯ? ಎಂದು ಯೋಚಿಸಿ ಅದೊಂದು ರಾತ್ರಿ ಮಲಗಿದ್ದ ತನ್ನ ಹೆಂಡತಿ ಮತ್ತು ಮಗನನ್ನು ಕಡೆಯ ಬಾರಿಗೆ ನೋಡಿ ರಾಜಮನೆತನದ ಅಷ್ಟೂ ಐಷಾರಾಮಗಳು ತೊರೆದು, ಜನರ ಸಂಕಷ್ಟಗಳು ಹಾಗೂ ಅಜ್ಞಾನಕ್ಕೆ ತನ್ನಿಂದೇನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿ ಲೋಕೋದ್ಧಾರಕ್ಕಾಗಿ ಸತ್ಯದ ಹುಡುಕಾಟಕ್ಕೆ ಹೊರಟೇ ಹೋಗುತ್ತಾನೆ.

ಜೀವನದ ಸತ್ಯಾನ್ವೇಷಣೆಯಲ್ಲಿ ಅರಸೊತ್ತಿಗೆ, ಹೆಂಡತಿ. ಮಗ ಹಾಗೂ ರಾಜ್ಯವನ್ನು ರಾತ್ರೋ ರಾತ್ರಿ ತೊರೆದು ಅನ್ನ ನೀರಿನ ಹಂಗಿಲ್ಲದೆ ಕಾಡಿನಲ್ಲಿ ಸುಧೀರ್ಘವಾದ ಧ್ಯಾನದಲ್ಲಿ ಮುಳುಗಿದ್ದವನಿಗೆ ಸುಮಾರು 6 ವರ್ಷಗಳ ಕಾಲ ಕಳೆದದ್ದೇ ತಿಳಿದಿರಲಿಲ್ಲ. ಹೀಗೆ ಅನ್ನ ನೀರು ಇಲ್ಲದೇ ಧ್ಯಾನಸಕ್ತನಾದ ಕಾರಣ, ದೇಹವೆಲ್ಲಾ ಕೃಶವಾಗಿ ಅವನ ದೈಹಿಕ ಶಕ್ತಿಯೆಲ್ಲಾ ಕುಗ್ಗಿ, ಪ್ರಾಣಕ್ಕೇ ಸಂಚಕಾರವಾದರೂ ಛಲ ಬಿಡದ ತ್ರಿವಿಕ್ರಮನಂತೆ ಸತ್ಯದ ಹುಡುಕಾಟದತ್ತಲೇ ಹರಿದ್ದು ಸಿದ್ಧಾರ್ಥನ ಚಿತ್ತ. ಅದೊಮ್ಮೆ ಅವನು ಧ್ಯಾನ ಮಾಡುತ್ತಿದ್ದ ಜಾಗದಲ್ಲಿ ಬಳಿಯಲ್ಲೇ ಹಾಡಿ ಕೊಂಡು ಹೋಗುತ್ತಿದ್ದ ಹಳ್ಳಿಯೊಬ್ಬರ ಜಾನಪದ ಹಾಡು ಅವನ ಮನಸ್ಸಿಗೆ ತೀವ್ರವಾಗಿ ನಾಟಿತು. ಅತೀಯಾದರೆ ಅಮೃತವೂ ವಿಷ ಎನ್ನುವಂತೆ ಏನೇ ಮಾಡಿದರೂ ಅತಿಯಾಗಿ ಮಾಡದೇ, ಹಿತ-ಮಿತವಾಗಿ ಮಾಡಬೇಕು ಎನ್ನುವ ಆ ಹಾಡಿನ ಭಾವಾರ್ಥದಂತೆ, ತನ್ನ ನಿರಾಹಾರ ವ್ರತವನ್ನು ತ್ಯಜಿಸಿ ಜೀವನಕ್ಕೆ ಅವಶ್ಯಕವಾಗಿರುವಷ್ಟು ಆಹಾರವನ್ನು ಪರಿವ್ರಾಜಕತೆಯಿಂದ ಪಡೆಯಲು ನಿರ್ಧರಿಸಿದ.

budda6ಅದೇ ಸಮಯಕ್ಕೆ ಸರಿಯಾಗಿ ಸುಜಾತ ಎಂಬ ಹೆಣ್ಣುಮಗಳು ತನಗೆ ಮಗ ಹುಟ್ಟಿದ ಸಂತೋಷದಲ್ಲಿ ಊರಿನವರಿಗೆಲ್ಲರಿಗೂ ಸಿಹಿ ಪಾಯಸವನ್ನು (ಕ್ಷೀರಾನ್ನ) ಹಂಚುತ್ತಾ ಧ್ಯಾನದಲ್ಲಿ ಮಗ್ನನಾಗಿದ್ದ ಗೌತಮನಿಗೂ ಒಂದು ತಟ್ಟೆಯಲ್ಲಿ ಕ್ಷೀರಾನ್ನ ನೀಡಿದಾಗ ಅದನ್ನು ಗೌತಮರು ಸಂತೋಷದಿಂದ ಸ್ವೀಕರಿಸುತ್ತಾರೆ. ಇದು ಗೌತಮರು ಸ್ವೀಕರಿಸಿದ ಮೊದಲ ಭಿಕ್ಷಾಹಾರವಾಗಿತ್ತು. ಹಾಗೆ ಸ್ವೀಕರಿಸಿದ ಆಹಾರವನ್ನು ಸೇವಿಸುವಾಗ ಸತ್ಯದ ಸಾಕ್ಷಾತ್ಕಾರಕ್ಕೆಂದು ದೇಹ ದಂಡಿಸಿದರೆ ಅದರಿಂದ ಯಾವುದೇ ಉಪಯೋಗವಿಲ್ಲ. ಕಾಯಕ್ಲೇಶ, ನಿರಾಹಾರ ನಿಯಮಗಳು ಸಾಧನೆಗೆ ಸಹಾಯಕವಾಗಲಾರವು ಹಾಗಾಗಿ ಜೀವಿಸುವುದಕ್ಕೆ ಎಷ್ಟು ಅಗತ್ಯವೂ ಅಷ್ಟು ಆಹಾರವನ್ನು ಮಾತ್ರವೇ ಸ್ವೀಕರಿಸ ಬೇಕು ಎನ್ನುವುದು ಅವರ ಅರಿವಿಗೆ ಬಂದಿತು.

buda2ಈ ಘಟನೆ ನಡೆದ ಮುಂದಿನ ಏಳು ವಾರಗಳ ಕಾಲ ಗೌತಮರು ಪ್ರತಿನಿತ್ಯವೂ ಹತ್ತಿರದ ನದಿಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಅಲ್ಲಿದ್ದ ಬೋಧಿ ವೃಕ್ಷದ (ಅರಳೀ ಮರ) ಕೆಳಗೆ ಧ್ಯಾನ ಮಾಡುತ್ತಾ ಹೊಟ್ಟೆ ಹಸಿದಾಗ ಮಾತ್ರಾ ಹತ್ತಿರದ ಹಳ್ಳಿಯಲ್ಲಿ ಭಿಕ್ಷಾಹಾರ ಮಾಡುತ್ತಾ ಧ್ಯಾನದಲ್ಲಿ ತಲ್ಲೀನನಾಗುತ್ತಾನೆ. ಹೀಗೆ ಏಳನೇ ವಾರ ವೈಶಾಖ ಶುದ್ಧ ಪೌರ್ಣಮಿಯಂದು (ಅವರ ಹುಟ್ಟಿದ ಹಬ್ಬದಂದೇ) ಅದುವರೆವಿಗೂ ತಾನು ಬಯಸುತ್ತಿದ್ದ ಸತ್ಯದ ಅರಿವು ಅವರಿಗೆ ಮೂಡಿದ್ದಲ್ಲದೇ, ಸೂರ್ಯೋದಯವಾಗುವುದರೊಳಗೆ ಗೌತಮನಿಗೆ ಈಗಿನ ಬಿಹಾರಕ್ಕೆ ಸೇರಿರುವ ಬೋಧಗಯಾ ಎಂಬ ಗ್ರಾಮದಲ್ಲಿ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಗುತ್ತದೆ. ಹಾಗೆ ಜ್ಞಾನೋದಯವಾದ ನಂತರ ಗೌತಮ ಬುದ್ಧ ಎಂಬ ಹೆಸರನ್ನು ಪಡೆದನು. ಬುದ್ಧ ಎಂದರೆ ಜ್ಞಾನ ಪಡೆದವನು ಎಂದು ಅರ್ಥ. ಬುದ್ಧನನ್ನು ತಥಾಗಥಾ ಎಂದು ಕರೆಯುತ್ತಾರೆ. ಹಾಗೆಂದರೆ ಸತ್ಯವನ್ನು ಅರಿತವನು ಎಂಬ ಅರ್ಥ ಬರುತ್ತದೆ.

ಜನ ಸೇವೆ ಮತ್ತು ಜನ ಕಲ್ಯಾಣವೇ ಬುದ್ಧನ ಜೀವನದ ಉದ್ದೇಶವಾಗಿದ್ದ ಕಾರಣ ಬುದ್ಧನು ಮೊದಲ ಬಾರಿ ಸಾರನಾಥದ ಜಿಂಕೆ ವನದಲ್ಲಿ ತನ್ನ ಪ್ರಥಮ ಪ್ರವಚನ ನೀಡಿದ್ದನ್ನು ಧರ್ಮ ಚಕ್ರ ಪ್ರವರ್ತನ ಎಂದು ಕರೆದಿದ್ದಾರೆ. ಈ ಧರ್ಮ ಚಕ್ರವೇ ಬೌದ್ಧ ಧರ್ಮದ ಚಿನ್ಹೆಯಾಗಿದೆ. ಅಲ್ಲಿಂದ ಸುಮಾರು ನಲವತ್ತೈದು ವರ್ಷಗಳ ಕಾಲ ಏಷ್ಯಾ ಖಂಡದ ಬಹುತೇಕ ಭಾಗಗಳಾದ ಶ್ರೀಲಂಕಾ, ಚೈನಾ, ಜಪಾನ್, ಇಂಡೊನೇಷ್ಯಾ ಇನ್ನು ಹಲವು ಪ್ರದೇಶಗಳಲ್ಲಿ ಬುದ್ಧನು ಸಂಚರಿಸಿ ತನ್ನ ಬೌದ್ಧ ಧರ್ಮದ ಪ್ರಚಾರವನ್ನು ಮಾಡಿದ ಪರಿಣಾಮ ಆ ದೇಶದ ಬಹುತೇಕ ಜನರು ಬೌಧ್ಧ ಧರ್ಮದ ಅನುಯಾಯಿಗಳಾದರು.

ಯಾವುದೇ ಜಾತಿ, ಮತಗಳ ಬೇಧವಿಲ್ಲದೆ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಬುದ್ಧನ ಪಂಚಶೀಲ ತತ್ವಗಳು ಹೀಗಿವೆ.

 • ಯಾವುದೇ ಜೀವಿಗಳನ್ನು ಕೊಲ್ಲದಿರುವುದು ಆಥವಾಹಿಂಸೆ ಮಾಡದಿರುವುದು.
 • ನಮ್ಮದಲ್ಲದಿರುವ ವಸ್ತುಗಳನ್ನು ತೆಗೆಯದಿರುವುದು ಅಥವಾ ಕದಿಯದಿರುವುದು
 • ಶೀಲ ಹರಣ ಮಾಡದಿರುವುದು
 • ಸುಳ್ಳನ್ನು ಹೇಳದಿರುವುದು.
 • ಮಾದಕ ಪಾನೀಯ ಅಥವಾ ಮಾದಕ ವಸ್ತುಗಳು ಸೇವಿಸದಿರುವುದು.

ಬೌದ್ಧ ಧರ್ಮದ ಅಷ್ಟಾಂಗ ಮಾರ್ಗಗಳು ಹೀಗಿವೆ.

 • ಒಳ್ಳೆಯ ನಂಬಿಕೆ
 • ಒಳ್ಳೆಯ ಆಲೋಚನೆ
 • ಒಳ್ಳೆಯ ನಡತೆ
 • ಒಳ್ಳೆಯ ಮಾತು
 • ಒಳ್ಳೆಯ ಧ್ಯಾನ
 • ಒಳ್ಳೆಯ ಪ್ರಯತ್ನ
 • ಒಳ್ಳೆಯ ವಿಚಾರ
 • ಒಳ್ಳೆಯ ಜೀವನೋಪಾಯ

ಗೌತಮ ಸಿದ್ಧಾರ್ಥ ಕೇವಲ ಸರ್ವ ಸಂಗ ಪರಿತ್ಯಾಗದಿಂದ ಬುದ್ಧನಾಗಲಿಲ್ಲ. ಬದಲಾಗಿ ತಾನು ಕಂಡ ಕೊಂಡ ಬದುಕಿನ ಸತ್ಯ ದರ್ಶನದಿಂದ ಆತ ಬುದ್ಧನಾಗಿ ಜಗದ್ವಿಖ್ಯಾತನಾದನು. ಪ್ರೀತಿ ಮತ್ತು ದಯೆ ಇವುಗಳೇ ಜಗತ್ತಿನಲ್ಲಿ ಪ್ರಮುಖವಾದವು ಹಾಗಾಗಿ ಬೇರೆಯವರತ್ತ ಬೆರಳು ತೋರುವ ಮನ್ನ ಮೊದಲು ನಮ್ಮನ್ನು ನಾವು ಅವಲೋಕಿಸಿಕೊಂಡಲ್ಲಿ ಎಲ್ಲವೂ ಸುಗಮವಾಗುವುದು ಎಂದು ಸಾವಿರಾರು ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗುತ್ತಿದೆ ಎನ್ನುವುದು ಗಮನಾರ್ಹವಾದ ಅಂಶವಾಗಿದೆ.

ಸಮಾಜದಲ್ಲಿರುವ ಅಜ್ಞಾನದ ಕಾರಣದಿಂದಾಗಿಯೇ ಅನ್ಯಾಯ ಮತ್ತು ಹಿಂಸೆಗಳು ನಡೆಯುತ್ತಿರುವುದನ್ನು ಕರುಣೆಯ ಮೂಲಕ ಪರಿಹಾರವನ್ನು ಕಂಡು ಕೊಳ್ಳಬಹುದೇ ಹೊರತು, ದ್ವೇಷದಿಂದದಲ್ಲ. ಅಹಿಂಸೆಯ ತಳಹದಿಯಲ್ಲಿ ಪ್ರೀತಿಯಿಂದ ದ್ವೇಷವನ್ನು ಗೆಲ್ಲುವುದೇ ಬುದ್ಧನ ಸರಳ ತತ್ವವಾಗಿತ್ತು. ಬಡವನಾಗಿ ಹುಟ್ಟುವುದು ನಮ್ಮ ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ನಮ್ಮದೇ ತಪ್ಪು. ಹಾಗಾಗಿ ಬಡತನವೇ ದೊಡ್ಡ ರೋಗವೆಂದು ಭಾವಿಸಿದ್ದ ಬುದ್ಧ ಪ್ರತಿಯೊಬ್ಬರೂ ಆರ್ಥಿಕವಾಗಿ ಶಕ್ತರಾಗಬೇಕು ಮತ್ತು ಆ ರೀತಿಯ ಆರ್ಥಿಕ ಸಂಪತ್ತು ಸರಿಯಾದ ಮಾರ್ಗದಿಂದ ಗಳಿಸಿಕೊಳ್ಳಬೇಕು ಎಂಬುದೇ ಆತನ ತತ್ವವಾಗಿತ್ತು.

ಬುದ್ಧ ಪೂರ್ಣಿಮೆಯಂದು ಕೇವಲ ಬುದ್ಧನ ಪೋಟೋ ಅಥವಾ ಪ್ರತಿಮೆಯನ್ನು ಪೂಜಿಸಿ ಪ್ರಸಾದ ರೂಪದಲ್ಲಿ ಕ್ಷೀರಾನ್ನವನ್ನು ನೀಡಿದರೆ ಬುದ್ಧ ಪೌರ್ಣಿಮೆಯನ್ನು ಅಚರಿಸಿದಂತಾಗುವುದಿಲ್ಲ. ಅದರ ಬದಲಾಗಿ ವರ್ಷ ಪೂರ್ತಿಯೂ ಬುದ್ಧನು ಹೇಳಿದ ಪಂಚಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಬುದ್ಧ ಪೂರ್ಣಿಮೆಯ ಆಚರಣೆ ಸಾರ್ಥಕವೆನಿಸುತ್ತದೆ ಅಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಚಾಪೇಕರ್ ಸಹೋದರರು

chepakar1ಇವತ್ತಿನ ಬಹುತೇಕ ರಾಜಕೀಯ ಪಕ್ಷದ ನಾಯಕರುಗಳು ನಮ್ಮವರು ಈ ದೇಶಕ್ಕಾಗಿ ಇಷ್ಟು ತ್ಯಾಗ ಮಾಡಿದ್ದಾರೆ ಅಷ್ಟು ತ್ಯಾಗ ಮಾಡಿದ್ದಾರೆ ಎಂದು ಪುಂಖಾನು ಪುಂಖವಾಗಿ ಹೇಳುತ್ತಲೇ ಜನರನ್ನು ಮರಳು ಮಾಡುತ್ತಿರುವ ಸಂಧರ್ಭದಲ್ಲಿ ಒಂದೇ ಕುಟುಂಬದ, ಅದರಲ್ಲೂ ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ಅಣ್ಣ ತಮ್ಮಂದಿರಾದ ಚಾಪೇಕರ್ ಸಹೋದರರನ್ನು ಬ್ರಿಟೀಷ್ ಅಧಿಕಾರಿಗಳು ಮತ್ತು ಮಿತ್ರದ್ರೋಹ ಎಸಗಿದ ಸಾಕ್ಷಿಯಾಗಿದ್ದ ಭಾರತೀಯನನ್ನು ಕೊಂಡಿದ್ದಕ್ಕಾಗಿ ಗಲ್ಲು ಶಿಕ್ಷೆಯನ್ನು ವಿಧಿಸಿದಾಗ ಅವರೆಲ್ಲರೂ ಸಂತೋಷದಿಂದ ಭಾರತಮಾತೆಗೆ ತಮ್ಮ ಪ್ರಾಣವನ್ನು ಅರ್ಪಿಸಿದ್ದನ್ನು ನೆನಪಿಸಿಕೊಂಡು ಆ ಸಹೋದರಿಗೆ ಎರಡು ಹನಿ ಅಶ್ರುತರ್ಪಣವನ್ನೂ ಸಲ್ಲಿಸದಲಾಗದಷ್ಟು ಸಮಯವಿಲ್ಲದಷ್ಟು ಕಾರ್ಯ ನಿರತರಾಗಿ ಹೋಗಿದ್ದೇವೆ ಎನ್ನುವುದು ನಿಜಕ್ಕೂ ಆ ದೇಶಭಕ್ತರಿಗೆ ಮಾಡುವ ಅವಮಾನ ಎಂದರೂ ತಪ್ಪಾಗದು.

ಚಾಪೇಕರ್ ಸಹೋದರರ ಪೋಷಕರಾದ ಶ್ರೀ ಹರಿಭಾವು, ಮತ್ತು ಶ್ರೀಮತಿ ಲಕ್ಷ್ಮೀ ಬಾಯಿ ಯವರ ಮನೆತನದ ಮೂಲಸ್ಥಾನ ಪೂನಾ ಬಳಿಯ ಚಿಂಚವಡವಾಗಿತ್ತು. ಮೂಲತಃ ಸಿರಿವಂತರಾಗಿದ್ದು ಕಾಲಾನುಕ್ರಮದಲ್ಲಿ ಅವೆಲ್ಲವನ್ನು ಕಳೆದುಕೊಂಡು ಶ್ರೀ ಹರಿಬಾವು ಅವರು ಅಂದಿನ ಬ್ರಿಟೀಷ್ ಸರ್ಕಾರದಲ್ಲಿ ನೌಕರರಾಗಿ ಕೆಲಕಾಲ ಸೇವೆ ಸಲ್ಲಿಸಿ ಗುಲಾಮಗಿರಿಗಿಂತ ಸ್ವತಂತ್ರ ವೃತ್ತಿಯೇ ಮೇಲೆಂದು ಅವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹರಿ ಕೀರ್ತನಾಕಾರರಾಗಿ ಭಗವಂತನ ಸ್ಮರಣೆ ಮಾಡುತ್ತಾ ಊರೂರು ಸಂಚರಿಸುತ್ತಿರುತ್ತಾರೆ. ಈ ದಂಪತಿಗಳಿಗೆ 25 ಜೂನ್ 1869ರಲ್ಲಿ ದಾಮೋದರ್ ಹರಿ ಚಾಪೇಕರ್ ಜನಿಸಿದರೆ, 1873ರಲ್ಲಿ ಬಾಲಕೃಷ್ಣ ಹರಿ ಚಾಪೇಕರ್ ಮತ್ತು 1880ರಲ್ಲಿ ಕೊನೆಯವರಾಗಿ ವಾಸುದೇವ ಹರಿ ಚಾಪೇಕರ್ ಎಂಬ ಮೂರು ಪುತ್ರರತ್ನರು ಜನಿಸುತ್ತಾರೆ. ವಂಶಪಾರಂಪರ್ಯವಾಗಿ ತಂದೆಯಿಂದಲೇ ಸ್ವಾತಂತ್ರ್ಯದಾಹ, ಸ್ವಾಭಿಮಾನದ ಕೆಚ್ಚು ಈ ಮೂವರೂ ಸಹೋದರರಲ್ಲೂ ರಕ್ತಗತವಾಗಿರುತ್ತದೆ.

ತಂದೆಯ ಜೊತೆಗೇ ಊರೂರು ಸಂಚರಿಸುತ್ತಾ ತಂದೆಯವರು ಹೇಳುತ್ತಿದ್ದ ಹಾಡು ಮತ್ತು ಕಥೆಗಳನ್ನು ಕೇಳುತ್ತಲೇ ಚಿಕ್ಕವಯಸ್ಸಿನಲ್ಲಿಯೇ ದಾಮೋದರ್ ಚಾಪೇಕರ್ ಅನೌಪಚಾರಿಕವಾಗಿಯೇ ಅಪಾರವಾದ ಜ್ಞಾನವನ್ನು ಪಡೆದಿದ್ದಲ್ಲದೇ ಆ ಜ್ಞಾನವನ್ನು ತನ್ನ ಸಹೋದರರಿಗೂ ಹಂಚಿದ್ದಲ್ಲದೇ ಸಮಾಜದಲ್ಲಿರುವ ತಮ್ಮ ಯವಸ್ಸಿನ ಇತರೇ ತಾರುಣ್ಯದ ಯುವಕರಿಗಳಿಗೂ ಕಲಿಸಿಕೊಡುವ ಸಲುವಾಗಿ ಚಾಪೇಕರ್ ಕ್ಲಬ್ ಒಂದನ್ನು ಸ್ಥಾಪಿಸಿ ಅಲ್ಲಿ ಆಟದ ಜೊತೆ ಜೊತೆಗೆ ಅನೇಕ ದೇಶಭಕ್ತ ವೀರರ ಹೋರಾಟದ ಕಥೆಗಳನ್ನು ಆ ತರುಣರಿಗೆ ಹೇಳುತ್ತಾ, ಅವರಲ್ಲಿ ಸ್ವಾತಂತ್ರ್ಯದ ಸ್ಫೂರ್ತಿಯನ್ನು ತುಂಬಿಸುವ ಮಹತ್ಕಾರ್ಯದಲ್ಲಿ ತೊಡಗಿರುತ್ತಾರೆ. ಅದಷ್ಟೇ ಅಲ್ಲದೇ, ಪುಣೆಯಲ್ಲಿದ ವಿವಿಧ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ಕ್ಞಾತ್ರಪವೃತ್ತಿಯ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ತಮ್ಮ ಕ್ಲಬ್ಗೆ ಸೇರಿಸಿ ಕೊಂಡು ಅವರೆಲ್ಲರಿಗೂ ದೇಶದ ಸ್ವಾತ್ರಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನಾದರೂ ಕೊಡುತ್ತೇವೆ ಎನ್ನುವಷ್ಟರ ಮಟ್ಟಿಗಿನ ಕೆಚ್ಚನ್ನು ಹಚ್ಚಿಸಿರುತ್ತಾರೆ.

chap

ಈ ಸಹೋದರರು ತಮ್ಮ ಊರು ಮತ್ತು ಅಕ್ಕ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಶಿವಾಜಿ, ಗಣೇಶ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಾವಿರಾರು ಜನರು ಸೇರುತ್ತಿದ್ದೆಡೆ ಹೋಗಿ ಅಲ್ಲಿ ಭಾರತದ ಹಿರಿಮೆಯನ್ನು ಸಾರುವ, ಬ್ರಿಟಿಷರು ಹೇಗೆ ಕುಟಿಲತೆಯಿಂದ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡು ಭಾರತೀಯರನ್ನು ಹೇಗೆ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ ಎಂಬುದರ ಕುರಿತಾಗಿ ಹಾಡಿನ ರೂಪದಲ್ಲಿ ಹೇಳುತ್ತಾ ಅಲ್ಲಿದ್ದ ಜನರಲ್ಲಿ ಸ್ವಾತ್ರಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚುವುದರಲ್ಲಿ ಅಲ್ಪ ಸ್ವಲ್ಪ ಸಫಲರೂ ಆಗಿರುತ್ತಾರೆ. ತಮ್ಮೂರು ಪೂನಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯವಾದಿ ಹೋರಾಟಗಳಲ್ಲಿ ಅಗ್ರಗಣ್ಯರಾಗಿದ್ದ ಈ ಸಹೋದರರಿಗೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಶ್ರೀ ವಾಸುದೇವ ಬಲವಂತ ಫಡ್ಕೆಯವರ ಬಲಿದಾನ ಪ್ರೇರಣೆದಾಯಕವಾಗಿರುತ್ತದೆ. ಈ ಮಧ್ಯೆ ಬಾಲ ಗಂಗಾಧರ ತಿಲಕರ ಪ್ರೆರಣಾದಾಯಿ ಭಾಷಣಗಳೂ ಸಹಾ ಅವರ ಕ್ರಾಂತಿಯ ಚಿಂತನೆಗೆ ಚೈತನ್ಯವಾಗಿದ್ದಲ್ಲದೇ, ಹೇಗಾದರೂ ಮಾಡಿ ಬ್ರಿಟಿಷರನ್ನು ಭಾರತದಿಂದ ಓಡಿಸಲೇ ಬೇಕೆಂಬ ಹಂಬಲ ಅವರದ್ದಾಗಿರುತ್ತದೆ.

ಭಾರತೀಯರನ್ನು ಬ್ರಿಟೀಷರು ಕೇವಲ ದಾಸ್ಯದಲ್ಲಿ ಮತ್ರ ಇಟ್ಟು ಕೊಳ್ಳದೇ, ನಮ್ಮ ದೇಶದ ಸಂಸ್ಕಾರ, ಸಂಪ್ರದಾಯ ಮತ್ತು ಸಂಸ್ಕೃತಿಗೆ ಮಾರಕವಾಗಿದ್ದಾರೆ ಎಂಬುದನ್ನು ಮನಗಂಡಿದ್ದಲ್ಲದೇ, ಇಂಗ್ಲಿಷ್ ಶಿಕ್ಷಣದ ಮೂಲಕ ಭಾರತೀಯರನ್ನು ತಮ್ಮ ಪರಂಪರಾಗತ ಧಾರ್ಮಿಕ ನಂಬಿಕೆಯಿಂದ ದೂರಗೊಳಿಸುತ್ತಾ ಸತ್ವಹೀನರನ್ನಾಗಿಸುತ್ತಿದ್ದಾರೆ. ಅದಲ್ಲದೇ ತಮ್ಮ ಸರ್ಕಾರೀ ಪ್ರಾಯೋಜಿತ ಮಿಶನರಿಗಳ ಮೂಲಕ ಮತಾಂತರ ಮಾಡುತ್ತಿದ್ದನ್ನು ತೀವ್ರವಾಗಿ ಖಂಡಿಸುತ್ತಲೇ ಇರುತ್ತಾರೆ. ಅದಕ್ಕಾಗಿ ಆ ಸಹೋದರರು, ಊರೂರು ಅಲೆಯುತ್ತಾ ನಡೆಸಿಕೊಂಡು ಹೋಗುತ್ತಿದ್ದ ಹರಿಕೀರ್ತನೆ ನಿಲ್ಲಿಸಿ ಭಾರತ ಮಾತೆಯ ಯಶೋಗಾನವನ್ನು ಹಾಡುತ್ತಾ ಜನರಲ್ಲಿ ದೇಶಭಕ್ತಿ ತುಂಬುವ ಕೆಲಸವನ್ನು ತೀವ್ರಗೊಳಿಸಿದ್ದಲ್ಲದೇ, ಬಿಸಿ ರಕ್ತದ ತರುಣನ್ನು ಸಂಘಟಿಸಿ ಊರ ಹೊರಗಿನ ದೇವಸ್ಥಾನಗಳಲ್ಲಿ ಕುಸ್ತಿ ತರಬೇತಿ, ಲಾಠಿ ಬೀಸುವುದು ಮತ್ತು ಪಿಸ್ತೂಲು ಉಪಯೋಗಿಸುವುದನ್ನು ಕಲಿಸಲು ಆರಂಭಿಸುತ್ತಾರೆ.

1896ರಷ್ಟರಲ್ಲಿ ಮುಂಬೈ ನಗರಕ್ಕೆ ಪ್ಲೇಗ್ ಎಂಬ ಮಹಾಮಾರಿ ಕಾಲಿಟ್ಟಿದ್ದಲ್ಲದೇ ನೋಡ ನೋಡುತ್ತಲೇ ನೂರಾರು ಜನರು ದೀಪದ ಹುಳದಂತೆ ಸಾಯುತ್ತಿರುವ ರೀತಿಯನ್ನು ನೋಡಿ ಇಡೀ ನಗರವೆಲ್ಲ ನಡುಗಿ, ಅದರ ಭೀತಿಯಿಂದ ಜನರು ದಿಕ್ಕಾಪಾಲಾಗಿ ವಲಸೆ ಹೊರಡಲು ಆರಂಭಿಸುತ್ತಾರೆ. ಹೀಗೆ ವಲಸ ಬಂದವರಿಂದಲೇ ಆ ಮಹಾಮಾರಿ ಪೂನಾ ನಗರಕ್ಕೂ ತೀವ್ರವಾಗಿ ಹರಡಿದಾಗ, ಆ ರೋಗವನ್ನು ತೊಡೆದುಹಾಕಲು ಬ್ರಿಟಿಷ್ ಸರ್ಕಾರ ರ್ಯಾಂಡ್ ಎಂಬ ಅಧಿಕಾರಿಯನ್ನು ನೇಮಿಸುತ್ತಾರೆ. ಸ್ವಭಾವತಃ ಭಾರತೀಯರನ್ನು ಕಂಡರೆ ಆಗದ ಆತ ದುಷ್ಟ ಮತ್ತು ಕ್ರೂರ ಮನಸ್ಸಿನ ಅಧಿಕಾರಿಯಾಗಿರುತ್ತಾನೆ. ಹಾಗಾಗಿ ಪ್ಲೇಗ್ ಹೊಡೆದೋಡಿಸಲು ಆತ ಕೇವಲ ಕಾಟಾಚಾರದ ಕ್ರಮಗಳನ್ನು ಕೈಗೊಂಡಿದ್ದಲ್ಲದೇ, ಭಾರತೀಯರನ್ನು ಹಿಂಸಿಸಲು ಮತ್ತು ಸೆದೆಬಡೆಯಲು ಇದೇ ಸುಸಂದರ್ಭ ಎಂದು ತಿಳಿದ ದರ್ಪಕ್ಕೆ, ದಬ್ಬಾಳಿಕೆಗೆ, ಕ್ರೌರ್ಯಕ್ಕೆ ಪ್ರಸಿದ್ಧನಾಗಿದ್ದ ಆ ರ್ಯಾಂಡ್ ಪ್ಲೇಗ್ ಬಂದ ಸಂಶಯದ ಮೇಲೆ ದೊಡ್ಡ ದೊಡ್ಡ ಶ್ರೀಮಂತರ ಮನೆಗಳಲ್ಲಿ ಪ್ಲೇಗ್ ರೋಗ ಬಂದಿರದಿದ್ದರೂ, ಇಲಿಗಳು ಸತ್ತು ಬೀಳುತ್ತಿವೆ ಎಂದು ಸುಳ್ಳು ಹೇಳಿ ಆ ಮನೆಗಳಿಗೆ ನುಗ್ಗುವುದು. ಮನೆಗಳನ್ನು ಒಡೆದು ಅಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕೊಳ್ಳೆ ಹೊಡೆಯುವುದು. ಆ ಮನೆಗಳಲ್ಲಿರುವ ದೇವರ ಮನೆಗೆ ಬೂಟುಕಾಲಿನಲ್ಲಿ ನುಗ್ಗಿ ಅಲ್ಲಿದ್ದ ವಿಗ್ರಹಗಳನ್ನು ಒದೆಯುವುದು. ಆ ಮನೆಯ ಹೆಂಗಸರಿರುವ ಕೋಣೆಗಳಿಗೂ ವಿನಾಕಾರಣ ಹೋಗಿ ಶೋಧಿಸುವ ನೆಪದಲ್ಲಿ ಹೆಂಗಸರನ್ನು ಗೋಳು ಹುಯ್ದುಕೊಳ್ಳುವುದು ಕೆಲವು ಬಾರಿ ಅವರ ಮೇಲೆ ಅತ್ಯಾಚಾರ ಮಾಡಿರುವುದು ಉಂಟು. ಪ್ಲೇಗಿನಿಂದ ಸತ್ತಿರುವ ಮತ್ತು ಸಾಯುತ್ತಿರುವವರನ್ನು ಸಾಗಿಸುವ ನೆಪದಲ್ಲಿ ಪ್ರತ್ಯೇಕವಾಗಿ ಇಟ್ಟು ಉಪಚಾರ ಮಾಡುವ ಆಸ್ಪತ್ರೆ ಶಿಬಿರಗಳಿಗೆ ಬದುಕಿರುವವರನ್ನು ಬಲವಂತವಾಗಿ ಎಳೆದುಹಾಕುತ್ತಿದ್ದಲ್ಲದೇ, ರೋಗ ಪೀಡಿತ ಜನರನ್ನು ಸಾರ್ವಜನಿಕವಾಗಿ ಬೆಂಕಿಯಿಂದ ಸುಟ್ಟು ಹಾಕುವ ಮೂಲಕ ತನ್ನ ವಿಕೃತಿ ಮೆರೆದಿರುತ್ತಾನೆ. ಇದಷ್ಟೇ ಅಲ್ಲದೇ, ಆತ ಹಿಂದೂ ದೇಗುಲಗಳ ಒಳಗೆ ನುಗ್ಗಿ ಅಲ್ಲಿದ್ದ ವಿಗ್ರಹಗಳನ್ನು ಭಗ್ನಗೊಳಿಸಿ ದೇವಾಲಯದ ಪಾವಿತ್ರ್ಯತೆಯನ್ನು ಹಾಳುಮಾಡುವುದಲ್ಲದೇ ಅಲ್ಲಿದ್ದ ಧಾರ್ಮಿಕ ಗ್ರಂಥಗಳನ್ನು ಹರಿದು ಹಾಕುವುದೋ ಇಲ್ಲವೇ ಸುಟ್ಟು ಹಾಕುತ್ತಾ ನಿರಂತರವಾಗಿ ಭಾರತೀಯರನ್ನು ಹಿಂಸಿಸುತ್ತಾ ಹಿಂದೂ ವಿರೋಧಿಯಾಗಿರುತ್ತಾನೆ. ಈ ವಿಷಯವನ್ನು ತಿಳಿದ ಚಾಪೇಕರ್ ಸಹೋದರರ ಮನದಾಳದಲ್ಲಿ ಸ್ತುಪ್ತಾವಸ್ಥೆಯಲ್ಲಿದ್ದ ಕ್ರಾಂತಿಕಾರಿ ಭಾವನೆ ತೀವ್ರವಾಗಿ ಜಾಗೃತವಾಗಿ ಇವೆಲ್ಲದರ ಪ್ರತೀಕವಾಗಿ ದುಷ್ಟ ಬ್ರಿಟೀಷ್ ಅಧಿಕಾರಿ ರ್ಯಾಂಡ್ ನ ಹತ್ಯೆಮಾಡಿ ಜನರಿಗೆ ನೆಮ್ಮದಿ ತರಬೇಕೆಂದು ನಿಶ್ಚಯಿಸಿ ಅವರನ ಹತ್ಯೆಗೆ ಸಂಚು ರೂಪಿಸಿದ್ದಲ್ಲದೇ ಆ ಕಾರ್ಯವನ್ನು ಸ್ವತಃ ಚಾಪೇಕರ್ ಸಹೋದರರೇ ವಹಿಸಿಕೊಳ್ಳುತ್ತಾರೆ.

ರ್ಯಾಂಡ್ ನನ್ನು ಹತ್ಯೆ ಮಾಡುವ ಸಲುವಾಗಿ ಆತನಿಲ್ಲದ ಸಮಯವನ್ನು ನೋಡಿಕೊಂಡು ಪೂನಾದಲ್ಲಿ ಆತ ವಾಸಿಸುತ್ತಿದ್ದ ಹೊಟೇಲಿನ ಸುತ್ತಮುತ್ತಲೂ ಮಾರುವೇಷದಲ್ಲಿ ಹೋಗಿ ಅವನು ವಾಸಿಸುತ್ತಿದ್ದ ಕೊಠಡಿಯನ್ನೆಲ್ಲಾ ಗಮನಿಸಿಕೊಂಡು ಬಂದಿರುತ್ತಾರೆ. ಅದರ ಜೊತೆಗೆ ಅವನ ಕುದುರೆ ಸಾರೋಟಿನ ಬಣ್ಣ, ಅವರ ಚಲನವಲನ, ಅವನು ಪ್ರತೀ ದಿನ ಬಂದು ಹೋಗುತ್ತಿದ್ದ ಸಮಯ ಎಲ್ಲವನ್ನೂ ಚೆನ್ನಾಗಿ ಗಮನಿಸಿರುತ್ತಾರೆ.

dam1897 ರ ಜೂನ್ 22ರಂದು ಬ್ರಿಟಿಷ್ ಸಮ್ರಾಜ್ಯದ ಮಹಾರಾಣಿ ವಿಕ್ಟೋರಿಯ ಪಟ್ಟಕ್ಕೇರಿದ ವಜ್ರ ಮಹೋತ್ಸವದ ದಿನದ ಅಂಗವಾಗಿ ಪೂನಾದಲ್ಲೊಂದು ಸಮಾರಂಭವನ್ನು ಹಮ್ಮಿಕೊಳ್ಳುವ ವಿಷಯ ಚಾಪೇಕರ್ ಸಹೋದರರ ಗಮನಕ್ಕೆ ಬಂದು ಇದೇ ಸಂದರ್ಭದಲ್ಲಿಯೇ ದುಷ್ಟ ರ್ಯಾಂಡ್ನನ್ನು ಹತ್ಯೆ ಮಾಡಲು ಚಾಪೇಕರರು ನಿರ್ಧರಿಸುತ್ತಾರೆ. ಆಂದಿನ ಸಮಾರಂಭ ಮಧ್ಯರಾತ್ರಿಗೂ ಸಂಭ್ರಮದಿಂದ ನಡೆದು ಸಮಾರಂಭ ಮುಗಿದ ನಂತರ ಎಲ್ಲರೂ ಹೊರಡಲು ಸಿದ್ಧವಾಗಿ ತಮ್ಮ ಸಾರೋಟನ್ನು ಹತ್ತಲು ಸಿದ್ಧರಾಗುತ್ತಾರೆ. ಅದೇ ಕಾರ್ಯಕ್ರಮದಲ್ಲಿ ತನ್ನ ಪತ್ನಿಯೊಂದಿಗೆ ಭಾಗಿಯಾಗಿದ್ದ ಆಯಸ್ಟ್ ಎಂಬ ತರುಣ ಅಧಿಕಾರಿ ತನ್ನ ಮನೆಗೆ ಹೊರಡಲು ಕುದುರೆ ಗಾಡಿಯನ್ನೇರಿ ಕುಳಿತರೆ ಅವನ ಜೊತೆ ಇನ್ನೂ ಕೆಲವು ಬ್ರಿಟೀಷ್ ಅಧಿಕಾರಿಗಳು ಸಹಾ ಅವರವರ ಗಾಡಿಗಳಲ್ಲಿ ಕುಳಿತು ತಮ್ಮ ಮನೆಯ ಕಡೆ ಹೊರಡುತ್ತಾರೆ. ದುರಾದೃಷ್ಟವಶಾತ್ ಆಯಸ್ಟ್ ಕುಳಿತಿದ್ದ ಕುದುರೆ ಗಾಡಿಯು ನೋಡುವುದಕ್ಕೆ ರ್ಯಾಂಡ್ನ ಕುದುರೇ ಗಾಡಿಯಂತೆಯೇ ಇದ್ದ ಕಾರಣ ಆ ಗಾಡಿಯಲ್ಲಿ ಬರುತ್ತಿದ್ದವನು ರ್ಯಾಂಡ್ ಎಂದೇ ಭಾವಿಸಿ ಕತ್ತಲೆಯಲ್ಲಿ ಬಾಲಕೃಷ್ಣ ಚಾಪೇಕರ್ ಆ ಗಾಡಿಯನ್ನು ಅಡ್ಡಗಟ್ಟಿ ಆ ಗಾಡಿಯನ್ನು ಏರಿ ಆಯಸ್ಟ್ ತಲೆಗೆ ಸರಿಯಾಗಿ ಗುಂಡುಹಾರಿಸಿದ ನಂತರ ಆತ ರ್ಯಾಂಡ್ ಅಲ್ಲಾ ಎಂಬುದನ್ನು ತಿಳಿದು ಕೂಡಲೇ ಗೋಂದ್ಯಾ ಅಲಾರೇ ಎಂಬ ಸಂಕೇತ ವಾಕ್ಯವನ್ನು ಕೂಗಿ ಹೇಳಿದ ಕೂಡಲೇ ಅದನ್ನು ಅರಿತ ಅಣ್ಣನಾದ ದಾಮೋದರ ಕೂಡಲೇ ಮುನ್ನುಗಿ ರ್ಯಾಂಡ್ನ ಗಾಡಿಯನ್ನು ಹಿಂಬದಿಯಿಂದ ಏರಿ ಆತನ ಬೆನ್ನಿಗೆ ಗುಂಡು ಹಾರಿಸಿ ಗಾಡಿಯಿಂದ ಕೆಳಗೆ ಧುಮುಕಿ ಕತ್ತಲಲ್ಲಿ ಮಾಯಾವಾಗುತ್ತಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರ್ಯಾಂಡ್ ಮತ್ತು ಆಯಸ್ಟ್ ಬಿದ್ದಿದ್ದರೆ, ಈ ದುರ್ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಆತನ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿರುತ್ತಾಳೆ. ಕೂಡಲೇ ಆ ಮೂವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸುತ್ತಾರೆ. ನೇರವಾಗಿ ತಲೆಗೇ ಗುಂಡು ತಗುಲಿದ್ದ ಕಾರಣ ಆಯಸ್ಟ್ ಕೆಲವೇ ಗಂಟೆಗಳಲ್ಲೆ ಮೃತಪಟ್ಟರೇ, ಹಿಂದೂಗಳನ್ನು ಹಿಂಸಿಸಿದ್ದ ದುಷ್ಟ ರ್ಯಾಂಡ್ 10 ದಿನಗಳ ಕಾಲ ನರಳೀ ನರಳೀ ನರಕಯಾತನೆಯನ್ನು ಅನುಭವಿಸಿ ಅಸುನೀಗುತ್ತಾನೆ. ಬ್ರಿಟೀಷ್ ಅಧಿಕಾರಿಗಳಾದ ಆಯಸ್ಟ್ ಮತ್ತು ರ್ಯಾಂಡ್ ಹತ್ಯೆಯ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದಲ್ಲದೇ ಅವರಿಬ್ಬರ ಹಂತಕರನ್ನು ಪತ್ತೆ ಹಚ್ಚಲು ಪೋಲೀಸರು ತಿಂಗಳಾನು ಗಟ್ಟಲೇ ಹರಸಾಹಸ ಪಟ್ಟರೂ ಯಾವುದೇ ಕುರುಹು ಸಿಗದೇ ಹತಾಶೆ ಪಡುತ್ತಿರುತ್ತಾರೆ.

balaಹೊರಗಿನ ಶತ್ರುಗಳನ್ನು ಗುರುತಿಸಿ ಅವರೊಂದಿಗೆ ಹೋರಾಟ ಮಾಡುವುದು ಸುಲಭ ಆದರೆ ನಮ್ಮೊಂದಿಗೆ ಮಿತ್ರರಾಗಿದ್ದು ಕೊಂಡು ಸಮಯ ಸಾಧಕರಾಗಿ ಅದೊಂದು ದಿನ ನಮಗೇ ಅರಿವಿಲ್ಲದಂತೆ ನಮ್ಮ ಬೆನ್ನಿಗೆ ಚೂರಿ ಇರಿಯುವ ಹಿತಶತ್ರುಗಳನ್ನು ಗುರುತಿಸುವುದು ಬಹಳ ಕಷ್ಟಕರವೇ ಸರಿ. ಚಾಪೇಕರ್ ಸಹೋದರ ವಿಷಯದಲ್ಲೂ ಇದೇ ರೀತಿಯಾಗಿ ಅವರ ಕ್ರಾಂತಿಕಾರಿ ತಂಡದ ಸದಸ್ಯನಾಗಿಯೇ ಇದ್ದ ಗಣೇಶ ಶಂಕರ ದ್ರಾವಿಡ ಎನ್ನುವವ ಬ್ರಿಟೀಷರ ಆಮಿಷಕ್ಕೆ ಒಳಗಾಗಿ ಆಯಸ್ಟ್ ಮತ್ತು ರ್ಯಾಂಡ್ ಹತ್ಯೆಗೈದಿದ್ದ ಚಾಪೇಕರ್ ಸಹೋದರನ್ನು ಹಿಡಿಯಲು ಬ್ರಿಟೀಷ್ ಅಧಿಕಾರಿಗಳಿಗೆ ಸಹಾಯ ಮಾಡಿದ ಪರಿಣಾಮವಾಗಿ ಬಾಲಕೃಷ್ಣ ಮತ್ತು ದಾಮೋದರರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಇಲ್ಲದೇ ಗಲ್ಲು ಶಿಕ್ಷೆಗೆ ಗುರಿಮಾಡಿದರು.

ranadeತಮ್ಮ ಜೊತೆಗೇ ಇದ್ದು ತಮ್ಮ ಸಹೋದರರನ್ನೇ ಬ್ರಿಟೀಷರಿಗೆ ಹಿಡಿದುಕೊಟ್ಟು ಮಿತ್ರದ್ರೋಹವನ್ನು ಮಾಡಿದ್ದ ಆ ಮಿತ್ರದ್ರೋಹಿ ದ್ರಾವಿಡನನ್ನು ಚಾಪೇಕರ್ ಸಹೋದರರಲ್ಲಿ ಕಿರಿಯವನಾದ ವಾಸುದೇವ ಮತ್ತು ಮತ್ತೊಬ್ಬ ಕ್ರಾಂತಿಕಾರಿ ಮಹದೇವ ರಾನಡೆ ರಾತ್ರೋರಾತ್ರಿ ಹತ್ಯೆಮಾಡುವ ಮೂಲಕ ಆ ದೇಶದ್ರೋಹಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಈ ಹತ್ಯೆಯ ಕಾರಣೀಭೂತರನ್ನು ಹಿಡಿಯಲು ಹರಸಾಹಸ ಪಟ್ಟ ಪೋಲಿಸರು ಅಂತಿಮವಾಗಿ ಅವರಿಬ್ಬರನ್ನೂ ಬಂಧಿಸಿ ಅವರಿಗೂ ಯಥಾ ಪ್ರಕಾರ ಮರಣದಂಡಣೆಯನ್ನು ವಿಧಿಸುತ್ತಾರೆ.

vasuಭಾರತೀಯರನ್ನು ಚಿತ್ರಹಿಂಸೆ ಮಾಡಿ ಕೊಲ್ಲುತ್ತಿದ್ದ ಹಿಂದೂ ವಿರೋಧಿ ರ್ಯಾಂಡ್ ನ ಹತ್ಯೆ ಮಾಡಿದ್ದಕ್ಕಾಗಿ ಮೇ 8 1898 ರಂದು ಶ್ರೀ ದಾಮೋದರ ಹರಿ ಚಾಪೇಕರ್, ಮೇ 10 1899ರಂದು ಶ್ರೀ ಬಾಲಕೃಷ್ಣ ಹರಿ ಚಾಪೇಕರ್ ಮತ್ತು ಕಿರಿಯವರಾದ ವಾಸುದೇವ್ ಹರಿ ಚಾಪೇಕರ್ ಅವರನ್ನು ಮೇ 12 1899ರಂದು ಗಲ್ಲಿಗೆ ಏರಿಸಲಾಗುತ್ತದೆ. ಭಾರತ ದೇಶದ ಸ್ವಾತ್ರಂತ್ರ್ಯಕ್ಕಾಗಿ ಮತ್ತು ಭಾರತೀಯರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯನ್ನು ತಡೆಯುವುದಕ್ಕಾಗಿ ಆ ಮೂವರು ಸಹೋದರರ ತ್ಯಾಗ ಮತ್ತು ಬಲಿದಾನ ಖಂಡಿತವಾಗಿಯೂ ವ್ಯರ್ಥವಾಗದೇ ಈ ಮೂವರ ಹೃತಾತ್ಮರ ಪ್ರೇರಣೆಯಿಂದಾಗಿ ದೇಶದಲ್ಲಿ ಬೇರೆ ಬೇರೆ ರೂಪದಲ್ಲಿ ಸಿಡಿದೆದ್ದು ಬ್ರಿಟೀಶರ ವಿರುದ್ದ ಹೋರಾಡಲು ಹಲವಾರು ಕ್ರಾಂತಿಕಾರಿಗಳು ಸ್ವಾತ್ರಂತ್ರ್ಯ ಹೋರಾಟದಲ್ಲಿ ಧುಮುಕಿದರು. ಹಾಗೆ ಈ ಮೂವರು ಸಹೋದರರಿಂದಲೇ ಪ್ರೇರಿತರಾದವರಲ್ಲಿ ವೀರ ಸಾವರ್ಕರ್‌ ಕೂಡಾ ಒಬ್ಬರು ಎನ್ನುವುದೂ ಮಹತ್ವವಾಗಿದೆ. ಸ್ವಾತ್ರಂತ್ರ್ಯ ಹೋರಾಟಕ್ಕಾಗಿ ಈ ದೇಶಕ್ಕಾಗಿ ಪ್ರಾಣ ತೆತ್ತ ಇಂತಹ ನಿಜವಾದ ಇತಿಹಾಸವನ್ನು ಇಂದಿನ ಯುವಜನರಿಗೆ ಪರಿಚಯಿಸುವ ಮಹತ್ತರ ಜವಾಬ್ಧಾರಿ ನಮ್ಮ ನಿಮ್ಮದೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಅದು ಕ್ರಿ.ಶ, 7ನೇ ಶತಮಾನದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ದೇಶ ವಿದೇಶಗಳಲ್ಲೆಲ್ಲಾ ಹರಡಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾಗಿದ್ದರೆ, ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿಯಿಂದಾಗಿ ಒಂದು ರೀತಿಯಲ್ಲಿ ಸನಾತನ ಧರ್ಮ ಅಳಿವಿನಂಚಿಗೆ ತಲುಪಿತ್ತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು.

ಕೇರಳದ ಪೂರ್ಣಾ ನದಿ ತಟದಲ್ಲಿದ್ದ ಸಸಲಂ ನಂತರ ಕಾಲಟಿ ಎಂದು ಪ್ರಸಿದ್ಧವಾದ ಸ್ಥಳದಲ್ಲಿ ವಾಸವಾಗಿದ್ದ ಶ್ರೀ ಕಾಯ್‌ಪಿಳ್ಳೆ ಶಿವಗುರು ನಂಬೂದರಿ ಮತ್ತು ಶೀಮತಿ ಆರ್ಯಾಂಬಾ ಎಂಬ ದಂಪತಿಗಳಿಗೆ ತ್ರಿಶೂರಿನ ವಡಕ್ಕನಾಥ ದೇವರ ಫಲವಾಗಿ ಶ್ರೀ ಶಂಕರರರು ಕ್ರಿ. ಶ. 788 ವೈಶಾಖ ಶುದ್ಧ ಪಂಚಮಿಯಂದು ಜನಿಸುತ್ತಾರೆ.

ಬಹಳ ಸಣ್ಣ ವಯಸ್ಸಿನಲ್ಲಿಯೇ ತಂದೆಯವರನ್ನು ಕಳೆದುಕೊಂಡ ಶಂಕರರಿಗೆ 5 ವರ್ಷದವರಿದ್ದಾಗಲೇ ಅವರ ತಾಯಿ ಉಪನಯನವನ್ನು ನೆರವೇರಿಸುತ್ತಾರೆ. ಆ ಸಣ್ಣ ವಯಸ್ಸಿಗೇ ಅಸಾಧಾರಣ ಮೇಧಾವಿಯಾದ ಶಂಕರರು 8 ವರ್ಷಕ್ಕೆಲ್ಲಾ ನಾಲ್ಕು ವೇದಗಳನ್ನೂ ಕರಗತ ಮಾಡಿಕೊಂಡಿದ್ದಲ್ಲದೇ ಶಾಸ್ತ್ರ ಮತ್ತು ಪುರಾಣಗಳನ್ನು ಅನೇಕ ಗುರುಗಳಿಂದ ಆಭ್ಯಾಸ ಮಾಡಿ ಕೇವಲ 12ನೇ ವರ್ಷಕ್ಕೆಲ್ಲಾ ಸಕಲ ಶಾಸ್ತ್ರ ಪಾರಂಗತರಾಗುತ್ತಾರೆ.

shank3ಇಂತಹ ಬಾಲ ಶಂಕರರು ಲೌಕಿಕಕ್ಕಿಂತಲೂ ಸಂನ್ಯಾಸತ್ವದ ಕಡೆಗೇ ಹೆಚ್ಚಿನ ಒಲವು ಇದ್ದ ಕಾರಣ, ಸನ್ಯಾಸಿಯಾಗಲು ಅಪ್ಪಣೆ ಕೊಡಬೇಕೆಂದು ತಾಯಿಯನ್ನು ಕೋರುತ್ತಾರೆ. ಇರುವ ಒಬ್ಬ ಮಗ ಸನ್ಯಾಸಿಯಾಗಿಬಿಟ್ಟರೆ ಈ ಇಳೀ ವಯಸ್ಸಿನಲ್ಲಿ ತನ್ನನ್ನು ನೋಡಿಕೊಳ್ಳುವವರು ಯಾರೂ ?  ಎಂಬ ಚಿಂತೆಯಿಂದಾಗಿ ಅವರ ತಾಯಿಯವರು ಶಂಕರರಿಗೆ ಸನ್ಯಾಸತ್ವ ಸ್ವೀಕರಿಸಲು ಒಪ್ಪಿಗೆ ಕೊಡುವುದಿಲ್ಲ. ಹೇಗಾದರೂ ಮಾಡಿ ತಾಯಿಯನ್ನು ಒಪ್ಪಿಸಲೇ ಬೇಕೆಂದು ನಿರ್ಧರಿಸಿದ ಶಂಕರಾಚಾರ್ಯರು ಅದೊಂದು ಮುಂಜಾನೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆಯೊಂದು ಅವರ ಕಾಲನ್ನು ಹಿಡಿಯುತ್ತದೆ. ಅದರಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆಗದಿದ್ದಾಗ, ಅಮ್ಮಾ, ಹೇಗೂ ಸಾಯುತ್ತಿದ್ದೇನೆ. ಕೊನೆಯ ಹೊತ್ತಿಗಾದರೂ ಸಂನ್ಯಾಸ ಸ್ವೀಕರಿಸಲು ಒಪ್ಪಿಕೋ! ಎಂದು ಕೇಳಿಕೊಳ್ಳುತ್ತಾರೆ. ಮಗನ ಆರ್ತನಾದಕ್ಕೆ ಮರುಗಿ ಅಲ್ಲಿಯೇ ಇದ್ದ ಅವರ ತಾಯಿ ಸನ್ಯಾಸ ಸ್ವೀಕರಿಸಲು ಒಪ್ಪಿಗೆ ನೀಡಿದಾಗ, ಶಂಕರರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಿದಾಗ ಮೊಸಳೆ ಅವರ ಕಾಲು ಬಿಟ್ಟಿತು. ತಾಯಿಯ ಮನಸ್ಸಿನ ಇಂಗಿತವನ್ನು ಅರಿತಿದ್ದ ಶಂಕರರು ಅಮ್ಮಾ, ನಿಮ್ಮ ಅಂತಿಮ ಕ್ಷಣಗಳಲ್ಲಿ ನಾನು ಎಲ್ಲಿದ್ದರೂ ನಿನ್ನ ಎದುರು ಬಂದು ನಿಲ್ಲುತ್ತೇನೆ ಎಂಬುದಾಗಿ ಮಾತು ನೀಡೀ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೂಕ್ತ ಗುರುಗಳನ್ನು ಅರಸುತ್ತಾ ಉತ್ತರದ ಕಡೆ ಪ್ರಯಾಣಿಸುತ್ತಾರೆ.

shank4ಹಾಗೆ ಗುರುಗಳನ್ನು ಅರಸುತ್ತಿರುವಾಗ ನರ್ಮದಾ ನದಿ ತೀರದಲ್ಲಿ ಬಹು ದೊಡ್ಡ ಜ್ಞಾನಿಗಳಾದ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರನ್ನು ಈ ಗುಹೆಯಲ್ಲಿ ಭೇಟಿಯಾಗಿ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ಗೋವಿಂದ ಭಗವತ್ಪಾದರು ನೀನಿನ್ನು ಚಿಕ್ಕಹುಡುಗ. ಸ್ವಲ್ಪ ದೊಡ್ಡವನಾದ ಮೇಲೆ ಬಾ ಎಂದಾಗ, ಛಲ ಬಿಡದ ತ್ರಿವಿಕ್ರಮನಂತೆ ಶಂಕರರು ಅವರ ಹಿಂದೆಯೇ ದುಂಬಾಲು ಬೀದ್ದಾಗ, ಅವರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ, ಅವರ ಕೈಯ್ಯಿಗೆ ವಿಷ್ಣು ಸಹಸ್ರನಾಮದ ತಾಳೆ ಗರಿ ಕೊಟ್ಟು ಇದಕ್ಕೆ ಭಾಷ್ಯ ಬರೆದರೆ ನಾನು ನಿನ್ನನ್ನು ನನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ಸಾಗಹಾಕುತ್ತಾರೆ. ಹೇಗೂ ಈ ಭಾಷ್ಯ ಬರೆಯುವುದಕ್ಕೆ ಕನಿಷ್ಟ ಪಕ್ಷ 2 ವರ್ಷವಾದರೂ ಬೇಕಾಗುತ್ತದೆ ಅಲ್ಲಿಯವರೆಗೆ ಈ ಹುಡುಗನ ಕಾಟ ತಪ್ಪುತ್ತದೆ ಎಂಬುದು ಗೋವಿಂದ ಭಗವತ್ಪಾದರ ಆಶಯವಾಗಿರುತ್ತದೆ ಆದರೆ ದೈವೀ ಸ್ವರೂಪವಾದ ಶಂಕರರು ಮರುದಿನವೇ ಭಾಷ್ಯದ ಸಮೇತ ಗುರುಗಳಿಗೆ ಒಪ್ಪಿಸುತ್ತಾರೆ. ಇಂತಹ ಅದ್ಭುತವನ್ನು ನೋಡಿ ಆನಂದಭರಿತರಾದ ಗೋವಿಂದಪಾದರು. ಅಯ್ಯಾ ನಾನು ನಿನಗೆ ಗುರುವಲ್ಲ. ನೀನೇ ನನಗೆ ಗುರು ಎಂದು ನಮಸ್ಕರಿಸಿ ಮನಸಾರೆ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಅವರಿಗೆ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಕಲಿಸುತ್ತಾರೆ.

ಸಕಲ ವೇದ ಶಾಸ್ತ್ರ ಪಾರಂಗತರಾದ ಶಂಕರರು, ಸನಾತನ ಧರ್ಮದ ಉಳಿವಿಗಾಗಿ ಮತ್ತು ಪುನರುತ್ಥಾನಕ್ಕಾಗಿ ಮನೋವೇಗದಲ್ಲಿ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸಿ, ದೇಶದ ನಾಲ್ಕು ದಿಕ್ಕುಗಳಾದ ಉತ್ತರದಲ್ಲಿ: ಬದರಿ ಪೀಠ – ಉತ್ತರ ಜ್ಯೋತಿರ್ ಮಠ, ದಕ್ಷಿಣದಲ್ಲಿ: ಶೃಂಗೇರಿ ಪೀಠ – ದಕ್ಷಿಣ ಶಾರದಾ ಮಠ, ಪೂರ್ವದಲ್ಲಿ: ಪುರಿ ಪೀಠ – ಪೂರ್ವಾ ಗೋವರ್ಧನ ಮಠ ಮತ್ತು ಪಶ್ಚಿಮದಲ್ಲಿ ದ್ವಾರಕಾ ಪೀಠ – ಪಶ್ಚಿಮ ಮಠ ಹೀಗೆ ನಾಲ್ಕು ಶಕ್ತಿ ಪೀಠ ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ ಅದ್ವೈತ ಸಿದ್ಧಾಂತ ವನ್ನು ಜನಪ್ರಿಯಗೊಳಿಸಿದರು.

shank2ಹೀಗೆ ಕೇವಲ 32 ವರ್ಷಗಳಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು ಶ್ರೀ ಶಂಕರಾಚಾರ್ಯರು. ಅವರ ಜೀವನದ ಅಂತಿಮ ದಿನಗಳಲ್ಲಿ ಹಿಮಾಲಯಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ತಮ್ಮ ದೇಹದಿಂದ ಮುಕ್ತಿಯನ್ನು ಪಡೆಯುತ್ತಾರೆ. ಅದಕ್ಕೆ ಪ್ರತೀಕವಾಗಿ ಇಂದಿಗೂ ಸಹಾ ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ ಮತ್ತು ಅವರ ಶಿಲಾಪ್ರತಿಮೆಯೂ ಇದೆ.

ಶಂಕರರ ಜೀವನದ ಬಗೆಗೆ ಒಂದು ಸಂಕ್ಷಿಪ್ತ ಶ್ಲೋಕ ಹೀಗಿದೆ

ಅಷ್ಟವರ್ಷೇ ಚತುರ್ವೇದೀ, ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ, ದ್ವಾತ್ರಿಂಶೇ ಮುನಿರಭ್ಯಗಾತ್ ||

ಅಂದರೇ 8 ವರ್ಷಕ್ಕೆ 4 ವೇದಗಳನ್ನು ಕಲಿತವರು, 12ನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, 16ನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು 32ನೇ ವರ್ಷದಲ್ಲಿ ಅಭ್ಯಗತರು- ಎಂದರೆ ಕಾಲವಾದರು ಎಂದರ್ಥ.

ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಎರಡೂ ಒಂದೇ. ಆತ್ಮನೇ ಪರಮಾತ್ಮನು. ಪರಮಾತ್ಮನೇ ಆತ್ಮನು ಎಂದು ಅಹಂ ಬ್ರಹ್ಮಾಸ್ಮಿ ಎಂಬ ಅದ್ವೈತ ಸಿದ್ಧಾಂತ ವನ್ನು ಜಗತ್ತಿಗೆ ತಿಳಿಸಿ ಕೊಟ್ಟವರು.

ಅಳಿವಿನಂಚಿನಲ್ಲಿದ್ದ ಸನಾತಧರ್ಮವನ್ನು ಪುನರುತ್ಥಾನ ಮಾಡಿದ ಆದಿ ಗುರು ಶ್ರೀ ಶಂಕರಾಚಾರ್ಯರ ಸಾಧನೆಗಳನ್ನು ಸದಾಕಾಲವೂ ಭಕ್ತಿ ಪೂರ್ವಕವಾಗಿ ಸ್ಮರಿಸುವ ಮೂಲಕ ಅವರು ಬೋಧಿಸಿದ ತತ್ವ, ವಿಚಾರಗಳನ್ನು ಅರಿಯೋಣ, ಪಾಲಿಸೋಣ‌ ಮತ್ತು ಸನ್ಮಾರ್ಗದಲ್ಲಿ ನಡೆಯೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ ಜ್ಞಾನ ಹೊಂದಿರುವ ಸಂತರನ್ನು ಸೂಚಿಸುತ್ತದೆ.

ನಾವಿಂದು ಅಂತಹದೇ, ನಾನು ದೇವನು ಅಲ್ಲಾ ದೇವ ಮಾನವನೂ ಅಲ್ಲಾ ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಎಂದೇ ಹೇಳುತ್ತಲೇ ಲಕ್ಷಾಂತರ ಭಕ್ತರನ್ನು ಹೊಂದಿದ್ದಂತಹ ಬೆಲಗೂರಿನ ಬಿಂದು ಮಾಧವ ಶರ್ಮಾ ಅವಧೂತರ ಬಗ್ಗೆ ತಿಳಿದುಕೊಳ್ಳೋಣ. ಬೆಲಗೂರು ಎನ್ನುವುದು ಅರಸೀಕೆರೆ ಮತ್ತು ಹೊಸದುರ್ಗದ ನಡುವೆ ಇರುವ ಸಣ್ಣ ಗ್ರಾಮವಾಗಿದ್ದು 70ರ ದಶಕದ ವರೆಗೂ ಸ್ಥಳೀಯರ ಹೊರತಾಗಿ ಕರ್ನಾಟಕದ ಉಳಿದ ಭಾಗದ ಜನರಿಗೆ ಪರಿಚಯವೇ ಇರಲಿಲ್ಲ. ಸುಮಾರು 750 ವರ್ಷಗಳಿಗಿಂತಲೂ ಹಳೆಯದಾದ ವೀರ ಪ್ರತಾಪ ದೇವಾಲಯದ ಅರ್ಚಕರ ವಂಶದದಲ್ಲಿ ಏಪ್ರಿಲ್ 30, 1947ರಲ್ಲಿ ಜನಿಸಿದ ಶ್ರೀ ಬಿಂಧು ಮಾಧವರವರು ತಮ್ಮ 17ನೇ ವಯಸ್ಸಿನಲ್ಲಿ ಅವರಿಗಾದ ಅಭೂತಪೂರ್ವವಾದ ದೈವಾನುಭವದಿಂದಾಗಿ ಅವಧೂತರಾಗಿ ಬೆಳೆಯಲ್ಪಟ್ಟು ಅವರ ಮಾರ್ಗದರ್ಶನದಲ್ಲಿ ತಮ್ಮ ಊರನ್ನು ಪ್ರಪಂಚದ ಇತಿಹಾಸದ ನಕ್ಷೆಯಲ್ಲಿ ಶಾಶ್ವತವಾಗಿ ಇರಿಸಿದ್ದಾರೆ ಎಂದರೂ ತಪ್ಪಾಗದು.

anjaneyaಬೆಲಗೂರಿನಲ್ಲಿ ಸುಮಾರು 750 ವರ್ಷಗಳ ಹಿಂದೆ ಋಷಿ ವ್ಯಾಸರಾಯರು ಸ್ಥಾಪಿಸಿದರು ಎನ್ನಲಾಗುವ ಮುಖ್ಯ ದೇವರು ವೀರ ಪ್ರತಾಪ ಆಂಜನೇಯ ಸ್ವಾಮಿಯ ದೇವಾಲಯವನ್ನು ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಅವಧೂತರು ಜೀರ್ಣೋದ್ಧಾರ ಮಾಡಿದ್ದಲ್ಲದೇ ಆ ಊರಿನ ಗ್ರಾಮ ದೇವತೆ ಮತ್ತು ಇತರೇ ದೇವಾಲಯಗಳನ್ನು ಸಹಾ ಬೇಲೂರಿನ ದೇವಾಲಯಗಳಂತೆ ಭರಪೂರ ಶಿಲ್ಪಕಲೆಗಳಿಂದ ತುಂಬಿ ತುಳುಕುವಂತೆ ಮಾಡಿ ಬೆಲಗೂರಿಗೆ ದೇಶ ವಿದೇಶಗಳಿಂದ ಪ್ರತೀ ದಿನವೂ ನೂರಾರು ಭಕ್ತಾದಿಗಳು ಭೇಟಿ ನೀಡುವಂತಹ ಆಧ್ಯಾತ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಶ್ಲಾಘನೀಯ.

temp1ಆಂಜನೇಯ, ಶಿವ ಮತ್ತು ವಿಷ್ಣುವಿನ ಮೂರು ದೇವಾಲಯಗಳನ್ನು ಆಧುನಿಕತೆಗೆ ತಕ್ಕಂತೆ ವೈಭವೋಪೇತವಾಗಿ ಜೀರ್ಣೋದ್ಧಾರ ಮತ್ತು ಪುನರ್ನಿರ್ಮಾಣ ಮಾಡುವುದರ ಜೊತೆಗೆ, ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ವಿಶಾಲವಾದ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಪ್ರತಿ ಪೂರ್ಣಿಮೆಯ ದಿನದಂದು ಹೋಮವಾದ ನಂತರ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಮಾಡುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.

ಅವಧೂತರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದಿಲ್ಲವಾದರೂ, ತಾಯಿ ಸರಸ್ವತಿ ದೇವಿಯು ಅವರ ನಾಲಿಗೆಯ ಮೇಲೆ ಸದಾಕಾಲವೂ ನೆಲೆಸಿದ್ದ ಕಾರಣ, ವೇದ ಮತ್ತು ಉಪನಿಷತ್ತುಗಳು ಅವರ ಬಾಯಿಯಿಂದ ಸರಾಗವಾಗಿ ಹರಿಯುತ್ತಿದ್ದವು. ಸ್ವಾಮೀಜಿಗಳ ಪವಾಡದಿಂದ ಅನೇಕ ಭಕ್ತರಿಗೆ ಅವರ ಮೇಲಿನ ನಂಬಿಕೆ ಹೆಚ್ಚಾಗಿದ್ದಲ್ಲದೇ, ಅನೇಕ ಕಠಿಣಾತೀತ ನಾಸ್ತಿಕರನ್ನು ಸಹಾ ಆಸ್ತಿಕರನ್ನಾಗಿ ಪರಿವರ್ತನೆ ಮಾಡಿದ ಉದಾಹಣೆಯೂ ಸಾಕಷ್ಟಿತ್ತು.

s2ವೀರ ಪ್ರತಾಪ ಆಂಜನೇಯನ ಪರಭಕ್ತರಾದ ಅವಧೂತರು ಭಕ್ತರೊಳಗೆ ಭಕ್ತರಾಗಿ ಭಕ್ತಿಯ ಮಾರ್ಗವನ್ನೇ ಅನುಸರಿಸುತ್ತಿದ್ದರೂ, ಪ್ರತೀ ಅರ್ಥದಲ್ಲಿಯೂ ಭಗವಂತನೊಂದಿಗೆ ಒಂದಾಗಿದ್ದರು ಎಂದರೂ ತಪ್ಪಾಗದು. ಆಧ್ಯಾತ್ಮಿಕ ಋಷಿ ಪರಂಪರೆಗೆ ಋಣಿಯಾಗಿರುವ ಈ ದೇಶದಲ್ಲಿ ಮಹಾನ್ ಋಷಿಗಳ ದೀರ್ಘ ಸಾಲಿಗೆ ಈ ಅವಧೂತರೂ ಸಹಾ ಒಬ್ಬರಾಗಿದ್ದು, ಸಂಕಷ್ಟದ ಕಾಲದಲ್ಲಿ ಧರ್ಮದ ಮರುಸ್ಥಾಪನೆಗಾಗಿ ದೈವತ್ವದ ಅಂಶವಾಗಿ ಶ್ರೀಕೃಷ್ಣನ ಪ್ರತಿರೂಪದಂತೆ ಮಾನವನ ರೂಪದಲ್ಲಿ ಅವಧೂತರು ಅವತರಿಸಿದ್ದಾರೆ ಎಂದೇ ಅವರ ಭಕ್ತರ ನಂಬಿಕೆಯಾಗಿತ್ತು.

s6ಆಧ್ಯಾತ್ಮಿಕ ಆಚರಣೆಗಳನ್ನು ಬಿಂದು ಮಾಧವ ಅನುಸರಿಸಿದರಾದರೂ ಅವರು ಯಾವುದೇ ಆಧ್ಯಾತ್ಮಿಕ ಅಭ್ಯಾಸಗಳನ್ನು ಅನುಸರಿಸಲಿಲ್ಲ. ದೀರ್ಘ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಅವಧೂತರು, ಆಂಜನೇಯನ ದೇವಸ್ಥಾನದಲ್ಲಿ ನಿರಾಹಾರಿಗಳಾಗಿ 7 ರಿಂದ 10 ದಿನಗಳವರೆಗೆ ಧ್ಯಾನಕ್ಕಾಗಿ ಕುಳಿತ ಉದಾಹಣೆಯೂ ಇತ್ತು. ಬ್ರಾಹ್ಮಣ ಅಂದರೆ ಬ್ರಹ್ಮ ಜ್ಞಾನಿ, ಸಮಾಜದಲ್ಲಿ ಜಾತಿ ನಿರ್ಮೂಲನೆಯಾಗಬೇಕು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವಂತವನೇ ನಿಜವಾದ ಬ್ರಾಹ್ಮಣ ಎನ್ನುತ್ತಿದ್ದರು. ಹಾಗಿಯೇ ಕಳೆದ 30-40 ವರ್ಷಗಳಲ್ಲಿ, ನಿರಂತರವಾಗಿ ಭಕ್ತರುಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವ ಸಲವಾಗಿ ಬೆಲಗೂರಿಗೆ ಬರುತ್ತಿದ್ದರು. ಹಾಗೆ ಬಂದ ಎಲ್ಲಾ ಭಕ್ತ ಸಮೂಹವನ್ನು ಬಹಳ ಪ್ರೀತಿಯಿಂದ ಒಮ್ಮೆ ದಿಟ್ಟಿಸಿ ನೋಡಿದರೆ ಇಲ್ಲವೇ ಅವರ ಮೇಲೆ ಕೈ ಹಾಕಿ ಆಶೀರ್ವದಿಸಿದರೂ ಸಾಕು ಹಲವರಿಗೆ ಅವರ ಸಮಸ್ಯೆಯ ಪರಿಹಾರವಾಗಿರುವ ಉದಾಹರಣೆಗಳೆಷ್ಟೋ. ತಮ್ಮನ್ನು ಕಾಣಲು ಬರುವ ಪ್ರತಿಯೊಬ್ಬ ಭಕ್ತರಿಗೂ ಆಧ್ಯಾತ್ಮಿಕ ಮತ್ತು ಸಾತ್ವಿಕ ಆಹಾರವನ್ನು ಉಣಬಡಿಸುವುದರಲ್ಲಿ ಸ್ವಾಮಿಗಳು ಎತ್ತಿದ ಕೈ. ಶ್ರೀ ಕ್ಷೇತ್ರದ ಅಡುಗೆ ಮನೆ ಅಕ್ಷಯ ಪಾತ್ರೆ ಎಂದಿಗೂ ಬರಿದಾಗದೇ, ಬರುವ ಭಕ್ತಾದಿಗಳು ಹಸಿವಿನಿಂದ ಎಂದೂ ಹಿಂದಿರುಗಿದ ಪ್ರಮೇಯವೇ ಬಂದಿರಲಿಲ್ಲ. ಸ್ವಾಮೀಜಿಯವರ ಪಾಕಶಾಲೆಯಲ್ಲಿ ಯಾವುದೇ ಪಂಗಡ, ಜಾತಿ, ಪಂಥದ ಭೇದವಿಲ್ಲದೆ ಎಲ್ಲ ಭಕ್ತರಿಗೂ ಸದಾ ಕಾಲವೂ ತೆರೆದಿರುತ್ತದೆ.

s8ಭಕ್ತರ ಜೊತೆಯಲ್ಲಿಯೇ ಭಜನೆ ಮಾಡುವುದು, ಭಕ್ತರ ಭಜನೆಯಲ್ಲಿ ಸುಶ್ರಾವ್ಯವಾಗಿ ಕೊಳಲನ್ನು ನುಡಿಸುವುದು ಇಲ್ಲವೇ ಪಕ್ಕವಾದ್ಯಗಾರರಾಗಿ ತಬಲ ನುಡಿಸುವುದೋ ಇಲ್ಲವೇ ಭಕ್ತಿಯ ಪರವಶರಾಗಿ ಅವರೊಂದಿಗೆ ನರ್ತನ ಮಾಡುತ್ತಾ ಸಾಮಾನ್ಯರಾಗಿಯೇ ಬೆರೆಯುತ್ತಿದ್ದದ್ದು ನಿಜಕ್ಕೂ ಅನನ್ಯವಾಗಿತ್ತು.

ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಸಂದರ್ಭಗಳಿಗಾಗಿ ರಥ ಇದ್ದೇ ಇರುತ್ತದೆ. ಆದರೆ ಸ್ವಾಮಿಗಳ ಸಾರಥ್ಯದಲ್ಲಿ ನಿರ್ಮಾಣವಾದ ಈ ಊರಿನ ಮತ್ತೊಂದು ಪ್ರಾಚೀನವಾದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿರುವ ಭಾರತ ಮಾತ ರಥ ಅತ್ಯಂತ ವಿಶೇಷವಾಗಿದೆ. ಈ ರಥದಲ್ಲಿ ಸುಮಾರು 210 ಸಾಧಕರ ಉಬ್ಬು ಚಿತ್ರಗಳ ಮೂಲಕ ಕೆತ್ತಲಾಗಿದ್ದು ಇದರಲ್ಲಿ ದೇಶಕ್ಕಾಗಿ ಹೋರಾಡಿದ ಹೋರಾಟಗಾರರು, ಸಿನಿಮಾ ಸಾಧಕರು, ಕವಿಗಳು, ವಿಜ್ಞಾನಿಗಳು, ಋಷಿ ಮುನಿಗಳ ಚಿತ್ರಗಳನ್ನು ಕೆತ್ತಿಸುವ ಮೂಲಕ ಭಾರತಾಂಬೆಗೆ ಗೌರವವನ್ನು ಗುರುಗಳು ಸಲ್ಲಿಸಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ.

RATHAಸಾಧಾರಣವಾಗಿ ರಥದ ಮೇಲೆ ತಳಿರು ತೋರಣಗಳ ವಿನ್ಯಾಸದ ಜತೆಗೆ ಸಾಲು ಸಾಲು ದೇವರ ಪ್ರತಿಮೆಗಳನ್ನು ಕೆತ್ತಿಸಿದರೆ, ಈ ಬೆಲಗೂರಿನಲ್ಲಿ ರಥದಲ್ಲಿ ಅಡಿಯಿಂದ ಮುಡಿಯವರೆಗೆ, ದೇಶಕ್ಕಾಗಿ ಜೀವ– ಜೀವನವನ್ನೇ ಮುಡುಪಾಗಿಟ್ಟವರ ಶಿಲ್ಪಗಳನ್ನು ಕೆತ್ತಿಸಿದ್ದಾರೆ. ಚಕ್ರದ ಮೇಲ್ಭಾಗದಿಂದ ಹಿಡಿದು, ನಡು ಭಾಗದ ಸುತ್ತ ಹಾಗೂ ಶಿಖರದವರೆಗೂ ಈ ಶಿಲ್ಪಗಳನ್ನು ಕೆತ್ತಿಸಿದ್ದಾರೆ. ಮಾರುತಿಪೀಠದ ಅವಧೂತ ಬಿಂದುಮಾಧವ ಶರ್ಮ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಉಡುಪಿಯ ಶಿಲ್ಪಿ ರಾಜಶೇಖರ್‌ ಹೆಬ್ಬಾರ್‌ ಮತ್ತವರ 40 ಮಂದಿಯ ತಂಡದೊಂದಿಗೆ ಸುಮಾರು 59 ಅಡಿ ಎತ್ತರವಿರುವ 21 ಅಡಿ ಅಗಲವಿರುವ, ಸುಮಾರು 75 ಸಾವಿರ ಕೆ.ಜಿ ತೂಕವಿರುವ ಈ ರಥವನ್ನು ಸಾಗುವಾನಿ, ಹೊನ್ನೆ ಮತ್ತು ಕಿರಾಲುಬೋಗಿ ಮರಗಳನ್ನು ಉಪಯೋಗಿಸಿ ಸರಿಸುಮಾರು ₹ 3.5 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿದೆ.

ನಮ್ಮನ್ನು ನಾದಲೋಕಕ್ಕೆ ಕರೆದೊಯ್ದು ನಮ್ಮಲ್ಲಿ ಕರ್ಣಾನಂದ, ಆತ್ಮಾನಂದ, ಬ್ರಹ್ಮಾನಂದ, ಜ್ಞಾನಾನಂದವನ್ನುಂಟು ಮಾಡುವ ಎಲ್ಲರನ್ನೂ ಕೂಡ ರಥದಲ್ಲಿ ತೋರಿಸಲಾಗಿದೆ. ಮನುಷ್ಯನಲ್ಲಿ ದೈವತ್ವವನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಅವರ ಸಾಧನೆಯನ್ನು ತೋರಿಸಬೇಕೆನ್ನುವ ಉದ್ದೇಶದಿಂದ ಈ ರಥವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಲಕ್ಷ್ಮಿನಾರಾಯಣ ಸ್ವಾಮಿಗೆ ಅರ್ಪಿಸಿದ್ದರೂ, ದೇಶದ ಮಹಾನ್ ನಾಯಕರ ಶಿಲ್ಪಗಳು ಇದರಲ್ಲಿ ಅಡಕವಾಗಿರುವ ಕಾರಣ ಇದನ್ನು ಭಾರತಾಂಬೆ ರಥ ಅಥವಾ ಭಾರತ ಮಾತಾ ರಥ ಎಂದೂ ಕರೆಯುವುದೇ ಸೂಕ್ತವೆನಿಸುತ್ತದೆ.

ಈ ರಥದಲ್ಲಿ ಒಟ್ಟು 4 ದ್ವಾರಗಳಿದ್ದು, ಮೊದಲನೆಯದರಲ್ಲಿ ಲಕ್ಷ್ಮೀನಾರಾಯಣ, ಎರಡನೆಯದರಲ್ಲಿ ಭಾರತಾಂಬೆ, ಮೂರನೆಯದರಲ್ಲಿ ಸೀತಾ,ರಾಮ, ಲಕ್ಷ್ಮಣ, ಆಂಜನೇಯ ಹಾಗೂ ನಾಲ್ಕನೆಯದರಲ್ಲಿ ಬಿಂದು ಮಾಧವಶರ್ಮ ಅವಧೂತರ ವಿಗ್ರಹಗಳಿವೆ. ಈ ರಥದಲ್ಲಿ ಒಂದು ಪ್ರಧಾನ ಕಳಶದ ಜೊತೆ, 33 ಉಪ ಕಳಶ, 2 ಗುಮ್ಮಟ, 12 ಆನೆಗಳು, 24 ಕಂಬಗಳು, 365 ಗಂಟೆಗಳು ಇದ್ದು ಈ ಬೃಹತ್ ರಥವನ್ನು ಎಳೆಯಲು ಸರಿ ಸುಮಾರು 1 ಸಾವಿರ ಜನರ ಸಹಾಯವಿದೆ. ಪ್ರತೀ ವರ್ಷ ಚೈತ್ರ ಮಾಸದಲ್ಲಿ ಈ ಊರಿನಲ್ಲಿ ಲಕ್ಷ್ಮೀ ನಾರಾಯಣ ದೇವಾಲಯ ಮತ್ತು ವೀರ ಪ್ರತಾಪ ಆಂಜನೇಯ ದೇವಾಲಯಗಳ ಬ್ರಹ್ಮ ರಥೋತ್ಸವ ಒಟ್ಟಾಗಿ ನಡೆಸುವುದು ಇಲ್ಲಿನ ವಿಶೇಷವಾಗಿದೆ.

ಈ ದೇವಾಲಯದಲ್ಲಿ ರಾಮಸೇತುವಿನಲ್ಲಿ ಬಳಸಲಾಗಿರುವ ತೇಲುವ ಕಲ್ಲನ್ನು ಒಂದು ಅಗಲವಾದ ಪಾತ್ರೆಯ ನೀರನಲ್ಲಿ ಇಟ್ಟಿದ್ದು, ಸದಾ ಕಾಲವೂ ತೇಲುತ್ತಾ ಇರುವ ಈ ಕಲ್ಲನ್ನು ಪ್ರತಿಯೊಬ್ಬ ಭಕ್ತರಿಗೂ ಮುಟ್ಟಿ ನೋಡಿ ಆನಂದವನ್ನು ಅನುಭವಿಸುವ ಭಾಗ್ಯವನ್ನು ಒದಗಿಸಲಾಗಿದೆ.

ಸದಾ ಕಾಲವೂ ಭಕ್ತರೊಂದಿಗೆ ಕಾಲ ಕಳೆಯುತ್ತಿದ್ದ ಬಿಂಧು ಮಾಧವ ಅವಧೂತರು ತಮ್ಮ 75ನೇ ವಯಸ್ಸಿನಲ್ಲಿ ನವೆಂಬರ್ 27 2020ರಂದು ಇಹಲೋಕವನ್ನು ತ್ಯಜಿಸಿದಾಗ ಕರೋನ ಮಹಾ ಮಾರಿ ಇದ್ದ ಕಾರಣ ಸರಳವಾಗಿ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಅಂತಿಮ ದರ್ಶನ ಪಡೆಯದೇ ಇದ್ದದ್ದಕ್ಕಾಗಿ ದುಃಖಿಸಿದ ಭಕ್ತ ಸಮೂಹಕ್ಕೆ ಕಡಿಮೇ ಏನಿಲ್ಲ. ಅದೇ ರೀತೀಯಲ್ಲಿ 2021 ರಲ್ಲಿಯೂ ಕರೋನಾ ಲಾಕ್ಡೌನ್ ಮುಂದುವರೆದು ಈಗ 2022 ರಂದು ಸ್ವಲ್ಪ ಕಡಿಮೆ ಆಗಿರುವ ಕಾರಣ, ಸ್ವಾಮಿಗಳ ಹೆಸರಿನಲ್ಲಿ ಧಾರ್ಮಿಕ ಟ್ರಸ್ಟ್ ನಿರ್ಮಾಣ ಮಾಡಿಕೊಂಡು 28.4.2022 ಗುರುವಾರದಂದು ಅವಧೂತರ ಅಮೃತಶಿಲೆಯ ಮೂರ್ತಿಯನ್ನು ಲೋಕಾರ್ಪಣೆ ಮಾಡಿರುವುದಲ್ಲದೇ, ಏಪ್ರಿಲ್ 30 ರಂದು ಅವರ ಜಯಂತಿ ಮಹೋತ್ಸವದ ಜೊತೆ ಮೇ 2, ಕೋಟಿ ಗಾಯತ್ರಿ ಜಪ ಸಾಂಗತ ಹೋಮದ ಪೂರ್ಣಾಹುತಿಯನ್ನು ಮಾಡುವ ಮೂಲಕ ಬಹಳ ಅದ್ದೂರಿಯಿಂದ ಗುರುಗವಂದನೆಯನ್ನು ಅವರ ಭಕ್ತಾದಿಗಳು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ದೇಶವಿದೇಶಗಳಿಂದ ಸಾವಿರಾರು ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದು ಇನ್ನೂ ಸಹಸ್ರಾರು ಭಕ್ತಾದಿಗಳು ಹೋಮದ ಕಡೆಯ ದಿನ ಬರುವ ನಿರೀಕ್ಷೆ ಇದೆ.

WhatsApp Image 2022-04-29 at 3.12.12 PMಚಿರಂಜೀವಿ ಆಂಜನೇಯನ ಪರಮಭಕ್ತರಾಗಿದ್ದ, ಭಕ್ತರ ಪಾಲಿಗೆ ಸಾಕ್ಷಾತ್ ಆಂಜನೇಯ ಸ್ವರೂಪಿ ಮತ್ತು ನಡೆದಾಡುವ ಮಾರುತಿ ಎಂದೇ ಖ್ಯಾತರಾಗಿದ್ದ ನಾವು ದೇವರನ್ನು ಮನುಷ್ಯರಲ್ಲೇ ಕಾಣಬೇಕು. ಸಾಯುವರಾರೂ ದೇವರಾಗುವುದಿಲ್ಲ. ಸತ್ತು ಬದುಕಿದವನು ಮಾತ್ರ ದೇವರಾಗುತ್ತಾನೆ ಎಂದು ಹೇಳುತ್ತಿದ್ದ ಶ್ರೀ ಬಿಂಧು ಮಾಧವ ಶರ್ಮ ಅವಧೂತರು ಇಂದು ಬೆಲಗೂರಿನ ಶ್ರೀ ಕ್ಷೇತ್ರದಲ್ಲಿ ಭೌತಿಕವಾಗಿ ಇಲ್ಲದಿದ್ದರೂ, ಭಾವನಾತ್ಮಕವಾಗಿ ಶ್ರೀಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತರ ಭವರೋಗಗಳನ್ನು ನಿವಾರಿಸಲು ಸದಾಕಾಲವೂ ಇರುವುದರಿಂದ ಸ್ವಲ್ಪ ಸಮಯ ಮಾಡಿಕೊಂಡು ಬೆಂಗಳೂರಿನಿಂದ ಅರಸೀಕೆರೆಗೆ ಬಸ್ ಇಲ್ಲವೇ ರೈಲು ಮುಖಾಂತರ ತಲುಪಿ ಅಲ್ಲಿಂದ 48.4 ಕಿ.ಮೀ. ದೂರದಲ್ಲಿರುವ ಬೆಲಗೂರಿಗೆ ಬಂದು ಅವಧೂತರ ಕೃಪೆಗೆ ಪಾತ್ರರಾಗ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ವೀರ ಕುನ್ವರ್ ಸಿಂಗ್

ಬ್ರಿಟೀಷರ ಸೇನೆಯಲ್ಲಿ ಸಾಮಾನ್ಯ ಸೈನಿಕನಾಗಿದ್ದ ಮಂಗಲ್ ಪಾಂಡೆ 1857ರಲ್ಲಿ ಬ್ರಿಟೀಷ್ ಸೈನ್ಯದ ವಿರುದ್ಧವೇ ತಿರುಗಿ ಬಿದ್ದು ನಡೆಸಿದ ಹೋರಾಟವನ್ನು ಬ್ರಿಟೀಷರು ಸಿಪಾಯಿದಂಗೆ ಎಂದು ದಾಖಲಿಸಿದರೆ, ಭಾರತದ ನಿಜವಾದ ಇತಿಹಾಸಕಾರರು ಅದನ್ನು ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮ ಎಂದೇ ಹೆಮ್ಮೆಯಿಂದ ಕರೆಯುತ್ತಾರೆ. ಮಂಗಲ್ ಪಾಂಡೆ ಹತ್ತಿಸಿದ ಸ್ವಾತ್ರಂತ್ರ್ಯದ ಕಿಚ್ಚನ್ನು ಬಿಹಾರ್ ಪ್ರಾಂತ್ಯದಲ್ಲಿ ಪ್ರಜ್ವಲಿಸುವಂತೆ ಮಾಡಿದ ಕೀರ್ತಿ ಪ್ರಸ್ತುತ ಭಾರತದ ಬಿಹಾರದ ಭೋಜ್‌ಪುರ ಜಿಲ್ಲೆಯ ಭಾಗವಾಗಿರುವ ಜಗದೀಸ್‌ಪುರದ ಪರ್ಮಾರ್ ರಜಪೂತರ ಉಜ್ಜೈನಿಯಾ ಕುಲದ ಕುಟುಂಬಕ್ಕೆ ಸೇರಿದ್ದ ವೀರ್ ಕುನ್ವರ್ ಸಿಂಗ್ ಅವರಿಗೆ ಸಲ್ಲುತ್ತದೆ. ತಮ್ಮ 80 ನೇ ವಯಸ್ಸಿನಲ್ಲಿ ಸಾಮಾನ್ಯ ಸೈನಿಕರ ಪಡೆಯನ್ನು ಮುನ್ನಡೆಸುತ್ತಾ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವನ್ನು ಹಣ್ಣುಗಾಯಿ ನೀರು ಗಾಯಿ ಮಾಡಿದ್ದ ವೀರ ಕುನ್ವರ್ ಸಿಂಗ್ ಅವರ ಬಲಿದಾನ ದಿನವಾದ ಏಪ್ರಿಲ್ 26 ರಂದು ಅವರ ಸಂಸ್ಮರಣೆಯನ್ನು ಮಾಡುವುದು ಪ್ರತಿಯೊಬ್ಬ ಭಾರತೀಯರ ಅದ್ಯ ಕರ್ತವ್ಯವೇ ಆಗಿದೆ.

kanvar4ಏಪ್ರಿಲ್ 1777 ರಲ್ಲಿ ಪ್ರಸ್ತುತ ಬಿಹಾರದ ಭೋಜ್‌ಪುರ ಜಿಲ್ಲೆಗೆ ಸೇರಿರುವ ಜಗದೀಸ್‌ಪುರದಲ್ಲಿ ಮಹಾರಾಜ ಶಬ್ಜದಾ ಸಿಂಗ್ ಮತ್ತು ರಾಣಿ ಪಂಚ್ರತನ್ ದೇವಿಯವರಿಗೆ ಕುನ್ವರ್ ಸಿಂಗ್ ಜನಿಸುತ್ತಾರೆ. ಅವರ ತಂದೆಯವರೂ ಸಹಾ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದವರೇ ಆಗಿದ್ದರು. ಕುನ್ವರ್ ಅವರ ಎಲ್ಲಾ ಸಾಹಸಕ್ಕೆ ಅವರ ಸಹೋದರ ಬಾಬು ಅಮರ್ ಸಿಂಗ್ ಮತ್ತು ಅವರ ಸೈನ್ಯಧಿಕಾರಿಯಾಗಿದ್ದ ಕೃಷ್ಣ ಸಿಂಗ್ ಬೆಂಗಾವಲಾಗಿರುತ್ತಾರೆ. ಈ  ತ್ರಿಮೂರ್ತಿಗಳು ಸುಮಾರು ಒಂದು ವರ್ಷಗಳ ಕಾಲ ಬ್ರಿಟಿಷ್ ಪಡೆಗಳಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಛತ್ರಪತಿ ಶಿವಾಜಿ ಮಹಾರಾಜರಂತೆ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಪರಿಣಿತಿ ಹೊಂದಿದ್ದ ಇರುವರು ಸಾಯುವವರೆಗೂ ಅಜೇಯರಾಗಿದ್ದು ಅವರ ತಂತ್ರ ಮತ್ತು ಪ್ರತಿತಂತ್ರಗಳು ಬ್ರಿಟಿಷರನ್ನು ಸದಾಕಾಲವೂ ಗೊಂದಲಕ್ಕೀಡು ಮಾಡಿದ್ದವು ಎಂದರೂ ಅತಿಶಯೋಕ್ತಿಯೇನಲ್ಲ.

ಶತ್ರುಗಳನ್ನು ಬಗ್ಗು ಬಡಿಯುವ ಮುನ್ನ ಅವರ ಶಕ್ತಿಯನ್ನು ಅರಿಯಲು ಅವರೊಂದಿಗೇ ಸ್ನೇಹ ಬೆಳಸಿ ಅದರ ಪ್ರತಿಫಲವಾಗಿ ಬ್ರಿಟಿಷ್ ಅವರಿಂದಲೇ ಮದ್ದುಗುಂಡು ಕಾರ್ಖಾನೆಯನ್ನೂ ಆರಂಭಿಸಿ ಅಲ್ಲಿ ತಯಾರಾಗುತ್ತಿದ್ದ ಮದ್ದು ಗುಂಡುಗಳನ್ನು ಬ್ರಿಟಿಷರಿಗೆ ಅನುಮಾನವೇ ಬಾರದಂತೆ ಅವರ ವಿರುದ್ದವೇ ಬಳಸಲು ಸ್ವತಂತ್ರ ಹೋರಾಟಗಾರರಿಗೆ ನೀಡುತ್ತಿರುತ್ತಾರೆ. 1857 ಜುಲೈ 25 ರಂದು ಬ್ರಿಟೀಷರ ವಿರುದ್ದ ತಮ್ಮದೇ ಸೈನ್ಯದೊಂದಿಗೆ ಹೋರಾಟಿ ಬ್ರಿಟಿಷರನ್ನು ಸೋಲಿಸಿ ಅವರ ಖಜಾನೆಯನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಕುನ್ವರ್ ಸಿಂಗ್ ವಿರುದ್ಧ ಹೋರಾಡಲು ಮೊದಲು ಕ್ಯಾಪ್ಟನ್ ಡನ್ ಬಾರ್ ಅವರ ನೇತೃತ್ವದಲ್ಲಿ ಸೈನ್ಯ ಬರುತ್ತಿರುವುದನ್ನು ತಿಳಿದ ಕುನ್ವರ್ ಅವರ ತಂಡ ಗಾಂಗೀ ಎಂಬಲ್ಲಿ ಡನಬಾರ್ ನ ಸಮೇತ ಇಡೀ ಬ್ರಿಟಿಷ್ ಸೇನೆಯನ್ನು ಕೊಂದು ಹಾಕಿದ್ದರಿಂದ ಹತಾಶರಾಗಿ ಮೇಜರ್ ಐಲ್ ಎಂಬುವನೊಂದಿಗೆ ಕಳುಹಿಸಿದ ದೊಡ್ಡ ಸೈನ್ಯದೊಂದಿಗೆ ಕುನ್ವರ್ ಸಿಂಹ ರ ಅತ್ಯಂತ ಚಿಕ್ಕ ಪಡೆ ಹೋರಾಡಲು ಅಸಮರ್ಥರಾಗಿ ಹಿಂದಿರುಗುತ್ತಾರೆ.

kanvar3ಕೆಲ ಕಾಲದ ನಂತರ ಅಲ್ಲಿನ ಅಲ್ಲಿನ ಸ್ಥಳೀಯ ಜಮೀನ್ದಾರರ ಬೆಂಬಲದ ಜೊತೆಗೆ ವಾರಣಾಸಿ ಮತ್ತು ಗಾಜಿಪುರದ ಸೈನ್ಯದ ನೆರವು ಪಡೆದು ತಮ್ಮ ನೆಚ್ಚಿನ ಹೋರಾಟಗಾರರಲ್ಲಿ ಸ್ಪೂರ್ತಿಯನ್ನು ತುಂಬಿ ಕೆಲವೇ ಕೆಲವು ದಿನಗಳಲ್ಲಿ ಬ್ರಿಟಿಷ್ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸುತ್ತಾರೆ. ಈ ಸೋಲಿನಿಂದ ಅವಮಾನಿತನಾದ ಗವರ್ನರ್‌ ಜನರಲ್‌ ಲಾರ್ಡ್ ಕ್ಯಾನಿಂಗ್, ಲಾರ್ಡ್ ಕೆಡ್ ನಾಯಕತ್ವದಲ್ಲಿ ಕಳುಹಿಸಿದ ಮತ್ತೊಂದು ದೊಡ್ಡ ಸೈನ್ಯವನ್ನೂ ಸಹಾ ತನ್ನ ಚಾಣಕ್ಷ ಯುದ್ದತಂತ್ರಗಳಿಂದ ಕುನ್ವರ್ ಸಿಂಗ್ ಸೋಲಿಸಿದಾಗ ಬ್ರಿಟಿಷ್ ಅಥಿಕಾರಿಗಳು ಅಕ್ಷರಶಃ ಹೈರಾಣಾಗುತ್ತಾರೆ. ಮರಳಿ ಯತ್ನವ ಮಾಡು ಎಂಬಂತೆ ಲುಗಾರ್ಡ್ ನಾಯಕತ್ವದಲ್ಲಿ ಅತಿ ದೋಡ್ಡ ಬ್ರಿಟಿಷ್ ಸೈನ್ಯ ಆಕ್ರಮಣಕ್ಕೆ ಸಿದ್ದವಾಗುತ್ತಿದ್ದದ್ದನ್ನು ತಿಳಿದ ಕುನ್ವರ್ ಸಿಂಹ ಈ ಮೊದಲೇ ಹೇಳಿದಂತೆ ಛತ್ರಪತಿ ಶಿವಾಜಿ ಮಹಾರಾಜರು ಪರಿಚಯಿಸಿದ ಗೆರಿಲ್ಲಾ ಯುದ್ಧ ತಂತ್ರಗಾರಿಕೆಯಂತೆ, ಚಾಣಕ್ಷ ತನದಿಂದ ಅವರ ಸೈನ್ಯದ ಗಮನವನ್ನು ಬೇಕೆ ಕಡೆಗೆ ಚದುರಿಸಿ, ಆಪ್ರದೇಶದಲ್ಲಿ ಯುದ್ಧವನ್ನು ಎದುರಿಸಲು ಕುನ್ವರ್ ಸಿಂಗ್ ಸೈನ್ಯವೇ ಇರದಿದ್ದದ್ದನ್ನು ಕಂಡು ಹೆದರಿ ಓಡಿ ಹೋಗಿರಬಹುದೆಂದು ಭಾವಿಸಿ ಯುದ್ದವನ್ನು ಗೆದ್ದವರಂತೆ ಸಂಭ್ರಮಿಸುತ್ತಿದ್ದಾಗ ಏಕಾ ಏಕಿ ಅವರ ಮೇಲೆ ಗೆರಿಲ್ಲಾ ರೀತಿಯಿಂದ ಧಾಳಿ ಅಂತಹ ದೊಡ್ಡ ಸೈನ್ಯವನ್ನು ಸುಲಭವಾಗಿ ಸೋಲಿಸಿ ಬಿಡುತ್ತಾರೆ. ಕುನ್ವರ್ ಸಿಂಹ ನನ್ನು ಮತ್ತು ಅವನ ಸಹೋದರ ಅಮರ್ ಸಿಂಗನನ್ನು ಜೀವಂತವಾಗಲೀ ಅಥವಾ ಮರಣೋತ್ತರವಾಗಲೀ ಹಿಡಿದು ಕೊಟ್ಟವರಿಗೆ ತಲಾ 25,000ರೂ ಮತ್ತು 5,000ರೂಗಳ ಬಹುಮಾನವನ್ನು ಕೊಡುತ್ತೇವೆ ಎಂದು ಅಂದಿನ ಬ್ರಿಟಿಷ್ ಸರ್ಕಾರವೇ ಘೋಷಿಸಿತ್ತು ಎಂದರೆ ಕನ್ವರ್ ಸಿಂಗ್ ಅವರ ತಂಡ ಬ್ರಿಟೀಷರಿಗೆ ಯಾವ ಪರಿಯಲ್ಲಿ ಕಾಟ ಕೊಟ್ಟಿತ್ತು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.

ಅದೊಮ್ಮೆ ಕುನ್ವರ್ ಸಿಂಗ್ ಜಗದೀಶಪುರ ತಲಪಲು ಗಂಗಾ ನದಿಯನ್ನು ದಾಟುತ್ತಿದ್ದಾಗ ಬ್ರಿಟಿಷರ ಸೈನಿಕನೊಬ್ಬ ಹಾರಿಸಿದ ಗುಂಡು ಅವರ ಮಣಿಕಟ್ಟಿಗೆ ಬಡಿಯಿತು. ಅದಾಗಲೇ 80 ವರ್ಷ ವಯೋಮಾನದವರಾಗಿದ್ದ ಕುನ್ವರ್ ತನ್ನ ಕೈ ಎತ್ತಲೂ ಅಸಾಧ್ಯವಾದಾಗ, ಅದರಿಂದ ತನ್ನ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗದಂತೆ ತಡೆಯುವ ಸಲುವಾಗಿ ತಂತಾನೇ ತನ್ನ ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಂತಹ ಪರಮ ವೀರರಾಗಿದ್ದರು. ಮಾರ್ಚ್ 1858 ರಲ್ಲಿ, ಈಗಿನ ಉತ್ತರ ಪ್ರದೇಶಕ್ಕೆ ಸೇರಿದ ಅಜಂಗಢವನ್ನು ಒಂದೇ ಕೈಯ್ಯಲ್ಲಿ ಹೋರಾಟ ಮಾಡಿ ವಶಪಡಿಸಿಕೊಂಡದ್ದಲ್ಲದೇ, 22 ಮತ್ತು 23 ಏಪ್ರಿಲ್ ರಂದು ಜಗದೀಸ್‌ಪುರದ ಬಳಿ ಕ್ಯಾಪ್ಟನ್ ಲೆ ಗ್ರ್ಯಾಂಡ್ ನೇತೃತ್ವದ ಬ್ರಿಟಿಷ ಸೈನ್ಯದ ವಿರುದ್ದ ನಡೆದ ಯುದ್ದದಲ್ಲಿ ಕ್ಯಾಪ್ಟನ್ ಲೆ ಗ್ರ್ಯಾಂಡ್ ಸೇರಿದಂತೆ ಸುಮಾರು 130 ಜನರನ್ನು ಕೊಂದು ಯುದ್ದವನ್ನು ಗೆದ್ದರೂ ಸಹಾ ಆ ಹೋರಾಟದಲ್ಲಿ 80 ವರ್ಷದ ಕುನ್ವರ್ ಸಿಂಗ್ ತೀವ್ರವಾಗಿ ಗಾಯಗೊಂಡರೂ ಜಗದೀಶ್ ಪುರ ಕೋಟೆಯ ಮೇಲೆ ಹಾರುತ್ತಿದ್ದ ಯೂನಿಯನ್ ಜ್ಯಾಕ್ ಧ್ವಜವನ್ನು ಕೆಳಕ್ಕೆ ಇಳಿಸಿ ತಮ್ಮ ಧ್ವಜವನ್ನು ಹಾರಿಸಿ, 1858ರ ಏಪ್ರಿಲ್ 23 ರಂದು ತಮ್ಮ ಅರಮನೆಗೆ ಮರಳಿ ವಿಜಯೋತ್ಸವವನ್ನು ಆಚರಿಸಿದರು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಈ ಉತ್ಸಾಹ ಕೇವಲ ಮೂರು ದಿನಗಳ ಕಾಲವಿದ್ದು 26 ಏಪ್ರಿಲ್ 1858 ರಂದು ಕುನ್ವರ್ ಸಿಂಗ್ ಅವರ ದೇಹಾಂತ್ಯವಾಗುತ್ತದೆ. ಸಹೋದರನ ಸಾವಿನಿಂದ ವಿಚಲಿತರಾಗದೆ ಅವರ ಉತ್ತರಾಧಿಕಾರಿಯಾಗಿ ಸೈನ್ಯದ ನೇತೃತ್ವವನ್ನು ವಹಿಸಿಕೊಂಡ ಅವರ ಸೋದರ ಅಮರಸಿಂಗ್ ಬ್ರಿಟಿಷ್ ವಿರುದ್ದ ಹೋರಾಟ ಮುಂದುವರಿಸುತ್ತಲೇ ಹೋಗುತ್ತಾರೆ.

kanvar2ಎಷ್ಟೆಲ್ಲಾ ವಿರೋಧಾಭಾಸಗಳ ನಡುವೆಯೂ ತನ್ನ ಸಣ್ಣದಾದ ಸ್ಥಳೀಯ ಸೈನ್ಯದೊಂದಿಗೆ ಧೈರ್ಯದಿಂದ ಬ್ರಿಟೀಷರ ವಿರುದ್ದ ಹೋರಾಡಿ ಅವರಿಗೆ ಚಳ್ಳೇ ಹಣ್ಣು ತಿನಿಸಿದ್ದ ಕಾರಣ ಅವರನ್ನು ವೀರ್ ಕುನ್ವರ್ ಸಿಂಗ್ ಎಂದು ಕರೆಯಲಾಗುತ್ತದೆ. ಸ್ವಾತ್ರಂತ್ರ್ಯಾನಂತರ ಅವರ ಗೌರವಾರ್ಥವಾಗಿ ಭಾರತ ಸರ್ಕಾರವು 1966 ರಲ್ಲಿ ಕನ್ವರ್ ಸಿಂಗ್ ಅವರ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರೆ, ಬಿಹಾರ ರಾಜ್ಯ ಸರ್ಕಾರವು ವೀರ ಕುನ್ವರ್ ಸಿಂಗ್ ವಿಶ್ವವಿದ್ಯಾಲಯವನ್ನು , ಅರ್ರಾದಲ್ಲಿ 1992 ರಲ್ಲಿ ಸ್ಥಾಪಿಸಿತು.

paark2017 ರಲ್ಲಿ, ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸಲು ಇದ್ದ ಅರ್ರಾ-ಛಾಪ್ರಾ ಸೇತುವೆಗೆ ವೀರ್ ಕುನ್ವರ್ ಸಿಂಗ್ ಸೇತುವೆ ಎಂದು ಕರೆದದ್ದಲ್ಲದೇ, 2018 ರಲ್ಲಿ, ಕುನ್ವರ್ ಸಿಂಗ್ ಅವರ ಮರಣದ 160 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ನೆನಪಿಗಾಗಿ ಬಿಹಾರ ಸರ್ಕಾರವು ಅವರ ಪ್ರತಿಮೆಯನ್ನು ಹಾರ್ಡಿಂಜ್ ಪಾರ್ಕ್‌ಗೆ ಸ್ಥಳಾಂತರಿಸಿ, ಆ ಉದ್ಯಾನವನವನ್ನು ಅಧಿಕೃತವಾಗಿ ವೀರ್ ಕುನ್ವರ್ ಸಿಂಗ್ ಆಜಾದಿ ಪಾರ್ಕ್ ಎಂದು ಮರುನಾಮಕರಣ ಮಾಡುವ ಮೂಲಕ ಇಂದಿನ ಯುವ ಜನತೆಗೂ ವೀರ್ ಕನ್ವರ್ ಸಿಂಗ್ ಅವರನ್ನು ಪರಿಚಯಿಸುವ ಕಾರ್ಯವನ್ನು ಮಾಡಿದ್ದು ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.

kanvar4ಕೆಲವರು ಮಾಡಿದ ಅಹಿಂಸಾ ತತ್ವದ ಹೋರಾಟ ಮತ್ತು ಉಪವಾಸಗಳಿಗೆ ಹೆದರಿ ಬ್ರಿಟೀಷರು ಭಾರತವನ್ನು ಬಿಟ್ಟು ಹೋದರು ಎಂದೇ ಇತಿಹಾಸದಲ್ಲಿ ಓದುತ್ತಿರುವ ನಮ್ಮ ಇಂದಿನ ಮಕ್ಕಳಿಗೆ ವೀರ ಕನ್ವರ್ ಸಿಂಗ್ ನಂತಹ ಲಕ್ಷಾಂತರ ಕಾಂತ್ರಿಕಾರಿಗಳ ತ್ಯಾಗ ಮತ್ತು ಬಲಿದಾನಗಳಿಂದಾಗಿ ಈ ದೇಶಕ್ಕೆ ಸ್ವಾತ್ರಂತ್ಯ ದೊರಕಿದೆ ಎಂಬ ಸತ್ಯ ಸಂಗತಿಯನ್ನು ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮದೇ ಆಗಿದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಅನಂತ ಲಕ್ಷ್ಮಣ ಕಾನ್ಹೇರೆ

savarkarಇತಿಹಾಸ ತಿಳಿಯದ ಕೆಲವು ಅರಿವುಗೇಡಿಗಳು ವೀರ ಸಾವರ್ಕರ್ ಅವರೊಬ್ಬ ಹೇಡಿ ಹಾಗೂ ಬ್ರಿಟಿಷರಿಗೆ ಕ್ಷಮೆ ಅರ್ಜಿ ಬರೆದು ಅವರೊಂದಿಗೆ ಶಾಮೀಲಾರಾಗಿದ್ದರು ಎಂದು ಪದೇ ಪದೇ ಹೇಳುವಾಗ ನಿಜಕ್ಕೂ ಮೈಯ್ಯಲ್ಲಿರುವ ರಕ್ತ ಕುರಿಯುತ್ತದೆ. ನಿಜ ಹೇಳಬೇಕೆಂದರೆ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ಬಹುತೇಕ ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಕರಾಗಿದ್ದಲ್ಲದೇ ಅವರ ಹಿಂದೆ ನಿಂತು ಅವರ ಎಲ್ಲಾ ಹೋರಾಟಗಳಿಗೂ ಶಕ್ತಿ ತುಂಬುತಿದ್ದದ್ದೇ ವೀರ ಸಾವರ್ಕರ್. ಅಂತಹ ವೀರ ಸಾವರ್ಕರ ಗರಡಿಯಲ್ಲಿ ತಯಾರಾಗಿ ದೇಶದ ಸ್ವಾತ್ರಂತ್ರ್ಯಕ್ಕಾಗಿ ತಮ್ಮ 18ರ ಪ್ರಾಯದಲ್ಲೇ 19 ಎಪ್ರಿಲ್ 1910 ರಂದು ಹುತಾತ್ಮರಾದವರೇ ಶ್ರೀ ಅನಂತ ಲಕ್ಷ್ಮಣ ಕಾನ್ಹೇರೆ ಅವರೂ ಸಹಾ ಒಬ್ಬರು.

anant2ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಆಯನಿ ಮೇಟೆಯಲ್ಲಿ 1891ರಲ್ಲಿ ಜನಿಸಿದ ಅನಂತರಾವ್ ಅವರು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಸಲುವಾಗಿ ಔರಂಗಾಬಾದಿನಲ್ಲಿದ್ದ ತಮ್ಮ ಸೋದರಮಾವನ ಮನೆಗೆ ಬರುತ್ತಾರೆ. ಶಾಲೆಯಲ್ಲಿ ಓದುತ್ತಿರುವಾಗಲೇ ಸ್ವಾತ್ರಂತ್ರ್ಯ ಹೋರಾಟದ ಕಿಚ್ಚನ್ನು ಹತ್ತಿಸಿಕೊಂಡು ಕೆಲವು ತೀವ್ರವಾದಿಗಳ ಪರಿಚಯವಾಗಿ ತಮ್ಮ ಮಾವನ ಮನೆಯಲ್ಲಿದ್ದರೆ ಸರಿಹೋಗುವುದಿಲ್ಲ ಎಂದು ತಿಳಿದು, ತಮ್ಮ ಸೋದರ ಮಾವನ ಮನೆಯಿಂದ ಹೊರಬಂದು ತಾವೇ ಅಲ್ಲಿಯ ಗಂಗಾರಾಮ ಮಾರವಾಡಿಯವರ ವಠಾರದಲ್ಲಿ ಸಣ್ಣ ಕೋಣೆಯೊಂದರಲ್ಲಿ ಬಾಡಿಗೆಗೆ ಬರುತ್ತಾರೆ. ಅಷ್ಟರಲ್ಲಾಗಲೇ ಅವರಿಗೆ ನಾಸಿಕ್ಕಿನ ಸ್ವಾತಂತ್ರ್ಯವಾದಿ ಗುಪ್ತ ಸಂಸ್ಥೆಯ ಕಾಶಿನಾಥ ಟೋಣಪೆಯವರು ಗಂಗಾರಾವ್ ಅವರ ಪರಿಚಯವಾಗಿ ಅನಂತರಾವ್ ಅವರನ್ನು ಗುಪ್ತ ಸಂಸ್ಥೆಯ ಸದಸ್ಯರನ್ನಾಗಿಸಿಕೊಂಡಿದ್ದಲ್ಲದೇ ದೇಶದ ಸ್ವಾತ್ರಂತ್ಯ್ರಕ್ಕಾಗಿ ಎಂತಹ ಕಠಿಣ ತ್ಯಾಗವನ್ನು ಮಾಡಲು ಸಿದ್ಧರಿರುವುದಾಗಿ ಪ್ರತಿಜ್ಞೆಯನ್ನೂ ಮಾಡಿಸಿ ಕೊಂಡಿರುತ್ತಾರೆ.

ಇದೇ ಸಮಯದಲ್ಲಿ ಸಾವರ್ಕರ್ ಆವರ ಮತ್ತೊಬ್ಬ ಪರಮ ಶಿಷ್ಯ ಮದನಲಾಲ್ ಢಿಂಗ್ರಾ ಲಂಡನ್ನಿನಲ್ಲಿಯೇ ಕರ್ಜನ್ ವಾಲಿಯ ಹತ್ಯೆ ಮಾಡಿದ್ದರಿಂದ ಉತ್ಸಾಹಗೊಂಡ ಅನಂತ್ ರಾವ್ ಸಹಾ ತಾವೂ ಸಹಾ ಅಂತಹದ್ದೇ ಹತ್ಯೆಗೆ ಸಿದ್ದ ಎಂಬುದನ್ನು ಗಂಗಾರಾವ್ ಅವರ ಬಳಿ ಹೇಳಿಕೊಳ್ಳುತ್ತಾರೆ. ಅನಂತರಾವ್ ಅವರ ಧೈರ್ಯ ಮತ್ತು ಕ್ಷಮತೆಯನ್ನು ಪರಿಕ್ಷೀಸುವ ಸಲುವಾಗಿ ಅವರ ಕೈಗೆ ಬಿಸಿ ಬಿಸಿಯಾಗಿ ಕಾಯಿಸಿದ್ದ ಕಬ್ಬಿಣದ ಇಕ್ಕಳವನ್ನು ಹಿಡಿಸಿದರೆ ಮತ್ತೊಮ್ಮೆ ಉರಿಯುತ್ತಿರುವ ದೀಪದ ಚಿಮಣಿಯ ಬಿಸಿಯಾದ ಗಾಜನ್ನು ಎರಡೂ ಕೈಯಲ್ಲಿ ಹಿಡಿಯಲು ಹೇಳಿದಾಗ, ಒಂದು ಕ್ಷಣವೂ ವಿಚಲರಿತರಾಗದೇ, ಎರಡೂ ಪರೀಕ್ಷೆಯಲ್ಲಿಯೂ ಸಫಲತೆ ಹೊಂದಿದಾಗ ಗಂಗರಾವ್ ಅವರಿಗೆ ಅನಂತರಾವ್ ಅವರ ಮೇಲೆ ಭರವಸೆ ಬರುತ್ತದೆ.

ananth4ಇದೇ ಸಮಯದಲ್ಲಿ ನಾಸಿಕ್ಕಿನ ಜಿಲ್ಲಾಧಿಕಾರಿಯಾಗಿದ್ದ ಜಾಕ್ಸನ್ ಎಂಬ ಬ್ರಿಟೀಷ್ ವ್ಯಕ್ತಿ ಅತ್ಯಂತ ಕ್ರೂರ ಮತ್ತು ಕಪಟಿಯಗಿದ್ದು ನಿರಪರಾಧಿಗಳಾಗಿದ್ದ ಶ್ರೇಷ್ಠ ನ್ಯಾಯವಾದಿ, ಕೀರ್ತನಕಾರರಾದ ತಾಂಬೇಶಾಸ್ತ್ರಿ ಮತ್ತು ವೀರ ಸಾವರ್ಕರ್ ಅವರ ಅಣ್ಣ ಬಾಬುರಾವ್ ಸಾವರ್ಕರ್ ಅವರಂತಹ ದೇಶಭಕ್ತರನ್ನು ಸೆರೆಮನೆಗೆ ಕಳುಹಿಸುವ ಮೂಲಕ ಕ್ರಾಂತಿಕಾರಿಗಳ ಕೆಂಗಣ್ಣಿಗೆ ತುತ್ತಾಗಿದ್ದಲ್ಲದೇ, ಅವನನ್ನು ಮುಗಿಸಲು ಹೊಂಚು ಹಾಕುತ್ತಿರುತ್ತಾರೆ. ಅದೇ ಸಮಯದಲ್ಲಿಯೇ ಇಂಗ್ಲೇಂಡಿಲ್ಲಿದ್ದ ವೀರ ಸಾವರ್ಕರ್ ಬೈಬಲ್ ಪುಸ್ತಕದವನ್ನು ಕೊರೆದು ಅದರಲ್ಲಿ ಗುಪ್ತವಾಗಿ ಬಂದೂಕುಗಳನ್ನು ಇರಿಸಿ ಭಾರತದ ಕ್ರಾಂತಿಕಾರಿಗಳಿಗೆ ಬಂದೂಕನ್ನು ರವಾನಿಸುತ್ತಿರುತ್ತಾರೆ. ಕ್ರೂರಿ ಜಾಕ್ಸನ್ ನನ್ನು ಕೊಂದು ಹಾಕಲು ಅನಂತ್ ರಾವ್ ಆವರೇ ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಅವರಿಗೆ ಸಾವರ್ಕರ್ ಅವರು ಕಳುಹಿಸಿದ ಬಂದೂಕನ್ನು ಬಳಸಲು ತರಭೇತಿಯನ್ನು ನೀಡಲಾಗುತ್ತದೆ. ಜಾಕ್ಸನನನ್ನು ಹತ್ಯೆ ಮಾಡುವ ಸಲುವಾಗಿ ಅನಂತರಾವರವರು ಪ್ರತೀ ದಿನವೂ ಗುಪ್ತವಾಗಿ ಬಂದೂಕಿನಿಂದ ಗುರಿ ಸಾಧಿಸುವ ಅಭ್ಯಾಸ ಮಾಡುತ್ತಿದ್ದದ್ದಲ್ಲದೇ, ಜಿಲ್ಲಾಧಿಕಾರಿಯ ಕಾರ್ಯಾಲಯಕ್ಕೂ ಹೋಗಿ ತಮ್ಮ ಶಿಖಾರಿ ಜಾಕ್ಸನ್‌ನ್ನು ಸರಿಯಾಗಿ ನೋಡಿಕೊಂಡೂ ಬಂದಿದ್ದರು. ಬ್ರಿಟಿಷ್ ಅಧಿಕಾರಿ ಜಾಕ್ಸನ್‌ನನ್ನು ಕೊಂದ ಹೇಗೂ ಗಲ್ಲು ಶಿಕ್ಷೆ ಖಚಿತ ಎಂದೇ ತಿಳಿದ್ದ ಅನಂತರಾವ್ ಅವರು ತಮ್ಮ ಭಾವಚಿತ್ರವನ್ನು ಸ್ಟುಡಿಯೋದಲ್ಲಿ ತೆಗೆಸಿ ತಮ್ಮ ಮರಣದನಂತರ ತಮ್ಮ ತಂದೆ-ತಾಯಿಯವರಿಗೆ ತನ್ನ ನೆನಪಿಗಾಗಿ ಈ ಛಾಯಾಚಿತ್ರವಿರಲಿ ಎಂಬುದು ಅವರ ಭಾವನೆಯಾಗಿತ್ತು.

ಡಿಸೆಂಬರ್ 21,, 1909  ರಂದು ಕಿರ್ಲೋಸ್ಕರ್ ನಾಟಕ ಮಂಡಳಿಯು ನಾಸಿಕ್ಕಿನ ವಿಜಯಾನಂದ ನಾಟಕ ಗೃಹದಲ್ಲಿ ಶಾರದಾ ಎಂಬ ನಾಟಕವನ್ನು ಅಯೋಜಿದ್ದಲ್ಲದೇ ಅದೇ ಸಮಾರಂಭದಲ್ಲೇ ಜಾಕ್ಸನ್‌ ಅವರನ್ನೂ ಸಹಾ ಸನ್ಮಾನಿಸಲು ತೀರ್ಮಾನಿಸಿದ್ದ ವಿಷಯವನ್ನು ತಿಳಿದ ಅನಂತರಾವ್, ಜಾಕ್ಸನ್ ನನ್ನು ಮುಗಿಸಲು ಇದೇ ಸರಿಯಾದ ಸಮಯ ಎಂದು ಭಾವಿಸಿ ನಾಟಕ ಆರಂಭಕ್ಕೂ ಮುನ್ನವೇ ಅಲ್ಲಿ ಹೋಗಿ ಜಾಕ್ಸನ್‌ ಬರುವಿಕೆಗಾಗಿಯೇ ಕಾಯುತ್ತಿದ್ದರು. ಜಾಕ್ಸನ್ ಮುಂಬಾಗಿಲಿನಿಂದ ನಾಟಕಗೃಹವನ್ನು ಪ್ರವೇಶಿಸುತ್ತಿದ್ದಂತೆಯೇ ಏಕಾ ಏಕಿ ಮುನ್ನುಗ್ಗಿದ ಅನಂತರಾವ್ ಜಾಕ್ಸನ್ ಮೇಲೆ ಹಾರಿಸಿದ ಗುಂಡು ಗುರಿ ತಪ್ಪಿ ಅದು ಜಾಕ್ಸನ್ನಿನ ಕಂಕುಳಿನಿಂದ ಹೊರಬಿದ್ದಿತು. ಇದರಿಂದ ಕೊಂಚವೂ ವಿಚಲಿತರಾಗದ ಅನಂತ್ ರಾವ್ ಮೇಲಿಂದ ಮೇಲೆ ನಾಲ್ಕು ಗುಂಡು ಹಾರಿಸಿದಾಗ ಗುಂಡೇಟಿನಿಂದ ರಕ್ತದ ಮುಡುವಿನಲ್ಲಿ ಜಾರಿಹೋದ ಜಾಕ್ಸನ್‌ ಅಲ್ಲಿಯೇ ಕುಸಿದು ಬಿದ್ದನು.

ananth1ಜಾಕ್ಸನ್ ಅವರನ್ನು ಕೊಂದ ನಂತರ ಎಲ್ಲಿಯೂ ಓಡಿ ಹೋಗದೇ ಖುದ್ದಾಗಿ ಪೋಲೀಸರಿಗೆ ಶರಣಾದ ಅನಂತರಾವ್ ಅವರಿಗೆ ಪೂರ್ವ ನಿರ್ಧಾರದಂತೆಯೇ ಜಿಲ್ಲಾಧಿಕಾರಿ ಜಾಕ್ಸನ್ ವಧೆಯ ಆರೋಪದಲ್ಲಿ ಮತ್ತು ಅವರಿಗೆ ಸಹಕರಿಸಿದ ಅವರ ಸ್ನೇಹಿತರಾದ ಅಣ್ಣಾ ಕರ್ವೆ ಮತ್ತು ವಿನಾಯಕ ದೇಶಪಾಂಡೆಯವರನ್ನು ಸೇರಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು. ಏಪ್ರಿಲ್ 19, 1910 ಥಾನೆಯ ಸೆರೆಮನೆಯಲ್ಲಿ ಬೆಳಗ್ಗೆ 7 ಗಂಟೆಗೆ ಆ ಮೂವರನ್ನೂ ಗಲ್ಲಿಗೆ ಏರಿಸಿದ್ದಲ್ಲದೇ, ಅವರ ಕಳೇಬರಕ್ಕಾಗಿ ಕಾಯುತ್ತಿದ್ದ ಆವರ ಬಂಧು ಮಿತ್ರರಿಗೆ ತಿಳಿಸದಂತೆ ರಹಸ್ಯವಾಗಿ ಅ ಮೂವರು ಕ್ರಾಂತಿಕಾರಿಗಳ ದೇಹಗಳನ್ನು ಥಾನೆ ಖಾಡಿಕಿನಾರಿ ಎಂಬಲ್ಲಿ ದಹಿಸಿದ್ದಲ್ಲದೇ ಅವರ ಚಿತಾಭಸ್ಮವನ್ನೂ ಸಹಾ ಯಾರಿಗೂ ಸಿಗದಂತೆ ಸಮುದ್ರದ ಜಲಸಂಧಿಯೊಳಗೆ ಎಸೆಯುವ ಮೂಲಕ ತಮ್ಮ ಕ್ರೌಯ್ರವನ್ನು ಬ್ರಿಟೀಷ್ ಪೋಲಿಸರು ತೋರಿಸಿದ್ದರು.

ಜಾಕ್ಸನ್ ಅವರನ್ನು ಕೊಲೆ ಮಾಡಲು ಅಂದಿನ ಕಾಲದಲ್ಲಿನ ಆಧುನಿಕ ಬಂದೂಕು ಹೇಗೆ ಸಿಕ್ಕಿತು? ಎಂಬುದರ ತನಿಖೆಗೆ ಹೊರಟ ಪೋಲಿಸರಿಗೆ ಅದರ ಮೂಲ ಬ್ರಿಟನ್ನಿನದಾಗಿತ್ತು ಎಂದು ತಿಳಿದ ಆ ಕಾರ್ಯಚರಣೆಯ ತನಿಖೆಯನ್ನು ಸ್ಕಾಟ್‌ಲ್ಯಾಂಡ್ ಯಾರ್ಡಿನ ಪೋಲಿಸರಿಗೆ ಒಪ್ಪಿಸಿದರು. ಅಲ್ಲಿನ ಪೋಲೀಸರು ತ್ವರಿತವಾಗಿ ನಡೆಸಿದ ತನಿಖೆಯಲ್ಲಿ ಸಾವರ್ಕರ್ ಮತ್ತು ಲಂಡನ್ನಿನ ಇಂಡಿಯಾ ಹೌಸ್ ನಲ್ಲಿದ್ದ ಸಹಚರರು ಭಾರತಕ್ಕೆ ಗುಟ್ಟಾಗಿ ಬೈಬಲ್ ಪುಸ್ತಕದ ಮೂಲಕ ಬ್ರೌನಿಂಗ್ ಪಿಸ್ತೂಲ್ ರವಾನಿಸಿದ್ದ ವಿಷಯವನ್ನು ಅರಿತು ಸಾವರ್ಕರ್ ಅವರನ್ನು ಬಂಧಿಸಲು ಹೊಂಚು ಹಾಕಿದ್ದರು.

ಈ ವಿಷಯವನ್ನು ಅರಿತ ಸಾವರ್ಕರ್ ಮತ್ತು ಅವರ ಗೆಳೆಯ ಶ್ಯಾಮ್ ಜಿ ಕೃಷ್ಣವರ್ಮ ಲಂಡನ್‌ನಿಂದ ಫ್ರಾನ್ಸ್‌ಗೆ ತೆರಳಿ ಅಲ್ಲಿ ಕೆಲ ಕಾಲ ಭೂಗತರಾಗಿದ್ದರು. ಅಷ್ಟರಲ್ಲಿ ಬ್ರಿಟೀಷರ ಬಂಧನದಲ್ಲಿದ್ದ ಅವರ ಅಣ್ಣ ಬಾಬಾರಾವ್ ಸಾವರ್ಕರ್ (ಗಣೇಶ್ ಸಾವರ್ಕರ್) ಅವರನ್ನು ಬ್ರಿಟಿಷ್‌ರು ಇದೇ ಪ್ರಕರಣದಲ್ಲಿ  ಕಾಲಾಪಾನಿಗೆ ಕಳುಹಿಸಿ ಚಿತ್ರಹಿಂಸೆ ಕೊಡುತ್ತಿದ್ದ ಸುದ್ದಿಯನ್ನು ಕೇಳಿ ಸಾವರ್ಕರ್ ವಿಚಲಿತರಾದ ಸಾವರ್ಕರ್ ಅಂತಿಮವಾಗಿ ಬ್ರಿಟೀಷರಿಗೆ ಸೆರೆ ಸಿಕ್ಕಿದ್ದು ಈಗ ಇತಿಹಾಸವಾಗಿದೆ.

anand3ಕೆಲ ನಾಯಕರುಗಳು ಮಾಡಿದ ಅಹಿಂಸಾ ಹೋರಾಟ ಮತ್ತು ಸತ್ಯಾಗ್ರಹಗಳಿಗೆ ಹೆದರಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ಯ್ರವನ್ನು ಕೊಟ್ಟರು ಎಂಬ ಗಿಣಿ ಪಾಠದ ಇತಿಹಾಸವನ್ನೇ ಓದುವ ನಮ್ಮ ಇಂದಿನ ಮಕ್ಕಳಿಗೆ, ಅನಂತ್ ಲಕ್ಷ್ಮಣ ಕಾನ್ಹರೆಯಂತಹ 18 ವರ್ಷವನ್ನು ದಾಟದ ಸಾವಿರಾರು ಯುವಕರುಗಳು ನಿಸ್ವಾರ್ಥವಾಗಿ ಈ ದೇಶಕ್ಕಾಗಿ ದೇಹವನ್ನು ಬಲಿದಾನ ಮಾಡಿದ್ದರಿಂದಲೇ ನಾವು ಸರ್ವ ಸ್ವತಂತ್ರ್ಯವಾಗಿ ಈ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂಬ ನೈಜ ಇತಿಹಾಸವನ್ನು ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮಲ್ಲರದ್ದಾಗಿದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು

ನಮ್ಮ ಸನಾತನ ಧರ್ಮದಲ್ಲಿ ಮಾತೃದೇವೋಭವ, ಪಿತೃದೇವೋಭವದ ನಂತರದ ಸ್ಥಾನವನ್ನು ಆಚಾರ್ಯದೇವೋಭವ ಎಂದು ಗುರುಗಳಿಗೆ  ಮೀಸಲಾಗಿಟ್ಟಿದ್ದೇವೆ.  ಜನ್ಮ ನೀಡಿದವರು  ತಂದೆ-ತಾಯಿಯರಾದರೇ, ಪ್ರತಿಯೊಬ್ಬರಿಗೂ ವಿದ್ಯಾ ಬುದ್ಧಿಯನ್ನು ಕಲಿಸಿ ಅವರನ್ನು ತಿದ್ದಿ ತೀಡೀ ಸಮಾಜದಲ್ಲಿ ಇಬ್ಬ ಸಭ್ಯ ನಾಗರೀಕರನ್ನಾಗಿ ಮಾಡಿಸುವವರೇ ಗುರುಗಳು ಎಂದರೂ ತಪ್ಪಾಗದು. ಹಾಗಾಗಿ ನಮ್ಮ ಸನಾತನ ಧರ್ಮದಲ್ಲಿ ಗುರುಪರಂಪರೆ ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ನಮ್ಮ ಕಾಲಮಟ್ಟದ ಅಂತಹ ಅನೇಕ ಗುರುಗಳಲ್ಲಿ  ಕರ್ನಾಟಕದ ಅತ್ಯಂತ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಸಿದ್ದಗಂಗಾ ಮಠದ ಸ್ವಾಮಿಗಳಾಗಿದ್ದ ಭಾರತೀಯ ಆಧ್ಯಾತ್ಮಿಕ ಚಿಂತಕರೂ, ಅತ್ಯಂತ ಮಾನವೀಯ ಹೃದಯವಂತರೂ, ಶಿಕ್ಷಣತಜ್ಞರೂ, ಶತಾಯುಷಿಗಳಾಗಿ ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದ ಪದ್ಮಭೂಷಣ ಶ್ರೀ ಶಿವಕುಮಾರ ಸ್ವಾಮಿಗಳು ಅಗ್ರಗಣ್ಯರು ಎಂದರೆ ಅತಿಶಯವೆನಿಸದು.

ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು  ಗಂಗಮ್ಮ ದಂಪತಿಗಳಿಗೆ  ಎಪ್ರಿಲ್ 1, 1908ರಲ್ಲಿ 13ನೇ ಮಗನಾಗಿ ಜನಿಸಿದ ಶಿವಣ್ಣನವರು  ಮುಂದೆ ಕರ್ನಾಟಕದ ಪ್ರಸಿದ್ಧ ಸಿದ್ದಗಂಗಾ ಮಠದ  ಮಠಾಧಿಪತಿಗಳಾಗಿ  ಮಾರ್ಚ್ 3, 1930ರಲ್ಲಿ ಜವಾಬ್ದಾರಿಯನ್ನು ಹೊತ್ತು  ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿ ಕೇವಲ  ಒಂದು ಧರ್ಮ ಅಥವಾ ಜಾತಿಗಷ್ಟೇ ಸ್ಥೀಮಿತವಾಗದೇ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ   ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಗಳಾಗುವ ಮೂಲಕ 12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪರಿ ನಿಜಕ್ಕೂ ಅನನ್ಯ, ಅಧ್ಭುತ ಮತ್ತು ಅನುಕಣೀಯವೇ ಸರಿ.

ssk1ಪೂರ್ವಾಶ್ರಮದಲ್ಲಿ ಸ್ವಾಮಿಗಳು ತಮ್ಮ ಕುಟುಂಬದಲ್ಲಿ ಅತ್ಯಂತ ಕಿರಿಯರಾಗಿದ್ದಲ್ಲದೇ  ಆಟ ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ  ಕಾರಣ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ತಮ್ಮ ಹುಟ್ಟೂರು ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಗಿ ಪ್ರಾಥಮಿಕ ವಿದ್ಯಾಭ್ಯಾಸ ತಮ್ಮ ಪಕ್ಕದ ಊರಾದ ಪಾಲನಹಳ್ಳಿಯಲ್ಲಾಗಿ ತುಮಕೂರು ಬಳಿಯ  ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 1926ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸುತ್ತಾರೆ. ಇದೇ ಸಮಯದಲ್ಲಿಯೇ ಅವರಿಗೆ ಅಂದಿನ  ಸಿದ್ದಗಂಗಾ ಶ್ರೀಗಳಾಗಿದ್ದ ಉದ್ದಾನ ಶಿವಯೋಗಿಗಳ ಪರಿಚಯವಾಗಿ ಅವರ ಸಹಾಯದಿಂದಲೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿಕೊಂಡಿದ್ದಲ್ಲದೇ ಆಶ್ರಯಕ್ಕಾಗಿ  ಬೆಂಗಳೂರಿನ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಆಗುತ್ತದೆ. ವಿದ್ಯಾಭ್ಯಾಸದ ಜೊತೆಗೆ ಸಿದ್ದಗಂಗಾ ಮಠದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.

ssk41930ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದಾಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ, ಅವರಿಗೆ ಕಾವಿ, ರುದ್ರಾಕ್ಷಿಗಳ ದೀಕ್ಷೆಯನ್ನು ಕೊಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು  ಅನುವು ಮಾಡಿಕೊಡುತ್ತಾರೆ.

ssk5ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ ಮಾಜಿ ಮುಖ್ಯಮಂತ್ರಿಗಳು ಮತ್ತು ಬೆಂಗಳೂರಿನಲ್ಲಿರುವ ವಿಧಾನಸೌಧದ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯನವರು ಸಹಾ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿವಕುಮಾರ ಸ್ವಾಮಿಗಳ ಸಹಪಾಠಿಯಾಗಿದ್ದನ್ನು ಈ ಪೋಟೋದಲ್ಲಿ ಕಾಣಬಹುದಾಗಿದೆ. ಸನ್ಯಾಸತ್ವದ ರೀತಿ ರಿವಾಜುಗಳನ್ನು ಪಾಲಿಸುತ್ತಲೇ ಪ್ರಥಮ ದರ್ಜೆಯಲ್ಲಿ ತಮ್ಮ  ಪದವಿಯನ್ನು ಮುಗಿಸಿ ಸಿದ್ದಗಂಗಾ ಮಠಕ್ಕೆ  ಶ್ರೀ ಶಿವಕುಮಾರ ಸ್ವಾಮಿಗಳಾಗಿ ಹಿಂದಿರುಗಿದ ಕೆಲವೇ ಸಮಯದಲ್ಲಿ ಹಿರಿಯ ಗುರುಗಳಾದ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದ ನಂತರ ಮಠದ ಸಕಲ ಆಡಳಿತ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಗಳೆಲ್ಲವೂ ಶ್ರೀಗಳವರಿಗೆ ಹಸ್ತಾಂತರವಾದ ನಂತರ  ತಮ್ಮ ಸಂಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ.

ss4ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಾಗ ಮಠದ ಆದಾಯ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದು ಮಠದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ದಾಸೋಹ ಮತ್ತು  ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅತ್ಯಂತ ಕಷ್ಟದಾಯಕ ಎನಿಸಿದ ಸಂದರ್ಭದಲ್ಲಿ ಶ್ರೀಗಳು ಜೋಳಿಗೆ ಹಿಡಿದು ಮಠದ ಭಕ್ತರ ಮನೆ ಮನೆಗಳಿಗೆ ಪಾದ ಪೂಜೆಗೆಂದು ಹೋಗಿ ಅವರಿಂದ ಧವಸ ಧಾನ್ಯಗಳ ಜೊತೆ ಧನಕನಕ ಕಾಣಿಕೆಗಳನ್ನು ಸ್ವೀಕರಿಸುವ ಮೂಲಕ ಮಠದ ಖಜಾನೆಯನ್ನು ಅಂದು ಭರ್ತಿಮಾಡಿದ್ದು ಮುಂದೆಂದೂ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಕೇವಲ ತುಮಕೂರಿನ ಸುತ್ತಮುತ್ತಲಿಗೇ ಮೀಸಲಾಗಿದ್ದ  ಅವರ ಶಿಕ್ಷಣ ಸಂಸ್ಥೆಗಳನ್ನು ರಾಜ್ಯದ ನಾನಾ ಭಾಗಗಳಿಗೂ ವಿಸ್ತರಿಸಿದ್ದಲ್ಲದೇ ಕಾಲ ಕಾಲಕ್ಕೆ ಅನುಗುಣವಾಗಿ ಹಂತ ಹಂತವಾಗಿ ಆಧುನಿಕ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಸಾವಿರಾರು ಶಿಕ್ಷಕರುಗಳು,  ವೈದ್ಯರುಗಳು, ಇಂಜೀನೀಯರುಗಳನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.  ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವವರ ಪೈಕಿ ಹಲವರು ಇಂದು ದೇಶ ವಿದೇಶಗಳಲ್ಲಿ ವಿಖ್ಯಾತಿ ಪಡೆಯುವಷ್ಟರ ಮಟ್ಟಿಗೆ ಎತ್ತರದ ಸ್ಥಾನಗಳಿಸಿರುವುದು ಮಠದ  ಹಿರಿಮೆ ಮತ್ತು ಗರಿಮೆ ಎನಿಸಿದೆ.

ssk3ಇಷ್ಟೆಲ್ಲಾ ಕೆಲಸಕಾರ್ಯಗಳ ಮಧ್ಯೆಯೂ ಶ್ರೀಗಳು ಪ್ರತಿದಿನವೂ ಬೆಳಿಗ್ಗೆ 4 ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನ, ಆದಾದ ನಂತರ ತಮ್ಮ  ಇಷ್ಟಲಿಂಗ ಪೂಜೆಯನ್ನು ಮುಗಿಸಿ ನಂತರ ತಮ್ಮ ದರ್ಶನಕಾಗಿ ಬಂದಿರುತ್ತಿದ್ದ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ನೀಡಿ ತಾವೂ ಸಹಾ ಧರಿಸುವ ಮೂಲಕ  ಅವರ  ಪೂಜೆ ಸಂಪನ್ನವಾಗುತ್ತಿತ್ತು. ಇದೇ  ಪದ್ದತಿಯನ್ನು ಅವರ ಜೀವಿತಾವಧಿಯ ಪೂರ್ಣ ಚಾಚೂ ತಪ್ಪದೇ ನಡೆದದ್ದಲ್ಲದೇ  ಅವರ ಅಂತಿಮ ದಿನಗಳಲ್ಲಿ ಆಸ್ಪತ್ರೆಯಲ್ಲಿ ಇದ್ದಾಗಲೂ ನಡೆದಿತ್ತು ಎನ್ನುವುದು ಗಮನಾರ್ಹವಾಗಿದೆ.

ss3ತಮ್ಮ ಪೂಜೆಯ ನಂತರ ಬೆಳಿಗ್ಗೆ 6:30 ಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ಸಿಹಿ ಮತ್ತು ಖಾರ ಚಟ್ನಿಯ ಜೊತೆಗೆ  ಎರಡು ತುಂಡು ಸೇಬನ್ನು ಸೇವಿಸಿ ಬೇವಿನ-ಚಕ್ಕೆಯ ಕಷಾಯ ಸೇವಿಸುವ ಮೂಲಕ ಅಕ್ಷರಶಃ ಯೋಗಿಯಂತೆ ಜೀವನ ನಡೆಸಿದ್ದರು. ತಮ್ಮ ಪ್ರವಾಸ ಹೊರತಾಗಿ ಮಠದಲ್ಲಿ ಇದ್ದ ಅಷ್ಟೂ ದಿನಗಳು ತಪ್ಪದೇ ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಓದುತ್ತಿರುವ ತರುಣರೆಲ್ಲರೂ ಸೇರಿ ನಡೆಸುತ್ತಿದ್ದ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುವ ಮೂಲಕ ತಮ್ಮ ಮಠದ ವಿದ್ಯಾರ್ಥಿಗಳೊಂದಿಗೆ ನಿರಂತವಾಗಿ ಸಂಪರ್ಕದಲ್ಲಿರುತ್ತಿದ್ದದ್ದು ಅವರ ಹೆಗ್ಗಳಿಕೆ. ಮಠದ ಆವರಣದ ವಿದ್ಯಾರ್ಥಿ ನಿಲಯದ ಮುಂಭಾಗದ ವಿಶಾಲವಾದ ಬಯಲಿನಲ್ಲಿ ಸಾವಿರಾರು ಮಕ್ಕಳು  ಒಟ್ಟಿಗೆ ಪ್ರಾರ್ಥನೆ ಮಾಡುವುದು ಮಠದ ಪ್ರಮುಖ ಆಕರ್ಷಣೆಯಾಗಿದ್ದಲ್ಲದೇ ಅದನ್ನು ನೋಡುವುದೇ ಒಂದು ಸೌಭಾಗ್ಯ.  ಸಿದ್ದಗಂಗೆಯ ಮಠದ ಪಾಕಶಾಲೆಯಲ್ಲಿ ಅದೆಷ್ಟೋ ವರುಷಗಳಿಂದಲೂ ಹತ್ತಿಸಿದ ಬೆಂಕಿ ಆರಿರುವ ಉದಾಹರಣೆಯೇ ಇಲ್ಲ ಎಂಬ ಖ್ಯಾತಿಯನ್ನು ಪಡೆದಿದೆಯಲ್ಲದೆ, ದಿನದ 24ಗಂಟೆಗಳು, ವರ್ಷದ 365 ದಿನಗಳೂ ಅಲ್ಲಿನ ಭೋಜನ ಶಾಲೆ ಭಕ್ತಾದಿಗಳಿಗೆ ಮತ್ತು ವಿದ್ಯಾರ್ಥಿಗಳ ಸೇವೆಗೆ ಸಿದ್ಧವಾಗಿರುತ್ತದೆ. ಅವರಲ್ಲಿಗೆ ಆಶ್ರಯ ಕೋರಲು ಬರುತ್ತಿದ್ದ ಎಲ್ಲ ಮಕ್ಕಳನ್ನೂ ಸ್ವಾಮೀಜಿಗಳೇ ಖುದ್ದಾಗಿ ಸಂದರ್ಶನ ಮಾಡುತ್ತಾ ಅಗತ್ಯವಿದ್ದವರನ್ನು ತಮ್ಮ ಆಶ್ರಮದಲ್ಲೇ ಉಚಿತ ಊಟ ಮತ್ತು ವಸತಿಯೊಂದಿಗೆ ಯೋಗ್ಯ ಶಿಕ್ಷಣ ಕೊಟ್ಟಿರುವುದು ಶ್ರೀ ಮಠದ ಹೆಗ್ಗಳಿಕೆಯಾಗಿದೆ.

ssk2ಪ್ರಾರ್ಥನೆಯ ನಂತರ ಕಛೇರಿಗೆ ಬರುತ್ತಿದ್ದ  ಶ್ರೀಗಳು ತಪ್ಪದೇ ಅಂದಿನ ದಿನ ಪತ್ರಿಕೆಗಳನ್ನು ಓದುವ ಮೂಲಕ ವರ್ತಮಾನದ ಸುದ್ದಿಗಳನ್ನು ತಿಳಿದುಕೊಳ್ಳುತ್ತಿದ್ದರು. ನಂತರ ತಮ್ಮನ್ನು ಭೇಟಿಯಾಗಲು ಬಂದಿರುತ್ತಿದ್ದ ಭಕ್ತಾದಿಗಳ ಉಭಯ ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರ ವ್ಯವಹಾರಗಳವನ್ನೂ ತಾವೇ ಖುದ್ದಾಗಿ ಮಾಡುವ ಮೂಲಕ ತಮ್ಮ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ ಕಾಯಕವೇ ಕೈಲಾಸ ಎಂಬುದನ್ನು ಕೇವಲ ಮಾತಾಗಿರಿಸದೇ ಅದನ್ನು ಕೃತಿಯಲ್ಲಿಯೂ ತೋರಿಸಿದ ಮಹಾಗಣ್ಯರಾಗಿದ್ದರು.

ಮಧ್ಯಾಹ್ನ ಮತ್ತೆ ಮಠದಲ್ಲಿ  ಸ್ನಾನ ಪೂಜೆಯಾದ ಬಳಿಕ, ಒಂದು  ಹೇರಳೇಕಾಯಿ ಗಾತ್ರದಷ್ಟಿನ ಮುದ್ದೆ, ಸ್ವಲ್ಪವೇ ಅನ್ನ, ತೊಗರಿಬೇಳೆಯ ತೊವ್ವೆಯ ಊಟ ಮುಗಿಸಿ ಸ್ವಲ್ಪ  ವಿಶ್ರಾಂತಿಯ ನಂತರ ಸಂಜೆ ೪ ಗಂಟೆಗೆ ಮತ್ತೆ ಭಕ್ತಗಣದ ಬೇಟಿಯಾದ ನಂತರ ಮಠದ ಮಕ್ಕಳ ಅಟ ಪಾಠದ ಕುಶಲೋಪರಿ, ದಾಸೋಹದ ಮಾಹಿತಿ ಇವೆಲ್ಲವೂ ರಾತ್ರಿ 9 ಗಂಟೆಯವರೆವಿಗೂ ನಡೆದ ನಂತರ  ರಾತ್ರಿ 10:30ರ ವರೆಗೆ ಸ್ವಾಮೀಜಿಯವರು ಮಲಗುವ ಮುನ್ನಾ ಸುಮಾರು ಅರ್ಧ ಗಂಟೆಗಳ ಕಾಲ ಪುಸ್ತಕವನ್ನು ಓದಿ ರಾತ್ರಿ 11 ಗಂಟೆಗೆ ನಿದ್ರೆಗೆ ಜಾರಿದರೆ ಮತ್ತೆ ಮುಂಜಾನೆ 4ಕ್ಕೆ ಏಳುವ ಮೂಲಕ ತಮ್ಮ ದೈನಂದಿನ ಚಟುವಟಿಕೆಗಳು ನಡೆಯುತ್ತಿತ್ತು.

 • ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ 1965ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿದರೆ,
 • ಪೂಜ್ಯ ಸ್ವಾಮೀಜಿಯವರ 100 ನೇ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವದ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿತ್ತು,
 • 2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತಲ್ಲದೇ, 2017 ರಲ್ಲಿ, ಕರ್ನಾಟಕ ಸರಕಾರ ಮತ್ತು ಅವರ ಭಕ್ತಾದಿಗಳು ಸ್ವಾಮೀಜಿಯವರ  ಸಾಮಾಜಿಕ ಸೇವೆಯು ಎಲ್ಲರಿಗೂ ಆದರ್ಶವಾಗಿರಲಿ ಎನ್ನುವಂತೆ  ಅವರಿಗೆ ಭಾರತ ರತ್ನ ನೀಡಲು ಮನವಿಯನ್ನು ಸಹಾ ಸಲ್ಲಿಸಲಾಗಿತ್ತು.

ಶತಾಯುಷಿಗಳಾಗಿದ್ದರೂ ಅತ್ಯಂತ ಚಟುವಟಿಕೆಗಳಿಂದಿರುತ್ತಿದ್ದ ಸ್ವಾಮಿಗಳು ಭಕ್ತಾದಿಗಳ ಮನೆಗಳಿಗೆ ಭೇಟಿ ನೀಡಿ ಅವರಿಗೆ ಆಶೀರ್ವದಿಸುತ್ತಿದ್ದಂತಹ ಸಂಧರ್ಭವೊಂದರಲ್ಲಿ ನಮ್ಮ ಆತ್ಮೀಯರೊಬ್ಬರ ಹೊಸಾ ಕಾಂಪ್ಲೆಕ್ಶ್ ಉದ್ಘಾಟನೆಗೆ ಬಂದು ಅಲ್ಲಿಯ ಕಾರ್ಯಕ್ರಮವ ಮುಗಿಸಿಕೊಂಡು   ಅಲ್ಲಿಂದ ನೇರವಾಗಿ ತಮಗೆ ಪರಿಚಯವೇ ಇಲ್ಲದಿದ್ದ ಆ ಪ್ರದೇಶದಲ್ಲಿಯೂ ದಾಪುಗಾಲು ಹಾಕುತ್ತಾ ಯಾರದ್ದೇ ನೆರವಿಲ್ಲದೇ ಸೀದಾ ನಮ್ಮ ಆತ್ಮೀಯರ ಮನೆಗೆ ಬಂದು ಪಾದಪೂಜೆಗೆ ಸಿದ್ಧರಾದಾಗ   ಅವರ ಸಮೀಪದ ದರ್ಶನದ ಭಾಗ್ಯ ನಮ್ಮದಾಗಿತ್ತಲ್ಲದೇ, ಅವರನ್ನು ಏಕೆ ನಡೆದಾಡುವ ದೇವರೆಂದು ಕರೆಯುತ್ತಾರೆ ಎಂಬುದರ ಸಾಕ್ಷಾತ್ ಪರಿಚಯವಾಗಿತ್ತು.

ss2ಇಷ್ಟೆಲ್ಲಾ ಬಿಡುವಿಲ್ಲದ ಚಟುವಟಿಕೆಗಳ ಮಧ್ಯೆ ಆಗ್ಗಿಂದ್ದಾಗ್ಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಸ್ವಾಮೀಜಿಯವರಿಗೆ  2018ರ ಡಿಸೆಂಬರ್ ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ  ದಾಖಲಿಸಿ ಹೃದಯಕ್ಕೆ ಸ್ಟಂಟ್ ಅಳವಡಿಸುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಸ್ವಾಮೀಜಿಗಳು ಮಠಕ್ಕೆ ಹಿಂದಿರುಗಿದರಾದರೂ, ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳು ಒಂದೆರಡು ಬಾರಿ ತುಮಕೂರಿನ ತಮ್ಮದೇ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿ ಮತ್ತೆ ಮಠಕ್ಕೆ ಹಿಂದಿರುಗಿದರೂ ಅರೋಗ್ಯ ಸುಧಾರಿಸಿದ ಕಾರಣ 2019 ಜನವರಿ 21 ರಂದು ಬೆಳಗ್ಗೆ ಸಿದ್ಧಗಂಗಾದ ಹಳೆಯ ಮಠದಲ್ಲಿ ಶ್ರೀಗಳು ಲಿಂಗೈಕ್ಯರಾದಾಗ  ಅವರಿಗೆ ಬರೂಬ್ಬರಿ 111 ವರ್ಷ ವಯಸ್ಸಾಗಿತ್ತು ಎನ್ನುವುದು ಗಮನಾರ್ಹವಾಗಿದೆ.

bhara_ratnaನಾವು ನೀವು ಪ್ರತ್ಯಕ್ಷವಾಗಿ ಕಂಡ,  ನಡೆದಾಡುವ ದೇವರು ಎಂದೇ ಪೂಜಿಸಿ ಆರಾಧಿಸಿದ್ದ  ಶ್ರೀ ಶಿವಕುಮಾರ ಸ್ವಾಮಿಗಳು, ಇನ್ನು ನಮ್ಮೊಂದಿಗೆ ಭೌತಿಕವಾಗಿ  ಇಲ್ಲದಿದ್ದರೂ, ಅವರ ಆದರ್ಶಗಳು, ಅವರ ಸರಳ ನಡೆ, ನುಡಿಗಳು  ಮತ್ತು ಆಶೀರ್ವಾದಗಳು, ಸದಾಕಾಲವೂ ನಮ್ಮೊಂದಿಗೆ ಇದ್ದು, ನಮ್ಮನ್ನು ಚಿರಕಾಲವೂ ಕಾಪಾಡುತ್ತಲೇ ಇರುತ್ತಾರೆ.ಕರ್ನಾಟಕದ ಈ ಅನರ್ಘ್ಯರತ್ನಕ್ಕೆ ರಾಜ್ಯ ತ್ತು ಕೇಂದ್ರ ಸರ್ಕಾರ ಕೊಡುವ ಕಾಗದದ ಮರಣೋತ್ತರ ಭಾರತರತ್ನ ಪ್ರಶಸ್ತಿಗಿಂತಲೂ ಈಗಾಗಲೇ ವಿಶ್ವಾದ್ಯಂತ ಜನರುಗಳೇ ತಮ್ಮ ಹೃದಯಾಂತರಾಳದಿಂದ  ಮುಂದಿನ ಸಾವಿರಾರು ವರ್ಷಗಳಿಗೂ ಅಚ್ಚಳಿಯದಂತೆ ನೀಡಿರುವ  ವಿಶ್ವರತ್ನ ಗೌರವವೇ ಹೆಚ್ಚೆನಿಸುತ್ತದೆ ಅಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಅರ್ಥಪೂರ್ಣ ಮಹಿಳಾ ದಿನಾಚರಣೆ

WhatsApp Image 2022-02-28 at 1.04.11 PMಮಾರ್ಚ್ 8 ರಂದು ವಿಶ್ವಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಿಸಿಕೊಂಡು ಬರಲಾಗುತ್ತದೆ. ಇದೇ ಅಂಗವಾಗಿ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಇರುವ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಸಹಾ ಕಳೆದ ಕೆಲವು ವರ್ಷಗಳಿಂದಲೂ ನಮ್ಮ ನಿಮ್ಮೆಲ್ಲರ ನಡುವೆಯೇ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕಿಯರ ಸಾಧನೆಯನ್ನು ಗುರುತಿಸಿ ಅವರ ಸಾಧನೆಗಳು ಮತ್ತಷ್ಟು ಮಗದಷ್ಟು ಹೆಚ್ಚಾಗಲಿ ಎಂದು ಅವರಿಗೆ ಗೌರವ ಸಲ್ಲಿಸಿಕೊಂಡು ಬರುತ್ತಿದೆ. ಈ ಬಾರಿ ಯಲಹಂಕ ವಿಭಾಗದ ಆರೋಗ್ಯಭಾರತಿ ಸಹಯೋಗದೊಂದಿಗೆ ದಿನಾಂಕ 13-3-2022 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ವಿದ್ಯಾಪೀಠ ಶಾಲೆಯಲ್ಲಿ ನಡೆಸಲಾಗುತ್ತಿರುವ ಅವರ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿತರಾಗುತ್ತಿರುವ ಸಾಧಕಿಯರ ಸಾಧನೆಗಳ ಬಗ್ಗೆ ಸ್ವಲ್ಪ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು. ಎಂಬ ಜನಪ್ರಿಯ ಗೀತೆ ಅಂಬರೀಶ್ ಅವರ ನಾಗರ ಹೊಳೆ ಚಿತ್ರದಲ್ಲಿ ಕೇಳಿದ್ದೇವೆ. ಈ ಭೂಮಿಯಲ್ಲಿ ನಾವು ಇರುವ ಮೂರು ದಿನ ಸುಖಃದಿಂದ ನೆಮ್ಮದಿಯಾಗಿ ಆರೋಗ್ಯದಿಂದ ಇದ್ದರೇ ಸಾಕು ಎನ್ನುವುದು ಎಲ್ಲರ ಭಾವನೆ. ಹಾಗಾಗಿಯೇ ಪ್ರತಿ ದಿನವೂ ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಂ ಎಂದು ಭಗವಂತನ ಬಳಿ ಕೇಳಿಕೊಳ್ಳುತ್ತೇವೆ.

ಹಾಗಾಗಿ ವೈದ್ಯೋ ನಾರಾಯಣೋ ಹರಿಃ ಎನ್ನುವಂತೆ ನಮ್ಮೆಲ್ಲರ ಆರೋಗ್ಯಕ್ಕಾಗಿಯೇ ಹಗಲಿರಳೂ ನಿಸ್ವಾರ್ಥವಾಗಿ ದುಡಿತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದ್ಧಿಗಳ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಅಂತಹದ್ದೇ ಸಾಧನೆಗೈದ ಡಾ.ಶೋಭಾ ನಾಗೇಶ್ ಪರಿಚಯ ಹೀಗಿದೆ.

ಶ್ರೀಮತಿ ಡಾ. ಶೋಭಾ ನಾಗೇಶ್ ರವರು ತಮ್ಮ ವೈದ್ಯಕೀಯ ಪದವಿಯನ್ನು ಪಡೆದ ನಂತರ ಕರ್ನಾಟಕದ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಪ್ರಸೂತಿ ತಜ್ಞೆ ಕೆಲಸಕ್ಕೆ ಸೇರಿಕೊಂಡ ನಂತರ ಸಾರ್ವಜನಿಕ ಆರೋಗ್ಯದಲ್ಲಿ ಡಿಪ್ಲೊಮಾ ವನ್ನು ಸಹಾ ಪಡೆದುಕೊಳ್ಳುವ ಮೂಲಕ ಪ್ರಸೂತಿ ತಜ್ಞೆ ಯಾಗುವ ಜೊತೆ ಜೊತೆಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಯಾಗಿಯೂ ಸುಮಾರು 28 ವರ್ಷಗಳ ಕಾಲ ಸುಧೀರ್ಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ಮಲ್ಲಸಂದ್ರದ ಸರ್ಕಾರೀ ಹೆರಿಗೆ ಆಸ್ಪತ್ರೆಯಲ್ಲಿ 12 ವರ್ಷಗಳ ಸೇವೆ ಸಲ್ಲಿಸಿದ ನಂತರ ಕಳೆದ 6 ವರ್ಷಗಳಿಂದ ನಮ್ಮ ತಿಂಡ್ಲುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಾ ನಮ್ಮೆಲ್ಲರ ಆರೋಗ್ಯಕ್ಕಾಗಿ ಹಗಲಿರುಳೂ ಅವಿರತವಾಗಿ ದುಡಿಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ.

ನಗುಮುಖದ ಸದಾಕಾಲವೂ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುವ ಡಾ. ಶೋಭಾರವರನ್ನು ಭೇಟಿ ಮಾಡುವುದೇ ತುಸು ಕಷ್ಟ ಎಂದರೂ ತಪ್ಪಾಗದು. ತಿಂಡ್ಲುವಿನ ಪ್ರಾಥಮಿಕ ಆರೋಗ್ಯಕೇಂದ್ರ ಅರ್ಥಾತ್ PHC ನಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕಾರ್ಯ ವೈಖರಿ, ಕ್ರಿಯಾಶೀಲ ಸೇವಾ ಮನೊಭಾವನೆಯಂದಾಗಿ ಎಲ್ಲರ ಗಮನವನ್ನೂ ಸೆಳೆದಿದೆ ಎಂದರೆ ತಪ್ಪಾಗಲಾರದು.

ಕಳೆದ ಎರಡು ವರ್ಷಗಳಿಂದಲೂ ಇಡೀ ವಿಶ್ವಕ್ಕೇ ವಕ್ಕರಿಸಿಕೊಂಡಿರುವ ಕೊವಿಡ್ ಸಾಂಕ್ರಾಮಿಕ ಮಹಾಮಾರಿಯ ಸಮಯದಲ್ಲಿ ಹೊತ್ತು ಗೊತ್ತಿಲ್ಲದೇ ನಿರಂತರವಾಗಿ ಜನರಿಗೆ ನೆರವಾಗುವ ಮೂಲಕ ಜನರ ಪ್ರೀತಿಗೆ ಪಾತ್ರರಾದ ಈ ಹಿರಿಯ ವೈದ್ಯರಿಗೆ ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಗೌರವ ಸಲ್ಲಿಸಿರುವುದನ್ನು ಗಮನಿಸಿ, ಅವರ ಸಾರ್ವಜನಿಕ ಸೇವೆಗೆ ಮತ್ತಷ್ಟು ಹುರುಪು ನೀಡಲಿ ಎಂದೇ ವಿಶ್ವಗುರು ಚಾರಿಟಬಲ್ ಟ್ರಸ್ಟ್ ಕೂಡಾ ಇಂದು ಗೌರವ ಪೂರ್ವಕ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

WhatsApp Image 2022-03-11 at 11.42.38 AMಹೆಣ್ಣು ಮಕ್ಕಳು ಎಂದರೆ ಗಂಡ ಮನೆ ಮಕ್ಕಳು ಸಂಸಾರ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿರಬೇಕು ಎಂಬ ನಂಬಿಕೆಿ ಇರುವಂತಹ ಈ ಸಮಾಜದಲ್ಲಿ ಪರಸ್ಪರ ಸಂಬಂಧವೇ ಇರದ ಹೆಣ್ಣು ಮಕ್ಕಳಿಬ್ಬರು ತಮ್ಮ ವಿದ್ಯಾಭ್ಯಾಸ ಮುಗಿಸಿ ಖಾಸಗೀ ಕಂಪನಿಯಲ್ಲಿ ಕೆಲ ಕಾಲ ಕೆಲಸ ಮಾಡಿಕೊಂಡು ಸಂಸಾರದ ನೊಗವನ್ನು ಹೊರುತ್ತಿರುವಾಗ ಅಚಾನಕ್ಕಾಗಿ ಅವರಿಬ್ಬರ ಪರಿಚಯವಾಗಿ ನಂತರ ಉತ್ತಮ ಸ್ನೇಹಿತೆಯರಾಗಿ ನಂತರದ ದಿನಗಳಲ್ಲಿ ಒಂದೇ ತಾಯಿಯ ಮಡಿಲಲ್ಲಿ ಹುಟ್ಟದೇ ಹೋದರೂ ಅದಕ್ಕಿಂತಲೂ ಒಂದು ಕೈ ಮಿಗಿಲಾದ ಸಹೋದರಿಯರಂತರಾಗಿ ನಮ್ಮಆಚರಣೆ ಮತ್ತು ಸಮಾಜದ ಒಳಿತಿಗಾಗಿ ಏನಾದರೂ ಮಾಡಲೇ ಬೇಕೆಂದು ಯೋಚಿಸುತ್ತಿರುವಾಗಲೇ ಅವರಿಬ್ಬರಿಗೂ ಹೊಳೆದದ್ದೇ ಅಜ್ಜಿಯ ಅರಮನೆ ಎಂಬ ವಿಶಿಷ್ಠವಾದ ಆಲೋಚನೆ.

ಅಜ್ಜಿಯ ಅರಮನೆಯ ಸಂಸ್ಥಾಪಕಿಯರಲ್ಲಿ ಒಬ್ಬರಾದ ಶ್ರೀಮತಿ ಸುಮಾ ವಿ. ಎಸ್. ಅವರ ಕಿರು ಪರಿಚಯ ಹೀಗಿದೆ.

WhatsApp_Image_2022-03-11_at_10.53.35_AM-removebg-previewಶ್ರೀಮತಿ ಸುಮಾ ವಿ. ಎಸ್. ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ಅದರಲ್ಲೂ ಹೆಸರಿಗೆ ಅನ್ವರ್ಥದಂತೆಯೇ ಇರುವ ನಮ್ಮ ಗೋಕುಲದ ಸುಂದರ ನಗರದಲ್ಲಿಯೇ. ಹಾಗಾಗಿ ಅವರು ಸ್ಥಳೀಯರು ಎಂಬುದೇ ಹೆಮ್ಮೆಯ ವಿಷಯವಾಗಿದೆ. ಸುಮಾ ಅವರ ತಂದೆಯವರು ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಆವವ ವಿದ್ಯಾಭ್ಯಾಸವೆಲ್ಲವೂ ಬಿಇಎಲ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಾದ ನಂತರ Diploma in beauty culture ಮುಗಿಸಿ ಕೆಲವರ್ಷಗಳ ಕಾಲ ವಿವಿದೆಡೆಯಲ್ಲಿ ಕೆಲಸ ಮಾಡಿ ರೇವತಿಯವರ ಪರಿಚಯವಾದ ನಂತರ ಅಜ್ಜಿಯ ಅರಮನೆ ಸಂಸ್ಥೆಯನ್ನು ಆರಂಭಿಸಿ ಈಗ ಅದರಲ್ಲಿಯೇ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇನ್ನು ಅಜ್ಜಿಯ ಅರಮನೆಯ ಸಹ ಸ್ಥಾಪಕಿಯಾದ ಶ್ರೀಮತಿ ರೇವತಿ ವೆಂಕಟೇಶ್ ಅವರ ಕಿರು ಪರಿಚಯ ಹೀಗಿದೆ.

WhatsApp_Image_2022-03-11_at_11.45.20_AM-removebg-previewಶ್ರೀಮತಿ ರೇವತಿ ವೆಂಕಟೇಶ್. ಹೆಸರಿಗೆ ತಕ್ಕಂತೆಯೇ ರೂಪವತಿಯೂ ಹೌದು. ಮೂರ್ತಿ ಚಿಕ್ಕದಾದರೂ ಕೀರ್ತಿಯಂತೂ ದೊಡ್ಡದೇ ಇದೆ. ಕರ್ನಾಟಕದ ಶಿಲ್ಪ ಕಲೆಗಳ ತವರೂರಾದ ಹಾಸನದಲ್ಲಿ ಸಂಪ್ರದಾಯಸ್ಥರ ಕುಟುಂಬದಲ್ಲಿ ಜನಿಸಿದ ರೇವತಿಯವರು ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ತಮ್ಮ ಶಿಕ್ಷಣವನ್ನೆಲ್ಲಾ ಹಾಸನದಲ್ಲೇ ಮುಗಿಸಿದ ನಂತರ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಶ್ರೀ ವೆಂಕಟೇಶ್ ಅವರನ್ನು ವಿವಾಹವಾದ ನಂತರ ಬೆಂಗಳೂರಿಗೆ ಬರುತ್ತಾರೆ. ಗಂಡ ಮನೆ ಮತ್ತು ಮುದ್ದಾದ ಮಗನ ಜೊತೆ ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿಯೊಂದರೆಲ್ಲಿ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಅರ್ಥಾತ್ HR departmentನಲ್ಲಿ ಕೆಲಸ ಮಾಡುತ್ತಿದ್ದರೂ ಅದೇಕೋ ಆ ಕೆಲಸದಲ್ಲಿ ಅಷ್ಟಾಗಿ ಮನಸ್ಸಿಗೆ ಮುದ ನೀಡದ ಕಾರಣ ಅ ಕೆಲಸಕ್ಕೆ ತಿಲಾಂಜಲಿ ಇತ್ತು ಈಗ ಸಂಪೂರ್ಣವಾಗಿ ಅಜ್ಜಿಯ ಅರಮನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

sum2ನಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯರು ಎಂದರೆ ವೈಶಿಷ್ಟ್ಯವಾದ ಆಚಾರ ವಿಚಾರಗಳನ್ನು ರೂಢಿಸಿ ಕೊಂಡಿರುವುದಲ್ಲದೇ ಅವರ ಪ್ರತಿಯೊಂದು ಕೆಲಸಗಳ ಹಿಂದೆಯೂ ವೈಜ್ಞಾನಿಕವಾದ ಗಟ್ಟಿತನವಿರುತ್ತದೆ. ಹಾಗಾಗಿ ಇವರಿಬ್ಬರೂ ಅದೇ ತಳಹದಿಯಲ್ಲಿಯೇ. ನಮ್ಮ ಹಳೆಯ ಸಂಪ್ರದಾಯಗಳನ್ನು ಮತ್ತು ಅಡುಗೆಯ ಶ್ರೀಮಂತ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಯೋಚಿಸಿದರು. ಅದಕ್ಕೆ ಪೂರಕವೆಂಬಂತೆ ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಯಂತೆ, ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಹೆಸರಿನಲ್ಲಿ ಸರಿಯಾದ ಕ್ರಮದಲ್ಲಿ ಅಡುಗೆಯನ್ನು ಮಾಡದೇ ಇರುವ ಕಾರಣ ಅನೇಕ ರೋಗರುಜಿನಗಳಿಗೆ ತುತ್ತಾಗುವುದನ್ನು ಮನಗಂಡ ಇವರಿಬ್ಬರು ನಮ್ಮ ಸಾಂಪ್ರದಾಯಿಕ ಅಡುಗೆ ಪಾತ್ರೆಗಳ ಕುರಿತಾಗಿ ಸ್ವಲ್ಪ ಗಮನ ಹರಿಸಿ ತಮ್ಮ ಮನೆಗಳ ಅಟ್ಟದ ಮೇಲೆ ಹತ್ತಿ ನೋಡಿದಾಗ ಅವರ ಕಣ್ಣಿಗೆ ಕಾಣಿಸಿದ್ದೇ ವಿವಿಧ ಬಗೆಯ ಕಲ್ಲಿನ ಮರಗಿಗಳು.

suma3ಮೃದುವಾದ ಬಳಪದ ಕಲ್ಲಿನಿಂದ ಮಾಡಲ್ಪಟ್ಟಿರುವ ಕಲ್ಲಿನ ಮರಗಿಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡಿದಾಗ ಅದು ಅಡುಗೆಯ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವುದಲ್ಲದೇ, ನಮ್ಮ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ. ಇದರಲ್ಲಿ ತಯಾರಿದ ಆಹಾರ ಮತ್ತು ಇದರಲ್ಲಿ ಸಂಗ್ರಹಿಸಿದ ಪದಾರ್ಥಗಳು ಸುದೀರ್ಘವಾದ ಕಾಲ ಹಾಳಾಗುವುದಿಲ್ಲ ಎಂಬುದನ್ನು ಮನಗಂಡು ಅದನ್ನೇ ನಮ್ಮ ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡಲು ಯೋಚಿಸಿದಾಗಲೇ ಅಜ್ಜಿಯ ಅರಮನೆಯ ಹುಟ್ಟಿಕೊಂಡಿತು.

ನಮ್ಮ ಪೂರ್ವಜರು ನಮಗೆ ಅಡುಗೆ ಮಾಡಲು ಉತ್ತಮ ಮಾರ್ಗವನ್ನು ಕಲಿಸಿದ್ದರು. ಆದರೆ ಇತ್ತೀಚೆಗೆ ಹೊಸ ಆವಿಷ್ಕಾರದ ಹೆಸರಿನಲ್ಲಿ ಆಕರ್ಷಕ ಮತ್ತು ಸುಲಭ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಿದ ನಂತರ ನಮ್ಮ ಸಂಪ್ರದಾಯಕ ಅಡುಗೆ ಪಾತ್ರೆಗಳು ನಮ್ಮ ದೈನಂದಿನ ಜೀವನದಿಂದ ಕಣ್ಮರೆಯಾಗಿ ಅಟ್ಟ ಸೇರಿಕೊಂಡು ಧೂಳು ಕುಡಿಯುತ್ತಿದ್ದವು. ಈಗ ಮತ್ತೆ ಅದೇ ಕಲ್ಲು ಮರಗಿಗಳನ್ನು ಹೊಸಾ ರೀತಿಯಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನವಾಗಿ ಕರ್ನಾಟಕ, ಅಕ್ಕ ಪಕ್ಕದ ಆಂಧ್ರ ಮತ್ತು ತಮಿಳುನಾಡಿನಲ್ಲಿ ಈ ಬಳಪದ ಕಲ್ಲುಗಳಿಂದ ಪಾತ್ರೆಗಳನ್ನು ತಯಾರಿಸುತ್ತಿದ್ದ ಕೆಲವೇ ಕೆಲವು ಗುಡಿಕೈಗಾರಿಕೆಗಳನ್ನು ಸಂಪರ್ಕಿಸಿದಾಗ ಬಹುತೇಕ ಕುಶಲಕರ್ಮಿಗಳು ತಮ್ಮ ಪೂರ್ವಜರುಗಳಿಂದ ಕಲಿತಿದ್ದ ಸಾಂಪ್ರದಾಯಕ ರೀತಿಯ ಉತ್ಪನ್ನಗಳನ್ನೇ ತಯಾರಿಸುತ್ತಿದ್ದ ಕಾರಣ ಜನರು ಅದನ್ನು ಬಳಸುತ್ತಿರಲಿಲ್ಲ ಎಂಬುದನು ಮನಗಂಡ ಇವರಿಬ್ಬರೂ ಆ ಕುಶಲಕರ್ಮಿಗಳ ಜೊತೆಯಲ್ಲಿಯೇ ಕೆಲ ಸಮಯ ಕಳೆದು ಅವರೆಲ್ಲರ ವಿಶ್ವಾಸವನ್ನು ಗಳಿಸಿ ಹೊಸಾ ಹೊಸಾ ರೀತಿಯ ವಿನ್ಯಾಸಗಳನ್ನು ಇವರಿಬ್ಬರೇ ರೂಪಿಸಿ ಅದನ್ನು ಆದೇ ಕುಸಲ ಕರ್ಮಿಗಳ ಕೈಯ್ಯಲ್ಲಿಂದಲೇ ಉತ್ಪಾದನೆ ಮಾಡಿಸಿದ್ದಲ್ಲದೇ ನಿಧಾನವಾಗಿ ಅವುಗಳನ್ನು ಮಾರುಕಟ್ಟೆಯಲ್ಲಿ ಸಮಂಜಸವಾದ ಮತ್ತು ಸ್ಪರ್ಧಾತ್ಮಕವಾದ ಬೆಲೆಯಲ್ಲಿ ಮಾರಾಟ ಮಾಡಲು ಆರಂಭಿಸಿದರು.

ಆರಂಭದಲ್ಲಿ ಯಾವುದೇ ರೀತಿಯಾದ ಬದಲಾವಣೆಯನ್ನು ಬಯಸದ ಆ ಕುಶಲ ಕರ್ಮಿಗಳ ಮನಸ್ಥಿತಿಯನ್ನು ಬದಲಾಯಿಸುವುದು ನಿಜವಾಗಿಯೂ ದೊಡ್ಡ ಸವಾಲಾಗಿತ್ತು. ಇವರಿಬ್ಬರೂ ಅವರಿಗೆ ಮಾರುಕಟ್ಟೆಯ ವಿಸ್ತಾರವನ್ನು ಅರ್ಥ ಮಾಡಿಸಿದ್ದಲ್ಲದೇ, ಹೊಸಾ ವಿನ್ಯಾಸಗಳ ಮೂಲಕ ಆಕರ್ಶಕವಾದ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹೇಗೆ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಲ್ಲದೇ, ಅವರಿಗೆ ಮುಂಗಡವಾಗಿಯೇ ಹಣವನ್ನು ನೀಡುವ ಮೂಲಕ ಅವರಿಗೆ ಆರ್ಥಿಕ ಸಬಲೀಕರಣ ನೀಡಿದ ಫಲವಾಗಿ ಇಂದು ನೂರಾರು ಗುಡಿಕೈಗಾರಿಕೆಯವರು ಇವರೊಂದಿಗೆ ಕೆಲಸ ಮಾಡುತ್ತಿರುತ್ತಾರೆ.

ಹೀಗೆ ಕುಶಲ ಕರ್ಮಿಗಳಿಂದ ತಯಾರಿಸಿದ ಕಲ್ಲಿನ ಮರಗಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟಮಾಡುವ ಕೆಲಸ ಅಷ್ಟೊಂದು ಸುಲಭದ್ದೇನಾಗಿರಲಿಲ್ಲ. ಸುಮ ಮತ್ತು ರೇವತಿ ಇಬ್ಬರೂ ಮಹಿಳಾ ಉದ್ಯಮಿಗಳೇ ಆಗಿದ್ದರಿಂದ ಕಾರ್ಮಿಕರೊಂದಿಗೆ ಕೆಲಸ ಮಾಡುವಾಗ ಮತ್ತು ಅದನ್ನು ಮಾರುಕಟ್ಟೆಗೆ ತರುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಹೆಚ್ಚಿನವರು ಇದು ಮಹಿಳೆಯರ ಕೆಲಸವಲ್ಲ ಹಾಗಾಗಿ ಇದನು ಕೈಬಿಡುವುದೇ ಉತ್ತಮ ಎಂಬ ಸಲಹೆ ನೀಡಿದ್ದನ್ನೇ ಸವಾಲಾಗಿ ಸ್ವೀಕರಿಸಿ ಆ ಎಲ್ಲಾ ವಿಘ್ನಗಳನ್ನು ಎದುರಿಸಿ ಇಂದು ಯಶಸ್ವಿಯಾಗಿ ಮುಂದುವರೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಇವರ ಈ ಸಾಧನೆಯನ್ನು ಅನೇಕ ಗ್ರಾಹಕರು ನಮ್ಮ ಪೂರ್ವಜರು ಬಳಸಿದ ಈ ಎಲ್ಲಾ ಸಾಂಪ್ರದಾಯಿಕ ಉತ್ಪನ್ನಗಳನ್ನು ಮರು ಬಳಕೆ ಮಾಡುವ ಈ ಅದ್ಭುತವಾದ ಕೆಲಸವನ್ನು ಮಾಡುತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರೆ ಇನ್ನೂ ಕೆಲವರು ಅಯ್ಯೋ ಈ ಮಣ ಭಾರದ ಸಾಮಗ್ರಿಗಳನ್ನು ಯಾರು ಖರೀದಿಸುತ್ತಾರೆ? ಎಂದು ಉತ್ಸಾಹವನ್ನು ಕುಗ್ಗಿಸುವ ಜನರೂ ಇದ್ದಾರೆ. ಪುರಂದರ ದಾಸರೇ ಹೇಳಿರುವಂತೆ ನಿಂದ ಕರು ಇರಬೇಕು ಸಮಾಜದ ಒಳಿತಿಗಾಗಿ ಕೇರಿಯಲ್ಲಿ ನಿಂದಕರು ಇರಬೇಕು ಎಂಬುದನ್ನೇ ಮನನ ಮಾಡಿಕೊಂಡು ಅವೆಲ್ಲಾ ಋಣಾತ್ಮಕ ಸಂಗತಿಗಳನ್ನೂ ಬದಿಗೊತ್ತಿ ಧನಾತ್ಮಕ ಚಿಂತನೆಯಿಂದ ಕಲ್ಲಿನ ಮರಗಿಯ ಜೊತೆ ವಿವಿಧ ರೀತಿಯ ಮರದ ಉತ್ಮನ್ನಗಳು ಹಳೇ ಕಾಲದ ಕಂಚು ಮತ್ತು ಪಂಚಲೋಹದ ಉತ್ಪನ್ನಗಳನ್ನೂ ಯಶ್ವಸಿಯಾಗಿ ಆಧುನೀಕರಿಸಿದ್ದಲ್ಲದೇ ಅವರ ಕೆಲವು ಉತ್ಪನ್ನಗಳ ಪ್ರದರ್ಶನವನ್ನೂ ಸಹಾ ಅದೇ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದೆ. ನಮ್ಮೆ ಹೆಮ್ಮೆಯ ಪ್ರಧಾನಿಗಳ ನೆಚ್ಚಿನ ಕರೆಯಾದ ಆತ್ಮನಿರ್ಭರ್ ಅಂದರೆ ಸ್ವಾಭೀಮಾನಿ ಸ್ವ-ಉದ್ಯೋಗದಂತೆ ಸಹೃದಯಿಗಳಾದ ನಾವುಗಳು ಅವರ ಉತ್ಪನ್ನಗಳನ್ನು ಕೊಂಡು ಕೊಳ್ಳುವ ಮೂಲಕ ಅವರ ಈ ಸಾಧನೆಗೆ ಬೆಂಬಲಿಸುವುದಲ್ಲದೇ, ತನ್ಮೂಲಕ ನಶಿಸಿ ಹೋಗುತ್ತಿರುವ ಗುಡಿ ಕೈಗಾರಿಗೆ ಮತ್ತು ಆರೋಗ್ಯ ಎರಡನ್ನೂ ಕಾಪಾಡಿದಂತಾಗುತ್ತದಲ್ಲದೇ, ಅಂತಹ ಹೆಮ್ಮೆಯ ಸಾಧಕಿಯರೊಂದಿಗೆ ಕೆಲ ಕಾಲ ಕಳೆದು ಅವರ ಅನುಭವಗಳನ್ನು ಕೇಳುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಇಷ್ಟೆಲ್ಲ ತಿಳಿದ ಮೇಲೆ ಇನ್ನೇಕೆ ತಡಾ, ಇದೇ ಭಾನುವಾರದಂದು ಸ್ವಲ್ಪ ಸಮಯ ಮಾಡಿಕೊಂದು ನಾವೆಲ್ಲರೂ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಮತ್ತು ಅರೋಗ್ಯಭಾರತಿ ಯಲಹಂಕ ವಿಭಾಗ ನಡೆಸುತ್ತಿರುವ ಅರ್ಥಪೂರ್ಣ ಮಹಿಳಾದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಣ್ಣುಮಕ್ಕಳ ಸಾಧನೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ