ಸಂಚಾರಿ ವಿಜಯ್

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು.|
ಮದುವೆಗೋ ಮಸಣಕೋ ಹೋಗೆಂದ ಕಡೆ ಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ||

ಡಿವಿಜಿಯವರು ಅಂದು ಯಾರನ್ನು ತಲೆಯಲ್ಲಿ ಇಟ್ಟುಕೊಂಡು ಈ ಕಗ್ಗವನ್ನು ಬರೆದರೋ ಏನೋ? ಆದರೆ ಈ ಪದ್ಯ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ರಂಗಭೂಮಿ ಮತ್ತು ಚಲನಚಿತ್ರನಟ ಮತ್ತು ನಿರ್ದೇಶಕ ಸಂಚಾರಿ ವಿಜಯ್ ಅವರ ಪಾಲಿಗಂತೂ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಕೆಲ ವರ್ಷಗಳ ಹಿಂದೆ, ದಯಾಳ್ ಪದ್ಮನಾಭ್ ಅವರ ನಿರ್ದೇಶನದ ಸತ್ಯಹರಿಶ್ಚಂದ್ರ ಸಿನಿಮಾ ತಿರುವಣ್ಣಾಮಲೈನಲ್ಲಿನ ಚಿತ್ರೀಕರಣದಲ್ಲಿ ವಿಜಯ ಭಾಗವಹಿಸುತ್ತಿದ್ದರು. ಅದೆ ಸಮಯದಲ್ಲಿ ಅವರದ್ದೇ ಆದ ಆರನೇ ಮೈಲಿ ಚಿತ್ರದ ಪೂಜೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಹಮ್ಮಿಕೊಂಡಿದ್ದು ನಿರ್ಮಾಪಕರು ಬರಲೇ ಬೇಕು ಎಂಬ ಒತ್ತಾಯ ಮಾಡಿದ ಪಲವಾಗಿ ರಾಜನಹಳ್ಳಿಗೆ ಬಂದು ಪೂಜೆ ಮುಗಿಸಿಕೊಂಡು ನಿರ್ಮಾಪಕ ಎ. ಮಂಜು ಅವರ ಕಾರಿನಲ್ಲಿ ಮತ್ತೆ ತಿರುವಣ್ಣಾಮಲೈಗೆ ಹಿಂದಿರಿಗುವ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರು ನುಜ್ಜು ಗುಜ್ಜಾಗಿದ್ದರೂ ಅದೃಷ್ಠವಷಾತ್ ವಿಜಯ್ ಹೆಚ್ಚಿನ ಅಪಾಯವಿಲ್ಲದೇ ಪಾರಾದಾಗ, ಎಲ್ಲರೂ ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೊನ್ನೆ ಜೂನ್ 12 ಶನಿವಾರ ಜೆಪಿ ನಗರದಲ್ಲಿ ತಮ್ಮ ಗೆಳೆಯನ ಬೈಕ್ನಲ್ಲಿ ಹೆಲ್ಮೆಟ್ ಹಾಕಿಕೊಳ್ಳದೇ ಹೋಗುತ್ತಿರುವಾಗ ಬೈಕ್ ಅಪಘಾತವಾಗಿ ತೊಡೆ ಮತ್ತು ತಲೆಗೆ ತೀವ್ರವಾದ ಪೆಟ್ಟು ಬಿದ್ದ ಕಾರಣ, ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೆದಳು ನಿಶ್ಕ್ರಿಯೆಯಾಗಿ ಜೀವಚ್ಛವವಾಗಿ ಈಗಲೋ ಆಗಲೋ ಎನ್ನುವಂತಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅಂದು ಕಾರು ನುಚ್ಚು ನೂರಾದರೂ ಉಳಿಸಿದ್ದ ವಿಧಿ, ಇಂದು ಸಾಧಾರಣಗಿ ಬೈಕ್ ಜಾರಿದ್ದಕ್ಕೆ ಸೀದಾ ಮಸಣದ ದಾರಿ ತೋರಿಸಿರುವುದು, ನಂಬಲಾರದಾಗಿದೆ.

vij7

ಬಿ. ವಿಜಯ್ ಕುಮಾರ್ ಎಂಬ ಸುಸಂಪನ್ನ, ವಿದ್ಯಾವಂತ ಸುರದ್ರೂಪಿ ತರುಣ ಸಂ‍ಚಾರಿ ವಿಜಯ್ ಆಗಿದ್ದರ ಹಿಂದೆಯೂ ಒಂದು ರೋಚಕ ಕಥೆ ಇದೆ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿಇ ಮುಗಿಸಿ ಕೆಲಸವನ್ನು ಅರಸಿ ಬೆಂಗಳೂರಿಗೆ ಬಂದು ಕೆಲ ಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲೇ ನಟನಾಗ ಬೇಕೆಂಬ ಅಸೆಯಿಂದ ಸಂಜೆಯ ಹೊತ್ತಿನಲ್ಲಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಂಗಭೂಮಿಯ ನಟನೆಯಲ್ಲಿ ನಿರತರಾಗುತ್ತಿದ್ದಂತೆಯೇ ಎರಡು ದೋಣಿಯ ಮೇಲೆ ಕಾಲು ಇಡುವುದು ಸರಿಯಲ್ಲ ಎಂದು ನಿರ್ಧರಿಸಿ,ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಕೊಳ್ಳುತ್ತಾರೆ. ಆಗಾಗಲೇ ಖ್ಯಾತಿ ಪಡೆದಿದ್ದ ಸಂಚಾರಿ ಎಂಬ ಹೆಸರಿನ ನಾಟಕ ತಂಡದ ಅವಿಭಾಜ್ಯ ಅಂಗವಾಗಿ ಸುಮಾರು ಹತ್ತು ವರ್ಷಕ್ಕೂ ಅಧಿಕವಾಗಿ ಕಾಲ ಕಳೆದದ್ದರಿಂದ ಅವರು ಸಂಚಾರಿ ವಿಜಯ್ ಎಂದೇ ಖ್ಯಾತಿಯನ್ನು ಪಡೆಯುತ್ತಾರೆ. ಸಂಚಾರಿ ನಾಟಕ ತಂಡವಲ್ಲದೇ ನಾಡಿನ ಹಲವಾರು ತಂಡಗಳೊಂದಿಗೆ ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ, ಅದರ ಜೊತೆ ಜೊತೆಯಲ್ಲಿಯೇ ಕನ್ನಡದ ವಿವಿಧ ಛಾನೆಲ್ಲುಗಳ ಧಾರಾವಾಹಿಗಳಲ್ಲದೇ ಅಲ್ಲೊಂದು ಇಲ್ಲೊಂದು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಲ್ಲದೇ, ಒಂದೆರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದರು.

ಕಲೆ ಎಂಬುದು ವಿಜಯ ಅವರಿಗೆ ರಕ್ತಗತವಾಗಿ ಬಂದಿತ್ತು ಎಂದರು ತಪ್ಪಾಗಲಾರದು. ಜುಲೈ 17, 1983 ರಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ ಬಸವರಾಜಯ್ಯ ಮತ್ತು ಗೌರಮ್ಮ ದಂಪತಿಗಳ ಕುಟುಂಬದಲ್ಲಿ ವಿಜಯ್ ಅವರ ಜನನವಾಗುತ್ತದೆ. ತಂದೆ ಬಸವರಾಜಯ್ಯನವರು ಚಿತ್ರ ಕಲಾವಿದರಾಗಿದ್ದಲ್ಲದೇ, ಅನೇಕ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಎತ್ತಿದ ಕೈ. ತಾಯಿಯವರೂ ಸಹಾ ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಹೀಗಾಗಿಯೇ ವಿಜಯ್ ಬಾಲ್ಯದಿಂದಲೇ ರಂಗಭೂಮಿ, ಚಿತ್ರಕಲೆಯ ಜೊತೆಗೆ ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತವನ್ನು ಅಭ್ಯಾಸಿಸುತ್ತಾರೆ. ಅವರ ಅನೇಕ ನಾಟಕಗಳಲ್ಲಿ ತಮ್ಮ ಸಂಗೀತದ ಸುಧೆಯನ್ನು ಹರಿಸಿದ್ದಲ್ಲದೇ ಮುಂದೆ ಅನೇಕ ರಿಯಾಲಿಟಿ ಶೋಗಳಲ್ಲಿಯೂ ಅದನ್ನು ಜನರಿಗೆ ಪರಿಚಯಿಸಿದ್ದಾರೆ.

ಚಿಕ್ಕಂದಿನಿಂದಲೂ ಅಮ್ಮನ ಜೊತೆ ಪೇಟೆಗೆಂದೂ ಹೋದಾಗ ಅಲ್ಲಿ ಓಡಾಡುತ್ತಿದ್ದ ಆಟೋ, ಕಾರುಗಳ ಮೇಲೆಯೇ ವಿಜಯ್ ಕಣ್ಣು. ಅವರ ಪಂಚನಹಳ್ಳಿವರೇ ಆದ ಕಡೂರಿನ ಅಂದಿನ ಶಾಸಕರಾಗಿದ್ದ ಪಿ.ಬಿ.ಓಂಕಾರಮೂರ್ತಿ ಅವರ ಮನೆಯ ಎದುರು ಪ್ರತಿ ನಿತ್ಯವೂ ಐದಾರು ಬಗೆ ಬಗೆಯ ಕಾರುಗಳು ಬರುವುದನ್ನೇ ಬೆರಗುಗಣ್ಣಿನಿಂದ ನೋಡಿ ನಿಲ್ಲುತ್ತಿದ್ದ ವಿಜಯ್, ಅಮ್ಮಾ ನಾವೂ ಸಹಾ ಅಂತಹ ಕಾರಿನಲ್ಲಿ ಓಡಾಡ ಬೇಕು ಎಂದು ಪೀಡಿಸುತ್ತಿದ್ದರಂತೆ, ಅಯ್ಯೋ ಮಗಾ, ಕಾರು ಅಂದ್ರೆ ಸಾಮಾನ್ಯನಾ? ಅದೆಲ್ಲಾ ದೊಡ್ಡವರಿಗೆ ಮಾತ್ರಾ! ಎಂದು ಅವರ ಅಪ್ಪ ಮತ್ತು ಅಮ್ಮ ಸಮಾಧಾನ ಪಡಿಸುತ್ತಿದ್ದರಂತೆ, ಪೋಷಕರ ಜೊತೆ ಚಿಕ್ಕಮಗಳೂರಿಗೆ ಹೋದಾಗ ಆಟೋದ ಬಲಭಾಗದಲ್ಲಿ ಕುಳಿತು ಆಟೋದಿಂದ ಕುತ್ತಿಗೆ ಹೊರಗೆ ಹಾಕಿ ಇಡೀ ಪೇಟೆ ಬೀದಿಯ ಅಂಗಡಿಗಳನ್ನು ನೋಡುವುದೆಂದರೆ ವಿಜಯ್ ಗೆ ಏನೋ ಒಂದು ರೀತಿಯ ಖುಷಿ.

vij3

SSLC ಮುಗಿಸಿ ತಿಪಟೂರಿನಲ್ಲಿ ಪಿಯುಸಿಗೆ ಸೇರಿಕೊಂಡಿದ್ದೇ ತಡಾ ಬಿಚ್ಚಿ ಬಿಟ್ಟ ಕುದುರೆಯಂತಾಗಿ ಗೆಳೆಯರ ಗುಂಪನ್ನು ಕಟ್ಟಿಕೊಂಡು ಸಾಧಾರಣ ಸೈಕಲ್ಲಿನಲ್ಲಿಯೇ, ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರವಾಸ ಹೋಗುವುದು ಅವರಿಗೆ ಮುದ ನೀಡುತ್ತಿತ್ತು. ಅದರಲ್ಲಿಯೂ ಮಳೆಯಲ್ಲಿ ನೆನೆದುಕೊಂಡು ಸೈಕಲ್ ತುಳಿಯುವುದೆಂದರೆ ಬಹಳ ಮಜ ನೀಡುತ್ತಿತ್ತು. ನಂತರ ತಿಪಟೂರಿನ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇಗೆ ಸೇರಿಕೊಂಡಾಗ ಸೈಕಲ್ ಬದಲಾಗಿ ಗೆಳೆಯರೊಂದಿಗೆ ಬೈಕ್ನಲ್ಲಿ ಪ್ರವಾಸ ಹೋಗುವುದನ್ನು ಅಭ್ಯಾಸ ಮಾಡಿಕೊಂಡರು. ನಾಲ್ಕೈದು ಗೆಳೆಯರು ಸೇರಿಕೊಂಡು ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ, ವಿಜಯ್ ಅವರ ತಂಡ ಓಡಾಡದ ಪ್ರದೇಶವಿಲ್ಲ ಎಂಬಂತಾಗಿತ್ತು. ಇದೇ ಸಮಯದಲ್ಲಿಯೇ ಗೆಳೆಯರ ನೆರವಿನಿಂದ ಕಾರ್ ಓಡಿಸುವುದನ್ನೂ ಕಲಿತುಕೊಂಡಾಗಿತ್ತು. ಇವೆಲ್ಲದರ ನಡುವೆಯೇ ಉತ್ತಮ ದರ್ಜೆಯಲ್ಲಿಯೇ ಎಂಜಿನಿಯರಿಂಗ್ ಪದವಿ ಮುಗಿಸಿ ಜೀವನ ಅರೆಸುತ್ತಾ ಬೆಂಗಳೂರಿನತ್ತ ಪಯಣ ಸಾಗಿ ಬಂತು. ಬೆಂಗಳೂರಿಗೆ ಬಂದ ಮೇಲಂತೂ ಕಾರು ಖರೀದಿಸಬೇಕು ಎನ್ನುವ ಅವರ ಆಸೆ ಮತ್ತಷ್ಟು ಹೆಚ್ಚಾಯಿತಾದರೂ ಅಂದಿನ ಆರ್ಥಿಕ ಪರಿಸ್ಥಿತಿ ಇಲ್ಲದ ಕಾರಣ, ಕಾಲೇಜು ಪಾಠ, ರಂಗಭೂಮಿ, ಸಿನಿಮಾದಲ್ಲಿ ಅವಕಾಶ ಪಡೆಯತೊಡಗಿದರು. ಇದೇ ಸಮಯದಲ್ಲಿಯೇ ಅವರ ತಮ್ಮ ಕೊಡಿಸಿದ ರಿಡ್ಜ್ ಕಾರು ಅವರ ಜೀವನದ ಮೊತ್ತಮೊದಲ ಕಾರಾಗಿತ್ತು. ಅದೇ ಕಾರಿನಲ್ಲಿಯೇ. ಶಿರಸಿ, ಆಗುಂಬೆ ಮತ್ತು ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಮಳೆಯ ನಡುವಿನ ಪ್ರಯಾಣದ ತಮ್ಮ ಕನಸನ್ನು ನನಸನ್ನಾಗಿ ಮಾಡಿಕೊಂಡಿದ್ದರು. ಅಂತಿಮವಾಗಿ ಮಳೆಯಲ್ಲಿಯೇ ತಮ್ಮ ನೆಚ್ಚಿನ ವಾಹನದಲ್ಲಿ ಸಂಚರಿಸುತ್ತಿದ್ದಾಗಲೇ ಅಂತ್ಯ ಕಾಣಬೇಕಾದ ಪರಿಸ್ಥಿತಿ ಬಂದೊದಗಿದ್ದು ವಿಧಿಯ ವಿಪರ್ಯಾಸವೇ ಸರಿ.

ಇಷ್ಟರ ನಡುವೆ ಸಾವು ಧ್ಯೇಯಕ್ಕಿಲ್ಲ ಸಾಂಬಶಿವ ಪ್ರಹಸನ, ಸ್ಮಶಾನ ಕುರುಕ್ಷೇತ್ರ, ಸಾವಿರದವಳು, ಪ್ಲಾಸ್ಟಿಕ್ ಭೂತ, ಶೂದ್ರ ತಪಸ್ವಿ, ಸತ್ಯಾಗ್ರಹ, ಸಂತೆಯೊಳಗೊಂದು ಮನೆಯ ಮಾಡಿ, ಮಾರ್ಗೊಸ ಮಹಲ್, ಮಹಾಕಾಲ, ಅರಹಂತ, ಕಮಲಮಣಿ ಕಾಮಿಡಿ ಕಲ್ಯಾಣ, ನರಿಗಳಿಗೇಕೆ ಕೋಡಿಲ್ಲ ಮುಂತಾದ ನೂರಾರು ನಾಟಕಗಳಲ್ಲಿ ನಟಿಸಿದ್ದಲ್ಲದೇ, ಪಾಪ ಪಾಂಡು, ಪಾರ್ವತಿ ಪರಮೇಶ್ವರ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ಪಾತ್ರವಹಿಸಿದ್ದರೂ ವಿಜಯ್ ಸಾಮಾನ್ಯ ಜನರಿಗೆ ಇನ್ನೂ ಅಪರಿಚಿತರಾಗಿಯೇ ಉಳಿದಿದ್ದರು.

vij6

ರಮೇಶ್ ಅಭಿನಯದ ರಂಗಪ್ಪ ಹೋಗ್ಬಿಟ್ನಾ ಮುಖಾಂತರ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದ ವಿಜಯ್ ರಾಮರಾಮ ರಘುರಾಮ, ವಿಲನ್, ದಾಸವಾಳ, ಒಗ್ಗರಣೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವಾಗಲೇ. ಇವರು ನಟಿಸಿದ್ದ ಹರಿವು ಚಿತ್ರಕ್ಕೆ ರಾಜ್ಯಪ್ರಶಸ್ತಿಯೂ ಬಂದಿತ್ತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ನಾನು ಅವನಲ್ಲ ಅವಳು ಎಂಬ ಚಿತ್ರದಲ್ಲಿ ತೃತೀಯ ಲಿಂಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಕ್ಕಾಗಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಪ್ರಕಟವಾದಾಗಲೇ, ಸಮಸ್ತ ಕನ್ನಡಿಗರಿಗೂ ರಾತ್ರೋ ರಾತ್ರಿ ಸಂಚಾರಿ ವಿಜಯ್ ಎಂಬ ಅಧ್ಭುತ ನಟ ಅಕ್ಷರಶಃ ಪರಿಚಯವಾದರು ಎಂದರೂ ತಪ್ಪಾಗಲಾರದು.

vij5

ರಾಷ್ಟ್ರಪ್ರಶಸ್ತಿ ಪಡೆದ ನಂತರ ಕನ್ನಡ ಚಿತ್ರರಂಗದ ಜೊತೆ ಜೊತೆಯಲ್ಲಿಯೇ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳು ಸಾಲು ಸಾಲಾಗಿ ಸಿಕ್ಕರೂ ತಮ್ಮ ಆಯ್ಕೆಯಲ್ಲಿ ಎಚ್ಚರವಹಿಸಿದ ಕಾರಣ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದರೂ ಎಲ್ಲರ ಮನದಲ್ಲಿ ಉಳಿಯುವಂತೆ ಅಭಿನಯಿಸಿದ್ದರು.

vij2

ಲಾಕ್ಡೌನ್ ಸಮಯದಲ್ಲಿ ಅವಶ್ಯಕತೆ ಇದ್ದವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವ ಅಭ್ಯಾಸವನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದರು. ಅವರೇ ಒಂದು ಸಂದರ್ಶನದಲ್ಲಿ ಹೇಳಿದಂತೆ ನಮ್ಮ ಜೀವನ ಎಲ್ಲವೂ ಕ್ಷಣಿಕ. ಇದ್ದಾಗ ಕೈಲಾದಷ್ಟು ಜನರಿಗೆ ಉಪಕಾರ ಮಾಡುವ ಮೂಲಕ ಅವರ ಮನಸ್ಸಿನಲ್ಲಿ ಶಾಶ್ವತವಾದ ನೆಲೆ ಮೂಡಿಸುವಂತಾಗಬೇಕು ಎಂದು ಹೇಳಿದ್ದು‌ಇನ್ನೂ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ.

ಮೊನ್ನೆ ಶನಿವಾರ ಅಪಘಾತವಾದ ಸಮಯದಲ್ಲಿಯೂ ಯಾವುದೋ ಕೋವಿಡ್ ಸೋಂಕಿತರಿಗೆ ಆಹಾರದ ಕಿಟ್ ವಿತರಿಸಿ, ಹಿಂದಿರುಗುವಾಗ ಮಳೆ ಜೋರಾದ ಕಾರಣ ಅವರ ಸ್ನೇಹಿತ ಗಾಡಿಯ ವೇಗವನ್ನು ಹೆಚ್ಚಿಸಿದಾಗ ಗಾಡಿ ಮಳೆಯ ನೀರಿನಿಂದಾಗಿ ಜಾರಿ ವಿಜಯ್ ಗಾಡಿಯಿಂದ ಹಾರಿ ಬಿದ್ದು ಅಲ್ಲಿನ ದೀಪದ ಕಂಬಕ್ಕೆ ತಲೆತಾಗಿ ಜೋರಾಗಿ ತಲೆಗೆ ಮತ್ತು ತೊಡೆಗೆ ಪೆಟ್ಟಾಗಿದೆ. ಅಕಸ್ಮಾತ್ ತಲೆಗೆ ಹೆಲ್ಮೆಟ್ ಹಾಕಿದ್ದಲ್ಲಿ ಈಪಾಟಿ ಅಪಘಾತ ಆಗುತ್ತಿರಲಿಲ್ಲ ಎಂಬುದೇ ಅವರನ್ನು ಚಿಕಿತ್ಸೆ ಮಾಡಿದ ಡಾಕ್ಟರ್‌ ಅರುಣ್ ನಾಯಕ್ ಹೇಳಿದ್ದು ಎಲ್ಲಾ ವಾಹನ ಚಾಲಕರಿಗೂ ಎಚ್ಚರಿಕೆಯ ಗಂಟೆಯಾಗಿದೆ.

ಬದುಕಿರುವಾಗ ಕೈಲಾದ ಮಟ್ಟಿಗೆ ಸಹಾಯ ಮಾಡುವುದನ್ನು ರೂಢಿ ಮಾಡಿ ಕೊಂಡಿದ್ದ ವಿಜಯ್ ಈಗ ಮೆದುಳು ನಿಶ್ಕ್ರಿಯೆಯಾಗಿ ಮತ್ತೆ ಚೇತರಿಕೊಳ್ಳುವುದಿಲ್ಲ ಎಂಬ ವಿಷಯ ಅವರ ಮನೆಯವರಿಗೆ ತಿಳಿದ ತಕ್ಷಣವೇ, ಅವರ ಕುಟುಂಬ ಬದುಕಿದ್ದೂ ಸತ್ತವರಂತೆ ಬದುಕುವ ಬದಲು, ಸತ್ತ ಮೇಲೆಯೂ ಮೂರ್ನಾಲ್ಕು ಜನರ ಬಾಳಿನಲ್ಲಿ ಬದುಕುವ ಆಸೆಯನ್ನು ಮೂಡಿಸುವ ಸಲುವಾಗಿ ಅವರ ಅಂಗಾಂಗ ದಾನಕ್ಕೆ ಮುಂದಾಗಿರುವುದು ನಿಜಕ್ಕೂ ಅನ್ಯನ್ಯ ಮತ್ತು ಅನುಕರಣೀಯವೇ ಸರಿ. ಅವರ ಎರಡು ಕಣ್ಣುಗಳು, ಎರಡು ಕಿಡ್ನಿಗಳನ್ನು, ಯಕೃತ್ ತೆಗೆದು ಅಗತ್ಯ ಇರುವವರಿಗೆ ಕಸಿ ಮಾಡುವ ಮೂಲಕ ಬದುಕಿನ ಭರವಸೆಯನ್ನು ಕಳೆದುಕೊಂಡು ದುಃಖದ ಕೋಡಿಯಲ್ಲಿರುವವರ ಜೀವನದಲ್ಲಿ ಮತ್ತೆ ನಗುವನ್ನು ತುಂಬುವಂತಹ ಶ್ಲಾಘನೀಯ ಕೆಲಸಕ್ಕೆ ಮುಂದಾಗಿರುವ ವಿಜಯ್ ಅವರ ಕುಟುಂಬವನ್ನು ಎಷ್ಟು ಹೊಗಳಿದರೂ ಸಾಲದು.

ಸುರದ್ರೂಪಿ, ಸಮಾಜಮುಖೀ ನಟ ವಿಜಯ್ ಅವರ ಅಕಾಲಿಕ ಮರಣ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ನಷ್ಟವಾದರೂ ಪರೋಪಕಾರಾಯ ಇದಂ ಶರೀರಂ ಎನ್ನುವಂತೆ ಬದುಕಿದ್ದಾಗಲೂ ಮತ್ತು ಸಾಯುವಾಗಲೂ ಮತ್ತೊಬ್ಬರಿಗೆ ಸಹಾಯ ಮಾಡಿದ ವರ ಕೀರ್ತಿ ಕನ್ನಡ ಚಿತ್ರರಂಗದಲ್ಲಿ ಆಚಂದ್ರಾರ್ಕವಾಗಿ ಉಳಿಯಲಿದೆ ಎನ್ನುವುದಂತೂ ಸತ್ಯ.

ಕೇವಲ 38. ವರ್ಷಗಳ ಸಾಯಬಾರದ ವಯಸ್ಸಿನಲ್ಲಿ ಅಚಾನಕ್ಕಾಗಿ, ಅಕಾಲಿಕವಾಗಿ ದುರ್ಮರಣಕ್ಕೆ ತುತ್ತಾಗಿ ಜೀವನದ ಪಯಣದ ಸಂಚಾರವನ್ನು ತುರ್ತಾಗಿ ಮೊಟುಕುಗೊಳಿಸಿಕೊಂಡ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಸದ್ಗತಿ ಕೊಡಲಿ ಅವರು ಮಾಡುತ್ತಿದ್ದ ಸಮಾಜಮುಖೀ ಕಾರ್ಯಗಳು ಎಲ್ಲರಿಗೂ ಪ್ರೇರಣಾದಾಯಕವಾಗಲಿ. ಅವರು ನಿರ್ಲಕ್ಷದಿಂದ ಹೆಲ್ಮೆಟ್ ಧರಿಸದೇ ಅಪಘಾತಕ್ಕೀಡಾದದ್ದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ.

ಏನಂತೀರೀ?
ನಿಮ್ಮವನೇ ಉಮಾಸುತ

ಬಾಲ್ಯದ ಬಯಾಸ್ಕೋಪ್

ಬೇಸಿಗೆಯಲ್ಲಿ ಪರೀಕ್ಷೆ ಮುಗಿದು ಫಲಿತಾಂಶ ಬಂದಿದ್ದೇ ತಡಾ ಗಂಟು ಮೂಟೆ ಕಟ್ಟಿಕೊಂಡು ತಾತನ ಮನೆಗೆ ಹೋಗುವುದು ನಮ್ಮ ಮನೆಯ ವಾಡಿಕೆ. ನಮ್ಮೂರಿಗೆ ಹೋಗಲು ಪ್ರಮುಖ ಆಕರ್ಷಣೆಯೆಂದರೆ ಅದೇ ಸಮಯದಲ್ಲಿ ಎರಡು ವಾರಗಳ ಕಾಲ ನಡೆಯುತ್ತಿದ್ದ ಊರ ಹಬ್ಬ, ಜಾತ್ರೆ, ದೇವಸ್ಥಾನದ ಮುಂದಿದ್ದ ಕಲ್ಯಾಣಿ, ಅಜ್ಜಿ ಮಾಡಿಕೊಡುತ್ತಿದ್ದ ಕೆಂಡ ರೊಟ್ಟಿ ಗಟ್ಟಿ ಚಟ್ನಿ ಮತ್ತು ಬೆಣ್ಣೆ, ತಾತನ ತೊಡೆ ಮೇಲೆ ಕುಳಿತುಕೊಂಡು ಕೇಳುತ್ತಿದ್ದ ಕಥೆಗಳಲ್ಲದೇ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ಪ್ರೊಜೆಕ್ಷನ್.

ನಮ್ಮೂರು ಬಾಳಗಂಚಿ ಸುಮಾರು ಮುನ್ನೂರರಿಂದ ನಾಲ್ಕು ನೂರು ಕುಟುಂಬ ಇರುವಂತಹ ಸಣ್ಣ ಹಳ್ಳಿಯಾದರು, ಗುರು ವಿದ್ಯಾರಣ್ಯರು ಹುಟ್ಟಿದ ಊರು ಎಂಬ ಖ್ಯಾತಿ ಇದ್ದರೆ, ಅಷ್ಟು ಸಣ್ಣ ಹಳ್ಳಿಯಲ್ಲೇ ಸುಮಾರು ಹತ್ತು ಹದಿನೈದು ದೇವಸ್ಥಾನಗಳಿವೆ. ಗ್ರಾಮದೇವತೆ ಹೊನ್ನಾದೇವಿ ಮತ್ತು ನಮ್ಮ ಆರಾದ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿ ಪ್ರಮುಖವಾದವು.

ಇಂತಹ ಐತಿಹಾಸಿಕ ಊರಿಗೆ ರಜೆ ಬಂದ ಕೂಡಲೇ ಎಲ್ಲಾ ಹುಡುಗರೂ ಬಂದು ಸೇರುತ್ತಿದ್ದೆವು.  ನಾನು ಊರಿಗೆ ಬರುತ್ತೇನೆ ಅಂತ ಕಾಗದ ಬರೆಯುತ್ತಿದ್ದಂತೆಯೇ ನಮ್ಮಜ್ಜಿ ಬಹಳ ಚುರುಕಾಗಿ ನಮ್ಮ ಅಕ್ಕ ಪಕ್ಕದ ಸಂಬಂಧೀಕರ ಮನೆಯವರೆಲ್ಲರಿಗೂ ಮೊದಲೇ ಹೇಳಿಕೊಟ್ಟು ದೇವಸ್ಥಾನದ ಕಲ್ಯಾಣಿ ಅಥವಾ ಕೆರೆಯಲ್ಲಿ ಹಬ್ಬದ ಸಮಯ ಬಿಟ್ಟು ಉಳಿದ ಸಮಯ ಈಜಾಡಿದರೆ ದಂಡ ಹಾಕ್ತಾರಂತೆ ಅಂತ ಹೆದರಿಸಿ ಬಿಡುತ್ತಿದ್ದರು. ಆಗೆಲ್ಲಾ ನಮಗೆ ಪಂಚಾಯ್ತಿಕಟ್ಟೆಯಲ್ಲಿ ನಿಂತು ದಂಡ ಹಾಕಿಸಿಕೊಳ್ಳುವುದು ಎಂದರೆ ಅವಮಾನ  ಎಂದು ತಿಳಿದಿದ್ದ ಕಾರಣ  ಬಹಳವಾಗಿ ಅಂಜುತ್ತಿದ್ದೆವು. ಬೆಳಿಗ್ಗೆ ಸ್ವಲ್ಪ ಹೊತ್ತು ದೇವಸ್ಥಾನದ ಪೂಜೆ, ಹಸುವನ್ನು  ಮೇಯಲು ಹೊಲಕ್ಕೆ ಬಿಟ್ಟು ಬಂದ ಮೇಲೆ ಸಂಜೆಯವರೆಗೂ ಬೇಸರ ಕಳೆಯಲು  ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ, ವರಸೆಯಲ್ಲಿ ಚಿಕ್ಕಪ್ಪನಾಗಬೇಕಾದರೂ ನಮಗಿಂತ ಐದಾರು ವರ್ಷಗಳಷ್ಟು ದೊಡ್ಡವನಾದ ಸೋಮಶೇಖರ ನಮ್ಮೆಲ್ಲರ ಪ್ರೀತಿಯ ಸೋಮ,  ಏ ಬನ್ರೋ ನಿಮಗೆಲ್ಲಾ ಸಿನಿಮಾ ತೋರಿಸ್ತೀನಿ! ಎಂದು ಹೇಳಿದಾಗ ನಮಗೆಲ್ಲಾ ಕುತೂಹಲ.

ಅಜ್ಜೀ, ಸೋಮನ ಮನೆಗೆ ಹೋಗಿ ಆಟ ಆಡ್ಕೋಂಡ್  ಬರ್ತೀನಿ  ಎಂದಾಗ ಹೇ ಹುಷಾರು, ಕೊಳ ಮತ್ತು ಕೆರೆ ಕಡೆ ಹೋದ್ರೇ ದಂಡ ಹಾಕ್ತಾರೆ ಅಂತಾ ಗೊತ್ತಲ್ಲಾ ಎಂದು ಮತ್ತೊಮ್ಮೆ ಎಚ್ಚರಿಸಲು ಮರೆಯುತ್ತಿರಲಿಲ್ಲ. ಇಲ್ಲಾ ಅಜ್ಜೀ ಹೊರಗೆಲ್ಲೂ ಹೋಗೋದಿಲ್ಲ ಆವರ ಮನೆಯಲ್ಲೇ ಆಡಿಕೊಳ್ತೀವಿ ಎಂದು ಹೇಳಿ  ಅವರ ಮನೆಗೆ ಹೋಗುವಷ್ಟರಲ್ಲಿ ಅದಾಗಲೇ ಹತ್ತಾರು ಹುಡುಗರು ಅಲ್ಲಿ ಸೇರಿರುತ್ತಿದ್ದರು. ಇಡೀ ಮನೆಯೆಲ್ಲಾ ಕತ್ತಲೆ. ಒಂದು ಮೂಲೆಯಲ್ಲಿ ಅವರಪ್ಪನ ಪಂಚೆಯನ್ನು ಕಟ್ಟಿರುತ್ತಿದ್ದ ಸೋಮ. ಮಟ ಮಟ ಮಧ್ಯಾಹ್ನದ ಬಿಸಿಲು ಅವರ ಮನೆಯ ಹೆಂಚಿನ ಸಂದಿಯಲ್ಲಿ ಇಣುಕುತ್ತಿದ್ದೇ ತಡ ಅದಕ್ಕೆ ಸರಿಯಾಗಿ  ಒಂದು ಕನ್ನಡಿಯನ್ನು ಹಿಡಿದು ಅದರ ಬೆಳಕು ಪರದೆಯತ್ತ ಬೀಳುವಂತೆ ಮಾಡಿ ಅದರ ಮಧ್ಯೆ ಒಂದು ಬೂದುಕನ್ನಡಿ ಹಿಡಿದು ಆ ಬೂದುಗಣ್ಣಡಿಯ ಮುಂದೆ ಸಣ್ಣದಾದ ಫಿಲ್ಮ್ ಹಿಡಿದರೆ ಅದು ಪರದೆಯ ಮೇಲೆ ದೊಡ್ಡದಾಗಿ ಮೂಡಿದ್ದೇ ತಡ ನಮಗೆಲ್ಲರಿಗೂ ಆನಂದವೋ ಆನಂದ. ಎಲ್ಲರು ಜೋರಾಗಿ  ಕೂಗುತ್ತಾ ಚಪ್ಪಾಳೆ ತಟ್ಟಿ ಹರ್ಷೋದ್ಗಾರವನ್ನು ವ್ಯಕ್ತಪಡಿಸುತ್ತಿದ್ದೆವು.

lenseಹೀಗೆ ನಮ್ಮ ಸೋಮ ನನಗೆ ಮೊತ್ತ ಮೊದಲ ಬಾರಿಗೆ  ಸಿನಿಮಾ ಪ್ರೋಜೆಕ್ಷನ್ ಬಗ್ಗೆ ಗೀಳು ಹತ್ತಿಸಿದ.  ಊರಿನಲ್ಲಿ ಇರುವಷ್ಟು ದಿನವೂ  ಒಬ್ಬೊಬ್ಬರ ಮನೆಯಲ್ಲಿ ಇದೇ ರೀತಿಯ ಸಿನಿಮಾ ಪ್ರೊಜೆಕ್ಷನ್ ಮುಂದುವರೆಯುತ್ತಿತ್ತು. ಮೊದಲೆಲ್ಲಾ ಸಿನಿಮಾ ಪ್ರೇಕ್ಷಕನಾಗಿ ನೋಡುತ್ತಿದ್ದ ನಾನು ನಂತರದ ದಿನಗಳಲ್ಲಿ  ಕನ್ನಡಿಯಲ್ಲಿ ಬೆಳಕು ಬಿಡುವುದು ಇಲ್ಲವೇ ಬೂದುಗಾಜು  ಹಿಡಿಯುವಷ್ಟರ ಮಟ್ಟಿಗೆ ಬೆಳೆದಿದ್ದೆ. ಉಳಿದೆಲ್ಲಾ ಕೆಲಸಗಳನ್ನು ಬೇರೆಯವ ಕೈಯ್ಯಲ್ಲಿ ಮಾಡಿಸುತ್ತಿದ್ದರೂ ಫಿಲ್ಮ್ ಹಿಡಿಯುತ್ತಿದ್ದದ್ದು ಮಾತ್ರಾ  caption of the troup ಸೋಮನೇ.  ಎಷ್ಟು ಕೇಳಿದರು ಅದನ್ನು ಮಾತ್ರ ಅವನು ಬಿಟ್ಟು ಕೊಡುತ್ತಿರಲಿಲ್ಲವಾದ್ದರಿಂದ  ಊರ ಹಬ್ಬದ ಜಾತ್ರೆ ಖರ್ಚಿಗೆ ಕೊಟ್ಟ ಹಣದಲ್ಲಿ 50 ಪೈಸಾ ಕೊಟ್ಟು ಸಣ್ಣ ಬೂದುಗಾಜನ್ನು ಕೊಂಡುಕೊಂಡು ಕಡೆಗೆ ಸೋಮನನ್ನೇ ಕಾಡಿ ಬೇಡಿ ಕೆಲವು ಫಿಲ್ಮಗಳನ್ನು ಪಡೆದುಕೊಂಡು ನಮ್ಮ ಸ್ವತಃ ನಾನೇ  ನಮ್ಮ ಮನೆಯಲ್ಲಿ ಹುಡುಗರನ್ನು ಕೂಡಿ ಹಾಕಿಕೊಂಡು ಪ್ರೋಜೆಕ್ಷನ್ ಮಾಡುವಷ್ಟು ಬೆಳೆದು ಬಿಟ್ಟಿದ್ದೆ.

slide_projectorಅದೇ ಸಮಯದಲ್ಲೇ ನಮ್ಮ ಊರ ಹಬ್ಬ ಮುಗಿಸಿಕೊಂಡು ತಾತಾ ಅಜ್ಜಿ ಜೊತೆ  ಕಾಶೀ, ಗಯಾ ಯಾತ್ರೆಗೆ  ಹೋಗಿದ್ದಾಗ ಕಾಶಿಯ ಮಾರುಕಟ್ಟೆಯಲ್ಲಿ  ಸಿನಿಮಾ ಪ್ರೋಜೆಕ್ಟರ್ ಒಂದನ್ನು ನೋಡಿ ಅಪ್ಪನಿಗೆ ಜೋತು ಬಿದ್ದು8 ರೂಪಾಯಿಗೆ ಸಣ್ಣ ಪ್ರೊಜೆಕ್ಟರ್ ಖರೀದಿಸಿ,  ಕಾಶಿಯಲ್ಲಿ ನಾವು ಉಳಿದು ಕೊಂಡಿದ್ದ ಮನೆಯಲ್ಲಿಯೇ  ಅದನ್ನೊಮ್ಮೆ ಪರೀಕ್ಷಿಸಿಯೂ ನೋಡಿದ್ದೆ. ನನಗೋ ಬೇಗನೇ ಬೆಂಗಳೂರಿಗೆ ಬಂದು ನಮ್ಮ ಸ್ನೇಹಿತರಿಗೆ ತೋರಿಸಿ ಹೀರೋ ಆಗಬೇಕು  ಎಂಬ ಹಂಬಲ.

filimಬೆಂಗಳೂರಿಗೆ ಬಂದ ತಕ್ಶಣವೇ ಎಲ್ಲಾ ಗೆಳೆಯರನ್ನೂ ಕೂಡಿಸಿಕೊಂಡು  ಎಲ್ಲಾ ಬಾಗಿಲು ಕಿಟಕಿಗಳನ್ನು ಮುಚ್ಚಿ ಕತ್ತಲು ಕೋಣೆಯನ್ನು ಮಾಡಿ ಮತ್ತೆ ಅಪ್ಪನ ಪಂಚೆಯನ್ನೇ ಪರದೆಯಂತೆ ಕಟ್ಟಿ ಎಲ್ಲರಿಗೂ ಸಿನಿಮಾ ತೋರಿಸಿ ಭೇಷ್ ಎನಿಸಿಕೊಂಡಿದ್ದೆ. ಇದು ಎಲೆಕ್ಟ್ರಿಕಲ್ ಬಲ್ಚ್ ಮುಂದೆ ಬೂದು ಕನ್ನಡಿ ಜೋಡಿಸಿ ಅದರ ಮುಂದೆ  ಫಿಲ್ಮ್ ಸ್ಲೈಡ್ಗಳನ್ನು ಇಡುವ ವ್ಯವಸ್ಥೆ ಇತ್ತು. ಅರಂಭದಲ್ಲಿ ಪ್ರೊಜೆಕ್ಟರ್ ಜೊತೆ ಕೊಟ್ಟಿದ್ದ  ಐದಾರು ಹಿಂದಿ ಸಿನಿಮಾದ ಸ್ಲೈಡ್ ಗಳನ್ನೇ ತೋರಿಸಿ ತೋರಿಸಿ ಬೇಜಾರದ ನಂತರ ನಮ್ಮ ಚಿಕ್ಕಪ್ಪನ ತಮ್ಮ ಪೂರ್ಣಿಮಾ ಟಾಕೀಸಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಸಹಾಯದಿಂದ ಅವರ ಥಿಯೇಟರಿನಲ್ಲಿ ಕತ್ತರಿಸಿ ಬಿಸಾಡುತ್ತಿದ್ದ ಕನ್ನಡ, ತಮಿಳು ಸಿನಿಮಾದ ಫಿಲ್ಮ್ ಗಳನ್ನು ಪಡೆದುಕೊಂಡು ನಾನೇ ಸಿಗರೇಟ್ ಪ್ಯಾಕನ್ನು ಕತ್ತರಿಸಿ ಅದರ ಮಧ್ಯೆ ಫಿಲ್ಮ್ ಇಟ್ಟು ನನ್ನದೇ ಆದ ಸ್ಲೈಡ್ ತಯಾರಿಸಿಕೊಂಡು ಹೊಸಾ ಹೊಸಾ ಚಿತ್ರಗಳನ್ನು ತೋರಿಸುತ್ತಿದ್ದೆ.

filim_projectorಇದಾಗಿ ಕೆಲವು ತಿಂಗಳುಗಳ ನಂತರ ನಮ್ಮ ತಂದೆಯವರ ತಂಗಿ ಅರ್ಥಾತ್  ನಮ್ಮ ಅತ್ತೆಯ ಮನೆಗೆ ಎಂದು ಟಿ.ನರಸೀಪುರಕ್ಕೆ ಹೋಗಿದ್ದಾಗ ಅಲ್ಲಿ ನಮ್ಮತ್ತೆ ಮಗ ದತ್ತನ ಬಳಿ ಇದ್ದ ದೊಡ್ಡ ಪ್ರೊಜೆಕ್ಟರ್ ನನಗೆ ಬಹಳವಾಗಿ  ಇಷ್ಟವಾಗಿ ಹೋಯಿತು. ಅದುವರೆವಿಗೂ ನನ್ನ ಬಳಿ ಇದ್ದದ್ದು ಸ್ಟಿಲ್  ಪ್ರೊಜೆಕ್ಟರ್ ಆಗಿದ್ದರೆ ಇದು ಮೋಶನ್ ಪ್ರೊಜೆಕ್ಟರ್ ಆಗಿತ್ತು. ಇದೂ ಸಹಾ ಎಲೆಕ್ಟ್ರಿಕಲ್ ಬಲ್ಬು ಮುಂದೆ ಬೂದುಗನ್ಣಡಿ ಇಟ್ಟು ಅದರ ಮುಂದೆ ಸಿನಿಮಾ ರೋಲ್ ಇಡುವಂತ ವ್ಯವಸ್ಥೆ ಇತ್ತು. ಮೇಲೊಂದು ರಾಟೆ ಕೆಳಗೊಂದು ರಾಟೆಯ ಮಥ್ಯೆ ಫಿಲ್ಮ್ ರೋಲ್ ಸಿಕ್ಕಿಸಿ ಒಂದು ಕೈಯಲ್ಲಿ ರಾಟೆಯನ್ನು ತಿರುಗಿಸುತ್ತಿದ್ದರೆ ಸಿನಿಮಾ ಮೋಷನ್ ಆಗುತ್ತಿತು. ಆಗಲೇ ನನಗೆ ಗೊತ್ತಾಗಿದ್ದು ಒಂದು ಚೂರು ಚಲನವಲನ ಮಾಡಿಸಲು 24 ಫಿಲ್ಮ್ ರೋಲ್ ಆಗಬೇಕಿತ್ತು ಎಂದು.  ಅವರ ಮನೆಯಲ್ಲಿ ಇದ್ದ ಎರಡೂ ದಿನಗಳು  ಊಟ ತಿಂಡಿ ಎಲ್ಲವನ್ನೂ ಬಿಟ್ಟು ದತ್ತನ ರೂಮಿನಲ್ಲೇ ಪ್ರೊಜೆಕ್ಟರ್ ಜೊತೆಯೇ ಕಳೆದಿದ್ದೆ.

ಮತ್ತೆ ಬೆಂಗಳೂರಿಗೆ ಹಿಂದಿರುಗಿದ ನಂತರ ಆ ಬಾರಿಯ ನನ್ನ ಹುಟ್ಟಿದ ಹಬ್ಬಕ್ಕೆ ನನಗೆ ಬಟ್ಟೆ ಬೇಡ ಬೇರೆ ಯಾವುದೇ ಉಡುಗೊರೆ ಬೇಡ. ನನಗೆ ದತ್ತನದೇ ರೀತಿಯ  ಮೂಷನ್ ಪ್ರೊಜೆಕ್ಟರೇ ಕೊಡಿಸಬೇಕೆಂದು ಅಮ್ಮನ ಸೆರಗು ಹಿಡಿದುಕೊಂಡು ಜಗ್ಗ ತೊಡಗಿದೆ. ( ಅಪ್ಪನ ಬಗ್ಗೆ ಅತ್ಯಂತ ಗೌರವ ಇದ್ದ ಕಾರಣ,  ಅಮ್ಮ ಬದುಕಿರುವವರೆಗೂ ನಾನು ಅಮ್ಮನ ಮಗನೇ ಅಗಿದ್ದೆ)  ನನ್ನ ಬಳಿ ಅಷ್ಟೊಂದು ದುಡ್ಡಿಲ್ಲ ಬೇಕಿದ್ರೇ ನಿಮ್ಮಪ್ಪನನ್ನೇ ನೀನೇ ಕೇಳು ಎಂದು ಅಮ್ಮಾ ಹೇಳಿದಾಗ, ನನಗೆ ಅದೆಲ್ಲಾ ಗೊತ್ತಿಲ್ಲಾ. ನೀವೇ  ಅಣ್ಣನಿಗೆ(ನಾವು ಅಪ್ಪನನ್ನು ಅಣ್ಣಾ ಎಂದೇ ಸಂಭೋಧಿಸುತ್ತಿದ್ದೆವು) ಹೇಳಿ ಒಪ್ಪಿಸಿ ಕೊಡಿಸಬೇಕು ಎಂದು  ದಂಬಾಲು ಬಿದ್ದೆ.

ಅದೊಂದು ದಿನ ಅಮ್ಮಾ ಒಳ್ಳೆಯ ಮುಹೂರ್ತ ನೋಡಿ ರೀ, ನೋಡ್ರೀ ನಿಮ್ಮ ಮಗನ ಹುಟ್ಟು ಹಬ್ಬಕ್ಕೆ ಅದೇನೋ ಬೇಕೆಂತೆ ಎಂಬ ಪೀಠಿಕೆ ಹೇಳಿ ನನ್ನನ್ನು ಮಾತು ಮುಂದುವರೆಸಲು ಕಣ್ಸನ್ನೆ ಮಾಡಿದರು. ನಾನೋ ಅಳುಕುತ್ತಲೇ  ನನ್ನ ಮೋಷನ್ ಪ್ರೊಜೆಕ್ಟರ್ ಆಸೆ ಮುಂದಿಟ್ಟೆ. ಅದೆಲ್ಲಾ ಬೇಡ ಸುಮ್ಮನೇ ಓದು ಎಂದಾಗ. ಇಲ್ಲಾ ಅಣ್ಣಾ ನಾನು ಚೆನ್ನಾಗಿ ಓದ್ತೇನೆ ಎಂದು ಹೇಳಿ, ಅದಾದ ಮುಂದಿನ  ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಮತ್ತೊಮ್ಮೆ ನೋಡಿ ಈ ಸಲಾ ಚೆನ್ನಾಗಿಯೇ ಮಾರ್ಕ್ಸ್ ತೆಗೊಂಡಿದ್ದೀನಿ ಈಗಲಾದರೂ ಕೊಡಿಸಿ ಎಂದು ದಂಬಾಲು ಬಿದ್ದೆ.  ಸರಿ ಎಂದು ಒಪ್ಪಿಕೊಂಡು ಅಂದಿನ ಕಾಲದಲ್ಲೇ ಸುಮಾರು 300 ರೂಪಾಯಿ ಗಳಿಗೆ ಪ್ರೊಜೆಕ್ಟರ್ ಕೊಡಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು.

filim_reelಮತ್ತೆ ಗೆಳೆಯರನ್ನು ಕೂಡಿ ಹಾಕಿಕೊಂಡು  ಈ ಬಾರಿ ಮೋಷನ್ ಸಿನಿಮಾ ತೋರಿಸಿದ್ದೆ.  ಅದರ ಜೊತೆಗೆ ಬಂದ ಮುರ್ನಾಲ್ಕು ರೀಲ್ ಗಳನ್ನೇ ನೋಡಿ ನೋಡಿ ಬೇಸರವಾದಾಗ ನನ್ನ ಗುರು, ಮಾರ್ಗದರ್ಶಿ ಎಲ್ಲವೂ ಆಗಿದ್ದ ಕಣ್ಣಾ ಮಾವನ ಜೊತೆ ಭಾನುವಾರ  ಚಿಕ್ಕಪೇಟೆಯಲ್ಲಿ ನಡೆಯುತ್ತಿದ ಸಂಡೇ ಬಜಾರ್ (ಚೋರ್ ಬಜಾರ್) ಹೋಗಿ ಹುಡುಕೀ ಚೆನ್ನಾಗಿ ಚೌಕಾಸಿ ಮಾಡಿ ಸಿನಿಮಾ ರೋಲ್ ತರಲು ಪ್ರಾರಂಭಿಸಿದೆ. ನನಗೆ ಅವರಿವರು ಕೊಡುತ್ತಿದ್ದ ಎಲ್ಲಾ ಹಣವನ್ನೂ ಒಟ್ಟುಗೂಡಿಸಿ  ಹೊಸಾ ಹೊಸಾ ಫಿಲ್ಮ್ ರೋಲ್ ತರುವುದರಲ್ಲೇ ಖರ್ಚು ಮಾಡುತ್ತಿದೆ. ನಾನು ದೊಡ್ಡವನಾದ ಮೇಲೆ ಸಿನಿಮಾ ಥಿಯೇಟರಿನಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತೇನೆ  ಎಂದೆಲ್ಲಾ ಹೇಳುತ್ತಿದೆ.

ಕಡೆ ಕಡೆಗೆ ಬಿಡುವು ಸಿಕ್ಕಾಗಲೆಲ್ಲಾ ಹುಡುಗರನ್ನು ಕೂಡಿ ಹಾಕಿಕೊಂಡು ಇದ್ದ ಸಣ್ಣ ಮನೆಯಲ್ಲೇ ಕತ್ತಲಲ್ಲಿ ಸಿನಿಮಾ ತೋರಿಸುತ್ತಿದ್ದ ಸಮಯದಲ್ಲೇ ಮನೆಯಲ್ಲಿ  ಒಂದೊಂದೇ ಸಾಮಾನುಗಳು ಕಾಣದಂತೆ ಮಾಯಾವಾಗ ತೊಡಗಿದಾಗ ಅಮ್ಮಾ ಗದರಿಸತೊಡಗಿದವು. ಆರಂಭದಲ್ಲಿ ಅದನ್ನು ತಲೆಗೆ ಹಾಕಿಕೊಳ್ಳದಿದ್ದರೂ ನಂತರ ದೊಡ್ಡ ದೊಡ್ಡ ಸಾಮಾನುಗಳು ಕಾಣೆಯಾಗ ತೊಡಗಿದಾಗ ಇದ್ದವರು ಮೂರು ಕದ್ದವರು ಯಾರು ಎಂಬ ಪ್ರಶ್ನೆ ಮೂಡುವಂತಾದಾಗ ಅನಿವಾರ್ಯವಾಗಿ ನನ್ನ ಸಿನಿಮಾ ಪ್ರೋಜೆಕ್ಷನ್ ಬಿಡಬೇಕಾಯಿತು.   ಅದೇ ಸಮಯದಲ್ಲೇ ನಮ್ಮ ಕಣ್ಣಾ ಮಾವ ನನಗೆ ಎಲೆಕ್ಟ್ರಾನಿಕ್ಸ್ ಮಾಡೆಲ್ ಮಾಡುವ ಗೀಳು  ಹತ್ತಿಸಿದ ಪರಿಣಾಮ ಸದ್ದಿಲ್ಲದೇ ನನ್ನ ಸಿನಿಮಾ ಪ್ರೊಕಜೆಕ್ಟರ್ ಅಟ್ಟಕ್ಕೇರಿ ಧೂಳು ಕುಡಿಯ ತೊಡಗಿತು. ನಂತರದ ದಿನಗಳಲ್ಲಿ ಮನೆ ಖಾಲಿ ಮಾಡಿ ಬೇರೊಂದು ಮನೆಗೆ ಹೋಗುವಾಗ ನನಗೇ ಗೊತ್ತಿಲ್ಲದೇ ನನ್ನ ಪ್ರೊಜೆಕ್ಟರ್ ಗುಜರಿ ಸೇರುವ ಮುಖಾಂತರ ನಾನು ಥಿಯೇಟರ್ನಲ್ಲಿ ಪ್ರೋಜೆಕ್ಟರ್ ಬಾಯ್ ಆಗುವ ಆಸೆ ಶಾಶ್ವತವಾಗಿ ಮುಚ್ಚಿಹೋಯಿತು.

ಈಗಲೂ ಸಹಾ ಸೋಮನನ್ನು ಭೇಟಿಯಾದಾಗ, ದತ್ತನೊಂದಿಗೆ ಮಾತನಾಡುವಾಗ ಇಲ್ಲವೇ ಸಿನಿಮಾ ನೋಡಲು ಥಿಯೇಟರ್ ಗೆ ಹೋದಾಗಲೆಲ್ಲಾ ನನ್ನ ಬಾಲ್ಯದ ಸವಿ ಸವಿ ನೆನಪುಗಳು ನನ್ನ ಕಣ್ಣ ಮುಂದೆ ಬಂದು ಹೋಗುತ್ತದೆ.  ಇಂದು ಅದೆಷ್ಟೋ ಮೀಟಿಂಗ್ಸ್ ಗಳಲ್ಲಿ ನನ್ನ ಪ್ರೆಸೆಂಟೇಷನ್  ಪ್ರೋಜೆಕ್ಟರ್ ನಲ್ಲಿ ಪ್ರೊಜೆಕ್ಟ್ ಮಾಡುವಾಗ ನನಗೇ ಅರಿವಿಲ್ಲದಂತೆ  ನನ್ನಳಗೇ ಹುದುಗಿ ಹೋಗಿರುವ ಪ್ರೊಜೆಕ್ಟರ್ ಮ್ಯಾನ್ ಜಾಗೃತನಾಗಿ ತುಟಿಯಮೇಲೆ ಸಣ್ಣದಾದ ನಗೆ ಚೆಲ್ಲಿಸುತ್ತಾನೆ. ಅದಕ್ಕೇ ಹೇಳುವುದು ನಾವು ಬಯಸುವುದೇ ಒಂದು ಕಡೆಗೆ ಆಗುವುದೇ ಒಂದು. ಮೇಲೆ ಕುಂತವನು ಆಡಿಸಿದಷ್ಟು ದಿನ, ಅಡುವುದಷ್ಟೇ ನಮ್ಮ ಕೆಲಸ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಶಂಖನಾದ ಅರವಿಂದ್

ಜನರು ತಮ್ಮೆಲ್ಲಾ ದೈನಂದಿನದ ಕಷ್ಟ ಸುಖಃಗಳನ್ನು ಮರೆಯುವುದಕ್ಕಾಗಿ ಮನೋರಂಜನೆಗಾಗಿ ಕೆಲ ಕಾಲ ನಾಟಕ ಮತ್ತು ಚಲನಚಿತ್ರಗಳನ್ನು ನೋಡಿ ಅದರಲ್ಲಿ ಬರುವ ನಾಯಕ ಮತ್ತು ನಾಯಕಿಯರೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಂಡು ತಮ್ಮ ಕಷ್ಟಗಳನ್ನು ಮರೆಯುತ್ತಾರೆ. ಇವೆಲ್ಲವೂ ನಾಯಕ ನಾಯಕಿ ಪ್ರಧಾನವಾಗಿದ್ದರೂ ಅವರಿಬ್ಬರ ಕಥೆಯ ಏಕತಾನತೆಯನ್ನು ತಡೆಯುವ ಸಲುವಾಗಿ ನಾಯಕ ಮತ್ತು ನಾಯಕಿಯ ಕಥೆಗೆ ಸಮಾನಾಂತರವಾಗಿ ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಾಗಿ ಅಂದೂ ಇಂದು ಮತ್ತು ಮುಂದೆಯೂ ಹಾಸ್ಯನಟರ ಕಾಲ್ ಶೀಟ್ ಮೊದಲು ಪಡೆದುಕೊಂಡು ನಂತರ ನಾಯಕರನ್ನು ಆರಿಸಿಕೊಳ್ಳುವ ಸಂಪ್ರದಾಯ ರೂಡಿಯಲ್ಲಿದೆ.

ARVIND7

ಹಾಸ್ಯನಟರುಗಳಲ್ಲಿ ಎರಡು ಬಗೆಯದ್ದಾಗಿದೆ ಕೇವಲ ತಮ್ಮ ಸಂಭಾಷಣೆಯಿಂದ ಜನರನ್ನು ನಗಿಸುವವರು ಹೆಚ್ಚಿನ ಹಾಸ್ಯನಟರಾಗಿದ್ದರೇ ಇನ್ನು ಕೆಲವೇ ಕೆಲವು ಹಾಸ್ಯನಟರನ್ನು ನೋಡಿದಾಕ್ಷಣವೇ ಬಿದ್ದು ಬಿದ್ದು ನಗಬೇಕೇನಿಸುತ್ತದೆ. ಅವರು ಪರದೆಯ ಮೇಲೆ ಸುಮ್ಮನೇ ಬಂದು ನಿಂತು ತಮ್ಮ ಆಂಗಿಕ ಅಭಿನಯದಿಂದಲೇ ಪ್ರೇಕ್ಷಕರಲ್ಲಿ ನಗೆಯನ್ನು ಉಕ್ಕಿಸಿಬಿಡುತ್ತಾರೆ. ಅಂತಹವರಲ್ಲಿ ಪ್ರಮುಖರೆಂದರೆ, ಕನ್ನಡದಲ್ಲಿ ನರಸಿಂಹರಾಜು, ದ್ವಾರಕೀಶ್ ಅವರಾದರೆ, ತಮಿಳಿನಲ್ಲಿ ಹುಟ್ಟು ಕನ್ನಡಿಗರೇ ಆಗಿದ್ದ ತಾಯ್ ನಾಗೇಶ್, ಹಿಂದಿಯಲ್ಲಿ ಜಾನೀ ಲಿವರ್ ಅಗ್ರಗಣ್ಯರು. ಇಂತಹ ಮೇರು ನಟರ ಸಾಲಿನಲ್ಲಿಯೇ ನಿಲ್ಲಬಹುದಾಗಿದ್ದ ಮತ್ತೊಬ್ಬ ನಟರೆಂದರೆ ಅದು ಅರವಿಂದ್ ಎಂದರೂ ತಪ್ಪಾಗಲಾರದು.

ಕೇವಲ ಅರವಿಂದ್ ಎಂದಾಕ್ಷಣ ಜನರಿಗೆ ಥಟ್ ಅಂತಾ ನೆನಪಾಗೋದಿಲ್ಲ. ಅದರೆ ಶಂಖನಾದ ಅರವಿಂದ್ ಅಥವಾ ಅನುಭವ/ಬೆಟ್ಟದ ಹೂ ಅರವಿಂದ್ ಎಂದಾಕ್ಷಣ ಎಲ್ಲರ ಮುಖದಲ್ಲಿಯೂ ಪರಿಚಾಯಾತ್ಮಕ ನಗು ಸಹಜವಾಗಿಯೇ ಮೂಡುತ್ತದೆ ಎಂದರೆ ಆ ಸಿನಿಮಾಗಳಲ್ಲಿ ಅ ನಟನ ಪರಕಾಯ ಪ್ರವೇಶದ ಅರಿವಾಗುತ್ತದೆ.

arvind5

ಮೂಲತಃ ಚಿಕ್ಕ‌ಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕ್ ಮಾಚಿಕೊಪ್ಪ ಗ್ರಾಮದವರಾಗಿದ್ದ ಅರವಿಂದ್ ರಂಗಭೂಮಿ‌ ಕಲಾವಿದರು. ಎಪ್ಪತ್ತರ ದಶಕದಲ್ಲಿ ಕಾಶೀನಾಥ್ ಅವರ ಅಪರೂಪದ ಅತಿಥಿಗಳು ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅಲ್ಲಿಂದ ಮುಂದೆ ಕಾಶೀನಾಥ್ ಅವರ ಗರಡಿಯಲ್ಲಿ ಒಂದು ರೀತಿಯ ನಿಲಯದ ಕಲಾವಿದರೇ ಆಗಿ ಹೋಗಿ ಅವರ ಅಪರಿಚಿತ ಅನುಭವ ಮುಂತಾದ ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದಿದ್ದರು.. ಖ್ಯಾತ ನಟ, ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದ ದಿವಂಗತ ಕಾಶಿನಾಥ್‌ ಅವರ ಬಹುತೇಕ ಸಿನಿಮಾಗಳಲ್ಲಿ ಒಂದಲ್ಲಾ ಒಂದು ಪಾತ್ರದ ಮೂಲಕ ಜನರನ್ನು ಮನರಂಜಿಸುವ ಮೂಲಕ ಎಂಭತ್ತರ ದಶಕದಲ್ಲಿ ಬಹು ಬೇಡಿಕೆಯ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

arind3

ಎಂಭತ್ತರ ದಶಕದಲ್ಲಿ ಅರವಿಂದ್ ಅವರನ್ನೇ ಪ್ರಮುಖರನ್ನಾಗಿಸಿಕೊಂಡು ತೆರೆಗೆ ಬಂದ ಶಂಖನಾದ ಸಿನಿಮಾ ಅವರ ಚಿತ್ರಬದುಕನ್ನೇ ಬದಲಿಸಿತು ಎಂದರೂ ತಪ್ಪಾಗಲಾರದು. ವರ್ಣ ವ್ಯವಸ್ಥೆಯಲ್ಲಿ ದಲಿತ ಸಮುದಾಯದ ಬದುಕು ಬಿಚ್ಚಿಟ್ಟಿದ್ದು ಶಂಖನಾದ ಸಿನಿಮಾದ ದಾಸಯ್ಯನ ಪಾತ್ರ. ಅದರಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಕುರಿತು ಇರುವ ಮೌಢ್ಯತೆಯನ್ನು ಹೊಡೆದುಹಾಕಿ ಜಾತ್ಯತೀತೆಯನ್ನು ಎತ್ತಿಹಿಡಿದಿತ್ತು. ಗಾರೆ ಕೆಲಸ ಕೂಲಿ ಮಾಡುತ್ತಾ ಸಮಯವಿದ್ದಾಗ ದಾಸಯ್ಯನಾಗಿಯೂ ಜನಪದ ಪೌರೋಹಿತ್ಯವನ್ನು ನಿಭಾಯಿಸುತ್ತಿದ್ದ ದಲಿತ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ತಾನೇ ಮನೆ ಮನೆಗೂ ಹೋಗಿ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಪಾತ್ರದಲ್ಲಿ ಅತ್ಯಧ್ಭುತವಾಗಿ ನಟಿಸಿದ್ದರು. ಏಳು ರಾಷ್ಟ್ರಪ್ರಶಸ್ತಿ ಬಾಚಿಕೊಂಡ ಆ ಸಿನಿಮಾದ ಮೂಲಕ ಕೇವಲ ಅರವಿಂದ್ ಎಂದಾಗಿದ್ದವರು ರಾತ್ರೋ ರಾತ್ರಿ ಶಂಖನಾದ ಅರವಿಂದ್ ಆಗಿ ಪ್ರಖ್ಯಾತರಾಗಿ ಹೋದರು.

arvind8

ಅಲ್ಲಿಂದ ಮುಂದೆ ಅವರಿಗೆ ಕೀರ್ತಿ ಮತ್ತು ಯಶಸ್ಸನ್ನು ತಂದು ಕೊಟ್ಟ ಸಿನಿಮಾ ಎಂದರೆ, ರಾಷ್ಟ್ರಪಶಸ್ತಿ ಪಡೆದಿದ್ದ ಹಿರಿಯ ನಿರ್ದೇಶಕರಾದ ಶ್ರೀ ಲಕ್ಷ್ಮೀನಾರಾಯಣ್ ಅವರು ಪುನೀತ್ ರಾಜಕುಮಾರ್ ಅವರನ್ನು ಮುಖ್ಯಭೂಮಿಕೆಯಲ್ಲಿ ಇಟ್ಟುಕೊಂದು ತೆಗೆದ ಬೆಟ್ಟದ ಹೂವು ಸಿನಿಮಾದಲ್ಲಿ ರಾಮಾಯಣ ದರ್ಶನ ಪುಸ್ತಕಕ್ಕೆ 10ರೂಪಾಯಿ ಹೊಂದಿಸಲು ಮುಗ್ಧ ಬಾಲ ನಟನಾಗಿ ಪುನೀತ್ ಅಭಿನಯಿಸಿದರೆ, ಅವರೊಟ್ಟಿಗೆ ಅಡುಗೆ ಭಟ್ಟನಾಗಿ ಅರೆ ಬರೆ ಇಂಗ್ಲೀಷ್ ಮಾತನಾಡುವ ಅಡುಗೆ ಭಟ್ಟನಾಗಿ ನಟಿಸಿದ ಅರವಿಂದ್ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಮಾ. ಪುನೀತ್ ಮತ್ತು ಅರವಿಂದ್ ಅವರಿಬ್ಬರ ನಡುವಿನ ಹಾಡಂತೂ ಇಂದಿಗೂ ಜನಮಾನಸದಲ್ಲಿ ಅಚ್ಚೊತ್ತಿದೆ.

arvind4

ಅದಾದ ಕೆಲ ಸಮಯ ಮತ್ತೊಬ್ಬ ಮಹಾನ್ ನಿರ್ದೇಶಕರಾದ ಸುರೇಶ್ ಹೆಬ್ಲೀಕರ್ ಅವರ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ಅರವಿಂದ್ ಅಭಿನಯಿಸಿದರು. ಪ್ರಮುಖವಾಗಿ ಕಾಡಿನ ಬೆಂಕಿ, ಪ್ರಥಮ ಉಷಾಕಿರಣ ಸಹಾ ಅವರಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿತ್ತು. ಆದಾದ ನಂತರ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ ಪರಿಣಾಮ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಅವಕಾಶ ಕಡಿಮೆಯಾಗುತ್ತಿದ್ದಂತೆಯೇ ಟಿವಿ ಧಾರವಾಹಿಗಳಲ್ಲಿಯೂ ಸಹಾ ಅಭಿನಯಿಸಿದ್ದಲ್ಲದೇ, ಸ್ನೇಹಿತರೊಂದಿಗೆ ಸೇರಿಕೊಂಡು ಸಿಕ್ಸ್‌ ಟು ಸಿಕ್ಸ್‌ , ಗುಪ್‌ಚುಪ್‌ ಮುಂತಾದ ಎರಡು ಮೂರು ಸಿನಿಮಾಗಳನ್ನು ನಿರ್ಮಿಸಿದರೂ ಅದ್ಯಾವುದೂ ಅವರ ಕೈ ಹಿಡಿದಿರಲಿಲ್ಲ.

ಖ್ಯಾತ ಹಿನ್ನೆಲೆ ಗಾಯಕಿ ರಮಾ ಅವರನ್ನು ಮದುವೆಯಾಗಿ ಮಾನಸ ಹೊಳ್ಳ ಮತ್ತು ಪ್ರಾರ್ಥನ ಎಂಬ ಇಬ್ಬರು ಹೆಣ್ಣುಮಕ್ಕಳು ಹಾಗೂ ಅಭಿಷೇಕ್‌ ಎಂಬ ಒಬ್ಬ ಮಗ ಇದ್ದಾನೆ. ಅವರ ಪತ್ನಿಯವರೂ ಸಹಾ ಅವರೂ ಕನ್ನಡ ಸಿನಿ ರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಲ್ಲದೇ ಶಂಖನಾದ ಅರವಿಂದ ಕಲಾವೃಂದ ಎಂಬ ತಮ್ಮದೇ ಒಂದು ಕಲಾವಿದರ ತಂಡವನ್ನು ಕಟ್ಟಿಕೊಂಡು ಸುಗಮಸಂಗೀತ ರಸಸುಧೆಯನ್ನು ಹರಿಸುತ್ತಿದ್ದರು. ಅವರ ಮಗಳ ಹಿರಿಯ ಪುತ್ರಿ ಮಾನಸ ಹೊಳ್ಳ ಖ್ಯಾತ ಹಿನ್ನಲೆಗಾಯಕಿ ಮತ್ತು ಖ್ಯಾತ ಸಂಗೀತ ನಿರ್ದೇಶಕಿಯಾಗಿಯೂ ಪ್ರವರ್ಧಮಾನಕ್ಕೆ ಬರುತ್ತಿದ್ದರೆ ಅವರ ಉಳಿದಿಬ್ಬರು ಮಕ್ಕಳು ಕಲಾವಿದರಾಗಿದ್ದಾರೆ.

arvind

ದೀರ್ಘಕಾಲದ ಅನಾರೋಗ್ಯದಿಂದಾಗಿ ಅವರ ಪತ್ನಿ ರಮ್ಯಾ ಅರವಿಂದ್ ಇದೇ ಜನವರಿ 23 ರಂದು ನಿಧನರಾದ ನಂತರ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದ ಸುಮಾರು 70ರ ಪ್ರಾಯದ ಅರವಿಂದ್ ಅವರಿಗೂ ಸಹಾ ಅದು ಹೇಗೋ ಕೊರೋನಾ ಸೋಂಕು ತಗುಲಿದ್ದ ಕಾರಣ ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರುಗಳು ಎಷ್ಟೇ ಪ್ರಯತ್ನ ಪಟ್ಟರೂ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಇಂದು ಮಧ್ಯಾಹ್ನ ಮೇ 7, 2021ರಂದು ತಮ್ಮ ಕೊನೆಯುಸಿಳೆಯುವ ಮೂಲಕ ಕನ್ನಡ ಚಿತ್ರರಂಗದ ಒಂದು ಅನರ್ಘ್ಯ ರತ್ನವೊಂದು ಕಣ್ಮರೆಯಾಗಿದೆ ಎಂದರೆ ತಪ್ಪಾಗದು.

arvind2

ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ಬಹಳಷ್ಟು ಬಂಧು ಮಿತ್ರರನ್ನು ಕಳೆದುಕೊಳ್ಳುತ್ತಿದ್ದೇವೆ, ನೆನ್ನೆಯಷ್ಟೇ, ರಾಜ್ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ, ರವಿಚಂದ್ರ ಅಭಿನಯದ ಅಂಜದ ಗಂದು ಸಿನಿಮಾ ನಿರ್ದೇಶಿಸಿದ್ದ ಶ್ರೀ ರೇಣುಕಾ ಶರ್ಮಾ ಅವರು ಇದೇ ಕೋವಿಡ್ ನಿಂದಾಗಿ ಅಸುನಿಗಿದ್ದರು. ಇಂದು ಖ್ಯಾತ ನಟ, ನಿರ್ಮಾಪಕ ಶಂಖನಾದ ಅರವಿಂದ್ ಅವರು ನಿಧರಾಗುವ ಮೂಲಕ ಅವರ ಮೂವರು ಮಕ್ಕಳು ಕೇಲವೇ ತಿಂಗಳಲ್ಲಿ ಅಮ್ಮಾ ಅಪ್ಪಾ ಅಜ್ಜಾ ಮಾವ ಅವರನ್ನು ಕಳೆದುಕೊಳ್ಳುವ ಮೂಲಕ ತಬ್ಬಲಿಗಳಾಗಿದ್ದಾರೆ.

ಇಂತಹ ಸಾವಿನಲ್ಲಿಯೂ ಅವರ ಮಗ‌ ಟಿವಿಯ ಸಂದರ್ಶನದಲ್ಲಿ ಸರ್ಕಾರದ ವಿರುದ್ಧ ಆಡಿದ ಮಾತುಗಳು,ಅನಗತ್ಯವಾಗಿ ಮೋದಿ ಸುಧಾಕರ್ ಎಳೆದು ತಂದದ್ಧು ಆಸ್ಪತ್ರೆ ವಿರುದ್ದ ಮಾಡಿದ ಕೊಲೆ ಆರೋಪಗಳು ಬಹುಶಃ ಆತನಿಗೇ ಗೊತ್ತಿಲ್ಲದಂತೆ ಯಾರದ್ದೋ ಷಡ್ಯಂತರದ ಭಾಗವಾಗಿದ್ದಾನೆ ಎಂದೆನಿಸುತ್ತಿದೆ.

ನಿಜ ಕೆಲವೇ ವಾರಗಳ ಅಂತರದಲ್ಲಿ ನಾಲ್ವರನ್ನು ಕಳೆದುಕೊಂಡ ನೋವು ಅರ್ಥ ಆಗುತ್ತದೆ ಆದರೆ ಅದಕ್ಕೆ ಸರ್ಕಾರವನ್ನಾಗಲೀ ಮಂತ್ರಿಯನ್ನಾಗಲೀ ಹೊಣೆ ಮಾಡಲಾಗದು.

ಯಾವುದೇ ಪಕ್ಷದ ಸರ್ಕಾರ ಇದ್ದರೂ ಇಂತಹ ಮಹಾಮಾರಿ ಸಂಧರ್ಭದಲ್ಲಿ ರಾಜಕೀಯ ಮಾಡಲು ಮುಂದಾಗುವುದಿಲ್ಲ. ಅರವಿಂದ್ ಅವರ ಬಗ್ಗೆ ಅಪಾರವಾದ ಅಭಿಮಾನವಿದೆ. ಈ ರೀತಿಯಾಗಿ ಅವರ ಸಾವಿನಲ್ಲಿಯೂ ರಾಜಕೀಯ ಬೆರೆಸಿ ತನ್ನ ತಂದೆಯ ಮೇಲಿರುವ ಅಭಿಮಾನವನ್ನು ಮಗನೇ ಕಡಿಮೆಯಾಗುವಂತೆ ಮಾಡಿದ್ದು ವಿಪರ್ಯಾಸವೇ ಸರಿ.

ಜೀವ ಇದ್ದಲ್ಲಿ ಮಾತ್ರವೇ ಜೀವನ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಯವಿಟ್ಟು ಅನಾವಶ್ಯಕವಾಗಿ ಹೊರಗೆಲ್ಲೂ ಹೊಗದಿರಿ. ಅನಿವಾರ್ಯವಾಗಿ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವ ವರೆಗು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರನ್ನು ಕಾಪಾಡಿಕೊಳ್ಳಿ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಧೃಡರಾಗಿರೋಣ. ನೆಮ್ಮದಿಯ ಜೀವನವನ್ನು ಸಾಗಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

ನನಗೆ ಹಿಂದೀ ಬರೋದಿಲ್ಲ, ನಾವು ದ್ರಾವಿಡರು

ಕಳೆದ ಒಂದೂವರೆ ವರ್ಷಗಳಿಂದ ಕೂರೋನಾ ಮಹಾಮಾರಿ ವಕ್ಕರಿಸಿ ಇಡೀ ವಿಶ್ವವೇ ಒಂದು ರೀತಿ ಸ್ಥಬ್ಧವಾಗಿದ್ದು ಎಲ್ಲೆಡೆಯೂ ಲಾಕ್ ಡೌನ್ ಪರಿಸ್ಥಿತಿ ಇದ್ದು ಈಗ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿಯೋ ಇಲ್ಲವೇ, ನಾವೇ ಅದರೊಂದಿಗೇ ಜೀವನ ನಡೆಸುವ ಕಲೆಯನ್ನು ಕಲಿತುಕೊಂಡಿದ್ದೇವೆ ಎನ್ನಬಹುದಾದ ಪರಿಸ್ಥಿತಿಯಲ್ಲಿ, ಕೂರೋನಾಕ್ಕಿಂತಲೂ ಹೆಚ್ಚಾಗಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಪ್ರತೀ ದಿನವೂ ಮಾಧ್ಯಮದವರ ಕೂರೋನಾ ಕುರಿತಾದ ಕಾರ್ಯಕ್ರಮಗಳಿಂದ ಭಯಭೀತರನ್ನಾಗಿ ಮಾಡಿಸುವ ಜೊತೆಗೆ ಹಾಗೇ ಸುಮ್ಮನೆ ವಿಷಯಾಂತರ ಮಾಡುತ್ತಾ,, ಪ್ರಕಾಶ್ ರೈ ಕೆ.ಜಿ.ಎಫ್ ಚಿತ್ರದಲ್ಲಿ ನಟಿಸುತ್ತಿರುವ ವಿಷಯ , ಕನ್ನಡ ಚಿತ್ರರಂಗದ ಮೋಹಕ ನಟ-ನಟಿಯರು ನಿರೂಪಕಿಯರು ಮಾದಕ ವಸ್ತುಗಳ ವ್ಯಸನಿಗಳಗಿದ್ದು ತೋರಿಸುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿವೆ.

ನಟ ಪ್ರಕಾಶ್ ರೈ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡಿಗನಾಗಿ ದಕ್ಷಿಣ ಭಾರತದ ಅಷ್ಟೂ ಚಲಚಿತ್ರರಂಗವಲ್ಲದೇ ಹಿಂದೀ ಚಿತ್ರರಂಗದಲ್ಲಿಯೂ ತನ್ನ ಛಾಪನ್ನು ಮೂಡಿಸಿ ಪ್ರಖ್ಯಾತನಾದವರೇ. ಜನರು ಗೌರವ ಕೊಡುವುದು ಒಬ್ಬ ವ್ಯಕ್ತಿಗಿಂತ ಆತನ ವ್ಯಕ್ತಿತ್ವಕ್ಕೇ ಎನ್ನುವ ಅರಿವಿಲ್ಲದ ಆತ, ಚಲಚಿತ್ರರಂಗದಲ್ಲಿ ತನ್ನ ಖಳನಾಯಕತನವನ್ನೇ ತನ್ನ ವ್ಯಕ್ತಿತ್ವಕ್ಕೂ ಅಳವಡಿಸಿಕೊಂಡು ಈಗಾಗಲೇ, ಹಲವಾರು ಬಾರಿ ತಮಿಳು, ತೆಲುಗು, ಮಲಯಾಳಂ ಅಷ್ಟೇ ಅಲ್ಲದೇ ಹಿಂದೀ ಚಿತ್ರರಂಗದಲ್ಲಿಯೂ ಭಹಿಷ್ಕಾರಕ್ಕೆ ಒಳಗಾಗಿ ಪ್ರಖ್ಯಾತಿಗಿಂತ ಕುಖ್ಯಾತಿಗೆ ಒಳಗಾಗಿದ್ದೇ ಹೆಚ್ಚು.

ಪ್ರಕಾಶ್ ರೈ ತನಗೆ ಬೇಕಾದ ಸಮಯದಲ್ಲಿ ಬೇಕಾದ ರೀತಿಯ ಬಣ್ಣವನ್ನು ಬದಲಿಸುವ ಮತ್ತು ಕನ್ನಡವನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿ ಕೊಳ್ಳುವ ಊಸರವಳ್ಳಿ ಎಂದರೂ ತಪ್ಪಾಗಲಾರದು. ಉಳಿದೆಲ್ಲಾ ಚಿತ್ರರಂಗದವರೂ ಆತನನ್ನು ಭಹಿಷ್ಕಾರ ಹಾಕಿದ್ದಾಗ ತಾನೊಬ್ಬ ಕನ್ನಡಿಗ ಎಂಬುದು ಥಟ್ ಅಂತ ನೆನಪಾಗಿ ಕನ್ನಡ ಚಿತ್ರವೊಂದನ್ನು ನಿರ್ಮಿಸಿ ಅದರ ಪ್ರಚಾರಕ್ಕೆಂದು ಕನ್ನಡದ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ನಿರೂಪಕಿ, ಆ ಸಮಯದಲ್ಲಿ ಕಾವೇರೀ ನದಿ ನೀರಿನ ಕುರಿತಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ನಡುವಿನ ಪರಿಸ್ಥಿತಿ ಬಿಗುವಾಗಿರುವ ಕುರಿತಂತೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದ್ದೇ ತಡಾ, ಅಲ್ಲಿಯ ವರೆವಿಗೂ ಶಾಂತ ಮೂರ್ತಿಯ ಸ್ವರೂಪದಂತಿದ್ದ ಪ್ರಕಾಶ್ ಇದ್ದಕ್ಕಿದ್ದಂತೆಯೇ ಆ ನಿರೂಪಕಿಯ ಮೇಲೆ ಹೌಹಾಹಾರೀ, ಉರ್ಕೊಂಡು ನಾನು ಇಲ್ಲಿ ಬಂದಿರುವುದು ಒಬ್ಬ ಚಲನಚಿತ್ರ ನಟ ಮತ್ತು ನಿರ್ಮಾಪಕನಾಗಿ ನನ್ನ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೇನೆ. ಹಾಗಾಗಿ ನೀವು ಚಲಚಿತ್ರ ರಂಗದವರನ್ನು ಭಾಷೆಯ ಹೆಸರಿನಲ್ಲಿ ಒಡೆಯದಿರಿ. ಕಲಾವಿದರಿಗೆ ಎಲ್ಲಾ ಭಾಷೇನು ಒಂದೇ. ಅವರಿಗೆ ಭಾಷೆಯ ಹಂಗಿಲ್ಲ ಅಂತ ಹೇಳಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಇನ್ನು ತನ್ನ ವಯಕ್ತಿಕ ತೆವಲುಗಳಿಗಾಗಿ ಚೆಂದದ ಹೆಂಡತಿ ಮತ್ತು ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದರೂ ಆಕೆಗೆ ವಿಚ್ಛೇದನ ನೀಡಿ ಹಿಂದೀ ಭಾಷೀಯ ಉತ್ತರ ಭಾರತೀಯ ನೃತ್ಯಗಾರ್ತಿಯನ್ನು ಎರಡನೇ ಮದುವೆಯಾಗಿ ಆಕೆಗೂ ಒಂದು ಮಗುವನ್ನು ಕರುಣಿಸಿರುವ ವಿಷಯ ಎಲ್ಲರಿಗೂ ತಿಳಿದಿದೆ.

ಹಿರಿಯ ಸಾಹಿತಿ ಲಂಕೇಶ್ ಅವರ ನಿಧನದ ನಂತರ ಅವರ ಪತ್ರಿಕೆಯನ್ನು ಮುನ್ನಡೆಸಿಕೊಂಡು ತುಕ್ಡೇ ತುಕ್ಡೇ ಗ್ಯಾಂಗ್ ನವರಿಗೆ ಅಮ್ಮನಂತಿದ್ದ ಗೌರಿ ಹತ್ಯೆಯಾದದ್ದೇ ತಡಾ, ಪ್ರಕಾಶನಿಗೆ ಆತನೊಳಗಿದ್ದ ರಾಜಕಾರಣೀ ಜಾಗೃತವಾಗಿ, ಸಾವಿನ ಮನೆಯ ಮುಂದೆ ಹಾಕಿದ್ದ ಬೆಂಕಿಯಲ್ಲಿ ತನ್ನ ಚಳಿ ಕಾಯಿಸಿಕೊಳ್ಳುವಂತೆ ನಾನು ಗೌರಿ ಎಂದು ಬೊಬ್ಬಿಡುತ್ತಾ, ಟೌನ್ ಹಾಲ್ ಮುಂದೆ ಅಬ್ಬರಿಸಿದ್ದಲ್ಲದೇ Just Ass-King ಎನ್ನುವ ಬಿರುದಾಂಕಿತನಾಗಿ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹೇಳ ಹೆಸರಿಲ್ಲದಂತೇ ಠೇವಣಿಯೂ ಗಿಟ್ಟದಂತೆ ಸೋತು ಸುಣ್ಣವಾಗಿ ಮನೆ ಸೇರಿದ್ದು ಈಗ ಇತಿಹಾಸ.

ಅದಾದ ನಂತರ ರಾವಣಾಸುರವಧೆಯನ್ನು ಮಕ್ಕಳ ನೀಲಿ ಚಲಚಿತ್ರರಂಗಕ್ಕೆ ಹೋಲಿಸುವ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಪ್ರಕಾಶ, ನಂತರ ಈ ಕೋವಿಡ್ ದಿನಗಳಲ್ಲಿ ಕೆಲ ನಿರಾಶ್ರಿತರಿಗೆ ಸಹಾಯ ಮಾಡಿ, ಇಲಿ ಹೋದದ್ದನ್ನೇ ಹುಲಿ ಹೋಯಿತು ಎನ್ನುವಂತೆ ಬಿಟ್ಟಿ ಪ್ರಚಾರ ಪಡೆದದ್ದಂತೂ ಸುಳ್ಳಲ್ಲ.

ಕೇವಲ ಕನ್ನಡ ಚಿತ್ರರಂಗವಲ್ಲದೇ, ಭಾರತೀಯ ಚಲನ ಚಿತ್ರರಂಗ ಮತ್ತು ಪ್ರಪಂಚದ ಚಿತ್ರರಂಗದಲ್ಲಿಯೇ, ಕನ್ನಡಿಗರು ಸೃಷ್ಟಿಸಿದ ಅದ್ಭುತ ಇತಿಹಾಸವಾದ ಕೆ.ಜಿ.ಎಫ್ ಚಿತ್ರದ ಎರಡನೇ ಭಾಗದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕರು ಪ್ರಕಟಿಸಿದರೋ, ಆಗ ಇದ್ದಕ್ಕಿದ್ದಂತೆಯೇ ಸ್ವಾಭೀಮಾನಿ ದೇಶಭಕ್ತರು ಅತನ ವಿರುದ್ದ ಭಹಿಷ್ಕಾರದ ಬೆದರಿಕೆ ಹಾಕಿದ್ದಲ್ಲದೇ, ಅತನಿರುವ ಚಿತ್ರವನ್ನು ನೋಡುವುದಿಲ್ಲ ಎಂಬ ಸಾತ್ವಿಕ ಪ್ರತಿಭಟನೆ ತೋರಿದದ್ದು ಪ್ರಕಾಶ್ ರೈ ಮತ್ತು ಕೆಜಿಎಫ್ ಚಿತ್ರ ತಂಡಕ್ಕೆ ಮರ್ಮಘಾತವಾಗಿದ್ದಂತೂ ಸುಳ್ಳಲ್ಲ.

ಈ ಕುರಿತಂತೆ ವಿಷಯಾಂತರ ಮಾಡಲು ಪ್ರಕಾಶ್ ರೂ ಅಂತಹ ಗೋಸುಂಬೆಗೆ ಥಟ್ ಅಂತ ನರನಪಾಗಿದ್ದೇ ಹಿಂದೀ ದಿವಸ್. ಕೇವಲ ತಮಿಳು, ತೆಲುಗು ಭಾಷೆಯ ಈ ಭಾಷೆಯ ಚಿತ್ರಗಳನ್ನು ನೋಡಿ ಅಲ್ಲಿಂದ ಸ್ವಲ್ಪ ಇಲ್ಲಿಂದ ಸ್ವಲ್ಪ ಕದ್ದು ಅದನ್ನು ತಮ್ಮದೇ ಸಿನಿಮಾ ಎಂದು ಬಿಂಬಿಸುವ ಚಿತ್ರರಂಗದವರು, ಬರೀ ಚಿತ್ರವಲ್ಲದೇ ತಮಿಳು ನಾಡಿನ ಚಲಚಿತ್ರರಂಗದವರು ಆರಂಭಿಸಿದ ಹಿಂದಿ ತೆರೆಯಾದು ಪೋಡಾ ಎಂಬುದನ್ನು ಯಥಾವತ್ತಾಗಿ ಇಲ್ಲಿ ನಕಲು ಮಾಡಿ, ನನಗೆ ಹಿಂದೀ ಬರೋದಿಲ್ಲ ಹೋಗೂ, ನಾವು ದ್ರಾವಿಡರು ಎಂಬ ಅಭಿಯಾನವನ್ನು ಇದೇ ಪ್ರಕಾಶ್ ರೈ ಮುಂದಾಳತ್ವದಲ್ಲಿ ಮುಂದುವರೆಸುತ್ತಾ ತಮ್ಮ ಬೌದ್ಧಿಕ ದೀವಾಳಿತನವನ್ನು ಎತ್ತಿ ತೋರಿಸಿದ್ದಲ್ಲದೇ ಭಾಷೆಯ ಹೆಸರಿನಲ್ಲಿ ಕನ್ನಡಿಗರನ್ನು ಎತ್ತಿ ಕಟ್ಟಿ ಪ್ರಚೋದಿಸುತ್ತಿರುವುದು ನಿಜಕ್ಕೂ ಶೋಚನೀಯವೇ ಸರಿ.

ಇನ್ನು ಈ ಖನ್ನಢ ಉಟ್ಟು ಓರಾ(ಲಾ)ಗಾರರು ಹಾಕಿಕೊಂಡಿದ್ದ ಟಿ-ಶರ್ಟ್ ನಲ್ಲಿ ಬರೆದಿದ್ದನ್ನು ನೋಡಿ ನಗಬೇಕೋ ಅಳಬೇಕೋ ಅಂತಾ ಗೊತ್ತಾಗಲಿಲ್ಲ ಕನ್ನಡಿಗರು ಶಾಂತಿ ಪ್ರಿಯರು. ಕುಡಿಯಲು ನೀರು ಕೇಳಿದರೆ ಜೊತೆಗೆ ಬೆಲ್ಲವನ್ನು ಕೊಡುವಂತಹ ಸಹೃದಯಿಗಳು. ಯಾರನ್ನೂ ಏಕವಚನದಲ್ಲಿ ಮಾತನಾಡಿಸದೇ ಎಲ್ಲರಿಗೂ ಗೌರವವನ್ನು ನೀಡುವವರು. ಅದರೆ ತಮಿಳರ ಹಿಂದಿ ತೆರೆಯಾದು ಪೋಡಾ ಎಂಬುದನ್ನು ಯಥಾವತ್ತಾಗಿ ಇಲ್ಲಿ ನಕಲು ಮಾಡುತ್ತಾ, ಹಿಂದಿ ಗೊತ್ತಿಲ್ಲ ಹೋಗೂ ಅಂತ ಏಕವಚನ ಬಳಸಿರುವುದಲ್ಲದೇ, ಎರಡನೇ ಸಾಲಿನಲ್ಲಿ ನಾನು ಕನ್ನಡಿಗರು ಎಂಬ ಆಪಭ್ರಂಷ ಬೇರೆ. ನಾನು ಕನ್ನಡಿಗ ಎಂದೋ, ಇಲ್ಲವೇ ನಾವು ಕನ್ನಡಿಗರು ಎಂದೋ ವ್ಯಾಕರಣಾತ್ಮಕವಾಗಿ ಸರಿಯಾಗಿ ಬರೆಯಲೂ ಬಾರದವರಿಂದ ಕನ್ನಡ ಉದ್ದಾರ ಇನ್ನು ಎಷ್ಟರ ಮಟ್ಟಿಗೆ? ಇನ್ನು ಮುಂದಿನ ಸಾಲು ನಾವು ದ್ರಾವಿಡರು ಎಂಬುದು ದೇಶವನ್ನೇ ವಿಭಜನೆ ಮಾಡುವ ಹುನ್ನಾರ.

ಇನ್ನು ಇದಕ್ಕೆ ಬೆನ್ನೆಲುಬಾಗಿ ಹಿಂದಿ ಬಾರದು ಎಂಬ ಅಸಂಬದ್ಧ ಟಿ-ಶರ್ಟ್ ಹಾಕಿಕೊಂಡ ಶಾಸಕ ಝಮೀರ್ ನನ್ನು ನೋಡಿದಾಗಲಂತೂ ಏನು ಹೇಳಬೇಕು ಎಂದು ತಿಳಿಯದೇ ಮೂಕವಿಸ್ಮಿತರಾಗುವುದೊಂದು ಬಾಕಿ.

ಬ್ರಿಟೀಷರು ಭಾರತಕ್ಕೆ ಬಂದಾಗ, ಒಡೆದು ಆಳು ಎಂಬ ನೀತಿಯನ್ನು ಅಳವಡಿಸಿಕೊಂಡು ಆರ್ಯರು ಮತ್ತು ದ್ರಾವಿಡರು ಎನ್ನುವಂತೆ ಉತ್ತರ ಭಾರತೀಯರು ಮತ್ತು ದಕ್ಷ್ಣಿಣ ಭಾರತೀಯರ ಮಧ್ಯೆ ಕಂದಕವನ್ನು ತೋಡುವ ಸುಳ್ಳು ಇತಿಹಾಸವನ್ನು ಬರೆದದ್ದಲ್ಲದೇ, ಆರ್ಯರು ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದವರು ಹಾಗಾಗಿ ಅವರೂ ಸಹಾ ಪರಕೀಯರೇ ಎಂಬ ವಿಷ ಬೀಜವನ್ನು ಬಿತ್ತಿ ಹೋದರು. ಅಂತಿಮವಾಗಿ ಧರ್ಮಾಧಾರಿತವಾಗಿ ದೇಶವನ್ನು ಒಡೆದು ಮೂರು ಭಾಗಗಳಾಗಿ ಮಾಡಿ ಹೋದರೆ, ಸ್ವಾತಂತ್ರ್ಯ ಬಂದ ಮೇಲೆ ನಮ್ಮ ರಾಜಕಾರಣಿಗಳು ತಮ್ಮ ಓಟಿಗಾಗಿ ಜನರನ್ನು ಜಾತಿಯ ಮೇಲೆ ಒಡೆದು ಛಿದ್ರ ಛಿದ್ರ ಮಾಡಿದರು. ಈಗ ಈ ಚಿತ್ರರಂಗದವರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಭಾಷೆಯಾಧಾರಿತವಾಗಿ ನಮ್ಮನ್ನು ಒಡೆಯಲು ಹವಣಿಸುತ್ತಿರುವುದು ನಮ್ಮ ಜನರಿಗೇಕೆ ಅರ್ಥವಾಗುತ್ತಿಲ್ಲ?

ಮೇಲು ನೋಟಕ್ಕೆ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಎಂದು ಬೊಬ್ಬಿರಿಯುತ್ತಾ ತಪ್ಪು ತಪ್ಪಾಗಿ ಬರೆದ ಟಿ-ಶರ್ಟ್ ಹಾಕಿಕೊಂಡು ಬೀದಿಗಿಳಿದ ಕೆಲ ಕನ್ನಡ ಹೋರಾಟಗಾರರಿಗೆ ಮತ್ತು ಪ್ರಕಾಶ್ ರೈ ನಂತಹವರಿಗೆ ಕನ್ನಡಕ್ಕಿಂತಲೂ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಈ ಎಲ್ಲಾ ಹೋರಾಟವಷ್ಟೇ. ಇಂತಹವರಿಂದ ಕನ್ನಡ ಮತ್ತು ಕನ್ನಡಿಗರು ಉದ್ದಾರವಾಗ್ತಾರಾ?

ನಿಜವಾಗಿಯೂ ಹಿಂದಿ ಹೇರಿಕೆ ಎಲ್ಲಿಂದ ಆಗಿದೆ ಎಂದು ಯೋಚನೆ ಮಾಡಿದರೆ,

20-30 ವರ್ಷಗಳ ಹಿಂದೆ ನಮಗೆ ಹೆಚ್ಚು ಬಾಡಿಗೆ ಕೊಡ್ತಾರೇ, ನಮ್ಮ ಆಸ್ತಿಗೆ ಹೆಚ್ಚಿನ ಹಣ ಕೊಡ್ತಾರೆ ಅಂತ, ಕನ್ನಡ, ಕನ್ನಡಿಗರನ್ನು ಮರೆತು, ಬೆಂಗಳೂರಿನ ಹೃದಯಭಾಗವಾಗಿದ್ದ, ಪ್ರಮುಖ ವ್ಯಾಪಾರೀ ತಾಣವಾಗಿದ್ದ ಚಿಕ್ಕಪೇಟೆ, ಬಳೇ ಪೇಟೆ, ತಿಗಳ ಪೇಟೆ, ಅಕ್ಕೀ ಪೇಟೆಯಲ್ಲಿ ಮಾರ್ವಾಡಿಗಳಿಗೆ ಮಾರಿದ್ರಲ್ಲಾ ಅವಾಗಲೇ ಹಿಂದಿ ಹೇರಿಕೆ ಶುರುವಾಯಿತಲ್ವೇ.

ಈಗಲೂ ಸಹಾ ಕಮೀಶನ್ ಜಾಸ್ತಿ ಕೊಡ್ತಾರೆ ಅಂತ ಗೊತ್ತಾದ್ರೇ, ಇದೇ ಖನ್ನಡ ಹೋರಾಟಗಾರರೇ ಮುಂದೆ ನಿಂತು ಅನ್ಯ ಭಾಷಿಕರಿಗೆ ಆಸ್ತಿ ಖರೀದಿ,ಅಂಗಡಿ,ಮನೆ ಬಾಡಿಗೆ ಪಡೆಯಲು ದಲ್ಲಾಳಿ ಕೆಲಸ ಮಾಡ್ತಾ ಇರೋದು ಗುಟ್ಟಿನ ವಿಷಯವೇನಲ್ಲ. ದುಡ್ಡು ಕೊಟ್ರೇ ಸನ್ನೀ ಲಿಯೋನ್ ಅರೆ ಬೆತ್ತಲೆ ನೃತ್ಯಕ್ಕೆ ಮುಂದಾಳತ್ವ ವಹಿಸ್ತೀನಿ ಅಂತ ಹೇಳಿದವರೂ ಮತ್ತೊಬ್ಬ ಖನ್ನಡ ಓರಾಟಗಾರ ಎನ್ನುವುದು ಸುಳ್ಳೆನಲ್ಲ. ಹೀಗೆ ಹಣದ ಆಸೆಗಾಗಿ ನಮ್ಮ ಜುಟ್ಟನ್ನೇ ಇನ್ನೊಬ್ಬರ ಕೈಗೆ ಕೊಟ್ಟು ಈಗ ಅಯ್ಯೋ ಕನ್ನಡಿಗರ ಮೇಲೆ ಅನ್ಯಭಾಷಿಕರ ದಬ್ಬಾಳಿಕೆ ಅಂತಾ ಬಾಯಿ ಬಡ್ಕೊಂಡ್ರೆ ಏನು ಪ್ರಯೋಜನ ಅಲ್ಚೇ?

ಅದೇ ರೀತಿ, ಏ ಬಾಯ್, ಚಾರ್ ಸೌ ಬೀಸ್ ಪಾನ್ ದೇನಾ, ತೋಡಾ ಸುಪಾರೀ ಔರ್ ಚುನ್ನಾ, ದೇಖ್ ಕೇ ಡಾಲ್ನಾ ಎಂದು ಬೀಡಾ ಹಾಕಿಸಿಕೊಂಡು ಬಾಯ್ತುಂಬಾ ತಿಂದು ಎಲ್ಲೆಂದರಲ್ಲಿ ಉಗಿಯುವ ನೂರಾರು ಖನ್ನಢ ಓರಾಟಗಾರರು ಇಂದಿಗೂ ಎಲ್ಲೆಡೆ ಕಾಣ್ತಾರೇ ಅಲ್ವೇ?

ಇನ್ನು ನಮ್ಮ ಹೆಮ್ಮಕ್ಳು ರಸ್ತೆ ಬದಿಯಲ್ಲಿ ಭಯ್ಯಾ ಪಾನಿ ಪೂರಿ ದೇನಾ, ಭಯ್ಯಾ ತೋಡಾ ಜ್ಯಾದಾ ಮೀಟಾ ಡಾಲ್ನಾ ಅಂತಾನೋ, ಇಲ್ಲವೇ ಭಯ್ಯಾ ಏ ಬಿಂದಿ ಪ್ಯಾಕೇಟ್ ಕಿತ್ನಾಕಾ ಹೈ? ತೋಡಾ ಕಮ್ ಕರ್ಕೇ ದೇನಾ ಭಯ್ಯಾ, ಎಂದು ಅವರಿಗೆ ಕನ್ನಡ ಬಂದ್ರೂ ನಮ್ಮವರೇ ಅರೆ ಬರೇ ಹಿಂದಿಯಲ್ಲಿ ಮಾತಾನಾಡಿಸುವುದು ಸುಳ್ಳೆನಲ್ಲಾ ಅಲ್ವೇ?

ಕನ್ನಡ ಭಾಷೆಯನ್ನು ಉಳಿಸುವುದು ಮತ್ತು ಬೆಳೆಸುವುದು ಯಾವುದೋ ಕನ್ನಡ ಚಿತ್ರರಂಗದ ಕೆಲ ನಟ ನಟಿಯರಿಂದಾಗಲೀ, ಕೆಲ ಕನ್ನಡ ಪರ ಸಂಘಟನೆಗಳ ಜವಾಬ್ದಾರಿಯಲ್ಲ. ಬದಲಾಗಿ ಅದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ.

 • ಹಾಗಾಗಿ ಮೊದಲು ಮನೆಯಲ್ಲಿ ಸ್ವಚ್ಚವಾಗಿ ಮತ್ತು ಸ್ಪಷ್ಟವಾಗಿ ಕನ್ನಡ ಮಾತನಾಡೋಣ.
 • ವ್ಯಾವಹಾರಿಕವಾಗಿ ಸಹಿಯನ್ನೂ ಒಳಗೊಂಡಂತೆ ಎಲ್ಲವನ್ನೂ ಕನ್ನಡಲ್ಲೇ ಮಾಡುವ ಪ್ರಯತ್ನ ನಮ್ಮಿಂದಲೇ ಆರಂಭವಾಗಲಿ.
 • ನಮ್ಮ ಮಕ್ಕಳನ್ನು ಕನ್ನಡ ಶಾಲೆ ಅದರಲ್ಲೂ ಸರ್ಕಾರೀ ಶಾಲೆಗೇ ಸೇರಿಸಿ ಎಂದು ಕೂಗಾಡುವ ಬದಲು, ಮಕ್ಕಳು ಕಲಿಯುವ ಶಾಲೆಯಲ್ಲಿ ಕನ್ನಡ ಸರಿಯಾಗಿ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಕಲಿಸುತ್ತಾರಾ ಎಂದು ಗಮನಿಸೋಣ.
 • ಒಬ್ಬ ಕನ್ನಡಿಗನಾಗಿ ಸರ್ಕಾರೀ, ಖಾಸಗೀ ಮತ್ತು ಬ್ಯಾಂಕ್ಗಳಲ್ಲಿ ಕನ್ನಡವನ್ನೇ ವ್ಯಾವಹಾರಿಕ ಭಾಷೆಯನ್ನಾಗಿ ನಾವು ಬಳಸಲು ಆರಂಭಿಸಿದಲ್ಲಿ, ಉಳಿದವರೂ ವಿಧಿ ಇಲ್ಲದೇ ಕನ್ನಡದಲ್ಲಿಯೇ ಪ್ರತಿಕ್ರಿಯಿಸುತ್ತಾರೆ.
 • ಒಂದು ಗೆರೆಯನ್ನು ಮುಟ್ಟದೇ ಸಣ್ಣದು ಮಾಡಬೇಕೆಂದರೆ ಅದರ ಪಕ್ಕದಲ್ಲಿ ದೊಡ್ಡದಾದ ಗರೆಯೊಂದನ್ನು ಬರೆಯುವಂತೆ, ಇತರೇ ಭಾಷೆಗಳಿಗಿಂತಲೂ ನಮ್ಮ ಮಾತೃಭಾಷೆಯನ್ನು ಹೆಚ್ಚಾಗಿ ಬಳಸುತ್ತಾ ಹೋದಂತೆ ಉಳಿದ ಭಾಷಾ ವ್ಯಾಮೋಹ ಕುಗ್ಗುತ್ತದೆ.
 • ಕನ್ನಡದ ಮೇಲಿನ ಅಭಿಮಾನದಿಂದ ಅದನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಎಲ್ಲಾ ಕನ್ನಡಿಗರು ತಮ್ಮನ್ನು ತಾವು ಸ್ವಪ್ರೇರಣೆಯಿಂದ ತೊಡಗಿಸಿಕೊಳ್ಳಬೇಕೇ ಹೊರತು, ಕನ್ನಡದ ಹೆಸರಿನಿಂದ ಅನ್ಯಭಾಷಿಗರನ್ನು ಹೆದರಿಸಿ ಬೆದರಿಸಿ ನಮ್ಮ ಹೊಟ್ಟೆ ಹೊರೆಯುವ ಕಾಯಕಕ್ಕೆ ಎಂದೂ ಯಾರೂ ಇಳಿಯಬಾರದು.
 • ಕನ್ನಡಿಗರದ್ದು ಕೊಡುವ ಕೈ ಹೊರತು ಬೇಡುವ ಕೈ ಅಲ್ಲಾ. ದೇಹಿ ಎಂದು ಬಂದವರಿಗೆ ಹೊಟ್ಟೆಯ ತುಂಬಾ ಊಟ ಬಡಿಸುವ ವಿಶಾಲ ಹೃದಯಿಗಳು.

ಯಾವುದೋ ನಟ ಅಥವಾ ಕೆಲ ಸಂಘಟನೆಗಳ ಸ್ವಾರ್ಥಕ್ಕೆ ಅವರ ಹೊಟ್ಟೆ ತುಂಬಿಸುವುದಕ್ಕೆ ನೈಜ ಕನ್ನಡಿಗರಾದ ನಾವುಗಳು ಬಲಿಯಾಗದೇ. ಸ್ವಾಭಿಮಾನಿಗಳಾಗಿ ತಲೆಯೆತ್ತಿ ಬಾಳೋಣ. ಇತರರನ್ನೂ ನೆಮ್ಮದಿಯಾಗಿ ಬಾಳಗೊಡೋಣ. ಕರ್ನಾಟಕದಲ್ಲಿ ಕನ್ನಡಕ್ಕೇ ಪ್ರಾಧ್ಯಾನ್ಯ ಮತ್ತು ಕನ್ನಡಿಗನೇ ಸಾರ್ವಭೌಮ.

ಊಟದ ಎಲೆಯಲ್ಲಿ ಉಪ್ಪಿನಕಾಯಿ, ಕೋಸಂಬರಿ, ಪಲ್ಯ, ಗೊಜ್ಜುಗಳು ಇದ್ದರೂ ಹೊಟ್ಟೆ ತುಂಬಿಸುವುದು ಮಾತ್ರ ಅನ್ನ ಮತ್ತು ಸಾರು. ಅಂತೆಯೇ ಉಳಿದೆಲ್ಲಾ ಭಾಷೆಗಳನ್ನು ದ್ವೇಷಿಸದೇ ಕಲಿಯೋಣ. ಕನ್ನಡವನ್ನು ಮಾತ್ರಾ ವ್ಯಾವಹಾರಿಕವಾಗಿ ಬಳಸೋಣ. ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಭೀಮನ ಅಮಾವಾಸ್ಯೆ ಅಣ್ಣಾವ್ರ ನೆನಪು

ಕಹಿ ಘಟನೆಗಳನ್ನು ಆದಷ್ಟು ಬೇಗ ಮರೆತು ಬಿಡಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದ್ರೇ ಏನ್ಮಾಡೋದು? ಕೆಲವೊಂದು ಘಟನೆಗಳು ಒಂದೊಂದು ಜಾಗ ಒಂದೊಂದು ಹಬ್ಬ ಇಲ್ಲವೇ ವಸ್ತುಗಳೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಅದನ್ನು ನೋಡಿದ ತಕ್ಷಣವೇ ಥಟ್ ಅಂತಾ ನೆನಪಾಗಿ ಬಿಡುತ್ತವೆ. ಅದೇ ರೀತಿಯಲ್ಲಿ ಭೀಮನ ಅಮಾವಾಸ್ಯೆ ಬಂದ್ರೇ ಗಂಡನ ಪೂಜೆ, ಭಂಡಾರ ಒಡೆಯುವ ಜೊತೆ ವರ‌ನಟ ಅಣ್ಣಾವ್ರೇ ನೆನಪಾಗ್ತಾರೆ ನೋಡಿ.

ಅದು 2000ನೇ ಇಸವಿ ಜುಲೈ ತಿಂಗಳು ಭೀಮನ ಅಮಾವಾಸ್ಯೆಯ ದಿನ. ನಮ್ಮ ಮನೆಗೆ ಮಹಾಲಕ್ಷ್ಮಿಯಾಗಿ ಮಗಳು ಬಂದು ಕೇವಲ ಎರಡು ತಿಂಗಳಾಗಿತ್ತು. ಮಗಳು ಹುಟ್ಟಿದ ನಂತರದ ಮೊದಲ ಹಬ್ಬ. ಹಾಗಾಗಿ ಮನೆಯಲ್ಲಿ ಭೀಮನ ಅಮಾವಾಸ್ಯೆ ಕಳೆ ಕಟ್ಟಿತ್ತು ಎಂದರೂ ತಪ್ಪಾಗಲಾರದು. ಮಡದಿ ಬಾಣಂತನಕ್ಕೆ ತವರಿಗೆ ಹೋಗಿದ್ದಳು. ಚಿಕ್ಕ ತಂಗಿ ಅವರ ಮನೆಯಲ್ಲಿ ಭಂಡಾರ ಹೊಡೆಯುವುದಕ್ಕೆ ಆದಾಗಲೇ ಕರೆದಾಗಿತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಅಂದು ಕಛೇರಿಯೂ ಇತ್ತು. ಹಾಗಾಗಿ ಬೆಳ್ಳಂಬೆಳಗ್ಗೆಯೇ ಎದ್ದು ಎಣ್ಣೆ ನೀರು ಸ್ನಾನ ಮಾಡಿ ನಮ್ಮ ಮನೆಯಲ್ಲಿ ಪೂಜೆ ಮುಗಿಸಿ ಅಲ್ಲಿಂದ ತಂಗಿಯ ಮನೆಗೆ ಹೋಗಿ ಭಂಡಾರ ಒಡೆದು ತಿಂಡಿ ತಿಂದು ಅಲ್ಲಿಂದ ಅತ್ತೆಯ ಮನೆಗೆ ಹೋಗಿ ಗೌರೀ ದಾರ ಕಟ್ಟಿಕೊಂಡ ಮಡದಿ ಮತ್ತು ಮಗಳನ್ನು ಮಾತನಾಡಿಸಿಕೊಂಡು ಕಛೇರಿಗೆ ಹೋಗಬೇಕು ಎಂದು ರಾತ್ರಿಯೇ ನಿರ್ಧರಿಸಿಯಾಗಿತ್ತು.

raj_kndnap

ಬೆಳಿಗ್ಗೆ ಎದ್ದೊಡನೆಯೇ ಅಂದು ಕೊಂಡಂತೆ ಮನೆಯಲ್ಲಿ ಪೂಜೆ ಮಾಡಿಕೊಂಡು ತಂಗಿಯ ಮನೆಗೆ ಭಂಡಾರ ಒಡೆದು ಇನ್ನೇನು ಉದ್ದಿನ ಕಡುಬಿಗೆ ಕೈ ಹಾಕಬೇಕು ಎನ್ನುವಷ್ಟರಲ್ಲಿ ನಮ್ಮ ತಂಗಿಯ ಮನೆಯ ಪಕ್ಕದವರು ವಿಷ್ಯಾ ಗೊತ್ತಾಯ್ತಾ? ವೀರಪ್ಪನ್ ಅಣ್ಣಾವ್ರನ್ನಾ ಕಿಡ್ನಾಪ್ ಮಾಡ್ಬಿಟ್ಟಿದ್ದಾನಂತೇ ಅಂದ್ರೂ. ಅರೇ ಹೌದಾ? ನನಗೇ ಗೊತ್ತೇ ಇರಲಿಲ್ಲ ಎಂದು ದೇವ್ರೇ ದೇವ್ರೇ ಅವರು ಹೇಳಿದ್ದು ಸುಳ್ಳಾಗಿರಲಿ ಅಂತ ಮನಸ್ಸಿನಲ್ಲಿ ಅನ್ಕೊಂಡು ಟಿವಿ ಹಾಕಿ ಫ್ಲಾಷ್ ನ್ಯೂಸ್ ನೋಡ್ತಿದ್ದೇ ತಡಾ ಎದೆ ಧಸಕ್ ಎಂದಿತು. ಅವರು ಹೇಳಿದ್ದು ನಿಜ. ಹೀಗೆ 21 ವರ್ಷದ ಹಿಂದೆ ಭೀಮನ ಅಮಾವಾಸ್ಯೆಯ ಹಿಂದಿನ ದಿನ ಅಚಾನಕ್ಕಾಗಿ ಕತ್ತಲಿನಲ್ಲಿ ಅಣ್ಣಾವ್ರನ್ನು ಅವರ ಸ್ವಗ್ರಾಮವಾದ ಗಾಜನೂರಿನಿಂದಲೇ ವೀರಪ್ಪನ್ ಅಪಹರಿಸಿದ್ದ.

tyre.jpeg

ಕೂಡಲೇ ಸಮಸ್ಯೆಯ ಗಂಭೀರತೆ ಅರಿವಾಗಿತ್ತು. ಆಗ ನನ್ನ ಆಫೀಸ್ ಇದ್ದದ್ದು ಬೆಂಗಳೂರಿನ ಹೃದಯಭಾಗವಾದ ಎಂ. ಜಿ. ರೋಡನಲ್ಲಿ. ನಮ್ಮ ಮನೆಯಿಂದ ಅಲ್ಲಿಗೆ ತಲುಪಲು ಮೇಖ್ರೀ ಸರ್ಕಲ್ ಇಲ್ಲವೇ ಸದಾಶಿವ ನಗರ ದಾಟಿಯೇ ಹೋಗಬೇಕಾಗಿತ್ತು. ಸುಮ್ಮನೆ ಹೋಗಿ ಸಮಸ್ಯೆಗೆ ಏಕೆ ಸಿಲುಕಿಕೊಳ್ಳಬೇಕು ಎಂದು ಅಂದು ಕಛೇರಿಗೆ ಹೋಗದಿರಲು ನಿರ್ಧರಿಸಿ ಸೀದ ಅತ್ತೆಯ ಮನೆಗೆ ಹೋಗಿ ಮಗಳು ಮತ್ತು ಮಡದಿಯನ್ನು ನೋಡಿಕೊಂಡು ಅತ್ತೆಯ ಮನೆಯ ಆತಿಥ್ಯವನ್ನೂ ಸವಿದು ಮನೆಗೆ ಹಿಂತಿರುಗಿ ಬರುವಷ್ಟರಲ್ಲಿ ನಮ್ಮ ಕಛೇರಿಯಿಂದ ಮನೆಗೆ ಫೋನ್ ಮಾಡಿ ನಂತರ ನಮ್ಮ ಮಾವನ ಮನೆಯ ಲ್ಯಾಂಡ್ ಲೈನ್ ನಂಬರ್ ತೆಗೆದುಕೊಂಡು ಅಲ್ಲಿಗೂ ಕರೆಮಾಡಿದ್ದರು. ವಿಷಯದ ಗಂಭೀರತೆಯನ್ನು ತಿಳಿಸಿ ಪರಿಸ್ಥಿತಿ ತಿಳಿಯಾದ ಮೇಲೆ ಕಛೇರಿಗೆ ಬರುತ್ತೇನೆ ಎಂದು ತಿಳಿಸಿದೆ. ಅವರೂ ಸಹಾ ಅದಕ್ಕೆ ಒಪ್ಪಿ ಅಗತ್ಯವಿದ್ದಾಗ ಫೋನಿನಲ್ಲಿಯೇ ಸಹಕರಿಸು ಎಂದು ಕೇಳಿಕೊಂಡಿದ್ದರು. ಹೇಗೂ ನನ್ನ ತಂಡ 24×7 ಕೆಲಸ ಮಾಡುತ್ತಿತ್ತು. ಅವರಿಗೆ ಕರೆ ಮಾಡಿ ಏನೇನು, ಹೇಗೇಗೇ ಮಾಡಬೇಕು ಎಂದು ಮತ್ತೊಮ್ಮೆ ತಿಳಿಸಿದೆ. ಈಗಿನ ರೀತಿ ಮೊಬೈಲ್ ಇರಲಿಲ್ಲವಾದ್ದರಿಂದ ಯಾವುದೇ ಸಮಸ್ಯೆ ಇದ್ದರೂ ನಮ್ಮ ಮನೆಗಾಗಲೀ ಅಥವಾ ನಮ್ಮ ಮಾವನ ಮನೆಯ ಲ್ಯಾಂಡ್ ಲೈನಿಗೆ ಕರೆ ಮಾಡಿ ಎಂದು ತಿಳಿಸಿದೆ.

ಮಧ್ಯಾಹ್ನದ ಹೊತ್ತಿಗೆ ನನ್ನ ಪ್ರಾಣ ಸ್ನೇಹಿತ ಕೃಷ್ಣ, ಮನೆಯ ಲ್ಯಾಂಡ್ ಲೈನಿಗೇ ಕರೆ ಮಾಡಿ ಎಲ್ಲಿದ್ದೀಯೋ ಅಂದಾ? ಲ್ಯಾಂಡ್ ಲೈನಿಗೆ ಕರೆ ಮಾಡಿ ಎಲ್ಲಿದ್ದೇಯಾ ಅಂತಾ ಕೇಳ್ತೀಯಾ? ಅಂತಾ ಜೋರಾಗಿ ನಗುತ್ತಾ ಮನೆಯಲ್ಲಿಯೇ ಇದ್ದೇನೆ ಏನು ಸಮಾಚಾರ ಅಂದೆ. ಸಮಾಚಾರ ಅಂತೇ ಸಮಾಚಾರ ಎಲ್ಲಾ ನನ್ನ ಗ್ರಹಚಾರ.. ಆಫೀಸಿಗೆ ಹೋಗಿದ್ಯಾ? ಅಂತ ಕೇಳ್ದಾ. ಹೇ ಹೇಗೋ ಹೋಗೋದಿಕ್ಕೆ ಆಗುತ್ತೇ? ಅಣ್ಣಾವ್ರ ಕಿಡ್ನಾಪ್ ವಿಷ್ಯ ತಿಳಿದ್ಮೇಲೆ ಆಫೀಸಿಗೆ ಹೋಗ್ಲಿಲ್ಲ ಅಂದೇ. ನೀನು ಆಫೀಸಿಗೆ ಹೋಗಲ್ಲಾ ಅಂದ್ರೇ ನನಗೆ ಯಾಕೆ ಹೇಳಲಿಲ್ಲಾ ಬಂದೇ ಇರು ಮನೆಗೆ ಬಂದ್ ಮಾಡೀನಿ ಎಂದ. ಅವನು ಹಾಗೆ ಅಂದಾಗಲೇ ನನಗೆ ನೆನಪಿಗೆ ಬಂದಿದ್ದು. ಪ್ರತೀ ದಿನ ಕೃಷ್ಣನನ್ನು ಪಿಕ್ ಅಪ್ ಮಾಡಿ ಎಂಜಿ ರಸ್ತೆಯ ಅನಿಲ್ ಕುಂಬ್ಲೆ ಸರ್ಕಲ್ ಬಳಿ ಇದ್ದ ಅವನ ಇನಿಸ್ಟಿಟ್ಯೂಟ್ ಬಳಿ ಬಿಟ್ಟು ಹೋಗ್ತಾ ಇದ್ದೆ. ಆದ್ರೇ ಅವತ್ತು ಅವಸರದಲ್ಲಿ ಕೃಷ್ಣನಿಗೆ ಆಫೀಸಿಗೆ ಹೋಗ್ತಾ ಇಲ್ಲಾ ಅನ್ನೋದನ್ನು ಹೇಳೋದು ಮರ್ತಿದ್ದೆ.

tyre

ಐದು ಹತ್ತು ನಿಮಿಷದಲ್ಲಿಯೇ ಬುಸು ಬುಸುಗುಟ್ಟುತ್ತಲೇ ಮನೆಗೆ ಬಂದ ಕೃಷ್ಣ ನಿನ್ನಿಂದ ಎಷ್ಟು ಅನಾಹುತ ಆಯ್ತು ಗೊತ್ತಾ? ಬೆಳಿಗ್ಗೆ ನಿನಗೆ ಕಾದೂ ಕಾದೂ ಸುಸ್ತಾಗಿ ಲೇಟ್ ಆಗುತ್ತೇ ಅಂತಾ ಬಸ್ಸಿನಲ್ಲಿ ಇನಿಸ್ಟಿಟ್ಯೂಟಿಗೆ ಹೋದ್ಮೇಲೆ ಅಣ್ಣಾವ್ರ ಕಿಡ್ನಾಪ್ ಆಗಿದ್ದ ಕಾರಣ ಇನಿಸ್ಟಿಟ್ಯೂಟಿಗೆ ರಜೆ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಸರಿ ಮನೆಗೆ ಹಿಂದಿರಿಗಿ ಬರುವುದಕ್ಕೆ ಯಾವ ಬಸ್ಸೂ ಸಿಗದೇ ಹಾಗೂ ಹೀಗೂ ಸದಾಶಿವನಗರ ಪೋಲೀಸ್ ಸ್ಟೇಷನ್ ವರೆಗೂ ಯಾರ್ಯಾದೋ ಡ್ರಾಪ್ ತೆಗೆದುಕೊಂಡು ಬಂದು ಅಲ್ಲಿಂದ ನಡ್ಕೊಂಡು ರಾಮಯ್ಯ ಕಾಲೇಜ್ ವರೆಗೂ ಬಂದ್ರೇ ಅಲ್ಲಿ ಕೆಲವರು ಅಣ್ಣಾವ್ರ ಕಿಡ್ನಾಪ್ ಆಗಿದ್ದಕ್ಕೆ ಟೈರ್ ಸುಡ್ತಾ ಇದ್ರು. ಅವರು ನನ್ನನ್ನು ನೋಡಿದ ಕೂಡಲೇ ಏನೂ ನಿನ್ನ ಹೆಸ್ರೂ ಅಂದ್ರು. ನಾನು ಕೃಷ್ಣಾ ಎಂದಿದ್ದೇ ತಡಾ, ಫಟ್ ಅಂತಾ ಯಾರೋ ಹಿಂದಿನಿಂದ ತಲೆ ಮೇಲೆ ಹೊಡೆದ ಹಾಗಾಯ್ತು. ಯಾರೋ ಅದು ಹೊಡೆದದ್ದು ಅಂತಾ ತಿರುಗಿ ನೋಡುತ್ತಿದ್ದಂತೆಯೇ ಮತ್ತೊಂದು ಹೊಡೆತ. ಈ ತಮಿಳ್ರೆಲ್ಲಾ ಬಂದು ನಮ್ಮ ಅಣ್ಣಾವ್ರನ್ನು ಕಿಡ್ನಾಪ್ ಮಾಡ್ಬಿಟ್ಟಿದ್ದಾರೆ. ಇವರನ್ನು ಸುಮ್ಮನೇ ಬಿಡಬಾರದು ಅಂತಾ ಯಾರೋ ಹೇಳಿದ್ದು ಕೇಳಿಸ್ತು. ಅರೇ ನಾನು ತಮಿಳಿಗನಲ್ಲ. ಅಪ್ಪಟ ಕನ್ನಡಿಗ. ನನ್ನ ಹಣೆ ಮೇಲಿರುವ ಮುದ್ರೇ ನೋಡಿ ಅಂತಾ ತೋರಿಸಿದ್ದಕ್ಕೆ ಮತ್ತೊಂದು ಒದೆ ಕೊಟ್ತು ಹೋಗ್ ಅಂತಾ ಕಳಿಸಿದ್ರು ನೋಡು. ಎಲ್ಲಾ ನಿನ್ನಿಂದಲೇ ಆಗಿದ್ದು ಎಂದ. ನನಗೆ ಅವನ ಪರಿಸ್ಥಿತಿ ಅರಿವಾಗಿ ನಗು ಬರ್ತಾ ಇದ್ರೂ ಅದನ್ನು ತೋರಿಸಿಕೊಳ್ಳಲಿಲ್ಲ ಸಾರಿ ಸಾರಿ ನನ್ನದೇ ತಪ್ಪು ಎಂದು ಸಮಾಧಾನ ಪಡಿಸಿದೆ. ಅದೇನಪ್ಪಾ ಅಂದ್ರೇ ನನ್ನ ಗೆಳೆಯ ಅವನ ಹೆಸರಿಗೆ ಅನ್ವರ್ಥದಂತೇ ಕೃಷ್ಣ ವರ್ಣದವ. ಅಪ್ಪಟ್ಟ ಕನ್ನಡಿಗನಾದರೂ ನೋಡಲು ಪಕ್ಕಾ ತಮಿಳರಂತೆಯೇ ಇದ್ದ ಕಾರಣ ಈ ರೀತಿಯ ಮುಜುಗರಕ್ಕೆ ಒಳಗಾಗಿದ್ದ.

raj3

ಎರಡು ಮೂರು ದಿನ ಎಲ್ಲರ ಬಾಯಿಯಲ್ಲಿ, ಟಿವಿಯಲ್ಲಿ, ಪೇಪರಿನಲ್ಲಿ ಎಲ್ಲಾ ಕಡೆಯೂ ಅಣ್ಣಾವ್ರ ಮಾತೇ. ಇಡೀ ರಾಜ್ಯ ಅಘೋಷಿತ ಬಂದ್. ಅಣ್ಣಾವ್ರು ಕಿಡ್ನಾಪ್ ಆದಾಗ ಆಫೀಸಿನಲ್ಲಿ ಇದ್ದವರು ಹೊರಗೆ ಬರಲಾಗದೇ ಮೂರ್ನಾಲ್ಕು ದಿನ ಎಲ್ಲವೂ ಅಲ್ಲಿಯೇ. ಅವರ ಪುಣ್ಯಕ್ಕೆ ನಮ್ಮ ಆಫೀಸಿನ ಪಕ್ಕದಲ್ಲಿಯೇ ಇದ್ದ ಬೃಂದಾವನ್ ಹೋಟೆಲ್ ಇದ್ದ ಕಾರಣ ಅಲ್ಲಿಂದಲೇ ನಮ್ಮ ಕಛೇರಿಯವರು ಎಲ್ಲರಿಗೂ ಊಟ ತಿಂಡಿ ವ್ಯವಸ್ಥೆಯನ್ನು ಮಾಡ್ದಿದ್ದ ಕಾರಣ ವಿಧಿ ಇಲ್ಲದೇ ಅವರೆಲ್ಲರೂ ಎಂದಿನಂತೆ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದ ಕಾರಣ ನನಗೆ ಸ್ವಲ್ಪ ನಿರಾಳವಾಗಿತ್ತು. ಅಗತ್ಯವಿದ್ದಾಗ ಲಾಂಡ್ ಲೈನಿನಿಂದ ಡೈಯಲ್ ಮಾಡಿ, ರಿಮೋಟ್ ಕಂಟ್ರೋಲ್ ಮುಖಾಂತರ ಅಲ್ಪಸ್ವಲ್ಪ ಕೆಲಸ ಮುಗಿಸಿ ಉಳಿದದ್ದೆಲ್ಲವನ್ನೂ ಹುಡುಗರಿಗೆ ಪೋನ್ ಮುಖಾಂತರ ಮಾಡಿ ಹಾಗೂ ಹೀಗೂ ಕೆಲಸ ಮುಗಿಸುತ್ತಿದ್ದೆ.

nokia6100

ನಮ್ಮದೋ online portal ಕಂಪನಿ. ಕ್ಷಣ ಕ್ಷಣಕ್ಕೂ ಅಣ್ಣಾವ್ರ ಕಿಡ್ನಾಪ್ ಬಗ್ಗೆ ಅಪ್ಡೇಟ್ ಮಾಡ್ಬೇಕಾಗಿತ್ತು. ಹಾಗೂ ಹೀಗೂ ಮೂರ್ನಾಲ್ಕು ದಿನ ಕಳೆದ ನಂತರ ಸ್ವಲ್ಪ ತಿಳಿಯಾದ ನಂತರ ನಾನು ಕಛೇರಿಗೆ ಹೋದೆ. ಹೋದ ತಕ್ಷಣವೇ ನಮ್ಮ ಬಾಸ್ ಕರೆದು, ಅಂದಿನ ಕಾಲಕ್ಕೆ ಪ್ರಸಿದ್ಧವಾಗಿದ್ದ Nokia6100 Box piece ಕೈಗಿತ್ತು ಇನ್ನು ಮುಂದೆ ಇದು ನಿನ್ನ official phone ಎಂದು ಕೈಗಿತ್ತಾಗ ಸ್ವರ್ಗಕ್ಕೆ ಮೂರೇ ಗೇಣು. ಅಂದೆಲ್ಲಾ Incoming callಗೆ 4ರೂ. & outgoing callಗೆ 8ರೂ ಇದ್ದ ಜಮಾನ. ಮೊಬೈಲ್ ಫೋನ್ ಸೊಂಟಕ್ಕೆ ನೇತು ಹಾಕಿಕೊಳ್ಳುವುದೇ ಒಂದು ಘನತೆ ಎನ್ನುವಂತಹ ಕಾಲದಲ್ಲಿ ಅಣ್ಣಾವ್ರ ದಯೆಯಿಂದ ನನಗೆ official ಮೊಬೈಲ್ ಬಂದಿತ್ತು.

ಅಣ್ಣಾವ್ರು ಇವತ್ತು ಬಿಡುಗಡೆ ಆಗ್ತಾರೆ ನಾಳೆ ಬಿಡುಗಡೆ ಆಗ್ತಾರೆ ಅಂತ ನಾವೂ ನಮ್ಮ Portalನಲ್ಲಿ ಹಾಕ್ತಾನೇ ಇದ್ವೀ. ಸಮಸ್ತಕನ್ನಡಿಗರೂ ಬಕ ಪಕ್ಷಿಗಳ ತರಹ ಅಣ್ಣಾವ್ರ ಬಿಡುಗಡೆಗೆ ಕಾಯ್ತಾನೇ ಇದ್ರು. ವೀರಪ್ಪನ್ ಕ್ಯಾಸೆಟ್ ಮೇಲೆ ಕ್ಯಾಸೆಟ್ ಕಳಿಸ್ತಾ ಇದ್ನೇ ಹೊರ್ತು ಅವನು ಮಾತ್ರ ನಮ್ಮ ಕರ್ನಾಟಕದ ಪೋಲೀಸರ ಕೈಗೆ ಸಿಗಲೇ ಇಲ್ಲ. ಇಷ್ಟರ ಮಧ್ಯೆ ವೀರಪ್ಪನ್ ತರಹಾನೇ ಮೀಸೆ ಬಿಟ್ಕೊಂಡಿದ್ದ ನಕ್ಕಿರನ್ ಗೋಪಾಲ್ ಮಾತ್ರಾ ಅಡುಗೆ ಮನೆ ಬಚ್ಚಲು ಮನೆಗೆ ಹೋಗುವ ಹಾಗೆ ನಾಡಿಗೂ ಕಾಡಿಗೂ ಅಡ್ಡಾಡುತ್ತಾ ಅಣ್ಣಾವ್ರ ಫೋಟೋ ತಂದು ತೋರಿಸ್ತಿದ್ದದ್ದೇ ಆಯ್ತು. ನಾಗಪ್ಪ ವೀರಪ್ಪನಿಂದ ತಪ್ಪಿಸಿಕೊಂಡು ಬಂದಾಗ ನಮ್ಮ ಆಫೀಸಿನಲ್ಲಿಯೇ ಅವನ Interview ಕೂಡಾ ಮಾಡಿದ್ವಿ. ಅಂತೂ ಇಂತೂ 108 ದಿನಗಳ ನಂತರ ಅಣ್ಣಾವ್ರು ಬಿಡುಗಡೆ ಯಾದ್ಮೇಲೇನೇ ಕರ್ನಾಟಕದಲ್ಲಿ ಹಬ್ಬದ ವಾತಾವರಣ. ಅಣ್ಣಾವ್ರು ನಮ್ಮ ಜೊತೆ ಇಲ್ಲಾ ಅಂತಾ ಬಹುತೇಕ ಕನ್ನಡಿಗರೂ ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಒಂದೂ ಹಬ್ಬವನ್ನೇ ಆಚರಿಸಲಿರಲಿಲ್ಲ.

raj8

ಹೀಗೆ ಪ್ರತೀ ವರ್ಷ ಭೀಮನ ಅಮಾವಾಸ್ಯೆ ಬಂದಾಗಲೂ ನನಗೆ ಅಣ್ಣಾವ್ರು ನನ್ನ ಕಣ್ಣ ಮುಂದೇನೇ ಬಂದು ಹೋಗ್ತಾರೆ. ಅಣ್ಣಾವ್ರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ಸಿನಿಮಾಗಳ ಮುಖಾಂತರ ನಮ್ಮೊಂದಿಗೆ ಚಿರಕಾಲವೂ ಇದ್ದೇ ಇರ್ತಾರೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಬೇಬಿ ಶ್ಯಾಮಿಲಿ

ತೊಂಬತ್ತರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತವಾಗಿ, ಆಗಿನ ಕಾಲದ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಬೆಳೆದು ಅವರಷ್ಟೇ ಇಲ್ಲವೇ ಅವರಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾ, ಆ ಸ್ಟಾರ್ ನಟ-ನಟಿಯರೂ ಈ ಪುಟ್ಟ ಹುಡುಗಿಯ ಕಾಲ್ ಶೀಟಿಗೆ ತಕ್ಕಂತೆ ತಮ್ಮ ಕಾಲ್ ಶೀಟ್ ಅನುಸರಿಸಿಕೊಳ್ಳುವಂತಹ ಸೆಲೆಬ್ರಿಟಿ ಬಾಲ ನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ? ಏನು. ಮಾಡುತ್ತಿದ್ದಾಳೆ ಎಂಬ ಕುತೂಹಲಕಾರಿ ಸಂಗತಿ ಇದೋ ನಿಮಗಾಗಿ.

ಆಗ ತೊಂಬತ್ತರ ದಶಕ. ನಾನಾಗ ಕಾಲೇಜ್ ವಿದ್ಯಾರ್ಥಿ. ಮಣಿರತ್ನಂ ನಿರ್ದೇಶನ ಮತ್ತು ಇಳೆಯರಾಜ ಅವರ ಸಂಗೀತವನ್ನು ಇಷ್ಟ ಪಡುತ್ತಿದ್ದವ. ಈ ಡೆಡ್ಲೀ ಕಾಂಬಿನೇಷನ್ನಿನಲ್ಲಿ ಅಂಜಲಿ ಎಂಬ ಚಿತ್ರ ಬಿಡುಗಡೆಯಾಗಿದ್ದನ್ನು ಕೇಳಿ ನಾನು ಮತ್ತು ನಮ್ಮ ಗೆಳೆಯರೆಲ್ಲಾ ಪಲ್ಲವಿ ಸಿನಿಮಾ ಮಂದಿರದಲ್ಲಿ ನೋಡಲು ಹೋಗಿದ್ದೆವು. ಈಗ ಆ ಚಿತ್ರಮಂದಿರವನ್ನು ಒಡೆದು ಹಾಕಲಾಗಿದೆ ಆದರೂ ಪಲ್ಲವಿ ಟಾಕೀಸ್ ಸ್ಟಾಪ್ ಹೆಸರು ಮಾತ್ರ ಹಾಗೆಯೇ ಉಳಿದುಕೊಂಡು ಗತವೈಭವವನ್ನು ‌ನೆನೆಪಿಸುತ್ತಿದೆ.

ಚಿತ್ರಮಂದಿರದಲ್ಲಿ, ಆರಂಭದಲ್ಲಿ ಮಣಿರತ್ನಂ ಅವರ ಚಿತ್ರ ಕಥೆ ಒಂದು ಕಡೆಯಾದರೆ, ತಮ್ಮ ಐನೂರನೇ ಸಂಗೀತ ಚಿತ್ರನಿರ್ದೇಶನದ ಚಿತ್ರದಲ್ಲಿ ಇಳೆಯರಾಜ ಒಂದಕ್ಕಿಂತ ಒಂದು ಅತ್ಯಮೋಘವಾದ ಹಾಡುಗಳು ಮನಸೂರೆ ಗೊಳ್ಳುತ್ತಿದ್ದಂತೆಯೇ, ಧುತ್ತೆಂದು ಸುಮಾರು ಎರಡು ಅಥವಾ ಎರಡೂವರೇ ವರ್ಷದ ಪುಟ್ಟ ಹುಡುಗಿಯ ಆಗಮನವಾಗುತ್ತಿದ್ದಂತೆಯೇ, ಆಕೆಯ ಮೇಲೆ ನೆಟ್ಟ ನಮ್ಮ ಕಣ್ಣುಗಳನ್ನು ಬೆರೆಡೆಯಲ್ಲಿ ಸರಿಸಲೇ ಆಗಲಿಲ್ಲ. ಅದಾಗಲೇ ಪ್ರಬುದ್ಧ ನಟ ನಟಿಯಾಗಿ ಹೆಸರುವಾಸಿಯಾಗಿದ್ದ ರಘುವರನ್ ಮತ್ತು ರೇವತಿಯವರಿಗಿಂತಲೂ ಒಂದು ಕೈ ಅಧಿಕವಾಗಿ, ಒಬ್ಬ ಮಾನಸಿಕವಾಗಿ ಅಷ್ಟೇನೂ ಬುದ್ಧಿ ಬೆಳಯದಿದ್ದ ಹುಡುಗಿಯ ಪಾತ್ರದಲ್ಲಿ ಯಾವುದೇ ಸಂಭಾಷಣೆಯೇ ಇಲ್ಲದೇ ತನ್ನ ಮನೋಜ್ಞ ಅಭಿನಯದಿಂದ ತನ್ನ ಚೊಚ್ಚಲು ಚಿತ್ರದಲ್ಲೇ ಎಲ್ಲರ ಮನಸ್ಸೂರೆಗೊಂಡಿದ್ದಳು ಬೇಬಿ ಶ್ಯಾಮಿಲಿ. ಆ ಚಿತ್ರದ ಉತ್ತಮ ಬಾಲನಟಿಯಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಬಾಜಿಕೊಳ್ಳುವ ಮುಖಾಂತರ ದಿನ ಬೆಳಗಾಗುವುದರೊಳಗೆ ವಿಶ್ವ ವಿಖ್ಯಾತಳಾಗಿ ಹೋದಳು.

Screenshot 2020-07-18 at 11.18.17 PM

ಜುಲೈ 10, 1987 ರಂದು ಬಾಬು ಮತ್ತು ಆಲಿಸ್ ದಂಪತಿಗೆ ಚೆನ್ನೈನಲ್ಲಿ ಜನಿಸಿದ ಬೇಬಿ ಶ್ಯಾಮಿಲಿಗೆ ಚಿತ್ರರಂಗವೇನೂ ಹೊಸದೇನೂ ಆಗಿರಲಿಲ್ಲ. ಆಕೆಯ ತಂದೆಯೂ ಸಹ ಚಲನಚಿತ್ರ ನಟನಾಗುವ ಹಂಬಲದಿಂದ ಮದ್ರಾಸ್‌ಗೆ ವಲಸೆ ಬಂದು ಅದು ಸಾಧ್ಯವಾಗದೇ ಹೋದಾಗ, ತಮ್ಮ ಮಕ್ಕಳ ಮೂಲಕ ಅವರ ಮಹತ್ವಾಕಾಂಕ್ಷೆಯನ್ನು ಈಡೇರಿಕೊಂಡವರು. ಶ್ಯಾಮಿಲಿಯ ಅಕ್ಕ ಶಾಲಿನಿ ಅದಾಗಲೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರಾಂತ ಬಾಲನಟಿಯಾಗಿ ಪ್ರಖ್ಯಾತಳಾಗಿದ್ದಳು ಮತ್ತು ಮುಂದೆ ಆಕೆ ದೊಡ್ಡವಳಾಗಿ ನಟ ಅಜಿತ್ ಅವರನ್ನು ವರಿಸಿದ್ದಾಳೆ. ಇನ್ನು ಸಹೋದರ ರಿಚರ್ಡ್ ರಿಷಿ ಕೂಡ ಚಲನ ಚಿತ್ರ ನಟನೇ ಹೌದು. ಹೀಗೆ ನಟ ನಟಿಯರೇ ಅವರ ಕುಟುಂಬದಲಿದ್ದಾರೆ.

1990 ರ ಅಂಜಲಿ ಚಲನಚಿತ್ರದಲ್ಲಿ ಮಾನಸಿಕ ಸವಾಲಿನ ಮಗುವಿನ ಪಾತ್ರದಲ್ಲಿ ಸೈ ಎನಿಸಿಕೊಂಡು ಹತ್ತು ಹಲವಾರು ಪ್ರಶಸ್ತಿಗಳನ್ನು ಚಾಜಿಕೊಂಡನೆಯೇ ಆಕೆಗೆ ದಕ್ಷ್ಣಿಣ ಭಾರತದ ಅಷ್ಟೂ ಭಾಷೆಯ ಚಿತ್ರರಂಗದಲ್ಲಿ ಅವಕಾಶಗಳ ಮಹಾಪೂರವೇ ಹರಿಯತೊಡಗಿತು. ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಚಿತ್ರಗಳಲ್ಲಿ ಹೆಚ್ಚಿನ ಬೇಡಿಕೆಯುಳ್ಳ ಬಾಲ ನಟಿಯಾಗಿದ್ದಲ್ಲದೇ, ಆಕೆಯನ್ನು ಮನಸ್ಸಿನಲ್ಲಿಟ್ಟು ಕೊಂಡೇ ಅನೇಕ ಚಿತ್ರಕಥೆಗಳನ್ನು ಬರೆಯತೊಡಗಿದವು. ಜೆಸ್ಸಿಕಾ ಮೆಕ್ಕ್ಲೂರ್ ಆಧಾರಿತ ಭರತನ್ ಅವರ ಮಾಲೂಟ್ಟಿ ಎಂಬ ಮಲೆಯಾಳಿ ಚಿತ್ರದಲ್ಲಿ ಬೋರ್-ಬಾವಿಯೊಳಗೆ ಸಿಕ್ಕಿಬಿದ್ದ ಮಗುವಿನ ಆಕೆಯ ಅಭಿನಯಕ್ಕಾಗಿ ಆಕೆಗೆ ಕೇರಳ ರಾಜ್ಯದ ಅತ್ಯುತ್ತಮ ಬಾಲ ಕಲಾವಿದರಿಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿತು. ಕನ್ನಡದಲ್ಲಿ ವಿಷ್ಣುವರ್ಧನ್ ಮತ್ತು ಅನಂತ್ ನಾಗ್ ಕೊತೆಯಲ್ಲಿ ಅಭಿನಯಿಸಿದ ಮತ್ತೆ ಹಾಡಿತು ಕೋಗಿಲೆ ಚಿತ್ರದ ಅಭಿನಯಕ್ಕಾಗಿ ಶ್ಯಾಮಿಲಿಗೆ ಅತ್ಯುತ್ತಮ ಬಾಲ ಕಲಾವಿದರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿತ್ತು.

kogile

ಕನ್ನಡದಲ್ಲಿ ಸುಪ್ರಸಿದ್ಧ ನಟರಾದ ವಿಷ್ಣುವರ್ಧನ್, ಅಂಬರೀಶ್, ಸೀತಾರಾ, ಶ್ರುತಿ, ಶ್ರೀನಾಥ್, ಗೀತಾ, ಮೇಘನಾ, ವಿನಯ ಪ್ರಸಾದ್, ಸುನಿಲ್, ಸತ್ಯಪ್ರಿಯಾ, ಭಾವ್ಯಾ, ಲಕ್ಷ್ಮಿ ಮತ್ತು ಅಭಿಜಿತ್ ಹೀಗೆ ಬಹುತೇಕ ಎಲ್ಲಾ ನಟ ನಟಿಯರೊಂದಿಗೆ ದಕ್ಷಾಯಿನಿ, ಕಾದಂಬರಿ, ಕರುಳಿನ ಕುಡಿ, ಭೈರವಿ ಚಿನ್ನಾ ನೀ ನಗುತಿರು, ಭುವನೇಶ್ವರಿ, ಮತ್ತೆ ಹಾಡಿತು ಕೋಗಿಲೆ, ಹೂವು ಹಣ್ಣು ಜಗದೇಶ್ವರಿ ಹೀಗೆ ಹತ್ತು ಹಲವಾರು ಚಿತ್ರಗಳು ಆಕೆಯ ಅಭಿನಯದಿಂದಲೇ ಯಶಸ್ವೀಯಾಯಿತು ಎಂದರೂ ಅತಿಶಯೋಕ್ತಿಯೇನಲ್ಲ.

ಶೃತಿ, ಆಭಿಜಿತ್ ಮತ್ತು ಶ್ಯಾಮಿಲಿ ಜೋಡಿಯ ಮಕ್ಕಳ ಭಕ್ತಿ ಪ್ರಧಾನ ಚಿತ್ರಗಳು ಗಲ್ಲಾ ಪೆಟ್ಟಿಗೆಯನ್ನು ಸೂರೆಗೊಂಡಿದ್ದವು. ಹಾಗಾಗಿ, ಬೇಬಿ ಶ್ಯಾಮಿಲಿ ಅವರ ಚಿತ್ರ ನಿರ್ಮಿಸಿದರೆ ಸಾಕು ಸಿನಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಮತ್ತು ಚಿತ್ರ ಹಿಟ್ ಆಗುತ್ತದೆ ಎಂಬುದು ಆಗಿನ ನಿರ್ಮಾಪಕರ ಲೆಕ್ಕಾಚಾರವಾಗಿತ್ತು. ಈ ಲೆಕ್ಕಾಚಾರ ಬಹುತೇಕ ಸತ್ಯವೂ ಆಗಿತ್ತು.

smaili2

ಈ ಹೊತ್ತಿಗಾಗಲೇ ಸ್ವಲ್ಪ ದೊಡ್ಡವಳಾಗಿ ಬೆಳೆದು ಬಾಲನಟಿಯ ಮುಗ್ಧತೆ ಮಾಯವಾಗಿದ್ದ ಕಾರಣ ಅವಕಾಶಗಳು ಕಡಿಮೆಯಾಗ ತೊಡಗಿದಾಗ ಚಿತ್ರರಂಗಕ್ಕೆ ತಾತ್ಕಾಲಿಕ ಬ್ರೇಕ್ ನೀಡಿ ತನ್ನ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ ಶ್ಯಾಮಿಲಿ ತಮ್ಮ ಕಾಲೇಜಿಗೆ ಬರುವಷ್ಟರಲ್ಲಿ ಅತ್ಯಂತ ಸುಂದರವಾಗಿ ಕಾಣತೊಡಗಿದಾಗ ಮತ್ತೆ ಚಿತ್ರ ರಂಗ ಆಕೆಯನ್ನು ನಾಯಕಿಯನ್ನಾಗಿ ನೋಡ ತೊಡಗಿತು. ಚಿಕ್ಕ ವಯಸ್ಸಿನಲ್ಲಿಯೇ ಬಾಲ ನಟಿಯಾಗಿ ಅಷ್ಟೋಂದು ಪ್ರಸಿದ್ಧವಾಗಿದ್ದ ಈಕೆ ಹೀರೋಯಿನ್ ಆಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಾ, ದೊಡ್ಡ ನಟಿ ಆಗುತ್ತಾಳೆ ಎಂದೇ ಎಲ್ಲರೂ ಭಾವಿಸಿದ್ದರು. ಆಕೆ ತಮಿಳು ಚಿತ್ರವೊಂದರ ಮೂಲಕ ನಾಯಕಿಯಾಗಿ ತನ್ನ ಭವಿಷ್ಯವನ್ನು ಪರೀಕ್ಷಿಸಿದಳಾದರೂ, ಚಿತ್ರ ಫ್ಲಾಪ್ ಆಗುವ ಮೂಲಕ ಆಕೆಯ ಆಸೆಗೆ ತಣ್ಣೀರೆರೆಚಿತು. ನಂತರ ತೆಲುಗಿನ ಓಯೆ! ಎಂಬ ಚಿತ್ರದ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬೇಬಿ ಶ್ಯಾಮಿಲಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡ ಕಾರಣ ಮತ್ತೆ ಆಕೆ ಮತ್ತೊಂದು ವಿಶ್ರಾಂತಿ ಪಡೆಯುವಂತಾಯಿತು. ಈ ಸಮಯದಲ್ಲಿ ಆಕೆ 2010 ರಿಂದ 2015ರ ನಡುವೆ ಸಿಂಗಪುರದಲ್ಲಿ ಅಧ್ಯಯನ ಮಾಡಿ ಕೆಲಕಾಲ ಅಲ್ಲಿ ಕೆಲಸವನ್ನೂ ಮಾಡಿದ ನಂತರ ಮತ್ತೆ ಚೆನ್ನೈಗೆ ಹಿಂದಿರುಗಿ, ಕೆಲ ಸಿನಿಮಾಗಳಲ್ಲಿ ಅಭಿನಯಿಸಿದರೂ ಬಾಲ ನಟಿಯಾಗಿ ಪಡೆದ ಯಶಸ್ಸು ಕಾಣಲಿಲ್ಲ. ತೆಲುಗಿನಲ್ಲಿ ಓಯ್ ನಂತರ ಅಮ್ಮಮ್ಮಗಾರಿಲ್ಲು ಜೊತೆಗೆ ಒಂದು ತಮಿಳು ಹಾಗೂ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿದರೂ, ಈ ಚಿತ್ರಗಳು ಯಾವಾಗ ತೆರೆಕಂಡು ರಿಲೀಸ್ ಆದವು ಎಂದೇ ತಿಳಿಯದಂತಾಯಿತು. ಹೀಗೆ ಮತ್ತೇ ಅವಕಾಶ ಸಿಕ್ಕರೆ ಸಾಕು ಎನ್ನುವಂಥದ್ದು ಪರಿಸ್ಥಿತಿ ತಲುಪಿರುವುದಂತೂ ಸುಳ್ಳಲ್ಲ.

ಕನ್ನಡದಲ್ಲಿ ಶಿವಣ್ಣನ ತಂಗಿ ಪಾತ್ರದಲ್ಲಿ ನಟಿಸುವಂತೆ ಶಾಮಿಲಿ ಅವಕಾಶ ಕೊಟ್ಟರೂ, ಡೇಟ್ಸ್ ಇಲ್ಲವೆಂಬ ನೆಪದಿಂದ ಒಪ್ಪಿಕೊಂಡಿರಲಿಲ್ಲವಂತೇ. ಅದೇ ರೀತಿ ಸುದೀಪ್ ಅಭಿನಯದ ಕೋಟಿಗೊಬ್ಬ2 ಚಿತ್ರದಲ್ಲಿಯೂ ಶ್ಯಾಮಿಲಿ ಅಭಿನಯಿಸಲಿದ್ದಾರೆ ಎಂಬ ಗಾಢವಾದ ವದಂತಿ ಇತ್ತಾದರೂ ಅದು ವದಂತಿಯಾಗಿಯೇ ಉಳಿದು ಹೋಯಿತು.

ಬಾಲ ನಟಿಯಾಗಿ ಒಂದು ಕಾಲದಲ್ಲಿ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಟಾಪ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದ ನಟಿ ಇದ್ದಕ್ಕಿದ್ದಂತೆ ಈ ರೀತಿ ಆಗಲು ಕಾರಣವೇನು ಎಂದು ಹುಡುಕಲು ಹೊರಟಾಗ ಸಿಕ್ಕಿದ ಉತ್ತರವೇ ಆಕೆಯ ಉದ್ಧಟತನ ಮತ್ತು ಸ್ವಲ್ಪ ಅಹಂ. ಬಾಲನಟಿಯಾಗಿ ಗಳಿಸಿದ್ದ ಅದೇ ಯಶಸ್ಸು ಈಗ ನಾಯಕಿಯದಾಗಲೂ ಸಿಗುತ್ತದೆ ಎಂದು ಭಾವಿಸಿದ್ದದ್ದೇ ಆಕೆಯ ಪಾಲಿಗೆ ಮುಳುವಾಯಿತು. ಕಾಲಾಯ ತಸ್ಮೈ ನಮಃ ಎನ್ನುವಂತೆ ಹಿಂದಿನದ್ದೆಲ್ಲವನ್ನೂ ಮರೆತು ಈಗಿನ ಪರಿಸ್ಥಿತಿಗೆ ತನ್ನನ್ನು ತಾನು ಅಳವಡಿಸಿಕೊಳ್ಳಲು ಆಕೆ ಎಡವಿದ್ದಳು. ವಿದ್ಯೆ, ವಿನಯವನ್ನು ಕೊಡುವಂತಹ ಶಿಕ್ಷಣ ಮಾಯವಾಗಿ ಎಲ್ಲರೂ ತೋರಿಕೆಗೆ ಮತ್ತು ಹಾರಿಕೆಗಾಗಿ ವಿದ್ಯೆಯನ್ನು ಬಳಸಿಕೊಳ್ಳುತ್ತಿರುವುದು ಮತ್ತು ಹತ್ತಿದ ಮೇಲೆ ಏಣಿಯ ಹಂಗೇಕೆ ಎನ್ನುವ‌ ಧೋರಣೆಯ ಫಲವೇ ಇಂತಹ ಸೋಲಿಗೆ ಕಾರಣವಾಗುತ್ತದೆ ಎಂಬುವ ಎಚ್ಚರಿಕೆಯ ಗಂಟೆಯನ್ನು ಆಕೆಯ ಅನುಭವದಿಂದ ಕಲಿಯಬಹುದಾಗಿದೆ.

samili1

ಆಕೆಯ ಕೈಯಿಂದ ಹಲವಾರು ಚಿತ್ರಗಳ ಆಫರ್ ತಪ್ಪಿ ಹೋಗಲು ಆಕೆಯ ವರ್ತನೆ ಮತ್ತು ಭಯಂಕರ ಸಿಟ್ಟು ಕೂಡ ಒಂದು ಕಾರಣವಂತೆ. ಚಿತ್ರದ ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಬಾರದ ಕಾರಣ ಬೇಸತ್ತ ನಿರ್ಮಾಪಕರು ಮತ್ತು ನಿರ್ದೇಶಕರು ಆಕೆಯ ಜೊತೆ ಚಿತ್ರ ಮಾಡಲು ಹಿಂದೇಟು ಹಾಕುತ್ತಿರುವುದು ಇದೀಗ ಹರಿದಾಡುತ್ತಿರುವ ಸುದ್ದಿ. ಒಟ್ಟಾರೆಯಾಗಿ ಶ್ಯಾಮಿಲಿ ಅವರು ತಮ್ಮ ನಡವಳಿಕೆಯಿಂದಾಗಿ ಹಲವಾರು ದೊಡ್ಡ ಮಟ್ಟದ ಚಿತ್ರಗಳ ಆಫರ್ ಕೈ ತಪ್ಪಿಸಿಕೊಂಡಿದ್ದಾರೆ ಎಂಬುದು ಸದ್ಯದ ಮಾತುಗಳು.

ಹೀಗೆ ಬಾಲ ನಟಿಯಾಗಿ ತನ್ನ ಮುಗ್ಧ ಅಭಿನಯ ಮತ್ತು ಮುದ್ದು ಮುದ್ದಾಗೊ ಮಾತನಾಡುತ್ತಾ ಎಲ್ಲರ ಮನಸ್ಸೆಳಿದಿದ್ದ ಬೇಬಿ ಶ್ಯಾಮಿಲಿಯನ್ನು ಈಗ ಬದಲಾದ ಕಾಲದಲ್ಲಿ ಮರತೇ ಹೋಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸ್ಟಾರ್ ಆಗಿ ಮಿಂಚಿದ್ದ ಬೇಬಿ ಶ್ಯಾಮಿಲಿ ಮತ್ತೆ ಸಿನಿಮಾ ಮಾಡಿದ್ದಾರೆ ಎಂದರೆ ಅದನ್ನು ನೋಡಲು ಚಿತ್ರಮಂದಿರದತ್ತ ಹೋಗುವವರು ಈಗ ಯಾರೂ ಇಲ್ಲವಾಗಿರುವ ಕಾರಣ ಈಗ ಶ್ಯಾಮಿಲಿ ಕೆಲವು ಬ್ರಾಂಡ್ ಗಳಿಗೆ ಮಾಡಲಿಂಗ್ ಮಾಡುತ್ತಾ ಮನೆಯಲ್ಲೇ ಪೇಂಟಿಂಗ್ ಮಾಡುತ್ತಾ ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಾ ಕಾಲ ಕಳೆಯುತ್ತಾ ಚಿತ್ರರಂಗದಲ್ಲಿನ ಅವಕಾಶಗಳಿಗೆ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತಿರುವುದು ಸ್ವಯಂಕೃತಾಪರಾಧವೇ ಸರಿ. ಇನ್ನೂ ಕಾಲ ಮಿಂಚಿಲ್ಲ. ಆದ ತಪ್ಪನ್ನು ತಿದ್ದಿಕೊಂಡು ನಡವಳಿಯನ್ನು ಬದಲಿಸಿಕೊಂಡಲ್ಲಿ ಮತ್ತೆ ಆಕೆಯನ್ನು ತುಂಬು ಹೃದಯದಿಂದ ಪ್ರೇಕ್ಷಕರು ಸ್ವೀಕರಿಸುತ್ತಾರೆ.

ಏನಂತೀರೀ?

ಸುಶಾಂತ್ ಸಿಂಗ್ ರಜಪೂತ್

ನೆನ್ನೆ ಇಡೀ ದಿನ ಯಾವುದೇ ದೃಶ್ಯ ಮಾಧ್ಯಮ ಮತ್ತು ಫೇಸ್ ಬುಕ್ ವಾಲ್ ಗಳಲ್ಲಿ, ವಾಟ್ಸ್ಯಾಪ್ ಡಿಪಿಗಳಲ್ಲಿ ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿಪ್ಪಿರುವ ಸುದ್ದಿಯದೇ ಚರ್ಚೆ. ಅವನ ಸಾವಿನ ಪರ-ವಿರೋಧಗಳನ್ನು ತಮ್ಮ ತಮ್ಮ ಶೈಲಿಯಲ್ಲಿ ಸಂತಾಪಸೂಚಿಸುತ್ತಿದ್ದರು. ಅದರಲ್ಲೊಬ್ಬರು, ಕಳೆದ ವಾರ ಕನ್ನಡ ಚಿರಂಜೀವಿ ಸರ್ಜಾ ಈ ವಾರ ಸುಶಾಂತ್ ಮರಣ ಹೀಗೆ ಇಬ್ಬರು ಉದಯೋನ್ಮುಖ ಕಲಾವಿದರುಗಳು ವಿಧಿವಶರಾಗಿರುವುದು ನಿಜಕ್ಕೂ ದುಃಖಕರ ಎಂದು ವ್ಯಕ್ತಪಡಿಸಿದ್ದರು. ಅದನ್ನು ನೋಡಿದ ನಾನು ಕಳೆದವಾರ ವಿಧಿಯಾಟವಾದರೇ ಈ ವಾರ ಸ್ವಯಂಕೃತಾಪರಾಧ. ಮೊದಲನೆಯದ್ದಕ್ಕೆ ವಿಷಾಧವಿದೆ ಎರಡನೆಯದಕ್ಕೆ ವಿರೋಧವಿದೆ ಎಂದು ಪ್ರತಿಕ್ರಿಯಿಸಿದೆ.

su1

ಹಾಗೆಂದ ಮಾತ್ರಕ್ಕೆ ಸುಶಾಂತ್ ಸಾವನ್ನು ನಾನು ಸಂಭ್ರಮಿಸುತ್ತಿಲ್ಲ. ಅವನ ಅಕಾಲಿಕ ಮರಣದ ಬಗ್ಗೆ ದುಃಖವಿದೆಯಾದರೂ ಸಾವಿಗಾಗಿ ಆತನು ಆರಿಸಿಕೊಂಡ ವಿಧಾನದ ಬಗ್ಗೆ ಬೇಸರವಿದೆ ಮತ್ತು ವಿರೋಧವಿದೆ. 1986 ಜನವರಿ 21ರಂದು ಬಿಹಾರ್ ರಾಜ್ಯದ ಪಾಟ್ನಾ ದಲ್ಲಿ ಜನಿಸಿದ್ದ ಸುಶಾಂತ್ ಜನ್ಮತಃ ಸುರದ್ರೂಪಿ ಮತ್ತು ಬುದ್ಧಿವಂತ ಕೂಡ. AIEEEನಲ್ಲಿ 7ನೇ ರ್ಯಾಂಕ್ ಪಡೆದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ಅತನ ಕೆನ್ನೆಯಲ್ಲಿ ಬೀಳುವ ಗುಳಿಗಳಿಂದಲೇ ಎಲ್ಲರರನ್ನೂ ಆಕರ್ಶಿಸವಲ್ಲವನಾಗಿದ್ದರಿಂದಲೇ ತನ್ನ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದಾಗಲೇ ಮಾಡಲಿಂಗ್ ಪ್ರಪಂಚದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವ ನಂತರ ಹಿಂದಿ ಕಿರುತೆರೆಯಲ್ಲಿ ನಟನಾ ವೃತ್ತಿ ಆರಂಭಿಸಿಕಿಸ್ ದೇಶ್ ಮೆ ಹೇ ಮೇರಾ ದಿಲ್, ಪವಿತ್ರ ರಿಶ್ತಾ ಧಾರವಾಹಿಗಳಲ್ಲಿನ ಲವಲವಿಕೆಯ ಅಭಿನಯಾ ಮೂಲಕ ಬಲು ಬೇಗನೆ ಬಹಳಷ್ಟು ಪ್ರಸಿದ್ದಿ ಪಡೆದುಕೊಂಡಿದ್ದ.

Sushant-Singh-Rajput-dead

2013ರಲ್ಲಿ ಕಾಯ್ ಪೋ ಚೆ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಲಗ್ಗೆ ಹಾಕಿದ ಸುಶಾಂತ್ ಈ ಚಿತ್ರದ ಅದ್ಭುತ ನಟನೆಗಾಗಿ ಫಿಲ್ಮಫೇರ್ ಪ್ರಶಸ್ತಿಗೂ ನಾಮಿನೇಟ್ ಆಗಿದ್ದ. ನಂತರ ಶುದ್ಧ ದೇಸಿ ರೊಮ್ಯಾನ್ಸ್, ಡಿಟಿಕ್ಟಿವ್ ಬ್ಯೋಂಕೇಶ್ ಬಕ್ಷಿ ಚಿತ್ರದಲ್ಲಿ ನಟಿಸಿ, 2014ರಲ್ಲಿ ಅನುಷ್ಕಶರ್ಮನ ಜೋಡಿಯಾಗಿ ಪಿಕೆ ಚಿತ್ರದಲ್ಲಿ ಸರ್ಫರಾಜ್ ಆಗಿ ಕಾಣಿಸಿಕೊಂಡಿದ್ದು ಆತನಿಗೆ ದೊಡ್ಡ ಹೆಸರನ್ನು ತಂದು ಕೊಟ್ಟಿತು. ಆದಾದ ನಂತರ ಭಾರತೀಯ ಕ್ರಿಕೆಟ್ ಲೋಕದ ಯಶಸ್ವಿ ನಾಯಕನಾದ ಮಹೇಂದ್ರ ಸಿಂಗ್ ಜೀವನಾಧಾರಿತ ಚಿತ್ರ ಎಂ ಎಸ್ ಧೋನಿ, ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ನಾಯಕನದಾಗ ಎಲ್ಲರ ಗಮನ ಈತನತ್ತ ಹರಿಯತೊಡಗಿತು. ಆ ಚಿತ್ರಕ್ಕಾಗಿ ಹಲವರು ತಿಂಗಳುಗಳ ಕಾಲ ಆತನ ಪರಿಶ್ರಮ ವ್ಯರ್ಥವಾಗದೇ, ದೋನಿಯ ರೂಪದಲ್ಲಿ ಅತನ ಪರಕಾಯಪ್ರವೇಶ ಚಿತ್ರವನ್ನು ಯಶಸ್ವಿಗೊಳಿಸಿದ್ದಲ್ಲದೇ ದಿನಬೆಳಗಾಗುವುದರಲ್ಲಿ ಆತ ಅನಾಯಾಸವಾಗಿ ಸ್ಟಾರ್ ಪಟ್ಟಕ್ಕೇರಿಬಿಟ್ಟಿದ್ದ. 2019ರಲ್ಲಿ ತೆರೆಕಂಡ ನಂತರ ಕೇದಾರನಾಥ್ ಮತ್ತು ಚಿಚೋರೆ ಚಿತ್ರಗಳಲ್ಲಿನ ಆತನ ಅಭಿನಯದಿಂದಾಗಿ ಈತ ಹಿಂದೀ ಚಿತ್ರರಂಗದಲ್ಲಿ ಚಿರಕಾಲ ಮಿಂಚಬಲ್ಲ ತಾರೆ ಭರವಸೆ ಮೂಡಿಸಿದ್ದದ್ದು ಸುಳ್ಳಲ್ಲ.

ಯಾವಾಗ ಸ್ಟಾರ್ ಗಿರಿ ಆತನ ನೆತ್ತಿಗೇರಿತೋ ಆಗಲೇ ತನ್ನ ಮನದಾಳದಲ್ಲಿ ಮುಚ್ಚಿಟ್ಟುಕೊಂಡಿದ್ದ ಎಡಪಂಕ್ತೀಯ ಧೋರಣೆಯನ್ನು ಸಾರ್ವಜನಿಕವಾಗಿ ಪ್ರಕಟಿಸತೊಡಗಿದ. ತನ್ನ ಅಭಿನಯ ಮತ್ತು ಪರಿಶ್ರಮದ ಮೂಲಕ ಚಿತ್ರರಂಗದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಬದಲು ನಕಲಿ ಜಾತ್ಯಾತೀತರ ಬಕೆಟ್ ಹಿಡಿಯಲು ಆರಂಭಿಸಿದ.ಬಾಲಿವುಡ್ ಸಿನಿಮಾ ಜಗತ್ತನ್ನು ತನ್ನ ಕಬಂಧ ಬಾಹುಗಳಿಂದ ಖಾನ್ ಗಳ ಮೂಲಕ ಆಳುತ್ತಿರುವ ದಾವೂದ್ ಮತ್ತವನ ತಂಡಕ್ಕೆ ಬಹುಪರಾಕ್ ಹೇಳಿದರೆ ಹಿಂದಿ ಚಿತ್ರರಂಗದಲ್ಲಿ ಬಹಳ ಕಾಲ ಉಳಿಯಬಹುದೆಂಬ ಭ್ರಮೆಯನ್ನು ಕಾಣತೊಡಗಿದ. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಜಾವೇದ್ ಅಖ್ತರ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ಮುಂತಾದ ಖಾನ್ ಪ್ರಿಯರೊಂದಿಗೆ ಹೆಚ್ಚಾಗಿ ಗುರಿತಿಸಿಕೊಳ್ಳತೊಡಗಿದ್ದಲ್ಲದೇ, ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪಟ್ಟಕ್ಕೇರಿದ ಕೂಡಲೇ ಈತನಿಗೂ ಅಸಹಿಷ್ಣುತೆ ಆರಂಭವಾಗತೊಡಗಿತು. ಉತ್ತರ ಪ್ರದೇಶದ ಅಖ್ಲಾಕ್ ಸಾವಿಗೆ ಸಂತಾಪ ವ್ಯಕ್ತಪಡಿಸುವ ಭರದಲ್ಲಿ ತಾನು ರಜಪೂತ ವಂಶದಲ್ಲಿ ಹುಟ್ಟಿದ್ದಕ್ಕೇ ನನಗೆ ನಾಚಿಕೆ ಆಗುತ್ತಿದೆ ಎನ್ನುವ ಆತನ ಸಾರ್ವಜನಿಕ ಹೇಳಿಕೆ ಎಲ್ಲರ ಹುಬ್ಬನ್ನೇರಿಸಿತು. ನೆನ್ನೆ ಮೊನ್ನೆ ಪ್ರವರ್ಧಮಾನಕ್ಕೆ ಬರುತ್ತಿರುವ ನಟನ ಈ ರೀತಿಯ ಉದ್ಧಟತನದ ಹೇಳಿಕೆ ಸಾರ್ವಜನಿಕವಾಗಿ ಅನೇಕ ವಿರೋಧಾಭಾಸವನ್ನು ಎದುರಿಸಬೇಕಾಯಿತು. ವಿದೇಶಿ ಹವಾಲಾದ ಬಗ್ಗೆ ಕಠಿಣ ನಿರ್ಧಾರ ಮತ್ತು ನೋಟ್ ಬ್ಯಾನ್ ಮಾಡಿದ ಮೇಲಂತೂ ಬಾಲಿವುಡ್ದಿನಲ್ಲಿ ಅರ್ಥಿಕ ತೊಂದರೆಗಳನ್ನು ಎದುರಿಸಬೇಕಾಯಿತು. ಅದಲ್ಲದೇ ಖಾನ್ ಗಳ ಚಿತ್ರ ಯಾವಾಗ ಮೇಲಿಂದ ಮೇಲೆ ಸೋಲನ್ನನುಭಿಸತೊಡಗಿತೋ ಆಗ ಅವರನ್ನು ಕೇಳೋರೆ ಇಲ್ಲವಾಯ್ತು. ಕಾಳ ಧನ ಬಿಳಿ ಮಾಡುವ ಅವಕಾಶ ಇಲ್ಲದೆ ಹೋದಾಗ ಸುಶಾಂತ್ ರಜಪೂತ್ ನಂತರ ಹೊಸಾ ನಟರಿಗೂ ಚಿತ್ರಗಳು ಸಿಗದಂತಾದಾಗ ಮೋದಿಯ ಆಡಳಿತವನ್ನು ವಿರೋಧಿಸುತ್ತಾ ಹಿಂದೂಧರ್ಮವನ್ನೇ ಹೀಯಾಳಿಸೋ ವೃತ್ತಿಗೆ ಅವರೆಲ್ಲರೂ ಇಳಿದಾಗ ಗುಂಪಿನಲ್ಲಿ ಗೋವಿಂದಾ ಎನ್ನುವಂತೆ, ದೇಶದ ಇತಿಹಾಸದಲ್ಲಿ ಕ್ಷಾತ್ರತೇಜಕ್ಕೆ ಹೆಸರಾಗಿದ್ದ ರಜಪೂತರ ವಂಶದವನಾಗಿ ರಜಪೂತರನ್ನೇ ದೂಷಿಸುವ ಮಟ್ಟಕ್ಕೆ ಹೋಗಿದ್ದದ್ದೇ ಅಕ್ಷ್ಮಮ್ಯ ಅಪರಾಧ ಎನಿಸಿತಲ್ಲದೆ ಆತನ ಅವನತಿಗೆ ಕಾರಣವಾಯಿತು.

ನೆನ್ನೆ ಬೆಳಿಗ್ಗೆಯವರೆಗೂ ಚೆನ್ನಾಗಿಯೇ ಇದ್ದ 34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯ ಬೆಡ್ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಎಂತಹ ಸಂದರ್ಭದಲ್ಲೂ ಧೃತಿಗೆಡದೇ ಸ್ವಾವಲಂಭಿಗಳಾಗಿ ದೇಶಾದ್ಯಂತ ವ್ಯಾಪಾಗಳಾಗಿ ದೇಶದ ಅರ್ಥಿಕ ಸಧೃಢತೆಗೆ ಕಾರಣವಾಗಿರುವ ರಜಪೂತರಿಗೇ ಅವಮಾನ ಮಾಡಿದ್ದಾನೆ ಎಂದರೆ ತಪ್ಪಾಗಲಾರದು. ಇದುವರೆಗೂ ಆತನ ಅತ್ಮಹತ್ಯೆಗೆ ಕಾರಣವೇನೂ ಎನ್ನುವುದು ತಿಳಿಯದಿದ್ದರೂ, ಕಳೆದ 6 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

su2

ಇಂತಹ ಕಠಿಣ ನಿರ್ಧಾರಕ್ಕೆ ಕಾರಣವೇನು ಎಂಬುದು ನೆನ್ನೆಯಿಂದಲೂ ಬಹಳವಾಗಿ ಚರ್ಚೆಯ ವಿಷಯವಾಗಿದೆ. ಆತನ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕೆಲ ದಿನಗಳ ಹಿಂದಷ್ಟೇ ನಿಶ್ಚಿತಾರ್ಥಮಾಡಿಕೊಂಡಿದ್ದು ಇಲ್ಲವೇ ಒಂದು ವಾರದ ಹಿಂದೆ ಆತನ ಮಾಜಿ ಮ್ಯಾನೇಜರ್ ಆಗಿದ್ದ ದಕ್ಷಿಣ ಕನ್ನಡದ ಮೂಲದ ದಿಶಾ ಸಾಲಿಯಾನ್ ಕೂಡಾ ಸಂಶಯಾಸ್ಪದವಾಗಿ ಮರಣ ಹೊಂದಿದ್ದೂ ಕೂಡಾ ಈತನ ಸಾವಿನ ಜೊತೆಗೆ ತಳುಕು ಹಾಕಿಕೊಳ್ಳುತ್ತಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ದೀರ್ಘಕಾಲದ ಖಿನ್ನತೆ ಮತ್ತು ಒಂಟಿತನ ಅವನ ಜೀವನವನ್ನು ಈ ರೀತಿಯಾಗಿ ಕೊನೆಗೊಳಿಸುವ ಹಠಾತ್ ನಿರ್ಧಾರಕ್ಕೆ ಬರಲೂ ಕಾರಣವಾಗಿರಬಹುದಾಗಿದೆ.

ಈ ರೀತಿಯಾದ ಸಾವು ನಿಜಕ್ಕೂ ಇಂದಿನ ಯುವಕರಿಗೆ ಅದರಲ್ಲೂ ಧಿಢೀರ್ ಆಗಿ ಪ್ರಜ್ವಲಿಸಿ ಪ್ರವರ್ಧಮಾನಕ್ಕೆ ಬರಬೇಕು ಎಂದು ಬಯಸುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಹಾಗಾಗಿ ನಾವೆಲ್ಲರೂ ಈ ಸಾವನ್ನು ಒಬ್ಬ ಸೆಲೆಬ್ರಿಟಿಯ ಆತ್ಮಹತ್ಯೆ ಎಂದು ತಿಪ್ಪೆಗೆ ಸಾರಿಸದೆ, ಈ ಘಟನೆಯಿಂದ ಎಚ್ಚರಗೊಂಡು ನಮ್ಮನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳುವ ಸರಿಯಾದ ಸಮಯ ಸಂಧರ್ಭ ಬಂದಿದೆ ತಿಳಿದೋ ಇಲ್ಲವೇ ತಿಳಿಯದೆಯೋ, ಯಾರನ್ನೋ ಮೆಚ್ಚಿಸಲು ಮತ್ತು ಸಮಾಜವನ್ನು ಮೆಚ್ಚಿಸಲು, ತಮ್ಮ ತನವನ್ನು ಬಿಟ್ಟು ಬಕೆಟ್ ಹಿಡಿಯಲು ಹೋಗಿ ನೀರೀಕ್ಷೆಗೆ ತಕ್ಕಂತೆ ತಮಗೆ ಸಿಗಬೇಕಾದದ್ದು ಸಿಗದಿದ್ದಾಗ, ಈ ರೀತಿಯ ಹಾದಿ ತಪ್ಪುವುದು ಸಹಜ. ಇತರರ ನಿರೀಕ್ಷೆಗೆ ತಕ್ಕಂತೆ ಬದುಕುವುದನ್ನು ಬಿಟ್ಟು ನಮ್ಮ ತನವನ್ನು ನಾವು ಎಂದಿಗೂ ಉಳಿಸಿಕೊಂಡಾಗಲೇ ಸಾರ್ವಜನಿಕ ಜೀವನದಲ್ಲಿ , ನಾವು ಸಂತೋಷವಾಗಿರುತ್ತೇವೆ. ಯಾರನ್ನೋ ಮೆಚ್ಚಿಸಲು ನಾವು ನಂಬಿದ ಸಿದ್ಧಾಂತಗಳನ್ನು ಗಾಳಿಗೆ ತೂರಿದಾಗಲೇ ಈ ರೀತಿಯ ಅಸಹಾಯಕತೆ ಮತ್ತು ಒಂಟಿತನದ ಭಾವನೆ ಎಲ್ಲರನ್ನೂ ಕಾಡುತ್ತದೆ. ಇದು ನಮ್ಮ ಮನಸ್ಸನ್ನು ದುರ್ಬಲಗೊಳಿಸುತ್ತಾ ಹೋಗುವುದಲ್ಲದೇ, ನಮ್ಮಲ್ಲಿಯೇ ನಮ್ಮ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಮೂಡಿಸುವ ಮೂಲಕ ಇಂತಹ ಕುಕೃತ್ಯಗಳಿಗೆ ಕಾರಣವಾಗುತ್ತದೆ.

su3

ಮನುಜರು ತಪ್ಪು ಮಾಡುವುದು ಸಹಜ. ಅದರಿಂದ ದುಃಖವಾಗುವುದೂ ಸಹಜ ಪ್ರಕ್ರಿಯೆ, ಮುಂದೆ ಆ ರೀತಿಯ ತಪ್ಪುಗಳಾಗದಂತೆ ನಕಾರಾತ್ಮಕ ಭಾವನೆಗಳಿಂದ ಎಚ್ಚರಿಗೆ ವಹಿಸುವುದು ಸರಿಯಾದ ಮಾರ್ಗ. ನಮಗೆ ಮಾನಸಿಕವಾಗಿ ನೋವಾಗಿದ್ದಲ್ಲಿ ಅಥವಾ ಯಾವುದೇ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದಲ್ಲಿ, ಕುಟುಂಬ ಅಥವಾ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಸುಶಾಂತ್ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದ ಛಿಛೋರೆ ಚಿತ್ರದಲ್ಲಿ, ಆತ್ಮಹತ್ಯೆಗೆ ಯತ್ನಿಸಿದ್ದ ಮಗನನ್ನು, ಆ ಮನಸ್ಥಿತಿಯಿಂದ ಹೊರಗೆ ತರುವ ಮೂಲಕ ಆತ್ಮಹತ್ಯೆ ಪರಿಹಾರವಲ್ಲ ಎಂದು ನೀಡಿದ್ದ ಸಂದೇಶ ಪ್ರೇಕ್ಷಕರಿಗೆ ಹಿಡಿಸಿ ಆ ಚಿತ್ರ ಅಭೂತಪೂರ್ವ ಯಶಸ್ಸನ್ನು ಕಾಣಲು ಕಾರಣವಾಗಿತ್ತು. ಆದರೆ ಹೇಳುವುದು ಶಾಸ್ತ್ರ ತಿನ್ನುವುದು ಬದನೇಕಾಯಿ ಎನ್ನುವಂತೆ ನಿಜ ಜೀವನದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡದ್ದು ನಿಜಕ್ಕೂ ಅಕ್ಷ್ಮಮ್ಯ ಅಪರಾಧ. ಅಂದು ಸುಶಾಂತ್ ದೇಶದಲ್ಲಿ ಅಸಹಿಷ್ಣುತೆಯಿಂದಾಗಿ ರಜಪೂತ ವಂಶದಲ್ಲಿ ನಾನು ಹುಟ್ಟಿದ್ದಕ್ಕೆ ಬೇಸರವಾಗುತ್ತಿದೆ ಎಂದಿದ್ದ. ಇಂದು ಸಮಸ್ಯೆಗಳಿಗೆ ಹೆದರಿ ಬದುಕನ್ನು ಅಕಾಲಿಕವಾಗಿ ಅಂತ್ಯ ಮಾಡಿಕೊಂಡ ಈ ಹೆದರು ಪುಕ್ಕಲನೂ ಓರ್ವ ರಜಪೂತನೇ ಎಂದು ಒಪ್ಪಿಕೊಳ್ಳಲು ನಮಗೆ ನಾಚಿಕೆ ಆಗುತ್ತಿದೆ.

ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ . ಸುಶಾಂತನ ಬಗ್ಗೆ ನಾನು ಓದಿ ತಿಳಿದಿದ್ದನ್ನು ನಾನು ಇಲ್ಲಿ ಬರೆದಿದ್ದೇನೆ. ಸೆಲೆಬ್ರಿಟಿಯಾದವರು ಜನ ತಮ್ಮನ್ನು ನೋಡುತ್ತಾರೆ ಮತ್ತು ಕೆಲವರು ತಮ್ಮನ್ನೇ ಅನುಸರಿಸುತ್ತಾರೆ ಎನ್ನುವುದನ್ನು ಸದಾಕಾಲವೂ ಮನಸ್ಸಿನಲ್ಲಿಟ್ಟು ಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸಬೇಕೇ ಹೊರತು, ತನ್ನ ಸ್ವಹಿತಕ್ಕಾಗಿ ಮತ್ತು ಕೆಲವೇ ಮಂದಿಗಳನ್ನು ಮೆಚ್ಚಿಸುವುದಕ್ಕಾಗಿ ದೇಶದಲ್ಲಿ ದಳ್ಳುರಿ ಎಬ್ಬಿಸುವ ಕಾರ್ಯದಲ್ಲಿ ಆತ ಭಾಗಿಯಾಗಿ, ಸ್ವಧರ್ಮವನ್ನೇ ಬಿಟ್ಟು ಕೊಟ್ಟ ಭ್ರಷ್ಟ ಎನ್ನುವುದಂತೂ ಈಗ ಇತಿಹಾಸ. ಚಲನಚಿತ್ರ ನಟ ಅಥವಾ ನಾಯಕ ಈ ರೀತಿಯಾಗಿ ದುರ್ಬಲ ಮನಸ್ಸಿನಿಂದ ಅತ್ಮಹತ್ಯೆ ಮಾಡಿಕೊಂಡಲ್ಲಿ ಅವನನ್ನೇ ಅನುಸರಿಸುವ ಮಂದಿಗೇನೂ ಈ ನಾಡಿನಲ್ಲಿ ಕೊರತೆಯಿಲ್ಲ. ಅದನ್ನೇ ನಾನು ಹೇಳಿದ್ದು. ಅದರ ಹೊರತಾಗಿ ಅವನನ್ನು ನಿಂದಿಸಿ ಯಾವುದೇ ವಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳುವ ಚಪಲ ನನಗಿಲ್ಲ. ಅವನ ಆತ್ಮಕ್ಕೆ ಶಾಂತಿ ಸಿಗಲಿ. ಯಾರೂ ಅತನನ್ನು ಅನುಕರಿಸದಿರಲಿ ಎನ್ನುವದಷ್ಟೇ ನನ್ನ ಆಶಯ.

ಏನಂತೀರೀ?

ಚಿರಂಜೀವಿ

ಚಿರಂಜೀವಿ ಎಂದರೆ ಸಾವಿಲ್ಲದವ ಎಂದರ್ಥ. ಆದರೆ ಜಾತಸ್ಯ ಮರಣಂ ಧೃವಂ ಎಂದರೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮವೂ ಹೌದು. ಹಾಗಾಗಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಅರಿವಿದ್ದರೂ, ಸಾವನ್ನೇ ಜಯಿಸಿ ಚಿರಂಜೀವಿಯಾಗುವ ಹಪಾಹಪಿಯಲ್ಲಿವವರಿಗೇನೂ ಕಡಿಮೆ ಇಲ್ಲ. ಆದರೆ ನಿಷ್ಕಲ್ಮಮಶವಾಗಿ ತಮ್ಮ ಮಗನಿಗೆ ಆ ಭಗವಂತ ದೀರ್ಘಾಯಸ್ಸು ನೀಡಲಿ ಎಂದು ತುಂಬು ಹೃದಯದಿಂದ ಚಿರಂಜೀವಿ ಎಂದು ಹೆಸರಿಸಿದ ಆ ಪೋಷಕರಿಗೂ ಭಗವಂತ ಈ ರೀತಿಯಾಗಿ ಮೋಸ ಮಾಡುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಹೌದು ನಿಮಗೆ ಈಗಾಗಲೇ ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂದು ತಿಳಿದಿದೆ. ಕನ್ನಡ ಚಿತ್ರರಂಗದಲ್ಲಿ ಸ್ವಸಾಮರ್ಥ್ಯದಿಂದ ತಮ್ಮ ಪ್ರತಿಭೆಯ ಮೂಲಕ ಮತ್ತು ಸಜ್ಜನಿಕೆಯ ಮೂಲಕ ಮೇಲೆ ಬಂದ ಶಕ್ತಿಪ್ರಸಾದ್ ಅವರ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಸಾಯುವ ವಯಸ್ಸಲ್ಲದ ವಯಸ್ಸಿನಲ್ಲಿ ಕೇವಲ 39 ವರ್ಷಕ್ಕೇ ಅಕಾಲಿಕವಾಗಿ ಮತ್ತೆ ಬಾರದ ಲೋಕಕ್ಕೆ ಶಾಶ್ವತವಾಗಿ ಪಯಣಿಸಿರುವುದು ನಿಜಕ್ಕೂ ದುಃಖಕರವಾದ ವಿಷಯವಾದರೂ ಚಿರಂಜೀವಿ ಸರ್ಜಾನ ಅಕಾಲಿಕ ಮರಣ ಅನೇಕ ಚಿತ್ರನಟರಿಗೆ ಹಾಗು ಅವರಂತೆ ಆಗಬೇಕು ಎಂದು ಹಪಾಹಪಿಸುವ ಅನೇಕ ಯುವಕರಿಗೆ ಜೀವನದ ಪಾಠವನ್ನು ಕಲಿಸುವಂತಿದೆ ಎಂದರೆ ತಪ್ಪಾಗಲಾರದು.

chiru7

ಚಿತ್ರರಂಗ ಚಿರಂಜೀವಿ ಸರ್ಜಾಗೆ ಹೊಸದೇನಲ್ಲ. ಅವರ ಇಡೀ ಕುಟುಂಬವೇ ಕನ್ನಡ ಚಿತ್ರರಂಗವೇಕೆ? ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರುವಾಸಿಯಾದ ದೊಡ್ಡ ಮನೆತನ. ಅವರ ಅಜ್ಜ ಶಕ್ತಿ ಪ್ರಸಾದ್ ರಾಜಕುಮಾರ್ ಅವರ ಬ್ಯಾನರಿನ್ನ ಖಾಯಂ ಖಳನಟ. ಮಾವ ಅರ್ಜುನ್ ಸರ್ಜಾ ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ ತಮ್ಮ ನಟನೆ ಮತ್ತು ದೇಹದಾಢ್ಯದಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹೆಸರುವಾಸಿಯಾದ ನಟ, ನಿರ್ದೇಶಕ ಮತ್ತು ನಿರ್ಮಾಕಪರೂ ಹೌದು. ಆವರ ಧರ್ಮಪತ್ನಿ ಆಶಾರಾಣಿಯೂ ಸಹಾ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿದ್ದಲ್ಲದೆ, ಹಿರಿಯ ನಟ ರಾಜೇಶ್ ಅವರ ಮಗಳೂ ಕೂಡಾ. ಅವರ ಮತ್ತೊಬ್ಬ ಸೋದರ ಮಾವ ದಿ. ಕಿಶೋರ್ ಸರ್ಜಾ ಒಳ್ಳೆಯ ನಿರ್ದೇಶಕ ಎಂದು ಹೆಸರು ಮಾಡಿದ್ದರು. ಇನ್ನು ತಮ್ಮ ಧೃವ ಸರ್ಜಾ ಖ್ಯಾತ ನಟನಾದರೆ, ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಘನಾ ರಾಜ್ ಸಹಾ ಬಹುಭಾಷಾ ಚಿತ್ರನಟಿ ಮತ್ತು ಆಕೆಯ ಪೋಷಕರಾದ ಶ್ರೀಮತಿ ಪ್ರಮೀಳಾ ಜೋಷಾಯ್ ಮತ್ತು ಸುಂದರ್ ರಾಜ್ ಸಹಾ ಚಿತ್ರರಂಗದಲ್ಲಿ ಖ್ಯಾತರಾದವರೇ.

chiru7

ಹೀಗೆ ಚಲನಚಿತ್ರರಂಗದ ಕುಟುಂಬದಲ್ಲೇ 17 ಅಕ್ಟೋಬರ್ 1984ರಂದು ಬೆಂಗಳೂರಿನಲ್ಲಿಯೇ ಜನಿಸಿ, ತಮ್ಮ ಇಡೀ ವಿದ್ಯಾಭ್ಯಾಸವನ್ನು ಇಲ್ಲಿಯೇ ಮುಗಿಸಿ ಒಂದು ರೀತಿಯ ಪಕ್ಕಾ ಬೆಂಗಳೂರಿನ ಲೋಕಲ್ ಬಾಯ್ ಎಂದರೂ ತಪ್ಪಾಗಲಾರದು. ಚಿತ್ರರಂಗದ ನಂಟಿನಿಂದಾಗಿ ನಟನಾಗುವ ಮೊದಲು ತಮ್ಮ ಮಾವಂದಿರೊಂದಿಗೆ ಸಹ ನಿರ್ದೇಶಕರರಾಗಿ ತೆರೆಯ ಹಿಂದಿನಿಂದಲೇ ಚಿತ್ರರಂಗದ ಆ, ಆ, ಇ, ಈ… ಕಲಿತು ಮಾವ ಕಿಶೋರ್ ಸರ್ಜಾ ನಿರ್ದೇಶನದ ವಾಯುಪುತ್ರ ಸಿನಿಮಾದ ಮೂಲಕವೇ ಕನ್ನಡ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಗಂಡೆದೆ, ಚಿರು, ವರದನಾಯಕ, ಚಂದ್ರಲೇಖ, ಆಟಗಾರ, ರುದ್ರತಾಂಡವ, ರಾಮಲೀಲಾ ಹೀಗೆ 22ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಲ್ಲದೇ ಇನ್ನೂ ಮೂರ್ನಾಲ್ಕು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಹು ಬೇಡಿಕೆಯ ನಟನಾಗಿದ್ದರು. ಅವರ ಇಡೀ ಕುಟುಂಬವೇ ಹನುಮಂತನ ಭಕ್ತರಾಗಿದ್ದು ಅವರ ಸಿನಿಮಾಗಳ ಒಂದಾದರೂ ದೃಶ್ಯಗಳಲ್ಲಿ ಅಥವಾ ಹಾಡುಗಳಲ್ಲಿ ಆಂಜನೇಯನನ್ನು ನೆನೆಪಿಸಿಕೊಳ್ಳುವಂತಹ ಆಸ್ತಿಕ ಮತ್ತು ಅಜಾತು ಶತ್ರುವಾಗಿದ್ದರು.

chiru6

ಚಿತ್ರರಂಗದ ಮತ್ತೊಂದು ಕುಟುಂಬದ ಕುಡಿಯಾದ ಮತ್ತು ತಮ್ಮ ಜೊತೆಯಲ್ಲೇ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದ ಮೇಘನಾ ರಾಜ್ ಅವರನ್ನು ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸುತ್ತಿದ್ದರೂ ಯಾವುದೇ ಗಾಸಿಪ್ಪಿಗೆ ಒಳಗಾಗದೇ, 2018ರಲ್ಲಿ ಈ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ದತಿಗಳಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಸುಖಃ ದಾಂಪತ್ಯದ ಕುರುಹಾಗಿ ಮೇಘನಾರಾಜ್ ಈಗ 4 ತಿಂಗಳ ಗರ್ಭಿಣಿಯಾಗಿದ್ದಾರೆ ಆದರೆ ಆ ಮುದ್ದು ಕಂದನನ್ನು ನೋಡುವ ಮೊದಲೇ ಚಿರಂಜೀವಿ ಇಹಲೋಕ ತ್ಯಜಿಸುವಂತಾಗಿರುವುದು ನಿಜಕ್ಕೂ ಬೇಸರದ ಸಂಗತಿ.

39 ವರ್ಷಕ್ಕೇ ಹೃದಯಾಘಾತದಿಂದ ಸಾವು ಎಂದರೆ ನಿಜವಾಗಿಯೂ ನಂಬಲು ಆಸಾಧ್ಯ. ಅದರಲ್ಲೂ ಶಕ್ತಿಪ್ರಸಾದ್ ಅವರ ಕುಟಂಬವಿಡೀ ಅಂಗಸಾಧನೆ ಮಾಡಿದವರು ಮತ್ತು ಕಟ್ಟು ಮಸ್ತು ದೇಹವನ್ನು ಹೊಂದಿದವರೇ ಆಗಿದ್ದರು. ಶಕ್ತಿ ಪ್ರಸಾದ್ ಕನ್ನಡ ಚಿತ್ರ ರಂಗ ಪ್ರವೇಶಿಸುವ ಮೊದಲು ಕೋಟೇ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರಾಗಿದ್ದವರು ಮತ್ತು ಗರಡಿ ಮನೆಯಲ್ಲಿ ಪಳಗಿದ್ದವರು. ಹಾಗಾಗಿ ಅವರ ಮಗ ಅರ್ಜುನ್ ಸರ್ಜಾ ಒಳಗೊಂಡತೆ, ಚಿರಂಜೀವಿ, ಧೃವ ಎಲ್ಲರೂ ಸಹಾ ಕಟ್ಟು ಮಸ್ತಾದ ದೇಹ ಹೊಂದಿದ್ದರೂ ಹೃದಯಾಘಾತದಿಂದ ಸಾವು ಸಂಭವಿಸಿದೆ ಎನ್ನುವುದು ನಂಬಲು ಕಷ್ಟಸಾಧ್ಯವೇ ಸರಿ.

ಚಿತ್ರನಟರ ಜೀವನ ಎಂದರೆ ಐಶಾರಾಮ್ಯ ಜೀವನ ನಡೆಸುವವರು ಎಂದು ತಿಳಿದವರೇ ಹೆಚ್ಚು. ನಿಜ ಹೇಳ ಬೇಕೆಂದರೆ ಸೆಲೆಬ್ರಿಟಿಗಳ ಜೀವನ ಮೇಲೇಲ್ಲಾ ಥಳುಕು, ಒಳಗೆಲ್ಲಾ ಹುಳುಕು ಎನ್ನುವ ವಾತವರಣವೇ ಹೆಚ್ಚು. ಒಂದು ಚಿತ್ರ ಹಿಟ್ ಆದರೆ ಮತ್ತೊಂದು ಮಗದೊಂದು ಚಿತ್ರ ಹಿಟ್ ಆಗಲೇ ಬೇಕು ಎನ್ನುವ ಹಪಾಹಪಿಯಲ್ಲಿರುತ್ತಾರೆ. ಒಂದು ಚಿತ್ರ ಅಕಸ್ಮಾತ್ ಸೋಲಾಯಿತು ಎಂದರೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿ ತಮ್ಮ ಜೀವನವೇ ಹಾಳಾಗಿ ಹೋಯಿತೇನೋ ಅನ್ನುವಷ್ಟರ ಮಟ್ಟಿಗೆ ಒತ್ತಡಕ್ಕೆ ಒಳಗಾಗಿ ಮಾನಸಿಕ ಖಿನ್ನತೆಗೆ ಹೋಗಿರುವ ಉದಾಹಣೆಗಳು ನಮ್ಮ ಕಣ್ಣ ಮುಂದಿವೆ. ಇವಲ್ಲಕ್ಕಿಂತಲೂ ಹೆಚ್ಚಾಗಿ ತಮ್ಮ ಬಳಿ ಹಣ ಸೇರುತ್ತಲೇ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಮತ್ತೊಂದು ಆಘಾತಕಾರಿ ವಿಷಯ. ದುಡ್ದಿಲ್ಲದಿದ್ದಾಗ ರಸ್ತೆಯ ಬದಿಯ ಚಿತ್ರಾನ್ನ ತಿಂದೂ ಜೀವನದಲ್ಲಿ ಮುಂದೆ ಬರಬೇಕು ಎಂದು ಮೆಟ್ಟಿ ನಿಲ್ಲುವವರು, ಕೈಯ್ಯಲ್ಲಿ ಒಂದು ಚೂರು ದುಡ್ದು ಓಡಾಡ ತೊಡಗಿದರೆ‌ ಸಾಕು, ಆಕಾಶದಿಂದ ಉದುರಿ ಬಿದ್ದವರ ತರಹ, ಐಶಾರಾಮ್ಯದ ಜೀವನದ, ಆಹಾರ ಪದ್ಧತಿಗಳು, ಮೋಜು ಮಸ್ತಿಗಳನ್ನು ರೂಢಿಸಿಕೊಂಡು ಆರೋಗ್ಯದ ಕಡೆ ಗಮನ ಹರಿಸುವುದನ್ನು ಮರೆಯುತ್ತಾರೆ. ಹೇಗೂ ದುಡ್ಡು ಖರ್ಚು ಮಾಡಿದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೂಲಕ ಏನು ಬೇಕಾದರೂ ಗುಣಪಡಿಸಿಕೊಳ್ಳಬಹುದು ಎಂಬ ಧೋರಣೆಗೆ ಅವರಲ್ಲಿ ಮನೆಮಾಡಿರುತ್ತದೆ. ವೈದ್ಯರು ಕೊಡುವ ಔಷಧೋಪಚಾರಗಳು ಮಾತ್ರೆಗಳು ಕ್ಷಣಿಕವಾಗಿ ತಾತ್ಕಾಲಿಕವಾದ ಪರಿಣಾಮವನ್ನು ಬೀರಬಲ್ಲದೇ ಹೊರತಾಗಿ, ಅವು ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಆ ಕ್ಷಣದಲ್ಲಿ ಅವರಿಗೆ ಬಾರದಾಗಿರುತ್ತದೆ.

ಇನ್ನು ಸಿನಿಮಾಗಳಲ್ಲಿ ಪಾತ್ರಕ್ಕೆ ತಕ್ಕಂತೆ ದಿಢೀರ್ ಎಂದು ಸಣ್ಣಗಾಗುವುದು ಮತ್ತು ದಿಢೀರ್ ಎಂದು ದಪ್ಪಗಾಗುವ ಚಾಳಿ ಬಹುತೇಕ ಸಿನಿಮಾ ನಟರಿಗಿರುತ್ತದೆ. ಇದಕ್ಕೆ ಸರ್ಜಾ ಸಹೋದರರೂ ಹೊರತಾಗಿರಲಿಲ್ಲ. There is no short cut for success ಎನ್ನುವಂತೆ ದೇಹವನ್ನು ದಂಡಿಸುವುದಾಗಲೀ ಅಥವಾ ಬೆಳೆಸುವುದಾಗಲೀ ಅರೋಗ್ಯಕರವಾಗಿ ನೈಸರ್ಗಿಕವಾಗಿ ಇರಬೇಕೇ ಹೊರತು, ಯಾವುದೋ ಸ್ಟೀರಾಯ್ಡ್ ಇಲ್ಲವೇ ಸಪ್ಲಿಮೆಂಟ್ಗಳನ್ನು ಸೇವಿಸಿ ದಿಢೀರ್ ಆಗಿ ದೇಹವನ್ನು ದಂಡಿಸುವುದು ತಾತ್ಕಾಲಿಕವಾಗಿ ಫಲಿತಾಂಶವನ್ನು ನೀಡಬಲ್ಲದೇ ಹೊರತು ದೀರ್ಘಕಾಲದಲ್ಲಿ ಅದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ ಎನ್ನುವುದಕ್ಕೆ ಇಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸತ್ತು ಹೋದ ಚಿರಂಜೀವಿ ಸರ್ಜಾನೇ ಸಾಕ್ಷಿ.

ಸಾವಿಲ್ಲದ ಮನೆಯಲ್ಲಿ ಸಾಸಿವೇ ಕಾಳು ತೆಗೆದುಕೊಂಡು ಬಾ ಎನ್ನುವಂತೆ ಸಾವು ಎಲ್ಲರ ಮನೆಯಲ್ಲಿ ಆಗುತ್ತದೆಯಾದರೂ, ಇನ್ನೂ ಬಾಳಿ ಬೆಳಗ ಬೇಕದ ಇಷ್ಟು ಸಣ್ಣ ವಯಸ್ಸಿನಲ್ಲಿ ಅದೂ ಅಜ್ಜಿ, ತಂದೆ, ತಾಯಿಯರು ಇರವಾಗಲೇ ಮಕ್ಕಳು ಅಗಲಿಹೋದಲ್ಲಿ ಆ ದುಃಖವನ್ನು ಸಹಿಸುವುದು ನಿಜಕ್ಕೂ ಕಷ್ಟವೇ ಸರಿ. ಪುತ್ರ ಶೋಕ ನಿರಂತರಮ್ ಎನ್ನುವಂತೆ, ಮಗ ತಮ್ಮ ಅಂತ್ಯಸಂಸ್ಕಾರ ಮಾಡುತ್ತಾನೆ ಎಂದು ನಂಬಿದ್ದ ತಂದೆ ತಾಯಿಯರಿಗೆ, ತಂದೆಯೇ ಮಗನ ಅಂತ್ಯ ಸಂಸ್ಕಾರ ಮಾಡುವ ದುರ್ವಿಧಿ ನಿಜಕ್ಕೂ ದುಃಖಕರ ಮತ್ತು ಅಂತಹ ದುರ್ವಿಧಿ ಯಾವ ಪೋಷಕರಿಗೂ ಬಾರದಿರಲಿ.

chiru4

ಈ ಜೀವನ ನಶ್ವರ. ನೆನ್ನೆ ಯಾರೋ ಹೋಗಿದ್ದರು. ಇಂದು ಚಿರಂಜೀವಿ ಸರ್ಜಾ ವಿಧಿವಶರಾಗಿದ್ದಾರೆ. ನಾಳೆ ಮತ್ತೊಬ್ಬರ ಸರದಿ. ಹೀಗೆ ನಾವೆಲ್ಲರೂ ಸರದಿಯಲ್ಲಿ ನಮ್ಮ ಪಾಲಿನ ಅಂತಿಮ ದಿನಗಳಿಗೆ ಕಾಯುತ್ತಿರುವವರೇ. ವ್ಯಕ್ತಿಗಳು ಗತರಾದಾಗ ಕೆಲವು ದಿನಗಳ ಕಾಲ ಅವರ ನೆನಪಿನಲ್ಲಿರುತ್ತಾರೆ. ಆದಾದನಂತರ ಎಲ್ಲರೂ ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಮಗ್ನರಾಗಿ ಯಾರು ಸತ್ತರು? ಹೇಗೆ ಸತ್ತರು? ಎಂಬೆಲ್ಲವನ್ನೂ ಈ ಸಮಾಜ ಅಷ್ಟೇ ಬೇಗ ಮರೆತು ಬಿಡುತ್ತದೆ ಎಂಬುದು ವಾಸ್ತವ ಸತ್ಯ. ಹಾಗಾಗಿ ಇರುವಷ್ಟು ದಿನ ಸುಖಃವಾಗಿ ಸಂತೋಷದಿಂದ ಆರಾಮವಾದ ಜೀವನ ನಡೆಸೋಣ. ನಾವು ಇದ್ದರೂ , ಇಲ್ಲದಿದ್ದರೂ ಈ ಸಮಾಜ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಲೇ ಇರುತ್ತದೆ. ಹಾಗಾಗಿ ಧಾವಂತದ ಬದುಕಿಗೆ ಸ್ವಲ್ಪ ಕಡಿವಾಣ ಹಾಕಿ ನೆಮ್ಮದಿಯಿಂದ ಎಲ್ಲರೊಂದಿಗೆ ಸ್ನೇಹ-ಪ್ರೀತಿಯಿಂದಿದ್ದು ತುಂಬು ಜೀವನ ನಡೆಸೋಣ. ಸಾವಿಗೆ ವಯಸ್ಸು ಮತ್ತು ಸಮಯ ಎಂಬುದಿಲ್ಲ. ಚಿರಂಜೀವಿ ಎಂಬುದೂ ಕೂಡ ಕೇವಲ ಒಂದು ಹೆಸರಾಯಿತೇ ಹೊರತು ಅವನಿಗೆ ಮೃತ್ಯುವನ್ನು ಜಯಿಸುವುದಿರಲೀ, ದೀರ್ಘಾಯಸ್ಸನ್ನೂ ಕೊಡಲಿಲ್ಲ ಎನ್ನುವುದು ಜೀವನದ ವಾಸ್ತವದ ಕಠು ಸತ್ಯ. ಬಾಳಿ ಬದುಕುವ ವಯಸ್ಸಿಗೆ ಬಾರದ ಲೋಕಕ್ಕೆ ಪಯಣಿಸಿದ ಚಿರಂಜೀವಿಯ ಆತ್ಮಕ್ಕೆ ಆ ಭಗವಂತ ಶಾಂತಿ ಕರುಣಿಸಲಿ. ದುಃಖ ತಪ್ತ ಕುಟುಂಬ ವರ್ಗಕ್ಕೆ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಮೇಘನಾ ರಾಜ್ ಒಡಲಲ್ಲಿ ಅರಳುತ್ತಿರುವ ಕಂದನ ರೂಪದಲ್ಲಿ ಚಿರಂಜೀವಿ ಸರ್ಜಾ ಮತ್ತೊಮ್ಮೆ ಮರು ಹುಟ್ಟು ಪಡೆದು ಪ್ರಜ್ವಲಿಸಲಿ ಎಂದು ಪ್ರಾರ್ಥಿಸೋಣ.

ಏನಂತೀರೀ?

ಸಾಹಸಸಿಂಹ ವಿಷ್ಣುವರ್ಧನ್

vishnu3.jpeg

ಆತ ಕನ್ನಡ ಚಿತ್ರರಂಗ ಕಂಡ ಆತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ಆದರೆ ಅಷ್ಟೇ ದುರದೃಷ್ಟವಂತ ನಟ. ಸಾಮಾಜಿಕವಾಗಿರಲೀ, ಪೌರಾಣಿಕವಾಗಿರಲೀ, ಕಮರ್ಷಿಯಲ್ ಆಗಿರಲೀ, ಕಲಾತ್ಮಕವಾಗಿರಲೀ ಯಾವುದೇ ಸಿನಿಮಾ ಅದರೂ ಅದಕ್ಕೊಪ್ಪುವ ನಟ. ನಟನೆ, ನೃತ್ಯ, ಸಾಹಸ ಯಾವುದೇ ಇರಲಿ ಎಲ್ಲದ್ದಕ್ಕೂ ಸೈ. ಸ್ಪಷ್ಟವಾದ ಉಚ್ಚಾರ, ನೇರವಾದ ಸಂಭಾಷಣೆ, ಹಾಡುಗಾರಿಕೆಯಲೂ ತನ್ನ ಛಾಪನ್ನು ಮೂಡಿಸಿದ್ದ ನಟ ಅವರೇ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸಾಹಸಸಿಂಹ ಡಾ. ವಿಷ್ಣುವರ್ಧನ್.

ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಗ್ರಾಮದ ಮೂಲದ ಆದರೆ ಮೈಸೂರಿನಲ್ಲಿ ನೆಲೆಸಿದ್ದ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳಿಗೆ ಸೆಪ್ಟೆಂಬರ್ 18, 1950ರಂದು ಜನಿಸಿದ ನೋಡಲು ಕೆಂಪಗೆ ದುಂಡದುಂಡಗಿದ್ದ ಗಂಡು ಮಗುವಿಗೆ ಸಂಪತ್ ಕುಮಾರ್ ಎಂದು ಹೆಸರಿಟ್ಟರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ನಡೆಯಿತು. ಅವರ ತಂದೆಯವರು ಕನ್ನಡ ಚಲನಚಿತ್ರರಂಗದಲ್ಲಿ ಅದಾಗಲೇ ಖ್ಯಾತ ಸಂಗೀತ ನಿರ್ದೇಶಕರಾಗಿ ಮತ್ತು ಸಂಭಾಷಣೆಕಾರಾಗಿ ಗುರುತಿಸಿಕೊಂಡಿದ್ದರು. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ತಮ್ಮ ಕುಟುಂಬದದ ವಾಸ್ತವ್ಯವನ್ನು ಮೈಸೂರಿನ ಚಾಮುಂಡಿಪುರಂನಿಂದ ಬೆಂಗಳೂರಿನ ಜಯನಗರಕ್ಕೆ ಬದಲಾಯಿಸಿದ ಕಾರಣ, ಸಂಪತ್ ಕುಮಾರ್ ತಮ್ಮ ಮಿಡ್ಲ್ ಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಂದುವರಿಸಿ, ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಹೆಚ್ ನರಸಿಂಹಯ್ಯನವರ ಅಡಿಯಲ್ಲಿ ಪಡೆದುಕೊಂಡರು.

ಹೆಸರು ಸಂಪತ್ ಕುಮಾರ್ ಎಂದಿದ್ದರೂ ಶಾಲಾ ಕಾಲೇಜಿನಲ್ಲಿ ಕುಮಾರ್ ಎಂದೇ ಖ್ಯಾತಿ ಪಡೆದಿದ್ದವರು ಓದಿಗಿಂತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೇ ಹೆಚ್ಚಿನ ಆಸಕ್ತಿ. ಶಾಲಾ ಕಾಲೇಜು ದಿನಗಳಿಂದಲೇ ನಾಟಕ ಮತ್ತು ಹಾಡಿನಲ್ಲಿ ಎತ್ತಿದ ಕೈ. ಯಾವುದೇ ಸ್ಪರ್ಧೆಯಲ್ಲಿ ಕುಮಾರ್ ಭಾಗವಹಿಸುತ್ತಿದ್ದಾರೆಂದರೆ ಅಲ್ಲೊಂದು ಬಹುಮಾನ ಕಟ್ಟಿಟ್ಟ ಬುತ್ತಿ ಎಂಬುದು ಅವರ ಗೆಳೆಯರ ಬಳಗದಲ್ಲಿ ಮಾತಾಗಿತ್ತು.

ತಂದೆಯವರು ಚಿತ್ರರಂಗದಲ್ಲಿಯೇ ಇದ್ದ ಕಾರಣ, 1955ರಲ್ಲಿಯೇ ಬಾಲ ನಟನಾಗಿ ಶಂಕರ್ ಸಿಂಗ್ ನಿರ್ಮಾಣದ ಶಿವಶರಣ ನಂಬಿಯಕ್ಕ ಎಂಬ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಂತರ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿಯೂ ಕೂಡ ಬಾಲ ನಟನಾಗಿ ಕುಮಾರ್ ಅಭಿನಯಿಸಿದ್ದರು. ಮುಂದೆ ತಮ್ಮ 21ನೆಯ ವಯಸ್ಸಿನಲ್ಲಿ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ, ಖ್ಯಾತ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ವಂಶವೃಕ್ಷ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿಯೂ ನಟಿಸಿದ್ದರು.

chamaiah.jpeg

ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲರು ತರಾಸು ಅವರ ನಾಗರಹಾವು ಕಾದಂಬರಿಯನ್ನು ತೆರೆಗೆ ತರಲು ನಿರ್ಧರಿಸಿ ಆ ಚಿತ್ರದ ರಾಮಾಚಾರೀ ಪಾತ್ರಕ್ಕೆ ನವ ಯುವಕನನ್ನು ಹುಡುಕುತ್ತಿದ್ದಾಗ ಅವರ ಕಣ್ಣಿಗೆ ಕುಮಾರ್ ಬೀಳುತ್ತಾರೆ. ಮೊದಲ ನೋಟದಲ್ಲಿಯೇ ಅತನ ಹಾವ, ಭಾವ, ನೋಟ ಎಲ್ಲವೂ ಮೆಚ್ಚುಗೆಯಾಗಿ ಸಂಪತ್ ಕುಮಾರ್ ಎಂಬ ತರುಣನಿಗೆ ವಿಷ್ಣುವರ್ಧನ್ ಎಂದು ಮರುನಾಮಕರಣ ಮಾಡಿ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ನಟನನ್ನು ಕೊಡುಗೆಯಾಗಿ ನೀಡಿದರು. ಅದೇ ಸಿನಿಮಾದ ಮೂಲಕ ಖ್ಯಾತ ನಟ ಅಮರನಾಥ್ (ಅಂಬರೀಷ್) ಮತ್ತು ಧೀರೇಂದ್ರ ಗೋಪಾಲ್ ಕೂಡಾ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 1972ರಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರ ವಿಷ್ಣುವರ್ಧನ್, ಅಶ್ವಥ್, ಆರತಿ, ಅಂಬರೀಷ್, ಧೀರೇಂದ್ರ ಗೋಪಾಲ್ ಮತ್ತು ಜಯಂತಿ ಅವರ ಚಿತ್ರರಂಗದ ಬದುಕನ್ನೇ ಬದಲಾಯಿಸಿತು ಎಂದರೂ ತಪ್ಪಾಗಲಾರದು. ನಾಯಕಿ ಅಲಮೇಲು(ಅರತಿ)ಅನ್ನು ಚುಡಾಯಿಸುವ ಜಲೀಲನ ಪಾತ್ರದಲ್ಲಿ ಬರುವ ಅಂಬರೀಷ್ ಮತ್ತು ಚಿತ್ರದುರ್ಗದ ಒನಕೆ ಓಬ್ಬವ್ವನ ಪಾತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಜಯಂತಿಯವರ ಅಭಿನಯ ಇಂದಿಗೂ ಯಾವುದೇ ಶಾಲಾಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿರುವುದನ್ನು ಕಾಣ ಬಹುದಾಗಿದೆ. ಗುರು ಶಿಷ್ಯರ ಸಂಬಂಧ ದ್ವಾಪರ ಯುಗದಲ್ಲಿ ದ್ರೋಣಾಚಾರ್ಯ ಮತ್ತು ಏಕಲವ್ಯನಂತಿದ್ದರೆ, ಕಲಿಯುಗದಲ್ಲಿ ಚಾಮಯ್ಯ ಮೇಷ್ಟ್ರು ಮತ್ತು ರಾಮಚಾರಿಯಂತಿರಬೇಕು ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಹೊಂದಿದೆ.
ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರ ನಾನಾ ಕಡೆ ಶತದಿನೋತ್ಸವ ಆಚರಿಸಿದರೆ ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ರಾತ್ರೋರಾತ್ರಿ ವಿಷ್ಣುವರ್ಧನ್ ಕನ್ನಡ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದಲ್ಲದೇ, ಆ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ.

ಈ ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ ಹತ್ತಾರು ಚಿತ್ರಗಳು ವಿಷ್ಣುವರ್ಧನ್ ಅವರನ್ನು ಅರಸಿ ಬಂದು ಅದರಲ್ಲಿ ಬಹುತೇಕ ಚಿತ್ರಗಳು ಯಶಸ್ವಿಯಾಗಿ ಬೇಕೋ ಬೇಡವೋ ಜನ, ರಾಜಕುಮಾರರ ನಂತರದ ಸ್ಥಾನವನ್ನು ವಿಷ್ಣುವರ್ಧನರಿಗೆ ಕೊಡಲಾರಂಭಿಸಿದರು. ಈ ದಿಗ್ಗಜರಿಬ್ಬರೂ ಸೇರಿ ಗಂಧದಗುಡಿ ಚಿತ್ರದಲ್ಲಿ ನಟಿಸುತ್ತಿರುವಾಗ ಹೋರಾಟದ ದೃಶ್ಯವೊಂದರಲ್ಲಿ, ವಿಷ್ಣುವರ್ಧನ್ ಮತ್ತು ರಾಜ್ ಕುಮಾರ್ ಪರಸ್ಪರ ಬಂದೂಕಿನಿಂದ ಹೋರಾಟ ಮಾಡುವ ಸನ್ನಿವೇಶ ಇರುತ್ತದೆ. ದುರಾದೃಷ್ಟವಶಾತ್ ವಿಷ್ಣುವರ್ಧನ್, ರಾಜಕುಮಾರರತ್ತ ಗುಂಡೊಂದನ್ನು ಹಾರಿಸುವಾಗ ಸಹಾಯಕನ ತಪ್ಪಿನಿಂದಾಗಿ ನಕಲಿ ಬಂದೂಕಿನ ಬದಲಾಗಿ ಅಸಲೀ ಬಂದೂಕಿನಿಂದ ಹಾರಿದ ಗುಂಡಿನಿಂದ ಅದೃಷ್ಟವಷಾತ್ ರಾಜಕುಮಾರರು ತಪ್ಪಿಸಿಕೊಂಡರು. ಈ ವಿಷಯದ ಕುರಿತು ಆ ಕ್ಷಣದಲ್ಲೇ ವಿಷ್ಣುವರ್ಧನ್ ರಾಜಕುಮಾರರ ಕ್ಷಮೆಯನ್ನು ಕೇಳಿದರೂ ಕೆಲವರು ಇದು ರಾಜಕುಮಾರರ ಹತ್ಯೆಯ ಯತ್ನ ಎಂಬಂತೆ ಬಿಂಬಿಸಿ ಆ ದಿಗ್ಗಜರಿಬ್ಬರ ನಡುವೆ ಕಂದಕ ಮಾಡುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗುತ್ತಾರೆ. ಅದೇ ಸಮಯದಲ್ಲಿ ವಿಷ್ಣುವರ್ಧನ್ ಅವರ ತಂದೆಯವರ ನಿಧನರಾದಾಗ ಯಾರೋ ಕಿಡಿಗೇಡಿಗಳು ಆವರ ಮನೆಯತ್ತ ಕಲ್ಲು ತೂರಿದ್ದಲ್ಲದೇ ಶವಯಾತ್ರೆಯಲ್ಲೂ ದಾಂಧಲೆ ಎಬ್ಬಿಸಿದರು. ಇವೆಲ್ಲವುಗಳಿಂದ ಬೇಸೆತ್ತ ವಿಷ್ಣುವರ್ಧನ್ ಬೆಂಗಳೂರಿನ ಸಹವಾಸವೇ ಬೇಡ ಎಂದು ದೂರದ ಮದ್ರಾಸಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿಬಿಟ್ಟರು.

vishnu_bharati2.jpg

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಷ್ಣುವರ್ಧನ್ ಅವರ ಕೈಹಿಡಿದವರೆಂದರೆ ಖ್ಯಾತ ನಿರ್ಮಾಪಕ ಎನ್ ವೀರಾಸ್ವಾಮಿ (ವಿ ರವಿಚಂದ್ರನ್ ಅವರ ತಂದೆ)ಯವರು, ಪ್ರಚಂಡ ಕುಳ್ಳ ದ್ವಾರಕೀಶ್ ಮತ್ತು ಜೀವದ ಗೆಳೆಯ ಅಂಬರೀಷ್. ವೀರಾಸ್ವಾಮಿಯವರು ತಮ್ಮ ಬಹುತೇಕ ಸಿನಿಮಾಗಳಲ್ಲಿ ವಿಷ್ಣುವರ್ಧನರಿಗೆ ಅವಕಾಶ ನೀಡಿದರೆ, ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಜೋಡಿಯ ಹತ್ತಾರು ಸಿನಿಮಾಗಳು ಒಂದಾದ ಮೇಲೊಂದು ಯಶಸ್ವಿಯಾಗಿ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನರಿಗೊಂದು ಶಾಶ್ವತ ಸ್ಥಾನ ಮಾನ ದೊರೆಯುವಂತಾಯಿತು. ಇದೇ ಸಮಯದಲ್ಲಿಯೇ ಅಂದಿನ ಕಾಲದಲ್ಲೇ ಪಂಚ ಭಾಷಾ ತಾರೆಯಾಗಿದ್ದ ಖ್ಯಾತ ನಟಿ ಭಾರತಿಯವರೊಂದಿಗೆ ವಿಷ್ಣುವರ್ಧನ್ ಅವರ ವಿವಾಹವೂ ಜರುಗುತ್ತದೆ..

vishnu_Bharathi

ಮುಂದೆ ಎಂಭತ್ತರ ದಶಕದಲ್ಲಿ ಕರ್ನಾಟಕದಲ್ಲಿ ವಾತಾವರಣ ತಿಳಿಯಾದ ಮೇಲೆ ಪುನಃ ಬೆಂಗಳೂರಿನ ತಮ್ಮ ಜಯನಗರಕ್ಕೇ ಹಿಂದಿರುಗಿದ ವಿಷ್ಣು ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.ಕನ್ನಡ ಸೇರಿದಂತೆ ತಮಿಳು(6) , ತೆಲುಗು(4) ಮಲಯಾಳಂ(3) ಮತ್ತು ಹಿಂದಿ ( 4) ಭಾಷೆಗಳೂ ಸೇರಿದಂತೆ ಸುಮಾರು 220ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಸಿನಿಮಾ ಅಲ್ಲದೇ ಎಂಬತ್ತರ ದಶಕದಲ್ಲಿ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಮಾಲ್ಗುಡಿ ಡೇಸ್ ಧಾರಾವಾಹಿಯ ರುಪೀಸ್ ಫಾರ್ಟಿ-ಫೈವ್ ಎ ಮಂತ್ ಎಂಬ ಸಂಚಿಕೆಯಲ್ಲಿಯೂ ವಿಷ್ಣುವರ್ಧನ್ ಅಭಿನಯಿಸಿದ್ದರು.

ತಮ್ಮ ಚಲನಚಿತ್ರಗಳ ಸಾಧನೆಗಾಗಿ ಅಭಿಮಾನಿಗಳಿಂದ ಹಲವಾರು ಪ್ರಶಸ್ತಿ ಮತ್ತು ಬಿರುದುಗಳು ಸಂದಿವೆ

 • ಸಾಹಸ ಸಿಂಹ
 • ಅಭಿನಯ ಭಾರ್ಗವ
 • ಮೈಸೂರು ರತ್ನ
 • ಗೌರವ ಡಾಕ್ಟರೇಟ್
 • ವಿಷ್ಣುದಾದ
 • ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ.
 • ಅತ್ಯುತ್ತಮ ನಟನೆಗಾಗಿ ಏಳು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
 • ಅತ್ಯುತ್ತಮ ನಟನೆಗಾಗಿ ಎಂಟು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ
 • ಜೀವಮಾನ ಸಾಧನೆ ಪ್ರಶಸ್ತಿ ಡಾ. ರಾಜ್‌ಕುಮಾರ್ ರಾಜ್ಯ ಪ್ರಶಸ್ತಿ – 2008
 • ಇವರ ನೆನಪಿನಲ್ಲಿಯೇ ಬೆಂಗಳೂರು ಮಹಾನಗರ ಪಾಲಿಕೆ ಉತ್ತರಹಳ್ಳಿಯ ಮುಖ್ಯರಸ್ತೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂದು ಹೆಸರಿಸಿದ್ದಾರೆ
 • ಕನ್ನಡ ಚಿತ್ರರಂಗದಲ್ಲಿ 14ಬಾರಿ ದ್ವಿಪಾತ್ರಗಳಲ್ಲಿ ಅಭಿನಯಿಸಿ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೆಗ್ಗಳಿಗೆ
 • ವಿಷ್ಣು ಅವರ ಜೊತೆ ಅತಿ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರದ್ದಾದರೆ, ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಗಳೆಂದು ಹೆಸರಾಗಿದೆ.

ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಗೆಳೆತನ ನಾಗರಹಾವು ಚಿತ್ರದಿಂದ ಆರಂಭವಾಗಿ ಅದು ಕಡೆಯ ತನಕ ಒಡಹುಟ್ಟಿದವರ ಹಾಗೆಯೇ ಮುಂದುವರೆಯಿತು. ಗೆಳೆತನ ಎಂದರೆ ವಿಷ್ಣು-ಅಂಬಿಯ ತರಹ ಕುಚುಕು ರೀತಿಯಲ್ಲಿ ಇರಬೇಕು ಎಂದು ಜನರು ಹೇಳುವ ಮಟ್ಟಿಗೆ ಇತ್ತು. ಸಾಧಾರಣವಾಗಿ ಯಾರ ಮಾತನ್ನೂ ಕೇಳದಿದ್ದ ಅಂಬರೀಷ್, ವಿಷ್ಣುವರ್ಧನ್ ಹೇಳಿದರೆಂದರೆ ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಿದ್ದರು ಎಂದರೆ ಅವರಿಬ್ಬರ ನಡುವಿನ ಅವಿನಾಭಾವ ಸಂಬಂಧ ಹೇಗಿತ್ತು ಎಂಬ ಅರಿವಾಗುತ್ತದೆ.

vishnu5

ಬಾಲ್ಯದಿಂದಲೂ ಕ್ರಿಕೆಟ್ ಆಟದತ್ತ ಒಲವಿದ್ದ ವಿಷ್ಣುವರ್ಧನ್ ಅತ್ಯುತ್ತಮ ಎಡಗೈ ಆಲ್ರೌಂಡರ್ ಆಗಿದ್ದರು. ತಮ್ಮದೇ ಒಡನಾಡಿಗಳೊಂದಿಗೆ ವಿಷ್ಣುವರ್ಧನ್ ಸ್ನೇಹಲೋಕ ಎಂಬ ತಂಡವನ್ನು ಕಟ್ಟಿಕೊಂಡು ಬಸವನ ಗುಡಿಯ ನ್ಯಾಷನಲ್ ಕಾಲೇಜ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದರು. ಇಂದಿಗೂ ಸಹಾ ಅವರ ನೆನಪಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತದೆ.

vishnu7

ವಿಷ್ಣುವರ್ಧನ್ ತಮ್ಮ ಕಡೆಯ ದಿನಗಳಲ್ಲಿ ಅಧ್ಯಾತ್ಮದತ್ತ ಹೆಚ್ಚಿನ ಒಲವನ್ನು ತೋರಲಾರಂಭಿಸಿದರು. ಬನ್ನಂಜೆ ಗೋವಿಂದಾಚಾರ್ಯರನ್ನು ತಮ್ಮ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದದ್ದಲ್ಲದೇ ಚಿತ್ರೀಕರಣ ಹೊರತಂತೆ ಅವರ ವೇಷ ಭೂಷಣ ಮತ್ತು ಹಾವ ಭಾವ ಮಾತು ಕತೆ ಎಲ್ಲವೂ ಆಧ್ಯಾತ್ಮಿಕವಾಗಿಯೇ ಇರುತ್ತಿತ್ತು. ಈ ವಿಷಯದಲ್ಲಿ ಮತ್ತೊಬ್ಬ ಹಿರಿಯ ನಟ ಇತ್ತೀಚೆಗಷ್ಟೇ ನಿಧನರಾದ ಶ್ರೀ ಶಿವರಾಂ ಅವರು ಅವರ ಜೊತೆಗಾರರಾಗಿದ್ದರು.

cashwath

ತಮ್ಮ ಸಾವು ಅವರಿಗೆ ತಿಳಿದಿತ್ತೇನೋ ಎನ್ನುವಂತೆ ಆಪ್ತರಕ್ಷಕ ಚಿತ್ರದಲ್ಲಿ ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮೋನೇ! ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೆ! ಪ್ರೀತ್ಸೋದು ಎಂದು ನಿಮ್ಮನ್ನೇ!! ಹೇ ಹೇ ಹೇ ಸಿಂಹ ಸಿಂಹ ಸಿಂಹ. ಎಂಬ ಸಾಲಿನ ಮೂಲಕ ಮೊತ್ತ ಮೊದಲ ಬಾರಿಗೆ ಸಾವಿನ ಮಾತುಗಳನ್ನು ತಮ್ಮ ಹಾಡಿನ ಮೂಲಕ ಹೇಳಿಕೊಂಡಿದ್ದರು. ಕಾಕತಾಳೀಯವೆಂಬಂತೇ ಆ ಚಿತ್ರವೇ ಅವರ ಕಟ್ಟ ಕಡೆಯ ಚಿತ್ರವಾಗಿ ದಿನಾಂಕ 30.12.2009ರಂದು ತಮ್ಮ ಹುಟ್ಟೂರಾದ ಮೈಸೂರಿನಲ್ಲಿ ಅಕಾಲಿಕವಾಗಿ ನಿಧನರಾದರು. ಕೇವಲ ಒಂದು ದಿನ ಹಿಂದೆ 29.12.2009ರಂದು ಕನ್ನಡ ಚಿತ್ರರಂಗದ ಖ್ಯಾತ ಸಂಗೀತಗಾರ ಸಿ. ಅಶ್ವಥ್ ಅವರ ನಿಧನ ವಿಷ್ಣುವರ್ಧನ್ ಅವರ ಮೇಲೆ ಬಹಳವಾಗಿ ಪರಿಣಾಮ ಬೀರಿತ್ತು ಅದನ್ನು ಆ ದುಖಃವನ್ನು ಅಂದೇ ರಾತ್ರಿ ತಮ್ಮ ಕುಚಿಕು ಗೆಳೆಯ ಅಂಬಿಯೊಡನೆ ಹಂಚಿಕೊಂಡು ಬೇಸರ ಪಟ್ಟಿದ್ದರಂತೆ.

vishnu9.jpeg

ವಿಷ್ಣುವರ್ಧನ್ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ನಟಿಸಿರುವ ನಾಗರಹಾವು, ಗಂಧದ ಗುಡಿ, ಭೂತಯ್ಯನಮಗ ಅಯ್ಯು, ಕಳ್ಳ ಕುಳ್ಳ, ನಾಗರಹೊಳೆ, ಕಿಟ್ಟು ಪುಟ್ಟು, ಗುರು ಶಿಷ್ಯರು, ಸಾಹಸಸಿಂಹ, ಜಿಮ್ಮಿಗಲ್ಲು, ಸುಪ್ರಭಾತ, ಬಂಧನ, ನೀ ಬರೆದ ಕಾದಂಬರಿ, ಜೀವನ ಚಕ್ರ, ಕರ್ಣ, ಜಯಸಿಂಹ, ಮುತ್ತಿನಹಾರ, ಸಾಮ್ರಾಟ್, ಮಹಾ ಕ್ಷತ್ರಿಯ, ಜೀವನದಿ, ವೀರಪ್ಪನಾಯಕ, ಸೂರ್ಯವಂಶ, ಯಜಮಾನ, ಕೋಟಿಗೊಬ್ಬ, ಆಪ್ತಮಿತ್ರ, ಈ ಬಂಧನ, ಆಪ್ತರಕ್ಷಕ ಹೀಗೆ ನೂರಾರು ಚಿತ್ರಗಳ ಮೂಲಕ
ನಮ್ಮೊಂದಿಗೆ ಸದಾಕಾಲವೂ ಇದ್ದೇ ಇರುತ್ತಾರೆ

vishnu_maraka

ಅವರ ಕುಟುಂಬದ ಇಚ್ಚೆಯಂತೆಯೇ ಅವರ ನೆಚ್ಚಿನ ತಾಣವಾದ ಬಾಲಣ್ಣನವರ ಅಭಿಮಾನ್ ಸ್ಟುಡಿಯೋವಿನ ಗಣೇಶ ದೇವಸ್ಥಾನದ ಬಳಿಯೇ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳನ್ನು ನಡೆಸಿತಾದರೂ ಇಂದಿಗೆ ದಶಕವೇ ಕಳೆದರೂ ಅವರ ಸ್ಮಾರಕ ನಿರ್ಮಾಣವಾಗದಿರುವುದು ನಿಜಕ್ಕೂ ಬೇಸರದ ಸಂಗತಿ.

ಬದುಕಿದ್ದಾಗಲೂ ಸುಖಾಸುಮ್ಮನೆ ಹತ್ತಾರು ಆರೋಪಗಳು, ನಾನಾರೀತಿಯ ತೊಂದರೆಗಳನ್ನು ನೀಡಿದ ಕಾಣದ ಕೈಗಳು ಅಥವಾ ವಿಧಿಯ ಆಟ, ಸಾವಿನ ನಂತರವಾದರೂ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡದೇ ಹೋಗಿರುವುದು ನಿಜಕ್ಕೂ ದುಖಃಕರವಾದ ವಿಷಯವೇ ಸರಿ. ಇತ್ತೀಚಿಗೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಾಹಸ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ರಂಗರಾಜನ್ ಎಂಬ ನಟ ವಿಷ್ಣುವರ್ಧನ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಜನಾಕ್ರೋಶದ ನಂತರ ಕ್ಷಮೆ ಕೇಳಿದ್ದು ಹಚ್ಚಹಸಿರಾಗಿದ್ದಾಗಲೇ, ಬೆಂಗಳೂರಿನ ವಿಜಯನಗರ ಬಳಿ ಅವರ ಅಭಿಮಾನಿಗಳು ಪ್ರೀತಿಯಿಂದ ಸ್ಥಾಪಿಸಿದ್ದ ಪುತ್ಥಳಿಯನ್ನು ಯಾರೋ‌ ಕಿಡಿಗೇಡಿಗಳು ಅವರ ಅಪಾರ ಅಭಿಮಾನಿಗಳ ಹೃದಯಕ್ಕೆ ನೋವನ್ನು ಉಂಟುಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಸಾಕಷ್ಟು ನ್ಯಾಯಾಲಯದ ಹೋರಾಟದ ನಂತರ ಮೈಸೂರಿನ ಹೆಗ್ಗಡದೇವನ ಕೋಟೆಯ ಉದ್ದೂರು ಕ್ರಾಸ್ ಬಳಿ ವಿಷ್ಣುವರ್ಧನ್ ಅವರ ಭವ್ಯವಾದ ಸ್ಮಾರಕಕ್ಕೆ ಗುದ್ದಲಿ ಪೂಜೆ ನಡೆದಿದೆ. ವಿಷ್ಣು ಅವರ ಕುಟುಂಬ ಮತ್ತು ರಾಜ್ಯ ಸರ್ಕಾರದ ನೆರವಿನಿಂದ, ವಿಷ್ಣು ಅಭಿಮಾನಿಗಳ ಅಪೇಕ್ಷೆಯಂತೆ ಅತೀ ಶೀಘ್ರದಲ್ಲಿಯೇ ಅಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಗೊಂಡು ನಮ್ಮ ಮುಂದಿನ ಪೀಳಿಗೆಯವರಿಗೂ ವಿಷ್ಣುವರ್ಧನ್ ಅವರ ಪರಿಚಯವಾಗಲೀ ಎಂಬುದೇ ಎಲ್ಲಾ ಅಭಿಮಾನಿಗಳ ಆಸೆಯಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ