ಕಾಶಿಗೆ ಹೋದಾಗ, ಇಷ್ಟವಾದದ್ದನ್ನು ಏಕೆ ಬಿಟ್ಟು ಬರಬೇಕು?

kashi1

ಸನಾತನ ಧರ್ಮದಲ್ಲಿ ದೇಶಾದ್ಯಂತ ಇರುವ ತೀರ್ಥಕ್ಷೇತ್ರಗಳಿಗೆ ಹೋಗುವ ಮುಖಾಂತರ ಹಿಂದೂಗಳ ಭಾವೈಕ್ಯತೆ ಸೌಹಾರ್ದತೆಯೊಂದಿಗೆ, ನಾವೆಲ್ಲರೂ ಒಂದು ಎಂದು ಸಾರುವ ಸತ್ ಸಂಪ್ರದಾಯವನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಪ್ರತಿಯೊಬ್ಬ ಹಿಂದೂವೂ ಸಹಾ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿಯೇ ತೀರುತ್ತಾರೆ. ಅಂತಹ ತೀರ್ಥಕ್ಷೇತ್ರಗಳಲ್ಲಿ ವಾರಣಾಸಿ ಅಥವಾ ಕಾಶಿ ಪ್ರಮುಖವಾಗಿದೆ.

ಕಾಶೀಯಲ್ಲಿ ಹರಿಯುವ ಗಂಗಾ ನದಿಯ 64 ಘಾಟ್ ಗಳಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀ ಕಾಶೀ ವಿಶ್ವನಾಥ ಮತ್ತು ಶ್ರೀ ವಿಶಾಲಾಕ್ಷಿ ಅಮ್ಮನವರ ದರ್ಶನವನ್ನು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವುದರ ಮುಖಾಂತರ ಜೀವನಕ್ಕೆ ಮುಕ್ತಿ ಹೊಂದುವುದು ಪ್ರತಿಯೊಬ್ಬ ಹಿಂದೂಗಳ ಅಂತಿಮ ಗುರಿಯಾಗಿರುತ್ತದೆ. ಇದರ ಜೊತೆ ಸಾಮಾನ್ಯವಾಗಿ ಕಾಶಿಗೆ ಹೋದವರು ದೇವರ ದರ್ಶನ ಮಾಡುವು ಜೊತೆಗೆ ತಮಗಿಷ್ಟ ಇರುವ ಒಂದು ವಸ್ತುವನ್ನು ಬಿಟ್ಟು ಬರಬೇಕು ಎಂಬ ಪದ್ದತಿ ರೂಢಿಯಲ್ಲಿದೆ. ಈ ರೀತಿಯ ಒಂದು ವಸ್ತುವನ್ನು ಏಕೆ ಬಿಟ್ಟು ಬರಬೇಕು? ಇದರ ಹಿಂದಿರುವ ನಿಜವಾದ ಕಾರಣಗಳೇನು? ಹಾಗೆ ಬಿಟ್ಟುಬಂದ ಮೇಲೆ ಆಗುವ ಪರಿಪಾಟಗಳೇನು ಎಂಬುದೇ ಇಂದಿನ ಲೇಖನದ ಕಥಾ ವಸ್ತು.

kashi2

ಹಿಂದಿನ ಕಾಲದಲ್ಲಿ ವಯಸ್ಸಾದವರು ತಮ್ಮೆಲ್ಲಾ ಜವಬ್ಧಾರಿಗಳನ್ನು ಮುಗಿಸಿದ ನಂತರ ಕಾಲ್ನಡಿಗೆಯಲ್ಲಿ ಕಾಶೀಗೆ ಹೋಗಿ ವಿಶ್ವನಾಥನ ದರ್ಶನ ಮಾಡಿಕೊಂಡು ಬರುವ ಸಂಕಲ್ಪವನ್ನು ಮಾಡಿಕೊಂಡು ಮನೆಯಿಂದ ದೇಶಾಂತರ ಹೋಗಿಬಿಡುತ್ತಿದ್ದರು.ಎಲ್ಲೋ ಅಪರೂಪಕ್ಕೊಬ್ಬರು ಕಾಶಿಯಿಂದ ಹಿಂದಿರುಗಿ ಬರುತ್ತಿದ್ದರೆ, ಬಹುತೇಕರು ಮಾರ್ಗದ ಮಧ್ಯೆಯೇ ಭಗವಂತನ ಪಾದದಲ್ಲಿ ಐಕ್ಯವಾದರೆ, ಇನ್ನೂ ಹಲವರು ಅಲ್ಲೇ ಕಾಶಿಯಲ್ಲೇ ಉಳಿದು ಬಿಡುತ್ತಿದ್ದರು.

ಹಾಗೆ ಭಗವಂತನದರ್ಶನ ಮಾಡಲು ಹೊರಡುವವರು, ತಮ್ಮ ಆಸ್ತಿ ಪಾಸ್ತಿ ಮನೆ ಮಠ ಸಂಸಾರದ ಬಂಧನಗಳ ಮೇಲಿನ ಆಸೆಗಳನ್ನು ಬಿಟ್ಟು ಕೇವಲ ಭಗವಂತನ ಮೇಲೆಯೇ ಕೇಂದ್ರೀಕರಿಸಿ ಬಂದದ್ದೆಲ್ಲವೂ ಬರಲೀ ಗೋವಿಂದನ ದಯೆ ಒಂದಿರಲಿ ಎಂಬ ಭಾವದಿಂದ ಕಾಶೀ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗಂಗಾ ಸ್ನಾನ ಮಾಡುವ ಮುಖಾಂತರ ತನ್ನೆಲ್ಲಾ ಆಯಾಸ ಪರಿಹರಿಸಿಕೊಳ್ಳುವುದರ ಜೊತೆಗೆ ಅದುವರೆವಿಗೂ ಮಾಡಿರಬಹುದಾದ ಪಾಪ ಕರ್ಮಗಳನ್ನೆಲ್ಲವನ್ನೂ ಕಳೆದುಕೊಂಡು ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿಯ ದರ್ಶನ ಮಾಡಬೇಕು ಎಂಬ ನಿಯಮವಿತ್ತು. ಈ ರೀತಿಯಾಗಿ ತಪಸ್ಸನ್ನು ಆಚರಿಸಿದಂತೆ ನಿಷ್ಠೆ ನಿಯಮಗಳನ್ನು ಪಾಲಿಸಿ ಭಗವಂತನ ದರ್ಶನ ಮಾಡಿದಲ್ಲಿ ಮುಕ್ತಿ ದೊರೆಯುವುದು ಎನ್ನುವುದೇ ನಮ್ಮ ಪೂರ್ವಜರ ಆಶಯವಾಗಿತ್ತು.

ಆದರೆ ಉಪ್ಪು ಹುಳಿ ಖಾರ ತಿಂದುಂಡ ದೇಹಕ್ಕೆ ಅರಿಷಡ್ವರ್ಗಗಳಾದ, ಕಾಮ, ಕೋಧ, ಲೋಭ, ಮೋಹ, ಮಧ ಮತ್ತು ಮಾತ್ಸರ್ಯಗಳಿಂದ ಹೊರಬಂದು ನಿರ್ಮಲ ಮನಸ್ಸಿನಿಂದ ಭಗವಂತನಲ್ಲಿ ಏಕೋಭಾವವನ್ನು ಹೊಂದಲಾಗದೇ ಚಡಪಡಿಸತೊಡಗಿದರು, ಏನಾದರೂ ಬಿಡಬೇಕು ಎಂದರೆ ಏನು ಬಿಡಬೇಕು? ಎಂಬುದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡು ಕೊಳ್ಳಲು ಪ್ರಯತ್ನಿಸಿದಾಗಲೇ ಅವರಿಗೆ ಹೊಳೆದದ್ದು ಕಾಶಿಗೆ ಹೋದಾಗ, ಮೋಹ ಮಾತ್ಸರ್ಯಗಳ ಪ್ರತೀಕವಾಗಿ ತಮಗೆ ಇಷ್ಟವಾದ ಒಂದು ತರಕಾರಿ ಒಂದು ಹಣ್ಣು ಮತ್ತು ಒಂದು ತಿಂಡಿಯನ್ನು ಬಿಟ್ಟು ಬಂದಲ್ಲಿ ಇಳೀ ವಯಸ್ಸಿನಲ್ಲಿ ಮುಕ್ತಿ ದೊರೆಯುತ್ತದೆ ಎಂಬ ಆಲೋಚನೆಯನ್ನು ಮುಂದಿಟ್ಟರು. ಈ ಪರ್ಯಾಯ ವ್ಯವಸ್ಥೆ ಬಹಳ ಸುಲಭ ಎನಿಸಿದ ಕಾರಣ ಬಹುತೇಕರು ಇದನ್ನೇ ಪುರಸ್ಕರಿಸಿದ್ದರಿಂದ ಅದೇ ಸಂಪ್ರದಾಯವಾಗಿ ಬಿಟ್ಟಿತು.

ಹಾಗೆ ಕಾಶಿಗೆ ಹೋಗುವ ಮಂದಿಯೂ ಸಹಾ ಅದರಲ್ಲೂ ಒಳ ಮಾರ್ಗಗಳನ್ನು ಕಂಡು ಹಿಡಿದುಕೊಂಡಿದ್ದಲ್ಲದೇ ತಮಗೆ ಇಷ್ಟ ಬಂದ ತರಕಾರಿ, ಹಣ್ಣು, ತಿಂಡಿಗಳ ಬದಲಾಗಿ ತಮಗಿಷ್ಟವಿಲ್ಲದ್ದನ್ನು ತ್ಯಜಿಸಿ ಬರಲು ಆರಂಭಿಸಿದರೆ, ಇನ್ನೂ ಕೆಲವರು ತಮಗೆ ಇಷ್ಟ ಬಂದ ತರಕಾರಿ ಹಣ್ಣುಗಳು ಮತ್ತು ತಿಂಡಿಗಳನ್ನು ಹೋಗುವ ಒಂದೆರಡು ತಿಂಗಳ ಮುಂಚೆ ಸಿಕ್ಕಾ ಪಟ್ಟೆ ಅದನ್ನೇ ತಿಂದು ಕಡೆಗೆ ಮತ್ತೆಂದೂ ತಿನ್ನಲೇ ಬಾರದೆಂಬ ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿಕೊಳ್ಳುತ್ತಿದರು.

ಈ ರೀತಿಯಾಗಿ ತಮಗೆ ಇಷ್ಟವಾದದ್ದನ್ನು ಬಿಟ್ಟು ಬಿಡಬೇಕು ಎಂಬುದರ ಕುರಿತಾಗಿಯೂ ಒಂದೆರದು ಮೋಜಿನ ಪ್ರಸಂಗಗಳು ಇದೋ ನಿಮಗಾಗಿ

ನಮ್ಮ ಅಜ್ಜ ರಾಜಾರಾವ್ ಮೂಲತಃ ಬೆಳ್ಳೂರಿನವರಾದರೂ ಚಿಕ್ಕವಯಸ್ಸಿನಲ್ಲಿಯೇ ತಮ್ಮ ತಂದೆ ತಾಯಿಯರು ಮರಣ ಹೊಂದಿದ ಕಾರಣ ಅದು ಹೇಗೋ ಕಾಶಿಗೆ ಹೋಗಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಕಡೆಗೆ ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ ಎಂಬ ಶ್ಲೋಕದಂತೆ ಮತ್ತೆ ಕರ್ನಾಟಕಕ್ಕೆ ಕೆಲಸ ಹುಡುಕಿಕೊಂಡು ತಮ್ಮ ವಿದ್ಯಾರ್ಹತೆಗೆ ಕೆಜಿಎಫ್ ಚಿನ್ನದ ಗಣಿಯಲ್ಲಿ Administration officer ಆಗಿ ಕೆಲಸ ಗಿಟ್ಟಿಸಿಕೊಂಡರು. ಎಲ್ಲಿಯ ಬೆಳ್ಳೂರು, ಎಲ್ಲಿಯ ಕಾಶೀ ಮತ್ತು ಎಲ್ಲಿಯ ಕೆಜಿಎಫ್ ಎಲ್ಲವೂ ಭಗವಂತನ ಲೀಲೆ. ಅನುರೂಪದ ಮಡದಿ ವಿಶಾಲಾಕ್ಷಿ ಎಂಟು ಗಂಡು ಮಕ್ಕಳಲ್ಲಿ ಉಳಿದ ಒಬ್ಬನೇ ಮಗನ ನಂತರ ಪಂಚಕನ್ಯೆಯರನ್ನು ಮಕ್ಕಳಾಗಿ ಪಡೆದು ವಯಸ್ಸು 50 ದಾಟುತ್ತಿದ್ದಂತೆಯೇ ಆರೋಗ್ಯದಲ್ಲಿ ಏರುಪೇರಾದಾಗ, ತಮ್ಮ ಕಡೆಯ ಆಸೆಯಾಗಿ ಕಾಶೀ ವಿಶ್ವನಾಥನ ದರ್ಶನ ಮಾಡಲಿಚ್ಚಿಸಿದರು.

padavalakai

ಕಾಶಿಯಲ್ಲೇ ಬೆಳೆದು, ಕಾಶಿಯ ಇಂಚು ಇಂಚಿನ ಪ್ರದೇಶದ ಪರಿಚಯವಿದ್ದರೂ ತೀರ್ಧಯಾತ್ರೆ ಎಂದು ಸಂಕಲ್ಪ ಮಾಡಿಕೊಂಡಾಗ ತಮಗೆ ಬಲು ಇಷ್ಟವಾದ ತರಕಾರಿಯಾದ ಪಡವಲಕಾಯಿಯನ್ನು ಬಿಟ್ಟು ಬರಲು ನಿರ್ಧರಿಸಿದರು. ಸರಿ ಹೇಗೂ ಪಡವಲಕಾಯಿಯನ್ನು ಬಿಟ್ಟು ಬರುವ ಮೊದಲು ಅದನ್ನು ಚೆನ್ನಾಗಿ ತಿಂದು ಬಿಡಲು ನಿರ್ಧರಿಸಿ, ತಮ್ಮ ಮನೆಯ ಕೈತೋಟದಲ್ಲೇ ನಾಲ್ಕು ಕಂಬಗಳನ್ನು ನಿಲ್ಲಿಸಿ ಅದಕ್ಕೆ ತಂತಿಯ ಚಪ್ಪರ ಹಾಕಿಸಿ ಅಲ್ಲೇ ಕಂಬದ ಬದಿಯಲ್ಲಿ ಪಡವಲಕಾಯಿ ಬೀಜ ಹಾಕಿ ಬಹಳ ಜನತನದಿಂದ ನೀರು, ಗೊಬ್ಬರವನ್ನು ಹಾಕಿ ಪೋಷಿಸಿದ ಕಾರಣ ನೋಡ ನೋಡುತ್ತಿದ್ದಂತೆಯೇ ದೊಡ್ಡ ದೊಡ್ಡದಾಗಿ ಪಡವಲಕಾಯಿ ಬಿಡತೊಡಗಿತು. ಪ್ರತಿದಿನವೂ ಮನೆಯಲ್ಲಿ ಪಡವಲಕಾಯಿಯ ಒಂದೊಂದು ಅಡುಗೆ ಮಾಡತೊಡಗಿದರು. ಪಡವಲಕಾಯಿ ಕೂಟು, ಪಡವಲಕಾಯಿ ಹುಳಿ, ಪಲ್ಯ, ಕೋಸಂಬರಿ, ಮಜ್ಜಿಗೆ ಹುಳಿ ಒಟ್ಟಿನಲ್ಲಿ ಮನೆಯವರೆಲ್ಲರಿಗೂ ಒಂದು ವಾರ ಕಳೆಯುವುದರೊಳಗೆ ಅವರೊಬ್ಬರನ್ನು ಹೊರತು ಪಡಿಸಿ ಮನೆಯ ಉಳಿದವರೆಲ್ಲರಿಗೂ ಪಡವಲಕಾಯಿ ಎಂದರೆ ವಾಕರಿಕೆ ಬರುವಂತಾಯಿತು. ಆದರೆ ಅಪ್ಪನ ಮೇಲಿನ ಗೌರವವೋ ಅಥವಾ ಭಯದಿಂದಲೋ ಹೇಳಿಕೊಳ್ಳಲಾಗದೇ ಸುಮ್ಮನಿದ್ದರು. ಅಪ್ಪಾ ರೈಲಿನಲ್ಲಿ ಕಾಶಿ ಕಡೆಗೆ ಪ್ರಯಾಣಿಸುತ್ತಿದ್ದಂತೆಯೇ, ಮಗ ಪಡವಲ ಕಾಯಿ ಬಳ್ಳಿಯನ್ನು ಕಿತ್ತೊಗೆದು ಆ ಜಾಗದಲ್ಲಿ ಮಲ್ಲಿಗೆ ಅಂಟನ್ನು ಹಾಕಿದ. ಅಪ್ಪಾ ಮೂರ್ನಲ್ಕು ವಾರ ಕಳೆದ ನಂತರ ಊರಿಗೆ ಹಿಂದಿರುಗಿ ಬರುವಷ್ಟರಲ್ಲಿ ಪಡವಲಕಾಯಿ ಬಳ್ಳಿಯ ಜಾಗದಲ್ಲಿ ಮಲ್ಲಿಗೆ ಅಂಟು ಬೆಳೆಯುತ್ತಿತ್ತು. ಹೇಗೂ ಪಡವಲಕಾಯಿ ಬಿಟ್ಟು ಬಂದಿದ್ದ ಕಾರಣ ದೂರ್ವಾಸ ಮುನಿಗಳ ಅಪರಾವತರಾಗಿದ್ದ ನಮ್ಮಜ್ಜ ತಮ್ಮ ಕೋಪವನ್ನು ತಡೆದುಕೊಂಡು ಸುಮ್ಮನಾಗಿದ್ದರಂತೆ. ಸುಮಾರು ದಶಕಗಳ ಕಾಲ ಯಥೇಚ್ಚವಾಗಿ ಮಲ್ಲಿಗೆ ಬಿಡುತ್ತಿದ್ದರೆ ಮದುವೆಯಾಗಿ ಗಂಡನೆ ಮನೆಗೆ ಬಂದು ಸುಮಾರು ವರ್ಷಗಳ ಕಾಲ ನಮ್ಮಮ್ಮ ಪಡವಲಕಾಯಿಯನ್ನೇ ನಮ್ಮ ಮನೆಯಲ್ಲಿ ಬಳಸುತ್ತಿರಲಿಲ್ಲ.

ಇದೇ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಓದಿದ ಜೋಕ್ ಹೀಗಿದೆ

ಬಹಳ ವರ್ಷಗಳ ಹಿಂದೆ ಅಜ್ಜಿಯ ಮುದ್ದಿನಿಂದ ಸಾಕಿ ಸಲಹಿ ದುಂಡು ದುಂಡಗಾಗಿದ್ದ ಗುಂಡಾ. ಹೀಗೆ ತಿಂದೂ ತಿಂದು ಹೆಸರಿಗೆ ಅನ್ವರ್ಥವಾಗಿ ಗುಂಡಾಗಿದ್ದ ತಮ್ಮ ಮೊಮ್ಮಗನನ್ನು ಕರೆದ ಅಜ್ಜಿ, ನೋಡಪ್ಪಾ ಕಾಶಿಗೆ ಹೋದ್ರೆ ಇಷ್ಟವಾದ ಬೋಂಡಾ ಬಿಟ್ಟು ಬಾ ಒಳ್ಳೆಯದಾಗುತ್ತದೆ ಅಂತ ಹೇಳುತ್ತಾರೆ. ಮನೆಯಿಂದ ತಿಂಗಳಾನು ಗಟ್ಟಲೆ ಹೊರಗಿದ್ದರೆ ಸರಿಯಾಗಿ ತಿನ್ನಲು ಸಿಗದೇ ಸಣ್ಣಗಾಗಬಹುದು ಎಂಬುದು ಅಜ್ಜಿಯ ಆಸೆಯಾಗಿತ್ತು.

ಮೊಮ್ಮಗನಿಗೆ ಬೋಂಡಾ ಬಜ್ಜಿ ಅಂದರೆ ಸಿಕಾಪಟ್ಟೆ ಇಷ್ಟ. ಹೇಗೂ ಕಾಶಿಗೆ ಹೋಗ್ತೀನಲ್ಲಾ ಅಂತ ಅದನ್ನೇ ಮತ್ತೆ ಮತ್ತೆ ತಿಂದು ತಿಂದು ದಪ್ಪ ಆಗಿ ಓಳ್ಳೇ ರೋಗಿಷ್ಟನ ತರಹಾ ಆಗಿಹೋದ. ಕಡೆಗೂ. ಅಜ್ಜಿಯ ಒತ್ತಾಯಕ್ಕೆ ಮಣಿದು ಕಾಶಿಗೆ ಹೋದ ಗುಂಡ ಎಷ್ಟು ದಿನಗಳಾದರು ಹಿಂದಿರುಗುವುದಿರಲಿ, ಉಭಾ ಶುಭಾ ಅಂತ ಒಂದು ಪತ್ರವನ್ನೂ ಹಾಕದೇ ಹೋದಾಗ ಅಜ್ಜಿಗೆ ಭಯವಾಗ ತೊಡಗಿತು.

ಅಷ್ಟರಲ್ಲೇ ಗುಂಡನ ಪತ್ರವೊಂದು ಬಂದಿತಲ್ಲದೇ, ಆ ಪತ್ರದಲ್ಲಿ ಹೀಗೆ ಬರೆದಿತ್ತು.

ಪ್ರೀತಿಯ ಅಜ್ಜಿಗೆ ಗುಂಡನ ಸಾಷ್ಟಾಂಗ ನಮಸ್ಕಾರಗಳು.

ನಾನಿಲ್ಲಿ ಕ್ಷೇಮ..ನಿಮ್ಮ ಮಾತಿಗೆ ಕಟ್ಬು ಬಿದ್ದು ನನಗೆ ಬಹಳ ಇಷ್ಟ ವಾದ ಬಜ್ಜಿಯನ್ನು ಬಿಡಬೇಕೆಂದು ಕಾಶಿಗೆ ಬಂದು ತಲುಪಿದೆ. ಆದರೇನು ಮಾಡುವುದು ಇಲ್ಲಿ ಸಿಕ್ಕಾಪಟ್ಟೆ ಛಳೀ.

bajji

ಸ್ಥಳ ಮತ್ತು ಸ್ಥಳೀಯರ ಪರಿಚಯ ಮಾಡಿಕೊಂಡು, ಎಲ್ಲರ ಚಳೀ ಹೋಗಿಸುವಂತಹ, ನನ್ನದೇ ಆದ ಅಂಗಡಿ ಒಂದನ್ನು ತೆರೆದಿದ್ದಲ್ಲದೇ, ನಿಮಗೆ ಕೊಟ್ಟ ಮಾತಿನಂತೆ ನಾನು ಪ್ರತಿ ದಿನವೂ ಕಾಶಿಯಲ್ಲಿ ಬಜ್ಜಿ ಬಿಡುತ್ತಿದ್ದೇನೆ. ನಿಮ್ಮ ಆಶೀರ್ವಾದದಿಂದ ಒಳ್ಳೆಯ ವ್ಯಾಪಾರವೂ ಆಗುತ್ತಿದೆ.

ಇಂತಿ ನಿಮ್ಮ ಪ್ರೀತಿಯ ಗುಂಡಾ..

ಮೊಮ್ಮಗನ ಪತ್ರವನ್ನು ಓದಿ ಮೂರ್ಛೆ ಹೋದ ಅಜ್ಜಿ ಇಂದಿಗೂ ಕೋಮಾ ಸ್ಥಿತಿಯಲ್ಲೇ ಇದ್ದಾರಂತೆ 😓

ಇನ್ನೂ ಕೆಲವರು ಕಾಶಿಗಿ ಹೋಗಿ ಕೆಲವು ಪದಾರ್ಥಗಳನ್ನು ಬಿಟ್ಟು ಬಂದಿರುತ್ತಾರಾದರು ಬಾಯಿ ಚಪಲ ತಾಳಿಕೊಳ್ಳದೇ ಚಡಪಡಾಯಿಸ್ತಿರ್ತಾರೆ. ಯಾವುದೇ ಸಭೆ ಸಮಾರಂಭಗಳಿಗೋ ದೇವಸ್ಥಾನ ಇಲ್ಲವೇ ಮಠದ ಊಟದಲ್ಲಿ ಅವರು ಬಿಟ್ಟು ಬಂದ ತರಕಾರಿ ಅಥವಾ ಸಿಹಿ ತಿಂಡಿಗಳ ಆಡುಗೆ ಮಾಡಿದ್ದರೇ,, ಅಯ್ಯೋ ಇದು ದೇವರ ಪ್ರಸಾದ ಹಾಗೆಲ್ಲಾ ತಿನ್ನದೇ ಬಿಸಾಡಿದರೆ ಕಡೆಗಾಲದಲ್ಲಿ ತಿನ್ನಲು ಎರಡು ಪಿಡಿಚೆ ಅನ್ನವೂ ಸಿಗುವುದಿಲ್ಲ ಅಲ್ವೇ? ಎಂದು ಅಕ್ಕ ಪಕ್ಕದವರಿಗೆ ಹೇಳಿ ತಮಗೆ ತಾವೇ ಸಮಾಧಾನ ಮಾಡಿಕೊಂಡು ತಮ್ಮ ಜಿಹ್ವಾಫಲವನ್ನು ತೀರಿಸಿಕೊಳ್ಳುವ ಮಂದಿಗೇನೂ ಕಡಿಮೆ ಇಲ್ಲ.

kashi_vishnatha

ಆದ್ದರಿಂದ ನಮ್ಮ ಶಾಸ್ತ್ರ ಸಂಪ್ರದಾಯಗಳ ರೂಪದಲ್ಲಿರುವ ರೂಢಿಯ ಹಿಂದಿನ ನಿಜವಾದ ಅರ್ಥವನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಪಾಲಿಸಿದಲ್ಲಿ ನಿಜವಾಗಿಯೂ ಕಾಶೀ ವಿಶ್ವನಾಥನ ಅನುಗ್ರಹಕ್ಕೆ ಪಾತ್ರರಾಗಿ ಮುಕ್ತಿಯನ್ನು ಪಡೆಯಬಹುದಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

ಅಧ್ಭುತವಾದ ಇಡ್ಲಿಗಳು!

howrah_express

ಅದು ಸ್ವಾತಂತ್ರ್ಯ ಪೂರ್ವದ ದಿನಗಳು ಅದೊಂದು ದಿನ ಅಯ್ಯರ್ ಎಂಬ ವ್ಯಕ್ತಿ ಮತ್ತು ಬ್ರಿಟಿಷ್ ವ್ಯಕ್ತಿಯೊಬ್ಬ ಮದ್ರಾಸ್ನಿಂದ ಕಲ್ಕತ್ತಾಗೆ ಹೌರಾ ಮೇಲ್ ನಲ್ಲಿ ಮೊದಲನೇ ದರ್ಜೆಯ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದರು. ನಿಗಧಿಯಂತೆ ರೈಲು ರಾತ್ರಿ 8 ಗಂಟೆಗೆ ಮದ್ರಾಸ್ ಸೆಂಟ್ರಲ್‌ನಿಂದ ಹೊರಟಿತು. ಮಾರನೇ ದಿನ ಬೆಳಿಗ್ಗೆ 7 ಗಂಟೆಗೆಯ ಹೊತ್ತಿಗೆ ವಿಜಯವಾಡ ತಲುಪಿತ್ತು. ಇಬ್ಬರೂ ಸಹಾ ತಮ್ಮ ಪ್ರಾರ್ಥರ್ವಿಧಿಗಳನ್ನು ಮುಗಿಸಿ, ಬ್ರಿಟಿಷ್ ವ್ಯಕ್ತಿ ಅಲ್ಲಿಯೇ ಸ್ಟೇಷನ್ನಿನಲ್ಲಿ ಸಿಕ್ಕ ರುಚಿಕರವಾದ ಉಪಹಾರವನ್ನು ಮಾಡಿದರೆ, ಅಯ್ಯರ್ ತನ್ನ 4-ಹಂತದ ಟಿಫಿನ್ ಕ್ಯಾರಿಯರ್ ತೆಗೆದು ಅದರ ಮೊದಲಿನ ಡಬ್ಬದಲ್ಲಿದ್ದ ನಾಲ್ಕು ಇಡ್ಲಿಗಳನ್ನು ಸೇವಿಸಿ ನೀರು ಕುಡಿದು ಆರಾಮವಾಗಿದ್ದರು.

idlies

ಮಧ್ಯಾಹ್ನ ರೈಲು ವಿಶಾಖಪಟ್ಟಣ ತಲುಪಿದಾಗ ಬ್ರಿಟಿಷ್ ವ್ಯಕ್ತಿ ಸ್ಥಳೀಯ ರೈಲ್ವೆ ರಿಫ್ರೆಶ್‌ಮೆಂಟ್ ಸ್ಟಾಲ್‌ನಿಂದ ಭರ್ಜರಿಯಾದ ಊಟವನ್ನು ಖರೀದಿಸಿ ಊಟ ಮಾಡಿದರೆ, ಅಯ್ಯರ್ ಮತ್ತೆ ತನ್ನ ಟಿಫಿನ್ ಕ್ಯಾರಿಯರ್ ತೆಗೆದು, ಎರಡನೇ ಡಬ್ಬಿಯನ್ನು ಮಾತ್ರವೇ ತೆರೆದು ಮತ್ತೆ 4 ಇಡ್ಲಿಗಳನ್ನು ಸಂತೋಷದಿಂದ ಸೇವಿಸಿದರು. ಇದನ್ನೇ ಗಮನಿಸುತ್ತಿದ್ದ ಬ್ರಿಟಿಷ್ ವ್ಯಕ್ತಿಗೆ ಬಹಳ ಕುತೂಹಲ ಎನಿಸಿತು..

tiffin carrier

ರಾತ್ರಿ ರೈಲು ಬೆರ್ಹಾಂಪುರಕ್ಕೆ ಬಂದಾಗಲೂ ಊಟದ ಸಮಯದಲ್ಲಿ ಅದೇ ಈ ದೃಶ್ಯವು ಪುನರಾವರ್ತನೆಯಾದಾಗ, ಇನ್ನು ಹೆಚ್ಚಿನ ಕುತೂಹಲವನ್ನು ತಡೆದುಕೊಳ್ಳಲಾಗದ, ಬ್ರಿಟಿಷ್ ವ್ಯಕ್ತಿಯು, ಕ್ಷಮಿಸಿ, ನೀವು ಬೆಳಗಿನಿಂದಲೂ ಸೇವಿಸುತ್ತಿರುವ ಆ ಬಿಳಿ ವಸ್ತುಗಳು ಯಾವುದು ಎಂದು ತಿಳಿಸುವಿರಾ? ಎಂದಾಗ, ಅಯ್ಯರ್ ಸರ್, ಇವುಗಳು ಐಕ್ಯೂ ಮಾತ್ರೆಗಳು. ನಾವು ದಕ್ಷಿಣ ಭಾರತೀಯರು ನಿಯಮಿತವಾಗಿ ತೆಗೆದುಕೊಳ್ಳುವ ಕಾರಣ ಬುದ್ದಿವಂತರಾಗಿಯೂ ಮತ್ತು ದಷ್ಟ ಪುಷ್ಠವಾಗಿದ್ದೇವೆ ಎನ್ನುತ್ತಾನೆ.

ಅದಕ್ಕೆ ಅಹುದಹುದು ನೀವು ಬುದ್ಧಿವಂತರೆಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಉದ್ಗರಿಸಿದ ಬ್ರಿಟಿಷ್ ವ್ಯಕ್ತಿ, ನೀವು ಅವರನ್ನು ಹೇಗೆ ತಯಾರಿಸುತ್ತೀರಿ? ಎಂದು ಕೇಳಿದನು.

ಅದಕ್ಕುತ್ತರವಾಗಿ ಅಯ್ಯರ್ ಇಡ್ಲೀ ತಯಾರು ಮಾಡಲು ಬೇಕಾಗುವ ಕಚ್ಚಾ ವಸ್ತುಗಳು ಮತ್ತು
ತಯಾರಿಕೆಯ ಪ್ರಕ್ರಿಯೆಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಅದರಿಂದ ಸಂತೃಷ್ಟರಾದ ಆ ಬ್ರಿಟಿಷ್ ವ್ಯಕ್ತಿ, ನಿಮಗೆ ಆಭ್ಯಂತರವಿಲ್ಲದಿದ್ದರೆ, ನನಗೂ ಒಂದೆರಡು ಕೊಡಬಹುದೇ? ನೀವು ಕೇಳಿದಷ್ಟು ಬೆಲೆಯನ್ನು ನಾನು ಕೊಡಲು ಸಿದ್ಧನಿದ್ದೇನೆ ಎಂದು ಕೇಳಿಕೊಂಡರು.

ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದೆಣಿಸಿದ ಅಯ್ಯರ್ ಸುಮ್ಮನೇ ಕೆಲ ಸಮಯ ಯೋಚನೆ ಮಾಡಿದಂತೆ ನಟಿಸಿ, ಸದ್ಯಕ್ಕೆ ನನ್ನ ಬಳಿ ನಾಳಿನ ಉಪಾಹಾರಕ್ಕಾಗಿ ಕೇವಲ ಮೂರು ಮಾತ್ರ ಉಳಿದಿದೆ. ಹೇಗೂ ನಾಳೆ ಬೆಳಗ್ಗೆಯ ಹೊತ್ತಿಗೆ ಕಲ್ಕತ್ತಾ ತಲುಪುವುದರಿಂಡ ನಾನು ನನ್ನ ಸಂಬಂಧಿಯ ಮನೆಯಲ್ಲಿಯೇ ತಿಂಡಿ ತಿನ್ನುತ್ತೇನೆ, ಹಾಗಾಗಿ ಅವುಗಳನ್ನು ನಿಮಗೆ ಕೊಡುತ್ತೇನೆ. ಆದರೆ ಅವುಗಳಿಗೆ ತಲಾ 20 ರೂಪಾಯಿ ಕೊಡಬೇಕಾಗುತ್ತದೆ ಎಂದರು.

ಆ ಬ್ರಿಟಿಷರ್ ಅಧಿಕಾರಿ ಸ್ವಲ್ಪವೂ ಹಿಂದೆ ಮುಂದೆ ಯೋಚಿಸದೇ, 60 ರೂಪಾಯಿಗಳನ್ನು (ಆ ದಿನಗಳಲ್ಲಿ ಅದರ ಬೆಲೆ ಬಹಳಷ್ಟು ಇತ್ತು) ಕೊಟ್ಟು ಇಡ್ಲಿಗಳನ್ನು ಪಡೆದುಕೊಂಡರು.

ಮರುದಿನ ಬೆಳಿಗ್ಗೆ ರೈಲು ಹೌರಾ ನಿಲ್ದಾಣಕ್ಕೆ ಬಂದು ತಲುಪಿದಾಗ, ಇನ್ನೇನು ಇಬ್ಬರು ರೈಲಿನಿಂದ ಇಳಿದು ತಮ್ಮ ತಮ್ಮ ಪ್ರದೇಶಗಳಿಗೆ ಹೋಗಬೇಕು ಎನ್ನುವಾಗ, ಆ ಬ್ರಿಟೀಷ್ ವ್ಯಕ್ತಿ ನೀವು ಹೇಳಿದ ಪರಿಕರಗಳು ಮತ್ತು ಪ್ರಕ್ರಿಯೆಗಳನ್ನು ಸರಿಯಗಿ ತಿಳಿಸಿದ್ದೀರಿ ಎಂದು ಭಾವಿಸುತ್ತೇನೆ ಎಂದರು.

ಅದಕ್ಕೆ ಅಯ್ಯರ್ ಅವರು, ಹೌದು, ನಾನು ನಿಮಗೆ ಎಲ್ಲಾ ವಿವರಗಳನ್ನೂ ಸರಿಯಾಗಿ ತಿಳಿಸಿದ್ದೇನೆ ಎಂದರು.

ಹಾಗಾದರೆ ಆ ಮಾತ್ರೆಗಳು ಏಕೆ ಅಷ್ಟೊಂದು ದುಬಾರಿಯಾಗಿದೆ? ಎಂದು ಬ್ರಿಟಿಷ್ ವ್ಯಕ್ತಿ ಪ್ರಶ್ನಿಸಿದರು.

ಅದಕ್ಕೆ ಅಯ್ಯರ್ ಆವರು ನಗುನಗುತ್ತಲೇ, ನೆನಪಿಡಿ, ಅದು ಐಕ್ಯೂ ಟ್ಯಾಬ್ಲೆಟ್‌ಗಳು ಎಂದು ನಾನು ನಿಮಗೆ ಹೇಳಿದ್ದೇ. ಕಳೆದ ರಾತ್ರಿ ನೀವು ಕೇವಲ ಅಂತಹ 3 ಮಾತ್ರೆಗಳನ್ನು ಮಾತ್ರಾ ತೆಗೆದುಕೊಂಡಿದ್ದೀರಿ ಈಗ ಅದು ಕೆಲಸ ಮಾಡುತ್ತಿದೆ. ಎಂದು ತಮ್ಮ ಹಾದಿ ಹಿಡಿದರು.

ಇಡ್ಲಿ(ಇಂಗು) ತಿಂದ ಮಂಗನಂತೆ, ಬೆಪ್ಪಗಾದ ಬ್ರಿಟಿಷ್ ವ್ಯಕ್ತಿ ಹ್ಯಾಪು ಮೋರೆ ಹಾಕಿ ಕೊಂಡು ಮುಖ ಮೆಚ್ಚಿಕೊಂಡು ಅವರ ಹಾದಿ ಹಿಡಿದರು.

Indian Rocks & British Shocks ಅಲ್ವೇ? 😁🤣

ಏನಂತೀರೀ?
ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ

ವಿವೇಕವಂತ ಹಾಸ್ಯನಟ ವಿವೇಕ್ ಅಜರಾಮರ

ಹಾಸ್ಯ ಮನುಷ್ಯರ ಜೀವನದ ಅವಿಭಾಜ್ಯ ಅಂಗ. ಜೀವನದ ಏಕಾನತೆಯಿಂದಾಗಲೀ ದುಃಖದಿಂದಾಗಲೀ ಹೊರಬರಲು ಜನರಿಗೆ ಸಹಾಯ ಮಾಡುವುದೇ, ತಿಳಿಹಾಸ್ಯ ಹಾಗಾಗಿಯೇ ಸರ್ಕಸ್, ನಾಟಕ, ಚಲನಚಿತ್ರಗಳಲ್ಲಿ ಮನೋರಂಜನೆಯ ಭಾಗವಾಗಿ ಒಂದಷ್ಟು ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ನೋಡುತ್ತಾ ಅನುಭವಿಸುತ್ತಾ ಕೆಲ ಕಾಲ ತಮ್ಮ ನೋವುಗಳನ್ನು ಮರೆಯುವಂತೆ ಮಾಡುವುದರಲ್ಲಿ ಸಫಲತೆಯನ್ನು ಕಂಡಿದ್ದಾರೆ.

vivek3

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು, ದಿನೇಶ್, ಉಮೇಶ್, ಇತ್ತೀಚಿನ ಜಗ್ಗೇಶ್, ಚಿಕ್ಕಣ್ಣ, ಕುರಿಪ್ರತಾಪ್ ರಂತಹ ದಂಡೇ ಇದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಗೌಂಡಮಣಿ ಮತ್ತು ಸೆಂದಿಲ್ ಅವರಿಬ್ಬರ ಜೋಡಿ ಹಾಸ್ಯಪಾತ್ರಗಳಿಗೆ ಹೇಳಿಮಾಡಿಸಿದ ಜೋಡಿಯಾಗಿತ್ತು. ಚಿತ್ರಕತೆಯ ಜೊತೆ ಜೊತೆಯಲ್ಲಿಯೇ ಇವರಿಬ್ಬರ ಹಾಸ್ಯ ತುಣುಕುಗಳು ಜನರನ್ನು ರಂಜಿಸುತ್ತಿದ್ದವು. ಅದೆಷ್ಟೋ ಸಂದರ್ಭದಲ್ಲಿ ನಾಯಕ ನಾಯಕಿಯರಿಂಗಿಂತಲೂ ಮೊದಲು ಈ ಹಾಸ್ಯನಟರ ಕಾಲ್ ಶೀಟ್ ತೆಗೆದುಕೊಳ್ಳುವಂತಹ ಸಂದರ್ಭವೂ ಇತ್ತು ನೋಡ ನೋಡಿತ್ತಿದ್ದಂತೆಯೇ ಇವರಿಬ್ಬರ ಹಾಸ್ಯಗಳು ಹಾಸ್ಯಾಸ್ಪದ ಎನಿಸುವಂತಾಗುತ್ತಿದ್ದ ಕಾಲದಲ್ಲಿಯೇ ತಮಿಳು ಚಿತ್ರರಂಗಕ್ಕೆ ಧುತ್ತೆಂದು ಧೂಮಕೇತುವಿನಂತೆ ಧುಮಿಕಿದವರೇ ಹಾಸ್ಯ ನಟ ವಿವೇಕ್.

vivek4

ಆರಂಭದಲ್ಲಿ ಹೆಗಲಿಗೆ ಹಡಪವೊಂದನ್ನು ನೇತು ಹಾಕಿಕೊಂಡು ಮೆಡಿಮಿಕ್ಸ್ ಸೋಪನ್ನು ಮಾರುವ ಅಮಾಯಕ ಸೇಲ್ಸ್ ಮ್ಯಾನ್ ನಂತೆ ಕಾಣಿಸಿಕೊಂಡು ನಂತರ ವೀಗಾರ್ಡ್ ಸೇರಿದಂತೆ ಅನೇಕ ಉತ್ಪನ್ನಗಳ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಯುವ ಹಾಸ್ಯನಟ ವಿವೇಕ್ ನೋಡ ನೋಡುತ್ತಿದ್ದಂತೆಯೇ ತಮಿಳು ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದರು. ಖ್ಯಾತ ನಟ ರಜನಿಕಾಂತ್ ಅವರ ಹಾವಭಾವಗಳನ್ನು ನಕಲು ಮಾಡುತ್ತಲೇ ಜನರ ಹೃದಯವನ್ನು ವಿವೇಕ್ ಗೆದ್ದರು ಎಂದರೂ ತಪ್ಪಾಗಲಾರದು. ಉಳಿದೆಲ್ಲ ನಟರುಗಳು ನಿರ್ದೇಶಕರು ಮತ್ತು ಸಂಭಾಷಣಾಕಾರರು ಹೇಳಿಕೊಟ್ಟಂತೆ ನಟಿಸುತ್ತಿದ್ದರೆ, ಬುದ್ಧಿವಂತ ಮತ್ತು ವಿವೇಕವಂತ ವಿವೇಕ್ ಅದಕ್ಕಿಂತಲೂ ಒಂದು ಹೆಜ್ಜೆ ಮುಂದುವರೆದು ತಮ್ಮ ಪಾತ್ರಗಳಿಗೆ ತಾವೇ ಸಂಭಾಷಣೆಯನ್ನು ಬರೆದು ಅಭಿನಯಿಸುವಷ್ಟರ ಮಟ್ಟಿಗೆ ಪ್ರಭುದ್ಧರಾಗಿ ಬೆಳೆದರು. ನಿರ್ದೇಶಕ ಹೇಳುತ್ತಿದ್ದ ಸನ್ನಿವೇಶಗಳಿಗೆ ತಕ್ಕಂತೆ ತಮ್ಮದೇ ಆದ ಪಂಚಿಂಗ್ ಸಂಭಾಷಣೆಗಳ ಮೂಲಕ ಕೆಲವೇ ಕೆಲವೇ ದಿನಗಳಲ್ಲಿ ತಮಿಳಿನ ಸೂಪರ್‌ ಸ್ಟಾರ್‌ ರಜನಿಕಾಂತ್‌, ದಳಪತಿ ವಿಜಯ್‌, ಅಜಿತ್‌ ಸೇರಿದಂತೆ ಎಲ್ಲಾ ಪ್ರಮುಖ ನಟರೊಂದಿಗೆ ತೆರೆಯನ್ನು ಹಂಚಿಕೊಳ್ಳುವಷ್ಟರ ಮಟ್ಟಿಗೆ ಬೆಳೆದದ್ದಲ್ಲದೇ, ಸಿನಿಮಾ ಪೋಸ್ಟರ್ ಗಳಲ್ಲಿ ಸಿನಿಮಾದ ನಾಯಕ ನಾಯಕಿಯರ ಸರಿಸಮಾನವಾಗಿ ಖಡ್ಡಾಯವಾಗಿ ವಿವೇಕ್‌ ಅವರ ಚಿತ್ರವಿರುತ್ತಿತ್ತು ಎಂದರೆ ಅವರ ಸಾಧನೆಗೆ ಎಷ್ಟರ ಮಟ್ಟಿಗಿತ್ತು ಎಂಬುದರ ಅರಿವಾಗುತ್ತದೆ.

ತೊಂಬತ್ತರ ದಶಕದಲ್ಲಿ ಈಗಿನಷ್ಟು ಕನ್ನಡ ಟಿವಿ ಛಾನಲ್ಗಳು ಇಲ್ಲದಿದ್ದ ಸಂದರ್ಭದಲ್ಲಿ ಸನ್ ಟಿವಿಯೇ ಮನಗೆಲ್ಲಾ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಅದರಲ್ಲೂ ಪ್ರತಿದಿನ ರಾತ್ರಿ ಹತ್ತರ ನಂತರ ಪ್ರಸಾರವಾಗುತ್ತಿದ್ದ ಹಾಸ್ಯ ಕಾರ್ಯಕ್ರಮದಲ್ಲಿ ವಿವೇಕ್ ಅವರ ಒಂದೆರಡು ಹಾಸ್ಯ ತುಣುಕುಗಳನ್ನು ನೋಡಿದರೇನೇ ಕಣ್ತುಂಬ ನಿದ್ದೆ ಬರುತ್ತಿತ್ತು ಎಂದರೂ ಅತಿಶಯೋಕ್ತಿಯೇನಲ್ಲ. ಅದರಲ್ಲೂ ಅವರ ಈ ಒಂದು ದೃಶ್ಯ ಮಾತ್ರ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ಯಾವುದೋ ಸಣ್ಣ ತಪ್ಪಿಗಾಗಿ ಪೋಲೀಸರ ಕೈಗೆ ಸಿಕ್ಕಿ ಕೊಳ್ಳುವ ವಿವೇಕ್ ಅವರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ಸಲುವಾಗಿ ನನಗೆ ಪೋಲೀಸ್ ಕಮಿಷಿನರ್ ಗೊತ್ತು, ಐಜಿ ಗೊತ್ತು ಎಂದು ಒಂದೇ ಸಮನೇ ಪೋಲಿಸರ ಮೇಲೆ ಒತ್ತಡ ಹಾಕುತ್ತಾರೆ. ಅಯ್ಯೋ ರಾಮ! ಇಷ್ಟೊಂದು ಜನರನ್ನು ಗೊತ್ತಿರುವ ಪ್ರಭಾವಿ ವ್ಯಕ್ತಿಯನ್ನು ನಾವು ಹಿಡಿದಿದ್ದೇವೆ. ಇದರಿಂದ ನಮಗೇ ತೊಂದೆರೆಯಾಗಬಹುದೇನೋ ಎಂದು ಪೋಲಿಸರು ಯೋಚಿಸಿ ಅವರನ್ನು ಬಿಟ್ಟು ಕಳುಹಿಸಿದಾಗಾ, ಅವರಿಂದ ಬಹಳ ದೂರ ಹೋದ ನಂತರ ವಿವೇಕ್ ನನಗೆ ಪೋಲೀಸ್ ಕಮಿಷಿನರ್ ಗೊತ್ತು, ಐಜಿ ಗೊತ್ತು ಆದರೆ ಅವರಿಗೆ ನಾನು ಗೊತ್ತಿಲ್ಲ! ಎಂದು ಹೇಳಿ ತನ್ನ ಸಿಗ್ನೇಚರ್ ಸ್ಟೈಲ್ ಆದ ಬಾಯಿಯಲ್ಲಿ ಬೆರಳನ್ನು ಮಡಿಚಿಟ್ಟುಕೊಂಡು ಟುಪ್ ಎಂದು ಶಬ್ಧ ಮಾಡುತ್ತಾ ಓಡಿ ಹೋಗುವ ದೃಶ್ಯವನ್ನು ಅದೆಷ್ಟು ಬಾರಿ ನೋಡಿದ್ದೇನೋ ಲೆಖ್ಖವಿಲ್ಲ.

ಆರಂಭದಲ್ಲಿ ನಾಯಕನ ಗೆಳೆಯ, ನಾಯಕಿಯ ಸಹೋದರ ಪಾತ್ರಗಳ ಮೂಲಕ ಹಾಸ್ಯವನ್ನು ಮಾಡುತ್ತಾ ಚಿತ್ರರಂಗದಲ್ಲಿ ತನ್ನ ಸ್ಥಾನಮಾನವನ್ನು ಗುರುತಿಸಿಕೊಂಡ ನಂತರ. ಅನ್ನಿಯನ್, ಶಿವಾಜಿಯಲ್ಲಿ ನಾಯಕರುಗಳಿಗೇ ಸಮಾನಾಂತರವಾಗಿ ನಾಯಕರಿಗಿಂತಲೂ ಒಂದು ಗುಲಗಂಚಿ ಹೆಚ್ಚಾಗಿರುವ ಪಾತ್ರಗಳನ್ನು ಮಾಡಿದ ನಂರರ ಇತ್ತೀಚಿನ ದಿನಗಳಲ್ಲಿ ವೆಳ್ಳೈ ಪೂಕ್ಕಳ್, ಬೃಂದಾವನಂ ಚಿತ್ರಗಳಲ್ಲಿ ಗಂಭೀರ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ತನ್ನ ವಿಭಿನ್ನ ನಟನಾ ಶೈಲಿಯ ಮೂಲಕ ಜನರಿಗೆ ಹತ್ತಿರವಾಗಿದ್ದರು. ಮುಂದೆ ವಡಿವೇಲು ಮೈಲುಸ್ವಾಮಿ ಸಂತಾನಮ್, ಯೋಗಿ ಬಾಬು ಮುಂತಾದ ಹಾಸ್ಯನಟರುಗಳು ಹಾಸ್ಯಕ್ಕೆ ಜನರು ಮನಸೋಲುತ್ತಿದ್ದಂತೆಯೇ ಕೆಲ ಕಾಲ ನೇಪಥ್ಯಕ್ಕೆ ಸರಿದ ವಿವೇಕ್ ನಂತರ ಹಾಸ್ಯಪಾತ್ರಗಳಿಂದ ಹೊರಬಂದು ಗಂಭೀರ ಪಾತ್ರಗಳ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಂಡರು.

vivek2

2016ರಲ್ಲಿ ಕೈಗೆ ಬಂದಿದ್ದ ಮಗನನ್ನು ಅಚಾನಕ್ಕಾಗಿ ಕಳಕೊಂಡ ನಂತರ ಮಾನಸಿಕವಾಗಿ ಬಹಳವಾಗಿಯೇ ಕುಗ್ಗಿಹೋದ ವಿವೇಕ್ ನಂತರದ ದಿನಗಳಲ್ಲಿ ಅಂತರ್ಮುಖಿಯಾಗಿದ್ದರು. ಪುತ್ರ ಶೋಕ ನಿರಂತರಂ ಎನ್ನುವಂತೆ ಅವರ ಮಗನ ಅಗಲಿಕೆ ಅವರನ್ನು ಬಹಳವಾಗಿಯೇ ಕಾಡುತ್ತಿದ ಪರಿಣಾಮ ಅದರಿಂದ ಹೊರಬರುವ ಸಲುವಾಗಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಮತ್ತು ಮರಗಳನ್ನು ಕಡಿದು ಪರಿಸರ ಹಾಳು ಮಾಡುತ್ತಿರುವುದನ್ನು ಸರಿಪಡಿಸುವ ಸಲುವಾಗಿ ಗ್ರೀನ್ ಕಲಾಂ ಪ್ರಾಜೆಕ್ಟ್ ಅಡಿಯಲ್ಲಿ ಸುಮಾರು ಒಂದು ಕೋಟಿ ಗಿಡಗಳ ನೆಟ್ಟು ಬೆಳೆಸುವ ಕಾರ್ಯಕ್ರಮಗಳನ್ನು ‌ಹಮ್ಮಿಕೊಂಡಿದ್ದಲ್ಲದೇ ಅದರ ಅಂಗವಾಗಿ ಮೂರು ಲಕ್ಷಕ್ಕೂ ಹೆಚ್ಚು ಮರಗಳನ್ನು ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನೆಡುವ ಮೂಲಕ ಆ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದರು. ವಿವೇಕ್ ಅವರ ನಟನೆ ಮತ್ತು ಸಾಮಜಿಕ ಕಳಕಳಿಯನ್ನು ಗಮನಿದ ಭಾರತ ಸರ್ಕಾರವೂ ಸಹಾ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಬಹುತೇಕರಿಗೆ ತಿಳಿಯದಿದ್ದ ವಿಷಯವೇನೆಂದರೆ, ವಿವೇಕ್ ಅವರಿಗೆ ಸುಲಲಿತವಾಗಿ ಕನ್ನಡ ಅರ್ಥವಾಗುತ್ತಿತ್ತು. ಸಾಲು ಮರದ ತಿಮ್ಮಕ್ಕ ಅವರನ್ನು ತಮಿಳುನಾಡಿನಲ್ಲಿ ಸನ್ಮಾನಿಸುವ ಸಂದರ್ಭದಲ್ಲಿ ಆಕೆ ಕನ್ನಡದಲ್ಲಿ ಮಾತಾನಾಡಿದ್ದನ್ನು ಅಲ್ಲಿಯೇ ಇದ್ದ ಕನ್ನಡದ ನಟಿ ರಶ್ಮಿಕ ಮಂದಣ್ಣ ಅವರನ್ನು ಕನ್ನಡದವರೆಂದು ಅನುವಾದಿಸಲು ವೇದಿಕೆಗೆ ಕರೆದರು. ಆದರೆ ಆ ನಟಿ ಕನ್ನಡವನ್ನು ಪರಭಾಷಿಕರಿಗಿಂತ ಕೆಟ್ಟದಾಗಿ ಮಾತನಾಡಿ ಮುಜುಗರ ತಂದರು. ಆಗ ತಮಿಳಿಗ ನಟ ವಿವೇಕ್ ತಿಮ್ಮಕ್ಕನವರ ಸಾಧನೆ ಮತ್ತು ಆಕೆಗೆ ದೊರೆತ ಗೌರವ ಮತ್ತು ಪ್ರಶಸ್ತಿಗಳ ಬಗ್ಗೆ ಬೆಳಕು ಚೆಲ್ಲಿದ್ದಲ್ಲದೇ ಆಕೆಯ ಕನ್ನಡ ಭಾಷೆಯ ಭಾಷಣವನ್ನು ನಿರರ್ಗಳವಾಗಿ ತಮಿಳಿಗೆ ಭಾಷಾಂತರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

vivek_corona

ಕೇವಲ ಕೆಲವೇ ವಾರಗಳ ಹಿಂದೆ, ಕೊರೋನ ಲಸಿಕೆ ಕುರಿತಂತೆ ಸರ್ಕಾರದ ಆರೋಗ್ಯ ಇಲಾಖೆಯ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ನಟಿಸುವ ಮೂಲಕ ಸಮಾಜದಲ್ಲಿ ತಮ್ಮ ಸಾಮಾಜಿಕ ಬದ್ಧತೆ ಮತ್ತು ಕಳಕಳಿಯನ್ನು ಎತ್ತಿ ಹಿಡಿಯುವಂತಹ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಒಳ್ಳೆಯವರು ಬಹಳ ದಿನಗಳ ಕಾಲ ನಮ್ಮೊಂದಿಗೆ ಇರಲಾರರು ಎನ್ನುವಂತೆ ಕೇವಲ ಒಂದು ವಾರಗಳ ಹಿಂದೆ ಕರೋನಾ ಲಸಿಕೆ ತೆಗೆದುಕೊಂಡು ಎರಡು ದಿನಗಳಾದ ನಂತರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಅವರಿಗೆ ಹೃದಯ ಸ್ತಂಭನ ಉಂಟಾಗಿರುವುದು ತಿಳಿದು ಬಂದಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಿಂದಾಗಿ ವೈದ್ಯರುಗಳ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದಲ್ಲದೇ, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆಯನ್ನು ಆರಂಭಿಸಿದ್ದರು.

ದುರಾದೃಷ್ಟವಾಶಾತ್ ವೈದ್ಯರುಗಳ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ದಿ. 17.04.2021 ರ ಬೆಳಗಿನ ಜಾವ ಹೃದಯಾಘಾತದಿಂದಾಗಿ ವಿವೇಕ್ ಅವರು ನಮ್ಮೆಲ್ಲರನ್ನೂ ಅಗಲುವ ಮೂಲಕ ಪ್ರಪಂಚಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ದುಃಖದ ಕಡಲಿಗೆ ದೂಡಿ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ತಮಿಳು ಚಿತ್ರರಂಗದಲ್ಲಿ ಜನ ಪ್ರಿಯ ನಟರಾಗಿ ಸರಿ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಅತ್ಯಂತ ಬೇಡಿಕೆಯ ನಟನಾಗಿದ್ದ ವಿವೇಕ್ ಇನ್ನಿಲ್ಲ ಎಂದು ನಂಬುವುದಕ್ಕೆ ಅಸಾಧ್ಯವೆನಿಸಿದೆ. ಭೌತಿಕವಾಗಿ ವಿವೇಕ್ ಇನ್ನು ಮುಂದೆ ನಮ್ಮೊಂದಿಗೆ ಇರುವುದಿಲ್ಲವಾದರೂ ಅವರ ನಟನೆ ಮತ್ತು ಹಾಸ್ಯ ಭರಿತ ಸಂಭಾಷಣೆಗಳ ಮೂಲಕ ಆಚಂದ್ರಾರ್ಕವಾಗಿ ಅಜರಾಮರವಾಗಿರುತ್ತಾರೆ.

vivek5

ಆರಂಭದ ದಿನಗಳಲ್ಲಿ ಯಾವುದೇ ಗಾಡ್ ಫಾದರ್ ಗಳು ಇಲ್ಲದೇ ಕೇವಲ ತನ್ನ ಪ್ರತಿಭೆಯ ಮೂಲಕ ಅತ್ಯಂತ ಕಷ್ಟ ಪಟ್ಟು ಈ ಹಂತಕ್ಕೆ ಏರಿದ್ದ ವಿವೇಕ್ ನಂತರದ ದಿನಗಳಲ್ಲಿ ತಮ್ಮ ವಿವೇಕಯುತ ಹಾಸ್ಯಭರಿತ ಸಂಭಾಷಣೆಗಳ ಮೂಲಕ ಉತ್ತಮ ಸಂದೇಶಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವುದರಲ್ಲಿ ಯಶಸ್ವಿಯಾಗಿದ್ದರು. ನಂತರ ದಿನಗಳಲ್ಲಿ ಅವರ ಬದುಕು ಮತ್ತು ವೃತ್ತಿ ಬದುಕು ಎರಡೂ ಸಹಾ ತೂಗು ಉಯ್ಯಾಲೆಯಂತ ಅತ್ತಿತ್ತ ತೂಗುವಂತಿದ್ದರೂ ಅದನ್ನು ಸರಿಪಡಿಸಿಕೊಂಡು ಮತ್ತೆ ಯಶಸ್ವಿಯಾಗುವತ್ತ ಸಾಗುತ್ತಿದ್ದರು. ನಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಕೇವಲ 59 ವರ್ಷಗಳ ಸಾಯ ಬಾರದ ವಯಸ್ಸಿನಲ್ಲಿ ಜೀವನದ ಒತ್ತಡಗಳನ್ನು ತಾಳಲಾರದೇ ಅಸುನೀಗಿದ್ದು ನಿಜಕ್ಕೂ ದುಃಖಕರ. ಅವರು ಹಾಸ್ಯಕ್ಕಾಗಿ ಹೇಳಿದ್ದ ಸಾಲು, ಇನ್ನೀಕ್ಕಿ ಸತ್ತಾ ನಾಳೈಕ್ಕಿ ಪಾಲು. ಎನ್ನುವಂತೆ ನಮ್ಮೆಲ್ಲರನ್ನೂ ಅಗಲಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಅಕಾಲಿಕ ಅಗಲಿಕೆಯ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಕೊಡಲಿ ಎಂದು ಕೇಳಿಕೊಳ್ಳೋಣ

ಏನಂತೀರೀ?

ನಿಮ್ಮವನೇ ಉಮಾಸುತ

ವರ್ಷದ ಕೂಳು, ಹರ್ಷದ ಕೂಳು

ರಾಮ್ ಮತ್ತು ಶ್ಯಾಮ್ ಇಬ್ಬರೂ ಬಾಲ್ಯ ಸ್ನೇಹಿತರು. ಒಟ್ಟೊಟ್ಟಿಗೆ ಆಟ ಪಾಠವಾಡಿ ಬೆಳೆದವರು. ಏನೇ ಕೆಲಸ ಮಾಡಿದರೂ ಅವರಿಬ್ಬರೂ ಒಟ್ಟಿಗೇ ಮಾಡುತ್ತಿದ್ದರು. ಹಾಗಾಗಿ ಅವರಿಬ್ಬರೂ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು.  ರಾಮ್ ತಂದೆ ಹೆಸರಾಂತ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಶ್ಯಾಮ್ ತಂದೆ ಒಂದು ವೈಜ್ಣಾನಿಕ ತರಭೇತಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ ಅವರ ಇಡೀ ಕುಟುಂಬ ಫೋಟೋಗ್ರಾಫಿ ವೃತ್ತಿಯಲ್ಲಿ ನಿರತರಾಗಿದ್ದರು. ನಗರದ ಹಲವಾರು ಬಡಾವಣೆಗಳಲ್ಲಿ ಅವರ ಕುಟುಂಬದ ಸದಸ್ಯರ ಹತ್ತಾರು ಸ್ಟುಡಿಯೋಗಳು ಇದ್ದವು. ಶ್ಯಾಮ್ ಮತ್ತು ಅವನ ತಮ್ಮ ಶ್ರೀನಿ ಸಮಯ ಸಿಕ್ಕಾಗಲೆಲ್ಲಾ ಆವರ ಸಹೋದರರ ಸ್ಟುಡಿಯೋಗಳಿಗೆ ಹೋಗಿ ಕುಟುಂಬದ ವೃತ್ತಿಯಾದ ಫೋಟೋಗ್ರಾಫಿ ಕಲೆಯನ್ನು ಕಲಿತುಕೊಳ್ಳುತ್ತಿದ್ದರು ಮತ್ತು  ಕೆಲವೊಮ್ಮೆ ಅವರ ಸಹೋದರರ ಜೊತೆ ಸಹಾಯಕರಾಗಿ ಸಭೆ ಸಮಾರಂಭಗಳಿಗೂ ಹೋಗಿ  ಫೋಟೋಗ್ರಫಿ ಕಲಿಯುತ್ತಿದ್ದದ್ದೂ ಉಂಟು.

ರಾಮ್ ಮತ್ತು ಶ್ಯಾಮ್ ಕಾಲೇಜ್ ವಿದ್ಯಾಭ್ಯಾಸ ಮುಗಿದ ನಂತರ ರಾಮ್ ಕೆಲವು ಕೋರ್ಸ್ಗಳನ್ನು ಮಾಡಲು ನಿರ್ಧರಿಸಿದ್ದರೆ, ಶ್ಯಾಮ್ ಮತ್ತು ಅವನ ತಮ್ಮ ಶ್ರೀನಿ ಇಬ್ಬರೂ ಸೇರಿ ಪ್ರತಿಷ್ಠಿತ ಬಡಾವಣೆವೊಂದರಲ್ಲಿ ತಮ್ಮದೇ ಆದ ಒಂದು ಸ್ವಂತ ಸ್ಟುಡಿಯೋವೊಂದನ್ನು ಆರಂಭಿಸಿ ತಕ್ಕ ಮಟ್ಟಿಗೆ ಸಂಪಾದನೆ ಆರಂಭಿಸಿದ್ದರು. ರಾಮ್ ತಂದೆಯವರಿಗೆ ತಮ್ಮಂತೆಯೇ ತಮ್ಮ ಮಗನೂ ತಮ್ಮ ಕಾರ್ಖಾನೆಯಲ್ಲಿಯೇ ಕೆಲಸ ಮಾಡುವ ಬಯಕೆ. ಅದಕ್ಕನುಗುಣವಾಗಿಯೇ ಅವರ ಕಾರ್ಖಾನೆಯಲ್ಲಿ ಒಂದು ವರ್ಷದ ತರಭೇತಿ ಆರಂಭವಾಗುತ್ತಿದ್ದ ಕಾರಣ ತಮ್ಮ ಮಗನನ್ನು ಅದಕ್ಕೆ ಸೇರಿಸಲು ಇಚ್ಚಿಸಿದ್ದರು. ತರಭೇತಿಯಲ್ಲಿ ಉತ್ತಮ ಅಂಕಗಳಿಸುವವರನ್ನು ಅಲ್ಲಿಯೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಪದ್ದತಿ ಇದ್ದದ್ದರಿಂದ ತಮ್ಮ ಮಗನಿಗೂ ಕೆಲಸ ಸಿಗಬಹುದೆಂಬ ದೂರಾಲೋಚನೆಯಾಗಿತ್ತು.  ರಾಮ್ಗೆ ಅಲ್ಲಿ ಕೆಲಸ ಮಾಡಲು ಇಚ್ಚೆ ಇಲ್ಲದಿದ್ದರೂ ಅಪ್ಪನ ಮಾತಿಗೆ ಮರುಮಾತನಾಡದೆ ಅರ್ಜಿ ಹಾಕಿದ್ದ. ಎಂದಿನಂತೆ ರಾಮನ ಜೊತೆ ಸುಮ್ಮನೆ ತನ್ನದೂ ಇರಲಿ ಎಂದು ಶ್ಯಾಮ್ ಕೂಡ ಅರ್ಜಿ ಗುಜರಾಯಿಸಿದ್ದ.  ಅವರಿಬ್ಬರ ಗೆಳೆತನದ  ಅದೃಷ್ಟವೋ ಏನೋ ಇಬ್ಬರೂ ಅಲ್ಲಿಯೂ ಒಟ್ಟಿಗೆ ನೇಮಕವಾದರು.

ರಾಮ್ ಅಪ್ಪನ ಆಸೆಯಂತೆ ಕಾರ್ಖಾನೆಯಲ್ಲಿ  ಬೇಗ ಬೇಗನೆ ಕೆಲಸ ಕಲಿತು ಎಲ್ಲರ ಮನಗೆದ್ದು ಅಲ್ಲಿಯೇ ಕೆಲಸ ಗಿಟ್ಟಿಸಲು ಪ್ರಯತ್ನಿಸುತ್ತಿದ್ದರೆ, ಶ್ಯಾಮ್ ಕೆಲಸ ಕಡೆ ಅಷ್ಟೇನೂ ಗಮನ ಹರಿಸದೆ ಎಲ್ಲರೊಡನೆ ಕಲೆತು ತನ್ನ  ಸ್ಟುಡಿಯೋ ವ್ಯವಹಾರದ ಬಗ್ಗೆ ಪ್ರಚಾರ ಪಡಿಸುತ್ತಾ ಗಿರಾಕಿಗಳನ್ನು ಗಿಟ್ಟಿಸುವ ಪ್ರಯತ್ನ ಮಾಡುತ್ತಾ  ಒಂದೆರಡು ತಿಂಗಳುಗಳ ಒಳಗೆಯೇ ನಾಲ್ಕಾರು ಆರ್ಡರ್ಗಳನ್ನೂ ಗಿಟ್ಟಿಸಿಕೊಂಡಿದ್ದ. ಹಾಗೂ ಹೀಗೂ ಒಂದು ವರ್ಷದ ತರಭೇತಿಯನ್ನು ಇಬ್ಬರೂ ಮುಗಿಸಿ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದ್ದರು.

ಅಷ್ಟರೊಳಗೆ ರಾಮ್ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಾಗ ಶ್ಯಾಮ್ ಕೂಡಾ ತಾನೂ ಏನೂ ಕಮ್ಮಿ ಇಲ್ಲದಂತೆ ಪೀಣ್ಯಾದ ಬಳಿ ಒಂದು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿಯೇ ಬಿಟ್ಟ. ಅಲ್ಲಿಯೂ ಕೂಡಾ ಕೆಲಸಕ್ಕಿಂತ ತನ್ನ ವ್ಯವಹಾರವನ್ನೇ ಮುಂದುವರಿಸುತ್ತಾ ಹಾಗೂ ಹೀಗೂ ಕಾಲ ಕಳೆಯುತ್ತಿದ್ದ. ಒಮ್ಮೆ ದೂರದ ಸಂಬಂಧಿಯೊಬ್ಬರ ಮದುವೆಗೆಂದು ಮೂರ್ನಾಲ್ಕು ದಿನ ರಜೆ ಹಾಕಿ ಊರಿಗೆ ಹೋಗಿ ತಿರುಗಿ ಬಂದಾಗ ಅವನ ತಮ್ಮ ಮೂರ್ನಾಲ್ಕು  ಸಮಾರಂಭಗಳ  ಆರ್ಡರ್ ಬಂದಿರುವುದಾಗಿಯೂ ಅದರಲ್ಲಿ ಹಾಸನದ ಮದುವೆಯೂ ಒಂದಿತ್ತು. ಅಂದಿನ ದಿನದ  ಮಹೂರ್ತ ತುಂಬಾ ವಿಶೇಷವಾಗಿದ್ದರಿಂದ  ಅವರ ಬಂಧುಗಳೆಲ್ಲಾ ಅವರವರ ಅರ್ಡರ್ನಲ್ಲಿ  ತೊಡಗಿಕೊಂಡು ಇವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಗೋಳಾಡತೊಡಗಿದ. ಅತ್ತ ದರಿ ಇತ್ತ ಪುಲಿ ಎನ್ನುವ ಪರಿಸ್ಥಿತಿ ಶ್ಯಾಮನದ್ದಾಗಿತ್ತು.

ಸರಿ ಒಂದು ಪ್ರಯತ್ನ ಮಾಡಿಯೇ ಬಿಡೋಣ ಎಂದು ತನ್ನ ಬಾಸ್ ಅವರಿಗೆ ಕರೆ ಮಾಡಿ ತುಂಬಾ ಮೆಲುಧನಿಯಲ್ಲಿ ನರಳುವನಂತೆ ನಟಿಸುತ್ತಾ, ಸಾರ್, ಊರಿನಿಂದ ಮದುವೆ ಮುಗಿಸಿಕೊಂಡು ಬಂದೆ. ಆದರೆ ಅಲ್ಲಿಯ ಹವಾಮಾನದ ಪ್ರಭಾವವೋ ಅಥವ ಬಿಸಿಲಿನ ಝಳದಿಂದಾಗಿಯೋ ಏನೋ, ನನ್ನ ಆರೋಗ್ಯ ಹದಗೆಟ್ಟಿದೆ. ಹಾಸಿಗೆಯಿಂದ ಮೇಲೇ ಏಳಲೂ ಆಗುತ್ತಿಲ್ಲ. ಹಾಗೂ ಹೀಗೂ ಮಾಡಿಕೊಂಡು ವೈದ್ಯರ ಬಳಿ ಹೋಗಿದ್ದೆ. ಅವರ ಔಷಧೋಪಚಾರ ಮಾಡಿ ಒಂದೆರಡು ದಿನ ವಿಶ್ರಾಂತಿ ಪಡೆದುಕೊಳ್ಳಲು ಹೇಳಿದ್ದಾರೆ. ದಯವಿಟ್ಟು ಎರಡು ಮೂರು ದಿನ ರಜೆಗಳನ್ನು ಮುಂದುವರಿಸಿ ನಾನು ಹುಷಾರಾದ ಕೂಡಲೇ ಕೆಲಸಕ್ಕೆ ಬಂದು ಬಿಡುತ್ತೇನೆ ಎಂದು ದೈನ್ಯದಿಂದ ಕೇಳಿಕೊಂಡ. ಮಾನವೀಯತೆ ದೃಷ್ಠಿಯಿಂದ ಅವನ ಮೇಲಧಿಕಾರಿಗಳ ಮನ ಕರಗಿ ಸರಿ. ಅತಿ ಶೀಘ್ರವಾಗಿ ಗುಣಮುಖರಾಗಿ ಕೆಲಸಕ್ಕೆ ಬನ್ನಿ, ಹೇಗೂ ನಾನು ಕೂಡ ಮೂರು ದಿನ ಕೆಲಸಕ್ಕೆ ಬರುವುದಿಲ್ಲ ನಮ್ಮ ಅಣ್ಣನ ಮಗನ ಮದುವೆಗೆ ಹೋಗುತ್ತಿದ್ದೇನೆ ಎಂದರು.  ಶ್ಯಾಮನಿಗೆ ರೋಗಿ ಬಯಸಿದ್ದೂ ಹಾಲೂ ಅನ್ನ . ವೈದ್ಯರು ಹೇಳಿದ್ದೂ ಹಾಲೂ ಅನ್ನ ಎಂಬಂತಾಗಿ ಸರಿ ಸಾರ್ ಎಲ್ಲೂ ಹೋಗದೆ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಂಡು ಅತೀ ಶೀಘ್ರದಲ್ಲಿ ಹುಶಾರಾಗಿ ಕೆಲಸಕ್ಕೆ ಬಂದು ಬಿಡುತ್ತೇನೆ ಎಂದು ಹೇಳಿದ.

ತಮ್ಮನ ಬಳಿ ಮದುವೆ ಮನೆಯ ವಿಳಾಸ ಪಡೆದುಕೊಂಡು ಹೆಗಲಿಗೆ ಕ್ಯಾಮೆರಾ ಚೀಲವನ್ನು ಏರಿಸಿಕೊಂಡು ವಾಹನದಲ್ಲಿ ಜೋಂಯ್ ಎಂದು ಹೊರಟೇ ಬಿಟ್ಟ. ಮೊದಲನೇ ದಿನದ ಚಪ್ಪರದ ಪೂಜಾ ಕಾರ್ಯಕ್ರಮಗಳನ್ನೆಲ್ಲಾ ಮುಗಿಸಿಕೊಂಡು ಅಲ್ಲಿಯೇ ಊಟ ಮುಗಿಸಿಕೊಂಡು ಮಾರನೇ ದಿನ ಹಾಸನದ ಮದುವೆ ಮಂಟಪಕ್ಕೆ ಹೋಗುವ ವ್ಯವಸ್ಥೆಗಳನ್ನೆಲ್ಲಾ ಕೂಲಂಕುಶವಾಗಿ ವಿಚಾರಿಸಿಕೊಂಡು ಮಾರನೇ ಅವರು ಹೇಳಿದ್ದಕ್ಕಿಂತ  ಅರ್ಧ ಗಂಟೆಗೆ ಮುಂಚೆಯೇ ಹಾಜರಾಗಿ ತನಗೆ ಅನುಕೂಲವಾಗಿದ್ದ ಆಸನದಲ್ಲಿ ಆಸೀನನಾಗಿದ್ದ. ಮನೆಯ ನೆಂಟರಿಷ್ಟರೆಲ್ಲಾ ಬಂದ ಕೂಡಲೇ ವಾಹನ ಹಾಸನದತ್ತ ಹೊರಟಿತ್ತು. ದಾರಿಯ ಮಧ್ಯೆಯಲ್ಲಿ ಮದುವೆಯ ಮನೆಯವರು ಆಡುತ್ತಿದ್ದ ಅಂತ್ಯಾಕ್ಷರಿಯಲ್ಲಿ ತಾನೂ ಪಾಲ್ಗೊಂಡು ತನಗೆ ಗೊತ್ತಿದ್ದ ಹಾಡುಗಳನ್ನು ಹಾಡುತ್ತಾ ಮನೆಯವರಲ್ಲಿ ಅವನು ಒಬ್ಬನಾಗಿಯೇ ಹೋದ. ಆಷ್ಟರಲ್ಲಾಗಲೇ ಹಾಸನ ಮದುವೆ ಮಂಟಪಕ್ಕೆ ಬಂದಾಗಿತ್ತು. ಎಲ್ಲರೂ ವಾಹನವಿಳಿದು ಬೆಳಗಿನ ಕಾರ್ಯಕ್ರದ ಸಿದ್ಧತೆಯಲ್ಲಿ ತೊಡಗಿದ್ದರು. ನೋಡಲು ನಿಜಕ್ಕೂ ಸುಂದರನಾಗಿದ್ದ ಶ್ಯಾಮ ಮದುವೆಗೆ ಬಂದಿದ್ದ ಚೆಂದದ ಹುಡುಗಿಯರ ತರ ತರಹದ ಫೋಟೋಗಳನ್ನು ತೆಗೆಯುತ್ತಾ ಎಲ್ಲರ ಮನ ಗೆದ್ದು ಬೆಳಗಿನ ಕಾರ್ಯಕ್ರಮ ಮುಗಿಸಿ ಅವರ ಜೊತೆಯಲ್ಲಿಯೇ ಊಟ ಮಾಡಿ ಸಂಜೆ ಮೈಸೂರಿನಿಂದ ಬರುವ ಮಧುಮಗನ ಆಗಮನವನ್ನೇ ಕಾಯುತ್ತಿದ್ದ. ಆಷ್ಟರಲ್ಲಿ ವರಪೂಜೆಗೆ ಸಿಧ್ದವಾಗಿದ್ದ ವಧುವಿನ ನಾನಾ ಭಂಗಿಗಳ ಫೋಟೋ ತೆಗೆಯುತ್ತಾ ಅವಳ ಜೊತೆಯಲ್ಲಿದ್ದ ಹುಡುಗಿಯರನ್ನು ಛೇಡಿಸುತ್ತಿದ್ದಾಗಲೇ ಹೊರಗಿನಿಂದ ಯಾರೋ ಗಂಡಿನ ಕಡೆಯ ಬಸ್ ಬಂದಾಯ್ತು. ಎಲ್ಲರೂ ಸಿಧ್ಧರಾಗಿ ಎಂದು ಕೂಗಿ ಹೇಳಿದ್ದನ್ನು ಕೇಳಿದ ಶ್ಯಾಮ, ಹೊರಗಡೆ ಬಂದ. ಅಷ್ಟರಲ್ಲಾಗಲೇ ನಾದಸ್ವರ ತಂಡದವರು ಪಿ, ಪ್ಪಿ , ಪ್ಪೀ ಎಂದು ಶಬ್ಧಮಾಡಿತ್ತಿದ್ದರೆ ಡೋಲಿನವರು ಡ. ಡ್ದ, ಡಬ್, ಡಕ್ ಎಂದು ಸರಿ ಮಾಡಿಕೊಂಡು ಶೃತಿಪೆಟ್ಟಿಗೆಯವನ ಸಂಗಡ ಕೃತಿಯೊಂದನ್ನು ನುಡಿಸಲಾರಂಭಿಸಿದರು.

ಬಸ್ ಬಂದು ನಿಂತ ಕೂಡಲೇ  ದಡ ದಡ ಅಂತ  ಎಲ್ಲರೂ ಇಳಿಯಲು ಅನುವಾದಾಗ ಕೆಲವು ಕ್ಷಣ ಅಲ್ಲಿ ಗೊಂದಲದ ವಾತಾವರಣ ಮೂಡಿದರೂ, ನಂತರ ಎಲ್ಲವೂ ತಿಳಿಯಾಗಿ  ಮೊದಲು ಕಳಸಗಿತ್ತಿ ಅವಳ ಹಿಂದೆ ಕೊಬ್ಬರಿ ಗಿಟುಕನ್ನು ಹಿಡಿದ ವರ ಅವನ ಪಕ್ಕದಲ್ಲಿ ವರನ ತಂದೆ ತಾಯಿಯರು ಅವರ ಹಿಂದೆ ಸಂಬಂಧಿಕರು ನಿಂತು ಕೊಂಡಿದ್ದರು. ಇದೇ ಸರಿಯಾದ ಸಮಯವೆಂದು ನಾಲ್ಕಾರು ಫೋಟೋಗಳನ್ನು ಕ್ಲಿಕ್ಕಿಸಿ,

ವರನನ್ನು ಹತ್ತಿರದಿಂದ ಸೆರೆ ಹಿಡಿಯಲು, ಏರು ಧನಿಯಲ್ಲಿ ಸಾರ್ ಸ್ವಲ್ಪ ಜಾಗ ಬಿಡಿ, ಆಮ್ಮಾ ಸ್ವಲ್ಪ ಈ ಕಡೆ ಬನ್ನಿ ಎನ್ನುತ್ತ ಶ್ಯಾಮ ವರನ ಸಮೀಪಕ್ಕೆ ಬಂದು ಕ್ಯಾಮೆರಾವನ್ನು ಝೂಮ್ ಮಾಡುತ್ತಿದ್ದಾಗ ಕ್ಯಾಮೆರಾದಲ್ಲಿ ಕಂಡ ವ್ಯಕ್ತಿಯೊಬ್ಬರನ್ನು ಕಂಡ ಕೂಡಲೇ ಶ್ಯಾಮ ಬೆವರಲಾರಂಭಿಸಿದ. ಕೈ ಕಾಲುಗಳು ನಡುಗಲಾರಂಭಿಸಿತು.  ನಿಂತ ಜಾಗದಲ್ಲಿಯೇ  ಕಣ್ಣು ಕತ್ತಲಾಗ ತೊಡಗಿದವು. ಗಂಟಲು ಗದ್ಗತವಾಗಿ ಬಾಯಿಯಿಂದ ಮಾತೇ ಹೊರಡಲಾರದಾಯಿತು.  ಪಕ್ಕದಲ್ಲಿ ನುಡಿಸುತ್ತಿದ್ದ ನಾದಸ್ವರವೂ ಅವನಿಗೆ ಕೇಳದಂತಾಗಿತ್ತು.  ಅವನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಆ ವ್ಯಕ್ತಿ ಶ್ಯಾಮನ ಬಳಿ ಬಂದು ಮೆಲ್ಲಗೆ ಅವನ ಹೆಗಲು ಮೇಲೆ ಕೈ ಹಾಕಿ ರೀ ಶ್ಯಾಮ್, ಹಾಸಿಗೆಯಿಂದ ಮೇಲೇ ಏಳಲೂ ಆಗದಷ್ಟು ಬಳಲಿದ್ದೀರಿ. ಹಾಗೆಂದು ಫೋಟೋ ಸರಿಯಾಗಿ ತೆಗೆಯದೇ ಇರಬೇಡಿ. ಇದು ನಮ್ಮ ಹುಡುಗನ ಜೀವಮಾನ ಇರುವ ವರೆವಿಗೂ ನೆನಪಿನಲ್ಲಿ ಇರಬೇಕಾದಂತಹ ಸಂಧರ್ಭ. ಹಾಗಾಗಿ ನೋಡಿಕೊಂಡು ಫೋಟೋ ತೆಗೆಯಿರಿ ಎಂದು ಮೆಲು ಧನಿಯಲ್ಲಿ ಶ್ಯಾಮನಿಗೆ ಮಾತ್ರವೇ ಕೇಳುವಂತೆ ವ್ಯಂಗವಾಗಿ ಹೇಳಿ ಹೋದರು. ಅವರ ಮಾತನ್ನು ಕೇಳುತ್ತಿದ್ದ ಶ್ಯಾಮನಿಗೆ ತನ್ನ ಪ್ಯಾಂಟ್ ಒದ್ದೆಯಾದ ಅನುಭವ.

ಸ್ವಲ್ಪ ದುಡ್ಡಿನ ಆಸೆಯಿಂದ ಕೆಲಸಕ್ಕೆ  ಅನಾರೋಗ್ಯ ಎಂದು  ಸುಳ್ಳು ಹೇಳಿ ಹಾಸನಕ್ಕೆ ಛಾಯಾಗ್ರಹಣಕ್ಕೆಂದು ಬಂದರೆ, ಆ ಮದುವೆ ಅವನ ಮೇಲಧಿಕಾರಿಯ ಅಣ್ಣನ ಮಗನದ್ದೇ ಆಗಿರ ಬೇಕೆ?  ಇಡೀ ಮದುವೆ ಮನೆಯಲ್ಲಿ ಪದೇ ಪದೇ ಅವನ ಮೇಲಧಿಕಾರಿಯ ಮುಖವನ್ನೇ ನೋಡುವ ಸಂಧರ್ಭ ಬರುತ್ತಿದ್ದಾಗ,  ಅಯ್ಯೋ ಇದೇನಪ್ಪಾ ಹೀಗಾಗಿ ಹೋಯ್ತು? ಯಾಕಾದರೂ ಇಲ್ಲಿಗೆ ಬರಲು ಒಪ್ಪಿಕೊಂಡನೋ? ಎಂದು ಹಾಗೂ ಹೀಗೂ ಮದುವೆ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹಿಂದಿರುಗಿ ಒಂದು ವಾರವಾದರೂ ಸ್ಟುಡಿಯೋಗಾಗಲೀ,  ಕೆಲಸಕ್ಕಾಗಲೀ ಹೋಗಲು ಅವನಿಗೆ ಮನಸ್ಸೇ ಬರಲಿಲ್ಲ.  ಕೆಲಸಕ್ಕೆ ಹೋಗಿ ಅವರ ಮೇಲಧಿಕಾರಿಗಳ ಬಳಿ ಹೇಗೆ ಮುಖ ತೋರಿಸುವುದು ಎಂಬ ಪಾಪ ಪ್ರಜ್ಞೆ ಕಾಡಿ ಕೊನೆಗೂ ಒಂದು ನಿರ್ಧಾರ ತಳೆದು ಮಾರನೇ ದಿನ ಕೆಲಸಕ್ಕೆ  ಹೊತ್ತಿಗೆ ಮುಂಚೆಯೇ  ಹೋಗಿಯೇ ಬಿಟ್ಟ. ಕಛೇರಿಗೆ ಅವರ ಮೇಲಧಿಕಾರಿಗಳು ಬಂದೊಡನೆಯೇ ಅವರ ಕೊಠಡಿಗೆ ತೆರಳಿ  ಜೋಬಿನಲ್ಲಿಟ್ಟು ಕೊಂಡಿದ್ದ ರಾಜೀನಾಮೆ ಪತ್ರವನ್ನು ಅವರ ಕೈಗಿತ್ತು ಏನನ್ನೂ ಮಾತನಾಡದೆ ಅವರನ್ನು ಹಿಂತಿರುಗಿಯೂ ನೋಡದೆ ಸರ ಸರನೆ ಮನೆಯ ಕಡೆ ಹೊರಟೇ ಬಿಟ್ಟ.

ಆದರೆ ಮನೆ ಕಡೆಗೆ ಹೋಗಲು ಮನಸ್ಸಾಗದೆ, ತನ್ನ ಕಛೇರಿಯಿಂದ  ಸೀದಾ ರಾಮ್ ಕಛೇರಿಗೆ ತೆರಳಿ ಅವನೊಂದಿಗೆ ಬಿಸಿ ಬಿಸಿಯಾದ ಕಾಫಿ ಕುಡಿಯುತ್ತಾ ನಡೆದದ್ದನ್ನೆಲ್ಲಾ ಅವನ ಬಳಿ  ಹೇಳಿ ಮನಸ್ಸನ್ನು ಹಗುರ ಮಾಡಿಕೊಂಡ. ಅವನ ಮಾತನ್ನೆಲ್ಲಾ ತದೇಕ ಚಿತ್ತದಿಂದ ಕೇಳಿದ ರಾಮ್, ಶ್ಯಾಮ  ಇನ್ನು ಮುಂದೆ ನೀನು ಎಲ್ಲಿಯೂ ಕೆಲಸ ಮಾಡುವ ಅವಶ್ಯಕತೆಯಿಲ್ಲ. ನಿನ್ನ ಸ್ಟುಡಿಯೋ ಕಡೆ ಗಮನ ಹರಿಸು ಎಂದು ಬುದ್ದಿವಾದ ಹೇಳಿದ್ದನ್ನು ಮನಸಾರೆ ಕೇಳಿಕೊಂಡ ಶ್ಯಾಮ್ ಇಂದು ನಾಲ್ಕಾರು ದೊಡ್ಡ ದೊಡ್ಡ  ಆಧುನಿಕ ಸ್ಟುಡಿಯೋ ಮಾಲಿಕ. ಹತ್ತಾರು ಕೆಲಸದವರಿಗೆ ಕೆಲಸ ಕೊಟ್ಟಿರುವ ಯಶಸ್ವೀ ಮಾಲಿಕ ಮತ್ತು ವ್ಯವಹಾರಸ್ಥ.  ಅದಕ್ಕೇ ದೊಡ್ಡವರು ಹೇಳಿರುವುದು ಹರ್ಷದ ಕೂಳಿಗೆ ಮರುಳಾಗಿ ವರ್ಷದ ಕೂಳನ್ನು ಕಳೆದುಕೊಳ್ಳಬಾರದು ಎಂದು

ಏನಂತೀರಿ?

ನಿಮ್ಮವನೇ ಉಮಾಸುತ

ಮಾತು ಬಲ್ಲವನಿಗೆ ಸಮಸ್ಯೆಯೇ ಇಲ್ಲ.

ರಷ್ಯಾದ ಯಹೂದಿಯೊಬ್ಬನಿಗೆ ಅಂತಿಮವಾಗಿ ತನ್ನ ತಾಯ್ನಾಡಾದ ಇಸ್ರೇಲ್‌ಗೆ ವಲಸೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಮಾಸ್ಕೋ ವಿಮಾನ ನಿಲ್ದಾಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಆತನ ಸಾಮಾನು ಸರಂಜಾಮುಗಳಲ್ಲಿ ಲೆನಿನ್ ಪ್ರತಿಮೆಯನ್ನು ಕಂಡು, ಅರೇ ಇದು ಏನು? ಎಂದು ಪ್ರಶ್ನಿಸಿದರು. ಕೂಡಲೇ ಆ ವ್ಯಕ್ತಿ, ಸರ್ ಇದು ಏನು? ಎಂಬುದು ತಪ್ಪಾದ ಪ್ರಶ್ನೆ. ಅದರ ಬದಲು ಇವರು ಯಾರು? ಎಂದು ನೀವು ಕೇಳಬೇಕಾಗಿತ್ತು ಎಂದು ಹೇಳಿ, ಇವರು ಕಾಮ್ರೇಡ್ ಲೆನಿನ್. ಸಮಾಜವಾದದ ಅಡಿಪಾಯವನ್ನು ಹಾಕಿದ ಮಹಾನ್ ವ್ಯಕ್ತಿಯಲ್ಲದೇ, ರಷ್ಯಾದ ಜನರ ಭವಿಷ್ಯ ಮತ್ತು ಸಮೃದ್ಧಿಯನ್ನು ಸೃಷ್ಟಿಸಿದವರು ಹಾಗಾಗಿ ಬಹಳ ಅಭಿಮಾನದಿಂದ ಮತ್ತು ಹೆಮ್ಮೆಯಿಂದ ಪ್ರೀತಿಯ ನಾಯಕನ ನೆನಪಾಗಿ ಈ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದಾಗ, ಅದರಿಂದ ಸಂಪ್ರೀತಗೊಂಡ ರಷ್ಯಾದ ಕಸ್ಟಮ್ಸ್ ಅಧಿಕಾರಿಗಳು ಯಾವುದೇ ಹೆಚ್ಚಿನ ಪರಿಶೀಲನೆ ಇಲ್ಲದೆ ಆತನನ್ನು ಇಸ್ರೇಲಿಗೆ ಹೋಗಲು ಅನುವು ಮಾಡಿಕೊಟ್ಟರು.

ಇಸ್ರೇಲಿಗೆ ತಲುಪಿದ ನಂತರ ಟೆಲ್ ಅವೀವ್ ವಿಮಾನ ನಿಲ್ದಾಣದಲ್ಲಿಯೂ, ಇಸ್ರೇಲಿನ ಕಸ್ಟಮ್ಸ್ ಅಧಿಕಾರಿಗಳು ಆ ವ್ಯಕ್ತಿಯ ಸಾಮಾನು ಸರಂಜಾಮುಗಳನ್ನು ಪರೀಕ್ಷಿಸಿ, ಅರೇ ಇದು ಏನು? ಎಂದು ಪ್ರಶ್ನಿಸಿದರು. ಕೂಡಲೇ, ಸರ್, ಇದು ಏನು? ಎಂಬ ತಪ್ಪಾದ ಪ್ರಶ್ನೆಯನ್ನು ಕೇಳಿದ್ದೀರಿ. ನೀವು ಇವರು ಯಾರು? ಎಂಬ ಪ್ರಶ್ನೆಯನ್ನು ಕೇಳಬೇಕಿತ್ತು ಎಂದು ಹೇಳಿ ಒಂದು ಕ್ಷಣವೂ ಸುಮ್ಮನಾಗದೇ, ಇವರು ಲೆನಿನ್. ಇವರಿಂದಲೇ, ಯಹೂದಿಗಳು ರಷ್ಯಾವನ್ನು ತೊರೆಯಲು ಕಾರಣವಾಯಿತು. ಈ ಕಾರಣದಿಂದಲೇ ಪ್ರತೀ ದಿನವೂ ಆತನನ್ನು ಶಪಿಸುವ ಸಲುವಾಗಿಯೇ ನಾನು ಈ ಪ್ರತಿಮೆಯನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ. ಈ ಮಾತುಗಳಿಂದ ಮರುಕ ಪಟ್ಟ ಇಸ್ರೇಲಿ ಕಸ್ಟಮ್ಸ್ ಅಧಿಕಾರಿಗಳು, ಈ ಕುರಿತಂತೆ ನಾನು ಸಹಾ ಕ್ಷಮೆಯಾಚಿಸುತ್ತೇನೆ ಎಂದು ಹೇಳಿ, ನೀವೀಗ ಹೊರಡ ಬಹುದು ಎಂದು ಹೇಳಿ ಕಳುಹಿಸಿದರು.

ಹೀಗೆ ರಷ್ಯಾ ಮತ್ತು ಇಸ್ರೇಲಿನ ಕಸ್ಟಮ್ ಅಧಿಕಾರಿಗಳಿಗೆ ವಿಭಿನ್ನವಾದ ಉತ್ತರಗಳನ್ನು ನೀಡಿ ತಂದ ಪ್ರತ್ರಿಮೆಯನ್ನು ತನ್ನ ಹೊಸ ಮನೆಯ ಮೇಜಿನ ಮೇಲೆ ಇಟ್ಟಿದ್ದಲ್ಲದೇ, ತಾನು ಸುರಕ್ಷಿತವಾಗಿ ರಷ್ಯಾದಿಂದ ತಾಯ್ನಾಡಿಗೆ ಮರಳಿದ್ದನ್ನು ಸಂಭ್ರಮಿಸಲು ತನ್ನ ಬಂಧು ಮಿತ್ರರನ್ನು ತನ್ನ ಮನೆಗೆ ಭೋಜನಕ್ಕೆ ಆಹ್ವಾನಿಸಿದನು.

ಹಾಗೆ ಭೋಜನಕ್ಕೆ ಬಂದ ಸ್ನೇಹಿತರೊಬ್ಬರು, ಮೇಜಿನ ಮೇಲಿದ್ದ ಲೆನಿನ್ ಪ್ರತಿಮೆಯನ್ನು ಗಮನಿಸಿ, ಇವರು ಯಾರು? ಎಂದು ಪ್ರಶ್ನಿಸಿದಾಗ, ಆತ ಅರೇ ಗೆಳೆಯಾ ಇವರು ಯಾರು? ಎಂದು ತಪ್ಪಾದ ಪ್ರಶ್ನೆಯನ್ನು ಕೇಳದಿರು. ಇದು ಏನು? ಎಂದು ಪ್ರಶ್ನಿಸು. ಇದು ಹತ್ತು ಕಿಲೋಗ್ರಾಂಗಳಷ್ಟು ತೂಕದ ಘನ ಚಿನ್ನವಾಗಿದ್ದು, ಯಾವುದೇ ಕಸ್ಟಮ್ಸ್ ಸುಂಕ ಮತ್ತು ತೆರಿಗೆಯನ್ನು ಪಾವತಿಸದೇ ನನ್ನ ವಾಕ್ಛಾತುರ್ಯದಿಂದ ಸುಲಭವಾಗಿ ರಷ್ಯಾದಿಂದ ಇಸ್ರೇಲಿಗೆ ತಂದಿದ್ದೇನೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ.

ಸಾರಾಂಶ: ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಶಿಕ್ಷೆ ಇಲ್ಲ. ಪಟ ಪಟನೆ ಸುಂದರವಾಗಿ ಮಾತನಾಡಲು ಬರುವವನು ಎಂತಹವನ್ನೂ ಎಂತಹ ವಿಭಿನ್ನ ಪರಿಸರದಲ್ಲಿಯೂ ಮರುಳು ಮಾಡಬಲ್ಲ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.

ಏನಂತೀರೀ?
ನಿಮ್ಮವನೇ ಉಮಾಸುತ

ಗೆಳೆಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶದ ಭಾವಾನುವಾದ

ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

ಅದೊಂದು ದಿನ ಶಂಕರನಿಗೆ ಹುಶಾರಿಲ್ಲದಿದ್ದ ಕಾರಣ ಅವರ ತಾಯಿ ಅವನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರೂ ಸಹಾ ಭಯ ಪಡುವಂತಹದ್ದೇನೂ ಇಲ್ಲ. ಮನೆಯಲ್ಲಿಯೇ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ. ಈಗ ಕೊಟ್ಟಿರುವ ಆಂಟೀಬಯಾಟಿಕ್ ಸ್ವಲ್ಪ ಸ್ಟ್ರಾಂಗ್ ಆಗಿರುವ ಕಾರಣ ಸ್ವಲ್ಪ ಹಣ್ಣುಗಳು ಮತ್ತು ಎಳನೀರನ್ನು ಕೊಡಿ ಎಂದು ಹೇಳಿದ್ದರು.

ಮಾರನೇಯ ದಿನ ಶಂಕರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾಗ ಅವನ ಮನೆಯ ಮುಂದಿನ ಚರಂಡಿ ಶುದ್ಧಿ ಮಾಡಲು ಒಂದ ಇಬ್ಬರು ನಗರ ಪಾಲಿಕೆ ಕೆಲಸದವರು ಚರಂಡಿಯನ್ನು ಶುದ್ದಿ ಮಾಡಿದ ನಂತರ, ಅಮ್ಮಾ ಸ್ವಲ್ಪ ಕುಡಿಯಲು ನೀರು ಕೊಡ್ತೀರಾ ಎಂದು ಕೇಳುತ್ತಾರೆ. ಆಗ ಮತ್ತಾವುದೋ ಕೆಲಸದಲ್ಲಿ ಮಗ್ನರಾಗಿದ್ದ ಶಂಕರರ ತಾಯಿ ಅವರ ಮಗಳಿಗೆ ಕುಡಿಯಲು ನೀರು ತಂದು ಕೊಡಲು ಹೇಳುತ್ತಾರೆ. ಆಕೆ ಕೂಡಲೇ ಅಡುಗೆ ಮನೆಗೆ ಹೋಗಿ, ಒಳಗಿನಿಂದ ಕುಡಿಯಲು ಒಂದು ಲೋಟ ಮತ್ತು ನೀರಿನ ತಂಬಿಗೆ ತಂದು ಆತನಿಗೆ ನೀರು ಕೊಡುತ್ತಾಳೆ. ಒಂದು ಲೋಟ ನೀರು ಚಪ್ಪರಿಸಿಕೊಂಡು ಕುಡಿದ ಆತ, ಅಮ್ಮಾ ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ? ಅಂದ ಕೂಡಲೇ ಅವಳು ಇನ್ನೂ ಸ್ವಲ್ಪ ನೀರನ್ನು ಲೋಟಕ್ಕೆ ಹಾಕಿ ಇಡೀ ತಂಬಿಗೆಯನ್ನೇ ಖಾಲೀ ಮಾಡ್ತಾಳೆ. ಹೊಟ್ಟೇ ತುಂಬಾ ನೀರನ್ನು ಕುಡಿದ ಮೇಲೆ ಅತ, ಅಮ್ಮಾ ನಿಮ್ಮನೇ ನೀರು ತುಂಬಾನೇ ಸಿಹಿಯಾಗಿ ಚೆನ್ನಾಗಿತ್ತು ಎಂದಾಗ ಶಂಕರನ ತಾಯಿ ಮಗಳ ಕೈಯ್ಯಲ್ಲಿದ್ದ ತಂಬಿಗೆ ನೋಡಿ ಅಯ್ಯೋ ರಾಮಾ ಇದೇನೇ ಮಾಡ್ದೇ? ಎಂದು ಏರು ಧನಿಯಲ್ಲಿ ಹೇಳುತ್ತಾ ಮಗಳನ್ನು ಮನೆಯ ಒಳಗೆ ದರ ದರನೆ ಎಳೆದುಕೊಂಡು ಹೋಗಿ, ಎಂತಹ ಕೆಲ್ಸಾ ಮಾಡಿದ್ಯೇ ನೀನು? ಮನೆ ಹಾಳು ಮಾಡ್ಬಿಡ್ತೀಯಾ ಎಂದು ಗದರುತ್ತಾಳೆ.

ನಿಜಕ್ಕೂ ಅದೇನಪ್ಪಾ ಆಗಿತ್ತು ಅಂದರೆ, ಶಂಕರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾಗ ಮನೆಯ ಮುಂದೆ ಸೈಕಲ್ಲಿನಲ್ಲಿ ಎಳನೀರು ಮಾರಿಕೊಂಡು ಬಂದಿದ್ದನ್ನು ನೋಡಿದ ಅವರ ತಾಯಿ ಎರಡು ಎಳನೀರನ್ನು ಖರೀದಿಸಿ ಅದನ್ನು ಮನೆಯಲ್ಲಿನ ಕುಡಿಯುವ ನೀರಿನ ತಂಬಿಗೆಯಲ್ಲಿ ಹಾಕಿಸಿಕೊಂಡು ಬಂದು ಶಂಕರ ನಿದ್ದೆ ಮಾಡುತ್ತಿದ್ದರಿಂದ ಅವನು ಎದ್ದ ಮೇಲೇ ಎಳನೀರು ಕೊಟ್ಟರಾಯಿತು ಎಂದು ಅಡುಗೆ ಮನೆಯಲ್ಲಿಯೇ ಆ ಎಳನೀರಿನ ತಂಬಿಗೆಯನ್ನಿಟ್ಟು ಮತ್ತಾವುದೋ ಕೆಲಸದಲ್ಲಿ ಮಗ್ನರಾಗಿರುತ್ತಾರೆ.

ಇದಾವುದರ ಅರಿವಿರದ ಶಂಕರ ತಂಗಿ, ನೀರು ತಂದು ಕೊಡು ಎಂದು ಅವರಮ್ಮ ಹೇಳಿದ ಕೂಡಲೇ ಅಡುಗೆ ಮನೆಯಲ್ಲಿದ್ದ ಆ ನೀರಿನ ತಂಬಿಗೆಯಿಂದ ನೀರು ಕೊಟ್ಟಿದ್ದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಯಿತು. ಅದಕ್ಕೇ ನಮ್ಮ ಹಿರಿಯರು ಹೇಳಿರೋದು ಎಲ್ಲದ್ದಕೂ ಋಣ ಇರಲೇಬೇಕು ಎಂದು. ಆ ಎಳನೀರಿನ ಮೇಲೆ ಚರಂಡಿ ಶುದ್ಧಿ ಮಾಡುವವನ ಋಣ ಇದ್ದರೇ ಅದು ಹೇಗೆ ತಾನೇ ಶಂಕರ ಕುಡಿಯಲು ಸಾಧ್ಯ? ಇದಕ್ಕೇ ಹೇಳೋದು ದಾನೇ ದಾನೇ ಪರ್ ಲೀಖಾ ಹೋತಾ ಹೈ ಖಾನೇ ವಾಲೋಂಕಾ ನಾಮ್ ಅಂತಾ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಗಸಗಸೆ ಪಾಯಸ

ಹಬ್ಬದ ಹರಿದಿನಗಳಲ್ಲಿ ದೇವರ ಪೂಜೆಯಷ್ಟೇ ಊಟಕ್ಕೂ ಮಹತ್ವವಿದ್ದೇ ಇರುತ್ತದೆ. ಹಬ್ಬದ ಊಟ ಎಂದರೆ ಸಿಹಿ ಭಕ್ಷಗಳೇ ಪ್ರಾಧ್ಯಾನ್ಯವಾದದರು ಎಲೆ ಕೊನೆಗೇ ಪಾಯಸ ಬಡಿಸಲೇ ಬೇಕೆಂಬ ಶಾಸ್ತ್ರ ಮತ್ತು ನಮ್ಮ ಊಟ ಆರಂಭವಾಗುವುದೇ ಪಾಯಸದಿಂದ. ಇಂದೆಲ್ಲಾ ಬಾಣಸಿಗರು ಬಗೆ ಬಗೆಯ ಪಾಯಸಗಳನ್ನು ಮಾಡುತ್ತಾರಾದರೂ, ಹಿಂದಿನ ಕಾಲದಲ್ಲಿ ಶ್ಯಾವಿಗೆ ಪಾಯಸ ಇಲ್ಲವೇ ಗಸಗಸೆ ಪಾಯಸಕ್ಕೇ ಹೆಚ್ಚಿನ ಪ್ರಾಶಸ್ತ್ರ್ಯ. ಅಂತಹ ಗಸಗಸೆ ಪಾಯಸದ್ದೇ ಕುರಿತಾದ ಮೋಜಿನ ಸಂಗತಿ ಇದೋ ನಿಮಗಾಗಿ.

ಚಿಕ್ಕ ವಯಸ್ಸಿನಿಂದಲೂ ನಾನು ಗಸಗಸೆ ಪಾಯಸ ಪ್ರಿಯ. ಬಹುಶಃ ಈ ಆಭ್ಯಾಸ ನಮ್ಮ ತಾತನಿಂದ ಬಂದಿರಬಹುದೆಂದೇ ನನ್ನ ಅನಿಸಿಕೆ. ನಮ್ಮ ತಾತಾ ಖ್ಯಾತ ವಾಗ್ಗೇಯಕರರು, ಗಮಕಿಗಳು ಮತ್ತು ಹರಿಕಥಾ ವಿದ್ವಾಂಸರಾಗಿದ್ದರು. ರಾಮೋತ್ಸವ, ಗಣೇಶೋತ್ಸವ, ಇಲ್ಲವೇ ದಸರಾ ಸಮಯದಲ್ಲಿ ಒಂದರ ಹಿಂದೆ ಒಂದು ನಿರಂರವಾದ ಕಾರ್ಯಕ್ರಮಗಳಿದ್ದು, ಹಳ್ಳಿ ಹಳ್ಳಿಗಳಲ್ಲಿ ಈಗಿನಂತೆ ಸೌಂಡ್ ಸಿಸ್ಟಮ್ ಇಲ್ಲದಿದ್ದ ಕಾರಣದಲ್ಲಿ ಎಲ್ಲರಿಗೂ ಕೇಳಬೇಕು ಎಂದು ಗಟ್ಟಿ ಧನಿಯಲ್ಲಿ ಹಾಡುತ್ತಿದ್ದ ಕಾರಣ ಅಗಾಗ ಗಂಟಲು ಕಟ್ಟಿಬಿಡುತ್ತಿತ್ತು. ಹಾಗೆ ಗಂಟಲು ಕಟ್ಟಿದಾಗಲೆಲ್ಲಾ ಅದಕ್ಕೆ ರಾಮಬಾಣವಾಗಿ ಮೆಣಸಿನಸಾರು ಉಪಯೋಗಿಸುತ್ತಿದ್ದು ಮತ್ತು ಮುಂದೆ ಗಂಟಲು ಕಟ್ಟಬಾರದು ಎಂಬ ಎಚ್ಚರಿಕೆಯ ಸಲುವಾಗಿ ಗಸಗಸೆ ಪಾಯಸ ಮಾಡುತ್ತಿದ್ದರು.

ತೆಂಗಿನ ಕಾಯಿ ತುರಿ, ಹುರಿದ ಗಸಗಸೆ, ಬೆಲ್ಲ ಮತ್ತು ಏಲಕ್ಕಿಯ ಜೊತೆ, ಹದವಾಗಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿದ ಬಿಸಿ ಬಿಸಿಯಾದ ಗಸಗಸೆ ಪಾಯಸ ಕುಡಿಯುತ್ತಿದ್ದರೆ, ಉತ್ತಮ ಪೋಷಕಾಂಷದ ಜೊತೆ ದೇಹಕ್ಕೆ ತಂಪನ್ನು ಕೊಡುವು ನೀಡುವದರ ಜೊತೆ, ಬಾಯಿ ಹುಣ್ಣು ಮತ್ತು ನಿದ್ರಾಹೀನತೆಯನ್ನೂ ತಡೆಯುತ್ತದೆ. ಹಾಗಾಗಿ ನಮ್ಮ ಮನೆಯಲ್ಲಿ ನೆನಸಿಕೊಂಡಾಗಲೆಲ್ಲಾ ಗಸಗಸೆ ಪಾಯಸವನ್ನೇ ಹೆಚ್ಚಾಗಿ ಮಾಡುತ್ತಿದ್ದರಿಂದ ನಾನೂ ಸಹಾ ಗಸಗಸೆ ಪಾಯಸ ಪ್ರಿಯನಾಗಿದ್ದರಲ್ಲಿ ಅತಿಶಯೋಕ್ತಿಯೇನಾಗಿರಲಿಲ್ಲ.

ಮದುವೆಯಾದ ನವ ದಂಪತಿಗಳನ್ನು ಸ್ನೇಹಿತರ ಮತ್ತು ಸಂಬಂಧೀಕರ ಮನೆಗಳಲ್ಲಿ ಊಟಕ್ಕೆ ಕರೆಯುವುದು ನಮ್ಮಲ್ಲಿ ಬಂದಿರುವ ಸಂಪ್ರದಾಯ. ಹಾಗೆಯೇ ತೊಂಭತ್ತರ ದಶಕದಲ್ಲಿ ನನ್ನ ಮದುವೆಯಾದ ಸುಮಾರು ಆರು ತಿಂಗಳುಗಳ ಕಾಲ ವಾರಾಂತ್ಯವೆಲ್ಲಾ ಈ ರೀತಿಯ ಊಟಕ್ಕೇ ಮೀಸಲಾಗಿತ್ತು. ಅಪ್ಪಾ ಮತ್ತು ಅಮ್ಮ ಇಬ್ಬರ ಕಡೆಯೂ ದೊಡ್ಡದಾದ ಕುಟುಂಬವರ್ಗ. ಮೇಲಾಗಿ ಎರಡೂ ಕಡೆಯೂ ಅವರಿಬ್ಬರೂ ಹಿರಿಯವರಾಗಿದ್ದ ಕಾರಣ, ಗಂಡು ಮಕ್ಕಳ ಮೊದಲನೇ ಮದುವೆ ನನ್ನದೇ ಆದ ಕಾರಣ ಎಲ್ಲರೂ ದಂಪತಿಗಳ ಜೊತೆ ಅಪ್ಪಾ ಅಮ್ಮನನ್ನೂ ಕರೆದು ಅತಿಥಿ ಸತ್ಕಾರ ಮಾಡುತ್ತಿದ್ದರು. ಅದೇ ರೀತಿ ಇಂದಿರಾನಗರದಲ್ಲಿದ್ದ ನಮ್ಮ ಚಿಕ್ಕಮ್ಮನ ಮನೆಯಲ್ಲಿ ಅದೊಂದು ಶನಿವಾರ ಸಂಜೆ ನಮ್ಮನ್ನು ಊಟಕ್ಕೆ ಕರೆದಿದ್ದರು. ಮಧ್ಯಾಹ್ನವೇ ನಮ್ಮ ತಂದೆ ಮತ್ತು ತಾಯಿ ಇಬ್ಬರೂ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದು, ನಾನು ಸಂಜೆ ನಮ್ಮಾಕಿಯನ್ನು ಆಕೆಯ ಕಛೇರಿಯಿಂದ ಕರೆದುಕೊಂಡು ಚಿಕ್ಕಮ್ಮನ ಮನೆಗೆ ಹೋದಾಗ ಗಂಟೆ ಆರು ಅಥವಾ ಆರುವರೆಯಗಿತ್ತು. ಹೋದ ತಕ್ಷಣ ಕೈಕಾಲು ಮುಖ ತೊಳೆದುಕೊಳ್ಳುವಷ್ಟರಲ್ಲಿಯೇ ಬಿಸಿ ಬಿಸಿ ಜಾಮೂನು ಮತ್ತು ಬೊಂಡದ ಸಮಾರಾಧನೆ ಸಿದ್ಧವಾಗಿತ್ತು.

ಅದು ಈಗಿನಂತೆಯೇ ಡಿಸೆಂಬರ್ ಮಾಸವಾಗಿದ್ದ ಕಾರಣ ಚಳಿಯೊಂದಿಗೆ ಬಿಸಿ ಬಿಸಿ ಬೊಂಡ ಮನಸ್ಸಿಗೆ ಹಿಡಿಸಿದ ಕಾರಣ ನಾಲ್ಕಾರು ಬೊಂಡಗಳು ಹೆಚ್ಚಾಗಿಯೇ ತಿಂದು ಹಾಗೇ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ನನ್ನ ನಾಲ್ಕು ಚಿಕ್ಕಮ್ಮಂದಿರಲ್ಲಿ ಈ ಚಿಕ್ಕಮ್ಮನೆಂದರೆ ನನಗೆ ತುಸು ಹೆಚ್ಚಿನ ಪ್ರೀತಿ. ಮದುವೆಗೆ ಮುಂಚೆ ನಮ್ಮ ಮನೆಯಲ್ಲಿಯೇ ಕೆಲವು ವರ್ಷಗಳ ಕಾಲ ಇದ್ದ ಕಾರಣ ನನಗೆ ಅವರು ಚಿಕ್ಕಮ್ಮನಿಗಿಂತ ಅಕ್ಕ ಇಲ್ಲವೇ ಉತ್ತಮವಾದ ಗೆಳತಿಯಂತಿದ್ದರು. ಮದುವೆಗೆ ಮುಂಚೆ ಮತ್ತು ಮದುವೆಯಾದ ಎಷ್ಟೋ ವರ್ಷಗಳ ಕಾಲ ನನ್ನ ಬಟ್ಟೆ ಬರೆಗಳನ್ನು ತೆಗೆದುಕೊಳ್ಳಲ್ಲು ನಾನು ವಿದ್ಯಾರಣ್ಯಪುರದಿಂದ ಇಂದಿರಾನಗರಕ್ಕೆ ಬಂದು ಚಿಕ್ಕಮ್ಮನನ್ನೇ ಆಶ್ರಯಿಸುತ್ತಿದ್ದೆ ಎಂದರೆ ನಮ್ಮಿಬ್ಬರ ಅವಿನಾಭಾವ ಸಂಬಂಧ ಎಷ್ಟಿತ್ತು ಎಂದು ತಿಳಿಯುತ್ತದೆ. ಇನ್ನೂ ನಮ್ಮ ಚಿಕ್ಕಪ್ಪನವರೂ ಸಹಾ ಅದೇ ರೀತಿ ಗೆಳಯನಂತೇ ಇರುತ್ತಿದ್ದ ಕಾರಣ ಎಷ್ಟೋ ದಿವಸ ಕಾಲೇಜಿನಿಂದ ಸೀದಾ ಚಿಕ್ಕಮ್ಮನ ಮನೆಗೆ ಹೋಗಿ ಮಾರನೇ ದಿನ ಚಿಕ್ಕಪ್ಪನ ಶರ್ಟ್ ಇಲ್ಲವೇ ಟಿ-ಶರ್ಟ್ಗಳನ್ನು ಕಾಲೇಜಿಗೆ ಹಾಕಿಕೊಂಡು ಹೋಗುವಷ್ಟು ಆತ್ಮೀಯ ಸಂಬಂಧ ನಮ್ಮಿಬ್ಬರಲ್ಲಿತ್ತು.

ಹೀಗೇ ಲೋಕಾಭಿರಾಮವಾಗಿ ಹರಟುತ್ತಾ ಮದುವೆಯ ಅಲ್ಬಮ್ ನೋಡುತ್ತಾ ಅಲ್ಲಿಯ ಕೆಲವು ಮೋಜಿನ ಸಂಗತಿ ಇಲ್ಲವೇ ಪಜೀತಿಯ ಪ್ರಸಂಗಗಳನ್ನು ಮೆಲುಕು ಹಾಕುತ್ತಾ‌‌ ಹೋಗಿ ಗಂಟೆ ಒಂಭತ್ತಾಗಿದ್ದೇ ಗೊತ್ತಾಗಲಿಲ್ಲ. ಸರಿ ಕಲಹಈಗಾಗಲೇ ತಡಾವಾಗಿದೆ ಮತ್ತೆ ಅಲ್ಲಿಂದ ಅಷ್ಟು ದೂರದ ನಮ್ಮ ಮನೆಗೆ ಹೋಗುವುದಕ್ಕೆ ತಡವಾಗಬಹುದೆಂಬ ಕಾರಣ ಎಲ್ಲರೂ ಊಟಕ್ಕೆ ಕುಳಿತುಕೊಂಡೆವು. ನಿಜ ಹೇಳಬೇಕೇಂದರೆ, ಬೋಂಡ ತಿಂದ್ದಿದ್ದ ಕಾರಣ ಊಟ ಮಾಡಲು ಮನಸ್ಸೇ ಇಲ್ಲದಿದ್ದರೂ ಶಾಸ್ತ್ರಕ್ಕಾದರೂ ಊಟ ಮಾಡೋಣ ಎಂದು ನಾನು ಮತ್ತು ನನ್ನ ಮಡದಿ ನಿರ್ಧರಿಸಿಕೊಂಡಿದ್ದೆವು. ಊಟದ ಸಮಯದಲ್ಲಿ ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಕೋಳಿ ಕೆದಕಿದಂತೆ ಊಟ ಮಾಡುವುದನ್ನು ಗಮನಿಸಿದ ನಮ್ಮ ಚಿಕ್ಕಮ್ಮ, ಸಿರೀ (ನಮ್ಮ ಚಿಕ್ಕಮ್ಮ ಪ್ರೀತಿಯಿಂದ ಹಾಗೆಯೇ ಕರೆಯುವುದು) ಯಾಕೋ ಊಟ ಸರಿಯಾಗಿ ಮಾಡ್ತಿಲ್ಲಾ? ಅಡುಗೆ ಚೆನ್ನಾಗಿಲ್ವಾ? ಎಂದು ಕೇಳಿ ಸರಿ ಸರಿ ನಿನಗೆ ಇಷ್ಟವಾದ ಗಸಗಸೆ ಪಾಯಸ ಮಾಡಿದ್ದೀನಿ ಅದನ್ನಾದರೂ ಕುಡಿ ಎಂದು ಹೇಳಿ ಎಲ್ಲರಿಗೂ ದೊಡ್ಡ ದೊಡ್ಡ ಲೋಟದ ಭರ್ತಿ ಗಸಗಸೆ ಪಾಯಸ ತಂದು ಕೊಟ್ಟರು. ಘಮ ಘಮವಾದ ಏಲಕ್ಕಿ ಪರಿಮಳ ಬರುತಿದ್ದ ಗಸಗಸೆ ಪಾಯಸವನ್ನು ಗಟಗಟನೇ ಕುಡಿದು ಲೋಟವನ್ನು ಕೆಳಗೆ ಇಡುತ್ತಾ ಬಾಯಿ ಚಪ್ಪರಿಸುತ್ತಿದ್ದಂತೆಯೇ ಚಿಕ್ಕಪ್ಪ ಮತ್ತೊಮ್ಮೆ ಲೋಟಕ್ಕೆ ಪಾಯಸ ಬಡಿಸಿಯೇ ಬಿಟ್ಟರು.

ನಮ್ಮೊಂದಿಗೆ ನಮ್ಮ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಎಷ್ಟೇ ಆತ್ಮೀಯರಾಗಿದ್ದರೂ ಊಟ ತಿಂಡಿ ವಿಷಯದಲ್ಲಿ ಆವರಿಬ್ಬರೂ ಸ್ವಲ್ಪ ಶಿಸ್ತಿನವರು. ಅವರ ಮನೆಯಲ್ಲಿ ಊಟಕ್ಕೆ ಎಲ್ಲರೂ ಒಟ್ಟಿಗೇ ಕುಳಿತುಕೊಳ್ಳಬೇಕು. ಊಟಕ್ಕೆ ಮುಂಚೆ ಎಲ್ಲರೂ ತಟ್ಟೇ ಲೋಟ ಮತ್ತು ಪಾತ್ರೆಗಳನ್ನು ಅಡುಗೆ ಮನೆಯಿಂದ ಊಟದ ಮನೆಗೆ ತಂಡಿಡಬೇಕು ಊಟಕ್ಕೆ ಚಾಪೇ ಮತ್ತು ನೀರನ್ನು ಬಡಿಸಿಕೊಂಡು ಬಡಿಸಿದಷ್ಟೂ ಊಟವನ್ನು ಒಂದಗಳೂ ಚೆಲ್ಲದಂತೆ ತಿಂದಾದ ನಂತರ ಎಲ್ಲರೂ ಅವರವರು ಉಂಡ ತಟ್ಟೆಗಳನ್ನು ಆವರೇ ತೊಳೆಯಬೇಕು. ಈ ರೀತಿಯ ಅಲಿಖಿತ ನಿಮಯ ಗೊತ್ತಿದ್ದ ಕಾರಣ ಅಯ್ಯೋ ಚಿಕ್ಕಪ್ಪಾ, ಹೊಟ್ಟೇ ತುಂಬಿಹೋಗಿದೆ ಮತ್ತೆ ಏಕೆ ಬಡಿಸಿದ್ರೀ ಎಂದು ಹುಸಿ ಮುನಿಸು ತೋರಿಸಿದ್ದನ್ನು ಗಮನಿಸಿದ ಚಿಕ್ಕಮ್ಮ. ಊಟ ಸರಿಯಾಗಿ ಮಾಡಿಲ್ಲ. ಪಾಯಸವನ್ನಾದರೂ ಕುಡಿ ಎಂದು ಬಲವಂತ ಮಾಡಿದ ಕಾರಣ ವಿಧಿ ಇಲ್ಲದೇ ಹಾಗೂ ಹೀಗೂ ಪಾಯಸ ಕುಡಿಯುತ್ತಿದ್ದ ಹಾಗೇ ಸಂಜೆ ಕರಿದ ಬೊಂಡಾ ತಿಂದ ಪರಿಣಾಮವೋ ಏನೋ ಹೊಟ್ಟೇ ಉಬ್ಬರಿಕೊಳ್ಳ ತೊಡಗಿತು. ತೇಗು ಬರ್ತಾ ಇಲ್ಲಾ, ಉಳಿದ ಪಾಯಸ ಕುಡಿಯುವುದಕ್ಕೇ ಆಗ್ತಾ ಇಲ್ಲಾ. ಹಾಗೂ ಹೀಗೂ ಮಾಡಿ ಪಾಯಸ ಕುಡಿದು ಖಾಲೀ ಮಾಡಿ ನಮ್ಮಮ್ಮ ಮತ್ತು ನಮ್ಮಾಕಿ ಕುಂಕುಮ ಮತ್ತು ಉಡುಗೊರೆಯನ್ನು ಪಡೆದುಕೊಂಡು ಇಂದಿರಾನಗರವನ್ನು ಬಿಟ್ಟಾಗ ಗಂಟೆ ಹತ್ತಾಗಿತ್ತು.

ನಮ್ಮ ಬಳಿ ಆಗಿನ್ನೂ ಕಾರ್ ಇಲ್ಲದಿದ್ದ ಕಾರಣ ನಾಲ್ಕು ಜನ ಎರಡು ಗಾಡಿಯಲ್ಲಿ ಹೊರಡುತ್ತಿದಂತೆಯೇ ಹೊಟ್ಟೆಯೆಲ್ಲಾ ಉಬ್ಬಸ, ರಸ್ತೆ ಸರಿಯಿಲ್ಲದ ಕಾರಣ ಗಾಡಿ ಕುಲುಕಿದಂತೆಲ್ಲಾ ನನಗೆ ಕಸಿವಿಸಿ ಹೇಳಿಕೊಳ್ಳುವುದಕ್ಕೂ ಆಗದು ಬಿಡಲೂ ಆಗದಂತಹ ಪರಿಸ್ಥಿತಿ ನನ್ನದಾಗಿತ್ತು. ಸ್ವಲ್ಪ ದೂರ ಹೋದ ನಂತರ ಗಾಡಿ ನಿಲ್ಲಿಸಿ ಒಂದೆರಡು ನಿಮಿಷ ವಿಶ್ರಮಿಸಿಕೊಳ್ಳುತ್ತಿದ್ದಾಗ ಅಲ್ಲಿಯೇ ಹತ್ತಿರವಿದ್ದ ಮೆಡಿಕಲ್ಸ್ ಸ್ಟೋರ್ ನಿಂದ ಅಪ್ಪಾ Sprite ತಂದು ಕೊಟ್ಟು ಇದನ್ನು ಕುಡಿ ಸರಿಹೋಗಬಹುದು ಎಂದರು. ಸರಿ ಎಂದು ಅದರ ಒಂದೆರಡು ಗುಟುಕನ್ನು ಬಾಯಿಯೊಳಗೆ ಹಾಕಿಕೊಂಡೆನಾದರೂ ನುಂಗಲು ಆಗುತ್ತಿಲ್ಲ. ಉಗಿಯಲು ಮನಸ್ಸು ಬರುತ್ತಿರಲಿಲ್ಲ. ಕೊಂಡ ತಪ್ಪಿಗೆ ಅತ್ತೇ ಸೊಸೇ ಮತ್ತು ಮಾವ ಎಲ್ಲರೂ ಸೇರಿ ಅದನ್ನು ಕುಡಿದು ಮುಗಿಸಿ ಒಂದೆರಡು ಹಾಜ್ಮೊಲಾ ಚಾಕ್ಲೇಟ್ ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಮತ್ತೆ ಗಾಡಿಯನ್ನೇರಿ ನಿಧಾನವಾಗಿ ಗಾಡಿ ಓಡಿಸಿಕೊಂಡು ಹೊರಟೆ.

ಡಿಸೆಂಬರ್ ತಿಂಗಳ ಕೊರೆಯುವ ಚಳಿ ಒಂದೆಡೆಯಾದರೇ ಹೊಟ್ಟೇ ಉಬ್ಬಸ ಮತ್ತೊಂದೆಡೆ. ಯಾವ ಶತ್ರುವಿಗೂ ಬೇಡಪ್ಪಾ ಈ ಪಜೀತಿ. ಎಲ್ಲರೂ ಹಸಿವಿನಿಂದ ನರಳುತ್ತಾರೆ ಎಂದು ಕೇಳಿದ್ದೇ. ಆದರೆ ನಾನಿಂದು ಹೊಟ್ಟೇ ತುಂಬಾ ಉಂಡು ನರಳಾಡುತ್ತಿದ್ದೆ. ಅಂತೂ ಇಂತೂ ಸದಾಶಿವ ನಗರ ಪೋಲೀಸ್ ಠಾಣೆ ದಾಟಿ ಬಿಇಎಲ್ ಹೊಸಾ ರಸ್ತೆ ಕಡೆಗೆ ತಿರುಗಿ ದೇವಸಂದ್ರ ಹತ್ತಿರ ಬರುತ್ತಿದ್ದಂತೆಯೇ ಇದ್ದಕ್ಕಿದ್ದಂತೆಯೇ ಮೈಯೆಲ್ಲಾ ಒಮ್ಮಿಂದೊಮ್ಮೆಲ್ಲೇ ಬಿಸಿಯಾಗಿ ನಾಭಿಯಿಂದ ಹೊರಟು ಜ್ವಾಲಾಮುಖಿ ಸ್ಪೋಟವಾಗುವಂತೆ ಡರ್ ಎಂದು ಜೋರಾಗಿ ತೇಗು ಬರುತ್ತಿದ್ದಂತೆಯೇ ಮನಸ್ಸಿಗೆ ಏನೋ ಉಲ್ಲಾಸ ಮತ್ತು ಉತ್ಸಾಹ.

ತೇಗು ಬರುತ್ತಿದ್ದಂತೆಯೇ ಘಕ್ಕನೆ ಗಾಡಿಯನ್ನು ನಿಲ್ಲಿಸಿ ಒಂದು ಕ್ಷಣ ಗಾಡಿಯಿಂದ ಇಳಿದು ದೀರ್ಘವಾದ ನಿಟ್ಟುಸಿರು ಬಿಡುತ್ತಿದ್ದಂತೆಯೇ ಅದುವರೆವಿಗೂ ಹೋಗಲು ಗಂಟಲಿನವರೆಗೂ ಸಿದ್ಧವಾಗಿದ್ದ ಪ್ರಾಣ ಮತ್ತೊಮ್ಮೆ ಹೃದಯದೊಳಗೆ ಬೆಚ್ಚಗೆ ಅಡಗಿ ಕುಡಿದಂತಹ ಅನುಭವವಾಗಿದ್ದಂತೂ ಸುಳ್ಳಲ್ಲಾ. ಹೋದ ಪ್ರಾಣ ಮತ್ತೆ ಮರಳಿದಂತಾದ ಮೇಲೆ ನೆಮ್ಮದಿಯಾಗಿ ಮನೆಗೆ ಬಂದ ಕೂಡಲೇ ಚಿಕ್ಕಮ್ಮನಿಗೆ ಕರೆ ಮಾಡಿ ಪ್ರಯಾಸದಿಂದ ಮನೆಗೆ ತಲುಪಿದ್ದದ್ದನ್ನು ಸವಿಸ್ತಾರವಾಗಿ ಹೇಳಿ ಮುಗಿಸಿ ಗಸಗಸೆ ಪಾಯಸ ಕುಡಿದ ಮತ್ತಿಗೆ ಬೆಚ್ಚಗೆ ನಿದ್ದೇ ಹೋಗಿದ್ದೆ. ಇಂದಿಗೂ ಚಿಕ್ಕಮ್ಮ ಮತ್ತು ಚಿಕ್ಕಪ್ಪನವರು ಆಗ್ಗಾಗ್ಗೇ ಕರೆ ಮಾಡೀ ಸಿರೀ ಬಾರೋ ಮನೆಗೆ ನಿನ್ನ ಪ್ರೀತಿಯ ಗಸಗಸೆ ಪಾಯಸ ಮಾಡಿಕೊಡ್ತೀನೀ ಅಂತಾರೆ. ಆಗ ಕುಳಿತಲ್ಲಿಂದಲೇ ಎದ್ದು ನಿಂತು ಒಮ್ಮೆ ಕೈ ಮುಗಿದು ಅಮ್ಮಾ ತಾಯಿ ಸಾಕು ಸಾಕು ನಿಮ್ಮನೆ ಗಸಗಸೆ ಪಾಯಸ ಎಂದು ಈ ಪ್ರಸಂಗವನ್ನು ನೆನೆದು ಎಲ್ಲರೂ ಗಹಹಗಿಸಿ ನಗುತ್ತೇವೆ.

ಈ ಪ್ರಸಂಗದಿಂದ ನಾನು ಕಲಿತ ದೊಡ್ಡ ಪಾಠವೆಂದರೆ, ನೆಂಟರಿಷ್ಟ್ರರು, ಗೆಳೆಯರ ಮನೆ, ಸಭೆ ಸಮಾರಂಭ ಇಲ್ಲವೇ ಹೋಟೇಲ್ಲಿಗೇ ಹೋದಾಗಾ, ನಮಗೆ ಇಷ್ಟಾ ಎಂದು ಎರ್ರಾ ಬಿರ್ರಿ ತಿನ್ನದೇ, ಇನ್ನೂ ನಾಲ್ಕು ತುತ್ತು ತಿನ್ನಲು ಹೊಟ್ಟೆಯಲ್ಲಿ ಜಾಗವಿದೆ ಎನ್ನುವಾಗಲೇ ಊಟವನ್ನು ಮುಗಿಸಿ ಇಂತಹ ಮುಜುಗರದಿಂದ ಪಾರಾಗ ಬಹುದು ಎಂದು. ಆದಕ್ಕೇ ಅಲ್ವೇ ನಮ್ಮ ಹಿರಿಯರು ಹೇಳಿರೋದು ಅತಿಯಾದರೇ ಅಮೃತವೂ ವಿಷ ಎಂದು ಇನ್ನು ಗಸಗಸೆ ಪಾಯಸ ಅದರ ಮುಂದೆ ಯಾವ ಲೆಖ್ಖ ಅಲ್ವೇ?

ಏನಂತೀರೀ?

ಜ್ಞಾನಚೂರ್ಣ ನಶ್ಯ

ಬಹುಶಃ ಇಂದಿನ ಕಾಲದಲ್ಲಿ ಯಾವುದೇ ಚಟವಿಲ್ಲದವರು ಸಿಗುವುದೇ ಅಪರೂಪ ಎಂದರೂ ತಪ್ಪಾಗಲಾರದೇನೋ?. ಇಂದಿನ ಬಹುತೇಕ ಹುಡುಗರು ಕಾಲೇಜು ಮೆಟ್ಟಿಲು ಹತ್ತುವುದರೊಳಗೇ ಬೀಡಿ ಇಲ್ಲವೇ ಸಿಗರೇಟ್ ಈ ರೀತಿ ಯಾವುದಾದರೂಂದು ತಂಬಾಕಿನ ಉತ್ಪನ್ನಕ್ಕೆ ದಾಸರಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರ ಸಂಗತಿ. ಆದರೆ ಇವೆರೆಡರ ಹೊರತಾಗಿಯೂ ತಂಬಾಕಿನಿಂದ ತಯಾರಾದ ಹೊಗೆರಹಿತ ಸಣ್ಣದಾಗಿ ನಶೆ ಏರಿಸುವ ವಸ್ತುವೇ ನಶ್ಯ ಇಲ್ಲವೇ ನಸ್ಯ ಎಂದೂ ಕರೆಯುತ್ತಾರೆ.. ಇಂತಹ ನಶ್ಯದ ಕುರಿತಾದ ಕೆಲವು ಮೋಜಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನನಗೆ ತಿಳಿದಂತೆ, ನಶ್ಯಕ್ಕೂ ನಮ್ಮ ಕುಟುಂಬಕ್ಕೂ ಸುಮಾರು ಒಂದು ಶತಮಾನಗಳ ನಂಟು. 1900-1983ರ ವರೆಗಿದ್ದ ನಮ್ಮ ತಾತ ಮತ್ತು 1937-2017ರ ವರೆಗೆ ಇದ್ದ ನಮ್ಮ ತಂದೆಯವರು ನಶ್ಯ ಹಾಕುತ್ತಿದ್ದ ಕಾರಣ ನಮ್ಮ ಇಡೀ ಕುಟುಂಬದವರಿಗೆ ನಶ್ಯ ಒಂದು ರೀತಿಯ ಕಾಫೀ ಪುಡಿ ಇದ್ದ ಹಾಗಿತ್ತು. ನಾವೆಲ್ಲರೂ ಚಿಕ್ಕವರಿದ್ದಾಗ ಪ್ರತೀ ಬಾರಿ ನಮ್ಮೂರಿಗೆ ಹೋಗುವಾಗಲೂ ಅಜ್ಜಿಯವರಿಗೆ ಹೇಗೆ ಒಂದು ಕೆಜಿ ಕಾಫೀ ಪುಡಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆವೆಯೋ ಹಾಗೆಯೇ ನಮ್ಮ ತಾತನವರಿಗೆ ಕಾಲು ಕೆಜಿ ಕೊಡೇ ಮಾರ್ಕ್ ನಶ್ಯ ತೆಗೆದುಕೊಂಡು ಹೋಗಲೇ ಬೇಕೆಂಬ ಅಲಿಖಿತ ನಿಯಮ ನಮ್ಮ ಕುಟುಂಬದಲ್ಲಿತ್ತು. ಬೆಂಗಳೂರಿನಿಂದ ಯಾರೇ ಊರಿಗೆ ಹೋದ ಕೂಡಲೇ ನಶ್ಯ ತಂದ್ಯಾ? ಅಂತಾ ಕೇಳುತ್ತಿದ್ದ ನಮ್ಮ ತಾತನವರಿಗೆ ಅಯ್ಯೋ, ಮರ್ತೇ ಹೋಯ್ತು ಅಂತಂದ್ರೇ ಸಾಕು. ಛೇ.. ಛೇ.. ಛೇ.. ಇಷ್ಟು ಚಿಕ್ಕವಯಸ್ಸಿಗೇ ಅದೆಂತಾ ಮರೆವೋ ನಿಮಗೆಲ್ಲಾ ಅಂತಾ ಬೇಸರಿಸಿಕೊಂಡು ಬಾಲ ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದವರಿಗೆ ಮೆಲ್ಲಗೇ ತೆಗೋಳ್ಳಿ ನಶ್ಯ ಎಂದು ಕಾಲು ಕೆಜಿ ಡಬ್ಬಿ ಕೈಗಿಟ್ಟೊಡನೆಯೇ ನಿಧಿ ಸಿಕ್ಕಂತಹ ಅನುಭವ ನಮ್ಮ ತಾತನವರದಾಗಿರುತ್ತಿತ್ತು. ಅಂದು ಸಂಜೆ ಮನೆಯ ಜಗಲಿಯ ಮೇಲೆ ಕುಳಿತು ಅವರ ಸಹ ವಯಸ್ಕರೊಡನೆ ಫ್ರೆಷ್ ನಶ್ಯದ ನಶೆ ಏರಿಸಿಕೊಂಡು ಸಂಭ್ರಮಿಸುತ್ತಿದ್ದ ಪರಿ ನಿಜಕ್ಕೂ ವರ್ಣಿಸಲಸದಳ.

ಇನ್ನು ಬೆಂಗಳೂರಿನ ಮಲ್ಲೇಶ್ವರ, ಚಿಕ್ಕ ಪೇಟೆ, ಇಲ್ಲವೇ ಸಿಟಿ ಮಾರ್ಕೆಟ್ ಇಲ್ಲವೇ ಮೈಸೂರಿನ ದೇವರಾಜ ಮಾರ್ಕೆಟ್ ಕಡೆಗೆ ನಾನಾಗಲೀ, ನಮ್ಮ ಚಿಕ್ಕಪ್ಪನವರಾಗಲೀ ಇಲ್ಲವೇ ನಮ್ಮ ತಂಗಿ-ಭಾವಂದಿರು ಹೋಗಿರುವ ಸುದ್ದಿ ನಮ್ಮ ತಂದೆಯವರಿಗೆ ಗೊತ್ತಾಗುತ್ತಿದ್ದಂತೆಯೇ, ನಶ್ಯಾ ತಂದ್ರಾ? ಅಂತ ಅವರ ತಂದೆಯವರಂತೆಯೇ ಕೇಳುತ್ತಿದ್ದರು. ಅಪ್ಪಿ ತಪ್ಪಿ ಅಯ್ಯೋ ಮರ್ತು ಹೋಯ್ತು ಅಂತಾನೋ ಇಲ್ಲಾ ಪುರುಸೊತ್ತೇ ಆಗ್ಲಿಲ್ಲ ಅಂತಾನೋ ಹೇಳಿದ್ರೇ ಸಾಕು. ಥೇಟ್ ನಮ್ಮ ತಾತನ ತರಹಾನೇ ಬೇಸರ ಮಾಡಿಕೊಂಡಿರುವಾಗ ಅವರ ಕೈಯಲ್ಲಿ 100 ಗ್ರಾಂ ಕೊಡೇ ಮಾರ್ಕ್ (70 Strong + 30 lite) ನಶ್ಯ ಕೈಗೆ ಕೊಟ್ಟಾಕ್ಷಣವೇ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಷ್ಟು ಸಂತೋಷ ಪಡುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಇನ್ನು ನಾವೆಲ್ಲಾ ಚಿಕ್ಕವರಿದ್ದಾಗಾ, ಬಿದ್ದು ಗಾಯ ಮಾಡಿಕೊಂಡು ರಕ್ತ ಸೋರಿಸಿಕೊಂಡು ಬಂದರೆ ನಶ್ಯವೇ ನಮಗೆಲ್ಲಾ ದಿವ್ಯೌಷಧ. ಆರಂಭದಲ್ಲಿ ಉರಿ ಹತ್ತಿದರೂ, ರಕ್ತಸ್ರಾವ ಕೂಡಲೇ ‌ನಿಂತು ಹೋಗಿ ಕೆಲವೇ ದಿನಗಳಲ್ಲಿ ಗಾಯ‌ ವಾಸಿಯಾಗುತ್ತಿತ್ತು.

ಇನ್ನು ಶಾಲಾ ಶಿಕ್ಷಕರಾಗಿದ್ದ ನಮ್ಮ ಅಮ್ಮನ ಸೋದರಮಾವ ರಾಮ ಅವರೂ ಕೂಡಾ ನಶ್ಯ ಹಾಕುತ್ತಿದ್ದರಂತೆ. ವಾರಾಂತ್ಯದಲ್ಲಿ ನಮ್ಮ ಅಜ್ಜಿ (ಅವರ ಅಕ್ಕ) ಮನೆಗೆ ಬಂದಾಗ, ಅವರ ಪ್ರೀತಿಯ ಸೋದರ ಸೊಸೆ ನಮ್ಮ ತಾಯಿಯವರಿಗೆ ಅವರಿಗಿಷ್ಟವಾದ ಸಿಹಿ ತಿಂಡಿಯನ್ನೆಲ್ಲವನ್ನೂ ತಂದು ಕೊಟ್ಟು ಸ್ವಲ್ಪ ಸಮಯದ ನಂತರ ಅವರ ನಶ್ಯದ ಕರ್ಚೀಫ್ ಕೊಟ್ಟು, ಮಣಿಯಾ ಸ್ವಲ್ಪ ಈ ಕರ್ಚೀಫ್ ಒಗೆದು ಹರವು ಹಾಕಿ ಬಿಡೋ, ನಾಳೆ ಊರಿಗೆ ಹೋಗುವಷ್ಟರಲ್ಲಿ ಒಣಗಿ ಬಿಡುತ್ತದೆ ಎನ್ನುತ್ತಿದ್ದರಂತೆ. ಅವರು ತಂದು ಕೊಟ್ಟ ಸಿಹಿ ತಿಂಡಿಗಳನ್ನು ತಿನ್ನುವುದರಲ್ಲಿ ಮಗ್ನರಾಗಿರುತ್ತಿದ್ದ ಸಣ್ಣ ವಯಸ್ಸಿನ ನಮ್ಮಮ್ಮ, ಛೀ.. ನಾನು ಒಗೆಯೋದಿಲ್ಲಪ್ಪಾ.. ಅಸಹ್ಯ ಆಗುತ್ತದೆ ಎನ್ನುತ್ತಿದ್ದರಂತೆ. ಅದಾದ ನಂತರ ಬಲವಂತದಿಂದ ಆ ಕರ್ಚೀಫನ್ನು ಕೈಯ್ಯಿಂದ ತಿಕ್ಕದೇ ಕಾಲಿನಿಂದ ಓಗೆಯುತ್ತಿದ್ದನ್ನು ಗಮನಿಸಿದ ನಮ್ಮಮ್ಮನ ರಾಮ ಮಾವಾ, ಮಣಿಯಾ.. ನಾನು ಬದುಕಿದ್ರೇ, ನಿನಗೆ ನಶ್ಯ ಹಾಕೋ ಗಂಡನನ್ನೇ ಹುಡುಕ್ತೀನಿ ನೋಡು ಎಂದು ಹಾಸ್ಯ ಮಾಡುತ್ತಿದ್ದರಂತೆ. ದುರಾದೃಷ್ಟವಶಾತ್ ನಮ್ಮ ಅಮ್ಮನ ಮದುವೆಯಾಗುವಷ್ಟರಲ್ಲಿ ಅವರ ಮುದ್ದಿನ ಸೋದರ ಮಾವ ಬದುಕಿಲ್ಲದಿದ್ದರೂ, ಕಾಕತಾಳೀಯವೋ ಎನ್ನುವಂತೆ, ರಾಮ ಮಾವನ ಆಸೆಯಂತೆಯೇ ನಮ್ಮಮ್ಮನಿಗೆ ನಶ್ಯ ಹಾಕುವ ಗಂಡ ಮತ್ತು ಮಾವನವರೇ ಸಿಕ್ಕಿದ್ದನ್ನು ಅದೆಷ್ಟೋ ಬಾರಿ ಅಮ್ಮ ನಮ್ಮೊಂದಿಗೆ ಹೇಳುತ್ತಿದ್ದಿದ್ದಲ್ಲದೇ, ಇಂತಹ ಪರಿಪಾಟಲು ನನ್ನ ಸೊಸೆಗೆ ಬಾರದಿರಲಿ ಎಂದು ನನ್ನನ್ನು ನೋಡಿ ಎಚ್ಚರಿಸುತ್ತಿದ್ದರು. ಅಮ್ಮ ಮದುವೆಯಾದ ಹೊಸದರಲ್ಲಿ ಮನೆಯ ಕೆಲಸದವಳು ನಮ್ಮ ತಂದೆಯವರ ನಶ್ಯದ ಕರ್ಚೀಫನ್ನು ಅಸಹ್ಯದಿಂದ ಕಾಲಿನಿಂದ ಒಗೆಯುತ್ತಿದ್ದನ್ನು ಗಮನಿಸಿದ ನಮ್ಮಮ್ಮ ಕೂಡಲೇ ಅವಳನ್ನು ಕೆಲಸದಿಂದ ಬಿಡಿಸಿದ್ದಲ್ಲದೇ, ಅಮ್ಮಾ ಸಾಯುವ ವರೆಗೂ ನಮ್ಮ ತಂದೆಯವರ ನಶ್ಯದ ಕರ್ಚೀಫ್ ಅನ್ನು ಅವರೇ ಒಗೆಯುತ್ತಿದ್ದರು. ಅಮ್ಮಾ ಹೋದ ನಂತರ ಸಾಯುವ ದಿನದ ವರೆಗೂ ನಮ್ಮ ತಂದೆಯವರೇ ಖುದ್ದಾಗಿ ಅವರ ನಶ್ಯದ ಕರ್ಚೀಫ್ ಒಗೆದುಕೊಳ್ಳುತ್ತಿದ್ದರು.

ನಮ್ಮ ತಂದೆ ಮತ್ತು ನಮ್ಮ ತಾತ ಇಬ್ಬರೂ ಸಹಾ ನಶ್ಯ ಮೂಗಿಗೆ ಏರಿಸುವಾಗ ತಮ್ಮ ಶರ್ಟ್ ಮೇಲೆ ಚೆಲ್ಲಿಕೊಂಡಿದ್ದ ನಶ್ಯವನ್ನು ಹಾಗೆಯೇ ಒರೆಸಿಕೊಳ್ಳುತ್ತಿದ್ದರಿಂದ ಆವರ ಬಟ್ಟೆಗಳೆಲ್ಲಾ ನಶ್ಯದ ವಾಸನೆಯಾಗಿರುತ್ತಿತ್ತು. ಅದೊಮ್ಮೆ ನವೆಂಬರ್ ಚಳಿಗಾಲ. ಅಮ್ಮಾ ಒಗೆದು ಹಾಕಿದ್ದ ನನ್ನ ಸ್ವೆಟರ್ ಇನ್ನೂ ಒಣಗಿರಲಿಲ್ಲ. ಕಾಲೇಜಿಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದ ಕಾರಣ ‍ಚಳಿ ಎಂದು ಬೇಡ ಬೇಡ ಎಂದರೂ ಅಪ್ಪನ ಸ್ವೆಟರ್ ಹಾಕಿಕೊಂಡು ಹೋಗಲು ಅಮ್ಮಾ ಒತ್ತಾಯ ಪಡಿಸಿದ ಕಾರಣ, ವಿಧಿ ಇಲ್ಲದೇ ಅಪ್ಪನ ಸ್ವೆಟರ್ ಹಾಕಿಕೊಂಡು ಕಾಲೇಜಿಗೆ ಹೋದೆ. ನಮಗೆಲ್ಲಾ ನಶ್ಯದ ವಾಸನೆ ಅಭ್ಯಾಸವಾಗಿದ್ದ ಕಾರಣ ನನಗೇನೂ ಅನ್ನಿಸುತ್ತಿರಲಿಲ್ಲ. ಆದರೇ ನನ್ನ ಸ್ನೇಹಿತರಿಗೆಲ್ಲಾ ನಶ್ಯದ ಘಮಲು ಅವರ ಮೂಗಿಗೆ ಬಡಿದು, ಇದೇನಿದು ಹೊಗೇಸೊಪ್ಪಿನ ವಾಸನೇ? ಎಂದರೆ ಮತ್ತೊಬ್ಬ ಇದು ನಶ್ಯದ ವಾಸನೆ ಹಾಗೆ ಬರುತ್ತಿದೆಯಲ್ಲಾ? ಎಂದಾಗ ನನಗೇನೂ ಗೊತ್ತಿಲ್ಲದ ಹಾಗೆ ಸುಮ್ಮನಿದ್ದು ಸ್ವಲ್ಪ ಸಮಯದ ನಂತರ ಛಳಿಯನ್ನೂ ಲೆಕ್ಕಿಸದೇ, ಸದ್ದಿಲ್ಲದೇ ಸ್ವೆಟರ್ ತೆಗೆದು ಬ್ಯಾಗಿನಲ್ಲಿ ಇಟ್ಟುಕೊಂಡು ಮನೆಗೆ ಬಂದು ಅಮ್ಮನೊಂದಿಗೆ ನಡೆದ ವಿಷಯವನ್ನೆಲ್ಲಾ ಹೇಳಿ ಅಮ್ಮನ ಮೇಲೆ ರೇಗಾಡಿದ್ದೆ.

ಇನ್ನು ನಮ್ಮ ಮನೆಗೆ ಅಡುಗೆಗೆಂದು ಬರುತ್ತಿದ್ದ ನಾಗರಾಜ್ ಆವರಿಗೂ ನಶ್ಯದ ಆಭ್ಯಾಸ. ಅವರ ಮದುವೆ ದೂರದ ವಿದುರಾಶ್ವಥದಲ್ಲಿ ನಡೆದಾಗ ಮದುವೆಗೆಂದು ಹೋಗಿದ್ದ ಐದಾರು ಜನರ ಬಳಿ ನಶ್ಯದ ಡಬ್ಬಿಯನ್ನು ಕೊಟ್ಟಿಟ್ಟು, ನಮ್ಮನ್ನು ನೋಡಿದ ತಕ್ಷಣವೇ, ಸದ್ದಿಲ್ಲದೇ ಅವರಿಗೆ ನಶ್ಯ ಕೊಟ್ಟಿದ್ದನ್ನು ನೆನಸಿಕೊಂಡರೇ ಇನ್ನೂ ನಗು ಬರುತ್ತದೆ.

ನಮ್ಮ ಭಾವನವರ ತಾತ ತೊಂಭತ್ತು ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದಾಗ ಮೂಗಿನಲ್ಲಿ‌ ನಶ್ಯ ಏರಿಸಿಕೊಳ್ಳಲು ಅಶಕ್ತರಾದಗಲೂ ಚಿಟುಕಿ ನಶ್ಯವನ್ನು‌ಬಾಯಿಗೆ ಹಾಕಿಕೊಳ್ಳುವಷ್ಟರ ಮಟ್ಟಿಗೆ ಚಟ ಬೆಳೆಸಿಕೊಂಡಿದ್ದರು.

ಅದೇ ರೀತಿ ನನ್ನ ಆಪ್ತ ಸ್ನೇಹಿತನ ತಾಯಿಯವರಿಗೂ ನಶ್ಯ ಸೇವಿಸುವ ಚಟ ಇದ್ದ ಕಾರಣ, ಅವರ ಮನೆಗೆ ಹೋಗುವಾಗ ಹೂವು ಹಣ್ಣು ತೆಗೆದುಕೊಂಡು ಹೋಗುವುದರ ಜೊತೆಗೆ ನಶ್ಯವನ್ನೂ ತೆಗೆದುಕೊಂಡು ಹೋಗುವ ರೂಢಿಯನ್ನು ಮಾಡಿಕೊಂಡಿದ್ದು ವಿಪರ್ಯಾಸ.

ನಮ್ಮ ತಂದೆಯವರು ಬಿ.ಇ.ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯೊಳಗೇ ಬೀಡೀ ಸಿಗರೇಟ್ ತೆಗೆದುಕೊಂಡು ಹೋಗುವುದು ನಿಷಿಧ್ಧವಾಗಿದ್ದರೂ ನಶ್ಯ ತೆಗೆದುಕೊಂಡು ಹೋಗಲು ಯಾವುದೇ ನಿರ್ಭಂಧವಿರಲಿಲ್ಲ. ಅದಕ್ಕೇ ನಮ್ಮ ತಂದೆ ಯಾವಾಗಲೂ ಹಾಸ್ಯವಾಗಿ ನೋಡು ಈ ಜ್ಞಾನಚೂರ್ಣಕ್ಕೆ ಎಷ್ಟೊಂದು ರಾಜ ಮರ್ಯಾದೆ. ಯಾರೂ ಕೂಡಾ ಇದನ್ನು ತಡೆಯಲಾರರು. ರಾಜರ ವಿದ್ವತ್ ಸಭೆಯಲ್ಲೂ ನಿರಾಯಾಸವಾಗಿ ನಶ್ಯವನ್ನು ಮೂಗಿಗೆ ಏರಿಸಿಕೊಳ್ಳಬಹುದು ಎಂದು ಹೇಳುತ್ತಿದ್ದರು. ತಾವೂ ನಶ್ಯ ಹಾಕುತ್ತಿದ್ದದ್ದಲ್ಲದೇ ಅವರ ಸಹೋದ್ಯೋಗಿಗಳಿಗೂ ನಶ್ಯದ ದುರಾಭ್ಯಾಸ ಮಾಡಿಸಿದ್ದರು. ಆದರೆ ಅವರ್ಯಾರು ನಮ್ಮ ತಂದೆಯಂತೆ ನಶ್ಯದ ಡಬ್ಬಿಯನ್ನು ಇಟ್ಟುಕೊಳ್ಳದೇ, ಕೇವಲ ನಮ್ಮ ತಂದೆಯವರನ್ನು ಕಂಡಾಕ್ಷಣವೇ ಅವರಿಗೆ ನಶ್ಯ ಹಾಕುವ ಖಯಾಲು ಬರುತ್ತಿತ್ತು. ಅಣ್ಣಾ ಕೋತಿ ತಾನು ಕೆಡುವುದಲ್ಲದೇ, ಇಡೀ ವನವನ್ನೆಲ್ಲಾ ಕೆಡಿಸಿತು ಎನ್ನುವಂತೆ ನೀವೂ ನಶ್ಯ ಹಾಕುವುದಲ್ಲದೇ, ನಿಮ್ಮ ಸ್ನೇಹಿತರಿಗೂ ನಶ್ಯ ದಾನ ಮಾಡಿ ಅವರನ್ನೇಕೆ ಕೆಡುಸುತ್ತೀರೀ? ಎಂದರೆ, ನೋಡು ಮಗು ಬೇರೆ ಎಲ್ಲಾ ವಸ್ತುಗಳನ್ನು ಕೊಡುವಾಗ ದಾನ ಕೊಡುವವರ ಕೈ ಮೇಲಿದ್ದರೆ, ದಾನ ತೆಗೆದುಕೊಳ್ಳುವವರ ಕೈ ಕೆಳಗಿರುತ್ತದೆ. ಆದರೆ ನಶ್ಯ ಕೊಡುವಾಗ ಮಾತ್ರಾ ತದ್ವಿರುದ್ಧವಾಗಿ ನಶ್ಯ ಕೊಡುವವರ ಕೈ ಕೆಳಗಿದ್ದರೆ, ನಶ್ಯ ತೆಗೆದುಕೊಳ್ಳುವವರ ಕೈ ಮೇಲಿರುತ್ತದೆ ಎಂದು ಹೇಳುತ್ತಾ ಈ ಶ್ಲೋಕದ ಉದಾಹರಣೆ ನೀಡುತ್ತಿದ್ದರು.

ನಸ್ಯದಾನಂ ಮಹಾದಾನಂ, ಅನ್ನ ದಾನಂ ಚ ಮಧ್ಯಮಂ|
ಅಧಮಂ ವಸ್ತ್ರದಾನಂಚ, ಕನ್ಯಾದಾನಂಚ ನಿಷ್ಪಲಂ||

ಇಬ್ಬರು ನಶ್ಯ ಹಾಕುವವರು ಎದುರು ಬದಿರಾದಾಗ ಬಲಗೈನಲ್ಲಿ ಹಸ್ತಲಾಘವ ಮಾಡಿದರೇ ಅವರಿಗೇ ಅರಿವಿಲ್ಲದಂತೆ ಅವರ ಎಡಗೈಯಲ್ಲಿರುವ ನಶ್ಯದ ಡಬ್ಬಿ ಪರಸ್ಪರ ವಿನಿಮಯವಾಗಿ ಒಂದು ಬಾರಿ ನಶ್ಯ ಏರಿಸಿಯೇ ಅವರ ನಡುವಿನ ಸಂಭಾಷಣೆ ಆರಂಭವಾಗುವುದು ಸೋಜಿಗವೆನಿಸುತ್ತದೆ.

ನಮ್ಮ ತಂದೆಯವರ ಅಪ್ತ ಸ್ನೇಹಿತರಾದ ಶೇಷಗಿರಿ ಅವರು ನಮ್ಮ ತಂದೆಯವರಿಗೆಂದೇ surgical steel ನಿಂದ ಲೇಥ್ ಮಿಷಿನ್ನಿನಲ್ಲಿ ವಿಶೇಷವಾಗಿ ಮಾಡಿಸಿದ ಎರಡು ನಶ್ಯದ ಡಬ್ಬಿಯನ್ನು ಉಡುಗೊರೆಯನ್ನಾಗಿ ನೀಡಿದ್ದರು. ಹಾಗಾಗಿ ಆ ನಶ್ಯದ ಡಬ್ಬಿ ಕರ್ಣನ ವಜ್ರ ಕವಚದಂತೆ 24 ಗಂಟೆಯೂ ದೇಹದ ಅವಿಭಾಜ್ಯ ಅಂಗವಾಗಿ ನಮ್ಮ ತಂದೆಯವರ ಜೊತೆಯಲ್ಲಿಯೇ ಸದಾಕಾಲವೂ ಇರುತ್ತಿತ್ತು. ಸಣ್ಣ ವಯಸ್ಸಿನಲ್ಲಿ ನನ್ನ ಮಗ ತಾತನನ್ನು ಆಟವಾಡಿಸ ಬೇಕಾದರೆ ಆಥವಾ ತಾತನಿಂದ ಏನಾದರೂ ಪಡೆದು ಕೊಳ್ಳಬೇಕಾದರೇ ಸದ್ದಿಲ್ಲದೇ ನಶ್ಯದ ಡಭ್ಭಿಯನ್ನು ಮುಚ್ಚಿಟ್ಟು ಬಿಡುತ್ತಿದ್ದ. ಲೋ. ಲೋ.. ಮಗೂ ನಶ್ಯದ ಡಬ್ಬಿ ಕೊಡೋ.. ನನಗೆ ಗೊತ್ತು ನೀನೇ ಎಲ್ಲೋ ಮುಚ್ಚಿಟ್ಟಿದ್ದೀಯಾ ಎಂದು ಗೋಪಿಕಾ ಸ್ತ್ರೀಯರು ದೈನೇಸಿಯಾಗಿ ತಮ್ಮ ಬಟ್ಟೆಯನ್ನು ಕೇಳುತ್ತಿರುವಂತೆ ಇದ್ದರೇ, ಇನ್ನು ತನಗೇನೂ ಸಂಬಂಧವೇ ಇಲ್ಲದಂತೇ ಇರುತ್ತಿದ್ದ ಕೃಷ್ಣನಂತೇ ನನ್ನ ಮಗ ಇರುತ್ತಿದ್ದದ್ದು ಈಗಲೂ ನೆನಪಾಗುತ್ತದೆ.

ಕೆಲ ವರ್ಷದ ಹಿಂದೆ ಅಪ್ಪನನ್ನೂ ಕರೆದುಕೊಂಡು ಕುಟುಂಬ ಸಮೇತ ಸಿಂಗಾಪೂರ್ ಮತ್ತು ಮಲೇಷ್ಯಾಗೆ ಎರಡು ವಾರಗಳ ಕಾಲ ಪ್ರವಾಸಕ್ಕೆ ಹೋಗಿದ್ದೆವು. ಎರಡು ವಾರಗಳಿಗಾಗುವಷ್ಟು ನಶ್ಯವನ್ನು ಎರಡು ಬ್ಯಾಗಿನಲ್ಲಿ ತೆಗೆದುಕೊಂಡು ಬಂದಿದ್ದರು. ಅಪ್ಪ. ಸಿಂಗಾಪೂರಿನಲ್ಲಿ Snow Worldಗೆ ಹೋಗಿದ್ದಾಗ ಅಲ್ಲಿ ಎಲ್ಲರೂ ಛಳಿಯನ್ನು ತಡೆಯುವಂತಹ ಕೋಟು ಕೈಗವಸು ಮತ್ತು ಮಂಜುಗಡ್ಡೆಯ ಮೇಲೆ ನಡೆಯಬಹುದಾದಂತಹ ಬೂಟುಗಳನ್ನು ಖಡ್ಡಾಯವಾಗಿ ಧರಿಸಲೇ ಬೇಕಿತ್ತು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ನಾವೆಲ್ಲರೂ ಚೆನ್ನಾಗಿ ಆಟವಾಡಿ ಸಂತೋಷದಿಂದ ಹೊರಬಂದು ಕೋಟು ಸೂಟುಗಳನ್ನೆಲ್ಲಾ ಬಿಚ್ಚಿಕೊಟ್ಟು ಅಲ್ಲಿಯೇ ಇದ್ದ ಕಾಫೀ ಬಾರಿನಲ್ಲಿ ಬಿಸಿ ಬಿಸಿ ಕಾಫೀ ಹೀರುತ್ತಿದ್ದಾಗ ತಂದೆಯವರಿಗೆ ಇದ್ದಕ್ಕಿದ್ದಂತಯೇ ತಮ್ಮ ನಶ್ಯದ ದಬ್ಬಿಯ ನೆನಪಾಗಿ ಚೆಡ್ಡಿಯ ಜೋಬು, ಶರ್ಟಿನ ಜೋಬನ್ನೆಲ್ಲಾ ತಡಕಾಡುತ್ತಿರುವಾಗ ನಶ್ಯದ ಡಬ್ಬಿಯನ್ನು ತಾವು ಹಾಕಿಕೊಂಡಿದ್ದ ಕೋಟಿನಲ್ಲಿ ಬಿಟ್ಟಿರುವ ನೆನಪಾಗಿದೆ. ತಿರುಪತಿಯಲ್ಲಿ ಗುಂಡು ಹೊಡೆಸಿಕೊಂಡವರನ್ನು ಹುಡುಕುವಂತೆ ಅಲ್ಲಿದ್ದ ನೂರಾರು ಕೋಟುಗಳನ್ನು ಒಂದೊಂದಾಗಿ ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ತಡಕಾಡಿದ ನಂತರ ನಶ್ಯದ ಡಬ್ಬಿ ಸಿಕ್ಕಾಗ ಅವರ ಮುಖದಲ್ಲಿ ಕಂಡ ನಗು ಇನ್ನೂ ಮರೆಯಲೇ ಆಗುತ್ತಿಲ್ಲ. ಕಡೆಗೆ ಅಲ್ಲಿದ್ದವರಿಗೆಲ್ಲಾ ಚೂರು ಚೂರು ನಶ್ಯದ ಘಮಲನ್ನು ಹತ್ತಿಸಿ ಅವರೆಲ್ಲರಿಗೂ ಸೀನು ಬರಿಸಿ ಬರುವಷ್ಟರಲ್ಲಿ ಸುಮಾರು ಅರ್ಧ ಮುಕ್ಕಾಲು ಗಂಟೆ ಕಳೆದು ಹೋಗಿದ್ದೇ ಗೊತ್ತಾಗಿರಲಿಲ್ಲ.

dun2ಎಲ್ಲೋ ತುಂಬಾ ಹಿಂದೆ ಓದಿದಂತೆ, ಖ್ಯಾತ ಸಾಹಿತಿಗಳಾದ ಕೀ. ರಂ. ನಾಗರಾಜ್ ಮತ್ತು ಚುಟುಕು ಕವಿ ದುಂಡಿರಾಜ್ ಇಬ್ಬರೂ ಗಳಸ್ಯ ಗಂಠಸ್ಯ ಸ್ನೇಹಿತರಾಗಿದ್ದರಂತೆ. ಅವರಿಬ್ಬರ ಬರವಣಿಗೆ ಶೈಲಿ ವಿಭಿನ್ನವಾಗಿದ್ದರೂ ಅವರಿಬ್ಬರ ಮಧ್ಯೆ ಸಾಮ್ಯದ ಸಂಗತಿಯೆಂದರೆ ನಶ್ಯ. ಅದೊಮ್ಮೆ ಕೀರಂ ಮಂಗಳೂರಿಗೆ ಬಂದಿದ್ದಾಗ ಡುಂಡಿಯವರು, ಅವರಿಗೆ ಕೃಷ್ಣ ನಶ್ಯದ ಡಬ್ಬಿ ಕೊಟ್ಟಿದ್ದರಂತೆ. ಕೆಲವು ದಿನಗಳ ನಂತರ ಕೀರಂ, ಡುಂಡಿಗೆ ಪತ್ರ ಬರೆದು- ಕೃಷ್ಣ ನಶ್ಯ ತುಂಬಾ ಚೆನ್ನಾಗಿತ್ತು ಎಂದು ಹೊಗಳಿದ್ದೇ ತಡಾ,. ಕೂಡಲೇ ನಶ್ಯದ ಕುರಿತೇ ಡುಂಡಿ ಹನಿಗವನವೊಂದು ಬರೆದಿದ್ದಾರೆ.

ಸಸ್ಯ ತಿನ್ನುವವ ಸಸ್ಯಾಹಾರಿ, ಮಾಂಸ ತಿನ್ನುವವ ಮಾಂಸಾಹಾರಿ
ಮೂಗಿನ ತುಂಬಾ ತಂಬಾಕಿನ ಪುಡಿ/ ತುಂಬಿಸಿಕೊಳ್ಳುವವ ನಶ್ಯಾಹಾರಿ ಎಂದಿದ್ದಲ್ಲದೇ,

ದೇಗುಲದ ಗರ್ಭಗುಡಿಯೊಳಗೆ ಸಿಗರೇಟು ಪ್ರವೇಶಿಸದು, ಮದ್ಯದ ಬಾಟಲಿಗೂ ಅನುಮತಿ ಇಲ್ಲ. ನಶ್ಯ ಮಾತ್ರ ಒಳಹೋಗಬಹುದು. ಅದಕ್ಕೆ ಪುರೋಹಿತರ ಬೆಂಬಲವೂ ಇರುತ್ತದೆ ಎಂದು ಹಾಸ್ಯಮಯವಾಗಿ ವಾಸ್ತವವನ್ನು ಡುಂಡಿಯವರು ಬರೆದಿದ್ದಾರೆ.

ಹೊಗೇ ಸೊಪ್ಪಿನ ಉತ್ಪನ್ನಗಳಾದ ಹೊಗೆಸೊಪ್ಪು, ಜರ್ದಾ, ಕಡ್ಡೀ ಪುಡಿ, ಬೀಡಿ, ಸಿಗರೇಟ್ ಸೇದುವುದನ್ನು ಇಂದೆಲ್ಲಾ ನೋಡುತ್ತೇವೆಯಾದರೂ ನಶ್ಯ ಹಾಕುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ ಎಂದೇ ಹೇಳಬಹುದು. ಒಂದಾನೊಂದು ಕಾಲದಲ್ಲಿ ನಶ್ಯ ಅತ್ಯಂತ ಜನಪ್ರಿಯವಾಗಿತ್ತು ಮತ್ತು ನಶ್ಯ ಹಾಕುವವರು ಅತ್ಯಂತ ಬುದ್ಧಿವಂತರೆಂದೇ ಪರಿಗಣಿಸಿದ್ದರಿಂದ ನಶ್ಯವನ್ನು ಜ್ಞಾನಚೂರ್ಣವೆಂದೇ ಕರೆಯುತ್ತಿದ್ದರು.

ನಮ್ಮ ತಂದೆಯವರ ವೈಕುಂಠ ಸಮಾರಾಧನೆಯಂದು ಅವರ ಅಪ್ತ ಗೆಳೆಯರಿಗೆಲ್ಲಾ ನಶ್ಯದ ದಾನವನ್ನೇ ಕೊಟ್ಟಿದ್ದೆವು. ನಮ್ಮ ತಂದೆಯವರಿಗೆ ನಶ್ಯವನ್ನು ತರುವುದಕ್ಕಾಗಿಯೇ ಪ್ರತೀವಾರವೂ ತಪ್ಪದೇ ಮಲ್ಲೇಶ್ವರಕ್ಕೆ ಹೋಗುತ್ತಿದ್ದ ನಾವು ತಂದೆಯವರು ಗತಿಸಿಹೋದ ನಂತರ ಮಲ್ಲೇಶ್ವರಕ್ಕೆ ಹೋಗುವುದೇ ನಿಲ್ಲಿಸಿಬಿಟ್ಟಿದ್ದೇವೆ. ಅಕಸ್ಮಾತ್ ಮಲ್ಲೇಶ್ವರ ನಶ್ಯದ ಅಂಗಡಿಯ ಮುಂದೆ ಹೋಗುವ ಪ್ರಮೇಯ ಬಂದರೆ, ಏನನ್ನು ಕೊಳ್ಳದೇ ಹೋದರೂ, ಸುಮ್ಮನೇ ಒಂದು ಕ್ಷಣ ಅಂಗಡಿಯ ಮುಂದೆ ನಿಂತು ಕೊಂಡರೆ, ಗತಿಸಿ ಹೋದ ನಶ್ಯ ಪ್ರಿಯರಾದ ನಮ್ಮ ತಾತ ಮತ್ತು ತಂದೆಯವರ ನೆನಪಾಗಿ ನಮಗೆ ಅರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಜಿನುಗುತ್ತದೆ.


WhatsApp Image 2022-02-21 at 8.04.36 AMಇಂದಿಗೂ ಸಹಾ ನನಗೆ ಅಪ್ಪನ ನೆನಪಾದಾಗಲೆಲ್ಲಾ ಬೀರುವಿನಲ್ಲಿ ಭದ್ರವಾಗಿ ಎತ್ತಿಟ್ಟಿರುವ ಅವರ ನಶ್ಯದ ಡಬ್ಬಿಯನ್ನು ತೆಗೆದು ಒಮ್ಮೆ ಮೂಸುತ್ತಿದ್ದಂತೆಯೇ ಅಪ್ಪನ ಘಮಲು ಮೂಗಿಗೆ ಬಡಿದು,ಅವರ ಪ್ರೀತಿಯ ಅಪ್ಪುಗೆಯ ಆಲಿಂಗನದ ಸುಖಃ ದೊರೆತು. ಅಪ್ಪಾ ಇಲ್ಲೇ ಇದ್ದಾರೆ ಎನ್ನುವ ಭಾವನೆ
ಮೂಡುತ್ತದೆ ಎಂದರೆ ಸುಳ್ಳಲ್ಲ. ಹಿರಿಯರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಲ್ಲಿ ಅದನ್ನು ನೋಡಿದಾಗಲೆಲ್ಲಾ ಅವರ ಸವಿನೆನಪುಗಳು ಕಣ್ಮುಂದೆ ಬಂದು ಮನಸ್ಸಿಗೆ ಮುದನೀಡುವುದಲ್ಲದೇ, ಅಪ್ಯಾಯಮಾನ ಎನಿಸುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಸೂಚನೆ : ನಶ್ಯ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾದ್ದರಿಂದ ಯಾವುದೇ ತಂಬಾಕು ಪದಾರ್ಥಗಳಿದ ದಯವಿಟ್ಟು ದೂರವಿರುವುದು ಉತ್ತಮ

ಗಾಡಿ ಕಾಣ್ತಾ ಇಲ್ಲಾ

ಅದೊಂದು ಶನಿವಾರ ಬೆಳಿಗ್ಗೆ ಎಂದಿನಂತೆ ಐದಕ್ಕೆಲ್ಲಾ ಎದ್ದು ಪ್ರಾರ್ಥರ್ವಿಧಿಗಳನ್ನು ಮುಗಿಸಿ ಗೆಳೆಯರೊಡನೆ ಸುಮಾರು ಹತ್ತು ಹನ್ನೆರಡು ಕಿಮೀ ದೂರಗಳಷ್ಟು ಸುದೀರ್ಘವಾದ ನಡಿಗೆಯನ್ನು ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದು ಸ್ನಾನ ಸಂಧ್ಯಾವಂದನೆಯನ್ನು ಮುಗಿಸಿ ಅಡುಗೆ ಮನೆಗೆ ಹೋಗಿ ನೋಡಿದರೆ ತಿಂಡಿ ಇನ್ನೂ ಮಾಡಿರಲಿಲ್ಲ.

ಇದೇನಮ್ಮಾ ಇಷ್ಟು ಹೊತ್ತಾದಾರೂ ತಿಂಡಿಯೇ ಮಾಡಿಲ್ಲ್ಲ ಎಂದು ಮನೆಯಾಕಿಯನ್ನು ಕೇಳಿದರೆ, ಈ ಇವತ್ತು ಮಕ್ಕಳಿಗೂ ರಜೆ ಹಾಗಾಗಿ ಸ್ವಲ್ಪ ಹೆಚ್ಚಿನ ಹೊತ್ತು ನಿದ್ದೇ ಮಾಡಿಬಿಟ್ಟೆ. ಒಂದು ಹದಿನೈದು ಇಪ್ಪತ್ತು ನಿಮಿಷ ಇರಿ ಬಂದು ಏನಾದ್ರೂ ಮಾದಿಕೊಡ್ತೀನಿ ಎಂದಳು ಮನೆಯಾಕೆ. ಪ್ರತೀ ದಿನವೂ ನಮಗಾಗಿ ದಣಿವಿಲ್ಲದೇ ದುಡಿವ ಮನೆಯಾಕೆಗೆ ಒಂದು ದಿನವಾದರೂ ವಿಶ್ರಾಂತಿ ಕೊಡೋಣಾ ಎಂದು ನಿರ್ಧರಿಸಿ, ಸರಿ ಏನು ಬೇಡಾ ಬಿಡಮ್ಮಾ. ಚಾಮುಂಡೀ ಚಾಟ್ಸಿನಲ್ಲಿ ತಿಂಡಿ ತಂದು ಬಿಡ್ತೀನಿ. ಮಧ್ಯಾಹ್ನಕ್ಕೆ ಏನಾದರೂ ಮಾಡುವೆಯಂತೆ ಎಂದು ಕೆಲವು ಕ್ಯಾರಿಯರ್ಗಳನ್ನು ಬುಟ್ಟಿಯೊಳಕ್ಕೆ ಹಾಕಿಕೊಂಡು ಗಾಡಿ ಹೊರತೆಗೆದು ರೊಂಯ್ ಎಂದು ಹೊರಟೇ ಬಿಟ್ಟೆ.

ಹೇಳೀ ಕೇಳೀ ಶನಿವಾರದ ಬೆಳಿಗ್ಗೆ. ನಮ್ಮಂತಹ ಅನೇಕ ಬುದ್ದಿವಂತರುಗಳು ಅದಾಗಲೇ ಚಾಮುಂಡೀ ಚಾಟ್ಸ್ ಮುಂದೆ ದಂಡಿಯಾಗಿ ನಿಂತಿದ್ದರು. ಅದು ಹೇಗೋ ಸಂದಿ ಗೊಂದಿಯಲ್ಲಿ ನುಸುಳಿಕೊಂಡು ರಾಜಾ, ಎರಡು ಪ್ಲೇಟ್, ಇಡ್ಲೀ, ಒಂದು ಪ್ಲೇಟ್ ಪೂರಿ, ಎರಡು ಪ್ಲೇಟ್ ಖಾಲೀ ದೋಸೇ ಮತ್ತು ಒಂದು ಪೊಂಗಲ್ ಎಂದು ಆರ್ಡರ್ ಮಾಡಿದೆ. ಯಥಾ ಪ್ರಕಾರ ಅಂಗಡಿಯವರೆಲ್ಲರೂ ನನ್ನನ್ನು ನೋಡಿ ಚೆನ್ನಾಗಿದ್ದೀರಾ ಸಾರ್ ಎಂದು ಪರಿಚಯಸ್ಥ ದೇಶಾವರಿ ನಗೆ ಬೀರಿ, ಇಡ್ಲಿ ಇನ್ನೊಂದು ಹತ್ತು ನಿಮಿಷ ಆಗುತ್ತದೆ ಅಷ್ಟರೊಳಗೆ ಉಳಿದ್ದದ್ದೆಲ್ಲವನ್ನೂ ಕಟ್ಟಿ ಬಿಡುತ್ತೇನೆ ಎಂದು ಡಬ್ಬಾಗಳನ್ನು ಕೈಯಿಂದ ತೆಗೆದುಕೊಂಡರು.

ಡಬ್ಬಿಗಳನ್ನು ಅಂಗಡಿಯವರ ಕೈಗಿತ್ತು ಆ ಕಡೆ ಈ ಕಡೇ ದೃಷ್ಟಿ ಹರಿಸುವಷ್ಟರಲ್ಲಿ ಹತ್ತಾರು ಪರಿಚಯಸ್ಥರ ಮುಖಗಳು ಕಾಣಿಸಿ ಎಲ್ಲರಿಗೂ ಹಾಯ್, ಹಲೋ ನಮಸ್ಕಾರ ಹೇಳುತ್ತಾ, ಗೆಳೆಯ ಮಂಜುವಿನೊಂದಿಗೆ ಮಾತಿಗೆ ಇಳಿಯುವುದಕ್ಕೆ ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ನಮ್ಮ ಕೆಲಸ, ನಮ್ಮ ಮಕ್ಕಳ ವಿದ್ಯಾಭ್ಯಾಸದಿಂದ ಆರಂಭವಾಗಿ ಸ್ಥಳೀಯ ಸಮಸ್ಯೆಗಳು, ಅನಗತ್ಯ ವೈಟ್ ಟ್ಯಾಂಪಿಗಿನಿಂದ ಆಗುತ್ತಿರುವ ಟ್ರಾಫಿಕ್ ಕಿರಿ ಹೀಗೆ ಹಾಗೆ ಮಾತಾನಾಡುತ್ತಾ ಸುಮಾರು ಇಪ್ಪತ್ತು ಇಪ್ಪತ್ತೈದು ನಿಮಿಷಗಳು ಕಳೆದದ್ದೇ ಗೊತ್ತಾಗಲಿಲ್ಲ. ಏನಪ್ಪಾ ರಾಜಾ, ಆಯ್ತಾ ನಮ್ಮ ಪಾರ್ಸೆಲ್ಲು ಎಂದು ಕೇಳಿದಾಗ ಎಲ್ಲಾ ರೆಡಿ ಸಾರ್, ಇಡ್ಲೀ ಒಂದು ಐದು ನಿಮಿಷಗಳಷ್ಟೇ ಎಂದಾಗಾ ವಿಧಿ ಇಲ್ಲದೇ ಇದೇ ಆಟಗಳಾಗೋಯ್ತು ನಿಮ್ದು ಎಂದು ಹುಸಿ ಕೋಪ ತೋರುತ್ತಾ ಮತ್ತೆ ಮಾತು ಮುಂದುವರಿಸಿದೆವು.

ಐದು ನಿಮಿಷ ಎಂದವನು ಹಾಗೂ ಹೀಗೂ ಹತ್ತು ನಿಮಿಷಗಳಾದ ನಂತರ ನಾನು ಹೇಳಿದ್ದೆಲ್ಲ್ಲವನ್ನೂ ಕಟ್ಟಿ ಕೊಟ್ಟು ತಗೋಳೀ ಸರ್. ಇವತ್ತು ತುಂಬಾ ರಶ್ ಇತ್ತು ಹಾಗಾಗಿ ಬೇಜಾರು ಮಾಡ್ಕೋಬೇಡಿ ಎಂದಾಗ ಬೈಯ್ಯಲು ಮನಸ್ಸಾಗದೇ, ಹೇಳಿದಷ್ಟು ದುಡ್ಡನ್ನು ಆನ್ಲೈನ್ ಮೂಲಕ ಪಾವತಿ ಮಾಡಿ, ಅದಾಗಲೇ ಹೊಟ್ಟೇ ಕೂಡಾ ಚುರ್ ಗುಟ್ಟುತ್ತಿದ್ದರಿಂದ ಹಾಗೇ ಮಾತಾನಾಡಿಕೊಂಡೇ, ಸೀದಾ ಮನೆಗೆ ಬರುವಷ್ಟರಲ್ಲಿ ಮನೆಯವರೆಲ್ಲರ ಸ್ನಾನ ಮತ್ತು ಪೂಜಾ ಕಾರ್ಯಗಳು ಮುಗಿದಿದ್ದ ಕಾರಣ, ಮನೆಯ ಕೆಲಸದ ಹುಡುಗಿಯೂ ಸೇರಿದಂತೆ ಎಲ್ಲರೂ ಒಟ್ಟಿಗೇ ಕುಳಿತುಕೊಂಡು ನೆಮ್ಮದಿಯಾಗಿ ತಂದಿದ್ದ ಎಲ್ಲಾ ತಿಂಡಿಗಳನ್ನೂ ಹಂಚಿಕೊಂಡು ತಿನ್ನುವಷ್ಟರಲ್ಲಿ ಗಂಟೆ ಹತ್ತಾಗಿತ್ತು.

ಅದಾದಾ ನಂತರ ಹಾಗೇ ಏನೋ ಕೆಲಸದಲ್ಲಿ ಮಗ್ನನಾಗಿ ಮಧ್ಯಾಹ್ನ ಮನೆಯವರು ಮಾಡಿದ ಮುದ್ದೇ ಬಸ್ಸಾರು ತಿಂದು ಭುಕ್ತಾಯಾಸದಿಂದ ಹಾಗೇ ಒಂದೆರೆಡು ಗಂಟೆ ಕಣ್ಣು ಮುಚ್ಚಿ ಸಂಜೆ ಮತ್ತೆ ಮಡದಿ ಮಾಡಿಕೊಟ್ಟ ಸ್ನಾಕ್ಸ್ ತಿನ್ನುತ್ತಾ, ಶನಿವಾರ ಸಂಜೆಯ ವಿಶೇಷ ಟಿವಿ ಕಾರ್ಯಕ್ರಮಗಳನ್ನು ನೋಡುತ್ತಾ ಇಡೀ ದಿನ ಕಳೆದುಹೋದದ್ದೇ ಗೊತ್ತಾಗಲಿಲ್ಲ.

ಭಾನುವಾರ ಬೆಳಿಗ್ಗೆ ಮಗಳನ್ನು ನೃತ್ಯಾಭ್ಯಾಸಕ್ಕೆ ಬಿಟ್ಟು ನಾನು ಸಾಂಘೀಕ್ಕಿಗೆ ಹೋಗಿ, ಹಾಗೇ ಬರುವಾಗ ಮಗಳನ್ನು ಕರೆದುಕೊಂಡು ಬರುವುದು ವಾಡಿಕೆ. ಅದರಂತೆಯೇ, ಮಗಳನ್ನು ಬೆಳಿಗ್ಗೆ ಐದೂ ಮುಕ್ಕಾಲಿಗೆ ಎಬ್ಬಿಸಿ ಎಬ್ಬಿಸಿ, ಲಗು ಬಗನೆ ತಯಾರಾಗುತ್ತಿದ್ದಂತೆಯೇ, ಅಪ್ಪಾ, ಗಾಡಿ ಹೊರಗೆ ಇಡಿ ಅಷ್ಟರೊಳಗೆ ನಾನು ರೆಡಿ ಆಗ್ಬಿಡ್ತೀನಿ ಎಂದು ಮಗಳು ಕೂಗಿ ಹೇಳಿದಾಗ, ಎಲ್ಲಾ ರೆಡಿ ಇದೆ ನಿನಗಾಗಿ ಕಾಯ್ತಾ ಇದ್ದೀನಿ ಎಂದು ಹೇಳಿ, ಗಾಡಿಯ ಕೀ ತೆಗೆದುಕೊಂಡು, ಮನೆಯ ಕಾಂಪೌಂಡಿನಿಂದ ಗಾಡಿ ಹೊರಗೆ ತೆಗೆಯಲು ಬಂದು ನೋಡಿದರೇ, ಗಾಡೀನೇ ಕಾಣ್ತಾ ಇಲ್ಲಾ. ಒಂದು ಕ್ಷಣ ಎಧೆ ಧಸಕ್ ಎಂದಿತು.

ಅರೇ, ಈಗ ತಾನೇ ಗೇಟಿನ ಬೀಗ ತೆಗ್ದೆ. ಕಾರ್ ಎಲ್ಲಾ ಇದ್ದ ಹಾಗೇ ಇದೇ ಎಂದು ಗೇಟ್ ತೆಗ್ದು ಹೊರಗೇನಾದ್ರೂ ಇದ್ಯಾ ಅಂತಾ ಕಾಂಪೌಂಡ್ ಹೊರಗೆ ಬಂದು ನೋಡಿದ್ರೇ ಅಲ್ಲೆಲ್ಲೂ ಗಾಡಿಯ ಪತ್ತೇನೇ ಇಲ್ಲಾ. ಹಿಂದಿನ ರಾತ್ರಿಯೇ, ಅಪ್ಪಾ ಮಗಳು ಸುಮ್ಮನೇ ಸದ್ದಿಲ್ಲದೇ ಬೆಳಿಗ್ಗೆ ಹೋಗಬೇಕು ನನ್ನ ಮತ್ತು ನನ್ನ ಮಗನ ನಿದ್ದೆಯ ತಂಟೆಗೆ ಬರಬಾರದು ಎಂದು ಎಚ್ಚರಿಕೆಯನ್ನು ಮಡದಿ ನೀಡೀದ್ದರೂ ವಿಧಿ ಇಲ್ಲದೇ, ಸಾಗರ್, ಗಾಡೀ ಏನಾದ್ರೂ ನೋಡಿಡ್ಯಾ? ಕೀ ಇದೇ. ಗಾಡಿ ಮಾತ್ರಾ ಕಾಣಿಸ್ತಾ ಇಲ್ಲಾ ಅಂತಾ ಎಷ್ಟೇ ಮೆತ್ತಗೆ ಹೇಳಿದ್ರೂ, ನಿದ್ದೆ ಮಾಡುತ್ತಿದ್ದ ಅಥವಾ ನಿದ್ದೆ ಮಾಡುತ್ತಿದ್ದಂತೆ ನಟಿಸುತ್ತಿದ್ದ ನನ್ನ ಮಡದಿಯ ಕಿವಿಗೆ ಬೀಳುವುದಕ್ಕೆ ತಡವಾಗಲೇ ಇಲ್ಲಾ. ದುಡ್ದಿನ ಬೆಲೆ ಗೊತ್ತಿಲ್ಲ. ಎಲ್ಲೆಲ್ಲೋ ತೆಗೆದುಕೊಂಡು ಹೋಗ್ಬಿಡದು. ಈಗ ಗಾಡಿ ಇಲ್ಲಾ ಅನ್ನೋದು ಎಂದು ರಣ ಚಾಮುಂಡಿಯ ಅಪರಾವತೆಯಾಗಿ ಹೋದಳು ಮಡದಿ.

ಶಾಂತ ಚಿತ್ತದಿಂದ ಗಾಢ ನಿದ್ರಾವಸ್ತೆಯಲ್ಲಿದ್ದ ಮನೆಯ ವಾತಾವರಣ ಒಂದೇ ಕ್ಷಣದಲ್ಲಿ ಗಲಿ ಬಿಲಿ. ಗಾಡಿ ಎಲ್ಲಿಗೆ ತೆಗೆದುಕೊಂಡು ಹೋಗಿದ್ರೀ? ಎಂದು ಒಮ್ಮೆ ಯೋಚಿಸಿಕೊಳ್ಳಿ ಎಂದಾಗ, ಅರೇ, ಕೀ ಇಲ್ಲೇ ಇರುವಾಗ ಗಾಡಿ ಎಲ್ಲಿಗೆ ತೆಗೆದುಕೊಂಡು ಹೋಗೋದಿಕ್ಕೆ ಆಗುತ್ತದೆ? ನೆನ್ನೆ ಇಡೀ ದಿನಾ ಮನೆಯಲ್ಲೇ ಇದ್ದೇ. ಎಲ್ಲೂ ಹೊರಗೇ ಹೋಗಿಲ್ಲ ಎಂದ್ ದಬಾಯಿಸಿದೆ. ಮಗಳು ಅಪ್ಪಾ ಡಾನ್ಸ್ ಕ್ಲಾಸಿಗೆ ತಡ ಆಗ್ತಾ ಇದೆ. ಕಾರಿನಲ್ಲಿ ಹೋಗೋಣ. ಆಮೇಲೆ ಗಾಡಿ ಬಗ್ಗೆ ಹುಡುಕೋಣ ಎಂದಳು. ಮಗಳ ಧಾವಂತ ಅರ್ಥವಾಗುತ್ತಿದ್ದರೂ, ಅರವತ್ತು ಎಪ್ಪತ್ತು ಸಾವಿರದ ಗಾಡಿ ಕಳೆದು ಹೋಗಿದೆಯಲ್ಲಾ? ಎಂಬ ಅತಂಕ ನನ್ನದು.

ಅಷ್ಟರಲ್ಲಿ ಪರಿಚಯವಿದ್ದ ಪೋಲೀಸ್ ಸಿಬ್ಬಂಧಿಯೊಬ್ಬರಿಗೆ ಕರೆ ಮಾಡಿ ಈ ರೀತಿ ಗಾಡಿ ಕಳುವಾಗಿ ಹೋಗಿದೆ ಅದಕ್ಕೆ ಏನು ಮಾಡುವುದು ಎಂದು ವಿಚಾರಿಸಿದೆ. ಅವರು ಸಹಾ ಸರ್ ನಮ್ಮ ಏರಿಯಾದಲ್ಲಿ ಆ ರೀತಿಯಾದ ಕಳ್ಳತನಗಳು ಇಲ್ಲಾ. ಇಷ್ಟು ಹೊತ್ತಿಗೆ ರೈಟರ್ ಕೂಡಾ ಬಂದಿರುವುದಿಲ್ಲ. ಒಂದು ಒಂಬತ್ತು ಇಲ್ಲವೇ ಹತ್ತು ಘಂಟೆಗೆ ಗಾಡಿ ದಾಖಲೆಯ ಸಮೇತ ಸ್ಟೇಷನ್ನಿಗೆ ಬನ್ನಿ. ನಾನೂ ಅಲ್ಲೇ ಇರ್ತೀನಿ ಕಂಪ್ಲೇಂಟ್ ಕೊಡಿ ನಂತರ ನಮ್ಮ ಕೈಯ್ಯಲ್ಲಾದ ಮಟ್ಟಿಗೆ ಹುಡುಕಲು ಪ್ರಯತ್ನಿಸ್ತೀವಿ ಎಂದರು

ಗಾಡಿ ಕಳೆದುಹೋಗಿದ್ದನ್ನು ತುಂಬಾನೇ ಮನಸ್ಸಿಗೆ ಹಚ್ಚಿಕೊಂಡ ಮಗ, ಅಪ್ಪಾ ನೆನ್ನೆ ಬೆಳಿಗ್ಗೆ ತಿಂಡಿ ತರೋದಿಕ್ಕೆ ಗಾಡಿ ತೆಗೆದುಕೊಂಡು ಹೋಗಿದ್ರಲ್ವಾ? ಬರೋವಾಗ ಗಾಡಿ ತೆಗೆದುಕೊಂಡು ಬಂದ್ರೋ ಇಲ್ವೋ ಅಂತಾ ನೆನಪಿಸಿಕೊಳ್ಳಿ ಎಂದಾ. ಇಲ್ಲಾ ಕಣೋ ನಾನು ನಡೆದುಕೊಂಡು ಹೋಗಿ ನಡೆದುಕೊಂಡೇ ಬಂದೆ. ಇದೇ ಕೈಯ್ಯಲ್ಲಿ ಬ್ಯಾಸ್ಕೆಟ್ ಹಿಡಿದು ತಂದ ನೆನಪು ಎಂದೇ. ಸರಿ ಹಾಗಿದ್ರೇ ಇನ್ನೆಲ್ಲಿ ಹೋಗಿರಲು ಸಾಧ್ಯ ಎಂದು ಯೋಚ್ನೆ ಮಾಡ್ತಾ ಇರುವಾಗಲೇ, ಹೇಗೂ ಇರ್ಲಿ ಒಮ್ಮೆ ನೋಡಿ ಕೊಂಡು ಬಂದೇ ಬಿಡೋಣಾ ಅಂತಾ ಬೆಳ್ಳಂಬೆಳ್ಳಿಗೆಯ ಚುಮು ಚುಮು ಛಳಿಯನ್ನೂ ಲೆಕ್ಕಿಸದೇ, ಚಾಮುಂಡೀ ಚಾಟ್ಸ್ ಅಂಗಡಿಯ ಕಡೆ ಓಡಿ ಹೋಗಿ ನೋಡಿದರೇ, ದೂರದಿಂದಲೇ ಅಂಗಡಿಯ ಮುಂದೆ ಅನಾಥವಾಗಿ ನಿಂತ ನಮ್ಮ ಗಾಡಿ ಅಸ್ಪಷ್ಟವಾಗಿ ಕಾಣುತ್ತಿದೆ. ಮುಂಜಾನೆಯ ಮಂಜಿನಿಂದಾಗಿ ಅದು ನಮ್ಮದೇ ಗಾಡಿಯಾ ಎಂದು ಸರಿಯಾಗಿ ಕಾಣದಿದ್ದರೂ, ಅಲ್ಲೊಂದು ಗಾಡಿ ನಿಂತದ್ದನ್ನು ನೋಡಿ ಮರುಭೂಮಿಯಲ್ಲಿ ನೀರು ಕಂಡಾಗ ಆಗುವಂತಹ ಅನುಭವ. ಹತ್ತಿರ ಹೋಗಿ ನೋಡುತ್ತಿದ್ದಂತೆಯೇ, ನನಗೇ ಅರಿವಿಲ್ಲದ ಹಾಗೇ ಕಣ್ಣಂಚಿನಲ್ಲಿ ನೀರೂರಿತ್ತು. ಇಡೀ ದಿನ ರಸ್ತೆಯಲ್ಲಿಯೇ ಗಾಡಿ ನಿಂತ ಪರಿಣಾಮ ರಸ್ತೆಯ ಧೂಳು ಗಾಡಿಯ ಮೇಲೆಲ್ಲಾ ಆವೃತವಾಗಿದ್ದು ಅದರ ಮೇಲೆ ಮುಂಜಾನೆಯ ಮಂಜಿನ ಹನಿ ಬಿದ್ದು ಗಾಡಿ ಗಲೀಜಾಗಿ ಕಾಣುತ್ತಿತ್ತು.

ಗಾಡೀ ಗಲೀಜಾಗಿದ್ದರೂ ಪರವಾಗಿಲ್ಲ. ಕಷ್ಟ ಪಟ್ಟು ಕೊಂಡ ಗಾಡಿ ಸಿಕ್ತಲ್ಲ ಎಂದು ಪಕ್ಕದಲ್ಲೇ ಇದ್ದ ಸೀತಾರಾಮಾಂಜನೇಯಸ್ವಾಮಿಗೆ ಭಕ್ತಿಯಿಂದ ಕೈ ಮುಗಿದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಡಿಕ್ಕಿಯಲ್ಲಿದ್ದ ಬಟ್ಟೆಯಿಂದ ಲಗು ಬಗನೇ ಸೀಟ್ ಮತ್ತು ಗಾಡಿಯ ಮೇಲಿನ ಧೂಳನ್ನು ಹಾಗೇ ಕೊಡವಿಕೊಂಡು ಮನೆಗೆ ಬರುವಷ್ಟರಲ್ಲಿ ಗಂಟೆ ಆರೂವರೆಯಾಗಿತ್ತು. ಗಾಡಿಯನ್ನು ನೋಡಿದಾಕ್ಷಣ ಆನಂದ ಭಾಷ್ಪ ಸುರಿಸಿದ ಮನೆಯಾಕಿ ಇನ್ನು ಹೆಚ್ಚಿನ ಸಹಸ್ರ ನಾಮಾರ್ಚನೆಯನ್ನು ಆರಂಭಿಸುವಷ್ಟರಲ್ಲಿ ನಾನೂ ಮತ್ತು ನನ್ನ ಮಗಳು ಅಲ್ಲಿಂದ ಕಾಲ್ಕಿತ್ತಿದ್ದೆವು ಎಂದು ಹೇಳಬೇಕಿಲ್ಲವೇನೋ?

ಒಟ್ಟಿನಲ್ಲಿ ಒಂದು ಕ್ಷಣದ ಮರೆವು ಎಂತಹಾ ಮುಜುಗರವನ್ನು ತಂದೊಗಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಪ್ರಸಂಗವೇ ಸಾಕ್ಷಿ. ದೇವರ ದಯೆ ಸರಿ ಸುಮಾರು ಇಪ್ಪತ್ತೆರಡು ಗಂಟೆಗಳ ಕಾಲ ರಸ್ತೆಯ ಬದಿಯಲ್ಲೇ ಅನಾಥವಾಗಿ ಇದ್ದರೂ ಗಾಡಿಯನ್ನು ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ಅದಕ್ಕೇ ಹೇಳೋದು ಕಾಲಾ ಕೆಟ್ಟು ಹೋಗಿಲ್ಲ, ನಾವು ಬದಲಾಗಿದ್ದೇವೆ. ಮಾತನಾಡುವ ಭರದಲ್ಲಿ ಎಲ್ಲವನ್ನೂ ಮರೆಯುತ್ತಿದ್ದೇವೆ ಎಂದು

ಏನಂತೀರೀ?