ಅಪ್ಪಾ

ರಮೇಶ ಹಳ್ಳಿಯೊಂದರಲ್ಲಿರಲ್ಲಿ ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವಂತೆ ನಾವಿಬ್ಬರು ನಮಗಿಬ್ಬರು ಎಂಬು ಮುದ್ದಾದ ಸಂಸಾರವಿತ್ತು. ಪಿತ್ರಾರ್ಜಿತವಾಗಿ ಬಂದಿದ್ದ ಅಲ್ಪ ಸ್ವಲ್ಪ ಹೊಲ ಗದ್ದೆಯಲ್ಲೇ ಮಳೆಯಾಧಾರಿತವಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಗಳು ಹತ್ತನೇ ತರಗತಿಯಲ್ಲಿ ಇಂಗ್ಲೀಶ್, ಗಣಿತದಲ್ಲಿ ಫೇಲ್ ಆಗಿ ಮುಂದೆ ಓದಲಾರೆ ಎಂದಾಗ ಮಗಳನ್ನು ಬಲವಂತ ಮಾಡದೇ, ಮನೆಯಲ್ಲೇ ಹಾಡು ಹಸೆ, ಆಡುಗೆ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಕಲಿಸಿ ವಯಸ್ಸು 18 ಆಗುತ್ತಿದ್ದಂತೆಯೇ ಹತ್ತಿರದ ಪಟ್ಟಣವೊಂದರಲ್ಲಿ ಕೆಲಸ ಮಾಡುತ್ತಿದ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಹೆಂಡತಿಯ ಕೋರಿಕೆಯ ಮೇರೆಗೆ ಇರುವ ಒಬ್ಬಳೇ ಮಗಳ ಮದುವೆಯನ್ನು ಹತ್ತಿರದ ಪಟ್ಟಣದಲ್ಲಿ ತನ್ನ ಶಕ್ತಿ ಮೀರಿ ಸ್ವಲ್ಪ ಸಾಲವನ್ನೂ ಮಾಡಿ ಅದ್ದೂರಿಯಿಂದ ಮಾಡಿದ್ದ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಮಗಳ ಮದುಗೆಂದು ಮಾಡಿದ್ದ ಸಾಲವನ್ನು ತೀರಿಸಲು ಸಲುವಾಗಿ ತನ್ನ ಹೊಲವಲ್ಲದೇ ಅಕ್ಕ ಪಕ್ಕದ ತೋಟದಲ್ಲೂ ಅಡಿಕೆ, ಕಾಯಿ ಕೀಳಲು ಹೋಗುವ ಮೂಲಕ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಿದ್ದ. ಇನ್ನು ರಮೇಶನ ಹೆಂಡತಿಯೂ ಸಹಾ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಅರಿತು ಸುಮ್ಮನೇ ಮನೆಯಲ್ಲಿ ಕೂರದೇ, ಹತ್ತಿರದ ಅಂಗನವಾಡಿಯಲ್ಲಿ ಆಯಾ ಆಗಿ ಕೆಲಸಮಾಡುತ್ತಿದ್ದಳು.

ತಾವು ಪಡುತ್ತಿರುವ ಕಷ್ಟವನ್ನು ತಮ್ಮ ಮಗ ಮಹೇಶನಿಗೆ ಬರಬಾರದೆಂದು ಬಾಲ್ಯದಿಂದಲೂ ಆತನಿಗೆ ಸಾಧ್ಯವಾದಷ್ಟೂ ಸೌಲಭ್ಯಗಳನ್ನು ನೀಡಿ ತಮ್ಮೂರಿನಲೇ ಇದ್ದ ಶಾಲೆಯಲ್ಲಿ ಓದಿಸುತ್ತಿದ್ದ. ಆರ್ಥಿಕವಾಗಿ ಬಡವರಾಗಿದ್ದರೂ, ಬೌದ್ಧಿಕವಾಗಿ ಶ್ರೀಮಂತರಾಗಿದ್ದ ಕಾರಣ ಮಹೇಶ ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಚುರುಕಾಗಿಯೇ ಇದ್ದು ಓಹೋ ಎನ್ನಲಾಗದಿದ್ದರೂ, ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆಯುತ್ತಿದ್ದ. ಅದೇ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಾದ ನಾಟಕ, ಪ್ರಬಂಧ, ಚರ್ಚಾ ಸ್ಪರ್ಧೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಆಸ್ತಕ್ತಿಯಿಂದ ಭಾಗವಹಿಸಿ ನಾಲ್ಕಾರು ಬಹುಮಾನಗಳನ್ನು ಗಳಿಸಿದ್ದ ಕಾರಣ ತನ್ನ ಶಾಲೆಯ ಶಿಕ್ಷಕವೃಂದದವರಿಗೆ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.

ಹೀಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರತಿ ಬಾರಿ ಪಟ್ಟಣಗಳಿಗೆ ಹೋದಾಗಲೂ ಅಲ್ಲಿನ ಹೈಸ್ಕೂಲು ಹುಡುಗ ಹುಡುಗಿಯರು ಧರಿಸುತ್ತಿದ್ದ ಬಟ್ಟೆ ಬರೆಗಳು, ಕೈಯ್ಯಲ್ಲಿ ಹಿಡಿದಿರುತ್ತಿದ್ದ ಮೊಬೈಲ್ಲುಗಳು, ಶಾಲೆ ಬಿಟ್ಟ ನಂತರ ಶಾಲೆಯ ಪಕ್ಕದಲ್ಲೇ ಇರುತ್ತಿದ್ದ ಅಂಗಡಿ ಮತ್ತು ಹೋಟೇಲ್ಲುಗಳಲ್ಲಿ ತಮಗೆ ಬೇಕಾದದ್ದನ್ನು ತಿನ್ನುತ್ತಾ ಐಸ್ ಕ್ರೀಮ್ ಮೆಲ್ಲುತ್ತಾ ಹರಟುತ್ತಿದ್ದದ್ದು ಮಹೇಶನಿಗೆ ಅಚ್ಚರಿ ಮೂಡಿಸುತಿದ್ದದ್ದಲ್ಲದೇ, ತಾನೂ ಸಹಾ ಹೀಗೆ ಇಂತಹ ಪ್ರತಿಷ್ಠಿತ ಕಾಲೇಜಿನಲ್ಲೇ ಓದುತ್ತಾ ಐಶಾರಾಮ್ಯವಾದ ಜೀವನವನ್ನು ನಡೆಸಬೇಕು ಎಂದು ಕನಸು ಕಾಣುತ್ತಿದ್ದ.

ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರ ಬಂದಾಗ, ರಮೇಶ ದಂಪತಿಗಳು ತಮ್ಮ ಮಗನನ್ನು ಮತ್ತಷ್ಟು ಕಾಳಜಿಯಿಂದ ನೋಡಿ ಕೊಳ್ಳತೊಡಗಿದ್ದಲ್ಲದೇ ತಡರಾತ್ರಿಯಲ್ಲೂ ಅವನ ಓದಿಗೆ ಯಾವುದೇ ತೊಂದರೆಯಾಗದಂತೆ ಟೀ ಕಾಫೀ ಮಾಡಿಕೊಡುತ್ತಾ ಪರೀಕ್ಷೆಯ ದಿನ ರಮೇಶನೇ ತನ್ನದೇ ಟಿವಿಎಸ್-50 ಯಲ್ಲಿ ಮಹೇಶನನ್ನು ಕೂರಿಸಿಕೊಂಡು ಪರೀಕ್ಷೆಗೆ ಬಿಟ್ಟು ಬಂದಿದ್ದ. ಪರೀಕ್ಷೇಗಳೆಲ್ಲವೂ ಮುಗಿದು ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ಮಗ ಮಹೇಶನಿಗಿಂತಲೂ ಅಪ್ಪಾ ರಮೇಶನಿಗೆ ಆತಂಕ ಹೆಚ್ಚಾಗಿತ್ತು.ಇತ್ತೀಚಿನ ದಿನಗಳಲ್ಲಿ ಫಲಿತಾಂಶವೆಲ್ಲವೂ ಬೆರಳ ತುದಿಯಲ್ಲಿ ಮೊಬೈಲ್ ಮುಖಾಂತರವೇ ನೋಡಬಹುದಾಗಿದ್ದರೂ, ರಮೇಶನ ಬಳಿ ಸಾಧಾರಣವಾದ ಮೊಬೈಲ್ ಇದ್ದ ಕಾರಣ, ಫಲಿತಾಂಶವನ್ನು ಶಾಲೆಯಲ್ಲೇ ನೋಡಲು ನಿರ್ಧರಿಸಿ ಆ ದಿನ ಬೆಳ್ಳಂಬೆಳಿಗ್ಗೆಯೇ ಅಪ್ಪಾ ಮಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ವಿಶೇಷವಾಗಿ ದೇವರಿಗೆ ಕೈ ಮುಗಿದು ಮಡದಿ ಕೊಟ್ಟ ತಿಂಡಿಯನ್ನು ತಿನ್ನುವಾಗಲೂ ಫಲಿತಾಂಶದ ದುಗುಡವೇ ಹೆಚ್ಚಾಗಿತ್ತು.

ಮಗನನ್ನು ತನ್ನ ಗಾಡಿಯಲ್ಲಿ ಕುಳ್ಳರಿಸಿಕೊಂಡು ಫಲಿತಾಂಶ ನೋಡಲು ಶಾಲೆಗೆ ಹೋಗುವ ಮಾರ್ಗದಲ್ಲಿ ಸಿಕ್ಕ ಗಣೇಶ ಮತ್ತು ಮಾರಮ್ಮನ ಗುಡಿಗೆ ನಮಸ್ಕರಿಸುತ್ತಾ ಶಾಲೆಯ ನೋಟೀಸ್ ಬೋರ್ಡಿನಲ್ಲಿ ಕೆಳಗಿನಿಂದ ಮೇಲಕ್ಕೆ ತನ್ನ ಮಗನ ರಿಜಿಸ್ಟರ್ ನಂಬರ್ ನೋಡುತ್ತಾ ಅಂತಿಮವಾಗಿ ಉನ್ನತ ಶ್ರೇಣಿಯಲ್ಲಿ ತನ್ನ ಮಗ ತೇರ್ಗಡೆಹೊಂದಿದ್ದರಿಂದ ಸಂತೋಷಗೊಂಡು ಮಗನನ್ನು ಅಪ್ಪಿ ಮುದ್ದಾಡಿ, ಅಲ್ಲೇ ಇದ್ದ ಹೋಟೆಲ್ಲಿಗೆ ಮಗನನ್ನು ಕರೆದುಕೊಂಡು ಹೋಗಿ ಜಾಮೂನು, ಮಸಾಲೆ ದೋಸೆ ಮತ್ತು ಕಾಫಿಯ ಸಮಾರಾಧನೆ ನಡೆಸಿಕೊಂಡು ಮಡದಿಗೆ ಫಲಿತಾಂಶ ಹೇಳಲು ಮನೆಯ ಕಡೆಗೆ ಧಾವಿಸಿದರು.

ಅಪ್ಪಾ ಮಗ ಫಲಿತಾಂಶ ನೋಡಿಕೊಂಡು ಹಿಂದಿರುಗುವಷ್ಟರಲ್ಲಿ ಅಮ್ಮಾ ರುಚಿ ರುಚಿಯಾದ ಕೊಬ್ಬರಿ ಮಿಠಾಯಿಯನ್ನು ಮಾಡಿ ತಟ್ಟೆಯಲ್ಲೇ ಆರಲು ಬಿಟ್ಟಿದ್ದಳು. ಅಪ್ಪಾ ಮಗ ಸಂತೋಷದಿಂದ ಬಂದು 85% ಅಂಕಗಳನ್ನು ತೆಗೆದುಕೊಂಡು ವಿಷಯ ತಿಳಿಸಿದ ತಕ್ಷಣ, ಕೂಡಲೇ ಕೈ ಕಾಲುಗಳನ್ನು ತೊಳೆದುಕೊಂಡು ದೇವರ ಮನೆಗೆ ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚಿ ದೇವರಿಗೆ ಕೈ ಮುಗಿದು, ಮಗ ಮತ್ತು ಮನೆಯವರ ಹಣೆಗೆ ವೀಭೂತಿ ಇಟ್ಟು ಎಲ್ಲರೂ ಭಕ್ತಿಯಿಂದ ದೇವರಿಗೆ ನಮಸ್ಕರಿಸಿ ಇನ್ನೂ ಬಿಸಿ ಬಿಸಿ ಮತ್ತು ಹಸಿಯಾಗಿಯೇ ಇದ್ದ ಕೊಬ್ಬರಿ ಮಿಠಾಯಿಯನ್ನು ಮಗನಿಗೆ ತಿನ್ನಿಸಿದರೆ, ಸಂಜೆ ಕೊಬ್ಬರಿ ಮಿಠಾಯಿ ಆರಿ ಬೆಳ್ಳಗಾದ ಕೂಡಲೇ ರಮೇಶ ನೆರೆ ಹೊರೆಯವರಿಗೆಲ್ಲಾ ಅದನ್ನು ಹಂಚುವ ಮೂಲಕ ಮಗನ ಫಲಿತಾಂಶವನ್ನು ಸಂಭ್ರಮಿಸಿದ್ದರು.

ದೇವರ ದಯೆ ಮತ್ತು ಮಗನ ಕಠಿಣ ಪರಿಶ್ರಮದಿಂದಾಗಿ 10ನೇ ತರಗತಿ ಮುಗಿಸಿಯಾಗಿದೆ. ಮುಂದೆ ತಮ್ಮೂರಿಗೆ ಹತ್ತಿರದಲ್ಲೇ ಇರುವ ITI/Diploma ಸೇರಿಸಿದರೆ, 2-3 ವರ್ಷದಲ್ಲೇ ಓದು ಮುಗಿಸಿ ಮಗ ಪಟ್ಟಣದ ಯಾವುದಾದರೂ ನೌಕರಿ ಗಿಟ್ಟಿಸಬಹುದು ಎನ್ನುವುದು ರಮೇಶನ ಆಸೆ. ಅದರೆ ಮಹೇಶನ ಮನದಲ್ಲಿ ದೂರದ ಪಟ್ಟಣದಲ್ಲಿರುವ ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡು ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು ಕೈಯ್ಯಲ್ಲೊಂದು ಪುಸ್ತಕ ಹಿಡಿದು ಕೊಂಡು ರಾಜಾಹುಲಿ ಚಿತ್ರದಲ್ಲಿ ಯಶ್ ಮತ್ತವನ ಸ್ನೇಹಿತರು ಬಸ್ಸಿನ ಫುಟ್ ಬೋರ್ಡಿನಲ್ಲಿ ನಿಂತು ಕೊಂಡು ದಾರಿಯಲ್ಲಿ ಹೋಗಿ ಬರುವ ಚಂದನೆಯ ಹೆಣ್ಣುಮಕ್ಕಳನ್ನು ನೋಡಿಕೊಂಡು ಓಡಾಡುವಂತೆ ಹೋಗಿ ಬರುವ ಆಸೆ.

ಮನೆಯಲ್ಲಿ ಈ ಕುರಿತಂತೆ ಒಂದೆರಡು ಬಾರಿ ತೀವ್ರವಾದ ವಾದ ವಿವಾದಗಳು ನಡೆದು ಇರುವ ಒಬ್ಬನೇ ಮಗ ಅವನಾದರೂ ಚೆನ್ನಾಗಿ ಇರಲಿ. ಕಷ್ಟನೋ ಸುಖಾನೋ ತಂದೆ ತಾಯಿಯರಾಗಿ ನಮ್ಮ ಜವಾಬ್ಧಾರಿಯನ್ನು ನಾವು ನಿಭಾಯಿಸಿ ಅವನಿಷ್ಟದಂತೆ ಓದಿಸಿ ಬಿಡೋಣ. ಮುಂದೆ ಆವನಿಗೆ ಬಿಟ್ಟಿದ್ದು ಎಂದು ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡು ಮಡದಿ ಹೇಳುತ್ತಿದ್ದರೆ, ಪಟ್ಟಣದಲ್ಲಿ ಪ್ರತಿಷ್ಠಿತ ಕಾಲೇಜು ಸೇರಿಸುವ ಖರ್ಛು ವೆಚ್ಚಗಳನ್ನು ಮನಸ್ಸಿನಲ್ಲೇ ಮಂಡಿಗೆ ಎಣಿಸುತ್ತಾ ಹೋದ ರಮೇಶ. ಮನೆಯ ಆರ್ಥಿಕ ಪರಿಸ್ಥಿತಿಯ ಅರಿವಿದ್ದರೂ, ಪಟ್ಟಣದಲ್ಲೇ ಓದಬೇಕೆಂದು ಹಠ ಹಿಡಿದು ಕೂತ್ತಿದ ಮಹೇಶನಿಗೇ ಅಂತಿಮ ಗೆಲುವಾಗಿ ಅಪ್ಪಾ ಮತ್ತು ಮಗ ಇಬ್ಬರೂ ಪಟ್ಟಣಕ್ಕೆ ಬಂದು ಕಾಲೇಜಿಗೆ ಸೇರಿಸಲು ಬಂದಾಗ, ರಮೇಶ ಮಹೇಶನ ಜೊತೆ ಇನ್ನೇನು ಕಾಲೇಜಿನ ಒಳಗೆ ಕಾಲಿ ಇಡಬೇಕು ಎಂದು ಬಲಗಾಲು ಎತ್ತಿಡುವಾಗ, ಶಾಲಾ ಕಾಲೇಜು ಎನ್ನುವುದು ವಿದ್ಯಾ ಮಾತೆಯ ದೇಗುಲ ಇದ್ದ ಹಾಗೆ. ಮೊದಲ ಬಾರಿಗೆ ಹೋಗುವಾಗ ಕಾಲಿನಲ್ಲಿ ಚಪ್ಪಲಿ ಹಾಕಿಕೊಂಡು ಹೋಗುವುದು ಸರಿಯಲ್ಲ ಎಂದು ರಮೇಶ ಚಪ್ಪಲಿಯನ್ನು ಅಲ್ಲೇ ಹೊರಗೆ ಬಿಟ್ಟಾಗ ಒಲ್ಲದ ಮನಸ್ಸಿನಿಂದಲೇ ಮಹೇಶನೂ ಅಪ್ಪನನ್ನು ಮನಸ್ಸಿನಲ್ಲೇ ಬೈದುಕೊಂಡು ಚಪ್ಪಲಿ ಬಿಡುತ್ತಾನೆ.

WhatsApp Image 2022-06-19 at 10.28.22 AM (1)ಹಾಗೆ ಕಾಟಾಚಾರದಿಂದ ಎಲ್ಲೆಂದರಲ್ಲಿ ಚಪ್ಪಲಿ ಬಿಡುವಾಗ ಕಣ್ಣು ತನ್ನ ಅಪ್ಪನ ಚಪ್ಪಲಿಯ ಕಡೆ ಹೋದಾಗ ಒಂದು ಕ್ಷಣ ತಬ್ಬಿಬ್ಬಾಗಿದ್ದಲ್ಲದೇ ಅವನಿಗೆ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯಲಾರಂಭಿಸುತ್ತದೆ. ಮಗನ ಕಾಲಿಗೆ ಕಲ್ಲು ಮುಳ್ಳು ಚುಚ್ಚಿ ಆತನಿಗೆ ನೋವಾಗ ಬಾರದೆಂದು ಚಂದನೆಯ ಚಪ್ಪಲಿಯನ್ನು ಕೊಡಿಸಿದ್ದ ಅಪ್ಪ. ಆತ ಮಾತ್ರ ಸವಿದು ಹೋದ ಚಪ್ಪಲಿಯನ್ನೇ ಧರಿಸಿಕೊಂಡು ಓಡಾಡುತ್ತಿದ್ದದ್ದು ಆಗ ಮಗ ಮಹೇಶನ ಕಣ್ಣಿಗೆ ಬೀಳುತ್ತದೆ. ಕೂಡಲೇ, ಮನಸ್ಸು ಬದಲಿಸಿದ ಮಗ, ಅಪ್ಪಾ ನನಗೆ ಈ ಕಾಲೇಜಿನಲ್ಲಿ ಓದಲು ಇಷ್ಟವಿಲ್ಲ. ನಡೀರಿ ನಮ್ಮ ಊರಿನ ಸಮೀಪವೇ ಇರುವ ಸರ್ಕಾರೀ ಕಾಲೇಜಿನಲ್ಲೇ ಓದುತ್ತೇನೆ ಎಂದು ಹೇಳುತ್ತಾನೆ.

ಮಗನ ಈ ದಿಢೀರ್ ನಿರ್ಧಾರಕ್ಕೆ ರಮೇಶನೂ ಒಂದು ಕ್ಷಣ ಗಲಿಬಿಲಿಗೊಂಡು, ಮಗೂ, ಇದೇನು ಕಡೇ ಕ್ಷಣ ಈ ರೀತಿಯಾಗಿ ನಿರ್ಧಾರ ಬದಲಿಸಿದ್ದೀಯೇ? ದುಡ್ಡು ಕಾಸಿನ ಬಗ್ಗೆ ಚಿಂತೆ ಮಾಡಬೇಡ. ಅದನ್ನು ನಾನು ಹೊಂದಿಸುತ್ತೇನೆ. ನೀನು ಚೆನ್ನಾಗಿ ಓದಬೇಕು ಅಷ್ಟೇ ಎನ್ನುತ್ತಾನೆ. ಒಮ್ಮೆ ಧೃಢ ನಿರ್ಧಾರ ತೆಗೆದುಕೊಂಡಿದ್ದ ಮಹೇಶ ಇಲ್ಲ ಅಪ್ಪಾ, ಇದು ದಿಢೀರ್ ನಿರ್ಧಾರ ಎನಿಸಿದರೂ ಇದರ ಹಿಂದೆ ಸಾಕಷ್ಟು ದೂರಾಲೋಚನೆ ಇದೆ ಎಂದು ಹೇಳಿ ಅಪ್ಪನೊಂದಿಗೆ ತಮ್ಮೂರಿನ ಬಳಿ ಇರುವ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳುತ್ತಾನೆ.

ಪ್ರತೀ ದಿನ ಕಾಲೇಜಿಗೆ ಹೋಗುವ ಮುನ್ನ ಮನೆಯ ಕೊಟ್ಟಿಗೆ ಕೆಲಸ ಮುಗಿಸಿ, ಸಮಯ ಸಿಕ್ಕಾಗಲೆಲ್ಲಾ ಅಪ್ಪನಿಗೆ ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತಲೇ ದ್ವಿತೀಯ ವರ್ಷದ ಪಿಯುಸಿಯಲ್ಲಿ ಇಡೀ ಜಿಲ್ಲೆಗೇ ಪ್ರಥಮ ಮತ್ತು ರಾಜ್ಯಕ್ಕೆ ಐದನೇಯವನಾಗಿ ಉತ್ತೀರ್ಣನಾದಾಗ ರಮೇಶ ದಂಪತಿಗಳ ಆನಂದಕ್ಕೆ ಪಾರವೇ ಇಲ್ಲ. ಮಹೇಶನನ್ನು ಸಂದರ್ಶನ ಮಾಡಲು ಬಂದ ಮಾಧ್ಯಮಗಳು, ಇಷ್ಟು ಒಳ್ಳೆಯ ಅಂಕಗಳನ್ನು ಗಳಿಸಿರುವ ನೀವು ಮುಂದೆ ಡಾಕ್ಟರ್ ಇಲ್ಲವೇ ಇಂಜಿನೀಯರಿಂಗ್ ಪದವಿ ಪಡೆದು ವಿದೇಶದಲ್ಲಿ ಹೇರಳವಾಗಿ ಹಣ ಮಾಡುವ ಹಂಬಲವಿದೆಯೇ? ಎಂದು ಪ್ರಶ್ನಿಸಿದಾಗ, ಮಹೇಶನ ಉತ್ತರ ಅವರೆಲ್ಲರನ್ನೂ ದಿಗ್ಭ್ರಾಂತ ಗೊಳಿಸುತ್ತದೆ.

ನಮ್ಮ ದೇಶ ಭಾರತ ಕೃಷಿ ಪ್ರಧಾನವಾದ ದೇಶ. ರೈತರುಗಳೇ ಈ ದೇಶದ ಬೆನ್ನಲುಬು. ಮೊದಲು ಹೊಟ್ಟೆಗೆ ಹಿಟ್ಟಿದ್ದಾಗ ಮಾತ್ರವೇ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಯಬಹುದು. ಹಾಗಾಗಿ ಡಾಕ್ಟರ್ ಇಂಜೀನಿಯರ್ ಬೇಕಾದಷ್ಟು ಜನರು ಸಿಗುತ್ತಾರೆ. ಆದರೆ ನಿಜವಾದ ಕೃಷಿಕ ಸಿಗುವುದು ಇಂದಿಗೆ ದುಸ್ತರವಾಗಿರುವ ಕಾರಣ, ನಾನು ಕೃಷಿ ವಿಜ್ಞಾನವನ್ನು ಅಧ್ಯಯನ ಮಾಡಿ ಕೃಷಿಯಲ್ಲಿ ಸಾಧನೆ ಮಾಡಲು ಇಚ್ಚಿಸಿದ್ದೇನೆ ಎಂದು ಹೇಳುತ್ತಿದ್ದಾಗ ರಮೇಶನಿಗೆ ಆನಂದಭಾಷ್ಪವನ್ನು ತಡೆಯಲಾಗದೇ, ಸುತ್ತಮುತ್ತಲೂ ಮಾಧ್ಯಮದವರು ಇದ್ದಾರೆ ಎಂಬುದನ್ನೂ ಲೆಖ್ಖಿಸದೇ ತನ್ನ ಮಗ ಮಹೇಶನನ್ನು ಬರಸೆಳೆದು ಅಪ್ಪಿಕೊಂಡು ಮುದ್ದಾಡುತ್ತಾನೆ.

palekarನೋಡ ನೋಡುತ್ತಿದ್ದಂತೆಯೇ ಕೇವಲ ಐದೇ ವರ್ಷಗಳಲ್ಲಿ ಕೃಷಿ ವಿಜ್ಣಾನದಲ್ಲಿ ಉನ್ನದ ಪದವಿಯನ್ನು ಪಡೆದ ಮಹೇಶ ತನ್ನೂರಿಗೆ ಮರಳಿ ತಮ್ಮ ಜಮೀನಿನಲ್ಲಿ ಪಾಲೇಕರ್ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾನೆ. ಆರಂಭದಲ್ಲಿ ಇರುವ ಜಮಿನನ್ನೇ ವಾರದ ಫಸಲು, ತಿಂಗಳ ಫಸಲು, ಮೂರು ತಿಂಗಳ ಫಸಲು ಮತ್ತು ವಾರ್ಷಿಕ ಫಸಲು ಕೊಡುವ ಗಿಡ ಮರಗಳನ್ನು ಹಾಕುವುದಲ್ಲದೇ ತಮ್ಮ ಜಮೀನಿನ ಸುತ್ತಲೂ ಕಡಿಮೆ ಪರಿಶ್ರಮದಲ್ಲಿ ದೀರ್ಘಾವಧಿಯಲ್ಲಿ ಹೆಚ್ಚಿನ ಆದಯವನ್ನು ತಂದು ಕೊಡಬಲ್ಲಂತಹ ತೇಗದ ಮರಗಳನ್ನು ನೆಡುತ್ತಾನೆ.

lakeತನ್ನೂರಿನ ರೈತರುಗಳನ್ನು ಒಗ್ಗೂಡಿಸಿ ಪಾಳು ಬಿದ್ದಿದ್ದ ಭಾವಿ ಮತ್ತು ಕಲ್ಯಾಣಿ ಮತ್ತು ರಾಜ ಕಾಲುವೆಯನ್ನು ಸ್ವಜ್ಜಗೊಳಿಸಿದ ಪರಿಣಾಮ ಮಳೆಗಾಲದಲ್ಲಿ ಬಿದ್ದ ನೀರು ಪೋಲಾಗದೇ ಭಾವಿ, ಕಲ್ಯಾಣಿ ಮತ್ತು ಕೆರೆಯಲ್ಲಿ ಶೇಖರಣೆಯಾಗುತ್ತದೆ. ಅದೇ ರೀತಿ ಬಂಜರು ಭೂಮಿಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿದ ಕಾರಣ, ಬೆಂಗಾಡಾಗಿದ್ದಂತಹ ಅವರ ಊರು ಕೆಲವೇ ಕೆಲವು ವರ್ಷಗಳಲ್ಲಿ ನಿತ್ಯಹರಿದ್ವರ್ಣ ಕಾಡಿನಂತೆ ಹಚ್ಚ ಹಸಿರುನಿಂದ ಕಂಗೊಳಿಸಲಾರಂಭಿಸುತ್ತದೆ. ಕೃಷಿಯ ಜೊತೆ, ಹಣ್ಣು, ತರಕಾರಿ, ಹೈನುಗಾರಿಕೆ, ಜೇನು, ರೇಷ್ಮೇ, ಕುರಿ ಕೋಳಿಗಳ ಸಾಕಾಣಿಕೆಯನ್ನೂ ತನ್ನೂರಿನ ಜನರಿಗೆ ಪರಿಚಯಿಸಿದ್ದಲ್ಲದೇ, ತನಗಿದ್ದ ಸಂಪರ್ಕದಿಂದ ಕೃಷಿ ಮಾರುಕಟ್ಟೆಯನ್ನು ತಮ್ಮೂರಿನಲ್ಲೇ ಆರಂಭಿಸುವ ಮೂಲಕ ನೋಡ ನೋಡುತ್ತಿದ್ದಂತೆಯೇ ಅವರ ಊರು ಮಾದರಿ ಊರಾಗುವಂತೆ ಮಾಡಿದ್ದನ್ನು ಗಮನಿಸಿದ ಸರ್ಕಾರ ಮಹೇಶನಿಗೆ ಪ್ರಶಸ್ತಿಯನ್ನು ಪ್ರಕಟಿಸಿ ಅದನ್ನು ಅವರ ಊರಿನಲ್ಲೇ ಸಮಾರಂಭ ಏರ್ಪಡಿಸುತ್ತಾರೆ.

ಮಗನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಿಕ್ಕಿರಿದ ಜನಸಂದಣಿಯನ್ನು ಮುಂದಿನ ಸಾಲಿನಲ್ಲೇ ಕುಳಿತು ರಮೇಶ ಸಂಭ್ರಮಿಸುತ್ತಿರುತ್ತಾನೆ. ಮುಖ್ಯಮಂತ್ರಿಗಳು ಮಹೇಶನಿಗೆ ಪ್ರಶಸ್ತಿ ಪ್ರಧಾನ ಮಾಡಲು ಬಂದಾಗ ದಯವಿಟ್ಟು ಈ ಪ್ರಶಸ್ತಿಗೆ ನನಗಿಂತಲೂ ಅರ್ಹರಾದ ಮತ್ತೊಬ್ಬರು ಇಲ್ಲೇ ಇದ್ದಾರೆ. ಅವರಿಗೇ ಈ ಸನ್ಮಾನ ಮಾಡಬೇಕು ಎಂದಾಗ ಇಡೀ ಸಭೆಯಲ್ಲಿ ಒಂದು ಕ್ಷಣ ಮೌನಕ್ಕೆ ಜಾರಿ ಅವರು ಯಾರಿರಬಹುದು? ಎಂದು ಅಕ್ಕ ಪಕ್ಕ ನೋಡುತ್ತಿದ್ದಾಗ, ಮೌನವನ್ನು ಮುರಿದ ಮಹೇಶ ನನ್ನ ಈ ಏಳಿಗೆಗೆ ಕಾರಣೀಭೂತರಾದ ತನ್ನ ತಂದೆಯನ್ನು ವೇದಿಕೆಗೆ ಬರಲು ಕೇಳಿಕೊಂಡಾಗ, ಕುಳಿತಲ್ಲಿಂದಲೇ, ನಾನು ಬರುವುದಿಲ್ಲ ಎಂದು ಕೈ ಆಡಿಸಿದಾಗ ವೇದಿಕೆಯಿಂದ ದಡದಡನೆ ಕೆಳೆಗೆ ಇಳಿದ ಬಂದ ರಮೇಶ ತನ್ನ ತಂದೆ-ತಾಯಿಯ ಕಾಲಿಗೆ ನಮಸ್ಕರಿಸಿ, ಆನಂದ ಅಪ್ಪುಗೆಯನ್ನು ನೀಡಿ, ಕೈ ಹಿಡಿದು ಅವರನ್ನು ವೇದಿಕೆಯ ಮೇಲೆ ಕರೆತಂದು ಮುಖ್ಯಮಂತ್ರಿಗಳ ಕೈಯ್ಯಲ್ಲಿ ತನ್ನ ಪರವಾಗಿ ತನ್ನ ತಂದೆಯವರಿಗೇ ಸನ್ಮಾನ ಮಾಡಿಸಿದ್ದನ್ನು ಕಣ್ತುಂಬ ತುಂಬಿಕೊಂಡ ಮಹೇಶನ ತಾಯಿ, ಇಂತಹ ಮಗನನ್ನು ಕೊಟ್ಟು ತಮ್ಮ ಬದುಕನ್ನು ಸಾರ್ಥಕಗೊಳಿಸಿದ ಭಗವಂತನಿಗೆ ಮನಸ್ಸಿನಲ್ಲೇ ಸ್ಮರಿಸುತ್ತಾಳೆ.

ತಂದೆ ತಾಯಿಯರೇ, ಈ ಪ್ರಪಂಚದಲ್ಲಿ ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುವ ದೇವರುಗಳು. ಅಮ್ಮಾ ಜನ್ಮ ನೀಡಿ, ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿ ಮುನ್ನೆಲೆಯಲ್ಲಿ ಕಾಣಿಸಿಕೊಂಡರೆ, ಅದರ ಹಿಂದೆ ಎಲೆ ಮರೆಕಾಯಿಯಂತೆ, ಸ್ವಂತಕ್ಕೆ ಕಿಂಚಿತ್ತು, ಕುಟುಂಬಕ್ಕೆ ಇಡೀ ಸಂಪತ್ತು. ಪರೋಪಕಾರಾಯ ಇದಂ ಶರೀರಂ ಎಂದು ಕುಟುಂಬದ ಒಳಿತಿಗಾಗಿಯೇ ಕಾಯಾ ವಾಚಾ ಮನಸಾ‌ ಜೀವಿಸುವ, ತನ್ನೆಲ್ಲಾ ಬಯಕೆಗಳೊಂದಿಗೆ ರಾಜಿಯಾಗದೆ, ಕುಟುಂಬದ ಬಯಕೆಗಳೊಂದಿಗೆ ಸದಾ ರಾಜಿಯಾಗುವ ರಾಜನಾದ ರಮೇಶನಂತಹ ಅಪ್ಪನಿಗೆ, ವಿಶ್ವ ಅಪ್ಪಂದಿರ ದಿನದಂದು ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸೋಣ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಸಮಸ್ಯೆ ಒಂದು ಪರಿಹಾರ ನೂರು

ಕಳೆದ ಒಂದು ವರ್ಷದಿಂದಲೂ ಕೊರೋನಾ ಮಾಹಾಮಾರಿಯಿಂದಾಗಿ ಇಡೀ ಪ್ರಪಂಚವೇ online ಮೂಲಕ ನಡೆದುಕೊಂಡು ಹೋಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಹಳ್ಳಿಗಾಡುಗಳಲ್ಲಂತೂ ಸ್ವಲ್ಪ ಜೋರಾದ ಗಾಳಿ ಇಲ್ಲವೇ ಮಳೆ ಬಂದಿತೆಂದರೂ ಸಾಕು, ವಿದ್ಯುತ್ ಕಡಿತವಾಗಿ ನೆಟ್ವರ್ಕ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಇಲ್ಲೊಂದು ಗುಡ್ಡಗಾಡಿನ ಹಳ್ಳಿಯ ಹುಡುಗಿ ತನ್ನ ತರಗತಿಗಳು ಆನ್‌ಲೈನ್ ‌ನಲ್ಲಿ ಆರಂಭವಾಗಿದೆ. ಜೋರಾದ ಮಳೆಯಿಂದಾಗಿ ಮನೆಯಲ್ಲಿ ನೆಟ್ವರ್ಕ್ ಇಲ್ಲ. ಅರೇ.. ನೆಟ್ವರ್ಕ್ ಇಲ್ಲಾ ಎಂದು ಗೊಣಗಾಡದೇ ಕೂಡಲೇ, ಅಪ್ಪಾ ಮತ್ತು ತಂಗಿಯ ಜೊತೆ ಮನೆಯ ಸಮೀಪದ ಎತ್ತರದ ಗುಡ್ಡವನ್ನೇರಿದ್ದಾಳೆ. ತಂಗಿ ಕೊಡೆ ಹಿಡಿದ್ದರೆ ಅದಕ್ಕೆ ಅಪ್ಪಾ ಆಧಾರವಾಗಿ ನಿಂತಿದ್ದಾರೆ. ಆ ಹುಡುಗಿ ತನ್ನ ಪಾಡಿಗೆ ತಾನು ಮೊಬೈಲ್ ನಲ್ಲಿ online ಪಾಠ ಕೇಳುತ್ತಿದ್ದಾಳೆ.

ಇದಕ್ಕೇ ಹೇಳೋದು ನೆಟ್ವರ್ಕ್ ಸಮಸ್ಯೆ‌, ವಿದ್ಯುತ್ ಸಮಸ್ಯೆ, ಎಂದು ಹತ್ತಾರು ಜನರನ್ನು ಸೇರಿಸಿ ಭಾರಿ ಪ್ರತಿಭಟನೆ ನಡೆಸಿ ಸರ್ಕಾರ ಸರೀ ಇಲ್ಲಾ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ರಾಜೀನಾಮೆ ನೀಡಬೇಕು ಎನ್ನುವುದರಿಂದ ಸಮಸ್ಯೆಗಳು ಪರಿಹಾರವಾಗದು. ಇಂತಹ ಪ್ರತಿಭಟನೆಗಳಿಂದಾಗಿ ಸಮಯ ಮತ್ತು ಪರಿಶ್ರಮ ಎರಡೂ ನಷ್ಟ. ಮಳೆಗಾಲದಲ್ಲಿ ಎಲ್ಲಾ ಪಕ್ಷಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಮರಗಿಡಗಳ ಆಶ್ರಯ ಪಡೆದರೆ, ಹದ್ದು ಮಾತ್ರಾ ಮಳೆ ಸುರಿಸುವ ಮೋಡಗಳ ಮೇಲೆ ಹಾರುತ್ತಾ ಮಳೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ, ಮಳೆಗಾಲದಲ್ಲಿ ಇಂತಹ ಸಮಸ್ಯೆಗಳೆಲ್ಲವೂ ತಾತ್ಕಾಲಿಕ. ಹಾಗಾಗಿ ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ನಮ್ಮಲ್ಲಿ ಛಲ ಮೂಡಿ, ನಾವೇ ಒಂದು ಹೆಜ್ಜೆ ಮುಂದಾಲೋಚನೆ ಮಾಡಿದಲ್ಲಿ ಸಮಸ್ಯೆಯೂ ಬಗೆಹರಿಯುತ್ತದೆ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ. ನೆಮ್ಮದಿ ಇದ್ದಲ್ಲಿ ಮಾತ್ರವೇ, ತಾಳ್ಮೆ. ತಾಳ್ಮೆ ಇದ್ದಲ್ಲಿ ಮಾತ್ರವೇ ಸಮಸ್ಯೆಗೆ ಪರಿಹಾರ.

ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ನೋಡಿದಾಕ್ಷಣ ನನ್ನ ಮನದಲ್ಲಿ ಮೂಡಿದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಬಹುಶಃ ನಮ್ಮಲನೇಕರಿಗೆ ಇನ್ನೂ ವಿವಿಧ ರೀತಿಯ ಭಾವನೆಗಳು ಮೂಡಬಹುದು. ಭಾವನೆಗಳು ಯಾವುದೇ ಇರಲಿ. ಸಮಸ್ಯೆ ಪರಿಹಾರವಾಗಬೇಕಷ್ಟೇ. ಸಮಸ್ಯೆ ಒಂದೇ ಇದ್ದರೂ ಅದಕ್ಕೆ ನೂರಾರು ಪರಿಹಾರಗಳು ಇರುತ್ತವೆ. ಹಾಗಾಗಿ ಸಮಸ್ಯೆಗಳನ್ನು ಪರಿಹರಿಸುವತ್ತ ಹರಿಸಬೇಕು ನಮ್ಮ ಚಿತ್ತ.

ಏನಂತೀರೀ?
ನಿಮ್ಮವನೇ ಉಮಾಸುತ

ಮಾತೃ ಸ್ವರೂಪೀ ಅಪ್ಪಾ

gard3ಅದೊಂದು ಐಶಾರಾಮೀ ಅಂತರಾಷ್ಟ್ರೀಯ ಶಾಲೆಯ ಉದ್ಯಾನವನದಲ್ಲಿ  ಗಂಗಣ್ಣ ಗಿಡಗಳಿಗೆ ನೀರನ್ನು ಹಾಕಿ ಪೋಷಿಸುತ್ತಿದ್ದರು. ಸಂಜೆ ಬಿಸಿಲು ತೀವ್ರವಾಗಿ ಅತನನ್ನು ಬಸವಳಿಸುತ್ತಿತ್ತಾದರೂ ಅದನ್ನು ಲೆಕ್ಕಿಸದೆ ತನ್ನ ಕರ್ತವ್ಯದಲ್ಲಿ ನಿರತನಾಗಿದ್ದ ಮಾಲಿ ಗಂಗಣ್ಣನ ಅವರ ಬಳಿ ಬಂದ ಸಹೋದ್ಯೋಗಿಯೊಬ್ಬರು, ಪ್ರಿನ್ಸಿಪಾಲ್ ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ. ಈ ಕೂಡಲೇ ಅವರನ್ನು ಭೇಟಿಯಾಗಬೇಕೆಂತೇ ಎಂದು ಹೇಳಿದರು.

gard1ಅರೇ! ಏನಪ್ಪಾ ಆಯ್ತು? ಪ್ರಿನ್ಸಿಪಾಲ್ ಮೇಡಂ ಕರೆಯುವಷ್ಟು ತಪ್ಪನ್ನು ನಾನೇನು ಮಾಡಿದೆ? ಎಂದು ಯೋಚಿಸುತ್ತಲೇ, ಭಯ ಭಯದಿಂದ ಬೆವರು ಸುರಿಯುತ್ತಿದ್ದ ಮುಖ ಮತ್ತು ಕೈಕಾಲುಗಳನ್ನು ತೊಳೆದುಕೊಂಡು ದಡಾ ಬಡಾ ಎಂದು ಓಡುತ್ತಾ ಪ್ರಿನ್ಸಿಪಾಲ್ ಕೊಠಡಿಯತ್ತ ಧಾವಿಸಿ ಹೋಗುತ್ತಿದ್ದಂತೆಯೆ ಹೃದಯದ ಬಡಿತ ಹೆಚ್ಚಾಗುತ್ತಲೇ ಇತ್ತು. ಆತ ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ಏಕಾ ಏಕಿ ಪ್ರಾಂಶುಪಾಲರು ಬರಹೇಳಿದ್ದು ಆತನಿಗೆ ಆತಂಕವನ್ನು ಮೂಡಿಸುತ್ತು. ಧಾವಂತದಿಂದಲೇ, ದ್ವಾರದ ಬಳಿ ಬಂದು ಟಕ್ ಟಕ್ ಎಂದು ಪ್ರಿನ್ಸಿಪಾಲ್ ಕೊಠಡಿಯ ಬಾಗಿಲನ್ನು ಬಡಿದರು ಗಂಗಣ್ಣ.

ಎಸ್.. ಕಮ್ ಇನ್! ಎಂಬ ವಾಕ್ಯ ಕೇಳಿ ಒಳಗೆ ಹೋದ ಗಂಗಣ್ಣ ವಿನಮ್ರವಾಗಿ ಕೈ ಮುಗಿದು, ಮೇಡಂ ಏನೋ ಬರ ಹೇಳಿದಿರಂತೇ? ಎನ್ನುವಾಗ ಆತನ ಧ್ವನಿಯಲ್ಲಿ ಅದ್ರತೆ ಇತ್ತು.

ನೀಟಾಗಿ ಸೀರೆಯುಟ್ಟ ಮಧ್ಯಮ ವಯಸ್ಸಿನ ಅಲ್ಲಲ್ಲಿ ನೆರೆತ ಕೂದಲಿನ ದಿಟ್ಟತನದ ದಕ್ಷತನದ ಮಹಿಳೆಯಾಗಿದ್ದ ಪ್ರಾಂಶುಪಾಲರು ತಮ್ಮ ಮೂಗಿನ ಮೇಲೆ ಬಂದಿದ್ದ ಕನ್ನಡಕವನ್ನು ಸರಿಮಾಡಿಕೊಂಡು ತಗೋ, ಇದನ್ನು ಓದು ಎಂದು ತಮ್ಮ ಮುಂದಿದ್ದ ಒಂದು ಕಾಗದದ ಹಾಳೆಯನ್ನು ಕೊಟ್ಟರು.

ಅರೇ.. ಇದೇನು ಮೇಡಂ? ನನಗೆಲ್ಲಿ ಓದಲು ಬರುತ್ತದೆ? ನಾನು ಅನಕ್ಷರಸ್ಥ. ದಯವಿಟ್ಟು ನಾನೇನಾದರೂ ಗೊತ್ತಿಲ್ಲದೇ ತಪ್ಪು ಮಾಡಿದ್ದರೆ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿ ನನಗೆ ಮತ್ತೊಂದು ಅವಕಾಶ ಕೊಡಿ ಮೇಡಂ. ನನ್ನ ಮಗಳಿಗೆ ಈ ಶಾಲೆಯಲ್ಲಿ ಉಚಿತವಾಗಿ ಅಧ್ಯಯನ ಮಾಡಲು ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ. ಅವಳ ಜೀವನದ ಹೊರತಾಗಿ ನನಗೆ ಬೇರಾವುದೇ ಚಿಂತೆ ಇಲ್ಲಾ ಎಂದು ನಡುಗುತ್ತಲೇ ಹೇಳಿದರು ಗಂಗಣ್ಣ.

ನಿಮ್ಮ ಮಗಳು ಬರೆದಿರುವ ಈ ಪತ್ರವನ್ನು ನೀನು ಓದಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿೆ ಶಾಲೆಯಲ್ಲಿದ್ದ ಎಲ್ಲಾ ಶಿಕ್ಷಕ/ಶಿಕ್ಷಕಿಯರನ್ನು ಅಲ್ಲಿಗೆ ಕರೆಸಿ ಅವರಲ್ಲೊಬ್ಬರಿಗೆ ಆ ಪತ್ರವನ್ನು ಓದಲು ಹೇಳಲಾಯಿತು.

ಆ ಪತ್ರದ ಸಾಲುಗಳು ಹೀಗಿತ್ತು

ವಿಶ್ವ ಅಮ್ಮಂದಿರ ದಿನಕ್ಕಾಗಿ ತಾಯಿಯ ಬಗ್ಗೆ ಪ್ರಬಂಧವನ್ನು ಬರೆಯಲು ನಮ್ಮ ಶಿಕ್ಷಕಿಯವರು ತಿಳಿಸಿದ್ದಾರೆ.

father1ನಮ್ಮದು ಹಾಸನದ ಬಳಿಯ ಒಂದು ಸಣ್ಣ ಹಳ್ಳಿ. ವೈದ್ಯಕೀಯ ಮತ್ತು ಶಿಕ್ಷಣವು ಇನ್ನೂ ದೂರದ ಕನಸಿನಂತೆಯೇ ಇರುವ ಕುಗ್ರಾಮ ಎಂದರು ತಪ್ಪಾಗದು. ಅಂತಹ ಸಣ್ಣ ಹಳ್ಳಿಯಲ್ಲಿ ಸಣ್ಣ ಪ್ರಾಯದ ನಮ್ಮಮ್ಮ ನನಗೆ ಜನ್ಮ ನೀಡುವಾಗಲೇ ಅಸುನೀಗುತ್ತಾಳೆ. ಹಾಗಾಗಿ ನಾನು ತಂದೆಯ ಮಡಿಲಲ್ಲಿ ಸೇರಿಕೊಳ್ಳುತ್ತೇನೆ. ಎಲ್ಲರೂ ಹುಟ್ಟುತ್ತಲೇ ತಾಯಿಯನ್ನು ತಿಂದು ಕೊಂಡವಳು ಎಂದು ಮೂದಲಿಸಲಾರಂಭಿಸುತ್ತಾರೆ.

ನಮ್ಮ ತಂದೆಗೂ ಇನ್ನೂ ಸಣ್ಣ ವಯಸ್ಸಾದರಿಂದ ಎಲ್ಲರೂ ಅವರಿಗೆ ಮತ್ತೊಂದು ಮದುವೆಯನ್ನು ಮಾಡಿಕೊಳ್ಳಲು ಎಲ್ಲರೂ ಒತ್ತಾಯ ಮಾಡತೊಡಗಿದರಾದರೂ ಅಪ್ಪಾ ಅದನ್ನು ನಿರಾಕರಿಸುತ್ತಾರೆ. ತಾತ ಮತ್ತು ಅಜ್ಜಿಯರೂ ಸಹಾ ಇನ್ನೂ ಚಿಕ್ಕ ವಯಸ್ಸು, ಮಗಳನ್ನೂ ಬೇರೆ ನೋಡಿಕೊಳ್ಳಬೇಕು. ವಂಶೋದ್ಧಾರಕನೂ ಬೇಕು ಎಂಬ ಎಲ್ಲಾ ರೀತಿಯಲ್ಲೂ ಭಾವನಾತ್ಮಕ ಅಂಶಗಳ ಮೂಲಕ ಅಪ್ಪನನ್ನು ಒಪ್ಪಿಸಲು ಪ್ರಯತ್ನಿಸಿದರಾದರೂ ಅಪ್ಪಾ ಯಾವುದಕ್ಕೂ ಜಗ್ಗಲಿಲ್ಲ.

ಆಲ್ಲೇ ಇದ್ದರೆ ಎಲ್ಲರೂ ಹೀಗೆಯೇ ಪೀಡಿಸುತ್ತಲೇ ಇರುತ್ತಾರೆ ಎಂದು ತಿಳಿದ ಅಪ್ಪ, ತನ್ನ ಆಸ್ತಿ, ಮನೆ. ಮಠ ದನಕರುಗಳನ್ನೆಲ್ಲವನ್ನೂ ಬಿಟ್ಟು ಪಟ್ಟಣಕ್ಕೆ ನನ್ನನ್ನು ಹೊತ್ತುಕೊಂಡು ಬರುತ್ತಾರೆ. ಇಷ್ಟು ದೊಡ್ಡ ನಗರದಲ್ಲಿ ಅಪ್ಪನಿಗೆ ತಿಳಿದವರು ಯಾರೂ ಇರಲಿಲ್ಲ, ಕೈಯ್ಯಲ್ಲಿಯೂ ಬಿಡಿಗಾಸೂ ಇರಲಿಲ್ಲ. ಅವನ ತೋಳಿನಲ್ಲಿ ಕೇವಲ ನಾನಿದ್ದೆ. ಜೀವನವೂ ಬಹಳ ಕಠಿಣವಾಗಿತ್ತು. ಹಗಲು ರಾತ್ರಿ ಎನ್ನದೇ ಸಿಕ್ಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಲೇ ನನ್ನನ್ನು ಚೆನ್ನಾಗಿ ಬೆಳಸತೊಡಗಿದರು.

father2ತನಗೆ ತಿನ್ನಲು ಇದೆಯೋ ಇಲ್ಲವೋ ಎಂದು ಯೋಚಿಸದೇ ಸದಾಕಾಲದಲ್ಲೂ ನನಗೆ ಹೊಟ್ಟೆಯ ತುಂಬಾ ತಿನ್ನಿಸುತ್ತಿದ್ದರು. ತಮ್ಮ ಶಕ್ತಿ ಸಾಮರ್ಥ್ಯವನ್ನು ಮೀರಿ ನನಗೆ ಸಾಧ್ಯವಾದಷ್ಟು ಉತ್ತಮವಾದ ಸೌಕರ್ಯಗಳನ್ನು ಒದಗಿಸಿದರು. ಸ್ವಲ್ಪ ವರ್ಷಗಳಲ್ಲಿ ಈ ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತಲ್ಲದೇ, ನನಗೆ ಇಲ್ಲಿಯೇ ಉಚಿತವಾಗಿ ಓದುವ ಅವಕಾಶ ಕೊಡಲಾಯಿತು. ಅಂದಿನಿಂದ ನನಗೆ ತಂದೆಯೇ ತಾಯಿಯಾಗಿ ಹೋದರು. ತಾಯಿಯ ಪ್ರೀತಿ ವಿಶ್ವಾಸ ಹೇಗಿರುತ್ತದೆ ಎಂದು ಯಾರಾದರೂ ನನ್ನನ್ನು ಕೇಳಿದರೆ ಎಲ್ಲದ್ದಕ್ಕೂ ನಾನು ತಂದೆಯನ್ನೇ ತೋರಿಸುವಷ್ಟರ ಮಟ್ಟಿಗೆ ಬೆಳೆದಿದೆ ನಮ್ಮಿಬ್ಬರ ಅವಿನಾಭಾವ ಸಂಬಂಧ.

gard2ನನ್ನ ತಾಯಿ ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಹೊತ್ತು ಹೆತ್ತಿರಬಹುದು. ಆದರೆ ಕಳೆದ ಒಂಬತ್ತು ವರ್ಷಗಳು ನನ್ನ ತಂದೆಯೇ ಭೂಮಿಯ ನಂತರದ ಅತ್ಯುತ್ತಮ ತಾಯಿಯಾಗಿದ್ದಾರೆ. ಈ ವಿಶ್ವ ತಾಯಿಯ ದಿನದಂದು, ನನ್ನ ತಂದೆಯೇ ನನಗೆ ಭೂಮಿಯ ಮೇಲಿನ ಅತ್ಯುತ್ತಮ ತಾಯಿ ಆಗಿದ್ದಾರೆ ಎಂದು ಹೇಳಬಯಸುತ್ತೇನೆ ಮತ್ತು ನಾನು ಅವರಿಗೆ ಹೃದಯಪೂರ್ವಕ ನಮಸ್ಕರಿಸುತ್ತೇನೆ. ಈ ಶಾಲೆಯಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಮಾಲಿಯೇ ನನ್ನ ತಂದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಅಮ್ಮಂದಿರ ಬಗ್ಗೆ ಬರೆಯಲು ಹೇಳಿದ ಪ್ರಬಂಧದಲ್ಲಿ ನಾನು ಅಪ್ಪನ ಬಗ್ಗೆ ಬರೆದಿರುವ ಕಾರಣ ನನ್ನ ಶಿಕ್ಷಕಿ ನನಗೆ ಕಡಿಮೆ ಅಂಕ ಕೊಡಬಹುದು ಇಲ್ಲವೇ ಕರೆದು ಬೈಯ್ಯುವುದಾಗಲೀ ಇಲ್ಲವೇ ಶಿಕ್ಷೆಯನ್ನಾದರೂ ಕೊಡಬಹುದು. ಆದರೆ ನನಗೆ ಅದರ ಕುರಿತಂತೆ ಯಾವುದೇ ಬೇಸರವಿಲ್ಲ, ಏಕೆಂದರೆ ಅವೆಲ್ಲವೂ ನನ್ನ ತಂದೆಯ ನಿಸ್ವಾರ್ಥ ತ್ಯಾಗ ಮತ್ತು ಪ್ರೇಮಕ್ಕೆ ನನ್ನ ಕಡೆಯಿಂದ ಕೊಡಬಹುದಾದ ಒಂದು ಸಣ್ಣ ಬೆಲೆಯಷ್ಟೇ ಎಂದು ನಾನು ನಂಬುತ್ತೇನೆ.

ಆ ಶಿಕ್ಷಕಿ  ಪತ್ರವನ್ನು ಓದುತ್ತಿರುವಾಗ ಇಡೀ ಪ್ರಾಂಶುಪಾಲರ ಕೊಠಡಿ ನಿಶ್ಯಭ್ಧವಾಗಿತ್ತು. ಎಲ್ಲರ ಕಣ್ಣುಗಳಲ್ಲಿಯೂ ನೀರು ಜಿನುಗುತ್ತಿತ್ತು. ಅಷ್ಟೊಂದು ಪ್ರಖರವಾದ ಸೂರ್ಯನ ಕಿರಣಗಳಲ್ಲಿ ಕೆಲಸ ಮಾಡಿದಾಗಲೂ ಬೆವರಿನಿಂದ ಒದ್ದೆ ಯಾಗದ ಗಂಗಣ್ಣನ ಬಟ್ಟೆಗಳು, ತನ್ನ ಬಗ್ಗೆ ವಾತ್ಸಲ್ಯ ಪೂರ್ವಕವಾಗಿ ಮಗಳು ಬರೆದಿದ್ದ ಪತ್ರವನ್ನು ಕೇಳಿ ಆತನ ಎದೆಯನ್ನು ಕಣ್ಣೀರಿನಿಂದ ನೆನೆಸಿತ್ತು. ಗಂಗಣ್ಣ ಎರಡೂ ಕೈಗಳನ್ನು ಮಡಚಿಕೊಂಡು ಆನಂದಭಾಷ್ಪಸುರಿಸುತ್ತಾ ನೆನದು ತೊಪ್ಪೆಯಾಗಿ ನಿಂತಿದ್ದರು.

ಕೂಡಲೇ, ಆ ಕಾಗದವನ್ನು ಶಿಕ್ಷಕಿಯ ಕೈಗಳಿಂದ ತೆಗೆದುಕೊಂಡು, ಅದನ್ನು ತನ್ನ ಹೃದಯಕ್ಕೆ ಅವಚಿಕೊಂಡು ಹಿಡಿದಿಕೊಂಡು ಮತ್ತೊಮ್ಮೆ ಗಳಗಳ ಅಳುವ ಮೂಲಕ ತನ್ನ ಮನಸ್ಸನ್ನು ಹಗುರ ಮಾಡಿಕೊಂಡರು.

ಇದನ್ನೆಲ್ಲಾ ಗಮನಿಸುತ್ತಿದ್ದ ಪ್ರಾಂಶುಪಾಲರು ಕೂಡಲೇ ತಮ್ಮ ಆಸನದಿಂದ ಎದ್ದು, ಗಂಗಣ್ಣನಿಗೆ ಕುಳಿತುಕೊಳ್ಳಲು ಆಸನವನ್ನು ನೀಡಿ, ಕುಡಿಯಲು ನೀರು ಕೊಟ್ಟು ಸಮಾಧಾನ ಪಟ್ಟುಕೊಳ್ಳಲು ಹೇಳಿದರು. ಆನಂತರ ಅವರು ಏನು ಹೇಳುತ್ತಿದ್ದರು ಎಂದು ಗಂಗಣ್ಣನಿಗೆ ಕೇಳಿಸುತ್ತಲೇ ಇರಲಿಲ್ಲ. ಇದನ್ನು ಗಮನಿಸಿದ ಪ್ರಾಂಶುಪಾಲರು ಕೆಲ ಸಮಯ ಮೌನ ವಹಿಸಿದ ನಂತರ ಗಂಗಣ್ಣಾ, ನಿಮ್ಮ ಮಗಳ ಈ ಪ್ರಬಂಧಕ್ಕೆ ನಾವು 10/10 ಅಂಕಗಳನ್ನು ಕೊಡುತ್ತಿದ್ದೇವೆ. ಈ ಶಾಲೆಯ ಇತಿಹಾಸದಲ್ಲಿ ತಾಯಿಯ ದಿನದ ಬಗ್ಗೆ ಬರೆದ ಅತ್ಯುತ್ತಮ ಪ್ರಬಂಧ ಇದಾಗಿದೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ನಾಳೆ ನಮ್ಮ ಶಾಲೆಯಲ್ಲಿ ನಡೆಯಲಿರುವ ವಿಶ್ವ ತಾಯಂದಿರ ದಿನದ ಕಾರ್ಯಕ್ರಮದಲ್ಲಿ ಈ ಪತ್ರವನ್ನು ಇಡೀ ಶಾಲೆಗೆ ತೋರಿಸಲಾಗುತ್ತದೆ ಮತ್ತು ಆ ಕಾರ್ಯಕ್ರಮಕ್ಕೆ ನಿಮ್ಮನ್ನೇ ಮುಖ್ಯ ಅತಿಥಿಯಾಗಿ ಆಹ್ವಾನಿಸಲು ನಿರ್ಧರಿಸಿದ್ದೇವೆ ಎಂದರು…

ಒಂದು ಮಗುವನ್ನು ಪ್ರೀತಿ ಮತ್ತು ಆದರಗಳಿಂದ ಬೆಳೆಸಲು ಆಕೆ ಮಹಿಳೆಯೇ ಆಗಬೇಕು ಎಂದೇನಿಲ್ಲ. ಮುಖ್ಯವಾಗಿ ಆ ಮಗುವಿನಲ್ಲಿ ಧೃಢವಾದ ನಂಬಿಕೆಯನ್ನು ಬಲಪಡಿಸುವುದು, ಪ್ರಶಂಶಿಸುವುದು, ಅಂಗೀಕರಿಸುವುದು ಮತ್ತು ಅವರ ಎಲ್ಲಾ ಸಾಹಸಕಾರ್ಯಗಳಿಗೂ ತಾನು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂಬ ಭರವಸೆಯನ್ನು ಆ ಮಗುವಿನಲ್ಲಿ ಮೂಡಿಸಿ ಆದು ಹೆಮ್ಮೆಯ ಸಾಧನೆಗಳನ್ನು ಮಾಡುವಂತೆ ಪ್ರೇರೇಪಿಸುವುದೇ ಉತ್ತಮ ತಾಯಿಯ ಲಕ್ಷಣ. ಅಂತಹ ಸಂಪೂರ್ಣ ಜವಾಬ್ಧಾರಿಯನ್ನು ನೀವು ಒಬ್ಬ ತಂದೆಯಾಗಿಯೇ ತಾಯಿಯ ಸಂಪೂರ್ಣ ಜವಾಬ್ಧಾರಿಗಳನ್ನು ನಿಭಾಯಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಲು ನಾವು ಇಚ್ಚಿಸುತ್ತೇವೆ.

gard4ತೋಟಗಾರನೆಂದರೆ ಕೇವಲ ತಮ್ಮ ತೋಟದಲ್ಲಿ ಬೆಳೆದಿರುವ ಹೂವು ಹಣ್ಣುಗಳನ್ನು ಬೆಳಸುವುದು ಮಾತ್ರವಲ್ಲ. ಬದಲಿಗೆ ನಮ್ಮ ಜೀವನದ ಅತ್ಯಮೂಲ್ಯವಾದ ಹೂವುಗಳಾದ ಮಕ್ಕಳನ್ನೂ ಸಹಾ ಅತ್ಯಂತ ಜೋಪಾನವಾಗಿ ಮುತುವರ್ಜಿಯಿಂದ ಸುಂದರವಾಗಿ ಪೋಷಿಸುವ ಜವಾಬ್ಧಾರಿ ಇರುತ್ತದೆ. ಅಂತಹ ಮಹತ್ಕಾರ್ಯವನ್ನು ನೀವು ಅತ್ಯಂತ ಯಶಸ್ವಿಯಾಗಿ ಮಾಡಿರುವ ಕಾರಣ, ನಾಳಿನ ಕಾರ್ಯಕ್ರಮಕ್ಕೆ ನೀವೇ ನಮ್ಮ ಮುಖ್ಯ ಅತಿಥಿಗಳು ಎಂದಾಗಾ, ಅಲ್ಲಿ ನೆರೆದಿದ್ದವರೆಲ್ಲರೂ ಜೋರಾಗಿ ಕರತಾಡಣ ಮಾಡುತ್ತಿದ್ದರೆ ಗಂಗಣ್ಣನಿಗೆ ಇದು ಕನಸೋ ನನಸೋ ಎಂದು ಅರಿಯದೆ ಪೆಚ್ಚು ಪೆಚ್ಚಾಗಿ ದೇಶಾವರಿ ನಗೆ ಬೀರುತ್ತಾ ನಿಂತಿದ್ದರು.

ಇದಕ್ಕೇ ಹೇಳೋದು ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎನ್ನುವಂತೆ ಪ್ರತಿಯೊಬ್ಬ ಯಶಸ್ವೀ ತಾಯಿಯ ಹಿಂದೆ ಆತನ ಗಂಡನ ನಿಸ್ವಾರ್ಥ ಪರಿಶ್ರಮವೂ ಇರುತ್ತದೆ ಅಲ್ಲವೇ?

ಇಂದು ಮೇ 21. ನಮ್ಮ ಮುದ್ದಿನ ಮಗಳ ಹುಟ್ಟಿದ ದಿನ. ಅವಳನ್ನು ಪ್ರೀತಿಸುವ ಅಪ್ಪನಾಗಿ ಈ ಲೇಖನವನ್ನು ಅವಳಿಗಾಗಿ ಅರ್ಪಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭಹಾರೈಕೆಗಳು ನಮ್ಮ ಮುದ್ದಿನ ಮಗಳ ಮೇಲಿರಲಿ ಎಂದು ಆಶಿಸುತ್ತೇವೆ.

ಏನಂತೀರೀ?
ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ ಓದಿದ ಸುಂದರ ಲೇಖನದ ಭಾವಾನುವಾದ. ಇಂತಹ ಸುಂದರ ಪ್ರಸಂಗವನ್ನು ಬರೆದಿರುವ ಆ ಅನಾಮಿಕ ಲೇಖಕರಿಗೆ ಹೃದಯಪೂರ್ವಕ ನಮಸ್ಕಾರಗಳು

ನಾನು ಅಪ್ಪನಾದ ಮಧುರ ಕ್ಷಣ

ತುಂಬು ಗರ್ಭಿಣಿ ಪತ್ನಿಯನ್ನು ವೈದ್ಯರ ಬಳಿ ತೋರಿಸಿ ಎಲ್ಲವೂ ಸರಿಯಾಗಿದೆ. ಇನ್ನು ಒಂದೆರಡು ವಾರಗಳಲ್ಲಿ ಪ್ರಸವವಾಗಬಹುದು ಎಂದಾಗ ಖುಷಿಯಿಂದ ಹೊಟ್ಟೇ ತುಂಬಾ ಚಾಟ್ಸ್ ತಿನ್ನಿಸಿ ನನ್ನಾಕೆಯನ್ನು ಅವಳ ತಾಯಿಯ ಮನೆಗೆ ಬಿಟ್ಟು ಬಂದಿದ್ದೆ.

ಅಂದು ಮೇ 21, 2000ನೇ ಇಸವಿಯ ವೈಶಾಖ ಬಹುಳ ಚತುರ್ಥಿ. ಅರ್ಥಾತ್ ಸಂಕಷ್ಟಹರ ಚತುರ್ಥಿ. ಬೆಳ್ಳಂ ಬೆಳಿಗ್ಗೆಯೇ ನಮ್ಮ ತಂದೆ ತಾಯಿ, ಸೋದರ ಮಾವ ಮತ್ತು ಚಿಕ್ಕಂಮ್ಮಂದಿರು ಮೇಲುಕೋಟೆಗೆ ಹೋಗುವವರಿದ್ದರು. ಹಾಗಾಗಿ ಅವರು ಮಾಡಿಟ್ಟಿದ್ದ ಬಿಸಿ ಬಿಸಿ ಇಡ್ಲಿಯನ್ನು ಅದಾಗಲೇ ತವರು ಮನೆಗೆ ಚೊಚ್ಚಲ ಬಾಣಂತನಕ್ಕೆ ಹೋಗಿದ್ದ ಮಡದಿಗೆ ತೆಗೆದುಕೊಂಡು ಕೊಟ್ಟು ಆಕೆಯೊಂದಿಗೆ ಇಡ್ಲಿಯನ್ನು ಸವಿಯುತ್ತಿದ್ದಾಗ, ಇದ್ದಕ್ಕಿದ್ದಂತೆಯೇ,ನಮ್ಮಾಕಿ ರೀ.. ಯಾಕೋ ಹೊಟ್ಟೆ ಕಲ್ಲಾಗುತ್ತಿದೆ ಎಂದಾಗ, ಕೂಡಲೇ ವೈದ್ಯರಿಗೆ ಕರೆ ಮಾಡಿ ಅವರ ಸಲಹೆಯಂತೆ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಕರೆಕೊಂಡು ಹೋಗಲು ಸಿದ್ಧವಾಗಿ, ತುಂಬಿದ ಬಸುರಿಯನ್ನು ನನ್ನ ಬಜಾಜ್ ಸ್ಕೂಟರಿನಲ್ಲಿಯೇ ಕೂರಿಸಿಕೊಂಡು ಆಸ್ಪತ್ರೆಗೆ ಹೊಗುವ ಮಾರ್ಗದ ಮಧ್ಯದಲ್ಲಿಯೇ ಇದ್ದ ಗಣಪತಿ ದೇವಸ್ಥಾನಕ್ಕೆ ಹೋಗಿ ಸಂಕಷ್ಟಿಯಂದು ದೇವರಿಗೆ ನಮಸ್ಕರಿಸಿ ದೇವಸ್ಥಾನದಲ್ಲಿಯೇ ಸಿಕ್ಕ ನನ್ನಾಕಿಯ ಸಹೋದ್ಯೋಗಿಯವರನ್ನೂ ಮಾತನಾಡಿಸಿ ಆರಾಮವಾಗಿ ಮೂರನೇ ಮಡಡಿಯಲ್ಲಿದ್ದ ಆಸ್ಪತ್ರೆಗೆ ಮೆಟ್ಟಿಲು ಹತ್ತಿಸಿಕೊಂಡೇ ಕರೆದು ಕೊಂಡು ಹೋಗಿದ್ದೆ. ಸ್ವಲ್ಪ ಸಮಯದ ನಂತರ ವೈದ್ಯರು ಬಂದು ಪರೀಕ್ಷಿಸಿ ನೋಡಿ ಇದೇಲ್ಲಾ ಫಾಲ್ಸ್ ಪೇಯ್ನ್. ಕೆಲವರಿಗೆ ಹೀಗೆ ಆಗುವುದು ಸಹಜ. ಸಂಜೆವರೆಗೂ ಇಲ್ಲಿಯೇ ಇರಲಿ ಆಮೇಲೆ ನೋಡೋಣ ಎಂದರು. ಸರಿ ಎಂದು ನಮ್ಮ ಅತ್ತೆ ಮತ್ತು ನನ್ನ ತಂಗಿಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು, ಅತ್ತೆಯವರ ಬಳಿ ನನ್ನ ಮೊಬೈಲ್ ಕೊಟ್ಟು , ಏನಾದರೂ ಬೇಕಿದ್ದಲ್ಲಿ ಕರೆ ಮಾಡಿ ಎಂದು ಹೇಳಿ ನಾನೂ ಮತ್ತು ನಮ್ಮ ಮಾವನವರು ಮನೆಗೆ ಬಂದು ಮನೆಯಲ್ಲಿದ್ದ ಅಜ್ಜಿ ಮತ್ತು ನನ್ನ ತಂಗಿಯ ಮಗಳೊಂದಿಗೆ ಸೇರದಿದ್ದರೂ ಸ್ವಲ್ಪ ಊಟ ಮಾಡಿ ಆಟವಾಡುತ್ತಿದ್ದೆ. ಹಾಗೆಯೇ ದೇವಾಲಯಗಳಿಗೆ ನಮ್ಮ ಮಾವ ಮತ್ತು ಚಿಕ್ಕಮ್ಮಂದಿರ ಕುಟುಂಬಗಳೊಡನೆ ಹೋಗಿದ್ದ ತಂದೆ ತಾಯಿರಿಗೂ ಮಡದಿಯನ್ನು ಆಸ್ಪತ್ರೆಗೆ ಸೇರಿಸಿದ್ದ ವಿಷಯ ತಿಳಿಸಿದ್ದೆ.

ಸ್ವಲ್ಪ ಸಮಯದ ನಂತರ ಸಂಜೆ ಇದ್ದಕ್ಕಿದ್ದಂತೆಯೇ ನನ್ನ ಮನಸ್ಸಿಗೆ ಅದೇಕೋ ಏನೋ ಒಂದು ತರಹದ ಕಸಿವಿಸಿಯಾಗಿ ಕೂಡಲೇ ನನ್ನ ಮೊಬೈಲ್ಗೆ ಕರೆ ಮಾಡಿ, ಮಮತ ಹೇಗಿದ್ದಾಳೆ? ಎಂದು ನಮ್ಮ ಅತ್ತೆಯವರನ್ನು ಕೇಳುವಷ್ಟರಲ್ಲಿಯೇ, ನಮ್ಮ ಅತ್ತೆಯವರೂ ಅಯ್ಯೋ ಐದು ನಿಮಿಷಗಳ ಹಿಂದೆ ನಿಮಗೆ ಮಗಳು ಹುಟ್ಟಿದ್ದಾಳೆ. ಗಾಬರಿಯಲ್ಲಿ ನಿಮಗೆ ಕರೆ ಮಾಡುವುದನ್ನೇ ಮರೆತು ಬಿಟ್ಟೆವು ಎಂದಾಗ, ಒಂದು ಕಡೆ ಸಂತೋಷ ಮತ್ತೊಂದು ಕಡೆ ಅತ್ತೆಯವರ ಮೇಲೆ ತುಸು ಕೋಪ ಬಂದಿತಾದರೂ, ಸಾವರಿಸಿಕೊಂಡು ಕೂಡಲೇ ಆಸ್ಪತ್ರೆಗೆ ಹೋದಾಗ ನನ್ನ ತಂಗಿ ಮುದ್ದು ಮುದ್ದಾಗಿ, ಕೆಂಪಾಗಿದ್ದ ನಮ್ಮ ಮಗಳನ್ನು ಟವೆಲ್ನಲ್ಲಿ ಸುತ್ತಿ ನನ್ನ ಕೈಗಿತ್ತಾಗ ಮತ್ತು ಪ್ರಸವದಿಂದ ಬಳಲಿದ್ದ ಮಡದಿಯನ್ನೂ ನೋಡಿದಾಗ ನೆತ್ತಿಗೇರಿದ್ದ ಕೋಪವೆಲ್ಲವೂ ಜರ್ ಎಂದು ಇಳಿದು ಹೋಗಿತ್ತು.

ಮಧ್ಯಾಹ್ನ ಆಸ್ಪತ್ರೆಯಿಂದ ನಾವು ಹೊರಡುವಾಗಲೂ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದ ನನ್ನ ಮಡದಿ ನಾವು ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಅವಳಿಗೆ ಹೆರಿಗೆಯ ನೋವು ಶುರುವಾಗಿದೆ. ಕೂಡಲೇ ಆಸ್ಪತ್ರೆಯಲ್ಲಿದ್ದ ಕಲಿಕೆಯ ಡಾಕ್ಟರ್ (ಆಕೆ ನನ್ನ ಗೆಳೆಯನ ತಂಗಿ) ವೈದ್ಯರಿಗೆ ಕರೆ ಮಾಡಿ ನನ್ನಾಕೆಯನ್ನು ಹೆರಿಗೆಯ ವಾರ್ಡಿಗೆ ಕರೆದುಕೊಂಡು ಹೋಗಿ ಹಿರಿಯ ವೈದ್ಯರು ಬರುವಷ್ಟರಲ್ಲಿಯೇ ನನ್ನ ಗೆಳೆಯನ ತಂಗಿಯೇ ನನ್ನ ಮಡದಿಗೆ ಸಹಜ ಪ್ರಸವವನ್ನು ಮಾಡಿಸಿದ್ದಳು.

ಕೂಡಲೇ Y2K babyಯಾಗಿ ಮನೆಗೆ ಬಂದ ಮಹಾಲಕ್ಷ್ಮಿಯ ವಿಷಯವನ್ನು ನಮ್ಮ ತಂದೆ ತಾಯಿಯರಿಗೆ ತಿಳಿಸುವ ಮನಸ್ಸಾದರೂ ಅವರು ಯಾವುದಾದರೂ ದೇವಾಲಯದಲ್ಲಿದ್ದರೆ ಪುರುಡಾಗುವುದೆಂಬ ಕಾರಣದಿಂದ ಗಟ್ಟಿ ಮನಸ್ಸು ಮಾಡಿ ಕೊಂಡು ತಿಳಿಸದೆ, ಅವರನ್ನು ಬಿಟ್ಟು ಉಳಿದೆಲ್ಲಾ ನೆಂಟರಿಷ್ಟರಿಗೂ ಮತ್ತು ನನ್ನ ನೆಚ್ಚಿನ ಸ್ನೇಹಿತರಿಗೂ ಕರೆ ಮಾಡಿ ನಾನು ಅಪ್ಪನಾದ ಹೆಮ್ಮೆಯ ವಿಷಯವನ್ನು ತಿಳಿಸಿದ್ದೆ. ಹಾಗೆ ವಿಷಯ ತಿಳಿದ ಸ್ವಲ್ಪಹೊತ್ತಿನಲ್ಲಿಯೇ ತಂಡೋಪ ತಂಡದಲ್ಲಿ ನಮ್ಮ ಮಗಳನ್ನು ನೋಡಲು ಬಂದವರನ್ನು ಕಂಡು ಕೂಡಲೇ ಹತ್ತಿರದ ಸ್ವೀಟ್ ಸ್ಟಾಲ್ನಿಂದ ಸಿಹಿ ತಂದು ಎಲ್ಲರಿಗೂ ಹಂಚಿದ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ರಾತ್ರಿ ಸುಮಾರು ಹತ್ತು ಗಂಟೆಗೆ ಮನೆಗೆ ಬಂದ ತಂದೆ ತಾಯಿ ವಿಷಯ ತಿಳಿದ ಕೂಡಲೇ ಅಷ್ಟು ಹೊತ್ತಿನಲ್ಲಿಯೇ ಆಸ್ಪತ್ರೆಗೆ ಬಂದು ತಮ್ಮ ಮೊಮ್ಮಗಳನ್ನು ಎತ್ತಿ ಮುದ್ದಾಡಿದ್ದ ಸಂಭ್ರಮದ ಕ್ಷಣ ಇನ್ನು ಕಣ್ಣ ಮುಂದೆಯೇ ಇದೆ.

ಹನ್ನೆರಡನೆಯ ದಿನ ಎಲ್ಲಾ ಗುರು ಹಿರಿಯರ ಸಮ್ಮುಖದಲ್ಲಿ ಸೃಷ್ಟಿ ಎಂದು ನಾಮಕರಣ ಮಾಡಿಸಿಕೊಂಡ ಅಂದಿನ ನಮ್ಮ ಮನೆಯ ಪುಟ್ಟಗೌರಿಯೇ ಇಂದು ದೊಡ್ಡವಳಾಗಿ ನನ್ನನ್ನು ಆತ್ಮೀಯವಾಗಿ ತಿದ್ದುವ ಮತ್ತು ನನ್ನ ಎಲ್ಲಾ ಕಾರ್ಯಗಳನ್ನು ಸರಿಯಾಗಿ ವಿಮರ್ಶಿಸುವ ಆಪ್ತ ವಿಮರ್ಶಕಿ. ಅಪ್ಪ ನೀವು ತಪ್ಪು ತಪ್ಪಾಗಿ ಮಾತನಾಡುತ್ತಿದ್ದೀರಿ. ಅಪ್ಪಾ ಹಾಗೆ ಮಾತನಾಡಬಾರದಾಗಿತ್ತು. ಅಪ್ಪಾ ನೀವು ದಪ್ಪಗಾಗಿದ್ದೀರಿ, ಸ್ವಲ್ಪ ಸಣ್ಣಗಾಗಿ. ಅಪ್ಪಾ ನಿಮ್ಮ ಮೀಸೆ ಟ್ರಿಮ್ ಮಾಡಿ. ಫ್ರೆಂಚ್ ಗಡ್ಡ ನಿಮಗೆ ಚೆನ್ನಾಗಿ ಒಪ್ಪುತ್ತದೆ ಅದನ್ನೇ ಬಿಡಿ ಎಂದು ಹೀಗೆ ಹಾಗೆ ಹೇಳುತ್ತಾ ನನ್ನ ನಡಾವಳಿ, ನಾನು ಹಾಕುವ ಬಟ್ಟೆ, ನಾನು ತಿನ್ನುವ ಆಹಾರ ಎಲ್ಲದರ ಮೇಲೂ ಹದ್ದಿನ ರೀತಿಯಲ್ಲಿ ಕಣ್ಣಿಟ್ಟು ತನ್ನ ಅಪ್ಪನ್ನನ್ನು ಕಣ್ಣುಗಳ ರೆಪ್ಪೆಯಂತೆ ತನ್ನ ತಾಯಿಯೊಂದಿಗೆ ಜತನದಿಂದ ಕಾಯುತ್ತಿದ್ದಾಳೆ ನನ್ನ ಮಗಳು. ದೊಡ್ಡವಳಾಗುತ್ತಾ ಹೋದಂತೆಲ್ಲಾ, ಥೇಟ್ ತನ್ನ ಉಮಾ ಅಜ್ಜಿಯ ಅಜಮಾಸು ಎತ್ತರ ಮತ್ತು ಬಹತೇಕ ಅವರದ್ದೇ ಸ್ವಭಾವವೂ ರೂಢಿಯಾಗಿರುವುದರಿಂದ ಅಮ್ಮನನ್ನು ಕಳೆದು ಕೊಂಡಿದ್ದ ನನಗೆ ಮಗಳ ರೂಪದಲ್ಲಿಯೇ ಅಮ್ಮ ಮೈದಾಳಿದ್ದಾರೆ ಎಂದೇ ನನ್ನ ನಂಬಿಕೆಯಾಗಿದೆ. ಮೂರು ವರ್ಷಗಳ ನಂತರ ನನ್ನ ಮಗ ಸಾಗರ್ ಜನಿಸಿ (ಆ ರೋಚಕ ಅನುಭವವನ್ನು ಮುಂದೆ ಎಂದಾದರೂ ಹಂಚಿಕೊಳ್ಳುತ್ತೇನೆ) ನನ್ನ ತಂದೆ ತನದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದನಾದರೂ ಮೊಟ್ಟ ಮೊದಲ ಬಾರಿಗೆ ತಂದೆಯಾದ ಕ್ಷಣ ಅದ್ಭುತ, ಅವರ್ಣನೀಯ ಮತ್ತು ಅನುಭವಿಸಿಯೇ ತೀರಬೇಕಾದ ಆನಂದವದು.

ಹೀಗೆ 22 ವರ್ಷಗಳ ಹಿಂದೆ ಸೃಷ್ಟಿ, ಈ ಭೂಲೋಕದಲ್ಲಿ ಸೃಷ್ಟಿಸಿ, ಅವಳ ಸೃಷ್ಟಿಕರ್ತರಿಗೆ ಹೆಮ್ಮೆಯನ್ನು ತಂದ ದಿನ. ,ಸದ್ಯಕ್ಕೆ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿಯ ನಾಲ್ಕನೇ ವರ್ಷದಲ್ಲಿ ಓದುತ್ತಿರುವ ಸೃಷ್ಟಿ, ‌ಮುಂದಿನ ವರ್ಷ ತನ್ನ ಪದವಿಯನ್ನು ಮುಗಿಸಿ ಸಾವಿರಾರು ವಿನೂತನ ಶೈಲಿಯ ಕಟ್ಟಡಗಳ ವಿನ್ಯಾಸದ ಸೃಷ್ಟಿಕರ್ತೆಯಾಗಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ.

ಓದಿನ ಜೊತೆಗೆ ವಂಶಪಾರಂಪರ್ಯವಾಗಿ ಮತ್ತಾತನಿಂದ ಬಳುವಳಿಯಾಗಿ ಬಂದ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾ, ಕರ್ನಾಟಕ ಶಾಸ್ತ್ರೀಯ ಸಂಗೀತ, ವಯೊಲಿನ್ ಮತ್ತು ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸದ್ಯ ತನ್ನಕ್ಕ ವಿದುಷಿ ಸಿಂಧು ನಂದಕಿಶೋರ್ ಬಳಿಯಲ್ಲೇ ಭರತನಾಟ್ಯದಲ್ಲಿ ಸೀನಿಯರ್ ಮತ್ತು ಖ್ಯಾತ ಚಲನಚಿತ್ರ ಚಿತ್ರ ಸಂಗೀತ ನಿರ್ದೇಶಕ ರಘು ಧನ್ವಂತರಿ ಅವರ ಬಳಿ ಗಿಟಾರ್ ಮತ್ತು ಯುಕಿಲೇಲೇ ಆಭ್ಯಾಸ ಮಾಡುತ್ತಿದ್ದಾಳೆ. ಸಂಗೀತದ ಜೊತೆ ಮಂಡಲ ಆರ್ಟ್ಸ್ ಕಲೆಯಲ್ಲೂ ಪ್ರಾವೀಣ್ಯತೆಯನ್ನು ಪಡೆದಿರುವ ಸೃಷ್ಟಿ, ಅದಲ್ಲಿ ನೂರಾರು ಚಿತ್ರ ವಿಚಿತ್ರಗಳನ್ನು ಬಿಡಿಸುವುದ ಜೊತೆಗೆ ತನ್ನ ಕಲಾಪ್ರೌಢಿಮೆಯನ್ನು ಗುರುಗಳ ಸಮ್ಮುಖದಲ್ಲಿ ವಿವಿಧ ರಂಗಸ್ಥಳಗಳಲ್ಲಿ ಪ್ರದರ್ಶನದ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ.

ಹಿಂದೂ ಸಂಪ್ರದಾಯದ ಪ್ರಕಾರ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ಪುಟ್ಟಿ, ಸೃಷ್ಟಿಗೆ ಸಹೃದಯೀ ಹಿತೈಷಿಗಳಾದ ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಇರಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.

ಕೇವಲ ಮಕ್ಕಳಿಗೆ ಜನ್ಮ ನೀಡಿ ತಂದೆ ತಾಯಿಯರಾಗುವುದು ಹೆಚ್ಚಲ್ಲ. ಮಕ್ಕಳಿಗೆ ಒಳ್ಳೆಯ ವಿದ್ಯೆಯ ಜೊತೆಗೆ ವಿನಯ, ವಿವೇಕ, ಸನ್ನಡತೆಯನ್ನು ಕಲಿಸಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಿ ನಾಡು, ನುಡಿ, ದೇಶ ಮತ್ತು ಧರ್ಮದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುಂತೆ ಮಾಡಿದಾಗಲೇ ಜನ್ಮದಾತರಿಗೆ ಸಾರ್ಥಕತೆ ದೊರೆಯುತ್ತದೆ.

ಏನಂತೀರೀ?

ನಿಮ್ಮವನೇ ಉಮಾಸುತ