ಅಪರೂಪ ಮತ್ತು ಅನುರೂಪದ ಅವಳಿಗಳು

ಮಾನವ ಸಂತಾನವರ್ಧನೆಯಲ್ಲಿ ಒಂದು ಹೆರಿಗೆಗೆ ಒಂದು ಮಗುವಾಗುವುದು ಸಹಜ ಪ್ರಕ್ರಿಯೆಯಾದರೂ, ಕೆಲವೊಮ್ಮೆ ಒಂದೇ ಗರ್ಭದಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಕೂಸುಗಳೂ ಬೆಳೆಯುವುದು ಉಂಟು. ಎರಡು ಮಕ್ಕಳು ಒಂದೇ ಗರ್ಭದಲ್ಲಿ ಬೆಳೆಯುವುದನ್ನು ಅವಳಿ ಎಂದು ಕರೆಯುತ್ತಾರೆ. ಒಂದೇ ತಾಯಿಯ ಗರ್ಭದಲ್ಲಿ ಒಂದೇ ದಿನದಲ್ಲಿ ಕೆಲವೇ ಕೆಲವು ನಿಮಿಷಗಳ ಅಂತರದಲ್ಲಿ ಜನಿಸುವ ಈ ಮಕ್ಕಳು ಬಹುತೇಕ ನೋಡಲು ಒಂದೇ ತರಹದವರಾಗಿರುತ್ತಾರೆ ಮತ್ತು ಅವರ ಹಾವ ಭಾವಗಳು ಅವರಿಗೆ ಬುದ್ದೀ ಬರುವವರೆಗೂ ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ. ಅನೇಕ ಸಲ, ಈ ಅವಳೀ ಮಕ್ಕಳು ಮತ್ತೊಂದು ಅವಳೀಗಳ ಜೊತೆ ಮದುವೆಯಾಗಿ ಅನೇಕರಿಗೆ ಪೇಚು ಮತ್ತು ಮೋಜನ್ನೂ ತಂದಿರುವ ಪ್ರಸಂಗಗಳಿಗೇನೂ ಕಡಿಮೆ ಏನಿಲ್ಲ. ಎಲ್ಲಾ ಭಾಷೆಗಳಲ್ಲಿಯೂ ರಾಮ್ ಮತ್ತು ಶ್ಯಾಮ್, ಶಂಕರ್ ಗುರು, ಸೀತ ಮತ್ತು ಗೀತ ನಂತಹ ಅವಳಿಗಳ ಕಥೆಯ ಚಿತ್ರಗಳನ್ನು ನಾವು ಈಗಾಗಲೇ ನೋಡಿದ್ದೇವೆ.

ಈಗಾಗಲೇ ನಮಗೆಲ್ಲರಿಗೂ ತಿಳಿದಿರುವಂತೆ ಜುಲೈ 14ರಂದು ದೇಶಾದ್ಯಂತ ಸಿಬಿಎಸ್ಇ ಪಠ್ಯಕ್ರಮದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಪ್ರತೀ ವರ್ಷದಂತೆ ಈ ವರ್ಷವೂ ಪ್ರಮಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಈ ವರ್ಷ ನೊಯ್ಡಾದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಒಂದೇ ತರಹದ ಮುಖಚಹರೆ ಹೊಂದಿದ್ದ ಅವಳಿ ಸಹೋದರಿಯರು, ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿರುವುದು ಕುತೂಹಲಕಾರಿ ಸಂಗತಿಯಾಗಿದೆ.

manya_mansi

ರಾಜಧಾನಿ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ಆಸ್ಟರ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಮಾನ್ಸಿ ಸಿಂಗ್ ಮತ್ತು ಮಾನ್ಯ ಸಿಂಗ್ ಎಂಬ 9 ನಿಮಿಷಗಳ ಅಂತರದ ಅವಳಿ ಸಹೋದರಿಯರಿಬ್ಬರೂ ಸಿಬಿಎಸ್ಇ ದ್ವಿತೀಯ ಪಿಯುಸಿಯಲ್ಲಿ ಒಂದೇ ರೀತಿಯಾಗಿ ಶೇ.95.8ರಷ್ಟು ಅಂಕ ಪಡೆದು ಇಲ್ಲೂ ಸಹಾ ತಮ್ಮ ಅವಳಿತನವನ್ನು ಎತ್ತಿ ಹಿಡಿದಿರುವುದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಒಟ್ಟು ಅಂಕಗಳಲ್ಲಿ ಒಂದೇ ರೀತಿ ಬಂದಿರುವುದು ಕಾಕತಾಳೀಯ ಎನ್ನಬಹುದಾದರೂ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ 98ಅಂಕಗಳು, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ 95 ಹೀಗೇ ಐದೂ ವಿಷಯಗಳಲ್ಲಿ ಒಂದೇ ಅಂಕಗಳನ್ನು ಗಳಿಸುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ. ಸಾಧಾರಣವಾಗಿ ಶಾಲೆಯಲ್ಲಿನ ಆಂತರಿಕ ಪರೀಕ್ಷೆಗಳಲ್ಲಿ ಇದೇ ರೀತಿಯ ಜಿದ್ದಾ ಜಿದ್ದಿಯನ್ನು ಪ್ರದರ್ಶಿಸುತ್ತಾ ಇದೇ ರೀತಿಯ ಒಂದೇ ಅಂಕಗಳನ್ನು ಗಳಿಸುವ ಅಭ್ಯಾಸವನ್ನು ಹೊಂದಿದ್ದ ಈ ಅವಳಿಗಳು, ಈಗ ಬೋರ್ಡ್ ಪರೀಕ್ಷೆಯಲ್ಲಿಯೂ ಒಂದೇ ರೀತಿಯ ಅಂಕಗಳನ್ನು ಪಡೆದುಕೊಂಡಿರುವುದು ಆ ಸಹೋದರಿಯರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವ ಬಗ್ಗೆ ನಿರೀಕ್ಷೆ ಇತ್ತು. ಆದರೆ ನಮ್ಮಿಬ್ಬರಿಗೂ ಒಂದೇ ತೆರನಾದ ಅಂಕ ಬರುತ್ತದೆ ಎಂದು ಊಹಿಸಿರಲಿಲ್ಲ. ಪರೀಕ್ಷೆ ನಂತರದ ಅವಲೋಕನದಲ್ಲಿ ಮಾನ್ಯಾಗೆ ಹೆಚ್ಚಿನ ಅಂಕ ಬರಬಹುದೆ ಎಂಬ ನಿರೀಕ್ಷೆಯಲ್ಲಿದ್ದೆವು ಎಂದು ಮಾನಸಿ ತಿಳಿಸಿದ್ದಾಳೆ.

ಮಾನ್ಸೀ ರಸಾಯನಶಾಸ್ತ್ರದಲ್ಲಿ ಚೆನ್ನಾಗಿದ್ದರೆ, ಮಾನ್ಯಾ ಭೌತಶಾಸ್ತ್ರದಲ್ಲಿ ಬಲಶಾಲಿಯಂತೆ, ಈ ಅಕ್ಕ ತಂಗಿಯರಿಬ್ಬರೂ ಯಾವಾಗಲೂ ಒಟ್ಟಿಗೆ ಅಧ್ಯಯನ ಮಾಡುತ್ತಿದ್ದದ್ದಲ್ಲದೇ, ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಾ ಪರಸ್ಪರ ಯಾವುದೇ ರೀತಿಯ ಒತ್ತಡವಿಲ್ಲದೇ ಒಬ್ಬರನ್ನೊಬ್ಬರು ಸಮಾನವಾಗಿ ಕಾಣುತ್ತಿದ್ದದ್ದಲ್ಲದೇ ಪರಸ್ಪರ ಪ್ರೋತ್ಸಾಹಿಸುವ ಮೂಲಕ ಈ ರೀತಿಯ ಅಪರೂಪದ ಸಾಧನೆಗೆ ಕಾರಣರಾಗಿದ್ದಾರೆ.

mansi_manya

ನೋಡಲು ಒಂದೇ ರೀತಿ, ಒಂದೇ ಶಾಲೆ ಮತ್ತು ಒಂದೇ ತರಗತಿಯಲ್ಲಿ ಅಕ್ಕ ಪಕ್ಕವೇ ಕುಳಿತುಕೊಳ್ಳುತ್ತಿದ್ದರಿಂದ ಚಿಕ್ಕವಯಸ್ಸಿನಂದಲೂ, ಶಿಕ್ಷಕರಿಗೂ ಮತ್ತು ಅವರ ಸಹಪಾಠಿಗಳಿಗೆ ಇವರಿಬ್ಬರ ನಡುವಿನ ಅಂತರವನ್ನು ಗುರುತಿಸಲಾಗದೇ ಪೇಚಿಗೆ ಒಳಗಾಗುತ್ತಿದ್ದರಂತೆ. ಈ ಗೊಂದಲವನ್ನು ಪರಿಹರಿಸುವ ಸಲುವಾಗಿ 9 ನೇ ತರಗತಿಯಲ್ಲಿ, ಅವರಿಬ್ಬರ ವಿಭಾಗವನ್ನು ಬದಲಾಯಿಸಿದ್ದೂ ಉಂಟಂತೆ. ಭಾರತ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಪತ್ನಿಯಾದ ಶ್ರೀಮತಿ ವಿಜಯ ಸಿಂಗ್ ಅವರ ಪ್ರಕಾರ ಅವರ ಮಕ್ಕಳಾದ ಈ ಅವಳಿ ಸಹೋದರಿಯರು ಸದಾಕಾಲವೂ ಅಂತರ್ಮುಖಿಗಳಾಗಿದ್ದು ತಮ್ಮ ಇತರೇ ಸಹಪಾಠಿಗಳೊಂದಿಗೆ ಬೆರೆಯದೇ ಪರಸ್ಪರವೇ ಇರುತ್ತಿದ್ದ ಕಾರಣ ಹೊಸಬರೊಂದಿಗೆ ಸ್ನೇಹ ಬೆಳೆಸಿಕೊಳ್ಳುವ ಸಲುವಾಗಿ ಅವರಿಬ್ಬರನ್ನು ಬೇರ್ಪಡಿಸಿದ್ದರಂತೆ.

ಈ ಅವಳಿ ಸಹೋದರಿಯರು ಎಂಜಿನಿಯರಿಂಗ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರಲ್ಲದೇ, ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಜೆಇಇ ಮೇನ್ಸ್‌ ಪರೀಕ್ಷೆಗೆ ಈಗಿನಿಂದಲೇ ತಯಾರಾಗುತ್ತಿದ್ದಾರೆ.

ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ, ಅವಳಿಯಾದವರು ಒಂದೇ ರೀತಿ ಅಂಕ ಪಡೆಯುತ್ತಾರೆ ಎಂಬುದಾಗಿ ಕೆಲ ವರ್ಷಗಳ ಹಿಂದೆ ಓದಿದ್ದ ಮಾನ್ಯ ತನ್ನ ಸಹೋದರಿ ಮಾನ್ಸಿಯೊಂದಿಗೆ ಇದರ ಬಗ್ಗೆ ಚರ್ಚಿಸಿ ಈ ರೀತಿಯ ಸಂಭಾವ್ಯತೆ ಬಹಳ ಅಪರೂಪ ಎಂದು ಪರಸ್ಪರ ನಕ್ಕಿದ್ದರಂತೆ. ಕಾಕತಾಳೀಯವೋ ಎನ್ನುವಂತೆ ಈಗ ಅವರಿಬ್ಬರೇ ಅದೇ ರೀತಿಯ ಅಪರೂಪದ ಸಂದರ್ಭಕ್ಕೆ ಕಾರಣೀಭೂತರಾಗಿರುವುದನ್ನು ಈಗಲೂ ಅವರಿಬ್ಬರಿಗೂ ನಮಗೆ ನಂಬಲೇ ಆಗುತ್ತಿಲ್ಲವಂತೆ

ಒಂದೇ ರೂಪ, ಒಂದೇ ರೀತಿಯ ಧ್ವನಿ ಮತ್ತು ಒಂದೇ ರೀತಿಯ ಅಂಕಗಳನ್ನು ಪಡೆದಿರುವ ಹೊರತಾಗಿಯೂ, ಇವರಿಬ್ಬರೂ ಬ್ಯಾಡ್ಮಿಂಟನ್ ಅಟವನ್ನು ಇಷ್ಟ ಪಡುತ್ತಾರಲ್ಲದೇ ಇಬ್ಬರ ಆಹಾರ ಪದ್ಧತಿಯೂ ಒಂದೇ ರೀತಿಯಾಗಿದ್ದು ಇಬ್ಬರೂ ಕಡಿಮೆ ಕೊಬ್ಬಿನ ಅಂಶವಿರುವ ಆಹಾರವನ್ನು ತಿನ್ನಲು ಬಯಸುವ ಮೂಲಕ ಒಂದು ಅಪರೂಪದ ಅನುರೂಪದ ಅವಳಿಗಳಾಗಿದ್ದಾರೆ.

ಈ ಅಪರೂಪದ ಅನುರೂಪದ ಅವಳಿ ಸಹೋದರಿಯರ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಅವರ ಎಲ್ಲಾ ರೀತಿಯ ಆಸೆ, ಆಕಾಂಕ್ಷೆಗಳು ಈಡೇರಿ, ಭಾರತದ ಸ್ಪತ್ಪ್ರಜೆಗಳಾಗಿ ದೇಶಕ್ಕೇ ಕೀರ್ತಿ ತರುವಂತಾಗಲೀ ಎಂದು ಹಾರೈಸೋಣ.

ಏನಂತೀರೀ?