ಛಲದಂಕ ಮಲ್ಲ ಕೆ. ವೈ. ವೆಂಕಟೇಶ್

venk`

ಚಿಕ್ಕಂದಿನಲ್ಲಿಯೇ, ಖಾಯಿಲೆಯಿಂದಾಗಿ ಕೇವಲ 4.2″ ಎತ್ತರ ಬೆಳೆದಾಗ ಸುತ್ತಮುತ್ತಲಿನವರೆಲ್ಲರೂ ಕುಳ್ಳಾ ಕುಳ್ಳಾ ಎಂದು ಆಡಿಕೊಂಡಾಗ, ತನ್ನ ಅಂಗವೈಕುಲ್ಯವನ್ನೇ ಮೆಟ್ಟಿ ನಿಂತು. ನಾನು ಎತ್ತರವಾಗಿಲ್ಲದಿದ್ದರೆ ಏನಂತೇ? ನನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ ಭಾರತದ ತ್ರಿವರ್ಣಧ್ವಜವನ್ನು ಭಾನೆತ್ತರಕ್ಕೆ ಹಾರಿಸುತ್ತೇನೆ ಎಂಬ ಛಲದಿಂದ ಪ್ಯಾರಾ ಓಲಂಪಿಕ್ಸ್ ನಲ್ಲಿ ಭಾರತ ಗೌರವವನ್ನು ಎತ್ತಿ ಹಿಡಿದ ಕೆ. ವೈ. ವೆಂಕಟೇಶ್ ಅವರ ಸಾಧನೆಯನ್ನು ಗುರುತಿಸಿ ಕೇಂದ್ರಸರ್ಕಾರ 2020ರ ಸಾಲಿನ ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಂತಹ ಹೆಮ್ಮೆ ಸಾಧಕನ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ.

ಅದು 1989, ಆರ್. ಟಿ. ನಗರದ ಆದರ್ಶ ಪಾಲಿಟೆಕ್ನಿಕ್ಕಿಗೆ ಮೊದಲ ವರ್ಷದ ಡಿಪ್ಲಮೋಗೆ ಸೇರಿಕೊಂಡು ಮೊದನೇ ದಿನ ಕಾಲೇಜಿಗೆ ಹೋಗಿದ್ದೆ. ಸಣ್ಣಗೆ ಪೀಚಲು ಹುಡುಗನಂತಿದ್ದ ನನ್ನನ್ನು ಯಾರೋ ಏಯ್ ಏನೋ ನಿನ್ನ ಹೆಸ್ರೂ? ಅಂತಾ ಕೇಳಿದ ಹಾಗಾಯ್ತು. ಯಾರಪ್ಪಾ ಅದೂ ಅಂತ ಹಿಂದುರಿಗಿ ನೋಡಿದರೆ ನನ್ನ ಹಿಂದೆ ಕುಳ್ಳಗಿನ ದಪ್ಪದಾದ (ಸೋಡಾಬುಡ್ದಿ) ಕನ್ನಡಕ ಹಾಕಿಕೊಂಡಿದ್ದ ಹುಡುಗನೊಬ್ಬ ಕಾಣಿಸಿದ. ಅವನ ಜೊತೆ ಮೂರ್ನಾಲ್ಕು ಹುಡುಗರಿದ್ದರು. ನಾನು ಸಹಾ ಭಯದಿಂದಲೇ ನನ್ನ ಹೆಸರು ಹೇಳಿದೆ. ಎಲ್ಲಿಂದ ಬರೋದು.. ಇತ್ಯಾದಿ ಇತ್ಯಾದಿ. ಪ್ರಶ್ನೆಗಳನ್ನು ರ್ಯಾಗಿಂಗ್ ಮಾಡುವ ರೀತಿ ಕೇಳಿ ನಂತರ ನನ್ನ ಹೆಸ್ರೂ ವೆಂಕಟೇಶ. ಈ ಕಾಲೇಜಿನಲ್ಲಿ ಸೀನಿಯರ್. ನಿನ್ನ ತಂಟೆಗೆ ಯಾರಾದ್ರೂ ಬಂದ್ರೇ ನನ್ನ ಹೆಸ್ರು ಹೇಳು ಅಂತ ಹೇಳಿ ಕಳುಹಿಸಿದ. ಹೂಂ ಸರಿ ಎಂದು ಬದುಕಿದೆಯಾ ಬಡ ಜೀವ ಎಂದು ಅಲ್ಲಿಂದ ಓಟ ಕಿತ್ತಿದ್ದೆ.

ಆಮೇಲೆ ಇತರೇ ಸೀನಿಯರ್ ಬಳಿ ವಿಚಾರಿಸಿದಾಗ ಓ ಅವನಾ, ಕುಳ್ಳಾ ವೆಂಕಟೇಶ. ನಮ್ಮ ಕಾಲೇಜಿನ ತುಂಬಾ ಸೀನಿಯರ್. ಅವಾಗವಾಗ ಸಪ್ಲಿಮೆಂಟರಿ ಬರೆಯೋದಿಕ್ಕೆ ಬರ್ತಾ ಇರ್ತಾನೆ ಅಂತ ಹೇಳಿದ್ರು, ಆದಾದ ಮೇಲೆ ಒಂದೆರಡು ಬಾರಿ ವೆಂಕಟೇಶನನ್ನು ನಮ್ಮ ಕಾಲೇಜಿನಲ್ಲಿ ನೋಡಿ ಪರಿಚಯದ ನಗೆ ಬೀರಿದ್ದೆ, ಮೂರ್ನಾಲ್ಕು ವರ್ಷಗಳ ನಂತರ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಎಸ್. ರಮೇಶ್ ಅವರು ಯಾವುದೋ ಧಾರ್ಮಿಕ ಸಮಾರಂಭಕ್ಕೆ ಬಂದಿದ್ದಾಗ ಅವರ ಜೊತೆ ವೆಂಕಟೇಶನನ್ನು ನೋಡಿ ಆಶ್ಚರ್ಯಚಕಿತನಾಗಿ ಇದೇನು ಇಲ್ಲಿ ಎಂದು ಕೇಳಿದಾಗ, ನಾನು ರಮೇಶ್ ಅವರ ಪರ್ಸನಲ್ ಸೆಕ್ರೆಟರಿ ಎಂದು ಹೆಮ್ಮೆಯಿಂದ ವೆಂಕಟೇಶ ಹೇಳಿದ್ದ.

ಆಮೇಲೆ ವೆಂಕಟೇಶನನ್ನು ನೋಡಿದ್ದೇ ಟಿವಿಯಲ್ಲಿ. ಯಾವುದೋ ಕ್ರೀಡಾ ಕೂಟದಲ್ಲಿ ಗುಡು ಗುಡು ಅಂತ ತನ್ನ ಪುಟ್ಟ ಪುಟ್ಟ ಹೆಜ್ಜೆ ಹೆಜ್ಜೆಗಳನ್ನು ಇಟ್ಟುಕೊಂಡು ಓಡುತ್ತಾ ಮೊದಲಿಗನಾಗಿ ಪ್ರಶಸ್ತಿಯನ್ನು ಮಡಿಲುಗೇರಿಸಿಕೊಂಡಿದ್ದನ್ನು ನೋಡಿ, ಅರೇ ನಮ್ಮ ವೆಂಕಟೇಶ ನಿಜಕ್ಕೂ ಸೂಪರ್ ಅಂತಾ ಹೆಮ್ಮೆ ಪಟ್ಟಿದ್ದೆ. ಇವತ್ತು ಬೆಳಿಗ್ಗೆ ಪೇಪರ್ ನೋಡಿದಾಗ ಅದೇ ನಮ್ಮ ವೆಂಕಟೇಶನಿಗೆ ಆತನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವದ ಪದ್ಮಶ್ರೀ ಪ್ರಶಸ್ತಿಗಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿರುವ ವಿಷಯ ತಿಳಿದು ವೆಂಕಟೇಶನ ಮೇಲಿದ್ದ ಗೌರವ ನಿಜಕ್ಕೂ ಇನ್ನೂ ಹೆಚ್ಚಾಯಿತು.

ಮೂಲತಃ ತುಮಕೂರಿನ ಕಡೆಯವರಾದರೂ ಬೆಂಗಳೂರಿನಲ್ಲಿಯೇ ಸಾಂಪ್ರದಾಯಿಕ ಮಧ್ಯಮ ವರ್ಗದ ಕುಟುಂಬದಲ್ಲಿಯೇ ಬೆಳೆದ ವೆಂಕಟೇಶ, ಚಿಕ್ಕಂದಿನಲ್ಲಿಯೇ, ಅಕೋಂಡ್ರೊಪ್ಲಾಸಿಯಾ ಎಂಬ ಬವಣೆಗೆ ತುತ್ತಾಗಿ ಕೇವಲ 4.2″ ಕುಬ್ಜನಾದಾಗ ಅನುಭವಿಸಿದ ನೋವಿಗೆ ಲೆಕ್ಕವಿಲ್ಲ. ಸದಾಕಾಲವೂ ಮೊಣಕಾಲುದ್ದದ ಬರ್ಮುಡ ಚೆಡ್ಡಿ ಕಣ್ಣಿಗೆ ದಪ್ಪನೆಯ ಕನ್ನಡಕ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದರೆ, ಎಲ್ಲರೂ ಅವರನ್ನನ್ನೇ ದಿಟ್ಟಿಸಿ ನೋಡುತ್ತಾ ಅವರ ಎತ್ತರದ ಬಗ್ಗೆ ಆಡಿಕೊಂಡವರಿಗೆ ಲೆಖ್ಖವೇ ಇಲ್ಲ. ಇಷ್ಟೆಲ್ಲಾ ಆದರೂ ವೆಂಕಟೇಶನ ಕುಟುಂಬ ಸದಾಕಾಲವೂ ಇದೆಕ್ಕೆಲ್ಲಾ ತಲೆ ಕೆಡಸಿಕೊಳ್ಳದೇ ಆತನ ಬೆಂಬಲಕ್ಕೆ ನಿಂತದ್ದು ವೆಂಕಟೇಶನಿಗೆ ಆನೆಯ ಬಲ ತಂದಿತ್ತು.

ಇದೇ ಸಮಯದಲ್ಲಿ ಎರಡೂ ಕಾಲುಗಳು ಇಲ್ಲದಿದ್ದರೂ ಬ್ರಿಟೀಶ್ ಕಾಲುವೆಯನ್ನು ಈಜಿ ದಾಖಲೆ ನಿರ್ಮಿಸಿದ್ದ ಸಿ ಎನ್ ಜಾನಕಿಯವರ ಭೇಟಿ ವೆಂಕಟೇಶನಿಗೆ‌ ಆಗಿ, ಅವರಿಂದ ಪ್ರೇರಿತನಾಗಿ, ಕಾಲೇ ಇಲ್ಲದವರು ಇಂತಹ ಸಾಧನೆ ಮಾಡ ಬಹುದಾದರೇ, ಎಲ್ಲವೂ ಸರಿಯಿದ್ದು ಕೇವಲ ಕುಬ್ಜನಾಗಿರುವ ನಾನೇಕೆ ಪ್ರಯತ್ನಿಸ ಬಾರದು? ಎಂದು ಪ್ಯಾರಾ ಓಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲಾರಂಬಿಸಿದ.

ಆಕಾರದಲ್ಲಿ ಚಿಕ್ಕದಾಗಿದ್ದರೇನಂತೆ ನೋಡ ನೋಡುತ್ತಿದ್ದಂತೆಯೇ, ಛಲ ಬಿಡದ ತ್ರಿವಿಕ್ರಮನಂತೆ ಭಾಗವಹಿಸಿದ ಕ್ರೀಡಾ ಸ್ಪರ್ಧೆಗಳಲ್ಲಿ ಪದಕಗಳನ್ನು ಬಾಚುತ್ತಾ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ವಿದೇಶಗಳಲ್ಲಿಯೂ ಭಾರತವನ್ನು ಪ್ರತಿನಿಧಿಸುವ ಹಂತಕ್ಕೆ ಎರಿದ ನಮ್ಮ ವೆಂಕಟೇಶ. 1994 ರಲ್ಲಿ, ಬರ್ಲಿನ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ವೆಂಕಟೇಶ್, ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಹಾಕಿ, ವಾಲಿಬಾಲ್, ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ಅನೇಕ ಪಂದ್ಯಗಳಲ್ಲಿ ಭಾಗವಹಿಸಿ ಪದಕಗಳನ್ನು ಕೊಳ್ಳೇ ಹೊಡೆದ ವೆಂಕಟೇಶ್. 1999ರಲ್ಲಿ ಆಸ್ಟ್ರಿಯಾದಲ್ಲಿ ನಡೆದ ಮಲ್ಟಿ ಡಿಸೆಬಿಲಿಟಿ ಚಾಂಪಿಯನ್‌ಶಿಪ್‌ನಲ್ಲಿ ಶಾಟ್ ಪುಟ್ ನಲ್ಲಿ ಆತನಿಗೆ ಮೊದಲ ಅಂತರರಾಷ್ಟ್ರೀಯ ಚಿನ್ನ ಲಭಿಸಿದ ನಂತರ ಹಿಂದಿರುಗಿ‌ ನೋಡುವ ಪ್ರಮೇಯವೇ ಬರಲಿಲ್ಲ.

2002 ರಲ್ಲಿ ಬ್ಯಾಡ್ಮಿಂಟನಲ್ಲಿ ಬೆಳ್ಳಿ ಪದಕವನ್ನು ಪಡೆದದ್ದಲ್ಲದೇ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್ 2004 ರಲ್ಲಿ ಶಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋನಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಪಡೆದ. ಅದೇ ವರ್ಷ, ಮತ್ತೊಂದು ಚಿನ್ನದ ಪದಕ ಗಳಿಸಿದ., ಸ್ವೀಡಿಷ್ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ. ಹಾಕಿ ಸ್ಪರ್ಧೆಯಲ್ಲಿ ಚಿನ್ನದ ಪದಕ, ಫುಟ್ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾನೆ ನಮ್ಮ ವೆಂಕಟೇಶ್.

2005ರಲ್ಲಿ ನಡೆದಿದ್ದ 4ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ, ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆ ಬರೆದಿದ್ದಲ್ಲದೇ, ಈ ಕ್ರೀಡಾಕೂಟದಲ್ಲಿ ‌ ಅಥ್ಲೆಟಿಕ್ಸ್‌ ಹಾಗೂ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಗಳಿಸಿದ್ದರು. ಇವನ ಪದಕಗಳ ಸಾಧನೆ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ನಲ್ಲಿಯೂ ಸೇರ್ಪಡೆಯಾಗಿತ್ತು. 2006 ರಲ್ಲಿ ಯುರೋಪಿಯನ್ ಓಪನ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆದ್ದಿದ್ದಲ್ಲದೇ,ಆನೇಕ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿಧಿಸಿ ಹಲವಾರು ಪ್ರಶಸ್ತಿಗಳನ್ನು ಮತ್ತು ಪದಕಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಪತಾಕೆಯನ್ನು ವಿಶ್ವಾದ್ಯಂತ ಹಾರಿಸಿದ್ದಾನೆ ನಮ್ಮ ವೆಂಕಟೇಶ್.

2012 ರಲ್ಲಿ ವಯೋಸಹಜ ಕಾರಣಗಳಿಂದ ಸ್ಪರ್ಧಾತ್ಮಕ ಕ್ರೀಡೆಗಳಿಂದ ನಿವೃತ್ತಿ ಪಡೆದರೂ, ಅಂಗವಿಕಲರ ವಿವಿಧ ಕ್ರೀಡೆಗಳ ಆಡಳಿತ, ಅಭಿವೃದ್ಧಿ ಮತ್ತು ಪ್ರಚಾರದಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ ಅಂಗವಿಕಲರಿಗಾಗಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿದ್ದರು. ಇದರ ಜೊತೆಗೆ ಐಪಿಸಿ ಮಾನ್ಯತೆ ಪಡೆದ ಕೋಚಿಂಗ್‌ ಕೂಡಾ ಪಡೆದು ಕೂಂಡು ತನ್ನಂತೆಯೇ ಅಂಗವೈಕಲ್ಯತೆಯಿಂದ ಬಳುತ್ತಿರುವವರಿಗೆ ಅನೇಕ ಕ್ರೀಡೆಗಳಲ್ಲಿ ತರಭೇತಿ ನೀಡುವ ಮೂಲಕ ಭಾರತದಲ್ಲಿ ಪ್ಯಾರಾ ಕ್ರೀಡೆಯನ್ನು ಉತ್ತೇಜಿಸುವುದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದಾರೆ. ಇದಲ್ಲದೇ, ವೆಂಕಟೇಶನ ನೇತೃತ್ವದಲ್ಲಿಯೇ ಅನೇಕ ಅಂತರರಾಷ್ಟ್ರೀಯ ಪ್ಯಾರಾ ಕ್ರೀಡಾ ಕೂಟಗಳಿಗೆ ಹಲವಾರು ಆಟಗಾರರನ್ನು ಕರೆದುಕೊಂಡು ಹೋಗಿ ಪದಕಗಳನ್ನು ಗೆದ್ದು ಬಂದಿದ್ದಾರೆ.

ವೆಂಕಟೇಶ್ ಅವರ ಇಷ್ಟೆಲ್ಲಾ ಸಾಧನೆಗಳನ್ನು ಪರಿಗಣಿಸಿದ ಅನೇಕ ಸಂಘ ಸಂಸ್ಥೆಗಳು ವೆಂಕಟೇಶ್ ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿದೆ. ಭಾರತ ಸರ್ಕಾರವೂ ಪ್ಯಾರಾಓಲಂಪಿಕ್ಸ್ ನಲ್ಲಿನ ವೆಂಕಟೇಶ್ ಅವರ ಸಾಧನೆಗಾಗಿ 20-21ರ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ತೊಂಬತ್ತರ ದಶಕದಲ್ಲಿ ನಾನು ನೋಡಿದ್ದ ನಮ್ಮ ಕಾಲೇಜಿನ ಸೀನಿಯರ್ ಕುಳ್ಳಾ ವೆಂಕಟೇಶ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಗರ್ವ ಪಡುವ ಸಂಗತಿಯಾಗಿದೆ. ಅಯ್ಯೋ ನಮ್ಮ ಮಗ ಈ‌ರೀತಿ ಅಂಗವೈಕುಲ್ಯನಾದನಲ್ಲಾ, ಮುಂದೆ ಇವನ ಜೀವನ ಹೇಗಪ್ಪಾ ಎಂದು ಚಿಂತಿಸುತ್ತಿದ್ದ ಪೋಷಕರಿಗೆಲ್ಲಾ ಸ್ಪೂರ್ತಿ ನೀಡುವಂತೆ ಸಾಧನೆ‌ ಮಾಡಲು, ಛಲವೊಂದಿದ್ದರೆ, ತನ್ನ ಅಂಗವೈಕಲ್ಯವನ್ನೇ ಮೆಟ್ಟಿಲಾಗಿಸಿಕೊಂಡು ಪರಿಶ್ರಮದಿಂದ ಹೆತ್ತವರು ‌ಮತ್ತು ಇಡೀ‌ ದೇಶವೇ ಹೆಮ್ಮೆ‌ ಪಡುವಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿರುವ ನಮ್ಮ ವೆಂಕಟೇಶ ನಿಜಕ್ಕೂ ಕನ್ನಡ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಬಲಮುರಿ ಪ್ರವಾಸ ಭಾಗ-1

ಕಳೆದ ಒಂದೂವರೆ ತಿಂಗಳಿಂದ ಕೂರೋನಾ ಮಹಾಮಾರಿಯಿ ಸೋಂಕಿನಿಂದಾಗಿ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಬೇಜಾರಾಗಿ ಹೋಗಿದೆ. ಎಲ್ಲಾ ಸರಿ ಇದ್ದಿದ್ರೇ ಈ ಬೇಸಿಗೆ ರಜೆಯಲ್ಲಿ ಸಂಸಾರ ಸಮೇತ ಯಾವುದಾದರೂ ಪ್ರವಾಸೀ ತಾಣಗಳಿಗೆ ಹೋಗಿ ಒಂದಷ್ಟು ದಿನ ಆರಾಮಾಗಿ ಇದ್ದು ಬರ್ತಾ ಇದ್ವಿ ಅನ್ಸತ್ತೆ . ಅದಕ್ಕೆ ಈಗ ಕುಳಿತಲ್ಲಿಂದಂದಲೇ ನಾವು ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಲೇಜಿನಲ್ಲಿರುವಾಗ ಬಲಮುರಿಗೆ ಹೋಗಿದ್ದ ರೋಚಕ ಪ್ರವಾಸದ ಅನುಭವವನ್ನು ಹಂಚಿಕೊಳ್ತಾ ಇದ್ದೀನಿ. ಓದಿ ನೀವೂ ಕುಳಿತಲ್ಲಿಂದಲೇ ಆನಂದಿಸಿ.

adarshaಆಗ 1992ನೇ ಇಸ್ವಿ. ನಾವಾಗ ಆರ್. ಟಿ. ನಗರದ ಆದರ್ಶ ಪಾಲಿಟೆಕ್ನಿಕ್ ನಲ್ಲಿ ಅಂತಿಮ ವರ್ಷದ ಡಿಪ್ಲಮೋ ವ್ಯಾಸಂಗ ಮಾಡುತಾಇದ್ವಿ. ಇನ್ನೇನು ಕೆಲವೇ ದಿನಗಳಲ್ಲಿ ಕಾಲೇಜು ಮುಗಿದು ಪರೀಕ್ಷೇ ಆಗಿ ಹೋದ್ರೇ, ಕೆಲಸ ಹುಡುಕೋದೋ ಇಲ್ವೇ, ವ್ಯಾಸಂಗ ಮುಂದುವರಿಸುವ ಬಗ್ಗೆ ಯೋಚನೆ ಮಾಡ್ತಾ ಇದ್ರು. ಅದೇ ಸಮಯದಲ್ಲಿ ಕೊಡಗು, ಮೈಸೂರಿನ ಸುತ್ತಮುತ್ತಲೂ ಒಳ್ಳೆಯ ಮಳೆಯಾಗಿ ಕಾವೇರಿ, ಕಪಿಲ ನದಿಗಳು ತುಂಬಿ ಹರಿಯುತ್ತಿದ್ದನ್ನು ಎಲ್ಲಾ ವೃತ್ತ ಪತ್ರಿಕೆಗಳೂ ದಿನೇ ದಿನೇ ಪ್ರಕಟಿಸುತ್ತಿದ್ದವು. ಮೈಸೂರಿನ ಕೃಷ್ಣರಾಜಾ ಅಣೆಕಟ್ಟೆ ತುಂಬಿ ಬಂದಾವನ ನೋಡಲು ರಮಣೀಯವಾಗಿದ್ದು ಅಲ್ಲಿಯ ಸಂಗೀತ ಕಾರಂಜಿಯನ್ನು ನೋಡಲು ಅಪಾರ ಜನಸಾಗರವೇ ಹರಿಯುತ್ತಿದ್ದನ್ನು ಓದಿ, ಕೇಳಿ ನಮಗೂ ನೋಡುವ ಆಸೆಯಾಗಿತ್ತು. ಅಂತಿಮ ವರ್ಷದ ವಿದ್ಯಾರ್ಥಿಗಳ ಎಲ್ಲಾ ಸೇರಿ ಮೈಸೂರಿನ ಸುತ್ತ ಮುತ್ತ ಕಾಲೇಜಿನ ಸಹಪಾಠಿಗಳೊಂದಿಗೆ ಪ್ರವಾಸ ಮಾಡಲು ನಿರ್ಧರಿಸಿ, ಪ್ರಾಂಶುಪಾಲರ ಅನುಮತಿ ಕೇಳಿದಾಗ ಇಬ್ಬರು ಅಧ್ಯಾಪಕರ ನೇತೃತ್ವದಲ್ಲಿ ವಾರಾಂತ್ಯದಲ್ಲಿ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆ ಬರದಂತೆ ಹೋಗಿಬರಲು ಅಪ್ಪಣೆ ನೀಡಿದಾಗ ನಮಗೆಲ್ಲಾ ಸ್ವರ್ಗಕ್ಕೆ ಮೂರೇ ಗೇಣು.

ನಾವು ಕಾಲೇಜಿಗೆ ಸೇರಿದ ಮೊದಲನೇ ದಿನದಂದಲೂ ನಾವು ಆರು ಮಂದಿ ಸ್ನೇಹಿತರು (ಇಂದಿಗೂ ಅಂದಿನಷ್ಟಲ್ಲದಿದ್ದರೂ ಅದೇ ಗೆಳೆತನ ಮುಂದುವರಿದಿದೆ) ನಗರದ ವಿವಿಧ ಕಡೆಗಳಲ್ಲಿ ವಾಸಿಸುತ್ತಿದ್ದರೂ, ನಾವೆಲ್ಲರೂ ಒಟ್ಟಿಗೆ ಕಾಲೇಜಿಗೆ ಬರುವುದು, ಒಟ್ಟಿಗೆ ಹೋಗುವುದು, ಆಟ ಊಟಗಳೆಲ್ಲವೂ ಒಟ್ಟೋಟ್ಟಿಗೆ ಮಾಡುತ್ತಿದ್ದದ್ದು ಅನೇಕ ಸ್ನೇಹಿತರಿಗೆ ಆಶ್ಚರ್ಯ. ನಾವೆಲ್ಲರೂ ಕೀಟಲೆ ಮಾಡುವುದರಲ್ಲಿಯೂ ಅಗ್ರಗಣ್ಯರಾದರೂ, ಓದಿನಲ್ಲೂ, ಆಟಗಳಲ್ಲೂ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಕಾರಣ, ಎಲ್ಲ ಅಧ್ಯಾಪಕರ ನೆಚ್ಚಿನ ಶಿಷ್ಯರಾಗಿದ್ದೆವು. ಹೀಗಾಗಿ ಸಹಜವಾಗಿ ನಾವೇ ಆಸಕ್ತಿ ವಹಿಸಿ ಅಂತಿಮ ವರ್ಷದ Computer Sc & Electronics ವಿದ್ಯಾರ್ಥಿಗಳನ್ನು ಮಾತನಾಡಿಸಿ ಎಲ್ಲರನ್ನೂ ಪ್ರವಾಸಕ್ಕೆ ಬರಲು ಒಪ್ಪಿಸಿದೆವು. ಇಡೀ ಎರಡೂ ತರಗತಿಗಳು ಸೇರಿದರೂ ಸಂಖ್ಯೇ 35ಕ್ಕೇರದ ಕಾರಣ ಬಸ್ಸಿನ ಒಟ್ಟು ಸಂಖ್ಯೆ 50 ಇದ್ದ ಕಾರಣ ಇಬ್ಬರು ಶಿಕ್ಷಕರನ್ನು ಹೊರತು ಪಡಿಸಿದರೆ ಇನ್ನೂ ಉಳಿದ 13 ಸಂಖ್ಯೆಗಳನ್ನು ತುಂಬಲು ಮೊದಲನೇ ವರ್ಷದವರನ್ನು ನಮ್ಮ ಜೊತೆಗೆ ಕರೆದೊಯ್ಯಲು ನಿರ್ಧರಿಸಿ ಪ್ರಾಂಶುಪಾರರಿಂದ ಸುಲಭವಾಗಿ ಅನುಮತಿಯನ್ನು ಪಡೆದೇ ಬಿಟ್ಟವು.

trip1ಪ್ರವಾಸ ನಿರ್ಧರಿಸಿಯಾಗಿತ್ತು. ವಿದ್ಯಾರ್ಥಿಗಳು ತಯಾರಾಗಿದ್ದರು. ಕಾಲೇಜಿನಿಂದಲೂ ಅನುಮತಿ ಪಡೆದಾಗಿತ್ತು. ಈಗ ಉಳಿದಿದ್ದು ಊಟ, ತಿಂಡಿ ಮತ್ತು ಬಸ್ ವ್ಯವಸ್ಥೆ ಮಾಡಿ ಒಟ್ಟು ಎಷ್ಟು ಖರ್ಚಾಗುವುದೆಂದು ನಿರ್ಧರಿಸಿ ಅದನ್ನು ಸಮಭಾಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಹಂಚಿ ಅವರಿಂದ ಮುಂಚಿತವಾಗಿ ಹಣವನ್ನು ಸಂಗ್ರಹಿಸುವ ಮಹತ್ಕಾರ್ಯ ಉಳಿದಿತ್ತು. ಮಲ್ಲೇಶ್ವರಂನಲ್ಲಿ ಪರಿಚಯವಿದ್ದ ಒಂದು ಟ್ರಾವೆಲ್ಸ್ ಕಂಪನಿಯನ್ನು ಮಾತನಾಡಿಸಿದಾಗ ಕಾಲೇಜ್ ಹುಡುಗರು ಎಂದು ಆದಷ್ಟು ಕಡಿಮೆ ಬೆಲೆಯಲ್ಲಿ ಬಸ್ ನೀಡಲು ಒಪ್ಪಿಕೊಂಡರು. ಜೊತೆಗೆ ಅವರ ಬಳಿಯಿದ್ದ ನುರಿತ ಚಾಲಕನನ್ನು ನಮಗೆ ಪರಿಚಯಿಸಿ ನಮ್ಮ ಹುಡುಗರು ಇವರು. ಇವರನ್ನು ಜಾಗೃತೆಯಿಂದ ಕರೆದುಕೊಂಡು ಹೋಗು ಎಂದು ಅಪ್ಪಣೆ ಮಾಡಿದರು ಇನ್ನು ಪರಿಚಯದ ಅಡುಗೆಯವರನ್ನು ಭೇಟಿಯಾಗಿ, ಶುಚಿ ರುಚಿಯಾಗಿ ಆದಷ್ಟು ಕಡಿಮೆ ಕರ್ಚಿನಲ್ಲಿ ಹೊಟ್ಟೆ ತುಂಬುವಷ್ಟು ತಿಂಡಿ ಮತ್ತು ಊಟ ತಯಾರಿಸಿಕೊಡಲು ವಿನಂತಿಸಿದಾಗ ಅವರೂ ಸಹಾ ಸ್ನೇಹಪೂರ್ವಕ ಸಂಭಾವನೆಗೆ ಒಪ್ಪಿಕೊಂಡು ಅಡುಗೆ ಮಾಡಲು ಅವಶ್ಯತೆ ಇದ್ದ ಎಲ್ಲ ಪರಿಕರಗಳು ಮತ್ತು ಸಾಮಾನಿನ ಪಟ್ಟಿಯನ್ನು ಬರೆದು ಕೊಟ್ಟರು

ಸಾಮಾನಿನ ಪಟ್ಟಿ ಹಿಡಿದು ಕೊಂಡು ಸಮೀಪದ ಅಂಗಡಿಯಲ್ಲಿ ಅದಕ್ಕೇ ಆಗಬಹುದಾದ ಖರ್ಚನ್ನು ತಿಳಿದುಕೊಂಡು ಇಡೀ ಪ್ರವಾಸಕ್ಕೆ ಆಗಬಹುದಾಗಿದ್ದ ಅಂದಾಜು ಮೊತ್ತವನ್ನು ತಿಳಿದುಕೊಂಡು ಒಟ್ಟು ಮೊತ್ತವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸಮನಾಗಿ ಹಂಚಿ ಅದಕ್ಕೆ ತಕ್ಕಂತೆ ಹಣ ಪಡೆಯಬೇಕೆಂದು ನಿರ್ಧರಿಸುತ್ತಿರುವಾಗಲೇ ನಮ್ಮಲ್ಲೇ ಇದ್ದ ಬುದ್ದಿವಂತನೊಬ್ಬ ಇಡೀ ಪ್ರವಾಸಕ್ಕೇ ನಮ್ಮೆಲ್ಲರ ಇಷ್ಟೊಂದು ಪರಿಶ್ರಮಕ್ಕೆ ಏನಾದರೂ ಪ್ರತಿಫಲವಿರಲೇಬೇಕು. ನಮ್ಮ ಸಮಯಕ್ಕೂ ಬೆಲೆ ಇದೆ ಎಂದು ನಿರ್ಧರಿಸಿ ಒಟ್ತು ಮೊತ್ತವನ್ನು ಎಲ್ಲ ವಿದ್ಯಾರ್ಥಿಗಳಿಗೆ ಸಮನಾಗಿ ಹಂಚುವ ಬದಲು ನಾವು ಆರುಜನರನ್ನು ಹೊರತು ಪಡಿಸಿ ಇಡೀ ಪ್ರವಾಸದ ಖರ್ಚನ್ನು 42 ವಿದ್ಯಾರ್ಥಿಗಳಿಗೆ ಹಂಚ ಬೇಕೆಂದು ಪ್ರಸ್ತಾಪವನ್ನಿಟ್ಟೇ ಬಿಟ್ಟ. ಆರಂಭದಲ್ಲಿ ಕೆಲವರು ವಿರೋಧಿಸಿದರೂ ಹುಡುಗು ಬುದ್ದಿಯ ನಾವೆಲ್ಲರೂ ಒಪ್ಪಿ ಕೊಂಡು ಈ ನಿರ್ಧಾರ ನಮ್ಮ ಆರು ಜನರ ಮಧ್ಯೆಯಲ್ಲಿಯೇ ಇರಬೇಕೆಂದು ಆಪ್ಪಿ ತಪ್ಪಿ ಕೂಡಾ ಇದು ಯಾರಿಗೂ ತಿಳಿಸಬಾರದೆಂದು ಆಣೆ ಪ್ರಮಾಣಗಳನ್ನು ಪರಸ್ಪರ ತೆಗೆದುಕೊಂಡದ್ದೂ ಆಯಿತು. ಪ್ರವಾಸದ ಪ್ರತಿ ವಿದ್ಯಾರ್ಥಿಗಳ ಅಂದಾಜು ಮೊತ್ತ ನೂರು ರೂಪಾಯಿಗಳಿಗೂ ಕಡಿಮೆ ಇದ್ದದ್ದರಿಂದ ಯಾರಿಗೂ ಅನುಮಾನ ಬಾರದೇ ಎಲ್ಲರೂ ಸಮಯಕ್ಕೆ ಸರಿಯಾಗಿ ಅಲ್ಲದಿದ್ದರೂ ಒಂದೆರಡು ದಿನಗಳು ತಡವಾಗಿ ಕೊಟ್ಟು ಬಿಟ್ಟರು. ಪ್ರವಾಸದ ಹಿಂದಿನ ದಿನ ನಮ್ಮ ಪ್ರಾಂಶುಪಾಲರು ನಮ್ಮೆಲ್ಲರನ್ನೂ ಕರೆದು ಪ್ರವಾಸದಲ್ಲಿ ನಾವೆಲ್ಲರೂ ಹೇಗೆ ನಡೆದುಕೊಳ್ಳಬೇಕೆಂದು ಒಂದೆರಡು ಗಂಟೆಯ ಉಪನ್ಯಾಸವನ್ನು ಮಾಡಿ ಎಲ್ಲರೂ ಬೆಳಿಗ್ಗೆ ಏಳಕ್ಕೆ ಸರಿಯಾಗಿ ಕಾಲೇಜಿನ ಬಳಿಯೇ ಬರಬೇಕೆಂದು ರಾತ್ರಿ ಸುಮಾರು 10:30 ರಿಂದ 11ರ ಒಳಗೆ ನಗರದ ಕೆಲವೊಂದು ಪ್ರತಿಷ್ಟಿತ ಬಡಾವಣೆಯ ಬಳಿ ಕರೆತಂದು ಬಿಡುವುದಾಗಿ ತಿಳಿಸಲಾಯಿತು.

ಪ್ರವಾಸದ ಹಿಂದಿನ ಸಂಜೆ ಕಾಲೇಜನ್ನು ಮುಗಿಸಿ ಎಲ್ಲರೂ ಮಲ್ಲೇಶ್ವರದಲ್ಲೇ ಇದ್ದ ನಮ್ಮ ಸ್ನೇಹಿತನ ಮನೆಗೆ ಬಂದು ಎಲ್ಲರೂ ಒಂದೊಂದು ಕೆಲಸಗಳನ್ನು ಹಂಚಿಕೊಂಡು ಅಡುಗೆಗೆ ಬೇಕಾದ ಸಾಮನುಗಳನ್ನು ತರಲು ಕೆಲವರು ಮತ್ತೇ ಕಲವರು ಒಲೆ, ಪಾತ್ರೆ ಪಡಗಗಳನ್ನು ತರಲು ಹೊರಟೆವು. ಅಡುಗೆಗೆ ಬೇಕಾದ ತರಕಾರಿ ಮತ್ತು ಸಾಮಾನುಗಳ ಬೆಲೆ ನಾವು ಅಂದಾಜು ಮಾಡಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಆಯಿತು. ಇನ್ನು ಪಾತ್ರೆಗಳನ್ನು ಬಾಡಿಗೆಗೆ ತರಲು ಹೋದಾಗ ಯಾವ ಕಾರ್ಯಕ್ರಮಕ್ಕೆ ಈ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರೆಂದು ಅಂಗಡಿಯವರು ಕೇಳಿದಾಗ ಸತ್ಯಹರಿಶ್ಚಂದ್ರರ ವಂಶದವರಂತೆ, ಕಾಲೇಜು ಪ್ರವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಬಾಯಿ ತಪ್ಪಿ ಹೇಳಿದಾಗ ನಾವು ಪ್ರವಾಸಕ್ಕೆಲ್ಲಾ ಪಾತ್ರೆಗಳನ್ನು ಕೊಡೋದಿಲ್ಲ ಅಂತಾ ಹೇಳೋದೇ? ನಾವು ಎಷ್ಟೇ ಪರಿ ಪರಿಯಾಗಿ ಬೇಡಿ ಕೊಂಡರೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಅವರು ಪಾತ್ರೇ ಕೊಡಲು ಒಪ್ಪಲೇ ಇಲ್ಲಾ. ಅರೇ ಇದೊಳ್ಳೆ ಪಜೀತೀ ಆಯ್ತಲ್ಲಪ್ಪಾ ಅಂತಾ ಯೋಚಿಸುತ್ತಿರುವಾಗಲೇ ಅದೃಷ್ಟವೋ ಎಂಬಂತೆ ಆ ಅಂಗಡಿಯ ಮಾಲಿಕರರ ತಮ್ಮ ಅಲ್ಲಿಗೆ ಬಂದು ಅವನಿಗೆ ನಮ್ಮ ಗೆಳೆಯನೊಬ್ಬ ಪರಿಚಯವಿದ್ದ ಕಾರಣಾ, ಏ ಇದೇನೋ ಇಲ್ಲಿ ಅಂತಾ ಕೇಳಿದಾಗ, ಮರುಭೂಮಿಯಲ್ಲಿ ಓಯಸಿಸ್ ಕಂಡತಾಯಿತು. ಈಗ ಅವನ ಮೂಲಕ ಅವರ ಅಣ್ಣನನ್ನು ಪುಸಲಾಯಿಸಿ, ತಮ್ಮನ ಸ್ನೇಹಿತರೆಂಬ ಸಲಿಗೆಯಿಂದ ಸ್ವಲ್ಪ ಹೆಚ್ಚಿನ ಹಣಕ್ಕೆ ಒಪ್ಪಿ ಪಾತ್ರೆ ಸಾಮಾನುಗಳನ್ನು ಕೊಟ್ಟರು. ಉಸ್ಸಪ್ಪಾ, ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಆರಂಭದಲ್ಲಾದ ವಿಘ್ನಗಳೆಲ್ಲಾ ನಿವಾರಣೆಯಗಿದ್ದದ್ದು ನಮಗೆಲ್ಲಾ ನೆಮ್ಮದಿ ತಂದಿತ್ತಾದರೂ ಅಂದು ಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತವೇ ಖರ್ಚಾಗುತ್ತಿದ್ದದ್ದು ಸ್ವಲ್ಪ ಕಳವಳಕಾರಿಯಗಿತ್ತು.

cookingಮನೆಗೆ ಬಂದ ಅಡುಗೆ ಸಾಮಾನುಗಳನ್ನು ಗಮನಿಸಿದ ನಮ್ಮ ಸ್ನೇಹಿತನ ತಾಯಿ ಮತ್ತು ಆತನ ಚಿಕ್ಕಮ್ಮ ಅಯ್ಯೋ ಇಷ್ಟು ಜನರಿಗೆ ಅಡುಗೆ ಮಾಡಲು ಇಷ್ಟೋಂದು ತುಪ್ಪಾ, ಎಣ್ಣೆ ಮತ್ತು ಡಾಲ್ಡಾ ಏಕೆ? ಅಡುಗೆಯವರು ಸುಮ್ಮನೆ ಸುರಿತಾರೆ ಇಲ್ಲಾಂದ್ರೆ ನಮಗೆ ಗೊತ್ತಾಗದ ಹಾಗೆ ಮನೆಗೆ ಕದ್ದೊಯ್ತಾರೆ. ವಾಪಸ್ ಕೊಟ್ಟು ಬನ್ನಿ ಎಂದಾಗ, ಅಹಾ! ದುಡ್ಡು ಉಳಿಸುವುದನ್ನೇ ಯೋಚಿಸುತ್ತಿದ್ದ ವಾವು ಕೂಡಲೇ ಅಂಗಡಿಗೆ ಹೋಗಿ ಹೆಚ್ಚಾಗಿದೆ ಎಂದಿದ್ದ ಎಣ್ಣೆ, ಡಾಲ್ಡ ಮತ್ತು ತುಪ್ಪವನ್ನು ಹಿಂದಿರುಗಿಸಿ ಹಣ ವಾಪಸ್ ಪಡೆದಾಗ ಮನಸ್ಸಿಗೆ ಸ್ವಲ್ಪ ನಿರಾಳ. ಅಂದು ಇಡೀ ರಾತ್ರಿ ನಾವುಗಳು ಯಾರೂ ನಿದ್ದೇಯೇ ಮಾಡಲಿಲ್ಲ. ಬೆಳಿಗ್ಗೆ ನಾಲ್ಕು ಗಂಟೆಗೆ ಎಲ್ಲರೂ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಒಂದಿಬ್ಬರು ಬಸ್ ತರಲು ಹೋದರೆ ಉಳಿದವರು ಅಡುಗೆಯವರ ಸಹಾಯಕ್ಕೆ ನಿಂತೆವು. ಉಪ್ಪಿಟ್ಟಿಗೇನೋ ತಂದಿದ್ದ ಎಣ್ಣೆ ಸಾಕಾಯ್ತು. ಕೇಸರಿ ಬಾತ್ ಮತ್ತು ಪಲಾವ್ಗೆ ತುಪ್ಪಾ ಮತ್ತು ಡಾಲ್ಡಾ ಸಾಕಾಗೋದಿಲ್ಲ, ಓಡಿ ಹೋಗಿ ಇನ್ನೂ ಸ್ವಲ್ಪ ಡಾಲ್ಡಾ, ಎಣ್ಣೆ ಮತ್ತು ತುಪ್ಪಾ ತಂದ್ಬಿಡಿ ಎಂದು ಬೆಳಗಿನ ಜಾವ ಐದಕ್ಕೇ ಅಡುಗೆಯವರು ಹೇಳಿದಾಗ ಹೃದಯ ಕೈಗೆ ಬಂದಂತಾಯ್ತು. ಅಯ್ಯೋ ದೇವರೇ ದುಡ್ಡು ಉಳಿಸಲು ಹೋಗಿ ಯಾರದ್ದೋ ಮಾತು ಕೇಳಿಕೊಂಡು ತಂದಿದ್ದ ಸಾಮಾನನ್ನು ಹಿಂದಿರುಗಿಸಿ ಕೈ ಸುಟ್ಟು ಕೊಂಡೆವಲ್ಲಾ ಎಂದೆಣಿಸುತ್ತಾ , ಸ್ನೇಹಿತನ ಮನೆಯಲ್ಲಿದ್ದ ತುಪ್ಪಾ ಮತ್ತು ಎಣ್ಣೆಯನ್ನೇ ಬಳಸಿಕೊಂಡು ಸರಿ ತೂಗಿಸಿ. ತಿಂಡಿ ಅಡುಗೆ ಕೆಲಸ ಮುಗಿಸಿ ಬಸ್ ಬರುವುದನ್ನೇ ಕಾಯತೊಡಗಿದೆವು.

ಇನ್ನು ಬಸ್ ಕರೆತರಲು ಟ್ರಾವೆಲ್ಸ್ಗೆ ಹೋದರೆ ಅಲ್ಲಿ ಬಸ್ಸೇ ಇಲ್ಲಾ. ನಮ್ಮ ಹುಡುಗರಿಗೆ ಅಯ್ಯೋ ರಾಮ ಏನಪ್ಪಾ ಮಾಡೋದು ಬಸ್ಸೇ ಇಲ್ಲವಲ್ಲಾ ಎಂಬ ಗಾಬರಿ. ಯಾರಿಗಾದರೂ ಫೋನ್ ಮಾಡಿ ಕೇಳೋಣವೆಂದರೆ ಇಂದಿಂತೆ ಮೊಬೈಲ್ ಕೂಡಾ ಇಲ್ಲದ ಸಮಯವದು. ಸರಿ ಟ್ರಾವೆಲ್ಸ್ ಆಫೀಸಿನಲ್ಲಿ ಮಲಗಿದ್ದ ಕ್ಲೀನರ್ ಅನ್ನು ಎಬ್ಬಿಸಿ ಕೇಳಿದರೆ ರಾತ್ರಿ ಬೇರೇ ಪ್ರವಾಸಕ್ಕೆ ಹೋಗಿದ್ದ ಬಸ್ ತಡವಾಗಿ ಬಂದಿದ್ದ ಕಾರಣ ಡ್ರೈವರ್ ಬಸ್ಸನ್ನು ಸೀದಾ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಇನ್ನೇನು ಬಂದು ಬಿಡ್ತಾರೆ ಎಂದ. ಸರಿ ಈಗ ಬರ್ತಾರೆ ಆಗ ಬರ್ತಾರೆ ಅಂತಾ ಅರ್ಧ ಮುಕ್ಕಾಲು ಗಂಟೆ ಕಾದ್ರೂ ಬಸ್ಸಿನ ಪತ್ತೆ ಇಲ್ಲದ ಕಾರಣ ಗಾಭರಿಯಿಂದ ಕ್ಲೀನರನ್ನು ನಮ್ಮ ಸ್ಕೂಟರ್ನಲ್ಲಿ ಕೂಡಿಸಿಕೊಂಡು ಡ್ರೈವರ್ ಮನೆ ಕಡೆಗೆ ಹೋಗಿ ನೋಡಿದ್ರೇ, ರಾತ್ರಿ ಏರಿಸಿದ್ದ ನಶೆ ಇನ್ನೂ ಇಳಿಯದೆ ಕುಂಭಕರ್ಣನ ತಮ್ಮನಂತೆ ನಿದ್ರಿಸುತ್ತಿದ್ದರು ಡ್ರೈವರ್. ಅಂತೂ ಇಂತೂ ಹರ ಸಾಹಸ ಪಟ್ಟು ಅವರನ್ನು ಎಬ್ಬಿಸಿಕೊಂಡು ಬಸ್ಸನ್ನು ಹೊರಡಿಸಿಕೊಂಡು ಸ್ನೇಹಿತನ ಮನೆಯ ಬಳಿ ಸಿದ್ದ ಪಡಿಸಿದ್ದ ಅಡುಗೆಯನ್ನು ತೆಗೆದುಕೊಂಡು ಕಾಲೇಜ್ ಬಳಿ ಬಂದಾಗ, ಗಂಟೆ ಅದಾಗಲೇ 7:10. ಉತ್ಸಾಹದಿಂದ ಬೆಳಿಗ್ಗೆ 6.00ಕ್ಕೆಲ್ಲಾ ಕಾಲೇಜ್ ಬಳಿ ಬಂದು ಕಾಯುತ್ತಿದ್ದವರೆಲ್ಲಾರೂ ತಡವಾಗಿ ಬಂದ ನಮಗೆ ಹಿಡಿಶಾಪ ಹಾಕಿದರೂ ಕಿತ್ತಾಡಲು ಇದು ಸೂಕ್ತ ಸಮಯವಲ್ಲದ ಕಾರಣ, ನಮ್ಮ ಕಷ್ಟ ನಮಗೆ ಎಂದು ಕೊಂಡು ಹಲ್ಲು ಕಚ್ಚಿಕೊಂಡು ಸುಮ್ಮನಾದವು. ಸರಿ ಸರಿ ತಡವಾಗಿದೆ ಎಂದು ಎಲ್ಲರೂ ಬಸ್ ಹತ್ತಿ ಎಂದು ಹೇಳಿ ಎಲ್ಲರನ್ನೂ ಲಗು ಬಗನೇ ಬಸ್ ಹತ್ತಿಸಿಕೊಂಡು ಸಂಖ್ಯೆ ಎಣಿಸಿನೋಡಿದರೆ, ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪರಕರನ್ನು ಸೇರಿಸಿ 49 ಸಂಖ್ಯೆ ಬರ್ತಾ ಇದೆ. ಯಾರಪ್ಪ ಅದು ಮಿಸ್ಸಾಗಿರೋದು ಅಂತ ಗೊಣಗಾಡ್ತಾ, ನಮ್ಮ ಲಿಸ್ಟ್ ತೆಗೆದು ನೋಡಿದರೆ, ಪೆರುಮಾಳ್ ಇನ್ನೂ ಬಂದಿಲ್ಲ. ಬಿಟ್ಟು ಹೋಗೋದುಕ್ಕೂ ಆಗೋದಿಲ್ಲ. ಕಾಯುವುದಕ್ಕೂ ಆಗೋದಿಲ್ಲ. ಸರಿ ಸರಿ ಅಷ್ಟರೋಳಗೆ ಬಸ್ಸಿಗೆ ಪೂಜೆ ಮಾಡಿಬಿಡೋಣ ಅಂತ ನಿರ್ಧರಿಸಿ, ನಾಗಾ, (ನಮ್ಮ ಕಾಲೇಜಿನ Compute Lab Assistant ಮತ್ತು ವೃತ್ತಿ ನಿರತ ಪೂಜಾರಿ ನಾಗರಾಜ) ಯಾವುದೇ ವಿಘ್ನ ಆಗದಂತೇ ಸರಿಯಾಗಿ ಪೂಜೇ ಮಾಡಪ್ಪಾ ಎಂದು ಜೋರಾಗಿ ಹೇಳಿ ಅವನ ಕಿವಿಯ ಬಳಿ ನಾಗಾ, ಪೆರುಮಾಳ್ ಇನ್ನೂ ಬಂದಿಲ್ಲ. ನಿಧಾನವಾಗಿ ಪೂಜೆ ಮಾಡು ಎಂದ್ವಿ. ಆತನೂ ಕೂಡಾ ಅಚ್ಚುಕಟ್ಟಾಗಿ ನಾವು ಹೇಳಿದಂತೆಯೇ ಪೂಜೆ ಮಾಡಿ, ಮಂಗಳಾರತಿ ಮಾಡಿ ಈಡುಗಾಯಿ ಹೊಡೆಯುವಷ್ಟರಲ್ಲಿ ಗಂಟೆ 7:45. ಇನ್ನು ಕಾಯುವುದು ಮೂರ್ಖತನ ಎಂದು ನಿರ್ಧರಿಸಿ, ಹೇಗೂ ಒಂದು ಸೀಟ್ ಕಡೆಮೆ ಇದ್ದ ಕಾರಣ ನಮ್ಮ ನಾಗರಾಜನನ್ನೇ ಕರೆದುಕೊಂಡು ರೈಟ್ ರೈಟ್ ಅಂತಾ ಬಸ್ ಹೊರಡಿಸಿ, ಕಾಲೇಜ್ ಆವರಣ ಬಿಟ್ಟು, ತಿರುವು ತೆಗೆದುಕೊಂಡು ಒಂದು ಸ್ವಲ್ಪ ದೂರ ಹೋಗ್ತಾ ಇದ್ದ ಹಾಗೆಯೇ, ದೂರದಲ್ಲಿ ಯಾರೋ ಓಡೋಡಿ ಬರುತ್ತಾ ಬಸ್ಸಿಗೆ ಅಡ್ಡವಾಗಿ ಕೈ ತೋರಿಸೋದು ಕಾಣಿಸ್ತು ಹತ್ತಿರ ಹೋಗಿ ನೋಡಿದ್ರೇ ನಮ್ಮ ಪೆರುಮಾಳ್. ಬಸ್ ನಿಲ್ಲಿಸಿ, ತಡವಾಗಿ ಬಂದಿದ್ದಕ್ಕಾಗಿ ಪೆರುಮಾಳಿಗೆ ಸಹಸ್ರನಾಮಾರ್ಚನೆಯನ್ನು ಮಾಡಿ ಬಸ್ಸಿಗೆ ಹತ್ತಿಸಿಕೊಂಡು ಹೊರಟಾಗ ಗಂಟೆ 8.00

ಬಸ್ಸಿನಲ್ಲಿ ಕರೆದುಕೊಂಡು ಹೋಗಲು ಅನುಮತಿ ಇರೋದು 50 ಜನ. ನಾವು 51 ಮಂದಿ ಇದ್ದೀವಿ. ಒಬ್ಬರೇ ತಾನೇ ಹೇಗೋ ಅನುಸರಿಸಿಕೊಂದು ಹೋಗ್ಬೋದಲ್ವಾ ಅಂತಾ ಎಲ್ಲರೂ ಯೋಚನೆ ಮಾಡ್ತಾ ಇರಬಬಹುದು ಅಲ್ವೇ? ಆದ್ರೇ ಆ ಹೆಚ್ಚಾದ ಒಂದು ಸಂಖ್ಯೆ ಮತ್ತು ಕಾದು ಕಾದು ಕರೆದುಕೊಂಡು ಹೋದ ಪೆರುಮಾಳ್ ಇವರಿಬ್ಬರಿಂದಲೇ ನಮ್ಮ ಪ್ರವಾಸದಲ್ಲಿ ರೋಚಕ ತಿರುವು ಹೇಗೆ ಪಡೆದುಕೊಳ್ಳುತ್ತದೆ? ಒಂದು ಗಂಟೆ ತಡವಾಗಿ ಹೊರೆಟ ನಾವು ಸರಿಯಾದ ಸಮಯಕ್ಕೆ ಎಲ್ಲವನ್ನು ನೋಡಲಿಕ್ಕೆ ಆಯ್ತಾ?  ಪ್ರವಾಸ ಸುಖ್ಯಾಂತ್ಯವಾಗಿತ್ತಾ? ಎಲ್ಲಾ ಕೂತೂಹಲವನ್ನು ಭಾಗ- 2 ರಲ್ಲಿ ಸವಿವರವಾಗಿ ತಿಳಿಸುತ್ತೇನೆ.

ಏನಂತೀರೀ?

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ

ಮೊನ್ನೆ ತಾನೇ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಭಗವಾನ್ ವಿಷ್ಣುವಿಗೆ ಸಹಸ್ರನಾಮವಿರುವಂತೆ ನಮ್ಮೀ ಲೇಖನದ ನಾಯಕ ಶ್ರೀನಿವಾಸನಿಗೂ ಹಲವಾರು ನಾಮಗಳು. ಮನೆಯಲ್ಲಿ ಪೋಷಕರು ನಾಮಕರಣ ಮಾಡಿದ್ದು ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ಮುರಳಿ ಎಂದು. ಇನ್ನು ಬಾಲ್ಯದಿಂದಲೂ ನೋಡಲು ಸ್ವಲ್ಪ ದಷ್ಟ ಪುಷ್ಟವಾಗಿದ್ದ ನಮ್ಮ ಶ್ರೀನಿವಾಸ, ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿನಯದ ನಾಗರಹೊಳೆ ಸಿನಿಮಾದಲ್ಲಿ ಬರುವ ಪಿಂಟೋ (ದಪ್ಪನೆಯ ಹುಡುಗ)ನನ್ನು ಹೋಲುತ್ತಿದ್ದ ಕಾರಣ ನೆರೆಹೊರೆಯವರು ಪ್ರೀತಿಯಿಂದ ಪಿಂಟೂ ಎಂದು ಕರೆಯುತ್ತಿದ್ದರೆ, ಶಾಲಾ ಕಾಲೇಜುಗಳಲ್ಲಿ G K ಎಂಬ ಇನಿಷಿಯಲ್ಸ್ ನಿಂದಲೇ ಪ್ರಖ್ಯಾತ. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಹಿರಣ್ಯಕಷುಪು ಪ್ರಹ್ಮಾದನನ್ನು ಕುರಿತು ಎಲ್ಲಿರುವನು ನಿಮ್ಮ ಹರಿ? ಈ ಕಂಬದಲ್ಲಿರುವನೇ? ಈ ಕಂಬದಲ್ಲಿರುವನೇ ಎಂದು ಕೇಳಿದರೆ, ಎಲ್ಲಾ ಕಡೆಯಲ್ಲೂ ಇರುವನು ನಮ್ಮ ಹರಿ ಎನ್ನುವಂತೆ ನಮ್ಮ ಈ ಶ್ರೀನಿವಾಸನೂ ಒಂದು ರೀತಿಯಲ್ಲಿ ಎಲ್ಲಾ ಕಡೆಯಲ್ಲೂ, ಎಲ್ಲರ ಮನದಲ್ಲೂ ಇರುವ ಸರ್ವಾಂತರ್ಯಾಮಿ. ಇಷ್ಟೆಲ್ಲಾ ಉಪಮಾನ ಉಪಮೇಯಗಳೊಂದಿಗೆ ವಿವರಿಸುತ್ತಿರುವ ಈ ಶ್ರೀನಿವಾಸ ಯಾರು? ಎಂಬ ಕುತೂಹಲ ಎಲ್ಲರಿಗೂ ಮೂಡುವುದು ಸಹಜ. ಬನ್ನೀ ನಮ್ಮ ಪ್ರೀತಿಯ ಶ್ರೀನಿವಾಸ (ಪಿಂಟೂ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

G K ಶೀನಿವಾಸ, ಅಲಿಯಾಸ್ ಪಿಂಟೂ ಉರ್ಘ್ G K, ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನ ಶ್ರೀರಾಂಪುರದ ದೇವಯ್ಯಪಾರ್ಕಿನ ಬಳಿ. ಹೇಳೀ ಕೇಳೀ ಶ್ರೀರಾಂಪುರದಲ್ಲಿ ಒಂದು ರೀತಿಯ ಮಧ್ಯಮ ವರ್ಗದವರೇ ಹೆಚ್ಚು. ಒಂದು ಕಡೆ ಮಧ್ಯಮವರ್ಗದವರಿದ್ದರೆ ಮತ್ತೊಂದು ಕಡೆ ಸ್ಲಂ. ನಮ್ಮ ಶ್ರೀನಿವಾಸನ ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆರ್ಥಿಕವಾಗಿ ಸ್ವಲ್ಪ ಸಧೃಡರು. ಒಬ್ಬ ಅಕ್ಕ ಮತ್ತು ಒಬ್ಬಳು ತಂಗಿಯ ಮಧ್ಯೆ ಬೆಳೆದ ಶ್ರೀನಿವಾಸನಿಗೆ ದುಡ್ಡಿನದ್ದೇನೂ ಕೊರತೆ ಇರಲಿಲ್ಲ. ಸಕ್ಕರೆ ಇದ್ದ ಕಡೆ ಇರುವೆ ಮುತ್ತುವ ಹಾಗೆ ನಮ್ಮ ಮುದ್ದು ಮುದ್ದಾದ ಶ್ರೀನಿವಾಸನ ಸುತ್ತ ಸದಾ ಗೆಳೆಯರ ಗುಂಪೇ ಇರುತ್ತಿತ್ತು. ಅಮ್ಮಾ ಬೆಳಿಗ್ಗೆ ಕಷ್ಟ ಪಟ್ಟು ಎರಡೂ ಹೊತ್ತಿಗೆ ಅಡುಗೆ ಮಾಡಿಟ್ಟು ಹೋಗಿ, ಸಂಜೆ ಉಸ್ಸಪ್ಪಾ ಎಂದು ಕಛೇರಿ ಮುಗಿಸಿ ಆಡುಗೆ ಮನೆಗೆ ಬಂದು ನೋಡಿದರೆ ಪಾತ್ರೆ ಪಗಡಗಳೆಲ್ಲಾ ಚೆಲ್ಲಾ ಪಿಲ್ಲಿ. ಮಾಡಿದ ಅಡುಗೆಯೆಲ್ಲಾ ಖಾಲಿ ಖಾಲಿ. ಸಂಜೆ ಶಾಲೆ ಮುಗಿದ ಮೇಲೆ ನಮ್ಮ ಪಿಂಟೋ ತನ್ನ ಪಟಾಲಂ ನೆಲ್ಲಾ ಕರೆತಂದು ಅಮ್ಮಾ ಮಾಡಿದ ಅಡುಗೆಯನ್ನೆಲ್ಲಾ ಗೆಳೆಯರೊಡನೆ ಖಾಲಿ ಮಾಡಿಬಿಡುತ್ತಿದ್ದರೂ, ಸ್ವಲ್ಪವೂ ಬೇಸರಿಕೊಳ್ಳದೇ ಮತ್ತೆ ಪ್ರೀತಿಯಿಂದ ಅನ್ನ ಮಾಡಿ ಬಡಿಸುತ್ತಿದ್ದ ಅನ್ನಪೂರ್ಣೆ ಅವರ ಅಮ್ಮಾ.

ಅದೊಮ್ಮೆ ಬೆಂಗಳೂರಿನಿಂದ ಚಿಕ್ಕಮಗಳೂರಿನ ಕೊಪ್ಪಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಮತ್ತೊಬ್ಬ ತರುಣ ಅವರ ಪಕ್ಕದಲ್ಲಿ ಮತ್ತೊಬ್ಬ ವಯಸ್ಕರು ಪ್ರಯಾಣಿಸುತ್ತಿದ್ದರು. ಹಾಗೆ ಹೋಗುವಾಗ ಆ ಮಧ್ಯಮ ವಯಸ್ಸಿನವರೂ ಮತ್ತು ತರುಣ ಪರಸ್ಪರ ಪರಿಚಯಿಸಿಕೊಂಡು ಎಲ್ಲಿಗೇ ಪ್ರಯಾಣ ಎಂದು ಕೇಳಿಕೊಂಡರು ಅಗ ಹುಡುಗ ಕೊಪ್ಪಾದ ಕಡೆಗೆ ಅಂದನಂತೆ ಅದಕ್ಕೆ ಅವರು ಓಹೋ!! ನಾನು ಕೂಡ ಕೊಪ್ಪಾಕ್ಕೇ ಹೋಗುತ್ತಿರುವುದು, ಅಲ್ಲಿಂದೆ ಮುಂದೇ ಎಲ್ಲಿ? ಅಂದದ್ದಕ್ಕೆ ಗಿಣಿಯಕ್ಕೆ ಹೋಗುತ್ತಿದ್ದೀನಿ ಎಂದನಂತೆ ಆ ತರುಣ. ಅಯ್ಯೋ ರಾಮಾ! ನಾನೂ ಕೂಡಾ ಗಿಣಿಯಾಕ್ಕೆ ಹೋಗಿತ್ತಿರುವುದು. ಗಿಣಿಯಾದಲ್ಲಿ ಯಾರ ಪೈಕಿ? ಎಂದಾಗ ಅ ತರುಣ ಅವರ ಮನೆಯ ಹಿರಿಯರ ಹೆಸರನ್ನು ಹೇಳಿದಾಗ, ಅಯ್ಯಯ್ಯೋ ನಮ್ಮದೂ ಅವರ ಕುಟುಂಬವೇ!! ಏನು ಋಣಾನು ಸಂಬಂಧ ನೋಡಿ ನಾವಿಬ್ಬರೂ ಸಂಬಧಿಗಳೂ ಒಂದೇ ಸಮಯದಲ್ಲಿ ಒಟ್ಟಿಗೆ ಊರಿಗೆ ಹೋಗುತ್ತಿದ್ದೇವೆ ಎಂದರಂತೆ. ಇವರಿಬ್ಬರ ಸಂಭಾಷಣೆಯು ಬೇಕೋ ಬೇಡವೋ ಅ ವೃದ್ಧರ ಕಿವಿಗೆ ಬೀಳುತ್ತಿತ್ತು. ಆರಂಭದಲ್ಲಿ ಮತ್ತೊಬ್ಬರ ವಿಷಯ ತಮಗೇಕೆ ಎಂದು ಸುಮ್ಮನಾಗಿದ್ದರೂ, ಇವರಿಬ್ಬರ ಸಂಭಾಷಣೆ ಕೇಳಲಾಗದೇ, ಇದೇನು ಸ್ವಾಮೀ ಇಬ್ಬರೂ ಒಂದೇ ಕುಟುಂಬದವರು ಅಂತೀರೀ? ಒಬ್ಬರಿಗೊಬ್ಬರ ಪರಿಚಯವೇ ಇಲ್ಲವೇ ಎಂದು ಕುತೂಹಲದಿಂದ ಕೇಳಿದಾಗ. ಇಬ್ಬರೂ ಗಹ ಗಹ ನಗುವುದನ್ನು ನೋಡಿ ಆಶ್ಚರ್ಯ ಚಕಿತರಾಗಿ ಇದೇನು ಸ್ವಾಮಿ ಹೀಗೆ ನಗ್ತಾ ಇದ್ದೀರಿ? ಕೇಳ್ಬಾರದ್ದೇನಾದ್ರೂ ಕೇಳ್ಬಿಟ್ನಾ? ಎಂದಾಗ ಮತ್ತೊಮ್ಮೆ ಜೋರಾಗಿ ನಗುತ್ತಾ ಇಲ್ಲಾ ಸ್ವಾಮೀ, ಹಾಗೇನಿಲ್ಲಾ. ನಾವಿಬ್ಬರೂ ಅಪ್ಪಾ ಮಗ. ಸುಮ್ಮನೆ ಪ್ರಯಾಣದ ಏಕನತೆಯನ್ನು ಕಳೆಯಲು ಈ ರೀತಿಯಾಗಿ ಮಾತನಾದ್ವೀ ಎಂದಾಗ ಬೇಸ್ತು ಬಿದ್ದ ವಯಸ್ಕರ ಪರಿ ಯಾರಿಗೂ ಬೇಡ. ಈ ರೀತಿಯಾಗಿತ್ತು ಶ್ರೀ ಕೃಷ್ಣಮೂರ್ತಿಗಳು ಮತ್ತು ಅವರ ಮಗ ಶ್ರೀನಿವಾಸನ ಸಂಬಂಧ. ಅಪ್ಪಾ ಮಗ ಎನ್ನುವು ಸಂಬಂಧಕ್ಕಿಂತ ಆತ್ಮೀಯ ಗೆಳೆಯರಂತೆಯೇ ಸದಾಕಾಲವೂ ಇರುತ್ತಿದ್ದರು.

ಇನ್ನು ಪ್ರೀತಿಯ ಅಕ್ಕ ಮಂಜುಳ ಮತ್ತು ಮಮತೆಯ ತಂಗಿ ಮಮತ ಇಬ್ಬರೂ Partners in crime ಎನ್ನುವಂತೆ ಸಹೋದರನ ಎಲ್ಲಾ ಆಟ-ಪಾಠ ಮತ್ತು ಚೇಷ್ಟೆಗಳಲ್ಲಿಯೂ ಸಹಭಾಗಿತ್ವ. ಪಿಂಟೂವಿನ ಎಲ್ಲಾ ಸ್ನೇಹಿತರಿಗೂ ಇವರಿಬ್ಬರೂ ಪ್ರೀತಿಯ ಅಕ್ಕ ತಂಗಿಯರು. ಪಿಂಟೂನನ್ನು ಹುಡುಕಿಕೊಂಡು ಆವರ ಮನೆಗೆ ಯಾರೇ ಹೋದರೂ ಅವರನಿಲ್ಲದಿದ್ದರೂ ಮೆನೆಯಲ್ಲಿ ಉಳಿದ ನಾಲ್ವರಲ್ಲಿ ಯಾರಿದ್ದರೂ ಅತಿಥ್ಯಕ್ಕೇನು ಕಡಿಮೆ ಇಲ್ಲದಂತೆ ನೋಡಿ ಕಳುಹಿಸುತ್ತಿದ್ದಂತಹ ಸ್ನೇಹಮಯೀ ಕುಂಟುಂಬ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದರೂ ಯಾವುದೇ ಮುಜುಗರವಿಲ್ಲದೇ ಅವರ ಮನೆಯೆ ಎಲ್ಲಾ ಕಡೆಗೂ ಮುಕ್ತವಾಗಿ ಹೋಗಬಹುದಾಗಿತ್ತು.

WhatsApp Image 2020-01-15 at 7.32.29 PMಇಂತಾ ಪಿಂಟೂ ನನಗೆ ಪರಿಚಯವಾಗಿದ್ದು ಆರ್. ಟಿ. ನಗರದ ಆದರ್ಶ ಪಾಲಿಟೆಕ್ನಿಕ್ ನಲ್ಲಿ. ನಾನು ಮೊದಲ ವರ್ಷಕ್ಕೆ ಸೇರಿಕೊಂಡಾಗ ಪಿಂಟೂ ಎರಡನೇ ವರ್ಷದಲ್ಲಿದ್ದ. ಅಗಾಗಲೇ ಅವರನ ಕೀರ್ತಿ ಪತಾಕೆ ಕಾಲೇಜಿನಲ್ಲಿ ಹಬ್ಬಿಯಾಗಿತ್ತು. ಅವನದ್ದೇ ಆದ ಒಂದು ಗುಂಪಿತ್ತು. ಮಲ್ಲೇಶ್ವರಂ ಸುತ್ತ ಮುತ್ತಲಿಂದ ಬರುತ್ತಿದ್ದ 115A ಮತ್ತು 176 ಬಸ್ಸಿನ ಅಷ್ಟೂ ಹುಡುಗರಿಗೆ ಅವನದ್ದೇ ನಾಯಕತ್ವ. ಕಾಲೇಜು ಶುರುವಾದ ಒಂದೆರಡು ವಾರಗಳಲ್ಲಿನಡೆದ ಮೊದಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯ, ಮಿಮಿಕ್ರಿ, ಹಾಡು ಹೀಗೆ ಹತ್ತಾರು ಸ್ಪರ್ಥೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಎಲ್ಲರ ಗಮನ ಸೆಳೆದ ನನ್ನನ್ನು ಗಮನಿಸಿ ಏನೋ ರಾಜಾ! ಏನೋ ನಿನ್ನ ಹೆಸ್ರೂ?? ಯಾವ ಬ್ರಾಂಚು? CS ಇಲ್ವಾ ECನಾ? ಎಲ್ಲಿಂದ ಬರೋದು ಅಂತಾ ಒಂದೇ ಸಮನೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು ಇನ್ನೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ. ಅಷ್ಟರಲ್ಲಿ ನನ್ನ ಮಕ್ಕದಲ್ಲಿದ್ದ ಮತ್ತು ಪಿಂಟೂ ಮನೆಯ ರಸ್ತೆಯಲ್ಲಿಯೇ ವಾಸವಾಗಿದ್ದ ನನ್ನ ಸಹಪಾಠಿ ವಿಜಯ್ ನಮ್ಮಿಬ್ಬರನ್ನೂ ಪರಸ್ಪರ ಪರಿಚಯ ಮಾಡಿಕೊಟ್ಟಿದ್ದ. ಅಲ್ಲಿಂದ ಮುಂದೆ ನಮ್ಮಿಬ್ಬರ ಅವಿನಾಭಾವ ಸಂಬಂಧ ಅವಿಸ್ಮರಣಿಯವಾಗಿ ಮುಂದುವರೆಯಿತು

ವಯಸ್ಸಿನಲ್ಲಿ ಪಿಂಟೂ ನನಗಿಂತ ಚಿಕ್ಕವ(ನಾನು PUC ಮುಗಿಸಿ Diploma)ನಾದರೂ ನೋಡಲು ನನಗೆ ಅಣ್ಣನಂತೆಯೇ ಇದ್ದ. ನೋಡ್ ಮಗಾ, ಯಾರೇ ಏನ್ ಮಾಡಿದ್ರೂ ನನ್ಗೆ ಹೇಳು ನಾನು ನೋಡ್ಕೋತೀನಿ ಅಂತ ಅಭಯ ಹಸ್ತ ನೀಡಿದ್ದ ಪಿಂಟೂ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಲೂ ಇದ್ದ. ಒಂದು ರೀತಿ ಕೈಲಾಸಂ ಅವರ ಪೋಲಿ ಕಿಟ್ಟಿಯ ತರಹ. ಹೊರ ಜಗತ್ತಿಗೆ ಆತ ಸ್ವಲ್ಪ ಒರಟ ಅಥವಾ ಹುಂಬನಂತೆ ಕಂಡರೂ ಮೃದು ಮನಸ್ಸು, ದಾನ ಶೂರ ಕರ್ಣ, ಆಪದ್ಭಾಂಧವ ಎಂತಹ ಕಾಲದಲ್ಲೂ ಎಂತಹ ಉಪಕಾರಕ್ಕೂ ಸೈ ಎನ್ನುವಂತಹ ಆಪ್ತಮಿತ್ರ ಎಂದರೂ ಸೈ. ಗೆಳೆಯರ ಕಷ್ಟ ಸುಖಃಗಳಲ್ಲಿ ಸದಾ ಬಾಗಿ. ಎಷ್ಟೋ ಬಾರಿ ತನ್ನ ಕೈಯಿಂದಲೇ ಆಗಿನ ಕಾಲದಲ್ಲಿಯೇ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ್ದ ನಮ್ಮ ಪಿಂಟೂ. ದೇವನೊಬ್ಬ ನಾಮ ಹಲವು ಎನ್ನುವಂತೆ ವ್ಯಕ್ತಿಯಾಗಿ ಪಿಂಟೂ ಒಬ್ಬನಾದರೂ, ನಾನಾ ರೂಪಗಳಲ್ಲಿ ನಾನಾ ತರಹ ಸಹಾಯ ಮಾಡುತ್ತಿದ್ದ

WhatsApp Image 2020-01-15 at 7.32.30 PMಕಾಲೇಜು ಎಂದ ಮೇಲೆ ಕಾಲೇಜಿನ ಚುನಾವಣೆ ಎನ್ನುವುದು ಸಹಜ ಪ್ರಕ್ರಿಯೆ. ನಮ್ಮ ಕಾಲೇಜಿನಲ್ಲಿಯೂ ಚುನಾವಣೆ ನಡೆದಾಗ ಎರಡನೇ ವರ್ಷದಲ್ಲಿ ಓದುತ್ತಿದ್ದರೂ ಕಾಲೇಜ್ ಪ್ರೆಸಿಡೆಂಟ್ ಶಿಪ್ಪಿಗೆ ಪಿಂಟೂ ಸ್ಪರ್ಧಿಸಿದಾಗ ನಮ್ಮೆಲ್ಲರ ಸಹಕಾರ ಅವನಿಗೇ ಎಂದು ಪ್ರತ್ಯೇಕ ಹೇಳ ಬೇಕಿಲ್ಲ. ಮೊದಲು ಕ್ಲಾಸ್ ರೆಪ್ರೆಸೆಂಟಿಟಿವ್ ನಮ್ಮವರೇ ಚುನಾಯಿತರಾಗಿ ಅದಾದ ನಂತರ ಸಾಂಸ್ಕೃತಿಕ, ಕ್ರೀಡೆ, ಇತ್ಯಾದಿ, ಇತ್ಯಾದಿಗಳೆಲ್ಲವೂ ನಮ್ಮವರೇ. ಈಗ ನಾವೇನು ಕಿರಿಕ್ ಪಾರ್ಟಿ ಸಿನಿಮಾದಯಲ್ಲಿ ನೋಡಿದ್ವೋ ಅದೇ ರೀತಿಯ ಜಿದ್ದಾ ಜಿದ್ದಿ ಚುನಾವಣೆಗಳು ಆ ಕಾಲದಲ್ಲೇ ನಡೆದು ಆ ಚಿತ್ರದ ನಾಯಕ ಕರ್ಣನಂತೆಯೇ ನಮ್ಮ ಪಿಂಟೂ ಅನಾಯಾಸವಾಗಿ ಗೆದ್ದು ಕಾಲೇಜ್ ಪ್ರೆಸಿಡೆಂಟ್ ಆಗಿಯೇ ಬಿಟ್ಟ. ಓದಿನಲ್ಲಿ ಅಷ್ಟಕ್ಕಷ್ಟೇ ಇದ್ದರೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎತ್ತಿದ ಕೈ. ಕಾಂಚೀ ರೇ ಕಾಂಚಿರೇ.. ಅಂತ ಬಲಗೈ ಚಿಟಿಕೆ ಹೊಡೆದುಕೊಂಡು ಹಾಡಲು ಶುರು ಹಚ್ಚಿಕೊಂಡಾ ಅಂತಂದ್ರೇ, ಒಂದೋ ಬೆಂಚನ್ನೇ ಡ್ರಮ್ಸ್ ಮಾಡಿಕೊಂಡ ನುಡಿಸುತ್ತಿದ್ದ ನಮ್ಮಂತಹವರ ಕೈ ನೋವಾಗ ಬೇಕು ಇಲ್ಲವೇ ಚಪ್ಪಾಳೆ ಸಿಳ್ಳೇ ಹೊಡೆದು ಎಲ್ಲರ ಕೈ ನೋವಾಗ ಬೇಕು ಆಗಲೇ ಆ ಸಂಗೀತ ಗೋಷ್ಟಿ ಮುಗಿಯುತ್ತಿದ್ದದ್ದು. ಇನ್ನು ಕೇರಂ ಮತ್ತು ಕ್ರಿಕೆಟ್ ಕಾಲೇಹಿನಲ್ಲಿ ಅವನಿಷ್ಟವಾದ ಆಟವಾದರೂ ಅವರ ಮನೆಯ ಮೇಲಿನ ಕೋಣೆಯಲ್ಲಿ ಆಪ್ತ ಗೆಳೆಯರೊಡನೆ ಇಸ್ಪೀಟ್ ಆಟವನ್ನೂ ಆಡುತ್ತಿದ್ದ. ಅಪ್ಪೀ ತಪ್ಪೀ ನಾವು ಅಲ್ಲಿಗೇ ಹೋದರೇ, ಅಲಲಲಲೇ ಕಂಠಾ, ನೀವೆಲ್ಲಾ ಇಲ್ಲಿಗೆ ಬರ್ಬಾದಪ್ಪಾ, ಹೋಗಪ್ಪಾ ಎಂದೂ ಮೊದಲು ಪ್ರೀತಿಯಿಂದ ಹೇಳಿದ್ದಕ್ಕೆ ಬಗ್ಗದಿದ್ದರೇ, ಹೋಗಲೇಲೇ…. ಅಂತ ಪ್ರೀತಿಯಿಂದ ಗದರಿ ಕಳಿಸುವಂತಹ ಸಲುಗೆ ನಮ್ಮಲ್ಲಿತ್ತು.

WhatsApp Image 2020-01-15 at 7.32.31 PMಕಾಲೇಜ್ ಸ್ಪೋಟ್ಸ್ ಡೇ ಮತ್ತು ಕಲ್ಚರ್ಲ್ಸ್ ಡೇನಲ್ಲಿ ಅವನದ್ದೇ ಪಾರುಪತ್ಯ. ಸ್ವತಃ ಒಳ್ಳೆಯ ಕ್ರಿಕೆಟ್ ಮತ್ತು ಕೇರಂ ಆಟಗಾರನಾಗಿದ್ದ ಪಿಂಟುವಿಗೆ ಒಂದಂಲ್ಲಾ ಒಂದು ಪ್ರಶಸ್ತಿಗಳು ಕಟ್ಟಿಟ್ಟ ಬುತ್ತಿ. ಇನ್ನು ರಿಹರ್ಸಲ್ ನಲ್ಲಿ ಅವನು ಮತ್ತು ಅವನ ತಂಡ ಮಾಡಿ ತೋರಿಸಿ ಪ್ರಿನ್ಸಿಪಾಲರನ್ನು ಒಪ್ಪಿಸಿದ ಸಣ್ಣ ಸಣ್ಣ ನಗೆ ನಾಟಕಗಳು ಮತ್ತು ಹಾಡುಗಳು ಕಾರ್ಯಕ್ರಮದಂದು ತನ್ನದೇ ಆದ ರೂಪವನ್ನು ಪಡೆದು ಕೆಲವೊಂದು ಬಾರಿ ಕಾಲೇಜಿನ ಆಡಳಿತವರ್ಗಕ್ಕೆ ಮುಜುಗರಕ್ಕೆ ಒಳಪಡಿಸಿದರೂ ಅದಕ್ಕೆಲ್ಲಾ ಕೇರೇ ಮಾಡುತ್ತಿರಲಿಲ್ಲ ನಮ್ಮ ಪಿಂಟೂ. ಆನೆ ನಡೆದದ್ದೇ ದಾರಿ ಎನ್ನುವಂತಿದ್ದ.

ಇನ್ನು ಪರೀಕ್ಷೇ ಬಂದಿತೆಂದರೆ ಪ್ರಾಕ್ಟಿಕಲ್ಸ್ ಪರೀಕ್ಷೆಗೆ ಹೊರಗಿನಿಂದ ಯಾವ ಪರಿಕ್ಷಕರು ಬರುತ್ತಾರೆ ಎಂಬ ಕೂತೂಹಲ ನಮಗಿದ್ದರೆ ಅದರ ಪರಿಹಾರಕ್ಕೆ ನಾವೆಲ್ಲಾ ಹೋಗುತ್ತಿದ್ದದ್ದೇ ಪಿಂಟೂವಿನ ಬಳಿ. ಸ್ಟಾಫ್ ರೂಮ್ ಮತ್ತು ಆಫೀಸ್ ರೂಮಿನಲ್ಲಿ ಎಲ್ಲರ ಪರಿಚಯವನ್ನೂ ಮಾಡಿ ಕೊಂಡಿರುತ್ತಿದ್ದ ನಮ್ಮ ಹೀರೋ, ಪರೀಕ್ಷೇಗೆ ಒಂದು ವಾರ ಮುಂಚೆಯೇ ಯಾವ ಕಾಲೇಜಿನಿಂದ ಯಾರು ಬರುತ್ತಾರೆ? ಅವರ ಸ್ವಭಾವ ಎಂತಹದ್ದು. ಹೋದ ವರ್ಷ ಅವರು ಯಾವ ಕಾಲೇಜಿಗೆ ಹೋಗಿದ್ದರು ಅಲ್ಲಿ ಯಾವ ರೀತಿಯ ಅಂಕಗಳನ್ನು ಕೊಟ್ಟಿದರು. ಅವರ ಸ್ವಭಾವ ಸರಳವೋ ಇಲ್ಲವೇ ಶಿಸ್ತಿನವರೋ, ಅಂಕ ಕೊಡುವುದರಲ್ಲಿ ದಾರಾಳಿಯೋ ಇಲ್ಲವೇ ಹಿಡಿತವೋ ಎಲ್ಲವನ್ನೂ ಪತ್ತೆ ಹಚ್ಚಿ, ಲೇ ಏನು ಭಯ ಪಡ್ಬೇಡ್ರೋ.. ಒಳ್ಳೇ ಮನುಶ್ಯ. ನೋಡೋಕೆ ಸ್ವಲ್ಪ ಸ್ಟ್ರಿಕ್ಟ್ ಆದ್ರೇ ಚೆನ್ನಾಗಿ ಮಾಡಿದ್ರೇ ಮಾರ್ಕ್ ಕೊಡ್ತಾರಂತೆ ಅಂತ ಎಲ್ಲರನ್ನೂ ಹುರಿದುಂಬಿಸುತ್ತಿದ್ದ ನಮ್ಮ ಪಿಂಟು.

ಓ ಲೇಖನ ಓದುತ್ತಿರುವ ಎಲ್ಲರಿಗೂ ನಮ್ಮ ಕಾಲೇಜಿನ ವಿದ್ಯಾರ್ಥಿ ನಾಯಕ ಪಿಂಟೂವಿನ ಪ್ರತಾಪ ನಿಮ್ಮ ಕಾಲೇಜಿನ ಹೀರೋಗಳೋ ಇಲ್ಲವೇ ರಣರಂಗದ ಶಿವರಾಜ್ ಕುಮಾರ್, ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ನೆನಪು ಮಾಡಿಸತ್ತೇ ಅಂದ್ರೇ ಖಂಡಿತ ಅತಿಶಯೋಕ್ತಿ ಏನಲ್ಲ. ಇಂತಾ ಪಿಂಟೋ ಓದಿ ಮುಗಿಸಿದ್ನಾ? ಆಮೇಲೇ ಏನ್ಮಾಡ್ದಾ? ಈಗ ಎಲ್ಲಿದ್ದಾನೇ? ಅನ್ನೂದನ್ನಾ ಮುಂದಿನ ಭಾಗದಲ್ಲಿ ಭಾಗದಲ್ಲಿ ತಿಳಿದು ಕೊಳ್ಳೋಣ.ಅಲ್ಲಿವರೆಗೂ ಶ್ರೀನಿವಾಸನನ್ನು ಸ್ಮರಣೆ ಮಾಡೋಣ. ಅರರೇ ನಮ್ಮ ಶ್ರೀನಿವಾಸನಲ್ಲಾ ಸಾಕ್ಷಾತ್ ಆ ಭಗವಂತ ಶ್ರೀನಿವಾಸನನ್ನು ಸ್ಮರಿಸೋಣ.

ಏನಂತಿರೀ?

ಸಶೇಷ
ಕಥೆ ಮುಂದುವರೆಯುತ್ತದೆ…………….