ಕೊರೋನ ಲಸಿಕೆ ಅಭಿಯಾನ

ಕಳೆದ ವರ್ಷದ ಆರಂಭದಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿ ಕೊಂಡ ಸಾಂಕ್ರಾಮಿಕ ಕೊರಾನಾ ವೈರಾಣು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚಾದ್ಯಂತ ಆವರಿಸಿ ಅಕ್ಷರಶಃ ಜಗತ್ತನ್ನು ನಿಸ್ತೇಜವನ್ನಾಗಿಸಿದ್ದು ಈಗ ಇತಿಹಾಸ.

ಕಡೆಗೂ ಈ ಮಹಾಮಾರಿಗೆ ಲಸಿಕೆಯನ್ನು ನಮ್ಮ ದೇಶದ ವಿಜ್ಞಾನಿಗಳು ಕಂಡು ಹಿಡಿಯಲು ಸಫಲರಾಗಿ ಅದು ವಿಶ್ವದ ಇತರೇ ರಾಷ್ಘ್ರಗಳ ಲಸಿಕೆಗಿಂತಲೂ ಉತ್ತಮ ಫಲಿತಾಂಶ ತೋರಿದ ಕಾರಣ ಇಂದು ನಮ್ಮ ದೇಶದಿಂದ ಅನೇಕ ರಾಷ್ಟ್ರಗಳಿಗೆ Made in India ಲಸಿಕೆಗಳು ರಫ್ತಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

ಕಳೆದ ಜನವರಿ 16ರಂದು ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತದ ದೇಶವಾಗಿಗಳಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ, ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೂರೋನಾ ವಾರಿಯರ್ಸ್ ಅವರುಗಳಿಗೆ ನೀಡಿ ನಂತರ  ಫೆಬ್ರವರಿ 2ರಿಂದ ಎರಡನೇ ಹಂತದ ಲಸಿಕೆಯನ್ನೂ ಯಶಸ್ವಿ ಗೊಳಿಸಿದರು, ಮಾರ್ಚ್.1 ರಿಂದ ದೇಶದ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ತುರ್ತುಆನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲು ಆರಂಭಿಸಿದರು. ಈಗ ಏಪ್ರಿಲ್ 1 ರಿಂದ  ದೇಶದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್-19 ಲಸಿಕೆಗೆ ಚಾಲನೆ ನೀಡಿದ್ದಾರೆ.

ಎಲ್ಲೂ ಹೊರಗಡೆ ಹೋಗದೇ ಮನೆಯಲ್ಲಿಯೇ ಅಷ್ಟೋಂದು ಎಚ್ಚರಿಕೆ ವಹಿಸಿದ್ದರೂ Home Delivery  ರೀತಿಯಲ್ಲಿ ಕಳೆದ ಅಕ್ಟೋಬರಿನಲ್ಲಿ ನನಗೂ  ಸಹಾ ಕೊರೋನಾ ವಕ್ಕರಿಸಿಕೊಂಡು ಒಂದು ವಾರಗಳ ಕಾಲ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡು ನಂತರ ಹದಿನೈದು ದಿನಗಳ ಕಾಲ  ಹೋಮ್ ಕ್ವಾರಂಟೈನ್  ಇದ್ದು ಗುಣಮುಖರಾದವರಲ್ಲಿ ನಾನೂ ಒಬ್ಬ.

ಕೊರೋನಾ ಚಿಕಿತ್ಸೆ ಸಿಗದಯೇ ಅಥವಾ ಸಿಕ್ಕಿಯೂ ಸಹಾ ಇದುವರೆವಿಗೂ ಪ್ರಪಂಚಾದ್ಯಂತ  ಅಧಿಕೃತವಾಗಿ 28 ಲಕ್ಷಕ್ಕಿಂತಲೂ ಅಧಿಕ ಮಂದಿ ಸಾವ್ವನ್ನಪ್ಪಿದ್ದರೆ ಇನ್ನು ಅನಧಿಕೃತವಾಗಿ ಸತ್ತವರ ಸಂಖ್ಯೆ ಎಷ್ಟೋ ಬಲ್ಲವರು ಯಾರು?

ಹಾಗಾಗಿ ಇಂತಹ ಮಹಾಮಾರಿಯ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಈ ಲಸಿಕೆಯು ಸಹಾಯ ಮಾಡುತ್ತದೆ ಎನ್ನುವ ಭರವಸೆಯಲ್ಲಿ ನಾನು ಸಹಾ ಲಸಿಕೆ ಹಾಕಿಸಿಕೊಳ್ಳಲು ನಿರ್ಧರಿಸಿದೆ. ಆರಂಭಿಕ ಹಂತಹ ಜನಸಂದಣಿ ಸ್ವಲ್ಪ ಕಡಿಮೆಯಾಗಲಿ ಎಂದು ಒಂದು ವಾರಗಳ ಕಾಯ್ದು 5ನೇ ತಾರೀಖು, ಈ ಲಿಂಕ್ ಮುಖಾಂತರ https://selfregistration.cowin.gov.in/ COVID 19 vaccination self-registration ಮಾಡಿಕೊಂಡೆ.  ಆರೋಗ್ಯ ಸೇತು ಆಪ್ ಮುಖಾಂತರವೂ  ಸುಲಭವಾಗಿ ನಮ್ಮ ಹೆಸರು, ವಿಳಾಸ, ಮೊಬೈಲ್ ನಂ. ಮತ್ತು ನಮ್ಮ ಬಡಾವಣೆಯ ಪಿನ್ ಕೋಡ್ ನಂಬರ್ ಕೊಡುತ್ತಿದ್ದಂತೆಯೇ, ನಮ್ಮ ಮನೆಯ ಹತ್ತಿರವಿರುವ ಸರ್ಕಾರಿ ಮತ್ತು ಮಹಾನಗರ ಪಾಲಿಕೆ ಆರೋಗ್ಯ ಕೇಂದ್ರಗಳ ವಿವರವನ್ನು ತೋರಿಸುತ್ತದೆ. ನಮ್ಮ ಅನುಕೂಲಕರವಾದ ದಿನಾಂಕ ಮತ್ತು ಸಮಯನ್ನು ಆಯ್ಕೆ ಮಾಡಿಕೊಂಡ ತಕ್ಷಣವೇ ನೋಂದಾಯಿಸಿಕೊಂಡಿದ್ದಕ್ಕಾಗಿ ಒಂದು SMS ಮೂಲಕ ಧೃಢೀಕರಿಸಲ್ಪಡುತ್ತದೆ.

WhatsApp Image 2021-04-09 at 5.14.33 PMಮೊನ್ನೆ 7ನೇ ತಾರೀಖು, ಬುಧವಾರ ಬೆಳಿಗ್ಗೆ ಸರಿಯಾಗಿ 10:30ಕ್ಕೆ ಸಹಕಾರ ನಗರದ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಹೋಗಿ ಅಲ್ಲಿದ್ದ ಜನರನ್ನು ನೋಡಿ ಒಂದು ಕ್ಷಣ ಅರೇ ನಾನೇನೂ ಆಸ್ಪತ್ರೆಗೆ  ಬಂದಿದ್ದೇನೋ ಇಲ್ಲವೇ ಯಾವುದಾದರೂ ಸಮಾರಂಭಕ್ಕೆ ಬಂದಿದ್ದೇನೋ ಎನಿಸುವಂತಿತ್ತು ಕಾರಣ ಅಲ್ಲೊಂದು ಶಾಮಿಯಾನ  ಅದರ ನೆರಳಲ್ಲಿ ಅಚ್ಚುಕಟ್ಟಾಗಿ ಜನರು ಕುಳಿತ್ತಿದ್ದರು.

WhatsApp Image 2021-04-09 at 5.14.32 PM (1)ನಾನು ಹೋದ ತಕ್ಶಣ ಟೋಕನ್ ಒಂದನ್ನು ಕೊಟ್ಟು ನಮ್ಮ ಸರದಿಯ ಅಂದಾಜು ಸಮಯವನ್ನು ತಿಳಿಸಿದರು. ಅಲ್ಲೇ ಮರದ ನೆರಳಿನ ಕೆಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿಯೇ ಅವರು ಹೇಳಿದ್ದ ಸಮಯಕ್ಕಿಂತಲೂ ಮುಂಚೆ ನನ್ನ ಟೋಕನ್ ನಂ.  ಬಂದಾಗಿತ್ತು.

WhatsApp Image 2021-04-07 at 1.25.20 PMಅಲ್ಲಿ ಕುಳಿತಿದ್ದ ಸ್ವಯಂಸೇವರೊಬ್ಬರ ಬಳಿ ನನಗೆ ಬಂದಿದ್ದ SMS ತೋರಿಸಿದ ತಕ್ಷಣವೇ ಅದನ್ನು ಧೃಡೀಕರಿಸಿ ಕೆಲವೇ ನಿಮಿಷಗಳಲ್ಲಿ ಕೊಂಚವೂ ನೋವಾಗದಂತೆ ಕೋವಿಶೀಲ್ಡ್ ಎಂಬ ಲಸಿಕೆಯನ್ನು ಹಾಕಿಯೇ ಬಿಟ್ಟಿದ್ದರು. ಲಸಿಕೆ ಹಾಕಿಸಿಕೊಳ್ಳುತ್ತಿರುವ ಫೋಟೋವೊಂದನ್ನು ತೆಗೆಯಲು ಅಲ್ಲಿಯೇ ಇದ್ದ ಸಿಬ್ಬಂಧಿಯೊಬ್ಬರನ್ನು ಕೇಳಿಕೊಂಡಾಗ ಅವರೂ ಸಹಾ ನಗು ಮುಖದಿಂದಲೇ ಈ ಫೋಟೋವೊಂದನ್ನು ತೆಗೆದುಕೊಟ್ಟರು.

ಲಸಿಕೆ ಹಾಕಿಸಿಕೊಂಡ ನಂತರ ಅರ್ಧ ಗಂಟೆ ಅಲ್ಲಿಯೇ ಕುಳಿತು ಕೊಳ್ಳಲು ಸೂಚಿಸುವುದಲ್ಲದೇ,  ಲಸಿಕೆ ಹಾಕಿಸಿಕೊಂಡವರ ಆರೋಗ್ಯದಲ್ಲಿನ ಏರಿಳಿತದ ಬಗ್ಗೆ ನಿಗಾ ವಹಿಸಲು ಸೂಚಿಸುತ್ತಾರೆ. ಕೊವಿಡ್-19 ಲಸಿಕೆ ಹಾಕಿಸಿಕೊಂಡ ವ್ಯಕ್ತಿಯಲ್ಲಿ ಯಾವುದೇ ರೀತಿಯ  ಅಲರ್ಜಿ ಮತ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂಬುದು ಖಾತ್ರಿಯಾದ ನಂತರವೇ ಅವರನ್ನು ಲಸಿಕಾ ಕೇಂದ್ರದಿಂದ ಹೊರಹೋಗಲು ಅನುವು ಮಾಡಿಕೊಡಲಾಗುತ್ತದೆ. 

WhatsApp Image 2021-04-09 at 5.14.32 PMಲಸಿಕೆ ಹಾಕಿಸಿಕೊಂಡ ಒಂದೆರಡು ದಿನಗಳಲ್ಲಿ ಜ್ವರ,  ಶೀತ ಮತ್ತು ಆಯಾಸದಂತಹ ಕೆಲವು ಅಡ್ಡಪರಿಣಾಮಗಳು ಬಂದರೂ ಅದಕ್ಕೆ ಭಯ ಅಥವಾ ಆತಂಕ ಪಡುವ ಅವಶ್ಯಕತೆ ಇಲ್ಲ. ಇದು ಸಹಜ ಪ್ರಕ್ರಿಯೆ ಎಂದು ತಿಳಿ ಹೇಳುವುದಲ್ಲದೇ, ಮುಂದಿನ 28 ದಿನಗಳಲ್ಲಿ ಮತ್ತೊಮ್ಮೆ ಎರಡನೇ ಲಸಿಕೆಯನ್ನು ಹಾಕಿಸಿಕೊಳ್ಳಲು ತಪ್ಪದೇ ಬರಬೇಕೆಂದು ಆತ್ಮೀಯತೆಯಿಂದ ಬೀಳ್ಕೊಡುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.

ಅಕಸ್ಮಾತ್ Registration ಮಾಡಿಕೊಳ್ಳದೇ ನೇರವಾಗಿ ಹೋದರೂ ಲಸಿಕೆಯನ್ನು ಹಾಕುತ್ತಾರೆ. ಹಾಗೆ ಮುಂಗಡವಾಗಿ Register ಮಾಡಿಕೊಳ್ಳುವುದರಿಂದ ಲಸಿಕಾ ಕೇಂದ್ರದಲ್ಲಿ ನಮ್ಮ ವಿವರಗಳನ್ನು ಮತ್ತೊಮ್ಮೆ ಕೊಡಬೇಕಾದ ಸಮಯವನ್ನು ಉಳಿಸ ಬಹುದಾಗಿದೆ.

ಲಸಿಕೆ ಹಾಕಿಸಿಕೊಂಡು ಸುರಕ್ಷಿತವಾಗಿ ಮನೆಗೆ ಬಂದ ನಾನು  ಅನಗತ್ಯವಾದ ತೊಂದರೆ ತೆಗೆದುಕೊಳ್ಳುವುದು ಬೇಡ ಎಂದು  48 ಗಂಟೆಗಳ ಕಾಲ ಯಾವುದೇ ರೀತಿಯ ದೈಹಿಕ ವ್ಯಾಯಾಮ ಮಾಡದೇ ಆರಾಮಾಗಿ ಕಾಲ ಕಳೆದೆ.  ಚುಚ್ಚು ಮದ್ದನ್ನು ಚೆನ್ನಾಗಿ ಕೊಟ್ಟಿದ್ದ ಕಾರಣ ನನ್ನ ಎಡತೋಳಿನಲ್ಲಿ ಯಾವುದೇ ರೀತಿಯ ನೋವು ಕಾಣಿಸದಿದ್ದರೂ ಮೊದಲ ದಿನ ಸ್ವಲ್ಪ ಮೈ ಬೆಚ್ಚಗಿದ್ದು ಸುಮಾರು 98-100 ಡಿಗ್ರಿ ಇತ್ತಾದರೂ ಎರಡನೆಯ ದಿನ ಯಾವುದೇ ರೀತಿಯ ಸಮಸ್ಯೆಯು ಕಾಣಿಸಲಿಲ್ಲ.

ಸರ್ಕಾರದ ವತಿಯಿಂದ ಸದ್ಯಕ್ಕೆ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆಯನ್ನು ಹಾಕುವ ಆಭಿಯಾನ ಜಾರಿಯಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ವಯೋಮಾನದವರಿಗೂ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತದೆ.

ಅಕಸ್ಮಾತ್ ಯಾವುದೇ ವಯೋಮಾನದವರು ತುರ್ತಾಗಿ ಲಸಿಕೆ ಹಾಕಿಸಿಕೊಳ್ಳ ಬೇಕೆಂದು ಇಚ್ಚಿಸಿದಲ್ಲಿ  ಎಲ್ಲಾ ನಗರದ ಆಯ್ದ ಖಾಸಗೀ ಆಸ್ಪತ್ರೆಗಳಲ್ಲಿ 250/- ರೂಪಾಯಿಗಳಲ್ಲಿ ಹಾಕಿಸಿಕೊಳ್ಳಬಹುದಾದ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ನಮ್ಮಲ್ಲಿ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ  ಎರಡು ಮಾದರಿಯ ಕೊರೊನಾ ಲಸಿಕೆಗಳನ್ನು ಬಳಸಲಾಗುತ್ತಿದ್ದು ಎರಡೂ ಸಹಾ  ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಸುರಕ್ಷಿತವಾಗಿದೆ. ಈ ಲಸಿಕೆಗಳು ವೈರಸ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುವುದಲ್ಲದೇ,  ಬಾಹ್ಯ ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಇದು ಸುಲಲಿತವಾಗಿ ಆಗಬೇಕೆಂದರೆ ಎಲ್ಲರೂ ತಪ್ಪದೇ ಎರಡೂ ಲಸಿಕೆಗಳನ್ನು ಹಾಕಿಸಿಕೊಳ್ಳಲೇ ಬೇಕಾಗಿದೆ.

ಇನ್ನು ಲಸಿಕೆ ಹಾಕಿಸಿಕೊಂಡ ಸ್ವಲ್ಪ ದಿನಗಳ ನಂತರವೇ ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ವೃದ್ದಿಸುವ ಕಾರಣ ಲಸಿಕೆ ಹಾಕಿಸಿಕೊಂಡ  ಕೂಡಲೇ ಕೂರೋನಾದಿಂದ ಸುರಕ್ಷಿತ ಎಂದು ಯಾರೂ ಭಾವಿಸದೇ, ಈಗ ವಹಿಸುತ್ತಿರುವ ಮುಂಜಾಗ್ರತಾ ಕ್ರಮಗಳ್ಳನ್ನು  ಮುಂದುವರಿಸಲೇ ಬೇಕಾಗಿದೆ.  ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಹೊರಗೆ ಓಡಾಡುವಾಗ ಮೂಗು ಮುಚ್ಚುವಂಟೆ ಸದಾಕಾಲವೂ ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ತೊಳೆಯುವುದು, ಅನತ್ಯವಾಗಿ ಮುಖ ಮತ್ತು ಮೂಗುಗಳನ್ನು ಮುಟ್ಟಿಕೊಳ್ಳುವುದನ್ನು ತಡೆಗಟ್ಟಬೇಕಾಗಿದೆ.

ವಿಶ್ವದ ಎರಡನೇ  ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ  ಮತ್ತು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮಟ್ಟದ ಈ ಲಸಿಕೆಯ ಅಭಿಯಾನವನ್ನು ನಮ್ಮ ದೇಶದಲ್ಲಿ ಸರ್ಕಾರದ ವತಿಯಿಂದ ಅತ್ಯಂತ ಸುರಕ್ಷಿತವಾಗಿ ಆರಂಭಿಸಲಾಗಿದೆ. ಯಾರೋ ಮೂರನೇ ವ್ಯಕ್ತಿಗಳ ಅನಗತ್ಯ ಮಾತುಗಳಿಗೆ ಕಿವಿಗೊಡದೇ, ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ದೇಶವನ್ನು ಕೂರೋನಾದಿಂದ ಅತೀ ಶೀಘ್ರದಲ್ಲಿಯೇ ಮುಕ್ತವನ್ನಾಗಿಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

ಕಾಲ ಹೀಗೇ  ಇರುವುದಿಲ್ಲ

ಸ್ವಲ್ಪ ದಿನಗಳಾದ ನಂತರ, ಯಾರೂ ನಮ್ಮಲ್ಲಿ ಈ ವಿಷಯಗಳ ಬಗ್ಗೆ ವಿಚಾರಿಸುವುದೇ ಇಲ್ಲಾ

  • ನೀವು ಎಷ್ಟು ಹಣ ಸಂಪಾದಿಸಿದ್ದೀರೀ?
  • ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?
  • ನಿಮ್ಮಲ್ಲಿ ಎಷ್ಟು ಮತ್ತು ಯಾವ ಕಾರುಗಳಿವೆ? ಅಂತಾ,

ಅದರ ಬದಲು ಎಲ್ಲರೂ ಕೇಳುವುದು ಕೇವಲ ಎರಡೇ ಪ್ರಶ್ನೆಗಳು

  • ನಿಮ್ಮ ಆರೋಗ್ಯ ಹೇಗಿದೆ?
  • ನಿಮ್ಮ ಮಕ್ಕಳು ಏನು ಮಾಡ್ತಾ ಇದ್ದಾರೆ?

ಹಾಗಾಗಿ ಈ ಕರೋನಾ ಲಾಕ್ ಡೊನ್ ಸಮಯದಲ್ಲಿ ಚೆನ್ನಾಗಿ ಊಟ ತಿಂಡಿ ಮಾಡಿ, ಸ್ವಲ್ಪ ವ್ಯಾಯಾಮಾನೂ ಮಾಡಿ , ಮನೆಯಿಂದ ಹೊರಗೆ ಬರದೇ, ಮನೆಯಲ್ಲಿಯೇ ಲವಲವಿಕೆಯಿಂದ  ಮಡದಿ ಮಕ್ಕಳೊಂದಿಗೆ  ಚಟುವಟಿಕೆಯಿಂದ ಸಂತೋಷವಾಗಿ ಕಾಲ ಕಳೆಯಿರಿ. ಈ ಸಮಯದಲ್ಲಿ ಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ಕಲಿಸಿಕೊಡಿ. ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪರಿಚಯಿಸಿ. ಏಕಂದರೆ ಇಂದಿನ ಮಕ್ಕಳೇ ನಾಳೇ ನಾಡಿನ ಸತ್ಪ್ರಜೆಗಳು. ಯಥಾ ರಾಜಾ ತಥಾ ಪ್ರಜಾ ಎನ್ನುವುದರ ಜೊತೆಗೆ ಯಥಾ ಪ್ರಜಾ ತಥಾ ದೇಶ ಎನ್ನುವುದೂ ಈಗ ಅನ್ವಯವಾಗುವ ಹೊಸಾ ಮಾತು

ಆರೋಗ್ಯ  ಇದ್ರೇ, ಹಣ ಸಂಪಾದನೆ ಮಾಡ ಬಹುದೇ  ಹೊರತು,

ಹಣದಿಂದ ಆರೋಗ್ಯವನ್ನು  ಖಂಡಿತವಾಗಿಯೂ ಕೊಳ್ಳಲಾಗುವುದಿಲ್ಲ.

kala

ಏಕೆಂದರೆ,  ಕಾಲ ಹೀಗೇ  ಇರುವುದಿಲ್ಲ. ಸದಾಕಾಲವೂ ಬದಲಾಗುತ್ತಲೇ ಇರುತ್ತದೆ.

 

 

ಏನಂತೀರೀ?

ವಿಶ್ವ ಆರೋಗ್ಯ ದಿನಾಚರಣೆ 2020

WHD1ವಿಶ್ವ ಆರೋಗ್ಯ ದಿನವು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು, ಪ್ರತಿವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ. ಆರೋಗ್ಯದ ಕಾಳಜಿ ಕುರಿತಾಗಿ ವಿಶ್ವಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷವೂ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ವೆಂದು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

2020 ರಲ್ಲಿ, ವಿಶೇಷವಾಗಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ವಿಶ್ವದಾದ್ಯಂತ ಹರಡಿರುವ ಮಹಾಮಾರಿ ಕೊರೋನಾದ ವಿರುದ್ಧ ಆರೋಗ್ಯ ರಕ್ಷಣೆ ನೀಡುವಲ್ಲಿ ಹಗಲಿರಳೂ ಶ್ರಮವಹಿಸುತ್ತಿರುವ ವೈದ್ಯರು, ದಾದಿಯರು, ಶುಶ್ರೂಷಕಿಯರು ಮತ್ತು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರ ಪ್ರಮುಖ ಪಾತ್ರದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಅವರ ಕಾರ್ಯಪಡೆಗಳನ್ನು ಬಲಪಡಿಸಲು ಕರೆ ನೀಡುತ್ತದೆ.

VHD3ಉತ್ತಮ ರೀತಿಯ ಬದುಕಿಗೆ ಆರೋಗ್ಯವೂ ಅತ್ಯಗತ್ಯ. ಆರೋಗ್ಯವಿದ್ದಲ್ಲಿ ಮಾತ್ರವೇ ಆಯುಷ್ಯ ಎಂಬುದನ್ನು ಎಲ್ಲರೂ ಅರಿತು ಕೊಳ್ಳಬೇಕು. ಇತ್ತೀಚೆಗೆ ಕೂರೂನಾ ಕುರಿತಂತೆ ಕುಚೋದ್ಯವಾಗಿ, ದೊಡ್ಡ ಫಜೀತಿ ಆಗಿದೆ ಮಾರ್ರೆ. ಆಗಾಗ ಕೈ ತೊಳೆದು ತೊಳೆದೂ, ಕೈಯಲ್ಲಿರುವ ಧನ ರೇಖೆಯೇ ಅಳಿಸಿಹೋಗುತ್ತಿದೆ. ಕೈ ತೊಳಿಲಿಲ್ಲಾಂದ್ರೆ ಆಯುಷ್ಯ ರೇಖೆಗೆ ಅಳಿಸಿ ಹೋಗುವ ಭಯ ಎಂಬ ಸಂದೇಶವನ್ನು ಹರಿಬಿಟ್ಟರು. ಅದಕ್ಕೆ ಪ್ರತ್ಯುತ್ತರವಾಗಿ ಕೈಇದ್ದರೆ ಮಾತ್ರವೇ ಧನರೇಖೆ ಕಾಣೋದು. ಮೊದಲು ಆಯುಷ್ಯ ಗಟ್ಟಿ ಮಾಡ್ಕೊಳ್ಳೋಣ. ಆಯಸ್ಸು ಇದ್ರೆ ಕೈ ಇರುತ್ತದೆ. ಅದೇ ಕೈಯಿಂದ ಕೈತುಂಬಾ ಹಣವನ್ನು ಎಷ್ಟು ಬೇಕಾದ್ರೂ ಸಂಪಾದಿಸಬಹುದು ಎಂದು ಪ್ರತ್ಯುತ್ತರಿಸಿದೆ.

WHD2ಅದೇಕೋ ಏನೋ, ನಮ್ಮ ದೇಶದಲ್ಲಿ ಆರೋಗ್ಯದ ಕುರಿತಾದ ಅರಿವು ಸ್ವಲ್ಪ ಕಡಿಮೆಯೇ ಎಂಬುದು ವಿಷಾದನೀಯ ಸಂಗತಿ. ಭಾರತ ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದೆ. ದೇಶದ ಜನರ ಆರೋಗ್ಯ ಸುಧಾರಣೆಗಳಿಗೆ ಹಲವಾರು ವರ್ಷಗಳಿಂದ ಹತ್ತಾರು ಕ್ರಮಗಳನ್ನು ತೆಗೆದುಕೊಂಡಿದ್ದರೂ ಆರೋಗ್ಯ ಸುಧಾರಿಸಿಲ್ಲ. ಅದರಲ್ಲೂ ಮಹಿಳೆಯರಲ್ಲಿ ಅನೀಮಿಯಾ, ಇನ್ನೂ ನಿಲ್ಲದ ಬಾಲ್ಯ ವಿವಾಹ ಪದ್ದತಿ, ಆಟ ಆಡಿಕೊಂಡು ನಲಿಯುವ ಚಿಕ್ಕ ವಯಸ್ಸಿಗೇ ಮದುವೆಯಾಗಿ ಮಕ್ಕಳನ್ನು ಹೆರುವುದರಿಂದ, ಹುಟ್ಟುವ ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ರಕ್ತ ಕಣಗಳ ಕೊರತೆ, ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳಲ್ಲಿ ಅಸಂತೃಪ್ತಿ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ ಎಲ್ಲವೂ ತಲೆ ಎತ್ತಿ ನಿಂತಿವೆ. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಬಡತನ ಮತ್ತು ಶಿಕ್ಷಣದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳೇ ಆರೋಗ್ಯದ ಕೆಡುಕಿಗೆ ತಳಹದಿಯಾಗಿದೆ.

ಹಾಗೆಂದ ಮಾತ್ರಕ್ಕೆ ಈ ಸಮಸ್ಯೆಗಳು ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗದೇ, ಪ್ರಪಂಚಾದ್ಯಂತ ಇದೇ ರೀತಿಯ ಸಮಸ್ಯೆಗಳು ಎಲ್ಲ ಕಡೆಯಲ್ಲೂ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಉತ್ತಮ ಆರೋಗ್ಯಕ್ಕಾಗಿ ಸತ್ವಯುತ ಆಹಾರಗಳು, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ-ಬೆಳಕು, ಸ್ವಚ್ಛ ಪರಿಸರ, ನೆಮ್ಮದಿ ಮತ್ತು ಮನರಂಜನೆ ಅತ್ಯಗತ್ಯವಾದದ್ದು.

ನಾವಿಂದು ದೈಹಿಕ, ಮಾನಸಿಕ ಒತ್ತಡದಿಂದ ಜೀವನಶೈಲಿ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕೇವಲ ಆಸ್ಪತ್ರೆ, ಔಷಧ, ವೈದ್ಯರಿಂದಲೇ ಆರೋಗ್ಯ ಸುಧಾರಣೆಯಾಗುತ್ತದೆಂದು ನಂಬಿದರೆ ಅದು ತಪ್ಪು ಕಲ್ಪನೆ. ರೋಗ ಬಾರದಂತೆ ತಡೆಗಟ್ಟುವಿಕೆಯೇ ಚಿಕಿತ್ಸೆಗಿಂತ ಉತ್ತಮವಾದುದು. ಆದ್ದರಿಂದ ಪ್ರತಿಯೊಬ್ಬರೂ ಈ ಕೆಳಗೆ ತಿಳಿಸಿದಂತೆ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಚ್ಚ ಅರೋಗ್ಯದತ್ತ ಹರಿಸೋಣ ಚಿತ್ತ.

  • ರಾತ್ರಿ ಬೇಗ ಮಲಗೋಣ ಮತ್ತು ಬೆಳಿಗ್ಗೆ ಬೇಗ ಏಳೋಣ. ಅರೋಗ್ಯವಂತ ಮನುಷ್ಯರಿಗೆ ಕನಿಷ್ಟ 6 -7 ಗಂಟೆ ನಿದ್ರೆ ಅವಶ್ಯಕತೆಯಿದ್ದು, ಮಕ್ಕಳು, ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತರಿಗೆ ಮಾತ್ರ ಅದಕ್ಕಿಂತ ಹೆಚ್ಚಿನ ನಿದ್ದೆಯ ಅಗತ್ಯವಿದೆ.
  • ಬ್ರಾಹ್ಮಿಮುಹೂರ್ತದಲ್ಲೆದ್ದು (5-5.45ರೊಳಗೆ) ಕನಿಷ್ಠ 650 ಮಿ.ಲೀಟರ್ ನಿಂದ 1.2 ಲೀಟರ್ ಉಗುರು ಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯುವುದು ಉತ್ತಮ ಅಭ್ಯಾಸ
  • ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಅಥವಾ ಟೀ ಬೇಡ. ಎದ್ದ ತಕ್ಷಣ ದಿನನಿತ್ಯದ ಶೌಚಾದಿ ಕರ್ಮಗಳನ್ನು ಮುಗಿಸಿ ಸ್ವಲ್ಪ ಕಾಲ ದೀರ್ಘ ನಡಿಗೆ ಅಥವಾ ವ್ಯಾಯಾಮ ಮಾಡಿ ಎದ್ದು2 ಘಂಟೆಯಾದ ನಂತರ ಯಾವುದಾದರೂ ಹಣ್ಣನ್ನು ಅಥವಾ ತಿಂಡಿಯನ್ನು ಸೇವಿಸುವುದು ಉತ್ತಮ.
  • ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ತಪ್ಪಿಸಬಾರದು. ಕಾಫಿ, ಟೀ ಕುಡಿಯಲೇ ಬೇಕಿದ್ದಲ್ಲಿ ತಿಂಡಿ ಆದ ನಂತರ ಕನಿಷ್ಟ ಒಂದುವರೆ ಗಂಟೆ ಬಿಟ್ಟು ಕುಡಿಯಿರಿ.
  • ಬೆಳಗಿನ ಉಪಹಾರದಲ್ಲಿ ಮಾಮೂಲಿ ಇಡ್ಲಿ, ದೋಸೆ, ಉಪ್ಪಿಟ್ಟು ಇತ್ಯಾದಿಗಳ ಜೊತೆಗೆ ಯಾವುದಾದರೊಂದು ಋತುವಿಗನುಗುಣವಾದ ತಾಜಾಹಣ್ಣು, ತರಕಾರಿ ಸಲಾಡ್, ಸ್ವಲ್ಪ ಒಣಹಣ್ಣುಗಳಿರಲಿ. ಜೊತೆಗೆ ಮೊಳಕೆ ಕಾಳುಗಳಿರಲಿ. ಜಂಕ್ ಪುಡ್ ಗಳಿಂದ ಮತ್ತು ಕರಿದ ಕುರುಕಲು ಪದಾರ್ಥಗಳನ್ನು ನಿರ್ಭಂಧಿಸೋಣ.
  • ಊಟಕ್ಕೆ ಅಥವಾ ತಿಂಡಿಗೆ ಕನಿಷ್ಟ ಅರ್ಧ ಗಂಟೆ ಮೊದಲು ನೀರು ಕುಡಿಯುವುದನ್ನು ನಿಲ್ಲಿಸೋಣ ಮತ್ತು ಊಟವಾದ ನಂತರ 2 ತಾಸು ಬಿಟ್ಟು ಕುಡಿಯೋಣ. ಊಟದ ಜೊತೆಗೆ ನೀರು ಕುಡಿಯುವುದು ಮತ್ತು ಊಟದ ಮಧ್ಯ ಮಾತನಾಡದಿರುವುದು ಒಳಿತು.
  • ಬೆಳಿಗ್ಗೆ 8 ಘಂಟೆಯೊಳಗೆ ತಿಂಡಿ, ಮಧ್ಯಾಹ್ನ 1-2 ಗಂಟೆಯೊಳಗೆ ಊಟದಲ್ಲಿ ಮುದ್ದೆ/ರೊಟ್ಟಿ/ಚಪಾತಿ, ಅನ್ನಾ, ಸಾರು, ಪಲ್ಯ, ಕೋಸಂಬರಿ, ಇತ್ಯಾದಿ ಒಳಗೊಂಡಿರಲಿ ಮತ್ತು ರಾತ್ರಿ 8 ಘಂಟೆಯೊಳಗೆ ರಾತ್ರಿಯ ಲಘುಬೋಜನ ಸೇವಿಸಬೇಕು.
  • ಒಮ್ಮೆಲೇ ಅತಿಯಾಗಿ ತಿನ್ನುವುದರ ಬದಲು ಅದೇ ಆಹಾರವನ್ನು ಪ್ರತೀ ಎರಡು ಗಂಟೆಗಳಿಗೊಮ್ಮೆ ತಿಂದಲ್ಲಿ ಉತ್ತಮವಾಗಿ ಜೀರ್ಣವಾಗಿ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ
  • ಇನ್ನು ಸೇವಿಸುವ ಯಾವುದೇ ಆಹಾರವನ್ನು ನಿಧಾನವಾಗಿ ಅಗಿದು ಜಗಿದು (ಕನಿಷ್ಠ 20-25 ಬಾರಿ) ಸೇವಿಸೋಣ. ನಮ್ಮ ಬಾಯಿಗಳಲ್ಲಿ ಹಲ್ಲುಗಳಿರುವುದೇ ಹೊರತು, ಹೊಟ್ಟೆಯಲ್ಲಿಲ್ಲ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಜೀರ್ಣಕ್ರಿಯೆ ಸುಲಲಿತವಾಗಿ ಆಗಿ ಮಲಬದ್ಧತೆಯಾಗುವುದಿಲ್ಲ ಮತ್ತು ಜೊತೆಗೆ ಬೊಜ್ಜು ಬರುವುದಿಲ್ಲ.
  • ರಾತ್ರಿ ಊಟಮಾಡಿದ ತಕ್ಷಣವೇ ಮಲಗಲು ಹೋಗದೇ ಕನಿಷ್ಟ ಪಕ್ಷ ಊಟವಾದ ನಂತರ 2 ಗಂಟೆ ಆದ ಮೇಲೆ ನಿದ್ದೆ ಮಾಡೋಣ. ಅಂದರೆ ಸುಮಾರು 8 ಗಂಟೆಗೆ ಊಟ ಮಾಡಿ 10 ಗಂಟೆಗೆ ನಿದ್ದೆ ಮಾಡೋಣ. ಈ ಮಧ್ಯದಲ್ಲಿ ಸ್ವಲ್ಪ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಮನರಂಜನೆ ಇರಲಿ.
  • ನಮ್ಮ ಆಹಾರದಲ್ಲಿ 5 ಬಿಳಿ ವಿಷಗಳು ಅಂದರೆ, ಸಕ್ಕರೆ, ಮೈದಾ, ಬಿಳಿಅಕ್ಕಿ, ಉಪ್ಪು, ಸಂಸ್ಕರಿಸದೇ ಇರುವ ಹಾಲು (ಹಾಲಿನ ಬದಲು ಕಡೆದ ಮಜ್ಜಿಗೆ ಸೇವನೆ ಅತ್ಯುತ್ತಮ) ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸೋಣ.
  • ಈಗಾಗಲೇ ನಾವು ಬಳಸುತ್ತಿರುವ ಅನೇಕ ಆಹಾರಗಳಿಂದ ಹಲವಾರು ರಾಸಾಯನಿಕಗಳು ನಮ್ಮ ಶರೀರವನ್ನು ಸೇರುತ್ತಿವೆ. ಅದರ ಜೊತೆಗೆ ಕೃತಕ ಬಣ್ಣ, ಪ್ರಿಸರ್ವೇಟಿವ್‌ ಬಳೆಸಿದ ಆಹಾರಗಳನ್ನು ತಿನ್ನುವುದನ್ನು ನಿಲ್ಲಿಸೋಣ.
  • ಆದಷ್ಟೂ ತಾಜ ತಾಜಾ ಆಹಾರಗಳನ್ನು ಸೇವಿಸುವ ಮೂಲಕ ಫ್ರಿಡ್ಜನಲ್ಲಿಟ್ಟ ತಂಪು ಪಾನಿಯಗಳು, ಇನ್ನಿತರ ರೆಡಿಮೇಡ್ ಪಾನಿಯಗಳು ಬೇಡ. ನಮ್ಮ ಆಹಾರದಲ್ಲಿ ಧನಾತ್ಮಕ ಆಹಾರ ಅಂದರೆ ಹೆಚ್ಚು ಹೆಚ್ಚು ಪ್ರಕೃತಿದತ್ತ ಹಣ್ಣು, ತರಕಾರಿ ಸೇವನೆ ಇರಲಿ.
  • ದಿನದಲ್ಲಿ ಕನಿಷ್ಟ 3-4 ಲೀಟರ್ ನೀರು ಸೇವನೆ ಅಗತ್ಯ. ಯಾಕೆಂದರೆ 7 ಮೀಟರ್ ಉದ್ದದ ಜೀರ್ಣಾಂಗ ವ್ಯೂಹದ ಶುದ್ಧತೆಗಾಗಿ ಕನಿಷ್ಠ 4 ಲೀಟರ್ ನೀರು ಅಗತ್ಯ. ರಾತ್ರಿ 7 ಗಂಟೆಗೆ ನೀರು ಕುಡಿಯುವುದನ್ನು ನಿಲ್ಲಿಸಿ, ಇಲ್ಲವಾದಲ್ಲಿ ಪದೇ-ಪದೇ ನಿದ್ರಾ ಭಂಗವಾಗುತ್ತದೆ.
  • ನೀರು ಆಹಾರಕ್ಕಿಂತ ನಮಗೆ ಹೆಚ್ಚು ಶಕ್ತಿ ಸಿಗುವುದು ಉಸಿರಾಡುವ ಗಾಳಿಯಿಂದ (ಶೇ.54ರಷ್ಟು). ಆದ್ದರಿಂದ ದೀರ್ಘವಾಗಿ ಉಸಿರಾಡಲು ಪ್ರಯತ್ನಿಸಿ.
  • ಲಂಘನಂ ಪರಮೌಷಧಂ ಎಂದರೆ ಅನೇಕ ರೋಗಗಳಿಗೆ ಉಪವಾಸವೇ ಮದ್ದು ಎನ್ನುತ್ತವೆ ಆಯುರ್ವೇದ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನದೇ, ಅಗಾಗ ವ್ರತಾಚರಣೆಯ ರೂಪದಲ್ಲಿ ಉಪವಾಸಗಳನ್ನು ಮಾಡೋಣ.
  • ಕಷ್ಟಪಟ್ಟು ಬೆವರು ಸುರುಸುವಿಕೆ ಇಂದು ಮಾಯವಾಗಿದೆ. ಎಲ್ಲವೂ ಕೇವಲ ಎರಡು ಬೆರಳಿನಿಂದ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಕನಿಷ್ಟ 1 ಗಂಟೆಗಳ ಕಾಲ ವಾಕಿಂಗ್, ಸ್ವಿಮ್ಮಿಂಗ್, ಜಾಗಿಂಗ್, ಯೋಗ, ಡ್ಯಾನ್ಸಿಂಗ್ ಇತ್ಯಾದಿಗಳನ್ನು ಮಾಡಬೇಕು. ಎಲ್ಲರೂ ಒಟ್ಟಿಗೆ ಸೇರಿ ಸ್ನೇಹಿತರೊಂದಿಗೆ ಮಾಡುವ ವ್ಯಾಯಾಮ ಅಥವಾ ಯೋಗಾಭ್ಯಾಸಗಳನ್ನು ಹೆಚ್ಚು ದಿನ ಮುಂದುವರೆಸಬಹುದು.
  • ಮಧ್ಯಪಾನ, ಧೂಮಪಾನ ಇನ್ನಿತರ ದುಶ್ಚಟಗಳಿಂದ ದೂರವಿರಿ.
  • ಧನಾತ್ಮಕ ಚಿಂತನೆಯಿಂದ, ಪರೋಪಕಾರದಿಂದ, ಅಧ್ಯಾತ್ಮಿಕ ಚಿಂತನೆಗಳಿಂದ, ಸಜ್ಜನರ ಸಂಗದಿಂದ, ಮನಸ್ಸು ಸಂತುಲತೆಯಿಂದಿದ್ದಾಗ ಆರೋಗ್ಯ ಸುಧಾರಿಸುವುದು.

ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ ಎನ್ನುತ್ತದೆ ನಮ್ಮ ಆರೋಗ್ಯ ಶಾಸ್ತ್ರ. ಹಾಗಾಗಿ ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಗೊಳ್ಳಬಹುದಾದರೆ ಅದೇ ಆರೋಗ್ಯ. ಆದರೆ ಇಂದಿನ ಕಲಿಯುಗದಲ್ಲಿ ನಾವು ಮನುಷ್ಯರು ಮಾತ್ರ ಬೇರೆ ಜೀವಿಗಳಿಗಿಂತ ಭಿನ್ನವಾಗಿ ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಇದೇ ನಮ್ಮ ಅನಾರೋಗ್ಯದ ಗುಟ್ಟು. ಆದ್ದರಿಂದ ನಾವು ಪರಿಸರವನ್ನು ಪೋಷಿಸಿ ಪ್ರಕೃತಿನಿಯಮಗಳಿಗನುಗುಣವಾಗಿ ಜೀವನ ನಡೆಸಿ ಒಳ್ಳೆಯ ಗಾಳಿ, ಒಳ್ಳೆಯ ನೀರು, ಒಳ್ಳೆಯ ಆಹಾರ ಇವುಗಳನ್ನು ಪಡೆದು ಉತ್ತಮ ದೈಹಿಕ ಚಟುವಟಿಕೆಯೊಂದಿಗೆ ಧನಾತ್ಮಕ ಚಿಂತನೆಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಪಡೆಯೋಣ.

ಏನಂತೀರೀ?