ರಾಹುಲ್ ತೆವಾಟಿಯ

2014ರ ಐಪಿಲ್ ಹರಾಜು ಪ್ರಕ್ರಿಯೆಯಲ್ಲಿ ಹರಿಯಾಣದ ಫರೀದಾಬಾದಿನ 21 ವಯಸ್ಸಿನ ಅಷ್ಟೇನು ಖ್ಯಾತನಾಗಿರದಿದ್ದ ಆಲ್ರೌಂಡರ್ ರಾಹುಲ್ ತೆವಾಟಿಯಾ ಎಂಬ ಯುವಕನನ್ನು ಮೂಲ ಬೆಲೆಯಾದ 10 ಲಕ್ಷಗಳಿಗೆ ರಾಜಸ್ಥಾನ್ ರಾಯಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸುಮಾರು ಮೂರು ವರ್ಷಗಳ ಕಾಲ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನು ಆಡಿಸಿ ಡಗ್ ಔಟಿನಲ್ಲಿ ನೀರನ್ನು ಹೊತ್ತು ತರಲು ಬಳಸಿಕೊಳ್ಳುತ್ತದೆ. 2017ರಲ್ಲಿ ರಾಜಸ್ಥಾನ್ ತಂಡದಿಂದ ಹೊರಬಿದ್ದು ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾದರೂ ಹೆಚ್ಚಿನ ಬದಲಾವಣೆ ಇಲ್ಲದೇ ಒಂದೇ ವರ್ಷಕ್ಕೆ ಅವರನ್ನು ಕೈಬಿಟ್ಟಿತ್ತು.

2018ರ ಹರಾಜಿನಲ್ಲಿ 24 ವರ್ಷದ ಲೆಗ್ ಸ್ಪಿನ್ನರ್‌ ರಾಹುಲ್ ತೆವಾಟಿಯಾ ಮೂಲ ಬೆಲೆ ಕೇವಲ 10 ಲಕ್ಷ ರೂ.ಗಳಿಗೆ ಆರಂಭವಾಗಿ ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ನಿಮಿಷಗಳಲ್ಲಿ ಅವರ ಬೆಲೆ 2.5 ಕೋಟಿ ರೂ.ಗೆ ಏರುತ್ತದೆ. ಅಷ್ಟು ಕೊಡಲು ಸಾಧ್ಯವಿಲ್ಲವೋ ಅಥವಾ ಅಷ್ಟೊಂದು ಹಣಕ್ಕೆ ಅವರು ಅರ್ಹರಲ್ಲವೋ ಎನುವಂತೆ ಕಿಂಗ್ಸ್ 11 ಪಂಜಾಬ್ ಅವರನ್ನು ಕೈಬಿಟ್ಟ ಕಾರಣ ಲೆಗ್ ಸ್ಪಿನ್ ಬೋಲಿಂಗ್ ಅಲ್ಲದೇ ಕೆಳ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಬಲ್ಲರು ಎಂಬ ಕಾರಣದಿಂದ ದೆಹಲಿ ಡೇರ್‌ಡೆವಿಲ್ಸ್ ತಂಡ ಅವರನ್ನು 3 ಕೋಟಿಗಳಿಗೆ ಖರೀದಿಸುತ್ತದೆ.

ಅದೃಷ್ಟ ತನ್ನ ಪರವಾಗಿಲ್ಲದಿದ್ದರೇ ಏನು ತಾನೇ ಮಾಡಲು ಸಾಧ್ಯ ಎನ್ನುವಂತೆ, ಅಮಿತ್ ಮಿಶ್ರಾರಂತಹ ಹಿರಿಯ ಅನುಭವಿ ಲೆಗ್ ಸ್ಪಿನ್ನರ್ ಅದಾಗಲೇ ದೆಹಲಿಯ ತಂಡದಲ್ಲಿದ್ದ ಕಾರಣ ಮತ್ತೆ ರಾಹುಲ್ ತೆವಾಟಿಯಾ ಅವರಿಗೆ ತಂಡದ 11ರ ಬಳಗದಲ್ಲಿ ಸೂಕ್ತ ಸ್ಥಾನ ಸಿಗುವುದಿಲ್ಲ. ಸಿಕ್ಕ ಒಂದೆರಡು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲವಾದ ಕಾರಣ ಮತ್ತೆ 2019ರ ಹರಾಜಿಯಲ್ಲಿ ಭಾಗವಹಿಸಿ, ತಮ್ಮ ಮೊದಲ ತಂಡವಾದ ರಾಜಸ್ಥಾನದ ಪಾಲಾಗಿ ಅದ್ಭುತವಾದ ಓಹೋ ಎನ್ನುವಂತಹ ಪ್ರದರ್ಶನವಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡಿದ ಕಾರಣ 2020ರಲ್ಲೂ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿ ಮುಂದುವರೆಯುತ್ತಾರೆ.

ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್-13ನೇ ಆವೃತ್ತಿಯಲ್ಲಿ ರಾಜಸ್ಥಾನ್ ತಂಡದ ಪ್ರಮುಖ ಆಟಗಾರನಾಗುವುದರಲ್ಲಿ ಯಶಸ್ವಿಯಾಗಿ, ಚನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ 3 ವಿಕೆಟ್ ಪಡೆಯುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಎಲ್ಲರೂ ವಿಕೆಟ್ ಪಡೆದಾಗ ಆರ್ಭಟಿಸಿದರೆ ಈತ ಮಾತ್ರ ತನ್ನೆರಡೂ ಕಿವಿಯನ್ನು ಹಿಡಿದುಕೊಂಡು ಸಂಭ್ರಮಿಸುವ ಪರಿ ಆಶ್ಚರ್ಯಕರವಾಗಿದೆ.
ಇನ್ನು ಎರಡನೇ ಪಂದ್ಯ, ತಮಗೆ 2.5 ಕೋಟಿ ಕೊಟ್ಟು ತೆಗೆದುಕೊಳ್ಳುವಷ್ಟು ಅರ್ಹರಲ್ಲ ಎಂಬ ಕಾರಣದಿಂದಾಗಿ ಕೈಬಿಟ್ಟ ಕಿಂಗ್ಸ್ 11 ಪಂಜಾಬ್ ವಿರುದ್ಧದ ಪಂದ್ಯವಾಗಿರುತ್ತದೆ. ಆ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಅಬ್ಬರಕ್ಕೆ ಸಿಲುಕಿ ಮೊದಲ ಓವರಿನಲ್ಲಿಯೇ 19 ರನ್ಗಳನ್ನು ಚಚ್ಚಸಿಕೊಂಡ ನಂತರ ಬೋಲಿಂಗ್ ಮಾಡುವ ಅವಕಾಶವೇ ಸಿಗದೇ ಪಂಜಾಬ್ ತಂಡ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದಾಗ ಬಹುತೇಕರು ಪಂದ್ಯ ರಾಜಸ್ಥಾನ್ ತಂಡದ ಕೈಬಿಟ್ಟಿತು ಎಂದೇ ಭಾವಿಸಿರುತ್ತಾರೆ.

ನಾಯಕ ಸ್ಮಿತ್ ಮತ್ತು ಸಂಜು ಸಾಂಸ್ಯನ್ ಭರ್ಜರಿಯ ಬ್ಯಾಟಿಂಗ್ ಮೂಲಕ ಉತ್ತಮ ರನ್ ಗಳಿಸಿ, ಕಡೆಯ ಮೂರು ಓವರುಗಳಲ್ಲಿ ರಾಜಸ್ಥಾನ್ ತಂಡಕ್ಕೆ ಗೆಲ್ಲಲು ಕೊನೆಯ ಮೂರು ಓವರ್ಗಳಲ್ಲಿ ರಾಜಸ್ಥಾನಕ್ಕೆ 51 ರನ್ಗಳನ್ನು ಬೇಕಿರುತ್ತದೆ. ಅಲ್ಲಿಯವರೆಗೂ 19 ಎಸತಗಳನ್ನು ಎದುರಿಸಿ ಕೇವಲ 8 ರನ್ಗಳನ್ನು ಗಳಿಸಿದ್ದ ತೆವಾಟಿಯಾನನ್ನು ಎಲ್ಲರೂ ಹಳಿದುಕೊಳ್ಳುತ್ತಿರುವಾಗಲೇ, ಇದ್ದಕ್ಕಿದ್ದಂತೆಯೇ 18ನೇ ಓವರ್ನಲ್ಲಿ ಶೆಲ್ಡನ್ ಕೋರ್ಟೇಲ್ ಬೋಲಿಂಗಿನಲ್ಲಿ ಮೊದಲ ನಾಲ್ಕು ಎಸತಗಳನ್ನು ಭರ್ಜರಿಯಾಗಿ ಸಿಕ್ಸರ್ ಬಾರಿಸಿದ್ದಲ್ಲದೇ ಮತ್ತೇ ಆರನೇ ಎಸೆತವನ್ನೂ ಮತ್ತೊಮ್ಮೆ ಸಿಕ್ಸರ್ ಹೀಗೆ 6,6,6,6,6,0,6 ಎತ್ತಿದ್ದಲ್ಲದೇ, ನಂತರ ಕೇವಲ 11 ಬಾಲ್ಗಳಲ್ಲಿ ಅರ್ಧಶತಕ ಪೂರೈಸುತ್ತಾರೆ. ಒಟ್ಟು 7 ಭರ್ಜರಿ ಸಿಕ್ಸರ್ ಗಳೊಂದಿಗೆ 31 ಎಸತೆಗಳಲ್ಲಿ 53ರನ್ ಸಿಡಿಸುವ ಮೂಲಕ ರಾಜಸ್ಥಾನ ತಂಡ ದಾಖಲೆಯ ಮೊತ್ತವನ್ನು ಇನ್ನೂ 3 ಎಸೆತಗಳು ಇರುವಂತೆಯೇ ಗಳಿಸುವ ಮೂಲಕ ಗೆಲುವಿನ ದಡ ತಲುಪಿಸಿದ್ದಲ್ಲದೇ ಕೈಜಾರುತ್ತಿದ್ದ ಪಂದ್ಯದ ಗತಿಯನ್ನೇ ಬದಲಿಸಿದ ರಾಹುಲ್ ತೆವಾಟಿಯಾ ಹೀರೋ ಎನಿಸಿಕೊಳ್ಳುತ್ತಾರೆ.

ಈ ಮೂಲಕ ನಾನು ತೆವಾಟಿಯಾ ನನ್ನನ್ನೇ ತಂಡದಿಂದ ಕೈ ಬಿಟ್ಟೆಯಾ? ಎನ್ನುವಂತೆ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದ ಮತ್ತು ತಮ್ಮ ಸಾಮರ್ಥ್ಯವನ್ನು ಹೀನಾಯವಾಗಿ ಅಂದಾಜು ಮಾಡಿದ್ದ ಪಂಜಾಬ್ ತಂಡದವರ ಎದುರೇ ಭರ್ಜರಿಯಾಗಿ ಪ್ರದರ್ಶನ ನೀಡುವ ಮೂಲಕ ದ್ವೇಷವನ್ನು ತೀರಿಸಿಕೊಂಡಿದ್ದಾರೆ ಎನ್ನುವುದಕ್ಕಿಂತಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದರೆ ತಪ್ಪಾಗಲಾರದು. ಮೊದಲು ಎಚ್ಚರಿಕೆಯ ಆಟವಾಡಿ, ಕೊನೆಯ ಮೂರು ಓವರ್ಗಳಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುವ ಮೂಲಕ ಸೋಲಿನ ಸುಳಿಯಲ್ಲಿದ್ದ ರಾಜಸ್ಥಾನ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ ಈ ಯುವ ಆಟಗಾರ ರಾಹುಲ್ ತೆವಾಟಿಯಾನ ಆಟ ಎಲ್ಲರನ್ನೂ ಮೋಡಿ ಮಾಡಿದ್ದಲ್ಲದೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಅವಶ್ಯಕವಾಗಿರುವ ಒಬ್ಬ ಸಮರ್ಥ ಆಲ್ರೌಂಡರ್ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ತಮಗಿದೆ ಎಂಬುದನ್ನು ಸಾಭೀತು ಪಡಿಸಿದ್ದಾರೆ.

ಕಾಕತಾಳೀಯವೆಂದರೆ, ಹೆಸರಿಗೆ ಪಂಜಾಜ್ ತಂಡವಾದರೂ ಕರ್ನಾಟಕದವರೇ ಹೆಚ್ಚಾಗಿರುವ ತಂಡ ವಿರುದ್ಧ ಹೀರೋ ಎನಿಸಿಕೊಂಡ ರಾಹುಲ್ ತೆವಾಟಿಯಾ ಹರ್ಯಾಣದ ಪರವಾಗಿ 2013 ರಲ್ಲಿ ಕರ್ನಾಟಕದ ವಿರುದ್ಧವೇ ರಣಜಿ ಟ್ರೋಫಿ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದ್ದಾರೆ. ಸಾಂಪ್ರದಾಯಿಕವಾದ ಶೈಲಿಯ ಲೆಗ್ ಸ್ಪಿನ್ನರ್, ಚೆಂಡನ್ನು ಹಾರಿಸುವುದಕ್ಕಿಂತಲೂ ಗಾಳಿಯಲ್ಲಿ ತೇಲೀಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದು ದಾಂಡಿಗರಿಗೆ ದುಃಸ್ವಪ್ನವಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ.

ಅದಕ್ಕೇ ಹೇಳೋದು ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಯಾರಿಗೆ ಗೊತ್ತು? ಹಾಗಾಗಿ ಯಾರ ಸಾಮರ್ಥ್ಯ ಎಲ್ಲಿ ಮತ್ತು ಹೇಗೆ ಪ್ರಕಟವಾಗುತ್ತದೆಯೋ ಯಾರು ಬಲ್ಲರು? ರಾಹುಲ್ ತೆವಾಟಿಯಾ ಅವರ ಈ ಪ್ರದರ್ಶನ ಅದಕ್ಕೊಂದು ಉತ್ತಮ ಉದಾರಣೆ. ಅದಕ್ಕಾಗಿಯೇ ಯಾರನ್ನು ಕಡಿಮೆ ಅಂದಾಜು ಮಾಡಬಾರದು ಅಲ್ವೇ?

ಏನಂತೀರೀ?

ಕೃಷ್ಣಪ್ಪ ಗೌತಮ್

ಯಾವುದೇ ಕ್ಷೇತ್ರದಲ್ಲಿ, ಯಾರಾದರೂ ಮಹತ್ತರ ಸಾಧನೆ ಮಾಡಿದಲ್ಲಿ ಅದನ್ನು ಆ ಕೂಡಲೇ ನಾಲ್ಕಾರು ಜನ ಗಮನಿಸಿ ಅವರ ಬಗ್ಗೆ ಸ್ಪೂರ್ತಿದಾಯಕವಾಗಿ ಪ್ರೋತ್ಸಾಹಕರ ಮಾತುಗಳನ್ನು ಆಡಿದಲ್ಲಿ, ಆ ಸಾಧನೆ ಮಾಡಿದವರಿಗೆ ಉತ್ತೇಜನ ದೊರೆತು ಮತ್ತಷ್ಟೂ ಉತ್ತಮವಾದ ಸಾಧನೆ ಮಾಡುವ ಹುಮಸ್ಸು ಮೂಡುತ್ತದೆ. ದುರದೃಷ್ಟವಶಾತ್, ಭಾರತ ಮತ್ತು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಾವಳಿಗಳೇ ಅತ್ಯಂತ ಮಹತ್ವ ಪಡೆದದ್ದಕ್ಕೋ ಇಲ್ಲವೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿರ್ಲಕ್ಷದ ಪರಿಣಾಮವಾಗಿಯೋ ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಬೌಲಿಂಗ್  ಕೃಷ್ಣಪ್ಪ ಗೌತಮ್ ಅವರ ಅತೀ ದೊಡ್ಡ ಸಾಧನೆ ಯಾರಿಗೂ ಅಷ್ಟಾಗಿ ತಿಳಿಯದೇ ಹೋದದ್ದು ನಿಜಕ್ಕೂ ವಿಷಾಧನೀಯ ಮತ್ತು ಒಬ್ಬ ಕ್ರೀಡಾಪಟುವಿಗೆ ಮಾಡಿದ ಅವಮಾನವೇ ಸರಿ. ಬಹುತೇಕ ವೃತ್ತಪತ್ರಿಕೆಗಳು ತಮ್ಮ ಕ್ರೀಡಾ ಪೇಜಿನಲ್ಲಿ ಸಣ್ಣದಾಗಿ ಇದರ ಬಗ್ಗೆ ಮಾಹಿತಿ ಒದಗಿಸಿದರೆ, ದೃಶ್ಯ ಮಾಧ್ಯಮದಲ್ಲಿ ಇದು ಬಹು ದೊಡ್ಡ ಸುದ್ದಿಯಾಗದೇ ಹೋದದ್ದು ನಿಜಕ್ಕೂ ದುಃಖಕರ. ಟಿ 20 ಪಂದ್ಯಗಳು ಎಂದರೆ ಹೊಡಿ ಬಡೀ ಆಟಕ್ಕೆ ಪ್ರಸಿದ್ಧಿಯಾಗಿವೆ. ಸಿಕ್ಕ ಅವಕಾಶಗಳಲ್ಲಿ ಸಾಕಷ್ಟು ರನ್ ಗಳಿಸಬೇಕು. ಮತ್ತು ಬೋಲಿಂಗ್ ಮಾಡುವಾಗ ಹೆಚ್ಚು ರನ್ ಕೊಡದೇ ಆದಷ್ಟೂ ವಿಕೆಟ್ ಕೀಳಬೇಕು. ಬೋಲರ್ ಆಗಿ ಮೂರ್ನಾಲ್ಕು ವಿಕೆಟ್ ತೆಗೆದರೆಂದರೆ ಅದು ಬ್ಯಾಟ್ಸ್ಮನ್ ಶತಕ ಗಳಿಸಿದ ಹಾಗೆ. ಇಲ್ಲಿ ಬ್ಯಾಟಿಂಗ್ನಲ್ಲಿ ಶತಕ ಬಾರಿಸಿದ್ದಲ್ಲದೇ ಬೋಲಿಂಗ್ನಲ್ಲಿ 8 ವಿಕೆಟ್ ಪಡೆದು ಡಬಲ್ ಸೆಂಚುರಿ ಹೊಡೆದ ಹಾಗಿದೆ. ಒಟ್ಟಿನಲ್ಲಿ ಕೆ. ಗೌತಮ್ ಇದೊಂದೇ ಟಿ 20 ಪಂದ್ಯದಲ್ಲಿ ತ್ರಿಶತಕ ಬಾರಿಸಿದಂತಿದೆ.

gautam2
2008 ರಲ್ಲಿ T20 ಐಪಿಎಲ್ ಟೂರ್ನಿ ಆರಂಭವಾದ ಒಂದು ವರ್ಷದ ನಂತರ ಮೈಸೂರಿನ ಕಟ್ಟ ಕಡೆಯ ಯುವರಾಜ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕನಸಿನ ಕೂಸಾಗಿ ಕರ್ನಾಟಕದ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ಒದಗಿಸಲು ಕರ್ನಾಟಕ ಪ್ರೀಮಿಯರ್ ಲೀಗ್ ಟಿ 20 ಲೀಗ್‌ ಆರಂಭಿಸಲಾಯಿತು. ಮಧ್ಯದಲ್ಲಿ ಒಂದೆರಡು ವರ್ಷ ಕುಂಟುತ್ತಾ ಸಾಗಿದರೂ ರಾಜ್ಯದ ನಾನಾ ಪ್ರಾಂತದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಕೆಪಿಎಲ್ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಕೆಪಿಎಲ್ ಕರ್ನಾಟಕದ ಒಳನಾಡಿನ ಕಚ್ಚಾ ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆಯಾಗಿ ಪರಿಣಮಿಸಿದೆ ಮತ್ತು ಅವರ ಕೌಶಲ್ಯಗಳನ್ನು ದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸಲು ಸಹಕಾರಿಯಾಗಿದೆ. ಪ್ರಸ್ತುತ ಕರ್ನಾಟಕ ರಾಜ್ಯದ ಅನೇಕ ಪ್ರತಿಭಾವಂತ ಕ್ರಿಕೆಟಿಗರು ಕೆಪಿಎಲ್ನಲ್ಲಿ ತೋರಿದ ಸಾಧನೆಯಿಂದಾಗಿ ರಾಜ್ಯ, ಐಪಿಎಲ್ ಮತ್ತು ದೇಶದ ಇತರೇ ತಂಡಗಳಿಗೆ ಆಯ್ಕೆಯಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಜಗಜ್ಜಾಹೀರಾತು ಮಾಡಿದ್ದಾರೆ.

ಕಳೆದ ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಿವಮೊಗ್ಗ ಲಯನ್ಸ್ ಮತ್ತು ಬಳ್ಳಾರಿ ಟಸ್ಕರ್ಸ್‌ ವಿರುದ್ಧದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ ಪರವಾಗಿ ಒನ್ ಡೌನ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಕೆ. ಗೌತಮ್ ದೊರೆತ ಜೀವದಾನವನ್ನು ಸಂಪೂರ್ಣವಾಗಿ ಬಳೆಸಿಕೊಂಡು ಕೇವಲ 56 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಒಳಗೊಂಡ ಕರ್ನಾಟಕ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ವೇಗದ ಶತಕವನ್ನು ಬಾರಿಸಿ ತಂಡದ ಮೊತ್ತ ಕೇವಲ 17 ಓವರಿನಲ್ಲಿ 203-3 ರನ್ ಗಳಿಸಲು ಸಹಕರಿಸಿದರು. ನಂತರ ಮತ್ತೆ ಒನ್ ಡೌನ್ ಬೋಲಿಂಗ್ ಮಾಡಿದ ಪ್ರತಿಭಾವಂತ ಆಲ್‌ರೌಂಡರ್ ಕೇವಲ 4 ಓವರ್ನಲ್ಲಿ 15 ಕೊಟ್ಟು 8 ವಿಕೆಟ್ ಪಡೆದು ಎದುರಾಳಿ ತಂಡವನ್ನು ಕೇವಲ 133 ರನ್ಗಳಿಗೆ ನಿಯಂತ್ರಿಸಿ 70 ರನ್ಗಳ ಜಯವನ್ನು ತಂದಿತ್ತಿದ್ದಾರೆ. ಟಿ 20 ಪಂದ್ಯಗಳಲ್ಲಿ ಅದೂ ಒಂದೇ ಪಂದ್ಯದಲ್ಲಿ ಈ ರೀತಿಯಾಗಿ ಶತಕ ಮತ್ತು 8 ವಿಕೆಟ್ ಪಡೆದ ಉದಾಹರಣೆ ಇಲ್ಲವೇ ಇಲ್ಲ. ಖಂಡಿತವಾಗಿಯೂ ಈ ಪ್ರದರ್ಶನ ಟಿ 20 ಕ್ರಿಕೆಟ್‌ನಲ್ಲಿ ಅತ್ಯುತ್ತಮವಾದ ಆಲ್ರೌಂಡರ್ ಪ್ರದರ್ಶನ ಎಂದು ದಾಖಲೆ ಪುಸ್ತಕ ಸೇರ ಬಹುತಾಗಿತ್ತು. ದುರದೃಷ್ಟವಶಾತ್ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಟಿ 20 ಪಂದ್ಯಗಳು ಎಂದು ಮಾನ್ಯತೆ ಮಾಡದಿರುವ ಕಾರಣ ಇಂತಹದೊಂದು ಪ್ರದರ್ಶನ ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಯಾಗದೆ ಕೇವಲ ಪೇಪರಿನಲ್ಲಿಯೇ ಉಳಿದು ಹೋದದ್ದು ನಿಜಕ್ಕೂ ದುರದೃಷ್ಟಕರ. ಟಿ 20 ಪಂದ್ಯಗಳು ಎಂದರೆ ಹೊಡಿ ಬಡೀ ಆಟಕ್ಕೆ ಪ್ರಸಿದ್ಧಿಯಾಗಿವೆ. ಸಿಕ್ಕ ಅವಕಾಶಗಳಲ್ಲಿ ಸಾಕಷ್ಟು ರನ್ ಗಳಿಸಬೇಕು. ಮತ್ತು ಬೋಲಿಂಗ್ ಮಾಡುವಾಗ ಹೆಚ್ಚು ರನ್ ಕೊಡದೇ ಆದಷ್ಟೂ ವಿಕೆಟ್ ಕೀಳಬೇಕು. ಬೋಲರ್ ಆಗಿ ಮೂರ್ನಾಲ್ಕು ವಿಕೆಟ್ ತೆಗೆದರೆಂದರೆ ಅದು ಬ್ಯಾಟ್ಸ್ಮನ್ ಶತಕ ಗಳಿಸಿದ ಹಾಗೆ. ಇಲ್ಲಿ ಬ್ಯಾಟಿಂಗ್ನಲ್ಲಿ ಶತಕ ಬಾರಿಸಿದ್ದಲ್ಲದೇ ಬೋಲಿಂಗ್ನಲ್ಲಿ 8 ವಿಕೆಟ್ ಪಡೆದು ಡಬಲ್ ಸೆಂಚುರಿ ಹೊಡೆದ ಹಾಗಿದೆ. ಒಟ್ಟಿನಲ್ಲಿ ಕೆ. ಗೌತಮ್ ಇದೊಂದೇ ಟಿ 20 ಪಂದ್ಯದಲ್ಲಿ ತ್ರಿಶತಕ ಬಾರಿಸಿದಂತಿದೆ.

ಬೆಂಗಳೂರಿನ ಒಂದು ಸಣ್ಣ ಪ್ರದೇಶದಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಅಪ್ಪಟ ಕನ್ನಡಿಗ ಗೌತಮ್ ದೇಶದ ಆಫ್ ಸ್ಪಿನ್ ದಂತಕತೆ ಎರಪಲ್ಲಿ ಪ್ರಸನ್ನರವರ ಕಣ್ಣಿಗೆ ಬಿದ್ದು ಅವರ ಗರಡಿಯಲ್ಲಿ ಆಫ್ ಸ್ಪಿನ್ ಬೋಲಿಂಗ್ ಕರಗತ ಮಾಡಿಕೊಂಡರು. ಹರ್ಭಜನ್ ಸಿಂಗ್ ಅವರ ಅಪ್ಪಟ ಅಭಿಮಾನಿಯಾದ ಗೌತಮ್ ಅವರ ಬೋಲಿಂಗ್ ಶೈಲಿಯನ್ನೇ ಅನುಕರಿಸುತ್ತಾರೆ. ಕೇವಲ ಬಲಗೈ ಆಫ್ ಸ್ಪಿನ್ನರ್ ಆಗಿರದೆ, ಮಧ್ಯಮ ಅಥವಾ ಕೆಳ ಕ್ರಮಾಂಕದಲ್ಲಿ ಅತ್ಯಂತ ರಭಸವಾಗಿ ಬ್ಯಾಟ್ ಬೀಸಿ ಅತ್ಯಂತ ತ್ವರಿತವಾಗಿ ರನ್ ಗಳಿಸಬಲ್ಲ ಬಲಗೈ ಬ್ಯಾಟ್ಸ್ಮನ್. 2008ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಸ್ಪಿನ್ ಅಭ್ಯಾಸಕ್ಕಾಗಿ ನೆಟ್ ಪ್ರಾಕ್ಟೀಸ್ ಬೋಲರ್ ಆಗಿ ಕರೆಯಲ್ಪಟ್ಟ ಗೌತಮ್ ಅಲ್ಲಿಂದ ಹಿಂದಿರುಗೆ ನೋಡಲೇ ಇಲ್ಲ. ಕಿರಿಯರ ಮಟ್ಟದಲ್ಲಿ ರಾಜ್ಯ ತಂಡಕ್ಕೆ ಸ್ಥಾನಗಿಟ್ಟಿಸಿ ನಂತರ 2012 ರಲ್ಲಿ ತಮ್ಮ 24ನೇ ವಯಸ್ಸಿಗೆ ಕರ್ನಾಟಕ ಪರ ಉತ್ತರಪ್ರದೇಶದ ವಿರುದ್ಧ ರಣಜಿ ಪಂದ್ಯಾವಳಿಯ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಆ ಪಂದ್ಯದಲ್ಲಿ ಹೆಚ್ಚಿನ ಸಾಧನೆ ಮಾಡದೇ ಕೇವಲ 2 ವಿಕೆಟ್ ಪಡೆದರು. ಕರ್ನಾಟಕ ರಾಜ್ಯದಲ್ಲಿ ಕ್ರಿಕೆಟ್ ಪ್ರತಿಭೆಗಳ ಕಣಜವಾಗಿರುವ ಕಾರಣ, ಈ ಸಾಧನೆ ಸಾಲದಾಗದೇ ತಂಡದಿಂದ ಕೈ ಬಿಡಲ್ಪಟ್ಟರು.

ರಾಜ್ಯತಂಡದಿಂದ ಕೈ ಬಿಡಲ್ಪಟ್ಟರೂ, ಎದೆ ಗುಂದದೆ, ಧೈರ್ಯ ಗೆಡದೆ ತಮ್ಮ ಸತತ ಪರಿಶ್ರಮವನ್ನು ಮುಂದುವರಿಸಿ 2016ರ ಕೆಪಿಎಲ್ ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ ಪರಿಣಾಮವಾಗಿ ರಾಜ್ಯ ತಂಡಕ್ಕೆ ಮತ್ತೊಮ್ಮೆ 2016ರಲ್ಲಿ ಪುರರಾಯ್ಕೆಗೊಂಡರು. ಆ ಋತುವಿನಲ್ಲಿ 27 ವಿಕೆಟ್ ಕಬಳಿಸುವ ಮೂಲಕ ಕರ್ನಾಟಕದ ಪರ ಪ್ರಮುಖ ಸ್ಪಿನ್ ಬೋಲರ್ ಆಗಿ ರೂಪುಗೊಂಡು ರಾಷ್ಟ್ರೀಯ ಆಯ್ಕೆಗಾರ ಕಣ್ಣಿಗೆ ಬಿದ್ದು ಆಸ್ಟ್ರೇಲಿಯಾ ವಿರುದ್ಧದ ಪ್ರವಾಸ ಪಂದ್ಯಕ್ಕಾಗಿ ಭಾರತದ ಎ ತಂಡಕ್ಕೆ ಆಯ್ಕೆಯಾಗಿ ಕೊಟ್ಟ ಆವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಕೇವಲ 68 ಎಸೆತಗಳಲ್ಲಿ 74 ರನ್ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

gautam4

ತದನಂತರ ಕರ್ನಾಟಕ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿ ತಮ್ಮ ಆಲ್ರೌಂಡರ್ ಪ್ರದರ್ಶನದಿಂದ ಅನೇಕ ಪಂದ್ಯಗಳನ್ನು ಗೆಲ್ಲಿಸುವುದರಲ್ಲಿ ಮಹತ್ತರ ಪಾತ್ರವಹಿಸಿದರು. ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಆಟಗಾರರು ವಿಫಲದಾದರೂ ಕೆಳ ಕ್ರಮಾಂಕದ ಆಟಗಾರರನ್ನು ಹುರಿದುಂಬಿಸುತ್ತ ತಮ್ಮ ಬಿರುಸಾದ ಬ್ಯಾಟಿಂಗ್ನಿಂದ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರಲ್ಲದೇ, ತಮ್ಮ ಪರಿಣಾಮಕಾರಿ ಬೋಲಿಂಗ್ನಿಂದಾಗಿ ಎದುರಾಳಿಗಳಲ್ಲಿ ನಡುಕು ಹುಟ್ಟಿಸಿ ಸೋಲಬಹುದಾಗಿದ್ದ ಅಥವಾ ಡ್ರಾ ಆಗಬಹುದಾಗಿದ್ದ ಪಂದ್ಯಗಳನ್ನು ರೋಚಕವಾಗಿ ಗೆಲ್ಲಿಸಿಕೊಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಗೌತಮ್.

ಇಂತಹ ಅನರ್ಘ್ಯ ಪ್ರತಿಭಾ ಗಣಿಯನ್ನು 2017 ರಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಆಶ್ಚರ್ಯಕರವಾಗಿ ಅತ್ಯಂತ ಹೆಚ್ಚಿನ ಬೆಲೆಗೆ ಖರೀದಿತಾದರೂ ಇಡೀ ಐಪೆಲ್ ಪಂದ್ಯವಳಿಗಳಲ್ಲಿ ಅವರನ್ನು ಯಾವುದೇ ಪಂದ್ಯಗಳಲ್ಲಿ ಆಡಿಸದೆ, ಅವರ ಪ್ರತಿಭಾ ಪ್ರದರ್ಶನಕ್ಕೆ ತಣ್ಣೀರೆರಚಿತು. ಆದರೆ 2018ರ ಐಪಿಎಲ್ ಹರಾಜಿನಲ್ಲಿ ಕ್ರಿಕೆಟ್ ಜಗತ್ತಿನ ಗೋಡೆ ಎಂದೇ ಹೆಸರುವಾಸಿಯಾಗಿರುವ ನಮ್ಮ ರಾಜ್ಯದವರೇ ಆದ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ಪರ ಗೌತಮ್ ಅವರನ್ನು ಸಮಂಜಸವಾದ ದರದಲ್ಲಿ ಖರೀದಿಸಿ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿಸಿದರು. ಆಡಿದ ಮೊದಲ ಪಂದ್ಯದಿಂದಲೇ ಪ್ರಬುದ್ಧ ಬ್ಯಾಟಿಂಗ್ ಮತ್ತು ಬೋಲಿಂಗ್ ಮಾಡಿದ ಪರಿಣಾಮವಾಗಿ ತಂಡದ ಪ್ರಮುಖ ಆಟಗಾರನಾಗಿ ಗುುರುತಿಸಲ್ಪಟ್ಟಿದ್ದಾರೆ ಮತ್ತು ಮಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ಭರವಸೆಯನ್ನು ಮೂಡಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.

ತಮ್ಮ ಆಲ್ರೌಂಡ್ ಪ್ರದರ್ಶನದಿಂದಾಗಿ, ರಾಜ್ಯ ತಂಡಕ್ಕಿಂತ ಇಂಡಿಯಾ ಎ, ಭಾರತದ ಇತರೇ ತಂಡ, ಇಂಡಿಯಾ ರೆಡ್, ಗ್ರೀನ್, ಅಧ್ಯಕ್ಷರ ಇಲೆವೆನ್ ಹೀಗೆ ಒಂದಲ್ಲಾ ಒಂದು ತಂಡಕ್ಕೆ ಸತತವಾಗಿ ಆಯ್ಕೆಯಾಗುತ್ತಿದ್ದರೂ ನಿರಂತವಾಗಿ ಸ್ಥಿರ ಪ್ರದರ್ಶನ ನೀಡುವುದರಲ್ಲಿ ಯಾಕೋ ಸ್ವಲ್ಪ ಎಡವುತ್ತಿರುವುದು ರಾಜ್ಯ ಕ್ರೀಡಾಸಕ್ತರಲ್ಲಿ ಆತಂಕವನ್ನು ಉಂಟು ಮಾಡಿದೆ. ಬಹುಶಃ ಈ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನದಿಂದ ಮತ್ತು ನಮ್ಮೆಲ್ಲರ ಪ್ರೋತ್ಸಾಹಕರ ಉತ್ತೇಜನದಿಂದ ಮತ್ತೊಮ್ಮೆ ತಮ್ಮ ಲಯ ಕಂಡು ಕೊಂಡು ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ದೇಶದ ಕೀರ್ತಿಪತಾಕೆ ಹಾರಿಸುವಂತಾಗಲೀ ಎಂದು ಹಾರೈಸೋಣ.

ಏನಂತೀರೀ?