2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಭಾರತ ತಂಡದ ಆಟಗಾರರು ಸುಮಾರು ಆರೆಂಟು ತಿಂಗಳುಗಳ ಕಾಲ ಕರೋನಾ ಪ್ರಭಾವದಿಂದಾಗಿ ಯಾವುದೇ ಕ್ರಿಕೆಟ್ ಆಟವಾಡದೇ, ಎಲ್ಲರೂ ನೇರವಾಗಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಮೈ ಕೈ ಸಡಿಲಗೊಳಿಸಿದರು. ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಪ್ರಯಾಣಿಸಿ, ೧೪ ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ 66 ರನ್ ಗಳ ಹೀನಾಯ ಸೋಲನ್ನು ಕಂಡಾಗ, ಭಾರತದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಇನ್ನೂ ಎರಡು ಪಂಡ್ಯಗಳು ಇದೆಯಲ್ಲಾ! ಆಗ ಜಯ ನಮ್ಮದೇ ಎಂದು ಸಮಾಧಾನ ಪಟ್ಟುಕೊಂಡಿದ್ದರು. ಮತ್ತೆ ಎರಡನೇ ಪಂದ್ಯದಲ್ಲೂ 51 ರನ್ ಗಳ ಸೋಲು ಕಂಡಾಗ ಇವರ ಕಥೆ ಇಷ್ಟೇ ಎಂದು ಎಳ್ಳು ನೀರು ಬಿಟ್ಟು ಸುಮ್ಮನಾಗಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಪುಡಿದೆದ್ದ ಭಾರತ ತಂಡ, 13 ರನ್ನುಗಳ ಅಂತರದಲ್ಲಿ ರೋಚವಾಗಿ ಪಂದ್ಯ ಗೆದ್ದಾಗ ಒಂದು ರೀತಿಯ ಸಮಾಧಾನ.

ಗೆಲುವಿನ ನಾಗಲೋಟವನ್ನು ಮುಂದುವರೆಸಿದ ಭಾರತ ತಂಡ ಮೊದಲ ಎರಡು ಟಿ-20 ಪಂದ್ಯಗಳನ್ನು ಗೆದ್ದು ಮೂರನೆಯದ್ದೂ ಕೂದಲೆಳೆಯಲ್ಲಿ ಸೋತಾಗ ಪರವಾಗಿಲ್ಲಪ್ಪಾ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯನ್ನು 2-1 ರಿಂದ ಕೈವಶ ಮಾಡಿಕೊಂಡರೇ ಅದಕ್ಕೆ ಪ್ರತ್ಯುತ್ತರ ನೀಡಿದ ಭಾರತ ತಂಡ ಟಿ-20 ಸರಣಿಯನ್ನು 2-1 ರಿಂದ ಗೆಲ್ಲುವ ಮೂಲಕ ಸಮಬಲದ ಹೋರಾಟ ನೀಡುವ ಮೂಲಕ ನಾಲ್ಕು ಟೆಸ್ಟ್ ಪಂದ್ಯಾವಳಿಯ ಸರಣಿಯನ್ನು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ತಂದೆಯಾಗುವ ಸಂಭ್ರದಲ್ಲಿದ್ದ ಕಾರಣ ಮೊದಲನೇ ಟೆಸ್ಟ್ ನಂತರ ಭಾರತಕ್ಕೆ ಹಿಂದಿರುಗುವುದಾಗಿ ಅದಾಗಲೇ ಪ್ರಕಟಿಸಿಯಾಗಿತ್ತು. ತಂಡದ ಪ್ರಮುಖ ಬ್ಯಾಟ್ಸ್ ಮನ್ ರೋಹಿತ್ ಮತ್ತು ಬೋಲರ್ ಇಶಾಂತ್ ಶರ್ಮಾ ಗಾಯಾಳುಗಳ ಪಟ್ಟಿಯಲ್ಲಿ ಸೇರಿದ್ದ ಕಾರಣ, ಬಿಸಿಸಿಐ ಏಕದಿನ ಸರಣಿಯಲ್ಲಿದ್ದ ಕೆಲವು ಆಟಗಾರರನ್ನು ಮುಂಜಾಗೃತಾ ಕ್ರಮವಾಗಿ ಆಸ್ಟ್ರೇಲಿಯಾದಲ್ಲಿಯೇ ಉಳಿಸಿಕೊಂಡಿತ್ತು. ಹಿಂದಿನ ಸರಣಿಯನ್ನು ಸೋತಿದ್ದ ಕಾರಣ ಶತಾಯ ಗತಾಯ ಈ ಬಾರೀ ಬಾರ್ಡರ್-ಗವಾಸ್ಕರ್ ಸರಣಿಯನ್ನು ಗೆಲ್ಲಲೇ ಬೇಕೆಂದು ನಿರ್ಧರಿಸಿದ್ದ ಆಸ್ಟ್ರೇಲಿಯಾ ಭಾರತದ ವಿರುದ್ಧ ಬಲಿಷ್ಟ ತಂಡವನ್ನೇ ಆಯ್ಕೆಮಾಡಿಕೊಂಡಿತ್ತು. ವಿರಾಟ್ ಇಲ್ಲದ ಭಾರತ ತಂಡ ಆಸ್ಟ್ರೇಲಿಯಾ ತಂಡದ ಎದುರು ಲೆಖ್ಖಕ್ಕೇ ಇಲ್ಲಾ. ಈ ಸರಣಿ 4-0 ಅಂತರದಲ್ಲಿ ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದು ಅಸ್ಟ್ರೇಲಿಯಾದ ಮಾಜಿ ಆಟಗಾರರೆಲ್ಲಾ ಪುಂಖಾನುಪುಂಖವಾಗಿ ಹೇಳಿಕೆ ನೀಡುವ ಮೂಲಕ ಭಾರತದ ತಂಡದ ಮೇಲೆ ಒಂದು ರೀತಿಯ ಒತ್ತಡ ಹೇರುದ್ದರು.

ಮೊದಲನೇ ಟೆಸ್ಟ್ ಪಂದ್ಯ ಹಗಲುರಾತ್ರಿಯ ಪಂದ್ಯವಾಗಿದ್ದು ಟಾಸ್ ಗೆದ್ದ ಭಾರತ ಮೊದಲು ಅಟವಾಡಲು ನಿರ್ಧರಿಸಿತು. ಮೊದಲನೇ ಓವರಿನಲ್ಲಿಯೇ ಪೃಥ್ವೀ ಶಾ ವಿಕೆಟ್ ಒಪ್ಪಿಸಿ ನಡೆದರೆ ಪೂಜಾರಾ ಮತ್ತು ಮಯಾಂಕ್ ಕೂಡಾ ಹೆಚ್ಚು ಹೊತ್ತು ನಿಲ್ಲದೇ ಪೆವಿಲಿಯನ್ ಸೇರಿಕೊಂಡಾಗ ಭಾರತದ ತಂಡದಲ್ಲಿ ಆತಂಕ ಮೂಡಿತ್ತು. ತಂಡದ ನಾಯಕ ವಿರಾಟ್ ಮತ್ತು ಉಪನಾಯಕ ರೆಹಾನೆ ಎಚ್ಚರಿಕೆಯಿಂದ ನಿಂತು ಆಡುವ ಮೂಲಕ ತಂಡ ಉತ್ತಮ ಮೊತ್ತ ಕಲೆ ಹಾಗುವತ್ತ ದಾಪುಗಾಲು ಹಾಕಿತ್ತು. 74 ರನ್ ಗಳಿಸಿದ್ದ ಕೊಹ್ಲಿ ಮತ್ತೊಂದು ಶತಕದತ್ತ ಹೆಜ್ಜೆ ಹಾಗುತ್ತಿದ್ದಾಗಲೇ, ರೆಹಾನೆ ಮಾಡಿದ ತಪ್ಪಿಗಾಗಿ ರನ್ ಔಟ್ ಆಗಬೇಕಾಗಿದ್ದು ಪಂದ್ಯದ ಗತಿಯನ್ನೇ ಬದಲಿಸಿದ್ದಲ್ಲದೇ ಭಾರತ 244 ರನ್ನುಗಳಿಗೆ ಮೊದಲ ಇನ್ನಿಂಗ್ಸ್ ಮುಗಿದಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೈದಾನಕ್ಕೆ ಇಳಿದ ಆಸ್ಟ್ರೇಲಿಯಾ ಆಟಗಾರರು ಆಶ್ವಿನ್, ಉಮೇಶ್ ಮತ್ತು ಬ್ರುಮ್ರಾ ದಾಳಿಗೆ ನಲುಗಿ ಕೇವಲ 191ಕ್ಕೆ ಆಲ್ ಔಟ್ ಆಗುವ ಮೂಲಕ ಭಾರತಕ್ಕೆ ಅಲ್ಪ ಮೊತ್ತದ ಮುನ್ನಡೆ ಲಭಿಸಿತ್ತು. ಭಾರತದ ಎರಡನೇ ಇನ್ನಿಂಗ್ಸಿನಲ್ಲಿ ಹೇಜಲ್ ವುಡ್ಸ್ ಮತ್ತು ಪ್ಯಾಟ್ ಕಮಿನ್ಸ್ ಎಸೆದ ಬೆಂಕಿಯ ಉಂಡೆಗಳಂತೆ ಚೆಂಡಿನ ಎದುರು ತರೆಗಲೆಗಳಂತೆ ಉದುರಿದ ಭಾರತ ತಂಡ ತನ್ನ ಅತ್ಯಂತ ಕನಿಷ್ಠ ಮೊತ್ತವಾದ 36/9 ರನ್ನುಗಳಿಗೆ ಔಟ್ ಆಗಿ, ಆಸ್ಟ್ರೇಲಿಯಾ ಸುಲಭವಾಗಿ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸುವ ಮೂಲಕ ಪಂದ್ಯವನ್ನು ವಶ ಮಾಡಿಕೊಂಡಿತ್ತು. ಗಾಯದ ಮೇಲೆ ಬರೆ ಎಳೆದಂತೆ ತಂಡ ಪ್ರಮುಖ ಬೋಲರ್ ಶಮಿ ಗಾಯಾಳು ಪಟ್ಟಿಯಲ್ಲಿ ಸೇರಿಕೊಂಡಿದ್ದ.

ಮೊದಲ ಪಂದ್ಯ ಹೀನಾಯವಾಗಿ ಸೋತ ನಂತರ ಆಳಿಗೊಂದು ಕಲ್ಲು ಎಂದು ಎಲ್ಲರೂ ಸರಣಿಯನ್ನು ೪-೦ ಅಂತರದಿಂದ ಅಸ್ಟ್ರೇಲಿಯಾ ಪರವಾಗಿಯೇ ಆಗುತ್ತದೆ ಎಂದೇ ಷರಾ ಬರೆದಿದ್ದರು. ತಂಡದ ಪ್ರಮುಖ ಆಟಗಾರರು ಮತ್ತು ನಾಯಕನ ಅನುಪಸ್ಥಿತಿಯಲ್ಲಿ ರಹಾನೆ ತಂಡವನ್ನು ಮುನ್ನೆಡೆಸುವ ಜವಾಬ್ಧಾರಿಯನ್ನು ಹೊತ್ತುಕೊಂಡಿದ್ದರು. ಮೊದಲ ಪಂದ್ಯ ಸುಲಭವಾಗಿ ಗೆದ್ದ ಅತಿಯಾದ ರಣೋತ್ಸಾಹದಲ್ಲಿದ್ದ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ, ಬುಮ್ರಾ, ಅಶ್ವಿನ್ ಮತ್ತು ಸಿರಾಜ್ ಮಾರಕ ಬೋಲಿಂಗ್ ಎದರು 195 ಕ್ಕೆ ಔಟಾದರೆ, ಮೂರು ಜೀವದಾನಗಳ ಲಾಭ ಪಡೆದ ನಾಯಕ ರಹಾನೆ, ರವೀಂದ್ರ ಜಡೇಜರ ಆಕರ್ಶಕ ಅರ್ಧ ಶಕಕದ ನೆರವಿನಿಂದಾಗಿ ಜವಾಬ್ದಾರಿಯುತ ಮೊತ್ತವಾದ 326 ರನ್ ಗಳಿಸಿತು. ಎರಡನೇ ಇನ್ನಿಂಗ್ಸಿನಲ್ಲಿ ಮತ್ತೊಮ್ಮೆ ಭಾರತೀಯರ ಸಂಘಟಿನ ಬೋಲಿಂಗ್ ಪರಿಣಾಮ 200ಕ್ಕೆಲ್ಲಾ ಔಟಾದಾಗ, ಅಗತ್ಯವೈದ್ದ 70ರನ್ನುಗಳನ್ನು 2 ವಿಕೆಟ್ ನಷ್ಟಕ್ಕೆ ಗಳಿಸಿ ಭಾರತ ತಂಡ ಅಭೂತ ಪೂರ್ವವಾಗಿ ೮ ವಿಕೆಟ್ ಗಳ ವಿಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿದ್ದಲ್ಲದೇ ಮುಂದಿನ ಪಂದ್ಯಗಳಲ್ಲಿ ಪುಟಿದೇಳುವ ಮುನ್ನೆಚ್ಚರಿಕೆಯನ್ನೂ ನೀಡಿತು. ಈ ಮಧ್ಯೆ ಉಮೇಶ್ ಯಾದವ್ ಗಾಯಾಳುವಾದ ಕಾರಣ ಭಾರತಕ್ಕೆ ಮರಳಬೇಕಾಯಿತು

ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮ ತಂಡಕ್ಕೆ ಮರಳಿ ಬಂದ ಕಾರಣ ತಂಡದಲ್ಲಿ ಅಮಿತೋತ್ಸಾಹ ಮೂಡಿತ್ತು. ಮತ್ತೆ ಟಾಸ್ ಗೆದ್ದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಆಕರ್ಷಕ ಶತಕ ಮತ್ತು ಲಾಬೂಸ್ಚಂಗ್ನೆ ಅರ್ಧಶತಕದ ನೆರವಿನಿಂದ ಗೌರವಯುತ ಮೊತ್ತವಾದ 338 ರನ್ ಗಳಿಸಿದರೆ ಅದಕ್ಕುತ್ತರವಾಗಿ ಗಿಲ್ ಮತ್ತು ಪೂಜಾರ ಅವರ ಅರ್ಧ ಶತಕದ ನೆರವಿನಿಂದ ಭಾರತ ಕೇವಲ 244 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತು. ಎರಡನೇ ಇನ್ನಿಂಗ್ಸಿನಲ್ಲಿ 6 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿ ಡಿಕ್ಲೇರ್ ಮಾಡಿ ಕೊಂಡ ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು ೪೧೦ ರನ್ನುಗಳ ಸವಾಲನ್ನು ನೀಡಿತು. ಈ ಸವಾಲನ್ನು ಧನಾತ್ಮಕವಾಗಿ ಸ್ವೀಕರಿಸಿದ ಭಾರತದ ಆರಂಭಿಕ ಆಟಗಾರರು ಉತ್ತಮ ಆಟವಾಡಿ ಭರವಸೆ ಮೂಡಿಸಿದರಾದರೂ102-3 ವಿಕೆಟ್ ಕಳೆದುಕೊಂಡಾಗ ಮರುಭೂಮಿಯಲ್ಲಿ ಓಯಸಿಸ್ಸ್ ಕಂಡಂತೆ ರಿಷಭ್ ಪಂತ್ ಆಕ್ರಮಣ ಆಟವಾಡಿ 97 ರನ್ ಗಳಿಸಿ ಪಂದ್ಯವನ್ನು ಗೆಲ್ಲುವ ಭರವಸೆ ಮೂಡಿಸಿ ಶತಕ ವಂಚಿತರಾಗಿ ಔಟಾದಾಗ ಗೆಲ್ಲುವ ಕನಸನ್ನು ಕೈಬಿಟ್ಟು ಪಂದ್ಯ ಉಳಿಸಿಕೊಂಡರೆ ಸಾಕಪ್ಪಾ ಎನ್ನುವ ಸ್ಥಿತಿಯಾಗಿತ್ತು. ಈ ಮಧ್ಯದಲ್ಲಿ ಜಡೇಜಾ ಕೂಡಾ ಬೆರಳಿಗೆ ಪೆಟ್ಟು ಮಾಡಿಕೊಂಡು ಗಾಯಳು ಪಟ್ಟಿಗೆ ಸೇರಿಯಾಗಿತ್ತು. ಈಗ ಉಳಿದಿದ್ದ ಹನುಮ ವಿಹಾರಿ ಮತ್ತು ರವಿ‍ಚಂದ್ರ ಆಶ್ಚಿನ್ ಮಾತ್ರ. ಭಾರತದ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಾ ಕೈ ಬಿಟ್ಟು ಹೋಯಿತು ಎಂದು ಭಾವಿಸಿದ್ದರೇ, ಆಸ್ಟ್ರೇಲಿಯಾ ಪ್ರೇಕ್ಷಕರು ಭಾರತದ ಆಟಗಾರರ ಮೇಲೆ ವರ್ಣಬೇಧದ ಮೂಲಕ ಅವಹೇಳನ ಮಾಡುವ ಮೂಲಕ ಭಾರತೀಯರ ಛಲವನ್ನು ಕುಗ್ಗಿಸಲು ಪ್ರಯತ್ನಿಸಿದರು. ಈ ನೋವುಗಳನ್ನೆಲ್ಲವನ್ನೂ ನುಂಗಿಕೊಂಡು ಮತ್ತು ಬೆಂಕಿಯಂತೆ ಮೈಮೇಲೆಯೇ ಹಾಕುತ್ತಿದ್ದ ಚೆಂಡುಗಳನ್ನು ಸಮರ್ಥವಾಗಿ ಎದುರಿಸಿದ ವಿಹಾರಿ ಮತ್ತು ಅಶ್ವಿನ್ ಪಂದ್ಯಾ ಡ್ರಾ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದಾಗ ಎಲ್ಲರೂ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತಾಗಿತ್ತು. ಈ ಮಧ್ಯೆ ಭಾರತ ತಂಡದಲ್ಲಿ ಅಶ್ವಿನ್, ಬೂಮ್ರಾ ಮತ್ತು ಹನುಮ ವಿಹಾರಿ ಯೂ ಸಹಾ ಗಾಯಾಳು ಪಟ್ಟಿ ಸೇರಿಕೊಂಡಿದ್ದರು.

ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಲಿಷ್ಟ ತಂಡದೆದರು ಹನ್ನೊಂದು ಆಟಗಾರರನ್ನು ಆಯ್ಕೆ ಮಾಡುವುದೇ ಭಾರತಕ್ಕೆ ತಲೆ ನೋವಾಗಿತ್ತು. ಇದೇ ಪಂದ್ಯದ ಮೂಲಕ ಏಕದಿನ ಮತ್ತು ಟಿ-20 ಪಂದ್ಯಾವಳಿಗಳಲ್ಲಿ ಭರವಸೆ ಮೂಡಿಸಿದ್ದ ತಮಿಳುನಾಡಿನ ಟಿ. ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಟೆಸ್ಟ್ ಪಾದಾರ್ಪಣೆ ಮಾದಿದರೆ ಅವರ ಜೊತೆ ಮತ್ತೊಬ್ಬ ವೇಗಿ ಶಾರ್ದೂಲ್ ಠಾಕೂರ್ ಕೂಡಾ ಹನ್ನೊಂದರ ಬಳಗಕ್ಕೆ ಸೇರಿಕೊಂಡು ಸಂಪೂರ್ಣ ಉತ್ಸಾಹಿ ಆದರೆ ಟೆಸ್ಟ್ ಅನನುಭವಿ ಬೋಲಿಂಗ್ ಪಡೆಯಾಗಿತ್ತು. ಮತ್ತೊಮ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಲಾಬೂಸ್ಚಂಗ್ನೆ ಅಕರ್ಷಕ ಶತಕದೊಂದಿಗೆ 369 ರನ್ ಗಳಿಸಿದರೆ, ಭಾರತದ ಪರ ನಟ್ಟು, ಸುಂದರ್ ಮತ್ತು ಶಾರ್ದೂಲ್ ತಲಾ ಮೂರು ವಿಕೆಟ್ ಗಳಿಸಿದ್ದರು. ಈ ಮಧ್ಯೆ ಸೈನಿ ಕೂಡಾ ಗಾಯಾಳುವಾಗಿ ಮೈದಾನದಿಂದ ಹೊರನಡೆದಿದ್ದರು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಮೊತ್ತ 186 ಆಗುವಷ್ಟರಲ್ಲಿ ಪ್ರಮುಖ 6 ಆಟಗಾರರನ್ನು ಕಳೆದುಕೊಂಡು ಇನ್ನೇನು ಹತ್ತಿಪ್ಪತ್ತು ರನ್ ಗಳಿಸುವಷ್ಟರಲ್ಲಿ ಭಾರತ ತಂಡ ಆಲೌಟ್ ಆಗಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಮೊದಲ ಪಂದ್ಯವಾಡುತ್ತಿದ್ದ ಸುಂದರ್ ಚಕ್ರವ್ಯೂಹ ಬೇಧಿಸಿದ ಅಭಿಮನ್ಯುವಿನಂತೆ ಛಲದಿಂದ ಹೋರಾಡಿ 62 ರನ್ ಗಳಿಸಿದರೆ, ಅದಕ್ಕೆ ಅಷ್ಟೇ ಬೆಂಬಲವಾಗಿ ಶಾರ್ದೂಲ್ ಕೂಡ 67 ರನ್ ಗಳಿಸುವ ಮೂಲಕ ಭಾರತ ತಂಡ ಆಚ್ಚರಿಯ ಹೋರಾಟ ತೋರಿ 336 ರನ್ನುಗಳನ್ನು ಗಳಿಸಿತ್ತು.

ಎರಡನೇ ಇನ್ನಿಂಗ್ಸ್ ಅರಂಭಿಸಿದ ಆಸ್ಟ್ರೇಲಿಯಾಕ್ಕೆ ಸಿರಾಜ್ ಮತ್ತು ಶರ್ದೂಲ್ ಅವರ ಧಾಳಿಗೆ ನಲುಗಿ 294 ಕ್ಕೆಲ್ಲಾ ಪತನವಾದಾಗ ಭಾರತಕ್ಕೆ ಪಂದ್ಯ ಗೆಲ್ಲಲು 328 ರನ್ನುಗಳು ಇಲ್ಲವೇ ಪಂದ್ಯ ಉಳಿಸಿಕೊಳ್ಳಲು ಸುಮಾರು 100 ಓವರ್ಗಳನ್ನು ಆಡ ಬೇಕಿತ್ತು. ನಾಯಕ ಮತ್ತು ಉಪನಾಯಕರು ಆವರ ಖ್ಯಾತಿಗೆ ತಕ್ಕಂತೆ ನಿಂತು ಆಡದೆ ಪಟಪಟನೇ ಔಟಾದಾಗ, ಯುವ ಆರಂಭಿಕ ಆಟಗಾರ್ ಶುಭಮನ್ ಗಿಲ್ 91 ರನ್ ಗಳಿಸಿದರೆ ಮತ್ತೊಂದು ತುದಿಯಲ್ಲಿ ತಾಳ್ಮೆಯ ಪ್ರತಿರೂಪವಾಗಿ ಬ್ಯಾಟ್ ಇರುವುದೇ ರಕ್ಷಣಾತ್ಮಕವಾಗಿ ಅಡುವುದಕ್ಕಾಗಿ ಎಂದು ಜವಾಬ್ಧಾರಿಯುತ ೫೬ ರನ್ ಗಳಿಸಿ ಪಂದ್ಯ ಸೋಲುವುದಕ್ಕಿಂದ ಕನಿಷ್ಠ ಪಕ್ಷ ಡ್ರಾ ಮಾಡಿಕೊಂಡರೆ ಸಾಕು ಎನ್ನುವತ್ತ ಪೂಜಾರ ಕೊಂಡೊಯ್ದಿದ್ದರು. ಆದರೆ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಬ್ಯಾಟ್ ಇರುವುದೇ ಭಯಂಕರವಾಗಿ ಬೀಸುವುದಕ್ಕಾಗಿ ಎಂದು ಆಕರ್ಷಕವಾಗಿ ಆಟವಾಡಿ ಮತ್ತೊಂದು ತುದಿಯಲ್ಲಿ ಸತತವಾಗಿ ವಿಕೆಟ್ ಉರುಳುತ್ತಿದ್ದದ್ದನ್ನೂ ಲೆಕ್ಕಿಸಿದೇ 89 ರನ್ ಗಳಿಸುವ ಮೂಲಕ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 329 ರನ್ ಗಳಿಸುವ ಮೂಲಕ ೩ ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಪಡೆದದ್ದಲ್ಲದೇ ಸರಣಿಯನ್ನು ೨-೧ ರ ಮೂಲಕ ಕೈವಶಮಾಡಿ ಕೊಂಡಿತ್ತು.

ಈ ಟೆಸ್ಟ್ ಸರಣಿಯನ್ನು ಅವಲೋಕಿಸಿದಲ್ಲಿ, ತಂಡದ ನಾಯಕನ‌ ಅನುಪಸ್ಥಿತಿಯಲ್ಲಿ, ತಂಡದ ಪ್ರಮುಖ 12 ಆಟಗಾರರು ಗಾಯಾಳುಗಳಾಗಿದ್ದರೂ, ಆಸ್ಟ್ರೇಲಿಯಾದ ಈ ಎಲ್ಲಾ ಹೊಗಳು ಭಟ್ಟರ ಲೆಕ್ಕಾಚಾರವನ್ನೂ ತಲೆ ಕೆಳಗು ಮಾಡಿ, ಅನಾಗರಿಕ ಪ್ರೇಕ್ಷಕರ ದುಂಡಾವರ್ತಿಯ ನಡುವೆಯೂ, ಇಡೀ ತಂಡವಾಗಿ ಆಡಿ, ಆಸ್ಟ್ರೇಲಿಯದಲ್ಲಿಯೇ ಬಾರ್ಡರ್ ಮತ್ತು ಗವಾಸ್ಕರ್ ಸರಣಿಯನ್ನು 2-1 ರಿಂದ ಗೆದ್ದಿದ್ದಲ್ಲದೇ, ವಿಶ್ವ ಟೆಸ್ಟ್ ಸರಣಿಯಲ್ಲಿ ಮತ್ತೆ ಅಗ್ರಗಣ್ಯ ಸ್ಥಾನಕ್ಕೇರಿದ ಭಾರತ ತಂಡದ ಸಾಧನೆ ನಿಜಕ್ಕೂ ಅಪ್ರತಿಮವಾದದ್ದು ಎಂದರೆ ಅತಿಶಯೋಕ್ತಿಯೇನಲ್ಲ.

ಈ ಸರಣಿಯ ಮೂಲಕ ಎಲ್ಲರೂ ಕಲಿಯಬೇಕಾದ ಪಾಠವೇನೆಂದರೆ, ಯಾರ ಸಾಮರ್ಧ್ಯವನ್ನೂ ಕಡೆಗಣಿಸಲಾಗದು. ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಗೊತ್ತಾಗದು ಎನ್ನುವಂತೆ ಯಾವ ಆಟಗಾರ ಯಾವಾಗ ಪ್ರವರ್ಧಮಾನಕ್ಕೆ ಬರುತ್ತಾನೆ ಎನ್ನುವುದು ಗೊತ್ತಾಗುವುದಿಲ್ಲ ಎನ್ನುವುದು ತಿಳಿದು ಬಂದಿತು. ಇದಲ್ಲದೇ ತಂಡಕ್ಕೆ ಯಾವ ಆಟಗಾರನೂ ಅನಿವಾರ್ಯವಲ್ಲ. ತಮ್ಮ ಕೋಳಿ ಕೂಗಿದರೇ ಬೆಳಗಾಗುತ್ತದೆ ಎಂದೇನೂ ಇಲ್ಲ. ಒಬ್ಬ ಆಟಗಾರರಿಲ್ಲದಿದ್ದರೇ ಖಂಡಿತವಾಗಿಯೂ ಆತನ ಸ್ಥಾನವನ್ನು ಸರಿದೂಗಬಲ್ಲ ಮತ್ತೊಬ್ಬ ಆಟಗಾರ ಇದ್ದೇ ಇರುತ್ತಾನೆ. ಅಂತಹವರನ್ನು ಗುರುತಿಸಿದ ಬೇಕಾದ ಗುರುತರ ಜವಾಬ್ಧಾರಿ ತಂಡದ ಆಡಳಿತ ಮಂಡಳಿಯದ್ದಾಗಿರುತ್ತದೆ.

ಸಿಕ್ಕ ಅವಕಾಶಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದನ್ನು ಸಿರಾಜ್, ವಾಷಿಂಗ್ಟನ್, ಶಾರ್ದುಲ್, ಗಿಲ್, ನಟರಾಜನ್ ಅವರು ತೋರಿಸಿಕೊಟ್ಟರೇ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳದಿದ್ದರೆ ಹೇಗೆ ಮೂಲೆ ಗುಂಪಾಗುತ್ತಾರೆ ಎನ್ನುವುದಕ್ಕೆ ಪೃಥ್ವಿ ಶಾ ಮತ್ತು ಮಯಾಂಕ್ ಸಾಕ್ಷಿಗಳಗಿದ್ದಾರೆ.

ಇಡೀ ಸರಣಿಯ ಗೆಲುವು ತಂಡದ ಗೆಲುವಾಗಿದ್ದು ಅದರ ಶ್ರೇಯ ಒಬ್ಬರಿಗೇ ಕೊಡುವಂತಹ ಪ್ರಯತ್ನ ಸಲ್ಲದು. ಈ ಮಧ್ಯೆ ವಿರಾಟ್ ಕೊಹ್ಲಿಯ ಮೇಲಿನ ಕೆಲ ವಯಕ್ತಿಕ ದ್ವೇಷದ ಕಾರಣದಿಂದ ಹಂಗಾಮಿ ನಾಯಕ ರಹಾನೆ ನೇತೃತ್ವದಲ್ಲಿ ಈ ಸರಣಿ ಗೆದ್ದ ತಕ್ಷಣ ಕೊಹ್ಲಿ ನಾಯಕತ್ವದ ಬದಲಾವಣೆಗೆ ಬೆಂಕಿ ಕಾರುತ್ತಿರುವ ಕೆಲ ಪಟ್ಟ ಭಧ್ರಹಿತಾಸಕ್ತಿಗಳಿಗೆ ಬರುವ ಇಂಗ್ಲೇಂಡ್ ಸರಣಿಯಲ್ಲಿ ಇದೀಗ ತಾನೇ ತಂದೆಯಗಿ ಸಂಭ್ರಮಿಸುತ್ತಿರುವ ಕೊಹ್ಲಿ ತಮ್ಮ ಬ್ಯಾಟಿನ ಮೂಲಕವೇ ಉತ್ತರ ನೀಡಲಿದ್ದಾರೆ ಎಂಬ ಭರವಸೆ ಎಲ್ಲಾ ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯವನ್ನು ಗೆದಿದ್ದು ಸರಣಿ ಗೆಲ್ಲಲು ಎರಡೂ ತಂಡಗಳಿಗೆ ಈ ಪಂದ್ಯ ಬಹಳ ಮುಖ್ಯವಾಗಿರುವ ಪರಿಣಾಮವಾಗಿ ಈ ಪಂದ್ಯ ಬಹಳ ಜಿದ್ದಾ ಜಿದ್ದಿನಿಂದ ರೋಚಕವಾಗಿರುವುದರಲ್ಲಿ ಸಂದೇಹವೇ ಇಲ್ಲ. ಈ ಸಮಯದಲ್ಲಿ, ಇದೇ ಕ್ರೀಡಾಂಗಣದಲ್ಲಿ , ಇದೇ ತಂಡಗಳ ನಡುವೆ 1996ರಲ್ಲಿ ರೋಚಕವಾಗಿ ನಡೆದ ಟೈಟಾನ್ ಕಪ್ ಪಂದ್ಯವಳಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಹೊನಲು ಬೆಳಕಿನ ಆ ಪಂದ್ಯವನ್ನು ಕ್ರೀಡಾಂಗಣದಲ್ಲಿ ನೇರವಾಗಿ ನೋಡಲು ಹೋಗಿದ್ದ ನನ್ನ ಅನುಭವನ್ನು ನಿಮ್ಮೊಡನೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.

ನನ್ನ ಗೆಳೆಯ ನರಹರಿ, ಅರ್ಥಾತ್ ನಮ್ಮ ಪ್ರೀತಿಯ ಹರಿಯವರ ಮನೆಯನ್ನು ಬಿಇಎಲ್ ಕ್ರಿಕೆಟ್ ತಂಡಕ್ಕೆ ಆಡುತ್ತಿದ್ದ ಆಟಗಾರರೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದರು. ಹಾಗಾಗಿ ಬೆಂಗಳೂರಿನಲ್ಲಿ ನಡೆವ ಬಹುತೇಕ ಪಂದ್ಯಗಳಿಗೆ ಅವರೇ ಎರಡು ಟಿಕೆಟ್ ತಂದು ಕೊಟ್ಟು ಆದರ ಮೊತ್ತವನ್ನು ಮುಂದಿನ ತಿಂಗಳ ಬಾಡಿಗೆಯಲ್ಲಿ ಹಿಡಿದುಕೊಳ್ಳವ ಅಲಿಖಿತ ಒಪ್ಪಂದವಾಗಿದ್ದ ಕಾರಣ, ಈ ಪಂದ್ಯಕ್ಕೂ ನಮಗೆ ಸುಲಭವಾಗಿ ಟಿಕೆಟ್ ಸಿಕ್ಕಿ, ನಾನೂ ಮತ್ತು ನನ್ನ ಗೆಳೆಯ ಹರಿ ಮಟ ಮಟ ಮಧ್ಯಾಹ್ನ ಸುಡು ಬಿಸಿಲಿನಲ್ಲಿ ನನ್ನ ಹೀರೋ ಪುಕ್ ಗಾಡಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಗ್ಗೆ ಹಾಕಿದ್ದೆವು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈ ವೋಲ್ಟೇಜ್ ಪಂದ್ಯ ಒಂದು ಕಡೆಯಾದಲ್ಲಿ ಕರ್ನಾಟಕದ ಪಾಲಿಗೆ ಒಂದು ಮಹತ್ವ ಪೂರ್ಣ ಪಂದ್ಯವಾಗಿತ್ತು ಎಕೆಂದರೆ ಕರ್ನಾಟಕದ ಆರು ಮಂದಿ ಈ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆರಂಭಿಕ ಆಟಗಾರ ಸುಜಿತ್ ಸೋಮಸುಂದರ್, ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕಲಿಗಳಾದರೆ, ಶ್ರೀನಾಥ್, ಪ್ರಸಾದ್, ಕುಂಬ್ಲೆ ಮತ್ತು ಸುನೀಲ್ ಜೋಷಿ ಬೋಲಿಂಗ್ ಜವಾಬ್ಧಾರಿಯನ್ನು ಹೊತ್ತಿದ್ದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ನಾಯಕ ಮಾರ್ಕ್ ಟೇಲರಿಗೂ ಚಿನ್ನಸ್ವಾಮಿ ಕ್ರೀಂಡಾಂಗಣಕ್ಕೂ ಅವಿನಾಭಾವ ಸಂಬಂಧ. ಪ್ರತೀ ಬಾರಿ ಈ ಕ್ರೀಡಾಂಗಣದಲ್ಲಿ ರನ್ಗಳ ಮಳೆ ಸುರಿಸುವಂತೆ ಈ ಬಾರಿಯೂ 105 ರನ್ನುಗಳನ್ನು ಬಾರಿಸಿದರೆ, ಅವರಿಗೆ ಆಧಾರವಾಗಿ ಮತ್ತೊಂದು ತುದಿಯಲಿ ಸ್ಟೀವ್ ವಾ 41 ಮತ್ತು ಒಂಡೇ ಸ್ಪೆಶಲಿಸ್ಟ್ ಮೈಕಲ್ ಬೆವನ್ 36 ರನ್ನುಗಳ ಬಲದಿಂದ ನಿಗಧಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ಸಾಧಾರಣ ಮೊತ್ತಗಳಿಸಿತು. ಟೇಲರ್ ನಂತೆ ವೆಂಕೀಯೂ ಕೂಡಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸದಾಕಾಲವೂ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬರುವಂತೆ ಈ ಬಾರಿಯೂ ಮತ್ತೊಮ್ಮೆ ಅಪದ್ಭಾಂಧವನಾಗಿ 37ರನ್ನುಗಳನ್ನಿತ್ತು 3 ವಿಕೆಟ್ ಗಳಿಸಿದರೆ, ಅವರಿಗೆ ಸಾತ್ ಕೊಟ್ಟ ಅನಿಲ್ 40/2 ವಿಕೆಟ್ ಗಳಿಸಿದ್ದರು.

ಸಂಜೆ ವಿರಾಮದ ಸಮಯದಲ್ಲಿ ಅಸ್ತ್ರೇಲಿಯಾ ಸಾಧಾರಣ ಮೊತ್ತಗಳಿಸಿದ್ದ ಕಾರಣ ಭಾರತಕ್ಕೆ ಗೆಲುವು ಸುಲಭದ ತುತ್ತು ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆರಂಭ ಆಟಗಾರರಾಗಿ ಬಂದ ಸುಜಿತ್ ಸೋಮಸುಂದರ್ ಒಂದು ಬೌಂಡರಿ ಬಾರಿಸಿ ಆಟಕ್ಕೆ ಕುದುರಿಕೊಳ್ಳುತ್ತಿದ್ದಾನೆ ಎನ್ನುವಷ್ಟರಲ್ಲಿ ಮೆಗ್ರಾತ್ ಬೋಲಿಂಗಿಗೆ ಮೊದಲ ಆಹುತಿಯಾದರೆ ನಂತರ ಬಂದ ಬಹುತೇಕ ದಾಂಡಿಗರು ಆತುರಾತುರವಾಗಿ ಪೆವಿಲಿಯನ್ ಸೇರಿಕೊಂಡರು. ನಾಯಕ ಅಜರುದ್ದೀನ್ ವಿವಾದಾತ್ಮಕವಾಗಿ ಔಟಾದಾಗ, ಪ್ರೇಕ್ಷರ ಸಹನೆಯ ಕಟ್ಟೆಯೊಡೆದು ಮೈದಾನದತ್ತ ಕೈಗೆ ಸಿಕ್ಕ ವಸ್ತುಗಳನ್ನು ಎಸೆಯತೊಡಗಿದಾಗ ಪಂದ್ಯ ಕೆಲಕರ ಸ್ಥಗಿತಗೊಂಡಿತ್ತು. ಸ್ವತಃ ಅಜರುದ್ದೀನ್ ಮತ್ತೊಮ್ಮೆ ಮೈದಾನಕ್ಕೆ ಬಂದು ಪ್ರೇಕ್ಷಕರತ್ತ ಕೈಜೋಡಿಸಿ ತಾಳ್ಮೆಯಿಂದ ಸಹಕರಿಸಲು ಕೋರಿಕೊಂಡಾಗಲೇ ಪಂದ್ಯ ಪುನರಾರಂಭವಾಯಿತು. ಒಂದು ಕಡೆ ವಿಕೆಟ್ ಮೇಲೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಭದ್ರವಾಗಿ ತಳವೂರಿದ್ದ ಸಚಿನ್ ಭರ್ಜರಿಯಾಗಿ ಆಟವಾಡುತ್ತಾ ಎಲ್ಲರಲ್ಲೂ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ 111 ಚೆಂಡುಗಳಲ್ಲಿ 88 ರನ್ನುಗಳನ್ನು ಗಳಿಸಿದ್ದ ಸಚಿನ್ ಸ್ಟೀವ್ ವಾ ಬೋಲಿಂಗಿನಲ್ಲಿ ಔಟಾಗುತ್ತಿದ್ದಂತೆಯೇ, ಪಂದ್ಯದ ಫಲಿತಾಂಶ ನಿರ್ಧಾರವಾಗಿ ಭಾರತ ತಂಡ ಇಷ್ಟು ಕಳಪೆಯಗಿ ಆಡುತ್ತಿದೆಯಲ್ಲಾ ಎಂಬ ನೋವಿನಿಂದ ಮತ್ತೊಮ್ಮೆ ಪೇಕ್ಷಕರ ದಾಂಧಲೆ ಆರಂಭವಾಯಿತು.

ಪಂದ್ಯ ಭಾರತದ ಕೈ ಜಾರುತ್ತಲಿದೆ ಮತ್ತು ನಾವಿದ್ದ ಸ್ಟಾಂಡಿನಲ್ಲಿಯೇ ಜೋರಾದ ಗಲಭೆ ನಡೆಯುತ್ತಿದ್ದ ಕಾರಣ ಸುಮ್ಮನೆ ಅಲ್ಲೇಕೆ ಸಿಕ್ಕಿ ಹಾಕಿಕೊಳ್ಳಬೇಕೆಂದು ನಿರ್ಧರಿಸಿದ ನಾನು ಮತ್ತು ನನ್ನ ಗೆಳೆಯ ಹರಿ ಮೈದಾನದಿಂದ ಹೊರಬರಲು ಹೊರಟೆವು. ಅಲ್ಲಿಂದ ಒಂದು ಹತ್ತು ಹದಿನೈದು ಸೀಟ್ ದಾಟುತ್ತಿದ್ದಂತೆಯೇ ನನ್ನ ಮತ್ತಿಬ್ಬರು ಗೆಳೆಯರು ಸಿಕ್ಕರು. ಅವರಿಗೂ ಪರಿಸ್ಥಿತಿಯನ್ನು ವಿವರಿಸಿ ಅವರಲ್ಲೂ ಭಯದ ವಾತಾವಾಣ ಬಿತ್ತಿ ಅವರನ್ನೂ ಮೈದಾನದಿಂದ ಹೊರತರುವುದರಲ್ಲಿ ನಾನು ಸಫಲನಾಗಿ ಎಲ್ಲರನ್ನೂ ಕಾಪಾಡದೆನೆಂಬ ಸಾರ್ಥಕತೆ ನನ್ನಲ್ಲಿ ಮೂಡಿತ್ತು.

kumle1ಛೇ!! ನಾವು ನೋಡಲು ಹೋಗಿದ್ದ ಪಂದ್ಯವನ್ನೇ ಈ ರೀತಿಯಾಗಿ ಸೋಲಬೇಕೇ? ಅದೂ ಸಾಧಾರಣ ಮೊತ್ತ ಎಂದು ಮನಸ್ಸಿನಲ್ಲಿಯೇ ಭಾರತದ ಆಟಗಾರರನ್ನು ಶಪಿಸುತ್ತಾ ಇನ್ನೇನು ಮನೆಯ ಹತ್ತಿರತ್ತರ ಹೋಗುತ್ತಿರುವಾಗ, ಇದ್ದಕ್ಕಿದ್ದಂತೆಯೇ ಪಟಾಕಿ ಶಬ್ಧ ಕೇಳಿಸಿತು. ಪಟಾಕಿ ಶಬ್ಧ ಕೇಳಿದ ಮೇಲಂತೂ ನಮ್ಮ ಕೋಪ ಮತ್ತಷ್ಟೂ ಹೆಚ್ಚಾಗಿ, ಅದ್ಯಾರಪ್ಪಾ ಆ ದೇಶದ್ರೋಹಿಗಳು ನಮ್ಮ ಮನೆಯ ಹತ್ತಿರ ಇರುವವರು?. ಭಾರತ ಸೋತಿದ್ದಕ್ಕೆ ಪಟಾಕಿ ಹೊಡೆಯುತ್ತಿರುವುದು? ಎಂದು ಅವರನ್ನು ಶಪಿಸುತ್ತಾ ನನ್ನ ನ್ಸೇಹಿತನ ಮನೆಯ ಬಾಗಿಲನ್ನು ಬಡಿದಾಗ, ಬಾಗಿಲನ್ನು ತೆರೆದ ನನ್ನ ಸ್ನೇಹಿತನ ತಂಗಿ, ಅರೇ ಏನ್ರೋ? ಆಟಾನೇ ನೋಡ್ದೇ ಬಂದುಬಿಟ್ರಾ? ಅಂದ್ಲು. ಏ ಹೋಗೇ.. ಹೋಗೇ… ಆ ಸೋಲೋ ಪಂದ್ಯಾನಾ ಯರು ನೋಡ್ತಾರೇ? ಇಂತಾ ಕಳಪೆ ಆಟ ಆಡ್ತಾರಲ್ಲಾ ಆದನ್ನು ನೋಡೋ ನಾವು ಮುಟ್ಥಾಳರು ಎಂದೆ. ಏ ಇಲ್ವೋ ಭಾರತ ಗೆದ್ಬಿಡ್ತು ಅಂತಾ ಚಿತ್ತು ಹೇಳಿದಾಗ, ಏ ಹೋಗೇ, ಸುಮ್ಮನೆ ಸುಳ್ಳು ಹೇಳಬೇಡ. ನಾವು ಸಚಿನ್ ಔಟಾದ ಮೇಲೇನೇ ಬಂದಿದ್ದು. ಬಾಲಂಗೋಚಿಗಳಾದ ಕುಂಭ್ಲೆ. ಶ್ರೀನಾಥ್ ಮತ್ತು ಪ್ರಸಾದ್ ಮಾತ್ರ ಆಡ್ಬೇಕಿತ್ತು. ಪಂದ್ಯ ಗೆಲ್ಲಲು ಇನ್ನೂ 50 ರನ್ ಬೇಕಿತ್ತು. ಆ ಕೊಲ್ಟೇಗಳು ಹೊಡ್ಬಿಟ್ರಾ ಎಂದೆ. ಹೌದು ಕಣ್ರೋ ಅವರೇ ಹೊಡಿದಿದ್ದು. ಬೇಕಿದ್ರೇ ನೋಡಿ ಎಂದಾಗ, ಮನೆಯೊಳಗೆ ಹೋಗಿ ಟಿವಿ ನೋಡಿದ್ರೇ ಟೇಲರ್ ಹ್ಯಾಪು ಮೋರೆ ಹಾಕಿಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಮಾತನಾಡುತ್ತಿದ್ದ. ಒಂದು ಕಡೆ ಪಂದ್ಯ ಗೆದ್ದದ್ದು ಮನಸ್ಸಿಗೆ ಖುಷಿ ಕೊಡ್ತಾದ್ರೂ, ಮೈದಾನಕ್ಕೇ ಹೋಗಿ ನಮ್ಮ ಪೆದ್ದು ತನದಿಂದ ಅಂತಹ ರೋಚಕ ಕ್ಷಣಗಳನ್ನು ಮಿಸ್ ಮಾಡ್ಕೊಂಬಿಟ್ವಲ್ಲಾ ನಾವಿಬ್ಬರೂ ಹೋಗ್ಲೀ ನಮ್ಮ ಮತ್ತಿಬ್ಬರು ಸ್ನೇಹಿತರನ್ನು ಬಲವಂತವಾಗಿ ಕರೆದು ಕೊಂಡು ಬಂದ್ವಲ್ಲಾ ಅಂತ ತುಂಬಾ ಬೇಜಾರಾಯ್ತು

kumble3ಸುಮ್ಮನೆ ಹಾಗೇ ಮನೆಗೆ ಹೋದ್ರೆ ನಮ್ಮ ಮನೆಯಲ್ಲೂ ಇದೇ ರೀತಿಯ ಅಭಾಸ ಆಗುತ್ತದೆ ಎಂದು ಭಾವಿಸಿ ಅಲ್ಲೇ ಕುಳಿತು ಪಂದ್ಯ ಹೈಲೈಟ್ಸ್ ನೋಡಿದಾಗ ಗೊತ್ತಾಗಿದ್ದು ಎನಪ್ಪಾ ಅಂದ್ರೇ, ಬೆಂಗಳೂರಿನ. ಸ್ಥಳೀಯ ಹುಡುಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಅಮೋಘ ಆಟದ ಪರಿಣಾಮವಾಗಿ ಸೋಲುತ್ತಿದ ಪಂದ್ಯವನ್ನು ಭರ್ಜರಿಯಾಗಿ ಗೆಲುವು ಪಡೆದಿತ್ತು. 164/8 ವಿಕೆಟ್ ಕಳೆದು ಕೊಂಡು ಹೀನಾಮಾನ ಸ್ಥಿತಿಯಲ್ಲಿದ್ದ ತಂಡಕ್ಕೆ ಆಸರೆಯಾಗಿ ಇನ್ನೂ 7ಚೆಂಡುಗಳು ಬಾಕಿ ಇರುವಷ್ಟರಲ್ಲಿಯೇ 216 ರನ್ನುಗಳನ್ನು ಗಳಿಸುವ ಮೂಲಕ ಕೆಲವರ ಹೃದಯಾಘಾತಕ್ಕೆ ಕಾರಣರಾದರೇ ಕೊಟ್ಯಾಂತರ ಭಾರತದ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದು ಬಿಟ್ಟಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ. ಆ ಪಂದ್ಯದ ಮತ್ತೊದು ವಿಶೇಷವೇನಂದರೆ, ತಮ್ಮ ಮಗ/ಮೊಮ್ಮಗ ಆಡುವುದನ್ನು ಕಣ್ತುಂಬಿಸಿಕೊಳ್ಳಲು ಅನಿಲ್ ಕುಂಬ್ಳೆ ಅವರ ತಾಯಿ ಮತ್ತವರ ಅಜ್ಜಿ ಖುದ್ದಾಗಿ ಪ್ರೇಕ್ಷಕರ ನಡುವೆ ಮೈದಾನದಲ್ಲಿದ್ದರು. ಶ್ರೀನಾಥ್ ಮತ್ತು ಕುಂಬ್ಲೆ ಪ್ರತೀಬಾರಿ ರನ್ನುಗಳನ್ನು ಗಳಿಸಿದಾಗಲೂ ಟಿವಿ ಕ್ಯಾಮೆರಾಗಳು ಆ ಇಬ್ಬರು ಮಹಿಳೆಯರತ್ತವೇ ತೋರಿಸುತ್ತಾ ಅವರ ಕ್ಷಣ ಕ್ಷಣದ ಪ್ರತಿಕ್ರಿಯೆಗಳನ್ನು ಸೆರೆ ಹಿಡಿದಿಟ್ಟಿದ್ದರು. ಅಂತಿಮ ಜಯದ ರನ್ ಗಳಿಸಿದಾಗಲಂತಲೂ ಕುಂಬ್ಲೆಯವರ ತಾಯಿಯವರ ಹರ್ಷೋಧ್ಗಾರ ಇಡೀ ಪಂದ್ಯದ ಹೈಲೈಟ್ ಎಂದರೂ ತಪ್ಪಾಗಲಾರದು. ಆ ಅದ್ಭುತ ರಸಕ್ಷಣ ಮತ್ತು ಕುಂಬ್ಳೆ ಅವರ ತಾಯಿಯವರರು ತಮ್ಮ ಮಗನ ಸಾಧನೆಯನ್ನು ಸಂಭ್ರಮಿಸಿದ ಪರಿ ಇಂದಿಗೂ ಲಕ್ಷಾಂತರ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದೆದೇ ಎಂದೇ ಭಾವಿಸುತ್ತೇನೆ.

kumble2ಶ್ರೀನಾಥ್ 23 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರೆ ಅವರಿಗೆ ಬೆಂಬಲವಾಗಿ ಮತ್ತೊಂದು ತುದಿಯಲ್ಲಿ ಕುಂಬ್ಳೆ 19 ಎಸೆತಗಳಲ್ಲಿ 16 ರನ್ ಗಳಿಸಿ ಪಂದ್ಯವನ್ನು ಭಾರತದ ಪರ ಗೆಲ್ಲಿಸಿಕೊಟ್ಟಿದ್ದರು. ಭಾರತದ ತಂಡದ ಪರವಾಗಿ ಅತೀ ಹೆಚ್ಚಿನ ರನ್ ಗಳಿಸಿದ್ದ ಸಚಿನ್ ಅವರನ್ನು ಪಂದ್ಯಶ್ರೇಷ್ಠ ಎಂದು ಪುರಸ್ಕರಿಸಲಾಯಿತಾದರೂ, ಮೈದಾನದಲ್ಲಿದ್ದ ಪ್ರೇಕ್ಷಕರಿಗೂ ಮತ್ತು ಸಮಸ್ಥ ಕ್ರಿಕೆಟ್ ಪ್ರೇಮಿಗಳಿಗೂ ಅಂದಿನ ಪಂದ್ಯದ ಗೆಲುವಿನ ನಿಜವಾದ ರೂವಾರಿಗಳಾದ ಶ್ರೀನಾಥ್ ಮತ್ತು ಕುಂಬ್ಳೆ ಅವರುಗಳೇ ಪಂದ್ಯ ಪುರುಶೋತ್ತಮರಾಗಿದ್ದರು. ಈ ಪಂದ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ರೋಮಾಂಚಕವಾದ ಪಂದ್ಯ ಎಂದೇ ಖ್ಯಾತಿಯಾಗಿದೆ. ಅಂತಿಮವಾಗಿ ಭಾರತ ಕುಂಬ್ಲೆ ಅವರ ಅಮೋಘ ಬೋಲಿಂಗಿನಿಂದಾಗಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಸುವ ಮೂಲಕ ಟೈಟಾನ್ ಕಪ್ ಎತ್ತಿ ಹಿಡಿಯಿತು.

ಇಂದೂ ಕೂಡಾ ಅದೇ ಕ್ರೀಡಾಂಗಣ, ಅದೇ ಎರಡು ತಂಡಗಳು, ಕರ್ನಾಟಕದ ಇಬ್ಬರು ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮನೇಷ್ ಪಾಂಡೆ ಆಡುತ್ತಿದ್ದಾರೆ. ಹಾಗಾಗಿ ಅಂದಿನ ಪಂದ್ಯದಂತೆಯೇ ರೋಚಕವಾಗಿ ಭಾರತ ತಂಡ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಲಿ ಎನ್ನುವುದೇ ಸಮಸ್ತ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಸೆ

ನನ್ನ ಕಾರಣದಿಂದಾಗಿ ಪಂದ್ಯ ರೋಚಕ ಕ್ಷಣಗಲನ್ನು ಮೈದಾನದಲ್ಲಿದ್ದರೂ ನೋಡಲಾಗ ಗೆಳೆಯರಾದ ಹರಿ ಮತ್ತು ಕೃಷ್ಣರಲ್ಲಿ ಮತ್ತೊಮ್ಮೆ ಕ್ಷಮೆ ಕೋರುತ್ತಾ ಈ ಲೇಖನವನ್ನು ಅವರಿಬ್ಬರಿಗೂ ಅರ್ಪಿಸುತ್ತಿದ್ದೇನೆ,

ಏನಂತೀರೀ?