ಶ್ರೀಮತಿ ದ್ರೌಪದಿ ಮುರ್ಮು

ನಮ್ಮ ಭಾರತ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಒಂದು ರೀತಿಯ ಅಧ್ಯಕ್ಷ ಪದವಿಯನ್ನು ಹೊಂದಿರುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತೀಯ ಮೂರೂ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್) ದಂಡನಾಯಕರಾಗಿದ್ದು, ಸಂಸತ್ತಿನ ಉಭಯ ಸಭೆಗಳಲ್ಲಿ ಬಹುಮತದಿಂದ ರೂಪಿಸಲ್ಪಟ್ಟ ಹೊಸಾ ಮಂಡಿಸಲ್ಪಟ್ಟ ಮಸೂದೆಗಳು ರಾಷ್ಟ್ರಪತಿಗಳ ಅಂಗೀಕಾರದ ನಂತರವೇ ಅಧಿಕೃತವಾದ ಕಾನೂನಾಗಿ ಜಾರಿಗೆ ತರಲ್ಪಡುತ್ತದೆ. ಇಂತಹ ರಾಷ್ಟ್ರಪತಿಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸಾಂಸದರು ಮತ್ತು ದೇಶದ ಎಲ್ಲಾ ರಾಜ್ಯಗಳ ಮತ್ತು ಪ್ರಾಂತ್ಯಗಳ ವಿಧಾನಸಭೆಯ ಶಾಸಕರು ನೇರವಾಗಿ ಚುನಾಯಿಸಲ್ಪಟ್ಟು ಐದು ವರ್ಷಗಳ ಕಾಲ ರಾಷ್ಟಪತಿಗಳಾಗಿ ಸೇವೆ ಸಲ್ಲಿಸುತ್ತಾರೆ.

ಪ್ರಸ್ತುತ ರಾಷ್ಟ್ರಪತಿಗಳಾಗಿರುವ ಶ್ರೀ ರಾಮ್ ನಾಥ್ ಕೋವಿಂದ್ ಅವರ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದ್ದು ಅವರ ಜಾಗಕ್ಕೆ ಹೊಸಾ ರಾಷ್ಟ್ರಪತಿಗಳ ಆಯ್ಕೆಗಾಗಿ ಕಳೆದ ಮೂರ್ನಾಲ್ಕು ವಾರಗಳಿಂದಲೂ ಆಡಳಿತ ಪಕ್ಷವಾದ ಬಿಜೆಪಿ ಮತ್ತು ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ವಿರೋಧ ಪಕ್ಷಗಳಲ್ಲಿ ತೀವ್ರವಾದ ಪೈಪೋಟಿ ಏರ್ಪಟ್ಟಿದೆ.

ಎಂದಿನಂತೆ ದೇಶದ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲದೇ, ವಯಕ್ತಿಯ ಅಂಹನಿಂದಾಗಿ ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತಂತೆ ಎನ್ನುವಂತೆ, ಶರದ್ ಪವಾರ್, ಫರೋಕ್ ಅಬ್ದುಲ್ಲಾ, ದೇವೇಗೌಡ, ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣಗಾಂಧಿ ಇನ್ನೂ ಮುಂತಾದ ಹೆಸರುಗಳು ಚಾಲ್ತಿಯಲ್ಲಿದ್ದು ಅಂತಿಮವಾಗಿ 84 ವರ್ಷದ ಬಿಹಾರ್ ಮೂಲದ ಮಾಜಿ ಐ.ಎ.ಎಸ್‌ ಅಧಿಕಾರಿ ಮತ್ತು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಗಳನ್ನು ಬದಲಿಸುತ್ತಾ ಅಧಿಕಾರ ಸವಿದು ಈ ಇಳೀ ವಯಸ್ಸಿನಲ್ಲಿಯೂ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೇಸ್ಸಿನಲ್ಲಿ ರಾಜಾಶ್ರಯ ಪಡೆದಿದ್ದ ಮಾಜೀ ಕೇಂದ್ರ ವಿದೇಶಾಂಗ ಸಚಿವ, ಕೇಂದ್ರ ಹಣಕಾಸಿನ ಸಚಿವರಾಗಿದ್ದ ಯಶ್ವಂತ್‌ ಸಿನ್ಹಾ ಆಯ್ಕೆಯಾಗಿದ್ದಾರೆ. ಎಷ್ಟೇ ಜಾತ್ಯಾತೀತ ಎಂದು ಅಬ್ಬಿರಿದು ಬೊಬ್ಬಿರಿದರೂ ಅಂತಿಮವಾಗಿ ನಡೆಯುವ ಜಾತಿಯ ಲೆಕ್ಕದಲ್ಲಿ ಮೇಲ್ವರ್ಗದ ಕಾಯಸ್ಥ ಸಮುದಾಯಕ್ಕೆ ಸೇರಿದವರಾಗಿದ್ದು ಗೆಲ್ಲಲು ಅಗತ್ಯವಾದ ಸಂಖ್ಯೆ ಇಲ್ಲದಿದ್ದರೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

murmu4ಇವರ ಎದುರಿನಲ್ಲಿ ಆಡಳಿತ ಪಕ್ಷವಾದ ಬಿಜೆಪಿಯು ತಮ್ಮ ರಾಷ್ಟ್ರಪತಿಯ ಅಭ್ಯರ್ಥಿಯಾಗಿ 64 ವರ್ಷದ ಒರಿಸ್ಸಾ ಮೂಲದ ಸಂಥಾಲ್‌ ಬುಡಕಟ್ಟು ಸಮುದಾಯದ (ಆದಿವಾಸಿ) ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಆಯ್ಕೆ ಮಾಡುವ ಮೂಲಕ ವಿರೋಧ ಪಕ್ಷದವರಿಗೆ ಒಂದು ರೀತಿ ಮರ್ಮಾಗಾಥವನ್ನೇ ನೀಡಿದ್ದಾರೆ ಎಂದರೂ ತಪ್ಪಾಗದು.

kovindಸಾಧಾರಣವಾಗಿ ಬಿಜೆಪಿ ಎಂಬುದು ಮೇಲ್ವರ್ಗದ ಜನಾಂಗದ ಪಕ್ಷ ಬ್ರಾಹ್ಮಣರು ಮತ್ತು ಬನಿಯಾಗಳ ಪಕ್ಶ ಎಂದು ಬಿಂಬಿಸುತ್ತಿದ್ದ ಪ್ರತಿಪಕ್ಷಗಳ ಆರೋಪವನ್ನುಸ ಸುಳ್ಳು ಮಾಡುವ ಸಲುವಾಗಿ ಕಳೆದ ಬಾರಿ ದಲಿತರಾಗಿದ್ದ ಶ್ರೀ ಕೋವಿಂದ್ ಆವರನ್ನು ಆಯ್ಕೆ ಮಾಡಿದರೆ, ಈ ಬಾರಿ ಪ್ರಪ್ರಥಮ ಬಾರಿಗೆ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಪರೋಕ್ಷವಾಗಿ ಓರಿಸ್ಸಾದ ಬಿಜು ಜನತಾದಳದವರೂ ಬೆಂಬಲಿಸುವಂತೆ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದ್ದಾರೆ ಎಂದರೂ ಅತಿಶಯವಾಗದು

ಪ್ರದಾನಿಗಳು ಸದಾ ಕಾಲವೂ ಜಪಿಸುವ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮೂಲಕ, ಪಕ್ಷದ ಅತ್ಯಂತ ತಳಮಟ್ಟದವರನ್ನೂ ಗುರುತಿಸಿ, ಸರ್ವಸ್ಪರ್ಶೀ ಸಾಮಾಜಿಕ ದೃಷ್ಟಿಕೋನಕ್ಕೆ ಬದ್ಧವಾಗಿ ನಮ್ಮ ದೇಶದ ಹಿರಿಮೆ, ಗರಿಮೆ, ಪರಂಪರೆ, ವೈವಿಧ್ಯವನ್ನು ಗೌರವಿಸುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಅಪೂರ್ವವೇ ಸರಿ.

ದ್ರೌಪದಿ ಮುರ್ಮು ಅವರಉ 20 ಜೂನ್ 1958 ರಂದು ಭಾರತದ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಶ್ರೀ ಬಿರಂಚಿ ನಾರಾಯಣ ತುಡು ಅವರ ಮಗಳಾಗಿ ಜನಿಸುತ್ತಾರೆ. ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲೇ ಮುಗಿಸಿದ ನಂತರ ಒರಿಸ್ಸಾದ ರಾಜಧಾನಿ ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲೆಯಲ್ಲಿ ಪದವಿಯನ್ನು ಪಡೆದು ಕೆಲ ಕಾಲ, ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಗೌರವ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಕೆಲ ಕಾಲ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಕೆಲಸ ಮಾಡಿದ್ದಾರೆ.

ತಮ್ಮ ಜೀವನ ಉದ್ದಕ್ಕೂ ಬಡತನದಿಂದಾಗಿ ಕಷ್ಟಗಳನ್ನೇ ಅನುಭವಿಸಿ ಬೆಳೆದ ದ್ರೌಪದಿಯವರು ತಮ್ಮ ಮುಂದಿನ ಜೀವನವನ್ನು ಬಡವರು, ದೀನದಲಿತರ ಸಬಲೀಕರಣಕ್ಕಾಗಿ ಮೀಸಲಾಗಿಡಲು ನಿರ್ಧರಿಸಿ ಸಮಾಜ ಸೇವೆಯನ್ನು ಮಾಡುವ ಸಲುವಾಗಿ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸುತ್ತಾರೆ.

  • 1997 ರಲ್ಲಿ ಬಿಜೆಪಿ ಪಕ್ನದಿಂದ ರಾಯರಂಗ್‌ಪುರ ನಗರ ಪಂಚಾಯತ್‌ನಲ್ಲಿ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸುತ್ತಾರೆ. 2000ದಲ್ಲಿ ಅದೇ ಪಂಚಾಯಿತಿಯ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾಗುತ್ತಾರೆ.
  • murmu1ಅದೇ 2000ರಲ್ಲಿ ನಡೆದ ಒರಿಸ್ಸಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕಿಯಾಗಿ, ಬಿಜೆಡಿ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ನವೀನ್ ಪಟ್ನಾಯಕ್ ಅವರ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ, ಮೀನುಗಾರಿಕೆ ಮತ್ತು ಪಶು ಸಂಗೋಪನೆಯಂತಹ ಪ್ರಭಲ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ.
  • 2002ರಿಂದ 2009ರ ವರೆಗೂ ಮಯೂರ್ ಭಂಜ್ ಜಿಲ್ಲಾ ಬಿಜೆಪಿ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
    2004ರಲ್ಲಿ ಮತ್ತೊಮ್ಮೆ ರಾಯ್ ರಂಗಪುರ್ ವಿಧಾನ ಸಭೆಯ ಶಾಸಕಿಯಾಗಿ ಮರು ಆಯ್ಕೆಯಾಗಿದ್ದಲ್ಲದೇ, 2006ರಿಂದ 2009 ತನಕ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ
  • ಎರಡನೇ ಬಾರಿಗೆ ಶಾಸಕಿಯಾಗಿದ್ದಾಗ, ತಮ್ಮ ನಿಸ್ವಾರ್ಥ ಜನಸೇವೆಯಿಂದಾಗಿ ಅತ್ಯುತ್ತಮ ಶಾಸಕಿ ಎಂದು ನೀಲಕಂಠ ಪ್ರಶಸ್ತಿಗೂ ಸಹಾ ಭಾಜನರಾಗಿದ್ದಾರೆ.
  • urmu5ಪಕ್ಷದ ಶಿಸ್ತಿನ ಸಿಪಾಯಿಯಂತೆ ಚಿಕ್ಕವಯಸ್ಸಿನಲ್ಲೇ ಸಕ್ರೀಯ ರಾಜಕಾರಣದಿಂದ ಹಿಂದೆ ಸರಿದು 2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ, 2017ರಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಪಟ್ಟಿಯಲ್ಲಿ ಅವರ ಹೆಸರನ್ನೂ ಸಹಾ ಪರಿಗಣಿಸಲಾಗಿದ್ದದ್ದು ಗಮನಾರ್ಹವಾಗಿದೆ.

ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನಲ್ಲಿ ರಾಜ್ಯಪಾಲೆಯಾಗಿ, ಅಲ್ಲಿನ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿದ್ದ ಸಂಧರ್ಭದಲ್ಲಿ ಅಲ್ಲಿನ ವಿಶ್ವವಿದ್ಯಾನಿಲಯಗಳಿಗಾಗಿ ಕುಲಪತಿಗಳ ಪೋರ್ಟಲ್ ಅನ್ನು ಪ್ರಾರಂಭಿಸಿದಲ್ಲದೇ ಅದರ ಮೂಲಕ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ಏಕಕಾಲದಲ್ಲಿ ವಿದ್ಯಾರ್ಥಿಗಳ ಆನ್‌ಲೈನ್ ದಾಖಲಾತಿ ಮೊತ್ತ ಮೊದಲಿಗೆ ಪ್ರಾರಂಭ ಮಾಡಿದ ಹೆಗ್ಗಳಿಕೆ ಅವರದ್ದಾಗುತ್ತದೆ. ಇದದಿಂದ ವಿದ್ಯಾರ್ಥಿಗಳು ದಾಖಲಾತಿಯ ಪಾರದರ್ಶಕವಾದ ವ್ಯವಸ್ಥೆಯನ್ನು ಕಾಣುವಂತಾಗಿದೆ. ಅದೇ ರೀತಿಯಲ್ಲೇ ರಾಜ್ಯ ಸರ್ಕಾರ ಪ್ರಜೆಗಳ ಹಿತಕ್ಕಿಂತಲೂ ತಮ್ಮ ರಾಜಕೀಯ ಹಿತಕ್ಕಾಗಿ ಬಿಜೆಪಿಯ ರಘುವರ್ ದಾಸ್ ಸರ್ಕಾರದ ಸಿಎನ್‌ಟಿ-ಎಸ್‌ಪಿಟಿ ತಿದ್ದುಪಡಿ ಮಸೂದೆ, ಹೇಮಂತ್ ಸೋರೆನ್ ಅವರ ಸರ್ಕಾರ ಮಂಡಿಸಿದ್ದ ಬುಡಕಟ್ಟು ಸಲಹಾ ಸಮಿತಿಯ ರಚನೆಗೆ ಸಂಬಂಧಿಸಿದ ಕಡತವನ್ನು ಸಹಾ ಹಲವು ಆಕ್ಷೇಪಗಳೊಂದಿಗೆ ಮರುಪರಿಶೀಲನೆಗಾಗಿ ಸರ್ಕಾರಕ್ಕೆ ಹಿಂದಿರುಗಿಸುವ ಕಠಿಣ ಮತ್ತು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದು ಅವರ ಗರಿಮೆಯಾಗಿದೆ.

murmu2ಮುರ್ಮುರವರು ವಯಕ್ತಿಯ ಜೀವನದಲ್ಲಿ ತಮ್ಮ ಪತಿ ಮತ್ತು ಇಬ್ಬರು ಪುತ್ರರನ್ನು ಕಳೆದುಕೊಂಡ ನಂತರ ತಮ್ಮ ಪುತ್ರಿಯೊಂದಿಗೆ ಜೀವನದಲ್ಲಿ ಆದ ಅಡೆ ತಡೆಗಳನ್ನೆಲ್ಲವನ್ನೂ ದಿಟ್ಟತನದಿಂದ ಎದುರಿಸುತ್ತಲೇ, ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಬುಡಕಟ್ಟು ಜನಾಂಗದ ಅಭ್ಯುದಯಕ್ಕಾಗಿ ದುಡಿದ ಅನುಭವ ಹೊಂದಿದ್ದಾರೆ.

2022ರ ಜುಲೈ ತಿಂಗಳಿನಲ್ಲಿ ನಡೆಯಲಿರುವ 15ನೇ ರಾಷ್ಟ್ರಪತಿ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ, ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಭಾರತದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುವಷ್ಟರ ಮಟ್ಟಿಗೆ ಮುಂದುವರಿದಿದ್ದಾರೆ. ಮುರ್ಮು ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದಲ್ಲಿ ಸರ್ವಪಲ್ಲಿ ರಾಧಾಕೃಷ್ಣರ ನಂತರ ರಾಷ್ಟ್ರಪತಿ ಪದವಿಯನ್ನುಆಲಂಕರಿಸಿದ ಎರಡನೇ ಶಿಕ್ಷಕಿ ಎನಿಸಿಕೊಳ್ಳಲಿದ್ದಾರೆ. ಈ ರೀತಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿ ದೇಶದ ಪ್ರಥಮ ಪ್ರಜೆಯಾಗುವಷ್ಟರ ಮಟ್ಟಿಗೆ ಏರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿದಂತಾಗುತ್ತದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

rashtrapathi

ಧನ್ಯೋಸ್ಮಿ

ಜೀವನ ಎಂದರೆ ಕೇವಲ ಆಟ, ಪಾಠ, ಕೆಲಸ, ಊಟ, ನಿದ್ದೆಯಷ್ಟೇ ಅಲ್ಲದೇ ಅಭ್ಯಾಸ ಮತ್ತು ಹವ್ಯಾಸಗಳೂ ಸಹಾ ನಮ್ಮ ಜೀವನ ಅವಿಭಾಜ್ಯ ಅಂಗವಾಗಿರುತ್ತದೆ ಎಂದರೆ ತಪ್ಪಾಗದು. ಜೀವನದಲ್ಲಿ ಸುಖಃ ಮತ್ತು ದುಃಖಗಳು ಸಂಭವಿಸಿದಾಗ ಅವುಗಳನ್ನೆಲ್ಲಾ ಸರಿದೂಗಿಸಿಕೊಂಡು ಹೋಗಲು ಹವ್ಯಾಸಗಳು ಹೆಚ್ಚಿನ ಪಾತ್ರ ವಹಿಸುತ್ತವೆ. ಹಾಗಾಗಿಯೇ ಖುಷಿ ಮತ್ತು ದುಃಖಗಳ ಸಮಯದಲೂ ಹಾಡುಗಳನ್ನು ಗುಣುಗುವ ಮೂಲಕವೋ ಇಲ್ಲವೇ ನೃತ್ಯ ಮಾಡುವ ಮೂಲಕವೋ ಇಲ್ಲವೇ ಒಳ್ಳೆಯ ವಿಷಯಗಳನ್ನು ಓದುವ ಇಲ್ಲವೇ ಬರೆಯುವ ಇಲ್ಲವೇ, ಯಾವುದಾದರೂ ಪುಣ್ಯಕ್ಷೇತ್ರಗಳೋ ಇಲ್ಲವೇ ಪ್ರಕೃತಿ ತಾಣಕ್ಕೆ ಭೇಟಿ ನೀಡುವ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಗೆ ಹಾಕುವ ಮೂಲಕ ನಿರಾಳತೆಯನ್ನು ತಂದು ಕೊಳ್ಳುವುದು ಸಹಜ ಪ್ರಕ್ರಿಯೆ.

ಇದೇ ರೀತಿ ನಾನೂ ಸಹಾ ಚಿಕ್ಕವಯಸ್ಸಿನಿಂದಲೇ ಓದುವ ಹವ್ಯಾಸವನ್ನು ಬೆಳಸಿಕೊಂಡು ಸಮಯ ಸಿಕ್ಕಾಗಲೆಲ್ಲಾ ಏನಾದರೂ ಒದುತ್ತಲೇ ಹೋದೆ. ಮನೆಗೆ ಪ್ರತಿದಿನವೂ ಬರುತ್ತಿದ್ದ ವೃತ್ತ ಪತ್ರಿಕೆ, ವಾರ ಪತ್ರಿಕೆ ಪಾಕ್ಷಿಕ ಮತ್ತು ಮಾಸಿಕಗಳನ್ನು ಒಂದಕ್ಷರವು ಬಿಡದೇ ಓದಿ ಮುಗಿಸಿದ ಮೇಲೆ ತಾತ ಮತ್ತು ತಂದೆಯವರು ಜತನದಿಂದ ಸಂಗ್ರಹಿಸಿದ್ದ ಪೌರಾಣಿಕ, ಆಧ್ಯಾತ್ಮ ಪುಸ್ತಕಗಳನ್ನೂ ಬಿಡಲಿಲ್ಲ. ಶಾಲೆಯಲ್ಲಿ ಬಿಡಿವಿನ ವೇಳೆಯಲ್ಲಿಯೂ  ಗ್ರಂಥಾಲಯಕ್ಕೆ ಹೋಗಿ ಆರಂಭದಲ್ಲಿ ಎಲ್ಲರಂತೆ ಡಾಬು. ಶೂಜಾ, ಮಜ್ನೂ, ಪುಟ್ಟೀ, ಫ್ಯಾಂಟಮ್, ಬಹದ್ದೂರ್ ಗಳ ಜೊತೆಗೆ ಬಾಲ ಭಾರತಿಯ ದೇಶಭಕ್ತರ ಸಣ್ಣ ಸಣ್ಣ ಪುಸ್ತಕಗಳ ನಂತರ ಅಮರ ಚಿತ್ರಕಥೆ, ಚಂದಾಮಾಮಾ ಬಾಲಮಿತ್ರ, ಬಾಲ ಮಂಗಳ ಓದುತ್ತಿದ್ದವನು ಕ್ರಮೇಣ ಶಾರೀರಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆಯುತ್ತಾ ಹೋದಂತೆಲ್ಲಾ ವಾರಪತ್ರಿಕೆಗಳಲ್ಲಿ ಬರುತ್ತಿದ್ದ ಧಾರಾವಾಹಿಗಳಲ್ಲದೇ ಕಾದಂಬರಿಗಳನ್ನು ಸಹಾ ಓದುವ ಮೂಲಕ ಕನ್ನಡದ ಬಹುತೇಕ ಖ್ಯಾತ ಲೇಖಕರ ಕೃತಿಗಳನ್ನು ಓದಿಕೊಂಡಿದ್ದೆ . ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಕೆಲವು ಪ್ರಬಂಧ ಮತ್ತು ಚರ್ಚಾಸ್ಪರ್ಧೆಗಳಿಗೆ ಅಲ್ಪ ಸ್ವಲ್ಪ ಬರೆಯುತ್ತಿದ್ದೆನಾದರೂ ಬರವಣಿಗೆಯನ್ನು ಎಂದಿಗೂ ಗಂಭೀರವಾಗಿ ಹವ್ಯಾಸವನ್ನಾಗಿಸಿಕೊಳ್ಳುವ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ.

ನಿಜ ಹೇಳಬೇಕೆಂದರೆ, ಬರಹ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತ ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರಾಗಿದ್ದಲ್ಲದೇ, ಅನೇಕ ಪೌರಾಣಿಕ ನಾಟಕಗಳಿಗೆ ಮಟ್ಟುಗಳನ್ನು ಬರೆಯುತ್ತಿದ್ದರಲ್ಲದೇ, ಭಗವದ್ಗೀತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದರಲ್ಲದೇ ತಮ್ಮ ಸಾಹಿತ್ಯಿಕ ಚಟುಕವಟಿಕೆಗಳಿಗಾಗಿ ೭೦ ದಶಕದಲ್ಲೇ ರಾಜ್ಯಪ್ರಶಸ್ತಿ ಪುರಸ್ಕೃತರು. ಇನ್ನು ನಮ್ಮ ತಂದೆ. ದಿ. ಶಿವಮೂರ್ತಿಗಳು ಗಮಕಿಗಳು, ಲೇಖಕರು ಮತ್ತು ಮೋಚಿಂಗ್ ಕಲಾವಿದರಾಗಿದ್ದರು. ಹಾಗಾಗಿ ಉತ್ತಮ ಓದನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದೆನಾದರೂ, ಬರೆಯುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಯಾವಾಗ ಸಾಮಾಜಿಕ ಜಾಲತಾಣಗಳು ಪ್ರಸಿದ್ಧಿಗೆ ಬಂದವೋ ಆಗ ಧುತ್ತನೆ ನನ್ನಲ್ಲಿದ್ದ ಬರಹಗಾರ ಜಾಗೃತನಾಗಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಬೇಕೋ ಬೇಡವೋ ಹಲವರೊಡನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದರೊಂದಿಗೆ ನನ್ನ ಬರವಣಿಗೆ ಆರಂಭವಾಯಿತು. ಇಂತಹ ಪ್ರಚೋದನಕಾರಿ ಬರವಣಿಗೆಯನ್ನೂ ಮೆಚ್ಚಿಕೊಂಡ ಅನೇಕ ಗೆಳೆಯರು ಅದೆಷ್ಟೋ ಗಂಪುಗಳಿಗೆ ನನ್ನನ್ನು ಸೇರಿಸಿ ಸುಖಾ ಸುಮ್ಮನೇ ಯಾವುದೋ ಅನಾವಶ್ಯಕ ವಿಷಯಗಳಿಗೆ ನನ್ನನ್ನು ರೊಚ್ಚಿಗೆಬ್ಬಿಸಿ ಆವೇಶ ಭರಿತ ಲೇಖನಗಳಿಗೆ ನನ್ನನ್ನು ಸೀಮಿತಗೊಳಿಸಿದ್ದರು. ಹಾಗೆ ಬರೆದ ಅನೇಕ ಲೇಖನಗಳಿಂದ ಗಳಿಸಿದ್ದು ಮಿತ್ರತ್ವಕ್ಕಿಂತ ಶತೃತ್ವವೇ ಹೆಚ್ಚು ಎನ್ನುವುದೇ ವಿಪರ್ಯಾಸ. ಇದರ ಜೊತೆಗೆ ಸುಖಾಸುಮ್ಮನೇ ಬೇಡದ ವಿವಾದಗಳನ್ನೂ ಮೈ ಮೇಲೆ ಹೇರಿಕೊಂಡು ಅವೆಲ್ಲವೂ ಕೇವಲ ಸಾಮಾಜಿಕ ಜಾಲತಾಣಕ್ಕೇ ಸೀಮಿತವಾಗದೇ ಮನೆಯವರೆಗೂ ಬಂದು ನಮ್ಮ ತಂದೆ ಮತ್ತು ಮಡದಿ ನನ್ನ ಪರವಾಗಿ ಕ್ಷಮೆಯಾಚಿಸ ಬೇಕಾದಂತಹ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಅದೆಷ್ಟೋ ಬಾರಿ ನನ್ನ ಮಕ್ಕಳ ಸ್ನೇಹಿತರೂ ಸಹಾ ಇದರ ಬಗ್ಗೆ ಕಳಕಳಿಯನ್ನು ವ್ಯಕ್ತ ಪಡಿಸಿದಾಗ ನನ್ನ ಮಕ್ಕಳೂ ಸಹಾ ಅಪ್ಪಾ ನಿಮ್ಯಾಕೆ ಕಂಡೋರ ಉಸಾಬರೀ? ಎಂದು ಗದರಿಸುವ ಮಟ್ಟಕ್ಕೂ ಬಂದಿತ್ತು.

ಇಂತಹ ಸಮಯದಲ್ಲೇ ಅನಿರೀಕ್ಷಿತವಾಗಿ ನಮ್ಮ ತಂದೆಯವರು ಅಕಾಲಿಕವಾಗಿ ನಿಧನರಾದಂತಹ ಸಂಧರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಲೇಖನವನ್ನು ಎಲ್ಲರೂ ಮೆಚ್ಚಿಕೊಂಡು, ಪರವಾಗಿಲ್ವೇ, ತಾತ ಮತ್ತು ಅಪ್ಪನ ತರಹ ನೀನೂ ಸಹಾ ಗಂಭೀರವಾಗಿ ಬರೆಯಬಲ್ಲೆ ಎಂದು ಹೇಳಿದಾಗ ಅವರು ನನ್ನನ್ನು ಹೊಗಳುತ್ತಿದ್ದಾರೋ? ಇಲ್ಲವೇ ತೆಗಳುತ್ತಿದ್ದಾರೋ? ಎಂಬುದೇ ತಿಳಿದೇ ಮತ್ತೆ ತೀಕ್ಷ್ಣವಾದ ರಾಜಕೀಯ ಬರಹದತ್ತಲೇ ಹರಿಯುತ್ತಿತ್ತು ಚಿತ್ತ. ಈ ಕುರಿತಂತೆ ನನ್ನ ಮಡದಿ ಮಂಜುಳ ಸದಾಕಾಲವೂ ಎಚ್ಚರಿಸುತ್ತಿದ್ದರೂ ಕೇಳದಿದ್ದ ನನಗೆ, ಅದೊಂದು ದಿನ ನನ್ನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಗಳು ತಲೆ ಗಟ್ಟಿ ಇದೇ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಮೂರ್ಖತನ. ನಿನ್ನ ಬರವಣಿಗೆಯನ್ನು ಬದಲಿಸಿಕೋ ಎಂದು ಪ್ರೀತಿಪೂರ್ವಕದ ಆಜ್ಞೆ ಮಾಡಿದದರು.

Enantheeri_logoಅವರ ಮಾತಿಗೆ ಕಟ್ಟು ಬಿದ್ದು,  ಮೊತ್ತ ಮೊದಲ ಬಾರಿಗೆ ನಮ್ಮ ತಂದೆಯವರ ನೆನಪಿನಲ್ಲೇ ದುಡ್ಡಿನ ಮಹತ್ವ ಎನ್ನುವ ನನ್ನದೇ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸಿದಾಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದಾದ ನಂತರ ಒಂದರ ಮೇಲೊಂದು ಲೇಖನಗಳನ್ನು ಬರೆಯುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾ ಹೋದಂತೆ ಸಮಾನ ಮನಸ್ಕರ ಗೆಳೆಯರ ಗುಂಪು ಬೆಳೆಯ ತೊಡಗಿತು. ಈ ರೀತಿ ಎಲ್ಲೆಲ್ಲೋ ಲೇಖನಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಒಂದು ಬ್ಲಾಗ್ ಆರಂಭಿಸಿ ಎಂದು ನನ್ನ ಆತ್ಮೀಯ ಗೆಳೆಯ ಶ್ರೀ ವಾಸುದೇವ ಅವರು ಸೂಚಿಸಿದಾಗ 2019ರ ಶಿವರಾತ್ರಿಯಂದು (ಮಾರ್ಚ್ 7, 2019) ಆ ಪರಶಿವನ ಕೃಪಾಶೀರ್ವಾದದಿಂದ ಸಣ್ಣದಾಗಿ ಒಂದು ಬ್ಲಾಗ್ ಆರಂಭಿಸಿ ಈಗಾಗಲೇ ಬರೆದಿದ್ದ ಕೆಲವು ಲೇಖನಗಳನ್ನು ಅದರಲ್ಲಿ ಪ್ರಕಟಿಸಿ ನಿಮ್ಮೆಲ್ಲರ ಮುಂದೆ ಭಕ್ತಿಪೂರ್ವಕವಾಗಿ ನನ್ನೀ ಪ್ರಯತ್ನ ಹೇಗಿದೆ? ಎಂದು ಕೇಳಿದ್ದೆ. ಸ್ವಲ್ಪ ಕಾಲದ ನಂತರ ಅದಕ್ಕೊಂದು https://enantheeri.com ಎಂಬ ನಾಮಕರಣ ಮಾಡಿ ಎಲ್ಲರ(ವ)ನ್ನೂ ಪ್ರಶ್ನಿಸಿ ಮತ್ತು ಪರಿಹರಿಸಿಕೊಳ್ಳಿ ಎಂಬ ಟ್ಯಾಗ್ ಲೈನ್ ನೊಂದಿಗೆ ಏನಂತೀರಿ? ಎಂದು ಪ್ರಶ್ನಿಸಿದ್ದೆ. ಈ ಹವ್ಯಾಸೀ ಬರಹಗಾರನ ಪ್ರಯತ್ನವನ್ನು ನೀವೆಲ್ಲರೂ ಅತ್ಯಂತ ಆದರಾಭಿಮಾನಗಳಿಂದ ಅಪ್ಪಿಕೊಂಡಿರಿ ಮತ್ತು ಕಾಲ ಕಾಲಕ್ಕೆ ಸೂಕ್ತವಾದ ಸಲಹೆ ಮತ್ತು ಮಾಹಿತಿಗಳನ್ನು ನೀಡುವ ಮೂಲಕ ನನ್ನನ್ನು ತಿದ್ದಿ ತೀಡಿದ ಪರಿಣಾಮವಾಗಿಯೇ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಏನಂತೀರಿ.ಕಾಂ ಬ್ಲಾಗ್ ಮೂರು ವರ್ಷಗಳನ್ನು ದಾಟಿ ಅಮೋಘವಾಗಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದು ನಮ್ಮ ಬ್ಲಾಗಿನ ಅಂಕಿ ಅಂಶಗಳು ಈ ರೀತಿಯಾಗಿವೆ.

Year Total posts Total words Average  words per post Views
2019 269 209,927 780 53292
2020 317 217,934 688 153212
2021 246 191,834 780 188972
2022 40 31,722 793 27624
872 651417 760 423100

ನಮ್ಮ ಬ್ಲಾಗಿನಲ್ಲಿ ಒಟ್ಟು 872 ಲೇಖನಗಳು ಪ್ರಕಟಿತವಾಗಿದ್ದು, ಅದನ್ನು 423100 ಜನರು ಓದಿದ್ದಾರೆ. ಇಡೀ ಲೇಖನಗಳು 651417 ಪದಗಳಿದ್ದು ಪ್ರತೀ ಲೇಖನವೂ ಸುಮಾರು 760 ಪದಳಿಂದ ಕೂಡಿವೆ. ಈ ಮೂರು 3 ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 291 ಲೇಖನಗಳಂತೆ ಅಂದರೆ ತಿಂಗಳಿಗೆ 24 ಲೇಖನಗಳನ್ನು ಪ್ರಕಟಿಸುವುದನ್ನೇ ಗಮನಿಸಿ ಬಿಡುವಿಲ್ಲದ ಬರಹಗಾರ ಎಂದು ನನಗೆ ಬಿರುದನ್ನು ಕೊಟ್ಟ ಐಯ್ಯಂಗಾರ್ ಆಹಾರದ ಮಾಲಿಕರೂ, ಕವಿಗಳೂ ಅಪ್ಪಟ ಕನ್ನಡಿಗರಾದ ಸಹೃದಯೀ ಗೆಳೆಯ ಶ್ರೀ ವಿಜಯ್ ಹೆರಗು ಅವರ ಬಿರುದಿಗೆ ಅನ್ವರ್ಥವಾಗಿದ್ದೇನೆ ಎಂಬುದು ಖುಷಿ ಕೊಡುತ್ತದಾದರೂ ಇದರಿಂದ ಹೆಚ್ಚಿದ ಜವಾಬ್ಧಾರಿಯಿಂದಾಗಿ ಕೊಂಚ ಭಯವೂ ಆಗುತ್ತಿದೆ.

enangheeri_statsWhatsApp Image 2022-03-02 at 10.40.24 AMಮೂರು ವರ್ಷಗಳ ಕಾಲ ನಿರಂತರವಾಗಿ ಬರೆಯುತ್ತಾ ಸುಮಾರು  100 ಕ್ಕೂ ಅಧಿಕ ದೇಶಗಳಿಂದ ನಾಲ್ಕು ಲಕ್ಷಕ್ಕೂ ಅಧಿಕ ಓದುಗರ ಅಭಿಮಾನ ಗಳಿಸಿದ್ದು ಒಂದು ಹೆಮ್ಮೆಯ ಮೈಲಿಗಲ್ಲಾಗಿದೆ. ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯೋಸ್ಮಿ ಎಂದು ಹೇಳುವ ಮೂಲಕ ವಂದನೆ ಸಲ್ಲಿಸುವುದರೊಂದಿಗೆ ಸದಾಕಾಲವೂ ನನ್ನೊಂದಿಗೆ ಇದ್ದ ಕೆಲವರನ್ನು ನೆನೆಪಿಸಿಕೊಳ್ಳಲೇ ಬೇಕಾದದ್ದು ನನ್ನ ಆದ್ಯ ಕರ್ತವ್ಯವಾಗಿದೆ.

ಆರಂಭದಲ್ಲಿ ನನಗೆ ಜನ್ಮ ಕೊಟ್ಟಿದ್ದಲ್ಲದೇ ಮನೆಯೇ ಮೊದಲ ಪಾಠ ಶಾಲೇ ತಾಯಿ ತಂದೆಯರೇ ನನ್ನ ಮೊದಲ ಗುರುಗಳು. ಚೌಲದ ಸಮಯದಲ್ಲಿ ಅಪ್ಪಾ ಅಕ್ಷರಭ್ಯಾಸ ಮಾಡಿಸಿದರೆ, ಕಾಪೀ ಪುಸ್ತಕದಲ್ಲಿ, ಸ್ಲೇಟು ಬಳಪಗಳೊಂದಿಗೆ ಅಕ್ಷರಭ್ಯಾಸ ಮಾಡುವ ಸಹಜ ಪದ್ದತಿಯ ಹೊರತಾಗಿ ನಮ್ಮಮ್ಮ ಕೋಡುಬಳೆಯಲ್ಲಿ ಅ ಆ ಇ ಈ… ಮಾಡಿಕೊಟ್ಟು ಅದರ ಮೂಲಕ ವಿಭಿನ್ನವಾಗಿ ಕನ್ನಡವನ್ನು ಕಲಿಸಿದ್ದಲ್ಲದೇ, ಕೇವಲ ಐದು ವರ್ಷಗಳಿರುವಾಗಲೇ ದಿನಪತ್ರಿಕೆ, ವಾರಪತ್ರಿಕೆಗಳ ಮೂಲಕ ಓದುವುದನ್ನು ಅಭ್ಯಾಸ ಮಾಡಿಸಿದ ನಮ್ಮಮ್ಮ ಉಮಾ ಅವರಿಗೆ ಹೇಗೆ ಕೃತಜ್ಞತೆಯನ್ನು ಅರ್ಪಿಸುವುದು? ಎಂದು ಯೋಚಿಸುತ್ತಿರುವಾಗ ಹೊಳೆದದ್ದೇ ಉಮಾಸುತ ಎಂಬ ಅಂಕಿತನಾಮ. ಇನ್ನು ಐತಿಹಾಸಿಕ, ಪೌರಾಣಿಕ, ಹಬ್ಬ ಹರಿದಿನಗಳ ಕುರಿತಾದ ಲೇಖನಕ್ಕೆ ಬೇಕಾದಂತಹ ಎಲ್ಲಾ ಜ್ಞಾನವನ್ನೂ ನನ್ನ ಮಸ್ತಕ್ಕೆ ತುಂಬಿ ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಶಕ್ತಿಯೇ ನಮ್ಮ ಪೂಜ್ಯ ತಾತ ಮತ್ತು ತಂದೆಯವರು ಹಾಗಾಗಿ ಈ ಮೂವರಿಗೂ ನಾನು ಸದಾಕಾಲವೂ ಚಿರಋಣಿಯಾಗಿರುತ್ತೇನೆ.

ಇನ್ನು ಲೇಖನಗಳನ್ನು ಪ್ರಕಟಿಸಿದ ಕೂಡಲೇ ಅದನ್ನು ತಪ್ಪದೇ ಓದಿ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯ ಜೊತೆಗೆ ಮತ್ತಷ್ಟು ಪೂರಕ ಮಾಹಿತಿಗಳನ್ನು ನೀಡುವ ಮೂಲಕ ಲೇಖನದ ಮೆರಗನ್ನು ಹೆಚ್ಚಿಸಿ ನನ್ನನ್ನು ಪ್ರೋತ್ಸಾಹಿಸುವ ಗೆಳೆಯರಾದ ಹರಿ, ಸುರೇಶ್, ಕನ್ನಡದ ಮೇಷ್ಟ್ರು ಶ್ರೀ ನರಸಿಂಹ ಮೂರ್ತಿಗಳು, ಆತ್ಮೀಯರಾದ ಶ್ರೀ ವೆಂಕಟರಂಗ ಶ್ರೀ ಭರತ್, ಅನಂತಕೃಷ್ಣ, ಜಯಸಿಂಹ, ಅಣ್ಣಾ, ನಮ್ಮ ಪ್ರತೀ ಹಬ್ಬಗಳ ಆಚರಣೆ ಮತ್ತು ಅದರ ವಿಶೇಷತೆಗಳನ್ನೇಕೆ ಓದುಗರಿಗೆ ಸುಲಭವಾಗಿ ಪರಿಚಯಿಸಬಾರದು? ಎಂಬ ಸಲಹೆ ನೀಡಿ ಹಬ್ಬಗಳ ಕುರಿತಾದ ಲೇಖನಗಳನ್ನು ಬರೆಯಲು ಪ್ರೇರಣೆ ನೀಡಿದ ಯುವಾ ಬ್ರಿಗೇಡ್ ಗೆಳೆಯ ನಿತ್ಯಾನಂದ ಗೌಡ, ಆತ್ಮಕಥನಗಳನ್ನೇ ಕಥಾರೂಪದಲ್ಲಿ ಬರೆದಲ್ಲಿ ಹೆಚ್ಚಿನ ಜನರಿಗೆ ತಲುಪುತ್ತದೆ ಎಂದು ಸಲಹೆ ನೀಡಿದ್ದಲ್ಲದೇ ನನ್ನ ಪ್ರತಿ ಲೇಖನದ ಒಂದಕ್ಷರವನ್ನೂ ಬಿಡದೇ ಓದಿ ಪ್ರತಿಕ್ರಿಯಿಸುವ ಶ್ರೀಮತಿ ಉಷಾ ವಾಸು ಇವರೆಲ್ಲರಿಗೂ ಹೃದಯಪೂರ್ವಕ ವಂದನೆಗಳನ್ನು ಹೇಳಲೇ ಬೇಕು.

ನನಗೆ ಬರಹದ ಜೊತೆಗೆ ನಳಪಾಕವೂ ಅಚ್ಚು ಮೆಚ್ಚಿನ ಹವ್ಯಾಸವಾಗಿದೆ. ಅಮ್ಮ ಚಿಕ್ಕಮ್ಮ ಮತ್ತು ಅಜ್ಜಿಯರಿಂದ ಕಲಿತಿದ್ದ ಪಾಕಶಾಸ್ತ್ರವನ್ನೇ ಒಂದೊಂದಾಗಿ ಲೇಖನರೂಪದಲ್ಲಿ ನಳಪಾಕ ವಿಭಾಗದಲ್ಲಿ ಪ್ರಕಟಿಸಿ ಜನಮನ್ನಣೆಗಳಿಸಿದ್ದಾಗ ನನ್ನ ಸಹೋದರಿ ಲಕ್ಷ್ಮೀ ಆನಂದ್, ನನಗೆ ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ಪರಿಚಯವಾದ ಶ್ರೀಮತಿ ಮಾಧುರ್ಯ ಮುರಳೀಧರ್ ಮತ್ತು ಶೈಲಾ ಅನಂತ್ (ಹರಿಯ ಚಿಕ್ಕಮ್ಮ) ಅವರೂ ಸಹಾ ಅನೇಕ ಪಾಕಶಾಸ್ತ್ರಗಳನ್ನು ಪ್ರಕಟಿಸಲು ನೆರವಾಗಿದ್ದಾರೆ. ಹಾಗಾಗಿ ಅವರಿಗೂ ಸಹಾ ಹೃತ್ಪೂರ್ವಕ ಧನ್ಯವಾದಗಳು.

ಸಜ್ಜನರ ಸಂಘ, ಹೆಜ್ಜೇನು ಸವಿದಂತೆ ಎನ್ನುವಂತೆ, ತಿಂಗಳ ಅಂಗಳದ ಸಮಾನ ಮನಸ್ಕ ಸಾಹಿತ್ಯಾಸಕ್ತರ ಗುಂಪಿನ ಮೂಲಕ ಪರಿಚಿತರಾಗಿ ನನ್ನನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿಗೆ ಪರಿಚಯಿಸಿದ ವಿಜಯ್ ಭರ್ತೂರ್ ಮತ್ತು ಅಭಾಸಾಪ ಸಂಘಟನೆಯಲ್ಲಿ ನನಗೆ ಪರಿಚಿತರಾದ ಶ್ರೀ ತಿಮ್ಮಣ್ಣ ಭಟ್, ನಾರಾಯಣ ಶೇವಿರೆ, ರಘುನಂದನ್ ಭಟ್, ಪೊ. ಪ್ರೇಮಶೇಖರ್, ರೋಹಿತ್ ಚಕ್ರತೀರ್ಥ ಇವರೆಲ್ಲರ ಒಡನಾಟದಿಂದ ಅವರ ಮಾತುಗಳು ಮತ್ತು ಕೃತಿಗಳೂ ನನ್ನ ಲೇಖನದ ಮೇಲೆ ಪ್ರಭಾವ ಬೀರಿರುವ ಕಾರಣ ಅವರಿಗೂ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ.

ನಮ್ಮೀ ಬ್ಲಾಗಿನಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಹೆಚ್ಚಿನವು ಸ್ವಕೃತಿಗಳಾಗಿದ್ದರೆ ಇನ್ನೂ ಕೆಲವು ಸಾಮಾಜಿಕ ಜಾಲತಾಣಗಳಲ್ಲಿನ ಅನುವಾದಿತ ಕೃತಿಗಳಾಗಿವೆ. ಇಡೀ ಬ್ಲಾಗನ್ನು ಗಮನಿಸಿದಲ್ಲಿ ಯಾವುದೇ ಒಂದು ಸಿದ್ಧಾಂತಗಳಿಗೆ ಮತ್ತು ಕಟ್ಟು ಪಾಡುಗಳಿಗೆ ಬೀಳದೆ, ಕನ್ನಡ ನಾಡು, ಭಾಷೆ, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯ, ಕ್ರೀಡೆಗಳು, ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಪ್ರವಾಸ, ಇತಿಹಾಸ, ವ್ಯಕ್ತಿಪರಿಚಯ ನಳಪಾಕವೂ ಸೇರಿದಂತೆ ಸುಮಾರು 26 ವರ್ಗಗಳಿದ್ದು ಓದುಗರಾದ ನಿಮಗೆ ಯಾವುದೇ ರೀತಿಯಲ್ಲಿ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಲೇಖನಗಳನ್ನು ಬರೆದಿದ್ದೇನೆ ಎನ್ನುವುದಕ್ಕಿಂತ ನಿಮ್ಮೆಲ್ಲರ ಪ್ರೋತ್ಸಾಹದಿಂದ ಬರೆಸಿಕೊಂಡು ಹೋಗಿದ್ದೀರೀ ಎಂದರೆ ತಪ್ಪಾಗಲಾರದು. ಹಾಗಾಗಿ ನಮ್ಮ ಬ್ಲಾಗಿನ ಸಮಸ್ತ ಓದುಗರಿಗೂ ಅನಂತಾನಂತ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ.

ಒಟ್ಟಿನಲ್ಲಿ ಈ ಬ್ಲಾಗಿನ ಮೂಲಕ ನೂರಾರು ಸಾಹಿತ್ಯಾಸಕ್ತ ಗೆಳೆಯರು ಪರಿಚಯವಾಗಿದ್ದಲ್ಲದೇ ಅನೇಕ ಉಪಯುಕ್ತ ಮಾಹಿತಿಗಳನ್ನೂ ತಿಳಿಯುವಂತಾಯಿತು ತನ್ಮೂಲಕ ತಿಳಿಸುವಂತಾಯಿತು. ಈ ಎಲ್ಲಾ ಬೆಳವಣಿಗೆಯನ್ನು ಕಣ್ಣಾರೆ ನೋಡಿ ಸಂಭ್ರಮಿಸಲು ನಮ್ಮ ತಂದೆಯವರು ನಮ್ಮೊಂದಿಗೆ ಇಲ್ಲವಲ್ಲಾ ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ಸಾವಿರಾರು ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ನನಗೆ ದೊರತದ್ದು ನನ್ನ ಪೂರ್ವ ಜನ್ಮದ ಸುಕೃತವೇ ಸರಿ.

ಕಡೆಯದಾಗಿ ತಮ್ಮೆಲ್ಲರಲ್ಲೂ ನನ್ನದೊಂದು ಸಣ್ಣ ಮನವಿ. ನಮ್ಮ ಬ್ಲಾಗಿನ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಇದನ್ನು ಮತ್ತಷ್ಟು ಹೇಗೆ ಉತ್ತಮ ಪಡಿಸ ಬಹುದು ಎಂಬದರ ಕುರಿತಾಗಿ ಸೂಕ್ತ ಸಲಹೆಗಳನ್ನು ಈ ಕೂಡಲೇ ನೀಡುವ ಮುಖಾಂತರ ನಿಮ್ಮೀ ಬ್ಲಾಗನ್ನು ಮತ್ತಷ್ಟು ಮಗದಷ್ಟು ಉತ್ತಮ ಸಾಹಿತ್ಯತಾಣವನ್ನಾಗಿ ಮಾಡಬೇಕೆಂದು ಕೋರುತ್ತೇನೆ. ತನ್ಮೂಲಕ ಇದುವರೆಗೂ ನಮ್ಮ ಮಸ್ತಕದಲ್ಲಿ ಇದ್ದದ್ದನ್ನು ಡಿಜಿಟಲ್ ಪುಸ್ತಕ ರೂಪದಲ್ಲಿ ಸಂಗ್ರಹಿಸಿ ನಮ್ಮ ಮುಂದಿನ ಪೀಳಿಗೆಯವರಿಗೂ ಅದನ್ನು ಉಳಿಯುವಂತೆ ಮಾಡುವ ಜವಾಬ್ಧಾರಿ ನಮ್ಮ ನಿಮ್ಮೆಲರ ಮೇಲಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಉಮಾ

ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿತ್ತು. ಕೆ.ಜಿ.ಎಫ್ ನಲ್ಲಿದ್ದ  ಅಂದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಜಾರಾವ್ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಸತವಾಗಿ ಏಳು ಗಂಡು ಮಕ್ಕಳ (ಅರು ಮಕ್ಕಳು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅಳಿದು ಹೋಗಿದ್ದವು) ನಂತರ ಅವರ  ಮನೆಯಲ್ಲಿ ಮೊತ್ತ ಮೊದಲಬಾರಿಗೆ  ಮಹಾಲಕ್ಷ್ಮಿಯ ಜನನವಾಗಿತ್ತು.  ರಾಯರ ಮನೆ ದೇವರು ಮೇಲುಕೋಟೆ ಯೋಗಾನರಸಿಂಹನಾಗಿದ್ದ ಕಾರಣ,  ಅವರಿಗೆ ತಮ್ಮ ಮಗಳ ಹೆಸರು  ಲಕ್ಷ್ಮಿಯ ಹೆಸರಿಡಬೇಕು ಎಂದಿತ್ತು. ಆದರೆ ಅವರ ಮಡದಿ ವಿಶಾಲಾಕ್ಷಿ ಅವರ ತಾಯಿಯವರು ತಮ್ಮ ಮನೆ ದೇವರು  ವೀರಭದ್ರಸ್ವಾಮಿಗೆ  ಹೊತ್ತ ಹರಕೆಯನ್ನು ತೀರಿಸುವ ಸಲುವಾಗಿ ಮಗುವಿಗೆ ಉಮಾ (ಮುಂದೆ ದೈವೇಚ್ಚೆಯೇ ಬೇರೆಯಾಗಿತ್ತು) ಎಂದು ಹೆಸರಿಟ್ಟಿದ್ದರು.  ಆರಂಭದಲ್ಲಿ ಇದರ ಬಗ್ಗೆ ಸ್ವಲ್ಪ ಕಸಿವಿಸಿಯಾದರೂ ನಂತರ ಆ ಮಗುವಿನ ಸೌಂದರ್ಯ, ಆಟ ಪಾಟಗಳಿಂದಾಗಿ ಎಲ್ಲವೂ ಮರೆಯಾಗಿತ್ತು. ಅಂತಿಮವಾಗಿ ಮನೆಯಲ್ಲಿ ಉಮಾಮಣಿ ಎಲ್ಲರ ಪ್ರೀತಿಯ ಮಣಿ ಆದರೆ ಶಾಲೆಯಲ್ಲಿ ಅಪ್ಪನ ಆಸೆಯಂತೆ ಉಮಾವತಿ  ಎಂದಾಗಿತ್ತು.

ತಮ್ಮ ಮನೆಯ ರಾಜಕುಮಾರಿ ನಡೆದರೆ ಕಾಲು ನೋಯುತ್ತದೆ ಎಂಬಂತೆ ಕೈ ಗೊಂದು ಆಳು ಕಾಲಿಕೊಂದು ಆಳು ಇಟ್ಟು ಕೊಂಡು ಸಾಕಿದ್ದರು.  ಅಂದಿನ ಕಾಲದಲ್ಲಿ ಕೆಜಿಎಫ್ ನಲ್ಲಿ ಕನ್ನಡ ಶಾಲೆಗಳು  ಅವರ ಮನೆಯಿಂದ ದೂರವಿದ್ದ ಕಾರಣ ಮನೆಯ ಹತ್ತಿರವೇ ಇದ್ದ ತಮಿಳು  ಮಾಧ್ಯಮದ ಶಾಲೆಗೆ ಸೇರಿಸಿದ್ದರು. ಹಾಗಾಗಿ ಮನೆಯಲ್ಲಿ ಕನ್ನಡ  ಅಕ್ಕ ಪಕ್ಕ ಮತ್ತು ಶಾಲೆಯಲ್ಲಿ ತಮಿಳು, ಇಂಗ್ಲೀಶ್ ಇನ್ನು ಮನೆಯ ಕೆಲಸದವರೊಂದಿಗೆ ತೆಲುಗು ಭಾಷೆಯಲ್ಲಿ ವ್ಯವಹಿರಿಸುತ್ತಿದ್ದ ಕಾರಣ,  ಉಮಾಳಿಗೆ  ಈ ಎಲ್ಲಾ ಭಾಷೆಗಳೂ  ಸರಾಗ ಮತ್ತು ಸುಲಲಿತವಾಗಿಹೋಯಿತು. ನೋಡ ನೋಡುತ್ತಿದ್ದಂತೆಯೇ ಬೆಳೆದು ದೊಡ್ಡವಳಾಗಿ ಮದುವೆಯ ಪ್ರೌಢಾವಸ್ಥೆಗೆ ಬಂದಾಗ, ಬಹುಶಃ ಉಮಾ ಹುಟ್ಟಿದಾಗ ಮುಂದೊಮ್ಮೆ ಆಕೆ ಶಿವ ಎಂಬುವನೊಂದಿಗೆ ಮದುವೆಯಾಗುತ್ತದೆ ಎಂದು ಕನಸು  ಕಂಡಿದ್ದರೋ ಏನೋ? ಹಾಗೆಯೇ ತಮ್ಮ ಅಂತಸ್ತಿಗೆ ತಕ್ಕ ಹಾಗೆ ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ  ಶಿವಮೂರ್ತಿ ಎಂಬವರೊಂದಿಗೆ ಮದುವೆ ಆಗಿ ಬೆಂಗಳೂರಿಗೆ ಬರುತ್ತಾರೆ.

ಅರೇ ಇದೇನು  ಉಮಾ, ಶಿವಮೂರ್ತಿಯೊಂದಿಗೆ ಮದುವೆ ಮಾಡಿಕೊಂಡ್ರೇ ನಮಗೇನು ಅಂತೀರಾ ?ಅಲ್ಲೇ ಇರೋದು ನೋಡಿ ಗಮ್ಮತ್ತು. ಅದೇ ಉಮಾ ಶಿವಮೂರ್ತಿಗಳ ಸುಮಧುರ ದಾಂಪತ್ಯದ ಫಲವಾಗಿಯೇ ಎಪ್ಪತ್ತರ ದಶಕದಲ್ಲಿ ನನ್ನ ಜನನವಾಗುತ್ತದೆ. ಮತ್ತದೇ ಸಂಪ್ರದಾಯದ ರೀತಿಯಲ್ಲಿಯೇ ಮನೆ ದೇವರ ಹೆಸರಾಗಿ ಶ್ರೀಕಂಠ ಎಂದು ನಾಮಕರಣ ಮಾಡಿದರೂ ತಾಂತ್ರಿಕವಾಗಿ ಉಮಾ ಆವರ ಮಗನಾಗಿರುವ ಕಾರಣ ನಾನು ಉಮಾಸುತನಾಗಿರುವೆ.

ನಾನು ಶಿಶುವಿಹಾರಕ್ಕೆ ಸೇರಿದಾಗ ನನಗೆ ಹೇಳಿಕೊಡುವ ಸಲುವಾಗಿಯೇ ನಮ್ಮ ಅಮ್ಮಾ ನನ್ನ ಜೊತೆಯಲ್ಲಿಯೇ ಕನ್ನಡ ಓದು ಬರೆಯುವುದನ್ನು ಕಲಿತಿದ್ದಲ್ಲದೇ ನನಗೆ   ಅಕ್ಷರಗಳು ಸುಲಭವಾಗಿ ಪರಿಚಯವಾಗಲಿ ಎಂದು ಕೋಡು ಬಳೆಯಲ್ಲಿ ಅ, ಆ, ಇ, ಈ….  ಕಲಿಸಿಕೊಟ್ಟವರು. ಐದನೇ ವಯಸ್ಸಿಗೆ ಮನೆಗೆ ಬರುತ್ತಿದ್ದ ಪ್ರಜಾವಾಣಿಯ  ದಪ್ಪದಪ್ಪ ಅಕ್ಷರಗಳ ಶೀರ್ಷಿಕೆ ಓದುವುದಕ್ಕೆ ಪ್ರೋತಾಹಿಸಿದ್ದಲ್ಲದೇ, ಒಂದನೇ  ತರಗತಿಗೆ ಬರುವಷ್ಟರಲ್ಲಿಯೇ ಕೈಗೆ ವೃತ್ತ ಪತ್ರಿಕೆ, ಸುಧಾ, ಪ್ರಜಾಮತ, ಮಯೂರವನ್ನು ಕೊಟ್ಟು ಕನ್ನಡವನ್ನು ಸರಾಗವಾಗಿ ಓದುವುದನ್ನು ಕಲಿಸಿದ್ದಲ್ಲದೇ, ಕೈಗೆ ಏನೇ ಸಿಕ್ಕರು ಅದನ್ನು ಓದಿ ಮುಗಿಸುವ ಗೀಳನ್ನು ಹಚ್ಚಿಸಿದ್ದವರು ನಮ್ಮಮ್ಮ.

ಅದೊಮ್ಮೆ ನಾನು ಅಯ್ಯೋ ನೀವು ಬರೀ ಎಸ್.ಎಸ್.ಎಲ್.ಸಿ ಅಷ್ಟೇನಾ ಓದಿರೋದು? ಎಂದು ಕೇಳಿದ್ದನ್ನೇ ಛಲವಾಗಿ ತೆಗೆದುಕೊಂಡು ನನ್ನ ಪೆನ್ಸಿಲ್ಲನ್ನೇ ತೆಗೆದುಕೊಂಡು ಹೋಗಿ ನೆಲಮಂಗಲದಿಂದ ಬೆಂಗಳೂರಿಗೆ ಬಂದು ಮೈ ಇನಿಸ್ಟಿಟ್ಯೂಟಿನಲ್ಲಿ ಟಿಸಿಹೆಚ್ ಮಾಡಿದ್ದಂತಹ ಛಲಗಾರ್ತಿ ನಮ್ಮಮ್ಮ.

ಇನ್ನು ಆಕೆಯ ಭಾಷಾ ಪಾಂಡಿತ್ಯಕ್ಕೆ ಸರಿ ಸಾಟಿ ಯಾರೂ ಇಲ್ಲವೇನೋ? ಮನೆಯ ಮುಂದೆ ನಿಂಬೇಹಣ್ಣು ಮಾರಿಕೊಂಡು ಬರುವ ತಮಿಳಿಗನೊಂದಿಗೆ ಎಂದ ಊರುಪಾ? ಎಂದು ಮಾತಿಗಾರಂಭಿಸಿ, ಓ ಅದಾ ಪಾತ್ತೇ  ನಂಬ ಆಳಾಚ್ಚೇ.. ಎಂದು  ಅವನ ಊರಿನ ಶೈಲಿಯಲ್ಲೇ ಮಾತನಾಡಿ ಮೋಡಿ ಮಾಡಿ ತನಗೆ ಬೇಕಾದಷ್ಟು ಚೌಕಾಸಿ ಮಾಡಿ ನಿಂಬೇ ಹಣ್ಣುಗಳನ್ನು ಕೊಂಡು ಕೊಳ್ಳುತ್ತಿದ್ದ ಚಾಲಾಕಿ ನಮ್ಮಮ್ಮ.

ಇನ್ನು ತರಕಾರಿ ಮಾರಿಕೊಂಡು ತೆಲುಗರವರು ಬಂದರೆ,  ಎಂಪಾ, ಏ ಊರು ಮೀದೀ? ಓ ಮನವಾಡಾ.. ಎಂದು ಅವನನ್ನು ಅಲ್ಲಿಗೇ ಕಟ್ಟಿ ಹಾಕಿದರೆ ಇನ್ನು ಕರ್ನಾಟಕದ ಯಾವುದೇ ಶೈಲಿಯಲ್ಲಿ ಮಾತಾನಾಡಿದರೂ ಅವರಿಗೇ ನೀರು ಕುಡಿಸುವಷ್ಟು ಸರಾಗವಾಗಿ ಮೋಡಿ ಮಾಡುತ್ತಿದ್ದವರು ನಮ್ಮಮ್ಮ. ಹೀಗೆ ಕಲ್ಲನ್ನೂ ಮಾತನಾಡಿಸಿ ಕರಗಿಸುವುದನ್ನು ಕರಗತ ಮಾಡಿಕೊಂಡಿದ್ದವರು ನಮ್ಮಮ್ಮ.

ಶಿಸ್ತಿಗೆ ಮತ್ತೊಂದು ಹೆಸರೇ ಉಮಾ ಎಂದರೂ ತಪ್ಪಾಗಲಾರದು. ಸುಳ್ಳು ಮತ್ತು ಮೋಸ ಮಾಡುವುದು ನಮ್ಮಮ್ಮನಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿಯೇ ನಮ್ಮನ್ನೆಲ್ಲಾ ಬಹಳ ಶಿಸ್ತಿನಿಂದಲೇ ಬೆಳೆಸಿದ್ದರು.  ನಮ್ಮ ಇಡೀ ವಂಶವೇ ಕಾಫೀ ಕುಡಿಯುತ್ತಿದ್ದರೆ ನಮ್ಮ ಅಮ್ಮಾ ನಮಗಾರಿಗೂ ಕಾಫೀ ಅಭ್ಯಾಸ ಮಾಡಿಸಲೇ ಇಲ್ಲ, ಇನ್ನು ಪ್ರತೀ ದಿನ ನಾವು  ಕರಾಗ್ರೇ ವಸತೇ  ಲಕ್ಷ್ಮೀ… ಎಂದು ಹೇಳಿಕೊಂಡೇ ಹಾಸಿಗೆಯಿಂದ ಎದ್ದು ಸೀದಾ ಬಚ್ಚಲು ಮನೆಗೆ ಹೋಗಿ ಗಂಗೇಚ ಯಮುನೇ ಚೈವ… ಹೇಳಿಕೊಂಡು  ಸ್ನಾನ ಮುಸಿಗಿಸಿಕೊಂಡು ಹಣೆಗೆ ವಿಭೂತಿ/ಕುಂಕುಮ  ಇಟ್ಟುಕೊಂಡು ದೇವರಿಗೆ ಬೆನಕ ಬೆನಕ ಏಕದಂತ… ಹೇಳಿ ನಮಸ್ಕಾರ ಮಾಡಿದ ನಂತರವಷ್ಟೇ ನಮಗೆ ಹಾಲು ಮತ್ತು ತಿಂಡಿ. ಇನ್ನು ಪ್ರತೀ ದಿನ ಶಾಲೆಗೆ ಹೋಗುವ ಮುನ್ನಾ ಖಡ್ಡಾಯವಾಗಿ ಅಮ್ಮನಿಗೆ ಮತ್ತು ಮನೆಯಲ್ಲಿದ್ದ ಹಿರಿಯರಿಗೆ ನಮಸ್ಕಾರ ಮಾಡೊಕೊಂಡು ಹೋಗುವುದನ್ನು ರೂಢಿ ಮಾಡಿಸಿದ್ದರು ನಮ್ಮಮ್ಮ.   ಊಟ ಮಾಡುವುದಕ್ಕೆ ಮುನ್ನಾ  ಅನ್ನಪೂರ್ಣೇ, ಸದಾಪೂರ್ಣೇ… ಸಹನಾವವರು ಹೇಳಿಕೊಟ್ಟಿದ್ದರೆ ರಾತ್ರಿ ಮಲಗುವಾಗ ರಾಮಸ್ಕಂದ ಹನೂಮಂತಂ.. ಹೇಳಿಯೇ ನಿದ್ದೆ ಮಾಡುವುದು ನಮಗೆ ರೂಢಿ ಮಾಡಿಸಿದ್ದರು.

ಅಪ್ಪಾ ಅಮ್ಮಾ  ಅಪರೂಪಕ್ಕೆ ಸಿನಿಮಾಗೆ ಹೋದರೆ, ನಮ್ಮನ್ನು ಮನೆಯಲ್ಲಿಯೇ ಬಿಟ್ಟು ಸಿನಿಮಾದಿಂದ ಬಂದ ನಂತರ ಸಿನಿಮಾ ಟಿಕೇಟ್ ಹಣವನ್ನು ನಮಗೆ ಕೊಟ್ಟು  ಅದನ್ನು ಡಬ್ಬಿ ಗಡಿಗೆಯಲ್ಲಿ ಹಾಕಿಸಿ ತಿಂಗಳಿಗೊಮ್ಮೆ ಕೆನರಾ ಬ್ಯಾಂಕಿಗೆ ಹೋಗಿ ನಮ್ಮ ಹೆಸರಿನಲ್ಲಿ ಉಳಿತಾಯ ಮಾಡಿಸುವುದನ್ನು ಚಿಕ್ಕವಯಸ್ಸಿನಲ್ಲಿಯೇ ಕಲಿಸಿದ್ದರು. ಹಾಗೆ ಕಲೆ ಹಾಕಿದ್ದ ದುಡ್ಡಿನಲ್ಲಿಯೇ ಕಾಶೀಗೆ ಹೋಗಿದ್ದಾಗ ಅಂದಿನ ಕಾಲಕ್ಕೆ 300 ರೂಪಾಯಿಗಳಿಗೆ ಅಮ್ಮನಿಗೆ  ಬನಾರಸ್ ಸಿಲ್ಕ್ ಸೀರೆ ಕೊಡಿಸಿದ್ದೆ.

ನಾನು ಸಣ್ಣವನಿದ್ದಾಗ ಪ್ರತೀ ದಿನ ಸಂಜೆ RSS ಶಾಖೆಗೆ ಹೋಗಿ ಬಂದು ಕೈ ಕಾಲು ಮುಖ ತೊಳೆದುಕೊಂಡು ವೀಭೂತಿ ಇಟ್ಟುಕೊಂಡು ದೇವರಿಗೆ ನಮಸ್ಕರಿಸಿ ಖಡ್ಡಾಯವಾಗಿ ಬಾಯಿಪಾಠ ಹೇಳಲೇ ಬೇಕಿತ್ತು. ಬಾಯಿ ಪಾಠದಲ್ಲಿ ಹಲವು ಬಗೆಯ ಶ್ಲೋಕಗಳು, ವಾರಗಳು, ತಿಂಗಳುಗಳು, ನಕ್ಷತ್ರಗಳು, ರಾಶಿ, 1-20 ರ ವರೆಗಿನ ಮಗ್ಗಿ ಹೀಗೆ ಎಲ್ಲವನ್ನು ಮನನ ಮಾಡಿಸಿ ನಂತರ ಆ ದಿನದ ಮನೆಪಾಠವನ್ನು ಮುಗಿಸಿದ ನಂತರವಷ್ಟೇ ನಮಗೆ ರಾತ್ರಿಯ ಊಟ.

ನೀರಿನಲ್ಲಿ ಮೀನು ಹೇಗೆ ಸರಾಗವಾಗಿ  ಈಜುತ್ತದೆಯೋ ಹಾಗೆಯೇ ನಮ್ಮ ವಂಶದಲ್ಲಿ ಇಸ್ಪೀಟ್ ಆಡುವುದನ್ನು ಮಕ್ಕಳಿಗೆ ಕಲಿಸಬೇಕಿರಲಿಲ್ಲ ಅದು ಸುಲಭವಾಗಿಯೇ ಬರುತ್ತಿತ್ತು..  ಇದಕ್ಕೆ ಮೊದಲು ಕಡಿವಾಣ ಹಾಕಿದ್ದೇ ನಮ್ಮಮ್ಮ. ನಮಗಾರಿಗೂ ಇಂದಿಗೂ  ಇಸ್ಪೀಟ್ ಆಟ ಆಡುವುದು ಇರಲಿ ಅದನ್ನು ಹಿಡಿಯುವುದನ್ನು ಕಲಿಸಲಿಲ್ಲ. ಅದಕ್ಕೆ ನಮ್ಮ ದೊಡ್ಡಮ್ಮ ಎಷ್ಟೋ ಬಾರಿ ಹೇಳುತ್ತಿದ್ದರು, ಉಮಾ ನಮಗೆ ಮೂರು ಗಂಡು ಮಕ್ಕಳಿರುವುದೂ ಒಂದೇ ನಿನಗೆ ಒಬ್ಬ ಮಗನಿರುವುದು ಒಂದೇ ಎಂದು ಹೊಗಳುತ್ತಿದ್ದರು.

ಇನ್ನು ನೀವೆಲ್ಲಾ ನನ್ನ enantheeri.com ಬ್ಲಾಗಿನಲ್ಲಿ  ನಳಪಾಕ ಮತ್ತು Enantheeri YouTube ಛಾನೆಲ್ಲಿನಲ್ಲಿ ಅನ್ನಪೂರ್ಣ ಮಾಲಿಕೆಯನ್ನು ನೋಡಿ ಬಹಳ ಸಂತೋಷ ಪಟ್ಟಿದ್ದೀರಿ ಮತ್ತು ಹಾರೈಸಿದ್ದೀರಿ.  ನಿಜ ಹೇಳಬೇಕೆಂದರೆ  ಇದರ ಸಂಪೂರ್ಣ ಶ್ರೇಯ ನಮ್ಮಮ್ಮನಿಗೇ ಸೇರಬೇಕು. ನಾವೆಲ್ಲಾ ಚಿಕ್ಕವರಿದ್ದಾಗ ಮೂರು ದಿನಗಳು ಅಮ್ಮಾ ಮೂಲೆಯಲ್ಲೇ ಕುಳಿತೇ ನಮ್ಮ ಕೈಯಲ್ಲಿ ಅನ್ನಾ, ಸಾರು, ಹುಳಿ ಮಾಡಿಸಿ ತಕ್ಕ ಮಟ್ಟಿಗಿನ  ಅಡುಗೆ ಕಲಿಸಿದ್ದರಿಂದಲೇ ಈಗ ಏನೋ ಅಲ್ಪ ಸ್ವಲ್ಪ ಅಡುಗೆ ಮಾಡುವುದಲ್ಲದೇ ಹತ್ತಾರು ಜನರಿಗೆ  ಮಾಡಿ ತೋರಿಸುವಷ್ಟು ಕಲಿತಿದ್ದೇವೆ.

ಚುರುಕು ಎನ್ನುವುದಕ್ಕೆ ಅನ್ವರ್ಥವೆಂದರೆ ನಮ್ಮಮ್ಮ ಎಂದರೂ ಅತಿಶಯೋಕ್ತಿಯೇನಲ್ಲ. ಯಾವುದೇ ಕೆಲಸವಿರಲಿ ಥಟ್ ಅಂತಾ ಮಾಡಿ ಮುಗಿಸುತ್ತಿದ್ದರು. ಅದು ಹೂವು ಕಟ್ಟುವುದೇ ಇರಲೀ, ದೇವರ ಪೂಜೆಯೇ ಇರಲಿ, ಅತಿಥಿ ಸತ್ಕಾರವೇ ಇರಲಿ, ಅಡುಗೆಯೇ ಇರಲಿ  ಎಲ್ಲದ್ದರಲ್ಲಿಯೂ ಅಚ್ಚುಕಟ್ಟು. ಯಾವುದೇ ರೀತಿಯ ಹೂಗಳನ್ನು ಕೊಟ್ಟರೂ ಚಕ ಚಕಾ  ಅಂತಾ ಚೆಂದನೆಯ  ಹೂವಿನ ಮಾಲೆ ಕಟ್ಟಿಕೊಡುವುದರಲ್ಲಿ ನಮ್ಮನಿಗೆ ನಮ್ಮನೇ ಸೈ. ಇನ್ನು ದೇವರ ಪೂಜೆಗೆ ಕುಳಿತರೆಂದರೆ ಮಧ್ಯಾಹ್ನ ಒಂದು ಗಂಟೆಯಾದರೂ ಅದರ ಪರಿವೇ ಇರುತ್ತಿರಲಿಲ್ಲ. ಮನೆಗೆ ಬಂದವರೊಡನೆ ಮಾತನಾಡಿಸುತ್ತಲೇ ಅವರಿಗೆ ಗೊತ್ತಾಗದಂತೆಯೇ ಇರುವ ಪರಿಕರಗಳಲ್ಲಿಯೇ ಅತ್ಯಂತ ರುಚಿಯಾದ ಅಡುಗೆಯನ್ನು ಮಾಡಿಹಾಕುತ್ತಿದ್ದ ಅನ್ನಪೂರ್ಣೆ ನಮ್ಮಮ್ಮ.

ದೇಶ ಸುತ್ತಿ ನೋಡು, ಕೋಶ ಓದಿ ನೋಡಿದರೆ ಜ್ಞಾನ ವೃದ್ಧಿಯಾಗುತ್ತದೆ  ಎಂಬ ಕಾರಣದಿಂದ ಪ್ರತೀ ಬೇಸಿಗೆಯಲೂ ಹುಡುಕೀ ಹುಡುಕೀ ಒಂದಾಲ್ಲಾ ಒಂದು ಊರಿನಲ್ಲಿ ವೇದ ಶಿಬಿರಕ್ಕೋ, ಸಂಘದ ಶಿಬಿರಗಳಿಗೋ ಇಲ್ಲವೇ ಮತ್ತಾವುದೋ  ಕೆಲ ಕಾರ್ಯಗಳಲ್ಲಿ ನನ್ನನ್ನು ಜೋಡಿಸಿ ನನ್ನ ಜ್ಞಾನ ದಾಹವನ್ನು ಹೆಚ್ಚಿಸುತ್ತಿದ್ದಾಕೆ ನಮ್ಮಮ್ಮ.

ಹಾಗಂತ ನಮ್ಮಮ್ಮ ತುಂಬಾ ಸಾಧು ಅಂತೇನೂ ಇಲ್ಲಾ. ಕೋಪ ಬಂದರೆ ರಣಚಂಡಿಯೇ. ಕೈಗೆ ಸಿಕ್ಕದ್ದರಲ್ಲಿಯೇ ಬಾರಿಸುತ್ತಿದ್ದಾಕೆ. ಕೋಪದಲ್ಲಿ ಮೊಗಚೇ ಕೈನಿಂದ ತಂಗಿಯ ತಲೆಗೆ ಮೊಟಕಿ ಮೂರು ಹೊಲಿಗೆಯನ್ನು ಹಾಕಿಸಿದ ಉದಾಹರಣೆಯೂ ಉಂಟು. ಆದರೆ ಆ ಕೋಪ ತಾಪವೆಲ್ಲಾ ಬೆಣ್ಣೆ ಕರಗುವ ಮುನ್ನವೇ ನೆರೆ ಬಂತು ಪೆನ್ನಾರಿಗೆ ಎನ್ನುವಂತೆ ಕ್ಷಣ ಮಾತ್ರದಲ್ಲಿಯೇ ಕರಗಿ ಹೋಗುತ್ತಿತ್ತು. ಕೆಲವೇ ನಿಮಿಷಗಳ ಹಿಂದೇ  ಇವರೇ ಏನು ರೌದ್ರಾವತಾರದಲ್ಲಿದ್ದು ಎನ್ನುವಷ್ಟರ ಮಟ್ಟಿಗೆ ಆಚ್ಚರಿಯನ್ನು ಮೂಡಿಸುತ್ತಿದ್ದರು.

ಮದುವೆಯಾದ ಹೊಸತರಲ್ಲಿ ಎಲ್ಲ ಅಮ್ಮಂದಿರಂತೆ,  ಮಗ ನನ್ನಿಂದ ದೂರವಾಗುತ್ತಿದ್ದಾನೇನೋ ಎನ್ನುವ ಭಾವನೆ ಮೂಡಿ ಆಗಾಗಾ.. ಹೋಗೋ ಹೋಗೋ ಹೆಂಡ್ತೀ ಗುಲಾಮಾ.. ಹೆಂಡ್ತೀ ಸೆರಗು ಹಿಡ್ದುಕೊಂಡು ಓಲಾಡು ಎಂದು ಮೂದಲಿಸಿದರೆ, ಇತ್ತ ಹೆಂಡ್ತಿ.. ನಿಮ್ಮಂತಹವರಿಗೇಕೆ ಮದುವೆ ಮಕ್ಕಳು? ಸುಮ್ಮನೇ ಅಮ್ಮನ ಸೆರಗು ಹಿಡಿದುಕೊಂಡು ಓಡಾಡಿ ಎಂದು ಬೈಯುತ್ತಿದ್ದರು. ಒಟ್ಟಿನಲ್ಲಿ ಮದುವೆಯಾದ ಗಂಡು ಮಕ್ಕಳದ್ದು ಎರಡು ಅಲುಗಿನ ಕತ್ತಿಯ ಮೇಲೆ ನಡೆಯ ಬೇಕಾದ  ಅನಿವಾರ್ಯವಾಗಿತ್ತು.  ಇದೇ ವಿಷಯಕ್ಕೆ ನಾನು ಮತ್ತು ನಮ್ಮಮ್ಮ ಶರಂಪರ ಕಿತ್ತಾಡಿ ಕೆಲವೇ ನಿಮಿಷಗಳಲ್ಲಿ ಏನೂ ಆಗದಂತೆ ಅಮ್ಮನೊಂದಿಗೆ ಸಹಜವಾಗಿ ಬೆರೆಯುತ್ತಿದ್ದದ್ದು ನಮ್ಮಾಕಿಗೆ ಬಹಳ  ಆಶ್ಚರ್ಯವನ್ನುಂಟು ಮಾಡುತ್ತಿತ್ತು. ಕಡೆಗೆ, ಈ ಅಮ್ಮಾ ಮಗನ ಜಗಳದ ಮಧ್ಯೆ ಮೂಗು ಏಕೆ ತೂರಿಸುವುದು ಎಂದು ತಟಸ್ಥವಾಗಿ ಅಲಿಪ್ತ ನೀತಿ ತಳೆದು ಬಿಡುತ್ತಿದ್ದಳು.

ನಮ್ಮ ಮನೆಯ ಮುಂದಿರುವ ಪಾರ್ಕಿಗೆ ಅಪ್ಪಾ- ಅಮ್ಮಾ ಪ್ರತೀದಿನ ಸಂಜೆ ತಪ್ಪದೇ ಹೋಗ್ತಾ ಇದ್ರೂ, ಅಪ್ಪಾ ಹೋಗೋದು walking ಮಾಡೋದಕ್ಕೆ ಆದ್ರೇ ಅಮ್ಮಾ ಮಾತ್ರಾ ಪರಿಶುಧ್ಧವಾಗಿ ಮನಬಿಚ್ಚಿ talking ಮಾಡುವುದಕ್ಕಾಗಿಯೇ ಎಂದರೂ ತಪ್ಪಾಗದು. ಅಪ್ಪನ ಜೊತೆ ಎರಡು ಮೂರು ಸುತ್ತು ಹಾಕುತ್ತಿದ್ದಂತೆಯೇ, ರೀ.. ನನಗೆ ಇನ್ನು ಮುಂದೆ ನಡೆಯಲು ಸಾಥ್ಯವಿಲ್ಲಾ ಎಂದು ಅಲ್ಲಿಯೇ ಹಾಸಿರುವ ನಿಗಧಿತ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾರೆ ಎಂದರೆ ಅವರ ಅಂದಿನ ದರ್ಬಾರ್ ಶುರು ಎಂದೇ ಆರ್ಥ. ರೀ ಸೀತಾ ಲಕ್ಷಮ್ಮಾ ನಿಮ್ಮ ಎರಡನೇ ಮಗನಿಗೆ ಯಾವುದಾದ್ರೂ ಹೆಣ್ಣು ಗೊತ್ತಾಯ್ತಾ? ಅವರ ಪಾಡಿಗೆ ಆವರು walk ಮಾಡುತ್ತಿದ್ದವರನ್ನು ಮಾತಾಡಿಸಿ, ನೋಡಿ ಮಹಾಲಕ್ಷ್ಮೀ ಲೇಔಟಿನಲ್ಲಿ ಒಬ್ಬಳು ಹುಡುಗಿ ಇದ್ದಾಳೆ. ಒಳ್ಳೆ ಮನೆತನ ಮನೆಗೆ ಬನ್ನಿ ಜಾತಕ ಕೊಡ್ತೀನಿ. ಯಾರಿಗೆ ಯಾರ ಮನೆಯ ಋಣಾ ಇರುತ್ತದೋ? ಯಾರಿಗೆ ಗೊತ್ತು? ಎಂದು ಅಲ್ಲೇ ಕುಳಿತಲ್ಲಿಯೇ ಹೆಣ್ಣುಗಂಡು ಜೋಡಿಸಿಯೇ ಬಿಡುತ್ತಿದ್ದರು. ಈ ರೀತಿ ಅಮ್ಮಾ ಮಾಡಿಸಿದ ಮದುವೆ ಲೆಖ್ಕವೇ ಇಲ್ಲ, ಇಂದಿಗೂ ಅದು ಹೇಗೋ ನಮ್ಮ ಮನೆಯ ಫೋನ್ ನಂಬರ್ ಪತ್ತೇ ಮಾಡೀ ಉಮಾ ಅವರು ಇದ್ದಾರಾ? ಎಂದು ಕೇಳಿದಾಗ.. ಆವರು ಇಲ್ಲಾ.. ನೀವು ಯಾರು ಮಾತಾಡ್ತಾ ಇರೋದು? ಏನು ಸಮಾಚಾರ ಎಂದು ಕೇಳಿದ್ರೇ.. ಹೌದಾ… ಯಾವಾಗ ಬರ್ತಾರೇ? ಸ್ವಲ್ಥ ಹೊತ್ತಿನ ನಂತರ ನಾನೇ ಕರೆ ಮಾಡ್ತೇನೆ ಅಂದಾಗ, ಅಮ್ಮಾ ಹೋಗಿ ಸುಮಾರು ವರ್ಷ ಆಯ್ತು ಎನ್ನುವಾಗ ಗಂಟಲು ಗಟ್ಟಿಯಾಗುತ್ತದೆ. ಅಯ್ಯೋ ಪಾಪವೇ.. ದಯವಿಟ್ಟು ಕ್ಷಮಿಸಿ ನನಗೆ ಗೊತ್ತಿರಲಿಲ್ಲ ನನ್ನ ದೊಡ್ಡ ಮಗಳಿಗೆ ಅವರೇ ಗಂಡು ಹುಡುಕಿ ಕೊಟ್ಟಿದ್ದರು ಈಗ ನಮ್ಮ ಚಿಕ್ಕ ಮಗನಿಗೋ ಇಲ್ಲವೇ ಮಗಳಿಗೋ ಸಂಬಂಧ ಹುಡುಕ್ತಾ ಇದ್ದೀವಿ ಅದಕ್ಕೆ ಉಮಾ ಅವರನ್ನೊಮ್ಮೆ ವಿಚಾರಿಸಿ ಬಿಡೋಣ ಎಂದು ಕರೆ ಮಾಡಿದ್ದೇ ಎಂದು ಇಂದಿಗೂ ಕರೆಗಳು ಬರುತ್ತಲೇ ಇರುತ್ತದೆ ಎಂದರೆ ಅಮ್ಮನ ಪ್ರಭಾವ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

ಕೆಲ ವರ್ಷಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಬಳ್ಳಾರಿಯ ಗಣಿ ಬ್ರದರ್ಸ್ ಗಳದ್ದೇ ಕಾರುಬಾರು ನಡೆಯುತ್ತಿದ್ದಾಗ, ಅಮ್ಮನ ತವರು ಕೆಜಿಎಫ್ ಆಗಿದ್ದ ಕಾರಣ ನಾನು ತಮಾಷೆಗೆಂದು ಭಯಾನಕ ಗಣಿ ಸಿಸ್ಟರ್ಸ್ ಎಂದು ನಮ್ಮ ಅಮ್ಮ ಮತ್ತು ಚಿಕ್ಕಮ್ಮಂದಿರನ್ನು ರೇಗಿಸುತ್ತಿದ್ದೆ.

maniಅಮ್ಮನ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳ್ತಾ ಇದ್ದೀನಂದ್ರೇ, ಇವತ್ತು ವೈಶಾಖ ಬಹುಳ ತೃತಿಯಾ. 12 ವರ್ಷಗಳ ಹಿಂದೆ ಅಕಾಲಿಕವಾಗಿ  ಅಮ್ಮಾ ನಮ್ಮನ್ನೆಲ್ಲಾ ಅಗಲಿದ ದಿನವಿದು. ಹಾಗಾಗಿ ನಮ್ಮನನ್ನು ಪರಿಚಯಿಸ ಬೇಕೆನಿಸಿತು.

ಕೊರೋನಾ ಮಾಹಾಮಾರಿಯಿಂದಾಗಿ ಕಳೆದೆರಡು ವರ್ಷ ಅಮ್ಮನ ಶ್ರಾಧ್ದವನ್ನು ಶಾಸ್ತ್ರೋಕ್ತವಾಗಿ ಮಾಡಲು ಸಾಧ್ಯವಾಗದೇ ಹೋಗಿದ್ದದ್ದಕ್ಕಾಗಿ ಬೇಸರವಿದೆ.  ಶ್ರದ್ಧೆಯಿಂದ ಮಾಡುವುದೇ ಶ್ರಾಧ್ಧ  ಎನ್ನುವಂತೆ, ಎರಡೂ ಬಾರಿಯೂ ಮನೆಯ ಹತ್ತಿರದ ಪುರೋಹಿತರನ್ನು ಕರೆಸಿ ಶ್ರದ್ಧಾ ಭಕ್ತಿಗಳಿಂದ  ಅಮ್ಮಾ ಅಜ್ಜಿ ಮತ್ತು ಮುತ್ತಜ್ಜಿಯರಿಗೆ ತಿಲತರ್ಪಣವನ್ನು ನೀಡಿ ಅರ್ಚಕರಿಗೆ ಯಥಾ ಶಕ್ತಿ ಸ್ವಯಂಪಾಕವನ್ನು ಕೊಟ್ಟು ಮಗಳಿಗಿಂತ ಮುತ್ತೈದೆ ಇಲ್ಲಾ‍, ಅಳಿಯನಿಗಿಂತ ಬ್ರಾಹ್ಮಣನಿಲ್ಲ ಎನ್ನುವಂತೆ ಮನೆಯ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬವನ್ನು ಕರೆಸಿ ಯಥಾ ಶಕ್ತಿ ಸತ್ಕರಿಸಿ ಅವರಿಗೇ ಮುತ್ತೈದೆ ಬಾಗಿಣವನ್ನು ಕೊಟ್ಟು ಮನಸ್ಸನ್ನು ಹಗುರ ಮಾಡಿಕೊಂಡಿದ್ದೆ. ಎಲ್ಲಾ ಅಮ್ಮಂದಿರಿಗೂ ತಮ್ಮ ಗಂಡು ಮಕ್ಕಳು ಮನೆಯ ಹೆಣ್ಣುಮಕ್ಕಳನ್ನು ಕರೆದು ಸತ್ಕರಿಸಿಬಿಟ್ಟರೆ ಖಂಡಿತವಾಗಿಯೂ  ಎಲ್ಲಿದ್ದರೂ ಅಲ್ಲಿಂದಲೇ ನಮ್ಮನ್ನೆಲ್ಲಾ ಹಾರೈಸುತ್ತಾರೆ ಎನ್ನುವುದೇ ನನ್ನ ಭಾವನೆ. ಈ ಬಾರಿ ಕೊರೋನಾ ಹಾವಳಿ ಅಷ್ಟಾಗಿ ಇಲ್ಲದಿರುವ ಕಾರಣ ಶಾಸ್ತ್ರೋಕವಾಗಿ ಶ್ರಾದ್ಧ ಮಾಡುವ ಮೂಲಕ ಅಮ್ಮನಿಗೆ ಸದ್ಗತಿ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.

ಇಂದಿಗೂ ನಾವು ಎಷ್ಟೇ ಆಸ್ತೆ ವಹಿಸಿ ಒತ್ತು ಶಾವಿಗೆ, ತಂಬುಳಿ, ಹುಣಸೇ ಗೊಚ್ಚು, ಬಜ್ಜಿ ಬೋಂಡ, ಹುಗ್ಗಿ, ಬೆಲ್ಲದನ್ನ ಮಾಡಿದರೂ ತಿನ್ನುವಾಗ ಛೇ.. ನಮ್ಮಮ್ಮ ಮಾಡುತ್ತಿದ್ದ ರುಚಿ ಬರಲಿಲ್ಲವಲ್ಲಾ ಎಂದು ಅಮ್ಮನ ನೆನಸಿಕೊಂಡೇ ತಿನ್ನುತ್ತೇವೆ. ಇಂಗು ತೆಂಗು ಕೊಟ್ಟರೆ ಮಂಗವೂ ಅಡುಗೆ ಮಾಡುತ್ತದೆ ಎನ್ನುವುದು ಗಾದೆ ಮಾತಾದರೂ, ಎಲ್ಲರಂತೆ ಅಮ್ಮ, ಕಾಯಿ ತುರಿಯನ್ನು ಸಾರಿಗೆ ಹಾಕದೇ, ಕಾಯಿಯನ್ನು ಚೆನ್ನಾಗಿ ರುಬ್ಬಿ ಅದರ ಹಾಲು ತೆಗೆದು ಹಾಕಿ ಹದವಾಗಿ ಇಂಗಿನ ಒಗ್ಗರಣೆ ಹಾಕಿ ಅಮ್ಮಾ ಮಾಡುತ್ತಿದ್ದ ಸಾರಿನ ರುಚಿ ವರ್ಣಿಸುವುದಕ್ಕಿಂತಲೂ ಅದನ್ನು ಸವಿದಿದ್ದವರಿಗೇ ಗೊತ್ತು. ಇನ್ನು ರುಬ್ಬಿದ ಕಾಯಿಯ ಚರಟವನ್ನು ಹಾಗೇ ಬೀಸಾಕದೇ ಯಾವುದಾದರೂ ತರಕಾರಿಯ ಪಲ್ಯ ಮಾಡಿ ಅದಕ್ಕೆ ಆ ಕಾಯಿ ಚರಟವನ್ನು ಹಾಕಿ ಕಸದಿಂದಲೂ ರಸವನ್ನು ತೆಗೆಯುತ್ತಿದ್ದ ಪುಣ್ಯಾತ್ಗಿತ್ತಿ. ಪುಣ್ಯಕ್ಕೆ ಅಮ್ಮನ ಜೊತೆಯಲ್ಲೇ ಪಳಗಿದ್ದ ನಮ್ಮಾಕೆಯೂ ಸಹಾ ಅದೇ ರೀತಿಯ ಸಾರನ್ನು ಮಾಡುವುದನ್ನು ಕಲಿತು ನಮ್ಮಮ್ಮನಿಂದಲೇ ನನಗಿಂತಲೂ ಚೆನ್ನಾಗಿ ಸಾರು ಮಾಡುತ್ತೀಯೇ, ಎಂಚು ಭೇಷ್ ಪಡೆದಿರುವ ಕಾರಣ, ಇನ್ನೂ ಸಹಾ ಅಮ್ಮನ ಸಾರಿನ ರುಚಿಯನ್ನು ಆಗಾಗ ಮನೆಯಲ್ಲಿ ಸವಿಯುತ್ತಿರುತ್ತೇವೆ. 

ಅಮ್ಮನ ನೆನಪಿಸುವ ಅದೆಷ್ಟೋ ಕೆಲಸಗಳನ್ನು ನಾನು ಇಂದಿಗೂ ಮಾಡುವುದೇ ಇಲ್ಲ. ಅದಕ್ಕೆ ಉದಾಹರಣೆ ಎಂದರೆ, ಇಂದಿಗೂ ನಾನು ಯಶವಂತಪುರ ಸರ್ಕಲ್ ಕಡೆ ಹೋಗುವುದನ್ನು ತಪ್ಪಿಸುತ್ತೇನೆ. ಯಶವಂತಪುರ ಮಾರ್ಕೆಟ್ ಕಡೆ ಹೋದಾಗಲೆಲ್ಲಾ ಒಂದು ಕ್ಷಣ ನಿಲ್ಲಿಸಿ ಓಡೋಡಿ ಹೋಗಿ ಅಮ್ಮನಿಗಾಗಿ ಚಿಗುರು ವಿಳ್ಳೇದೆಲೆ ತರುತ್ತಿದ್ದದ್ದು ನೆನಪಿಗೆ ಬಂದು ಬಿಡುತ್ತದೆ. ಇಂದಿಗೂ ಬೀದಿಯಲ್ಲಿ ಬಿಡಿ ಹೂ ಮಾರಿಕೊಂಡು ಹೋಗುವುದನ್ನು ನೋಡಿದಾಗಲೆಲ್ಲಾ ಗೊತ್ತಿಲ್ಲದೇ ಕಣ್ಣಂಚಿನಲ್ಲಿ ನೀರೂರುತ್ತದೆ.  ಅದರೆ ಭಿಕ್ಶುಕರನ್ನು ಕಂಡರೆ, ಇಲ್ಲವೇ ಸುಭ್ರಹ್ಮಣ್ಯನ ಕಾವಡಿ ಹೊತ್ತುಕೊಂಡು ಹೋಗುವವರನ್ನು ಎಲ್ಲಿಯೇ ನೋಡಿದರೂ, ಎಂತಹ ತುರ್ತು ಕೆಲಸದಲ್ಲಿ ಮಗ್ನನಾಗಿದ್ದರೂ ಒಂದು ಕ್ಷಣ ಬಿಡುವು ಮಾಡಿಕೊಂಡು  ತಕ್ಷಣವೇ ಅವರ ಬಳಿ ಹೋಗಿ ಕೈಲಾದ ಮಟ್ಟಿಗಿನ ಕಾಣಿಕೆ ಹಾಕುವಾಗ  ಅಮ್ಮನೇ ಚಿಕ್ಕ ವಯಸ್ಸಿನಲ್ಲಿ ಕೈ ಹಿಡಿದು ಹಾಕಿಸುತ್ತಿದ್ದದ್ದು ನೆನಪಾಗುವುರಿಂದ ಅಂತಹ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಎಂದಿಗೂ ಬಯಸುವುದಿಲ್ಲ.

ನಮ್ಮ ಅಮ್ಮಾ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮ ನಡೆ ನುಡಿ ಆಚಾರ ವಿಚಾರಗಳ ಮೂಲಕ ಸದಾಕಾಲವೂ ನಮ್ಮೊಂದಿಗೆ ಇದ್ದೇ ಇದ್ದಾರೆ. ಅಮ್ಮಾ ಹೇಳಿಕ್ಕೊಟ್ಟ ಪ್ರತಿಯೊಂದನ್ನೂ ಇಂದಿಗೂ ಚಾಚೂ ತಪ್ಪದೇ ಅಚರಿಸಿಕೊಂಡು ಹೋಗುವ ಮುಖಾಂತರ ಅಮ್ಮನ ವ್ಯಕ್ತಿತ್ವವನ್ನು ನಮ್ಮಲ್ಲಿ ಪ್ರತಿಫಲನಗೊಳಿಸುತ್ತಿದ್ದೇವೆ.

ಬಹುತೇಕರು ನನ್ನ ಬರಹವವನ್ನು ಓದಿಯೋ ಇಲ್ಲವೇ, ನನ್ನ ಮಾತುಗಳನ್ನು ಕೇಳಿಯೋ ಇಲ್ಲವೇ ಗಮಕ ವ್ಯಾಖ್ಯಾನ ಮಾಡುವಾಗ ಎಲ್ಲಾ ಥೇಟ್ ತಾತ ಮತ್ತು ಅಪ್ಪನ ಹಾಗೇ ರೂಡಿಸಿಕೊಂಡಿದ್ದೀಯೇ ಎಂದುಹೊಗಳುತ್ತಾರೆ. ಆದರೆ ನನಗೆ ನಿಜವಾಗಿಯೂ ಓದಿನ ಹುಚ್ಚನ್ನು ಹತ್ತಿಸಿದ ಅಮ್ಮನನ್ನು ಯಾರೂ ನೆನೆಯದ ಕಾರಣ, ನನ್ನ ಅಂಕಿತನಾಮವನ್ನು ಉಮಾಸುತ ಎಂದಿಟ್ಟು ಕೊಂಡು ಪ್ರತಿ ಬಾರಿಯೂ ಅವರೆಲ್ಲರೂ ನನ್ನ ಲೇಖನದ ಕೊನೆಯಲ್ಲಿ ನಮ್ಮಮ್ಮನನ್ನು ನೆನಪಿಸಿಕೊಳ್ಳುವಂತೆ ಮಾಡುವುದರಲ್ಲಿ ಖುಷಿ ಪಡುತ್ತೇನೆ. ತನ್ಮೂಲಕ ನನಗೆ ವಿದ್ಯೆ, ಬುದ್ಧಿ, ವಿವೇಕಗಳನ್ನು ಕಲಿಸಿದ ಅಮ್ಮನಿಗಾಗಿಯೇ ಕಿಂಚಿತ್ ಗೌರವನ್ನು ಕೊಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಹೆತ್ತ ತಾಯಿಯ ಋಣ ನೂರು ಜನ್ಮ ಎತ್ತಿಬಂದರೂ ತೀರಿಸಲಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ