ತಾಜಾ ಆಹಾರ

ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್ ನಿನಗ್ ಇಷ್ಟಾ ಇಲ್ಲೇನ್? ಎಂದು ಹೇಳಿ ಅಮೇರಿಕಾದ ಆಹಾರ ಪದ್ದತಿಯ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳಿಸಿದ್ದದ್ದನ್ನು ಕೇಳಿ ನನಗೆ ನಿಜಕ್ಕೂ ಅಚ್ಚರಿ ಮತ್ತು ಆಶ್ಚರ್ಯವಾಗಿದ್ದಲ್ಲದೇ, ನನಗೇ ಅರಿವಿಲ್ಲದಂತೆಯೇ ನಮ್ಮ ಆಹಾರ ಪದ್ದತಿಗಳ ಬಗ್ಗೆ ಹೆಮ್ಮೆ ಮೂಡಿದ್ದಂತೂ ಸತ್ಯ.

mcdನನ್ನ ಸ್ನೇಹಿತನೇ ಹೇಳಿದಂತೆ, ಅಮೆರಿಕಾದಲ್ಲಿ ಎಲ್ಲರೂ ಸಿರಿವಂತರೇನಲ್ಲ, ಅಲ್ಲಿಯೂ ಸಹಾ ಅತ್ಯಂತ ಬಡ ಕಾರ್ಮಿಕ ವರ್ಗದವರು ಇದ್ದು ಅವರೆಲ್ಲರೂ ತಮ್ಮ ದಿನ ನಿತ್ಯದ ಆಹಾರವಾಗಿ  ಮೆಕ್ಡೊನಾಲ್ಡ್ಸ್, ಕೆ.ಎಫ್.ಸಿ  ಪಿಜ್ಜಾ ಹಟ್ ಗಳಿಂದ ಬರ್ಗರ್, ಚಿಕನ್ ಮತ್ತು ಪಿಜ್ಜಾಗಳಂತಹ  ಜಂಕ್ ಫುಡ್ ಅಂದರೆ ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ ತಿನ್ನುವ ಮೂಲಕ ತಮ್ಮ ಹೊಟ್ಟೆ ತುಂಚಿಸಿಕೊಂಡರೆ, ಅಮೆರಿಕ ಮತ್ತು ಯುರೋಪಿನ ಸಿರಿವಂತ  ಮಿಲಿಯನೇರ್ಗಳು ಮಾತ್ರಾ ತಾಜಾ ತರಕಾರಿಗಳನ್ನು ಬೇಯಿಸಿ ತಿನ್ನುತ್ತಾರೆ. ಅಲ್ಲಿ  ತಾಜಾ ಹಿಟ್ಟಿನಿಂದ ತಯಾರಿಸಿದ ಬಿಸಿ ಬಿಸಿ ಬ್ರೆಡ್ (ರೊಟ್ಟಿ)ಗಳ ಜೊತೆ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸಲಾಡ್ ಗಳನ್ನು ತಿನ್ನುವವರು ನಿಜಕ್ಕೂ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅಂದರೆ ಅಲ್ಲಿ ಶ್ರೀಮಂತರಿಗೆ ಮಾತ್ರ ತಾಜಾ ತರಕಾರಿಗಳನ್ನು ಖರೀದಿಸಲು ಶಕ್ತರಾಗಿರುತ್ತಾರೆ.

ದುರಾದೃಷ್ಟವಷಾತ್ ಬಡ ಜನರು ಮಾತ್ರಾ  ಪ್ಯಾಕೇಜ್ ಮಾಡಿದ ಆಹಾರವನ್ನು ತಿನ್ನುತ್ತಾರೆ. ವಾರಕ್ಕೊಮ್ಮೆ ತಮಗೆ ಅವಶ್ಯಕವಾಗಿರುವ ಆಹಾರವನ್ನು ಖರೀದಿಸಿ ಅವುಗಳನ್ನು  ಫ್ರೀಜರ್ನಲ್ಲಿ ಇಟ್ಟುಕೊಂಡು ಅಗತ್ಯವಿದ್ದಾಗ  ಮೈಕ್ರೋ ವೇವ್ ಒಲೆಯಲ್ಲಿ ಬಿಸಿ ಮಾಡಿ ಸೇವಿಸುತ್ತಾರೆ.

kfcಆದರೆ ಅದೇ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾಗಿ, ಶ್ರೀಮಂತರು ಇತ್ತೀಚೆಗೆ ತಮ್ಮ ಮನೆಗಳ ಫ್ರೀಜರ್ಗಳಲ್ಲಿ ಇದೇ ಪ್ಯಾಕ್ಡ್ ಜಂಕ್ ಪುಡ್ ಗಳನ್ನು ಸಂಗ್ರಹಿಸಿಕೊಳ್ಳುವುದು ಐಶಾರಾಮ್ಯ ಎಂದು ಭಾವಿಸಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ. ಇಷ್ಟಕ್ಕೇ ಸೀಮಿತವಾಗಿರಿಸದೇ,  ಮಕ್ಕಳ ಹುಟ್ಟುಹಬ್ಬ ಅಥವಾ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಇದೇ  ಮೆಕ್ಡೊನಾಲ್ಡ್ಸ್ ಪಿಜ್ಜಾ ಹಟ್ , ಕೆ.ಎಫ್.ಸಿಗಳಲ್ಲಿ ಆಚರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಅದೇ  ಅಮೆರಿಕದಲ್ಲಿನ  ಶ್ರೀಮಂತರು ಬಿಡಿ ಯಾವುದೇ, ಮಧ್ಯಮ ವರ್ಗದವರೂ ಸಹಾ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಈ ಜಂಕ್ ಪುಡ್ ಜಾಯಿಂಟ್ಸ್ ಗಳಲ್ಲಿ ಆಚರಿಸಲು ಇಚ್ಚಿಸುವುದಿಲ್ಲ ಎಂಬುದು ಗಮನಾರ್ಹವಾಗಿದೆ.

ft1ಅದೇ ಭಾರತದ ಪ್ರತೀ ಬಡವರ ಮನೆಗಳಲ್ಲಿಯೂ ತಾಜಾ ತಾಜವಾಗಿ ತಯಾರಿಸಿದ ಬಿಸಿ ಬಿಸಿ ರೊಟ್ಟಿ, ಅನ್ನದೊಂದಿಗೆ ತಾಜಾ ತರಕಾರಿಗಳಿಂದ ತಯಾರಿಸಿದ ಪಲ್ಯಗಳು, ವಿಧ ವಿಧವಾದ ದಾಲ್ ಮತ್ತು ತಾಜಾವಾದ ಕ್ಯಾರೆಟ್, ಸೌತೆಕಾಯಿ ಮತ್ತು ಈರುಳ್ಳಿಗಳ ಜೊತೆ ಇಡೀ ಮನೆಯವರೆಲ್ಲಾ ಒಟ್ಟಾಗಿ ಸಂತೋಷದಿಂದ ಆಹಾರವನ್ನು ಸೇವಿಸುತ್ತಾರೆಯೇ ಹೊರತು ಶೈತ್ಯೀಕರಿಸಿದ ಆಹಾರವನ್ನು ಸೇವಿಸುವುದಿಲ್ಲ, ಸೇವಿಸುವುದಿಲ್ಲ ಎನ್ನುವುದಕ್ಕಿಂತ ಅಂತಹ ಆಹಾರ ಪದಾರ್ಥಗಳನ್ನು ಖರೀದಿಸಲು ಶಕ್ತರಾಗಿಲ್ಲ ಎನ್ನುವುದು ವಾಸ್ತವಾಂಶವಾಗಿದೆ.

junkಅಂಧ ಪಾಶ್ಚಾತ್ಯೀಕರಣದಿಂದ ಐಶಾರಾಮ್ಯದ ಸಂಕೇತ ಎಂದು ಪ್ಯಾಕ್ಡ್ ಆಹಾರ ತಿನ್ನುವುದು ನಿಜಕ್ಕೂ ಗುಲಾಮಗಿರಿಯ ಮನಸ್ಥಿತಿ ನಮ್ಮವರದ್ದು ಎಂದರೂ ತಪ್ಪಾಗದು.  ಯುರೋಪ್, ಅಮೇರಿಕಾ ದೇಶದ ಜನರು ನಮ್ಮ ಜನಸಾಮಾನ್ಯರಂತೆ ತಾಜಾ ಆಹಾರವನ್ನು ತಿನ್ನಲು ಹಂಬಲಿಸುತ್ತಿದ್ದರೆ, ಅದೇ ನಮ್ಮವರು ಅಲ್ಲಿಯ ಬಡ ಜನರಂತೆ ಫ್ರಿಜ್ನಲ್ಲಿ ಇರಿಸಲಾಗಿರುವ ಹಳೆಯ ಪ್ಯಾಕ್ ಮಾಡಿದ ಆಹಾರವನ್ನು ತಿನ್ನಲು ಹಂಬಲಿಸುತ್ತಿರುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತಿದೆ. ಇಲ್ಲಿ ಬಡವ ಬಲ್ಲಿದ ಎನ್ನುವುದಕ್ಕಿಂತಲೂ, ಜಂಕ್ ಆಹಾರ ದೇಹಕ್ಕೆ ಅನಾರೋಗ್ಯಕ್ಕೆ ಈಡು ಮಾಡಿದರೆ, ಅದೇ ತಾಜಾ ಆಹಾರ ತಿನ್ನುವುದು ಆರೋಗ್ಯಕರ ಎನ್ನುವುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ.

ph2ಇಲ್ಲಿ ನಮಗೆ ಸುಲಭವಾಗಿ ಲಭ್ಯವಿರುವ ಆಹಾರಗಳನ್ನು ನಾವು ಲಘುವಾಗಿ ಪರಿಗಣಿಸಿ, ಅಲ್ಲಿನ ಬಡತನದ ಆಹಾರವನ್ನು  ಅಳವಡಿಸಿಕೊಳ್ಳಲು ನಾವು ಬಯಸಿದರೇ, ಅದೇ  ಅಮೇರಿಕನ್ನರು ನಮ್ಮ ಜನಸಾಮಾನ್ಯರ ಆಹಾರಗಳನ್ನು ಸೇವಿಸುವುದು  ಐಷಾರಾಮ್ಯ  ಎಂದು ಭಾವಿಸುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ತಾಜಾ ಹಣ್ಣು ಮತ್ತು ತರಕಾರಿಗಳ ಬೆಲೆಗಳು ಹವಾಮಾನ ಮತ್ತು ಬೆಳೆಗಳನ್ನು ಅವಲಂಬಿತವಾಗಿ ಏರಿಳಿತ ಕಂಡರೆ, ಪ್ಯಾಕೇಜ್ ಮಾಡಿದ ಆಹಾರದ ಬೆಲೆಗಳು ವರ್ಷಪೂರ್ತಿ ಸ್ಥಿರವಾಗಿರುವುದಲ್ಲದೇ, ಅವುಗಳ ಗಡುವು ದಿನಾಂಕಗಳು ಹತ್ತಿರ ಬರುತ್ತಿದ್ದಂತೆ,ಬೆಲೆಗಳು ಅಗ್ಗವಾಗುತ್ತದೆ. ಡಬ್ಬಿಯಲ್ಲಿಟ್ಟ ಆಹಾರವು ಕೆಟ್ಟು ಹೋಗುವ ಸಂಭವವಿರುವ ಕಾರಣ ವ್ಯಾಪಾರಿಗಳು ಕೆಲವೊಮ್ಮೆ ಉಚಿತವಾಗಿಯೂ ಹಂಚುವ ಉದಾಹರಣೆಗಳನ್ನು ನೋಡಬಹುದಾಗಿದೆ. ಅನೇಕ ಬಾರಿ ಈ ರೀತಿಯ ಉಚಿತವಾದ ಆಹಾರಗಳನ್ನು ಪಡೆಯಲು ಅಂಗಡಿಯ ಮುಂದೆ ತಡರಾತ್ರಿಯವರೆಗೂ ಸಾವಿರಾರು ಜನರು ಲಗ್ಗೆ ಹಾಕಿ ಪರಸ್ಪರ ಹೊದೆದಾಡಿರುವ ಪ್ರಸಂಗಳಿಗೇನೂ ಕಡಿಮೆ ಏನಿಲ್ಲ.

ff1ಅದೇ 135+ ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ  ಇಲ್ಲಿಯವರೆಗೆ ತಾಜಾ ಹಣ್ಣು ಮತ್ತು ತರಕಾರಿಗಳಿಗೆ ಅಂತಹ ಕೊರತೆ ಇರದೇ ಋತುಗಳ ಅನುಸಾರವಾಗಿ ಅಲ್ಪಪ್ರಮಾಣದ ಬೆಲೆ ಏರಿಕೆಗಳೊಂದಿಗೆ ಲಭ್ಯವಿರುವ ಕಾರಣ ನಮ್ಮ ದೇಶದ ಸಾಮಾನ್ಯ ಜನರೂ ತಾಜಾ ತಾಜವಾದ ಶುಚಿ ಮತ್ತು ರುಚಿ ಯಾದ  ಆಹಾರವನ್ನು ಸೇವಿಸುವಷ್ಟು  ಅದೃಷ್ಟಪಡೆದಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ದುರಾದೃಷ್ಟವಷಾತ್ ಗುಲಾಮೀ ದಾಸ್ಯತನದಿಂದ ಮತ್ತು ಪ್ರತಿಷ್ಟೆಯ ಸಂಕೇತ ಎಂದು ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಹಲವರು  ಶ್ರೀಮಂತಿಕೆಯ ಪ್ರತೀಕ ಎಂದು ಬಹುದಿನ ಕೆಡದಂತೆ ರಾಸಾಯನಿಕ ಸಂರಕ್ಷಕಗಳನ್ನು ಬೆರೆಸಿ ಪ್ಯಾಕೇಜ್ ಮಾಡಿದ ಆಹಾರಕ್ಕೆ ಜೋತು ಬೀಳುತ್ತಿರುವ ಮೂಲಕ ವಿನಾಕಾರಣ ತಮ್ಮ ಮೇಲೆ ತಾವೇ ಅನಾರೋಗ್ಯವನ್ನು ಹೇರಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ.

rotimakingನಿಜ ಹೇಳಬೇಕೆಂದರೆ ಜಂಕ್ ಫುಡ್ ಸೇವಿಸುತ್ತಿರುವ ಪಟ್ಟಣವಾದ ಸಿರಿವಂತರುಗಳು ಇಪ್ಪತ್ತೈದು ಮೂವ್ವತ್ತು ವರ್ಷಕ್ಕೇ ಸ್ಥೂಲಕಾಯರಾಗಿ ಅಧಿಕ ರಕ್ತದೊತ್ತಡ, ಮಧುಮೇಹ ಇಲ್ಲವೇ ಹೃದಯಾಘಾತಕ್ಕೆ ಒಳಗಾಗಿ ಆರೋಗ್ಯಕ್ಕಾಗಿ ಲಕ್ಷಾಂತರ ಹಣವನ್ನು ವ್ಯಯಿಸುತ್ತಿದ್ದರೆ, ಅದೇ  ಪಟ್ಟಣದಲ್ಲಿರುವ ಮಧ್ಯಮ ವರ್ಗದವರು ಮತ್ತು ಹಳ್ಳಿಗರು ತಾಜಾ ತಾಜಾ ಆಹಾರವನ್ನು ಸೇವಿಸಿ ದೀರ್ಘಾಯುಷ್ಯವಂತರಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ಇವೆಲ್ಲವುಗಳ ಅರಿವಿದ್ದರಿಂದಲೇ ಏನೋ? ನಮ್ಮ ಪೂರ್ವಜರು ಪ್ರತೀ ದಿನವೂ ಪ್ರತೀ ಹೊತ್ತು ತಾಜಾ ತಾಜಾ ಆಹಾರವನ್ನು ಮನೆಗಳಲ್ಲೇ ತಯಾರಿಸಿಕೊಂಡು ಸೇವಿಸುವ ಪದ್ದತಿಯನ್ನು ರೂಢಿಗೆ ತಂದಿದ್ದರು ಎಂದೆನಿಸುತ್ತದೆ ಅಲ್ಲವೇ? ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿಯೇ,  ದೊಡ್ಡವರ ಮನೆ ನೋಟ ಚೆಂದ, ಬಡವರ ಮನೆಯ ಊಟ ಚೆಂದಾ! ಎಂಬ ಗಾದೆಯೂ ರೂಢಿಗೆ ಬಂದಿರ ಬಹುದಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣದಲ್ಲಿ  ಆತ್ಮೀಯರೊಬ್ಬರು ಕಳುಹಿಸಿ ಕೊಟ್ಟಿದ್ದ ಸಂದೇಶದಿಂದ ಪ್ರೇರಿತವಾದ ಲೇಖನವಾಗಿದೆ.

ಹೊಟ್ಟೇ ತುಂಬಾ ಊಟ ಮಾಡಿ, ಇಷ್ಟ ಬಂದಷ್ಟು ಹಣ ಕೊಡಿ.

ಸಾಮಾನ್ಯವಾಗಿ ಬಹುತೇಕ ಮಧ್ಯಮವರ್ಗದ ಜನರು ಹೋಟೇಲ್ಲಿಗೆ ಹೋದ ತಕ್ಷಣ ಸರ್ವರ್ ಮೆನು ಕಾರ್ಡ್ ಕೈಗೆ ಕೊಟ್ಟೊಡನೆಯೇ ಅದರಲ್ಲಿ ಯಾವ ಯಾವ ಖಾದ್ಯಗಳಿವೆ ಎಂಬುದನ್ನು ನೋಡುವುದಕ್ಕಿಂತಲೂ ಯಾವುದರ ಬೆಲೆ ಎಷ್ಟಿದೆ? ನಮ್ಮಬಳಿ ಇರುವ ಬೆಲೆಗೆ ಯಾವ ತಿಂಡಿ ಸರಿ ಹೊಂದಬಹುದು ಎಂದೇ ಲೆಖ್ಖಾಚಾರ ಹಾಕುವುದು ಸರ್ವೇ ಸಾಮಾನ್ಯ. ಕೆಲವು ವರ್ಷಗಳ ಹಿಂದೆ ನಮ್ಮ ಮಕ್ಕಳನ್ನು ಒಂದು ದೊಡ್ಡ ಹೊಟೇಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾಗ ನಮ್ಮ ಮಗಳು ಆ ಹೋಟೇಲ್ಲಿನ ಖಾದ್ಯಗಳ ಬೆಲೆಯನ್ನು ನೋಡಿದ ಕೂಡಲೇ ಅಪ್ಪಾ, ಈ ಹೋಟೇಲ್ ಬೇಡಾ, ಬೇರೇ ಯಾವುದಾದರೂ ಹೋಟೆಲ್ಲಿಗೆ ಹೋಗೋಣ ನಡೀರಿ ಎಂದಾಗಾ, ಯಾಕೋ ಪುಟ್ಟಾ ಎಂದು ಕೇಳಿದ್ದಕ್ಕೇ, ಅಯ್ಯೋ ರಾಮ ಇಲ್ಲಿನ ಒಂದು ತಿಂಡಿಯ ಬೆಲೆಯಲ್ಲಿಯೇ ಹೊರಗಡೇ, ನಾವೆಲ್ಲರೂ ಹೊಟ್ಟೇ ತುಂಬಾ ತಿನ್ನಬಹುದು ಎಂದು ತನ್ನ ಕಕ್ಕುಲತಿಯನ್ನು ತೋರಿದ್ದಳು. ಊಟಕ್ಕೆ ಬಂದಾಗ ಬೆಲೆಯನ್ನೆಲ್ಲಾ ನೋಡಬಾರದು. ಇಲ್ಲಿಯ ಬೆಲೆಯೆಲ್ಲಾ ತಿಳಿದೇ, ಇಲ್ಲಿಗೆ ಕರೆದುಕೊಂಡು ಬಂದಿದ್ದೀನಿ. ಸುಮ್ಮನೇ ಉತ್ತಮವಾದ ಆಹಾರ ಸವಿಯಿರಿ ಎಂದಿದ್ದೆ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೇ, ದೂರದ ಸಿಂಗಾಪುರದಲ್ಲಿರುವ ಅನ್ನಲಕ್ಷ್ಮಿ ಎಂಬ ಭಾರತೀಯರ ಹೋಟೇಲ್, ಅದರಲ್ಲೂ ದಕ್ಷಿಣ ಭಾರತೀಯ ತಿಂಡಿ ತಿನಿಸುಗಳ ಈ ಹೋಟೇಲ್ಲಿನಲ್ಲಿ ಈ ಲೇಖನ ಶೀರ್ಷಿಕೆಯಂತೆ ಹೊಟ್ಟೇ ತುಂಬಾ ಊಟ ಮಾಡಿ ಮನಸ್ಸಿಗೆ ಇಷ್ಟ ಬಂದಷ್ಟು ಹಣ ಕೊಡುಬಹುದಾಗಿದೆ. ಆ ಹೋಟೇಲ್ ಬಗ್ಗೆಯೇ ನಾನಿಂದು ನಿಮಗೆ ತಿಳಿಸಿಕೊಡಲು ಇಚ್ಚಿಸುತ್ತಿದ್ದೇನೆ.

ಅನ್ನಲಕ್ಷ್ಮಿ ಎಂಬ ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಒಂದು ಅಂತರರಾಷ್ಟ್ರೀಯ ಹೋಟೆಲ್ಲುಗಳ ಸರಪಳಿಯಾಗಿದ್ದು, ಮಾನವೀಯತೆಯ ಮೇಲಿನ ನಂಬಿಕೆಗಳ ಮೇಲೆ ಮತ್ತು ಅನ್ನದಾತೋ ಸುಖೀಭವ ಎಂಬ ಅಸಾಮಾನ್ಯ ತತ್ತ್ವದ ಮೇಲೆ ಕಾರ್ಯನಿರ್ವಹಿಸುವ ಲಾಭರಹಿತ ಸಂಸ್ಥೆಯಾದ ಟೆಂಪಲ್ ಆಫ್ ಫೈನ್ ಆರ್ಟ್ಸ್ (ಟಿಎಫ್‌ಎ)ನ ಪಾಕಶಾಲೆಯ ಒಂದು ವಿಭಾಗವಾಗಿದೆ. 1984ರಲ್ಲಿ ಮಲೇಷ್ಯಾದಲ್ಲಿ ಮೊತ್ತ ಮೊದಲಬಾರಿಗೆ ಈ ಅನ್ನಲಕ್ಷ್ಮಿ ಹೋಟೇಲ್ ಆರಂಭವಾಗಿ ನಂತರ ಆಸ್ಟ್ರೇಲಿಯಾ, ಸಿಂಗಾಪುರದಲ್ಲಿ ಆರಂಭವಾದ ನಂತರ ಭಾರತದ ಕೊಯಮತ್ತೂರಿನಲ್ಲಿ 1989 ರಲ್ಲಿ ಪ್ರಾರಂಭವಾಗಿ, ಚೆನ್ನೈ ಸೇರಿದಂತೆ ಅನೇಕ ಕಡೆ ಇದರ ಶಾಖೆಗಳು ಆರಂಭವಾಗಿವೆ.

ಈ ಹೋಟೆಲ್ಲಿನ ಇನ್ನೂ ಒಂದು ಮಹತ್ವದ ವಿಷಯವೇನೆಂದರೆ, ಇಲ್ಲಿನ ಅಹಾರ ಪದ್ದತಿ ಶುದ್ಧ ಭಾರತೀಯ ಸಸ್ಯಹಾರವಾದರೂ ಈ ಹೋಟೆಲ್ಲಿನ ಪರಿಸರ ಮಾತ್ರಾ ಆಯಾಯಾ ಪ್ರದೇಶದ ಕಲಾವಿದರುಗಳನ್ನು ಬಳಸಿಕೊಂಡು ಪ್ರಾದೇಶಿಕ ಲಲಿತಕಲೆಗಳನ್ನು ಬೆಂಬಲಿಸುತ್ತಾ ಬಂದಿದೆ. ಇದೇ ಕಾರಣಕ್ಕಾಗಿ 2013 ರಲ್ಲಿ, ಚೆನ್ನೈ ಶಾಖೆಯು ಅತ್ಯುತ್ತಮ ದಕ್ಷಿಣ ಭಾರತೀಯ ರೆಸ್ಟೋರೆಂಟ್ (ಸ್ಟ್ಯಾಂಡ್-ಅಲೋನ್) ವಿಭಾಗದಲ್ಲಿ ಟೈಮ್ಸ್ ಫುಡ್ ಅಂಡ್ ನೈಟ್ ಲೈಫ್ ಪ್ರಶಸ್ತಿಯನ್ನೂ ಪಡೆದು ಕೊಂಡಿರುವುದು ಗಮನಾರ್ಹವಾದ ವಿಷಯವಾಗಿದೆ.

ಇನ್ನು ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಸಿಂಗಾಪುರದ ಅನ್ನಲಕ್ಷ್ಮಿ ಹೋಟೆಲ್ಲಿನ ಬಗ್ಗೆ ಹೇಳಬೇಕೆಂದರೆ, ಇಲ್ಲಿ ಇತರೇ ಹೋಟೆಲ್ಲಿನಂತೆ ಯಾವುದೇ ಮೆನುವನ್ನು ನೀಡುವುದಿಲ್ಲ. ಬದಲಾಗಿ ಇಲ್ಲಿ ಆಹಾರವನ್ನು ಬಫೆ-ಶೈಲಿಯಲ್ಲಿ ಬಡಿಸಲಾಗುತ್ತದೆ. ಒಂದು ಕಡೆಯಲ್ಲಿ ಸ್ನೇಹಪರ ಬಾಣಸಿಗರು ನಮ್ಮ ಕಣ್ಣ ಮುಂದೆಯೇ ಬಿಸಿ ಬಿಸಿಯಾದ ಗರಿ ಗರಿಯಾದ ಅಷ್ಟೇ ರುಚಿ ರುಚಿಯಾದ ದೋಸೆಗಳನ್ನು ಮಾಡಿಕೊಡಲು ಸಿದ್ದರಿರುತ್ತಾರೆ. ಖಾಲೀ ದೋಸೆ, ತುಪ್ಪದ ದೋಸೆ, ಮಸಾಲಾ ದೋಸೆಯ ಜೊತೆಗೆ ಜಾಫ್ನಾ ದೋಸೆ (ಶ್ರೀಲಂಕಾ ರೀತಿಯದ್ದು) ಹೀಗೆ ನಾಲ್ಕೈದು ರೀತಿಯ ದೋಸೆಗಳನ್ನು ಎರಡು ಮೂರು ರೀತಿಯ ಚಟ್ನಿ ಮತ್ತು ಸಾಂಬಾರ್ ಒಟ್ಟಿಗೆ ಸವಿಯ ಬಹುದಾಗಿದೆ.

ಪರಿಮಳಯುಕ್ತ ಬಾಸ್ಮತಿ ಅಕ್ಕಿಯಿಂದ ಮಾಡಿದ ಬಗೆ ಬಗೆಯ ಅನ್ನದ ಭಕ್ಷಗಳು ಜೊತೆಗೆ ದಾಲ್ ವಿವಿಧ ರೀತಿಯ ಪಲ್ಯಗಳು, ದಕ್ಷಿಣ ಭಾರತೀಯ ತಿಳೀ ಸಾರು, ಹುಳಿ ಹೀಗೆ ಪ್ರತಿಯೊಂದು ಭಕ್ಷ್ಯಗಳಿಂದ ಹೊರಹೊಮ್ಮುವ ಪರಿಮಳವೇ ನಮ್ಮ ಹೊಟ್ಟೆಯನ್ನು ತುಂಬಿಸಿಬಿಡುತ್ತವೆ ಎಂದರೂ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ರೋಟೀ, ನಾನ್ ಮತ್ತು ಮೂಂಗ್ ಧಾಲ್ ನೆನಸಿಕೊಂಡರೇನೇ ಬಾಯಿಯಲ್ಲಿ ನೀರೂರಿಸುತ್ತದೆ. ಸ್ಥಳೀಯವಾಗಿಯೇ ಬಹಳ ವಿಶಿಷ್ಟವಾದ ನಾನಾ ರೀತಿಯ ಮಸಾಲೆಗಳ ರುಚಿಕರವಾದ ಮಿಶ್ರಣದಿಂದ ತಯಾರು ಮಾಡಿ ಉಣಬಡಿಸುವ ಆಹಾರವನ್ನು ವರ್ಣಿಸುವುದಕ್ಕಿಂದಲೂ ಸವಿದರೇ ಬಲು ಮಜವಾಗಿರುತ್ತದೆ.

ಊಟದ ನಂತರ ಹದವಾದ ಪರಿಮಳಯುಕ್ತ ಕೆನೆ ಮೊಸರಿಗೆ ದ್ರಾಕ್ಷಿ ಮತ್ತು ಅಲ್ಲಲ್ಲಿ ಬಾಯಿಗೆ ಸಿಕ್ಕಿ ರುಚಿಯನ್ನು ಹೆಚ್ಚಿಸುವ ಹುರಿದ ಗೋಡಂಬಿಯ ತುಣುಕಿನೊಂದಿಗೆ ಸರಿ ಪ್ರಮಾಣದಲ್ಲಿ ಸಕ್ಕರೆಯನ್ನು ಬೆರೆಸಿದ ಲಸ್ಸಿ ಕುಡಿದ ಮೇಲಂತೂ ಸ್ವರ್ಗಕ್ಕೆ ಮೂರೇ ಗೇಣು ಎನಿಸುವಂತೆ ಮಾಡುತ್ತದೆ. ನಿಜ ಹೇಳಬೇಕೆಂದರೆ ಇಲ್ಲಿನ ಆಹಾರ ಇತರೇ ಹೋಟೆಲ್ಲಿನಲ್ಲಿ ತಿನ್ನುವ ಆಹಾರದಂತೆ ಇರದೇ, ಮನೆಯಲ್ಲಿ ಪ್ರೀತಿ ಪೂರ್ವಕವಾಗಿ ಅಮ್ಮ ಮಾಡಿದ ಅಡುಗೆಯನ್ನು ತಿಂದಂತೆಯೇ ಒಂದು ರೀತಿಯ ಅನನ್ಯವಾದ ಅನುಭವವನ್ನು ಕೊಡುತ್ತದೆ.

ಅನ್ನಂ ಪರಬ್ರಹ್ಮ ಎನ್ನುವ ತತ್ವದಡಿಯಲ್ಲಿ ಹಸಿದವರಿಗೆ ಉತ್ಕೃಷ್ಟವಾದ ಆಹಾರವನ್ನು ಅನ್ನಲಕ್ಷ್ಮಿ ಹೋಟೆಲ್ಲಿನ ಸ್ವಯಂಸೇವಕರು ನೀಡಲು ಕಟಿ ಬದ್ಧರಾಗಿರುವ ಕಾರಣದಿಂದಲೇ ಇಷ್ಟು ಸುವ್ಯವಸ್ಥಿತವಾಗಿ ಈ ಹೋಟೇಲ್ ನಡೆದುಕೊಂಡು ಹೋಗುತ್ತಿದೆ. ಹೆಚ್ಚಿನವರು ತಮ್ಮ ಬಿಡುವಿನ ಸಮಯವನ್ನು ಈ ರೆಸ್ಟೋರೆಂಟಿನಲ್ಲಿ ಅಡುಗೆಗೆ ಸಹಾಯ ಮಾಡುವುದು, ತರಕಾರಿ ಹೆಚ್ಚುವುದು. ಆಹಾರ ಬಡಿಸುವುದು, ಪಾತ್ರೆ ತೊಳೆಯುವುದು ಹೀಗೆ ಹೋಟೆಲ್ ಸಂಬಂಧ ಪಟ್ಟ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದಲೇ, ಅನ್ನಲಕ್ಷ್ಮಿಯ ಮಾಲಿಕರು ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ಒದಗಿಸುವುದರತ್ತ ಗಮನ ಹರಿಸುತ್ತಾರೆಯೇ ವಿನಃ ಲಾಭದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವುದಿಲ್ಲ. ಈ ರೆಸ್ಟೋರೆಂಟ್ ಹೆಚ್ಚಾಗಿ ಸ್ವಯಂಸೇವಕರ ನಿಸ್ವಾರ್ಥ ಮತ್ತು ಸಹಾನುಭೂತಿಯ ಸೇವೆಯ ಮುಖಾಂತರ ನಡೆಯುವ ಕಾರಣ ಇಲ್ಲಿನ ಆಹಾರಕ್ಕೆ ಬೆಲೆಯನ್ನು ನಿಗದಿಪಡಿಸುವುದು ಕಠಿಣವಾಗಿದೆ. ಇದೆಲ್ಲವನ್ನೂ ಅರಿತಿರುವ ಗ್ರಾಹಕರೂ ಸಹಾ ಹೊಟ್ಟೇ ತುಂಬಾ ತಿಂದು ಸುಮ್ಮನೇ ಖಾಲೀ ಕೈ ಬೀಸಿಕೊಂಡು ಹೋಗದೇ ಯಥೆಚ್ಚವಾಗಿ ಹಣವನ್ನು ಪಾವತಿಸಿಯೇ ಹೋಗುತ್ತಾರೆ. ಕನಿಷ್ಠ ಪಕ್ಷ 5- 10 $ ಪಾವತಿಸಿಯೇ ಹೋಗುವುದರಿಂದಾಗಿ ಈ ಹೋಟೆಲ್ ಇದುವರೆಗೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ.

ಮುಂದಿನ ಬಾರಿ ಸಿಂಗಾಪುರಕ್ಕೆ ಹೋದಾಗ ತಪ್ಪದೇ ಈ ಕೆಳಕಂಡ ವಿಳಾಸದಲ್ಲಿರುವ ಅನ್ನಲಕ್ಷ್ಮಿ ಹೋಟೆಲ್ಲಿಗೆ ಹೋಗಿ ಶುಚಿ ರುಚಿಯಾದ ಊಟವನ್ನು ಸವಿದು. ಆ ಸಹಾನುಭೂತಿಯ ಸ್ವಯಂಸೇವಕರು ಮತ್ತು ಅವರ ಸೇವೆಗೆ ಒಂದು ಧನ್ಯವಾದಗಳನ್ನು ಅರ್ಪಿಸಿ ಬರುತ್ತೀರಲ್ಲವೇ?

Annalakshmi Restaurant
#01, 20 Havelock Rd,
04 Central Square, Singapore 059765
Tel: +65 6339 9993
Mon: 11am – 3pm
Tue to Sun: 11am – 3pm, 6.15pm – 9.30pm
Nearest Station: Chinatown/Clarke Quay

ಏನಂತೀರೀ?
ಇಂತಿ ನಿಮ್ಮ ಉಮಾಸುತ

1 ರೂಪಾಯಿಗೆ ಹೊಟ್ಟೆ ತುಂಬಾ ಊಟ

ಅರೇ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ತರಕಾರಿಗಳ ಬೆಲೆ ಎಲ್ಲವೂ ಗಗನಕ್ಕೇರಿರುವಾಗ ಇದೇನಿದು 1 ರೂಪಾಯಿಗೆ ಹೊಟ್ಟೆ ತುಂಬಾ ಊಟಾನಾ? ಅದೂ ಈಗಿನ ಕಾಲದಲ್ಲಿ? ಸರ್ಕಾರವೇ ನಡೆಸುವ ಇಂದಿರಾ ಕ್ಯಾಂಟೀನ್ ನಲ್ಲಿಯೇ ಪ್ಲೇಟ್ ಊಟ ಒಂದಕ್ಕೆ 10 ರೂಪಾಯಿಗಳು ಇರುವಾಗ, ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೇ ಅಂತಾ ನಂಬುವುದು ಸ್ವಲ್ಪ ಕಷ್ಟವೇ ಅದರೂ ಇದು ದೂರದ ದೆಹಲಿಯಲ್ಲಿ ನಿತ್ಯ ಸತ್ಯವಾದ ಸಂಗತಿಯಾಗಿದೆ.

ದೆಹಲಿಯ ಭೂಟೊ ವಾಲಿ ಗಲ್ಲಿಯಲ್ಲಿರುವ ನಂಗ್ಲೋಯಿ ಅವರ ಶ್ಯಾಮ್ ರಸೊಯಿಯಲ್ಲಿ ಪ್ರತೀ ದಿನವೂ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಸುಮಾರು 1 ಸಾವಿರದಿಂದ 1,100 ಜನರು ಈ ಊಟಕ್ಕಾಗಿ ಸರದಿಯಲ್ಲಿ ಕಾದು ನಿಂತು ಈ ರುಚಿಕವಾದ ಊಟವನ್ನು ಸವಿಯುತ್ತಿದ್ದಾರೆ. ಕಳೆದ ಎರಡು ವರ್ಷದಿಂದ, ಪ್ರವೀಣ್ ಕುಮಾರ್ ಗೋಯಲ್ ಎಂಬುವರು ಈ ಶ್ಯಾಮ್ ರಸೋಯ್ ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲಿಯೇ ತಿನ್ನಲಿಕ್ಕೆ ಆಗದವರು ಮನೆಯಿಂದ ಪಾತ್ರೆಗಳನ್ನು ತಂದು ಈ ಹೋಟೆಲ್ಲಿನ್ನಿಂದ ಪಾಸರ್ಲ್ ಸಹಾ ತೆಗೆದುಕೊಂಡು ಹೋಗುವುದಲ್ಲದೇ, ಅಲ್ಲಿಯೇ ಹತ್ತಿರದ ಇಂದ್ರಲೋಕ್, ಸಾಯಿ ಮಂದಿರ್‌ನಂತಹ ಪ್ರದೇಶಕ್ಕೆ ಆಟೋ ರಿಕ್ಷಾ ಮೂಲಕವೂ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. ಹೀಗೆ ಪ್ರತೀ ದಿನವೂ ಸುಮಾರು 2000 ಜನರ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಬೆಳಿಗ್ಗೆ 1 ರೂಪಾಯಿಗೆ ಬಿಸಿ ಬಿಸಿಯಾದ ಖಡಕ್ ಚಹಾ ಕೂಡ ಇಲ್ಲಿ ಲಭ್ಯವಿದೆ.

ರಂಜೀತ್ ಸಿಂಗ್ ಎಂಬ ಉದ್ಯಮಿಯವರು ನಡೆಸುತ್ತಿದ್ದ ಎನ್‌ಜಿಟಿ ಕಾರ್ಖಾನೆ ವಿವಿಧ ಕಾರಣಗಳಿಂದ ಮುಚ್ಚಿಹೋಗಿದ್ದರಿಂದ ಆ ಜಾಗ ಖಾಲಿ ಇದ್ದದ್ದನ್ನು ಗಮನಿಸಿದ ಪ್ರವೀಣ್ ಕುಮಾರ್ ಗೋಯಲ್ ತಮ್ಮ ಈ ಮಹತ್ಕಾರ್ಯಕ್ಕೆ ಈ ಜಾಗವನ್ನು ಕೊಡಲು ಸಾಧ್ಯವೇ ಎಂದು ಕೇಳಿದಾಗ ರಂಜೀತ್ ಸಿಂಗ್ ತುಂಬು ಹೃದಯದಿಂದ ಕೊಟ್ಟ ಜಾಗದಲ್ಲಿ ಜನರು ಸರಿಯಾಗಿ ನೆಲದ ಮೇಲೆ ಕುಳಿತು ಊಟ ಮಾಡುವ ಸಾಮಾನ್ಯ ವ್ಯವಸ್ಥೆಯನ್ನು ಮಾಡಿದ್ದಾರೆ. ಸುಮಾರು ಐದಾರು ಸಹಾಯಕರೊಂದಿಗೆ ಆರಂಭಿಸಿದ ಈ ಹೊಟೆಲ್ಲಿಗೆ ಅನೇಕ ಸ್ಥಳೀಯರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಇವರ ಜೊತೆ ಕೈಜೋಡಿಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದ ಕೆಲಸವಾಗಿದೆ. ಆರಂಭದಲ್ಲಿ ಕೇವಲ ಬಡ ಜನರು ಮಾತ್ರವೇ ಇಲ್ಲಿಗೆ ಬರುತ್ತಿದ್ದು, ಈ ಹೋಟೆಲ್ಲಿನ ಖ್ಯಾತಿ ಎಲ್ಲೆಡೆಯಲ್ಲಿಯೂ ಹಬ್ಬಿರುವ ಕಾರಣ, ಕೆಲವೊಂದು ಮಧ್ಯಮ ವರ್ಗದ ಜನರು ಮತ್ತು ಶ್ರೀಮಂತರು ಈ ಪ್ರದೇಶವನ್ನು ಹುಡುಕಿಕೊಂಡು ಬಂದು ಊಟ ಮಾಡಿದರೂ ಇನ್ನು ಕೆಲವರು ವಿವಿಧ ಕಾರಣಗಳಿಂದ ಆ ಪ್ರದೇಶಕ್ಕೆ ಹೋಗಿದ್ದಾಗ ಇಲ್ಲಿಯ ಊಟವನ್ನು ಸವಿದು ಬರುವುದು ಗಮನಾರ್ಹವಾದ ಅಂಶವಾಗಿದೆ,

ಕೇವಲ 1 ರೂಪಾಯಿಗಳಿಗೆ ಊಟ ಎಂದರೆ ಅದು ಕಳಪೆಯಾಗಿರದೇ, ಪ್ರತೀ ದಿನವೂ ಬಗೆ ಬಗೆಯ ಭಕ್ಷ ಭೋಜನದೊಂದಿಗೆ, ಸೋಯಾ ಪಲಾವ್, ಅನ್ನ, ರೊಟ್ಟಿ, ಎರಡು ರೀತಿಯ ಪಲ್ಯಗಳು ಮತ್ತು ಹಲ್ವಾ ಇಲ್ಲವೇ ಖೀರ್ ನೊಂದಿಗೆ ಅತ್ಯಂತ ರುಚಿಕರವಾಗಿರುತ್ತದೆ. ಆರಂಭದಲ್ಲಿ, ಈ ಊಟದ ಬೆಲೆ 10 ರೂಪಾಯಿಗಳಿದ್ದು ಈಗ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ 1ರೂಪಾಯಿಗೆ ಇಳಿಸಿದ್ದಾರೆ.

ನಮ್ಮ ಭಾರತೀಯರ ಸಂಸ್ಕಾರ ಮತ್ತು ಸಂಪ್ರದಾಯವೇ ಒಂದು ರೀತಿಯ ಅಭೂತಪೂರ್ವವಾದದ್ದು, ಯಾರೋ ಪುಣ್ಯಾತ್ಮರು ಕೇವಲ 1 ರೂಪಾಯಿಗಳಿಗೆ ಊಟ ಹಾಕುತ್ತಿದ್ದಾರೆ ಎಂದರೆ ಅದನ್ನು ಗಡದ್ದಾಗಿ ಕೇವಲ 1 ರೂಪಾಯಿ ಪಾವತಿಸಿ ತಿಂದು ಹೋಗದೇ, ಈ ಸತ್ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ತಮ್ಮ ಕೈಲಾದ ಮಟ್ಟಿಗೆ ಧನಸಹಾಯವನ್ನು ಮಾಡುತ್ತಾರೆ. ಇನ್ನೂ ಅನೇಕರು ಅಕ್ಕಿ, ಬೇಳೆ ಗೋಧಿ ಮತ್ತು ತರಕಾರಿಗಳನ್ನು ತಂದು ಕೊಡುತ್ತಿರುವ ಕಾರಣದಿಂದ ಈ ಕಾರ್ಯ ನಿರಂತರವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುತ್ತಾರೆ ಶ್ರೀ ಗೋಯಲ್ ಅವರು. ಇತ್ತೀಚೆಗೆ ಒಬ್ಬ ಬಡ ವೃದ್ಧೆಯೊಬ್ಬರು ಇಲ್ಲಿನ ಊಟ ಸವಿದ ನಂತರ ಅವರೂ ಸಹಾ ತಮ್ಮ ಕೈಲಾದ ಮಟ್ಟಿಗಿನ ಸಾಮಗ್ರಿಗಳನ್ನು ತಂದು ಕೊಟ್ಟಿದ್ದನ್ನು ಸ್ಮರಿಸಿಕೊಳ್ಳುತ್ತಾರೆ.

ಎಲ್ಲದ್ದಕ್ಕಿಂತಲೂ ಪ್ರಮುಖವಾದ ಆಂಶವೆಂದರೆ, ಈ ದೇಣಿಗೆಯನ್ನು ಹಣದ ಮೂಲಕ ಸ್ವೀಕರಿಸಿದೆ ಎಲ್ಲವೂ ಡಿಜಿಟಲ್ ಪಾವತಿ ಮೂಲಕ ನಡೆಯುವುದರಿಂದ ಪಾರದರ್ಶಕವೂ ಆಗಿದ್ದು ಜನರಿಗೆ ನಂಬಿಕೆ ಬಂದ ಕಾರಣ ಅನೇಕರು ತನು ಮನ ಮತ್ತು ಧನಗಳ ಮೂಲಕ ಸಹಾಯ ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ವಸು ದೈವ ಕುಟುಂಬಕಂ ಎಂಬ ನಮ್ಮ ಹಿಂದೂ ಧರ್ಮದ ತತ್ವಕ್ಕೆ ಅನುಗುಣವಾಗಿದೆ.

ಸುಮಾರು ದಿನಗಳಿಂದ ಈ ಶ್ಯಾಮ್ ರಸೋಯಿಯಲ್ಲಿ ಊಟ ಮಾಡುತ್ತಿರುವ ವಯೋವೃದ್ಧ ಶ್ರೀ ನರೇಂದ್ರಲಾಲ್ ಶರ್ಮಾ ರವರು ಹೇಳುವಂತೆ ನಾನು ಇಲ್ಲಿ ಕೇವಲ ಒಂದು ರೂಪಾಯಿಗೆ ಸೇವಿಸುತ್ತಿರುವ ಊಟ, ನಿಜಕ್ಕೂ ಶುಚಿ ರುಚಿಯಾಗಿದ್ದು ಇಲ್ಲಿಯವರೆಗೆ ನಮಗೆ ಯಾವುದೇ ಆರೋಗ್ಯ ವ್ಯತಿರಿಕ್ತವಾಗಿಲ್ಲ ಎಂದು ಹೇಳಿದ್ದಲ್ಲದೇ ಕೇವಲ ದೊಡ್ಡವರಲ್ಲದೇ, ಇಲ್ಲಿನ ಊಟವನ್ನು ಸೇವಿಸಿರುವ ಮಕ್ಕಳ ಮೇಲೂ ಯಾವುದೇ ರೀತಿಯ ಪರಿಣಾಮವಾಗದೇ ಎಲ್ಲರೂ ಸಂತೋಷದಿಂದ ಸವಿಯುತ್ತಿದ್ದಾರೆ ಎಂದಿರುವುದು ಆ ಹೋಟೆಲ್ಲಿನ ಖ್ಯಾತಿಯನ್ನು ತಿಳಿಸುತ್ತದೆ.

ಇನ್ನು ಉಚಿತವಾಗಿ ಊಟ ಹಾಕಿದರೆ ನಮ್ಮ ಜನರು ಒಪ್ಪದ ಕಾರಣ, ಕೇವಲ 1 ರೂಪಾಯಿಗೆ ಇಂದಿನ ಕಾಲದಲ್ಲಿಯೂ ಜನರ ಹಸಿವನ್ನು ನೀಗಿಸುತ್ತಿರುವ ಪ್ರವೀಣ್ ಕುಮಾರ್ ಗೋಯಲ್ ಮತ್ತು ಅವರ ತಂಡದವರ ಈ ಅದ್ಭುತ ಕಾರ್ಯಕ್ಕೆ ಒಂದು ಮೆಚ್ಚಿಗೆ ನೀಡುವುದರ ಮೂಲಕ ಅವರ ಈ ಅನನ್ಯವಾದ ಕಾರ್ಯವನ್ನು ಶ್ಲಾಘಿಸೋಣ. ಸಾಧ್ಯವಾದಲ್ಲಿ ಈ ವಿಷಯವನ್ನು ದೆಹಲಿಯ ನಮ್ಮ ಬಂಧು ಮಿತ್ರರಿಗೆ ತಲುಪುವಂತೆ ಮಾಡಿ ಅವರ ಮೂಲಕ ಪ್ರವೀಣ್ ಕುಮಾರ್ ಮತ್ತವರ ಸಂಗಡಿಗರನ್ನು ನಮ್ಮ ಕೈಲಾದ ಮಟ್ಟಿಗೆ ಬೆಂಬಲಿಸಿ ಇನ್ನೂ ಹತ್ತಾರು ವರ್ಷಗಳ ಕಾಲ ಲಕ್ಷಾಂತರ ಮಂದಿಯ ಹಸಿವನ್ನು ನೀಗಿಸುವ ಕಾರ್ಯದಲ್ಲಿ ಪ್ರತ್ಯಕ್ಷವಾಗಿಯೋ ಇಲ್ಲವೋ ಪರೋಕ್ಷವಾಗಿ ಸಹಾಯ ಹಸ್ತವನ್ನು ಚಾಚೋಣ. ಹೊಟ್ಟೇ ತುಂಬಿರುವವರಿಗೆ ಊಟವನ್ನು ಹಾಕುವ ಬದಲು, ಹಸಿದವರಿಗೆ ಊಟವನ್ನು ಹಾಕಿದಾಗ ಸಿಗುವ ಸಂತೃಪ್ತಿಯೇ ಬೇರೆ.

ಏನಂತೀರೀ?

ನೆರೆ ಮನೆಯ ಸಾರಿನ ರುಚಿಯೇ ಚೆನ್ನ

ಪ್ರತಿದಿನ ಮಧ್ಯಾಹ್ನ ನಮ್ಮ ಕಛೇರಿಯ ಊಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಬಹಳ ವರ್ಷಗಳಿಂದ ರೂಢಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಒಬ್ಬರು ಪ್ರತಿದಿನವೂ ಅವರ ಮನೆಯಾಕಿ ಶ್ರಧ್ದೆಯಿಂದ ಪ್ರೀತಿಯಿಂದ ಅಡುಗೆ ಮಾಡಿ ಊಟದ ಡಬ್ಬಿಯನ್ನು ಕಟ್ಟಿ ಕಳುಹಿಸಿದ್ದರೂ ಅದೇಕೋ ಏನೋ ಬಹಳಷ್ಟು ಬಾರಿ ಯಾರು ಹೋಟೆಲ್ನಿಂದ ಊಟ ತರಿಸಿರುತ್ತಾರೋ ಅವರಿಗೆ ತಮ್ಮ ಮನೆಯ ಊಟವನ್ನು ಕೊಟ್ಟು ತಾವು ಹೋಟೆಲ್ ಊಟ ಮಾಡುತ್ತಾರೆ. ಕುತೂಹಲದಿಂದ ಹಾಗೇಕೆ ಮಾಡುತ್ತೀರೆಂದು ಕೇಳಿದರೆ ಇದು ಒಂದು ಊಟವೇ ಒಳ್ಳೇ ದನದ ಆಹಾರ ಇದ್ದ ಹಾಗೆ ಇದೆ ಎನ್ನುತ್ತಾರೆ. ನಿಜವಾಗಲೂ ಆವರ ಮನೆಯ ಅಡುಗೆ ತುಂಬಾನೇ ರುಚಿಯಾಗಿರುತ್ತದೆ. ಈ ವಿಷಯವನ್ನು ಹೇಳಲು ಹೊರಟಾಗಲೇ ನಮ್ಮ ತಂದೆಯವರ ದೊಡ್ಡಪ್ಪನವರ ಇದೇ ರೀತಿಯ ಒಂದು ಮೋಜಿನ ಪ್ರಸಂಗವನ್ನು ಎಲ್ಲರೊಂದಿಗೆ ಹಂಚಿ ಕೊಳ್ಳಲೇ ಬೇಕೆನಿಸಿತು.

ಅಂದಿನ ಕಾಲಕ್ಕೆ ನಮ್ಮೂರು ಸುಮಾರು ನೂರು ನೂರೈವತ್ತು ಮನೆಗಳಿರುವ ಸಣ್ಣ ಹಳ್ಳಿ, ಅ ಕಾಲದಲ್ಲಿ ನಮ್ಮದೇ ಸಂಬಂಧೀಕರ ಸುಮಾರು ಎಂಟು ಹತ್ತು ಮನೆಗಳಿದ್ದವು. ಅದೊಮ್ಮೆ ನಮ್ಮ ತಂದೆಯವರ ತಂದೆ ಅಂದರೆ ನಮ್ಮ ತಾತ ಮತ್ತು ಅವರ ಅಣ್ಣ ರಾಮಯ್ಯನವರು ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಮೂರ್ನಾಲ್ಕು ದಿನ ಹೋಗಿದ್ದರು. ಮನೆಯ ಗಂಡಸರು ಇಲ್ಲದಿದ್ದಾಗ ಅಡುಗೆ ಮಾಡಲು ಮನಸ್ಸೊಪ್ಪದ ಹೆಂಗಸರು ಗೊಡ್ಡುಸಾರು, ಉಪ್ಪು ಮೆಣಸಿನಪುಡಿ, ಮೆಂತ್ಯದ ಹಿಟ್ಟು ಹೀಗೇ ಏನೋ ಮಾಡಿಕೊಂಡು ದಿನಕಳೆಯುತ್ತಿದ್ದರು. ಹೋದ ಕೆಲಸ ಬೇಗನೆ ಮುಗಿದು, ಅಣ್ಣಾ ತಮ್ಮ ಇದ್ದಕ್ಕಿದ್ದಂತೆಯೇ ಮಟ ಮಟ ಮಧ್ಯಾಹ್ನ ಉರಿ ಬಿಸಿಲಿನಲ್ಲಿ ಬಂದು ಕೈಕಾಲು ತೊಳೆದುಕೊಂಡು ಲೇ!! ಇವಳೇ!! ತಟ್ಟೆ ಹಾಕ್ತೀಯಾ? ಹೊಟ್ಟೆ ತುಂಬಾನೇ ಹಸಿವಾಗುತ್ತಿದೆ ಎಂದಾಗ, ಮನೆಯಲ್ಲಿದ್ದ ಓರಗಿತ್ತಿಯರಿಗೆ ದಿಕ್ಕೇ ತೋಚದಂತಾಯಿತು. ಕಡೆಗೆ ನಮ್ಮ ಅಜ್ಜಿಯೇ ಸ್ವಲ್ಪ ಬುದ್ಧಿ ಓಡಿಸಿ. ಸ್ವಲ್ಪ ಇರಿ ಅನ್ನಕ್ಕೆ ಇಟ್ಟಿದ್ದೀವಿ ಒಂದು ಹತ್ತು ನಿಮಿಷ ಅನ್ನ ಆದ ಕೂಡಲೇ ಬಿಸಿ ಬಿಸಿ ಊಟ ಮಾಡುವಿರಂತೆ ಎಂದು ಹೇಳಿ, ಕೂಡಲೇ ಅನ್ನಕ್ಕೆ ಸೌದೇ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ತಮ್ಮ ಅಕ್ಕನಿಗೆ ನೋಡಿ ಕೊಳ್ಳಲು ಹೇಳಿ ಹಿತ್ತಲ ಬಾಗಿಲಿನಿಂದ ಹೊರ ಹೋಗಿ ಅಲ್ಲಿಯೇ ಸ್ವಲ್ಪ ದೂರದಲ್ಲಿಯೇ ಇದ್ದ ನಮ್ಮ ಮತ್ತೊಬ್ಬ ಸಂಬಂಧೀಕರಾದ ಸುಬ್ಬಮ್ಮನವರ ಮನೆಗೆ ಬಂದು ಲೇ ಸುಬ್ಬು, ಸ್ವಲ್ಪ ಸಾರೋ ಇಲ್ಲವೇ ಹುಳಿನೋ ಮಾಡಿದ್ರೆ ಕೊಡೇ, ನಮ್ಮನೆಲೀ ಗಂಡಸರು ಯಾರೂ ಇಲ್ಲಾ ಅಂತ ಅಡುಗೆನೇ ಮಾಡಿಲ್ಲ . ಈಗ ನೋಡಿದರೆ ಇಬ್ಬರೂ ಬಂದು ಬಿಟ್ಟಿದ್ದಾರೆ ಎಂದಾಗ, ಅನ್ನಪೂರ್ಣೆ ಸುಬ್ಬಮ್ಮನವರೂ ಮರುಮಾತಿಲ್ಲದೇ ತಮ್ಮದೇ ಮನೆಯ ಪಾತ್ರೆಯೊಂದರಲ್ಲಿ ಮಾಡಿದ್ದ ಹುಳಿಯನ್ನು ಕೊಟ್ಟರು. ಬದುಕಿದೆಯಾ ಬಡಜೀವ ಎಂದು ಸೆರಗಿನಲ್ಲಿ ಪಾತ್ರೆಯನ್ನು ಮುಚ್ಚಿಟ್ಟುಕೊಂಡು ಪುನಃ ಹಿತ್ತಲಿನ ಬಾಗಿಲಿನಿಂದ ಮನೆಗೆ ಬರುವಷ್ಟರಲ್ಲಿ ಅನ್ನವೂ ಸಿದ್ಧವಾಗಿ ಮನೆಯವರಿಗೂ ಮತ್ತು ಭಾವನವರಿಗೂ ಬಿಸಿ ಬಿಸಿ ಅಡುಗೆಯನ್ನು ಬಡಿಸಿದರು. ಮೊದಲೇ ಹೊಟ್ಟೆ ಹಸಿದಿದ್ದ ಅಣ್ಣ ತಮ್ಮಂದಿರಿಬ್ಬರೂ ಗಬ ಗಬನೆ ತಿಂದು ಮುಗಿಸಿ ಡರ್ ಎಂದು ತೇಗಿ ಎದ್ದಿದ್ದರು.

ಮಾರನೇಯ ದಿನ ಅದೇ ರೀತೀ ಅಣ್ಣ ತಮ್ಮಂದಿರಿಬ್ಬರೂ ಊಟಕ್ಕೆ ಕುಳಿತಿದ್ದಾಗ, ಒಂದೆರಡು ತುತ್ತನ್ನು ಬಾಯಿಗಿಟ್ಟ ನಮ್ಮ ದೊಡ್ಡ ತಾತ ರಾಮಯ್ಯನವರು ಅರೇ ಇಂದೇಕೋ ರುಚಿ ಬೇರೆ ರೀತಿಯಾಗಿ ಇದೆಯಲ್ಲಾ? ನೆನ್ನೆ ಮಾಡಿದ್ದ ಹುಳಿ ಅಧ್ಭುತವಾಗಿತ್ತು. ಇವತ್ತೇಕೆ ಹೀಗಿದೆ ಎಂದು ಕೇಳಿದರು. ಸುಳ್ಳು ಹೇಳಲು ಬಾರದ ನಮ್ಮ ದೊಡ್ಡ ಅಜ್ಜಿಯವರು ನೆನ್ನೆ ತಿಂದಿದ್ದು ನಮ್ಮಮನೆ ಹುಳಿಯಲ್ಲ, ಅದು ಸುಬ್ಬು ಮನೆ ಹುಳಿ ಎಂದು ಬಾಯ್ತಪ್ಪಿ ಹೇಳಿಯೇ ಬಿಟ್ಟರು. ನಮ್ಮ ಅಜ್ಜಿ ಹಾಗೆ ಹೇಳಿದ್ದೇ ಸಾಕಾಯ್ತು. ಅಂದಿನಿಂದ ಪ್ರತಿದಿನವೂ ನಮ್ಮ ದೊಡ್ಡ ತಾತ ಸುಬ್ಬು ಮನೆ ಹುಳಿಯೋ ಇಲ್ಲವೇ ಸಾರೋ ಬೇಕೇ ಬೇಕು ಎಂದು ಒಂದು ರೀತಿಯ ಹಠ ಮಾಡುತ್ತಿದ್ದರು. ಸರಿ ಮನೆಯವರು ಊಟ ಮಾಡುವುದಿಲ್ಲವಲ್ಲಾ ಎಂದು ಬೇಸರದಿಂದಲೇ ನಮ್ಮ ಮನೆಯ ಸಾರನ್ನು ಅವರ ಮನೆಗೆ ಕೊಟ್ಟು ಅವರ ಮನೆಯ ಅಡುಗೆಯನ್ನು ನಮ್ಮ ಮನೆಗೆ ತಂದು ಬಡಿಸುವುದನ್ನು ರೂಢಿ ಮಾಡಿಕೊಂಡರು. ಏನೋ? ಒಂದೆರಡು ದಿನ ಆದರೆ ಪರವಾಗಿಲ್ಲ ಅದನ್ನೇ ದುರಭ್ಯಾಸ ಮಾಡಿಕೊಂಡ ನಮ್ಮ ದೊಡ್ಡ ತಾತನವರ ಈ ಮೊಂಡು ಹಠಕ್ಕೆ ತಕ್ಕ ಪಾಠವನ್ನು ಕಲಿಸಲೇ ಬೇಕು ಎಂದು ನಮ್ಮ ಅಜ್ಜಿಯರಿಬ್ಬರೂ ಯೋಚಿಸುತ್ತಲೇ ಇದ್ದಾಗ ಅವರಿಗೊಂದು ಅದ್ಭುತ ಉಪಾಯ ಹೊಳದೇ ಬಿಟ್ಟಿತು.

Dabari

ಎಂದಿನಂತೆ ನಮ್ಮ ಅಜ್ಜಿ ಮಧ್ಯಾಹ್ನ ಸುಬ್ಬಮ್ಮನವರ ಮನೆಗೆ ನಮ್ಮ ಮನೆ ಹುಳಿ ಕೊಟ್ಟು ಅವರ ಮನೆಯ ತೆಗೆದುಕೊಂಡು ಬರಲು ಹೋಗಿದ್ದನ್ನು ನಮ್ಮ ದೊಡ್ದ ತಾತನವರು ನೋಡುತ್ತಲೇ ಇದ್ದರು. ಆದರೆ ನಮ್ಮಜ್ಜಿ ಅಂದು ಸ್ವಲ್ಪ ಬದಲಾವಣೆ ಮಾಡಿದ್ದರು. ನಮ್ಮ ಅಜ್ಜಿ ಖಾಲಿ ಪಾತ್ರೆಯೊಂದನ್ನು ತೆಗೆದುಕೊಂಡು ಹೋಗಿ ಅದನ್ನು ಸುಬ್ಬಮ್ಮನವರಿಗೆ ಕೊಟ್ಟು ಅವರ ಮನೆಯಿಂದ ಒಂದು ಪಾತೆಯನ್ನು ಇಸ್ಕೊಂಡು ಮನೆಗೆ ಬಂದು ಅದೇ ಪಾತ್ರೆಯಲ್ಲಿ ನಮ್ಮ ಮನಯದ್ದೇ ಹುಳಿಯನ್ನು ಹಾಕಿ ಊಟಕ್ಕೆ ಬಡಿಸಿದರು. ಸುಬ್ಬನ್ನವರ ಮನೆಯ ಪಾತ್ರೆ ನೋಡುತ್ತಿದ್ದಂತೆಯೇ, ನಮ್ಮ ದೊಡ್ಡ ತಾತನವರ ಮುಖ ಇಷ್ಟಗಲ ಅರಳಿ, ಊಟಕ್ಕೆ ಕುಳಿತು ಭೇಷ್! ಭೇಷ್! ವಾಹ್! ಎಷ್ಟು ಚೆನ್ನಾಗಿ ಮಾಡಿದ್ದಾಳೆ ನೋಡು ಸುಬ್ಬು. ನೀವು ಇಬ್ಬರು ಇದ್ದೀರಿ ದಂಡಕ್ಕೆ. ಒಳ್ಳೇ ಕಲಗಚ್ಚಿನ ತರಹ ಹುಳೀ ಸಾರು ಮಾಡ್ತೀರಿ. ಹೋಗಿ ಸುಬ್ಬು ಮನೆಗೆ ಹೋಗೆ ಅದು ಹೇಗೆ ಮಾಡ್ತಾಳೇ ಅಂತಾ ತಿಳ್ಕೊಂಡು ಬನ್ನಿ ಎಂಬ ಮಾತು. ಸರಿ ಬಿಡಿ ನಿಮಗೆಲ್ಲಿ ಅವಳ ರೀತಿ ಮಾಡೋದಿಕ್ಕೆ ಬರುತ್ತೆ. ಸುಮ್ಮನೆ ಇಸ್ಕೊಂಡು ಬನ್ನಿ ಸಾಕು ಎಂದು ಹೇಳುತ್ತಿದ್ದರೆ ನಮ್ಮ ಅಜ್ಜಿಯರಿಬ್ಬರೂ ತಲೆಯ ಮೇಲೆ ಸೆರಗು ಹಾಕಿಕೊಂಡು ಮುಸಿ ಮುಸಿ ನಕ್ಕಿದ್ದೇ ನಕ್ಕಿದ್ದು ನಮ್ಮ ದೊಡ್ಡ ತಾತನವರಿಗೆ ಗೊತ್ತೇ ಆಗಿರಲಿಲ್ಲ. ತಾವು ಮಾಡಿದ ಉಪಾಯ ಗೊತ್ತಾಗದಿರಲೆಂದೇ ನಮ್ಮ ದೊದ್ಡ ತಾತನವರಿಗೆ ಮಾತ್ರವೇ ಪತ್ಯೇಕವಾಗಿ ಊಟ ಹಾಕುತ್ತಿದ್ದರು.

ಇದೇ ನಾಟಕ ಅನೇಕ ದಿನಗಳವರೆಗೆ ಮುಂದುವರಿದು ಅದೊಂದು ದಿನ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುವಾಗ ಸುಬ್ಬಬ್ಬನವರ ಮನೆಯ ಪಾತ್ರೆಯಲ್ಲಿದ್ದ ಸಾರು ಖಾಲಿಯಾಗಿದ್ದಾಗ ಮತ್ತೊಂದು ಪಾತ್ರೆಯಿಂದ ಸಾರನ್ನು ಬಡಿಸಿದಾಗ ಅರೇ ಇದೇನಿದೂ ಎರಡೂ ಸಾರೂ ಒಂದೇ ರುಚಿ ಇದೆಯಲ್ಲಾ ಎಂದಾಗ ಅದುವರೆಗೂ ಮುಚ್ಚಿಟ್ಟುಕೊಂಡು ಬಂದಿದ್ದ ಗುಟ್ಟನ್ನು ರಟ್ಟು ಮಾಡಲೇ ವೇಕಾಯಿತು. ವಿಷಯ ತಿಳಿದು ರಾಮಯ್ಯನವರು ಎಲ್ಲಿ ರಂಪ ರಾಮಾಯಣವನ್ನು ಮಾಡಿಬಿಡುತ್ತಾರೋ ಎಂದು ಅಜ್ಜಿಯಂದಿರು ಭಯದಿಂದಲೇ ಕೆಕ್ಕರಿಸಿ ಅವರನ್ನೇ ನೋಡುತ್ತಿದ್ದರೆ, ಇಷ್ಟು ದಿನ ತಾನು ಬೇಸ್ತು ಬಿದ್ದೆನಲ್ಲಾ ಎಂದೂ ಮತ್ತು ತಮ್ಮ ಮನೆಯ ಅಡುಗೆಯೇ ಇಶ್ಘೊಂಡು ರುಚಿಯಾಗಿ ಇರುವಾಗ ಕಂಡೋರ ಮನೆಯ ಆಡುಗೆಗೆ ದಾಕರ ಪಡುತ್ತಿದ್ದೆನಲ್ಲಾ ಎಂದು ಅವರ ಮೇಲೆ ಅವರಿಗೇ ಬೇಸರವಾಗಿ ಅ ವಿಷಯವನ್ನು ಹೆಚ್ಚು ಮುಂದುವರೆಸದಿದ್ದಾಗ, ಬದುಕಿದೆಯಾ ಬಡ ಜೀವ ಎಂದು ನಮ್ಮ ಅಜ್ಜಿಯರಿಬ್ಬರೂ ನಿಟ್ಟುಸಿರು ಬಿಟ್ಟಿದ್ದರಂತೆ.

ನಮ್ಮ ಅಜ್ಜಿಯರು ಅಂದಿನ ಕಾಲಕ್ಕೆ ಹೆಚ್ಚೇನೂ ಓದಿರಲಿಲ್ಲ, ಮೂರೋ ಇಲ್ಲವೇ ನಾಲ್ಕನೇ ಕ್ಲಾಸಿಗೇ ಶಾಲೆ ಬಿಡಿಸಿ ಮನೆಯಲ್ಲಿಯೇ ಹಾಡು, ಹಸೆ, ಅಡುಗೆ ಕಲಿತಿದ್ದರೂ,ಲೋಕಜ್ಞಾನ, ವ್ಯವಹಾರದ ಕುಶಲತೆ ಮತ್ತು ಬುದ್ಧಿವಂತಿಕೆಯಲ್ಲಿ ಡಿಗ್ರಿ ಓದಿದವರಿಗಿಂತಲೂ ಒಂದು ಕೈ ಹೆಚ್ಚು ಎಂದು ಈ ಪ್ರಸಂಗದಲ್ಲೇ ತೋರಿಸಿಕೊಟ್ಟಿದ್ದರು. ಅದಕ್ಕೇ ಹೇಳುವುದು ಹೆಣ್ಣು ಸಂಸಾರದ ಕಣ್ಣು ಎಂದು

ಏನಂತೀರೀ?

ಎಲ್ಲರೂ ಮಾಡುವುದು ಹೊಟ್ಟೆಗಾಗಿ

ಜೀವ ಇರುವ ಪ್ರತೀ ವ್ಯಕ್ತಿಗೂ ಆಹಾರ ಅತ್ಯಾವಶ್ಯಕ. ಹಾಗಾಗಿ ಅವನ ಪ್ರತಿಯೊಂದು ಕಾರ್ಯಗಳೂ ತನ್ನ ಎರಡು ಹೊತ್ತಿನ ಆಹಾರವನ್ನು ಗಳಿಸುವ ನಿಟ್ಟಿನಲ್ಲಿಯೇ ಇರುತ್ತದೆ. ಅದನ್ನೇ ಪುರಂದರ ದಾಸರು ಅತ್ಯಂತ ಸರಳವಾಗಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಗೇಣು ಬಟ್ಟೆಗಾಗಿ ಎಂದು ತಿಳಿಸಿದ್ದಾರೆ.

ಹಿಂದೆಲ್ಲಾ  ಮಳೆ ಬೆಳೆ ಇಂದಿಗಿಂತಲೂ ಚೆನ್ನಾಗಿ ಆಗುತ್ತಿದ್ದರೂ ಅದೇಕೋ  ಹೊತ್ತು ಹೊತ್ತಿನ ಊಟಕ್ಕೆ ಬರವೇ. ಈಗಿನಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ.  ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಹೊತ್ಟಿಗೆ ಹೊಟ್ಟೆ ತುಂಬುವ ಊಟ  ಸಿಕ್ಕರೇ ಅದುವೇ ಅವರಿಗೆ ಮಹದಾನಂದ. ಕೆಲವೊಮ್ಮೆ ಅದೂ ಸಿಕ್ಕರೆ ಸಿಕ್ಕಿತು ಇಲ್ಲದಿದ್ದರೆ ಇಲ್ಲಾ ಎನ್ನುವ ಪರಿಸ್ಥಿತಿ. ಮನೆಗಳಲ್ಲಿ ಅನ್ನಪೂರ್ಣೆಯರು ಇದ್ದರೂ ಅನ್ನಕ್ಕೇಕೋ ಬರ.  ಇಂತಹ ಬರವನ್ನು ನೀಗಿಸಲೆಂದೇ ಎಲ್ಲಾಕಡೆಗಳಲ್ಲಿ ಹುಟ್ಟಿಕೊಂಡದ್ದು ಖಾನಾವಳಿಗಳು ಇಲ್ಲವೇ ಊಟದ ಮನೆಗಳು.

khanavali2khanavali

ಈ ಖಾನಾವಳಿಗಳು ಮತ್ತು ಊಟದ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ರುಚಿರುಚಿಯಾದ ತಿಂಡಿ ಪದಾರ್ಥಗಳು, ಮಧ್ಯಾಹ್ನ ಮತ್ತು ರಾತ್ರಿ ಊಟಗಳು ಕೈಗೆಟುಕುವ ಬೆಲೆಯಲ್ಲಿ ಸಿಗತೊಡಗಿದವು. ಆರಂಭದಲ್ಲಿ  ಅವರು ಯಾರೂ ಲಾಭ ನಷ್ಟದ ಬಗ್ಗೆ ಚಿಂತಿಸದೆ, ನಾಲ್ಕು ಜನಗಿರ ಹಸಿವನ್ನು ನೀಗಿಸುವುದೇ ಒಂದು ಕಾಯಕ ಎಂದು ತಿಳಿದವರಾಗಿದ್ದರು. ಊಟ ಮಾಡಿ ಸಂತೃಪ್ತಗೊಂಡ ನಂತರ ಇಷ್ಟೇ ಕೊಡಬೇಕು ಮತ್ತು ಅಷ್ಟೇ ಕೊಡಬೇಕು ಎಂದು ಒತ್ತಾಯಿಸದೇ ಅವರು ಕೊಟ್ಟಷ್ಟನ್ನೇ ತೆಗೆದುಕೊಳ್ಳುತ್ತಿದ್ದರು.  ಅವರು ಕೇಳುವುದಿಲ್ಲ  ಎಂದು ನಮ್ಮ ಜನರೂ  ಸುಮ್ಮನೆ ಪುಗಸಟ್ಟೆ ತಿನ್ನುತ್ತಿರಲಿಲ್ಲ. ಅವರ ಹಂಗೇಕೆ ಎಂದು ಯಥಾ ಶಕ್ತಿ ದಾರಾಳಿಗಳಾಗಿಯೇ ದುಡ್ಡು ಕೊಡುತ್ತಿದ್ದರು. ಒಟ್ಟಿನಲ್ಲಿ ಎಲ್ಲವೂ ನಂಬಿಕೆ ಮತ್ತು ಸಮನ್ವಯ ರೀತಿಯಲ್ಲಿ ನೆಡೆದುಕೊಂಡು ಹೋಗುತ್ತಿತ್ತೇ ಹೊರತು ಅದೊಂದು  ವ್ಯಾಪಾರವಾಗಿರಲಿಲ್ಲ. ಎಷ್ಟೋ ಸಲಾ  ಹಸಿದು ಬಂದವರಿಗೆ ಉಚಿತವಾಗಿಯೇ  ಮೃಷ್ಟಾನ್ನ  ಭೋಜನ ಬಡಿಸಿ ಕಳುಹಿಸಿದ ಉದಾಹರಣೆಗಳು ಸಾಕಷ್ಟಿದ್ದವು.   ದೂರದ ಸಿಂಗಾಪೂರದಲ್ಲಿರುವ ಅನ್ನಪೂರ್ಣ ಎಂಬ ಭಾರತೀಯ ರೆಸ್ಟೋರೆಂಟಿನಲ್ಲಿ ಇಂದಿಗೂ  ಊಟಕ್ಕೆ ಬೆಲೆ ಕಟ್ಟುವುದಿಲ್ಲಜನ ತಮಗೆ ಏನು ಬೇಕೋ? ಎಷ್ಟು ಬೇಕೋ ತಿಂದ ನಂತರ ಅವರ ಮನಸ್ಸಿಗೆ ಇಷ್ಟ  ಬಂದಷ್ಟು  ಹಣವನ್ನು ಅಲ್ಲಿರುವ ಹುಂಡಿಯಲ್ಲಿ ಹಾಗಿದರೆ ಸಾಕು. ಹಣ ಕೊಡದೆ ಸುಮ್ಮನೇ ಹೋದರೋ ಅವರೇನು ಕೇಳುವುದಿಲ್ಲವಾದರೂ,  ಇನ್ನೂ ನಂಬಿಕೆಗೆ ಬೆಲೆ ಇರುವ ಕಾರಣ, ಆ ರೆಸ್ಟೋರೆಂಟ್ ಇಂದಿಗೂ ಚೆನ್ನಾಗಿಯೇ ಕಾರ್ಯ ನಿರ್ವಹಿಸಿತುತ್ತಿದೆ

annapoorna_singapore

ಈ ರೀತಿಯಾದ ಊಟದ ವ್ಯವಸ್ಥೆ ಇದೆ ಎಂದು ಜನರೂ ಸಹಾ ಹುಚ್ಚಾಪಟ್ಟೆ ಅಲ್ಲಿಗೆ ಹೋಗದೇ,  ಯಾರ ಮನೆಗಳಲ್ಲಿ ಆಹಾರವನ್ನು ತಯಾರಿಸಲು ಅನಾನುಕೂಲವೋ, ಇಲ್ಲವೇ  ಯಾರಿಗೆ ಪ್ರತಿನಿತ್ಯ ಮನೆಯೂಟ ತಿಂದು ಬೇಜಾರಾಗಿ ನಾಲಿಗೆ ಬೇರೆ ರುಚಿಯನ್ನು ಬಯಸುತ್ತದೆಯೋ ಅಂತಹವರು, ಇಲ್ಲವೇ ಪರ ಊರಿನಿಂದ ಉಪಾಧ್ಯಾಯರಾಗಿಯೋ ಇಲ್ಲವೇ ಇತರೇ ಸರ್ಕಾರಿ  ಕೆಲಸದ ನಿಮಿತ್ತವಾಗಿ ಬಂದವರು ಈ ರೀತಿಯ ಊಟದ ಮನೆ ಮತ್ತು ಖಾನಾವಳಿಗಳಲ್ಲಿ ತಮ್ಮ ನಾಲಿಗೆ ಬರವನ್ನು ಹೊಟ್ಟೆಯ ಹಸಿವನ್ನು ನಿವಾರಿಸಿ ಕೊಳ್ಳುತ್ತಿದ್ದರು. ಕ್ರಮೇಣ  ಈ ರೀತಿಯ ಪದ್ದತಿ ಎಲ್ಲೆಡೆಯಲ್ಲಿಯೂ ಪ್ರಖ್ಯಾತವಾಗುತ್ತಾ ಹೋಗುತ್ತಾ ಹೋಟೆಲ್ಎಂಬುದು ಒಂದು ದೊಡ್ದ  ಉದ್ಯಮವೇ ಆಗಿ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ದೊರಕಿಸಿಕೊಟ್ಟಿತಲ್ಲದೆ ಲಕ್ಷಾಂತರ ಜನರ ಹಸಿವನ್ನು ನೀಗಿಸತೊಡಗಿದವು.

ಮನೆಗಳಲ್ಲಿ ನೆಲದ ಮೇಲೆ ಕುಳಿತು ಊಟಮಾಡುತ್ತಿದ್ದವರು ಕ್ರಮೇಣ ನೆಲದಿಂದ ಟೇಬಲ್ ಮತ್ತು ಖುರ್ಚಿಗಳಿಗೆ ಭಢ್ತಿ ಹೊಂದಿದರು. ಅಲ್ಲಿ ಮಾಡಿಟ್ಟಿದ್ದನ್ನು ತಿಂದು ಹೋಗುತ್ತಿದ್ದವರು, ಈಗ ತಮಗೆ ಏನು ಬೇಕೋ ಅದನ್ನು  ಕೇಳಿ ಮಾಡಿಸಿಕೊಂಡು ತಿನ್ನುವಷ್ಟರ ಮಟ್ಟಿಗೆ ಬೆಳೆದು ಬಂದಿದ್ದರು. ಹೊಟೇಲ್ಗಳು ಐಶಾರಾಮ್ಯವಾಗ ತೊಡಗಿದವು. ಪಂಚತಾರ ಹೋಟೆಲ್ಗಳಾಗಿ ಪರಿವರ್ತಿತವಾಗಿ ಊಟಕ್ಕಿಂತ ನೋಟಕ್ಕೇ ಪ್ರಧಾನ್ಯತೆ ಹೊಂದ ತೊಡಗಿದಾಗಿ ಮೂಲ ಉದ್ದೇಶವೇ ಬದಲಾಗಿ ದುಬಾರಿಯಾಗ ತೊಡಗಿದಾಗ ಜನರು ಈ ಹೋಟೆಲ್ಗಳಿಂದ ವಿಮುಖರಾಗ ತೊಡಗಿದಾಗಲೇ  ಹುಟ್ಟಿಕೊಂಡಿದ್ದೇ ದರ್ಶಿನಿ ಹೋಟೆಲ್ಗಳು.

upahara

ಬಸವನ ಗುಡಿಯಲ್ಲಿ ಉಪಹಾರ ದರ್ಶಿನಿ ಎಂಬ ಹೆಸರಿನಲ್ಲಿ ಶುಚಿ ರುಚಿಯಾದ ಊಟಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ತ್ವರಿತವಾಗಿ ಎಲ್ಲರಿಗೂ ಸಿಗುವಂತೆ ಲಭ್ಯವಾಯಿತೂ ಅಲ್ಲಿಂದ ಈ ರೀತಿಯ ದರ್ಶಿನಿಗಳು ಗಲ್ಲಿ ಗಲ್ಲಿಗೊಂದಂತೆ ನಾಯಿಕೊಡೆಗಳಂತೆ ಹುಟ್ತುಕೊಂಡವು.  ಜನಾ ಇಲ್ಲಿ ಆರಾಮವಾಗಿ ಬಂದು ಕುಳಿತುಕೊಂಡು ನಿಧಾನವಾಗಿ ತಮಗೆ ಏನು ಬೇಕೋ ಅದನ್ನು  ಆರ್ಡರ್ ಮಾಡಿ ಊಟ ತಿಂಡಿ ಮಾಡಲು ಸಾಧ್ಯವಿರಲಿಲ್ಲ. ಇಲ್ಲಿ  ಬಂದವರೆಲ್ಲರೂ ಸ್ವಸಹಾಯ ಪದ್ದತಿಯಲ್ಲಿ  ಅಲ್ಲಿ ಏನು ಲಭ್ಯವಿರುತ್ತದೆಯೋ ಅದನ್ನು ಮುಂಗಡವಾಗಿ ಟೋಕನ್ ಪಡೆದು,  ನಿಂತು ಕೊಂಡೇ ಗಬಗಬನೆ ತಿಂದು,  ಸೊರ ಸೊರನೇ ಕಾಫೀ/ಟೀ ಹೀರಿ ಲಗುಬಗನೇ ಓಡತೊಡಗಿದರು.

ಕ್ರಮೇಣ ಈ ದರ್ಶಿನಿ ಹೋಟೆಲ್ಗಳು ಫಾಸ್ಟ್ ಫುಡ್ ಗಳಾಗಿ ಮಾರ್ಪಾಟಗತೊಡಗಿದವು.  ಬೆಳಗಿನ ಹೊತ್ತು ನಮ್ಮ ಸಂಪ್ರದಾಯಿಕ ತಿಂಡಿಗಳಾದ  ಉಪ್ಪಿಟ್ಟು, ದೋಸೆ, ಇಡ್ಲಿ, ಪೂರಿಗಳಾದರೆ ಸಂಜೆ ಹೊತ್ತು, ಪಾನಿಪೂರಿ, ಮಸಾಲೆ ಪೂರಿ, ಬೇಲ್ ಪೂರಿ, ನೂಡಲ್ಸ್, ಫ್ರೈಡ್ ರೈಸ್ ಮತ್ತು  ತರತರಹದ ಮಂಚೂರಿಯನ್ಗಳು  ಒಂದೆಡೆಯಾದರೇ ಪಿಡ್ಜಾ, ಬರ್ಗರ್ ಅವರ ಹಾವಳಿ ಮತ್ತೊಂದು, ಈ ದಿಢೀರ್ ಆಹಾರಗಳು  ಜನರ ನಾಲಿಗೆಯ ರುಚಿಯನ್ನು ತಣಿಸುತ್ತಿತ್ತಾದರೂ, ಆಹಾರ  ಸಂಪೂರ್ಣವಾಗಿ ಬೆಂದಿರದ ಕಾರಣ, ಮತ್ತು ಇಲ್ಲಿಯ ಪರಿಸರಕ್ಕೆ ಸರಿಯಾಗಿ ಹೊಂದದಿರುವ ಕಾರಣ  ಜೀರ್ಣವಾಗದೆ  ಆರೋಗ್ಯಕ್ಕೆ ಮಾರಕವಾಗುತ್ತಾ ,  ಜನಾ ನಿಧಾನವಾಗಿ  ಸ್ಥೂಲಕಾಯರಾಗ ತೊಡಗಿದರು.

ಯಾವಾಗ ಜನಾ ಮನೆಯಿಂದ ಹೊರಗೆ ನಡೆಯಲು ಸಾಧ್ಯವಾಗಲಿಲ್ಲವೋ, ಆಗ ಮನೆಗೇ ಆಹಾರವನ್ನು ಯಾರಾದರೂ ತಲುಪಿಸಿದರೆ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಿರುವಾಗಲೇ ಹುಟ್ಟುಕೊಂಡಿದ್ದೇ  ಈ Swiggy & Zomato ಮುಂತಾದ ಕಂಪನಿಗಳು. ಒಂದಷ್ಟು ಬುದ್ಧಿವಂತ ಜನಾ ಆಧುನಿಕ ತಂತ್ರಜ್ಞಾನವನ್ನು ಬಳೆಸಿಕೊಂಡು ಸಾಫ್ಟ್ವೇರ್ ಸಿದ್ಧ ಪಡಿಸಿ ಸುತ್ತಮುತ್ತಲಿನ ಹೋಟೆಲ್ಗಳನ್ನು ಅವರ ಜಾಲದಲ್ಲಿ ಅಳವಡಿಸಿಕೊಂಡು ಜನರು ತಮ್ಮ   ಮೊಬೈಲ್  ಆಪ್ಗಳ  ಮೂಲಕ ತಮಗೆ ಏನು ಬೇಕೋ  ಅದನ್ನು ತಮ್ಮ ಮೊಬೈಲ್ಗಳ ಮೂಲಕವೇ  ಅರ್ಡರ್ ಮಾಡಿದಲ್ಲಿ ,  ನಿಗಧಿತ ಸಮಯದಲ್ಲಿ ನಿಗಧಿತ ಸ್ಥಳಕ್ಕೆ ಬಂದು ತಲುಪತೊಡಗಿದವು. ಈ ರೀತಿಯ ವ್ಯವಸ್ಥೆ  ಹೋಟೆಲ್ ಉದ್ಯಮಿಗಳಿಗೆ ಒಂದು ರೀತಿಯ ವರದಾನವೇ ಆಯಿತು. ತಮ್ಮ ಆಹಾರಗಳು ಬಹುಜನರಿಗೆ ಸುಲಭವಾಗಿ ಯಾವುದೇ ಹೆಚ್ಚಿನ ಖರ್ಚಿಲ್ಲದೇ ತಲುಪತೊಡಗಿದವ. ಹೋಟೆಲ್ಗಳಿಂದ ಆಹಾರವನ್ನು ಪಡೆದುಕೊಂಡು ಎಲ್ಲರ ಮನೆಗಳಿಗೂ ತಲುಪಿಸುವ ವ್ಯವಸ್ಥೆಯಿಂದಾಗಿ ಸಾವಿರಾರು ಯುವಕರಿಗೆ ಕೆಲಸ ಸಿಕ್ಕಿತು.  ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಈ ರೀತಿಯ ಪಾರ್ಟ್ ಟೈಮ್ ಕೆಲಸಗಳಿಂದ ಕೈತುಂಬಾ ಸಂಪಾದನೆ ಮಾಡುತ್ತಾ , ಕೆಲವೇ ಕೆಲವು ವಿದ್ಯಾಸಕ್ತ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉದ್ದಾರವಾದರೆ, ಬಹುತೇಕ ಯುವಕರು ಸುಲಭವಾಗಿ ಸಿಕ್ಕುವ  ಹಣದಿಂದ  ಹಾದಿ ತಪ್ಪಿದ್ದೇ ಅಧಿಕ.

swiggyzomato

ಆಹಾರ ಉದ್ಯಮದಲ್ಲಿ  ಈ ರೀತಿಯಾಗಿ ಕ್ರಾಂತಿಕಾರಿ ಬದಲಾವಣೆಯಾಗ ತೊಡಗಿದರೆ ಮನೆಗಳಲ್ಲಿಯೂ ಇದರ ಪರಿಣಾಮ ವ್ಯತಿರಿಕ್ತವಾಗತೊಡಗಿತು ಮನೆಗಳಲ್ಲಿ  ಕುಟ್ಟುವುದು, ರುಬ್ಬುವುದು, ಒಗ್ಗರಣೆ ಹಾಕುವುದು ಕ್ರಮೇಣ ಮಾಯವಾಗ ತೊಡಗಿತು.  ಒಂದು ಕಾಲದಲ್ಲಿ ಮನೆಯ ಹೆಂಗಳೆಯರು ಹುಳಿ ಪುಡಿ, ಸಾರಿನ ಪುಡಿ, ಚಟ್ನೀಪುಡಿ, ಮೆಂತ್ಯದ ಹಿಟ್ಟು, ಹಪ್ಪಳ ಸಂಡಿಗೆ, ಬಾಳಕ,  ಪುಳಿಯೋಗರೆ ಗೊಜ್ಜನ್ನು ಮನೆಗಳಲ್ಲಿಯೇ  ಬಿಡುವಿನ ಸಮಯದಲ್ಲಿ ತಯಾರಿಸುತ್ತಿದ್ದವರು ನೋಡ ನೋಡುತ್ತಿದ್ದಂತೆಯೇ, MTR ಪುಳಿಯೋಗರೆ ತರಿಸಲು ಶುರುಮಾಡಿಬಿಟ್ಟರು. ಇನ್ನು ಒತ್ತು ಶ್ಯಾವಿಗೆ ಮಾಡುವುದನ್ನೇ ಮರೆತು ಎಲ್ಲರೂ Instant Noodles ಮೋರೆ ಹೋಗಿಬಿಟ್ತಿದ್ದು ನಿಜಕ್ಕೂ ದುಃಖಕರವೇ ಸರಿ.

Mtr

ಇನ್ನು ಹಬ್ಬಹರಿದಿನಗಳು ಬಂದರೆ ಶ್ರದ್ಧಾ ಭಕ್ರಿಯಿಂದ ಮಡಿಯಿಂದ ನಾನಾ ರೀತಿಯ ಭಕ್ಷ ಭೋಜನಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದು ನಮ್ಮ ಸಂಪ್ರದಾಯ. ಆದರೆ ಈಗ  ಬಹುತೇಕರ ಮನೆಗಳಲ್ಲಿ  ಆ  ರೀತಿಯ ಎಲ್ಲಾ ಸಂಪ್ರದಾಯಗಳಿಗೂ ತಿಲಾಂಜಲಿ ಕೊಟ್ಟು ಬಹುತೇಕ ಸಮಯಗಳಾಗಿಬಿಟ್ಟಿದೆ.  ದೇವರ ನೈವೇದ್ಯಕ್ಕೆ, ಮೋದಕ, ಕಡುಬು, ಒಬ್ಬಟ್ಟು ಎಲ್ಲವೂ ಸಿದ್ಧವಾಗಿಯೇ ಸಿಗುತ್ತದೆ.  ಆಯಾಯಾ ಹಬ್ಬಗಳ ಅನುಗುಣವಾಗಿ  ಹಬ್ಬದ ಅಡುಗೆಗಳನ್ನೇ ಮಾಡಿಕೊಡಲು ನೂರಾರು ಜನರು ಸಿದ್ಧರಿರುವಾಗ ಬಹುತೇಕ ಮನೆಗಳಲ್ಲಿ ಹಬ್ಬದ ದಿನ ಹಚ್ಚದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಈ ಹಿಂದೆ  ಮದುವೆಗೆ ಮುನ್ನ ಹೆಣ್ಣು  ನೋಡಲು ಬಂದಾಗ, ಹುಡುಗೀಗೆ ಅಡುಗೆ ಬರುತ್ತದೆಯೇ? ಎಂಬ ಪ್ರಶ್ನೆ ಸಹಜವಾಗುತ್ತಿತ್ತು.  ಓ ನಮ್ಮ ಹುಡುಗಿ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾಳೆ. ನೀವೀಗ ತಿಂದ ಉಪ್ಪಿಟ್ಟು (ಆಕೆ ಮಾಡದಿದ್ದರೂ ಸಹಾ) ಕೇಸರಿ ಬಾತ್ ಆಕೆಯೇ ಮಾಡಿದ್ದು. ನಮ್ಮ ಹುಡುಗೀಗೆ  ಆಡುಗೆ, ಹಾಡು ಹಸೆ ಎಲ್ಲವನ್ನೂ ಕಲಿಸಿದ್ದೇವೆ ಎಂದು ಹೆಮ್ಮೆಯಿಂದ ಕನ್ಯಾಪಿತೃಗಳು ಹೇಳುತ್ತಿದ್ದರು. ಈಗ ಅ ರೀತಿಯ ಹೆಣ್ಣು ಗಂಡು ನೋಡುವ ಸಂಪ್ರದಾಯವೂ ಯಾವುದೋ ಒಂದು ಹೋಟಲಿನ್ನಲ್ಲಿಯೋ ಇಲ್ಲವೇ ಕಾಫೀ ಬಾರ್ ಗಳಲ್ಲಿ ಆಗುತ್ತಿರುವ ಕಾರಣ ಮತ್ತು ಬಹುತೇಕ ಹೆಣ್ಣು ಮಕ್ಕಳಿಗೆ ಅಡುಗೆ ಬಾರದಿರುವ ಕಾರಣ ಆ ರೀತಿಯ ಸಂಪ್ರದಾಯ ಮತ್ತು ಆ ಪ್ರಶ್ನೆಗಳು ಮಾಯವಾಗಿಯೇ ಹೋಗಿದೆ.

ಹೌದು ನಿಜ. ಅಡುಗೆ  ಎನ್ನುವುದು ಸುಲಭದ ಕೆಲಸವಲ್ಲ. ಅದಕ್ಕೆ ತಾಳ್ಮೆ ಬೇಕು ಮತ್ತು ಸಮಯಪ್ರಜ್ಞೆ ಬೇಕು. ಯಾವ ಯಾವ ಪದಾರ್ಧಗಳನ್ನು ಎಷ್ಟೆಷ್ಟು ಮತ್ತು ಹೇಗೆ ಬೆಳೆಸಿದಲ್ಲಿ ರಸಗವಳ ಸಿದ್ದಪಡಿಸಬಹುದೆಂಬ ಕಲೆಯನ್ನು ಕೈವಶ ಮಾಡಿಕೊಳ್ಳಬೇಕು. ಆದರೆ ನಿಜ ಹೇಳುತ್ತೇನೆ. ಒಮ್ಮೆ ಮನಸ್ಸಿಟ್ಟು  ಅಡುಗೆ ಮಾಡಲು ಹೊರಟಲ್ಲಿ ಆ ಕಲೆ ತಾನಾಗಿಯೇ ಒಲಿದುಬಿಡುತ್ತದೆ.   ಮನೆಯವರೆಲ್ಲರ ಮನಗಳನ್ನು ಗೆಲ್ಲಬಹುದಾದ ಏಕೈಕ ಅಸ್ತ್ರವೇ ತಿಂಡಿ ಅಡುಗೆ. ಅಮ್ಮನ ಕೈ ರುಚಿಯ ಮುಂದೆ ಜಗತ್ತಿನ ಯಾವುದೇ ಅಡುಗೆಗಳನ್ನು ನೀವಾಳಿಸಿ ಹಾಗಬಹುದು.  ಕೇವಲ ಹಾಸ್ಟೆಲ್ಲಿನಲ್ಲಿ  ಓದುವ ಮಕ್ಕಳಿಗೆ ಮತ್ತು ಮನೆಯಿಂದ ದೂರವಿದ್ದು ಹೊರ ಊರಿನಲ್ಲಿ ಕೆಲಸಮಾಡುವವರಿಗೆ  ಮಾತ್ರವೇ  ಮನೆ ಊಟದ ಮಹತ್ವ ತಿಳಿದಿರುತುತ್ತದೆ, ಹಾಗಾಗಿ ಸಾಧ್ಯವಾದಷ್ಟು ಹೊರಗಿನ ಊಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡದೆ, ಉಪ್ಪು ಗಂಜಿಯಾಗಲೀ, ಮೊಸರನ್ನವೇ ಆಗಲೀ ಮನೆಯಲ್ಲಿಯೇ ಮಾಡಿಕೊಂಡು ತಿನ್ನೋಣ. ಆರೋಗ್ಯವಾಗಿರೋಣ.

ಏನಂತೀರೀ?

ಹಬ್ಬಗಳ ಆಚರಣೆಯಲ್ಲಿ ತಾರತಮ್ಯ

ದೀಪಾವಳಿ ಬೆಳಕಿನ ಹಬ್ಬ ನಮ್ಮ ಸಂಪ್ರದಾಯದಲ್ಲಿ ಆಬಾಲ ವೃದ್ದರಾಗಿ ಸಡಗರ ಸಂಭ್ರಮದಿಂದ ಭರಪೂರ ಐದು ದಿನಗಳು ಆಚರಿಸುವ ಹಬ್ಬ. ಆದರೆ ನೆನ್ನೆ ಈ ಕೆಳಕಂಡ ಫೋಟೋ ನೋಡಿ ಮನಸ್ಸಿಗೆ ಬೇಸರ ತರಿಸಿತು ಏನೂ ಅರಿಯದ ಎರಡು ಪುಟ್ಟ ಕಂದಮ್ಮಗಳ ಕೈಯಲ್ಲಿ ಪಟಾಕಿ ಬಿಡಿ, ಬಡ ಮಕ್ಕಳಿಗೆ ಎರಡು ಹೊತ್ತು ಒಪ್ಪತ್ತು ಊಟ ಕೊಡಿ ಎಂದು ಬರೆದಿತ್ತು.

WhatsApp Image 2019-10-26 at 11.53.33 AMಅರೇ ಬಡಮಕ್ಕಳಿಗೆ ಊಟ ಹಾಕುವುದಕ್ಕೂ ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯುವುದಕ್ಕೂ ಏನು ಸಂಬಂಧ? ಹಾಗಾದರೆ ನಾವು ಹಬ್ಬಗಳನ್ನು ಮಾಡದಿದ್ದ ಮಾತ್ರಕ್ಕೇ ಆ ಮಕ್ಕಳಿಗೆ ಊಟ ದೊರೆಯುತ್ತದೆಯೇ? ಆ ಮಕ್ಕಳು ಊಟ ಮಾಡುವುದು ಕೇವಲ ನಮ್ಮ ಹಬ್ಬಗಳ ಸಮಯದಲ್ಲಿ ಮಾತ್ರವೇ? ಆ ಮಕ್ಕಳಿಗೆ ಹೊತ್ತು ಹೊತ್ತಿಗೆ ಊಟ ಹಾಕುವುದು ಅವರವರ ಪೋಷಕರ ಜವಾಬ್ದಾರಿಯಲ್ಲವೇ? ಆ ಮಕ್ಕಳಿಗೆ ಹೊತ್ತಿನ ಊಟವನ್ನು ಹಾಕುವ ಸಲುವಾಗಿ ಸಾರ್ವಜನಿಕರು ತಮ್ಮ ಹಬ್ಬದ ಆಚರಣೆಯನ್ನು ಬದಿಗೊತ್ತಬೇಕೇ? ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಒಪ್ಪತ್ತು ಊಟವನ್ನೂ ಹಾಕದಿರುವಷ್ಟು ಬಡವರಾದರೂ ಸ್ವಾಭಿಮಾನಿಗಳೇ ಹೊರತು ಇನ್ನೊಬ್ಬರ ಬಳಿ ಕೈ ಚಾಚುವುದಿಲ್ಲ. ಎಲ್ಲಾ ಸರ್ಕಾರೀ ಶಾಲೆಗಳಲ್ಲಿಯೂ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಮಾಡಿ ಯಾವ ಮಕ್ಕಳೂ ಹಸಿದುಕೊಂಡು ಇರದಂತೆ ನೋಡಿಕೊಳ್ಳುತ್ತಿದೆ. ಸರ್ಕಾರವೂ ಸಹಾ ಜನ ಹಸಿದುಕೊಂಡು ಇರಬಾರದೆಂದೇ ನಾನಾ ರೀತಿಯ ಭಾಗ್ಯಗಳ ಮೂಲಕ ಅವರಿಗೆ ಅವಶ್ಯಕವಾದ ಆಹಾರಗಳನ್ನು ಉಚಿತವಾಗಿಯೋ ಇಲ್ಲವೇ ಅತ್ಯಂತ ಕಡಿಮೆ ಬೆಲೆಗಳಲ್ಲಿ ಕೊಡುತ್ತಿರುವಾಗ ಇದೆಂತಹಾ ಪ್ರತಿಭಟನೆ.

ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯಬೇಡಿ. ಗಣೇಶ ಹಬ್ಬದಂದು ಬಣ್ಣದ ಗಣೇಶ ಉಪಯೋಗಿಸಬೇಡಿ, ಕೃಷ್ಣ ಜನ್ಮಾಷ್ಟಮಿಯಂದು ಬೆಣ್ಣೆಯ ಮಡಿಕೆ ಒಡೆಯಬೇಡಿ, ನಾಗರಪಂಚಮಿಯಂದು ಹುತ್ತಗಳಿಗೆ ಹಾಲನ್ನು ಎರೆಯಬೇಡಿ. ಶೋಭಾಯಾತ್ರೆ ಮಾಡಬೇಡಿ, ರಥಯಾತ್ರೆ ನಿಷಿದ್ದ, ಇತ್ತೀಚೆಗೆ ಮತ್ತೊಬ್ಬ ಪ್ರಭೂತಿ ದೀಪಾವಳಿಯ ರಾಮಲೀಲಾವನ್ನು ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿದ ಹಾಗೆ ಎಂದು ತನ್ನ ಬಾಯಿಯನ್ನು ಹರಿಬಿಟ್ಟಿದ್ದಾನೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಶುಭಸಮಾರಂಭಗಳಲ್ಲಿ ಅಕ್ಷತೆಯನ್ನೇ ಹಾಕಬೇಡಿ ಅದರಿಂದ ಅಕ್ಕಿ ಹಾಳು. ಅರೇ ಏನಾಕ್ತಾ ಇದೆ? ನಮ್ಮ ಸಮಾಜದಲ್ಲಿ?

ಸ್ವಲ್ಪ ಗಮನವಿಟ್ಟು ಯೋಚಿಸಿದಲ್ಲಿ ಇದೆಲ್ಲದರ ಹಿಂದೆ ಒಂದು ವ್ಯವಸ್ಥಿತ ಸಂಚಿದೆ ಎಂದನಿಸುತ್ತದಲ್ಲವೇ? ನಮ್ಮ ಹಿಂದೂ ಸಂಪ್ರದಾಯಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಷಡ್ಯಂತರ ಇದೆ ಎಂದಿನಿಸುತ್ತಿಲ್ಲವೇ? ನಮ್ಮ ಪ್ರತಿಯೊಂದು ಹಬ್ಬಕ್ಕೂ ಒಂದಲ್ಲಾ ಒಂದು ರೀತಿಯ ಕ್ಯಾತೆ ತೆಗೆಯುತ್ತಾ ಅಂದು ಬ್ರಿಟಿಷರು ನಮ್ಮನ್ನು ಒಡೆದಂತೆಯೇ ಇಂದು ಕೆಲವೊಂದು ಪಟ್ಟಭಧ್ರ ಹಿತಾಸಕ್ತಿಗಳೂ ನಮ್ಮ ನಮ್ಮನ್ನೇ ಎತ್ತಿ ಕಟ್ಟುತ್ತಿರುವುದು ಎಲ್ಲರ ಗಮನಕ್ಕೆ ಬರುತ್ತಿಲ್ಲವೇ?

ವರ್ಷದ ಮುನ್ನೂರೈವತ್ತು ದಿನಗಳೂ ಹಬ್ಬವನ್ನು ಆಚರಿಸುವ ಮೂಢಜನರು ಎಂದು ನಮ್ಮನ್ನು ಹಳಿಯುವ ಮಂದಿಯಾದರೂ ಮಾಡುತ್ತಿರುವುದಾದರೂ ಏನು? ಹೊಸ ವರ್ಷ, ಪ್ರೇಮಿಗಳ ದಿನ, ಧನ್ಯವಾದ ಅರ್ಪಿಸುವ ದಿನ, ಹ್ಯಾಲೋವಿನ್ ಡೇ, ಕ್ರಿಸ್ಮಸ್ ಹೀಗೇ ಹಾಗೆ ಎಂದು ಎಗ್ಗಿಲ್ಲದೇ ನೂರಾರು ಹಬ್ಬಗಳನ್ನು ಆಚರಿಸಿತ್ತಾ ಅವುಗಳಿಗೆ ನೂರಾರು ರೂಪಾಯಿ ಬೆಲೆಯ ಗ್ರೀಟಿಂಗ್ಸ್, ಜೊತೆಗೆ ಸಾವಿರಾರು ಬೆಲೆ ಬಾಳುವ ಉಡುಗೊರೆಗಳು ಜೊತೆಗೆ ತರ ತರಹದ ಚಾಕ್ಲೆಟ್ಗಳು, ಸಾವಿರಾರು ರೂಪಾಯಿಗಳ ಕೇಕ್ ಕತ್ತರಿಸುವಂತಹ ಹೊಸಾ ಸಂಪ್ರದಾಯ ಹಬ್ಬಿಸಿರುವುದು ಯಾರಿಗೂ ತಿಳಿಯುತ್ತಿಲ್ಲವೇ? ಅದೇ ರೀತಿ ಇನ್ನು ಯುವಜನತೆಗೆ ವಾರಾಂತ್ಯದಲ್ಲಿ ಖಡ್ಡಾಯವಾಗಿ ಪಾರ್ಟಿಗಳಿಗೇ ಹೋಗಲೇ ಬೇಕು ಅಲ್ಲಿ ಸಿಗರೇಟ್ ಮತ್ತು ಮದ್ಯಪಾನ ಸೇವಿಸಿದರೆ ಮಾತ್ರವೇ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗುತ್ತಾರೆ ಎಂಬ ಹುಸಿ ಭ್ರಮೆ ಹುಟ್ಟಿಸುತ್ತಿರುವುದು ನಿಜಕ್ಕೂ ಗಾಭರಿ ಹುಟ್ಟಿಸುತ್ತಿದೆ. ಈಗಂತೂ ಕೇವಲ ಸಿಗರೇಟ್ ಮತ್ತು ಮಧ್ಯಪಾನಗಳಿಗಷ್ಟೇ ಸೀಮಿತವಾಗಿಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೇವ್ ಪಾರ್ಟಿ ಎಂಬ ಹೆಸರಿನಲ್ಲಿ ಯುವಜನತೆಯನ್ನು ಮಾದಕವಸ್ತುಗಳ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರಲ್ಲಾ ಅವರ ಬಗ್ಗೆ ಏನನ್ನಬೇಕು?

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ, ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ನಮ್ಮ ಮನು ಸ್ಮೃತಿ ತಿಳಿಸುತ್ತದೆ. ಹಾಗಾಗಿ ನಮ್ಮಲ್ಲಿ ಹೆಣ್ಣು ಮಕ್ಕಳನ್ನು ತಾಯಿಯಂತೆ ಕಾಣುತ್ತೇವೆ. ಆದರೆ ಅದೇ ಹೆಣ್ಣು ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆಯೇ ಕತ್ತಲ ಕೋಣೆಯಲ್ಲಿಯೇ ಉಳಿಸುವ, ಒಂದು ಪಕ್ಷ ಮನೆಯಿಂದ ಹೊರಬರಲು ಅನುವು ಮಾಡಿಕೊಟ್ಟರೂ, ಚಳಿ ಇರಲೀ, ಮಳೆ ಇರಲೀ, ಬೇಸಿಗೆ ಇರಲೀ, ಹೊರ ಜಗತ್ತೇ ಕಾಣದಂತೆ ಪರದೆ ಹಾಕಿಕೊಂಡು ಓಡಾಡಿಸುವ ಮಂದಿ, ಇನ್ನು ಪ್ರತೀ ಹಬ್ಬಕ್ಕೂ ಲಕ್ಷಾಂತರ ಪ್ರಾಣಿಗಳನ್ನು ಬಲಿಹಾಕಿ ರಕ್ತದ ಕೋಡಿಯನ್ನೇ ಹರಿಸುವ, ದೇಶ ಮತ್ತು ಧರ್ಮಕ್ಕೂ ವೆತ್ಯಾಸ ಕಾಣದೆ, ಈ ಜಾತ್ಯಾತೀತ ದೇಶದಲ್ಲಿಯೂ, ಎಲ್ಲರಿಗೂ ಒಂದೇ ಕಾನೂನು ಎಂಬುದನ್ನು ದಿಕ್ಕರಿಸಿ ತಮ್ಮ ಧರ್ಮ ಹೇಳಿದಂತೆಯೇ ನಡೆಯುವ ಮತ್ತು ಅದನ್ನು ಎಲ್ಲರೂ ಅನುಸರಿಸುವಂತೆ ದಬ್ಬಾಳಿಕೆ ಮಾಡುವವರನ್ನು ಯಾರೂ ಯಾಕೆ ಕೇಳುವುದಿಲ್ಲ?

  • ದೊಡ್ಡವರ ಹುಟ್ಟುಹಬ್ಬದ ದಿನ ಲಕ್ಷಂತರ ರೂಪಾಯಿ ಖರ್ಚು ಮಾಡಿ ಕೇಕು ಕತ್ತರಿಕೊಂಡು ಕೇಕೇ ಹಾಕುತ್ತಾ ಶಾಂಪೇನ್ ಮಳೆ ಹರಿಸುವಾಗ, ಬಡ ಮಕ್ಕಳ ಹಸಿವು ನೆನಪಾಗೊಲ್ವಾ?
  • ಶ್ರೀಮಂತರ ಮದುವೆ ಮನೆಗಳಲ್ಲಿ ನೂರಾರು ರೀತಿಯ ಆಹಾರಗಳನ್ನು ತಯಾರಿಸಿ, ಬಂದ ಅಥಿತಿಗಳು ಅದನ್ನು ತಿನ್ನದೆ ಉಳಿದಾಗ ಆಹಾರ ವ್ಯರ್ಥವಾದಾಗ, ಬಡ ಮಕ್ಕಳ ಹಸಿವು ನೆನಪಾಗೊಲ್ವಾ?
  • ತಮ್ಮ ನೆಚ್ಚಿನ ಸಿನಿಮಾ ನಟರ ಸಿನಿಮಾ ರಿಲೀಸ್ ಆದಾಗ ಅವರ ಫ್ಲೆಕ್ಸ್ ಗಳಿಗೆ ಹಾಲನ್ನು ಸುರಿವಾಗ, ಕುರಿ ಕೋಳಿ ಬಲಿ ಕೊಡುವಾಗ, ಬಡ ಮಕ್ಕಳ ಹಸಿವು ನೆನಪಾಗೊಲ್ವಾ?
  • ಗ್ರಾಮ ಪಂಚಾಯಿತಿ,ನಗರಸಭೆ, ವಿಧಾನಸಭೆ, ಲೋಕಸಭೆ ಈ ರೀತಿಯ ಯಾವುದೇ ಚುನಾವಣೆಗಳ ಸಮಯದಲ್ಲಿ ಹಣ ಹೆಂಡದ ಮಳೆ ಸುರಿಸುವಾಗ ಮತ್ತು ಫಲಿತಾಂಶದ ಸಂಧರ್ಭದಲ್ಲಿ ಸಾವಿರಾರು ರೂಪಾಯಿಯ ಪಟಾಕಿ ಹೊಡೆಯುವಾಗ, ಪರಿಸರ ಹಾಳೋಗೋಲ್ವಾ?
  • ಪ್ರತೀ ಐಪಿಎಲ್ ಪಂದ್ಯಾವಳಿಗಳು ಮುಗಿದಾಗ ಲಕ್ಷಾಂತರ ರೂಪಾಯಿಗಳ ಪಟಾಕಿ ಸುಡುವಾಗ, ಪರಿಸರ ಹಾಳೋಗೋಲ್ವಾ?
  • ಕೆಟ್ಟ ರಸ್ತೆಗಳಲ್ಲಿ, ವಾಹನ ದಟ್ಟಣೆಯಿಂದ, ಪ್ರತೀ ನಿತ್ಯ ಲಕ್ಷಾಂತರ ವಾಹನಗಳು ಹೊರಸೂಸುವ ಹೊಗೆಯಿಂದ, ಪರಿಸರ ಹಾಳೋಗೋಲ್ವಾ?
  • ಪ್ರತೀ ದಿನವೂ ಹೊತ್ತಲ್ಲದ ಹೊತ್ತಿನಲ್ಲಿ ಲೌಡ್ ಸ್ಪೀಕರಿನಲ್ಲಿ ಆಜಾನ್ ಕೂಗುವಾಗ, ಶಬ್ಧಮಾಲಿನ್ಯವಾಗುವುದಲ್ವಾ?
  • ನಾಯಿ ಕೊಡೆಗಳಂತೆ ನಗರದಾದ್ಯಂತ ತಲೆ ಎತ್ತಿರುವ ಮೊಬೈಲ್ ಟವರ್ಗಳ ಹೊರ ಸೂಸುವ ತರಂಗಾತಂರಗಳಿಂದ ಕಾಣೆಯಾಗಿರುವ ಗುಬ್ಬಿಗಳು, ಇವರ ಕಣ್ಣಿಗೆ ಕಾಣುವುದೇ ಇಲ್ವಾ?

ನಮ್ಮ ಪೂರ್ವಜರು ಹಬ್ಬಗಳ ಆಚರಣೆಯನ್ನು ತಂದಿರುವುದೇ ಸಮಾಜದ ಸ್ವಾಸ್ಥತ್ಯೆಯನ್ನು ಕಾಪಾಡುವುದಕ್ಕೆ,ಎಲ್ಲರೂ ಒಟ್ಟಿಗೆ ಸಂಭ್ರಮ ಪಡುವುದಕ್ಕೆ ಮತ್ತು ಸಮಾಜದ ಆರ್ಥಿಕತೆಯನ್ನು ಸುಭದ್ರಗೊಳಿಸುವುದಕ್ಕಾಗಿ. ಒಂದು ಹಬ್ಬದ ಆಚರಣೆ ಮಾಡುವಾಗಿನ ಸಡಗರದಲ್ಲಿ, ಲಕ್ಷಾಂತರ ಕುಟುಂಬಗಳು ಭಾಗಿಯಾಗುತ್ತವೆ. ಆಹಾರ ಬೆಳೆದ ರೈತ, ಹಾಲು ಉತ್ಪಾದಕ, ಬಟ್ಟೆಗಳ ತಯಾರಕರು, ಹೂವು ಮಾರಾಟಗಾರರು, ದೇವರ ಮೂರ್ತಿಗಳ ತಯಾರಕರು, ಪಟಾಕಿ ತಯಾರಕರು, ಸಿಹಿ ತಿಂಡಿ ತಯಾರಕರುಗಳು ಹೀಗೆ ಸಾವಿರಾರು ಮನೆಗಳು ಸಂಭ್ರಮಿಸುತ್ತಾರೆ.

ಒಂದು ಪಕ್ಷ ಇಂತಹ ವಿಕೃತಿಗಳ ಮಾತಿನಂತೆ ಹಬ್ಬವನ್ನೇ ಆಚರಣೆ ಮಾಡದೇ ಹೋದರೇ ಸಮಾಜದ ಆರ್ಥಿಕತೆಯನ್ನೇ ಬುಡಮೇಲು ಮಾಡಿದಂತಾಗುವುದಿಲ್ಲವೇ? ಸಮಾಜದಲ್ಲಿ ಆಗುವ ಪ್ರತೀ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿಯೂ ಎಲ್ಲರೂ ಸ್ವಯಂಪ್ರೇರಿತವಾಗಿ ತಮ್ಮ ಕೈಲಾಗುವ ಅಳಿಲು ಸೇವೆಯನ್ನು ಮಾಡುತ್ತಿರುವಾಗ ಹಬ್ಬವನ್ನೇ ಆಚರಿಸಬೇಡಿ. ಸಂಭ್ರಮಿಸಲೇ ಬೇಡಿ ಅನ್ನುವಂತಹ ಇದೆಂತಾ ಪ್ರತಿಭಟನೇ? ಇಷ್ಟಾದ ಮೇಲೂ ಆ ಮಕ್ಕಳಿಗೆ ಸಹಾಯ ಮಾಡಬೇಕೆಂದಿದ್ದಲ್ಲಿ  ಅಂತಹವರು ತಮ್ಮ ಸಂಪಾದನೆಯ ಹಣದಲ್ಲಿ ಮಾಡಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅದು ಬಿಟ್ಟು ಸುಮ್ಮನೆ ಇತರ ಮೇಲೆ ತಮ್ಮ ಧ್ತ್ಯೇಯಗಳನ್ನು ಹೇರುವುದು ತರವಲ್ಲ.

ಇಂತಹ ಪ್ರಭೂತಿಗಳ ಈ ರೀತಿಯ ದಬ್ಬಾಳಿಕೆಯನ್ನು ನೋಡುತ್ತಿರುವಾಗ ಇತ್ತೀಚೆಗೆ ನಮ್ಮ ಹಿರಿಯ ಹಿತೈಷಿಗಳಿಬ್ಬರು ಹೇಳಿದ ಈ ಪ್ರಸಂಗ ನೆನಪಾಯಿತು.

ಛೇರ್ಮನ್ ತಿಮ್ಮ ತನ್ನ ಮಗನನ್ನು ಶಾಲೆಗೆ ಸೇರಿಸಲು ಹೊರಟ. ಶಾಲೆಯಲ್ಲಿ,ಮೇಸ್ಟ್ರು ತುಂಬ ಸ್ಟ್ರಿಕ್ಟು.ತಪ್ಪು ಮಾಡಿದರೆ ಹೊಡೆತ ಗ್ಯಾರಂಟಿ.ಛೇರ್ಮನ್ನರ ಮಗ, ತಪ್ಪು ಮಾಡಿದರೆ ಏನು ಮಾಡಬೇಕು? ಎನ್ನುವ ಗೊಂದಲ. ಸ್ವತಃ ಛೇರ್ಮನ್ನರೇ ಆ ಗೊಂದಲಕ್ಕೆ ಪರಿಹಾರ ಸೂಚಿಸಿದರು.

ಮೇಸ್ಟ್ರೆ, ಒಂದು ವೇಳೆ ನನ್ನ ಮಗ ತಪ್ಪು ಮಾಡಿದರೆ, ಅವನ ಬದಲು ಬೇರೆ ಯಾರಾದರೂ ಒಬ್ಬನಿಗೆ ಸರಿಯಾಗಿ ನಾಲ್ಕು ಬಾರಿಸಿ. ಆಗ ನನ್ನ ಮಗ ಹುಷಾರಾಗ್ತಾನೆ ಅಂತ. ದಯವಿಟ್ಟುಅವನಿಗೆ ಹೊಡೆಯೋದು ಬೇಡ ಎಂದರು.

ಅಂದಿನಿಂದ, ಹೇಗಿದ್ದರೂ ಏಟು ತಿನ್ನಲು,ಮತ್ತೊಬ್ಬ ಅಬ್ಬೇಪಾರಿ ಸಿಕ್ಕಿದ್ದಾನಲ್ಲಾ ಎಂದು ಛೇರ್ಮನ್ ಮಗ ತಪ್ಪು ಮಾಡುತ್ತಲೇ ಹೋದ.

ಇಲ್ಲಿ
ಶಾಲೆ -> ನಮ್ಮ ದೇಶ
ಛೇರ್ಮನ್ ಮತ್ತು ಅವನ ಮಗ -> ನಮ್ಮ ಸಂಸ್ಕೃತಿಯನ್ನು ವಿರೋಧಿಸುವ ಪ್ರಭೂತಿಗಳು ಮತ್ತು ಅನ್ಯಧರ್ಮೀಯರು
ಏಟು ತಿನ್ನುವ ಹುಡುಗ -> ಹಿಂದೂಗಳು

ಛೇರ್ಮನ್ ಮತ್ತವನ ಮಗ ಪ್ರತೀ ಬಾರಿಯೂ ತಪ್ಪು ಮಾಡುತ್ತಲೇ ಹೋಗುತ್ತಾರಾದರೂ ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಮತ್ತು ಅವನಿಗೆ ಆವನು ಮಾಡುತ್ತಿರುವ ತಪ್ಪಿನ ಅರಿವಾಗುವುದೇ ಇಲ್ಲ. ಆದರೆ, ತನ್ನದಲ್ಲದ ತಪ್ಪಿಗೆ ಏಟು ತಿನ್ನುವ ಹಣೆ ಬರಹ ಮಾತ್ರ ನಮ್ಮ ಹಿಂದೂಗಳಿಗೆ ತಪ್ಪುವುದಿಲ್ಲ.

ಹಾಗಾಗಿ ಯಾರು ಏನೇ ಹೇಳಲಿ, ಬಿಡಲಿ. ಹೇಳೀ ಕೇಳಿ ನಮ್ಮದು ಜಾತ್ಯಾತೀತ ದೇಶ. ಅವರಿಗೆ ಹೇಗೆ ಅವರ ಸಂಸೃತಿ ಮತ್ತು ಸಂಪ್ರದಾಯಗಳ ಅಚರಣೆಗೆ ಅವಕಾಶವಿಯೋ ಹಾಗೆ ನಮಗೂ ಅವಕಾಶವಿದೆ. ಹಾಗಾಗಿ ಅಂತಹವರ ಮಾತುಗಳನ್ನು ಹೆಚ್ಚಿಗೆ ತಲೆಗೆ ಹಾಕಿಕೊಳ್ಳದೆ ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುವ ಹಬ್ಬ ಮತ್ತು ಸಂಪ್ರದಾಯಗಳನ್ನು ಸಂಭ್ರಮ ಸಡಗರಗಳಿಂದ ಆಚರಿಸೋಣ.. ಹಾಂ!! ಇನ್ನೊಂದು ಕೋರಿಕೆ. ಯಾರ ಮನೆಗಳಲ್ಲಿ ನಮ್ಮ ಹಬ್ಬಗಳನ್ನು ಆಚರಿಸುತ್ತಾರೋ ಅವರ ಬಳಿಯಲ್ಲಿಯೇ ಪದಾರ್ಥಗಳನ್ನು ಖರೀದಿಸೋಣ. ಏಕೆಂದರೆ ನಾವು ಕೊಟ್ಟ ಹಣದಲ್ಲಿ ಅವರ ಮನೆಗಳಲ್ಲಿಯೂ ಹಬ್ಬದ ಸಡಗರ ಸಂಭ್ರಮ ಮೂಡಿಸೋಣ ಮತ್ತು ಅವರನ್ನು ಮತ್ತೊಬ್ಬರ ಬಳಿ ಊಟಕ್ಕಾಗಿ ಕೈ ಚಾಚದಿರುವಂತೆ ಸ್ವಾಭಿಮಾನಿಗಳಾಗಿಸೋಣ.

ಏನಂತೀರೀ?

 

ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ  ಆಹಾರ ಸೇವಿಸಬೇಕೇ ಹೊರತು   ಆಹಾರ ಸೇವಿಸುವಕ್ಕೇ ಬದುಕಬಾರದು

ಮಾಗಿ ಕಳೆಯುತ್ತಿದ್ದಂತೆಯೇ ಎಲ್ಲರಿಗೂ ಸುಗ್ಗಿಯೋ ಸುಗ್ಗಿ, ಒಂದು ಕಡೆ ಸಂಕ್ರಾಂತಿಯ ಸಡಗರ,‌ ಮತ್ತೊಂದೆಡೆ ಮಾಘಮಾಸ ಮದುವೆ ಮುಂಜಿ ‌ನಾಮಕರಣಗಳ ಸಂಭ್ರಮ. ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲ ರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.

ಇನ್ನು ಎರಡು ಮೂರು ವಾರಗಳಲ್ಲಿ ಮೂರ್ನಾಲ್ಕು ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ತುಂಬಾ ಆತ್ಮೀಯವಾಗಿ, ಪ್ರೀತಿಯಿಂದ, ಇಂದಿನ ಕಾಲದಲ್ಲೂ ಮನೆಯವರೆಗೂ ಬಂದು ಆತ್ಮೀಯವಾಗಿ ಆಮಂತ್ರಿಸಿದಾಗ ಹೋಗದಿದ್ದರೆ, ಅವರ ವಿಶ್ವಾಸಕ್ಕೆ ಮತ್ತು ಬಂಧುತ್ವಕ್ಕೆ ಮಾಡಿದ ಅಪಮಾನ. ಇಂದೆಲ್ಲಾ ಕರೆಯುವುದೇ 50-60 ಆತ್ಮೀಯರನ್ನು. ಹಾಗೆ ಅವರ ಅತ್ಮೀಯ ಜನರ ಸಾಲಿನಲ್ಲಿ ನಾವೂ ಇದ್ದೀವಲ್ಲಾ ಎಂಬುದೇ ಸಂತೋಷ. ಹಾಗಾಗಿ‌ ಸಮಯ ಮಾಡಿಕೊಂಡು ಸಪತ್ನಿ ಸಮೇತರಾಗಿ ಎಚ್ಚರಿಕೆಯಿಂದ ಹೋಗಿಬರುತ್ತೇವೆ. ಇಂದಿನ ಕಾಲದಲ್ಲಿ ಮಂತ್ರಕ್ಕಿಂತ ತಂತ್ರವೇ ಹೆಚ್ಚು ಎನ್ನುವಂತೆ ಶಾಸ್ತ್ರ ಸಂಪ್ರದಾಯಕ್ಕಿಂತಲೂ ಫೋಟೋ ವೀಡೀಯೋಗಳಲ್ಲಿ ತೋರಿಕೆಯ ಆಡಂಬರವೇ ತುಸು ಹೆಚ್ಚೇ ಎನಿಸಿದರು ಕಾಲಾಯ ತಸ್ಮೈ ನಮಃ ಎಂದು ಯಾವುದೇ ಚಕಾರವೆತ್ತದೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ರೂಢಿ ಮಾಡಿಕೊಂಡಿದ್ದೇವೆ. ಸಭೆ ಸಮಾರಂಭಗಳ ಕರ್ತರು ಮತ್ತು ಪುರೋಹಿತರು ಶಾಸ್ತ್ರ ಸಂಪ್ರದಾಯದ ಕಡೆ ಗಮನಿಸಿದರೆ ಬಹುತೇಕ ಕಾರ್ಯಕ್ರಮಕ್ಕೆ ಬಂದವರೆಲ್ಲರ ಗಮನವೆಲ್ಲವೂ ಊಟ ತಿಂಡಿ ತೀರ್ಥಗಳ ಬಗ್ಗೆಯೇ ಇರುತ್ತದೆ ಎಂದು ಹೇಳಿದರೆ ಉತ್ಪ್ರೇಕ್ಷೆ ಏನಲ್ಲ. ಅದೇ ರೀತಿ ಕಾರ್ಯಕ್ರಮ ಬಹುತೇಕ ಮುಗಿಯುವ ಹಂತಕ್ಕೆ ಬಂದು ಎಲ್ಲರೂ ಉಡುಗೊರೆಗಳನ್ನು ಕೊಟ್ಟು ಮನೆಯವರಿಗೆಲ್ಲಾ ಶುಭಕೋರಿ ಊಟದ ಮನೆಯತ್ತ ಧಾವಿಸುವುದರಲ್ಲಿಯೇ ನಿರತರಾಗಿರುತ್ತಾರೆ.

ಹಿಂದೆಲ್ಲಾ ಅಚ್ಚು ಕಟ್ಟಾಗಿ ತೊಳೆದ ಅಗ್ರದ ಬಾಳೆ ಎಲೆಯನ್ನೋ ಇಲ್ಲವೇ ಮುತ್ತಗದ ಎಲೆಯನ್ನು ಸಾಲಾಗಿ ನೆಲದ ಮೇಲೆ ಜೋಡಿಸಿ, ಮಂದಲಿಗೆ (ಊಟದ ಚಾಪೆ) ಹಾಸಿ ಸ್ಟೀಲ್ ಲೋಟದ ತುಂಬಾ ನೀರು ತುಂಬಿ, ಎಲೆಗಳ ಮುಂದೆ ಎರಡೆಳೆಯ ರಂಗೋಲಿ ಎಳೆ ಎಳೆದು ಪ್ರತೀ ಎಲೆಗಳ ಮುಂದೆ ಸಣ್ಣಗೆ ದೀಪ ಹಚ್ಚಿಸಿಟ್ಟು ಊಟ ಮಾಡಲು ಬಂದಿರುವವರಿಗೆ ಉಲ್ಲಾಸದ ವಾತಾವರಣ ಸೃಷ್ಟಿ ಮಾಡಿರುತ್ತಿದ್ದರು. ಬಂದವರೆಲ್ಲರೂ ಕೈಕಾಲು ತೊಳೆದುಕೊಂಡು ಸಾಲು ಸಾಲಗಿ ಪಂಕ್ತಿಯಲ್ಲಿ ಕುಳಿತು ಕೊಳ್ಳಲು ಆರಂಭಿಸಿದರೆ, ಅಡುಗೆ ಭಟ್ಟರುಗಳು ಸಾಲು ಸಾಲಿನಲ್ಲಿ ಬಂದು, ಎಲೆಯ ಬಲ ತುದಿಗೆ ಪಾಯಸ, ಎಲೆಯ ಅಗ್ರದ ಕಡೆಯಿಂದ ಎಡದಿಂದ ಬಲಕ್ಕೆ ಉಪ್ಪು, ಉಪ್ಪಿನಕಾಯಿ, ಹೆಸರು ಬೇಳೆ ಮತ್ತು ಕಡಲೇ ಬೇಳೆಗಳ ಕೋಸಂಬರಿ, ಅದರ ಪಕ್ಕದಲ್ಲಿ ಅಯಾಯಾ ಕಾಲದ ಅನುಗುಣವಾಗಿ ಲಭಿಸುವ ತರಕಾರಿಗಳ ಎರಡು ರೀತಿಯ ಚೆನ್ನಾಗಿ ಇಂಗು ತೆಂಗಿನ ಒಗ್ಗರಣೆ ಹಾಕಿ ಹದವಾಗಿ ಬಾಡಿಸಿದ ಪಲ್ಯಗಳು, ಅದರ ಮುಂಭಾಗದಲ್ಲಿ ಸಿಹಿ-ಹುಳಿ ಸಮಾಗಮದ ಗೊಜ್ಜು, ಎಲೆಯ ಎಡ ತುದಿಯಲ್ಲಿ ಚಿತ್ರಾನ್ನ ಇಲ್ಲವೇ ಪುಳಿಯೋಗರೆ ಅಥವಾ ಯಾವುದಾದರೂ ಕಲೆಸಿದ ಅನ್ನ. ಅದರ ಮೇಲೆ ಕರಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ (ಉಪ್ಪು ಮೆಣಸಿನಕಾಯಿ), ಎಲೆಯ ಬಲ ತುದಿಯಲ್ಲಿ ಬೂದುಕುಂಬಳದ ಮಜ್ಜಿಗೆ ಹುಳಿ, ಎಲೆಯ ಮಧ್ಯ ಭಾಗದಲ್ಲಿ ಬಿಸಿ ಬಿಸಿಯಾದ ಅನ್ನ ಅದರ ಮೇಲೆ ಹುಳಿ ತೊವ್ವೆ ಹಾಕಿ ತುಪ್ಪದ ಆಭಿಗಾರ ಮಾಡಿ, ಊಟದ ಮಂತ್ರ ಸಹನಾ ವವತು, ಅನ್ನಪೂರ್ಣೇ ಸದಾಪೂರ್ಣೇ ಸಾಮೂಹಿಕವಾಗಿ ಹೇಳಿ, ಓಂ ಶಾಂತಿ ಶಾಂತಿ ಶಾಂತಿಃ ಎಂದು ಮುಗಿಸುತ್ತಿದ್ದಂತೆ ಮನೆಯ ಹಿರಿಯರು ತಮ್ಮ ಮನೆ ದೇವರನ್ನು ನೆನೆದು ಗೋವಿಂದ ಹೇಳಿಸಿ, ಭೋಜನ ಕಾಲೇ ಸೀತಾ ರಾಮ ಸ್ಮರಣೆ ಮಾಡಿಸಿ, ಹರ ನಮಃ ಪಾರ್ವತಿ ಪತಯೇ, ಹರ ಹರ ಮಹಾದೇವ ಎಂದು ಹೇಳಿ ಮುಗಿಸುತ್ತಿದ್ದಂತಯೇ, ಅಡುಗೆಯವರು ಬಡಿಸುತ್ತಿದ್ದ ಬಿಸಿ ಬಿಸಿ ಹುಳಿದೊವ್ವೆಯನ್ನೂ ಇಲ್ಲವೇ ಚೆನ್ನಾಗಿ ಎಲ್ಲಾ ರೀತಿಯ ತರಕಾರಿ ಹಾಕೆ ಮಾಡಿದ ಹುಳಿಯನ್ನು ಕಲೆಸಿ ತಿನ್ನುವ ರುಚಿ ವರ್ಣಿಸುವುದಕ್ಕಿಂತ ಅನುಭವಿಸಿದರೆ ಮಾತ್ರ ಆನಂದ. ಆದಾದ ನಂತರ ಕಟ್ಟೆ ಕಲಿಸಿದ ಅನ್ನದ ಮಧ್ಯೆ ಚೆನ್ನಾಗಿ ಹದವಾಗಿ ಕುದಿಸಿ ಇಂಗಿನ ಒಗ್ಗರಣೆ ಹಾಕಿದ ಬಿಸಿ ಬಿಸಿ ಬೇಳೆ ಸಾರು ಅದಕ್ಕೆ ಒಂದೆರಡು ಮಿಳ್ಳೆ ತುಪ್ಪ ಹಾಕಿಸಿಕೊಂಡು ಸಾರು ಎಲೆಯಿಂದ ಜಾರಿ ಹೋಗದಂತೆ ಹದವಾಗಿ ಕಲೆಸಿ ತಿನ್ನುವುದೇ ಒಂದು ಕಲೆ. ಚೆನ್ನಾಗಿ ಕಲೆಸಿದ ಸಾರನ್ನವನ್ನು ಸೊರ್ ಸೊರ್ ಎಂದು ಚಪ್ಪರಿಸಿ ಕೈನ ಐದೂ ಬೆರಳು ಬಾಯಿಯ ಒಳಗೆ ಫೂರ್ತಿ ಹಾಕಿಕೊಂಡು ಸಾರನ್ನ ತಿನ್ನುತ್ತಿದರೆ, ಸ್ವರ್ಗಕ್ಕೆ ಮೂರೇ ಗೇಣು. ಸಾರನ್ನ ತಿಂದು ಮುಗಿಸಿದ ನಂತರ ಅವರವರ ಅಂತಸ್ತಿಗೆ ತಕ್ಕಂತೆ ಲಾಡು, ಬೂಂದಿ, ಬಾದುಶಾ, ಜಿಲೇಬಿ, ಜಾಹಂಗೀರ್ ಇಲ್ಲವೇ ಬೇಳೆ ಒಬ್ಬಟ್ಟು ಅಥವಾ ಕಾಯಿ ಹೋಳಿಗೆ. ಇನ್ನು ಸ್ಥಿತಿವಂತರಾಗಿದ್ದರೆ ಪೇಣಿಯನ್ನೋ ಇಲ್ಲವೇ ಚಿರೋಟಿ ಜೊತೆಗೆ ಬೂರಾ ಸಕ್ಕರೆ ಮತ್ತು ಬಿಸಿ ಬಿಸಿ ಘಮ ಘಮವಾದ ಬಾದಾಮಿ ಹಾಲಿನೊಂದಿಗೆ ಕಲೆಸಿ ತಿಂದು ಮುಗಿಸುವುದರೊಳಗೆ, ಖಾರ ಖಾರವಾದ ಬೂಂದಿ ಇಲ್ಲವೇ ಹೀರೇ ಕಾಯಿ ಬಜ್ಜಿ ಅಥವಾ ಆಲೂಗೆಡ್ಡೆ ಬೋಂಡ ತಿನ್ನುವ ಅನುಭವ ಅವರ್ಣನೀಯ. ಇಷೃರ ಮಧ್ಯದಲ್ಲಿ ಪಂಕ್ತಿಯಲ್ಲಿದ್ದವರು ಯಾವುದಾದರೂ ದೇವರನಾಮವನ್ನೋ ಇಲ್ಲವೆ ಶ್ಲೋಕವನ್ನು ಎತ್ತರದ ಧನಿಯಲ್ಲಿ ಹೇಳಲು ಶುರುಮಾಡಿದರೆ ಒಬ್ಬರಿಗಿಂತ ಮತ್ತೊಬ್ಬರು ಒಂದಾದ ಮೇಲೆ ಮೂರ್ನಾಲ್ಕು ಹಾಡು/ಶ್ಲೋಕಗಳನ್ನು ಹೇಳುವಷ್ಟರಲ್ಲಿ, ಅಡುಗೆಯವರು ಮಾಡಿದ ಎಲ್ಲಾ ಪದಾರ್ಥಗಳನ್ನೂ ಮತ್ತೊಮ್ಮೆ ವಿಚಾರಣೆ ಮಾಡಿದ ನಂತರ ಸಲಿಗೆಯಿಂದ ಬಡಿಸಿದ ಕಲೆಸಿದ ಅನ್ನ ತಿಂದು ಮುಗಿಸಿ ಸ್ವಲ್ಪವೇ ಸ್ವಲ್ಪ ಅನ್ನ ಮೊಸರು ಹಾಕಿಸಿಕೊಂಡು ಅದಕ್ಕೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕಲೆಸಿಕೊಂಡು ಉಪ್ಪಿನ ಕಾಯಿ ಜೊತೆ ನೆಂಚಿಕೊಂಡು ತಿಂದರೆ ಹೊಟ್ಟೆಯಲ್ಲಿ ತಣ್ಣಗಿನ ಹಿತಾನುಭವ. ಇಷೃರಲ್ಲಿ ಕೊಟ್ಟ ತಾಂಬೂಲವನ್ನು ಎಡಗೈಯಲ್ಲಿ ತೆಗೆದುಕೊಂಡು ಅಲ್ಲಿಯೇ ಅಕ್ಕ ಪಕ್ಕದಲ್ಲಿಯೇ ತೆಂಗಿನಕಾಯಿನ್ನು ಇಟ್ಟು, ಊಟ ಮುಗಿಯುವವರೆಗೂ ತಾಳ್ಮೆಯ ಪ್ರತೀಕವಾಗಿದ್ದವರು ಕೈ ತೊಳೆಯುವ ಹೊತ್ತಿಗೆ ಒಬ್ಬರಿಗಿಂತ ಮತ್ತೊಬ್ಬರು ಕೈ ತೊಳೆಯಲು ಏಕೆ ಆತುರ ತೋರುತ್ತಾರೆ? ಎನ್ನುವುದು ಇಂದಿಗೂ ನನಗೆ ತಿಳಿಯದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಊಟ ಮುಗಿಸಿ ಡರ್ ಎಂದು ತೇಗಿ ಅಲ್ಲಿಯೇ ತಟ್ಟೆಯಲ್ಲಿ ಇಟ್ಟಿದ್ದ ವಿಳ್ಳೇದೆಲೆ ಮತ್ತು ಚೂರಡಿಕೆ ಅದಕ್ಕೆ ಹದವಾಗಿ ಸುಣ್ಣ ಹಚ್ಚಿಕೊಂಡು ಬಾಯಿಯೊಳಗೆ ಮೆಲ್ಲುತ್ತಾ , ನಾಲಿಗೆ ಕೆಂಪಾಗಿದೆಯೇ ಎಂದು ನೋಡಿ ಕೊಂಡು ನಾಲಿಗೆ ಕೆಂಪಾಗಿದ್ದರೆ ಏನೋ ಸಾಧಿಸಿದಂತಹ ಅನುಭವ.

ಆದರೆ ಇಂದು ಮೇಲೆ ಹೇಳಿದಂತಹ ಬಹುತೇಕ ಪದ್ದತಿಗಳು ಮಾಯವಾಗಿ ಎಲ್ಲವೂ ನಗರೀಕರಣವಾಗಿದೆ. ಬಹುತೇಕ ಸಮಾರಂಭಗಳಲ್ಲಿ ಪಾನಿಪುರಿ, ಬೇಲ್ ಪುರಿ, ಮಸಾಲೆ ಪೂರಿ ಒಂದೆಡೆಯಾದರೆ, ಬಾಳೆಯ ಎಲೆಗಳ ಜಾಗದಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ, ನೆಲದ ಬದಲು ಕಾಲು ನೋವಿನ ನೆಪ ಹೇಳಿ ಟೇಬಲ್ಗಳು, ಇಲ್ಲವೇ ನಿಂತೇ ತಿನ್ನುವ ರೂಡಿ. ಕುಡಿಯಲು ನೀರಿನ ಬಾಟೆಲ್ಗಳು, ಬೇಳೆ ಕೊಸಂಬರಿ ಬದಲಾಗಿ ಅಮೇರಿಕನ್ ಜೋಳದ ಕೋಸಂಬರಿ, ಅನ್ನ ತಿಂದರೆ ದಪ್ಪಗಾಗುತ್ತೇವೆಂಬ ಭಯದಿಂದ ಮೈದಾ ಹಿಟ್ಟಿನ ರುಮಾಲಿ ರೋಟಿ ಅಥವಾ ರೊಟಿ, ಅದಕ್ಕೆ ಮಸಾಲೆ ಭರಿತ ಗೊಜ್ಜು, ಜೊತೆಗೆ ಬೇಳೆ ಕಟ್ಟು (ದಾಲ್), ನೆಂಚಿಕೊಳ್ಳಲು ಗೋಬಿ ಮಂಚೂರಿ ಜೊತೆಗೆ ಪಲಾವ್, ಬಿರ್ಯಾನಿ, ಘೀ ರೈಸ್ ಕುರ್ಮಾ, ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥಗಳಾದ ರಸಮಲೈ, ಚಂಪಾಕಲಿ, ಚಂ ಚಂ ಎಲ್ಲಾ ತಿಂದು ಮುಗಿಸಿ ಕೈ ತೊಳೆದು ಪಕ್ಕಕ್ಕೆ ಬಂದರೆ ತಣ್ಣಗಿನ ಐಸ್ ಕ್ರೀಮ್ ಜೊತೆಗೆ ಕ್ಯಾರೆಟ್ ಹಲ್ವಾ ಇಲ್ಲವೇ ಗುಲಾಬ್ ಜಾಮೂನು, ಬಗೆ ಬಗೆಯ ಕತ್ತರಿಸಿದ ಹಣ್ಣುಗಳು ಜೊತೆಗೆ ಪಾನ್ ಬೀಡಾಗಳದ್ದೇ ಕಾರು ಬಾರಾಗಿದೆ. ಇನ್ನು ಹಾಕಿಸಿಕೊಂಡ ಎಲ್ಲಾ ಪದಾರ್ಥಗಳನ್ನು ಬಹುತೇಕ ಮಂದಿ ಪೂರ್ತಿ ತಿನ್ನುವುದೇ ಇಲ್ಲ. ಕೋಳಿ ಕೆದಕಿದಂತೆ ತಟ್ಟೆಯಲ್ಲಿ ಆಹಾರವನ್ನು ಕೆದಕಿ ತಿನ್ನುವ ಶಾಸ್ತ್ರಮಾಡಿಂತೆ ಮಾಡಿ ಚೆಲ್ಲುವವರೇ ಹೆಚ್ಚಾಗಿದ್ದಾರೆ. ಈ ರೀತಿಯಾಗಿ ಆಹಾರ ಚೆಲ್ಲುವುದು ಅನ್ನದಾತರಿಗೆ ದ್ರೋಹ ಬಗೆದಂತೆಯೇ ಸರಿ.

ಇತ್ತೀಚೆಗೆ ನಾನು ಬಹುತೇಕ ಮದುವೆ ಮನೆಗಳಲ್ಲಿ ಊಟ ಮಾಡುತ್ತಿರುವಾಗ ನಿಧಾನವಾಗಿ ಊಟ ಮಾಡಿ, ಸಾವಕಾಶವಾಗಿ ಏನನ್ನು ಬೇಕೋ ಕೇಳಿ ಹಾಕಿಸಿಕೊಳ್ಳಿ ಎಂದು ಹೆಣ್ಣಿನ ತಂದೆ ಮತ್ತು ತಾಯಿಯವರು ಕೈ ಮುಗಿದು ಎಲ್ಲರನ್ನೂ ವಿಚಾರಿಸುವುದನ್ನು ಕಂಡಾಗಲೆಲ್ಲಾ ಒಂದು ಕ್ಷಣ, ನನಗೆ ಗಂಟಲು ಭಾರವಾಗಿ ಏನನ್ನೂ ನುಂಗಲು ಆಗದಂತಹ ಅನುಭವ. ನಾವೆಲ್ಲರೂ ತಿನ್ನುತ್ತಿರುವುದು ಮಧುಮಗಳ ತಂದೆಯ ಬೆವರಿನ ಪರಿಶ್ರಮದ ಫಲ. ಎಷ್ಟೋ ಕಷ್ಟ ಪಟ್ಟು ಸಾಲ ಸೋಲ ಮಾಡಿ, ನಡೆಸುತ್ತಿರುವ ಮದುವೆಯಲ್ಲಿ ಮಾಡಿಸಿರುವ ಅಡುಗೆಯನ್ನು ತಿನ್ನಲು ನಾವೆಷ್ಟು ಅರ್ಹರು? ಎಂಬ ಪ್ರಶ್ನೆ ಕಾಡುತ್ತದೆ. ಮದುವೆ ಮನೆಯಲ್ಲಿ ಅಡುಗೆಗೆ ಉಪ್ಪು ಹೆಚ್ಚಾಗಿದ್ದಲ್ಲಿ ಬೇಸರಗೊಳ್ಳದಿರಿ. ಮಧು ಮಗಳ ತಂದೆ ತಾಯಿಯರ ಕಣ್ಣೀರು ಆಡುಗೆಗೆ ಜಾರಿ ಬಿದ್ದು ಅಡುಗೆ ಉಪ್ಪಾಗಿರಬಹುದು ಎಂಬ ಬರಹವನ್ನು ಇತ್ತೀಚೆಗೆ ವ್ಯಾಟ್ಸಾಪ್ನಲ್ಲಿ ಓದಿದ ನಂತರವಂತೂ ನನ್ನ ಮನಸಿನ ತುಮಲ ಇನ್ನೂ ಹೆಚ್ಚಾಗಿದೆ.

ಪ್ರತಿಯೊಂದು ಧಾನ್ಯ ಧಾನ್ಯಗಳ ಮೇಲೂ ತಿನ್ನುವವರ ಹೆಸರು ಬರೆದಿರುತ್ತದೆ ಎಂದು ತುಳಸೀ ದಾಸರು ಎಂದೋ ಹೇಳಿರುವಂತೆ , ನಮ್ಮ ಹೆಸರು ಆಂದಿನ ಕಾರ್ಯಕ್ರಮದ ಊಟದ ಮೇಲೆ ಬರೆದ್ದಿದ್ದಲ್ಲಿ ಮಾತ್ರವೇ ನಮಗೆ ತಿನ್ನುವ ಭಾಗ್ಯ ಇಲ್ಲದಿದ್ದಲ್ಲಿ ತಿನ್ನಲು ಅರ್ಹತೆಯೇ ಇರುವುದಿಲ್ಲ ಎಂದು ಎಷ್ಟೋ ಬಾರಿ ನನಗೆ ನಾನೇ ಸಮಾಧಾನ ಪಟ್ಟುಕೊಂಡಿದ್ದೇನೆ.

ಆದರೂ ಅಂದಿನ ಊಟದ ಮೇಲೆ ನಮ್ಮ ಹೆಸರು ಬರೆದಿದೆ ಎಂದು ಸಿಕ್ಕಾ ಪಟ್ಟೆ ಎಲೆಗೆ ಹಾಕಿಸಿಕೊಂಡು ಸುಮ್ಮನೆ ನೈವೇದ್ಯ ಮಾಡಿದಂತೆ ಎರೆಡೆರಡು ಕಾಳು ತಿಂದು ಆಹಾರವನ್ನು ಚೆಲ್ಲುವ ಅಧಿಕಾರ ನಮಗೇನಿದೆ? ಪ್ರಪಂಚಾದ್ಯಂತ ತಿನ್ನುವ ಆಹಾರಕ್ಕೆ ಮತ್ತು ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವಾಗ ನಾವು ಯಾರದ್ದೋ ಮನೆಯ ಸಮಾರಂಭದಲ್ಲಿ ಆಹಾರವನ್ನು ಅನಗತ್ಯವಾಗಿ ಚೆಲ್ಲುವುದು ಎಷ್ಟು ಸರಿ?

ಹಿಂದಿನ ಕಾಲದಲ್ಲಿ ಅಳಿದುಳಿದ ಎಂಜಲನ್ನು ಮನೆಯಲ್ಲಿ ಸಾಕಿರುವ ಗೋವುಗಳಿಗೆ ಕಲಗಚ್ಚಿನ ರೂಪದಲ್ಲಿ ಹಾಕುತ್ತಿದ್ದರು. ನಾವು ಬಿಸಾಡಿದ ಪದಾರ್ಥಗಳನ್ನೇ ತಿಂದು ನಮಗೆ ಆರೊಗ್ಯಕರವಾದ ಗಟ್ಟಿ ಹಾಲನ್ನು ಹಸುಗಳು ಕೊಡುತ್ತಿದ್ದವು. ಇನ್ನು ಉಳಿದ ಎಂಜಲು ಎಲೆಗಳನ್ನು ಮನೆಯ ಪಕ್ಕದಲ್ಲಿರುತ್ತಿದ್ದ ತಿಪ್ಪೆಗೆ ಹಾಕಿ ಅದರ ಮೇಲೆ ಸ್ವಲ್ಪ ಮನೆಯ ಆಕಳ ಸಗಣಿಯನ್ನು ಹಾಕಿದರೆ ಫಲವತ್ತಾದ ನೈಸರ್ಗಿಕ ಸಾವಯವ ಗೊಬ್ಬರ ಕೃಷಿಗೆ ಉಚಿತವಾಗಿಯೇ ತಯಾರಾಗುತ್ತಿತ್ತು. ಇನ್ನು ಕೈ ತೊಳೆಯುವ ನೀರು, ಪಾತ್ರೆ ತೊಳೆಯುವ ನೀರು ಸೀದಾ ಮನೆಯ ಮುಂದೆಯೋ ಇಲ್ಲವೇ ಹಿತ್ತಲಿನಲ್ಲಿಯೋ ಹಾಕಿರುವ ಬಾಳೇಗಿಡಗಳಿಗೋ ಇಲ್ಲವೇ ಹೂವಿನ ಗಿಡ ಅಥವಾ ತರಕಾರಿಯ ಕೈತೋಟಕ್ಕೆ ನೀರುಣಿಸುತ್ತಿತ್ತು. ಹೀಗೆ ಪ್ರತಿಯೊಂದು ಕಸವೂ ರಸವಾಗಿ ಮಾರ್ಪಡುತ್ತಿದ್ದವು.

ಆದರೆ ಇಂದು ಪ್ಲಾಸ್ಟಿಕ್ ಯುಕ್ತ ಕಸವನ್ನು ವಿಲೇವಾರಿ ಮಾಡುವುದೇ ಬಹಳ ಸಮಸ್ಯೆಯಾಗಿದ್ದು, ಪರಿಸರದ ಹಾನಿಗೆ ನಮಗರಿವಿಲ್ಲದಂತೆ ನಾವೇ ಕಾರಣೀಕೃತರಾಗುತ್ತಿದ್ದೇವಲ್ಲವೇ? ಕೈ ಮತ್ತು ಪಾತ್ರೆ ತೊಳೆದ ನೀರು ಸೀದಾ ಚರಂಡಿಗೆ ಸೇರಿ ಅದು ಹಾಗೇ ಹರಿದು ಕೆರೆ, ಕೊಳ್ಳ, ನದಿಯನ್ನು ಸೇರಿ ನೀರನ್ನು ಕಲುಷಿತ ಗೊಳಿಸುತ್ತಿರುವುದು ನಿಜಕ್ಕೂ ಆಘಾತಕಾರಿ. ಇನ್ನು ಬಹುತೇಕ ಅಡುಗೆಯ ರುಚಿ ಹೆಚ್ಚಿಸುವುದ್ದಕ್ಕಾಗೆ ಬಳೆಸುತ್ತಿರುವ ತೈಲಗಳು ಎಷ್ಟು ಸುರಕ್ಷಿತ ಎಂದು ಯೋಚಿಸಿದ್ದೇವೆಯೇ? ಶುಧ್ಧ ತುಪ್ಪದ ಹೆಸರಿನಲ್ಲಿ ಪ್ರಾಣಿಗಳ ಕೊಬ್ಬನ್ನು ತಿನ್ನುತ್ತಿರುವುದರಂದಲೇ ಬಹುತೇಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂಬುವ ಅರಿವಿದೆಯೇ? ಇನ್ನು ರಾಸಾಯನಿಕ ಕೃತಕ ಗೊಬ್ಬರಗಳಿಂದ ಬೆಳೆದ ಆಹಾರ, ಕೊಳಕು ಚರಂಡಿ ನೀರಿನಿಂದ ಬೆಳೆದ ತರಕಾರಿಗಳು ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ?

ಹಾಗಂದ ಮಾತ್ರಕ್ಕೇ ನಾನು ಏನನ್ನೂ, ಏಲ್ಲಿಯೂ ತಿನ್ನಬಾರದೆಂದು ಹೇಳುತ್ತಿಲ್ಲ. ನಾವು ತಿನ್ನುತ್ತಿರುವ ಆಹಾರಗಳನ್ನು ಒಮ್ಮೆ ಪರೀಕ್ಷಿಸಿ ಸಾಧ್ಯವಾದಷ್ಟೂ ಆರೋಗ್ಯಕರ ಆಹಾರವನ್ನು ಸೇವಿಸೋಣ ಮತ್ತು ಆರೋಗ್ಯಕರ ಜೀವನ ನಡೆಸೋಣ. ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸಬೇಕೇ ಹೊರತು ಆಹಾರ ಸೇವಿಸುವಕ್ಕೇ ಬದುಕಬಾರದು ಅಲ್ಲವೇ?

ಏನಂತೀರೀ?

ಇಂತಿ‌ ನಿಮ್ಮವ ಉಮಾಸುತ