ಎಳ್ಳಿನ ಹಾಲು

ಹೇಳಿ ಕೇಳಿ ಇದು ಬೇಸಿಗೆ ಸಮಯ. ಹತ್ತಾರು ಸಲ ಬಾಯಾರಿಕೆಯಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ಅನಾರೋಗ್ಯಕರವಾದ ಪೇಯಗಳನ್ನು ಕುಡಿಯುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರಿಬಹುದಾದ ಆರೋಗ್ಯಕರವಾದ ಸಸ್ಯಜನಿತ ಎಳ್ಳಿನ ಹಾಲನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 2-3 ಜನರು ಸವಿಯಬಹುದಾದಷ್ಟು ಎಳ್ಳಿನ ಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಬಿಳಿ ನೈಲಾನ್ ಎಳ್ಳು – 100 ಗ್ರಾಂ
ಬೆಲ್ಲ- 100 ಗ್ರಾಂ
ಹಾಲು – 1/2 ಲೀಟರ್
ಏಲಕ್ಕಿ – 3 ರಿಂದ 4

ಎಳ್ಳಿನ ಹಾಲು ತಯಾರಿಸುವ ವಿಧಾನ

  • ಎಳ್ಳನ್ನು ಚೆನ್ನಾಗಿ ತೊಳೆದು ಸುಮಾರು 10-15 ನಿಮಿಷಗಳಷ್ಟು ಕಾಲ ನೀರಿನಲ್ಲಿ ನೆನೆಸಿಡಿ
  • ಬೆಲ್ಲವನ್ನು ನೀರಿನಲ್ಲಿ ಗಟ್ಟಿಯಾಗಿ ಕರಗಿಸಿಕೊಂಡು ಕಸ ಕಡ್ಡಿ ಇರದಂತೆ ಚೆನ್ನಾಗಿ ಶೋಧಿಸಿಕೊಳ್ಳಿ
  • ನೆನೆಸಿದ ಎಳ್ಳು, ಮತ್ತು ಏಲಕ್ಕಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಅದಕ್ಕೆ ಬೆಲ್ಲದ ನೀರನ್ನುಸೇರಿಸಿದಲ್ಲಿ, ಘಮ ಘಮಸಿರುವ ಆರೋಗ್ಯಕರವಾದ ಎಳ್ಳಿನ ಹಾಲು ಸವಿಯಲು ಸಿದ್ಧ.


ಬಿಸಿಲು ಹೊತ್ತಿನಲ್ಲಿ ಇದಕ್ಕೆ ತಣ್ನಗಿರುವ ಐಸ್ ಕ್ಯೂಬ್ ಗಳನ್ನು ಸೇರಿಸಿ ಸೇವಿಸಿದಲ್ಲಿ ದೇಹಕ್ಕೆ ಇನ್ನೂ ಮುದ ನೀಡುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ಕುಡ್ಕೊಳೀ.
.

ಏನಂತೀರೀ?
ನಿಮ್ಮವನೇ ಉಮಾಸುತ

ಮನದಾಳದ ಮಾತು : ಈ ಬೇಸಿಗೆ ಕಾಲದಲ್ಲಂತೂ ಬಿಸಿಲಿನ ಪ್ರಮಾಣ ಜಾಸ್ತಿಯಾಗಿ ಮೈಯಲ್ಲಿರುವ ನೀರಿನ ಪ್ರಮಾಣವೆಲ್ಲಾ ಬೆವರಿನ ಮೂಲಕ ಹೊರ ಹೋಗಿ, ನಿರ್ಜಲೀಕರಣದ ಸಮಸ್ಯೆಗೆ ಈ ಎಳ್ಳಿನ ಹಾಲು ಪರಿಣಾಮಕಾರಿಯಾಗಿದೆ, ಎಳ್ಳಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಮೂಳೆಗಳ ಸಢೃಡತೆಗೆ ಸಹಕಾರಿಯಾಗಿದೆ. ನಿಯಮಿತವಾಗಿ ಎಳ್ಳನ್ನು ಸೇವಿಸುವ ಮುಖಾಂತರ ಕರುಳಿನ ಕ್ಯಾನ್ಸರನ್ನೂ ಕೂಡಾ ತಡೆಯಬಹುದಾಗಿದೆ. ಎಳ್ಳಿನಲ್ಲಿ ಎಣ್ಣೆಯ ಅಂಶ ವಿರುವ ಕಾರಣ ಚರ್ಮಕ್ಕೆ ಕಾಂತಿಯನ್ನು ತಂದು ಕೊಡುತ್ತದೆ. ಈ ಎಳ್ಳಿನ ಹಾಲನ್ನು ಪ್ರತಿ ನಿತ್ಯವೂ ಸೇವಿಸುವುದರಿಂದ ಸಂಧಿವಾತದಿಂದ ದೂರವಿರಬಹುದಾಗಿದೆ.


ಈ ಪಾಕಪದ್ದತಿಯನ್ನು ತಿಳಿಸಿಕೊಟ್ಟ ಶ್ರೀಮತಿ ಲಕ್ಷ್ಮೀ ಆನಂದ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು