ಅಪೂಪ ದಾನ

ನಾವೆಲ್ಲರೂ, ಗೋದಾನ, ಭೂದಾನ, ಸುವರ್ಣದಾನ, ರತ್ನದಾನ ಕಡೆಗೆ ಅನ್ನದಾನ ಮತ್ತು ರಕ್ತದಾನವನ್ನು ಕೇಳಿದ್ದೇವೆ. ಅರೇ, ಇದೇನಿದು ಅಪೂಪ ದಾನ? ಅಂತ ಆಶ್ಚರ್ಯ ಪಡ್ತಾ ಇದ್ದೀರಾ? ಹೌದು ಈ ರೀತಿಯಾದ ಅಪರೂಪದ ಅಪೂಪ ದಾನವನ್ನು ಎಲ್ಲಾ ಸಮಯದಲ್ಲಿಯೂ ಕೊಡಲು ಬರುವುದಿಲ್ಲ. ಇದು ಕೇವಲ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕಮಾಸದಲ್ಲಿ ಮಾತ್ರವೇ ಕೊಡುವಂತಹ ಅನುರೂಪದ ದಾನವೇ ಅಪೂಪ ದಾನ. ಹಾಗಾದ್ರೇ ಅಪೂಪ ದಾನ ಅಂದ್ರೆ ಏನು? ಅಧಿಕ ಮಾಸ ಅಂದ್ರೇ ಏನು? ಅದು ಹೇಗೆ ಬರುತ್ತದೆ? ಮತ್ತು ಅದರ ಮಹತ್ವ ಮತ್ತು ಆ ಮಾಸಾಚರಣೆಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಯಾವ ಚಾಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಇರುವುದಿಲ್ಲವೋ ಆ ಮಾಸವನ್ನು ಅಧಿಕ ಮಾಸವೆಂದು ಪರಿಗಣಿಸಲಾಗುತ್ತದೆ. ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ವಶಿಷ್ಟ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ.

ಅಧಿಕಮಾಸವು ಸಹ ಖಗೋಳ ಶಾಸ್ತ್ರ ಮತ್ತು ಗಣಿತ ಸೂತ್ರಗಳನ್ನು ಆಧರಿಸಿದೆ. ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) ಅಂದರೆ 365.2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾದರೆ, ಚಂದ್ರನು ಭೂಮಿಯ ಸುತ್ತಲೂ ಒಂದು ಸುತ್ತು ಸುತ್ತಿ ಬರಲು 27.3 ದಿವಸಗಳು ಬೇಕು. ಹಾಗಾಗಿ ಇದು ಚಂದ್ರಮಾನದ ಮಾಸಿಕ ಚಲನೆಯಾಗಿದೆ. ಹೀಗೆ ಭೂಮಿ ಮತ್ತು ಚಂದ್ರರ 27.3 ದಿವಸಗಳ ಚಲನೆ ಲೆಖ್ಖಾಚಾರದ ಪ್ರಕಾರ ಸೂರ್ಯನ ಸುತ್ತಲೂ 1/12 ಭಾಗವನ್ನು ಚಲಿಸಿರುತ್ತದೆ. ಸೂರ್ಯನ ಸುತ್ತಲು ಚಲಿಸುವ ಭೂಮಿಯ ಪಥವು ಸಮನಾಗಿಲ್ಲವಾಗಿರುವುದರಿಂದ, ಚಂದ್ರನು ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆವರೆಗೆ ಚಲಿಸಲು 2.2 ಹೆಚ್ಚಿನ ದಿವಸಗಳನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ.

ಹಾಗಾಗಿ ಚಾಂದ್ರಮಾನದ ಲೆಖ್ಖಾಚಾರದಂತೆ
ವಾರ್ಷಿಕ ಚಲನೆ 29.531 x 12 = 354.372 ದಿನಗಳಾಗುತ್ತದೆ.
ಸೌರಮಾನದ ವಾರ್ಷಿಕ ಚಲನೆ (1 ಆವರ್ತನ) = 365.2422 ದಿವಸಗಳಾಗುತ್ತದೆ.
ಚಾಂದ್ರಮಾನದ ವಾರ್ಷಿಕ ಚಲನೆ (29.531 x 12) = 354.372
ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: (365.2422 – 354.372) = 10.8702 ದಿವಸಗಳಾಗುತ್ತದೆ.

ಈ ರೀತಿಯಾದ 10 ದಿನಗಳ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಹಾಗಾಗಿ ಈ ವ್ಯತ್ಯಾಸ ಸರಿ ತೂಗಿಸಲು ಪ್ರತೀ 3 ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ. ಆಂದರೆ ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ಹೀಗೆ 33 ತಿಂಗಳಿಗೊಮ್ಮೆ ಒಂದು ಮಾಸವನ್ನು ಸೇರಿಸುವ ಪರಿಕಲ್ಪನೆಯೇ ಅಧಿಕ ಮಾಸ. ಈ ಹಿನ್ನೆಲೆಯಲ್ಲಿಯೇ ಅಧಿಕ ಮಾಸದಲ್ಲಿ 33 ಸಂಖ್ಯೆಯ ದಾನಗಳನ್ನು ಕೊಡುವ ಪದ್ಧತಿ ರೂಢಿಯಲ್ಲಿ ಬಂದಿದೆ ಎನ್ನಬಹುದು.

ಅದಲ್ಲದೇ ಅಧಿಕಮಾಸದಲ್ಲಿ 33 ದೇವತೆಗಳನ್ನು ಈ ರೀತಿಯಾಗಿ ವಿಂಗಡಿಸಿದ್ದಾರೆ.
ಅಷ್ಟ (8) ವಸುಗಳು, ಏಕಾದಶ (11) ರುದ್ರರು, ದ್ವಾದಶ (12) ಆದಿತ್ಯರು, (1) ಪ್ರಜಾಪತಿ, (1) ವಷಟ್ಕಾರ ಹೀಗೆ ಒಟ್ಟು 33 ದೇವತೆಗಳು.

ಈ ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನ ಕೊಟ್ಟರೆ ಹೆಚ್ಚಿನ ಫಲವಿದೆ ಎಂದು ಹೇಳಲಾಗುತ್ತದೆ. ಅಪೂಪ ಎಂದರೆ, ಅತಿರಸ ಅಥವಾ ಕಜ್ಜಾಯ ಎಂದು ಕರೆಯಲ್ಪಡುವ ಅಕ್ಕಿ, ಬೆಲ್ಲ ಮತ್ತು ತುಪ್ಪದಿಂದ ಮಾಡಿದ 33 ಭಕ್ಷ್ಯವನ್ನು ಒಂದು ತಟ್ಟೆಯಲ್ಲಿಟ್ಟು ದಾನ ಮಾಡಬೇಕು. ಅತಿರಸ ಮಾಡಲಾಗದಿದ್ದಲ್ಲಿ ಅನಾರಸ ಶ್ರೇಷ್ಠ, ಖರ್ಚಿಕಾಯಿ ಇಲ್ಲವೇ ಬೇಸನ್ ಲಾಡು ಅಥವಾ ನಿಮ್ಮ ಇಚ್ಚೆ ಮತ್ತು ಅನುಕೂಲಕ್ಕೆ ಅನುಗುಣವಾಗಿ 33 ಸಂಖ್ಯೆಯಷ್ಟು ಭಕ್ಷವನ್ನು ಮಾಡಿ ಈ ಅಪೂಪ ಶ್ಲೋಕವನ್ನು ಪಠಿಸುತ್ತಾ,

ತ್ರಯಸ್ತ್ರಿಂಶದ ಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ|
ಸಘೃತಂ ಹಿರಣ್ಯಂಚ ಬ್ರಾಹ್ಮಣಾಯ ನಿವೇದಯೇತ್||

33 ಅಪೂಪಗಳ ತಟ್ಟೆಯನ್ನು ದೇವರ ಎದುರಿನಲ್ಲಿ ರಂಗೋಲಿ ಅರಿಶಿನ ಕುಂಕುಮಾದಿಗಳಿಂದ ಮಂಡಲಮಾಡಿ ಮಣೆಯ ಮೇಲಿಟ್ಟು ಮೇಲೆ ತಿಳಿಸಿದ 33 ದೇವತೆಗಳನ್ನು ಆವಾಹನ ಮಾಡಿ, ತಟ್ಟೆಯ ಸಮೇತ ಬ್ರಾಹ್ಮಣರಿಗೆ ಅಥವಾ ಮನೆಯ ಅಳಿಯನಿಂಗಿಂತ ಶ್ರೇಷ್ಠವಾದ ಬ್ರಾಹ್ಮಣರಿಲ್ಲ ಎಂದು ಅಳಿಯನಿಗೋ, ಇಲ್ಲವೇ ಹೆಂಡತಿಯರ ಅಣ್ಣ ಅಥವಾ ತಮ್ಮಂದಿರಿಗೆ ದಾನ ಮಾಡಿದಲ್ಲಿ, ಹೆಚ್ಚಿನ ಫಲ ಲಭಿಸುತ್ತದೆ ಎನ್ನುತ್ತದೆ ಶಾಸ್ತ್ರ. ಈ ರೀತಿಯಾದ ಅಪೂಪ ದಾನವು ಪೃಥ್ವೀ ದಾನದಷ್ಟೇ ಫಲವನ್ನು ಕೊಡುತ್ತದೆ ಎಂದರೆ ಮತ್ತೊಂದು ಪುರಾಣದ ಪ್ರಕಾರ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ.

ಅಧಿಕ ಮಾಸದಲ್ಲಿ ಅಪೂಪ ದಾನ ಸರ್ವ ಶ್ರೇಷ್ಠ ದಾನವಾಗಿದ್ದರೆ ಅದರ ಜೊತೆ ಈ ಕೆಳಕಂಡ ದಾನವನ್ನು ಮಾಡುವುದರಿಂದ ಇನ್ನೂ ಅಧಿಕ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.

 • ಸುವರ್ಣ ದಾನ – ದಾರಿದ್ರ್ಯ ನಾಶ
 • ಗೋ ದಾನ – ಬ್ರಹ್ಮ ಲೋಕ ಪ್ರಾಪ್ತಿ
 • ರಜತ ದಾನ – ಪಿತೃಗಳು ತೃಪ್ತಿಹೊಂದಿ ಪುತ್ರ – ಪೌತ್ರ – ಧನ – ಧನ್ಯ ಮೊದಲಾದ ಐಶ್ವರ್ಯ ಪ್ರಾಪ್ತಿ
 • ತಾಮ್ರ ಪಾತ್ರ ಮತ್ತು ಧಾನ್ಯ ದಾನ – ಸರ್ವಾಭೀಷ್ಟ ಸಿದ್ಧಿ
 • ರತ್ನ ದಾನ – ರಾಜ ಯೋಗ
 • ಮುತ್ತು ಗಳ ದಾನ – ಭುಕ್ತಿ ಮುಕ್ತಿ ಪ್ರಾಪ್ತಿ
 • ವಸ್ತ್ರ ದಾನ – ಚಂದ್ರ ಲೋಕ ಪ್ರಾಪ್ತಿ
 • ಶಾಲು ದಾನ – ಪಾಪ ಪರಿಹಾರ
 • ರೇಷ್ಮೆ ವಸ್ತ್ರ ದಾನ – ಭಯ ಪರಿಹಾರ
 • ಪಾದರಕ್ಷೆ ದಾನ – ಸುಖಕರ ಪರಲೋಕ ಪ್ರಯಾಣ

ಅಧಿಕ ಮಾಸದಲ್ಲಿ ನಿತ್ಯದಾನ ಮಾಡಲು ಬಯಸುವವರು ಈ ರೀತಿಯಾಗಿ ದಾನಗಳನ್ನು ಮಾಡಬಹುದಾಗಿದೆ.

ಶುಕ್ಲ ಪಕ್ಷ

 • ಪಾಡ್ಯ:- ಅರಿಶಿನ, ಕುಂಕುಮ, ಎಲೆ, ಅಡಿಕೆ ಮತ್ತು ದಕ್ಷಿಣೆ
 • ಬಿದಿಗೆ:- ಅರಿಶಿನ, ಕುಂಕುಮ, ಎಲೆ, ಅಡಿಕೆ ಮತ್ತು ದಕ್ಷಿಣೆ
 • ತದಿಗೆ:- ಕೊಬ್ಬರಿ ಮತ್ತು ಸಕ್ಕರೆ
 • ಚೌತಿ:- ನಿಂಬೆಹಣ್ಣು, ಸಕ್ಕರೆ ಮತ್ತು ಏಲಕ್ಕಿ
 • ಪಂಚಮಿ:- ಅಕ್ಕಿ, ಎಲೆಅಡಿಕೆ ಮತ್ತು ದಕ್ಷಿಣೆ
 • ಷಷ್ಠಿ:- ಮೊಸರು
 • ಸಪ್ತಮಿ:- ಹಣ್ಣುಗಳು
 • ಅಷ್ಟಮಿ:- ತೊಗರಿಬೇಳೆ
 • ನವಮಿ:- ಗೋರಿಕಾಯಿ
 • ದಶಮಿ:- 2 ಬೆಲ್ಲದ ಅಚ್ಚು
 • ದ್ವಾದಶಿ:- ಹಾಲು
 • ತ್ರಯೋದಶಿ:- ಗೋಧಿಹಿಟ್ಟು
 • ಚತುರ್ದಶಿ:- ಮಲ್ಲಿಗೆ ಹೂವು
 • ಹುಣ್ಣಿಮೆ:- ಸೌತೆಕಾಯಿ

ಕೃಷ್ಣ ಪಕ್ಷ

 • ಪಾಡ್ಯ:- ಹೀರೇಕಾಯಿ
 • ಬಿದಿಗೆ:- ಗೆಡ್ಡೆ ಗೆಣಸು
 • ತದಿಗೆ:- ಕುಪ್ಪಸ, ಎಲೆಅಡಿಕೆ ಜೊತೆಗೆ ದಕ್ಷಿಣೆ
 • ಚೌತಿ:- ಹುರಿಗಡಲೆ
 • ಪಂಚಮಿ:- ಕಡಲೆಕಾಯಿ ಬೀಜ
 • ಷಷ್ಠಿ:- ರವೆ, ಎಲೆಅಡಿಕೆ ಮತ್ತು ದಕ್ಷಿಣೆ
 • ಸಪ್ತಮಿ:- ಶ್ರೀಕೃಷ್ಣ ವಿಗ್ರಹ ಸಮೇತ ತುಳಸಿ ದಾನ
 • ಅಷ್ಟಮಿ:- ಹತ್ತಿ
 • ನವಮಿ:- ಕಡಲೇ ಹಿಟ್ಟು
 • ದಶಮಿ:- ಗಾಜಿನ ಬಳೆಗಳು
 • ದ್ವಾದಶಿ:- ಹೆಸರುಬೇಳೆ
 • ತ್ರಯೋದಶಿ:- ಅವಲಕ್ಕಿ
 • ಚತುರ್ದಶಿ:- ಕಡ್ಲೆಕಾಯಿ ಎಣ್ಣೆ
 • ಅಮಾವಾಸ್ಯೆ:- ಕಡ್ಲೆಬೇಳೆ

ಇನ್ನು ಅಧಿಕ ಮಾಸದಲ್ಲಿ ಈ ಕೆಳಕಂಡ ರೀತಿಯ ದಾನಗಳನ್ನು ಸಹಾ ಮಾಡಬಹುದಾಗಿದೆ.

 • 33 ಕರುವಿನ ಜೊತೆ ಹಸುವಿನ ದಾನ ಮಾಡಬಹುದು ಅದು ಸಾಧ್ಯವಾಗದಿದ್ದಲ್ಲಿ ಬೆಳ್ಳಿ ಅಥವಾ ಹಿತ್ತಾಳೆ ಹಸು ಕರುವಿನ ವಿಗ್ರಹ
 • 33 ವಿಷ್ಣುಪಾದ ದಾನ
 • 33 ಅನ್ನಪೂರ್ಣೇಶ್ವರಿಯ ಮೂರ್ತಿ
 • 33 ತಮ್ಮ ಆರ್ಥಿಕ ಪರಿಸ್ಥಿತಿಯ ಅನುಕೂಲಕ್ಕೆ ತಕ್ಕಂತೆ ಬೆಳ್ಳಿ, ಹಿತ್ತಾಳೆಯ ಅರಿಷಿಣ ಕುಂಕುಮ ಬಟ್ಟಲು
 • 33 ಮುತ್ತೈದೆಯರಿಗೆ ಉಡಿ ತುಂಬಿಸಬಹುದು
 • 33 ಮುತ್ತೈದೆಯರಿಗೆ ಬಳೆಗಳನ್ನು ತೊಡಿಸುವುದು
 • 33 ಮುತ್ತೈದೆಯರಿಗೆ ವಸ್ತ್ರ ದಾನ
 • 33 ವಟುಗಳಿಗೆ ಸಂಧ್ಯಾವಂದನೆ ಸಾಮಗ್ರಿ ದಾನ
 • 33 ಮರದ ಬಾಗಿಣ ಸಹಿತ 33 ದಂಪತಿಗಳಿಗೆ ಭೋಜನ
 • 33 ಜೊತೆಯ ಬೆಳ್ಳಿ ಅಥವಾ ಹಿತ್ತಾಳೆಯ ದೀಪ ದಾನ
 • 33 ತುಳಸಿ ಸಸಿಗಳನ್ನು ದಾನ ಮಾಡಬಹುದು
 • 33 ಹಾಲು ಮೊಸರು ತುಂಬಿದ ಪಾತ್ರೆಗಳ ದಾನ
 • 33 ದೇವರ ಪುಸ್ತಕಗಳ ದಾನ ಅಲ್ಲದೇ,
 • ಅಧಿಕ ಮಾಸದ ಒಂದು ತಿಂಗಳು ಪೂರ್ತಿ ಪ್ರತೀ ದಿನ ಒಬ್ಬ ವಟುವಿಗೆ ಊಟ ಹಾಕಿಸುವುದು
 • ಅಧಿಕ ಮಾಸದ ಒಂದು ತಿಂಗಳು ಪೂರ್ತಿ ಒಬ್ಬ ಮತ್ತೈದೆಗೆ ಮುಡಿಯಲು ಹೂವು ಕೊಡುವುದು
 • ಅಧಿಕ ಮಾಸದ ಒಂದು ತಿಂಗಳು ಪೂರ್ತಿ ಒಂದು ಬ್ರಾಹ್ಮಣ ಮತ್ತು ಮುತ್ತೈದೆಗೆ ತಾಂಬೂಲ ದಕ್ಷಿಣೆ ಕೊಡುವುದು
 • ಒಂದು ಒಣ ಕೊಬ್ಬರಿಯನ್ನು ಸಣ್ಣದಾಗಿ ರಂಧ್ರ ಮಾಡಿ ಅದರೊಳಗೆ ಅಕ್ಕಿಯನ್ನು ತುಂಬಿ ಅದರ ಜೊತೆ ಶ್ರೀ ಕೃಷ್ಣನ ಬೆಳ್ಳಿ ಅಥವಾ ಹಿತ್ತಾಳೆಯ ಮೂರ್ತಿಯನ್ನು ಕೊಬ್ಬರಿಯ ರಂಧ್ರವನ್ನು ಮುಚ್ಚಿ ದಕ್ಷಿಣೆಯ ಸಹಿತ ತಾಂಬೂಲವನ್ನು ದಾನ ಮಾಡಿದರೆ ಗೋವರ್ಧನ ಪರ್ವತ ದಾನ ಮಾಡಿದ ಫಲ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ ಶಾಸ್ತ್ರ

ನಮ್ಮ ಶಾಸ್ತ್ರದ ಪ್ರಕಾರ ಈ ಅಧಿಕ ಮಾಸವನ್ನು ಮಲೀನಮಾಸ ಎಂದು ಪರಿಗಣಿಸಲಾಗಿರುವ ಕಾರಣ ಈ ತಿಂಗಳಿನಲ್ಲಿ ನಾಮಕರಣ, ಮುಂಜಿ, ಮದುವೆ, ಗೃಹ ಪ್ರವೇಶ ಮತ್ತು ಹೊಸ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಆದರೆ, ಈ ಅಧಿಕ ಮಾಸದಲ್ಲಿ ಧ್ಯಾನ ,ಯೋಗ, ಪೂಜೆ, ವ್ರತಗಳುಗಳನ್ನು ಮಾಡ ಬಹುದಾಗಿದೆ. ಈ ಮಾಸದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಿಂದ ವ್ಯಕ್ತಿಯು ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಕಾಣುವುದಲ್ಲದೇ, ಉಳಿದ ತಿಂಗಳಲ್ಲಿ ಮಾಡಿದ ಪೂಜೆಗಳಿಗಿಂತಲೂ 10 ಪಟ್ಟು ಹೆಚ್ಚಿನ ಫಲವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.

ಹಾಗಾಗಿ ಇನ್ನೇಕೆ ತಡಾ, ಈ ಅಧಿಕ ಮಾಸದಲ್ಲಿ ಉಪವಾಸ, ಪೂಜೆ, ವ್ರತ, ಧ್ಯಾನ, ಭಜನೆ, ಕೀರ್ತನೆಗಳ ಜೊತೆ ಹೋಮ ಮತ್ತು ಹವನಗಳನ್ನು ಮಾಡುವುದಲ್ಲದೇ, ಶ್ರೀ ದೇವಿ ಪುರಾಣ, ಭಗವದ್ ಪುರಾಣ, ಶ್ರೀ ವಿಷ್ಣು ಪುರಾಣ, ಲಲಿತಾ ಸಹಾಸ್ರನಾಮ, ವಿಷ್ಣು ಸಹಸ್ರನಾಮ ಪಠಿಸುವ ಜೊತೆ ಜೊತೆಯಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ದಾನಗಳನ್ನು ಮಾಡುವ ಮೂಲಕ ಅಧಿಕ ಮಾಸದ ಅಧಿಕ ಫಲವನ್ನು ಪಡೆಯೋಣ.

ಏನಂತೀರೀ?

ಸೂಚನೆ: ಕೆಲವೊಂದು ಮಾಹಿತಿಗಳನ್ನು ಅಂತರ್ಜಾಲದಿಂದ ಎರವಲು ಪಡೆಯಲಾಗಿದೆ.

ಪೋಲಿಸರ ಬಿಸಿ ಬಿಸಿ ಕಜ್ಜಾಯ

ಕೊರೋನಾ ಮಹಾಮಾರಿಯ ಸಲುವಾಗಿ ದೇಶಾದ್ಯಂತ ಏನೂ, ಇಡೀ ಪ್ರಪಂಚಾದ್ಯಂತ ಎಲ್ಲಾ ದೇಶಗಳೂ ಲಾಕ್ ಡೌನ್ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ಎಲ್ಲಾ ಧರ್ಮಗುರುಗಳಾದಿಯಾಗಿ ಪರಿ ಪರಿಯಾಗಿ ಕೇಳಿಕೊಂಡರೂ, ಇನ್ನೂ ಕೆಲವು ಪುಂಡ ಪೋಕರಿಗಳು ರಸ್ತೆಯಲ್ಲಿ ಅಂಡಲೆಯುತ್ತಿರುವವರಿಗೆ ಪೋಲೀಸರು ತಮ್ಮ ಬೆತ್ತದಿಂದ ಬಿಸಿ ಬಿಸಿಯಾದ ಕಜ್ಜಾಯ ಉಣಿಸುತ್ತಿರುವ ವೀಡೀಯೋ ಅಥವಾ ಪೋಟೋಗಳನ್ನು ನೋಡುತ್ತಿರುವಾಗ ಅಥವಾ ಓದುತ್ತಿರುವಾಗ ಸುಮಾರು ವರ್ಷಗಳ ಹಿಂದೆ ನಮ್ಮ ಗೆಳೆಯರ ಗುಂಪೊಂದಕ್ಕೆ ಇದೇ ರೀತಿಯಾಗಿ ಪೋಲೀಸರು ಕೊಟ್ಟಿದ್ದ ರಸವತ್ತಾದ ಕಜ್ಜಾಯದ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ಕೋರಮಂಗಲದ ಬಳಿಯ ಪ್ರತಿಷ್ಠಿತ ವೆಬ್ ಪೋರ್ಟೆಲ್ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದೆ. ಆಗಿನ ಕಾಲಕ್ಕೇ ಸುಮಾರು 400-500 ಜನರು ಕೆಲಸಮಾಡುತ್ತಿದ್ದ ದೊಡ್ದ ಕಂಪನಿ. ಪ್ರತೀ ಶುಕ್ತ್ರವಾರ ಮಧ್ಯಾಹ್ನ ಒಂದೊಂದು ಪ್ರಾಜೆಕ್ಟ್ಗಳು ಲೈವ್ ಆಗುತ್ತಿದ್ದವು. ಸುಮಾರು ಎರಡು ಮೂರು ತಿಂಗಳು ಹಗಲೂ ರಾತ್ರಿ ಎನ್ನದೇ ದುಡಿದು ದಣಿವಾಗಿರುತ್ತಿದ್ದ ತಮ್ಮ ತಂಡದ ಸದಸ್ಯರಿಗೆ ಅಭಿನಂದನಾ ಪೂರ್ವಕವಾಗಿಯೋ ಇಲ್ಲವೇ ಮುಂದಿನ ಪ್ರಾಜೆಕ್ಟ್ ಮಾಡಲೂ ಉತ್ಸಾಹ ತುಂಬುವ ನಿಟ್ಟಿನಲ್ಲಿ ಶುಕ್ರವಾರದ ಸಂಜೆ ಹೊರಗಡೆ ಮೋಜು ಮಸ್ತಿಗೆಂದು ಕರೆದುಕೊಂಡು ಹೋಗುತ್ತಿದ್ದದ್ದು ವಾಡಿಕೆ.

ಮೋಜು ಮಸ್ತಿ ಎಂದ ಮೇಲೆ ತಿನ್ನಲು ಮತ್ತು ಕುಡಿಯಲು ಯಾವುದೇ ಶರತ್ತುಗಳು ಇರರಲಿಲ್ಲ. ಅವರಿಗಿಷ್ಟ ಬಂದದ್ದನ್ನು ತಿಂದು ಕುಡಿದು ಮಸ್ತಿ ಮಾಡಿ ಸೀದಾ ಮನೆಗೆ ಹೋಗಿ ಶನಿವಾರ ಮತ್ತು ಭಾನುವಾರ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಮತ್ತಿ ಸೋಮವಾರ ಉತ್ಸಾಹ ಭರಿತಗಾಗಿ ಕಛೇರಿಗೆ ಬಂದು ಎಂದಿಗಿಂತಲೂ ಹೆಚ್ಚಿನ ಹುರುಪಿನಿಂದ ಹೊಸಾ ಪ್ರಾಜೆಕ್ಟ್ ಮಾಡಲು ಸಿದ್ದರಾಗುತ್ತಿದ್ದರು. ಪ್ರತೀ ವಾರದ ವಾಡಿಕೆಯಂತೆ ಸುಮಾರು ಇಪ್ಪತ್ತು ಇಪ್ಪತ್ತೈದು ಅದರಲ್ಲೂ ಯುವಕರೇ ಹೆಚ್ಚಾಗಿದ್ದ ತಂಡದ ಹೊಸಾ ಪ್ರಾಜೆಕ್ಟ್ ಲೈವ್ ಆದ ಎರಡು ಮೂರು ಗಂಟೆಯಲ್ಲಿಯೇ ಭಾರೀ ಮನ್ನಣೆಗೆ ಪಾತ್ರರಾಗಿದ್ದನ್ನು ಕಂಡ ಅವರ ಮ್ಯಾನೇಜರ್ ಅತ್ಯಂತ ಉತ್ಸಾಹದಿಂದ ಸಂಜೆ ಕಛೇರಿ ಮುಗಿದ ನಂತರ ಎಲ್ಲರನ್ನೂ ಎಂ.ಜಿ. ರಸ್ತೆಯ ಪ್ರತಿಷ್ಠಿತ ಪಬ್ ಒಂದಕ್ಕೆ ತಮ್ಮ ಇಡೀ ತಂಡವನ್ನು ಕರೆದು ಕೊಂಡು ಹೋಗೀ ಗಮ್ಮತ್ತಾಗಿಯೇ ಮೋಜು ಮಾಡಿದ್ದಾರೆ. ಸಮಯದ ಪರಿಧಿಯೇ ಇಲ್ಲದಂತೆ ಮೋಜು ಮಸ್ತಿಮಾಡುತ್ತಿದ್ದ ತಂಡಕ್ಕೆ ಸಾರ್ ಗಂಟೆ ಹನ್ನೊಂದಾಯಿತು ನಮ್ಮ ಪಬ್ ಮುಚ್ಚಬೇಕು. ಇಲ್ಲದಿದ್ದಲ್ಲಿ ಪೋಲೀಸರು ಬಂದು ಗಲಾಟೆ ಮಾಡುತ್ತಾರೆ ಎಂದಾಗಲೇ ಓಹ್ ಸಮಯ ಇಷ್ಟೋಂದಾಯಿತೇ ಎಂದು ನೋಡಿ ಕೊಂಡು ಒಲ್ಲದ ಮನಸ್ಸಿನಿಂದಲೇ ತಮ್ಮ ತಮ್ಮ ಮನೆಗಳತ್ತ ಹೊರಡಲು ಅನುವಾದರು.

ಅ ತಂಡದಲ್ಲಿದ್ದ ಕೃಷ್ಣನೂ ಸಹಾ ಬಿಟ್ಟಿ ಸಿಕ್ಕಿತ್ತು ಅಂತಾ ಒಂದೆರಡು ಹೆಚ್ಚಿಗಿಯೇ ಏರಿಸಿಕೊಂಡಿದ್ದ. ಇಷ್ಟು ಹೊತ್ತಿನ ಸಮಯದಲ್ಲಿ ದೂರದ ರಾಜಾಜೀ ನಗರದಲ್ಲಿರುವ ಮನೆಗೆ ಹೋಗಿ ಅಪ್ಪಾ ಅಮ್ಮನ ಕೈಯ್ಯಲ್ಲಿ ಬೈಸಿಕೊಳ್ಳುವ ಬದಲು ಇಲ್ಲೇ ಹತ್ತಿರವಿರುವ ಕೋರಮಂಗಲದಲ್ಲೇ ಇರುವ ಆಫೀಸಿಗೆ ಹೋಗಿ ಅಲ್ಲೇ ಸುಮ್ಮನೇ ಮಲಗಿಕೊಂಡು ಬೆಳ್ಳಿಗ್ಗೆ ನಶೆ ಇಳಿದ ಮೇಲೆ ಮನೆಗೆ ಹೋಗುವುದೇ ವಾಸಿ ಎಂದೆನಿಸಿದೆ. ಸರೀ, ಆಫೀಸಿಗೆ ಒಬ್ಬನೇ ಹೋಗುವುದು ಹೇಗೆ ಎಂದು ಅಲ್ಲೇ ಇನ್ನೇನು ಮತ್ತೊಬ್ಬ ಗೆಳೆಯನ ಕಾರನ್ನೇರಿ ಮನೆಯ ಕಡೆ ಹೊರಟಿದ್ದ ಸರ್ದಾರ್ಜೀ ಸ್ನೇಹಿತನನ್ನು ಕರೆದು, ಅರೇ ಯಾರ್, ಇಂತಹ ಸಮಯದಲ್ಲಿ ಕಾರ್ನಲ್ಲಿ ಮನೆಗೆ ಹೋದರೆ ಏನು ಮಜಾ? ಬಾ ನನ್ನ ಜೊತೆ ಬೈಕಿನಲ್ಲಿ ಜಾಲಿಯಾಗಿ ಆಫೀಸಿಗೆ ಹೋಗೋಣ. ಬೆಳಿಗ್ಗೆ ನಾನೇ ನಿನ್ನ ಮನೆಯ ಹತ್ತಿರ ಬಿಟ್ತು ಹೋಗುತ್ತೇನೆ ಎಂದು ಹೇಳಿದ್ದಾನೆ ಅರೇ, ಛೋಡ್ ದೋ ಯಾರ್!! ನನಗೆ ಸುಸ್ತಾಗಿದೆ. ನಾನು ಕಾರಿನಲ್ಲಿಯೇ ಮನೆಗೆ ಹೋಗ್ಬಿಡ್ತೀನಿ ಅಂತಾ ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ, ಬೆಂಬಿಡ ಬೇತಾಳನಂತೆ ಬೆನ್ನು ಹತ್ತಿ ಸರ್ದಾರ್ಜಿ ಗೆಳೆಯನನ್ನು ತನ್ನ ಬೈಕಿನಲ್ಲಿ ಹಿಂದೆ ಕುಳ್ಳರಿಕೊಳ್ಳುವುದರಲ್ಲಿ ಸಫಲನಾದ ನಮ್ಮ ಕೃಷ್ಣ.

wheeliಅದಾಗಲೇ ತೀರ್ಥ ಸೇವಿಸಿದ್ದರ ಪರಿಣಾಮ ಪರಮಾತ್ಮನ ಲೀಲೆ ಅಡಿಯಿಂದ ಮುಡಿಯವರೆಗೂ ಏರಿಯಾಗಿತ್ತು. ಎಂ.ಜಿ ರಸ್ತೆಯ ಮುಖ್ಯರಸ್ತೆಗಳಲ್ಲಿ ಹೋದರೆ ಪೋಲಿಸರ ಕೈಯಲ್ಲಿ ತಗುಲಿಕೊಂಡು ಡ್ರಿಂಕ್ & ಡ್ರೈವ್ ಕೇಸ್ ಅಡಿಯಲ್ಲಿ ದಂಡ ಯಾರು ಕಟ್ಟುತ್ತಾರೆ ಎಂದು ಯೋಚಿಸಿ, ಆಶೋಕನಗರ, ಜೌಗುಪಾಳ್ಯದ ಮುಖಾಂತರ ಖಾಲಿ ಇದ್ದ ಸಂದು ಗೊಂದು ರಸ್ತೆಗಳಲ್ಲಿ ದಿಮ್ಮಾಲೇ ರಂಗಾ ಎಂದು ಜೋರಾಗಿಯೇ ಬೈಕ್ ಓಡಿಸಿಕೊಂಡು ಅಗಾಗಾ ವೀಲಿ ಮಾಡಿಕೊಂಡು ಜಾಲಿಯಾಗಿ ಬರುತ್ತಿದ್ದ ಕೃಷ್ಣನಿಗೆ, ನ್ಯಾಷನಲ್ ಗೇಮ್ಸ್ ವಿಲೇಜ್ ಹತ್ತಿರದ ಆ ಕತ್ತಲೆಯಲ್ಲಿಯೂ ಲಾಠಿ ಹಿಡಿದು ಗಾಡಿಗಳನ್ನು ಅಡ್ಡ ಹಾಕುತ್ತಿದ್ದ ಪೋಲೀಸರನ್ನು ಕಂಡೊಡನೆಯೇ ಹೃದಯ ಬಾಯಿಗೆ ಬಂದಹಾಗಿದೆ.

police1ಇದೇನಪ್ಪಾ? ತಾನೊಂದು ಬಗೆದರೇ ದೈವವೊಂದು ಬಗೆದೀತು ಎನ್ನುವಂತೆ ಸಂದಿಗೊಂದಿಗಳಲ್ಲಿ ಬಂದರೂ ಇಲ್ಲಿ ಮಾಮನ ಕೈಯಲ್ಲಿ ತಗುಲಿಹಾಕಿಕೊಳ್ಳುವ ಹಾಕಾಯ್ತಲ್ಲಾ ಎಂದು ಯೋಚಿಸಿ ಗಾಡಿಯನ್ನು ಸ್ವಲ್ಪ ನಿಧಾನ ಮಾಡಿದಾಗ, ಏನ್ರೀ ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗಿದ್ರೀ? ಕುಡಿದಿದ್ದೀರಾ? ಅದೂ ವೀಲೀ ಮಾಡ್ತೀರಾ? ಗಾಡಿ ಸೈಡ್ ಹಾಕಿ. ಚೆಕ್ ಮಾಡ್ಬೇಕು ಅಂತಾ ಪೋಲೀಸ್ ಹೇಳಿದ್ದು ಕೇಳಿದ ತಕ್ಷಣವೇ, ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಅನ್ನೋ ರೀತಿಯಲ್ಲಿ ಒಮ್ಮಿಂದೊಮ್ಮೆಗೆ ಗಾಡಿಯ ಎಕ್ಸಲೇಟರ್ ಜೋರು ಮಾಡಿ ಭರ್… ಎಂದು ಗಾಡಿ ಓಡಿಸಿಕೊಂಡು ಶರವೇಗದಿಂದ ಮುನ್ನುಗ್ಗಿದ್ದಾನೆ. ಇದನ್ನು ನೋಡಿದ ಪೋಲೀಸರೂ ಒಂದು ಕ್ಷಣ ದಂಗಾಗಿ ತಮ್ಮ ಕೈಯ್ಯಲ್ಲಿದ್ದ ಲಾಠಿಯನ್ನು ಬೀಸಿದ್ದಾರೆ. ಇಲ್ಲಿ ಏನಾಗುತ್ತಿದೇ ಎಂಬುದೇ ಅರಿವಿಲ್ಲದ ಕನ್ನಡ ಬಾರದ, ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಮಾಯಕ ಸರ್ದಾರ್ಜಿಯ ಬೆನ್ನಿಗೆ ಛಟೀರ್ ಅಂತಾ ಏಟು ಬಿದ್ದಿದೆ. ಅಚಾನಕ್ಕಾಗಿ ಲಾಠಿಯ ಪೆಟ್ಟು ಬಿದ್ದ ಶಬ್ಧ ಮತ್ತು ಆ ನೋವಿಗೆ ಸರ್ದಾರ್ಜಿ ಕಿರುಚಿದ ಶಬ್ಧಕ್ಕೆ ನಮ್ಮ ಕೃಷ್ಣನಿಗೆ ಕುಡಿದಿದ್ದ ನಶವೆಲ್ಲಾ ಜರ್ ಎಂದು ಇಳಿದು ಬಿಟ್ಟಿದೆ. ಗಾಡಿಯನ್ನು ಮತ್ತಷ್ಟೂ ಜೋರಾಗಿ ಓಡಿಸಲು ಪ್ರಯತ್ನಿಸಿದಾಗ ಮತ್ತಷ್ಟೂ ವ್ಯಗ್ರರಾದ ಪೋಲೀಸರಿಬ್ಬರೂ ತಮ ಕೈಯಲ್ಲಿದ್ದ ಫೈಬರ್ ಲಾಠಿಯನ್ನು ಆ ಕತ್ತಲಲ್ಲಿಯೂ ಗಾಡಿಯತ್ತ ತೂರಿದ್ದಾರೆ. ಏಕಲವ್ಯ ಮತ್ತು ಅರ್ಜುನ ಇಬ್ಬರೂ ನಾಯಿಯತ್ತ ಶಬ್ಧವೇಧಿ ಬಾಣ ಬಿಟ್ಟ ಹಾಗೆ ಆ ಇಬ್ಬರು ಪೋಲೀಸರೂ ಬೀಸಿದ ಲಾಠಿ ಗುರಿ ತಪ್ಪದೇ, ಮತ್ತದೇ ಸರ್ದಾರ್ಜಿಯ ಬೆನ್ನಿಗೆ ಸರಿಯಾಗಿ ಪೆಟ್ಟು ಕೊಟ್ಟಿದೆ. ಎದ್ದೆನೋ, ಬಿದ್ದೆನೋ, ಗೆದ್ದೆನೋ ಎಂಬಂತೆ ಹಾಗೂ ಹೀಗೂ ಸರ್ದಾರ್ಜಿಯ ಚಿರಾಟ ನರಳಾಟ ನಡುವೆಯೇ ಆಫೀಸಿಗೆ ಬಂದು ಸೇರಿಕೊಂಡಿದ್ದಾರೆ.

police3ಸುಮ್ಮನೆ ತನ್ನ ಪಾಡಿಗೆ ತಾನು ಮತ್ತೊಬ್ಬನ ಕಾರಿನಲ್ಲಿ ಹೋಗುತ್ತಿದ್ದ ಸರ್ದಾರ್ಜಿ ಗೆಳೆಯನನ್ನು ಜಾಲೀ ರೈಡ್ ಎಂದು ಕರೆದು ತಂದು ಅವನದ್ದಲ್ಲದ ತಪ್ಪಿಗಾಗಿಯೂ ಪೋಲೀಸರ ಬಿಸಿ ಬಿಸಿ ಕಜ್ಜಾಯದ ರುಚಿ ತೋರಿಸಿದ ಕೃಷ್ಣನ ಮೇಲೆ ಆ ನೋವಿನಲ್ಲೂ ಎಗರಾಡಿದ್ದಾನೆ ಸರ್ದಾರ್ಜಿ. ಅಷ್ಟು ಹೊತ್ತಿನಲ್ಲಿ ಎಲ್ಲಿಗೂ ಹೋಗಲಾಗದು ಎಂದು ತಿಳಿದು ಸೆಕ್ಯುರಿಟಿ ಬಳಿಯಲ್ಲಿ ಇದ್ದ ಪೈನ್ ಕಿಲ್ಲರ್ ಮಾತ್ರೆಯೊಂದನ್ನು ನುಂಗಿ ಮೀಟೀಂಗ್ ರೋಮೊಂದರ ಮೂಲೆಯಲ್ಲಿ ಮಲಗಿದ್ದವರಿಗೆ, ಬೆಳಿಗ್ಗೆ ಹೌಸ್ ಕೀಪಿಂಗ್ ಬಾಯ್ಸ್ ಬಂದು ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ಕೃಷ್ಣನೇನೋ ಆರಾಮಾಗಿ ಎದ್ದು ಬಿಟ್ಟನಾದರೂ ಪೋಲೀಸರ ಕಜ್ಜಾಯ ಸರ್ದಾರ್ಜಿಯ ಬೆನ್ನಮೇಲೆ ಬಾಸುಂಡೆಯನ್ನು ಬರಿಸಿತ್ತು. ಹೆದರಿದ ಪರಿಣಾಮ ಜ್ವರವೂ ಬಂದು ಸೋಮವಾರ ಮತ್ತು ಮಂಗಳವಾರವೂ ಕಚೇರಿಗೆ ಬರಲಾಗಲಿಲ್ಲ.

ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಸೋಮವಾರ ಮತ್ತು ಮಂಗಳವಾರ ಸರ್ದಾರ್ಜಿ ಕಛೇರಿಗೆ ಬಾರದಿರುವುದನ್ನೇ ಎತ್ತಿ ತೋರಿಸುತ್ತಾ ಕೃಷ್ಣಾ ಎಲ್ಲರ ಬಳಿಯಲ್ಲೂ ರಸವತ್ತಾಗಿ ಪೋಲಿಸರ ಕಜ್ಜಾಯವನ್ನು ವರ್ಣಿಸುತ್ತಲೇ ಇದ್ದ. ಕೃಷ್ಣನ ಮಾತುಗಳನ್ನು ಕೇಳಿ ಕನಿಕರದಿಂದ ಪ್ರತಿಯೊಬ್ಬರೂ ಸರ್ದಾರ್ಜಿಗೆ ಕರೆ ಮಾಡಿ. ಛೇ!!! ಪಾಪ ನಿನಗೆ ಹೀಗಾಗಬಾರದಾಗಿತ್ತು ಎಂದು ಮರುಕ ಪಡುತ್ತಿದ್ದರೆ, ಸರ್ದಾರ್ಜಿಗೆ ಕತ್ತಲಲ್ಲಿ ಪೋಲೀಸರಿಂದ ಬಿದ್ದ ಕಜ್ಜಾಯಕ್ಕಿಂತಲೂ ಹಗಲಿನಲ್ಲಿ ಗೆಳೆಯರು ಕರೆ ಮಾಡಿ ಲೊಚಗುಟ್ಟುತ್ತಿದ್ದದ್ದೇ ಅತ್ಯಂತ ನೋವು ತರಿಸಿದ್ದಂತೂ ಸುಳ್ಳಲ್ಲ.

ನಮ್ಮ ಕರ್ತವ್ಯ ನಿರತ ಆರಕ್ಷಕರು ದಂಡಂ ದಶಗುಣಂ ಭವೇತ್ ಎನ್ನುವಂತೆ ಪುಂಡ ಪೋಕರಿಗಳಿಗೆ ಮತ್ತು ಕುಡುಕರಿಗೆ ಕುಂಡಿ ಮೇಲೇ ಬಾಸುಂಡೆ ಬರುವಂತೆ ಎರಡು ಬಾರಿಸಿ ಮುಂದೆದೂ ಈ ರೀತಿ ರಸ್ತೆಗೆ ಇಳಿಯದಂತೆ , ವೀಲೀ ಮಾಡದಂತೇ ಅಥವಾ ಕುಡಿದು ವಾಹನ ಚಲಾಯಿಸುವವರಿಗೆ ಜಾಣರಿಗೆ ಮಾತಿನ ಪೆಟ್ಟು ಕೋಣರಿಗೆ ದೊಣ್ಣೆ ಪೆಟ್ಟು ಆಂತಾ ಪೆಟ್ಟು ಕೊಡುವುದನ್ನೇ ಅಮಾಯಕರ ಮೇಲಿನ ಹಲ್ಲೆ ಅಥವಾ ಒಂದು ಕೋಮಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಎನ್ನುವಂತೆ ಬಿಂಬಿಸುತ್ತಿರುವ ಕೆಲವರ ಮನಸ್ಥಿತಿ ನಿಜವಾಗಿಯೂ ಅಸಹ್ಯಕರವೆನಿಸುತ್ತದೆ.

ಏನಂತೀರೀ?