ಚರಣ್ ರಾಜ್

ದೂರದ ಬೆಳಗಾವಿಯ ಹುಡುಗ ಚಿತ್ರ ನಟನಾಗಬೇಕೆಂದು ಬೆಂಗಳೂರಿನ ಗಾಂಧಿನಗರದಲ್ಲಿ ಐದಾರು ವರ್ಷಗಳ ಕಾಲ ನಾನಾ ವಿಧದ ಕಷ್ಟ ಪಟ್ಟು ಸಣ್ಣ ಸಣ್ಣ ಪೋಷಕ ಪಾತ್ರಗಳ ಮೂಲಕ ಆರಂಭಿಸಿ ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿದ್ದ ಸಮಯದಲ್ಲಿಯೇ ತೆಲುಗು ಚಿತ್ರರಂಗದಲ್ಲಿ ಅಚಾನಕ್ಕಾಗಿ ಖಳನಾಯಕನಾಗಿ ಮಿಂಚಿ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗವಲ್ಲದೇ ಹಿಂದಿಯಲ್ಲೂ ಛಾಪು ಮೂಡಿಸಿದರು ಇಲ್ಲಿದೇ ನಮ್ಮನೇ ಅಲ್ಲಿ ಹೋದೆ ಸುಮ್ಮನೇ ಎನ್ನುವಂತೆ ಮತ್ತೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದು ಆಡು ಮುಟ್ಟದ ಸೂಪ್ಪಿಲ್ಲ ಇವರು ಮಾಡದ ಕೆಲಸವಿಲ್ಲ ಎನ್ನುವಂತೆ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿರುವ ನಮ್ಮ ಹೆಮ್ಮೆಯ ಕನ್ನಡಿಗ ಚರಣ್ ರಾಜ್ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ.

chaan2ಚರಣ್ ರಾಜ್ ಅವರು ದೂರದ ಬೆಳಗಾವಿ ಜಿಲ್ಲೆಯ ಬೊಮ್ಮಯಿ ಗ್ರಾಮದಲ್ಲಿನ ಸಾಮಿಲ್ ಮಾಲಿಕರೊಬ್ಬರ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೂ ಹಾಡು ನಟನೆಯಲ್ಲಿ ಚುರುಕಾಗಿದ್ದ ಚರಣ್ ಅವರು ತಮ್ಮ ಶಾಲಾದಿನಗಳಲ್ಲಿ ಶಾಲೆಯ ವಾರ್ಷಿಕೋತ್ಸವ ಅಥವಾ ಯಾವುದೇ ಸ್ಪರ್ಥೆಯಲ್ಲಿ ಭಾಗವಹಿಸಿದ್ದಾರೆ ಎಂದರೆ ಬಹುಮಾನ ಅವರಿಗೇ ಕಟ್ಟಿಟ್ಟ ಬುತ್ತಿ ಎನ್ನುವಷ್ಟರ ಮಟ್ಟಿಗೆ ಕೀರ್ತಿ ಪಡೆದಿರುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕಾಲೇಜಿಗೆ ಸೇರಿಕೊಂಡಾಗ ಅದೊಮ್ಮೆ ಗೆಳೆಯರೆಲ್ಲರೂ ನಿನಗೆ ನಾಯಕನಾಗುವ ಎಲ್ಲಾ ಅರ್ಹತೆ ಇರುವ ಕಾರಣ ನೀನೇಕೆ ಚಿತ್ರರಂಗದಲ್ಲಿ ನಟಿಸಲು ಪ್ರಯತ್ನಿಸಬಾರದು ಎಂದು ಹುರಿದುಂಬಿಸುತ್ತಿದ್ದಾಗ ಕುಚೋದ್ಯಕ್ಕೆಂದು ಗೆಳೆಯನೊಬ್ಬ ಈ ಮುಸುಡಿಗೆ ಯಾರು ಪಾತ್ರ ಕೊಡುತ್ತಾರೆ? ಎಂದು ಆಡಿಕೊಂಡಿದ್ದನ್ನೇ ಸವಾಲಾಗಿ ಸ್ವೀಕರಿಸಿ ಮನೆಯವರೆಲ್ಲರ ಮಾತುಗಳನ್ನೆಲ್ಲಾ ಧಿಕ್ಕರಿಸಿ ಅಪ್ಪನ ಸಾಮಿಲ್ ನಿಂದ 6000/-  ರೂಪಾಯಿಗಳನ್ನು ಕದ್ದು ಬೆಂಗಳೂರಿನ ಗಾಂಧಿನಗರಕ್ಕೆ ಬರುತ್ತಾರೆ.

ಕೂತು ತಿನ್ನುವವನಿಗೆ, ಕುಡಿಕೆ ಹೊನ್ನು ಸಾಲದು ಎನ್ನುವಂತೆ ಕೈಯ್ಯಲ್ಲಿ ಇದ್ದ ಹಣವೆಲ್ಲಾ ಖಾಲಿಯಾಗುತ್ತಾ ಹೋದಂತೆಲ್ಲಾ ಜೀವನಕ್ಕಾಗಿ ಸಂಜೆಯ ಹೊತ್ತು ಕ್ಯಾಬರೆ ಬಾರ್ ಗಳಲ್ಲಿ ಹಾಡುಗಳನ್ನು ಹಾಡುತ್ತಾ ಆರಂಭಿಸಿ ಬೆಂಗಳೂರಿನ ಅನೇಕ ಆರ್ಕೇಸ್ಟ್ರಾಗಳಲ್ಲಿ ಸಣ್ಣ ಪುಟ್ಟ ಸಭೆ ಸಮಾರಂಭಗಳು ಮದುವೆ ಮುಂಜಿಗಳಲ್ಲಿ ಹಾಡುತ್ತಾ, ಚಿಕ್ಕ ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಾ ಜೀವನ ನಡೆಸುತ್ತಿದ್ದರೂ ಗಮನವೆಲ್ಲಾ ಗಾಂಧಿನಗರದತ್ತವೇ ಇದ್ದು ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತದೆ. ಅದೃಷ್ಟವಷಾತ್ ತಮ್ಮ ರೂಂ ಮೇಟ್ ಅವರು ಸಿದ್ದಲಿಂಗಯ್ಯನವರು ತಮ್ಖ ಹೊಸಾ ಚಿತ್ರ ಪರಾಜಿತಕ್ಕೆ ನಟರ ಹುಡುಕಾಟದಲ್ಲಿದ್ದಾರೆ ಎಂಬುದನ್ನು ತಿಳಿದು ಅವರ ಮನೆಗೆ ಹೋಗಿ ತಮ್ಮ ಅಭಿನಯವನ್ನು ತೊರಿಸಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ಸಫಲವಾದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲೇ ಇಲ್ಲ.

ಆರಂಭದಲ್ಲಿ ಸಣ್ಣ ಪುಟ್ಟಪಾತ್ರಗಳಲ್ಲಿ ನಂತರ ಪೋಷಕನಾಗಿ ಆನಂತರ ಖಳನಾಯಕನಾಗಿ, ಹಲವಾರು ಸಿನಿಮಾಗಳಲ್ಲಿ ನಟಿಸಿದ ನಂತರ ಆಶಾ ಸಿನಿಮಾದ ಮೂಲಕ ನಾಯಕನಾಗಿ ಭಡ್ತಿ ಪಡೆದದ್ದಲ್ಲದೇ, ಆನಂತರ ಆಫ್ರಿಕಾದ ಶೀಲಾ, ಗಂಧದಗುಡಿ ಭಾಗ2, ಅಣ್ಣಾವ್ರ ಮಕ್ಕಳು, ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ.

charan4ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿರುವ ಸಮಯದಲ್ಲೇ ತೆಲುಗಿನಲ್ಲಿ ನಾಯಕ ನಟರಷ್ಟೇ ಖ್ಯಾತಿ ಪಡೆದಿದ್ದ ವಿಜಯಶಾಂತಿ ಅವರ ಪ್ರತಿಘಟನ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಕರೆ ಬಂದಾಗ ಆರಂಭದಲ್ಲಿ ಇಲ್ಲಿ ನಾಯಕನಾಗಿರುವಾಗ ಮತ್ತೊಂದು ಭಾಷೆಯ ಚಿತ್ರರಂಗದಲ್ಲಿ ಖಳನಟನಾಗಿ ಅಭಿನಯಿಸ ಬೇಕೇ? ಎಂಬ ಜಿಜ್ಞಾಸೆ ಮನದಲ್ಲಿ ಮೂಡಿದಾಗ ಕಲಾವಿದರಾದವರು ಕೇವಲ ಒಂದು ಪಾತ್ರಕ್ಕೇ ಮೀಸಲಾಗಿರದೇ ಎಲ್ಲಾ ಪಾತ್ರಗಳಲ್ಲೂ ಅಭಿನಯಿಸ ಬೇಕು ಎಂದು ನಿರ್ಧರಿಸಿ ಪರಭಾಷೆಯ ಚಿತ್ರದಲ್ಲೂ ಒಂದು ಕೈ ನೋಡೇ ಬಿಡೋಣ ಎಂದು ಪ್ರತಿಘಟನಾ ಚಿತ್ರದಲ್ಲಿ ನಟಿಸಿ, ಆ ಚಿತ್ರ ಯಶಸ್ವಿಯಗಿದ್ದೇ ತಡಾ ದಿನ ಬೆಳಗಾಗುವುದರೊಳಗೆ, ಚರಣ್ ರಾಜ್ ಆಂಧ್ರಾದ್ಯಂತ ಮನೆಮಾತಾಗಿದ್ದಲ್ಲದೇ, ಅವರ ಅದೃಷ್ಟ ಖುಲಾಯಿಸಿತು ಎಂದರೂ ತಪ್ಪಾಗದು. ಅ ಚಿತ್ರದ ಅವರ ನಟನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿದ ಮೇಲಂತೂ ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲೂ ಅವಕಾಶಗಳು ಹೇರಳವಾಗಿ ಸಿಗಲಾರಂಭಿಸಿತು.

chaan3ವಿಜಯಶಾಂತಿ ಅವರ ಬಹುತೇಕ ಚಿತ್ರಗಳಲ್ಲಂತೂ ಚರಣ್ ರಾಜ್ ಖಾಯಂ ನಟರಾಗಿದ್ದು. ನಮ್ ನಾಡು, ಗಡಿನಾಡು, ನೀತಿಕ್ಕು ತಂದನೈ ಮತ್ತು ಜಂಟಲ್ ಮ್ಯಾನ್  ಇಂದ್ರುಡು ಚಂದ್ರುಡು ಮತ್ತು ಕರ್ತವ್ಯಂ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾಗುತ್ತಿದ್ದಂತೆಯೇ ರಜನೀಕಾಂತ್ ಅಭಿನಯದ ಫೂಲ್ ಬನೆ ಅಂಗಾರೇ ,ವೀರ,ಧರ್ಮ ಡೋರಾಯ್ ಮುಂತಾದ ಹಿಂದೀ ಚಿತ್ರಗಳಲ್ಲಿಯೂ ಆಭಿನಯಿಸುವ ಮೂಲಕ ಬಹು ಬಾಷಾಭಾಷಾ ನಟರೆನಿಸಿಕೊಂಡರು. ಈ ಎಲ್ಲಾ ಭಾಷೆಗಳಲ್ಲಿಯೂ ಕೇವಲ ನಟನೆಯಷ್ಟೇ ಅಲ್ಲದೇ ಆಯಾಯಾ ಭಾಷೆಗಳನ್ನೂ ಕಲಿತು ಅವರ ಪಾತ್ರಗಳಿಗೆ ಅವರೇ ಡಬ್ ಮಾಡಿದ್ದದ್ದು ಗಮನಾರ್ಹವಾಗಿತ್ತು.

ಕೇವಲ ಅಭಿನಯಕ್ಕೆ ಮಾತ್ರವೇ ತಮ್ಮನ್ನು ತಾವು ಸೀಮಿತಗೊಳಿಕೊಳ್ಳದ ಚರಣ್ ರಾಜ್ , ಹಿನ್ನಲೆ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ನಿರ್ಮಾಪಕರಾಗಿ, ನಿರ್ದೇಶಕರಾಗಿದ್ದಲ್ಲದೇ, ಬರಹಗಾರರಾಗಿಯೂ ತಮ್ಮ ಛಾಪನ್ನು ಮೂಡಿಸುವ ಮೂಲಕ ಪ್ರಸ್ತುತ ತೆಲುಗು, ತಮಿಳು ಮತ್ತು ಮಳಯಾಳಂ ಭಾಷೆಯ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಬೇರೆ ಭಾಷೆಯಲ್ಲಿ ಎಷ್ಟೇ ಹೆಸರು ಮಾಡಿದರೂ ಸಮಯ ಸಿಕ್ಕಾಗಲೆಲ್ಲಾ ಚರಣ್ ರಾಜ್ ತಮ್ಮ ಕನ್ನಡ ಭಾಷೆಯ ಪ್ರೇಮದಿಂದಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಹಣವನ್ನು ಹಾಕಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಲ್ಲದೇ ಇತ್ತೀಚಿನ ರಾಜಾಹುಲಿ, ಟಗರು ಮುಂತಾದ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

chaan1ಚರಣ್ ರಾಜ್ ಅವರಂತೆಯೇ ಅವಾ ಮಗ ತೇಜ್ ರಾಜ್ ಕೂಡಾ ತನ್ನ ತಂದೆಯಂತೆಯೇ ತಮಿಳು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ತಮಿಳು ಚಿತ್ರ 90ml ಯಶಸ್ವಿಯಾಗುತ್ತಿದ್ದಂತೆಯೇ, ಇನ್ನೂ ಮೂರ್ನಾಲ್ಕು ತಮಿಳು ಸಿನಿಮಾದಲ್ಲಿ‌ ಬಣ್ಣ ಹಚ್ಚಿವ ಮೂಲಕ ಕೈ ತುಂಬಾ ಕೆಲಸವಿದ್ದರೂ, ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೇಮದಿಂದಾಗಿ ಭರತ ಬಾಹುಬಲಿ ಎಂಬ ಕನ್ನಡ‌ ಸಿನಿಮಾದಲ್ಲಿ ತೇಜ್ ರಾಜ್ ಅವರು ಕಾಣಿಸಿಕೊಂಡಿದ್ದಾರೆ.

charanಇನ್ನು ಕೊರೊನಾ ಸಮಯದಲ್ಲಿ ದಿನದ 24 ಗಂಟೆಯೂ ಪೌರ ಕಾರ್ಮಿಕರು, ವೈದ್ಯರು ಮತ್ತು ಪೊಲೀಸ್ ಇಲಾಖೆ ಜೊತೆಗೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಹೋಂ ಗಾರ್ಡ್​ಗಳು ಕೊರೊನಾ ವಾರಿಯರ್ಸ್​ಗಳಾಗಿ ಕೆಲಸ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಈ ಫ್ರೆಂಟ್‌ಲೈನ್ ವಾರಿಯರ್ಸ್​ಗಳಿಗೆ ಅನೇಕ ಸಿನಿಮಾ ತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರೆ, ಅವರ ಜೊತೆ ಚರಣ್ ರಾಜ್ ಅವರೂ ಸಹಾ ಕೈ ಜೋಡಿಸಿ, ಬೆಂಗಳೂರಿನ ಚಿಕ್ಕ ಜಾಲ, ಯಲಹಂಕ, ವಿದ್ಯಾರಣ್ಯಪುರ ಸೇರಿದಂತೆ ಹತ್ತು ಹಲವು ಪೊಲೀಸ್ ಠಾಣೆಗಳಿಗೆ ಸ್ವತಃ ಅವರೇ ತೆರಳಿ ಪೊಲೀಸ್ ಸಿಬ್ಬಂದಿಗೆ ಆಹಾರ ಕಿಟ್​ಗಳನ್ನು ವಿತರಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯೂ ನಗರದ 148 ಠಾಣೆಗಳಿಗೂ ತೆರಳಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಪೊಲೀಸರೂ ಕೂಡ ಮನುಷ್ಯರೇ. ಜನರು ಮಹಾಮಾರಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ, ಕೊರೊನಾ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಗೌರವನ್ನು ಕೊಟ್ಟು ಜನರೂ ಸಹಾ ತಮ್ಮ ತಮ್ಮ ಮನೆಯಿಂದ ಹೊರಬಾರದಂತೆ ಜನರನ್ನು ಕೋರಿಕೊಂಡಿದ್ದರು.

ಹೀಗೆ ಎಲ್ಲೇ ಇರು ಹೇಗೇ ಇರು, ಎಂದೆಂದಿಗೂ ಕನ್ನಡಾವಾಗಿರು ಎನ್ನುವಂತೆ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಹಿನ್ನಲೆ ಗಾಯಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿ ಭಾರತೀಯ ವಿವಿಧ ಚಿತ್ರರಂಗದಲ್ಲಿ ಮಿಂಚುತ್ತಿದ್ದರೂ, ತಮಗೆ ಮೊತ್ತ ಮೊದಲ ಬಾರಿಗೆ ಅಭಿನಯಿಸಲು ಅವಕಾಶ ಕೊಟ್ಟ ಶ್ರಿ ಸಿದ್ದಲಿಂಗಯ್ಯನವರನ್ನು ತಮ್ಮ ಗಾಡ್ ಫಾದರ್ ಎಂದು ಹೇಳಿಕೊಳ್ಳುತ್ತಲೇ, ಕನ್ನಡದ ತನ ಮತ್ತು ಕನ್ನಡದ ಕಂಪನ್ನು ದೇಶಾದ್ಯಂತ ತನ್ನ ಚಿತ್ರಗಳಲ್ಲಿ ಎತ್ತಿ ಮೆರೆಸುತ್ತಿರುವ ಕನ್ನಡಕ್ಕೆ ಗೌರವವನ್ನು ತಂದು ಕೊಟ್ಟಿರುವ ಚರಣ್ ರಾಜ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?
ನಿಮ್ಮವನೇ ಉಮಾಸುತ

ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ 

sri7ಎಪ್ಪತರ ದಶಕದ ಅಂತ್ಯದವರೆಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಭಲ್ಯ.  ವೇಗದ ಬೋಲರ್ಗಳೇನಿದ್ದರೂ  ಆರಂಭಿಕ ನಾಲ್ಕಾರು ಓವರ್ಗಳನ್ನು ಮಾಡಿ ಚಂಡಿನ ಹೊಳಪನ್ನು ತೆಗೆದುಕೊಡಲಷ್ಟೇ ಸೀಮಿತವಾದ ಕಾಲದಲ್ಲಿ ಕಪಿಲ್ ದೇವ್  ಅವರ ಆಗಮನವಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಅವರು ನಿವೃತ್ತರಾಗುವ ವೇಳೆಗೆ ಭಾರತದ ವೇಗದ ಬೌಲಿಂಗ್ ನೊಗ ಹೊರುವವರು ಯಾರು ಎಂದು ಯೋಚಿಸುತ್ತಿರುವಾಗಲೇ ನಿಜವಾದ ವೇಗ ಬೋಲಿಂಗ್ ಎಂದರೆ ಹೇಗೆ ಇರುತ್ತದೆ ಎಂದು ತೋರಿಸಿದ, ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಪಡುತ್ತಿದ್ದ ಜಾವಗಲ್ ಶ್ರೀನಾಥ್ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಹಾಸನ ಜಿಲ್ಲೆಯ ಹಳೇಬೀಡು ಬಳಿಯ ಜಾವಗಲ್ ಗ್ರಾಮದ ಮೂಲದವರಾದ ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ದಂಪತಿಗಳಿಗೆ. ಆಗಸ್ಟ್    31, 1969ರಲ್ಲಿ ಶ್ರೀನಾಥ್ ಅವರು ಜನಿಸುತ್ತಾರೆ. ವ್ಯವಹಾರಸ್ಥರಾಗಿದ್ದ ಅವರ ತಂದೆಯವರು ಮೈಸೂರಿನಲ್ಲೇ ನೆಲೆಸಿದ್ದ ಕಾರಣ, ಶ್ರೀನಾಥ್ ಅವರ ಬಾಲ್ಯವೆಲ್ಲಾ ಮೈಸೂರಿನಲ್ಲೇ ಆಗಿ ಮರಿಮಲ್ಲಪ್ಪ ಶಾಲೆಯಲ್ಲಿ ಅವರ ಪೌಢಶಿಕ್ಷಣ ಪಡೆಯುತ್ತಿರುವಾಗಲೇ ಶಾಲೆಯ ಕ್ರಿಕೆಟ್ ತಂಡದ ನಾಯಕರಾಗಿರುತ್ತಾರೆ. ಪೋಷಕರ ಆಸೆಯಂತೆ ಇಂಜೀನಿಯರಿಂಗ್ ಮೊದಲ 2 ವರ್ಷಗಳನ್ನು ಹಾಸನದ ಮಲ್ನಾಡ್ ಕಾಲೇಜಿನಲ್ಲಿ ನಡೆದು ನಂತರದ 2 ವರ್ಷಗಳು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜೀನಿಯರಿಂಗ್ ನಲ್ಲಿ ಪದವಿ ಮಾಡುತ್ತಿರುವಾಗಲೇ,  ಕ್ಲಬ್ ಕ್ರಿಕೆಟ್ ಆಡುತ್ತಿರುವಾಗ 6.3″ ಎತ್ತರದ ಈ ವೇಗದ ಬೌಲರ್ ಕರ್ನಾಟಕದ ಮತ್ತೊಬ್ಬ ಕನ್ನಡದ ಕಲಿಗಳಾದ ಶ್ರೀ ಗುಂಡಪ್ಪ ವಿಶ್ವನಾಥ್ ಅವರ ಕಣ್ಣಿಗೆ ಬಿದ್ದದ್ದೇ ತಡಾ ಕರ್ನಾಟಕದ ರಣಜೀ ತಂಡಕ್ಕೆ ಆಯ್ಕೆಯಾಗುತ್ತಾರೆ.

sri81989/90 ರಲ್ಲಿ ಕರ್ನಾಟಕ ತಂಡದ ಪರವಾಗಿ ಹೈದರಾಬಾದ್ ವಿರುದ್ಧ  ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ  ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭರವಸೆಯನ್ನು ಮೂಡಿಸುವುದಲ್ಲದೇ ಮುಂದಿನ ಆರು ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ಋತುವನ್ನು ಮುಗಿಸಿ, ಎರಡನೇ ಋತುವಿನಲ್ಲಿ 20 ವಿಕೆಟ್ ಪಡೆಯುವಷ್ಟರಲ್ಲಿಯೇ ಭಾರತದ ಪರ  18, ಆಕ್ಟೋಬರ್ 1991ರಂದು ಪಾಕ್ ವಿರುದ್ಧ ಶಾರ್ಜಾದಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರೆ, ಅದೇ ವರ್ಷ

29  ಅಕ್ಟೋಬರ್ 1991ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ಭಾರತದ ಪರ ಮೊದಲ ಟೆಸ್ಟ್ ಆಡುತ್ತಾರೆ. ಭಾರತದ ತಂಡದಲ್ಲಿ ಅದಾಗಲೇ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಅವರುಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾರಣ ಬಹಳ ದಿನಗಳ ವರೆಗೂ ಶ್ರೀನಾಥ್ ಬೆಂಚು ಕಾಯಿಸುವ ಪರಿಸ್ಥಿತಿಯುಂಟಾಗುತ್ತದೆ.

sri4ಕಪಿಲ್ ದೇವ್ ಅವರ ನಿವೃತ್ತಿಯಾದ ನಂತರ ಭಾರತದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಯ ತಂಡಕ್ಕೆ ಶ್ರೀನಾಥ್ ವೇಗದ ಬೌಲರ್ ಆಗಿ ಮೊದಲ  ಆಯ್ಕೆಯಾಗಿ ಪರಿಗಣಿಸಲ್ಪಡುವುದಲ್ಲದೇ,  ಕರ್ನಾಟಕದ ಮತ್ತೊಬ್ಬ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರ ಜೊತೆಯಲ್ಲಿ ಭಾರತದ ಪರ ಅತ್ಯುತ್ತಮ ವೇಗದ ಜೋಡಿ ಎನಿಸಿಸುತ್ತಾರೆ. ಅದೊಮ್ಮೆ ಭಾರತದ ತಂಡದಲ್ಲಿ ದ್ರಾವಿಡ್, ವಿಜಯ್ ಭಾರದ್ವಾಜ್, ಕುಂಬ್ಲೆ, ಜೋಷಿ, ವೆಂಕಿ, ದೊಡ್ಡಗಣೇಶ್  ಜೊತೆಯಲ್ಲಿ ಶ್ರೀನಾಥ್ ಹೀಗೆ  11ರ ಬಳಗದಲ್ಲಿ 5-6 ಕರ್ನಾಟಕದ ಆಟಗಾರೇ ಇದ್ದ ಸಂದರ್ಭದಲ್ಲಿಯೂ ಶ್ರೀನಾಥ್ ತಂಡದ ಪರ ಅವಿಭಾಜ್ಯ ಅಂಗವಾಗಿದ್ದರು.

ಅಂದೆಲ್ಲಾ ಭಾರತದ ಪಿಚ್‍ಗಳು ಹೆಚ್ಚಾಗಿ  ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತಿದ್ದ  ಕಾರಣ  ಆರಂಭದಲ್ಲಿ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆ ಎನಿಸಿದ್ದರೂ ನಂತರ ದಿನಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡು , ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್‍ಗಳನ್ನು ಪಡೆದರೆ, ಕರ್ನಾಟಕದ ಪರ . ಮೊದಲ ದರ್ಜೆ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆಯುವ ಮೂಲಕ ಎಲ್ಲಾ ವಿಧದ ಕ್ರಿಕೆಟ್ಟಿಗೂ ಸೈ ಎನಿಸಿಕೊಂಡರು.  ಬೌಲಿಂಗ್ ಜೊತೆಯಲ್ಲಿಯೇ ಕೆಳ ಹಂತದಲ್ಲಿ ಉತ್ತಮವಾದ ಹೊಡೆತಗಳೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುವ ಮೂಲಕ ಹತ್ತು ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.  ಚಂಡನ್ನು  ಅತ್ಯಂತ ಭರ್ಜರಿಯಾಗಿ ಬಾರಿಸುತ್ತಿದ್ದ ಕಾರಣ, ಏಕದಿನ ಪಂದ್ಯಗಳಲ್ಲಿ “ಪಿಂಚ್ ಹಿಟ್ಟರ್” ಅಗಿಯೂ  ನಿರ್ವಹಿಸಿರುವುದಲ್ಲದೇ, ಟೆಸ್ಟ್ ಪಂದ್ಯಗಳಲ್ಲಿ ಕೆಲವೊಮ್ಮೆ ನೈಟ್ ವಾಚ್ ಮೆನ್ ಆಗಿಯೂ ನಿಭಾಯಿಸಿದ್ದಾರೆ. ಕರ್ನಾಟಕ ಮತ್ತು  ಭಾರತದ ರಾಷ್ಟ್ರೀಯ ತಂಡವಲ್ಲದೇ,  ಇಂಗ್ಲೆಂಡಿನ  ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ.

ಸಾಧಾರಣವಾಗಿ ವೇಗದ ಬೌಲರ್ಗಳು 135-145ಕಿಮೀ ವೇಗದಲ್ಲಿ ಬೋಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, 1996 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಅವರು  ಗಂಟೆಗೆ 156 ಕಿ.ಮೀ ವೇಗದಲ್ಲಿ ಬೋಲಿಂಗ್ ಮಾಡಿದ್ದರೇ, ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ, ಗಂಟೆಗೆ 154.5 ಕಿ.ಮೀ ವೇಗದ ಎಸೆತವೊಂದನ್ನು ಎಸೆದಿರುವುದು  ಭಾರತದ ಪರ ಇಂದಿಗೂ ಅತ್ಯಂತ ಮಾರಕದ ಬೌಲಿಂಗ್ ದಾಖಲೆಯಾಗಿದೆ.

sri5ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ಫಾರ್ಮಿನಲ್ಲಿ ಇರುವಾಗಲೇ, ತಮ್ಮ 30ನೇ ವಯಸ್ಸಿನಲ್ಲಿ  1999 ರಲ್ಲಿ ಜ್ಯೋತ್ಸ್ನಾ ಅವರನ್ನು ವಿವಾಹವಾದರು. ಕಾಕತಾಳೀಯವೆಂದರೆ ಅದೇ ದಿನ ಕನ್ನಡ ಮತ್ತೊಬ್ಬ ಕಲಿ ಅನಿಲ್ ಕುಂಬ್ಲೆಯವರೂ ವಿವಾಹವಾದರು. ದುರಾದೃಷ್ಟವಷಾತ್ ನಾನಾ ಕಾರಣಗಳಿಂದಾಗಿ ಅವರ ವೈವಾಹಿಕ ಜೀವನ ಯಶಸ್ವಿಯಾಗದೆ ತಮ್ಮ ಮೊದಲ ಪತ್ರಿಯವರಿಗೆ ವಿಚ್ಚೇದನ ನೀಡಿದನ ನಂತರ 2008 ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

ನೀಳಕಾಯದ ಸಸ್ಯಾಹಾರಿಯಾಗಿ ವೇಗದ ಬೌಲರ್ ಆಗಿದ್ದ ಶ್ರೀನಾಥ್ ವಿಪರೀತ ಕ್ರಿಕೆಟ್ ಆಡುತ್ತಿದ್ದ ಪರಿಣಾಮವಾಗಿ ರೊಟೇಟರ್ ಕಫ್ ಖಾಯಿಲೆಗೆ ತುತ್ತಾಗಿ  ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಾರ್ಚ್ 1997 ರಿಂದ ನವೆಂಬರ್ ವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿತ್ತು.  ಆದಾದ ನಂತರ ಶ್ರೀನಾಥ್ ಮತ್ತೆ ಅದೇ ರೀತಿಯಲ್ಲಿ  ಚಂಡನ್ನುಎಸೆಯಬಲ್ಲರೇ ಎಂಬ ಎಲ್ಲರ ಅನುಮಾನಕ್ಕೆ ಸಡ್ಡು ಹೊಡೆಯುವಂತೆ ಬೌಲಿಂಗ್ ಮಾಡುವ ಮುಖಾಂತರ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. 2000ದ ನಂತರ ಭಾರತ ತಂಡಕ್ಕೆ  ಅಜಿತ್ ಅಗರ್ಕರ್, ಜಹೀರ್ ಖಾನ್ ರಂತಹ ವೇಗಿಗಳು ಸೇರಿಕೊಂಡಾಗ ನಿಧಾನವಾಗಿ ನೇಪತ್ಯಕ್ಕೆ ಸರಿಯ ತೊಡಗಿದ ಶ್ರೀನಾಥ್ 2002 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯ ನಂತರ ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.  ಆದರೆ ಅಂದಿನ ತಂಡದ ನಾಯಕ ಸೌರವ್ ಗಂಗೂಲಿ  ಅವರ ಒತ್ತಾಯದ ಮೇರೆಗೆ  2003 ರ ವಿಶ್ವಕಪ್‌ನವರೆಗೂ ಏಕದಿನ ಪಂದ್ಯಗಳನ್ನು ಮುಂದುವರೆಸಿ, ದಕ್ಷಿಣ ಆಫ್ರಿಕಾದಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ನಡೆದ 2003ರ ವಿಶ್ವಕಪ್ ಪಂದ್ಯಾಗಳಿಗಳ ನಂತರ   ಅವರು ಎಲ್ಲಾ ಪ್ರಕಾರದ ಕ್ರಿಕೆಟ್ಟಿನಿಂದ ನಿವೃತ್ತಿ ಘೋಷಿಸಿದರು.

sri2ತಮ್ಮ ನಿವೃತ್ತಿಯ ನಂತರ ಕೆಲ ಕಾಲ ವೀಕ್ಷಕ ವಿವರಣೆಕಾರರಾಗಿ ಗುರುತಿಸಿಕೊಂಡರೂ ನಂತರ ತಮ್ಮ ಸೌಮ್ಯ ಸ್ವಭಾವ ಮತ್ತು ಸನ್ನಡತೆ ಮತ್ತು ಕ್ರಿಕೆಟ್ ಬಗ್ಗೆ ಅವರಿಗಿದ್ದ ಅಪಾರವಾದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಏಪ್ರಿಲ್ 2006 ರಲ್ಲಿ, ಶ್ರೀನಾಥ್ ಅವರು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನಿಂದ ಮ್ಯಾಚ್ ರೆಫರಿಯಾಗಿ ಆಯ್ಕೆಯಾಗಿದ್ದಲ್ಲದೇ, 2007 ರ ವಿಶ್ವಕಪ್ನಲ್ಲಿ ಸೇವೆ ಸಲ್ಲಿಸಿದರು. ಇದುವರೆಗೂ ಅವರು 35 ಟೆಸ್ಟ್ ಪಂದ್ಯಗಳು, 194 ODIಗಳು ಮತ್ತು 60 T20I ಗಳಲ್ಲಿ ರೆಫರಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರ್ಷಗಳ ಹಿಂದೆ ಅನಿಲ್ ಕುಂಬ್ಲೆ ಅವರ ಸಾರಥ್ಯದಲ್ಲಿ  ಶ್ರೀನಾಥ್  ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದಲ್ಲದೇ  ಅವರ ಸಮಯದಲ್ಲೇ ಚಿನ್ನಸ್ವಾಮೀ ಕ್ರೀಡಾಂಗಣದ ನವೀಕರಣ ಮತ್ತು ನೆಲಮಂಗಲದ  ಬಳಿಯ ಆಲೂರಿನ ಮೈದಾನಗಳಲ್ಲದೇ ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಕ್ರೀಡಾಂಗಣಗಳು ಆರಂಭವಾಗಲು ಕಾರಣೀಭೂತರಾಗಿದ್ದಾರೆ.

ಶ್ರೀನಾಥ್ ಅವರ ಕೆಲವೊಂದು ದಾಖಲೆಗಳು ಈ ರೀತಿಯಾಗಿವೆ.

 • ಭಾರತದ ಪರ  ಏಕದಿನ ಪಂದ್ಯಾವಳಿಗಳಲ್ಲಿ 300  ವಿಕೆಟ್ ಪಡೆದ ಮೊದಲ ಆಟಗಾರ
 • ವೇಗದ ಬೌಲರ್ ಆಗಿ 1992, 1996, 1999 ಮತ್ತು 2003 ಹೀಗೆ  ಸತತವಾಗಿ 4 ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿರುವ ಏಕೈಕ ಭಾರತೀಯ ಆಟಗಾರ
 • ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್(44) ಕಬಳಿಸಿರುವ ಭಾರತೀಯ ಬೌಲರ್
 • ಕ್ರಿಕೆಟ್ಟಿನಲ್ಲಿ ಶ್ರೀನಾಥ್ ಅವರ ಕೊಡುಗೆಯನ್ನು ಮನ್ನಿಸಿ ಭಾರತ ಸರ್ಕಾರ  1999 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀನಾಥ್ ಅವರ ಕ್ರಿಕೆಟ್ ಬದುಕಿನ ಈ ಕೆಲವೊಂದು ರೋಚಕ ಘಟನೆಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಇರುತ್ತಾರೆ.

 • 1996 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ನಡೆಯುತ್ತಿದ್ದ ಟೈಟಾನ್ ಕಪ್‌ ಪಂದ್ಯದಲ್ಲಿ ಗೆಲ್ಲಲು 216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಮೊತ್ತ 164/8 ಆಗಿರುವಾಗ  88 ರನ್‌ಗಳಿಸಿ ಸಚಿನ್ ತೆಂಡೂಲ್ಕರ್ ಔಟಾದ ನಂತರ ಪಂದ್ಯ ಕೈಚೆಲ್ಲಿ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದಾಗ ಅನಿಲ್ ಕುಂಬ್ಲೆ ಅವರ ಜೊತೆ 9ನೇ ವಿಕೆಟ್ ಜೊತೆಯಾಟಕ್ಕೆ 52 ರನ್ ಸೇರಿಸಿದ ಶ್ರೀನಾಥ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೊಂದಿಗೆ 23 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿ  ಭಾರತ ತಂಡವನ್ನು ಫೈನಲ್‌ ತಲುಪಿಸಿದ್ದಲ್ಲದೇ, ರಾಜ್‌ಕೋಟ್‌ನಲ್ಲಿ ನಡೆದ ಫೈನಲ್ಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ತಂಡ ಪ್ರಶಸ್ತಿಯನ್ನು ಪಡೆಯುವುದರ ಕಾರಣೀಭೂತರಾದರು.
 • sri91999ರಲ್ಲಿ ದೆಹಲಿಯಲ್ಲಿ ನಡೆದ  ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸಿನಲ್ಲಿ ಅನಿಲ್ ಕುಂಬ್ಲೆ ಅದಾಗಲೇ 9 ವಿಕೆಟ್ ಪಡೆದಿದ್ದಾಗ ಮತ್ತೊಂದು ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ  ಶ್ರೀನಾಥ್ ಎಸೆತವೊಂದರಲ್ಲಿ ಪಾಕ್ ಆಟಗಾರ ಹೊಡೆದ ಚೆಂಡನ್ನು ಭಾರತದ ಆರಂಭಿಕ ಆಟಗಾರ ಸಡಗೊಪನ್ ರಮೇಶ್ ಹಿಡಿಯಲು ಪ್ರಯತ್ನಿಸಿದಾಗ, ಅನಿಲ್ ಕುಂಬ್ಳೆ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಲಿ ಎನ್ನುವ ಸದಾಶಯದಿಂದ  ಕ್ಯಾಚ್ ಹಿಡಿಯದಿರು ಎಂದು ಕೂಗಿದ್ದನ್ನು ಟಿವಿಯಲ್ಲಿ ಕೇಳಿ ಅಚ್ಚರಿ ಪಟ್ಟಿದ್ದೇವೆ. ನಂತರ ಎಲ್ಲಾ ಚೆಂಡುಗಳನ್ನು ವಿಕೆಟ್ ನಿಂದ ದೂರ ಎಸೆದ್ ತಮ್ಮ ಓವರ್ ಮುಗಿಸಿ ಮುಂದಿನ ಓವರಿನಲ್ಲಿ ಕುಂಬ್ಲೆ ಬೌಲಿಂಗಿನಲ್ಲಿ ವಾಸಿ ಅಕ್ರಮ್ ಔಟಾದಾಗ ಕುಂಬ್ಲೆ ಅವರನ್ನು ಭುಜದ ಮೇಲೆ ಎತ್ತಿ ಮೆರೆಸಾಡುವ ಮೂಲಕ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

12-13 ವರ್ಷಗಳ ಕಾಲ ಭಾರತದ ಪರ ಅಂತರಾಷ್ಟ್ರೀಯ ಪಂದ್ಯಗಳನ್ನು ದೇಶ ವಿದೇಶಗಳಲ್ಲಿ ಆಡಿದ ಶ್ರೀನಾಥ್, ವೇಗದ ಬೌಲರ್ ಆಗಿದ್ದರೂ ತಮ್ಮ ಇಡೀ ಕ್ರಿಕೆಟ್ ಜೀವನದಲ್ಲಿ ಎಂದಿಗೂ ಎದುರಾಳಿ ತಂಡದ ವಿರುದ್ಧ ಕೋಪತಾಪಗಳನ್ನು ತೋರದೇ ಸಹನಾಮೂರ್ತಿಯಂತಿದ್ದು ವಿಶ್ವಾದ್ಯಂತ  ಕನ್ನಡಿಗರ ಸೌಮ್ಯತನವನ್ನು ಎತ್ತಿ ಮೆರೆಸಿದ ಜಾವಗಲ್ ಶ್ರೀನಾಥ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ಐಶಾರಾಮಿ ಕಾರುಗಳ ಮಾಲಿಕ ರಮೇಶ್ ಬಾಬು

ram3ಬೆಂಗಳೂರು ನಗರಕ್ಕೆ ದೇಶ ವಿದೇಶಗಳಿಂದ ಸರ್ಕಾರೀ ಅಥವಾ ಖಾಸಗೀ ಕೆಲಸಗಳಿಗೆಂದು ಬರುವ ಪ್ರಸಿದ್ಧ ವ್ಯಕ್ತಿಗಳು ಓಡಾಡುವುದಕ್ಕೆ ಐಶಾರಾಮಿ ಕಾರುಗಳನ್ನು ಬಳಸುವುದನ್ನು ನಾವೆಲ್ಲರೂ ಟಿವಿಯಲ್ಲಿಯೋ ಇಲ್ಲವೇ ಖುದ್ದಾಗಿ ನೋಡಿ ಸಂಭ್ರಮಿಸಿರುತ್ತೇವೆ. ವಾವ್ ಅಂತಹ ಕಾರುಗಳಲ್ಲಿ ಓಡಾಡುವವರೇ ಭಾಗ್ಯವಂತರು ಎಂದೇ ಭಾವಿಸಿರುತ್ತೇವೆ.  ನಿಜ ಹೇಳ್ಬೇಕು ಅಂದರೆ ಅಂತಹ ಐಶಾರಾಮೀ ಕಾರುಗಳ ಒಡೆಯ ನಮ್ಮ ನಿಮ್ಮಂತೆಯೇ  ಸಾಮಾನ್ಯ ಮಧ್ಯಮ ವರ್ಗದ ಕ್ಷೌರಿಕ ಕುಟುಂಬದಿಂದ ಬಂದು ತಮ್ಮ ಬುದ್ದಿವಂತಿಕೆ ಮತ್ತು ಕಾರ್ಯಕ್ಷಮತೆಯಿಂದ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ಅಚ್ಚರಿ ಮೂಡಿಸುತ್ತದೆ ಅಲ್ಲವೇ?  ಹೌದು  ಅಂತಹ ಅದ್ಭುತ ವ್ಯಕ್ತಿಯಾದ ಶ್ರೀ ರಮೇಶ್ ಬಾಬು ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ರಮೇಶ್ ಬಾಬು ಅವರ ತಂದೆ ಗೋಪಾಲ್ ಅವರು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಸಣ್ಣದಾದ ಹೇರ್ ಕಟಿಂಗ್ ಅಂಗಡಿಯೊಂದನ್ನು ತಮ್ಮ ತಮ್ಮನೊಂದಿಗೆ ನಡೆಸಿಕೊಂಡು ಹೋಗುತ್ತಿದ್ದರು. ರಮೇಶ್ ಬಾಬು ಅವರಿಗೆ 7 ವರ್ಷ ವಯಸ್ಸಾಗಿರುವಾಗ 1979ರಲ್ಲಿ ದುರಾದೃಷ್ಟವಷಾತ್  ನಿಧನರಾದಾಗ,  ಅವರ ಮನೆಯನ್ನು ನಿಭಾಯಿಸಲು ಬಹಳವಾದ ಕಷ್ಟವಾಗುತ್ತದೆ.  ಪ್ರತೀ ದಿನ 5 ರೂಪಾಯಿ ಕೊಡುವ ಒಪ್ಪಂದದಂತೆ  ಅವರ ಅಂಗಡಿಯನ್ನು ಚಿಕ್ಕಪ್ಪನವರು ವಹಿಸಿಕೊಳ್ಳುತ್ತಾರೆ. ಅವರು ಕೊಡುವ ಐದು ರೂಪಾಯಿಗಳಲ್ಲಿ ರಮೇಶ್ ಅವರ ತಾಯಿ, ಸಹೋದರ ಮತ್ತು ಸಹೋದರಿಯರ ದೈನಂದಿನ ಅವಶ್ಯಕತೆಗಳು ಮತ್ತು ವಿದ್ಯಾಭ್ಯಾಸಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ  ಅವರ ತಾಯಿಯವರು ನಾಲ್ಕಾರು ಮನೆಗಳಲ್ಲಿ  ಮನೆಗೆಲಸ ಮಾಡಲು ಆರಂಭಿಸುತ್ತಾರೆ.

ತಾಯಿಯವರು ಕೆಲಸ ಮಾಡುತ್ತಿದ್ದ ಮನೆಯಾಕೆ ಉಡುಗೊರೆಯಾಗಿ ಕೊಡಿಸಿದ ಸೈಕಲ್ ಸಹಾಯದಿಂದ ಆ ಚಿಕ್ಕ ಹುಡುಗ ರಮೇಶ್ ಬೆಳ್ಳಂಬೆಳಿಗ್ಗೆ  ದಿನಪತ್ರಿಕೆಗಳು ಮತ್ತು ಹಾಲನ್ನು ಸರಬರಾಜು ಮಾಡುವ ಮೂಲಕ ತನ್ನ ತಾಯಿಯ ಹೊರೆಯನ್ನು ಸ್ವಲ್ಪ ಮಟ್ಟಿಗೆ  ಕಡಿಮೆ ಮಾಡುವುದಲ್ಲದೇ  ಹಾಗೂ ಹೀಗೂ ಹತ್ತನೇ ತರಗತಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಂಜೆ ಕಾಲೇಜಿನಲ್ಲಿ ಪಿಯುಸಿಗೆ  ಸೇರಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಅವರ ತಾಯಿಯವರಿಗೂ ಮತ್ತು  ಚಿಕ್ಕಪ್ಪನೊಡನೆ ವ್ಯಾವಹಾರಿಕವಾಗಿ ವೈಮನಸ್ಯ ಉಂಟಾಗಿ ಆವರು ಪ್ರತೀ ತಿಂಗಳೂ ನೀಡುತ್ತಿದ್ದ ಹಣವನ್ನು ನಿಲ್ಲಿಸಿದಾಗ ವಿಧಿ ಇಲ್ಲದೇ ರಮೇಶ್ ಅವರೇ ತಮ್ಮ ಅಂಗಡಿಯ ವ್ಯವಹಾರವನ್ನು ವಹಿಸಿಕೊಳ್ಳಲು ಮುಂದಾದಾಗ, ಅವರ ತಾಯಿ, ವ್ಯವಹಾರ  ಎಲ್ಲಾ ಬೇಡ ಮೊದಲು ಶಿಕ್ಷಣಕ್ಕೆ ಆದ್ಯತೆ ಕೊಡು ಎಂದು ಹೇಳಿದಾಗ,  ಬೆಳಿಗ್ಗೆ ತಾನು ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಸಂಜೆ ಕಾಲೇಜಿಗೆ ಹೋಗಿ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ ಎಂಬ ಭವರವಸೆ ನೀಡಿ ಅಂದಿನಿಂದ  ರಮೇಶ್ ಬೆಳಿಗ್ಗೆ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂಜೆ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ.

1993ರಲ್ಲಿ ಅವರ ಚಿಕ್ಕಪ್ಪನವರು ಒಂದು ಚಿಕ್ಕ ಕಾರೊಂದನ್ನು ಕೊಂಡಾಗ, ತಾವೂ ಅವರಿಗಿಂತ ಏನು ಕಡಿಮೆ ಎಂದು ನಿರೂಪಿಸುವ ಸಲುವಾಗಿ ಅಲ್ಪ ಸ್ವಲ್ಪ ಉಳಿಸಿದ್ದ ಹಣದೊಂದಿಗೆ ಸ್ವಲ್ಪ ಕೈಸಾಲ ಮಾಡಿ  ಸೆಕೆಂಡ್ ಹ್ಯಾಂಡ್ ಮಾರುತಿ ವ್ಯಾನ್ ವಾಹನವನ್ನು ಕೊಂಡು ಬೀಗುತ್ತಾರೆ. ಆರಂಭದಲ್ಲಿ ಎಲ್ಲವೂ ಸರಿ ಇದ್ದು ನಂತರ   ಸಾಲದ ಕಂತನ್ನು ಕಟ್ಟುವ ಸಲುವಾಗಿ ತಮ್ಮ ತಾತನ ಆಸ್ತಿಯನ್ನು ಅಡಮಾನ ಇಡಬೇಕಾಗುತ್ತದೆ.  ಆರು ಸಾವಿರದ ಎಂಟು ನೂರು ರೂಪಾಯಿಗಳಷ್ಟು ಸಾಲದ ಬಡ್ಡಿ ಪಾವತಿಸಲು ಪರದಾಡುವಂತಹ ಪರಿಸ್ಥಿತಿ ಬಂದಿರುತ್ತದೆ.

ಇದೇ ಸಮಯದಲ್ಲಿಯೇ ಅವರ ಪಾಲಿಗೆ ಆವರ ತಾಯಿ ಕೆಲಸ ಮಾಡುತ್ತಿದ್ದ ಇಂಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೆಯಾಕೆ ನಂದಿನಿಯವರು ಬೆಂಬಲಕ್ಕೆ ನಿಲ್ಲುತ್ತಾರೆ. ಸುಮ್ಮನೇ ಕಾರನ್ನು ಮನೆಯ ಮುಂದೆ ನಿಲ್ಲಿಸುವ ಬದಲು ಅದನ್ನು ಬಾಡಿಗೆಗೆ ಓಡಿಸಿ ಅದರಿಂದ ಬಂದ ಹಣದಿಂದ ಸಾಲದ ಕಂತನ್ನು ತೀರಿಸು ಎಂದು ಹೇಳಿದ್ದಲ್ಲದೇ, ಅವರೇ ಕೆಲಸ ಮಾಡುತ್ತಿದ ಕಂಪನಿಯಲ್ಲಿ ಗುತ್ತಿಗೆಯನ್ನೂ ಕೊಡಿಸುತ್ತಾರೆ. ಹೀಗೆ 1994ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಟ್ರಾವೆಲ್ಸ್ ಏಜೆನ್ಸಿ 2004 ರಷ್ಟರಲ್ಲಿ 5-6 ಕಾರುಗಳನ್ನು ಹೊಂದುವ ಮಟ್ಟಕ್ಕೆ ಬೆಳಿದಿದ್ದರೂ ರಮೇಶ್ ಅವರು ತಮ್ಮ ತಮ್ಮ ಕ್ಷೌರಿಕ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ.

ವ್ಯವಹಾರದಲ್ಲಿ ಎಲ್ಲೆಡೆಯೂ ಪೈಪೋಟಿ  ಇದ್ದೇ ಇರುತ್ತದೆ. ತಾವು ಉಳಿದವರಿಗಿಂತಲೂ  ವಿಭಿನ್ನವಾಗಿ ಏನಾದರು ಮಾಡ ಬೇಕೆಂದು ಯೋಚಿಸುತ್ತಿರುವಾಗಲೇ ಎಲ್ಲರ ಬಳಿಯೂ ಚಿಕ್ಕ ಚಿಕ್ಕ ಕಾರುಗಳಿವೆ. ಅದೊಮ್ಮೆ ಯಾರೋ  ಮರ್ಸಿಡಿಸ್ ಕಾರನ್ನು ಬಾಡಿಗೆ ಕೇಳಿದಾಗ ಅದನ್ನು ಮತ್ತೊಬ್ಬರಿಂದ ಎರವಲು ಪಡೆದು ವ್ಯವಹಾರವನ್ನು ನಿಭಾಯಿಸಿದ್ದು ನೆನಪಾಗುತ್ತದೆ. ಜನರಿಗೆ ಹೊಚ್ಚ ಹೊಸಾ ಐಶಾರಾಮಿ ಕಾರನ್ನು ಬಾಡಿಗೆಗೆ ನೀಡಿದಲ್ಲಿ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು ಎಂದು ನಿರ್ಥರಿಸಿ, 2004 ರಲ್ಲಿ 40ಲಕ್ಷದ ಐಷಾರಾಮಿ ಕಾರೊಂದನ್ನು ಖದೀದಿಸಲು ಮುಂದಾದಾಗ, ಎಲ್ಲರೂ ದೊಡ್ಡ ತಪ್ಪು ಮಾಡುತ್ತಿದ್ದೀಯೇ, ಎಂದೇ ಎಚ್ಚರಿಸಿದರೂ, ದೊಡ್ಡದಾದ ವ್ಯವಹಾರದ ಅವಕಾಶವನ್ನು ಬಿಡಬಾರದು. ಹಾಗೊಮ್ಮೆ ಏನಾದರೂ ತಪ್ಪಾದಲ್ಲಿ ಅದೇ ಕಾರನ್ನು ಮಾರಾಟ ಮಾಡಿ ನಿಭಾಯಿಸೋಣ ಎಂಬ ಭರವಸೆಯೊಂದಿಗೆ ಬೆಂಗಳೂರಿನಲ್ಲಿ ಹೊಚ್ಚ ಹೊಸ ಐಷಾರಾಮಿ ಕಾರನ್ನು ಬಾಡಿಗೆ ಕೊಡುವ Ramesh Tours & Travels, RTT ಸಂಸ್ಥೆಯನ್ನು ಭಂಡ ಧೈರ್ಯದಿಂದ ಆರಂಭಿಸುತ್ತಾರೆ.

ram4ನೀರಿಗೆ ಇಳಿದ ಮೇಲೆ ಛಳಿಯೇನು? ಬಿಸಿಲೇನು? ಎನ್ನುವಂತೆ  ವ್ಯಾಪಾರ ಮಾಡಲು ಸಿದ್ಧರಾದಾಗ,  ಅಪಾಯಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎನ್ನುವ ತತ್ವದಡಿಯಲ್ಲಿ ಅದುವರೆವಿಗೂ ಮರ್ಸಿಡಿಸ್, BMW, Audi, ಹೀಗೆ ಐದು ಮತ್ತು ಹತ್ತು ಆಸನಗಳ ಐಷಾರಾಮಿ ಕಾರುಗಳು ಇದ್ದರೂ ಅಂತಿಮವಾಗಿ ತಮ್ಮ ಹೆಮ್ಮೆ, ರೋಲ್ಸ್ ರಾಯ್ಸ್  2011 ರಲ್ಲಿ ಖರೀದಿಸಿದಾಗ, ಅಂತಹ  ದುಬಾರಿ ಕಾರನ್ನು ಖರೀದಿಸುವುದರ ವಿರುದ್ಧ ಮತ್ತೆ ಅನೇಕರು ಎಚ್ಚರಿಕೆ ನೀಡಿದರು. ವ್ಯವಹಾರದ ಗಂಧವೇ ಇಲ್ಲದಿದ್ದ 2004ರಲ್ಲಿಯೇ ಅಪಾಯವನ್ನು ತೆಗೆದುಕೊಂಡಿದ್ದೇನೆ. ಈಗ ತಕ್ಕ ಮಟ್ಟಿಗಿನ ವ್ಯವಹಾರ  ಜ್ಞಾನವಿದೆ ಧೈರ್ಯತೆಗೆದು ಕೊಂಡು  ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀಧಿಸಿದ ಕಾರು  ವರ್ಷಗಳ ನಂತರ  ಆದಕ್ಕೆ ಮಾಡಿದ ಸಾಲವೆಲ್ಲಾ ತೀರಿ, ಲಾಭವನ್ನು ಗಳಿಸಲು ಆರಂಭಿಸಿದಾಗ ತೆಗೆದುಕೊಂಡು ಶ್ರಮಕ್ಕೆ ಬೆಲೆ ಸಿಕ್ಕಂತಾಗಿತ್ತು.

ಪ್ರತಿಯೊಂದು ವ್ಯವಹಾರದಲ್ಲೂ ಸವಾಲುಗಳು ಮತ್ತು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಪ್ರತೀ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ ತಮ್ಮ ವಾಹನಗಳ ರಸ್ತೆ ತೆರಿಗೆಯೆಂದೇ, ಸುಮಾರು 3 ಕೋಟಿಗೂ ಅಧಿಕ ಹಣವನ್ನು ಪಾವತಿಸಬೇಕಾಗಿತ್ತು. ಅದನ್ನು ಹೊಂದಿಸಲು ಅವರು ತಮ್ಮ ಆಸ್ತಿಯ ದಾಖಲೆಗಳನ್ನು ಒತ್ತೆ ಇಟ್ಟು ಸಾಲ ಪಡೆದಿರುವುದಲ್ಲದೇ, ಅವರ ಮಡದಿಯ ಕೆಲವು ಆಭರಣಗಳನ್ನು ಒತ್ತೆ ಇಟ್ಟಿದ್ದರೂ ಅವೆಲ್ಲವೂ ವ್ಯವಹಾರಕ್ಕೆಂದು ಮಾಡಿದ ಖರ್ಚಾಗಿರುವ ಕಾರಣ ಅದನ್ನು ಮರಳಿ ಪಡೆಯುವ ಭರವಸೆ ಇದೆ ಎಂದು ನುಡಿಯುವಾಗ ಅವರ ಕಣ್ಗಳಲ್ಲಿದ್ದ ಕಾಂತಿ ನಿಜಕ್ಕೂ ವರ್ಣಿಸಲು ಆಸಾಧ್ಯವಾಗಿದೆ.

ram150ರ ಆಸುಪಾಸಿನಲ್ಲಿರುವ  ರಮೇಶ್ ಬಾಬು ಅವರ 400 ಸಾಮಾನ್ಯ ಕಾರುಗಳು ಮತ್ತು 120 ಟಾಪ್ ಎಂಡ್ ಐಷಾರಾಮಿ ಕಾರುಗಳ ಹೆಮ್ಮೆಯ ಮಾಲೀಕರಾಗಿದ್ದು ಕಾರ್ಪೊರೇಟ್ ದೈತ್ಯರಿಗೆ ಮತ್ತು ಸರ್ಕಾರೀ ಅತಿಥಿಗಳು ಅವಾ  ಐಷಾರಾಮಿ ವಾಹನಗಳ ಸೌಲಭ್ಯವನ್ನು ಪಡೆದಿದ್ದಾರೆ. ಈ ಪರಿಯಲ್ಲಿ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರೂ, ತಮ್ಮ ಕುಲವೃತ್ತಿಯನ್ನು ಮರೆಯದೇ, ಇಂದಿಗೂ ಸಹಾ ಬೆಂಗಳೂರಿನ  ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ತಮ್ಮ ಸಲೂನ್‌ನಲ್ಲಿ ವಾರಕ್ಕೆ 3 ದಿನಗಳ ಕಾಲ  ಕ್ಷೌರಿಕವೃತ್ತಿಯನ್ನು ಮಾಡುವುದನ್ನು ರೂಢಿಯಲ್ಲಿಟ್ಟಿಕೊಳ್ಳುವ ಮಟ್ಟಿಗೆ ವೃತ್ತಿಪರರಾಗಿದ್ದಾರೆ. ಮುಂದಿನ ಒಂದು  ದಶಕದಲ್ಲಿ ಸುಮಾರು 700 ಕಾರುಗಳನ್ನು ಹೊಂದುವ  ಸಂಕಲ್ಪವನ್ನು  ತೊಟ್ಟಿದ್ದಾರೆ. ಅವರ ವೃತ್ತಿಪರತೆ ಮತ್ತು ಕಠಿಣ ಪರಿಶ್ರಮವನ್ನು ನೋಡಿದಲ್ಲಿ  ಅವರ ಆಸೆ ಇನ್ನು ಬೇಗನೇ ಈಡೇರುವ ಭರವಸೆ ಎಲ್ಲರಿಗಿದೆ.

ram2ತಮ್ಮ ಕಂಪನಿಯ ಮೂಲಕ ದಿನದ 24 ಗಂಟೆಗಳು, ವರ್ಷದ 365 ದಿನಗಳು ಕಾರ್ಯನಿರ್ವಹಿಸುವುದಲ್ಲದೇ, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ನಿಯೋಗಗಳ ಎಲ್ಲಾ ರೀತಿಯ ವಾಹನಗಳ ಅವಶ್ಯಕತೆಗಳನ್ನು ನಿರ್ವಹಿಸಲು ವಿಶೇಷ ಸಮನ್ವಯ ಮತ್ತು ವ್ಯವಸ್ಥೆಗಳು ಅವರ ಬಳಿಯಲ್ಲಿದೆ. ಸೆಲ್ಫ್ ಡ್ರೈವ್ ಕಾರ್ ಗಳನ್ನೂ ಬಾಡಿಗೆ ಕೊಡಲು ಪರವಾನಗಿ ಪಡೆದಿರುವ  ಭಾರತದಲ್ಲಿನ ಕೆಲವೇ ಕಾರು ಬಾಡಿಗೆ ಕಂಪನಿಗಳಲ್ಲಿ ರಮೇಶ್ ಅವರ ಕಂಪನಿಯೂ ಒಂದಾಗಿದ್ದು, ತಮ್ಮ ಗ್ರಾಹಕರ ಪ್ರಯಾಣ ಮತ್ತು ಪ್ರವಾಸೋದ್ಯಮ ಅವಶ್ಯಕತೆಗಳಿಗೆ ನಿರ್ದಿಷ್ಟವಾದ ಪ್ರವಾಸಗಳನ್ನು ಸಹ ನಾವು ವಿನ್ಯಾಸಗೊಳಿಸುವ ಮೂಲಕ ದಿನೇ ದಿನೇ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ.

ram5ಅವರ ವಿನಮ್ರತೆ ಮತ್ತು ಕಠಿಣ ಪರಿಶ್ರಮದಿಂದ ಗಳಿಸಿರುವ  ಅಸಾಧಾರಣ ಯಶಸ್ಸಿನಿಂದಾಗಿ  ಅವರಿಗೆ ‘ಬಿಲೇನಿಯರ್ ಬಾರ್ಬರ್‘ ಎಂದೇ ಹೆಸರುವಾಸಿಯಾಗಿದ್ದಾರೆ.  ವರ್ಷಕ್ಕೆ 3.78 ಕೋಟಿ ರೂಪಾಯಿಗಳ ರಸ್ತೆ ತೆರಿಗೆಯನ್ನು ಕಟ್ಟುವಾಗಲೂ ಅವರು ತಮ್ಮ ಹೆಂಡತಿಯ ಆಭರಣಗಳು ಮತ್ತು  ಆಸ್ತಿಗಳನ್ನು ಅಡವು ಇಟ್ಟಿದ್ದಾರೆ  ಇಲ್ಲವೇ  ಮಾರಾಟ ಮಾಡಿದ್ದಾರೆಯೇ ಹೊರತು ಅವರೆಂದು ತಮ್ಮ ವಾಹನಗಳನ್ನು ಮಾರಿಲ್ಲ. ಇಂದಿಗೂ  ಅವರ ಬಳಿ  ಮೊತ್ತ ಮೊದಲ ಬಾರಿಗೆ ಖರೀದಿಸಿದ ಮಾರುತಿ ವ್ಯಾನ್ ಚಲಾಯಿವ ಸುಸ್ಥಿತಿಯಲ್ಲಿದೆ. ಗ್ರಾಹಕರೊಂದಿಗೆ ವಿನಮ್ರವಾಗಿ, ಕಷ್ಟಪಟ್ಟು ಕೆಲಸ ಮಾಡಿದಲ್ಲಿ  ಅದೃಷ್ಟವೂ ತಾನಾಗಿಯೇ ಕೈ ಹಿಡಿಯುತ್ತದೆ. ಅದೇ ಕೇವಲ ಅದೃಷ್ಟವನ್ನೇ ನೆಚ್ಚಿ ಕುಳಿತರೇ ಏನನ್ನು ಸಾಧಿಸಲಾಗದು ಎಂದು ಹೇಳಿರುವ ರಮೇಶ್ ಬಾಬು ನಮ್ಮ ಇಂದಿನ ಯುವಜನತೆಗೆ  ಜೀವಂತ  ದಂತಕಥೆಯಾಗಿರುವ ಮೂಲಕ . ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳಿಗಿದ್ದಾರೆ

ಏನಂತೀರೀ?

ನಿಮ್ಮವನೇ ಉಮಾಸುತ

ಹನಿಗವನ ಚಕ್ರವರ್ತಿ ಎಚ್. ಡುಂಡಿರಾಜ್

ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತು ಎಲ್ಲರಿಗೂ ತಿಳಿದೇ ಇದೆ. ಆದೇ ಕವಿ ಸಾಲು ಸಾಲುಗಳಲ್ಲಿ ಹೇಳುವುದನ್ನು ಕೆಲವೇ ಕೆಲವು ಸಾಲುಗಳಲ್ಲಿ ಹನಿಗವಿ ಹೇಳುತ್ತಾನೆ ಎಂದು ಹೇಳಿದರೂ ತಪ್ಪಾಗದು ಕನ್ನಡದಲ್ಲಿ60-70ರ ದಶಕದಲ್ಲಿ ದಿನಕರದೇಸಾಯಿಗಳು ಚುಟುಕು ಕವಿ ಎಂದು ಹೆಸರಾಗಿದ್ದರೆ, ಸದ್ಯದಲ್ಲಿ ಚುಟುಕು ಚಕ್ರವರ್ತಿ, ಹನಿಗವನಗಳ ರಾಜ ಎಂಬೆಲ್ಲಾ ಕೀರ್ತಿ ಖಂಡಿತವಾಗಿಯೂ ಶ್ರೀ ಎಚ್. ಡುಂಡಿರಾಜ್ ಅವರಿಗೇ ಸಲ್ಲುತ್ತದೆ ಎಂದರೆ ಅತಿಶಯವೇನಲ್ಲ. ಪದ್ಯ ಹಾಗೂ ಗದ್ಯ ಎರಡರಲ್ಲೂ ಗಣನೀಯ ಕೃಷಿಮಾಡಿರುವ ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಎಚ್. ಡುಂಡಿರಾಜ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಕುದ್ರು ಎಂಬ ಸಣ್ಣ ಗ್ರಾಮದ ವೆಂಕಟರಮಣಭಟ್ ಮತ್ತು ರಾಧಮ್ಮ ಎಂಬ ದಂಪತಿಗಳಿಗೆ 18ನೇ ಆಗಸ್ಟ್, 1956 ರಂದು ಜನಿಸಿದ ಡುಂಡಿರಾಜರ ಮನೆಯಲ್ಲಿ ಆರ್ಥಿಕವಾಗಿ ಬಡತನವಿದ್ದರೂ, ಸಾಂಸ್ಕೃತಿಕವಾಗಿ ಶ್ರ್ರೀಮಂತರಾಗಿದ್ದಂತಹ ಕುಟಂಬ. ಆಗೆಲ್ಲಾ ಇಂದಿನಂತೆ ರೇಡಿಯೋ ಟಿವಿಗಳು ಇಲ್ಲದಿದ್ದಂತಹ ಕಾಲದಲ್ಲಿ ಮನೆಯ ಹತ್ತಿರವೇ ಇದ್ದ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ ನೆಡೆಯುತ್ತಿದ್ದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾಗಲೇ ಅವರಿಗೆ ಬರಯಲು ಪ್ರೇರೇಪಣೆಯಾಗಿ, ತಮ್ಮ 5ನೇ ತರಗತಿಯ ವೇಳೆಗೆ ತಮ್ಮ . ಗೆಳೆಯರೊಂದಿಗೆ ಸೇರಿ ಕೈಬರಹದ ಪತ್ರಿಕೆಯೊಂದನ್ನು ಆರಂಭಿಸಿ ಅದನ್ನು ಅವರು ಆಟವಾಡುವ ಅಂಗಡಿಯಲ್ಲಿ ಮಾರಾಟಮಾಡುತ್ತಿದ್ದರಂತೆ. ಡುಂಡಿರಾಜರ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಶ್ರೀ ಸೀತಾರಾಮ ಎನ್ನುವರು ಪಠ್ಯಪುಸ್ತಕಗಳಲ್ಲದೇ ಇತರೇ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತಿದ್ದ ಕಥೆ ಕವನಗಳನ್ನು ತಂದು ಮಕ್ಕಳ ಮುಂದೆ ಓದಿ ಅವರೆಲ್ಲರಿಗೂ ಈ ರೀತಿಯಾಗಿ ಓದುವುದನ್ನು ಪ್ರೋತ್ಸಾಹಿಸುವ ಪರಿಪಾಠ ಬೆಳೆಸಿದ್ದದ್ದು ಡುಂಡಿರಾಜರ ಮೇಲೆ ಭಾರೀ ಪ್ರಭಾವವನ್ನು ಬೀರಿತ್ತು.

ಮುಂದೆ ಬಸ್ರೂರು ಹೈಸ್ಕೂಲಿಗೆ ಹೋದಾಗಲೂ ಅಲ್ಲಿಯೂ ಇದ್ದ ಕೈಬರಹದ ಪತ್ರಿಕೆಯಲ್ಲಿ ಡುಂಡಿರಾಜರ ಬರವಣಿಗೆ ಮುಂದುವರೆದು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ವಾರಪತ್ರಿಕೆಗಳಾದ ಉದಯವಾಣಿ, ಸುಧಾ ಪತ್ರಿಕೆಯ ಮಕ್ಕಳ ವಿಭಾಗಗಳಿಗೂ ತಮ್ಮ ಬರಹವನ್ನು ಕಳುಹಿಸಿಕೊಡುತ್ತಿದ್ದರು. ಅವರ ಮನೆಯಲ್ಲಿ ಆ ಪತ್ರಿಕೆಗಳು ಬರುತ್ತಿರಲಿಲ್ಲವಾದ್ದರಿಂದ ಅದೆಷ್ಟೋ ಬಾರಿ ಯಾರೋ ಅವರ ಬರಹಗಳನ್ನು ಓದಿ ಇವರಿಗೆ ತಿಳಿಸಿದಾಗಲೇ ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಷಯ ತಿಳಿದು ಅವರಿಗೆ ಸಂತೋಷವಾಗುತ್ತಿತ್ತು.

ಮನೆಯೇ ಮೊದಲ ಪಾಠ ಶಾಲೆ, ಪೋಷಕರೇ ಮೊದಲ ಗುರುಗಳು ಎಂಬ ಹಾಗೆ, ದೇವಸ್ಥಾನದ ಭಜನೆಯೊಂದಿಗೆ ಅವರ ತಂದೆಯವರು ಪ್ರತಿದಿನವೂ ಊರಿನವರೆಲ್ಲರನ್ನು ಮನೆಯಲ್ಲಿ ಸೇರಿಸಿಕೊಂಡು ಹೇಳುತ್ತಿದ್ದ ರಾಮಾಯಣ, ಮಹಾಭಾರತವೂ ಅವರ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಲು ಕಾರಣವಾಗಿತ್ತು. ಎಸ್.ಎಸ್.ಎಲ್.ಸಿ ಯಲ್ಲಿ ಅವರ ಶಾಲೆಗೇ ಅತಿಹೆಚ್ಚಿನ ಅಂಕಗಳಿಸಿ ತೇರ್ಗಡೆಯಾಗಿ ಪಿ.ಯು.ಸಿ. ಶಿಕ್ಷಣಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜಿಗೆ ಸೇರಿ ಅವರ ಅಣ್ಣ ಶಿವರಾಮ ಭಟ್ ಅವರ ಮನೆಯಲ್ಲಿ ಉಳಿದುಕೊಂಡರು. ಅವರ ಅಣ್ಣನ ಮನೆಗೆ ಅಡಿಗರು, ನಾಡಿಗರು, ನಿಸಾರ್ ಮುಂತಾದವರು ಬಂದು ಹೋಗುತ್ತಿದ್ದ ಕಾರಣ ಅವರೆಲ್ಲರ ಒಡನಾಟದಿಂದ ಅಲ್ಲೊಂದು ಉತ್ತಮ ಸಾಹಿತ್ಯಕ ವಾತಾವರಣ ಬೆಳೆದು ದುಂಡಿರಾಜರ ಸಾಹಿತ್ಯಕ್ಕೆ ಮತ್ತಷ್ಟು ಪ್ರೇರಣೆಯನ್ನು ನೀಡಿತು. ಪಿಯುಸಿ ಮುಗಿದ ನಂತರ ಇಷ್ಟವಿಲ್ಲದಿದ್ದರೂ ನಂತರ 1972-78ರಲ್ಲಿ ಹೆಬ್ಬಾಳದ ಗಾಂಧಿ ಕೃಷಿ ವಿಶ್ವವಿದ್ಯಾನಿಲಯ (GKVK) ಬಿ.ಎಸ್ಸಿ(ಕೃಷಿ) ಪದವಿಯನ್ನು ಪಡೆದು, 1978-80ರಲ್ಲಿ ಎಂ. ಎಸ್ಸಿ ಪದವಿಗಾಗಿ ಧಾರವಾಡದ ಕೃಷಿ ಕಾಲೇಜಿಗೆ ಸೇರಿಕೊಂಡಿದ್ದಾಗಲೂ ನಾಟಕವೊಂದನ್ನು ಬರೆದು ಅದನ್ನು ನಾ. ದಾಮೋದರ ಶೆಟ್ಟಿ ಅವರ ತಂಡ ಪ್ರದರ್ಶಸಿದಾಗ ಅದಲ್ಲಿ ದುಂಡಿರಾಜರು ನಟಿಸಿದ್ದರು. ಸಾಹಿತ್ಯದ ಕೃಷಿಯೊಂದಿಗೆ ಓದಿನಲ್ಲೂ ಅತ್ಯಂತ ಚುರುಕಾಗಿದ್ದ ಡುಂಡಿರಾಜರು, ಕಾಲೇಜಿಗೆ ಅತ್ಯಧಿಕ ಅಂಕ ಗಳಿಸಿ ಸ್ವರ್ಣ ಪದಕದೊಂದಿಗೆ ಎಂ.ಎಸ್ಸಿ (ಕೃಷಿ) ಪೂರೈಸಿದರು.

ಆರಂಭದಲ್ಲಿ ಕೆಲ ಕಾಲ ಉಪನ್ಯಾಸಕಾರನಾಗಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದರಾದರೂ, ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಕೃಷಿ ಅಧಿಕಾರಿಯಾಗಿ ವೃತ್ತಿ ಆರಂಭಿಸಿ ಮಂಗಳೂರು, ಉಡುಪಿ, ಕಾರ್ಕಳ, ಬ್ರಹ್ಮಾವರ, ಬೆಳಗಾವಿ, ನಾಸಿಕ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಹೀಗೆ ಸರಿ ಸುಮಾರು 36 ವರ್ಷಗಳ ಕಾಲ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳ ನಿರ್ವಹಿಸಿ, 2018ರಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ.

dun1

ಹೀಗೆ ಕೆಲಸದ ನಡುವೆಯೂ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸುತ್ತಲೇ, ಅವರ ಅನೇಕ ಬರಹಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಅವುಗಳ ವಿಶೇಷಾಂಕಗಳಲ್ಲಿ ಪ್ರಕಟವಾದರೆ ಅವರು ನಾಟಕಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿಯೂ ಪ್ರಸಾರವಾಗಿವೆ ಅದೆಷ್ಟೋ ಬಾರಿ ಅವರ ನಾಟಕಗಳಲ್ಲಿ ಅವರೇ ಅಭಿನಯಿಸಿದ ಉದಾರಣೆಗಳು ಇವೆ. ಆರಂಭದಲ್ಲಿ ಎಲ್ಲರಂತೆ ಸಾಮಾನ್ಯ ರೀತಿಯಲ್ಲಿಯೇ ಕವಿತೆಗಳನ್ನು ಬರೆಯುತ್ತಿದ್ದ ಡುಂಡಿರಾಜರು ದಿನಕರ ದೇಸಾಯಿಯವರ ಶೈಲಿಯಿಂದ ಪ್ರೇರಿತರಾಗಿ 1985ರಿಂದ ದೇಸಾಯಿಯವರ ಶೈಲ್ಲಿಯೇ ಹನಿಗವನಗಳನ್ನು ಬರೆಯಲು ಆರಂಭಿಸುತ್ತಾರೆ. ಆನಂತರ ಸುಬ್ರಾಯ ಚೊಕ್ಕಾಡಿಯವರ ಸಲಹೆಯಂತೆ ಇತರರ ಶೈಲಿಯನ್ನು ಅನುಸರಿಸುವುದನ್ನು ಬಿಟ್ಟು ತಮ್ಮದೇ ಶೈಲಿಯನ್ನು ರೂಢಿಸಿಕೊಂಡ ನಂತರ ಕೆಲವೇ ದಿನಗಳಲ್ಲಿ ಜನಪ್ರಿಯ ಚುಟುಕು ಕವಿಗಳಾಗುತ್ತಾರೆ.

dun6

ಯಾವುದೇ ವಿಷಯವನ್ನು ಪ್ರಸ್ತುತಪಡಿಸುವಾಗ ಅದನ್ನು ಗಂಭೀರವಾಗಿ ಹೇಳುವುದಕ್ಕಿಂತಲೂ ಹಾಸ್ಯದ ಮೂಲಕ ಹೇಳಿದರೆ ಅದು ಹೆಚ್ಚು ಜನರನ್ನು ತಲುಪುತ್ತದೆ ಎಂಬ ಕಾರಣಕ್ಕಾಗಿ ಅವರು‍ ನಗೆಹನಿಗಳನ್ನು ಬರೆಯಲು ಆರಂಭಿಸಿದರು. ಹಾಸ್ಯವನ್ನು ಇನ್ನಷ್ಟು ಜನರಿಗೆ ತಲುಪಿಸುವುದು ಎಂದು ಯೋಚಿಸಿ, ಲಘು ಧಾಟಿಯ ಪ್ರಬಂಧಗಳನ್ನು ಜನ ಓದುತ್ತಾರೆ. ಹಾಗೆಯೇ ಅದರ ಜೊತೆ ಕೆಲವು ಪಂಚ್ ಗಳನ್ನು ಸೇರಿಸಿ ಸರಿಯಾದ ಒತ್ತು ಕೊಟ್ಟು ಓದಿದರೆ ಅದರ ಸ್ವಾರಸ್ಯ ಜನರಿಗೆ ಇನ್ನೂ ಹೆಚ್ಚಾದೀತು ಎಂಬ ಯೋಚನೆಯಿಂದ ಈ ನೂತನ ನಗೆ ಹನಿಯ ಪ್ರಯೋಗ ಮಾಡಿ ಅದರಲ್ಲೂ ಸಫಲತೆಯನ್ನು ಕಂಡು ಕೊಂಡಿದ್ದಾರೆ. ಕೆಲವೊಮ್ಮೆ ಅವರ ಹಾಸ್ಯ ಅಪಹಾಸ್ಯಕ್ಕೀಡಾಗುತ್ತದೆ ಎಂಬ ಅರಿವೂ ಸಹಾ ಅವರಿಗಿದೆ.

ಇವಲ್ಲದರ ನಡುವೆಯೇ ಭಾರತಿ ಎಂಬುವರೊಡನೆ ದಾಂಪತ್ಯಕ್ಕೆ ಕಾಲಿಟ್ಟು ಸಹಜಾ ಮತ್ತು ಸಾರ್ಥಕ್ ಎಂಬ ಇಬ್ಬರು ಮಕ್ಕಳಿದ್ದು ಅವರಿರೆಲ್ಲರಿಗೂ ಮದುವೆಯಾಗಿ ಅಳಿಯ ಮತ್ತು ಸೊಸೆಯೂ ಸಹಾ ಅವರ ಕುಟುಂಬಕ್ಕೆ ಜೋಡಣೆಯಾಗಿದ್ದಾರೆ. ಕಾರ್ಪೋರೇಷನ್ ಬ್ಯಾಂಕಿನಿಂದ ನಿವೃತರಾಗಿ ಮಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರೂ ಜೊತೆ ಜೊತೆಯಲ್ಲಿಯೇ ಪ್ರಸಕ್ತ ವಿಷಯಗಳಿಗೆ ಅನುಗುಣವಾಗಿ ತಮ್ಮ ಪಂಚ್ ಗಳನ್ನು ಹರಿದು ಬಿಡುತ್ತಲೇ ಇದ್ದಾರೆ.

ಹನಿಗವನಗಳ ಕೊತೆ ಅಂಕಣಕಾರರಾಗಿಯೂ ಪ್ರಸಿದ್ಧರಾಗಿರುವ ಡುಂಡಿರಾಜ್ ವಿಜಯಕರ್ನಾಟಕ, ಪ್ರಜಾವಾಣಿ, ಕಸ್ತೂರಿ, ತುಷಾರ, ವಿಜಯವಾಣಿ ಹಾಗೂ ಉದಯವಾಣಿ ಪತ್ರಿಕೆಗಳಿಗೆ ಅನೇಕ ಅಂಕಣಗಳನ್ನು ಬರೆದಿದ್ದಾರೆ ಮತ್ತು ಬರೆಯುತ್ತಲೇ ಇದ್ದಾರೆ. 2011ರಿಂದ ಆರಂಭಿಸಿ ಇಂದಿನವರೆಗೂ ಪ್ರತಿ ದಿನವೂ ಉದಯವಾಣಿ ಪತ್ರಿಕೆಯಲ್ಲಿ ‘ಹನಿದನಿ’ಎಂಬ ದೈನಿಕ ಅಂಕಣದಲ್ಲಿ ನಿರಂತರವಾಗಿ ಹೊಸ ಹನಿಗವನ ಬರೆಯುತ್ತಲೇ ಬಂದಿರುವುದು ಅವರ ಹೆಗ್ಗಳಿಕೆಯಾಗಿದೆ.

dun5

ಬರವಣಿಗೆಯೊಂದಿಗೆ ಹಾಸ್ಯ ಭಾಷಣಕಾರರಾಗಿಯೂ ಜನಪ್ರಿಯತೆ ಹೊಂದಿರುವ ಡುಂಡಿರಾಜ್ ಅವರು ಕೇವಲ ಕರ್ನಾಟಕವಲ್ಲದೇ ದೂರದ ದೆಹಲಿ, ಮುಂಬೈ, ಚೆನ್ನೈ, ಅಮೆರಿಕಾ, ಇಂಗ್ಲೇಂಡ್, ಸಿಂಗಾಪೂರ್, ದುಬೈ, ಕತಾರ್ ಹಾಗು ಬಹರೈನ್ ಗಳಲ್ಲಿಯೂ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇದುವರೆಗೂ ಡುಂಡಿರಾಜ್ ಅವರ 60 ಕೃತಿಗಳು ಪ್ರಕಟಗೊಂಡಿದ್ದು ಅವುಗಳಲ್ಲಿ 9 ಕವನ ಸಂಕಲನಗಳು, 12 ಹನಿಗವನಗಳ ಸಂಗ್ರಹ, 10 ನಾಟಕ ಕೃತಿಗಳು, 10 ನಗೆ ಬರಹ, ಲಲಿತ ಪ್ರಬಂಧ ಮತ್ತು ಅಂಕಣ ಬರಹಗಳ ಸಂಗ್ರಹ ಒಂದು ಸಂಪಾದಿತ ಕೃತಿಯೂ ಸೇರಿದೆ. ಒಟ್ಟು 4 ಧ್ವನಿ ಸುರುಳಿಗಳೂ ಬಿಡುಗಡೆಯಾಗಿವೆ. ನಕ್ಕಳಾ ರಾಜಕುಮಾರಿ, ಕೋತಿಗಳು ಸಾರ್ ಕೋತಿಗಳು, ನಿಂಬೆಹುಳಿ ಹಾಗೂ ಹಾರುವ ಹಂಸಗಳು ಇನ್ನು ಮುಂತಾದ ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸುವ ಮೂಲಕ ಚಿತ್ರಗೀತೆಗಳ ರಚನೆಕಾರರಾಗಿಯೂ ಪ್ರಸಿದ್ಧಿಯನ್ನು ಪಡೆದಿದ್ದಾರೆ.

dun3

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಡುಂಡಿರಾಜ್ ಅವರಿಗೆ ಹತ್ತು ಹಲವಾರು ಪ್ರಶಸ್ತಿ, ಗೌರವಗಳು ದೊರೆತಿವೆ ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.

 • ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ
 • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ
 • ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
 • ಮುದ್ದಣ ಕಾವ್ಯ ರಾಜ್ಯಪ್ರಶಸ್ತಿ
 • ಚುಟುಕು ಸಾರ್ವಭೌಮ ಪ್ರಶಸ್ತಿ
 • ಚುಟುಕು ಚಕ್ರವರ್ತಿ ಪ್ರಶಸ್ತಿ
 • ಚುಟುಕು ರತ್ನ ಪ್ರಶಸ್ತಿ
 • ವಿಶ್ವೇಶ್ವರಯ್ಯ ರಾಷ್ತ್ರೀಯ ಸಾಹಿತ್ಯ ಪ್ರಶಸ್ತಿ

ಡುಂಡಿರಾಜ್ ಕೆಲ ಹನಿಗವನಗಳು

ಗಾದೆ

ಚಳಿಗಾಲ ಎಂದರೆ ವಿನ್ಟರು

ಬೇಸಿಗೆ ಬಂದರೆ ನೆಂಟರು !

ಯಾರಿಗೆ

ದಾಂಪತ್ಯ ಜೀವನದಲ್ಲಿ ಅಂತಿಮ ಜಯ ಯಾರಿಗೆ?

ಗಂಡನಿಗಲ್ಲ ಹೆಂಡತಿಗೂ ಅಲ್ಲಾ, ಅವಳ ಕಣ್ಣಿರಿಗೆ!

ಮಿಂದದ್ದು

ಎಷ್ಟು ಬೆಳ್ಳಗಿದ್ದಾಳೆ!, ಹಾಲಲ್ಲಿ ಮಿಂದವಳೇ?

Hall ಅಲ್ಲಿ ಅಲ್ಲಾ ಸಾರ್, ಬಾತ್ ರೊಮಿನಲ್ಲೇ!

ಲಾಭ

ಬರೆದು ಬರೆದೂ ಕನ್ನಡ ಕವನ,

ಪಡೆದೆನು ಕನ್ನಡಕವನ್ನ !

ಅಪೇಕ್ಷೆ

ಮದುವೆಯಾಗುವ ಹುಡುಗ ಸ್ಲಿಮ್ ಆಗಿರಬೇಕು, ಟ್ರಿಮ್ ಆಗಿರಬೇಕು,

ಕೇಳಿದಾಗ ಕೊಡುವ, ATM ಆಗಿರಬೇಕು!

dun2

ನಾಡು ನುಡಿ ಸಾಹಿತ್ಯ ಇರುವುದರಿಂದಲೇ ಬದುಕು ಬಹಳ ಸುಂದರವಾಗಿ ಕಾಣುತ್ತದೆ. ಇಲ್ಲೊಂದು ಆಸಕ್ತಿ ಮೂಡಿದೆ. ಬುದುಕನ್ನು ಹೆಚ್ಚು ಸುಂದರಗೊಳಿಸೋದೆ ನಮ್ಮ ನಾಡು ನುಡಿ ಸಂಸ್ಕೃತಿ ಎಂದು ತಮ್ಮ ಚೆಂದನೆಯ ಪಂಚ್ ಗಳುಳ್ಳ ಹನಿಗನವನಗಳ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಎಚ್ಚರಿಕೆಯ  ಗಂಟೆಯನ್ನೂ ಬಾರಿಸುತ್ತಿರುವ ಚುಟುಕು ಸಾರ್ವಭೌಮ, ಚುಟುಕು ಚಕ್ರವರ್ತಿ ಡುಂಡಿರಾಜರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಮೂಗೂರು ಸುಂದರಂ ಮಾಸ್ಟರ್

ಅವಿಭಜಿತ ಮೈಸೂರು ಜಿಲ್ಲೆಯ ‍ಚಾಮರಾಜನಗರದ ಬಳಿಯ ಮೂಗೂರು ಗ್ರಾಮದ ತರುಣ, ಸಿನಿಮಾದ ಹುಚ್ಚಿನಿಂದ ದೂರದ ಮದ್ರಾಸಿಗೆ ಹೋಗಿ,  ಎಂಜಿಆರ್, ಎಂಟಿಆರ್, ಜಯಲಲಿತ ಅಂತಹ ಮುಖ್ಯಮಂತ್ರಿಗಳಿಂದ ಹಿಡಿದು, ರಾಜಕುಮಾರ್, ಶಿವಾಜಿ ಗಣೇಶನ್, ವಿಷ್ಣುವರ್ಧನ್, ರಜನೀಕಾಂತ್, ಚಿರಂಜೀವಿ, ಅಕ್ಕಿನೇನಿ ನಾಗೇಶ್ವರ್ ರಾವ್ ಇಂದ ಹಿಡಿದು ಅವರ ಕುಟುಂಬದ ಇತ್ತೀಚಿನ ನಟರ ವರೆಗೂ ಕುಣಿಸಿ ಕುಪ್ಪಳಿಸಿದ್ದಲ್ಲದೇ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಬಹುತೇಕ ನಟ ನಟಿಯರಿಂದ ನೃತ್ಯ ಮಾಡಿಸಿ, 1200ಕ್ಕೂ ಹೆಚ್ಚಿನ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಮೂಗೂರು ಸುಂದರಂ ಮಾಸ್ಟರ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು

ನೃತ್ಯ ನಿರ್ದೇಶಕ ಮೂಗೂರು ಸುಂದರಂ ಎಂದರೆ ಅನೇಕರಿಗೆ ಥಟ್ಟನೇ ಹೊಳೆಯದೇ ಯಾರಪ್ಪಾ ಇವರು? ಎನಿಸಿದಲ್ಲಿ, ಭಾರತದ ಮೈಕಲ್ ಜಾಕ್ಸನ್ ಎಂದೇ ಪ್ರಸಿದ್ಧರಾಗಿರುವ, ದಕ್ಷಿಣ ಭಾರತ ಮತ್ತು ಬಾಲಿವುಡ್ಡಿನ  ಖ್ಯಾತ ನೃತ್ಯಪಟು,  ಚಿತ್ರನಟ, ನಿರ್ದೇಶಕರಾದ ಪ್ರಭುದೇವ ಅವರ ತಂದೆ ಎಂದು ಪರಿಚಯಿಸಿದರೆ ನೆನಪಾಗ ಬಹುದು.  ಸುಂದರ್ ಅವರು ಅಕ್ಟೋಬರ್ 31,  1938ರಲ್ಲಿ ಮೂಗೂರಿನಲ್ಲಿ ಸಾಧಾರಣ ಕೃಷಿ ಪ್ರಧಾನವಾದ ಕುಟುಂಬದಲ್ಲಿ  ಜನಿಸುತ್ತಾರೆ. ಎಲ್ಲರಂತೆ ಬಾಲಕ ಸುಂದರ್ ಅವರನ್ನು  ಓದಲು ಶಾಲೆಗೆ ಸೇರಿಸಿದಾಗ ವಿದ್ಯೆ ತಲೆಗೆ ಹತ್ತದೆ,  ಎರಡನೇ ತರಗತಿಗೇ ಶಾಲೆಯನ್ನು ಬಿಟ್ಟು ತಮ್ಮ ಕುಲ ವೃತ್ತಿಯಾದ ಮೂಗೂರಿನ ತ್ರಿಪುರ ಸಂದರಿ ದೇವಸ್ಥಾನದಲ್ಲಿ ಶಂಖ ಊದುವ ಕೆಲಸ ಮಾಡಿಕೊಂಡೇ ಬೆಳೆಯುತ್ತಾ ಹೋಗುತ್ತಾರೆ. ಬಾಲ್ಯದಿಂದಲೂ ಅವರಿಗೆ ಯಾವುದೇ ಹಾಡು ಅಥವಾ ತಾಳ ವಾದ್ಯದ ಶಬ್ಧ ಕೇಳಿದೊಡನೆಯೇ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಅಭ್ಯಾಸ. ಇದರ ಜೊತೆ ಜೊತೆಗೇ ವಯೋಸಹಜವಾಗಿ ಊರಿನ ಟೆಂಟ್ ಸಿನಿಮಾದಲ್ಲಿ ಬರುತ್ತಿದ್ದ ಸಿನಿಮಾಗಳನ್ನು ನೋಡುವ ಖಯಾಲಿ. ಗೆಳೆಯರೊಡನೆ ಸಿನಿಮಾ ನೋಡಲೆಂದೇ, ಅವರ ತಂದೆ ನಡೆಸುತ್ತಿದ್ದ ಸಣ್ಣದಾದ ಹೋಟೆಲ್ಲಿನ ಗಲ್ಲ ಪೆಟ್ಟಿಗೆಯಿಂದ ದುಡ್ಡನ್ನು ಕದ್ದು ಸಿಕ್ಕಿಕೊಂಡ ಪ್ರಸಂಗವೂ ಇದೆ.  ಪಾತಾಳ ಭೈರವಿ ಚಿತ್ರವನ್ನು ಹತ್ತಾರು ಸಲಾ ನೋಡಿದ ಪ್ರಭಾವದಿಂದ ಸಿನಿಮಾ ಹುಚ್ಚನ್ನು ಹತ್ತಿಸಿಕೊಂಡು ಮದ್ರಾಸ್ಸಿಗೆ ಓಡಿ ಹೋಗುತ್ತಾರೆ.

ಪರಿಚಯವೇ ಇಲ್ಲದ ಊರಿನಲ್ಲಿ ಹೊಟ್ಟೆ ಪಾಡಿಗೆ  ಏನಾದರೂ ಮಾಡಲೇಬೇಕೆಂದು ಹಾಗೂ ಹೀಗೂ ಮಾಡಿ  ವಾಹಿನಿ ಸ್ಟುಡಿಯೋ ಹತ್ತಿರವೇ ಇದ್ದ  ಚಂದಮಾಮಾ ಪುಸ್ತಕ ಮುದ್ರಣಾಲಯದ ಬಳಿ  ತಿಂಗಳಿಗೆ 40ರೂ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.  ಬಾಲ್ಯದಿಂದಲೂ ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣ ಸಿನಿಮಾ ಸೇರಲು ನೃತ್ಯವೂ ಅತ್ಯಾವಶ್ಯವೂ ಇದ್ದ ಕಾರಣ,  ಅಲ್ಲೇ ಹತ್ತಿರದ ನೃತ್ಯ ಶಾಲೆಯೊಂದಕ್ಕೆ ತಿಂಗಳಿಗೆ 10 ರೂಪಾಯಿ ಫೀ ಕೊಟ್ಟು ಸೇರಿಕೊಳ್ಳುತ್ತಾರಾದರೂ ಆ ನೃತ್ಯಶಾಲೆಯ ತರಭೇತುದಾರರಿಗಿಂತಲೂ ಸುಂದರ್ ಅವರೇ ಚೆನ್ನಾಗಿ  ನೃತ್ಯ ಮಾಡುತ್ತಿರುತ್ತಾರೆ. ಹಾಗೂ ಹೀಗೂ 1962 ರಲ್ಲಿ ಕೊಂಜುಮ್ ಸಲಂಗೈ ಚಿತ್ರದಲ್ಲಿ ಸಹ ನರ್ತಕರಾಗಿ ನಟಿಸಿಸುವ ಅವಕಾಶ ಸಿಕ್ಕುತ್ತಿದ್ದಂತೆಯೇ  ಚಂದಮಾಮಾ ಮುದ್ರಣಾಲಯದ ಕೆಲಸ ಬಿಟ್ಟುಬಿಡುತ್ತಾರೆ. ಹಾಗೇ ಅಲ್ಲೊಂದು ಇಲ್ಲೊಂದು ಸಿನಿಮಾದ ಅವಕಾಶ ಸಿಕ್ಕಿದರೂ ಅಲ್ಲಿಂದ ಬರುತ್ತಿದ್ದ ಹಣ ಜೀವನಕ್ಕೆ ಸಾಲದೇ, 1962ರಲ್ಲಿ ಭಾರತ ಮತ್ತು ಚೀನಾದ ನಡುವೆ ನಡೆಯುತ್ತಿದ್ದ ಯುದ್ದಕ್ಕೆ ಸೈನಿಕರ ಅವಶ್ಯಕತೆ ಇದೆ ಎಂಬುದನ್ನು ಗೆಳೆಯನಿಂದ ತಿಳಿದು ಸೈನ್ಯಕ್ಕೆ ಸೇರುವ ಸಂದರ್ಶನಕ್ಕೆ ಹಾಜರಾಗಿ ಅಲ್ಲಿನ ಎಲ್ಲಾ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿ ಸೈನ್ಯಕ್ಕೆ ಸೇರುವ ಹಿಂದಿನ ರಾತ್ರಿ ಮತ್ತೊಂದು ಸಿನಿಮಾದ ಅವಕಾಶ ಸಿಕ್ಕಿದ ಕಾರಣ ಸೈನ್ಯಕ್ಕೆ ಸೇರದೇ ಸಿನಿಮಾದಲ್ಲಿಯೇ ಮುಂದುವರೆಯಲು ನಿರ್ಧರಿಸುತ್ತಾರೆ.

ಅಷ್ಟರಲ್ಲಿ ಅವರಿಗೆ ಖ್ಯಾತ ನೃತ್ಯ ನಿರ್ದೇಶಕ ತಂಗಪ್ಪನ್ ಮಾಸ್ಟರ್  ಅವರ ಪರಿಚಯವಾಗಿ ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕರಾಗಿ ಕೆಲಸ ಮಾಡುತ್ತಲೇ ಸಿನಿಮಾರಂಗದ ಎಲ್ಲರ ಪರಿಚಯ ಮತ್ತು ಒಳಹೊರಗುಗಳನ್ನು ಅರಿತುಕೊಂಡು, ತಮಿಳು ನಾಡಿನ ಖ್ಯಾತ ನಿರ್ದೇಶಕ ಬಾಲಚಂದರ್ ಅವರ ಪ್ರಥಮ ನಿರ್ದೇಶನ ಚಿತ್ರವಾದ  ನೀರ್ಕುಮಿಳಿ ಚಿತ್ರಕ್ಕೆ ಸ್ವತಂತ್ರ್ಯ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ ಸುಂದರ್ ಅವರು ನೋಡ ನೋಡುತ್ತಿದ್ದಂತೆಯೇ ಸುಂದರಂ ಮಾಸ್ಟರ್ ಎಂದೇ ಖ್ಯಾತರಾಗಿ, ಎಪ್ಪತ್ತರ ದಶಕದಿಂದಲೂ ಸುಮಾರು ನಾಲ್ಕು ದಶಕಗಳ ಕಾಲ ದಕ್ಷಿಣ ಭಾರತದ ಬಹುತೇಕ ಎಲ್ಲಾ ನಟನಟಿಯರಿಗೂ ಅಚ್ಚು ಮೆಚ್ಚಿನ ನೃತ್ಯ ನಿರ್ದೇಶಕರಾಗಿದ್ದಾರೆ. ಅದಲ್ಲದೇ ಇತರೇ ನೃತ್ಯ ನಿರ್ದೇಶಕರಂತೆ ಅರಚುತ್ತಾ, ಕಿರಿಚಾಡದೇ, ಮಾತು ಕಡಿಮೆ, ಕೆಲಸ ಜಾಸ್ತಿ ಮಾಡುವ ಸುಂದರಂ ಮಾಸ್ಟರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸ್ವತಃ ಶಾಸ್ತ್ರೀಯವಾಗಿ ನೃತ್ಯ ಕಲಿಯದಿರುವ ಸುಂದರಂ ಮಾಸ್ಟರ್ ಅವರ ನೃತ್ಯ ಶೈಲಿ ಇತರೇ ನೃತ್ಯ ನಿರ್ದೇಶಕರಿಗಿಂತಲೂ ವಿಭಿನ್ನವಾಗಿದ್ದು ಸರಳ ಮತ್ತು ಸುಂದರವಾಗಿದ್ದು ಹಾಡಿನ ಭಾವರ್ಥಕ್ಕೆ ತಕ್ಕಂತೆ ನಟ ನಟಿಯರ ಇತಿ ಮಿತಿಯನ್ನು ಅರಿತುಕೊಂಡು ಸಂಯೋಜಿಸುವ ನೃತ್ಯ ಚಿತ್ರರಸಿಕರ ಹೃನ್ಮನಗಳನ್ನು ಗೆದ್ದಿವೆ.

ಸಿನಿಮಾರಂಗದಲ್ಲಿ ಉತ್ತುಂಗದ ಸ್ಥಿತಿಯಲ್ಲಿರುವಾಗಲೇ ಮತ್ತೆ ತಮ್ಮ ತವರೂರಿಗೆ ಬಂದು ಮಹದೇವಮ್ಮ ಅವರನ್ನು ವಿವಾಹವಾಗಿ, ಅವರ ಸುಖಃ ದಾಂಪತ್ಯದ ಫಲವಾಗಿ ಅವರಿಗೆ ರಾಜು ಸುಂದರಂ,  ಪ್ರಭುದೇವ, ಮತ್ತು ನಾಗೇಂದ್ರ ಪ್ರಸಾದ್ ಎಂಬ ಮೂವರು ಗಂಡು ಮಕ್ಕಳಿದ್ದಾರೆ. ಈ ಮೂವರು ಮಕ್ಕಳಿಗೂ ಶಾಸ್ತ್ರೀಯವಾಗಿ ನೃತ್ಯಾಭ್ಯಾಸ ಮಾಡಿಸಿ ಅಧಿಕೃತವಾಗಿ ರಂಗಪ್ರವೇಶವನ್ನೂ ಮಾಡಿಸಿದ್ದಾರೆ. ಈಗ ಆ ಮೂವರು ಮಕ್ಕಳೂ ದಕ್ಷಿಣ ಭಾರತದ ಚಿತ್ರದಲ್ಲಿ ಹೆಸರಾಂತ ನೃತ್ಯ ನಿರ್ದೇಶಕರಾಗಿದ್ದಾರೆ.  ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ  ಪ್ರಭುದೇವ ನೃತ್ಯ ನಿರ್ದೇಶನವಲ್ಲದೇ, ನಾಯಕ ನಟನಾಗಿಯೂ ಮತ್ತು ಚಿತ್ರ ನಿರ್ದೇಶನನಾಗಿಯೂ ತಮಿಳು, ತೆಲುಗು ಮತ್ತು ಹಿಂದೀ ಚಿತ್ರರಂಗದಲ್ಲಿ ಪ್ರಜ್ವಲಿಸುತ್ತಿದ್ದಾರೆ.

ತಂದೆ ಮಕ್ಕಳು ಕರ್ನಾಟಕದಿಂದ ದೂರದಲ್ಲಿದ್ದು ಇಷ್ಟೆಲ್ಲಾ ಸಾಧಿಸಿದ್ದರೂ, ಇಂದಿಗೂ ಅವರ ಮನೆ ಮಾತು ಕನ್ನಡವೇ ಆಗಿದ್ದು, ಸುಂದರಂ ಮಾಸ್ಟರ್ ತಮ್ಮ ಕಿರಿಯ ಮಗ ನಾಗೇಂದ್ರ ಪ್ರಸಾದ್ ಅವರ ನಾಯಕ ನಟನಾಗಿ ಚೊಚ್ಚಲ ಚಿತ್ರ  ಮತ್ತು ಸುಂದರಂ ಮಾಸ್ಟರ್ ಅವರ ಚೊಚ್ಚಲ ನಿರ್ದೇಶನ  ಮನಸೆಲ್ಲಾ ನೀನೇ  (ತೆಲುಗು ಚಿತ್ರ ಮನಸಂತ ನುವ್ವೇ ಚಿತ್ರದ ರೀಮೇಕ್)  ಕನ್ನಡದಲ್ಲಿಯೇ ಮಾಡಿ ತಮ್ಮ ಕನ್ನಡತನವನ್ನು ಎತ್ತಿ ಹಿಡಿದಿದ್ದಾರೆ.

ಮಕ್ಕಳು ಚಿತ್ರರಂಗದಲ್ಲಿ ಮಿಂಚುತ್ತಾ ಚನ್ನೈನಲ್ಲಿಯೇ ವಾಸ್ತವ್ಯ ಹೂಡಿರುವಾಗ ಸುಂದರಂ ಮಾಸ್ಟರ್ ಚಿತ್ರರಂಗದ ಕೆಲಸಗಳಿಂದ ದೂರವಿದ್ದು ತಮ್ಮ ಪತ್ನಿಯೊಡನೆ ಮೈಸೂರಿನ ಜೆ.ಪಿ.ನಗರದಲ್ಲಿರುವ ಮನೆಯಲ್ಲಿ ನೆಮ್ಮದಿಯಾಗಿ ಜೀವನ ನಡೆಸುತ್ತಾ, ಅವರ ಮಾಲಿಕತ್ವದ ತ್ರಿಪುರ ಸುಂದರಿ ಕಲ್ಯಾಣ ಮಂಟಪವನ್ನು ನಿರ್ವಹಿಸುತ್ತಿರುವುದಲ್ಲದೇ,  ತಮ್ಮ ಹುಟ್ಟೂರಾದ ಮೂಗೂರಿನ ತಮ್ಮ ಜಮೀನಿನಲ್ಲಿ ಸ್ವತಃ ಟ್ರಾಕ್ಟರ್ ಚಲಾಯಿಸುತ್ತಾ, ಆಪ್ಪಟ ರೈತನಂತೆ ವ್ಯವಸಾಯ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಆಗಾಗ ಸಮಯ ಮಾಡಿಕೊಂಡು  ಕನ್ನಡ, ತಮಿಳು ತೆಲುಗು ಟಿವಿ ಛಾನೆಲ್ಲಿನ ಪ್ರಸಿದ್ಧ ನೃತ್ಯ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿಯೂ ನಿರ್ವಹಿಸುತ್ತಿದ್ದಾರೆ.

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ  ಜನಪ್ರಿಯ ನೃತ್ಯ ಸಂಯೋಜಕರಾಗಿ ಅವರ ಮಕ್ಕಳು ತಮಿಳುನಾಡಿನಲ್ಲಿಯೇ ವಾಸ್ತವ್ಯ ಹೂಡಿದ್ದರೂ ಅವರಲ್ಲರೂ  ಮೂಗುರು ಮತ್ತು ಮೈಸೂರುಗಳೊಂದಿಗೆ ನಿಕಟ ಸಂಪರ್ಕವನ್ನು ಉಳಿಸಿಕೊಂಡಿದ್ದಾರೆ. ಪ್ರಭುದೇವ ಅವರ ಮುಂಬೈ ಶೋ ಒಂದನ್ನು ನೋಡಲು ಹೋಗಿದ್ದ ಸುಂದರಂ ದಂಪತಿಗಳನ್ನು ನೋಡಿದ ಕಾರ್ಯಕ್ರಮದ ನಿರೂಪಕ ಆ ದಂಪತಿಗಳನ್ನು ವೇದಿಕೆಯ ಮೇಲೆ ಕರೆದು ತಮ್ಮ ಮಗನ ಕುರಿತಂತೆ ಎರಡು ಮಾತುಗಳನ್ನಾಡಿ ಎಂದು ವಿನಂತಿಸಿಕೊಂಡಾಗ, ಸುಂದರಂ ಮಾಸ್ಟರ್ ಅವರ ಧರ್ಮಪತ್ನಿ ಅ‍‍ಚ್ಚಕನ್ನಡದಲ್ಲಿ ಸ್ವಚ್ಚವಾಗಿ ಅ ವೇದಿಕೆಯ ಮೇಲೆ ಮಾತನಾಡಿ ನಮ್ಮ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದ ವೀಡೀಯೋ ವೈರಲ್ ಆಗಿತ್ತು.

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಸುಂದರಂ ಮಾಸ್ಟರ್ ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದು ಅವುಗಳಲ್ಲಿ ಪ್ರಮುಖವಾಗಿ,

 • 1993 ರಲ್ಲಿ ತಿರುಡಾ ತಿರುಡಾ ಚಿತ್ರದ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
 • 1999 ರಲ್ಲಿ ಜೀವಮಾನ ಸಾಧನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ
 • 2010 ರಲ್ಲಿ ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಿಜಯ್ ಪ್ರಶಸ್ತಿ
 • 2018 ರಲ್ಲಿ ಝೀ ತೆಲುಗು ಕಡೆಯಿಂದ ತೆಲುಗು ಚಿತ್ರರಂದಲ್ಲಿನ ಸೇವೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ

ಅದೊಮ್ಮೆ ವರನಟ ರಾಜ್ ಕುಮಾರರಿಗೆ ಕನ್ನಡದಲ್ಲೇಕೆ ನೃತ್ಯ ನಿರ್ದೇಶಕರು ಇಲ್ಲಾ?  ನೀವೇಕೆ ಪ್ರತಿಯೊಂದಕ್ಕೂ ತಮಿಳುನಾಡಿನಿಂದ ಕರೆಸಿಕೊಳ್ಳುತ್ತೀರೀ? ಎಂದು ಕೇಳಿದ್ದಕ್ಕೆ ಅಷ್ತೇ ತೀವ್ರವಾಗಿ ಪ್ರತಿಕ್ರಿಯಿಸಿದ ರಾಜಕುಮಾರರು, ನಮ್ಮಲ್ಲೇಕೆ ಇಲ್ಲ? ಖ್ಯಾತ ನೃತ್ಯನಿರ್ದೇಶಕರಾದ ನಮ್ಮ ಮೂಗೂರು ಸುಂದರಂ ಮತ್ತವರ ಮಕ್ಕಳು ಇಡೀ ದಕ್ಷಿಣ ಭಾರತ ಮತ್ತು ಹಿಂದೀ ಚಿತ್ರರಂಗವನ್ನೇ ಧೂಳಿಪಟ ಮಾಡಿದ್ದಾರಲ್ಲಾ? ಎಂದು ತಿರುಗೇಟು ನೀಡಿದ್ದರಂತೆ.

ಹೀಗೆ ಐದು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದಿಂದ ದೂರವಿದ್ದರೂ, ಕನ್ನಡಿಗರಾಗಿಯೇ, ಕನ್ನಡತನವನ್ನು ಎತ್ತಿ ಮೆರೆಸಿದ ಮತ್ತು ಮಕ್ಕಳ ಮೂಲಕ ಮೆರೆಸುತ್ತಿರುವ, ತಮ್ಮ ಇಳೀ ವಯಸ್ಸಿನಲ್ಲಿ ಇಲ್ಲಿದೇ ನಮ್ಮನೇ ಅಲ್ಲಿದ್ದೆ ಸುಮ್ಮನೇ ಎನ್ನುತ್ತಾ ಮತ್ತೇ ಮೈಸೂರಿಗೆ ಮರಳಿ ಕನ್ನಡದ ಮಣ್ಣಿನ ಮಗನಾಗಿರುವ ಮೂಗೂರು ಸುಂದರಂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?

ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್

ರಾಜ್ಯದಲ್ಲಿ ಈಗ ಪಂಚಾಯತಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮತ್ತು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೇ ಕೇವಲ ರಾಜ್ಯದಲ್ಲೇಕೇ, ಇಡೀ ರಾಷ್ಟ್ರದಲ್ಲಿಯೇ ಗ್ರಾಮೀಣ ಮಟ್ಟಕ್ಕೆ ಅಧಿಕಾರವನ್ನು ವಿಕೇಂದ್ರೀಕರಿಸಿದ ಹಿಂದಿರುವ ಕಥೆ ಬಲು ರೋಚಕವಾಗಿದೆ. ಅದು 1983, ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಪರ್ವ. ಸುಮಾರು 35-37 ವರ್ಷಗಳ ಕಾಲ ಕಾಂಗ್ರೇಸ್ ಆಡಳಿತದಿಂದ ಬೇಸತ್ತಿದ್ದ ಕನ್ನಡಿಗರು ಮೊತ್ತ ಮೊದಲ ಬಾರಿಗೆ ಕಾಂಗ್ರೇಸ್ಸನ್ನು ಧಿಕ್ಕರಿಸಿ, ಜನತಾ ಪಕ್ಷ + ಕ್ರಾಂತಿರಂಗ= ಜನತಾರಂಗವನ್ನು ಬೆಂಬಲಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ , ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ, ರಾಜ್ಯ ಕಂಡ ಅತ್ಯಂತ ಚಾಣಾಕ್ಷ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಕಾಂಗ್ರೇಸ್ಸೇತರ ಸರ್ಕಾರ ಆಡಳಿತಕ್ಕೆ ಬಂದ್ದಿತ್ತು. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದ ಕ್ರಾಂತಿರಂಗದ ಬಂಗಾರಪ್ಪ ನಿರಾಶರಾಗಿ ಸರ್ಕಾರದಿಂದ ದೂರ ಉಳಿದಾಗ ಕ್ರಾಂತಿರಂಗದ ಮತ್ತೊಬ್ಬ ಹಿರಿಯರಿಗೆ ಕೇಳಿದ ಖಾತೆಯ ಮಂತ್ರಿಗಿರಿ ಸಿಗುತ್ತಿತ್ತಾದರೂ, ಅವರು ಬಯಸೀ ಬಯಸೀ, ಯಾರೂ ಇಚ್ಛೆ ಪಡದ ಖಾತೆಯಾದ ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೇಳಿ ಪಡೆದದ್ದಲ್ಲದೇ, ಆ ಖಾತೆಯ ಮೂಲಕವೇ ಜನಸಾಮಾನ್ಯರಿಗೆ ಅದ್ಭುತ ಸೇವೆಯನ್ನು ಮಾಡಿ ಎಲ್ಲರೂ ಮೂಗಿನ ಮೇಲೆ ಬೆರೆಳಿಡುವಂತೆ ಮಾಡಿದ್ದಲ್ಲದೇ ಇಂದಿಗೂ ಹಳ್ಳಿಗಾಡಿನಲ್ಲಿ ಅವರ ಸೇವೆಯಿಂದಾಗಿ ನೀರ್ ಸಾಬ್ ಎಂದೇ ಪ್ರಖ್ಯಾತರಾಗಿರುವ ಅಬ್ದುಲ್ ನಜೀರ್ ಸಾಬ್ ಅವರು ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯವರಾದ ಅಬ್ದುಲ್ ನಜೀರ್ ಸಾಬ್, 25 ಡಿಸೆಂಬರ್ 1932, ತಮಿಳು ನಾಡಿನ ಬಯನಾಪುರಂ ಎಂಬಲ್ಲಿ ಜನಿಸಿದರೂ ಬೆಳೆದದ್ದೆಲ್ಲಾ ಗುಂಡ್ಲುಪೇಟೆಯಲ್ಲಿಯೇ. ಮನೆಯ ಆರ್ಥಿಕ ದುಸ್ಥಿತಿಯ ಪರಿಣಾಮವಾಗಿ ಹೈಸ್ಕೂಲ್ ವರೆಗೂ ಓದಿದ್ದ ನಜೀರ್ ಸಾಬ್, ಕೃಷಿ ಕಾರ್ಮಿಕರನ್ನು ಸಂಘಟಿಸುವುದು ಮತ್ತು ದೀನ ದಲಿತರ ಉನ್ನತಿಗಾಗಿ ಕೆಲಸ ಮಾಡುತ್ತಲೇ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು. ಗುಂಡ್ಲು ಪೇಟೆಯ ಅಂದಿನ ಶಾಸಕಿಯಾಗಿದ್ದ ಕೆ.ಎಸ್ ನಾಗತ್ನಮ್ಮ ಅವರ ಗರಡಿಯಲ್ಲಿಯೇ ಪಳಗಿ ,ಗುಂಡ್ಲು ಪೇಟೆ ಪಟ್ಟಣದ ಮುನ್ಸಿಪಲ್ ಕೌನ್ಸಿಲರ್ ಆಗಿ ನಂತರ ಅಧ್ಯಕ್ಷರು ಆಗಿ, ಕ್ರಾಂಗ್ರೇಸ್ ಪಕ್ಷದ ಕಟ್ಟಾಳುವಾಗಿದ್ದರು. ಆಗ ಕಾಂಗ್ರೇಸ್ಸಿನಲ್ಲಿ ಕೋಲಾರದ ಶ್ರೀನಿವಾಸಪುರದ ರಮೇಶ್ ಕುಮಾರ್ ಮತ್ತು ಆಂಧ್ರ ಮೂಲದವರಾಗಿದ್ದರೂ ಬೆಂಗಳೂರಿನ ಮಲ್ಲೇಶ್ವರದ ಶಾಸಕರಾಗಿದ್ದ ರಘುಪತಿ ಮತ್ತು ನಜೀರ್ ಸಾಬ್ ಅಮರ್ ಅಕ್ವರ್ ಆಂಥೋಣಿಯವರಂತೆ ತ್ರಿಮೂರ್ತಿಗಳೆಂದೇ ಖ್ಯಾತರಾಗಿದ್ದರು.. ಇನ್ನೂ ಬಿಸಿರಕ್ತದ ಚುರುಕಾದ ಆ ಯುವಕರ ಬಗ್ಗೆ, ಅದೇಕೋ ಏನೋ ಕಾಂಗ್ರೇಸ್ ಆಸಕ್ತಿ ತೋರದೇ, ಮೂಲೆ ಗುಂಪು ಮಾಡಿತ್ತು. ಸಾಮಾನ್ಯವಾಗಿ ಯಾವ ರಾಜಕಾರಣಿಗಳನ್ನೂ ಹೊಗಳದ ಲಂಕೇಶ್ ರವರು ತಮ್ಮ ಪತ್ರಿಕೆಯಲ್ಲಿ ನಜೀರ್ ಸಾಬ್ ಅವರ ವ್ಯಕ್ತಿತ್ವದ ಬಗ್ಗೆ ಒಂದು ವಾಸ್ತವಿಕ ಚಿತ್ರಣದ ಲೇಖನವೊಂದನ್ನು ಬರೆದು ಅದಕ್ಕೆ ನೀಡಿದ್ದ ಶೀರ್ಷಿಕೆ ಕಾಂಗೈ ಕೊಚ್ಚೆಯಲ್ಲೊಂದು ಕಮಲ – ನಜೀರ್ ಸಾಬ್‌ ಎಂಬುದು ಎಷ್ಟು ಅರ್ಥಗರ್ಭಿತವಾಗಿತ್ತು ಎಂದೆನಿಸುತ್ತದೆ.

ಮುಂದೆ ಇಂದಿರಾಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ದೇವರಾಜ ಅರಸು ರವರು ಕ್ರಾಂಗ್ರೇಸ್ಸಿನಿಂದ ಹೊರಬಂದು ಶ್ರೀ ಬಂಗಾರಪ್ಪನವರ ಸಹಕಾರದೊಂದಿಗೆ ಕ್ರಾಂತಿರಂಗ ಪಕ್ಷವನ್ನು ಕಟ್ಟಿದಾಗ ನಜೀರ್ ಸಾಬ್ ಆರಸು ಅವರನ್ನೇ ಅನುಸರಿಸಿ, ಅರಸು ಅವರ ನಿಧನರಾದ ನಂತರ ಕ್ರಾಂತ್ರಿರಂಗದ ಅಧ್ಯಕ್ಷರೂ ಆಗಿದ್ದರು. 1983ರಲ್ಲಿ ಜನತಾ-ರಂಗದ ಭಾಗವಾಗಿ ಹೆಗಡೆ ಸರ್ಕಾರದ ಮಂತ್ರಿಗಳಾಗಿದ್ದು ಈಗ ಇತಿಹಾಸ.

ಗ್ರಾಮೀಣಾಭಿವೃದ್ಧಿ ‍ಸಚಿವರಾಗಿ ಅಧಿಕಾರವಹಿಸಿಕೊಂಡು ಮೈಮರೆಯದೇ ತಕ್ಷಣವೇ ಕಾರ್ಯ ಪ್ರವೃತ್ತರಾಗಿ, ಆ ಸಮಯದಲ್ಲಿ ನಾಡಿನಾದ್ಯಂತ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಸರಿಯಾಗಿ ಮಳೆಯೂ ಬಾರದೇ ಬರಗಾಲದಿಂದ ಕೆರೆ ಕಟ್ಟೆ, ಭಾವಿಗಳೆಲ್ಲವೂ ಬರಿದಾಗಿ ಕುಡಿಯಲೂ ನೀರಿಲ್ಲದಿದ್ದಂತಹ ಪರಿಸ್ಥಿತಿ ಇದ್ದದ್ದನ್ನು ಗಮನಿಸಿ ಕೂಡಲೇ ಸರ್ಕಾರದ ವತಿಯಿಂದ ಅಂತಹ ಪ್ರತೀ ಬರದ ಪೀಡಿತ ಹಳ್ಳಿಗಳಲ್ಲಿಯೂ ಕೊಳವೇ ಭಾವಿಗಳನ್ನು ಕೊರೆಸಿ, ಕೈ ಪಂಪ್ ಹಾಕಿಸಿ ಕೊಡುವ ಮೂಲಕ ಜನರಿಗೆ ನೀರನ್ನು ಒದಗಿಸಿದ ಆಧುನಿಕ ಭಗೀರಥ ಎಂದೆನಿಸಿದ ಕಾರಣ ಜನರು ಅವರನ್ನು ನೀರ್ ಸಾಬ್ ಎಂದೇ ಪ್ರೀತಿಯಿಂದ ಕರೆಯತೊಡಗಿದರು.

ಹೇಳೀ ಕೇಳೀ ಭಾರತ ಕೃಷಿ ಪ್ರಧಾನವಾಗಿರುವ ಹಳ್ಳಿಗಳಿಂದ ಕೂಡಿರುವ ರಾಷ್ಟ್ರ. ಬ್ರಿಟೀಷರು ನಮ್ಮನ್ನು ಆಕ್ರಮಿಸಿಕೊಳ್ಳುವವರೆಗೂ ಬಹುತೇಕ ಹಳ್ಳಿಗಳ ಆಡಳಿತ ಆಯಾಯಾ ಪಂಚಾಯ್ತಿ ಕಟ್ಟೆಗಳಲ್ಲಿಯೇ ಮುಗಿದು ಹೋಗುತ್ತಿತ್ತು. ಆದರೇ ಬದಲಾದ ರಾಜಕೀಯ ಕಾರಣಗಳಿಂದಾಗಿ, ಪ್ರಜಾಪ್ರಭುತ್ವ ಬಂದರೂ ಆಡಳಿತವೆಲ್ಲವೂ ಹಳ್ಳಿಯಿಂದ ಕೈ ಜಾರಿ ದಿಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು. ಬಡತನ ಮತ್ತು ಶೋಷಣೆಗಳನ್ನು ಖುದ್ದಾಗಿ ಅನುಭವಿಸಿದ್ದ ಸಮಾಜವಾದಿ ಹಿನ್ನಲೆಯುಳ್ಳ ನಜೀರ್ ಸಾಬ್ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮಹಾತ್ಮಾ ಗಾಂಧಿಯವರ ಕನಸಿನ ಕೂಸಾಗಿದ್ದ ಸ್ವರಾಜ್ಯ ಕಲ್ಪನೆಯ ಭಾಗವಾಗಿ ಗ್ರಾಮ ಪಂಚಾಯಿತಿ ಮತ್ತು ಮಂಡಲ ಪಂಚಾಯಿತಿಯನ್ನು ಭಾರೀ ವಿರೋಧಗಳನ್ನು ಎದುರಿಸಿಯೂ ಜಾರಿಗೆ ತರುವ ಮೂಲಕ ಅಧಿಕಾರವನ್ನು ಪುನಃ ಹಳ್ಳಿಗಳತ್ತ ತರುವುದರಲ್ಲಿ ಯಶಸ್ವಿಯಾದರು.

ಜನ್ಮತಃ ಮುಸ್ಲಿಂ ಆಗಿದ್ದರೂ, ಹಿಂದೂಗಳೊಂದಿಗೆ ಬಹಳ ಸ್ನೇಹ ಸೌಹಾರ್ದಗಳೊಂದಿಗೆ ಗೌರವಾದರಗಳನ್ನು ಪಡೆದುಕೊಂಡು ನಿಜವಾದ ಅರ್ಥದಲ್ಲಿ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿರುವಾಗ ರಾಜ್ಯದಾದ್ಯಂತ ಕೊಳವೇ ಭಾವಿ‌ಗಳನ್ನು ತೆಗೆಸಿದ್ದನ್ನೇ ಮುಂದು ಮಾಡಿಕೊಂಡು ಬಹಳಷ್ಟು ಜನರು ತಮ್ಮಷ್ಟಕ್ಕೆ ತಾವು ಎಗ್ಗಿಲ್ಲದೇ ಕೊಳವೇ ಭಾವಿ‌ಗಳನ್ನು ತೆಗೆಸಿ ಅಂತರ್ಜಲ ಬರಿದು ಮಾಡುತ್ತಿರುವುದನ್ನು ಗಮನಿಸಿದ ನಜೀರ್ ಸಾಬ್, ಎರಡು ಬೋರ್‌ವೆಲ್‌ಗಳ ನಡುವೆ ಕಡ್ಡಾಯವಾಗಿ 500 ಮೀಟರ್ ಗಳ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಕಾನೂನನ್ನು ಜಾರಿಗೆ ತಂದು ಅಂತರ್ಜಲದ ಬಗ್ಗೆ ಕಾಳಜಿ ವಹಿಸಿದ್ದರು.

ನಜೀರ್ ಸಾಬ್ ಅಂತಿಮ ದಿನಗಳು ಬಹಳ ಯಾತನಾಮಯವಾಗಿತ್ತು. ಪುಪ್ಪುಸ ಕ್ಯಾನ್ಸರ್ ನಿಂದ ಉಲ್ಬಣಾವಸ್ಥೆಗೆ ತಲುಪಿದ್ದ ನಜೀರ್ ಸಾಬ್ ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಸಹಾ ಅವರು ಹೆಚ್ಚು ದಿನ ಬದುಕುವುದಿಲ್ಲ ಎಂದು ತಿಳಿಸಿದ್ದ ಕಾರಣ ಅವರ ಬಹುತೇಕ ಸಂಬಂಧಿಗಳು ಮತ್ತು ಹಿತೈಷಿಗಳು ನೋಡಿಕೊಂಡು ಹೋಗಲು ಆಸ್ಪತ್ರೆಗೆ ಬರುತ್ತಿದ್ದರು. ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿ ತಂದಿದ್ದನ್ನು ನೋಡಿ ಸಂತೋಷವಾಗಿದ್ದ ಅಂದಿನ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರು ನಜೀರ್ ಸಾಬ್ ಅವರ ಆರೋಗ್ಯವನ್ನು ವಿಚಾರಿಸಲು ಅವರ ಆಪ್ತ ಮಿತ್ರ ಸ್ಯಾಮ್ ಪಿತ್ರೋಡ ಅವರನ್ನು ಕಳುಹಿಸಿದ್ದರು. ಅದೇ ಸಮಯದಲ್ಲಿ ಒಂದಿಬ್ಬರು ಪ್ರಗತಿ ಪರರೂ ಆಸ್ಪತ್ರೆಗೆ ಬಂದಿದ್ದು ಅವರು ಏನು ಸಾಹೇಬ್ರೇ ನಿಮ್ಮ ಆರೋಗ್ಯ ಹೇಗಿದೆ? ಎಂದು ವಿಚಾರಿಸಿದಾಗ, ಕ್ಯಾನ್ಸರಿನಿಂದ ವಿಷಮಸ್ಥಿತಿಯನ್ನು ತಲುಪಿದ್ದ ಸಮಯದಲ್ಲೂ, ನನ್ನ ಆರೋಗ್ಯದ ವಿಚಾರ ಬಿಡಿ. ಈ ವರ್ಷ ರಾಜ್ಯದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದು ರಾಜ್ಯದಲ್ಲೆಲ್ಲಾ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿರುವ ಕಾರಣ, ಚೀನಾದಿಂದ ಒಳನಾಡು ಮೀನುಗಾರಿಕೆಯ ಹೊಸ ವಿಧಾನಗಳ ಕುರಿತಂತೆ ಮಾಹಿತಿ ಪಡೆದು ಬ್ಲೂಪ್ರಿಂಟ್ ಮಾಡಿಸ್ತಾ ಇದ್ದೀನಿ. ಅದು ಆದಷ್ಟು ಬೇಗ ಜಾರಿಗೆಯಾಗಿ ನಮ್ಮ ಹಳ್ಳಿಗಾಡಿನ ರೈತರಿಗೆ ನೆಮ್ಮದಿ ತರಲಿ ಅನ್ನೋದೆ ನನ್ನ ಉದ್ದೇಶ ಎಂದಿದ್ದರಂತೆ.

ಸಾವಿಗೆ ಒಂದೆರಡು ಗಂಟೆಗಳ ಮುಂಚೆ ಆ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್. ಆರ್. ಬೊಮ್ಮಾಯಿಯವರು ಕೆಲ ಸಚಿವರೊಂದಿಗೆ ನಜೀರ್ ಸಾಬ್ ಆವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಲು ಬಂದು, ಉಭಯ ಕುಶಲೋಪರಿ ವಿ‍ಚಾರಿಸಿದ ನಂತರ ನಜೀರ್ ಸಾಬ್ ಅವರ ಹೆಗಲು ಮೇಲೆ ಕೈಇರಿಸಿ, ಸಾಹೇಬ್ರೇ ನೀವೇನೂ ಕಾಳಜಿ ಮಾಡಿಕೊಳ್ಳಬೇಡಿ, ಇಲ್ಲಿನ ಒಳ್ಳೆಯ ಔಷಧೋಪಚಾರದಿಂದ ಅತೀ ಶೀಘ್ರವಾಗಿಯೇ ಗುಣಮುಖರಾಗುತ್ತೀರಿ. ನಿಮಗೇನಾದರೂ ಸಮಸ್ಯೆ ಇದ್ದಲ್ಲಿ ನನ್ನೊಂದಿಗೆ ಹೇಳಿ, ನಾನು ಪರಿಹರಿಸುತ್ತೇನೆ ಎಂದು ಹೇಳಿದಾಗ ನಜೀರ್ ಸಾಬ್ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿದ್ದಾಗ ಮತ್ತೊಮ್ಮೆ ಸ್ವಲ್ಪ ಎತ್ತರದ ಧ್ವನಿಯಲ್ಲಿ ಸಾಹೇಬ್ರೇ, ನಿಮ್ಮ ಕುಟುಂಬದಲ್ಲಿ ಯಾವುದಾದರೂ ಸಮಸ್ಯೆ ಇದ್ಯೇ? ಎಂದು ವಿಚಾರಿಸಿದಾಗ,

ತಮಗೆ ಹಾಕಿದ್ದ ಮಾಸ್ಕ್ ಸರಿಸಿ, ಸರ್, ನನ್ನ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ನಿರ್ವಸತಿಕರಿಗೆಂದು ಸಾವಿರ ಮನೆಗಳ ಹೊಸಾ ಕಾರ್ಯಕ್ರಮವೊಂದನ್ನು ರೂಪಿಸಿದ್ದೇನೆ. ಅದರಂತೆ ಪ್ರತೀ ತಾಲೂಕಿನ ಬಡವರಿಗೆ ವರ್ಷಕ್ಕೆ ಒಂದು ಸಾವಿರ ಮನೆಗಳನ್ನು ಕಟ್ಟಿಸಿತ್ತಾ ಹೋದ್ರೇ, ಇನ್ನೈದು ವರ್ಷಗಳಲ್ಲಿ ಇಡೀ ರಾಜ್ಯದ ವಸತಿರಹಿತರ ಸಮಸ್ಯೆಯೆ ಬಗೆಹರಿದು, ರಾಜ್ಯಕ್ಕೂ ಮತ್ತು ನಿಮಗೂ ಒಳ್ಳೆಯ ಹೆಸರು ಬರುತ್ತದೆ. ಇದಕ್ಕೆಂದೇ ಐರ್‌ಡಿಪಿಯಲ್ಲಿ ಹೆಚ್ಚುವರಿಯಾಗಿ ಮಿಕ್ಕಿರುವ 13 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಆದಷ್ಟು ಬೇಗನೇ ಕೆಲಸ ಶುರು ಮಾಡಿಸಿ ಬಿಡಿ ನಮ್ಮ ಸರಕಾರಕ್ಕೆ ಪುಣ್ಯ ಬರುತ್ತದೆ ಎಂದ್ದಿದ್ದರಂತೆ.

ಇಂದೋ ನಾಳೆಯೋ ಸಾವಿನ ಮನೆಯ ಕದ ತಟ್ಟುತ್ತಿದ್ದ ವ್ಯಕ್ತಿಯು ಸ್ವಂತಕ್ಕೇನೂ ಕೇಳದೇ, ನಾಡಿನ ವಸತಿ ರಹಿತರಿಗೋಸ್ಕರ ಮನೆಕಟ್ಟಿಸಿ ಕೊಡಬೇಕೆಂಬ ಕೋರಿಕೆ ಕೇಳಿದ ಮುಖ್ಯಮಂತ್ರಿಗಳು ಮತ್ತು ನಜೀರ್ ಸಾಹೇಬರ ರಾಜಕೀಯ ಒಡನಾಡಿಗಳಾದ ರಮೇಶ್ ಕುಮಾರ್ ಮತ್ತು ಎಂ.ರಘುಪತಿ, ಪತ್ರಕರ್ತ ಮಿತ್ರರಾದ ಇಮ್ರಾನ್ ಖುರೇಶಿ,ಇ.ರಾಘವನ್ ಮತ್ತು ರವೀಂದ್ರ ರೇಷ್ಮೆಯವರು ಮಮ್ಮಲ ಮರುಗಿದ್ದರೆ, ರ ಮುಖ್ಯಮಂತ್ರಿಗಳು ಕೊಠಡಿಯಿಂದ ಹೊರಬಂದು ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿದ್ದರಂತೆ. ಈ ಘಟನೆ ನಡೆದ ಒಂದೆರಡು ಗಂಟೆಗಳಲ್ಲಿಯೇ ಅತ್ಯಂತ ಕ್ರಿಯಾಶೀಲ ಹಾಗೂ ಮಾನವೀಯ ಸಂವೇದನೆಯುಳ್ಳ, ಪ್ರಾಮಾಣಿಕ ರಾಜಕಾರಣಿ ನಜೀರ್ ಸಾಬ್ ಮತ್ತೆ ಬಾರದ ಲೋಕಕ್ಕೆ ಹೋಗಿಬಿಟ್ಟರು.

ನಜೀರ ಸಾಬ್ ಅವರ ನಿಧನರಾದ ನಂತರ 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಪಕ್ಷಭೇದವೆಣಿಸದೆ ಅತ್ಯಂತ ಪ್ರಾಂಜಲ ಮನಸ್ಸಿನಿಂದ ಸಂಸತ್ತಿನಲ್ಲಿ ಸಂವಿಧಾನದ 64ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಇದು ಕರ್ನಾಟಕದ ಜನತಾದಳ ರಾಜ್ಯ ಸರಕಾರದ ಮಾದರಿ ಎಂದು ತಿಳಿಸಿದ್ದರು. ಕಾರಣಾಂತರಗಳಿಂದ ಆಗ ಆ ಮಸೂದೆ ಅಂಗಿತವಾಗದಿದ್ದರೂ, ನಂತರ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಸಂವಿಧಾನದ 73ನೇ ಹಾಗೂ 74ನೇ ತಿದ್ದುಪಡಿಕಾಯ್ದೆಗಳು ನಜೀರ್ ಸಾಬ್ ರಾಜ್ಯದಲ್ಲಿ ತಂದ ಸುಧಾರಣೆಗಳು ಅಂದು ಇಡೀ ದೇಶಾದ್ಯಂತ ಜಾರಿಗೆಯಾಗಿ ನಜೀರ್ ಸಾಬ್ ಅವರ ಕನಸು ದೇಶಾದ್ಯಂತ ನನಸಾಯಿತು.

ನಜೀರ್ ಸಾಬ್ ಅವರ ನಿಧನರಾದ ನಂತರ ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ಮಾಡಲು ಮೈಸೂರಿನಲ್ಲಿರುವ ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿ, ಅಂದಿನ ಮಹಾ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಆವರ ಉಸ್ತುವಾರಿಯಲ್ಲಿ ಅಬ್ದುಲ್ ನಜೀರ್‌ಸಾಬ್ ‌ಗ್ರಾಮೀಣಾಭಿವೃದ್ಧಿ ಅಧ್ಯಯನ ಮತ್ತು ತರಬೇತಿ ಸಂಸ್ಥೆಯನ್ನು ಆರಂಭಿಸುವ ಮೂಲಕ ಗ್ರಾಮರಾಜ್ಯದ ಪರಿಕಲ್ಪನೆಗೆ ನಜೀರ ಸಾಬ್ ಅವರು ನೀಡಿದ ಕೊಡುಗೆಯ ಐತಿಹಾಸಿಕ ಸ್ಮಾರಕವನ್ನಾಗಿಸಿದರು.

ಸರಿ ಸುಮಾರು ಐದೂವರೆ ವರ್ಷಗಳ ಕಾಲ ರಾಜ್ಯದ ಮಂತ್ರಿಯಾಗಿ, ಅಧಿಕಾರ ವಿಕೇಂದ್ರೀಕರಣ ಮಾಡಿದ್ದಲ್ಲದ್ದೇ, ಬರ‌ ಪೀಡಿತ ಪ್ರದೇಶಗಳಲ್ಲಿ ಕೊಳವೇ ಭಾವಿಗಳನ್ನು ಕೊರೆಸಿ, ಜನರ ಬಾಯಾರಿಕೆಯನ್ನು ನಿವಾರಿಸಿದ ಆಧುನಿಕ ಭಗೀರಥ ಎನಿಸಿಕೊಂಡವರು. ಕೇವಲ ಮಂತ್ರಿಯಾಗಿಯೇ, ರಾಜ್ಯದ ಯಾವುದೇ ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಜನ ಮನ್ನಣೆಯನ್ನು ಗಳಿಸಿದ್ದಲ್ಲದೇ, ಇಂದಿಗೂ ರಾಜ್ಯದ ಕೆಲವೆಡೆ ಕೊಳವೆ ಬಾವಿಯ ಹ್ಯಾಂಡ್ ಪಂಪಿನ ಮೇಲೆ ನಜೀರ್ ಸಾಬ್ ಕೃಪೆ ಎಂಬ ಕೆತ್ತನೆಯೊಂದಿಗೆ ಜನರ ಮನಗಳಲ್ಲಿ ಅಚ್ಚೊತ್ತಿರುವುದನ್ನು ಕಾಣಬಹುದು.

ಇಂತಹ ನಿಸ್ವಾರ್ಥ, ಅಪ್ಪಟ ಪ್ರಾಮಾಣಿಕ ರಾಜಕಾರಣಿಯಾಗಿಯೂ, ಅಪರೂಪದ ಜನಸೇವಕ ಮತ್ತು ಜನನಾಯಕರಾಗಿದ್ದ ನೀರ್ ಸಾಬ್ ಅರ್ಥಾತ್ ಅಬ್ದುಲ್ ನಜೀರ್ ಸಾಬ್ ಆವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?

ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್

ನಮಗೆಲ್ಲಾ ತಿಳಿದಿರುವಂತೆ ಐ.ಎ.ಎಸ್ ಅಧಿಕಾರಿಗಳೆಂದರೆ ಆಕಾಶದಿಂದ ನೇರವಾಗಿ ಈ ಧರೆಗೆ ಇಳಿದವರು ಎಂಬ ಹಮ್ಮು ಬಿಮ್ಮಿನಿಂದಲೇ ಸೂಟು ಬೂಟು ಧರಿಸಿಕೊಂಡು ಎಲ್ಲಿ ನೆಲದ ಮೇಲೆ ಕಾಲಿಟ್ಟರೆ ಅವರ ಕಾಲು ಸವೆದು ಹೋಗುತ್ತದೋ ಎಂದು ಸದಾಕಾಲವೂ ಐಶಾರಾಮಿ ಏಸಿ ಕಾರಿನಲ್ಲೇ ಓಡಾಡುತ್ತಾ ಏಸಿ ಕಛೇರಿಗಳಲ್ಲಿಯೇ ಕುಳಿತುಕೊಂಡು, ಆದಷ್ಟೂ ಜನರೊಂದಿಗೆ ಬೆರೆಯದೇ, ದೂರವೇ ಇದ್ದು ಅಧಿಕಾರವನ್ನು ಚಲಾಯಿಸುವರು ಎಂದೇ ಎಲ್ಲರ ಭಾವನೆ. ಆದರೆ ಇದಕ್ಕೆಲ್ಲವೂ ತದ್ವಿರುದ್ಧಂತೆ ಐ.ಎ.ಎಸ್ ಅಧಿಕಾರಿ ವರ್ಗದಲ್ಲಿಯೇ ಓರ್ವ ಸಂತ ಎಂದು ಬಣ್ಣಿಸಲ್ಪಟ್ಟ ಮತ್ತು ಧರಿಸುವ ವೇಷ ಭೂಷಣ, ನಡೆ ನುಡಿಗಳಲ್ಲಿಯೂ ಹಾಗೂ ನೋಡಲಿಕ್ಕೂ ಸಂತನ ರೀತಿಯಲ್ಲಿಯೇ ನೀಳವಾದ ಗಡ್ಡ, ಸದಾ ಮಂದಹಾಸದಿಂದ ತುಂಬಿರುವ ವದನ ಹಾಗೂ ಜೇನಿನಂತಹ ಮನಸ್ಸಿನಿಂದ ಹೊರಹೊಮ್ಮುವ ಸವಿಯಾದ ಮಾತುಗಳ ಅಧಿಕಾರಿ. ದೂರದ ಪಂಜಾಬಿನಿಂದ ಬಂದಿದ್ದರೂ, ಕನ್ನಡಿಗರೇ ನಾಚಿಕೆ ಪಟ್ಟುಕೊಳ್ಳುವಷ್ಟು, ಕರ್ನಾಟಕವನ್ನೂ, ಕನ್ನಡವನ್ನೂ ಮತ್ತು ಕನ್ನಡ ನಾಡಿನ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಕನ್ನಡದಲ್ಲಿ ಸುಲಲಿತವಾಗಿ ಮಾತನಾಡುವುದಲ್ಲದೇ ತಮ್ಮೆಲ್ಲಾ ವ್ಯವಹಾರಗಳನ್ನೂ ಕನ್ನಡಲ್ಲಿಯೇ ಮಾಡುವ, ಕನ್ನಡ ನಾಡು ಕಂಡ ಅತ್ಯಂತ ನಿಸ್ಪೃಹಿ ಹಿರಿಯ ಅಧಿಕಾರಿಗಳಾಗಿದ್ದ ಶ್ರೀ ಚಿರಂಜೀವಿ ಸಿಂಗ್ ಅವರೇ ನಮ್ಮ ಈ ದಿನದ ಕನ್ನಡದ ಕಲಿಗಳು ಕಥಾನಾಯಕರು.

1945ರಲ್ಲಿ ಭಾರತದ ಪಂಜಾಬ್‌ನಲ್ಲಿ ಜನಿಸಿದ ಶ್ರಿ ಚಿರಂಜೀವಿ ಸಿಂಗ್ ಓದಿನಲ್ಲಿ ಬಹಳ ಚುರುಕಾಗಿದ್ದು ತಮ್ಮ ವಿದ್ಯಾಭ್ಯಾಸವನ್ನೆಲ್ಲವೂ ಉತ್ತರ ಭಾರತದಲ್ಲಿಯೇ ಮುಗಿಸಿ, ಜನ ಸೇವೆ ಮಾಡಬೇಕೆಂಬ ಉತ್ಸಾಹದಿಂದಾಗಿ ಉತ್ತಮ ಶ್ರೇಣಿಯಲ್ಲಿ ಐ.ಎ.ಸ್ ಪದವಿ ಪಡೆದು 1971 ಕರ್ನಾಟಕ ಕ್ಯಾಡೇರ್‌ನಲ್ಲಿ ಆಯ್ಕೆಯಾಗಿ ಕರ್ನಾಟಕ ರಾಜ್ಯದಲ್ಲಿ ತಮ್ಮ ಸೇವೆಯನ್ನು ಆರಂಭಿಸುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ ಚಿರಂಜೀವಿ ಸಿಂಗ್ ಸೇವೆ ಮಾಡದ ಇಲಾಖೆಯಿಲ್ಲ ಎನ್ನುವಂತೆ 2005 ರಲ್ಲಿ ಕರ್ನಾಟಕದ ಅಭಿವೃದ್ಧಿ ಆಯುಕ್ತರಾಗಿ ಮತ್ತು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗುವವರೆಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ಉತ್ತರ ಭಾರತದಿಂದ ಕರ್ನಾಟಕಕ್ಕೆ ಬರುವ ಬಹುತೇಕ ಐ.ಎ.ಎಸ್. ಅಧಿಕಾರಿಗಳು ಅಲ್ಲಿದೇ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಎನ್ನುವಂತೆ ಇಲ್ಲಿಗೆ ಬಂದರೂ ಇಲ್ಲಿಯ ಭಾಷೆಯನ್ನು ಕಲಿಯುವುದಿಲ್ಲ. ಅಕಸ್ಮಾತ್ ಕಲಿತರೂ ಕೇವಲ ಅಲ್ಪ ಸ್ವಲ್ಪ ವ್ಯಾವಹಾರಿಕ ಕನ್ನಡವನ್ನು ಕಲಿತಿರುತ್ತಾರೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಚಿರಂಜೀವಿ ಸಿಂಗ್ ಕನ್ನಡ ಕಸ್ತೂರಿಯನ್ನು ಒಪ್ಪಿ ಅಪ್ಪಿ ಕೊಂಡರಲ್ಲದೇ, ಕನ್ನಡಿಗರೂ ಹೆಮ್ಮೆ ಪೆಡುವಂತೆ ಅತ್ಯುತ್ತಮವಾಗಿ ಕನ್ನಡದಲ್ಲಿ ಮಾತನಾಡುವುದಲ್ಲದೇ, ಅಚ್ಚು ಕಟ್ಟಾಗಿ ಕಾವ್ಯಗಳನ್ನು ಬರೆಯುವ ಸಾಮರ್ಥ್ಯವನ್ನೂ ರೂಡಿಸಿಕೊಂಡಿದ್ದಲ್ಲದೇ, ಅವರಿಗೆ ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಂತೆ ಅಗಾಧವಾದ ಜ್ಞಾನವನ್ನು ಆಸಕ್ತಿಯಿಂದ ಬೆಳೆಸಿಕೊಂಡರು. ಕನ್ನಡದ ಶರಣರು ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಪಂಜಾಬಿ ಭಾಷೆಗೆ ತರ್ಜುಮೆ ಮಾಡಿದ್ದನ್ನು ಶ್ಲಾಘಿಸಿ, ಕನ್ನಡದ ಖ್ಯಾತ ಸಾಹಿತಿಗಳು ಮತ್ತು ವಿಮರ್ಶಕರಾದ ಡಾ. ಸುಮತೀಂದ್ರ ನಾಡಿಗರು, ಚಿರಂಜೀವಿ ಸಿಂಗ್ ಅವರನ್ನು ಕನ್ನಡದ ಕಿಟ್ಟಲ್‌ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯೇನಲ್ಲ.

ಚಿರಂಜೀವಿ ಸಿಂಗ್ ಅವರು ಕನ್ನಡವನ್ನು ಎಷ್ಟರ ಮಟ್ಟಿಗೆ ತಮ್ಮ ಭಾಷೆ ಎಂದು ಅಪ್ಪಿಕೊಂಡಿದ್ದರು ಎಂದರೆ, ಒಮ್ಮೆ ಅವರ ತವರು ರಾಜ್ಯವಾದ ಪಂಜಾಬಿನಿಂದ ಬಂದ ಅಧಿಕಾರಿಗಳು ತಮ್ಮ ಕಚೇರಿಯ ವ್ಯವಹಾರಕ್ಕೆ ಸಂಬಂಧ ಪಟ್ಟ ಸರ್ಕಾರಿ ಪತ್ರವೊಂದನ್ನು ಚಿರಂಜೀವಿ ಸಿಂಗ್ ಅವರಿಗೆ ಬರೆಯುವಾಗ, ಹೇಗೂ ಈ ಅಧಿಕಾರಿಗಳು ತಮ್ಮವರೇ ಅಲ್ಲವೇ ಎಂದೆಣಿಸಿ, ಆ ಪತ್ರವನ್ನು ಪಂಜಾಬಿ ಭಾಷೆಯಲ್ಲೇ ಬರೆದಿದ್ದರು. ಚಿರಂಜೀವಿಸಿಂಗ್ ಅವರು ಆ ಪತ್ರಕ್ಕೆ ಪ್ರತ್ಯುತ್ತವನ್ನು ಕನ್ನಡದಲ್ಲಿಯೇ ಕಳುಹಿಸಿ ಅವರಿಗೆ ಮೌನವಾಗಿ ಸರಿಯಾದ ಪಾಠ ಕಲಿಸುವ ಮೂಲಕ ತಮ್ಮ ಕನ್ನಡತನ ಮತ್ತು‌ಕನ್ನಡ ಪ್ರೇಮವನ್ನು ಮೆರೆದಿದ್ದರು.

ಚಿರಂಜೀವಿ ಸಿಂಗ್ ಅವರ ಪ್ರಕಾರ ಕಲಿಯುವುದು ಎಂದರೆ ಕೇವಲ ತರಗತಿ ಕೊಠಡಿಯೊಳಗೆ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದೇ ಶಿಕ್ಷಣವಲ್ಲ. ಜನಸಾಮಾನ್ಯರೊಂದಿಗೆ ಅಧಿಕಾರದ ದರ್ಪವಿಲ್ಲದೇ ಸಾಮಾನ್ಯ ಮನುಷ್ಯರಂತೆ ವ್ಯವಹರಿಸುವ ಮೂಲಕ ಸಾಕಷ್ಟು ಕಲಿಯುವುದಿದೆ ಎಂದು ಹೇಳುತ್ತಿದ್ದಿದ್ದಲ್ಲದೇ, ಅವರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ರಾತ್ರಿಯ ಪ್ರಯಾಣ ಮಾಡಲು ಬಯಸದೇ, ಹೆಚ್ಚಿನ ಸಮಯ ಹಗಲಿನ ವೇಳೆಯಲ್ಲಿಯೇ ಮಾತ್ರ ಪ್ರಯಾಣ ಮಾಡಲು ಇಚ್ಚಿಸುತ್ತಿದ್ದರು. ಈ ರೀತಿಯಾಗಿ ಹಗಲಿನಲ್ಲಿ ಸಂಚರಿಸಿವಾಗ ಜನರೊಂದಿಗೆ ಬೆರೆಯಲು ಸಹಾಯವಾಗುವುದಲ್ಲದೇ ಅವರ ಸಂಕಷ್ಟಗಳನ್ನು ಅರಿಯಲು ಸಹಕಾರಿಯಾಗುತ್ತದೆ ಎಂದು ಹೇಳುತ್ತಿದ್ದರು ಇದಕ್ಕೆ ಪುರಾವೆಯಂತೆ ತಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಅವರಿಗೆ ಹಳ್ಳಿಯಲ್ಲಿ ಕೆಲಸ ಮಾಡಲು ಸೂಚನೆ ಬಂದಿತ್ತು. ಆಗ ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಹಾಗೆ ವಾಸ್ತವ್ಯ ಮಾಡಿದ್ದರಿಂದಲೇ ಅಲ್ಲಿನ ಜನರಿಗೆ ಕುಡಿಯಲು ಹಗರಿ ಹಳ್ಳದ ಒರತೆ ನೀರಷ್ಟೇ ಇತ್ತು ಎಂಬುದನ್ನು ಅರಿತು ಅ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗಿತ್ತು ಎಂದು ನೆನಪಿಸಿಕೊಂಡಿದ್ದರು.

ಚಿರಂಜೀವಿಸಿಂಗ್ ಅವರ ಬಗ್ಗೆ ಪ್ರಸ್ತುತ ಅಥವಾ ನಿವೃತ್ತ ಅಧಿಕಾರಿಗಳನ್ನು ವಿಚಾರಿಸಿದಲ್ಲಿ ಅವರಿಂದ ಬರುವುದು ಗೌರವ ಹಾಗೂ ಮೆಚ್ಚುಗೆಯ ಮಾತುಗಳೇ. ತಮ್ಮ ಜನಪರ ಗುಣಕ್ಕೆ ಪ್ರಸಿದ್ಧರಾಗಿದ್ದ ಚಿರಂಜೀವಿ ಸಿಂಗ್ ಕುರಿತಂತೆ, ಅವರಿಂದ ಕೇಳಿಬರುವ ಮಾತುಗಳೆಂದರೆ, ಕರ್ನಾಟಕ ರಾಜ್ಯ ಕಂಡ ಅನೇಕ ಅತ್ಯುತ್ತಮ ಅಧಿಕಾರಿಗಳಲ್ಲಿ ಚಿರಂಜೀವಿ ಸಿಂಗ್ ಅಗ್ರಗಣ್ಯರು. ಕೊಂಚವೂ ಭ್ರಷ್ಟರಲ್ಲದ, ಅತ್ಯಂತ ಪ್ರಾಮಾಣಿಕರಾದ, ಅಧಿಕಾರದ ಅಹಂಕಾರವಿಲ್ಲದೇ, ಕಷ್ಟಗಳನ್ನು ಹೇಳಿಕೊಂಡು ತಮ್ಮ ಬಳಿ ಬರುವ ಜನರನ್ನು ಕಂಡರೆ ತಿರಸ್ಕಾರವಾಗಲೀ ಉಡಾಫೆತನವನ್ನು ತೋರಿಸಿದೇ, ಅವರ ಸಂಕಷ್ಟವನ್ನು ವ್ಯವಧಾನದಿಂದ ಕೇಳುವ ಸಂವೇದನಾ ಶೀಲ ಅಧಿಕಾರಿ ಎಂದೇ ಬಣ್ಣಿಸುತ್ತಾರೆ ಎಂದರೆ ಚಿರಂಜೀವಿ ಸಿಂಗ್ ಅವರ ಜನಪ್ರಿಯತೆ ಎಷ್ಟಿತ್ತು ಎಂಬುದು ಅರಿವಾಗುತ್ತದೆ.

ಅವರ ನೇರ ಮತ್ತು ನಿಷ್ಟುರವಾದವನ್ನು ಅರಿಯಲು ಈ ಪ್ರಸಂವೊಂದೇ ಸಾಕು. ಕೆಲ ದಶಕಗಳ ಹಿಂದೆ ಮುಖ್ಯಮಂತ್ರಿಗಳಾಗಿದ್ದವರು, ಮಾತಿನ ಭರದಲ್ಲಿ, ರಾಷ್ಟ್ರದ ಪ್ರಖರ ಹೋರಾಟಗಾರರೆಂದೇ ಪ್ರಸಿದ್ದಿ ಪಡೆದಿದ್ದ ಅಂದಿನ ಕೇಂದ್ರ ಮಂತ್ರಿಯೊಬ್ಬರ ಕುರಿತಂತೆ ನೀಡಿದ್ದ ವಿವಾದಾಸ್ಪದ ಹೇಳಿಕೆಯೊಂದು ದೇಶಾದ್ಯಂತ ಎಲ್ಲಾ ಪತ್ರಿಕೆಗಳಲ್ಲಿಯೂ ಪ್ರಕಟವಾಗಿ ದೆಹಲಿಯ ನಾಯಕರನ್ನು ಕೆರಳಿಸಿದ್ದಲ್ಲದೇ, ಉರಿಯುವ ಬೆಂಕಿಗೆ ತುಪ್ಪಾ ಸುರಿದಂತೆ, ದೆಹಲಿ ನಾಯಕರೂ ಅದಕ್ಕೆ ಅಷ್ಟೇ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿ ಕಾವನ್ನು ಹೆಚ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರು ಮುಖ್ಯಮಂತ್ರಿಗಳ ಸ್ಪಷ್ಟೀಕರಣ ಕೇಳಿದಾಗ ಅದಕ್ಕೆ ಉತ್ತರಿಸಲು ಬಯಸದೇ, ಮುಖ್ಯಮಂತ್ರಿಗಳ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಲು ಆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ಚಿರಂಜೀವಿ ಸಿಂಗ್ ಅವರಿಗೆ ಸೂಚನೆ ಕೊಟ್ಟರು. ಅದಕ್ಕೆ ಪ್ರತಿಯಾಗಿ ಎದ್ದು ನಿಂತ ಸಿಂಗ್ ಅವರು, ತಮ್ಮ ಎಂದಿನ ಮೆಲುಧ್ವನಿಯಲ್ಲಿಯೇ, ಸ್ಪಷ್ಟವಾಗಿ ನಾನು ಆ ರೀತಿ ಸ್ಪಷ್ಟೀಕರಣ ಕೊಡಲು ಸಾಧ್ಯವಿಲ್ಲ. ಏಕೆಂದರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆಯೇ ಮುಖ್ಯಮಂತ್ರಿಗಳು ಆ ರೀತಿಯ ಹೇಳಿಕೆ ನೀಡಿದಾಗ ನಾನು ಕೂಡಾ ಅಲ್ಲಿಯೇ ಉಪಸ್ಥಿತನಿದ್ದೆ ಎಂದು ಖಡಾಖಂಡಿತವಾಗಿ ನಿರಾಕರಿಸಿದರು. ಚಿರಂಜೀವಿ ಸಿಂಗ್ ಅವರ ಸತ್ಯಸಂಧತೆ, ನಿಷ್ಠುರತೆ ನೆರೆದಿದ್ದ ಪ್ರಕರ್ತರನ್ನು ನಿಬ್ಬೆರಗಾಗಿಸಿತ್ತು.

1984ರಲ್ಲಿ ದೇಶದಲ್ಲಿ ಅಪರೇಷನ್ ಬ್ಲೂ ಸ್ಟಾರ್ ಮೂಲಕ ಸಿಖ್ ಧರ್ಮಕ್ಕೆ ಮತ್ತು ಸಿಖ್ ಜನಾಂಗದ ಭಾವನೆಗಳಿಗೆ ಆದ ತೀವ್ರವಾದ ಆಘಾತವನ್ನು ಪ್ರತಿಭಟಿಸಿ ನಡೆದ ಮೌನ ಮೆರವಣೆಗೆಯಲ್ಲಿ ಮನನೊಂದ ಒಬ್ಬ ಸಿಖ್ಖರಾಗಿ ಚಿರಂಜೀವಿ ಸಿಂಗ್ ಅವರು ಭಾಗವಹಿಸಿ ಅಂದಿನ ದೆಹಲಿ ಸರ್ಕಾರದ ದೊರೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಈ ದಕ್ಷ ಅಧಿಕಾರಿಯ ಪರವಹಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದರು.

ಅವರ ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಸೇವೆಯಲ್ಲಿದ್ದಾಗಲೇ ತೀರಿಕೊಂಡ ರಾಜು ಎಂಬ ಚಾಲಕರ ಪಾರ್ಥಿವ ಶರೀರವನ್ನು ಮೈಸೂರಿಗೆ ಕರೆದೊಯ್ಯುವಾಗ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಗೌರವ ತೋರಿಸಿದ್ದಲ್ಲದೇ, ತಮ್ಮ ಇಲಾಖೆಯಲ್ಲಿ ಯಾವುದೇ ಸಿಬ್ಬಂದಿ ಅಥವಾ ಅವರ ಕುಟುಂಬಸ್ಥರು ತೀರಿಕೊಂಡಾಗ ಅವರ ಮನೆಗಳಿಗೆ ಹೋಗಿ ಸಾಂತ್ವನ ನೀಡುತ್ತಿದ್ದಲ್ಲದೇ, ಸಾಧ್ಯವಾದಲ್ಲಿ ಅಂತಿಮ ಕ್ರಿಯೆಯಲ್ಲಿಯೂ ಭಾಗವಹಿಸುತ್ತಿದ್ದದ್ದು ಅವರ ಮಾನವೀಯ ಗುಣಗಳನ್ನು ಎತ್ತಿ ತೋರಿಸುತ್ತದೆ.

ಆವರು ನಿವೃತ್ತರಾದ ಸಮಯದಲ್ಲಿ ದಯವಿಟ್ಟು ನನ್ನ ಬಗ್ಗೆ ಯಾವುದೇ ಲೇಖನ, ಪುಸ್ತಕಗಳು ಬೇಡ. ಏನೋ ಒಳ್ಳೆಯ ವಿದ್ಯಾಭ್ಯಾಸ ದೊರಕಿತು ಐಎಎಸ್ ತೇರ್ಗಡೆಯಾದೆ. ನನ್ನ ತಂದೆ-ತಾಯಿ ಪುಣ್ಯದಿಂದ ನನಗೆ ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿದೆ ಎಂದು ಅತ್ಯಂತ ವಿನಮ್ರವಾಗಿ ಕೋರಿಕೊಂಡಿದ್ದಲ್ಲದೇ, ಅವರು ಜಿಲ್ಲಾಧಿಕಾರಿಯಾಗಿ 35-40 ವರ್ಷಗಳ ಹಿಂದೆ ಸೇವೆ ಸಲ್ಲಿಸಿದ್ದ ಸ್ಥಳಗಳಲ್ಲಿ ಅವರಿಗೆ ಸಹಕರಿಸಿದ ಅನೇಕರನ್ನು ಅತ್ಯಂತ ಗೌರವ ಮತ್ತು ಹೆಮ್ಮೆಯಿಂದ ಸ್ಮರಿಸಿಕೊಳ್ಳುವ ದೊಡ್ಡಗುಣ ಚಿರಂಜೀವಿ ಸಿಂಗ್ ಅವರದ್ದಾಗಿದೆ.

ನಿವೃತ್ತಿಯ ನಂತರ ಪಂಜಾಬಿಗೆ ಮರಳದೇ ಕರ್ನಾಟಕದಲ್ಲಿಯೇ ಉಳಿದು ಕೊಂಡ ಶ್ರೀಯುತರು, ಗ್ರಾಮೀಣಾಭಿವೃದ್ಧಿ, ಪರಿಸರ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ಸರ್ಕಾರೇತರ ಸಂಸ್ಥೆಗಳೊಂದಿಗೆ ಇಂದಿಗೂ ಉತ್ತಮವಾದ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಂದೆಯವರು ತೀರಿಕೊಂಡಾಗ ಅವರ ಅಂತಿಮ ಕ್ರಿಯೆಯನ್ನು ಮಂಡ್ಯದಲ್ಲಿಯೇ ಜರುಗಿಸಿ ಆ ಚಿತಾಭಸ್ಮವನ್ನೂ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಿ ತಂದೆಯ ಮತ್ತು ಕನ್ನಡ ನಾಡಿನ ಪವಿತ್ರ ಕಾವೇರಿ ನದಿಯ ಕುರಿತಂತೆ ಅವರಿಗಿದ್ದ ಗೌರವವನ್ನು ಎತ್ತಿ ತೋರಿಸಿದ್ದರು ಚಿರಂಜೀವಿಸಿಂಗ್ ಅವರು.

 • ತಮ್ಮ ಸೇವಾವಧಿಯಲ್ಲಿ ಪ್ಯಾರಿಸ್‌ನ ಯುನೆಸ್ಕೋದ ಭಾರತದ ರಾಯಭಾರಿಯಾಗಿದ್ದರು.
 • 2005ರಲ್ಲಿ ಅವರ ಸಾಧನೆಗಳಿಗಾಗಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಈ ಹಿರಿಯ ವಯಸ್ಸಿನಲ್ಲೂ ಯಾವುದೇ ಅಸೌಖ್ಯವಿದ್ದರೂ ಸದಾ ಕಾಲವೂ ಮಂದಹಾಸದಿಂದ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಜಗತ್ತೇ ಸಾಮಾಜಿಕ ಅಂತರ್ಜಾಲಕ್ಕೆ ಶರಣಾಗಿರುವಾಗ ಇಂದಿಗೂ ಮೊಬೈಲ್ ಉಪಯೋಗಿಸದೇ, ಓಡಾಟಕ್ಕೆ ಸ್ವಂತ ಕಾರು ಹೊಂದಿಲ್ಲದ ಚಿರಂಜೀವಿಸಿಂಗ್ ಅನುರೂಪ ಮತ್ತು ಅನುಕರಣಿಯ ಎನಿಸಿಕೊಳ್ಳುತ್ತಾರೆ. ನಾಡಿಗೆ ಹೆಮ್ಮೆ ತರುವ, ಆಡಳಿತಕ್ಕೆ ಶಕ್ತಿ ಕೊಟ್ಟಿರುವ, ರಾಜ್ಯದ ಜನತೆಯೊಂದಿಗೆ ಬೆರೆತು ಅವರ ಕಷ್ಟ ಸುಖಗಳು ತನ್ನ ಸುಖ ಎಂದೆಣಿಸಿ ಸದಾ ತನ್ನಿಂದ ಯಾವ ರೀತಿ ಒಳ್ಳೆಯ ಕೆಲಸಗಳಾಗಬಹುದು ಎಂದು ಸದಾ ಚಿಂತಿಸಿ ಅದರಂತೆಯೇ ನಡೆದು ಕೊಂಡಿದ್ದಲ್ಲದೇ, ಕನ್ನಡದ ಚಂದಸ್ಸುಗಳಲ್ಲಿಯೇ ಕಾವ್ಯವನ್ನು ಬರೆಯುವಷ್ಟು ಕನ್ನಡವನ್ನು ಕಲಿತು ನಮ್ಮ ಕನ್ನಡಿಗರೇ ಆಗಿರುವ ಶ್ರೀ ಚಿರಂಜೀವಿ ಸಿಂಗ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಡಾ. ಪ್ರಭಾಕರ್ ಭಟ್ ಕಲ್ಲಡ್ಕ

ಅವರು ಓದಿದ್ದು ಎಂ.ಬಿ.ಬಿ.ಎಸ್. ಅವರು ಮದುವೆಯಾದದ್ಫೂ ವೈದ್ಯರನ್ನೇ. ಇಬ್ಬರೂ ಯಾವುದೋ ಸರ್ಕಾರೀ ಸೇವೆ ಮಾಡಿಕೊಂಡು ತಿಂಗಳಂತ್ಯದಲ್ಲಿ ಕೈತುಂಬಾ ಸಂಬಳ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಇಲ್ಲವೇ ಗಂಡ ಹೆಂಡತಿ ಇಬ್ಬರೂ ಸೇರಿ ಒಂದು ಸುಸಜ್ಜಿತವಾದ ನರ್ಸಿಂಗ್ ಹೋಮ್ ಕಟ್ಟಿಸಿ ಲಕ್ಷ ಲಕ್ಷ ರೂಪಾಯಿಗಳನ್ನು ಸಂಪಾದಿಸಿಕೊಂಡು ಹಾಯಾಗಿ ಇರಬಹುದಿತ್ತು. ಅವರು ರಾಜಕಾರಣಕ್ಕೆ ಬಂದಿದ್ದರೆ ಇಷ್ಟು ಹೂತ್ತಿಗೆ ಶಾಸಕ ಇಲ್ಲವೇ ಸಂಸದರಾಗಿ ರಾಜ್ಯ ಸರ್ಕಾರವೋ ಇಲ್ಲವೇ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗ ಬಹುದಿತ್ತು. ಅವರು ಬಯಸಿದ್ದರೆ ಮುಖ್ಯಮಂತ್ರಿಗಳೂ ಆಗಬಹುದಿತ್ತು. ಆದರೆ ಆವರೆಂದೂ ಸ್ವಾರ್ಥಿಯಾಗಲೇ ಇಲ್ಲ. ಸದಾಕಾಲವೂ ಅವರದ್ದೇನಿದ್ದರೂ ದೇಶದ ಬಗ್ಗೆಯೇ ಚಿಂತೆ. ಅವರು King ಆಗಲು ಇಷ್ಟಪಡದೇ King Maker ಆಗಲು ಇಷ್ಟ ಪಟ್ಟರು. ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಕರ್ನಾಟಕ ಕಂಡ ಪ್ರಖರವಾಗ್ಮಿ ನಿಸ್ವಾರ್ಥ ಸಮಾಜ ಸೇವಕರಾದ ಕಲ್ಲಡ್ಕದ ಡಾ. ಪ್ರಭಾಕರ್ ಭಟ್ ಅವರನ್ನು ಪರಿಚಯ ಮಾಡಿಕೊಳ್ಳೋಣ.

ದಕ್ಷಿಣ ಕರ್ನಾಟಕದ ಮತ್ತು ಕೇರಳ ಗಡಿಯಲ್ಲಿನ ಸಣ್ಣ ಗ್ರಾಮವಾದ ಕಲ್ಲಡ್ಕದಲ್ಲಿ ಸುಮಾರು 80 ವರ್ಷಗಳ ಹಿಂದೆ ನವೆಂಬರ್ 15 ರಂದು, ಸಾಮಾನ್ಯ ಬಡತನದ ಕುಟುಂಬದಲ್ಲಿ ಜನಿಸಿದ ಪ್ರಭಾಕರ್ ಭಟ್ಟರು, ಓದಿನಲ್ಲಿ ಬಾಲ್ಯದಿಂದಲೂ ಅತ್ಯಂತ ಚುರುಕಾಗಿದ್ದ ಕಾರಣ ಉನ್ನತ ಶ್ರೇಣಿಯಲ್ಲಿಯೇ MBBS ಪದವಿಯನ್ನು ಮುಗಿಸುವ ಜೊತೆ ಜೊತೆಯಲ್ಲಿಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದ ಕಾರಣ ದೇಶ ಮತ್ತು ಹಿಂದುತ್ವದಲ್ಲಿ ಅಪಾರವಾದ ಮತ್ತು ಅಧಮ್ಯವಾದ ಪ್ರೀತಿಯ ಕಾರಣ ಯಾವುದೇ ನೌಕರಿಯನ್ನೂ ಸೇರದೇ. ಸಂಘದ ಶಾಖೆಗಳನ್ನು ಅವಿಭಜಿತ ದಕ್ಷಿಣ ಕರ್ನಾಟಕಾದ್ಯಂತ ವಿಸ್ತರಣೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು.

60ರ ದಶಕದಲ್ಲಿ MBBS ಮುಗಿಸಿದ್ದ ಡಾ.ಕಮಲಾ ಭಟ್ ಅವರೊಂದಿಗೆ ವಿವಾಹವಾದರೂ, ತಮ್ಮ ಹುಟ್ಟು ಗುಣ ಬಿಡದೇ ತಮ್ಮ ಪತ್ನಿಯನ್ನೂ ಸೇರಿಸಿಕೊಂಡೇ ದಂಪತಿಗಳಿಬ್ಬರೂ ಸಮಾಜ ಸೇವೆ ಮತ್ತು ದೇಶ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಲ್ಲದೇ, ಇಂದು ಭಾರತೀಯ ಜನತಾ ಪಕ್ಷದಲ್ಲಿ ಉನ್ನತ ಅಧಿಕಾರದಲ್ಲಿರುವ ಅವಿಭಜಿತ ದಕ್ಷಿಣ ಕರ್ನಾಟಕದ ಬಹುತೇಕ ರಾಜಕಾರಣಿಗಳನ್ನು ಬೆಳೆಸುವುದರಲ್ಲಿಯೇ ತಮ್ಮ ಜೀವನವನ್ನು ಸವೆಸಿದರು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ ಧಮನಕಾರೀ ನೀತಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಒಂದು ತಿಂಗಳುಕಾಲ ಸೆರೆಮನೆ ವಾಸ ಅನುಭವಿಸಿದ ಹೊರ ಬಂದ ನಂತರ ಕಂಡವರ ಉಸಾಬರೀ ನಮಗೇಕೆ? ಎಂದು ನೆಮ್ಮದಿಯಾಗಿ ಗಂಡ ಹೆಂಡತಿಯರಿಬ್ಬರೂ ನರ್ಸಿಂಗ್ ಹೋಮ್ ಆರಂಭಿಸಿ ನೆಮ್ಮದಿಯ ಜೀವನವನ್ನು ನಡೆಸಬಹುದಿತ್ತು. ಆದರೆ, ಪ್ರಭಾಕರ್ ಭಟ್ಟರು ಸೆರೆಮನೆ ವಾಸದ ನಂತರ ತಮ್ಮ ಹೋರಾಟವನ್ನು ಮತ್ತಷ್ಟೂ ತೀವ್ರಗೊಳಿಸಿದರು.

ಹೇಳೀ ಕೇಳೀ ಕಲ್ಲಡ್ಕದಲ್ಲಿ ಹಿಂದೂಗಳಿಗಿಂತಲೂ ಮುಸಲ್ಮಾನರ ಸಂಖ್ಯೆಯೇ ಹೆಚ್ಚಾಗಿದ್ದು ಅವರ ಹಾವಳಿಯೇ ಅತಿಯಾಗಿತ್ತು. ಅಂತಹವರ ಮಧ್ಯೆ ಹಿಂದೂಗಳನ್ನು ಒಗ್ಗೂಡಿಸಿ ಅವರಲ್ಲಿ ಹಿಂದುತ್ವವನ್ನು ಜಾಗೃತಗೊಳಿಸುವ ಸಲುವಾಗಿ ಎಷ್ಟೇ ವಿರೋಧ ವ್ಯಕ್ತವಾದರೂ ಅವುಗಳನ್ನೆಲ್ಲವೂ ಲೆಕ್ಕಿಸದೇ, ಪ್ರಭು ಶ್ರೀರಾಮ ಮಂದಿರವನ್ನು ಕಟ್ಟಿದ್ದಲ್ಲದೇ, ಅಲ್ಲಿನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲಿಸುವ ಸಲುವಾಗಿ ಶ್ರೀರಾಮ ವಿದ್ಯಾ ಕೇಂದ್ರ ಆರಂಭಿಸಿ, ಶಾಲಾ ಉಧ್ಘಾಟನಾ ದಿನದಂದು ಪೋಲಿಸರು 4 ಜನರಿಗಿಂತ ಹೆಚ್ಚಿನ ಜನ ಸೇರಬಾರದು ಎಂದು ಸೆಕ್ಷನ್ 144 ಹೇರಿದ್ದರೂ, ಪೋಲೀಸರು ಚಾಪೇ ಕೆಳಗೆ ತೂರಿದರೆ, ಪ್ರಭಾಕರ್ ಭಟ್ ಅವರು ರಂಗೋಲಿ ಕೆಳಗೆ ತೂರಿ ಪೋಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ, ನಾಲ್ಕು ನಾಲ್ಕು ಜನರನ್ನೇ ಸೇರಿಸಿ ತಮ್ಮ ಶಾಲೆಯ ಶಂಖು ಸ್ಥಾಪನೆಯನ್ನು ಉಡುಪಿಯ ಪೇಜಾವರ ಶ್ರೀಗಳನ್ನು ಕೈಯ್ಯಲ್ಲಿ ಮಾಡಿಸಿದ್ದ ಸಾಹಸಿಗಳು. ಗಾಯದ ಮೇಲೆ ಬರೆ ಎಳೆಯುವಂತೆ ತಮ್ಮ ಶಾಲೆ ಇದ್ದ ಜಾಗಕ್ಕೆ ಹನುಮಾನ್ ನಗರ ಎಂದು ನಾಮಕರಣ ಮಾಡಿ ಎಲ್ಲರ ಹುಬ್ಬೇರಿಸಿದ್ದರು.

ರಾಜ್ಯ ಸರ್ಕಾರದ ಶಿಕ್ಷಣ ನೀತಿಯಂತೆ ಪಾಠ ಪ್ರವಚನಗಳ ಜೊತೆ, ಹಿಂದೂ ಸಂಸ್ಕೃತಿಯಂತೆ ಸರಸ್ವತಿ ಪ್ರಾರ್ಥನೆಯೊಂದಿಗೆ ಶಾಲೆಯ ಆರಂಭ, ಓದಿನ ಜೊತೆ ಜೊತೆಯಲ್ಲಿಯೇ ದೇವರ ನಾಮ ಮತ್ತು ಭಜನೆಗಳ ಸಂಕೀರ್ತನೆಯಲ್ಲದೇ ಭಗವದ್ಗೀತೆಗಳನ್ನೂ ಹೇಳಿಕೊಡಲಾರಂಭಿಸಿದರು. ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದರೆ ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ ಎಂಬ ತತ್ವದಡಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸರಿ ಸುಮಾರು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ಸಮವಸ್ತ್ರದ ಜೊತೆಗೆ, ಅಂದಿನ ಕಾಲದಲ್ಲಿಯೇ ಬಡ ಮಕ್ಕಳಿಗೆ ಬಿಸಿಯೂಟವನ್ನು ಕೊಡುವ ಮೂಲಕ ಎಲ್ಲರ ಗಮನ ಸೆಳೆದರು. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಅನೇಕ ಹಿಂದೂಪರ ಸಂಘಟನೆಗಳು ಮತ್ತು ಸಿರಿವಂತರು ತಮ್ಮ ಕೈಲಾದ ಮಟ್ಟಿಗೆ ಧನ-ಧಾನ್ಯಗಳನ್ನು ಸಹಾಯ ಮಾಡುವ ಮೂಲಕ ರಾಜ್ಯದಲ್ಲಿ ಅತಿದೊಡ್ಡ ಉಚಿತ ಕನ್ನಡ ಮಧ್ಯಮ ಶಾಲೆ ಎಂಬ ಕೀರ್ತಿಗೆ ಪಾತ್ರವಾಯಿತು.

ಒಬ್ಬ ವ್ಯಕ್ತಿ ಪ್ರವರ್ಧಮಾನಕ್ಕೆ ಬರುತ್ತಿದ್ದಾನೆ ಎಂದರೆ ಅದಕ್ಕೆ ಅಡ್ಡಿ ಪಡಿಸುವವರು ಹುಟ್ಟಿಕೊಳ್ಳುವುದು ಈ ಸಮಾಜದಕ್ಕೆ ಅಂಟಿಕೊಂಡಿರುವ ಜಾಡ್ಯ! ಇದಕ್ಕೆ ಪ್ರಭಾಕರ್ ಭಟ್ಟರೂ ಹೊರತಾಗಿರಲಿಲ್ಲ. ಅವರ ಶಾಲೆಯ ಊಟೋಪಚಾರಕ್ಕಾಗಿ ಕೊಲ್ಲೂರಿನ ದೇವಾಲಯ ಧನ ಸಹಾಯವನ್ನು ಮಾಡುತ್ತಿತ್ತು. ಇದನ್ನು ಗಮನಿಸಿದ ಅಂದಿನ ಸರ್ಕಾರದ ಪ್ರಭಲ ಸಚಿವರೊಬ್ಬರು ಕೊಲ್ಲೂರು ದೇವಸ್ಥಾನಕ್ಕೆ ಪತ್ರ ಬರೆದು ಈ ಧನ ಸಹಾಯವನ್ನು ನಿಲ್ಲಿಸುವ ಮೂಲಕ ತಮ್ಮ ವಯಕ್ತಿಕ ದ್ವೇಷವನ್ನು ಮೆರೆದರು. ಆರಂಭದ ದಿನಗಳಲ್ಲಿ ಸರ್ಕಾರಕ್ಕೆ ಅನುದಾನ ಮುಂದುವರೆಸಲು ಪತ್ರ ಬರೆದ್ದಲ್ಲದೇ ಮಕ್ಕಳೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರೂ ಜಗ್ಗದ ಸರ್ಕಾರಕ್ಕೆ ಸೆಡ್ಡು ಹೊಡೆಯಲು ನಿರ್ಧರಿದ ಪ್ರಭಾಕರ್ ಭಟ್ಟರು, ತಮ್ಮ ಶಾಲೆಯ ಮಕ್ಕಳು ತಮ್ಮ ಊಟವನ್ನು ತಾವೇ ಬೆಳೆಯುವ ನಿರ್ಧಾರಕ್ಕೆ ಬಂದು ಶಾಲೆಯ ಪಕ್ಕದಲ್ಲೇ ಇರುವ ಸುದೇಕಾರು ಎಂಬಲ್ಲಿನ ಶಾಲೆಗೆ ಸೇರಿದ್ದ ಗದ್ದೆಯಲ್ಲಿ ಶಾಲಾ ಮಕ್ಕಳೇ ಶುದ್ಧ ಸಾವಯುವ ಆಧಾರಿತ ಕೃಷಿ ಪದ್ಧತಿಯಲ್ಲಿ ಕಾಯಕ ಮಾಡಿ ತಮ್ಮ ಮಧ್ಯಾಹ್ನದ ಊಟಕ್ಕೆ ಬೇಕಾದ ಅಕ್ಕಿ ಮತ್ತು ಬೇಳೆ ಮತ್ತು ಕಾಯಿಪಲ್ಲೆಗಳನ್ನು ಬೆಳೆದು ಮಾದರಿಯಾದರು. ಶಾಲಾ ಮಕ್ಕಳು ಬೆಳೆದ ಭತ್ತ ಆ ಮಕ್ಕಳ ಊಟಕ್ಕಾದರೆ, ಭತ್ತ ಬಡಿದ ನಂತರದ ಹುಲ್ಲು ತಮ್ಮದೇ ಶ್ರೀರಾಮ ಕಾಲೇಜಿನಲ್ಲಿ ನಡೆಸುತ್ತಿರುವ ವಸುಧಾರ ಗೋಶಾಲೆಯ ಗೋವುಗಳಿಗೆ ಆಹಾರವಾಗುವ ಮೂಲಕ ಕಸದಲ್ಲೂ ರಸವನ್ನು ತೆಗೆದದ್ದಲ್ಲದೇ, ಮಕ್ಕಳಿಗೆ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಧೃತಿಗೆಡದೆ ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ ಹೇಗೆ ಜೀವನವನ್ನು ನಡೆಸಬಹುದು ಎಂಬುದನ್ನು ಪ್ರಾಯೋಗಿವಾಗಿ ತೋರಿಸಿಕೊಟ್ಟರು.

ಇನ್ನು ತಮ್ಮ ಶಾಲೆಯ ಮಕ್ಕಳ ಸಾಂಸ್ಕೃತಿಕ ಮತು ಕ್ರೀಡಾ ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸುವ ಸಲುವಾಗಿ ಅವರ ಶಾಲ ಆವರಣದಲ್ಲಿಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೋತ್ಸವವನ್ನು ಏರ್ಪಡಿಸಿ ತಮ್ಮ ಶಾಲಾಮಕ್ಕಳಿಗೆ ಉತ್ಸಾಹವನ್ನು ತುಂಬಿದ ಪರಿಣಾಮ ಇಂದು ಅವರ ಶಾಲಾ ವಿದ್ಯಾರ್ಥಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ನಾನಾ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಶಾಲೆಯ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.

ಇನ್ನು ವಯಕ್ತಿವಾಗಿ ಹೇಳಬೇಕೆಂದರೆ ಎಂಭತ್ತರ ದಶಕದಲ್ಲಿ ಬಂಟ್ವಾಳದ ಬಳಿ ಇರುವ ನರಿಕೊಂಬು ಎಂಬ ಊರಿನಲ್ಲಿ ಶ್ರೀಕೃಷ್ಣ ಸೋಮಯಾಜಿಯವರು ಬೇಸಿಗೆ ಕಾಲದಲ್ಲಿ ನಡೆಸುತ್ತಿದ್ದ ವೇದ ಶಿಭಿರದಲ್ಲಿ ಪ್ರತೀ ವರ್ಷವೂ ತಪ್ಪದೇ ಎರಡು ಮೂರು ಬಾರಿ ಶಿಬಿರಕ್ಕೆ ಬಂದು ಶಿಭಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಸಂಧರ್ಭದಲ್ಲಿ ನನಗೆ ಅವರ ಪರಿಚಯವಾಗಿ ಅವರ ಅದ್ಭುತ ವಾಗ್ಜರಿ ಮತ್ತು ಹೇಳಬೇಕಾದದ್ದನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಕೇಳುಗರ ಮನಸ್ಸಿಗೆ ನಾಟುವಂತೆ ಹೇಳುತ್ತಿದ್ದದ್ದು ಅವರು ಹೇಳುತ್ತಿದ್ದ ದೇಶಭಕ್ತರ ಕಥೆಗಳು ಮೈಮನಗಳನ್ನು ರೋಮಾಂಚನಗೊಳಿಸುತ್ತಿದ್ದ ಕಾರಣ ನನಗೆ ಅರಿವಿಲ್ಲದಂತೆಯೇ ಅವರ ಅಭಿಮಾನಿಯಾಗಿ ಅವರನ್ನು ಅನುಸರಿಸುತ್ತಲೇ ಬಂದೆ. ಮುಂದೆ ನನ್ನ ಎರಡೂ OTCಯಲ್ಲಿಯೂ ಅವರ ಮಾರ್ಗದರ್ಶನ ದೊರೆತದ್ದು ನನ್ನ ಸೌಭಾಗ್ಯ. ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಹುತೇಕ ಭಾಷಣಗಳು ಬೆರಳ ತುದಿಯಲ್ಲಿ ಲಭ್ಯವಾಗಿರುವ ಕಾರಣ ಸಮಯ ಸಿಕ್ಕಾಗಲೆಲ್ಲಾ ಅವರ ಭಾಷಣಗಳಿಂದ ಪ್ರೇರಿತನಾಗುತ್ತಿದ್ದೇನೆ.

ಈಗಾಗಲೇ ತಿಳಿಸಿದಂತೆ ತೇನ ವಿನಾ ತೃಣಮಪಿ ನ ಚಲತಿ ಎನ್ನುವಂತೆ ಅವಿಭಜಿತ ದಕ್ಷಿಣಕನ್ನಡದಲ್ಲಿ ಸಂಘಪರಿವಾರದ ಯಾವುದೇ ಕೆಲಸಗಳು ನಡೆಯ ಬೇಕಾದರೂ ಪ್ರಭಾಕರ್ ಭಟ್ಟರ ನಿರ್ಧಾರಗಳೇ ಅಂತಿಮವಾಗಿರುತ್ತದೆ ಎಂದರೂ ಅತಿಶಯವಲ್ಲ. ಒಮ್ಮೆ ಅವರು ನಿರ್ಧಾರ ಮಾಡಿದರೇ ಸಾಕು ಅದನ್ನು ಸಾಧಿಸಿಯೇ ತೋರಿಸುವ ಛಲದಂಕಮಲ್ಲ ಎನ್ನುವುದಕ್ಕೆ ಉದಾರಣೆ 2009ರಲ್ಲಿ ಲೋಕಸಭಾ ಚುನಾವಣೆ. ಆ ಚುನಾವಣೆಯಲ್ಲಿ ಕಾಂಗ್ರೇಸ್ಸಿನಿಂದ ಹಿರಿಯ ರಾಜಕಾರಣಿ ಜನಾರ್ಧನ ಪೂಜಾರಿಯವರು ನಿಂತಿದ್ದರೇ, ಪಕ್ಷೇತರಾಗಿ ಬಿಜೆಪಿಯ ಮಾಜೀ ಶಾಸಕ ಮತ್ತು ಅವರ ಭಾವಮೈದುನ (ಹೆಂಡತಿಯ ಸ್ವಂತ ಅಣ್ಣ) ಉರಿಮಜಲು ರಾಮ್ ಭಟ್ ಕಣಕ್ಕಿಳಿದು ಪ್ರಭಾಕರ್ ಭಟ್ ಅವರನ್ನು ಮುಜುಗರಕ್ಕೀಡು ಮಾಡಿದ್ದರು. ಆದರೆ ತಮ್ಮ ನಂಬಿಕೆ ಸಿದ್ಧಾಂತಗಳ ಮುಂದೆ ವಯಕ್ತಿಕ ಸಂಬಂಧಗಳು ನಗಣ್ಯವಾಗುತ್ತದೆ ಎನ್ನುವಂತೆ, ಸಂಘದ ಕೇವಲ ಸಂಘದ ಪ್ರಚಾರಕರಾಗಿದ್ದ ಮತ್ತು ಹೆಚ್ಚಿನ ಜನರಿಗೆ ಪರಿಚಯವೇ ಇಲ್ಲದಿದ್ದ ತಮ್ಮ ಶಿಷ್ಯನಾದ ನಳಿನ್ ಕುಮಾರ್ ಕಟೀಲನ್ನು ಬಿಜೆಪಿಯ ಅಭ್ಯರ್ಥಿಯನ್ನಾಗಿಸಿ, ಸ್ವತಃ ತಾವೇ ಮಂಚೂಣಿಯಲ್ಲಿದ್ದು ತಾವೇ ಅಭ್ಯರ್ಥಿಯೇನೋ ಎನ್ನುವಂತೆ ಬೈಠಕ್ ಮೇಲೆ ಬೈಠಕ್ ನಡೆಸಿ, ಊರೂರು ಸುತ್ತಿ ಜನರನ್ನು ಹುರಿದುಂಬಿಸಿ ನಳೀನ್ ಕುಮಾರರನ್ನು ಜಯಶಾಲಿಯನ್ನಾಗಿ ಮಾಡಿ ತಮ್ಮ ಬಲವನ್ನು ತೋರಿಸಿದ್ದರು.

ಇನ್ನು 1992ರ ಅಯೋಧ್ಯಾ ರಾಮಜನ್ಮ ಭೂಮಿಯ ಹೋರಾಟದ ಸಮಯದಲ್ಲಿ, ಇತ್ತೀಚಿನ NRC & CAA ಹೋರಾಟದ ಸಂದರ್ಭದಲ್ಲಿ ಕೇವಲ ದಕ್ಷಿಣ ಕರ್ನಾಟಕವಲ್ಲದೇ, ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಇತ್ತೀಚೆಗೆ ಕನಕಪುರದ ಬಳಿ ಅನಧಿಕೃತವಾಗಿ ಏಸು ಪ್ರತಿಮೆಯನ್ನು ಸ್ಥಾಪಿಸಿದ್ದರ ವಿರುದ್ದವೂ ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ನಡೆಸಿದ ಹೋರಾಟ ಫಲ ನೀಡಿ ಏಸು ಪ್ರತಿಮೆಯ ಸ್ಥಾಪನೆಗೆ ತಡೆಯಾಜ್ಞೆ ಪಡೆಯುವುದರ ಹಿಂದೆ ಪ್ರಭಾಕರ್ ಭಟ್ ಅವರ ಶ್ರಮವೂ ಇದೆ.

80ರ ವಯಸ್ಸಿನಲ್ಲಿಯೂ 20ರ ತರುಣರ ಹಾಗೆ ರಾಜ್ಯಾದಂತ ಪ್ರವಾಸ ಮಾಡುತ್ತಾ, ನೂರಾರು ಹಿಂದೂ ಸಾಮ್ರಾಜ್ಯ ದಿನೋತ್ಸವಗಳನ್ನು ನಡೆಸುತ್ತಾ, ಹಿಂದೂ ಧರ್ಮ ಉಳಿವಿಗಾಗಿ ಕಟಿ ಬದ್ಧರಾಗುವಂತೆ ತರುಣರಲ್ಲಿ ಪ್ರೇರೇಪಿಸುವ ಅಧ್ಭುತ ಕಾರ್ಯದಲ್ಲಿ ಎಲೆಮರೆಯ ‌ಕಾಯಿಯಂತೆ ತೊಡಗಿರುವ ಮತ್ತು ತಮ್ಮ ಶಾಲೆಯ ಮೂಲಕ ದೇಶಭಕ್ತ ಭಾವೀ ಪ್ರಜೆಗಳನ್ನು ರೂಪಿಸುವ ಸಲುವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕರ್ಮಯೋಗಿ ಕಲ್ಲಡ್ಕದ ಡಾ. ಪ್ರಭಾಕರ್ ಭಟ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಪ್ರಭಾತ್ ಕಲಾವಿದರು ಗೋಪೀನಾಥ ದಾಸರು

ಎಂಭತ್ತರ ದಶಕದವರೆಗೂ, ಪರಭಾಷಾ ನಾಯಕ ನಟಿಯರು ಮತ್ತು ನೃತ್ಯಗಾರ್ತಿಯರು ಕನ್ನಡ ‍ಚಿತ್ರರಂಗಕ್ಕೆ ಬರುವವರೆಗೂ, ಕನ್ನಡದ ಚಿತ್ರರಂಗಕ್ಕೆ ಹೊಸ ಮುಖದ ಪ್ರಬುದ್ಧ ನವರರಸವನ್ನೂ ಅಭಿನಯಿಸಿ ತೋರಿಸಬಲ್ಲಂತಹ ನಟಿಯರು, ಸಹ ನೃತ್ಯಗಾರ್ತಿಯರು ಬೇಕೆಂದಲ್ಲಿ, ಇಂದಿಗೂ ಯಾವುದೇ ಸಾಂಸ್ಕೃತಿಯ ಕಾರ್ಯಕ್ರಮ ಅಥವಾ ಪೌರಾಣಿಕ ನಾಟಕಗಳಿಗೆ ರಂಗ ಸಜ್ಜಿಕೆ ಮತ್ತು ಉಡುಪುಗಳು ಬೇಕಾದಲ್ಲಿ, ಇಲ್ಲವೇ ಅತ್ಯುತ್ತಮವಾದ ಆಧುನಿಕ ಧ್ವನಿವರ್ಧಕಗಳು ಮತ್ತು ಬೆಳಕಿನ ಪರಿಕರಗಳು ಬೇಕಿದ್ದಲ್ಲಿ, ಎಲ್ಲರೂ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಪ್ರಭಾತ್ ಕಲಾವಿದರು ತಂಡವನ್ನೇ ಆಶ್ರಯಿಸುತ್ತಾರೆ. ಅಂತಹ ಪ್ರಭಾತ್ ಕಲಾವಿದರು ತಂಡವನ್ನು ಆಸ್ಥೆಯಿಂದ ಕಟ್ಟಿ ಬೆಳೆಸಿ ದೇಶ ವಿದೇಶಗಳ್ಲಿ ಕನ್ನಡ ಕಂಪು ಮತ್ತು ಜನಪದ ಸೊಗಡನ್ನು ಮೆರೆಸಿದ ಶ್ರೀ ಗೋಪೀನಾಥ ದಾಸರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆ ಕಥಾ ನಾಯಕರು.

1914,ಜೂನ್ 20ರಂದು ಹರಿಕಥಾ ದಾಸರ ವಂಶವೆಂದೇ ಖ್ಯಾತರಾಗಿದ್ದ ಶ್ರೀ ವೆಂಕಣ್ಣದಾಸರು ಮತ್ತು ಶ್ರೀಮತಿ ಭಾಗೀರಥಿ ದೇವಿ ಎಂಬ ದಂಪತಿಗಳ ಎರಡನೆಯ ಮಗನಾಗಿ ಜನಿಸಿದ ಗೋಪೀನಾಥರಾಸರು ಬಹಳ ಮುದ್ದಾಗಿದ್ದ ಕಾರಣ ಎಲ್ಲರೂ ಪ್ರೀತಿಯಿಂದ ಗೋಪಣ್ಣ ಎಂದು ಕರೆಯುತ್ತಿದ್ದರು. ನೀರಿನಲ್ಲಿರುವ ಮೀನಿಗೆ ಈಜು ಕಲಿಸಬೇಕೆ? ಎನ್ನುವಂತೆ ಹರಿಕಥೆ ಮತ್ತು ಸಂಗೀತಮಯ ವಾತಾವರಣವಿದ್ದ ಮನೆಯಲ್ಲಿ ಗೋಪೀನಾಥರಿಗೆ ಸಂಗೀತದ ಮೇಲಿನ ಆಸಕ್ತಿ ರಕ್ತಗತವಾಗಿಯೇ ಬಂದಿತ್ತು. ಇದನ್ನು ಗಮನಿಸಿದ ಅವರ ತಂದೆ ಪ್ರಸಿದ್ಧ ವೈಣಿಕ ಎಲ್‌. ರಾಜಾರಾಯರಲ್ಲಿ ಶಾಸ್ತ್ರ ಬದ್ಧವಾಗಿ ವೀಣೆ ಮತ್ತು ಗಾಯನದ ಶಿಕ್ಷಣವನ್ನು ಕೊಡಿಸಿದ ಪರಿಣಾಮ, ಚಿಕ್ಕ ವಯಸ್ಸಿನಲ್ಲಿಯೇ ಗೋಪಿನಾಥ ದಾಸರು ಶಾಸ್ತ್ರಬದ್ದ ಸುಶ್ರಾವ್ಯ ಗಾಯಕರಲ್ಲದೇ ವೈಣಿಕರಾಗಿಯೂ ಪ್ರಸಿದ್ದರಾದರು. ಇದರ ಜೊತೆ ಜೊತೆಯಲ್ಲಿಯೇ ತಂದೆ ಮತ್ತು ಚಿಕ್ಕಪ್ಪ ವೇಣುಗೋಪಾಲದಾಸರಿಂದ ಹರಿಕಥೆ ಅಭ್ಯಾಸ ಮಾಡಿದ್ದಲ್ಲದೇ, ನೋಡಲು ಬಹಳ ಸುಂದರವಾಗಿದ್ದ ಗೋಪಣ್ಣನವರು ಅಂದಿನ ಕಾಲದ ಖ್ಯಾತ ರಂಗಕರ್ಮಿ ಶ್ರೀ ವರದಾಚಾರ್ಯರ ಗರಡಿಯಲ್ಲಿ ನಾಟಕ ರಂಗದಲ್ಲೂ ಪಳಗಿ ಬಾಲ ನಟರಾಗಿ ಹೆಸರುವಾಸಿಯಾದರು.

ಕಲಿತ ವಿದ್ಯೆಯನ್ನು ಹತ್ತಾರು ಜನರಿಗೆ ಕಲಿಸಿದರೆನೇ, ವಿದ್ಯೆ ಪ್ರಾಪ್ತಿಯಾಗುತ್ತದೆ ಎಂಬಂತೆ ಬೆಂಗಳೂರಿನ ಸುಲ್ತಾನ್ ‌ಪೇಟೆಯಲ್ಲಿದ್ದ ಆರ್ಯಬಾಲಿಕಾ ಪಾಠ ಶಾಲೆಯಲ್ಲಿ ಕೇವಲ ಹತ್ತೊಂಬತ್ತು ವರ್ಷಕ್ಕೇ, ಸಂಗೀತ ಶಿಕ್ಷಕಾರಾಗಿ ಸೇರಿಕೊಂಡರು. ಖ್ಯಾತ ಗಮಕ ವಿದುಷಿ ಶಕುಂತಲಾಬಾಯಿ ಪಾಂಡುರಂಗರಾವ್ ಮತ್ತು ಚಲನಚಿತ್ರ ರಂಗದ ಖ್ಯಾತ ಅಭಿನೇತ್ರಿ ಎಂ.ವಿ.ರಾಜಮ್ಮ ಇವರ ಶಿಷ್ಯೆಯರು ಎಂಬ ಹೆಗ್ಗಳಿಕೆಯೂ ಗೋಪೀನಾಥ ದಾಸರದ್ದು.

ಅದೇ ಸಂದರ್ಭದಲ್ಲಿಯೇ ಅವರ ತಂದೆಯವರ ಅಕಾಲಿಕ ಅವಸಾನರಾದಾಗ, ತಮ್ಮ ಸಹೋದರರೊಂದಿಗೆ ತಮ್ಮ ವಂಶಪಾರಂಪರ್ಯ ಹರಿಕಥೆ ಕಾರ್ಯಕ್ರಮ ನಡೆಸುತ್ತಿದ್ದರು. ತೆರೆದ ರಂಗಮಂಟಪಗಳು ಇಲ್ಲವೇ ದೇವಸ್ಥಾನಗಳಲ್ಲಿ ನೆರೆದಿರುವ ಎಲ್ಲರಿಗೂ ಕೇಳಿಸುವಂತೆ ಹರಿಕಥೆ ಮಾಡುವುದು ಸ್ವಲ್ಪ ಕಷ್ಟವೆನಿಸಿದ ಕಾರಣ ಆಗಷ್ಟೇ ಚಾಲ್ತಿಗೆ ಬಂದಿದ್ದ ದ್ವನಿ ವರ್ಧಕಗಳನ್ನು ಖರೀದಿಸಿ ತಮ್ಮದೇ ಆದ ಪ್ರಭಾತ್ ಸೌಂಡ್ ಸಿಸ್ಟಂಸ್ ಸ್ಥಾಪಿಸಿ, ತಮ್ಮ ಕಾರ್ಯಕ್ರಮಗಳಲ್ಲದೇ ಇತರರ ಕಾರ್ಯಕ್ರಮಗಳಿಗೂ ಬಾಡಿಗೆಗೆ ಕೊಡಲಾರಂಭಿಸಿದರು. ಅಂದು ಸ್ಥಾಪಿಸಿದ ಪ್ರಭಾತ್ ಸೌಂಡ್ ಸಿಸ್ಟಂಸ್ ಇಂದಿಗೂ ಬಹುತೇಕ ಎಲ್ಲಾ ದೊಡ್ಡ ದೊಡ್ಡ ಖಾಸಗೀ ಮತ್ತು ಸರ್ಕಾರೀ ಸಭೆ ಸಮಾರಂಭಗಳಿಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ಗೋಪೀನಾಥ ದಾಸರ ಅಣ್ಣ ಕರಿರಿಗಿಯವರಿಗೆ ಸ್ವಲ್ಪ ನಾಟಕದ ಖಯಾಲಿ. ಇನ್ನೂ ಗೋಪೀನಾಥ ದಾಸರೋ ಬಾಲ್ಯ ಕಲಾವಿದರಾಗಿಯೇ ಅದಾಗಲೇ ಖ್ಯಾತರಾಗಿದ್ದ ಕಾರಣ, ಆಗಾಗ ತಾವು ಶಿಕ್ಷಕರಾಗಿದ್ದ ಶಾಲೆಯನ್ನು ತಪ್ಪಿಸಿ ನಾಟಕಗಳಲ್ಲಿ ಅಭಿನಯಿಸಲು ಹೋಗುತ್ತಿದ್ದರು. ಅದೊಂದು ಸಂದರ್ಭದಲ್ಲಿ ಈ ಸಹೋದರರಿಗೆ ಕಲ್ಚರ್ಡ್ ಕಮೆಡಿಯನ್‌ ಹಿರಣ್ಣಯ್ಯ (ಮಾ. ಹಿರಣ್ಣಯ್ಯನವರ ತಂದೆ) ಅವರ ಪರಿಚಯವಾಗಿ ಎಲ್ಲರೂ ಸೇರಿ ಒಟ್ಟಿಗೆ ನಾಟಗಳಲ್ಲಿ ಆಭಿನಯಿಸತೊಡಗಿದರು. ಅವರು ನಟಿಸುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ಸೂಕ್ತವಾದ ಪರದೆಗಳು, ಸೈಡ್‌ವಿಂಗ್ಸ್‌, ಸೀನರಿಗಳು ಮತ್ತು ಪೌರಾಣಿಕ ಪಾತ್ರಗಳಿಗೆ ಅಗತ್ಯವಾದ ಪೋಷಾಕುಗಳು, ಆಭರಣಗಳು ಇಲ್ಲದಿದ್ದದ್ದನ್ನು ಗಮನಿಸಿ, ಮತ್ತದೇ ತಮ್ಮ ಸಹೋದರರ ಜೊತೆ ಸೇರಿಕೊಂಡು ಈ ಎಲ್ಲಾ ವಸ್ತುಗಳನ್ನೂ ಬಾಡಿಗೆ ಕೊಡುವ ತಮ್ಮದೇ ಆದ ಸಂಸ್ಥೆಯೊಂದನ್ನು ಆರಂಭಿಸಿಯೇ ಬಿಟ್ಟರು ಗೋಪಣ್ಣನವರು.

ಅದಾಗಲೇ ಹರಿಕಥೆಯಲ್ಲಿ ಪಳಗಿದ್ದ ಗೋಪೀನಾಥದಾಸರ ಭಾಷಾ ಸಂಪತ್ತು ಅಗಾಧವಾಗಿತ್ತು. ಇದನ್ನೇ ನಾಟಕರಂಗದಲ್ಲಿಯೂ ಬಳಸಿಕೊಂಡು ಅನೇಕ ನಾಟಕಗಳಿಗೆ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಲ್ಲದೇ, ತಮ್ಮದೇ ಸಣ್ಣ ವಯಸ್ಸಿನ ತಂಡವನ್ನು ಕಟ್ಟಿಕೊಂಡು ತಾವೇ ರಚಿಸಿದ, ನಾಟಕ ಮತ್ತು ಸಂಗೀತ ರೂಪಕಗಳನ್ನು ನಿರ್ದೇಶಿಸಿ ಯಶಸ್ವೀ ಕಿರಿಯರ ನಾಟಕ ತಂಡವೊಂದನ್ನು ಕಟ್ಟಿಯೇ ಬಿಟ್ಟರು ಗೋಪಣ್ಣನವರು.

ಗೋಪೀನಾಥ ದಾಸರ ಈ ಬಾಲ ಕಲಾವಿದರ ತಂಡ ಜನಪದ ಗೀತೆ ಪುಣ್ಯಕೋಟಿ, ಕರ್ನಾಟಕ ವೈಭವ, ಪಾಶ್ಚಾತ್ಯ ದೃಶ್ಯ ಕಾವ್ಯ ಸಿಂಡ್ರೆಲಾ ಮುಂತಾದ ನಾಟಕಗಳನ್ನು ರಾಜ್ಯಾದಂತ ನೂರಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿ, ದೇಶದ ರಾಜಧಾನಿ ದೆಹಲಿಗೂ ಕಾಲಿಟ್ಟು ನಂತರ ರಾಷ್ಟ್ರದ ವಿವಿಧಡೆಯಲ್ಲಿಯೂ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರದರ್ಶಿತಗೊಂಡು ಪ್ರಖ್ಯಾತಿ ಗಳಿಸಿತು. ಅವರ ಸಿಂಡ್ರೆಲಾ ನೃತ್ಯರೂಪಕ, ಜನವರಿ 26, 2007 ರಂದು 1001ನೇ ಪ್ರದರ್ಶನ ಕಂಡು ದಾಖಲೆಯನ್ನೇ ಸ್ಥಾಪಿಸಿತು. ಹರಿಕಥೆಗೆ ಪ್ರಸಿದ್ಧವಾಗಿದ್ದ ಕುಟುಂಬ, ಪ್ರಭಾತ್‌ ಸೌಂಡ್‌ ಸಿಸ್ಟಂಸ್ ಮೂಲಕ ಧ್ವನಿವರ್ಧಕ ಮತ್ತು ರಂಗಸಜ್ಜಿಗೆಯನ್ನು ಒದಗಿಸುತ್ತಲ್ದೇ, ಮಕ್ಕಳ ತಂಡವನ್ನು ಕಟ್ಟಿಕೊಂಡು ಪ್ರಭಾತ್‌ ಕಲಾವಿದರು ಎಂಬ ಸಂಸ್ಥೆಯಾಗಿದ್ದರ ಪ್ರಮುಖ ರೂವಾಗಿಗಳೇ ನಮ್ಮ ಗೋಪಣ್ಣನವರು.

ಈ ಮಕ್ಕಳ ಪ್ರಭಾತ್ ಕಲಾವಿದರು ಟೋಳಿಯಿಂದಿಗೆ ಜನಪದ ಗೀತೆಗಳಾದ ಗೋವಿನ ಕಥೆ, ಕಿಂದರ ಜೋಗಿಗಳಲ್ಲದೇ, ಧರ್ಮಭೂಮಿ, ಕರ್ನಾಟಕ ವೈಭವ ಮುಂತಾದ ಇತಿಹಾಸ ಹಿನ್ನಲೆಯ ನೃತ್ಯರೂಪಗಳಲ್ಲದೇ, ಮೋಹಿನಿ ಭಸ್ಮಾಸುರ, ಭಗವದ್ಗೀತೆ ಮುಂತಾದ ಪೌರಾಣಿಕ ನೃತ್ಯರೂಪಕಗಳಿಗೆ ಪ್ರಸಿದ್ಧವಾಗಿತ್ತು. ಎಪ್ಪತ್ತರ ದಶಕದಲ್ಲಿ ಇದೇ ತಂಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಸಲುವಾಗಿ ಗೋಪೀನಾಥ ದಾಸರು ರಷ್ಯಾ ದೇಶದ ಕಲೆಯಾದ ಬ್ಯಾಲೆಯ ಶೈಲಿಯಲ್ಲಿ ಈ ಎಲ್ಲಾ ಭಾರತೀಯ ನೃತ್ಯ ರೂಪಗಳನ್ನು ಈ ನವ-ವಿಧಾನಗಳಿಂದ ಪ್ರಪಂಚಾದ್ಯಂತ ಪಸರಿಸುವುದರ ಹಿಂದಿನ ಪರಿಶ್ರಮ ಗೋಪಣ್ಣನವರದ್ದಾಗಿತ್ತು.

 • ಕನ್ನಡದ ಕಂಪನ್ನು ವಿಶ್ವಾದ್ಯಂತ ಹರಡಿದ ಗೋಪೀನಾಥರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆಯಲ್ಲದೇ, ಗೌರವ ಡಾಕ್ಟರೇಟ್ ಪಡೆದ ಮೊದಲ ಹರಿಕಥಾ ವಿದ್ವಾಂಸರೂ ಎಂಬ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
 • ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೆರೆದು ಮರೆಯಾದ ಮಂಜುಳಾ ಪ್ರಭಾತ್ ಕಲಾವಿದರು ತಂಡದ ಹೆಮ್ಮೆಯ ಕೊಡುಗೆ
 • ತೊಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿ‍ಂ‍ಚಿದ ಅಮೇರಿಕಾ ಅಮೇರಿಕಾ ಚಿತ್ರದ ನಾಯಕಿ ಹೇಮಾ ಪಂಚಮುಖಿ ಇದೇ ಪ್ರಭಾತ್ ಕುಟುಂಬದ ಕುಡಿ ಎನ್ನುವುದೂ ಗಮನಾರ್ಹ.
 • ಅಂತರರಾಷ್ಟ್ರೀಯ ಮಟ್ಟದ ನೃತ್ಯಗಾರ್ತಿಯಾದ ಶ್ರೀಮತಿ ನಿರುಪಮಾ ರಾಜೇಂದ್ರ ಅವರು ಸಹಾ ಇದೇ ಕುಟುಂಬದವರು.

ಇಷ್ಟೆಲ್ಲಾ ಸಾಧಿಸುವುದರಲ್ಲಿಯೇ ತಮ್ಮ ಆಯಸ್ಸನ್ನು ಸವೆಸಿದ್ದರ ಪರಿಣಾಮ ತಮ್ಮ 68ನೇ ವಯಸ್ಸಿನಲ್ಲಿ 1982ರಲ್ಲಿ ನಿಧನರಾದರೂ ಅತ್ಯಂತ ಜತನದಿಂದ ಕಟ್ಟಿದ ಅವರ ಸಂಸ್ಥೆಯನ್ನು ಅವರ ಮಕ್ಕಳು ಮುಂದುವರೆಸಿಕೊಂಡು ಮೊದಲಿನ ರೂಪಕಗಳ ಜೊತೆ, ಶ್ರೀನಿವಾಸ ಕಲ್ಯಾಣ, ಶ್ರೀ ಕೃಷ್ಣ ವೈಜಯಂತಿ, ಶ್ರೀ ರಾಮ ಪ್ರತಿಕ್ಷಾ, ಮಹಿಷಾಸುರ ಮರ್ಧಿನಿ ಮುಂತಾದ ನೃತ್ಯ ರೂಪಕಗಳನ್ನು ಯಶಸ್ವಿಯಾಗಿ ರಂಗದ ಮೇಲೆ ತಂದಿದ್ದಾರೆ. ಪ್ರಭಾತ್ ಕಲಾವಿದರು ಈ ಪ್ರಯೋಗದಿಂದ ಪ್ರಭಾವಿತರಾಗಿ ಇವರ ಬಹುತೇಕ ರೂಪಕಗಳು, ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಮತ್ತು ಸಂಸ್ಕೃತ ಭಾಷೆಗಳಿಗೂ ಭಾಷಾಂತರಗೊಂಡು ದೇಶಾದ್ಯಂತ ಪ್ರದರ್ಶನವಾಗಿ ದಾಖಲೆಯನ್ನು ಸೃಷ್ಟಿಸಿದೆ.

ಸದಾ ಹಸನ್ಮುಖಿ ಮತ್ತು ಸಹನಶೀಲ ವ್ಯಕ್ತಿಯಾಗಿ, ಕಷ್ಟವೋ ನಷ್ಟವೋ, ದೇಹಿ ಎಂದು ಬಂದವರಿಗೆ ನಾಸ್ತಿ ಎನ್ನದೆ, ಮುಖಸಿಂಡರಿಸಿ ಕೊಳ್ಳದೇ, ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದ ದಾನಶೂರ ಕರ್ಣ ಎಂದರೂ ಅತಿಶಯೋಕ್ತಿಯೇನಲ್ಲ. ಅನೇಕ ಸಂಘ ಸಂಸ್ಥೆಗಳ ಪರವಾಗಿ ತಮ್ಮ ಪ್ರಭಾತ್ ತಂಡದ ಸಹಾಯಾರ್ಥ ಪ್ರದರ್ಶನಗಳನ್ನು ಉಚಿತವಾಗಿ ನೀಡುವ ಮೂಲಕ ಆ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಲ್ಲದೇ, ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಅಶಕ್ತ ಕಲಾವಿದರನ್ನು ತಮ್ಮ ಮನೆಯಲ್ಲಿಯೇ ಊಟ ಬಟ್ಟೆಯ ಜೊತೆಗೆ ಅಲ್ಪ ಸ್ವಲ್ಪ ಹಣವನ್ನೂ ನೀಡಿ ಆಶ್ರಯ ನೀಡಿದ ಆಶ್ರಯ ದಾತರಾಗಿದ್ದಲ್ಲದೇ, ಕಲಾತಪಸ್ವಿ ಗೋಪೀನಾಥ ದಾಸರು ತಮ್ಮ ವಂಶಪಾರಂಪರ್ಯ ಹರಿಕಥೆಯೊಂದಿಗೆ ಆರಂಭಿಸಿ, ಬಾಲ ನಟ, ಸಂಗೀತ ಶಿಕ್ಷಕ, ಪ್ರಭಾತ್ ಸೌಂಡ್ಸ್, ಪ್ರಭಾತ್ ರಂಗ ಸಜ್ಜಿಕೆ, ಪ್ರಭಾತ್ ಕಲಾವಿದರು ಹೀಗೆ ಲಲಿತಕಲೆಗಾಗಿಯೇ ತಮ್ಮನ್ನು ಮತ್ತು ತಮ್ಮ ಅವಿಭಕ್ತ ಕುಟುಂಬವನ್ನು ಜೋಡಿಸಿಕೊಂಡು ಕರ್ನಾಟಕ ಮತ್ತು ಕನ್ನಡದ ಸೊಗಡನ್ನು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಇನ್ನೂ ಅದರ ಸೊಗಡನ್ನು ಹೆಚ್ಚಿಸಿಕೊಂಡು ಹೋಗುತ್ತಲೇ ಇರುವ ಕಾರಣ ಗೋಪೀನಾಥ ದಾಸರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಈ ಲೇಖನ ವಿಕಿಪೀಡಿಯಾದ ಮಾಹಿತಿ ಆಧಾರವಾಗಿದೆ