ಐದು ರೂಪಾಯಿ ಡಾಕ್ಟರ್ ಶಂಕರೇಗೌಡ

ಇವತ್ತಿನ ದಿನ ಕಾಲದಲ್ಲಿ ದುಡಿಯುವ ಸಮಯದಲ್ಲಿ ಸರಿಯಾಗಿ ಎರಡು ಹೊತ್ತಿನ ಊಟ ಕಣ್ತುಂಬ ನಿದ್ದೆಯನ್ನೂ ಮಾಡದೇ, ಹೊಟ್ಟೆ ಬಟ್ಟೆ ಕಟ್ಟಿ ಅಷ್ಟೋ ಇಷ್ಟೋ ಉಳಿಸಿದ್ದನ್ನು ಒಂದು ಸಣ್ಣ ಖಾಯಿಲೆಯಿಂದ  ಹುಷಾರಾಗೋದಿಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯರನ್ನು ಬೈದು ಕೊಳ್ಳುತ್ತಲೇ,  ಲಕ್ಷಾಂತರ ರೂಪಾಯಿ ಹಣ ಆಸ್ಪತ್ರೆಗೆ ಕಟ್ಟಿ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ಇರುವಾಗ, ಮಣಿಪಾಲ್ ಅಂತಹ ಕಾಲೇಜಿನಲ್ಲಿ ಓದಿ ವೈದ್ಯಕೀಯ ಪದವಿಯನ್ನು ಪಡೆದು ದೇಶ ವಿದೇಶಗಳಲ್ಲಿ ಲಕ್ಷಾಂತರ ಹಣವನ್ನು ಸಂಪದಿಸಿ ನೆಮ್ಮದಿಯಾಗಿರುವ ಬದಲು ವೈದ್ಯೋ ನಾರಯಣೋ ಹರಿಃ ಎನ್ನುವುದನ್ನು ಅಕ್ಷರಶಃ ಪಾಲಿಸುವಂತೆ ಮಂಡ್ಯಾದ ಗ್ರಾಮೀಣ ಜನರಿಗೆ ದೇವರಂತೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ  ಐದು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯರಾದ ಡಾ. ಎಸ್‌. ಸಿ. ಶಂಕರೇಗೌಡವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆ ಅವರ ಯಶೋಗಾಥೆಯನ್ನು ನಮ್ಮ  ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

shank1ಶಂಕರೇಗೌಡರು ಹುಟ್ಟಿದ್ದು ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ. ಬಾಲ್ಯದಿಂದಲೂ ಓದಿನಲ್ಲಿ ಚುರುಕಾಗಿದ್ದ ಶಂಕರೇ ಗೌಡರು ತಮ್ಮ  ವೈದ್ಯಕೀಯ ಶಿಕ್ಷಣವನ್ನು ಉಡುಪಿ ಮಣಿಪಾಲ್ ಕಾಲೇಜಿನಲ್ಲಿ ಪಡೆದು  ಇತರೇ ವೈದ್ಯರಂತೆ ವಿದೇಶಕ್ಕೆ ಫಲಾಯನ ಮಾಡಿಯೋ ಇಲ್ಲವೇ ತಮ್ಮದೇ ನರ್ಸಿಂಗ್ ಹೋಮ್ ಕಟ್ಟಿಸಿಕೊಂಡು ಲಕ್ಷ ಲಕ್ಷಗಟ್ಟಲೇ ಹಣವನ್ನು ಸಂಪಾದಿಸುವವರೇ ಹೆಚ್ಚಾಗಿರುವ ಕಾಲದಲ್ಲಿ  ಆರ್ಥಿಕ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಬಹುತೇಕರಿಗೆ ಸೂಕ್ತವಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದನ್ನು ಮನಗಂಡು  ಸೂಕ್ತ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಸುಮ್ಮನಾಗದೇ ತಮ್ಮೂರಿನಿಂದ ಸುಮಾರು 12 ಕಿಮೀ ದೂರದ ಮಂಡ್ಯದಲ್ಲಿ 30 ವರ್ಷಗಳ ಹಿಂದೆ  ಸಣ್ಣದೊಂದು ಕ್ಲಿನಿಕ್ ಆರಂಭಿಸಿ ಚರ್ಮವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಕೈಗುಣ ಚೆನ್ನಾಗಿರುವ ಕಾರಣ ಕೇವಲ ಮಂಡ್ಯಾದ ರೋಗಿಗಳಲ್ಲದೇ, ದೂರದ ಬೆಂಗಳೂರು, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತಮಿಳುನಾಡು, ಒಡಿಶಾ ಮತ್ತು ಮುಂಬೈನಿಂದಲೂ ರೋಗಿಗಳು ಬರುತ್ತಾರೆ  ಎಂಬುದು ಅವರ ಹೆಗ್ಗಳಿಕೆಯಾಗಿದೆ.

ಹಾಗಾಗಿಯೇ ದೇಶದ ನಾನಾ ಭಾಗಗಳಿಂದ ಇವರ ಬಳಿ ಜನರು ಬಂದು ಚಿಕಿತ್ಸೆ ಪಡೆಯಲು ನಿತ್ಯ ನೂರಾರು ಜನ ಸಾಲುಗಟ್ಟಿ ನಿಲುತ್ತಾರೆ. ಕೇವಲ 5 ರೂಪಾಯಿಗಳಷ್ಟೇ ರೋಗಿಗಳಿಂದ ಹಣವನ್ನು ಪಡೆದರೂ ಇವರು ಬರೆದು ಕೊಡುವ ಔಷಧಿಗಳು ಕೂಡ ದುಬಾರಿಯಾಗಿರದೇ, ಕೇವಲ ನೂರರಿಂದ ಇನ್ನೂರು ರೂಪಾಯಿಯಲ್ಲೇ ಸಿಗುತ್ತದೆ. ಒಮ್ಮೆ ಇವರ ಬಳಿ ಬಂದು ಚಿಕಿತ್ಸೆ ಪಡೆದರೆ ಸಾಕು ಮತ್ತೆ ಮತ್ತೆ ಅವರ ಬಳಿ ಅಲೆಯುವ ಅವಶ್ಯಕತೆಯೂ ಇಲ್ಲ. ಅವರು ಒಮ್ಮೆ ನೀಡುವ ಔಷಧಿಯಿಂದಲೇ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬುದು  ಅವರಿಂದ ಚಿಕಿತ್ಸೆ ಪಡೆಯುವ ರೋಗಿಗಳ ನಂಬಿಕೆಯಾಗಿರುವ ಕಾರಣ ದಿನೇ ದಿನೇ ಅವರ ಜನಪ್ರಿಯರಾಗುತ್ತಿದ್ದಾರೆ.

ಇವರ ಬರಿ ಚಿಕಿತ್ಸೆ ಪಡೆಯಲು ಯಾರದ್ದೇ ಶಿಫಾರಸ್ಸಾಗಲಿ ಹಂಗಾಗಲೀ ಇಲ್ಲವೇ ಇಲ್ಲವಾಗಿದೆ. ರೋಗಿಯು ಬಡವನಾಗಿರಲೀ, ಬಲ್ಲಿದನಾಗಿರಲೀ,  ರಾಜಕಾರಣಿಯಾಗಿರಲೀ, ಇಲ್ಲವೇ ಉದ್ಯಮಿಯಾಗಿರಲೇ ಅಥವಾ ಹಿರಿಯ  ಅಧಿಕಾರಿಯೇ ಆಗಿದ್ದರೂ  ಇವರ ಬಳಿ ಎಲ್ಲರೂ ಸಮಾನರೇ. ಎಲ್ಲರು ಸರದಿಯ ಸಾಲಿನಲ್ಲಿಯೇ ನಿಂತು ಕೊಂಡು ಸರದಿ  ಬಂದಾಗ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುತ್ತಾರೆ. ಆದರೆ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಅಶಕ್ತರಿಗೆ ಪ್ರತ್ಯೇಕ ಸರತಿ ಸಾಲು ಇದೆ.  ಚಿಕಿತ್ಸೆಯ ನಂತರ ಎಲ್ಲರಿಂದಲೂ ಪಡೆಯುವುದು ಒಂದೇ ದರವಾದ್ದರಿಂದ ಅದೆಷ್ಟೋ ಜನರು ಮೂಗಿಗಿಂತ ಮೂಗಿನ ನತ್ತೇ ಭಾರ ಎನ್ನುವಂತೆ  ಇವರ ಚಿಕಿತ್ಸೆಯ ಹಣಕ್ಕಿಂತ ಇಲ್ಲಿಗೆ ಬರುವ ಬಸ್ ಚಾರ್ಜ ಹೆಚ್ಚಾಗಿರುತ್ತದೆ ಎಂದೇ ತಮಾಷೆ ಮಾಡುತ್ತಾರೆ.

shank3ಸಾಮಾನ್ಯವಾಗಿ ವೈದ್ಯರ ಚಿಕಿತ್ಸಾ ವೆಚ್ಚವನ್ನು ಐಎಂಎ(ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ನಿರ್ಧರಿಸುತ್ತದೆ. ಆದರೆ  ಶಂಕರೇ ಗೌಡರು ಇದಾವುದರ ಹಂಗಿಲ್ಲದೇ ತಮ್ಮ ಪಾಡಿಗೆ ತಾವು  ಸಂತೋಷದಿಂದ ಐದು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅನೇಕ ಬಾರಿ ತಮ್ಮ ಚಿಕಿತ್ಸೆಯ ದರವನ್ನು  ಹೆಚ್ಚಿಸಲು ಸಲಹೆ ನೀಡಿದರೂ ಅದಕ್ಕೆಲ್ಲಾ ಶಂಕರೇಗೌಡ್ರು ಸೊಪ್ಪೇ ಹಾಕದೇ, ಇನ್ನು ಅದಿಲ್ಲ ಇದಿಲ್ಲ ಎಂದು ಪದೇ ಪದೇ  ಒಂದಲ್ಲ ಒಂದು ಮುಷ್ಕರದಲ್ಲಿ ಭಾಗಿಗಳಾಗಿ ತಮ್ಮ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸುವ ವೈದ್ಯರಿಂದ ಸದಾಕಾಲವೂ ದೂರವಿದ್ದು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ರೋಗಿಗಳ ಚಿಕಿತ್ಸೆಗೆಂದೇ ವೈದ್ಯರಿರಬೇಕು. ರೋಗಿಗಳಿಗೆ ಚಿಕಿತ್ಸೆ ಕೊಡದ ವೈದ್ಯರು ಇಲ್ಲವೇ ರೋಗಿಗಳಿಂದ ಸುಲಿಗೆ ಮಾಡುವವರು ನಿಜವಾದ  ವೈದ್ಯರೇ ಅಲ್ಲಾ ಎಂದು ಎನ್ನುವುದು ಅವರ ಧ್ಯೇಯವಾಗಿದೆ. ನನಗೆ ನನ್ನ ವೈದ್ಯಕೀಯ ಸೇವೆಯಲ್ಲೇ ತೃಪ್ತಿ ಇದೆ. ಹಾಗಾಗಿ ನಾನು ಸದಾಕಾಲವು ಹೀಗೆಯೇ ಇದೇ ರೀತಿಯಲ್ಲಿಯೇ  ಮುಂದುವರೆಯುತ್ತೇನೆ  ಎನ್ನುತ್ತಾರೆ  ಡಾ.ಶಂಕರೇಗೌಡರು.

shank2ಡಾ. ಶಂಕರೇಗೌಡರು ವೃತ್ತಿಯಲ್ಲಿ ವೈದ್ಯರಾಗಿದ್ದರೇ, ಪ್ರವೃತ್ತಿಯಲ್ಲಿ ಅವರೊಬ್ಬ ಯಶಸ್ವಿ ರೈತರು ಮತ್ತು ಸಜ್ಜನಿಕೆಯ ರಾಜಕಾರಣಿಯೂ  ಆಗಿದ್ದಾರೆ. ತಮ್ಮ ಸ್ವಗ್ರಾಮ ಶಿವಳ್ಳಿಯಲ್ಲಿ ಹತ್ತಾರು ಎಕರೆ ಜಮೀನು ಹೊಂದಿರುವ ಶಂಕರೇಗೌಡರು ಪ್ರತಿ ವರ್ಷ ನೂರಾರು ಟನ್ ಕಬ್ಬು ಮತ್ತು ಮನೆಗೆ ಅಗತ್ಯವಿರುವಷ್ಟು ಭತ್ತ ಬೆಳೆಯುತ್ತಾರೆ. ಹಾಗಾಗಿಯೇ ಅವಾ ದೈನಂದಿನ ಚಟುವಟಿಕೆ ಉಳಿದವರಿಗಿಂತಲೂ ಸ್ವಲ್ಪ ವಿಭಿನ್ನವಾಗಿದೆ. ಮಂಡ್ಯದ ಬಂಡೀಗೌಡ ಮೂರನೇ ತಿರುವಿನಲ್ಲಿರುವ ಮನೆಯಲ್ಲಿ ವಾಸಿಸುವ ವೈದ್ಯರು,  ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಪ್ರಾಥಃರ್ವಿಧಗಳನ್ನು ಮುಗಿಸಿದ  ನಂತರ ಸುಮಾರು ಒಂದು ಗಂಟೆ ಕಾಲ ದಿನಪತ್ರಿಕೆಗಳ ಓದಿದ ಬಳಿಕ ಊರಿನಲ್ಲಿರುವ ತಮ್ಮ ಜಮೀನಿನಲ್ಲಿ ಇತರೇ ರೈತರಂತೆಯೇ ಸುಮಾರು ಎರಡು ಗಂಟೆ ಕಾಲ ಜಮೀನಿನಲ್ಲಿ ಬೇಸಾಯ ಮಾಡಿ ನಂತರ  ಅವರಿಗಾಗಿಯೇ ಅಲ್ಲೇ ಕಾಯುತ್ತಿರುವ  ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.

shank3ಆದಾದ ನಂತರ ಮನೆಗೆ ಬಂದು ಸ್ನಾನ ತಿಂಡಿ ಇಲ್ಲವೇ ಊಟವನ್ನೇ ಮುಗಿಸಿ ಚಿಕಿತ್ಸೆ ನೀಡಲು ಆರಂಭಿಸಿದರೆ ರಾತ್ರಿ ಎಂಟು ಗಂಟೆವರೆಗೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇಿ ಇರುತ್ತಾರೆ. ಕೆ.ಆರ್.ರಸ್ತೆಯಲ್ಲಿರುವ ಆದಿಚುಂಚನಗಿರಿ ಬಿಲ್ಡಿಂಗ್ ನಲ್ಲಿ ತಮ್ಮ ಕ್ಲಿನಿಕ್ ಹೊಂದಿರುವ ವೈದ್ಯರು  ಇತರೇ ಕ್ಲಿನಿಕ್ಕಿನಂತೆ ಭಾರೀ  ಐಶಾರಾಮ್ಯವಾಗಿರದೇ ಸಾಧಾರಣವಾಗಿದ್ದರೂ ಅವರ ಕೈಗುಣ ಚೆನ್ನಾಗಿರುವ ಕಾರಣ ಜನರು ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಬಾರಿ ರೋಗಿಗಳು ಕ್ಲೀನಿಕ್ಕಿಗೆ ಬರಲೂ ಸಾಧ್ಯಾವಾದೇ ಇರುವ ಹೋಗುತ್ತಿರುವ ದಾರಿಯ ಮಧ್ಯದಲ್ಲಿ ಕೈ ಅಡ್ಡ ಹಾಕಿ ನಿಲ್ಲಿಸಿದರೆ, ಅಲ್ಲೇ ಯಾವುದೋ ಅಂಗಡಿಯ ಜಗುಲಿಯ ಮೇಲೆ ಕುಳಿತೋ ಇಲ್ಲವೇ  ರಸ್ತೆಯ ಪಕ್ಕದಲ್ಲಿ ನಿಂತೂ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಗುಣಪಡಿಸಲು ಸಾಧ್ಯವಾಗದ ಅನೇಕ ರೋಗಗಳನ್ನು ಗುಣಪಡಿಸಿರುವ ವೈದ್ಯರ ಬಳಿ ಒಂದು ಮೊಬೈಲ್ ಫೋನಾಗಲೀ, ಕಂಪ್ಯೂಟರ್ ಅಥವಾ ಇಂಟರ್ನೆಟ್ ಇಲ್ಲದಿರುವುದು ಅಚ್ಚರಿಯ ವಿಷಯವಾಗಿದೆ. ಅವರ ಕ್ಲಿನಿಕ್‌ನಲ್ಲಿ ಕೇವಲ ಒಂದು ದೂರವಾಣಿ ಇದ್ದು ಅದನ್ನೂ ಸಹಾ ಯಾವುದೇ ಸಹಾಯಕರು ಅಥವಾ ಕಾಂಪೌಂಡರ್ಗಳು ಇಲ್ಲದೇ ಅವೆಲ್ಲಾ ಕೆಲಸವನ್ನೂ ವೈದ್ಯರೇ ಸ್ವತಃ ನಿರ್ವಹಿಸುತ್ತಾರೆ.

ಈ ರೀತಿಯ ಸರಳ ಸಜ್ಜನರು ರಾಜಕೀಯಕ್ಕೆ ಬಂದಲ್ಲಿ ಹೆಚ್ಚಿನ ಸೇವೆ ಸಲ್ಲಿಸಬಹುದು ಎನ್ನುವ ಕಾರಣದಿಂದಾಗಿ, ತಮ್ಮ  ಕ್ಷೇತ್ರದ ಜನರ ಬಲವಂತಕ್ಕೆ ಮಣಿದು ಕಳೆದ ಜಿಲ್ಲಾ ಪಂಚಾಯತ್  ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡೂವರೆ ವರ್ಷಗಳ ಕಾಲ ಮಂಡ್ಯ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರು. ಇದೇ  ಉತ್ಸಾಹದಲ್ಲಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿಯೂ ಪಕ್ಷೇತರರಾಗಿ ಸ್ಪರ್ಧಿಸಿ ಜನ ಬೆಂಬಲ ಸಿಗದೇ ಪರಾಭವಗೊಂಡು ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಡಾ.ಶಂಕರೇಗೌಡ ಅವರು ಸಮಾಜಕ್ಕೆ ಸಲ್ಲಿಸಿದ ಈ ಅಸಾಧಾರಣವಾದ ಸೇವೆಗಾಗಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದಾರೆ

  • ಕಲ್ಪವೃಕ್ಷ ಟ್ರಸ್ಟ್ ಕರ್ನಾಟಕ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಿದೆ.
  • ಜೀ ಕನ್ನಡ ವಾಹಿನಿಯು 2019ರಲ್ಲಿ  ಹೆಮ್ಮೆಯ ಕನ್ನಡಿಗ  ಪ್ರಶಸ್ತಿ ನೀಡಿ ಗೌರವಿಸಿದೆ.
  • ಅವರ ನಿಸ್ವಾರ್ಥ ಕೆಲಸಕ್ಕಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಲೇಖನವನ್ನು ಬರೆದು  ಗೌರವ ಸಲ್ಲಿಸಿವೆ.

shank4ಕೊರೋನಾ ಮಹಾಮಾರಿಯ ಸಂಧರ್ಭದಲ್ಲಿಯೂ ಯಾವುದಕ್ಕೂ ಜಗ್ಗದೆ, ಕುಗ್ಗದೆ ನಿರಂತರವಾಗಿ ಎಂದಿನಂತೆ ಚಿಕಿತ್ಸೆ ನೀಡುತ್ತಲೇ ಇದ್ದರು. ವರ್ಷದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ  ವಿಶ್ರಾಂತಿ ದೃಷ್ಟಿಯಿಂದ ಮನೆಯಲ್ಲೇ ಕ್ಲಿನಿಕ್ ಮಾಡಿಕೊಂಡು ಬೆಳಿಗ್ಗೆ 8ರಿಂದ 9.30ರವರೆಗೆ ಹಾಗೂ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆವರೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಂದೆಲ್ಲಾ ಇವರು ಮನೆಗೆ ಬರುವವರೆಗೂ ಆತಂಕದಲ್ಲೇ ಇರುತ್ತಿದ್ದ ಶಂಕ್ರೇಗೌಡರ ಮಡದಿ ಮತ್ತು ಮಗಳಿಗೆ ಈಗ ವೈದ್ಯರು ಮನೆಯಲ್ಲೇ ಇದ್ದು ಚಿಕಿತ್ಸೆ  ಕೊಡುತ್ತಿರುವುದು ಅವರ ಮನೆಯವರಿಗೆ ತುಸು ನೆಮ್ಮದಿ ನೀಡಿದೆ.

ವರ್ಷದ 365 ದಿನವೂ ಬೇಸರಿಸಿಕೊಳ್ಳದೇ, ಇಷ್ಟು ತಡರಾತ್ರಿಯವರೆಗೂ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡುತ್ತೀರಿ? ಎಂದು ಪ್ರಶ್ನಿಸಿದ್ದಕ್ಕೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾಗಿದ್ದ ಡಾ.ಕೆ.ಗೋವಿಂದ ಅವರೂ ಸಹಾ ಹೀಗೆಯೇ ಹಗಲಿರುಳು ಎನ್ನದೇ ಚಿಕಿತ್ಸೆ ಕೊಡುತ್ತಿದ್ದದ್ದೇ ನನಗೆ ಸ್ಫೂರ್ತಿ ಎನ್ನುತ್ತಾರೆ ಗೌಡರು.

ಈ ಮೊದಲೇ ಹೇಳಿದಂತೆ ವೈದ್ಯೋ ನಾರಯಣೋ ಹರಿಃ ಎಂದು ವೈದ್ಯರನ್ನು ದೇವರ ಸಮಾನ ಎಂದು  ಅನಾದಿ ಕಾಲದಿಂದಲೂ ನಂಬಿರುವವರಿಗೆ, ಇತ್ತೀಚಿಗೆ  ಎಲ್ಲೆಡೆಯೂ  ವಾಣಿಜ್ಯೀಕರಣವಾಗಿ  ಅನೇಕ ವೈದ್ಯರು ದುಬಾರಿ ಶುಲ್ಕವನ್ನು ವಿಧಿಸುವುದಲ್ಲದೇ, ಔಷಧಿ ಕಂಪನಿಗಳು ಮತ್ತು ಸುತ್ತಮುತ್ತಲಿನ ಮೆಡಿಕಲ್ ಸ್ಟೋರ್ಗಳೊಂದಿಗೆ ಶಾಮೀಲಾಗಿ, ಅವರು ಕೊಡುವ ಕಮಿಷನ್ ಆಸೆಗಾಗಿ ದುಬಾರೀ ಔಷಧಿಗಳನ್ನೇ ಬರೆಯುವ ದಿನಗಳಲ್ಲಿ,  ವೃತ್ತಿ ಗೌರವ  ಅದರ್ಶ ಮತ್ತು ತತ್ವಗಳನ್ನು ಉಳಿಸಿಕೊಂಡು ಗ್ರಾಮೀಣ ಜನರಿಗೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ  ಡಾ. ಶಂಕ್ರೇಗೌಡರು ಈಗ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾವೀ ವೈದ್ಯರಿಗೆ ಖಂಡಿತವಾಗಿಯೂ ಮಾದರಿಯಾಗಬಲ್ಲರು ಇಂತಹ ಮಾನವೀಯತೆ ಮತ್ತು ಸೇವಾ ಮನೋಭಾವನೆಯನ್ನು  ಹೊಂದಿರುವ ಶ್ರೀ ಡಾ. ಶಂಕರೇ ಗೌಡರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ರಾಮಕೃಷ್ಣ ಹೆಗಡೆ

h6

ಕರ್ನಾಟಕ ಕಂಡ ಅತ್ಯಂತ ಚಾಣಕ್ಷ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದಂತಹ ಹಳ್ಳಿಯಿಂದ ದಿಲ್ಲಿಯವರೆಗೂ ಯುವಕರಿಂದ ವಯಸ್ಸಾದವರೂ ಇಷ್ಟಪಡುತ್ತಿದ್ದ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವುಗಳ ಮೂಲಕ ಇಂದಿಗೂ ರಾಜ್ಯದ ಜನಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಶ್ರೀ ರಾಮಕೃಷ್ಣ ಹೆಗಡೆಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಉತ್ತರಕರ್ನಾಟಕದ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕೃಷಿಕ ಕುಟುಂಬದ ಮಹಾಬಲೇಶ್ವರ ಹೆಗಡೆ ಹಾಗೂ ಸರಸ್ವತಿ ಹೆಗಡೆ ದಂಪತಿಗಳಿಗೆ 1926ರ ಅಗಸ್ಟ್ 29ರಂದು ರಾಮಕೃಷ್ಣ ಹೆಗಡೆಯವರು ಜನಿಸುತ್ತಾರೆ. ಓದಿನಲ್ಲಿ ಅತ್ಯಂತ ಚುರುಕಾಗಿದ್ದ ರಾಮಕೃಷ್ಣರಿಗೆ ನಾಯಕತ್ವ ಎನ್ನುವುದು ರಕ್ತಗತವಾಗಿ ಬರುವುದಕ್ಕೆ ಅವರ ಮನೆಯ ವಾತಾವರಣವೂ ಕಾರಣವಾಗಿತ್ತು ಎಂದರೂ ಎಂದರೂ ತಪ್ಪಾಗದು. ಅವರು ತಂದೆಯವರು ಸ್ವಾತ್ರಂತ್ರ ಹೋರಾಟಗಾರಾಗಿದ್ದರೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಅಂಟಿಕೊಂದ್ದಂತಹ ತೋಟದ ಮಧ್ಯೆಯಲ್ಲಿದ್ದ ಅವರ ಮನೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯತಾಣವಾಗಿತ್ತು. ಹಾಗಾಗಿಯೇ ಅವರ ಮನೆಗೆ ಪೋಲೀಸರ ಧಾಳಿ ಆಗ್ಗಿಂದ್ದಾಗೆ ನಡೆಯುತ್ತಿದ್ದವು.

h3

ಸ್ವಾತ್ರಂತ್ರ್ಯ ಹೋರಾಟಗಾರರನ್ನು ಮತ್ತು ಬ್ರಿಟೀಷರ ದಬ್ಬಾಳಿಕೆಯನ್ನು ಅತ್ಯಂತ ಹತ್ತಿರದಿಂದ ಕಂಡಿದ್ದ ರಾಮಕೃಷ್ಣರು ಚಿಕ್ಕಂದಿನಿಂದಲೇ, ಪತ್ರಕರ್ತರಾಗಬಯಸಿದ್ದರು. ಹಾಗಾಗಿಯೇ ಸಿರ್ಸಿಯ ಮಾರಿಕಾಂಬ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕೈಬರಹದ ಪತ್ರಿಕೆ ಹೂವಿನ ಸರಕ್ಕೆ ಲೇಖನ ಬರೆಯುತ್ತಿದ್ದರು. ಮುಂದೆ ಬನಾರಸ್ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಅವರ ಆಸೆಗಳನ್ನು ಪೂರೈಸಿಕೊಂಡಿದ್ದರು. ಕಾಶಿ ವಿದ್ಯಾಪೀಠದಲ್ಲಿ ಪದವಿ ಮುಗಿಸಿ ಅಲ್ಲಿಂದ ಲಕ್ನೋ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಗಿಸಿಕೊಂಡು ಕರ್ನಾಟಕಕ್ಕೆ ಮರಳಿ ವಕೀಲ ವೃತ್ತಿಯೊಂದಿಗೆ ಕೆಲಕಾಲ ಸಿರ್ಸಿಯ ಸ್ಥಳೀಯ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ನಂತರ ರಾಜಕೀಯದತ್ತ ಮುಖ ಮಾಡಿದ ಕಾರಣ ಪತ್ರಕರ್ತನಾಗದೇ ಹೋದದ್ದಕ್ಕೆ ಅವರಿಗೆ ವಿಷಾಧವಿತ್ತು.

h1

1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ ಹೆಗಡೆಯವರು ತಮ್ಮ 20ನೇ ವಯಸ್ಸಿನಲ್ಲಿಯೇ ರೈತ ಚಳುವಳಿಯ ರೂವಾರಿಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಹೆಗಡೆಯವರು 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಮಂತ್ರಿಮಂಡಲಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ ಜನಪ್ರಿಯರಾದರು. ಹೆಗಡೆ ಮತ್ತು ವೀರೇಂದ್ರ ಪಾಟೀಲರ ಜೋಡಿಯನ್ನು ಲವ-ಕುಶ ಜೋಡಿ ಎಂದೇ ಜನರು ಕರೆಯುತ್ತಿದ್ದರು.

1975ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಹೆಗಡೆಯವರು ಜೈಲುವಾಸಕ್ಕೆ ತಳ್ಳಲ್ಪಟ್ಟಾಗ, ಅಲ್ಲಿ ಅವರಿಗೆ ಹಿರಿಯ ನಾಯಕರಾದ ಜಯಪ್ರಕಾಶ ನಾರಾಯಣ್ ವಾಜಪೇಯಿ, ಮಧುದಂಡವತೆ, ಅಡ್ವಾಣಿ, ಚಂದ್ರಶೇಖರ್ ಮುಂತಾದ ಹಿರಿಯ ನಾಯಕರು ಬಹಳ ಹತ್ತಿರವಾಗಿ ಜೆಪಿಯವರ ನೇತೃತ್ವದಲ್ಲಿ ಆರಂಭಗೊಂಡ ಜನತಾ ಪಕ್ಷಕ್ಕೆ ಸೇರಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.

h2

1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷ ಮತ್ತು ಕ್ರಾಂತಿರಂಗ ಜಂಟಿಯಾಗಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಹುಮತಕ್ಕೆ ಅಲ್ಪ ಸಂಖ್ಯೆಯ ಕೊರತೆ ಇದ್ದಾಗ, ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಪ್ರಪ್ರಥಮವಾದ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಮಂತ್ರಿಯಾದ ಸಮಯದಲ್ಲಿ ರಾಜ್ಯದಲ್ಲಿ ಕಾಡುತ್ತಿದ ಬರಕ್ಕೆ ಪರಿಹಾರವಾಗಿ ನೀರ್ ಸಾಬ್ ಎಂದೇ ಖ್ಯಾತಿಯಾದ ಅಬ್ದುಲ್ ನಜೀರ್ ಸಾಬ್ ಅವರೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಕೊಳವೇ ಭಾವಿಯನ್ನು ತೊಡಿಸಿ ಜನರ ದಾಹವನ್ನು ತೀರಿಸಿದ್ದಲ್ಲದೇ, ದೇಶದಲ್ಲೇ ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಕೆಲವೇ ದಿನಗಳಲ್ಲಿ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡರು.

ಇದೇ ಜನಪ್ರಿಯತೆಯನ್ನೇ ರಾಜಕಿಯವಾಗಿ ಬಳಸಿಕೊಳ್ಳಲು ನಿರ್ಧರಿ, ವಿಧಾನಸಭೆಯನ್ನು ವಿಸರ್ಜಿಸಿ ಮುಂದೆ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಅಧಿಕಾರದ ಹಿಂದೆ ಜೋತು ಬೀಳುವ ಅನೇಕ ರಾಜಕಾರಣಿಗಳ ಮಧ್ಯೆ ಅಧಿಕಾರವೇ ಹೆಗಡೆವರನ್ನು ಹುಡಿಕಿಕೊಂಡು ಬರುವಷ್ಟು ಅದೃಷ್ಟಶಾಲಿಯಾಗಿದ್ದರು ಎಂದರೂ ತಪ್ಪಾಗದು. ಕುರ್ಚಿಗಾಗಿ ಬಡಿದಾಡುವ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆ ಅವರ ಈ ನಡೆ ಸಾರ್ವಕಾಲಿಕವಾಗಿ ಅಚ್ಚರಿ ಹುಟ್ಟಿಸುವಂತದ್ದಾಗಿತ್ತು. ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ, ಮತ್ತು ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 25 ರ ಮೀಸಲಾತಿ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ದೇಶದಲ್ಲಿಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ.

ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಅವರ ಬೆನ್ನು ಬಿಡದ ಬೇತಾಳದಂತೆ ಕಾಡಿದವರೆಂದರೆ ಎ.ಕೆ.ಸುಬ್ಬಯ್ಯನವರು. ರಾಮಕೃಷ್ಣ ಹೆಗಡೆಯವರ ಮೊದಲ ಬಾರಿಗೆ ಮುಖ್ಯ ಮಂತ್ರಿಗಳಾಗಿದ್ದಾಗ ರೇವಜೀತು ಹಗರಣ ಹಾಗೂ ಅವರ ಮಗ ಭರತ್ ಹೆಗಡೆ ಶಾಮೀಲಾಗಿದ್ದ ಎನ್ನಲಾದ ಮೆಡಿಕಲ್ ಸೀಟ್ ಹಗರಣ ಮುಂತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕತ್ವಕ್ಕೆ ಕಪ್ಪು ಚುಕ್ಕಿ ಮೂಡಿಸಿದ್ದಲ್ಲದೇ, ಅವರ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾಗಿ ಅವರೆಲ್ಲರ ಮೇಲೆಯೇ ನ್ಯಾಯಾಂಗ ತನಿಖೆಗೆ ಆದೇಶಿಸಿ ರಾಜ್ಯಾದ್ಯಂತ ಮನೆ ಮಾತಾದರೆ, ಎರಡನೇ ಬಾರೀ ದೂರವಾಣಿ ಕದ್ದಾಲಿಕೆಯ ಹಗರಣದ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆಯವರು ರಾಜ್ಯರಾಜಕೀಯದಿಂದ ದೂರ ಸರಿಯುವಂತಾಯಿತು.

h5

ತಮ್ಮ ರಾಜಕೀಯ ಅವಧಿಯಲ್ಲಿ ಮಂತ್ರಿಗಳಾಗಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ನಂತರ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13 ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ ಎಂಬುದು ಅವರ ಹೆಗ್ಗಳಿಕೆಯಾಗಿದೆ. ರಾಜಕೀಯದ ಜೊತೆ ಜೊತೆಗೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳಲ್ಲಿಯೂ ಅಪಾರವಾದ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದ್ದರು. ಅದರ ಮುಂದು ವರೆದ ಭಾಗವಾಗಿಯೇ ಹೆಸರಘಟ್ಟದ ಬಳಿ ಖ್ಯಾತ ಒಡಿಸ್ಸೀ ನೃತ್ಯಗಾರ್ತಿ ಪ್ರೋತಿಮಾ ಬೇಡಿ ಅವರ ನೃತ್ಯಗ್ರಾಮಕ್ಕೆ ಸರ್ಕಾರಿ ಜಾಗವನ್ನು ನೀಡಿದ್ದರು. ಮತ್ತೊಬ್ಬ ನೃತ್ಯಗಾರ್ತಿ ಪ್ರತಿಭಾ ಪ್ರಹ್ಲಾದ್ ಅವರಿಗೂ ಹೆಗಡೆಯವರ ಕೃಪಾಶೀರ್ವಾದವಿತ್ತು ಎನ್ನುವುದು ಬಲ್ಲವರ ಮಾತಾಗಿದೆ. ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆಯವರು ಮರಣ ಮೃದಂಗ ಎನ್ನುವ ಸಿನಿಮಾ ಸೇರಿದಂತೆ ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ, ರಾಜ್ಯದ ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಗೆ ಶೇಕಡಾ50 ರ ರಿಯಾಯಿತಿ ಮುಂತಾದ ಯೋಜನೆಗನ್ನು ತರುವುದರ ಮೂಲಕ ಕಲಾ ಪೋಷಕರೆನಿಸಿಕೊಂಡರು.

ಈ ದೇಶ ಪ್ರಜಾಪ್ರಭುತ್ವ ದೇಶ ಎನಿಸಿದರು ಅನೇಕ ರಾಜಕೀಯ ನಾಯಕರು ತಮ್ಮ ಕುಟುಂಬಸ್ಥರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡು ಅಧಿಕಾರ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳುವಾಗ ಇದಕ್ಕೆ ಅಪರಾಧ ಎನ್ನುವಂತಿದ್ದರು ಹೆಗಡೆಯವರು. ರಾಮಕೃಷ್ಣ ಹೆಗಡೆಯವರು ತಮ್ಮ ಕಾಲದಲ್ಲಿ ಹಲವಾರು ನಾಯಕರನ್ನು ಬೆಳಸಿ ಹೋದರು. ಪ್ರಸ್ತುತ ರಾಜಕಾರಣದಲ್ಲಿರುವ ಹಲವಾರು ನಾಯಕರುಗಳು ಹೆಗಡೆಯವರ ಗರುಡಿಯಿಂದ ಹೊರಬಂದಿರುವ ಶಿಷ್ಯರೇ. ಮಾಜೀ ಮುಖ್ಯ ಮಂತ್ರಿಗಳಾದ ಎಸ್. ಆರ್. ಬೊಮ್ಮಾಯಿ, ಸಿದ್ದರಾಮಯ್ಯ, ಬಿ.ಸೋಮಶೇಖರ್, ಆರ್. ವಿ. ದೇಶಪಾಂಡೆ, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಪಿ.ಜಿ.ಆರ್.ಸಿಂಧ್ಯ, ಜೀವರಾಜ್ ಆಳ್ವ ಹೀಗೆ ಇನ್ನೂ ಅನೇಕ ನಾಯಕರುಗಳನ್ನು ಬೆಳೆಸಿದರು. ಹೆಗಡೆ ತಾವೊಬ್ಬರೇ ಬೆಳೆಯದೇ ಇತರರನ್ನೂ ಬೆಳೆಸಿ ಅವರವರ ಶಕ್ತಿ ಸಾಮರ್ಥ್ಯದ ಅನುಗುಣವಾಗಿ ಅವರಿಗೆ ಅಧಿಕಾರವನ್ನು ನೀಡಿ ಬೆಳಸಿದರು.

ಬಾಯಿಮಾತಿನಲ್ಲಿ ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ರಾಜಕೀಯ ನಾಯಕರೇ ಹೆಚ್ಚಾಗಿರುವ ಇಂದಿನ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆಯವರು ಅಪ್ಪಟವಾದ ಜಾತ್ಯತೀತರಾಗಿದ್ದರು ಎಂದರೆ ಅತಿಶಯವೆನಿಸಿದು. ಅವರೆಂದೂ ತಮ್ಮ ಸ್ವಜಾತಿಯಿಂದ ಗುರುತಿಸಿಕೊಳ್ಳಲೇ ಇಲ್ಲ, ಉತ್ತರ ಕರ್ನಾಟಕದ ಲಿಂಗಾಯಿತರ ನಾಯಕರೆಂದೇ ಪ್ರಸಿದ್ಧಿ ಪಡೆದಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನಿಗೂ ಸಹಾ ಅಂತರ್ಜಾತಿ ವಿವಾಹವನ್ನು ಮಾಡಿಸಿದ್ದದ್ದು ಗಮನಾರ್ಹವಾಗಿತ್ತು.

h4

ಬದಲಾದ ರಾಜಕೀಯದಲ್ಲಿ ಯಾರನ್ನು ಹೆಗಡೆಯವರು ಬೆನ್ನು ತಟ್ಟಿ ಬೆಳೆಸಿದ್ದರೋ ಅದೇ ನಾಯಕರು ತಮ್ಮ ಬೆಂಬಲಿಗರ ಮೂಲಕ ಹೆಗಡೆಯವರಿಗೆ ವಿಧಾನಸೌಧದ ಮುಂದೆ ಚೆಪ್ಪಲಿಯ ಸೇವೆಯನ್ನು ಮಾಡಿಸಿ ಅವಮಾನಿಸಿದ್ದಲ್ಲದೇ ಮುಂದೆ ಅವರಿಗೆ ಅಚಾನಕ್ಕಾಗಿ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗ ತಾವು ಕಟ್ಟಿದ ಪಕ್ಷದಂದಲೇ ಉಚ್ಚಾಟಿಸುವ ಮೂಲಕ ಹೆಗಡೆಯವರ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಿದಾಗ, ಸ್ವಪಕ್ಷೀಯರಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ಕೊರಗಿನಲ್ಲೇ 2004ರ ವರ್ಷದ ಜನವರಿ 12ರಂದು ನಿಧನರಾದರು.

ರಾಜಕಾರಣದಲ್ಲಿದ್ದು ಜನಾನುರಾಗಿಯಾಗಿ, ಜನತೆಯ ಕೈಗೆ ಆಡಳಿತ ನೀಡಿ, ಸದುದ್ದೇಶಗಳಿಂದ, ಜಾತಿಯ ಹಂಗು ಮತ್ತು ಬೆಂಬಲವಿಲ್ಲದೇ, ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾದ ಶ್ರೀ ರಾಮಕೃಷ್ಣ ಹೆಗಡೆ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

ವಿಜಯ ಸಂಕೇಶ್ವರ

vij4ಮಾಡುವ ಕೆಲಸ ಯಾವುದಾದರೂ ಏನಂತೆ, ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಸಾಧಕರಿಗೆ ಯಾವುದು ಅಸಾಧ್ಯವಲ್ಲ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೇ ಎನ್ನುವ ಅಣ್ಣವರ ಹಾಡಿನಂತೆ  ನಾನು ಏನಾದ್ರು ಸಾಧನೆ ಮಾಡೇ ಮಾಡ್ತೀನಿ ಅಂತ 19 ವರ್ಷದ ಯುವಕನೊಬ್ಬ ತನ್ನ ಕುಟುಂಬದ ವ್ಯಾಪಾರದಿಂದ ಹೊರ ಬಂದು ಕೈ ಕೆಸರಾದರೆ ಬಾಯ್ ಮೊಸರು ಎನ್ನುವಂತೆ 1975ರಲ್ಲಿ ಒಂದು ಟ್ರಕ್ ಖರೀದಿಸಿ  ಸಾರಿಗೆ ಉದ್ಯಮವನ್ನು ಆರಂಭಿಸಿ ಇಂದು  4,300 ವಾಹನಗಳನ್ನು ಹೊಂದಿರುವ ಭಾರತದಲ್ಲಿ ಅತ್ಯಂದ  ದೊಡ್ಡದಾದ  ಸಾರಿಗೆ ಉದ್ಯಮವನ್ನು ಕಟ್ಟಿರುವ ಶ್ರೀ ವಿಜಯ ಸಂಕೇಶ್ವರ ಅವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ, ಅವರ ಸಾಹಸ ಮತ್ತು ಯಶೋಗಾಥೆಗಳ ಬಗ್ಗೆ ತಿಳಿಯೋಣ ಬನ್ನಿ.

ವಿಜಯ ಸಂಕೇಶ್ವರ ಅವರದ್ದು  ಮೂಲತಃ ಉತ್ತರ ಕರ್ನಾಟಕದ ಗದಗ್ ಪ್ರಾಂತ್ಯವಾಗಿದ್ದು ತಂದೆ ಬಸವಣ್ಣೆಪ್ಪ ಹಾಗು ತಾಯಿ ಚಂದ್ರಮ್ಮ ಈ ದಂಪತಿಗಳ  5 ನೇ ಮಗನಾಗಿ 1950 ರಲ್ಲಿ ಜನಿಸುತ್ತಾರೆ. ಅಷ್ಟರಲ್ಲಾಗಾಲೇ ಅವರ ತಂದೆಯವರು ಬಿ.ಜಿ ಸಂಕೇಶ್ವರ ಪ್ರಿಂಟರ್ಸ್ ಎಂಬ ಮುದ್ರಣಾಲಯದ ಮಾಲೀಕರಾಗಿದ್ದರು. ಅರವತ್ತು ಮತ್ತು ಎಪ್ಪತರ ದಶಕದ ವಿದ್ಯಾರ್ಥಿಗಳಿಗೆ ಡಿ.ಕೆ. ಭಾರದ್ವಾಜ್ ಅವರ  ಇಂಗ್ಲೀಷ್ – ಇಂಗ್ಲೀಷ್ – ಕನ್ನಡ ನಿಘಂಟಿನ ಪರಿಚಯ ಇದ್ದೇ  ಇರುತ್ತದೆ.  ಆ ನಿಘಂಟು ಮುದ್ರಣವಾಗುತ್ತಿದ್ದದ್ದೇ ಗದಗಿನ ಇದೇ ಸಂಕೇಶ್ವರ ಪ್ಲಬಿಕೇಷನ್ನಿನಲ್ಲಿ ಎನ್ನುವುದು ಬಹುತೇಕರಿಗೆ ಗೊತ್ತೇ  ಇರುವುದಿಲ್ಲ. ಈ ಪ್ರಕಾಶನದ ಮುಖಾಂತರ ಅನೇಕ ಪುಸ್ತಕಗಳನ್ನು ಅದರಲ್ಲೂ ಶೈಕ್ಷಣಿಕ ಪುಸ್ತಕಗಳ ಪ್ರಕಟಣೆ, ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುವ ಅತಿ ದೊಡ್ಡ ಪ್ರಕಾಶಕರಾಗಿರುತ್ತಾರೆ. ಮುದ್ರಣ ಉದ್ಯಮ ಒಂದು ರೀತಿಯಲ್ಲಿ ಅವರ ಕುಟುಂಬದ ವ್ಯವಹಾರವಾಗಿದ್ದು ಇಡೀ ಮನೆಯವರೆಲ್ಲಾ ಆದೇ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ.  ವಿಜಯ ಸಂಕೇಶ್ವರ ಅವರ ತಂದೆ ತಮ್ಮ ಆಸ್ತಿಯನ್ನು ವಿಭಜಿಸಿ ಮಕ್ಕಳೊಂದಿಗೆ ಹಂಚಿಕೊಂಡಾಗ ಅವರ   ಅವರ ಅಣ್ಣಂದಿರೆಲ್ಲಾ ಅದೇ  ಊರಿನಲ್ಲಿ ಪ್ರತ್ಯೇಕವಾದ ಮುದ್ರಣದ ಪ್ರೆಸ್ ಆರಂಭಿಸಿದಾಗ ಅದೇ ತಾನೇ ಬಿ.ಕಾಂ ಪದವಿ ಮುಗಿಸಿದ್ದ ತರುಣ  ವಿಜಯ್ ತಾನೂ ಸಹಾ ತನ್ನ ಅಣ್ಣಂದಿರೊಂದಿಗೆ ಮತ್ತೊಂದು ಪ್ರೆಸ್ ತೆಗೆದು ವೃಥಾ ತಮ್ಮ ತಮ್ಮಲ್ಲೇ ಸ್ಪರ್ಥೆಯನ್ನು ಮಾಡಿಕೊಳ್ಳುವ ಬದಲು ಬೇರೆಯ ವ್ಯವಹಾರವನ್ನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಅವರಿಗೆ ಹೊಳೆದದ್ದೇ  ಲಾರಿಯ ವ್ಯವಹಾರ.

19-20 ವರ್ಷದ ವಿಜಯ್ ಸಾರಿಗೆ ವ್ಯವಹಾರಕ್ಕೆ ಪ್ರವೇಶಿಸುವ ನಿರ್ಧಾರವು ಅವರ ತಂದೆಗೆ ದಿಗ್ಭ್ರಮೆಗೊಳಿಸಿತ್ತಾದರೂ ಮಗನ ನಿರ್ಧಾರಕ್ಕೆ ಬೆಂಬಲ ಸೂಚಿಸಿದಾಗ, ಸೆಕೆಂಡ್ ಹ್ಯಾಂಡ್ ಲಾರಿಯೊಂದನ್ನು ಖರೀದಿಸಿ, ಹುಬ್ಬಳ್ಳಿ – ಗದಗ್ ಮಧ್ಯೆ ಸ್ವತಃ ಚಾಲನೆ ಮಾಡಿಕೊಂಡು ಸರಕುಗಳನ್ನು ಸಾಗಿಸಲು ಆರಂಭಿಸಿದ ವಿಜಯ್  ಸಂಕೇಶ್ವರ ಇಂದು ರೂ.18,000 ಕೋಟಿಯ ವ್ಯವಹಾರವುಳ್ಳ  1500 ಉದ್ಯೋಗಿಗಳಿರುವ, 400 ಬಸ್‌ಗಳು ಮತ್ತು 3,900 ಟ್ರಕ್‌ಗಳೊಂದಿಗೆ ದೇಶದ ಖಾಸಗಿ ವಲಯದಲ್ಲಿ ವಾಣಿಜ್ಯ ವಾಹನಗಳ ಅತಿದೊಡ್ಡ  ಕಂಪನಿಯಾದ   VRL ಲಾಜಿಸ್ಟಿಕ್ಸ್ ಲಿಮಿಟೆಡ್ ಕಂಪನಿಯ CMD ಆಗಿರುವ ಸಾಹಸ ನಿಜಕ್ಕೂ ಅಧ್ಭುತ ಮತ್ತು ಅನುಕರಣಿಯವೇ ಸರಿ.

ತಮ್ಮ ಕೌಟುಂಬಿಕ ವ್ಯವಹಾರದಿಂದ ಹೊರಬಂದು ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಅಚ್ಚರಿ ಮೂಡಿಸುವಂತಿತ್ತು. ಬಿಕಾಂ ಓದಿದ್ದರೂ ಲಾರಿ ಓಡಿಸುವುದೇ ಎಂದು ಮೂಗು ಮುರಿದವರೇ ಹೆಚ್ಚು. ಆ ಅಸಂಘಟಿತ ವಲಯದಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸುವುದು ನಿಜಕ್ಕು  ಕಷ್ಟಕರವಾಗಿತ್ತು. ಆರಂಭದಲ್ಲಿ ಗದಗದಿಂದ ಹುಬ್ಭಳ್ಳಿ , ಹುಬ್ಬಳ್ಳಿಯಿಂದ ಗದಗಿಗೆ ಕಿರಾಣಿ ಸಾಮಗ್ರಿ, ಇನ್ನಿತರ ಸಾಮಗ್ರಿಗಳನ್ನು ಸಾಗಿಸುತ್ತಿದ್ದರು. ಮೊದಲಿಗೆ ಅವರ ಈ ಕೆಲಸಕ್ಕೆ ಮನೆಯವರಿಂದಾಗಲಿ ಅಥವಾ ಸ್ನೇಹಿತರಿಂದಾಗಲಿ ಯಾವುದೇ ಪ್ರೋತ್ಸಾಹ ದೊರೆಯಲಿಲ್ಲ. ಅಲ್ಲದೆ ಆಗಿನ ಕಾಲದಲ್ಲಿದ್ದ ಪ್ರತಿಷ್ಠಿತ ಸರಕು ಸಾಗಾಣಿಕಾ ಸಂಸ್ಥೆಗಳಿಂದಲೂ ತೀವ್ರವಾದ ವಿರೋಧವನ್ನು ಎದುರಿಸಬೇಕಾಯಿತು. ಆದರೂ ಎದೆಗುಂದದೇ ಅದೇ ಕೆಲಸದಲ್ಲಿ ಮುಂದುವರೆದರು. ನಂತರ ಅವರಿಗೆ ಒಂದೇ ಲಾರಿಯನ್ನು ಸ್ವತಃ ಓಡಿಸುವುದರಿಂದ  ಹೆಚ್ಚಿನ  ಲಾಭ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು 1979ರಲ್ಲಿ ತಮ್ಮ ಪತ್ನಿ ಲಲಿತ ಅವರ ಹೆಸರಿನಲ್ಲಿ ಮತ್ತೊಂದು ಲಾರಿ ಖರೀದಿ ಮಾಡಿ ನಿಧಾನವಾಗಿ ತಮ್ಮ ಸರಕು ಸಾಗಣೆಯನ್ನು ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಪೂನಾದ ವರೆಗೂ ವಿಸ್ತರಿಸುತ್ತಾರೆ.

ಹೀಗೆ ತಮ್ಮ ಸಾರಿಗೆ ವ್ಯವಹಾರವನ್ನು ವಿಸ್ತರಿಸಿಕೊಂಡಾಗ ಅವರ ವಾಹನ ಅಪಘಾತವಾಗಿ ತೀವ್ರ ತರನಾದ ನಷ್ಟವನ್ನು ಅನುಭವಿಸುತ್ತಾರೆ. ಅದೆಷ್ಟೋ ಬಾರಿ ಅವರ ಬಳಿ ಲಾರಿಗಳು ರಿಪೇರಿಗೆ ಬಂದಾಗ, ಲಾರಿಗಳ ಟೈರ್ ಬದಲಿಸಲು ಹಣವಿಲ್ಲದಿದ್ದಾಗ ತಮ್ಮ ಮಡದಿಯ ಆಭರಣಗಳನ್ನು ಒತ್ತೆ ಇಟ್ಟು ಆ ಹಣವನ್ನು ಲಾರಿಗೆ ಸುರಿಯುತ್ತಾರೆ. ಇಷ್ಟೆಲ್ಲಾ ಕಷ್ಟಗಳಾದಾಗ ಅವರ ಪೋಷಕರು ಮತ್ತು ಹೆಂಡತಿಯವರು ಈ ಸಾರಿಗೆ ಉದ್ಯಮ ನಮಗೆ ಆಗಿಬರುವುದಿಲ್ಲ, ಹೇಗೂ ಕುಟುಂಬ ವ್ಯವಹಾರದಲ್ಲಿ ಅನುಭವವಿದೆ ಅದನ್ನೇ ಮುಂದುವರೆಸು ಎಂದು ದಂಬಾಲು ಬೀಳುತ್ತಾರೆ. ಆದರೆ ಅದಾಗಲೇ ನಾಲ್ಕೈದು ವರ್ಷಗಳ ಕಾಲ ಸಾರಿಗೆ ವ್ಯವಹಾರವನ್ನು ನಡೆಸಿದ್ದರಿಂದ ವ್ಯವಹಾರಗಳಲ್ಲಿ  ಅಪಾಯಗಳನ್ನು ತೆಗೆದುಕೊಳ್ಳದಿದ್ದರೆ, ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಅರಿತು ಕಳೆದುಕೊಂಡ ಜಾಗದಲ್ಲಿಯೇ ಮತ್ತೆ ಕಳೆದುಕೊಂಡದ್ದನ್ನು ಗಳಿಸಬೇಕು ಎಂಬು ಧೃಢ ಸಂಕಲ್ಪವನ್ನು ತೊಟ್ಟ ವಿಜಯ್ ಸಂಕೇಶ್ವರರು ಅದರಲ್ಲೇ ಮುಂದುವರೆಯುತ್ತಾರೆ.

vij6ಅಂದು ಅವರು ಮಾಡಿದ ನಿರ್ಧಾರ ಸರಿಯಾಗಿದ್ದು ಹಂತ ಹಂತವಾಗಿ ಆ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತಿದ್ದಂತೆಯೇ ತಾನೂ ಕೂಡಾ ಈ ಉದ್ಯಮದಲ್ಲಿ ಯಶಸ್ವಿಯಾಗಬಹುದು ಎಂಬ ಆಶಾಕಿರಣ ಅವರಲ್ಲಿ ಮೂಡಿತ್ತು. ಸುಮ್ಮನೇ  ಒಬ್ಬನೇ ದುಡಿಯುವುದರಿಂದ ಲಾಭವಿಲ್ಲ. ಆದರ ಬದಲು ಒಂದು ಕಂಪನಿಯನ್ನು  ಅರಂಭಿಸಿ ಸಂಘಟಿತವಾಗಿ ದುಡಿದಲ್ಲಿ ಹೆಚ್ಚಿನದ್ದನ್ನು ಸಾಧಿಸಬಹುದು ಎಂದು ನಿರ್ಧರಿಸಿ, 31-3-1983ರಂದು ವಿ ಆರ್ ಎಲ್  ಪ್ರೈವೇಟ್ ಲಿಮಿಟೆಡ್  ಎಂಬ ಸರಕು ಸಾಗಾಣಿಕಾ ಸಂಸ್ಥೆಯನ್ನು ಆರಂಭಿಸುತ್ತಾರೆ. ನಂತರ 1-7-1994 ರಲ್ಲಿ ಅದೇ ಕಂಪನಿ Deemend Public Ltd Co ಎಂದು ಪರಿವರ್ತನೆಯಾಗುತ್ತದೆ.  ಆ ಸಮಯದಲ್ಲಿ ಬೆಂಗಳೂರಿನಿಂದ ಹುಬ್ಬಳ್ಖಿಯ ಕಡೆಗೆ ರಾಜ್ಯ ರಸ್ತೆ ಸಾರಿಗೆಯ ವಾಹನಗಳು ಬಹಳ ಇಲ್ಲದಿದ್ದದ್ದನ್ನು ಗಮನಿಸಿ, ಕೇವಲ ಸರಕು ಸಾಗಾಣಿಕೆಯಲ್ಲದೇ, ಪ್ರಯಾಣಿಕರಿಗೂ ಅನುಕೂಲವಾಗುವ ಅತ್ಯುತ್ತಮವಾದ ಅಂದಿನ ಕಾಲಕ್ಕೆ ಆಧುನಿಕವಾದ ನಾಲ್ಕು ಬಸ್ ಗಳನ್ನು ಕೊಂಡು  ಆರಂಭದಲ್ಲಿ ಹುಬಳ್ಳಿಯಿಂದ ಬೆಂಗಳೂರಿಗೆ, ಬೆಂಗಳೂರಿಂದ ಹುಬ್ಬಳ್ಳಿಗೆ ಪ್ರಯಾಣಿಕರ ಬಸ್ ಸೇವೆ ಆರಂಭಿಸಿದರು. ಅಲ್ಲಿಂದ ಹಂತ ಹಂತವಾಗಿ ರಾಜ್ಯದ ಮೂಲೆ ಮೂಲೆಗೂ ವಿಸ್ತರಿಸಿ ಅಲ್ಲಿಂದ ಮುಂದೆ ನೆರ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರಗಳಿಗೂ ತಮ್ಮ ಸೇವೆಯನ್ನು ಮುಂದುವರಿಸಿ ಇಂದು  ನೂರಾರು ಅತ್ಯುತ್ತಮ  ಬಸ್ ಗಳ  ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ.

vij3ಸಾರಿಗೆಯಲ್ಲಿ ಇಷ್ಟೆಲ್ಲಾ ಸಾಧಿಸಿದ್ದರೂ ಅವರಿಗೆ ಮತ್ತೇನಾದರೂ ಹೆಚ್ಚಿನದ್ದನ್ನು ಸಾಧಿಸಲೇ ಬೇಕು ಎಂದು ಯೋಚಿಸುತ್ತಿರುವಾಗಲೇ, ಅವರ ಗಮನ ದಿನಪತ್ರಿಯತ್ತ ಹರಿಯುತ್ತದೆ. ಅಂದೆಲ್ಲಾ ಬಹುತೇಕ ಪತ್ರಿಕೆಗಳು ಬೆಂಗಳೂರಿನಿಂದ ಮುದ್ರಣವಾಗುತ್ತಿದ್ದ ಕಾರಣ ಸ್ಥಳೀಯ ವಿಷಯಗಳತ್ತ ಹೆಚ್ಚಿನ ಪ್ರಾಧಾನ್ಯತೆ ನೀಡದಿರುವುದನ್ನು ಗಮನಿಸಿದ ಸಂಕೇಶ್ವರ್ ಅವರು ಅಕ್ಟೋಬರ್ 4, 1999 ರಂದು ವಿಜಯ ಕರ್ನಾಟಕ ಎಂಬ ಪತ್ರಿಕೆಯನ್ನು ಆರಂಭಿಸಿ ಕನ್ನಡ ಪತ್ರಿಕಾ ರಂಗದಲ್ಲೇ ಅತ್ಯಂತ ಕ್ರಾಂತಿಯನ್ನು ಉಂಟು ಮಾಡುತ್ತಾರೆ. ಮುದ್ರಣದ ಉದ್ಯಮದಲ್ಲಿ ಅವರಿಗಿದ್ದ ಅನುಭವವನ್ನು ಬಳಸಿಕೊಂಡು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾಂ, ಶಿವಮೊಗ್ಗ ಇನ್ನೂ ಹತ್ತು ಹಲವಾರು ಕಡೆಗಳಲ್ಲಿ ಆಧುನಿಕ ಆಫ್ ಸೆಟ್ ಪ್ರಿಂಟರ್ಗಳನ್ನು ಅಳವಡಿಸಿ ಅಲ್ಲಿಯ ಸ್ಥಳೀಯ ಮಾಹಿತಿಗಳ ಆವೃತ್ತಿಗಳನ್ನು ಕೇವಲ 1 ರೂಪಾಯಿ ಬೆಲೆಗೆ ಕೊಟ್ಟು ಕೆಲವೇ ಕೆಲವು ದಿನಗಳಲ್ಲಿ ಕನ್ನಡ ಪತ್ರಿಕಾ ರಂಗದಲ್ಲಿ ವಿಜಯ ಕರ್ನಾಟಕ ಪತ್ರಿಕೆಯನ್ನು ನಂಬರ್-1 ಪತ್ರಿಕೆಯನ್ನಾಗಿ ಮಾಡುತ್ತಾರೆ.

ಇಷ್ಟರ ಮಧ್ಯೆ ರಾಜಕೀಯದತ್ತ ಚಿತ್ತ ಹರಿಸಿ, ಭಾರತೀಯ ಜನತಾಪಕ್ಷದಿಂದ ಧಾರವಾಡದ ಲೋಕಸಭಾ ಸದಸ್ಯರೂ ಆಗುವು ಮೂಲಕ ಯಶಸ್ವಿ ರಾಜಕಾರಣಿ ಎನಿಸಿಕೊಳ್ಳುತ್ತಾರೆ. ಕೆಲವೇ ಕೆಲವು ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತಲೂ ಪ್ರಾದೇಶಿಕ ಪಕ್ಷವಿದ್ದಲ್ಲಿ ಹೆಚ್ಚಿನದ್ದನ್ನು ಸಾಧಿಸಬಹುದು  ಎಂದು ಯೋಚಿಸಿ ತಮ್ಮದೇ ಆದ ಕನ್ನಡ ನಾಡು ಎಂಬ ಪ್ರಾದೇಶಿಕ ಪಕ್ಷವನ್ನೂ ಸ್ಥಾಪಿಸಿ ಯಶಸ್ಸು ಕಾಣದೇ ಹಳೇ ಗಂಡನ ಪಾದವೇ ಗತಿ ಎಂದು ಮತ್ತೆ ಬಿಜೆಪಿಯನ್ನು ಸೇರಿ ಸಂಸದರಾಗಿದ್ದಾರೆ.

ವಿಜಯ ಕರ್ನಾಟಕ ಯಶಸ್ಸಿನ ತುತ್ತತುದಿಯಲ್ಲಿ ಇರುವಾಗಲೇ ಉಷಾ ಕಿರಣ ಎಂಬ ಮತ್ತೊಂದು ವೃತ್ತಪತ್ರಿಕೆಯನ್ನು ಆರಂಭಿಸಿ ಕೆಲವೇ ಕೆಲವು ದಿನಗಳಲ್ಲಿ ಆವೆಲ್ಲವನ್ನೂ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಮಾರಿ ಬಿಡುತ್ತಾರೆ. ದಿನಪತ್ರಿಕೆಗಳಿಗಿಂತಲೂ ದೃಶ್ಯ ಮಾಧ್ಯಮದ ಮೂಲಕ ಜನರಿಗೆ ಇನ್ನು ಹತ್ತಿರವಾಗಬಹುದು ಎಂಬುದನ್ನು ಮನಗಂಡು ದಿಗ್ವಿಜಯ ನ್ಯೂಸ್ ಛಾನೆಲ್ ಆರಂಭಿಸಿ ಅದರಲ್ಲೂ ತಕ್ಕ ಮಟ್ಟಿಗಿನ ಯಶಸ್ಸನ್ನು ಕಂಡಿರುವಾಗಲೇ, ಮತ್ತೆ ವಿಜಯವಾಣಿ ಎಂಬ ದಿನಪತ್ರಿಕೆಯನ್ನೂ ನಡೆಸುತ್ತಿದ್ದಾರೆ. ಇವೆಲ್ಲದರ ಜೊತೆ ಏರ್ ಲೈನ್ಸ್ ಕೂಡಾ ನಡೆಸಬೇಕೆಂಬ ಹಂಬಲದಿಂದ  ಏರ್ ಲೈಸನ್ಸ್ ಕೂಡಾ ಪಡೆದಿದ್ದಾರಾದರೂ ಅದನ್ನು ಇನ್ನು ಕಾರ್ಯರೂಪಕ್ಕೆ ತಂದಿಲ್ಲದಿರುವುದು ನಿಜಕ್ಕೂ ಸೋಜಿಗವೆನಿಸಿದೆ.

vjay2ಸಮಯಕ್ಕೆ ಬಹಳ ಮಹತ್ವ ಕೊಡುವ ಸಂಕೇಶ್ವರ  ಅವರ ದಿನಚರಿ ಆರಂಭವಾಗುವುದು ಬೆಳಗಿನ ಜಾವ 4 ಗಂಟೆಗೆ ಎಂದರೆ ಬಹಳ  ಆಶ್ಚರ್ಯವಾಗ ಬಹುದು.  ಪ್ರತಿ ದಿನವು ಬೆಳ್ಳಂಬೆಳಿಗ್ಗೆ 4  ಕ್ಕೆ ಎದ್ದು ತಮ್ಮೆಲ್ಲಾ ಪ್ರಾತರ್ವಿಧಿಗಳನ್ನು ಮುಗಿಸಿ ಸ್ನಾನ ಜಪ ತಪಗಳನ್ನು ಮುಗಿಸಿ 4:30 ಕ್ಕೆಲ್ಲಾ ತಮ್ಮ ದೈನಂದಿನ ಕೆಲಸವನ್ನು ಆರಂಭಿಸಿದರೆ ಒಂದು ನಿಮಿಷವೂ ವ್ಯರ್ಥ ಮಾಡದೇ ರಾತ್ರಿ ೧೦.೦೦ರ ವರೆಗೆ ನಿರಂತರವಾಗಿ ದುಡಿಯುತ್ತಾರೆ. ದುಡ್ಡಿನ ಬೆಲೆಯನ್ನು ಚೆನ್ನಾಗಿ ಅರಿತಿರುವ ಸಂಕೇಶ್ವರರು ಎಂದಿಗೂ ಎಲ್ಲಿಯೂ  ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ ಎನ್ನುವುದಕ್ಕೆ ಒಂದು ಸುಂದರವಾದ ಉದಾಹರಣೆಯನ್ನು ನೀಡಲೇ ಬೇಕಾಗಿದೆ.   ಸ್ವತಃ ಟ್ರಕ್ ಚಾಲಕರಾಗಿದ್ದ ಕಾರಣ  ಅವರಿಗೆ ಟೈರ್ ಗಳನ್ನು ನೋಡಿದ ಕೊಡಲೇ  ಅದು ಎಷ್ಟು  ಕಿಮೀ ಓಡಿದೆ ಎನ್ನುವುದನ್ನು ಕರಾರುವಾಕ್ ಆಗಿ ಹೇಳುವ ಕಲೆ ಅವರಿಗೆ ಸಿದ್ಧಿಸಿರುವ ಕಾರಣ ಇಂದಿಗೂ ಸಹಾ ಅವರು ತಮ್ಮ ವಾಹನಗಳಿಗೆ ಟೈರ್ಗಳನ್ನು ಖುದ್ದಾಗಿಯೇ ಕೊಳ್ಳುವ ಮೂಲಕ ಪ್ರತಿಯೊಂದು ಟೈರನ್ನು ಸಹಾ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದು ಗಮನಾರ್ಹವಾದ ವಿಷಯವಾಗಿದೆ.

vij5ನೀವು ಈ ಪರಿಯ ಯಶಸ್ಸನ್ನು ಪಡೆಯಲು ಏನು  ಕಾರಣ ಏನು ಎಂದು ಯಾರಾದರು ಅವರನ್ನು ಕೇಳಿದದಲ್ಲಿ ಕೊಂಚವೂ ವಿಚಲಿತರಾಗದೇ ಇದಕ್ಕೆಲ್ಲವೂ ನನ್ನಲ್ಲಿದ್ದ ಛಲ ಮತ್ತು ಪರಿಶ್ರಮವೇ ಕಾರಣ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ. ನಾನು ಯಾವತ್ತೂ ಹೀಗೇ ಬದುಕಬೇಕು ಎಂದು ಯೋಚಿಸಿರಲಿಲ್ಲ.  ಹೆತ್ತ ತಂದೆ, ತಾಯಿಗೆ ಮೂರು ಹೊತ್ತು ಊಟ ಹಾಕಿ, ಅವರನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ಎಂಬುದೇ ನನ್ನ ಭಾವನೆಯಾಗಿತ್ತು. ಆದರೆ ಇಮ್ದು ಈ ಮಟ್ಟದಲ್ಲಿ ಬೆಳದಿರುವುದಕ್ಕೆ ನನ್ನ  ಪರಿಶ್ರಮವೇ ಮುಖ್ಯ ಕಾರಣ ಎಂದು ಹೇಳುವಾಗ ಅವರ ಕಣ್ಗಳಲ್ಲಿ ಮೂಡುವ ಹೊಳಪು ನಿಜಕ್ಕು ಅನನ್ಯ.

vijay1ಹಾಗಾಗಿಯೇ ಇವರು  ಏನೇ ಮಾಡಬೇಕು ಎಂದು ಕೊಂಡರೂ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಎಲ್ಲೆಡೆಯಲ್ಲು  ವಿಜಯವನ್ನೇ ಸಾಧಿಸುತ್ತಿರುವ ಪರಿಣಾಮವಾಗಿ ತಮ್ಮೆಲ್ಲ ಕಾರ್ಯ, ಕಲಾಪಗಳಿಗೂ ಧನಾತ್ಮಕ ಚಿಂತನೆಯಿಂದ ವಿಜಯ ಎನ್ನುವ ಹೆಸರಿಂದಲೇ ಅರಂಭಿಸಿರುವುದು ಗಮನಿಸಬೇಕಾದ ಅಂಶವಾಗಿದೆ. ಆರಂಭದಲ್ಲಿ ಕೇವಲ ಒಂದು ಸೆಕೆಂಡ್ ಹ್ಯಾಂಡ್ ಲಾರಿಯಿಂದ ಆರಂಭಿಸಿ ಇಂದು. ನೂರಾರು ಬಸ್ಸುಗಳು, ಸಾವಿರಾರು ಲಾರಿಗಲು ಕೋಟ್ಯಾಂತರ ರೂಪಾಯಿಗಳ ಒಡೆಯನಾದರೂ,  ಇಂದಿಗೂ ಸಹಾ ಸರಳ ಸಜ್ಜನರಾಗಿ ಲಕ್ಷಾಂತರ ಜನರಿಗೆ ಪ್ರೇರಣಾದಾಯಕರಾಗಿರುವ ಕಾರಣ  ಅವರ ಸಾಧನೆಗಳನ್ನು ಗುರುತಿಸಿ ಭಾರತ ಸರ್ಕಾರ ೨೦೨೧ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿದೆ.  ಛಲ ಮತ್ತು ಕಠಿಣ ಪರಿಶ್ರಮ ಇದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ಉದಾರಣೆಯಾಗಿರುವ ಶ್ರೀ ವಿಜಯ ಸಂಕೇಶ್ವರ ಅವರು ಖಂಡಿತವಾಗಿಯೂ  ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಅಲ್ವೇ?

ಏನಂತಿರೀ?

ನಿಮ್ಮವನೇ ಉಮಾಸುತ

ಮಕ್ಕಳ ಕವಿ ಜಿ. ಪಿ. ರಾಜರತ್ನಂ

ನರಕಕ್ಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ!, ನನ್ ಮನಸನ್ನ್ ನೀ ಕಾಣೆ!ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!, ಎಲ್ಲಾ ಕೊಚ್ಕೊಂಡ್ ಓಗ್ಲಿ!, ಪರ್ಪಂಚ್ ಇರೋ ತನಕ ಮುಂದೆ, ಕನ್ನಡ್ ಪದಗೊಳ್ ನುಗ್ಲಿ! ಹೀಗೆ ಕನ್ನಡಕ್ಕಾಗಿಯೇ ತಮ್ಮ ತನು ಮನ ಧನವನ್ನು ಮುಡುಪಾಗಿಟ್ಟ ಹಿರಿಯರಾದರೂ, ಕಿರಿಯರಿಗಾಗಿಯೇ ಶಿಶು ಸಾಹಿತ್ಯವನ್ನು ರಚಿಸಿ ಕನ್ನದ ಸಾಹಿತ್ಯವನ್ನು ಆಚಂದ್ರಾರ್ಕವಾಗಿ ಬೆಳಗುವಂತೆ ಮಾಡಿದ ಕನ್ನಡದ ಹಿರಿಯ ಬರಹಗಾರರಾದ ಶ್ರೀ ಜಿ. ಪಿ. ರಾಜರತ್ನಂ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ಅದು ಎಪ್ಪತ್ತರ ದಶಕ. ಆಗ ತಾನೇ ನೆಲಮಂಗಲದ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಾ, ನಮ್ಮ ಮನೆಯಲೊಂದು ಸಣ್ಣ ಪಾಪ ಇರುವುದು, ಒಂದು ಎರಡು ಬಾಳೆಲೆ ಹರಡು ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಕಲಿತರೆ, ಅಮ್ಮ ಬಣ್ಣದ ತಗಡಿನ ತುತ್ತೂರಿ.. ಕಾಸಿಗೆ ಕೊಂಡನು ಕಸ್ತೂರಿ ಪದ್ಯವನ್ನು ಕಲಿಸಿಕೊಟ್ಟಿದ್ದರು. ಅದೊಂದು ವಾರಂತ್ಯದಲ್ಲಿ ಬೆಂಗಳೂರಿನಲ್ಲಿದ್ದ ಸೋದರತ್ತೆ ಮನೆಗೆ ಬಂದಿದ್ದೆ. ನಮ್ಮ ಅತ್ತೇ ಮಕ್ಕಳು ಶ್ರೀ ರಾಜರತ್ನಂ ಅವರು ಬೆಂಗಳೂರಿನ ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ ಮಕ್ಕಳಿಗಾಗಿ ನಡೆಸುತ್ತಿದ್ದ ಬಾಲ ಗೋಪಾಲ ಕಾರ್ಯಕ್ರಮಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಮಕ್ಕಳಿಗೆ ಚೆಂದದ ಕಥೆಗಳನ್ನು ಹೇಳಿದ ನಂತರ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿರುತ್ತಿತ್ತು. ಆಗ ನಾನು ವೇದಿಕೆಯನ್ನೇರಿ ನಮ್ಮ ಮನೆಯಲೊಂದು ಸಣ್ಣ ಪಾಪ ಇರುವುದು.. ಎಂಬ ಪದ್ಯವನ್ನು ಮುದ್ದು ಮುದ್ದಾಗಿ ಹೇಳಿದ್ದನ್ನು ಕೇಳಿ ವೇದಿಕೆಯ ಮೇಲೆಯೇ ಆಸೀನರಾಗಿದ್ದ ರಾಜರತ್ನಂ ಆವರು ಮಗೂ.. ಈ ಪದ್ಯವನ್ನು ಬರೆದವರು ಯಾರು ಅಂತಾ ಗೊತ್ತಾ? ಎಂದು ಕೇಳಿದ್ದೇ ತಡಾ, ಥಟ್ ಅಂತಾ ನೀವೇ.. ಅಂತ ಹೇಳಿದ್ದೇ. ಅದನ್ನು ಕೇಳಿದ ತಕ್ಷಣವೇ ನನ್ನನ್ನು ಬರಸೆಳೆದು ಅಪ್ಪಿ ಮುದ್ದಾಡಿ ಕೈಗೊಂದು ಚಾಕಲೇಟ್ ಕೊಟ್ಟು ಕಳುಹಿಸಿದ್ದರು. ನಂತರ 1978ರ ಮಕ್ಕಳ ವರ್ಷದ ಅಂಗವಾಗಿ ನಡೆದ ಕಾರ್ಯಕ್ರಮಕ್ಕಾಗಿ ನೆಲಮಂಗಲಕ್ಕೆ ರಾಜರತ್ನಂ ಅವರು ಬಂದಿದ್ದಾಗ, ಸ್ಪರ್ಧೆಯೊಂದರ ಬಹುಮಾನ ಪಡೆಯಲು ವೇದಿಕೆ ಏರಿದ ನನ್ನನ್ನು, ಥಟ್ ಎಂದು ಗುರುತಿಸಿ, ಬಾರಯ್ಯಾ ನಮ್ಮ ಮನೆಯಲೊಂದು ಸಣ್ಣ ಪಾಪಾ… ಎಂದು ಅಕ್ಕರೆಯಿಂದ ಮುತ್ತಿಟ್ಟು ಅವರ ಕೈಯ್ಯಾರ ಬಹುಮಾನ ವಿತರಿಸಿದ್ದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ರಾಜರತ್ನಂ ಅವರ ಪೂರ್ವಜರು ತಮಿಳುನಾಡಿನ ನಾಗಪಟ್ಟಣಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ಅವಿಭಜಿತ ಮೈಸೂರಿನ ಗುಂಡ್ಲು ಪೇಟೆಗೆ ವಲಸೆ ಬಂದು ಆಯುರ್ವೇದ ಪಂಡಿತರಾಗಿದ್ದ ಕಾರಣ ಅವರ ವಂಶವನ್ನು ಗುಂಡ್ಲು ಪಂಡಿತರೆಂದೇ ಕರೆಯುತ್ತಿದ್ದರು. ಇಂತಹ ವಂಶದಲ್ಲಿ ಡಿಸೆಂಬರ್ 05, 1904 ರಂದು ಅವರ ತಾಯಿಯ ತವರೂರಾದ ರಾಮನಗರದಲ್ಲಿ ರಾಜತ್ನಂ ಅವರು ಜನಿಸುತ್ತಾರೆ. ಚಿಕ್ಕವರಿರುವಾಗಲೇ ತಾಯಿಯವರನ್ನು ಕಳೆದು ಕೊಂಡು ಅಜ್ಜಿಯವರ ಅಕ್ಕರೆಯಲ್ಲಿ, ಶಾಲಾ ಶಿಕ್ಷಕರಾಗಿದ್ದ ತಂದೆ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್ ಅವರ ಆರೈಕೆಯಲ್ಲಿಯೇ ತಮ್ಮ ಊರಾದ ಗುಂಡ್ಲುಪೇಟೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಾರೆ. ಓದಿನಲ್ಲಿ ಚುರುಕಾಗಿದಷ್ಟೇ ತುಂಟತನದಲ್ಲೂ ಮುಂದಿದ್ದರು ಎನ್ನುವುದಕ್ಕೆ ಉದಾಹಣೆಯಾಗಿ ಜಿ.ಪಿ.ರಾಜಯ್ಯಂಗಾರ್ ಎಂದಿದ್ದ ಅವರ ಹೆಸರನ್ನು ಶಾಲೆಯ ಗುಮಾಸ್ತರ ನೆರವಿನಿಂದ ಜಿ.ಪಿ.ರಾಜರತ್ನಂ ಎಂದು ಬದಲಿಸಿಕೊಳ್ಳುತ್ತಾರೆ. ಬಹುಶಃ ಇದು ಮುಂದೆ ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನವಾಗಿ ಮೆರೆಯುತ್ತೇನೆ ಎಂಬುದರ ಮುನ್ಸೂಚನೆಯೇನೋ? ಎಂದರೆ ಕಾಕತಾಳೀಯವಾಗಬಹುದು.

1931ರಲ್ಲಿ ಕನ್ನಡದಲ್ಲಿ ಎಂ.ಎ ಮುಗಿಸಿದ ರಾಜರತ್ನಂ, ತಮ್ಮೂರಿನ ಶಿಶು ವಿಹಾರದಲ್ಲಿ ಮತ್ತು ತಮ್ಮ ತಂದೆಯವರ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವಾಗಲೇ, ಮಕ್ಕಳಿಗಾಗಿ ತುತ್ತೂರಿ ಎಂಬ ಶಿಶುಗೀತೆ ಸಂಕಲನ ರಚಿಸಿದರು ಆ ಸಂಕಲನದ ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ, ಒಂದು ಎರಡು ಬಾಳೆಲೆ ಹರಡು, ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು, ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ, ರೊಟ್ಟಿ ಅಂಗಡಿ ಕಿಟ್ಟಪ್ಪ, ನನಗೊಂದು ರೊಟ್ಟಿ ತಟ್ಟಪ್ಪಾ , ಅಪ್ಪಾ ನಾಕಾಣಿ, ಯಾಕೋ ಪುಟಾಣಿ, ಹೇರ್ ಕಟ್ಟಿಂಗ್ ಸೆಲೂನ್ ಮುಂದಾದ ಪದ್ಯಗಳು ಇಂದಿಗೂ ಎಷ್ಟೋ ಮಕ್ಕಳ ನಾಲಿಗೆ ತುದಿಯಲ್ಲಿ ನಲಿಯುವಂತಾಗಿದೆ.

ಉತ್ತಮವಾದ ಕೆಲಸವನ್ನು ಹುಡುಕಿಕೊಂಡು ದೂರದ ಹೈದರಾಬಾದಿಗೂ ಹೋಗಿ ನಂತರ ಬೆಂಗಳೂರಿಗೆ ಆಗಮಿಸಿ ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದಾಗಲೇ ಅವರಿಗೆ ಅಲ್ಲಿ ಅಧಿಕಾರಿಗಳಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ರಾಜರತ್ನಂ ಅವರ ಸಾಹಿತ್ಯದ ಚಟುವಟಿಕೆ ಬಲ್ಲವರಾಗಿದ್ದರಿಂದ ಸಾಹಿತ್ಯದ ಕೆಲಸವನ್ನೇ ಮುಂದುವರೆಸು ನಾನು ನೆರವು ನೀಡುತ್ತೇನೆ ಎಂದ ಪರಿಣಾಮವೇ ರಾಜರತ್ನಂ ಅವರು ಬೌದ್ಧ ಧರ್ಮದ ಅಧ್ಯಯನ ನಡೆಸಿ, ಚೀನಾದೇಶದ ಬೌದ್ಧ ಯಾತ್ರಿಕರು, ಧರ್ಮದಾನಿ ಬುದ್ಧ, ಬುದ್ಧನ ಜಾತಕಗಳು ಮುಂತಾದ ಬೌದ್ಧ ಕೃತಿಗಳನ್ನು ರಚಿಸಿಸಲು ಅನುವಾಯಿತು. ಭಗವಾನ್ ಮಹಾವೀರ, ಶ್ರೀ ಗೋಮಟೇಶ್ವರ, ಮಹಾವೀರರ ಮಾತುಕತೆ, ಭಗವಾನ್ ಪಾರ್ಶ್ವನಾಥ, ಜೈನರ ಅರವತ್ತು ಮೂವರು ಮೊದಲಾದ ಜೈನ ಸಾಹಿತ್ಯವನ್ನೂ ರಚಿಸಿದರು.

1938ರಲ್ಲಿ ಕಾಲೇಜಿನಲ್ಲಿ ದೊರೆತ ಕನ್ನಡ ಪಂಡಿತ ಹುದ್ದೆ ರಾಜರತ್ನಂ ಅವರ ಬದುಕಿಗೆ ಆರ್ಥಿಕ ಸ್ಥಿರತೆಯನ್ನು ತಂದುಕೊಟ್ಟಿತು ಎಂದರೂ ತಪ್ಪಾಗಲಾರದು. ಕಾಲೇಜಿನ ಅಧ್ಯಾಪಕರಾಗಿ ಮೈಸೂರು, ಶಿವಮೊಗ್ಗ, ತುಮಕೂರು ಮುಂತಾದ ಊರುಗಳಿಗೆ ವರ್ಗಾವಣೆಗೊಂಡು ಅಲ್ಲಿನ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಕನ್ನಡದ ಕಿಚ್ಚನ್ನು ಹಬ್ಬಿಸಿ ಅವರಲ್ಲಿ ಸಾಹಿತಾಸಕ್ತಿಯನ್ನು ತುಂಬಿದರು. 1964ರಲ್ಲಿ ಕನ್ನಡ ರೀಡರ್ ಆಗಿ ನಿವೃತ್ತರಾದ ನಂತರವೂ ಒಂದೆರಡು ವರ್ಷ ಯು.ಜಿ.ಸಿ. ಅಧ್ಯಾಪಕರಾಗಿ ಕೆಲಸ ಮಾಡಿದರು. ಆದಾದ ನಂತರ ಆಡಳಿತ ಮಂಡಳಿ ಇಲ್ಲವೇ ಪ್ರಾಂಶುಪಾಲರ ಒತ್ತಾಯದ ಮೇರೆಗೆ, ನ್ಯಾಷನಲ್ ಕಾಲೇಜು, ಎಂ.ಇ.ಎಸ್ ಕಾಲೇಜು, ಸತ್ಯಸಾಯಿ ಕಾಲೇಜುಗಳಲ್ಲಿ ನಾನಾ ವಿಷಯಗಳ ಬಗ್ಗೆ ಬೋಧನೆ ಮಾಡಿದ್ದರು.

ಖ್ಯಾತ ಕವಿ ಶಿವರಾಮ ಕಾರಂತರು ಪುತ್ತೂರಿನ ಬಾಲವನದಲ್ಲಿ ನಡೆಸುತ್ತಿದ್ದ ಮಕ್ಕಳ ಮೇಳದ ಅನುಭವಗಳಿಂದ ಪ್ರೇರಿತರಾದ ರಾಜರತ್ನಂ ಪಾಪ ಮತ್ತು ಪೀಪಿ, ಕಡಲೆಪುರಿ, ಗುಲಗಂಜಿ, ಕಂದನ ಕಾವ್ಯಮಾಲೆ ಮುಂತಾದವುಗಳನ್ನು ರಚಿಸಿ, ಕನ್ನಡದಲ್ಲಿ ಶಿಶು ಸಾಹಿತ್ಯ ಪ್ರಕಾರವನ್ನು ರಾಜರತ್ನಂ ಪೋಷಿಸಿ ಬೆಳೆಸಿದ್ದಲ್ಲದೇ, ಸಂಸ್ಕೃತದ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಅದರಲ್ಲೂ ಮಕ್ಕಳಿಗೆ ಅರ್ಥವಾಗುವಂತೆ ಅನುವಾದಿಸಿದರು.

ಮೈಸೂರಿನ ಹೆಂಡದ ಅಂಗಡಿಯಲ್ಲಿ ಕಂಡ ದೃಶ್ಯಗಳ ಆಧಾರಿತ ಎಂಡಕುಡುಕ ರತ್ನ ಎಂಬ ಅನನ್ಯ ಕೃತಿ ಹೊರಬರುವಂತೆ ಮಾಡಿತು. ಒಬ್ಬ ಕುಡುಕನ ಮುಖಾಂತರ ತಮ್ಮ ಕನ್ನಡದ ಪ್ರೇಮವನ್ನು ಅಲ್ಲಿ ವ್ಯಕ್ತಪಡಿಸಿದ್ದರು . 14 ಪದ್ಯಗಳ ಎಂಡಕುಡುಕ ರತ್ನ ಕೃತಿಯೊಂದಿಗೆ ಪುಟ್ನಂಜಿ ಪದಗಳು ಮತ್ತು ಮುನಿಯನ ಪದಗಳು ಸೇರಿ ಒಟ್ಟು 77 ಪದಗಳ ರತ್ನನ ಪದಗಳು ಪುಸ್ತಕದ ಪ್ರಕಟಣೆಗೆ ಹಣ ಇಲ್ಲದಿದ್ದಾಗ ತಮ್ಮ ತಾರೆ ಕವನಕ್ಕೆ ದೊರೆತಿದ್ದ ಬಿ.ಎಂ.ಶ್ರೀ ಚಿನ್ನದ ಪದಕವನ್ನೇ ಒತ್ತೆ ಇಟ್ಟು ಸಾಲ ಪಡೆದು ಪ್ರಕಟಿಸಿದ್ದರಂತೆ. ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯವಾಗಿ. ಸತತವಾಗಿ ಏಳೆಂಟು ಮುದ್ರಣವಾಗಿ ಇಂದಿಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವ ಕನ್ನಡ ಪುಸ್ತಕಗಳಲ್ಲಿ ಒಂದು ದಾಖಲೆಯಾಗಿದೆ. ಮುಂದೆ ನಾಡಿನ ಸುಪ್ರಸಿದ್ಧ ಹಾಡುಗಾರರಾದ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ‍ಸಿ ಅಶ್ವಥ್ ಅಂತಹ ಕಂಚಿನ ಕಂಠದಲ್ಲಿ ಜನಪ್ರಿಯವಾಗಿ ಅಂದಿಗೂ ಇಂದಿಗೂ ಮತ್ತು ಎಂದೆಂದಿಗೂ ಕನ್ನಡಗರ ಹೃನ್ಮನಗಳಲ್ಲಿ ಚಿರಸ್ಥಾಯಿಯಾಗಿಯೇ ಉಳಿದಿದೆ. ರಾಜರತ್ನಂ ಉತ್ತಮ ಸಾಹಿತಿ ಮತ್ತು ಉತ್ತಮ ವಾಗ್ಮಿ ಎಂದು ನಾಡಿನಲ್ಲೆಲ್ಲಾ ಹೆಸರಾಗಿದ್ದರು. ಬೆಂಗಳೂರು ಆಕಾಶವಾಣಿಯಲ್ಲಿ ಪ್ರತಿದಿನವೂ ಬೆಳಿಗ್ಗೆ 6:30ಕ್ಕೆ ಬಿತ್ತರವಾಗುತ್ತಿದ್ದ ಚಿಂತನ ಕಾರ್ಯಕ್ರಮದಲ್ಲಿ ಅವರ WATCH ಎಂದರೆ ಒಂದು ಗಡಿಯಾರ ಎಂಬರ್ಥವಾದರೇ ಮತ್ತೊಂದು ಅರ್ಥವಾದ ಗಮನಿಸು ಕುರಿತಂತೆ ಅವರ ಚಿಂತನ ಕೇಳುಗರ ಮನವನ್ನು ತಟ್ಟಿತ್ತಲ್ಲದೇ, ಎಲ್ಲರ ಒತ್ತಾಯದ ಮೇರೆಗೆ ಪುನಃ ಪುನಃ ಅನೇಕ ಬಾರಿ ಮರುಪ್ರಸಾರವಾಗಿತ್ತು.

ರಾಜರತ್ನಂ ಹಲವರ ಮೇಲೆ ಹೇಗೆ ಪ್ರಭಾವ ಬೀರುತ್ತಿದ್ದರು ಎನ್ನುವುದಕ್ಕೆ ಈ ಪ್ರಸಂಗ ಸೂಕ್ತವಾಗಿದೆ. ಅದೊಮ್ಮೆ ತಮ್ಮ ಪುಸ್ತಕಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೋದ ರಾಜರತ್ನಂ ಅವರು ಅಲ್ಲಿದ್ದ ಯುವಕನನ್ನು ಕರೆದು ಮಗೂ ಈ ಪುಸ್ತಕಗಳನ್ನು ಎತ್ತಿ ಒಳಗಿಡಲು ಜವಾನರನ್ನು ಕಳುಹಿಸು ಎಂದಿದ್ದಾರೆ. ರಾಜರತ್ನಂ ಅವರ ಪರಿಚಯವಿಲ್ಲದಿದ್ದ ಆ ಯುವಕ ಯಾರೂ ಇಲ್ಲಾ ಎಂದು ತಲೆಯಾಡಿಸಿ ತನ್ನ ಕೆಲಸದಲ್ಲಿ ಮಗ್ನನಾಗಿದ್ದಾನೆ. ಕಷ್ಟ ಪಟ್ಟು ಎಲ್ಲಾ ಪುಸ್ತಕಗಳನ್ನು ರಾಜರತ್ನಂ ಅವರೇ ಆಟೋದಿಂದ ಪರಿಷತ್ತಿನ ಒಳಗೆ ಇಳಿಸುವಷ್ಟರಲ್ಲಿ ಪರಿಷತ್ತಿನ ವ್ಯವಸ್ಥಾಪಕರು ಬಂದು ಇದೇನು ರಾಯರೇ, ನೀವು ಎತ್ತಿಡುತ್ತಿದ್ದೀರಿ? ನಮ್ಮವರು ಯಾರೂ ಇರಲಿಲ್ಲವೇ ಎಂದು ಅಲ್ಲಿಯೇ ಕೆಲಸದಲ್ಲಿ ಮಗ್ನನಾಗಿದ್ದ ಯುವಕನತ್ತ ತಿರುಗಿ ಏನಪ್ಪಾ, ನೀನಾದರೂ ಇವರಿಗೆ ಸಹಾಯ ಮಾಡಬಾರದಿತ್ತಾ? ಇವರು ಯಾರು ಗೊತ್ತೇ? ಇವರೇ ಜಿ.ಪಿ. ರಾಜರತ್ನಂ ಎಂದು ಪರಿಚಯಿಸಿದ್ದಾರೆ. ರಾಜರತ್ನಂ ಅವರ ಹೆಸರು ಕೇಳುತ್ತಲೇ, ಬಾಲ್ಯದಿಂದಲೂ ಆವರ ಶಿಶುಗೀತೆಗಳನ್ನು ಓದಿ ಬೆಳೆದಿದ್ದನಾದರೂ ಅವರನ್ನು ನೋಡಿರದ ಆ ಹುಡುಗಾ ತಬ್ಬಿಬ್ಬಾಗಿ ಕ್ಷಮಿಸೀ, ನೀವು ರಾಜರತ್ನಂ ಎಂಬುದು ಗೊತ್ತಿರಲಿಲ್ಲ ಎಂದಿದ್ದಾನೆ. ಆಗ ರಾಜರತ್ನಂ ಅವರು ಮೃದುವಾಗಿ, ನೋಡೋ ಹುಡುಗ, ನಾನು ಅಂತ ಅಲ್ಲ. ಯಾರೇ ವಯಸ್ಸಾದವರು ಕರೆದರೂ ತಕ್ಷಣವೇ ಹತ್ತಿರ ಹೋಗಿ ಏನು ಅಂತ ಕೇಳಿ ಸಹಾಯ ಮಾಡಬೇಕು ಗೊತ್ತಾಯ್ತಾ? ಎಂದಿದ್ದಾರೆ. ಅದಾದ ಸ್ವಲ್ಪ ದಿನಗಳ ನಂತರ ರಾಜರತ್ನಂ ಆಟೋದಲ್ಲಿ ಬಟ್ಟೆ ಗಂಟಿನಲ್ಲಿ ಪುಸ್ತಕಗಳನ್ನು ತಂದಿದ್ದನ್ನು ದೂರದಿಂದಲೇ ಗಮನಿಸಿದ ಆ ಯುವಕ ಓಡಿಹೋಗಿ ಆ ಪುಸ್ತಕಗಳನ್ನು ಆಟೋದಿಂದ ಇಳಿಸಿಕೊಂಡು ಒಳಗಿಟ್ಟಿದ್ದಕ್ಕೆ ಸಂತೋಷಪಟ್ಟ ರಾಜರತ್ನಂ, ಮತ್ತೆ ವ್ಯವಸ್ಥಾಪಕರ ಬಳಿ ಬಂದು ನೋಡೀ ರಾಯರೇ, ನಿಮ್ಮೀ ಹುಡುಗ ಈಗ ಒಳ್ಳೆಯವನಾಗಿಬಿಟ್ಟಿದ್ದಾನೆ. ನಾನು ಬಂದಿದ್ದನ್ನು ದೂರದಿಂದಲೇ ನೋಡಿ ಓಡಿಬಂದು ಪುಸ್ತಕ ಇಳಿಸಿಕೊಂಡ. ಇವನಿಗೆ ನನ್ನ ಲೆಖ್ಖದಲ್ಲಿ ಕಾಫಿ ತರಿಸಿಕೊಡಿ ಎಂದಿದ್ದಲ್ಲದೇ, ಹಾಗೇ ನನಗೂ ಒಂದು ಕಾಫಿ ಎಂದು ನಕ್ಕಿದ್ದರಂತೆ.

ಹಲವು ಕವಿ ಸಮ್ಮೇಳನಗಳ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅಲ್ಲದೇ 1978ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ರಾಜರತ್ನಂ ಅವರಿಗೆ ಲಭಿಸಿತ್ತು. ಸದಾ ಖಾದಿಯ ಉಡುಪಿನಲ್ಲಿಯೇ ಸೌಮ್ಯವಾಗಿ ಕಂಗೊಳಿಸುತ್ತಿದ್ದ ರಾಜರತ್ನಂ ಉತ್ತಮ ದೇಹದಾಢ್ಯಪಟು ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಯೌವನದಿಂದಲೂ ಗರಡಿ ಮನೆಯಲ್ಲಿ ಅಂಗಸಾಧನೆ ಮಾಡಿ ಬಲವಾದ ಮೈಕಟ್ಟು ಹೊಂದಿ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಸಧೃಢರಾಗಿದ್ದರು. 1979ರ ಮಾರ್ಚ್ 11ರಂದು ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದ ಮಕ್ಕಳ ಸಾಹಿತ್ಯ ಗೋಷ್ಟಿಯ ಅಧ್ಯಕ್ಷತೆಯಿಂದ ಹಿಂದಿರುಗಿ ಬಂದು, ಮಾರ್ಚ್ 13ರ ಮಧ್ಯಾಹ್ನ ತ್ರೀವ್ರ ಹೃದಯಾಘಾತಕ್ಕೆ ಒಳಗಾಗಿ ಮತ್ತೆ ಬಾರದಿರುವ ಲೋಕಕ್ಕೆ ಹೊರಟು ಹೋದರು.

ಹೀಗೆ ತಮಿಳು ಮಾತೃ ಭಾಷೆಯಾಗಿದ್ದರೂ, ಯಾವುದೇ ಕನ್ನಡಿಗರಿಂಗಿಂತಲೂ ಒಂದು ಗುಲಗಂಜಿ ತೂಕ ಹೆಚ್ಚಾಗಿಯೇ ಕನ್ನಡವನ್ನು ಒಪ್ಪಿ, ಅಪ್ಪಿ ಮುದ್ದಾದಿದ್ದಲ್ಲದೇ, ತಮ್ಮ ಅಮೋಘ ಸಾಹಿತ್ಯದ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಧೃವ ನಕ್ಷತ್ರದಂತೆ ಸದಾಕಾಲವೂ ಪ್ರಜ್ವಲಿಸುತ್ತಲೇ ಇರುವ, ಕನ್ನಡ ಸಾಹಿತ್ಯ ಲೋಕದ ಕೇವಲ ರಾಜ ರತ್ನವಾಗಿರದೇ, ಅರ್ನರ್ಘ್ಯ ರತ್ನವೇ ಆಗಿರುವ ಗುಂಡ್ಲುಪಂಡಿತ, ಹೆಂಡ್ಕುಡ್ಕ, ಅನನ್ಯ ಕನ್ನಡಿಗ ರಾಜರತ್ನಂ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಹೆಚ್. ಜಿ. ದತ್ತಾತ್ರೇಯ (ದತ್ತಣ್ಣ)

ಇವರು ಎಸ್.ಎ.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ರ್ಯಂಕ್ ಇನ್ನು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದು ಪ್ರತಿಷ್ಟಿತ ಚೆನೈನ ಐಐಟಿಯಲ್ಲಿ ಪ್ರವೇಶ ಸುಲಭವಾಗಿ ಸಿಕ್ಕಿದರೂ ಅಲ್ಲಿಗೆ ಹೋಗದೇ ಬೆಂಗಳೂರಿನಲ್ಲಿಯೇ ಇಂಜೀನಿಯರಿಂಗ್ ಮುಗಿಸಿ, ನೆಮ್ಮದಿಯಾಗಿ ಕೈ ತುಂಬಾ ಸಂಬಳ ತರುವ ಉದ್ಯೋಗವನ್ನು ಬಿಟ್ಟು ಭಾರತೀಯ ವಾಯುಸೇನೆಗೆ ಸೈನಾಧಿಕಾರಿಗಳಾಗಿ ಸೇರಿ, 21ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ರಂಗಭೂಮಿ ಮತ್ತು ರೇಡಿಯೋ ನಾಟಕಗಳ ಕಡೆ ಆಕರ್ಷಿತರಾಗಿ, ಯಶಸ್ವೀ ನಟ ಎಂದು ಪ್ರಖ್ಯಾತರಾದ ನಂತರ ನೂರಾರು ಹಿಂದಿ ಮತ್ತು ಕನ್ನಡ‍ವೂ ಸೇರಿದಂತೆ ನೂರಾರು ಚಲನಚಿತ್ರಗಳಲ್ಲಿ ನಟಿಸಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದವರು. ಹೀಗೆ ಬಹುಮುಖ ಪ್ರತಿಭೆಯಾದ ಶ್ರೀ ದತ್ತಾತ್ರೇಯ ಎಲ್ಲರ ಪ್ರೀತಿಯ ದತ್ತಣ್ಣನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ಚಿತ್ರದುರ್ಗದಲ್ಲಿ ವಕೀಲರಾಗಿದ್ದ ಶ್ರೀ ಹರಿಹರ ಗುಂಡೂರಾಯರು ಮತ್ತು ವೆಂಕಮ್ಮ ದಂಪತಿಗಳ ಜನ್ಮದಲ್ಲಿ ಏಪ್ರಿಲ್ 20, 1942 ರಂದು ಚಿತ್ರದುರ್ಗದ ಸಂಪ್ರದಾಯ ಕುಟುಂಬದಲ್ಲಿ ದತ್ತಾತ್ರೇಯ ಅವರು ಜನಿಸಿದರು. ಅವರ ಪೂರ್ತಿ ಹೆಸರು, ಹರಿಹರ ಗುಂಡೂರಾವ್ ದತ್ತಾತ್ರೇಯ ಮತ್ತು ಎಲ್ಲರ ಪ್ರೀತಿಯ ದತ್ತಣ್ಣ ಎಂದೇ ಖ್ಯಾತರಾಗಿದ್ದಾರೆ. ಅವರು ಬಾಲ್ಯವನ್ನೆಲ್ಲಾ ಚಿತ್ರದುರ್ಗದ ಮಠದ ಕೇರಿಯಲ್ಲಿಯೇ ತುಂಬು ಕುಟುಂಬದಲ್ಲಿ ಕಳೆಯುತ್ತಾರೆ. ಅವರನ್ನೂ ಸೇರಿ ಅವರ ಒಡಹುಟ್ಟಿದವರು ಐದು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಮನೆಯಲ್ಲಿ ಎಲ್ಲರೂ ಪ್ರತಿಭಾವಂತರೇ. ಇತ್ತೀಚೆಗಷ್ಟೇ ನಿಧನರಾದ ಶ್ರೀ ಹೆಚ್. ಜಿ. ಸೋಮಶೇಖರ್ ಅವರು ದತ್ತಣ್ಣ ಅವರ ಖಾಸ ಅಣ್ಣ.

ದತ್ತಣ್ಣ ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಹೇಗೆ ಚುರುಕೋ ಹಾಗೇಯೇ ತುಂಟತನದಲ್ಲೂ ಒಂದು ಕೈ ಮುಂದೆಯೇ. ಅಂದಿನ ಕಾಲದಲ್ಲಿ ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ನಾಟಕ ಕಂಪನಿ ನಾಟಕಗಳ ಪ್ರಭಾವದಿಂದಾಗಿ ಶಾಲೆಯಿಂದಲೇ ನಾಟಕದ ಗೀಳನ್ನು ಹತ್ತಿಸಿಕೊಂಡ ದತ್ತಣ್ಣನವರು ತಮ್ಮ ನೆರೆಹೊರೆಯ ಹುಡುಗರೊಂದಿಗೆ ಮಾಡಿದ ಸೊಹ್ರಾಬ್-ರುಸ್ತುಂ ನಾಟಕ ಅವರಿಗೆ ಪ್ರಖ್ಯಾತಿ ತಂದುಕೊಟ್ಟಿತ್ತು. ತುಮಕೂರಿನ ಪ್ರೌಢಶಾಲೆಯ ನಾಟಕದಲ್ಲಿ ಮದಕರಿ ನಾಯಕನ ಪಾತ್ರ ಮಾಡಿದರೆ, ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ ಅಳಿಯ ದೇವರು ನಾಟಕದಲ್ಲಿ ರುಕ್ಕುಪಾತ್ರದಲ್ಲಿ ಮಿಂಚಿದ್ದರು. ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ ದೇವದಾಸಿ ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ. ನೋಡಲು ತೆಳ್ಳಗೆ, ಬೆಳ್ಳಗಿದ್ದ ದತ್ತಣ್ಣನವರಿಗೆ ಹೆಣ್ಣುಪಾತ್ರಗಳೇ ಹುಡುಕಿ ಕೊಂಡು ಬರ ತೊಡಗಿದವು. ಮೆಟ್ರಿಕ್ಯುಲೇಷನ್ ಪರೀಕ್ಷೆ ಹತ್ತಿರ ಬಂದಂತೆ ನಾಟಕಗಳಿಗೆ ವಿರಾಮ ಹಾಕಿ ಓದಿನ ಕಡೆ ಗಮನ ಹರಿಸಿ ರಾಜ್ಯಕ್ಕೇ ಮೊದಲ ರ್ಯಾಂಕಿನೊಂದಿಗೆ ತಮ್ಮ ಹತ್ತನೇ ತರಗತಿ ಮುಗಿಸುತ್ತಾರೆ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ಪದವಿ ಪೂರ್ವ ಶಿಕ್ಷಣದ ಜೊತೆ ಜೊತೆಯಲ್ಲಿಯೇ ಅಭಿನಯಿಸಿದ ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಡನ್‌ಲಪ್ ಗರ್ಲ್ ನಾಟಕದಲ್ಲೂ ಅವರದ್ದು ಹೆಣ್ಣಿನ ಪಾತ್ರವೇ. ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಎರಡನೇ ರ್ಯಾಂಕ್ ನೊಂದಿಗೆ ತೇರ್ಗಡೆಯಾಗಿ ಅಂದಿನ ಮದರಾಸಿನ ಪ್ರತಿಷ್ಠಿತ ಐಐಟಿಯಲ್ಲಿ ಸುಲಭವಾಗಿ ಪ್ರವೇಶ ಸಿಕ್ಕಿದರೂ ಅಲ್ಲಿಗೆ ಹೋಗಲು ಮನಸ್ಸಾಗದೇ ಬೆಂಗಳೂರಿನಲ್ಲಿಯೇ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಭಾರತೀಯ ವಾಯುಸೇನೆಯ ತಾಂತ್ರಿಕ ಅಧಿಕಾರಿ ಆಗಿ ಸೇನೆಗೆ ಸೇವೆ ಸಲ್ಲಿಸಲು ಸೇರಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಬೆಂಗಳೂರು, ಚಂಡೀಗಢ, ಕಾನ್ಪುರ್, ಭಟಿಂದಾ, ಅಂಡಮಾನ್ ಮೊದಲಾದ ಕಡೆ ಭಾರತೀಯ ವಾಯುಸೇನೆಯ ಕರ್ತವ್ಯ ನಿರ್ವಹಣೆ ಮಾಡುತ್ತಲೇ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ( IISC) ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿಯನ್ನೂ ಸಹಾ ಪಡೆದುಕೊಳ್ಳುತ್ತಾರೆ. Commissioned Officer ಆಗಿ ವಾಯುಸೇನೆಯ ಉನ್ನತ ಅಧಿಕಾರಿಯಾಗಿ ಸುಮಾರು ಮುಂದೆ 21 ವರ್ಷಗಳ ಕಾಲ ಸೇವೆ ಸಲ್ಲಿಸಿ 1986ರಲ್ಲಿ ವಿಂಗ್ ಕಮ್ಯಾಂಡರ್ ಆಗಿ ನಿವೃತ್ತಿ ಹೊಂದುತ್ತಾರೆ.

ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಹಿಂದುಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (HAL) ಸಂಸ್ಥೆಯ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮೊದಲು ಪ್ರಾಧ್ಯಾಪಕರಾಗಿ ಸೇರಿಕೊಂಡರು. ನಂತರ ಡಿಜಿಎಂ ಕಡೆಗೆ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು. ಅವರ ವಿದ್ಯಾರ್ಥಿಗಳು ಹೇಳುವ ಪ್ರಕಾರ ಸಿನಿಮಾದಲ್ಲಿ ನೋಡಲು ಸರಳವಾಗಿ ಕಂಡರೂ ಅಧ್ಯಾಪಕರಾಗಿ ಅವರು ಬಲು ಖಡಕ್ ಮತ್ತು ಪರಿಪೂರ್ಣವಾಡ ಪ್ರಾಧ್ಯಾಪಕರು. ನಿವೃತ್ತರಾದ ಮೇಲಂತೂ ತಮ್ಮನ್ನು ಸಂಪೂರ್ಣವಾಗಿ ನಾಟಕ ಮತ್ತು ಸಿನೆಮಾರಂಗಕ್ಕಾಗಿಯೇ ಮೀಸಲಿಟ್ಟರು.

ಶಾಲಾ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ದತ್ತಣ್ಣ ಮುಂದೆ HAL ಸೇರಿ ಅಲ್ಲಿನ ಕರ್ತವ್ಯದ ನಿಮಿತ್ತ ಸುಮಾರು ವರ್ಷಗಳ ಕಾಲ ದೆಹಲಿಯಲ್ಲಿಯೇ ಇರಬೇಕಾದ ಸಂಧರ್ಭ ಬಂದಾಗ ಅಲ್ಲಿನ ಕನ್ನಡ ಭಾರತಿ ಸಂಸ್ಥೆಗೆ ಸೇರಿಕೊಂಡು ಅಲ್ಲಿಯ ಸಹಸದ್ಯರೊಂದಿಗೆ ಸೇರಿ ಬಿ.ವಿ.ಕಾರಂತರ ನಹಿ ನಹಿ ರಕ್ಷತಿ, ಸಿಕ್ಕು, ಎಚ್ಚಮನಾಯಕ, ನಾನೇ ಬಿಜ್ಜಳ ಮುಂತಾದ ಹತ್ತಾರು ನಾಟಕಗಳಲ್ಲಿ ದತ್ತಣ್ಣ ನಟಿಸಿದ್ದರು. ಅದರಲ್ಲೂ ನಾನೇ ಬಿಜ್ಜಳ ನಾಟಕದಲ್ಲಿ ಬಿಜ್ಜಳನ ಪಾತ್ರ ದತ್ತಣ್ಣನವರಿಗೆ ಬಹಳ ಖ್ಯಾತಿ ತಂದು ಕೊಟ್ಟ ಪಾತ್ರ. ಹಲವಾರು ಗಣ್ಯರ ಅಪೇಕ್ಷೆಯ ಮೇರೆಗೆ ಅದು ಹಲವು ಬಾರಿ ಮರು ಪ್ರದರ್ಶನಗೊಂಡ ನಾಟಕವೂ ಹೌದು. ಎಂ.ಎಸ್.ಸತ್ಯು ರವರ ಕುರಿ ನಾಟಕಕ್ಕೆ ನೇಪಥ್ಯದಲ್ಲಿ ದತ್ತಣ್ಣನವರದು ಪ್ರಮುಖ ಪಾತ್ರ. ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದ ನಂತರವಂತೂ ನೂರಾರು ನಾಟಕಗಳಲ್ಲಿ ಅಭಿನಯಿಸಿದರು. ಅದೇ ಸಮಯದಲ್ಲಿ ತಮ್ಮ 46ನೇ ವಯಸ್ಸಿನಲ್ಲಿ ನಾಗಾಭರಣ ಅವರ ನಿರ್ದೇಶನದ ಆಸ್ಫೋಟ ಚಿತ್ರದ ಮೂಲಕ ಚಿತ್ರರಂಗಕ್ಕೆ 1988ರಲ್ಲಿ ಪಾದಾರ್ಪಣೆ ಮಾಡುತ್ತಾರೆ. ತಮ್ಮ ಮೊತ್ತ ಮೊದಲ ಸಿನೆಮಾಕ್ಕೇ ಅವರಿಗೆ ಶ್ರೇಷ್ಟ ನಟ ರಾಜ್ಯ ಪ್ರಶಸ್ತಿ ದೊರೆತ ನಂತರ ಕನ್ನಡ ಚಿತ್ರರಂಗದ ಪೋಷಕ ಪಾತ್ರಕ್ಕೆ ದತ್ತಣ್ಣ ಅನಿವಾರ್ಯದ ನಟನಾಗಿ ಬಿಟ್ಟರು. ಪಿ.ಶೇಷಾದ್ರಿ, ನಾಗಾಭರಣ ಮುಂತಾದ ಕಲಾತ್ಮಕ ಚಿತ್ರಗಳ ನಿರ್ದೇಶಕರು ಅವರ ಒಳಗಿರುವ ಅದ್ಭುತ ನಟನೆಯನ್ನು ಹೊರತಂದು ದತ್ತಣ್ಣ ಅವರನ್ನು ಪ್ರಸಿದ್ಧಿಗೆ ತಂದರೆ ಇನ್ನೂ ಮಾಸ್ ಚಿತ್ರಗಳಲ್ಲಿಯೂ ವಿಭಿನ್ನವಾದ ಪಾತ್ರಗಳು, ಹಾಸ್ಯ ಪಾತ್ರಗಳನ್ನು ಮಾಡಿ ನೋಡ ನೋಡುತ್ತಿದ್ದಂತೆಯೇ ದತ್ತಣ್ಣ ಕನ್ನಡಿಗರ ಮನಗಳಲ್ಲಿ ಶಾಶ್ವತವಾದ ಮನೆಯನ್ನು ಮಾಡಿಯೇ ಬಿಟ್ಟರು.

ದತ್ತಣ್ಣನವರು ಕನ್ನಡಿಗರಿಗೆ ಬಹಳ ಹತ್ತಿರ ಮತ್ತು ಆಪ್ಯಾಯಮಾನರಾಗಿದ್ದು ಟಿ.ಎನ್. ಸೀತಾರಾಂ ಅವರ ಮಾಯಾ ಮೃಗ ಧಾರವಾಹಿಯ ಮೂಲಕ. ಆ ಧಾರಾವಾಹಿಯ ಶಾಸ್ತ್ರೀಗಳ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಅಭಿನಯವನ್ನು ಯಾರೂ ಸಹಾ ಮರೆಯಲು ಸಾಧ್ಯವಿಲ್ಲ. ಮೌನಿ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ಅಮೇರಿಕಾ.. ಅಮೇರಿಕಾ.., ರಾಮ ಭಾಮ ಶಾಮ, ಸಂತ ಶಿಶುನಾಳ ಶರೀಫ, ಕೊಟ್ರೇಶಿ ಕನಸು, ಅಂಡಮಾನ್, ಅನಂತು ವರ್ಸಸ್ ನುಸೃತ್ ಚಿತ್ರಗಳಲ್ಲಿನ ವಿಭಿನ್ನ ಪೋಷಕ ಪಾತ್ರಗಳಲ್ಲಿ ನಟಿಸಿದ್ದರೆ, ಜಗ್ಗೇಶ್ ಮತ್ತು ಹರಿಪ್ರಿಯಾ ಜೊತೆ ಅಭಿನಯಿಸಿದ ನೀರ್ ದೋಸೆ ಚಿತ್ರ ಅವರ ಅಭಿನಯದ ಮತ್ತೊಂದು ಮಜಲನ್ನು ತೋರಿಸುತ್ತದೆ. ವಯಸ್ಸಾದ ಚಪಲ ಚನ್ನಿಗರಾಯನ ಆಭಿನಯವನ್ನು ನೋಡಿದ ಕನ್ನಡಿಗರು, ದತ್ತಣ್ಣ ಹೀಗೂ ಅಭಿನಯಿಸುತ್ತಾರಾ? ಎಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಹೀಗೆ ಇದುವರೆಗೂ 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಒಳಗೊಂಡಂತೆ, ಎರಡು ರಾಷ್ಟ್ರೀಯ ತೀರ್ಪುಗಾರರ ಮಂಡಳಿಯ ಪ್ರಶಸ್ತಿ, ಎರಡು ರಾಜ್ಯ ಪ್ರಶಸ್ತಿ, ಫಿಜಿ ರಾಷ್ಟ್ರದ ಫಿಲ್ಮ್ ಉತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳು ಅವರ ಬತ್ತಳಿಕೆಯಲ್ಲಿವೆ.

ಹಿಂದೆ ಒಂದೆರಡು ಹಿಂದಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ದತ್ತಣ್ಣ, ಕಳೆದ ವರ್ಷದ ಅಕ್ಷಯ್ ಕುಮಾರ್ ಅವರ ಪ್ರಖ್ಯಾತ ಮಿಷನ್ ಮಂಗಲ್ ಚಿತ್ರದಲ್ಲಿ ವಿಜ್ಞಾನಿಗಳಾಗಿ ನಟಿಸಿದ್ದರು. ದತ್ತಣ್ಣ ಅವರ ಬಗ್ಗೆ ಅಕ್ಷಯ್ ಕುಮಾರ್ ಅವರಿಗಂತೂ ವಿಶೇಷ ಮಮಕಾರ. ಆ ಚಿತ್ರದ ಪ್ರತಿಯೊಂದು ಸಂದರ್ಶನದಲ್ಲೂ ದತ್ತಣ್ಣ ಅವರ ವ್ಯಕ್ತಿತ್ವ ಮತ್ತು ಅಭಿನಯದ ಬಗ್ಗೆ ಮುಕ್ತಕಂಠದಿಂದ ಹೊಗಳುತ್ತಿದ್ದಿದ್ದಲ್ಲದೇ, ಎಲ್ಲರ ಬಳಿಯೂ ಇವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಮಹನೀಯರು ಅವರ ಜೊತೆ ನಾವುಗಳು ಅಭಿನಯಿಸುತ್ತಿರುವುದು ನಮ್ಮ ಪೂರ್ವಜನ್ಮದ ಸುಕೃತ ಎಂದೇ ಪರಿಚಯಿಸುತ್ತಿದ್ದರು ಎಂದಾಗ ವಿದ್ವಾನ್ ಸರ್ವತ್ರ ಪೂಜ್ಯತೇ ಎಂಬ ಸಂಸ್ಕೃತದ ಗಾದೆ ನೆನಪಿಗೆ ಬರುತ್ತದೆ.

ಇಷ್ಟೆಲ್ಲಾ ಅವರ ಕಾರ್ಯಸಾಧನೆಗಳ ಬಗ್ಗೆ ಹೇಳಿದರೆ, ಆವರ ವಯಕ್ತಿಕ ವಿಷಯವೊಂದನ್ನು ಹೇಳದೇ ಹೋದರೆ ದತ್ತಣ್ಣನವರ ಪರಿಚಯ ಪೂರ್ಣವಾಗುವುದಿಲ್ಲ. ಈಗ 78 ವರ್ಷದವರಾದ ದತ್ತಣ್ಣನವರು ಬ್ರಹ್ಮಚಾರಿಗಳಾಗೇ ಉಳಿದಿದ್ದಾರೆ. ಮನೆಯವರು ಅನೇಕ ಬಾರಿ ಅವರಿಗೆ ಮದುವೆ ಮಾಡಲು ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಕಡೆಗೆ. ನೀನು ಯಾರನ್ನಾದ್ರೂ ಪ್ರೀತಿ ಮಾಡಿದ್ರೆ ಹೇಳು. ನಮಗೆ ಜಾತಿಯ ಪ್ರಶ್ನೆ ಇಲ್ಲ. ಯಾವ ಹುಡುಗಿ ಆದರೂ ಪರವಾಗಿಲ್ಲ! ಎಂದು ಮುಕ್ತವಾಗಿ ಮನೆಯವರು ಕೇಳಿದ್ದರು ಎನ್ನುತ್ತಾರೆ ದತ್ತಣ. ಸರಿ ನೀವೇಕೆ ಮದುವೆ ಆಗಲಿಲ್ಲ? ಎಂದು ದತ್ತಣ್ಣ ಅವರನ್ನು ಕೇಳಿದಾಗ, ಎರಡು ಕಾರಣಕ್ಕೆ ತಾನು ಮದುವೆ ಆಗಿಲ್ಲ ಎಂದ ದತ್ತಣ್ಣ, ಒಂದು ವೃತ್ತಿ ಜೀವನ, ನಾಟಕಗಳ ನಡುವೆ ಪುರುಸೊತ್ತು ಸಿಗಲಿಲ್ಲ. ಮತ್ತೊಂದು ಮದುವೆ ಅನಿವಾರ್ಯ ಅಂತ ಅವರಿಗೆ ಅನ್ನಿಸಲೇ ಇಲ್ಲ! ಹಾಗಾಗಿ ನಾನು ಬ್ರಹ್ಮಚಾರಿಯಾಗಿಯೇ, ಸಂತೋಷವಾಗಿ ಇದ್ದೇನೆ. ನನ್ನ ನೆಮ್ಮದಿ ಹಾಳು ಮಾಡ್ಬೇಡಿ. ಈ ಸ್ವಾತಂತ್ರ್ಯವನ್ನು ನಾನು ಕಳೆದು ಕೊಳ್ಳಲು ಇಷ್ಟಪಡುವುದಿಲ್ಲ! ಎಂದು ಹೇಳಿ ಗಟ್ಟಿಯಾಗಿ ನಗುತ್ತಾರೆ.

ಒಂದೆಡೆ ಕಲಾತ್ಮಕ ಚಿತ್ರಗಳು, ಇನ್ನೊಂದೆಡೆ ಕಮರ್ಷಿಯಲ್ ಚಿತ್ರಗಳು, ಅದರ ಮಧ್ಯೆ ಹುಟ್ಟಿಕೊಂಡ ಬ್ರಿಜ್ ಚಿತ್ರಗಳು ಇವೆಲ್ಲವಕ್ಕೂ ಸರಿದೂಗಿಸಿಕೊಂಡು ಹೋಗಬಲ್ಲ ನಟನೆಂದರೆ ಅದು ದತ್ತಣ್ಣ ಎನ್ನುವುದು ನಿರ್ವಿವಾದವೇ ಸರಿ. ತಮ್ಮ ಕಾಯಕವನ್ನು ಗೌರವಿಸುವವರನ್ನು ಇಡೀ ಸಮಾಜವೇ ಗೌರವಿಸುತ್ತದೆ. ಹಾಗಾಗಿ ದತ್ತಣ್ಣನವರನ್ನು ಎಲ್ಲೆಡೆಯೂ, ಎಲ್ಲರೂ ಗೌರವಿಸುತ್ತಾರೆ. ಇಂದಿಗೂ ಅತ್ಯಂತ ಸರಳವಾಗಿ, ನಿಗರ್ವಿಯಾಗಿ, ಸಹ ನಟರುಗಳಿಗೆ ಆದರ್ಶಪ್ರಾಯರಾಗಿ ತಮ್ಮ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ, ಸಜ್ಜನಿಕೆಯ ಸಾಕಾರಮೂರ್ತಿಯಾಗಿರುವ ದತ್ತಣ್ಣ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಇಂಗ್ಲಿಷ್ ಚಿತ್ರ ನಟ ಕನ್ನಡಿಗ ಸಾಬು ದಸ್ತಗೀರ್

ಇತ್ತೀಚೆಗೆ ಭಾರತೀಯ ನಟರುಗಳು ಹಾಲಿವುಡ್ಡಿನಲ್ಲಿ ನಟಿಸಿ ಪ್ರಖ್ಯಾತವಾಗಿರುವುದು ಸಹಜವಾಗಿದೆ. ಹಾಗೆ ನೋಡಿದರೆ, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ ಮೊದಲ ಭಾರತೀಯ ನಟ ಯಾರು ಎಂದು Googleನಲ್ಲಿ ಹುಡುಕಿದರೆ, ಇಸ್ಮಾಯಿಲ್ ಮರ್ಚೆಂಟ್ ಅವರ ಹೌಸ್ ಹೋಲ್ಡರ್ನಲ್ಲಿ ನಟಿಸಿದ ಶಶಿ ಕಪೂರ್ ಅವರ ಹೆಸರು ಕಂಡು ಬರುತ್ತದೆ. ಆದರೆ, ಸ್ವಾತಂತ್ರ್ಯ ಪೂರ್ವವೇ ನಮ್ಮ ಮೈಸೂರಿನ ಮಾವುತರೊಬ್ಬರ ಮಗ 1937ರಲ್ಲಿಯೇ ಎಲಿಫೆಂಟ್ ಬಾಯ್ ಚಿತ್ರದಲ್ಲಿ ಬಾಲನಟನಾಗಿ ನಟಿಸಿ ನಂತರ ನಾಯಕನಾಗಿಯೂ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಕಂಪನ್ನು ದೇಶ ವಿದೇಶಗಳಲ್ಲಿ ಹರಡಿದ ಇಂಗ್ಲಿಷ್ ಚಿತ್ರ ನಟ, ಕನ್ನಡಿಗ ಸಾಬು ದಸ್ತಗೀರ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕ.

ಬ್ರಿಟಿಷರ ಅಧೀನದಲ್ಲಿದ್ದ ಮೈಸೂರು ಸಂಸ್ಥಾನದಲ್ಲಿ ಹುಟ್ಟಿದ ಮಾವುತನೊಬ್ಬನ ಮಗ ಸಾಬು (ಹುಟ್ಟು ಹೆಸರು ಸೆಲಾರ್ ಸಾಬು/ಕಾನೂನು ಪ್ರಕಾರ ಸಾಬು ದಸ್ತಗೀರ್) ತನ್ನ 13ನೇ ವಯಸ್ಸಿನಲ್ಲಿಯೇ ಎಲಿಫೆಂಟ್ ಬಾಯ್ ಎಂಬ ಪ್ರಸಿದ್ಧ ಇಂಗ್ಲೀಷ್ ಚಿತ್ರದಲ್ಲಿ ಬಾಲ ನಾಯಕನಾಗಿ ನಟಿಸಿದ್ದರು. ಪ್ರಖ್ಯಾತ ಇಂಗ್ಲಿಷ್ ಲೇಖಕ ರಡ್ಯಾರ್ಡ್ ಕಿಪ್ಲಿಂಗ್ ಅವರ 1894ರ ಅತ್ಯಂತ ಜನಪ್ರಿಯ ಪುಸ್ತಕ ಜಂಗಲ್ ಬುಕ್ ನಲ್ಲಿ ಬರುವ ತೂಮಾಯ್ ಆಫ್ ಎಲಿಫೆಂಟ್ಸ್ ಕತೆ ಆಧರಿಸಿದ ಈ ಚಿತ್ರ 1937ರಲ್ಲಿ, ಅಂದರೆ ಶಶಿ ಕಪೂರ್ ಇಂಗ್ಲಿಷ್ ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಕಾಲು ಶತಮಾನದ ಮೊದಲೇ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಪಡೆದಿತ್ತು.

ಹಾಲಿವುಡ್ಡಿನ ಪ್ರಸಿದ್ಧ ನಿರ್ದೇಶಕ ರೆಲ್ಟನ್ ಕೋರ್ಡಾ ಮತ್ತು ಸಾಕ್ಷಚಿತ್ರಗಳನ್ನು ತಯಾರಿಸುತ್ತಿದ್ದ ರಾಬರ್ಟ್ ಜೆ. ಪ್ಲಾಹರ್ಟಿ ಎಂಬಿಬ್ಬರು ತಮ್ಮ ಮಹತ್ವಾಕಾಂಕ್ಷಿ ಚಿತ್ರ Elephant Boy ಕುರಿತಂತೆ ವನ್ಯಜೀವಿಗಳು, ಮೈಸೂರಿನ ಅರಣ್ಯ, ಅದರ ಸುತ್ತಮುತ್ತಲಿನ ರಮ್ಯವಾದ ಪರಿಸರ, ಅಲ್ಲಿಯ ಕಾಡು ಜನರ ಜೊತೆ ಆನೆಗಳ ಸಂಬಂಧ ಇತ್ಯಾದಿಗಳ ಚಿತ್ರೀಕರಣವನ್ನು ಮೈಸೂರಿನ ಸುತ್ತಮುತ್ತಾ ಚಿತ್ರೀಕರಿಸಿಕೊಂಡಿದ್ದರು. ಅವರ ಕಥೆಗೆ ಸೂಕ್ತವಾಗುವಂತೆ ಅವರಿಗೆ ಆನೆಗಳ ಜೊತೆ ಅತ್ಯಂತ ಒಡನಾಡಿಯಾಗಿರುವ ಒಬ್ಬ ಮುಗ್ಧ ಹುಡುಗನ ಪಾತ್ರಕ್ಕೆ ಸೂಕ್ತವಾದ ಬಾಲನಟನ ಶೋಧನೆಯಲ್ಲಿರುವಾಗ ಅಂದಿನ ಮೈಸೂರಿನ ಅರಮನೆಯ ಆನೆಯ ಲಾಯದಲ್ಲಿ ಸಾಬು ದಸ್ತಗೀರ್ (ಸೆಲಾರ್ ಶೇಕ್ ಸಾಬು) ಎಂಬ ಸಣ್ಣ ವಯಸ್ಸಿನ ಹುಡುಗ ತನ್ನ ಅಲ್ಲೇ ಮಾವುತನಾಗಿ ಕೆಲಸಮಾಡುತ್ತಿದ್ದ ತನ್ನ ತಂದೆಯನ್ನು ಕೇವಲ 9 ನೇ ವಯಸ್ಸಿನಲ್ಲಿ ಕಳೆದುಕೊಂಡು ತನ್ನ ಜೀವನಕ್ಕಾಗಿ ಅದೇ ಆನೆ ಗಳು ಮತ್ತು ಕುದುರೆ ಲಾಯಗಳಲ್ಲಿ ಸೇವೆ ಸಲ್ಲಿಸುತ್ತಾ ಅಲ್ಲಿಯ ಪ್ರಾಣಿಗಳ ಜೊತೆ ಸಾಕಷ್ಟು ಪಳಗಿ ಅವುಗಳೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿದ್ದನು. ಅರಮನೆಯ ಆನೆ ಲಾಯ ನೋಡಲು ಬರುತ್ತಿದ್ದ ಪ್ರೇಕ್ಷಕರ ಎದುರು, ಆ ಪ್ರಾಣಿಗಳೊಂದಿಗೆ ಸಾಹಸಗಳನ್ನು ಮಾಡಿ ತೋರಿಸಿ ತನ್ನ ಪ್ರತಾಪವನ್ನು ಮೆರೆಯುತ್ತಿದ್ದದ್ದನ್ನು ನೋಡಿ ಆ ಇಬ್ಬರು ನಿರ್ದೇಶಕರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗಾಗಿದೆ.

ಹೇಳಿ ಕೇಳಿ ಅವರ ಚಿತ್ರ Elephant Boy ಚಿತ್ರಕಥೆಯಲ್ಲಿ ಮಾವುತನ ಮಗನೊಬ್ಬನ ಕನಸಿನ ಮತ್ತು ಸಂಘರ್ಷದ ಕುರಿತಂತೆ ಇರುವ ಕಾರಣ, ಆನೆಗಳ ಜೊತೆ ಉತ್ತಮವಾಗಿ ಪಳಗಬಲ್ಲ ಹುಡುಗನ ಅವಶ್ಯಕತೆ ಇತ್ತು. ಈ ಪಾತ್ರಕ್ಕೆ ಸಾಬೂ ಹೊರತಾಗಿ ಬೇರಾರು ಸರಿಹೊಂದಲಾರರು ಎಂದು ನಿರ್ಧರಿಸಿ, ಸಾಬು ಮತ್ತು ಅಲ್ಲಿರುವರನ್ನು ಒಪ್ಪಿಸಿ ಸಾಬು ಮತ್ತು ಅವನಿಗೆ ಸಹಾಯಕನಾಗಿ ಆವರ ಅಣ್ಣ ಹೀಗೆ ಇಬ್ಬರನ್ನೂ ಇಂಗ್ಲೇಂಡಿಗೆ ಕರೆದುಕೊಂಡು ಹೋಗಿ ಅವರಿಗೆ ಅತ್ಯುತ್ತಮವಾದ ಶಾಲಾ ಶಿಕ್ಷಣವನ್ನು ಕೊಡಿಸಲಾಯಿತು. ಇಂಗ್ಲೀಷ್ ಚಿತ್ರಗಳಲ್ಲಿ ನಟಿಸಲು ಇಂಗ್ಲೀಷ್ ಭಾಷೆ ಶಿಕ್ಷಣದ ಅಗತ್ಯತೆಯನ್ನು ಮನಗಂಡ ಸಾಬೂ ಕೂಡಾ ಇಂಗ್ಲಿಷ್ ಭಾಷೆಯನ್ನು ಶೀಘ್ರವಾಗಿ ಕಲಿತುಕೊಂಡನು. ಇಂಗ್ಲೇಂಡಿನ ಸ್ಟುಡಿಯೋದಲ್ಲಿ ಅಲ್ಲಿನ ಭಾರೀ ಗಾತ್ರದ ಆನೆಗಳ ಜೊತೆ ಅತ್ಯಂತ ವೇಗವಾಗಿ ಪಳಗಿದ ಸಾಬು ಅವುಗಳ ಜೀವದ ಗೆಳೆಯನ ರೀತಿ ಅವುಗಳ ಸೊಂಡಿಲುಗಳ ಮೇಲೆ ತೂರಾಡುತ್ತಾ, ಅದರ ಸಹಾಯದಿಂದ ಆನೆಗಳ ಮೇಲೆ ಲೀಲಾಜಾಲವಾಗಿ ಹತ್ತಿಳಿದ ದೃಶ್ಯಗಳೊಂದಿಗೆ ಮೈಸೂರಿನಲ್ಲಿ ಚಿತ್ರೀಕರಿಸಿದ ದೃಶ್ಯಗಳನ್ನು ಅತ್ಯುತ್ತಮವಾಗಿ ಸಮ್ಮಿಳಿಸಿ ತೆರೆಗೆ ಬಂದು ಚಿತ್ರ ಅತ್ಯಂತ ಸುಂದರವಾಗಿ ಮೂಡಿಬಂದಿದ್ದಲ್ಲದೇ ಎಲ್ಲಾ ಕಡೆಯಲ್ಲಿಯೂ ಭರ್ಜರಿ ಪ್ರದರ್ಶನಗೊಂಡಿತು. ಈ ಚಿತ್ರಕ್ಕೆ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯೂ ಬಂದ ನಂತರ ನಿರ್ಮಾಪಕ ಅಲೆಕ್ಸಾಂಡರ್ ಕೋರ್ಡಾ ಸಾಬುವಿಗಾಗಿಯೇ ವಿಶೇಷವಾಗಿ ದಿ ಡ್ರಮ್ ನಿರ್ಮಿಸಿದರು. 1938ರಲ್ಲಿ ಬಿಡುಗಡೆಯಾದ ಈ ಚಿತ್ರ ಸಾಕಷ್ಟು ಯಶಸ್ವಿಯಾಗಿ ನಾಯಕ ಪ್ರಿನ್ಸ್ ಅಝೀಮ್ ಪಾತ್ರ ಸಾಬು ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತು. ಈ ಚಿತ್ರದ ಪ್ರಚಾರಕ್ಕಾಗಿ ಅಮೇರಿಕಾಕ್ಕೆ ಪ್ರವಾಸ ಕರೆದೊಯ್ದು ಸಾಬುವಿನ ಮೊದಲ ಚಿತ್ರ ಯಶಸ್ವಿಯಾಗಿದ್ದು ಅದೃಷ್ಟದಿಂದಲ್ಲ. ಅತನಿಗೆ ಪ್ರತಿಭೆಯಿದೆ ಎಂಬುದನ್ನು ಸಾಬೀತುಪಡಿಸಿದರು. ಟಾರ್ಜನ್ ಜಂಗಲ್ ಸಿನೆಮಾಗಳ ಸಮಾನಾಂತರ ಯಶಸ್ಸಿನೊಂದಿಗೆ, ಹಾಲಿವುಡ್ಡಿನ ಮಂದಿಯೂ ಈ ಹೊಸ ಹುಡುಗನ ಪ್ರತಿಭೆಯನ್ನು ತೀವ್ರ ಕುತೂಹಲದಿಂದ ಗಮನಿಸತೊಡಗಿದರು.

1940ರಲ್ಲಿ ಕೊರ್ಡಾ ಅವರ ಮೂರನೆಯ ಚಿತ್ರವಾದ ತೀಫ್ ಆಫ್ ಬಗ್ದಾದ್ನಲ್ಲಿ ಸಾಬು, ಅಬು ದ ಥೀಫ್ ಪಾತ್ರವನ್ನು ನಿರ್ವಹಿಸುತ್ತಾನೆ ಮತ್ತು 1942ರಲ್ಲಿ ಜಂಗಲ್ ಬುಕ್ ಮೋಗ್ಲಿ ಚಿತ್ರದಲ್ಲಿ ತೋಳಗಳ ಜೊತೆ ಬೆಳೆದ ಹುಡುಗ ಮೊಗ್ಲಿ ಪಾತ್ರವನ್ನು ಸಾಬು ಅತ್ಯತ್ತಮವಾಗಿ ನಿರ್ವಹಿಸಿದ ಚಿತ್ರ ಅತ್ಯಂತ ಯಶಸ್ವಿಯಾಗುತ್ತದೆ. ಅದೇ ವರ್ಷ ವಿಶ್ವ ಜನಪ್ರಿಯ ಅರೇಬಿಯನ್ ನೈಟ್ಸ್ ಬಿಡುಗಡೆಯಾಗಿ ಅದರಲ್ಲಿ ಸಾಬು ಅಲಿ ಬಿನ್ ಅಲಿ ಪಾತ್ರವಹಿಸಿದರೆ, 1943ರ ವೈಟ್ ಸ್ಯಾವೇಜ್’ ಚಿತ್ರದಲ್ಲಿ ಒರಾಂಗೋ ಪಾತ್ರ, 1944ರ ಕೋಬ್ರಾ ವುಮನ್ ಕೂಡಾ ಸಾಬುವಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿತು.ಇದರಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, ಆ ಮೂರೂ ಚಿತ್ರಗಳು ಹಾಲಿವುಡ್ ನಲ್ಲಿ ತಯಾರಾಗಿದ್ದ ಚಿತ್ರಗಳಾಗಿದ್ದವು.

ಹೀಗೆ ಒಂದಾದ ಮೇಲೊಂದು ಹಾಲಿವುಡ್ ಚಿತ್ರಗಳು ಯಶಸ್ವಿಯಾಗುತ್ತಿದ್ದಂತೆ ಸಾಬು ಇಂಗ್ಲೇಂಡಿನಿಂದ ಅಮೇರಿಕಾಕ್ಕೆ 1944ರಲ್ಲಿ ವಲಸೆಗೊಂಡು ಕೇವಲ 20ನೇ ವರ್ಷಕ್ಕೇ ಅಮೇರಿಕಾದ ಪ್ರಜೆಗಳಾಗುತ್ತಾರೆ. ಅದೇ ಸಮಯಕ್ಕೆ ಎರಡನೇ ಮಹಾಯುದ್ಧ ಆರಂಭವಾಗಿ ಸಾಬು ಅಲ್ಲಿನ ವಾಯುಪಡೆ ಸೇರಿಕೊಂಡು ಬಿ-24 ಲಿಬರೇಟರ್ ಬಾಂಬರ್ ವಿಮಾನದಲ್ಲಿ ಬಾಲ ಗನ್ನರ್ ಆಗಿ ಹಲವು ಬಾಂಬಿಂಗ್ ಹಾರಾಟಗಳಲ್ಲಿ ಭಾಗಿಯಾದರು. 307th ಬಾಂಬ್ ಗ್ರೂಪ್ಗೆ ಸೇರಿದ 307th ಬೊಂಬಾರ್ಡ್ ಮೆಂಟ್ ಸ್ಕ್ವಾಡ್ರನ್ ಸದಸ್ಯರಾಗಿದ್ದಲ್ಲದೇ, ಅಲ್ಲಿನ ಸಾಹಸಕ್ಕಾಗಿ ಡಿಸ್ಟಿಂಗ್ವಿಷ್ಡ್ ಫ್ಲೈಯಿಂಗ್ ಕ್ರಾಸ್ ಕೂಡಾ ಪಡೆಯುವ ಮೂಲಕ ಕೇವಲ ರೀಲ್ ನಲ್ಲಿ ಅಲ್ಲದೇ ರಿಯಲ್ ಆಗಿಯೂ ಸಾಹಸಿಗನಾಗಿ ಮೆರೆಯುತ್ತಾರೆ ಸಾಬು.

ಯುದ್ಧದ ಬಳಿಕ ಆರ್ಥಿಕ ಹಿಂಜರಿಕೆಯ ಕಾರಣದಿಂದ ಹಾಲಿವುಡ್ಡಿನಲ್ಲಿ ಚಲನಚಿತ್ರಗಳ ನಿರ್ಮಾಣ ಕಡಿಮೆಯಾದ ಕಾರಣ, ಕೆಲವು ಐರೋಪ್ಯ ಚಿತ್ರಗಳಲ್ಲಿ ನಟಿಸಿದರೂ ಇಂಗ್ಲೇಂಡ್ ಮತ್ತು ಹಾಲಿವುಡ್ಡಿನಲಿ ಯಶಸ್ವಿಯಾದಷ್ಟು ಯಾಶಸ್ವಿಯಾಗಲಿಲ್ಲ. ಇವೆಲ್ಲದರ ನಡುವೆಯೇ 1948ರಲ್ಲಿ ಭಾರತದಲ್ಲಿ ನಡೆದ ಜಿಮ್ ಕಾರ್ಬೆಟ್ ಅವರ ಅನುಭವದ ಮ್ಯಾನ್ ಈಟರ್ ಆಫ್ ಕುಮಾವ್ ಚಿತ್ರದಲ್ಲಿ ಸಾಬು ನಾರಾಯಣನ ಪಾತ್ರ ವಹಿಸಿ ಅದು ತಕ್ಕ ಮಟ್ಟಿಗೆ ಯಶಸ್ವಿಯಾಗುತ್ತದೆ.

ಹೀಗೆ ಚಿತ್ರೀಕರಣದ ಸಮಯದಲ್ಲಿಯೇ ಭೇಟಿಯಾದ ಸಹ ನಟಿ ಮರ್ಲಿನ್ ಕೂಪರ್ ಎಂಬಾಕೆಯನ್ನು ಮದುವೆಯಾಗುತ್ತಾರೆ. ಅವರ ತುಂಬು ಸಂಸಾರದ ಫಲವಾಗಿ ಒಬ್ಬ ಮಗ ಮತ್ತು ಮಗಳ ತಂದೆಯಾಗುತ್ತಾರೆ. 50ರ ದಶಕದ ಮಧ್ಯಭಾಗದ ಹೊತ್ತಿಗೆ ಸಾಬು ಅವರ ವೃತ್ತಿಜೀವನವು ಅಳಿವಿನಂಚಿಗೆ ಸಿಕ್ಕಿ ಅವಕಾಶಗಳು ಎಲ್ಲಿ ಸಿಗಬಹುದು ಎಂಬುದನ್ನು ಹುಡುಕಲಾರಂಭಿಸುತ್ತಾರೆ.ಕಡಿಮೆ-ಬಜೆಟ್ಟಿನ ಯುರೋಪ್ ಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ನಟಿಸುವ ಅವಕಾಶಗಳೂ ಸಿಗದಿದ್ದಾಗ ಬಹಳವಾಗಿ ಹತಾಶಗೊಂಡಿದ್ದರು. ಇವೆಲ್ಲವುಗಳ ಮಧ್ಯೆ ಸಾಬು ವಿರುದ್ಧದ ಅಹಿತಕರ ನಾಗರಿಕ ಮತ್ತು ಪಿತೃತ್ವ ಕುರಿತಾಗಿ ಹೂಡಲಾದ ಮೊಕ್ಕದ್ದಮೆಗಳು ಸಾಬೂವಿನ ಜೀವನವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಹಾಗೂ ಹೀಗೂ 1963 ರಲ್ಲಿ ರಾಂಪೇಜ್ ಬಿಡುಗಡೆಯಾಗುತ್ತದೆ. 1963ರಲ್ಲಿ ಡಿಸ್ನಿಯ ಎ ಟೈಗರ್ ವಾಕ್ಸ್ ಚಿತ್ರದ ಚಿತ್ರೀಕರಣ ಮುಗಿದಿದ್ದ ಸಮಯದಲ್ಲಿಯೇ. ಡಿಸೆಂಬರ್ 2, 1963 ರಂದು ದಕ್ಷಿಣ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ತಮ್ಮ 39 ನೇ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಸಾಬು ನಿಧನರಾಗುತ್ತಾರೆ. ಅವರನ್ನು ಹಾಲಿವುಡ್ ಬೆಟ್ಟದ ಫಾರೆಸ್ಟ್ ಲಾನ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಅವರ ನಿಧನರಾದ ನಂತರ ಡಿಸ್ನಿಯ ಎ ಟೈಗರ್ ವಾಕ್ಸ್ ಬಿಡುಗಡೆಯಾಗಿ ಉತ್ತಮವಾದ ವಿಮರ್ಶೆಗಳೊಂದಿಗೆ ಯಶಸ್ವಿಯಾಗುತ್ತದೆ.

ಮುಂದೆ ಅವರ ಮಗ ಪಾಲ್ ಸಾಬು ಗೀತರಚನೆಕಾರನಾಗಿ ಪ್ರಸಿದ್ಧಿಯಾಗಿ ಸಾಬು ಎಂಬ ರಾಕ್ ಬ್ಯಾಂಡ್ ಒಂದನ್ನು ನಡೆಸಿಕೊಂಡು ಹೋಗುತ್ತಿರುತ್ತಾನೆ, 2001 ರಲ್ಲಿ ನಿಧನರಾದ ಅವರ ಮಗಳು ಜಾಸ್ಮಿನ್ ಸಾಬು, ಪ್ರಸಿದ್ಧ ಕುದುರೆ ತರಬೇತುದಾರಳಾಘಿದ್ದು, ಅನೇಕ ಚಿತ್ರಗಳಲ್ಲಿ ಆಕೆಯ ಕೌಶಲ್ಯಗಳನ್ನು ಬಳಸಿಕೊಳ್ಳಗಾಗಿದೆ.

ಒಟ್ಟು 23 ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿ ಸುಪ್ರಸಿದ್ಧಿಯಾಗಿದ್ದ ಸಾಬು ದಸ್ತಗೀರ್ ದುರಾದೃಷ್ಟವಷಾತ್ ಒಂದೇ ಒಂದು ಭಾರತೀಯ ಚಿತ್ರದಲ್ಲಿ ನಟಿಸಲು ಅವಕಾಶವೇ ಸಿಗಲಿಲ್ಲ 1957ರಲ್ಲಿ ಮೆಹಬೂಬ್ ಖಾನ್ ಅವರ ಪ್ರಖ್ಯಾತ ಮದರ್ ಇಂಡಿಯಾ ಚಿತ್ರಕ್ಕೆ ಮೊದಲು ಸಾಬು ಅವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಅವರಿಗೆ ವರ್ಕ್ ಪರ್ಮೀಟ್ ಸಿಗದ ಕಾರಣ ಭಾರತಕ್ಕೆ ಬಂದು ನಟಿಸಲಾಗಲಿಲ್ಲವಾದ್ದರಿಂದ ಆ ಪಾತ್ರಕ್ಕೆ ದಿಲೀಪ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡರು. ಆ ಚಿತ್ರ ಅಂದಿನ ಕಾಲದಲ್ಲಿಯೇ ಅತ್ಯಂತ ಯಶಸ್ವಿಯಾಗಿ ದಿನ ಬೆಳಗಾಗುವುದರಲ್ಲಿಯೇ ಯೂಸೂಫ್ ಖಾನ್ ದಿಲೀಪ್ ಕುಮಾರ್ ಎಂಬ ಹೆಸರಿನಲ್ಲಿ ಹಿಂದೀ ಚಿತ್ರರಂಗದ ಧೃವತಾರೆ ಎನಿಸಿಕೊಳ್ಳುವಷ್ಟು ಖ್ಯಾತಿಯನ್ನು ಪಡೆಯುತ್ತಾರೆ.

ಜನವರಿ 27, 1924ರಲ್ಲಿ ಮೈಸೂರಿನ ಕರಪುರ ಎಂಬಲ್ಲಿ ಮಾವುತನ ಮಗನಾಗಿ ಜನಿಸಿದ ಸಾಬು, ತನ್ನ ಸಾಹಸಮಯ ಸಾಮರ್ಥ್ಯ ಮತ್ತು ಅದೃಷ್ಟದ ಬಲದಿಂದಾಗಿ ವಿದೇಶಕ್ಕೆ ಹೋಗಿ ಯಶಸ್ವಿ ನಟನಾಗಿ 39 ವರ್ಷಕ್ಕೇ ಕಾಲವಾದರೂ 1940 ಮತ್ತು 1950 ರ ದಶಕದದಲ್ಲಿ ಅವರು ಹಾಲಿವುಡ್‌ನ ಶ್ರೀಮಂತ ತಾರೆಗಳಲ್ಲಿ ಒಬ್ಬರಾಗಿದ್ದರು. ಬಿಳಿ ನಟರು ಹೆಚ್ಚಾಗಿ ಏಷ್ಯನ್ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಯುಗದಲ್ಲಿ, ಅವರ ಮೈಕಟ್ಟು ಮಾತ್ರವಲ್ಲದೆ ಅವರ ನೈಸರ್ಗಿಕ ನಟನಾ ಸಾಮರ್ಥ್ಯದಿಂದ ಪ್ರಸಿದ್ಧಿ ಪಡೆದ್ದಲ್ಲದೇ, ಅಂದಿನ ಖ್ಯಾತ ನಟರುಗಳಾಗಿದ್ದ ಜೇಮ್ಸ್ ಸ್ಟೀವರ್ಟ್ ಮತ್ತು ರೊನಾಲ್ಡ್ ರೇಗನ್ (ಅಮೇರಿಕಾದ ಮಾಜೀ ಅಧ್ಯಕ್ಷರು) ಸೇರಿದಂತೆ ಅನೇಕ ಹಾಲಿವುಡ್ ನಟರಿಗೆ ಸರಿಸಮನಾಗಿ ಅಭಿನಯಿಸುವ ಮೂಲಕ ಕನ್ನಡಿಗನಾಗಿ ಕನ್ನಡದ ಕಂಪನ್ನು ವಿದೇಶಗಳಲ್ಲಿಯೂ ಅತ್ಯಂತ ಯಶ‍ಸ್ವಿಯಾಗಿ ಪಸರಿಸಿದ ಸಾಬು ದಸ್ತಗೀರ್ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?

ಫೀಲ್ಡ್ ಮಾರ್ಷಲ್,  ಕೆ.ಎಂ.ಕಾರ್ಯಪ್ಪ

ಬ್ರಿಟಿಷರು ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆದು ಎರಡು ದೇಶಗಳಾಗಿ ಮಾಡಿ ಹೋದ ನಂತರ ಸ್ವಾತಂತ್ರ್ಯ ಭಾರತದ ಮೊತ್ತ ಮೊದಲ ಪ್ರಧಾನಿಯಾಗಿ ನೆಹರು ಅಧಿಕಾರ ವಹಿಸಿಕೊಂಡಿದ್ದರು. ನಮ್ಮ ದೇಶಕ್ಕಾಗಿ ಸೂಕ್ತವಾದ ರಕ್ಷಣಾ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ನಮ್ಮ ಸೈನ್ಯಕ್ಕೆ ಅತ್ಯುತ್ತಮ ಭಾರತೀಯ ಕಮಾಂಡರ್ ಮತ್ತು ಅತ್ಯಂತ ಅನುಭವಿ ವ್ಯಕ್ತಿಯನ್ನು ಸೇನಾ ಮುಖ್ಯಸ್ಥರಾಗಿ ಆಯ್ಕೆ ಮಾಡಲು ಬಯಸಿತ್ತು. ಆದರೆ ನೆಹರು ಅವರಿಗೆ ಇದ್ದಕ್ಕಿಂದ್ದಂತೆಯೇ ಜಗತ್ಪ್ರಸಿದ್ದ ನಾಯಕನಾಗುವ ಮತ್ತು ಭಾರತ ಅಹಿಂಸಾಪ್ರಿಯ ದೇಶ ಎಂದು ತೋರಿಸುವ ಉಮ್ಮೇದು. ಹಾಗಾಗಿ ನಮ್ಮ ದೇಶಕ್ಕೆ ಯಾವುದೇ ಶತ್ರುವಿನ ಭಯವೇ ಇಲ್ಲದ ಕಾರಣ, ನಮಗೆ ಸೈನ್ಯವೇ ಅವಶ್ಯವಿಲ್ಲ ಎಂದಿದ್ದರು. ಆದರೆ ಅಲ್ಲಿದ್ದವರು ಸರಿಯಾಗಿ ತಿಳಿ ಹೇಳಿದ ನಂತರ ಯಾರನ್ನೂ ಸಮಾಲೋಚಿಸದೇ ಯಾವ ಬ್ರಿಟೀಷರ ವಿರುದ್ಧ ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವೋ ಅಂತಹ ಬ್ರಿಟಿಷ್ ವ್ಯಕ್ತಿಯಾಗಿದ್ದ ಜನರಲ್ ರಾಬ್ ಲಾಕ್‌ಹಾರ್ಟ್ ಅವರನ್ನು ಭಾರತೀಯ ಸೇನೆಯ ಮುಖ್ಯಸ್ಥರಾಗಿ ನೇಮಕ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.

ನೆಹರು ಅವರ ನಂಬಿಕೆಯನ್ನು ತೆಲೆಕೆಳಗು ಮಾಡಿದ ಪಾಪಿ ಪಾಕೀಸ್ಥಾನ ಕಾಶ್ಮೀರದ ವಿಷಯ ಮುಂದಿಟ್ಟುಕೊಂಡು ಭಾರತದ ಮೇಲೆ ದಂಡೆತ್ತಿ ಬಂದಾಗ ಭಾರತ ಸೇನೆ ಒಬ್ಬ ಮಹಾನ್ ನಾಯಕತ್ವದಲ್ಲಿ ಪಾಪೀಸ್ಥಾನವನ್ನು ಬಡಿದು ಹಾಕಿ ಕಾಶ್ಮೀರವನ್ನು ಉಳಿಸಿಕೊಂಡಿದ್ದು ಈಗ ಇತಿಹಾಸ. ಆದಾದ ನಂತರ ನೆಹರು ಮತ್ತು ರಾಬ್ ಲಾಕ್‌ಹಾರ್ಟ್ ಅವರ ನಡುವಿನೆ ಸಂಬಂಧ ಹದಗೆಟ್ಟ ಕಾರಣ ಲಾಕ್ ಹಾರ್ಟ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಮತ್ತೆ ಸೇನಾ ಮುಖ್ಯಸ್ಥರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯ ಸಂದರ್ಭ ಒದಗಿ ಬಂದ ಕಾರಣ ತುರ್ತು ಸಭೆಯೊಂದನ್ನು ಕರೆಯಲಾಯಿತು. ಆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನೆಹರು, ಜನರಲ್ ಲಾಕ್‌ಹಾರ್ಟ್ ಸರಿ ಸಮಾನರಾದಂತಹ ಒಬ್ಬ ಸಮರ್ಥ ಮತ್ತು ಅನುಭವಿ ಸೇನಾಧಿಕಾರಿ ನಮ್ಮ ದೇಶದಲ್ಲಿ ಇಲ್ಲದಿರುವುದರಿಂದ ಮತ್ತೊಬ್ಬ ಬ್ರಿಟಿಷ್ ಅಧಿಕಾರಿಯನ್ನೇ ಸೇನಾ ಮುಖ್ಯಸ್ಥರನ್ನಾಗಿ ನೇಮಿಸುವುದು ಉತ್ತಮ ಎಂದು ಭಾವಿಸುತ್ತೇನೆ ಎಂದರು.

ಈ ಮಾತನ್ನು ಕೇಳಿದಾಕ್ಷಣ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ನಖಶಿಖಾಂತ ಮೈಯೆಲ್ಲಾ ಉರಿದು ಉರಿದು ಹೋಗಿ ಕೂಡಲೇ ಎದ್ದು ನೆಹರು ಅವರನ್ನುದ್ದೇಶಿಸಿ, ಸರ್, ನಮ್ಮ ದೇಶವನ್ನು ಮುನ್ನಡೆಸಲು ಸಾಕಷ್ಟು ಅನುಭವವಿರುವ ವ್ಯಕ್ತಿ ನಮ್ಮಲ್ಲಿಲ್ಲವಾದ್ದರಿಂದ ನಾವೇಕೆ ಒಬ್ಬ ಅನುಭವಿಯಾದ ಪ್ರಧಾನಿಯನ್ನು ಬ್ರಿಟನ್‌ನಿಂದ ಕರೆತರಬಾರದು? ಎಂದು ಗುಡುಗುತ್ತಾರೆ.

ಈ ಮಾತನ್ನು ಕೇಳಿ ನೆಹರು ಒಂದು ಕ್ಷಣ ಅವಕ್ಕಾದರೂ ಅದನ್ನು ತೋರಿಸಿಕೊಳ್ಳದೇ, ಸಾವರಿಸಿಕೊಂಡು ನಿಮ್ಮ ಹೆಸರು ಏನಂದಿರಿ? ಎಂದು ಕೇಳಿ ತಿಳಿದು, ನೋಡಿ.. ಮೇಜರ್ ಜನರಲ್ ನಾಥು ಸಿಂಗ್ ರಾಥೋಡ್, ಹಾಗಾದರೇ, ನೀವು ಭಾರತೀಯ ಸೇನೆಯ ಮೊದಲ ಜನರಲ್ ಆಗಲು ಸಿದ್ಧರಿದ್ದೀರಾ? ಎಂದು ಮರು ಪ್ರಶ್ನಿಸುತ್ತಾರೆ.

ಆ ಜಾಗದಲ್ಲಿ ಬೇರಾರೇ ಇದ್ದರೂ ಖಂಡಿತವಾಗಿಯೂ ಇಂತಹ ಸುವರ್ಣಾವಕಾಶವನ್ನು ಬಿಟ್ಟುಕೊಡಲು ಇಚ್ಚಿಸದೇ ಒಪ್ಪಿಕೊಂಡು ಬಿಡುತ್ತಿದ್ದರೇನೋ, ಅದರೇ, ಜನರಲ್ ನಾಥೂ ಸಿಂಗ್, ಸರ್ ನನಗಿಂತಲೂ ಸಮರ್ಥವಾದ ಬಹಳಷ್ಟು ಸೇನಾಧಿಕಾರಿಗಳು ನಮ್ಮಲ್ಲಿ ಇದ್ದಾರೆ. ಕಾಶ್ಮೀರದ ಯುದ್ಧದ ಸಮಯದಲ್ಲಿ ಸ್ವತಃ ಮುಂದೆ ನಿಂತು ಸೈನ್ಯವನ್ನು ಮುನ್ನಡೆಸಿ ಜಯವನ್ನು ತಂದಿತ್ತ ನಮ್ಮ ಹಿರಿಯ ಲೆಫ್ಟಿನೆಂಟ್ ಜನರಲ್ ಕಾರ್ಯಪ್ಪ ಅವರಿಗಿಂತ ಉತ್ತಮವಾದ ವ್ಯಕ್ತಿ ನಮ್ಮ ದೇಶವನ್ನು ಕಾಪಾಡಲು ಅಗತ್ಯವಿಲ್ಲಾ! ಎಂದು ಕಡ್ಡಿ ಮುರಿದಂತೆ ಘರ್ಜಿಸುತ್ತಾರೆ.

ಆ ಸಭೆಯಲ್ಲಿ ಅಲ್ಲಿಯವರೆಗೂ ನಿಶ್ಯಬ್ಧವಾಗಿದ್ದವರೆಲ್ಲರೂ, ಲೆಫ್ಟಿನೆಂಟ್ ಜನರಲ್ ನಾಥು ಸಿಂಗ್ ರಾಥೋಡ್ ಅವರ ಸಲಹೆಗೆ ಜೋರು ಕರತಾಡನ ಮಾಡುವ ಮೂಲಕ ತಮ್ಮ ಸಹಮತವನ್ನು ವ್ಯಕ್ತಪಡಿಸಿದ ಕಾರಣ ಒಬ್ಬಂಟಿಯಾದ ನೆಹರು, ವಿಧಿ ಇಲ್ಲದೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರನ್ನು ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿ ಆಯ್ಕೆ ಮಾಡುತ್ತಾರೆ. ನಂತರ ದೇಶದ ಪ್ರಥಮ ಮಹಾದಂಡನಾಯಕರೂ ಆಗಿದ್ದ ಹೆಮ್ಮೆಯ ಕಾರ್ಯಪ್ಪನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಪೂರ್ಣ ಹೆಸರು, ಕೊಡಂದೆರ ಮಾದಪ್ಪ ಕಾರ್ಯಪ್ಪ 1989 ಜನವರಿ 28 ರಂದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸುತ್ತಾರೆ. ಕೊಡಂದೆರ ಮನೆತನಕ್ಕೆ ಸೇರಿದ್ದ ಕೊಡವರಾದ ಮಾದಪ್ಪನವರು ಮತ್ತು ಕಾವೇರಿ ದಂಪತಿಗಳ ಪುತ್ರನಾಗಿ ಜನಿಸುತ್ತಾರೆ. ತಂದೆ ಕಾವೇರಿ ಕಂದಾಯ ಇಲಾಖೆಯಲ್ಲಿದ್ದು ಬಹಳ ಶಿಸ್ತಿನ ವ್ಯಕ್ತಿಯಾಗಿರುತ್ತಾರೆ. ಮನೆಯಲ್ಲಿ ಎಲ್ಲರೂ ಕಾರ್ಯಪ್ಪನವರನ್ನು ಮುದ್ದಿನಿಂದ ಚಿಮ್ಮ ಎಂದೇ ಕರೆಯುತ್ತಿರುತ್ತಾರೆ. ಕಾರ್ಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಗಿ ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸುತ್ತಾರೆ. ಓದಿನ ಜೊತೆ ಆಟದಲ್ಲೂ ಮುಂದಿದ್ದ ಕಾರ್ಯಪ್ಪನವರು, ಕೊಡವರ ಸಾಂಪ್ರದಾಯಕ ಆಟವಾದ ಹಾಕಿ ಮತ್ತು ಟೆನ್ನಿಸ್ ನಲ್ಲಿ ಪ್ರಬುದ್ಧ ಆಟಗಾರರಾಗಿತ್ತಾರೆ.

ತಮ್ಮ ಶಿಕ್ಷಣ ಮುಗಿದ ನಂತರ ಬಹಳಷ್ಟು ಕೊಡವರಂತೆ ಇವರೂ ಸಹಾ ಸೇನೆಯ ಕಡೆ ಆಕರ್ಷಿತರಾಗಿ ಅನೇಕ ಕಠಿಣ ಪರೀಕ್ಷೆಗಳನ್ನು ಮುಗಿಸಿ, ಕಠಿಣತರವಾದ ತರಬೇತಿಯನ್ನು ಪಡೆದು ಮುಂಬಯಿಯಲ್ಲಿದ್ದ ಬ್ರಿಟಿಷ್ ಸೈನ್ಯದ 2ನೇ ಬೆಟ್ಯಾಲಿಯನ್ 88ನೇ ಕರ್ನಾಟಕ (ಕೊಡಗು) ಪದಾತಿ ದಳಕ್ಕೆ ನಿಯುಕ್ತರಾಗುತ್ತಾರೆ. ಅದಾಗಿ ಮೂರು ತಿಂಗಳ ನಂತರ 2/125ನೇಪಿಯರ್ ರೈಫ್‌ಲ್ಸ್ (ಸ್ವಾತಂತ್ರ್ಯಾನಂತರ 5ನೇ ರಜಪುತಾನ ರೈಫ್‌ಲ್ಸ್)ಗೆ ವರ್ಗಾವಣೆಯಾಗಿ, ಮೆಸೊಪೊಟಾಮಿಯಾಗೆ(ಈಗಿನ ಇರಾಕ್)ದಲ್ಲಿ ಸುಮಾರು ಎರಡು ವರ್ಷಗಳ ಅಲ್ಲಿನ ಬಂಡುಗೋರರನ್ನು ಬಗ್ಗು ಬಡಿದು ಭಾರತಕ್ಕೆ ಮರಳಿ ಬಂದು, ವಾಯವ್ಯ ಗಡಿ ಪ್ರದೇಶದ ಅಫಘಾನಿಸ್ಥಾನದ ಸರಹದ್ದಿನ ವಜೀರಿಸ್ತಾನದಲ್ಲಿದ್ದ (ಈಗ ಪಾಕಿಸ್ತಾನದಲ್ಲಿದೆ) ವೇಲ್ಸ್ ರಾಜಕುಮಾರನ ಸ್ವಂತ 7ನೇ ಡೊಗ್ರಾ ದಳದಲ್ಲಿ ಸೈನ್ಯದ ಸಕ್ರಿಯ ಸೇವೆಯನ್ನು ಮುಂದುವರೆಸಿದರು.

ಮರುಭೂಮಿಯಂತಹ ವಿಪರೀತ ಉಷ್ಣವಿರುವ ಪ್ರದೇಶದಲ್ಲಿಯೂ ದೂರದರ್ಶಕ ಯಂತ್ರವಿಲ್ಲದಿರುವ ಬಂದೂಕಿನಿಂದಲೇ(non-telescopic rifles)ಶತ್ರುವಿನ ಹಣೆಗೆ ಗುಂಡಿಕ್ಕುವ ಸಾಮರ್ಥ್ಯವಿದ್ದ ಪಠಾಣರ ವಿರುದ್ಧ ಹೋರಾಡಿದ್ದಲ್ಲದೇ ಅಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಜಯವನ್ನು ತಂದಿತ್ತ ಕಾರ್ಯಪ್ಪನವರ ಶೌರ್ಯ ಬ್ರಿಟಿಶ್ ಸೈನ್ಯಾಧಿಕಾರಿಗಳಿಗೆ ಮೆಚ್ಚುಗೆಯಾಗಿ ಅವರನ್ನು ಫ್ರಾಂಟೀಯರ್ ಬ್ರಿಗೆಡ್ ಗುಂಪಿನ ಬ್ರಿಗೆಡಿಯರ್ ಆಗಿ ಬಡ್ತಿ ದೊರೆಯುತ್ತದೆ. ಅದೇ ಸಮಯದಲ್ಲಿಯೇ, ಮುಂದೆ ಪಾಕೀಸ್ಥಾನ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು ರಾಷ್ಟ್ರಪತಿಗಳೂ ಆಗಿ ಹೋದ, ಕರ್ನಲ್ ಅಯೂಬ್ ಖಾನ್ ಕಾರ್ಯಪ್ಪನವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಇವರ ಧೈರ್ಯ, ಶೌರ್ಯ ಮತ್ತು ಕಾರ್ಯತತ್ಪರತೆಗಳನ್ನು ಮೆಚ್ಚಿದ್ದ ಬ್ರಿಟೀಶ್ ಸೈನ್ಯ ಕಾರ್ಯಪ್ಪನವರಿಗೆ ಸೈನ್ಯದ ಒಂದು ತುಕಡಿಯನ್ನೇ ಇವರ ಅಧೀನಕ್ಕೊಪ್ಪಿಸಿ, ಇರಾಕ್, ಸಿರಿಯಾ, ಇರಾನ್ ಬರ್ಮಾ ನಂತರ ವಝಿರಿಸ್ತಾನದಲ್ಲಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.

ಭಾರತ ಪಾಕೀಸ್ಥಾನದ ವಿಭಜನೆಯ ಸಮಯದಲ್ಲಿ ಕಾರಿಯಪ್ಪನವರು ಭಾರತದ ಸೈನ್ಯ ವಿಭಜನೆ ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಅತ್ಯಂತ ಸಂಯಮತೆಯಿಂದ ಎರಡೂ ದೇಶಗಳೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಸ್ವಾತಂತ್ರ್ಯಾನಂತರ ಕಾರ್ಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು. 1947ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯಾಗಿ ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂಪಡೆಯುವ ಮೂಲಕ ಲೆಹ್‌ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟಿದ್ದರು. ಆದಾದ ನಂತರ ಮೇಜರ್ ಜನರಲ್ ಆಗಿ ಬಡ್ತಿಯನ್ನು ಪಡೆದ ಕಾರ್ಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕ(Commander-in-Chief) ಕೂಡ ಆಗಿದ್ದರು. ಹೀಗೆ ಸೈನ್ಯದಲ್ಲಿ ಹಂತ ಹಂತವಾಗಿ ವಿವಿಧ ಹುದ್ದೆಗಳನ್ನು ಏರುತ್ತಾ ಸೈನ್ಯದ ಮಹಾದಂಡನಾಯಕರಾಗಿ ಒಟ್ಟು 29 ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತರಾದರು.

ಸೈನ್ಯದಿಂದ ನಿವೃತ್ತರಾದ ಬಳಿಕ ಕೆಲಕಾಲ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ದೇಶಗಳ ಹೈ ಕಮಿಶನರ್ ಕೂಡಾ ಆಗಿದ್ದಲ್ಲದೇ ತಮ್ಮ ಅನುಭವದಿಂದಾಗಿ ಅನೇಕ ದೇಶಗಳ ಸೈನ್ಯಗಳ ಪುನಾರಚನೆಯಲ್ಲಿ ನೇತೃತ್ವವಹಿಸುವ ಮೂಲಕ. ಪ್ರಪಂಚವನ್ನೆಲ್ಲಾ ಸುತ್ತಿ ಬಂದರೂ ಕಾರ್ಯಪ್ಪನವರು ತಮ್ಮನ್ನು ಸದಾಕಾಲವೂ ಸೈನಿಕನೆಂದೇ ಗುರುತಿಸಿ ಕೊಳ್ಳುತ್ತಿದ್ದಿದ್ದಲ್ಲದೇ ಅದರ ಪ್ರತೀಕವಾಗಿ ಅವರ ಮನೆಯಲ್ಲಿ ಭಾರತೀಯ ಸೈನಿಕನೊಬ್ಬನ ಸಣ್ಣ ಮೂರ್ತಿಯನ್ನು ಇಟ್ಟಿಕೊಂಡಿದ್ದರು. ನಿವೃತ್ತರಾದ ನಂತರವೂ 1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಹೋಗಿ ಸೈನಿಕರೊಂದಿಗೆ ಮಾತುಕತೆ ನಡೆಸಿ, ಅವರ ಮನಃಸ್ಥೈರ್ಯವನ್ನು ಹೆಚ್ಚಿಸಿ ಹುರುದುಂಬಿಸಿ ಬಂದಿದ್ದರು.

ನೋಡಲು ಎತ್ತರದ ಅಜಾನುಬಾಹುವಾಗಿ ಬಹಳ ಕಠೋರದ ಮನುಷ್ಯ ಎನಿಸಿದರೂ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು ಮತ್ತು ಮತ್ತೊಬ್ಬರ ಕಷ್ಟಕ್ಕೆ ಸಹಾಯ ಹಸ್ತ ಚಾಚುತ್ತಿದ್ದರು ಎನ್ನುವುದಕ್ಕೆ ಈ ಪ್ರಸಂಗವನ್ನು ಹೇಳಲೇ ಬೇಕು. ಸೈನ್ಯಾಧಿಕಾರಿಯಾಗಿ ವಿದೇಶದಲ್ಲಿ ಸಂಚರಿಸುತ್ತಿದ್ದ ಮಾರ್ಗದ ಬದಿಯುದ್ದಕ್ಕೂ ಪಠಾಣ ಹೆಂಗಸರು ನೀರಿನ ಬಿಂದಿಗೆಗಳನ್ನಿರಿಸಿಕೊಂಡು ನಿಂತಿರುವದನ್ನು ನೋಡಿ, ಹೀಗೇಕೆಂದು ವಿಚಾರಿಸಿದಾಗ, ಹತ್ತಾರು ಮೈಲುಗಟ್ಟಲೆ ದೂರದಿಂದ ಆ ಸ್ತ್ರೀಯರು ತಮ್ಮ ಮನೆಗಳಿಗೆ ನೀರು ತರುತ್ತಿದ್ದಾರೆಂಬ ವಿಷಯ ತಿಳಿದ ಕೂಡಲೇ, ತಮ್ಮ ಸೈನಿಕರ ಸಹಾಯದಿಂದ ಆ ಬುಡಕಟ್ಟು ಜನರ ಊರಿನ ಸಮೀಪದಲ್ಲೇ ಬಾವಿಯೊಂದನ್ನು ಸಂಜೆಯಾಗುವದರೊಳಗೆ ತೋಡಿಸಿಕೊಡುವ ಮೂಲಕ ಆ ಹೆಂಗಸರನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಈ ವಿಷಯ ಅಲ್ಲಿನ ಫಕೀರನಿಗೆ ಗೊತ್ತಾಗಿ, ತನ್ನ ಸಹಚರರೊಂದಿಗೆ ಕಾರ್ಯಪ್ಪನವರ ಬಳಿ ಬಂದು, ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು, ಖಲೀಫಾ! ಎಂದು ಉದ್ಘೋಷಿಸಿದ್ದರಂತೆ.

ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆಂದು ತಮ್ಮ ನೇತೃತ್ವದಲ್ಲಿ ಭಾರತೀಯ ಭೂತಪೂರ್ವ ಸೈನಿಕ ಸಂಘವನ್ನು (Indian Ex-services League) ಮತ್ತೊಬ್ಬ ಕನ್ನಡಿಗ ಜನರಲ್ ತಿಮ್ಮಯ್ಯನವರೊಡನೆ ಸೇರಿ ಸ್ಥಾಪಿಸಿ, ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ ಎಂದು ಸರ್ಕಾರ್ವನ್ನು ಎಚ್ಚರಿಸಿದ್ದಲ್ಲದೇ, ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ ಎಂಬ ಭರವಸೆ ಸೈನಿಕನಿಗೆ ಬರಬೇಕು ಎನ್ನುವಂಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು. ಈ ಸಂಘಕ್ಕಾಗಿ ತಮ್ಮ ಸ್ನೇಹಿತರ ನೆರವಿನಿಂದ ಹಣ ಸಂಗ್ರಹ ಮಾಡಿದ್ದಲ್ಲದೇ, ಪಾಟಿಯಾಲದ ಮಹಾರಾಜರು ಅವರಿಗೆ ದಾನವಿತ್ತಿದ್ದ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದ್ದರು.

ತಮ್ಮ ಇಳೀ ವಯಸ್ಸಿನ್ಲ್ಲಿ ಸಾರ್ವಜನಿಕ ಸೇವೆಯಿಂದ ಸಂಪೂರ್ಣವಾಗಿ ನಿವೃತ್ತರಾದ ನಂತರ ಮಡಿಕೇರಿಯಲ್ಲಿ ತಮ್ಮ ಸ್ವಂತ ಮನೆ ರೋಶನಾರಾದಲ್ಲಿ ವಾಸಿಸುತ್ತಾ, ಆಗ್ಗಿಂದ್ದಾಗಿ ಚಿಕಿತ್ಸೆಗೆಂದು ಬೆಂಗಳೂರಿನಲ್ಲಿದ್ದ ಕಮಾಂಡೋ ಆಸ್ಪತ್ರೆಗೆ ಬಂದಘೀಗಿ ಮಾಡುತ್ತಿದ್ದರು. ತಮ್ಮ ವಯೋಸಜವಾಗಿ 1993 ಮೇ 15ರ ಬೆಳಿಗ್ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಸ್ವರ್ಗಸ್ಥರಾದರು. ಸಾಮಾನ್ಯ ಸೈನಿಕನಾಗಿ ಸೇವೆ ಅರಂಭಿಸಿ, ಹಂತ ಹಂತವಾಗಿ ತನ್ನ ಸಾಮರ್ಥ್ಯದ ಮೂಲಕ ವಿವಿಧ ಹುದ್ದೆಗಳನ್ನೇರಿ ಅಂತಿಮವಾಗಿ ಭಾರತದ ಸೇನೆಯ ಮಹಾದಂಡನಾಯಕನಾಗಿ ಸೇವೆ ಸಲ್ಲಿಸಿದ, ದೇಶವಿದೇಶಗಳಲ್ಲಿ ಕರ್ನಾಟಕದ ಗರಿಮೆಯನ್ನು ಹೆಚ್ಚಿಸಿದ ಕನ್ನಡದ ಹೆಮ್ಮೆಯ ಕುವರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?

ಕನ್ನಡ ಚಲನಚಿತ್ರದ ಮಾಂತ್ರಿಕ ಬಿ. ವಿಠ್ಠಲಾಚಾರ್ಯ

ಇವತ್ತಿನ ನಮ್ಮ ಕನ್ನಡದ ಕಲಿಗಳು ಕಥಾನಾಯಕರನ್ನು ಹೇಗೆ ಪರಿಚರಿಸಿಕೊಡುವುದು ಎಂಬ ಗೊಂದಲ ನನ್ನ ಮನಸ್ಸಿನಲ್ಲಿ ಮೂಡುತ್ತಿದೆ. ಇವರು ತಮ್ಮ ಜೀವನ ಆರಂಭಿಸಿದ್ದು, ಕೂಲೀ ಕಾರ್ಮಿಕನಾಗಿ ನಂತರ ಹೊಟೇಲ್ ಮಾಲಿಕ, ತದನಂತರ ಸ್ವಾತಂತ್ರ್ಯ ಹೋರಾಟಗಾರ, ಆನಂತರ ಚಲನಚಿತ್ರ ಪ್ರದರ್ಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ಹೀಗೆ ಹಿಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಜನರ ಮನವನ್ನು ಸೂರೆಗೊಂಡ ಅಪ್ರತಿಮ ಛಲಗಾರ ಬಿ. ವಿಠಲಾಚಾರ್ಯರು.

ವಿಠಲಾಚಾರ್ಯರು ಎಂದರೆ ನಮಗೆ ಥಟ್ ಅಂತಾ ನೆನಪಾಗೋದೇ ಪೌರಾಣಿಕ ಇಲ್ಲವೇ ಕ್ರಾಂತಿಕಾರಿ ಸಿನಿಮಾಗಳೇ. ಇಂದಿನ ಕಾಲದಲ್ಲಿ ಗ್ರಾಫಿಕ್ ತಂತ್ರಜ್ಞಾನ ಬಳಸಿಕೊಂಡು ಯಾವುದೇ ರೀತಿಯ ಎಫೆಕ್ಟ್ಗಳನ್ನು ಸುಲಭವಾಗಿ ಮಾಡಬಹುದು. ಅದ್ಧೂರಿಯ ಯುದ್ದ ಭೂಮಿಯ ಚಿತ್ರೀಕರಣವನ್ನು ಮಾಡದಯೇ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕುಳಿತು ಗ್ರಾಫಿಕ್ಸ್ ಸಹಾಯದಿಂದ ಸುಲಭವಾಗಿ ತಯಾರಿಸಿಬಿಡಬಹುದು. ಈ ರೀತಿಯ ಯಾವುದೇ ತಂತ್ರಜ್ಞಾನವೂ ಇಲ್ಲದಿದ್ದ 50-60ರ ದಶಕದಲ್ಲಿಯೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿ, ಚಿಕ್ಕಮಕ್ಕಳಂತೂ ಚೆಟ್ಟಿಯನ್ನೇ ಒದ್ದೆ ಮಾಡಿಕೊಳ್ಳುವಷ್ಟು ರೋಚಕವಾಗಿ ತೋರಿಸುತ್ತಿದ್ದ ಕನ್ನಡಿಗನಾಗಿದ್ದರೂ, ಅಚಾನಕ್ಕಾಕಿ ಮದ್ರಾಸಿಗೆ ಹೋಗಿ ಕಡೆಗೆ ಯಶಸ್ವೀ ತೆಲುಗು ಮತ್ತು ತಮಿಳು ಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡ ಬಿ ವಿಠಲಾಚಾರ್ಯರ ಸಿನಿಮಾ ಪಯಣ ನಿಜಕ್ಕೂ ಬಲು ರೋಚಕವಾಗಿದೆ.

ದಕ್ಷಿಣ ಕರ್ನಾಟಕದ ದೇವಾಲಯಗಳ ನಗರೀ ಎಂದೇ ಖ್ಯಾತವಾಗಿರುವ ಉಡುಪಿಯ ಆಯುರ್ವೇದ ವೈದ್ಯರೊಬ್ಬರ ಮಗನಾಗಿ ಉದ್ಯಾವರದಲ್ಲಿ ಮಧ್ಯಮ ವರ್ಗದ ಸಂಪ್ರದಾಯಸ್ಥರ ಕುಟುಂಬದ ಏಳನೆಯ ಮಗುವಾಗಿ ವಿಠಲಾಚಾರ್ಯರು ಜನವರಿ 20, 1920 ರಲ್ಲಿ ಜನಿಸುತ್ತಾರೆ. ಅವರಿಗೆ ಬಾಲ್ಯದಿಂದಲೂ ಯಕ್ಷಗಾನ, ನಾಟಕ ಮತ್ತು ಬಯಲಾಟಗಳಲ್ಲಿಯೇ ಆಸಕ್ತಿಯಿದ್ದ ಕಾರಣ, ಮೂರನೇ ತರಗತಿಯವರಗೇ ಓದಿ ನಂತರ ಶಾಲೆಯನ್ನೂ ಊರನ್ನೂ ಬಿಟ್ಟು ಜೀವನದ ಪಾಠವನ್ನು ಕಲಿಯಲಾರಂಭಿಸುತ್ತಾರೆ. ಹಾಗೇ ಸಾಗುತ್ತಲೇ ಹೋಗಿ ಹಾಸನ ಜಿಲ್ಲೆಯ ಅರಸೀಕೆರೆ ತಲುಪಿ ಅಲ್ಲಿ ಕೂಲೀ ಕೆಲಸದಿಂದ ಹಿಡಿದು ನಾನಾ ರೀತಿಯ ಕೆಲಸಗಳನ್ನು ಮಾಡುತ್ತಲೇ ಕೂಡಿಟ್ಟ ಅಲ್ಪ ಸ್ವಲ್ಪ ಹಣದಿಂದ ತಮ್ಮ ಸೋದರ ಸಂಬಂಧಿಯೊಬ್ಬರು ನಡೆಸುತ್ತಿದ್ದ ಉಡುಪಿ ಹೋಟೆಲೊಂದನ್ನು ಖರೀದಿಸಿ ಅದನ್ನು ಯಶಸ್ವಿಯಾಗಿ ನಡೆಸುತ್ತಾ ಜೀವನ ಇನ್ನೇನು ನೆಲೆಗೊಂಡಿತ್ತು ಎಂದು ತಿಳಿಯುತ್ತಿರುವಾಗಲೇ ದೇಶಾದ್ಯಂತ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಭಿಯಾನ ನಡೆಯುತ್ತಿದ್ದದ್ದನ್ನು ನೋಡಿ ಅವರಲ್ಲಿದ್ದ ದೇಶಾಭಿಮಾನ ಜಾಗೃತಗೊಂಡು ಕೆಲವು ಸ್ನೇಹಿತರೊಂದಿಗೆ ಬ್ರಿಟಿಷ್ ಸರ್ಕಾರದ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿದ ಕಾರಣ, ಪೋಲೀಸರು ಅವರನ್ನು ಬಂಧಿಸಿ ಸೆರಮನೆಗೂ ತಳ್ಳಲ್ಪಡುತ್ತಾರೆ. ಸೆರೆಮನೆಯಿಂದ ಬಿಡುಗಡೆಯಾಗಿ ಹೊರಗೆ ಬಂದಾಗ ಅವರ ತಮ್ಮ ಹೋಟೇಲನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ತಮ್ಮ ಹೋಟೆಲ್ ಉದ್ಯಮವನ್ನು ಸಹೋದರನಿಗೇ ಹಸ್ತಾಂತರಿಸಿ, ತನ್ನ ಸ್ನೇಹಿತರಾಗಿದ್ದ ಡಿ. ಶಂಕರ್ ಸಿಂಗ್ ಮತ್ತಿತರ ಜೊತೆಯಲ್ಲಿ ಅರಸೀಕೆರೆಯಲ್ಲಿಯೇ ಟೂರಿಂಗ್ ಟಾಕೀಸ್ ಅನ್ನು ಆರಂಭಿಸುತ್ತಾರೆ. ಟೂರಿಂಗ್ ಟಾಕೀಸ್ ಉದ್ಯಮ ಚೆನ್ನಾಗಿ ಕೈ ಹಿಡಿದ ಕಾರಣ ಅಕ್ಕ ಪಕ್ಕ ಊರುಗಳಲ್ಲಿಯೂ ಇನ್ನೂ ಮೂರ್ನಾಲ್ಕು ಟೂರಿಂಗ್ ಟಾಕೀಸ್ಗಳನ್ನು ಅರಂಭಿಸಿ ಯಶಸ್ವೀ ಪ್ರದರ್ಶಕರಾಗುತ್ತಾರೆ. ಇದೇ ಸಮಯದಲ್ಲಿಯೇ ಕೆ.ಆರ್.ಪೇಟೆಯ ರಾಮದಾಸ ಆಚಾರ್ಯರ ಮೂರನೇ ಮಗಳಾದ ಜಯಲಕ್ಷ್ಮಿಯೊಂದಿಗೆ ಮದುವೆಯಾಗುತ್ತದೆ.

ವಿಠಲಾಚಾರ್ಯರು ತಮ್ಮ ಟಾಕೀಸಿನಲ್ಲಿ ಪ್ರದರ್ಶಿತವಾಗುತ್ತಿದ್ದ ಪ್ರತಿಯೊಂದು ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಚಿತ್ರ ನಿರ್ದೇಶನ ಮತ್ತು ನಿರ್ಮಾಣವನ್ನು ಏಕಲವ್ಯನಂತೆ ಸ್ವತಃ ಕಲಿಯುತ್ತಾರೆ. ಅದೇ ಹುಚ್ಚು ಧೈರ್ಯದಿಂದ ತಮ್ಮ ಗೆಳೆಯರೊಂದಿಗೆ ಮೈಸೂರಿಗೆ ತೆರಳಿ ಮಹಾತ್ಮ ಪಿಕ್ಚರ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿ ಕನ್ನಡ ಚಿತ್ರಗಳನ್ನು ನಿರ್ಮಿಸುತ್ತಾರೆ. 1944 ರಿಂದ 1953ರ ವೆರೆಗಿನ 9 ವರ್ಷಗಳಲ್ಲಿ 18 ಕನ್ನಡ ಚಿತ್ರಗಳನ್ನು ನಿರ್ಮಿಸಿ ಧಾಖಲೆಯನ್ನು ನಿರ್ಮಿಸುತ್ತಾರೆ. ಅವರು ನಿರ್ಮಿಸಿದ ಬಹುತೇಕ ಚಿತ್ರಗಳು ಪೌರಾಣಿಕ ಚಿತ್ರಗಳೇ ಆಗಿದ್ದು ಅವುಗಳು ಬಹಳ ಯಶಸ್ವಿಯಾಗಿ ಅವರಿಗೆ ಕೈತುಂಬ ಹಣದ ಜೊತೆ ಮನ್ನಣೆಯೂ ದೊರೆಯುತ್ತದೆ. ವಿಠಲಾಚಾರ್ಯರ ಸಿನಿಮಾ ಎಂದರೆ Special effectsಗೆ ಬಲು ಖ್ಯಾತಿಯಾಗಿರುತ್ತದೆ. ಯುದ್ದದಲ್ಲಿ ಬಾಣ ಪ್ರಯೋಗಗಳು, ಭೂತ ಪಿಶಾಚಿಗಳ ಚೇಷ್ಟೇ, ಅಸ್ತಿ ಪಂಜರದ ಮನುಷ್ಯರ ಕುಚೇಷ್ಟೇ, ದೇವರುಗಳು ದಿಢೀರ್ ಪ್ರತ್ಯಕ್ಷವಾಗುವುದು,ದಿಢೀರ್ ಮಾಯವಾಗುವುದೆಲ್ಲವನ್ನು ಅತ್ಯಂತ ರೋಚಕವಾಗಿ ತೋರಿಸುವುದರಲ್ಲಿ ಸಿದ್ಧಹಸ್ತರಾಗಿರುತ್ತಾರೆ. ಬಹುತೇಕ ಸಿನಿಮಾಗಳನ್ನು ಸ್ವತಃ ವಿಠಲಾಚಾರ್ಯರೇ ನಿರ್ದೇಶಿಸಿದರೇ, ಉಳಿದ ಸಿನಿಮಾಗಳನ್ನು ಅವರ ಸ್ನೇಹಿತ ಶಂಕರಸಿಂಗ್ ಮತ್ತಿತರು ನಿರ್ದೇಶಿಸಿದ್ದರು. ಸಿನಿಮಾಗಳು ಯಶಸ್ವಿಯಾಗಿ ನಡೆಯುತ್ತಿದ್ದರೂ ಕೆಲವೊಂದು ಸಮಸ್ಯೆಗಳಿಂದಾಗಿ ಅವರ ಪಾಲುದಾರರಲ್ಲಿ ಒಬ್ಬೊಬ್ಬರಾಗಿ ಅವರನ್ನು ಬಿಟ್ಟು ಹೋಗಿ, ಕಡೆಗೆ ಶಂಕರಸಿಂಗ್ ಮಾತ್ರ ವಿಠ್ಠಲಾಚಾರ್ಯರೊಂದಿಗೆ ಉಳಿಯುತ್ತಾರೆ.

ವಿಠಲಾಚಾರ್ಯ, ಶಂಕರಸಿಂಗ್, ಹುಣಸೂರು ಕೃಷ್ಣಮೂರ್ತಿ, ಪಿ. ಶಾಮಣ್ಣ ಮುಂತಾದವರು ಕೈಗೂಡಿಸಿ ತಯಾರಿಸಿದ ಜಗನ್ಮೋಹಿನಿ ಚಿತ್ರವಂತೂ ಅನೇಕ ಕಡೆ, 25 ವಾರಗಳ ಪ್ರದರ್ಶನಗೊಂಡು ರಜತೋತ್ಸವ ಆಚರಿಸಿತು. ವಿಠಲಾಚಾರ್ಯ ಮತ್ತು ಶಂಕರ ಸಿಂಗ್ ಜೋಡಿ ಮಹಾತ್ಮ ಪಿಕ್ಚರ್ಸ್‌ ಲಾಂಛನದಲ್ಲಿ 1952ರಲ್ಲಿ ಶ್ರೀನಿವಾಸಕಲ್ಯಾಣ, ಚಂಚಲಕುಮಾರಿ, ಮತ್ತು ಸಾಮಾಜಿಕ ಚಿತ್ರ ದಳ್ಳಾಳಿ ಎಂಬ ಮೂರು ಚಿತ್ರಗಳನ್ನು ತಯಾರಿಸಿ ಕನ್ನಡ ಚಿತ್ರ ರಂಗಕ್ಕೆ ತನ್ನದೇ ಆದ ಸ್ಥಾನವನ್ನು ಗಳಿಸಿಕೊಡುವಲ್ಲಿ ಮಹತ್ತರ ಸಾಧನೆ ಮಾಡುತ್ತಾರೆ. ವಿಠಲಾಚಾರ್ಯರ ಚಿತ್ರಗಳಿಂದಲೇ, ಖ್ಯಾತ ನಟಿಯರಾದ ಹರಿಣಿ, ಪ್ರತಿಮಾ ದೇವಿ, ಜಯಶ್ರಿ, ಲಕ್ಷ್ಮಿದೇವಿ ನಟರುಗಳಾದ ವೀರಭದ್ರಪ್ಪ, ಮರಿರಾವ್, ಬಾಲಕೃಷ್ಣ, ಮಹಾಬಲರಾವ್ ಮುಂತಾದ ಅನೇಕ ರಂಗಭೂಮಿ ಕಲಾವಿದರುಗಳು ಬೆಳ್ಳಿ ತೆರೆಗೆ ಪದಾರ್ಪಣ ಮಾಡುವ ಅವಕಾಶ ದೊರಕುವಂತಾಗುತ್ತದೆ. ಪಿ.ಶಾಮಣ್ಣ ಸಂಗೀತ ನಿರ್ದೇಶಕರಾಗಿ, ಎಮ್.ಎಸ್. ಮಣಿ ಮತ್ತು ಜಿ. ದೊರೈ ಛಾಯಾಗ್ರಾಹಕರಾಗಿ, ಹುಣಸೂರು ಕೃಷ್ಣ ಮೂರ್ತಿಗಳು ಚಿತ್ರಕಥಾಕಾರರಾಗಿ ಚಲನಚಿತ್ರ ಜಗತ್ತಿಗೆ ಪ್ರವೇಶ ಮಾಡಿ ಮುಂದೆ ಇವರೆಲ್ಲರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದೊಡ್ಡ ಹೆಸರು ಮಾಡಿದ ವ್ಯಕ್ತಿಗಳಾಗಿದ್ದಲ್ಲದೇ ಕನ್ನಡ ಚಿತ್ರರಂಗ ಏಳಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ. ಬಡ್ಡಿ ಗೋಪಾಲರಾಯರ ಹಗರಣವನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿಯವರು ರಚಿಸಿದ ಧರ್ಮರತ್ನಾಕರ ಎಂಬ ಜನಪ್ರಿಯ ಸಾಮಾಜಿಕ ನಾಟಕವನ್ನು ಸಿನಿಮಾಕ್ಕಾಗಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ನಿರ್ಮಿಸಿದ ದಳ್ಳಾಳಿ ಚಿತ್ರವು, ಆ ಕಾಲದಲ್ಲಿ ಹೊಸಾ ಪ್ರಯೋಗವೆಂದೇ ಪರಿಗಣಿಸಿ ಅಪಾರ ಯಶಸ್ಸು ಗಳಿಸುತ್ತದೆ.

ಆದರೆ 1953 ರಲ್ಲಿ ತಪ್ಪು ಕಲ್ಪನೆಗಳಿಂದಾಗಿಯೋ ಅಥವಾ ಯಾರದ್ದೋ ದುರುದ್ದೇಶದ ಫಲವಾಗಿಯೋ ವಿಠ್ಠಲಾಚಾರ್ಯ ಮತ್ತು ಶಂಕರಸಿಂಗ್ ಅವರ ಸಂಬಂಧ ಕೊನೆಯಾಗಿ ವಿಠಲಾಚಾರ್ಯರು ತಮ್ಮದೇ ಆದ ವಿಠ್ಠಲ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ರಾಜ್ಯಲಕ್ಷ್ಮಿ ಎಂಬ ಯಶಸ್ವೀ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣವನ್ನೂ ಮಾಡುತ್ತಾರೆ.

1954 ರಲ್ಲಿ, ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ ಕನ್ಯಾದಾನ ಎಂಬ ಕ್ರಾಂತಿಕಾರಿಯಾದ ಚಿತ್ರ ಯಶಸ್ವಿಯಾದ ನಂತರ ಅದನ್ನೇ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಲು ಮದ್ರಾಸ್ಸಿಗೆ ಹೋದವರು, ಅಲ್ಲಿನ ಚಿತ್ರರಂಗದ ಚಟುವಟಿಕೆಗಳಿಂದ ಆಕರ್ಷಿತರಾಗಿ ತಮ್ಮ ಜೀವಿತಾವಧಿಯವರೆಗೂ ಮದ್ರಾಸಿನಲ್ಲಿಯೇ ನೆಲೆಸಿ ತಮಿಳು ಮತ್ತು ಹೆಚ್ಚಾಗಿ ತೆಲುಗು ಚಿತ್ರಗಳನ್ನೇ ನಿರ್ಮಾಣ ಮತ್ತು ನಿರ್ದೇಶನ ಮಾಡಿದರೂ, ಕನ್ನಡವನ್ನು ಎಂದೂ ಮರೆಯದೇ ಮದರಾಸಿನಿಂದಲೇ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ.

1963 ರಲ್ಲಿ ರಾಜ್ ಕುಮಾರ್, ಲೀಲಾವತಿ, ಉದಯ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ ಅಷ್ಟೇ ಅಲ್ಲದೇ ಚಿತ್ರದ ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿದ್ದ ಘಂಟಸಾಲಾ ಆವರಿಗೆ ತಕ್ಕ ಮಟ್ಟಿನ ಹೆಸರನ್ನು ತಂದುಕೊಟ್ಟ ಅಂದಿಗೂ ಇಂದಿಗೂ ಎಂದೆಂದಿಗೂ ಜನಮಾನದಲ್ಲಿ ಉಳಿದಿರುವ ವೀರಕೇಸರಿ ಚಿತ್ರವನ್ನು ವಿಠಲಾಚಾರ್ಯರು ನಿರ್ದೇಶನ ಮಾಡುತ್ತಾರೆ. ಆ ಕಾಲದಲ್ಲಿ ವಿಠಲಾಚಾರ್ಯರ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕರೇ ಸಾಕು ಆ ಕಲಾವಿದರ ಬಣ್ಣದ ಬದುಕಿನ ಭವಿಷ್ಯವೇ ಬದಲಾಗುತ್ತದೆ ಎಂಬ ಮಾತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇಳಿ ಬರುತ್ತದೆ ಎಂದರೆ ಅದು ವಿಠಲಾಚಾರ್ಯರ ತಾಕತ್ತನ್ನು ತೋರಿಸುತ್ತದೆ.

ಇದೇ ವೀರಕೇಸರಿ ಸಿನಿಮಾವನ್ನು ಎನ್.ಟಿ.ಆರ್ ನಾಯಕತ್ವದಲ್ಲಿ ತೆಲುಗಿನಲ್ಲಿಯೂ ಬಂದಿಪೋಟ್ಟು ಎಂಬ ಹೆಸರಿನಲ್ಲಿ ನಿರ್ದೇಶಿಸಿ ಅದು ಅತ್ಯಂತ ಯಶಸ್ವಿಯಾದ ನಂತರವಂತೂ ಎನ್.ಟಿ.ಆರ್ ಮತ್ತು ವಿಠಲಾಚಾರ್ಯರ ನಡುವಿನ ಸಂಬಂಧ ಗಟ್ಟಿಯಾಗಿ ಸಾಲು ಸಾಲಾಗಿ ಸುಮಾರು 15 ಚಿತ್ರಗಳನ್ನು ನಿರ್ದೇಶಿಸಿದ ಗೌರವ ವಿಠಲಾಚಾರ್ಯದ್ದಾಗಿರುತ್ತದೆ. ಈ ಜೋಡಿಯ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದ ಕಾರಣ ತೆಲುಗು ಅಭಿಮಾನಿಗಳು ಪ್ರೀತಿಯಿಂದ ಜನಪದ ಬ್ರಹ್ಮ ಎಂದರೆ, ಅವರ ಚಿತ್ರಗಳಲ್ಲಿನ ಅಧ್ಭುತ ದೃಶ್ಯಗಳು ಮತ್ತು special effect ಗಳಿಗೆ ಮಾರುಹೋದ ತಮಿಳು ಚಿತ್ರರಂಗದ ಅಭಿಮಾನಿಗಳು ವಿಠಲಾಚಾರ್ಯರನ್ನು ಮಾಯಾಜಾಲಾ ಮನ್ನನ್ ಎಂದು ಪ್ರೀತಿಯಿಂದ ಕರೆಯುವಷ್ಟರ ಮಟ್ಟಿಗೆ ಪ್ರಸಿದ್ಧರಾಗಿದ್ದರು.

ಹೀಗೆ ಕರಾವಳಿಯ ಮನುಷ್ಯ ತನ್ನ ಸ್ವಂತ ಶಕ್ತಿಯಿಂದ ಸಿನಿಮಾ ತಯಾರಿಕೆಯನ್ನು ಕಲಿತುಕೊಂಡು ಯಶಸ್ವೀ ಕನ್ನಡ ಚಿತ್ರಗಳನ್ನು ಪ್ರದರ್ಶಿಸಿ, ನಿರ್ಮಿಸಿ, ನಿರ್ದೇಶಿಸಿ, ಬಹುತೇಕ ರಂಗಭೂಮಿ ಕಲಾವಿದರುಗಳನ್ನು ಚಿತ್ರರಂಗಕ್ಕೆ ಪರಿಚಯಿಸಿ, ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ಹಾಕಿ ನಂತರ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ವಲಸೆ ಹೋಗಿ ಪೌರಾಣಿಕ ಚಲನಚಿತ್ರವಲ್ಲದೇ ಸಾಮಾಜಿಕ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಯಶಸ್ವಿಯಾಗಿದ್ದ ವಿಠಲಾಚಾರ್ಯರು, ತಮ್ಮ 79ನೇ ವಯಸ್ಸಿನಲ್ಲಿ ಮೇ 28, 1999ರಲ್ಲಿ ಚನ್ನೈ ನಗರದಲ್ಲಿ ನಿಧನರಾಗುತ್ತಾರೆ. ಬಿ.ವಿಠಲಾಚಾರ್ಯರು ಭೌತಿಕವಾಗಿ ನಮ್ಮನ್ನಿಂದು ಅಗಲಿದ್ದರೂ ಅವರ ತಮ್ಮ ಚಿತ್ರಗಳ ಮೂಲಕ ಎಲ್ಲೆಡೆಯಲ್ಲಿಯೂ ಹಬ್ಬಿಸಿದ್ದ ಕನ್ನಡದ ಕಂಪು ಮತ್ತು ಅವರ ಆ ರೋಚಕ ಅನುಭವ ಆಚಂದ್ರಾರ್ಕವಾಗಿ ನಮ್ಮೆಲ್ಲರನ್ನೂ ಪ್ರೇರೇಪಿಸುತ್ತಲೇ ಇರುವ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಭಾರತೀಕಂಠ ಗಂಗೂಬಾಯಿ ಹಾನಗಲ್

ಅದೊಂದು ದೇವಾಲಯದಲ್ಲಿ ಸಂಗೀತ ಕಛೇರಿ ನಡೆಯುತ್ತಿತ್ತು. ದೇವಸ್ಥಾನದ ಆರ್ಚಕರು ಪೂಜೆ ಪುನಸ್ಕಾರಗಳಲ್ಲಿ ನಿರತರಾಗಿದ್ದ ಕಾರಣ ಖುದ್ದಾಗಿ ಸಂಗೀತ ಕಛೇರಿಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಕಛೇರಿಯಿಂದ ಸುಶ್ರಾವ್ಯವಾಗಿ ಗಂಡು ಧ್ವನಿಯಲ್ಲಿ ಕೇಳಿಬರುತ್ತಿದ್ದ ಸಂಗೀತವನ್ನು ಆಲಿಸುತ್ತಲೇ, ದೇವಸ್ಥಾನದ ಮಹಾಮಂಗಳಾರತಿ ಮುಗಿಸಿ ಸಂಗೀತ ಕಛೇರಿಗೆ ಬಂದು ನೋಡಿದರೆ, ಅಲ್ಲಿ ಹಾಡುತ್ತಿದ್ದವರು ಗಂಡಸಾಗಿಲ್ಲದೇ, ಹೆಂಗಸಾಗಿದ್ದಿದ್ದನ್ನು ನೋಡಿ ಆಶ್ವರ್ಯಚಕಿತರಾಗಿದ್ದರು. ಅಂತಹ ವೈಶಿಷ್ಟ್ಯವಾದ ಧ್ವನಿಯಲ್ಲಿ ಐದಾರು ದಶಕಗಳ ಕಾಲ ಹಿಂದೂಸ್ಥಾನೀ ಸಂಗೀತ ಪ್ರಿಯರ ಮನವನ್ನು ಗೆದ್ದಂತಹ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರೇ ನಮ್ಮ ಕನ್ನಡದ ಕಲಿಗಳು ಮಾಲಿಕೆಯ ಇಂದಿನ ಕಥಾನಾಯಕಿ.

ಹಾನಗಲ್ಲಿನ ಚಿಕ್ಕೂರಾವ್ ನಾಡಗೀರ್ ಮತ್ತು ಅಂಬಾಬಾಯಿ ದಂಪತಿಗಳಿಗೆ 1915 ರ ಮಾರ್ಚ್ 5ರಂದು ಜನಿಸಿದ ಹೆಣ್ಣುಮಗುವಿಗೆ ಗಾಂಧಾರೀ ಎಂದು ಹೆಸರಿಸಿ ಪ್ರೀತಿಯಿಂದ ಗಂಗೂಬಾಯಿ ಎಂದು ಕರೆಯಲಾರಂಭಿಸಿದರು. ನಂತರ ಆವರ ಕುಟುಂಬ ಧಾರವಾಡಕ್ಕೆ ತಮ್ಮ ವಸತಿಯನ್ನು ಬದಲಿಸುತ್ತಾರೆ. ಈ ಕುಟುಂಬ ಹಾನಗಲ್ಲಿಗೆ ಬಂದಿದ್ದೇ ಒಂದು ರೋಚಕವಾದ ಕಥೆ. ಇವರ ಅಜ್ಜ ನರಗುಂದದ ಬಾಬಾಸಾಹೇಬರ ಆಳ್ವಿಕೆಯಲ್ಲಿ ಕೋರ್ಟಿನ ಮುನ್ಸೀಫರಾಗಿದ್ದಂತೆ. ಸ್ವಾತಂತ್ರ್ಯ ಸಮರದ ಸಮಯದಲ್ಲಿ ಬ್ರಿಟಿಷರು ಬಾಬಾಸಾಹೇಬರ ವಿರುದ್ಧ ಯುದ್ದವನ್ನು ಮಾಡಲು ಹೊರಟಾಗ ಇವರ ಕುಟುಂಬ ಬ್ರಿಟಿಷ್ ಸೈನಿಕರ ಕೈಸೆರೆಯಿಂದ ತಪ್ಪಿಸಿಕೊಂಡು, ಹಾನಗಲ್ಲಿಗೆ ಓಡಿ ಬಂದು ನೆಲೆಸಿದ ಕಾರಣ ಇವರ ಮನೆ ಹೆಸರು ಹಾನಗಲ್ ಎಂದಾಯಿತು.

ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದಿದ್ದರು. ಆ ಶಾಲೆಯಲ್ಲಿ ವರಕವಿ ದ.ರಾ.ಬೇಂದ್ರೆಯವರು ಇವರ ಗುರುಗಳಾಗಿದ್ದ ಕಾರಣ, ಈ ಗುರು ಶಿಷ್ಯೆಯ ಸಂಬಂಧ ಬೇಂದ್ರೆಯವರ ಜೀವಿತಾವಧಿಯ ವರೆಗೂ ಮುಂದುವರಿಸಿಕೊಂಡು ಹೋಗಿದ್ದದ್ದು ಗಮನಾರ್ಹವಾಗಿತ್ತು.

ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಅತ್ಯುತ್ತಮವಾದ ಕರ್ನಾಟಕ ಸಂಗೀತದ ಗಾಯಕಿಯಾಗಿದ್ದರೂ ಅವರಿಗೆ ಹಿಂದೂಸ್ಥಾನಿ ಹಾಡುಗಾರಿಕೆಯ ಮೇಲೆ ಇಚ್ಛೆ ಇದ್ದ ಕಾರಣ ತಮ್ಮ ಮಗಳಿಗೆ ಉತ್ತಮವಾದ ಸಂಗೀತಭ್ಯಾಸವನ್ನು ಮಾಡಿಸಲೆಂದೇ ಅವರ ಕುಟುಂಬ ಹಾನಗಲ್ಲಿನಿಂದ ಧಾರವಾಡಕ್ಕೆ ವಾಸ್ತವ್ಯವನ್ನು ಬದಲಿಸಿದ್ದರು. ಖ್ಯಾತ ಹಿಂದುಸ್ತಾನಿ ಸಂಗೀತ ಗಾಯಕರಾದ ಹೀರಾಬಾಯಿ ಬಡೋದೆಕರ, ಅಬ್ದುಲ್ ಕರೀಮ ಖಾನರು ಧಾರವಾಡ ಮತ್ತು ಹುಬ್ಬಳ್ಳಿಗೆ ಬಂದ್ದಿದ್ದಾಗ, ಅಂಬಾಬಾಯಿಯವರ ಮನೆಗೆ ಬಂದು ಅವರ ಹಾಡುಗಾರಿಕೆ ಕೇಳುತ್ತಿದ್ದರು. ಅದೇ ಸಂದರ್ಭದಲ್ಲಿಯೇ ಪುಟ್ಟ ಹುಡುಗಿ ಗಂಗೂಬಾಯಿಯವರ ಮುದ್ದು ಮುದ್ದಾದ ಹಾಡುಗಾರಿಕೆಯನ್ನೂ ಮೆಚ್ಚಿ, ಈಕೆಗೆ ಶಾಸ್ತ್ರೀಯವಾಗಿ ಸಂಗೀತ ಕಲಿಸಿದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹರಸಿದ್ದರಂತೆ. ಹಾಗಾಗಿ ಬಾಲಕಿ ಗಂಗೂಬಾಯಿಯರಿಗೆ ಆರಂಭದಲ್ಲಿ ದತ್ತೋಪಂತ ದೇಸಾಯಿ ಮತ್ತು ಕೃಷ್ಣಾಚಾರ್ಯ ಹುಲಗೂರ ಇವರಿಂದ ಸಂಗೀತ ಶಿಕ್ಷಣ ಆರಂಭಿಸಿ, ಬಳಿಕ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ಸವಾಯಿ ಗಂಧರ್ವ ಅರ್ಥಾತ್ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾಗಿ ಹಿಂದೂಸ್ಥಾನ ಸಂಗೀತದಲ್ಲಿ ಪ್ರಬುದ್ಧೆಯಾಗುತ್ತಿದ್ದ ಸಮಯದಲ್ಲಿ ತಮ್ಮ ಮಗಳಿಗೆ ತಮ್ಮ ಕರ್ನಾಟಕ ಸಂಗೀತ ಪದ್ಧತಿಯು ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ಅಂಬಾಬಾಯಿಯವರು ಹಾಡುವದನ್ನೇ ನಿಲ್ಲಿಸಿದ್ದು ತಮ್ಮ ಮಗಳ ಮೇಲಿದ್ದ ಅಪರಿಮಿತ ಪ್ರೇಮವನ್ನು ತೋರಿಸುತ್ತದೆ.

1939ರಲ್ಲಿ ಇಂತಹ ತ್ಯಾಗಮಯಿ ತಾಯಿ ತೀರಿಕೊಂಡರೇ ಅದೇ ದುಃಖದಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅವರ ತಂದೆಯನ್ನೂ ಕಳೆದುಕೊಂಡಾಗ ಅಗಲಿದ ತಂದೆತಾಯಿಯರಿಗೆ ಕನ್ಯಾದಾನದ ಪುಣ್ಯಫಲ ದೊರೆಯಲೆಂದು ಅದೇ ವರ್ಷದಲ್ಲಿಯೇ ಹುಬ್ಬಳ್ಳಿಯ ಗುರುನಾಥ ಕೌಲಗಿ ಎಂಬ ವಕೀಲರೊಂದಿಗೆ ಗಂಗೂಬಾಯಿಯವರ ವಿವಾಹವನ್ನು ಅವರ ಮಾವ ಮಾಡಿಸುತ್ತಾರೆ.

ಮದುವೆಯಾದ ನಂತರವೂ ತಮ್ಮ ಸಂಗೀತಾಭ್ಯಾಸವನ್ನು ಮುಗಿಸಿ ತಮ್ಮ ವಿಶಿಷ್ಟ ಮಾಧುರ್ಯದ ಕಂಠದಿಂದ ಸುಪ್ರಸಿದ್ಧರಾಗುತ್ತಿದ್ದಂತೇ, ಧಾರವಾಡದ ಆಕಾಶವಾಣಿಯೂ ಸೇರಿದಂತೆ ಎಲ್ಲೆಡೆಯಲ್ಲಿಯೂ ಆವರ ಖ್ಯಾತಿ ಹರಡಿ, ಖ್ಯಾತ ಎಚ್.ಎಮ್.ವಿ. ಗ್ರಾಮಾಫೋನ್ ಕಂಪನಿಯವರು ಗಂಗೂಬಾಯಿಯವರನ್ನು ಮುಂಬಯ್ಯಿಗೆ ಕರೆಸಿಕೊಳ್ಳುವ ಮೂಲಕ ಗಂಗೂಬಾಯಿಯವರ ಸಂಗೀತ ದಿಗ್ವಿಜಯ ಪ್ರಾರಂಭವಾಗುತ್ತದೆ. ಮುಂಬಯಿಯಲ್ಲಿ ನಾನಾ ಕಛೇರಿಗಳನ್ನು ನೀಡಿದ್ದಲ್ಲದೇ, ಮುಂಬಯಿ ಆಕಾಶವಾಣಿಯಲ್ಲಿಯೂ ಹಾಡತೊಡಗುತ್ತಾರೆ. ಹುಬ್ಬಳ್ಳಿಯಿಂದ ಬಂದಿದ್ದ ಗಂಗೂಬಾಯಿಯವರನ್ನು ಎಚ್.ಎಮ್.ವಿ. ಕಂಪನಿಯವರು ತಮ್ಮ ಗ್ರಾಮಫೋನ್ ಗಾನಮುದ್ರಿಕೆಯಲ್ಲಿ ಪರಿಚಯಿಸುವಾಗ ಗಂಗೂಬಾಯಿ ಹುಬ್ಬಳೀಕರ್ ಎಂದು ಮುದ್ರಿಸಿದ್ದರು. ಆದರೆ ತಮ್ಮ ಪೂರ್ವಜವರ ಊರಾದ ಹಾನಗಲ್ಲಿನ ಹೆಸರನ್ನೇ ಖ್ಯಾತಿಗೊಳಿಸುವ ಸಲುವಾಗಿ ಅವರ ಸೋದರ ಮಾವನ ಅಪೇಕ್ಷೆಯ ಮೇರೆಗೆ ಗಂಗೂಬಾಯಿ ಹಾನಗಲ್ ಎಂದು ಮರು ಮುದ್ರಣ ಮಾಡುತ್ತಾರೆ.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿಯವರ ಸಮ್ಮುಖದಲ್ಲಿ ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ ಎಂಬ ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆಯನ್ನು ಗಳಿಸಿದ್ದಲ್ಲದೇ, ಮುಂದೇ, ಆ ಕಾಲದ ಎಲ್ಲಾ ಉದ್ದಾಮ ಸಂಗೀತಕಾರರಾದ ಬಡೆ ಗುಲಾಮ ಅಲಿ ಖಾನ್, ಉಸ್ತಾದ್ ಫಯಾಜ್ ಖಾನ್, ಪಂಡಿತ್ ಓಂಕಾರನಾಥ್, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಮುಂತಾದ ಘಟಾನುಘಟಿಗಳೇ ಮೆಚ್ಚಿ ಕೊಂಡಾಡುತ್ತಾರೆ ಖ್ಯಾತ ಚಿತ್ರನಟಿ ನರ್ಗೀಸಳ ತಾಯಿಯಾದ ಜದ್ದನಬಾಯಿಯವರು ಗಂಗೂಬಾಯಿಯವರ ಹಾಡುಗಾರಿಕೆಯನ್ನು ಮೆಚ್ಚಿ ಅವರಿಗೆ ಕಲ್ಕತ್ತಾದ ಅಖಿಲ ಭಾರತ ಸಂಗೀತ ಸಮ್ಮೇಳನಕ್ಕೆ ಕಳುಹಿಸಿಕೊಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು.

ಇದೇ ರೀತಿಯ ಅಭಿಮಾನಕ್ಕೆ ಮತ್ತೊಂದು ಪ್ರಸಂಗವನ್ನು ಹೇಳಲೇ ಬೇಕು. ಅವರ ಪತಿ ಶ್ರೀ ಗುರುನಾಥ ಕೌಲಗಿಯವರ ವ್ಯವಹಾರದ ಸಮಯದಲ್ಲಿ ಹುಬ್ಬಳ್ಳಿಯಲ್ಲಿದ್ದ ಅವರ ಮನೆಯನ್ನು ಒತ್ತೆ ಇಟ್ಟು ಸಾಲ ಪಡೆದಿದ್ದು, ಅದನ್ನು ಹಿಂದಿರುಗಿಸಲಾಗದೇ ಮನೆಯ ಹರಾಜಿಗೆ ಬಂದಿತ್ತು. ಅದೃಷ್ಟವಶಾತ್ ಆ ಮನೆಯನ್ನು ಹರಾಜಿನಲ್ಲಿ ಕೊಂಡುಕೊಂಡ ಉಪೇಂದ್ರ ನಾಯಕ್ ಎನ್ನುವರರು ಇವರ ಸಂಗೀತಾಭಿಮಾನಿಯಾಗಿದ್ದ ಕಾರಣ, ನಿಮಗೆ ಅನುಕೂಲವಾದಾಗ ಹಣವನ್ನು ಕೊಡಿ ಎಂದು ಅವರ ಮನೆಯಯನ್ನು ಅವರಿಗೇ ಹಿಂದಿರುಗಿಸಿದ್ದು ಅಭಿಮಾನಿಗಳ ಪರಾಕಾಷ್ಟೆ ಎಂದರೂ ತಪ್ಪಾಗಲಾರದು.

ಗಂಗೂಬಾಯಿ ಹಾನಗಲ್ ಅವರು ತಮ್ಮ ಮಗಳು ಖ್ಯಾತ ಸಂಗೀತ ವಿದೂಷಿ ಕೃಷ್ಣಾ ಹಾನಗಲ್ ಮತ್ತು ಆವರ ಸಹೋದರ ಖ್ಯಾತ ತಬಲಾವಾದಕ ಶೇಷಗಿರಿ ಹಾನಗಲ್ ಅವರ ಜೊತೆಗೂಡಿ ಲೆಖ್ಖವಿಲ್ಲದಷ್ಟು ಸಂಗೀತ ಕಛೇರಿಗಳನ್ನು ಆಕಾಶವಾಣಿ, ದೂರದರ್ಶನ ಮತ್ತು ಭಾರತಾದ್ಯಂತವಲ್ಲದೇ, ನೆರೆರಾಷ್ಟ್ರಗಳಾದ ನೇಪಾಳ, ಪಾಕೀಸ್ಥಾನ, ಜರ್ಮನಿ, ಫ್ರಾನ್ಸ್ ಅಲ್ಲದೇ ಅಮೇರಿಕಾ ಮತ್ತು ಕೆನಡಾಗಳಲ್ಲಿಯೂ ನಡೆದು ಸಂಗೀತಾಸಾಕ್ತರ ಹೃನ್ಮನಗಳನ್ನು ಗೆದ್ದಿದ್ದಲ್ಲದೇ ಅವರ ಸಂಗೀತ ಸವಿಯನ್ನು ಉಣಬಡಿಸಿದ್ದರು. ಹೀಗೆ ಒಮ್ಮೆ ಸಂಗೀತ ಕಾರ್ಯಕ್ರಮಕ್ಕಾಗಿ ದೆಹಲಿಗೆ ಹೋಗಿರುವಾಗಲೇ ಅಸ್ವಸ್ಥರಾಗಿ ಅಸ್ಪತ್ರೆ ಸೇರಿದ್ದ ಅವರ ಪತಿ ಶ್ರೀ ಗುರುನಾಥ ಕೌಲಗಿಯವರು 1966ರಲ್ಲಿ ಕೊನೆಯುಸಿರೆಳೆಯುತ್ತಾರೆ.

ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣುಮಗಳ ತಾಯಿಯಾಗಿದ್ದ ಗಂಗೂಬಾಯಿಯವರು ತಮ್ಮ ಸಂಗೀತ ಸಾಧನೆಯನ್ನು ತಮ್ಮ ಅಪಾರ ಶಿಷ್ಯರಿಗೆ ಧಾರೆ ಎರೆದು ನೂರಾರು ಶಿಷ್ಯರನ್ನು ಬೆಳಸಿದ್ದಾರೆ. ಅವರುಗಳಲ್ಲಿ ಪ್ರಮುಖರೆಂದರೆ ಅವರ ಮಗಳು ಕೃಷ್ಣಾ, ಸೀತಾ ಹಿರೇಬೆಟ್ಟ, ಸುಲಭಾ ನೀರಲಗಿ, ನಾಗನಾಥ್ ಒಡೆಯರ್ ಇನ್ನು ಮುಂತಾದವರು.

ಸಂಗೀತ ಕ್ಷೇತ್ರದಲ್ಲಿ ಗಂಗೂಬಾಯಿ ಹಾನಗಲ್ಲರ ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನು ಹೇಳುತ್ತಾ ಹೋದರೆ ದಿನವೆಲ್ಲಾ ಸಾಲದೇನೋ ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

1969—ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
1971—ಪದ್ಮಭೂಷಣ ಪ್ರಶಸ್ತಿ
1973—ಕೇಂದ್ರ ಸಂಗೀತ ನಾಟಕ ಅಕಾಡೆಮಿ
1984—ಮಧ್ಯಪ್ರದೇಶ ಸರಕಾರದಿಂದ ತಾನಸೇನ್ ಪ್ರಶಸ್ತಿ
1992—ಕರ್ನಾಟಕ ಸರಕಾರದಿಂದ ಕನಕ-ಪುರಂದರ ಪ್ರಶಸ್ತಿ
1993—ಅಸ್ಸಾಂ ಸರಕಾರದಿಂದ ಶ್ರೀಮಂತ ಶಂಕರದೇವ ಪ್ರಶಸ್ತಿ
1994-95 -೯೫—ಸಂಗೀತರತ್ನ ಟಿ.ಚೌಡಯ್ಯ ಸ್ಮಾರಕ ರಾಷ್ಟ್ರ ಪ್ರಶಸ್ತಿ
1997—ದೀನಾನಾಥ ಮಂಗೇಶಕರ್ ಪ್ರಶಸ್ತಿ
1997—ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿಗಳಲ್ಲದೇ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ,ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿಯಲ್ಲದೇ, ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಫೆಲೊಶಿಪ್ ವಾರಣಾಸಿಯಲ್ಲಿ ಭಾರತೀಕಂಠ ಬಿರುದು, ಪ್ರಯಾಗದಲ್ಲಿ ಸ್ವರಶಿರೋಮಣಿ ಬಿರುದು, ಬೆಂಗಳೂರು ಗಾಯನ ಸಮಾಜ ನೀಡಿದ ಸಂಗೀತ ಕಲಾರತ್ನ ಬಿರುದು, ತ್ಯಾಗರಾಜ ಉತ್ಸವ ಸಮಿತಿ, ತಿರುಪತಿ ನೀಡಿದ ಸಪ್ತಗಿರಿ ಸಂಗೀತ ವಿದ್ವನ್ಮಣಿ ಬಿರುದು ಹೀಗೆ ಹಲವಾರು ಬಿರುದು ಬಾವಲಿಗಳಿಗೆ ಪಾತ್ರರಾಗಿದ್ದಾರೆ.

ಗಂಗೂಬಾಯಿಯವರು ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಸದಸ್ಯೆಯಾಗಿ ಮೇಲ್ಕನೆಯ ಶಾಸಕಿಯೂ ಆಗಿದ್ದಾಗ, ಶಾಸ್ತ್ರೀಯ ಸಂಗೀತವನ್ನು ಪ್ರಾಥಮಿಕ ಶಿಕ್ಷಣದದ ಹಂತದಿಂದಲೇ ಮಕ್ಕಳಿಗೆ ಕಲಿಸುವ ಮೂಲಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುವ ಆಸೆಯಿಂದ ಅನೇಕ ಸಮಾರಂಭಗಳಲ್ಲಿ ಮತ್ತು ಮೇಲ್ಮನೆಯಲ್ಲಿಯೂ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಮತ್ತಿತರ ಅಧಿಕಾರಿಗಳ ಮೇಲೆ ಹೇರಿದ ಒತ್ತಡಕ್ಕೆ ಮಣಿದು ಉಣಕಲ್ ಹತ್ತಿರ ಗುರುಕುಲದ ಮಾದರಿಯ ಸಂಗೀತ ವಿದ್ಯಾಲಯವನ್ನು ನಿರ್ಮಿಸುವ ಕಾರ್ಯ ಆರಂಭವಾದರೂ ಅದನ್ನು ನೋಡುವ ಸೌಭಾಗ್ಯ ಗಂಗೂಬಾಯಿಯವರಿಗೆ ಇಲ್ಲವಾಗಿ ಹೋದದ್ದು ದೌರ್ಭಾಗ್ಯವೇ ಸರಿ.

ವಯೋಸಹಜ ಹೃದಯ ಸಂಬಂಧೀ ಖಾಲಿಯಿಂದ ದೀರ್ಘಕಾಲ ಬಳಲುತ್ತಿದ್ದ ಅವರು ತಮ್ಮ 97ನೇ ವಯಸ್ಸಿನಲ್ಲಿ 21, ಜುಲೈ, 2009 ರಂದು ಹುಬ್ಬಳ್ಳಿಯಲ್ಲಿ ನಿಧನರಾದಾಗ ಇಡೀ ದೇಶವೇ ಒಬ್ಬ ಅತ್ಯದ್ಛುತ ಸಂಗೀತ ಕಣ್ಮಣಿಯನ್ನು ಕಳೆದುಕೊಂಡಿದ್ದಕ್ಕಾಗಿ ಸಂತಾಪ ವ್ಯಕ್ತ ಪಡಿಸಿತು. ಅವರ ಇಚ್ಚೆಯಂತೆಯೇ, ನಿಧನದ ನಂತರ ಅವರ ಎರಡೂ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಮತ್ತೆರಡು ಜೀವಗಳ ಬಾಳಿನಲ್ಲಿ ಬೆಳಕನ್ನು ಮೂಡಿಸಿದ ಸಾರ್ಥಕತೆ ಅವರದ್ದಾಗಿದೆ.

ಭಾರತ ಸರ್ಕಾರ ಖ್ಯಾತ ಹಿಂದೂಸ್ತಾನಿ ಗಾಯಕಿ ದಿವಂಗತ ಡಾ.ಗಂಗೂಬಾಯಿ ಹಾನಗಲ್ ಅವರ ಭಾವಚಿತ್ರ ಇರುವ ಅಂಚೆ ಚೀಟಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮುಖಾಂತರ ಬಿಡುಗಡೆಗೊಳಿಸುವ ಮೂಲಕ ಆ ಮಹಾನ್ ಗಾಯಕಿಗೆ ತನ್ನ ಗೌರವನ್ನು ತೋರಿಸಿದೆ.

ಹೀಗೆ ತಮ್ಮ ಹಿಂದೂಸ್ಥಾನೀ ಸಂಗೀತದ ಮೂಲಕ ಕೋಟ್ಯಂತರ ಸಂಗೀತಾಸಕ್ತರ ಹೃದಯಗಳನ್ನು ಗೆದ್ದು ಆ ಮೂಲಕ ಕರ್ನಾಟಕದ ಘನತೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಜಗತ್ಪ್ರಸಿದ್ಧವನ್ನಾಗಿ ಮಾಡಿದ ಮತ್ತು ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಸಂಗೀತ ಕಲಾರತ್ನ ಗಂಗೂಬಾಯಿ ಹಾನಗಲ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?