ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ 

sri7ಎಪ್ಪತರ ದಶಕದ ಅಂತ್ಯದವರೆಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಭಲ್ಯ.  ವೇಗದ ಬೋಲರ್ಗಳೇನಿದ್ದರೂ  ಆರಂಭಿಕ ನಾಲ್ಕಾರು ಓವರ್ಗಳನ್ನು ಮಾಡಿ ಚಂಡಿನ ಹೊಳಪನ್ನು ತೆಗೆದುಕೊಡಲಷ್ಟೇ ಸೀಮಿತವಾದ ಕಾಲದಲ್ಲಿ ಕಪಿಲ್ ದೇವ್  ಅವರ ಆಗಮನವಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಅವರು ನಿವೃತ್ತರಾಗುವ ವೇಳೆಗೆ ಭಾರತದ ವೇಗದ ಬೌಲಿಂಗ್ ನೊಗ ಹೊರುವವರು ಯಾರು ಎಂದು ಯೋಚಿಸುತ್ತಿರುವಾಗಲೇ ನಿಜವಾದ ವೇಗ ಬೋಲಿಂಗ್ ಎಂದರೆ ಹೇಗೆ ಇರುತ್ತದೆ ಎಂದು ತೋರಿಸಿದ, ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಪಡುತ್ತಿದ್ದ ಜಾವಗಲ್ ಶ್ರೀನಾಥ್ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಹಾಸನ ಜಿಲ್ಲೆಯ ಹಳೇಬೀಡು ಬಳಿಯ ಜಾವಗಲ್ ಗ್ರಾಮದ ಮೂಲದವರಾದ ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ದಂಪತಿಗಳಿಗೆ. ಆಗಸ್ಟ್    31, 1969ರಲ್ಲಿ ಶ್ರೀನಾಥ್ ಅವರು ಜನಿಸುತ್ತಾರೆ. ವ್ಯವಹಾರಸ್ಥರಾಗಿದ್ದ ಅವರ ತಂದೆಯವರು ಮೈಸೂರಿನಲ್ಲೇ ನೆಲೆಸಿದ್ದ ಕಾರಣ, ಶ್ರೀನಾಥ್ ಅವರ ಬಾಲ್ಯವೆಲ್ಲಾ ಮೈಸೂರಿನಲ್ಲೇ ಆಗಿ ಮರಿಮಲ್ಲಪ್ಪ ಶಾಲೆಯಲ್ಲಿ ಅವರ ಪೌಢಶಿಕ್ಷಣ ಪಡೆಯುತ್ತಿರುವಾಗಲೇ ಶಾಲೆಯ ಕ್ರಿಕೆಟ್ ತಂಡದ ನಾಯಕರಾಗಿರುತ್ತಾರೆ. ಪೋಷಕರ ಆಸೆಯಂತೆ ಇಂಜೀನಿಯರಿಂಗ್ ಮೊದಲ 2 ವರ್ಷಗಳನ್ನು ಹಾಸನದ ಮಲ್ನಾಡ್ ಕಾಲೇಜಿನಲ್ಲಿ ನಡೆದು ನಂತರದ 2 ವರ್ಷಗಳು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜೀನಿಯರಿಂಗ್ ನಲ್ಲಿ ಪದವಿ ಮಾಡುತ್ತಿರುವಾಗಲೇ,  ಕ್ಲಬ್ ಕ್ರಿಕೆಟ್ ಆಡುತ್ತಿರುವಾಗ 6.3″ ಎತ್ತರದ ಈ ವೇಗದ ಬೌಲರ್ ಕರ್ನಾಟಕದ ಮತ್ತೊಬ್ಬ ಕನ್ನಡದ ಕಲಿಗಳಾದ ಶ್ರೀ ಗುಂಡಪ್ಪ ವಿಶ್ವನಾಥ್ ಅವರ ಕಣ್ಣಿಗೆ ಬಿದ್ದದ್ದೇ ತಡಾ ಕರ್ನಾಟಕದ ರಣಜೀ ತಂಡಕ್ಕೆ ಆಯ್ಕೆಯಾಗುತ್ತಾರೆ.

sri81989/90 ರಲ್ಲಿ ಕರ್ನಾಟಕ ತಂಡದ ಪರವಾಗಿ ಹೈದರಾಬಾದ್ ವಿರುದ್ಧ  ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ  ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭರವಸೆಯನ್ನು ಮೂಡಿಸುವುದಲ್ಲದೇ ಮುಂದಿನ ಆರು ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ಋತುವನ್ನು ಮುಗಿಸಿ, ಎರಡನೇ ಋತುವಿನಲ್ಲಿ 20 ವಿಕೆಟ್ ಪಡೆಯುವಷ್ಟರಲ್ಲಿಯೇ ಭಾರತದ ಪರ  18, ಆಕ್ಟೋಬರ್ 1991ರಂದು ಪಾಕ್ ವಿರುದ್ಧ ಶಾರ್ಜಾದಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರೆ, ಅದೇ ವರ್ಷ

29  ಅಕ್ಟೋಬರ್ 1991ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ಭಾರತದ ಪರ ಮೊದಲ ಟೆಸ್ಟ್ ಆಡುತ್ತಾರೆ. ಭಾರತದ ತಂಡದಲ್ಲಿ ಅದಾಗಲೇ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಅವರುಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾರಣ ಬಹಳ ದಿನಗಳ ವರೆಗೂ ಶ್ರೀನಾಥ್ ಬೆಂಚು ಕಾಯಿಸುವ ಪರಿಸ್ಥಿತಿಯುಂಟಾಗುತ್ತದೆ.

sri4ಕಪಿಲ್ ದೇವ್ ಅವರ ನಿವೃತ್ತಿಯಾದ ನಂತರ ಭಾರತದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಯ ತಂಡಕ್ಕೆ ಶ್ರೀನಾಥ್ ವೇಗದ ಬೌಲರ್ ಆಗಿ ಮೊದಲ  ಆಯ್ಕೆಯಾಗಿ ಪರಿಗಣಿಸಲ್ಪಡುವುದಲ್ಲದೇ,  ಕರ್ನಾಟಕದ ಮತ್ತೊಬ್ಬ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರ ಜೊತೆಯಲ್ಲಿ ಭಾರತದ ಪರ ಅತ್ಯುತ್ತಮ ವೇಗದ ಜೋಡಿ ಎನಿಸಿಸುತ್ತಾರೆ. ಅದೊಮ್ಮೆ ಭಾರತದ ತಂಡದಲ್ಲಿ ದ್ರಾವಿಡ್, ವಿಜಯ್ ಭಾರದ್ವಾಜ್, ಕುಂಬ್ಲೆ, ಜೋಷಿ, ವೆಂಕಿ, ದೊಡ್ಡಗಣೇಶ್  ಜೊತೆಯಲ್ಲಿ ಶ್ರೀನಾಥ್ ಹೀಗೆ  11ರ ಬಳಗದಲ್ಲಿ 5-6 ಕರ್ನಾಟಕದ ಆಟಗಾರೇ ಇದ್ದ ಸಂದರ್ಭದಲ್ಲಿಯೂ ಶ್ರೀನಾಥ್ ತಂಡದ ಪರ ಅವಿಭಾಜ್ಯ ಅಂಗವಾಗಿದ್ದರು.

ಅಂದೆಲ್ಲಾ ಭಾರತದ ಪಿಚ್‍ಗಳು ಹೆಚ್ಚಾಗಿ  ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತಿದ್ದ  ಕಾರಣ  ಆರಂಭದಲ್ಲಿ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆ ಎನಿಸಿದ್ದರೂ ನಂತರ ದಿನಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡು , ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್‍ಗಳನ್ನು ಪಡೆದರೆ, ಕರ್ನಾಟಕದ ಪರ . ಮೊದಲ ದರ್ಜೆ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆಯುವ ಮೂಲಕ ಎಲ್ಲಾ ವಿಧದ ಕ್ರಿಕೆಟ್ಟಿಗೂ ಸೈ ಎನಿಸಿಕೊಂಡರು.  ಬೌಲಿಂಗ್ ಜೊತೆಯಲ್ಲಿಯೇ ಕೆಳ ಹಂತದಲ್ಲಿ ಉತ್ತಮವಾದ ಹೊಡೆತಗಳೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುವ ಮೂಲಕ ಹತ್ತು ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.  ಚಂಡನ್ನು  ಅತ್ಯಂತ ಭರ್ಜರಿಯಾಗಿ ಬಾರಿಸುತ್ತಿದ್ದ ಕಾರಣ, ಏಕದಿನ ಪಂದ್ಯಗಳಲ್ಲಿ “ಪಿಂಚ್ ಹಿಟ್ಟರ್” ಅಗಿಯೂ  ನಿರ್ವಹಿಸಿರುವುದಲ್ಲದೇ, ಟೆಸ್ಟ್ ಪಂದ್ಯಗಳಲ್ಲಿ ಕೆಲವೊಮ್ಮೆ ನೈಟ್ ವಾಚ್ ಮೆನ್ ಆಗಿಯೂ ನಿಭಾಯಿಸಿದ್ದಾರೆ. ಕರ್ನಾಟಕ ಮತ್ತು  ಭಾರತದ ರಾಷ್ಟ್ರೀಯ ತಂಡವಲ್ಲದೇ,  ಇಂಗ್ಲೆಂಡಿನ  ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ.

ಸಾಧಾರಣವಾಗಿ ವೇಗದ ಬೌಲರ್ಗಳು 135-145ಕಿಮೀ ವೇಗದಲ್ಲಿ ಬೋಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, 1996 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಅವರು  ಗಂಟೆಗೆ 156 ಕಿ.ಮೀ ವೇಗದಲ್ಲಿ ಬೋಲಿಂಗ್ ಮಾಡಿದ್ದರೇ, ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ, ಗಂಟೆಗೆ 154.5 ಕಿ.ಮೀ ವೇಗದ ಎಸೆತವೊಂದನ್ನು ಎಸೆದಿರುವುದು  ಭಾರತದ ಪರ ಇಂದಿಗೂ ಅತ್ಯಂತ ಮಾರಕದ ಬೌಲಿಂಗ್ ದಾಖಲೆಯಾಗಿದೆ.

sri5ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ಫಾರ್ಮಿನಲ್ಲಿ ಇರುವಾಗಲೇ, ತಮ್ಮ 30ನೇ ವಯಸ್ಸಿನಲ್ಲಿ  1999 ರಲ್ಲಿ ಜ್ಯೋತ್ಸ್ನಾ ಅವರನ್ನು ವಿವಾಹವಾದರು. ಕಾಕತಾಳೀಯವೆಂದರೆ ಅದೇ ದಿನ ಕನ್ನಡ ಮತ್ತೊಬ್ಬ ಕಲಿ ಅನಿಲ್ ಕುಂಬ್ಲೆಯವರೂ ವಿವಾಹವಾದರು. ದುರಾದೃಷ್ಟವಷಾತ್ ನಾನಾ ಕಾರಣಗಳಿಂದಾಗಿ ಅವರ ವೈವಾಹಿಕ ಜೀವನ ಯಶಸ್ವಿಯಾಗದೆ ತಮ್ಮ ಮೊದಲ ಪತ್ರಿಯವರಿಗೆ ವಿಚ್ಚೇದನ ನೀಡಿದನ ನಂತರ 2008 ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

ನೀಳಕಾಯದ ಸಸ್ಯಾಹಾರಿಯಾಗಿ ವೇಗದ ಬೌಲರ್ ಆಗಿದ್ದ ಶ್ರೀನಾಥ್ ವಿಪರೀತ ಕ್ರಿಕೆಟ್ ಆಡುತ್ತಿದ್ದ ಪರಿಣಾಮವಾಗಿ ರೊಟೇಟರ್ ಕಫ್ ಖಾಯಿಲೆಗೆ ತುತ್ತಾಗಿ  ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಾರ್ಚ್ 1997 ರಿಂದ ನವೆಂಬರ್ ವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿತ್ತು.  ಆದಾದ ನಂತರ ಶ್ರೀನಾಥ್ ಮತ್ತೆ ಅದೇ ರೀತಿಯಲ್ಲಿ  ಚಂಡನ್ನುಎಸೆಯಬಲ್ಲರೇ ಎಂಬ ಎಲ್ಲರ ಅನುಮಾನಕ್ಕೆ ಸಡ್ಡು ಹೊಡೆಯುವಂತೆ ಬೌಲಿಂಗ್ ಮಾಡುವ ಮುಖಾಂತರ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. 2000ದ ನಂತರ ಭಾರತ ತಂಡಕ್ಕೆ  ಅಜಿತ್ ಅಗರ್ಕರ್, ಜಹೀರ್ ಖಾನ್ ರಂತಹ ವೇಗಿಗಳು ಸೇರಿಕೊಂಡಾಗ ನಿಧಾನವಾಗಿ ನೇಪತ್ಯಕ್ಕೆ ಸರಿಯ ತೊಡಗಿದ ಶ್ರೀನಾಥ್ 2002 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯ ನಂತರ ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.  ಆದರೆ ಅಂದಿನ ತಂಡದ ನಾಯಕ ಸೌರವ್ ಗಂಗೂಲಿ  ಅವರ ಒತ್ತಾಯದ ಮೇರೆಗೆ  2003 ರ ವಿಶ್ವಕಪ್‌ನವರೆಗೂ ಏಕದಿನ ಪಂದ್ಯಗಳನ್ನು ಮುಂದುವರೆಸಿ, ದಕ್ಷಿಣ ಆಫ್ರಿಕಾದಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ನಡೆದ 2003ರ ವಿಶ್ವಕಪ್ ಪಂದ್ಯಾಗಳಿಗಳ ನಂತರ   ಅವರು ಎಲ್ಲಾ ಪ್ರಕಾರದ ಕ್ರಿಕೆಟ್ಟಿನಿಂದ ನಿವೃತ್ತಿ ಘೋಷಿಸಿದರು.

sri2ತಮ್ಮ ನಿವೃತ್ತಿಯ ನಂತರ ಕೆಲ ಕಾಲ ವೀಕ್ಷಕ ವಿವರಣೆಕಾರರಾಗಿ ಗುರುತಿಸಿಕೊಂಡರೂ ನಂತರ ತಮ್ಮ ಸೌಮ್ಯ ಸ್ವಭಾವ ಮತ್ತು ಸನ್ನಡತೆ ಮತ್ತು ಕ್ರಿಕೆಟ್ ಬಗ್ಗೆ ಅವರಿಗಿದ್ದ ಅಪಾರವಾದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಏಪ್ರಿಲ್ 2006 ರಲ್ಲಿ, ಶ್ರೀನಾಥ್ ಅವರು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನಿಂದ ಮ್ಯಾಚ್ ರೆಫರಿಯಾಗಿ ಆಯ್ಕೆಯಾಗಿದ್ದಲ್ಲದೇ, 2007 ರ ವಿಶ್ವಕಪ್ನಲ್ಲಿ ಸೇವೆ ಸಲ್ಲಿಸಿದರು. ಇದುವರೆಗೂ ಅವರು 35 ಟೆಸ್ಟ್ ಪಂದ್ಯಗಳು, 194 ODIಗಳು ಮತ್ತು 60 T20I ಗಳಲ್ಲಿ ರೆಫರಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರ್ಷಗಳ ಹಿಂದೆ ಅನಿಲ್ ಕುಂಬ್ಲೆ ಅವರ ಸಾರಥ್ಯದಲ್ಲಿ  ಶ್ರೀನಾಥ್  ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದಲ್ಲದೇ  ಅವರ ಸಮಯದಲ್ಲೇ ಚಿನ್ನಸ್ವಾಮೀ ಕ್ರೀಡಾಂಗಣದ ನವೀಕರಣ ಮತ್ತು ನೆಲಮಂಗಲದ  ಬಳಿಯ ಆಲೂರಿನ ಮೈದಾನಗಳಲ್ಲದೇ ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಕ್ರೀಡಾಂಗಣಗಳು ಆರಂಭವಾಗಲು ಕಾರಣೀಭೂತರಾಗಿದ್ದಾರೆ.

ಶ್ರೀನಾಥ್ ಅವರ ಕೆಲವೊಂದು ದಾಖಲೆಗಳು ಈ ರೀತಿಯಾಗಿವೆ.

 • ಭಾರತದ ಪರ  ಏಕದಿನ ಪಂದ್ಯಾವಳಿಗಳಲ್ಲಿ 300  ವಿಕೆಟ್ ಪಡೆದ ಮೊದಲ ಆಟಗಾರ
 • ವೇಗದ ಬೌಲರ್ ಆಗಿ 1992, 1996, 1999 ಮತ್ತು 2003 ಹೀಗೆ  ಸತತವಾಗಿ 4 ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿರುವ ಏಕೈಕ ಭಾರತೀಯ ಆಟಗಾರ
 • ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್(44) ಕಬಳಿಸಿರುವ ಭಾರತೀಯ ಬೌಲರ್
 • ಕ್ರಿಕೆಟ್ಟಿನಲ್ಲಿ ಶ್ರೀನಾಥ್ ಅವರ ಕೊಡುಗೆಯನ್ನು ಮನ್ನಿಸಿ ಭಾರತ ಸರ್ಕಾರ  1999 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀನಾಥ್ ಅವರ ಕ್ರಿಕೆಟ್ ಬದುಕಿನ ಈ ಕೆಲವೊಂದು ರೋಚಕ ಘಟನೆಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಇರುತ್ತಾರೆ.

 • 1996 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ನಡೆಯುತ್ತಿದ್ದ ಟೈಟಾನ್ ಕಪ್‌ ಪಂದ್ಯದಲ್ಲಿ ಗೆಲ್ಲಲು 216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಮೊತ್ತ 164/8 ಆಗಿರುವಾಗ  88 ರನ್‌ಗಳಿಸಿ ಸಚಿನ್ ತೆಂಡೂಲ್ಕರ್ ಔಟಾದ ನಂತರ ಪಂದ್ಯ ಕೈಚೆಲ್ಲಿ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದಾಗ ಅನಿಲ್ ಕುಂಬ್ಲೆ ಅವರ ಜೊತೆ 9ನೇ ವಿಕೆಟ್ ಜೊತೆಯಾಟಕ್ಕೆ 52 ರನ್ ಸೇರಿಸಿದ ಶ್ರೀನಾಥ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೊಂದಿಗೆ 23 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿ  ಭಾರತ ತಂಡವನ್ನು ಫೈನಲ್‌ ತಲುಪಿಸಿದ್ದಲ್ಲದೇ, ರಾಜ್‌ಕೋಟ್‌ನಲ್ಲಿ ನಡೆದ ಫೈನಲ್ಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ತಂಡ ಪ್ರಶಸ್ತಿಯನ್ನು ಪಡೆಯುವುದರ ಕಾರಣೀಭೂತರಾದರು.
 • sri91999ರಲ್ಲಿ ದೆಹಲಿಯಲ್ಲಿ ನಡೆದ  ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸಿನಲ್ಲಿ ಅನಿಲ್ ಕುಂಬ್ಲೆ ಅದಾಗಲೇ 9 ವಿಕೆಟ್ ಪಡೆದಿದ್ದಾಗ ಮತ್ತೊಂದು ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ  ಶ್ರೀನಾಥ್ ಎಸೆತವೊಂದರಲ್ಲಿ ಪಾಕ್ ಆಟಗಾರ ಹೊಡೆದ ಚೆಂಡನ್ನು ಭಾರತದ ಆರಂಭಿಕ ಆಟಗಾರ ಸಡಗೊಪನ್ ರಮೇಶ್ ಹಿಡಿಯಲು ಪ್ರಯತ್ನಿಸಿದಾಗ, ಅನಿಲ್ ಕುಂಬ್ಳೆ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಲಿ ಎನ್ನುವ ಸದಾಶಯದಿಂದ  ಕ್ಯಾಚ್ ಹಿಡಿಯದಿರು ಎಂದು ಕೂಗಿದ್ದನ್ನು ಟಿವಿಯಲ್ಲಿ ಕೇಳಿ ಅಚ್ಚರಿ ಪಟ್ಟಿದ್ದೇವೆ. ನಂತರ ಎಲ್ಲಾ ಚೆಂಡುಗಳನ್ನು ವಿಕೆಟ್ ನಿಂದ ದೂರ ಎಸೆದ್ ತಮ್ಮ ಓವರ್ ಮುಗಿಸಿ ಮುಂದಿನ ಓವರಿನಲ್ಲಿ ಕುಂಬ್ಲೆ ಬೌಲಿಂಗಿನಲ್ಲಿ ವಾಸಿ ಅಕ್ರಮ್ ಔಟಾದಾಗ ಕುಂಬ್ಲೆ ಅವರನ್ನು ಭುಜದ ಮೇಲೆ ಎತ್ತಿ ಮೆರೆಸಾಡುವ ಮೂಲಕ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

12-13 ವರ್ಷಗಳ ಕಾಲ ಭಾರತದ ಪರ ಅಂತರಾಷ್ಟ್ರೀಯ ಪಂದ್ಯಗಳನ್ನು ದೇಶ ವಿದೇಶಗಳಲ್ಲಿ ಆಡಿದ ಶ್ರೀನಾಥ್, ವೇಗದ ಬೌಲರ್ ಆಗಿದ್ದರೂ ತಮ್ಮ ಇಡೀ ಕ್ರಿಕೆಟ್ ಜೀವನದಲ್ಲಿ ಎಂದಿಗೂ ಎದುರಾಳಿ ತಂಡದ ವಿರುದ್ಧ ಕೋಪತಾಪಗಳನ್ನು ತೋರದೇ ಸಹನಾಮೂರ್ತಿಯಂತಿದ್ದು ವಿಶ್ವಾದ್ಯಂತ  ಕನ್ನಡಿಗರ ಸೌಮ್ಯತನವನ್ನು ಎತ್ತಿ ಮೆರೆಸಿದ ಜಾವಗಲ್ ಶ್ರೀನಾಥ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

ರಚಿನ್ ರವೀಂದ್ರ

rac1ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಭಾರತದ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಬಂದಿಳಿದ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯರಿಗೆ ಎರಡು ಹೆಸರುಗಳು ಗಮನ ಸೆಳೆಯುವಂತಿದ್ದು ಒಂದು ಇಶ್ ಸೋಧಿಯದ್ದಾಗಿದರೆ ಮತ್ತೊಂದು ರಚಿನ್ ರವೀಂದ್ರ ಎನ್ನುವ ಆಟಗಾರರದ್ದಾಗಿತ್ತು. ಹಾಗೆ ನೋಡಿದರೆ  ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರಿಗೇನೂ ಕಡೆಮೆ ಇಲ್ಲ ದೀಪಕ್ ಪಟೇಲ್,  ಜಿತಿನ್ ಪಟೇಲ್, ರೋನಿ ಹಿರಾ, ತರುಣ್ ನೇತುಲಾ, ಜೀತ್ ರಾವಲ್ ಮುಂತಾದ ಭಾರತೀಯ ಮೂಲದವರು ಈಗಾಗಲೇ ನ್ಯೂಜಿಲೆಂಡ್ ತಂಡದ  ಪರ ಆಡಿದ್ದಾರೆ.  ಅವರಲ್ಲರ ನಡುವೆ ರಚಿನ್ ರವೀಂದ್ರ  ವಿಶೇಷವಾಗಿದ್ದು  ಅದರ ಸಂಪೂರ್ಣ ವಿವರಗಳು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

jvaಬೆಂಗಳೂರು ಮೂಲದ ಕ್ಲಬ್ ಕ್ರಿಕೆಟರ್ ಆಗಿದ್ದ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಶ್ರೀ ರವೀಂದ್ರ ಕೃಷ್ಣಮೂರ್ತಿ ಮತ್ತು​ ​ದೀಪಾ ಕೃಷ್ಣಮೂರ್ತಿಯರು  ಉಜ್ವಲ ಭವಿಷ್ಯವನ್ನು ಅರಸುತ್ತಾ 1990ರಲ್ಲಿ ನ್ಯೂಜಿಲ್ಯಾಂಡಿಗೆ ಹೋಗಿ  ಅಂತಿಮವಾಗಿ ಅಲ್ಲಿಯೇ ನೆಲೆಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಎಲ್ಲದ್ದಕ್ಕಿಂತಲೂ ವಿಶೇಷವೆಂದರೆ,  ಬೆಂಗಳೂರಿನಲ್ಲಿ  ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಮತ್ತು ಕರ್ನಾಟಕದ ತಂಡದ ಮಾಜೀ ನಾಯಕ ಮತ್ತು ಕೋಚ್ ಆಗಿದ್ದ  ಜೆ ಅರುಣ್ ಕುಮಾರ್ (ಜ್ಯಾಕ್) ಅವರೊಂದಿಗೆ  ಸ್ಥಳೀಯ ಕ್ರಿಕೆಟ್ ಆಡಿದ್ದ ರವೀಂದ್ರ ಕೃಷ್ಣಮೂರ್ತಿ ಅವರು  ನ್ಯೂಜಿಲೆಂಡ್ ನಲ್ಲಿಯೂ ಸಹಾ ಕ್ರಿಕೆಟ್ಟಿಗೆ ಉತ್ತಮವಾದ ಪ್ರೋತ್ಸಾಹವಿದ್ದದ್ದರಿಂದ ವಿಲ್ಲಿಂಗ್ಟನ್ನಿನಲ್ಲಿ ಹಟ್ ಹಾಕ್ಸ್ ಎಂಬ ಕ್ರಿಕೆಟ್ ಕ್ಲಬ್‌ವೊಂದನ್ನು ಆರಂಭಿಸಿ ಅಲ್ಲಿನ ಪುಟ್ಟ ಮಕ್ಕಳಿಗೆ ತರಭೇತಿಯನ್ನು ನೀಡುತ್ತಲೇ ತಮ್ಮ ಕ್ರಿಕೆಟ್ ದಾಹವನ್ನು ನೀಗಿಸಿಕೊಳ್ಳುತ್ತಿರುತ್ತಾರೆ. 18 ನವೆಂಬರ್ 1999 ರಂದು ರವೀಂದ್ರ ದಂಪತಿಗಳ ಬಾಳಿನಲ್ಲಿ ಮಗನೊಬ್ಬ ಆಗಮನವಾಗುತ್ತದೆ.

sachinತಮ್ಮ ಮುದ್ದಿನ ಮಗನಿಗೆ ರಚಿನ್ ಎಂದು ವಿಭಿನ್ನವಾಗಿ ಹೆಸರಿಟ್ಟಾಗ ಹುಬ್ಬೇರಿಸಿದವರಿಗೇನು ಕಡಿಮೆ ಇಲ್ಲ,  ಆದರೆ ಆ ಹೆಸರಿನ ಹಿಂದಿನ ಗೂಢಾರ್ಥ ಮತ್ತು ಭಾವಾರ್ಥಗಳನ್ನು ತಿಳಿದ ನಂತರ ಎಲ್ಲರೂ ಸಮಾಧಾನ ಪಟ್ಟುಕೊಳ್ಳುತ್ತಾರೆ.  ಹೌದು, ರವೀಂದ್ರ ಕೃಷ್ಣಮೂರ್ತಿಗಳು ಕರ್ನಾಟಕ ಮತ್ತು ಭಾರತ ಕ್ರಿಕೆಟ್ ತಂಡದ ದಂತಕಥೆಯಾದ  ರಾಹುಲ್ ದ್ರಾವಿಡ್ ಮತ್ತು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳಲ್ಪಡುವ ಸಚಿನ್ ತೆಂಡೂಲ್ಕರ್  ಅವರ ಅಪ್ಪಟ ಅಭಿಮಾನಿ. ಹಾಗಾಗಿ ರವೀ ಅವರು  ರಾಹುಲ್ ದ್ರಾವಿಡ್ ಹೆಸರಿನ “ರ” (RA) ಮತ್ತು ಸಚಿನ್ ಹೆಸರಿನ “ಚಿನ್” (CHIN) ಎರಡನ್ನೂ ಸೇರಿಸಿ ರಚಿನ್ ಎಂದು ಹೆಸರಿಟ್ಟಿದ್ದರು, ಈಗ ಅದೇ ರಚಿನ್ ಬೆಳೆದು ದೊಡ್ಡವನಾಗಿ ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆಯಾಗಿ ಭಾರತ ತಂಡದ ಪರ ಅದರಲ್ಲೂ ಭಾರತದಲ್ಲೇ ಸರಣಿಯನ್ನು ಆಡುತ್ತಿರುವುದು ಹೆಚ್ಚಿನ ವಿಶೇಷವಾಗಿದೆ.

ra4ಮನೆಯಲ್ಲಿ ಕ್ರಿಕೆಟ್ ವಾತಾವರಣವಿದ್ದ ಕಾರಣ ರಚಿನ್ ಸಹಾ ತನ್ನ ತಂದೆಯಂತೆಯೇ ಕ್ರಿಕೆಟ್ಟಿನಲ್ಲಿ ಆಸಕ್ತಿ ಬೆಳಸಿಕೊಂಡು ತನ್ನ ತಂದೆಯ ಹಾದಿಯಲ್ಲೇ ಸಾಗಿದರು. ಬಾಲ್ಯದಿಂದಲೇ ತಮ್ಮದೇ ಆದ ಹಟ್ ಹಾಕ್ಸ್ ಕ್ಲಬ್ಬಿನಲ್ಲಿಯೇ ತರಭೇತಿಯನ್ನು ಆರಂಭಿಸಿ ನಂತರ ನ್ಯೂಜಿಲೆಂಡ್​ನಲ್ಲಿ ಪ್ರತಿಷ್ಠಿತ ಕ್ರಿಕೆಟ್ ಕ್ಪಬ್ಬುಗಳಲ್ಲಿ ಟ್ರೈನಿಂಗ್  ಪಡೆಯಲು ಆರಂಭಿಸಿದರು. ಬೇಸಿಗೆ ಸಮಯ ಚಿಕ್ಕಾಗಲೆಲ್ಲಾ ಭಾರತಕ್ಕೆ ಬಂದು ಇಲ್ಲಿಯೂ ಸಹಾ ಕ್ರಿಕೆಟ್ ಅಭ್ಯಾಸ ಮಾಡುತ್ತಾ ಸಾಂಪ್ರದಾಯಿಕ ಎಡಗೈ ಸ್ಪಿನ್ನರ್ ಆಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಹೊಡೀ ಬಡೀ ಎನ್ನುವ ಎಡಗೈ ದಾಂಡಿಗರಾಗಿ ರೂಪುಗೊಂಡಿದ್ದಲ್ಲದೇ, ತಮ್ಮ ಪ್ರತಿಭೆಯಿಂದಾಗಿ ರಚಿನ್ ಕಿವೀಸ್​ ಕಿರಿಯರ ತಂಡದಲ್ಲಿ ಸ್ಥಾನ ಪಡೆದು 2016ರ ಮತ್ತು 2018 ರ ಅಂಡರ್ -19 ಕ್ರಿಕೆಟ್  ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸುತ್ತಾರೆ.  ಈಗಾಗಲೇ ತಿಳಿಸಿದಂತೆ ತಮ್ಮ ತಂದೆಯವರ ಒಡನಾಡಿ  ಜಾವಗಲ್ ಶ್ರೀನಾಥ್ ಮತ್ತು ಅರುಣ್ ಕುಮಾರ್  ಅವರ ಜೊತೆ ಸಂಪರ್ಕದಲ್ಲಿ ಇದ್ದು ಅವರಿಂದಲು  ಆಗ್ಗಾಗ್ಗೆ ಕ್ರಿಕೆಟ್ ಸಲಹೆಗಳನ್ನು ಪಡೆದು ಉತ್ತಮ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ.

rac2ಕಳೆದ ನಾಲ್ಕು ವರ್ಷಗಳಿಂದ ಆಂಧ್ರದ ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ ಮತ್ತು ರವೀಂದ್ರ ಅವರ ಹಟ್ ಹಾಕ್ಸ್ ಕ್ಲಬ್  ನಡುವಿನ ಒಪ್ಪಂದದಂತೆ ರಚಿನ್ ರವೀಂದ್ರ  ಪ್ರತಿ ವರ್ಷವೂ ಭಾರತದಲ್ಲಿ ಈ ಕ್ಲಬ್ಬಿಗ್ಗೆ ಬಂದು ತರಭೇತಿ ಪಡೆಯುತ್ತಿರುವುದಲ್ಲದೇ ಆ ತಂಡದ ಪರವಾಗಿ  ಕ್ರಿಕೆಟ್ ಆಡುತ್ತಿರುವುದು ವಿಶೇಷವಾಗಿದೆ. ರಚಿನ್ ಒಬ್ಬ ಭರವಸೆಯ ಯುವ ಕ್ರಿಕೆಟಿಗನಾಗಿದ್ದು  ಎಡಗೈ ಬ್ಯಾಟರ್ ಮತ್ತು ಎಡಗೈ ಸ್ಪಿನ್ ಆಗಿ ದೀರ್ಘ ಕಾಲದ ವರೆಗೂ ಮಿಂಚುವ ಭರವಸೆ ಇದೆ ಎಂದು  ಆಂಧ್ರಪ್ರದೇಶ ಕ್ರಿಕೆಟ್ ಅಕಾಡೆಮಿಯ ಕೋಚ್‌ಗಳಲ್ಲಿ ಒಬ್ಬರಾದ ಖತೀಬ್ ಸೈಯದ್ ಶಹಾಬುದ್ದೀನ್ ಅವರು ಹೇಳುತ್ತಾರೆ.

ra3ಇಷ್ಟೆಲ್ಲಾ ಭರವಸೆಯನ್ನು ಮೂಡಿಸಿದ್ದ ರಚಿನ್ ಕಳೆದ ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಹಿರಿಯರ ತಂಡದಲ್ಲಿ ಅವಕಾಶ ಲಭಿಸಿತ್ತದೆ. ಇದುವರೆವಿಗೂ ನ್ಯೂಜಿಲೆಂಡ್ ಪರ 6 ಟಿ20 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿರುವುದಲ್ಲದೇ ಕೆಳಕ್ರಮಾಂಕದಲ್ಲಿ ಬ್ಯಾಟ್ ಮಾಡಲು  ಸಿಕ್ಕ ಅವಕಾಶವನ್ನು ಉಪಯೀಗಿಸಿಕೊಂಡು ಇದುವರೆವಿಗೂ 47 ರನ್ ಬಾರಿಸುವ ಮೂಲಕ ಭರವಸೆಯ ಆಲ್ರೌಂಡರ್ ಆಗುವ ಲಕ್ಷಣವನ್ನು ಸಾಭೀತು ಪಡಿಸಿದ್ದಾನೆ. ಸಚಿನ್ ತೆಂಡೂಲ್ಕರ್ ಅವರನ್ನು ತನ್ನ ಬ್ಯಾಟಿಂಗ್ ಆರಾಧ್ಯ ದೈವ ಎಂದು ಉಲ್ಲೇಖಿಸಿರುವ ರಚಿನ್ ಅವರ ಆಟವನ್ನು ನೋಡುತ್ತಲೇ  ಬೆಳೆದ ನನಗೆ ಆಟವನ್ನು ಮುಂದುವರೆಸುತ್ತಲೇ ಹೋದಂತೆ ಸಚಿನ್ ಅವರ ಬಗ್ಗೆ ನನ್ನ ಅಭಿಮಾನವೂ ಬೆಳೆಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ra5ಭಾರತದ ವಿರುದ್ಧ ಮೊದಲ ಟಿ೨೦ ಪಂದದಲ್ಲಿ ನ್ಯೂಜಿಲೆಂಡ್ ಪರ 6ನೇ ಕ್ರಮಾಂಕದಲ್ಲಿ ಅಂತಿಮ ಓವರ್ನಲ್ಲಿ ಕಣಕ್ಕಿಳಿದ ಎಡಗೈ ಆಟಗಾರ ರಚಿನ್ 7 ರನ್​ಗಳಿಸಿದ್ದಾಗ ಮೊಹಮ್ಮದ್ ಸಿರಾಜ್​ ಎಸೆತದಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.  ತಂಡದಲ್ಲಿ ಸಾಕಷ್ಟು ಆಲ್ರೌಂಡರ್ಗಳು ಇರುವ ಕಾರಣ ಬೋಲಿಂಗ್ ಮಾಡಲು ಅವಕಾಶ ಸಿಗದಿದ್ದರೂ ಅತ್ಯುತ್ತಮವಾದ  ಕ್ಷೇತ್ರ ರಕ್ಷಣೆ ಮಾಡುವ ಮೂಲಕ ಪಂದ್ಯದುದ್ದಕ್ಕೂ ಗಮನ ಸೆಳೆಯುವ ಮೂಲಕ  ಅರೇ ಯಾರೀ ರಚಿನ್ ಎಂಬ ಕುತೂಹಲ ಮೂಡಿಸಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾಗ, ಆತ ನಮ್ಮ ಹೆಮ್ಮೆಯ ಕನ್ನಡಿಗ ಎಂದು ತಿಳಿದ ನಂತರವೇ ಈ ಲೇಖನಕ್ಕೆ ಪ್ರೇರಣಾದಾಕನಾಗಿರುವುದು ಗಮನಾರ್ಹ.

ಒಟ್ಟಿನಲ್ಲಿ ಇದುವರೆವಿಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಹಲವಾರು ಭಾರತೀಯ ಮೂಲದ ಆಟಗಾರರನ್ನು ನೋಡಿದ್ದ ನಮಗೆ  ಇದೀಗ ಬೆಂಗಳೂರು ಮೂಲದ ಕನ್ನಡಿಗನೇ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವುದು  ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ.  ಕ್ರಿಕೆಟ್ ಆಟಗಾರರಾಗ ಬೇಕು ಎಂದು ಕನಸನ್ನು ಕಂಡಿದ್ದ ರವೀಂದ್ರ ಅವರಿಗೆ ಇದೀಗ ಅವರ ಮಗ  ಅಂತರಾಷ್ಟ್ರೀಯ ಆಟಗಾರನಾಗಿ ಈಡೇರಿಸುತ್ತಿರುವುದು ಅದರಲ್ಲೂ ನ್ಯೂಜಿಲೆಂಡ್ ಪರ ನಮ್ಮೂರಿನ ಹುಡುಗ ಆಡುತ್ತಿದ್ದಾನೆ ಎಂಬುದೇ ಪ್ರತಿಯೊಬ್ಬ ಕನ್ನಡಿಗರಿಗೂ ವಿಶೇಷವಾಗಿದೆ. ಎಲ್ಲೇ ಇರು ಹೇಗೇ ಇರು, ಎಂದೆದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯಾ.. ಕನ್ನಡವೇ ನಿತ್ಯ ಎನ್ನುವಂತೆ ತನ್ನ ಪ್ರತಿಭೆಯ ಮೂಲಕ ವಿಶ್ವ ಕ್ರಿಕೆಟ್ಟಿನಲ್ಲಿ  ಕನ್ನಡದ ಕಂಪನ್ನು ಹರಡುತ್ತಿರುವ ರಚಿನ್ ರವೀಂದ್ರ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಸುಹಾಸ್ ಯತಿರಾಜ್

su1ಅ ಪುಟ್ಟ ಮಗುವಿಗೆ ಹುಟ್ಟುತ್ತಲೇ ಕಾಲಿನ ತೊಂದರೆಯಿಂದಾಗಿ ಆತ ಸರಿಯಾಗಿ ನಡೆಯಲಾರ ಎಂಬುದು ಗೊತ್ತಾಗುತ್ತಿದ್ದಂತೆಯೇ  ಆತನಿಗೆ ಭವಿಷ್ಯವೇ ಇಲ್ಲಾ ಎಂದು ಯೋಚಿಸುವವರೇ ಹೆಚ್ಚಾಗಿರುವಾಗ,  ಅದೇ ಮಗು ತನ್ನ ಅಂಗವೈಕುಲ್ಯತೆಯನ್ನು ಮೆಟ್ಟಿ ನಿಂತು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ  ಅತ್ಯುತ್ತಮವಾಗಿ ಓದಿ ಇಂಜೀನಿಯರ್ ಆಗಿದ್ದಲ್ಲದೇ ತನ್ನ ಸಾಮರ್ಧ್ಯದಿಂದ  ಐ.ಎ.ಎಸ್ ಮುಗಿಸಿ ಉತ್ತರಪ್ರದೇಶದಲ್ಲಿ ದಕ್ಷ ಜಿಲ್ಲಾಧಿಕಾರಿಯಾಗಿ  ಅನೇಕ ಪ್ರಶಸ್ತಿಗಳಿಸಿರುವುದಲ್ಲದೇ   ಇತ್ತೀಚಿನ ಅವರ ಚೊಚ್ಚಲ ಟೋಕಿಯೋ ಪ್ಯಾರಾ ಓಲಂಪಿಕ್ಸ್  ಗೇಮ್ಸ್‌ನಲ್ಲಿ ಬೆಳ್ಳಿಪದಕವನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಪತಾಕೆಯನ್ನು  ಹಾರಿಸಿರುವ ನಮ್ಮೆಲ್ಲರ ಹೆಮ್ಮೆಯ ಕನ್ನಡಿಗ ಲಾಳಿನಕೆರೆ ಯತಿರಾಜ್ ಸುಹಾಸ್ ಅವರ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಲಾಳನಕೆರೆ ಗ್ರಾಮದ ಮೂಲದವರಾದ  ಸರ್ಕಾರೀ ಅಧಿಕಾರಿಗಳಾಗಿದ್ದ ಶ್ರೀ ಯತಿರಾಜ್ ಮತ್ತು  ಜಯಶ್ರಿ  ದಂಪತಿಗಳಿಗೆ ಜುಲೈ 2, 1983ರಲ್ಲಿ  ಸುಹಾಸ್ ಜನಿಸುತ್ತಾರೆ.  ದುರಾದೃಷ್ಟವಷಾತ್  ಹುಟ್ಟಿನಿಂದಲೇ ಕಾಲಿನ ಸಮಸ್ಯೆಯನ್ನು ಹೊಂದಿದ್ದ ಸುಹಾಸ್  ಅವರನ್ನು  ಅವರ ತಂದೆ ತಾಯಿಯರು ಬಹಳ ಜತನದಿಂದ ನೋಡಿಕೊಳ್ಳುತ್ತಾರೆ. ಸರ್ಕಾರೀ ಕೆಲಸವಾಗಿದ್ದ ಕಾರಣ  ಊರಿಂದ ಊರಿಗೆ  ವರ್ಗವಾಗಿ ಸುಹಾಸ್ ತಮ್ಮ ಬಾಲ್ಯವನ್ನೆಲ್ಲಾ ಮಂಡ್ಯ, ಶಿವಮೊಗ್ಗ ಇತ್ಯಾದಿ ಕಡೆಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು,  ಓದಿನಲ್ಲಿ ಸದಾಕಾಲವೂ ಚುರುಕಾಗಿದ್ದ ಸುಹಾಸ್ ತಮ್ಮ ಪಿಯುಸಿ ಮುಗಿಸಿದ ನಂತರ  ಸುರತ್ಕಲ್ಲಿನ ಪ್ರತಿಷ್ಠಿತ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಯನ್ನು 2004ರಲ್ಲಿ ಪಡೆಯುತ್ತಾರೆ.

su3ಕಂಪ್ಯೂಟರ್ ಪದವಿ ಮುಗಿಸಿದ ನಂತರ ಕೆಲವು ವರ್ಷಗಳ ಕಾಲ ಬೆಂಗಳೂರಿನ ಸ್ಯಾಪ್‌ಲ್ಯಾಬ್ಸ್‌ ಕಂಪೆನಿಯಲ್ಲಿ ಕೆಲಸ ಮಾಡಿದ  ನಂತರ 2007ರಲ್ಲಿ  ಯುಪಿಎಸ್​​ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಆಫೀಸರ್ ಆಗುತ್ತಾರೆ.  ಆಗ್ರಾ, ಆಝಮ್ ಗಢ , ಮಥುರಾ, ಮಹಾರಾಜ್ ಗಂಜ್, ಹತ್ರಾಸ್, ಸೋನಾಭದ್ರ , ಜಾವುನಪುರ, ಅಲಹಾಬಾದ್ ( ಪ್ರಯಾಗ್ ರಾಜ್ ) ಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸುಹಾಸ್ ದಕ್ಷ, ಜನಪರ ಅಧಿಕಾರಿ ಎಂದು ಹೆಸರನ್ನು ಗಳಿಸುತ್ತಾರೆ.  ಕೋರೋನ ನಿಯಂತ್ರಣದಲ್ಲಿ ವಿಫಲರಾದ ಕಾರಣ ಗೌತಮ ಬುದ್ಧ ಜಿಲ್ಲೆಯ ಜಿಲ್ಲಾಧಿಕಾರಿ ಬಿ ಎನ್ ಸಿಂಗ್ ಅವರನ್ನು  ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಆದಿತ್ಯನಾಥ್ ತೀವ್ರ ತರಾಟೆಗೆ ತೆಗೆದುಕೊಂಡದ್ದನ್ನು ಸಹಿಸಲಾರದ ಬಿ ಎನ್ ಸಿಂಗ್ ಮೂರು ತಿಂಗಳ ರಜೆ ಹಾಕಿ ತೆರಳಿದ ಕೂಡಲೇ, ಅವರ ಜಾಗಕ್ಕೆ ಸಾಂಕ್ರಾಮಿಕ ರೋಗದ ನಡುವೆಯೂ ಪ್ರಯಾಗದ  ಕುಂಭಮೇಳವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದ ಯೋಗಿ ಆದಿತ್ಯನಾಥ್ ರ ನೀಲಿಗಣ್ಣಿನ ಹುಡುಗನಾಗಿದ್ದ ಸುಹಾಸ್ ಅವರನ್ನು ನೇಮಿಸುತ್ತಾರೆ. ವಹಿಸಿದ ಜವಾಬ್ಧಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಗೌತಮ ಬುದ್ಧ ಜಿಲ್ಲೆಯಲ್ಲಿ  ಮಿತಿಮೀರಿದ ಕೋವಿಡ್ ಅನ್ನು ನಿಯಂತ್ರಣಕ್ಕೆ ತಂದ ಕೀರ್ತಿಗೆ ಸುಹಾಸ್ ಪಾತ್ರರಾಗುವುದಲ್ಲದೇ, ಇದಕ್ಕು ಮುನ್ನಾ  ಉತ್ತರಪ್ರದೇಶದ ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಹೆಮ್ಮೆಯ ಗರಿಯೂ ಸುಹಾಸ್ ಮುಡಿಗೇರಿದೆ.

ಬಾಲ್ಯದಿಂದಲೇ ಓದಿನ ಜೊತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಚಿಕ್ಕಂದಿನಲ್ಲೇ ಸುಹಾಸ್‌ಗೆ ತಮ್ಮ ತಂದೆಯವರ ಮೂಲಕ ಬ್ಯಾಡ್ಮಿಂಟನ್‌ ಆಟ ಪರಿಚಯವಾಗಿತ್ತು. ತಂದೆ ಯತಿರಾಜ್‌ ಆಡುವಾಗ ಸುಹಾಸ್‌ ಸ್ಕೋರಿಂಗ್ ಮಾಡುತ್ತಲೇ ತಂದೆ ಆಡುವುದನ್ನು ನೋಡುತ್ತಲೇ ಬ್ಯಾಡ್ಮಿಂಟನ್ ಆಟವನ್ನು ಆಡಲು  ಕಲಿತುಕೊಳ್ಳುತ್ತಾರೆ. ಆರಂಭದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಬಾಲ್‌ ಬ್ಯಾಡ್ಮಿಂಟನ್‌ ಆಡುತ್ತಿದ್ದ ಸುಹಾಸ್ ನಂತರದ ದಿನಗಳಲ್ಲಿ ಶಟ್ಲ್‌ ಬ್ಯಾಡ್ಮಿಂಟನ್‌ನಲ್ಲಿ ಪರಿಣಿತಿ ಪಡೆಯುತ್ತಾರೆ.

ಹೀಗೆ ಬಾಲ್ಯದಲ್ಲಿ ಕಲಿತ ಆಟವನ್ನು ತಮ್ಮ ಬಿಡುವಿಲ್ಲದ ಕೆಲಸದ ಒತ್ತಡವನ್ನು ತೊಡೆದು ಹಾಕುವ ಸಲುವಾಗಿ ಮತ್ತೆ ಬ್ಯಾಡ್ಮಿಂಟನ್ ರ್ಯಾಕೆಟ್ ಹಿಡಿದ ಸುಹಾಸ್ ಅಲ್ಲಿಂದ ಹಿಂದುರಿಗೆ ನೋಡುವ ಪ್ರಮೇಯವೇ ಬರಲಿಲ್ಲ. ನೋಡ ನೋಡುತ್ತಿದ್ದಂತೆಯೇ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಯಶಸ್ಸು ಕಂಡ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಹಾಕಿ ಯಶಸ್ಸು ಕಾಣುತ್ತಾರೆ. ಏಶಿಯನ್ ಕ್ರೀಡಾಕೂಟದಲ್ಲೂ ಪದಕಗಳನ್ನು  ಗಳಿಸಿ ದೇಶಕ್ಕೆ ಹೆಮ್ಮೆ ತಂದಿದ್ದಲ್ಲದೇ ಪ್ರಸ್ತುತ ವರ್ಲ್ಡ್ ನಂಬರ್ 2 ಸ್ಥಾನದಲ್ಲಿರುವ ಕಾರಣ ಸಹಜವಾಗಿಯೇ  ಪ್ಯಾರಾಲಂಪಿಕ್ಸ್ ನಮ್ಮ ದೇಶವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆಯುತ್ತಾರೆ.

su5ಈ ಬಾರಿಯ  ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಟೂರ್ನಿಯಲ್ಲಿ ಮೊದಲಬಾರಿಗೆ ಆಡುತ್ತಿದ್ದ ಕಾರಣ ಅವರಿಗೆ ಯಾವುದೇ ರ್ಯಾಂಕ್ ಇಲ್ಲದಿದ್ದರಿಂದ ಅರ್ಹತಾ ಸುತ್ತು, ಪ್ರಧಾನ ಸುತ್ತು, ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳನ್ನು  ಒಂದೊಂದಾಗಿ ಗೆಲ್ಲುತ್ತಲೇ ಬಂದು ಕಡೆಗೆ ಫೈನಲ್ಲಿನಲ್ಲಿ  ಚಳಿಯಿಂದ ಕೂಡಿದ ಚೀನಾದಲ್ಲಿ ಕಠಿಣವಾದ ಪರಿಶ್ರಮದ ಹೊರತಾಗಿಯೂ ಸೋಲನ್ನು ಅನುಭವಿಸಿ ರಜತಪದಕವನ್ನು ಪಡೆಯುವ ಮೂಲಕ ದೇಶದ ಹೆಮ್ಮೆಯನ್ನು ವಿಶ್ವದಲ್ಲಿ ಹಾರಿಸುವುದರಲ್ಲಿ ಸುಹಾಸ್ ಸಫಲರಾಗುತ್ತಾರೆ. ಈ  ಮೂಲಕ ಇಂತಹ ಚಾಂಪಿಯನ್ ಶಿಪ್ ಗೆದ್ದ ದೇಶದ ಪ್ರಪ್ರಥಮ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಪದಕ ಗೆದ್ದ ನಂತರದ ಸಂದರ್ಶನದಲ್ಲಿ ಮಾತನಾಡುತ್ತಾ, ಬ್ಯಾಡ್ಮಿಂಟನ್‌ ನನ್ನ ಎರಡನೇ ಬದುಕಾಗಿದ್ದು ನಿತ್ಯವೂ ಕಠಿಣ ಶ್ರಮದಿಂದ ಅಭ್ಯಾಸದಲ್ಲಿ ತೊಡಗಿಸಿಕೊಂಡ ಕಾರಣ  ಯಶಸ್ಸನ್ನು ತಂದು ಕೊಟ್ಟಿದೆ. ತಂದೆ ಯತಿರಾಜ್‌ ತೀರಿಕೊಂಡ ನಂತರ ತಾಯಿ ಜಯಶ್ರೀ ಆವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ವಿಶೇಷ ಚೇತನರು ತಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಹಿಂಜರಿಯಬಾರದು. ಬದುಕಿನಲ್ಲಿ ಎಲ್ಲವನ್ನೂ ಸಾಧಿಸುವ ಛಲ ಇರಬೇಕು. ಹಾಗಿದ್ದಲ್ಲಿ ಮಾತ್ರ ಇಂತಹ ಹತ್ತು ಹಲವು ಸಾಧನೆಗಳು ಸಾಧ್ಯ  ಎಂದು ಹೇಳುವ ಮೂಲಕ  ವಿಶೇಷ ಚೇತನರಷ್ಟೇ ಅಲ್ಲದೇ ಉಳಿದ ಎಲ್ಲಾ ಕ್ರೀಡಾ ಪಟುಗಳಿಗೂ ಪ್ರೇರಣೆಯನ್ನು ತುಂಬಿದೆ ಎಂದರು ತಪ್ಪಾಗದು.

ಅದೇ ರೀತಿ ಮತ್ತೊಂದು ಸಂದರ್ಶನದಲ್ಲಿ ಫೈನಲ್ ಪಂದ್ಯದಲ್ಲಿ ಸೋಲುಂಡು ಬೆಳ್ಳಿ ಪದಕಗಳಿಸಿದ್ದಕ್ಕೆ ಹೇಗೆ ಅನ್ನಿಸುತ್ತದೆ ಎಂದು ಕೇಳಿದಾಗ, ತಕ್ಷಣವೇ ಪಂದ್ಯ ಸೋತ ಕೂಡಲೇ, ನನ್ನಲ್ಲಿ  ಮತ್ತಷ್ಟು ಛಲವನ್ನು ಮೂಡಿಸಿದ್ದಲ್ಲದೇ, ಇಂದಿನಿಂದಲೇ  ಮುಂದಿನ ಬಾರಿ ಚಿನ್ನವನ್ನು ಗೆಲ್ಲಲು ಪ್ರೇರಣೆ ನೀಡಿದೆ. ಚೊಚ್ಚಲು ಟೂರ್ನಿಯಲ್ಲಿಯೇ ಚಿನ್ನವನ್ನು ಗೆದ್ದಿದ್ದರೆ ಬಹುಶಃ ನನಗೆ ಸಂತೃಪ್ತತೆಯಿಂದಾಗಿ ಆಟವನ್ನು ಮುಂದುವರೆಸಲು ಇಚ್ಚಿಸುತ್ತಿರಲಿಲ್ಲ.  ಆದರೆ ಪಂದ್ಯವನ್ನು ಸೋಲುವ ಮುಖಾಂತರ ಭಗವಂತ ನನಗೆ ಮತ್ತೊಂದು ಅವಕಾಶವನ್ನು ನೀಡಿದ್ದಾನೆ ಎಂಬ ಭರವಸೆಯ ಧನಾತ್ಮಕ ಚಿಂತನೆಯಿಂದ ಮಾತನಾಡಿದ್ದು ನಿಜಕ್ಕೂ ಶ್ಲಾಘನೀಯವಾಗಿತ್ತು.

su2ಈಗಾಗಲೇ ತಮ್ಮ ಚುನಾವಣಾ ನಿರ್ವಹಣೆ, ಕಂದಾಯ ಆಡಳಿತ ಇತ್ಯಾದಿಗಳಲ್ಲಿ ದಕ್ಷ ಸೇವೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಸುಹಾಸ್ ಗಳಿಸಿದ್ದಾರೆ.

 • 2016 ರಲ್ಲಿ ಉತ್ತರ ಪ್ರದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಶ್ ಭಾರತಿ ಪ್ರಶಸ್ತಿಗೆ ಪಾತ್ರರಾದವರು.
 • ಡಿಸೆಂಬರ್  3 2016 ರಂದು ವಿಶ್ವ ವಿಕಲಚೇತನರ ದಿನದಂದು, ಅವರು ಪ್ಯಾರಾ ಕ್ರೀಡೆಗಳಲ್ಲಿನ ಅವರ ಸಾಧನೆಗಾಗಿ ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ.
 • ಪ್ಯಾರಾ ಓಲಂಪಿಕ್ಸಿನಲ್ಲಿ ಅವರ ಸಾಥನೆಯನ್ನು ಗುರುತಿಸಿ ಭಾರತ ಸರ್ಕಾರ 2021ರ ಸಾಲಿನ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

su4ಅಲಹಾಬಾದ್ ನಲ್ಲಿ ಅಪರ ಮುನಿಸಿಪಲ್ ಕಮಿಷನರ್ ಅಗಿರುವ  ರಿತು ಸುಹಾಸ್ ಅವರನ್ನು ವಿವಾಹವಾಗಿ 5 ವರ್ಷದ ಸಾನ್ವಿ  ಮತ್ತು  2 ವರ್ಷದ  ವಿವಾನ್ ಎಂಬ ಮಗನಿದ್ದಾರೆ. ಯಜಮಾನರಂತೆಯೇ ರಿತು ಆವರೂ ಸಹಾ  ಮಿಸೆಸ್ ಇಂಡಿಯಾ 2019 ಸ್ಪರ್ಧೆಯಲ್ಲಿ ಭಾಗವಹಿಸಿ ಶ್ರೀಮತಿ U.P ಆಗಿ ಆಯ್ಕೆಯಾಗಿರುವುದಲ್ಲದೇ,  ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರ ಜಾಗೃತಿಯ ಕುರಿತಾದ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಸ್ತಿಯನ್ನು ಪಡೆಯುವ ಮೂಲಕ ಪತಿಗೆ ತಕ್ಕ ಸತಿಯಾಗಿದ್ದಾರೆ.

ತಮ್ಮೆಲ್ಲಾ ದೌರ್ಬಲ್ಯಗಳ ಹೊರತಾಗಿಯೂ  ಪಠ್ಯ, ಪಠ್ಯೇತರ ಮತ್ತು ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವುದಲ್ಲದೇ, ತಮಗೆ ವಹಿಸಿದ ಎಲ್ಲಾ ಹುದ್ದೆಗಳಲ್ಲಿಯೂ ವ್ಯಾಪಕ ಜನಮನ್ನಣೆ ಗಳಿಸಿರುವ ಸುಹಾಸ್ ಅವರು ದೂರದ ಉತ್ತರ ಪ್ರದೇಶದಲ್ಲಿ ಇದ್ದರೂ  ತಮ್ಮ ಮಡದಿ ಮತ್ತು ಮಕ್ಕಳಿಗೆ ಕನ್ನಡವನ್ನು ಕಲಿಸಿಕೊಟ್ಟು ಮನ ಮತ್ತು ಮನೆಯಲ್ಲಿ  ಅಪ್ಪಟ ಕನ್ನಡತನವನ್ನು ಮೆರೆಸುತ್ತಾ ತಮ್ಮ ಸಾಧನೆಗಳಿಂದ ಕನ್ನಡಿಗರಿಗೆ ಹೆಮ್ಮೆಯನ್ನು ತರುತ್ತಿರುವ ಕಾರಣ, ನಿಸ್ಸಂದೇಹವಾಗಿಯೂ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಮಂಜಮ್ಮ ಜೋಗತಿ

ಸಾಮಾನ್ಯವಾಗಿ ನಗರ ಪ್ರದೇಶಗಳ ಸಿಗ್ನಲ್ ಗಳ ಬಳಿ , ಬಸ್ ಇಲ್ಲವೇ ರೈಲ್ವೇ ನಿಲ್ಡಾಣಗಳ ಬಳಿ ಹಿಂಡು ಹಿಂಡಾಗಿ ಚಪ್ಪಾಳೆ ಹೊಡೆದುಕೊಂಡು ಭಿಕ್ಷೆ ಬೇಡುವ ತೃತೀಯ ಲಿಂಗಿಗಳನ್ನು ನೋಡಿದ ಕೂಡಲೇ ಬಹುತೇಕರಿಗೆ ತಾತ್ಸಾರದ ಭಾವನೆ ಮೂಡುತ್ತದೆ. ಕಲವರೂ ಅಲ್ನೋಡೋ ಚಕ್ಕಾ ಬಂದ್ರೂ, ಅಲ್ನೋಡೋ ಕೋಜಾ ಬಂದ್ರೂ ಎಂದು ಛೇಡಿಸಿದರೆ, ಇನ್ನೂ ಕೆಲವರೂ ಇನ್ನೂ ಕೆಟ್ಟದಾಗಿ ಅಲ್ನೋಡೋ 9 ಎಂದು ಅಸಹ್ಯ  ಬರುವ  ರೀತಿಯಲ್ಲಿ ಆಡಿಕೊಳ್ಳುವುದನ್ನು ನೋಡಿದ್ದೇವೆ. ತಮಗೇ ಅರಿವಿಲ್ಲದಂತೆ ತಮ್ಮ ದೇಹದಲ್ಲಿ ಆಗುವ ಬದಲಾವಣೆಯಿಂದಾಗಿ, ತಮ್ಮದಲ್ಲದ ತಪ್ಪಿಗಾಗಿ  ಹುಟ್ಟಿದ ಮನೆಯವರಿಂದಲೇ ತಿರಸ್ಕೃತಗೊಂಡು, ಸಮಾಜದ ದೃಷ್ಠಿಯಲ್ಲಿ ಅಸ್ಪೃಷ್ಯರಾಗಿ ಜನರನ್ನು ಕಾಡಿ ಬೇಡಿ ಇಲ್ಲವೇ ಇನ್ನಾವೋದೋ ರೀತಿಯಲ್ಲಿ ಅಸಹ್ಯಕರ ಜೀವನ  ಸಾಗಿಸುವರ ಮಧ್ಯೆದಲ್ಲೇ ಕೆಸರಿನಲ್ಲಿ ಕಮಲ ಅರಳುವಂತೆ ತಮ್ಮ ಜನಪರ ಹೋರಾಟ ಮತ್ತು ಕಲಾ ಸಾಧನೆಗಳಿಗಾಗಿ   ಅಂತಹದೇ ತೃತೀಯ ಲಿಂಗಿಯಾದ ಮಂಜಮ್ಮ ಜೋಗತಿಯವರು ಈ ಬಾರಿ  ಪದ್ಮಶ್ರೀ ಪ್ರಶಸ್ತಿಯನ್ನು ಗಳಿಸಿರುವುದು  ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಅಂತಹ ಮಹಾನ್ ಸಾಧಕಿಯ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

man6ಬಳ್ಳಾರಿ ಜಿಲ್ಲೆಯ ತಗ್ಗಿನಮಠ ಎಂಬ ಊರಿನ  ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಗಳಿಗೆ  18-04-1964 ರಲ್ಲಿ  ಪುತ್ರನ ಜನನವಾಗುತ್ತದೆ. ಧರ್ಮಸ್ಥಳದ ಮಂಜುನಾಥನ ಅನುಗ್ರಹದಿಂದ ಹುಟ್ಟಿದ ಮಗುವಿಗೆ ಬಿ. ಮಂಜುನಾಥ ಶೆಟ್ಟಿ  ಎಂಬ ಹೆಸರನ್ನಿಡುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಎಲ್ಲಾ ಹುಡುಗರಂತೆ ಆಡು, ಓದು, ಕುಣಿತ ಸಡಗರ  ಎಲ್ಲವೂ ಇದ್ದ ಮಂಜುನಾಥನಿಗೆ ಹೈಸ್ಕೂಲ್ ಸೇರುವ ವೇಳೆಗೆ ಅವನ  ಶರೀರದಲ್ಲಿ ವಿಚಿತ್ರವಾದ ಬದಲಾವಣೆಗಳು ಆಗ ತೊಡಗಿದ್ದಲ್ಲದೇ ತನ್ನ ವಯಸ್ಸಿನ ಹುಡುಗರೊಂದಿಗೆ  ಸಹಜವಾಗಿ ಬೆರೆಯಲು ಮುಜುಗರವಾಗ ತೊಡಗಿದ್ದಲ್ಲದೇ ಇತ್ತ ಹುಡುಗಿಯರೂ  ಅವನನ್ನು ತಮ್ಮ ಬಳಿಗೆ ಸೇರಿಸಿಕೊಳ್ಳುತ್ತಿರಲಿಲ್ಲ.  ಇದೇ ಸಮಯದಲ್ಲಿ ಅವನಿಗೆ ಹೆಣ್ಣು ಮಕ್ಕಳ ಹಾಗೆ ಇರಬೇಕು ಆವರ ಹಾಗೆ ಬದುಕ ಬೇಕು ಎಂದೆನಿಸಿ, ಶಾಲೆಯ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನೇ ಹೆಚ್ಚಾಗಿ ಮಾಡತೊಡಗುತ್ತಾನೆ.

ಹತ್ತನೆ ತರಗತಿಗೆ ಬರುವಷ್ಟರಲ್ಲಿ  ಮಂಜುನಾಥಶೆಟ್ಟಿಯ ನಡವಳಿಕೆ ಸಂಪೂರ್ಣವಾಗಿ ಹೆಣ್ಣಿನಂತೆ ಬದಲಾದಾಗ, ಅವರ  ತಂದೆ ಮನಗನನ್ನು ಶಾಲೆಯಿಂದ ಬಿಡಿಸಿ ಪಿಗ್ಮಿ ಸಂಗ್ರಹಿಸುವ ಕೆಲಸಕ್ಕೆ ಹಚ್ಚುವುದಲ್ಲದೇ, ಮಂಜುನಾಥನಿಗೆ ಅರಿವೇ ಇಲ್ಲದಂತೆ ಹೆಂಗಸರಂತೆ ಹಾವ ಭಾವಗಳನ್ನು ತೋರಿದಾಗ ಬಡಿಗೆಯಿಂದ ಬಡಿಯುತ್ತಿರುತ್ತಾರೆ. ಅಗಾಗಲೇ  ಮಂಜುನಾಥನ ಮಾವನೊಬ್ಬ ಇದೇ ರೀತಿ ಬದಲಾಗಿ ಹೋಗಿದ್ದ ಕಾರಣ, ತಮ್ಮ ಮಗನೂ ಆ ರೀತಿಯಾಗಬಾರದೆಂಬ ಕಳವಳ  ಅವರದ್ದಾಗಿರುತ್ತದೆ.

man3ಈ ವಿಷಯ  ಅಕ್ಕ ಪಕ್ಕದವರಿಗೆ ತಿಳಿದರೆ ಏನೆಂದು ಕೊಂಡಾರು? ಎಂಬ ಭಯದಿಂದ ಆತನನ್ನು ಆತನ  ಅಜ್ಜಿಯ ಮನೆಗೆ ಕಳುಹಿಸಿದರೆ, ಅಲ್ಲಿ ಅವರ ಸೋದರಮವನೂ ಸಹಾ ಅದೇ ರೀತಿ ಸಿಕ್ಕ ಸಿಕ್ಕದ್ದಿರಿಂದಲೇ ಪ್ರತೀ ದಿನವೂ ಹೊಡೆದು ಬಡಿದು ಹಾಕುತ್ತಿದ್ದದ್ದಲ್ಲದೇ, ತಮ್ಮ ಮನೆತನದ ಮರ್ಯಾದೆಯನ್ನು ಉಳಿಸಿಕೊಳ್ಳುವ ಸಲುವಾಗಿ  ಮಂಜುನಾಥಶೆಟ್ಟಿಯ ಮೈಮೇಲೆ ಹುಲಿಗೆಮ್ಮ ಬರುತ್ತಾಳೆಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅವನನ್ನು ಹುಲಿಗೆಮ್ಮ ದೇವತೆಗೆ ಮುಡಿಪಾಗಿಡಲು ನಿರ್ಧರಿಸಿ 1985ರಲ್ಲಿ ಹೊಸಪೇಟೆ ತಾಲ್ಲೂಕು ಹುಲಿಗಿ ಗ್ರಾಮದ ಸುಪ್ರಸಿದ್ಧ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಕೊಡಿಸುತ್ತಾರೆ.

ಜೋಗತಿಯಾಗಿ ಮುತ್ತು ಕಟ್ಟಿಸಿಕೊಂಡ ನಂತರವು  ಮನೆಯವರ ಅನಾದರಣೆಯನ್ನು ಸಹಿಸಲಾರದೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದಾಗ  ಮನೆಯವರು ಚಿಗಟೇರಿ ಆಸ್ಪತ್ರೆಗೆ ಸೇರಿಸಿ ಬದುಕಿದ್ದಾನಾ ಇಲ್ಲವೇ ಸತ್ತು ಹೊಗಿದ್ದಾನಾ ಎಂಬುದನ್ನು ವಿಚಾರಿಸಲು ಮನೆಯವರು ಯಾರೂ ಬಾರದಿದ್ದಾಗ, ಮರ್ಯಾದೆ ಇಲ್ಲದ ಮನೆಯಲ್ಲಿ  ಇರುವ ಬದಲು ತಮ್ಮ ಒಬ್ಬೊಂಟಿಯಾಗಿ, ಸಮಾಜಮುಖಿಯಾಗಲು ನಿರ್ಧರಿಸುವ ಹೊತ್ತಿಗೆ ದೇವರ ರೂಪದಲ್ಲಿ  ಅವರಿಗೆ ಗುರುವಾಗಿ, ಅದಕ್ಕಿಂತಲೂ ಹೆಚ್ಚಾಗಿ ತಾಯಿಯಂತೆ ಕಾಳಮ್ಮ ಜೋಗತಿ ಸಿಕ್ಕ ನಂತರ ಅವರ ಬದುಕಿನ ದಿಕ್ಕೇ ಬದಲಾಗುತ್ತದೆ.  ಕಾಳಮ್ಮನವರು ಮಂಜಮ್ಮ ಜೋಗತಿಯನ್ನು ತಮ್ಮ ಮನೆ ಮಗಳಾಗಿ ಸಾಕಿದ್ದಲ್ಲದೇ  ತಾವು ಕಲಿತಿದ್ದ ಸಕಲ ವಿದ್ಯೆಯನ್ನು ಧಾರೆ ಎರೆಯುತ್ತಾರೆ.

ಹೀಗೆ ತರುಣನಾಗ ಬೇಕಿದ್ದ ಮಂಜುನಾಥಶೆಟ್ಟಿ ಮಂಜಮ್ಮಳಾಗಿ ರೂಪಾಂತರ ಹೊಂದಿದ ನಂತರ ಕಾಳಮ್ಮನವರ ಬಳಿ ಜಾನಪದ ನೃತ್ಯ, ಹಾಡುಗಾರಿಕೆ ಮತ್ತಿತರ ಸಾಂಪ್ರದಾಯಕ  ಕಲೆಗಳೆಲ್ಲವನ್ನೂ ಕರಗತ ಮಾಡಿಕೊಂಡು ಕೆಲವೇ ದಿನಗಳಲ್ಲಿ ಅತ್ಯುತ್ತಮ ಕಲಾವಿದೆಯಾಗಿ ಪರಿಪಕ್ವವಾಗಿ ತುಮಕೂರಿನಲ್ಲಿ ನಡೆದ ಅಖಿಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳನದಲ್ಲಿ ಕಲಾಪ್ರದರ್ಶನ ನೀಡುವುದರೊಂದಿಗೆ ಅವರ ಕಲಾಯಾನ ಆರಂಭವಾಗಿ ಅಲ್ಲಿಂದ ಮಂದೆ ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಡುತ್ತಾರೆ.

man4ಕೇವಲ ಹಾಡುಗಾರಿಕೆ ಮತ್ತು ನೃತ್ಯಕ್ಕೇ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೇ, ರಂಗಭೂಮಿ ಮೇಲೂ ತಮ್ಮ ನಟನಾ ಚಾತುರ್ಯದಿಂದ ಎಲ್ಲರ ಮನ್ನಣೆ ಗಳಿಸುತ್ತಾರೆ. ಶ್ರೀ ರೇಣುಕಾ ಚರಿತ್ರೆ ನಾಟಕದದಲ್ಲಿ  ಮುಖ್ಯ ಹಾಡುಗಾರ್ತಿ, ಗೌಡಶಾನಿ, ಕಾಮಧೇನು, ಪರಶುರಾಮ ಸೇರಿ ಒಟ್ಟು ಏಳು ಪಾತ್ರಗಳ ನಿರ್ವಹಣೆ ಮಾಡುವ ಮೂಲಕ ಅಧ್ಭುತವಾದ ಪ್ರತಿಭೆ ಎನಿಸಿಕೊಳ್ಳುತ್ತಾರೆ. ಮಂಜಮ್ಮನವರ ಮನೋಜ್ಞ ಅಭಿನಯದಿಂದಾಗಿ ಆ ನಾಟಕ ಸಾವಿರಾರು ಪ್ರದರ್ಶನಗಳನ್ನು ಕಾಣುತ್ತದೆ ಎಂದರೆ ಅವರ ನಟನಾ ಕೌಶಲ್ಯ ಹೇಗಿದ್ದಿರಬಹುದು ಎಂಬುದರ ಅರಿವಾಗುತ್ತದೆ. ಇದೇ ಸಂಧರ್ಭದಲ್ಲಿ ಅವರ ಗುರು ಕಾಳವ್ವ ಜೋಗತಿಯವರ ದೇಹಾಂತ್ಯವಾದಾಗ, ಅಕೆಯೇ ಗುರುವಿನ ಸ್ಥಾನದಲ್ಲಿ ನಿಂತು  ನೂರಾರು ಕಲಾವಿದರುಗಳಿಗೆ ಹಾಡುಗಾರಿಕೆ, ನೃತ್ಯ ಮತ್ತು ಅಭಿನಯಗಳನ್ನು ಹೇಳಿಕೊಡುತ್ತಾರೆ. ಇದೇ ಸಮಯದಲ್ಲಿ ಇವರದ್ದೇ ಮುಖ್ಯಪಾತ್ರವಿದ್ದ ಮೋಹಿನಿ ಭಸ್ಮಾಸುರ, ಹೇಮರೆಡ್ಡಿ ಮಲ್ಲಮ್ಮ, ಮೋಹನ್‌ಲಾಲಾ ಮುಂತಾದ ಪಾತ್ರಗಳಲ್ಲಿ ಅಭಿನಯ ಜನರ ಹೃನ್ಮನಗಳನ್ನು ಸೆಳಯುತ್ತದೆ.

ಹಂಪೆ ಉತ್ಸವ, ಬೀದರ್ ಉತ್ಸವ, ಜಾನಪದ ಲೋಕೋತ್ಸವ, ವಿಶ್ವ ಗೋ ಸಮ್ಮೇಳನ, ಜಾನಪದ ಜಾತ್ರೆ ಹೀಗೆ ಕೇವಲ ನಮ್ಮ ರಾಜ್ಯವಲ್ಲದೇ ದೇಶಾದ್ಯಂತ ನಡೆಯುತ್ತಿದ್ದ ಬಹುತೇಕ ಎಲ್ಲಾ ಪ್ರಮುಖ ಉತ್ಸವಗಳಲ್ಲಿ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ತಮ್ಮ ಕಲಾಪ್ರದರ್ಶನ ನೀಡುವ ಮೂಲಕ ಎಲ್ಲೆಡೆಯಲ್ಲಿಯೂ ಮೆಚ್ಚುಗೆಯನ್ನು ಗಳಿಸುತ್ತಾರೆ.

man7ಕೇವಲ ಕಲೆಗಷ್ಟೇ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೇ, ಅಶಕ್ತ ಹೆಣ್ಣುಮಕ್ಕಳು ದಿಕ್ಕೇ ಕಾಣದ ತೃತೀಯಲಿಂಗಿಗಳ ಪಾಲಿಗೆ ಪ್ರೇರಣಾದಾಯಕವಾಗಿದ್ದಾರೆ ಎಂದರು ಅತಿಶಯವಲ್ಲ.  ಸಮಾಜದಲ್ಲಿ ತೃತೀಯ ಲಿಂಗಿಗಳ ಬಗ್ಗೆ ಕುಹುಕದ ಮಾತುಗಳ ಮಧ್ಯೆಯೇ  ತಮ್ಮದೇ ಪ್ರತ್ಯೇಕ ಅಸ್ತಿತ್ವ ಮತ್ತು ಅಸ್ಮಿತೆ ಕಂಡುಕೊಂಡು ಅವರಿವರನ್ನು ಬೇಡುತ್ತಲೋ ಇಲ್ಲವೋ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ನಿತ್ಯವೂ ಬದುಕಿನಲ್ಲಿ  ಹೋರಾಟದ ಜೀವನ ನಡೆಸುವ ಅದೆಷ್ಟೋ ತೃತೀಯ ಲಿಂಗಿಗಳಿಗೆ ತಮ್ಮವರೂ ಕೂಡಾ  ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಂತಹ ಪಟ್ಟವನ್ನೂ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿದ  ಮಂಜಮ್ಮನವರ ಬದುಕೇ ಸ್ಪೂರ್ತಿದಾಯಕವೇ ಸರಿ.

man5ಸತತ ನಾಲ್ಕು ದಶಕಗಳಿಂದಲೂ ನಿರಂತರ ಕಲಾ ಸೇವೆಗೈದಿರುವ ಮಂಜಮ್ಮ ಜೋಗತಿ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.

 • 2006 : ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
 • 2007 : ಜಾನಪದ ಶ್ರೀ ಪ್ರಶಸ್ತಿ
 • 2008 : ಜಾನಪದ ಲೋಕ ಪ್ರಶಸ್ತಿ
 • 2010 : ಕನ್ನಡ ರಾಜ್ಯೋತ್ಸವ ಪ್ರಶಸ್ತಿ
 • 2012 : ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ
 • 2014 : ಸಮಾಜ ಸಖಿ ಪ್ರಶಸ್ತಿ
 • 2021 : ಪದ್ಮಶ್ರೀ ಪ್ರಶಸ್ತಿ

man2ಮಂಗಳಮುಖಿಯಾಗಿ ಎಲ್ಲರೂ ಅಚ್ಚರಿಪಡುವಂತೆ ಲಲಿತ ಕಲೆಯ ಜೊತೆಗೆ, ನಾಟಕ, ನಿರ್ದೇಶನ, ಹಾಡು, ಕುಣಿತ ಮುಂತಾದ ಮನೋರಂಜನಾತ್ಮಕ ಕಲೆಗಳನ್ನು ರೂಢಿಸಿಕೊಂಡಿರುವ ಮಂಜಮ್ಮ ಜೋಗತಿ ಅವರಿಗೆ ಸಾಧನೆಯನ್ನು ಗುರುತಿಸಿ ಅವರಿಗೆ 2021ರ ಸಾಲಿನ ಪದ್ಮಶ್ರೀ ಪುರಸ್ಕಾರವನ್ನು  ನೀಡುವುದರ ಮೂಲಕ  ಆ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿರುವುದರ ಜೊತೆಗೆ  ಅವರಂತಯೇ  ಇರುವ ನೂರಾರು ಸಾಧಕಿಯರಿಗೆ ಭರವಸೆಯ ಹಾದಿ ತೋರಿಸಿದಂತಾಗಿದೆ ಎಂದರೂ ತಪ್ಪಾಗದು.  ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರ ಕೈಗಳಿಂದ ಪ್ರಶಸ್ತಿಯನ್ನು ಸ್ವೀಕರಿಸುವ ಮೊದಲು ಅವರಿಗೆ ನಮಸ್ಕರಿಸಿ ತಮ್ಮ ಮಂಗಳಮುಖಿಯರ ಸಂಪ್ರಾದಾಯದ ರೀತಿಯಲ್ಲಿ ರಾಷ್ಟ್ರಪತಿಗಳಿಗೆ ದೃಷ್ಟಿಯನ್ನು ನಿವಾಳಿಸಿ ನೆರೆದಿದ್ದವರೆಲ್ಲರಿಗೂ  ಅಚ್ಚರಿಯನ್ನು ಮೂಡಿಸಿ ನಂತರ ನಸುನಗುತ್ತಲೇ  ದೇಶಾದ್ಯಂತ ಇರುವ ಸಾವಿರಾರು ಮಂಗಳ ಮುಖಿಯರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಅವರೆಲ್ಲರಿಗೂ  ಭರವಸೆಯನ್ನು ಮೂಡಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

man8ಚಿಕ್ಕವಯಸ್ಸಿನಲ್ಲಿಯೇ ಮನೆಯವರಿಂದ ತಿರಸ್ಕರಿಸಲ್ಪಟ್ಟು, ಮುಂದೆ ಸ್ಪಷ್ಟ ಗುರಿ, ಹಿಂದೆ ದಿಟ್ಟ ಗುರುವಿನ ಆಶೀರ್ವಾದದಿಂದ ಕಲೆಯ ಅರಾಧಕರಾಗಿ ಕಲೆಯ ಕೈ ಹಿಡಿದು ಸಾವಿರಾರು ಪ್ರದರ್ಶನಗಳನ್ನು ನೀಡುವ ಮೂಲಕ  ಲಕ್ಷಾಂತರ ಜನರುಗಳ ಮನಸ್ಸನ್ನು ಗೆದ್ದು  ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾ ಸಂಘಟನೆಗೇ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವುದ್ದಲ್ಲದೇ, ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಜನಪದ ಕಲೆಯ ಪೋಷಣೆ ಮತ್ತು ರಕ್ಷಣೆಯ ಕಾರ್ಯದಲ್ಲಿ ತಮ್ಮ ಛಲ, ಪರಿಶ್ರಮ, ಬದ್ಧತೆಗಳನ್ನು ತೋರಿಸುತ್ತಿರುವ ಮಂಜಮ್ಮ ಜೋಗತಿಯವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಅಕ್ಷರ ಸಂತ ಹರೇಕಳ ಹಾಜಬ್ಬ

hajabba1ಅದೊಮ್ಮೆ ಮಂಗಳೂರಿನಲ್ಲಿ ರಸ್ತೆಯಲ್ಲಿ ಕಿತ್ತಲೆ ಹಣ್ಣುಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬರ ಬಳಿ ಬಂದ ದಂಪತಿಗಳು ಕಾರಿನಲ್ಲಿಯೇ ಕುಳಿತುಕೊಂಡು ಹೌ ಮಚ್ ಈಸ್ ದಿಸ್? ಎಂದು ಆಂಗ್ಲ ಭಾಷೆಯಲ್ಲಿ ಕೇಳಿದಾಗ, ಕನ್ನಡ, ತುಳು ಮತ್ತು ಬ್ಯಾರಿ ಬಿಟ್ಟರೇ ಮತ್ತಾವುದೇ ಭಾಷೆಯ ಪರಿಚಯವಿರದಿದ್ದ ಆ ಕಿತ್ತಳೇ ವ್ಯಾಪಾರಿಗೆ ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಹೀಗೆ ಪರಸ್ಪರ ಭಾಷೆಯ ಸಂವಹನೆಯ ಕೊರತೆಯಿಂದಾಗಿ ಅವರಿಬ್ಬರ ನಡುವೆ ವ್ಯಾಪಾರ ವಹಿವಾಟು ನಡೆಯದೇ ಅವರು ಬೇರೆಯವರ ಬಳಿ ಹಣ್ಣುಗಳನ್ನು ಖರೀದಿಸಿದಾಗ, ಆ ಕಿತ್ತಳೇ ವ್ಯಾಪಾರಿಗೆ ಬಹಳ ಬೇಸರವಾಯಿತು. ತನಗೆ ಹೀಗೆ ಆಗಿದ್ದು, ತನ್ನ ಮಕ್ಕಳಿಗೆ ಮತ್ತು ತನ್ನ ಸ್ವಂತ ಹಳ್ಳಿಯ ಮಕ್ಕಳಿಗೆ ಅಗಬಾರದೆಂದು ನಿರ್ಧರಿಸಿ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ತಮ್ಮ ಊರಿನಲ್ಲಿ ಸರ್ಕಾರಿ ಶಾಲೆಯನ್ನು ಆರಂಭಿಸಿ ತನ್ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ನೀಡಿದ ಈ ಅಕ್ಷರ ಬ್ರಹ್ಮನ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವೂ 2020ರ ಸಾಲಿನ ಪದ್ಮಶ್ರೀ ನೀಡಿ ಗೌರವಿಸಿದೆ. ಅಂತಹ ಎಲೆಮರೆಕಾಯಿ ಹರೇಕಳ ಹಾಜಬ್ಬನವರ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಮಂಗಳೂರು ತಾಲ್ಲೂಕಿನ ಹರೇಕಳ ಎಂಬ ಸಣ್ಣ ಊರಿನಲ್ಲಿ ಕಡು ಬಡತನದ ಕುಟುಂಬದಲ್ಲಿ ಹಾಜಬ್ಬ ಅವರ ಜನನವಾಗುತ್ತದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಜೊತೆ ಹತ್ತಾರು ಮಕ್ಕಳು. ದುಡಿಯುವ ಕೈ ಒಂದಾರೆ, ತಿನ್ನುವ ಕೈಗಳು ಹತ್ತಾರು ಎಂಬಂತಹ ಪರಿಸ್ಥಿತಿ ಇದ್ದ ಕಾರಣ, ಬಾಲ್ಯದಲ್ಲಿ ಶಾಲೆಯ ಮೆಟ್ಟಿಲು ಹತ್ತಲಾಗದೇ ಮನೆಯ ಜೀವನೋಪಾಯದ ನೊಗ ಹೊತ್ತು ಚಿಕ್ಕಂದಿನಲ್ಲೇ ಬುಟ್ಟಿಯಲ್ಲಿ ಕಿತ್ತಳೆ ಹಣ್ಣುಗಳನ್ನು ಹೊತ್ತು ಕೊಂಡು ಬೀದಿ ಬೀದಿಯಲ್ಲಿ ಮಾರುವ ಕಾಯಕವನ್ನು ಕೈಗೆತ್ತಿ ಗೊಂಡರು. ಪ್ರತಿದಿನ ವ್ಯಾಪಾರದಲ್ಲಿ ಗಳಿಸುತ್ತಿದ ದಿನನಿತ್ಯದ ಕುಟುಂಬ ನಿರ್ವಹಣೆಗೇ ಸಾಕಾಗುತ್ತಿತ್ತು.

hajabba3ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಎಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸ್ವತಃ ಅನುಭವಿಸಿದ್ದನ್ನು ಈ ಲೇಖನದ ಆರಂಭದಲ್ಲೇ ತಿಳಿದ್ದಿದ್ದೇವೆ. ತಾನು ಶಿಕ್ಷಣದಿಂದ ವಂಚಿತನಾದರೂ ಮುಂದಿನ ಪೀಳಿಗೆ ಇಂತಹ ಪರಿಸ್ಥಿತಿ ಎದುರಿಸ ಬಾರದು. ಅದಕ್ಕೆ ಬೇರೆಯವನ್ನು ದೂರಿದರೆ ಫಲವಿಲ್ಲ, ಹಾಗಾಗಿ ತನ್ನಕೈಯ್ಯಲಿ ಏನಾದರೂ ಮಾಡಲೇ ಬೇಕು ಎಂಬ ಧೃಢಸಂಕಲ್ಪ್ವನ್ನು ತೊಟ್ಟು ತಲೆಯಮೇಲೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣುಗಳನ್ನು ಹೊತ್ತು ವ್ಯಾಪಾರ ಮಾಡುತ್ತಿದ್ದಾಗಲೇ ತಮ್ಮೂರಿನಲ್ಲಿ ಶಾಲೆಯೊಂದನ್ನು ಕಟ್ಟಬೇಕೆಂಬ ಆಸೆ ಚಿಗುರಿ. ಆ ಕನಸನ್ನು ಕೇವಲ ತಮ್ಮ ಮನದಲ್ಲೇ ಇಟ್ಟುಕೊಳ್ಳದೇ ಅದನ್ನು ತನ್ನ ಬದುಕಿನ ಗುರಿಯಾಗಿ ಸ್ವೀಕರಿಸಿ, ಜಗತ್ತಿಗೆ ಗೊತ್ತೇ ಇರದಿದ್ದ ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣರಾಗಿ ಜನಮಾನಸದಲ್ಲಿ ಅಕ್ಷರ ಸಂತನಾಗಿ ಮೂಡಿದ ಕಾರ್ಯ ನಿಜಕ್ಕೂ ಅನನ್ಯ, ಅಭಿನಂದನಾರ್ಹ ಮತ್ತು ಅನುಕರಣೀಯವೇ ಸರಿ.

hab5ಶಾಲೆಯನ್ನು ಕಟ್ಟುವ ಆವರ ಆಸೆ ಸುಖಾ ಸುಮ್ಮನೇ ಈಡೇರಲಿಲ್ಲ ಅದಕ್ಕಾಗಿ ಹಣ್ಣುಗಳನ್ನು ಮಾರುತ್ತಲೇ ಅಕ್ಷರಶಃ ಸರ್ಕಾರೀ ಕಛೇರಿಗಳಿಂದ ಕಛೇರಿಗೆ ಅಲೆದ ಕಷ್ಟ ಪಟ್ಟ ಪಾಡು ಅಷ್ಟಿಷ್ಟಲ್ಲ. ಗಿರೀಶ್ ಕಾಸರವಳ್ಳಿಯವರ ತಬರನ ಕಥೆ ಚಿತ್ರದಲ್ಲಿ ತಮ್ಮ ಪಿಂಚಣಿ ಹಣಕ್ಕಾಗಿ ಚಾರುಹಾಸನ್ ಅವರು ಕಛೇರಿಯಿಂದ ಕಛೇರಿಗೆ ಅಲೆದಾಡುವುದನ್ನು ನೆನಪಿಸಿಕೊಂಡರೆ, ಹಾಜಪ್ಪಾ ಅವಾರು ಕಿತ್ತು ತಿನ್ನುವ ಬಡತನ ಲೆಕ್ಕಿಸದೆ ಕಿತ್ತಳೆ ಮಾರಾಟದ ಮಧ್ಯೆ ಶಾಲೆಗಾಗಿ ಕಚೇರಿಗಳಿಗೆೆ ಅಲೆದಾಡಿದ ರೀತಿ ಅದಕ್ಕಿಂತಲು ಭಿನ್ನವಾಗಿರಲಿಲ್ಲ. ಅಂತಿಮವಾಗಿ ಜೂನ್ 17 2000ರಂದು ಹರೇಕಳ ನ್ಯೂಪಡು ಗೆ ಸರಕಾರಿ ಶಾಲೆ ಮಂಜೂರು ಮಾಡಿಸಿಕೊಂಡು ಬರುವುದರಲ್ಲಿ ಯಶಸ್ವಿಯಾದರು. ಶಾಲೆಗೆ ಸರ್ಕಾರದ ಮಂಜೂರಾತಿಯೇನೋ ಇತ್ತು ಆದರೆ ಶಾಲೆ ಆರಂಭಿಸಲು ಕಟ್ಟಡವೇ ಇರಲಿಲ್ಲ. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಅಲ್ಲೇ ಬೋರಲುಗುಡ್ಡದ ಬಳಿ 40 ಸೆಂಟ್ಸ್ ಜಾಗ ಖರೀದಿಸುವ ಸಲುವಾಗಿ ತಾವು ಕಿತ್ತಳೆ ಹಣ್ಣಿನ ವ್ಯಾಪಾರ ಮಾಡಿ ಮುಂದೆ ಉಪಯೋಗಕ್ಕೆ ಆಗಲಿ ಎಂದು ಉಳಿಸಿದ್ದ ಸುಮಾರು 25,000 ರೂ.ಗಳ ಜೊತೆ ಊರಿನ ಇತರೇ ದಾನಿಗಳ ಸಹಾಯದಿಂದ ಹಣವನ್ನು ಸಂಗ್ರಹಿಸಿ ಜಾಗದ ಖರೀದಿಯೊಂದಿಗೆ ಶಾಲೆಗೆ ಅವಶ್ಯವಿರುವ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ನೋಡ ನೋಡುತ್ತಿದ್ದಂತೆಯೇ ಅಲ್ಲೊಂದು ಸುಂದರವಾದ ಶಾಲೆ ತಲೆೆ ಎತ್ತಿತ್ತು. ಸ್ವಾರ್ಧಕ್ಕಲದೆ ದೇವಲೋಕದಿಂದ ಗಂಗೆಯನ್ನು ಭೂಲೋಕಕ್ಕೆ ತಂದ ಭಗೀರಥನಂತೆ ಸಾರ್ವಜನಿಕರಿಗಾಗಿ ಶಾಲೆಯನ್ನು ನಿರ್ಮಿಸಲು ಹಾಜಬ್ಬನವರು ಪಡುತ್ತಿರುವ ಕಷ್ಟವನ್ನು ನೋಡಿ ಅವರಿಗೆ ಸಹಾಯ ಮಾಡಲು ಹತ್ತಾರು ಕೈಗಳು ಜೋಡಿಸುತ್ತಿದ್ದಂತೆಯೇ ಶಾಲೆ ಆರಂಭವಾದಾಗ ಹಾಜಬ್ಬನವರ ಸಂಭ್ರಮಕ್ಕೆೆ ಎಣೆಯೇ ಇಲ್ಲ. ಶಾಲೆ ಆರಂಭವಾದಾಗಲಿಂದಲೂ ಇಂದಿನವರೆಗೂ ಶಾಲೆಯೇ ಅವರ ಬದುಕಿನ ಸರ್ವಸ್ವವಾಗಿ, ನೂರಾರು ಮಕ್ಕಳಿಗೆ ಅಕ್ಷರ ಭಾಗ್ಯವನ್ನು ಕರುಣಿಸುತ್ತಿರುವ ಸರಕಾರಿ ಶಾಲೆಗೆ ಇಂದಿಗೂ ಪ್ರತಿದಿನವೂ ಭೇಟಿ ನೀಡಿದಾಗಲೇ ಅವರ ಮನಸ್ಸಿಗೆ ಸಮಾಧಾನವಾಗುವುದು.

hag6ಸರಕಾರಿ ಶಾಲೆಯಾದರೂ ಅದು ತಮ್ಮದೇ ಖಾಸಗೀ ಶಾಲೆಯೇನೋ ಎನ್ನುವಂತೆ ಪ್ರೀತಿಸುವ ಹಾಜಬ್ಬನವರು ಶಾಲೆಗೆ ಬರುತ್ತಿರುವ ಮಕ್ಕಳ ಉತ್ಸಾಹವನ್ನು ಕಂಡು ಶಾಲೆಯನ್ನು ಹಿರಿಯ ಪ್ರಾಥಮಿಕದವರೆಗೆ ವಿಸ್ತರಿಸಲು ಪಣತೊಟ್ಟಿದ್ದಲ್ಲದೇ, ತಮ್ಮ ಅವಿರತ ಶ್ರಮದಿಂದ ಈಗ ಅದು ಪ್ರೌಢಶಾಲೆಯವರೆಗೂ ತಲುಪಿದೆ. 20 ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ ಈಗ 170 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಈಗ ಅಲ್ಲಿ ಕಾಲೇಜ್ ಮತ್ತು ಐಟಿಐ ಕೂಡಾ ಸ್ಥಾಪಿಸುವ ಕನಸು ಹಾಜಬ್ಬನವರದ್ದಾಗಿದ್ದು, ಅವರ ಛಲವನ್ನು ನೋಡಿದಲ್ಲಿ ಕೇವಲ ಪ್ರಥಮ ದರ್ಜೆ ಏಕೆ? ಪದವಿ ಶಿಕ್ಷಣದ ಕಾಲೇಜ್ ಕೂಡಾ ಇನ್ನು ಕೆಲವೇ ವರ್ಷಗಳಲ್ಲಿ ಆರಂಭವಾಗುವುದರಲ್ಲಿ ಸಂದೇಹವೇ ಇಲ್ಲ. ಹರೇಕಳದ ಹಾಜಬ್ಬರು ಕಟ್ಟಿಸಿದ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.. ಆದರೆ ಹಾಜಬ್ಬನವರು ಮಾತ್ರಾ ಇಂದಿಗೂ ಒಂದು ಬಿಳಿಯಂಗಿ, ಪೈಜಾಮ ಧರಿಸಿಕೊಂಡು ಕೈಯ್ಯಲ್ಲಿ ಹಣ್ಣಿನ ಬುಟ್ಟಿಯನ್ನು ಹಿಡಿದು ಹಾದಿ ಬೀದಿ ತಿರುಗುತ್ತಾರೆ.

hab4ಹಾಜಬ್ಬನವರ ಈ ರೀತಿಯ ಸಾಹಸವನ್ನು ಮೆಚ್ಚಿ ಹತ್ತು ಹಲವಾರು ಸಂಘಟನೆಗಳು ಅವರಿಗೆ ಪ್ರಶಸ್ತಿ ಪುರಸ್ಕಾರಗಳ ಜೊತೆ ಕೊಡುವ ನಗದನ್ನು ಸಹಾ ಎಷ್ಟೇ ಬಡತನ ಇದ್ದರೂ, ತಮ್ಮ ಮತ್ತು ತಮ್ಮ ಪತ್ರಿಯ ಆರೋಗ್ಯ ಕ್ಷೀಣಿಸುತ್ತಿದ್ದರೂ, ಎಷ್ಟೇ ಬಡತನವಿದ್ದರೂ, ಆ ಲಕ್ಷಾಂತರ ಮೊಬಲಗಿನ ಪ್ರಶಸ್ತಿ ಮೊತ್ತವನ್ನು ಶಾಲೆಯ ಅಭಿವೃದ್ಧಿಗಾಗಿಯೇ ವಿನಿಯೋಗಿಸುತ್ತಿದ್ದಾರೆ. ಇದರ ಜೊತೆಗೆ ಸುಮಾರು 70 ಲಕ್ಷ ರೂ. ದೇಣಿಗೆ- ಅನುದಾನವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿಕೊಟ್ಟಿರುವುದಲ್ಲದೇ, 20 ಸೆಂಟ್ಸ್ ಗಳ ಜಾಗದಿಂದ ಆರಂಭವಾದ ಶಾಲೆ ಇಂದು ಒಂದು ಎಕ್ರೆ ಮೂವತ್ಮೂರುವರೇ ಸೆಂಟ್ಸ್ ನಷ್ಟು ವಿಶಾಲವಾದ ಜಮೀನಿನಲ್ಲಿ ಸುಂದರವಾಗಿ ತಲೆ ಎತ್ತಿದೆ.

hab6
ಮಠ ಮಂದಿರಗಳಿಗೆ ಕೊಡುವ ದೀಪ ಆರತಿ ತಟ್ಟೆ ಟ್ಯೂಬ್ ಲೈಟ್ ಕಡೆಗೆ ಗಂಟೆಗಳ ಮೇಲೂ ದಾನಿಗಳ ಹೆಸರನ್ನು ದೊಡ್ಡದಾಗಿ ಹಾಕಿಸಿಕೊಳ್ಳುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗ ಶಾಲೆಗಾಗಿ ಇಷ್ಟೆಲ್ಲ ಶ್ರಮವಹಿಸಿದರೂ ಅಲ್ಲಿನ ಯಾವ ನಾಮಫಲಕದಲ್ಲಿಯೂ ಸಹಾ ಅವರ ಹೆಸರನ್ನು ಹಾಕಿಸಿಕೊಳ್ಳದಿರುವ, ಯಾವುದೇ ಪ್ರಚಾರವೂ ಬಯಸದ, ಪ್ರಶಸ್ತಿ ಪುರಸ್ಕಾರಗಳಿಂದ ದೂರವಿರುವ, ಎಲ್ಲರ ಒತ್ತಾಯಕ್ಕೆ ಮಣಿದು ಪ್ರಶಸ್ನಿಗಳನ್ನು ಸ್ವೀಕರಿಸಿ ಅದರ ಜೊತೆಗೆ ಬರುವ ಆಷ್ಟೂ ಹಣವನ್ನು ಸ್ವಾರ್ಥಕ್ಕೆ ಬಳಸದೇ ತಮ್ಮೂರಿನ ಶಾಲೆಗಾಗಿಯೇ ವಿನಿಯೋಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ಸರ್ಕಾರೀ ಶಾಲೆಗಾಗಿ ತಮ್ಮ ತನು ಮನ ಧನವನ್ನು ವಿನಿಯೋಗಿಸಿದ್ದರೂ ಹಾಜಬ್ಬರಿಗೆ ಸ್ವಂತದ್ದೊಂದು ಮನೆಯೂ ಇರಲಿಲ್ಲ, ಸೋರುವ ಮನೆಯಲ್ಲೀ ಕಾಲ ಕಳೆಯುತ್ತಿದ್ದದ್ದನ್ನು ಗಮನಿಸಿದ ಸಜ್ಜನರೊಬ್ಬರು ಇವರ ನಿಸ್ವಾರ್ಥ ಸೇವೆ ಮತ್ತು ತ್ಯಾಗವನ್ನು ಗಮನಿಸಿ ದಾನಿಗಳೊಬ್ಬರು ಒತ್ತಾಯ ಪೂರ್ವಕವಾಗಿ ಕಟ್ಟಿಸಿಕೊಟ್ಟ ಮನೆಯಲ್ಲಿ ಸರಳವಾಗಿ ಜೀವನವನ್ನು ನಡೆಸುತ್ತಿರುವುದು ಗಮನಾರ್ಹವಾಗಿದೆ.

ಹಾಜಬ್ಬರ ಈ ಸೇವೆ ಮತ್ತು ಸಾಧನೆಯನ್ನು ಗುರುತಿಸಿದ ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ತಮ್ಮ ಪ್ರಶಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರೂ ತಪ್ಪಾಗದು. ಹಾಗೆ ಪಡೆದ ಪ್ರಶಸ್ತಿ ಪುರಸ್ಕಾರಗಳಲ್ಲಿ ಪ್ರಮುಖವಾದವುಗಳು ಹೀಗಿವೆ

 • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
 • ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ
 • ರಮಾ ಗೋವಿಂದ, ಸಂದೇಶ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ
 • ಮಂಗಳೂರು, ಕುವೆಂಪು ಸೇರಿದಂತೆ ಮೂರು ವಿಶ್ವವಿದ್ಯಾನಿಲಯಗಳ ಪಠ್ಯದಲ್ಲಿ ಹಾಜಬ್ಬ ಸಾಧನೆಯನ್ನು ಪಠ್ಯವನ್ನಾಗಿಸಿ ಅವರಿಗೆ ವಿಶೇಷ ಗೌರವ ಅರ್ಪಿಸಿದೆ.
 • ಕರ್ನಾಟಕದಲ್ಲಿ ತುಳು ವಿಭಾಗದಲ್ಲಿ ಹಾಜಬ್ಬರ ಯಶೋಗಾಥೆ ಪಾಠವಾಗಿದೆ.
 • ಪಕ್ಕದ ಕೇರಳ ರಾಜ್ಯದಲ್ಲಿ ಕನ್ನಡ ಮಾಧ್ಯಮದ 8ನೇ ಮತ್ತು 10ನೇ ತರಗತಿಯ ಸಮಾಜ ಮತ್ತು ವಿಜ್ಞಾನ ಪಠ್ಯದಲ್ಲಿ ಪಾಠವಾಗಿದೆ.
 • ಅಂತಾರಾಷ್ಟ್ರೀಯ ಮಾಧ್ಯಮಗಲೂ ಹಾಜಬ್ಬ ಅವರ ಸಾಧನೆಗಳನ್ನು ಪ್ರಕಟಿಸಿವೆ.

hajabba2ಹಾಜಬ್ಬನವರ ಇಂತಹ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರವೂ ಸಹಾ ಹರೇಕಳ ಪಂಜಿ ಮಾಡಿಯ ಹಾಜಬ್ಬ ಅವರಿಗೆ ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿಯಾದ 2020ರ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿ ನೆನ್ನೆ ನವೆಂಬರ್ 8 2021 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು ನೀಡಿದ್ದಾರೆ. ವಿಮಾನದಲ್ಲಿ ಮಂಗಳೂರಿನಿಂದ ದೂರದ ದೆಹಲಿಗೆ ಪ್ರಯಾಣಿಸಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸುವಾಗಲೂ ತಮ್ಮ ನೆಚ್ಚಿನ ಉಡುಪಾದ ಬಿಳಿ ಪಂಚೆ ಮತ್ತು ಶರ್ಟ್‌ನಲ್ಲಿ ಅದೂ ಬರಿಗಾಲಿನಲ್ಲಿ ಪ್ರಶಸ್ತಿಯನ್ನು ಮುಗ್ಧವಾಗಿ ಅತ್ಯಂತ ಸಾಮಾನ್ಯ ನಾಗರೀಕರಂತೆ ನಡು ಬಗ್ಗಿಸಿ ಕೈಮುಗಿದುಕೊಂಡೇ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿ ಅಲ್ಲಿ ನೆರೆದಿದ್ದವರೆಲ್ಲರಿಗೂ ಅರೆಕ್ಷಣ ಅಚ್ಚರಿಗೆ ಒಳಗಾಗುವಂತೆ ಮಾಡಿದರು. ಹಾಜಬ್ಬನವರ ಈ ಸರಳತೆಯು ಕೇವಲ ಅಲ್ಲಿ ನೆರದಿದ್ದವರಲ್ಲದೇ, ರಾಷ್ಟ್ರಪತಿಗಳೂ ಕೂಡ ಅಚ್ಚರಿಗೊಳಗಾದರು.

ಪ್ರಶಸ್ತಿ ಪಡೆದದ್ದು ನಿಮಗೆ ಹೇಗನಿಸುತ್ತದೆ? ಎಂದು ಮಾಧ್ಯಮದವರು ಕೇಳಿದ್ದಕ್ಕೆ, ನಾನೊಬ್ಬ ದೇಶದ ಸಾಮಾನ್ಯ ಪ್ರಜೆ. ನನ್ನ ಕಾರ್ಯ ಮೆಚ್ಚಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಲ್ಲದೇ, ನಾನು ರಾಷ್ಟ್ರಪತಿ ಭವನದಲ್ಲಿ ಉಳಿದುಕೊಳ್ಳಲು ಯೋಗ್ಯತೆ ಇಲ್ಲದ ಮನುಷ್ಯ. ಸರ್ಕಾರ ನನ್ನಂತಹ ವ್ಯಕ್ತಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದೆ. ಇದರಲ್ಲಿ ಮಾಧ್ಯಮದ ಪಾತ್ರವೂ ಬಹಳ ದೊಡ್ಡದಿದೆ. ಎಲ್ಲರೂ ಸೇರಿ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ತಮಗೆ ಸಹಾಯ ಮಾಡಿದ ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳಿಗೆ ಪ್ರೀತಿಯಿಂದ ಹಾಜಬ್ಬನವರು ಧನ್ಯವಾದ ಅರ್ಪಿಸಿದ್ದದ್ದು ಗಮನಾರ್ಹವಾಗಿತ್ತು.

ಸಾಧನೆಗೆ ವಿದ್ಯೆಯ ಹಂಗಿಲ್ಲ, ಹಣದ ಅವಶ್ಯಕತೆಯಿಲ್ಲ. ಸಾಧಿಸುವ ಛಲವೊಂದಿದ್ದಲ್ಲಿ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿರುವ, ನಮ್ಮ ನಿಮ್ಮಂತಹ ನೂರಾರು ಜನರಿಗೆ ಪ್ರೇರಣೆಯಾಗಿರುವ ಹಾಜಪ್ಪನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್

ಪ್ರತೀ ವರ್ಷ ನವೆಂಬರ್ ತಿಂಗಳಿನ 30 ದಿನಗಳ ಕಾಲ ಕನ್ನಡ ನಾಡು, ನುಡಿ, ಲಲಿತ ಕಲೆ, ಸಾಹಿತ್ಯ ಸಂಗೀತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಪರಿಚಯಿಸುವ ಕನ್ನಡ ಕಲಿಗಳು ಎಂಬ ಮಾಲಿಕೆಯನ್ನು ನಮ್ಮ ಏನಂತೀರೀ? ಬ್ಲಾಗಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ರೂಢಿಮಾಡಿಕೊಂಡು ಬಂದಿದ್ದು ಮೂರನೇ ವರ್ಷಕ್ಕೂ ಅಂತಹ ಮಹನೀಯ ಕನ್ನಡಿಗರ ಪಟ್ಟಿಯಲ್ಲಿ ಖಂಡಿತವಾಗಿಯೂ ಇವರ ಹೆಸರು ಇರಲೇ ಇಲ್ಲ. ಆದರೆ ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೇ ಎನ್ನುವಂತೆ ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ನಮ್ಮನ್ನು ಅಗಲಿರುವ ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜಕುಮಾರ್ ಅವರು ನಮ್ಮ ಇಂದಿನ ಕನ್ನಡದ ಕಲಿಗಳಾಗಿದ್ದಾರೆ.

pun11

1975ರ ವೇಳೆಗೆ ಕನ್ನಡದ ವರನಟ ರಾಜಕುಮಾರರು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಅಂದಿನ ಮದ್ರಾಸ್ ಇಂದಿನ ಚೆನ್ನೈನಲ್ಲಿಯೇ ಬಹುತೇಕ ದಕ್ಷಿಣಭಾರತದ ಚಿತ್ರರಂಗದ ಚಟುವಟಿಕೆಗಳೆಲ್ಲವೂ ನಡೆಯುತ್ತಿದ್ದ ಕಾರಣ, ಅಲ್ಲಿಯೇ ಕೂಡು ಕುಟುಂಬದೊಂದಿಗೆ ಇದ್ದ ರಾಜಕುಮಾರ ಧರ್ಮಪತ್ನಿ ತುಂಬು ಗರ್ಭಿಣಿಯಾಗಿದ್ದ ಶ್ರೀಮತಿ ಪಾರ್ವತಮ್ಮನವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ರಾಜಕುಮಾರರು ಆ ಸಮಯದಲ್ಲಿ ಆ ಸ್ಥಳದಲ್ಲಿ ಇಲ್ಲದಿದ್ದ ಕಾರಣ, ನಿರ್ದೇಶಕ ಭಗವಾನ್ ಮತ್ತವರ ಪತ್ನಿ ಪಾರ್ವತಮ್ಮನವರನ್ನು ಆಸ್ಪತ್ರೆಗೆ ಸೇರಿಸಿದಾಗ, 17 ಮಾರ್ಚ್, 1975ರಲ್ಲಿ ಮುದ್ದಾದ ಗಂಡು ಮಗುವೊಂದಕ್ಕೆ ಜನ್ಮನೀಡುತ್ತಾರೆ. 1965ರಲ್ಲಿ ಬಿಡುಗಡೆಯಾಗಿ ರಾಜಕುಮಾರರಿಗೆ ಅತ್ಯಂತ ಕೀರ್ತಿಯನ್ನು ತಂದಿದ್ದ ಸತ್ಯಹರಿಶ್ಚಂದ್ರ ಸಿನಿಮಾದ ನೆನಪಿಗಾಗಿ ಆ ಪುಟ್ಟಕಂದನಿಗೆ ಲೋಹಿತ್ ಎಂದು ನಾಮಕರಣ ಮಾಡುತ್ತಾರೆ.

pun12

ಕಣ್ಣು ಮೂಗು ಹೋಲಿಕೆಯಲ್ಲಿ ಅಪ್ಪನ ತದ್ರೂಪಾದರೆ, ಬಣ್ಣದಲ್ಲಿ ಥೇಟ್ ಅಮ್ಮನ ಪ್ರತಿರೂಪವಾದ ಲೋಹಿತನಿಗೆ ಕೇವಲ 6 ತಿಂಗಳಾಗಿರುವಾಗಲೇ ನಿರ್ದೇಶಕ ವಿ. ಸೋಮಶೇಖರ್ ಪ್ರೇಮದ ಕಾಣಿಕೆ ಚಿತ್ರದಲ್ಲಿ ಅವರು ಮೊತ್ತ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರೆ, 1977ರಲ್ಲಿ ಕೇವಲ ಒಂದು ವರ್ಷದವನಾಗಿದ್ದಾಗ ವಿಜಯ್ ಅವರ ಸನಾದಿ ಅಪ್ಪಣ್ಣ ಚಿತ್ರದಲ್ಲಿ ರಾಜಕುಮಾರ್ ಅವರ ಮಗನಾಗಿ ಮೀನಿಗೆ ಈಜಲು ಹೇಳಿಕೊಡಬೇಕೆ ಎನ್ನುವಂತೆ ಅಧ್ಭುತವಾಗಿ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮುಖಾಂತರ ಸಂಪೂರ್ಣವಾಗಿ ಬಾಲನಟನಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ.

pun8

ನಂತರ ವಸಂತ ಗೀತ (1980), ಭಾಗ್ಯಂತ (1981), ಚಲಿಸುವ ಮೋಡಗಳು (1982), ಚಿತ್ರದಲ್ಲಿ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂಬ ಹಾಡನ್ನೂ ಹಾಡುವ ಮುಖಾಂತರ ಹಿನ್ನಲೆ ಗಾಯಕನಾಗಿಯೂ ಗುರುತಿಸಿಕೊಳ್ಳುತ್ತಾರೆ. ಇನ್ನು 1983ರಲ್ಲಿ ತೆರೆಗೆ ಬಂದ ಎರಡು ನಕ್ಷತ್ರಗಳು ಚಿತ್ರದಲ್ಲಿ ಗಾಯನದ ಜೊತೆ ದ್ವಿಪಾತ್ರಾಭಿನಯದಲ್ಲಿ ಸೈ ಎನಿಸಿಕೊಳ್ಳುತ್ತಾರೆ. 1983ರಲ್ಲಿ ಹಿರಣ್ಯಕಷಪುವಾಗಿ ರಾಜಕುಮಾರ್ ಮತ್ತು ಹರಿಭಕ್ತ ಪ್ರಹ್ಲಾದನಾಗಿ ಪುನೀತ್ ಅಭಿನಯವನ್ನು ಖಂಡಿತವಾಗಿಯೂ ಮರೆಯಲಾಗದು. 1985 ರಲ್ಲಿ ಬೆಟ್ಟದ ಹೂವು ಚಿತ್ರದಲ್ಲಿ ರಾಮಾಯಣ ದರ್ಶನಂ ಪುಸ್ತವನ್ನು ಕೊಳ್ಳುವ ಸಲುವಾಗಿ ಶೆರ್ಲಿ ಮೇಡಂಗಾಗಿ ಕಾಡಿನಿಂದ ಆರ್ಕಿಡ್ ಹೂವುಗಳನ್ನು ಆರಿಸಿ ತರುವ ರಾಮು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಕಾರಣ ಆ ಪಾತ್ರದ ಬಾಲ ನಟನೆಗಾಗಿ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಇಲ್ಲಿಂದ ನಂತರ ಶಿವರಾಜ ಕುಮಾರ್ ಅವರನ್ನು ನಾಯಕರಾಗಿ ತೆರೆಯ ಮೇಲೆ ತರುವುದರಲ್ಲಿ ನಿರತರಾದ ರಾಜ್ ಕುಟುಂಬ ಲೋಹಿತ್ ಅವರ ಬಾಲನಟನೆಗೆ ಬ್ರೇಕ್ ಹಾಕುತ್ತಾರೆ.

pun10

ಈ ಮಧ್ಯೆ ಹರಿಶ್ಚಂದ್ರನ ಮಗ ಲೋಹಿತ್ ಅಲ್ಪಾಯುಷಿ ಆದ ಕಾರಣ ಲೋಹಿತ್ ಎಂಬ ಹೆಸರನ್ನು ಜ್ಯೋತಿಷ್ಯರೊಬ್ಬರ ಸಲಹೆಯಂತೆ ಪುನೀತ್ ಎಂಬ ಹೆಸರಾಗಿ ಬದಲಾಯಿಲಾಗುತ್ತದೆ. ಮುಂದೆ ಅಪ್ಪಾ ಅಮ್ಮನ ಮುದ್ದಿನ ಕೂಸಾಗಿ ಅಮ್ಮನ ಸೆರಗನ್ನೇ ಹಿಡಿದುಕೊಂಡು ಎಲ್ಲಾ ಕಡೆ ಆಲೆಯುತ್ತಿದ ಕಾರಣ, ಶಾಲೆಗೆ ಹೋಗಿ ಶಾಸ್ತ್ರೀಯವಾಗಿ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಇದೇ ಸಮಯಕ್ಕೆ ಕನ್ನಡ ಚಲನಚಿತ್ರರಂಗ ಮದ್ರಾಸಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ, ರಾಜ್ ಕುಟುಂಬ ಸಹಾ ಬೆಂಗಳೂರಿನ ಸದಾಶಿವ ನಗರದ ಮನೆಗೆ ಬಂದಾಗ ಖಾಸಗೀ ಬೋಧನೆ (private tuition) ಮೂಲಕ ಆಗುತ್ತದೆ. ಇದೇ ಸಮಯದಲ್ಲಿಯೇ ನೃತ್ಯ ಮತ್ತು ಚಮತ್ಕಾರಿಕ (acrobatics) ಕಲೆಯನ್ನು ಕರಗತ ಮಾಡಿಕೊಳ್ಳುತ್ತಲೇ ತಂದೆಯವರ ಪರುಷುರಾಮ ಚಿತ್ರದಲ್ಲಿ ಕೈಲಾಸಂ ಅವರ ಪ್ರಖ್ಯಾತ ಹಾಡು ನಮ್ಮ ತಿಪ್ಪಾರಳ್ಳಿ ಬಲು ದೂರಾ ನಡೆಯಕ್ ಬಲು ದೂರಾ ಹಾಡನ್ನು ಹಾಡಿದ್ದಲ್ಲದೇ ಅದಕ್ಕೆ ಅತ್ಯುತ್ತಮವಾಗಿ ನೃತ್ಯವನ್ನು ಮಾಡುವ ಮುಖಾಂತರ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಾರೆ.

ಇವೆಲ್ಲಾ ಆಗುವಷ್ಟರಲ್ಲಿ ಬಾಲ್ಯವಸ್ಥೆಯಿಂದ ತರುಣವಸ್ಥೆಗೆ ಬಂದಿದ್ದ ಪುನೀತ್ ಅವರಿಗೆ ತಂದೆಯವರ ನಾಮಬಲ, ಅಮ್ಮನ ಪ್ರೀತಿ, ಜೊತೆಗೆ ತನ್ನದೇ ಆದ ಛಾಪು ಎಲ್ಲವೂ ಇದ್ದ ಕೆಲವು ಸಹವಾಸ ದೋಷದಿಂದ ತಂದೆಗೆ ತಕ್ಕ ಮಗನಾಗ ಬೇಕಾದವರು ದಾರಿತಪ್ಪಿದ ಮಗನಾಗುವ ಜಾಡನ್ನು ಹಿಡಿಯುತ್ತಾರೆ. 1998ರಲ್ಲಿ 22 ವರ್ಷದ ಯುವಕ ಪುನೀತ್ ಆವರಿಗಿದ್ದ ಪ್ರಭಾವವನ್ನು ದುರ್ಬಳಕೆ ಮಾಡಿಕೊಳ್ಳುವ ದುರಾಲೋಚನೆಯಿಂದ ಅವರ ಬಾಲ್ಯ ಸ್ನೇಹಿತರೇ ವ್ಯವಹಾರದ ಗಂಧಗಾಳಿಯೇ ಗೊತ್ತಿರದ ಪುನೀತ್ ಅವರನ್ನು ಪುಸಲಾಯಿಸಿ ಗ್ರಾನೈಟ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಸೂಚಿಸುವುದಲ್ಲದೇ, ಇದರಲ್ಲಿ ಒಳ್ಳೆಯ ಲಾಭ ಇದೆ. ಗ್ರ್ಯಾನೈಟ್ಗಳನ್ನು ಕ್ವಾರಿಗಳಿಂದ ಖರೀದಿ ಮಾಡಿ ಬೆಂಗಳೂರಿಗೆ ತಂದು ಮಾರಿದಲ್ಲಿ ಸುಲಭವಾಗಿ ಲಕ್ಷಾಂತರ ಹಣಗಳಿಸಬಹುದು. ಗಣಿಗಾರಿಕೆ ಇಲಾಖೆಯವರು ತಪಾಸಣೆಗೆ ಬಂದಲ್ಲಿ, ಪುನೀತ್ ರಾಜಕುಮಾರ್ ಅವರದ್ದು ಎಂದು ಹೇಳಿದರೆ ಸಾಕು ಯಾವುದೇ ತಪಾಸಣೆ ಇಲ್ಲದೇ ಬಿಟ್ಟು ಬಿಡುತ್ತಾರೆ. ನೀವು ಸುಮ್ಮನೆ ಬಂಡವಾಳ ಹಾಕಿ ಸ್ಲೀಪಿಂಗ್ ಪಾರ್ಟ್ನರ್ ಆಗಿದ್ದರೆ ಸಾಕು ಉಳಿದಿದ್ದೆಲ್ಲವನ್ನೂ ನಾವು ನೋಡ್ಕೋತೀವಿ ಎಂದು ಭರವಸೆಯನ್ನು ಹುಟ್ಟಿಸಿ ಪುನೀತ್ ಅವರನ್ನು ತಪ್ಪು ದಾರಿಗೆ ಎಳೆಯುವುದಲ್ಲದೇ, ಕೆಲವೇ ದಿನಗಳಲ್ಲಿ ಪುನೀತ್ ಅವರ ಅರಿವಿಗೆ ಬಾರದಂತೆ ಕಳ್ಳ ವ್ಯವಹಾರಗಳನ್ನು ಮಾಡುವ ಮೂಲಕ ರಾಜ್ ಕುಟುಂಬಕ್ಕೆ ಕೆಟ್ಟ ಹೆಸರನ್ನು ತರುವ ಕೆಲಸ ಮಾಡುತ್ತಾರೆ. ಇದೇ ಸಮಯದಲ್ಲಿ ರಾಜ್ ಕುಟುಂಬದ ಆಪ್ತರಾಗಿದ್ದ ಮತ್ತು ಬೆಂಗಳೂರಿನ ಪೋಲಿಸ್ ಕಮೀಶಿನರ್ ಆಗಿದ್ದ ಕೆಂಪಯ್ಯ ನವರು ಪುನೀತ್ ಅವರನ್ನು ಕರೆದು ಬುದ್ಧಿವಾದ ಹೇಳಿದ್ದು ಅವರ ಬದುಕಿನಲ್ಲಿ ಬಾರೀ ತಿರುವನ್ನು ಪಡೆದುಕೊಳ್ಳುತ್ತದೆ.

pun13

ಅದಾಗಲೇ ಬಾಲ ನಟನಾಗಿ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿಗಳನ್ನು ಪಡೆದಿದ್ದರೂ, ಚಲನಚಿತ್ರಗಳಲ್ಲಿ ಮುಂದೆ ನಟಿಸಲೇ ಬಾರದೆಂಬ ನಿರ್ಧಾರ ತಳೆದಿದ್ದ ಪುನೀತ್ ಮತ್ತೆ ತಮ್ಮ ನಿರ್ಧಾರವನ್ನು ಬದಲಿಸಿ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಲ್ಲದೇ ಧೃತಿ ಮತ್ತು ವಂದಿತ ಎಂಬ ಇಬ್ಬರು ಮುದ್ದಾದ ಮಕ್ಕಳ ತಂದೆಯಾಗುತ್ತಾರೆ.

ನಿಜ ಹೇಳಬೇಕೆಂದರೆ, ಇಲ್ಲಿಂದ ಅವರು ತಮ್ಮ ಜೀವನದಲ್ಲಿ ತಂದು ಕೊಂಡ ಬದಲಾವಣೆ ಅಲ್ಲಿಂದ ಅವರ ಜೀವನದಲ್ಲಿ ತಂದು ಕೊಂಡ ಬದಲಾವಣೆ ನಿಜಕ್ಕೂ ಅದ್ಭುತ, ಅನನ್ಯ ಮತ್ತು ಅನುಕರಣೀಯವೇ ಸರಿ. 2002ರಲ್ಲಿ ತಮ್ಮದೇ ವಜ್ರೇಶ್ವರಿ ಬ್ಯಾನರ್ ಅಡಿಯಲ್ಲಿ ನಾಯಕನಾಗಿ ಅಪ್ಪು ಎಂಬ ಚಿತ್ರದ ಮೂಲಕ ಭರ್ಜರಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ನೋಡ ನೋಡುತ್ತಿದ್ದಂತೆಯೇ ಮುಟ್ಟಿದ್ದೆಲ್ಲಾ ಚಿನ್ನವಾಗಿ, ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ರಾಜಕುಮಾರ, ಯುವರತ್ನ, ಸೇರಿದಂತೆ ಚಿತ್ರಗಳೆಲ್ಲವೂ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿಯಾಗಿ ಪವರ್ ಸ್ಟಾರ್ ಎಂಬ ಬಿರುದಾಂಕಿತರಾಗುತ್ತಾರೆ.

ಈ ಮಧ್ಯೆ ಏಪ್ರಿಲ್ 12, 2006 ರಂದು ವರನಟ ರಾಜಕುಮಾರರನ್ನು ಕಳೆದುಕೊಂಡ ನಂತರ ಹ್ಯಾಟ್ರಿಕ್ ಹೀರೋ ಎಂಬ ಹೆಸರನ್ನು ಪಡೆದಾಗಿದ್ದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರುಗಳು ಇದ್ದರೂ ಬಣ್ಣದ ಹೊರತಾಗಿ ನೋಡಲು ಬಹುತೇಕ ರಾಜಕುಮಾರರಂತೆಯೇ ಇದ್ದ ಪುನೀತ್ ತಂದೆಯವರು ಸದ್ದಿಲ್ಲದೇ ಮಾಡುತ್ತಿದ್ದ ಎಲ್ಲಾ ಸಾಮಾಜಿಕ ಚಟುವಟುಕೆಗಳಿಗೂ ರಾಯಭಾರಿಗಳಾಗಿ ಮುಂದುವರಿಸಿಕೊಂಡು ಹೋಗುವುದಲ್ಲದೇ, ತಂದೆಯಂತೆಯೇ ಅವರ ಎಲ್ಲಾ ಚಿತ್ರಗಳಲ್ಲಿಯೂ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಸಮಾಜಕ್ಕೆ ತಿಳಿವಳಿಯನ್ನು ನೀಡುವಂತಹ ಚಿತ್ರಗಳಲ್ಲಿಯೇ ತೊಡಗಿಸಿಕೊಳ್ಳುತ್ತಾರೆ.

ಇಷ್ಟರ ಮಧ್ಯೆ ಹಿಂದಿಯಲ್ಲಿ ಅತ್ಯಂತ ಜನಪ್ರಿಯ ಟಿವಿ ಶೋ ಆಗಿದ್ದ ಕೌನ್ ಬನೇಗಾ ಕರೋರ್ ಪತಿ ಕಾರ್ಯಕ್ರಮವನ್ನು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮವನ್ನು ನಡೆಸಬೇಕೆಂದು ಆಲೋಚಿಸುತ್ತಿರುವಾಗ ಆ ಕಾರ್ಯಕ್ರಮದ ನಿರೂಪಕರಾಗಿ ಪುನೀತ್ ರಾಜಕುಮಾರ್ ಅವರನ್ನು ಆರಿಸಿದಾಗ ಅಮಿತಾಭ್ ಬಚ್ಚನ್ ಅವರ ಸ್ಥಾನವನ್ನು ಪುನೀತ್ ತುಂಬ ಬಲ್ಲರೇ? ಎಂಬ ಅನುಮಾನಕ್ಕೆಲ್ಲಾ ಸಡ್ಡುಹೊಡೆಯುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವವರೊಂದಿಗೆ ಲವಲವಿಕೆಯಿಂದ ಮಾತನಾಡಿಸುತ್ತಾ ಆವರಿಗೆಲ್ಲಾ ಪ್ರೋತ್ಸಾಹಿಸುತ್ತಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿಸಿದ ಕೀರ್ತಿವಂತರಾಗುತ್ತಾರೆ ಪುನೀತ್.

ಮೇ 31, 2017ರಲ್ಲಿ ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ತಮ್ಮ ಪ್ರೀತಿಯ ಅಮ್ಮ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ನಿಧನರಾದಾಗ ಕೆಲ ಕಾಲ ಜರ್ಜರಿತರಾಗಿ ಹೋದ ಪುನೀತ್ ಅವರು ನಂತರ ಸುಧಾರಿಸಿಕೊಂಡು ಚಿತ್ರರಂಗದೊಂದಿಗೆ ಮುಂದುವರೆಸಿಕೊಂಡು ಹೋಗುವುದಲ್ಲದೇ, ಜೊತೆ ಜೊತೆಯಲ್ಲಿಯೇ ತಮ್ಮ ತಾಯಿ ಹೆಸರಿನಲ್ಲಿ PRK production house ಪ್ರಾರಂಭಿಸಿ ಅದರ ಮೂಲಕ ವಿವಿಧ ಖಾಸಗೀ ಛಾನಲ್ ಗಳಿಗೆ ಧಾರವಾಹಿಗಳು ಮತ್ತು ಕನ್ನಡದಲ್ಲಿ ಕೆಲವು ನವ ನವೀನ ರೀತಿಯ ಚಿತ್ರಗಳನ್ನು ನಿರ್ಮಿಸಿ ಹೊಸಾ ಕಲಾವಿದರು ಮತ್ತು ನಿರ್ದೇಶಕರುಗಳಿಗೆ ಅವಕಾಶವನ್ನು ನೀಡುವ ಮೂಲಕ ತಮ್ಮ ತಾಯಿಯವರು ಹಾಕಿಕೊಟ್ಟ ಸಂಪ್ರದಾಯವನ್ನೂ ಸಹಾ ಮುಂದುವರೆಸಿಕೊಂಡು ಹೊಗುತ್ತಾರೆ. ಇವೆಲ್ಲವುಗಳ ಜೊತೆ ಜೊತೆಯಲ್ಲಿಯೇ ಅನೇಕ ಕನ್ನಡ ಚಿತ್ರಗಳಲ್ಲಿ ಹಳೆಯ ಇಲ್ಲವೇ ಹೊಸಾ ನಟರು ಎಂಬ ಬೇಧಭಾವವಿಲ್ಲದೇ ಹಿನ್ನಲೆಗಾಯನವನ್ನು ಮಾಡುವ ಮೂಲಕ ಯಶಸ್ವೀ ಗಾಯಕ ಎಂದೂ ಖ್ಯಾತಿಯನ್ನು ಪಡೆಯುತ್ತಾರೆ.

pun3

ರಾಜಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಮತ್ತು ಅಭಿಮಾನಿಗಳನ್ನು ದೇವರೆಂದು ಕರೆದು ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುವ ಮೂಲಕ ಯೋಗ ಧ್ಯಾನ ಮುಂತಾದ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಕನ್ನಡಿಗರ ರಾಯಭಾರಿಗಳಾದರೆ ಅದನ್ನೇ ಆನುವಂಶಿಕವಾಗಿ ಪಡೆದುಕೊಂಡ ಪುನೀತ್ ಸಹಾ ಹಿರಿಯ ಕಿರಿಯ ಎನ್ನದೇ ಎಲ್ಲರಿಗೂ ಗೌರವವನ್ನು ಕೊಡುವ ಅವರ ವರ್ತನೆ, ಸಂಸ್ಕಾರ ಸಂಸ್ಕೃತಿ ಮತ್ತು ಸಾಮಾಜಿಕ ಕಾಳಜಿಯಿಂದಾಗಿ, ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎಂಬುದನ್ನು ಸಾಭೀತು ಮಾಡುವ ಮುಖಾಂತರ ಕೇವಲ ಕನ್ನಡಿಗರಲ್ಲದೇ ಇಡೀ ದೇಶದ ಯುವಕರಿಗೆ ಉತ್ತಮ ಸಂಸ್ಕೃತಿ ಮತ್ತು ಮನೋಭಾವಗಳನ್ನು ಹೊಂದಿದಲ್ಲಿ ಭೌತಿಕ ಆಸ್ತಿಯನ್ನು ಪಡೆಯಬಹುದು ಎಂಬುದಕ್ಕೆ ಜ್ವಲಂತ ಉದಾಹಣೆಯಾಗಿ ಹೋದರು.

pun1

ಯಾವುದೇ ಕೆಟ್ಟ ಚೆಟಗಳಿಲ್ಲದೇ, ಉತ್ತಮ ಜೀವನ ಶೈಲಿಯೊಂದಿಗೆ ಸದಾಕಾಲವೂ ವ್ಯಾಯಾಮ ಮಾಡುತ್ತಾ ಅತ್ಯಂತ ಆರೋಗ್ಯಪೂರ್ಣವಾಗಿಯೇ ಇದ್ದ ಪುನೀತ್ ರಾಜಕುಮಾರ್ ಅವರು ಇದ್ದಕ್ಕಿಂದ್ದಂತೆಯೇ, ಅಕ್ಟೋಬರ್ 29, 2021 ರಂದು ಇಹಲೋಕವನ್ನು ತ್ಯಜಿಸುವ ಮೂಲಕ ಇಡೀ ಕರ್ನಾಟಕಕ್ಕೇ ಸೂತಕವನ್ನು ಹರಡಿ ಹೋಗಿದ್ದಾರೆೆ ಎಂದರು ತಪ್ಪಾಗದು. ಒಬ್ಬ ವ್ಯಕ್ತಿಯ ಉಪಸ್ಥಿತಿಗಿಂತಲೂ ಆತನ ಅನುಪಸ್ಥಿತಿ ಹೆಚ್ಚಿಗೆ ಕಾಡುತ್ತದೆ ಎನ್ನುವುದೇ ಆತನ ಸಾಧನೆಗೆ ಹಿಡಿದ ಕೈಗನ್ನಡಿ ಎನ್ನುವಂತ ಪುನೀತ್ ಅವರ ಅಂತಿಮ ದರ್ಶನಕ್ಕೆ ಲಕ್ಷೋಪ ಲಕ್ಷ ಸಂಖ್ಯೆಯ ಅಭಿಮಾನಿಗಳು ಕೇವಲ ಬೆಂಗಳೂರು ಮತ್ತು ಸುತ್ತಮುತ್ತಲಲ್ಲದೇ ನೆರೆಹೊರೆಯ ತಮಿಳುನಾಡು, ಕೇರಳ, ಆಂಧ್ರದ ರಂಗಗಳಲ್ಲದೇ ದೇಶ ವಿದೇಶ ಅದರಲ್ಲೂ ಪಾಕಿಸ್ಥಾನದಿಂದಲೂ ಕನ್ನಡವೇ ಅರಿಯದ ಅವರ ಅಭಿಮಾನಿಯೊಬ್ಬನೂ ತನ್ನ ಹಾಡಿನ ಮುಖಾಂತರ ಶ್ರದ್ಧಾಂಜಲಿಗಳನ್ನು ಸಲ್ಲಿಸಿದ್ದು ಗಮನಾರ್ಹವಾಗಿತ್ತು.

pun5

ರಾಜಕುಮಾರ್ ಕುಟುಂಬ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಆರೋಪಕ್ಕೆ ಪುನೀತ್ ಅವರ ಸಾವಿನ ನಂತರ ತಿಳಿದ ಬಂದ ಸತ್ಯದ ಸಂಗತಿ ಖಂಡಿತವಾಗಿಯೂ ಶಾಶ್ವತವಾದ ಉತ್ತರವನ್ನು ನೀಡುತ್ತದೆ. ಪುನೀತ್ ತಮ್ಮ ಆದಾಯದಲ್ಲಿ ಕೆಲವು ಪಾಲುಗಳನ್ನು ಸದ್ದಿಲ್ಲದೇ ಸಾಮಾಜಿಕ ಚಟುವಟಿಕೆಗಳಿಗಾಗಿಯೇ ಮೀಸಲಿಟ್ಟು ಒಂದು ಅಂದಾಜಿನ ಪ್ರಕಾರ ಸುಮಾರು 1800 ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ, 26 ಅನಾಥಾಶ್ರಮ, 16 ವೃದ್ದಾಶ್ರಮ, 46 ಉಚಿತಶಾಲೆ, 19 ಗೋಶಾಲೆಗಳಲ್ಲದೇ, ಮೈಸೂರಿನಲ್ಲಿ ಶಕ್ತಿಧಾಮ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಉಚಿತ ವಸತಿ, ಇವೆಲ್ಲವನ್ನು ನಡೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಇದಲ್ಲದೇ, ಕಲರ್ಸ್ ಕನ್ನಡದ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರೇ ತಮ್ಮ ಮುಖಪುಟದಲ್ಲಿ ಬರೆದುಕೊಂಡಿರುವಂತೆ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಯೂ ಹೆಚ್ಚು ಒತ್ತಡದಲ್ಲಿ ಇರುತ್ತಿದ್ದುದದ್ದನ್ನು ಸ್ವತಃ ಗಮನಿಸಿದ್ದ ಅಪ್ಪು, ಎಲ್ಲರೂ ಹೆಚ್ಚು ಹೆಚ್ಚು ದುಡ್ಡನ್ನು ಗೆಲ್ಲವ ಮೂಲಕ ಖುಷಿಯಾಗಿರಬೇಕು ಎಂದು ಪ್ರಾಮಾಣಿಕವಾಗಿ ಆಸೆಪಡುತ್ತಿದ್ದ ಒಳ್ಳೆಯ ಹೃದಯವಂತ ಎಂದು ಹೇಳಿರುವುದಲ್ಲದೇ, ಸ್ಪರ್ಧಿಗಳು ತಪ್ಪು ಉತ್ತರ ಕೊಟ್ಟಾಗ ಅವರಿಗಿಂತಲು ಪುನೀತ್ ಹೆಚ್ಚು ನಿರಾಶೆಗೆ ಒಳಗಾಗುತ್ತಿದ್ದದ್ದಲ್ಲದೇ, ಸ್ಪರ್ಧಿಗಳು ಸರಿ ಉತ್ತರ ಕೊಟ್ಟಾಗ ಅತ್ಯಂತ ಉತ್ಸಾಹವನ್ನು ವ್ಯಕ್ತಪಡಿಸುತ್ತಿದ್ದಂತಹ ಭಾವುಕ ಜೀವಿ ಎಂದು ಹೇಳಿದ್ದಾರೆ. ಹೆಚ್ಚು ಹೆಚ್ಚು ಜನರು ಕೋಟಿ ಗೆಲ್ಲಬೇಕು ಎಂದು ಸಾವಿರ ಸಲ ಹೇಳುತ್ತಿದ್ದದ್ದಲ್ಲದೇ ತಪ್ಪು ಉತ್ತರ ಕೊಟ್ಟು ಯಾರಾದರೂ ಕಡಿಮೆ ಹಣದೊಂದಿಗೆ ಸ್ಪರ್ಧೆಯಿಂದ ಹೊರಬಿದ್ದಲ್ಲಿ ಹಣದ ಅತ್ಯಾವಶ್ಯಕವಿರುವವರೆಗೆ, ಶೂಟಿಂಗ್ ಮುಗಿದ ನಂತರ ತಮ್ಮ ಸ್ವಂತ ಹಣವನ್ನು ಎಷ್ಟೋ ಸ್ಪರ್ಥಿಗಳಿಗೆ ಕೊಡುತ್ತಿದ್ದದ್ದಲ್ಲದೇ, ಈ ವಿಷಯಎಲ್ಲೂ ಸುದ್ದಿಯಾಗದ ಹಾಗೆ ನೋಡಿಕೊಳ್ಳುತ್ತಿದ್ದ ಪ್ರಾಮಾಣಿಕ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಅದೇ ರೀತಿ ಲಾಕ್ದೌನ್ ಸಮಯದಲ್ಲಿ ತಿಂಗಳಾನುಗಟ್ಟಲೆ ಜಿಮ್ಗಳು ಮುಚ್ಚಲ್ಪಟಾಗ ಸದ್ದಿಲ್ಲದೇ ಜಿಮ್ ಟ್ರೈನರ್ಗಳಿಗೆ ಪ್ರತೀ ತಿಂಗಳು ತಮ್ಮ ಕೈಲಾದ ಸಹಾಯ ಮಾಡಿದ್ದಲ್ಲದೇ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಪಾರವಾದ ಹಣವನ್ನೂ ಕೊಟ್ಟಿದ್ದರು. ತಮ್ಮ ತಂದೆಯವರಂತೆಯೇ ನಂದಿನಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಮತ್ತು ಕನ್ನಡ ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಾಹೀರಾತುಗಳಲ್ಲಿ ಉಚಿತವಾಗಿ ಅಭಿನಯಿಸುವ ಮೂಲಕ ಅಪಾರವಾದ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಂತಹ ವ್ಯಕ್ತಿಯಾಗಿದ್ದರು ಪುನೀತ್ ರಾಜಕುಮಾರ್.

pun7

ತಂದೆಯವರಿಂದ ಪಡೆದಿದ್ದಂತಹ ಹೆಸರು, ಜನರ ಬೆಂಬಲದ ಜೊತೆಗೆ ಕೈ ತುಂಬಾ ಹಣ ಇದ್ದಾಗ ಹಾಳಾಗಿ ಹೋಗಿರುವ ಅದೆಷ್ಫೋ ಚಿತ್ರನಟರುಗಳು ಇರುವಾಗ, ಬದುಕಿದ್ದ ಕೇವಲ 46 ವರ್ಷಗಳಲ್ಲಿಯೇ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ನಡುವಿನ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಲೇ ಎಂಬಂತೆ ಸತ್ತ ಮೇಲೆಯೂ ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡುವ ಮುಖಾಂತರ ಪರೋಪಕಾರಾಯ ಇದಂ ಶರೀರಂ ಎನ್ನುವುದನ್ನು ಪ್ರತ್ಯಕ್ಶವಾಗಿ ತೋರಿಸಿಕೊಟ್ಟಿದ್ದಲ್ಲದೇ, ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿದು ಹೋದ ಪುನೀತ್ ರಾಜಕುಮಾರ್ ಆಚಂದ್ರಾರ್ಕವಾಗಿ ಕನ್ನಡದ ರಾಜರತ್ನ ಮತ್ತು ಕನ್ನಡದ ಕಲಿಯೇ ಸರಿ.

ಏನಂತಿರೀ?
ನಿಮ್ಮವನೇ ಉಮಾಸುತ