ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

raj3

ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಭ್ರಮದಿಂದ ನಾಡಹಬ್ಬದ ದಸರವನ್ನು ಆಚರಿಸಿದ ನಂತರ ಎಲ್ಲರ ಚಿತ್ತ ಮುಂದಿನ ತಿಂಗಳ ನವೆಂಬರ್-1 ನೇ ತಾರೀಖಿನತ್ತ ಎಂದರೂ ಅತಿಶಯೋಕ್ತಿಯೇನಲ್ಲ. ಸ್ವಾತ್ರಂತ್ರ್ಯಾ ನಂತರ 1956 ರ ನವೆಂಬರ್-1 ರಂದು, ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಮಾಡಲಾಯಿತು. ಆನಂತರ 1973 ನವೆಂಬರ್-1 ರಂದು ಮೈಸೂರು ರಾಜ್ಯವನ್ನು ಕನ್ನಡಿಗರು ಇರುವ ಕರುನಾಡು ಅರ್ಥಾತ್ ಕರ್ನಾಟಕ ಎಂದು ಹೆಸರಿಸಿದ ಸಂಭ್ರಮವೇ ನಾವೆಲ್ಲರೂ ಆಚರಿಸುವ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ. ದುರಾದೃಷ್ಟವಶಾತ್ 6 ಕೋಟಿ ಇರುವ ಕನ್ನಡಿಗರು ಈ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೋ ಇಲ್ಲವೋ ಆದರೇ ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು ಕೇಳಲು ಆನಂದ. ನವೆಂಬರ್ 1 ರಂದು ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ (ಉಳಿದ 364 ದಿನ ಪರಭಾಷೆಗಳ ಚಿತ್ರಕ್ಕೇ ಮೀಸಲು) ಕಡ್ಡಾಯವಾಗಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವುದು ನೋಡಲು ಮಹದಾನಂದ. ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳಿನಿಂದ ಮುಂದಿನ ವರ್ಷ ಅಕ್ಟೋಬರ್ 31 ರ ವರೆಗೆ ಕನ್ನಡದ ಬಗ್ಗೆ ಕುಂಭಕರ್ಣ ನಿದ್ದೆಯ ಧೋರಣೆ. ಇಂಗ್ಲೀಷ್, ಕಂಗ್ಲೀಷ್, ಇಲ್ಲವೇ ಅನ್ಯ ಭಾಷೆಗಳದ್ದೇ ಪ್ರಾಭಲ್ಯ.

raj4

ಇದಕ್ಕಿಂತಲೂ ದುರಾದೃಷ್ಟವೆಂದರೆ, ಅ ಕಾರಕ್ಖೂ ಹಕಾರದ ಉಚ್ಚಾರ ಬಿಡಿ ಸರಿಯಾಗಿ ಶುದ್ಧವಾಗಿ ನಾಲ್ಕು ವಾಕ್ಯಗಳನ್ನೂ ವ್ಯಾಕರಣಬದ್ಧವಾಗಿ ಮಾತನಾಡಲು ಮತ್ತು ಬರೆಯಲು ಬಾರದವರೆಲ್ಲ ಕನ್ನಡಪರ ಸಂಘಟನೆಗಳ ಹೆಸರಿನಲ್ಲಿ ಕನ್ನಡದ ರಕ್ಷಣೆಯ ಗುತ್ತಿಗೆ ಪಡೆದವರಂತೆ, ಕನ್ನಡ ಮತ್ತು ಕನ್ನಡಿಗರು ಇವರಿಂದಲೇ ಉದ್ದಾರವಾಗುತ್ತಿರುವಂತೆ ನಡೆಸುವ ಆರ್ಭಟವನ್ನು ನೋಡಲಾಗದು. ಕನ್ನಡಕ್ಕಾಗಿಯೇ ತಮ್ಮ ತನು ಮನ ಧನವನ್ನೆಲ್ಲಾ ಅರ್ಪಿಸಿದ, ಕನ್ನಡದ ಕುಲಪುರೋಹಿತರೆಂದೇ ಪ್ರಖ್ಯಾತರಾಗಿರುವ ಕನ್ನಡ ಏಕೀಕರಣಕ್ಕೇ ತಮ್ಮ ಇಡೀ ಮೀಸಲಾಗಿರಿಸಿದ್ದ ಆಲೂರು ವೆಂಕಟರಾಯರು, ಪ್ರಥಮ ರಾಷ್ಟ್ರಕವಿ ಪಂಜೆ ಮಂಗೇಶರಾಯರು, ಕಯ್ಯಾರ ಕೀಯಣ್ಣ ರೈ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ, ಅನಕೃ, ಮ ರಾಮಮೂರ್ತಿಗಳು ಇವೆರಲ್ಲರ ನಿಸ್ವಾರ್ಥ ಹೋರಾಟ ಬಿಡಿ ಅಂತಹ ಮಹನೀಯರುಗಳು ಯಾರೂ ಎಂದು ಗೊತ್ತಿಲ್ಲದ ಬಹುತೇಕರು ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಸರ, ಕೈಗೆ ಬೇಡಿಯಂತಹ ಬ್ರೇಸ್ ಲೆಟ್ ಹಾಕಿಕೊಂಡು ಹೆಗಲ ಮೇಲೊಂದು ಕೆಂಪು ಮತ್ತು ಹಳದಿ ಶಲ್ಯವನ್ನು ಹಾಕಿಕೊಂಡ ಪ್ಲೆಕ್ಸ್ ತಮ್ಮ ಬಡಾವಣೆಯಲ್ಲಿ ಹಾಕಿಸಿ ಬಿಟ್ಟಲ್ಲಿ ಅವರನ್ನೇ ಕನ್ನಡಪರ ಹೋರಾಟಗಾರೆಂದೇ ನಂಬಬೇಕಾದ ದೈನೇಸಿ ಪರಿಸ್ಥಿತಿಗೆ ಕನ್ನಡಿಗರು ತಲುಪಿರುವುದು ನಿಜಕ್ಕೂ ದುರ್ದೈವವೇ ಸರಿ.

ನಿಜ ಹೇಳಬೇಕೆಂದರೆ ಈ ಬಹುತೇಕ ಹೋರಾಟಗಾರರು ಬೆಂಗಳೂರಿನ ಸುತ್ತ ಮುತ್ತಲಿಂದ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಮೈ ಬಗ್ಗಿಸಿ ಕೆಲಸ ಮಾಡಲಾಗದೇ ಕನ್ನಡ ಹೋರಾಟದ ಹೆಸರಿನಲ್ಲಿ ಹಣ ಮಾಡಿಕೊಂಡು ಐಶಾರಾಮ್ಯದ ಜೀವನ ನಡೆಸುತ್ತಿರುವುದು ಸುಳ್ಳಲ್ಲ.

 • ಮಾತೆತ್ತಿದರೆ ಹೋರಾಟ, ಬಂದ್ ಆ ಲೆಖ್ಖ ಕೊಡಿ ಈ ಲೆಖ್ಖ ಕೊಡಿ ಎಂಬು ಬೊಬ್ಬಿರಿಯುವ ಈ ನಾಯಕರುಗಳು ಎಂದಾದರೂ ತಮ್ಮ ಆಸ್ತಿಯ ವಿವರಗಳನ್ನು ಸಾರ್ವಜನಿಕರ ಮುಂದೆ ಇಟ್ಟಿರುವುದನ್ನು ನೋಡಿದ್ದೇವೆಯೇ?
 • ಕನ್ನಡ ಹೆಸರಿನಲ್ಲಿ ಸಂಘವೊಂದನ್ನು ನೊಂದಾಯಿಸಿ ಅದಕ್ಕೊಂದು ಲೆಟರ್ ಹೆಡ್ ಮಾಡಿಸಿ ಕಾಲ ಕಾಲಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡಾಭಿವೃದ್ಧಿ ಪ್ರಾಧಿಕಾರದಲ್ಲಿ ಸರ್ಕಾರಿ ಹಣವನ್ನು ಕಬಳಿಸಿಸುವ ಲೆಖ್ಖವನ್ನು ಏನಾದರೂ ಕೊಟ್ಟಿದ್ದಾರಾ?
 • ಕನ್ನಡಪರ ಹೋರಾಟಕ್ಕೂ ರಾಜಕೀಯ ಪಕ್ಷಗಳು ಕರೆಗೊಡುವ ಬಂದ್ ಎತ್ತಲಿಂದೆತ್ತ ಸಂಬಂಧ? ಯಾರೋ ರಾಜಕೀಯ ನಾಯಕರು ಎಲ್ಲೋ ಕರೆ ನೀಡಿದ್ದಕ್ಕೆ ಕುರಿ, ಕೋಳಿ, ಹಂದಿ, ಎಮ್ಮೆ, ಮೇಕೆಯನ್ನು ರೈಲ್ವೇ ನಿಲ್ದಾಣದ ಮುಂದೆಯೋ ಇಲ್ಲವೇ ವಿಧಾನಸೌಧದ ಮುಂದೆ ಹಿಡಿದುಕೊಂಡು ವರ್ಷಕ್ಕೆ ಹೆಚ್ಚೂ ಕಡಿಮೆ ನಾಲ್ಕೈದು ಬಂದ್ ಮಾಡಿಸುವುದರಿಂದ ಕನ್ನಡ ಮತ್ತು ಕನ್ನಡಿಗರಿಗೆ ಏನು ಪ್ರಯೋಜನ?
 • ಸುಮ್ಮನೆ ನೊಂದಾಯಿತ ಕನ್ನಡಪರ ಸಂಘಟನೆಗಳ ಪಟ್ಟಿಯನು ಸಂಪೂರ್ಣವಾಗಿ ಓದಬೇಕಾದರೆ ಕನಿಷ್ಟ ಪಕ್ಷ ಎರಡು ಮೂರು ದಿನಗಳು ಬೇಕಾದೀತು. ಗಲ್ಲಿ ಗಲ್ಲಿಗೆ ಈ ಪರಿಯಾಗಿ ಕನ್ನಡ ಸಂಘಟನೆಗಳು ಇದ್ದರೂ ಕರ್ನಾಟಕದಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿರಬೇಕಾದ ಪರಿಸ್ಥಿತಿಗೆ ಈ ಕನ್ನಡ ಪರ ಸಂಘಟನೆಗಳ ನಿಲುವೇನು?
 • ಕನ್ನಡ ಕನ್ನಡ ಎಂದು ಬೊಬ್ಬಿರಿಯುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನೇಡತರ ಶಾಸಕರ ಸಂಖ್ಯೆಯೇ ಹೆಚ್ಚಾಗಿರುವುದು ಈ ಕನ್ನಡಪರ ಸಂಘಟನೆಗಳ ಕಣ್ಣಿಗೆ ಕಾಣುವುದಿಲ್ಲವೇ?
 • ನಮ್ಮ ರಾಜ್ಯದ ಗಡಿ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಯ ಹಲವಾರು ಕಡೆ, ಬೆಳಗಾಂ, ಬಳ್ಳಾರಿ, ರಾಯಚೂರು, ಅಷ್ಟೇಕೆ ನಮ್ಮ ಬೆಂಗಳೂರಿನಲ್ಲೂ ಕನ್ನಡ ಶಾಲೆಗಳು ಅಲ್ಲೋಂದು ಇಲ್ಲೋಂದು ಆಳಿದುಳಿದ ಪಳುವಳಿಕೆಯಂತೆ ಉಳಿದುಕೊಂಡಿರುವಾಗ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ ಎಷ್ಟು ಶಾಲೆಗಳು ಇವೆ? ನಮ್ಮ ಮುಂದಿನ ಪೀಳಿಗೆಯ ಎಷ್ಟು ಮಕ್ಕಳು ಕನ್ನಡವನ್ನು ಕಲಿಯುತ್ತಿದ್ದಾರೆ? ಎಂಬುದರ ಲೆಖ್ಖವೇನಾದರು ಈ ಸಂಘಟನೆಗಳಿಗೆ ಅರಿವಿದೆಯೇ?
 • ಖನ್ನಡಾ, ಖನ್ನಡಾ ಎಂದು ಬಸ್ಸು, ರೈಲು ಮೆಟ್ರೋಗಳ ನಿಲ್ಡಾಣಗಳಲ್ಲಿ ಹೋರಾಡುವ ನಡೆಸಿ ಬಲವಂತದ ಮಾಘಸ್ನಾನ ಮಾಡಿಸುವ ಬದಲು ಈ ಸಂಘಟನೆಗಳಿಂದ ಅನ್ಯಭಾಷಿಕರಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸೊಗಡನ್ನು ಕಲಿಸುವಂತಹ ಯಾವುದಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಉದಾಹರಣೆಗಳನ್ನು ನೀಡಬಲ್ಲರೇ?

ಕನ್ನಡ ಪರ ಹೋರಾಟ ಏನು ಎಂಬುದನ್ನು ಇಂದಿನ ಹೋರಾಟಗಾರರು ಖಂಡಿತವಾಗಿಯೂ ಆಲೂರು ವೆಂಕಟರಾಯರು, ಗಳಗನಾಥರು, ಅನಕೃ, ಮ. ರಾಮಮೂರ್ತಿಗಳಂತಹ ಮಹನೀಯರಿಂದ ಕಲಿತುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕವಾಗಿದೆ.

raj6

ನಮ್ಮ ಕನ್ನಡ ಭಾಷೆಯ ಅಳಿವು ಉಳಿವು ಮತ್ತು ರಕ್ಷಣೆಯನ್ನು ನಾವಯ ಯಾವುದೇ ಸಂಘಟನೆಗಳಿಗೆ ಗುತ್ತಿಗೆ ನೀಡಿಲ್ಲ.‌ಅದು ಇನ್ನೂ ನಮ್ಮ ಕೈಯ್ಯಲ್ಲಿಯೇ ಇದೆ ಎನ್ನುವುದನ್ನು ಕನ್ನಡಿಗರಾದ ನಾವುಗಳು‌ ಮೊದಲು ಅರಿಯಬೇಕಾಗಿದೆ. ಕನ್ನಡದ ಅಸ್ತಿತ್ವ ಅಸ್ಮಿತೆಗಳನ್ನು ಉಳಿಸುವ ಸಲುವಾಗಿ ನಮ್ಮ ಮನ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಬಹುದೇ?

 • ಮನೆಯೇ ಮೊದಲ ಪಾಠಶಾಲೆ ಹಾಗಾಗಿ ನಮ್ಮ ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸ ಬಹುದೇ?
 • ನಮ್ಮ ಮಕ್ಕಳಿಗೆ ಅಚ್ಚ ಕನ್ನಡದ ಹೆಸರಿಡಬಹುದೇ?
 • ನಮ್ಮ ಮಕ್ಕಳಿಗೆ ಮಮ್ಮಿ ಡ್ಯಾಡಿ, ಆಂಟಿ, ಅಂಕಲ್ ಅಂಥಾ ಹೇಳಿ ಕೊಡುವ ಬದಲು ಅಚ್ಚ ಕನ್ನಡದಲ್ಲಿ ಅಮ್ಮಾ, ಅಪ್ಪಾ, ಚಿಕ್ಕಪ್ಪಾ, ಚಿಕ್ಕಮ್ಮಾ, ಅತ್ತೆ-ಮಾವ, ಅಜ್ಜಿ-ಅಜ್ಜ ತಾತ-ಅಜ್ಜಿ ಎಂಬಂತಹ ಸಂಬಂಧ ಬೆಸೆಯುವ ಪದಗಳನ್ನೇ ಉಪಯೋಗಿಸಬಹುದೇ?
 • ಶಾಲೆಯಲ್ಲಿ ಯಾವುದೇ ಭಾಷೆಯ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ನಮ್ಮ ಮಕ್ಕಳಿಗೆ ಮನೆಯಲ್ಲಿ ನಾವೇ ಸ್ಪುಟವಾಗಿ ಕನ್ನಡ ಓದಲು ಬರೆಯಲು ಕಲಿಸಲು ಪ್ರಯತ್ನಿಸ ಬಹುದೇ?
 • ಪ್ರತಿದಿನ ಇತರೇ ವೃತಪತ್ರಿಕೆಗಳೊಂದಿಗೆ ಕನ್ನಡ ಪತ್ರಿಕೆ ಮತ್ತು ವಾರಪತ್ರಿಕೆಗಳನ್ನು ತರಿಸಿ ನಮ್ಮ ಮಕ್ಕಳಿಗೆ ಓದಲು ಅನುವು ಮಾಡಿ ಕೊಡಬಹುದೇ?
 • ಕನ್ನಡ ಹಲವಾರು ಖ್ಯಾತ ಲೇಖಕರ ಪುಸ್ತಕಗಳನ್ನೇ ಖರೀದಿಸಿ ಎಲ್ಲಾ ಸಭೇ ಸಮಾರಂಭಗಳಲ್ಲಿ ಉಡುಗೊರೆಯಾಗಿ ಕೊಡುವ ಸತ್ಸಂಪ್ರದಾಯ ಬೆಳಸಿ ಕೊಳ್ಳಬಹುದೇ?
 • ಆದಷ್ಟೂ ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಛಾನಲ್ಗಳನ್ನೇ ನೋಡುವ ಅಭ್ಯಾಸ ಬೆಳೆಸಿ ಕೊಳ್ಳಬಹುದೇ?
 • ಹೋಟೆಲ್ಗಳಲ್ಲಿ ರೈಸ್, ಸಾಂಬರ್, ಪಿಕ್ಕಲ್ ಬದಲಾಗಿ ಅನ್ನ, ಹುಳಿ, ಉಪ್ಪಿನ ಕಾಯಿ, ಅಂಗಡಿಗಳಲ್ಲಿ ರೈಸ್, ದಾಲ್, ಆಯಿಲ್ ಬದಲಾಗಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಅಂಗಡಿಗಳಲ್ಲಿ, ಬೀನ್ಸ್, ಕ್ಯಾಪ್ಸಿಕಾಂ, ಚಿಲ್ಲಿ ಬದಲಾಗಿ ಹುರಳಿಕಾಯಿ, ದೊಣ್ಣೆಮೆಣಸಿಕಾಯಿ, ಮೆಣಸಿನಕಾಯಿ ಹಣ್ಣಿನ ಅಂಗಡಿಗಳಲ್ಲಿ ಆಪೆಲ್, ಆರೆಂಜ್, ಬನಾನ ಬದಲಾಗಿ, ಸೇಬು, ಕಿತ್ತಳೆ, ಬಾಳೇಹಣ್ಣುಗಳನ್ನು ಕೊಡಿ ಎಂದು ಕೇಳ ಬಹುದೇ?
 • ನೆರೆಹೊರೆಯವರ ಜೊತೆ ಮತ್ತು ಕಛೇರಿಗಳಲ್ಲಿ ಕನ್ನಡ ಗೊತ್ತಿರುವವರ ಬಳಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಮಾತನಾಡ ಬಹುದೇ?
 • ಗಣೇಶೋತ್ಸವ, ಅಣ್ಣಮ್ಮ, ಊರ ಹಬ್ಬ, ನಾಡ ಹಬ್ಬಗಳ ರಾಜ್ಯೋತ್ಸವದ ಸಮಯದಲ್ಲಿ ಕನ್ನಡ ಕಲಾವಿದರಿಗೇ ಆದ್ಯತೆ ಕೊಟ್ಟು, ನಾಟಕ, ನೃತ್ಯ, ಸಂಗೀತ ವಾದ್ಯಗೋಷ್ಠಿಗಳು ಕನ್ನಡ ಭಾಷೆಯದ್ದೇ ಆಗಿರುವಂತೆ ನೋಡಿ ಕೊಳ್ಳಬಹುದೇ?
 • ನಮ್ಮ ಮನೆಯ ಮುಂದಿನ ಫಲಕ, ನಮ್ಮ ಅಂಗಡಿ, ಮುಗ್ಗಟ್ಟಿನ ಫಲಕಗಳು ಮತ್ತು ನಮ್ಮ ರಸ್ತೆಯ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಸುವಂತಾಗ ಬಹುದೇ?

raj5

ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ನಾವೇ ಸಾರಿ ಸಾರಿ ಎಲ್ಲರಿಗೂ ಒತ್ತಿ ಒತ್ತಿ ಹೇಳಬೇಕಾದಂತಹ ಕೆಟ್ಟ ಪರಿಸ್ಥಿತಿ ಬಂದೊದಗಿಬಿಟ್ಟಿರುವುದು ನಿಜಕ್ಕೂ ಶೋಚನೀಯವಾಗಿದೆ. ಇದಕ್ಕೆ ಬೇರೇ ಭಾಷೆಯವರ ದಬ್ಬಾಳಿಕೆ ಎನ್ನುವುದಕ್ಕಿಂತಲೂ ನಮ್ಮಲ್ಲಿಲ್ಲದ ಭಾಷಾಭಿಮಾನವೇ ಕಾರಣ ಎಂದರು ತಪ್ಪಾಗದು. ನಮ್ಮೆಲ್ಲರ ಕನ್ನಡ ಭಾಷಾಭಿಮಾನ ಕೇವಲ ಕನ್ನಡರಾಜ್ಯೋತ್ಸವದ ಸಂಧರ್ಭವಾದ ನವೆಂಬರ್ 1-30 ಅಥವಾ ಇನ್ನೂ ಒಂದೆರಡು ಹೆಚ್ಚಿನ ವಾರಗಳಿಗೆ ಮಾತ್ರವೇ ಸೀಮಿತಗೊಂಡು ಮಿಕ್ಕೆಲ್ಲಾ ದಿನಗಳು ಕುಂಬಕರ್ಣನಂತೆ ನಿದ್ರೆ ಹೋಗುವುದರಿಂದಲೇ ಕನ್ನಡದ ಹೆಸರಿನಲ್ಲಿ ತಮ್ಮ ಹೊಟ್ಟೆಹೊರೆದುಕೊಳ್ಳುವವರಿಗೆ ಸುಗ್ರಾಸ ಭೋಜನವನ್ನು ಒದಗಿಸುತ್ತಿದೇವೆ.

raj1

ನಿಜಕ್ಕೂ ಬೇಸರ ತರಿಸುವ ಸಂಗತಿಯೇನೆಂದರೆ, ಒಂದೆರಡು ಸಂಘಟನೆಗಳ ಹೊರತಾಗಿ ಬಹುತೇಕ ಕನ್ನಡಪರ ಸಂಘಗಳ ಹುಟ್ಟು ಆಯಾಯಾ ನಾಯಕರ ಹೊಟ್ಟೇ ಪಾಡಿಗಾಗಿಯೇ ಆಗಿರುತ್ತದೆ. ಈ ನಾಯಕರು ತಮ್ಮ ಅಸ್ಥಿತ್ವಕ್ಕಾಗಿ ಮತ್ತು ಅಗ್ಗದ ದಿಢೀರ್ ಪ್ರಚಾರಕ್ಕಾಗಿ ಕನ್ನಡದ ಹೆಸರಿನಲ್ಲಿ ಆಗ್ಗಿಂದ್ದಾಗ್ಗೆ ಮುಷ್ಕರಗಳನ್ನು ಮಾಡಿಸುತ್ತಾ, ಅನ್ಯಭಾಷಿಕರನ್ನು ಹೆದರಿಸಿ ಬೆದರಿಸುತ್ತಾ ರೋಲ್ ಕಾಲ್ ಮಾಡಿಕೊಳ್ಳುವುದೋ ಇಲ್ಲವೇ ಯಾವುದಾದರೂ ಸಂಧಾನ (settlement) ಮಾಡಿಸುವ ಮೂಲಕ ಹಣ ಮಾಡುವುದಕಷ್ಟೇ ಸೀಮಿತವಾಗಿದೆಯೇ ಹೊರತು ಇಂತಹ ಸಂಘಟನೆಗಳಿಂದ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಒಂದು ನಯಾಪೈಸೆಯೂ ಲಾಭವಿಲ್ಲ ಎನ್ನುವುದು ಜಗಜ್ಜಾಹೀರಾತಾಗಿದೆ.

raj2

ಒಬ್ಬ ಸ್ವಾಭಿಮಾನಿ ಕನ್ನಡಿಗನಾಗಿ ಕನ್ನಡದ ಬಗ್ಗೆಯ ಕಳಕಳಿಯಿಂದಾಗಿ ನಿಮ್ಮೆಲ್ಲರ ಬಳಿ ಬಿಚ್ಚುಮನಸ್ಸಿನಿಂದ ತೋಡಿಕೊಂಡಿದ್ದೇನೆಯೇ ಹೊರತು ವಯಕ್ತಿಕವಾಗಿ ನನಗೆ ಯಾವುದೇ ಕನ್ನಡಪರ ಸಂಘಟನೆಗಳ ಸಂಪರ್ಕವೂ ಇಲ್ಲ ಮತ್ತು ಅವರ ವಿರುದ್ಧ ದ್ವೇಷವೂ ಇಲ್ಲ. ಕನ್ನಡ ಉಳಿಸುವಿಕೆಗೆ ನಾವುಗಳು ಸುಲಭವಾಗಿ ಹೇಗೆಲ್ಲಾ ತೊಡಗಿಕೊಳ್ಳಬಹುದೆಂದು ನನಗೆ ತೋಚಿದಂತೆ ವಿವರಿಸಿದ್ದೇನೆ. ನಾನು ತಿಳಿಸಿದ್ದಕ್ಕಿಂತಲೂ ಇನ್ನೂ ಅನೇಕ ರೀತಿಯಿಂದ, ನಿಮ್ಮ ನಿಮ್ಮಗಳ ಅಭಿಲಾಶೆಗಳಿಗೆ ಮತ್ತು ಆಸ್ಥೆಗೆ ತಕ್ಕಂತೆ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಾಮರ್ಥ ನಿಮ್ಮೆಲ್ಲರ ಬಳಿ ಇದ್ದೇ ಇದೆ. ಆದರೆ ಅದಕ್ಕೆ ಮನಸ್ಸು ಮಾಡಬೇಕಷ್ಟೇ.

ಒಗ್ಗಟ್ಟಿನಲ್ಲಿ ಬಲವಿದೆ, ಮನಸ್ಸಿದ್ದಲ್ಲಿ ಮಾರ್ಗವಿದೆ. ನವೆಂಬರ್ ಕನ್ನಡಿಗರಾಗುವುದಕ್ಕಿಂತಲೂ ವರ್ಷ ಪೂರ್ತಿ ಕನ್ನಡಿರಾಗುವ ಮೂಲಕವೇ ಕನ್ನಡವನ್ನು ಉಳಿಸಿ ಬೆಳಸಲು ಸಾಧ್ಯವಿದೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಇಲ್ಲಿ‌ ಕನ್ನಡವೇ ನಿತ್ಯ. ಕನ್ನಡವೇ ಸತ್ಯ.

ಸಿರಿಗನ್ನಡಂ ಗೆಲ್ಗೆ. ಸವಿಗನ್ನಡಂ ಬಾಳ್ಗೆ

ಏನಂತೀರೀ?

ನಿಮ್ಮವನೇ ಉಮಾಸುತ

ತಲಕಾವೇರಿ, ತೀರ್ಥೋಧ್ಭವ

ನಾವು ಪ್ರತಿನಿತ್ಯವೂ ಸ್ನಾನ ಮಾಡುವಾಗ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಕೊಂಡೇ ಸ್ನಾನ ಮಾಡುತ್ತೇವೆ. ಅಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಏಳು ನದಿಗಳಾದ – ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ಅದರಲ್ಲೂ ದಕ್ಷಿಣ ಭಾರತ ಮತ್ತು ಕರ್ನಾಟಕಕ್ಕೆ ಈ ಕಾವೇರಿ ನದಿಯು ಜೀವ ನದಿಯಾಗಿರುವುದರಿಂದಲೇ ಅದನ್ನು ಕೇವಲ ನದಿ ಎಂದು ಭಾವಿಸದೇ, ಕಾವೇರಿ ತಾಯಿ ಎಂದೇ ಸಂಭೋದಿಸುತ್ತೇವೆ ಮತ್ತು ಪರ ಭಕ್ತಿಯಿಂದ ಕಾವೇರಿ ತಾಯಿಯನ್ನು ಆರಾಧಿಸುತ್ತೇವೆ.

tk1ಸಾಧಾರಣವಾಗಿ ನದಿ ಮೂಲ ಋಷಿ ಮೂಲ, ಗಂಡಸರ ಸಂಬಳ ಹೆಂಗಸರ ವಯಸ್ಸು ಕೇಳಬಾರದು ಅಥವಾ ಹುಡುಕಬಾರದು ಎನ್ನುವ ಆಡು ಮಾತಿದೆ. ಆದರೆ, ಕರ್ನಾಟಕದ ಪರಮ ಪವಿತ್ರ ಕಾವೇರಿ ನದಿಯು ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ತಪ್ಪಲಲ್ಲಿರುವ ತಲಕಾವೇರಿಯಲ್ಲಿ ಉಗಮವಾಗುತ್ತದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಇಂತಹ ಕಾವೇರಿ ನದಿ. ತುಲಾಸಂಕ್ರಮಣದ ಕನ್ಯಾ ಲಗ್ನದಲ್ಲಿ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ತೀರ್ಥೋದ್ಭವವಾಗಿ ಅಲ್ಲಿಂದ ಮುಂದೆ ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ, ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ, ಲೋಕಪಾವನಿ, ಭವಾನಿ, ನೊಯಲ್ ನದಿಗಳು ಕಾವೇರಿಯೊಂದಿಗೆ ಸೇರಿಸಿಕೊಂಡು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕೋಟ್ಯಾಂತರ ಜನರ ಬಾಯಾರಿಕೆಯನ್ನು ನಿವಾರಿಸುವುದಲ್ಲದೇ, ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಹಾಗಾಗಿಯೇ ಕಾವೇರಿಯ ಶೇಕಡಾ 95 ರಷ್ಟು ನೀರು ವ್ಯವಸಾಯಕ್ಕೆ ಬಳಕೆಯಾಗುವುದರಿಂದಲೇ, ಅದು ದಕ್ಷಿಣ ಭಾರತದ ಜೀವ ನದಿಯಾಗಿ ಕೋಟ್ಯಾಂತರ ಜನರ ಆರಾಧ್ಯ ದೈವವಾಗಿ ಪೂಜನೀಯಳಾಗಿದ್ದಾಳೆ.

ಸ್ಕಂದ ಪುರಾಣದಲ್ಲಿ ಉಲ್ಲೇಖದಂತೆ, ಬ್ರಹ್ಮಗಿರಿಯಲ್ಲಿ ಕವೇರ ಎಂಬ ಮುನಿಗೆ ಬಹಳ ಕಾಲ ಮಕ್ಕಳಾಗದೇ ಹೋದಾಗ ಆ ಮುನಿಯು ಸುಮಾರು ಸಾವಿರ ವರ್ಷಗಳವರೆಗೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ದಿನದಿಂದ ದಿನಕ್ಕೆ ಆತನ ತಪ್ಪಸ್ಸಿನ ಘೋರತೆ ಹೆಚ್ಚಾದ ಫಲವಾಗಿ ಆತನ ದೇಹದಿಂದ ಹೊರಸೂಸಲ್ಪಡುವ ಶಾಖವೂ ಮೂರು ಲೋಕಕ್ಕೂ ಅವರಿಸಿದಾಗ, ಜನಸಾಮಾನ್ಯರು, ಋಷಿ ಮುನಿಗಳು ಮತ್ತು ದೇವಾನು ದೇವತೆಗಳು ಇದರಿಂದ ಪಾರುಗಾಣಿಸುವಂತೆ ಬ್ರಹ್ಮ ದೇವನನ್ನು ಕೇಳಿಕೊಳ್ಳುತ್ತಾರೆ. ಆಗ ಬ್ರಹ್ಮದೇವರು ಕವೇರ ರಾಜನ ತಪಸ್ಸಿಗೆ ಮೆಚ್ಚಿ ಅವನ ಮುಂದೆ ಪ್ರತ್ಯಕ್ಷನಾಗಿ ಆತನಿಗೆ ಸಂತಾನವನ್ನು ಕರುಣಿಸುತ್ತಾನೆ.

ಹಾಗೆ ಬ್ರಹ್ಮ ದೇವರಿಂದ ಆಶೀರ್ವಾದ ಫಲವಾಗಿ ಕವೇರ ಮುನಿ ದಂಪತಿಗಳಿಗೆ ಪುತ್ರಿಯ ಜನನವಾಗಿ ಆಕೆಗೆ ಲೋಪಮುದ್ರೆ ಎಂಬ ಹೆಸರು ಹೆಸರಿನಿಂದ ಮುದ್ದಾಗಿ ಬೆಳೆಯುತ್ತಿರುತ್ತಾಳೆ. ಅದೇ ರೀತಿ ಕವೇರ ಮುನಿಯ ಮಗಳಾಗಿದ್ದರಿಂದ ಕಾವೇರಿ ಎಂಬ ಅನ್ವರ್ಥನಾಮವೂ ಜೊತೆ ಜೊತೆಯಲ್ಲಿಯೇ ಹುಟ್ಟಿಕೊಳ್ಳುತ್ತದೆ. ಅದೊಮ್ಮೆ ಅಗಸ್ತ್ಯ ಮುನಿಯು ತನ್ನ ಶಿಷ್ಯರೊಂದಿಗೆ ಲೋಕಲ್ಯಾಣಕ್ಕಾಗಿ ಪರ್ಯಟನೆ ಮಾಡುತ್ತಿದ್ದಾಗ, ಬ್ರಹ್ಮಗಿರಿ ಪ್ರದೇಶಕ್ಕೆ ಬಂದಿದ್ದಾಗ ಅಲ್ಲಿ ಕಾವೇರಿಯನ್ನು ಕಂಡು ಆಕೆಯನ್ನು ವಿವಾಹ ಮಾಡಿಕೊಂಡು ತಮ್ಮ ಪರ್ಯಟನೆಯನ್ನು ಮುಂದುವರೆಸುತ್ತಿದ್ದಾಗ ತಮ್ಮ ಪತ್ನಿಯಾದ ಲೋಪಮುದ್ರೆಯನ್ನು ತಮ್ಮ ತಪಶ್ಯಕ್ತಿಯಿಂದ ನೀರಾಗಿ ಪರಿವರ್ತಿಸಿ ಆ ನೀರನ್ನು ತಮ್ಮ ಕಮಂಡಲದೊಳಗೆ ಬಂಧಿಸಿಟ್ಟು ಕೊಳ್ಳುತ್ತಾರೆ. ಅದೊಂದು ಸಂಜೆ ಪೂಜೆಗೆ ಕುಳಿತಿರುವಾಗ ಜೋರಾಗಿ ಬೀಸಿದ ಗಾಳಿಗೆ ಅವರ ಕಮಂಡಲ ಉರುಳಿ ಹೋಗಿ, ಲೋಕಕಲ್ಯಾಣಾರ್ಥವಾಗಿ ಕಾವೇರಿ ನದಿಯಾಗಿ ಗುಪ್ತಗಾಮಿನಿಯಾಗಿ ಹರಿಯುತ್ತಾ, ಭೃಂಗಡೇಶ್ವರದಲ್ಲಿ ತನ್ನೊಂದಿಗೆ ಸಣ್ಣ ಸಣ್ಣ ನದಿಗಳೊನ್ನು ತನ್ನೊಂದಿಗೆ ಸೇರಿಸಿಕೊಂಡು ಮುಂದೆ ಹರಿಯುತ್ತಾಳೆ ಎಂಬ ಉಲ್ಲೇಖವಿದೆ.

tk3ಈ ರೀತಿಯಾಗಿ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದಿಯಾಗಿರುವ ನಿತ್ಯಹರಿದ್ವರ್ಣ ಕಾಡುಗಳನ್ನೇ ಹಾಸಿ ಹೊದ್ದಿಕೊಂಡಿರುವ ಸುಂದರವಾದ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಮೇಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರವಿದ್ದು ಕೊಡಗಿನ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ 48 ಕಿ. ಮಿ. ದೂರದಲ್ಲಿದೆ.

ಮಡಿಕೇರಿಯಿಂದ ಭೃಗಂಡೇಶ್ವರದ ಮೂಲಕ ಎತ್ತರೆತ್ತರದ ಸಾಲು ಸಾಲು ಬೆಟ್ಟಗಳ ನಡುವೆ ಕಾಫೀ ಏಲಕ್ಕಿ ಮೆಣಸಿನ ತೋಟಗಳ ಮಧ್ಯೆ ಬ್ರಹ್ಮಗಿರಿ ಬೆಟ್ಟವನ್ನು ತಲುಪುತ್ತಿದ್ದಂತೆ ವಿಶಾಲವಾದ ತಲಕಾವೇರಿಯ ಮಹಾದ್ವಾರ ಕಣ್ಣಿಗೆ ಗೋಚರಿಸುತ್ತದೆ, ಅಲ್ಲಿ ಕಾಫೀ, ಟೀ, ತಂಪುಪಾನೀಯ, ಚುರುಮುರಿ, ಬಗೆ ಬಗೆಯ ಕತ್ತರಿಸಿದ ಹಣ್ಣುಗಳನ್ನು ಮಾರುವ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ದಾಟಿ ಮುಂದೆ ಸಾಗಿದಲ್ಲಿ, ದೂರದಲ್ಲಿ ತಲಕಾವೇರಿಯ ಮಹಾದ್ವಾರ ಗೋಚರಿಸುತ್ತದೆ. ವರ್ಷದ ಸುಮಾರು ತಿಂಗಳುಗಳ ಕಾಲ ಇಲ್ಲಿ ಮಂಜು ಮುಸುಕಿರುವುದನ್ನೇ ನೋಡಿಯೇ ಏನೋ? ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಮಕ್ಕಳ ಕವಿ ಎಂದೇ ಪ್ರಖ್ಯಾತರಾಗಿದ್ದ ಶ್ರೀ ಜಿ. ಪಿ. ರಾಜರತ್ನಂ ಅವರು
ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಿಕೇರಿ ಮೇಲ್ ಮಂಜು! ಎಂಬ ಪದ್ಯವನ್ನು ಬರೆದಿದ್ದರೇನೋ ಎನ್ನುವಮ್ತೆ ಕ್ಷಣ ಕ್ಷಣಕ್ಕೂ ಮಂಜು ಕಣ್ಣು ಮುಚ್ಚಾಲೆಯಾಟವಾಡುವುದು ನಿಜಕ್ಕೂ ನೋಟ ಆವಿಸ್ಮರಣೀಯ ಅನುಭವವಾಗಿರುತ್ತದೆ. ಕ್ಯಾಮೆರಾ ಫೋಕಸ್ ಮಾಡಿ ಕ್ಲಿಕ್ ಮಾಡುವಷ್ಟರಲ್ಲಿಯೇ ಕ್ಷಣ ಮಾತ್ರದಲ್ಲಿಯೇ ಮಂಜು ಆವರಿಸಿಕೊಳ್ಳುತ್ತದೆ.

tk4ತಲಕಾವೇರಿಯ ಮಹಾದ್ವಾರವನ್ನು ಪ್ರವೇಶಿಸಿ ಮೆಟ್ಟಲುಗಳನ್ನು ಏರಿ ಮುಂದೆ ಹೋಗುತ್ತಿದ್ದಂತೆಯೇ ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿ ಸದಾಕಾಲವೂ ಎದೆ ಮಟ್ಟದಷ್ಟು ನೀರು ತುಂಬಿರುವ ಪುಷ್ಕರಿಣಿ ಎದುರಾಗುತ್ತದೆ. ಈ ಪುಷ್ಕರಣಿಗೆ ಇಳಿದು ಅದರಲ್ಲಿ ಭಕ್ತಿಯಿಂದ ಮುಂದೆ ಸಾಗಿದಲ್ಲಿ ಸುಮಾರು 2/2 ಅಡಿ ಅಗಲದ ಕುಂಡಿಕೆ ಕಾಣಿಸುತ್ತದೆ. ಇದೇ ಸಣ್ಣ ಕುಂಡಿಕೆಯೇ ಪವಿತ್ರ ಕಾವೇರಿಯ ಉಗಮಸ್ಥಾನವಾಗಿದೆ. ಪುಷ್ಕರಣಿಯಲ್ಲಿ ಮೂರು ಮುಳುಗು ಹಾಕಿ ಕುಂಡಿಕೆ ಇರುವ ಸ್ಥಳಕ್ಕೆ ಬಂದಲ್ಲಿ, ಅಲ್ಲಿರುವ ಪುರೋಹಿತರು ತಮ್ಮ ತಂಬಿಗೆಯಿಂದ ಕುಂಡಿಕೆಯಲ್ಲಿರುವ ಪವಿತ್ರ ನೀರನ್ನು ಭಕ್ತಾದಿಗಳ ತಲೆಯ ಮೇಲೇ ಹಾಕುವಾಗ ಆಗುವ ರೋಮಾಂಚನವನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಹೆಚ್ಚು ಆನಂದ ತರುತ್ತದೆ. ಆ ತಣ್ಣನೆಯ ಪರಿಶುದ್ಧ ಸ್ಪಟಿಕದಂತಹ ನೀರು ಮೈಮನಗಳನ್ನು ಪುಳಕಿತಗೊಂಡು ಕಾವೇರಿಯ ಬಗ್ಗೆ ಧನ್ಯತಾ ಭಾವನೆ ಮೂಡಿಬರುವುದಂತು ಸತ್ಯ. ಸ್ನಾನ ಮುಗಿಸಿ, ತೀರ್ಥ ಕುಂಡಿಕೆಯ ಪಕ್ಕದಲ್ಲಿಯೇ ಸದಾಕಾಲವು ನಿರಂತರವಾಗಿ ಉರಿಯವ ಜ್ಯೋತಿ ಮಂಟಪದಲ್ಲಿ ಜಲಕ್ಕೇ ಅಲ್ಲಿನ ಪುರೋಹಿತರು ಕುಂಕುಮಾರ್ಚನೆ, ಮಂಗಳಾರತಿ ಮಾಡಿ ಪೂಜೆ ಸಲ್ಲಿಸುವ ಮೂಲಕ ಕಾವೇರಿ ಮಾತೆಗೆ ಭಕ್ತಿಯಿಂದ ತಲೆ ಬಾಗುವುದು ನಿಜಕ್ಕೂ ಅನನ್ಯ.

ಪವಿತ್ರ ಕುಂಡಿಕೆಯ ಪಕ್ಕದಲ್ಲಿ ಸ್ವಲ್ಪ ಮೆಟ್ಟಲುಗಳನ್ನು ಹತ್ತಿ ಮೇಲಕ್ಕೆ ಹೋದಲ್ಲಿ ಗಣಪತಿ ಮತ್ತು ಅಗಸ್ತೇಶ್ವರ ದೇವಸ್ಥಾನವಿದ್ದು ಅಲ್ಲಿನ ದೇವರುಗಳ ದರ್ಶನ ಪಡೆದು ಅಲ್ಲಿರುವ ಛಾವಡಿಯಲ್ಲಿ ಸ್ವಲ್ಪ ಕಾಲ ಕುಳಿತುಕೊಂಡಲ್ಲಿ ಅಗುವ ಹಿತಾನುಭವ ನಿಜಕ್ಕೂ ಅನನ್ಯ. ದೇವಾಲಯದ ಪಕ್ಕದಲ್ಲೇ ಇರುವ ಸುಮಾರು 300-400 ಮೆಟ್ಟಿಲುಗಳ 300 ಅಡಿ ಎತ್ತರದ ಬ್ರಹ್ಮಗಿರಿ ಬೆಟ್ಟ ಏರಿ ತುದಿ ತಲುಪುತ್ತಾ ಅಲ್ಲಿನ ಸಾಲು ಸಾಲು ಬೆಟ್ಟಗಳ ಸಾಲು ಮನಮೋಹಕ ಕಾನನ, ಮುಖಕ್ಕೇ ಮುತ್ತಿಡುವ ಬೆಳ್ಳಿ ಮೋಡಗಳು ಮಟ್ಟಿಲು ಹತ್ತಿದ ಆಯಾಸವನ್ನು ಕೆಲವೇ ಕ್ಷಣಗಳಲ್ಲಿ ನಿವಾರಿಸಿಬಿಡುತ್ತದೆ.

tk2ತಲಕಾವೇರಿಯ ಪ್ರಮುಖ ಆಕರ್ಷಣೆಯೆಂದರೆ ಪ್ರತೀ ವರ್ಷ ಅಕ್ಟೋಬರ್ 17 ನೇ ತಾರೀಕು ಅಥವಾ ಅಪರೂಪಕ್ಕೆ ಒಮ್ಮೊಮ್ಮೆ 18 ನೇ ತಾರೀಕಿನಂದು ತುಲಾ ಸಂಕ್ರಮಣದಂದು ಕೊಡವರ ಆರಾಧ್ಯ ದೈವ ಕಾವೇರಿ ತೀರ್ಥರೂಪವಾಗಿ ಮೂರು ಬಾರಿ ಉಕ್ಕಿ ಹರಿಯುವ ತೀರ್ಥೋಧ್ಭವವನ್ನು ಕಣ್ತುಂಬಿಸಿ ಕೊಳ್ಳುವುದಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಜನರು ತಲಕಾವೇರಿಗೆ ಬಂದು ಭಕ್ತಿಯಿಂದ ಮಿಂದು ಸಂಭ್ರಮಿಸುತ್ತಾರೆ. ಅರ್ಚಕರಿಂದ ವಿವಿಧ ಪೂಜೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಪುರೋಹಿತರ ವೇದಘೋಷಗಳ ನಡುವೆಯೇ ನಿಗಧಿತ ಸಮಯಕ್ಕೆ ಸರಿಯಾಗಿ ಪವಿತ್ರ ಕುಂಡದಲ್ಲಿ ಕೆಲಕ್ಷಣಗಳು ತೀರ್ಥ ಉಧ್ಭವಾಗುತ್ತಿದ್ದರೆ ಅದನ್ನು ಕಂಡು ಪುನೀತಾದ ಭಕ್ತರ ಹೃದಯಸ್ಪರ್ಶಿ ಹರ್ಷೋಧ್ಗಾರ ಮುಗಿಲು ಮುಟ್ಟಿರುತ್ತದೆ. ಪುರೋಹಿತರೂ ಸಹಾ ಅದೇ ರಸ ಕ್ಷಣದಲ್ಲಿ ಜಯ ಘೋಷದೊಂದಿಗೆ ತಂಬಿಗೆಯಿಂದ ಕುಂಡದಿಂದ ಉದ್ಭವವಾಗುವ ಪವಿತ್ರ ಕಾವೇರಿ ತೀರ್ಥವನ್ನು ಜನಸ್ಥೋಮದ ಮೇಲೆ ಪ್ರೋಕ್ಷಿಸುವುದು ನಿಜಕ್ಕೂ ಅಧ್ಭುತವೇ ಸರಿ.

ತೀರ್ಥೋಧ್ಭವಕ್ಕೆ ಆಗಮಿಸಿದವರೆಲ್ಲರು ಆ ಪುಣ್ಯ ತೀರ್ಥವನ್ನು  ಸಂಗ್ರಹಿಸಿ ಕೊಂಡು ಅದನ್ನು ತಮ್ಮ ಬಂಧು ಮಿತ್ರರೊಂದಿಗೆ ಹಂಚಿಕೊಂಡರೆ ಪುಣ್ಯ ಲಭಿಸುತ್ತದೆ ಎನ್ನುವ ಎಂಬ ಪ್ರತೀತಿಯೂ ಇದೆ. ಅದೇ ರೀತಿ ಮರಣಶ್ಯಯೆಯಲ್ಲಿರುವವರಿಗೂ ಗಂಗ ಜಲ ಹಾಕುವ ರೀತಿಯಲ್ಲೇ ಈ ತೀರ್ಥವನ್ನು ಹಾಕುವುದರಿಂದ ಅವರಿಗೆ ಮುಕ್ತಿ ಲಭಿಸುತ್ತದೆ ಎಂಬ ನಂಬಿಕೆಯೂ ಇಲ್ಲಿನ ಭಕ್ತಾದಿಗಳಿಗಿದೆ.

ತಲಕಾವೇರಿಯಲ್ಲಿ ಈ ರೀತಿಯಾಗಿ ತೀರ್ಥೋಧ್ಭವ ನಡೆಯುವ ಸಮಯದಲ್ಲೇ ದೇಶ ವಿದೇಶದಲ್ಲಿ ಇರುವ ಕೊಡವರು ತಮ್ಮ ಕುಲದೇವತೆಯಾದ ಕಾವೇರಿ ಮಾತೆಯನ್ನು ಮತ್ತು ಕುಲ ದೈವವಾದ ಇಗ್ಗುತಪ್ಪ(ಸುಬ್ರಮಣ್ಯ ಸ್ವಾಮಿ) ನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಆ ದಿನದಂದು ಮನೆ ಮಂದಿಯೆಲ್ಲಾ ಒಟ್ಟು ಸೇರಿ ಹಿರಿಯ ಮುತ್ತೈದೆಯ ಮುಂದಾಳತ್ವದಲ್ಲಿ ಮನೆಯ ದೇವರ ಕೋಣೆಯಲ್ಲಿ ಸೌತೆಕಾಯಿ (ಬೆಳ್ಳೆರಿ ಕಾಯಿ) ಅಥವಾ ತೆಂಗಿನಕಾಯಿಗೆ ಕೆಂಪು ರೇಶ್ಮೆ ವಸ್ತ್ರ ಸುತ್ತಿ, ಹೂವು, ಅಭರಣ, ಪತ್ತಾಕ (ಕೊಡವರ ಮಾಂಗಲ್ಯ) ದಿಂದ ಅಲಂಕರಿಸಿ ಮೂರು ವಿಳ್ಯದೆಲೆ ಅಡಿಕೆ, ಹಣ್ಣು ಹಂಪಲು ಇಟ್ಟು, ಅಕ್ಕಿಯಿಂದ ಮಾಡಿದ ದೋಸೆ, ಕುಂಬಳಕಾಯಿಯಿಂದ ಮಾಡಿದ ಹುಳಿ/ಗೊಜ್ಜಿನ ಜೊತೆಗೆ ಪಾಯಸವನ್ನು ಸಹಾ ನೈವೇದ್ಯ ಮಾಡಿ ಹಬ್ಬವನ್ನು ಆಚರಿಸುವ ಮೂಲಕ ಕಾವೇರಿ ಮಾತೆಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.

ಕಳೆದ ವರ್ಷ ಕರೋನ ಮಹಾಮಾರಿಯಿಂದಾಗಿ ನಿರ್ಭಂಧ ಹೇರಿದ್ದ ಕಾರಣ ಕಳೆಗುಂದಿದ್ದ ತೀರ್ಥೋಧ್ಭವದ ಸಮಾರಂಭ ತಲಕಾವೇರಿಯಲ್ಲಿ ನೆನ್ನೆ ಮಧ್ಯಾಹ್ನ (17.10.21) 1 ಗಂಟೆ 11 ನಿಮಿಷಕ್ಕೆ ಮಕರ ಲಗ್ನದಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ತೀರ್ಥೋದ್ಭವ ನಡೆಯುವ ಮೂಲಕ ಎಲ್ಲರ ಮನಸ್ಸಿನಲ್ಲೂ ನೆಮ್ಮದಿಯನ್ನು ತಂದಿದೆ.

ಜಾತ್ರ ಮಹೋತ್ಸವ ಇನ್ನೂ ಒಂದು ತಿಂಗಳುಗಳ ಕಾಲ ನಡೆಯುವ ಕಾರಣ ಸಮಯ ಮಾಡಿಕೊಂಡು ತಲಕಾವೇರಿಗೆ ಭೇಟಿ ನೀಡಿ ತಾಯಿ ಕಾವೇರಿಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಲಕ್ಷದ್ವೀಪ

lak5

ಹೆಸರೇ ಸೂಚಿಸುವಂತೆ ಅದೊಂದು ದ್ವೀಪಗಳ ಸಮೂಹ. ಭಾರತದ ಅರಬ್ಬೀ ಸಮುದ್ರದಲ್ಲಿ ಸುಮಾರು 36 ಹವಳದ ಬಂಡೆಗಳ ಉಷ್ಣವಲಯದ ದ್ವೀಪಸಮೂಹವೇ ಲಕ್ಷದ್ವೀಪ. ದೇಶದ ಅತ್ಯಂತ ಪ್ರಾಚೀನವಾದ, ನೈಸರ್ಗಿಕವಾದ ಸುಂದರವಾದ ಮತ್ತು ಆಷ್ಟೇ ಸ್ವಚ್ಚತೆಯನ್ನು ಕಾಪಾಡಿಕೊಂಡಿರುವ, ಕನ್ನಡಿಯಂತಹ ನೀರಿನಲ್ಲಿ ಕಣ್ಣು ಕೋರೈಸುವ ಹವಳದ ಬಂಡೆಗಳು, ಬೆಳ್ಳಿಯ ಬಣ್ಣದಲ್ಲಿ ಪ್ರಜ್ವಲಿಸುವ ಕರಾವಳಿ ತೀರಗಳು ಈ ದ್ವೀಪ ಸಮೂಹಗಳಲ್ಲಿ ಇದ್ದು, ಭಾರತದಲ್ಲೇ ಅತ್ಯಂತ ಸ್ವಚ್ಚ ಕರಾವಳಿ ತೀರ ಎಂದೇ ಖ್ಯಾತಿ ಪಡೆದಿರುವ ಕಾರಣ, ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ತಮ್ಮ ರಜಾದಿನಗಳನ್ನು ಇಲ್ಲಿ ಕಳೆಯಲು ಬಯಸುತ್ತಾರೆ.

lak8

ವಿಮಾನ ಮತ್ತು ಸಮುದ್ರ ಮಾರ್ಗದ ಮೂಲಕ ಮಾತ್ರವೇ ಸಂಪರ್ಕ ಹೊಂದಿರುವ ಈ ದ್ವೀಪಕ್ಕೆ ತಲುಪಲು ಕೇರಳದ ಕೊಚ್ಚಿನ್ (ಸಮುದ್ರ ಮಾರ್ಗ 496 Kms) ಮತ್ತು ಕರ್ನಾಟಕದ ಮಂಗಳೂರು (ಸಮುದ್ರ ಮಾರ್ಗ 365 km) ಅತ್ಯಂತ ಪ್ರಮುಖವಾದ ಸ್ಥಳಗಳಾಗಿವೆ. ಈ ದ್ವೀಪ ಸಮೂಹದಲ್ಲಿ ಸುಮಾರು 97% ದಟ್ಟವಾದ ಕಾಡಿನಿಂದ ಆವರಿಸಿದ್ದು ಬಹುತೇಕ ಭಾಗಗಳು ರಕ್ಷಿತ ವಲಯಕ್ಕೆ ಸೇರಿದ್ದು ಕೇವಲ ಕೆಲವೇ ಭೂಭಾಗಗಳಲ್ಲಿ ಜನ ಸಾಂದ್ರತೆ ಇದೆ. ಇಲ್ಲಿನ 95% ರಷ್ಟು ನಿವಾಸಿಗಳು ಸಂರಕ್ಷಿಸಲಾದ ಬುಡಕಟ್ಟು ಪಂಗಡಗಳಿಗೆ ಸೇರಿದ್ದು, ಕೇವಲ 11 ದ್ವೀಪಗಳಲ್ಲಿ ಮಾತ್ರವೇ ಜನವಸತಿ ಇದೆ.

ಆನಾದಿ ಕಾಲದಿಂದಲೂ ಭಾರತ ಭೂಭಾಗವಾಗಿಯೇ ಇರುವ ಈ ದ್ವೀಪ ಸಮೂಹದಲ್ಲಿ ಸದ್ಯದ ಪ್ರಕಾರ ಸುಮಾರು 70,000 ಜನರು ವಾಸಿಸುತ್ತಿದ್ದು, ಅವರಲ್ಲಿ 2.7% ಹಿಂದೂಗಳು, 0.5%,ಕ್ರಿಶ್ಚಿಯನ್ನರು 0.01% ಸಿಖ್ಖರು, 0.02% ಬೌದ್ಧರು, 0.02% ಜೈನರು ಇದ್ದರೆ, 96.5% ರಷ್ಟು ಮುಸ್ಲಿಮರು ಇಲ್ಲಿದ್ದಾರೆ. ಈ ದ್ವೀಪಗಳಲ್ಲಿ ಮಲಯಾಳಂ, ಜೆಸ್ಸೆರಿ (ದ್ವಿಪ್ ಭಾಷೆ) ಮತ್ತು ಮಹಲ್ ಭಾಷೆಗಳನ್ನು ಮಾತನಾಡುತ್ತಾರೆ. ಇನ್ನು ಉತ್ತರ ದ್ವೀಪಗಳ ಜನರು ಅರ್ವಿಯನ್ನು ಹೋಲುವ ತಮಿಳು ಮತ್ತು ಅರೇಬಿಕ್ ಪ್ರಭಾವದಿಂದ ಕೂಡಿದ ಮಲಯಾಳಂನ ಉಪಭಾಷೆಯನ್ನು ಮಾತನಾಡುತ್ತಾರೆ.

lak4

ಸುಮಾರು 5ನೇ ಶತಮಾನದವರೆಗೂ ಹಿಂದೂ ಬುಡಕಟ್ಟಿಗೆ ಸೇರಿದವರೇ ಇದ್ದಿದ್ದು ನಂತರ 5-6ನೇ ಶತಮಾನದಲ್ಲಿ ಅಲ್ಲಿಗೆ ಬೌದ್ಧರು ಆಗಮಿಸಿ ನಿಧಾನವಾಗಿ ನೆಲೆಗೊಳ್ಳುತ್ತಾರೆ. 7ನೇ ಶತಮಾನದ ಹೊತ್ತಿಗೆ ಇಸ್ಲಾಂ ಧರ್ಮ ಅಲ್ಲಿಗೆ ಪ್ರವೇಶಿಸಿದ ಬಳಿಕ ನಿಧಾನವಾಗಿ ಆ ದ್ವೀಪಗಳ ಜನರು ವಿವಿಧ ಕಾರಣಗಳಿಂದಾಗಿ ಮುಸಲ್ಮಾನರಾಗಿ ಮತಾಂತರ ಗೊಂಡು ಮುಸ್ಲಿಂ ಬಾಹುಳ್ಯ ದ್ವೀಪವಾಗುತ್ತದೆ. 1468 ರಲ್ಲಿ ಈ ದ್ವೀಪಕ್ಕೆ ಪ್ರವೇಶಿಸಿದ ಪೋರ್ಚುಗೀಸರು ಅಲ್ಲಿಯ ಜನರಿಗೆ ತೆಂಗಿನ ನಾರಿನ ಉತ್ಪಾದನೆ ಕಲಿಸುವ ಮೂಲಕ ಸ್ವಲ್ಪ ಮಟ್ಟಿಗಿನ ಆಧುನಿಕ ಜಗತ್ತನ್ನು ಪರಿಚಯಿಸಿದರೆ ನಂತರ ಬ್ರಿಟಿಷರೂ ಈ ದ್ವೀಪಗಳನ್ನು ಬಹಳಷ್ಟು ಕಾಲ ಆಳ್ವಿಕೆ ನಡೆಸುತ್ತಾರೆ. ಅಗಟ್ಟಿ, ಅಮಿನಿ, ಅನ್ಡ್ರೊಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ಪೇನಿ, ಕವರತ್ತಿ, ಕಿಲ್ತಾನ್, ಮಿನಿಕಾಯ್ ಮುಂತಾದ ದ್ವೀಪಗಳು ಹೆಚ್ಚಿನ ರೀತಿಯಾಗಿ ಅಭಿವೃದ್ಧಿಯನ್ನು ಕಂಡಿದ್ದು ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಎನಿಸಿದೆ ಎಂದರೂ ಅತಿಶಯೋಕ್ತಿ ಏನಲ್ಲ.

lak3

ಇಂತಹ ದ್ವೀಪಕ್ಕೆ ಭಾರತ ಸರ್ಕಾರ ನವಂಬರ್ 2, 1956ರಲ್ಲಿ ಪ್ರತ್ಯೇಕವಾದ ಅಸ್ತಿತ್ವವನ್ನು ನೀಡಿದ್ದಲ್ಲದೇ, ಮೈಸೂರು ರಾಜ್ಯದಿಂದ ಕರ್ನಾಟಕ ಎಂಬ ಹೆಸರನ್ನು ಬದಲಿಸಿದ ನವಂಬರ್ 1,1973 ರಂದೇ ಈ ದ್ವೀಪಕ್ಕೆ ಲಕ್ಷದ್ವೀಪ ಎಂದು ಅಧಿಕೃತವಾಗಿ ಹೆಸರಿಸಲಾಯಿತಲ್ಲದೇ ಇದನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿತು.

ಸುಮಾರು 70 ಸಾವಿರದ ಆಸುಪಾಸಿನಲ್ಲಿ ಇರುವ ಈ ದ್ವೀಪ ಸಮೂಹದ ಜನರನ್ನು ಪ್ರತಿನಿಧಿಸಲು ಕೇವಲ ಓರ್ವ ಸಂಸದರಿದ್ದು ಉಳಿದ ಆಡಳಿತವೆಲ್ಲವೂ ಪಂಚಾಯತ್ ವ್ಯವಸ್ಥೆಯ ಮುಖಾಂತರವೇ ನಡೆಯುತ್ತದೆ. ಜನರು ತಮ್ಮ ಮತ ಚಲಾಯಿಸಿ ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಸ್ಥಳೀಯ ಆಡಳಿತ ನಡೆಸಲಾಗುತ್ತದೆ ಉಳಿದದ್ದೆಲ್ಲವೂ, ಐಪಿಎಸ್ ಅಥವಾ ಐಎಎಸ್ ಮಟ್ಟದ ಅಧಿಕಾರಿಗಳನ್ನೇ ಇಲ್ಲಿನ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡುವುದು ಅಂದಿನಿಂದಲೂ ನಡೆದುಕೊಂಡ ಬಂದಿರುವ ಸಂಪ್ರದಾಯವಾಗಿದೆ. ಇಲ್ಲಿನ ಜನರು ತಮ್ಮೆಲ್ಲಾ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ವಿದ್ಯಾಭ್ಯಾಸಗಳಿಗೆ ಕೇರಳ ಅಥವಾ ಕರ್ನಾಟಕದ ಕರಾವಳಿ ಪ್ರದೇಶವನ್ನೇ ಆಶ್ರಯಿಸುತ್ತಾರೆ. 90ರ ದಶಕದಲ್ಲಿ ಇಲ್ಲಿನ ಸಾಂಸದರಾಗಿದ್ದ ಶ್ರೀ ಪಿ ಎಂ ಸಯೀದ್ ಅವರು ತಮ್ಮ ಉನ್ನತ ವ್ಯಾಸಂಗವನ್ನು ಮಂಗಳೂರಿನಲ್ಲಿ ಮಾಡಿದ್ದ ಕಾರಣ ಅವರಿಗೆ ಕನ್ನಡ ಭಾಷೆಯು ಸುಲಲಿತವಾಗಿ ಬರುತ್ತಿದ್ದದ್ದಲ್ಲದೇ ಲೋಕಸಭೆಯಲ್ಲೂ ಅವರೊಮ್ಮೆ ಅಪರೂಪಕ್ಕೆ ಕನ್ನಡದಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದರು.

ಸಾಮಾನ್ಯವಾಗಿ ಇಲ್ಲಿನ ಆಡಳಿತ ಅಧಿಕಾರಿಗಳಾಗಿ ಬರುತ್ತಿದ್ದ ಐಪಿಎಸ್ ಅಥವಾ ಐಎಎಸ್ ಮಟ್ಟದ ಅಧಿಕಾರಿಗಳು ತಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಬದಲಾವಣೆಯನ್ನು ತರದೇ ರೂಡಿಯಲ್ಲಿದ್ದ ಪದ್ದತಿಗಳನ್ನೇ ಮುಂದುವರೆಸಿಕೊಂಡು ಹೋಗುತ್ತಾ, ಇಲ್ಲಿನ ಸುಂದರ ಪ್ರಕೃತಿ ತಾಣಗಳಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಾ ಇಲ್ಲಿನವರಿಗೆ ಅಚ್ಚು ಮೆಚ್ಚಾಗಿಯೇ ಇರುತ್ತಿದ್ದರು. ಒಂದು ವರ್ಷದ ಹಿಂದೆ ಲಕ್ಷದ್ವೀಪದಲ್ಲಿ ಭಾರತದ ಇಂಟಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿ ಹೆಸರು ಮಾಡಿದ್ದ ದಿನೇಶ್ವರ್ ಶರ್ಮಾ ಅವರು ಆಡಳಿತ ಅಧಿಕಾರಿಯಾಗಿ ಇದೇ ರೀತಿಯಲ್ಲೇ ಜನ ಮೆಚ್ಚುವಂತೆ ಕೆಲಸ ನಿರ್ವಹಿಸಿ ನಿವೃತ್ತಿಯಾದ ನಂತರ ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ಮೊತ್ತ ಮೊದಲ ಬಾರಿಗೆ ರಾಜಕೀಯ ಹಿನ್ನಲೆಯ ಎಲ್‌ ಜೆ ಪ್ರಫುಲ್‌ ಪಟೇಲ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದಾಗಲೇ ಎಲ್ಲರ ಹುಬ್ಬೇರಿತ್ತು. ಪ್ರಫುಲ್ ಪಟೇಲ್ ಈ ಹಿಂದೆ ಗುಜರಾತಿನಲ್ಲಿ ನರೇಂದ್ರ ಮೋದಿಯವರ ಮಂತ್ರಿಮಂಡಲದಲ್ಲಿ ಅಮಿತ್ ಶಾ ಅವರು ಕೊಲೆ ಆಪಾದನೆ ಮೇರಿಗೆ ಜೈಲು ಸೇರಿದ್ದಾಗ ಗೃಹ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.

ಆರಂಭದ ಕೆಲ ತಿಂಗಳುಗಳ ಕಾಲ ಇಲ್ಲಿನ ಪದ್ದತಿಗಳನ್ನು ಅಧ್ಯಯನ ಮಾಡಿದ ಪ್ರಫುಲ್ ಪಟೇಲ್ ಹವಾಯಿ ದ್ಚೀಪ ಮತ್ತು ಮಾಲ್ಡೀವ್ಸ್ ಗಿಂತಲೂ ಒಂದು ಕೈ ಹೆಚ್ಚೇ ಇರುವ ಈ ಸುಂದರ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಸಲುವಾಗಿ ಈಗಾಗಲೇ ದೇಶದಲ್ಲಿದ್ದ ಕಾನೂನುಗಳನ್ನೇ ಒಟ್ಟುಗೂಡಿಸಿ ಲಕ್ಷದ್ವೀಪ ಡೆವಲಪ್‌ಮೆಂಟ್‌ ಅಥಾರಿಟಿಯ ರೆಗ್ಯುಲೇಶನ್‌ ಜಾರಿಗೆ ತರಲು ಯೋಚಿಸಿದ್ದೇ ತಡಾ ಇಡೀ ಲಕ್ಷದ್ವೀಪದ ಜನ ಬೆಚ್ಚಿ ಬೆರಗಾದರು. ಅಭಿವೃದ್ಧಿಯ ಹೆಸರಿನಲ್ಲಿ ಕೇವಲ 36 ಕಿವೀ ವಿಸ್ತೀರ್ಣವಿರುವ ಈ ಪ್ರದೇಶದಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸುವ ಸಲುವಾಗಿ ಬಹುತೇಕ ಕಾಡುಗಳನ್ನು ಕಡಿಯುವ ಮೂಲಕ ಇಲ್ಲಿನ ದ್ವೀಪವಾಸಿಗಳ ಜನ ಜೀವನವನ್ನು ಮತ್ತು ಸಾಂಪ್ರದಾಯಿಕ ಕಸುಬುಗಳನ್ನು ನಾಶ ಮಾಡಲಿದೆ ಎಂದು ಜನರು ಕಳವಳಗೊಂಡಿದ್ದಾರೆ.

 • ಇದಷ್ಟೇ ಅಲ್ಲದೇ ಆಡಳಿತಾತ್ಮಕವಾಗಿಯೂ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರುವುದು ಅಲ್ಲಿನ ಜನರಿಗೆ ಮುಜುಗರವನ್ನುಂಟು ಮಾಡಿದೆ. ಕೇರಳ ರಾಜ್ಯದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ಈ ಭೂ ಭಾಗದಲ್ಲಿ ಇಸ್ಲಾಂ ಮಲಯಾಳಿಗಳೇ ಹೆಚ್ಚಾಗಿದ್ದು ಅವರ ಪ್ರಮುಖ ಆಹಾರವಾದ ದನದ ಮಾಂಸ, ತರಕಾರಿ, ಸೊಪ್ಪುಗಳಲ್ಲವನ್ನೂ ಕೇರಳ ಇಲ್ಲವೇ ಕರ್ನಾಟಕದ ಕರಾವಳಿ ಪ್ರದೇಶದಿಂದ ಆಮದು ಮಾಡಿಕೊಳ್ಳಬೇಕು. ಹೀಗೆ ಆಮದು ಮಾಡಿಕೊಂಡಾಗ ಆ ಮಾಂಸ ತಾಜಾವಾಗಿರದ ಕಾರಣ, ಇಲ್ಲಿಯ ಶಾಲಾ ಮಕ್ಕಳ ಊಟದಲ್ಲಿ ಕೋಳಿ ಮತ್ತು ದನದ ಮಾಂಸದ ಬದಲಾಗಿ ಅಲ್ಲಿಯೇ ತಾಜಾವಾಗಿಯೇ ಸಿಗುವ ಮೀನು ಮತ್ತು ಮೊಟ್ಟೆಗಳನ್ನು ಕೊಡುವ ನಿರ್ಧಾರ ಮಾಡಿದ್ದಲ್ಲದೇ, Animal preservation regulation ಎಂಬ ಈಗಾಗಲೇ ಇದ್ದ ಕಾನೂನನ್ನು ಜಾರಿಗೆ ತರುವ ಮೂಲಕ ಮಾಂಸಕ್ಕಾಗಿ ದನವನ್ನು ಕಡಿಯುವುದನ್ನು ತಡೆಗಟ್ಟಲು ಮುಂದಾಗಿದ್ದೇ ತಡಾ, ಬಹು ಸಂಖ್ಯಾತ ಮುಸ್ಲಿಮರಿಗೆ ದನದ ಮಾಂಸವನ್ನು ತಿನ್ನದಂತೆ ಮಾಡುವ ಮೂಲಕ ಬಲವಂತವಾಗಿ ಹಿಂದುತ್ವವನ್ನು ಹೇರಲಾಗುತ್ತಿದೆ ಎಂಬ ಹುಯಿಲನ್ನು ಎಬ್ಬಿಸಿದರು.
 • ಇನ್ನು ಈಗಾಗಲೇ ಭಾರತದ ಬಹುತೇಕ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇರುವಂತೆಯೇ ಇಲ್ಲಿನ ಸ್ಥಳಿಯ ಚುನಾವಣೆಯಲ್ಲಿಯೂ ಸ್ಪರ್ಧಿಸುವವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮುಂದಾದ ಪರಿಣಾಮ, ಈಗಾಗಲೇ ಮೂರ್ನಾಲ್ಕು ಹೆಂಡತಿಯರಿಂದ ಹತ್ತಾರು ಮಕ್ಕಳನ್ನು ಹೊಂದಿದ್ದಂತಹ ಸ್ಥಳೀಯ ಮುಖಂಡರ ಬುಡಕ್ಕೇ ಬೆಂಕಿ ಬಿದ್ದಂತಾಗಿದೆ.
 • ಸಮುದ್ರ ಮಥ್ಯದಲ್ಲಿರುವ ಮತ್ತು ಭಾರತದ ಅನೇಕ ನೌಕಾ ಕೇಂದ್ರಗಳ ಶಾಖೆಗಳು ಅಲ್ಲಿರುವ ಕಾರಣ ದೇಶದ ಹಿತದೃಷ್ಟಿಯಿಂದಾಗಿ ಸಮಾಜ ವಿರೋಧಿ ಚಟುವಟಿಕೆ ತಡೆ (ಪಿಎಎಸ್‌ಎ Prevention of Anti-Social Activities Act -PASA) ಕಾಯ್ದೆ ಜಾರಿಗೆ ಮಾಡಿದಾಗ, ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಅಪರಾಧ ಸಂಖ್ಯೆ ಕಡಿಮೆ ಇರುವಾಗ ಇಂತಹ ಕಾನೂನು ಏಕೆ? ಎಂಬುದು ಇಲ್ಲಿಯ ಜನರ ಆಕ್ರೋಶವಾಗಿದೆ.
 • ಇನ್ನು ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಕಾನೂನಾತ್ಮಕವಾಗಿಯೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧವಾಗಿಯೂ ಅಲ್ಲಿಯ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ಗಳು
  ವರಾತ ತೆಗೆಯುತ್ತಿದ್ದಾರೆ.
 • ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅದುವರೆವಿಗೂ ಲಕ್ಷದ್ವೀಪದಲ್ಲಿ ನಿಷೇಧವಿದ್ದ ಮದ್ಯದ ಮಾರಾಟವನ್ನು ತೆರವುಗೊಳಿಸಿದ್ದೂ ಸಹಾ ಅಲ್ಲಿನ ಮುಸ್ಲಿಂ ಧಾರ್ಮಿಕ ಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ.
 • ಅದುವರೆವಿಗೂ ಪ್ರವಾಸೋದ್ಯಮಕ್ಕೆ ಕೇರಳದ ಕೊಚ್ಚಿನ್ ನಿಂದಲೇ ಹಡುಗು ಮತ್ತು ವಿಮಾನಗಳ ಹಾರಾಟವಿದ್ದುದ್ದರ ಜೊತೆಗೆ ಪ್ರವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿ ಎಂಬ ದೃಷ್ಟಿ ಕೋನದಿಂದ ಮಂಗಳೂರಿನಿಂದಲೂ ಸಂಪರ್ಕವನ್ನು ಏರ್ಪಡಿಸಲು ಮುಂದಾಗಿದ್ದು ಕೇರಳಿಗರ ಕೋಪವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

lak2

ಈ ಎಲ್ಲಾ ಕಾರಣಗಳಿಂದಾಗಿಯೇ ಈ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಗುಲ್ಲೆಬ್ಬಿಸಿದ್ದ ರೀತಿಯಲ್ಲಿಯೇ ಅನೇಕ ನಿವೃತ್ತ ಅಧಿಕಾರಿಗಳು (ಎಡಪಂತೀಯರು ಎಂದು ವಿಶೇಷವಾಗಿ ಹೇಳಬೇಕಿಲ್ಲವೇನೋ) ಸಂಸದರು ಮತ್ತು ಚಲನಚಿತ್ರ ಗಣ್ಯರೆಲ್ಲರೂ ಒಟ್ಟಾಗಿ Save Lakshadweep ಎಂಬ ಆಂದೋಲನವನ್ನು ಶುರು ಮಾಡಿರುವುದಲ್ಲದೇ ಈ ಉದ್ದೇಶಿತ ಯೋಜನೆಯಿಂದ ಲಕ್ಷದ್ವೀಪದ ಮೂಲ ಸ್ವರೂಪವೇ ಬದಲಾಗಿ, ಅಲ್ಲಿನ ಬುಡಕಟ್ಟು ಮತ್ತು ಅವರ ನೆಲೆ ಅರಣ್ಯ ನಾಶವಾಗುವುದಲ್ಲದೇ, ಅಲ್ಲಿನ ಜನಜೀವನವನ್ನು ಸಂಪೂರ್ಣ ನಾಶಮಾಡಲಿದೆ. ಹಾಗಾಗಿ ಈ ಉದ್ಧೇಶಿತ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಎಂದಿನಂತೆ ಲೂಟಿಯನ್ಸ್ ಮಾಧ್ಯಮದವರ ಕುಮ್ಮಕ್ಕೂ ಇರುವ ಕಾರಣ ಕಳೆದ ಎರಡು ವಾರಗಳಿಂದ ಇದೇ ವಿಷಯ ಟ್ವಿಟ್ಟರಿನಲ್ಲಿಯೂ ಟ್ರೆಂಡಿಗ್ಗಿನಲ್ಲಿದೆ.

ಉರಿಯುವುದಕ್ಕೆ ತುಪ್ಪಾ ಸುರಿಯುವಂತೆ ಅಲ್ಲಿನ ಸ್ಥಳೀಯರನ್ನು ಎತ್ತಿಕಟ್ಟಿರುವ ಕೆಲವು ಬುದ್ದಿಜೀವಿಗಳು ಇಂತಹ ಮಹಾಮಾರಿಯ ಸಂಧರ್ಭದಲ್ಲಿ ಸರಣಿ ಉಪವಾಸ ಸತ್ಯಾಗ್ರಹವನ್ನು ಅರಂಭಿಸಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ದಂಗೆ ಏಳುವಂತೆ ಪ್ರಚೋದಿಸುತ್ತಿರುವುದಲ್ಲದೇ, ಪ್ರತಿಭಟನೆಯನ್ನು ಹೇಗಾದರೂ ಹಿಂಸಾರೂಪಕ್ಕೆ ಪರಿವರ್ತಿಸಿ ಇದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿ ಭಾರತಕ್ಕೆ ಕೆಟ್ಟ ಹೆಸರನ್ನು ತರಲು ಕಟಿಬದ್ಧವಾಗಿ ನಿಂತಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ಅಪ್ಪಾ ಹಾಕಿದ ಆಲದ ಮರ ಎಂದು ಕಳೆದ ಎಪ್ಪತ್ತು ವರ್ಷಗಳಿಂದಲೂ ಸರಿಯಾದ ರೀತಿಯ ಅಭಿವೃದ್ಧಿ ಕಾಣದ ಈ ದ್ವೀಪಗಳಿಗೆ ವಿಶ್ವಮಾನ್ಯತೆಯನ್ನು ತಂದು ಕೊಡಲು ಮುಂದಾಗಿರುವ ಈ ಯೋಜನೆ ದಿನದಿಂದ ದಿನಕ್ಕೆ ಕೋಮುವಾದದ ಬಣ್ಣಕ್ಕೆ ತಿರುಗುತ್ತಾ ಹೋಗಿರುವುದು ನಿಜಕ್ಕೂ ವಿಷಾಧನೀಯವೇ ಸರಿ. ಬದಲಾವಣೆ ಎನ್ನುವುದು ಜಗದ ನಿಯಮ. ನೀರು ಹರಿಯುತ್ತಿದ್ದಾಗಲೇ ಶುದ್ಧವಾಗಿರುವುದು. ನಿಂತ ನೀರೇ ಕೊಳೆತು ನಾರುವುದು ಎಂಬ ನಿತ್ಯ ಸತ್ಯ ಕೆಲವರ ಸೈದ್ಧಾಂತಿಕ ವಿರೋಧಾಭಾಸಗಳ ನಡುವೆ ಕಾಣೆಯಾಗಿ ಹೋಗುತ್ತಿರುವುದು ವಿಷಾಧನೀಯವೇ ಸರಿ.

ಧರ್ಮಾಧಾರಿತವಾಗಿ ದೇಶದಲ್ಲಿ ಜನಸಂಖ್ಯೆಯ ಅಸಮಾನತೆ ಹೀಗಯೇ ಮುಂದುವರಿದಲ್ಲಿ, ಸಂವಿಧಾನ ನಗಣ್ಯವಾಗಿ, ಅಭಿವೃದ್ಧಿ, ಎನ್ನುವುದು ಹೇಗೆ ಮರೀಚಿಕೆ ಆಗುತ್ತದೆ ಎನ್ನುವುದಕ್ಕೆ ಈ ಪ್ರತಿಭಟನೆಯೇ ಜ್ವಲಂತ ಉದಾಹರಣೆಯಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಭಾಷಾ ಭೂಷಣ

ಇತ್ತೀಚೆಗೆ ಟಿವಿಯಲ್ಲಿ ಪೌರಾಣಿಕ ಚಿತ್ರವೊಂದು ಪ್ರಸಾರವಾಗುತ್ತಿತ್ತು. ಪೌರಾಣಿಕ ಚಿತ್ರ ಎಂಬ ಕುತೂಹಲದಿಂದ ನೋಡಲು ಕುಳಿತುಕೊಂಡು ಕೊಂಡ ಅರ್ಧಗಂಟೆಗಳಲ್ಲಿಯೇ ಮನಸ್ಸಿಗೆ ನೋವಾಗಿ ನೋಡಲು ಅಸಹನೀಯವಾಯಿತು. ಅಕಾರ ಮತ್ತು ಹಕಾರದ ನಡುವಿನ ವ್ಯತ್ಯಾಸ ಅರಿಯದ, ಅವರ ಸಂಭಾಷಣೆಗೂ ಅವರ ಆಂಗಿಕ ಅಭಿನಯಕ್ಕೂ ಸಂಬಂಧವೇ ಇರದ, ಕನ್ನಡ ಭಾಷೆಯ ಮೇಲೆ ಸ್ವಲ್ಪವೂ ಹಿಡಿತವಿರದ ಅಪಾತ್ರರನ್ನೆಲ್ಲಾ ಪೌರಾಣಿಕ ಪಾತ್ರದಲ್ಲಿ ನೋಡುತ್ತಿದ್ದಾಗ, ಕನ್ನಡ ಕಸ್ತೂರಿ ಎನ್ನುವಂತಹ ಸೊಗಡಿರುವ ಭಾಷೆಯನ್ನು ಇಷ್ಟು ಕೆಟ್ಟದಾಗಿ ಕೊಲೆ ಮಾಡುತ್ತಿದ್ದಾರಲ್ಲಾ? ಎಂದೆನಿಸಿ ಕೂಡಲೇ ಅಭಿನಯ ಮತ್ತು ಭಾಷ ಶುದ್ಧತೆಯಲ್ಲಿ ಪರಿಪಕ್ವವಾಗಿದ್ದ ಪೌರಾಣಿಕ ಚಿತ್ರಗಲ್ಲಿ ತಮ್ಭ ಹಾವ ಭಾವ ಮತ್ತು ಕಂಚಿನ ಕಂಠದಿಂದ ಕನ್ನಡಿಗರ ಹೃನಮನಗಳನ್ನು ಗೆದ್ದಿದ್ದ ದಿ.ವಜ್ರಮುನಿಯವರ ಕುರಿತಾದ ಲೇಖನವೊಂದು ಬರೆದಿದ್ದೆ. ಇಂತಹ ಕಲಾವಿದನ ಸ್ಥಾನವನ್ನು ತುಂಬ ಬಲ್ಲ ಮತ್ತೊಬ್ಬ ಕಲಾವಿದ ಇನ್ನೂ ನಮ್ಮ ಕನ್ನಡ ಚಿತ್ರರಂಗಕ್ಕೆ ಸಿಗದಿರುವುದರ ಕುರಿತು ವಿಷಾಧ ವ್ಯಕ್ತಪಡಿಸಿದ್ದೆ.

vajra

ಧರ್ಮಾಧಾರಿತವಾಗಿ ದೇಶವನ್ನು ವಿಭಜಿಸಿ, ದೇಶದಲ್ಲಿ ಸಮಾನತೆಯನ್ನು ತರಲೆಂದೇ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾಗಿದ್ದ ಸಂವಿಧಾನವನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿಸಿ ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಹೇಳಿಕೊಂಡರೂ ಇಲ್ಲಿ ಪ್ರತಿಯೊಂದಕ್ಕೂ ಜಾತಿಯೇ ಪ್ರಮುಖವಾಗಿರುವುದು ನಿಜಕ್ಕೂ ದುಃಖಕರವೇ ಸರಿ. ಮಗುವೊಂದು ಹುಟ್ಟಿದಾರಿಂದಲೂ ಸಾಯುವವರೆಗೂ ಗುರುತಿಸುವುದೇ ಜಾತಿಯಿಂದಲೇ ಎನ್ನುವುದು ವಿಪರ್ಯಾಸವಾಗಿದೆ. ವಜ್ರಮುನಿಯವರ ಆಭಿನಯ ಮತ್ತು ಭಾಷಾ ಪ್ರೌಢಿಮೆಯ ಅಭಿಮಾನದಿಂದ ಆ ಲೇಖನ ಬರೆದಿದ್ದನೇ ಹೊರತು ಆವರ ಜಾತಿ ಆವರ ರಾಜಕೀಯ ಸಿದ್ಧಾಂತಗಳು ನನಗೆ ಗೌಣವಾಗಿದ್ದವು. ದುರಾದೃಷ್ಟವಶಾತ್ ಕೆಲವು ವಿಕೃತ ಮನಸ್ಸಿನವರು ಅದರಲ್ಲೂ ಜಾತಿಯನ್ನು ಹಿಡಿದು ಜರಿಯತೊಡಗಿದ್ದು ನಿಜಕ್ಕೂ ಬೇಸರ ತಂದಿತ್ತು.

kn2

ಕನ್ನಡ ಭಾಷೆ ಕೇವಲ ಭಾಷೆಯಾಗಿಯೋ ಇಲ್ಲವೇ ಯಾವುದೋ ಒಂದು ಧರ್ಮ ಅಥವಾ ಜಾತಿಗೆ ಮೀಸಲಾಗಿಲ್ಲ ಅದು ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆಯಾಗಿದೆ. ಇತ್ತೀಚೆಗೆ ಖನ್ನಢ ಖನ್ನಢ ಎಂದು ಓರಾಟ ಮಾಡುತ್ತಾ ತಮ್ಮ ಒಟ್ಟೆಯನ್ನು ಒರೆದುಕೊಳ್ಳುತ್ತಿರುವ ಉಟ್ಟು ಓಲಾಟಗಾರರೊಬ್ಬರೊಂದಿಗೆ ಮಾತನಾಡುತ್ತಾ, ಅಲ್ಲಾ ಸರ್, ನೀವು ಅಷ್ಟು ದೊಡ್ಡ ಕನ್ನಡಪರ ಹೋರಾಟಗಾರರೆನ್ನುತ್ತೀರಿ ಆದರೆ ನಿಮಗೆ ಸರಿಯಾಗಿ ಕನ್ನಡ ಬರೆಯುವುದು ಇರಲಿ, ಶುದ್ಧವಾಗಿ ವ್ಯಾಕರಣಬದ್ಧವಾಗಿ ಅ-ಕಾರ ಹ-ಕಾರಗಳ ಅಪಭ್ರಂಷವಿಲ್ಲದೇ ಮಾತನಾಡಲು ಬರುವುದಿಲ್ಲವಲ್ಲಾ? ನೀವೇ ಹೀಗೆ ಇದ್ದ ಮೇಲೆ ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ನಿಮ್ಮನ್ನು ಹಿಂಬಾಲಿಸುವ ನಿಮ್ಮ ಅನುಯಾಯಿಗಳು ಅದನ್ನೇ ಅನುಕರಿಸುತ್ತಾರಲ್ಲವೇ? ಎಂದು ಪ್ರಶ್ನಿಸಿದ್ದಕ್ಕೆ ಇದ್ದಕ್ಕಿಂದ್ದಂತೆಯೇ ಕೋಪಗೊಂಡು, ಹೌದು ರೀ ನಾವು ಶೂದ್ರರು. ಶೂದ್ರರು ಅಂಗೇ ಮಾತನಾಡುವುದು ಎನ್ನಬೇಕೇ? ನೀವು ನಮ್ಮ ತರಹ ಬೀದಿಗೆ ಬಂದು ಹೋರಾಡಿ ಅಗ ಗೊತ್ತಾಗುತ್ತದೆ ಕನ್ನಡದ ಹೋರಾಟ ಅಂದ್ರೆ ಏನು ಅಂತಾ ಎಂದು ಬುಸು ಬುಸು ಗುಟ್ಟಿದರು.

kn3

ಅರೇ ಸರ್, ಇಲ್ಲಿ ಶೂದ್ರ, ಸವರ್ಣೀಯ ಎಂಬ ಜಾತಿಯ ಮಾತೇಕೆ? ಭಾಷಾ ಶುದ್ಧಿಗೂ ಜಾತಿಗೂ ಎಲ್ಲಿಯ ಸಂಬಂಧ? ಕನ್ನಡದ ರಸಋಷಿ ಎಂದೇ ಖ್ಯಾತರಾಗಿದ್ದ ಕುವೆಂಪು, ದೇಜಗೌ, ಚಂಪಾ ಪ್ರೊ.ಸಿದ್ದಲಿಂಗಯ್ಯ, ಇವೆರೆಲ್ಲರು ಶುದ್ಧವಾದ ಕನ್ನಡವನ್ನು ಮಾತನಾಡುತ್ತಿದ್ದರಲ್ಲವೇ? ದೊಡ್ಡರಂಗೇ ಗೌಡ, ಪ್ರೋ.ಕೃಷ್ಣೇ ಗೌಡರ ಕನ್ನಡ ಕೇಳುವುದಕ್ಕೇ ಕರ್ಣಾನಂದ. ಎಸ್. ಕೆ ಕರೀಂ ಖಾನ್ ಮತ್ತು ನಿಸಾರ್ ಅಹಮದ್ ಅವರ ಭಾಷಾ ಪಾಂಡಿತ್ಯ ನೋಡಿ ಅವರನ್ನು ಕನ್ನಡಿಗರಲ್ಲ ಎನ್ನಲಾಗುತ್ತದೆಯೇ? ಎಲ್ಲಿಂದಲೋ ಬಂದು ಕನ್ನಡ ಕಲಿತು ಕನ್ನಡಕ್ಕೆ ನಿಘಂಟನ್ನು ಬರೆದು ಕೊಟ್ಟ ರೆವರೆಂಡ್ ಕಿಟ್ಟಲ್ ಮತ್ತು ಐ.ಎ.ಎಸ್ ಅಧಿಕಾರಿಗಳಾಗಿ ಬಂದ ಚಿರಂಜೀವಿಸಿಂಗ್ ಕನ್ನಡ ಭಾಷೆಯ ಸೊಗಡಿಗೆ ಸೋತು ಹೋಗಿ ಕನ್ನಡವನ್ನು ಕಲಿತು ಹಳಗನ್ನಡದ ಛಂದಸ್ಸಿನಲ್ಲಿ ಕಾವ್ಯ ಬರೆಯುವಷ್ಟು ಪಾಂಡಿತ್ಯ ಗಳಿಸಿಲ್ಲವೇ? ಇವರೆಲ್ಲರಿಗೂ ಸಾಧ್ಯವಾದದ್ದು ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದವರಿಗೇಕೆ ಶುದ್ಧವಾದ ಕನ್ನಡ ಭಾಷೆಯನ್ನು ಮಾತನಾಡಲು ಸಾಧ್ಯವಿಲ್ಲ? ಶುದ್ಧ ಭಾಷೆಯನ್ನು ಮಾತನಾಡಿ ಎಂದು ಕೇಳಿದರೆ ಅದರಲ್ಲೂ ಜಾತೀಯತೆಯೇ? ಬೀದಿಯಲ್ಲಿ ಹೋರಾಟ‌ ಮಾಡುವುದಕ್ಕೂ ಶುದ್ಧವಾಗಿ ಕನ್ನಡ ಮಾತನಾಡುವುದಕ್ಕೂ ಯಾವ ಬಾದರಾಯಣ ಸಂಬಂಧ? ಎಂದದಕ್ಕೆ ನನ್ನನ್ನೇ ಸುಟ್ಟು ಭಸ್ಮಮಾಡುವ ಭಸ್ಮಾಸುರರಂತೆ ದುರು ದುರುಗುಟ್ಟು ನೋಡಿದರು, ಅಕ್ಕ ಪಕ್ಕದಲ್ಲಿದ್ದ ನನ್ನ ಹಿತೈಷಿಗಳು ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಸುಮ್ಮನೇ ನೀನೇಕೆ ಅವರ ವಿರೋಧ ಕಟ್ಟಿಕೊಳ್ಳುತ್ತೀಯೇ? ಎಂದು ನನ್ನನ್ನೇ ಸಮಾಧಾನ ಪಡಿಸಿದ್ದು ನಿಜಕ್ಕೂ ವಿಪರ್ಯಾಸ ಎನಿಸಿತು.

ಕನ್ನಡಪರ ಹೋರಾಟಗಾರು ಮತ್ತು ನಟ ನಟಿಯರನ್ನು ಬಿಡಿ, ಕನ್ನಡದ ಸಾರಥಿಗಳಾಗಿ ಇರುವ ಮಾಧ್ಯಮದವರಿಗೇ ಶುದ್ಧವಾಗಿ ಕನ್ನಡ ಬರೆಯಲು ಮಾತನಾಡಲು ಬಾರದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ, ಇತ್ತೀಚಿಗೆ ಕನ್ನಡದ ಹೆಸರಾಂತ ಪತ್ರಿಕೆಯ ಶೀರ್ಷಿಕೆ ಹೀಗಿತ್ತು

ಶೀಘ್ರವಾಗಿ ಆಮ್ಲಜನಕವನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಉಚ್ಚನ್ಯಾಯಾಲಯದಿಂದ ತಾಕಿತು .

ತಾಕಿತು ಎಂದರೆ ಮುಟ್ಟಿತು ಇಲ್ಲವೇ ತಗುಲಿತು ಎಂಬ ಅರ್ಥ ಬರುತ್ತದೆ. ನಿಜವಾಗಿಯೂ ಆ ಶೀರ್ಷಿಕೆಯಲ್ಲಿ ತಾಕೀತು ಎಂಬ ಪದ ಬಳಸ ಬೇಕಿತ್ತು, ತಾಕೀತು ಎಂದರೆ, ಆದೇಶ ಅಥವಾ ಆಜ್ಞೆ ಎಂದರ್ಥ ಬರುತ್ತದೆ.

ಇನ್ನು ಕನ್ನಡದ ಖಾಸಗೀ ಟಿವಿ ವಾಹಿನಿಗಳು ಮತ್ತು ಎಫ್.ಎಂ ರೇಡಿಯೋ ಜಾಕಿಗಳು ಮತ್ತು ಕೆಲವೊಂದು ನಿರೂಪಕರ ಭಾಷೆಯ ಪದ ಪ್ರಯೋಗವೋ ಆ ಭಗವಂತನಿಗೇ ಮೆಚ್ಚಿಗೆಯಾಗಬೇಕು. ಹಿಂದೊಮ್ಮೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಸಭೆಯೊಂದು ಏರ್ಪಾಟಾಗಿ ಅ ಸಭೆಗೆ ಮುಖ್ಯಮಂತ್ರಿಗಳು ಮತ್ತು ಹಿರಿಯ ಮಂತ್ರಿಗಳಾದಿಯಾಗಿ ರಾಜ್ಯದ ಬಹುತೇಕ ಗಣ್ಯರು ಅಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ನಿರೂಪಕಿ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಆರಂಭವಾಗುತ್ತದೆ ಎಂದು ಉದ್ಘೋಷಿಸಿದರು. ಕೂಡಲೇ ವೇದಿಗೆ ಬಂದ ಸರಳಾಯ ಸಹೋದರಿಯರು, ಜನಗಣಮನ ಹಾಡಿಯೇ ಬಿಟ್ಟರು. ವೇದಿಕೆ ಮೇಲೆ ತಮ್ಮ ಪಾಡಿಗೆ ಹರಟುತ್ತಿದ್ದವರಿಗೂ ಮತ್ತು ಸಭಿಕರೆಲ್ಲರೂ ಕಕ್ಕಾ ಬಿಕ್ಕಿಯಾಗಿ ಕಡೆಗೆ ಎಲ್ಲರೂ ದಡಬಡ ಎಂದು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದರು. ಕಾರ್ಯಕ್ರಮ ನಾಡಗೀತೆಯೊಂದಿಗೆ ಆರಂಭವಾಗಬೇಕಿತ್ತು, ನಾಡಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ವ್ಯತ್ಯಾಸ ಅರಿಯದಿದ್ದ ನಿರೂಪಕಿ ನಾಡಗೀತೆ ಎಂದು ಹೇಳಬೇಕಾದ ಜಾಗದಲ್ಲಿ ರಾಷ್ಟ್ರಗೀತೆ ಎಂದು ಹೇಳಿದ್ದೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿತ್ತು.

ಇನ್ನೂ ಎಷ್ಟೋ ನಿರೂಪಕರು ಇಲ್ಲವೇ ಸ್ವಾಗತ ಭಾಷಣ ಮಾಡುವವರು, ಕಿಕ್ಕಿರಿದ ಸಭೆಯಲ್ಲಿ ಎಲ್ಲರಿಗೂ ಹಾದರದ ಸುಸ್ವಾಗತ ಎನ್ನುವ ಮೂಲಕ ಆದರನ್ನು ಹಾದರ ಮಾಡಿ ಬಿಡುತ್ತಾರೆ. ಇನ್ನು ಭಾಷಣ ಮಾಡುವವರೋ ಮಾತನಾಡುವ ಭರದಲ್ಲಿ ನಮ್ಮ ಯತ್ತ ತಾಯಿಯ ಮೇಲೆ ಹಾಣೆ ಮಾಡಿ ಏಳುತ್ತೇನೆ, ನಿಮ್ಮೆಲ್ಲರ ಒಟ್ಟೆಗೆ ಹಕ್ಕಿ ಕೊಡಿಸುವವರೆಗೂ ನನಗೆ ನೆಮ್ಮದಿಯಿಲ್ಲ ಎಂದು ಓತ ಪ್ರೋತವಾಗಿ ಮಾತನಾಡುವುದನ್ನು ಕೇಳಿದಾಗ ಮನಸ್ಸಿಗೆ ಸಂಕಟವಾಗುತ್ತದೆ.

ಕಳೆದ ಮೂರ್ನಾಲ್ಕು ದಶಕಗಳಿಂದ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಸರಿಯಾಗಿ ಕನ್ನಡವನ್ನು ಹೇಳಿಕೊಡದೇ ಇರುವುದೇ ಇಷ್ಟಕ್ಕೆಲ್ಲಾ ಮೂಲ ಕಾರಣ ಎಂದರೂ ತಪ್ಪಾಗದು. ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ ಎನ್ನುವಂತೆ ಚಿಕ್ಕವಯಸ್ಸಿನಲ್ಲಿ ಸರಿಯಾಗಿ ಕಲಿತಿದ್ದರೆ ಎಷ್ಟೇ ವಯಸ್ಸಾದರೂ ಮರೆಯುವುದಿಲ್ಲ, ದುರಾದೃಷ್ಟವಶಾತ್ ಕನ್ನಡ ಭಾಷೆಯಲ್ಲಿ ಕಲಿಯುವುದೇ ಕೀಳರಿಮೆ ಎಂಬ ಭಾವನೆಯನ್ನು ಬಿತ್ತಿ ಕನ್ನಡ ಮಾಧ್ಯಮಗಳ ಶಾಲೆಗಳನ್ನು ಮುಚ್ಚಿ ಆಲ್ಲೆಲ್ಲಾ ಆಂಗ್ಲ ಮಾಧ್ಯಮವನ್ನು ಆರಂಭಿಸಿದ್ದು ಮೂಲಕಾರಣವಾದರೆ, ಎಲ್ಲಾ ಮಕ್ಕಳೂ ಡಾಕ್ಟರ್ ಮತ್ತು ಇಂಜೀನಿಯರ್ ಗಳಾಗ ಬೇಕು. ಎಲ್ಲರೂ ವಿದೇಶಗಳಿಗೆ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಬೇಕು ಎಂಬ ಹಪಾಹಪಿ ಬಿದ್ದಾಗ ಕನ್ನಡವನ್ನು ಕೇವಲ ಒಂದು ಐಚ್ಚಿಕ ವಿಷಯವಾಗಿ ಅದೂ ಕಾಟಾಚಾರಕ್ಕಾಗಿ ಕಲಿಯುತ್ತಿದ್ದಾರೆಯೇ ಹೊರತು ನಿಜವಾಗಿಯೂ ಕನ್ನಡದ ಬಗ್ಗೆ ಯಾರಿಗೂ ಆಸಕ್ತಿಯೇ ಇಲ್ಲ. ಹತ್ತನೇ ತರಗತಿಯಲ್ಲಿಯೂ ಕನ್ನಡ ಮಾಧ್ಯಮದ ಐದನೇ ತರಗತಿಯ ಮಕ್ಕಳು ಓದುವ ಪಠ್ಯವನ್ನಿಟ್ಟರೆ ಆ ಮಕ್ಕಳು ಕನ್ನಡವನ್ನು ಹೇಗೆ‌ ಕಲಿಯುತ್ತಾರೆ?

ಹಿಂದೆಲ್ಲಾ ಸಂಜೆಯಾಯಿತೆಂದರೆ, ಮಕ್ಕಳಿಗೆ ಕೈ ಕಾಲು ಮುಖ ತೊಳೆಸಿ ಹಣೆಗೆ ಭಸ್ಮವನ್ನೋ ಕುಂಕುಮವನ್ನೋ ಧಾರಣೆ ಮಾಡಿಸಿ ದೇವರ ಮುಂದೆ ಭಕ್ತಿಯಿಂದ ಬಾಯಿ ಪಾಠ ಎನ್ನುವ ನೆಪದಲ್ಲಿ ಬಾಲ ಶ್ಲೋಕಗಳು, ತಿಥಿ, ವಾರ, ನಕ್ಢತ್ರ, ರಾಶಿ ಇವೆಲ್ಲದರ ಜೊತೆ 1-20ರ ವರೆಗೆ ಮಗ್ಗಿ ಹೇಳಿಸಿ ಕಾಪೀ ಪುಸ್ತಕವನ್ನು ಬರೆಸುತ್ತಿದ್ದರು. ಶುದ್ಧವಾದ ವ್ಯಾಕರಣವನ್ನು ಹೇಳಿಕೊಡುತ್ತಿದ್ದದ್ದಲ್ಲದೇ, ದೇವರ ನಾಮ ಮತ್ತು ಭಜನೆಗಳನ್ನು ಹೇಳಿಕೊಡುವ ಮೂಲಕ ಭಾಷೆಯ ಉಚ್ಚಾರ ಶುದ್ಧತೆ ಮತ್ತು ಸಂಗೀತದ ಅಭ್ಯಾಸವನ್ನು ಮಾಡಿಸುತ್ತಿದ್ದರು. ಬೆಳಿಗ್ಗೆ ವೃತ್ತಪತ್ರಿಕೆಗಳ ಶೀರ್ಷಿಕೆಯನ್ನು ಓದುವುದು ದೊಡ್ಡ ದೊಡ್ಡ ವಾರ್ತೆಗಳನ್ನು ಕಡ್ಡಾಯವಾಗಿ ಓದಲೇ ಬೇಕಿತ್ತು. ಬೇಕೋ ಬೇಡವೂ ಮನೆಯಲ್ಲಿರುತ್ತಿದ್ದ ರೇಡಿಯೋಗಳಲ್ಲಿ ಸುಮಧುರವಾದ ಕನ್ನಡ ಚಿತ್ರಗೀತೆಗಳು ಆ ಮಕ್ಕಳ ಕಿವಿಯ ಮೇಲೆ ಬೀಳುತ್ತಿದ್ದವು. ತನ್ಮೂಲಕ ಮಕ್ಕಳಿಗೇ ಅರಿವಿಲ್ಲದಂತೆ ಶುದ್ಧವಾದ ಕನ್ನಡ ಹಾಡುಗಳು, ಕನ್ನಡ ಪದಗಳು ಮತ್ತು ಆಕಾಶವಾಣೀ ಉದ್ಘೋಷಕರ ಸ್ವಚ್ಚ ಕನ್ನಡ ಅವರ ಕಿವಿಗಳಿಗೆ ಬೀಳುತ್ತಿತ್ತು, ಅದನ್ನೇ ಅನುಕರಣೆ ಮತ್ತು ಅನುಸರಣೆ ಮಾಡುವ ಮೂಲಕ ಸಹಜವಾಗಿ ಶುದ್ಧ ಕನ್ನಡ ಮಕ್ಕಳಿಗೆ ಅಚ್ಚೊತ್ತುತ್ತಿತ್ತು.

ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಮನೆಯಲ್ಲಿ ಎಲ್ಲರೂ ಶುದ್ಧವಾದ ಕನ್ನಡದಲ್ಲೇ ಸಂಭಾಷಣೆ ನಡೆಸುತ್ತಿದ್ದದ್ದು ಗಮನರ್ಹವಾಗಿತ್ತು. ಆದರೆ ಇಂದು ಮಗು ಹುಟ್ಟುತ್ತಲೇ ಅದರೊಂದಿಗೆ ಟಸ್ ಪುಸ್ ಎಂದು ಇಂಗ್ಲೀಷಿನಲ್ಲೇ ಮಾತನಾಡಿಸುವಾಗ ಮುಂದೆ ಅದೇ ಮಗು ಶುದ್ಧವಾದ ಕನ್ನಡ ಮಾತನಾಡಬೇಕು ಎಂದು ಬಯಸುವುದು ಶುದ್ಧ ಮೂರ್ಖತನವಾಗುತ್ತದೆ. ಇನ್ನು ಟಿವಿ ಮತ್ತು ಮೊಬೈಲ್ ಬಂದ ಮೇಲಂತೂ ಎಲ್ಲರೂ(ವೂ) ಹಾಳಾಗಿ ಹೋಗಿದ್ದಾರೆ.

ನಾನು ಪ್ರೌಢಶಾಲೆಯಲ್ಲಿದ್ದಾಗ ಆಕಾಶವಾಣಿಯ ಕಾರ್ಯಕ್ರಮವೊಂದರಲ್ಲಿ ನಮ್ಮ ಗುರುಗಳು ಪಕ್ಷಿಕಾಶಿ ಎಂಬ ಜಾಗದಲ್ಲಿ ಪಚ್ಚಿಕಾಶಿ ಎಂದ ಕೂಡಲೇ, ಮುದ್ರಣ ಮಾಡಿಕೊಳ್ಳುತ್ತಿದ್ದಾಕೆ ಸರ್, ತಪ್ಪಾಗಿ ಉಚ್ಚಾರ ಮಾಡುತ್ತಿದ್ದೀರಿ ಸರಿಯಾಗಿ ಪಕ್ಷಿಕಾಶಿ ಎಂದು ಉಚ್ಚರಿಸಿ ಎಂದು ಮೂರ್ನಾಲ್ಕು ಬಾರಿ ಅವರ ಬಾಯಲ್ಲಿ ಸರಿಯಾದ ಪದವನ್ನು ಹೇಳಿಸಿದ ನಂತರವೇ ಮುದ್ರಣವನ್ನು ಮುಂದುವರೆಸಿದ್ದರು. ದುರಾದೃಷ್ಟವಶಾತ್ ಅಂತಹ ಭಾಷಾ ಪ್ರಾವೀಣ್ಯತೆಯನ್ನು ಪಡೆದವರು ಇಂದು ಇಲ್ಲವೇ ಇಲ್ಲ ಅಥವಾ ಇದ್ದರೂ ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಇದ್ದಾರೆ ಹಾಗಾಗಿಯೇ ಹೃದಯದ ಮಾತು ಕೇಳೀ… ಎನ್ನುವ ಜಾಗದಲ್ಲಿ ರುದಯದ ಮಾತು ಕೇಳೀ.. ಎಂದು ಹಾಡಿರುವುದನ್ನೇ ಮುದ್ರಿಸಿದ ಸಂಗೀತ ನಿರ್ದೇಶಕರನ್ನು ನೆನೆದರೆ, ಹೃದಯ ಕಿತ್ತು ಬರುತ್ತದೆ, ಹೇಗೆ ಬರೆದರೂ ನಡೆಯುತ್ತದೆ ಎನ್ನುವ ಗೀತ ರಚನೆಕಾರ ಮತ್ತು ಸಂಭಾಷಣೆಕಾರ, ಇನ್ನು ಕನ್ನಡವೇ ಬಾರದ ಸಂಗೀತ ನಿರ್ದೇಶಕರು ಮತ್ತು ಚಿತ್ರ ನಿರ್ದೇಶಕರು, ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದ ನಟ ನಟಿಯರು ಆಡಿದ್ದೇ ಆಡು ಏಳಿದ್ದೇ ಸಂಭಾಷಣೆ. ಒಟ್ಟಿನಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಕನ್ನಡದ ಕಗ್ಗೊಲೆ ಮಾಡುತ್ತಿರುವುದಂತೂ ಸತ್ಯ.

ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಡಿಪ್ಲೊಮಾ ಮಾಡಿ ಕೆಲಸಕ್ಕೆ ಸೇರಿದ ಹೊಸದರಲ್ಲಿ ಸರಾಗವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡಲು ಸ್ವಲ್ಪ ಪರದಾಡುತ್ತಿದ್ದೆ. ನನ್ನ ಎಲ್ಲಾ ಆಲೋಚನೆಗಳು ಕನ್ನಡದಲ್ಲಿದ್ದು ಅದನ್ನು ಸಂಭಾಷಣೆ ರೂಪದಲ್ಲಿ ಆಂಗ್ಲ ಭಾಷೆಗೆ ಮನಸ್ಸಿನಲ್ಲೇ ತರ್ಜುಮೆ ಮಾಡಲು‌ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದದ್ದನ್ನು ನನ್ನ ಸಹೋದ್ಯೋಗಿಯೊಬ್ಬ ಆಡಿಕೊಳ್ಳುತ್ತಿದ್ದದ್ದನ್ನು ಗಮನಿಸಿದ ನಮ್ಮ ಕಛೇರಿಯ ಮುಖ್ಯಸ್ಥರು ನಮ್ಮಿಬ್ಬರನ್ನೂ ಅವರ ಕೊಠಡಿಗೆ ಕರೆಸಿಕೊಂಡು ಶ್ರೀಕಂಠ ಅವನ ಮಾತೃ ಭಾಷೆಯನ್ನು ಚೆನ್ನಾಗಿ ಮಾತನಾಡುತ್ತಾನಾ? ಎಂದು ನನ್ನ ಗೆಳೆಯನನ್ನು ಪ್ರಶ್ನಿಸಿದರು. ಅದಕ್ಕವನು ಹೌದು ಕನ್ನಡದಲ್ಲಿ ಅವನು ಬಹಳ ಸುಂದರವಾಗಿ, ಸ್ಪಷ್ಟವಾಗಿ‌ ಮತ್ತು ಸುಲಲಿತವಾಗಿ ಮಾತನಾಡುತ್ತಾನೆ ಎಂದ ಕೂಡಲೇ, ಹಾಗಿದ್ದರೆ ಇಂಗ್ಲೀಷ್ ಕೂಡಾ ಒಂದು ಭಾಷೆ ಅಷ್ಟೇ. ಅವನು ಇನ್ನು ಕೆಲವೇ ದಿನಗಳಲ್ಲಿ ಸರಾಗವಾಗಿ ಇಂಗ್ಲೀಷ್ ಮಾತನಾಡುತ್ತಾನೆ ಎನ್ನುವ ನಂಬಿಕೆ ನನಗಿದೆ. ಯಾರಿಗೆ ತಮ್ಮ ಮಾತೃಭಾಷೆಯ‌ ಮೇಲೆ ಸ್ಪಷ್ಟತೆ ಇರುತ್ತದೆಯೋ ಅವರು ಇತರೇ ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ‌ಹಾಗಾಗಿ ಅವನಿಗೆ ನಾವು ಪ್ರೋತ್ಸಾಹಿಸಬೇಕೇ ಹೊರತು ಆಡಿಕೊಳ್ಳಬಾರದು ಎಂಬ ಕಿವಿ ಮಾತನ್ನು ಹೇಳಿ ಕಳುಹಿಸಿದ್ದರು.‌ ಅದಾದ ಕೆಲವೇ ತಿಂಗಳಲ್ಲಿ ವ್ಯಾವಹಾರಿಕವಾಗಿ ನನ್ನ ಇಂಗ್ಲಿಷ್ ಬಹಳಷ್ಟು ಸುಧಾರಿಸಿದ್ದಲ್ಲದೇ ಕಳೆದ 30 ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನದ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದಲ್ಲದೇ, ವ್ಯಾವಹಾರಿಕವಾಗಿ ಹತ್ತಾರು ವಿದೇಶಗಳಿಗೂ ಹೋಗಿ ಬಂದಿದ್ದೇನೆ.

kn1

ಕನ್ನಡ ಎನ್ನುವುದು ಯಾರೊಬ್ಬರ ಸ್ವತ್ತಲ್ಲ ಅದಕ್ಕೆ ಖಂಡಿತವಾಗಿಯೂ ಸಾವಿಲ್ಲ. ಅದನ್ನು ಉಳಿಸಿ ಬೆಳಸ ಬೇಕಾದ ಅನಿವಾರ್ಯತೆಯೂ ಕನ್ನಡಕ್ಕೆ ಇಲ್ಲ. ಕನ್ನಡದ ಹೋರಾಟ ಎಂದರೆ ಬೀದಿಗೆ ಬಂದು ಕನ್ನಡೇತರರ ವಿರುದ್ದ ಪ್ರತಿಭಟನೆ ಮಾಡಬೇಕು ಎಂದೇನಿಲ್ಲ. ಯಾರಿಗೆ ಅನಿವಾರ್ಯತೆ ಇದೆಯೋ ಅಂತಹವರು ಮಾತ್ರ ಕನ್ನಡ ಹೆಸರಿನಲ್ಲಿ ಕುರಿ ಮೇಕೆ ಆಡುಗಳನ್ನು ಪ್ರದರ್ಶನ ಮಾಡುತ್ತಾ, ತಮ್ಮ ಗಂಜಿ ಕಂಡುಕೊಳ್ತಾ ಇರೋದು ಈ ನಾಡಿನ ದುರಾದೃಷ್ಟಕರ.

ಸಮಸ್ತ ಕನ್ನಡಿಗರು ಯಾವುದೇ ಧರ್ಮ, ಜಾತಿ ಮತ್ತು ಯಾವುದೇ ಪೋತಪ್ಪ ನಾಯಕರುಗಳ ಹಂಗಿಲ್ಲದೇ ಶುದ್ಧ ಕನ್ನಡದಲ್ಲಿ ತಮ್ಮ ತಮ್ಮ ಗ್ರಾಮೀಣ ಸೊಗಡಿನಲ್ಲಿಯೇ ವ್ಯಾಕರಣ ಬದ್ಧವಾಗಿ ಕನ್ನಡ ಮಾತನಾಡುತ್ತಾ ಅದನ್ನೇ ‌ತಮ್ಮಮಕ್ಕಳಿಗೂ ಕಲಿಸಿದರೆ ಸಾಕು. ಕನ್ನಡ ಇನ್ನೂ ಸಾವಿರಾರು ವರ್ಷಗಳ ಕಾಲ ಇರುತ್ತದೆ.

ಕನ್ನಡವೇ ಸತ್ಯ. ಕನ್ನಡವೇ ನಿತ್ಯ.

ಏನಂತೀರೀ?

ನಿಮ್ಮವನೇ ಉಮಾಸುತ

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ

ಅರೇ ಇದೇನಿದು? ಇಂತಹ ತರೆಬರಹ ಎಂದು ಯೋಚನೆ ಮಾಡುತ್ತಿದ್ದೀರಾ? ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡೂ.. ಎನ್ನುವಂತೇ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಚಿತ್ರಗಳನ್ನು ಒಮ್ಮೆ ನೋಡಿ, ಮೈ ನಖಶಿಖಾಂತ ಉರಿಯದೇ ಹೋದ್ರೇ, ಆತ ನಿಜವಾದ ಕನ್ನಡಿಗನೇ ಅಲ್ಲ.. ನಮಗೆಲ್ಲಾ ಕನ್ನಡ ಅಂದ ತಕ್ಷಣ ನೆನಪಾಗೋದೇ ನಮ್ಮ ಹಳದಿ ಮತ್ತು ಕೆಂಪು ಬಾವುಟದ ಜೊತೆ ತಾಯಿ ಭುವನೇಶ್ವರಿ. ಅದರೆ ದುರಾದೃಷ್ಟವಷಾತ್ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಆ ಫಲಕದಲ್ಲಿ ಕನ್ನಡಾಂಬೆಯ ಸ್ಥಾನದಲ್ಲಿ ಏಸು ಮತ್ತು ಅಲ್ಲಾಹುವನ್ನು ಕೂರಿಸಿ ಕನ್ನಡಾಂಬೆಗೆ ದ್ರೋಹ ಬಗೆದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಸ್ವಾತಂತ್ರ್ಯಾನಂತರ ಹತ್ತಾರು ಕಡೆ ಹರಿದು ಹಂಚಿಹೋಗಿದ್ದ ಕನ್ನಡ ನಾಡು ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಹೋರಾಟದ ಫಲವಾಗಿ 1950ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ಒಟ್ಟುಗೂಡಿಸಿ, ಕನ್ನಡಿಗರೇ ಬಹು ಸಂಖ್ಯಾತರಾಗಿದ್ದರೂ, ಕಾಸರಗೋಡು, ಸೊಲ್ಲಾಪುರ, ಕೊಲ್ಹಾಪುರದಂತಹ ಪ್ರದೇಶಗಳು ಕೈಬಿಟ್ಟು ಹೋಗಿ ಕನ್ನಡದ ಭೂಭಾಗಗಳು ಒಂದಾಗಿ ಮೈಸೂರು ರಾಜ್ಯವಾಗಿ ಏಕೀಕರಣಗೊಂಡು ಬೆಂಗಳೂರನ್ನು ಕರ್ನಾಟಕದ ರಾಜಧಾನಿಯನ್ನಾಗಿ ಮಾಡುತ್ತಾರೆ. 1973 ನವೆಂಬರ್ 1 ರಂದು ಮೈಸೂರು ರಾಜ್ಯ ಕರ್ನಾಟಕ ಎಂದು ಬದಲಾದಾಗ ಸಮಸ್ತ ಕನ್ನಡಿಗರೆಲ್ಲರ ಒಕ್ಕೊರಲಿನ ಘೋಘಣೆ ಹೆಸರಾಯಿತು ಕರ್ನಾಟಕ, ಉಸಿರಾಗಲೀ ಕನ್ನಡ ಎಂದೇ ಹೊರತು ಅಲ್ಲಿ ಯಾವುದೇ ಧರ್ಮ ಮತ್ತು ಅಥವಾ ಜಾತಿಯನ್ನು ನೋಡಿರಲಿಲ್ಲ. ಕನ್ನಡ ಏಕೀಕರಣದಿಂದ ಕರ್ನಾಟಕ ರಾಜ್ಯವಾಗುವವರೆಗೂ ಯಾವುದೇ ಜಾತೀ ಮತ ಮತ್ತು ಧರ್ಮದ ಹೆಸರಿಲ್ಲದೇ, ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡಗರೇ ಎಂಬ ವಿಶಾಲ ಮನೋಭಾವವಿಂದ ಒಗ್ಗೂಡಿ ಹೋರಾಡಿದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ.

ಕನ್ನಡ ಭಾಷೆಯನ್ನು ಅಪ್ಪಿ ಮುದ್ದಾಡಿ ಲಾಲಿಸಿ ಪಾಲಿಸಿ ಬೆಳೆಸಿದವರು ಕೊಟ್ಯಾಂತರ ಜನರು. ಕನ್ನಡದ ಆದಿ ಕವಿ ಪಂಪ, ರನ್ನ, ಜನ್ನ ಇವರೆಲ್ಲರೂ ಜೈನರಾಗಿದ್ದವರು, ಮಾಸ್ತಿ, ಕೈಲಾಸಂ, ರಾಜರತ್ನಂ, ಡಿವಿಜಿ, ಗೊರೂರು, ಪುತೀನ ಇವರೆಲ್ಲರ ಮಾತೃಭಾಷೆ ತಮಿಳು. ಜರ್ಮನಿಯಿಂದ ಕ್ರೈಸ್ತಪಾದ್ರಿಯಾಗಿ ಕ್ರೈಸ್ತಮತ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದ ಫರ್ಡಿನಾಂಡ್ ಕಿಟ್ಟಲ್ ಕನ್ನಡ ಕಲಿತು ಕನ್ನಡಿಗರಾಗಿ ಕನ್ನಡಕ್ಕೇ ನಿಘಂಟು ಬರೆದುಕೊಟ್ಟರು. ಹೆಸರಾಂತ ಸಾಹಿತಿ ನಾಡಿಸೋಜ ಕ್ರೈಸ್ತರು, ನಟವರ ಗಂಗಾಂಧರ ಎಂಬ ಸುಪ್ರಸಿದ್ಧ ಹಾಡನ್ನು ಬರೆದ ಎಸ್.ಕೆ.ಕರೀಮ್ ಖಾನ್ ಮತ್ತು ಬೆಣ್ಣೆ ಕದ್ದ ನಮ್ಮ ಕೃಷ್ಣಾ.. ಪ್ರಖ್ಯಾತಿಯ ನಿಸಾರ್ ಅಹ್ಮದ್ ಅಪ್ಪಟ ಮುಸಲ್ಮಾನರು. ಕನ್ನಡದಲ್ಲಿ ಛಂದಸ್ಸಿನ ಕಾವ್ಯವನ್ನು ಬರೆದ ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಚಿರಂಜೀವಿ ಸಿಂಗ್ ಪಂಜಾಬಿಗಳು. ಹೀಗೆ ಇವರೆಲ್ಲರೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಅಪ್ಪಿ ಮುದ್ದಾಡಿ ಕನ್ನಡಿಗರಾದರೇ ಹೊರತೂ ಕನ್ನಡಮ್ಮನನ್ನೇ ಬದಲಿಸುವ ಹೀನ ಕೃತ್ಯಕ್ಕೆಂದೂ ಕೈ ಹಾಕಿರಲೇ ಇಲ್ಲ.

ಖ್ಯಾತ ರಂಗಕರ್ಮಿ, ಹಾಸ್ಯ ನಟ, ಚಲನಚಿತ್ರ ಸಂಭಾಷಣೆಗಾರ ರಿಚರ್ಡ್ ಲೂಯಿಸ್ ಜನ್ಮತಃ ಅಪ್ಪಟ ಕ್ರಿಶ್ಚಿಯನ್ ಆದರೂ ಅವರ ಎಲ್ಲಾ ನಾಟಕಗಳು ಮತ್ತು ಹಾಸ್ಯ ರಸಸಂಜೆ ಕಾರ್ಯಕ್ರಮಗಳು ಆರಂಭವಾಗುವುದು ಇಲ್ಲಿನ ಮಣ್ಣಿನ ಸೊಗಡಾದ ವಂದಿಪೆ ನಿನಗೆ ಗಣನಾಥ ಎಂದು ವಿಘ್ನವಿನಾಶಕನನ್ನು ಪೂಜಿಸಿಯೇ ಹೊರತು, ಏಸುವನ್ನಲ್ಲ.

ಹೇಳಿ ಕೇಳಿ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಲ್ಲೇಶ್ವರ, ಬಸವನಗುಡಿ, ಚಾಮರಾಜ ಪೇಟೆ, ವಿಜಯನಗರ ರಾಜಾಜಿನಗರ ಮತ್ತು ಜಯನಗರದಂತಹ ಪ್ರದೇಶಗಳಲ್ಲಿಯೇ ಇನ್ನೂ ಅಲ್ಪಸ್ವಲ್ಪ ಕನ್ನಡ ಭಾಷೆ ಮತ್ತು ಕನ್ನಡದ ಸಂಸ್ಕೃತಿಗಳು ಉಳಿದಿದ್ದು ಮಿಕ್ಕೆಲ್ಲಾ ಕಡೆಯೂ ಕನ್ನಡಾ ಎಂದರೇ ಎನ್ನಡಾ, ಎಕ್ಕಡಾ ಅನ್ನುವಂತಹ ಪರಿಸ್ಥಿತಿ ಬಂದೊದಗಿರುವುದು ಬೇಸರದ ಸಂಗತಿಯಾಗಿದೆ ಮತ್ತು ಕನ್ನಡದ ಗಂಧಗಾಳಿ ಅಲ್ಪಸ್ವಲ್ಪ ಉಳಿದಿದೇ ಎಂದು ಭಾವಿಸಿದ್ದ ಜಯನಗರದಲ್ಲಿಯೇ, ನಡೆಯ ಬಾರದಂತಹ ದುರ್ಘಟನೆಯೊಂದು ನಡೆದು ಹೋಗಿದೆ.

ಜಯನಗರದ ಓಂ ಕನ್ನಡ ಮರಿಯಮ್ಮನ ಕರುನಾಡು ಸಂಘ ಎಂಬ ನೋಂದಾಯಿತ ಸಂಘವೊಂದು, 22.11.2020 ಭಾನುವಾರ ಬೆಳಿಗ್ಗೆ 10.00 ಘಂಟೆಗೆ ಸ್ಥಳೀಯ ಶಾಸಕಿಯಾದ ಸೌಮ್ಯಾ ರೆಡ್ಡಿಯವರು ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ರಾಜ್ಯೋತ್ಸವದ ಫಲಕಗಳಲ್ಲಿ ಧ್ವಜಾರೋಹನ, ಡಿಂದಿಮವ ಮುಂತಾದ ಕಾಗುಣಿತ ತಪ್ಪುಳಲ್ಲದೇ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎನ್ನುವ ಬದಲಾಗಿ ಸಿರಿಗನ್ನಡಂ ಗೆಲ್ಗೆ |ಜೈ ಏಸು| ಎನ್ನುವ ಉದ್ಧಟತನವಾದರೇ. ಕುವೆಂಪುರವರ ಜನಪ್ರಿಯ ಗೀತೆ ಬಾರಿಸು ಕನ್ನಡ ಡಿಂಡಿಮವಾ, ಓ ಕರ್ನಾಟಕ ಹೃದಯ ಶಿವಾ ಬದಲು ಏಸು ಎಂದು ಬರೆಸಿರುವುದಲ್ಲದೇ, ತಾಯಿ ಭುವನೇಶ್ವರಿಯ ಭಾವಚಿತ್ರದ ಬದಲಾಗಿ ಏಸು,ಅಲ್ಲಾಹ ಚಿತ್ರಗಳನ್ನು ಇಟ್ಟು ಅದಕ್ಕೆ ಅದ್ದೂರಿಯಾಗಿ ಪೂಜೆ ಮಾಡಿರುವುದು ಖಂಡಿತವಾಗಿಯೂ ಸಮಸ್ತ ಕನ್ನಡಿಗರು ಮತ್ತು ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟ ನಡೆಸಿರುವು ಅಕ್ಷಮ್ಯ ಅಪರಾಧವಾಗಿದೆ. ಈ ರೀತಿಯ ತೋರಿಕೆಯ ಉದ್ಧಟತನದ ರಾಜ್ಯೋತ್ಸವ ಮಾಡುವ ಮೂಲಕ ಆ ಸಂಘಟನೆಗಳು ಏನನ್ನು ಸಾಧಿಸಲು ಹೊರಟಿವೆ ಎಂಬುದು ಸ್ಪಷ್ಟವಾದ ಕಲ್ಪನೆ ಇದ್ದರೂ, ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಶಾಸಕಿಯೂ ಸಹಾ ಅದರ ಬಗ್ಗೆ ಇದುವರೆಗೂ ಯಾವುದೇ ಚಕಾರಾ ಎತ್ತದಿರುವುದನ್ನು ನೋಡಿ ಇಂತಹ ಮತಾಂಧ ಕನ್ನಡ ಮತ್ತು ಹಿಂದೂ ವಿರೋಧಿ ಸಂಘಟನೆಗಳೊಂದಿಗೆ ಆಕೆಯೂ ಕೈ ಜೋಡಿಸಿರಬಹುದಾ? ಎಂಬ ಅನುಮಾನ ಮೂಡುತ್ತಿದೆ. ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ಹಿಂದೂ ವಿರೋಧಿ ಮಿಷನರಿಗಳ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಕನ್ನಡದ ಅಸ್ಮಿತೆಗೇ ಕೊಳ್ಳಿ ಇಡುತ್ತಿದ್ದಾರಾ? ಎಂದು ಸಂದೇಹ ಮೂಗಿಗೆ ಬಡಿಯುತ್ತಿದೆ.

ವರ್ಷ ಪೂರ್ತೀ ಕುಂಬಕರ್ಣನಂತೆ ಮಲಗಿದ್ದು ನವೆಂಬರ್ ಮಾಸದಲ್ಲಿ ಮಾತ್ರಾ ಕನ್ನಡ ಹೆಸರಿನಲ್ಲಿ ಖನ್ನಡದ ಉಟ್ಟು ಓ(ಲಾ)ಟಗಾರರು ಎಂದು ಗಲ್ಲಿಗಲ್ಲಿಗಳಲ್ಲಿ ಕನ್ನಡ ಬಾವುಟಗಳನ್ನು ಏರಿಸಿ, ಕೆಲವು ಚಲನಚಿತ್ರದ ನಟ-ನಟಿಯರನ್ನು ಕರೆಸಿಯೋ ಇಲ್ಲವೇ ಕಿತ್ತೋದ ಆರ್ಕೇಷ್ಟ್ರಾ ಮಾಡಿಸಿ, ಚೆಂದಾ ಎತ್ತುವವರಾರು ಇದರ ವಿರುದ್ಧ ಇದುವರೆವಿಗೂ ಪ್ರತಿಭಟನೆ ಬಿಡಿ, ಒಂದು ಎಚ್ಚರಿಕೆಯ ಹೇಳಿಕೆಯನ್ನೂ ನೀಡದಿರುವುದು ನಿಜಕ್ಕೂ ಆಶ್ಚರ್ಯವಾಗಿದೆ. ಇನ್ನು ಮಾತೆತ್ತಿದರೆ ಬಂದ್ ಎಂದು ಕುರಿ, ಕೋಳಿ ಹಂದಿ, ಹಸುಗಳನ್ನು ಬೀದಿಯಲ್ಲಿ ಓಡಾಡಿಸಿಕೊಂಡು ತನ್ನ ಹೊಟ್ಟೆ ಹೊರೆದುಕೊಳ್ಳುವವರ ಬಾಯಿ ಬಂದ್ ಆಗಿರುವುದು ಸಂದೇಹಾಸ್ಪದವಾಗಿದೆ.

ಇದುವರೆವಿಗೂ ಕ್ರೈಸ್ತರ ಮತಾಂತರ ಸದ್ದಿಲ್ಲದೇ, ಆಸ್ಪತ್ರೆ, ಶಾಲೆಗಳನ್ನು ಗುಡ್ಡಗಾಡಿನಲ್ಲಿ ಕಟ್ಟಿ ಅಲ್ಲಿಯ ಜನರ ಸಹಾಯಕ್ಕೆ ಬಂದಿರುವ ದೇವದೂತರೆಂಬ ಬಣ್ಣ ಕಟ್ಟಿ ನಂತರ ನಿಧಾನವಾಗಿ ಅಲ್ಲೊಂದು ಚರ್ಚ್ ಕಟ್ಟಿ ಹಿಂದೂ ಹೆಣ್ಮಕ್ಕಳ ಕೊರಳಿನ ತಾಳಿಗಳ ಜಾಗದಲ್ಲಿ ಶಿಲುಬೆಗಳನ್ನು ತಗುಲು ಹಾಕಿ ಸಂಜು, ಸಾಂಸ್ಯನ್ ಆಗಿ, ಅರುಣ್, ಆನ್ ಆಗಿ ಜಗ, ಜಾರ್ಜ್ ಆಗಿ ನಿಧಾನವಾಗಿ ಬದಲಾಗುತ್ತಿದ್ದದ್ದನ್ನು ನೋಡುತ್ತಿದ್ದೆವು. ಸದಾಕಾಲವೂ ಬಿಳೀ ಬಟ್ಟೆಯನ್ನು ತೊಡುತ್ತಿದ್ದ ಪಾದ್ರಿಗಳು ಹಿಂದೂಗಳನ್ನು ಮೋಸದಿಂದ ಮರಳು ಮಾಡಲು ಕೇಸರೀ ಬಣ್ಣದ ಪಂಚೆ ಮತ್ತು ನಿಲುವಂಗಿಗಳನ್ನು ಧರಿಸಲು ಆರಂಭಿಸಿದರು. ನಮ್ಮ ದೇವಸ್ಥಾನಗಳ ಮುಂದೆ ಇರುವಂತಹ ಎತ್ತರದ ಗರುಡ ಗಂಬಗಳು ಚರ್ಚ್ ಮುಂದೆಯೂ ಝಗಮಗಿಸ ತೊಡಗಿದವು. ದೇವಸ್ಥಾನಗಳಲ್ಲಿ ನಮ್ಮ ಅರ್ಚಕರು ಭಕ್ತಾದಿಗಳ ಮೇಲೆ ನೀರನ್ನು ಪ್ರೋಕ್ಷಿಸುವಂತೆ ಅಲ್ಲಿಯ ಪಾದ್ರಿಗಳೂ ನೀರನ್ನು ಪ್ರೋಕ್ಷಿಸತೊಡಗಿದರು. ಮೊನ್ನೆ ಚರ್ಚಿನ ಪಾದ್ರಿಯ ಅರ್ಚಕತ್ಚದಲ್ಲಿ ಆಯುಧಪೂಜೆ ನಡೆಸಿರುವುದು, ಏಸುವಿನ ಭಾವಚಿತ್ರಗಳಿಗೆ ವೀಭೂತಿ ಬಳಿದು ಕುಂಕುಮ ಬಳಿದು ರುದ್ರಾಕ್ಷಿ ಮಣಿಯನ್ನು ಧಾರಣೆ ಮಾಡಿಸಿರುವುದು. ಪಾದ್ರಿಗಳು ಹಿಂದೂ ಧರ್ಮದಂತೆ ಗುದ್ದಲೀ ಪೂಜೆಯನ್ನು ಮಾಡಿಸುವ ಮೂಲಕ ಹಿಂದೂಗಳನ್ನು ನಿಧಾನವಾಗಿ ಮತಾಂತರ ಮಾಡುವ ಕೆಲಸದಲ್ಲಿ ನಿರಂತರವಾಗಿ ತೊಡಗಿದ್ದಾರೆ.

ಈಗ ಅದೇ ರೀತಿಯ ಮತಾಂತರ ಹಾಡ ಹಗಲಲ್ಲೇ ಜಯನಗರದ ಶಾಸಕಿಯ ಸಮ್ಮುಖದಲ್ಲಿಯೇ, ಜಾತ್ಯಾತೀತತೆ ಎಂಬ ಹೆಸರಿನಲ್ಲಿ ಕನ್ನಡಮ್ಮನ ಆರಾಧನೆಯಾದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡಮ್ಮನನ್ನೇ ಮಾಯವಾಗಿಸಿ ಆ ಜಾಗದಲ್ಲಿ ಏಸು ಮತ್ತು ಅಲ್ಲಾಹುವನ್ನು ತಂದು ಕೂರಿಸುವ ಮೂಲಕ ಸಮಸ್ತ ಕನ್ನಡಿಗರು ಮತ್ತು ಹಿಂದುಗಳ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿರುವವರನ್ನು ಈ ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ. ಯಾವುದೋ ರಾಜಕೀಯ ಒತ್ತಡಗಳಿಗೆ ಮಣಿದು ಅವರನ್ನು ಹಾಗೆಯೇ ಬಿಟ್ಟಲ್ಲಿ ಯಾರು ಯಾವುದೇ ರೀತಿಯ ತಪ್ಪನ್ನು ಮಾಡಿದರೂ ಈ ಪೋಲೀಸರು ಮತ್ತು ಸರ್ಕಾರ ಏನೂ ಮಾಡುವುದಿಲ್ಲ ಎಂಬ ತಪ್ಪು ಆಭಿಪ್ರಾಯ ಜನರಲ್ಲಿ ಮೂಡಿದಿದರೇ, ಇನ್ನು ಇಂತಹ ಅಪರಾಧ ಮಾಡುವರಿಗೆ ಹೆದರಿಕೆಯೇ ಇಲ್ಲವಾಗಿ ಮತ್ತಷ್ಟು ಮಗದಷ್ಟು ಇಂತಹ ಕುಕೃತ್ಯಗಳನ್ನು ಮಾಡಲು ಪ್ರೋತ್ಸಾಹಿಸಿದಂತಾಗುತ್ತದೇ ಅಲ್ಲವೇ? ಸ್ವಾಭಿಮಾನಿ ಕನ್ನಡಿಗರಾಗಿ ಮತ್ತು ಕ್ಷಾತ್ರತೇಜದ ಹಿಂದೂಗಳಾಗಿ ಇದನ್ನು ಒಗ್ಗಟ್ಟಾಗಿ ಪ್ರತಿಭಟಿಸದೇ ಹೋದಲ್ಲಿ ಮುಂದೊಂದು ದಿನ ನಮ್ಮೆಲ್ಲಾ ಐತಿಹ್ಯವಾದ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ದೇವರುಗಳೇ ಮಾಯವಾಗುವ ದುಸ್ಥಿತಿ ಬಂದರೂ ಬರಬಹುದು ಎಂದರೆ ಅತಿಶಯೋಕ್ತಿಯೇನಲ್ಲ. ಕನ್ನಡಿಗರು ಶಾಂತಿ ಪ್ರಿಯರು ಹೌದಾದರೂ, ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಗೆ ಧಕ್ಕೆ ಬಂದಲ್ಲಿ ಉಗ್ರನರಸಿಂಹವತಾರವನ್ನೂ ತಾಳಬಲ್ಲರು ಎಂಬುದನ್ನು ಮರೆಯಬಾರದು ಎಂಬ ಎಚ್ಚರಿಕೆಯನ್ನು ಇಂತಹ ದುಷ್ಕೃತ್ಯ ನಡೆಸಿದ ಸಂಘಟನೆಗಳಿಗೆ ತಲುಪಿಸುವ ಜವಾಬ್ಧಾರೀ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಅಲ್ವೇ?

ಏನಂತೀರೀ?

ಕೊಹಿನೂರು ವಜ್ರ ನಮ್ಮ ಕರ್ನಾಟಕದ ಸ್ವತ್ತು 

ಅರೇ 105.6 ಕ್ಯಾರೆಟ್ ತೂಕದ  ಪ್ರಸ್ತುತ 350 ಮಿಲಿಯನ್ ಯುಎಸ್ ಡಾಲರ್ ಅಂದರೆ 23,28,95,07,500 ರೂ. ಬೆಲೆ ಬಾಳುವಂತಹ ಲಂಡನ್ ಗೋಪುರದ ಜ್ಯುವೆಲ್ಹೌಸ್‌ನಲ್ಲಿ 1911 ರಲ್ಲಿ ಕ್ವೀನ್ ಮೇರಿಯ ಕಿರೀಟದದ ಮೂಲಕ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿರುವ ಆ ಕೋಹಿನೂರ್ ವಜ್ರವೆಲ್ಲಿ ನಮ್ಮ ಕರ್ನಾಟಕವೆಲ್ಲಿ?  ಅಲ್ಲಿಗೂ ಇಲ್ಲಿಗೂ ಎಲ್ಲಿಯ ಬಾದರಾಯಣ ಸಂಬಂಧ? ಸ್ವಲ್ಪ ಉಸಿರು ಬಿಗಿ ಮಾಡಿಕೊಂಡು ಇದನ್ನು ಕೇಳ್ತಾ/ಈ ಲೇಖನ ಓದುತ್ತಾ ಹೋದಂತೆಲ್ಲಾ ನಿಮಗೇ ಅರ್ಥವಾಗುತ್ತದೆ.

ಆರ್ಟಿಐ ಕಾರ್ಯಕರ್ತ ಶ್ರೀ ರೋಹಿತ್ ಸಬರ್ ವಾಲ್ ಅವರು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಹಾಕಿದ್ದ ಅರ್ಜಿಗೆ ಸಿಕ್ಕಿದ  ಉತ್ತರದ ಪ್ರಕಾರ  ಇರುವರೆಗೂ ನಾವೆಲ್ಲರೂ ಕೇಳಿದ್ದಂತೆ ಈ ಕೊಹಿನೂರ್ ವಜ್ರವನ್ನು ಬ್ರಿಟಿಷರು ಕದ್ದುಕೊಂಡು ಹೋಗಿಲ್ಲ ಅಥವಾ ಬಲವಂತವಾಗಿ ತೆಗೆದುಕೊಂಡಿಲ್ಲ. ಬದಲಿಗೆ, ಪಂಜಾಬ್ ಪ್ರಾಂತ್ಯದ ಅಂದಿನ ರಾಜರು, ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆ ರೂಪದಲ್ಲಿ ನೀಡಿದ್ದಾರೆ.  ಲಾರ್ಡ್ ಡಾಲ್ ಹೌಸಿ ಹಾಗೂ ಮಹಾರಾಜ ದುಲೀಪ್ ಸಿಂಗ್ ನಡುವೆ 1849ರಲ್ಲಿ ಆಗಿದ್ದ ಲಾಹೋರ್ ಒಪ್ಪಂದ ಪ್ರಕಾರ, ಮಹಾರಾಜ ರಣಜಿತ್ ಸಿಂಗ್ ಅವರು ಶಾ ಸುಜಾ ಉಲ್ ಮುಲ್ಕ್ ರಿಂದ ಪಡೆದಿದ್ದ ಈ ಕೊಹಿನೂರ್ ವಜ್ರವನ್ನು  ಇಂಗ್ಲೆಂಡಿನ ಮಹಾರಾಣಿಗೆ ಕಪ್ಪ ಕಾಣಿಕೆ ರೂಪದಲ್ಲಿ ಈ ವಜ್ರವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಆದರೆ ಈ ಉತ್ತರದ ಬಗ್ಗೆ ದೇಶವ್ಯಾಪೀ ಚರ್ಚೆ ನಡೆದದ್ದಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿನ ವಿರೋಧಾಭಾಸವನ್ನು ಗಮನಿಸಿದ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಂಡು ನಾವು ಆ ರೀತಿಯಾಗಿ ಹೇಳಿಯೇ ಇಲ್ಲ. ಕೋಹಿನೂರ್ ವಜ್ರ ಎಂದೆಂದಿಗೂ ನಮ್ಮದೇ ಮತ್ತು ಅದನ್ನು ನ್ಯಾಯಯುತವಾದ ಹೋರಾಟದ ಮೂಲಕ ಮರಳಿ ಭಾರತಕ್ಕೆ ಹಿಂದಿರುಗಿ ತರುತ್ತೇವೆ ಎಂಬ ಆಶ್ವಾಸನೆ ನೀಡಿರುವುದು ಭಾರತೀಯರಲ್ಲಿ  ತುಸು ನೆಮ್ಮದಿಯನ್ನು ಮೂಡಿಸಿದೆ.

ಇನ್ನು ಕೋಹೀನೂರು ವಜ್ರದ ಬಗ್ಗೆ ಹಲವಾರು ಕಥೆಗಳಿದ್ದರೂ, ಒಂದು ಪೌರಾಣಿಕ ಮತ್ತು ಒಂದು ಐತಿಹಾಸಿಕ ಕಥೆಯತ್ತ ಗಮನ ಹರಿಸೋಣ.

ತಜ್ಞರು ಹೇಳುವ ಪ್ರಕಾರ ಈ ಕೋಹಿನೂರ್ ವಜ್ರ ಸುಮಾರು 5000 ವರ್ಷಗಳ ಹಳೆಯದು. ಹಾಗೆ ನೋಡಿದರೆ,  ದ್ವಾಪರಯುಗದಲ್ಲಿ ಈ ವಜ್ರದ ಕುರಿತಂತೆ ಶಮಂತಕೋಪಾಖ್ಯಾನ ಕಥೆಯಲ್ಲಿ ಉಲ್ಲೇಖವಾಗಿದೆ ಶ್ರೀ ಕೃಷ್ಣನ ಸಂಬಂಧಿಯಾದ ಸತ್ರಾಜಿತನು ತಪ್ಪಸ್ಸು ಮಾಡಿ ಈ ಶಮಂತಕಮಣಿಯನ್ನು ಪಡೆದುಕೊಳ್ಳುತ್ತಾನೆ. ಅದೊಮ್ಮೆ ಕೃಷ್ಣಾ ಮತ್ತು ಶಮಂತಕ ಮಣಿಯನ್ನು ಧರಿಸಿದ್ದ ಸತ್ರಾಜಿತನ ತಮ್ಮ ಬೇಟೆಗಾಗಿ ಕಾಡಿಗೆ ಹೋಗಿದ್ದಾಗ, ಸತ್ರಾಜಿತನ ತಮ್ಮ ಮರಳಿ ಬಾರದಿದ್ದದ್ದನ್ನು ಕಂಡು ಎಲ್ಲರೂ ಶ್ರೀಕೃಷ್ಣನೇ ಶಮಂತಕ ಮಣಿಯ ಆಸೆಗಾಗಿ ಕೊಂದಿರಬಹುದೆ ಎಂಬ ಸಂದೇಹ ಪಟ್ಟಾಗ, ಶ್ರೀಕೃಷ್ಣನು ಕಾಡಿನಲ್ಲಿ ಮಣಿಯನ್ನು ಹುಡುಕುತ್ತಾ ಹೋರಟಾಗ,  ಜಾಂಬವಂತ ಎಂಬ ಕರಡಿಯ ಗುಹೆಯಲ್ಲಿ ಆ ಶಮಂತಕ ಮಣಿಯನ್ನು ಆತನ ಪುತ್ರಿ ಜಾಂಬವತಿಯ ಬಳಿ  ಇರುವುದನ್ನು ನೋಡಿ ಜಾಂಬವಂತನೊಂದಿಗೆ ಘೋರ ಯುದ್ಧವನ್ನು ಮಾಡುತ್ತಿರುವಾಗ ಶ್ರೀಕೃಷ್ಣನೇ ರಾಮ ಎಂಬುದರ ಅರಿವಾಗಿ ತಪ್ಪೊಪ್ಪಿಕೊಂಡು ಆತನಿಗೆ ಮಣಿಯ ಸಮೇತ ತನ್ನ ಮಗಳನ್ನೂ ಕಲ್ಯಾಣ ಮಾಡಿಕೊಡುತ್ತಾನೆ.ಈ ರೀತಿಯಾಗಿ ಮಣಿಯನ್ನು ತಂದ ಕೃಷ್ಣನನ್ನು ಕಂಡ ಸತ್ರಾರ್ಜಿತನಿಗೂ  ತನ್ನ ತಪ್ಪಿನ ಅರಿವಾಗಿ ತನ್ನ ಪುತ್ರಿ ಸತ್ಯಭಾಮಳೊಂದಿಗೆ ಶಮಂತಕ ಮಣಿಯನ್ನು ಕೊಡಲು ಮುಂದಾದಾಗ, ಕೇವಲ ಸತ್ಯಭಾಮಳನ್ನು ಮಾತ್ರ ವರಿಸಿ, ಶಮಂತಕವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ ಎನ್ನುತ್ತದೆ.

ಇನ್ನು ಇತಿಹಾಸದ ಪ್ರಕಾರ  13ನೇ ಶತಮಾನದಲ್ಲಿ  ಈ ವಜ್ರ ಅಂದಿನ ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೊಳೂರು ಎಂಬ ಗ್ರಾಮದ ಗಣಿಯಲ್ಲಿ  ದೊರಕಿತು ಎನ್ನಲಾಗುತ್ತದೆ. ಪ್ರಸ್ತುತ ಇದು ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳೂರಿನ  ಸರ್ವೇ.ನಂ.337 ಮತ್ತು ಸರ್ವೇ.ನಂ.342 ಕ್ಕೆ ಸೇರಿದ್ದಾಗಿರುವುದರಿಂದಲೇ ಈ ಕೋಹೀನೂರ್ ವಜ್ರ ಕರ್ನಾಟಕದ ಸ್ವತ್ತು ಎಂದು ಗರ್ವದಿಂದ ಮತ್ತು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ.

13ನೇ ಶತಮಾನದಲ್ಲಿ ಈ ಪ್ರಾಂತ್ಯ ಕಾಕತೀಯರ ಸಾಮ್ರಜ್ಯದಲ್ಲಿತ್ತು. ಗೋಲ್ಕೊಂಡ ವಜ್ರವು  (ಅಪ್ಪಟ ಬಿಳಿ ಬಣ್ಣದ, ಶುಭ್ರ ಮತ್ತು ಪಾರದರ್ಶಕ ವಜ್ರ)  ಜಗತ್ತಿನ ಅತಿ ದೊಡ್ಡ ವಜ್ರ ಎಂದು ಪರಿಗಣಿಸಲಾಗಿದೆ. ಇಂದಿನವರೆಗೂ ಇದಕ್ಕಿಂತ ದೊಡ್ಡ ಗಾತ್ರದ ವಜ್ರ  ಎಲ್ಲಿಯೂ ಪತ್ತೆಯಾಗಿಲ್ಲ. ಇದು ಕಾಕಾತೀಯ ಅರಸರ ಆರಾಧ್ಯ ದೇವತೆಯ ಕಣ್ಣಿನಂತೆ ಈ ಕೊಹಿನೂರು ವಜ್ರವನ್ನು ಭಕ್ತರಿಂದ ಪೂಜಿಸಲಾಗುತ್ತಿತ್ತು.

ಈ ಅನರ್ಘ್ಯ ವಜ್ರ ಮೊದಲಿಗೆ ದೊರೆತಾಗ ಸುಮಾರು 793 ಕ್ಯಾರಟ್ ಅಂದರೆ 158.6 ಗ್ರಾಂ ತೂಕವಿತ್ತು. ಹಾಗಾಗಿ ಇಂತಹ ವಜ್ರವನ್ನು  ತಮ್ಮ ಬಳಿ ಇರಿಸಿಕೊಂಡರೆ ಅದು ಪ್ರತಿಷ್ಠೆ ಸಂಕೇತ ಎಂದು ಅಂದಿನ ಬಹುತೇಕರು ಭಾವಿಸಿದ್ದ ಕಾರಣ ಇದೇ ವಜ್ರದ ವಿಷಯವಾಗಿ ಹಲವಾರು ಯುದ್ಧಗಳು ನೆಡೆದಿವೆ, ಹಲವಾರು ರಾಜರುಗಳು ಪ್ರಾಣ ಬಿಟ್ಟಿದ್ದಾರೆ, ರಾಜ್ಯಗಳನ್ನು ಕಳೆದುಕೊಂಡಿದ್ದಾರೆ. ಕಳ್ಳತನವೂ ಆಗಿದೆ. ಹಾಗಾಗಿ ಈ ವಜ್ರವನ್ನು ಕಲಹಪ್ರಿಯ ಎಂದೂ ಕರೆಯಲಾಗುತ್ತದೆ.  

ಕ್ರಿಶ-1310ರಲ್ಲಿ ಮಲ್ಲಿಕಫುರ್ ಖಿಲ್ಜಿ ಈ ವಜ್ರವನ್ನು ವಶಪಡಿಸಿಕೊಂಡು ಸುಮಾರು 200 ವರ್ಷಗಳ ಕಾಲ ಈ ವಜ್ರವು ಮುಘಲರ ಸಾಮ್ರಜ್ಯದಲ್ಲಿತ್ತು. ನಂತರ ಕ್ರಿಶ-1739ರಲ್ಲಿ ಪರ್ಶಿಯನ್ ಜನರಲ್ ಆದ ನಾದಿರ್ ಮೊಹಮ್ಮದ್ ಷಾ ಭಾರತಕ್ಕೆ ಬಂದಾಗ ಈ ವಜ್ರವನ್ನು ವಶಪಡಿಸಿಕೊಂಡು ತನ್ನ ದೇಶಕ್ಕೆ ತೆಗೆದುಕೊಂಡು ಹೋಗಿದ್ದಲ್ಲದೇ ಈ ವಜ್ರಕ್ಕೆ ಕೊಹಿನೂರು (ಬೆಳಕಿನ ಬೆಟ್ಟ) ಎಂಬ ಪರ್ಷಿಯನ್ ಹೆಸರಿಡುತ್ತಾನೆ.

ಕ್ರಿಶ-1747 ರಲ್ಲಿ ಜನರಲ್ ನಾದಿರ್ ಮೊಹಮ್ಮದ್ ಷಾ ಮರಣದ ನಂತರ ಈ ವಜ್ರವು ಅಹಮ್ಮದ್ ಷಾ ದುರಾನಿಯ ವಶಕ್ಕೆ ಬಂದು, ಆನಂತರ ಕ್ರಿಶ-1813 ಅಲ್ಲಿ ಷಾ ಶುಜಾರ ದುರಾನಿ ಈ ವಜ್ರವನ್ನು ಪುನಃ ಭಾರತಕ್ಕೆ ತಂದು ಅದನ್ನು ರಾಜ ರಾಣಜಿತ್ ಸಿಂಗ್ ರವರಿಗೆ  ಕಾಣಿಕೆಯಾಗಿ ನೀಡಿದನು. ರಾಜ ರಣಜಿತ್ ಸಿಂಗ್ ರಿಗೆ  ಈ ವಜ್ರವನ್ನು ಒರಿಸ್ಸಾದ ಜಗನಾಥ್ ಪೂರಿ ದೇವಸ್ಥಾನದಲ್ಲಿ ಇಡಬೇಕೆಂಬ ಮಹಾದಾಸೆ ಇತ್ತು ಆದರೆ ಕ್ರಿಶ-1849ರಲ್ಲಿ ಬ್ರಿಟಿಷ್ ಅಧಿಕಾರಿ ಸರ್ ಜಾನ್ ಲಾರೆನ್ಸ್ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ ಈ ಕೊಹಿನೂರು ವಜ್ರ ಬ್ರಿಟಿಷರ ಸ್ವತ್ತಾಗಿ, ಲಾಹೋರ್  ಟ್ರೀಟಿ ಎಂಬ ಹೆಸರಿನಲ್ಲಿ ಈ ವಜ್ರವನ್ನು ಬ್ರಿಟೀಷರು ಈಸ್ಟ್ ಇಂಡಿಯ ಕಂಪೆನಿಗೆ ವರ್ಗಾವಣೆ ಮಾಡಿದರು. ಅದರ ಜೊತೆ ಜೊತೆಗೆ ಇದನ್ನು ಯುದ್ದದ ಖರ್ಚು” ಎಂದು ದಾಖಲಿಸಿದ್ದಲ್ಲದೇ, ಕುತಂತ್ರದಿಂದ . ಈ ಕೊಹಿನೂರು ವಜ್ರವನ್ನು ರಾಜ ರಣಜಿತ್ ಸಿಂಗ್ ನ ಕಿರಿಯ ಮಗನಾದ ದುಲೀಪ್ ಸಿಂಗ್ ಕಾಣಿಕೆಯನ್ನಾಗಿ ನೀಡಿರುವಂತೆ ದಾಖಲೆಯಲ್ಲಿ ನಮೂದಿಸಲಾಗಿದೆ ಈ ಮೂಲಕ ಕೊಳ್ಳೆ ಹೊಡೆದ ವಜ್ರಕ್ಕೆ ತಮ್ಮ ಕುತಂತ್ರದ ಮೂಲಕ ನಕಲೀ ದಾಖಲೆಯನ್ನು ಸೃಷ್ಟಿಸುತ್ತಾರೆ.

ಮುಂದೆ 1850 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಈ ವಜ್ರವನ್ನು  ರಾಣಿ ವಿಕ್ಟೋರಿಯ ಬ್ರೂಚ್ ಳಿಗೆ ಉಡುಗೊರೆಯಾಗಿ ನೀಡುತ್ತದೆ. ಆಕೆಯ ಸಾಮ್ರಾಜ್ಯದಲ್ಲಿ ಇದ್ದ ಆಲ್ಬರ್ಟ್ ಪ್ರಿನ್ಸ್ ಕೋನ್ ಸೋರ್ಟ್ ಎಂಬುವನಿಗೆ ಈ ವಜ್ರದ ಆಕಾರವು ಆಕರ್ಷಕವಾಗಿ ಕಾಣದ ಕಾರಣ ಆದನ್ನು ಮತ್ತಷ್ಟೂ ಆಕರ್ಷಣೀಯವನ್ನಾಗಿ ಮಾಡಲು  1852 ರಲ್ಲಿ ಈ ವಜ್ರವನ್ನು ಮಿಸ್ಟರ್ ಕೇಂಟೋರ ಎಂಬ ಚಿನ್ನದ ಕುಶಲಕರ್ಮಿಗೆ ನೀಡುತ್ತಾನೆ.

ವಿಶ್ವದಲ್ಲಿಯೇ ಅತೀ ದೊಡ್ಡ ಗಾತ್ರದಲ್ಲಿ ಈ ವಜ್ರ ಗಣಿಯಲ್ಲಿ ದೊರೆತಾಗ ಸುಮಾರು 793 ಕ್ಯಾರೆಟ್ ಅಂದರೆ 158.6 ಗ್ರಾಂ ನಷ್ಟು ಇತ್ತು. ಅದನ್ನು ಮಿ.ಕಂಟೋರ  186 ಕ್ಯಾರಟ್ ಅಂದರೆ 37.2ಗ್ರಾಂ ಗಳಿಗೆ ತೂಕ ಮತ್ತು ಆಕಾರವನ್ನು ಕಡಿಮೆಗೊಳಿಸಿ ಕತ್ತರಿಸಿ ರಾಣಿಯ ಪರ್ಪಲ್-ವೆಲ್ವೆಟ್ ಕ್ವೀನ್ ಮಥರ್ನ್ ಕಿರೀಟದಲ್ಲಿ ಅಳವಡಿಸುತ್ತಾನೆ.  ರಾಣಿ ವಿಕ್ಟೋರಿಯ ಬ್ರೂಚ್ ರವರು ಈ ಕಿರೀಟ ಧರಿಸಿದ ನಂತರ ಇನ್ನು ಮುಂದೆ ಈ ವಜ್ರದ ಕಿರೀಟವನ್ನು ಕೇವಲ ಮಹಿಳೆಯರು ಮಾತ್ರ ಧರಿಸಬೇಕು ಎಂದು ಆದೇಶ ಹೊರಡಿಸಿದ್ದಲ್ಲದೇ,  ಅಂದಿನಿಂದ ಇಂದಿನವರೆಗೂ ಇದನ್ನು ಕೇವಲ ಮಹಿಳೆಯರು ಮಾತ್ರ ಧರಿಸಿದ್ದಾರೆ. ಅವರ ಮರಣದ ನಂತರ ಈ ಕೊಹಿನೂರು ವಜ್ರವಿದ್ದ ಕಿರೀಟವನ್ನು ಲಂಡನ್ ಗೋಪುರದಲ್ಲಿರುವ ಜ್ಯುವೆಲ್ ಹೌಸ್‌ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಹೀಗೆ ‍ನಮ್ಮ ಕರ್ನಾಟಕದ ಯಾದಗಿರಿ ಜಿಲ್ಲೆಯ ಅಪೂರ್ವ ವಜ್ರ ತಮ್ಮ ಮೂಲ ಗಾತ್ರವನ್ನು ಕಳೆದುಕೊಂಡಿದ್ದರೂ ಇಂದಿಗೂ ಲಂಡನ್ನಿನಲ್ಲಿ ರಾಣಿಯ ಕಿರೀಟದಲ್ಲಿ    ಮೆರೆಯುತ್ತಿದೆ ಎಂಬುದು ಹೆಮ್ಮೆಯ  ವಿಷಯವಾದರು ನಮ್ಮ ದೇಶದ ಈ ಅನರ್ಘ್ಯ ವಜ್ರ  ಬ್ರಿಟಿಷರ ಪಾಲಾಗಿದೆಯಲ್ಲಾ ಎಂಬ  ನೋವಂತೂ ಇದ್ದೇ ಇದೆ.

ಈ ರೀತಿಯಾಗಿ ಮೋಸದ ಮೂಲಕ ಬ್ರಿಟಿಷರು ಈ ವಜ್ರವನ್ನು ತೆಗೆದುಕೊಂಡು ಹೋಗಿರುವ ಕಾರಣ ಈ ವಜ್ರವು ಭಾರತಕ್ಕೆ ಸೇರಬೇಕೆಂದು ಸ್ವಾತಂತ್ರ್ಯ ಬಂದ 1947 ರಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ  ವಾದ ವಿವಾದಗಳು ನಡೆಯುತ್ತಿವೆಯಾದರೂ, ಬ್ರಿಟೀಷರು ಅಂದೇ ದೂರದೃಷ್ಟಿಯಿಂದ ಮೋಸದ ದಾಖಲೆ ಸೃಷ್ಟಿಸಿರುವ ಪರಿಣಾಮವಾಗಿ ಭಾರತೀಯರ ವಾದಗಳು ವ್ಯರ್ಥವಾಗುತ್ತಿದೆ. ಈ ವಜ್ರಕ್ಕೆ ಹೋರಾಟ ಮಾಡುತ್ತಿರುವುದು ಭಾರತ ದೇಶವಷ್ಟೆ ಅಲ್ಲದೆ, ಪಾಕಿಸ್ತಾನ, ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನ, ಇರಾನ್ ಕೂಡಾ ಇದು ನಮ್ಮ ಆಸ್ತಿ ಎಂದು ವಾದ ಮಾಡುತ್ತಿರುವ ಕಾರಣ ಇದು ಇನ್ನೂ ಬಗೆಹರಿಯದ ವಿಷಯವಾಗಿ ಜಟಿಲವಾಗುತ್ತಲೇ ಇದೆ.  ಬ್ರಿಟಿಷರಿಗೆ ಇದು ಉಡುಗೊರೆಯಾಗಿ ಕೊಟ್ಟದ್ದಲ್ಲಾ ಅವರು  ಇದನ್ನು ನಮ್ಮ ದೇಶದಿಂದ ಕದ್ದು ತೆಗೆದುಕೊಂಡು ಹೋಗಿರುವುದು ಎಂದು ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ಸಮರ್ಥವಾಗಿ  ಸಾಬೀತು ಪಡಿಸಿದಲ್ಲಿ ಮಾತ್ರವೇ ಕೋಹಿನೂರು ವಜ್ರ ಭಾರತ ದೇಶಕ್ಕೆ ಹಿಂದಿರುಗಿ ಬರುವ ಸಾಧ್ಯತೆಗಳಿವೆ. ಈ ವಿಷಯದಲ್ಲಿ  ದೇಶವಾಸಿಗಳೆಲ್ಲರೂ ತಮ್ಮ ಎಲ್ಲಾ ಸೈದ್ಧಾಂತಿಕ ವಿರೋಧಗಳನ್ನು ಬದಿಗಿಟ್ತು ಹೋರಾಟ ಮಾಡಿದಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ಕೋಹಿನೂರು ವಜ್ರ ಮತ್ತೊಮ್ಮೆ ನಮ್ಮದಾಗುವುದರಲ್ಲಿ ಸಂದೇಹವೇ ಇಲ್ಲ.

ಈ ಕೋಹೀನೂರ್ ವಜ್ರದ ಕುರಿತಂತೆ  ಇಂಗ್ಲೇಂಡಿನ ಇತಿಹಾಸಜ್ಞ ಡಾಲ್ರಿಂಫೆಲೆ  ಸಂಶೋಧನೆ ನಡೆಸಿ ಕೊಹಿನೂರ್ – ದಿ ಹಿಸ್ಟರಿ ಆಫ್ ದ ವಲ್ಡ್ಸ್ ಫೇಮಸ್ ಡೈಮೆಂಡ್ ಎಂಬ  ಗ್ರಂಥವನ್ನು ರಚಿ‍ಸಿದ್ದಾರೆ. ಈ ಪುಸ್ತಕದಲ್ಲಿ ಅವರು, ಈ ವಜ್ರದ ಮೂಲವನ್ನು  ಹುಡುಕುತ್ತಾ ಇಂಗ್ಲೆಂಡಿನಿಂದ ಭಾರತಕ್ಕೆ ಬಂದು ಆ ವಜ್ರ ಎಲ್ಲಿ ದೊರಕಿತೋ ಅಲ್ಲಿಂದ ಆರಂಭಿಸಿ ಕಡೆಗೆ  ಯಾರಿಂದ ಯಾರಿಗೆ ಕೈ ಬದಲಿಸುತ್ತಾ ಹೋಗಿತ್ತೋ ಆ ಎಲ್ಲಾ ಸ್ಥಳಗಳಿಗೂ ಭೇಟಿಕೊಟ್ಟು ಧಾಖಲೆಗಳನ್ನು ಸಂಗ್ರಹಿಸಿ ಕರ್ನಾಟಕದ  ಕೊಳ್ಳೂರಿನ ಗಣಿಯಲ್ಲಿ ದೊರೆತ ಗೊಲ್ಕೊಂಡ ವಜ್ರ ಈಗ ಕೋಹಿನೂರ್ ವಜ್ರವಾಗಿ ಹೇಗೆ  ಬ್ರಿಟಿಷ್ ರಾಣಿಯ ಕಿರೀಟದ ಭಾಗವಾಗಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ಕೋಹಿನೂರ್ ವಜ್ರದ ರೋಚಕ ಕಥನ ಇದೋ ನಿಮಗಾಗಿ https://youtu.be/_iPEAsTk6pU

ನಮ್ಮ ಕರ್ನಾಟಕದ ಹೆಮ್ಮೆಯ ಕೋಹೀನೂರ್ ವಜ್ರದ ಈ ರೋಚಕ ಕಥೆಯನ್ನು ನೀವೂ ತಿಳಿದುಕೊಳ್ಳಿ ಮತ್ತು ಇತರರಿಗೂ ತಿಳಿಸುತ್ತೀರೀ ಎಂದೇ ಭಾವಿಸುತ್ತೇವೆ.

ಏನಂತೀರೀ?

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಹೌದು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವುದನ್ನು ಪ್ರಸ್ತುತ ನಾವೇ ಸಾರಿ ಸಾರಿ ಎಲ್ಲರಿಗೂ ಈ ವಿಷಯವನ್ನು ಒತ್ತಿ ಒತ್ತಿ ಹೇಳಬೇಕಾದಂತಹ ಕೆಟ್ಟ ಪರಿಸ್ಥಿತಿ ಬಂದೊದಗಿಬಿಟ್ಟಿರುವುದು ನಿಜಕ್ಕೂ ಶೋಚನೀಯವಾಗಿದೆ. ಈ ರೀತಿಯಾಗಲು ಯಾರು ಕಾರಣೀಭೂತರು ಎಂದು ಯೋಚಿಸಿದಲ್ಲಿ ಮತ್ತೊಮ್ಮೆ ನಮ್ಮನ್ನು ನಾವೇ ಹಳಿದುಕೊಳ್ಳಬೇಕಾಗುತ್ತದೆ. ಅದಕ್ಕೆ ಸರಳವಾದ ಕಾರಣ ನಮ್ಮಲ್ಲಿಲ್ಲದ ಭಾಷಾಭಿಮಾನ. ನಮ್ಮೆಲ್ಲರ ಭಾಷಾಭಿಮಾನ ಕೇವಲ ಕನ್ನಡರಾಜ್ಯೋತ್ಸವದ ಸಂಧರ್ಭವಾದ ನವೆಂಬರ್ 1-30 ಅಥವಾ ಇನ್ನೂ ಒಂದೆರಡು ಹೆಚ್ಚಿನ ವಾರಗಳಿಗೆ ಮಾತ್ರವೇ ಸೀಮಿತಗೊಂಡು ಮಿಕ್ಕೆಲ್ಲಾ ದಿನಗಳು ಕುಂಬಕರ್ಣನಂತೆ ನಿದ್ರೆ ಹೋಗುವುದೇ ಈ ರೀತಿಯ ದುರ್ವಿಧಿಗೆ ಕಾರಣವಾಗಿದೆ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೇ, 1986ರಲ್ಲಿ ಸಲ್ಲಿಸಿದ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ಗೊಳಿಸಿ ಎಂದು ಈಗ ಕರ್ನಾಟಕ ರಾಜ್ಯ ಬಂದ್ ಕರೆ ಕೊಟ್ಟಿರುವವರ ಮನಸ್ಥಿತಿಯನ್ನು ನೋಡಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಬೇಕೆನಿಸಿತು. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿಯೇ ದೇಶಾದ್ಯಂತ ರಾಜ್ಯಗಳು ವಿಭಜಿತವಾದರೂ ಕನ್ನಡಿಗರ ದುರ್ವಿಧಿಯೆಂದರೆ ಅಪ್ಪಟ ಕನ್ನಡಿಗರೇ ಇದ್ದ ಪ್ರದೇಶಗಳು ಸದ್ದಿಲ್ಲದೇ ಕೇರಳ ಮತ್ತು ಮಹಾರಾಷ್ಟ್ರ ಪಾಲಾಯಿತು. ಇನ್ನು ಕರ್ನಾಟಕದ ಅವಿಭಾಜ್ಯ ಪ್ರದೇಶಗಳಲ್ಲಿ ತಮಿಳು,ತೆಲುಗು ಮರಾಠಿ ಮತ್ತು ಹಿಂದಿ ಭಾಷಿಗರ ಸಂಖ್ಯೆ ಹೆಚ್ಚಾಯಿತು. ಹಾಗೆಂದ ಮಾತ್ರಕ್ಕೆ ನಾವು ಈ ಅನ್ಯ ಭಾಷಿಗರನ್ನು ದೂಷಿಸುತ್ತಿಲ್ಲ ಮತ್ತು ದ್ವೇಷಿಸುತ್ತಿಲ್ಲ. ಬದಲಾಗಿ ಅವರಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸದೇ ನಾವೇ ಅವರ ಭಾಷೆಯನ್ನು ಕಲಿತು,ಆವರ ಹಬ್ಬ ಹರಿ ದಿನಗಳು, ಆಚರಣೆಗಳು ಮತ್ತು ಅವರ ಸಿನಿಮಾಗಳನ್ನು ನೋಡಿದ ಪರಿಣಾಮವೇ ಇಂದಿನ ಈ ದುಸ್ಥಿತಿ.

sarojini

ಸಂಸದೆ, ರಾಜ್ಯಸಭಾ ಪ್ರತಿನಿಧಿ ಮತ್ತು ಒಮ್ಮೆ ಕೇಂದ್ರ ಸಚಿವೆಯೂ ಆಗಿದ್ದ ಡಾ. ಸರೋಜಿನಿ ಮಹಿಷಿಯವರು ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ, ಕೇಂದ್ರ ಸರ್ಕಾರದ ರೇಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಿ ಮತ್ತು ಡಿ ಗುಂಪಿನ ಕೆಲಸಗಳನ್ನು ಕನ್ನಡಿಗರಿಗೆ ಮೀಸಲಾತಿ ನೀಡುವ ಬಗ್ಗೆ ಸಮಿತಿಯೊಂದರ ಮುಂದಾಳತ್ವ ವಹಿಸಿ 1986ರಲ್ಲಿ ಕರ್ನಾಟಕ ಸರಕಾರಕ್ಕೆ ನೀಡಿದ್ದ 58 ಶಿಫಾರಸುಗಳ ಪೈಕಿ 45 ಶಿಫಾರಸುಗಳನ್ನು ರಾಜ್ಯ ಸರಕಾರ ಒಪ್ಪಿಗೆ ನೀಡಿ ಅವುಗಳನ್ನು ಜಾರಿಗೆಯೂ ತಂದಿದೆ. ಉಳಿದ 13 ಪ್ರಮುಖ ಶಿಫಾರಸುಗಳಲ್ಲಿ ಒಂದಾದ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ಒತ್ತಾಯವನ್ನು ಈಗ ಕನ್ನಡಪರ ಸಂಘಟನೆಗಳು ಮಾಡುತ್ತಿವೆ.

ಈಗ ಬಂದ್ ಕರೆ ಕೊಟ್ಟಿರುವ ಖನ್ನಡ ಓಲಾಟರಾಗರು ಈ ಕೆಳಕಂಡ ವಿಷಯಗಳಲ್ಲಿ ಅವರ ನಿಲುವೇನು ಎಂಬುದನ್ನು ಮೊದಲು ತಿಳಿಯಪಡಿಸಲಿ?

 • ಕನ್ನಡ ಮಾತೃಭಾಷೆಯವರು ಮಾತ್ರ ಕನ್ನಡಿಗರೇ?
 • ಕನ್ನಡ ಮಾತನಾಡಬಲ್ಲವರೆಲ್ಲರೂ ಕನ್ನಡಿಗರೇ?
 • ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೆಲ್ಲರೂ ಕನ್ನಡಿಗರೇ?
 • ಕರ್ನಾಟಕದಲ್ಲಿ ಸದ್ಯ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರೇ?
 • ರಾಜ್ಯದಲ್ಲಿ ಪ್ರಸ್ತುತವಾಗಿ ಆರು ಕೋಟಿ ಕನ್ನಡಿಗರು ಇದ್ದರೂ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳು ಏಕೆ ಇಲ್ಲ?
 • ಬೆಂಗಳೂರಿನ ಮಲ್ಟಿಪ್ಲೆಕ್ಸಿನಲ್ಲಿ ಕನ್ನಡ ಸಿನಿಮಾಗಳಿಗೇಕೆ ಇನ್ನೂ ತಾರತಮ್ಯ?
 • ರಸ್ತೆ/ಕಟ್ಟಡ ನಿರ್ಮಾಣ ಮತ್ತು ಜಾಡಮಾಲಿ ಕೆಲಸಮಾಡಲು ಕನ್ನಡಿಗರೇಕೆ ಮುಂದಾಗುವುದಿಲ್ಲ?
 • ಸಿ ಮತ್ತು ಡಿ ದರ್ಜೆಯಂತಹ ಕೆಲಸಕ್ಕೆ‌ ಮಾತ್ರವೇ ಕನ್ನಡಿಗರು ಸೀಮಿತವಾಗಬೇಕೇ?
 • ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಬಗ್ಗೆ ನಿಮ್ಮ ನಿಲುವೇನು?
 • ಮರಾಠಿಗರ ಮತ್ತು ಕೊಂಕಣಿಗಳ ಅಸ್ಮಿತೆ ಎಂಬ ನೆಪದಲ್ಲಿ ಕನ್ನಡಿಗರನ್ನು ಹೊರಹಾಕುತ್ತಿರುವ ಮಹಾರಾಷ್ಟ್ರ ಮತ್ತು ಗೋವಾದ ರಾಜ್ಯಗಳಿಗಿಂತ ನಮ್ಮ ರಾಜ್ಯ ಹೇಗೆ ವಿಭಿನ್ನ?
 • ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಸಮರ್ಥಿಸುತ್ತೀರೀ?
 • ಅನೇಕ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಈ ಸಮಯದಲ್ಲಿ ಈ ರೀತಿಯ ಬಂದ್ ಕರೆ ನೀಡುವುದು ಒಪ್ಪುವಂತಹದ್ದೇ?

ಬಹಳ ದುಃಖದ ಸಂಗತಿಯೇನೆಂದರೆ ಬಂದ್ ಕರೆ ನೀಡಿರುವ ಬಹುತೇಕ ಸಂಘಟನೆಗಳ ನಾಯಕರುಗಳ ಮಾತೃಭಾಷೆ ಕನ್ನಡವೇ ಆಗಿರುವುದಿಲ್ಲ. ಈಗಿರುವ ಘಟಾನುಘಟಿ ನಾಯಕರುಗಳಿಗೆ ಸರಿಯಾಗಿ ಸ್ಪೃಟವಾಗಿ, ಸ್ವಚ್ಚವಾಗಿ ಅಚ್ಚ ಕನ್ನಡ ಮಾತನಾಡಲು ಬರುವುದೇ ಇಲ್ಲ. ಅ ಕಾರ ಮತ್ತು ಹ ಕಾರ ಬಳಕೆಯ ವೆತ್ಯಾಸವೇ ಅರಿಯದೇ ಆದರಕ್ಕೆ ಹಾದರ ಎಂದು ಹೇಳುವಂತಹ ನಾಯಕರೇ ಹೆಚ್ಚು. ಇಂದು ಬಹುತೇಕ ಕನ್ನಡ ಪರ ಸಂಘಟನೆಗಳು ಅವರ ನಾಯಕರುಗಳ ಸ್ವಪ್ರತಿಷ್ಟೆಯಿಂದಾಗಿ ಅನೇಕ ಭಾಗಗಳಾಗಿ ತಂಡು ತುಂಡುಗಳಾಗಿ ಹೋಗಿ ಅವರಲ್ಲಿಯೇ ಒಗ್ಗಟ್ಟಿಲ್ಲದಾಗಿದೆ. ಈಗ ಕರೆದಿರುವ ಮುಷ್ಕರಕ್ಕೂ ಸಹಾ ಅನೇಕ ಕನ್ನಡ ಪರ ಸಂಘಟನೆಗಳು ಬೆಂಬಲವನ್ನು ಸೂಚಿಸಿಯೇ ಇಲ್ಲ ಎನ್ನುವುದನ್ನು ಗಮನಿಸಬೇಕಾದ ಅಂಶವಾಗಿದೆ. ಹೀಗೆ ತಮ್ಮಲ್ಲಿಯೇ ಒಗ್ಗಟ್ಟಿಲ್ಲದೇ ಸುಖಾಸುಮ್ಮನೆ ಮತ್ತೊಬ್ಬರ ಮೇಲೆ ಗಧಾ ಪ್ರಹಾರ ಮಾಡುವುದು ಎಷ್ಟು ಸರಿ? ಮೊದಲು ಈ ಕನ್ನಡಪರ ಸಂಘಟನೆಗಳು ತಮ್ಮೆಲ್ಲಾ ಅಹಂಗಳನ್ನು ಬದಿಗಿಟ್ಟು ಒಂದಾಗಿ ಸಾಥ್ವಿಕ‌ ಹೋರಾಟ ಮಾಡಿದಲ್ಲಿ ಎಲ್ಲರ ಮನ‌ ಗೆಲ್ಲಬಹುದು

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಮಾತನಾಡುವವರ ಸಂಖ್ಯೆ ಸದ್ಯಕ್ಕೆ ಕೇವಲ ಶೇ 20 ರಷ್ಟು ಆಗಿ ಹೋಗಿ ಅನ್ಯಭಾಷಿಕರೇ ಹೆಚ್ಚಾಗಿ ಹೋಗಿದ್ದಾರೆ. ಚಿಕ್ಕಪೇಟೆ, ಬಳೇಪೇಟೆ, ಅಕ್ಕಿಪೇಟೆ ಮಾರ್ವಾಡಿಗರ ಪಾಲಾದರೆ, ಹಲಸೂರು, ಬೆಂಗಳೂರು ದಂಡು ತಮಿಳರ ಪಾಲಾಗಿದ್ದರೆ, ಕೋರಮಂಗಲ, ಹೊಸೂರು ರಸ್ತೆ , ವೈಟ್ ಫೀಲ್ಡ್ ಪ್ರದೇಶಗಳಲ್ಲಿ ತೆಲುಗರದ್ದೇ ಪ್ರಾಭಲ್ಯ. ಇನ್ನು ಮಲೆಯಾಳಿಗಳು ಮತ್ತು ಉರ್ದು ಭಾಷಿಕರು ನಗರಾದ್ಯಂತ ಹಂಚಿಹೋಗಿದ್ದು ಅವರ ಮಧ್ಯೆ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಅಲ್ಪ ಸ್ವಲ್ಪ ಕನ್ನಡಿಗರನ್ನು ಕಾಣುವಂತಾಗಿದೆ. 60-70ರ ದಶಕದ ಆನಕೃ ಮತ್ತು ಮ ರಾಮಮೂರ್ತಿಗಳ ಕಾಲದಿಂದಲೂ ಹಿಡಿದು ಇಂದಿಗೂ ಸಹಾ ಬೆಂಗಳೂರಿನಲ್ಲಿ ಕನ್ನಡ ಸಿನಿಮಾ ಪ್ರದರ್ಶನಕ್ಕೆ ಹೋರಾಟ ಮಾಡಲೇ ಬೇಕಿದೆ. ಇಂದಿಗೂ ಬಸ್, ಮಾಲ್ ಮತ್ತು ಪಬ್ಗಳಲ್ಲಿ ಕನ್ನಡದ ಚಿತ್ರಗೀತೆಗಳು ಮರೀಚಿಕೆಯೇ ಆಗಿದೆ. ಬೆಂಗಳೂರಿನ 26 ವಿಧಾನಸಭಾ ಸದಸ್ಯರುಗಳಲ್ಲಿ ಹೆಚ್ಚಿನವರು ಅನ್ಯಭಾಷಿಗರೇ ಆಗಿದ್ದಾರೆ. ಅವರಲ್ಲಿ ಕೆಲವರಿಗೆ ಇನ್ನೂ ಸಹಾ ಸರಿಯಾಗಿ ಕನ್ನಡ ಮಾತನಾಡುವುದಕ್ಕೂ ಬರುವುದಿಲ್ಲ. ಮೊದಲು ಈ ವಿಷಯಗಳ ಬಗ್ಗೆ ಆದ್ಯತೆ ಕೊಟ್ಟು ಅಯಕಟ್ಟಿನ ಪ್ರದೇಶಗಳಲ್ಲಿ ಉನ್ನತ ಅಧಿಕಾರಗಳಲ್ಲಿ ಕನ್ನಡಿಗರನ್ನು ಆಯ್ಕೆಮಾಡದೇ, ಸುಖಾ ಸುಮ್ಮನೆ ಒಂದು ದಿನದ ಬಂದ್ ಮಾಡಿ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವಾಗುವಂತೆ ಮಾಡಿ, ಜನ ಜೀವನ ಅಸ್ತವ್ಯಸ್ತ ಮಾಡುವುದರ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ. 2019ರಲ್ಲಿ ನಡೆದ ಸುಮಾರು 10-12 ಬಂದ್ ಗಳಿಂದ ಬಂದ್ ಕರೆ ನೀಡಿದ ಸಂಘಟನೆಗಳು ಉದ್ದಾರವಾದವೇ ಹೊರತು ರಾಜ್ಯದ ಭಾಷೆ, ಜಲ ನೆಲ ಸಂಸ್ಕೃತಿಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು.

b2

ನಿಜಕ್ಕೂ ಬೇಸರ ತರಿಸುವ ಸಂಗತಿಯೇನೆಂದರೆ, ಒಂದೆರಡು ಸಂಘಟನೆಗಳ ಹೊರತಾಗಿ ಬಹುತೇಕ ಕನ್ನಡಪರ ಸಂಘಗಳ ಹುಟ್ಟು ಆಯಾಯಾ ನಾಯಕರ ಹೊಟ್ಟೇ ಪಾಡಿಗಾಗಿಯೇ ಆಗಿರುತ್ತದೆ. ಈ ನಾಯಕರು ತಮ್ಮ ಅಸ್ಥಿತ್ವಕ್ಕಾಗಿ ಮತ್ತು ಅಗ್ಗದ ದಿಢೀರ್ ಪ್ರಚಾರಕ್ಕಾಗಿ ಈ ರೀತಿಯ ಮುಷ್ಕರಗಳನ್ನು ಆಗ್ಗಿಂದ್ದಾಗ್ಗೆ ಕನ್ನಡದ ಹೆಸರಿನಡಿ ಮಾಡುವುದು, ಅನ್ಯಭಾಷಿಕರನ್ನು ಹೆದರಿಸಿ ಬೆದರಿಸುತ್ತಾ ರೋಲ್ ಕಾಲ್ ಮಾಡುವುದು ಇಲ್ಲವೇ ಯಾವುದಾದರೂ ಸಂಧಾನ (settlement) ಮಾಡಿಸುವ ಮೂಲಕ ಹಣ ಮಾಡುವುದಕಷ್ಟೇ ಸೀಮಿತವಾಗಿದ್ದು ಇವರಿಂದ ಕನ್ನಡಕ್ಕೆ ಒಂದು ನಯಾಪೈಸೆಯೂ ಲಾಭವಿಲ್ಲ ಎನ್ನುವುದು ಜಗಜ್ಜಾಹೀರಾತಾಗಿದೆ. ಕನ್ನಡದ ಹೆಸರಿನಲ್ಲಿ, ಪಾಪದ ಕುರಿ, ಕೋಳಿ, ಹಂದಿ, ನಾಯಿ, ಎಮ್ಮೆ, ಹಸುಗಳನ್ನು ಅಸಹ್ಯಕರವಾಗಿ ಪ್ರತಿಭಟನೆಗೆ ಬಳೆಸಿಕೊಳ್ಳುವ ಮೂಲಕ ಜನರ ಮುಂದೆ ನಗೆಪಾಟಲಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಹಾಗಂದ ಮಾತ್ರಕ್ಕೆ ಪ್ರತಿಭಟನೆ ಮಾಡಬಾರದು ಎಂದಲ್ಲ.ಅದಕ್ಕೆ ವಿರೋಧವನ್ನೂ ಮಾಡುತ್ತಿಲ್ಲ. ಡಾ. ಸರೋಜಿನಿ ಮಹಿಷಿ ವರದಿ‌ ಸಂಪೂರ್ಣವಾಗಿ ರಾಜ್ಯದಲ್ಲಿ ಜಾರಿಗೆಯಾಗಿ ಕನ್ನಡದ ನೆಲದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಲೇ ಬೇಕು.

 • ಬಂದ್ ಮಾಡಿ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡುವ ಬದಲು ಸಾಥ್ವಿಕವಾಗಿ ಹೋರಾಡ ಬಹುದಲ್ಲವೇ?
 • ಕನ್ನಡ ಪರ ಹೋರಾಟಗಾರರಿಗೆ ನಿಜಕ್ಕೂ ಕನ್ನಡಿಗರಿಗೆ ಕೆಲಸಕೊಡಿಸುವ ಉಮೇದು ಇದ್ದಲ್ಲಿ ಪ್ರತೀ ಸಂಘಟನೆಗಳು ಕನ್ನಡ ಶಾಲೆಗಳನ್ನು ದತ್ತು ಪಡೆದು ಕನ್ನಡಿಗರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು ಅರ್ಹತೆಯ ಆಧಾರದಲ್ಲಿಯೇ ಉತ್ತಮ ಕೆಲಸ ಸಿಗುವಂತೆ ಮಾಡಬಹುದಲ್ಲವೇ?
 • ಎಲ್ಲರಿಗೂ ಸರ್ಕಾರವೇ ನೌಕರಿ ಕೊಡಬೇಕು ಮತ್ತು ಅದರಲ್ಲೂ ಮೀಸಲಾತಿ ಕೊಡಬೇಕು ಎಂದು ಕನ್ನಡಿಗರನ್ನು ಪರಾವಲಂಭಿಯರನ್ನಾಗಿ ಮಾಡುವ ಬದಲು ಇದೇ ಕನ್ನಡಪರ ಸಂಘಟನೆಗಳು ಕನ್ನಡಿಗರಿಗೆ ಸ್ವ-ಉದ್ಯೋಗವನ್ನು ಆರಂಭಿಸುವಂತಹ ತರಭೇತಿಗಳನ್ನು ನೀಡುವುದು ಮತ್ತು ಅವರಿಗೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಸ್ವಾವಲಂಭಿಗಳನ್ನಾಗಿ ಮಾಡಬಹುದಲ್ಲವೇ?

ಮತ್ತೊಮ್ಮೆ ಹೇಳುತ್ತೇನೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಸಾರ್ವಭೌಮರು ಯಾವಾಗಲೂ ಕೊಡುಗೈ ದಾನಿಗಳಾಗಿರುತ್ತಾರೆಯೇ ಹೊರತು ಎಂದೂ ಯಾರ ಬಳಿಯಲ್ಲಿಯೂ ದೈನೇಸಿಯಾಗಿ ಕೈಚಾಚುವುದಿಲ್ಲ. ಹಾಗಾಗಿ ಸುಮ್ಮನೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಎಂದು ರಾಜ್ಯಾದ್ಯಂತ ಬಂದ್ ಮಾಡುವ/ಮಾಡಿಸುವ ಬದಲು ತಮ್ಮ ಸ್ವಸಾಮರ್ಥ್ಯದಿಂದಲೇ ರಾಜಮಾರ್ಗವಾಗಿ ಕೆಲಸ ಗಿಟ್ಟಿಸುಕೊಳ್ಳುವಂತಾದರೆ ಕನ್ನಡಿಗರಿಗೇ ಹೆಮ್ಮೆಯಲ್ಲವೇ?

ಏನಂತೀರೀ?

ನಿನ್ಮವನೇ ಉಮಾಸುತ

ಕೆಚ್ಚೆದೆಯ ಹಾಕಿ ಪಟು ಎಂ. ಪಿ. ಗಣೇಶ್

ಯಾವುದೇ ಒಂದು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪುದು ಎಷ್ಟು ಕಷ್ಟ ಎಂದು ಕ್ರೀಡಾಪಟು ಆಗಿದ್ದವರಿಗೆ ತಿಳಿಯುತ್ತದೆ ಇಲ್ಲವೇ ಕ್ರೀಡಾಸಕ್ತರಿಗೆ ತಿಳಿದಿರುತ್ತದೆ. ಇಲ್ಲೊಬ್ಬರು ಎರಡೆರಡು ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಮತ್ತೊಂದು ಕ್ರೀಡೆಯ ಆಡಳಿತಾಧಿಕಾರಿಯಾಗಿ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದ ವೀರ ಸೇನಾನಿ, ಕೆಚ್ಚೆದೆಯ ಆಟಗಾರ, ಛಲವಂತ ನಾಯಕ, ಅತ್ಯುತ್ತಮ ತರಭೇತಿದಾರ ಮತ್ತು ಸಮರ್ಥ ಕ್ರೀಡಾ ಆಡಳಿತಗಾರರಾಗಿದ್ದ ಹಾಕಿ ಆಟಗಾರ ಶ್ರೀ ಎಂ ಪಿ ಗಣೇಶ್ ಆವರ ಬಗ್ಗೆ ತಿಳಿದುಕೊಳ್ಳೋಣ.

ಕೊಡಗು ಜಿಲ್ಲೆಯ ಮಡಿಕೇರಿಯ ಸುಂಟಿಕೊಪ್ಪದ ಬಳಿಯ ಅಂದಗೋವೆ ಎಂಬ ಗ್ರಾಮದ ಮೊಳ್ಳೆರ ಮನೆತನದ ಪೂವಯ್ಯನವರ ಮಗನಾಗಿ ಜುಲೈ 8, 1948ರಂದು ಗಣೇಶರವರು ಜನಿಸಿದರು. ಮೊಳ್ಳೆರ ಪೂವಯ್ಯ ಗಣೇಶ್ ಎಂಬುದು ಇವರ ಪೂರ್ಣ ಹೆಸರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ಅತ್ಯಂತ ಚಟುವಟಿಕೆಯಿಂದಿದ್ದ ಗಣೇಶ್ ರವರು ತಮ್ಮ ವಿದ್ಯಾಭ್ಯಾಸವನ್ನು ಮಡಿಕೇರಿಯಲ್ಲಿಯೇ ಮುಗಿಸಿ ನಂತರ ಅಲ್ಲಿಯೇ ಕಾಲೇಜನ್ನೂ ಮುಂದುವರೆಸುತ್ತಾರೆ. ಕಾಲೇಜಿನಲ್ಲಿ ಅವರು ಅತ್ಯುತ್ತಮ ಫುಟ್ಬಾಲ್ ಅಟಕ್ಕೆ ಖ್ಯಾತರಾಗಿ ದಸರಾ ಕ್ರೀಡಾಕೂಟದಲ್ಲಿಯೂ ತಮ್ಮ ಕಾಲೇಜಿನ ಪ್ರಮುಖ ಆಟಗಾರನಾಗಿ ಪಾಲ್ಗೊಂಡು ನಂತರ ತಮ್ಮ ಜಿಲ್ಲಾ ತಂಡದ ಸದಸ್ಯರಾಗಿರುತ್ತಾರೆ.

ದೇಶದ ಸೈನ್ಯಕ್ಕೆ ಕರ್ನಾಟಕದ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ಕೊಡಗಿನ ಪ್ರತಿ ಮನೆಯಲ್ಲಿಯೂ ದೇಶ ಸೇವೆಗಾಗಿ ಒಬ್ಬರನ್ನು ಮೀಸಲಾಗಿಟ್ಟಿರುತ್ತಾರೆ, ಅಂತೆಯೇ ಗಣೇಶ್ ಅವರೂ ಸಹಾ ತಮ್ಮ ಪಿಯುಸಿ ಮುಗಿಸುವ ಹೊತ್ತಿಗೇ ಭಾರತೀಯ ಸೈನ್ಯಕ್ಕೆ ಸೇರಿಕೊಳ್ಳುತ್ತಾರೆ. ಸೈನ್ಯದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ರೀಡೆಗೆ ಖಡ್ಡಾಯವಾಗಿ ಸೇರಿಕೊಳ್ಳಲೇ ಬೇಕಾಗಿರುವ ಕಾರಣ ಮತ್ತು ಅವರ ಕೊಡಗಿನಿಂದ ಬಂದಿದ್ದ ಕಾರಣ ಉನ್ನತಾಧಿಕಾರಿಯಾಗಿದ್ದ ನಂದಾ ರವರು ಗಣೇಶ್ ಅವರನ್ನು ಹಾಕಿ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. ಹಾಕಿ ಮತ್ತು ಕೊಡಗಿಗೆ ಒಂದು ರೀತಿಯ ಅವಿನಾಭಾವ ಸಂಬಂಧ. ಕೊಡಗಿನ ಅನೇಕ ಹಾಕಿ ಆಟಗಾರರು ಕರ್ನಾಟಕ ಮತ್ತು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅದೇ ರೀತಿ ಗಣೇಶ್ ಅವರೂ ಕೂಡ ತಮ್ಮ ಚುರುಕಾದ ಮತ್ತು ಮಿಂಚಿನ ವೇಗದ ಆಟದಿಂದಾಗಿ ಬಲು ಬೇಗನೇ ಎಲ್ಲರ ಗಮನ ಸೆಳೆದು, ಸರ್ವಿಸಸ್ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ಪಿನಲ್ಲಿ ಸರ್ವಿಸಸ್ ತಂಡದ ಪರ 1965ರಿಂದ 1970ರವರೆಗೆ ಪ್ರಮುಖ ಆಟಗಾರರಾಗುತ್ತಾರೆ. ಮುಂದೆ 1974ರಲ್ಲಿ ಮುಂಬಯಿ ತಂಡಕ್ಕೆ ಸೇರ್ಪಡೆಯಾಗುತ್ತಾರೆ.

prakash1ರಾಷ್ಟ್ರ ಮಟ್ಟದ ಅನೇಕ ಹಾಕಿ ಪಂದ್ಯಾವಳಿಯಲ್ಲಿ ತಮ್ಮ ವೇಗದ ಮತ್ತು ಬಿರುಸಿನ ಗೋಲ್ ಹೊಡೆಯುವ ಶಕ್ತಿಯುತ ಆಟದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ, ಅಂತರರಾಷ್ಟ್ರೀಯ ಮಟ್ಟದ ಲೈಟ್ ಬ್ಲೂಸ್ ಸ್ಪರ್ಧೆಗೆ ಆಯ್ಕೆಯಾದರು. ಬ್ಯಾಂಕಾಕಿನಲ್ಲಿ 1970ರಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ರಜತ ಪದಕ ಪಡೆದ ಭಾರತದ ಹಾಕಿ ತಂಡದ ಸದಸ್ಯರಾಗಿರುತ್ತಾರೆ. ಜಪಾನ್, ಪಾಕಿಸ್ತಾನ, ಮುಂತಾದ ದೇಶಗಳ ತಂಡಗಳ ವಿರುದ್ಧದ ಅವರ ವೇಗದ ಆಟವನ್ನು ಮೆಚ್ಚಿದ ಅಂದಿನ ಮಾಧ್ಯಮಗಳು ಗಣೇಶ್ ಅವರನ್ನು ಭಾರತದ ಹುಲಿ ಎಂದು ಕರೆಯುತ್ತಾರೆ. 1971ರ ಬಾರ್ಸಿಲೋನ ವಿಶ್ವ ಕಪ್ ಹಾಕಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ತಂಡದ ಸದಸ್ಯರಾಗಿರುತ್ತಾರೆ. 1972ರ ಮ್ಯೂನಿಚ್ ಒಲಿಂಪಿಕ್ಸಿನಲ್ಲಿ ಗಣೇಶ್ ಅವರು ತಮ್ಮ ವಿಶಿಷ್ಟ ಆಟದ ಮೂಲಕ ಎಲ್ಲರ ಗಮನ ಸೆಳೆದರಾದರೂ ಅಂತಿಮವಾಗಿ ಕಂಚಿನ ಪದಕಗಳಿಸಲಷ್ಟೇ ಸಾಧ್ಯವಾಗುತ್ತದೆ. ಒಲಂಪ್ಲಿಕ್ಸಿನಿನಲ್ಲಿ ತಮ್ಮ ಪ್ರದರ್ಶನದಿಂದಾಗಿ 1973ರ ಹಾಲೆಂಡ್‌ನ ಆಮ್ಸ್ಟರ್‌ಡ್ಯಾಮ್ ವಿಶ್ವ ಕಪ್‌ ಹಾಕಿ ತಂಡಕ್ಕೆ ಭಾರತ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಾರೆ. ತಮ್ಮ ಅತ್ಯಮೋಘ ಆಟದಿಂದಾಗಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವುದರಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ. ಫೈನಲ್ ಪಂದ್ಯದಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ವಿರುದ್ಧದ ಜಿದ್ದಾಜಿದ್ದಿನ ಪಂದ್ಯ ನಡೆದು ಎರಡೂ ತಂಡಗಳ ಸಮಬಲದಿಂದಾಗಿ ಪಂದ್ಯದ ಗೆಲುವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಹಂತಕ್ಕೆ ತಲುಪುತ್ತದೆ. ಮೊದಲೇ ಹೈವೋಲ್ಟೇಜ್ ಪಂದ್ಯ ಅದರಲ್ಲೂ ತಂಡ ನಾಯಕನಾಗಿ ಅವರ ಮೇಲಿನ ಜವಾಬ್ಧಾರಿ ಅತ್ಯಂತ ಮಹತ್ತವಾಗಿರುತ್ತದೆ. ಹೀಗಾಗಿ ಪೆನಾಲ್ಟಿ ಶೂಟೌಟ್‌ನ ನಿರ್ಣಾಯಕ ಹೊಡೆತದಲ್ಲಿ ಸ್ವತಃ ಗಣೇಶ್ ಅವರೇ ಗೋಲನ್ನು ಬಾರಿಸಲು ಹೋಗಿ ಒತ್ತಡದಿಂದಾಗಿಯೋ ಅಥವಾ ದುರಾದೃಷ್ಟದಿಂದಾಗಿಯೋ ಏನೋ ಗೋಲುಗಳಿಸಲು ವಿಫಲರಾಗಿ ತಂಡ ಬೆಳ್ಳಿ ಪದಕಕ್ಕೇ ತೃಪ್ತಿಪಡಬೇಕಾಗುತ್ತದೆ ಈ ಘಟನೆ ನನ್ನ ಜೀವನದಲ್ಲಿ ಮರೆಯಲಾರದ ಕ್ಷಣವಾಗಿದೆ. ಇದರಲ್ಲಿ ನಾನು ಗೋಲುಗಳಿಸಿದ್ದರೇ ಭಾರತ ತಂಡ ಗೆಲುವು ಸಾಧಿಸಿ ಚಿನ್ನದ ಪದಕ ಜಯಿಸುತ್ತಿತ್ತು. ನನ್ನ ತಪ್ಪಿನಿಂದಾಗಿ ಈಡೀ ತಂಡವೇ ಸೋಲು ಕಂಡಿದ್ದು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿತ್ತು ಎಂದು ಸಂದರ್ಶನವೊಂದರಲ್ಲಿ ಸ್ವತಃ ಗಣೇಶ್ ಅವರೇ ಹೇಳಿಕೊಂಡಿದ್ದಾರೆ.

ಗಣೇಶ್ ಅವರ ಪುಟ್ಬಾಲ್ ಆಟದ ಪರಿಣಿತಿ, ಚಾಕಚಕ್ಯತೆ ಮತ್ತು ಸಾಮರ್ಥ್ಯವನ್ನು ಕಂಡು ಇಟಾಲಿಯನ್ ಕ್ಲಬ್ ಆವರನ್ನು ತಮ್ಮ ತಂಡದ ಪರವಾಗಿ ಆಡಲು ಆಹ್ವಾನ ಕೊಡುತ್ತದೆ. ಬಾಲ್ಯದಿಂದಲೂ ಫುಟ್ಬಾಲ್ ಆಟದತ್ತವೇ ಒಲವನ್ನು ಹೊಂದಿದ್ದ ಗಣೇಶ್ ಈ ಆಹ್ವಾನವನ್ನು ಸುವರ್ಣಾವಕಾಶ ಎಂದು ಪರಿಗಣಿಸಿ, ಸೈನ್ಯಕ್ಕೆ ಮತ್ತು ಹಾಕಿ ಆಟಕ್ಕೆ ವಿದಾಯ ಹೇಳಿ ಕೆಲಕಾಲ ವಿದೇಶೀ ಲೀಗಿನಲ್ಲಿ ಫುಟ್ಬಾಲ್ ಆಟವನ್ನೂ ಆಡಿ ತಮ್ಮ ಕ್ರೀಡಾ ನೈಪುಣ್ಯತೆಯನ್ನು ಮೆರೆಸುತ್ತಾರಾದರೂ ಹಲವಾರು ಗಾಯಗಳ ಸಮಸ್ಯೆಯಿಂದಾಗಿ ಅವರು ಎಲ್ಲಾ ರೀತಿಯ ಆಟಕ್ಕೆ ವಿದಾಯ ಹೇಳಿ ಹಾಕಿ ತರಭೇತುರಾರರಾಗುವತ್ತ ಹರಿಸುತ್ತಾರೆ ತಮ್ಮ ಚಿತ್ತ.

1980ರ ಮಾಸ್ಕೋವಿನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಎಮ್ ಎಮ್ ಸೋಮಯ್ಯನವರ ನೇತೃತ್ವದಲ್ಲಿ ಸ್ವರ್ಣಪದಕವನ್ನು ಗೆದ್ದ ಭಾರತೀಯ ತಂಡದ ಕೋಚ್ ಆಗಿದ್ದರು. 1988ರ ಸಿಯೋಲ್‌ ಒಲಿಂಪಿಕ್ಸ್‌ನಲ್ಲಿ ಮತ್ತು 1989ರ ಬರ್ಲಿನ್‍ನಲ್ಲಿನ ಚಾಂಪಿಯನ್ಸ್ ಟ್ರೋಫಿಯಲ್ಲೂ ತಂಡ ತರಭೇತಿದಾರರಾಗಿರುತ್ತಾರೆ. ಳಲ್ಲಿ ಹಾಗೂ ಬ್ಯಾಂಕ್‌ಕಾಕ್‌ನಲ್ಲಿನ ಏಷ್ಯಾ ಕ್ರೀಡೆಗಳಲ್ಲಿ ಭಾರತೀಯ ಹಾಕಿ ಫೆಡರೇಶನ್ನಿನ ಕೋಚಿಂಗ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

ganeshತಾವು ಹಿಡಿದ ಕೆಲಸವಾಗಲೀ ಅಥವಾ ತಮಗೆ ವಹಿಸಿದ ಕೆಲಸವನ್ನಾಗಲೀ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಎಂ. ಪಿ. ಗಣೇಶ್ ಅವರ ಸಾಮರ್ಥ್ಯವನ್ನು ಗಮನಿಸಿದ ಅಂದಿನ ಯುವಜನ ಕ್ರೀಡಾ ಸಚಿವರಾಗಿದ್ದ ಮತ್ತು ಕೊಡಗಿನವರೇ ಆಗಿದ್ದ ಶ್ರೀ ಗುಂಡೂರಾವ್ ಅವರನ್ನು ಯುವಜನ ಕ್ರೀಡಾ ಇಲಾಖೆಯ ನಿರ್ದೇಶಕರಾಗಿದ್ದ ಜೆ. ಆನಂದನ್ ಅವರ ಸಹಾಯಕ ಕ್ರೀಡಾ ಆಡಳಿತಗಾರರಾಗಿ ನೇಮಿಸಿದರು. . ಇವರ ಪ್ರಾಮಾಣಿಕ ಸೇವೆಯ ಫಲವಾಗಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಇವರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡುತ್ತಾರೆ ಇಂಫಾಲ್ ಮುಂತಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ ಬೆಂಗಳೂರಿನಲ್ಲಿಯೇ ಇರಲು ಇಷ್ಟಪಟ್ಟ ಗಣೇಶ್ ಅವರನ್ನು ದಕ್ಷಿಣ ಭಾರತದ ರಾಷ್ಟ್ರೀಯ ಕ್ರೀಡಾಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಾಯಿತು. 1991ರಿಂದ 2001ರ ವರೆಗೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿ, ಕೆಲಕಾಲ ದೆಹಲಿಯಲ್ಲಿಯೂ ಸೇವೆ ಸಲ್ಲಿಸಿದರು. ಒಬ್ಬ ಕ್ರೀಡಾಪಟುವಾಗಿ ಮತ್ತೊಬ್ಬ ಕ್ರೀಡಾಪಟುಗಳ ಅವಶ್ಯಕತೆಗಳನ್ನು ಅರಿತು ಅವರಿಗೆ ಅಗತ್ಯವಿದ್ದ ಎಲ್ಲಾ ರೀತಿಯ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಟ್ಟ ಪರಿಣಾಮವಾಗಿ ಅವರ ಆಡಳಿತಾವಧಿಯಲ್ಲಿಯೇ, ಭಾರತ ತಂಡ 2004ರ ಒಲಿಂಪಿಕ್ಸ್, 2006ರ ಕಾಮನ್ ವೆಲ್ತ್ ಕ್ರೀಡಾ ಕೂಟಗಳಲ್ಲಿ ಹಿಂದಿಗಿಂತಲೂ ಉತ್ತಮ ಫಲಿತಾಂಶದಲ್ಲಿ ಕಂಡಿದ್ದರಲ್ಲಿ ಗಣೇಶ್ ಅವರ ಕೊಡುಗೆ ಮಹತ್ತರವಾದದ್ದು. 2006ರಲ್ಲಿ ರಾಷ್ತ್ರೀಯ ಕ್ರೀಡಾ ಪ್ರಾಧಿಕಾರದ ಸೇವೆಯಿಂದ ನಿವೃತ್ತರಾದ ಗಣೇಶ್ ಬೆಂಗಳೂರಿಗೆ ಹಿಂದಿರುಗಿದರೂ ಅವರನ್ನು ವಿಶ್ರಾಂತ ಜೀವನ ನಡೆಸಲು ಬಿಡದೆ, ಅವರ ಕ್ರೀಡಾಧಿಕಾರಿಯಾಗಿದ್ದ ಕೌಶಲ್ಯವನ್ನು ಕ್ರಿಕೆಟ್ ಆಟದಲ್ಲೂ ಬಳೆಸಿಕೊಳ್ಳಲು ನಿರ್ಥರಿಸಿದ ರಾಜ್ಯ ಕ್ರಿಕೆಟ್ ಸಂಸ್ಥೆ 2009ರಿಂದ ಕೆಲ ಕಾಲ ಅವರನ್ನು ಕರ್ನಾಟಕ ರಾಜ್ಯದ ಕ್ರಿಕೆಟ್ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಹುದ್ದೆ ನೀಡಿ ಅವರ ಅಪಾರವಾದ ಕ್ರೀಡಾ ಅನುಭವವನ್ನು ಕ್ರಿಕೆಟ್ಟಿಗರೊಂದಿಗೂ ಹಂಚಿಕೊಳ್ಳುವ ಸುವರ್ಣಾವಕಾಶವನ್ನು ನೀಡಿತು.

ಕ್ರೀಡಾಜಗತ್ತಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ ಗಣೇಶ ಅವರಿಗೆ

 • 1973 ರಲ್ಲಿ ಅರ್ಜುನ ಪ್ರಶಸ್ತಿ
 • 1981ರಲ್ಲಿ ಕರ್ನಾಟಕದ ಬೆಳ್ಳಿ ಮಹೋತ್ಸವ ಕ್ರೀಡಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಹೀಗೆ ಹಾಕಿ, ಫುಟ್ಬಾಲ್ ಮತ್ತು ಕ್ರಿಕೆಟ್ ಮೂರೂ ಆಟಗಳಲ್ಲಿಯೂ ತಮ್ಮ ಸಾಧನೆಯನ್ನು ಮೆರೆದ ಎಂ ಪಿ ಗಣೇಶ್ ಅವರು ಕರ್ನಾಟಕದಿಂದ ಹೊರಹೊಮ್ಮಿದ ಅತಿದೊಡ್ಡ ಕ್ರೀಡಾಪಟುಗಳಲ್ಲಿ ಪ್ರಮುಖರಾಗಿದ್ದಾರೆ. ಅವರು ಪ್ರತಿಭಾವಂತ ಕ್ರೀಡಾಪಟು ಮಾತ್ರವಲ್ಲದೆ, ಅವರ ಆಡಳಿತಾತ್ಮಕ ಕುಶಾಗ್ರಮತಿ ಭಾರತೀಯ ಕ್ರೀಡೆಗಳಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ

ಏನಂತೀರೀ?