ವಿಶ್ವ ತೆಂಗಿನ ದಿನ

ಇವತ್ತು ಬೆಳಿಗ್ಗೆ ವಾಟ್ಸಾಪ್ಪಿನಲ್ಲಿ ಸ್ನೇಹಿತರ ಸಂದೇಶಗಳನ್ನು ಓದುತ್ತಿದ್ದಾಗ ಅತ್ಯುತ್ತಮ ಕಲೆಗಾರ ಮತ್ತು ಕ್ರಿಯಾತ್ಮಕ ಗುಣವುಳ್ಳ ಗೆಳೆಯ ಅಶೋಕ್ ವಿಶ್ವ ತೆಂಗಿನ ದಿನದ ಶುಭಾಶಯಗಳು ಎಂದು ಕಳುಹಿಸಿದಾಗ, ತಕ್ಷಣವೇ, ಅರೇ ಹೀಗೂ ಉಂಟೇ? ಎಂದು ಪ್ರತ್ಯುತ್ತರ ನೀಡಿ ಅದರ ಕುರಿತಂತೆ ಹೆಚ್ಚಿನ ವಿವರಗಳನ್ನು ಗೂಗಲ್ ಮಾಡಿ ನೋಡಿದಾಗ ತಿಳಿದು ಬಂದ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಪ್ರತೀ ವರ್ಷದ ಸೆಪ್ಟೆಂಬರ್ 2ನೇ ದಿನವನ್ನು ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಸುಮಾರು 18 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಇಂಡೋನೇಷ್ಯಾದ ಜಕಾರ್ತಾದಲ್ಲಿದಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಏಷ್ಯನ್ ಮತ್ತು ಪೆಸಿಫಿಕ್ ತೆಂಗಿನಕಾಯಿ ಸಮುದಾಯ (ಎಪಿಸಿಸಿ) ಮತ್ತು ಅದರ ಸದಸ್ಯ ರಾಷ್ಟ್ರಗಳು ವಿಶ್ವ ತೆಂಗಿನ ದಿನವನ್ನಾಗಿ ಆಚರಿಸುತ್ತವೆ. ಎಪಿಸಿಸಿಯ ಸದಸ್ಯ ರಾಷ್ಟ್ರಗಳಲ್ಲಿ ತೆಂಗಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಮತ್ತು ತೆಂಗಿನಕಾಯಿ ಉದ್ಯಮದ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮನೆಯಲ್ಲಿ ಒಂದು ತೆಂಗಿನ ಮರವಿದ್ದಲ್ಲಿ ಅದು ಅವರ ಜೀವನದಲ್ಲಿ ಎಂತಹ ಅದ್ಭುತ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ಮಾಡುವ ಸದುದ್ದೇಶವನ್ನು ವಿಶ್ವ ತೆಂಗಿನ ದಿನದಂದು ಮಾಡಲಾಗುತ್ತದೆ.

ವೈಜ್ಞಾನಿಕವಾಗಿ ಹೇಳಬೇಕೆಂದರೆ ತೆಂಗಿನಕಾಯಿ ತಾಳೆ ಮರದ ಕುಟುಂಬವಾದ ಅರೆಕೇಸಿಗೆ ಸೇರಿದೆ. ಕೊಕೊಸ್ ಕುಲದ ಏಕೈಕ ಜೀವಂತ ಜಾತಿ ತೆಂಗಿನಕಾಯಿ. ಇದು ಕೊಕೊಸ್ ನ್ಯೂಸಿಫೆರಾ ಪಾಮ್ನ ಪ್ರಬುದ್ಧ ಹಣ್ಣು. ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳ ಜನರ ಜೀವನದ ಅನಿವಾರ್ಯ ಮತ್ತು ಅವಿಭಾಜ್ಯ ಆಹಾರ ಪದಾರ್ಥವಾಗಿದೆ. ಇದು ಉಷ್ಣವಲಯದ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚು ತೇವಾಂಶವುಳ್ಳ, ಮರಳು ಮಿಶ್ರಿತ ಲವಣಯುಕ್ತ ಸಮೃದ್ಧ ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಫಲವತ್ತಾಗಿ ಬೆಳೆಯುತ್ತದೆ. ಚೆನ್ನಾಗಿ ಬೆಳೆಯುತ್ತದೆ. ಸುಮಾರು 60-75 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ತೆಂಗಿನ ಮರ ಬಹಳ ದೀರ್ಘಾವಧಿಯ ಬೆಳೆಯಾಗಿದ್ದು ಒಂದು ಮರದ ಆಯಸ್ಸು ಅಜಮಾಸು 75 ರಿಂದ 100 ವರ್ಷಗಳಾಗಿರುತ್ತದೆ. ಇದೇ ಕಾರಣಕ್ಕೇ ನನ್ನನ್ನು ನೀನು 7 ವರ್ಷ ಚೆನ್ನಾಗಿ ಜತನದಿಂದ ಬೆಳೆಸು, ನಾನು ನಿನ್ನನ್ನು 70 ವರ್ಷಗಳು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬ ಗಾದೆ ಮಾತಿದೆ.

ಸಾಂಪ್ರದಾಯಕ ತೆಂಗಿನ ಸಸಿಗಳು ಫಲ ಕೊಡಲು ಸುಮಾರು 7-8 ವರ್ಷಗಳಷ್ಟು ತೆಗೆದುಕೊಂಡರೆ, ಸುಧಾರಿತ ತಳಿಗಳು ನೆಟ್ಟ 4-5 ವರ್ಷಗಳಲ್ಲಿಯೇ ಫಲವನ್ನು ನೀಡಲು ಆರಂಭಿಸುತ್ತದೆ. ಆಧಿಕ ಜೀವಸತ್ವಗಳು, ಕ್ಯಾಲೊರಿಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ತೆಂಗಿನ ಕಾಯಿಯ ಪ್ರತಿಯೊಂದು ಭಾಗವೂ ಉಪಯೋಗಕಾರಿಯಾಗಿದೆ ಎಳನೀರು, ತೆಂಗಿನಕಾಯಿ, ಕೊಬ್ಬರಿ, ಕೊಬ್ಬರೀ ಎಣ್ಣೆ, ತೆಂಗಿನ ಚಿಪ್ಪು, ತೆಂಗಿನ ಹೆಡೆಮಟ್ಟೆ, ತೆಂಗಿನ ನಾರು, ತೆಂಗಿನ ಗರಿ, ಕಡೆಗೆ ತೆಂಗಿನ ಮರದ ತೀರು ಹೀಗೆ ಪ್ರತಿಯೊಂದು ಭಾಗವೂ ಒಂದಲ್ಲಾ ಒಂದು ಕಾರ್ಯಕ್ಕೆ ಉಪಯೋಗವಾಗುವ ಕಾರಣ ತೆಂಗಿನ ಮರಕ್ಕೆ ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ.

ಸರಿ ಸುಮಾರು 400 ಗ್ರಾಂ ತೂಕವಿರುವ ತೆಂಗಿನ ಕಾಯಿಯಲ್ಲಿ ತಿರುಳಿನ ಹೊರತಾಗಿ ಸುಮಾರು 30-150 ಮಿಲಿ ಎಳನೀರಿನಲ್ಲಿ 100 ಗ್ರಾಂ ಕರ್ನಲ್ 354 ಕ್ಯಾಲೊರಿಗಳನ್ನು ಹೊಂದಿರುವ ಕಾರಣ ನಮ್ಮ ಹಿರಿಯರು ನಮ್ಮ ಪ್ರತಿ ನಿತ್ಯದ ಆಹಾರದಲ್ಲಿ ತೆಂಗಿನ ಕಾಯಿ, ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಬಳಕೆಯನ್ನು ರೂಢಿಯಲ್ಲಿ ತಂದಿದ್ದಲ್ಲದೇ ಔಷಧಿಯರೂಪದಲ್ಲಿಯೂ ಬಳಸುತ್ತಿದ್ದರು.

ತೆಂಗು ಭಾರತೀಯರ ಜೀವನ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ.‌ ಬಹುತೇಕರ ಮನೆಗಳಲ್ಲಿ ಕಸ ಗುಡಿಸಲು ಇಂದಿಗೂ ತೆಂಗಿನ ಕಡ್ಡಿ‌ಪೊರಕೆಯನ್ನೇ ಬಳಸುತ್ತಾರೆ. ಇಂದಿಗೂ ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿ ಚಪ್ಪರ ಹಾಕುವುದೇ ತೆಂಗಿನ ಗರಿಗಳಿಂದಲೇ. ಇನ್ನು ಪೂಜೆಯ ಸಮಯದಲ್ಲಿ ನೈವೇದ್ಯಕ್ಕೆ ತೆಂಗಿನಕಾಯಿ ಬಳಸಿದರೆ ಅದೇ ತೆಂಗಿನಕಾಯಿಯನ್ನು ಅಡುಗೆಗೂ ಉಪಯೋಗಿಸಿಕೊಳ್ಳುತ್ತಾರೆ. ಇಂಗು ಮತ್ತು ತೆಂಗು ಇದ್ದರೆ ಮಂಗವೂ ಚೆನ್ನಾಗಿ ಅಡುಗೆ‌ ಮಾಡುತ್ತದೆ ಎನ್ನುವ ಗಾದೆ ಮಾತೂ ಇದೆ. ಬಹುತೇಕ ಸಾಂಪ್ರದಾಯಿಕ ಅಡುಗೆಗೆ ಮತ್ತು ಸಿಹಿತಿಂಡಿಗಳನ್ನು ತೆಂಗಿನಕಾಯಿ ಮತ್ತು‌ ಕೊಬ್ಬರಿ ಇಲ್ಲದೆ ಊಹಿಸಿಕೊಳ್ಳಲೂ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅವಿಭಾಜ್ಯ ಅಂಗವಾಗಿದೆ.

ತೆಂಗಿನ ಚಿಪ್ಪನ್ನು ಅಲಂಕಾರಿಕ ವಸ್ತುಗಳನ್ನು ಮಾಡಲು ಬಳಸುತ್ತಾರೆ. ಇತ್ತೀಚೆಗೆ ತೆಂಗಿನ‌ಚಿಪ್ಪಿನಲ್ಲಿ ಮಾಡಿದ ಇಡ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ. ತೆಂಗಿನ ಚಿಪ್ಪನಲ್ಲಿ ಕಾಫೀ/ಟೀ ಕುಡಿಯುವ ಹವ್ಯಾಸವೂ ಹೆಚ್ಚಾಗುತ್ತಿದೆ.

ತೆಂಗಿನ ನಾರನ್ನು ಹಗ್ಗವನ್ನು ತಯಾರಿಸಲು ಬಳಸಿಕೊಂಡರೆ ಅದೇ ನಾರಿನಿಂದ ಮಾಡಿದ ಬಣ್ಣ ಬಣ್ಣದ ಡೋರ್ ಮ್ಯಾಟ್‌ ‌ಗಳು ಮತ್ತು ಚಿತ್ತಾರಗಳಿಗೆ ಬಹಳ ಬೇಡಿಕೆ ಇದೆ. ತೆಂಗಿನ ನಾರಿನಿಂದ ತಯಾರಿಸಿದ ಹಾಸಿಗೆಗಳು ಅರೋಗ್ಯಕರ‌ ಮತ್ತು ಹಿತಾನುಭವ ನೀಡುತ್ತದೆ ಎನ್ನುವ ಕಾರಣದಿಂದಾಗಿ ತೆಂಗಿನನಾರು ಸಹಾ ಹೆಚ್ಚಿನ ಬಳಕೆಯಲ್ಲಿದೆ. ತೆಂಗಿನ ತ್ರಾಜ್ಯದ ಬೂದಿ ಗೊಬ್ಬರವನ್ನಾಗಿ ಬಳಸುತ್ತಾರೆ

ಕೊಬ್ಬರಿಯಂತೂ ಮನೆಯಲ್ಲಿ ಹಿರಿಯರು ಕಿರಿಯರು ಎನ್ನುವ ಬೇಧವಿಲ್ಲದೇ ಪ್ರತಿಯೊಬ್ಬರೂ ತಿನ್ನಲು ಬಯಸುವ ಪದಾರ್ಥವಾಗಿದದ್ದು, ಕೊಲೆಸ್ಟ್ರಾಲ್, ನಾರಿನಾಂಶ, ಕಾಪರ್, ಸೆಲೆನಿಯಂ ಎನ್ನುವ ಪೋಷಕಾಂಶಗಳಿರುವ ಕಾರಣ ಇದನ್ನು ಸೂಪರ್ ಫುಡ್ ಎಂದು ಕರೆದರೂ ತಪ್ಪಾಗುವುದಿಲ್ಲ. ಹಾಗಾಗಿ ಪ್ರತಿದಿನ 20 ರಿಂದ 25 ಗ್ರಾಂ ನಷ್ಟು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ನಿಶ್ಶಕ್ತಿ, ಆಯಾಸ, ಗಂಟುಗಳಲ್ಲಿ ನೋವು, ಸೊಂಟ ನೋವು, ರಕ್ತಹೀನತೆ, ಅಜೀರ್ಣ, ಕೂದಲು ಉದುರುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಜ್ಞಾಪಕ ಶಕ್ತಿಯನ್ನೂ ವೃಧ್ದಿಸಲು ಸಹಾಯ ಮಾಡುತ್ತದೆ.

ಒಣಕೊಬ್ಬರಿ ಪ್ರತಿನಿತ್ಯ ಆಹಾರದಲ್ಲಿ ಬಳಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುವುದಲ್ಲಿದೇ, ಕೊಬ್ಬರಿಯಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶ ಮತ್ತು ಖನಿಜಗಳು ಕೀಲುಗಳಿಗೆ ಅತ್ಯವಶ್ಯಕವಾದ ಕೀಲೆಣ್ಣೆಯನ್ನು ವೃದ್ಧಿಸುವುದರಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ, ಮೂಳೆಗಳ ಗಂಟುಗಳ ಘರ್ಷಣೆಯನ್ನು ಕಡಿಮೆ ಮಾಡುವುದಲ್ಲದೇ, ಸವೆಯುವಿಕೆಯನ್ನು ತಡೆಯುತ್ತದೆ ಮತ್ತು ಮೂಳೆಗಳು ಕಟಕಟ ಎಂದು ಶಬ್ದಮಾಡುವುದನ್ನು ನಿವಾರಿಸುತ್ತದೆ ಮತ್ತು ಮೂಳೆಗಳನ್ನು ಬಲಶಾಲಿಯನ್ನಾಗಿಸುತ್ತದೆ. ಒಣ ಕೊಬ್ಬರಿಯಿಂದ ದೊರೆಯುವ ಖನಿಜಾಂಶಗಳು ದೇಹದಲ್ಲಿ ಬೇಗನೆ ಸೇರಿಕೊಳ್ಳುವ ಮೂಲಕ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರು ಮಾಡುತ್ತದೆ.

ಇನ್ನು ಮಕ್ಕಳಿನ ಮೆದಳನ್ನು ಚುರುಕಾಗಿಸಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕೊಬ್ಬರಿ ಸಹಾಯಕಾರಿಯಾಗಿದೆ. ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವ ಕಾರಣ ವಯಸ್ಸಾದ ನಂತರ ಕಾಡುವ ಅಜೀರ್ಣತೆ, ಮಲಬದ್ಧತೆ ಮತ್ತು ಮೂಲವ್ಯಾಧಿ ರೋಗದ ಸಮಸ್ಯೆಯನ್ನು ಕೂಡ ಸರಿಪಡಿಸ ಬಹುದಾಗಿದೆ. ಪ್ರತೀ ತಿಂಗಳ ಋತುಸ್ರಾವದಿಂದಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಕ್ತಹೀನತೆಯ ಸಮಸ್ಯೆಯಿಂದಾಗಿ ನಿಶ್ಯಕ್ತಿಯಿಂದಾಗಿ ತಲೆಸುತ್ತು, ತಲೆನೋವನ್ನು ಅನುಭವಿಸುತ್ತಾರೆ. ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿರುವ ಕಾರಣ ಅದು ಶರೀರದಲ್ಲಿ ರಕ್ತವನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿದೆ. ಮಹಿಳೆಯರ ಕೂದಲು ಉದುರುವ ಸಮಸ್ಯೆಗೂ ಕೊಬ್ಬರಿ ಉತ್ತಮ ಔಷಧವಾಗಿದೆ.

ಇನ್ನು ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದವರು ಪ್ರತೀ ದಿನ ಸೂರ್ಯೋದಯಕ್ಕಿಂತ ಮೊದಲು ಸುಮಾರು 20 ರಿಂದ 25 ಗ್ರಾಂ ನಷ್ಟು ಕೊಬ್ಬರಿಯನ್ನು ಅಷ್ಟೇ ಪ್ರಮಾಣದ ಕಲ್ಲು ಸಕ್ಕರೆಯ ಜೊತೆಗೆ ಸೇವಿಸುವುದರಿಂದ ಎಷ್ಟೇ ಹಳೆಯದಾದ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಳ್ಳ ಬಹುದಾಗಿದೆ.

ದೇಹದಲ್ಲಿ ಸೆಲೆನಿಯಂ ಕೊರತೆಯಿಂದಾಗಿ ಬಹುತೇಕರಲ್ಲಿ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುವ ಕಾರಣ, ಹೈಪರ್ ಥೈರಾಯ್ಡ್ ಅಥವಾ ಹೈಪೋ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು, ಪ್ರತಿನಿತ್ಯ ಒಣಕೊಬ್ಬರಿಯನ್ನು ಸೇವಿಸುವ ಮೂಲಕ ತಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳ ಬಹುದಾಗಿದೆ.

ಈಗಾಗಲೇ ತಿಳಿಸಿರುವಂತೆ ಕೊಬ್ಬರಿಯಲ್ಲಿ ಹೆಚ್ಚಿನ ನಾರಿನಂಶ ಇರುವ ಕಾರಣ ಹೃದಯವನ್ನು ಸುಸ್ಥಿತಿಯಲ್ಲಿ ಇಡುವಲ್ಲಿ ಸಹಾಯಕಾರಿಯಾಗಿದೆ. ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೇ, ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿನ ಬಂಜೆತನದ ಸಮಸ್ಯೆಯನ್ನು ನಿವಾರಿಸುವುದರಲ್ಲಿಯೂ ಸಹಕಾರಿಯಾಗಿದೆ.

ಇನ್ನು ನಿದ್ರಾಹೀನತೆಯಿಂದ ಬಳಲುತ್ತಿರುವವರು, ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ರಕ್ತದಲ್ಲಿರುವ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುವ ಕಾರಣ, ಕೊಬ್ಬರಿಯ ಸೇವನೆ ಮಧುಮೇಹಿಗಳಿಗೆ ವರದಾನವಾಗಿದೆ.

ಒಣಕೊಬ್ಬರಿ ಒಂದು ಒಳ್ಳೆಯ ಆ್ಯಂಟಿ ಬಯಾಟಿಕ್ ಆಗಿರುವ ಕಾರಣ ಯಾವುದೇ ತರಹದ ಗಾಯಗಳಾಗಲೀ ಅಥವಾ ತುರಿಕೆ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಕೊಬ್ಬರೀ ಎಣ್ಣೆ ರಾಮಬಾಣವಾಗಿದೆ. ಕೊಬ್ಬರೀ ಎಣ್ಣೆ‌ಹಚ್ಚುವುದರಿಂದ ಎಂತಹ ಗಾಯದ ಕಲೆಯೂ ಕೆಲವೇ ಕೆಲವು ದಿನಗಳಲ್ಲಿ ಮಾಯವಾಗುತ್ತದೆ. ಪ್ರತೀ ನಿತ್ಯ ತಲೆಗೆ ಕೊಬ್ಬರೀ ಎಣ್ಣೆಯನ್ನು ಹೆಚ್ಚಿಕೊಳ್ಳುವುದರಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದಲ್ಲದೇ, ಕಣ್ಣನ್ನೂ ತಂಪಾಗಿಸುತ್ತದೆ.

ಇಷ್ಟೆಲ್ಲಾ ಅದ್ಭುತ ಅಂಶಗಳನ್ನು ಹೊಂದಿದ್ದರಿಂದಲೇ ನಮ್ಮ ಪೂರ್ವಜರು ತೆಂಗನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿ ಶುಭ ಮತ್ತು ಅಶುಭ ಕಾರ್ಯದಲ್ಲಿ ತೆಂಗು ಮತ್ತು ತೆಂಗಿನ ಉತ್ಪನ್ನಗಳನ್ನು ನಮ್ಮ ಜೀವನದ ಅವಿಭಾಜ್ಯವನ್ನಾಗಿಸಿದ್ದರು. ಈಗಿನ ಜನಾ ತೆಂಗಿನಕಾಯಿಯ ಆರೋಗ್ಯ ಮತ್ತು ವಾಣಿಜ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಅದಕ್ಕೆಂದೇ ಒಂದು ದಿನವನ್ನು ಮೀಸಲಾಗಿರಿಸಿ ವಿಶ್ವ ತೆಂಗಿನ ದಿನವನ್ನು ಆಚರಿಸಲಾಗುತ್ತದೆ.

ತೆಂಗಿನ ಬುಡವನ್ನು ಮನೆಗೆ ತೊಲೆಯಾಗಿ ಬಳಸಿದರೆ, ಹಳ್ಳಿಗಳಲ್ಲಿ ತೆಂಗಿನ ಚಿಪ್ಪಿನ ಜಾನಪದ ಕಲೆಯನ್ನು ಇಂದಿಗೂ ಪ್ರಸಿದ್ಧವಾಗಿದೆ. ತೆಂಗಿನ ನಾರನ್ನು ಹಾಸಿಗೆ,‌ ತಲೆದಿಂಬು, ಕಾಲು ಒರೆಸುವ ಮ್ಯಾಟ್ ಗಳ ತಯಾರಿಕೆಯಲ್ಲಿ ಬಳಸಿದರೆ, ತೆಂಗಿನ ಚಿಪ್ಪನ್ನು ಸುಟ್ಟು ಕಪ್ಪು ಮಸಿಯನ್ನು ಬಣ್ಣಗಳಿಗೆ ಹಾಗೂ ಇದ್ದಿಲಾಗಿ ಮಾಡಲು ಬಳಸುತ್ತಾರೆ , ಇಂದಿಗೂ ಹಳ್ಳಿಗಳಲ್ಲಿ ತೆಂಗಿನ ಸೋಗೆ, ತೆಂಗಿನ‌ತ್ರಾಜ್ಯಗಳು ಉರುವಲಾಗಿ ಬಳಸಿದರೆ, ಎಷ್ಟೋ‌ ಗುಡಿಸಲುಗಳ ಸೂರಾಗಿ, ತೆಂಗಿನ ಗರಿಗಳನ್ನು ಬಳಸಲಾಗುತ್ತದೆ.

ಬೆಂಗಳೂರಿನಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಗೆಳೆಯರೊಬ್ಬರಿಗೆ ಕರೆ ಮಾಡಿ, ಹೀಗೆ ಲೋಕಾಭಿರಾಮವಾಗಿ ಹರಟುತ್ತಾ ಹೇಗಿದೆ ಕೆಲಸ ಎಂದಾಗ, ಅರೇ ಕೆಲಸವೆಲ್ಲಾ ಮನೆಯಿಂದಲೇ ಆಗುತ್ತಿದೆ. ಆದರೂ ಈ ಕೆಲಸ ನಂಬಿಕೊಂಡು ಇರುವುದಕ್ಕೆ ಆಗುವುದಿಲ್ಲಾ ಎಂದೇ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಊರಿನಲ್ಲಿಯೇ ಝಾಂಡಾ ಊರಿ ನಮ್ಮ ತೋಟದಲ್ಲಿ 250 ತೆಂಗಿನ ಸಸಿಗಳನ್ನು ನೆಡಿಸಿದ್ದೇನೆ. ಈ ಮಳೆಗಾಲದಲ್ಲಿ ಆ ತೆಂಗಿನ ಗಿಡಗಳು ಚೆನ್ನಾಗಿ ಕಚ್ಚಿಕೊಂಡಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಫಲ ಕೊಡಲು ಆರಂಭಿಸಿದರೆ ಈ ಕೆಲಸಕ್ಕೆಲ್ಲಾ ರಾಜೀನಾಮೆ ನೀಡಿ, ಊರಿನಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತೇನೆ ಎಂದಾಗ, ಅವರಿಗೆ ಶುಭ ಹಾರೈಸಿದೆ. ನಿಜ ಅವರೇ ಭಾಗ್ಯವಂತರು. ಕೃಷಿಯನ್ನು ನಂಬಿದವರು ಎಂದೂ ಹಾಳಾಗಿಲ್ಲ ಅದರಲ್ಲೂ ಶ್ರಧ್ಧೆಯಿಂದ ಪಾಲಿಸಿದಲ್ಲಿ ಕಲಿಯುಗದ ಕಲ್ಪವೃಕ್ಷ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ.

ಏನಂತೀರೀ?

ನಿಮ್ಮವನೇ ಉಮಾಸುತ

ಕೊಬ್ಬರಿ ಉಪಯುಕ್ತತೆಯ ಕುರಿತಾದ ಮಾಹಿತಿ ‌ಅಂತರ್ಜಾಲದಿಂದ‌ ಸಂಗ್ರಹಿಸಿದೆ.

ಕಲ್ಪವೃಕ್ಷ

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ನನ್ನನ್ನು ಏಳು ವರ್ಷ ಜನನದಿಂದ ಕಾಪಾಡು. ನಾನು ನಿನ್ನನ್ನು ಎಪ್ಪತ್ತು ವರ್ಷದ ವರೆಗೂ ನೆಮ್ಮದಿಯಿಂದ ಕಾಪಾಡುತ್ತೇನೆ ಎಂದು ತೆಂಗಿನಮರ ಹೇಳುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದದ ಮಾತಿನಲ್ಲಿ ಖಂಡಿತವಾಗಿಯೂ ಸತ್ಯವಿದೆ. ತೆಂಗಿನ ಮರದ ಪ್ರತಿಯೊಂದು ಭಾಗಗಳೂ ಉಪಯೋಗಿಸುವಂತಹದ್ದೇ ಅಗಿದ್ದು ಅದರಲ್ಲಿ ಬಿಸಾಡುವಂತಹ ತ್ರಾಜ್ಯಗಳೇ ಇಲ್ಲದಿರುವುದು ಮೆಚ್ಚಬೇಕಾದಂತಹ ಸಂಗತಿ. ತೆಂಗಿನ ಮರ ಇದ್ದಾಗ ಅನುಭವಿಸಿದ ಸಂತೋಷ ಮತ್ತು ಈಗ ತೆಂಗಿನ ಮರ ಇಲ್ಲದಿರುವಾಗ ಅನುಭವಿಸುತ್ತಿರುವ ಸಂಕಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.

ನಾನೀಗಾಗಲೇ ಹಲವಾರು ಬಾರಿ ಹೇಳಿಕೊಂಡಂತೆ ಮೂಲತಃ ನಾವು ಮಲೆನಾಡಾದ ಹಾಸನದ ಜಿಲ್ಲೆಯವರು. ನಮ್ಮ ಊರಿನ ಸುತ್ತಮುತ್ತಲಿನ ಜನರ ಪ್ರಮುಖ ಆದಾಯವೇ ತೆಂಗು. ಕಲ್ಪತರು ನಾಡು ತಿಪಟೂರು ನಮ್ಮೂರಿನಿಂದ ಕೆಲವೇ ಮೈಲಿಗಳ ದೂರದಲ್ಲಿವೆ. ಒಂದಾನೊಂದು ಕಾಲದಲ್ಲಿ ಊರಿನ ಶ್ಯಾನುಭೋಗರಾಗಿದ್ದರೂ, ನನಗೆ ಬುದ್ಧಿ ತಿಳಿಯುವ ಹೊತ್ತಿಗೆ ಇದ್ದ ಬದ್ದ ಜಮೀನುಗಳನ್ನೆಲ್ಲಾ ನಮ್ಮ ಮುತ್ತಾತಂದಿರೇ ಕಳೆದು ಹಾಕಿದ್ದರೂ ನಮ್ಮ ಅಜ್ಜಿ ಜತನದಿಂದ ಬೆಳಸಿ ಪೋಷಿಸಿದ್ದ ತೆಂಗಿನ ಮರವೇ ನನಗೆ ನಮ್ಮೂರಿಗೆ ಹೋಗಲು ಪ್ರಮುಖ ಆಕರ್ಷಣೆ. ಇಡೀ ಊರಿನ ಸುತ್ತ ಸಾವಿರಾರು ತೆಂಗಿನ ಮರಗಳ ತೋಟವಿದ್ದರೂ, ನಮ್ಮ ಊರಿನೊಳಗೆ ಇರುವ ಏಕೈಕ ತೆಂಗಿನ ಮರ ನಮ್ಮದೇ ಆಗಿದ್ದದ್ದು ಹೆಮ್ಮೆಯ ವಿಷಯವೆನಿಸುತ್ತಿದ್ದರೂ ಕೆಲವೊಂದು ಬಾರಿ ಸಂಕಟವೂ ಆಗುತ್ತಿತ್ತು. ಊರಿಗೆ ಯಾವ ಹಿರಿಯರು ಅಥವಾ ಸರ್ಕಾರೀ ಅಧಿಕಾರಿಗಳು ಬಂದರೂ, ಊರಿನ ಹಿರಿಯರು ಹತ್ತಿರವಿದ್ದವರನ್ನು ಕರೆದು ಏ ಹೋಗ್ಲಾ, ಐನೋರ ಮನೆ ತೆಂಗಿನ್ಮರ್ದಾಗೆ, ಎಳ್ಣೀರ್ ಕೆಡ್ವಕೊಂಡ್ ಬಾರ್ಲಾ ಎಂದು ಮುಲಾಜಿಲ್ಲದೇ ಕಳುಹಿಸುತ್ತಿದ್ದರು ಮತ್ತು ಇಂದಿಗೂ ಕಳುಹಿಸುತ್ತಲೇ ಇದ್ದಾರೆ.

kl3ನಾವು ಊರಿಗೆ ಬತುತ್ತಿದ್ದೇವೆ ಎಂದು ಗೊತ್ತಾಗುತ್ತಿದ್ದಂತೆಯೇ ನಮ್ಮ ಅಜ್ಜಿ ಲೇ, ಇವ್ನೇ, ಬಾರೋ ಇಲ್ಲಿ. ಈ ಕಾಪೀ ಕುಡ್ದು ತಿಂಡಿ ತಿಂದು ಒಂದು ಗೊನೆ, ಬೊಂಬಲು ಇರುವ ಎಳ್ನೀರ್ ಇಳಿಸಿಕೋಡೋ. ಮೊಮ್ಮಕ್ಕಳು ಬೆಂಗಳೂರಿನಿಂದ ಬರ್ತಾ ಇದ್ದಾರೆ ಅಂತ ನಾವು ಬರುವ ಹೊತ್ತಿಗಾಗಲೇ, ಎಳನೀರು ಸಿದ್ದ ಪಡಿಸಿಡುತ್ತಿದ್ದರು ನಮ್ಮ ಅಜ್ಜಿ. ಊರಿಗೆ ಹೋದೊಡನೆಯೇ ದೊಡ್ಡವರಿಗೆಲ್ಲಾ ಕಾಫೀ ಸಮಾರಾಧನೆಯಾದರೇ, ಮಕ್ಕಳಿಗೆಲ್ಲಾ ಯಥೇಚ್ಚ ಎಳನೀರು ಅಭಿಷೇಕ. ಏ ಕಚ್ಚಿಕೊಂಡು ಎಂಜಿಲು ಮಾಡಿಕೊಂಡು ಮೈಮೇಲೆಲ್ಲಾ ಸುರಿಸಿಕೊಂಡು ಕುಡೀಬೇಡ. ಲೋಟಕ್ಕೆ ಬಗ್ಗಿಸಿಕೊಂಡು ಕುಡೀ ಎಂದು ಎಷ್ಟೇ ಹೇಳಿದರೂ, ಕೇಳುತ್ತಿದ್ದವರು ಯಾರು? ಹೊಟ್ಟೇ ತುಂಬಾ ಎಳನೀರು ಕುಡಿದು ಬೊಂಬ್ಲು ತಿಂದು ಉಳಿಸಿದ್ದನ್ನೇ ಮಾರನೇಯ ದಿನ ದೋಸೆ ಮಾಡಿ ಬಡಿಸುತ್ತಿದ್ದರು ನಮ್ಮಜ್ಜಿ.

ಇನ್ನೂ ನಮ್ಮೂರಿನವರೋ ವಿಶಾಲ ಹೃದಯವಂತರು. ಇಂದಿಗೂ ಸಹಾ, ಹಿರಿಯರೂ ಕಿರಿಯರು ಎನ್ನದೇ, ಸ್ವಾಮೀ, ಐಯ್ನೋರೇ (ಐಯ್ಯನವರೇ ಎನ್ನುವ ಗ್ರಾಮೀಣ ಸೊಗಡು), ಬುದ್ದೀ ಎಂದೇ ಸಂಬೋಧಿಸುವಂತಹ ಸಂಸ್ಕಾರವಂತರು. ನಮ್ಮನ್ನು ನೋಡಿದ ತಕ್ಷಣ ಐಯ್ನೋರೇ, ಯಾವಾಗ್ ಬಂದ್ರೀ? ಎಲ್ಲಾ ಆರಾಮೇ? ಯಾವಾಗ್ ಓಯ್ತೀರೀ? ಎಂದು ಕೇಳುತ್ತಿದ್ದದ್ದು ನನಗೆ ಸೋಜಿಗವನ್ನುಂಟು ಮಾಡುತ್ತಿತ್ತು. ಅರೇ! ಇದೇನು ಈಗ ತಾನೇ ಬಂದಿದ್ದೀವಿ. ಅಷ್ಟು ಬೇಗನೇ ಯಾವಾಗ ಹೋಗ್ತೀರೀ? ಅಂತ ಕೇಳ್ತಾ ಇದ್ದಾರಲ್ಲಾ ಅಂತ ಕೋಪಾನೂ ಬರ್ತಾ ಇತ್ತು. ಅದರೆ ಅವರ ಮುಂದಿನ ಮಾತು ಅಪ್ಯಾಯಮಾನವಾಗುತ್ತಿತ್ತು. ಓಗೋ ಮುಂದೇ, ಮನ್ತಾವಾ ಬಂದ್ ಓಗೀ, ನಾಲ್ಕು ಕಾಯೀನೂ ವಸಿ ರಾಗಿ ಕೊಡ್ತೀನೀ ಎನ್ನುತಿದ್ದರು. ಹಾಗೆ ನಮ್ಮೂರಿನಿಂದ ಬೆಂಗಳೂರಿಗೆ ಹಿಂದಿರುಗುವಾಗ ಸುಮಾರು ಹತ್ತಿಪ್ಪತ್ತು ತೆಂಗಿನ ಕಾಯಿಯ ದಿಡ್ದಿ, ಒಂದಷ್ತು ಕೊಬ್ಬರೀ ಗಿಟುಕುಗಳು, ತೆಂಗಿನ ಮತ್ತು ಹಂಚೀಕಡ್ಡೀ ಪೊರಕೇ, ಒಂದಿಷ್ಟು ರಾಗಿ, ಹುರಳೀ ಕಾಳು, ಅವರೇ ಕಾಳು, ಹುಣಸೇ ಹಣ್ಣು, ಸಾಂಬಾರ್ ಈರುಳ್ಳಿಗಳು ನಮ್ಮ ಗಂಟಿನ ಜೊತೆಗಿರುತ್ತಿದ್ದವು, ಎಷ್ಟೋ ಬಾರಿ ಅವುಗಳ ಬೆಲೆಗಿಂತಲೂ ಅಧಿಕ ಮೊತ್ತವನ್ನೇ ಬಸ್ಸಿನಲ್ಲಿ ಮತ್ತು ಆಟೋದವನಿಗೆ ಲಗ್ಗೇಜ್ ರೂಪದಲ್ಲಿ ಕೊಟ್ಟಿದ್ದರೂ ನಮ್ಮೂರಿನ ಅಭಿಮಾನದ ಮುಂದೆ ಆ ಲಗ್ಗೇಜ್ ದುಡ್ಡು ಎಂದೂ ಹೆಚ್ಚೆನಿಸುತ್ತಿರಲಿಲ್ಲ.

ಹೀಗೆ ತೆಂಗಿನ ಕಾಯಿ ಮತ್ತು ತೆಂಗಿನ ಉತ್ಪನ್ನಗಳನ್ನು ನಾವೆಂದೂ ಕೊಂಡವರೇ ಅಲ್ಲ. ಬಾಡಿಗೆ ಮನೆಯಲ್ಲಿ ಎಷ್ಟು ದಿನ ಅಂತ ಇರುವುದು. ನಮಗೂ ಒಂದು ಸ್ವಂತ ಮನೆ ಬೇಡ್ವೇ ಅಂತಾ ಯಾವಾಗ ನಮ್ಮ ಅಮ್ಮನ ತಲೆಯಲ್ಲಿ ಹುಳಾ ಹೊಕ್ಕಿತೋ, ಅಂದಿನಿಂದ ತಂದೆಯವರ್ನ್ನು ಕಾಡೀ ಬೇಡೀ ಸಾಲ ಸೋಲ ಮಾಡಿಸಿ ಬೆಂಗಳೂರಿನಲ್ಲೊಂದು 40×66 ನಷ್ಟು ವಿಶಾಲವಾದ ನಿವೇಶನವೊಂದನ್ನು ಕೊಂಡು ಅದರಲ್ಲೊಂದು ಪುಟ್ಟದಾಗಿ ವಾಸಕ್ಕೊಂದು ಮನೆಯನ್ನು ಕಟ್ಟಿಸಿಕೊಂಡು ಮನೆಯ ಸುತ್ತಲೂ ಊರಿನಿಂದಲೇ ಐದಾರು ಸಾಂಪ್ರದಾಯಿಕ ತೆಂಗಿನ ಸಸಿಗಳನ್ನು ತರಿಸಿ ಅದನ್ನು ಮಕ್ಕಳಿಗಿಂತಲೂ ಹೆಚ್ಚಾಗಿ ಪೋಷಿಸಿ ಫಲ ಕೊಡಲಾರಂಬಿಸಿದ ನಂತರವಂತೂ ನಮ್ಮ ತಂದೆ ತಾಯಿಯರ ಆನಂದಕ್ಕೆ ಪಾರವೇ ಇಲ್ಲ. ನನಗೆ ಇನ್ನೂ ಚೆನ್ನಾಗಿ ನೆನಪಿರುವಂತೆ ನಮ್ಮ ಮನೆಯ ತೆಂಗಿನ ಮರದಲ್ಲಿ ಮೊದಲ ಬಾರಿಗೆ ಹೊಂಬಾಳೆ ಮೂಡಿದಾಗ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ. ಆ ಮರಕ್ಕೆ ಪೂಜೆ ಮಾಡಿ ಅಕ್ಕ ಪಕ್ಕದವರನ್ನು ಕರೆದು ಅರಿಷಿನ ಕುಂಕುಮ ಕೊಟ್ಟು ಗಸಗಸೆ ಪಾಯಸದ ಸಮಾರಾಧನೆ ಮಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

chap2ಹಾಕಿದ ಆರು ಮರಗಳಲ್ಲಿ ಒಂದನ್ನು ಉದ್ದೇಶಪೂರ್ವಕವಾಗಿಯೇ ತೆಗಿಸಿ ಹಾಕಿದ್ದರಿಂದ ಉಳಿದ ಐದೂ ಮರಗಳೂ ಸಾಕಷ್ಟು ಫಲ ನೀಡುತ್ತಿದ್ದವು. ನಾವು ಹೇಗೆ ನಮ್ಮೂರಿನಲ್ಲಿ ಎಳನೀರು ಕುಡಿದು ಸಂಭ್ರಮಿಸುತ್ತಿದ್ದೆವೋ ಅದೇ ರೀತಿ ಸಂಭ್ರಮಿಸುವ ಪಾಳಿ ಈಗ ನಮ್ಮ ಅಣ್ಣಂದಿರ ಮತ್ತು ಅಕ್ಕ ತಂಗಿಯ ಮಕ್ಕಳ ಪಾಲಾಗಿತ್ತು. ಅವರೆಲ್ಲರಿಗೂ ನಮ್ಮ ತಂದೆಯವರು ಪ್ರೀತಿಯ ಎಳ್ನೀರ್ ತಾತ ಆಗಿ ಹೋಗಿದ್ದರು. ಉಂಡೂ ಹೋದಾ ಕೊಂಡೂ ಹೋದ ಎನ್ನುವಂತೆ ಮನಸೋ ಇಚ್ಚೆ ಎಳ್ನೀರನ್ನು ಕುಡಿಸುತ್ತಿದ್ದದ್ದಲ್ಲದೇ, ಅವರು ಮನೆಗಳಿಗೆ ನಾಲ್ಕಾರು ಎಳನೀರುಗಳನ್ನು ಕೊಟ್ಟು ಕಳಿಸಿದರೇನೇ ನಮ್ಮ ತಂದೆ ತಾಯಿಯರಿಗೆ ಸಮಾಧಾನವಾಗುತ್ತಿತ್ತು. ಇನ್ನೂ ಯಾರೇ ನಮ್ಮ ಮನೆಗೆ ಬಂದರೂ ಬಾವಿಯಿಂದ ನೀರನ್ನು ಸೇದಿ ಹಂಡೆಗೆ ಸುರಿದು, ತೆಂಗಿನ ಹೆಡೆಮಟ್ಟೆ, ತೆಂಗಿನ ಸಿಪ್ಪೆ, ಕರಟಗಳನ್ನು ಹಾಕಿ ಚೆನ್ನಾಗಿ ಕೊತಕೊತನೇ ಬಿಸಿ ಬಿಸಿ ನೀರನ್ನು ಕಾಯಿಸಿ ಮೈ ತುಂಬ ಎಣ್ಣೇ ಹಚ್ಚಿ, ಹದವಾಗಿ ಚಿಗರೇಪುಡಿ ಮತ್ತು ಸೀಗೆ ಪುಡಿಯಿಂದ ಎಣ್ಣೇ ಹೋಗಿಸುತ್ತಿದ್ದ ಸುಖಃವನ್ನು ಅನುಭವಿಸಿದವರಾರೂ ಇನ್ನೂ ಮರೆತಿಲ್ಲ. ಸಂಬಂಧೀಕರ ಮತ್ತು ಅಕ್ಕ ಪಕ್ಕದವರ ಯಾರದ್ದೇ ಮನೆಯಲ್ಲಿ ಯಾವುದೇ ಶುಭ ಸಮಾರಂಭಗಳು ನಡೆದರೂ ಅದರ ಚಪ್ಪರಕ್ಕೆ ನಮ್ಮ ಮನೆಯ ತೆಂಗಿನ ಗರಿಯೇ ಪ್ರಾಶಸ್ತ್ಯ.

kal3ದಿನಗಳು ಕಳೆದಂತೆಲ್ಲಾ ತೆಂಗಿನ ಮರಗಳು ನಮ್ಮ ಮನೆಗಿಂತಲೂ ಎತ್ತರಕ್ಕೇರಿದ್ದವು. ಮೂರು ತಿಂಗಳಿಗೊಮ್ಮೆ ಸುಮಾರು 150-250 ಕಾಯಿಗಳನ್ನು ಕೀಳಿಸುತ್ತಿದ್ದರು. ಅರಂಭದಲ್ಲಿ ಕಾಯಿ ಕೀಳಿಸಲು ಮರವೊಂದಕ್ಕೆ 20ರೂಗಳನ್ನು ಕೊಡುತ್ತಿದ್ದದ್ದು ಅಂತಿಮವಾಗಿ ಅದು 200ಕ್ಕೇರಿತ್ತು. ಮರದಿಂದ ಗೊನೆಯನ್ನು ಜೋಪಾನವಾಗಿ ಇಳಿಸಿ, ಚೆನ್ನಾಗಿ ಬಲಿತ ಕಾಯಿಗಳನ್ನು ಅಟ್ಟದ ಮೇಲೆ ಕೊಬ್ಬರೀಯಾಗಲೆಂದು ಹಾಕಿ ಉಳಿದ ಕಾಯಿಗಳನ್ನು ಮನೆಗೆ ಬಳಸುತ್ತಿದ್ದದಲ್ಲದೇ ನಮ್ಮ ಬಂಧು-ಬಾಂಧವರಲ್ಲದೇ ಅಕ್ಕ ಪಕ್ಕದವರಿಗೂ ಕೊಡುತ್ತಿದ್ದೆವೇ ವಿನಃ ಎಂದಿಗೂ ಒಂದೂ ಕಾಯಿಯನ್ನು ಹಣಕ್ಕಾಗಿ ಮಾರಲೇ ಇಲ್ಲ. ಹಬ್ಬಗಳು ಬಂದಿತೆಂದರೆ ಅವತ್ತು ಅರವತ್ತು ಕಾಯಿಗಳನ್ನು ಸುಲಿದು ಎಲ್ಲರ ಮನೆಗಳಿಗೆ ಕೊಟ್ಟು ಬರುವುದೇ ನಮ್ಮ ಕೆಲಸವಾಗುತ್ತಿತ್ತು. ಸಂಕ್ರಾಂತಿ ಬಂದಿತೆಂದರೆ ನಮ್ಮ ಹತ್ತಿರದ ಸಂಬಂಧಿಗಳು ಮತ್ತು ಸುತ್ತಮುತ್ತಲಿನ ಎಲ್ಲರಿಗೂ ಹಬ್ಬಕ್ಕೆ ಸಾಕಾಗುವಷ್ತು ಕೊಬ್ಬರೀ ನಮ್ಮ ಮನೆಯಿಂದಲೇ ಕೊಡುತ್ತಿದ್ದರು. ನಮ್ಮ ತಾಯಿಯವರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ತಂಗಿಯರು, ಅವರ ತಂಗಿಯಂದಿರು ಮತ್ತು ನಮ್ಮ ತಂದೆಯವರ ಅಕ್ಕ ತಂಗಿಯರು ಎಂದು ಬೇಧ-ಭಾವ ತೋರದೇ, ಎಲ್ಲರ ಮನೆಗಳಿಗೂ ಎಳ್ಳು ಬೆಲ್ಲಕ್ಕೆ, ಕೊಬ್ಬರಿಯನ್ನು ಸ್ವತಃ ಸಣ್ಣದಾಗಿ ಹೆಚ್ಚಿ ಒಣಗಿಸಿ, ಒಂದರಾಡಿ ಕೊಡುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಮನದಲ್ಲಿದೆ. ಕಾಲ ಕಾಲಕ್ಕೆ ನಮ್ಮ ಮನೆಯ ಜೊಬ್ಬರೀ ಗಿಟುಕುಗಳು, ವಿದೇಶದಲ್ಲಿದ್ದ ನಮ್ಮ ಸಂಬಂಧೀಕರ ಮನೆಗಳ ವರೆಗೂ ತಲುಪಿತ್ತು.

ಮನೆಯಲ್ಲಿ ಯತೇಚ್ಛವಾಗಿ ಕಾಯಿ ಮತ್ತು ಕೊಬ್ಬರಿಗಳಿದ್ದ ಕಾರಣ, ಅಮ್ಮ ‌ಮಾಡುತ್ತಿದ್ದ ಪ್ರತೀ ಅಡುಗೆಯಲ್ಲೂ ಕಾಯಿ‌ಯೇ ಮುಂದು. ‌ಏನಿಲ್ಲವೆಂದರೂ ದಿನಕ್ಕೆ ಎರಡ್ಮೂರು ಕಾಯಿಗಳಾದರೂ ಅಚ್ಚರಿ ಎನಿಸುತ್ತಿರಲಿಲ್ಲ. ಚೆಟ್ನಿ, ಗೊಜ್ಜು, ಪಲ್ಯ, ಸಾರು, ಹುಳೀ, ಎಲ್ಲದಕ್ಕೂ ಕಾಯಿಯೇ ಪ್ರಾಧಾನ್ಯ. ಇಂಗು-ತೆಂಗು ಇದ್ದರೆ ಮಂಗವೂ ಚೆಂದಗೆ ಅಡುಗೆ ಮಾಡುತ್ತದಂತೇ ಎನ್ನುವಂತೆ ನಮ್ಮಮ್ಮನ ಕೈ ರುಚಿ ನಿಜಕ್ಕೂ ಅದ್ಭುತ. ಕಾಯಿ ಹಾಲು ಹಾಕಿ ಮಾಡುತ್ತಿದ್ದ ಆ ಸಾರು. ಕಾಯಿ ಹಿಂಡಿ ಹಾಲು ತೆಗೆದ ಚರಟವನ್ನು ಸುಮ್ಮನೇ ಬಿಸಾಡಲು ಮನಸ್ಸಾಗದೇ ಅದರ ಸಲುವಾಗಿ ಮಾಡುತ್ತಿದ್ದ ಪಲ್ಯ, ಕೋಸಂಬರಿ, ಹುಸ್ಲಿಗಳು ಊಟದ ರುಚಿಯನ್ನು ಮತ್ತಷ್ಟು ಮಗದಷ್ಟು ಹೆಚ್ಚಿಸುತ್ತಿದ್ದವು.

ತೆಂಗಿನ ಮರ ಬೆಳೆದು ದೊಡ್ಡದಾಗುತ್ತಿದ್ದಂತೆಯೇ ಅದನ್ನು ನೋಡ ನೋಡುತ್ತಲೇ ನಾನೂ ಸಹಾ ಬೆಳೆದು ನಿಂತಿದ್ದೆ. ಅಪ್ಪಾ-ಅಮ್ಮಾ ನೋಡಿ ಒಪ್ಪಿ ಅದ್ದೂರಿಯಾಗಿ ಬೆಂಗಳೂರಿನ ಹುಡುಗಿಯೊಂದಿಗೆ ಮದುವೆ ಮಾಡಿಸಿಯೇ ಬಿಟ್ಟರು. ಅಲ್ಲಿಂದ ಶುರುವಾಯ್ತು ನೋಡಿ ಕಾಯಿಯ ಕುರಿತಂತೆ ಜಟಾಪಟಿ. ಅತ್ತೆ ಸೊಸೆಯರ ನಡುವಿನ ಈ ತಂಗಿನ‌ಕಾಯಿ ಬಳಕೆಯ ಪೈಪೋಟಿಯ ಅನುಭವ ನೇರವಾಗಿಯಲ್ಲದಿದ್ದರೂ ತೆರೆಯ ಹಿಂದೆ ಆಗುತ್ತಿದ್ದದ್ದೇ ನನಗೇ. ಅದರಿಬ್ಬರ ಮಧ್ಯೆ ನಾನು ಸಿಕ್ಕಿ ಸಲುಗುತ್ತಿದ್ದದ್ದು ಯಾವ ಶತ್ರುವಿಗೂ ಬೇಡ.

ಹೇಳೀ ಕೇಳಿ ಬೆಂಗಳೂರಿನಲ್ಲಿಯೇ ಹುಟ್ಟಿ ಕಾಯಿ, ಕೊಬ್ಬರಿಯನ್ನು ಕೊಂಡು ತಂದು ತಿಂದು ಬೆಳೆದವಳು ನಮ್ಮಾಕಿ. ಹಾಗಾಗಿ ಅವಳ ಆಡುಗೆಯಲ್ಲಿ ಕಾಯಿಯನ್ನು ಜೋಪಾನವಾಗಿ ಬಳಸುತ್ತಿದ್ದಳು. ಅದಕ್ಕೆ ತದ್ವಿರುದ್ಧ ನಮ್ಮಮ್ಮ. ಚಟ್ನಿಗೆ ಕಾಯಿಯ ಹೊರತಾಗಿ ಹುರಿಗಡಲೆ ಬಳೆಸುತ್ತಾರೆ ಎನ್ನುವುದು ಅರಿವಾಗಿದ್ದೇ ನನ್ನ ಮಡದಿ ಬಂದ ಮೇಲೆ ಎಂದರೂ ತಪ್ಪಾಗಲಾರದು. ಅಮ್ಮ ದಿನಕ್ಕೆ ಒಂದೆರಡು ಕಾಯಿ ಬಳಸುತ್ತಿದ್ದರೆ ನಮ್ಮಾಕಿ ವಾರಕ್ಕೊಂದೋ ಇಲ್ಲವೇ ಎರಡೋ ತೆಂಗಿನ ಕಾಯಿಯನ್ನು ಬಳೆಸುವುದನ್ನು ನೋಡಿ ಅಮ್ಮನಿಗೆ ಅದೇನೋ ಸಂಕಟ. ಅಲ್ವೋ, ಇಷ್ಟೇ ಇಷ್ಟು ಕಾಯಿ ಹಾಕಿ ಅಡುಗೆ ಮಾಡಿದರೆ ಅದೇನು ರುಚಿಯಾಗಿರುತ್ತದೋ ಎಂದು ಅಮ್ಮಾ ಹೇಳಿದ್ರೇ, ಯಾಕೇ? ಚೆನ್ನಾಗಿಲ್ಲಾ ಚೆನ್ನಾಗಿಲ್ಲಾ ಅಂತಾನೇ ಒಂದು ಡಬರೀ ಸಾರು ಖರ್ಚಾಗಿದೇ? ಮನೆಯಲ್ಲಿ ಕಾಯಿ ಇದೇ ಅಂತಾ ಅಷ್ಟೊಂದು ಬಳಸುವುದು ದೇಹಕ್ಕೆ ಒಳ್ಳೆಯದಲ್ಲಾ. ಕೊಲೇಸ್ಟ್ರಾಲ್ ಹೆಚ್ಚಾಗುತ್ತದೆ ಎನ್ನುವ ನೀತಿ ಪಾಠ ಮನೆಯವರಿಂದ. ಒಟ್ಟಿನಲ್ಲಿ ಅತ್ತೇ ಸೊಸೆಯರ ತೆಂಗಿನಕಾಯಿಯ ವ್ಯಾಜ್ಯದಲ್ಲಿ ಬಲಿಪಶುವಾಗುತ್ತಿದ್ದದ್ದು ಮಾತ್ರಾ ನಾನೇ.

ನಾವು ಯಾರ ಮನೆಗಾದರೂ ಅಥವಾ ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ, ತೆಂಗಿನಕಾಯಿ ಬಾಗಿಣ ಕೊಟ್ಟರೆ, ನಾವು‌ ಮುಟ್ಟಿದ ಶಾಸ್ತ್ರ ‌ಮಾಡಿ ಅಯ್ಯೋ, ನಮ್ಮ ಮನೆಯಲ್ಲೇ ‌ಅಷ್ಟೊಂಸು‌ ತೆಂಗಿನ ಮರ ಇದೆ.‌ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಎಂದೇ ಹೇಳುತ್ತಿದ್ದ ಕಾರಣ ನಮ್ಮ ಸಂಬಂಧಿಕರಾರೂ ನಮಗೆ ತೆಂಗಿನ ಕಾಯಿಯನ್ನೇ ಕೊಡುತ್ತಿರಲಿಲ್ಲ.

ಜಾತಸ್ಯ ಮರಣಂ ಧೃವಂ ಎನ್ನುವಂತೆ ಹುಟ್ಟಿದವರು ಸಾಯಲೇ ಬೇಕು ಎನ್ನುವುದು ಜಗದ ನಿಯಮ. ಅದೇ ರೀತಿ ಅದೊಂದು ದಿನ ಯಾರಿಗೂ ಹೇಳದೇ ಬಾರದಿರುವ ಲೋಕಕ್ಕೆ ಅಮ್ಮಾ ಹೋಗಿಯೇ ಬಿಟ್ಟರು. ಅಮ್ಮನೇ ಇಲ್ಲದಿರುವಾಗ ಅಮ್ಮನ ಮನೆಯೇಕೆ ಎಂದು ಅಮ್ಮಾ ಬಾಳಿ ಬೆಳಗಿದ್ದ ನಮ್ಮ ಹಳೆಯ ಮನೆಯನ್ನು ಮಾರಿದ ಅಪ್ಪಾ ಅವರಿಚ್ಚೆಯಂತೆ ಮಕ್ಕಳಿಗೆ ಪಾಲನ್ನು ಹಂಚಿ ಬಿಟ್ಟರು. ನಿಜ ಹೇಳಬೇಕೆಂದರೆ ಆ ಮನೆಯನ್ನು ಮಾರಿದ ನಂತರವೇ ನಮಗೆ ತೆಂಗಿನ ಕಾಯಿ ಮತ್ತು ಕೊಬ್ಬರಿಯ ನಿಜವಾದ ‌ಬೆಲೆ ಗೊತ್ತಾದದ್ದು. ಅಯ್ಯೋ ಇಷ್ಟು ಸಣ್ಣ ಕಾಯಿಗೆ 25-30 ರೂಪಾಯಿಗಳಾ? ಎಂದು‌‌ ಮೂಗಿನ ಮೇಲೆ ಬೆರಳಿಟ್ಟೆವು. ಸಂಕ್ರಾಂತಿಗೆ ಕೇಜಿಗೆ 200ರೂ ಕೊಟ್ಟು ಕೊಬ್ಬರಿಯನ್ನು ಕೊಂಡು ತಂದಾಗಲೇ ನನ್ನಾಕಿ ರೀ…, ಕಾಯಿ ಕಡಿಮೇ ಬಳಸೀ… ಎಂದು ಏಕೆ ಸದಾಕಾಲವೂ ಹೇಳುತ್ತಿದ್ದಳು ಎಂಬ ಮಹತ್ವ ಅರಿವಾಗಿತ್ತು. ಆದರೆ ಕಾಲ ಮಿಂಚಿ ಹೋಗಿದ್ದರಿಂದ ಚಿಂತಿಸಿ ಫಲವಿಲ್ಲ ಎನ್ನುವಂತೆ ನಿಧಾನವಾಗಿ ಮತ್ತು ಆನಿವಾರ್ಯವಾಗಿ ದಿನಕ್ಕೆರಡು ಕಾಯಿಯ ಬಳಕೆಯಿಂದ, ವಾರಕ್ಕೊಂದೋ ಇಲ್ಲವೇ ಎರಡು ಕಾಯಿಯನ್ನು ಬಳಸುವ ಅಭ್ಯಾಸ ಮಾಡಿಕೊಂಡೆವು.

‌ಈಗ ಯಾರದ್ದೇ ಮನೆ, ಮದುವೆ, ಮುಂಜಿ, ಸಭೇ, ಸಮಾರಂಭಗಳಿಗೆ ಹೋದರೋ‌ ನಿಸ್ಸಂಕೋಚವಾಗಿ‌ ಕಾಯಿಯನ್ನು ಕೇಳಿ ಪಡೆದುಕೊಂಡರು ಬರುವಂತಹ ದೈನೇಸಿ‌ ಸ್ಥಿತಿಗೆ ತಲುಪಿದ್ದೇವೆ. ಮೈಸೂರಿನಲ್ಲಿರುವ ಚಿಕ್ಕಪ್ಪನ ಮನೆಗೆ ಹೋದರೆ ಮೊದಲು ನೋಡುವುದೇ ಮನೆಯ ಮುಂದಿನ ತೆಂಗಿನ ಮರಗಳಲ್ಲಿ ಎಷ್ಟು ಗೊನೆ ಬಲಿತಿದೆ. ಇಲ್ಲವೇ ಅವರ ಅಟ್ಟದ ಮೇಲೆ ಎಷ್ಟು ಕಾಯಿ ಇದೆ ಎಂದು. ಬೆಂಗಳೂರಿಗೆ ಬರುವಾಗ ಕಾರಿನ ಡಿಕ್ಕಿಯ ಭರ್ತಿ ಕಾಯಿಯನ್ನು ತುಂಬಿಕೊಂಡು ಬರ್ತೀವಿ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲವೇನೋ?

porake2ಮೊನ್ನೆ ಮನೆಯ ಮುಂದೆ ತೆಂಗಿನ ಪೊರಕೆಯನ್ನು ಮಾರಿಕೊಂಡು ಬಂದಾಕೆ, ಅಣ್ಣಾ ಜೋಡಿ 180ಕ್ಕೆ ಮಾರ್ತಾ ಇದ್ದೀನಿ ನಿಮಗಾದ್ರೇ 150ಕ್ಕೆ ಕೊಡ್ತೀನಿ ಅಂದಾಗ ನನಗೇ ಅರಿವಿಲ್ಲದಂತೆ ಊಟವಾದ ಬಳಿಕ ಒಣಗಿ ಬಿದ್ದ ತೆಂಗಿನ ಸೋಗೆಯನ್ನು ಮನೆಯ ಮುಂದೆ ಹರಡಿಕೊಂಡು ನಿಧಾನವಾಗಿ ಜೀವುತ್ತಾ (ಸೀಳುತ್ತಾ) ರಾಶಿ ರಾಶಿ ತೆಂಗಿನ ಪೊರಕೆಗಳನ್ನು ಮಾಡಿ ಎಲ್ಲರಿಗೂ ಉಚಿತವಾಗಿ ಹಂಚುತ್ತಿದ್ದ ನಮ್ಮ ಅಜ್ಜಿ ಮತ್ತು ತಂದೆಯವರು ಕಣ್ಣ ಮುಂದೆ ಬಂದು ಕಣ್ಣಂಚಿನಲ್ಲಿ ನೀರೂರಿತ್ತು. ಆ ಕೂಡಲೇ ನನ್ನ ಮನದಾಳವನ್ನು ಅರಿತ ನನ್ನಾಕೇ ಪ್ರೀತಿಯಿಂದ ತಲೆ ಸವರಿದಾಗ ಆಕೆಯ ಆ ಕರುಣೆಯಲ್ಲಿ ನಮ್ಮಮ್ಮನನ್ನು ಕಂಡಿದ್ದಂತೂ ಸುಳ್ಳಲ್ಲ.

ಈ ರೀತಿ ತೆಂಗಿನಕಾಯಿ ನಮ್ಮ ಜೀವನದಲ್ಲಿ ಕೇವಲ ಅಡುಗೆಯ ಪರಿಕರವಾಗಿವುದಷ್ಟೇ ಅಲ್ಲದೇ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ನಮ್ಮ ಮೂರು ತಲೆಮಾರಗಳನ್ನು ಸದಾಕಾಲವೂ ನೆನಪಿಸುವಂತಹ ಕಲ್ಪವೃಕ್ಷವಾಗಿದೆ.

ಏನಂತೀರೀ?

ಮಕರ ಸಂಕ್ರಾಂತಿ

ದೈನಂದಿನದ ಚಟುವಟಿಗಳಿಂದ ಬೇಸತ್ತವರಿಗೆ ಮುದ ನೀಡಲು ನಮ್ಮ ಹಿರಿಯರು ಹಬ್ಬದ ಆಚರಣೆಗಳನ್ನು ರೂಢಿಗೆ ತಂದರು. ಕೇವಲ ಮಾನವರು ಮಾತ್ರವಲ್ಲದೇ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಕು ಪ್ರಾಣಿಗಳಿಗೂ ತುಸು ನೆಮ್ಮದಿ ಮತ್ತು ಸಂತೋಷವನ್ನು ನೀಡಲು ಕೆಲವು ವಿಶೇಷ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೆ ಪ್ರಕೃತಿ, ಪ್ರಾಣಿ, ಪಶು ಮತ್ತು ಮಾನವವರು ಎಲ್ಲರೂ ಕೂಡಿ ಸಂತಸದಿಂದ ವೈವಿದ್ಯಮಯವಾಗಿ ಸಂಭ್ರಮಿಸುವ ಹಬ್ಬವೇ ಮಕರ ಸಂಕ್ರಾಂತಿ. ಇದನ್ನು ಸುಗ್ಗಿಯ ಹಬ್ಬವೆಂದೂ ಕರೆಯಲಾಗುತ್ತದೆ.

ಇಡೀ ಭೂಸಂಕುಲದ ಎಲ್ಲಾ ಚಟುವಟಿಕೆಗಳು ಸೂರ್ಯ ಮತ್ತು ಚಂದ್ರನ ಮೇಲೆಯೇ ಅವಲಂಭಿತವಾಗಿದೆ. ಪ್ರತಿ ಸಂವತ್ಸರ(ವರ್ಷ)ವನ್ನು ಎರಡು ಅಯನಗಳಾಗಿ ವಿಂಗಡಿಸಲಾಗಿದೆ.ಉತ್ತರಾಯಣ ( ಪುಷ್ಯಮಾಸದಿಂದ ಆಷಾಢಮಾಸದವರೆಗೆ) ಮತ್ತು ದಕ್ಷಿಣಾಯನ ( ಆಷಾಡ ಮಾಸದಿಂದ ಪುಷ್ಯಮಾಸದವರೆಗೆ)ಹೀಗೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಕಾಲವನ್ನು ಮಕರ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನು ಪ್ರತೀ ರಾಶಿಯಲ್ಲಿ ಒಂದೊಂದು ತಿಂಗಳ ಕಾಲವಿದ್ದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ. ಸಾಧಾರಣವಾಗಿ ಪ್ರತೀ ವರ್ಷ ಜನವರಿ 14 ಅಥವಾ 15ರಂದು ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ಮೂಲಕ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುವ ಕಾರಣ, ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ.

bheeshma.jpeg

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿರುವ ಕಾರಣ, ಈ ಸಮಯದಲ್ಲಿ ಮೃತರಾದವರು ಸೀದಾ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನೂ ಸಹಾ ಭಗದ್ಗೀತೆಯಲ್ಲಿ ಆಯಣಗಳಲ್ಲಿ ಉತ್ತರಾಯಣವೇ ಅತಿ ಶ್ರೇಷ್ಠ ಎಂದಿದ್ದಾನೆ. ಹಾಗಾಗಿಯೇ ಕುರುಕ್ಷೇತ್ರದ ಯುದ್ಧದಲ್ಲಿ ಭೀಷ್ಮ ಪಿತಾಮಹರು ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಇಚ್ಛಿಸದೇ, ಉತ್ತರಾಯಣದ ಪುಣ್ಯಕಾಲದವರೆಗೂ ಅರ್ಜುನ ನಿರ್ಮಿಸಿದ ಬಾಣಗಳ ಮಂಚದ ಮೇಲೆ ದಿನಗಳನ್ನು ಕಳೆದು ಅಷ್ಟಮಿ ದಿನದಂದು ಇಚ್ಛಾ ಮರಣಿಯಾಗುತ್ತಾರೆ.

ಇನ್ನು ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣ ಕಾಲದಲ್ಲಿಯೇ. ಹಾಗಾಗಿ ಬಹುತೇಕ ವಿವಾಹಗಳು, ನಾಮಕರಣ, ಚೌಲ-ಉಪನಯನ ಮತ್ತು ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು ಉತ್ತರಾಯಣಕಾಲದಲ್ಲಿ ಹೆಚ್ಚಾಗಿ ಮಾಡಲ್ಪಡುತ್ತದೆ. ಮಾಘ ಮಾಸದಲ್ಲಿ ನದಿಗಳಲ್ಲಿ ಸ್ನಾನ ಮಾಡಿ ಗಂಗೆ ಪೂಜೆ ಮಾಡಿದರೂ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನು ಹಳ್ಳಿಗಾಡಿನಲ್ಲಿ ಬೇರೆಲ್ಲಾ ಹಬ್ಬಗಳಿಗಿಂತ ಈ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಆಗ ತಾನೆ ಬೆಳೆದ ಫಸಲುಗಳೆಲ್ಲವನ್ನೂ ಕಟಾವು ಮಾಡಿ ಕಣಜಗಳಲ್ಲಿ ರಾಶಿ ರಾಶಿಯಾಗಿ ತಂಬಿರುವ ಪರಿಣಾಮವಾಗಿ ಇದನ್ನು ಸುಗ್ಗಿ ಹಬ್ಬ ಎಂದೂ ಕರೆಯುತ್ತಾರೆ. ಸುಗ್ಗಿಯು ಬಂದಿತು, ಹಿಗ್ಗನು ತಂದಿತು, ನಮ್ಮಯ ನಾಡಿನ ಜನಕೆಲ್ಲ ಎಂಬ ಜನಪದ ಹಾಡು ಬಹಳ ಪ್ರಸಿದ್ಧವಾಗಿದೆ.

ಸಂಕ್ರಾಂತಿ ಹಬ್ಬದ ದಿನದಂದು ಬೆಳ್ಳಂಬೆಳಗ್ಗೆಯೇ ಮನೆಯವರರೆಲ್ಲಾ ಎದ್ದು ಎಣ್ಣೆಯ ಅಭ್ಯಂಜನ ಮಾಡಿ, ಮನೆಯ ಹೆಣ್ಣು ಮಕ್ಕಳು ಮನೆಯ ಮುಂದೆ ದೊದ್ಡ ದೊಡ್ಡದಾದ ರಂಗೋಲಿಗಳನ್ನು ಇಟ್ಟು ಮನಯನ್ನು ಸಿಂಗರಿಸಿದರೆ, ಮನೆಯ ಗಂಡಸರು ಮನೆಯಲ್ಲಿರುವ ದನಕರುಗಳಿಗೆ ಸ್ನಾನ ಮಾಡಿಸಿ, ಕೊಟ್ಟಿಗೆ ಶುಚಿಗೊಳಿಸಿ ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಕಣಜದಲ್ಲಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಇನ್ನು ಮಕ್ಕಳು ಹೊಸಬಟ್ಟೆ ತೊಟ್ಟು ಅದರಲ್ಲೂ ಹೆಣ್ಣುಮಕ್ಕಳು ಲಂಗ ರವಿಕೆ ತೊಟ್ಟು, ತಲೆಗೆ ಬೈತಲೆಬಟ್ಟು , ಮುಡಿ ತುಂಬಾ ಹೂ ಮುಡಿದು ವೈಯಾರವಾಗಿ ಓಡಾಡುವುದನ್ನು ವರ್ಣಿಸುವುದಕ್ಕಿಂತ ನೋಡಿ ನಲಿಯುವುದಕ್ಕೇ ಆನಂದ.

sank3.jpeg

ಈ ಹಬ್ಬಕ್ಕೆ ವಿಶೇಷವಾಗಿ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಮತ್ತು ಕಡಲೇಕಾಯಿ ಬೀಜದ ಮಿಶ್ರಣದ ಜೊತೆಗೆ ಸಕ್ಕರೆಯ ಪಾಕದಿಂದ ತಯಾರಿಸಿದ ಸಕ್ಕರೇ ಅಚ್ಚು, ಮತ್ತು ಕಬ್ಬನ್ನು ಇಟ್ಟು ಪೂಜಿಸುತ್ತಾರೆ. ಈ ಹಬ್ಬಕ್ಕೆ ತುಪ್ಪಾ, ಅಕ್ಕಿ, ಹೆಸರುಬೇಳೆ, ಜೀರಿಗೆ, ಮೆಣಸು, ಹಸೀ ಮೆಣಸಿನಕಾಯಿ, ಅರಿಷಿನ ತೆಂಗಿನ ಕಾಯಿ ಮತ್ತು ಬೆಲ್ಲದ ಮಿಶ್ರಣದಿಂದ ಮಾಡಿದ ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)ಯನ್ನು ನೈವೇದ್ಯ ಮಾಡಿ, ಮನೆಯ ಹಿರಿಯರು ಎಲ್ಲರಿಗೂ ಎಳ್ಳು-ಬೆಲ್ಲದ ಮಿಶ್ರಣವನ್ನು ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೇ ಮಾತನಾಡೋಣ ಎಂದು ಹೇಳುತ್ತಾ ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ.

ಸಾಧಾರಣವಾಗಿ ಶುಭಸಮಾರಂಭಗಳಲ್ಲಿ ಎಳ್ಳಿನ ಬಳಕೆ ಇರುವುದಿಲ್ಲ, ಎಳ್ಳನ್ನು ಅಪರ ಕರ್ಮಗಳಲ್ಲಿ ತರ್ಪಣ ಬಿಡುವುದಕ್ಕೆ ಮತ್ತು ಶನಿ ಗ್ರಹದ ದೋಷ ಪರಿಹಾರಕ್ಕಾಗಿ ಉಪಯೋಗಿಸುವುದು ರೂಡಿಯಲ್ಲಿರುವ ಕಾರಣ ಸಾಮಾನ್ಯ ದಿನಗಳಂದು ಎಳ್ಳಿನ ದಾನವನ್ನು ಸ್ವೀಕರಿಸಲು ಹಿಂದು ಮುಂದು ನೋಡುತ್ತಾರೆ, ಆದರೆ ಸಂಕ್ರಾಂತಿಯಂದು ಮಾತ್ರ ಎಳ್ಳು ಬೀರುವುದೇ ಸಂಪ್ರದಾಯ. ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಇದು ಚಳಿಗಾಲವಾದ್ದರಿಂದ ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಮಾಡುವುದಲ್ಲದೇ ಚರ್ಮದ ಕಾಂತಿಯನ್ನೂ ಹೆಚ್ಚುತ್ತದೆ. ಇನ್ನು ಕೊಬ್ಬರಿ‌ ಮತ್ತು ಕಡಲೇಕಾಯಿ ಬೀಜವೂ ಸಹಾ ಎಣ್ಣೆ ಅಂಶದ ವಸ್ತುಗಳಾಗಿದ್ದು ಅವುಗಳ‌ಜೊತೆ ಸರಿದೂಗಿಸಲು ಹುರಿಗಡಲೆ ಮತ್ತು ಬೆಲ್ಲವನ್ನು ಬೆರೆಸಲಾಗಿರುತ್ತದೆ. ಇದೇ ರೀತಿ ಅಕ್ಕಿ, ಹೆಸರುಬೇಳೆ, ಜೀರಿಗೆ ಮತ್ತು ಮೆಣಸು ಮಿಶ್ರಿತ ಹುಗ್ಗಿಯೂ ಕೂಡಾ ಇದೇ ದೇಹಕ್ಕೆ ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಹೆಣ್ಣು ಮಕ್ಕಳು ನೆರೆಹೊರೆಯವರೊಂದಿಗೆ ಎಳ್ಳು ಬೆಲ್ಲ, ಕಬ್ಬು, ಬಾಳೆಹಣ್ಣುಗಳನ್ನು ಪರಸ್ಪರ ಎಳ್ಳು-ಬೆಲ್ಲ ಬೀರುವ ( ವಿನಿಮಯ ಮಾಡಿಕೊಳ್ಳುವ) ಸಂಪ್ರದಾಯ ರೂಢಿಯಲ್ಲಿದೆ.

ಇದು ಮಾಗಿಯ ಕಾಲವಾದ್ದರಿಂದ ಅಗ ತಾನೆ ಸೊಗಡಿನ ಮಣಿ ಅವರೇಕಾಯಿಯನ್ನು ತಂದು ಮಧ್ಯಾಹ್ನದ ಅಡುಗೆಯಲ್ಲಿ ಬಹತೇಕ ಅವರೇಕಾಯಿ ಮಯವಾಗಿರುತ್ತದೆ, ಅವರೇಕಾಯಿ-ಮೆಣಸು ಮಿಶ್ರಿತ ಉದ್ದಿನ ಕಡುಬು (ಅವರೇಕಾಯಿ ಇಡ್ಲಿ), ಅವರೇಕಾಯಿ ಹುಳಿ ಇಲ್ಲವೇ ಹಿದುಕಿದ ಆವರೇಕಾಯಿ ಕೂಟು, ಅವರೇಕಾಯಿ-ಕುಂಬಳಕಾಯಿ ಪಲ್ಯ ಇಲ್ಲವೇ ತೊವ್ವೆ, ಸಿಹಿಗೆಣಸಿನ ಪಲ್ಯದೊಂದಿಗೆ ಮನೆಯವರೆಲ್ಲರೂ ಸಂತೃಪ್ತಿಯಿಂದ ಊಟದ ಶಾಸ್ತ್ರ ಮುಗಿಸಿ ಭುಕ್ತಾಯಾಸ ಪರಿಹರಿಸಿಕೊಳ್ಳಲು ಸಣ್ಣದಾದ ನಿದ್ದೆಯನ್ನು ಮಾಡಿದರೆ ಅರ್ಧ ಸಂಕ್ರಾಂತಿ ಮುಗಿದ ಹಾಗೆಯೇ.

sank5

ಇನ್ನು ಸಂಜೆ ಹೊತ್ತು ಹೆಣ್ಣು ಮಕ್ಕಳು ಮತ್ತೊಮ್ಮೆ ಸಿಂಗರಿಸಿಕೊಂಡು ಎಳ್ಳು ಬೀರುವುದದನ್ನು ಮುಂದುವರೆಸಿದರೆ, ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮೊದಲ ವರ್ಷ ಮುತ್ತೈದೆಯರಿಗೆ ಐದು ಬಾಳೆಹಣ್ಣುಗಳನ್ನು ಕೊಟ್ಟು ಮುಂದಿನ ಐದು ವರ್ಷಗಳ ಕಾಲ ಕ್ರಮೇಣವಾಗಿ ಐದರಿಂದ ಹೆಚ್ಚಿಸಿಕೊಂಡು, ಐದನೇ ವರ್ಷಕ್ಕೆ ಇಪ್ಪತ್ತೈದು ಬಾಳೇ ಹಣ್ಣುಗಳನ್ನು ಬಾಗಿಣವಾಗಿ ಕೊಡುವ ಮೂಲಕ ಮುಕ್ತಾಯ ಮಾಡುತ್ತಾರೆ, ಗಂಡಸರುಗಳು ತಮ್ಮ ತಮ್ಮ ದನಕರುಗಳಿಗೆ ನಾನಾ ರೀತಿಯ ಹೂಗಳಿಂದ ಸಿಂಗಾರ ಮಾಡಿ, ಕೊರಳಿಗೆ ಮತ್ತು ಕಾಲ್ಗಳಿಗೆ ಗೆಜ್ಜೆ ಕಟ್ಟಿ ಕೆಲವರು ಅವುಗಳ ಕೋಡುಗಳಿಗೆ ಬಣ್ಣ ಬಳಿದು, ಉಸುರುಬುಡ್ಡೆ(ಬೆಲೂನ್)ಗಳನ್ನು ಕಟ್ಟಿ ಕತ್ತಲಾದ ಮೇಲೆ ಊರಿನ ಅರಳೀ ಕಟ್ಟೆಯ ಮುಂದೆ ದೊಡ್ಡದಾದ ಬೆಂಕಿಯನ್ನು ಹಾಕಿ, ಆ ಬೆಂಕಿಯ ಮೇಲೆ ತಮ್ಮ ಹಸುಗಳನ್ನು ಹಾರಿಸುತ್ತಾರೆ. ಈ ರೀತಿಯಾಗಿ ಕಿಚ್ಚು ಹಾಯಿಸುವುದನ್ನು ನೋಡಲೆಂದೇ, ಊರಿನ ಹಿರಿ ಕಿರಿಯರೆಲ್ಲಾ ಸಂಭ್ರಮ ಸಡಗರದಿಂದ ವರ್ಷವಿಡೀ ಕಾಯುತ್ತಿರುತ್ತಾರೆ, ಈ ರೀತಿಯಾಗಿ ಕಿಚ್ಚಾಯಿಸುವುದರಿಂದ ಆ ಹಸುಗಳ ಮೇಲಿರಬಹುದಾದ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿಕೀಟಗಳು ಬೆಂಕಿಯ ಶಾಖಕ್ಕೆ ನಾಶವಾಗುತ್ತದೆ ಎನ್ನುವುದು ಇದರ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವೂ ಇದೆ ಈ ರೀತಿಯಾಗಿ ಕರ್ನಾಟಕ ಮತ್ತು ಆಂದ್ರ ಪ್ರದೇಶಗಳಲ್ಲಿ ಆಚರಿಸುತ್ತಾರೆ.

sank2

ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂಬ ಹೆಸರಿನಿಂದ ಸಂಭ್ರಮದಿಂದ ಹಬ್ಬದ ಹಿಂದಿನ ದಿನ ಭೋಗಿ ಎಂಬ ಹೆಸರಿನಲ್ಲಿ ಮನೆಯಲ್ಲಿದ್ದ ಎಲ್ಲಾ ಕಸಕಡ್ಡಿಗಳನ್ನು ಮನೆಯ ಮುಂದೆ ಹಾಕಿ ಅದಕ್ಕೆ ಬೆಂಕಿ ಇಟ್ಟು ಮನೆಯ ಸುತ್ತಮುತ್ತ ಸ್ವಚ್ಚಗೊಳಿಸುತ್ತಾರೆ ಹಬ್ಬದ ದಿನವನ್ನು ಪೊಂಗಲ್ ಎಂಬ ಹೆಸರಿನಲ್ಲಿ ಸಮೃದ್ಧಿಯ ಸಂಕೇತವಾಗಿ ಹಾಲಿನ ಜೊತೆಗೆ ಬೆಲ್ಲ ಸೇರಿಸಿ ಕುದಿಸಿ ಉಕ್ಕಿಸಲಾಗುತ್ತದೆ ಮತ್ತು ಹಬ್ಬದ ಮಾರನೆಯ ದಿನ ಮಾಟ್ಟು ಪೊಂಗಲ್ ಎಂಬ ಹೆಸರಿನಲ್ಲಿ ಗೋಪೂಜೆ ಮಾಡುತ್ತಾರೆ

ಹಲವಾರು ಕಡೆ ಬಾರಿ ಅಪಾಯಕಾರಿ ಮತ್ತು ಸಾಹಸಮಯವಾದ ಜಲ್ಲಿಕಟ್ಟು ಎಂಬ ಹೆಸರಿನಲ್ಲಿ ಗೂಳಿಯನ್ನು ಪಳಗಿಸುವ ಆಟವಾಡಿಸುತ್ತಾರೆ. ಈ ಆಟವಾಡುವಾಗ, ಪ್ರಾಣಿ ಹಿಂಸೆಯಾಗುವುದಲ್ಲದೇ ಜನರಿಗೂ ಗಾಯವಾಗುವ ಕಾರಣ ಕೆಲಕಾಲ ಇದನ್ನು ನಿಷೇಧಿಸಲಾಗಿದ್ದರೂ ಈಗ ಸಾಂಕೇತಿಕವಾಗಿ ಆಚರಿಸಲು ನ್ಯಾಯಾಲಯಗಳು ಅನುಮತಿ ನೀಡಿದೆ. ನಾಲ್ಕನೇ ದಿನ ಕಾಣುಮ್ ಪೊಂಗಲ್ ಎಂಬ ಹೆಸರಿನಲ್ಲಿ ರುಚಿ ರುಚಿಯಾದ ಬಗೆ ಬಗೆಯ ಭಕ್ಷ ಭೋಜನಗಳನ್ನು ತಯಾರಿಸಿ ಮನೆಮಂದಿಯೆಲ್ಲಾ ಸೇವಿಸಿ ಸಂಭ್ರಮಿಸುತ್ತಾರೆ.

jyothi

ಕೇರಳದ ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿಯಂದು ಸಂಜೆ ಕಾಣುವ ಮಕರಜ್ಯೋತಿಯನ್ನು ಕಣ್ತುಂಬ ನೋಡಲು ದೇಶಾದ್ಯಂತ ಮಾಲೆ ಧರಿಸಿದ ಅಯ್ಯಪ್ಪ ವ್ರತಾಧಾರಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಶಬರಿಮಲೆಗೆ ಆಗಮಿಸುತ್ತಾರೆ. ಸಂಜೆ ಮಕರಜ್ಯೋತಿಯ ನಂತರ ಕೇರಳಾದ್ಯಂತ ಎಲ್ಲಾ ಆಸ್ತಿಕ ಬಂಧುಗಳ ಮನೆಯಲ್ಲಿ ನಂದಾದೀಪವನ್ನು ಬೆಳಗಿ ಸೂರ್ಯನು ಪಥವನ್ನು ಬದಲಿಸುವ ಸಮಯ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತಾರೆ.

kite.jpeg

ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನವನ್ನು ಗಾಳಿಪಟದ ಹಬ್ಬವನ್ನಾಗಿ ಆಚರಿಸುತ್ತಾರೆ. ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ , ಕರ್ನಾಟಕದಂತೆಯೇ ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ ( ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾನಾಡೋಣ) ಎಂದು ಹೇಳುತ್ತಾ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದೆ.

ಈ ರೀತಿಯಾಗಿ ನಮ್ಮ ಹಿರಿಯರು ರೂಢಿಗೆ ತಂದ ಪ್ರತಿಯೊಂದು ಹಬ್ಬಗಳಲ್ಲಿಯೂ ಸಾಮಾಜಿಕ ಸಾಮರಸ್ಯದ ಜೊತೆಗೆ, ಪ್ರಾಕೃತಿಕವಾಗಿಯೋ, ಸ್ಥಳೀಯ ಐತಿಹಾಸಿಕವಾಗಿಯೋ,ಇಲ್ಲವೇ ಪೌರಾಣಿಕವಾಗಿಯೋ ಮತ್ತು ವೈಜ್ಞಾನಿಕವಾಗಿ ಮಹತ್ವ ಪಡೆದಿರುತ್ತವೆ. ಆದರೆ ವಿಪರೀತವಾದ ಪಾಶ್ಚಾತ್ಯ ಅಂಧಾನುಕರಣೆ ಮತ್ತು ನಮ್ಮ ಹಬ್ಬಗಳ ವೈಚಾರಿಕತೆಯ ಬಗ್ಗೆ ಸರಿಯಾದ ತಿಳುವಳಿಕೆ ನಮ್ಮ ಇಂದಿನ ಯುವಜನತೆಗೆ ಇಲ್ಲದ ಕಾರಣ ಹಬ್ಬಗಳ ಸಡಗರ ಸಂಭ್ರಮ ಆಚರಣೆ ಹಿಂದಿನಂತೆ ಇಲ್ಲದಿರುವುದು ತುಸು ಬೇಸರದ ಸಂಗತಿಯಾದರೂ, ಮನೆಯ ಹಿರಿಯರು ಪರಂಪರಾಗತವಾಗಿ ರೂಡಿಯಲ್ಲಿರುವ ಆಚರಣೆಗಳನ್ನು ಮತ್ತದರ ಹಿಂದಿರುವ ಮಹತ್ವಗಳನ್ನು ತಿಳಿಸುವ ಮೂಲಕ ಮತ್ತೊಮ್ಮೆ ಗತವೈಭವವನ್ನು ಮರಳಿ ತರಬಹುದಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ