ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ನೆನಪಿಸಿದ ಕೂರೋನಾ

ಕೊರೋನಾ ಬಂದು ಇಡೀ ಪ್ರಪಂಚವೇ ಕಳೆದು ಒಂದೂವರೆ ವರ್ಷಗಳಿಂದ ಲಾಕ್ಡೌನ್ ಆಗಿರುವಾಗ ಅರೇ ಇದೇನಪ್ಪಾ ಇಂತಹ ಶೀರ್ಷಿಕೆ ಎಂದು ಆಶ್ಚರ್ಯ ಪಡುತ್ತಿದ್ದರೆ ನಿಮಗೊಂದು ಅಚ್ಚರಿಯ ಸಂಗತಿಗಳೊಂದಿಗೆ ನಿಮಗೆ ಸಾದರ ಪಡಿಸುವ ಸಣ್ಣದಾದ ಪ್ರಯತ್ನ

ಕೊರೋನಾ ವಕ್ಕರಿಸುವುದಕ್ಕಿಂತಲೂ ಮುಂಚೆ, ಎಲ್ಲರ ಮನೆಗಳಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಸಮಾರಂಭಗಳೂ ಸಹಾ ಬಹಳ ಅದ್ದೂರಿಯಿಂದ ನೂರಾರು ಜನರ ಸಮ್ಮುಖದಲ್ಲಿ ನಡೆಯುತ್ತಿತ್ತು. ಇನ್ನೂ ಮದುವೆ ಮುಂಜಿ ಉಪನಯನಗಳಲ್ಲಂತೂ ಸಾವಿರಾರು ಜನರನ್ನು ಸೇರಿಸಿ ನಭೂತೋ ನ ಭವಿಷ್ಯತಿ ಎನ್ನುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಜಾಂ ಜಾಂ ಎಂದು ನಡೆಸುತ್ತಿದ್ದರು. ನಿಜ ಹೇಳಬೇಕೆಂದರೆ ಈ ಎಲ್ಲಾ ಸಮಾರಂಭಗಳಲ್ಲಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಆತ್ಮೀಯತೆಗಿಂತ ಅಬ್ಬರದ ಆಡಂಬರವೇ ಪ್ರಾಧಾನ್ಯವಾಗಿ ಕಾರ್ಯಕ್ರಮಕ್ಕೆ ಬಂದಿರುವವರನ್ನು ಸರಿಯಾಗಿ ಯಾರೂ ವಿಚಾರಿಸಿಕೊಳ್ಳದೇ, ಬಂದವರು ಬಂದರು ಹೋದವರು ಹೋದರು ಎನ್ನುವಂತೆ ಹೊಟ್ಟೆ ಭರ್ತಿ ಉಂಡು ಲೋಕಾರೂಢಿಯಾಗಿ ಉಡುಗೊರೆಯೊಂದನ್ನು ಕೊಟ್ಟು ಫೋಟೋ ಇಲ್ಲವೇ ವೀಡಿಯೋ ತೆಗೆಸಿಕೊಳ್ಳುವುದಕ್ಕೆ ಮಾತ್ರವೇ ಸೀಮಿತವಾಗಿ ಹೋಗಿದ್ದದ್ದು ವಿಪರ್ಯಾಸವಾಗಿತ್ತು.

ಯಾವಾಗ ಕೊರೋನ ವಕ್ಕರಿಸಿ ಕೊಂಡಿತೋ, ಅದನ್ನು ತಡೆಗಟ್ಟುವುದಕ್ಕೆ ಮಾಸ್ಕ್ ಧರಿಸುವುದು, ಶುಚಿತ್ವ ಕಾಪಾಡಿ ಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದೊಂದೇ ಸೂಕ್ತವಾದ ಮಾರ್ಗ ಎಂದು ತಿಳಿಯುತ್ತಿದ್ದಂತೆಯೇ, ಸರ್ಕಾರವು ಎಲ್ಲಾ ಸಭೆ ಸಮಾರಂಭಗಳಿಗೆ ಅಂಕುಶವನ್ನು ಹಾಕಿದ್ದಲ್ಲದೇ, ಮೂವತ್ತು ನಲವತ್ತು ಜನರಿಗಷ್ಟೇ ಸೀಮಿತಗೊಳಿಸಿತು. ಆರಂಭದಲ್ಲಿ ಸರ್ಕಾರದ ಈ ನಿಯಮ ಅನೇಕರಿಗೆ ಕೋಪ ತರಿಸಿದರೂ ನಂತರದ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರದ ನಿಯಮಗಳು ಸೂಕ್ತ ಎನಿಸಿ ಅದಕ್ಕೆ ತಕ್ಕಂತೆ ಅನುಸರಿಸಿದ್ದು ಮೆಚ್ಚಿಗೆಯ ವಿಷಯವಾಗಿತ್ತು.

ನಮ್ಮ ಕುಟುಂಬದಲ್ಲೂ ಇದಕ್ಕೆ ಹೊರತಾಗಿರಲಿಲ್ಲ. ನಮ್ಮ ತಂದೆ ತಾಯಿಯರ ಶ್ರಾದ್ಧ ಕಾರ್ಯಕ್ಕೆ ಸುಮಾರೂ ಐವತ್ತು ಅರವತ್ತು ಜನರು ಸೇರುವುದು ಸಹಜ ಪ್ರಕ್ರಿಯೆಯಾಗಿತ್ತು. ಈ ಕೊರೋನಾದಿಂದಾಗಿ ಶ್ರಾದ್ಧ ಕಾರ್ಯಗಳನ್ನು ಮಾಡಿಸಲು ಪೌರೋಹಿತರು ಮತ್ತು ಅಡುಗೆಯವರು ಸಿಗದೇ ಹೋದಂತಹ ಪರಿಸ್ಥಿತಿಯ ಜೊತೆಗೆ ಕುಟುಂಬದವರು ಕೊರೋನಾ ನೆಪದಿಂದ ಬರಲು ಹಿಂದೇಟು ಹಾಕಿದಾಗ ವಿಧಿ ಇಲ್ಲದೇ ಮನೆಯ ಮಟ್ಟಿಗೆ ಶ್ರದ್ಧೆಯಿಂದ ಶ್ರಾದ್ಧವನ್ನು ಮಾಡಿ ಪಿತೃಕಾರ್ಯವನ್ನು ಮುಗಿಸಿದ್ದೆವು.

ವರ್ಷದ ಹಿಂದೆಯೇ ತಂಗಿಯ ಮಗಳಿಗೆ ಸಂಬಂಧ ಗೊತ್ತಾಗಿದ್ದರೂ ಕೊರೋನಾದಿಂದಾಗಿ ನಿಶ್ಚಿತಾರ್ಥ ಮತ್ತು ಮದುವೆಯನ್ನು ಮುಂದೂಡುತ್ತಲೇ ಬಂದು ಕಡೆಗೆ ಕಳೆದ ಅಕ್ಟೋಬರ್ ಸಮಯದಲ್ಲಿ ಕೊರೋನಾ ಸ್ವಲ್ಪ ಕಡಿಮೆಯಾದಾಗ ಸರ್ಕಾರೀ ನಿಯಮದಂತೆಯೇ, ಕೇವಲ ಮೂವತ್ತು ಜನರ ಸಮ್ಮುಖದಲ್ಲಿಯೇ ನಿಶ್ಚಿತಾರ್ಥ ನಡೆಸಿದಾಗ, ಮನೆಯ ಅನೇಕ ಹಿರಿಯರು ನೀವೆಲ್ಲಾ ದೊಡ್ಡವರಾಗಿ ಬಿಟ್ರೀ. ನಮ್ಮನ್ನೆಲ್ಲಾ ಕರೆಯದೇ ನಿಮ್ಮ ಪಾಡಿಗೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿಯೂ ಆಗಿತ್ತು. ಆನಂತರ ಅವರಿಗೆ ಕಾರ್ಯಕ್ರಮದ ವೀಡೀಯೋ ಮತ್ತು ಪೋಟೋಗಳನ್ನು ತೋರಿಸಿ ಕೇವಲ ಮನೆಯ ಮಟ್ಟಿಗೆ ಮಾಡಿಕೊಂಡಿದ್ದೇವೆ ಎಂದು ಸಮಾಧಾನ ಪಡಿಸುವುದರಲ್ಲಿ ಸಾಕು ಸಾಕಾಗಿ ಹೋಗಿತ್ತು.

ಮದುವೆಯನ್ನಾದರೂ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗೇ ಮಾಡೋಣ ಎಂದು ತೀರ್ಮಾನಿಸಿ ಅದಕ್ಕೆ ತಕ್ಕಂತೆ ಛತ್ರ, ಪುರೋಹಿತರು, ಅಡುಗೆಯವರು, ಪೋಟೋ, ಓಲಕ, ಹೀಗೆ ಎಲ್ಲರನ್ನೂ ಸಂಪರ್ಕಿಸಿ ಎಲ್ಲರಿಗೂ ಮುಂಗಡವನ್ನು ಕೊಟ್ಟು ಒಪ್ಪಿಸಲಾಗಿತ್ತು. ದುರಾದೃಷ್ಟವಶಾತ್ ಮತ್ತೆ ಕೊರೋನಾ ಎರಡನೇ ಅಲೇ ಮಿತಿ ಮೀರೀ ಹರಡಿ ಅನೇಕ ಹತ್ತಿರದ ಬಂಧು ಮಿತ್ರರನ್ನೇ ಆಹುತಿ ತೆಗೆದುಕೊಂಡಾಗ ಸರ್ಕಾರವೂ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ಡೌನ್ ಮತ್ತೊಮ್ಮೆ ಘೋಷಿಸಿದ್ದಲ್ಲದೇ ಮತ್ತೆ ಮದುವೆ ಮುಂಜಿ ಮತ್ತು ಸಮಾರಂಭಳಿಗೆ ಜನರ ಮಿತಿಯನ್ನು ಹೇರಿದಾಗ ಮತ್ತೊಮ್ಮೆ ಕುಟುಂಬದಲ್ಲಿ ಆತಂಕದ ಛಾಯೆ. ಮದುವೆಗೆ ಇನ್ನೇನು ಹತ್ತು ದಿನಗಳವರೆಗೂ ಎಲ್ಲವೂ ಅಯೋಮಯವಾಗಿತ್ತು. ಕಡೆಗೆ ಛತ್ರದವರು ಫೋನ್ ಮಾಡಿ ಸರ್ಕಾರದ ಆಜ್ಞೆಯ ಅನುಸಾರವಾಗಿ ನಿಮ್ಮ ಮದುವೆಗೆ ನಮ್ಮ ಛತ್ರ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ ಆದರೂ ಮನೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದಾಗ ಕೊಂಚ ನಿರಾಳ.

ಮತ್ತೆ ಪುರೋಹಿತರು, ಪೋಟೋದವರಿಗೆ, ಹೂವಿನವರಿಗೆ, ಅಡುಗೆಯವರಿಗೆ, ಅಲಂಕಾರ ಮಾಡುವವರಿಗೆ ಎಲ್ಲರೀಗೂ ಮನೆಯಲ್ಲಿಯೇ ಮನೆಮಟ್ಟಿಗೆ ಮದುವೆ ಮಾಡುತ್ತಿರುವ ವಿಷಯವನ್ನು ತಿಳಿಸಿ ಮತ್ತೊಮ್ಮೆ ಬಂಧು ಮಿತ್ರರಿಗೆಲ್ಲರಿಗೂ ಅನಿವಾರ್ಯ ಕಾರಣಗಳಿಂದಾಗಿ ಮದುವೆಯನ್ನು ಮನೆಯ ಮಟ್ಟಿಗೆ ಮನೆಯಲ್ಲೇ ಮಾಡುತ್ತಿರುವ ವಿಷಯವನ್ನು ತಿಳಿಸುವುದಕ್ಕೂ ಕೊಂಚ ನಿರಾಸೆಯಾದರೂ, ವಿಧಿ ಇಲ್ಲದೇ ಎಲ್ಲರಿಗೂ ವಿಷಯವನ್ನು ತಿಳಿಸಿ, ಅದರ ಜೊತೆಗೆ ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲರು ಅವರವರ ಮನೆಗಳಲ್ಲಿಯೇ ಕುಳಿತುಕೊಂಡು ಮದುವೆಯ ನೇರಪ್ರಸಾರ (Live) ನೋಡುವ ಸೌಲಭ್ಯವನ್ನು ಕಲ್ಪಿಸಿರುವುದನ್ನು ತಿಳಿಸಿಯಾಗಿತ್ತು. ಸ್ಥಳೀಯ ಬಿಬಿಎಂಪಿ ಕಛೇರಿಗೆ ಹೋಗಿ ಐದಾರು ಗಂಟೆಗಳ ಕಾಲ ವ್ಯಯಿಸಿ ಮದುವೆಗೆ ಬೇಕಾಗಿದ್ದ ಎಲ್ಲಾ ಅನುಪತಿ ಪತ್ರಗಳನ್ನು ಪಡೆದು ಅದರ ನಕಲನ್ನು ಹತ್ತಿರದ ಪೋಲೀಸ್ ಠಾಣೆಗೆ ತಲುಪಿಸಿದಾಗಲೇ ಮದುವೆ ಹೆಣ್ಣಿನ ಅಪ್ಪನಿಗೆ ಒಂದು ರೀತಿಯ ನಿರಾಳ.

ಮನೆಯಲ್ಲಿಯೇ ಮದುವೆಯಾಗಿದ್ದರಿಂದ ಸಾಂಗೋಪಾಂಗವಾಗಿ ಯಾವುದೇ ಶಾಸ್ತ್ರ ಸಂಪ್ರದಾಯಗಳಿಗೆ ಲೋಪವಾಗಂತೆ ಐದು ದಿನಗಳ ಮದುವೆಯ ಕಾರ್ಯ ಶುರುವಾಗಿತ್ತು. ಮನೆಯ ಹೆಣ್ಣು ಮಕ್ಕಳಿಗಂತೂ ಐದು ದಿನಗಳ ಮದುವೆಯ ಸಂಭ್ರಮ ನಿಜಕ್ಕೂ ಕೌತುಕವನ್ನು ಹೆಚ್ಚಿಸಿತ್ತು, ಗುರುವಾರ ಶಾಸ್ತ್ರ ಎಂದಿಲ್ಲದಿದ್ದರೂ, ಇಂದಿನ ರೂಢಿಯಂತೆ ಮದರಂಗಿ ಹಚ್ಚುವವರನ್ನು ಮನೆಗೇ ಕರೆಸಿ ಮನೆಯ ಹೆಣ್ಣು ಮಕ್ಕಳಿಗೆಲ್ಲರಿಗೂ ಎರಡೂ ಕೈಗಳಿಗೂ ಮದರಂಗಿ ಹಚ್ಚಿಸಿದ್ದ ಕಾರಣ ಅವರ ಊಟೋಪಚಾರಗಳೆಲ್ಲವೂ ಮನೆಯ ಗಂಡುಮಕ್ಕಳದ್ದೇ ಆಗಿತ್ತು. ಐದಾರು ಗಂಟೆಗಳ ನಂತರ ಅವರ ಕೈಗಳಲ್ಲಿ ಕೆಂಪಗೆ ಅರಳಿದ್ದ ಮದರಂಗಿಯ ಬಣ್ಣ ನೋಡಿ ಅವರ ಮುಖಾರವಿಂದಗಳು ಅರಳಿದ್ದನ್ನು ಹೇಳುವುದಕ್ಕಿಂತಲೂ ನೋಡಿದ್ದರೇ ಚೆನ್ನಾಗಿರುತ್ತಿತ್ತು.

ಎರಡನೆಯ ದಿನ ಚಪ್ಪರದ ಪೂಜೆ, ಹಿರಿಯರಿಗೆ ಪಾದ ಪೂಜೆ ಮಾಡಿ ಅವರ ಆಶೀರ್ವಾದ ಪಡೆದು, ನಾಂದಿ ಹೋಮದಲ್ಲಿ ಗಣಪತಿ ಮತ್ತು ನವಗ್ರಹಗಳನ್ನು ಸಂಪ್ರಿತಗೊಳಿಸಿ ಮದುವೆ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುವಂತೆ ಕೋರಿ, ಬಂದಿದ್ದ ಮುತ್ತೈದೆಯರ ಕಾಲು ತೊಳೆದು, ಕೈ ತುಂಬಾ ಅರಿಶಿನ ಕೊಟ್ಟು ಬಳೆ ತೊಡಿಸಿ ನಾನಾವಿಧದ ಪಲಪುಷ್ಪಗಳೊಂದಿಗೆ ಹೂವಿಳ್ಯವೆಲ್ಲವೂ ಶಾಸ್ತ್ರೋಕ್ತವಾಗಿ ವಿಧಿವತ್ತಾಗಿ ನಡೆದು ಇಂದಿನ ಕಾಲಕ್ಕೆ ಅನುಗುಣವಾಗಿ ಬೀಸೋಕಲ್ಲು, ಒನಕೆ ಎಲ್ಲವಕ್ಕೂ ಪೂಜೆ ಮಾಡಿ ಶಾಸ್ತ್ರಕ್ಕಾಗಿ ಅರಿಶಿನ ಕುಟ್ಟಿಸಿದಾಗ ಅಧಿಕೃತವಾಗಿ ಮದುವೆಯ ಕಾರ್ಯ ಆರಂಭವಾಗಿತ್ತು.

ಮೂರನೇ ದಿನದ ಸಂಜೆ ವರಪೂಜೆಯಾದರೂ ಬೆಳಗಿನಿಂದಲೇ ಮನೆಯಲ್ಲಿ ಸಂಭ್ರಮ. ಗಂಡಸರು ಹೂವು ಮತ್ತಿತರ ಸಾಮಗ್ರಿಗಳನ್ನು ತರಲು ಹೊರಗೆ ಹೊದರೆ, ಮನೆಯಲ್ಲಿದ್ದ ಹೆಣ್ಣುಮಕ್ಕಳು ಮದುವೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಮಧ್ಯಾಹ್ನವಾಗಿ ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಮನೆಯಲ್ಲಿದ್ದ ಹತ್ತು ಹದಿನೈದು ಜನರಿಗೆ ತಟ್ಟೆಯಲ್ಲಿ ಊಟಬಡಿಸಿ ಆ ತಟ್ಟೆಗಳನ್ನೆಲ್ಲಾ ತೊಳೆಯುವವರು ಯಾರು ಎಂದು ಅಲ್ಲರನ್ನೂ ಅರ್ಧ ಚಕ್ರಾಕಾರದಲ್ಲಿ ಕುಳ್ಳರಿಸಿಕೊಂಡು ಮನೆಯ ಹಿರಿಯ ತಾಯಿ ಕೈ ತುತ್ತು ಹಾಕುತ್ತಿದ್ದರೆ, ತಾಮುಂದು ನಾಮುಂದು ಎಂದು ಹತ್ತು ಹದಿನೈದು ನಿಮಿಷಗಳಲ್ಲಿ ಎಲ್ಲರ ಹೊಟ್ಟೆ ತುಂಬಿಹೋಗಿದ್ದೇ ಗೊತ್ತಾಗಲಿಲ್ಲ.

ಸಂಜೆ ಗಂಡಿನ ಮನೆಯವರು ಬರುವಹೊತ್ತಿಗೆ ಎಲ್ಲಾ ಹೆಣ್ಣುಮಕ್ಕಳು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಯಥಾಶಕ್ತಿ ಸೌಂದರ್ಯವರ್ಧಕಗಳನ್ನು ಧರಿಸಿ ಆಕಾಶದಲ್ಲಿದ್ದ ನಕ್ಷತ್ರಗಳೆಲ್ಲಾ ಒಟ್ಟಿಗೆ ಭೂಮಿಗೆ ಇಳಿದು ಬಿಟ್ಟಿದ್ದಾರೇನೋ ಎನ್ನುವಂತೆ ಕಂಗಳಿಸುತ್ತಿದ್ದರು ಎಂದರೂ ಉತ್ರ್ಪೇಕ್ಶೆಯೇನಲ್ಲ.

ಬೀಗರ ಮನೆಯವರು ಆಗಮಿಸುತ್ತಿದ್ದಂತೆಯ ಮನೆಯ ಹೆಣ್ಣು ಮಕ್ಕಳು ಆರತಿ ಬೆಳಗಿದರೆ, ಮನೆಯ ಹಿರಿಯರು ಎಲ್ಲರಿಗೂ ಸಂಬಂಧಮಾಲೆ ಹಾಕಿ ಸ್ವಾಗತಿಸಿದರು, ಗಂಡು ಮಕ್ಕಳು ಬೀಗರ ಮೆನೆಯವರು ತಂದಿದ್ದ ಸಾಮಾನುಗಳನ್ನೆಲ್ಲಾ ಅಚ್ಚುಕಟ್ಟಾಗಿ ಅವರ ಕೋಣೆಗೆ ತಲುಪಿಸಿ ಎಲ್ಲರನ್ನು ತಿಂಡಿಗೆ ಕೂರಿಸುವ ಹೊತ್ತಿನಲ್ಲಿ ಸೂರ್ಯ ಮುಳುಗಿ ಚಂದ್ರ ವರಪೂಜೆಯಲ್ಲಿ ನವ ದಂಪತಿಗಳನ್ನು ನೋಡಲು ಬಂದಿದ್ದ. ಗಂಡು ಮತ್ತು ಹೆಣ್ಣಿನ ಮನೆ ಎರಡೂ ಕಡೆ ಸೇರಿಸಿದರು ಸಂಖ್ಯೆ 40 ಮೀರದೇ ಹೋದದ್ದು ಹೆಣ್ಣಿನ ತಂದೆಗೆ ಕೊಂಚ ನಿರಾಳ. ಎಂಕಾ ನಾಣಿ ಸೀನ ಎಂದು ಮೂರು ಮತ್ತೊಂದು ಜನರು ಇದ್ದ ಕಾರಣ, ಕೆಲವೇ ಕೆಲವು ನಿಮಿಷಗಳಲ್ಲಿ ಎಲ್ಲರಿಗೂ ಅವರವರ ಪರಿಚಯವಾಗಿ ವರಪೂಜೆಯ ಕಾರ್ಯಕ್ರಮಗಳೆಲ್ಲವೂ ನಿರ್ವಿಘ್ನವಾಗಿ ನಡೆದು ರಾತ್ರಿ ಹೋಳಿಗೆ ಊಟ ಮುಗಿಯುತ್ತಿದ್ದಂತೆಯೇ ಬಂದವರಿಗೆ ಹಾಸಿಗೆ ಹೊದಿಕೆಯನ್ನು ಹೊಂದಿಸಿಯಾಗಿತ್ತು.

ನಾಲ್ಕನೇಯ ದಿನ ಧಾರೆಯ ದಿನ ಬೆಳಿಗ್ಗೆಯೇ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ, ಎಲ್ಲರೂ ಅವರವರಿಗೆ ಒಪ್ಪಿಸಿದ್ದ ಕಾರ್ಯಗಳನ್ನೆಲ್ಲಾ ಮುಗಿಸುವಷ್ಟರಲ್ಲಿ ಗಂಟೆ ಎಂಟಾಗಿತ್ತು. ಒಂದು ಸಾರಿ ಕಾಫಿ ಕುಡಿದ ನಂತರ ಹೆಣ್ಣು ಮಕ್ಕಳೆಲ್ಲಾ ಪುರೋಹಿತರ ಆಣತಿಯಂತೆ ಹಸೆಹಾಕಿ ಹಸೇಮಣೆಯನ್ನು ಇಟ್ಟು ಎಲ್ಲಾ ಅಲಂಕಾರಗಳನ್ನು ಮಾಡುತ್ತಿದ್ದರೆ, ಗಂಡಸರು ಹಿಂದಿನ ದಿನ ಹಿಡಿದಿಟ್ಟಿದ್ದ ನೀರೇಲ್ಲಾ ಖಾಲಿಯಾಗಿದ್ದನ್ನು ನೋಡಿ ಮತ್ತೆ ನೀರು ತುಂಬಿಸುವಷ್ಟರಲ್ಲಿ ಬಿಸಿ ಬಿಸಿ ತಿಂಡಿ ಸಿದ್ಧವಾಗಿತ್ತು. ಒಂದು ಕಡೆ ತಿಂಡಿ ತಿನ್ನುತ್ತಿದ್ದರೆ ಮತ್ತೊಂದು ಕಡೆ ಕಾಶೀ ಯಾತ್ರೆಗೆ ವರ ಸಿದ್ಧಾನಾಗಿ ಹೊರಟಾಗಿತ್ತು. ಅರರರೇ.. ಕಾಶೀಯಾತ್ರೆಗೆ ಒಬ್ಬಂಟಿಯಾಗಿ ಹೋಗುವುದು ಸರಿಯಲ್ಲ. ಹಾಗಾಗಿ ನಿಮ್ಮೊಂದಿಗೆ ನನ್ನ ಮಗಳನ್ನು ಕಲ್ಯಾಣ ಮಾಡಿಕೊಡುತ್ತೇನೆ. ಇಬ್ಬರೂ ನೆಮ್ಮದಿಯಾಗಿ ಕಾಶೀ ಯಾತ್ರೆ ಮುಗಿಸಿಕೊಂಡು ಬನ್ನಿ ಎಂದು ವಧುವಿನ ತಂದೆ ವರನ ಕಾಲು ತೊಳೆದು ಕೇಳಿಕೊಂಡರೆ ಹುಡುಗಿಯ ಸಹೋದರ ಭಾವನ ಕಾಲುಗಳಿಗೆ ಚಪ್ಪಲಿ ತೋಡಿಸಿ, ಛತ್ರಿ ಹಿಡಿದು ಹಸೆ ಮಣೇಗೆ ಕರೆದು ತರುವಷ್ಟರಲ್ಲಿ ಅಂತರಪಟ ಹಿಡಿದಾಗಿತ್ತು. ಹುಡುಗಿಯ ಸೋದರ ಮಾವ, ಸಕ್ಕರೆಯಂತೆ ಅಲಂಕಾರ ಮಾಡಿಕೊಂಡು ಸಿದ್ಧವಾಗಿದ್ದ ತನ್ನ ಸೊಸೆಯನ್ನು ಅಕ್ಕರೆಯಿಂದ ಎತ್ತುಕೊಂಡು ಹಸೆಯಣೆಯ ಮೇಲೆ ನಿಲ್ಲಿಸಿ ಜೀರಿಗೆ ಧಾರಣೆ ಮಾಡಿಸಿ, ಮಾಂಗಲ್ಯವನ್ನು ಬಂದಿದ್ದವರೆಲ್ಲರ ಕೈಗೆ ಮುಟ್ಟಿಸಿ ತನ್ನ ಸೊಸೆಯ ಮಾಂಗಲ್ಯಭಾಗ್ಯ ನೂರ್ಕಾಲ ಗಟ್ಟಿಯಾಗಿರಲಿ ಎಂದು ಹರಸಿ ಎಂದು ಕೇಳಿಕೊಂಡು ಮಾಂಗಲ್ಯವನ್ನು ವರನ ಕೈಗೆ ಕೊಡುತ್ತಿದ್ದಂತೆಯೇ ಪುರೋಹಿತರ ಗಟ್ಟಿ ಮೇಳಾ ಗಟ್ಟಿಮೇಳಾ ಎನ್ನುತಿದ್ದಂತೆಯೇ, ಮೊಬೈಲಿನಲ್ಲಿಯೇ ನಾದಸ್ವರ ಜೋರಾದರೆ, ಮಾಂಗಲ್ಯಂ ತಂತುನಾನೇನಾ ಮಮ ಜೀವನ ಹೇತುನಾ… ಎಂದು ಪುರೋಹಿತರು ಹೇಳುತ್ತಿದ್ದರೆ, ವರ ಮಧುವಿನ ಕೊರಳಿಗೆ ಮಾಂಗಲ್ಯದ ಮೂರು ಗಂಟು ಹಾಕುತ್ತಿದ್ದರೆ, ಅಲ್ಲಿಯವರೆಗೂ ತಡೆದು ಹಿಡಿದುಕೊಂಡಿದ್ದ ಕಣ್ನೀರ ಧಾರೆ ವಧುವಿನ ತಾಯಿಯ ಕಣ್ಣುಗಳಲ್ಲಿ ಧಾರಾಕಾರವಾಗಿ ಹರಿದು ಅದೇ ಕಣ್ಣಿರಿನಲ್ಲಿಯೇ ಮಗಳನ್ನು ಅಳಿಯನಿಗೆ ಧಾರೆ ಎರೆದು ಕೊಡುತ್ತಿದ್ದಂತೆಯೇ ಮದುವೆಯೂ ಮುಗಿದು ಹೊಗಿತ್ತು. ಸಪ್ತಪದಿ, ಲಾಜಹೋಮಗಳೆಲ್ಲವೂ ಸಾಂಗವಾಗಿ ನಡೆದು, ನಂತರ ಬಂದವರೆಲ್ಲರು ಭೂರೀ ಭೂಜನ ಸವಿದರೆ, ವಧು ವರರು ಜೊತೆಗೊಂದಿಷ್ಟು ಹಿರಿಯರು ಎಲ್ಲರು ಒಟ್ಟಿಗೆ ಭೂಮದ ಊಟಕ್ಕೆ ಕುಳಿತರೆ, ಉಳಿದವರೆಲ್ಲರು ಅದರ ಮಜ ತೆಗೆದುಕೊಳ್ಳಲು ಸುತ್ತುವರೆದಿದ್ದರು. ಅತ್ತೆ ಅಳಿಯನಿಗೆ ಪಾಯಸ ಹಾಕಲು ಬಂದಾಗ ಅಳಿಯ ಅತ್ತೆಯ ಕೈ ಹಿಡಿದು ಚಕ್ಕುಲಿಯನ್ನು ತೊಡಿಸಿದಾಗ ಎಲ್ಲರ ಹರ್ಷೋಧ್ಗಾರ ಮುಗಿಲಿ ಮುಟ್ಟಿತ್ತು. ನಂತರ ವರ ನಯವಾಗಿ ಸಿಹಿತಿಂಡಿಗಳನ್ನು ತಿನ್ನಿಸಿದರೆ, ವಧು ಮಾತ್ರಾ ತನ್ನ ಪತಿಗೆ ಬಗೆ ಬಗೆಯ ಉಂಡೆಗಳು, ಚಕ್ಕುಲಿ ಕೋಡುಬಳೆಯಂತಹ ಬಗೆ ಬಗೆಯ ತಿನಿಸಿಗಳನ್ನು ತಿನ್ನಿಸಿದರೆ, ಅವರ ಜೊತೆಗೆ ಕುಳಿತಿದ್ದ ಹಿರಿಯರೂ ತಮ್ಮ ಮದುವೆಯ ಸಮಯದಲ್ಲಿ ತಾವು ಇದೇ ರೀತಿಯಾಗಿ ತಿನಿಸಿದ್ದದ್ದನ್ನು ಮೆಲುಕು ಹಾಕುತ್ತಾ ಮತ್ತೆ ತಿನಿಸಿದ್ದು ಎಲ್ಲರಿಗೂ ಮೋಜು ತರಿಸಿದ್ದಂತೂ ಸುಳ್ಳಲ್ಲ. ಮತ್ತೆ ಸಂಜೆ ಔಪಚಾರಿಕವಾಗಿ ನಡೆದ ಆರತಕ್ಷತೆಗೆ ಎಲ್ಲರೂ ಮತ್ತೆ ಸಿದ್ಧರಾಗಿ, ಬಂದ ಅಕ್ಕ ಪಕ್ಕದ ಮನೆಯವರ ಜೊತೆ ಫೋಟೋ ತೆಗೆಸಿಕೊಂಡು ಎಲ್ಲರೊಂದಿಗೆ ಬಗೆ ಬಗೆಯ ಸಿಹಿಗಳೊಂದಿಗೆ ಊಟ ಮುಗಿಸಿ ಹಾಸಿಗೆಗೆ ಕಾಲು ಚಾಚಿದ್ದಷ್ಟೇ ನೆನಪಾಗಿ ಮತ್ತೆ ಎಚ್ಚರವಾದಾಗ ಸೂರ್ಯ ತನ್ನ ಆಗಮನವನ್ನು ತಿಳಿಸಿಯಾಗಿತ್ತು.

ಐದನೇ ದಿನ ಲಗುಬಗನೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಸತ್ಯನಾರಾಯಣ ಸ್ವಾಮಿಯ ಪೂಜೆಗೆ ಸಿದ್ಧತೆ ಮಾಡಿಕೊಂಡು ಭಕ್ತಿ ಪೂರ್ವಕವಾಗಿ ವಿಘ್ನವಿನಾಶಕನ ಜೊತೆ, ಮನೆ ದೇವರಿಗೆ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡಿ, ಸತ್ಯನಾರಾಯಣ ಕತೆಯ ಜೊತೆಜೊತೆಯಲ್ಲಿಯೇ ಪೂಜೆಯನ್ನು ಮುಗಿಸಿ ಎಲ್ಲರೂ ಭಕ್ತಿಯಿಂದ ಮಂಗಳಾರತಿ ತೀರ್ಥಪ್ರಸಾದಗಳನ್ನು ಸ್ವೀಕರಿಸಿ, ಬೀಗರ ಔತಣವನ್ನು ಸವಿದು ಫಲತಾಂಬೂಲವನ್ನು ಸ್ವೀಕರಿಸುತ್ತಿದ್ದಂತೆಯೇ ಮಗಳನ್ನು ಕಳುಹಿಸಿಕೊಡುವ ಹೃದಯವಿದ್ರಾವಕ ಪ್ರಸಂಗ ಹೇಳಲಾಗದು. ಮಧುಮಗಳಿಗೆ ಗಂಡನ ಮನೆಗೆ ಹೋಗುವ ಸಂಭ್ರಮದ ಕಡೆ ಇಷ್ಟು ದಿನಗಳ ಕಾಲ ಹುಟ್ಟಿ ಆಡಿ ಬೆಳೆದ ತವರು ಮನೆಯನ್ನು ಬಿಟ್ಟು ಹೊಗಬೇಕಲ್ಲಾ ಎಂಬ ಸಂಕಟವಾದರೇ, ಇಷ್ಟು ದಿನ ತಮ್ಮ ತೋಳಿನಲ್ಲಿ ಆಡಿ ಬೆಳೆದ ಮಗಳನ್ನು ಕಳುಹಿಸಿ ಕೊಡುವ ಸಂಕಟಕ್ಕೆ ಹರಿಯುವ ಕಣ್ಣೀರ ಧಾರೆ ಅಲ್ಲಿದ್ದ ಮಕ್ಕಳಿಗೆ ನಗುಹುಟ್ಟಿಸುವುದಾದರೂ ಮುಂದೆ ಅವರು ಆ ಸಂಧರ್ಭವನ್ನು ಅನುಭವಿಸಬೇಕಾದಗಲೇ ಅದರ ಸಂಕಟದ ಅರಿವಾಗುತ್ತದೆ.

ಬಹುಶಃ ಕೊರೋನಾ ಇಲ್ಲದಿದ್ದರೆ ಛತ್ರದಲ್ಲಿ ಇದೇ ಮದುವೆ ನಡೆದಿದ್ದರೇ, ಯಾವುದೋ ಕೆಲಸದಲ್ಲಿ ತೊಡಗಿಕೊಂಡೋ ಇಲ್ಲವೇ ಛತ್ರದ ಮೂಲೆಯೊಂದರಲ್ಲಿ ಕುಳಿತುಕೊಂಡು ಕಾಡು ಹರಟೆ ಹೊಡೆಯುವುದರಲ್ಲೇ ಕಳೆದು ಹೊಗುತ್ತಿತ್ತು. ಕೊರೋನಾದಿಂದಾಗಿ ಮನೆಯ ಮಟ್ಟಿಗೆ ಮದುವೆ ಮಾಡಬೇಕಾದಾಗ ಪ್ರತಿಯೊಂದನ್ನು ಹತ್ತಿರದಿಂದ ನೋಡುತ್ತಾ ಆ ಸಂಭ್ರಮ ಸಡಗರಗಳಲ್ಲಿ ಪಾಲ್ಗೊಳ್ಳುವ ಸುಯೋಗ ಲಭಿಸಿತು ಎಂದರು ತಪ್ಪಾಗದು.

ಮದುವೆ ಎಂದರೆ ಅದು ಕೇವಲ ಗಂಡು ಮತ್ತು ಹೆಣ್ಣಿನ ಸಂಬಂಧವಲ್ಲ. ಅದು ಕುಟುಂಬ ಕುಟುಂಬಗಳ ನಡುವಿನ ಸಂಬಂಧಕ್ಕೆ ಬೆಸುಗೆಯನ್ನು ಹಾಕುವ ಒಂದು ಸುಂದರ ವಿಧಿ ವಿಧಾನ ಎಂಬುದನ್ನು ಈ ಮೂಲಕ ಕೊರೋನಾ ತಿಳಿಸಿ ಕೊಟ್ಟಿದ್ದಲ್ಲದೇ ಕಾಲ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದರು ಅತಿಶಯವಲ್ಲ. ಇದೇ ಸತ್ ಸಂಪ್ರದಾಯವನ್ನು ಕೊರೋನ ನಂತರವೂ ಮುಂದುವರೆಸಿಕೊಂಡು ಹೋದರೆ ಉತ್ತಮವಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಸಮಸ್ಯೆ ಒಂದು ಪರಿಹಾರ ನೂರು

ಕಳೆದ ಒಂದು ವರ್ಷದಿಂದಲೂ ಕೊರೋನಾ ಮಾಹಾಮಾರಿಯಿಂದಾಗಿ ಇಡೀ ಪ್ರಪಂಚವೇ online ಮೂಲಕ ನಡೆದುಕೊಂಡು ಹೋಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಹಳ್ಳಿಗಾಡುಗಳಲ್ಲಂತೂ ಸ್ವಲ್ಪ ಜೋರಾದ ಗಾಳಿ ಇಲ್ಲವೇ ಮಳೆ ಬಂದಿತೆಂದರೂ ಸಾಕು, ವಿದ್ಯುತ್ ಕಡಿತವಾಗಿ ನೆಟ್ವರ್ಕ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಇಲ್ಲೊಂದು ಗುಡ್ಡಗಾಡಿನ ಹಳ್ಳಿಯ ಹುಡುಗಿ ತನ್ನ ತರಗತಿಗಳು ಆನ್‌ಲೈನ್ ‌ನಲ್ಲಿ ಆರಂಭವಾಗಿದೆ. ಜೋರಾದ ಮಳೆಯಿಂದಾಗಿ ಮನೆಯಲ್ಲಿ ನೆಟ್ವರ್ಕ್ ಇಲ್ಲ. ಅರೇ.. ನೆಟ್ವರ್ಕ್ ಇಲ್ಲಾ ಎಂದು ಗೊಣಗಾಡದೇ ಕೂಡಲೇ, ಅಪ್ಪಾ ಮತ್ತು ತಂಗಿಯ ಜೊತೆ ಮನೆಯ ಸಮೀಪದ ಎತ್ತರದ ಗುಡ್ಡವನ್ನೇರಿದ್ದಾಳೆ. ತಂಗಿ ಕೊಡೆ ಹಿಡಿದ್ದರೆ ಅದಕ್ಕೆ ಅಪ್ಪಾ ಆಧಾರವಾಗಿ ನಿಂತಿದ್ದಾರೆ. ಆ ಹುಡುಗಿ ತನ್ನ ಪಾಡಿಗೆ ತಾನು ಮೊಬೈಲ್ ನಲ್ಲಿ online ಪಾಠ ಕೇಳುತ್ತಿದ್ದಾಳೆ.

ಇದಕ್ಕೇ ಹೇಳೋದು ನೆಟ್ವರ್ಕ್ ಸಮಸ್ಯೆ‌, ವಿದ್ಯುತ್ ಸಮಸ್ಯೆ, ಎಂದು ಹತ್ತಾರು ಜನರನ್ನು ಸೇರಿಸಿ ಭಾರಿ ಪ್ರತಿಭಟನೆ ನಡೆಸಿ ಸರ್ಕಾರ ಸರೀ ಇಲ್ಲಾ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ರಾಜೀನಾಮೆ ನೀಡಬೇಕು ಎನ್ನುವುದರಿಂದ ಸಮಸ್ಯೆಗಳು ಪರಿಹಾರವಾಗದು. ಇಂತಹ ಪ್ರತಿಭಟನೆಗಳಿಂದಾಗಿ ಸಮಯ ಮತ್ತು ಪರಿಶ್ರಮ ಎರಡೂ ನಷ್ಟ. ಮಳೆಗಾಲದಲ್ಲಿ ಎಲ್ಲಾ ಪಕ್ಷಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಮರಗಿಡಗಳ ಆಶ್ರಯ ಪಡೆದರೆ, ಹದ್ದು ಮಾತ್ರಾ ಮಳೆ ಸುರಿಸುವ ಮೋಡಗಳ ಮೇಲೆ ಹಾರುತ್ತಾ ಮಳೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ, ಮಳೆಗಾಲದಲ್ಲಿ ಇಂತಹ ಸಮಸ್ಯೆಗಳೆಲ್ಲವೂ ತಾತ್ಕಾಲಿಕ. ಹಾಗಾಗಿ ಇಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ನಮ್ಮಲ್ಲಿ ಛಲ ಮೂಡಿ, ನಾವೇ ಒಂದು ಹೆಜ್ಜೆ ಮುಂದಾಲೋಚನೆ ಮಾಡಿದಲ್ಲಿ ಸಮಸ್ಯೆಯೂ ಬಗೆಹರಿಯುತ್ತದೆ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ. ನೆಮ್ಮದಿ ಇದ್ದಲ್ಲಿ ಮಾತ್ರವೇ, ತಾಳ್ಮೆ. ತಾಳ್ಮೆ ಇದ್ದಲ್ಲಿ ಮಾತ್ರವೇ ಸಮಸ್ಯೆಗೆ ಪರಿಹಾರ.

ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ನೋಡಿದಾಕ್ಷಣ ನನ್ನ ಮನದಲ್ಲಿ ಮೂಡಿದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಬಹುಶಃ ನಮ್ಮಲನೇಕರಿಗೆ ಇನ್ನೂ ವಿವಿಧ ರೀತಿಯ ಭಾವನೆಗಳು ಮೂಡಬಹುದು. ಭಾವನೆಗಳು ಯಾವುದೇ ಇರಲಿ. ಸಮಸ್ಯೆ ಪರಿಹಾರವಾಗಬೇಕಷ್ಟೇ. ಸಮಸ್ಯೆ ಒಂದೇ ಇದ್ದರೂ ಅದಕ್ಕೆ ನೂರಾರು ಪರಿಹಾರಗಳು ಇರುತ್ತವೆ. ಹಾಗಾಗಿ ಸಮಸ್ಯೆಗಳನ್ನು ಪರಿಹರಿಸುವತ್ತ ಹರಿಸಬೇಕು ನಮ್ಮ ಚಿತ್ತ.

ಏನಂತೀರೀ?
ನಿಮ್ಮವನೇ ಉಮಾಸುತ

ಡಾ. ಸುನೀಲ್ ಕುಮಾರ್ ಹೆಬ್ಬಿ

ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ |

ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋಹರಿಃ||

ಎಂಬ ಶ್ಲೋಕವನ್ನು ಸಾಧಾರಣವಾಗಿ ಎಲ್ಲಾ ದೇವಾಲಯಗಳಲ್ಲಿ ಪುರೋಹಿತರು ತೀರ್ಥ ಕೊಡುವಾಗ ಹೇಳುವುದನ್ನು ಕೇಳಿರುತ್ತೇವೆ. ಇದರ ಅರ್ಥ ಹೀಗಿದೆ. ಶರೀರವು ವ್ಯಾಧಿಗ್ರಸ್ತವೂ ಜರ್ಜರಿತವೂ ಆಗಿ ಕಳೇಬರದಂತಾಗಿ ಹೋದಾಗಾ, ಗಂಗಾ ಜಲವೇ ಔಷಧಿ, ಹರಿ ಅರ್ಥಾತ್ ಶ್ರೀ ಮನ್ನಾರಾಯಣನೇ ವೈದ್ಯನಾಗುತ್ತಾನೆ ಎಂದು ಭಗವಂತನನ್ನು ಹಾಡಿ ಹೊಗಳುವುದೇ ಆಗಿದೆ.

sunil2

ಸದ್ಯದ ಕಲಿಗಾಲದಲ್ಲಿ ಭಗವಂತನನ್ನು ಮರೆತು ಲೌಕಿಕದಲ್ಲೇ ಕಾಲ ಹರಣ ಮಾಡುತ್ತಿರುವವರು ಕಾಯಿಲೆಗೆ ತುತ್ತಾಗಿ ಅವರ ಶರೀರ ಜರ್ಜರಿತವಾಗಿ ಪರಿಸ್ಥಿತಿ ಉಲ್ಬಣಿಸಿದಾಗ, ಸಂಕಟ ಬಂದಾಗ ವೆಂಕಟರಮಣ ಎಂದು ದೈವವನ್ನು ನಂಬುವುದರ ಜೊತೆಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆಯೂ ಅತ್ಯಗತ್ಯವಾಗಿದೆ. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ಇರುವ ಹೈಟೆಕ್ ಆಸ್ಪತ್ರೆಗೆ ಸೇರಿದರೂ ಹುಷಾರಾಗದೇ ಹೋಗಬಹುದು. ಅದೇ ಒಂದು ಸಾಧಾರಣ ಕ್ಲಿನಿಕ್ಕಿನಲ್ಲಿ ಅಥವಾ ಸರ್ಕಾರೀ ಆಸ್ಪತ್ರೆಗೆ ಸೇರಿದರೂ ಉತ್ತಮ ಸೇವಾಮನೋಭಾವವುಳ್ಳ ವೈದ್ಯರಿಂದ ಚಿಕಿತ್ಸೆ ದೊರೆತು ಖಾಯಿಲೆ ಗುಣಮುಖವಾದ ಅನೇಕ ಉದಾಹರಣೆಗಳಿವೆ. ನಾವಿಂದು ಅಂತಹದ್ದೇ ನಿಸ್ವಾರ್ಥ ಸಮಾಜಮುಖೀ ವೈದ್ಯರಾದ‌ ತಮ್ಮ ಮೊಬೈಲ್ ಕ್ಲಿನಿಕ್ ಮುಖಾಂತರವೇ ರಾಜ್ಯ ಮತ್ತು ರಾಷ್ಟ್ರಾದ್ಯಂತ ಪ್ರಖ್ಯಾತರಾಗಿರುವ ಡಾ. ಶ್ರೀ ಸುನೀಲ್ ಕುಮಾರ್ ಹೆಬ್ಬಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೊಳ್ಳೋಣ.

ಮೂಲತಃ ವಿಜಯಪುರದಲ್ಲಿ ಹುಟ್ಟಿ, ಬೆಳೆದ ಶ್ರೀ ಹೆಬ್ಬಿಯವರು, 2008 ರಲ್ಲಿ ತಮ್ಮ ವೈದ್ಯಕೀಯ ಪದವಿ ಮುಗಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಬೆಂಗಳೂರಿನ ಯಾವುದಾದರೂ ನರ್ಸಿಂಗ್ ಹೋಂ ನಲ್ಲಿ ನೌಕರಿ ಸಿಕ್ಕಿದರೆ ಸಾಕು ಎಂದು ಹುಡುಕುತ್ತಿದ್ದಾಗ ಪ್ರಖ್ಯಾತವಾದ ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿ ಸುಮಾರು 3 ವರ್ಷಗಳ ಕಾಲ ಅಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಲ್ಲಿಗೆ ಬರುವ ಎಷ್ಟೋ ರೋಗಿಗಳಿಗೆ ಚಿಕಿತ್ಸೆಗಾಗಿ ದುಬಾರಿ ಹಣವನ್ನು ಕಟ್ಟಲೂ ಅರದಾಡುತ್ತಿರುವುದು ಅವರ ಮನಸ್ಸಿಗೆ ಬಹಳ ಕಸಿವಿಸಿಯನ್ನುಂಟು ಮಾಡುತ್ತಿರುತ್ತದೆ. ದೇಶದ ಪ್ರತಿಯೊಬ್ಬ ನಾಗರೀಕರಿಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಸಿಗುವಂತಾಗಬೇಕು ಎಂಬ ಭಾವನೆ ಅವರಲ್ಲಿ ಮೂಡಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕೆಲವೇ ಸಮಯಲ್ಲಿ ಅಲ್ಲಿನ ಕೆಲಸವು ಯಾಂತ್ರೀಕೃತ ಎನಿಸಿದಾಗ 2011ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ ಶ್ರೀ ಹೆಬ್ಬಿಯವರು ತಮ್ಮನ್ನು ತಾವು ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡುತ್ತಾರೆ.

uni3

ಅದರ ಭಾಗವಾಗಿಯೇ ತಮ್ಮ ಆತ್ಮೀಯರೊಬ್ಬರ ಬಳಿ 2 ಲಕ್ಷದಷ್ಟು ದೇಣಿಗೆ ಪಡೆದು ತಮ್ಮ ಬಳಿ ಇದ್ದ ಕಾರನ್ನೇ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ತಮ್ಮದೇ ಆದ ಮಾತೃ ಸಿರಿ ಫೌಂಡೇಶನ್ ಹೆಸರಿನಲ್ಲಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಮಾಡಲು Dr. On Wheel ಎನ್ನುವ Mobile clinic ಆರಂಭಿಸಿ, ಪ್ರತೀ ದಿನವೂ ರಾಜ್ಯದ ಹಲವಾರು ಕಡೆ ಪ್ರಯಾಣಿಸಿ ಅಗತ್ಯವಿದ್ದವರಿಗೆ ಉಚಿತವಾಗಿ ಚಿಕಿತ್ಸೆ ಕೊಡಲು ಪ್ರಾರಂಭಿಸುತ್ತಾರೆ.

sunil4

ಅಂದು ಸಣ್ಣದಾಗಿ ತಮ್ಮ ಕಾರಿನಲ್ಲಿಯೇ ಆರಂಭಿಸಿದ Mobile clinic ಇಂದು ಸಂಪೂರ್ಣ ಸುಸಜ್ಜಿತವಾದ ಮೊಬೈಲ್ Dr ಕ್ಲಿನಿಕ್ ಮೂಲಕ ಸುಮಾರು 785 ಕ್ಕೂ ಹೆಚ್ಚು ಉಚಿತ ಚಿಕಿತ್ಸಾ ಶಿಬಿರಗಳನ್ನು ನಡೆಸುವ ಮೂಲಕ 85,000 ಕ್ಕೂ ಹೆಚ್ಚು ರೋಗಿಗಳಿಗೆ ಸಂತೃಪ್ತ ಸೇವೆ ಸಲ್ಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಕಾಲದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆತು ಎಲ್ಲರೂ ಆರೋಗ್ಯದಿಂದ ಇರಬೇಕು ಎನ್ನುವ ಅವರ ಅಭಿಪ್ರಾಯವನ್ನು ಸಾಕಾರ ಮಾಡಲೆಂದೇ ಕಟಿ ಬದ್ಧರಾಗಿದ್ದಾರೆ. ಹಾಗಾಗಿಯೇ, ದೇಶದಲ್ಲಿ ಆರೋಗ್ಯ ಹಕ್ಕು ಕಾನೂನು ಜಾರಿಗೆಯಾಗಲೀ ಎಂಬ ಜನ ಜಾಗೃತಿಯನ್ನು ಎಲೆಮರೆ ಕಾಯಿಯಂತೆ ಮೂಡಿಸುತ್ತಾ, ಇದುವರೆಗೆ ಸುಮಾರು 8,000km ರಷ್ಟು ದೂರವನ್ನು ದೇಶಾದ್ಯಂತ ಸಂಚಾರ ಮಾಡಿ ಜನರಲ್ಲಿ ಮೂಡಿಸುವಲ್ಲಿ ಸಫಲರಾಗಿದ್ದಾರೆ.

ಪ್ರಸ್ತುತ ಮಲ್ಲೇಶ್ವರದ ನಿವಾಸಿಯಾಗಿರುವ ಡಾ. ಹೆಬ್ಬಿ ಅವರು, ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಗೋರಿಪಾಳ್ಯದಲ್ಲಿರುವ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರದಲ್ಲಿ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರಲ್ಲದೇ, ಅಲ್ಲಿನ ಕೆಲಸ ಮುಗಿಸಿಕೊಂಡು ಕೇವಲ 2 ಗಂಟೆಗಳ ಕಾಲ ವಿರಾಮ ಪಡೆದುಕೊಂಡು ಮತ್ತೆ ಬೆಳಿಗ್ಗೆ 10 ಗಂಟೆಯಿಂದ ಎಂದಿನಂತೆ ತಮ್ಮ ಮೊಬೈಲ್ ಕಾರ್ ಕ್ಲಿನಿಕ್ ಸೇವೆಗೆ ಸಿದ್ದರಾಗುತ್ತಾರೆ.

ಕೊರೋನಾ ಎಂಬ ಮಹಾಮಾರಿ ಪ್ರಪಂಚಾದ್ಯಂತ ವಕ್ಕರಿಸದ ಮೇಲಂತೂ, ಪ್ರಪಂಚಾದ್ಯಂತ ಪ್ರತಿನಿತ್ಯವೂ ಲಕ್ಷಾಂತರ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು ಸ್ಸೂಕ್ತವದ ಚಿಕಿತ್ಸೆ ದೊರೆಯದೇ ಸಾವನ್ನಪ್ಪುತ್ತಿರುವ ವಿಷಯವನ್ನು ಮನಗಂಡ ಡಾ. ಹೆಬ್ರಿಯವರು, ತಮ್ಮ ಮೊಬೈಲ್ ಕ್ಲಿನಿಕ್ ಮುಖಾಂತರ ಸೋಂಕಿಗೊಳಗಾದ ಬಡವರು ಇರುವಲ್ಲಿಗೇ ಹೋಗಿ ಅವರಿಗೆ ಸಂಪೂರ್ಣ ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವುದು ನಿಜಕ್ಕೂ ಅಮೋಘ. ಅನನ್ಯ ಮತ್ತು ಅನುಕರಣೀಯವೇ ಸರಿ.

suni1

ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾದ ಮೇಲಂತೂ ಹೆಬ್ಬಿಯವರಿಗೆ ವೈದ್ಯಕೀಯ ನೆರವನ್ನು ಕೋರಿ ಅನೇಕ ದೂರವಾಣಿ ಕರೆಗಳು ನಿರಂತರವಾಗಿ ಬರುತ್ತಲೇ ಇವೆ. ಎಲ್ಲಾ ಕರೆಗಳನ್ನೂ ತಾಳ್ಮೆಯಿಂದಲೇ ಸ್ವೀಕರಿಸಿ ಆವರಿಗೆ ಪೋನ್ ಮುಖಾಂತರವೇ ಚಿಕಿತ್ಸೆ ನೀಡುತ್ತಾರೆ. ಕೊರೋನಾ ಆರಂಭಿಕ ಲಕ್ಷಣಗಳಿರುವವರಿಗೆ ಅವರ ಉಸಿರಾಟದ ಆಮ್ಲಜನಕದ ಪ್ರಮಾಣವನ್ನು ಅರಿತುಕೊಂಡು, ಫೋನ್ ಮೂಲಕವೇ ಔಷಧಿಯನ್ನು ಸೂಚಿಸುತ್ತಾರೆ. ಅಕಸ್ಮಾತ್ ಪರಿಸ್ಥಿತಿ ತ್ರೀವ್ರವಾಗಿದೆ ಎಂದಾದಲೇ, ಸ್ವತಃ ಅವರೇ ಸೋಂಕಿತರ ಮನೆಗೆ ಹೋಗಿ ಸೂಕ್ತವಾದ ಚಿಕಿತ್ಸೆ ಕೊಟ್ಟು ಅದಕ್ಕಿಂಲೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಿಯೂ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಸೋಂಕಿತರೊಬ್ಬರಿಗೆ, ಆಸ್ಪತ್ರೆಗೆ ಸೇರಲೇ ಬೇಕಾದ ಅನಿವಾರ್ಯತೆಯಾದಾಗ, ಕೇವಲ 3 ಕಿಮೀ ದೂರದಲ್ಲಿರುವ ಆಸ್ಪತೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಚಾಲಕನೊಬ್ಬ ರೂ.12,000 ಕೇಳಿದಾಗ, ಆದನ್ನು ಭರಿಸಲಾಗದೇ ಹೆಬ್ಬಿಯವರಿಗೆ ಕರೆ ಮಾಡಿದಾಗ, ಹೆಬ್ಬಿಯವರೇ ಆ ವ್ಯಕ್ತಿಯನ್ನು ಎಲೆಕ್ಟ್ರಾನಿಕ್ ಸಿಟಿಯ ಆಸ್ಪತ್ರೆಗೆ ಸೇರಿಸಿ ಬಂದಿದ್ದಾರೆ.

ಕೊರೋನಾದಿಂದಾಗಿಯೇ ಹೆಬ್ಬಿಯವರ ಅಣ್ಣನ ಮಗನೂ ಕೆಲ ತಿಂಗಳ ಹಿಂದೆ ತೀರಿಕೊಂಡಾಗ, ಭಯಗ್ರಸ್ತರಾದ ಅವರ ಕುಟುಂಬದವರು ಹೆಬ್ಬಿಯವರ ಮೊಬೈಲ್ ಕ್ಲಿನಿಕ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರೂ, ಸೋಂಕಿತರ ಕುಟುಂಬಸ್ಥರ ನೋವು, ನರಳಾಟವನ್ನು ನೋಡಲು ಸಾಧ್ಯವಾಗದೇ, ಅಣ್ಣನ ಮಗನ ಅಂತ್ಯಕ್ರಿಯೆ ಮುಗಿದ ಮರುದಿನವೇ ಮರಳಿ ತಮ್ಮ ಸೇವೆಯನ್ನು ಎಂದಿನಂತೆ ಆರಂಭಿಸಿದ್ದಾರೆ.

sunil5

ಪ್ರತೀನಿತ್ಯವೂ 80 ರಿಂದ 120 ಕಿಮೀ ದೂರದ ವರೆಗೂ ಪ್ರಯಾಣಿಸಿ, ಸುಮಾರು 10-12 ಮಂದಿಗೆ ಚಿಕಿತ್ಸೆ ನೀಡುತ್ತಾರೆ. ಇಷ್ಟು ವರ್ಷಗಳ ಕಾಲ ಯಾವುದನ್ನೋ ಬದುಕೆಂದುಕೊಂಡು ಯಾಂತ್ರೀಕೃತವಾಗಿ ಕೆಲಸ ಮಾಡಿ ತಮ್ಮ ಬದುಕನ್ನು ನಷ್ಟ ಮಾಡಿಕೊಂಡಿದಕ್ಕೆ ಅವರಿಗೆ ಬೇಸರವಿದೆ. ಈಗ ಅವರಿಗೆ ನಿಜವಾದ ಬದುಕು ಏನೆಂಬುದು ಅರ್ಥವಾಗಿ ಕಳೆದ ವರ್ಷಗಳಿಂದ ದುಡಿಮೆಗೆ ನೀಡುವಷ್ಟೇ ಸಮಯವನ್ನು ತಮ್ಮ ಇಷ್ಟದ ಬದುಕನ್ನು ಜೀವಿಸಲು ಮೀಸಲಿಡಬೇಕೆಂದು ನಿರ್ಧರಿಸಿದ್ದಾರೆ. ಜೀವನದಲ್ಲಿ ಏರಿಳಿತ ಇಲ್ಲದಿದ್ದರೆ ಸುಖಃ ದುಖಃದ ಅರಿವಿಲ್ಲದೆ ಜೀವಂತ ಹೆಣವಾಗಿ ಬಿಡುತ್ತೇವೆ. ಅತಿಯಾದ ದುಡಿಮೆಯಿಂದಾಗಿ ಕನಿಷ್ಠ ಸುಖ ಸಿಗಬಹುದೇ ಹೊರತು ಬದುಕಿನ ಆನಂದ ಲಭಿಸಲಾರದು. ಹಾಗಾಗಿ ಬದುಕನ್ನು ಕಲಿಸುವುದೇ ನಿಜವಾದ ಬದುಕು ಎನ್ನುತ್ತಾರೆ ಡಾ. ಹೆಬ್ಬಿಯವರು.

ಇವರ ಸೇವೆಯನ್ನು ಗುರುತಿಸಿ ಸುಮಾರು 50 ಕ್ಕೂ ಹೆಚ್ಚು ಪ್ರಶಸ್ತಿ, ಪ್ರಮಾಣ ಪತ್ರ ಸಂದಿವೆಯಲ್ಲದೇ, ನೂರಾರು ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ದೇಶಾದ್ಯಂತ ಇವರ ಸೇವೆಯ ಕುರಿತಾದ ಮಾಹಿತಿಯನ್ನು ಪ್ರಸಾರ ಮಾಡಿವೆ.

ದಿನೇ ದಿನೇ ಗಗನಕ್ಕೇರಿರುವ ಪೆಟ್ರೋಲ್ ಬೆಲೆ, ಔಷಧಿ, ವೈದ್ಯಕೀಯ ಸಲಕರಣೆಗಳ ಬೆಲೆಯಿಂದಾಗಿ ತಮ್ಮ ಮೊಬೈಲ್ ಕ್ಲಿನಿಕ್ ಮುಂದುವರೆಸುವುದು ಅವರಿಗೆ ತ್ರಾಸದಾಯಕವಾಗುತ್ತಿದೆ. ಹಾಗಾಗಿ ಸಹೃದಯೀ ಜನರಿಂದ ಇಂತಹ ಸಮಜಮುಖೀ ಸೇವೆಗಾಗಿ ತಮ್ಮ ಕೈಲಾದ ಮಟ್ಟಿಗಿನ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ.

ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ |

ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ||

sunil_ontribute

ಪರೋಪಕಾರಕ್ಕಾಗಿ ಮರಗಳು ಹಣ್ಣುಕೊಡುತ್ತವೆ, ನದಿಗಳು ಹರಿಯುತ್ತಾ ನೀರನ್ನು ಕೊಡುವುದೂ ಬೇರೆಯವರ ಉಪಯೋಗಕ್ಕಾಗಿಯೇ, ಇನ್ನು ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರಮಾಡುವುದಕ್ಕಾಗಿಯೇ ಎಂಬ ಈ ಶ್ಲೋಕದ ತಾತ್ಪರ್ಯದಂತೆ, ಎಲ್ಲೆಲ್ಲಿಯೋ ಯಾವುದಕ್ಕೋ ಎಷ್ಟೆಷ್ಟೋ ಖರ್ಚು ಮಾಡುವ ನಾವುಗಳು ಅದರಲ್ಲಿ ಕೊಂಚ ಭಾಗವನ್ನಾದರೂ ಡಾ. ಹೆಬ್ಬಿಯವರ +919741958428 ಈ ಮೊಬೈಲ್ ನಂಬರಿಗೆ Google Pay ಮುಖಾಂತರ ಯಥಾಶಕ್ತಿ ಸಹಾಯವನ್ನು ಮಾಡುವ ಮುಖಾಂತರ ಅವರ ಸೇವೆಯೆಂಬ ಯಜ್ಞದಲ್ಲಿ ನಾವುಗಳೂ ಸಮಿಧೆಯಂತೆ ಯಥಾ ಶಕ್ತಿ ಭಾಗಿಗಳಾಗೋಣ. ಇದು ಅಗ್ರಹ ಪೂರ್ವಕ ಒತ್ತಾಯವೇನಲ್ಲವಾದರೂ, ಪ್ರೀತಿಪೊರ್ವಕ ಕೋರಿಕೆಯಷ್ಟೇ. ನಾನೂ ಸಹಾ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವುದಲ್ಲದೇ ನನ್ನ ಬಂಧು-ಮಿತ್ರರಿಗೂ ಈರೀತಿಯಾಗಿ ಸಹಾಯ ಮಾಡಲು ಕೋರಿಕೊಳ್ಳುತ್ತೇನೆ. ನೀವೂ ಸಹಾ ಅದನ್ನೇ ಮಾಡ್ತೀರೀ ತಾನೇ?

ಏನಂತೀರೀ?

ನಿಮ್ಮವನೇ ಉಮಾಸುತ.

ಹೆಚ್ಚಿನ ಮಾಹಿತಿಗಾಗಿ : Call : +916363832491 | +919741958428 |

| http://www.matrusiri.in | http://www.matrusirifoundation.org |

ಆಟ ಇನ್ನೂ ಬಾಕೀ ಇದೆ.

ನೆನ್ನೆಯ ದಿನ ವೀಕೆಂಡ್ ಕರ್ಘ್ಯೂ ಇದ್ದ ಕಾರಣ ಸಾವಯವ ಸಂತೆಯನ್ನು ಬಂದ್, Online ಮುಖಾಂತರವೇ ಸಾಂಘೀಕ್ಕಿನಲ್ಲಿ ಭಾಗವಹಿಸಿ, ಆತ್ಮೀಯರ ಮಗನ ಮದುವೆಯಲ್ಲೂ Online ಮುಖಾಂತರ ಆಶೀರ್ವದಿಸಿ, ಮನೆಯ ಗೇಟಿನ ಹೊರಗೂ ಹೋಗದೇ ಪಟ್ಟಾಗಿ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದೆ. ಸಮಯೋಚಿತವಾಗಿೆ ಚೆನ್ನಾಗಿ ಜೀರಿಗೆ, ಕಾಳುಮೆಣಸು, ಶುಂಠಿ ಮತ್ತು ಮನೆಯಲ್ಲೇ ಕಡೆದು ತೆಗೆದ ಬೆಣ್ಣೆಯ ತುಪ್ಪ ಹಾಕಿ ಮಾಡಿದ್ದ ನವಣೆ ಹುಗ್ಗಿ(ಪೊಂಗಲ್) ಜೊತೆಗೆ ಕಾಯಿ, ಕೊತ್ತಂಬರಿ ಮತ್ತು ಪುದಿನಾ ಹಾಕಿದ ಚೆಟ್ಟಿ ತಿಂದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಅನಂದಿಸಿ ಹಾಗೂ ಹೀಗೂ ಮಧ್ಯಾಹ್ನ ಮತ್ತೆ ಆರೋಗ್ಯಕರವಾದ ನಿಂಬೇ ಸಾರಿನ ಊಟ ಮುಗಿಸಿ ಇನ್ನೇನು ಭುಕ್ತಾಯಾಸವನ್ನು ಪರಿಹರಿಸ್ಕೊಳ್ಳಬೇಕು ಎನ್ನುವಷ್ಟರಲ್ಲಿ ನನ್ನ ಮತ್ತು ನಮ್ಮಾಕಿಯ ಮೊಬೈಲ್ ಒಟ್ಟೊಟ್ಟಿಗೆ ರಿಂಗಣಿಸಿತು.

ಒಬ್ಬರ ಮಾತು ಮತ್ತೊಬ್ಬರಿಗೆ ತೊಂದರೆ ಆಗದಿರಲೆಂದು ಇಬ್ಬರೂ ಬೇರೆ ಬೇರೆ ಕೋಣೆಯಲ್ಲಿ ಕರೆ ಸ್ವೀಕರಿಸಿದರೂ ಆ ಕಡೆಯಿಂದ ಕೇಳಿ ಬಂದ ವಿಷಯ ಮಾತ್ರಾ ಒಂದೇ ಆಗಿತ್ತು. ನಮ್ಮ ಸಂಬಂಧೀಕರ 40-45ರ ಪ್ರಾಯದ ಸ್ವಂತ ಉದ್ಯೋಗ ಮಾಡಿಕೊಂಡು ಈಗಿನ್ನೂಒಬ್ಬನೇ ಮಗನನ್ನು Engg. collegeಗೆ ಸೇರಿಸಿದ್ದವರೊಬ್ಬರು ಅಚಾನಕ್ಕಾಗಿ ಕೋವಿಡ್ಡಿಗೆ ಬಲಿಯಾಗಿ ಒಂದು ವಾರಗಳಾಯಿತು ಎಂಬ ಸುದ್ದಿ ನನ್ನ ಕಿವಿಗೆ ಬಿದ್ದರೆ, ನನ್ನಾಕಿಯ ಸ್ನೇಹಿತೆಯ ಮೈದುನ ಅದೇ 40-45ರ ಪ್ರಾಯದ ಸ್ವಂತ ಉದ್ಯೋಗ ಮಾಡಿಕೊಂಡಿದ್ದ ಇನ್ನೂ ಸಣ್ಣ ಪ್ರಾಯದ ಎರಡು ಮಕ್ಕಳ ತಂದೆಯೂ ಸಹಾ ಅಗ ತಾನೇ ಕೋವಿಡ್ ನಿಂದಾಗಿ ಮೃತಪಟ್ಟ ವಿಷಯ ತಿಳಿಯಿತು.

hena2ಕಾಕತಾಳೀಯವೆಂದರೆ ಇಬ್ಬರೂ ಸ್ವಂತ ಉದ್ಯೋಗ ಮಾಡಿಕೊಂಡಿದ್ದರು. ಆರಂಭದಲ್ಲಿ ಗಂಟಲು ಬೇನೆ ಮತ್ತು ಜ್ವರ ಕಾಣಿಸಿಕೊಂಡಾಗ ಕೋವಿಡ್ ಪರೀಕ್ಷೇ ಮಾಡಿಸಿಕೊಂಡು ಫಲಿತಾಂಶ -ve ಎಂದು ಬಂದಾಗ ಸ್ವಲ್ಪ ನಿರ್ಲಕ್ಷ ತೋರಿದ್ದ ಕಾರಣ, ಎರಡನೇ ಅಲೆಯ ವೈರಾಣು ದೇಹದೊಳಗೇ ವಿಸ್ಪೋಟಗೊಂಡು ತೀವ್ರವಾಗಿ ಉಲ್ಬಣವಾದಾಗ ಮತ್ತೇ ವೈದ್ಯರ ಬಳಿಗೆ ಹೋದಾಗ ಪರಿಸ್ಥಿತಿ ಕೈ ಮೀರಿತ್ತು. ಶ್ವಾಶಕೋಶದ 75 ರಷ್ಟು ಭಾಗ ಸೋಂಕಿಗೆ ಒಳಗಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ತಮ್ಮ ಕುಟುಂಟದವರನ್ನೂ ಮತ್ತು ಅಪಾರ ಬಂಧು ಮಿತ್ರರನ್ನು ಅಕಾಲಿಕವಾಗಿ ಶಾಶ್ವತವಾಗಿ ಅಗಲಿಬಿಟ್ಟಿದ್ದರು.

csk_RCBಈ ದುಃಖದ ವಿಷಯವನ್ನು ಅರಗಿಸಿಕೊಳ್ಳಲಾಗದೇ ಹಾಗೇ ಟಿವಿಯನ್ನು ಹಾಕಿದರೆ, High voltage, RCB & CSK IPL ಪಂದ್ಯವಳಿಯನ್ನು ನೋಡಲು ಕುಳಿತುಕೊಂಡರೆ ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ RCB ಅವರಿಗೆ ಅವರ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು. 19ನೇ ಓವರಿನವರೆಗೂ ಹಾಗೂ ಹೀಗೂ ಸುಸ್ಥಿತಿಯಲಿದ್ದ RCB ಗೆ ಅವರ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಅವರು 20ನೇ ಓವರಿನಲ್ಲಿ 37ರನ್ನುಗಳನ್ನು ಬಿಟ್ಟು ಕೊಟ್ಟ ಪರಿಣಾಮ 160-170ರ ಆಸುಪಾಸಿನಲ್ಲಿದ್ದ CSK ಇದ್ದಕ್ಕಿದ್ದಂತೆಯೇ 200 ರನ್ನುಗಳ ಹತ್ತಿರ ಬಂದ ಕೂಡಲೇ RCB ಅವರ ಜಂಘಾಬಲವೇ ಉಡುಗಿ ಹೋಯಿತು. ಪ್ರತೀ ಓವರಿಗೆ 10 ರನ್ನುಗಳನ್ನು ಹೊಡೆಯಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಒಳಗಾಗಿ ಪಟಪಟನೇ ವಿಕೆಟ್ ಕಳೆದುಕೊಳ್ಳುವ ಮೂಲಕ 69 ರನ್ನುಗಳ ಅಂತರದಿಂದ ಹೀನಾಯವಾಗಿ ಪಂದ್ಯವನ್ನು ಸೋತು ಹೋಯಿತು.

rajeevಇನ್ನು ಬಿಗ್ ಬಾಸ್ 8ನೇ ಸೀಜನ್ನಿನಲ್ಲಿ ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಾಜೀವ್ ಕೂಡಾ ಇದೇ ರೀತಿಯ ಅತಿಯಾದ ಆತ್ಮವಿಶ್ವಾಸದಿಂದ ಹೊರಬೀಳುವಂತಾಗಿತ್ತು. ಬಿಗ್ ಮನೆಯಲ್ಲಿ ಅತ್ಯಂತ ನೆಚ್ಚಿನ ಅಭ್ಯರ್ಥಿಯಾಗಿದ್ದ ಮತ್ತು ಹೊರಗಡೆ ತನಗೆ ಇಷ್ಟೊಂದು ಜನ ಸ್ನೇಹಿತರಿದ್ದಾರೆ ಎಂದು ಸದಾಕಾಲವು ಎರಡೂ ತೋಳುಗಳನ್ನೂ ಎತ್ತಿ ಬೀಗುತ್ತಿದ್ದ ರಾಜೀವ್, ತನ್ನ ಸಹಚರರಿಂದಲೇ ನಾಮಿನೇಟ್ ಆಗಿ ಎಷ್ಟೇ ಚೆನ್ನಾಗಿ ಆಟವಾಡಿದರೂ, ಎಷ್ಟೇ ಸದ್ಭಾವನೆಗಳಿಂದ ಮನೆಯಲ್ಲಿ ನಡೆದುಕೊಂಡಿದ್ದರೂ, ಹೊರಗಿನವರು ಹೃದಯ ಗೆಲ್ಲಲು ವಿಫಲರಾದದ್ದು ವಿಷಾಧನೀಯವೇ ಸರಿ. ತನ್ನ ಬಳಿ Immunity Pass ಇದ್ದರೂ ಅತಿಯಾದ ಆತ್ಮವಿಶ್ವಾಸದಿಂದ, ಅದನ್ನು ಸದ್ಭಳಕೆ ಮಾಡಿಕೊಳ್ಳದೇ ಹೋದದ್ದು ವಿಪರ್ಯಾಸವೇ ಸರಿ.

ಹಾಗಾದರೆ ಈ ಮೂರೂ ಪ್ರಕರಣಗಳಲ್ಲಿ ಎಲ್ಲರೂ ಎಡವಿದ್ದು ಎಲ್ಲಿ? ಎಂದು ಸೂಕ್ಷ್ಮವಾಗಿ ಯೋಚಿಸಿದಲ್ಲಿ ಎಲ್ಲರೂ ಆರೋಗ್ಯವನ್ನಾಗಲೀ ಆಟವನ್ನಾಗಲೀ ಗಂಭೀರವಾಗಿ ಪರಿಗಣಿಸದೇ ಲಘುವಾಗಿ ತೆಗೆದುಕೊಂಡಿದ್ದೇ ಸಂಚಕಾರವಾಯಿತು ಎಂದರೂ ತಪ್ಪಾಗಲಾರದು.

 • ಆನಾರೋಗ್ಯವಿದ್ದಾಗ  ಕೇವಲ ಕೋವಿಡ್ ಫಲಿತಾಂಶ  – ve  ಬಂದಿದೆ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ಸೂಕ್ತವಾದ ಚಿಕಿತ್ಸೆ ಪಡೆಯದೇ, ಗಂಭೀರವಾಗಿ ಮನೆಯಲ್ಲೇ ಇದ್ದು ಸುಧಾರಿಸಿಕೊಳ್ಳದೇ ಹೋದದ್ದು ಅವರ ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು.
 • ಕ್ರಿಕೆಟ್ ಎಂದರೆ ದಾಂಡಿಗರದ್ದೇ ಪ್ರಾಭಲ್ಯ ಎಂದು ಗೊತ್ತಿದ್ದರೂ ಅದೇಕೋ ಏನೂ ಎಂಟು ಎಸೆತಗಾರರು ಮತ್ತು ಕೇವಲ ಮೂವರು ಪ್ರಮುಖ ದಾಂಡಿಗರ ತಂಡವನ್ನು ಆಯ್ಕೆ ಮಾಡಿಕೊಂಡಾಗಲೇ ಎಡವಿದ್ದ ಕೋಹ್ಲಿ ತಂಡ, ಆಷ್ಟು ದೊಡ್ಡದಾದ ಮೊತ್ತವನ್ನು ಎದುರಿಸುವಾಗ ಒಂದು ಕಡೆ ಭರ್ಜರಿಯಾಗಿ ಮತ್ತೊಂದೆಡೆ ನಿಧಾನವಾಗಿ ಆಡಬೇಕಿತ್ತು. ದುರಾದೃಷ್ಟವಷಾತ್ ಕೋಹ್ಲಿ ಮತ್ತು ಪಡಿಕ್ಕಲ್ ಇಬ್ಬರೂ ಭರ್ಜರಿಯಾಗಿ ಹೊಡೆಯುವ ಭರದಲ್ಲಿ ಔಟಾಗಿದ್ದು ಉಳಿದ ಆಟರಾರರು ಒತ್ತಡ ತಾಳಲಾರದೇ ಸಾಲು ಸಾಲಾಗಿ ಅಲ್ಪ ಮೊತ್ತಕ್ಕೆ ಔಟಾಗಿ ಹೋದದ್ದು ವಿಪರ್ಯಾಸವೇ ಸರಿ.
 • ಕಳೆದ ನಾಲ್ಕಾರು ವಾರಗಳಿಂದಲೂ ಹೊರಗಿನ ಜನರು ತನ್ನನ್ನು ಪ್ರಮುಖವಾಗಿ ಆಯ್ಕೆ ಮಾಡದೇ ಕಡೇ ಸಾಲಿನಲ್ಲಿ ಆಯ್ಕೆ ಆಗುತ್ತಿದ್ದದ್ದು ಗೊತ್ತಿದ್ದರೂ ರಾಜೀವ್ ತನ್ನ ಬತ್ತಳಿಕೆಯಲ್ಲಿದ್ದ ಜೀವದಾನದ ಪಾಸ್ ಬಳಸಿಕೊಳ್ಳದೇ  ಹೋಗದೇ. ಹೊರಗಿನ ತನ್ನ ಸ್ನೇಹಿತರ ಕೈ ಹಿಡಿದೇ ಹಿಡಿಯುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವೇ ಆತನಿಗೆ ಮುಳುವಾಯಿತು.

jadduಇನ್ನು 19ನೇ ಓವರಿನವರೆಗೂ CSK ತಂಡ 160-170 ರನ್ನುಗಳನ್ನು ಗಳಿಸಬಹುದು ಎಂಬ ಅಂದಾಜಿನಲ್ಲಿದ್ದಾಗ ಒಂದೂ ರನ್ನು ಗಳಿಸದೇ ಇದ್ದಾಗ ಲಭಿಸಿದ ಜೀವದಾನವನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಜಡೇಜ ಭರ್ಜರಿಯಾಗಿ ಸಿಕ್ಸರ್ ಪೋರ್ ಗಳನ್ನು ಬಾರಿಸುತ್ತಾ 69 ರನ್ನುಗಳನ್ನು ಗಳಿಸಿದ್ದು ಆತನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಲ್ಲದೇ ಬೌಲೀಂಗ್ ಮಾಡುವಾಗಲೂ 3 ವಿಕೆಟ್ ಗಳಿಸಿದ್ದಲ್ಲದೇ ಒಂದು ಅಮೋಘವಾದ ರನ್ ಔಟಿಗೂ ಕಾರಣರಾಗಿ ತಂಡದ ಗೆಲುವಿಗೆ ರೂವಾರಿಯಾದರು.

srh_short_runಅದೇ ರೀತಿ ದೆಹಲಿ ಮತ್ತು ಹೈದರಾಬಾದಿನ ಎರಡನೇ ಪಂದ್ಯದಲ್ಲೂ ಇದೇ ರೀತಿಯ ಆತ್ಮ ವಿಶ್ವಾಸ ಮತ್ತು ಅತಿಯಾದ ಆತ್ಮವಿಶ್ವಾಸಗಳಿಂದಾಗಿ ಸೋಲುವಂತಿದ್ದ ಪಂದ್ಯ ಸಮಸ್ಥಿತಿಗೆ ತಲುಪಿ ನಂತರ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋಲಬೇಕಾದದ್ದು ಸೋಜಿಗವೇ ಸರಿ. ದೆಹಲಿ ನೀಡಿದ ಗೌರವಯುತ ಮೊತ್ತವಾದ 159 ರನ್ನುಗಳನ್ನು ಬೆನ್ನತ್ತಿದ್ದ ಹೈದರಾಬಾದ್ ತಂಡ ಒಂದು ಕಡೆ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದರೂ ಬಂಡೆ ಕಲ್ಲಿನಂತೆ ಒಂದು ಕಡೆ ಆಡುತ್ತಲೇ ಹೋದ ಕೇನ್ ವಿಲಿಯಮಸನ್ ಅಂತಿಮ ಓವರಿನಲ್ಲಿ ನಮ್ಮ ಕನ್ನಡಿಗ ಸುಚಿತ್ ಅವರ ಭರ್ಜರಿ ನಾಲ್ಕು ಮತ್ತು ಆರು ರನ್ನುಗಳ ಹೊಡೀ ಬಡೀ ಆಟದಿಂದ ಸೋಲುತ್ತಿದ್ದ ಪಂದ್ಯವನ್ನು ಟೈ ಮಾಡಿಕೊಳ್ಳುವುದರಲ್ಲಿ ಸಫಲವಾದರೆ, ಮತ್ತೆ ಆಟಕ್ಕೆ ಅದೇ ಪಂದ್ಯದಲ್ಲಿ ಉತ್ತಮವಾಗಿಯೇ ರನ್ನುಗಳನ್ನು ಗಳಿಸಿದ್ದ ಬರಿಸ್ಟೋವ್ ಮತ್ತು ವಿಲಿಯಮ್ ಸನ್ ಅವರನ್ನು ಕಳುಹಿಸಿದದೇ ಈ ಪಂದ್ಯಾವಳಿಯಲ್ಲಿ ರನ್ನುಗಳಿಗಾಗಿ ಪರದಾಡುತ್ತಿರುವ ನಾಯಕ ವಾರ್ನರ್ ಆಡುವುದಕ್ಕಾಗಿ ಬಂದು ಕಡೆಯಲ್ಲಿ ಓಡಿದ ಎರಡು ರನ್ನುಗಳಲ್ಲಿ ಒಂದು ಶಾರ್ಟ್ ಆದ ಕಾರಣ ಪಂದ್ಯ ಸೋಲುವಂತಾಗಿದ್ದು ಮತ್ತದೇ ನಾಯಕನೆಂಬ ಹಮ್ಮು ಮತ್ತು ಅತೀಯಾದ ವಿಶ್ವಾಸ.

ಈ ಎಲ್ಲಾ ಪ್ರಸಂಗಗಳನ್ನೂ ನೋಡುತ್ತಿದ್ದಾಗ ಧರ್ಮ ಸಂಸ್ಥಾಪನೆಗಾಗಿ ತ್ರೇತಾಯುಗದಲ್ಲಿ ಜನಿಸಿದ ರಾಮ ಮತ್ತು ದ್ವಾಪರಯುಗದಲ್ಲಿ ಆವತರಿಸಿದ ಕೃಷ್ಣ ಅವರ ತಂತ್ರಗಾರಿಗೆ ಯಿಂದ ನಮ್ಮವರು ಇನ್ನೂ ಕಲಿಯಲಿಲ್ಲವಲ್ಲಾ ಎಂಬ ಬೇಸರ ಮೂಡಿಸಿತು. ತ್ರೇತಾಯುಗದಲ್ಲಿ ಸೀತಾನ್ವೇಷಣೆಯ ಸಮಯದಲ್ಲಿ ರಾಮನ ಜೊತೆಗೆ ಇದ್ದದ್ದು ಕೌಶಲ್ಯರಹಿತ(unskilled) ಕಪಿಸೇನೆ. ಹಾಗಾಗಿ ಆ ಸಂದರ್ಭದಲ್ಲಿ ರಾಮನೇ ಪ್ರತಿಯೊಂದು ಕೆಲಸದಲ್ಲಿಯೂ ನೇತೃತ್ವವಹಿಸಿ ಯುದ್ಧದಲ್ಲಿ ಶಸ್ತ್ರಾಸ್ತ್ರವನ್ನು ಹಿಡಿಯಬೇಕಿತ್ತು. ಆದರೆ ದ್ವಾಪರಯುಗದಲ್ಲಿ ಕೃಷ್ಣನ ಜೊತೆಗೆ ಇದ್ದದ್ದು ವಿದ್ಯಾವಂತ ನುರಿತ(skilled) ಪಾಂಡವರು. ಹಾಗಾಗಿ ಕೃಷ್ಣ ಎಲ್ಲೂ ತಾಳ್ಮೆ ಗೆಡದೇ ತನ್ನೊಂದಿಗೆ ಅತಿರಥ ಮಹಾರಥರು ಇದ್ದಾರೆ ಎನ್ನುವ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಳ್ಳದೇ, ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಇಡೀ ಯುದ್ಧದಲ್ಲಿ ತನ್ನ ಅಸ್ತ್ರವನ್ನೇ ಬಳಸದೇ ಕೇವಲ ತನ್ನ ತಂತ್ರಗಾರಿಕೆಯನ್ನು ಪಾಂಡವರ ಮೇಲೆ ಪ್ರಯೋಗಿಸಿ (ಜರಾಸಂಧ ವಧೆಯಲ್ಲಿ ಅರಳಿ ಎಲೆಯನ್ನು ಸೀಳಿ ಅಕ್ಕ ಪಕ್ಕದಲ್ಲಿ ಎಸೆದದ್ದು, ಭೀಮ ದುರ್ಯೋಧನರ ಮಹಾಕಾಳಗಲ್ಲಿ ಭಲೇ ಭೀಮಾ ಭಲೇ ಎಂದು ತೊಡೆ ತಟ್ಟಿ ತೋರಿಸಿದ್ದು, ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕಾಪಾಡಿದ್ದು) ಅಧರ್ಮೀಯರನ್ನು ನಾಶ ಮಾಡಿ ಧರ್ಮವನ್ನು ಕಾಪಾಡಿದನು.

vACಅದೇ ರೀತಿಯಲ್ಲಿ ಮೊದಲ ಬಾರಿ ಕೊರೋನಾ ಬಂದಾಗ ಅಥವಾ ಆರಂಭದ ಪಂದ್ಯಗಳಲ್ಲಿ ವೈರಾಣುವಿನ ತೀವ್ರತೆ ಅಥವಾ ತಂಡದ ಶಕ್ತಿಯ ಪರಿಚಯ ಸರಿಯಾಗಿ ಇರದ ಕಾರಣ ವ್ಯಕ್ತಿಗತವಾಗಿಯೂ ಮತ್ತು ತಂಡದ ನಾಯಕನಾಗಿ ಬಹಳ ಎಚ್ಚರಿಕೆಯಿಂದ ಸ್ವತಃ ಪರಿಸ್ಥಿತಿಯನ್ನು ರಾಮನಂತೆ  ನಿಭಾಯಿಸ ಬೇಕಾಗುತ್ತದೆ. ಅದೇ ಎರಡನೇ ಹಂತದಲ್ಲಿ ಪರಿಸ್ಥಿತಿಯ ತೀವ್ರತೆಯ ಅರಿವು ಇರುತ್ತದೆ. ಅದನ್ನು ಹೇಗೆ ಪರಿಹರಿಸಬಹುದು ತನ್ನ ಜೊತೆಗೆ ತಂಡದ ಶಕ್ತಿ ಮತ್ತು ದೌರ್ಬಲ್ಯಗಳ ಅರಿವು ಇರುವಾಗ ಅದನ್ನು ತಾನು ಒಂದೆಡೆ ಬಂಡೆಯಾಗಿ ನಿಂತು ಕೃಷ್ಣನ ಹಾಗೆ ನಿಭಾಯಿಸಬೇಕಾಗುತ್ತದೆ.

ಆಟ ಆಡುವಾಗಲೀ, ಇಲ್ಲವೇ ವಯಕ್ತಿಕ ಜೀವನದ ಸಮಸ್ಯೆಗಳನ್ನು ನಿಭಾಯಿಸುವಾಗಲೀ ಅಥವಾ ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸುವಾಗಲೀ ಸಮಸ್ಯೆಯನ್ನು ತೀರ ಸರಳವಾಗಲೀ ಇಲ್ಲವೇ ಅತಿಯಾದ ಆತ್ಮವಿಶ್ವಾಸದಿಂದಾಗಲೀ ಎದುರಿಸದೇ ಆಟ ಇನ್ನೂ ಬಾಕೀ ಇದೇ ಎಂದು ಭಾವಿಸುತ್ತಲೇ ನಮ್ಮ ಹಿರಿಯರು ಪುರಾಣ ಪುಣ್ಯಕಥೆಗಳಲ್ಲಿ ತಿಳಿಸಿರುವಂತೆ ತಾಳ್ಮೆಯಿಂದ ತಂತ್ರಗಾರಿಕೆಯಿಂದ ಮತ್ತು ಎಚ್ಚರಿಕೆಯಿಂದ ನಿಭಾಯಿಸುವುದು ಉತ್ತಮ ಬೆಳವಣಿಗೆಯಾಗಿದೆ.

lockdownಹೇಗೂ  ಇನ್ನು ಹದಿನೈದು ದಿನಗಳ ಕಾಲ ಲಾಕ್ಡೌನ್ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಹಾಯಾಗಿ ಮನೆಯಲ್ಲೇ ತೆಪ್ಪಗೆ IPL & BigBoss ನೋಡಿಕೊಂಡು ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ಇದ್ದು ಕೊರೋನಾದಿಂದ ಸುರಕ್ಷಿತವಾಗಿರೋಣ ಅಲ್ವೇ?

ಕಡೇ ಮಾತು ನಮ್ಮ ಶಾಸ್ತ್ರ ಪುರಾಣಗಳಲ್ಲಿ ಹೇಳುತ್ತಿದ್ದದನ್ನು ಆಡಿಕೊಳ್ಳುತ್ತಿದ್ದವರೆಲ್ಲಾ ಈಗ ಅದನ್ನೇ ವೇದವಾಕ್ಯ ಎಂದು ಪಾಲಿಸುತ್ತಿರವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ದೇಶದ ವಾಸ್ತವತೆ ಮತ್ತು ನಮ್ಮ ಜವಾಬ್ಧಾರಿ

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯಮಾದ್ಯಮಗಳಲ್ಲಿ ಇದ್ದಕ್ಕಿದ್ದಂತೆಯೇ ಕೊರೋನಾ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ಬಂದಿರುವಂತಿದೆ. ಇದಕ್ಕಿದ್ದಂತೆಯೇ ಜಾಗೃತರಾಗಿ ಈ ಕೊರೋನಾ ಮಾಹಾಮಾರಿ ಉಲ್ಪಣವಾಗುವುದಕ್ಕೆ ಈ ರಾಜ್ಯಸರ್ಕಾರವೇ ಕಾರಣ ಈ ಕೇಂದ್ರ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಪುಂಖಾನುಪುಂಖವಾಗಿ ಹರಿಹಾಯುತ್ತಿರುವುದಲ್ಲದೇ, ಈ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಆಡಳಿತ ನಡೆಸಲು ಅಸಮರ್ಥರಾದಲ್ಲಿ ರಾಜಿನಾಮೆ ನೀಡಿ ಹೊರ ಬನ್ನಿ ಎನ್ನುತ್ತಿದ್ದಾರೆ

statueಇನ್ನೂ ಕೆಲವು ಕೆಲವರು ಮೋದಿ ಮತ್ತು ಬಿಜೆಪಿ ಪಕ್ಷದ ಮೇಲಿನ ತಮ್ಮ ವಯಕ್ತಿಕ ಹಿತಾಸಕ್ತಿಗಳಿಂದಾಗಿ  ಸರ್ಕಾರವನ್ನು ಟೀಕಿಸುವ ಬರದಲ್ಲಿ  ಇಂತಹ ಸಮಯದಲ್ಲಿ ಸರ್ಕಾರ ಆಸ್ಪತ್ರೆಗಳನ್ನು ಕಟ್ಟುವ ಬದಲು ಕೋಟ್ಯಾಂತರ ರೂಪಾಯಿಗಳ ಖರ್ಚು ಮಾಡಿ ಸ್ವಾತಂತ್ರ್ಯ ಹೋರಾಟಗಾರಾದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಯನ್ನು  ಕಟ್ಟಬೇಕಿತ್ತೇ?  ಎಂದರೆ ಇನ್ನೊಬ್ಬ ಮಹನೀಯರು, ಇಂತಹ ಸಮಯದಲ್ಲಿ ದೆಹಲಿಯಲ್ಲಿ ಹೊಸಾ ಪಾರ್ಲಿಮೆಂಟ್ ಭವನ ಬೇಕಿತ್ತೇ? ಎಂದು ಪ್ರಶ್ನಿಸುತ್ತಾರೆ.

guruಈ ದೇಶ ಕಂಡ ಮತ್ತೊಬ್ಬ ನಾಲಾಯಕ್ ನಾಯಕ ಚಿರಯೌವನಿಗ, ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಸ್ವತಃ  ಕೊರೋನಾದಿಂದ ನರಳುತ್ತಿರುವವನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ದೇಶದಕ್ಕೆ ಕೊರೋನಾ ಬಂದಿರುವುದೇ ಮೋದಿ ಇಂದ ಎಂದು ಹೇಳಿದರೆ, ತನ್ನ ವಯಕ್ತಿಕ ತೆವಲುಗಳಿಂದ ಮನೆ  ಮಠ ಕಳೆದುಕೊಂಡು ಅಂಡಲೆದು ಕೊರೋನಾ ರೋಗಕ್ಕೆ ತುತ್ತಾಗಿರುವ ನಿರ್ದೇಶಕನೊಬ್ಬ ತನ್ನ ಸಾವಿಗೆ ಈ ಸರ್ಕಾರವೇ ಕಾರಣ ಎಂದು ಷರಾ ಬರೆಯುತ್ತಾನೆ.  ಮತ್ತೊಬ್ಬ ಮಾಜೀ ಮುಖ್ಯಮಂತ್ರಿ  ಅನಾರೋಗ್ಯವಿದ್ದರೂ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಹೋಗಿ ಸಾವಿರಾರು ಜನರ ಸಂಪರ್ಕಕ್ಕೆ ಬಂದು ರೋಗ ಹತ್ತಿಸಿಕೊಂಡಿದ್ದಕ್ಕೆ ಇಂತಹ ಸರ್ಕಾರವನ್ನೇ ಕಂಡಿಲ್ಲ ಎಂದು ಹೇಳುತ್ತಾನೆ.

ಹೀಗೆ ಪುಂಖಾನು ಪುಂಖವಾಗಿ ಅಸಂಬದ್ಧವಾದ ಹೋಲಿಕೆ ಮಾಡುವವರಿಗೆ ಯಾವುದಕ್ಕೆ ಯಾವುದನ್ನು ಹೋಲಿಸಬೇಕು ಎನ್ನುವ ಸಾಮಾನ್ಯ  ಪರಿಜ್ಞಾನವೂ ಇರದೇ  ಇರುವುದು ಅವರ ಬೌದ್ಧಿಕ ದೀವಾಳಿತನವನ್ನು ಎತ್ತಿತೋರಿಸುತ್ತದೆ. ಇಂತಹವರಿಗೆ ಸಮಸ್ಯೆಗಳನ್ನು  ಪರಿಹರಿಸುವುದಕ್ಕಿಂತಲೂ ಇದೇ  ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡು ಜನರನ್ನು ರೊಚ್ಚಿಗೆಬ್ಬಿಸುತ್ತಾ ಸರ್ಕಾರವದ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿ ಮುಂದಿನ ಚುನಾವಣೆಯಲ್ಲಾದರೂ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಬಹುದೇ ಎಂಬ ದೂ(ದು)ರಾಲೋಚನೆ ಇವರದ್ದಾಗಿದೆ.

vACನಿಜ ಹೇಳಬೇಕೆಂದರೆ, ನಮಗಿಂತಲೂ  ಆರ್ಥಿಕವಾಗಿ ಸಾಕಷ್ಟು ಬಲಿಷ್ಟವಾಗಿರುವ ಮತ್ತು ನಮಗಿಂತಲೂ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ದೇಶಗಳೇ ಕಳೆದ ಒಂದು ವರ್ಷದಿಂದ ಈ ಮಹಾಮಾರಿಯನ್ನು ಎದುರಿಸಲು ತತ್ತರಿಸುತ್ತಿರುವಾಗ 130 ಕೋಟಿ ಜನ ಸಂಖ್ಯೆ ಹೊಂದಿರುವ ಈ ದೇಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ಸಂಬಾಳಿಸುವುದರಲ್ಲಿ ಬಹುಮಟ್ಟಿಗೆ ಸಫಲರಾಗಿದ್ದಾರೆ. ಇಡೀ ಪ್ರಪಂಚವೇೀ ಮಹಾಮಾರಿಗೆ ತಲ್ಲಣತೊಂಡಿದ್ದಾಗ ಈ ದೇಶದ ವಿಜ್ಞಾನಿಗಳೊಂದಿಗೆ ಮಾತನಾಡಿ  ಅತ್ಯಂತ ಕಡಿಮೆ ಸಮಯದಲ್ಲಿಯೇ ಈ ಮಹಾಮಾರಿಗೆ ಲಸಿಕೆಯನ್ನು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗಿರುವುದಲ್ಲದೇ, ಇಡೀ ದೇಶದಲ್ಲಿ ಅದನ್ನು ಉಚಿತವಾಗಿ ಹಾಕುವ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದಲ್ಲದೇ ಜಗತ್ತಿನ ಅದೆಷ್ಟೋ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುತ್ತಿರುವುದು ಗಮನಾರ್ಹವಾಗಿದೆ.

ಅಗತ್ಯವಿದ್ದಾಗಲೆಲ್ಲಾ ದೇಶವಾಸಿಗಳೊಂದಿಗೆ ಮಾತನಾಡುತ್ತಾ ಅವರಿಗೆ ದೈರ್ಯ ತುಂಬುತ್ತಾ ಅವರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ ಜಾಗಟೆ ಬಾರಿಸಲು,  ದೀಪ ಬೆಳಗಿಸಲು ಕರೆ ನೀಡುತ್ತಾ, ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂಧಿಗಳ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವಂತಹ ಒಳ್ಳೆಯ ಕೆಲಸಗಳಿಗೆ ಜನರ ಸ್ಪಂದನೆ ಅವರ ವಿರೋಧಿಗಳಿಗೂ ಅಚ್ಚರಿ ಮೂಡಿಸಿದೆ.

ಇದೇ ಜನರು ಲಾಕ್ಡೌನ್ ಗೆ ಕರೆ ನೀಡಿದಾಗ ಮತ್ತು ಅದನ್ನು ಮತ್ತೆ ಮತ್ತೆ ವಿಸ್ತರಿಸಿದಾಗ ಈ ಸರ್ಕಾರ ಜನರ ವಿರೋಧಿಯಾಗಿದೆ. ಇವರಿಗೆ ಜನಸಾಮಾನ್ಯರೆ ಮೇಲೆ ಕಾಳಜಿ ಇಲ್ಲ ಎಂದು ಬೊಬ್ಬಿರಿದಿತ್ತು.

ಲಾಕ್ಡೌನ್ ಸಮಯದಲ್ಲಿ ಜನರ ಅನಗತ್ಯ ಓಡಾಟ ಬಹಳಷ್ಟು ಕಡಿಮೆಯಾಗಿ ಕೊರೋನ  ಹಾವಳಿ ಕೂಡಾ ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದಂತೂ ಸುಳ್ಳಲ್ಲ.

ನಂತರ ಹಂತ ಹಂತವಾಗಿ ಲಾಕ್ದೌನ್ ಸಡಿಲೀಕರಿಸಿದರೂ, ಜನರೆಲ್ಲರೂ ಸ್ವಪ್ರೇರಣೆಯಿಂದ ಎಚ್ಚರಿಕೆಯಿಂದಿರಿ.  ಅನಗತ್ಯವಾಗಿ ಹೊರಗೆ ಮಾಸ್ಕ್ ಇಲ್ಲದೇ ಓಡಾಡದಿರಿ. ಸಾಮಾಜಿಕ ಅಂತರ ಕಾಪಾಡಿ ಎಂಬ ಎಚ್ಚರಿಕೆಯನ್ನು  ಸಾರಿ ಸಾರಿ ಹೇಳಿದರೂ, ಕೊಂಚವೂ ಕಿವಿಯ ಮೇಲೆ ಹಾಕಿಕೊಳ್ಳದೇ, ಧಿಮ್ಮಾಲೇ ರಂಗಾ ಎಂದು  ಅಡ್ಡಾಡಿ ಈಗ ಮತ್ತೆ ಕೊರೋನಾ ಮಿತಿ ಮೀರಿದಾಗ  ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ಸರ್ಕಾರವನ್ನು ಹೊಣೆ ಮಾಡುವುದು  ಎಷ್ಟು ಸರಿ?

ಲಾಕ್ದೌನ್  ವಿರೋಧಿಸಿದ್ದ ಜನರೇ ಈಗ ಮತ್ತೇ ಈ ಸರ್ಕಾರ ಜನರ ವಿರೋಧಿಯಾಗಿದೆ. ಇವರಿಗೆ ಜನಸಾಮಾನ್ಯರೆ ಮೇಲೆ ಕಾಳಜಿ ಇಲ್ಲಾ ಇಂತಹ ಪರಿಸ್ಥಿತಿಯಲ್ಲಿ ಈ ಕೂಡಲೇ, ಲಾಕ್ದೌನ್  ಮಾಡಬೇಕು ಎಂದು  ಬೊಬ್ಬಿರಿಯುತ್ತಿರುವುದು ನಿಜಕ್ಕೂ ಸೋಜಿಗವೆನಿಸುತ್ತಿದೆ.

ದೇಶಕ್ಕೆ ಯಾವುದೇ ವಿಪತ್ತುಗಳು ಎದುರಾದಾಗ ಅದನ್ನು ನಿಭಾಯಿಸುವುದು ಸರ್ಕಾರದ ಹೊಣೆಯಾದರೂ,  ಆ ಸಮಸ್ಯೆಯನ್ನು ನಿಭಾಯಿಸುವುದರಲ್ಲಿ ದೇಶದ 130 ಕೋಟಿ ಜನರ ಜವಾಬ್ದಾರಿಯೂ ಇದೆ ಎನ್ನುವುದನ್ನು ಮಾತ್ರ  ಈ ಜನರು ಮರೆತಂತಿದೆ. ಒಟ್ಟಿನಲ್ಲಿ ಈ ಜನರದ್ದು ಕೆಲಸಕ್ಕೆ ಕರೀ ಬೇಡಿ. ಊಟಕ್ಕೆ ಮಾತ್ರ ಮರೀ ಬೇಡಿ ಎನ್ನುವ ಮನೋಭಾವನೆ ಹೊಂದಿದೆ.

ಕೊರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆ ಬೋರಲು ಬಿದ್ದಿದೆ. ಎಲ್ಲೆಡೆಯಲ್ಲಿಯೂ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ ಎನ್ನುವುದು ಗೊತ್ತಿದ್ದರೂ,  ಅರೇ ದೇಶದ ಜಿಡಿಪಿ ಏಕೆ ಇಷ್ಟು ಕೆಳಗಿದೆ? ಎಂದು ಹೀಯ್ಯಾಳಿಸುತ್ತಾರೆ. ಈಗ ದೇಶದ ಆರ್ಥಿಕ ವ್ಯವಸ್ಥೆ ನಿಧಾನವಾಗಿ ಮೇಲೇರುತ್ತಿರುವುದನ್ನು ಸಹಿಸದೇ ಮತ್ತೆ ಲಾಕ್ದೌನ್ ಮಾಡುವ ಮುಖಾಂತರ ದೇಶದ ಆರ್ಥಿಕತೆಗೆ ಹೊಡೆರ ಬೀಳುವುದನ್ನೇ ಎದುರು ನೋಡುತ್ತಿದೆ. ನೇರವಾಗಿ ಪ್ರಜಾತಾಂತ್ರಿಕವಾದ ಚುನಾವಣೆಗಳ ಮೂಲಕ ಈ ಸರ್ಕಾರವನ್ನು ಬೀಳಿಸುವುದು ಅಸಾಧ್ಯ ಎಂದು ಈಗಾಗಲೇ ತಿಳಿದಿರುವ ವಿರೋಧ ಪಕ್ಷಗಳು ಈ ರೀತಿಯ ಕುತಂತ್ರದ ಮುಖಾಂತರವಾದರೂ ದೇಶದ ಜನರನ್ನು ರೊಚ್ಚಿಗೆಬ್ಬಿಸಿ ಈ ಸರ್ಕಾರದ ಮೇಲೆ ಅಸಹಕಾರವನ್ನು ತರಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಹೇಸಿಗೆ ಎನಿಸುತ್ತಿದೆ.

kumb_melaಹೀಗೆ ಹೇಳಿದ ಮಾತ್ರಕ್ಕೆ ಸರ್ಕಾರ ಮಾಡಿದ್ದೆಲ್ಲವೂ ಸರಿ ಎಂದು ವಾದಿಸುತ್ತಿಲ್ಲ.  ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದಲ್ಲಿ ಚುನಾವಣೆ ಮತ್ತು ಉಪಚುನಾವಣೆಗಳನ್ನು ಮುಂದೂಡಬಹುದಾಗಿತ್ತು. ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಲು ಕೇಳಿಕೊಳ್ಳಬಹುದಾಗಿತ್ತು. ತನ್ಮೂಲಕ ಭಾರಿ ಸಂಖ್ಯೆಯ ಜನರು  ಒಂದೆಡೆ ಸೇರುವುದನ್ನು ತಪ್ಪಿಸಬಹುದಾಗಿತ್ತು  ಸಿನಿಮಾ, ನಾಟಕ, ಮಾಲ್ ನಲ್ಲಿ ಸುತ್ತಾಟಗಳು ಜೀವನದ ಅತ್ಯವಶ್ಯಕ ವಸ್ತುಗಳಲ್ಲ ಎನ್ನುವುದನ್ನು ಅರಿತು ಅವುಗಳನ್ನು ಇನ್ನೂ ಕೆಲ ಕಾಲ ಮುಚ್ಚಬಹುದಾಗಿತ್ತು.  ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸರ್ಕಾರವೂ ಅನೇಕ ಕಡೆಯಲ್ಲಿ ಎಡವಿರುವುದು ತಿಳಿಯುತ್ತದೆ.

ಅದೇ ರೀತಿಯಲ್ಲಿ ಇಂತಹ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದ ಕೆಲ ಪಟ್ಟಭಧ್ರ ಹಿತಾಸಕ್ತಿಗಳೂ ಸಹಾ  ಜನರನ್ನು ಒಂದಕ್ಕೆರಡು ಪಟ್ಟು ಲೂಟಿ ಮಾಡಿದರೆ, ಇನ್ನೂ ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳು ತಪ್ಪು ಲೆಖ್ಖ ತೋರಿಸುವ ಮುಖಾಂತರ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಕೋಟ್ಯಾಂತರ ರೂಪಾಯಿಗಳ ಹಣವನ್ನು ಗುಳುಂ ಮಾಡುವ ಮೂಲಕ ಕೋತಿ ತಾನು ತಿಂದು ಮೇಕೆ ಬಾಯಿಗೆ ಒರಸಿದಂತೆ  ಆಡಳಿತ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಲ್ಲಿ ಯಶಸ್ವಿಯಾಗಿವೆ.

modi1130 ಕೋಟಿ ಜನರಿಂದ ಬಹುಮತದಿಂದ  ಎರಡು ಬಾರಿ ಆಡಳಿತಕ್ಕೆ ಬಂದಿರುವಂತಹ ಮತ್ತು ತನ್ನ ಇಡೀ ರಾಜಕೀಯ ಬದುಕಿನಲ್ಲಿ ಒಂದು ಚೂರು ಭ್ರಷ್ಟಾಚಾರದ ಕೊಳಕನ್ನು ಮೆತ್ತಿಕೊಳ್ಳದಿರುವ ಪ್ರಧಾನಿಗೆ ಜನರ ಕಷ್ಟ ಅರಿಯುತ್ತಿಲ್ಲವೇನು?  ಸಾಮ, ಬೇಧ, ದಂಡಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುತ್ತಾ ರಾಜ್ಯದ ಮೇಲೆ ರಾಜ್ಯವನ್ನು  ಯಶಸ್ವಿಯಾಗಿ ಅಶ್ವಮೇಧಯಾಗದಂತೆ ಗೆಲ್ಲುತ್ತಾ, ಶತ್ರುಗಳಿಗೆ ಸಿಂಹಸ್ವಪ್ನವಾಗಿರುವ ಗೃಹ ಸಚಿವರಿಗೆ ಜನರ ಸಂಕಷ್ಟದ ಅರಿವಿಲ್ಲವೇನು? ಇಷ್ಟು ದೊಡ್ಡ ದೇಶದ ರಕ್ಷಣಾ ಮಂತ್ರಿಯಾಗಿ ಈಗ ವಿತ್ತೀಯ ಖಾತೆಯನ್ನು ಹೊಂದಿರುವವರಿಗೆ ಜನರ ನೋವು ಅರಿವಾಗುತ್ತಿಲ್ಲವೇನು?

ಖಂಡಿತವಾಗಿಯೂ ಇವರೆಲ್ಲರಿಗೂ ದೇಶವಾಸಿಗಳ ನೋವು ಮತ್ತು ಸಂಕಟಗಳು  ಅರಿವಾಗುತ್ತಿದೆ ಮತ್ತು ಅದನ್ನು ನಿವಾರಿಸಲು ಅವರೆಲ್ಲರೂ ಹಗಲು ಇರಳು ಎನ್ನದೇ ಶ್ರಮವಹಿಸಿ ದುಡಿಯುತ್ತಿರುವುದು  ಎಲ್ಲರ ಕಣ್ಣ ಮುಂದೆಯೇ ಇದೆ. ಇವರ್ಯಾರು ರಜೆ ಕಳೆಯಲು ಅಗ್ಗಿಂದ್ದಾಗ್ಗೆ  ವಿದೇಶಗಳಿಗೆ ಹೋಗುವ  ಹವ್ಯಾಸವಿಲ್ಲ. ಇವರ್ಯಾರೂ ಐಶಾರಾಮ್ಯದ ಜೀವನ ನಡೆಸುತ್ತಿಲ್ಲ. ಇವರೆಲ್ಲರ ವೇಶಭೂಷಣ, ಆಹಾರ ಮತ್ತು ವ್ಯವಹಾರವೆಲ್ಲವೂ ಜನಸಾಮಾನ್ಯರಂತೆಯೇ ಇದೆ. ಅಧಿಕಾರಕ್ಕೆ ಏರುವ ಮೊದಲು ಅವರು ಹೇಳಿದ್ದ ನಾ ಮೇ ಖಾವುಂಗಾ ಔರ್ ನಾ ಖಾನೇ ದೂಂಗ ಎನ್ನುವ ಹೇಳಿಕೆಗೆ ಕಟಿ ಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.

ಮನೆಯಲ್ಲಿ ಕುಳಿತುಕೊಂಡು ಮತ್ತೊಬ್ಬರನ್ನು ಟೀಕಿಸುವುದು ಬಹಳ ಸುಲಭ. ಆದರೇ ಅದೇ ಜಾಗದಲ್ಲಿ ಕುಳಿತುಕೊಂದು ಸಮಸ್ಯೆಗಳನ್ನು ನಿಭಾಯಿಸುವುದು ಬಹಲ ಕಷ್ಟ. ಹಾಗಾಗಿ ಈ ದೇಶದ ಒಬ್ಬ ಜವಾಬ್ಧಾರಿ ಪ್ರಜೆಗಳಾಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜೊತೆಗೆ ಇರೋಣ. ಸುಮ್ಮನೇ ಟೀಕಿಸುತ್ತಾ ಜನರಲ್ಲಿ ನಕಾರಾತ್ಮಕ ಮನೋಭಾವನೆಗಳನ್ನು ಬಿತ್ತುವ ಬದಲು, ಸಮಸ್ಯೆಗಳನ್ನು ಪರಿಹರಿಸುವಂತಹ  ಸಕಾರಾತ್ಮಕ ಕಂಪನಗಳನ್ನು ಜನರಲ್ಲಿ ಮೂಡಿಸೋಣ. ತನ್ಮೂಲಕ ಕೋವಿಡ್ -19 ವಿರುದ್ಧದ ಹೋರಾಟ ಮತ್ತು ಆರ್ಥಿಕ ಕಠಿಣ ಪರಿಸ್ಥಿತಿಯಿಂದ ಅತ್ಯಂತ ಯಶಸ್ವಿಯಾಗಿ ಹೊರಬರುವುದರಲ್ಲಿ ನಮ್ಮ ಜವಾಬ್ಧಾರಿಯನ್ನು ನಿಭಾಯಿಸೋಣ.

ಇಷ್ಟಾದರೂ ಈ ಸರ್ಕಾರಗಳು ಸುಧಾರಿಸದೇ ಹೋದಲ್ಲಿ ಮುಂದಿನ ಬಾರಿಯ ಚುನಾವಣೆಯಲ್ಲಿ ನಮ್ಮೆಲ್ಲರ ಶಕ್ತಿಯನ್ನು ಆವರಿಗೆ ತೋರಿಸೋಣ. 2024ರ ಚುನಾವಣೆಯಲ್ಲಿ ಮತ ಹಾಕುವುದಕ್ಕಾದರೂ ಜೀವಂತ ಇರಬೇಕಾದ್ದರಿಂದ ಸದ್ಯಕ್ಕೆ ಸರ್ಕಾರ ಹೇಳಿದ ರೀತಿಯಲ್ಲಿ ಕೇಳುತ್ತಾ ಸ್ವಘೋಷಿತ ಲಾಕ್ದೌನ್ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ. ಜೀವ ಇದ್ದರೆ ಮಾತ್ರವೇ ಜೀವನ. ಜನ ಬೆಂಬಲವಿದ್ದಲ್ಲಿ ಮಾತ್ರವೇ ಸರ್ಕಾರ.

ಏನಂತೀರೀ?

ನಿಮ್ಮವನೇ ಉಮಾಸುತ

ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

cremationವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು ನಲ್ಲಿಟ್ಟು ಚಿಕಿತ್ಸೆ ಕೊಟ್ಟರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಸ್ವತಃ ಇಡೀ ಕುಟುಂಬವೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಯಾರಿಗೂ ತಂದೆಯವರ, ಮಾವನವರ, ತಾತನ ಮುಖವನ್ನೂ ನೋಡಲಾಗಲಿಲ್ಲ. ಆಗಿನ್ನೂ ಲಾಕ್ದೌನ್ ತೀವ್ರವಾಗಿದ್ದ ಕಾರಣ ಸರ್ಕಾರಿ ಲೆಖ್ಖದಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳೇ ಅವರ ಅಂತಿಮ ಸಂಸ್ಕಾರವನ್ನು ಮಾಡಿದ್ದರು. ಹೆತ್ತ ತಂದೆಯ ಮುಖವನ್ನೂ ನೋಡಲಾಗಲಿಲ್ಲವಲ್ಲಾ, ಅವರ ಅಂತಿಮ ವಿಧಿವಿಧಾನಗಳನ್ನೂ ಮಾಡಲಾಗಲಿಲ್ಲವಲ್ಲಾ ಎಂದು ಮಗನಿಗೆ ತೀವ್ರತರವಾದ ನೋವಿನಿಂದ ಬಹಳ ದಿನಗಳವರೆಗೂ ಖಿನ್ನತೆಗೆ ಒಳಗಾಗಿ ಹಲವು ತಿಂಗಳುಗಳ ನಂತರ ಸುಧಾರಿಸಿಕೊಳ್ಳುತ್ತಿದ್ದಾರೆ.corona1ಮತ್ತೊಂದು ಕುಟುಂಬ. ಇಲ್ಲಿ ತಾಯಿ, ಮಗ ಸೊಸೆ ಮತ್ತು ಮೊಮ್ಮಗ ಇದ್ದಂತಂಹ ಕುಟುಂಬ. ಮೈಸೂರಿನಲ್ಲಿ ತಮ್ಮ ಸಂಬಂಧಿಗಳ ಸಮಾರಂಭಕ್ಕೆ ಹೋಗಿ ಬಂದ ಕೆಲವೇ ದಿನಗಳಲ್ಲಿ ಕುಟುಂಬವಿಡೀ ಕೊರೋನಾ ಸೊಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ಸೇರುತ್ತಾರೆ. ಅವರ ಇಡೀ ರಸ್ತೆಯನ್ನೇ ಸೀಲ್ಡೌನ್ ಮಾಡುವ ಮೂಲಕ ಏನೂ ಮಾಡದ ಅವರ ರಸ್ತೆಯವರೆಲ್ಲರೂ ತೊಂದರೆ ಅನುಭವಿಸುವಂತಾಗುತ್ತದೆ. ಅದೃಷ್ಠವಶಾತ್ ಅಜ್ಜಿ ಮತ್ತು ಮೊಮ್ಮಗ ಬಹಳ ಬೇಗನೇ ಗುಣಮುಖರಾಗುತ್ತಾರಾದರೂ ಮಗ ಮತ್ತು ಸೊಸೆಯವರಿಗೆ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಸುಮಾರು ಒಂದು ತಿಂಗಳುಗಳ ಕಾಲ ಐಸಿಯುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನರಳಿ, ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ, ವೈದ್ಯರುಗಳ ಚಿಕಿತ್ಸೆ ಮತ್ತು ದೇವರ ದಯೆಯಿಂದಾಗಿ ಮನೆಗೆ ಬಂದು ಸುಮಾರು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಈಗ ಹುಶಾರಾಗಿದ್ದಾರೆ.corona2ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಆರೋಗ್ಯ ತಪ್ಪಿದ ಹಿರಿಯರೊಬ್ಬರನ್ನು ಕೋವಿಡ್ ಪರೀಕ್ಷೆ ಮಾಡಿಸಿದ ಒಂದು ದಿನದ ಬಳಿಕ ಅವರ ಮೊಬೈಲಿನಲ್ಲಿ ಅವರಿಗೆ ಕೋವಿಡ್+ ಬಂದಿದೆ, ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬರುತ್ತದೆ. ಹಾಗಾಗಿ ಸಿದ್ಧವಾಗಿರಿ ಎಂಬ ಸಂದೇಶ ಬಂದ ಕೂಡಲೇ ಆ ಹಿರಿಯರ ನಾಲ್ಕಾರು ಬಟ್ಟೆಗಳನ್ನು ಚೀಲದಲ್ಲಿಟ್ಟು ಮನೆಯ ಹಿರಿಯವರು ಎಂಬ ಮಾನವೀಯತೆಯನ್ನೂ ಮರೆತು ಅವರನ್ನು ಮನೆಯ ಹೊರಗೆ ಹಾಕಿ ಬಾಗಿಲು ಹಾಕಿ ಕೊಳ್ಳುತ್ತಾರೆ. ಅದು ಯಾವ ಕಾರಣಕ್ಕೋ ಏನೋ? ಅವರನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಆಂಬ್ಯುಲೆನ್ಸ್ ಕೂಡಾ ಬಹಳ ತಡವಾಗಿ ಬಂದು ನೋಡಿದರೆ ಮನೆಯ ಮುಂದೆಯೇ ಬೀದಿ ಹೆಣವಾಗಿರುತ್ತಾರೆ ಆ ಹಿರಿಯರು. ಅವರನ್ನು ನೋಡಲೂ ಸಹಾ ಅವರ ಮನೆಯವರು ಹೊರಗೆ ಬಾರದಂತಹ ಹೃದಯವಿದ್ರಾವಕ ಘಟನೆಯೂ ನಡೆದಿದೆ.

ಹೀಗೆ ಬರೆಯುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಇಂತಹ ದುರ್ಘಟನೆಗಳು ಕಳೆದೊಂದು ವರ್ಷದಲ್ಲಿ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ನಮ್ಮ ನಿಮ್ಮೆಲ್ಲರ ಮಧ್ಯೆ ಆರೋಗ್ಯದಿಂದ ಇದ್ದವರು ನೋಡ ನೋಡುತ್ತಿದ್ದಂತೆಯೇ ಗೋಡೆಯಲ್ಲಿ ಫೋಟೋವಾಗಿ ಬಿಟ್ಟಿದ್ದಾರೆ.

lockdownಸರ್ಕಾರವೂ ಸಹಾ ಈ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸುಮಾರು ಮೂರು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದರೂ, ಅಂತರ್ ರಾಜ್ಯಗಳ ಗಡಿಗಳನ್ನು ಮುಚ್ಚಿದ್ದರೂ, ಕೆಲವು ಅನಕ್ಷರಸ್ಥ ಕಿಡಿಗೇಡಿಗಳು ಮತ್ತು ಪುಂಡು ಪೋಕರಿಗಳು ಸರ್ಕಾರದ ನೀತಿನಿಯಮಗಳನ್ನು ಗಾಳಿಗೆ ತೂರಿದರೆ, ಜನರ ಹಿತಕ್ಕಿಂತಲೂ ತಮ್ಮ ರಾಜಕೀಯ ತೆವಲುಗಳಿಗೆ ಮತ್ತು ಆಡಳಿತ ಪಕ್ಷಕ್ಕೆ ಭಂಗ ತರಲೆಂದೇ ದೇಶದ ಹಿತಶತ್ರುಗಳಾಗಿ ಕಾಡಿದ ವಿರೋಧ ಪಕ್ಷಗಳು ಪ್ರಜೆಗಳ ಹಿತವನ್ನೂ ಅಲಕ್ಷಿಸಿ, ಅಂತರ್ ರಾಜ್ಯಗಳ ಗಡಿಯನ್ನು ತೆರೆಯಲು ಹೋರಾಟ ನಡೆಸಿದ್ದಲ್ಲದೇ, ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತೆ ತಮ್ಮ ಮನೆಯ ಮದುವೆ, ಮುಂಜಿ, ನಾಮಕರಣ ಹುಟ್ಟು ಹಬ್ಬಗಳಲ್ಲಿ ಸಾವಿರಾರು ಜನರನ್ನು ಒಟ್ಟು ಗೂಡಿಸಿ ಆಡಳಿತ ಪಕ್ಷಗಳ ಪ್ರತಿಯೊಂದು ನಡೆಯನ್ನೂ ವಿರೋಧಿಸುತ್ತಲೇ ಪರೋಕ್ಷವಾಗಿ ಕೊರೋನಾ ಹಬ್ಬಲು ಸಹಕರಿಸಿದವು ಎಂದರೂ ತಪ್ಪಾಗಲಾರದು.marshalಇಡೀ ಪ್ರಪಂಚವೇ ಈ ಮಹಾಮಾರಿಯಿಂದ ತಲ್ಲಣಿಸಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಗ್ಗಿದ್ದರೂ ಸರ್ಕಾರ ಕೊರೋನ ನಿಯಂತ್ರಣದ ಹೆಸರಿನಲ್ಲಿ ಮಾರ್ಷಲ್ ಗಳ ಮೂಲಕ ಮಾಸ್ಕ್ ಹಾಕಿಲ್ಲದ ಅಮಾಯಕರ ಬಳಿ ಐದು ನೂರು ಸಾವಿರ ರೂಪಾಯಿಗಳ ದಂಡ ಕಸಿಯುವ ಮೂಲಕ ಅಕ್ಷರಶಃ ಹಗಲು ದರೋಡೆಗೆ ಇಳಿಯುವ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದದ್ದು ನಿಜಕ್ಕೂ ಹೇಯಕರವಾದ ಸಂಗತಿಯೇ.marketಲಾಕ್ಡೌನ್ ಹಂತ ಹಂತವಾಗಿ ಸಡಿಲ ಗೊಳಿಸಿದ್ದೇ ತಡಾ ಜನ ಕೊರೋನಾ ಮಹಾಮಾರಿಯೇ ಬಂದಿಲ್ಲವೇನೋ ಇವರು ಹೋಟೇಲ್, ಮಾಲು, ಬಾರು, ಸಿನಿಮಾ, ಈಜುಗೊಳ, ಜಿಮ್, ಮಾರುಕಟ್ಟೆಗಳಿಗೆ ಹೋಗದಿದ್ದರೇ ಪ್ರಪಂಚವೇ ಮುಳುಗಿ ಹೋಗುತ್ತದೆಯೇನೋ ಎನ್ನುವಂತೆ ಎಲ್ಲಾ ಕಡೆಯಲ್ಲಿಯೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಮರೆತು,ರಾಜಾ ರೋಷದಿಂದ ಗೂಳಿ ನುಗ್ಗಿದ ಹಾಗೆ ನುಗ್ಗಿದ ಪರಿಣಾಮ ಸ್ವಲ್ಪ ತಹಬದಿಗೆ ಬಂದಿದ್ದ ಕೊರೋನ, ಮತ್ತೆ ಪ್ರಜ್ವಲಿಸುತ್ತಾ 2ನೇ ಅಲೆಯ ಮೂಲಕ ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ 30 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಪ್ರತಿ ದಿನವೂ ಸಹಸ್ರಾರು ಜನರು ,+veಎಂಬ ಅಂಕಿ ಅಂಶ ಕಣ್ಣ ಮುಂದೆ ರಾಚುತ್ತಿದೆ.2ndwave1ಕೊರೋನಾ ಗಿರೋನಾ ಏನೂ ಇಲ್ಲಾ ಇದೆಲ್ಲವೂ ಈ ಭ್ರಷ್ಟ ರಾಜಕಾರಣಿಗಳು ದುಡ್ಡು ಹೊಡೆಯುವ ಹುನ್ನಾರದ ಭಾಗ ಎನ್ನುವವರಿಗೆ, ಕಬ್ಬು ತಿಂದವರಿಗೆ ಮಾತ್ರವೇ ರುಚಿ ಗೊತ್ತಾಗುತ್ತದೆ ಎನ್ನುವಂತೆ ಕೊರೋನಿಂದ ಭಾಧಿತರಾದವರಿಗೆ ಮಾತ್ರವೇ ಅದರ ಅನುಭವ ಗೊತ್ತಿರುತ್ತದೆ. ಖ್ಯಾತ ಕಲಾವಿದ ದಂಪತಿಗಳಾದ ಸುನೇತ್ರ ಮತ್ತು ಪಂಡಿತ್ ದಂಪತಿಗಳು ತಮ್ಮ ಕುಟಂಬಸ್ಥರನ್ನು ಕಳೆದುಕೊಂಡು ಮಾಧ್ಯಮದ ಮುಂದೆ ರೋಧಿಸಿದ ಪರಿ ನಿಜಕ್ಕೂ ಕರುಳು ಚುರಕ್ ಎನಿಸಿತ್ತು. ನಿಜ ಕೆಲವೊಂದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಸಂಧರ್ಭದಲ್ಲಿಯೂ ಅಕ್ರಮ ಹಣವನ್ನು ಮಾಡಿರುವುದನ್ನು ಅಲ್ಲಗಳಿಯಲು ಆಗದಾದರೂ, ಇದೇ ಕಾರಣಕ್ಕೆ ಕೊರೋನಾನೇ ಇಲ್ಲ ಎಂದು ಹೇಳಲಾಗದು.ನಿಜ ಹೇಳ ಬೇಕೆಂದರೆ ಈ ಕೊರೋನ ಅಸ್ತಿ ಅಂತಸ್ತು ಅಧಿಕಾರ ನೋಡಿ ಕೊಂಡು ಬರೋದಿಲ್ಲ . ಈಗಾಗಲೇ ಹೆಸರಾಂತರ ಕಲಾವಿದರು, ರಾಜಕಾರಣಿಗಳು, ಕೇಂದ್ರ ಸಚಿವರು, ಸಂಸದರು,ಹಿರಿಯ ಗಣ್ಯರು, ಅಧಿಕಾರಿಗಳು, ವೈದ್ಯರುಗಳು, ಜನಸಾಮಾನ್ಯರು ಹೀಗೆ ಯಾವ ವರ್ಗವೆಂಬ ತಾರತಮ್ಯವಿಲ್ಲದೇ, ಈ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯ ಲಕ್ಷ್ಮೀಪುರ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರದಲ್ಲಿ ಸಾಲುಗಟ್ಟಿ ನಿಂತಿರುವ ಕೊರೋನದಿಂದ ಮೃತಪಟ್ಟ ಶವಗಳು ಸಾಲು ನೋಡಿದರೇ ಸಾಕು ಕೊರೋನ‌ ತೀವ್ರತೆಯ ಅನುಭವಾಗುತ್ತದೆ. ಸಾಧಾರಣ ದಿನಗಳಲ್ಲಿ ಮೂರ್ನಾಲ್ಕು ಶವಗಳು ಬರುತ್ತಿದ್ದ ಸ್ಮಶಾನದಲ್ಲಿ ಈಗ ಪ್ರತೀ‌ ದಿನವೂ 25-30ರ ವರೆಗೆ ಬಂದು ಆಂಬ್ಯುಲೆನ್ಸ್ ಸಾಲು ಸಾಲಾಗಿ ನಿಂತಿರುವ ಹೃದಯವಿದ್ರಾವಕ ದೃಶ್ಯ ಮನಕಲಕಿಸುತ್ತದೆ.ಲಾಕ್ಡೌನ್ ಸ್ಪಲ್ಪ ಸಡಿಲಗೊಳಿಸಿದ ತಕ್ಷಣ, ಮನೆ ಮಠ ಬಿಟ್ಟು ತನ್ನ ಗಡ್ಡ ಕೆರ್ಕೊಂಡು ಸಿನಿಮಾ ಅಂತ ಮಠ ಚಲನಚಿತ್ರದ ಖ್ಯಾತಿಯ ಗುರುಪ್ರಸಾದ್ ಹುಚ್ಚು‌ ಕುದುರೆ ತರಹಾ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಬೀದಿ ಬೀದಿ ಸುತ್ತಾಡಿ ಕೊರೋನ ಹತ್ತಿಸಿಕೊಂಡು ಈಗ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂತ ರಾಜ್ಯ ಸರ್ಕಾರವನ್ನು ತೆಗಳುತ್ತಾ ತನ್ನ ಸಾವಿಗೆ ಸರ್ಕಾರವೇ ಕಾರಣ ಎಂಬ ವರಾತ ತೆಗೆದರೆ ಯಾವುದೇ ಪ್ರಯೋಜನ ಆಗದು. ಸುಮ್ಮನೇ ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ರೇ ಈತನಿಗೆ ಕೊರೋನಾ ಬರ್ತಿತ್ತಾ?ದೇಶದ ಜವಾಬ್ದಾರಿಯುತ ನಾಗರೀಕರಾಗಿ ವಯಕ್ತಿವಾಗಿ ಕೆಲವೊಂದು ನೀತಿ ನಿಯಮಗಳನ್ನು ಮತ್ತು ಅನುಶಾಸನಗಳನ್ನು ಸ್ವಯಂ ಪಾಲಿಸಲೇ ಬೇಕಾಗುತ್ತದೆ

 • ಸರ್ಕಾರ ಲಾಕ್ಡೌನ್ ಮಾಡುತ್ತದೆಯೋ ಬಿಡುತ್ತದೆಯೋ, ದಯವಿಟ್ಟು ಇನ್ನೂ ಕೆಲ ಕಾಲ ಸ್ವಯಂ ಲಾಕ್ ಡೌನ್ ಒಳಗಾಗಿ ಮನೆಯಲ್ಲಿಯೇ ಸುರಕ್ಷಿತವಾಗಿ ಇರೋಣ.
 • ನಮ್ಮ ನಮ್ಮ ವಯಸ್ಸಿನ ಅನುಗುಣವಾಗಿ ಎರಡೂ ಬಾರಿ ಖಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳೋಣ.
 • ಒಂದಷ್ಟು ದಿನ ಸಭೆ, ಸಮಾರಂಭ, ಮದುವೆ ಮುಂಜಿ, ನಾಮಕರಣ ಮುಂತಾದ ಹೆಚ್ಚು ಜನರು ಸೇರುವಲ್ಲಿ ಹೋಗುವುದನ್ನು ಮುಂದು ಹಾಕೋಣ.
 • ಅನಗತ್ಯವಾಗಿ ಹೊರಗೆಲ್ಲೂ ಓಡಾಡದೇ, ಅನಿವಾರ್ಯವಾಗಿ ಹೊರಗೆ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡೋಣ ಮತ್ತು ಮನೆಗೆ ಬಂದ ತಕ್ಷಣ ಸಾಬೂನಿನಿಂದ ಕೈ ಕಾಲು ಮುಖವನ್ನು ತೊಳೆಯೋಣ.
 • ವಾರಕ್ಕೊಮ್ಮೆ ಪ್ರಾರ್ಥನೆ, ದೇವಸ್ಥಾನ, ಚರ್ಚ್ ಮಸೀದಿ ಎಂದು ತೀರ್ಥಕ್ಷೇತ್ರ, ಜಾತ್ರೆ, ಕುಂಭಮೇಳ ಎಂದು ಎಲ್ಲಿಗೂ ಹೋಗದೇ, ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಂತರ್ಯಾಮಿಯಾದ ಭಗವಂತನನ್ನು ಮನೆಯಿಂದಲೇ ಪ್ರಾರ್ಥಿಸೋಣ.
 • ಸಾಧ್ಯವಾದಷ್ಟೂ ಹೊರಗಡೆಯ ತಿಂಡಿ ತೀರ್ಥಗಳನ್ನು ಸೇವಿಸುವುದನ್ನು ನಿಲ್ಲಿಸೋಣ.
 • ಆದಷ್ಘೂ ಬಿಸಿ ನೀರು ಮತ್ತು ಬಿಸಿಬಿಸಿಯಾದ ಆಹಾರವನ್ನು ಅಚ್ಚುಕಟ್ಟಾಗಿ ಮನೆಯಲ್ಲಿಯೇ ಮಾಡಿಕೊಂಡು ಸೇವಿಸೋಣ.
 • ಮೆಣಸು, ಜೀರಿಗೆ, ಅರಿಶಿನ, ಚಕ್ಕೆ, ಕರಿಬೇವು, ದನಿಯಾ ಮುಂತಾದವುಗಳಿಂದ ತಯಾರಿಸಿದ ಕಷಾಯವನ್ನು ಆಗ್ಗಾಗ್ಗೆ ಸೇವಿಸುವ ಮೂಲಕ ಕೊರೋನಾ ಸೋಂಕು ನಮಗೆ ತಗುಲಿದ್ದರೂ ಅದು ನಾಶವಾಗುವಂತೆ ನೋಡಿಕೊಳ್ಳೋಣ.
 • ಸರ್ಕಸ್, ಸಿನಿಮಾ, ನಾಟಕ ಮತ್ತು ಪ್ರವಾಸಗಳನ್ನು ಕೆಲ ದಿನಗಳ ಕಾಲ ಮುಂದೂಡಿದರೆ ಜಗತ್ ಪ್ರಳಯವೇನೂ ಆಗದು ಎಂಬುದು ತಿಳಿದಿರಲಿ.
 • ಸರ್ಕಾರಕ್ಕೂ ಈ ಮೊದಲು ದೂರಲು ಚೀನ ದೇಶವಿತ್ತು, ತಬ್ಲೀಗ್ ಗಳು ಇದ್ದರು. ಆದರೆ ಈ ಬಾರೀ ಆ ಕಾರಣಗಳು ಯಾವುವೂ ಇಲ್ಲ. ಈ ಬಾರಿ ತಪ್ಪೆಲ್ಲಾ ನಮ್ದೇ.
 • ನುಡಿದಂತೆ ನಡೆ. ನಡೆಯುವುದಕ್ಕೆ ಆಗುವುದನ್ನೇ ನುಡಿ ಎನ್ನುವಂತೆ Rules is a rules even for fools ಎನ್ನುವಂತೆ ಮುಖಾಮೂತಿ ನೋಡದೇ, ಬಡವ, ಬಲ್ಲಿದ, ರಾಜಕಾರಣಿ, ಮಠಾಧಿಪತಿ, ಮೌಲ್ವಿ ಅಥವಾ ಪಾದ್ರಿ ಎನ್ನುವ ತಾರತಾಮ್ಯವಿಲ್ಲದೇ ತಪ್ಪು ಮಾಡಿದವರಿಗೆಲ್ಲರಿಗೂ ಶಿಕ್ಷೆಯಾಗಲಿ.
 • ಹಾಗೆಂದ ಮಾತ್ರಕ್ಕೆ ಶಿಕ್ಷೆಯೇ ಪರಮೋಚ್ಚ ಗುರಿಯಾಗಿರದೇ, ಸಮಾಜವನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ.
 • ಥೂ! ಈ ಸರ್ಕಾರ ಸರೀ ಇಲ್ಲಾ, ಈ ಜನಾನೇ ಸರಿ ಇಲ್ಲಾ! ಕೊರೋನಾನೇ ಇಲ್ಲ ಎಂದು ವಿತಂಡ ವಾದ ಮಾಡುತ್ತಾ ಸಮಾಜವನ್ನು ದೂರುವುದನ್ನು ಬಿಟ್ಟು ಸ್ವಯಂ ನಿರ್ಬಂಧ ಹೇರಿಕೊಂಡು ಸುರಕ್ಷಿತವಾಗಿರೋಣ.

ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲಾ ವೆಂಟಿಲೇಟರ್ಗಳಿಗೆ ಬರ ಎಂದ ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಳ್ಳುವ ಬದಲು ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡ್ ಸಾಮಾಜಿಕ ಅಂತರ ಕಾಪಾಡಿಕೊಂಡ್ರೇ ಈ ರೀತಿಯಲ್ಲಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಇರ್ತಿರ್ಲಿಲ್ಲಾ ಅಲ್ವೇ?ಈ ಲೇಖನ ಕೇವಲ ಓದುಗರನ್ನು ಹೆದರಿಸುವುದಕ್ಕೆ ಆಗಲೀ ಸರ್ಕಾರದ ಪರ ಅಥವಾ ವಿರೋಧವಾಗಿರದೇ, ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಾನಾ ಕಾರಣಗಳಿಂದ ಕೊರೋನ ಸೋಂಕಿತರಾಗಿ ಸೂಕ್ತ ಚಿಕಿತ್ಸಾ ವಿಧಾನಗಳಿಂದ ಗುಣಮುಖರಾದ ಸಂಖ್ಯೆಯೂ ಲಕ್ಷಾಂತರವಿದೆ.ಜೀವ ಇದ್ರೇ ಮಾತ್ರ ಜೀವನ. ಸುರಕ್ಷಿತವಾಗಿ ಇದ್ದರೆ ಬರೋದಿಲ್ಲ ಕೊರೋನ ಎನ್ನುವು್ಉ ಮಾತ್ರವೇ ಸತ್ಯ. ಮೊದಲನೆಯ ಸಲಾ ತಪ್ಪು ಮಾಡಿದರೆ ಕ್ಷಮೆ ಇರುತ್ತದೆ ಆದರೆ ಎರಡನೆಯ ಸಲಾ ಅದೇ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹಾಗಾಗಿ ಈ ಸಲ ನಮ್ಮಿಂದ ತಪ್ಪಾಗುವುದು ಬೇಡ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ