ಭೀಮಕುಂಡ್/ನೀಲ್ ಕುಂಡ್

ನಮಗೆಲ್ಲ ತಿಳಿದಿರುವಂತೆ, ನಮ್ಮ ಭಾರತ ದೇಶ ವಿವಿಧತೆಗಳಲ್ಲಿ ಏಕತೆಯನ್ನು ಹೊಂದಿರುವುದರ ಜೊತೆಗೆ ಹಲವಾರು ವಿಶೇಷತೆಗಳನ್ನು ಹೊಂದಿರುವ ದೇಶವಾಗಿದೆ. ಕಲೆ, ಸಾಹಿತ್ಯ ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮ, ಆಚಾರ ವಿಚಾರಗಳಲ್ಲಿ ಇತರ ಎಲ್ಲಾ ದೇಶಗಳಿಗಿಂತಲೂ ಭಿನ್ನವಾಗಿ ನಿಲ್ಲುವುದಷ್ಟೇ ಅಲ್ಲದೇ, ಇಲ್ಲಿನ ಪ್ರಾಕೃತಿಕ ಇತಿಹಾಸವೂ ವಿಭಿನ್ನವಾಗಿದ್ದು, ತನ್ನ ಅಡಿಯೊಳಗೆ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಅಂತಹ ವಿಚಿತ್ರ ರಹಸ್ಯಗಳಲ್ಲಿ ಭೀಮ್ ಕುಂಡ್ ಅಥವಾ ನೀಲ್ ಕುಂಡ್ ಸಹಾ ಒಂದಾಗಿದೆ. ಈ ನೈಸರ್ಗಿಕ ಕೊಳದ ವಿಶೇಷತೆ ಏನೆಂದರೆ ಇದುವರೆಗೂ ಈ ಕೊಳದ ಆಳ ಎಷ್ಟಿದೆ ಎಂದು ತಿಳಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ದೇಶ ವಿದೇಶಗಳ ದೊಡ್ಡ ದೊಡ್ಡ ವಿಜ್ಞಾನಿಗಳೇ ಈ ಬಗ್ಗೆ ಅಧ್ಯಯನ ನಡೆಸಿದ್ದರೂ,ಇಲ್ಲಿನ ನೀರಿನ ಆಳ ಕಂಡು ಹಿಡಿಯಲು ಇದುವರೆಗೆ ಸಾಧ್ಯವಾಗಿದಿರುವುದು ಅಚ್ಚರಿಯ ಜೊತೆಗೆ ಹೆಮ್ಮೆಯನ್ನೂ ಮೂಡಿಸುತ್ತದೆ.

bheem4

ಮಧ್ಯಪ್ರದೇಶದ ಛತ್ತರ್ ಪುರ್ ಜಿಲ್ಲೆಯ ಬಜನಾ ಹಳ್ಳಿಯ ಬಳಿ ಇರುವ ನೈಸರ್ಗಿಕ ನೀರಿನ ಕೊಳ ಭೀಮಕುಂಡ ಅನೇಕ ಚಿತ್ರವಿಚಿತ್ರಗಳ ಸಂಗಮವಾಗಿದೆ. ಕುಂಡ್ ಬಾಯಿಯಿಂದ ಸುಮಾರು 3 ಮೀಟರ್ ದೂರದ ಗುಹೆಯಲ್ಲಿರುವ ತೆರೆದ ಛಾವಣಿಯ ಈ ಕೊಳದ ಪ್ರವೇಶದ್ವಾರದ ಎಡಭಾಗದಲ್ಲಿ ಸಣ್ಣ ಶಿವಲಿಂಗವಿದೆ. ಈ ಕೊಳದ ನೀರು ಕಡು ನೀಲಿ ಬಣ್ಣದಿಂದ ಕೂಡಿದ್ದು, ಅತ್ಯಂತ ಸ್ವಚ್ಛ ಮತ್ತು ಪಾರದರ್ಶಕವಾಗಿದ್ದು, ನೀರಿನಲ್ಲಿ ಈಜುತ್ತಿರುವ ಮೀನುಗಳನ್ನು ಬರಿಗಣ್ಣಿನಿಂದ ಸ್ಪಷ್ಟವಾಗಿ ನೋಡಬಹುದಾಗಿದೆ.

pandavas

ಈ ಕೊಳದ ಇತಿಹಾಸವು ಮಹಾಭಾರತದ ಒಂದು ಪೌರಾಣಿಕ ಕಥೆಯೊಂದಿಗೆ ಜೋಡಿಸಿಕೊಂಡಿದ್ದು ಪಾಂಡವರು ಅಜ್ಞಾತವಾಸದ ಸಮಯದಲ್ಲಿ ಕಾಡಿನಲ್ಲಿ ಹೋಗುತ್ತಿದ್ದಾಗ, ಸುಡುವ ಬಿಸಿಲಿಗೆ ಸುಸ್ತಾಗಿ ನಿರ್ಜಲೀಕರಣದಿಂದ ದ್ರೌಪದಿಯು ಬಾಯಾರಿಕೆಯಿಂದ ಮೂರ್ಛೆ ಹೋದಳಂತೆ. ಆಗ ಪಾಂಡವರಲ್ಲಿಯೇ ಅತ್ಯಂತ ಬಲಿಷ್ಟನಾದ ಭೀಮ ತನ್ನ ಗಧೆಯನ್ನೆತ್ತಿ ಭೂಮಿಗೆ ಅಪ್ಪಳಿಸಿದಾಗ ಈ ಕೊಳವು ಸೃಷ್ಟಿಯಾಯಿತೆಂತೆ. ಇದಾದ ನಂತರ ಈ ಗುಹೆಯಲ್ಲಿ ಒಂದಷ್ಟು ಕಾಲ ಪಾಂಡವರು ನೆಲೆಸಿದ್ದರು ಎಂಬುದು ಸ್ಥಳೀಯರ ನಂಬಿಕೆಯಾಗಿದೆ.

narada

ಇದೇ ರೀತಿಯ ಮತ್ತೊಂದು ಪುರಾಣದ ಪ್ರಕಾರ, ನಾರದಮುನಿಯು ಭಗವಾನ್ ವಿಷ್ಣುವನ್ನು ಇದೇ ಜಾಗದ ಬಳಿ ಕುಳಿತು ತನ್ನ ಗಂಧರ್ವ ಗಾಯನದ ಮೂಲಕ ಸ್ತುತಿಸಿದಾಗ, ಅವನ ಭಕ್ತಿಗೆ ಮೆಚ್ಚಿದ ಮಹಾವಿಷ್ಣು ಇದೇ ಕುಂಡದಿಂದ ಪ್ರತ್ಯಕ್ಷನಾದನಂತೆ. ಭಗವಾನ್ ವಿಷ್ಣುವಿನ ದೇಹದ ಕಪ್ಪು ಬಣ್ಣದಿಂದಾಗಿಯೇ ಇಲ್ಲಿನ ನೀರಿನ ಬಣ್ಣ ಕಡು ನೀಲಿ ಬಣ್ಣಕ್ಕೆ ತಿರುಗಿತು ಎಂಬುದೇ ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. ಹಾಗಾಗಿ ಈ ಕೊಳವನ್ನುನೀಲ್ ಕುಂಡ್ ಎನ್ನುವುದರ ಜೊತೆಯಲ್ಲಿನಾರದ ಕುಂಡ ಎಂದೂ ಕರೆಯುತ್ತಾರೆ. ಅಂದಿನಿಂದಲೂ ಇದು ಸಾಧು ಸಂತರ, ಋಷಿ ಮುನಿಗಳ ಅಚ್ಚುಮೆಚ್ಚಿನ ಜಾಗವಾಗಿದ್ದು ಸದ್ಯಕ್ಕೆ ಈ ಕೊಲ ಅತ್ಯಂತ ನೆಚ್ಚಿನ ಪ್ರವಾಸಿತಾಣವಾಗಿದ್ದು ಅನೇಕ ವಿಜ್ಞಾನಿಗಳಿಗೆ ಪ್ರಮುಖ ಅಧ್ಯಯನದ ಕೇಂದ್ರವಾಗಿ ಮಾರ್ಪಟ್ಟಿದೆ.

bhem4

ಇಲ್ಲಿ ತರ್ಕಕ್ಕೆ ನಿಲುಕದಂತಹ ಅನೇಕ ರಹಸ್ಯಗಳಿದ್ದು ಅವುಗಳಲ್ಲಿ ಪ್ರಮುಖವಾದದ್ದೆಂದರೆ, ಈ ಕೊಳದ ಆಳದ ಬಗ್ಗೆ ಅದೆಷ್ಟೇ ಮುಳುಗುತಜ್ಞರೂ ಬಂದು ಪ್ರಯತ್ನಿಸಿದರೂ ತಿಳಿಯಲು ಸಾಧ್ಯವಾಗಿಲ್ಲ. ಈ ವಿಷಯ ಡಿಸ್ಕವರಿ ಛಾನಲ್ ಅವರಿಗೆ ತಿಳಿದು ಬಂದು ಅವರೂ ಸಹಾ ತಮ್ಮ ತಜ್ಞರೊಂದಿಗೆ ಇಲ್ಲಿಗೆ ಬಂದು ಈ ಭೀಮ್ ಕುಂಡದ ಆಳವನ್ನು ತಿಳಿಯುವಲ್ಲಿ ವಿಫಲರಾಗಿ ಹೋದದ್ದು ಈಗ ಇತಿಹಾಸವಾಗಿದೆ. ಅವರ ಮುಳುಗುತಜ್ಞರು ಸುಮಾರು 80 ಮೀಟರ್ ಆಳದ ತನಕ ತಲುಪಿದ ಬಳಿಕ ಅತೀ ವೇಗದಲ್ಲಿ ನೀರಿನ ಸೆಲೆ ಇದ್ದ ಕಾರಣ ಮುಂದೆ ಹೋಗಲು ಸಾಧ್ಯವಾಗದೆ ಹಿಂದಿರುಗಿ ಬಂದಿದ್ದಂತೆ.

ಈ ರೀತಿಯಾಗಿ ನೀರಿನ ಆಳವನ್ನು ಕಂಡು ಹಿಡಿಯಲು ಸಾಧ್ಯವಾಗದಿದ್ದಾಗ, ಪಂಪ್ ಮೂಲಕ ನೀರನ್ನು ಹೊರ ತೆಗೆದು ಈ ಕೊಳದ ಆಳ ನೀಡುವ ಪ್ರಯತ್ನವನ್ನೂ ಮಾಡಲಾಯಿತಾದರೂ, ದ್ವಾಪರಯುಗದಲ್ಲಿ ದೌಪತಿ ವಸ್ತ್ರಾಭರಣದ ಸಂದರ್ಭದಲ್ಲಿ ದುಷ್ಯಾಸನ ಎಳೆದಷ್ಟೂ ಸೀರೆಯು ಬಂದಂತೆ, ಎಷ್ಟು ನೀರು ಹೊರತೆಗೆದರೂ ಮತಷ್ಟೇ ಅಷ್ಟೇ ನೀರು ಮತ್ತೆ ತುಂಬುತ್ತಿದ್ದ ಕಾರಣ ಆ ಪ್ರಯತ್ನವೂ ವಿಫಲವಾಗಿಯಿತು. ಈ ಕೊಳಕ್ಕೆ ನೀರು ಬರಲು ಒಂದು ಮಾರ್ಗವಿದ್ದು ಹೊರಕ್ಕೆ ಹೋಗಲು ಮತ್ತೊಂದು ಮಾರ್ಗವಿದೆ ಎಂದು ನಂಬಲಾಗಿದೆ. ಇನ್ನೂ ಕೆಲವರು ಹೇಳುವ ಪ್ರಕಾರ ಈ ಕೊಳ ನೇರವಾಗಿ ಸಮುದ್ರದೊಂದಿಗೆ ಸಂಪರ್ಕ ಹೊಂದಿರುವ ಕಾರಣ ಎಷ್ಟು ನೀರು ತೆಗೆದರೂ, ನೀರಿನ ಮಟ್ಟ ಸದಾಕಾಲವೂ ಒಂದೇ ರೀತಿಯಲ್ಲಿ ಇದ್ದು ಇದುವರೆವಿಗೂ ಎಂತಹ ಕಡು ಬೇಸಿಗೆಯಲ್ಲಿಯೂ ಸಹಾ ಇದು ಬತ್ತಿಲ್ಲವಂತೆ.

ಸಾಮಾನ್ಯವಾಗಿ ಕೆರೆ, ಬಾವಿ, ಸಮುದ್ರದಲ್ಲಿ ಮನುಷ್ಯರು ಅಕಸ್ಮಾತ್ ಮುಳುಗಿ ಹೋದಾಗ ಒಂದೆರಡು ದಿನಗಳಲ್ಲಿ ಅವರ ಮೃತದೇಹ ಮೇಲಕ್ಕೆ ತೇಲಿಕೊಂಡು ಬರುವುದು ಸಹಜ ಪ್ರಕ್ರಿಯೆಯಾದರೆ, ಭೀಮ ಕುಂಡದಲ್ಲಿ ಅಚಾನಕ್ಕಾಗಿ ಮುಳುಗಿ ಸತ್ತವರ ದೇಹ ಇದುವರೆಗೂ ನೀರಿನ ಮೇಲೆ ತೇಲಿ ಬಂದಿಲ್ಲವಂತೆ.

earthquake1

ಈ ಕೊಳದ ಮತ್ತೊಂದು ವಿಶೇಷವೇನೆಂದರೆ, ಪ್ರಪಂಚದಲ್ಲಿ ಎಲ್ಲೇ ಯಾವುದೇ ಪ್ರಾಕೃತಿಕ ವಿಕೋಪಗಳು ನಡೆದರು ಅದರ ಮುನ್ಸೂಚನೆಯನ್ನೂ ಇಲ್ಲಿ ಕಾಣಬಹುದಾಗಿದೆ. ಸರ್ವೇ ಸಾಮಾನ್ಯದಿನಗಳಲ್ಲಿ ಒಂದೇ ಮಟ್ಟದಲ್ಲಿರುವ ನೀರು, ಸುನಾಮಿ, ಭೂಕಂಪದಂತಹ ವಿಕೋಪಗಳು ಸಂಭವಿಸುವ ಮುನ್ನಾ ಇದ್ದಕ್ಕಿದ್ದಂತೆಯೇ ಈ ಭೀಮ ಕುಂಡದ ನೀರು ಹೆಚ್ಚಾಗುತ್ತದೆಯಂತೆ. ಜಪಾನ್, ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿ ಸಂಭವಿಸಿದಾಗಲೂ ಇಲ್ಲಿನ ನೀರಿನ ಮಟ್ಟ ಏರಿಕೆಯಾಗಿತ್ತೆಂದು ಇಲ್ಲಿನ ಪ್ರತ್ಯಕ್ಷ ದರ್ಶಿಗಳು ಹೇಳುತ್ತಾರೆ.

bhm2

ಇಷ್ಟೆಲ್ಲಾ ಕೌತಕದಿಂದ ಕೂಡಿರುವ ಈ ಕೊಳವನ್ನು ನೋಡಲು ಮತ್ತು ಇಲ್ಲಿನ ಸ್ಪಟಿಕ ನೀರಿನಲ್ಲಿ ಮಿಂದೇಳಲು ದೇಶ ವಿದೇಶಗಳಿಂದ ಪ್ರತಿದಿನವೂ ಸಾವಿರಾರು ಜನರು ಬರುತ್ತಾರೆ. ಇಲ್ಲಿಗೆ ವಿಮಾನದಲ್ಲಿ ಬರಬೇಕೆಂದರೆ, ಭೀಮಕುಂಡದಿಂದ 92 ಕಿಮೀ ದೂರದಲ್ಲಿರುವ. ಖಜುರಾಹೋ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ಭೀಮಕುಂಡ್ ತಲುಪ ಬಹುದಾಗಿದೆ.

ಇನ್ನು ರೈಲಿನ ಮುಖಾಂತರ ಛತ್ತರ್ಪುರ್ ಮಹಾರಾಜ ಛತ್ರಸಲ್ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಸುಮಾರು 80 ಕಿಮೀ ದೂರದಲ್ಲಿರುವ ಭೀಮಕುಂಡಕ್ಕೆ ಖಾಸಗೀ ವಾಹನದ ಮೂಲಕ ತಲುಪಬಹುದಾಗಿದೆ.

ಇನ್ನೇಕೆ ತಡಾ ಸ್ವಲ್ಪ ಸಮಯ ಮಾಡಿಕೊಂಡು ರೈಲು ಇಲ್ಲವೇ ವಿಮಾನದ ಮುಖಾಂತರ ಮಧ್ಯಪ್ರದೇಶದ ಭೀಮ್ ಕುಂಡ್ ಗೆ ಭೇಟಿ ಕೊಟ್ಟು ಕೌತುಕದ ಭೀಮ್ ಕುಂಡಿನ ಸ್ಪಟಿಕದಂತಹ ನೀರಿನಲ್ಲಿ ಸ್ನಾನ ಮಾಡಿ ಪುಳಕಿತರಾಗ್ತೀರೀ ತಾನೇ?

ಇದೇ ಲೇಖನ ಈ ತಿಂಗಳ ಸಂಪ ಮಾಸಪತ್ರಿಕೆಯಲ್ಲಿಯೂ ಪ್ರಕಟವಾಗಿದೆ.

ಏನಂತೀರಿ?
ನಿಮ್ಮವನೇ ಉಮಾಸುತ

ಭೀಮ್ ಕುಂಡ್ ಅಥವಾ ನೀಲ್ ಕುಂಡನ್ನು ಇಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.