ಕೋತಿ ರಾಜ್ ಉರ್ಫ್ ಜ್ಯೋತಿರಾಜ್

ಜೀವಶಾಸ್ತ್ರದಲ್ಲಿ ನಾವೆಲ್ಲರೂ ಓದಿದಂತೆ ಮಂಗನಿಂದ ಮಾನವನಾಗಿ ಪರಿವರ್ತನೆಯಾದ ಎಂದು ಕೇಳಿದ್ದೇವೆ. ಅದಕ್ಕೆ ಪುರಾವೆ ಎನ್ನುವಂತೆ ಇಲ್ಲೊಬ್ಬ ಮನುಷ್ಯ ಅಕ್ಷರಶಃ ಮಂಗನಂತೆ ಚಂಗನೆ ಒಂದು ಕೆಡೆಯಿಂದ ಮತ್ತೊಂದು ಕಡೆಗೆ ಹಾರುತ್ತಾ ಎತ್ತೆರತ್ತರದ ಯಾವುದೇ ಅಸರೆ ಇಲ್ಲದ ಬಂಡೆಗಳನ್ನು ಯಾವುದೇ ಅಥವಾ ಯಾರದ್ದೇ ಸಹಾಯವಿಲ್ಲದೇ ಏರುತ್ತಾ ಇಳಿಯುತ್ತಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆಗಳನ್ನು ಮಾಡಿರುವ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಅವರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.

ಸಂದರ್ಶನವೊಂದರಲ್ಲಿ ಜ್ಯೋತಿರಾಜ್ ಅವರೇ ಹೇಳಿದಂತೆ ಅವರು ಮೂಲತಃ ತಮಿಳುನಾಡಿನವರು. 1988 ಆಗಸ್ಟ್ 15 ರಂದು ಜನಿಸಿದವರು. ತಮಿಳುನಾಡು ಮಧುರೆ ಜಿಲ್ಲೆಯ ತೇನಿ ಗ್ರಾಮದ ಜ್ಯೋತಿರಾಜ್ ಅವರಿಗೆ ಕೇವಲ ೩ ವರ್ಷದ ವಯಸ್ಸಾಗಿರುವಾಗ ತಮ್ಮ ಊರಿನ ಹತ್ತಿರದ ಜಾತ್ರೆಯೊಂದರರಲ್ಲಿ ತಮ್ಮ ಪೋಷಕರಿಂದ ತಪ್ಪಿಸಿಕೊಂಡು ತಮಿಳು ಮೂಲದವರೇ ಆದರೂ ಬಾಗಲಕೋಟೆಯಲ್ಲಿ ಬೇಕರಿಯೊಂದನ್ನು ನಡೆಸುತ್ತಿದ್ದ ದಂಪತಿಗಳ ಕೈಗೆ ಸಿಕ್ಕಿ ಅವರ ಆಶ್ರಯದಲ್ಲೇ ಸುಮಾರು 10-12 ವರ್ಷಗಳ ಕಾಲ ಬೆಳೆಯುತ್ತಾರೆ. ಅವರ ಮನೆಯಲ್ಲಿ ಕೊಡುತ್ತಿದ್ದ ಕಾಟವನ್ನು ತಾಳಲಾರದೇ, ಹೇಗಾದರೂ ಮಾಡಿ ಬೆಂಗಳೂರಿಗೆ ಹೋಗಿ ಯಾವುದಾದರೂ ಕೆಲಸ ಗಿಟ್ಟಿಸಿಕೊಂಡು ಜೀವನವನ್ನು ನಡೆಸಿಕೊಂಡು ಹೋಗಬಹುದು ಎಂದು ನಿರ್ಧರಿಸಿ ಬಾಗಲಕೋಟೆಯ ಬೇಕರಿಯಿಂದ ಓಡಿ ಬೆಂಗಳೂರಿಗೆ ಬರುವ ದಾರಿಯಲ್ಲಿ ಚಿತ್ರದುರ್ಗದ ಬಳಿ ಮಹದೇವಪ್ಪ ಎಂಬುವರ ಪರಿಚಯವಾಗಿ ಅವರ ಮನೆಯಲ್ಲೇ ಕೆಲ ವರ್ಷಗಳಿದ್ದು ಅವರ ಜೊತೆಯಲ್ಲೇ ಕಟ್ಟಡ ಕೆಲಸದ ಕೂಲೀ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ.

ಅದೊಮ್ಮೆ ಅದಾವುದೋ ವಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಜ್ಯೋತಿರಾಜ್ ಸಾಯಲು ನಿರ್ಧರಿಸಿ, ಮೊತ್ತ ಮೊದಲ ಬಾರಿಗೆ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಗೆ ಬಂದು ದಿನವಿಡೀ ಕೋಟೆಯೆಲ್ಲಾ ಸುತ್ತಾಡಿ ಸಂಜೆ ಹೊತ್ತಿಗೆ ಅಲ್ಲಿಯ ಗುಡಿಯೊಂದರ ಹಿಂದೆ ಸುಮಾರು ಅರ್ಧಲೀಟರ್ ಕೀಟನಾಶಕವನ್ನು ಕುಡಿದು ಸತ್ತೇ ಹೋದನೆಂದು ಭ್ರಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುತ್ತಾರೆ. ಆಯಸ್ಸು ಗಟ್ಟಿಗಿದ್ದರೆ ಯಾರೂ ಏನೂ ಮಾಡಲಾಗುವುದಿಲ್ಲ ಎನ್ನುವಂತೆ ಮಾರನೇಯ ದಿನ ಬೆಳಿಗ್ಗೆ ಸಹಜವಾಗಿ ಎಚ್ಚರವಾಗಿ ತಾನು ಸತ್ತಿಲ್ಲದಿರುವುದನ್ನು ಖಚಿತಪಡಿಸಿಕೊಂಡು ಅಲ್ಲಿಂದ ಗೋಪಾಲಸ್ವಾಮಿ ಹೊಂಡದಲ್ಲಿ ಬಿದ್ದು ಸಾಯಲು ಪ್ರಯತ್ನಿಸಿದರಾದರೂ ಸರಾಗವಾಗಿ ಈಜು ಬರುತ್ತಿದ್ದ ಕಾರಣ ಅಲ್ಲಿಯೂ ಸಾಯಲಾಗದೇ ಅಂತಿಮವಾಗಿ ಅಲ್ಲಿಯೇ ಇದ್ದ ಸುಮಾರು 80-100 ಅಡಿ ಎತ್ತರದ ಹಂಸಗೀತೆ ಎಂಬ ಹೆಬ್ಬಂಡೆ ಏರಿ ಆ ಬಂಡೆಯಿಂದ ಕೆಳಗೆ ಬಿದ್ದು ಸಾಯ ಬಹುದು ಎಂದು ನಿರ್ಧರಿಸಿ ನೋಡ ನೋಡುತ್ತಿದ್ದಂತೆಯೇ ಯಾವುದೇ ಸಹಾಯವಿಲ್ಲದೇ ಚಕ ಚಕನೆ ಆ ಬಂಡೆಯನ್ನು ಏರಿ ಕೆಳಗೆ ನೋಡಿದ್ದಲ್ಲಿ ದುರ್ಗವನ್ನು ನೋಡಲು ಬಂದಿದ್ದ ಪ್ರವಾಸಿಗರು ಜೋರಾಗಿ ಚಪ್ಪಾಳೆ ತಟ್ಟುತ್ತಾ ಸಿಳ್ಳೇ ಹೊಡೆಯುತ್ತಾ ಅಲ್ನೋಡ್ರೋ ಕೋತಿ ಮನುಷ್ಯ ಎಂದು ಕೂಗಿಹೇಳೀದ್ದೇ ಅವರ ಜೀವನದಲ್ಲಿ ಭಾರೀ ಬದಲಾವಣೆ ತರುತ್ತದೆ.

kothiದುರ್ಗದ ಕೋಟೆಯಲ್ಲಿದ್ದ ಕೋತಿಗಳು ಅಷ್ಟು ಸಲೀಸಾಗಿ ಮರದಿಂದ ಮರಕ್ಕೆ, ಬಂಡೆಯಿಂದ ಬಂಡೆಗೆ ಹೇಗೆ ಹಾರುತ್ತವೆ ಎಂಬುದನ್ನು ಗಮನಿಸಿ, ತಾನೂ ಅದೇ ರೀತಿ ಬೃಹತ್ ಬಂಡೆಗಲ್ಲುಗಳನ್ನು ಹತ್ತುವ ಸಾಹಸಿ ಗುಣವನ್ನು ಮೈಗೂಡಿಸಿಕೊಂಡ ಜ್ಯೋತಿರಾಜ್ ಅಲ್ಲಿಂದ ಕೋತಿರಾಜ್ ಆಗಿ ಬದಲಾವಣೆಯಾಗುತ್ತಾರೆ. ಕೋಟೆಯ ವೀಕ್ಷಣೆಗೆ ಬರುವ ರಾಜ್ಯ, ಹೊರರಾಜ್ಯ, ವಿದೇಶಿ ಪ್ರವಾಸಿಗರ ಮುಂದೆ ತನ್ನ ಈ ಸಾಹಸವನ್ನು ಪ್ರದರ್ಶಿಸಿ ಅವರು ಕೊಡುವ ಅಷ್ಟಿಷ್ಟು ಹಣದಿಂದಲೇ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವಾಗಲೇ ಅವರ ಈ ಸಾಹಸ ಒಬ್ಬರಿಂದ ಮತ್ತೊಬ್ಬರಿಗೆ ತಿಳಿಯುತ್ತಾ ಹೋಗಿ ದೇಶ ವಿದೇಶದ ಮಾಧ್ಯಮದವರು ಆವರನ್ನು ಸಂದರ್ಶಿಸಿದ್ದಲ್ಲದೇ, ಆತನ ಸಾಹಸ ಕುರಿತಂತೆ ಕತೆಗಳು, ಡಾಕ್ಯೂಮೆಂಟರಿಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿ ಬಿಡುವ ಮೂಲಕ ಜ್ಯೊತಿರಾಜ್ ಅಲಿಯಾಸ್ ಕೋತಿರಾಜ್ ಪ್ರಖ್ಯಾತಿಯನ್ನು ಹೊಂದುತ್ತಾರೆ. ಈತನ ಜನಪ್ರಿಯತೆಯನ್ನು ಬಳಸಿಕೊಂಡು ಹಣ ಮಾಡಬಹುದೆಂದು ಈತನನ್ನು ನಾಯಕತ್ವದಲ್ಲಿ ಜ್ಯೋತಿ ಅಲಿಯಾಸ್ ಕೋತಿರಾಜ ಕನ್ನಡ ಚಿತ್ರವೊಂದು ಬಿಡುಗಡೆಯಾಗಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಕೋತಿರಾಜ್ ನ ಸಮಗ್ರ ಪರಿಚಯ ನಾಡಿಗೆ ಆಗುತ್ತದೆ.

kothi3ತಮಿಳು ಭಾಷೆಯ ವೃತ್ತ ಪತ್ರಿಕೆಯಲ್ಲಿ ಕೋತಿರಾಜ್ ಬಗ್ಗೆ ಬಂದಿದ್ದ ವಿಷಯವನ್ನು ಓದಿ ತಿಳಿದ ಆತನ ನಿಜವಾದ ತಂದೆ ವಂಡಿಕಾರನ್ ಈಶ್ವರನ್ ಅವರು ಆತ ತನ್ನ ಮಗ ಎಂದು ತಿಳಿದು ಮಗನನ್ನು ಹುಡುಕಿಕೊಂಡು ಚಿತ್ರದುರ್ಗಕ್ಕೆ ಬಂದು 90ರ ದಶಕಲ್ಲಿ ವೀರಪಾಂಡಿ ಜಾತ್ರೆಯಲ್ಲಿ ತಾವು ಕಳೆದು ಕೊಂಡ ಮಗ ಈತನೆಂದೇ ಗುರುತಿಸುತ್ತಾರೆ. ನಂತರ ಆತನನ್ನು ಸಾಕಿ ಬೆಳಿಸಿದ್ದ ಬಾಗಲಕೋಟೆಯ ಬೇಕರಿ ಕುಟುಂಬದ ಮಧ್ಯಸ್ಥಿಕೆಯಲ್ಲಿ ಎಲ್ಲವೂ ನಿರ್ಧಾರವಾಗಿ ಜ್ಯೋತಿರಾಜ್ ತನ್ನ ಹುಟ್ಟೂರಿಗೆ ಹೋದಾಗ ಅದೇ ಜಾತ್ರೆಯ ಸಮಯವಾಗಿದ್ದು ಕಳೆದು ಹೋದ ತನ್ನ ಮಗ ಸಿಕ್ಕ ಸಂತೋಷದಲ್ಲಿ ಆತನ ತಂದೆ ಸುಮಾರು 10-12 ಹೋತಗಳನ್ನು ಕಡಿಸಿ ಭೂರಿ ಭೋಜನವನ್ನು ತಯಾರಿಸಿ ಇಡೀ ಊರಿಗೇ ಊಟಹಾಕಿಸುತ್ತಾರೆ. ಈತನ ಸಾಹಸವನ್ನು ಕಂಡ ತಮಿಳುನಾಡು ಸರ್ಕಾರವೂ ಆತನಿಗೆ ಬೇಕಾದ ಸಹಾಯ ಮಾಡಲು ಮುಂದಾದರೂ, ತಾನು ಹುಟ್ಟಿದ್ದು ತಮಿಳುನಾಡಾದರು ನನ್ನ ಕರ್ಮ ಭೂಮಿ ಕರ್ನಾಟಕ ಅದರಲ್ಲೂ ಚಿತ್ರದುರ್ಗ. ಹಾಗಾಗಿ ನಾನು ಎಂದೆಂದೂ ಕನ್ನಡಿಗನೇ ಮತ್ತು ನಾನು ಸಾಯುವುದೂ ಕನ್ನಡಿಗನಾಗಿಯೇ ಎಂದು ಹೆಮ್ಮೆಯಿಂದ ನುಡಿದು ಮತ್ತೆ ಚಿತ್ರದುರ್ಗಕ್ಕೆ ಹಿಂದಿರುಗುತ್ತಾನೆ.

discoveryಅದೇ ಸಮಯಕ್ಕೆ ಈತನ ಸಾಹಸದ ಬಗ್ಗೆ ತಿಳಿದ ಡಿಸ್ಕವರಿ ಛಾನೆಲ್ ತಮ್ಮ ಸೂಪರ್ ಹೀಮ್ಯಾನ್ ಸರಣಿಗೆ ಈತನನ್ನು ಸಂಪರ್ಕಿಸಿ ಚಿತ್ರೀಕರಣಕ್ಕೆ ವಿದೇಶಕ್ಕೆ ಬರಲು ಸೂಚಿಸುತ್ತಾರೆ. ಅಷ್ಟು ದೊಡ್ಡ ಮಾಧ್ಯಮವು ತನಗೆ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಸಂತೋಷವಾದರೂ, ತನ್ನ ಪ್ರತಿಭೆಯನ್ನು ಪ್ರೋತ್ಸಾಹಿಸಿ ತನಗೆ ಈ ಪರಿಯಾದ ಬೆಂಬಲವನ್ನು ನೀಡಿರುವ ಚಿತ್ರದುರ್ಗದಲ್ಲಿ ಚಿತ್ರೀಕರಿಸಿದಲ್ಲಿ ಮಾತ್ರವೇ ತಾನು ಒಪ್ಪಿಕೊಳ್ಳುವುದಾಗಿ ಷರತ್ತನ್ನು ಹಾಕುತ್ತಾನೆ. ಆರಂಭದಲ್ಲಿ ಛಾನೆಲ್ ಅವರು ಅದಕ್ಕೊಪ್ಪದೇ ಹೋದರೂ ನಂತರದ ದಿನಗಳಲ್ಲಿ ಅದಕ್ಕೊಪ್ಪಿ ಚಿತ್ರದುರ್ಗಕ್ಕೆ ಬಂದು ಈತನ ಸಾಹಸಗಳನ್ನೆಲ್ಲಾ ನೋಡಿ ಅಚ್ಚರಿಗೊಂಡು ಕಡೆಗೆ ದುರ್ಗದ ಬಳಿಯೇ ಇರುವ ಚಂದವಳ್ಳಿ ತೋಟದಲ್ಲಿದ್ದ ಕಡಿದಾದ ಯಾವುದೇ ಹಿಡಿತವೂ ಸಿಗದಿದ್ದಂತಹ ಬಂಡೆಯೊಂದನ್ನು ಏರಲು ಸೂಚಿಸುತ್ತಾರೆ. ಅವರ ಸವಾಲನ್ನು ಸ್ವೀಕರಿಸಿದ ಕೋತಿರಾಜ್ ಅವರು ಊಹಿಸಿದ್ದಕ್ಕಿಂತಲೂ ಕಡಿಮೆ ಸಮಯದಲ್ಲಿ ಆ ಬಂಡೆಯನ್ನು ಏರುವ ಮೂಲಕ ತಾನು ಕೇವಲ super he man ಮಾತ್ರವಾಗಿರದೇ, super super he man ಎಂದು ಸಾಭೀತು ಮಾಡಿ ತೋರಿಸುವ ಮೂಲಕ ಜಗದ್ವಿಖ್ಯಾತರಾಗುತ್ತಾರೆ.

ಚಿತ್ರದುರ್ಗದ ಬೆಟ್ಟವಲ್ಲದೇ ಕನ್ಯಾಕುಮಾರಿಯಿಂದ ಕಾಶ್ಮೀರದ ವರಗೆ, ಅಟಕ್ ನಿಂದ ಕಟಕ್ ವರೆಗೆ ದೇಶಾದ್ಯಂತ ಇರುವ ನಾನಾ ಸಾಹಸ ಬಂಡೆಗಳನ್ನು ಏರುವುದರ ಜೊತೆಗೆ ಭಾರತದ ಸ್ಪೈಡರ್ಮ್ಯಾನ್ ಎಂದೇ ಪ್ರಖ್ಯಾತಿ ಪಡೆಯುತ್ತಾರೆ. ಬರಿಗೈಯಲ್ಲಿಯೇ ಕಡಿದಾದ ಬಂಡೆಗಳನ್ನು ಸುಲಭವಾಗಿ ಏರುವ ಕರ್ನಾಟಕದ ಈ ಪ್ರತಿಭಾವಂತ ಪರ್ವತಾರೋಹಿ ಜ್ಯೋತಿರಾಜ್ ತನ್ನೀ ವಿದ್ಯೆಯನ್ನು ಹತ್ತಾರು ಹುಡುಗರಿಗೆ ಕಲಿಸಿಕೊಡಬೇಕು ಎಂದು ನಿರ್ಧರಿಸಿದ್ದಲ್ಲದೇ, ಈ ವಿದ್ಯೆಯಿಂದ ನಾಲ್ಕಾರು ಜೀವ ಉಳಿಸುವ ಕೆಲಸಕ್ಕೆ ಬಳಸಿಕೊಂಡು ಸಾರ್ಥಕತೆ ಪಡೆಯಲು ನಿರ್ಧರಿಸಿ, ದೂರದ ಅಮೇರಿಕಾದಲ್ಲಿ ಬೆಟ್ಟ ಗುಡ್ಡಗಳಲ್ಲಿ ಸಿಲುಕಿಕೊಂಡವರನ್ನು ಪಾರುಮಾಡುವುದರ ಕುರಿತಂತೆ ತರಭೇತಿಯನ್ನೂ ಪಡೆದು ಬಂಡೆಗಳ ಮಧ್ಯೆ ಸಿಲುಕಿ ಕೊಂಡಿದ್ದ ಹತ್ತು ಹಲವಾರು ಜನರ ಪ್ರಾಣವನ್ನು ಉಳಿಸಿದ್ದಾರೆ. ಈಗಾಗಲೇ ಅವರಿಂದ ತರಭೇತಿ ಪಡೆದ ಅನೇಕರು ಸೇನೆ ಮತ್ತು ಪೋಲೀಸ್ ಕೆಲವನ್ನು ಗಿಟ್ಟಿಸಿಕೊಂಡಿದ್ದರೆ, ಇಂದಿಗೂ ಸುಮಾರು 8-10 ಹುಡುಗರ ಸಂಪೂರ್ಣ ಜವಾಬ್ಧಾರಿಯನ್ನು ಜ್ಯೋತಿ ರಾಜ್ ನಿಭಾಯಿಸುತ್ತಿರುವುದು ಅತ್ಯಂತ ಶ್ಲಾಘನಿಯವಾಗಿದೆ.

ಫೆಬ್ರವರಿ 28, 2018 ರಂದು ವಿಶ್ವವಿಖ್ಯಾತ ಜೋಗದ ಜಲಪಾತಕ್ಕೆ ಬಂದಿದ್ದ ಯುವಕರ ತಂಡವು ಕಾಲು ಜಾರಿ ಜೋಗದ ಪ್ರಪಾತಕ್ಕೆ ಬಿದ್ದು ಹೋದಾಗ, ಅವರ ಶವದ ಪತ್ತೆಗಾಗಿ ಪೋಲಿಸರು ಜ್ಯೋತಿರಾಜ್ ಅವರ ಸಹಾಯವನ್ನು ಕೇಳಿಕೊಳ್ಳುತ್ತಾರೆ. ಸುಮಾರು800-1000 ಅಡಿಗಳಷ್ಟು ಎತ್ತರವಿರುವ ಜೋಗದ ಜಲಪಾತವನ್ನು ಅದಾಗಲೇ ೬-೮ ಬಾರಿ ಹತ್ತಿ ಇಳಿದಿದ್ದ ಕೋತಿರಾಜ್ ಅದಕ್ಕೆ ಒಪ್ಪಿಕೊಂಡು ಆ ಕೆಲಸದಲ್ಲಿ ನಿರತನಾಗಿ ಆ ಹುಡುಗನ ಶವವನ್ನು ಪತ್ತೆ ಹಚ್ಚಿ ತನ್ನ ಹೆಗಲಮೇಲೆ ಹಾಕಿಕೊಂಡು ಮೇಲೇರುತ್ತಿರುವಾಗ ಸಡಿಲವಾಗಿದ್ದ ಬಂಡೆ ಕಲ್ಲೊಂದು ಜ್ಯೋತಿರಾಜ್ ತಲೆಯ ಮೇಲೆ ಬಿದ್ದು ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಕೈ ಜಾರಿ ಜ್ಯೋತಿರಾಜ್ ಪ್ರಪಾತಕ್ಕೆ ಜಾರಿ ಬೀಳುವ ಮೂಲಕ ಎಲ್ಲರೂ ಜ್ಯೋತಿರಾಜ್ ಸತ್ತನೆಂದೇ ಭಾವಿಸಿದ್ದಾಗ ಅಷ್ಟೆಲ್ಲಾ ಅಪಘಾತಗಳ ನಡುವೆಯೂ ಬದುಕುಳಿದ ಜ್ಯೋತಿರಾಜ್ ನನ್ನು ಚಿಕಿತ್ಸೆಗಾಗಿ ಆಸ್ಪತೆಗೆ ಸೇರಿಸಲಾಗುತ್ತದೆ. ಸುಮಾರು 9 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಕಳೆದ 57 ಕೆಜಿ ತೂಕವಿದ್ದ ಜ್ಯೋತಿರಾಜ್, ಆಸ್ಪತ್ರೆಯಿಂದ ಹೊರಬರುವಷ್ಟರಲ್ಲಿ 96 ಕೆಜಿಯಷ್ಟು ದಪ್ಪವಾಗಿರುತ್ತಾರೆ.

ತನ್ನ ಕರ್ಮಭೂಮಿ ಚಿತ್ರದುರ್ಗದ ಕೋಟೆಯನ್ನು ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲವ್ವಾದರಿಂದ ಅದಕ್ಕಾಗಿ ತನ್ನಿಂದೇನಾದರೂ ಸಹಾಯ ಮಾಡಲೇ ಬೇಕೆಂದು ನಿರ್ಧರಿಸಿ ದುಬೈನಲ್ಲಿರುವ ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮತ್ತು ಅಮೆರಿಕಾದ ವೆನೆಜುಲ್ಲಾದಲ್ಲಿರುವ ಈ ಏಂಜಲ್ ಫಾಲ್ಸ್ ರುದ್ರ ರಮಣೀಯವಾದ ಮತ್ತು ಜಗತ್ತಿನ ಅತ್ಯಂತ ಕಡಿದಾದ ಜಾರುವ ಬಂಡೆಗಳಿರುವ ಜಲಪಾತವನ್ನು ಏರುವ ಮೂಲಕ ಬರುವ ಹಣದಲ್ಲಿ ಚಿತ್ರದುರ್ಗದ ಅಭಿವೃದ್ಧಿ ಮಾಡುತ್ತೇನೆೆ ಎಂಬ ಸಾಹಸಕ್ಕೆ ಕೈ ಹಾಕಿದ್ದರು. ದುರಾದೃಷ್ಟವಷಾತ್ ಅವರ ದೇಹದ ತೂಕ ಹೆಚ್ಚಾಗಿರುವ ಕಾರಣ ಈ ಸಾಹಸದಲ್ಲಿ ಪಾಲ್ಕೊಳ್ಳುವುದು ಪ್ರಾಣಕ್ಕೆ ಅಪಾಯ ಎಂದು ಅಲ್ಲಿನ್ನವರು ಸೂಚಿಸಿರುವ ಕಾರಣ ದೇಹದ ತೂಕವನ್ನು ಇಳಿಸಿ ಎಲ್ಲವೂ ಸುಗಮ ಎಂದು ಕೊಳ್ಳುತ್ತಿರುವಾಗಲೇ ಕೊರೋನಾ ಮಹಾಮಾರಿ ವಕ್ಕರಿಸಿ ಅವರ ಆಸೆಗೆ ತಣ್ಣಿರೆರೆಚಿದೆ.

azadಆಯುರ್ವೇದದ ಚಿಕಿತ್ಸೆ ಮತ್ತು ವ್ಯಾಯಾಮಗಳ ಮೂಲಕ ತೂಕ ಇಳಿಸಿಕೊಂಡು ಖಂಡಿತವಾಗಿಯೂ ಎಂಜಲ್ ಫಾಲ್ಸ್ ಏರಿಯೇ ತೀರುತ್ತೇನೆ ಎಂಬ ಭರವಸೆಯೊಂದಿಗೆ ತಮ್ಮ ಶಿಷ್ಯಂದಿರಿಗೆ ಪ್ರತಿದಿನವೂ ತರಭೇತಿ ನೀಡುತ್ತಾ ಪ್ರತೀ ಭಾನುವಾರ ದುರ್ಗದ ಪ್ರವಾಸಿಗರಿಗೆ ತಮ್ಮ ಸಾಹಸವನ್ನು ತೋರಿಸುತ್ತಾ ಅವರು ಕೊಡುವ ಅಲ್ಪ ಸ್ವಲ್ಪ ಹಣದಲ್ಲಿ ತಾವೂ ಮತ್ತು ತಮ್ಮ ಶಿಷ್ಯಂದಿರ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಸುದೀಪ್ ದರ್ಶನ್, ಶಾರೂಖ್ ಖಾನ್ ಅವರುಗಳು ಕೇವಲ ಸಿನಿಮಾದ ಹೀರೋಗಳಷ್ಟೇ. ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಜಾದ್ ಅವರಂತಹವರು ಈ ದೇಶದ ನಿಜವಾದ ಹೀರೋಗಳಾಗಿದ್ದು ಅವರೇ ನನ್ನ ಸ್ಪೂರ್ತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜ್ಯೋತಿರಾಜ್ ನನ್ನ ಜೀವಮಾನದಲ್ಲಿ ಖಂಡಿತವಾಗಿಯೂ ತನ್ನ ತಾಯ್ನಾಡಾದ ಭಾರತಕ್ಕೂ ಮತ್ತು ತನಗೆ ಆಶ್ರಯ ನೀಡಿದ ಕರ್ನಾಟಕ ಮತ್ತು ತನ್ನ ಕರ್ಮ ಭೂಮಿ ಚಿತ್ರದುರ್ಗಕ್ಕೆ ಕೀರ್ತಿ ತಂದೇ ತರುತ್ತೇನೆ ಎಂದು ಹೇಳುವಾಗ ಅವರ ದಿಟ್ಟ ನುಡಿಗಳು ಮತ್ತು ಹೊಳೆಯುವ ಕಣ್ಗಳು ನಿಜಕ್ಕೂ ನಮ್ಮ ನಿಮ್ಮಂತಹವರಿಗೆ ಪ್ರೇರಣೆ ನೀಡುತ್ತದೆ.

koti_jogಸುಮಾರು 830 ಅಡಿ ಎತ್ತರವಿರುವ ಕರ್ನಾಟಕದ ಅತಿ ದೊಡ್ಡದಾದ ಜೋಗ ಜಲಪಾತವನ್ನು ನೀರಿನ ಹರಿವಿಗೆ ವಿರುದ್ಧವಾಗಿ ಏರಿದ ಏಕೈಕ ವ್ಯಕ್ತಿ. ಯಾವುದೇ ಸಾಧನಗಳನ್ನು ಬಳಸದೇ ಕೇವಲ 15 ಸೆಕೆಂಡುಗಳಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಗಡಿಯಾರ ಗೋಪುರವನ್ನು ಹತ್ತಿದಂತಹ ಅಂತಾರಾಷ್ಟ್ರೀಯ ರಾಕ್ಕ್ಲೈಂಬರ್ ಸಿ.ಎಂ.ಪ್ರವೀಣ್ರಿಂದ ತರಬೇತಿ ಪಡೆದಿರುವಂತಹ ಸಾಹಸಿ ಕೋತಿರಾಜ್ ಅವರು ಅತೀ ಶೀಘ್ರದಲ್ಲಿಯೇ ವೆನಿಜ್ಯೂವೆಲಾದ ಏಂಜಲ್ ಫಾಲ್ಸ್ ಏರುವ ಮೂಲಕ ಅವರಿಗೆ ಅಂತರಾಷ್ಟ್ರೀಯ ಮನ್ನಣೆ ಸಿಗುವ ಮೂಲಕ ಭಾರತದ ವಿಜಯ ಪತಾಕೆ ವಿಶ್ವಾದ್ಯಂತ ಹರಡಲಿ ತನ್ಮೂಲಕ ಜ್ಯೋತಿರಾಜ್ ಅವರ ಕನಸೆಲ್ಲಾ ನನಸಾಗಲಿ ಮತ್ತು ನಮ್ಮ ಇಂದಿನ ಯುವಜನತೆಗೆ ಪ್ರೇರಣೆಯಾಗಲಿ ಎಂದು ಹಾರೈಸೋಣ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ದಕ್ಷಿಣ ಕಾಶೀ ಅಂತರ ಗಂಗೆ

ಇಂದು ಈ ವರ್ಷದ  ಮೊದಲ ಕಾರ್ತೀಕ ಸೋಮವಾರ.  ಕಾರ್ತೀಕ ಸೋಮವಾರದಂದು ಶಿವನ ದರ್ಶನ ಮಾಡಿದರೆ ಅದರಲ್ಲೂ ಕಾಶೀ ವಿಶ್ವೇಶ್ವರನ ದರ್ಶನ ಮಾಡಿದಲ್ಲಿ ಹೆಚ್ಚಿನ ಪುಣ್ಯ ಲಭಿಸುತ್ತದೆ  ಎನ್ನುವುದು ಶ್ರದ್ಧಾವಂತ ಹಿಂದೂಗಳ ನಂಬಿಕೆಯಾಗಿದೆ.  ದೂರದ ಕಾಶೀಗೆ ಹೋಗಿ ಗಂಗೆಯಲ್ಲಿ ಮಿಂದು ಕಾಶೀ ವಿಶ್ವೇಶ್ವರನ ದರ್ಶನದ ಭಾಗ್ಯ ಪಡೆಯಲು ಸಾಧ್ಯವಿಲ್ಲದವರು, ಇಲ್ಲೇ ಬೆಂಗಳೂರಿಗೆ ಹತ್ತಿರವಿರುವ ದಕ್ಷಿಣ ಕಾಶಿ ಪುಣ್ಯಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಅಂತರಗಂಗೆಯಲ್ಲಿ  ಮಿಂದು ಕುಳಿತಲ್ಲಿಂದಲೇ ಕಾಶೀ ವಿಶ್ವೇಶ್ವರನ ದರ್ಶನ ಪಡೆಯೋಣ ಬನ್ನಿ

ant1ನಮಗೆಲ್ಲರಿಗೂ ತಿಳಿದಿರುವಂತೆ ಕೋಲಾರ  ಚಿನ್ನದ ಬೀಡು. ಇತ್ತೀಚೆಗೆ ಕೋಲಾರ ರೇಷ್ಮೆ ಮತ್ತು ಹಾಲಿನ ಹೊಳೆಯನ್ನೂ ಹರಿಸುತ್ತಿದೆ. ಇವೆಲ್ಲರದರ ಜೊತೆಗೆ ಅವಿಭಜಿತ ಕೋಲಾರ ಜಿಲ್ಲೆ ಹತ್ತು ಹಲವಾರು ಧಾರ್ಮಿಕ ಪುಣ್ಯಕ್ಷೇತ್ರಗಳನ್ನು ಒಳಗೊಂಡಂತಹ ನಾಡಾಗಿದೆ. ಅಂತಹ ಪುಣ್ಯಕ್ಶೇತ್ರಗಳಲ್ಲಿ ಒಂದಾದ, ಶತಶೃಂಗ ಪರ್ವತಗಳ ಸಾಲಿಗೆ ಸೇರಿರುವ  ಅಂತರಗಂಗೆ  ಶ್ರೀಕ್ಷೇತ್ರದ ದರ್ಶನ ಮಾಡೋಣ ಬನ್ನಿ.

WhatsApp Image 2021-11-07 at 7.04.25 PMಬೆಂಗಳೂರಿನಿಂದ 65 ಕಿಮೀ ದೂರದಲ್ಲಿರುವ ಕೋಲಾರಕ್ಕೆ ತಲುಪಿ ಅಲ್ಲಿಂದ ಕೇವಲ 5 ಕಿಮೀ ಪ್ರಯಾಣಿಸಿದಲ್ಲಿ ಸುಂದರವಾದ ಅಷ್ಟೇ ದಟ್ಟವಾದ ಗಿಡಮರಗಳಿಂದ ಆವೃತವಾದ ಅಂತರ ಗಂಗೆ ಬೆಟ್ಟವನ್ನು ಕಾಣಬಹುದಾಗಿದೆ. ಎಲ್ಲರೂ ಸುಲಭವಾಗಿ ಹತ್ತಬಹುದಾದಂತಹ 30-40 ಮೆಟ್ಟಿಲುಗಳು ಅಲ್ಲಿಂದ ಸ್ವಲ್ಪ ದಾರಿ ಮತ್ತೆ ಕೆಲವು ಮೆಟ್ಟಿಲುಗಳು ಮತ್ತೆ ಸ್ವಲ್ಪ ದಾರಿ ಹೀಗೆ ಕೆಳಗಿನಿಂದ ಬೆಟ್ಟದ ಮೇಲೆ ತಲುಪಲು ಸುಮಾರು 250-300 ಮೆಟ್ಟಿಲುಗಳನ್ನು 10-12 ನಿಮಿಷಗಳಲ್ಲಿ ಸುಲಭವಾಗಿ ಹತ್ತಬಹುದಾಗಿದೆ.  ಈ ಪ್ರದೇಶದಲ್ಲಿ ವಿಪರೀತ ಕೋತಿಗಳ ಹಾವಳಿಯಿದ್ದು  ತಮ್ಮ ಆಹಾರದ ಅರಸುವಿಕೆಯಲ್ಲಿ ಭಕ್ತಾದಿಗಳ ಮೇಲೆ ಧಿಡೀರ್ ಎಂದು ಧಾಳಿ ಮಾಡುವ ಸಂಭವವು ಹೆಚ್ಚಾಗಿರುವ ಕಾರಣ  ಪ್ರವಾಸಿಗರು ತುಸು ಜಾಗೃತೆಯನ್ನು ವಹಿಸಬೇಕಾಗಿದೆ. ಈ ಕಾನನದಲ್ಲಿ  ನರಿ, ತೋಳ, ಜಿಂಕೆ, ಕಾಡು ಹಂದಿ, ನವಿಲು, ಸಾರಂಗಿ ಮುಂತಾದ ವನ್ಯ ಜೀವಿಗಳಿವೆ ಎಂಬ ಫಲಕಗಳನ್ನು ಕಾಣಬಹುದಾದರೂ,  ಪ್ರಕೃತಿಯ ಮೇಲೆ ಮನುಷ್ಯರು ನಿರಂತರವಾಗಿ ನಡೆಸುತ್ತಿರುವ ದಬ್ಬಾಳಿಕೆಯಿಂದಾಗಿ  ಬಹುತೇಕ ಈ ಎಲ್ಲಾ ವನ್ಯ ಜೀವಿಗಳು  ಇಲ್ಲಿ ಕಾಣದಂತಾಗಿ ಹೋಗಿರುವುದು ವಿಪರ್ಯಾಸವೇ ಸರಿ.

ant6ಸಾವಿರಾರು ವರ್ಷಗಳ ಹಿಂದೆ ಮುಚ್ಚುಕುಂದ ಮಹರ್ಷಿಗಳು ಸ್ಥಾಪಿಸಿದ್ದಾರೆಂದು ಹೇಳಲಾಗಿರುವ ಶ್ರೀ ವಿಶ್ವನಾಥ ಸ್ವಾಮಿಯ ಸಣ್ಣ ದೇವಾಲಯವಿದ್ದು ಆ ದೇವಸ್ಥಾನಕ್ಕೆ ಹೋಗುವ ಮೊದಲು ಒಂದು ಸಣ್ಣದಾದ ಕಲ್ಯಾಣಿ ಇದೆ. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕೋಲಾರ ಜಿಲ್ಲೆಯೂ ಒಂದಾಗಿದ್ದು ವರ್ಷದಲ್ಲಿ  ಕೇವಲ 40-50 ದಿನಗಳು ಇಲ್ಲಿ ಮಳೆ ಬೀಳಬಹುದು. ಆದರೆ, ಈ ಅಂತರಗಂಗೆಯಲ್ಲಿರುವ ಬಸವನ ಬಾಯಿಯಿಂದ ವರ್ಷಪೂರ್ತಿ  ನಿರಂತರವಾಗಿ  ಪವಿತ್ರ ಗಂಗೆ ಹರಿಯುತ್ತಿದೆ. ಈ ನೀರು ಹರಿಯುವ ಮೂಲ ಇದುವರೆಗೂ ಯಾರಿಗೂ ತಿಳಿದಿಲ್ಲವಾದರೂ ಈ ನೀರಿನ ಕುರಿತಾಗಿ ಮತ್ತು ಈ ಕ್ಷೇತ್ರಕ್ಕೆ ಅಂತರಗಂಗೆ ಎಂಬ ಹೆಸರು ಬರಲು ಒಂದು ಕುತೂಹಲಕಾರಿಯಾದ ಪೌರಾಣಿಕ ಕಥೆ ಇದೆ. ಹಾಗಾಗಿ ಈ ದೇವಸ್ಥಾನಕ್ಕೆ ಬರುವ ಬರುವ ಬಹುತೇಕ ಭಕ್ತಾದಿಗಳು ಬಸವನ ಬಾಯಿಯಿಂದ ಬರುವ ನೀರಿನಲ್ಲಿ ಮಿಂದು ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿ ನಂತರ ದೇವಸ್ಥಾನಕ್ಕೆ ಪ್ರವೇಶಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ಪವಿತ್ರವಾದ  ನೀರು ಔಷದೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ಸ್ನಾನ ಮಾಡುವುದರಿಂದ ಅನೇಕ ರೋಗ ರುಜಿನಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತಾದಿಗಳ ನಂಬಿಕೆಯಾಗಿದೆ.

ag1ಇಲ್ಲಿನ ಕಾಶೀ ವಿಶ್ವೇಶ್ವರ ಲಿಂಗದ ಪ್ರತಿಷ್ಟಾಪನೆ ಮತ್ತು ಈ ಕ್ಷೇತ್ರಕ್ಕೆ ಅಂತರಗಂಗೆ ಎಂಬ ಹೆಸರು ಬರುವ ಹಿಂದಿರುವ ಪೌರಾಣಿಕ ಕತೆಯೂ ಸಹಾ ರೋಚಕವಾಗಿದೆ.

ದ್ವಾಪರ ಯುಗ(ಮಹಾಭಾರತ)ದಲ್ಲಿ ಸಂದರ್ಭದಲ್ಲಿ ಪ್ರಜಾಪೀಡಕನಾಗಿದ್ದ ಕಾಲ್ಯವಾನ ಎಂಬ ರಾಕ್ಷಸನ  ಎಂಬ ರಾಕ್ಷಸನನ್ನು ಸಂಹರಿಸುವುದು ಶ್ರೀ ಕೃಷ್ಣನ ಕೈಯಲ್ಲಿಯಿರಲ್ಲಿಲ್ಲ ಹಾಗಾಗಿ ಆ ರಾಕ್ಷಸನನ್ನು ಸಂಹರಿಸುವುದಕ್ಕೆ ಒಂದು ಉಪಾಯ ಮಾಡಿ, ಶತಶೃಂಗ ಪರ್ವತದ ಒಂದು ಗುಹೆಯಲ್ಲಿ  ಮುಚ್ಚುಕುಂದ ಎಂಬ ಮಹರ್ಷಿಯೂ ಯೋಗನಿದ್ರೆ ಮಾಡುತ್ತಿದ್ದರು. ಆಗ ಶ್ರೀ ಕೃಷ್ಣನು ಕಾಲ್ಯವಾನನನನ್ನು ಕೆಣಕಿ ಮುಚ್ಚುಕುಂದ ಮಹರ್ಷಿಗಳು ಯೋಗನಿದ್ರೆ ಮಾಡುತ್ತಿರುವ ಗುಹೆಯಲ್ಲಿ ಓಡಿ ಹೋಗಿ ಮಾಯವಾಗಾಗುತ್ತಾನೆ.  ಆಗ ಆ ಕಾಲ್ಯವಾನ ರಾಕ್ಷಸ ಶ್ರೀ ಕೃಷ್ಣನನ್ನು ಹುಡುಕುತ್ತಾ ಮುಚ್ಚುಕುಂದರ ಗುಹೆಗೆ ಬಂದು ಯೋಗನಿದ್ರೆ ಮಾಡುತ್ತಿರುವ ಮುಚ್ಚುಕುಂದ ಮಹರ್ಷಿಯನೇ ಮಾಯಾವಿ ಶ್ರೀಕೃಷ್ಣ ಎಂದು ಭಾವಿಸಿ ಅವರಿಗೆ ತನ್ನ ಕಾಲಿನಿಂದ ಒದ್ದನು. ವಿನಾಕಾರಣ ತಮ್ಮ ಮೇಲೆ ಹಲ್ಲಿ ಮಾಡಿದ್ದರಿಂದ ಕೋಪಗೊಂಡ ಮುಚ್ಚುಕುಂದ ಮಹರ್ಷಿಗಳು ತಮ್ಮ ಯೋಗದೃಷ್ಟಿಯಿಂದ ಆ ಕಾಲ್ಯವಾನ ರಾಕ್ಷಸನನ್ನು ಸುಟ್ಟು  ಭಸ್ಮಮಾಡಿದರು. ಈ ಕಾಲ್ಯವಾನನಿಂದಾಗಿ ತನ್ನ ಯೋಗನಿದ್ರೆ ಭಂಗವಾಗಿದ್ದಲ್ಲದೇ, ತನಗೆ ಹತ್ಯಾ ದೋಷವು ತಗುಲಿತು ಎಂದು ಚಿಂತಿತರಾಗಿದ್ದಾಗ, ಶ್ರೀ ಕೃಷ್ಣನು ಮುಚ್ಚುಕುಂದ ಮಹರ್ಷಿಯವರಿಗೆ ಪ್ರತ್ಯಕ್ಷನಾಗಿ ಈ ರಾಕ್ಷಸನ ಅಂತ್ಯವು ನಿನ್ನ ಯೋಗದೃಷ್ಟಿಯಿಂದಲೇ ಅಂತ್ಯವಾಗಬೇಕೆಂದು ಕಾಲನಿಣ೯ಯವಾಗಿದ್ದರಿಂದ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಯೋಗನಿದ್ರೆ ಭಂಗದ ಪಾಪ ಪರಿಹಾರ ಮಾಡಿಕೊಳ್ಳಬೇಕೆಂದಲ್ಲಿ ಈ ಶತಶೃಂಗ ಪರ್ವತದ ಮಧ್ಯದ ಭಾಗದಲ್ಲಿ ಶಿವ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಆ ಶಿವಲಿಂಗಕ್ಕೆ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿ ಎಂದು ಹೆಸರಿಸಿ ಅದಕ್ಕೆ ನಿತ್ಯ  ಪೂಜಾ ಕೈಂಕರ್ಯಗಳನ್ನು ನೇರವೇರಿಸಿದಲ್ಲಿ ನಿಮ್ಮ ಯೋಗನಿದ್ರೆ ಭಂಗವಾದ ಪಾಪದ ಪರಿಹಾರವಾಗುತ್ತದೆ ಎಂದು ತಿಳಿಸುತ್ತಾನೆ. ಶ್ರೀ ಕೃಷ್ಣನು ಆಜ್ಞೆಯಂತೆ ಮಹರ್ಷಿಗಳು ಶತಶೃಂಗ ಪರ್ವತದ ಮಧ್ಯದ ಭಾಗದಲ್ಲಿ ಮಹಾಗಣಪತಿ, ಶ್ರೀ ವಿಶಾಲಾಕ್ಷೀ ಸಮೇತ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ಹಾಗೂ ಪಂಚಲಿಂಗ, ನವಗ್ರಹಗಳು, ಶ್ರೀ ವಿರಾಂಜನೇಯ.ಸ್ವಾಮಿ ಮತ್ತು ಶ್ರೀ ಭೈಲೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದರು.

ತಾವು ಪ್ರತಿಷ್ಠಾಪನೆ ಮಾಡಿದ ದೇವರುಗಳಿಗೆ ನಿತ್ಯ ಅಭಿಷೇಕ ಮಾಡಲು ಆ ಶತಶೃಂಗ ಪರ್ವತದ ಸಮೀಪದಲ್ಲಿಯೂ ಹಾಗೂ ಸುತ್ತಮುತ್ತಲಿನಲ್ಲಿಯೂ ಶುದ್ಧವಾದ ಜಲ ಇಲ್ಲದಿದ್ದ ಕಾರಣ, ಮುಚ್ಚುಕುಂದ ಮಹರ್ಷಿಗಳು ಪ್ರಾತ:ಕಾಲ(ಸೂಯೋದಯ)ವಾಗುವಷ್ಠರಲ್ಲೇ ತಮ್ಮ ತಪ:ಶಕ್ತಿಯಿಂದ ಉತ್ತರ ಭಾರತದ ವಾರಣಾಸಿ(ಕಾಶಿ)ಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಗಂಗೆಯಲ್ಲಿ ಮಿಂದು ತಮ್ಮ ನಿತ್ಯ ಕಮ೯(ಸಂಧ್ಯಾವಂದನೆ ಹಾಗೂ ಜಪ-ತಪ)ಗಳನ್ನು ಮುಗಿಸಿ ಅಲ್ಲಿರುವ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿಯ ದರ್ಶನ ಪಡೆದು ಇಲ್ಲಿನ ದೇವರ ಅಭಿಷೇಕ್ಕಾಗಿ ಗಂಗೆಯನ್ನು ತೆಗೆದುಕೊಂಡು ತಾವು ಪ್ರತಿಷ್ಠಾಪಿಸಿರುವ ಶಿವ ಲಿಂಗಕ್ಕೆ ಅಭಿಷೇಕ ಹಾಗೂ  ಪೂಜೆಯನ್ನು ಮಾಡುತ್ತಿದ್ದರಂತೆ. ಹೀಗೆ ಪ್ರತಿದಿನವೂ ಅಷ್ಟು ದೂರದಿಂದ ಬರುತ್ತಿದ್ದ ಈ ಮುನಿಗಳನ್ನು ಗಮನಿಸಿದ ಗಂಗಾಮಾತೆಯು, ಎಲೈ ಮುನಿವರ್ಯರೇ  ನೀವು ಪ್ರತಿದಿನವೂ ಅಷ್ಟು ದೂರದಿಂದ ಬರುವ ಅವಶ್ಯಕತೆ ಇಲ್ಲ, ನಾನೇ ನೀವು ಇರುವಲ್ಲಿಗೆ ಬರುತ್ತೇನೆ ಎನ್ನುತ್ತಾಳೆ. ಗಂಗೆಯ ಮಾತನ್ನು ನಂಬದ ಮುನಿಗಳು ನೀನೇ ಅಲ್ಲಿಗೆ  ಬರುತ್ತೇಯೇ ಎಂದು ಹೇಗೆ ನಂಬುವುದು?  ಎಂಬ ಸಂದೇಹವನ್ನು ವ್ಯಕ್ತಪಡಿಸಿದಾಗ, ಋಷಿಗಳ ಕೈಯ್ಯಲ್ಲಿದ ಬೆತ್ತ, ನಿಂಬೇಹಣ್ಣು ಮತ್ತು ಕಮಂಡಲಗಳಲ್ಲಿ ಬೆತ್ತ ಮತ್ತು ನಿಂಬೇಹಣ್ಣುಗಳನ್ನು ಅವರಿಂದ ಪಡೆದುಕೊಂಡು ನೀವು ಈ ಕೂಡಲೇ ನಿಮ್ಮ ಪ್ರದೇಶಕ್ಕೆ ಹೋಗಿ. ನಿಮ್ಮ ಶಿವ ಲಿಂಗದ ತಳ ಭಾಗ(ಶಿವ ಲಿಂಗದ ಕೇಳ)ಭಾಗದಲ್ಲಿ ನಿಂಬೆ ಹಣ್ಣು,ಬೆತ್ತ ಹಾಗೂ ಗಂಗಾ ಜಲ ಈ ಮೂರು ಸೇರಿ ಅಂತರ ಮಾಗ೯ದಿಂದ ಬರುತ್ತೇನೆ ಎನ್ನುತ್ತಾಳೆ. ಆಗ ಆ ಮುಚ್ಚುಕುಂದ ಮಹರ್ಷಿಯು ಗಂಗಾ ದೇವಿಗೆ ನಮಸ್ಕರಿಸಿ ಶ್ರೀ ಕಾಶೀ ವಿಶ್ವೇಶ್ವರ ಸ್ವಾಮಿಯ ಸಮೀಪ ಬಂದು ನೋಡಿದಾಗ ಆ ಶಿವ ಲಿಂಗದ ತಳ ಭಾಗದಲ್ಲಿ ಗಂಗಾ ದೇವಿ ಹೇಳಿದಂತೆ ನಿಂಬೆ ಹಣ್ಣು, ಬೆತ್ತ ಹಾಗೂ ಗಂಗಾ ಜಲ ಈ ಮೂರು ಸೇರಿ ಶಿವ ಲಿಂಗ ಕೆಳಭಾಗದಲ್ಲಿ ಬರುವುದನ್ನು ಮುಚ್ಚುಕುಂದ ಮಹರ್ಷಿಯೂ  ನೋಡಿ  ಶ್ರೀ ಕಾಶೀವಿಶ್ವೇಶ್ವರ ಸ್ವಾಮಿಗೆ ನಮಸ್ಕರಿಸಿ ಆ ನಿಂಬೆ ಹಣ್ಣು  ಮತ್ತು ಆ ಬೆತ್ತವನ್ನು ಅವರ ಕೈಗೆ ತೆಗೆದುಕೊಂಡು ಆ ಗಂಗಾ ಜಲವನ್ನು ಮಾತ್ರ ಆ ಶಿವ ಲಿಂಗದ ತಳ ಭಾಗದಲ್ಲಿ ಸ್ಥಾಪಿಸಿದರು. ಆದಾದ ನಂತರ ಆ ಶತಶೃಂಗ ಪರ್ವತದ ಮಧ್ಯದ ಭಾಗದಲ್ಲಿರುವ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿ ದೇವರ ಪಕ್ಕದ ಸ್ಥಳ(ದಕ್ಷಿಣ ಭಾಗ)ದಲ್ಲಿ ಎರಡು ಕಲ್ಲಿನ ಬಸವ ಮೂರ್ತಿಯನ್ನು ಮತ್ತು ವಿಷ್ಣುವಿನ ಮೂತಿ೯ಯನ್ನು ಪ್ರತಿಷ್ಠಾಪಿಸಿದರು. ನಂತರ ಒಂದು ಬಸವಣ್ಣನ ಬಾಯಿಂದ, ಮತ್ತೊಂದು ಬಸವಣ್ಣನ ಹೊಕ್ಕಳಿನಿಂದ ಹಾಗೂ ವಿಷ್ಣುಮೂತಿ೯ಯ ಪಾದದಿಂದ ಗಂಗಾ ಜಲವು ಬರುವಂತೆ ಸ್ಥಾಪಿಸಿದರು. ನದಿಯ ಮೂಲ ಋಷಿಯ ಮೂಲ ಹುಡುಕಬಾರದು ಎಂಬ ಮಾತಿದೆ ಅದೇ ರೀತಿ, ಆ ಉತ್ತರ ಭಾರತದ ಕಾಶಿಯಿಂದ ಗಂಗಾ ಜಲವು ಇಲ್ಲಿಗೆ ಅಂತರ ಮಾರ್ಗದಿಂದ ಬರುವುದಾಗಲಿ ಶಿವನ ತಳ ಭಾಗದಲ್ಲಿ ಬರುವುದಾಗಲಿ ಯಾರಿಗೂ ಕಾಣುವುದಿಲ್ಲವಾದ್ದರಿಂದ ಈ ಪ್ರದೇಶಕ್ಕೆ ಅಂತರಗಂಗೆ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇನ್ನು ಉತ್ತರ ಭಾರತದ  ಗಂಗೆ  ದಕ್ಷಿಣ ಭಾರತದಲ್ಲಿರುವ ಈ ವಿಶ್ವೇಶ್ವರಸ್ವಾಮಿಯ ಕ್ಷೇತ್ರಕ್ಕೆ ಹರಿದು ಬಂದ ಕಾರಣ ಈ ಪ್ರದೇಶವನ್ನು ದಕ್ಷಿಣಕಾಶೀ ಎಂದೂ ಕರೆಯಲಾಗುತ್ತದೆೆ ಎಂಬ ಕಥೆಯನ್ನು ಈ ದೇವಾಲಯದ ಅರ್ಚಕರಾಗಿರುವ ಶ್ರೀ ಕಾಶೀವಿಶ್ವನಾಥ ದೀಕ್ಷಿತರು ಆವರಿಂದ ಕೇಳಿದಾಗ ನಿಜಕ್ಕೂ ರೋಚಕವೆನಿಸಿತು.  ಅಂದು ಹೀಗೆ ಉದ್ಭವವಾದ ಗಂಗೆಯು ಇದುವರೆಗೂ ನಿರಂತರವಾಗಿ ಹರಿದು ಬಸವಣ್ಣನ ಬಾಯಿಯಿಂದ ಹೊರಹೊಮ್ಮಿ ಕಲ್ಯಾಣಿಯ ಮೂಲಕ ಹೊರಹೋಗುವುದನ್ನು ಇಂದಿಗೂ ಕಾಣಬಹುದಾಗಿದ್ದು ಎಂತಹ ಬರ ಪರಿಸ್ಥಿತಿಯಲ್ಲಿಯೂ ಇದು ಬತ್ತದಿರುವುದು ನಿಜಕ್ಕೂ ಅದ್ಭುತವಾಗಿದೆ.

ಇನ್ನು ದೂರದಿಂದ ಈ ಬೆಟ್ಟವನ್ನು ನೋಡಿದಲ್ಲಿ ನೂರು ಶೃಂಗಗಳು ಅಂದರೆ ಕೋಡು ಅಥವಾ ಕೊಂಬುಗಳು ಇರುವಂತೆ ಕಾಣುವುದರಿಂದ ಇದನ್ನು ಶತಶೃಂಗ ಪರ್ವತ ಎಂದೂ ಕರೆಯಲಾಗುತ್ತದೆ. ಕಾಶೀ ವಿಶ್ವೇಶ್ವರ ಸ್ವಾಮಿಯ ಪಕ್ಕದಲ್ಲಿಯೇ ಒಂದು ಕಡೆ ವಿಶಾಲಾಕ್ಷಿ ಅಮ್ಮನವರಗುಡಿ ಮತ್ತೊಂದು ಕಡೆ ಗಣೇಶನ ಗುಡಿ ಮತ್ತು ಅದರ ಜೊತೆಯಲ್ಲಿಯೇ ವೀರಭಧ್ರಸ್ವಾಮಿಯನ್ನೂ ಕಾಣಬಹುದಾಗಿದೆ. ಇದೇ ಗುಡಿಯಲ್ಲಿ  ಹರಿಹರೇಶ್ವರ, ಮಹಾಬಲೇಶ್ವರ, ಮಲ್ಲಿಕಾರ್ಜುನೇಶ್ವರ, ಪಾತಾಳೇಶ್ವರ ಈ ನಾಲ್ಕು ಲಿಂಗಗಳ ಜೊತೆ ಕಾಶೀ ವಿಶ್ವೇಶ್ವರನೂ ಸೇರಿ ಒಟ್ಟು ಐದು ಲಿಂಗಗಳು ಸೇರಿ ಪಂಚಲಿಂಗಗಳ ದರ್ಶನ ಪಡೆಯುವ ಭಾಗ್ಯ ಈ ಕ್ಷೇತ್ರದಲ್ಲಿ ಪಡೆಯ ಬಹುದಾಗಿದೆ.

1959ರಲ್ಲಿ ಲಕ್ಷ್ಮಣ್ ರಾವ್ ಎಂಬ ಜಿಲ್ಲಾಧಿಕಾರಿಗಳ ಕಾಲದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ ಚೆಂದದಾದ 250 ಮೆಟ್ಟಿಲುಗಳನ್ನು ಕಟ್ಟಿಸಿ ಆ ಬಸವಣ್ಣ ಬಾಯಿಂದ ಬರುವ ಗಂಗಾ ಜಲದ ಸ್ಥಳದ ಮೇಲೆ ಒಂದು ಗೋಪುರ ಕಟ್ಟಿ ಅಲ್ಲಿ ಪಕ್ಕದಲ್ಲಿ ಒಂದು ಸುಂದರವಾದ ಕಲ್ಯಾಣಿಯನ್ನು ಸಹಾ ಜೀರ್ಣೋದ್ಧಾರ ಮಾಡಿಸಿದರು. ವರ್ಷದ 365 ದಿನವೂ ಇಲ್ಲಿ ನಿತ್ಯ ಪೂಜೆ ಸಾಂಗೋಪಾಂಗವಾಗಿ ನಡೆಯುತ್ತಿದ್ದು ಹಬ್ಬಹರಿದಿನಗಳುಕಾತಿ೯ಕ ಮಾಸದ ಸೋಮವಾರಗಳು ಕಾತಿ೯ಕ ಮಾಸದ ಹುಣ್ಣಿಮೆ ಮಾರ್ಗಶಿರ ಮಾಸದ ಕೃತ್ತಿಕ ನಕ್ಷತ್ರದ ದಿನದಂದು ಇಲ್ಲಿ ಆಚರಿಸುವ ಲಕ್ಷದೀಪೋತ್ಸವದಲ್ಲಿ ಇಡೀ ಅಂತರಗಂಗೆ ಬೆಟ್ಟದ ಮೇಲೆ ದೀಪಾಲಂಕಾರವಾಗಿರುತ್ತದೆ. ಇನ್ನು ಮಹಾಶಿವರಾತ್ರಿಯ ದಿನದಂದು ಶ್ರೀ ಕಾಶೀವಿಶ್ವೇಶ್ವರ ಸ್ವಾಮಿಯ ಮೇಲೆ ಸೂರ್ಯನ ಕಿರಣ ಬೀಳುವುದು ಇಲ್ಲಿಯ ಮತ್ತೊಂದು ವಿಶೇಷವಾಗಿದೆ. ಅದೇ ರಾತ್ರಿ ಇಡೀ ಯಾಮದ ವಿಶೇಷ ಪೂಜೆ ನಡೆಯುತ್ತದೆ.  ಸದ್ಯಕ್ಕೆ ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಲ್ಪಟ್ಟಿದ್ದು ಭಕ್ತಾದಿಗಳು ಸಲ್ಲಿಸುವ ಕಾಣಿಕೆಗಳಿಂದಲೇ ದೇವಸ್ಥಾನ ನಿತ್ಯ ಪೂಜೆಗಳು ನಡೆಯುತ್ತಿದೆ.

ದೇವಾಲಯದ ಹಿಂಭಾಗದಲ್ಲಿ ಸ್ವಲ್ಪ ಕಿರಿದಾದ ಕಾಲು ಜಾಡಿನ ರಸ್ತೆಯ ಮೂಲಕ  ಅರಣ್ಯಕ್ಕೆ ಹೋಗುವ ಮಾರ್ಗವಿದೆ.  ಈ ಪ್ರದೇಶವು ಚಾರಣ ಪ್ರಿಯರಿಗೆ ಮತ್ತು, ಪರ್ವತಾರೋಹಣ ಮಾಡುವವರಿಗೆ  ತಮ್ಮ  ರಾತ್ರಿ ಸಂಚರಣೆ ಹಾಗು ಸಾಹಸ ಚಟುವಟಿಕೆಗಳನ್ನು ಮಾಡಲು ಪರಿಪೂರ್ಣ ಸ್ಥಳವಾಗಿದೆ. ಈ ಬೆಟ್ಟದ ಸುತ್ತಲೂ ಅನೇಕ ಅಗ್ನಿ ಪರ್ವತದ ಶಿಲೆಗಳು ಹಾಗು ನೈಸರ್ಗಿಕವಾಗಿ ಕೊರೆಯಲಾದ ಗುಹೆಗಳು ಇದ್ದು ಈ ಬೆಟ್ಟದ ಮೇಲ್ಭಾಗದಿಂದ ಕೋಲಾರದ ಪರಿಪೂರ್ಣ ಚಿತ್ರಣವನ್ನು ಕಾಣಬಹುದಾಗಿದೆ.  ಇದೇ ಪ್ರದೇಶದಲ್ಲಿಯೇ ಸಣ್ಣದಾಗಿ ಝರಿಯೊಂದು ಮೇಲಿಂದ ಕೆಳಗೆ ಬೀಳುವ ಮೂಲಕ ಸಣ್ಣದಾದ ಜಲಪಾತ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮತ್ತೊಂದು ಆಕರ್ಶಣೆಯಾಗಿದ್ದು  ಈ ನೀರು ಮಳೆಗಾಲದಲ್ಲಿ ಮಾತ್ರ ಕಾಣಬಹುದಾಗಿದೆ.

ಬೆಟ್ಟದ ತಟದಲ್ಲಿ ಒಂದೆರದು ಸಣ್ಣ ಕಾಫೀ ಟೀ, ತಂಪುಪಾನೀಯಗಳು   ಒಂದೆರಡು ಕಡೆ ಬೇಲ್ ಪುರಿ, ಕತ್ತರಿಸಿ ಖಾರ ಹಾಕಿದ ಸೌತೇಕಾಯಿ ಮತ್ತು ಕತ್ತರಿಸಿದ ಹಣ್ಣುಗಳು ಜೊತೆ ಬಾಟೆಲ್ ನೀರಿನ ಹೊರತಾಗಿ ಬೇರಾವುದೇ ಊಟೋಪಚಾರದ ವ್ಯವಸ್ಥೆ ಇಲ್ಲದಿರುವುದರಿಂದ  ಇಲ್ಲಿಗೆ ಬರುವಾಗ  ಕುಡಿಯಲು ಮತ್ತು ತಿನ್ನಲು ಅವಶ್ಯಕವಾದ ವಸ್ತುಗಳನ್ನು ತಮ್ಮೊಂದಿಗೆ ತರುವುದು ಒಳಿತು. ಅದರ ಜೊತೆಯಲ್ಲಿ ಈ ಪ್ರದೇಶ ಪ್ಲಾಸ್ಟಿಕ್ ಮುಕ್ತವಾದ ಪ್ರದೇಶ ಎಂಬುದಾಗಿರುವ ಕಾರಣ ತಾವು ತಂದಂತಹ ತ್ರಾಜ್ಯಗಳನ್ನು ಇಲ್ಲಿ ಬಿಸಾಡದಿರುವ ಮೂಲಕ ಈ ಪ್ರದೇಶದ ಸ್ವಚ್ಚತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಇನ್ನು ಇಲ್ಲಿರುವ ಗಿಡಮರ ಮತ್ತು ಪೊದೆಗಳು ಹೇರಳವಾಗಿರುವುದನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರೇಮಿಗಳ ಸಂಖ್ಯೆಯೂ ಇಲ್ಲಿ ಕಡಿಮೇ ಇಲ್ಲದಿರುವ ಕಾರಣ  ಈ ಕುರಿತಂತೆ  ಇಲ್ಲಿನ ಅರಣ್ಯ ಇಲಾಖೆಯ ರಕ್ಷಣಾ ಇಲಾಖೆಯವರು ಗಮನ ಹರಿಸುವುದು ಸೂಕ್ತವಾಗಿದೆ.

ಇಷ್ಟೆಲ್ಲಾ ವಿಷಯಗಳನ್ನು ತಿಳಿದ ನಂತರ ಇನ್ಣೇಕ ತಡಾ,  ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಕೋಲಾರದ ಅಂತರಗಂಗೆ ಅರ್ಥಾತ್ ದಕ್ಷಿಣಕಾಶಿಗೆ ಭೇಟಿ ನೀಡಿ ಬಸವಣ್ಣನ ಬಾಯಿಯಿಂದ ಬೀಳುವ ಔಷಧೀಯ ಗುಣವಿರುವ ನೀರಿನಲ್ಲಿ ಮಿಂದು ಶ್ರದ್ಧೆಯಿಂದ ಕಾಶೀವಿಶ್ವೇಶ್ವರನ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ  ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ ​

ಚಿತ್ರಸಾಲ್ ನವಗ್ರಹ ದೇವಸ್ಥಾನ

ಸಾಮಾನ್ಯವಾಗಿ ಪ್ರತಿಯೊಂದು ದೇವಾಲಯಗಳಲ್ಲಿಯೂ ಗರ್ಭಗುಡಿಯಿದ್ದು ಅಲ್ಲಿ ಪ್ರಮುಖ ದೇವರುಗಳು ಇರುತ್ತದೆ. ಆಸ್ತಿಕ ಮಹಾಶಯರು ದೇವರ ದರ್ಶನವನ್ನು ಪಡೆದು ಅಲ್ಲಿಂದ ಹೊರಗೆ ಬರುವಾಗ ಸಣ್ಣದಾದ ನವಗ್ರಹ ಗುಡಿಯಿದ್ದು ಅಲ್ಲಿ ನವಗ್ರಹಗಳ ವಿಗ್ರಹಗಳು ಇರುತ್ತದೆ. ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಒಂದು, ಮೂರು, ಹನ್ನೊಂದು ಪ್ರದಕ್ಷಿಣೆಯನ್ನು ಹಾಕಿ ಭಕ್ತಿಯನ್ನು ಸಲ್ಲಿಸುತ್ತಾರೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಅಸ್ಸಾಮಿನ ಗೌಹಾಟಿಯಲ್ಲಿ ನವಗ್ರಹಗಳದ್ದೇ ಒಂದು ದೇವಸ್ಥಾನವಿದ್ದು ಅದು ಎಲ್ಲಾ ನವಗ್ರಹ ದೇವಸ್ಥಾನದಂತೆ ಇರದೇ ಬಹಳ ವಿಶೇಷವಾಗಿದೆ. ಹಾಗಾದರೆ ಆ ದೇವಸ್ಥಾನದ ವೈಶಿಷ್ಟ್ಯವೇನು ಎಂಬುದನ್ನು ತಿಳಿಯೋಣ ಬನ್ನಿ.

ಅಸ್ಸಾಂ ಭಾರತದ ಪೂರ್ವಾಂಚಲದ ಅತ್ಯಂತ ದೊಡ್ಡದಾದ ಮತ್ತು ಅತ್ಯುತ್ತಮವಾದ ಹವಾಮಾನ, ಪ್ರಕೃತಿ ಸೌಂದರ್ಯಗಳಿಂದ ಕೂಡಿದ ರಾಜ್ಯವಾಗಿದ್ದು ಬ್ರಹ್ಮಪುತ್ರ ನದಿಯಿಂದ ಆವರಿಸಲ್ಪಟ್ಟಿದೆ. ಅಸ್ಸಾಂ ಚಹಾದ ಸುವಾಸನೆ ಅಂತರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ. ಇದರ ಜೊತೆ ಸಾವಿರಾರು ವರ್ಷಗಳ ಹಳೆಯ ಸಂಸ್ಕೃತಿಗಳನ್ನು ಇಂದಿಗೂ ಅಲ್ಲಿನ ಜನರು ಉಳಿಸಿಕೊಂಡು ಹೋಗಿದ್ದಾರೆ. ಅದರ ಜೊತೆ ವಿಶ್ವದ ಕೆಲವು ಪುರಾತನ ದೇವಾಲಯಗಳು ದಂತಕಥೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳಿಂದ ಸಮೃದ್ಧವಾಗಿದೆ.

chitra1ಇಂತಹ ಅಸ್ಸಾಮಿನ ಗುವಾಹಟಿ ನಗರದಲ್ಲಿರುವ ಚಿತ್ರಗ್ರಹ ಬೆಟ್ಟದ ತುದಿಯಲ್ಲಿ ನವಗ್ರಹ ದೇವಸ್ಥಾನವಿದೆ. ಆದರೆ ಈ ನವಗ್ರಹ ದೇವಸ್ಥಾನದಲ್ಲಿ ಉಳಿದ ದೇವಸ್ಥಾನಗಳಲ್ಲಿರುವಂತೆ ಪ್ರತೀ ನವಗ್ರಹದ ಮೂರ್ತಿಗಳ ಬದಲಾಗಿ, ಈ ದೇವಾಲಯದಲ್ಲಿ ಒಂಬತ್ತು ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದ್ದು ಅವುಗಳು ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದೂ ಶಿವಲಿಂಗವನ್ನೂ ಆಯಾಯಾ ಗ್ರಹದ ಅನುಗುಣವಾದ ಬಣ್ಣದ ಬಟ್ಟೆಯಿಂದ ಮುಚ್ಚಲ್ಪಟ್ಟಿದೆ. ವೃತ್ತಾಕಾರದಲ್ಲಿರುವ ಈ ಲಿಂಗಗಳ ಮಧ್ಯದಲ್ಲಿರುವ ಶಿವಲಿಂಗವು ಸೂರ್ಯನನ್ನು ಸಂಕೇತಿಸಿದರೆ ಅದರ ಸುತ್ತವೂ ಉಳಿದ ಎಂಟು ಗ್ರಹಗಳನ್ನು ಪ್ರತಿನಿಧಿಸುತ್ತದೆ. ಈ ನವಗ್ರಹ ದೇವಸ್ಥಾನವನ್ನು 18 ನೇ ಶತಮಾನದ ಉತ್ತರಾರ್ಧದಲ್ಲಿ ಅಹೋಮ್ ರಾಜ ರಾಜೇಶ್ವರ ಸಿಂಗ್ ನಿರ್ಮಿಸಿದ್ದು, 1923 ರಿಂದ 1945 ರ ಅವಧಿಯಲ್ಲಿ ನವೀಕರಿಸಲಾಗಿದೆ.

chitra2ಪ್ರಸ್ತುತ ಗುವಾಹಟಿಯಲ್ಲಿರುವ ನವಗ್ರಹಗಳ ದೇವಸ್ಥಾನವನ್ನು  ಅಂದಿನ ಕಾಲದಲ್ಲಿ ಸಂಭವಿಸಿದ ದೊಡ್ಡ ಭೂಕಂಪದಿಂದಾಗಿ ಈ ದೇವಾಲಯದ ಶಿಖರದ ಭಾಗ ನಾಶವಾದರೂ, ಇಟ್ಟಿಗೆಯಿಂದ ನಿರ್ಮಿಸಲಾಗಿದ್ದ ಗರ್ಭಗೃಹ ಮಾತ್ರ ಸುಸ್ಥಿತಿಯಲ್ಲಿದ್ದ ಕಾರಣ, ಆ ದೇವಸ್ಥಾನವನ್ನು ಸುಕ್ಕುಗಟ್ಟಿದ ಕಬ್ಬಿಣದ ಹಾಳೆಯಿಂದ ಪುನರ್ನಿರ್ಮಿಸಲಾಯಿತು.

chitra3

  • ಈ ನವಗ್ರಹದ ಒಂಬತ್ತು ಗ್ರಹಗಳಲ್ಲಿ ಮೊದಲನೆಯದಾಗಿ ಸೂರ್ಯನು ಮಹಾ ರಥದ ಮೇಲೇ ಆಸೀನರಾಗಿದ್ದು ಏಳು ಕುದುರೆಗಳನ್ನು ಹಿಡಿದಿರುವಂತೆ ಚಿತ್ರಿಸಲ್ಪಟ್ಟಿದೆ, ಉದ್ದವಾದ ಕೂದಲುಗಳನ್ನು ಹರಡಿಕೊಂಡು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುವುದಲ್ಲದೇ, ರಕ್ಷಾಕವಚವನ್ನು ಧರಿಸಿಕೊಂಡು ತನ್ನ ರಕ್ಷಣೆಗಾಗಿ ಎದೆಯ ಮುಂದೆ ಗುರಾಣಿಯನ್ನು ಹಿಡಿದಿರುವಂತಿದ್ದು ಆ ಗುರಾಣಿಯ ಸುತ್ತಲೂ ಪ್ರಭಾವಳಿಯ ಬೆಳಕು ಸ್ಪಷ್ಟವಾಗಿ ಕಾಣುವಂತಿದೆ.
  • ಎರಡನೆಯದಾಗಿ ಚಂದ್ರ ಬಿಳಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದು ಆವನ ಸುತ್ತಲೂ ಪ್ರಭಾವಳಿಯಯ ಜೊತೆಗೆ ಸಕಲ ರೀತಿಯ ಹೂವುಗಳ ಆಭರಣಗಳು ಮತ್ತು ಹಾರಗಳಿಂದ ಅಲಂಕರಿಸಲ್ಪಟ್ಟಿದೆ.
  • ಮೂರನೆಯದಾಗಿ, ಬೆಂಕಿಯಂತಹ ಕೆಂಪು ಬಣ್ಣದ ವಸ್ತ್ರವನ್ನು ಮಂಗಳ ಗ್ರಹಕ್ಕೆ ತೊಡಿಸಿದ್ದು, ಸಿಂಹಾಸನದ ಮೇಲೆ ಕುಳಿತು, ತನ್ನ ಮೂರು ತೋಳುಗಳಲ್ಲಿ ಗಧೆ, ಶೂಲ ಮತ್ತು ಶಕ್ತಿ ಆಯುಧಗಳನ್ನು ಹಿಡಿದಿರುವಂತಿದೆ.
  • ನಾಲ್ಕನೆಯದಾಗಿ ಬುದ್ಧನನ್ನು ಹಳದಿ ಬಣ್ಣದ ವಸ್ತ್ರದಲ್ಲಿ ಅಲಂಕರಿಸಿದ್ದು, ತನ್ನ ಮೂರು ಕೈಗಳಲ್ಲಿ ಖಡ್ಗ, ಖೇತಕ ಮತ್ತು ಗಧೆಯನ್ನು ಹಿಡಿದಿರುವ ವರದ ಭಂಗಿಯಲ್ಲಿ ಚಿತ್ರಿಸಲಾಗಿದೆ.
  • ಐದನೇ ಸ್ಥಾನದಲ್ಲಿ ಬೃಹಸ್ಪತಿಯನ್ನು ಚಿನ್ನದ ಹಳದಿ ಉಡುಪುಗಳಲ್ಲಿ ಅಲಂಕರಿಸಿ ಆತನ ಮೂರು ತೋಳುಗಳಲ್ಲಿ ಕಮಂಡಲ, ಅಕ್ಷಮಾಲಾ ಮತ್ತು ದಂಡವನ್ನು ಹಿಡಿದ ವರದ ಭಂಗಿಯಲ್ಲಿದೆ.
  • ಆರನೇ ಗ್ರಹವಾದ ಶುಕ್ರನನ್ನು ಬಿಳಿ ಉಡುಪುಗಳೊಂದಿಗೆ ಅಲಂಕರಿಸಿದ್ದು ಆತನ ನಾಲ್ಕು ತೋಳುಗಳಲ್ಲಿ ಬೃಹಸ್ಪತಿಯಂತೆಯೇ ಆಯುಧಗಳನ್ನು ಹೊಂದಿದ್ದಾನೆ.
  • ಏಳನೇ ಗ್ರಹವಾದ ಶನಿದೇವನನ್ನು ಕಪ್ಪು ಬಣ್ಣದ ಉಡುಪುನಲ್ಲಿ ಅಲಂಕರಿಸಿದ್ದು, ಉಳಿದೆಲ್ಲಾ ಗ್ರಹಗಳಿಗಿಂತ ಸಣ್ಣಗಿದ್ದು, ಒಂದು ಕಾಲು ಸ್ವಲ್ಪ ಕುಂಟುವಂತಿದ್ದು, ಆತನ ಎರಡು ಕೈಗಳಲ್ಲಿ ದಂಡ ಮತ್ತು ಅಕ್ಷಮಾಲಾ ಹಿಡಿದಿರುವ ಭಂಗಿಯಲ್ಲಿದೆ.
  • ಎಂಟನೆಯದಾದ ರಾಹುಗ್ರಹವನ್ನು ಸಿಂಹಾಸನ ಅಥವಾ ಎಂಟು ಕುದುರೆಗಳಿಂದ ಚಿತ್ರಿಸಿದ ಬೆಳ್ಳಿ ರಥದ ಮೇಲೆ ಕೂರಿಸಲಾಗಿದ್ದು ಅದರ ನಾಲ್ಕು ತೋಳುಗಳಲ್ಲಿ ಖಡ್ಗ, ಖೇತಕ ಮತ್ತು ಗಧೆಯನ್ನು ಹಿಡಿದಿದ್ದು ನಾಲ್ಕನೇ ಕೈಯಲ್ಲಿ ಪುಸ್ತವನ್ನು ಹಿಡಿದಿರುವ ವರದ ಭಂಗಿಯಲ್ಲಿದೆ.
  • ಒಂಬತ್ತನೇ ಗ್ರಹವಾದ ಕೇತುವನ್ನು ಗಾಢವಾದ ಕಪ್ಪು ಬಣ್ಣದ ವಸ್ತ್ರದಲ್ಲಿ ಅಲಂಕರಿಸಿದ್ದು, ಆತನ ಎರಡು ತೋಳುಗಳಲ್ಲಿ ಗದ ಮತ್ತು ಶೂಲವನ್ನು ಹಿಡಿದಿರುವಂತಿದೆ.

ದೇವಾಲಯದಿಂದ ಸ್ವಲ್ಪ ದೂರದಲ್ಲಿಯೇ ಸಿಲ್ಪುಖುರಿ ಎಂದು ಕರೆಯಲ್ಪಡುವ ಒಂದು ಕೊಳವಿದ್ದು ದೇವರಿಗೆ ಅಭಿಷೇಕ ಮಾಡಲು ಮತ್ತು ದೇವಾಲಯಕ್ಕೆ ಬರುವ ಭಕ್ತಾದಿಗಳ ನೀರಿನ ಅಗತ್ಯತೆಗಾಗಿ ಕಟ್ಟಲಾಗಿದೆ. ಸದಾಕಾಲವೂ ನೀರಿನಿಂದ ತುಂಬಿ ತುಳುಕುವ ಈ ಕೊಳ ಇದುವರೆವಿಗೂ ಬತ್ತಿಯೇ ಇಲ್ಲ ಎನ್ನುವುದು ಗಮನಾರ್ಹವಾಗಿದೆ.

ಈ ದೇವಾಲಯ ಗುವಹಾಟಿ ನಗರದ ಎತ್ತರದ ಗುಡ್ಡದ ಮೇಲೆ ಇರುವ ಕಾರಣ ಗುವಹಾಟಿ ನಗರದ ಯಾವುದೇ ಭಾಗದಿಂದ ನೋಡಿದರೂ ಕಾಣಬಹುದಾಗಿದೆ. ಅದೇ ರೀತೀ ಆ ಬೆಟ್ಟದ ಮೇಲಿಂದ ಇಡೀ ಗುವಹಾಟಿ ನಗರದ ವಿಹಂಗಮ ದೃಶ್ಯವನ್ನು ಸವಿಯಬಹುದಾಗಿದೆ.

chitra4ಪ್ರತಿದಿನವೂ ಈ ದೇವಾಲಯವು ಬೆಳಿಗ್ಗೆ 4:00 ಗಂಟೆಯಿಂದ ರಾತ್ರಿ 9:00 ಗಂಟೆಯ ವರೆಗೂ ಭಕ್ತಾದಿಗಳಿಗೆ ದರ್ಶನಕ್ಕೆ ತೆರೆದಿರುತ್ತದೆ. ಈ ಅವಧಿಯಲ್ಲಿ ನಾನಾವಿಧದ ಶಿವನ ಆರಾಧನೆಗಳು, ಅರ್ಚನೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯುತ್ತದೆ. ಶಿವ ಚತುರ್ದಶಿ ಮತ್ತು ಮಹಾ ಶಿವರಾತ್ರಿಯಂದು ಈ ದೇವಾಲಯದಲ್ಲಿ ನಡೆಯುವ ವಿಶೇಷವಾದ ಪೂಜೆಗಳು ವೀಕ್ಷಿಸಲು ಮತ್ತು ಲಿಂಗರೂಪಿಯಾದ ನವಗ್ರಹಗಳ ದಿವ್ಯ ಆಶೀರ್ವಾದ ಪಡೆಯಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

chitra5ದೇಶದ ಯಾವುದೇ ಭಾಗದಿಂದ ರಸ್ತೆಯ ಮೂಲಕ ಅಸ್ಸಾಮಿನ ಗುವಹಾಟಿ ನಗರಕ್ಕೆ ತಲುಪಿ ಅಲ್ಲಿಂದ ಸ್ಥಳೀಯವಾಗಿ ದೊರಕುವ ಆಟೋ ಇಲ್ಲವೇ ಟ್ಯಾಕ್ಸಿ ಮುಖಾಂತರ ಈ ನವಗ್ರಹ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದೆ.

ಇನ್ನು ದೇವಾಯಲದ ಸುತ್ತಮುತ್ತಲೂ ಕೋತಿಗಳ ಹಿಂಡು ಇದ್ದು ಅದು ಭಕ್ತಾದಿಗಳ ಚೀಲಗಳಿಂದ ಪ್ರಸಾದ ಮತ್ತು ಹಣ್ಣುಗಳನ್ನು ತೆಗೆದುಕೊಳ್ಳುವ ಸಲುವಾಗಿ ಛಂಗನೇ ಮೈ ಮೇಲೆ ಎರಗಿ ಭಕ್ತಾದಿಗಳ ಮೈ ಕೈ ತರೆಚಿರುವ ಕಾರಣ ಭಕ್ತಾದಿಗಳು ಬಹಳ ಎಚ್ಚರಿಕೆಯಿಂದ ತಮ್ಮ ಕೈಚೀಲಗಳನ್ನು ನೋಡಿಕೊಳ್ಳಬೇಕಾಗಿದೆ.

ಇನ್ನು ರೈಲಿನ ಮೂಲಕವೂ ಗುಹವಾಟಿ ಯನ್ನು ತಲುಪಿ ಅಲ್ಲಿಂದ ಕೇವಲ 3.3 ಕಿಮೀ ದೂರವಿರುವ ಈ ದೇವಸ್ಥಾನಕ್ಕೆ ಖಾಸಗೀ ವಾಹನಗಳ ಮೂಲಕ ತಲುಪಬಹುದಾಗಿದೆ.

ಇನ್ನು ವಿಮಾನದ ಮೂಲಕವೂ ಗುವಾಹಟಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಸುಮಾರು 24 ಕಿಮೀ ದೂರ ಇರುವ ದೇವಸ್ಥಾನವನ್ನು ಟ್ಯಾಕ್ಸಿ ಇಲ್ಲವೇ ಖಾಸಗೀ ವಾಹನದ ಮೂಲಕ ತಲುಪಬಹುದಾಗಿದೆ.

ಅಸ್ಸಾಮಿನ ಹವಾಮಾನ ವರ್ಷವಿಡೀ ಆಹ್ಲಾದಕರವಾಗಿರುವ ಕಾರಣ ವರ್ಷದ ಯಾವುದೇ ಸಮಯದಲ್ಲಿ ತಮ್ಮ ತಮ್ಮ ಅನುಕೂಲಕ್ಕನುಗುಣವಾಗಿ ಈ ದೇವಾಲಯಕ್ಕೆ ಬರಬಹುದಾಗಿದೆ.

ಇಷ್ಟೆಲ್ಲಾ ವಿವರಗಳನ್ನು ತಿಳಿದ ಕೊಂಡ ಮೇಲೆ ಇನ್ನೇಕೆ ತಡಾ. ಸಮಯ ಮಾಡಿಕೊಂಡು ಗುಹವಾಟಿಯ ಚಿತ್ರಸಾಲ್ ಬೆಟ್ಟಕ್ಕೆ ಭೇಟಿ ನೀಡಿ ಲಿಂಗರೂಪಿ ನವಗ್ರಹಗಳ ದರ್ಶನ ಮಾಡಿ, ನಿಮ್ಮ ಅನುಭವವಗಳನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ.