ಸಂಚಾರಿ ವಿಜಯ್

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು.|
ಮದುವೆಗೋ ಮಸಣಕೋ ಹೋಗೆಂದ ಕಡೆ ಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ||

ಡಿವಿಜಿಯವರು ಅಂದು ಯಾರನ್ನು ತಲೆಯಲ್ಲಿ ಇಟ್ಟುಕೊಂಡು ಈ ಕಗ್ಗವನ್ನು ಬರೆದರೋ ಏನೋ? ಆದರೆ ಈ ಪದ್ಯ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ರಂಗಭೂಮಿ ಮತ್ತು ಚಲನಚಿತ್ರನಟ ಮತ್ತು ನಿರ್ದೇಶಕ ಸಂಚಾರಿ ವಿಜಯ್ ಅವರ ಪಾಲಿಗಂತೂ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಕೆಲ ವರ್ಷಗಳ ಹಿಂದೆ, ದಯಾಳ್ ಪದ್ಮನಾಭ್ ಅವರ ನಿರ್ದೇಶನದ ಸತ್ಯಹರಿಶ್ಚಂದ್ರ ಸಿನಿಮಾ ತಿರುವಣ್ಣಾಮಲೈನಲ್ಲಿನ ಚಿತ್ರೀಕರಣದಲ್ಲಿ ವಿಜಯ ಭಾಗವಹಿಸುತ್ತಿದ್ದರು. ಅದೆ ಸಮಯದಲ್ಲಿ ಅವರದ್ದೇ ಆದ ಆರನೇ ಮೈಲಿ ಚಿತ್ರದ ಪೂಜೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಹಮ್ಮಿಕೊಂಡಿದ್ದು ನಿರ್ಮಾಪಕರು ಬರಲೇ ಬೇಕು ಎಂಬ ಒತ್ತಾಯ ಮಾಡಿದ ಪಲವಾಗಿ ರಾಜನಹಳ್ಳಿಗೆ ಬಂದು ಪೂಜೆ ಮುಗಿಸಿಕೊಂಡು ನಿರ್ಮಾಪಕ ಎ. ಮಂಜು ಅವರ ಕಾರಿನಲ್ಲಿ ಮತ್ತೆ ತಿರುವಣ್ಣಾಮಲೈಗೆ ಹಿಂದಿರಿಗುವ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರು ನುಜ್ಜು ಗುಜ್ಜಾಗಿದ್ದರೂ ಅದೃಷ್ಠವಷಾತ್ ವಿಜಯ್ ಹೆಚ್ಚಿನ ಅಪಾಯವಿಲ್ಲದೇ ಪಾರಾದಾಗ, ಎಲ್ಲರೂ ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೊನ್ನೆ ಜೂನ್ 12 ಶನಿವಾರ ಜೆಪಿ ನಗರದಲ್ಲಿ ತಮ್ಮ ಗೆಳೆಯನ ಬೈಕ್ನಲ್ಲಿ ಹೆಲ್ಮೆಟ್ ಹಾಕಿಕೊಳ್ಳದೇ ಹೋಗುತ್ತಿರುವಾಗ ಬೈಕ್ ಅಪಘಾತವಾಗಿ ತೊಡೆ ಮತ್ತು ತಲೆಗೆ ತೀವ್ರವಾದ ಪೆಟ್ಟು ಬಿದ್ದ ಕಾರಣ, ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೆದಳು ನಿಶ್ಕ್ರಿಯೆಯಾಗಿ ಜೀವಚ್ಛವವಾಗಿ ಈಗಲೋ ಆಗಲೋ ಎನ್ನುವಂತಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅಂದು ಕಾರು ನುಚ್ಚು ನೂರಾದರೂ ಉಳಿಸಿದ್ದ ವಿಧಿ, ಇಂದು ಸಾಧಾರಣಗಿ ಬೈಕ್ ಜಾರಿದ್ದಕ್ಕೆ ಸೀದಾ ಮಸಣದ ದಾರಿ ತೋರಿಸಿರುವುದು, ನಂಬಲಾರದಾಗಿದೆ.

vij7

ಬಿ. ವಿಜಯ್ ಕುಮಾರ್ ಎಂಬ ಸುಸಂಪನ್ನ, ವಿದ್ಯಾವಂತ ಸುರದ್ರೂಪಿ ತರುಣ ಸಂ‍ಚಾರಿ ವಿಜಯ್ ಆಗಿದ್ದರ ಹಿಂದೆಯೂ ಒಂದು ರೋಚಕ ಕಥೆ ಇದೆ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿಇ ಮುಗಿಸಿ ಕೆಲಸವನ್ನು ಅರಸಿ ಬೆಂಗಳೂರಿಗೆ ಬಂದು ಕೆಲ ಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲೇ ನಟನಾಗ ಬೇಕೆಂಬ ಅಸೆಯಿಂದ ಸಂಜೆಯ ಹೊತ್ತಿನಲ್ಲಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಂಗಭೂಮಿಯ ನಟನೆಯಲ್ಲಿ ನಿರತರಾಗುತ್ತಿದ್ದಂತೆಯೇ ಎರಡು ದೋಣಿಯ ಮೇಲೆ ಕಾಲು ಇಡುವುದು ಸರಿಯಲ್ಲ ಎಂದು ನಿರ್ಧರಿಸಿ,ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಕೊಳ್ಳುತ್ತಾರೆ. ಆಗಾಗಲೇ ಖ್ಯಾತಿ ಪಡೆದಿದ್ದ ಸಂಚಾರಿ ಎಂಬ ಹೆಸರಿನ ನಾಟಕ ತಂಡದ ಅವಿಭಾಜ್ಯ ಅಂಗವಾಗಿ ಸುಮಾರು ಹತ್ತು ವರ್ಷಕ್ಕೂ ಅಧಿಕವಾಗಿ ಕಾಲ ಕಳೆದದ್ದರಿಂದ ಅವರು ಸಂಚಾರಿ ವಿಜಯ್ ಎಂದೇ ಖ್ಯಾತಿಯನ್ನು ಪಡೆಯುತ್ತಾರೆ. ಸಂಚಾರಿ ನಾಟಕ ತಂಡವಲ್ಲದೇ ನಾಡಿನ ಹಲವಾರು ತಂಡಗಳೊಂದಿಗೆ ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ, ಅದರ ಜೊತೆ ಜೊತೆಯಲ್ಲಿಯೇ ಕನ್ನಡದ ವಿವಿಧ ಛಾನೆಲ್ಲುಗಳ ಧಾರಾವಾಹಿಗಳಲ್ಲದೇ ಅಲ್ಲೊಂದು ಇಲ್ಲೊಂದು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಲ್ಲದೇ, ಒಂದೆರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದರು.

ಕಲೆ ಎಂಬುದು ವಿಜಯ ಅವರಿಗೆ ರಕ್ತಗತವಾಗಿ ಬಂದಿತ್ತು ಎಂದರು ತಪ್ಪಾಗಲಾರದು. ಜುಲೈ 17, 1983 ರಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ ಬಸವರಾಜಯ್ಯ ಮತ್ತು ಗೌರಮ್ಮ ದಂಪತಿಗಳ ಕುಟುಂಬದಲ್ಲಿ ವಿಜಯ್ ಅವರ ಜನನವಾಗುತ್ತದೆ. ತಂದೆ ಬಸವರಾಜಯ್ಯನವರು ಚಿತ್ರ ಕಲಾವಿದರಾಗಿದ್ದಲ್ಲದೇ, ಅನೇಕ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಎತ್ತಿದ ಕೈ. ತಾಯಿಯವರೂ ಸಹಾ ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಹೀಗಾಗಿಯೇ ವಿಜಯ್ ಬಾಲ್ಯದಿಂದಲೇ ರಂಗಭೂಮಿ, ಚಿತ್ರಕಲೆಯ ಜೊತೆಗೆ ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತವನ್ನು ಅಭ್ಯಾಸಿಸುತ್ತಾರೆ. ಅವರ ಅನೇಕ ನಾಟಕಗಳಲ್ಲಿ ತಮ್ಮ ಸಂಗೀತದ ಸುಧೆಯನ್ನು ಹರಿಸಿದ್ದಲ್ಲದೇ ಮುಂದೆ ಅನೇಕ ರಿಯಾಲಿಟಿ ಶೋಗಳಲ್ಲಿಯೂ ಅದನ್ನು ಜನರಿಗೆ ಪರಿಚಯಿಸಿದ್ದಾರೆ.

ಚಿಕ್ಕಂದಿನಿಂದಲೂ ಅಮ್ಮನ ಜೊತೆ ಪೇಟೆಗೆಂದೂ ಹೋದಾಗ ಅಲ್ಲಿ ಓಡಾಡುತ್ತಿದ್ದ ಆಟೋ, ಕಾರುಗಳ ಮೇಲೆಯೇ ವಿಜಯ್ ಕಣ್ಣು. ಅವರ ಪಂಚನಹಳ್ಳಿವರೇ ಆದ ಕಡೂರಿನ ಅಂದಿನ ಶಾಸಕರಾಗಿದ್ದ ಪಿ.ಬಿ.ಓಂಕಾರಮೂರ್ತಿ ಅವರ ಮನೆಯ ಎದುರು ಪ್ರತಿ ನಿತ್ಯವೂ ಐದಾರು ಬಗೆ ಬಗೆಯ ಕಾರುಗಳು ಬರುವುದನ್ನೇ ಬೆರಗುಗಣ್ಣಿನಿಂದ ನೋಡಿ ನಿಲ್ಲುತ್ತಿದ್ದ ವಿಜಯ್, ಅಮ್ಮಾ ನಾವೂ ಸಹಾ ಅಂತಹ ಕಾರಿನಲ್ಲಿ ಓಡಾಡ ಬೇಕು ಎಂದು ಪೀಡಿಸುತ್ತಿದ್ದರಂತೆ, ಅಯ್ಯೋ ಮಗಾ, ಕಾರು ಅಂದ್ರೆ ಸಾಮಾನ್ಯನಾ? ಅದೆಲ್ಲಾ ದೊಡ್ಡವರಿಗೆ ಮಾತ್ರಾ! ಎಂದು ಅವರ ಅಪ್ಪ ಮತ್ತು ಅಮ್ಮ ಸಮಾಧಾನ ಪಡಿಸುತ್ತಿದ್ದರಂತೆ, ಪೋಷಕರ ಜೊತೆ ಚಿಕ್ಕಮಗಳೂರಿಗೆ ಹೋದಾಗ ಆಟೋದ ಬಲಭಾಗದಲ್ಲಿ ಕುಳಿತು ಆಟೋದಿಂದ ಕುತ್ತಿಗೆ ಹೊರಗೆ ಹಾಕಿ ಇಡೀ ಪೇಟೆ ಬೀದಿಯ ಅಂಗಡಿಗಳನ್ನು ನೋಡುವುದೆಂದರೆ ವಿಜಯ್ ಗೆ ಏನೋ ಒಂದು ರೀತಿಯ ಖುಷಿ.

vij3

SSLC ಮುಗಿಸಿ ತಿಪಟೂರಿನಲ್ಲಿ ಪಿಯುಸಿಗೆ ಸೇರಿಕೊಂಡಿದ್ದೇ ತಡಾ ಬಿಚ್ಚಿ ಬಿಟ್ಟ ಕುದುರೆಯಂತಾಗಿ ಗೆಳೆಯರ ಗುಂಪನ್ನು ಕಟ್ಟಿಕೊಂಡು ಸಾಧಾರಣ ಸೈಕಲ್ಲಿನಲ್ಲಿಯೇ, ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರವಾಸ ಹೋಗುವುದು ಅವರಿಗೆ ಮುದ ನೀಡುತ್ತಿತ್ತು. ಅದರಲ್ಲಿಯೂ ಮಳೆಯಲ್ಲಿ ನೆನೆದುಕೊಂಡು ಸೈಕಲ್ ತುಳಿಯುವುದೆಂದರೆ ಬಹಳ ಮಜ ನೀಡುತ್ತಿತ್ತು. ನಂತರ ತಿಪಟೂರಿನ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇಗೆ ಸೇರಿಕೊಂಡಾಗ ಸೈಕಲ್ ಬದಲಾಗಿ ಗೆಳೆಯರೊಂದಿಗೆ ಬೈಕ್ನಲ್ಲಿ ಪ್ರವಾಸ ಹೋಗುವುದನ್ನು ಅಭ್ಯಾಸ ಮಾಡಿಕೊಂಡರು. ನಾಲ್ಕೈದು ಗೆಳೆಯರು ಸೇರಿಕೊಂಡು ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ, ವಿಜಯ್ ಅವರ ತಂಡ ಓಡಾಡದ ಪ್ರದೇಶವಿಲ್ಲ ಎಂಬಂತಾಗಿತ್ತು. ಇದೇ ಸಮಯದಲ್ಲಿಯೇ ಗೆಳೆಯರ ನೆರವಿನಿಂದ ಕಾರ್ ಓಡಿಸುವುದನ್ನೂ ಕಲಿತುಕೊಂಡಾಗಿತ್ತು. ಇವೆಲ್ಲದರ ನಡುವೆಯೇ ಉತ್ತಮ ದರ್ಜೆಯಲ್ಲಿಯೇ ಎಂಜಿನಿಯರಿಂಗ್ ಪದವಿ ಮುಗಿಸಿ ಜೀವನ ಅರೆಸುತ್ತಾ ಬೆಂಗಳೂರಿನತ್ತ ಪಯಣ ಸಾಗಿ ಬಂತು. ಬೆಂಗಳೂರಿಗೆ ಬಂದ ಮೇಲಂತೂ ಕಾರು ಖರೀದಿಸಬೇಕು ಎನ್ನುವ ಅವರ ಆಸೆ ಮತ್ತಷ್ಟು ಹೆಚ್ಚಾಯಿತಾದರೂ ಅಂದಿನ ಆರ್ಥಿಕ ಪರಿಸ್ಥಿತಿ ಇಲ್ಲದ ಕಾರಣ, ಕಾಲೇಜು ಪಾಠ, ರಂಗಭೂಮಿ, ಸಿನಿಮಾದಲ್ಲಿ ಅವಕಾಶ ಪಡೆಯತೊಡಗಿದರು. ಇದೇ ಸಮಯದಲ್ಲಿಯೇ ಅವರ ತಮ್ಮ ಕೊಡಿಸಿದ ರಿಡ್ಜ್ ಕಾರು ಅವರ ಜೀವನದ ಮೊತ್ತಮೊದಲ ಕಾರಾಗಿತ್ತು. ಅದೇ ಕಾರಿನಲ್ಲಿಯೇ. ಶಿರಸಿ, ಆಗುಂಬೆ ಮತ್ತು ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಮಳೆಯ ನಡುವಿನ ಪ್ರಯಾಣದ ತಮ್ಮ ಕನಸನ್ನು ನನಸನ್ನಾಗಿ ಮಾಡಿಕೊಂಡಿದ್ದರು. ಅಂತಿಮವಾಗಿ ಮಳೆಯಲ್ಲಿಯೇ ತಮ್ಮ ನೆಚ್ಚಿನ ವಾಹನದಲ್ಲಿ ಸಂಚರಿಸುತ್ತಿದ್ದಾಗಲೇ ಅಂತ್ಯ ಕಾಣಬೇಕಾದ ಪರಿಸ್ಥಿತಿ ಬಂದೊದಗಿದ್ದು ವಿಧಿಯ ವಿಪರ್ಯಾಸವೇ ಸರಿ.

ಇಷ್ಟರ ನಡುವೆ ಸಾವು ಧ್ಯೇಯಕ್ಕಿಲ್ಲ ಸಾಂಬಶಿವ ಪ್ರಹಸನ, ಸ್ಮಶಾನ ಕುರುಕ್ಷೇತ್ರ, ಸಾವಿರದವಳು, ಪ್ಲಾಸ್ಟಿಕ್ ಭೂತ, ಶೂದ್ರ ತಪಸ್ವಿ, ಸತ್ಯಾಗ್ರಹ, ಸಂತೆಯೊಳಗೊಂದು ಮನೆಯ ಮಾಡಿ, ಮಾರ್ಗೊಸ ಮಹಲ್, ಮಹಾಕಾಲ, ಅರಹಂತ, ಕಮಲಮಣಿ ಕಾಮಿಡಿ ಕಲ್ಯಾಣ, ನರಿಗಳಿಗೇಕೆ ಕೋಡಿಲ್ಲ ಮುಂತಾದ ನೂರಾರು ನಾಟಕಗಳಲ್ಲಿ ನಟಿಸಿದ್ದಲ್ಲದೇ, ಪಾಪ ಪಾಂಡು, ಪಾರ್ವತಿ ಪರಮೇಶ್ವರ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ಪಾತ್ರವಹಿಸಿದ್ದರೂ ವಿಜಯ್ ಸಾಮಾನ್ಯ ಜನರಿಗೆ ಇನ್ನೂ ಅಪರಿಚಿತರಾಗಿಯೇ ಉಳಿದಿದ್ದರು.

vij6

ರಮೇಶ್ ಅಭಿನಯದ ರಂಗಪ್ಪ ಹೋಗ್ಬಿಟ್ನಾ ಮುಖಾಂತರ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದ ವಿಜಯ್ ರಾಮರಾಮ ರಘುರಾಮ, ವಿಲನ್, ದಾಸವಾಳ, ಒಗ್ಗರಣೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವಾಗಲೇ. ಇವರು ನಟಿಸಿದ್ದ ಹರಿವು ಚಿತ್ರಕ್ಕೆ ರಾಜ್ಯಪ್ರಶಸ್ತಿಯೂ ಬಂದಿತ್ತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ನಾನು ಅವನಲ್ಲ ಅವಳು ಎಂಬ ಚಿತ್ರದಲ್ಲಿ ತೃತೀಯ ಲಿಂಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಕ್ಕಾಗಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಪ್ರಕಟವಾದಾಗಲೇ, ಸಮಸ್ತ ಕನ್ನಡಿಗರಿಗೂ ರಾತ್ರೋ ರಾತ್ರಿ ಸಂಚಾರಿ ವಿಜಯ್ ಎಂಬ ಅಧ್ಭುತ ನಟ ಅಕ್ಷರಶಃ ಪರಿಚಯವಾದರು ಎಂದರೂ ತಪ್ಪಾಗಲಾರದು.

vij5

ರಾಷ್ಟ್ರಪ್ರಶಸ್ತಿ ಪಡೆದ ನಂತರ ಕನ್ನಡ ಚಿತ್ರರಂಗದ ಜೊತೆ ಜೊತೆಯಲ್ಲಿಯೇ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳು ಸಾಲು ಸಾಲಾಗಿ ಸಿಕ್ಕರೂ ತಮ್ಮ ಆಯ್ಕೆಯಲ್ಲಿ ಎಚ್ಚರವಹಿಸಿದ ಕಾರಣ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದರೂ ಎಲ್ಲರ ಮನದಲ್ಲಿ ಉಳಿಯುವಂತೆ ಅಭಿನಯಿಸಿದ್ದರು.

vij2

ಲಾಕ್ಡೌನ್ ಸಮಯದಲ್ಲಿ ಅವಶ್ಯಕತೆ ಇದ್ದವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವ ಅಭ್ಯಾಸವನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದರು. ಅವರೇ ಒಂದು ಸಂದರ್ಶನದಲ್ಲಿ ಹೇಳಿದಂತೆ ನಮ್ಮ ಜೀವನ ಎಲ್ಲವೂ ಕ್ಷಣಿಕ. ಇದ್ದಾಗ ಕೈಲಾದಷ್ಟು ಜನರಿಗೆ ಉಪಕಾರ ಮಾಡುವ ಮೂಲಕ ಅವರ ಮನಸ್ಸಿನಲ್ಲಿ ಶಾಶ್ವತವಾದ ನೆಲೆ ಮೂಡಿಸುವಂತಾಗಬೇಕು ಎಂದು ಹೇಳಿದ್ದು‌ಇನ್ನೂ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ.

ಮೊನ್ನೆ ಶನಿವಾರ ಅಪಘಾತವಾದ ಸಮಯದಲ್ಲಿಯೂ ಯಾವುದೋ ಕೋವಿಡ್ ಸೋಂಕಿತರಿಗೆ ಆಹಾರದ ಕಿಟ್ ವಿತರಿಸಿ, ಹಿಂದಿರುಗುವಾಗ ಮಳೆ ಜೋರಾದ ಕಾರಣ ಅವರ ಸ್ನೇಹಿತ ಗಾಡಿಯ ವೇಗವನ್ನು ಹೆಚ್ಚಿಸಿದಾಗ ಗಾಡಿ ಮಳೆಯ ನೀರಿನಿಂದಾಗಿ ಜಾರಿ ವಿಜಯ್ ಗಾಡಿಯಿಂದ ಹಾರಿ ಬಿದ್ದು ಅಲ್ಲಿನ ದೀಪದ ಕಂಬಕ್ಕೆ ತಲೆತಾಗಿ ಜೋರಾಗಿ ತಲೆಗೆ ಮತ್ತು ತೊಡೆಗೆ ಪೆಟ್ಟಾಗಿದೆ. ಅಕಸ್ಮಾತ್ ತಲೆಗೆ ಹೆಲ್ಮೆಟ್ ಹಾಕಿದ್ದಲ್ಲಿ ಈಪಾಟಿ ಅಪಘಾತ ಆಗುತ್ತಿರಲಿಲ್ಲ ಎಂಬುದೇ ಅವರನ್ನು ಚಿಕಿತ್ಸೆ ಮಾಡಿದ ಡಾಕ್ಟರ್‌ ಅರುಣ್ ನಾಯಕ್ ಹೇಳಿದ್ದು ಎಲ್ಲಾ ವಾಹನ ಚಾಲಕರಿಗೂ ಎಚ್ಚರಿಕೆಯ ಗಂಟೆಯಾಗಿದೆ.

ಬದುಕಿರುವಾಗ ಕೈಲಾದ ಮಟ್ಟಿಗೆ ಸಹಾಯ ಮಾಡುವುದನ್ನು ರೂಢಿ ಮಾಡಿ ಕೊಂಡಿದ್ದ ವಿಜಯ್ ಈಗ ಮೆದುಳು ನಿಶ್ಕ್ರಿಯೆಯಾಗಿ ಮತ್ತೆ ಚೇತರಿಕೊಳ್ಳುವುದಿಲ್ಲ ಎಂಬ ವಿಷಯ ಅವರ ಮನೆಯವರಿಗೆ ತಿಳಿದ ತಕ್ಷಣವೇ, ಅವರ ಕುಟುಂಬ ಬದುಕಿದ್ದೂ ಸತ್ತವರಂತೆ ಬದುಕುವ ಬದಲು, ಸತ್ತ ಮೇಲೆಯೂ ಮೂರ್ನಾಲ್ಕು ಜನರ ಬಾಳಿನಲ್ಲಿ ಬದುಕುವ ಆಸೆಯನ್ನು ಮೂಡಿಸುವ ಸಲುವಾಗಿ ಅವರ ಅಂಗಾಂಗ ದಾನಕ್ಕೆ ಮುಂದಾಗಿರುವುದು ನಿಜಕ್ಕೂ ಅನ್ಯನ್ಯ ಮತ್ತು ಅನುಕರಣೀಯವೇ ಸರಿ. ಅವರ ಎರಡು ಕಣ್ಣುಗಳು, ಎರಡು ಕಿಡ್ನಿಗಳನ್ನು, ಯಕೃತ್ ತೆಗೆದು ಅಗತ್ಯ ಇರುವವರಿಗೆ ಕಸಿ ಮಾಡುವ ಮೂಲಕ ಬದುಕಿನ ಭರವಸೆಯನ್ನು ಕಳೆದುಕೊಂಡು ದುಃಖದ ಕೋಡಿಯಲ್ಲಿರುವವರ ಜೀವನದಲ್ಲಿ ಮತ್ತೆ ನಗುವನ್ನು ತುಂಬುವಂತಹ ಶ್ಲಾಘನೀಯ ಕೆಲಸಕ್ಕೆ ಮುಂದಾಗಿರುವ ವಿಜಯ್ ಅವರ ಕುಟುಂಬವನ್ನು ಎಷ್ಟು ಹೊಗಳಿದರೂ ಸಾಲದು.

ಸುರದ್ರೂಪಿ, ಸಮಾಜಮುಖೀ ನಟ ವಿಜಯ್ ಅವರ ಅಕಾಲಿಕ ಮರಣ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ನಷ್ಟವಾದರೂ ಪರೋಪಕಾರಾಯ ಇದಂ ಶರೀರಂ ಎನ್ನುವಂತೆ ಬದುಕಿದ್ದಾಗಲೂ ಮತ್ತು ಸಾಯುವಾಗಲೂ ಮತ್ತೊಬ್ಬರಿಗೆ ಸಹಾಯ ಮಾಡಿದ ವರ ಕೀರ್ತಿ ಕನ್ನಡ ಚಿತ್ರರಂಗದಲ್ಲಿ ಆಚಂದ್ರಾರ್ಕವಾಗಿ ಉಳಿಯಲಿದೆ ಎನ್ನುವುದಂತೂ ಸತ್ಯ.

ಕೇವಲ 38. ವರ್ಷಗಳ ಸಾಯಬಾರದ ವಯಸ್ಸಿನಲ್ಲಿ ಅಚಾನಕ್ಕಾಗಿ, ಅಕಾಲಿಕವಾಗಿ ದುರ್ಮರಣಕ್ಕೆ ತುತ್ತಾಗಿ ಜೀವನದ ಪಯಣದ ಸಂಚಾರವನ್ನು ತುರ್ತಾಗಿ ಮೊಟುಕುಗೊಳಿಸಿಕೊಂಡ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಸದ್ಗತಿ ಕೊಡಲಿ ಅವರು ಮಾಡುತ್ತಿದ್ದ ಸಮಾಜಮುಖೀ ಕಾರ್ಯಗಳು ಎಲ್ಲರಿಗೂ ಪ್ರೇರಣಾದಾಯಕವಾಗಲಿ. ಅವರು ನಿರ್ಲಕ್ಷದಿಂದ ಹೆಲ್ಮೆಟ್ ಧರಿಸದೇ ಅಪಘಾತಕ್ಕೀಡಾದದ್ದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ.

ಏನಂತೀರೀ?
ನಿಮ್ಮವನೇ ಉಮಾಸುತ

ಶಾಲೆಗಳನ್ನೇ ವಿಶೇಷ ಕೋವಿಡ್ ಅರೈಕೆ ಕೇಂದ್ರಗಳನ್ನಾಗಿಸಿದ ರಾಷ್ಟ್ರೋತ್ಥಾನ ಪರಿಷತ್

ಅದೊಂದು ವಠಾರದಲ್ಲಿ ನಾಲ್ಕು ಜನರಿರುವ ಒಂದು ಸಣ್ಣ ಕುಟುಂಬವೊಂದು ವಾಸವಾಗಿತ್ತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಆ ಮನೆಗೆ ದೂರದೂರಿನಿಂದ ಸುಮಾರು ಎಂಟು ಹತ್ತು ನೆಂಟರು ಆಗಮಿಸಿ ಬಿಟ್ಟರು. ಬಂದರವರನ್ನು ನೋಡಿದರೆ ದೂರ ಪ್ರಯಾಣದಿಂದ ಬಹಳ ಹಸಿದಂತೆ ಕಾಣುತ್ತಿದ್ದರು. ಅವರೆಲ್ಲರನ್ನು ಊಟಕ್ಕೆ ಕುಳ್ಳಿರಿಸಬೇಕು.  ಆದರೆ  ಅವರ ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಅಡುಗೆ ಇರಲಿಲ್ಲ. ಅಷ್ಟು ಜನರಿಗೆ  ಅಡುಗೆ ಮಾಡಬೇಕೆಂದರೂ ಕನಿಷ್ಟ ಪಕ್ಷ ಒಂದೆರಡು ಗಂಟೆಯಾದರೂ ಬೇಕಿತ್ತು.  ತಿಂಗಳ ಕೊನೆಯಾಗಿದ್ದರಿಂದ ಹೋಟೇಲ್ಲಿನಿಂದಲೂ ತರುವಷ್ಟು ಹಣ ಅವರ ಬಳಿ ಇರಲಿಲ್ಲ. ಕೂಡಲೇ ಮನೆಯಾಕೆ ಧೃತಿಗೆಡದೆ ಎಲ್ಲರಿಗೂ ಊಟದ ವ್ಯವಸ್ಥೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ, ಅನ್ನಕ್ಕೆ ಕುಕ್ಕರ್ ಇಟ್ಟು ಕೂಡಲೇ ವಠಾರದ ಅಕ್ಕ ಪಕ್ಕದ ಮನೆಗಳಿಗೆ ಹೊಗಿ ಅವರ ಮನೆಯಲ್ಲಿದ್ದ ಸಾರು, ಹುಳಿಯನ್ನು ಪಡೆದುಕೊಂಡು ಬಂದು ಹತ್ತು ನಿಮಿಷಕ್ಕೆ ಬಿಸಿ ಬಿಸಿ ಅನ್ನದ ಜೊತೆಗೆ ಬಗೆಬಗೆಯ ಊಟ ಬಡಿಸಿ ಎಲ್ಲರನ್ನೂ ಸಂತೈಸಿದ್ದರು. ಉತ್ತಮ ನೆರೆಹೊರೆಯಿಂದಾಗಿ ಕ್ಷಣಮಾತ್ರದಲ್ಲಿ  ಅತಿಥಿ ಸತ್ಕಾರಕ್ಕೆ ಕಿಂಚಿತ್ತೂ ಲೋಪವಾಗದಂತೆ ನೋಡಿಕೊಂಡಿದ್ದರು ಆ ಮನೆಯಾಕೆ.

ದೇಶದಲ್ಲಿ  ಸದ್ಯದ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗೇನೂ ಇಲ್ಲವಾಗಿದೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ವ್ಯವಸ್ಥೆಗಳು ಇದ್ದು ಅದನ್ನು ಕಾಲ ಕಾಲಕ್ಕೆ ಅನುಗುಣವಾಗಿ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ  ಚೀನಾ ದೇಶದಿಂದ ಧುತ್ತೆಂದು  ಇಡೀ ಪ್ರಪಂಚಕ್ಕೇ ವಕ್ಕರಿಸಿದ ಕೊರಾನಾ ಎಂಬ ಮಹಾಮಾರಿಯಿಂದಾಗಿ ದೇಶಾದ್ಯಂತ  ಇದ್ದ ವೈದ್ಯಕೀಯ ವ್ಯವಸ್ಥೆಗಳು ಸಾಲಾದಾಗಿವೆ. ಎಲ್ಲೆಡೆಯೂ ಹಾಹಾಕಾರ ಏಳುವಂತಾಗಿದೆ.

ಬಡವ ಶ್ರೀಮಂತ ಎಂಬ ಬೇಧ ಭಾವವಿಲ್ಲದೇ ಎಲ್ಲರನ್ನೂ ಅಕ್ರಮಿಸಿಕೊಂಡಿರುವ ಈ ಕೊರೋನಾ ಮಹಾಮಾರಿಗೆ ಸರ್ಕಾರದ ಕಡೆಯಿಂದ ಉಚಿತ  ಚಿಕಿತ್ಸೆಗಾಗಿ ಆಸ್ಪತ್ರೆಗಳು ಸಿಗದೇ ಹೋದಾಗಾ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ  ಪಡೆದು ಕೊಳ್ಳುವುದು ಸ್ವಲ್ಪ ಜನಸಾಮಾನ್ಯರಿಗೆ ಸ್ವಲ್ಪ ದುಬಾರಿಯೇ ಎನಿಸಿದಾಗ, ಸುಖಾ ಸುಮ್ಮನೇ ಸರ್ಕಾರವನ್ನು ದೂರುತ್ತಾ  ತಮ್ಮ ಆಕ್ರೋಶಗಳನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕುವ ಎಷ್ಟೋ  ಮಂದಿಯನ್ನು ನಾವು ನೋಡಿದ್ದೇವೆ.

rs7ಇಂತಹ ಸಂಧರ್ಭದಲ್ಲಿ  ಸುಖಾ ಸುಮ್ಮನೇ  ಸರ್ಕಾರವನ್ನು ದೂರುತ್ತಾ ಕೂರದೇ ಮೇಲೆ ತಿಳಿಸಿದ ಉದಾಹರಣೆಯಲ್ಲಿನ ಒಳ್ಳೆಯ ನೆರಹೊರೆಯವರಂತೆ ಜನರ ಸಾಮಾನ್ಯರಿಗಾಗಿ  ಸಂಘಪರಿವಾರದ ಅಂಗ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ಮತ್ತು ಸೇವಾಭಾರತಿಯ ಸಹಯೋಗದೊಂದಿಗೆ ಕೋವಿಡ್ ಅರೈಕೆಯ ವಿಶೇಷ ಕೇಂದ್ರಗಳು ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದಲೂ ಆರಂಭಿಸಿರುವುದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ.

rs8ಸಾಮಾನ್ಯವಾಗಿ ಎಲ್ಲಾ  ಕೋವಿಡ್ ಪೀಡಿತರೂ ಆಸ್ಪತ್ರೆಗೆ ಸೇರಲೇ ಬೇಕಿಲ್ಲ. ಮನೆಯಲ್ಲಿಯೇ ಇತರರಿಂದ ಪ್ರತ್ಯೇಕವಾಗಿದ್ದು ಔಷಧೋಪಚಾರವನ್ನು ಪಡೆದು ಹುಷಾರಾಗಿರುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ ಕೋವೀಡ್-19ರ ಎರಡನೇ ಅಲೆ ಸ್ವಲ್ಪ ತೀವ್ರವಾಗಿರುವ ಕಾರಣ ಸ್ವಲ್ಪ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡರೂ ಜನಮರುಳೋ ಜಾತ್ರೆ ಮರುಳೋ ಎನ್ನುವಂತೆ ಎಲ್ಲರೂ ಆಸ್ಪತ್ರೆಗಳಿಗೆ ಸೇರಲು ಬಯಸುವುದರಿಂದ ನಿಜವಾಗಿಯೂ ಆಸ್ಲತ್ರೆಯ ಅವಶ್ಯಕತೆ ಇರುವ ರೋಗಿಗಳಿಗೆ ಆಸ್ಪತ್ರೆಯ  ಚಿಕಿತ್ಸೆಯೇ ದೊರೆಯದೇ ಇರುವುದನ್ನು ಮನಗಂಡ ರಾಷ್ಟ್ರೋತ್ಥಾನದ ಕಾರ್ಯಕರ್ತರೂ ಕೂಡಲೇ ಬನಶಂಕರಿ ಬಡಾವಣೆಯಲ್ಲಿರುವ ತಮ್ಮ ಶಾಲೆಯಲ್ಲಿಯೇ  ಸುಮಾರು 90 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆರೈಕಾ ಕೇಂದ್ರವನ್ನು ಆರಂಭಿಸಿದರು, 

rs2ಇಲ್ಲಿ 24 ಗಂಟೆಗಳೂ  ಅನುಭವಸ್ಥ ತಜ್ಞವೈದ್ಯರು ಮತ್ತು ನುರಿತ ದಾದಿಯರಲ್ಲದೇ ಕೋವೀಡ್ ಸೋಂಕಿತರ ಅಗತ್ಯಗಳನ್ನು ಪೂರೈಸಲು ಕಠಿಬದ್ಧರಾಗಿರುವ ಸ್ವಯಂಸೇವಕರ ತಂಡವೇ ಅಲ್ಲಿದೆ. ಬೆಳಿಗ್ಗೆ 6ಕ್ಕೆಲ್ಲಾ ಆರೋಗ್ಯಕರವಾದ ಕಷಾಯ.  ಸದಾಕಾಲವೂ ಸ್ವಚ್ಚವಾಗಿರುವ ಶೌಚಾಲಯ, ಸ್ನಾನಕ್ಕೆ ಬಿಸಿ ನೀರು, 8ಕ್ಕೆಲ್ಲಾ ರುಚಿಯಾದ ತಿಂಡಿ, 10 ಗಂಟೆಗೆ ಕಾಫಿ, ಮಥ್ಯಾಹ್ನ 12ಕ್ಕೆ ಊಟ ಸಂಜೆ 4ಕ್ಕೆ ಲಘು ಉಪಹಾರ ರಾತ್ರಿ 8ಕ್ಕೆ ಊಟ ಮತ್ತು 10 ಗಂಟೆಯ ಹೊತ್ತಿಗೆ ಅರಿಶಿನ ಮಿಶ್ರಿತ ಹಾಲು, ಮಲಗಿ ಕೊಳ್ಳಲು ಮೆತ್ತನೆಯ ಹಾಸಿಗೆ ಮತ್ತು ಹೊದ್ದುಕೊಳ್ಳಲು ಬೆಚ್ಚನೆಯ ಹೊದ್ದಿಗೆಿ ಇರುವಂತಹ ವಿಶೇಷ ಆಸ್ಪತ್ರೆಯ ಕೊಠಡಿಗಳಾಗಿವೆ. ಕಾಲ ಕಾಲಕ್ಕೆ ಕೋವಿಡ್ ಸೋಂಕಿತರಿಗೆ ಅಗತ್ಯವಾದ ಔಷಧೋಪಚಾರಗಳನ್ನು ಸಹಾ ಇಲ್ಲಿ ಕೊಡಲಾಗುವುದದೇ, ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುವ ಸೌಲಭ್ಯವೂ ಇಲ್ಲಿದೆ. ಅಗತ್ಯವಿದ್ದಲ್ಲಿ ಜೀವರಕ್ಷಕ  ಅಮ್ಲಜನಕದ ಸೌಲಭ್ಯವೂ ಇಲ್ಲಿದೆ.  ಕಾಲ ಕಾಲಕ್ಕೆ ಇಲ್ಲಿನ ರೋಗಿಗಳ ವೈದ್ಯಕೀಯ ತಪಾಸಣೆ ಮಾಡುತ್ತಾ  ಪರಿಸ್ಥಿತಿ ಕೈಮೀರುತ್ತಿದೆ ಎಂದಾದಾಗ ಕೂಡಲೇ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧರಾಗಿರುವ ತಂಡವಿದೆ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಇಷ್ಟೆಲ್ಲಾ ಸೌಲಭ್ಯಗಳು ಸಂಪೂರ್ಣವಾಗಿ ಉಚಿತ ಎನ್ನುವುದು ಅತ್ಯಂತ ಗಮನಾರ್ಹ ಮತ್ತು ಶ್ಲಾಘನೀಯವಾಗಿದೆ.

rs6ಕೋವಿಡ್ ಪರೀಕ್ಷೆಗೊಳಗಾಗಿ ಕೋವಿಡ್ ವೈರಾಣು ಧೃಢಪಟ್ಟು BU  ಸಂಖ್ಯೆ ಹೊಂದಿರುವ ಯಾವುದೇ 10-60 ವರ್ಷವಯಸ್ಸಿನ ಉಸಿರಾಟದ ಆಮ್ಲಜನಕದ ಮಟ್ಟ ೯೪ಕ್ಕೂ ಮೇಲಿರುವ ಲಿಂಗ, ಧರ್ಮ ಬೇಧವಿಲ್ಲದೇ ತಮ್ಮ ನಾಲ್ಕು ಜೊತೆ ಬಟ್ಟೆಗಳೊಂದಿಗೆ ಈ ಕೇಂದ್ರದ  ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದು ಕೋವಿಡ್ ಪ್ರಥಮ ಆರೈಕೆಯ ಕೇಂದ್ರವಾಗಿರುವ ಕಾರಣ ತೀವ್ರವಾಗಿ ಕೋವಿಡ್ ನಿಂದ ಬಳಲುತ್ತಿವವರಿಗೆ ಈ ಕೇಂದ್ರದಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ ಮತ್ತು ಅವರ ಜೊತೆಗೆ ಬರುವವರನ್ನು ಇಲ್ಲಿ ಇಟ್ಟು ಕೊಳ್ಳಲಾಗುವುದಿಲ್ಲ.

rs3ಇಷ್ಟೆಲ್ಲಾ ಸೌಲಭ್ಯವುಳ್ಳ  ಕೇಂದ್ರವನ್ನು ನಡೆಸಲು ತಿಂಗಳಿಗೆ ಸುಮಾರು 50 ಲಕ್ಷಗಳು ಬೇಕಾಗುತ್ತದೆ. ಸಂಘ ಮತ್ತು ಸಂಘ ಪರಿವಾರದ ಸ್ವಯಂ ಸೇವಕರು ಸ್ವಾರ್ಥಕ್ಕೆ ಸ್ವಲ್ಪ ಸಮಾಜಕ್ಕೆ  ಸರ್ವಸ್ವ ಎಂದು ಭಾವಿಸಿ, ದೇಶಕ್ಕೆ ವಿಪತ್ತು ಬಂದಾಗಲೆಲ್ಲಾ ಅಗತ್ಯ ಸೇವೆ ಸಲ್ಲಿಸುತ್ತಿರುವುದು ಜನಮಾನಸದಲ್ಲಿ ಈಗಾಗಲೇ ಅಚ್ಚೊತ್ತಿರುವುದರಿಂದ ಇಂತಹ ಕಾರ್ಯಕ್ರಮಕ್ಕೆ  ಆರ್ಥಿಕವಾಗಿ ಬೆಂಬಲ ನೀಡಲು ಅನೇಕ ಕಾರ್ಪೊರೇಟ್ ಸಂಸ್ಥೆಗಳು  ಮುಂದಾಗಿದ್ದು ತಮ್ಮ CSR ನಿಧಿಯಿಂದ ಸಹಾಯ ಮಾಡುತ್ತಿವೆ.  ಇದೂ ಅಲ್ಲದೇ ದೇಶವಿದೇಶದಲ್ಲಿ ನೆಲೆಸಿರುವ  ಅನೇಕ ಸಹೃದಯೀ ಸ್ಥಿತಿವಂತರು ಸಹಾ ಮುಂದೆ ಬಂದಿರುವುದು ಇಂತಹ ಹತ್ತು ಹಲವಾರು ಜನಪರ ಸೇವಾ ಕೇಂದ್ರಗಳನ್ನು ಆರಂಭಿಸುವುದಕ್ಕೆ ಪ್ರೋತ್ಸಾಹಕರವಾಗಿದೆ. ಇನ್ನೂ ಹಲವರು ದೇಶ ವಿದೇಶಗಳಿಂದ ಕರೆ ಮಾಡಿ oxymeter, oxygen concentretor ಮುಂತಾದವುಗಳನ್ನು ಕಳುಹಿಸಿಕೊಡಲು ಒಪ್ಪಿಕೊಂಡಿದ್ದಾರೆ. ಇಂತಹ ಮಹತ್ಕಾರ್ಯದಲ್ಲಿ ತಮ್ಮದೂ ಅಳಿಲು ಸೇವೆ ಸಲ್ಲಿಸಲು ಇಚ್ಚಿಸುವವರು ರಾಷ್ಟ್ರೋತ್ಧಾನದ ವೆಬ್ ಸೈಟಿನಲ್ಲಿ ಸೂಚಿಸಿರುವ ಬ್ಯಾಂಕಿನ ಅಕೌಂಟ್ ನಂಬರಿಗೆ ಹಣವನ್ನು ಕಳುಹಿಸಬಹುದಾಗಿದೆ.

rs1ಬನಶಂಕರಿ ಶಾಲೆಯಲ್ಲಿನ ವಿಶೇಷ ಚಿಕಿತ್ಸಾ ಕೇಂದ್ರಕ್ಕೆ ಬಂದ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ  ರಾಮಮೂರ್ತಿ ನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿಯೂ 50 ಹಾಸಿಗೆಯ ಕೇಂದ್ರ. ಯಲಹಂಕದ ಮಂಗಳ ವಿದ್ಯಾಮಂದಿರದಲ್ಲಿಯೂ ಕಳೆದ ವಾರ 50 ಹಾಸಿಗೆಯ ವಿಶೇಷ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿಯಲ್ಲದೇ, ಬೆಂಗಳೂರಿನ ಹೊರವಲಯದವರಿಗೆ ಅನುಕೂಲಕರವಾಗಲೆಂದು ಮಾಗಡೀ ರಸ್ತೆಯಲ್ಲಿರುವ ಚನ್ನೇಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿಯೇ ಎರಡು ದಿನಗಳ ಹಿಂದೆ 50 ಹಾಸಿಗೆ ಹಾಸಿಗೆಯ ವಿಶೇಷ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. 

ಇಂತಹ ಚಿಕಿತ್ಸಾ ಕೇಂದ್ರಗಳು ಆರಂಭಿಸಲು ಎಲ್ಲಾ ರೀತಿಯ ಸೌಲಭ್ಯವುಳ್ಳ ಸೂಕ್ತ ಜಾಗ ಸಿಕ್ಕಿದಲ್ಲಿ ಇನ್ನೂ ಹತ್ತು ಹಲವಾರು ಕೇಂದ್ರಗಳನ್ನು ತೆರೆಯಲು ರಾಷ್ಟ್ರೋತ್ಥಾನ ಮತ್ತು ಸೇವಾಭಾರತಿಯ ಸ್ವಯಂಸೇವಕರು ಸಿದ್ಧರಾಗಿದ್ದಾರೆ. ಈಗಾಗಲೇ ಅಂತಹ ಹತ್ತು ಹಲವಾರು ಸ್ಥಳಗಳನ್ನು ಗುರುತಿಸಿದ್ದರೂ,  ಅಲ್ಲಿಯ ಸ್ಥಳೀಯರ ಅಸಹಕಾರ ಮತ್ತು ಪ್ರತಿಭಟನೆಗಳ ಕಾರಣ  ಇಂತಹ ಕೇಂದ್ರಗಳನ್ನು ತೆರೆಯಲು ಸಾಥ್ಯವಾಗುತ್ತಿಲ್ಲ ಎಂದು ಆಯೋಜಕರು ಬೇಸರ ವ್ಯಕ್ತ ಪಡಿಸುತ್ತಾರೆ.

rs4ಸಾಧಾರಣವಾಗಿ ಇಲ್ಲಿಗೆ ಬರುವ ರೋಗಿಗಳನ್ನು ಅವರ ದೇಹದ ಆರೋಗ್ಯಕ್ಕೆ ಅನುಗುಣವಾಗಿ 7-14 ದಿನಗಳ ವರೆಗೂ ಇಲ್ಲಿ ರೋಗಿಗಳನ್ನು ಇಟ್ಟುಕೊಳ್ಳಲಾಗುತ್ತದೆ.   ಈಗಾಗಲೇ ಬನಶಂಕರಿ ಚಿಕಿತ್ಸಾ ಕೇಂದ್ರದಿಂದ ಸುಮಾರು 15-20 ಮತ್ತು ರಾಮಮೂರ್ತಿ ನಗರದ ಕೇಂದ್ರದಿಂದ 30–35 ರೋಗಿಗಳು  ಇಲ್ಲಿನ ಸೇವೆಯನ್ನು ಪಡೆದು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ಹಿಂದಿರಿಗಿರುವುದು ಆಶಾದಾಯಕವಾಗಿದೆ. ಕೆಲವೇ ಕೆಲವು ಬೆರಳಣಿಕೆಯಷ್ಟು ಜನರು ಹೆಚ್ಚಿನ ಚಿಕಿತ್ಸೆಗಳಿಗಾಗಿ ಬೇರೆಯ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ  ಒಂದಿಬ್ಬರನ್ನು ಮಾತಾನಾಡಿಸಿದಾಗ  ಅವರ ಪ್ರತಿಕ್ರಿಯೆಯಂತೂ ಅದ್ಭುತವಾಗಿತ್ತು. ಅದರಲ್ಲೂ  ಒಂದು ಕುಟುಂಬದ ಹಿರಿಯ ಮಗನ ಕುಟುಂಬ ದೂರದ ಕೆನಡಾದಲ್ಲಿದೆ. ಅವರ  70+  ವಯಸ್ಸಿನ ತಂದೆ, 65+ ವಯಸ್ಸಿನ ತಾಯಿ ಮತ್ತು ಅವರ ಮಗನಿಗೆ ಕೋವಿಡ್ ತಗುಲಿದೆ. ಮನೆಯಲ್ಲಿ ಸೊಸೆ ಮತ್ತು ಪುಟ್ಟ ವಯಸ್ಸಿನ ಮಗುವಿಗೆ ಏನು ಮಾಡುವುದು ಎಂಬ ದಿಕ್ಕೇ ತೋಚದೆ ಕೆನಾಡಲ್ಲಿರುವ ತಮ್ಮ ಓರಗಿತ್ತಿಗೆ ಕರೆ ಮಾಡಿದ್ದಾರೆ. ಆಕೆ ಅಲ್ಲಿಂದಲೇ ತನಗೆ ಪರಿಚಯವಿರುವರಿಂದ ರಾಷ್ಟ್ರೋತ್ಥಾನದ ಸ್ವಯಂಸೇವಕರ ಸಂಖ್ಯೆ ದೊರೆತು  ಅಲ್ಲಿಂದಲೇ ಕರೆ ಮಾಡಿ ಸಹಾಯವನ್ನು ಕೋರಿದಾಗ,  ತುಂಬು ಹೃದಯದಿಂದ ಸಹಾಯ ಹಸ್ತ ಚಾಚಿದ ಸ್ವಯಂ ಸೇವಕರು ಮೂವರನ್ನೂ ತಮ್ಮ ಕೇಂದ್ರಕ್ಕೆ ಕರೆತಂದು ಹಿರಿಯರಿಗೆ ಅಗತ್ಯವಿದ್ದ ಅಮ್ಲಜನಕವನ್ನು ನೀಡಿ ಸುಮಾರು ಎರಡು ವಾರಗಳ ಕಾಲ ಅವರಿಗೆ ಚಿಕಿತ್ಸೆ ನೀಡಿದ ಪರಿಣಾಮ  ಎಲ್ಲರೂ ಗುಣಮುಖರಾಗಿ ಮನೆಗೆ  ಬಂದಿದ್ದಾರೆ  ಎಂದು ಹೇಳಿದಾಗ  ಅವರ ಮುಖದಲ್ಲಿದ್ದ ಮಂದಹಾಸ ನಿಜಕ್ಕೂ ಅವರ್ಣನೀಯ.

ಕಳೆದ ನವೆಂಬರ್ ತಿಂಗಳಿನಲ್ಲಿ ಮದುವೆಯಾಗಿದ್ದ ಜೋಡಿಯೊಂದು ಕೊರೋನಾ ಮಹಾಮಾರಿಗೆ ತುತ್ತಾಗಿ ಮನೆಯಲ್ಲಿ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿದ್ದಾಗ, ಯಲಹಂಕದ ಸೇವಾ ಕೇಂದ್ರ ಪರಿಚಯವಾಗಿ ಈಗ ಅವರಿಬ್ಬರೂ  ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದು ಗಮನಾರ್ಹವಾಗಿದೆ.

rs5ಸಮಾಜ/ಸರಕಾರ ನಮಗೆ ಏನು ಮಾಡಿತು? ಎಂದು ಕೇಳುವವರೇ ಇಂದಿನ ದಿನಗಳಲ್ಲಿ ಹೆಚ್ಚಾಗಿರುವಾಗ ಎಲೆಮರೆಕಾಯಿಯಂತೆ ಸದ್ದಿಲ್ಲದೇ ಇಂತಹ ವಿಶೇಷ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಆಸ್ಪತ್ರೆಗಳ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡುವ ಮೂಲಕ ನಿಜವಾಗಿಯೂ ಆಸ್ಪತೆಯ ಸೌಲಭ್ಯ ಇರುವವರಿಗೆ ಸಿಗುವಂತೆ ಮಾಡುತ್ತಿರುವ ರಾಷ್ಟ್ರೋತ್ಥಾನ ಮತ್ತು ಸೇವಾಭಾರತಿಯ ಈ ಸಮಾಜಮುಖೀ ಕಾರ್ಯ ನಿಜಕ್ಕೂ ಆನನ್ಯ ಮತ್ತು ಅನುಕರಣಿಯ ಎಂದರೂ  ಅತಿಶಯೋಕ್ತಿಯೇನಲ್ಲ ಅಲ್ಲವೇ.

ಏನಂತೀರೀ?

ನಿಮ್ಮವನೇ ಉಮಾಸುತ

ಆಟ ಇನ್ನೂ ಬಾಕೀ ಇದೆ.

ನೆನ್ನೆಯ ದಿನ ವೀಕೆಂಡ್ ಕರ್ಘ್ಯೂ ಇದ್ದ ಕಾರಣ ಸಾವಯವ ಸಂತೆಯನ್ನು ಬಂದ್, Online ಮುಖಾಂತರವೇ ಸಾಂಘೀಕ್ಕಿನಲ್ಲಿ ಭಾಗವಹಿಸಿ, ಆತ್ಮೀಯರ ಮಗನ ಮದುವೆಯಲ್ಲೂ Online ಮುಖಾಂತರ ಆಶೀರ್ವದಿಸಿ, ಮನೆಯ ಗೇಟಿನ ಹೊರಗೂ ಹೋಗದೇ ಪಟ್ಟಾಗಿ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದೆ. ಸಮಯೋಚಿತವಾಗಿೆ ಚೆನ್ನಾಗಿ ಜೀರಿಗೆ, ಕಾಳುಮೆಣಸು, ಶುಂಠಿ ಮತ್ತು ಮನೆಯಲ್ಲೇ ಕಡೆದು ತೆಗೆದ ಬೆಣ್ಣೆಯ ತುಪ್ಪ ಹಾಕಿ ಮಾಡಿದ್ದ ನವಣೆ ಹುಗ್ಗಿ(ಪೊಂಗಲ್) ಜೊತೆಗೆ ಕಾಯಿ, ಕೊತ್ತಂಬರಿ ಮತ್ತು ಪುದಿನಾ ಹಾಕಿದ ಚೆಟ್ಟಿ ತಿಂದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಅನಂದಿಸಿ ಹಾಗೂ ಹೀಗೂ ಮಧ್ಯಾಹ್ನ ಮತ್ತೆ ಆರೋಗ್ಯಕರವಾದ ನಿಂಬೇ ಸಾರಿನ ಊಟ ಮುಗಿಸಿ ಇನ್ನೇನು ಭುಕ್ತಾಯಾಸವನ್ನು ಪರಿಹರಿಸ್ಕೊಳ್ಳಬೇಕು ಎನ್ನುವಷ್ಟರಲ್ಲಿ ನನ್ನ ಮತ್ತು ನಮ್ಮಾಕಿಯ ಮೊಬೈಲ್ ಒಟ್ಟೊಟ್ಟಿಗೆ ರಿಂಗಣಿಸಿತು.

ಒಬ್ಬರ ಮಾತು ಮತ್ತೊಬ್ಬರಿಗೆ ತೊಂದರೆ ಆಗದಿರಲೆಂದು ಇಬ್ಬರೂ ಬೇರೆ ಬೇರೆ ಕೋಣೆಯಲ್ಲಿ ಕರೆ ಸ್ವೀಕರಿಸಿದರೂ ಆ ಕಡೆಯಿಂದ ಕೇಳಿ ಬಂದ ವಿಷಯ ಮಾತ್ರಾ ಒಂದೇ ಆಗಿತ್ತು. ನಮ್ಮ ಸಂಬಂಧೀಕರ 40-45ರ ಪ್ರಾಯದ ಸ್ವಂತ ಉದ್ಯೋಗ ಮಾಡಿಕೊಂಡು ಈಗಿನ್ನೂಒಬ್ಬನೇ ಮಗನನ್ನು Engg. collegeಗೆ ಸೇರಿಸಿದ್ದವರೊಬ್ಬರು ಅಚಾನಕ್ಕಾಗಿ ಕೋವಿಡ್ಡಿಗೆ ಬಲಿಯಾಗಿ ಒಂದು ವಾರಗಳಾಯಿತು ಎಂಬ ಸುದ್ದಿ ನನ್ನ ಕಿವಿಗೆ ಬಿದ್ದರೆ, ನನ್ನಾಕಿಯ ಸ್ನೇಹಿತೆಯ ಮೈದುನ ಅದೇ 40-45ರ ಪ್ರಾಯದ ಸ್ವಂತ ಉದ್ಯೋಗ ಮಾಡಿಕೊಂಡಿದ್ದ ಇನ್ನೂ ಸಣ್ಣ ಪ್ರಾಯದ ಎರಡು ಮಕ್ಕಳ ತಂದೆಯೂ ಸಹಾ ಅಗ ತಾನೇ ಕೋವಿಡ್ ನಿಂದಾಗಿ ಮೃತಪಟ್ಟ ವಿಷಯ ತಿಳಿಯಿತು.

hena2ಕಾಕತಾಳೀಯವೆಂದರೆ ಇಬ್ಬರೂ ಸ್ವಂತ ಉದ್ಯೋಗ ಮಾಡಿಕೊಂಡಿದ್ದರು. ಆರಂಭದಲ್ಲಿ ಗಂಟಲು ಬೇನೆ ಮತ್ತು ಜ್ವರ ಕಾಣಿಸಿಕೊಂಡಾಗ ಕೋವಿಡ್ ಪರೀಕ್ಷೇ ಮಾಡಿಸಿಕೊಂಡು ಫಲಿತಾಂಶ -ve ಎಂದು ಬಂದಾಗ ಸ್ವಲ್ಪ ನಿರ್ಲಕ್ಷ ತೋರಿದ್ದ ಕಾರಣ, ಎರಡನೇ ಅಲೆಯ ವೈರಾಣು ದೇಹದೊಳಗೇ ವಿಸ್ಪೋಟಗೊಂಡು ತೀವ್ರವಾಗಿ ಉಲ್ಬಣವಾದಾಗ ಮತ್ತೇ ವೈದ್ಯರ ಬಳಿಗೆ ಹೋದಾಗ ಪರಿಸ್ಥಿತಿ ಕೈ ಮೀರಿತ್ತು. ಶ್ವಾಶಕೋಶದ 75 ರಷ್ಟು ಭಾಗ ಸೋಂಕಿಗೆ ಒಳಗಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ತಮ್ಮ ಕುಟುಂಟದವರನ್ನೂ ಮತ್ತು ಅಪಾರ ಬಂಧು ಮಿತ್ರರನ್ನು ಅಕಾಲಿಕವಾಗಿ ಶಾಶ್ವತವಾಗಿ ಅಗಲಿಬಿಟ್ಟಿದ್ದರು.

csk_RCBಈ ದುಃಖದ ವಿಷಯವನ್ನು ಅರಗಿಸಿಕೊಳ್ಳಲಾಗದೇ ಹಾಗೇ ಟಿವಿಯನ್ನು ಹಾಕಿದರೆ, High voltage, RCB & CSK IPL ಪಂದ್ಯವಳಿಯನ್ನು ನೋಡಲು ಕುಳಿತುಕೊಂಡರೆ ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ RCB ಅವರಿಗೆ ಅವರ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು. 19ನೇ ಓವರಿನವರೆಗೂ ಹಾಗೂ ಹೀಗೂ ಸುಸ್ಥಿತಿಯಲಿದ್ದ RCB ಗೆ ಅವರ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಅವರು 20ನೇ ಓವರಿನಲ್ಲಿ 37ರನ್ನುಗಳನ್ನು ಬಿಟ್ಟು ಕೊಟ್ಟ ಪರಿಣಾಮ 160-170ರ ಆಸುಪಾಸಿನಲ್ಲಿದ್ದ CSK ಇದ್ದಕ್ಕಿದ್ದಂತೆಯೇ 200 ರನ್ನುಗಳ ಹತ್ತಿರ ಬಂದ ಕೂಡಲೇ RCB ಅವರ ಜಂಘಾಬಲವೇ ಉಡುಗಿ ಹೋಯಿತು. ಪ್ರತೀ ಓವರಿಗೆ 10 ರನ್ನುಗಳನ್ನು ಹೊಡೆಯಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಒತ್ತಡಕ್ಕೆ ಒಳಗಾಗಿ ಪಟಪಟನೇ ವಿಕೆಟ್ ಕಳೆದುಕೊಳ್ಳುವ ಮೂಲಕ 69 ರನ್ನುಗಳ ಅಂತರದಿಂದ ಹೀನಾಯವಾಗಿ ಪಂದ್ಯವನ್ನು ಸೋತು ಹೋಯಿತು.

rajeevಇನ್ನು ಬಿಗ್ ಬಾಸ್ 8ನೇ ಸೀಜನ್ನಿನಲ್ಲಿ ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಾಜೀವ್ ಕೂಡಾ ಇದೇ ರೀತಿಯ ಅತಿಯಾದ ಆತ್ಮವಿಶ್ವಾಸದಿಂದ ಹೊರಬೀಳುವಂತಾಗಿತ್ತು. ಬಿಗ್ ಮನೆಯಲ್ಲಿ ಅತ್ಯಂತ ನೆಚ್ಚಿನ ಅಭ್ಯರ್ಥಿಯಾಗಿದ್ದ ಮತ್ತು ಹೊರಗಡೆ ತನಗೆ ಇಷ್ಟೊಂದು ಜನ ಸ್ನೇಹಿತರಿದ್ದಾರೆ ಎಂದು ಸದಾಕಾಲವು ಎರಡೂ ತೋಳುಗಳನ್ನೂ ಎತ್ತಿ ಬೀಗುತ್ತಿದ್ದ ರಾಜೀವ್, ತನ್ನ ಸಹಚರರಿಂದಲೇ ನಾಮಿನೇಟ್ ಆಗಿ ಎಷ್ಟೇ ಚೆನ್ನಾಗಿ ಆಟವಾಡಿದರೂ, ಎಷ್ಟೇ ಸದ್ಭಾವನೆಗಳಿಂದ ಮನೆಯಲ್ಲಿ ನಡೆದುಕೊಂಡಿದ್ದರೂ, ಹೊರಗಿನವರು ಹೃದಯ ಗೆಲ್ಲಲು ವಿಫಲರಾದದ್ದು ವಿಷಾಧನೀಯವೇ ಸರಿ. ತನ್ನ ಬಳಿ Immunity Pass ಇದ್ದರೂ ಅತಿಯಾದ ಆತ್ಮವಿಶ್ವಾಸದಿಂದ, ಅದನ್ನು ಸದ್ಭಳಕೆ ಮಾಡಿಕೊಳ್ಳದೇ ಹೋದದ್ದು ವಿಪರ್ಯಾಸವೇ ಸರಿ.

ಹಾಗಾದರೆ ಈ ಮೂರೂ ಪ್ರಕರಣಗಳಲ್ಲಿ ಎಲ್ಲರೂ ಎಡವಿದ್ದು ಎಲ್ಲಿ? ಎಂದು ಸೂಕ್ಷ್ಮವಾಗಿ ಯೋಚಿಸಿದಲ್ಲಿ ಎಲ್ಲರೂ ಆರೋಗ್ಯವನ್ನಾಗಲೀ ಆಟವನ್ನಾಗಲೀ ಗಂಭೀರವಾಗಿ ಪರಿಗಣಿಸದೇ ಲಘುವಾಗಿ ತೆಗೆದುಕೊಂಡಿದ್ದೇ ಸಂಚಕಾರವಾಯಿತು ಎಂದರೂ ತಪ್ಪಾಗಲಾರದು.

 • ಆನಾರೋಗ್ಯವಿದ್ದಾಗ  ಕೇವಲ ಕೋವಿಡ್ ಫಲಿತಾಂಶ  – ve  ಬಂದಿದೆ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ಸೂಕ್ತವಾದ ಚಿಕಿತ್ಸೆ ಪಡೆಯದೇ, ಗಂಭೀರವಾಗಿ ಮನೆಯಲ್ಲೇ ಇದ್ದು ಸುಧಾರಿಸಿಕೊಳ್ಳದೇ ಹೋದದ್ದು ಅವರ ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು.
 • ಕ್ರಿಕೆಟ್ ಎಂದರೆ ದಾಂಡಿಗರದ್ದೇ ಪ್ರಾಭಲ್ಯ ಎಂದು ಗೊತ್ತಿದ್ದರೂ ಅದೇಕೋ ಏನೂ ಎಂಟು ಎಸೆತಗಾರರು ಮತ್ತು ಕೇವಲ ಮೂವರು ಪ್ರಮುಖ ದಾಂಡಿಗರ ತಂಡವನ್ನು ಆಯ್ಕೆ ಮಾಡಿಕೊಂಡಾಗಲೇ ಎಡವಿದ್ದ ಕೋಹ್ಲಿ ತಂಡ, ಆಷ್ಟು ದೊಡ್ಡದಾದ ಮೊತ್ತವನ್ನು ಎದುರಿಸುವಾಗ ಒಂದು ಕಡೆ ಭರ್ಜರಿಯಾಗಿ ಮತ್ತೊಂದೆಡೆ ನಿಧಾನವಾಗಿ ಆಡಬೇಕಿತ್ತು. ದುರಾದೃಷ್ಟವಷಾತ್ ಕೋಹ್ಲಿ ಮತ್ತು ಪಡಿಕ್ಕಲ್ ಇಬ್ಬರೂ ಭರ್ಜರಿಯಾಗಿ ಹೊಡೆಯುವ ಭರದಲ್ಲಿ ಔಟಾಗಿದ್ದು ಉಳಿದ ಆಟರಾರರು ಒತ್ತಡ ತಾಳಲಾರದೇ ಸಾಲು ಸಾಲಾಗಿ ಅಲ್ಪ ಮೊತ್ತಕ್ಕೆ ಔಟಾಗಿ ಹೋದದ್ದು ವಿಪರ್ಯಾಸವೇ ಸರಿ.
 • ಕಳೆದ ನಾಲ್ಕಾರು ವಾರಗಳಿಂದಲೂ ಹೊರಗಿನ ಜನರು ತನ್ನನ್ನು ಪ್ರಮುಖವಾಗಿ ಆಯ್ಕೆ ಮಾಡದೇ ಕಡೇ ಸಾಲಿನಲ್ಲಿ ಆಯ್ಕೆ ಆಗುತ್ತಿದ್ದದ್ದು ಗೊತ್ತಿದ್ದರೂ ರಾಜೀವ್ ತನ್ನ ಬತ್ತಳಿಕೆಯಲ್ಲಿದ್ದ ಜೀವದಾನದ ಪಾಸ್ ಬಳಸಿಕೊಳ್ಳದೇ  ಹೋಗದೇ. ಹೊರಗಿನ ತನ್ನ ಸ್ನೇಹಿತರ ಕೈ ಹಿಡಿದೇ ಹಿಡಿಯುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವೇ ಆತನಿಗೆ ಮುಳುವಾಯಿತು.

jadduಇನ್ನು 19ನೇ ಓವರಿನವರೆಗೂ CSK ತಂಡ 160-170 ರನ್ನುಗಳನ್ನು ಗಳಿಸಬಹುದು ಎಂಬ ಅಂದಾಜಿನಲ್ಲಿದ್ದಾಗ ಒಂದೂ ರನ್ನು ಗಳಿಸದೇ ಇದ್ದಾಗ ಲಭಿಸಿದ ಜೀವದಾನವನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಜಡೇಜ ಭರ್ಜರಿಯಾಗಿ ಸಿಕ್ಸರ್ ಪೋರ್ ಗಳನ್ನು ಬಾರಿಸುತ್ತಾ 69 ರನ್ನುಗಳನ್ನು ಗಳಿಸಿದ್ದು ಆತನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಲ್ಲದೇ ಬೌಲೀಂಗ್ ಮಾಡುವಾಗಲೂ 3 ವಿಕೆಟ್ ಗಳಿಸಿದ್ದಲ್ಲದೇ ಒಂದು ಅಮೋಘವಾದ ರನ್ ಔಟಿಗೂ ಕಾರಣರಾಗಿ ತಂಡದ ಗೆಲುವಿಗೆ ರೂವಾರಿಯಾದರು.

srh_short_runಅದೇ ರೀತಿ ದೆಹಲಿ ಮತ್ತು ಹೈದರಾಬಾದಿನ ಎರಡನೇ ಪಂದ್ಯದಲ್ಲೂ ಇದೇ ರೀತಿಯ ಆತ್ಮ ವಿಶ್ವಾಸ ಮತ್ತು ಅತಿಯಾದ ಆತ್ಮವಿಶ್ವಾಸಗಳಿಂದಾಗಿ ಸೋಲುವಂತಿದ್ದ ಪಂದ್ಯ ಸಮಸ್ಥಿತಿಗೆ ತಲುಪಿ ನಂತರ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋಲಬೇಕಾದದ್ದು ಸೋಜಿಗವೇ ಸರಿ. ದೆಹಲಿ ನೀಡಿದ ಗೌರವಯುತ ಮೊತ್ತವಾದ 159 ರನ್ನುಗಳನ್ನು ಬೆನ್ನತ್ತಿದ್ದ ಹೈದರಾಬಾದ್ ತಂಡ ಒಂದು ಕಡೆ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದರೂ ಬಂಡೆ ಕಲ್ಲಿನಂತೆ ಒಂದು ಕಡೆ ಆಡುತ್ತಲೇ ಹೋದ ಕೇನ್ ವಿಲಿಯಮಸನ್ ಅಂತಿಮ ಓವರಿನಲ್ಲಿ ನಮ್ಮ ಕನ್ನಡಿಗ ಸುಚಿತ್ ಅವರ ಭರ್ಜರಿ ನಾಲ್ಕು ಮತ್ತು ಆರು ರನ್ನುಗಳ ಹೊಡೀ ಬಡೀ ಆಟದಿಂದ ಸೋಲುತ್ತಿದ್ದ ಪಂದ್ಯವನ್ನು ಟೈ ಮಾಡಿಕೊಳ್ಳುವುದರಲ್ಲಿ ಸಫಲವಾದರೆ, ಮತ್ತೆ ಆಟಕ್ಕೆ ಅದೇ ಪಂದ್ಯದಲ್ಲಿ ಉತ್ತಮವಾಗಿಯೇ ರನ್ನುಗಳನ್ನು ಗಳಿಸಿದ್ದ ಬರಿಸ್ಟೋವ್ ಮತ್ತು ವಿಲಿಯಮ್ ಸನ್ ಅವರನ್ನು ಕಳುಹಿಸಿದದೇ ಈ ಪಂದ್ಯಾವಳಿಯಲ್ಲಿ ರನ್ನುಗಳಿಗಾಗಿ ಪರದಾಡುತ್ತಿರುವ ನಾಯಕ ವಾರ್ನರ್ ಆಡುವುದಕ್ಕಾಗಿ ಬಂದು ಕಡೆಯಲ್ಲಿ ಓಡಿದ ಎರಡು ರನ್ನುಗಳಲ್ಲಿ ಒಂದು ಶಾರ್ಟ್ ಆದ ಕಾರಣ ಪಂದ್ಯ ಸೋಲುವಂತಾಗಿದ್ದು ಮತ್ತದೇ ನಾಯಕನೆಂಬ ಹಮ್ಮು ಮತ್ತು ಅತೀಯಾದ ವಿಶ್ವಾಸ.

ಈ ಎಲ್ಲಾ ಪ್ರಸಂಗಗಳನ್ನೂ ನೋಡುತ್ತಿದ್ದಾಗ ಧರ್ಮ ಸಂಸ್ಥಾಪನೆಗಾಗಿ ತ್ರೇತಾಯುಗದಲ್ಲಿ ಜನಿಸಿದ ರಾಮ ಮತ್ತು ದ್ವಾಪರಯುಗದಲ್ಲಿ ಆವತರಿಸಿದ ಕೃಷ್ಣ ಅವರ ತಂತ್ರಗಾರಿಗೆ ಯಿಂದ ನಮ್ಮವರು ಇನ್ನೂ ಕಲಿಯಲಿಲ್ಲವಲ್ಲಾ ಎಂಬ ಬೇಸರ ಮೂಡಿಸಿತು. ತ್ರೇತಾಯುಗದಲ್ಲಿ ಸೀತಾನ್ವೇಷಣೆಯ ಸಮಯದಲ್ಲಿ ರಾಮನ ಜೊತೆಗೆ ಇದ್ದದ್ದು ಕೌಶಲ್ಯರಹಿತ(unskilled) ಕಪಿಸೇನೆ. ಹಾಗಾಗಿ ಆ ಸಂದರ್ಭದಲ್ಲಿ ರಾಮನೇ ಪ್ರತಿಯೊಂದು ಕೆಲಸದಲ್ಲಿಯೂ ನೇತೃತ್ವವಹಿಸಿ ಯುದ್ಧದಲ್ಲಿ ಶಸ್ತ್ರಾಸ್ತ್ರವನ್ನು ಹಿಡಿಯಬೇಕಿತ್ತು. ಆದರೆ ದ್ವಾಪರಯುಗದಲ್ಲಿ ಕೃಷ್ಣನ ಜೊತೆಗೆ ಇದ್ದದ್ದು ವಿದ್ಯಾವಂತ ನುರಿತ(skilled) ಪಾಂಡವರು. ಹಾಗಾಗಿ ಕೃಷ್ಣ ಎಲ್ಲೂ ತಾಳ್ಮೆ ಗೆಡದೇ ತನ್ನೊಂದಿಗೆ ಅತಿರಥ ಮಹಾರಥರು ಇದ್ದಾರೆ ಎನ್ನುವ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಳ್ಳದೇ, ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಇಡೀ ಯುದ್ಧದಲ್ಲಿ ತನ್ನ ಅಸ್ತ್ರವನ್ನೇ ಬಳಸದೇ ಕೇವಲ ತನ್ನ ತಂತ್ರಗಾರಿಕೆಯನ್ನು ಪಾಂಡವರ ಮೇಲೆ ಪ್ರಯೋಗಿಸಿ (ಜರಾಸಂಧ ವಧೆಯಲ್ಲಿ ಅರಳಿ ಎಲೆಯನ್ನು ಸೀಳಿ ಅಕ್ಕ ಪಕ್ಕದಲ್ಲಿ ಎಸೆದದ್ದು, ಭೀಮ ದುರ್ಯೋಧನರ ಮಹಾಕಾಳಗಲ್ಲಿ ಭಲೇ ಭೀಮಾ ಭಲೇ ಎಂದು ತೊಡೆ ತಟ್ಟಿ ತೋರಿಸಿದ್ದು, ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕಾಪಾಡಿದ್ದು) ಅಧರ್ಮೀಯರನ್ನು ನಾಶ ಮಾಡಿ ಧರ್ಮವನ್ನು ಕಾಪಾಡಿದನು.

vACಅದೇ ರೀತಿಯಲ್ಲಿ ಮೊದಲ ಬಾರಿ ಕೊರೋನಾ ಬಂದಾಗ ಅಥವಾ ಆರಂಭದ ಪಂದ್ಯಗಳಲ್ಲಿ ವೈರಾಣುವಿನ ತೀವ್ರತೆ ಅಥವಾ ತಂಡದ ಶಕ್ತಿಯ ಪರಿಚಯ ಸರಿಯಾಗಿ ಇರದ ಕಾರಣ ವ್ಯಕ್ತಿಗತವಾಗಿಯೂ ಮತ್ತು ತಂಡದ ನಾಯಕನಾಗಿ ಬಹಳ ಎಚ್ಚರಿಕೆಯಿಂದ ಸ್ವತಃ ಪರಿಸ್ಥಿತಿಯನ್ನು ರಾಮನಂತೆ  ನಿಭಾಯಿಸ ಬೇಕಾಗುತ್ತದೆ. ಅದೇ ಎರಡನೇ ಹಂತದಲ್ಲಿ ಪರಿಸ್ಥಿತಿಯ ತೀವ್ರತೆಯ ಅರಿವು ಇರುತ್ತದೆ. ಅದನ್ನು ಹೇಗೆ ಪರಿಹರಿಸಬಹುದು ತನ್ನ ಜೊತೆಗೆ ತಂಡದ ಶಕ್ತಿ ಮತ್ತು ದೌರ್ಬಲ್ಯಗಳ ಅರಿವು ಇರುವಾಗ ಅದನ್ನು ತಾನು ಒಂದೆಡೆ ಬಂಡೆಯಾಗಿ ನಿಂತು ಕೃಷ್ಣನ ಹಾಗೆ ನಿಭಾಯಿಸಬೇಕಾಗುತ್ತದೆ.

ಆಟ ಆಡುವಾಗಲೀ, ಇಲ್ಲವೇ ವಯಕ್ತಿಕ ಜೀವನದ ಸಮಸ್ಯೆಗಳನ್ನು ನಿಭಾಯಿಸುವಾಗಲೀ ಅಥವಾ ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸುವಾಗಲೀ ಸಮಸ್ಯೆಯನ್ನು ತೀರ ಸರಳವಾಗಲೀ ಇಲ್ಲವೇ ಅತಿಯಾದ ಆತ್ಮವಿಶ್ವಾಸದಿಂದಾಗಲೀ ಎದುರಿಸದೇ ಆಟ ಇನ್ನೂ ಬಾಕೀ ಇದೇ ಎಂದು ಭಾವಿಸುತ್ತಲೇ ನಮ್ಮ ಹಿರಿಯರು ಪುರಾಣ ಪುಣ್ಯಕಥೆಗಳಲ್ಲಿ ತಿಳಿಸಿರುವಂತೆ ತಾಳ್ಮೆಯಿಂದ ತಂತ್ರಗಾರಿಕೆಯಿಂದ ಮತ್ತು ಎಚ್ಚರಿಕೆಯಿಂದ ನಿಭಾಯಿಸುವುದು ಉತ್ತಮ ಬೆಳವಣಿಗೆಯಾಗಿದೆ.

lockdownಹೇಗೂ  ಇನ್ನು ಹದಿನೈದು ದಿನಗಳ ಕಾಲ ಲಾಕ್ಡೌನ್ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಹಾಯಾಗಿ ಮನೆಯಲ್ಲೇ ತೆಪ್ಪಗೆ IPL & BigBoss ನೋಡಿಕೊಂಡು ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ಇದ್ದು ಕೊರೋನಾದಿಂದ ಸುರಕ್ಷಿತವಾಗಿರೋಣ ಅಲ್ವೇ?

ಕಡೇ ಮಾತು ನಮ್ಮ ಶಾಸ್ತ್ರ ಪುರಾಣಗಳಲ್ಲಿ ಹೇಳುತ್ತಿದ್ದದನ್ನು ಆಡಿಕೊಳ್ಳುತ್ತಿದ್ದವರೆಲ್ಲಾ ಈಗ ಅದನ್ನೇ ವೇದವಾಕ್ಯ ಎಂದು ಪಾಲಿಸುತ್ತಿರವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ದೇಶದ ವಾಸ್ತವತೆ ಮತ್ತು ನಮ್ಮ ಜವಾಬ್ಧಾರಿ

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯಮಾದ್ಯಮಗಳಲ್ಲಿ ಇದ್ದಕ್ಕಿದ್ದಂತೆಯೇ ಕೊರೋನಾ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ಬಂದಿರುವಂತಿದೆ. ಇದಕ್ಕಿದ್ದಂತೆಯೇ ಜಾಗೃತರಾಗಿ ಈ ಕೊರೋನಾ ಮಾಹಾಮಾರಿ ಉಲ್ಪಣವಾಗುವುದಕ್ಕೆ ಈ ರಾಜ್ಯಸರ್ಕಾರವೇ ಕಾರಣ ಈ ಕೇಂದ್ರ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಪುಂಖಾನುಪುಂಖವಾಗಿ ಹರಿಹಾಯುತ್ತಿರುವುದಲ್ಲದೇ, ಈ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಆಡಳಿತ ನಡೆಸಲು ಅಸಮರ್ಥರಾದಲ್ಲಿ ರಾಜಿನಾಮೆ ನೀಡಿ ಹೊರ ಬನ್ನಿ ಎನ್ನುತ್ತಿದ್ದಾರೆ

statueಇನ್ನೂ ಕೆಲವು ಕೆಲವರು ಮೋದಿ ಮತ್ತು ಬಿಜೆಪಿ ಪಕ್ಷದ ಮೇಲಿನ ತಮ್ಮ ವಯಕ್ತಿಕ ಹಿತಾಸಕ್ತಿಗಳಿಂದಾಗಿ  ಸರ್ಕಾರವನ್ನು ಟೀಕಿಸುವ ಬರದಲ್ಲಿ  ಇಂತಹ ಸಮಯದಲ್ಲಿ ಸರ್ಕಾರ ಆಸ್ಪತ್ರೆಗಳನ್ನು ಕಟ್ಟುವ ಬದಲು ಕೋಟ್ಯಾಂತರ ರೂಪಾಯಿಗಳ ಖರ್ಚು ಮಾಡಿ ಸ್ವಾತಂತ್ರ್ಯ ಹೋರಾಟಗಾರಾದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಯನ್ನು  ಕಟ್ಟಬೇಕಿತ್ತೇ?  ಎಂದರೆ ಇನ್ನೊಬ್ಬ ಮಹನೀಯರು, ಇಂತಹ ಸಮಯದಲ್ಲಿ ದೆಹಲಿಯಲ್ಲಿ ಹೊಸಾ ಪಾರ್ಲಿಮೆಂಟ್ ಭವನ ಬೇಕಿತ್ತೇ? ಎಂದು ಪ್ರಶ್ನಿಸುತ್ತಾರೆ.

guruಈ ದೇಶ ಕಂಡ ಮತ್ತೊಬ್ಬ ನಾಲಾಯಕ್ ನಾಯಕ ಚಿರಯೌವನಿಗ, ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಸ್ವತಃ  ಕೊರೋನಾದಿಂದ ನರಳುತ್ತಿರುವವನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ದೇಶದಕ್ಕೆ ಕೊರೋನಾ ಬಂದಿರುವುದೇ ಮೋದಿ ಇಂದ ಎಂದು ಹೇಳಿದರೆ, ತನ್ನ ವಯಕ್ತಿಕ ತೆವಲುಗಳಿಂದ ಮನೆ  ಮಠ ಕಳೆದುಕೊಂಡು ಅಂಡಲೆದು ಕೊರೋನಾ ರೋಗಕ್ಕೆ ತುತ್ತಾಗಿರುವ ನಿರ್ದೇಶಕನೊಬ್ಬ ತನ್ನ ಸಾವಿಗೆ ಈ ಸರ್ಕಾರವೇ ಕಾರಣ ಎಂದು ಷರಾ ಬರೆಯುತ್ತಾನೆ.  ಮತ್ತೊಬ್ಬ ಮಾಜೀ ಮುಖ್ಯಮಂತ್ರಿ  ಅನಾರೋಗ್ಯವಿದ್ದರೂ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಹೋಗಿ ಸಾವಿರಾರು ಜನರ ಸಂಪರ್ಕಕ್ಕೆ ಬಂದು ರೋಗ ಹತ್ತಿಸಿಕೊಂಡಿದ್ದಕ್ಕೆ ಇಂತಹ ಸರ್ಕಾರವನ್ನೇ ಕಂಡಿಲ್ಲ ಎಂದು ಹೇಳುತ್ತಾನೆ.

ಹೀಗೆ ಪುಂಖಾನು ಪುಂಖವಾಗಿ ಅಸಂಬದ್ಧವಾದ ಹೋಲಿಕೆ ಮಾಡುವವರಿಗೆ ಯಾವುದಕ್ಕೆ ಯಾವುದನ್ನು ಹೋಲಿಸಬೇಕು ಎನ್ನುವ ಸಾಮಾನ್ಯ  ಪರಿಜ್ಞಾನವೂ ಇರದೇ  ಇರುವುದು ಅವರ ಬೌದ್ಧಿಕ ದೀವಾಳಿತನವನ್ನು ಎತ್ತಿತೋರಿಸುತ್ತದೆ. ಇಂತಹವರಿಗೆ ಸಮಸ್ಯೆಗಳನ್ನು  ಪರಿಹರಿಸುವುದಕ್ಕಿಂತಲೂ ಇದೇ  ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡು ಜನರನ್ನು ರೊಚ್ಚಿಗೆಬ್ಬಿಸುತ್ತಾ ಸರ್ಕಾರವದ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿ ಮುಂದಿನ ಚುನಾವಣೆಯಲ್ಲಾದರೂ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಬಹುದೇ ಎಂಬ ದೂ(ದು)ರಾಲೋಚನೆ ಇವರದ್ದಾಗಿದೆ.

vACನಿಜ ಹೇಳಬೇಕೆಂದರೆ, ನಮಗಿಂತಲೂ  ಆರ್ಥಿಕವಾಗಿ ಸಾಕಷ್ಟು ಬಲಿಷ್ಟವಾಗಿರುವ ಮತ್ತು ನಮಗಿಂತಲೂ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ದೇಶಗಳೇ ಕಳೆದ ಒಂದು ವರ್ಷದಿಂದ ಈ ಮಹಾಮಾರಿಯನ್ನು ಎದುರಿಸಲು ತತ್ತರಿಸುತ್ತಿರುವಾಗ 130 ಕೋಟಿ ಜನ ಸಂಖ್ಯೆ ಹೊಂದಿರುವ ಈ ದೇಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ಸಂಬಾಳಿಸುವುದರಲ್ಲಿ ಬಹುಮಟ್ಟಿಗೆ ಸಫಲರಾಗಿದ್ದಾರೆ. ಇಡೀ ಪ್ರಪಂಚವೇೀ ಮಹಾಮಾರಿಗೆ ತಲ್ಲಣತೊಂಡಿದ್ದಾಗ ಈ ದೇಶದ ವಿಜ್ಞಾನಿಗಳೊಂದಿಗೆ ಮಾತನಾಡಿ  ಅತ್ಯಂತ ಕಡಿಮೆ ಸಮಯದಲ್ಲಿಯೇ ಈ ಮಹಾಮಾರಿಗೆ ಲಸಿಕೆಯನ್ನು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗಿರುವುದಲ್ಲದೇ, ಇಡೀ ದೇಶದಲ್ಲಿ ಅದನ್ನು ಉಚಿತವಾಗಿ ಹಾಕುವ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದಲ್ಲದೇ ಜಗತ್ತಿನ ಅದೆಷ್ಟೋ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುತ್ತಿರುವುದು ಗಮನಾರ್ಹವಾಗಿದೆ.

ಅಗತ್ಯವಿದ್ದಾಗಲೆಲ್ಲಾ ದೇಶವಾಸಿಗಳೊಂದಿಗೆ ಮಾತನಾಡುತ್ತಾ ಅವರಿಗೆ ದೈರ್ಯ ತುಂಬುತ್ತಾ ಅವರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ ಜಾಗಟೆ ಬಾರಿಸಲು,  ದೀಪ ಬೆಳಗಿಸಲು ಕರೆ ನೀಡುತ್ತಾ, ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂಧಿಗಳ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವಂತಹ ಒಳ್ಳೆಯ ಕೆಲಸಗಳಿಗೆ ಜನರ ಸ್ಪಂದನೆ ಅವರ ವಿರೋಧಿಗಳಿಗೂ ಅಚ್ಚರಿ ಮೂಡಿಸಿದೆ.

ಇದೇ ಜನರು ಲಾಕ್ಡೌನ್ ಗೆ ಕರೆ ನೀಡಿದಾಗ ಮತ್ತು ಅದನ್ನು ಮತ್ತೆ ಮತ್ತೆ ವಿಸ್ತರಿಸಿದಾಗ ಈ ಸರ್ಕಾರ ಜನರ ವಿರೋಧಿಯಾಗಿದೆ. ಇವರಿಗೆ ಜನಸಾಮಾನ್ಯರೆ ಮೇಲೆ ಕಾಳಜಿ ಇಲ್ಲ ಎಂದು ಬೊಬ್ಬಿರಿದಿತ್ತು.

ಲಾಕ್ಡೌನ್ ಸಮಯದಲ್ಲಿ ಜನರ ಅನಗತ್ಯ ಓಡಾಟ ಬಹಳಷ್ಟು ಕಡಿಮೆಯಾಗಿ ಕೊರೋನ  ಹಾವಳಿ ಕೂಡಾ ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದಂತೂ ಸುಳ್ಳಲ್ಲ.

ನಂತರ ಹಂತ ಹಂತವಾಗಿ ಲಾಕ್ದೌನ್ ಸಡಿಲೀಕರಿಸಿದರೂ, ಜನರೆಲ್ಲರೂ ಸ್ವಪ್ರೇರಣೆಯಿಂದ ಎಚ್ಚರಿಕೆಯಿಂದಿರಿ.  ಅನಗತ್ಯವಾಗಿ ಹೊರಗೆ ಮಾಸ್ಕ್ ಇಲ್ಲದೇ ಓಡಾಡದಿರಿ. ಸಾಮಾಜಿಕ ಅಂತರ ಕಾಪಾಡಿ ಎಂಬ ಎಚ್ಚರಿಕೆಯನ್ನು  ಸಾರಿ ಸಾರಿ ಹೇಳಿದರೂ, ಕೊಂಚವೂ ಕಿವಿಯ ಮೇಲೆ ಹಾಕಿಕೊಳ್ಳದೇ, ಧಿಮ್ಮಾಲೇ ರಂಗಾ ಎಂದು  ಅಡ್ಡಾಡಿ ಈಗ ಮತ್ತೆ ಕೊರೋನಾ ಮಿತಿ ಮೀರಿದಾಗ  ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ಸರ್ಕಾರವನ್ನು ಹೊಣೆ ಮಾಡುವುದು  ಎಷ್ಟು ಸರಿ?

ಲಾಕ್ದೌನ್  ವಿರೋಧಿಸಿದ್ದ ಜನರೇ ಈಗ ಮತ್ತೇ ಈ ಸರ್ಕಾರ ಜನರ ವಿರೋಧಿಯಾಗಿದೆ. ಇವರಿಗೆ ಜನಸಾಮಾನ್ಯರೆ ಮೇಲೆ ಕಾಳಜಿ ಇಲ್ಲಾ ಇಂತಹ ಪರಿಸ್ಥಿತಿಯಲ್ಲಿ ಈ ಕೂಡಲೇ, ಲಾಕ್ದೌನ್  ಮಾಡಬೇಕು ಎಂದು  ಬೊಬ್ಬಿರಿಯುತ್ತಿರುವುದು ನಿಜಕ್ಕೂ ಸೋಜಿಗವೆನಿಸುತ್ತಿದೆ.

ದೇಶಕ್ಕೆ ಯಾವುದೇ ವಿಪತ್ತುಗಳು ಎದುರಾದಾಗ ಅದನ್ನು ನಿಭಾಯಿಸುವುದು ಸರ್ಕಾರದ ಹೊಣೆಯಾದರೂ,  ಆ ಸಮಸ್ಯೆಯನ್ನು ನಿಭಾಯಿಸುವುದರಲ್ಲಿ ದೇಶದ 130 ಕೋಟಿ ಜನರ ಜವಾಬ್ದಾರಿಯೂ ಇದೆ ಎನ್ನುವುದನ್ನು ಮಾತ್ರ  ಈ ಜನರು ಮರೆತಂತಿದೆ. ಒಟ್ಟಿನಲ್ಲಿ ಈ ಜನರದ್ದು ಕೆಲಸಕ್ಕೆ ಕರೀ ಬೇಡಿ. ಊಟಕ್ಕೆ ಮಾತ್ರ ಮರೀ ಬೇಡಿ ಎನ್ನುವ ಮನೋಭಾವನೆ ಹೊಂದಿದೆ.

ಕೊರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆ ಬೋರಲು ಬಿದ್ದಿದೆ. ಎಲ್ಲೆಡೆಯಲ್ಲಿಯೂ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ ಎನ್ನುವುದು ಗೊತ್ತಿದ್ದರೂ,  ಅರೇ ದೇಶದ ಜಿಡಿಪಿ ಏಕೆ ಇಷ್ಟು ಕೆಳಗಿದೆ? ಎಂದು ಹೀಯ್ಯಾಳಿಸುತ್ತಾರೆ. ಈಗ ದೇಶದ ಆರ್ಥಿಕ ವ್ಯವಸ್ಥೆ ನಿಧಾನವಾಗಿ ಮೇಲೇರುತ್ತಿರುವುದನ್ನು ಸಹಿಸದೇ ಮತ್ತೆ ಲಾಕ್ದೌನ್ ಮಾಡುವ ಮುಖಾಂತರ ದೇಶದ ಆರ್ಥಿಕತೆಗೆ ಹೊಡೆರ ಬೀಳುವುದನ್ನೇ ಎದುರು ನೋಡುತ್ತಿದೆ. ನೇರವಾಗಿ ಪ್ರಜಾತಾಂತ್ರಿಕವಾದ ಚುನಾವಣೆಗಳ ಮೂಲಕ ಈ ಸರ್ಕಾರವನ್ನು ಬೀಳಿಸುವುದು ಅಸಾಧ್ಯ ಎಂದು ಈಗಾಗಲೇ ತಿಳಿದಿರುವ ವಿರೋಧ ಪಕ್ಷಗಳು ಈ ರೀತಿಯ ಕುತಂತ್ರದ ಮುಖಾಂತರವಾದರೂ ದೇಶದ ಜನರನ್ನು ರೊಚ್ಚಿಗೆಬ್ಬಿಸಿ ಈ ಸರ್ಕಾರದ ಮೇಲೆ ಅಸಹಕಾರವನ್ನು ತರಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಹೇಸಿಗೆ ಎನಿಸುತ್ತಿದೆ.

kumb_melaಹೀಗೆ ಹೇಳಿದ ಮಾತ್ರಕ್ಕೆ ಸರ್ಕಾರ ಮಾಡಿದ್ದೆಲ್ಲವೂ ಸರಿ ಎಂದು ವಾದಿಸುತ್ತಿಲ್ಲ.  ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದಲ್ಲಿ ಚುನಾವಣೆ ಮತ್ತು ಉಪಚುನಾವಣೆಗಳನ್ನು ಮುಂದೂಡಬಹುದಾಗಿತ್ತು. ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಲು ಕೇಳಿಕೊಳ್ಳಬಹುದಾಗಿತ್ತು. ತನ್ಮೂಲಕ ಭಾರಿ ಸಂಖ್ಯೆಯ ಜನರು  ಒಂದೆಡೆ ಸೇರುವುದನ್ನು ತಪ್ಪಿಸಬಹುದಾಗಿತ್ತು  ಸಿನಿಮಾ, ನಾಟಕ, ಮಾಲ್ ನಲ್ಲಿ ಸುತ್ತಾಟಗಳು ಜೀವನದ ಅತ್ಯವಶ್ಯಕ ವಸ್ತುಗಳಲ್ಲ ಎನ್ನುವುದನ್ನು ಅರಿತು ಅವುಗಳನ್ನು ಇನ್ನೂ ಕೆಲ ಕಾಲ ಮುಚ್ಚಬಹುದಾಗಿತ್ತು.  ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸರ್ಕಾರವೂ ಅನೇಕ ಕಡೆಯಲ್ಲಿ ಎಡವಿರುವುದು ತಿಳಿಯುತ್ತದೆ.

ಅದೇ ರೀತಿಯಲ್ಲಿ ಇಂತಹ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದ ಕೆಲ ಪಟ್ಟಭಧ್ರ ಹಿತಾಸಕ್ತಿಗಳೂ ಸಹಾ  ಜನರನ್ನು ಒಂದಕ್ಕೆರಡು ಪಟ್ಟು ಲೂಟಿ ಮಾಡಿದರೆ, ಇನ್ನೂ ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳು ತಪ್ಪು ಲೆಖ್ಖ ತೋರಿಸುವ ಮುಖಾಂತರ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಕೋಟ್ಯಾಂತರ ರೂಪಾಯಿಗಳ ಹಣವನ್ನು ಗುಳುಂ ಮಾಡುವ ಮೂಲಕ ಕೋತಿ ತಾನು ತಿಂದು ಮೇಕೆ ಬಾಯಿಗೆ ಒರಸಿದಂತೆ  ಆಡಳಿತ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಲ್ಲಿ ಯಶಸ್ವಿಯಾಗಿವೆ.

modi1130 ಕೋಟಿ ಜನರಿಂದ ಬಹುಮತದಿಂದ  ಎರಡು ಬಾರಿ ಆಡಳಿತಕ್ಕೆ ಬಂದಿರುವಂತಹ ಮತ್ತು ತನ್ನ ಇಡೀ ರಾಜಕೀಯ ಬದುಕಿನಲ್ಲಿ ಒಂದು ಚೂರು ಭ್ರಷ್ಟಾಚಾರದ ಕೊಳಕನ್ನು ಮೆತ್ತಿಕೊಳ್ಳದಿರುವ ಪ್ರಧಾನಿಗೆ ಜನರ ಕಷ್ಟ ಅರಿಯುತ್ತಿಲ್ಲವೇನು?  ಸಾಮ, ಬೇಧ, ದಂಡಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುತ್ತಾ ರಾಜ್ಯದ ಮೇಲೆ ರಾಜ್ಯವನ್ನು  ಯಶಸ್ವಿಯಾಗಿ ಅಶ್ವಮೇಧಯಾಗದಂತೆ ಗೆಲ್ಲುತ್ತಾ, ಶತ್ರುಗಳಿಗೆ ಸಿಂಹಸ್ವಪ್ನವಾಗಿರುವ ಗೃಹ ಸಚಿವರಿಗೆ ಜನರ ಸಂಕಷ್ಟದ ಅರಿವಿಲ್ಲವೇನು? ಇಷ್ಟು ದೊಡ್ಡ ದೇಶದ ರಕ್ಷಣಾ ಮಂತ್ರಿಯಾಗಿ ಈಗ ವಿತ್ತೀಯ ಖಾತೆಯನ್ನು ಹೊಂದಿರುವವರಿಗೆ ಜನರ ನೋವು ಅರಿವಾಗುತ್ತಿಲ್ಲವೇನು?

ಖಂಡಿತವಾಗಿಯೂ ಇವರೆಲ್ಲರಿಗೂ ದೇಶವಾಸಿಗಳ ನೋವು ಮತ್ತು ಸಂಕಟಗಳು  ಅರಿವಾಗುತ್ತಿದೆ ಮತ್ತು ಅದನ್ನು ನಿವಾರಿಸಲು ಅವರೆಲ್ಲರೂ ಹಗಲು ಇರಳು ಎನ್ನದೇ ಶ್ರಮವಹಿಸಿ ದುಡಿಯುತ್ತಿರುವುದು  ಎಲ್ಲರ ಕಣ್ಣ ಮುಂದೆಯೇ ಇದೆ. ಇವರ್ಯಾರು ರಜೆ ಕಳೆಯಲು ಅಗ್ಗಿಂದ್ದಾಗ್ಗೆ  ವಿದೇಶಗಳಿಗೆ ಹೋಗುವ  ಹವ್ಯಾಸವಿಲ್ಲ. ಇವರ್ಯಾರೂ ಐಶಾರಾಮ್ಯದ ಜೀವನ ನಡೆಸುತ್ತಿಲ್ಲ. ಇವರೆಲ್ಲರ ವೇಶಭೂಷಣ, ಆಹಾರ ಮತ್ತು ವ್ಯವಹಾರವೆಲ್ಲವೂ ಜನಸಾಮಾನ್ಯರಂತೆಯೇ ಇದೆ. ಅಧಿಕಾರಕ್ಕೆ ಏರುವ ಮೊದಲು ಅವರು ಹೇಳಿದ್ದ ನಾ ಮೇ ಖಾವುಂಗಾ ಔರ್ ನಾ ಖಾನೇ ದೂಂಗ ಎನ್ನುವ ಹೇಳಿಕೆಗೆ ಕಟಿ ಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.

ಮನೆಯಲ್ಲಿ ಕುಳಿತುಕೊಂಡು ಮತ್ತೊಬ್ಬರನ್ನು ಟೀಕಿಸುವುದು ಬಹಳ ಸುಲಭ. ಆದರೇ ಅದೇ ಜಾಗದಲ್ಲಿ ಕುಳಿತುಕೊಂದು ಸಮಸ್ಯೆಗಳನ್ನು ನಿಭಾಯಿಸುವುದು ಬಹಲ ಕಷ್ಟ. ಹಾಗಾಗಿ ಈ ದೇಶದ ಒಬ್ಬ ಜವಾಬ್ಧಾರಿ ಪ್ರಜೆಗಳಾಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜೊತೆಗೆ ಇರೋಣ. ಸುಮ್ಮನೇ ಟೀಕಿಸುತ್ತಾ ಜನರಲ್ಲಿ ನಕಾರಾತ್ಮಕ ಮನೋಭಾವನೆಗಳನ್ನು ಬಿತ್ತುವ ಬದಲು, ಸಮಸ್ಯೆಗಳನ್ನು ಪರಿಹರಿಸುವಂತಹ  ಸಕಾರಾತ್ಮಕ ಕಂಪನಗಳನ್ನು ಜನರಲ್ಲಿ ಮೂಡಿಸೋಣ. ತನ್ಮೂಲಕ ಕೋವಿಡ್ -19 ವಿರುದ್ಧದ ಹೋರಾಟ ಮತ್ತು ಆರ್ಥಿಕ ಕಠಿಣ ಪರಿಸ್ಥಿತಿಯಿಂದ ಅತ್ಯಂತ ಯಶಸ್ವಿಯಾಗಿ ಹೊರಬರುವುದರಲ್ಲಿ ನಮ್ಮ ಜವಾಬ್ಧಾರಿಯನ್ನು ನಿಭಾಯಿಸೋಣ.

ಇಷ್ಟಾದರೂ ಈ ಸರ್ಕಾರಗಳು ಸುಧಾರಿಸದೇ ಹೋದಲ್ಲಿ ಮುಂದಿನ ಬಾರಿಯ ಚುನಾವಣೆಯಲ್ಲಿ ನಮ್ಮೆಲ್ಲರ ಶಕ್ತಿಯನ್ನು ಆವರಿಗೆ ತೋರಿಸೋಣ. 2024ರ ಚುನಾವಣೆಯಲ್ಲಿ ಮತ ಹಾಕುವುದಕ್ಕಾದರೂ ಜೀವಂತ ಇರಬೇಕಾದ್ದರಿಂದ ಸದ್ಯಕ್ಕೆ ಸರ್ಕಾರ ಹೇಳಿದ ರೀತಿಯಲ್ಲಿ ಕೇಳುತ್ತಾ ಸ್ವಘೋಷಿತ ಲಾಕ್ದೌನ್ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ. ಜೀವ ಇದ್ದರೆ ಮಾತ್ರವೇ ಜೀವನ. ಜನ ಬೆಂಬಲವಿದ್ದಲ್ಲಿ ಮಾತ್ರವೇ ಸರ್ಕಾರ.

ಏನಂತೀರೀ?

ನಿಮ್ಮವನೇ ಉಮಾಸುತ

ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

cremationವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು ನಲ್ಲಿಟ್ಟು ಚಿಕಿತ್ಸೆ ಕೊಟ್ಟರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಸ್ವತಃ ಇಡೀ ಕುಟುಂಬವೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಯಾರಿಗೂ ತಂದೆಯವರ, ಮಾವನವರ, ತಾತನ ಮುಖವನ್ನೂ ನೋಡಲಾಗಲಿಲ್ಲ. ಆಗಿನ್ನೂ ಲಾಕ್ದೌನ್ ತೀವ್ರವಾಗಿದ್ದ ಕಾರಣ ಸರ್ಕಾರಿ ಲೆಖ್ಖದಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳೇ ಅವರ ಅಂತಿಮ ಸಂಸ್ಕಾರವನ್ನು ಮಾಡಿದ್ದರು. ಹೆತ್ತ ತಂದೆಯ ಮುಖವನ್ನೂ ನೋಡಲಾಗಲಿಲ್ಲವಲ್ಲಾ, ಅವರ ಅಂತಿಮ ವಿಧಿವಿಧಾನಗಳನ್ನೂ ಮಾಡಲಾಗಲಿಲ್ಲವಲ್ಲಾ ಎಂದು ಮಗನಿಗೆ ತೀವ್ರತರವಾದ ನೋವಿನಿಂದ ಬಹಳ ದಿನಗಳವರೆಗೂ ಖಿನ್ನತೆಗೆ ಒಳಗಾಗಿ ಹಲವು ತಿಂಗಳುಗಳ ನಂತರ ಸುಧಾರಿಸಿಕೊಳ್ಳುತ್ತಿದ್ದಾರೆ.corona1ಮತ್ತೊಂದು ಕುಟುಂಬ. ಇಲ್ಲಿ ತಾಯಿ, ಮಗ ಸೊಸೆ ಮತ್ತು ಮೊಮ್ಮಗ ಇದ್ದಂತಂಹ ಕುಟುಂಬ. ಮೈಸೂರಿನಲ್ಲಿ ತಮ್ಮ ಸಂಬಂಧಿಗಳ ಸಮಾರಂಭಕ್ಕೆ ಹೋಗಿ ಬಂದ ಕೆಲವೇ ದಿನಗಳಲ್ಲಿ ಕುಟುಂಬವಿಡೀ ಕೊರೋನಾ ಸೊಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ಸೇರುತ್ತಾರೆ. ಅವರ ಇಡೀ ರಸ್ತೆಯನ್ನೇ ಸೀಲ್ಡೌನ್ ಮಾಡುವ ಮೂಲಕ ಏನೂ ಮಾಡದ ಅವರ ರಸ್ತೆಯವರೆಲ್ಲರೂ ತೊಂದರೆ ಅನುಭವಿಸುವಂತಾಗುತ್ತದೆ. ಅದೃಷ್ಠವಶಾತ್ ಅಜ್ಜಿ ಮತ್ತು ಮೊಮ್ಮಗ ಬಹಳ ಬೇಗನೇ ಗುಣಮುಖರಾಗುತ್ತಾರಾದರೂ ಮಗ ಮತ್ತು ಸೊಸೆಯವರಿಗೆ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಸುಮಾರು ಒಂದು ತಿಂಗಳುಗಳ ಕಾಲ ಐಸಿಯುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನರಳಿ, ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ, ವೈದ್ಯರುಗಳ ಚಿಕಿತ್ಸೆ ಮತ್ತು ದೇವರ ದಯೆಯಿಂದಾಗಿ ಮನೆಗೆ ಬಂದು ಸುಮಾರು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಈಗ ಹುಶಾರಾಗಿದ್ದಾರೆ.corona2ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಆರೋಗ್ಯ ತಪ್ಪಿದ ಹಿರಿಯರೊಬ್ಬರನ್ನು ಕೋವಿಡ್ ಪರೀಕ್ಷೆ ಮಾಡಿಸಿದ ಒಂದು ದಿನದ ಬಳಿಕ ಅವರ ಮೊಬೈಲಿನಲ್ಲಿ ಅವರಿಗೆ ಕೋವಿಡ್+ ಬಂದಿದೆ, ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬರುತ್ತದೆ. ಹಾಗಾಗಿ ಸಿದ್ಧವಾಗಿರಿ ಎಂಬ ಸಂದೇಶ ಬಂದ ಕೂಡಲೇ ಆ ಹಿರಿಯರ ನಾಲ್ಕಾರು ಬಟ್ಟೆಗಳನ್ನು ಚೀಲದಲ್ಲಿಟ್ಟು ಮನೆಯ ಹಿರಿಯವರು ಎಂಬ ಮಾನವೀಯತೆಯನ್ನೂ ಮರೆತು ಅವರನ್ನು ಮನೆಯ ಹೊರಗೆ ಹಾಕಿ ಬಾಗಿಲು ಹಾಕಿ ಕೊಳ್ಳುತ್ತಾರೆ. ಅದು ಯಾವ ಕಾರಣಕ್ಕೋ ಏನೋ? ಅವರನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಆಂಬ್ಯುಲೆನ್ಸ್ ಕೂಡಾ ಬಹಳ ತಡವಾಗಿ ಬಂದು ನೋಡಿದರೆ ಮನೆಯ ಮುಂದೆಯೇ ಬೀದಿ ಹೆಣವಾಗಿರುತ್ತಾರೆ ಆ ಹಿರಿಯರು. ಅವರನ್ನು ನೋಡಲೂ ಸಹಾ ಅವರ ಮನೆಯವರು ಹೊರಗೆ ಬಾರದಂತಹ ಹೃದಯವಿದ್ರಾವಕ ಘಟನೆಯೂ ನಡೆದಿದೆ.

ಹೀಗೆ ಬರೆಯುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಇಂತಹ ದುರ್ಘಟನೆಗಳು ಕಳೆದೊಂದು ವರ್ಷದಲ್ಲಿ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ನಮ್ಮ ನಿಮ್ಮೆಲ್ಲರ ಮಧ್ಯೆ ಆರೋಗ್ಯದಿಂದ ಇದ್ದವರು ನೋಡ ನೋಡುತ್ತಿದ್ದಂತೆಯೇ ಗೋಡೆಯಲ್ಲಿ ಫೋಟೋವಾಗಿ ಬಿಟ್ಟಿದ್ದಾರೆ.

lockdownಸರ್ಕಾರವೂ ಸಹಾ ಈ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸುಮಾರು ಮೂರು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದರೂ, ಅಂತರ್ ರಾಜ್ಯಗಳ ಗಡಿಗಳನ್ನು ಮುಚ್ಚಿದ್ದರೂ, ಕೆಲವು ಅನಕ್ಷರಸ್ಥ ಕಿಡಿಗೇಡಿಗಳು ಮತ್ತು ಪುಂಡು ಪೋಕರಿಗಳು ಸರ್ಕಾರದ ನೀತಿನಿಯಮಗಳನ್ನು ಗಾಳಿಗೆ ತೂರಿದರೆ, ಜನರ ಹಿತಕ್ಕಿಂತಲೂ ತಮ್ಮ ರಾಜಕೀಯ ತೆವಲುಗಳಿಗೆ ಮತ್ತು ಆಡಳಿತ ಪಕ್ಷಕ್ಕೆ ಭಂಗ ತರಲೆಂದೇ ದೇಶದ ಹಿತಶತ್ರುಗಳಾಗಿ ಕಾಡಿದ ವಿರೋಧ ಪಕ್ಷಗಳು ಪ್ರಜೆಗಳ ಹಿತವನ್ನೂ ಅಲಕ್ಷಿಸಿ, ಅಂತರ್ ರಾಜ್ಯಗಳ ಗಡಿಯನ್ನು ತೆರೆಯಲು ಹೋರಾಟ ನಡೆಸಿದ್ದಲ್ಲದೇ, ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತೆ ತಮ್ಮ ಮನೆಯ ಮದುವೆ, ಮುಂಜಿ, ನಾಮಕರಣ ಹುಟ್ಟು ಹಬ್ಬಗಳಲ್ಲಿ ಸಾವಿರಾರು ಜನರನ್ನು ಒಟ್ಟು ಗೂಡಿಸಿ ಆಡಳಿತ ಪಕ್ಷಗಳ ಪ್ರತಿಯೊಂದು ನಡೆಯನ್ನೂ ವಿರೋಧಿಸುತ್ತಲೇ ಪರೋಕ್ಷವಾಗಿ ಕೊರೋನಾ ಹಬ್ಬಲು ಸಹಕರಿಸಿದವು ಎಂದರೂ ತಪ್ಪಾಗಲಾರದು.marshalಇಡೀ ಪ್ರಪಂಚವೇ ಈ ಮಹಾಮಾರಿಯಿಂದ ತಲ್ಲಣಿಸಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಗ್ಗಿದ್ದರೂ ಸರ್ಕಾರ ಕೊರೋನ ನಿಯಂತ್ರಣದ ಹೆಸರಿನಲ್ಲಿ ಮಾರ್ಷಲ್ ಗಳ ಮೂಲಕ ಮಾಸ್ಕ್ ಹಾಕಿಲ್ಲದ ಅಮಾಯಕರ ಬಳಿ ಐದು ನೂರು ಸಾವಿರ ರೂಪಾಯಿಗಳ ದಂಡ ಕಸಿಯುವ ಮೂಲಕ ಅಕ್ಷರಶಃ ಹಗಲು ದರೋಡೆಗೆ ಇಳಿಯುವ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದದ್ದು ನಿಜಕ್ಕೂ ಹೇಯಕರವಾದ ಸಂಗತಿಯೇ.marketಲಾಕ್ಡೌನ್ ಹಂತ ಹಂತವಾಗಿ ಸಡಿಲ ಗೊಳಿಸಿದ್ದೇ ತಡಾ ಜನ ಕೊರೋನಾ ಮಹಾಮಾರಿಯೇ ಬಂದಿಲ್ಲವೇನೋ ಇವರು ಹೋಟೇಲ್, ಮಾಲು, ಬಾರು, ಸಿನಿಮಾ, ಈಜುಗೊಳ, ಜಿಮ್, ಮಾರುಕಟ್ಟೆಗಳಿಗೆ ಹೋಗದಿದ್ದರೇ ಪ್ರಪಂಚವೇ ಮುಳುಗಿ ಹೋಗುತ್ತದೆಯೇನೋ ಎನ್ನುವಂತೆ ಎಲ್ಲಾ ಕಡೆಯಲ್ಲಿಯೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಮರೆತು,ರಾಜಾ ರೋಷದಿಂದ ಗೂಳಿ ನುಗ್ಗಿದ ಹಾಗೆ ನುಗ್ಗಿದ ಪರಿಣಾಮ ಸ್ವಲ್ಪ ತಹಬದಿಗೆ ಬಂದಿದ್ದ ಕೊರೋನ, ಮತ್ತೆ ಪ್ರಜ್ವಲಿಸುತ್ತಾ 2ನೇ ಅಲೆಯ ಮೂಲಕ ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ 30 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಪ್ರತಿ ದಿನವೂ ಸಹಸ್ರಾರು ಜನರು ,+veಎಂಬ ಅಂಕಿ ಅಂಶ ಕಣ್ಣ ಮುಂದೆ ರಾಚುತ್ತಿದೆ.2ndwave1ಕೊರೋನಾ ಗಿರೋನಾ ಏನೂ ಇಲ್ಲಾ ಇದೆಲ್ಲವೂ ಈ ಭ್ರಷ್ಟ ರಾಜಕಾರಣಿಗಳು ದುಡ್ಡು ಹೊಡೆಯುವ ಹುನ್ನಾರದ ಭಾಗ ಎನ್ನುವವರಿಗೆ, ಕಬ್ಬು ತಿಂದವರಿಗೆ ಮಾತ್ರವೇ ರುಚಿ ಗೊತ್ತಾಗುತ್ತದೆ ಎನ್ನುವಂತೆ ಕೊರೋನಿಂದ ಭಾಧಿತರಾದವರಿಗೆ ಮಾತ್ರವೇ ಅದರ ಅನುಭವ ಗೊತ್ತಿರುತ್ತದೆ. ಖ್ಯಾತ ಕಲಾವಿದ ದಂಪತಿಗಳಾದ ಸುನೇತ್ರ ಮತ್ತು ಪಂಡಿತ್ ದಂಪತಿಗಳು ತಮ್ಮ ಕುಟಂಬಸ್ಥರನ್ನು ಕಳೆದುಕೊಂಡು ಮಾಧ್ಯಮದ ಮುಂದೆ ರೋಧಿಸಿದ ಪರಿ ನಿಜಕ್ಕೂ ಕರುಳು ಚುರಕ್ ಎನಿಸಿತ್ತು. ನಿಜ ಕೆಲವೊಂದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಸಂಧರ್ಭದಲ್ಲಿಯೂ ಅಕ್ರಮ ಹಣವನ್ನು ಮಾಡಿರುವುದನ್ನು ಅಲ್ಲಗಳಿಯಲು ಆಗದಾದರೂ, ಇದೇ ಕಾರಣಕ್ಕೆ ಕೊರೋನಾನೇ ಇಲ್ಲ ಎಂದು ಹೇಳಲಾಗದು.ನಿಜ ಹೇಳ ಬೇಕೆಂದರೆ ಈ ಕೊರೋನ ಅಸ್ತಿ ಅಂತಸ್ತು ಅಧಿಕಾರ ನೋಡಿ ಕೊಂಡು ಬರೋದಿಲ್ಲ . ಈಗಾಗಲೇ ಹೆಸರಾಂತರ ಕಲಾವಿದರು, ರಾಜಕಾರಣಿಗಳು, ಕೇಂದ್ರ ಸಚಿವರು, ಸಂಸದರು,ಹಿರಿಯ ಗಣ್ಯರು, ಅಧಿಕಾರಿಗಳು, ವೈದ್ಯರುಗಳು, ಜನಸಾಮಾನ್ಯರು ಹೀಗೆ ಯಾವ ವರ್ಗವೆಂಬ ತಾರತಮ್ಯವಿಲ್ಲದೇ, ಈ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯ ಲಕ್ಷ್ಮೀಪುರ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರದಲ್ಲಿ ಸಾಲುಗಟ್ಟಿ ನಿಂತಿರುವ ಕೊರೋನದಿಂದ ಮೃತಪಟ್ಟ ಶವಗಳು ಸಾಲು ನೋಡಿದರೇ ಸಾಕು ಕೊರೋನ‌ ತೀವ್ರತೆಯ ಅನುಭವಾಗುತ್ತದೆ. ಸಾಧಾರಣ ದಿನಗಳಲ್ಲಿ ಮೂರ್ನಾಲ್ಕು ಶವಗಳು ಬರುತ್ತಿದ್ದ ಸ್ಮಶಾನದಲ್ಲಿ ಈಗ ಪ್ರತೀ‌ ದಿನವೂ 25-30ರ ವರೆಗೆ ಬಂದು ಆಂಬ್ಯುಲೆನ್ಸ್ ಸಾಲು ಸಾಲಾಗಿ ನಿಂತಿರುವ ಹೃದಯವಿದ್ರಾವಕ ದೃಶ್ಯ ಮನಕಲಕಿಸುತ್ತದೆ.ಲಾಕ್ಡೌನ್ ಸ್ಪಲ್ಪ ಸಡಿಲಗೊಳಿಸಿದ ತಕ್ಷಣ, ಮನೆ ಮಠ ಬಿಟ್ಟು ತನ್ನ ಗಡ್ಡ ಕೆರ್ಕೊಂಡು ಸಿನಿಮಾ ಅಂತ ಮಠ ಚಲನಚಿತ್ರದ ಖ್ಯಾತಿಯ ಗುರುಪ್ರಸಾದ್ ಹುಚ್ಚು‌ ಕುದುರೆ ತರಹಾ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಬೀದಿ ಬೀದಿ ಸುತ್ತಾಡಿ ಕೊರೋನ ಹತ್ತಿಸಿಕೊಂಡು ಈಗ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂತ ರಾಜ್ಯ ಸರ್ಕಾರವನ್ನು ತೆಗಳುತ್ತಾ ತನ್ನ ಸಾವಿಗೆ ಸರ್ಕಾರವೇ ಕಾರಣ ಎಂಬ ವರಾತ ತೆಗೆದರೆ ಯಾವುದೇ ಪ್ರಯೋಜನ ಆಗದು. ಸುಮ್ಮನೇ ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ರೇ ಈತನಿಗೆ ಕೊರೋನಾ ಬರ್ತಿತ್ತಾ?ದೇಶದ ಜವಾಬ್ದಾರಿಯುತ ನಾಗರೀಕರಾಗಿ ವಯಕ್ತಿವಾಗಿ ಕೆಲವೊಂದು ನೀತಿ ನಿಯಮಗಳನ್ನು ಮತ್ತು ಅನುಶಾಸನಗಳನ್ನು ಸ್ವಯಂ ಪಾಲಿಸಲೇ ಬೇಕಾಗುತ್ತದೆ

 • ಸರ್ಕಾರ ಲಾಕ್ಡೌನ್ ಮಾಡುತ್ತದೆಯೋ ಬಿಡುತ್ತದೆಯೋ, ದಯವಿಟ್ಟು ಇನ್ನೂ ಕೆಲ ಕಾಲ ಸ್ವಯಂ ಲಾಕ್ ಡೌನ್ ಒಳಗಾಗಿ ಮನೆಯಲ್ಲಿಯೇ ಸುರಕ್ಷಿತವಾಗಿ ಇರೋಣ.
 • ನಮ್ಮ ನಮ್ಮ ವಯಸ್ಸಿನ ಅನುಗುಣವಾಗಿ ಎರಡೂ ಬಾರಿ ಖಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳೋಣ.
 • ಒಂದಷ್ಟು ದಿನ ಸಭೆ, ಸಮಾರಂಭ, ಮದುವೆ ಮುಂಜಿ, ನಾಮಕರಣ ಮುಂತಾದ ಹೆಚ್ಚು ಜನರು ಸೇರುವಲ್ಲಿ ಹೋಗುವುದನ್ನು ಮುಂದು ಹಾಕೋಣ.
 • ಅನಗತ್ಯವಾಗಿ ಹೊರಗೆಲ್ಲೂ ಓಡಾಡದೇ, ಅನಿವಾರ್ಯವಾಗಿ ಹೊರಗೆ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡೋಣ ಮತ್ತು ಮನೆಗೆ ಬಂದ ತಕ್ಷಣ ಸಾಬೂನಿನಿಂದ ಕೈ ಕಾಲು ಮುಖವನ್ನು ತೊಳೆಯೋಣ.
 • ವಾರಕ್ಕೊಮ್ಮೆ ಪ್ರಾರ್ಥನೆ, ದೇವಸ್ಥಾನ, ಚರ್ಚ್ ಮಸೀದಿ ಎಂದು ತೀರ್ಥಕ್ಷೇತ್ರ, ಜಾತ್ರೆ, ಕುಂಭಮೇಳ ಎಂದು ಎಲ್ಲಿಗೂ ಹೋಗದೇ, ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಂತರ್ಯಾಮಿಯಾದ ಭಗವಂತನನ್ನು ಮನೆಯಿಂದಲೇ ಪ್ರಾರ್ಥಿಸೋಣ.
 • ಸಾಧ್ಯವಾದಷ್ಟೂ ಹೊರಗಡೆಯ ತಿಂಡಿ ತೀರ್ಥಗಳನ್ನು ಸೇವಿಸುವುದನ್ನು ನಿಲ್ಲಿಸೋಣ.
 • ಆದಷ್ಘೂ ಬಿಸಿ ನೀರು ಮತ್ತು ಬಿಸಿಬಿಸಿಯಾದ ಆಹಾರವನ್ನು ಅಚ್ಚುಕಟ್ಟಾಗಿ ಮನೆಯಲ್ಲಿಯೇ ಮಾಡಿಕೊಂಡು ಸೇವಿಸೋಣ.
 • ಮೆಣಸು, ಜೀರಿಗೆ, ಅರಿಶಿನ, ಚಕ್ಕೆ, ಕರಿಬೇವು, ದನಿಯಾ ಮುಂತಾದವುಗಳಿಂದ ತಯಾರಿಸಿದ ಕಷಾಯವನ್ನು ಆಗ್ಗಾಗ್ಗೆ ಸೇವಿಸುವ ಮೂಲಕ ಕೊರೋನಾ ಸೋಂಕು ನಮಗೆ ತಗುಲಿದ್ದರೂ ಅದು ನಾಶವಾಗುವಂತೆ ನೋಡಿಕೊಳ್ಳೋಣ.
 • ಸರ್ಕಸ್, ಸಿನಿಮಾ, ನಾಟಕ ಮತ್ತು ಪ್ರವಾಸಗಳನ್ನು ಕೆಲ ದಿನಗಳ ಕಾಲ ಮುಂದೂಡಿದರೆ ಜಗತ್ ಪ್ರಳಯವೇನೂ ಆಗದು ಎಂಬುದು ತಿಳಿದಿರಲಿ.
 • ಸರ್ಕಾರಕ್ಕೂ ಈ ಮೊದಲು ದೂರಲು ಚೀನ ದೇಶವಿತ್ತು, ತಬ್ಲೀಗ್ ಗಳು ಇದ್ದರು. ಆದರೆ ಈ ಬಾರೀ ಆ ಕಾರಣಗಳು ಯಾವುವೂ ಇಲ್ಲ. ಈ ಬಾರಿ ತಪ್ಪೆಲ್ಲಾ ನಮ್ದೇ.
 • ನುಡಿದಂತೆ ನಡೆ. ನಡೆಯುವುದಕ್ಕೆ ಆಗುವುದನ್ನೇ ನುಡಿ ಎನ್ನುವಂತೆ Rules is a rules even for fools ಎನ್ನುವಂತೆ ಮುಖಾಮೂತಿ ನೋಡದೇ, ಬಡವ, ಬಲ್ಲಿದ, ರಾಜಕಾರಣಿ, ಮಠಾಧಿಪತಿ, ಮೌಲ್ವಿ ಅಥವಾ ಪಾದ್ರಿ ಎನ್ನುವ ತಾರತಾಮ್ಯವಿಲ್ಲದೇ ತಪ್ಪು ಮಾಡಿದವರಿಗೆಲ್ಲರಿಗೂ ಶಿಕ್ಷೆಯಾಗಲಿ.
 • ಹಾಗೆಂದ ಮಾತ್ರಕ್ಕೆ ಶಿಕ್ಷೆಯೇ ಪರಮೋಚ್ಚ ಗುರಿಯಾಗಿರದೇ, ಸಮಾಜವನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ.
 • ಥೂ! ಈ ಸರ್ಕಾರ ಸರೀ ಇಲ್ಲಾ, ಈ ಜನಾನೇ ಸರಿ ಇಲ್ಲಾ! ಕೊರೋನಾನೇ ಇಲ್ಲ ಎಂದು ವಿತಂಡ ವಾದ ಮಾಡುತ್ತಾ ಸಮಾಜವನ್ನು ದೂರುವುದನ್ನು ಬಿಟ್ಟು ಸ್ವಯಂ ನಿರ್ಬಂಧ ಹೇರಿಕೊಂಡು ಸುರಕ್ಷಿತವಾಗಿರೋಣ.

ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲಾ ವೆಂಟಿಲೇಟರ್ಗಳಿಗೆ ಬರ ಎಂದ ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಳ್ಳುವ ಬದಲು ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡ್ ಸಾಮಾಜಿಕ ಅಂತರ ಕಾಪಾಡಿಕೊಂಡ್ರೇ ಈ ರೀತಿಯಲ್ಲಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಇರ್ತಿರ್ಲಿಲ್ಲಾ ಅಲ್ವೇ?ಈ ಲೇಖನ ಕೇವಲ ಓದುಗರನ್ನು ಹೆದರಿಸುವುದಕ್ಕೆ ಆಗಲೀ ಸರ್ಕಾರದ ಪರ ಅಥವಾ ವಿರೋಧವಾಗಿರದೇ, ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಾನಾ ಕಾರಣಗಳಿಂದ ಕೊರೋನ ಸೋಂಕಿತರಾಗಿ ಸೂಕ್ತ ಚಿಕಿತ್ಸಾ ವಿಧಾನಗಳಿಂದ ಗುಣಮುಖರಾದ ಸಂಖ್ಯೆಯೂ ಲಕ್ಷಾಂತರವಿದೆ.ಜೀವ ಇದ್ರೇ ಮಾತ್ರ ಜೀವನ. ಸುರಕ್ಷಿತವಾಗಿ ಇದ್ದರೆ ಬರೋದಿಲ್ಲ ಕೊರೋನ ಎನ್ನುವು್ಉ ಮಾತ್ರವೇ ಸತ್ಯ. ಮೊದಲನೆಯ ಸಲಾ ತಪ್ಪು ಮಾಡಿದರೆ ಕ್ಷಮೆ ಇರುತ್ತದೆ ಆದರೆ ಎರಡನೆಯ ಸಲಾ ಅದೇ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹಾಗಾಗಿ ಈ ಸಲ ನಮ್ಮಿಂದ ತಪ್ಪಾಗುವುದು ಬೇಡ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಶ್ರೀಕಂಠ, ವಿಷಕಂಠ, ನೀಲಕಂಠ

ಸಮುದ್ರ ಮಂಥನದ ಸಮಯ, ಕೈಲಾಸ ಪರ್ವತವನ್ನೇ ಕಡಗೋಲಾಗಿಸಿಕೊಂಡು ಆದಿಶೇಷನ ಒಂದು ತುದಿ ದೇವತೆಗಳು ಮತ್ತು ಮತ್ತೊಂದು ತುದಿಯನ್ನು ಅಸುರರು ಹಿಡಿದುಕೊಂಡು ಮಜ್ಜಿಗೆ ಕಡೆದಂತೆ ಸಮುದ್ರವನ್ನು ಕಡೆಯುತ್ತಿದ್ದಾಗ ಉಕ್ಕಿಬಂದ ಕಾರ್ಕೋಟಕ ವಿಷವನ್ನು ತಾಳಲಾರದೇ, ಎಲ್ಲರೂ ಆ ಪರಶಿವನ ಮೊರೆ ಹೊಕ್ಕಾಗಾ ಹಿಂದೂ ಮುಂದೇ ನೋಡದ ಶಿವಾ ಆ ಕಾರ್ಕೋಟಕ ವಿಷವನ್ನು ತನ್ನ ಎರಡೂ ಕೈಗಳಿಗೆ ಬರುವಂತೆ ಮಾಡಿಕೊಂಡು ಗಟ ಗಟನೆ ಆಪೋಷನೆ ಮಾಡುತ್ತಿರುವ ವಿಷಯ ತಿಳಿದು, ಪಾರ್ವತಿದೇವಿ ಓಡೋಡಿ ಬರುವಷ್ಟರಲ್ಲಿ ಶಿವ ವಿಷವನ್ನು ಸೇವಿಸಿಯಾಗಿರುತ್ತದೆ. ಇದನ್ನು ಕಂಡ ಪಾರ್ವತೀ ದೇವಿ ಕೂಡಲೇ ಆ ವಿಷ ಗಂಟಲಿನಿಂದ ಕೆಳಗೆ ಇಳಿಯಂತೆ ನೋಡಿಕೊಳ್ಳುವ ಸಲುವಾಗಿ ತನ್ನ ಪತಿದೇವನ ಗಂಟಲನ್ನು ಗಟ್ಟಿಯಾಗಿ ಅದುಮಿಕೊಂಡು ಹಿಡಿದುಕೊಳ್ಳುವ ಮೂಲಕ ಆ ವಿಷ ಶಿವನ ಗಂಟಲಲ್ಲೇ ಉಳಿಯುವ ಮೂಲಕ ಶಿವ ವಿಷಕಂಠನಾಗಿ, ಗಂಟಲಲ್ಲೇ ವಿಷ ಹೆಪ್ಪುಗಟ್ಟಿದ ಪರಿಣಾಮವಾಗಿ ನೀಲಕಂಠನಾಗುತ್ತಾನೆ ಎಂಬುದು ಪುರಾಣ ಪ್ರಸಿದ್ಧ ಕಥೆ ಎಲ್ಲರಿಗೂ ತಿಳಿದಿರುವ ಸಂಗತಿಯಷ್ಟೇ. ಈ ಕಲಿಯುಗದಲ್ಲಿ ಕಣ್ಣಿಗೆ ಕಾಣದ ಮಹಾಮಾರಿ ಕೋರೋನಾ ಕೂಡಾ ಅದೇ ಗಂಟಲಿಗೇ ವಕ್ಕರಿಸಿಕೊಳ್ಳುವುದು ನಿಜಕ್ಕೂ ಅತಂಕಕಾರಿಯಾಗಿದೆ.

ಕಳೆದ ಸೋಮವಾರವಿನ್ನೂ ಶಾಸ್ತ್ರೋಕ್ತವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಆದರೇ ಅಷ್ಟೇ ಸಂಭ್ರಮವಾಗಿ ಐವತ್ತನೇ ಹುಟ್ಟು ಹಬ್ಬ ಆಚರಿಸಿಕೊಂಡ ನನಗೆ, ಹುಟ್ಟುಹಬ್ಬದ ಉಡುಗೊರೆಯಾಗಿ ಕೋರಾನಾ ಮಹಾಮಾರಿ Home Delivery ಆಗಿದ್ದಂತೂ ನಿಜಕ್ಕೂ ಬೇಸರದ ಸಂಗತಿಯಾಗಿತ್ತು. ನಾವು ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿ, ಪುರೋಹಿತರೂ ಸೇರಿದಂತೆ ಹದಿನೈದು ಜನರು ಮೀರದಂತೆ ಎಚ್ಚರ ವಹಿಸಿ, ಸಾಮಾಜಿಕ ಅಂತರವನ್ನೆಲ್ಲಾ ಕಾಪಾಡಿಕೊಂಡಿದ್ದರೂ ಸಂಜೆ ಪುಸ್ತಕ ಬಿಡುಗಡೆಯಾದ ನಂತರ ನಾಲ್ಕೈದು ಜನ ಅತ್ಮೀಯರನ್ನು ಮನೆಗೆ ಕರೆದು ಅವರಿಗೆ ಪುಸ್ತಕವನ್ನು ಹಂಚಿದ್ದೇ ಮುಳುವಾಯಿತೇನೋ? ನಿರ್ಧಿಷ್ಟವಾಗಿ ಹೀಗೆಯೇ ಬಂದಿರಬಹುದು ಎನ್ನುವುವುದಕ್ಕೆ ಸ್ಪಷ್ಟ ಪುರಾವೆಗಳಿಲ್ಲದಿದ್ದರೂ ಬುಧವಾರ ಮಧ್ಯಾಹ್ನದಿಂದ ಯಾಕೋ ಗಂಟಲು ನೋವು ಶುರುವಾಯಿತು. ಬಹುಶಃ ಸತ್ಯನಾರಾಯಣ ಪೂಜೆಗೆಂದು ತಂದಿದ್ದ ಸೀತಾಫಲ, ಸೇಬು, ಸಪೋಟ ತಿಂದಿದ್ದರಿಂದ ಬಂದಿರಬಹುದೆಂದು ಉಪ್ಪು ನೀರನ್ನು ಗಂಟಲಿಗೆ ಹಾಕಿಕೊಂಡು ಮುಕ್ಕಳಿಸಿ ಸುಮ್ಮನಾದೆ.

ಸೋಮವಾರ ಸಂಜೆ ನಮ್ಮ ಮನೆಗೆ ಬಂದಿದ್ದ ಆತ್ಮೀಯರೊಬ್ಬರು ಬುಧವಾರ ಸಂಜೆ, ನನಗೆ ಕೋವಿಡ್ + ಎಂದು ಧೃಢಪಟ್ಟಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ನೀವೂ ಒಮ್ಮೆ ಪರೀಕ್ಷಿಕೊಳ್ಳಿ ಎಂಬ ಸಂದೇಶವನ್ನು ಕಳುಹಿಸಿದಾಗ ಅದನ್ನು ಓದಿ ಸುಮ್ಮನಾಗಿದೆ. ಗುರುವಾರ ಗಂಟಲು ನೋವಿನ ಬಾವು ಕಿವಿಯವರೆಗೂ ತಲುಪಿದ್ದರಿಂದ ವಿಧಿ ಇಲ್ಲದೇ ನಮ್ಮ ಕುಟುಂಬ ವೈದ್ಯರನ್ನು ಭೇಟಿದಾಗ, ಅವರೂ ಸಹಾ ಶೀತದ ಪರಿಣಾಮ ಗಂಟಲು ನೋವು ಬಂದಿರಬಹುದೆಂದು ಔಷಧಿಯನ್ನು ನೀಡಿ, ಏನೇ ಆಗಲೀ ಒಂದು ಸಲಾ ಕೋವಿಡ್ ಪರೀಕ್ಷೆ ಮಾಡಿಸುವುದು ಉತ್ತಮ. ಹತ್ತಿರದ Primary health center (PHC)ನಲ್ಲಿ ಉಚಿತವಾಗಿ ಮಾಡುತ್ತಾರೆ ಒಮ್ಮೆ ಮಾಡಿಸು ಎಂದಾಗ ಸರಿ ಸರ್ ಎಂದು ಹೇಳಿ ಬಂದೆ.

ಹಾವು ಕಚ್ಚಿ, ಹಾವಿನ ವಿಷದಿಂದ ಸಾಯುವುದಕ್ಕಿಂತಲೂ ಹಾವು ಕಚ್ಚಿರುವ ವಿಷಯ ಕೇಳಿಯೇ ಭಯಕ್ಕೆ ಸುಮಾರು ಜನಾ ಸತ್ತು ಹೋಗುತ್ತಾರೆ ಎನ್ನುವಂತೆ ಗುರುವಾರ ರಾತ್ರಿಯಿಡೀ ಸರಿಯಾಗಿ ನಿದ್ದೆಯೇ ಬರಲಿಲ್ಲ. ಅಯ್ಯೋ ಕೋವಿಡ್ + ಬಂದರೆ ಹೇಗೆ ಎಂಬ ಆತಂಕದಲ್ಲಿಯೇ ಇಡೀ ರಾತ್ರಿ ಹಾಸಿಗೆಯಲ್ಲಿ ಅತ್ತಿಂದಿತ್ತ ಒದ್ದಾಡಿದೆ. ಅದಕ್ಕೆ ಸರಿಯಾಗಿ ಸ್ವಲ್ಪ ಜ್ವರವೂ ಕಾಣಿಸಿಕೊಂಡಿತು. ಬೆಳಿಗ್ಗೆ ನಿತ್ಯಕ್ರಮಗಳನ್ನು ಮುಗಿಸಿ ತಿಂಡಿ ತಿಂದು ಹತ್ತಿರದ PHCಯಲ್ಲಿ ಪರೀಕ್ಷೆ ಮಾಡಿಸಲು ಹೊರಟಾಗ, ಮನೆಯಾಕಿ, ರೀ ಅಪ್ಪಿ ತಪ್ಪಿ ಕೋವಿಡ್ + ಬಂದರೆ ಏನ್ರೀ ಮಾಡುವುದು ಎಂದಾಗ, ಕೋವಿಡ್ +ve ನಿಂದ -ve ಆದರೆ ಮನೆಯಲ್ಲಿ ಸಂಕ್ರಾಂತಿ ಅಂದರೆ ಸಂಭ್ರಮದ ವಾತಾವರಣ. ಅಕಸ್ಮಾತ್ ಗ್ರಹಚಾರ ಕೆಟ್ಟು, ಕೆಡುಕಾದಲ್ಲಿ ಎಲ್ಲರ ಓಂ ಶಾಂತಿ ಎಂದು ಹಾಸ್ಯ ಮಾಡಿ ಮೆನೆಯಿಂದ ಹೊರಬಿದ್ದೇ.

ಬೇರೆ ಕಡೆ ಹೇಗೋ ಏನೋ ನನಗೆ ತಿಳಿಯದು, ನಾನು ಹೋಗಿದ್ದ ತಿಂಡ್ಲಿವಿನ ವಿರೂಪಾಕ್ಷಪುರದ ಕೆನರಾಬ್ಯಾಂಕ್ ಲೇಔಟಿನ PHCಯ ಸಿಬ್ಬಂಧಿ ನಿಜಕ್ಕೂ ಜನಸ್ನೇಹೀಯಾಗಿದ್ದರು. ಸರದಿಯ ಸಾಲಿನಲ್ಲಿ ಎಲ್ಲರನ್ನೂ ನೋಂದಾವಣಿ ಮಾಡಿಸಿಕೊಂಡು ಅವರ mobile OTP register ಮಾಡಿಕೊಂಡು, ಗಂಟೆ ಹನ್ನೆರಡಕ್ಕೆ ಸರಿಯಾಗಿ PPE kit ಧರಿಸಿದ ವ್ಯಕ್ತಿಯೊಬ್ಬ ನಮ್ಮ ಮೂಗಿನೊಳಗಿನಿಂದ ದ್ರವವನ್ನು ತೆಗೆದು ಒಂದು Stripಗೆ ಹಾಕಿ ಒಂದೈದು ನಿಮಿಷ ಕಾಯಲು ತಿಳಿಸಿದರು. Pregnency Test ರೀತಿಯಲ್ಲಿ ಆ Strip ಬಣ್ಣದ ಅನುಗುಣವಾಗಿ instant +ve or -ve ನಿರ್ಧರಿಸುತ್ತಾರೆ. ಇಲ್ಲಿ ಅದೃಷ್ಟವಶಾತ್ -ve ಎಂದು ತೋರಿಸಿದಲ್ಲಿ ಅವರಿಗೆ ಮತ್ತೊಮ್ಮೆ swab ಎಂಬ ಗಂಟಲು ದ್ರವ ಪರೀಕ್ಷೇ ಮಾಡಿ ಅದನ್ನು Medical Labಗೆ ಕಳುಹಿಸಿ ಎರಡು ದಿನಗಳ ನಂತರ ಫಲಿತಾಂಶವನ್ನು ತಿಳಿಸುತ್ತಾರೆ. ದುರಾದೃಷ್ಟವಷಾತ್ instant testನಲ್ಲಿ +VE ಎಂದು ಬಂದರೆ ಅಂತಹವರ ಆರೋಗ್ಯದ ಪೂರ್ವಾಪರಗಳನ್ನು ವಿಚಾರಿಸಿ. ಅವರವರ ಅನುಕೂಲಕ್ಕೆ ತಕ್ಕಂತೆ ಸರ್ಕಾರೀ ಅಥವಾ ಖಾಸಗಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುತ್ತಾರೆ. ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹಿಗಳು ಮತ್ತು 60 ವರ್ಷಕ್ಕೆ ಮೇಲ್ಪಟ್ಟವರಿಗೆ ಖಡ್ಡಾಯವಾಗಿ ಆಸ್ಪತ್ರೆಗೆ ಸೇರಿಕೊಳ್ಳಲು ಸೂಚಿಸುತ್ತಾರೆ. ಪುಣ್ಯಕ್ಕೆ ನನಗೆ ಅಂತಹ ಯಾವುದೇ ಸಮಸ್ಯೆ ಇಲ್ಲದಿದ್ದ ಕಾರಣ ಮತ್ತು ಮನೆಯಲ್ಲಿ ಪ್ರತ್ಯೇಕ ಕೊಠಡಿ ಅದಕ್ಕೆ ಸೇರಿದಂತೆಯೇ ಶೌಚಾಲಯ ಮತ್ತು ನೋಡಿಕೊಳ್ಳಲು ಜನ ಇರುವ ಕಾರಣ home quarantine ಆಗಿ ಚಿಕಿತ್ಸೆ ಪಡೆಯಲು ತಿಳಿಸಿ, paracitamal, zinc tablets, azithromycin ಮಾತ್ರೆಗಳನ್ನು ಸೇವಿಸಲು ತಿಳಿಸಿ, ಪ್ರತೀ ದಿನ ಬೆಳಿಗ್ಗೆ ಮಧ್ಯಾಹ್ನ, ಸಂಜೆ ಮತ್ತು ರಾತ್ರಿ temperature, pulse & oxygen level ಪರೀಕ್ಷಿಸಿ ಅದನ್ನು ದಾಖಲು ಪಡಿಸಿ WhatsAPP ಮುಖಾಂತರ ತಿಳಿಸಲು ಹೇಳಿ, ದೈರ್ಯಗೆಡದಿರಿ ಸರಿಯಾದ ಚಿಕಿತ್ಸೆಯಿಂದಾಗಿ ಶೇ99 ರಷ್ಟು ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿ ಕಳುಹಿಸಿದರು.

ಇಲ್ಲಿಂದ ನೋಡಿ ನಿಜವಾದ ಕಥೆ ಶುರುವಾಗುತ್ತದೆ. ಇಷ್ಟರಲ್ಲಾಗಲೇ ಹತ್ತು ಬಾರಿ ಮನೆಯಿಂದ ಆತಂಕದ ಕರೆಗಳು ಬಂದಿತ್ತು. ಹ್ಯಾಪು ಮೋರೆ ಹಾಕಿಕೊಂಡು ಮನೆಗೆ ಬಂದು ಪರಿಸ್ಥಿತಿಯನ್ನು ಮಡದಿ ಮಕ್ಕಳೊಡನೆ ತಿಳಿಸಿದಾಗ ಎಲ್ಲರೂ ಒಂದು ಕ್ಷಣ ದಿಗ್ರಾಂತರಾಗಿ ಕಡೆಗೆ ಆ ಕೊಠಡಿ, ಈ ಕೊಠಡಿ ಎಂದು ತಮ್ಮ ತಮ್ಮಲೇ ವಾದ ವಿವಾದಗಳನ್ನು ನಡೆಸಿ ಮೇಲಿನ ಕೊಠಡಿಗೆ ಹೋದರೆ ಅವರನ್ನು ನೋಡಿಕೊಳ್ಳಲು ಆಗದು ಹಾಗಾಗಿ ಕೆಳಗಿನ ಕೊಠಡಿಯೇ ಸೂಕ್ತ ಎಂದು ಕೆಳಗಿನ ಕೊಠಡಿಯಲ್ಲಿ ಸಕಲ ಏರ್ಪಾಟನ್ನು ಮಾಡುವಷ್ಟರಲ್ಲಿಯೇ ಬಿಬಿಎಂಪಿ call & SMS ಸುರಿಮಳೆ. ಸಾರ್, ನಿಮಗೆ ಗೊತ್ತೇ ನೀವು ಕೋವಿಡ್ +ve ವ್ಯಕ್ತಿಯಾಗಿದ್ದು home quarantine ಆಗಿ ಚಿಕಿತ್ಸೆ ಪಡೆಯಲು ಒಪ್ಪಿಕೊಂಡಿದ್ದೀರೀ. ನಿಮಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ನಿಮ್ಮ ಮನೆಯಲ್ಲಿ ಇದೆಯೇ, ನಿಮ್ಮ ಮನೆಯಲ್ಲಿ ಉಳಿದವರು ಯಾರು ಯಾರು ಇದ್ದಾರೆ? ಅವರೆಲ್ಲರ ಪರೀಕ್ಷೆಗಳನ್ನು ಮಾಡಿಸಿದಿದ್ದೀರಾ, ಕಳೆದ ಒಂದು ವಾರದಿಂದ ನೀವು ಭೇಟಿ ಮಾಡಿದ ಕನಿಷ್ಟ 20 ಜನರ ಹೆಸರು ಮತ್ತು ಅವರ ಮೊಬೈಲ್ ಸಂಖ್ಯೆ ನೀಡಿ. ನಿಮ್ಮ ಮನೆ ಎಲ್ಲಿ ಬರುತ್ತದೆ ನಾವು ಬಂದು ಪರೀಕ್ಷಿಸಬೇಕು ಹಾಗೆಯೇ ನಿಮ್ಮ ಅಕ್ಕ ಪಕ್ಕದವರೊಂದಿಗೆ ನಾವು ಮಾತನಾಡ ಬೇಕು, ಹೀಗೆ ಒಂದೇ ಸಮನೇ ಹತ್ತಾರು ಕರೆಗಳು ಮೊದಲ ಎರಡು ದಿನಗಳಲ್ಲಿ ಬಂದು ನಿಜಕ್ಕೂ ನಮ್ಮನ್ನು ಹತಾಶರಾನ್ನಾಗಿ ಮಾಡಿಬಿಡುತ್ತಾರೆ.

ಮುಳ್ಳಿನ ಮೇಲೆ ಬಿದ್ದ ಪಂಚೆಯನ್ನು ನಿಧಾನವಾಗಿ ತೆಗಯಲೇ ಬೇಕಾದಂತಹ ಅನಿವಾರ್ಯ ಪರಿಸ್ಥಿತಿಯಂತೆ ಅವರೆಲ್ಲರಿಗೂ ಅದಷ್ಟೂ ಸಮಚಿತ್ತದಿಂದ ಉತ್ತರಿಸಿ ಮಾಡಿದ ಮೊದಲ ಕೆಲವೆಂದರೆ, ಮಧ್ಯಾಹ್ನ ಮನೆಯ ಉಳಿದವರಿಲ್ಲರಿಗೂ ಪರೀಕ್ಷೆ ಮಾಡಿಸಿದ್ದು. ದೇವರ ದಯೆ ನನ್ನೊಬ್ಬನ ಹೊರತಾಗಿ ಉಳಿದವರೆಲ್ಲರದ್ದೂ -ve ಬಂದಿದ್ದರಿಂದ ಮನೆಯಲ್ಲಿ ಸ್ವಲ್ಪ ನಿರಾಳ.

ಮೊದಲ ಎರಡ್ಮೂರು ದಿನ ಬಿಬಿಎಂಪಿ ಸಿಬ್ಬಂಧಿಗಳು ನಮ್ಮನ್ನು ಹೈರಾಣಾಗಿಸಿಬಿಡುತ್ತಾರೆ. ಇದೆಲ್ಲಾ ಬಿಟ್ಟು ಸುಮ್ಮನೆ ಯಾವುದಾದರೂ ಆಸ್ಪತ್ರೆಗೆ ಹೋಗಿ ಸೇರಿಕೊಂಡಿದ್ದರೇ ಉತ್ತಮವಾಗುತ್ತಿತ್ತೇನೋ ಎನಿಸದೇ ಇರುವುದಿಲ್ಲ. ಇದೆಲ್ಲದರ ಸಿಟ್ಟು ಮತ್ತು ಸೆವಡುಗಳನ್ನು ಮನೆಯವರು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ನಮಗೆ ಅದೆಂತಹದ್ದೋ ಸಿಡಿಮಿಡಿಯಾಗಿ ಅವರ ಮೇಲೆ ಹರಿ ಬಿಟ್ಟಿದ್ದೂ ಉಂಟು.

ಮೊದಲು ಯಾರಿಗೂ ಹೇಳಬಾರದು ಎಂದು ಅಂದು ಕೊಂಡರೂ ನಿಧಾನವಾಗಿ ಮನಸ್ಸಿಗೆ ತಡೆಯದೆ ಒಬ್ಬಿಬ್ಬರು ಆತ್ಮೀಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇ ತಡ, ಯಾರಿಗೂ ಹೇಳಬೇಡಿ ಶ್ರೀಕಂಠನಿಗೆ ಕೋವಿಡ್ +ve ಅಂತೇ ಅಂತಾ ನನ್ನ ಮೇಲೆ ಅಕ್ಕರೆಯಿಂದಲೂ ಅಥವಾ ತಿಳಿಯದೆಯೋ ನಿಧಾನವಾಗಿ ಗೆಳೆಯರ ಗುಂಪಿಗೆ ಗೊತ್ತಾಗುತ್ತಿದ್ದಂತೆಯೇ ದೇಶ ವಿದೇಶಗಳಿಂದ ಕರೆಗಳ ಸುರಿಮಳೆ ಯಾಗುವುದನ್ನು ನೋಡಿ ನಿಜಕ್ಕೂ ಅರೇ, ನನ್ನ ಹಿತೈಷಿಗಳ ಬಳಗ ಇಷ್ತೊಂದು ಸಂಖ್ಯೆಯಲ್ಲಿಯೇ ಎಂದು ನನಗೇ ಆಶ್ವರ್ಯವಾಯಿತು. ಕರೆ ಮಾಡಿದರೆ ಬೇಜಾರಿಲ್ಲಾ ಎಲ್ಲರೂ ತಲಾ ತಟ್ಟಿ ಒಂದೊಂದು ರೀತಿಯ ಚಿಕಿತ್ಸಾ ವಿಧಾನಗಳನ್ನು ಸೂಚಿಸುವುದಲ್ಲದೇ, ನಾನು ಅದನ್ನು ಪರಿಪಾಲಿಸುತ್ತಿದ್ದೇನೋ ಇಲ್ಲವೋ ಎಂದು ಮೂರ್ನಾಲ್ಕು ಬಾರಿ ಕರೆ ಮಾಡಿ ವಿಚಾರಿಸಿಕೊಳ್ಳುವವರಿಗೇನೂ ಕಡಿಮೆ ಇಲ್ಲ.

ಜೀವ ಇದ್ದರೆ ತಾನೇ, ಜೀವನ ಎಂದು ನಾನೇ ಕೆಲವು ದಿನಗಳ ಹಿಂದೆ ಕೋವಿಡ್ ಕುರುತಾದ ಲೇಖನ ಬರೆದಿದ್ದೆ. ಈ ಕೋರಾನಾ ಮಹಾಮಾರಿಗೆ ಯಾವುದೇ ನಿರ್ಧಿಷ್ಟವಾದ ಔಷಧಿ ಇಲ್ಲದಿದ್ದ ಕಾರಣ PHC ನೀಡಿದ್ದ ಇಂಗ್ಲೀಷ್ ಔಷಧಿಗಳೊಡನೇ ಈಗಾಗಲೇ ಸಾಭೀತಾಗಿರುವ ಗಿರಿಧರ್ ಕಝೆಯವರ ಔಷದಿಗಳ ಜೊತೆ, ದಿನಕ್ಕೆರಡು ಬಾರಿ ಉಪ್ಪುನೀರಿನ ಮುಕ್ಕಳಿಸುವಿಕೆಯ ಜೊತೆ ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುವುದರ ಜೊತೆ ಅರಿಶಿನ ಕೊಂಬನ್ನು ಸುಟ್ಟು ಅದರ ಹೊಗೆಯನ್ನು ನೇರವಾಗಿ ಮೂಗು ಮತ್ತು ಗಂಟಲಿಗೆ ತೆಗೆದುಕೊಳ್ಳುವ ವಿಧಾನವನ್ನು ಅನುಸರಿಸಿದೆ. ಏನೇ ತಿಂದರೂ ಬಿಸಿಯಾಗಿ ತಿಂದಿದ್ದಲ್ಲದೇ, ದಿನಕ್ಕೂ ಹತ್ತಾರು ಲೋಟ ಬಿಸಿ ಬಿಸಿ ನೀರನ್ನು ಕುಡಿಯುವುದು ಉತ್ತಮ.

ಸುಮಾರು ಮೂವತ್ತು ವರ್ಷಗಳ ಹಿಂದೆ ನಮ್ಮ ಸಹೋದರಿಯರು ಮೈನೆರೆದಾಗ ಅವರನ್ನು ಮೆನೆಯ ಮೂಲೆಯೊಂದರಲ್ಲಿ ಒಂದು ವಾರದವರೆಗೆ ಕೂರಿಸಿ ಅವರಿಗೆ ಶಕ್ತಿ ಬರುವಂತಹ ಊಟೋಪಚಾರ ಮಾಡಿದಂತೆ ನನ್ನನ್ನೂ ಒಂದು ಕೊಠಡಿಯೊಂದರಲ್ಲಿ ಬಂಧಿ ಮಾಡಿ ಹೊತ್ತು ಹೊತ್ತಿಗೆ ಸರಿಯಾಗಿ ಬಿಸಿ ಬಿಸಿಯಾದ ಶುಚಿ ರುಚಿಯಾದ ತಿಂಡಿ, ತೀರ್ಥಗಳು ಮತ್ತು ಊಟೋಪಚಾರಗಳನ್ನು ಹಾಕುತ್ತಿದ್ದದ್ದು ನೆನಪಿಗೆ ಬಂದಿತ್ತು. ಕಳೆದ ಹತ್ತು ದಿನಗಳಿಂದ ನನ್ನ ಕೊಠಡಿಯ ಹೊಸಿಲನ್ನೂ ದಾಡದೇ home quarantine ಆಗಿದ್ದೇನೆ.

ಸುಮಾರು ಐದು ದಿನಗಳ ನಿರಂತರ ಚಿಕಿತ್ಸಾ ಕ್ರಮದ ನಂತರ ಬಿಟ್ಟು ಬರುತ್ತಿದ್ದ ಜ್ವರ ಹಂತ ಹಂತವಾಗಿ ಸಂಪೂರ್ಣ ನಿಂತು ಹೋಯಿತಾದರೂ, ಒಣ ಕೆಮ್ಮು ಮತ್ತು ಕಫ ಹಾಗೆಯೇ ಮುಂದುವರೆಯಿತು. ಪ್ರತೀ ದಿನವೂ ಕರೆಮಾಡಿ ಆರೋಗ್ಯವನ್ನು ವಿಚಾರಿಸುತ್ತಿದ್ದ ವೈದ್ಯರೊಡನೆ ಸಮಾಲೋಚನೆ ಮಾಡಿ ಅವರು ಹೊಸದಾಗಿ ಬರೆದುಕೊಟ್ಟ ಮಾತ್ರೆಯ ಮುಖಾಂತರ ಕೆಮ್ಮೂ ಕೂಡಾ ಕಡಿಮೆಯಾಗಿ ಇವತ್ತಿಗೆ ನನ್ನ ಹತ್ತು ದಿನಗಳ ಚಿಕಿತ್ಸೆ ಸಂಪೂರ್ಣವಾಗಿದೆ. ನಾಳೆ ಬೆಳಿಗ್ಗೆ ಪುನಃ PHCಗೆ ಪುನಃ ಮತ್ತೊಮ್ಮೆ ಪರೀಕ್ಷಿಸಿಕೊಂಡು ಬರಲು ವೈದ್ಯರು ಸೂಚಿಸಿದ್ದಾರೆ. ಭಗವಂತನ ಆಶೀರ್ವಾದ ಮತ್ತು ನಿಮ್ಮಂತಹ ಆತ್ಮೀಯರ ಶುಭಹಾರೈಕೆಗಳ ಫಲವಾಗಿ ಕೋವಿಡ್ +ve -ve ಆಗಿಬರಲಿ ಎಂದು ಆಶಿಸೋಣ.

ಇಲ್ಲಿ ಗಮನಿಸಿಸಬೇಕಾದ ಮತ್ತೊಂದು ಅಂಶವೆಂದರೆ ಕೊರೋನಾ ರೋಗಲಕ್ಷಣಗಳು ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ. ಬಹುತೇಕರಿಗೆ ವಾಸನೆ ಮತ್ತು ರುಚಿ ಇರುವುದಿಲ್ಲ. ಆದರೆ ನನಗೆ ಜ್ವರ, ನೆಗಡಿ ಮತ್ತು ಕೆಮ್ಮು ಇತ್ತೇ ಹೊರತು ರುಚಿ ಮತ್ತು ವಾಸನೆ ಮೊದಲನೇ ದಿನದಿಂದಲೂ ಚೆನ್ನಾಗಿಯೇ ಇತ್ತು. ಬಹುಶಃ ಜ್ವರ ಬಂದಿದ್ದರಿಂದಲೋ ಏನೋ ಏನೇ ತಿಂದರೂ ಕಹಿ ಕಹಿ ಎನಿಸುತ್ತಿದ್ದ ಕಾರಣ, ಹೇರಳೇಕಾಯಿ ಉಪ್ಪಿನಕಾಯಿ ತಿನ್ನುತ್ತಿದ್ದೆ.

ಮತ್ತೊಂದು ವಿಷಯವೆಂದರೆ ಕೋವಿಡ್ ಸೋಂಕಿತರಿಗೆ ಬಹಳ ಸುಸ್ತಾಗುವ ಕಾರಣ, ಎಷ್ಟು ಸಾಧ್ಯವೋ ಅಷ್ಟು ವಿಶ್ರಾಂತಿ ಪಡೆಯುವುದು ಅತ್ಯವಶ್ಯಕ. ನಾನಂತೂ ದಿನಕ್ಕೆ 12-15 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದೆ.

ಕೋರೋನಾ ಸಮಯದಲ್ಲಿ ನಮ್ಮೊಂದಿಗೆ Thermometer, Oximeter, inhalation kit ಬೆಚ್ಚಗಿನ ಹೊದಿಕೆ ಜೊತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಕಣ್ಣಿಗೆ ಕಾಣದ ವೈರಾಣು ಎಂದು ದಯವಿಟ್ಟು ಉಡಾಫೆ ಮಾಡದೇ, ಸುಮ್ಮನೇ ಎಲ್ಲೆಂದರೆಲ್ಲಿ ಅಂಡಲಯದೇ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಮನೆಯಿಂದ ಮಾಸ್ಕ್ ಸಮೇತರಾಗಿಯೇ ಓಡಾಡುತ್ತಾ, ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಜ್ವರ ತಲೇನೋವು ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ನಿರ್ಲಕ್ಷಿಸದೇ, ಎಲ್ಲಕ್ಕಿಂತಲೂ ಹೆಚ್ಚಾಗಿ ಸ್ವವೈದ್ಯಕೀಯ ಪದ್ದತಿಯನ್ನು ಮಾಡಿಕೊಳ್ಳದೇ, ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಅವರು ಹೇಳಿದಂತೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಕೋರೋನಾದಿಂದ ಮುಕ್ತಿ ಹೊಂದ ಬಹುದಾಗಿದೆ.

ಮತ್ತೆ ಎಲ್ಲರೂ ಮುಕ್ತವಾಗಿ ಪರಸ್ಪರ ಭೇಟಿಯಾಗುವ ಸಂದರ್ಭ ಬಂದೇ ಬರುತ್ತದೆ ಎನ್ನುವ ಆಶಾವಾದಿಗಳಾಗೋಣ

ಏನಂತೀರೀ?

ಜೀವವಿದ್ದಲ್ಲಿ ಮಾತ್ರವೇ ಜೀವನ

ಕಳೆದ ಒಂದು ವಾರದಲ್ಲಿ, ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾಸದಸ್ಯರು, ನಾಲ್ಕು ಬಾರಿ ಸಾಂಸದರಾಗಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದವರು ಮತ್ತು ಹಿರಿಯ ಶಾಸಕರಲ್ಲದೇ. ಹೆಸರಾಂತ ಗಾಯಕರರಾದ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡಿದ್ದೇವೆ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಚಿಂತಾಜನಕವಾಗಿದೆ. ಇವರೆಲ್ಲರೀ ಪರಿಸ್ಥಿತಿಯ ಹಿಂದೆ ಮಹಾಮಾರಿ ಕೂರೋನಾ ಕೈವಾಡವಿರುವುದು ಸ್ಪಷ್ಟವಾಗಿದೆ. ಸಚಿವರು, ಶಾಸಕರು, ಸಮಾಜದ ಗಣ್ಯವ್ಯಕ್ತಿಗಳಿಗೇ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲವೆಂದರೆ, ಇನ್ನು ಸಾಮಾನ್ಯ ಜನಗಳ ಪಾಡೇನು?

ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ವಹಿಸಿದ್ದರೂ, ಸಮಾಜದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತೀ ದಿನವೂ ಪತ್ರಿಕೆಗಳಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ನೋಡುವುದಕ್ಕೇ ಭಯವಾಗುತ್ತಿದೆ. ಸರ್ಕಾರ ಮತ್ತು ಸ್ಥಳೀಯ ನಗರ ಪಾಲಿಕೆಯವರು ಸಹಾ ಅತೀ ಹೆಚ್ಚಿನ ಕೋವಿಡ್ ಪರೀಕ್ಷಾಕೇಂದ್ರಗಳನ್ನು ಎಲ್ಲಾ ಕಡೆಯಲ್ಲಿಯೂ ಮುಂಜಾಗೃತಾ ಕ್ರಮವಹಿಸಿ ಆರಂಭಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಅದಲ್ಲದೇ ಎಲ್ಲಾ ಮೆಡಿಕಲ್ ಸ್ಟೋರ್ಗಳಲ್ಲಿಯೂ ಜ್ವರದ ಸಂಬಂಧಿತ ಮಾತ್ರೆಗಳನ್ನು ಖರೀದಿಸುವವರ ವಿವರಗಳನ್ನು ಪಡೆದು ಅವರೆಲ್ಲರಿಗೂ ತಮ್ಮ ಆಪ್ತಮಿತ್ರ ಸಹಾಯವಾಣಿಯ ಮುಖಾಂತರ ಕರೆ ಮಾಡಿ ಅವರ ಆರೋಗ್ಯದ ಸ್ಥಿತಿಗಳನ್ನು ವಿಚಾರಿಸಿ ಅವರಿಗೆ ಸೂಕ್ತ ಚಿಕಿತ್ಸೆಗಳನ್ನು ಕೊಡಿಸುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲದಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ಇವೆಲ್ಲರದ ಮಧ್ಯೆ ವಿಕ್ರಮ್ ಆಸ್ಪತ್ರೆಯ ಡಾ. ವೆಂಕಟ ಸುಬ್ಬರಾವ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿರುವ ಒಂದು ಪ್ರಸಂಗ ನಿಜಕ್ಕೂ ಆಘಾತಕಾರಿಯಾಗಿದೆ.

ನಗರದ ಒಂದು ಖ್ಯಾತ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗಳಿಸಿ ಸಹೋದ್ಯೋಗಿಗಳಾಗಿದ್ದ ಇಬ್ಬರು ಅಧ್ಯಾಪಕರುಗಳಲ್ಲಿ ಕೇವಲ ನಲವತ್ತೊಂದು ವರ್ಷಕ್ಕೇ ಅಧ್ಯಾಪಕ ವೃತ್ತಿಗೆ ತಿಲಾಂಜಲಿ ನೀಡಿ ಪೆಟ್ರೋಲ್ ಪಂಪ್ ವ್ಯವಹಾರ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊರೋನಾ Symptoms ಕಾಣಿಸಿಕೊಂಡ ನಂತರ, ಪರೀಕ್ಷೇ ಮಾಡಿಸಿಕೊಂಡು ಸೋಂಕು ಧೃಢ ಪಟ್ಟರೂ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯವುದರ ಬದಲು, ತಾವೇ ಒಂದು ತಮ್ಮ ಮನೆಯಲ್ಲಿಯೇ Self quarantine, ಆಗಿ ಬಿಟ್ಟು ಬಿಟ್ಟು ಜ್ವರ ಬಂದಾಗಲೆಲ್ಲ ಕೇವಲ Dolo 650 ತೆಗೆದುಕೊಳ್ಳಲಾರಂಬಿಸಿದ್ದಾರೆ. ಆದರೆ ಮಾತ್ರೆಯ ಪರಿಣಾಮಕಾರಿಯಾಗದೇ, ಐದಾರು ದಿನ ಕಳೆದ ನಂತರ ರೋಗ ಉಲ್ಬಣಿಸಿ ಸಾವಿಗೀಡಾಗಿದ್ದಾರೆ

ಅವರ ಸ್ನೇಹಿತರೇ ಆಗಿದ್ದ ಮತ್ತೊಬ್ಬ ಅಧ್ಯಾಪಕರಿಗೂ ಮತ್ತು ಅವರ ಮಡದಿಯವರಿಗೂ Covid ನ ರೋಗ ಲಕ್ಷಣಗಳು ಕಂಡು ಬಂದು, ಅವರ ಪರಮಾಪ್ತ ಸ್ನೇಹಿತರೇ, ತಂದುಕೊಂಡ ವಿಪತ್ತಿನ‌ ಬಗ್ಗೆ ಅರಿವಿದ್ದರೂ, ದಂಪತಿಗಳಿಗೆ Covid ಲಕ್ಷಣಗಳು ಕಾಣಿಸಿದ ನಂತರ ,ತಮ್ಮ ಇಬ್ಬರು ಗಂಡು ಮಕ್ಕಳನ್ನು ಪೋಷಕರ ಮನೆಯಲ್ಲಿ ಬಿಟ್ಟು ತಮ್ಮ ಪಾಡಿಗೆ ತಾವೇ home Quarantine ಮಾಡಿಕೊಂಡು ಮನೆಯಲ್ಲಿ ಉಳಿದು ಬಿಟ್ಟಿದ್ದಲ್ಲದೇ ತಮ್ಮ ವಿವೇಚನೆಗೆ ಅನುಗುಣವಾಗಿ ಒಂದಷ್ಟು symptomatic relief ಗೆ ಕೊಡುವ Paracetamol ,Cough syrup ತೆಗೆದುಕೊಂಡು ಸುಮ್ಮನಾಗಿದ್ದಾರೆ. ಆದರೆ ಯಾವಾಗ ರೋಗ ಉಲ್ಬಣವಾಗಿ ತೀವ್ರವಾಗಿ ಉಸಿರಾಟದ ಸಮಸ್ಯೆ ಕಾಣ ತೊಡಗಿದಾಗ, ಇಬ್ಬರೂ ನಗರದ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗುತ್ತಾರೆ. ಅವರ ಪತ್ನಿಯವರು ಈ ಮೊದಲೇ Bronchial Asthma ದಂತಹ Comorbidity ಸಮಸ್ಯೆ ಇದ್ದಿದ್ದರ ಪರಿಣಾಮವಾಗಿ I.C.U ನಲ್ಲಿ ಕೊಟ್ಟ ಚಿಕಿತ್ಸೆಯೂ ಕೂಡಾ ಫಲಕಾರಿಯಾಗದೆ, ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಾದಾಗ ಪಕ್ಕದ ಕೊಠಡಿಯಲ್ಲಿಯೇ ಅವರ ಪತಿರಾಯರು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಪತ್ನಿಯ ಅಂತ್ಯ ಸಂಸ್ಕಾರಕ್ಕೆ ಪತ್ನಿಯ ಶವವ ಒಂದು Ambulance ನಲ್ಲಿ ಮುಂದೆ ಹೋಗುತ್ತಿದ್ದರೆ, ಅದರ ಹಿಂದೆ ಮತ್ತೊಂದು Ambulanceನಲ್ಲಿ ಪತಿಯವರು ಹೋಗಿ, ಸಿನಿಮೀಯ ರೀತಿಯಲ್ಲಿ ಶವಸಂಸ್ಕಾರ ಮುಗಿದು ಹೋಗುತ್ತದೆ. ಮತ್ತೆ ಆಸ್ಪತ್ರೆಗೆ ಮರಳಿದ ಪತಿರಾಯರ ಆರೋಗ್ಯವೂ ಕ್ಷೀಣಿಸಿ, ಮೂರ್ನಾಲ್ಕು ದಿನಗಳ ನಂತರ ಅವರೂ ಮೃತಪಟ್ಟಿದ್ದಾರೆ.

ಇಲ್ಲಿ ಅತೀ ಸೂಕ್ಷ್ಮವಾಗಿ ಗಮನಿಸಬೇಕಾದಂತಹ ಅಂಶವೆಂದರೆ ಮೃತಪಟ್ಟವರೆಲ್ಲರೂ ವಿದ್ಯಾವಂತರನ್ನಿಸಿಕೊಂಡರೇ Masters and PhD, ಮಾಡಿಕೊಂಡಂತವರೇ ಇಷ್ಟು ಉದ್ಧಟತನ ಮತ್ತು ಮೂರ್ಖತನದಿಂದ ಸಾವನ್ನಪ್ಪುತ್ತಾರೆ ಎಂದರೆ ಇನ್ನು ಇನ್ನು ಅನಕ್ಷರಸ್ಥರು, ಬಡವರು ಮತು ಕೂಲೀ ಕಾರ್ಮಿಕರ ಬಗ್ಗೆ ಇನ್ನೇನು ಹೇಳಲು ಸಾಧ್ಯ? COVID ‌+ve ವರದಿ ಬಂದ ನಂತರ ವೈದ್ಯರುಗಳು ತಮ್ಮ ಅನುಭವ ಮತ್ತು ಕೆಲವು base line test ಗಳ ಆಧಾರದ ಮೇಲೆ, ಯಾರಿಗೆ Home Isolation ಮಾತ್ರ ಸಾಕು, ಯಾರಿಗೆ Hospitalization ಬೇಕು ಎನ್ನುವುದಕ್ಕೆ ಇರುವ Clear cut guide line ಗಳ ಆಧಾರದ ಮೇಲೆ ಚಿಕಿತ್ಸೆಗಳನ್ನು ನಿರ್ಧರಿಸುತ್ತಾರೆ. Home Isolation ಅಂದರೆ ಕೇವಲ ಮನೆಯಲ್ಲಿ‌ ಸುಮ್ಮನೆ ಇರಲು ವೈದ್ಯರು ಬಿಡುವುದಿಲ್ಲ. ರೋಗಿಗಳ test reports ಗಳ ಆಧಾರದ ಮೇಲೆ Fabiflu ಅನ್ನುವ Antiviral ಮತ್ತು Immuno booster vitamins ,ಗಳು ,ಒಂದು Antibiotic for secondary bacterial infection, and symptomatic relief and above all three times stringent monitoring of Vitals and Saturation ,ಇವೆಲ್ಲವನ್ನೂ advise ಮಾಡಿರುತ್ತಾರಲ್ಲದೇ, ಪ್ರತಿದಿನವೂ ಕರೆ ಮಾಡಿ ಅವರ ಸ್ಥಿತಿಗತಿಗಳನ್ನು ವಿಚಾರಿಸಿಕೊಳ್ಳುತ್ತಾ, any worsening of Infection ಇದೆಯಾ ಅಂತ ಖಾತ್ರಿ ಮಾಡಿಕೊಳ್ಳುತ್ತಾರೆ. ಪರಿಸ್ಥಿತಿ ಗಂಭೀರ ಎನಿಸಿದಲ್ಲಿ ಕೂಡಲೇ ಆಸ್ಪತ್ರೆಗೆ ಕರೆತಂದು ಅವರಿಗೆ ಸೂಕ್ತರೀತಿಯ ಚಿಕಿತ್ಸೆ ನೀಡುತ್ತಾರೆ. Home Isolation ನಲ್ಲಿದ್ದ ಎಷ್ಟೋ ಜನರಿಗೆ ಐದನೇ ಅಥವಾ ಆರನೇ ದಿನ ಸಮಸ್ಯೆಗಳು ಕಾಣಿಸಿ (Spikes of fever, Extreme degrees of fatigue or Breathlessness..) ಕೂಡಲೇ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.

ಕೂರೋನಾ ಬಗ್ಗೆ ಕಳೆದ ಆರು ತಿಂಗಳ ಹಿಂದೆ ಇದ್ದ ಆತಂಕ ಇತ್ತೀಚಿನ ದಿನಗಳಲ್ಲಿ ಇಲ್ಲವಾಗಿದೆ. ಇದಕ್ಕೆ ನಿರ್ಧಿಷ್ಟವಾದ ಔಷಧಿ ಇಲ್ಲದಿದ್ದರೂ ಅದಕ್ಕೆ ಪರಿಣಾಮಕಾರಿ ಔಷಧಿಗಳನ್ನು ಕಂಡು ಕೊಂಡಿರುವ ಪರಿಣಾಮ ಈಗ Covid +ಗಳು ಸಾವಿರಾರು ಸಂಖ್ಯೆಯಲ್ಲಿ ಗುಣಮುಖರಾಗುವ ಮೂಲಕ ಭರವಸೆಯನ್ನು ಮೂಡಿಸುತ್ತಿದ್ದಾರೆ. ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೇ ಮಾಡಿಸಿಕೊಳ್ಳಲು ಹೆದರಿಕೊಂಡು, ವೈದ್ಯರ ಬಳಿ ಸೂಕ್ತ ರೀತಿಯ ಚಿಕಿತ್ಸೆ ಪಡೆಯುವುದರ ಬದಲು, ಸುಮ್ಮನೆ ತಾವೇ ಮನೆಯಲ್ಲಿ ಜ್ವರಕ್ಕೆ Paracetamol ತೆಗೆದುಕೊಳ್ಳುತ್ತಾ‌ ಸಾವನ್ನಪ್ಪುತ್ತಿರುವುದು ನಿಜಕ್ಕೂ ದೌರ್ಭಾಗ್ಯಕರವೇ ಹೌದು. ಈ ರೀತಿಯ ಮೂರ್ಖತನದಿಂದ ತಮ್ಮನ್ನೇ ಆಶ್ರಯಿಸಿದ್ದ ಕುಟುಂಬದವರನ್ನು ಅನಾಥರನ್ನಾಗಿ ಮಾಡುವುದಲ್ಲದೇ, ಸಮಾಜದಲ್ಲಿಯೂ ಅನಾವಶ್ಯಕವಾದ ಭಯವನ್ನು ಮೂಡಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು.

Self quarantine ಸಮಸ್ಯೆಗಳು ಈ ರೀತಿಯಾದರೆ, ಇನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಅತ್ಯುತ್ತಮವಾದ ವೈದ್ಯರುಗಳಿಂದ ಚಿಕಿತ್ಸೆ ದೊರೆತರೂ ಪ್ರತೀ ದಿನ ಸಾವು ಸಂಭವಿಸುತ್ತಿವೆ ಎನ್ನುವುದೂ ಸತ್ಯ ಮತ್ತು ಅದನ್ನು ಅಲ್ಲಗಳಿಯಲು ಸಾಧ್ಯವಾಗದು. ಸದ್ಯಕ್ಕೆ ಈ ಮಹಾಮಾರಿಗೆ ನಿರ್ಧಿಷ್ಟವಾದ ಮದ್ದು ಇಲ್ಲದಿರುವುದೂ ಪರಿಸ್ಥಿತಿಯನ್ನು ಬಿಗಡಾಯಿಸುತ್ತಿದೆ ಎನ್ನುವುದು ನಂಬಲೇ ಬೇಕಾದ ಸತ್ಯವಾಗಿದೆ. ಹಾಗಾಗಿ ಯುದ್ಧಕಾಲೇ ಶಸ್ತ್ರಾಭ್ಯಾಸ ಎಂದು ಖಾಯಿಲೆ ತರಿಸಿಕೊಂಡು ವ್ಯಥೆ ಪಡುವುದರ ಬದಲು prevention is better than cure ಎನ್ನುವಂತೆ ಖಾಯಿಲೆಯಿಂದ ಆದಷ್ಟೂ ದೂರ ಇರುವುದು ಉತ್ತಮವಲ್ಲವೇ?

 • ಒಬ್ಬರಿಂದ ಒಬ್ಬರ ವಯಕ್ತಿಕ ಸಂಪರ್ಕದ ಕಾರಣದಿಂದಾಗಿ ಈ ರೋಗ ಹರಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿರುವುದರಿಂದ ಸಾಧ್ಯವಾದಷ್ಟೂ ಅನಾವಶ್ಯಕವಾಗಿ ಹೊರಗೆ ತಿರುಗಾಡದಿರುವುದರ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ.
 • ಅತ್ಯಗತ್ಯವಾಗಿ ಹೊರಗೆ ಹೋಗಲೇ ಬೇಕಾದ ಪರಿಸ್ಥಿತಿಯಲ್ಲಿ ಬಾಯಿ ಮತ್ತು ಮೂಗು ಪೂರ್ಣವಾಗಿ ಮುಚ್ಚಿಕೊಳ್ಳುವ ಹಾಗೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ.
 • ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಲು ಸಾಧ್ಯವಾದಷ್ಟೂ ಸಾರ್ವಜನಿಕ ವಾಹನಗಳನ್ನು ಬಳಸದೇ ವಯಕ್ತಿಕ ವಾಹನಗಳನ್ನೇ ಈ ಸಂದರ್ಭಗಳಲ್ಲಿ ಬಳಸುವುದು ಸೂಕ್ತ.
 • ಮದುವೆ, ಮುಂಜಿ, ನಾಮಕರಣ, ಶ್ರಾದ್ಧ ಇಲ್ಲವೇ ರಾಜಕೀಯ ಮತ್ತು ಧಾರ್ಮಿಕ ಸಭೆ ಸಮಾರಂಭಗಳಿಂದಲೇ ಈ ರೋಗ ಈಗಾಗಲೇ ಹರಡಿರುವುದು ಧೃಢ ಪಟ್ಟಿರುವ ಕಾರಣದಿಂದಾಗಿ ಇವುಗಳಿಂದ ಆದಷ್ಟೂ ದೂರವಿರುವುದೇ ಲೇಸು.
 • ಕೂರೋನಾ ವೈರಾಣು ಗಂಟಲಿನಲ್ಲಿಯೇ ಉಳಿಯುವುದರಿಂದ, ಕಾಲಕ ಕಾಲಕ್ಕೆ ಬಿಸೀ ನೀರು ಅಥವಾ ಬಿಸಿಯಾದ ಪದಾರ್ಥಗಳನ್ನು ಸೇವಿಸುವ ಮೂಲಕ ರೋಗಾಣುವನ್ನು ತಡೆಗಟ್ಟಬಹುದು ಎಂದು ಧೃಢ ಪಟ್ಟಿರುವ ಕಾರಣ ಸೇವಿಸುವ ಆಹಾರ ಬಿಸಿ ಬಿಸಿಯಾಗಿರಲಿ
 • ಈ ಸಾಂಕ್ರಾಮಿಕ ಕಾಲದಲ್ಲಿ ಸಾಧ್ಯವಾದಷ್ಟೂ ಹೊರಗಿನ ಆಹಾರವನ್ನು ತಿನ್ನದೇ ಮನೆಯಲ್ಲಿಯೇ ಶುಚಿ ರುಚಿಯಾಗಿ ಆಹಾರವನ್ನು ತಯಾರಿಸಿಕೊಂಡು ಸೇವಿಸಬಹುದಾಗಿದೆ.
 • ಪ್ರತೀ ದಿನ ನಿಯಮಿತ ವ್ಯಾಯಾಮಗಳನ್ನು ಮಾಡುವ ಮೂಲಕ ಕಷಾಯಗಳನ್ನು ಸೇವಿಸುವ ‌ಮೂಲಕ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕವೂ ರೋಗ ನಿರೋಧ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಬಹುದಾಗಿದೆ.

ಕರೋನ ಬಂದಿದೆ ಎಂದು ಆಸ್ಪತ್ರೆಗೆ ಹೋದರೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೆದರಿ ಮನೆಯಲ್ಲಿಯೇ ಕುಳಿತರೂ ಸಾವು ತಪ್ಪಿದ್ದಲ್ಲ. ಇತ್ತ ನರಿ ಅತ್ತ ಪುಲಿ ಎನ್ನುವ ಹಾಗಿದೆ ಮಧ್ಯಮ ವರ್ಗದ ಶ್ರೀಸಾಮಾನ್ಯರ ಬದುಕು. ಹಾಗಾಗಿ ಇಂತಹ ದುಬಾರಿ ಕಷ್ಟದ ಸಮಯದಲ್ಲಿ, ನಮ್ಮ ಜೀವ ನಮ್ಮ ಕೈಯಲ್ಲಿಯೇ ಇದೆ ಎಂಬುದನ್ನು ಮನಗಂಡು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ನಾವೇ ಹೊಣೆಗಾರರೇ ಹೊರತು ಯಾರನ್ನೂ ದೂಷಿಸಲಾಗದು ಮತ್ತು ದೂಷಿಸಬಾರದು ಕೂಡ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ. ಜೀವವಿದ್ದಲ್ಲಿ ಮಾತ್ರವೇ ಜೀವನ ಅಲ್ಲವೇ?

ಏನಂತೀರೀ?

ಧೈರ್ಯಂ  ಸರ್ವತ್ರ ಸಾಧನಂ

ಮುಖಪುಟದ ಮುಖಾಂತರವೇ ಪರಿಚಯವಾದ ಮೂಲತಃ ಮುಧೋಳದವರಾದರೂ ಸದ್ಯ ಕೊಪ್ಪಳದಲ್ಲಿರುವ ಶ್ರೀ ಶಿವಶರಣಪ್ಪ ಬಳಿಗಾರ್ ಅವರು ಕಳೆದ ಮೂರ್ನಾಲ್ಕು ವಾರಗಳಿಂದಲೂ ಸಾಮಾಜಿಕ ಜಾಲ ತಾಣಗಳಲ್ಲಿ ಅಷ್ಟೊಂದು ಕಾಣಸಿಗಲಿಲ್ಲ, ಎನೋ ಕೆಲಸ ಕಾರ್ಯದಲ್ಲಿ ನಿರತರಾಗಿ ಇರಬಹುದೇನೋ ಎಂದು ಕೊಂಡಿದ್ದರೆ ಇಂದು ಬೆಳಿಗ್ಗೆ ಅವರ ಮುಖಪುಟದ ಗೋಡೆಯಲ್ಲಿ ಅವರದ್ದೇ ಲೇಖನ ಓದಿ ಒಂದು ಕಡೆ ಮತ್ತೊಂದೆಡೆ ಸಂತೋಷವಾಯಿತು. ಅವರ ಬರೆದದ್ದನ್ನು ಹಾಗೆಯೇ ಇಲ್ಲಿ ಪ್ರಕಟಿಸುತ್ತಿದ್ದೇನೆ.

ಅವ್ವನಿಗೆ ಕಾಲುಸೆಪ್ಟೆಕ್ ಆದ ಕಾರಣ ಯಲಬುರ್ಗಾ ತಾಲ್ಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 4-5 ದಿನ ಚಿಕಿತ್ಸೆ ಗಾಗಿ ಉಳಿದಿದ್ದೆ. ಪ್ರತ್ಯೇಕ ಕೊಠಡಿ ಸುರಕ್ಷತೆ ಇತ್ತಾದರೂ, ಅಲ್ಲಿಂದ ಬಂದ ನಂತರ ನನಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತು.

ಪರೀಕ್ಷೆಗೆ ಕಾರು ತೆಗೆದುಕೊಂಡುಹೋಗಿದ್ದೆ. ಕೊರೊನಾ +ve ರಿಜಲ್ಟ್ ಕೇಳಿ ಒಂದು ಕ್ಷಣ ದಿಗ್ಮೂಢನಾದೆ. ಸಮೀಪದ ಗಿಡದ ಕೆಳಗೆ ಕುಳಿತೆ. ಕಾರು, ಹಣ, ಬಂಧು-ಮಿತ್ರರು ಎಲ್ಲರೂ ಇದ್ದಾರೆ. ಆದರೆ ಈಗ ಯಾರೂ ಇಲ್ಲ. ನಾನು ಒಬ್ಬಂಟಿ ಎಂದೆನಿಸಿತು.

ಕೋವಿಡ್ ಸೆಂಟರ್ ನ ವೈದ್ಯಕೀಯ ಸಲಹೆಗಾರರು ಬೇರೆ ತೊಂದರೆ ಇದ್ದರೆ ಇಲ್ಲಿಯೇ ಆ್ಯಡ್ಮಿಟ್ ಆಗಬಹುದು. ಇಲ್ಲವೇ ಮನೆಯಲ್ಲಿ ಅನುಕೂಲವಿದ್ದಲ್ಲಿ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು ಎಂದರು.

ಇಷ್ಟರಲ್ಲಾಗಲೇ ಮನೆಗೆ ಫೋನ್ ಮಾಡಿದ್ದೆ. ‌ಮಗಳು ನಕ್ಷತ್ರ ಮನೆಗೆ ಬರಬೇಕೆಂದು ಹಟ ಹಿಡಿದಳು. ಪ್ರತ್ಯೇಕ ಕೋಣೆ ಶೌಚಾಲಯ, ಜಳಕದ ರೂಮ್, ಲಭ್ಯವಿದ್ದರಿಂದ ಮನೆಯಲ್ಲಿಯೇ ಇದ್ದರಾಯಿತೆಂದು ಊರಿಗೆ ಬಂದೆ.

ಕೋವಿಡ್ ಮನೆಯ ಚಿಕಿತ್ಸೆ ಬಹಳ ಸರಳ. ವಿಟ್ಯಾಮಿನ್ ಸಿ ಮಾತ್ರೆ ಚೀಪಲು ,ಜಿಂಕ್ ಮಾತ್ರೆ ಜ್ವರಕ್ಕೆ ಪ್ಯಾರಾಸಿಟೆಮಲ್ ಮಾತ್ರೆ ಹಾಗೂ ಅಜಿತ್ರೋ ಮೈಸಿನ್ .

ಮೊದಲು ದಿನ ಯಾವುದೇ ಬದಲಾವಣೆವಾಗಲಿಲ್ಲ.

ಎರಡನೆಯ ದಿನ ತೀವ್ರವಾದ ಅತಿಸಾರ, ಆಮಶಂಕೆ. ಅದಕ್ಕೆ ಬೇರೆ ಗುಳಿಗೆ. ಹೆಚ್ಚಿನ ನೀರಿನ ಅಂಶ ಖಾಲಿಯಾದರೆ ಕಿಡ್ನಿಗಳು ಮೊದಲು ಹಾಳಾಗುತ್ತದೆ ಎಂದು ಎಚ್ಚರಿಸಿದ ಕಾರಣ, ಎಳೆನೀರು, ORS ನಿರಂತರವಾಗಿ ತೆಗೆದುಕೊಂಡ ಕಾರಣ ಮೂರೇ ದಿನಗಳಲ್ಲಿ ನಿಯಂತ್ರಣಕ್ಕೆ ಬಂತು.

ಇಷ್ಟರಲ್ಲಾಗಲೇ ಜ್ವರದಿಂದ ವಿಟ್ಯಾಮಿನ್ ಸಿ ಮಾತ್ರೆ ಚೀಪಿ ನಾಲಿಗೆ ತನ್ನ ಸತ್ವ ಕಳೆದುಕೊಂಡಿತ್ತು. ಏನೇ ತಿಂದರೂ ರುಚಿಸುತ್ತಿಲ್ಲ. 5 ದಿನ ಮುಗಿಯುವದರೊಳಗೆ ಜ್ವರ ಕಡಿಮೆಯಾದರೂ ತಲೆ ನೋವು ಕಡಿಮೆಯಾಗದ ಕಾರಣ ನಮ್ಮ ಮನೆಯ ಹಳೇ ಚಿಕಿತ್ಸೆಯಾದ, ನೀರನ್ಬು ಚೆನ್ನಾಗಿ ಕಾಯಿಸಿ ಅದಕ್ಕೆ ಜಂಡುಬಾಮ್ ಸೇರಿಸಿ, ತಲೆಯ ಮೇಲೆ ಕಂಬಳಿ ಹೊದ್ದು ಕೊಂಡು, ಬಿಸಿ ಬಿಸಿಯಾದ ಹಬೆಯನ್ನು 3-4 ಸಾರಿ ತೆಗೆದುಕೊಂಡೆ. ಬಂದ ತಲೆ ನೋವೆಲ್ಲಾ ಮಟ್ಯಾಷ್. ಇಂದಿಗೆ 11 ದಿನಗಳಾಗಿವೆ. ಇನ್ನು 3 ದಿನಗಳು ಮನೆಯೊಳಗಿದ್ದರೆ ಹೋಂ ಕ್ವಾರಂಟೈನ್ ಮುಗಿಯುವ ಕಾರಣ ಮತ್ತೆ ಹಿಂದಿನಂತೆ ಎಲ್ಲಾ ಕೆಲಸಕಾರ್ಯಗಳಲ್ಲಿ ತೊಡಗಿ ಕೊಳ್ಳಬಹುದು

ಪ್ರತೀ ದಿನ ಬೆಳಿಗ್ಗೆ ಎದ್ದು ಚುಮು ಚುಮು ಚಳಿಯಲ್ಲಿಯೂ 5 ಕಿ.ಮೀ ನಡೆಗೆ ಮಾಡಿದರೂ ಒಂದು ಕೆಜಿಯೂ ಇಳಿಯದಿದ್ದ ತೂಕ ಈಗ ಇದ್ದಕ್ಕಿದ್ದಂತೆಯೇ ಆರೇ ದಿನಗಳಲ್ಲಿ 5 ಕೆ. ಜಿ ಇಳಿದಿತ್ತು. ಈ ಕಾರಣದಿಂದಲಾದರೂ ತೂಕ ಇಳಿಕೆಯಾಗಿದ್ದು ಒಳ್ಳೆಯದೇ ಆಯುತೆಂದು ಅಂದುಕೊಂಡೆ.

ಕೊರೊನಾ ಬಂದಿರುವುದಕ್ಕೆ ಮೊದಲು ಆತಂಕವೆನಿಸಿದರೂ ನಂತರ ಅದನ್ನು ಎದುರಿಸುವದು ಅನಿವಾರ್ಯ ಹಾಗಾಗಿ ವೈದ್ಯರ ನೇತೃತ್ವದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಮತ್ತು ವಿಶ್ರಾಂತಿಯೇ ಮದ್ದು ಎಂಬುದು ಮನವರಿಕೆಯಾಗಿತ್ತು

ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಿರಾದರೇ, ಮನೆಯ ಸದಸ್ಯರಿಂದ ಅಂತರ ಕಾಪಾಡಿಕೊಳ್ಳುವದು ಒಳಿತು. ಪ್ರತ್ಯೇಕ ಕೋಣೆ, ಊಟದ ತಟ್ಟೆ, ಲೋಟ ಮತ್ತು ಸ್ವತಃ ಖುದ್ದಾಗಿ ಬಟ್ಟೆಗಳನ್ನು ಒಗೆದುಕೊಳ್ಳುವುದು ಉತ್ತಮ.

ಕೊನೆಯದಾಗಿ ತಾಯಿತಂದೆ ನಮಗೆ ಜನ್ಮ ನೀಡಿದರು ಈಗ ಎರಡನೇ ತಾಯಿಯಾಗಿ ನನಗೆ ನೋಡಿಕೊಂಡದ್ದು ನನ್ನ ಜೀವನ ಸಂಗಾತಿ.ಅವಳಿಗೆ ಋಣಿಯಾಗಿರಬೇಕು.

ಗೆಳೆಯ ಬಳಿಗಾರ್ ಅವರು ಕೋವಿಡ್ ಮಹಾಮಾರಿಗೆ ತುತ್ತಾಗಿದ್ದ ವಿಷಯ ಕೇಳಿ ಬೇಸರವಾದರೂ, ತಮ್ಮ ಧೈರ್ಯತನದಿಂದ ಮನೆಯಲ್ಲಿಯೇ ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾದದ್ದು ಮತ್ತು ಅವರ ಕಡೆಯ ಸಾಲು ಅಮ್ಮ ಮೊದಲ ಬಾರಿ ಜನ್ಮ ಕೊಟ್ಟರೇ ಎರಡನೆಯ ಬಾರಿ ಪುನರ್ಜನ್ಮವನ್ನು ಕೈಹಿಡಿದ ಮಡದಿ ಕೊಟ್ಟಳು ಎಂದು ಆಪ್ಯಾಯಮಾನವಾಗಿ ಹೇಳಿಕೊಂಡಿದ್ದು ಅವರ ಬಗ್ಗೆ ಇದ್ದ ಗೌರವವನ್ನು ಮತ್ತಷ್ಟೂ ಹೆಚ್ಚಿಸಿತು ಎಂದರೂ ತಪ್ಪಾಗಲಾರದು

ನಿಜ ಹೇಳ ಬೇಕೆಂದರೆ, ಪ್ರಪಂಚಾದ್ಯಂತ ಹರಡಿರುವ ಈ ಕೋವಿಡ್ ಮಹಾಮಾರಿಗೆ ಅಷ್ಟೇನು ಭಯ ಪಡುವ ಅಗತ್ಯವಿಲ್ಲ. ಹಾವಿ ಕಡಿದು, ಹಾವಿನ ವಿಷ ಏರಿ ಸಾಯುವುದಕ್ಕಿಂತಲೂ, ಹಾವು ಕಡಿದ ಭಯಕ್ಕೇ ಬಹಳಷ್ಟು ಮಂದಿ ಮರಣ ಹೊಂದುವಂತೆ, ಕರೋನಾ ವೈರಸ್ಸಿಗಿಂಗಲೂ, ಅದು ಬಂದಿರುವ ಭಯಕ್ಕೇ ಸಾಯುವವರೇ ಹೆಚ್ಚಾಗಿದ್ದಾರೆ.

ಕೆಲ ವಾರಗಳ ಹಿಂದೆ ನಮ್ಮ ಸಂಬಂಧೀಕರೊಬ್ಬರಿಗೆ ಅಚಾನಕ್ಕಾಗಿ ಜ್ವರ ಬಂದ ಕಾರಣ, ಯಾವುದಕ್ಕೂ ಇರಲೀ ಎಂದು ಕೋವಿಡ್ ಪರೀಕ್ಷೇ ಮಾಡಿಸಿಕೊಂಡರೇ, +ve result ಬರಬೇಕೇ? ಹತ್ತಿರದ ಸರ್ಕಾರೀ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅವರ ಸಲಹೆಯಂತೆಯೇ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಆರಂಭದಲ್ಲಿ ನಿರ್ಧರಿಸಿದರಾದರೂ ಒಂದೆರಡು ದಿನಗಳಲ್ಲಿಯೇ ಭಯಕ್ಕೇ ಜ್ವರ ಹೆಚ್ಚಾದ ಪರಿಣಾಮವಾಗಿ ವಿಧಿಯಿಲ್ಲದೇ, ಅವರ ಮನೆಯಿಂದ ಸುಮಾರು ಇಪ್ಪತ್ತು-ಮೂವತ್ತು ಕಿಮೀ. ದೂರದಲ್ಲಿರುವ ಕೋವಿಡ್ ಕೇಂದ್ರಕ್ಕೆ ಸರ್ಕಾರಿ ಆಂಬ್ಯುಲೆನ್ಸ್ ಮಟ ಮಟ ಮಧ್ಯಾಹ್ನ ಕರೆದು ಕೊಂಡು ಹೋಗಿ ಬಿಟ್ಟರು. ಹೋಗಿದ್ದು ಊಟದ ಸಮಯವಾದರೂ ಇವರಿನ್ನೂ ದಾಖಾಲು ಮಾಡಿಸಿಕೊಂಡಿಲ್ಲವಾದ್ದರಿಂದ ಇವರಿಗೆ ಊಟವೂ ಇಲ್ಲ ಏನೂ ಇಲ್ಲ. ಇನ್ನು ಇವರ ದಾಖಲಾತಿ ಮಾಡಿಸಿಕೊಳ್ಳಲು ಕೂರಿಸಿದ್ದ ಎದುರಲ್ಲಿಯೇ ಕೋವಿಡ್ ನಿಂದ ಮೃತ ಪಟ್ಟ ಸುಮಾರು ಹತ್ತಾರು ಹೆಣಗಳನ್ನು ಸಾಲು ಸಾಲಾಗಿ ಜೋಡಿಸಿಟ್ಟಿದ್ದನ್ನು ನೋಡಿಯೇ ಇವರ ಜಂಗಾ ಬಲವೇ ಅಡಗಿ ಹೋಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಮೊದಲ ದಿನವೇ ನೋಡಿದ ಹೆಣಗಳ ರಾಶಿ ಮತ್ತು ಸುತ್ತಮುತ್ತಲಿನ ಅಪರಿಚಿತರನ್ನು ನೋಡಿ ಮೊದಲ ಎರಡ್ಮೂರು ದಿನಗಳು ಬಂದಿದ್ದ ಜ್ವರ ಇಳಿಯಲಿಲ್ಲ ಮತ್ತು ನಾಲಿಗೆಯ ರುಚಿಯೂ ಹೋಗಿದ್ದ ಕಾರಣ ಎನನ್ನೂ ತಿನ್ನದೇ ದೇಹವೂ ಸೊರಗಿ ಹೋಗಿತ್ತು. ನಂತರದ ದಿನಗಳಲ್ಲಿ ಒಬ್ಬೊಬ್ಬರೇ ಪರಿಚಯವಾಗಿ, ಅವರೆಲ್ಲರ ಧೈರ್ಯ್ ಮತ್ತು ಸಾಂತ್ವನದ ಪರಿಣಾಮವಾಗಿ ಹಾಗೂ ಹೀಗು ಜ್ವರ ತಹಬದಿಗೆ ಬಂದು ಮುಂದಿನ ಎರಡು ವಾರಗಳಲ್ಲಿ ಎಲ್ಲವೂ ಸರಿಹೋಗಿ ಮನೆಗೆ ಹೋಗಬೇಕು ಎಂದರೆ, ಚಿಕಿತ್ಸೆಯ ಉಟ್ಟು ಖರ್ಚು 35,000/- ಆಗಿದ್ದು ಸರ್ಕಾರೀ ಆಸ್ಪತ್ರೆಯ ಕಡೆಯಿಂದ ಬಂದಿದ್ದ ಕಾರಣ ಸಬ್ಸಿಡಿ ಹೋಗಿ 7500/- ರೂಗಳನ್ನು ಕಟ್ಟಿ ಎಂದಾಗ ಹೃದಯ ಬಾಯಿಗೆ ಬಂದಿತ್ತು. ಕೇವಲ ಮೂರ್ನಾಲ್ಕು ಬಟ್ಟೆಗಳು ಮತ್ತು ಮೊಬೈಲ್ ತೆಗೆದುಕೊಂಡು ಹೋಗಿದ್ದವರಿಗೆ ಅಷ್ಟೊಂದು ಹಣ ಎಲ್ಲಿಂದ ಬರಬೇಕು. ದಿನಗೂಲಿಯಂತೆ ಅಡುಗೆ ಕೆಲಸ ಮಾಡುತ್ತಿದ್ದ ಅವರಿಗೆ ಕಳೆದ ಐದಾರು ತಿಂಗಳು ಯಾವದೇ ಕೆಲಸವಿಲ್ಲದಿದ್ದ ಕಾರಣ ಅಷ್ಟೊಂದು ಹಣ ಹೊಂಚಿಸುವುದು ತುಸು ಕಷ್ಟ ಕರವೇ ಆಗಿತ್ತು.

ಅದೃಷ್ಟವಶಾತ್ ಆ ಖಾಸಗೀ ಕೋವಿಡ್ ಸೆಂಟರಿನಲ್ಲಿ ಅವರ ಅಡುಗೆ ಕಾಂಟ್ರಾಕ್ಟರ್ ಅವರ ಪರಿಚಯಸ್ತರು ಇದ್ದ ಕಾರಣ ಅವರ ಮೂಲಕ 7500/- ರೂಗಳನ್ನು ಕಟ್ಟಿ, ಅಲ್ಲಿಂದ ಯಾವುದೇ ಆಟೋ ಅಥವಾ ಕ್ಯಾಬ್ ಬಾರದಿರುವ ಕಾರಣ ಒಂದು ಕಿಮೀ ದೂರ ನಡೆದುಕೊಂಡು ಬಂದು ಆಟೋವನ್ನು ಹಿಡಿದುಕೊಂಡು ಮನೆ ಸೇರಿ ಮೂರ್ನಾಲ್ಕು ವಾರಗಳು ಮನೆಯಲ್ಲಿಯೇ ವಿಶ್ರಾಂತಿ ಪಡೆದು ಈಗ ಸರಿ ಹೋಗುತ್ತಿದ್ದಾರೆ.

ಈ ಎರಡೂ ಪ್ರಸಂಗವನ್ನು ನೋಡಿದಾಗ ಗೆಳೆಯ ಬಳಿಗಾರ್ ಅವರು ತಮ್ಮ ಆತ್ಮ ವಿಶ್ವಾಸ ಮತ್ತು ಧೈರ್ಯದಿಂದ ಬಂದ ಸಮಸ್ಯೆಗೆ ಎದೆಗುಂದದೇ ಮನೆಯಲ್ಲಿಯೇ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಪಡೆದು ಗುಣ ಮುಖರಾಗಿರುವುದು ಅಭಿನಂದನರ್ಹ ಮತ್ತು ಅನುಕರಣೀಯವೇ ಸರಿ. ಅದಕ್ಕೇ ನಮ್ಮ ಹಿರಿಯರು ಹೇಳಿರುವುದು ಧೈರ್ಯಂ ಸರ್ವತ್ರ ಸಾಧನಂ ಅಲ್ವೇ ?

ಏನಂತೀರೀ?

ಆಲ್ ರೈಟ್ ಮುಂದಕ್ಕೆ ಹೋಗೋಣ

ಸುಮಾರು ದಿನಗಳಿಂದ ಕರೆ ಮಾಡದಿದ್ದ ನನ್ನ ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಸ್ನೇಹಿತ ನಿನ್ನೆ ರಾತ್ರಿ ಕರೆ ಮಾಡಿದ್ದ. ಸಾಧಾರಣವಾಗಿ ತಿಂಗಳಿಗೊಮ್ಮೆಯೋ ಇಲ್ಲವೇ ಎರಡು ತಿಂಗಳಿಗಳಿಗೆ ಒಮ್ಮೆ ಕರೆ ಮಾಡಿ ಗಂಟೆ ಗಟ್ಟಲೆಗಳ ಕಾಲ ಉಭಯ ಕುಶಲೋಪರಿಯನ್ನು ವಿಚಾರಿಸುವುದು ನಮ್ಮಿಬ್ಬರ ನಡುವಿನ ವಾಡಿಕೆ. ಇತ್ತೀಚೆಗೆ ಸುಮಾರು ಐದಾರು ತಿಂಗಳುಗಳಿಂದ ಆತ ಕರೆ ಮಾಡಿರಲಿಲ್ಲ. ಬಹುಶಃ ಕೆಲಸದ ಬಾಹುಳ್ಯದಿಂದಲೋ ಇಲ್ಲವೇ ಕೂರೋನಾ ಪರಿಸ್ಥಿತಿಯಿಂದಾಗಿ ಆತ ಕರೆ ಮಾಡದಿರಬಹುದು ಎಂದು ನಾನೂ ಕೂಡಾ ಸುಮ್ಮನಾಗಿದ್ದೆ.

ಯಥಾ ಪ್ರಕಾರ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ಮಕ್ಕಳ ವಿದ್ಯಾಭ್ಯಾಸ ಹೇಗಿದೆ ಎಂಬುದರಿಂದ ಆರಂಭವಾದ ನಮ್ಮಿಬ್ಬರ ಸಂಭಾಷಣೆ, ಕೆಲಸ ಹೇಗಿ ನಡೀತಾ ಇದೇ ಎಂಬಲ್ಲಿಗೆ ಬಂದಾಗ, ಎಲ್ಲಿಯ ಕೆಲಸ? ಕೆಲಸ ಕಳೆದುಕೊಂಡು ಮೂರು ತಿಂಗಳುಗಳಾಯಿತು. ಹೊಸಾ ಕೆಲಸದ ಹುಡುಕಾಟದಲ್ಲಿ ನಿರತನಾಗಿದ್ದೇನೆ. ವಿಶ್ವಾದ್ಯಂತ ಪರಿಸ್ಥಿತಿ ಸರಿ ಇರದ ಕಾರಣ ಹೊಸಾ ಕೆಲಸ ಸಿಗುವುದರಲ್ಲಿ ಸ್ವಲ್ಪ ತಡವಾಗಬಹುದಾದರೂ ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಆಶಾವಾದ ನನ್ನದು ಎಂದೆ. ವಿಷಯ ತಿಳಿದು ಬೇಸರಿಕೊಂಡ ಆತ, ಕೂದಲೇ ನನ್ನ ರೆಸ್ಯೂಂ ಕಳುಹಿಸಿಕೊಡು ನನ್ನ ಕೆಲವು ಭಾರತೀಯ ಸ್ನೇಹಿತರಿಗೆ ಕಳುಹಿಸಿ ನನ್ನ ಕಡೆಯಿಂದಲೂ ಪ್ರಯತ್ನಿಸುವ ಎಂದದ್ದಲ್ಲದೇ, ಯಾವುದೇ ರೀತಿಯ ಸಹಾಯ ಬೇಕಿದ್ದರೂ ಸಂಕೋಚವಿಲ್ಲದೇ ನನ್ನ ಬಳಿ ಕೇಳು ಎಂದು ತನ್ನ ದೊಡ್ಡತನವನ್ನು ತೋರಿದ. ಆತನ ಹೃದಯವೈಶಾಲ್ಯತೆಗೆ ಧನ್ಯವಾದಗಳನ್ನು ಅರ್ಪಿಸಿ, ಇನ್ನೂ ಮೂರ್ನಾಲ್ಕು ತಿಂಗಳುಗಳ ಕಾಲ ನಿರ್ವಹಿಸುವುದಕ್ಕೆ ತೊಂದರೆ ಇಲ್ಲ. ಅಷ್ಟರೊಳಗೆ ಕೆಲಸ ಸಿಗಲಿ ಎಂದು ಹಾರೈಸು ಎಂದು ಕೇಳಿಕೊಂಡೆ.

ನಂತರ ಯಥಾ ಪ್ರಕಾರ ಕೋವಿಡ್ ಪರಿಸ್ಥಿತಿ ಹೇಗಿದೆ ಎಂಬ ಪ್ರಶ್ನೆ ಅವನಿಂದ ತೂರಿಬಂತು. ಅಯ್ಯೋ ಅದನ್ನೇಕೆ ಕೇಳುತ್ತೀಯೇ? ಪ್ರತೀ ದಿನ 1000-2000 ಕ್ಕೂ ಹೆಚ್ಚಿನ ಜನರಿಗೆ ಕೋವಿಡ್+ ಆಗ್ತಾ ಇದೆ ಪ್ರತೀದಿನ 15-20 ಜನರು ಕೋವಿಡ್ ನಿಂದಾಗಿ ಸಾಯುತ್ತಿದ್ದಾರೆ. ಹಾಗಾಗಿ ಮತ್ತೆ ಇನ್ನೊಂದು ಸುತ್ತಿನ ಲಾಕ್ ಡೌನ್ ಆಗಿದೆ. ಸುಮಾರು ಮೂರ್ನಾಲ್ಕು ವಾರಗಳಿಂದ ಮನೆಯಿಂದಾಚೆಯೇ ಬಂದಿಲ್ಲ ಪರಿಸ್ಥಿತಿ ಗಂಭಿರವಾಗಿದೆ ಎಂದೆ.

nj

ಅರೇ ಕೇವಲ 2000-3000 ಕೋವಿಡ್+ ಮತ್ತು 15-20 ಜನರು ಸಾಯುತ್ತಿರುವುದಕ್ಕೇ ಅಷ್ಟೋಂದು ಭಯವೇಕೆ? ಇಲ್ಲಿ ಅದು ಸರ್ವೇ ಸಾಧಾರಣ. ಪ್ರತೀದಿನ ಸಾವಿರಾರು ಮಂದಿ ಇಲ್ಲಿ ಸಾಯುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಅವರವರ ಮುನ್ನೆಚ್ಚರಿಕೆಯ ಕ್ರಮದಲ್ಲಿ ಇರಬೇಕೆಂದು ತಿಳಿಸಿದೆ ಮತ್ತು ಸಾಧ್ಯವಾದಷ್ಟೂ ಜನರು ಮನೆಯಿಂದ ಹೊರಬರದೇ, ಸಾಮಾಜಿಕ ಅಂತರವನ್ನು ಕಾಪಾಡಿ ಎಂಬ ಎಚ್ಚರಿಕೆಯ ಹೊರತಾಗಿ ಉಳಿದೆಲ್ಲವೂ ಸಾಧಾರಣವಾಗಿಯೇ ಇದೆ. ಲಾಕ್ ಡೌನ್ ಅಥವಾ ಸೀಲ್ ಡೌನ್ ಇಲ್ಲ ಎಂದು ತಿಳಿಸಿ, ತನ್ನ ಮಾತು ಮುಂದುವರೆಸಿ, ಅದರೆ ಇಲ್ಲಿಯ ಜನರಿಗೆ ಸ್ವಲ್ಪ ಸಾಮಾಜಿಕ ಜವಾಬ್ಧಾರಿ ಹೆಚ್ಚಾಗಿಯೇ ಇದೆ. ಹಾಗಾಗಿ ಸರ್ಕಾರ ಹೇಳಿದ್ದನ್ನು ಕೇಳುವ ಮನಸ್ಥಿತಿ ಹೊಂದಿದ್ದಾರೆ. ಅವೆಲ್ಲವನ್ನೂ ಮೀರಿ ಹೋಗುವ ಸಾಕಷ್ಟು ಮಂದಿಗಳು ಇರುವ ಕಾರಣದಿಂದಾಗಿಯೇ ಇಲ್ಲಿಯೂ ಸಹಾ ಕೂರೋನಾ ಸಾಂಕ್ರಾಮಿಕ ರೋಗ ಮಾರಕವಾಗಿದೆ ಅದಕ್ಕೆ ಅವರು ಸರ್ಕಾರವನ್ನು ದೂಷಿಸದೇ ತಮ್ಮ ಪಾಡಿಗೆ ತಾವು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ.

ಅದರೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಅದಕ್ಕಿಂತಲೂ ವಿಭಿನ್ನ. ಅಮೇರಿಕಾಗಿಂತಲೂ ಐದಾರು ಪಟ್ಟು ಹೆಚ್ಚಿನ ಜನಸಂಖ್ಯೆ ಇರುವ ಮತ್ತು ಕಡಿಮೆ ಸಾಮಾಜಿಕ ಕಳಕಳಿ ಮತ್ತು ಜವಾಬ್ಧಾರಿಯನ್ನು ಹೊಂದಿರುವ ನಮ್ಮಲ್ಲಿ ದಿನೇ ದಿನೇ ಅಲ್ಲಿಯಷ್ಟಿಲ್ಲದಿದ್ದರೂ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರವೂ ಎಷ್ಟೆಲ್ಲಾ ಪ್ರಯತ್ನ ಪಟ್ಟರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಲಾಕ್‌ಡೌನ್ ಇದಕ್ಕೆ ಪರಿಣಾಮಕಾರಿ ಎಂದರೂ ಅದರಿಂದ ಹಲವಾರು ಆರ್ಥಿಕ ಸಮಸ್ಯೆಗಳು ಎದುರಾಯಿತು. ಅಂತರಾಜ್ಯ ಗಡಿಗಳನ್ನು ಮುಚ್ಚಿದ್ದು, ಅಂಗಡಿ ಮುಗ್ಗಟ್ಟುಗಳನ್ನು, ಬೀದಿ ಬದಿಯ ವ್ಯಾಪಾರ ನಿಷೇಧಿಸಿದ್ದು, ಸಾಧ್ಯವಾದಷ್ಟು ಎಲ್ಲರನ್ನೂ ಮನೆಗಳಿಂದಲೇ ಕೆಲಸ ಮಾಡಿ ಎಂದದ್ದನ್ನೇ ನೆಪ ಮಾಡಿಕೊಂಡ ಕೆಲವು ವಿರೋಧ ಪಕ್ಷಗಳ ನಾಯಕರುಗಳು ರಂಪರಾಮಾಯಣಕ್ಕೆ ಬಗ್ಗಿದ ಸರ್ಕಾರ ಯಾವಾಗ ನೆರೆರಾಜ್ಯದ ಗಡಿಗಳನ್ನು ಮುಕ್ತ ಮಾಡಿ, ಲಾಕ್ ಡೌನ್ ನಿರ್ಬಂಧವನ್ನು ಸಡಿಲಗೊಳಿಸಿ, ರಸ್ತೇ ಬದಿಯ ವ್ಯಾಪಾರಗಳಿಗೆ ಅವಕಾಶ ನೀಡಿತೋ ಅಲ್ಲಿಂದ ಶುರುವಾಯಿತು ನೋಡಿ ಕೋರೋನಾ ಅಬ್ಬರ.

ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದಾಗ ಅವರ ಕ್ರೆಡಿಟನ್ನು ಪಡೆಯಲು ತುದಿಕಾಲಲ್ಲಿ ನಿಂತವರೆಲ್ಲರೂ ಯಾವಾಗ ನಿಯಂತ್ರಣ ಕೈ ಮೀರುತ್ತಿದೆ ಎಂಬುದು ಅರಿವಾಗುತ್ತಿದ್ದಂತೆಯೇ ಸದ್ದಿಲ್ಲದೇ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ, ಕುರಿ ಹಳ್ಳಕ್ಕೆ ಬಿದ್ದರೆ, ಆಳಿಗೊಂದು ಕಲ್ಲು ಎಂದು ಪರಸ್ಪರ ದೂಷಣೆ ಮಾಡತೊಡಗಿದ್ದಾರೆ. ಇದೇ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ಕೆಲವು ಪಟ್ಟಭದ್ರ ಹಿತಾಸಕ್ತಿಯ ಮತ್ತು ಒಂದು ಚೂರೂ ಮಾನವೀಯತೆ ಇಲ್ಲದ ಅಧಿಕಾರಿಗಳು ಕೊರೊನಾ ಉಪಕರಣಗಳ ಖರೀದಿಯಲ್ಲಿಯೂ ಸಹಾ ಭಾರೀ ಭ್ರಷ್ಟಾಚಾರವನ್ನು ಮಾಡುತ್ತಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪರಿಸ್ಥಿತಿ ಗಂಭೀರವಾಗಿರುವ ಒಂದು ರಾಜಕೀಯವನ್ನು ಬದಿಗಿಟ್ಟು ಒಂದು ಜವಾಭ್ದಾರಿ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ಜೊತೆ ಕೈ ಜೋಡಿಸಿ ಪರಿಸ್ಥಿತಿಯನ್ನು ತಹಬದಿಗೆ ತರುವಂತಹ ವಿರೋಧ ಪಕ್ಷಗಳು ದೇಶದಲ್ಲಿ ಎಂದೋ ಮಾಯವಾಗಿ ಬಿಟ್ಟಿವೆ. ಎಲ್ಲದರಲ್ಲೂ ರಾಜಕೀಯ. ಯಾವುದೇ ಪ್ರಕರಣಗಳಾದರೂ ಅದರಲ್ಲಿ ತನ್ನ ರಾಜಕೀಯ ಬೇಳೆಯನ್ನು ಎಷ್ಟು ಮತ್ತು ಹೇಗೆ ಬೇಯಿಸಿಕೊಳ್ಳಬಹುದು? ಜನರನ್ನು ಹೇಗೆ ಸರ್ಕಾರದ ವಿರುದ್ಧ ಎತ್ತಿಕಟ್ಟಿ ಜನಾಂಧೋಲನ ಮಾಡಬಹುದು ಎಂಬುದನ್ನೇ ಯೋಚಿಸುತ್ತಿರುವ ರಾಜಕೀಯ ಧುರೀಣರೇ ಹೆಚ್ಚಾಗಿರುವುದು ದೇಶಕ್ಕೆ ನಿಜಕ್ಕೂ ಮಾರಕವಾಗಿದೆ.

online_classes

ಜನರ ಉದ್ಧಾರಕ್ಕಾಗಿ ಇರಬೇಕಿದ್ದ ಶಿಕ್ಷಣ ಮತ್ತು ಆಸ್ಪತ್ರೆ ಈ ಎರಡೂ ಕ್ಷೇತ್ರಗಳು ತಮ್ಮ ಜವಾಬ್ಧಾರಿಯನ್ನು ಮರೆತು ವ್ಯಾಪಾರೀಕರಣಗೊಂಡು ಪರಿಸ್ಥಿತಿಯನ್ನು ದುರ್ಲಾಭ ಪಡೆದುಕೊಂದು ಫೀ ಆಸೆಗೆಂದು ನರ್ಸರೀ ಶಾಲೆಯಿಂದ ಕಾಲೇಜಿನವರೆಗೂ Online ಶಿಕ್ಷಣ ಎಂದು ಮಕ್ಕಳನ್ನೂ ಮತ್ತು ಪೋಷಕರ ರಕ್ತವನ್ನು ಹೀರತೊಡಗಿದರೇ, ಇನ್ನು ಖಾಸಗೀ ಆಸ್ಪತ್ರೆಗಳಲ್ಲಿ ಬೆಡ್‌ ಇಲ್ಲ ಅದು ಇಲ್ಲ ಇದು ಇಲ್ಲಾ ಎಂದು ನೆಪವೊಡ್ದಿ ಎಲ್ಲದ್ದಕ್ಕೂ ದುಬಾರಿ ದರ ವಿಧಿಸುತ್ತಾ ಕೂರೋನಾ ವೈರಾಣುವಿನಿಂದ ಸಾಯುವುದಕ್ಕಿಂತಲೂ ಈವರ ಬಿಲ್ ನೋಡಿಯೇ ಸಾಯತೊಡಗಿರುವುದು ಸಹಾ ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಹಾಗೂ ಜನಾಕ್ರೋಶ ರೂಪಿತವಾಗಲು ಕಾರಣವಾಗುತ್ತಿದೆ.

ನಮ್ಮ ದೇಶದಲ್ಲಿ ತಪ್ಪು ಕಂಡು ಹಿಡಿಯುವರಿಗೇನೂ ಕಡಿಮೆ ಇಲ್ಲಾ. ಅದರೆ ಆ ತಪ್ಪನ್ನು ಹೇಗೆ ಸರಿಪಡಿಸಬೇಕು ಎಂದು ಹೇಳುವವರು ಯಾರೂ ಇಲ್ಲಾ. ಇಂದು ವಿರೋಧ ಪಕ್ಷದಲ್ಲಿರುವವರು ಒಂದು ಕಾಲದಲ್ಲಿ ಆಡಳಿತದಲ್ಲಿ ಇದ್ದವರೇ, ಅವರು ಅಂದಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯಾವಾಗದ ಕಾರಣಕ್ಕೇ ಇಂದು ಅವರು ವಿರೋಧ ಪಕ್ಷದಲ್ಲಿ ಇದ್ದಾರೆ ಎನ್ನುವುದನ್ನು ಮರೆಯದಿರುವುದು ಒಳೀತು. ಅದೇ ರೀತಿ ಒಂದು ಕಾಲಕ್ಕೆ ವಿರೋಧ ಪಕ್ಷದಲ್ಲಿದ್ದವರೇ ಇಂದು ಆಡಳಿತ ಪಕ್ಷದಲ್ಲಿದ್ದು ಇತರ ತಪ್ಪು ತೋರಿಸುವುದು ಸುಲಭ. ಅದರೆ ಅದೇ ತಪ್ಪನ್ನು ಸರಿಪಡಿಸುವುದು ಎಷ್ಟು ಕಷ್ಟ ಎಂಬುದು ಅವರಿಗೆ ಈಗ ಅರಿವಾಗುತ್ತಿರಬಹುದು.

ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಮಾಡಿದ ತಪ್ಪನ್ನು ಅವರೇ ಅನುಭವಿಸಬೇಕು ಎಂಬ ಹಗೆಯನ್ನು ಸಾಧಿಸುವವರು ಸಹಾ ಅಷ್ಟೇ ತಪ್ಪಿತಸ್ಥರಾಗುತ್ತಾರೆ. ಹಾಗಾಗಿ ಅವರ ತಪ್ಪನ್ನು ಸಾರ್ವಜನಿಕವಾಗಿ ಅವಮಾನಕರವಾಗಿ ಮತ್ತು ಅಸಹ್ಯಕರವಾಗಿ ಎತ್ತಿ ತೋರಿಸಿದೇ, ರಾಜಕಾರಣ ಮಾಡದೇ, ದೇಶದ ಹಿತದೃಷ್ಟಿಯಿಂದ ಸಮಸ್ಯೆಯನ್ನು ಬಗೆ ಹರಿಸುವತ್ತ ಚಿತ್ತ ಹರಿಸುತ್ತಾ ವಿಶಾಲ ಹೃದಯವಂತರಾಗ ಬೇಕಲ್ಲವೇ?

ಅದೇ ರೀತಿ ಕ್ಷಮೆ ಎನ್ನುವುದು ಮನುಷ್ಯರಲ್ಲಿರಬೇಕಾದ ಒಂದು ಪ್ರಮುಖ ಲಕ್ಷಣ. ತಮ್ಮ ಅಹಂ ಬದಿಗಿಟ್ಟು ಮಾಡಿದ ತಪ್ಪಿಗೆ ಕ್ಷಮೆ ಕೇಳುವುದೂ ಸಹಾ ದೊಡ್ಡ ಗುಣವೇ. ಇಲ್ಲಿ ಕ್ಷಮೆ ಕೇಳಿದಾಕ್ಷಣ ಆತ ಸಣ್ಣವನಾಗುವುದಿಲ್ಲ. ಬದಲಾಗಿ ಕ್ಷಮೆಯಾಚಿಸಿ, ಹಳೆಯದ್ದನ್ನೆಲ್ಲಾ ಮರೆತು ಮತ್ತೆ ಹೊಸ ಹುಮ್ಮಸ್ಸಿನಂದ ಸಮಸ್ಯೆಯನ್ನು ಬಗೆಹರಿಸುವ ವಿಶಾಲ ಹೃದಯದ ಮನಸ್ಥಿತಿ ಬರುತ್ತದೆ

ಇಡೀ ವಿಶ್ವಕ್ಕೇ ಕೂರೋನಾ ಮಹಾ ಮಾರಿ ಆಕ್ರಮಿಸಿಕೊಂಡಾಗ ಸರ್ಕಾರವು, ಪರಿ ಪರಿಯಾಗಿ ಗಿಣಿಗೆ ಹೇಳುವ ಹಾಗೆ ನಿಮ್ಮ ಎಚ್ಚರದಲ್ಲಿ ನೀವು ಇರಿ. ಹೊರಗೆಲ್ಲೂ ಬರಬೇಡಿ, ಸಾಮಾಜಿಕ ಅಂತವನ್ನು ಕಾಪಾಡಿ ಎಂದು ಕೇಳಿಕೊಂಡರೂ, ನಮಗೆ ನಮ್ಮ ಧರ್ಮವೇ ಮುಖ್ಯ, ನಮ್ಮ ಸುತ್ತಾಟವೇ ಮುಖ್ಯ ಎಂದು ಅಂಡೆಲೆಯುತ್ತಾ ಇಂದು ಕೂರೋನಾ ಸೋಕು ತಗುಲಿದ ಕೂಡಲೇ ಅದು ಸರ್ಕಾರದ ಬೇಜವಾಬ್ದಾರಿತನ ಎಂದು ಹೇಳುವುದು ಮೂರ್ಖತನವಲ್ಲದೇ ಮತ್ತೇನು? ಎಲ್ಲೂ ಹೋಗದೇ ಮನೆಯಲ್ಲಿಯೇ ಕುಳಿತವರಿಗೆ ಕೂರೋನ ಬಂದ ಒಂದೇ ಒಂದು ಉದಾಹರಣೆ ಎಲ್ಲಿಯೂ ಇಲ್ಲವೇ ಇಲ್ಲ ಅಲ್ಲವೇ?

covid2

ನಿಜ ಹೇಳಬೇಕೆಂದರೆ, ಕೂರೋನಾ ವಿಷಯದಲ್ಲಿ ದೇಶಾದ್ಯಂತ ಇರುವ ಯಾವುದೇ ಪಕ್ಷಗಳ ರಾಜ್ಯ ಸರ್ಕಾರಗಳಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಸುಮ್ಮನೆ ಕೈ ಕಟ್ಟಿ ಕುಳಿತಿಲ್ಲ. ಎಲ್ಲರೂ ತಮ್ಮ ಕೈ ಮೀರಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ಕಾರದ ಎಲ್ಲಾ ಎಚ್ಚರಿಕೆಯನ್ನೂ ಧಿಕ್ಕರಿಸಿ ಕೂರೋನಾ ಹತ್ತಿಸಿಕೊಂಡು ಈಗ ಅವರು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು, ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಖಂಡಿತವಾಗಿಯೂ ಸರಿಕಾಣದು. ಈ ರೀತಿಯ ಅನಗತ್ಯ ಪ್ರತಿಭಟನೆಗಳಿಂದ ಕೂರೋನಾ ಹೋಗಲಾಡಿಸಲು ಸಾಧ್ಯವಾಗದು ಮತ್ತು ಇಂತಹ ನಕಾರಾತ್ಮಕ ಹೋರಾಟಗಳು ನಿಷ್ಟೆಯಿಂದ ಕೆಲಸ ಮಾಡುತ್ತಿರುವ ಕೆಲವೇ ಕೆಲವು ಮಂತ್ರಿಗಳು ಮತ್ತು ಅಧಿಕಾರಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆಯಷ್ಟೇ.

covid1

ಕೂರೋನಾದಿಂದ ಸತ್ತಿರುವ ಸಂಖ್ಯೆಗಿಂತ ಆರೋಗ್ಯವಾಗಿ ಮನೆಗೆ ಮರಳಿರುವ ಸಂಖ್ಯೆಯೇ ಹೆಚ್ಚಾಗಿರುವಾಗ ಅಂತಹ ಧನಾತ್ಮಕ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಜನರಿಗೆ ತೋರಿಸಿ, ಕೂರೋನಾ ಬಗ್ಗೆ ಜನರಲ್ಲಿರುವ ಭಯ ಮತ್ತು ಮೌಢ್ಯವನ್ನು ಹೋಗಲಾಡಿಸುವ ಪ್ರಯತ್ನವನ್ನು ಎಲ್ಲರೂ ಮಾಡಿದಲ್ಲಿ ಈ ಸಾಂಕ್ರಾಮಿಕ ಭಯದಿಂದ ಮುಕ್ತಿ ಹೊಂದಬಹುದು.

ಇನ್ನು ಒಬ್ಬ ಜವಾಬ್ಧಾರಿ ನಾಗರೀಕನಾಗಿ, ಮನೆಯಲ್ಲಿಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಷಾಯಗಳನ್ನು ಸೇವಿಸುತ್ತಾ, ಧೃತಿಗೆಡದೇ, ಧೈರ್ಯದಿಂದ ಬಂದದ್ದು ಬರಲಿ ಗೋವಿಂದನ ದಯೆ ನಮಗಿರಲಿ ಎಂದು ಭಗವಂತನ ನೆನೆಯುತ್ತಾ ನೆಮ್ಮದಿಯ ಜೀವನ ನಡೆಸೋಣ.

ಜೀವ ನಮ್ಮದು ಹಾಗಾಗಿ ನಮ್ಮ ಹುಷಾರಿನಲ್ಲಿ ನಾವಿರಬೇಕು ಹೊರತೂ, ಎಲ್ಲದ್ದಕ್ಕೂ ಯಾವುದೇ ಸರ್ಕಾರವನ್ನು ದೂಷಿಸಲಾಗದು ಮತ್ತು ದೂಷಿಸಲೂಬಾರದು. ಹೋಗಿರುವುದು ಕೆಲಸ ಮಾತ್ರ ಜೀವ ಅಥವಾ ಜೀವನವಲ್ಲ. ಜೀವವಿದ್ದಲ್ಲಿ ಇಂತಹ ನೂರಾರು ಕೆಲಸವನ್ನು ಗಿಟ್ಟಿಸಿಕೊಂಡು ಮತ್ತೆ ನೆಮ್ಮದಿಯ ಜೀವನ ನಡೆಸಬಲ್ಲೆವು ಅಲ್ಲವೇ? ಅದಕ್ಕೇ ಹೇಳಿದ್ದು ಆಲ್ ರೈಟ್ ಮುಂದಕ್ಕೆ ಹೋಗೋಣ ಅಂತಾ.

ಏನಂತೀರೀ?

kamraj discussion, US it’s common they go for insurance

rahul ghandhi tweet

rajastan incident