ಕ್ರಾಂತಿಕಾರಿ ಖುದಿರಾಮ್ ಬೋಸ್

ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ. ಇಂತಹ ಶ್ರೇಷ್ಠ ನಾಡಿನಲ್ಲಿ ಜನಿಸಿದ್ದಕ್ಕಾಗಿ ನಿಜಕ್ಕೂ ಹೆಮ್ಮೆ ಪಡಬೇಕು. ಇಲ್ಲಿ ಪ್ರತೀ ದಿನವೂ ಒಂದು ಹಬ್ಬ ಹರಿದಿನವಿರುತ್ತದೆ ಇಲ್ಲವೇ, ದೇಶದ ಸ್ವಾತ್ರಂತ್ರ್ಯಕ್ಕಾಗಿಯೋ ಇಲ್ಲವೇ, ಧರ್ಮದ ಉಳಿವಿಗಾಗಿ ತಮ್ಮನ್ನೇ ತಾವು ಬಲಿದಾನ ಮಾಡಿಕೊಂಡವ ವೀರ ಮಾಹಾನ್ ಪುರುಷರ ಜನ್ಮದಿನವಾಗಿರುತ್ತದೆ ಇಲ್ಲವೇ ತ್ಯಾಗದ ದಿನವಾಗಿರುತ್ತದೆ. ಇಂದಿನ ದಿನಾಂಕ ಡಿಸೆಂಬರ್ 3. ಸುಮಾರು 133 ವರ್ಷಗಳ ಹಿಂದೆ, ತನ್ನ 18 ನೇ ವಯಸ್ಸಿನ 8ನೇ ತಿಂಗಳ 8ನೇ ದಿನದಂದು ಗಲ್ಲಿಗೇರಿಸಲ್ಪಟ್ಟ ಕ್ರಾಂತಿಕಾರಿ ಖುದಿರಾಮ್ ಭೋಸ್ಜನ್ಮದಿನವಾಗಿದ್ದು ಭಾರತೀಯರಿಗೆ ಅತ್ಯಂತ ಪವಿತ್ರ ದಿನವಾಗಿದೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ದೇಶಪ್ರೆಮಿಗಳಲ್ಲಿ ಅತ್ಯಂತ ಕಿರಿಯ ವಯಸ್ಸಿಗ ಎಂಬ ಹಿರಿಮೆಗೆ ಪಾತ್ರರಾಗಿರುವ ಖುದಿರಾಮ್ ಬೋಸ್ ಹುಟ್ಟಿದ್ದು 3/12/1889. ತನ್ನ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತನ್ನ ಅಕ್ಕ ಮತ್ತು ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾಗಿ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಳ್ಳಲು ಪ್ರೇರಿಪಿಸಿದ್ದೇ, ಬಂಕಿಮಚಂದ್ರರು ಬರೆದ ಆನಂದ ಮಠ ಮತ್ತು ಆನಂದದಾತ ಎಂಬ ಕಾದಂಬರಿಗಳು. ವಂದೇ ಮಾತರಂ ಗೀತೆಯಂತೂ ಇವರ ನರನಾಡಿಗಳಲ್ಲಿ ದೇಶ ಭಕ್ತಿ ಉಕ್ಕಿ ಹರಿಯುವಂತೆ ಮಾಡಿದ್ದಲ್ಲದೇ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ ಕಾರಣ, ತಮ್ಮ ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ್ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟು ಕೊಂಡು ಅತ್ಯಂತ ಗೌಪ್ಯವಾಗಿ ಕ್ರಾಂತಿಕಾರಿಗಳು ವಹಿಸುತ್ತಿದ್ದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅದೊಮ್ಮೆ ಹಾಗೆ ವಹಿಸಿದ್ದ ಕರಪತ್ರ ಹಂಚಿಕೆಯ ಸಮಯದಲ್ಲಿಯೇ ಪೋಲಿಸರ ಕೈಗೆ ಸಿಕ್ಕುಬಿದ್ದು ಬಿಡುಗಡೆಗೆಯಾದ ನಂತರವಂತೂ, ಅವರ ಮತ್ತು ಕ್ರಾಂತಿಕಾರಿಗಳ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ.

ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆಬ್ಬಿಸುವ ಕಾರ್ಯದಲ್ಲಿ ಅನೇಕ ಪತ್ರಿಕೆಗಳು ಉಗ್ರ ಲೇಖನಗಳ ಮೂಲಕ ದೇಶದ ನಾಗರೀಕರನ್ನು ಬಡಿದೆಬ್ಬಿಸಿ, ಬ್ರಿಟೀಷರ ವಿರುದ್ಧ ಹೋರಾಟ ಮಾಡುವ ಕುಮ್ಮಕ್ಕು ನೀಡುತ್ತಿದ್ದವು. ಹೀಗಾಗಿ ಬ್ರಿಟಿಷರ ವಿರುದ್ಧವಾಗಿ ಬರೆದ ಪತ್ರಿಕೆಗಳ ವಿರುದ್ಧ ಮೊಕದ್ದಮೆ ಹೂಡಲಾಗುತ್ತಿತ್ತು. ಇದೇ ಕಾರಣಕ್ಕಾಗಿಯೇ, ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ವಂದೇ ಮಾತರಂ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಏಕಾ ಏಕಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಎಂಬ ಪೋರ, ಬ್ರಿಟೀಷ್ ಅಧಿಕಾರಿಗೇ ತಿರುಗಿಸಿ ಹೋಡದೇ ಬಿಟ್ಟ. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡ್ ಆ ಕಿಶೋರನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನೂ ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದನು.

ಸುಶೀಲ್ ಕುಮಾರರೇನೋ ಆ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದರಾದರೂ, ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಅನೇಕ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದ ಸುಳಿವು ಬ್ರಿಟಿಷ್ ಸರ್ಕಾರಕ್ಕೆ ಗುಪ್ತಚರರ ಮೂಲಕ ತಿಳಿದು ಬಂದ ಕಾರಣ, ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತ್ತು.

ಏಲ್ಲೇ ಇರಲೀ, ಹೇಗೇ ಇರಲು. ಕಿಂಗ್ಸ್ ಫೋರ್ಡನನ್ನು ಮುಗಿಸಲೇ ಬೇಕು ಎಂಬ ದೃಢ ಸಂಕಲ್ಪವನ್ನು ತೊಟ್ಟಿದ್ದ ಆ ಕ್ರಾಂತಿಕಾರಿಗಳು, ಈ ಕಾರ್ಯವನ್ನು ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ತಮ್ಮ ಹಿರಿಯರ ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನ ಪ್ರತಿಯೊಂದು ಚಲನವಲನಗಳನ್ನೂ ಗಂಭೀರವಾಗಿ ಗಮನಿಸ ತೊಡಗಿದ್ದಲ್ಲದೇ ಅವನ ಹತ್ಯೆಗ ಸಂಚನ್ನು ರೂಪಿಸತೊಡಗಿದರು.

ಪ್ರತೀ ದಿನ ಸಂಜೆ ಕಿಂಗ್ಸ್ ಫೋರ್ಡ್ ಮನೋರಂಜನೆಗಾಗಿ ಹತ್ತಿರದ ಕ್ಲಬ್ಬಿಗೆ ಬರುವ ವಿಷಯವನ್ನು ಅರಿತು ಅವನು ಕ್ಲಬ್ಬಿನಿಂದ ಮನೆಗೆ ಹಿಂದಿರುಗುವ ಸಮಯದಲ್ಲಿ ಆತನ ಕಾರಿನ ಮೇಲೆ ಬಾಂಬ್ ಸಿಡಿಸಿ ಆತನನ್ನು ಹತ್ಯೆ ಮಾಡಲು ನಿರ್ಧರಿಸಿದರು. 1908ನೇ ಏಪ್ರಿಲ್ 30ರಂದು ಪೂರ್ವ ನಿರ್ಧಾರದಂತೆ ಕ್ಲಬ್ಬಿನಿಂದ ಹೊರಬಂದ ಕಿಂಗ್ಸ್ ಫೋರ್ಡ್ ಕಾರಿನಲ್ಲಿ ಯಾರು ಕುಳಿತಿದ್ದಾರೆ ಎಂಬುದನ್ನೂ ಗಮನಿಸದೇ, ನಿಗಧಿತ ಸ್ಥಳಕ್ಕೆ ಬಂದ ತಕ್ಷಣವೇ, ಬಾಂಬ್ ಹಾಕಲಾಯಿತಾದರೂ, ಅದೃಷ್ಟ ಗಟ್ಟಿಗಿದ್ದ ಕಾರಣ ಕಿಂಗ್ಸ್ ಪೋರ್ಡ್ ತಪ್ಪಿಸಿಕೊಂಡು, ಅವನ ಬದಲಾಗಿ ಆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು.

ಕಾರಿನ ಮೇಲೆ ಬಾಂಬ್ ಸಿಡಿಯುತ್ತಿದ್ದಂತೆಯೇ, ಕಿಂಗ್ಸ್ ಫೋರ್ಡನನ್ನು ಕೊಂದೆವೆಂದುಕೊಂಡ ಆ ತರುಣರು ಒಂದೊಂದು ದಿಕ್ಕಿಗೊಬ್ಬರು ಓಡಿದರು. ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಈ ಘಟನೆ ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿದ್ದಂತೂ ಸುಳ್ಳಲ್ಲ. ಆ ತರುಣರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡನ ವಾಹನ ಚೂರು ಚೂರು ಮಾಡಿದ್ದಲ್ಲದೇ, ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ಸಹಾ ನುಚ್ಚುನೂರು ಮಾಡಿ ಹಾಕಿತ್ತು.

ಈ ಘಟನೆಯನ್ನು ಸುಮ್ಮನೇ ಬಿಟ್ಟರೇ ಇದರಿಂದ ಇಂತಹ ಹತ್ತಾರು ಘಟನೆಗಳು ಮರುಕಳಿಸಬಹುದು ಎಂಬುದನ್ನು ಮನಗಂಡ ಬ್ರಿಟೀಷರು ಆ ಕ್ರಾಂತಿಕಾರಿಗಳನ್ನು ತೀವ್ರವಾಗಿ ಹುಡುಕುತ್ತಿದ್ದ ಪರಿಣಾಮ ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ಯುವಕ ಖುದಿರಾಮ್ ಬೋಸ್ ಪೋಲಿಸರ ಕಣ್ಣಿಗೆ ಪತ್ತೆಯಾಗುತ್ತಾರೆ. ಪೋಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧಿತನಾಗಿ ವಿಚಾರಣೆ ಎಂಬ ನಾಟಕ ನಡೆದು ಮರಣದಂಡನೆಗೆ ಗುರಿಯಾಗಿ, 1908ರ ಆಗಸ್ಟ್ 11ರಂದು ಭಾರತಮಾತೆಯ ಚರಣಾರವಿಂದಗಳಲ್ಲಿ ಕೇವಲ ತನ್ನ 18 ನೇ ವಯಸ್ಸಿನ 8 ನೇ ತಿಂಗಳ 8 ನೇ ದಿನದಂದು ತನ್ನ ಪ್ರಾಣವನ್ನು ಅರ್ಪಿಸುತ್ತಾರೆ.

ಆ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಕ್ರಾಂತಿಕಾರಿ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆಯೇ ಚಂದ್ರಶೇಖರ ಆಜಾದ್ ಅವರಂತೆಯೇ ತನ್ನ ಪಿಸ್ತೂಲಿನಿಂದಲೇ ತಾನೇ ಗುಂಡಿಕ್ಕಿಕೊಂಡು ಅಮರರಾಗುತ್ತಾರೆ.

ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಖುದೀರಾಮ್ ಬೋಸರ ನೆನಪಿನಾರ್ಥವಾಗಿ ಅಂಚೇ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರ ತ್ಯಾಗ ಮತ್ತು ಬಲಿದಾನಗಳಿಗೆ ಗೌರವವನ್ನು ಸೂಚಿಸಿದೆ.

ಇಂತಹ ಅದೆಷ್ಟೋ ಎಲೆಮರೆ ಕಾಯಿಯಂತಹ ಪ್ರಾಥಃ ಸ್ಮರಣೀಯ ವೀರ ಯೋಧರ ತ್ಯಾಗ ಮತ್ತು ಬಲಿದಾನಗಳಿಂದ ಕಟ್ಟಿದ ಸ್ವಾತಂತ್ರ್ಯ ಹೋರಾಟದ ಹುತ್ತದಲ್ಲಿ ನಂತರ ಹಾವಿನಂತೆ ಬಂದು ಸೇರಿಕೊಂಡ ಕೆಲವು ಶೋಕೀದಾರ ಹೋರಾಟಗಾರರು, ತಮ್ಮ ಹೋರಾಟದಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿತೆಂದು ಹೇಳಿಕೊಂಡು ತಲೆತಲಾಂತರಗಳಿಂದಲೂ ಈ ದೇಶ ತಮ್ಮ ಕುಟುಂಬದ ಜಹಾಗೀರು ಎಂಬಂತೆ ಆಧಿಕಾರ ನಡೆಸಿದ್ದು ಈ ದೇಶದ ವಿಪರ್ಯಾಸ. ಅವರನ್ನೇ ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಎಂಬಂತೆ ನಂಬಿರುವ ನಮ್ಮ ಇಂದಿನ ಪೀಳಿಗೆಗೆ ಇಂತಹ ಸಾವಿರಾರು ನಿಸ್ವಾರ್ಥ ದೇಶಪ್ರೇಮಿಗಳ ತ್ಯಾಗ ಮತ್ತು ಬಲಿದಾನಗಳ ರಕ್ತ ಸಿಕ್ತ ಅರ್ಪಣೆಯಿಂದ ಈ ದೇಶಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ದೊರಕಿತು ಎಂಬುದನ್ನು ತಿಳಿಸುವ ಗುರುತರವಾದ ಜವಾಬ್ಧಾರಿ ನಮ್ಮ ನಿಮ್ಮ ಮೇಲಿದೆ ಅಲ್ವೇ? ಬೋಲೋ…. ಭಾರತ್ ಮಾತಾ ಕೀ….. ಜೈ…….

ಏನಂತೀರೀ?

ನಿಮ್ಮವನೇ ಉಮಾಸುತ