ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳವಾಗಿದ್ದು ಅಲ್ಲಿ ನಮ್ಮ ಸನಾತನ ಧರ್ಮದ  ಆಧಾರದಲ್ಲಿ ಪೂಜೆ ಪುನಸ್ಕಾರಗಳು ನಡೆಯುವ ಮೂಲಕ ಶ್ರದ್ಧಾ ಕೇಂದ್ರಗಳಾಗಿವೆ. ಭಕ್ತಾದಿಗಳು ದೇವಾಲಯಕ್ಕೆ ಹೋಗಿ ತಮ್ಮ ಶಕ್ತ್ಯಾನುಸಾರ ದೇವರನ್ನು ಪೂಜಿಸಿ ನೈವೇದ್ಯವನ್ನು ಅರ್ಪಿಸಿ ಯಥಾ ಶಕ್ತಿ ಕಾಣಿಕೆಯನ್ನು ಅರ್ಪಿಸಿ ಬರುತ್ತಾರೆ. ಇನ್ನು ದೇವಾಲಯಗಳೂ ಸಹಾ ಭಕ್ತರಿಂದ ಆ ರೀತಿಯಾಗಿ ಪಡೆದ ದೇಣಿಗೆಯಿಂದ ಭಕ್ತಾದಿಗಳಿಗೆ ದಿನ ನಿತ್ಯವೂ ದಾಸೋಹ ನಡೆಸುವುದಲ್ಲದೇ, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಹೋಮ ಹವನಗಳನ್ನು ನಡೆಸುತ್ತಾ, ವಸುದೈವ ಕುಟುಂಬಕಂ ಎಂಬ ತತ್ವದಡಿಯಲ್ಲಿ, ಸರ್ವೇ ಜನಾಃ ಸುಖಿನೋ ಭವಂತು. ಲೋಕಾಃ ಸಮಸ್ತಾಃ ಸನ್ಮಂಗಳಾನಿ ಭವಂತು ಎಂದು ಎಲ್ಲರಿಗೂ ಹಾರೈಸುತ್ತವೆ.

t5ಅದೇ ರೀತಿಯಲ್ಲೇ ಧರ್ಮ ಸ್ಥಾಪನೆಗಾಗಿ, ಭಕ್ತರ ಒಳಿತಿಗಾಗಿ ತಿರುಪತಿಯಲ್ಲಿ ವೆಂಕಟರಮಣ ಸ್ವಾಮಿ ಸಾವಿರಾರು ವರ್ಷಗಳಿಂದಲೂ ನೆಲೆಸಿದ್ದು ದೇಶ ವಿದೇಶಗಳಿಂದಲೂ ಲಕ್ಷಾಂತರ ಭಕ್ತಾದಿಗಳು ತಿಮ್ಮಪ್ಪನ ದರ್ಶನಕ್ಕಾಗಿ ಬರುವುದಲ್ಲದೇ ತಮ್ಮ ಮನೋಭಿಷ್ಟಗಳನ್ನು ಈಡೇರಲೆಂದು ವಿವಿಧ ಸೇವೆಗಳನ್ನು ಮಾಡಿಸುವುದಲ್ಲದೇ ಯಥಾಶಕ್ತಿ ದೇವರ ಹುಂಡಿಗೆ ಧನಕನಕಗಳನ್ನು ಅರ್ಪಿಸಿಸುತ್ತಾರೆ. ಹಾಗಾಗಿಯೇ ತಿರುಪತಿಯ ದೇವಾಲಯ ನಮ್ಮ ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. 

kuberaಇನ್ನು ಭಕ್ತಾದಿಗಳು ತಿರುಪತಿಯ ಹುಂಡಿಗೆ ಯಥಾ ಶಕ್ತಿ ಧನಕನಕಗಳನ್ನು ಹಾಕುವ ಹಿಂದೆಯೋ ರೋಚಕವಾದ ಪೌರಾಣಿಕ ಕಥೆಯಿದೆ. ತ್ರೇತಾಯುಗದಲ್ಲಿ ಭಗವಾನ್ ಶ್ರೀನಿವಾಸನು ತಾಯಿ ಪದ್ಯಾವತಿಯನ್ನು ಮದುವೆಯಾಗಲು ಬಯಸಿದಾಗ ಆತನ ಬಳಿ ವಿವಾಹವಾಗಲು ಹಣವಿರಲಿಲ್ಲವಂತೆ. ಆಗ ಶ್ರೀನಿವಾಸನು ದೇವಲೋಕದ ಧನಿಕನಾದ ಕುಬೇರನ ಬಳಿ, ವೈಶಾಖಮಾಸದ, ಶುಕ್ಲಪಕ್ಷದ, ಸಪ್ತಮಿ ದಿನದಂದು, 14 ಲಕ್ಷ ಸುವರ್ಣ ವರಹಗಳನ್ನು ಸಾಲ ರೂಪದಲ್ಲಿ ಪಡೆದು, ವಿವಾಹವಾಗಿ ಸಾವಿರ ವರ್ಷಗಳ ಒಳಗಾಗಿ ಹದಿನಾಲ್ಕು ಲಕ್ಷ ವರಹಗಳ ಸಾಲವನ್ನು ಬಡ್ಡಿಯ ಸಮೇತ ತೀರಿಸುವುದಾಗಿ ಪಡೆದುಕೊಂಡಿರುತ್ತಾನೆ. ಶ್ರೀನಿವಾಸ ಪದ್ಮಾವತಿಯ ಮದುವೆಯಾಗಿ ಸಾವಿರಾರು ವರ್ಷಗಳು ಕಳೆದರೂ ಇನ್ನೂ ಕುಬೇರನ ಸಾಲವನ್ನು ಶ್ರೀನಿವಾಸನು ತೀರಿಸದಿರುವ ಕಾರಣ, ತಿಮ್ಮಪ್ಪನ ಹುಂಡಿಗೆ ಭಕ್ತಾದಿಗಳು ಯಥಾಶಕ್ತಿ ಕಾಣಿಕೆಯನ್ನು ಹಾಕುವ ಮೂಲಕ ಶ್ರೀನಿವಾಸನನ್ನು ಋಣಮುಕ್ತ ಮಾಡುವ ಅಚರಣೆ ರೂಡಿಯಲ್ಲಿದೆ.

promicery_noteಶ್ರೀನಿವಾಸರು ಕುಬೇರನಿಂದ ತನ್ನ ವಿವಾಹಕ್ಕಾಗಿ ಬ್ರಹ್ಮದೇವರ ಸಮಕ್ಷಮ ಮತ್ತು ಸಾಕ್ಷಿಯಲ್ಲಿ ಭಗವಾನ್ ರಾಮ ಮುದ್ರೆಯಿರುವ ಚಿನ್ನದ ನಾಣ್ಯಗಳನ್ನು ಸಾಲವಾಗಿ ಪಡೆದು ಕೊಂಡ ಪುರಾವೆಯಾಗಿ ಈ ಲೋಹದ ಶಾಸನವು ಇಂದಿಗೂ ತಿರುಪತಿ ದೇವಾಲಯದಲ್ಲಿ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ

t2ಸಾಮಾನ್ಯ ದಿನಗಳಲ್ಲಿ ಸರ್ವ ದರ್ಶನಕ್ಕೆ 18 ಗಂಟೆಗಳು ಮತ್ತು ವಿಶೇಷ ಹಬ್ಬ ಹರಿದಿನಗಳಲ್ಲಿ 20 ಗಂಟೆಗಳ ಕಾಲ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಭಕ್ತಾದಿಗಳು ತಮ್ಮ ಅನುಕೂಲದಂತೆ  ಈ ಸಮಯದಲ್ಲಿ ನಡೆಯುವ ವಿವಿಧ ಸೇವೆಗಳಿಗೆ ಸೇವಾಶುಲ್ಕ ಕಟ್ಟಿ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನದ ಪಡೆದು ಸ್ವಾಮಿಯ ಕೃಪಾಶೀರ್ವಾವಾದ ಪಡೆಯುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.

ದುರಾದೃಷ್ಟವಷಾತ್  ಅಂಧ್ರಪ್ರದೇಶದ ಸರ್ಕಾರ ಮತ್ತು ತಿರುಪತಿ ದೇವಾಲಯದ ಆಡಳಿತ ಮಂಡಳಿ ಅದೊಂದು ಧಾರ್ಮಿಕ ಶ್ರದ್ಧಾ ಕೇಂದ್ರ ಎಂಬುದನ್ನು ಮರೆತು ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ದೇವಾಲಯವನ್ನು ವ್ಯಾಪಾರಿತಾಣವಾಗಿ ಪರಿವರ್ತಿಸಿ, ಭಕ್ತಾದಿಗಳು ಹುಂಡಿಗೆ ಹಾಕುವ ಹಣವನ್ನು ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಭಾವಿಸಿ, ದೇವಾಲಯದ ವಿವಿಧ ಸೇವಾ ಶುಲ್ಕವನ್ನು ಏಕಾಏಕಿ ಹೆಚ್ಚಿಸುವ ಮೂಲಕ ದೇವಾಲಯವನ್ನು ಆದಾಯದ ಕೇಂದ್ರವನ್ನಾಗಿಸಿ ಮಾಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

t3ನಿಜ ಹೇಳ ಬೇಕೆಂದರೆ, ಕಳೆದ ಮೂರ್ನಾಲ್ಕು ದಶಕಗಳಲ್ಲಿ ಆಂಧ್ರ ಪ್ರದೇಶದಲ್ಲಿ ಭಾರೀ ಪ್ರಮಾಣದ ಆಮಿಷದ ಮತಾಂತರವಾಗುತ್ತಿದ್ದು ದಿನೇ ದಿನೇ ಹೆಸರಿಗಷ್ಟೇ  ಹಿಂದೂಗಳಾಗಿದ್ದು ಅವರ ಆಚಾರ ವಿಚಾರಗಳಲ್ಲಿ ಕ್ರೈಸ್ತರಾಗಿ ಹೋಗಿರುವುದಕ್ಕೆ ಮಾಜೀ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ್ ರೆಡ್ಡಿ ಮತ್ತು ಪ್ರಸ್ತುತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರೇ ಸಾಕ್ಷಿ. ವೈ.ಎಸ್.ಆರ್ ರೆಡ್ಡಿ ಮುಖ್ಯಮಂತ್ರಿಯದ ಮೇಲಂತೂ ತಿರುಪತಿಯ ತಿರುಮಲ ದೇವಾಲಯದ ಅಡಳಿತ ಮಂಡಳಿ ಮತ್ತು  ಕೆಲಸಗಾರರಲ್ಲಿ ಹಿಂದೂಯೇತರರು ಇರಬಾರದೆಂಬ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಆಯಕಟ್ಟಿನ ಜಾಗಗಳಲ್ಲಿ ತಮ್ಮ ಸಂಬಂಧೀಕರನ್ನೇ ನೇಮಕ ಮಾಡುವ ಮೂಲಕ ದೇವಾಲಯದಲ್ಲಿ  ಅರ್ಥಿಕ ಅವ್ಯವಸ್ಥೆಗಳಿಗೆ ಕಾರಣವಾಗಿದ್ದಲ್ಲದೇ ತಿರುಪತಿಯ ಸಪ್ತಗಿರಿಗಳಲ್ಲೇ  ಭಾರೀ ದೊಡ್ಡದಾದ ಚರ್ಚ್ ಕಟ್ಟಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಹೋಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ತಮ್ಮ ರಾಜಕೀಯದ ತೆವಲುಗಳಿಗಾಗಿ ವಿವಿಧ ರೀತಿಯ ಆಮಿಷಗಳು,  ಉಚಿತ ಭಾಗ್ಯಗಳನ್ನು ಜನರಿಗೆ  ಕೊಡುವ ಮೂಲಕ ಆಂಧ್ರ ಪ್ರದೇಶದ ಸರ್ಕಾರೀ ಖಜಾನೆಯನ್ನು ಬರಿದು ಮಾಡಿ ಸರ್ಕಾರವನ್ನು ನಡೆಸಲು ಹಣವಿಲ್ಲದೇ ತಿರುಪತಿ ದೇವಸ್ಥಾನಗಳ ಆಸ್ತಿಯನ್ನು ಹರಾಜು ಮಾಡುವಷ್ಟರ ಮಟ್ಟಿಗೆ ದಿವಾಳಿಯಾಗಿದೆ. ಇದಕ್ಕೆ ಭಕ್ತರು ಮತ್ತು ನ್ಯಾಯಾಲಯವೂ ವಿರೋಧ ವ್ಯಕ್ತಪಡಿಸಿದ ಕಾರಣ, ಸದ್ಯಕ್ಕೆ ಆದನ್ನು ಕೈ ಬಿಟ್ಟ ಸರ್ಕಾರ, ಪರೋಕ್ಷವಾಗಿ ದೇವಾಲಯದ ಸೇವಾಶುಲ್ಕವನ್ನು ಹೆಚ್ಚಿಸಲು ಹೊರಟಿರುವುದು ಅಕ್ಷಮ್ಯ  ಅಪರಾಧವೆಂದರೂ ತಪ್ಪಾಗದು.

ಕಳೆದ ವಾರ ಫೆ. 17ರಂದು  ಟಿಟಿಡಿ ಟ್ರಸ್ಟ್‌ ಸಭೆಯಲ್ಲಿ ವಿವೇಚನಾ ಕೋಟಾಕ್ಕೆ ಸಂಬಂಧಿಸಿದ ಸೇವೆಗಳ ದರದಲ್ಲಿ ಬದಲಾವಣೆ ಮಾಡುವ ಪ್ರಸ್ತಾಪನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಹಿಂದಿದ್ದ ಸೇವಾ ಶುಲ್ಕವನ್ನು ಅವೈಜ್ಞಾನಿಕವಾಗಿ ಯದ್ವಾ ತದ್ವಾ ಈ ರೀತಿಯಲ್ಲಿ ಏರಿಸಲಾಗಿದೆ.

ಸೇವೆಗಳು

ಹಾಲಿ ದರ 

ಉದ್ದೇಶಿತ ದರ ₹

ಸುಪ್ರಭಾತ ಸೇವೆ 240 2000
ತೋಮಲ ಸೇವೆ ಮತ್ತು ಅರ್ಚನೆ 440 5000
ಕಲ್ಯಾಣೋತ್ಸವ 1000 2500
ವೇದಾಶೀರ್ವಾದ 3000 10000
ವಸ್ತ್ರಾಲಂಕಾರ 50000 100000

t4ಸುಪ್ರಭಾತ ಸೇವೆಯನ್ನು ₹ 120 ರಿಂದ ₹ 1000 ಕ್ಕೆ ಹೆಚ್ಚಿಸುವಂತೆ ಕೆಲವರು ಪ್ರಸ್ತಾಪಿಸಿದಾಗ, ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ತರಕಾರಿ ಮಂಡಿಯಲ್ಲಿ ಹರಾಜು ಹಾಕುವಂತೆಯೋ ಇಲ್ಲವೇ ಕುರಿ ವ್ಯಾಪಾರ ಮಾಡುವಂತೆಯೋ, ಹೇ ಅದನ್ನು ₹2000ಕ್ಕೆ ಹೆಚ್ಚಿಸಿದರೆ ಏನಾಗುತ್ತದೆ? ಎಂಬ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದರೆ ಅವರ ದೃಷ್ಟಿಯಲ್ಲಿ ಅವರ  ದೇವಾಲಯ ಧಾರ್ಮಿಕ ಕೇಂದ್ರ ಎನ್ನುವುದಕ್ಕಿಂತಲೂ ವ್ಯಾಪಾರ ಕೇಂದ್ರ ಎಂದು ಭಾವಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ರೀತಿ ತಿರುಮಲದಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿನ ಆರ್ಜಿತ ಸೇವೆಗಳ ಶುಲ್ಕಗಳಲ್ಲಿ ಗಣನೀಯವಾಗಿ ಪರಿಷ್ಕರಣೆ ಮಾಡುವುದರಿಂದ ವಿವೇಚನಾ ಕೋಟಾದ ಮೇಲೆ ಇರುವ ಒತ್ತಡ ತಗ್ಗಿಸಲು ಪ್ರಯತ್ನ ಮಾಡಲಾಗುತ್ತಿದೆ ಹೊರತು  ಇದರಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗದು  ಎಂದು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗಿತ್ತಿದೆ.

ladduಇನ್ನು ತಿರುಪತಿಯ ತಿಮ್ಮಪ್ಪನಂತೆಯೇ, ತಿರುಪತಿ ದೇವಾಲಯದ  ಪ್ರಸಾದವಾದ ಲಾಡು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ತಿರುಪತಿಗೆ ಯಾರೇ ಹೋಗುತ್ತೇವೆ ಎಂದರು ಬಹುತೇಕರು ಅವರ ಕೈಯ್ಯಲ್ಲಿ ಹುಂಡಿಗೆ ಹಾಕಲು ಯಥಾಶಕ್ತಿ ಕಾಣಿಕೆಯನ್ನು ನೀಡುವುದಲ್ಲದೇ, ಬಂದ ನಂತರ ನಮಗೂ ಪ್ರಸಾದ ತನ್ನಿ ಎಂದು ಲಡ್ಡು ತರಲು  ಹಲವರು ಹಣ ಕೊಡುವುದು ವಾಡಿಕೆಯಾಗಿದೆ.  ತಿರುಪತಿ ಲಡ್ಡುವಿಗೆ ಇರುವ ಅಪಾರವಾದ ಬೇಡಿಕೆಯಿಂದಾಗಿ ಟಿಟಿಡಿಯು ಸಹಾ ನರೆರಾಜ್ಯದ ಪ್ರಮುಖ ಪಟ್ಟಣಗಲಲ್ಲಿ ತಿಮ್ಮಪ್ಪನ ದೇವಸ್ಥಾನವನ್ನು ಕಟ್ಟಿಸಿ ಅಲ್ಲಿಯೂ ತಿರುಪತಿ ಪ್ರಸಾದ ಲಭ್ಯವಾಗುವಂತೆ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಅದೇ ರೀತಿಯಾಗಿ ಕೊರೊನಾ ಸಮಯದಲ್ಲಿ ಆನ್​ಲೈನ್​ ಮೂಲಕ   ಅರ್ಚನೆ, ಅಭಿಷೇಕ ಮುಂತಾದ ರೀತಿಯ ಸೇವೆಯನ್ನು ಮಾಡಿಸಿದವರಿಗೆ ಅಂಚೆಯ ಮೂಲಕವೂ  ಪ್ರಸಾದವನ್ನು ಕಳುಹಿಸಲಾಗುತ್ತಿದೆ.  ಈ ರೀತಿಯಾಗಿ ಬಹಳ ವಿಶೇಷವಾದ ರುಚಿ ಹೊಂದಿರುವ ತಿರುಪತಿಯ ಪ್ರಸಾದದ ಬೆಲೆಯನ್ನು ಸದ್ದಿಲ್ಲದೇ ಏರಿಕೆ ಮಾಡಿದ್ದಾರೆ.  ನೇರವಾಗಿ  ಲಡ್ಡುವಿನ ಪ್ರಸಾದ ಬೆಲೆಯನ್ನು ಏರಿಕೆ ಮಾಡಿಲ್ಲವಾದರೂ, ಕೇವಲ 100 ರೂಪಾಯಿ ಇದ್ದ ಜಿಲೇಬಿ ಪ್ರಸಾದದ ಬೆಲೆಯನ್ನು ಈಗ 500 ರೂಪಾಯಿಗೆ ಏರಿಸಿದೆ.

ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್‌ಗೆ ಪ್ರಸ್ತುತ 100 ರೂ.ಗೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲವನ್ನು 2000 ರೂ.ಗೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ನಿಜ ಹೇಳಬೇಕೆಂದರೆ,  ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿಗೆ ಆಗುವ ವೆಚ್ಚ ಕೇವಲ 147.50 ರೂ. ಆಗಿದ್ದು ಅದನ್ನು ಶೇಕಡಾ 239ರಷ್ಟು ಹೆಚ್ಚುವರಿ ಮಾಡಿ ಪ್ರಸಾದದಲ್ಲೂ ಲಾಭವನ್ನು ನಿರೀಕ್ಷೆ ಮಾಡುತ್ತಿರುವುದು ನಿಜಕ್ಕೂ ದುಃಖಕರವಾಗಿದೆ.

ಹಿಂದೂ ಭಕ್ತರಿಂದ ಈ ರೀತಿಯಾಗಿ ಲೂಟಿ ಮಾಡಿದ ಹಣವನ್ನು ಕ್ರೈಸ್ತ ಮತಾಂತರಕ್ಕೆ ಬಳಸಿಕೊಳ್ಳುವುದರ ಜೊತೆಗೆ ತಮ್ಮ ರಾಜಕೀಯದ ತೆವಲುಗಳಿಗೆ ಬಳಸಿಕೊಳ್ಳಲು ಮುಂದಾಗಿರುವ ಈ ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಒಕ್ಕೊರಲಿನಿಂದ ಪ್ರತಿಭಟನೆ ಮಾಡುವುದಲ್ಲದೇ, ತಿರುಪತಿ ಹುಂಡಿಗೆ ಹಾಕುವ ಹಣವನ್ನು ತಮ್ಮ ಊರಿನಲ್ಲೇ ಇರುವ ದೇವಾಲಯದ ಜೀರ್ಣೋದ್ಧಾರಕ್ಕಾಗಲೀ ಇಲ್ಲವೇ,  ನಮ್ಮ ಪ್ರದೇಶದ ಸುತ್ತ ಮುತ್ತಲೂ ನಡೆಯುವ ಧಾರ್ಮಿಕ ಚಟುವಟಿಕೆಗಳು ಮತ್ತು ಹಿಂದೂಗಳ ಸಂರಕ್ಷಣೆಗಾಗಿ ಸದ್ಬಳಕೆ ಮಾಡುವ ಮೂಲಕ ಸದ್ದಿಲ್ಲದೇ ದೇವಾಲಯದ ಆದಾಯವನ್ನು ಕಡಿಮೆ ಮಾಡುವ ಮೂಲಕ  ಈ ಹಿಂದೂ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠವನ್ನು ಕಲಿಸಬಹುದಾಗಿದೆ ಅಲ್ಲವೇ?

ಒಂದು ಗೆರೆಯನ್ನು ಮುಟ್ಟದೇ ಸಣ್ಣದಾಗಿ ಮಾಡ ಬೇಕೆಂದರೆ, ಅದರ  ಪಕ್ಕದಲ್ಲಿ ಒಂದು ದೊಡ್ಡದಾದ ಗೆರೆಯನ್ನು ಎಳೆಯುವ ಮೂಲಕ ಸಣ್ಣ ಮಾಡುವಂತೆ, ಯಾವುದೇ ರೀತಿಯ ಹಾರಾಟ, ಚೀರಾಟ,  ಹೋರಾಟ,  ಪ್ರತಿಭಟನೆಗಳು ಇಲ್ಲದೇ ಸದ್ದಿಲ್ಲದೇ ಆರ್ಥಿಕ ದಿಗ್ಭಂಧನ ಹೇರುವ ಮೂಲಕ ಸರಿದಾರಿಗೆ ತರಬಹುದಾಗಿದೆ ಅಲ್ಲದೇ, ಈಗಾಗಲೇ ನ್ಯಾಯಾಲಯದಲ್ಲಿ ತೀರ್ಪಿತ್ತಿರುವಂತೆ, ದೇವಾಲಯದ ಆಡಳಿತವನ್ನು ಸರ್ಕಾರ ಕೈಯಿಂದ ಸ್ಥಳೀಯ ಆಡಳಿತ ಮಂಡಳಿಗೆ ವರ್ಗಾಯಿಸಿ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ಅಲ್ಲೇ ಡ್ರಾ  ಅಲ್ಲೇ ಬಹುಮಾನ ಎನ್ನುವಂತೆ  ಅದೇ ದೇವಾಲಯದ ಜೀರ್ಣೋದ್ಧಾರ ಮತ್ತು ವಿವಿಧ ಹಿಂದೂ ಧಾರ್ಮಿಕ ಕಾರ್ಯಗಳಿಗೆ ಬಳಸಿಕೊಳ್ಳುವ ಸಮಯ ಬಂದಿದೆ. ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಗೆಲ್ಲುವ ಛಲವಿದೆ ಅಲ್ವೇ?

ತಿರುಪತಿ ತಿಮ್ಮಪ್ಪನನ್ನು ಋಣಮುಕ್ತನಾಗಿ ಮಾಡುವ ಸಲುವಾಗಿ ಭಕ್ತಾದಿಗಳು ಹುಂಡಿಗೆ ಹಾಕುವ ಹಣವನ್ನು ಈ ಭ್ರಷ್ಟ ಹಿಂದೂ ವಿರೋಧಿಗಳು ಈ ರೀತಿಯಾಗಿ ಧರ್ಮವಿರೋಧಿ ಕಾರ್ಯಗಳಿಗೆ ಮತ್ತು ತಮ್ಮ ಖಜಾನೆಯನ್ನು ತಂಬಿಕೊಳ್ಳಲು ದುರ್ಬಳಕೆ ಮಾಡಿ ಕೊಳ್ಳುತ್ತಿರುವುದು ಧರ್ಮದ್ರೋಹವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಮಣಿಕರಣ್ ಸಿಖ್ಖರ ಮತ್ತು ಉಳಿದ ಹಿಂದೂಗಳ ಧಾರ್ಮಿಕ ಕೇಂದ್ರ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ವಿಶಿಷ್ಟವಾದ ದೇಶ. ಇಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್, ಜೈನ, ಪಾರಸೀ ಹೀಗೆ ಸರ್ವಧರ್ಮಗಳ ಭಾವೈಕ್ಯತೆಗಳ ಸಂಗಮವಾಗಿದೆ. ದೇಶಾದ್ಯಂತ ಈ ಧರ್ಮಗಳ ನಾನಾ ಧಾರ್ಮಿಕ ಕ್ಷೇತ್ರಗಳಿದ್ದು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಅಲ್ಲಿಗೆ ಹೋಗಿ ತಮ್ಮ ಭವರೋಗಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಒಂದೇ ಪುಣ್ಯಕ್ಷೇತ್ರ ಹಲವು ಧರ್ಮಗಳಿಗೆ ಶ್ರದ್ಧಾಕೇಂದ್ರವಾಗಿದ್ದು ಎರಡೂ ಪಂಗಡದವರು ಅಲ್ಲಿಗೆ ಹೋಗುತ್ತಾರೆ. ನಾನಿಂದು ಸಿಖ್ಖರಿಗೂ ಮತ್ತು ಉಳಿದ ಹಿಂದೂಗಳಿಗೆ ಪವಿತ್ರವಾದಂತಹ ಮಣಿಕರಣ್ ಬಗ್ಗೆ ತಿಳಿದುಕೊಳ್ಳೋಣ.

mani1

ಸಿಖ್ಖರ ಮತ್ತು ಉಳಿದ ಹಿಂದೂಗಳ ಪವಿತ್ರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಮಣಿಕರಣ್ ಇರುವುದು ಅತ್ಯಂತ ಶೀತ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ. ಕುಲು ನಗರದಿಂದ 5೦ ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪುಟ್ಟ ಪ್ರದೇಶವೇ ಮಣಿಕರಣ್. ಇಲ್ಲಿ ಸಿಖ್ಖರ ಪವಿತ್ರ ಮಂದಿರ ಗುರುದ್ವಾರದ ಜೊತೆ ಜೊತೆಗೇ ಹಿಂದೂಗಳ ಶಿವನ ಪವಿತ್ರ ಸಾನಿಧ್ಯವೂ ಒಟ್ಟೊಟ್ಟಿಗೆ ಇರುವುದು ವಿಶೇಷವಾಗಿದೆ. ಇವೆರಡೂ ಧಾರ್ಮಿಕ ಸಂಗತಿಗಳ ಹೊರತಾಗಿ, ಸುಮಾರು 1835 ಮೀಟರ್ ಎತ್ತರದ ಪರ್ವತದ ಪ್ರದೇಶವಾಗಿರುವ ಇಲ್ಲಿ ಬಿಸಿ ನೀರಿನ ಬುಗ್ಗೆಯ ಕುರಿತಂತೆ ಪ್ರಸಿದ್ಧವಾಗಿದೆ. ಇದು ಪಾರ್ವತಿ ನದಿಯ ಎಡದಂಡೆಯಾಗಿದ್ದು, ಉಳಿದೆಲ್ಲ ಕಡೆ ಶಾಂತವಾಗಿ ತಣ್ಣಗೆ ಹರಿಯುವ ನದಿ, ಕಣಿವೆಯ ಸುಮಾರು ಒಂದೂವರೆ ಕಿಲೋ ಮೀಟರ್ ದೂರದವರೆಗೆ ಅಲ್ಲಲ್ಲಿ ಬಿಸಿನೀರಿನ ಬುಗ್ಗೆ (hot springs) ಭೂಮಿ ಅಡಿಯಿಂದ ಇಲ್ಲಿ ಉಕ್ಕುತ್ತಿದ್ದು ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ

ಇಲ್ಲಿರುವ ಮೂರು ಬಿಸಿ ನೀರಿನ ಬುಗ್ಗೆಗಳಲ್ಲಿ ಒಂದು ಗುರುದ್ವಾರದೊಳಗೆ ಇದ್ದರೆ ಉಳಿದೆರಡು ಪ್ರದೇಶಗಳು ಅತಿಥಿಗೃಹವಾಗಿ ಮಾರ್ಪಟ್ಟು ಸ್ನಾನ ಗೃಹಗಳಾಗಿವೆ. ಇಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಗುಡಿ ಒಳಗಡೆಯೂ ಕೊಳ ನಿರ್ಮಿಸಿ ಅಲ್ಲಿಗೆ ತಣ್ಣನೆ ನೀರನ್ನೂ ಹರಿಯಬಿಟ್ಟು ನೀರು ಹದಾ ಮಾಡಿಸಿ ಭಕ್ತರಿಗೆ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗದ ಜೊತೆಗೆ ವಾಯು ದೋಷ ಮತ್ತು ಸಂಧಿವಾತ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಈ ಪರಿಸರದಲ್ಲಿ ಅಲ್ಲಿಯ ನೆಲವೆಲ್ಲವೂ ಬಿಸಿಯಾಗಿರುವ ಕಾರಣ ನಡೆದಾಡುವ ಎಲ್ಲಾ ಸ್ಥಳದಲ್ಲಿಯೂ ಮರದ ಹಲಗೆಯನ್ನು ಹಾಸಲಾಗಿದೆ.

ವೈಜ್ಞಾನಿಕವಾಗಿ ಹೇಳಬೇಕೆಂದರೆ ಈ ಬುಗ್ಗೆಗಳಲ್ಲಿನ ನೀರು ಗಂಧಕವನ್ನು ಹೊಂದಿರುವ ಕಾರಣ, ಇದು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುಬಹುದಾದರೂ, ಜನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳನ್ನು ಹೊಂದಿದ್ದಾರೆ. ಈ ನೀರಿನಲ್ಲಿರುವ ರೇಡಿಯಮ್ ಅಂಶದಿಂದಾಗಿಯೇ ಬಿಸಿ ನೀರಿನ ಬುಗ್ಗೆಗಳು ಏಳುತ್ತಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದರೂ, ಇದಕ್ಕೆ ಪರ್ಯಾಯವಾಗಿ ಸಿಖ್ ಮತ್ತು ಹಿಂದೂಗಳ ಪೌರಾಣಿಕ ಕಥೆಗಳೂ ಇವೆ.

ಸಿಖ್ಖರ ಪ್ರಕಾರ

nanak1

ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಅವರು 1574 ರಲ್ಲಿ ಮೂರನೆಯ ಉದಾಸಿಯ ಸಮಯದಲ್ಲಿ ಅವರ ಅನುಯಾಯಿ ಭಾಯಿ ಮರ್ದಾನಾ ಅವರೊಂದಿಗೆ ಇಲ್ಲಿಗೆ ಬರುತ್ತಾರೆ. ಅವರಿಗೆ ಹಸಿವಾದ ಕಾರಣ, ಗುರುನಾನಕ್ ಅವರು ಲಂಗರ್‌ಗೆ ಆಹಾರವನ್ನು ಸಂಗ್ರಹಿಸಲು ಮರ್ದಾನ ಅವರನ್ನು ಕಳುಹಿಸುತ್ತಾರೆ. ರೊಟ್ಟಿ ಮತ್ತು ಪಲ್ಯಗಳನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ಜನರಿಂದ ದಾನ ಪಡೆದರಾದರೂ ರೊಟ್ಟಿಗೆ ಹಿಟ್ಟನ್ನು ಕಲೆಸಲು ನೀರು ಸಿಗದೆ ಆಹಾರವನ್ನು ಬೇಯಿಸಲು ಪರದಾಡುತ್ತಾರೆ.

ಆಗ ನಾನಕರು ಮರ್ದಾನರಿಗೆ ಅಲ್ಲಿರುವ ಒಂದು ದೊಡ್ಡ ಬಂಡೆಯನ್ನು ಜರುಗಿಸಲು ತಿಳಿಸುತ್ತಾರೆ. ಗುರುಗಳ ನಿರ್ದೇಶನದಂತೆ ಕಲ್ಲನ್ನು ಪಕ್ಕಕ್ಕೆ ಸರಿಸುತ್ತಲೇ ಅಲ್ಲೊಂದು ಬಿಸಿನೀರಿನ ಬುಗ್ಗೆ ಕಾಣಿಸಿಕೊಂಡು ಆ ಬುಗ್ಗೆಯಲ್ಲಿ ರೊಟ್ಟಿ ತೇಲುವುದನ್ನು ನೋಡುತ್ತಾರೆ. ಈ ರೊಟ್ಟಿಗಳು ತೇಲಿಕೊಂಡು ತಮ್ಮಲ್ಲಿಗೆ ಬಂದರೆ ಅವುಗಳಲ್ಲಿ ಒಂದನ್ನು ದೇವರ ಹೆಸರಿನಲ್ಲಿ ದಾನ ಮಾಡುವುದಾಗಿ ಪ್ರಾರ್ಥಿಸುತ್ತಾರೆ. ಆಶ್ಚರ್ಯವೆಂಬಂತೆ, ರೊಟ್ಟಿಗಳು ಅವರತ್ತ ತೇಲಿ ಬರುತ್ತದಲ್ಲದೇ, ತಿನ್ನಲು ಯೋಗ್ಯವಾಗಿರುವಂತೆ ರೊಟ್ಟಿ ಅಂದಿನಿಂದ ಆ ಕ್ಷೇತ್ರದಲ್ಲಿ ದೇವರ ಹೆಸರಿನಲ್ಲಿ ಏನನ್ನಾದರೂ ದಾನ ಮಾಡಿದರೆ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯುತ್ತೇವೆ ಎಂಬ ನಂಬಿಕೆ ಇದೆ, ಈ ಗುರುದ್ವಾರದ ಕುರಿತಂತೆ ಜ್ಞಾನಿ ಗ್ಯಾನ್ ಸಿಖ್ ಅವರು ತಮ್ಮ ಹನ್ನೆರಡನೆಯ ಗುರು ಖಲ್ಸಾದಲ್ಲಿ ಉಲ್ಲೇಖಿಸಿರುವ ಕಾರಣ ಆವರ ಶಿಷ್ಯರಿಗೆ ಈ ಗುರುದ್ವಾರ ಅತ್ಯಂತ ಹೆಚ್ಚಿನ ಮಹತ್ವದ್ದಾಗಿದೆ.

ಇನ್ನು ಹಿಂದೂಗಳ ಪ್ರಕಾರ

shiv)rmoantic

ಮಣಿಕರಣ್, ಎಂಬ ಹೆಸರೇ ಸೂಚಿಸುವಂತೆ ರತ್ನ ಅಥವಾ ಮಣಿ ಎಂಬ ಅರ್ಥಬರುತ್ತದೆ. ಅದೊಮ್ಮೆ ಕೈಲಸ ಪರ್ವತದಿಂದ ವಿಹಾರಾರ್ಥವಾಗಿ ಶಿವ ಮತ್ತು ಪಾರ್ವತಿಯರು ಭೂಲೋಕಕ್ಕೆ ಬಂದಿದ್ದಾಗ ಈ ಸ್ಥಳದ ಸೌಂದರ್ಯದಿಂದ ಆಕರ್ಷಿತರಾಗಿ ಕೆಲ ಕಾಲ ಇಲ್ಲಿಯೇ ಇರಲು ನಿರ್ಧರಿಸುತ್ತಾರೆ. ಒಮ್ಮೆ ಪಾರ್ವತಿಯು ಇಲ್ಲಿಯ ನೀರಿನ ಚಿಲುಮೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕೆಯ ಕಿವಿಯ ಮಣಿ ಚಿಲುಮೆಯಲ್ಲಿ ಬಿದ್ದು ಹೋಗುತ್ತದೆ. ಆ ಮಣಿಯನ್ನು ನೀರಿನಿಂದ ತೆಗೆಯುವಂತೆ ಪರಮೇಶ್ವರನು ತನ್ನ ಗಣಗಳಿಗೆ ಆದೇಶಿಸುತ್ತಾನೆ. ಅವರು ಎಷ್ಟೇ ಹುಡುಕಿದರೂ ಆ ಮಣಿ ಸಿಗದಿದ್ದಾಗ ಕೋಪಗೊಂಡ ಶಿವನು ತಾಂಡವ ನೃತ್ಯ ಮಾಡುತ್ತಾ, ತನ್ನ ಮೂರನೆಯ ಕಣ್ಣು ತೆಗೆದಾಗ ಅಲ್ಲಿ ಗುಡುಗು ಮಿಂಚು ಸಿಡಿಲುಗಳ ಅಬ್ಬರವಾಗಿ ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ.

shiv4

ಇದರಿಂದ ಬೆಚ್ಚಿದ ದೇವತೆಗಳು ತಾಂಡವರೂಪಿ ಶಿವನನ್ನು ಶಾಂತಗೊಳಿಸಲು ನಾಗಶೇಷನನ್ನು ಕೋರಿಕೊಳ್ಳುತ್ತಾರೆ. ದೇವಾನು ದೇವತೆಗಳ ಕೋರಿಕೆಯ ಮೇರೆಗೆ ನಾಗಶೇಷನು ಪಾತಾಳದಿಂದ ಕುದಿಯುವ ನೀರಿನ ಗುಳ್ಳೆಗಳನ್ನು ಒಮ್ಮೆಲೆ ತೀವ್ರ ರಭಸದಿಂದ ಮೇಲಕ್ಕೆ ಚಿಮ್ಮಿಸುತ್ತಾನೆ. ಹೊಳೆಯುವ ಮಣಿಗಳನ್ನು ಕಂಡ ಶಿವಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ ಎಂಬುದು ಐಹಿತ್ಯ. ಬಿಸಿನೀರಿನ ಗುಳ್ಳೆಗಳು ಪಾರ್ವತಿಯ ರತ್ನವನ್ನು ಹೋಲುವ ರೀತಿಯಲ್ಲಿ ಚಿಮ್ಮಲಾರಂಭಿಸಿದ ಕಾರಣ ಈ ಸ್ಥಳಕ್ಕೆ ಮಣಿಕರಣ್ ಎಂಬ ಹೆಸರು ಬಂದಿತೆಂದು ನಂಬಿಕೆ ಇದೆ. 1905ರಲ್ಲಿ ಈ ಪ್ರದೇಶದಲ್ಲಿ ಭೂಕಂಪ ಆಗುವವರೆಗೂ ಮಣಿಯ ರೀತಿಯ ಬಿಸಿ ನೀರಿನ ಬುಗ್ಗೆಗಳು ಚಿಮ್ಮುತ್ತಲೇ ಇದ್ದವಂತೆ.

ಶಿವನ ಮಂದಿರದಕ್ಕೆ ಭೇಟಿ ನೀಡುವ ಭಕ್ತಾದಿಗಳು ಅದರ ಪಕ್ಕದಲ್ಲೇ ಇರುವ ಸಿಖ್ಖರ ಪವಿತ್ರ ಕ್ಷೇತ್ರವಾದ ಗುರುದ್ವಾರಕ್ಕೂ ಭೇಟಿ ನೀಡುವುದು ಇಲ್ಲಿರುವ ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿಗೆ ಯಾರು ಎಷ್ಟು ಹೊತ್ತಿಗೆ ಬಂದರೂ ಊಟ ಸಿದ್ಧವಾಗಿರುತ್ತದೆ. ಇಲ್ಲಿನ ಲಂಗರ್ ಗಾಗಿ ಅಕ್ಕಿ, ಬೇಳೆ ಮತ್ತು ಕಡಲೆಕಾಳನ್ನು ಶಿವನ ಸಾನಿಧ್ಯವಿರುವ ಪಕ್ಕದಲ್ಲಿ ಪ್ರಾಕೃತಿಕವಾಗಿ ಭೂಮಿ ಅಡಿಯಿಂದ ಉಕ್ಕಿ ಬರುವ ಬಿಸಿನೀರಿನಲ್ಲೇ ಬೇಯಿಸುವುದು ಇಲ್ಲಿನ ವೈಶಿಷ್ಟ್ಯ. ತಾಮ್ರದ ಹಂಡೆಗಳಲ್ಲಿ ತೊಳೆದ ಅಕ್ಕಿಯನ್ನು ಹಾಕಿ ಅದಕ್ಕೆ ಗೋಣೀ ಚೀಲವನ್ನು ಮುಚ್ಚಿ ಬಿಸಿನೀರಿನ ಕುಂಡದೊಳಗೆ ಸುಮಾರು 20 ನಿಮಿಷದೊಳಗೆ ಇಟ್ಟಲ್ಲಿ ಊಟಕ್ಕೆ ಅನ್ನ ಸಿದ್ಧವಾಗುತ್ತದೆ. ಇದೇ ರೀತಿಯಾಗಿಯೇ ತರಕಾರಿಗಳನ್ನೂ ಸಹಾ ಬೇಯಿಸಿಯೇ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತಾದಿಗಳು ಗುರುದ್ವಾರದಲ್ಲಿ ಲಂಗರ್ ರೂಪದ ಪ್ರಸಾದವನ್ನು ಸವಿದು ಪುನೀತರಾಗುತ್ತಾರೆ.

ಭಕ್ತಾಧಿಗಳೂ ಮತ್ತು ಪ್ರವಾಸಿಗರೂ ಸಹಾ ಪ್ರಸಾದ ರೂಪದಲ್ಲಿ ಅನ್ನ ಬೇಯಿಸುವ ವ್ಯವಸ್ಥೆ ಇಲ್ಲಿದ್ದು, ಬಟ್ಟೆಯಲ್ಲಿ ಸಣ್ಣ ಸಣ್ಣದಾಗಿ ಅಕ್ಕಿಯನ್ನು ಕಟ್ಟಿ ಇಟ್ಟಿರುತ್ತಾರೆ. ಅದಕ್ಕೆ 20 ರೂಗಳನ್ನು. ನೀಡಿ ಖರೀದಿಸಿ, ಅದಕ್ಕೆ ಹಗ್ಗ ಕಟ್ಟಿ ಈ ಬಿಸಿ ನೀರಿನ ಕುಂಡದದೊಳಗಡೆ ಇಳಿಸಿದ ಕೆಲವೇ ಕ್ಷಣಗಳಲ್ಲಿ ಅಕ್ಕಿ ಅನ್ನವಾಗಿ ಬೆಂದಿರುತ್ತದೆ. ಹೆಚ್ಚಿನವರು ಅದನ್ನು ಅಲ್ಲೇ ಪ್ರಸಾದ ರೂಪದಲ್ಲಿ ಸೇವಿಸಿದರೆ, ಇನ್ನೂ ಕೆಲವರು ಪ್ರಸಾದ ರೂಪದಲ್ಲಿ ತಮ್ಮ ತಮ್ಮ ಮನೆಗಳಿಗೂ ಕೊಂಡೊಯ್ಯುತ್ತಾರೆ.

ಹಿಮಾಚಲ ಪ್ರದೇಶದಲ್ಲಿ ಇರುವ ಈ ಮಣಿಕರಣ್ ಪಟ್ಟಣ ಸಮುದ್ರ ಮಟ್ಟದಿಂದ ಸುಮಾರು 1760 ಮೀಟರ್ ಎತ್ತರದಲ್ಲಿದ್ದರೂ ವರ್ಷವಿಡೀ ತಣ್ಣನೆಯ ಹವಾಮಾನದಿಂದ ಕೂಡಿದ್ದು ಸರಾಸರಿ ತಾಪಮಾನವು ಸುಮಾರು 10 ಡಿಗ್ರಿ ಇರುತ್ತದೆ. ಈ ಕಾರಣದಿಂದಾಗಿಯೇ ಬಹುತೇಕ ಪ್ರಸಾಸಿಗರು ಏಪ್ರಿಲ್ ರಿಂದ ಜೂನ್ ವರೆಗಿನ ಬೇಸಿಗೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಬಯಸುತ್ತಾರೆ. ಶ್ರದ್ದೇಯ ಭಕ್ತಾದಿಗಳಂತೂ ಚಳಿಗಾಲ, ಮಳೆಗಾಲ, ಶೀತ ಇದಾವುದನ್ನೂ ಲೆಖ್ಖಿಸದೇ ವರ್ಷವಿಡೀ ಇಲ್ಲಿಗೆ ಭೇಟಿಕೊಡುತ್ತಾರೆ.

ರೈಲಿನಲ್ಲಿ ಬರುವುದಾದರೆ, ಇಲ್ಲಿಂದ 300 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಪಠಾಣ್‌ಕೋಟ್‌ಗೆ ಬಂದು ಅಲ್ಲಿಂದ ಸ್ಥಳೀಯ ವಾಹನದ ವ್ಯವಸ್ಥೆ ಮಾಡಿಕೊಂದು ಸುಮಾರು 8 ಗಂಟೆ ಪ್ರಯಾಣ ಮಾಡಿದಲ್ಲಿ ಮಣಿಕರಣ್ ತಲುಪಬಹುದಾಗಿದೆ. ಬಸ್ಸಿನಲ್ಲಿ ಬರುವುದಾದರೆ, ಕುಲ್ಲು ಅಥವಾ ಮನಾಲಿಗೆ ತಲುಪಿ ಅಲ್ಲಿಂದ ಕ್ಯಾಬ್ ಮೂಲಕ ಮಣಿಕರಣ್ ತಲುಪ ಬಹುದಾಗಿದೆ. ವಿಮಾನದ ಮೂಲಕ ಭುಂಟಾರ್ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಬಸ್ಸಿನಲ್ಲಿ 90 ನಿಮಿಷಗಳ ಕಾಲ ಪ್ರಯಾಣಿಸಿ 35 ಪ್ರಯಾಣಿಸಿದರೆ, ಮಣಿಕರಣ್ ತಲುಪಬಹುದಾಗಿದೆ.

ಸಿಖ್ಖರ ಮತ್ತು ಇತರೇ ಹಿಂದೂಗಳ ಭಾವೈಕ್ಯತೆಗಳ ಸಂಗಮದೊಂದಿಗೆ, ಬಿಸಿ ನೀರಿನ ಬುಗ್ಗೆಗಳ ಪ್ರಾಕೃತಿಕ ವಿಸ್ಮಯದ ಅದ್ಭುತವಾದ್ ವೀಡಿಯೋ ಇದೋ ನಿಮಗಾಗಿ

 

ಹಿಂದೂ ಸಿಖ್ ಭಾವೈಕ್ಯತೆಗಳ ಸಂಗಮದೊಂದಿಗೆ ಬಿಸಿ ನೀರಿನ ಬುಗ್ಗೆಗಳ ಪ್ರಕೃತಿಯ ವಿಸ್ಮಯವನ್ನೂ ನೋಡುವ ಸಲುವಾಗಿ ಸಮಯ ಮಾಡಿ ಕೊಂಡು ಮಣಿಕರಣ್ ನೋಡಬಹುದಲ್ಲವೇ?

ಏನಂತೀರೀ?