ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಅದೊಂದು ಕುಗ್ರಾಮ. ಹೆಸರಿಗಷ್ಟೇ ಅಗ್ರಹಾರ ಎಂದಿದ್ದರೂ, ಇದ್ದದ್ದು ಎಂಕ, ನಾಣಿ, ಸೀನ ಅಂತಾ ಹತ್ತಾರು ಸಂಪ್ರದಾಯಸ್ಥರ ಮನೆ. ಕೃಷಿ ಪ್ರಧಾನವಾಗಿದ್ದ ಆ ಊರಿನಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯದ ಗಂಧವೇ ಇಲ್ಲದಿದ್ದರೂ ಜನಪದ ಸಾಹಿತ್ಯಕ್ಕೇನು ಕೊರತೆ ಇರಲಿಲ್ಲ. ಅಂತಹ ಊರಿನಲ್ಲೊಂದು ಅನರ್ಘ್ಯ ರತ್ನದಂತೆ, ತಾಯಿಯ ಕಡೆಯ ದೂರ ಸಂಬಧಿಯೊಬ್ಬರು ಮಾಡುತ್ತಿದ್ದ ಗಮಕ ವಾಚನದಿಂದ ಆಕರ್ಷಿತರಾಗಿ, ಮಹಾಭಾರತದ ಏಕಲವ್ಯನಂತೆ, ದೈವದತ್ತವಾದ ಶರೀರ ಮತ್ತು ಶಾರೀರದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿಕಥೆ, ಗಮಕ ವಾಚನ, ವ್ಯಾಖ್ಯಾನವಲ್ಲದೇ, ನಾಟಕದ ಮಟ್ಟುಗಳು ಮತ್ತು ಅನೇಕ ದೇವರ ನಾಮಗಳನ್ನು ರಚಿಸಿದ ಸರಸ್ವತೀ ಪುತ್ರರಾಗಿದ್ದ ಹರಿಕಥಾ ಸಾಮ್ರಾಟ, ಗಮಕ ವಿದ್ವಾನ್ ಬಾಳಗಂಚಿ ನಂಜುಂಡಯ್ಯನವರೇ ನಮ್ಮ ಈ ದಿನದ ಕನ್ನಡ ಕಲಿಗಳು.

ಅದು 1900ನೇ ಇಸವಿ, ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಗ್ರಾಮವಾದ ಬಾಳಗಂಚಿಯಲ್ಲಿ ನಂಜುಂಡಯ್ಯನವರು ಜನಿಸುತ್ತಾರೆ. ದುರದೃಷ್ಟವಶಾತ್ ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ತಂದೆಯವರನ್ನು ಕಳೆದುಕೊಂಡ ಶ್ರೀಯುತರು ತಮ್ಮ ತಾಯಿ ಮತ್ತು ಅಕ್ಕನ ನೆರಳಿನಲ್ಲಿಯೇ ಬೆಳೆಯುತ್ತಾರೆ. ಅವರಿಗಿನ್ನೂ ಏಳೆಂಟು ವರ್ಷ ವಯಸ್ಸಿನಲ್ಲಿದ್ದಾಗ ಅವರ ತಂದೆಯ ವೈದೀಕದಂದೇ, ಮರಣ ಹೊಂದಿ ನಂತರ ಕೆಲವು ಗಂಟೆಯೊಳಗೇ ಪುನರ್ಜನ್ಮ ಪಡೆದ ಅಪರೂಪದ ವ್ಯಕ್ತಿಯೂ ಹೌದು. (ಇದರ ಸವಿರವಾದ ಕಥೆಗೆ ಈ ಲೇಖನ ಓದಿ.) ಹೇಳೀ ಕೇಳಿ ಅವರದ್ದು ಶಾನುಭೋಗರ ಕುಟುಂಬ ಜೊತೆಗೆ ಅವರ ಪೂರ್ವಜರು ಇಷ್ಟಪಟ್ಟು ಒಪ್ಪಿಕೊಂಡು ಅಪ್ಪಿಕೊಂಡಿದ್ದ ಮನೆಯ ಹಿಂದೆಯೇ ಇದ್ದ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಅರ್ಚಕರ ವೃತ್ತಿ. ಆದಾಗಲೇ ಬೆಳೆದು ದೊಡ್ಡವರಾಗಿ ಇದ್ದ ಅವರ ಅಣ್ಣಂದಿರು ಪೂರ್ವಜರು ಮಾಡಿಟ್ಟಿದ್ದ ಆಸ್ತಿಗಳನ್ನೆಲ್ಲಾ ಕರಗಿಸಿ ನಾಲ್ಕಾರು ಮಕ್ಕಳನ್ನು ಅಕಾಲಿಕವಾದ ವಯಸ್ಸಿನಲ್ಲಿಯೇ ನಿಧನರಾಗಿದ್ದ ಕಾರಣ ಕಾರಣ, ಅರ್ಚಕವೃತ್ತಿಯ ಜೊತೆಗೆ ಶ್ಯಾನುಭೋಗತನದ ಜೊತೆ ಇಡೀ ಅವಿಭಕ್ತ ಕುಟುಂಬದ ಹೊಣೆಗಾರಿಕೆಯೂ ಚಿಕ್ಕ ವಯಸ್ಸಿನಲ್ಲಿಯೇ ನಂಜುಂಡಯ್ಯನವರ ಹೆಗಲಿಗೇರುತ್ತದೆ.

ಆಗಿನ ಕಾಲಕ್ಕೆ ಸಾವಿರದಿಂದ ಎರಡು ಸಾವಿರದೈನೂರು ಜನರು ಇದ್ದಿರಬಹುದಾದಂತಹ ಕೃಷಿಕ ಪ್ರಧಾನವಾದ ಸುಂದರವಾದ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ಸಣ್ಣ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದ್ದು, ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ ಎಂದು ಹೇಳುತ್ತಾರೆ. ಇಂತಹ ಪುರಾಣ ಪ್ರಸಿದ್ಡ ಊರಲ್ಲದೇ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಶಾನುಭೋಗರಾಗಿದ್ದ ನಂಜುಡಯ್ಯನವರು ಸ್ವಾತಂತ್ರ್ಯ ಬಂದು ಶ್ಯಾನುಭೋಗತನ ಹೋಗುವವರೆಗೂ ಅಧಿಕಾರದಲ್ಲಿ ಇದ್ದರೂ ಒಂದು ಕಳ್ಳ ಲೆಕ್ಕವಾಗಲೀ ಸುಳ್ಳು ಲೆಕ್ಕವನ್ನಾಗಲೀ ಬರೆಯದೇ, ಒಂದು ಚೂರು ದರ್ಕಾಸ್ತು ಜಮೀನನ್ನು ಮಾಡಿಕೊಳ್ಳದೇ, ದೇವಸ್ಥಾನದ ಅರ್ಚಕ ವೃತ್ತಿಯಿಂದಾಗಿ ಉಂಬಳಿಯಾಗಿ ಬಂದಿದ್ದ ಜಮೀನಿನಲ್ಲಿಯೇ ಒಟ್ಟು ಕುಟುಂಬವನ್ನು ನಡೆಸಿಕೊಂಡು ಹೋಗುತ್ತಿದ್ದರು ಎಂದರೆ ಅವರ ಪ್ರಮಾಣಿಕತೆ ಎಷ್ಟಿತ್ತು ಎಂದು ತಿಳಿಯುತ್ತದೆ.

ಅದಾಗಲೇ ಹೇಳಿದಂತೆ ಚಿಕ್ಕವಯಸ್ಸಿನಲ್ಲಿ ಅವರ ತಾಯಿಯ ಜೊತೆ ಅವರ ದೂರದ ಸಂಬಂಧಿಕರ ಮನೆಗೆ ಯಾವುದೋ ಸಭೆಗೆ ಹೋಗಿದ್ದಾಗ ಅಲ್ಲಿ ಕೇಳಿದ ಗಮಕವಾಚನದಿಂದ ಆಕರ್ಷಿತರಾಗಿ ತಾವೇ, ಸ್ವಂತ ಪರಿಶ್ರಮದಿಂದ ಗಮಕ ವಾಚನ ಮತ್ತು ವ್ಯಾಖ್ಯಾನವನ್ನು ಕರಗತ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸುತ್ತ ಮುತ್ತಲಿನ ಊರುಗಳಲ್ಲಿ ಅಗಾಗ ನಡೆಯುತ್ತಿದ್ದ ಹರಿಕಥೆಗಳನ್ನು ನೋಡಿಯೇ ಅದನ್ನೂ ಆಭ್ಯಾಸ ಮಾಡಿಕೊಂಡಿದ್ದರು. ಸುಮಾರು ಆರು ಅಡಿಗಳಷ್ಟು ಎತ್ತರ ಮತ್ತು ಅದಕ್ಕೆ ತಕ್ಕಂತೆಯೇ ಇದ್ದ ಶರೀರದ ಜೊತೆಗೆ ದೈವ ದತ್ತವಾದ ಶಾರಿರದ ಅವರ ಗಾಯನಕ್ಕೆ ಮತ್ತು ಹರಿಕಥೆಗೆ ಮರುಳಾಗದವರೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದೇನೋ? ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಿಕ್ಕಮಗಳೂರು ನಂತಹ ಇನ್ನೂ ಹಲವಾರು ಜಿಲ್ಲೆಗಳ ಪ್ರಮುಖ ಹಳ್ಳಿ, ಪಟ್ಟಣಗಳ ರಾಮೋತ್ಸವ, ಗಣೇಶೋತ್ಸವ, ಊರ ಜಾತ್ರೆಗಳಲ್ಲಿ ಶ್ರೀ ನಂಜುಂಡಯ್ಯನವರ ಹರಿಕಥೆ ಇಲ್ಲವೇ ಗಮನ ವಾಚನ ಕಡ್ಡಾಯವಾಗಿ ಇದ್ದೇ ಇರುತ್ತಿತ್ತು. ಬೇಸಿಗೆ ಮುಗಿದು, ಮಳೆ ಬಾರದಿದ್ದ ಸಮಯದಲ್ಲಿ ಇವರ ಭಕ್ತಿಯಿಂದ ನಡೆಸಿಕೊಡುತ್ತಿದ್ದ ರಾಮ ಸಂಕೀರ್ತನೆಯ ಫಲವಾಗಿ ಧಾರಾಕಾರವಾದ ಮಳೆ ಸುರಿಯುತ್ತದೆ ಎಂಬ ನಂಬಿಕೆ ಇದ್ದದ್ದರಿಂದ ಹಲವಾರು ಹಳ್ಳಿಗಳಲ್ಲಿ ಹರಿಕಥೆಗಳನ್ನು ಏರ್ಪಡಿಸಿ ತಮ್ಮ ತಮ್ಮ ಊರುಗಳಿಗೆ ಮಳೆಯನ್ನು ಸುರಿಸಿಕೊಂಡ ಹಲವಾರು ನಿದರ್ಶನಗಳಿಂದಾಗಿ ಇವರನ್ನು ಜನರು ಪ್ರೀತಿಯಿಂದ ಮಳೇ ನಂಜುಂಡಯ್ಯನವರೆಂದೇ ಕರೆಯುತ್ತಿದ್ದರು ಎನ್ನುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಹರಿಕಥೆಗೆ ಅಂದಿನ ಕಾಲದಲ್ಲಿ ಕೊಡುತ್ತಿದ್ದ ಐದರಿಂದ ಹತ್ತು ರೂಪಾಯಿಗಳಲ್ಲಿ ಮುಕ್ಕಾಲು ಪಾಲು ಹಣವನ್ನು ಪಕ್ಕವಾದ್ಯದವರಿಗೇ ಕೊಟ್ಟು ಉಳಿದ ಹಣವನ್ನು ಸ್ವಂತಕ್ಕೆ ಇಟ್ಟು ಕೊಳ್ಳುತ್ತಿದ್ದ ಮಹಾನ್ ಜನಾನುರಾಗಿಗಳಾಗಿದ್ದರು.

ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಹೆಚ್ಚಾಗಿ ಓದದಿದ್ದರೂ, ಸ್ವಕಲಿಕೆಯ ಮೇರೆಗೆ ಸಂಗೀತ ಕಲಿತುಕೊಂಡರೇ, ಸಾಹಿತ್ಯ ಎನ್ನುವುದು ಅವರಿಗೆ ಅದು ಹೇಗೆ ಒಲಿಯಿತು ಎಂದು ಆವರಿಗೇ ಗೊತ್ತಿರಲಿಲ್ಲವಂತೆ. ಪದ್ಯದ ಜೊತೆ ಗದ್ಯದಲ್ಲೂ ಅಪಾರ ಪಾಂಡಿತ್ಯ ಪಡೆದಿದ್ದ ಶ್ರೀಯುತರು ಗರಳಪುರಿ ನಂಜುಂಡ ಎಂಬ ಅಂಕಿತ ನಾಮದೊಂದಿಗೆ ಕರ್ನಾಟಕದ ಅನೇಕ ಊರುಗಳ ದೇವರುಗಳ ಮೇಲೆ ದೇವರ ನಾಮಗಳನ್ನು ಬರೆದಿರುವುದಲ್ಲದೇ ಅದಕ್ಕೆ ಸೂಕ್ತವಾದ ಸಂಗೀತವನ್ನೂ ಅವರೇ ನೀಡಿರುವುದು ಅವರ ಹೆಗ್ಗಳಿಕೆ. ಇಂದಿಗೂ ಅವರ ಅನೇಕ ಕೃತಿಗಳನ್ನು ರಾಜ್ಯದ ಅನೇಕ ದೇವಸ್ಥಾನಗಳಲ್ಲಿನ ನಾದಸ್ವರ ವಾದಕರು ನುಡಿಸುತ್ತಿದ್ದಾರೆ. ಸಂಸ್ಜೃತದಲ್ಲಿದ್ದ ಭಗವದ್ಗೀತೆಯನ್ನು ಅತೀ ಸರಳವಾದ ಕನ್ನಡಕ್ಕೆ ತರ್ಜುಮೆ ಮಾಡಿರುವುದಲ್ಲದೇ, ದೇವರ ಕೃತಿಗಳ ಹೊರತಾಗಿ ಭಗವದ್ಗೀತೆಯ ಕುರಿತಂತೆಯೇ ಗೀತೇ ಶ್ರೀಹರಿ ಮುಖ ಜಾತೇ.. ಎಂದೂ, ಕನ್ನಡದಲ್ಲಿ ಸುಲಭವಾಗಿ ಮತ್ತು ಸುಲಲಿತವಾಗಿ ಅರ್ಥವಾಗುವಂತೆ ಮಹಾಭಾರತವನ್ನು ಬರೆದ ಅವರ ಆರಾಧ್ಯ ದೈವವಾಗಿ ಕುಮಾರ ವ್ಯಾಸರ ಕುರಿತಂತೆ ಕರ್ನಾಟ ವರಚೂತ ವನಚೈತ್ರ ಲಕ್ಷ್ಮೀಶಾ.. ಎಂಬ ಕೃತಿಗಳನ್ನು ರಚಿಸಿರುವುದಲ್ಲದೇ, ಅನೇಕ ಪೌರಾಣಿಕ ನಾಟಕಗಳಿಗೆ ಸಮಯೋಚಿತ ಕಂದ ಪದ್ಯಗಳು ಮತ್ತು ಮಟ್ಟುಗಳನ್ನು ರಚಿಸಿಕೊಟ್ಟಿದ್ದು ಆ ಪದ್ಯಗಳನ್ನು ಇಂದಿಗೂ ಅನೇಕ ಪೌರಾಣಿಕ ನಾಟಕದಲ್ಲಿ ಬಳಸುತ್ತಿರುವುದು ನಂಜುಂಡಯ್ಯನವರ ಹೆಗ್ಗಳಿಗೆಯಾಗಿದೆ.

ಗಮಕ ಎಂದರೆ ಕೇವಲ ಪದ್ಯಗಳನ್ನು ಸಂಗೀತ ರೂಪದಲ್ಲಿ ಪ್ರಸ್ತುತ ಪಡಿಸದೆ ಸಾಹಿತ್ಯಕ್ಕೆ ಅನುಗುಣವಾಗಿ ರಾಗ ಸಂಯೋಜಿಸಿ ಪ್ರತೀ ಪದಗಳಿಗೆ ಅನುಗುಣವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಏರಿಳಿತಗಳೊಂದಿಗೆ ಹಾಡುತ್ತಿದ್ದದ್ದು ಇನ್ನೂ ಹಲವರ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ ಎಂದರೂ ಸುಳ್ಳಲ್ಲ. ಅರಸುಗಳಿಗಿದು ವೀ..ರಾ… ಭೂ.. ವ್ಯೋ..ಮ ಪಾತಾ..ಳ.. ಹಾಡಿರುವುದನ್ನು ಕೇಳಿದ್ದರೆ ಉಳಿದವರ ಹಾಡುವುದನ್ನು ಖಂಡಿತವಾಗಿಯೂ ಇಷ್ಟಪಡುತ್ತಿರಲಿಲ್ಲ ಎಂದೇ ಹೇಳಬಹುದು. ಕೇವಲ ತಾವೊಬ್ಬರೇ ಸಂಗೀತ, ಸಾಹಿತ್ಯದಲ್ಲಿ ಪಾರಂಗತರಾಗದೇ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಜನರಿಗೆ ಸಂಗೀತ ಮತ್ತು ದೇವರ ನಾಮಗಳನ್ನು ಹೇಳಿ ಕೊಟ್ಟಿದ್ದಾರೆ. ಇಂದಿಗೂ ಅವರಿಂದ ಸಂಗೀತ, ನಾಟಕ ಮತ್ತು ಗಮಕ ಕಲಿತ ಅನೇಕ ಶಿಷ್ಯವೃಂದ ರಾಜ್ಯದ ಹಲವಾರು ಕಡೆಗಳಲ್ಲಿ ನಮಗೆ ಕಾಣ ಸಿಗುತ್ತಾರೆ.

ಕನ್ನಡ ಪ್ರಖ್ಯಾತ ಕವಿಗಳಾಗಿದ್ದ ಗೊರೂರು ರಾಮಸ್ವಾಮಿ ಐಯ್ಯಂಗಾರರು ಮತ್ತು ಚಿಕ್ಕಮಗಳೂರಿನ ಹಿರೇಮಗಳೂರಿನ ಕೋಡಂಡರಾಮ ಸ್ವಾಮೀ ದೇವಸ್ಥಾನದ ಅರ್ಚಕರು ಮತ್ತು ವಿದ್ವಾಂಸರಾಗಿದ್ದ ಶ್ರೀ ಸವ್ಯಸಾಚಿಗಳಲ್ಲದೇ (ಕನ್ನಡದ ಪೂಜಾರಿ ಕಣ್ಣನ್ ಅವರ ತಂದೆ), ಹಿರಿಯ ಗಮಕಿಗಳಾಗಿದ್ದ ಬಿ. ಎಸ್. ಎಸ್.ಕೌಶಿಕ್ (ನಟ ನಿರ್ದೇಶಕ ಎಂ.ಡಿ. ಕೌಶಿಕ್ ಅವರ ತಂದೆ) ಮತ್ತು ಬಿಂದೂರಾಯರ ಜೊತೆ ಗಳಸ್ಯ ಗಂಟಸ್ಯ ಗೆಳೆತನ ನಂಜುಂಡ್ಯಯ್ಯನವರಿಗಿತ್ತು.

  • ಗಮಕ, ಹರಿಕಥೆ ಮತ್ತಿತರೇ ಲಲಿತಕಲೆಗಳಲ್ಲಿ ಅವರ ಈ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಎಪ್ಪತ್ತರ ದಶಕದಲ್ಲಿ ಕರ್ನಾಟಕ ರಾಜ್ಯಸರ್ಕಾರದ ಪ್ರಶಸ್ತಿಗೂ ಭಾಜರಾಗಿದ್ದಾರೆ.
  • ಕರ್ನಾಟಕ ಗಮಕಕಲಾ ಪರಿಷತ್ತು ಹೊರತಂದ ಪ್ರಖ್ಯಾತ ಗಮಕಿಗಳ ಕುರಿತಾದ ಪುಸ್ತಕದಲ್ಲಿ ಬಾಳಗಂಚಿ ನಂಜುಂಡಯ್ಯನವರ ಕುರಿತಾದ ಲೇಖನವಿದೆ
  • ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಸನ್ಮಾನಿತರಾಗಿದ್ದಾರೆ.

ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾದ ಪರಿಣಾಮ ಹಾಡುವುದಕ್ಕೂ, ಬರೆಯುವುದಕ್ಕೂ ಆಗದೇ ಪರಿತಪಿಸುತ್ತಲೇ, ತಮ್ಮ ಎಂಬತ್ಮೂರನೇ ವಯಸ್ಸಿನಲ್ಲಿ ನಿಧನರಾದರೂ ಇಂದಿಗೂ ಅವರು ರಚಿಸಿದ ಕೃತಿಗಳಿಂದಾಗಿ ಶಾಶ್ವತವಾಗಿ ಕನ್ನಡಿಗರ ಮನ ಮನೆಗಳಲ್ಲಿ ನೆಲೆಯೂರಿದ್ದಾರೆ.

ಸಂಗೀತ ಸಾಹಿತ್ಯದ ಗಂಧ ಗಾಳಿ‌ ಇಲ್ಲದ ಕುಗ್ರಾಮದ, ಕಿತ್ತು ತಿನ್ನುತ್ತಿದ್ದ ಬಡತನದ ಒಟ್ಟು ಕುಟುಂಬದ ನಡುವೆಯೂ, ಸ್ವಂತ ಪರಿಶ್ರಮದಿಂದ ಸಂಗೀತ, ಗಮಕ, ಹರಿಕಥೆಗಳಲ್ಲದೇ ವಾಗ್ಗೇಯಕಾರರಾಗಿ, ಕನ್ನಡದ ಸಾರಸ್ವತ ಲೋಕಕ್ಕೆ ಎಲೆಮರೆಕಾಯಿಯಂತೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದ, ನಾಲ್ಕಾರು ದಶಕಗಳ ಕಾಲ ನಿಸ್ವಾರ್ಥವಾಗಿ ಅರ್ಚಕರಾಗಿ ಭಗವಂತನ ಸೇವೆ ಮಾಡಿದ, ಶ್ಯಾನುಭೋಗತನ ನಡೆಸಿಯೂ ಕೈಕೆಸರು ಮಾಡಿಕೊಳ್ಳದ, ಸರಳ ಸ್ವಾಭಿಮಾನಿ ಜನಾನುರಾಗಿ, ‌ನಿಸ್ವಾರ್ಥಿಯಾಗಿದ್ದ ಬಾಳಗಂಚಿ ಶ್ರೀ ಗಮಕಿ ನಂಜುಂಡಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

ಅದೊಂದು ಹೆಸರಾಂತ ಗುರುಕುಲ ಬಹಳಷ್ಟು ವಿದ್ಯಾರ್ಥಿಗಳು ಆ ಗುರುಗಳ ಬಳಿ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಒಮ್ಮೆ ಗುರುಗಳಿಗೆ ತಮ್ಮ ಶಿಷ್ಯಂದಿರನ್ನು ಪರೀಕ್ಷಿಸುವ ಮನಸಾಗಿ, ಎಲ್ಲರನ್ನೂ ಒಟ್ಟುಗೂಡಿಸಿ ನಮಗೂ ಮತ್ತು ಭಗವಂತನಿಗೂ ಇರುವ ಅಂತರವೆಷ್ಟು? ಎಂಬ ಸರಳ ಪ್ರಶ್ನೆಯನ್ನು ಕೇಳಿದರು. ಗುರುಗಳ ಈ ಸರಳ ಪ್ರಶ್ನೆಗೆ ಬಹಳವಾಗಿ ತಲೆಕೆಡಿಸಿಕೊಂಡ ಶಿಷ್ಯಂದಿರು, ಒಬ್ಬ ಭೂಮಿ ಆಕಾಶದಷ್ಟು ದೂರವೆಂದರೆ ಮತ್ತೊಬ್ಬ, ಭೂಮಿ ಪಾತಾಳದಷ್ಟು ದೂರ ಗುರುಗಳೇ ಎಂದ ಹೀಗೆ ಒಬ್ಬಬ್ಬೊರು ಒಂದೊಂದು ರೀತಿಯಾಗಿ ಉತ್ತರಿಸಿದಾಗ ಸಮಾಧಾನರಾಗದ ಗುರುಗಳು. ಆ ಭಗವಂತ ನಮ್ಮಿಂದ ಕೇವಲ ಕೂಗಳತೆಯ ದೂರದಲ್ಲಿದ್ದಾನೆ ಎಂದರು. ಭಗವಂತ ನಮ್ಮಿಂದ ಕೂಗಳತೆಯ ದೂರದಲ್ಲೇ? ಅದು ಹೇಗೆ ಗುರುಗಳೇ ಎಂದು ಶಿಷ್ಯರು ಪ್ರಶ್ನಿಸಿದಾಗ ಸಮಚಿತ್ತದಿಂದ ಗುರುಗಳು, ನಮಗೆ ಸಂಕಟ ಬಂದ ಕೂಡಲೇ ಭಗವಂತಾ ನಮ್ಮನ್ನು ಸಂಕಟದಿಂದ ಪಾರು ಮಾಡು ಎಂದು ಪ್ರಾರ್ಥಿಸುತ್ತೇವೆ. ಅದೇ ರೀತಿ ಸಂಭ್ರಮಿಸುವ ಸಂದರ್ಭದಲ್ಲಿ ಭಗವಂತಾ ಏನಿದು ನಿನ್ನ ಲೀಲೇ ಎಂದು ಕೊಂಡಾಡುತ್ತೇವೆ. ಯಾರಾದರೂ ನಮ್ಮ ಸ್ಥಿತಿ ಗತಿ ಮತ್ತು ಆರೋಗ್ಯ ಹೇಗಿದೆ ಎಂದು ವಿಚಾರಿಸಿದಲ್ಲಿ ಎಲ್ಲಾ ಭಗವಂತನ ದಯೆಯಿಂದ ಇಲ್ಲಿಯವರೆಗೂ ಚೆನ್ನಾಗಿದೆ ಎನ್ನುತ್ತೇವೆ. ಹೀಗೆ ಪ್ರತಿ ಕ್ಷಣದಲ್ಲೂ ನಾವು ಭಗಂತನ ಸ್ಮರಣೆ ಮಾಡಿದಾಗಲೆಲ್ಲಾ ಭಗವಂತನು ಯಾವುದೋ ಒಂದು ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿಯೇ ತೀರುತ್ತಾನೆ. ಯಾವುದೋ ದೂರದ ಪ್ರಯಾಣದ ವೇಳೆಯಲ್ಲಿ ದಾರಿ ತಪ್ಪಿ ಅಯ್ಯೋ ಭಗವಂತಾ!! ಎಲ್ಲಿದ್ದೀನಪ್ಪಾ? ಇಲ್ಲಿಂದ ಪಾರಾಗುವುದು ಹೇಗಪ್ಪಾ? ಎಂದು ಯೋಚಿಸುತ್ತಿರುವಾಗಲೇ ದಾರಿ ಹೋಕನೊಬ್ಬ ಕಾಣ ಸಿಕ್ಕಿ, ನಾವು ಹೋಗಬೇಕಿದ್ದ ಸ್ಥಳದ ದಾರಿಯನ್ನು ತೋರಿದಾಗ ಆ ಸಂದರ್ಭದಲ್ಲಿ ಆತನೇ ದೇವರಹಾಗೆ ಕಾಣುತ್ತಾನಲ್ಲವೇ, ದುಷ್ಯಾಸನ ದ್ರೌಪತಿಯ ವಸ್ತ್ರಾಪಹರಣ ಮಾಡುತ್ತಿದ್ದಾಗ ದ್ರೌಪತಿಯನ್ನು ಕೃಷ್ಣ ರಕ್ಷಿಸಿದ್ದು ಭಕ್ತಿಯಿಂದ ಕರೆ ಮಾಡಿದಾಗಲೇ, ಮೊಸಳೆಯ ಬಾಯಿಯಿಂದ ಗಜೇಂದ್ರನನ್ನು ರಕ್ಷಿಸಿದ್ದೂ ಭಕ್ತಿಯಿಂದ ಕರೆ ಮಾಡಿದಾಗಲೇ , ಹಾಗಾಗಿ ಭಗವಂತ ನಮ್ಮ ಕೂಗಳತೆಯ ದೂರದಲ್ಲಿಯೇ ಇದ್ದಾನೆ. ನಾವು ಅವನನ್ನು ಭಕ್ತಿಯಿಂದ ಕೂಗಿ ಕರೆಯಬೇಕಷ್ಟೇ. ಎಂದಾಗ ಶಿಷ್ಯರೆಲ್ಲರೂ ಗುರುಗಳ ಉತ್ತರಕ್ಕೇ ಸಂತೃಪ್ತರಾಗಿ ಸಂತೋಷದಿಂದ ತಲೆದೂಗುತ್ತಾರೆ.

ನನ್ನನ್ನು ಹೆತ್ತು , ಹೊತ್ತು, ಸಾಕಿ, ಸಲಹಿ, ತಕ್ಕ ಮಟ್ಟಿಗೆ ವಿದ್ಯೆಯನ್ನು ಕಲಿಸಿ, ವಿವೇಕದೊಂದಿಗೆ ಸಂಸ್ಕಾರವಂತನನ್ನಾಗಿ ಮಾಡಿ, ನನ್ನ ಇಂದಿನ ಎಲ್ಲಾ ಏಳಿಗೆಗೆ ಕಾರಣಕರ್ತರಾದವರು ನನ್ನ ಪ್ರತ್ಯಕ್ಷ ದೇವರುಗಳಾದ ನನ್ನ ತಂದೆ ತಾಯಿಯರು. ಎಲ್ಲದ್ದಕ್ಕೂ ಅಮ್ಮನನ್ನೇ ಆಶ್ರಯಿಸಿ, ಅಮ್ಮನ ಮುದ್ದಿನ ಮಗನಾಗಿದ್ದ ನಾನು, ಹತ್ತು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಾಗ, ನನ್ನ ಬೆನ್ನಲುಬಾಗಿ ನಿಂತವರೇ ನನ್ನ ತಂದೆಯವರು. ನೆಚ್ಚಿನ ಮಡದಿಯನ್ನು ಕಳೆದು ಕೊಂಡಿದ್ದ ಅವರು, ತಾಯಿಯನ್ನು ಕಳೆದು ಕೊಂಡಿದ್ದ ನಾನು ಪರಸ್ಪರ ಸಂತೈಸಿಕೊಳ್ಳುತ್ತಾ ತೀರಾ ಹತ್ತಿರದವರಾಗಿ ಬಿಟ್ಟೆವು. ಅಪ್ಪನ ಮೇಲಿನ ಗೌರವಕ್ಕೂ ಮಿಗಿಲಾಗಿ, ತಂದೆ ಮಗನ ಸಂಬಂಧಕ್ಕೂ ಮಿಗಿಲಾಗಿ ಅತ್ಯುತ್ತಮ ಗೆಳೆಯರಾಗಿಬಿಟ್ಟೆವು. ಬೆಳಿಗ್ಗೆ ಒಟ್ಟೊಟ್ಟಿಗೇ ಏಳುತ್ತಾ, ವಾಯು ವಿಹಾರಕ್ಕೇ ಜೊತೆ ಜೊತೆಯಾಗಿಯೇ ಹೋಗುತ್ತಾ, ಮಾರ್ಗದ ನಡುವಿನಲ್ಲಿ ಪ್ರಸಕ್ತ ವಿದ್ಯಮಾನಗಳು, ದೇಶದ ಆಗುಹೋಗುಗಳು, ಕ್ರೀಡೆ, ಸಂಗೀತ, ಸಾಹಿತ್ಯ, ಬಿಡುಗಡೆಯಾದ ಹೊಸಾ ಪುಸ್ತಕಗಳನ್ನು ವಿಮರ್ಶಿಸುತ್ತಾ, ಕಡೆಗೆ ಯಾವುದೂ ಇಲ್ಲದಿದ್ದಲ್ಲಿ ನಮ್ಮ ಕುಟುಂಬದ ವಿಷಯಗಳನ್ನು ಚರ್ಚಿಸುತ್ತಾ ತೀರಾ ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಹತ್ತಿರವಾಗಿ ಬಿಟ್ಟೆವು. ಆರೋಗ್ಯ ತಪಾಸಣೆಗಿರಲಿ, ಅಂಗಡಿಗಿರಲೀ, ತವರೂರಿನ ಜಾತ್ರೆಗಳಿಗಾಗಲೀ , ಯಾವುದೇ ಸಭೆ ಸಮಾರಂಭವಿರಲೀ ಒಟ್ಟಿಗೇ ಹೋಗಿ ಒಟ್ಟಿಗೇ ಬರುತ್ತಿದ್ದೆವು. ಕಛೇರಿಯಿಂದ ಅಕಸ್ಮಾತ್ ಒಂದೋಂದು ದಿನ ಬರಲು ತಡವಾಯಿತೆಂದರೆ ಹತ್ತಾರು ಸಲಾ ಕರೆ ಮಾಡಿ, ಮಗೂ ಎಲ್ಲಿದ್ದೀಯಾ? ಮನೆಗೆ ಬರಲು ಎಷ್ಟು ಹೊತ್ತಾಗುತ್ತದೆ ಎಂದ ವಿಚಾರಿಸಿ ಮನೆಗೆ ಬರುವ ವರೆಗೂ ಎಚ್ಚರವಾಗಿರುತ್ತಿದ್ದು ಮನೆಗೆ ಬಂದಾಕ್ಷಣ ಗೇಟ್ ತೆಗೆದು ಕಾರ್ ನಿಲ್ಲಿಸಿ ಮನೆಯೊಳಗೆ ಬರುವಷ್ಟರಲ್ಲಿ ಆ ದಿನದ ಎಲ್ಲಾ ವಿವರಗಳನ್ನು ಚುಟುಕಾಗಿ ಹೇಳಿಬಿಡುತ್ತಿದ್ದರು.

ಅಂದು 2017 ಆಕ್ಟೋಬರ್ 1, ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಒಂದು ದಿನದ ಕ್ರಿಕೆಟ್ ಪಂದ್ಯ. ಎರಡೂ ತಂಡಗಳು 2-2 ಪಂದ್ಯಗಳನ್ನು ಗೆದ್ದು ಅಂತಿಮ ಪಂದ್ಯ ಬಹಳ ಕುತೂಹಲವಾಗಿದ್ದು, ಭಾರತ ತಂಡ ರೋಚಕವಾಗಿ 5ನೇ ಪಂದ್ಯ ಗೆದ್ದಾಗ, ಇಬ್ಬರೂ ಒಟ್ಟಿಗೆ ಅವರ ಕೊಠಡಿಯಲ್ಲೇ ಕುಳಿತು ನೋಡಿ ಗೆಲುವನ್ನು ಸಂಭ್ರಮಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಕಣ್ಣಿಗೆ ಕಟ್ಟಿದ ಹಾಗಿದೆ. ತಡ ರಾತ್ರಿಯರೆಗೂ ಪಂದ್ಯಾವಳಿಯನ್ನೇ ಮೆಲುಕು ಹಾಕುತ್ತ ಜೋರಾಗಿ ಕೇಕೇ ಹಾಕುತ್ತಿದ್ದವರಿಗೆ, ನನ್ನ ಮಡದಿ ರೀ… ಎಂದಾಗಲೇ ಸಮಯದ ಪರಿವಾಗಿ ನಾವಿಬ್ಬರೂ ಪಂದ್ಯ ಗೆದ್ದ ಸಂತೋಷದಿಂದಲೇ ಮಲಗಿದ್ದ ಸವಿನೆನಪು. ಮಾರನೇಯ ದಿನ ಅಕ್ಟೋಬರ್ 2, ರಾಷ್ಟ್ರಪಿತ ಗಾಂಧೀಜಿ ಮತ್ತು ರಾಷ್ಟ್ರಕಂಡ ಅತ್ಯುತ್ತಮ ಧೈರ್ಯವಂತ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಗಳ ಹುಟ್ಟಿದ ಹಬ್ಬ.

ರಾತ್ರಿ ತಡವಾಗಿ ಮಲಗಿದ್ದ ವಯಸ್ಸಾದವರನ್ನು ಎಬ್ಬಿಸುವುದು ಬೇಡ ಎಂದು ಪ್ರತಿನಿತ್ಯದಂತೆ ಬೆಳಗಿನ ಜಾವವೇ ಎದ್ದು ಮೆಲ್ಲಗೆ ಬಾಗಿಲು ತೆಗೆದು ವ್ಯಾಯಮಕ್ಕೆಂದು ಹೊರಡಲು ಅನುವಾದಾಗ, ಮಗೂ ಬಂದೇ ತಡಿ ಎಂದಾಗ, ಅಣ್ಣಾ, ರಾತ್ರಿ ತುಂಬ ತಡವಾಗಿ ಮಲಗಿದ್ದೀರಿ, ನೀವು ಇನ್ನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಿ, ನಾನು ಜಿಮ್ಗೆ ಹೋಗಿ ಬರುತ್ತೇನೆ ಎಂದು ಬಾಗಿಲಿಗೆ ಬೀಗ ಹಾಕಿಕೊಂಡ ಹೋಗಿದ್ದೆ. ಜಿಮ್ ಮುಗಿಸಿ ಬರುವಷ್ಟರಲ್ಲಿ ತಂದೆಯವರು ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಎಂದಿನಂತೆ ಮನೆಗೆ ಬರುತ್ತಿದ್ದ ಮೂರು ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರು. ಅಷ್ಟರಲ್ಲಿ ಅಡುಗೆ ಮನೆಯಿಂದ ಘಮ ಘಮ ದೋಸೆಯ ವಾಸನೆ. ರೀ.. ಮಾವನವರಿಗೆ ತಿಂಡಿ ಕೊಟ್ಟು ನೀವು ಸ್ನಾನ ಮುಗಿಸಿಬಿಡಿ, ನಿಮಗೂ ಬಿಸಿ ಬಿಸಿ ದೋಸೆ ಹಾಕಿ ಕೊಡುತ್ತೇನೆ ಎಂದು ನಮ್ಮಾಕಿ ಹೇಳಿದಾಗ, ಅಡುಗೆ ಮನೆಯಿಂದ ದೋಸೆ ಚಟ್ನಿಯ ತಟ್ಟೆಯನ್ನು ತಂದೆಯವರಿಗೆ ತಂದು ಕೊಟ್ಟಿದ್ದೆ. ಎರಡು ಮೂರು ಬಾರಿ ದೋಸೆ ತಿಂದು ನೆತ್ತಿ ಹತ್ತಿದಂತಾಗಿ ತಿಂದ ದೋಸೆಯನ್ನು ಕಕ್ಕಿಕೊಂಡಾಗ ಅಲ್ಲಿಯೇ ಪಕ್ಕದಲ್ಲಿದ್ದ ನಾನು ಅವರನ್ನು ಸಂತೈಸಿ ಬೆನ್ನು ಸವರುತ್ತಿದ್ದಾಗ, ಅವರ ಮೈ ಸ್ವಲ್ಪ ಸುಡುತ್ತಿತ್ತು. ಕೂಡಲೇ ಕುಟುಂದ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಗಾಬರಿ ಪಡುವಂತಹದ್ದೇನಿಲ್ಲಾ, ಆಸ್ಪತ್ರೆಗೆ ಕರೆದು ಕೊಂಡು ಬಂದು ಬಿಡು ಒಮ್ಮೆ ಪರಿಕ್ಷಿಸಿಯೇ ಬಿಡುವಾ ಎಂದಾಗ, ನಾನು ಮತ್ತು ನನ್ನ ಆಕೆ ತುರಾತುರಿಯಲ್ಲಿ ಸ್ನಾನ ಮುಗಿಸಿ ಮಗಳಿಗೆ ದೇವರ ಪೂಜೆ ಮಾಡಲು ತಿಳಿಸಿ ತಂದೆಯವರೇ ಸಹಜವಾಗಿ ನಡೆದುಕೊಂಡು ಬಂದು ಕಾರನ್ನೇರಿ, ಕ್ಷಣ ಮಾತ್ರದಲ್ಲಿಯೇ ಹತ್ತಿರದಲ್ಲಿದ್ದ ನರ್ಸಿಂಗ್ ಹೋಮ್ ತಲುಪಿದ್ದೆವು.

ತಂದೆಯವರನ್ನು ಕೂಲಂಕುಶವಾಗಿ ಪರೀಕ್ಷಿಸಿದ ಅಲ್ಲಿಯ ವೈದ್ಯರು ECG Report ನೋಡಿ ಭಯ ಪಡುವಂತಹದ್ದೇನಿಲ್ಲಾ, ಆದರೂ ನೀವು ದೊಡ್ಡ ಆಸ್ಪತ್ರೆಯಲ್ಲಿ ಯಾವುದಕ್ಕೂ ಒಮ್ಮೆ ಹೃದಯರೋಗ ತಜ್ಞರನ್ನು ನೋಡಲು ತಿಳಿಸಿ, ಪ್ರಥಮ ಚಿಕಿತ್ಸೆ ಕೊಟ್ಟು ಅವರದೇ Ambulanceನಲ್ಲಿ ತಂದೆಯವರನ್ನು ಕೂಡಲೇ ಕರೆದುಕೊಂಡು ಹೋಗಲು ಹೇಳಿದರು. ತಂದೆಯವರೇ ಖುದ್ದಾಗಿ ನಡೆದುಕೊಂಡು ಆಸ್ಪತ್ರೆಯಲ್ಲಿದ್ದ ಕೆಲವು ಪರಿಚಯಸ್ಥರನ್ನು ಮಾತನಾಡಿಸಿ Ambulanceನಲ್ಲಿ ಕುಳಿತು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? ಎಂದು ವಿಚಾರಿಸಿ ರಾಮಯ್ಯ ಆಸ್ಪತ್ರೆಗೆ ಹೊಗುತ್ತಿರುವುದನ್ನು ಖಚಿತ ಪಡಿಸಿಕೊಂಡು ಮುಖಕ್ಕೆ ಆಮ್ಲಜನಕದ ಮುಖವಾಡವನ್ನು ತಾವೇ ಧರಿಸಿ ಹಾಗೇ ಸುಮ್ಮನೆ ಮಲಗಿ ಕೊಂಡಾಗಲೂ ನನ್ನ ದೇವರು ನನ್ನ ಕೂಗಳತೆಯ ದೂರದಲ್ಲಿಯೇ ಇದ್ದರು ವಿಧಿಯಾಟದ ಮುಂದೆ ಯಾರದ್ದೂ ನಡೆಯುವುದಿಲ್ಲ ಎನ್ನುವಂತೆ ಅವರ ಕರ್ಮಭೂಮಿಯಾದ ಬಿಇಎಲ್ ಕಾರ್ಖಾನೆ ದಾಟುತ್ತಲೇ ಎರಡು ಬಾರಿ ಜೋರಾಗಿ ಉಸಿರಾಡಿ ಮೂರನೆಯದ್ದಕ್ಕೆ ಸುಮ್ಮನಾದಾಗ ಅವರ ಕೂಗಳತೆ ಅಂತರದಲ್ಲಿಯೇ ನಾನಿದ್ದೆ. ಆದರೆ ಕೂಗಿದರೆ ಓಗೊಡಲು ನನ್ನ ದೇವರೇ ಬದುಕಿರಲಿಲ್ಲ.

ಹೌದು ಇಂದಿಗೆ ಸರಿಯಾಗಿ ಮೂರು ವರ್ಷದ ಹಿಂದೆ ನನ್ನನ್ನೂ ಮತ್ತು ನನ್ನ ತಂದೆಯವರನ್ನು ಆ ಭಗವಂತ ದೂರ ಮಾಡಿದನಾದರೂ, ಅವರನ್ನು ನೆನಸಿಕೊಂಡಾಗಲೆಲ್ಲಾ ಮಗೂ ಎಂದು ನನ್ನನ್ನು ಕರೆಯುವುದು ನನಗೆ ಮಾತ್ರ ಕೇಳಿಸುತ್ತದೆ. ಹೊಸದದ್ದೇನಾದರೂ ಓದಿದಾಗ, ಯಾವುದೇ ಪದದ ಅರ್ಥ ತಿಳಿಯದಿದ್ದಾಗ, ಮನೆಯ ಮುಂದೆ ದುರ್ಗಾ ದೇವಿಯ ಮರವಣಿಗೆಯ ವಾದ್ಯದವರ ಸದ್ದಾದಾಗ, ನಮ್ಮ ಮಕ್ಕಳು ಹೆಚ್ಚಿನದ್ದೇನಾದರೂ ಸಾಧಿಸಿದಾಗ, ಮಗ ತಾತನ ರೀತಿಯನ್ನು ಅನುಕರಣೆ ಮಾಡಿದಾಗ, ಮನೆಯಲ್ಲಿ ವಿಶೇಷ ಅಡುಗೆ ಮಾಡಿದಾಗ, ಅದರಲ್ಲೂ ತಂಬುಳಿ, ರಾಗಿ ಮುದ್ದೆ ಮತ್ತು ಹುಗ್ಗಿಯನ್ನು ಮಾಡಿದಾಗ, ಜೋರಾದ ಮಳೆ ಬೀಳುತ್ತಿರುವಾಗ, ಮಲ್ಲೇಶ್ವರಂ ನೆಶ್ಯದ ಅಂಗಡಿ ಮುಂದೆ ಹೋದಾಗ, ಎಲ್ಲಿಯಾದರೂ ಸಂಗೀತ ಇಲ್ಲವೇ ಗಮಕ ವಾಚನ ಕೇಳಿದಾಗ, ಟಿವಿಯಲ್ಲಿ ಕ್ರಿಕೆಟ್ ಪಂದ್ಯ ಪ್ರಸಾರವಾಗುತ್ತಿದ್ದಾಗ, ಯಾರಾದರೂ ತಂದೆಯವರ ಸ್ನೇಹಿತರು ಅಥವಾ ದೂರದ ಸಂಬಂಧಿಕರು ಎಲ್ಲಾದರೂ ಸಿಕ್ಕಿ, ನೀನು ಶಿವಮೂರ್ತಿಯವರ ಮಗ ಶ್ರೀಕಂಠ ಅಲ್ಲವೇ, ಪಾಪ ಒಳ್ಳೆಯ ದೇವರಂಥಾ ಮನುಷ್ಯ, ಒಳ್ಳೆಯ ಸಂಪ್ರದಾಯಸ್ಥರು, ವಾಗ್ಮಿಗಳು, ಸುಸಂಸ್ಕೃತರು, ಎಲ್ಲಕ್ಕೂ ಹೆಚ್ಚಾಗಿ ಕವಿಗಳು, ಗಮಕಿಗಳು ಅಷ್ಟು ಆರೋಗ್ಯವಂತರಾಗಿದ್ದವರನ್ನು ಆ ಭಗವಂತ ಇಷ್ಟು ಬೇಗ ಕರೆಸಿಕೊಂಡು ಬಿಟ್ಟನಲ್ಲಾ ಎಂದಾಗಲೆಲ್ಲಾ, ಹೇ ನನ್ನ ತಂದೆಯವರು ಎಲ್ಲಿ ಹೋಗಿದ್ದಾರೆ? ನನ್ನ ಕೂಗಳತೆಯ ದೂರದಲ್ಲೇ ಇದ್ದಾರಲ್ಲಾ ಎನ್ನುವ ಭಾಸವಾಗುತ್ತದೆ.

ನನ್ನ ಪೂಜ್ಯ ತಂದೆಯವರು ಇಂದು ನನ್ನೊಂದಿಗೆ ಭೌತಿಕವಾಗಿ ಇಲ್ಲವಾದರೂ, ಮಾನಸಿಕವಾಗಿ ಖಂಡಿತವಾಗಿಯೂ ನನ್ನ ಕೂಗಳತೆಯ ದೂರದಲ್ಲಿಯೇ ಇದ್ದಾರೆ. ಅವರ ಅಕಾಲಿಕ ಅಗಲಿಕೆ ನಮ್ಮನ್ನು ಕಾಡುತ್ತದಾದರೂ, ಅವರ ಆಶೀರ್ವಾದ ನಮ್ಮನ್ನು ಸದಾ ಕಾಪಾಡುತ್ತಲೇ ಇರುತ್ತದೆ.

ಏನಂತೀರೀ?