ರಂಗಕರ್ಮಿ ಆರ್. ಎಸ್. ರಾಜಾರಾಂ

raj2

ಅರೇ ಈ ರಾಜಾರಾಂ ಅಂದ್ರೇ ಯಾರು ಅಂತಾ ಗೊತ್ತಗ್ಲಿಲ್ವಾ? ಅದೇ ರೀ, ರಮೇಶ್ ಭಟ್ ಮತ್ತು ಕ್ರೇಜೀ ಕರ್ನಲ್ ಸೀರಿಯಲ್ಲಿನಲ್ಲಿ ರಮೇಶ್ ಭಟ್ ಜೊತೆ ಇರ್ತಾ ಇದ್ರಲ್ಲಾ ಗೊತ್ತಾಯ್ತಾ? ಅರೇ ಇನ್ನೂ ಗೊತ್ತಾಗ್ಲಿಲ್ವಾ ಅದೇ ರೀ ಗಾಳಿಪಟದ ಸಿನಿಮಾದಲ್ಲಿ ನಮ್ಮ ದೂದ್ ಪೇಡ ದಿಗಂತ್ ಆವರ ತಾತನ ಪಾತ್ರದಲ್ಲಿ ಅನಂತ್ ನಾಗ್ ಹಂದಿ ಹೊಡೆಯಲು ಪ್ರಚೋದಿಸಿದ್ರಲ್ಲಾ ಅವರೇ ಅಂದಕ್ಷಣಾ ಓ.. ಅವ್ರಾ.. ಆ ಬಿಳೀ ತಾತ ಗೊತ್ತು ಬಿಡಿ ಬಹಳ ಚೆನ್ನಾಗಿ ಅಭಿನಯಿಸ್ತಾರೆ. ಸಂಜೆ ಹೊತ್ತು ಮಲ್ಲೇಶ್ವರದ 15-18 ನೇ ಕ್ರಾಸಿನ ಕಡೆ ವಾಕಿಂಗ್ ಮಾಡ್ತಾ ಇರ್ತಾರೆ. ಅವರದ್ದು ಮತ್ತು ಭಾರ್ಗವೀ ನಾರಾಯಣ್ ಅವರ ಜೋಡಿ ಬಹಳಾನೇ ಪ್ರಸಿದ್ಧ ಅಲ್ವೇ? ಅಂತ ಆವ್ರೇ ಹೇಳುವಷ್ಶು ಪ್ರಖ್ಯಾತರು.

ನೋಡಿದಾಕ್ಷಣ ಅರೇ ಇವರು ಯಾರೋ ನಮ್ಮ ತಾತನ ತರಹಾನೇ ಇದ್ದಾರಲ್ಲಾ! ಎನ್ನುವಷ್ಟು ಅಪ್ಯಾಯಮಾನತೆ,‌ ಇಳೀ ವಯಸ್ಸಿನಲ್ಲಿಯೂ ತುಂಟತನ ತೋರುವ ತಾತ, ಹೀಗೆ ತಮ್ಮ ಸಹಜ ಅಭಿನಯದ‌ ಮೂಲಕ ರಂಗಭೂಮಿ, ಹಿರಿತೆರೆ, ಕಿರಿತೆರೆಯಲ್ಲಿ ಸುಮಾರು ಆರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ರಂಗಕರ್ಮಿ ರಾಜಾರಾಂ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ.

rajam3

ಆರ್. ಎಸ್. ರಾಜಾರಾಂ ಅವರು ಮೂಲತಃ ಅಪ್ಪಟ ಬೆಂಗಳೂರಿನ ಮಲ್ಲೇಶ್ವರದವರು. ಅವರ ತಂದೆ ಶ್ರೀ ಜಿ.ಎಸ್‌. ರಘುನಾಥರಾವ್‌ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲಸ ನಿಮಿತ್ತ ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ಗೆ ವರ್ಗವಣೆಯಾಗಿದ್ದಾಗ 1938ರ ಜುಲೈ 10ರಂದು ಶಾರದಾಬಾಯಿಯವರ ಗರ್ಭದಲ್ಲಿ ಜನಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಮಲ್ಲೇಶ್ವರದ ಮನೆಗೆ ಹಿಂದಿರುಗುತ್ತಾರೆ ಮಲ್ಲೇಶ್ವರದ ಸರ್ಕರಿ ಶಾಲೆಯಲ್ಲಿಯೇ ತಮ್ಮ ಹತ್ತನೇ ತರಗತಿಯವರೆಗೂ ವಿದ್ಯಾಭ್ಯಾಸವನ್ನು ಮುಗಿಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಿ.ಯೂ.ಸಿಯನ್ನು ಮುಗಿಸುವ ಜೊತೆ ಜೊತೆಯಲ್ಲಿಯೇ ಗೆಳೆಯರೊಡನೆ ಮನೆಯ ಹತ್ತಿರವೇ ಇದ್ದ ಟೈಪಿಂಗ್ ಇನಿಸ್ತಿಟ್ಯೂಟ್ ಒಂದಕ್ಕೆ ಸೇರಿ ತಮ್ಮ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮುಗಿಸಿಕೊಳ್ಳುತ್ತಾರೆ. ನಂತರ ತಮ್ಮ ಪದವಿಗಾಗಿ ನರಸಿಂಹರಾಜಾ ಕಾಲೋನಿಯಲ್ಲಿರುವ ಆಚಾರ್ಯ ಪಾಠಶಾಲೆಯಲ್ಲಿ ಬಿ.ಎ ಪದವಿಗೆ ಸೇರಿದ ಸಮಯದಲ್ಲಿಯೇ ಯು.ಪಿ.ಎಸ್.ಸಿ ಮುಖೇನ ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧದಲ್ಲಿ ಬೆರಳಚ್ಚುಗಾರರಾಗಿ ಉದ್ಯೋಗಕ್ಕೆ ಸೇರಿ 37 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿ ಹಂತ ಹಂತವಾಗಿ ಭಢ್ತಿಯನ್ನು ಪಡೆದು ಕಡೆಗೆ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದರು.

ಶಾಲಾ ದಿನಗಳಿಂದಲೇ ನಾಟಕ, ಏಕಪಾತ್ರಾಭಿನಯ, ವೇಷಭೂಷಣ ಸ್ಪರ್ಧೆಗಳಲ್ಲಿ ಭಾಗವಹಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಕಾರಣ ಸಹಜವಾಗಿ ಚಿಕ್ಕವಯಸ್ಸಿನಲ್ಲಿಯೇ ರಂಗಭೂಮಿಯತ್ತ ಆಕರ್ಷಿತರಾಗಿ ತಮ್ಮ ಮನೆಯ ಅಕ್ಕ ಪಕ್ಕದಲ್ಲೇ ಇದ್ದ ಸ್ನೇಹಿತರೊಂದಿಗೆ ರಸಿಕ ರಂಜನಿ ಕಲಾವಿದರು ಎಂಬ ತಂಡವನ್ನು ಸ್ಥಾಪಿಸಿಕೊಂಡು ಅಂದಿನ ಕಾಲದ ಪ್ರಸಿದ್ಧ ನಾಟಕಕಾರಾದ ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ. ಗುಂಡಣ್ಣ ಮುಂತಾದವರ ನಾಟಕಗಳನ್ನು ಮಾಡುತ್ತಾರೆ. ತಮ್ಮ ಮನೆಗಳಿಂದ ತಂದಿದ್ದ ಪಂಚೆಗಳನ್ನೇ ಪರದಯನ್ನಾಗಿಸಿಕೊಂಡು ಹತ್ತು ಪೈಸಾ, ನಾಲ್ಕಾಣೆ ಎಂಟಾಣೆಯ ಪ್ರವೇಶ ದರದ ಟಿಕೆಟ್ ನೊಂದಿಗೆ ತಮ್ಮ ನಾಟಕಗಳನ್ನು ಅಲ್ಲಿಯೇ ಇದ್ದ ಸೇವಾ ಸದನದಲ್ಲಿ ಪ್ರದರ್ಶನ ಮಾಡುತ್ತಿರುತ್ತಾರೆ.

ಬಿಎ ಪದವಿ ಕಲಿಯಲೆಂದು ಸೇರಿದ್ದ ಆಚಾರ್ಯ ಪಾಠಶಾಲೆ ಅವರಲ್ಲಿದ್ದ ಕಲಾವಿದನಿಗೆ ಅತ್ಯತ್ತಮ ವೇದಿಕೆಯಾಗುವುದಲ್ಲದೇ ಅಲ್ಲಿಯೇ ಅವರಿಗೆ ಅನೇಕ ಹವ್ಯಾಸೀ ನಾಟಕ ತಂಡಗಳ ಪರಿಚಯವಾಗುತ್ತದೆ. ಬೆಳ್ಳಂ ಬೆಳಿಗ್ಗೆ ಚುಮು ಚುಮು ಚಳಿಯಲ್ಲಿ 6 ಗಂಟೆಗೆ ಮಲ್ಲೇಶ್ವರಂ ನಿಂದ ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗಿ ಬೆಳಗಿನ ತರಗತಿಗಳನ್ನು ಮುಗಿಸಿಕೊಂಡು 10:30ಕ್ಕೆ ಅಲ್ಲಿಂದ ಹೊರಟು 11:00 ಕ್ಕೆ ಸರಿಯಾಗಿ ವಿಧಾನ ಸೌಧದಲ್ಲಿ ಕೆಲಸಕ್ಕೆ ಹಾಜರಾಗಿ ಸಂಜೆ 5:30ಕ್ಕೆ ಮೆಜೆಸ್ಟಿಕ್ ಭಾಗದಲ್ಲಿ ನಡೆಯುತ್ತಿದ್ದ ನಾಟಕಗಳ ತಾಲೀಮು ಮುಗಿಸಿಕೊಂಡು ಮತ್ತೆ ಮನೆಗೆ ಸೇರುವಷ್ಟರಲ್ಲಿ ಗಂಟೆ ಹತ್ತು ಇಲ್ಲವೇ ಹನ್ನೊಂದಾಗುತ್ತಿತ್ತು. ಅದೆಷ್ಟೋ ಬಾರಿ ಕೋಪಗೊಂಡ ಅವರ ತಂದೆ ಮನೆಯ ಮುಂದಿನ ಬಾಗಿಲನ್ನು ಹಾಕಿಕೊಂಡಾಗ, ಅವರ ಪ್ರೀತಿಯ ಅಜ್ಜಿ ಹಿತ್ತಲಿನ ಬಾಗಿಲಿನಿಂದ ಮೊಮ್ಮಗನನ್ನು ಮನೆಯೊಳಗೆ ಕರೆದುಕೊಂಡು ಅಷ್ಟು ತಡರಾತ್ರಿಯಲ್ಲಿಯೂ ಅನ್ನ ಕಲಸಿ ಹಾಕುವ ಮೂಲಕ ರಾಜಾರಾಂ ಅವರ ಕಲೆಗೆ ಪ್ರೋತ್ಸಾಹ ಕೊಟ್ಟಿದ್ದರು.

ನೋಡ ನೋಡುತ್ತಿದ್ದಂತೆಯೇ ರಾಜಾರಾಂ ಅವರು ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಹರಿಕಥಾ ವಿದ್ವಾಂಸರಾಗಿದ ಶ್ರೀ ಗುರುರಾಜಲು ನಾಯ್ಡು ರವರ ಜೈ ಭಾರತ್ ನಾಟಕ ಮಂಡಳಿಯೊಂದಿಗೆ ಸಂಪರ್ಕ ಪಡೆಯುವ ಮೂಲಕ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದವು ಇವರ ಕೆಲವು ಪ್ರಸಿದ್ಧ ನಾಟಕಗಳಾಗಿದ್ದವು.

ರಾಜಾರಾಂ 1964ರಲ್ಲಿ ತಮ್ಮ ಸಚಿವಾಲಯ ಉದ್ಯೋಗಿಗಳೊಡನೆ ಸೇರಿಕೊಂಡು ಸಚಿವಾಲಯ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿಕೊಂಡು ಅದರ ಮೂಲಕ ದೇಶಾದ್ಯಂತ ಅನೇಕ ನಾಟಕ ಸ್ಪರ್ಥೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪುಸ್ಕಾರಗಳಿಗೆ ಭಾಗಿಯಾದರೂ, ಇಲ್ಲಿ ಹೆಚ್ಚಿನ ನಾಟಕದ ಚಟುವಟಿಕೆಗಳು ನಡೆಯುತ್ತಿರಲಿಲ್ಲವಾದ್ದರಿಂದ, ವಿಧಾನ ಸೌಧದಲ್ಲೇ ಇದ್ದ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅತಿಥಿ ಕಲಾವಿದರಾಗಿ ಪಾಲ್ಗೊಂಡು ಸರ್ವೇಜನಾಃ ಸುಖಿನೊ ಭವಂತು ಎಂಬ ನಾಟಕವಲ್ಲದೇ ಕುಟುಂಬ‌ ಕಲ್ಯಾಣ ಯೋಜನೆಯ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಇದೇ ಸಮಯದಲ್ಲಿಯೇ ಅಲ್ಲಿಗೆ ಅತಿಥಿ ಕಲಾವಿದರಾಗಿ ನಟಿಸುತ್ತಿದ್ದ ಸಿ. ಆರ್. ಸಿಂಹ, ಕಪ್ಪಣ್ಣ, ಲೋಕೇಶ್, ಗುಬ್ಬಿ ವೀರಣ್ಣನವ್ವರ ಮಗ ದೇವಾನಂದ್. ಮುಂದೆ ಹೆಸರಾಂತ ನಿರ್ಮಾಪಕರಾಗಿ ಖ್ಯಾತ ಗಳಿಸಿದ ಕೃಷ್ಣಂರಾಜು ಮತ್ತು ಶಂಕರ್ ರಾವ್ ಅವರುಗಳ ಪರಿಚಯವಾಗಿ ಇಂದಿಗೂ ಹವ್ಯಾಸಿ ರಂಗದಲ್ಲಿ ಪ್ರಖ್ಯಾತವಾಗಿರುವ ನಟರಂಗ ತಂಡವನ್ನು 1972ರಲ್ಲಿ ಸ್ಥಾಪನೆ ಮಾಡಿ ಅದರ ಮೂಲಕ ಎಚ್ಚೆಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.

rajram1

ಹೀಗೆ ಒಂದಾದ ಮೇಲೆ ಒಂದು ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ ಸಿ. ಆರ್ ಸಿಂಹ ಅವರ ಮೂಲಕ ನಾಟಕಗಳಲ್ಲಿ ಸಂಗೀತ ಸಂಯೋಜನೆ ಮಾಡುತ್ತಿದ್ದ ಮತ್ತೊಬ್ಬ ದಿಗ್ಗಜ ಸಿ. ಅಶ್ವಥ್ ಅವರ ಪರಿಚಯವಾಗಿ ಮುಂದೆ ರಾಜಾರಾಂ ಮತ್ತು ಅಶ್ವಥ್ ಅವರ ಜೋಡಿ ಹಾಲು ಜೇನಿನಂತಾಗುತ್ತದೆ. ಹಾರ್ಮೋನಿಯಂ ಹಿಡಿದು ತಾರಕ ಸ್ವರದಲ್ಲಿ ಅಶ್ವಥ್ ಹಾಡಲು ಆರಂಭಿಸಿದರೆ ಅವರಿಗೆ ಡೋಲಕ್ ಮೂಲಕ ರಾಜಾರಾಂ ಸಾಥ್ ನೀಡುತ್ತಿದ್ದರು. ನಾಟಕಗಳಿಗಾಗಿ ರೈಲಿನಲ್ಲಿ ದೂರ ಪ್ರಯಾಣ ಮಾಡುತ್ತಿರುವಾಗ ಅನೇಕ ಸ್ಥಳಗಳಲ್ಲಿ ಕೆಲವು ಗಂಟೆಗಳ ಕಾಲ ರೈಲು ನಿಂತರೆ ಇವರಿಬ್ಬರೂ ರೈಲಿನಿಂದ ಇಳಿದು ಪ್ಲಾಟ್ಫಾರ್ಮಿನ ಮೇಲೆ ಕುಳಿತು ಹಾಡುತ್ತಿದ್ದರೆ ಸುತ್ತಲೂ ಇರುವವರಿಗೆ ರಸದೌತಣ ಎಂದು ಬೇರೆ ಹೇಳಬೇಕಿಲ್ಲ.

ಹೀಗೆ ನಾನಾ ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ 1971ರಲ್ಲಿ ತಮ್ಮ ಬಾಲ್ಯಸ್ನೇಹಿತರೊಬ್ಬರ ಸಹಾಯದಿಂದ ಪಾಪಾ ಪುಣ್ಯ ಚಿತ್ರದಲ್ಲಿ ಪ್ರಪ್ತಥಮವಾಗಿ ಬಣ್ಣ ಹಚ್ಚುವ ಅವಕಾಶ ಲಭಿಸಿ, ಪಂಡರೀ ಬಾಯಿ ಮತ್ತು ಕಲ್ಯಾಣ್ ಕುಮಾರ್ ಅವರೊಂದಿಗೆ ಶ್ರೀ ಶೈಲದಲ್ಲಿ ಚಿತ್ರೀಕರಣದಲ್ಲಿ ಭಾಗಿಗಳಾಗುತ್ತಾರೆ. ನಂತರ 1972ರಲ್ಲಿಯೇ ಭಲೇ ಹುಚ್ಚಾ ಚಿತ್ರದಲ್ಲಿ ಜೋಕರ್ ಶ್ಯಾಮ್ , ಕೆಮಡಿಯನ್ ಗುಗ್ಗು ಅವರೊಟ್ಟಿಗೆ ನಟ ಸಾರ್ವಭೌಮ ರಾಜಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಲಭಿಸುತ್ತದೆ. ದುರಾದೃಷ್ಟವೆಂದರೆ ಅದೇ ಸಿನಿಮಾ ಅಣ್ಣಾವ್ರ ಜೊತೆ ಅಭಿನಯಿಸಿದ ಮೊದಲ ಮತ್ತು ಕಡೆಯ ಸಿನಿಮಾ ಆಗುತ್ತದೆ. ನಂತರ ಕನ್ನಡದ ಬಹುತೇಕ ಎಲ್ಲಾ ನಾಯಕ ನಟರೊಂದಿಗೆ ಅಭಿನಯಿಸಿದ ಹೆಗ್ಗಳಿಕೆ ರಾಜಾರಾಂ ಅವರದ್ದಾಗಿದೆ.

ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರು ರಾಜಾರಾಂ ಅವರು ಬಾಲು ಮಹೇಂದ್ರ ಅವರ ನಿರ್ದೇಶನದಲ್ಲಿ ಕಮಲಹಾಸನ್ ಅವರೊಂದಿಗೆ ನಟಿಸಿದ ಚಿತ್ರವನ್ನು ನೋಡಿ ಪ್ರಥಮಬಾರಿಗೆ ತಮ್ಮ ಚಿತ್ರದಲ್ಲಿ ರಾಜಾರಾಂ ಅವರಿಗೊಂದು ಅವಕಾಶ ನೀಡುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರದ್ದೂ ರಾಮ ಲಕ್ಷ್ಮಣ ಜೋಡಿಯಂತಾಗಿ ಅವರ ಪ್ರತಿಯೊಂದು ಚಿತ್ರದಲ್ಲಿಯೂ ಒಂದಲ್ಲಾ ಒಂದು ಪ್ರಮುಖ ಪಾತ್ರ ರಾಜಾರಾಂ ಅವರಿಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಅದೇ ಸಂಪ್ರದಾಯವನ್ನು ಸಿದ್ದಲಿಂಗಯ್ಯ ಅವರ ಶಿಷ್ಯ ಕೆ.ವಿ. ರಾಜು ಅವರು ಸಹಾ ಮುಂದುವರೆಸಿ ತಮ್ಮ ಬಹುತೇಕ ಚಿತ್ರಗಳಲ್ಲಿ ರಾಜಾರಾಂ ಅವರಿಗೆ ಅವಕಾಶ ಕೊಟ್ಟಿದ್ದರು.

raj4

1971 ರಿಂದ ಪಾಪ ಪುಣ್ಯದ ಮುಖಾಂತರ ಆರಂಭವಾಗಿ ಕೆಲವರ್ಷಗಳ ಹಿಂದೆ ಬಿಡುಗಡೆಯಾದ ಜೈಲಲಿತಾ ಸಿನಿಮಾ ಅವರ ಕೊನೆಯ ಸಿನಿಮಾವಾಗಿದ್ದು ಒಟ್ಟು 62 ಚಿತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ಟರ ನಿರ್ದೇಶನದ, ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅಭಿನಯಿಸಿದ್ದ ಗಾಳಿಪಟದಲ್ಲಿ ದೂಡ್ ಪೇಡಾ ದಿಂಗತ್ ತಾತಾನಾಗಿ ಅಭಿನಯಿಸಿದ್ದು ಮತ್ತು ಲೋಕೇಶ್ ಅವರ ನಿರ್ದೇಶನದ ಭುಜಂಗಯಯನ ದಶಾವತಾರ ಚಿತ್ರದ ಅವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿತ್ತು.

ಕನ್ನಡಲ್ಲಿ ಖಾಸಗೀ ಛಾನೆಲ್ಗಳು ಆರಂಭವಾದ ಮೇಲಂತೂ ರಾಜಾರಾಂ ಅವರಿಗೆ ಭರಪೂರ ಕೆಲಸ ಸಿಕ್ಕಿತ್ತು. ರಮೇಶ್ ಭಟ್ ಮತ್ತು ಗಿರಿಜಾ ಲೋಕೇಶ್ ರೊಂದಿಗೆ ಅಭಿನಯಿಸಿದ ಕ್ರೇಜಿ ಕರ್ನಲ್ ಎಂಬ ಧಾರಾವಾಹಿಯಲ್ಲಿ ಅವರಿಬ್ಬರ ಸರಿಸಮನಾಗಿ ರಾಜಾರಾಂ ಅವರ ಪಾತ್ರಾಭಿನಯವೂ ಬಹಳ ಮೆಚ್ಚಿಗೆಗಳಿಸಿತ್ತಲ್ಲದೇ, ಸಿಹಿ ಕಹಿ ಚಂದ್ರು ಅವರ ಅನೇಕ ಧಾರವಾಹಿಗಳದೇ ಇನ್ನೂ ಹತ್ತು ಹಲವರು ನಿರ್ದೇಶಕರ ಜೊತೆ ನೂರಾರು ಸಂಚಿಕೆಗಳಲ್ಲಿ ತಮ್ಮ ಸಹಜ ಅಭಿನಯದ ಮುಖಾಂತರ ಕನ್ನಡಿಗರ ಹೃನ್ಮನಗಳನ್ನು ಗೆದ್ದಿದ್ದರು.

ತಮ್ಮ ಪಾತ್ರಗಳ ಮುಖಾಂತರ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದರೂ ಬದುಕಿನಲ್ಲಿ ಬಹಳವಾಗಿ ನೊಂದಿದ್ದರು. ಆರ್ಥಿಕವಾಗಿ ಸಧೃಢರಾಗಿದ್ದದೂ ಅವರ ಇಬ್ಬರು ಮಕ್ಕಳು ಹುಟ್ಟು ಕುರುಡರಾಗಿದ್ದು ಅವರಿಗೆ ಬಹಳ ನೋವನ್ನುಂಟು ಮಾಡಿತ್ತು. ಇಬ್ಬರಿಗೂ ಉತ್ತಮವಾದ ಶಿಕ್ಷಣವನ್ನು ಕೊಡಿಸಿ ಹಿರಿಯ ಮಗ ತನ್ನದೇ ಆದ ಅಂಧ ಹೆಣ್ಣು ಮಕ್ಕಳ ಶಾಲೆಯನ್ನು ನಡೆಸುತ್ತಿದ್ದರೆ, ಇನ್ನು ಎರಡನೆಯ ಮಗ ಕಾರ್ಪರೇಷನ್ ಬ್ಯಾಂಕಿನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕಾಲ ಮೇಲೇ ತಾವು ನಿಂತು ಸಂಸಾರವನ್ನು ನಿಭಾಯಿಸುತ್ತಿದ್ದಾರೆ.

ರಾಜಾರಾಂ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಮಯೂರ ಕಲಾರಂಗ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಗೌರವಗಳು ಸಂದಿವೆ.

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ, ಧಾರವಾಹಿ ಮತ್ತು ನಾಟಕಗಳಿಂದ ಸ್ವಲ್ಪ ದೂರವಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದ ಹಿರಿಯ ರಂಗಕರ್ಮಿ ಆರ್‌.ಎಸ್‌.ರಾಜಾರಾಂ ಅವರು ಕೋವಿಡ್‌ ಸೋಂಕಿನಿಂದಾಗಿ ಏಪ್ರಿಲ್ 10, 2021ರಂದು ನಮ್ಮಲ್ಲರನ್ನೂ ಅಗಲಿದ್ದಾರೆ. ದೈಹಿಕವಾಗಿ ರಾಜಾರಾಂ ಅವರು ನಮ್ಮನ್ನಗಲಿದ್ದರೂ ಅವರ ತುಂಟಾಟಿಕೆಯ ಅಭಿನಯದ ಮೂಲಕ ಕನ್ನಡಿಗರ ಮನ ಮನೆಗಳಲ್ಲಿ ಶಾಶ್ವತವಾಗಿ ಮನೆಮಾಡಿದ್ದಾರೆ ಎಂದರೂ ಅತಿಶಯೋಕ್ತಿಯಾಗದು ಅಲ್ವೇ?

ಕೆಲವೊಮ್ಮೆ ಜನರು ಬದುಕಿರುವಾಗ ಅವರ ಬಗ್ಗೆ ಹೊಗಳುವುದಕ್ಕೆ ಕಂಜೂಸ್ ತನ‌‌ ತೋರಿಸುವವರೇ ಸತ್ತ ನಂತರ ವಾಚಾಮಗೋಚರವಾಗಿ ಹೋಗಳುವಾಗ,‌ ಅರೇ ಇದೇ ಮಾತುಗಳನ್ನು ಅವರು ಬದುಕಿದ್ದಾಗ ಮಾಡಿದ್ದರೆ ಇನ್ನೂ ಒಂದೆರಡು ದಿನ ಹೆಚ್ಚಿಗೆ ಬದುಕುತ್ತಿದ್ದರೇನೋ ಅನಿಸುತ್ತದೆ ಎನ್ನುವುದು ಸತ್ಯವಾದರೂ,‌ ಹೇಗಾದರೂ ಇರುತ್ತಾರಲ್ಲಾ, ಅವರನ್ನು ಹೊಗಳಿದರೆ ಎಲ್ಲಿ ಅಟ್ಟಕ್ಕೇರಿ ಕುಳಿತು ಬಿಡುತ್ತಾರೋ ಎನ್ನುವ ಸಂಶಯವೂ ಇರಬಹುದೇನೋ? ಇಲ್ಲವೇ ಅವರು ಇಷ್ಟು ಬೇಗ ಅಗಲುತ್ತಾರೆ ಎನ್ನುವ ಮನೋಭಾವವೂ ಮತ್ತೊಂದು ಕಾರಣ ಇರಬಹುದು.

ಹಾಗಾಗಿ ದಯವಿಟ್ಟು ಯಾರನ್ನಾದರೂ ಹೊಗಳ ಬೇಕು ಇಲ್ಲವೇ ಏನಾದರೂ ಕೊಡಬೇಕು ಎನಿಸಿದಲ್ಲಿ‌ ನಾಳೆಯ ಕೆಲಸವ ಇಂದೇ ಮಾಡು, ಇಂದಿನ ಕೆಲಸವ‌ ಇಂದೇ ಮಾಡು ಎಂದು ಥಟ್ ಅಂತ ಮಾಡಿಬಿಡಿ. ಯಾರಿಗೆ‌ ಗೊತ್ತು ನಾಳೆ ನಾವಿರ್ತಿವೋ ಇಲ್ಲಾ ಅವರು ಇರ್ತಾರೋ ಎಂದು.

ಏನಂತೀರೀ?

ನಿಮ್ಮವನೇ ಉಮಾಸುತ

ಮಕರ ಸಂಕ್ರಾಂತಿ

ದೈನಂದಿನದ ಚಟುವಟಿಗಳಿಂದ ಬೇಸತ್ತವರಿಗೆ ಮುದ ನೀಡಲು ನಮ್ಮ ಹಿರಿಯರು ಹಬ್ಬದ ಆಚರಣೆಗಳನ್ನು ರೂಢಿಗೆ ತಂದರು. ಕೇವಲ ಮಾನವರು ಮಾತ್ರವಲ್ಲದೇ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಕು ಪ್ರಾಣಿಗಳಿಗೂ ತುಸು ನೆಮ್ಮದಿ ಮತ್ತು ಸಂತೋಷವನ್ನು ನೀಡಲು ಕೆಲವು ವಿಶೇಷ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೆ ಪ್ರಕೃತಿ, ಪ್ರಾಣಿ, ಪಶು ಮತ್ತು ಮಾನವವರು ಎಲ್ಲರೂ ಕೂಡಿ ಸಂತಸದಿಂದ ವೈವಿದ್ಯಮಯವಾಗಿ ಸಂಭ್ರಮಿಸುವ ಹಬ್ಬವೇ ಮಕರ ಸಂಕ್ರಾಂತಿ. ಇದನ್ನು ಸುಗ್ಗಿಯ ಹಬ್ಬವೆಂದೂ ಕರೆಯಲಾಗುತ್ತದೆ.

ಇಡೀ ಭೂಸಂಕುಲದ ಎಲ್ಲಾ ಚಟುವಟಿಕೆಗಳು ಸೂರ್ಯ ಮತ್ತು ಚಂದ್ರನ ಮೇಲೆಯೇ ಅವಲಂಭಿತವಾಗಿದೆ. ಪ್ರತಿ ಸಂವತ್ಸರ(ವರ್ಷ)ವನ್ನು ಎರಡು ಅಯನಗಳಾಗಿ ವಿಂಗಡಿಸಲಾಗಿದೆ.ಉತ್ತರಾಯಣ ( ಪುಷ್ಯಮಾಸದಿಂದ ಆಷಾಢಮಾಸದವರೆಗೆ) ಮತ್ತು ದಕ್ಷಿಣಾಯನ ( ಆಷಾಡ ಮಾಸದಿಂದ ಪುಷ್ಯಮಾಸದವರೆಗೆ)ಹೀಗೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಕಾಲವನ್ನು ಮಕರ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನು ಪ್ರತೀ ರಾಶಿಯಲ್ಲಿ ಒಂದೊಂದು ತಿಂಗಳ ಕಾಲವಿದ್ದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ. ಸಾಧಾರಣವಾಗಿ ಪ್ರತೀ ವರ್ಷ ಜನವರಿ 14 ಅಥವಾ 15ರಂದು ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ಮೂಲಕ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುವ ಕಾರಣ, ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ.

bheeshma.jpeg

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿರುವ ಕಾರಣ, ಈ ಸಮಯದಲ್ಲಿ ಮೃತರಾದವರು ಸೀದಾ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನೂ ಸಹಾ ಭಗದ್ಗೀತೆಯಲ್ಲಿ ಆಯಣಗಳಲ್ಲಿ ಉತ್ತರಾಯಣವೇ ಅತಿ ಶ್ರೇಷ್ಠ ಎಂದಿದ್ದಾನೆ. ಹಾಗಾಗಿಯೇ ಕುರುಕ್ಷೇತ್ರದ ಯುದ್ಧದಲ್ಲಿ ಭೀಷ್ಮ ಪಿತಾಮಹರು ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಇಚ್ಛಿಸದೇ, ಉತ್ತರಾಯಣದ ಪುಣ್ಯಕಾಲದವರೆಗೂ ಅರ್ಜುನ ನಿರ್ಮಿಸಿದ ಬಾಣಗಳ ಮಂಚದ ಮೇಲೆ ದಿನಗಳನ್ನು ಕಳೆದು ಅಷ್ಟಮಿ ದಿನದಂದು ಇಚ್ಛಾ ಮರಣಿಯಾಗುತ್ತಾರೆ.

ಇನ್ನು ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣ ಕಾಲದಲ್ಲಿಯೇ. ಹಾಗಾಗಿ ಬಹುತೇಕ ವಿವಾಹಗಳು, ನಾಮಕರಣ, ಚೌಲ-ಉಪನಯನ ಮತ್ತು ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು ಉತ್ತರಾಯಣಕಾಲದಲ್ಲಿ ಹೆಚ್ಚಾಗಿ ಮಾಡಲ್ಪಡುತ್ತದೆ. ಮಾಘ ಮಾಸದಲ್ಲಿ ನದಿಗಳಲ್ಲಿ ಸ್ನಾನ ಮಾಡಿ ಗಂಗೆ ಪೂಜೆ ಮಾಡಿದರೂ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನು ಹಳ್ಳಿಗಾಡಿನಲ್ಲಿ ಬೇರೆಲ್ಲಾ ಹಬ್ಬಗಳಿಗಿಂತ ಈ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಆಗ ತಾನೆ ಬೆಳೆದ ಫಸಲುಗಳೆಲ್ಲವನ್ನೂ ಕಟಾವು ಮಾಡಿ ಕಣಜಗಳಲ್ಲಿ ರಾಶಿ ರಾಶಿಯಾಗಿ ತಂಬಿರುವ ಪರಿಣಾಮವಾಗಿ ಇದನ್ನು ಸುಗ್ಗಿ ಹಬ್ಬ ಎಂದೂ ಕರೆಯುತ್ತಾರೆ. ಸುಗ್ಗಿಯು ಬಂದಿತು, ಹಿಗ್ಗನು ತಂದಿತು, ನಮ್ಮಯ ನಾಡಿನ ಜನಕೆಲ್ಲ ಎಂಬ ಜನಪದ ಹಾಡು ಬಹಳ ಪ್ರಸಿದ್ಧವಾಗಿದೆ.

ಸಂಕ್ರಾಂತಿ ಹಬ್ಬದ ದಿನದಂದು ಬೆಳ್ಳಂಬೆಳಗ್ಗೆಯೇ ಮನೆಯವರರೆಲ್ಲಾ ಎದ್ದು ಎಣ್ಣೆಯ ಅಭ್ಯಂಜನ ಮಾಡಿ, ಮನೆಯ ಹೆಣ್ಣು ಮಕ್ಕಳು ಮನೆಯ ಮುಂದೆ ದೊದ್ಡ ದೊಡ್ಡದಾದ ರಂಗೋಲಿಗಳನ್ನು ಇಟ್ಟು ಮನಯನ್ನು ಸಿಂಗರಿಸಿದರೆ, ಮನೆಯ ಗಂಡಸರು ಮನೆಯಲ್ಲಿರುವ ದನಕರುಗಳಿಗೆ ಸ್ನಾನ ಮಾಡಿಸಿ, ಕೊಟ್ಟಿಗೆ ಶುಚಿಗೊಳಿಸಿ ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಕಣಜದಲ್ಲಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಇನ್ನು ಮಕ್ಕಳು ಹೊಸಬಟ್ಟೆ ತೊಟ್ಟು ಅದರಲ್ಲೂ ಹೆಣ್ಣುಮಕ್ಕಳು ಲಂಗ ರವಿಕೆ ತೊಟ್ಟು, ತಲೆಗೆ ಬೈತಲೆಬಟ್ಟು , ಮುಡಿ ತುಂಬಾ ಹೂ ಮುಡಿದು ವೈಯಾರವಾಗಿ ಓಡಾಡುವುದನ್ನು ವರ್ಣಿಸುವುದಕ್ಕಿಂತ ನೋಡಿ ನಲಿಯುವುದಕ್ಕೇ ಆನಂದ.

sank3.jpeg

ಈ ಹಬ್ಬಕ್ಕೆ ವಿಶೇಷವಾಗಿ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಮತ್ತು ಕಡಲೇಕಾಯಿ ಬೀಜದ ಮಿಶ್ರಣದ ಜೊತೆಗೆ ಸಕ್ಕರೆಯ ಪಾಕದಿಂದ ತಯಾರಿಸಿದ ಸಕ್ಕರೇ ಅಚ್ಚು, ಮತ್ತು ಕಬ್ಬನ್ನು ಇಟ್ಟು ಪೂಜಿಸುತ್ತಾರೆ. ಈ ಹಬ್ಬಕ್ಕೆ ತುಪ್ಪಾ, ಅಕ್ಕಿ, ಹೆಸರುಬೇಳೆ, ಜೀರಿಗೆ, ಮೆಣಸು, ಹಸೀ ಮೆಣಸಿನಕಾಯಿ, ಅರಿಷಿನ ತೆಂಗಿನ ಕಾಯಿ ಮತ್ತು ಬೆಲ್ಲದ ಮಿಶ್ರಣದಿಂದ ಮಾಡಿದ ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)ಯನ್ನು ನೈವೇದ್ಯ ಮಾಡಿ, ಮನೆಯ ಹಿರಿಯರು ಎಲ್ಲರಿಗೂ ಎಳ್ಳು-ಬೆಲ್ಲದ ಮಿಶ್ರಣವನ್ನು ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೇ ಮಾತನಾಡೋಣ ಎಂದು ಹೇಳುತ್ತಾ ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ.

ಸಾಧಾರಣವಾಗಿ ಶುಭಸಮಾರಂಭಗಳಲ್ಲಿ ಎಳ್ಳಿನ ಬಳಕೆ ಇರುವುದಿಲ್ಲ, ಎಳ್ಳನ್ನು ಅಪರ ಕರ್ಮಗಳಲ್ಲಿ ತರ್ಪಣ ಬಿಡುವುದಕ್ಕೆ ಮತ್ತು ಶನಿ ಗ್ರಹದ ದೋಷ ಪರಿಹಾರಕ್ಕಾಗಿ ಉಪಯೋಗಿಸುವುದು ರೂಡಿಯಲ್ಲಿರುವ ಕಾರಣ ಸಾಮಾನ್ಯ ದಿನಗಳಂದು ಎಳ್ಳಿನ ದಾನವನ್ನು ಸ್ವೀಕರಿಸಲು ಹಿಂದು ಮುಂದು ನೋಡುತ್ತಾರೆ. ಆದರೆ ಸಂಕ್ರಾಂತಿಯಂದು ಮಾತ್ರ ಎಳ್ಳು ಬೀರುವುದೇ ಸಂಪ್ರದಾಯ. ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಇದು ಚಳಿಗಾಲವಾದ್ದರಿಂದ ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಮಾಡುವುದಲ್ಲದೇ ಚರ್ಮದ ಕಾಂತಿಯನ್ನೂ ಹೆಚ್ಚುತ್ತದೆ. ಇನ್ನು ಕೊಬ್ಬರಿ‌ ಮತ್ತು ಕಡಲೇಕಾಯಿ ಬೀಜವೂ ಸಹಾ ಎಣ್ಣೆ ಅಂಶದ ವಸ್ತುಗಳಾಗಿದ್ದು ಅವುಗಳ‌ಜೊತೆ ಸರಿದೂಗಿಸಲು ಹುರಿಗಡಲೆ ಮತ್ತು ಬೆಲ್ಲವನ್ನು ಬೆರೆಸಲಾಗಿರುತ್ತದೆ. ಇದೇ ರೀತಿ ಅಕ್ಕಿ, ಹೆಸರುಬೇಳೆ, ಜೀರಿಗೆ ಮತ್ತು ಮೆಣಸು ಮಿಶ್ರಿತ ಹುಗ್ಗಿಯೂ ಕೂಡಾ ಇದೇ ದೇಹಕ್ಕೆ ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಹೆಣ್ಣು ಮಕ್ಕಳು ನೆರೆಹೊರೆಯವರೊಂದಿಗೆ ಎಳ್ಳು ಬೆಲ್ಲ, ಕಬ್ಬು, ಬಾಳೆಹಣ್ಣುಗಳನ್ನು ಪರಸ್ಪರ ಎಳ್ಳು-ಬೆಲ್ಲ ಬೀರುವ ( ವಿನಿಮಯ ಮಾಡಿಕೊಳ್ಳುವ) ಸಂಪ್ರದಾಯ ರೂಢಿಯಲ್ಲಿದೆ.

ಇದು ಮಾಗಿಯ ಕಾಲವಾದ್ದರಿಂದ ಅಗ ತಾನೆ ಸೊಗಡಿನ ಮಣಿ ಅವರೇಕಾಯಿಯನ್ನು ತಂದು ಮಧ್ಯಾಹ್ನದ ಅಡುಗೆಯಲ್ಲಿ ಬಹತೇಕ ಅವರೇಕಾಯಿ ಮಯವಾಗಿರುತ್ತದೆ, ಅವರೇಕಾಯಿ-ಮೆಣಸು ಮಿಶ್ರಿತ ಉದ್ದಿನ ಕಡುಬು (ಅವರೇಕಾಯಿ ಇಡ್ಲಿ), ಅವರೇಕಾಯಿ ಹುಳಿ ಇಲ್ಲವೇ ಹಿದುಕಿದ ಆವರೇಕಾಯಿ ಕೂಟು, ಅವರೇಕಾಯಿ-ಕುಂಬಳಕಾಯಿ ಪಲ್ಯ ಇಲ್ಲವೇ ತೊವ್ವೆ, ಸಿಹಿಗೆಣಸಿನ ಪಲ್ಯದೊಂದಿಗೆ ಮನೆಯವರೆಲ್ಲರೂ ಸಂತೃಪ್ತಿಯಿಂದ ಊಟದ ಶಾಸ್ತ್ರ ಮುಗಿಸಿ ಭುಕ್ತಾಯಾಸ ಪರಿಹರಿಸಿಕೊಳ್ಳಲು ಸಣ್ಣದಾದ ನಿದ್ದೆಯನ್ನು ಮಾಡಿದರೆ ಅರ್ಧ ಸಂಕ್ರಾಂತಿ ಮುಗಿದ ಹಾಗೆಯೇ.

sank5

ಇನ್ನು ಸಂಜೆ ಹೊತ್ತು ಹೆಣ್ಣು ಮಕ್ಕಳು ಮತ್ತೊಮ್ಮೆ ಸಿಂಗರಿಸಿಕೊಂಡು ಎಳ್ಳು ಬೀರುವುದದನ್ನು ಮುಂದುವರೆಸಿದರೆ, ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮೊದಲ ವರ್ಷ ಮುತ್ತೈದೆಯರಿಗೆ ಐದು ಬಾಳೆಹಣ್ಣುಗಳನ್ನು ಕೊಟ್ಟು ಮುಂದಿನ ಐದು ವರ್ಷಗಳ ಕಾಲ ಕ್ರಮೇಣವಾಗಿ ಐದರಿಂದ ಹೆಚ್ಚಿಸಿಕೊಂಡು, ಐದನೇ ವರ್ಷಕ್ಕೆ ಇಪ್ಪತ್ತೈದು ಬಾಳೇ ಹಣ್ಣುಗಳನ್ನು ಬಾಗಿಣವಾಗಿ ಕೊಡುವ ಮೂಲಕ ಮುಕ್ತಾಯ ಮಾಡುತ್ತಾರೆ, ಗಂಡಸರುಗಳು ತಮ್ಮ ತಮ್ಮ ದನಕರುಗಳಿಗೆ ನಾನಾ ರೀತಿಯ ಹೂಗಳಿಂದ ಸಿಂಗಾರ ಮಾಡಿ, ಕೊರಳಿಗೆ ಮತ್ತು ಕಾಲ್ಗಳಿಗೆ ಗೆಜ್ಜೆ ಕಟ್ಟಿ ಕೆಲವರು ಅವುಗಳ ಕೋಡುಗಳಿಗೆ ಬಣ್ಣ ಬಳಿದು, ಉಸುರುಬುಡ್ಡೆ(ಬೆಲೂನ್)ಗಳನ್ನು ಕಟ್ಟಿ ಕತ್ತಲಾದ ಮೇಲೆ ಊರಿನ ಅರಳೀ ಕಟ್ಟೆಯ ಮುಂದೆ ದೊಡ್ಡದಾದ ಬೆಂಕಿಯನ್ನು ಹಾಕಿ, ಆ ಬೆಂಕಿಯ ಮೇಲೆ ತಮ್ಮ ಹಸುಗಳನ್ನು ಹಾರಿಸುತ್ತಾರೆ. ಈ ರೀತಿಯಾಗಿ ಕಿಚ್ಚು ಹಾಯಿಸುವುದನ್ನು ನೋಡಲೆಂದೇ, ಊರಿನ ಹಿರಿ ಕಿರಿಯರೆಲ್ಲಾ ಸಂಭ್ರಮ ಸಡಗರದಿಂದ ವರ್ಷವಿಡೀ ಕಾಯುತ್ತಿರುತ್ತಾರೆ, ಈ ರೀತಿಯಾಗಿ ಕಿಚ್ಚಾಯಿಸುವುದರಿಂದ ಆ ಹಸುಗಳ ಮೇಲಿರಬಹುದಾದ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿಕೀಟಗಳು ಬೆಂಕಿಯ ಶಾಖಕ್ಕೆ ನಾಶವಾಗುತ್ತದೆ ಎನ್ನುವುದು ಇದರ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವೂ ಇದೆ ಈ ರೀತಿಯಾಗಿ ಕರ್ನಾಟಕ ಮತ್ತು ಆಂದ್ರ ಪ್ರದೇಶಗಳಲ್ಲಿ ಆಚರಿಸುತ್ತಾರೆ.

sank2

ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂಬ ಹೆಸರಿನಿಂದ ಸಂಭ್ರಮದಿಂದ ಹಬ್ಬದ ಹಿಂದಿನ ದಿನ ಭೋಗಿ ಎಂಬ ಹೆಸರಿನಲ್ಲಿ ಮನೆಯಲ್ಲಿದ್ದ ಎಲ್ಲಾ ಕಸಕಡ್ಡಿಗಳನ್ನು ಮನೆಯ ಮುಂದೆ ಹಾಕಿ ಅದಕ್ಕೆ ಬೆಂಕಿ ಇಟ್ಟು ಮನೆಯ ಸುತ್ತಮುತ್ತ ಸ್ವಚ್ಚಗೊಳಿಸುತ್ತಾರೆ ಹಬ್ಬದ ದಿನವನ್ನು ಪೊಂಗಲ್ ಎಂಬ ಹೆಸರಿನಲ್ಲಿ ಸಮೃದ್ಧಿಯ ಸಂಕೇತವಾಗಿ ಹಾಲಿನ ಜೊತೆಗೆ ಬೆಲ್ಲ ಸೇರಿಸಿ ಕುದಿಸಿ ಉಕ್ಕಿಸಲಾಗುತ್ತದೆ ಮತ್ತು ಹಬ್ಬದ ಮಾರನೆಯ ದಿನ ಮಾಟ್ಟು ಪೊಂಗಲ್ ಎಂಬ ಹೆಸರಿನಲ್ಲಿ ಗೋಪೂಜೆ ಮಾಡುತ್ತಾರೆ

ಹಲವಾರು ಕಡೆ ಬಾರಿ ಅಪಾಯಕಾರಿ ಮತ್ತು ಸಾಹಸಮಯವಾದ ಜಲ್ಲಿಕಟ್ಟು ಎಂಬ ಹೆಸರಿನಲ್ಲಿ ಗೂಳಿಯನ್ನು ಪಳಗಿಸುವ ಆಟವಾಡಿಸುತ್ತಾರೆ. ಈ ಆಟವಾಡುವಾಗ, ಪ್ರಾಣಿ ಹಿಂಸೆಯಾಗುವುದಲ್ಲದೇ ಜನರಿಗೂ ಗಾಯವಾಗುವ ಕಾರಣ ಕೆಲಕಾಲ ಇದನ್ನು ನಿಷೇಧಿಸಲಾಗಿದ್ದರೂ ಈಗ ಸಾಂಕೇತಿಕವಾಗಿ ಆಚರಿಸಲು ನ್ಯಾಯಾಲಯಗಳು ಅನುಮತಿ ನೀಡಿದೆ. ನಾಲ್ಕನೇ ದಿನ ಕಾಣುಮ್ ಪೊಂಗಲ್ ಎಂಬ ಹೆಸರಿನಲ್ಲಿ ರುಚಿ ರುಚಿಯಾದ ಬಗೆ ಬಗೆಯ ಭಕ್ಷ ಭೋಜನಗಳನ್ನು ತಯಾರಿಸಿ ಮನೆಮಂದಿಯೆಲ್ಲಾ ಸೇವಿಸಿ ಸಂಭ್ರಮಿಸುತ್ತಾರೆ.

jyothi

ಕೇರಳದ ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿಯಂದು ಸಂಜೆ ಕಾಣುವ ಮಕರಜ್ಯೋತಿಯನ್ನು ಕಣ್ತುಂಬ ನೋಡಲು ದೇಶಾದ್ಯಂತ ಮಾಲೆ ಧರಿಸಿದ ಅಯ್ಯಪ್ಪ ವ್ರತಾಧಾರಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಶಬರಿಮಲೆಗೆ ಆಗಮಿಸುತ್ತಾರೆ. ಸಂಜೆ ಮಕರಜ್ಯೋತಿಯ ನಂತರ ಕೇರಳಾದ್ಯಂತ ಎಲ್ಲಾ ಆಸ್ತಿಕ ಬಂಧುಗಳ ಮನೆಯಲ್ಲಿ ನಂದಾದೀಪವನ್ನು ಬೆಳಗಿ ಸೂರ್ಯನು ಪಥವನ್ನು ಬದಲಿಸುವ ಸಮಯ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತಾರೆ.

kite.jpeg

ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನವನ್ನು ಗಾಳಿಪಟದ ಹಬ್ಬವನ್ನಾಗಿ ಆಚರಿಸುತ್ತಾರೆ. ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ , ಕರ್ನಾಟಕದಂತೆಯೇ ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ ( ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾನಾಡೋಣ) ಎಂದು ಹೇಳುತ್ತಾ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದೆ.

ಈ ರೀತಿಯಾಗಿ ನಮ್ಮ ಹಿರಿಯರು ರೂಢಿಗೆ ತಂದ ಪ್ರತಿಯೊಂದು ಹಬ್ಬಗಳಲ್ಲಿಯೂ ಸಾಮಾಜಿಕ ಸಾಮರಸ್ಯದ ಜೊತೆಗೆ, ಪ್ರಾಕೃತಿಕವಾಗಿಯೋ, ಸ್ಥಳೀಯ ಐತಿಹಾಸಿಕವಾಗಿಯೋ,ಇಲ್ಲವೇ ಪೌರಾಣಿಕವಾಗಿಯೋ ಮತ್ತು ವೈಜ್ಞಾನಿಕವಾಗಿ ಮಹತ್ವ ಪಡೆದಿರುತ್ತವೆ. ಆದರೆ ವಿಪರೀತವಾದ ಪಾಶ್ಚಾತ್ಯ ಅಂಧಾನುಕರಣೆ ಮತ್ತು ನಮ್ಮ ಹಬ್ಬಗಳ ವೈಚಾರಿಕತೆಯ ಬಗ್ಗೆ ಸರಿಯಾದ ತಿಳುವಳಿಕೆ ನಮ್ಮ ಇಂದಿನ ಯುವಜನತೆಗೆ ಇಲ್ಲದ ಕಾರಣ ಹಬ್ಬಗಳ ಸಡಗರ ಸಂಭ್ರಮ ಆಚರಣೆ ಹಿಂದಿನಂತೆ ಇಲ್ಲದಿರುವುದು ತುಸು ಬೇಸರದ ಸಂಗತಿಯಾದರೂ, ಮನೆಯ ಹಿರಿಯರು ಪರಂಪರಾಗತವಾಗಿ ರೂಡಿಯಲ್ಲಿರುವ ಆಚರಣೆಗಳನ್ನು ಮತ್ತದರ ಹಿಂದಿರುವ ಮಹತ್ವಗಳನ್ನು ತಿಳಿಸುವ ಮೂಲಕ ಮತ್ತೊಮ್ಮೆ ಗತವೈಭವವನ್ನು ಮರಳಿ ತರಬಹುದಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಪಟಾ ಪಟಾ ಹಾರೋ ಗಾಳಿಪಟ

ಹೊಸದಾಗಿ ಮದುವೆಯಾದ ಸಹೋದ್ಯೋಗಿ ಸುಮಾರು ಎಂಟು ಗಂಟೆಯಾದರೂ ಇನ್ನೂ  ಕಛೇರಿಯಲ್ಲಿಯೇ ಇದ್ದದ್ದನ್ನು ಗಮನಿಸಿದ ನಾನು, ಏನಪ್ಪಾ ರಾಜಾ, ಮನೆಗೆ ಹೋಗುವುದಿಲ್ಲವಾ?  ಮೊನ್ನೆ ಮೊನ್ನೆ ತಾನೇ  ಮದುವೆ ಆಗಿದ್ದೀಯಾ,ನಿಮ್ಮ ಮನೆಯಲ್ಲಿ ನಿಮ್ಮ ಮನೆಯವರು ಒಬ್ಬರೇ ಇರುತ್ತಾರೆ ಮತ್ತು ನಿನ್ನ ಆಗಮನವನ್ನೇ ಕಾಯುತ್ತಿರುತ್ತಾರೆ.  ಪರವಾಗಿಲ್ಲಾ ನಾಳೆ ಕೆಲಸ ಮುಂದುವರಿಸುವಂತೆ ಎಂದು ತಿಳಿಹೇಳಿದೆ.  ಅದಕ್ಕವನು ಸಾರ್, ಹಾಗೇನಿಲ್ಲ ಸಾರ್. ಮನೆಯಲ್ಲಿ ಯಾರೂ ಇಲ್ಲಾ. ಸುಮ್ಮನೆ ಮನೆಗೆ ಹೋಗಿ ಮಾಡಲು ಏನೂ ಕೆಲಸ ಇಲ್ಲ. ಅದೇ ಟಿವಿ ನೋಡುವ ಬದಲು  ಎಲ್ಲಾ ಕೆಲಸ ಮುಗಿಸ್ತಾಇದ್ದೀನಿ ಅಂದ. ಯಾಕೇ? ಮನೆಯವರು ಇಲ್ವಾ? ಎಲ್ಲಿಗೆ ಹೋಗಿದ್ದಾರೆ ಅಂತಾ ಕೇಳಿದ್ದಕ್ಕೆ. ಸ್ವಲ್ಪ  ಬೇಸರದಿಂದ. ಸಾರ್ ಹೋದವಾರನೇ ಅವರ  ಅಪ್ಪಾ ಅಮ್ಮಾ ಬಂದು ಆಷಾಡ ಮಾಸ ಅಂತ ತವರಿಗೆ ಕರೆದುಕೊಂಡು ಹೋದ್ರು ಅಂದ. ಓಹೋ!!  ರಾಯರ ಬೇಸರಕ್ಕೆ ಇದಾ ಕಾರಣ. ಹಾಗಿದ್ರೆ ರಾಯರು ಮದುವೆಯಾದ ಮೇಲಿನ ಬ್ರಹ್ಮಚಾರಿ ಎಂದು ಅವನ ಕಾಲೆಳೆದು ನಮ್ಮ ಮೊದಲ ಆಷಾಡದ ವಿರಹ ವೇದನೆಯನ್ನು  ನೆನೆಸಿ ಕೊಂಡೆ.

ಮದುವೆಯಾದ ಮೊದಲ ವರ್ಷದ ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಂದೇ ಸೂರಿನಡಿಯಲ್ಲಿ ಇರಬಾರದೆಂಬ  ಶಾಸ್ತ್ರದ ಪ್ರಕಾರ ನಮ್ಮ ಮನೆಯವರನ್ನು ನಮ್ಮ ಮನೆಯಿಂದ  ಸುಮಾರು ಮೂರ್ನಾಲ್ಕು ಕಿಮೀ ದೂರದಲ್ಲಿಯೇ ಇದ್ದ ಅವರ ತವರು ಮನೆಗೆ  ಕಳುಹಿಸಿದ್ದೆವಾದರೂ  ಅಗಾಗ  ಕಛೇರಿ ಮುಗಿಸಿ ಸಂಜೆ ಭೇಟಿಯಾಗಲು ತೊಂದರೆ ಇರಲಿಲ್ಲ. ವಾಸ್ತವವಾಗಿ ಆ ಒಂದು ತಿಂಗಳಿನಲ್ಲಿಯೇ ನಾವು ಅತ್ಯಂತ ಹೆಚ್ಚಿನ ಸಮಯ ಕಳೆದಿದ್ದೆವು. ಬಹಳಷ್ಟು ದಿನ ಸಂಜೆ ನೇರವಾಗಿ ನಮ್ಮ ಮನೆಯವರ ಕಛೇರಿಗೆ ಹೋಗಿ ಅವಳನ್ನು ಕರೆದುಕೊಂಡು ಸುತ್ತದ ಜಾಗವಿಲ್ಲ   ತಿನ್ನದೇ ಇರುವ ಪ್ರದೇಶಗಳೇ ಇಲ್ಲವೇನೋ. ಇಂದಿಗೂ ನಮ್ಮಾಕಿ, ನೀವು ತುಂಬಾ ಬದಲಾಗಿದ್ದೀರಿ, ಮುಂಚಿನಂತೆ  ಎಲ್ಲಿಗೂ ಕರೆದು ಕೊಂಡು  ಹೋಗುವುದೇ ಇಲ್ಲಾ ಎಂದು ಮೊದಲ ಆಷಾಡ ಮಾಸದ  ಮೆಲಕನ್ನೇ ಹಾಕುತ್ತಿರುತ್ತಾಳೆ.  ನಿಜಕ್ಕೂ ಹೇಳಬೇಕೆಂದರೆ, ಆಷಾಡ ಮಾಸದ ಸಮಯ ಬೇಸಾಯದ ಸಮಯ. ಆಗಷ್ಟೇ ಮಳೆ ಬಿದ್ದು ಭೂಮಿ ಹಸನಾಗಿರುತ್ತದೆ. ರೈತಾಪಿ ಜನರು ಭೂಮಿಯನ್ನು ಚೆನ್ನಾಗಿ ಉತ್ತಿ ಬೀಜ ಬಿತ್ತುವ ಕಾಯಕದಲ್ಲಿ ತೊಡಗಿರುತ್ತಾರೆ. ಹಾಗಾಗಿ ಹೊಸದಾಗಿ ಮದುವೆಯಾಗಿರುವವರು  ಅದೇ ಗುಂಗಿನಲ್ಲಿಯೇ ಹೆಂಡತಿಯ ಸೆರಗಿನಲ್ಲಿಯೇ ಇದ್ದು ಬೇಸಾಯದಿಂದ ವಿಮುಖರಾಗದಿರಲೆಂದು ಈ ಪದ್ದತಿಯನ್ನು ನಮ್ಮ  ಹಿರಿಯರು ಮಾಡಿರಬಹುದು ಎನ್ನುವುದು ನನ್ನ   ಅಭಿಪ್ರಾಯ.   ಸಂಬಂಧೀಕರ ಇಲ್ಲವೇ ಸ್ನೇಹಿತರ ಶುಭಸಮಾರಂಭಕ್ಕೆ  ಅಂದೆಲ್ಲಾ  ಕನಿಷ್ಟ ಪಕ್ಷ ಒಂದು ವಾರದ ಮುಂಚೆಯೇ ಬಂದು ಸಮಾರಂಭ ಮುಗಿದ ಒಂದು ವಾರದವರೆಗೂ ಅಲ್ಲಿಯೇ ಇದ್ದು ಸಂಭ್ರಮಿಸುವ ಪರಿಪಾಠವಿದ್ದ ಕಾರಣ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗ ಬಾರದೆಂಬ ಕಾರಣದಿಂದಾಗಿ   ಈ ತಿಂಗಳಿನಲ್ಲಿ ಯಾವುದೇ  ಶುಭ ಕಾರ್ಯಗಳಾಗಲೀ, ಶುಭ ಸಮಾರಂಭಗಳನ್ನೂ ಮಾಡುವುದಿಲ್ಲ. ಇಂದಿಗೆ ಬೇಸಾಯ ಮಾಡುವವರೇ ಕಡಿಮೆಯಾಗಿ ಹೋದರೂ ಆ ಪದ್ದತಿಯನ್ನು ಇನ್ನೂ ಹಾಗೆಯೇ ಮುಂದುವರಿಸಿಕೊಂಡು ಬಂದಿರುವುದು ಅನೇಕ ನವ ದಂಪತಿಗಳ ವಿರಹ ವೇದನೆಗೆ ಕಾರಣವಾಗಿರುವುದು ನಿಜಕ್ಕೂ ದೌರ್ಭಾಗ್ಯ.  ಕಾಲ ಬದಲಾದಂತೆ  ಬಹುತೇಕ ಪದ್ದತಿಗಳು ಬದಲಾದರೂ ಇದೊಂದು ಮಾತ್ರ ಹಾಗೆಯೇ ಉಳಿದುರುವುದು ನಿಜಕ್ಕೂ ನವದಂಪತಿಗಳ ಪಾಲಿಗೆ ಶೋಚನೀಯವೇ ಸರಿ.

ಇನ್ನು ನಾವು ಬಾಲ್ಯದಲ್ಲಿದ್ದಾಗ ನಮಗೆಲ್ಲಾ ಆಷಾಡ ಮಾಸ ಬಂದಿತೆಂದರೆ ನಮಗೆ ಸಂಭ್ರಮವೋ ಸಂಭ್ರಮ. ಆಷಾಡ ಮಾಸದಲ್ಲಿ ಗಾಳಿ ಹೆಚ್ಚಾಗಿರುವ ಕಾರಣ  ನಮಗೆಲ್ಲಾ  ಗಾಳಿಪಟ ಹಾರಿಸುವ ಆನಂದ. ಹಾಗಾಗಿ ನಮ್ಮ ಕಡೆ ಆಷಾಢ ಮಾಸದ ಪ್ರಥಮ ಏಕದಶಿಯಂದು  ಗಾಳೀ‌ಪಟದ ವನ್ನು ಆಚರಿಸುತ್ತಾರೆ.  ಪ್ರಥಮ ಏಕಾದಶಿಯಂದು ಗಾಳೀ ಪಟ ಹಬ್ಬವಿದ್ದರೂ  ನಮಗೆಲ್ಲಾ ಇಡೀ ತಿಂಗಳೂ ಗಾಳಿ ಪಟ   ಹಾರಿಸುವುದೇ ಆಟ.  ಗಾಳಿಪಟ ಹಬ್ಬ ಬರುವುದಕ್ಕೆ ಮುಂಚೆಯೇ ಅದಕ್ಕೆ ಜೋರು ತಯಾರಿ ನಡೆದಿರುತ್ತದೆ.  ಪಟಕ್ಕೆ ಮುಖ್ಯ ಆಧಾರವಾದ ದಾರ. ದಾರ ಗಟ್ಟಿ ಇಲ್ಲದಿದ್ದಲ್ಲಿ ಗಾಳಿಯ ರಭಸಕ್ಕೆ  ಪಟದ ಜಗ್ಗಾಟಕ್ಕೆ ಕಿತ್ತು ಹೋಗಿ ಪಟ ದಿಕ್ಕಾಪಾಲಾಗಿ ಹೋಗುತ್ತದೆ. ಹಾಗಾಗಿ ಮೊದಲು ದಾರವನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿಯೇ ಮಾಂಜಾ ಹಾಕುವ ಪ್ರಕ್ರಿಯೆ ಶುರುವಾಗುತ್ತದೆ.  ಗಾಜನ್ನು ಸಣ್ಣ ಸಣ್ಣದಾಗಿ ಪುಡಿ ಮಾಡಿ ಅದಕ್ಕೆ ಮರದ ಅಂಟು ಅರ್ಥಾತ್, ಗೊಂದು ಇಲ್ಲವೇ ಮರವಜ್ರವನ್ನು ಕಾಯಿಸಿ ದ್ರವರೂಪಕ್ಕೆ ತಂದು ಅದಕ್ಕೆ ಪುಡಿ ಮಾಡಿದ ಗಾಜಿನ ಪುಡಿಯನ್ನು ಹಾಕಿ ಚೆಂದವಾಗಿ ಕಾಣಲು ಬಣ್ಣವನ್ನು ಬೆರೆಸಿ ಆ ದ್ರಾವಣವನ್ನು  ಬಟ್ಟೆಯಲ್ಲಿ ಅದ್ದಿಕೊಂಡು ದಾರಕ್ಕೆ ಬಳಿಯುವುದಕ್ಕೇ ಮಾಂಜಾ ಹಾಕುವುದು ಎನ್ನುತ್ತಾರೆ. ಮರವಜ್ರ ಇಲ್ಲವೇ ಗೋಂದಿನ ಬದಲಾಗಿ ಅನ್ನದ ಗಂಜಿಯೋ ಇಲ್ಲವೇ ಮೈದ ಗಂಜಿಯನ್ನೂ ಬಳೆಸುವುದೂ ವಾಡಿಕೆಯಲ್ಲಿದೆ. ಮಾಂಜಾ ಹಾಕುವ ಮುನ್ನಾ ಎರಡು ದೊದ್ಡ ಮರಗಳ ಕೊಂಬೆಗಳಿಗೋ ಇಲ್ಲವೇ ಒಂದು ಮನೆಯ ಗೇಟಿನಿಂದ ಮತ್ತೊಂದು ಮನೆಯ ಗೇಟಿಗೆ  ದಾರವನ್ನು  ಉದ್ದ ಉದ್ದವಾಗಿ ಕಟ್ಟಿ  ಕೈಗೆ ಬಟ್ಟೆ ಕಟ್ಟಿಕೊಂಡು ಮಾಂಜಾ ಹಾಕುತ್ತಾರೆ.  ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕೈ ಕೊಯ್ದುಕೊಂಡು ರಕ್ತ ಬರುವ ಸಂಭವ ಇದ್ದರೂ, ಒಂದು ಪಕ್ಷ ಕೈ ಕೊಯ್ದು ಕೊಂಡು ರಕ್ತ ಬಂದರೂ ಅದನ್ನೇ ಶೌರ್ಯದ ಪ್ರತೀಕ ಎಂದು ಬಿಂಬಿಸುವ ಪರಿಪಾಠವಿತ್ತು. ಹಾಗೆ ಮಾಂಜಾ ಹಾಕಿ ಒಣಗಿಸಿದ  ದಾರವನ್ನು  ಮರದ ರಾಟೆ ಇಲ್ಲವೇ ಡೀಲ್ನಲ್ಲಿ ಸುತ್ತಿಟ್ಟು ಯಾರ ಬಳಿ ದೊಡ್ದ ದೊಡ್ಡದಾದ ಡೀಲ್ ಇರುತ್ತದೋ ಅವನೇ  ಆ ಮಕ್ಕಳ ನಡುವೆ ಹೀರೋ ಎನ್ನುವ ಭಾವ ಇರುತ್ತಿತ್ತು . ಸಾಧಾರಣವಾಗಿ ಮರದ ರಾಟೆಗಳು ಮಗ್ಗದವರ ಬಳಿ ಇರುತ್ತಿದ್ದರಿಂದ ಅವರನ್ನು ಕಾಡಿ ಬೇಡಿ ಹಳೆಯ ರಾಟೆಗಳನ್ನು ತಂದು ಅದಕ್ಕೆ  ಮಾಂಜ ಹಾಗಿದ ದಾರವನ್ನು ಜೋಪಾನವಾಗಿ ಸುತ್ತುತ್ತಿದ್ದೆವು.

ಇನ್ನೂ ಗಾಳಿಪಟ ಮಾಡಲು ಮನೆಯಲ್ಲಿರುವ ಹಳೇ ವೃತ್ತಪತ್ರಿಕೆ ಮತ್ತು ತೆಂಗಿನ ಕಡ್ದಿಯ ಪೊರಕೆಯ ಕಡ್ಡಿಗಳು ಮತ್ತು ಅಂಟಿಸಲು ಗೋಂದು ಇದ್ದರೆ ಸಾಕು. ಬಹಳಷ್ಟು ಸಲಾ ಗೋಂದು ಇಲ್ಲದ ಕಾರಣ ಅನ್ನ ಇಲ್ಲವೇ ರಾಗಿ ಮುದ್ದೆಯನ್ನೇ ಅಂಟಿಸಲು ಬಳೆಸಿರುವ ಉದಾರಣೆಗಳಿಗೆ.  ಚಚ್ಚೌಕವಾಗಿ ಪತ್ರಿಕೆಯನ್ನು ಕತ್ತರಿಸಿಕೊಂಡು ಅದರ ಎರಡೂ ತುದಿಗಳಿಗೆ ಸರಿಯಾಗಿ ಬಿಲ್ಲಿನಂತೆ ಬಾಗುವ ಹಾಗೆ ಸಾಲುವ ಕಡ್ದಿಯನ್ನು ಅಂಟಿಸಿ ಅದರ ಮೇಲೆ ಬಾಣದ ಆಕಾರದಲ್ಲಿ ಮತ್ತೊಂದು ತೆಂಗಿನ ಕಡ್ಡಿಯನ್ನು ಅಂಟಿಸಿ ಕಡ್ಡಿಯ ಎಲ್ಲಾ ತುದಿಗಳು ಮತ್ತು ಕಡ್ಡಿಗಳು ಒಂದು ಗೂಡುವ ಕಡೆಗಳಲ್ಲಿ ಭದ್ರವಾಗಿ ಚಚ್ಚೌಕಾರವಾಗಿ ಕತ್ತರಿಸಿದ ಕಾಗದ ತುಣುಕುಗಳನ್ನು ಅಂಟಿಸಿ ಬಾಣದ ಹಾಗೆ ಇರುವ ತಳ ತುದಿಗೆ ಉದ್ದನೆಯ ಬಾಲಗಂಚಿಯನ್ನು ಅಂಟಿಸಿದರೆ ಗಾಳಿಪಟ ತಯಾರು.  ಗಾಳಿಪಟ ಸರಿಯಾಗಿ ಹಾರಲು ನಾವು ಹಾಕುವ ಸೂತ್ರ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಗಾಳಿಪಟದ ಮೇಲ್ತುದಿ ಮತ್ತು ಕೆಳತುದಿಯಿಂದ ಸಮಾನ ಅಂತರದಲ್ಲಿ  ಬಾಣದ ಹಾಗೆ ಅಂಟಿಸಿರುವ ಕಡ್ದಿಯ ಇಕ್ಕೆಲಗಳಲ್ಲಿ ದಾರ ತೂರುವಷ್ಟು ಎರಡು ರಂಧ್ರಗಳನ್ನು ಮಾಡಿ ಅದರೊಳಗೆ ದಾರ ತೂರಿಸಿ ಅದನ್ನು ಸರಿಯಾಗಿ ಮಧ್ಯಕ್ಕೆ ಬರವ ಹಾಗೆ ಒಂದು ಗಂಟು ಹಾಕಿದರೆ ಗಾಳಿಪಟ  ಸಿದ್ಧ.  ಆ ಸೂತ್ರದ ಮಧ್ಯಕ್ಕೆ ಸರಿಯಾಗಿ ರಾಟೆಯಲ್ಲಿ ಸುತ್ತಿಟ್ಟಿದ್ದ  ದಾರದ ತುದಿಯನ್ನು ಕಟ್ಟಿದಲ್ಲಿ  ಗಾಳಿಪಟ ಹಾರಲು ಸಿದ್ಧ. ಸಾಧಾರಣವಾಗಿ ಪಟದ ಎರಡೂ ತುದಿಯನ್ನು ಗಾಳಿಬೀಸುವ ದಿಕ್ಕಿನಲ್ಲಿ ಒಬ್ಬ ಹಿಡಿದು ಕೊಂಡರೆ ಮತ್ತೊಬ್ಬ ದಾರವನ್ನು ಹಿಡಿದುಕೊಂಡು  ಜೋರಾಗಿ ಗಾಳಿಯತ್ತ ಗಾಳಿಪಟವನ್ನು ತೂರಿಬಿಡುತ್ತಾನೆ. ಆಗ ದಾರ ಹಿಡಿದಿರುವಾತ ಗಾಳಿಗೆ ತಕ್ಕಂತೆ ಮೇಲೆ ಏರುವ ಪಟಕ್ಕೆ ಅಗತ್ಯವಾದಷ್ಟು ದಾರವನ್ನು ಬಿಡುತ್ತಾ , ಆಗಾಗ ದಾರವನ್ನು  ಕೆಳೆಗೆ ಇಲ್ಲವೇ ಆಚಿವೆ ಎಳೆಯುತ್ತಾ  ಪಟವನ್ನು ಹಾರಿಸುತ್ತಾನೆ. ಸೂತ್ರ ಸರಿಯಾಗಿ ಇದ್ದು ಬಾಲಗೋಂಚಿಯ ಭಾರ ಸರಿಯಾಗಿದ್ದಲ್ಲಿ ಗಾಳಿಯ ರಭಸಕ್ಕೆ   ಪಟ ಕೆಲವೇ ಕ್ಷಣಗಳಲ್ಲಿ ಬಾನೆತ್ತರಕ್ಕೆ ಹಾರುತ್ತದೆ.   ಅದರಲ್ಲಿ  ಯಾವುದೇ ಒಂದು ಸರಿಇಲ್ಲದಿದ್ದಲ್ಲಿ,  ಗಿರಿಗಿರನೇ ಸುತ್ತುತ್ತಾ ಅಲ್ಲಿಯೇ ಬಿದ್ದು ಬಿಡುತ್ತದೆ. ಹಾಗೆ ಬಿದ್ದಾಗ  ಅದನ್ನು ಲಾಂಡ ಪಟ ಎಂದು ಕರೆಯುತ್ತಾರೆ. ಕೂಡಲೇ ಆ ಪಟದ ಸೂತ್ರವನ್ನೋ ಇಲ್ಲವೇ ಬಾಲಗೋಂಚಿ ಭಾರವನ್ನು ಹೆಚ್ಚು ಕಡಿಮೆ ಮಾಡಿ ಯಶಸ್ವಿಯಾಗಿ ಆಗಸದತ್ತ ಹಾರಿಸಿದಾಗ ಆಗುವ ಆನಂದವನ್ನು  ಪದಗಳಲ್ಲಿ ವರ್ಣಿಸುವುದಕ್ಕಿಂತ ಅನುಭವಿಸಿದರೇ ಹೆಚ್ಚು ಆನಂದಮಯ.

ಸಾಧಾರವಾಗಿ  ಮೈದಾನಗಳಲ್ಲಿ ಅನೇಕರು ಇದೇ ರೀತಿ ಗಾಳಿಪಟವನ್ನು ಮಾಡಿ ಹಾರಿಸುತ್ತಿರುವಾಗ ಅವರಿಗೆ ಅರಿವಿಲ್ಲದಂತೆಯೇ ಒಂದು ರೀತಿಯ   ಸ್ವರ್ಧೆ ಎರ್ಪಟ್ಟು ಯಾರ ಪಟ ಹೆಚ್ಚು ಮೇಲೆ ಏರುತ್ತದೆ? ಯಾರ ಪಟ ಅತ್ಯಂತ ದೀರ್ಘಕಾಲ ಬಾನಿನಲ್ಲಿ ಹಾರಡುತ್ತದೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧರಿಸಲ್ಪಡುತ್ತದೆ.  ಕೆಲವೊಮ್ಮೆ ಒಬ್ಬರ ಮೇಲೆ ಒಬ್ಬರಿಗೆ ವೈಮನಸ್ಯವಾಗಿ ಒಬ್ಬರ ಪಟವನ್ನು ಮತ್ತೊಂದು ಪಟದ ದಾರದಿಂದ ಕೀಳಲು ಪ್ರಯತ್ನಿಸುವುದೂ ಉಂಟು ಈ ಪ್ರಕ್ರಿಯನ್ನು ಪೇಂಚ್ ಹಾಕುವುದು ಎನ್ನುತ್ತಾರೆ.  ಯಾರ ಮಾಂಜಾ ದಾರ ಚೆನ್ನಾಗಿರುತ್ತದೋ  ಅದರಲ್ಲಿರುವ ಗಾಜಿನ ಅಂಶ ಮತ್ತೊಂದು ಪಟದ ದಾರವನ್ನು ಹರಿದು ಹಾಕಿದರೆ ಅದೇನೋ ಯುದ್ಧ ಗೆದ್ದ ಸಂಭ್ರಮ. ಹಾಗೆ ದಾರ ಹರಿದು ಗೊತ್ತು ಗುರಿ ಇಲ್ಲದೇ ಹಾರುವ ಪಟವನ್ನು ಹಿಡಿಯಲು ಅದೆಷ್ಟೂ ದೂರ ದಿಕ್ಕಾಪಾಲಾಗಿ  ಆ ಪಟದ ವಾರಸುದಾರರು ಓಡುವುದೂ ಉಂಟು. ಒಟ್ಟಿನಲ್ಲಿ ಆಷಾಡ ಮಾಸದ ಗಾಳಿಯನ್ನು ಬಳಸಿಕೊಂಡು ಗಾಳಿಪಟ ಹಾರಿಸುವ ಆಟ ಅಂದು ನಮಗೆ ಅತ್ಯಂತ ಮೋಜಿನ ಖುಷಿ ಕೊಡುವ ಸಂಗತಿಯೇ ಆಗಿತ್ತು.

ಹೀಗೆ ಗಾಳಿಪಟ ಮಾಡುವಾಗ ಅನೇಕ ಯಡವಟ್ಟುಗಳನ್ನು ಮಾಡಿ ಹಿರಿಯರ ಕೈಯಲ್ಲಿ ಒದೆ ತಿಂದ ಉದಾರಣೆಗಳು ಬಹಳಷ್ಟು. ಅದೊಮ್ಮೆ ಪಟ ಮಾಡಲು ಮನೆಯಲ್ಲಿ ವೃತ್ತ ಪತ್ರಿಕೆಯನ್ನು ಹುಡುಕಿದರೆ, ದುರದೃಷ್ಟವಶಾತ್ ಅಂದಿನ ಬೆಳಿಗ್ಗೆಯೇ ನಮ್ಮ ತಾಯಿಯವರು ರದ್ದಿಗೆ ಹಾಕಿದ್ದಾಗ ಮನೆಯಲ್ಲಾ ತಡಕಿ ಬೀರುವಿನ ಮೇಲೆ ಇಟ್ಟಿದ್ದ ಪೇಪರನ್ನು ಹರಿದು ಕೊಂಡು ಗಾಳಿಪಟ ಮಾಡಿ ಹಾರಿಸಿ ಸಂಭ್ರಮದಿಂದ ಮನೆಗೆ ಬಂದಾಗಲೇ ನನಗೆ ತಿಳಿದಿದ್ದ ನಾನು ಪಟ ಮಾಡಲು ಬಳೆಸಿದ್ದು ನಮ್ಮ ತಂದೆಯವರು ಅತ್ಯಂತ ಜೋಪಾನವಾಗಿ ಎತ್ತಿಟ್ಟಿದ್ದ ಪ್ರಜಾವಾಣಿ ಪತ್ರಿಕೆಯಲ್ಲಿ ಅನಕೃ ಕುರಿತಾದ ಪ್ರಕಟವಾಗಿದ್ದ ವಿಶೇಷ ಸಂಚಿಕೆಯ ಪ್ರತಿ. ಕತ್ತೇಗೇನು ಗೊತ್ತು  ಕಸ್ತೂರಿ ಪರಿಮಳ ಎನ್ನುವಂತೆ  ಆ ಸಂಚಿಕೆಯ ಮಹತ್ವ ಗೊತ್ತಿಲ್ಲದೆ ಹರಿದು ಹಾಕಿದ್ದರ ಪರಿಣಾಮ ಒಂದೆರಡು ಗೂಸಾ ಬಿದ್ದಿತ್ತು. ಇನ್ನು ದೊಡ್ಡ ದೊಡ್ಡ ಪಟ ಮಾಡಲು ಮೈದಾಹಿಟ್ಟಿನ ಗೋಂದು ಮಾಡಲು ಹೋಗಿ  ಅಡುಗೆಮನೆಯಲ್ಲಾ ಗಲೀಜು ಮಾಡಿಟ್ಟು ಅಮ್ಮನ ಕೈಯಿಂದ ಬಾಸುಂಡೆ ತಿಂದ ಸಂದರ್ಭಗಳು ಅದೆಷ್ಟೋ ಇವೆ.

WhatsApp Image 2019-07-05 at 6.58.10 PM (1)

ಗಾಳಿಪಟ ಎಂದ ಮೇಲೆ ನಮ್ಮ ಕೀರ್ತಿಶೇಷ ರಾಮಕೃಷ್ಣಾ ಚಿಕ್ಕಪ್ಪನವರನ್ನು ನೆನಯಲೇ ಬೇಕು. ಕೇವಲ ಚೌಕಾಕಾರದ ಸಾಧಾರಣ ಪಟ ಮಾಡುತ್ತಿದ್ದ ನನಗೆ ಎಂಟು ಕಡ್ದಿಯ ಪಟ,  ಹದಿನಾರು ಕಡ್ಡಿಯ  ಆಯಾತಾಕಾರದ ಪಟ, ನಕ್ಷಾತ್ರಾಕಾರದ ಪಟ, ಮತ್ತು ಪಟದ ತುದಿಯಲ್ಲಿ  ಕೋಡಿನಂತೆ ಕಡ್ಡಿಗಳನ್ನು  ಬಿಟ್ಟು ಅವುಗಳ ನಡುವೆ ತೋರಣಗಳಂತೆ ಪೇಪರಿನಲ್ಲಿ ಕತ್ತರಿಸಿ ಅಂಟಿಸಿ ಅವುಗಳು ಗಾಳಿಯಲ್ಲಿ ಹಾರುವಾಗ ಪಟ ಪಟ ಎಂದು ಮಾಡುತ್ತಿದ್ದ ಶಬ್ಧ ನನ್ನ ಕಿವಿಯಲ್ಲಿ ಇನ್ನೂ ಹಾಗೆಯೇ ಇದೆ. ಸಾಧಾರಣ ವೃತ್ತ ಪತ್ರಿಕೆಯಲ್ಲಿ ಮಾಡಿದ ಪಟ ಗಾಳಿಯ ರಭಸಕ್ಕೆ ಹರಿದು ಹೋಗುತ್ತಿದ್ದ ಕಾರಣ ಆಸ್ಪತ್ರೆಯಲ್ಲಿ ಎಕ್ಸರೇ ಹಾಕಿಡಲು ಬಳೆಸುತ್ತಿದ್ದ ದಪ್ಪನೆಯ ಹಳದೀ ಇಲ್ಲವೇ ಬೂದು ಬಣ್ಣದ ಕಾಗದ ನಂತರ ಪ್ಲಾಸ್ಟಿಕ್ ಪಟವನ್ನೂ ಮಾಡಲು ಹೇಳಿಕೊಟ್ಟವರೇ ಆವರು. ಅಯಾಯಾ ಪಟಕ್ಕೆ ತಕ್ಕಂತೆ ಹೇಗೆ  ಸೂತ್ರವನ್ನು ಹಾಕಬೇಕೆಂಬ ಲೆಕ್ಕಾಚಾರ ಕಲಿತದ್ದೂ ಅವರಿಂದಲೇ. ಅನೇಕ ರಜಾ ದಿನಗಳಲ್ಲಿ ಅವರೊಂದಿಗೆ  ಗಾಳಿಪಟ ಹಾರಿಸಿ ಆನಂದಿಸಿದ ರಸಗಳಿಗೆಗಳನ್ನು ನನ್ನ ಜೀವನ ಪರ್ಯಂತ ಮರೆಯಾಗದು. ಅಂತಹ ಸುಂದರ ಕ್ಷಣಗಳು ಮತ್ತೆ  ಖಂಡಿತವಾಗಿಯೂ ಬಾರದು.

ಗಾಳಿಪಟ  ನಮ್ಮ ಜೀವನಕ್ಕೆ ಬಲು ಹತ್ತಿರದ ಸಂಗಾತಿ ಎಂದರೂ ತಪ್ಪಾಗಲಾದರು.   ಗಾಳಿಪಟದ ಏರಿಳಿತದಂತೆ ನಮ್ಮ ಜೀವನದಲ್ಲಿಯೂ ಏರಿಳಿತವಿದ್ದೇ ಇರುತ್ತದೆ. ಗಾಳಿಪಟದ ಸೂತ್ರ ಅಥವಾ ಬಾಲಂಗೋಚಿ ಸರಿ ಇಲ್ಲದಿದ್ದಲ್ಲಿ ಅದು ಹೇಗೆ ಗಾಳಿಪಟ ಇದ್ದಲ್ಲಿಯೇ ಗಿರಿಕಿ ಹೊಡೆಯುತ್ತದೆಯೋ ಅಂತೆಯೇ ನಮ್ಮ ಜೀವನದಲ್ಲಿ ಗುರಿ ಇಲ್ಲದೆ ಮುನ್ನಡೆಯಲು ಹೋದರೆ ಗೊತ್ತು ಗುರಿ ಇಲ್ಲದಂತೆಯೇ ಗಿರಿಕಿ ಹೊಡೆಯುವುದು ಖಂಡಿತವೇ ಸರಿ. ಹೇಗೆ ಗಾಳಿ ಬಳೆಸಿಕೊಂಡು ಪಟ  ಎತ್ತರೆತ್ತರಕ್ಕೆ  ಹಾರುತ್ತದೆಯೋ ಹಾಗೆಯೇ ನಾವೂ ಕೂಡಾ ಜೀವನದಲ್ಲಿ ಬರುವ  ಅವಕಾಶಗಳನ್ನು ಬಳೆಸಿಕೊಂಡು ಎತ್ತರಕ್ಕೇರುಲು ಪ್ರಯತ್ನಿಸಬೇಕು. ಪಟ ಮೇಲಕ್ಕೆ ಎಷ್ಟೇ ಏರಿದರೂ ಅದನ್ನು ಹಾರಿಸುವ ಇಲ್ಲವೇ ತೂರಾಡುತ್ತಿದ್ದಾಗ ಆದನ್ನು ಸರಿಪಡಿಸುವ ಸಾಮರ್ಥ್ಯ ದಾರ ಹಿಡಿದವನ ಬಳಿಯೇ ಇರುವ ಹಾಗೆ ನಮ್ಮನ್ನು  ಜೀವನದಲ್ಲಿ  ಎತ್ತರೆಕ್ಕೆ ಏರಿಸುವ ಮತ್ತು  ಅಡ್ಡದಾರಿಯನ್ನು ಹಿಡಿದಾಗ ಸರಿಪಡಿಸಲು ನಮ್ಮ ಹಿರಿಯರು ಬಳಿ ನಮ್ಮ ಸೂತ್ರ ಇದ್ದೇ ಇರುತ್ತದೆ.

WhatsApp Image 2019-07-05 at 6.58.25 PM (1)

ಇದೇ ಸಮಯದಲ್ಲಿ   ನನ್ನ ತಂಗಿಯ ಬಾಲ್ಯದ ಪಠ್ಯದಲ್ಲಿದ್ದ  ಮತ್ತು ಆಕೆ  ಮುದ್ದು ಮುದ್ದಾಗಿ ತೊದಲು ನುಡಿಯಲ್ಲಿ ಸದಾ ಹೇಳುತ್ತಿದ್ದ  ಗಾಳಿಪಟ ಕುರಿತಾದ ಪದ್ಯ ನೆನಪಿಗೆ ಬರುತ್ತದೆ. ಅಂದು ಆಕೆ ಹಾಗೆ ಪದ್ಯವನ್ನು ಉಲಿಯುತ್ತಿದ್ದರೆ ಅದು ನನಗೇ ಹೇಳುತ್ತಿದ್ದಳೇನೋ ಎನಿಸುತ್ತಿತ್ತು.

ಅಣ್ಣನು ಮಾಡಿದ ಗಾಳಿಪಟ

ಬಣ್ಣದ ಹಾಳೆಯ ಗಾಳಿಪಟ

                 ನೀಲಿಯ ಬಾನಲಿ ತೇಲುವ ಸುಂದರ

                 ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ

ಬೆದರದ ಬೆಚ್ಚದ ಗಾಳಿಪಟ

                 ದಾರವ ಜಗ್ಗಿ ದೂರದಿ ಬಗ್ಗಿ

                 ತಾರೆಯ ನಗಿಸುವ ನನ್ನ ಪಟ

ಉದ್ದದ ಬಾಲದ ಗಾಳಿಪಟ

ನನ್ನಯ ಮುದ್ದಿನ ಗಾಳಿಪಟ

ಇಂದು ತರತರಹದ ಬಣ್ಣ ಬಣ್ಣದ ಸಿದ್ದ ಪಡಿಸಿದ  ಗಾಳಿಪಟಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಚೀನಾ ಕೂಡ ತರ ತರಹದ ಪ್ಲಾಸ್ಟಿಕ್ ಮತ್ತು ನೈಲಾನ್ ಬಟ್ಟೆಯ, ಗಾಳಿ ಊದಿ ಬೆದರು ಬೊಂಬೆ ಮಾದರಿಯ ಇಲ್ಲವೇ ಡ್ರಾಗನ್ ಮಾದರಿಯ ತರತರಾವರಿ ಗಾಳಿಪಟವನ್ನು ಮಾರುಕಟ್ಟೆಗೆ ತಂದಿದ್ದಾರೆ. ಉತ್ತರ ಭಾರತದ ಕೆಲವು ಭಾಗದಲ್ಲಿ  ಕೇವಲ ಆಷಾಡ ಮಾಸವಲ್ಲದೆ ಸಂಕ್ರಾಂತಿ ಹಬ್ಬದ ಸಮಯದಲ್ಲೂ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಅನೇಕ ಕಡೆ ಗಾಳಿಪಟ ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರದರೂ ನಾವು ನಮ್ಮ ಕೈಯಾರೆ ಮಾಡಿ ಸರಿಯಾಗಿ ಸೂತ್ರ ಹಾಕಿ ಬಾನೇತ್ತರಕ್ಕೆ ಹಾರಿಸಿ ಆನಂದ ಪಡುವುದರ ಮುಂದೆ ಕೊಂಡು ತಂದು ಹಾರಿಸುವ ಪಟ ಮಜಾ ಕೊಡದು.

WhatsApp Image 2019-07-05 at 7.03.44 PM

ಆಷಾಢ ಮಾಸದ ಪ್ರಥಮ ಏಕದಶಿಯಂದು ಆಚರಿಸಲ್ಪಡುವ ಗಾಳೀ‌ಪಟದ ಹಬ್ಬಕ್ಕೆ ನಿಮಗೆಲ್ಲರಿಗೂ ಹಾರ್ಧಿಕ ಶುಭಾಶಯಗಳು.

ಪಟ ಮೇಲಕ್ಕೆ ಎಷ್ಟೇ ಏರಿದರೂ ಅದರ ಸೂತ್ರ  ದಾರ ಹಿಡಿದವನ ಬಳಿಯೇ ಇರುವ ಹಾಗೆ  ನಮ್ಮ ಜೀವನದಲ್ಲಿ ನಾವು ಎಷ್ಟೇ ಏರಿದರೂ ನಮ್ಮೆಲ್ಲರ ಸೂತ್ರ ಆ ಭಗವಂತನ ಬಳಿಯೇ ಇರುತ್ತದೆ.  ಜೀವನದಲ್ಲಿ ಅವನು ಸೂತ್ರಧಾರಿ ನಾವು  ಕೇವಲ ಅವನಾಡಿಸುವ ಪಾತ್ರಧಾರಿಗಳಷ್ಟೇ.

ಏನಂತೀರೀ?

WhatsApp Image 2019-07-05 at 7.02.50 PM (1)