ರಂಗನಾಥ ಮೇಷ್ಟ್ರು

WhatsApp Image 2021-07-23 at 7.54.47 AM

ಸಾಧಾರಣವಾಗಿ ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನೂ ಅಚರಿಸುತ್ತಿರಲಿಲ್ಲ. ಆದರೆ ಆಷಾಢ ಮಾಸದ ಹುಣ್ಣಿಮೆಯ ದಿನಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದದ್ದಂತೂ ಸುಳ್ಳಲ್ಲ. ಆಷಾಢ ಮಾಸದಲ್ಲಿ ನಾವೆಲ್ಲರೂ ಆಚರಿಸಬಹುದಾದಂತಹ ಅತ್ಯಂತ ಶ್ರೇಷ್ಠವಾದ ಹಬ್ಬವೆಂದರೆ ಗುರು ಪೂರ್ಣಿಮೆ. ಈ ಗುರು ಪುರ್ಣಿಮೆಯಂದು, ನಮ್ಮನ್ನು ತಿದ್ದಿ ತೀಡಿ ನಮ್ಮಲ್ಲಿ ಜ್ಞಾನ ದೀವಿಗೆಯನ್ನು ಹಚ್ಚಿ ಅದನ್ನು ಬೆಳಗಿ, ನಮಗೆ ವಿದ್ಯಾ ಬುದ್ಧಿಗಳನ್ನು ಕಲಿಸಿ ಕೊಟ್ಟ ಗುರುಗಳಿಗೆ ವಂದನೆ ಸಲ್ಲಿಸುವ ದಿನವಿದು. ಗುರುವಿನ ಮಹತ್ವವನ್ನು ಅರಿಯುವ ದಿನವಿದು. ಜನ್ಮ ಕೊಟ್ಟ ತಂದೆ ತಾಯಿಯರ ಹೊರತಾಗಿ ನಮ್ಮನ್ನು ಕೈ ಹಿಡಿದು ನಮ್ಮ ನಮ್ಮ ಸ್ವಭಾವ ಮತ್ತು ಶಕ್ತಿಗನುಗುಣವಾಗಿ ನಮ್ಮ ಜೀವನಕ್ಕೆ ಒಂದು ಸರಿಯಾದ ದಿಕ್ಕನ್ನು ತೋರಿಸಿಕೊಟ್ಟವರಿಗೆ ಥನ್ಯತಾಪೂರ್ವಕವಾಗಿ ಕೃತಜ್ಞತೆಗಳನ್ನು ಅರ್ಪಿಸುವ ದಿನವಿದು. ಇಂತಹ ಪವಿತ್ರ ದಿನದಂದು ನನ್ನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ನನಗೆ ಗಣಿತದ ಗುರುಗಳಾಗಿದ್ದ ಪ್ರಾಥಸ್ಮರಣೀಯರಾದ ದಿ. ಶ್ರೀ ರಂಗನಾಥ ಮೇಷ್ಟ್ರನ್ನು ನಿಮ್ಮಲ್ಲರಿಗೂ ಪರಿಚಯಿಸುವ ಸಣ್ಣ ಪ್ರಯತ್ನ.

ಶಾಲೆಯಲ್ಲಿ ಕಲಿತದ್ದು ಎಲ್ಲವೂ ಜೀವನದಲ್ಲಿ ಅಳವಡಿಸಿಕೊಳ್ಳಲಾಗದಿದ್ದರೂ ಚಿಕ್ಕವಯಸ್ಸಿನಲ್ಲಿ ಕಲಿತ ಕೂಡುವುದು ಕಳೆಯುವುದು, ಗುಣಾಕಾರ ಮತ್ತು ಭಾಗಾಕಾರಗಳು ನಮ್ಮ ಜೀವ ಇರುವರೆಗೂ ನಮ್ಮೊಂದಿಗೆ ಇದ್ದೇ ಇರುತ್ತದೆ. ಅದೇಕೋ ಏನೋ ಅಂದಿಗೂ ಇಂದಿಗೂ ಎಲ್ಲಾ ಮಕ್ಕಳಿಗೂ ಗಣಿತ ಎಂದರೆ ಕಬ್ಬಿಣದ ಕಡಲೆ ಎಂದೇ ಭಾವಿಸುತ್ತಾರೆ. ನಿಜ ಹೇಳಬೇಕೆಂದರೆ, ಒಮ್ಮೆ ಗಣಿತದ ಸೂತ್ರಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಅದು ನಿಜವಾಗಿಯೂ ಸುಲಿದ ಬಾಳೇಹಣ್ಣಿನಂತೆ ಬಲು ಸೊಗಸಾಗಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟವರೇ ನಮ್ಮ ರಂಗನಾಥ ಮೇಷ್ಟ್ರು. ಈಗಲೂ ಸಹಾ ಯಾರಾದರೂ, ನಾನು ಹಾಕಿದ ಲೆಖ್ಖಾಚಾರವನ್ನು ತಪ್ಪೆಂದು ಹೇಳಿದರೆ, ಕೂಡಲೇ ನಾನು ತಪ್ಪು ಮಾಡಿದ್ದೇನೆ ಎಂದರೆ ಅದು ನಮ್ಮ ಗಣಿತದ ಮೇಷ್ಟ್ರು ರಂಗನಾಥರಿಗೆ ಮಾಡಿದ ಅವಮಾನ ಮತ್ತೊಮ್ಮೆ ಸರಿಯಾಗಿ ಲೆಖ್ಧ ಹಾಕಿ ನೋಡಿ ಎಂದು ಹೇಳುತ್ತೇನೆ. ನನಗೆ ನನ್ನ ಲೆಖ್ಖಾಚಾರಕ್ಕಿಂತಲೂ ನಮ್ಮ ರಂಗನಾಥ ಮೇಷ್ಟ್ರು ಹೇಳಿಕೊಟ್ಟ ಗಣಿತ ಮೇಲೆ ಭರವಸೆಯೇ ಹೆಚ್ಚು. ಅದಕ್ಕೇ ಅಲ್ವೇ ನಮ್ಮ ಹಿರಿಯರು ಹೇಳಿರುವುದು ಮುಂದೇ ಗುರಿ ಇರಬೇಕು. ಹಿಂದೆ ಗುರು ಇರಬೇಕು ಎಂದು.

ಅದು ಎಂಭತ್ತರ ದಶಕ. ನಾನು ಬಿಇಎಲ್ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ಕಾಲ. ಅದೇ ಸಮಯದಲ್ಲಿ ಬಹಳಷ್ಟು ಹಿರಿಯ ಗುರುಗಳು ವಯೋಸಹಜ ನಿವೃತ್ತಿ ಹೊಂದಿದ ಪರಿಣಾಮವಾಗಿ ಅನೇಕ ಹೊಸಾ ಶಿಕ್ಷಕ/ಶಿಕ್ಷಕಿಯರನ್ನು ಶಾಲೆಗೆ ಸೇರಿಸಿಕೊಂಡ ಸಂಧರ್ಭದಲ್ಲಿಯೇ ನಮ್ಮ ಶಾಲೆಗೆ ಸೇರಿಕೊಂಡವರೇ ಆಗ ತಾನೇ ತಮ್ಮ ಪದವಿಯ ನಂತರ ಟಿಸಿಹೆಚ್ ಮುಗಿಸಿದ್ದ ಬಿಸಿ ರಕ್ತದ ತರುಣರೇ ನಮ್ಮ ರಂಗನಾಥ ಮೇಷ್ಟ್ರು. ಅಗೆಲ್ಲಾ ನಮ್ಮ ಶಾಲೆಯಲ್ಲಿ ಪೀಟೀ ಮೇಷ್ಟ್ರು ನಾರಾಯಣಪ್ಪ ಅವರ ಹೊರತಾಗಿ ಉಳಿದವರೆಲ್ಲರೂ ಶಿಕ್ಷಕಿಯರೇ ಇದ್ದು ಒಂದು ರೀತಿಯಲ್ಲಿ ಪ್ರಮೀಳಾ ಸಾಮ್ರಾಜ್ಯಕ್ಕೆ ಶಿಕ್ಷಕರಾಗಿ ಸೇರ್ಪಡೆಗೊಂಡವರು.

ಸುಮಾರು 5,5″ ಇಲ್ಲವೇ 5.6″ ಎತ್ತರದ, ಕೋಲು ಮುಖದ, ಸಪೂರದ ದೇಹದ ವಯಸ್ಸು ಇನ್ನೂ 23-24 ಇದ್ದರೂ ಬಾಲನೆರೆಯಿಂದ ಕೂಡಿದ ಮಧ್ಯಮವರ್ಗದ ರಂಗನಾಥ ಮೇಷ್ಟ್ರು ಮೊದಲ ಬಾರಿಗೆ ನಮ್ಮ ತರಗತಿಯ ಶಿಕ್ಷಕಿಯೊಂದಿಗೆ ಬಂದಾಗ ಎಂದಿನಂತೆಯೇ ಎಲ್ಲರೂ ಎದ್ದು ನಿಂತು ಒಕ್ಕೊರಲಿನಿಂದ ನಮಸ್ಕಾರ ಟೀಚರ್, ನಮಸ್ಕಾರ ಸಾರ್.. ಎಂದು ರಾಗಾವಾಗಿ ಹೇಳುತ್ತಾ ಅವರನ್ನು ತರಗತಿಗೆ ಸ್ವಾಗತಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಸಾಧಾರಣವಾಗಿ ಬಹುತೇಕ ಶಿಕ್ಷಕ/ಶಿಕ್ಷಕಿಯರು ತಮಗೆ ವಹಿಸಿಕೊಟ್ಟ ಪಾಠ ಪ್ರವಚನಗಳ ತಯಾರಿ ಮತ್ತು ಬೋಧನೆಯಲ್ಲಿ ಮಾತ್ರವೇ ನಿರತರಾಗಿ ತಮ್ಮ ಕೊಟ್ಟ ಕೆಲವನ್ನು ನಿಷ್ಥೆಯಿಂದ ಮಾಡಿ ಮುಗಿಸಿ ದೂರ ದೂರದ ಮನೆಗಳಿಗೆ ಹೋಗಿ ನೆಮ್ಮದಿಯಿಂದ ಇದ್ರೇ ಸಾಕಪ್ಪಾ ಎನ್ನುವವರೇ ಹೆಚ್ಚಾಗಿದ್ದಾಗ, ಅದಕ್ಕೆ ತದ್ವಿರುದ್ಧವಾಗಿದ್ದವರೇ ಆಗಿನ್ನೂ ಯುವಕರಾಗಿದ್ದ ಮೇಲಾಗಿ ಬ್ರಹ್ಮಚಾರಿಗಳೂ ಆಗಿದ್ದ ನಮ್ಮ ರಂಗನಾಥ ಮೇಷ್ಟ್ರು. ಅನೇಕ ಬಡ ಮಕ್ಕಳಿಗೆ ತಮ್ಮ ಕೈಯಿಂದಲೇ ಫೀ‌ ಮತ್ತು ಸಮವಸ್ತ್ರ ಕೊಡಿಸಿದ್ದೂ ಉಂಟು.

ಗಣಿತದ ತರಗತಿಗಳು ಆರಂಭವಾಗುವುದಕ್ಕೆ ಮುಂಚೆ ಎಲ್ಲರೂ ಒಕ್ಕೊರಿನಿಂದ ಖಡ್ಡಾಯವಾಗಿ ಎರಡೊಂದ್ ಎರಡು, ಎರೆಡೆರೆಡ್ಲಾ ನಾಲ್ಕು ರಿಂದ ಆರಂಭಿಸಿ, ಇಪ್ಪತ್ತೊಂಬೋತ್ಲಾ ನೂರಾ ಎಂಭತ್ತ್, ಇಪ್ಪತ್ತು ಹತ್ಲಾ ಇನ್ನೂರೂ.. ಎಂದು ರಾಗವಾಗಿ ಮುಗಿಸಲೇ ಬೇಕಾಗಿತ್ತು. ಹೀಗೆ ನಿತ್ಯವೂ ಎಲ್ಲರಿಗೂ ಒಟ್ಟಿಗೆ ಮಗ್ಗಿಯನ್ನು ಹೇಳುವ ಮುಖಾಂತರ ಇಡೀ ತರಗತಿಯ ವಿದ್ಯಾರ್ಥಿಗಳಿಗೆ ಅರಿವಿಲ್ಲದಂತೆಯೇ 2-20ರ ವರಗಿನ ಮಗ್ಗಿ ಕಂಠ ಪಾಠ ಅಗಿಬಿಡುತ್ತಿದ್ದಂತಹ ಕಾಲವಾಗಿತ್ತು, ಇಂದಿನ ಮಕ್ಕಳು ಪ್ರತಿಯೊಂದಕ್ಕೂ ಕ್ಯಾಲುಕ್ಲೇಟರ್ ಬಳಸುವುದನ್ನು ರೂಢಿ ಮಾಡಿಕೊಂಡಿರುವುದು ನಿಜಕ್ಕೂ ವಿಪರ್ಯಾಸ. ಹೀಗೆ ಮಗ್ಗಿ ಹೇಳುತ್ತಿದ್ದರೆ, ನಮ್ಮ ರಂಗನಾಥ ಮೇಷ್ಟ್ರು ತರಗತಿಗೆ ನೇರವಾಗಿ ಬರದೇ ನಮಗಾರಿಗೂ ತಿಳಿಯದಂತೆ ಮರೆಯಾಗಿ ಅಲ್ಲೇ ಕಿಟಕಿಯ ಪಕ್ಕದಲ್ಲೋ ಇಲ್ಲವೇ ಬಾಗಿಲ ಪಕ್ಕದಲ್ಲಿಯೋ ನಿಂತು ಯಾರೆಲ್ಲಾ ಹೇಳುತ್ತಿದ್ದಾರೆ, ಹೇಳುತ್ತಿಲ್ಲ, ಅಥವಾ ಹೇಳುವಾಗ ಯಾರೆಲ್ಲಾ ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ನಾವೆಲ್ಲಾ ಮಗ್ಗಿ ಮುಗಿಸಿದ ತರಗತಿ ಒಳಗೆ ಪ್ರವೇಶಿಸಿ ನಮ್ಮ ತಪ್ಪುಗಳನ್ನು ತಿದ್ದುತ್ತಿದ್ದರು.

ನನಗೇನೋ ನಮ್ಮ ತಂದೆ ತಾಯಿಯರು ಬಾಲ್ಯದಿಂದಲೇ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಯ ಹೊರತಾಗಿ ರಾಷ್ಟ್ರೋತ್ಥಾನದ ಬಾಲಭಾರತಿ ಪುಸ್ತಕಗಳಲ್ಲದೇ ವೀರ ದೇಶಭಕ್ತರು ಮತ್ತು ಅನೇಕ ಧಾರ್ಮಿಕ ಪುಸ್ತಕಗಳನ್ನು ಓದಲು ಕಲಿಸಿಕೊಟ್ಟಿದ್ದರು. ನಾನು ಅದನ್ನು ಕೇವಲ ಕಾಲ ಹರಣಕ್ಕಾಗಿ ಓದುತ್ತಿದ್ದೆನೇ ಹೊರತು ಅದರಿಂದಾಗುವ ಪ್ರಯೋಜನಗಳ ಅರಿವಿರಲಿಲ್ಲ. ಪಠ್ಯಪುಸ್ತಕಗಳ ಹೊರತಾಗಿಯೂ ಈ ರೀತಿಯ ಅನೇಕ ಪುಸ್ತಕಗಳನ್ನು ಮಕ್ಕಳು ಓದಿ ಜ್ಞಾನಾರ್ಜನೆ ಮಾಡುವುದು ಬಹಳ ಮುಖ್ಯ ಎಂದು ನಮ್ಮೆಲ್ಲರಿಗೂ ತೋರಿಸಿಕೊಟ್ಟವರೇ ನಮ್ಮ ರಂಗನಾಥ ಸರ್. ಶಾಲೆ ಮುಗಿಸಿ ಅವರ ಮನೆಗೆ ಹೋದರೆಂದರೆ ಊಟ, ತಿಂಡಿ, ನಿದ್ದೆ ಇದಾವುದರ ಪರಿವೆಯೇ ಇಲ್ಲದೇ ಎಲ್ಲಾ ರೀತಿಯ ವಾರಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದುವುದು ಅವರ ಮೆಚ್ಚಿನ ಹವ್ಯಾಸ. ಹಾಗಾಗಿ ಅವರ ಮನೆಗೆ ಬಹುತೇಕ ಎಲ್ಲಾ ರೀತಿಯ ವಾರಪತ್ರಿಕೆಗಳು ಮತ್ತು ಮಾಸಪತ್ರಿಕೆಗಳನ್ನು ತರಿಸುತ್ತಿದ್ದರಲ್ಲದೇ ಅವರ ಮನೆಯಲ್ಲಿಯೇ ಒಂದು ಸಣ್ಣ ಗ್ರಂಥಾಲಯದಷ್ಟು ಪುಸ್ತಗಳ ಸಂಗ್ರಹವನ್ನು ಇಟ್ಟುಕೊಂಡಿದ್ದರು.

ನಾವುಗಳು ಅವರ ಮನೆಗೆ ಹೋದರೆ ಸಾಕು. ಬಾರಯ್ಯಾ ಮಿತ್ರಾ… ಎಂದು ಬಾಯಿ ತುಂಬಾ ಕರೆದು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಮನೆಯವರ ಕ್ಷೇಮ ಸಮಾಚಾರಗಳನ್ನು ವಿಚಾರಿಸಿ ಬಂದ ಕೆಲಸವನ್ನು ಕೇಳಿದ ನಂತರ ಮನೆಗೆ ಹೋಗುವಾಗ ಅವರ ಜೋಬಿನಲ್ಲಿ ಇರುತ್ತಿದ್ದ ಮಿಂಠಿ ಇಲ್ಲವೇ ಯಾವುದಾದರು ಚಾಕ್ಲೆಟ್ ಕೊಡುವುದರ ಜೊತೆಗೆ, ನಮ್ಮ ನಮ್ಮ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಅವರು ನಮಗೆ ಓದಲು ಕೊಡುತ್ತಿದ್ದರಲ್ಲದೇ, ಆ ಪುಸ್ತಕವನ್ನು ಓದಿ ಮುಗಿಸಿದ ನಂತರ ಅದರ ಬಗ್ಗೆ ಅನೌಪಚಾರಿಕವಾಗಿ ಒಂದು ರೀತಿಯ ಆರೋಗ್ಯಕರವಾದ ಚರ್ಚೆಯನ್ನು ನಡೆಸಿ ನಾವು ಆ ಪುಸ್ತಕವನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೆ ಅದರಿಂದ ಏನನ್ನು ಕಲಿತಿದ್ದೇವೆ ಎಂಬುದರ ಮನನವನ್ನು ಮಾಡಿಸುತ್ತಿದ್ದಂತಹ ವ್ಯಕ್ತಿ ಅವರು. ಇದರ ಜೊತೆ ಆ ಪುಸ್ತಕದ ಬಗ್ಗೆ ಅವರ ಅಭಿಪ್ರಾಯವನ್ನು ಮಂಡಿಸುತ್ತಿದ್ದದ್ದಲ್ಲದೇ, ಅದನ್ನು ಬರೆದ ಲೇಖಕರ ದೃಷ್ಟಿಕೋನ ಹೀಗೂ ಇತ್ತೇನೂ ಎಂಬುದನ್ನು ಎತ್ತಿ ತೋರಿಸುತ್ತಿದ್ದಂತಹ ವ್ಯಕ್ತಿಯವರು.

ಹೀಗೆ ಶಾಲೆಯಲ್ಲಿ ಇರುವಷ್ಟು ಸಮಯ ಅವರು ನಮಗೆ ಶಿಕ್ಷಕರಾದರೇ, ಶಾಲೆ ಮುಗಿದ ಕೂಡಲೇ ಅವರು ನಮಗೊಬ್ಬ ಹಿತೈಷಿ ಅಥವಾ ನಮ್ಮ ಶ್ರೇಯೋಭಿಲಾಶಿಗಳಾಗಿದ್ದರು. ಎಲ್ಲದ್ದಕ್ಕೂ ಹೆಚ್ಚಾಗಿ ಒಬ್ಬ ಸೋದರ ಮಾವನೋ ಇಲ್ಲವೇ ಚಿಕ್ಕಪ್ಪನಂತೆ ಇದ್ದರು ಎಂದರೂ ತಪ್ಪಾಗಲಾರದು.

ಅವರು ಬೋರ್ಡಿನ ಕಡೆಗೆ ತಿರುಗಿ ಲೆಖ್ಖಗಳನ್ನು ಬಿಡಿಸುತ್ತಿದ್ದ ಸಂದರ್ಭದಲ್ಲಿ ಯಾದಾದ್ರು ಅನಾವಶ್ಯಕವಾಗಿ ಗಲಾಟೆ ಮಾಡಿದ್ರಂರೂ ಶಾಂತಮೂರ್ತಿ ರಂಗನಾಥರು, ಉಗ್ರ ನರಸಿಂಹ ರೂಪ ತಾಳುತ್ತಿದ್ದದ್ದೂ ಉಂಟು. ಸಹಿಸಲಾರದ ಮಟ್ಟದ್ದಷ್ಟು ಗಲಾಟೆ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಕಡೆಗೆ ತಿರುಗಿ ಚಾಕ್ ಪೀಸ್ ಬೀಸುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಅದೇ ರೀತಿ ಅವರು ಒಂಟಿ ಕಾಲಿನ ಮೇಲೆ ಸೊಟ್ತಗೆ ನಿಂತು ಒಂದು ಕಣ್ಣನ್ನು ಮುಚ್ಚಿಕೊಂಡು ಒಕ್ಕಣ್ಣಿನಲ್ಲಿ ನಮ್ಮನ್ನು ಒಂದು ರೀತಿ ದುರುಗುಟ್ಟಿಕೊಂಡು ನೋಡುತ್ತಿದ್ದ ರೀತಿಯೇ ನಮ್ಮೆಲ್ಲರ ಸದ್ದನ್ನು ಅಡಗಿಸಿಬಿಡುತ್ತಿತ್ತು.

ಏಳನೇ ಕ್ಲಾಸ್ ಪರೀಕ್ಷೆ ಬರೆದು ಫಲಿತಾಂಶದ ದಿನ ಗಣಿತದಲ್ಲಿ 92 ಅಂಕಗಳನ್ನು ಗಳಿಸಿದ್ದದ್ದಕ್ಕೆ ಕರೆದು ನಿಧಾನವಾಗಿ ನೋಡಿಕೊಂಡು ಬರೆದಿದ್ದರೆ 100ಕ್ಕೆ 100 ಗಳಿಸಬಹುದಾಗಿತ್ತು ಎಂದಿದ್ದಲ್ಲದೇ, ಹೈಸ್ಕೂಲಿನಲ್ಲಿ ಈ ರೀತಿಯಾಗಿ ಆತುರ ಪಡಬೇಡ ಎಂದು ಬುದ್ದಿವಾದ ಹೇಳಿದ್ದರು. ನಿಜಕ್ಕೂ ಹೇಳ್ಬೇಕೂ ಅಂದ್ರೇ ಪ್ರೈಮರಿ ಶಾಲೆ ಮುಗಿಸಿದ ನಂತರವೇ ಅವರೊಂದಿಗಿನ ಒಡನಾಟ ನನಗೆ ಹೆಚ್ಚಾಗಿದ್ದು. ಆ ಸಮಯದಲ್ಲೇ ಮಾತು ಚೆನ್ನಾಗಿ ಆಡ್ತೀನಿ ಅಂತಾ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದನ್ನು ಗಮನಿಸಿದ ನಮ್ಮ ಮೇಷ್ಟ್ರು ತಾವೂ ಸಹಾ ಯಲಹಂಕದ ಅಂದಿನ ದಲಿತ ಶಾಸಕರಾಗಿದ್ದ ಬಸವಲಿಂಗಪ್ಪನವರ ಪರ ಚುನಾವಣ ಪ್ರಚಾರ ಮಾಡಿದ್ದನ್ನು ತಿಳಿಸಿದ್ದಲ್ಲದೇ ಚಿಕ್ಕ ವಯಸ್ಸು ರಾಜಕೀಯ ಎಲ್ಲಾ ಬೇಡ. ಸುಮ್ಮನೆ ನಮ್ಮನ್ನು ಉಪಯೋಗಿಸಿಕೊಂಡು ಕಾಸಿಗೂ ಕಿಮ್ಮತ್ತಿಲ್ಲದೇ ಬಿಸಾಡುತ್ತಾರೆ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿ ಕಳುಹಿಸಿದ್ದರು. ಇಷ್ಟರ ಮಧ್ಯೆ ಅವರಿಗೂ ಸಹಾ ಮದುವೆಯಾಗಿ ಮುದ್ದಾದ ಎರಡು ಗಂಡು ಮಕ್ಕಳಾಗಿದ್ದರು.

ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಸೇರಿಕೊಂಡಾಗಲೂ ಅಗ್ಗಾಗ್ಗೆ ಮೇಷ್ಟ್ರನ್ನು ಮಾತನಾಡಿಸಿಕೊಂಡು ಬರ್ತಿದ್ದ ನನಗೆ, ಡಿಪ್ಲಮೋ ಕಡೆ ವರ್ಷದಲ್ಲಿ ಇದ್ದಾಗ ಸ್ವಲ್ಪ ಹುಷಾರು ತಪ್ಪಿ ಒಂದು ವಾರಗಳ ಮಟ್ಟಿಗೆ ಆಸ್ಪತ್ರೆಗೆ ಸೇರುವಂತಾಯಿತು. ಎಂದಿನಂತೆ ನನ್ನ ಆರೋಗ್ಯ ವಿಚಾರಿಸಲು ನನ್ನ ಆಪ್ತಮಿತ್ರ ಹಾಗೂ ರಂಗನಾಠ ಮೇಷ್ಟ್ರ ಬಲಗೈ ಬಂಟ ಹರಿ (ನರಹರಿ) ಆಸ್ಪತ್ರೆಗ ಬಂದಿದ್ದಾಗ ಬಹಳ ಬೇಜಾರಾಗುತ್ತಿದೆ ಎಂದಿದ್ದೆ. ಈ ವಿಷಯವನ್ನು ಯಥಾವತ್ತಾಗಿ ರಂಗನಾಥ ಮೇಷ್ಟ್ರ ಬಳಿ ಹೇಳಿದಾಗ ಮಾರನೇ ದಿನವೇ ಚಂದ್ರಶೇಖರ್ ಆಜಾದ್ ಅವರ ಅಜೇಯ ಪುಸ್ತಕವನ್ನು ಓದಲು ಕಳುಹಿಸಿಕೊಟ್ಟಿದ್ದರು. ಅಪರೂಪಕ್ಕೆ ಇಂದು ಚಂದ್ರಶೇಖರ್ ಆಜಾದ್ ಅವರ ಜಯಂತಿ, ಗುರುಪೂರ್ಣಿಮೆ ಒಟ್ಟೊಟ್ಟಿಗೆ ಬಂದಿದೆ. ಇವೆಲ್ಲದರ ಸವಿನೆನಪಿನಲ್ಲಿ ನಾನೀ ಲೇಖನ ಬರೆಯುತ್ತಿರುವುದು ಕಾಕತಾಳೀಯ ಎನ್ನುವುದಕ್ಕಿಂತಲೂ ಪೂರ್ವಜನ್ಮದ ಸುಕೃತವೇ ಎಂದು ನಾನು ಭಾವಿಸುತ್ತೇನೆ.

ಅಂತಹ ಅನಾರೋಗ್ಯದ ಸಮಯದಲ್ಲೂ ಬಾಬು ಕೃಷ್ಣಮೂರ್ತಿಗಳ ವಿರಚಿತ 582 ಪುಟಗಳ ಚಂದ್ರಶೇಖರ ಆಝಾದ್ ಅವರ ಪುಸ್ತವನ್ನು ಒಂದೇ ಗುಕ್ಕಿನಲ್ಲಿ ಊಟ ತಿಂಡಿ ನಿದ್ರೆಗಳ ಪರಿವೇ ಇಲ್ಲದೇ, ಕೇವಲ 24 ಗಂಟೆಗಳಲ್ಲಿ ಓದಿ ಮುಗಿಸಿದ್ದೆ. ಓದಿ ಮುಗಿಸಿದ್ದೇ ಎನ್ನುವುದಕ್ಕಿಂತಲು ನನ್ನ ಮೇಲಿನ ರಂಗನಾಥ ಮೇಷ್ಟ್ರು ಮತ್ತು ಗೆಳೆಯ ಹರಿಯ ಪ್ರೀತಿ ಮತ್ತು ಆಝಾದ್ ಅವರ ಸಾಧನೆ ಮತ್ತು ವ್ಯಕ್ತಿತ್ವ ನನ್ನನ್ನು ಓದಿಸಿಕೊಂಡು ಹೋಗಿತ್ತು ಎಂದರೂ ತಪ್ಪಾಗಲಾರದು. ಬಹುಶಃ ಅಂತಹ ವೀರಪುರುಷರ ಕಥೆಯನ್ನು ಓದಿದ್ದ ಪರಿಣಾಮವೋ ಏನೋ? ಕೆಲವೇ ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಅವರ ಪುಸ್ತಕವನ್ನು ಚೊಚ್ಚಲು ತುಂಬು ಗರ್ಭಿಣಿಯಾಗಿದ್ದ, ನಮ್ಮ ಮನೆಗೆ ಬಾಣಂತನಕ್ಕೆ ಬಂದಿದ್ದ ನನ್ನ ತಂಗಿಯೂ ಓದಿ ಮುಗಿಸಿದ ನಂತರ ನಾನೇ ಖುದ್ದಾಗಿ ರಂಗನಾಥ ಮೇಷ್ಟ್ರ ಮನೆಗೆ ಹೋಗಿ ಹಿಂದಿರುಗಿಸಿ ಕೃತಜ್ಞನೆಗಳನ್ನು ಹೇಳಿ ಬಂದಿದ್ದೆ.

ಹೊರಗಿನ ಪ್ರಪಂಚಕ್ಕೆ ಬಹಳ ಚೆನ್ನಾಗಿಯೇ ಕಾಣಿಸಿಕೊಳ್ಳುತ್ತಿದ್ದ ನಮ್ಮ ರಂಗನಾಥ ಮೇಷ್ಟ್ರಿಗೆ ವಯಕ್ತಿಕವಾಗಿ ಅನೇಕ ಕೌಟುಂಬಿಕ ಸಮಸ್ಯೆಗಳ ಜೊತೆಗೆ ಆರ್ಥಿಕ ಸಮಸ್ಯೆಗಳೂ ಇದ್ದ ಕಾರಣ ಕಾರಣ ಶಾಲೆ ಮುಗಿದ ನಂತರ ಪರಿಚಯಸ್ಥರ ಫೈನಾನ್ಸಿನಲ್ಲಿ ಲೆಖ್ಖ ಬರೆಯುತ್ತಿದ್ದಲ್ಲದೇ ಅನೇಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ವಿಷಯ ತಿಳಿದಿತ್ತು. ಅದೊಮ್ಮೆ ತಮ್ಮ ನೆಚ್ಚಿನ ಹೀರೋ ಪುಕ್ ನಲ್ಲಿ (ಗುರುಗಳಿಂದಲೇ ಪ್ರೇರಿತನಾಗಿ ನಾನೂ ಸಹಾ ನನ್ನ ಮೊತ್ತ ಮೊದಲ ದ್ವಿಚಕ್ರವಾಹನವಾಗಿ ಹೀರೋ ಪುಕ್ ಸ್ವಂತ ದುಡಿಮೆಯಲ್ಲಿ ಅದಾಗಲೇ ಖರೀದಿಸಿದ್ದೆ) ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟ ವಿಷಯ ಕೇಳಿ ನಿಜಕ್ಕೂ ಮನಸ್ಸಿಗೆ ದುಃಖವುಂಟಾಗಿತ್ತು. ಕಡೆಯದಾಗಿ ಅದೇ ಹೀರೋ ಪುಕ್ಕಿನಲ್ಲಿಯೇ ಹೋಗಿ ಅವರ ಅಂತಿಮ ದರ್ಶನ ಪಡೆದು ಬಂದಿದ್ದೆ

ಚಟ ಎನ್ನುವುದು ಮನುಷ್ಯರೊಂದಿಗೆ ಅಂಟಿ ಕೊಂಡು ಬಂದ ಜಾಡ್ಯ. ಬಹುತೇಕ ಎಲ್ಲರೂ ಒಂದಲ್ಲಾ ಒಂದು ಚಟಕ್ಕೆ ಬಲಿಯಾಗಿರುತ್ತಾರೆ. ಹಾಗೆಯೇ ನಮ್ಮ ರಂಗನಾಥ ಮೇಷ್ಟ್ರಿಗೂ ಸಹಾ ಸಿಗರೇಟ್ ಸೇದುವ ಅಭ್ಯಾಸವಿತ್ತು. ಹಾಗಾಗಿಯೇ ಆವರ ಜೋಬಿನಲ್ಲಿ ಸದಾಕಾಲವೂ ಮಿಂಟಿ ಇಲ್ಲವೇ ಚಾಕ್ಲೇಟ್ ಇಟ್ಟುಕೊಳ್ಳುತ್ತಿದ್ದ ರಹಸ್ಯ ಅವರ ಸಾವಿನ ನಂತರ ತಿಳಿದು ಬಂದಿತ್ತು. ಶಾಲೆಯಲ್ಲಿ ತರಗತಿ ಮುಗಿಸಿದ ನಂತರ ಸಿಗುವ ಸಣ್ಣ ಸಮಯದಲೇ ಅದೆಲ್ಲೋ ಹೋಗಿ ಬರುತ್ತಿದ್ದದ್ದು ಒಂದೆರಡು ಧಮ್ ಎಳೆಯಲು ಎಂದು ಆನಂತರವೇ ನಮಗೆ ಗೊತ್ತಾಗಿದ್ದು. ನಾವು ವಿಧ್ಯಾರ್ಥಿಗಳಾಗಿದ್ದಾಗ ಅಷ್ಟೆಲ್ಲಾ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು ಅವರು ಸಿಗರೇಟ್ ಸೇದುತ್ತಿದ್ದ ವಿಷಯವನ್ನು ತಿಳಿದಿರಲಿಲ್ಲ ಎಂದರೆ ಎಷ್ಟರ ಮಟ್ಟಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಿಟ್ಟುಕೊಳ್ಳುತ್ತಿದ್ದರು ಎಂಬುದು ಅರಿವಾಗುತ್ತದೆ.

ಬಹುಶಃ ಅದೇ ಗೌಪ್ಯತೆಯೇ ಅವರ ಅಕಾಲಿಕ ಮರಣಕ್ಕೂ ಕಾರಣವಾಗಿ ಹೋಯಿತೇ? ಎಂಬ ಅನುಮಾನವೂ ಅವರ ಸಾವಿನ ನಂತರ ಕಾಡಿದ್ದಂತೂ ಸುಳ್ಳಲ್ಲ. ಅವರ ಆರ್ಥಿಕ ಸಮಸ್ಯೆ ಮತ್ತು ಕೌಟುಂಬಿಕ ಸಮಸ್ಯೆಯನ್ನು ಮತ್ತೊಬ್ಬರ ಬಳಿ ಹಂಚಿಕೊಂಡಿದ್ದರೆ ಖಂಡಿತವಾಗಿಯೂ ಅದನ್ನು ಪರಿಹರಿಸಬಹುದಿತ್ತೇನೋ? ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ,ಪ್ರತಿಯೊಂದು ಸಮಸ್ಯೆಗೂ ಹತ್ತಾರು ಪರಿಹಾರವಿರುತ್ತದೆ ಎಂದು ಗಣಿತ ಕಲಿಸಿ ಕೊಡುವಾಗ ಹೇಳಿದ್ದ ಪರಮ, ಸ್ವಾಭಿಮಾನಿ ಮತ್ತು ಅತ್ಮಾಭಿಮಾನಿ ರಂಗನಾಥ ಮೇಷ್ಟ್ರು ಎಲ್ಲವನ್ನೂ ತಮ್ಮ ಒಡಲೊಳಗೇ ಅಡಗಿಸಿಟ್ಟುಕೊಂಡು ಸಮಸ್ಯೆಯೊಂದಿಗೆ ಅಕಾಲಿಕವಾಗಿ ಸಾಯಬಾರದ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿ ಹೋಗಿದ್ದು ನಿಜಕ್ಕೂ ದುಃಖಕರವೇ ಸರಿ.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವರೇ ಗುರು ಎಂದೂ ಅರ್ಥೈಸಬಹುದು.

ಹೀಗೆ ಅಗಣಿತ ಜ್ಞಾನ ಸಂಪನ್ನರಾಗಿದ್ದ ನಮ್ಮ ಗಣಿತದ ಗುರುಗಳಾಗಿದ್ದ ನಮ್ಮ ರಂಗನಾಥ ಮೇಷ್ಟ್ರಿಗೆ ಆಷಾಡ ಪೌರ್ಣಮಿಯ ದಿನದಂದು ಭಕ್ತಿಯಿಂದ ಗೌರವಾದರಗಳನ್ನು ಸಲ್ಲಿಸುವುದು ನನ್ನ ಆದ್ಯ ಕರ್ತವ್ಯವೇ ಸರಿ. ಗುರು ಚರಿತ್ರೆಯಲ್ಲಿಯೇ ಹೇಳಿರುವಂತೆ ನಮ್ಮ ಮುಂದೆ ಸಾಕ್ಷಾತ್ ದೇವರು ಮತ್ತು ನಮ್ಮ ಗುರುಗಳು ಇಬ್ಬರೂ ಇದ್ದಾಗ, ಮೊದಲಿಗೆ ದೇವರನ್ನು ಪೂಜಿಸದೇ ನೇರವಾಗಿ ಗುರುಗಳನ್ನು ಪೂಜಿಸಿದರೆ ಸಾಕು. ನಾವು ಮಾಡಿದ ಪೂಜೆ ಗುರುಗಳ ಮೂಲಕ ಭಗವಂತನನ್ನು ತಲುಪುತ್ತದೆ. ಅದನ್ನೇ ಪುರಂದರ ದಾಸರು ಸರಳವಾಗಿ ಗುರುವಿನ ಗುಲಾಮನಾಗದ ತನಕ ದೊರೆಯದಣ್ನ ಮುಕುತಿ. ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ ಎಂದು ತಿಳಿಸಿದ್ದಾರೆ

WhatsApp Image 2021-07-23 at 11.10.04 AM

ಇಂದು ಸ್ವರಾಜ್ಯ ನಮ್ಮ ಸಿದ್ದ ಹಕ್ಕು ಅದನ್ನು ನಾವು ಪಡದೇ ತೀರುತ್ತೇವೆ ಎಂದು ಸಾರಿ ಹೇಳಿದ ಶ್ರೀ ಬಾಲ ಗಂಗಾಧರ ತಿಲಕ್ ಮತ್ತು ಮೈ ಆಜಾದ್ ಹೂಂ ಔರ್ ಆಜಾದ್ ಹೀ ರಹೂಂಗ ಎಂದು ಹೇಳುತ್ತಾ ಬ್ರಿಟೀಷರ ಕೈಗೆ ಸೆರೆ ಸಿಕ್ಕದೇ ವೀರ ಸ್ವರ್ಗವನ್ನು ಸೇರಿದ ಶ್ರೀ ಚಂದ್ರಶೇಖರ್ ಆಜಾದ್ ಅಂತಹ ಪ್ರಾಥಃಸ್ಮರಣಿಯರ ಜನ್ಮ ದಿನ. ಅದಕ್ಕೆ ಮುಗುಟಪ್ರಾಯವಾಗಿ ಆಷಾಡ ಪೌರ್ಣಿಮೆ ಅರ್ಥಾತ್ ಗುರು ಪೌರ್ಣಿಮೆ. ಹಾಗಾಗಿ ನಾವೆಲ್ಲರೂ ಈ ಮೂವರಿಗೂ ಭಕ್ತಿ ಪೂರ್ವಕವಾದ ಪ್ರಣಾಮಗಳನ್ನು ಸಲ್ಲಿಸೋಣ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

Google ಮತ್ತು ಗುರು ನಡುವಿನ ಅಂತರ, ಮಹತ್ವ

ಇತ್ತೀಚಿನ ಯುವ ಜನರಿಗೆ ಹಿರಿಯರು ಏನು ಹೇಳಿದರೂ ಅಸಡ್ಡೆಯೇ. ಮೊನ್ನೆ ನನ್ನ ಮಗಳಿಗೆ ಅಡುಗೆ ಮಾಡುವುದು ಕಲಿಯಮ್ಮ ನಾಳೇ ನೀನೇ Higher Studies ಅಂತಾ ಬೇರೆ ಎಲ್ಲಾದ್ರೂ ಹೋದ್ರೇ ಅಥವಾ, ಮದುವೆ ಮಾಡಿಕೊಂಡು ಹೋದ್ಮೇಲೆ ಅಡುಗೆ ಬರ್ದೇ ಹೋದ್ರೇ ನಿನಗೇ ಕಷ್ಟ ಆಗುತೇ ಅಂದ್ರೆ, ಹೋಗಮ್ಮಾ, ಈಗ್ಲಿಂದಾನೇ ಅಡುಗೆ ಗಿಡುಗೆ ಅಂತ ಯಾರು ಕಲೀತಾರೆ. ಹೇಗೂ Google ಇದೇ, Youtube ಇದೇ. ಅಪ್ಪಂದೇ Blog & Channel ನಲ್ಲಿ ಎಷ್ಟೋಂದು ಅಡುಗೆ ತೋರ್ಸಿದ್ದಾರೆ ಅದನ್ನ ನೋಡಿ ಮಾಡ್ತೀನಿ ಬಿಡಮ್ಮಾ ಅನ್ನೋದೇ?

guru2

ಅದೇ ರೀತಿ ಮಗನಿಗೆ online class ನಡೀತಾ ಇದ್ರೂ ಅವನು ತನ್ನ ಪಾಡಿಗೆ ತಾನು ಏನೋ ಮಾಡ್ಕೋತಾ ಇದ್ದದ್ದನು ನೋಡಿ. ಏನೋ ಮಗೂ ಪಾಠ ಕೇಳಲ್ವೇನೋ ಅಂದ್ರೇ, ಹೇ, ಹೋಗಪ್ಪಾ, ಆದನ್ನು ಯಾರು ಕೇಳ್ತಾರೆ, ಆ Teacher ಪಾಠ ಮಾಡೋದು ಬೋರು ಅಂದ? ಇದೇನೋ ಮಗು, ಗುರುಗಳಿಗೇ ಹಾಗೆ ಹೇಳ್ತೀಯಾ? ಅವರು ಹೇಳಿದ್ದನ್ನೆಲ್ಲಾ ಚೆನ್ನಾಗಿ ಕೇಳಿ ಸದಾಕಾಲವೂ ನೆನಪಿನಲ್ಲಿ ಇಟ್ಕೋಬೇಕಪ್ಪಾ ಅಂದ್ರೇ, ಹಿರಿಯಕ್ಕನ ಚಾಳೀ ಮನೆ ಮಂದಿಗೆಲ್ಲಾ ಅನ್ನುವಂತೆ, ಏ ಹೋಗಪ್ಪಾ ಇದನ್ನೆಲ್ಲಾ ನಾವುಗಳು ಏಕೆ ನೆನಪಿನಲ್ಲಿ ಇಟ್ಕೋಬೇಕು. ಬೇಕಾದಾಗ Google ಮಾಡಿ ತಿಳ್ಕೋತೀವಿ ಅನ್ನೋದೇ?

ಇವತ್ತಿನ ಮಕ್ಕಳಿಗೆ ಯಾವುದನ್ನೂ ಓದಿ ಅಥವಾ ತಿಳಿದವರಿಂದ ಕೇಳಿ ತಿಳಿದುಕೊಳ್ಳಬೇಕು ಅನ್ನೋ ಮನಸ್ಥಿತಿನೇ ಇಲ್ಲ. ಎಲ್ಲದಕ್ಕೂ internet & Google. ಅದಕ್ಕೇ ಯೋಗರಾಜ್ ಭಟ್ರೂ ಸಹಾ ಲೈಫು ಇಷ್ಟೇನೇ ಹಾಡಿನಲ್ಲಿ ಮನೇಲೀ ಇಲಿ ಹಿಡಿಯೋದಕ್ಕೂ internetನಲ್ಲಿ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗವಾಡಿರುವುದು ನಿಜಕ್ಕೂ ಕಠು ಸತ್ಯ ಎನಿಸುವುದಲ್ಲದೆ ಮಾರ್ಮಿಕವೂ ಎನಿಸುತ್ತದೆ.

ಜೀವನದಲ್ಲಿ ಎಲ್ಲದ್ದಕ್ಕೂ Google ನೆಚ್ಚಿಕೊಳ್ಳೊದಕ್ಕೆ ಆಗೋದಿಲ್ಲ. ನಮ್ಮ ಏಳಿಗೆಯಲ್ಲಿ ಗುರುಗಳ ಪಾತ್ರ ತುಂಬಾನೇ ಮುಖ್ಯ ಆಗುತ್ತದೆ ಎನ್ನುವುದಕ್ಕೆ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ನಡುವೆ ನಡೆದ ಈ ಸುಂದರ ಪ್ರಸಂಗ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಆಗ್ತಾ ಇದೆ.

vivek

ಅದೊಮ್ಮೆ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡಿದಾಗ, ನಾನು ಭಗವದ್ಗೀತೆ ಮತ್ತು ಇತರ ಗ್ರಂಥಗಳನ್ನು ಹಲವಾರು ಬಾರಿ ಓದಿದ್ದೇನೆ, ನಾನು ಗೀತಾ ಮತ್ತು ರಾಮಾಯಣದ ಬಗ್ಗೆ ಉಪನ್ಯಾಸ ಮತ್ತು ಪ್ರವಚನಗಳನ್ನು ನೀಡುವಷ್ಟು ಜ್ಞಾನಾರ್ಜನೆ ಆಗಿದೆ ಮತ್ತು ಈಗಾಗಲೇ ಕೆಲವು ಕಡೆ ಪ್ರವಚನಗಳನ್ನೂ ಮಾಡಿದ್ದೇನೆ. ಇಷ್ಟೆಲ್ಲಾ ಅದ್ಮೇಲೂ ನನಗೆ ಇನ್ನೂ ಸಂತರ ಆಶ್ರಯ ಬೇಕೇ? ನನಗೆ ಇನ್ನೂ ಗುರುಗಳ ದೀಕ್ಷೇ ಬೇಕೇ? ಎಂದು ಕೇಳುತ್ತಾರೆ. ವಿವೇಕಾನಂದರನ್ನೊಮ್ಮೆ ದಿಟ್ಟಿಸಿ ನೋಡಿದ ರಾಮಕೃಷ್ಣರು ಉತ್ತರಿಸದೇ, ಮುಂದೆ ಸಮಯ ಬಂದಾಗ ನಿನಗೇ ಗೊತ್ತಾಗುತ್ತದೆ ಎಂದು ತಿಳಿಸಿ ಸುಮ್ಮನಾಗುತ್ತಾರೆ.

ಕೆಲವು ದಿನಗಳ ನಂತರ ರಾಮಕೃಷ್ಣರು ವಿವೇಕಾನಂದರನ್ನು ಕರೆದು ಅವರ ಕೈಯ್ಯಲ್ಲೊಂದು ವಸ್ತುವೊಂದನ್ನು ಕೊಟ್ಟು ಅದನ್ನು ಅಲ್ಲೇ ಸಮುದ್ರ ಮಾರ್ಗದಲ್ಲಿ ಕೆಲವು ಗಂಟೆಗಳಷ್ಟು ದೂರದಲ್ಲಿರುವ ಹತ್ತಿರದ ಹಳ್ಳಿಯೊಂದಕ್ಕೆ ತಲುಪಿಸಲು ತಿಳಿಸುತ್ತಾರೆ.

ಗುರುಗಳು ಹೇಳಿದ್ದೇ ವೇದವಾಕ್ಯ ಎಂದು ನಂಬಿದ್ದ ವಿವೇಕಾನಂದರೂ ಅದಕ್ಕೊಪ್ಪಿ ಮಾರನೇಯ ದಿನ ಸಮುದ್ರ ದಂಡೆಗೆ ಹೋಗಿ ಸಿದ್ಧವಾಗಿದ್ದ ದೋಣಿಯನ್ನೇರಿ ನಾವಿಕನಿಗೆ ಇನ್ನೇನ್ನು ಹೊರಡಲು ತಿಳಿಸಬೇಕು ಎನ್ನುವಷ್ಟರಲ್ಲಿ ಅವರಿಗೆ ಆ ಹಳ್ಳಿಗೆ ಹೋಗುವ ದಾರಿ ಗೊತ್ತಿಲ್ಲ ಎಂಬುದು ಅರಿವಾಗಿ, ನಾವಿಕನಿಗೆ ಆ ಹಳ್ಳಿಗೆ ಹೋಗುವ ದಾರಿಗೊತ್ತೇ ಎಂದು ಕೇಳಿದರೆ, ಅತನಿಗೂ ಅದರ ಬಗ್ಗೆ ಯಾವುದೇ ಸುಳಿವು ಇಲ್ಲ ಎಂಬುದನ್ನು ಅರಿತುಕೊಳ್ಳುತ್ತಾರೆ.

ಆ ಕೂಡಲೇ, ವಿವೇಕಾನಂದರು ತಮ್ಮ ಗುರುಗಳ ಬಳಿಗೆ ಆ ಹಳ್ಳಿಗೆ ಹೋಗುವ ದಾರಿ ಕೇಳುತ್ತಾರೆ.

ವೀವೇಕಾನಂದರ ಆಗಮನದ ನಿರೀಕ್ಷೆಯಲ್ಲಿದ್ದ ರಾಮಕೃಷ್ಣರು, ನಸುನಗುತ್ತಾ ನರೇಂದ್ರ ನೀನು ಗುರುವಿನ ಅವಶ್ಯಕತೆ ಬೇಕೆ ಎಂದು ಕೇಳಿದ ಪ್ರಶ್ನೆಗೆ ಇಂದು ಉತ್ತರ ನೀಡುವ ಸಮಯ ಬಂದಿದೆ ಎಂದು ಹೇಳುತ್ತಾ,

ನೋಡು ನಿನ್ನ ಬಳಿ ಹೋಗಲು ಮಾಧ್ಯಮ ಅಂದರೆ ದೋಣಿ ಇದೆ.

ಅದರ ಜೊತೆಗೆ ಕರೆದೊಯ್ಯಲು ಸಂಪನ್ಮೂಲವಾದ ನಾವಿಕನಿದ್ದಾನೆ.

ಹೋಗುವ ಮಾರ್ಗ ಅಂದರೆ ಸಮುದ್ರ ಇದೆ,

ನಿನಗೆ ಕೊಟ್ಟ ವಸ್ತುವನ್ನು ತಲುಪಿಸಬೇಕು ಎಂಬ ಕಾರ್ಯದ ಅರಿವಿದೆ.

ಎಲ್ಲಿ ಮತ್ತು ಯಾರಿಗೆ ಅದನ್ನು ತಲುಪಿಸಬೇಕೆಂದೂ ನಿಮಗೆ ತಿಳಿದಿದೆ

ಆದರೆ ನಿನಗೆ ಆಲ್ಲಿಗೆ ಹೋಗುವ ಸರಿಯಾದ ಮಾರ್ಗ ತಿಳಿದಿಲ್ಲ ಏಕೆಂದರೆ ನಿನಗೇ ಆ ಮಾರ್ಗ ಮತ್ತು ಹಳ್ಳಿ ಹೊಸದು. ಹಾಗಾಗಿ ನೀನು ಆ ಹಳ್ಳಿಯ ಮತ್ತು ಆದಕ್ಕೆ ಹೋಗುವ ಮಾರ್ಗವನ್ನು ತಿಳಿದಿರುವ ನನ್ನ ಬಳಿಗೆ ತಿಳಿದುಕೊಳ್ಳಲು ಬಂದಿರುವೆ.

ಅಂತೆಯೇ ನೀನು ಎಲ್ಲಾ ಧರ್ಮಗ್ರಂಥಗಳನ್ನು ಓದಿರಬಹುದು ಮತ್ತು ನೀವು ಅವುಗಳ ಕುರಿತಂತೆ ಅದ್ಭುತ ಪ್ರವಚನಗಳನ್ನೂ ಮಾಡಿರಬಹುದು

guru

ಆದರೆ, ಅ ಧರ್ಮಗ್ರಂಥಗಳ ನಿಜವಾದ ಗೂಡಾರ್ಥಗಳನ್ನು ಅರಿತುಕೊಳ್ಳಲು ಈ ಈಗಾಗಲೇ ಆ ಹಾದಿಯಲ್ಲಿ ಸಾಗಿದ ಒಬ್ಬ ಸಮರ್ಥವಾದ ಅರಿವಿರುವ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ. ನೀವು ಈಗಾಗಲೇ ಓದಿ ತಿಳಿದಿದ್ದ ಗ್ರಂಥಗಳಿಗೆ ಗುರುವಿನಿಂದ ಅದರ ಭಾಷ್ಯವನ್ನೊಮ್ಮೆ ಕೇಳಿದಾಗ ನಿಮಗೆ ಗ್ರಂಥದ ಸಮಗ್ರ ಚಿತ್ರಣ ಮೂಡುವುದಲ್ಲದೇ ಅದರ ಸಾರಂಶ ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಹಾಗಾಗಿ ನಿನಗೆ ಸಂತರ ಅಶ್ರಯ ಮತ್ತು ಸಮರ್ಥ ಗುರುವಿನ ಅವಶ್ಯಕತೆ ಇದೆ ಎಂದಾಗ ಗುರುಗಳಿಗೆ ಸಾಷ್ಟಾಂಗ ನಮಸ್ಕರಿಸುತ್ತಾರೆ.

Google ಮತ್ತು ಗುರುವಿನ ನಡುವೆ ಇರುವ ಅಂತರವೂ ಇದೇ. Google ನಾವು ಕೇಳಿದ ಪ್ರಶ್ನೆಗೆ ತನ್ನ ಬಳಿ ಮತ್ತೊಬ್ಬರು ತಿಳಿಸಿದಂತಹ ಉತ್ತರವನ್ನು ಮಾತ್ರ ಕೊಡಬಲ್ಲದೇ ಹೊರತು ಅದು ನಮ್ಮ ಪ್ರಶ್ನೆಯ ಹಿಂದೆ ಇರುವ ನಿಜವಾದ ನೋವನ್ನು ಅರಿತು ನಮ್ಮ ಭಾವನೆಗಳನ್ನು ಅನುಭವಿಸಿ ಉತ್ತರಿಸಲಾಗದು.

ಗುರು ಎಂದರೆ, ತನ್ನ ಅನುಯಾಯಿಗಳು ಯಾವುದೇ ಒಂದು ಸಂಗತಿಯನ್ನು ಅರಿಯಲು ಅಸಮರ್ಥರಾದಾಗ ಅವರಿಗೆ ಜ್ಞಾನದ ಹಾದಿಯನ್ನು ತೋರಿಸುವ ಮತ್ತು ಮುನ್ನಡೆಸುವ ವ್ಯಕ್ತಿ ಎಂದರ್ಥ. ಗುರುವಿನಲ್ಲಿ ಸರಳತೆ, ತ್ಯಾಗ, ಸಹುಷ್ಣುತೆ, ನಿಸ್ವಾರ್ಥತೆ, ಭಾವನಾತ್ಮಕತೆಗಳಂತಹ ವಿವಿಧ ಗುಣಗಳಿರುತ್ತವೆ.

ಪ್ರಪಂಚದ ಬಹುತೇಕ ಎಲ್ಲ ಜ್ಞಾನವೂ Googleನಲ್ಲಿ ಅಳವಡಿಸಲಾಗಿದೇ ಎಂದರೂ, ಅದಕ್ಕೆ ಗುರುವಿನ ಸ್ಥಾನವನ್ನು ಕೊಡಲಾಗದು ನಮಗೆ ಸದಾಕಾಲವೂ ನಿಜವಾದ ಗುರುವಿನ ಅನುಗ್ರಹದ ಅವಶ್ಯಕತೆ ಇದೆ. Googleಗೆ ಒಂದು ಪ್ರಶ್ನೆಯನ್ನು ಯಾರೇ ಕೇಳಿದರೂ ಒಂದೇ ಉತ್ತರವನ್ನು ಕೊಡುತ್ತದೆ. ಆದರೆ ಗುರುವಿಗೆ ಆಲೋಚನಾ ಶಕ್ತಿಯಿದ್ದು, ಅವರು, ಶಿಷ್ಯರಿಂದ ಶಿಷ್ಯರಿಗೆ ಅವರವರ ಭಾವನೆ ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಉತ್ತರಿಸುವ ಶಕ್ತಿ ಇರುತ್ತದೆ, ಹಾಗೆ ಉತ್ತರವನ್ನು ನೀಡುವಾಗ ಅದರಲ್ಲಿ ಪ್ರಾಮಾಣಿಕತೆ ಮತ್ತು ನಿಸ್ವಾರ್ಥವಾಗಿರುತ್ತದೆ.

ಇಂದು ಆಟೊಪೈಲಟ್ ಕಾರ್ಯಕ್ಷಮತೆ ಇರುವ ವಿಮಾನಗಳು ಮತ್ತು ಸ್ವಯಂ ಚಾಲಿತ ಡ್ರೈವರ್‌ಲೆಸ್ ಕಾರುಗಳು ಬಳಕೆಯಲ್ಲಿದ್ದರೂ ಅದನ್ನು ಸಮರ್ಥವಾಗಿ ನಿರ್ವಹಿಸಲು ಪೈಲೆಟ್ ಅಥವಾ ಡ್ರೈವರ್ ಇರಲೇ ಬೇಕು. ಏಕೆಂದರೆ ಮಾನವನ ಹಸ್ತಕ್ಷೇಪದಿಂದ ಮಾತ್ರವೇ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬಹುದೇ ಹೊರತು ಇದೇ ಕಾರ್ಯಕ್ಷಮತೆಯನ್ನು ಯಂತ್ರಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ.

google

ಊಟದ ರುಚಿಯನ್ನು ಹೆಚ್ಚಿಸುವ ಸಲುವಾಗಿ ಉಪ್ಪಿನಕಾಯಿಯನ್ನು ತಿನ್ನಬಹುದೇ ಹೊರತು, ಹೊಟ್ಟೆಯನ್ನು ತುಂಬಿಸುವುದಕ್ಕೆ ಉಪ್ಪಿನಕಾಯಿಯನ್ನು ತಿನ್ನಲಾಗುವುದಿಲ್ಲ. ಅದೇ ರೀತಿ ನಾವು ಗುರುಮುಖೇನ ಸರಿಯಾಗಿ ತಿಳಿದಂತ ವಿಷಯದ ಕುರಿತು ತಾಳೆ ಹಾಕಲು ಅಥವಾ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು Google ಬಳಸ ಬಹುದೇ ಹೊರತು, ಗುರುವಿನ ಜಾಗದಲ್ಲಿ Googleನ್ನು ಬದಲಿಸಲಾಗದು. ಅದಕ್ಕೇ ಅಲ್ಲವೇ ಪುರಂದರ ದಾಸರು ಹೇಳಿರುವುದು. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು.

ಏನಂತೀರೀ?

ಅರಿವೇ ಗುರು

ಅರಿವೇ ಗುರು

ಅದೊಂದು ಶಿಶುವಿಹಾರ ಅಲ್ಲಿ ಅನೇಕ ಪುಟ್ಟ ಪುಟ್ಟ ಮಕ್ಕಳು ಕಲಿಯುತ್ತಿದ್ದವು. ಅದೊಂದು ದಿನ ಸಂಜೆ ಆ ಶಿಶುವಿಹಾರಕ್ಕೆ ಒಂದು ವಯಸ್ಸಾದ ದಂಪತಿಗಳು ಫಲ ಪುಷ್ಪ ಕಾಣಿಕೆಗಳೊಂದಿಗೆ ಬಂದು ಉಮಾ ಮಿಸ್ ಎಲ್ಲಿದ್ದಾರೆ ಎಂದು ಕೇಳುತ್ತಾರೆ. ಅಲ್ಲಿದ್ದ ಆಯಾ ಆ ವಯೋದಂಪತಿಗಳನ್ನು ಅಲ್ಲಿಯೇ ಕುಳ್ಳರಿಸಿ ಕುಡಿಯಲು ನೀರು ತಂದು ಕೊಟ್ಟು, ಸ್ವಲ್ಪ ಸಮಯ ಕುಳಿತಿರಿ ಅವರನ್ನು ಕರೆದು ಕೊಂಡು ಬರುತ್ತೇನೆ ಎಂದು ಹೋಗಿ ಸ್ವಲ್ಪ ಸಮಯದ ನಂತರ ಉಮಾ ಮಿಸ್ ಬಂದವರೇ ನಮಸ್ಕಾರ ನಾನೇ ಉಮಾ. ಹೇಳಿ ನನ್ನಿಂದೇನಾಗ ಬೇಕಿತ್ತು ಎಂದು ವಿನಮ್ರವಾಗಿ ಕೇಳಿದರು. ಕೂಡಲೇ ಆ ದಂಪತಿಗಳಿಬ್ಬರೂ ಕುಳಿತಲ್ಲಿಂದಲೇ ಕೈಮುಗಿದು ಏನೂ ಇಲ್ಲಾ ಇಂದು ಗುರು ಪೂರ್ಣಿಮೆ ಹಾಗಾಗಿ ಗುರುಗಳನ್ನು ಗೌರವಿಸುವುದು ಮತ್ತು ಗುರು ಕಾಣಿಕೆ/ದಕ್ಷಿಣೆ ಕೊಡುವುದು ನಮ್ಮ ಸಂಪ್ರದಾಯ. ದಯವಿಟ್ಟು ಇದನ್ನು ಸ್ವೀಕರಿಸಬೇಕು ಎಂದು ಫಲ ಪುಷ್ಪಗಳು ಮತ್ತು ಅದರೊಂದಿಗೆ ಒಂದು ಉಡುಗೊರೆಯನ್ನು ಶಿಕ್ಷಕಿಯ ಮುಂದೆ ಇಟ್ಟರು. ಪರಿಚಯವೇ ಇಲ್ಲದ ಅಪರಿಚಿತರು ಅದೂ ವಯೋ ವೃದ್ಧರು ಗುರುಕಾಣಿಕೆ ಕೊಡಲು ಬಂದಿರುವುದನ್ನು ನೋಡಿ ಸ್ವಲ್ಪ ಕಸಿವಿಸಿಗೊಂಡು ದಯವಿಟ್ಟು ಕ್ಷಮಿಸಿ. ನಿಮ್ಮ ಪರಿಚಯವೇ ನನಗಿಲ್ಲದಿರುವಾಗ ನಾನು ನಿಮಗೆ ಹೇಗೆ ಗುರುವಾಗುತ್ತೇನೆ ಮತ್ತು ನಾನೇಕೆ ನಿಮ್ಮಿಂದ ಗುರು ಕಾಣಿಕೆ ಸ್ವೀಕರಿಸಬೇಕೆಂದು ತಿಳಿಸಿ ಎಂದಾಗ, ಅ ದಂಪತಿಗಳಿಬ್ಬರು ನಗುತ್ತಾ , ಹೌದು ನಿಮಗೆ ನಮ್ಮ ಪರಿಚಯವಿಲ್ಲ. ಆದರೆ ನಮಗೆ ನಿಮ್ಮ ಪರಿಚಯ ಚೆನ್ನಾಗಿಯೇ ಇದೆ. ಸುಮಾರು ವರ್ಷಗಳ ಹಿಂದೆ ನಿಮ್ಮ ಶಿಶುವಿಹಾರದಲ್ಲಿ ಸಮೀರನೆಂಬ ತುಂಟ ಹುಡುಗ ನಿಮ್ಮಲ್ಲಿ ಕಲಿಯುತ್ತಿದ್ದದ್ದು ನೆನಪಿದೆಯೇ? ನಾವು ಅವನ ಅಜ್ಜಿ ಮತ್ತು ತಾತ ಎಂದಾಗ. ಓಹೋ ಹೌದಾ ತುಂಬಾ ಸಂತೋಷ. ನನಗೆ ಚೆನ್ನಾಗಿ ನೆನಪಿದೆ. ಮುದ್ದಾದ ಹುಡುಗ. ಅಪ್ಪಾ ಅಮ್ಮಾ ಇಬ್ಬರೂ ಕೆಲಸ ಮಾಡುತ್ತಿದ್ದರಿಂದ ಬೆಳಗಿನಿಂದ ಸಂಜೆಯವರೆಗೂ ಇಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಆರಂಭದಲ್ಲಿ ತುಂಬಾನೇ ಅಳುತ್ತಿದ್ದ ಅದಾದ ನಂತರ ಬಹಳ ಚೇಷ್ಟೇ ಮಾಡುತ್ತಿದ್ದ. ಆಮೇಲೆ ತುಂಬಾನೇ ಒಳ್ಳೆಯವನಾಗಿ ಬಿಟ್ಟ. ಈಗ ಹೇಗಿದ್ದಾನೆ? ಎಲ್ಲಿದ್ದಾನೆ? ಅವನು ಏಕೆ ಬರಲಿಲ್ಲ? ಎಂದು ಒಂದೇ ಸಮನೇ ಪ್ರಶ್ನೆಗಳನ್ನು ಕೇಳಲಾರಂಭಿಸಿದರು ಉಮಾ ಮಿಸ್. ಅದಕ್ಕೆ ಅಜ್ಜಿ ತಾತ ನಸು ನಗುತ್ತಾ. ಆವರೆಲ್ಲರೂ ತುಂಬಾನೇ ಚೆನ್ನಾಗಿದ್ದಾರೆ. ದೂರದ ಹಿಮಾಚಲದಲ್ಲಿದ್ದಾರೆ. ಇಂಜೀನಿಯರಿಂಗ್ ಮುಗಿಸಿ ಕಳೆದ ತಿಂಗಳು ಕೆಲಸಕ್ಕೆ ಸೇರಿಕೊಂಡಿದ್ದಾನೆ ಮತ್ತು ಮೊದಲ ಸಂಬಳವನ್ನೂ ತೆಗೆದುಕೊಂಡಿದ್ದಾನೆ. ತನಗೆ ಕೆಲಸ ಸಿಕ್ಕಲು ಕಾರಣೀಭೂತರಾದ ಆ ನನ್ನ ಮೊದಲ ಗುರುವಿಗೇ ತನ್ನ ಜೀವಮಾನದ ಆ ಮೊದಲ ಸಂಬಳವನ್ನು ಕಾಣಿಕೆಯಾಗಿ ಅರ್ಪಿಸಲು ನಮಗೆ ತಿಳಿಸಿದ್ದರಿಂದ ನಾವಿಲ್ಲಿ ನಿಮನ್ನು ಹುಡುಕಿಕೊಂಡು ಬರಬೇಕಾಯಿತು ಎಂದಾಗ, ಉಮಾ ಮಿಸ್ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಯುತ್ತಲಿತ್ತು. ಅಲ್ಲಿಯವರೆಗೂ ಅದೆಷ್ಟೋ ಮಕ್ಕಳು ಅವರ ಬಳಿ ಕಲಿತಿದ್ದರೂ ಅವರು ಶಿಶುವಿಹಾರ ಬಿಟ್ಟ ನಂತರ ಈ ರೀತಿಯಾಗಿ ಅವರನ್ನು ನೆನಪಿಸಿಕೊಂಡ ಉದಾಹರಣೆಯೇ ಇರಲಿಲ್ಲವಾದ್ದರಿಂದ ಆ ಕ್ಷಣದಲ್ಲಿ ಆವರಿಗಾದ ಆನಂದ ಅವರ್ಣನೀಯವಾಗಿತ್ತು.

ಬನ್ನಿ ಒಳಗೆ ಕುಳಿತುಕೊಂಡು ಮಾತನಾಡೋಣ ಎಂದು ಅಜ್ಜಿಯವರ ಕೈಗಳನ್ನು ಹಿಡಿದುಕೊಂಡು ಶಾಲೆಯ ಒಳಗೆ ಕರೆದುಕೊಂಡು ಹೋಗಿ, ಹೇಳಿ ನಮ್ಮ ಸಮೀರ ಹೇಗಿದ್ದಾನೆ? ಯಾವ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ ಎಂದು ಕೇಳಿದರು ಉಮಾ ಮಿಸ್. ಅದಕ್ಕೆ ತಾತ ಮೆಕ್ಯಾನಿಕಲ್ ಇಂಜೀನಿಯರಿಂಗ್ ಮುಗಿಸಿ ತನ್ನ ಮೊದಲ ಕೆಲಸದ ಸಂದರ್ಶನಕ್ಕೆಂದು ಹೋದಾಗ ಆ ಕಂಪನಿಯ ಮುಂಬಾಗಿಲ್ ಗೇಟ್ ತೆಗೆದು ಕೊಂಡಿತ್ತಂತೆ ಅಲ್ಲಿ ಯಾರೂ ಇರಲಿಲ್ಲವಂತೆ. ಸರಿ ನಮ್ಮ ಸಮೀರ ಒಳಗೆ ಹೋಗಿ ಗೇಟನ್ನು ಸರಿಯಾಗಿ ಹಾಕಿಕೊಂಡು ಕಛೇರಿಯ ಒಳಗೆ ಹೋದಾಗ ಕೆಲವೊಂದು ವೃತ್ತ ಪತ್ರಿಕೆಗಳು ಮತ್ತು ದಿನಪತ್ರಿಕೆಗಳು ಅಲ್ಲಿದ್ದ ಸೋಫಾ ಮೇಲೆ ಅಚೀಚೆ ಹರಡಿಕೊಂಡಿದ್ದವಂತೆ. ಸಮೀರ ಕೂಡಲೇ ಆ ಪತ್ರಿಕೆಗಳನ್ನು ಸರಿಯಾಗಿ ಒಂದು ಕಡೆ ಜೋಡಿಸಿಟ್ಟು ಅಲ್ಲಿಯೇ ಸೋಫಾದಮೇಲೆ ಕುಳಿತು ಕೊಂಡು ತನಗೆ ಸಂದರ್ಶನಕ್ಕೆ ಕರೆದಿದ್ದವರಿಗೆ ಕರೆ ಮಾಡಿ ತಾನು ಸಂದರ್ಶನಕ್ಕೆ ಬಂದಿದ್ದೇನೆ ಎಂದು ಕರೆ ಮಾಡಿದಾಗ, ಅವರು ಓಹೋ ಬಂದ್ರಾ? ಸ್ವಲ್ಪ ಹೊತ್ತು ಅಲ್ಲೇ ಕುಳಿತಿರಿ ನಾನೇ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ ಎಂದರಂತೆ. ಸರಿ ಹೇಗೋ ಅವರು ಬರುವವರೆಗೂ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಅಲ್ಲಿದ್ದ ಗೋಡೆಗಳ ಮೇಲೇ ನಾನಾ ನೋಬೆಲ್ ಸಾಧಕರ ಸಾಧನೆಗಳನ್ನು ಹಾಕಿದ್ದರು. ಒಂದೊಂದಾಗಿ ಅವುಗಳನ್ನು ನೋಡುತ್ತಾ ಓದುತ್ತಾ ಹೋದಂತೆಲ್ಲಾ ಅರ್ಧ ಮುಕ್ಕಾಲು ಗಂಟೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ಆ ಸಂದರ್ಶಕರು ಹೊರ ಬಂದು ತಮ್ಮ ಪರಿಚಯ ಮಾಡಿಕೊಂಡು ಒಳಗೆ ಕರೆದು ಕೊಂಡು ಹೋಗುತ್ತಿರುವಾಗಲೇ ಅಚಾನಕ್ಕಾಗಿ ಬಾಗಿಲಿಗೆ ಸ್ವಲ್ಪ ಅಡ್ಡವಾಗಿ ದೊಡ್ಡದೊಂದು ಕಬ್ಬಿಣದ ಸಲಾಕೆ ಬಿದ್ದಂತಾಗಿ ಈ ಕಡೆಯಿಂದ ಆ ಕಡೆಗೆ ಹೋಗಲು ಅಡ್ಡಿ ಪಡಿಸಿತು. ಆ ಕಡೆ ಹೋಗಬೇಕಿದ್ದಲ್ಲಿ ಅದನ್ನು ದಾಟಿ ಹೋಗಲು ಸ್ವಲ್ಪ ಪರಿಶ್ರಮ ಪಡಬೇಕಿತ್ತು. ಆಗ ಕೂಡಲೇ ನಮ್ಮ ಸಮೀರ ತನ್ನ ಫೈಲ್ ಪಕ್ಕಕ್ಕಿಟ್ಟು ತೋಳನ್ನು ಸರಿ ಪಡಿಸಿಕೊಂಡು ಸ್ವಲ್ಪ ಶ್ರಮವಹಿಸಿ ಆ ಸಲಾಕೆಯನ್ನು ಪಕ್ಕಕ್ಕೆ ತಳ್ಳಿ ಒಳಗೆ ಹೋದ ತಕ್ಷಣವೇ ಆ ವ್ಯಕ್ತಿ ಜೋರಾಗಿ ಚಪ್ಪಾಳೆ ತಟ್ಟುತ್ತಾ , ನಮ್ಮ ಸಮೀರನ ಕೈ ಕುಲುಕಿ, ಕೈಯೊಳಗೆ ಒಂದು ಕವರ್ ಕೊಟ್ಟರಂತೆ. ಸಾರ್ ಇದೇನಿದು ಎಂದು ಮುಗ್ಧನಾಗಿ ಕೇಳಿದಾಗ, ಅದಕ್ಕವರು ಇದು ನಿಮ್ಮ ಕೆಲಸದ ಆಫರ್ ಲೆಟರ್. ನೀವು ನಾಳೆಯಿಂದಲೇ ನಮ್ಮ ಕಂಪನಿಗೆ ಬಂದು ಕೆಲಸಕ್ಕೆ ಸೇರಿ ಕೊಳ್ಳಬಹುದು ಎಂದಾಗ, ನಮ್ಮ ಸಮೀರ ಅವಾಕ್ಕಾಗಿ ಸಾರ್, ಇನ್ನೂ ಸಂದರ್ಶನವೇ ಮಾಡಲಿಲ್ಲ, ನಾವು ನೀವು ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇವೆ. ನನ್ನ ವಿದ್ಯಾಭ್ಯಾಸ, ಬುದ್ದಿವಂತಿಕೆ ಸಾಮರ್ಥದ ಪರಿಚಯವೇ ನಿಮಗಿಲ್ಲ, ಅಷ್ಟರೊಳಗೇ ಅದು ಹೇಗೆ ಆಫರ್ ಲೆಟರ್ ಕೊಟ್ಟಿದ್ದೀರಾ? ಎಂದಾಗ, ಮಗೂ ಅನ್ನ ಆಗಿದೆ ಎಂದು ನೋಡಲು ಒಂದು ಅಗುಳನ್ನು ಮುಟ್ಟಿ ನೋಡಿದರೇ ಸಾಕಾಗುತ್ತದೆ. ಹಾಗೆ ನಿನ್ನ ವಿದ್ಯಾಭ್ಯಾಸಕ್ಕಿಂತ ನಿನ್ನ ನಡುವಳಿಕೆ ಮತ್ತು ವರ್ತನೆ ಮತ್ತು ಸಂಸ್ಕಾರ ನನಗೆ ಹಿಡಿಸಿತು. ಯಾರ ಸಂಸ್ಕಾರ ಚೆನ್ನಾಗಿರುತ್ತದೆಯೋ ಆತ ತನ್ನ ಒಳ್ಳೆಯ ಸನ್ನಡತೆಯಿಂದ ಖಂಡಿತವಾಗಿಯೂ ಜೀವನದಲ್ಲಿ ಮುಂದೆ ಬರುತ್ತಾನೆ. ಹಾಗಾಗಿ ನಿನ್ನನ್ನು ಆಯ್ಕೆ ಮಾಡಿದೆ ಎಂದರು. ಅವರು ಹೇಳಿದ್ದು ನಮ್ಮ ಸಮೀರನಿಗೆ ಅರ್ಥವಾಗದೆ ಕಣ್ನೂ ಬಾಯಿ ತೆರೆದುಕೊಂಡು ನಿಂತಿದ್ದಾಗ, ನೋಡಪ್ಪಾ ನೀನು ನಮ್ಮ ಕಛೇರಿಗೆ ಬಂದಾಗ ಉದ್ದೇಶ ಪೂರ್ವಕವಾಗಿಯೇ ಗೇಟನ್ನು ತೆರೆದಿಡಲಾಗಿತ್ತು. ನೀನು ಒಳಗೆ ಬಂದೊಡನೆಯೇ ತೆರೆದಿದ್ದ ಗೇಟನ್ನು ಭಧ್ರವಾಗಿ ಹಾಕಿಕೊಂಡು ಒಳಗೆ ಬಂದಾಗ ಮೊದಲ ಬಾರಿಗೆ ನೀನು ನನ್ನ ಗಮನ ಸೆಳೆದೆ. ಮತ್ತೆ ಉದ್ದೇಶ ಪೂರ್ವಕವಾಗಿಯೇ ಹರಡಲಾಗಿದ್ದ ಪತ್ರಿಕೆಗಳನ್ನು ಒಂದೆಡೆ ಜೋಡಿಸಿಟ್ಟಾಗ ನಿನ್ನ ಅಚ್ಚು ಕಟ್ಟುತನ ನನಗೆ ಬಹಳ ಮೆಚ್ಚಿಗೆಯಾಯಿತು. ನನಗೆ ಕರೆ ಮಾಡಿದಾಗ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತಿರಿ ಎಂದಾಗ, ಬಹುತೇಕರು ಮೊಬೈಲ್ ನೋಡುತ್ತಾ ಸಮಯ ವ್ಯರ್ಥ ಮಾಡಿದರೆ, ನೀನು ಮಾತ್ರ ನಮ್ಮ ಕೊಠಡಿಯಲ್ಲಿ ತೂಗು ಹಾಕಿದ್ದ ಎಲ್ಲಾ ನೋಬೆಲ್ ಪ್ರಶಸ್ತಿ ವಿಜೇತರ ವಿವರಗಳನ್ನು ತದೇಕ ಚಿತ್ತದಿಂದ ಓದುತ್ತಿದ್ದಾಗ ನಿನ್ನ ಶ್ರಧ್ಧೆ ಮತ್ತು ಹೊಸಾ ವಿಷಯಗಳ ಕಲಿಕೆಯ ಅರಿವಾಯಿತು. ಇದೆಲ್ಲವನ್ನೂ ಇಲ್ಲಿಯೇ ಕುಳಿತು ಸಿ.ಸಿ ಟಿವಿ ಯಲ್ಲಿ ನೋಡುತ್ತಿದ್ದೆ. ನಿನ್ನನ್ನು ಒಳಗೆ ಕರೆದು ಕೊಂಡು ಹೋಗುವಾಗ ಬೇಕೆಂದೇ ಸಲಾಕೆ ಬೀಳಿಸಿದಾಗ ನೀನು ಧೃತಿಗೆಡದೆ ಶ್ರಮವಹಿಸಿ ಕೂಡಲೇ ಅದನ್ನು ಪಕ್ಕಕ್ಕಿಟ್ಟೆ ಇದರಿಂದ ನಿನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯ ಅರಿವಾಯಿತು ಇಷ್ಟೆಲ್ಲಾ ಸದ್ಗುಣಗಳಿರುವ ನೀನೇ ನಮಗೆ ಸೂಕ್ತ ವ್ಯಕ್ತಿ ಎಂದು ತಿಳಿದು ಕೂಡಲೇ ಆಫರ್ ಲೆಟರ್ ಕೊಟ್ಟಿದ್ದೇನೆ. ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹರೆಸಿದರಂತೆ.

ಸಂತೋಷದಿಂದ ಆಫರ್ ಲೆಟರ್ ತೆಗೆದುಕೊಂಡು ಮನೆಗೆ ಬಂದು ನಮಗೆ ಕರೆ ಮಾಡಿ ನಡೆದದ್ದೆಲ್ಲವನ್ನೂ ತಿಳಿಸಿ ನನಗೆ ಇಂದು ನನ್ನ ವಿದ್ಯಾರ್ಹತೆಗಿಂತ ನನ್ನ ಸಂಸ್ಕಾರ ಮತ್ತು ಸನ್ನಡತೆಯಿಂದ ಕೆಲಸ ಸಿಕ್ಕದೆ ಎಂದರೆ, ಅದನ್ನು ನನಗೆ ಕಲಿಸಿಕೊಟ್ಟ ನನ್ನ ಮೊದಲ ಗುರು ಉಮಾಮಿಸ್ ಅವರಿಗೆ ಚಿರಋಣಿಯಾಗಿರಲೇ ಬೇಕು. ಅಪ್ಪಾ ಅಮ್ಮಾ ಶಿಶುವಿಹಾರದ ಮುಂದೆ ಬಿಟ್ಟು ತಮ್ಮ ಕೆಲಸಕ್ಕೆ ಹೋಗುತ್ತಿದ್ದಾಗ ನಾನು ಶಿಶುವಿಹಾರದ ಗೇಟ್ ತೆಗೆದು ಅದನ್ನು ಮುಚ್ಚದೇ ಒಳಗೇ ಓಡಿ ಹೋಗಿ ಬ್ಯಾಗ್ ಮತ್ತು ಊಟದ ಡಬ್ಬಿಯನ್ನು ಎಲ್ಲೋ ಒಂದು ಕಡೆ ಎಸೆದು ಆಟಾ ಸಾಮಾನುಗಳು ಇದ್ದ ಕಡೆ ಓಡಿ ಹೋಗುತ್ತಿದ್ದೆ. ಹಾಗೆ ಆಟ ಆಡಿ ಸುಸ್ತಾದ ಮೇಲೆ ಆಟಾ ಸಾಮಾನುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಬಿಡುತ್ತಿದ್ದೆ. ಇದಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ ಉಮಾ ಮಿಸಿ ಒಮ್ಮೆ ಕರೆದು ನೋಡು ಸಮೀರ ಹೀಗೆಲ್ಲಾ ಮಾಡಬಾರದು. ಪ್ರತೀದಿನ ಶಿಶುವಿಹಾರದ ಒಳಗೆ ಬಂದ ತಕ್ಷಣವೇ ಗೇಟ್ ಹಾಕಿ ಕೊಂಡು ಬರದಿದ್ದರೆ ನಾಯಿ, ಹಸು ಇಲ್ಲವೇ ಮತ್ತೆ ಯಾರಾದರೂ ಬಂದು ಬಿಡಬಿಡ ಬಹುದು. ಹಾಗೇ ಬ್ಯಾಗನ್ನು ಎಲ್ಲಿಯೋ ಬಿಸಾಡದೇ ಒಂದು ಕಡೆ ಸರಿಯಾಗಿ ಇಡಬೇಕು ಮತ್ತು ಆಟ ಆಡಿದ ನಂತರ ಆಟಿಕೆಗಳನ್ನು ಸರಿಯಾಗಿ ಜೋಡಿಸಿ ಇಟ್ಟಲ್ಲಿ ಮಾತ್ರವೇ ನಾಳೆ ಪುನಃ ಅದನ್ನು ಬಳೆಸಬಹುದು ಇಲ್ಲದಿದ್ದಲ್ಲಿ ನಾಳೆ ಅದು ನಿನಗೇ ಆಡಲು ಸಿಗುವುದಿಲ್ಲ ಎಂದು ಅರಿವು ಮೂಡಿಸಿದ್ದರು. ಚಿಕ್ಕಂದಿನಲ್ಲಿ ಕಲಿತದ್ದು ನಾವೆಷ್ಟೇ ದೊಡ್ಡವರಾದರೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಹೋಗಿರುತ್ತದೆ. ಹಾಗಾಗಿ ಅಂದು ಉಮಾ ಮಿಸ್ ಕಲಿಸಿದ ಪಾಠವನ್ನೇ ಇಂದು ನನಗರಿವಿಲ್ಲದಂತೆಯೇ ಆ ಕಛೇರಿಯಲ್ಲಿ ಪಾಲಿಸಿದ್ದೆ. ಹಾಗೆ ಪಾಲಿಸಿದ್ದರಿಂದಲೇ ನನಗೆ ಈ ಕೆಲಸ ಸಿಕ್ಕಿದೆ. ಹಾಗಾಗಿ ನನ್ನ ಮೊದಲ ಸಂಬಳ ಅವರಿಗೇ ಮೀಸಲು. ಮುಂದೆ ನಾನು ಊರಿಗೆ ಬಂದಾಗ ಖಂಡಿತವಾಗಿಯೂ ಅವರನ್ನು ಮುಖಃತಃ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆಯುತ್ತೇನೆ ಎಂದು ತಿಳಿಸಿದ್ದಾನೆ ಎಂದಾಗ ಉಮಾ ಮಿಸ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದಾದ ನಂತರ ಅದೆಷ್ಟೋ ಹೊತ್ತು ಮಾತನಾಡಿ ಸಮೀರ ಊರಿಗೆ ಬಂದಾಗ ಖಂಡಿತವಾಗಿಯೂ ಕರೆದು ಕೊಂಡು ಬನ್ನಿ ಎಂದು ತಿಳಿಸಿ ಅಜ್ಜಿ ಮತ್ತು ತಾತನವರನ್ನು ಬೀಳ್ಗೊಟ್ಟರು.

ಇಂದು ಆಷಾಡಮಾಸದ ಪೂರ್ಣಿಮೆ. ಈ ದಿನವನ್ನು ಗುರು ಪೂರ್ಣಿಮೆ ಎಂದೂ ಕರೆಯುತ್ತಾರೆ.  ವ್ಯಾಸ ಮಹರ್ಷಿ ಎಂದೇ ಪ್ರಸಿದ್ಧರಾದ ಶ್ರೀ ಕೃಷ್ಣ ದ್ವೈಪಾಯನರು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿದರು ಮತ್ತು ವೇದ ಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ ಎಂದೇ ಬಿರುದಾಂಕಿತರಾದರು. ಈ ಮಹತ್ಕಾರ್ಯದ ಸಲುವಾಗಿ ಅವರು ಮಹಾಗುರು/ ಆದಿ ಗುರು ಎಂಬ ಕೀರ್ತಿಗೂ ಪಾತ್ರರಾದವರು. ಇಂದು ಅವರ ಜನ್ಮ ದಿನ ಹಾಗಾಗಿ ಈ ದಿವಸ ಪ್ರತಿಯೊಬ್ಬ ಭಾರತೀಯರೂ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸುವುದು ಆದಿ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯ.

ಒಂದಕ್ಷರವಂ ಕಲಿಸಿದಾತಂ ಗುರು ಅಂದರೆ ಒಂದು ಅಕ್ಷವನ್ನು ಕಲಿದವರೂ ನಮಗೆ ಗುರುವಾಗುತ್ತಾನೆ ಎಂಬ ನಾಣ್ಣುಡಿ ನಮ್ಮಲ್ಲಿ ಪ್ರಚಲಿತದಲ್ಲಿದೆ. . ನಮ್ಮ ಸಂಸ್ಕೃತಿಯಲ್ಲಿ ಮಾತೃ ದೇವೋಭವ, ಪಿತೃದೇವೋಭವ ನಂತರದ ಸ್ಥಾನವನ್ನು ಆಚಾರ್ಯ ದೇವೋಭವ ಎಂದು ಗುರುಗಳಿಗೆ ಮೀಸಗಿಟ್ಟಿದ್ದೇವೆ. ತಂದೆ ತಾಯಿಯರು ಜನ್ಮದಾತರಾಗಿ ನಮ್ಮ ಹೊತ್ತು ಹೆತ್ತು ಪೋಷಿಸಿದರೆ, ನಮ್ಮ ಗುರುಗಳು ನಿಸ್ವಾರ್ಥವಾಗಿ ನಮಗೆ ನಾಲ್ಕಕ್ಷರವನ್ನು ಕಲಿಸುವುದರ ಜೊತೆಗೆ ನಮ್ಮನ್ನು ಒಳ್ಳೆಯ ವ್ಯಕ್ತಿತ್ವಕ್ಕೆ ಕಾರಣೀಭೂತರಾಗುತ್ತಾರೆ. ಹಾಗಾಗಿ ಇಂದು ನಮ್ಮ ಗುರುಗಳಿಗೆ ಮನಃಪೂರ್ವಕವಾಗಿ ಇಲ್ಲಿಂದಲೇ ನಮಿಸೋಣ. ಸಾಧ್ಯವಾದಲ್ಲಿ ಅವರನ್ನು ಮುಖಃತಃ ಭೇಟಿಯಾಗಿ ಅವರ ಆಶೀರ್ವಾದಕ್ಕೆ ಪಾತ್ರರಾಗೋಣ. ಎಲ್ಲರಿಗೂ ಮತ್ತೊಮ್ಮೆ ಗುರು ಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು.

ಮುಂದೆ ಸ್ಪಷ್ಟ ಗುರಿ ಮತ್ತು ಬೆನ್ನ ಹಿಂದೆ ದಿಟ್ಟ ಗುರು ನಮ್ಮೊಂದಿಗೆ ಇದ್ದಲ್ಲಿ ಯಾವುದೇ ಕೆಲವೂ ಸುಲಭ ಸಾಧ್ಯ.

ಏನಂತೀರೀ?