ಗೀಜಗದ ಗೂಡು

ಗೀಜಗ ಪಕ್ಷಿಗಳಲೆಲ್ಲಾ ಅತ್ಯಂತ ಬುದ್ದಿವಂತ ಪಕ್ಷಿ. ನೋಡಲು ಬಣ್ಣದ ಗುಬ್ಬಚ್ಚಿ ತರಹ ಗುಬ್ಬಚ್ಚಿ ಜಾತಿಗೇ ಸೇರುವ ಪಕ್ಷಿಯಾದರೂ ಗೀಜಗದ ಹಕ್ಕಿ ಪ್ರಾಕೃತಿಕ ವಾಸ್ತುಶಿಲ್ಪಿ ಅದರ ನೇಯ್ಗೆಯ ಕೌಶಲ್ಯವನ್ನು ಮನುಷ್ಯರೂ ಕಲಿತುಕೊಳ್ಳಬೇಕು. ಅದಲ್ಲದೇ ಅದು ತನ್ನ ಗೂಡನ್ನು ಕಟ್ಟಿ ಕೊಳ್ಳುವ ರೀತಿ ಮತ್ತು ಜಾಗ ನಿಜಕ್ಕೂಆಶ್ಚರ್ಯಕರ. ಸಾಮಾನ್ಯವಾಗಿ ಎತ್ತರದ ಮರದ ತುತ್ತ ತುದಿಯಲ್ಲೋ ಅಥವಾ ನೀರಿನ ಸೆಲೆಯ ಮೇಲಿರುವ ಗಿಡಗಳಲ್ಲಿ ಕಟ್ಟುವ ಮೂಲಕ ಯಾರೂ ತನ್ನ ಗೂಡನ್ನು ನಾಶ ಮಾಡದಂತೆ ತಡೆಯುವುದರಲ್ಲಿ ಎಚ್ಚರಿಕೆ ವಹಿಸುತ್ತದೆ.

ಕೇವಲ ಹಸಿ ಮತ್ತು ಒಣ ಹುಲ್ಲುಗಳಿಂದ ಶಂಖುವಿನಾಕೃತಿಯಲ್ಲಿ ತನ್ನ ಕೊಕ್ಕು ಮತ್ತು ಕಾಲುಗಳನ್ನೇ ಬಳಸಿಕೊಂಡು ಒತ್ತಾಗಿ ಒಳಗಿರುವುದು ಪಕ್ಷಿ ಮಳೆಯಲ್ಲಿ ನೆನೆಯದ ರೀತಿಯಲ್ಲಿ ನೇಯ್ಗೆ ಮಾಡುವುದನ್ನು ನೋಡಲು ಸೊಗಸು. ಮೊದಲು ಗೂಡುಕಟ್ಟಲು ಪ್ರಶಸ್ತವಾದ ಸ್ಥಳವನ್ನು ಹುಡುಕಿಕೊಂಡು ಆ ಕೊಂಬೆಯ ತುತ್ತ ತುದಿಯಲ್ಲಿ ಮೊದಲು ನೇತು ಹಾಕಿಕೊಳ್ಳುವಂತೆ ಹೆಣೆಯುತ್ತಾ ಕ್ರಮೇಣ ಮಧ್ಯಭಾಗದಲ್ಲಿ ಅಗಲವಾದ ಪಾತ್ರೆಯಂತೆ ಅಗಲಗೊಳಿಸಿ ಮತ್ತೆ ಕೆಳಭಾಗಕ್ಕೆ ಕೊಳವೆಯಂತೆ ವಿನ್ಯಾಸಗೊಳಿಸುತ್ತದೆ. ಮಧ್ಯಭಾಗದಲ್ಲಿ ಮೊಟ್ಟೆಯಿಡಲು ಬಟ್ಟಲು ಆಕಾರದಲ್ಲಿ ಹಸಿ ಜೇಡಿಮಣ್ಣನ್ನು ತಂದು ಮೆತ್ತೆನೆಯ ಮಂಚದಂತೆ ಮಾಡುವುದಲ್ಲದೇ ರಾತ್ರಿ ಕತ್ತಲ ಸಮಯದಲ್ಲಿ ಬೆಳಕಿನ ಕೊರತೆಯಾಗದಿರಲೆಂದು ಬೆಡ್ ಲೈಟ್ ರೂಪದಲ್ಲಿ ಮಿಂಚು ಹುಳವನ್ನು ತಂದು ಜೇಡೀ ಮಣ್ಣಿನಲ್ಲಿ ಅಂಟು ಹಾಕುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಗಾಳಿ ಬಂದಾಗ ಸರಾಗವಾಗಿ ತೂಗುಯ್ಯಾಲೆಯಂತೆ ತೂಗುವ ಗೂಡಿನ ಕೆಳ ತುದಿಯಲ್ಲಿ ಮಾತ್ರವೇ ಸಣ್ಣದಾದ ಜಾಗದ ಮೂಲಕ ಪ್ರವೇಶಿಸುವಂತೆ ಕಟ್ಟುವ ಮೂಲಕ ಬೇರಾವುದೇ ಪಕ್ಷಿಗಳಾಗಲೀ ಹಾವುಗಳಾಗಲೀ ಸುಲಭವಾಗಿ ಪ್ರವೇಶಿಸದಂತೆ ರಕ್ಷಣಾತ್ಮಕವಾಗಿ ಗೂಡು ಕಟ್ಟುವ ಈ ಹಕ್ಕಿಯ ವಾಸ್ತು ಕೌಶಲ ಅನನ್ಯ ಮತ್ತು ಅಧ್ಭುತವೇ ಸರಿ.

ಭಾರತ, ಶ್ರೀಲಂಕಾ, ಬರ್ಮಾ ಹಾಗೂ ಪಾಕಿಸ್ತಾನಗಳ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಗೀಜಗ ಒಂದು ರೀತಿಯ ಸಂಘ ಜೀವಿ. ಹಾಗಿಯೇ ಒಂದೇ ಮರದಲ್ಲಿ ಹತ್ತಾರು ಗೀಜಗದ ಗೂಡುಗಳು ಕಾಣ ಸಿಗುತ್ತದೆ. ಸಾಮಾನ್ಯವಾಗಿ ಮೇ ತಿಂಗಳಿಂದ ಸೆಪ್ಟಂಬರ್-ಅಕ್ಟೋಬರ್ ಮಧ್ಯಭಾಗದವರೆಗೂ ಗಂಡು ಗೀಜುಗದ ಹಕ್ಕಿ ಅರ್ಧ ಗೂಡು ಕಟ್ಟಿ ಚೀರುತ್ತಾ ಹೆಣ್ಣು ಗೀಜುಗದ ಹಕ್ಕಿಗಳನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತದೆ. ಹೆಣ್ಣು ಹಕ್ಕಿಗಳು ಗಂಡಿನೊಂದಿಗೆ ಗೂಡು ಸೇರಿಕೊಳ್ಳುವ ಮೊದಲು ಗಂಡು ಹಕ್ಕಿ ಅರ್ಧ ಕಟ್ಟಿರುವ ಗೂಡನ್ನು ಕೂಲಂಕುಶವಾಗಿ ಪರಿಶೀಲಿಸಿ ಅದಕ್ಕೆ ಒಪ್ಪಿಗೆಯಾದಲ್ಲಿ ಮಾತ್ರವೇ, ಗಂಡುಹಕ್ಕಿಗಳೊಡನೆ ಸಂತಾನೋತ್ಪತ್ತಿಗೆ ಮುಂದಾಗುವುದಲ್ಲದೇ, ಬಳಿಕ ಎರಡೂ ಹಕ್ಕಿಗಳೂ ಸೇರಿಕೊಂಡು ಗೂಡನ್ನು ಪೂರ್ಣ ಮಾಡುವ ಮೂಲಕ ಸತಿ-ಪತಿಯ ಅನ್ಯೋನ್ಯತೆಯನ್ನು ಎತ್ತಿ ತೋರಿಸುತ್ತದೆ. ಹೊಸದಾಗಿ ಕಟ್ಟಿದ ಗೂಡಲ್ಲಿ ಹೆಣ್ಣುಹಕ್ಕಿ ಮೊಟ್ಟೆ ಇಟ್ಟು ಕಾವು ಕೊಡಲು ಶುರುಮಾಡುತ್ತಿದ್ದ ಹಾಗೆ ಗಂಡುಹಕ್ಕಿ ಆ ಗೂಡನ್ನ ಹೆಣ್ಣುಹಕ್ಕಿಗೆ ಬಿಟ್ಟುಕೊಟ್ಟು, ಮತ್ತೊಂದು ಹೊಸ ಗೂಡನ್ನು ಕಟ್ಟಿ ಹೊಸ ಸಂಗಾತಿಯನ್ನು ಆಕರ್ಷಿಸಲು ಮುಂದಾಗುತ್ತದೆ. ಆಹಾರಕ್ಕಾಗಿ ಸುತ್ತ ಮುತ್ತಲಿನ ಕೃಷಿ ಭೂಮಿಯಲ್ಲಿ ಬೆಳೆದಿರುವ ಭತ್ತ ರಾಗಿ ಕಾಳನ್ನು ಆಶ್ರಯಿಸುವುದಲ್ಲದೇ ಮಣ್ಣಿನಲ್ಲಿರುವ ಕ್ರಿಮಿ ಕೀಟಗಳನ್ನು ಭಕ್ಷಿಸುವ ಮೂಲಕ ರೈತನ ಮಿತ್ರನಾಗಿದೆ ಈ ಗೀಜಗ ಪಕ್ಷಿ.

ಎಂಭತ್ತರ ದಶಕದಲ್ಲಿ ಈಗಿನ ಬಿಇಎಲ್ ಹೊಸ ರಸ್ತೆಯ ಬ್ರಿಡ್ಜ್ ಇಳಿಯುತ್ತಿದ್ದಂತೆಯೇ ತೆರೆದ ಒಂದು ದೊಡ್ಡ ಮೋರಿ ಹಾದು ಹೋಗುತ್ತಿತ್ತು. ಅದರ ಅಕ್ಕ ಪಕ್ಕದಲ್ಲಿಯೇ ಅನೇಕ ಸಣ್ಣ ಸಣ್ಣ ಮರಗಳಿದ್ದು ಆ ಮರಗಳ ತುತ್ತ ತುದಿಯಲ್ಲಿ ಗೀಜಗದ ಇಂತಹ ನೂರಾರು ಗೂಡುಗಳು ಕಟ್ಟಿದ್ದು ಅದು ನನ್ನ ಗಮನವನ್ನು ಸದಾಕಾಲವೂ ಸೆಳೆಯುತ್ತಲೇ ಇತ್ತು. ಅದೇ ಗೀಜಗದ ಗೂಡಿನ ಅಕ್ಕ ಪಕ್ಕದಲ್ಲಿಯೇ, ಹೊನಗೊನ್ನೆ ಸೊಪ್ಪು, ಕೆಸವಿನ ದಂಟು ಸೊಂಪಾಗಿ ಬೆಳೆದಿದ್ದ ಕಾರಣ ಅಮ್ಮಾ ಅದೊಮ್ಮೆ ಕೆಸವಿನ ದಂಟು ಮತ್ತು ಹೊನಗೊನ್ನೆ ಸೊಪ್ಪನ್ನು ಕಿತ್ತು ಕೊಂಡು ಬರಲು ಹೇಳಿದಾಗ, ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯಾ ಹೇಳಿದ್ದೂ ಹಾಲು ಅನ್ನ ಎನ್ನುವಂತಾಗಿ ನಾನು ಮತ್ತು ನನ್ನ ಸ್ನೇಹಿತ ಇಬ್ಬರೂ ಅದನ್ನು ತರಲು ಹೋದೆವು.

ಹೊನಗೊನ್ನೆ ಸೊಪ್ಪು ಕಿತ್ತುಕೊಂಡು ಮೈ ಕೈಗೆ ತಾಕಿದರೆ ಕಡಿಯುವ ಕೆಸವಿನ ದಂಟನ್ನೂ ಮೈ ಕೈಗೆ ತಾಕದಂತೆ ಚಾಕುವಿನಿಂದ ಕತ್ತರಿಸಿಕೊಂಡು ಇನ್ನೇನು ಮನೆಯ ಕಡೆಗೆ ಬರಬೇಕು ಎನ್ನುವಷ್ಟರಲ್ಲಿಯೇ ಮರದ ತುದಿಯಲ್ಲಿ ನೇತು ಹಾಕಿಕೊಂಡಿದ್ದ ಗೀಜಗದ ಗೂಡಿನತ್ತ ಹರಿಯಿತು ಚಿತ್ತ. ಕೂಡಲೇ ಮರವನ್ನು ಹತ್ತಿ ಹಾಗೂ ಹೀಗೂ ಮಾಡಿ ಒಂದು ಗೂಡನ್ನು ಕಿತ್ತುಕೊಂಡೆ. ನನಗೂ ಒಂದು ಗೂಡು ಬೇಕು ಎಂದು ಸ್ನೇಹಿತ ಕೇಳಿದ್ದಕ್ಕೆ ಅವನಿಗೂ ಕೀಳಲೆಂದೂ ಸ್ವಲ್ಪ ಕೈ ಚಾಚಿದನಷ್ಟೇ. ಮರದ ಕೊಂಬೆ ಪಟ ಪಟ ಅಂತ ಮುರಿದ್ಕೊಂಡು ಹರಿಯುತ್ತಿರುವ ಕೊಚ್ಚೇ ಮೋರಿಗೆ ಬೀಳುತ್ತಿದ್ದಂತೆಯೇ, ನಾನೂ ಕೂಡಾ ಅದರ ಜೊತೆಗೇ ಬಿದ್ದು ಬಿಟ್ಟೆ. ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದೇನೆ. ಅದೃಷ್ಟವಷಾತ್ ಬರುತ್ತಿದ್ದ ಅಲ್ಪ ಸ್ವಲ್ಪ ಈಜಿನ‌ ಕಾರಣ, ಹಾಗೂ ಹೀಗೂ ಕೈ ಕಾಲು ಬಡಿಯುತ್ತಿದ್ದೇನೆ. ಸ್ನೇಹಿತ ಕೂಗಿಕೊಂಡರೂ ಯಾರಿಗೂ ಕೇಳಿಸದಂತಹ ನಿರ್ಜನ ಪ್ರದೇಶವದು. ಇಂದಿಗೆ ನನ್ನ ಆಯಸ್ಸು ಮುಗಿಯಿತು ಎಂದು ಭಾವಿಸಿದ ನನಗೆ ಸ್ನೇಹಿತನ ಸಮಯ‌ಪ್ರಜ್ಞೆಯಿಂದ ಎಸೆದ ಮರದ ಕೊಂಬೆಯನ್ನು ಹಿಡಿದುಕೊಂಡು ಮೇಲೆ ಬರುವಷ್ಟರಲ್ಲಿ ಹೃದಯ ಬಾಯಿಗೆ ಬಂದಿತ್ತು ಎಂದು ಹೇಳಬೇಕಿಲ್ಲ.

ಚರಂಡಿಗೆ ಬಿದ್ದು ಮೈಕೈಯೆಲ್ಲಾ ಕೊಳೆಯಾದ ಕಾರಣ ಹಾಗೇ ಮನೆಗೆ ಹೋದ್ರೇ ಅಮ್ಮನ ಕೈಯಲ್ಲಿ ಬೀಳಬಹುದಾದ ಒದೆಯನ್ನು ನೆನೆಸಿಕೊಂಡು ಅಲ್ಲೇ ಇದ್ದ ತೋಟದ ಭಾವಿಯಲ್ಲಿ ಬಟ್ಟೆ ಎಲ್ಲಾ ಬಿಚ್ಚಿ ಯಾರೋ ಭಾವಿಯಲ್ಲಿ ಸ್ನಾನಕ್ಕೆಂದು ಬಂದು ಬಿಟ್ಟು ಹೋಗಿದ್ದ ಸೋಪಿನಲ್ಲಿ ಬಟ್ಟೆ ಒಗೆದುಕೊಂಡು ಅದು ಒಣಗೋ ವರೆಗೂ ಭಾವಿಯ ಒಳಗೇ ಆಟ ಆಡ್ತಾ ಇದ್ವೀ. ಎಷ್ಟು ಹೋತ್ತಾದ್ರೂ ಮನೆಗೆ ಬಾರದಿದ್ದದ್ದನ್ನು ನೋಡಿ ಅಮ್ಮಾ, ಅಪ್ಪನನ್ನು ಹುಡುಕಿಕೊಂಡು ಬರಲು ಕಳುಹಿಸಿದ್ದರು. ನಮ್ಮ ಪುಣ್ಯ ಅಪ್ಪಾ ಬರುವ ವೇಳೆಗೆ ನಮ್ಮ ಬಟ್ಟೆ ಒಣಗಿದ್ದ ಪರಿಣಾಮ ಬಟ್ಟೆ ಹಾಕಿಕೊಂಡು ಇನ್ನೇನು ಮನೆ ಕಡೆ ಹೊರಡಬೇಕು ಎನ್ನುವಷ್ಟರಲ್ಲಿ ಅಪ್ಪಾನೂ ಅಲ್ಲಿಗೆ ಬಂದು ಏನ್ರೋ ಮಕ್ಳಾ ದೊಡ್ಡವರು ಇಲ್ಲದ ಸಮಯದಲ್ಲಿ ಈ ರೀತಿಯಾಗಿ ಭಾವಿಯಲ್ಲಿ ಈಜಲು ಬರಬಾರ್ದು ಅಂತಾ ಗೊತ್ತಿಲ್ವೇನ್ರೋ? ಏನಾದ್ರೂ ಹೆಚ್ಚು ಕಡಿಮೆ ಆದ್ರೇ ಯಾರು ಜವಾಬ್ಧಾರಿ ಎಂದು ಹೇಳಿದಾಗ ನಾನು ಮತ್ತು ನನ್ನ ಗೆಳೆಯ ಒಬ್ಬರನ್ನೊಬ್ಬರು ನೋಡಿಕೊಂಡು ಅಬ್ಬಾ ಬದುಕಿತು ಬಡ ಜೀವ ಎಂದು ಕೊಂಡಿದ್ದಂತೂ ಸುಳ್ಳಲ್ಲ.

ಸುಮಾರು ವರ್ಷಗಳ ನಂತರ ಭದ್ರಾವತಿಯ ಬಳಿಯ ಹಿರಿಯೂರಿನಲ್ಲಿದ್ದ ನಮ್ಮ ಸಂಬಂಧೀಕರ ಮನೆಗೆ ಹೋಗಿದ್ದಾಗ ಅವರ ಮನೆಯ ಹಿಂದೆ ಇದ್ದ ನೂರಾರು ಗೀಜಗದ ಗೂಡನ್ನು ನೋಡಿ ಪುಳಕಿತನಾಗಿ ಅಲ್ಲಿಂದ ನಾಲ್ಕೈದು ಗೂಡುಗಳನ್ನು ಮನೆಗೆ ತಂದು ಸುಮಾರು ವರ್ಷಗಳ ಕಾಲ ನಮ್ಮ ಮನೆಯಲ್ಲಿ ಅಲಂಕಾರಿಕವಾಗಿ ನೇತುಹಾಕಿದ್ದೆ. ಗೀಜಗದ ಗೂಡು ನಮಗೆಲ್ಲಾ ಅಲಂಕಾರಿಕ ವಸ್ತುವಾಗಿದ್ದರೆ,ಅವರ ಮೆನೆಯಲ್ಲಿ ಪಾತ್ರೆ ತೊಳೆಯಲು ನಾರಿನಂತೆ ಬಳಸಿಕೊಳ್ಳುತ್ತಿದ್ದದ್ದು ಸೋಜಿಗವೆನಿತ್ತು. ಸುಮಾರು ದಿನಗಳ ನಂತರ ಇಂದು ಹೊರಗೆ ವಾಯು ವಿಹಾರಕ್ಕೆಂದು ಹೋಗಿದ್ದಾಗ ಗೀಜಗದ ಗೂಡು ನೋಡಿದಾಗ ಹಿಂದಿನದ್ದೆಲ್ಲಾ ನೆನಪಾಯಿತು. ಗೀಜಗದ ಗೂಡಿಗೆ ಆಸೆಪಟ್ಟು ಕೊಚ್ಚೆ ಮೋರಿಗೆ ಬಿದ್ದು ಪ್ರಾಣಾಪಾಯದಿಂದ ಬಚಾವಾಗಿದ್ದ ಕಥೆ ಇಂದಿಗೂ ಮೈ ರೋಮಾಂಚನ ಗೊಳಿಸಿದ್ದಂತೂ ಸುಳ್ಳಲ್ಲ. ಭಗವಂತ ದೀರ್ಘಾಯಸ್ಸು ಬರೆದು ಕಳುಹಿಸಿದ್ದರೆ ಯಾರೂ ಏನೂ ಮಾಡೋದಿಕ್ಕೆ ಆಗೋದಿಲ್ಲ ಅಲ್ವಾ? ತೇನ ವಿನ ತೃಣಮಪಿ ನಚಲತಿ ಅನ್ನೋ ಮಾತು ನಿಜವಾಗಲೂ ಸತ್ಯ.

ಏನಂತೀರೀ?