ಹುಳಿಯವಲಕ್ಕಿ (ಗೊಜ್ಜವಲಕ್ಕಿ)

ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ಹುಳಿಯವಲಕ್ಕಿ (ಗೊಜ್ಜವಲಕ್ಕಿ) ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಗಟ್ಟಿ ಅವಲಕ್ಕಿ – 1/4 ಕೆಜಿ
 • ಹುಣಸೇ ಹಣ್ಣು- 100 gms
 • ಬೆಲ್ಲ – 200 gms
 • ಸಾರಿನಪುಡಿ- 3 ಚಮಚ
 • ಬಿಳೀ ಎಳ್ಳು- 1 ಚಮಚ
 • ಮೆಂತ್ಯ- 1 ಚಮಚ
 • ಜೀರಿಗೆ- 1 ಚಮಚ
 • ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

WhatsApp Image 2020-04-18 at 10.15.59 AM

 • ತುರಿದ ಕೊಬ್ಬರೀ – 1 ಕಪ್
 • ಕಡಲೇಕಾಯಿ ಬೀಜ – 50-100 gms
 • ಸಾಸಿವೆ – ½ ಚಮಚ
 • ಕಡಲೇಬೇಳೆ- 1 ಚಮಚ
 • ಉದ್ದಿನ ಬೇಳೆ-1 ಚಮಚ
 • ಒಣಮೆಣಸಿನಕಾಯಿ – 5-6
 • ಕರಿಬೇವು -2 ಕಡ್ಡಿ
 • ಕತ್ತರಿಸಿದ ಕೊತ್ತಂಬರಿ ಸೊಪ್ಪು – 3-4 ಚಮಚ
 • ಅಡುಗೆ ಎಣ್ಣೆ- 6-8 ಚಮಚ
 • ಚಿಟಿಕೆ ಅರಿಶಿನ ಪುಡಿ
 • ಚಿಟಿಕೆ ಇಂಗು

 

ಹುಳಿಯವಲಕ್ಕಿ (ಗೊಜ್ಜವಲಕ್ಕಿ) ತಯಾರಿಸುವ ವಿಧಾನ

 • ಹುಣಸೇ ಹಣ್ಣನ್ನು ನೀರಿನಲ್ಲಿ ನೆನೆಸಿ ಅದಕ್ಕೆ ಬೆಲ್ಲವನ್ನು ಸೇರಿಸಿ ಸುಮಾರು ಮೂರ್ನಾಲ್ಕು ಗಂಟೆ ಬೆಡಬೇಕು
 • ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿಕೊಂಡು ತರಿ ತರಿಯಾಗಿರುವಂತೆ ಪುಡಿ ಮಾಡಿಕೊಳ್ಳಬೇಕು
 • ಎಳ್ಳು, ಜೀರಿಗೆ ಮತ್ತು ಮೆಂತ್ಯವನ್ನು ಸಮಪ್ರಮಾಣದಲ್ಲಿ  ಬಾಣಲೆಯಲ್ಲಿ ಹುರಿದುಕೊಂಡು, ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಬೇಕು.
 • ನೆನೆಸಿದ ಹುಣಸೇ ಹಣ್ಣು ಮತ್ತು ಬೆಲ್ಲವನ್ನು ಚೆನ್ನಾಗಿ ಶೋಧಿಸಿಕೊಂಡು ಅದಕ್ಕೆ ೩ ಚಮಚ ಮನೆಯಲ್ಲಿ ಮಾಡಿದ ಸಾರಿನಪುಡಿ, ೨ ಚಮಚ ಸಿದ್ಧ ಪಡಿಸಿಟ್ಟುಕೊಂಡ ಎಳ್ಳು, ಜೀರಿಗೆ ಮತ್ತು ಮೆಂತ್ಯದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಗಂಟಿಲ್ಲದಂತೆ ಕಲೆಸಿಕೊಳ್ಳಬೇಕು
 • ತರಿ ತರಿಯಾಗಿ ಪುಡಿ ಮಾಡಿಟ್ಟುಕೊಂಡ ಅವಲಕ್ಕಿಗೆ ಈ ಮಿಶ್ರಣವನ್ನು ನಿಧಾನವಾಗಿ ಸೇರಿಸಿ ಚೆನ್ನಾಗಿ ಗಂಟಿಲ್ಲದಂತೆ ಕಲೆಸಿ ಸುಮಾರು ಹತ್ತು ಹದಿನೈದು ನಿಮಿಷಗಳಷ್ಟು  ಹೊತ್ತು ಬಿಡಬೇಕು.

ಒಗ್ಗರಣೆ ಹಾಕುವ ವಿಧಾನ

 • ಅಗಲವಾದ ಗಟ್ಟಿ ತಳದ ಬಾಣಲೆಯನ್ನು ಒಲೆಯಮೇಲಿಟ್ಟು ಅದಕ್ಕೆ  ೬-೮ ಚಮಚ ಅಡುಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿಸಿಕೊಳ್ಳಬೇಕು
 • ಸಾಸಿವೆ  ಸಿಡಿದ ನಂತರ ಕಡಲೇಕಾಯಿ ಬೀಜವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕೆಂಪಗಾಗುವಷ್ಟು ಹುರಿದುಕೊಳ್ಳಬೇಕು
 • ಈಗ ಕಡಲೇಬೇಳೇ ಮತ್ತು ಉದ್ದಿನ ಬೇಳೆಯನ್ನು ಬೆರೆಸಿ , ಜೊತೆಗೆ ಚಿಟಿಕೆ ಅರಿಶಿನ ಪುಡಿ ಚಿಟಿಕೆ ಇಂಗು ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು.
 • ಈಗ ಒಗ್ಗರಣೆಗೆ  ಮುರಿದಿಟ್ಟು ಕೊಂಡಿದ್ದ ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ, ಮೆಣಸಿನಕಾಯಿ ಘಾಟು ಹೋಗುವ ವರೆಗೂ ಹುರಿದುಕೊಳ್ಳಬೇಕು
 • ತುರಿದಿಟ್ಟುಕೊಂಡಿದ್ದ ಕೊಬ್ಬರೀ  ಒಂದು ಕಪ್ ಕೊಬ್ಬರಿಯನ್ನು ಬಾಣಲೆಗೆ ಹಾಕಿ, ಕೊಬ್ಬರಿಯ ಹಸೀ ಹೋಗುವಷ್ಟು ಕಾಲ ಹುರಿದುಕೊಂಡಲ್ಲಿ  ಒಗ್ಗರಣೆ ಸಿದ್ಧ,
 • ಈ ಒಗ್ಗರಣೆಗೆ ಅವಲಕ್ಕಿಯೊಂದಿಗೆ ಹುಣಸೇಹಣ್ಣು ಮಿಶ್ರಣವನ್ನು ನಿಧಾನವಾಗಿ ಬೆರೆಸಿ, ಚೆನ್ನಾಗಿ ತಿರುವಿ, ಸಣ್ಣ ಉರಿಯಲ್ಲಿ ಹತ್ತು ನಿಮಿಷಗಳಷ್ಟು ಕಾಲ ಬಿಟ್ಟು ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಮತ್ತೈದು ನಿಮಿಷಗಳಷ್ಟು ಕಾಲ ಬಿಟ್ಟಲ್ಲಿ ರುಚಿ ರುಚಿಯಾದ ಸಾಂಪ್ರದಾಯಿಕ ರೀತಿಯ ಹುಳಿಯವಲಕ್ಕಿ (ಗೊಜ್ಜವಲಕ್ಕಿ ಸಿದ್ಧ)

ಸಾಂಪ್ರದಾಯಿಕ ರೀತಿಯಲ್ಲಿ ಹುಳಿಯವಲಕ್ಕಿ (ಗೊಜ್ಜವಲಕ್ಕಿ) ಮಾಡುವುದನ್ನು ಈ ವೀಡೀಯೋದಲ್ಲಿ ತಿಳಿಸಿಕೊಡಲಾಗಿದೆ.

ಇನ್ನೇಕೆ ತಡಾ ನೋಡ್ಕೋಳ್ಳಿ,  ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ

ಇಷ್ಟ ಆದ್ರೇ Like  ಮಾಡಿ. Share ಮಾಡಿ, Subscribe ಆಗಿ

ಏನಂತೀರೀ?

ಮನದಾಳದ ಮಾತು : ಸಾಮಾನ್ಯವಾಗಿ ಈ ಹುಳಿಯವಲಕ್ಕಿ (ಗೊಜ್ಜವಲಕ್ಕಿ)ಯನ್ನು ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿಯೋ ಅಥವಾ ಸಭೆ ಸಮರಂಭಗಳಲ್ಲಿ ಊಟ ಮಾಡದ ಕೆಲವು ಮಡಿಜನರಿಗೆ ಫಲಾಹಾರ ರೂಪದಲ್ಲಿ ತಯಾರಿಸಲಾಗುತ್ತದೆ. ಇನ್ನು ರಾಮ ನಮಮಿಯಂದು ಹುಳಿಯವಲಕ್ಕಿ, ಬಾಳೇ ಹಣ್ಣು ರಸಾಯನ, ಹೆಸರುಬೇಳೆ ಕೋಸಂಬರಿ ಮತ್ತು ನೀರು ಮಜ್ಜಿಗೆಯೇ ಪ್ರಸಾದ. ಮನೆಯಲ್ಲಿಯೂ ಸಹಾ ಇದನ್ನು ಮಾಡುವುದು ಬಹಳ ಸುಲಭ ಮತ್ತು ರುಚಿಕರವೂ ಹೌದು. ಮನೆಮಂದಿಯೆಲ್ಲಾ ತುಂಬಾನೇ ಇಷ್ಟ ಪಡ್ತಾರೆ. ಅದರಲ್ಲೂ ಮೊಸರಿನೊಂದಿಗೆ ತಿನ್ನುವುದಕ್ಕಂತೂ ಇನ್ನೂ ಮಜವಾಗಿರುತ್ತದೆ.