ಸೌತೇಕಾಯಿ ಹಸೀ ಗೊಜ್ಜು

ದೋಸೆ, ಚಪಾತಿ ಅನ್ನದ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಗೊಜ್ಜುಗಳನ್ನು ಮಾಡುವುದು ಸಹಜ. ಈ ಎಲ್ಲಾ ಗೊಜ್ಜುಗಳನ್ನು ಮಾಡಲು ಬಹಳಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ಈ ಬೇಸಿಗೆಯಲ್ಲಿ ತಣ್ಣಗೆ ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಗೊಜ್ಜು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಎಳೆಯ ಸೌತೇಕಾಯಿ – 1
 • ತೆಂಗಿನತುರಿ – 1 ಬಟ್ಟಲು
 • ಜೀರಿಗೆ – 1 ಚಮಚ
 • ಬಿಳಿ ಎಳ್ಳು – 2 ಚಮಚ (ಐಚ್ಚಿಕ)
 • ಹುರಿಗಡಲೆ – 3-4 ಚಮಚ
 • ಸಾಸಿವೆ – 1 ಚಮಚ
 • ಹುರಿಗಡಲೆ – 4 ಚಮಚ
 • ಹುಣಸೇಹಣ್ಣು – ನಿಂಬೇಹಣ್ಣೈನ ಗಾತ್ರದ್ದು
 • ಹಸೀ/ಒಣ ಮೆಣಸಿನಕಾಯಿಗಳು – 5 ರಿಂದ 6
 • ಕರಿಬೇವಿನ ಸೊಪ್ಪು – 8-10 ಎಲೆಗಳು
 • ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ
 • ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು
 • ಚಿಟುಕಿ ಅರಿಶಿನ

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

 • ಅಡುಗೆ ಎಣ್ಣೆ – 2 ಚಮಚ
 • ಸಾಸಿವೆ – 1 ಚಮಚ
 • ಕರಿಬೇವಿನ ಸೊಪ್ಪು – 4-6ಎಲೆಗಳು
 • ಒಣ ಮೆಣಸಿನಕಾಯಿ – 2-3
 • ಚಿಟುಕಿ ಇಂಗು

ಸೌತೇಕಾಯಿ ಹಸೀ ಗೊಜ್ಜು ತಯಾರಿಸುವ ವಿಧಾನ

 • ಸೌತೇಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೇ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ
 • ಸಣ್ಣ ಬಾಣಲಿಯಲ್ಲಿ ಎಳ್ಳು ಮತ್ತು ಜೀರಿಗೆಯನ್ನು ಹಸೀ ಹೋಗುವ ವರೆಗೂ ಹುರಿದುಕೊಳ್ಳಿ
 • ಮಿಕ್ಸಿ ಜಾರಿಗೆ ತೆಂಗಿನತುರಿ, ಹುರಿಗಡಲೆ, ಸಾಸಿವೆ, ಹುಣಸೇಹಣ್ಣು, ಬೆಲ್ಲ, ಹುರಿದ ಎಳ್ಳು, ಜೀರಿಗೆ, ಹಸಿರು/ಒಣ ಮೆಣಸಿನಕಾಯಿ, ಕರೀಬೇವು, ಕೊತ್ತಂಬರಿ ಸೊಪ್ಪು ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಗಟ್ಟಿಯಾಗಿ ಚೆಟ್ನಿಯ ರೂಪದಲ್ಲಿ ರುಬ್ಬಿಕೊಳ್ಳಿ.
 • ಸಣ್ಣ ಬಾಣಲಿಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿಕೊಂಡ ನಂತರ, ಕರೀಬೇವು, ಇಂಗು, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ
 • ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಒಗ್ಗರಣೆಯನ್ನು ಸೇರಿಸಿ, ಹದಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ಕಲಸಿದಲ್ಲಿ ರುಚಿ ರುಚಿಯಾದ ಸೌತೇಕಾಯಿ ಹಸೀ ಗೊಜ್ಜು ಸವಿಯಲು ಸಿದ್ದ.

ಮೊದಲೇ ತಿಳಿಸಿದಂತೆ ಈ ಸೌತೇಕಾಯಿ ಹಸೀ ಗೊಜ್ಜನ್ನು ದೋಸೆ, ಚಪಾತಿಗಳಲ್ಲದೇ, ಇಡ್ಲಿ, ವಡೆ ಮತ್ತು ಪೊಂಗಲ್ ಮತ್ತು ಅನ್ನದ ಜೊತೆಯೂ ತಿನ್ನಲು ಚೆನ್ನಾಗಿರುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ನಿಮ್ಮವನೇ ಉಮಾಸುತ

ಮನದಾಳದ ಮಾತು : ಈ ಬೇಸಿಗೆ ಕಾಲದಲ್ಲಂತೂ ಬಿಸಿಲಿನ ಪ್ರಮಾಣ ಜಾಸ್ತಿಯಾಗಿ ಮೈಯಲ್ಲಿರುವ ನೀರಿನ ಪ್ರಮಾಣವೆಲ್ಲಾ ಬೆವರಿನ ಮೂಲಕ ಹೊರ ಹೋಗಿ, ನಿರ್ಜಲೀಕರಣದ ಸಮಸ್ಯೆಗೆ ಸೌತೇಕಾಯಿ ರಾಮಬಾಣವಾಗಿದೆ. ಹಸೀ ಸೌತೇಕಾಯಿ ಸೇವನೆಯಿಂದ ಚರ್ಮ ಸುಕ್ಕು ಕಟ್ಟುವುದನ್ನು ತಡೆಗಟ್ಟಬಹುದಲ್ಲದೇ, ಆರೋಗ್ಯವನ್ನು ಸಹಾ ಕಾಪಾಡುತ್ತದೆ. ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲೂ ಸಹಾ ಇದು ಉಪಯೋಗಕಾರಿಯಾಗಿದೆ. ಹಸೀ ಸೌತೇಕಾಯಿಯ ಬಿಲ್ಲೆಗಳನ್ನು ಕಣ್ಣ ಸುತ್ತಲು ಇಟ್ಟು ಕೊಳ್ಳುವ ಮುಖಾಂತರ ಕಣ್ಣಿನ ಸುತ್ತಲೂ ಬರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದಾಗಿದೆ. ನಿರಂತವಾಗಿ‌ ಹಸೀ ಸೌತೆಕಾಯಿ ಸೇವಿಸುವ ಮುಖಾಂತರ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದಾಗಿದೆ.

ಪುಳಿಯೋಗರೆ

ಇದು ದಕ್ಷಿಣ ಭಾರತದ ಜನಪ್ರಿಯ ಆಹಾರವೂ ಹೌದು ಮತ್ತು ದೇವಸ್ಥಾನಗಳಲ್ಲಿನ ಸುಪ್ರಸಿದ್ಧ ಪ್ರಸಾದವೂ ಹೌದು. ಪುಳಿಯೋಗರೇ ಎಂಬ ಹೆಸರು ಕೇಳಿದೊಡನೆ ನಮ್ಮ ಬಾಯಲ್ಲಿ ನೀರೂರುವ ಹಾಗೆಯೇ ಥಟ್ ಅಂತಾ ನೆನಪಾಗೋದೇ ಐಯ್ಯಂಗಾರ್ ಪುಳಿಯೋಗರೇ. ಬ್ರಾಹ್ಮಣರ ಒಂದು ಪಂಗಡವಾದ ಐಯ್ಯಾಂಗಾರರು ಈ ಪಾಕವಿಧಾನವನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡು ಅದನ್ನು ತಮ್ಮ ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತಹ ರುಚಿಕರವಾದ ಪುಳಿಯೋಗರೇ ಗೊಜ್ಜನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಒಮ್ಮೆ ಶುಚಿಯಾಗಿ ನೀರು ಬೆರಸದೇ ಮಾಡಿಟ್ಟುಕೊಂಡ ಈ ಗೊಜ್ಜನ್ನು ಜೋಪಾನವಾಗಿ ಎತ್ತಿಟ್ಟು, ಸುಮಾರು ಐದಾರು ತಿಂಗಳುಗಳ ಕಾಲ ಬೇಕಾದಾಗಲೆಲ್ಲಾ ಅನ್ನದ ಜೊತೆ ಕಲೆಸಿಕೊಂಡು ತಿನ್ನಬಹುದಾಗಿದೆ

ಪುಳಿಯೋಗರೇ ಗೊಜ್ಜನ್ನು ತಯಾರಿಸಿಕೊಳ್ಳಲು ಬೇಕಾದ ಸಾಮಗ್ರಿಗಳು

 • ಹುಣಿಸೆಹಣ್ಣು – 250 ಗ್ರಾಂ
 • ಪುಡಿ ಮಾಡಿದ ಬೆಲ್ಲ – 1 ಆಚ್ಚು
 • ಕರಿಎಳ್ಳು – 6 ಚಮಚ
 • ಒಣ ಕೊಬ್ಬರಿ – ಅರ್ಧ ಗಿಟುಕು
 • ಮೆಂತ್ಯ – 1 ಚಮಚ
 • ಕಾಳು ಮೆಣಸು – 2 ಚಮಚ
 • ಕೊತ್ತಂಬರಿ ಬೀಜ – 3 ಚಮಚ
 • ಜೀರಿಗೆ- 2 ಚಮಚ
 • ಒಣಮೆಣಸಿನಕಾಯಿ- ಗುಂಟೂರು 6 + ಬ್ಯಾಡಗಿ ಮೆಣಸಿನಕಾಯಿ 6
 • ಕಡಲೇಕಾಯಿ ಎಣ್ಣೆ – 2-3 ಚಮಚ
 • ರುಚಿಗೆ ತಕ್ಕಷ್ಟು ಉಪ್ಪು
 • ಉದುರು ಉದುರಾಗಿ ಮಾಡಿದ ಆರಿದ ಅನ್ನ – 1 ಪಾವು

  ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

 • ಸಾಸಿವೆ – 1 ಚಮಚ
 • ಉದ್ದಿನಬೇಳೆ – 2 ಚಮಚ
 • ಕಡಲೆಬೇಳೆ – 2 ಚಮಚ
 • ಕಡಲೆಕಾಯಿ ಬೀಜ -100 ಗ್ರಾಂ
 • ಕರಿಬೇವಿನ ಎಲೆಗಳು – 8-10
 • ಇಂಗು – 1/2 ಚಮಚ

ಪುಳಿಯೋಗರೆ ಗೊಜ್ಜನ್ನು ತಯಾರಿಸುವ ವಿಧಾನ

 • ಮೊದಲು ಹುಣಸೇ ಹಣ್ಣನ್ನು ಸುಮಾರು ಎರಡು-ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಂಡು ಅದರ ಹುಳಿಯನ್ನು ಚೆನ್ನಾಗಿ ಹಿಂಡಿ ತೆಗೆದಿಟ್ಟುಕೊಳ್ಳಿ
 • ಕರಿಎಳ್ಳನ್ನು ಹಸೀ ಹೋಗುವವರೆಗೂ ಹುರಿದುಕೊಂಡು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ
 • ಅರ್ಧ ಗಿಟುಕು ಒಣ ಕೊಬ್ಬರಿಯನ್ನು ಸಣ್ಣಗೆ ತುರಿದು ಸ್ವಲ್ಪ ಹಸೀ ಹೋಗುವವರೆಗೂ ಹುರಿದುಕೊಳ್ಳಿ
 • ಒಂದು ಗಟ್ಟಿ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಹಾಕಿ ಕಾದ ನಂತರ, ಮೆಂತ್ಯ, ಕರಿ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಎರಡೂ ಒಣ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಗರಿ ಗರಿಯಾಗಿ ಹುರಿದು, ಆರಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ
 • ಮತ್ತೆ ಗಟ್ಟಿ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು, ಅದು ಬಿಸಿಯಾದ ನಂತರ, ಅದಕ್ಕೆ ಹುಣಿಸೇ ರಸ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ
 • ಕುದಿಯುತ್ತಿರುವ ಹುಣಸೇ ರಸಕ್ಕೆ, ಪುಡಿ ಮಾಡಿಟ್ಟು ಕೊಂಡ ಮಸಾಲೆ ಮಿಶ್ರಣವನ್ನು ನಿಧಾನವಾಗಿ ಹಾಕಿ ಚೆನ್ನಾಗಿ ಹದ ಬರುವವರೆಗೂ, ಗಂಟಾಗಂತೆ ತಿರುವುತ್ತಿರಿ
 • ಈಗ ಪುಡಿ ಮಾಡಿಟ್ಟು ಕೊಂಡ ಎಳ್ಳಿನ ಪುಡಿ ಮತ್ತು ತುರಿದು ಕೊಂಡ ಕೊಬ್ಬರಿ ಬೆರೆಸಿ ಚೆನ್ನಾಗಿ ತಿರುವಿ ಒಂದು ಐದು ನಿಮಿಷಗಳ ನಂತರ ಒಲೆಯನ್ನು ಆರಿಸಿ ಗೊಜ್ಜು ತಣ್ಣಗಾಗಲು ಬಿಡಿ.

ಆರಿದ ಗೊಜ್ಜನ್ನು ಗಾಳಿಯಾಡದಂತಹ ಮುಚ್ಚಳದ ಡಬ್ಬಿಯಲ್ಲಿ ಭಧ್ರವಾಗಿ ತೆಗೆದಿಟ್ಟುಕೊಂಡು ಬೇಕಾದಾಗಲೆಲ್ಲಾ, ಅಗತ್ಯವಿದಷ್ಟು ಗೊಜ್ಜನ್ನು ಉಪಯೋಗಿಸಿ ಕೊಳ್ಳಬಹುದಾಗಿದೆ

 • ಗಟ್ಟಿ ತಳದ ಬಾಣಲೆಯಲ್ಲಿ ಎಳೆಂಟು ಚಮಚಗಳಷ್ಟು ಎಣ್ಣೆಯನ್ನು ಹಾಕಿ ಅದು ಕಾದ ನಂತರ, ಸಾಸಿವೆಯನ್ನು ಸಿಡಿಸಿಕೊಂಡು, ಉದ್ದಿನ ಬೇಳೆ, ಕಡಲೇ ಬೇಳೆ ಮತ್ತು ಕಡಲೇಕಾಯಿ ಬೀಜ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಿ, ಅದಕ್ಕೆ ಕರೀಬೇವಿನ ಸೊಪ್ಪು ಮತ್ತು ಇಂಗನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ
 • ಮಾಡಿಟ್ಟು ಕೊಂಡ ಒಗ್ಗರಣೆಗೆ ಕಲಸಲು ಬೇಕಾದಷ್ಟು ಮಾಡಿಟ್ಟುಕೊಂಡ ಗೊಜ್ಜನ್ನು ಬೆರೆಸಿ ಚೆನ್ನಾಗಿ ಎಣ್ಣೆ ಮಿಶ್ರಣವಾಗುವಂತೆ ತಿರುವಿ
 • ಸಿದ್ಧ ಪಡಿಸಿಟ್ಟು ಕೊಂಡಿದ್ದ ಉದುರು ಉದುರಾದ ಅನ್ನದ ಮೇಲೆ ಎರಡು ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಸಿದ್ಧ ಪಡಿಸಿಕೊಂಡ ಈ ಪುಳಿಯೋಗರೇ ಒಗ್ಗರಣೆಯನ್ನು ಬೆರೆಸಿ ಚೆನ್ನಾಗಿ ಕಲೆಸಿದಲ್ಲಿ ರುಚಿ ರುಚಿಯಾದ ಪುಳಿಯೋಗರೇ ಸವಿಯಲು ಸಿದ್ಧ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ಧಿಡೀರ್ ಎಂದು ಪುಳಿಯೋಗರೇ ಗೊಜ್ಜನ್ನು ತಯಾರು ಮಾಡಿಕೊಳ್ಳಬೇಕಿದ್ದಲ್ಲಿ, ಹುಣಸೇ ರಸ ಬೆಲ್ಲ ಮತ್ತು ಉಪ್ಪನ್ನು ಬಾಣಲೆಯಲ್ಲಿ ಹಾಕಿ ಅದು ಚೆನ್ನಾಗಿ ಕುದಿಯುತ್ತಿರುವಾಗ ರುಚಿಗೆ ತಕ್ಕಷ್ಟು ಸಾರಿನ ಪುಡಿ, ಎಳ್ಳಿನ ಪುಡಿ ಮತ್ತು ಕೊಬ್ಬರಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದಕ್ಕೆ ಮೇಲೆ ತಿಳಿಸಿದ ಒಗ್ಗರಣೆಯನ್ನೂ ಹಾಕಿಯೂ ಸಹಾ ರುಚಿ ರುಚಿಯಾದ ಧಿಡೀರ್ ಪುಳಿಯೋಗರೆಯನ್ನು ತಯಾರು ಮಾಡಿಕೊಳ್ಳಬಹುದಾಗಿದೆ.

ಹಾಗಲಕಾಯಿ ಗೊಜ್ಜು

ಸಾಧಾರಣವಾಗಿ ಹಾಗಲಕಾಯಿ ಗೊಜ್ಜು ಎಂದರೆ ಅದರ ಕಹಿ ಗುಣದಿಂದಾಗಿ ಮೂಗು ಮುರಿಯುವವರೇ ಹೆಚ್ಚು. ಆದರೆ ಹಾಗಲಕಾಯಿಯ ಈ ಕಹೀ ಗುಣವೇ ಮಧುಮೇಹಿಗಳಿಗೆ ರಾಮಬಾಣ. ಬರೀ ಹಾಗಲಕಾಯಿಯನ್ನು ತಿನ್ನಲು ಅಸಾಧ್ಯವಾದ್ದರಿಂದ ಕಾಯಿ, ಹುಣಸೇಹಣ್ಣು, ಬೆಲ್ಲ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಗೊಜ್ಜು ತಯಾರಿಸಲು ಬೇಕಾಗುವ ಪದಾರ್ಥಗಳು

 • ಮಧ್ಯಮ ಗಾತ್ರದ ಹಾಗಲಕಾಯಿ – 2
 • ನೆನಸಿದ ಹುಣಸೇ ಹಣ್ಣು – ನಿಂಬೆ ಗಾತ್ರದ್ದು
 • ಬೆಲ್ಲದ ಪುಡಿ – 5 ಚಮಚ
 • ಗೊಜ್ಜಿನ ಪುಡಿ – 3 ಚಮಚ
 • ಚಿಟಿಕಿ ಅರಿಷಿನ ಪುಡಿ
 • ರುಚಿಗೆ ತಕ್ಕಷ್ಟು ಉಪ್ಪು
 • ಕತ್ತರಿಸಿದ ಕೊತ್ತಂಬರೀ ಸೊಪ್ಪು – 2 ಚಮಚ

ಗೊಜ್ಜಿನ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು

 • ಉದ್ದಿನಬೇಳೆ – 2 ಚಮಚ
 • ಜೀರಿಗೆ – 1/2 ಚಮಚ
 • ಮೆಣಸು – 1/4 ಚಮಚ
 • ಬಿಳೀ ಎಳ್ಳು – 2 ಚಮಚ
 • ತುರಿದ ಕೊಬ್ಬರಿ – 4 ಚಮಚ

ಒಗ್ಗರಣೆಗಾಗಿ ಬೇಕಾಗುವ ಸಾಮಗ್ರಿಗಳು

 • ಕತ್ತರಿಸಿದ ಒಣಮೆಣಸಿನಕಾಯಿ – 2
 • ಸಾಸಿವೆ – 2 ಚಮಚ
 • ಅಡುಗೆ ಎಣ್ಣೆ – 2 ಚಮಚ
 • ಚಿಟಿಕೆ ಇಂಗು
 • ಕರಿಬೇವು 3 – 4 ಎಲೆಗಳು

ಹಾಗಲಕಾಯಿ ಗೊಜ್ಜು ತಯಾರಿಸುವ ವಿಧಾನ:

 • ಒಣ ಕೊಬ್ಬರಿಯನ್ನು ಹೊರತು ಪಡಿಸಿ ಗೊಜ್ಜಿನ ಪುಡಿಯ ಉಳಿದೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಿ
 • ಅದು ತಣ್ಣಗಾದ ನಂತರ ಅದಕ್ಕೆ ಒಣ ಕೊಬ್ಬರಿಯನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
 • ಹಾಗಲಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಿ
 • ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಹಸೀ ಹೋಗುವವರೆಗೂ ಹೆಚ್ಚಿದ ಹಾಗಲಕಾಯಿಯನ್ನು ಹುರಿದುಕೊಳ್ಳಿ
 • ಈಗ ಸ್ವಲ್ಪ ಅರಿಷಿನ, ರುಚಿಗೆ ತಕ್ಕಷ್ಟು ಉಪ್ಪು, ಹುಣಸೇ ಹುಳಿ ಮತ್ತು ಬೆಲ್ಲದ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ
 • ಚೆನ್ನಾಗಿ ಕುದಿಯುತ್ತಿರುವಾಗ ಸಿದ್ಧ ಪಡಿಸಿಟ್ಟುಕೊಂಡ ಗೊಜ್ಜಿನ ಪುಡಿಯನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾಗುವಷ್ತು ಹೊತ್ತು ಕುದಿಸಿ.
 • ಸಣ್ಣ ಬಾಣಲೆಯನ್ನು ಒಲೆಯ ಮೇಲೆ ಇರಿಸಿ ಅದಕ್ಕೆ ಎಣ್ಣೆ ಹಾಕಿ,
 • ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿಕೊಂಡು ಅದಕ್ಕೆ ಇಂಗು,ಅರಿಶಿನ ಮತ್ತು ಕತ್ತರಿಸಿಕೊಂಡ ಒಣ ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ
 • ಸಿದ್ಧ ಪಡಿಸಿಟ್ಟು ಕೊಂಡ ಒಗ್ಗರಣೆಯನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಒಂದೆರಡು ನಿಮಿಷಗಳಷ್ಟು ಕುದಿಸಿ ಅದಕ್ಕೆ ಕತ್ತರಿಸಿದ ಕೊತ್ತಂಬರೀ ಸೊಪ್ಪನ್ನು ಸೇರಿಸಿದಲ್ಲಿ ಆರೋಗ್ಯಕರವಾದ ಮತ್ತು ರುಚಿಕರವಾದ ಹಾಗಲಕಾಯಿ ಗೊಜ್ಜು ಸಿದ್ದ.

ಚಪಾತಿ, ದೋಸೆ, ರೊಟ್ಟಿ ಮತ್ತು ಅನ್ನದ ಜೊತೆಯೂ ಈ ಹಾಗಲಕಾಯಿ ಗೊಜ್ಜು ಸವಿಯಲು ಮಜವಾಗಿರುತ್ತದೆ.

ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ಮಾಡುವುದನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

WhatsApp Image 2020-06-25 at 2.34.49 PM

ಮನದಾಳದ ಮಾತು : ಕಹಿ ಎಂಬ ಪದ ನೆನಪಾದಾಗಲೆಲ್ಲ ಅದರ ಹೊತೆ ನೆನಪಾಗುವ ಇನ್ನೆರಡು ಪದಗಳೆಂದರೆ ಹಾಗಲಕಾಯಿ ಮತ್ತು ಬೇವಿನ ಕಾಯಿ. ಈ ಎರಡೂ ಪದಾರ್ಥಗಳೂ ಕಹಿಯಾಗಿರುವುದರಿಂದ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬ ಗಾದೆ ಮಾತಿದೆ. ಅದರೆ ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪಲ್ಯ, ಗೊಜ್ಜು, ಉಪ್ಪಿನಕಾಯಿ ಇಲ್ಲವೇ ಯಾವುದೇ ಒಂದು ರೀತಿಯಲ್ಲಾದರೂ ಹಾಗಲಕಾಯಿಯನ್ನು ವಾರಕ್ಕೊಮ್ಮೆಯಾದರೂ ಬಳಸುವ ಮೂಲಕ ಆರೋಗ್ಯವಂತರಾಗಿರೋಣ.
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ಕರ್ನಾಟಕಾದ್ಯಂತ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಬಿಳಿ ಹೋಳಿಗೆ ಮತ್ತು ಇಂದಿನ ಕಾಲಕ್ಕೆ ಅನುಗುಣವಾಗಿ ಮಾವಿನ ಹಣ್ಣಿನ ಗೊಜ್ಜನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.

ಸುಮಾರು 10-12 ಬಿಳೀ ಹೋಳಿಗೆಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು

• ಅಕ್ಕಿ ಹಿಟ್ಟು – 2 ಬಟ್ಟಲು
• ಮೈದಾ ಹಿಟ್ಟು – 1 ಬಟ್ಟಲು
• ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ – 1 ಚಮಚ
• ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
• ಕತ್ತರಿಸಿದ ಕರಿಬೇವಿನ ಸೊಪ್ಪು -1 ಚಮಚ
• ರುಚಿಗೆ ತಕ್ಕಷ್ಟು ಉಪ್ಪು
• ಅಡುಗೆ ಎಣ್ಣೆ – 1 ಬಟ್ಟಲು

ಬಿಳೀ ಹೋಳಿಗೆಗಳನ್ನು ತಯಾರಿಸಲು ಹೂರಣದ ಹಿಟ್ಟನ್ನು ತಯಾರಿಸುವ ವಿಧಾನ :

 • ಒಲೆಯ ಮೇಲೆ ಅಗಲವಾದ ಗಟ್ಟಿ ತಳದ ಪಾತ್ರೆಯಲ್ಲಿ ಸುಮಾರು ನಾಲ್ಕು ಲೋಟದಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
 • ಕುದಿಯುತ್ತಿರುವ ನೀರಿಗೆ ಎರಡು ಹನಿ ಎಣ್ಣೆ, ಶುಂಠಿ ಹಸೀಮೆಣಸಿನಕಾಯಿ ಪೇಸ್ಟ್ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
 • ನೀರು ಕುದಿಯುತ್ತಿರುವಾಗಲೇ ಒಲೆಯ ಉರಿಯನ್ನು ಕಡಿಮೆ ಮಾಡಿ ಅಕ್ಕಿಹಿಟ್ಟನ್ನು ನಿಧಾನವಾಗಿ ಅದಕ್ಕೆ ಸೇರಿಸಿ ಗಂಟಿಲ್ಲದ್ದಂತೆ ಚೆನ್ನಾಗಿ ಉಕ್ಕರಿಸಿಕೊಂಡು ಹಿಟ್ಟು ಗಟ್ಟಿಯಾದ ಮೇಲೆ ಸ್ವಲ್ಪ ಹೊತ್ತು ಆರಲು ಬಿಡಬೇಕು. ಹಿಟ್ಟು ಚೆನ್ನಾಗಿ ಆರಿದ ನಂತರ ಅದಕ್ಕೆ ನಾಲ್ಕೈದು ಚಮಚ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ನಾದಬೇಕು.
 • ನಾದಿದ ಹಿಟ್ಟನ್ನು ಸಣ್ಣ ಸಣ್ಣ ನಿಂಬೇ ಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.

ಬಿಳೀ ಹೋಳಿಗೆಗಳನ್ನು ತಯಾರಿಸಲು ಕನಕದ ಹಿಟ್ಟನ್ನು ತಯಾರಿಸುವ ವಿಧಾನ :

 • ಮೈದಾಹಿಟ್ಟನ್ನು ಅಗಲವಾದ ಪಾತ್ರೆಗೆ ಹಾಕಿಕೊಂಡು ಆದಕ್ಕೆ ಸ್ವಲ್ಪ ನೀರನ್ನು ಬೆರಿಸಿ ಗಟ್ಟಿಯಾಗಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಕಲೆಸಿ ಇಟ್ಟುಕೊಳ್ಳಬೇಕು.
 • ಕಲೆಸಿದ ಹಿಟ್ಟನ್ನು ಸ್ವಲ್ಪ ಸುಮಾರು ಒಂದು ಗಂಟೆಗಳ ಕಾಲ ನೆಯಲು ಬಿಟ್ಟು ನಂತರ ಸಣ್ಣ ನಿಂಬೇ ಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು

ಬಿಳೀ ಹೋಳಿಗೆಗಳನ್ನು ತಯಾರಿಸಲು ಹೂರಣದ ಹಿಟ್ಟನ್ನು ತಯಾರಿಸುವ ವಿಧಾನ :

 • ಸಣ್ಣ ಉಂಡೆಗಳಾಗಿ ಮಾಡಿಕೊಂಡಿದ್ದ ಕನಕದ ಉಂಡೆ (ಮೈದಾ ಹಿಟ್ಟಿನ ಉಂಡೆ)ಯನ್ನು ಅಂಗೈಯ್ಯಲ್ಲಿ ಅಗಲ ಮಾಡಿಕೊಂಡು ಅದರರೊಳಗೆ ಹೂರಣದ ಉಂಡೆ (ಉಕ್ಕರಿಸಿದ ಅಕ್ಕಿ ಹಿಟ್ಟಿನ ಉಂಡೆ)ಯನ್ನು ಇಟ್ಟು ಮೋದಕದ ರೀತಿಯಲ್ಲಿ ಮಡಿಚಿಟ್ಟು ಕೊಳ್ಳಬೇಕು
 • ಈಗ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿಕೊಂಡು ಮೋದಕ ರೀತಿಯ ಉಂಡೆಗಳನ್ನು ಚಪಾತಿಯ ರೀತಿಯಲ್ಲಿ ಲಟ್ಟಿಸಿಕೊಳ್ಳಬೇಕು
  ಒಲೆಯ ಮೇಲೆ ಕಾವಲಿಯನ್ನು ಇಟ್ಟು ಕಾವಲಿ ಚೆನ್ನಾಗಿ ಕಾದ ನಂತರ ಲಟ್ಟಿಸಿದ ಹೋಳಿಗೆಯನ್ನು ಕಾವಲಿಯ ಮೇಲೆ ಹಾಕಿ
 • ಸ್ವಲ್ಪ ಎಣ್ಣೆಯನ್ನು ಸವರೀ ಎರಡು ಬದಿಯಲ್ಲಿಯೂ ಕೆಂಪಗಾಗುವಂತೆ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿಯಾದ ಬಿಳೀ ಹೋಳಿಗೆ ಸಿದ್ಧ.

ಮಾವಿನ ಗೊಜ್ಜನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು

 •  ಸಾಸಿವೆ – 1/4 ಚಮಚ
 • ಬ್ಯಾಡಗೀ ಮೆನಸಿನಕಾಯಿ – 8-10
 •  ಪುಡಿ ಮಾಡಿದ ಬೆಲ್ಲ – 1/4 ಬಟ್ಟಲು
 •  ತೆಂಗಿನ ಕಾಯಿ ತುರಿ – 1 ಬಟ್ಟಲು
 •  ರಸಭರಿತ ಮಾವಿನಹಣ್ಣು – 3-4
 •  ಕತ್ತರಿಸಿದ ಮೆಣಸಿನಕಾಯಿ – 4-6
 •  ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಚಮಚ
 •  ಕತ್ತರಿಸಿದ ಕರಿಬೇವಿನ ಸೊಪ್ಪು -6-8 ಚಮಚ
 •  ಚಿಟುಕೆ ಅರಿಶಿನ
 •  ಚಿಟುಕೆ ಇಂಗು
 •  ಕೊಬ್ಬರೀ ಎಣ್ಣೆ – 1/4 ಬಟ್ಟಲು
 •  ರುಚಿಗೆ ತಕ್ಕಷ್ಟು ಉಪ್ಪು

ಮಾವಿನ ಗೊಜ್ಜನ್ನು ತಯಾರಿಸುವ ವಿಧಾನ :

 • ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಚಿಪ್ಪೆಯನ್ನು ತೆಗೆದು ಚೆನ್ನಾಗಿ ರಸಬರುವಂತೆ ಒಂದು ಪಾತ್ರೆಯಲ್ಲಿ ಹಿಂಡಿಕೊಳ್ಳಿ
  ತೆಂಗಿನ ತುರಿ, ಒಣಮೆಣಸಿನಕಾಯಿ ಮತ್ತು ಸಾಸಿವೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಚೆಟ್ನಿಯ ರೂಪದಲ್ಲಿ ರುಬ್ಬಿಕೊಳ್ಳಿ
 • ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಕೊಬ್ಬರೀ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿದ ನಂತರ ಚಿಟಿಕಿ ಇಂಗು ಮತ್ತು ಕತ್ತರಿಸಿದ ಒಣಮೆಣಸಿನಕಾಯಿ ಹಾಕಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ
 • ಈಗ ರುಬ್ಬಿಕೊಂಡಿದ್ದ ಮಸಾಲೆಯನ್ನು ಬಾಣಲೆಗೆ ಹಾಕಿ ಹಸೀ ಹೋಗುವರೆಗೂ ಬಾಡಿಸಿಕೊಳ್ಳಿ
 • ಕುದಿಯುತ್ತಿರುವ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಬೆಲ್ಲ, ಕತ್ತರಿಸಿದ ಕರಿಬೇವು ಮತ್ತು ಕೊತ್ತಂಬರೀ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ
 • ಕುದಿಯುತ್ತಿರುವ ಮಿಶ್ರಣಕ್ಕೆ ಕಿವಿಚಿಕೊಂಡಿದ್ದ ಮಾವಿನ ಹಣ್ಣಿನ ರಸವನ್ನು ಸೇರಿಸಿ ಒಂದು ನಿಮಿಷ ಕಾಯಿಸಿದಲ್ಲಿ ರುಚಿ ರುಚಿಯದ ಘಮ ಘಮವಾದ ಮಾವಿನ ಹಣ್ಣಿನ ಗೊಜ್ಜು ಸಿದ್ಧ.

ಆದಾಗಲೇ ಸಿದ್ದ ಪಡಿಸಿ ಕೊಂಡಿದ್ದ ಬಿಸಿ ಬಿಸಿಯಾದ ಬಿಳೀ ಹೋಳಿಗೆಯೊಂದಿಗೆ ಈಗ ತಯಾರಿಸಿದ ಮಾವಿನ ಹಣ್ಣಿನ ಗೊಜ್ಜನ್ನು ನೆಂಚಿಕೊಂಡು ತಿನ್ನಲು ಬಲು ಮಜವಾಗಿರುತ್ತದೆ.

ಬಿಸಿ ಬಿಸಿಯಾದ ಬಿಳೀ ಹೋಳಿಗೆ ಜೊತೆಗೆ ರುಚಿಕರವಾದ ಮಾವಿನ ಹಣ್ಣಿನ ಗೊಜ್ಜನ್ನು ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.

ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ

ಏನಂತೀರೀ?

ಮನದಾಳದ ಮಾತು : ಮಾವಿನ ಹಣ್ಣಿನ ಕಾಲದಲ್ಲಿ ಈ ರೀತಿಯಾಗಿ ಮಾವಿನ ಹಣ್ಣಿನ ಗೊಜ್ಜನ್ನು ತಯಾರಿಸಿಟ್ಟುಕೊಂಡು ಸುಮಾರು ಮೂರ್ನಾಲ್ಕು ದಿನಗಳ ಕಾಲ, ಪೂರಿ, ದೋಸೆ, ಚಪಾತಿ,ಅಲ್ಲದೇ ರಾಗಿ ಮುದ್ದೆ ಮತ್ತು ಅನ್ನದ ಜೊತೆಯೂ ಕಲೆಸಿಕೊಂಡು ತಿನ್ನಬಹುದಾಗಿದೆ. ಇನ್ನು ಅಕ್ಕಿ ಹಿಟ್ಟಿನ್ನು ಉಕ್ಕರಿಸಿಕೊಂಡು ಮಾಡಿದ ಬಿಳೀ ಹೋಳಿಗೆ ಎರಡು ಬಾರಿ ಬೇಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ಈ ಆಹಾರ ವಿಧಾನವನ್ನು ಸಾವಕಾಶವಾಗಿ ನಮಗೆ ಮಾಡಿ ತೋರಿಸಿಕೊಟ್ಟ ಬೆಂಗಳೂರಿನ ದೊಡ್ಡಬೊಮ್ಮಸಂದ್ರ ನಿವಾಸಿ ಶ್ರೀಯುತ ಆರ್. ಆನಂದ್ ಅವರಿಗೆ ಅವರಿಗೆ ನಮ್ಮ ಏನಂತೀರೀ YouTube ಛಾನೆಲ್ಲಿನ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.

#ಅನ್ನಪೂರ್ಣ
#ಬಿಳೀಹೋಳಿಗೆ
#ಮಾವಿನಹಣ್ಣಿನ_ಗೊಜ್ಜು
#ಏನಂತೀರೀ

 

ಹೇರಳೇಕಾಯಿ ಗೊಜ್ಜು

ಜನರ ಆಡುಭಾಷೆಯಲ್ಲಿ ಎಳ್ಳಿಕಾಯಿ, ದೊಡ್ಲೀಕಾಯಿ ಎಂದು ಕರೆಸಿಕೊಳ್ಳುವ
ಹೇರಳೇಕಾಯಿ ಆಯುರ್ವೇದದಲ್ಲಿ ಹಲವು ಕಾಯಿಲೆಗಳಿಗೆ ದಿವ್ಯೌಷಧಿಯಾಗಿದೆ. ವಿಟಮಿನ್ ಸಿ ಆಗರವಾಗಿರುವ ಹೇರಳೇಕಾಯಿಯ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ರಕ್ತ ಪರಿಶುದ್ಧಗೊಳ್ಳುವುದಲ್ಲದೆ ಲಿವರ್ನ ಆರೋಗ್ಯವನ್ನೂ ಕಾಪಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹಾನಿಕಾರಕ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೇರಳೇಕಾಯಿಯನ್ನು ನಮ್ಮ ಆಹಾರ ಪದ್ದತ್ತಿಯಲ್ಲಿ ಚಿತ್ರಾನ್ನ, ಉಪ್ಪಿನಕಾಯಿ, ಗೊಜ್ಜು ಹೀಗೇ ನಾನಾರೂಪದಲ್ಲಿ ಬಳೆಸುತ್ತೇವೆ. ಇಂದು ನಮ್ಮ ನಳಪಾಕ ಮಾಲಿಕೆಯಲ್ಲಿ ಹೇರಳೇಕಾಯಿ ಗೊಜ್ಜನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ.

ಹೇರಳೇಕಾಯಿ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು

 • ಹೇರಳೇ ಕಾಯಿ – 2-3
 • ಕಡಲೇಬೇಳೆ – 1 ಚಮಚ
 • ಉದ್ದಿನಬೇಳೆ – 1 ಚಮಚ
 • ಬೆಲ್ಲ- ½ ಅಚ್ಚು
 • ಒಣಕೊಬ್ಬರಿ/ತೆಂಗಿನ ಕಾಯಿ ತುರಿ 50 ಗ್ರಾಂ
 • ಒಣಮೆಣಸಿನಕಾಯಿ – 5-6
 • ಕಾಳು ಮೆಣಸು – 4-6
 • ಸಾಸಿವೆ – 1 ಚಮಚ
 • ಚಿಟುಕಿ ಅರಿಶಿನ
 • ಚಿಟುಕಿ ಇಂಗು
 • ಹುಣಸೇಹಣ್ಣು ನಿಂಬೇ ಗಾತ್ರ
 • ರುಚಿಗೆ ತಕ್ಕಷ್ಟು ಉಪ್ಪು
 • ಒಗ್ಗರಣೆಗೆ ಸ್ವಲ್ಪ ಎಣ್ಣೆ
 • ಕರಿಬೇವು – 8-10 ಎಲೆಗಳು
 • ಕತ್ತರಿಸಿದ ಕೊತ್ತಂಬರಿ – 1 ಚಮಚ

ಹೇರಳೇಕಾಯಿ ಗೊಜ್ಜು ಮಾಡುವ ವಿಧಾನ

WhatsApp Image 2020-06-22 at 1.42.32 PM

 • ಹೇರಳೇಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ
 • ಒಂದು ಬಾಣಲೆಗೆ ಉದ್ದಿನಬೇಳೆ,ಕಡಲೆಬೇಳೆ,ಮೆಣಸಿನ ಕಾಳು,ಒಣಮೆಣಸಿನಕಾಯಿ ಮತ್ತು ಕೊಬ್ಬರಿಯನ್ನು ಒಂದಾದ ನಂತರ ಒಂದನ್ನು ಹಾಕಿಕೊಂಡು ಚೆನ್ನಾಗಿ ಕೆಂಪಗೆ ಬರುವ ಹಾಗೆ ಹುರಿದುಕೊಳ್ಳಿ
 • ಹುರಿದ ಪದಾರ್ಥಗಳು ಆರಿದ ನಂತರ ನುಣ್ಣಗೆ ಪುಡಿ ಮಾಡಿಮಾಡಿಕೊಳ್ಳಿ
 • ಪುನಃ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು, ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿ,ಚಿಟಿಕೆ ಅರಿಶಿನ ಮತ್ತು ಇಂಗನ್ನು ಸೇರಿಸಿ ಅದಕ್ಕೆ ಸಣ್ಣಗೆ ಹೆಚ್ಚಿದ ಹೇರಳೇಕಾಯನ್ನು ಹಾಕಿ ಚೆನ್ನಾಗಿ ಹಸೀ ಹೋಗುವವರೆಗೂ ಹುರಿಯಿರಿ
 • ಈಗ ಹುಣಸೇಹುಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸ್ವಲ್ಪ ಕುದಿಯಲು ಬಿಡಿ.
 • ಕುದಿಯುತ್ತಿರುವ ಮಿಶ್ರಣಕ್ಕೆ ಪುಡಿ ಬೆಲ್ಲವನ್ನು ಸೇರಿಸಿ ಮತ್ತು ಮಾಡಿಕೊಂಡಿರುವ ಮಸಾಲೆ ಪುಡಿಯನ್ನು ಸೇರಿಸಿ ನಾಲ್ಕೈದು ನಿಮಿಷಗಳಷ್ಟು ಕುದಿಸಿ ಅದರ ಮೇಲೆ ಅಲಂಕರಿಕವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿದಲ್ಲಿ ರುಚಿ ರುಚಿಯಾದ ಹುಳಿಯಾದ ಮತ್ತು ಅಷ್ಟೇ ಒಗುರಾದ ಮತ್ತು ಸಿಹಿಯಾದ ಹೇರಳೇಕಾಯಿ ಗೊಜ್ಜು ಸಿದ್ಧ.

ಹೇರಳೇಕಾಯಿ ಗೊಜ್ಜನ್ನು ದೋಸೆ, ಚಪಾತಿ ಜೊತೆ ನೆಂಚಿ ಕೊಂಡು ತಿನ್ನಲು ಮಜವಾಗಿರುತ್ತದೆ. ರಾಗಿ ಮುದ್ದೆ ಹೇರಳೇಕಾಯಿ ಗೊಜ್ಜು ಕಾಂಬಿನೇಷನ್ ನಿಜಕ್ಕೂ ಸೂಪರ್!!

WhatsApp Image 2020-06-22 at 12.40.36 PM (1)

ರುಚಿಕರವಾದ ಹೇರಳೇಕಾಯಿ ಗೊಜ್ಜನ್ನು ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ

ಏನಂತೀರೀ?

ಮನದಾಳದ ಮಾತು : ಅನೇಕ ಔಷಧೀಯ ಗುಣವುವುಳ್ಳ ಹೇರಳೇಕಾಯಿಗೊಜ್ಜು ಬಾಣಂತೀಯರ ಅಚ್ಚುಮೆಚ್ಚು. ಈ ಹೇರಳೆ ಗೊಚ್ಚು ಬಾಣಂತೀಯರ ದೇಹದ ಶಾಖವನ್ನು ಹೆಚ್ಚಿಸಿ ಸದಾಕಾಲವೂ ಮೈ ಬೆಚ್ಚಗಿರಿಸುತ್ತದೆ. ಇದೇ ಕಾರಣಕ್ಕಾಗಿಯೇ ಹೇರಳೇಕಾಯಿ ಉಪ್ಪಿನ ಕಾಯಿಯನ್ನೂ ಬಾಣಂತಿಯರಿಗೆ ಬಡಿಸುತ್ತಾರೆ. ಹೇರಳೇಕಾಯಿ ಬದಲಾಗಿ ಒಳ್ಳೆಯ ಕಿತ್ತಳೇ ಹಣ್ಣಿನ ಸಿಪ್ಪೆಯನ್ನೂ ಬಳಸಿಯೂ ರುಚಿಕರವಾದ ಗೊಜ್ಜನ್ನು ತಯಾರಿಸಬಹುದಾಗಿದೆ.