ರಮೇಶ ಹಳ್ಳಿಯೊಂದರಲ್ಲಿರಲ್ಲಿ ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವಂತೆ ನಾವಿಬ್ಬರು ನಮಗಿಬ್ಬರು ಎಂಬು ಮುದ್ದಾದ ಸಂಸಾರವಿತ್ತು. ಪಿತ್ರಾರ್ಜಿತವಾಗಿ ಬಂದಿದ್ದ ಅಲ್ಪ ಸ್ವಲ್ಪ ಹೊಲ ಗದ್ದೆಯಲ್ಲೇ ಮಳೆಯಾಧಾರಿತವಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಗಳು ಹತ್ತನೇ ತರಗತಿಯಲ್ಲಿ ಇಂಗ್ಲೀಶ್, ಗಣಿತದಲ್ಲಿ ಫೇಲ್ ಆಗಿ ಮುಂದೆ ಓದಲಾರೆ ಎಂದಾಗ ಮಗಳನ್ನು ಬಲವಂತ ಮಾಡದೇ, ಮನೆಯಲ್ಲೇ ಹಾಡು ಹಸೆ, ಆಡುಗೆ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಕಲಿಸಿ ವಯಸ್ಸು 18 ಆಗುತ್ತಿದ್ದಂತೆಯೇ ಹತ್ತಿರದ ಪಟ್ಟಣವೊಂದರಲ್ಲಿ ಕೆಲಸ ಮಾಡುತ್ತಿದ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟಿದ್ದ. ಹೆಂಡತಿಯ ಕೋರಿಕೆಯ ಮೇರೆಗೆ ಇರುವ ಒಬ್ಬಳೇ ಮಗಳ ಮದುವೆಯನ್ನು ಹತ್ತಿರದ ಪಟ್ಟಣದಲ್ಲಿ ತನ್ನ ಶಕ್ತಿ ಮೀರಿ ಸ್ವಲ್ಪ ಸಾಲವನ್ನೂ ಮಾಡಿ ಅದ್ದೂರಿಯಿಂದ ಮಾಡಿದ್ದ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಮಗಳ ಮದುಗೆಂದು ಮಾಡಿದ್ದ ಸಾಲವನ್ನು ತೀರಿಸಲು ಸಲುವಾಗಿ ತನ್ನ ಹೊಲವಲ್ಲದೇ ಅಕ್ಕ ಪಕ್ಕದ ತೋಟದಲ್ಲೂ ಅಡಿಕೆ, ಕಾಯಿ ಕೀಳಲು ಹೋಗುವ ಮೂಲಕ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಿದ್ದ. ಇನ್ನು ರಮೇಶನ ಹೆಂಡತಿಯೂ ಸಹಾ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಅರಿತು ಸುಮ್ಮನೇ ಮನೆಯಲ್ಲಿ ಕೂರದೇ, ಹತ್ತಿರದ ಅಂಗನವಾಡಿಯಲ್ಲಿ ಆಯಾ ಆಗಿ ಕೆಲಸಮಾಡುತ್ತಿದ್ದಳು.
ತಾವು ಪಡುತ್ತಿರುವ ಕಷ್ಟವನ್ನು ತಮ್ಮ ಮಗ ಮಹೇಶನಿಗೆ ಬರಬಾರದೆಂದು ಬಾಲ್ಯದಿಂದಲೂ ಆತನಿಗೆ ಸಾಧ್ಯವಾದಷ್ಟೂ ಸೌಲಭ್ಯಗಳನ್ನು ನೀಡಿ ತಮ್ಮೂರಿನಲೇ ಇದ್ದ ಶಾಲೆಯಲ್ಲಿ ಓದಿಸುತ್ತಿದ್ದ. ಆರ್ಥಿಕವಾಗಿ ಬಡವರಾಗಿದ್ದರೂ, ಬೌದ್ಧಿಕವಾಗಿ ಶ್ರೀಮಂತರಾಗಿದ್ದ ಕಾರಣ ಮಹೇಶ ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಚುರುಕಾಗಿಯೇ ಇದ್ದು ಓಹೋ ಎನ್ನಲಾಗದಿದ್ದರೂ, ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆಯುತ್ತಿದ್ದ. ಅದೇ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಾದ ನಾಟಕ, ಪ್ರಬಂಧ, ಚರ್ಚಾ ಸ್ಪರ್ಧೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಆಸ್ತಕ್ತಿಯಿಂದ ಭಾಗವಹಿಸಿ ನಾಲ್ಕಾರು ಬಹುಮಾನಗಳನ್ನು ಗಳಿಸಿದ್ದ ಕಾರಣ ತನ್ನ ಶಾಲೆಯ ಶಿಕ್ಷಕವೃಂದದವರಿಗೆ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.
ಹೀಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರತಿ ಬಾರಿ ಪಟ್ಟಣಗಳಿಗೆ ಹೋದಾಗಲೂ ಅಲ್ಲಿನ ಹೈಸ್ಕೂಲು ಹುಡುಗ ಹುಡುಗಿಯರು ಧರಿಸುತ್ತಿದ್ದ ಬಟ್ಟೆ ಬರೆಗಳು, ಕೈಯ್ಯಲ್ಲಿ ಹಿಡಿದಿರುತ್ತಿದ್ದ ಮೊಬೈಲ್ಲುಗಳು, ಶಾಲೆ ಬಿಟ್ಟ ನಂತರ ಶಾಲೆಯ ಪಕ್ಕದಲ್ಲೇ ಇರುತ್ತಿದ್ದ ಅಂಗಡಿ ಮತ್ತು ಹೋಟೇಲ್ಲುಗಳಲ್ಲಿ ತಮಗೆ ಬೇಕಾದದ್ದನ್ನು ತಿನ್ನುತ್ತಾ ಐಸ್ ಕ್ರೀಮ್ ಮೆಲ್ಲುತ್ತಾ ಹರಟುತ್ತಿದ್ದದ್ದು ಮಹೇಶನಿಗೆ ಅಚ್ಚರಿ ಮೂಡಿಸುತಿದ್ದದ್ದಲ್ಲದೇ, ತಾನೂ ಸಹಾ ಹೀಗೆ ಇಂತಹ ಪ್ರತಿಷ್ಠಿತ ಕಾಲೇಜಿನಲ್ಲೇ ಓದುತ್ತಾ ಐಶಾರಾಮ್ಯವಾದ ಜೀವನವನ್ನು ನಡೆಸಬೇಕು ಎಂದು ಕನಸು ಕಾಣುತ್ತಿದ್ದ.
ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರ ಬಂದಾಗ, ರಮೇಶ ದಂಪತಿಗಳು ತಮ್ಮ ಮಗನನ್ನು ಮತ್ತಷ್ಟು ಕಾಳಜಿಯಿಂದ ನೋಡಿ ಕೊಳ್ಳತೊಡಗಿದ್ದಲ್ಲದೇ ತಡರಾತ್ರಿಯಲ್ಲೂ ಅವನ ಓದಿಗೆ ಯಾವುದೇ ತೊಂದರೆಯಾಗದಂತೆ ಟೀ ಕಾಫೀ ಮಾಡಿಕೊಡುತ್ತಾ ಪರೀಕ್ಷೆಯ ದಿನ ರಮೇಶನೇ ತನ್ನದೇ ಟಿವಿಎಸ್-50 ಯಲ್ಲಿ ಮಹೇಶನನ್ನು ಕೂರಿಸಿಕೊಂಡು ಪರೀಕ್ಷೆಗೆ ಬಿಟ್ಟು ಬಂದಿದ್ದ. ಪರೀಕ್ಷೇಗಳೆಲ್ಲವೂ ಮುಗಿದು ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ಮಗ ಮಹೇಶನಿಗಿಂತಲೂ ಅಪ್ಪಾ ರಮೇಶನಿಗೆ ಆತಂಕ ಹೆಚ್ಚಾಗಿತ್ತು.ಇತ್ತೀಚಿನ ದಿನಗಳಲ್ಲಿ ಫಲಿತಾಂಶವೆಲ್ಲವೂ ಬೆರಳ ತುದಿಯಲ್ಲಿ ಮೊಬೈಲ್ ಮುಖಾಂತರವೇ ನೋಡಬಹುದಾಗಿದ್ದರೂ, ರಮೇಶನ ಬಳಿ ಸಾಧಾರಣವಾದ ಮೊಬೈಲ್ ಇದ್ದ ಕಾರಣ, ಫಲಿತಾಂಶವನ್ನು ಶಾಲೆಯಲ್ಲೇ ನೋಡಲು ನಿರ್ಧರಿಸಿ ಆ ದಿನ ಬೆಳ್ಳಂಬೆಳಿಗ್ಗೆಯೇ ಅಪ್ಪಾ ಮಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ವಿಶೇಷವಾಗಿ ದೇವರಿಗೆ ಕೈ ಮುಗಿದು ಮಡದಿ ಕೊಟ್ಟ ತಿಂಡಿಯನ್ನು ತಿನ್ನುವಾಗಲೂ ಫಲಿತಾಂಶದ ದುಗುಡವೇ ಹೆಚ್ಚಾಗಿತ್ತು.
ಮಗನನ್ನು ತನ್ನ ಗಾಡಿಯಲ್ಲಿ ಕುಳ್ಳರಿಸಿಕೊಂಡು ಫಲಿತಾಂಶ ನೋಡಲು ಶಾಲೆಗೆ ಹೋಗುವ ಮಾರ್ಗದಲ್ಲಿ ಸಿಕ್ಕ ಗಣೇಶ ಮತ್ತು ಮಾರಮ್ಮನ ಗುಡಿಗೆ ನಮಸ್ಕರಿಸುತ್ತಾ ಶಾಲೆಯ ನೋಟೀಸ್ ಬೋರ್ಡಿನಲ್ಲಿ ಕೆಳಗಿನಿಂದ ಮೇಲಕ್ಕೆ ತನ್ನ ಮಗನ ರಿಜಿಸ್ಟರ್ ನಂಬರ್ ನೋಡುತ್ತಾ ಅಂತಿಮವಾಗಿ ಉನ್ನತ ಶ್ರೇಣಿಯಲ್ಲಿ ತನ್ನ ಮಗ ತೇರ್ಗಡೆಹೊಂದಿದ್ದರಿಂದ ಸಂತೋಷಗೊಂಡು ಮಗನನ್ನು ಅಪ್ಪಿ ಮುದ್ದಾಡಿ, ಅಲ್ಲೇ ಇದ್ದ ಹೋಟೆಲ್ಲಿಗೆ ಮಗನನ್ನು ಕರೆದುಕೊಂಡು ಹೋಗಿ ಜಾಮೂನು, ಮಸಾಲೆ ದೋಸೆ ಮತ್ತು ಕಾಫಿಯ ಸಮಾರಾಧನೆ ನಡೆಸಿಕೊಂಡು ಮಡದಿಗೆ ಫಲಿತಾಂಶ ಹೇಳಲು ಮನೆಯ ಕಡೆಗೆ ಧಾವಿಸಿದರು.
ಅಪ್ಪಾ ಮಗ ಫಲಿತಾಂಶ ನೋಡಿಕೊಂಡು ಹಿಂದಿರುಗುವಷ್ಟರಲ್ಲಿ ಅಮ್ಮಾ ರುಚಿ ರುಚಿಯಾದ ಕೊಬ್ಬರಿ ಮಿಠಾಯಿಯನ್ನು ಮಾಡಿ ತಟ್ಟೆಯಲ್ಲೇ ಆರಲು ಬಿಟ್ಟಿದ್ದಳು. ಅಪ್ಪಾ ಮಗ ಸಂತೋಷದಿಂದ ಬಂದು 85% ಅಂಕಗಳನ್ನು ತೆಗೆದುಕೊಂಡು ವಿಷಯ ತಿಳಿಸಿದ ತಕ್ಷಣ, ಕೂಡಲೇ ಕೈ ಕಾಲುಗಳನ್ನು ತೊಳೆದುಕೊಂಡು ದೇವರ ಮನೆಗೆ ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚಿ ದೇವರಿಗೆ ಕೈ ಮುಗಿದು, ಮಗ ಮತ್ತು ಮನೆಯವರ ಹಣೆಗೆ ವೀಭೂತಿ ಇಟ್ಟು ಎಲ್ಲರೂ ಭಕ್ತಿಯಿಂದ ದೇವರಿಗೆ ನಮಸ್ಕರಿಸಿ ಇನ್ನೂ ಬಿಸಿ ಬಿಸಿ ಮತ್ತು ಹಸಿಯಾಗಿಯೇ ಇದ್ದ ಕೊಬ್ಬರಿ ಮಿಠಾಯಿಯನ್ನು ಮಗನಿಗೆ ತಿನ್ನಿಸಿದರೆ, ಸಂಜೆ ಕೊಬ್ಬರಿ ಮಿಠಾಯಿ ಆರಿ ಬೆಳ್ಳಗಾದ ಕೂಡಲೇ ರಮೇಶ ನೆರೆ ಹೊರೆಯವರಿಗೆಲ್ಲಾ ಅದನ್ನು ಹಂಚುವ ಮೂಲಕ ಮಗನ ಫಲಿತಾಂಶವನ್ನು ಸಂಭ್ರಮಿಸಿದ್ದರು.
ದೇವರ ದಯೆ ಮತ್ತು ಮಗನ ಕಠಿಣ ಪರಿಶ್ರಮದಿಂದಾಗಿ 10ನೇ ತರಗತಿ ಮುಗಿಸಿಯಾಗಿದೆ. ಮುಂದೆ ತಮ್ಮೂರಿಗೆ ಹತ್ತಿರದಲ್ಲೇ ಇರುವ ITI/Diploma ಸೇರಿಸಿದರೆ, 2-3 ವರ್ಷದಲ್ಲೇ ಓದು ಮುಗಿಸಿ ಮಗ ಪಟ್ಟಣದ ಯಾವುದಾದರೂ ನೌಕರಿ ಗಿಟ್ಟಿಸಬಹುದು ಎನ್ನುವುದು ರಮೇಶನ ಆಸೆ. ಅದರೆ ಮಹೇಶನ ಮನದಲ್ಲಿ ದೂರದ ಪಟ್ಟಣದಲ್ಲಿರುವ ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡು ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು ಕೈಯ್ಯಲ್ಲೊಂದು ಪುಸ್ತಕ ಹಿಡಿದು ಕೊಂಡು ರಾಜಾಹುಲಿ ಚಿತ್ರದಲ್ಲಿ ಯಶ್ ಮತ್ತವನ ಸ್ನೇಹಿತರು ಬಸ್ಸಿನ ಫುಟ್ ಬೋರ್ಡಿನಲ್ಲಿ ನಿಂತು ಕೊಂಡು ದಾರಿಯಲ್ಲಿ ಹೋಗಿ ಬರುವ ಚಂದನೆಯ ಹೆಣ್ಣುಮಕ್ಕಳನ್ನು ನೋಡಿಕೊಂಡು ಓಡಾಡುವಂತೆ ಹೋಗಿ ಬರುವ ಆಸೆ.
ಮನೆಯಲ್ಲಿ ಈ ಕುರಿತಂತೆ ಒಂದೆರಡು ಬಾರಿ ತೀವ್ರವಾದ ವಾದ ವಿವಾದಗಳು ನಡೆದು ಇರುವ ಒಬ್ಬನೇ ಮಗ ಅವನಾದರೂ ಚೆನ್ನಾಗಿ ಇರಲಿ. ಕಷ್ಟನೋ ಸುಖಾನೋ ತಂದೆ ತಾಯಿಯರಾಗಿ ನಮ್ಮ ಜವಾಬ್ಧಾರಿಯನ್ನು ನಾವು ನಿಭಾಯಿಸಿ ಅವನಿಷ್ಟದಂತೆ ಓದಿಸಿ ಬಿಡೋಣ. ಮುಂದೆ ಆವನಿಗೆ ಬಿಟ್ಟಿದ್ದು ಎಂದು ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡು ಮಡದಿ ಹೇಳುತ್ತಿದ್ದರೆ, ಪಟ್ಟಣದಲ್ಲಿ ಪ್ರತಿಷ್ಠಿತ ಕಾಲೇಜು ಸೇರಿಸುವ ಖರ್ಛು ವೆಚ್ಚಗಳನ್ನು ಮನಸ್ಸಿನಲ್ಲೇ ಮಂಡಿಗೆ ಎಣಿಸುತ್ತಾ ಹೋದ ರಮೇಶ. ಮನೆಯ ಆರ್ಥಿಕ ಪರಿಸ್ಥಿತಿಯ ಅರಿವಿದ್ದರೂ, ಪಟ್ಟಣದಲ್ಲೇ ಓದಬೇಕೆಂದು ಹಠ ಹಿಡಿದು ಕೂತ್ತಿದ ಮಹೇಶನಿಗೇ ಅಂತಿಮ ಗೆಲುವಾಗಿ ಅಪ್ಪಾ ಮತ್ತು ಮಗ ಇಬ್ಬರೂ ಪಟ್ಟಣಕ್ಕೆ ಬಂದು ಕಾಲೇಜಿಗೆ ಸೇರಿಸಲು ಬಂದಾಗ, ರಮೇಶ ಮಹೇಶನ ಜೊತೆ ಇನ್ನೇನು ಕಾಲೇಜಿನ ಒಳಗೆ ಕಾಲಿ ಇಡಬೇಕು ಎಂದು ಬಲಗಾಲು ಎತ್ತಿಡುವಾಗ, ಶಾಲಾ ಕಾಲೇಜು ಎನ್ನುವುದು ವಿದ್ಯಾ ಮಾತೆಯ ದೇಗುಲ ಇದ್ದ ಹಾಗೆ. ಮೊದಲ ಬಾರಿಗೆ ಹೋಗುವಾಗ ಕಾಲಿನಲ್ಲಿ ಚಪ್ಪಲಿ ಹಾಕಿಕೊಂಡು ಹೋಗುವುದು ಸರಿಯಲ್ಲ ಎಂದು ರಮೇಶ ಚಪ್ಪಲಿಯನ್ನು ಅಲ್ಲೇ ಹೊರಗೆ ಬಿಟ್ಟಾಗ ಒಲ್ಲದ ಮನಸ್ಸಿನಿಂದಲೇ ಮಹೇಶನೂ ಅಪ್ಪನನ್ನು ಮನಸ್ಸಿನಲ್ಲೇ ಬೈದುಕೊಂಡು ಚಪ್ಪಲಿ ಬಿಡುತ್ತಾನೆ.
ಹಾಗೆ ಕಾಟಾಚಾರದಿಂದ ಎಲ್ಲೆಂದರಲ್ಲಿ ಚಪ್ಪಲಿ ಬಿಡುವಾಗ ಕಣ್ಣು ತನ್ನ ಅಪ್ಪನ ಚಪ್ಪಲಿಯ ಕಡೆ ಹೋದಾಗ ಒಂದು ಕ್ಷಣ ತಬ್ಬಿಬ್ಬಾಗಿದ್ದಲ್ಲದೇ ಅವನಿಗೆ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯಲಾರಂಭಿಸುತ್ತದೆ. ಮಗನ ಕಾಲಿಗೆ ಕಲ್ಲು ಮುಳ್ಳು ಚುಚ್ಚಿ ಆತನಿಗೆ ನೋವಾಗ ಬಾರದೆಂದು ಚಂದನೆಯ ಚಪ್ಪಲಿಯನ್ನು ಕೊಡಿಸಿದ್ದ ಅಪ್ಪ. ಆತ ಮಾತ್ರ ಸವಿದು ಹೋದ ಚಪ್ಪಲಿಯನ್ನೇ ಧರಿಸಿಕೊಂಡು ಓಡಾಡುತ್ತಿದ್ದದ್ದು ಆಗ ಮಗ ಮಹೇಶನ ಕಣ್ಣಿಗೆ ಬೀಳುತ್ತದೆ. ಕೂಡಲೇ, ಮನಸ್ಸು ಬದಲಿಸಿದ ಮಗ, ಅಪ್ಪಾ ನನಗೆ ಈ ಕಾಲೇಜಿನಲ್ಲಿ ಓದಲು ಇಷ್ಟವಿಲ್ಲ. ನಡೀರಿ ನಮ್ಮ ಊರಿನ ಸಮೀಪವೇ ಇರುವ ಸರ್ಕಾರೀ ಕಾಲೇಜಿನಲ್ಲೇ ಓದುತ್ತೇನೆ ಎಂದು ಹೇಳುತ್ತಾನೆ.
ಮಗನ ಈ ದಿಢೀರ್ ನಿರ್ಧಾರಕ್ಕೆ ರಮೇಶನೂ ಒಂದು ಕ್ಷಣ ಗಲಿಬಿಲಿಗೊಂಡು, ಮಗೂ, ಇದೇನು ಕಡೇ ಕ್ಷಣ ಈ ರೀತಿಯಾಗಿ ನಿರ್ಧಾರ ಬದಲಿಸಿದ್ದೀಯೇ? ದುಡ್ಡು ಕಾಸಿನ ಬಗ್ಗೆ ಚಿಂತೆ ಮಾಡಬೇಡ. ಅದನ್ನು ನಾನು ಹೊಂದಿಸುತ್ತೇನೆ. ನೀನು ಚೆನ್ನಾಗಿ ಓದಬೇಕು ಅಷ್ಟೇ ಎನ್ನುತ್ತಾನೆ. ಒಮ್ಮೆ ಧೃಢ ನಿರ್ಧಾರ ತೆಗೆದುಕೊಂಡಿದ್ದ ಮಹೇಶ ಇಲ್ಲ ಅಪ್ಪಾ, ಇದು ದಿಢೀರ್ ನಿರ್ಧಾರ ಎನಿಸಿದರೂ ಇದರ ಹಿಂದೆ ಸಾಕಷ್ಟು ದೂರಾಲೋಚನೆ ಇದೆ ಎಂದು ಹೇಳಿ ಅಪ್ಪನೊಂದಿಗೆ ತಮ್ಮೂರಿನ ಬಳಿ ಇರುವ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳುತ್ತಾನೆ.
ಪ್ರತೀ ದಿನ ಕಾಲೇಜಿಗೆ ಹೋಗುವ ಮುನ್ನ ಮನೆಯ ಕೊಟ್ಟಿಗೆ ಕೆಲಸ ಮುಗಿಸಿ, ಸಮಯ ಸಿಕ್ಕಾಗಲೆಲ್ಲಾ ಅಪ್ಪನಿಗೆ ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತಲೇ ದ್ವಿತೀಯ ವರ್ಷದ ಪಿಯುಸಿಯಲ್ಲಿ ಇಡೀ ಜಿಲ್ಲೆಗೇ ಪ್ರಥಮ ಮತ್ತು ರಾಜ್ಯಕ್ಕೆ ಐದನೇಯವನಾಗಿ ಉತ್ತೀರ್ಣನಾದಾಗ ರಮೇಶ ದಂಪತಿಗಳ ಆನಂದಕ್ಕೆ ಪಾರವೇ ಇಲ್ಲ. ಮಹೇಶನನ್ನು ಸಂದರ್ಶನ ಮಾಡಲು ಬಂದ ಮಾಧ್ಯಮಗಳು, ಇಷ್ಟು ಒಳ್ಳೆಯ ಅಂಕಗಳನ್ನು ಗಳಿಸಿರುವ ನೀವು ಮುಂದೆ ಡಾಕ್ಟರ್ ಇಲ್ಲವೇ ಇಂಜಿನೀಯರಿಂಗ್ ಪದವಿ ಪಡೆದು ವಿದೇಶದಲ್ಲಿ ಹೇರಳವಾಗಿ ಹಣ ಮಾಡುವ ಹಂಬಲವಿದೆಯೇ? ಎಂದು ಪ್ರಶ್ನಿಸಿದಾಗ, ಮಹೇಶನ ಉತ್ತರ ಅವರೆಲ್ಲರನ್ನೂ ದಿಗ್ಭ್ರಾಂತ ಗೊಳಿಸುತ್ತದೆ.
ನಮ್ಮ ದೇಶ ಭಾರತ ಕೃಷಿ ಪ್ರಧಾನವಾದ ದೇಶ. ರೈತರುಗಳೇ ಈ ದೇಶದ ಬೆನ್ನಲುಬು. ಮೊದಲು ಹೊಟ್ಟೆಗೆ ಹಿಟ್ಟಿದ್ದಾಗ ಮಾತ್ರವೇ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಯಬಹುದು. ಹಾಗಾಗಿ ಡಾಕ್ಟರ್ ಇಂಜೀನಿಯರ್ ಬೇಕಾದಷ್ಟು ಜನರು ಸಿಗುತ್ತಾರೆ. ಆದರೆ ನಿಜವಾದ ಕೃಷಿಕ ಸಿಗುವುದು ಇಂದಿಗೆ ದುಸ್ತರವಾಗಿರುವ ಕಾರಣ, ನಾನು ಕೃಷಿ ವಿಜ್ಞಾನವನ್ನು ಅಧ್ಯಯನ ಮಾಡಿ ಕೃಷಿಯಲ್ಲಿ ಸಾಧನೆ ಮಾಡಲು ಇಚ್ಚಿಸಿದ್ದೇನೆ ಎಂದು ಹೇಳುತ್ತಿದ್ದಾಗ ರಮೇಶನಿಗೆ ಆನಂದಭಾಷ್ಪವನ್ನು ತಡೆಯಲಾಗದೇ, ಸುತ್ತಮುತ್ತಲೂ ಮಾಧ್ಯಮದವರು ಇದ್ದಾರೆ ಎಂಬುದನ್ನೂ ಲೆಖ್ಖಿಸದೇ ತನ್ನ ಮಗ ಮಹೇಶನನ್ನು ಬರಸೆಳೆದು ಅಪ್ಪಿಕೊಂಡು ಮುದ್ದಾಡುತ್ತಾನೆ.
ನೋಡ ನೋಡುತ್ತಿದ್ದಂತೆಯೇ ಕೇವಲ ಐದೇ ವರ್ಷಗಳಲ್ಲಿ ಕೃಷಿ ವಿಜ್ಣಾನದಲ್ಲಿ ಉನ್ನದ ಪದವಿಯನ್ನು ಪಡೆದ ಮಹೇಶ ತನ್ನೂರಿಗೆ ಮರಳಿ ತಮ್ಮ ಜಮೀನಿನಲ್ಲಿ ಪಾಲೇಕರ್ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾನೆ. ಆರಂಭದಲ್ಲಿ ಇರುವ ಜಮಿನನ್ನೇ ವಾರದ ಫಸಲು, ತಿಂಗಳ ಫಸಲು, ಮೂರು ತಿಂಗಳ ಫಸಲು ಮತ್ತು ವಾರ್ಷಿಕ ಫಸಲು ಕೊಡುವ ಗಿಡ ಮರಗಳನ್ನು ಹಾಕುವುದಲ್ಲದೇ ತಮ್ಮ ಜಮೀನಿನ ಸುತ್ತಲೂ ಕಡಿಮೆ ಪರಿಶ್ರಮದಲ್ಲಿ ದೀರ್ಘಾವಧಿಯಲ್ಲಿ ಹೆಚ್ಚಿನ ಆದಯವನ್ನು ತಂದು ಕೊಡಬಲ್ಲಂತಹ ತೇಗದ ಮರಗಳನ್ನು ನೆಡುತ್ತಾನೆ.
ತನ್ನೂರಿನ ರೈತರುಗಳನ್ನು ಒಗ್ಗೂಡಿಸಿ ಪಾಳು ಬಿದ್ದಿದ್ದ ಭಾವಿ ಮತ್ತು ಕಲ್ಯಾಣಿ ಮತ್ತು ರಾಜ ಕಾಲುವೆಯನ್ನು ಸ್ವಜ್ಜಗೊಳಿಸಿದ ಪರಿಣಾಮ ಮಳೆಗಾಲದಲ್ಲಿ ಬಿದ್ದ ನೀರು ಪೋಲಾಗದೇ ಭಾವಿ, ಕಲ್ಯಾಣಿ ಮತ್ತು ಕೆರೆಯಲ್ಲಿ ಶೇಖರಣೆಯಾಗುತ್ತದೆ. ಅದೇ ರೀತಿ ಬಂಜರು ಭೂಮಿಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿದ ಕಾರಣ, ಬೆಂಗಾಡಾಗಿದ್ದಂತಹ ಅವರ ಊರು ಕೆಲವೇ ಕೆಲವು ವರ್ಷಗಳಲ್ಲಿ ನಿತ್ಯಹರಿದ್ವರ್ಣ ಕಾಡಿನಂತೆ ಹಚ್ಚ ಹಸಿರುನಿಂದ ಕಂಗೊಳಿಸಲಾರಂಭಿಸುತ್ತದೆ. ಕೃಷಿಯ ಜೊತೆ, ಹಣ್ಣು, ತರಕಾರಿ, ಹೈನುಗಾರಿಕೆ, ಜೇನು, ರೇಷ್ಮೇ, ಕುರಿ ಕೋಳಿಗಳ ಸಾಕಾಣಿಕೆಯನ್ನೂ ತನ್ನೂರಿನ ಜನರಿಗೆ ಪರಿಚಯಿಸಿದ್ದಲ್ಲದೇ, ತನಗಿದ್ದ ಸಂಪರ್ಕದಿಂದ ಕೃಷಿ ಮಾರುಕಟ್ಟೆಯನ್ನು ತಮ್ಮೂರಿನಲ್ಲೇ ಆರಂಭಿಸುವ ಮೂಲಕ ನೋಡ ನೋಡುತ್ತಿದ್ದಂತೆಯೇ ಅವರ ಊರು ಮಾದರಿ ಊರಾಗುವಂತೆ ಮಾಡಿದ್ದನ್ನು ಗಮನಿಸಿದ ಸರ್ಕಾರ ಮಹೇಶನಿಗೆ ಪ್ರಶಸ್ತಿಯನ್ನು ಪ್ರಕಟಿಸಿ ಅದನ್ನು ಅವರ ಊರಿನಲ್ಲೇ ಸಮಾರಂಭ ಏರ್ಪಡಿಸುತ್ತಾರೆ.
ಮಗನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಿಕ್ಕಿರಿದ ಜನಸಂದಣಿಯನ್ನು ಮುಂದಿನ ಸಾಲಿನಲ್ಲೇ ಕುಳಿತು ರಮೇಶ ಸಂಭ್ರಮಿಸುತ್ತಿರುತ್ತಾನೆ. ಮುಖ್ಯಮಂತ್ರಿಗಳು ಮಹೇಶನಿಗೆ ಪ್ರಶಸ್ತಿ ಪ್ರಧಾನ ಮಾಡಲು ಬಂದಾಗ ದಯವಿಟ್ಟು ಈ ಪ್ರಶಸ್ತಿಗೆ ನನಗಿಂತಲೂ ಅರ್ಹರಾದ ಮತ್ತೊಬ್ಬರು ಇಲ್ಲೇ ಇದ್ದಾರೆ. ಅವರಿಗೇ ಈ ಸನ್ಮಾನ ಮಾಡಬೇಕು ಎಂದಾಗ ಇಡೀ ಸಭೆಯಲ್ಲಿ ಒಂದು ಕ್ಷಣ ಮೌನಕ್ಕೆ ಜಾರಿ ಅವರು ಯಾರಿರಬಹುದು? ಎಂದು ಅಕ್ಕ ಪಕ್ಕ ನೋಡುತ್ತಿದ್ದಾಗ, ಮೌನವನ್ನು ಮುರಿದ ಮಹೇಶ ನನ್ನ ಈ ಏಳಿಗೆಗೆ ಕಾರಣೀಭೂತರಾದ ತನ್ನ ತಂದೆಯನ್ನು ವೇದಿಕೆಗೆ ಬರಲು ಕೇಳಿಕೊಂಡಾಗ, ಕುಳಿತಲ್ಲಿಂದಲೇ, ನಾನು ಬರುವುದಿಲ್ಲ ಎಂದು ಕೈ ಆಡಿಸಿದಾಗ ವೇದಿಕೆಯಿಂದ ದಡದಡನೆ ಕೆಳೆಗೆ ಇಳಿದ ಬಂದ ರಮೇಶ ತನ್ನ ತಂದೆ-ತಾಯಿಯ ಕಾಲಿಗೆ ನಮಸ್ಕರಿಸಿ, ಆನಂದ ಅಪ್ಪುಗೆಯನ್ನು ನೀಡಿ, ಕೈ ಹಿಡಿದು ಅವರನ್ನು ವೇದಿಕೆಯ ಮೇಲೆ ಕರೆತಂದು ಮುಖ್ಯಮಂತ್ರಿಗಳ ಕೈಯ್ಯಲ್ಲಿ ತನ್ನ ಪರವಾಗಿ ತನ್ನ ತಂದೆಯವರಿಗೇ ಸನ್ಮಾನ ಮಾಡಿಸಿದ್ದನ್ನು ಕಣ್ತುಂಬ ತುಂಬಿಕೊಂಡ ಮಹೇಶನ ತಾಯಿ, ಇಂತಹ ಮಗನನ್ನು ಕೊಟ್ಟು ತಮ್ಮ ಬದುಕನ್ನು ಸಾರ್ಥಕಗೊಳಿಸಿದ ಭಗವಂತನಿಗೆ ಮನಸ್ಸಿನಲ್ಲೇ ಸ್ಮರಿಸುತ್ತಾಳೆ.
ತಂದೆ ತಾಯಿಯರೇ, ಈ ಪ್ರಪಂಚದಲ್ಲಿ ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುವ ದೇವರುಗಳು. ಅಮ್ಮಾ ಜನ್ಮ ನೀಡಿ, ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿ ಮುನ್ನೆಲೆಯಲ್ಲಿ ಕಾಣಿಸಿಕೊಂಡರೆ, ಅದರ ಹಿಂದೆ ಎಲೆ ಮರೆಕಾಯಿಯಂತೆ, ಸ್ವಂತಕ್ಕೆ ಕಿಂಚಿತ್ತು, ಕುಟುಂಬಕ್ಕೆ ಇಡೀ ಸಂಪತ್ತು. ಪರೋಪಕಾರಾಯ ಇದಂ ಶರೀರಂ ಎಂದು ಕುಟುಂಬದ ಒಳಿತಿಗಾಗಿಯೇ ಕಾಯಾ ವಾಚಾ ಮನಸಾ ಜೀವಿಸುವ, ತನ್ನೆಲ್ಲಾ ಬಯಕೆಗಳೊಂದಿಗೆ ರಾಜಿಯಾಗದೆ, ಕುಟುಂಬದ ಬಯಕೆಗಳೊಂದಿಗೆ ಸದಾ ರಾಜಿಯಾಗುವ ರಾಜನಾದ ರಮೇಶನಂತಹ ಅಪ್ಪನಿಗೆ, ವಿಶ್ವ ಅಪ್ಪಂದಿರ ದಿನದಂದು ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸೋಣ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ