ಚರಣ್ ರಾಜ್

ದೂರದ ಬೆಳಗಾವಿಯ ಹುಡುಗ ಚಿತ್ರ ನಟನಾಗಬೇಕೆಂದು ಬೆಂಗಳೂರಿನ ಗಾಂಧಿನಗರದಲ್ಲಿ ಐದಾರು ವರ್ಷಗಳ ಕಾಲ ನಾನಾ ವಿಧದ ಕಷ್ಟ ಪಟ್ಟು ಸಣ್ಣ ಸಣ್ಣ ಪೋಷಕ ಪಾತ್ರಗಳ ಮೂಲಕ ಆರಂಭಿಸಿ ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿದ್ದ ಸಮಯದಲ್ಲಿಯೇ ತೆಲುಗು ಚಿತ್ರರಂಗದಲ್ಲಿ ಅಚಾನಕ್ಕಾಗಿ ಖಳನಾಯಕನಾಗಿ ಮಿಂಚಿ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗವಲ್ಲದೇ ಹಿಂದಿಯಲ್ಲೂ ಛಾಪು ಮೂಡಿಸಿದರು ಇಲ್ಲಿದೇ ನಮ್ಮನೇ ಅಲ್ಲಿ ಹೋದೆ ಸುಮ್ಮನೇ ಎನ್ನುವಂತೆ ಮತ್ತೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದು ಆಡು ಮುಟ್ಟದ ಸೂಪ್ಪಿಲ್ಲ ಇವರು ಮಾಡದ ಕೆಲಸವಿಲ್ಲ ಎನ್ನುವಂತೆ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿರುವ ನಮ್ಮ ಹೆಮ್ಮೆಯ ಕನ್ನಡಿಗ ಚರಣ್ ರಾಜ್ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ.

chaan2ಚರಣ್ ರಾಜ್ ಅವರು ದೂರದ ಬೆಳಗಾವಿ ಜಿಲ್ಲೆಯ ಬೊಮ್ಮಯಿ ಗ್ರಾಮದಲ್ಲಿನ ಸಾಮಿಲ್ ಮಾಲಿಕರೊಬ್ಬರ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೂ ಹಾಡು ನಟನೆಯಲ್ಲಿ ಚುರುಕಾಗಿದ್ದ ಚರಣ್ ಅವರು ತಮ್ಮ ಶಾಲಾದಿನಗಳಲ್ಲಿ ಶಾಲೆಯ ವಾರ್ಷಿಕೋತ್ಸವ ಅಥವಾ ಯಾವುದೇ ಸ್ಪರ್ಥೆಯಲ್ಲಿ ಭಾಗವಹಿಸಿದ್ದಾರೆ ಎಂದರೆ ಬಹುಮಾನ ಅವರಿಗೇ ಕಟ್ಟಿಟ್ಟ ಬುತ್ತಿ ಎನ್ನುವಷ್ಟರ ಮಟ್ಟಿಗೆ ಕೀರ್ತಿ ಪಡೆದಿರುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕಾಲೇಜಿಗೆ ಸೇರಿಕೊಂಡಾಗ ಅದೊಮ್ಮೆ ಗೆಳೆಯರೆಲ್ಲರೂ ನಿನಗೆ ನಾಯಕನಾಗುವ ಎಲ್ಲಾ ಅರ್ಹತೆ ಇರುವ ಕಾರಣ ನೀನೇಕೆ ಚಿತ್ರರಂಗದಲ್ಲಿ ನಟಿಸಲು ಪ್ರಯತ್ನಿಸಬಾರದು ಎಂದು ಹುರಿದುಂಬಿಸುತ್ತಿದ್ದಾಗ ಕುಚೋದ್ಯಕ್ಕೆಂದು ಗೆಳೆಯನೊಬ್ಬ ಈ ಮುಸುಡಿಗೆ ಯಾರು ಪಾತ್ರ ಕೊಡುತ್ತಾರೆ? ಎಂದು ಆಡಿಕೊಂಡಿದ್ದನ್ನೇ ಸವಾಲಾಗಿ ಸ್ವೀಕರಿಸಿ ಮನೆಯವರೆಲ್ಲರ ಮಾತುಗಳನ್ನೆಲ್ಲಾ ಧಿಕ್ಕರಿಸಿ ಅಪ್ಪನ ಸಾಮಿಲ್ ನಿಂದ 6000/-  ರೂಪಾಯಿಗಳನ್ನು ಕದ್ದು ಬೆಂಗಳೂರಿನ ಗಾಂಧಿನಗರಕ್ಕೆ ಬರುತ್ತಾರೆ.

ಕೂತು ತಿನ್ನುವವನಿಗೆ, ಕುಡಿಕೆ ಹೊನ್ನು ಸಾಲದು ಎನ್ನುವಂತೆ ಕೈಯ್ಯಲ್ಲಿ ಇದ್ದ ಹಣವೆಲ್ಲಾ ಖಾಲಿಯಾಗುತ್ತಾ ಹೋದಂತೆಲ್ಲಾ ಜೀವನಕ್ಕಾಗಿ ಸಂಜೆಯ ಹೊತ್ತು ಕ್ಯಾಬರೆ ಬಾರ್ ಗಳಲ್ಲಿ ಹಾಡುಗಳನ್ನು ಹಾಡುತ್ತಾ ಆರಂಭಿಸಿ ಬೆಂಗಳೂರಿನ ಅನೇಕ ಆರ್ಕೇಸ್ಟ್ರಾಗಳಲ್ಲಿ ಸಣ್ಣ ಪುಟ್ಟ ಸಭೆ ಸಮಾರಂಭಗಳು ಮದುವೆ ಮುಂಜಿಗಳಲ್ಲಿ ಹಾಡುತ್ತಾ, ಚಿಕ್ಕ ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಾ ಜೀವನ ನಡೆಸುತ್ತಿದ್ದರೂ ಗಮನವೆಲ್ಲಾ ಗಾಂಧಿನಗರದತ್ತವೇ ಇದ್ದು ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತದೆ. ಅದೃಷ್ಟವಷಾತ್ ತಮ್ಮ ರೂಂ ಮೇಟ್ ಅವರು ಸಿದ್ದಲಿಂಗಯ್ಯನವರು ತಮ್ಖ ಹೊಸಾ ಚಿತ್ರ ಪರಾಜಿತಕ್ಕೆ ನಟರ ಹುಡುಕಾಟದಲ್ಲಿದ್ದಾರೆ ಎಂಬುದನ್ನು ತಿಳಿದು ಅವರ ಮನೆಗೆ ಹೋಗಿ ತಮ್ಮ ಅಭಿನಯವನ್ನು ತೊರಿಸಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ಸಫಲವಾದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲೇ ಇಲ್ಲ.

ಆರಂಭದಲ್ಲಿ ಸಣ್ಣ ಪುಟ್ಟಪಾತ್ರಗಳಲ್ಲಿ ನಂತರ ಪೋಷಕನಾಗಿ ಆನಂತರ ಖಳನಾಯಕನಾಗಿ, ಹಲವಾರು ಸಿನಿಮಾಗಳಲ್ಲಿ ನಟಿಸಿದ ನಂತರ ಆಶಾ ಸಿನಿಮಾದ ಮೂಲಕ ನಾಯಕನಾಗಿ ಭಡ್ತಿ ಪಡೆದದ್ದಲ್ಲದೇ, ಆನಂತರ ಆಫ್ರಿಕಾದ ಶೀಲಾ, ಗಂಧದಗುಡಿ ಭಾಗ2, ಅಣ್ಣಾವ್ರ ಮಕ್ಕಳು, ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ.

charan4ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿರುವ ಸಮಯದಲ್ಲೇ ತೆಲುಗಿನಲ್ಲಿ ನಾಯಕ ನಟರಷ್ಟೇ ಖ್ಯಾತಿ ಪಡೆದಿದ್ದ ವಿಜಯಶಾಂತಿ ಅವರ ಪ್ರತಿಘಟನ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಕರೆ ಬಂದಾಗ ಆರಂಭದಲ್ಲಿ ಇಲ್ಲಿ ನಾಯಕನಾಗಿರುವಾಗ ಮತ್ತೊಂದು ಭಾಷೆಯ ಚಿತ್ರರಂಗದಲ್ಲಿ ಖಳನಟನಾಗಿ ಅಭಿನಯಿಸ ಬೇಕೇ? ಎಂಬ ಜಿಜ್ಞಾಸೆ ಮನದಲ್ಲಿ ಮೂಡಿದಾಗ ಕಲಾವಿದರಾದವರು ಕೇವಲ ಒಂದು ಪಾತ್ರಕ್ಕೇ ಮೀಸಲಾಗಿರದೇ ಎಲ್ಲಾ ಪಾತ್ರಗಳಲ್ಲೂ ಅಭಿನಯಿಸ ಬೇಕು ಎಂದು ನಿರ್ಧರಿಸಿ ಪರಭಾಷೆಯ ಚಿತ್ರದಲ್ಲೂ ಒಂದು ಕೈ ನೋಡೇ ಬಿಡೋಣ ಎಂದು ಪ್ರತಿಘಟನಾ ಚಿತ್ರದಲ್ಲಿ ನಟಿಸಿ, ಆ ಚಿತ್ರ ಯಶಸ್ವಿಯಗಿದ್ದೇ ತಡಾ ದಿನ ಬೆಳಗಾಗುವುದರೊಳಗೆ, ಚರಣ್ ರಾಜ್ ಆಂಧ್ರಾದ್ಯಂತ ಮನೆಮಾತಾಗಿದ್ದಲ್ಲದೇ, ಅವರ ಅದೃಷ್ಟ ಖುಲಾಯಿಸಿತು ಎಂದರೂ ತಪ್ಪಾಗದು. ಅ ಚಿತ್ರದ ಅವರ ನಟನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿದ ಮೇಲಂತೂ ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲೂ ಅವಕಾಶಗಳು ಹೇರಳವಾಗಿ ಸಿಗಲಾರಂಭಿಸಿತು.

chaan3ವಿಜಯಶಾಂತಿ ಅವರ ಬಹುತೇಕ ಚಿತ್ರಗಳಲ್ಲಂತೂ ಚರಣ್ ರಾಜ್ ಖಾಯಂ ನಟರಾಗಿದ್ದು. ನಮ್ ನಾಡು, ಗಡಿನಾಡು, ನೀತಿಕ್ಕು ತಂದನೈ ಮತ್ತು ಜಂಟಲ್ ಮ್ಯಾನ್  ಇಂದ್ರುಡು ಚಂದ್ರುಡು ಮತ್ತು ಕರ್ತವ್ಯಂ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾಗುತ್ತಿದ್ದಂತೆಯೇ ರಜನೀಕಾಂತ್ ಅಭಿನಯದ ಫೂಲ್ ಬನೆ ಅಂಗಾರೇ ,ವೀರ,ಧರ್ಮ ಡೋರಾಯ್ ಮುಂತಾದ ಹಿಂದೀ ಚಿತ್ರಗಳಲ್ಲಿಯೂ ಆಭಿನಯಿಸುವ ಮೂಲಕ ಬಹು ಬಾಷಾಭಾಷಾ ನಟರೆನಿಸಿಕೊಂಡರು. ಈ ಎಲ್ಲಾ ಭಾಷೆಗಳಲ್ಲಿಯೂ ಕೇವಲ ನಟನೆಯಷ್ಟೇ ಅಲ್ಲದೇ ಆಯಾಯಾ ಭಾಷೆಗಳನ್ನೂ ಕಲಿತು ಅವರ ಪಾತ್ರಗಳಿಗೆ ಅವರೇ ಡಬ್ ಮಾಡಿದ್ದದ್ದು ಗಮನಾರ್ಹವಾಗಿತ್ತು.

ಕೇವಲ ಅಭಿನಯಕ್ಕೆ ಮಾತ್ರವೇ ತಮ್ಮನ್ನು ತಾವು ಸೀಮಿತಗೊಳಿಕೊಳ್ಳದ ಚರಣ್ ರಾಜ್ , ಹಿನ್ನಲೆ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ನಿರ್ಮಾಪಕರಾಗಿ, ನಿರ್ದೇಶಕರಾಗಿದ್ದಲ್ಲದೇ, ಬರಹಗಾರರಾಗಿಯೂ ತಮ್ಮ ಛಾಪನ್ನು ಮೂಡಿಸುವ ಮೂಲಕ ಪ್ರಸ್ತುತ ತೆಲುಗು, ತಮಿಳು ಮತ್ತು ಮಳಯಾಳಂ ಭಾಷೆಯ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಬೇರೆ ಭಾಷೆಯಲ್ಲಿ ಎಷ್ಟೇ ಹೆಸರು ಮಾಡಿದರೂ ಸಮಯ ಸಿಕ್ಕಾಗಲೆಲ್ಲಾ ಚರಣ್ ರಾಜ್ ತಮ್ಮ ಕನ್ನಡ ಭಾಷೆಯ ಪ್ರೇಮದಿಂದಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಹಣವನ್ನು ಹಾಕಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಲ್ಲದೇ ಇತ್ತೀಚಿನ ರಾಜಾಹುಲಿ, ಟಗರು ಮುಂತಾದ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

chaan1ಚರಣ್ ರಾಜ್ ಅವರಂತೆಯೇ ಅವಾ ಮಗ ತೇಜ್ ರಾಜ್ ಕೂಡಾ ತನ್ನ ತಂದೆಯಂತೆಯೇ ತಮಿಳು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ತಮಿಳು ಚಿತ್ರ 90ml ಯಶಸ್ವಿಯಾಗುತ್ತಿದ್ದಂತೆಯೇ, ಇನ್ನೂ ಮೂರ್ನಾಲ್ಕು ತಮಿಳು ಸಿನಿಮಾದಲ್ಲಿ‌ ಬಣ್ಣ ಹಚ್ಚಿವ ಮೂಲಕ ಕೈ ತುಂಬಾ ಕೆಲಸವಿದ್ದರೂ, ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೇಮದಿಂದಾಗಿ ಭರತ ಬಾಹುಬಲಿ ಎಂಬ ಕನ್ನಡ‌ ಸಿನಿಮಾದಲ್ಲಿ ತೇಜ್ ರಾಜ್ ಅವರು ಕಾಣಿಸಿಕೊಂಡಿದ್ದಾರೆ.

charanಇನ್ನು ಕೊರೊನಾ ಸಮಯದಲ್ಲಿ ದಿನದ 24 ಗಂಟೆಯೂ ಪೌರ ಕಾರ್ಮಿಕರು, ವೈದ್ಯರು ಮತ್ತು ಪೊಲೀಸ್ ಇಲಾಖೆ ಜೊತೆಗೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಹೋಂ ಗಾರ್ಡ್​ಗಳು ಕೊರೊನಾ ವಾರಿಯರ್ಸ್​ಗಳಾಗಿ ಕೆಲಸ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಈ ಫ್ರೆಂಟ್‌ಲೈನ್ ವಾರಿಯರ್ಸ್​ಗಳಿಗೆ ಅನೇಕ ಸಿನಿಮಾ ತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರೆ, ಅವರ ಜೊತೆ ಚರಣ್ ರಾಜ್ ಅವರೂ ಸಹಾ ಕೈ ಜೋಡಿಸಿ, ಬೆಂಗಳೂರಿನ ಚಿಕ್ಕ ಜಾಲ, ಯಲಹಂಕ, ವಿದ್ಯಾರಣ್ಯಪುರ ಸೇರಿದಂತೆ ಹತ್ತು ಹಲವು ಪೊಲೀಸ್ ಠಾಣೆಗಳಿಗೆ ಸ್ವತಃ ಅವರೇ ತೆರಳಿ ಪೊಲೀಸ್ ಸಿಬ್ಬಂದಿಗೆ ಆಹಾರ ಕಿಟ್​ಗಳನ್ನು ವಿತರಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯೂ ನಗರದ 148 ಠಾಣೆಗಳಿಗೂ ತೆರಳಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಪೊಲೀಸರೂ ಕೂಡ ಮನುಷ್ಯರೇ. ಜನರು ಮಹಾಮಾರಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ, ಕೊರೊನಾ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಗೌರವನ್ನು ಕೊಟ್ಟು ಜನರೂ ಸಹಾ ತಮ್ಮ ತಮ್ಮ ಮನೆಯಿಂದ ಹೊರಬಾರದಂತೆ ಜನರನ್ನು ಕೋರಿಕೊಂಡಿದ್ದರು.

ಹೀಗೆ ಎಲ್ಲೇ ಇರು ಹೇಗೇ ಇರು, ಎಂದೆಂದಿಗೂ ಕನ್ನಡಾವಾಗಿರು ಎನ್ನುವಂತೆ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಹಿನ್ನಲೆ ಗಾಯಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿ ಭಾರತೀಯ ವಿವಿಧ ಚಿತ್ರರಂಗದಲ್ಲಿ ಮಿಂಚುತ್ತಿದ್ದರೂ, ತಮಗೆ ಮೊತ್ತ ಮೊದಲ ಬಾರಿಗೆ ಅಭಿನಯಿಸಲು ಅವಕಾಶ ಕೊಟ್ಟ ಶ್ರಿ ಸಿದ್ದಲಿಂಗಯ್ಯನವರನ್ನು ತಮ್ಮ ಗಾಡ್ ಫಾದರ್ ಎಂದು ಹೇಳಿಕೊಳ್ಳುತ್ತಲೇ, ಕನ್ನಡದ ತನ ಮತ್ತು ಕನ್ನಡದ ಕಂಪನ್ನು ದೇಶಾದ್ಯಂತ ತನ್ನ ಚಿತ್ರಗಳಲ್ಲಿ ಎತ್ತಿ ಮೆರೆಸುತ್ತಿರುವ ಕನ್ನಡಕ್ಕೆ ಗೌರವವನ್ನು ತಂದು ಕೊಟ್ಟಿರುವ ಚರಣ್ ರಾಜ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?
ನಿಮ್ಮವನೇ ಉಮಾಸುತ

ಇಂದಿನ ಯುವ ಜನತೆಯ ಆದ್ಯತೆ ಮತ್ತು ಆದರ್ಶಗಳು

ಕಳೆದ ಒಂದೂವರೆ ವರ್ಷದಿಂದ  ಇಡೀ ಪ್ರಪಂಚದ ಆರ್ಥಿಕ ಪರಿಸ್ಥಿತಿ ಕರೋನಾದಿಂದಾಗಿ ಕೆಟ್ಟುಕೆರ ಹಿಡಿದು ಹೋಗಿರುವ ಸಂಗತಿ  ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ.  ಇದರ ಪರಿಣಾಮದಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿ ಅಧೋಗತಿ ತಲುಪಿರುವುದನ್ನೇ ಎತ್ತಿ ತೋರಿಸುತ್ತಾ, ಜನರಿಗೆ ಎರಡು ಹೊತ್ತು ಊಟ ಸಿಗುತ್ತಿಲ್ಲ ಈ ಸರ್ಕಾರ ಏನು ಮಾಡ್ತಾ ಇದೇ? ಎಂದು  ಜನರನ್ನು ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿ ಅವರ ದಿಕ್ಕು ತಪ್ಪಿಸುವ ಕಾರ್ಯದಲ್ಲಿರುವಾಗಲೇ  ಈ ವಾರ ಬಹುನಿರೀಕ್ಷಿತವಾಗಿದ್ದ ಎರಡು ಸುಪ್ರಸಿದ್ಧ ನಾಯಕರುಗಳ ಸಿನಿಮಾ ಬಿಡುಗಡೆಯಾಗಿದೆ.  ಬಿಡುಗಡೆಯಾದ ಎರಡೇ ದಿನಗಳಲ್ಲಿಯೇ ಕೋಟಿ ಕೋಟಿ ರೂಪಾಯಿಗಳನ್ನು ಬಾಚಿಕೊಂಡ ಸುದ್ದಿಯನ್ನು ಮಾಧ್ಯಮದವರು ತೋರಿಸುತ್ತಿದ್ದಾರೆ.

ನಮ್ಮ ದೇಶದಲ್ಲಿ ಉನ್ನತ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು, ಅಧಿಕಾರಿಗಳು ಮುಂತಾದವರು ವರ್ಷಕ್ಕೆ  30-40 ಲಕ್ಷ  ಅದಕ್ಕಿಂತ ಸ್ವಲ್ಪ ಹೆಚ್ಚು ಎಂದರೆ 50-60 ಲಕ್ಷ  ರೂಪಾಯಿಗಳಷ್ಟು ಪಡೆಯುತ್ತಾರೆ. ಆದರೆ ಅದೇ ಈ ದೇಶದಲ್ಲಿ ಚಲನಚಿತ್ರ ನಟ ನಟಿಯರು ಪ್ರತಿ ಚಿತ್ರಕ್ಕೂ ಕೋಟ್ಯಾಂತರ ಹಣವನ್ನೇ ಪಡೆಯುತ್ತಾ, ವರ್ಷಕ್ಕೆ 10 ಕೋಟಿಯಿಂದ 100 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ.  ಆದರೆ ಆ ಹಣವನ್ನು ಏನು ಮಾಡ್ತಾರೆ? ಎನ್ನುವುದೇ ಇದುವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ  ದೇಶದ ಅಭಿವೃದ್ಧಿಗೆ ಈ ನಟಿಯರ ಕೊಡುಗೆ  ಏನು? ಅಷ್ಟು ದುಡಿದರೂ ಸರಿಯಾಗಿ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಯತ್ನಿಸುವುದು ವಿಪರ್ಯಾಸವೇ ಸರಿ. ಈ ನಟ ನಟಿಯರು  ಒಂದು ವರ್ಷ ಗಳಿಸುವಷ್ಟು ಹಣವನ್ನು ದೇಶದ ಉನ್ನತ ವಿಜ್ಞಾನಿಗಳಿಸಲು ತಮ್ಮ ಜೀವಮಾನವನ್ನು ಕೆಲಸ ಮಾಡ ಬೇಕಾದರೆ ಇನ್ನು ಸಾಮಾನ್ಯ ವ್ಯಕ್ತಿ ಅಷ್ಟೊಂದು ಹಣ ಗಳಿಸಲು 100 ವರ್ಷಗಳಾದರು ಆಗುತ್ತದೆ ಎಂದರೂ ಅತಿಶಯವಲ್ಲ.

tukde_gangಇತ್ತಿಚಿನ ವರ್ಷಗಳಲ್ಲಿ ನಮ್ಮ ದೇಶದ ಯುವ ಜನತೆಯನ್ನು ಆಕರ್ಷಿಸುತ್ತಿರುವ  ಮೂರು ಕ್ಷೇತ್ರಗಳೆಂದರೆ,  ಸಿನಿಮಾ, ಕ್ರಿಕೆಟ್ ಮತ್ತು ರಾಜಕೀಯ. ಇದಕ್ಕೆ ಮುಖ್ಯ ಕಾರಣ ಈ ಮೂರೂ  ಕ್ಷೇತ್ರಗಳಲ್ಲಿ ದೊರೆಯುವ ಕೀರ್ತಿ, ಪ್ರತಿಷ್ಠೆ ಮತ್ತು ಹಣ.  ಹಾಗಾಗಿ ಈ ಮೂರು ಕ್ಷೇತ್ರಗಳು ಇಂದಿನ ಆಧುನಿಕ ಯುವಕರ ಅದ್ಯತೆಗಳಾಗಿರುವುದು ನಿಜಕ್ಕೂ ವಿಪರ್ಯಾಸ. ಹಾಗಾಗಿಯೇ ಈ ಮೂರೂ ಕ್ಷೇತ್ರಗಳಲ್ಲಿರುವವರು ಇಂದು  ದೇಶ ಮತ್ತು ಸಮಾಜಕ್ಕೆ ನಿಷ್ಪ್ರಯೋಜಕರಾಗಿದ್ದಾರೆ ಎಂದರೂ ತಪ್ಪಾಗದೇನೋ?

ಸಿನಿಮಾ ರಂಗದಲ್ಲಿ ಪ್ರತಿಷ್ಟೆ ಗಳಿಸುತ್ತಿದ್ದಂತೆಯೇ, ಮಾದಕ ದ್ರವ್ಯ,  ಮತ್ತು ವೇಶ್ಯಾವಾಟಿಕೆಯಾದರೆ,  ಕ್ರಿಕೆಟ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಜೊತೆಗೆ ಗೂಂಡಾಗಿರಿಯಾದರೇ  ರಾಜಕೀಯದಲ್ಲಿಯೂ ಗೂಂಡಾಗಿರಿ ಮತ್ತು ಭ್ರಷ್ಟಾಚಾರ ತಾಂಡಾವವಾಡುತ್ತಿದೆ. ಈ ರೀತಿಯ ಕುಕೃತ್ಯಗಳ ಹಿಂದೆ ಆವರು ಗಳಿಸುವ ಹಣವನ್ನು ಹೇಗೆ ಖರ್ಚು ಮಾಡುವುದು ಎಂಬುದರ ಪರಿವಿಲ್ಲದಿರುವುದು ಒಂದು ಕಾರಣವಾಗಿದೆ ಎನ್ನಬಹುದೇನೋ? ಇಂತಹವರನ್ನು  ಉದ್ಧಾರ ಮಾಡಲು ನಾವು ಬೆವರು ಸುರಿಸಿದ ಹಣವನ್ನು ಖರ್ಚು ಮಾಡುವುದು  ಒಂದು ರೀತಿಯ ಮೂರ್ಖತನದ ಪರಮಾವಧಿಯೇನೋ?

sachinನಿಜ ಹೇಳಬೇಕೆಂದರೆ, 70-80 ವರ್ಷಗಳ ಹಿಂದಿನ ಸುಪ್ರಸಿದ್ಧ ನಟರು ತಿಂಗಳು ಸಂಬಳಕ್ಕೆ ಅಭಿನಯಿಸುತ್ತಿದ್ದರು.   30-40 ವರ್ಷಗಳ ಹಿಂದಿನ ಕ್ರಿಕೆಟಿಗರ ಗಳಿಕೆ ಈಗಿನ ಫಸ್ಟ್ ಕ್ಲಾಸ್ ಆಟಗಾರರು ಗಳಿಸುವುದಕ್ಕಿಂತಲೂ ಕಡಿಮೆ ಗಳಿಸುತ್ತಿದ್ದರು.  ವಿದೇಶಗಳಿಗೆ ಹೋದಾಗ ಈಗಿನಂತೆ ಐಶಾರಾಮ್ಯ ಹೋಟೆಲ್ಲಿನ  ಬದಲಾಗಿ ರೈಲ್ವೇ ಕೋಚಿನಲ್ಲಿಯೇ ಉಳಿದುಕೊಂಡ ಉದಾಹರಣೆಯೂ ಇದೆ. ಇನ್ನು 30-40 ವರ್ಷಗಳ ಹಿಂದಿನ ರಾಜಕಾರಣಿಗಳು ನಿಸ್ವಾರ್ಥ ಸೇವೆಗೆ ಖ್ಯಾತರಾಗಿದ್ದರೇ ಹೊರತು  ಖಂಡಿತವಾಗಿಯೂ  ಈಗಿನಷ್ಟು ಲೂಟಿಯಂತೂ ಇರಲಿಲ್ಲ.

sankayduttಕೆಲ ವರ್ಷಗಳ ಹಿಂದಿನವರೆಗೂ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳ ಮೇಲೆ ನಮ್ಮವರಿಗೆ ಎಲ್ಲರಿಗೂ ಅಪಾರವಾದ ನಂಬಿಕೆ ಇತ್ತು. ನಮ್ಮ ಆಚಾರ ವಿಚಾರಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಹೋಗುತ್ತಿದ್ದರು.   ಚಲನಚಿತ್ರಗಳಲ್ಲಿ ಅಸಭ್ಯ ಮತ್ತು ಅನಾಗರೀಕವಾದ ವಿಷಯಗಳನ್ನು ತೋರಿಸುತ್ತಿರಲಿಲ್ಲ. ಕ್ರಿಕೆಟಿಗರು ಮತ್ತು ರಾಜಕಾರಣಿಗಳು ಇಷ್ಟೊಂದು ಸೊಕ್ಕಿನಿಂದ ಇರುತ್ತಿರಲಿಲ್ಲ. ದುರಾದೃಷ್ಟವಷಾತ್  ಇಂದು ಅದೇ ಚಿತ್ರ ನಟರು, ಕ್ರಿಕೆಟಿಗರು ಮತ್ತು ರಾಜಕಾರಣಿಗಳನ್ನು ದೇವರನ್ನಾಗಿಸಿ ಅವರನ್ನು ಆರಾಧಿಸುವ ಬೌದ್ಧಿಕ ದಿವಾಳಿತನದವರೇ ಹೆಚ್ಚಾಗಿದ್ದಾರೆ.

ನಿಧಾನವಾಗಿ ಅವರೆಲ್ಲರೂ ನಮ್ಮನ್ನು ದೋಚಲು ಆರಂಭಿಸಿದರೆ ನಮಗೆ ಗೊತ್ತಿಲ್ಲದಂತೆಯೇ ಸಂತೋಷದಿಂದ ನಾವುಗಳು ಅವರ ಅಂಧಾಭಿಮಾನಿಗಳಾಗಿಯೋ ಇಲ್ಲವೇ  ಹಿಂಬಾಲಕರಾಗಿ ಒಂದಿ ರೀತಿಯ  ಮಾಫಿಯಾದ ಹಿಡಿತದಲ್ಲಿ ಸಿಕ್ಕಿಹಾಕಿಕೊಳ್ಳುವ ಹಾಗೆ ಸಿಕ್ಕಿಕೊಳ್ಳುವ ಮೂಲಕ, ನಮ್ಮ, ನಮ್ಮ ಮಕ್ಕಳ ಮತ್ತು ನಮ್ಮ ದೇಶದ ಭವಿಷ್ಯವನ್ನು ನಾಶ ಮಾಡುತ್ತಿರುವುದಲ್ಲದೇ ನಮ್ಮೆಲ್ಲರ ಶ್ರಮವೆಲ್ಲವನ್ನೂ ವ್ಯರ್ಥಗೊಳಿಸುತ್ತಿದ್ದೇವೆ.

hochinಅದೊಮ್ಮೆ ವಿಯೆಟ್ನಾಂ ಅಧ್ಯಕ್ಷರಾಗಿದ್ದ ಹೋ-ಚಿ-ಮಿನ್ಹ್ ಭಾರತಕ್ಕೆ ಬಂದಿದ್ದಾಗ.  ಭಾರತೀಯ ಮಂತ್ರಿಗಳೊಂದಿಗೆ ಮಾತನಾಡುತ್ತಾ, ನೀವೇನು ಮಾಡಿಕೊಂಡಿದ್ದೀರಿ? ಎಂದು ವಿಚಾರಿಸಿದಾಗ ನಮ್ಮ ಮಂತ್ರಿಗಳೊಬ್ಬರು, ನಾವು ರಾಜಕೀಯ ಮಾಡಿಕೊಂಡಿದ್ದೇವೆ ಎಂದು ಉತ್ತರಿಸಿದರಂತೆ.

ಮಂತ್ರಿಗಳ ಉತ್ತರದಿಂದ ವಿಚಲಿತರಾದ  ವಿಯಟ್ನಾಂ ಅಧ್ಯಕ್ಷರು ಮತ್ತೊಮ್ಮೆ ನೀವೇನು ಕೆಲಸ ಮಾಡುತ್ತಿದ್ದೀರೀ? ಎಂದು ಬಿಡಿಸಿ ಕೇಳಿದಾಗಲೂ, ರಾಜಕೀಯವೇ ನಮ್ಮ ವೃತ್ತಿ ಎಂದರಂತೆ ನಮ್ಮ ಮಂತ್ರಿಗಳು.

hochin2ಮಂತ್ರಿಗಳ  ಈ ರೀತಿಯ ಉತ್ತರದಿಂದ ಸ್ವಲ್ಪ ಸಿಟ್ಟಾದ ಹೋ-ಚಿ-ಮಿನ್ಹ್ ಬಹುಶಃ ನೀವು ನನ್ನ ಪ್ರಶ್ನೆಯನ್ನು ಅರ್ಥವನ್ನು ಅರ್ಥಮಾಡಿಕೊಂಡಿಲ್ಲ ಎನಿಸುತ್ತದೆ  ನಾನೂ ಸಹಾ ರಾಜಕೀಯವನ್ನೂ ಮಾಡುತ್ತೇನೆ. ಆದರೆ ವೃತ್ತಿಯಲ್ಲಿ ನಾನು ಕೃಷಿಕ ಮತ್ತು ಜೀವನೋಪಾಯಕ್ಕಾಗಿ  ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಕ್ಕಲುತನವನ್ನು ನಿಷ್ಠೆಯಿಂದ ಮಾಡುತ್ತೇನೆ. ಹಗಲಿನಲ್ಲಿ ನಮ್ಮ ದೇಶದ ರಾಷ್ಟ್ರಪತಿಯಾಗಿ ದೇಶದ ಜವಾಬ್ದಾರಿಯನ್ನು ಹೊರುತ್ತೇನೆ  ಎಂದಾಗ ನಮ್ಮ ದೇಶದ ನಿಯೋಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಂತೆ.

ಅಮೇರಿಕಾವೂ ಸೇರಿದಂತೆ  ಅದೆಷ್ಟೋ ದೇಶಗಳ  ಅಧ್ಕಕ್ಷರು ಮತ್ತು ಪ್ರಧಾನಿಗಳು ತಮ್ಮ ಅಧಿಕಾರಧ ಅವಧಿ ಮುಗಿದ ನಂತರ ಜೀವನೋಪಾಯಕ್ಕಾಗಿ ಮಾಜೀ ಅಧ್ಯಕ್ಷರು ಎನ್ನುವ ಹಮ್ಮು ಬಿಮ್ಮು ಇಲ್ಲದೇ, ಯಾವುದೋ ಒಂದು ಕೆಲಸವನ್ನು ಮಾಡುವುದನ್ನು ನೋಡಬಹುದಾಗಿದೆ. ದುರಾದೃಷ್ಟವಷಾತ್ ನಮ್ಮ ದೇಶದಲ್ಲಿ ಒಂದು ಪಂಚಾಯಿತಿ ಸದಸ್ಯರೋ ಇಲ್ಲವೇ ನಗರ ಪಾಲಿಕೆ ಸದಸ್ಯರಾದರೂ ಸಾಕೂ ತಮ್ಮ ಮುಂದಿನ ಹತ್ತಾರು ತಲೆಮಾರಿಗೆ ಆಗುವಷ್ಟು ಅಕ್ರಮ ಆಸ್ತಿಗಳನ್ನು ಸಂಪಾದನೆ ಮಾಡುವುದು ನಿಜಕ್ಕೂ ಛೇಧಕರವೇ ಸರಿ. ಕಲ ವರ್ಷಗಳ ಹಿಂದಿನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕೆ ರಾಜಕೀಯವನ್ನೇ ಆಶ್ರಯಿಸಿರುವುದಲ್ಲದೇ, ಈಗ ಅವರ  ಸಂಖ್ಯೆ ಕೋಟಿಗಳಿಗಿಂತಲು ಅಧಿಕವಾಗಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿಯಾಗಿದೆ.

cinimaಕೆಲವೇ ತಿಂಗಳುಗಳ ಹಿಂದೆ, ಕರೋನಾದಿಂದ ಇಡೀ ದೇಶದಲ್ಲಿ ತಿನ್ನಲು  ಆಹಾರವೇ ಇಲ್ಲ, ಲಸಿಕೆ ಇಲ್ಲಾ  ಎಂದು ಎಲ್ಲವನ್ನು ಸರ್ಕಾರವೇ ಉಚಿತವಾಗಿ ಕೊಡಬೇಕು ಎಂದು ಗೀಳಿಡುತ್ತಿದ್ದವರೇ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತೆ ಇಂದು ತಮ್ಮ ನೆಚ್ಚಿನ ನಾಯಕರುಗಳ ಸಿನಿಮಾ ಟಿಕೆಟ್ಟಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲು ಸಿದ್ದರಿದ್ದಾರೆ ಎಂದರೆ ನಮ್ಮ ಇಂದಿನ ಯುವ ಜನತೆಯ ಆದ್ಯತೆಗಳು ಮತ್ತು ಆದರ್ಶಗಳು ಬದಲಾಗುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹಣೆಯಾಗಿದೆ.

block_cicketsಹಾಗೆ  ಟಿಕೆಟ್ ಸಿಗಲಿಲ್ಲ ಎಂದು ಬ್ಲಾಕ್ ಟಿಕೇಟ್ ತೆಗೆದುಕೊಂಡು ನೋಡುತಿದ್ದರೆ, ಇನ್ನೂ ಕೆಲವರು ಬ್ಲಾಕ್ ಟಿಕೇಟ್ ಸಹಾ ಸಿಗಲಿಲ್ಲ  ಎಂದು ಥಿಯೇಟರ್ ಮುಂದೆ ಥರಣಿ ನಡೆಸಿದ ಉದಾರಣೆಯನ್ನೂ  ಅದೇ ಮಾಧ್ಯಮದವರು ತೋರಿಸುತ್ತಿದ್ದಾರೆ.  ಹಾಗಾದರೆ ತಿನ್ನಲು ಆಹಾರವಿಲ್ಲ ಎಂದು ಜನರು ಹಸಿವಿನಿಂದ ಸಾಯುತ್ತಿದ್ದಾರೆ ಎಂದರೆ,  ಒಬ್ಬ ನಾಯಕ ನಟನ ಸಿನಿಮಾಕ್ಕೆ ನೂರಾರು ರೂಪಾಯಿಗಳನ್ನು  ಖರ್ಚು ಮಾಡಲು ಹಣ ಎಲ್ಲಿಂದ ಬರುತ್ತದೆ?  ಎಂದು ಯಾರಾದರೂ ಹೇಳಲು ಸಾಧ್ಯವೇ?

ಇಂದಿನ ಯುವ ಜನತೆಗೆ ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣತಜ್ಞರು ಆದರ್ಶವಲ್ಲ. ಬದಲಾಗಿ ಸಿನಿಮಾ  ನಟರು, ರಾಜಕಾರಣಿಗಳು ಮತ್ತು ಕ್ರಿಕೆಟ್ ಆಟಗಾರರು  ಆದರ್ಶ ಮತ್ತು  ಆದ್ಯತೆಗಳಾಗುತ್ತಿದ್ದಾರೆ  ಯಾವ ದೇಶದಲ್ಲಿ ಇಂತಹ ಬೌದ್ಧಿಕ ದೀವಾಳಿತನ ಹೆಚ್ಚುತ್ತದೆಯೋ ಅಂತಹ ದೇಶ ಖಂಡಿತವಾಗಿಯೂ ಎಂದಿಗೂ ಪ್ರಗತಿಯಾಗುವುದಿಲ್ಲ. ಅಂತಹ ದೇಶವು ಸಾಂಸ್ಕೃತಿಕವಾಗಿ, ಕಾರ್ಯತಂತ್ರವಾಗಿ ದೇಶವು ಹಿಂದುಳಿಯುವುದಲ್ಲದೇ  ಅಂತಹ ದೇಶಗಳ  ಏಕತೆ ಮತ್ತು ಸಮಗ್ರತೆಯು ಯಾವಾಗಲೂ ಅಪಾಯದಲ್ಲಿರುತ್ತದೆ.

ಈ ರೀತಿಯಾಗಿ ಅನಗತ್ಯ ಮತ್ತು ಅಪ್ರಸ್ತುತ ವಲಯದ ಪ್ರಾಬಲ್ಯವು ಬೆಳೆಯುತ್ತಿರುವ ದೇಶವು  ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತದೆ ಮತ್ತು ಅಂತಹ  ದೇಶಗಳಲ್ಲಿ ಭ್ರಷ್ಟರು ಮತ್ತು ದೇಶವಿರೋಧಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಅಂತಹ ದೇಶದಲ್ಲಿ  ಪ್ರಾಮಾಣಿಕರು ಬದುಕಲು ನಿಜಕ್ಕೂ ಬವಣೆ ಪಡಬೇಕಾಗುತ್ತದೆ.

youthಹಾಗಂದ ಮಾತ್ರಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಟ್ಟವರೇ ಇದ್ದಾರೆ ಎನ್ನುವಂತಿಲ್ಲ ಅಲ್ಲಿಯೂ ಕೆಲವು ಒಳ್ಳೆಯ ಜನರಿದ್ದಾರೆ. ಅಂತಹ ವ್ಯಕ್ತಿ ಮತ್ತು ವ್ಯಕ್ತಿತ್ವ ನಮಗೆ  ಸದಾಕಾಲವೂ  ಗೌರವವಿದೆ. ಹಾಗಾಗಿ ಅಂತಹ  ಪ್ರತಿಭಾವಂತರು, ಪ್ರಾಮಾಣಿಕರು, ನಿಸ್ವಾರ್ಥ  ಆತ್ಮಸಾಕ್ಷಿಯುಳ್ಳ  ಸಮಾಜ ಸೇವಕರು, ನಿಜವಾದ ದೇಶಭಕ್ತ ಹೋರಾಟಗಾರು, ಸ್ವಾರ್ಥವಿಲ್ಲದೇ ದೇಶಕ್ಕಾಗಿ ಆಡುವ ಆಟಗಾರು ಮತ್ತು ಸ್ವಾರ್ಥ ಕಡಿಮೆ ಸಮಾಜಕ್ಕೆ ಸರ್ವಸ್ವ ಎನ್ನುವಂತಹ, ಪರೋಪಕಾರಾಯ ಇದಂ ಶರೀರಂ ಎಂದು ಮತ್ತೊಬ್ಬರ ಸಹಾಯಕ್ಕೆ ತುಡಿಯುವಂತಹ ಮನಸ್ಸುಳ್ಳವರನ್ನು ಬೆಳಸುವಂತಹ ವಾತಾವರಣವನ್ನು ಸೃಷ್ಟಿಸುವ ಗುರುತರವಾದ ಜವಾಬ್ಧಾರಿಯು ನಮ್ಮ ನಿಮ್ಮೆಲ್ಲರ ಮೇಲಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ್ದ  ಆಂಗ್ಲ ಸಂದೇಶವೊಂದರಿಂದ ಪ್ರೇರಿತವಾದ ಲೇಖನವಾಗಿದೆ.