ರಕ್ಷಾ ಬಂಧನ

ನಮ್ಮ ದಕ್ಷಿಣ ಭಾರತದಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ವೃದ್ಧಿಸುಸುವ ಅಥವಾ ಬಲಪಡಿಸುವ ಉದ್ದೇಶದಿಂದ ನಾಗರಪಂಚಮಿಯನ್ನು ಅಚರಿಸಿದರೆ ಭಾರತ ಉಳಿದ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

ಈ ರಕ್ಷಾ ಬಂಧನದ ಆಚರಣೆಯ ಹಿಂದೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆಯೂ ಇದೆ. ಬಲಿ ಚಕ್ರವರ್ತಿಯನ್ನು ಬಲಿ ತೆಗೆದುಕೊಳ್ಳುವ ಸಲುವಾಗಿ ಮಹಾವಿಷ್ಣು ವಾಮನ ರೂಪದಲ್ಲಿ ಬಂದು ಮೂರು ಹೆಜ್ಜೆಗಳ ಪ್ರದೇಶವನ್ನು ದಾನವಾಗಿ ಪಡೆದು ತ್ರಿವಿಕ್ರಮನಾಗಿ ಮೊದಲ ಹೆಜ್ಜೆ ಇಡೀ ಭೂಮಂಡಲವನ್ನು ಆಕ್ರಮಿಸಿದರೆ, ಎರಡನೇ ಹೆಜ್ಜೆ ಆಕಾಶಲೋಕವನ್ನು ಆಕ್ರಮಿಸಿ ಮೂರನೇ ಹೆಜ್ಜೆ ಎಲ್ಲಿ ಇಡುವುದು ಎಂಬ ಜಿಜ್ಞಾಸೆ ಕಾಡಿದಾಗ, ಬಂದಿರುವುದು ಸಾಮಾನ್ಯ ವಟುವಲ್ಲ ಎಂಬುದರ ಅರಿವಾಗಿ ನನ್ನ ತಲೆಯಮೇಲೆ ಇಡಿ ಎಂಬು ಬಲಿ ಚಕ್ರವರ್ತಿ ಪ್ರಾರ್ಥಿಸಿಕೊಂಡಾಗ ವಾಮನ ಬಲಿಯ ತಲೆಯ ಮೇಲೆ ತನ್ನ ಪಾದವನ್ನಿಟ್ಟು, ಪಾತಾಳ ಲೋಕಕ್ಕೆ ತುಳಿಯಲ್ಪಟ್ಟರೂ ತನ್ನ ಧಮ೯ವನ್ನು ಬಿಡದ ಬಲಿರಾಜನನ್ನು ಮೆಚ್ಚಿದ ವಿಷ್ಣುಪತ್ನಿ ಲಕ್ಷ್ಮೀಯು

ಏನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ|
ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ||

ಅಂದರೆ ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಕ್ಷೆಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಕ್ಷೆಯೇ, ನೀನು ವಿಚಲಿತಳಾಗಬೇಡ, ವಿಚಲಿತಳಾಗಬೇಡ.

ಎಂಬ ಆಶಯದಿಂದ ಬಲಿ ಚಕ್ರವರ್ತಿಯ ಕೈಗೆ ರಕ್ಷ್ನೆಯನ್ನು ಕಟ್ಟುವ ಮೂಲಕ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡ ದಿನವೇ ಶ್ರಾವಣ ಹುಣ್ಣಿಮೆಯಾಗಿತ್ತು ಹಾಗಾಗಿ ಅಂದಿನಿಂದ ಅಣ್ಣ ತಂಗಿಯರ ಅನುಬಂಧ ಬೆಸೆಯುವ ಈ ರಕ್ಷಾ ಬಂಧನದ ಆಚರಣೆ ಆರಂಭವಾಯಿತು ಎಂಬ ಪ್ರತೀತಿ ಇದೆ.

rakhi4

ರಕ್ಷೆ ಕಟ್ಟುವುದು ಕೇವಲ ಅಣ್ಣ ತಂಗಿಯರಷ್ಟೇ ಅಲ್ಲದೇ ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದು ಒಳ್ಳೆಯ ಕಾರ್ಯಗಳನ್ನು ಮಾಡುವ ಮುನ್ನಾ ಕಂಕಣ ಕಟ್ಟಿಸಿಕೊಂಡು ಆ ಕಂಕಣಕ್ಕೆ ಕಟಿ ಬದ್ದನಾಗಿ ಕಾರ್ಯವನ್ನು ನಿರ್ವಹಿಸಿ ಕೆಲಸವನ್ನು ಯಶಸ್ವಿಗೊಳಿಸಲು ಸದಾ ಎಚ್ಚರಿಸುವ ಸಂಕೇತವೇ ಈ ರಕ್ಷೆಯಾಗಿರುತ್ತದೆ ಎಂದರೂ ತಪ್ಪಾಗಲಾರದು.

ಅದಕ್ಕೆ ಪುರಾವೆಯಂತೆ ದೇವರು ಮತ್ತು ದಾನವರ ನಡುವೆ ಸುಮಾರು 12 ವರ್ಷಗಳ ಕಾಲ ನಿರಂತರವಾಗಿ ಯುದ್ಧ ನಡೆದು, ದೇವತೆಗಳ ರಾಜ ಇಂದ್ರನಿಗೆ ಸೋಲುಂಟಾಗಿ ಮೂರು ಲೋಕಗಳೂ ರಾಕ್ಷಸರ ಪಾಲಾಗುತ್ತದೆ. ಯುದ್ದದ ಸೋಲನ್ನು ಅರಗಿಸಿಕೊಳ್ಳದ ಇಂದ್ರ ತಮ್ಮ ಗುರುಗಳಾದ ಬೃಹಸ್ಪತಿಯವರ ಬಳಿ ಬಳಿಗೆ ಹೋಗಿ ಸಲಹೆ ಕೇಳಿದಾಗ ಇದೇ ಶ್ರಾವಣ ಮಾಸದ ಹುಣ್ಣಿಮೆಯಂದು ಕೆಲವು ಬೀಜಮಂತ್ರಗಳನ್ನು ಬೋಧಿಸಿ, ಇಂದ್ರ ಪತ್ನಿ ಶಚಿ(ಇಂದ್ರಾಣಿ), ಇಂದ್ರನ ಬಲಗೈ ಮಣಿಕಟ್ಟಿನ ಮೇಲೆ ಕಂಕಣ ಕಟ್ಟುತ್ತಾಳೆ. ಆ ಕಂಕಣದ ರಕ್ಷೆ ಮತ್ತು ಮಂತ್ರಗಳ ಅಶೀರ್ವಾದಿಂದ ಪುನಃ ದಾನವರ ಮೇಲೆ ದಂಡೆತ್ತಿ ಹೋದ ಇಂದ್ರ ತಾನು ಕಳೆದುಕೊಂಡಿದ್ದ ಎಲ್ಲಾ ರಾಜ್ಯಗಳನ್ನೂ ಮರಳಿ ಪಡೆಯುತ್ತಾನೆ ಎಂಬುದು ಪುರಾಣದಲ್ಲಿ ತಿಳಿದು ಬರುತ್ತದೆ.

ಇನ್ನು ಇತಿಹಾಸವನ್ನು ನೋಡುತ್ತಾ ಹೋದರೆ, ಇಡೀ ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನು ಸಿಂಧೂ ನದಿಯ ತಟದಲ್ಲಿ ಪುರೂರವನನ್ನು ಎದುರಿಸಿ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ ಪುರೂರವನ ಕೈ ಮೇಲಾಗುತ್ತಿದ್ದದ್ದನ್ನು ಗಮನಿಸಿದ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಇಲ್ಲಿಯ ಸಂಪ್ರದಾಯದಂತೆ ತನ್ನ ಪತಿಯನ್ನು ಯುದ್ದದಲ್ಲಿ ಕೊಲ್ಲದಿರುವಂತೆ ಮನವಿ ಯೊಂದಿಗೆ ಪುರೂರವನಿಗೆ ರಾಖಿಯನ್ನು ಕಳುಹಿಸುತ್ತಾಳೆ. ಅದಕ್ಕೆ ರೊಕ್ಸಾನಳನ್ನು ತನ್ನ ಸಹೋದರಿ ಎಂದು ಭಾವಿಸಿ ಅವಳು ಕಳುಹಿಸಿದ ರಕ್ಷೆಗ ಬದ್ಧನಾದ ಪುರೂರವ ಯುದ್ಧದಲ್ಲಿ ಪೌರವ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಆದರೆ ಅಂಬಿ ಎಂಬ ಹಿತಶತ್ರುವಿನಿಂದಾಗಿ ಅಲೆಕ್ಸಾಂಡರ್ ಪೌರವನನ್ನು ಸೆರೆಹಿಡಿದು ಹಿಂಸಿಸಿದ ಕಥೆ ಈಗ ಇತಿಹಾಸ.

ಇದೇ ರೀತಿಯಲ್ಲಿಯೇ ಚಿತ್ತೂರಿನ ರಾಜ ಸತ್ತುಹೋದಾಗ, ಚಿತ್ತೂರನ್ನು ವಶಪಡಿಸಿಕೊಳ್ಳಲು ಇದೇ ಸುಸಂದರ್ಭ ಎಂದು ಭಾವಿಸಿದ ಚಕ್ರವರ್ತಿ ಬಹದ್ದೂರ್ ಷಾ ಚಿತ್ತೂರಿನ ಮೇಲೆ ದಂಡೆತ್ತಿ ಬರಲು ನಿರ್ಧರಿಸುತ್ತಾನೆ. ಈ ವಿಷಯ ತಿಳಿದ ಚಿತ್ತೂರಿನ ರಾಣಿ ಕರ್ಣಾವತಿಯು ಸಹಾಯಕ್ಕಾಗಿ ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳುಹಿಸಿ ತನ್ನ ರಕ್ಷಣೆಯನ್ನು ಮಾಡುವಂತೆ ಕೋರಿಕೊಳ್ಳುತ್ತಾಳೆ, ದುರಾದೃಷ್ಟವಾಷಾತ್ ಈ ಮನವಿ ಹುಮಾಯೂನನಿಗೆ ತಲುಪುವ ಮುನ್ನವೇ, ಬಹದ್ದೂರ್ ಶಾನ ಸೈನ್ಯ ಚಿತ್ತೂರನ್ನು ವಶಪಡಿಸಿಕೊಂಡದ್ದನ್ನು ಸಹಿಸದ ರಾಣಿ ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡುತ್ತಾಳೆ. ತನಗೆ ರಕ್ಷೆ ಕಳುಹಿಸಿದ ಸಹೋದರಿಯ ನೆನಪಿನಲ್ಲಿ ಬಹದ್ದೂರ್ ಶಾನ ಸೈನ್ಯವನ್ನು ಸೋಲಿಸಿದ ಹುಮಾಯೂನ್ ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಪ್ರತಿಷ್ಟಾಪಿಸುವ ಮೂಲಕ ರಕ್ಷೆಗೆ ಬದ್ಧನಾಗುತ್ತಾನೆ ಎನ್ನುತ್ತದೆ ಇತಿಹಾಸ.

ಹೀಗೆ ರಕ್ಷೆಯನ್ನು ಸಹೋದರಿಯು ಸಹೋದರನ ಕೈಗೆ ಕಟ್ಟುವುದರ ಮೂಲಕ ತನ್ನ ತವರು ಮನೆ ಏಳಿಗೆಯಾಗಿ ತನ್ನ ರಕ್ಷಣೆಗೆ ಸನ್ನದ್ಧನಾಗಿರ ಬೇಕು ಎನ್ನುವ ಉದ್ದೇಶವಿದ್ದರೆ, ಈ ರೀತಿಯಾಗಿ ರಕ್ಷೆ ಕಟ್ಟಿಸಿಕೊಂಡ ಸಹೋದರನೂ ಕೂಡಾ ಎಲ್ಲ ಕಾಲವೂ ಎಲ್ಲಾ ರೀತಿಯಲ್ಲಿ ತನ್ನ ಸಹೋದರಿಯ ರಕ್ಷಣೆಗೆ ಬದ್ಧನಾಗಿರುವ ಸಂಕಲ್ಪವನ್ನು ತೊಟ್ಟಿರುತ್ತಾನೆ.

WhatsApp_Image_2020-08-02_at_12-removebg-preview

ಇನ್ನು ಕಟ್ಟುವ ರಾಖಿ ಹೇಗಿರ ಬೇಕು ಮತ್ತು ಹೇಗೆ ಕಟ್ಟಬೇಕು ಎಂದರೆ, ರಾಖಿಯಿಂದ ಪಸರಿಸುವ ಲಹರಿಗಳು ಸಹೋದರ ಸಹೋದರಿ ಬಾಂಧವ್ಯವನ್ನು ವೃದ್ಧಿಗೊಳಿಸುವಂತಿರಬೇಕು. ಹಾಗಾಗಿ ಚಿತ್ರ-ವಿಚಿತ್ರಗಳಿಂದ ಕೂಡಿರುವ ರಾಖಿಗಳಿಗಿಂತ ಹತ್ತಿ ಇಲ್ಲವೇ ಒಳ್ಳೆಯ ರೇಷ್ಮೆಯಿಂದ ಮಾಡಿರುವ ಹಳದಿ,ಕೆಂಪು ಅಥವಾ ಬಿಳಿ ಬಣ್ಣದ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದಲ್ಲಿ ಆ ರಾಖಿಯ ತ್ರಿಗುಣಗಳು (ಸತ್ತ್ವ, ರಜ, ತಮಸ್ಸು) ಧರಿಸಿದವರ ಜೀವನದ ಮೇಲೆ ಪ್ರತಿಕೂಲದ ಪರಿಣಾಮವನ್ನು ಬೀರಬಹುದಾಗಿರುತ್ತದೆ.

rakhi5

ಇನ್ನು ರಕ್ಷೆಯನ್ನು ಕಟ್ಟುವ ಸ್ಥಳ ಶುಚಿಯಾಗಿದ್ದು ಮಣೆ ಇಲ್ಲವೇ ಮಂದಲಿಗೆಯನ್ನು ಹಾಕಿ ಸಾಧ್ಯವಾದಲ್ಲಿ ರಂಗೋಲಿ ಬಿಡಿಸಿ ಸಹೋದರರನ್ನು ಪೂರ್ವಾಭಿಮುಖವಾಗಿ ಕೂರಿಸಿ ಹಣೆಗೆ ತಿಲಕವನ್ನಿಟ್ಟು ಉತ್ತರಾಭಿಮುಖವಾಗಿ ನಿಂತೋ ಇಲ್ಲವೇ ಕುಳಿತು ಬಲಿ ಚಕ್ರವರ್ತಿಗೆ ಮಹಾಲಕ್ಷ್ಮಿ ಹೇಳಿದ ಶ್ಲೋಕವನ್ನು ಪಠಿಸುತ್ತಾ ರಾಖಿಯನ್ನು ಕಟ್ಟಬೇಕು. ಇನ್ನು ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರರೂ ಸಹಾ ಅಷ್ಟೇ ಶ್ರದ್ಧಾ ಭಕ್ತಿಯಿಂದ ಸ್ಪಂದಿಸಬೇಕು. ರಕ್ಷೆಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುವ ಸಂಪ್ರದಾಯ ಕೆಲವಡೆಯಲ್ಲಿ ಇದೆ. ಈ ರೀತಿಯಲ್ಲಿ ತುಪ್ಪದ ದೀಪದ ಆರತಿ ಬೆಳಗುವುದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ಆಲೋಚನೆ ಮಾಡುವ ಶಕ್ತಿಯು ವೃದ್ಧಿಯಾಗುತ್ತದೆ ಎನ್ನುವ ಭಾವನೆ ಇದೆ. ಆದಾದ ನಂತರ ಸಹೋದರಿ ಸಹೋದರನಿಗೆ ಸಿಹಿ ತಿನ್ನಿಸುವ ಸಂಪ್ರದಾಯವಿದೆ.

rakhi3

ಸಹೋದರಿ ಆರತಿ ಎತ್ತಿದಾಗ ಕಾಣಿಕೆಯ ರೂಪದಲ್ಲಿ ಏನಾದರೂ ಕೊಡುವ ಸಂಪ್ರದಾಯವಿದೆ. ಅದರೆ ಈ ರೀತಿಯ ಕಾಣಿಕೆಗಳೇ, ಇಂದು ಅನೇಕ ಮನಸ್ಥಾಪಗಳಿಗೆ ಕಾರಣವಾಗುತ್ತಿರುವುದು ವಿಷಾಧನೀಯ. ಹೊದ ಸಲ ರಕ್ಷೆ ಕಟ್ಟಿದ್ದಾಗ ಅದನ್ನು ಕೊಟ್ಟಿದ್ದ ಈ ಬಾರಿ ಏನು ಕೊಡುತ್ತಾನೋ? ಎನ್ನುವ ತಾಮಸವು ಹೆಚ್ಚಾಗಿ, ಅವಳ ಅಪೇಕ್ಷೆಗನುಗುಣವಾಗಿ ಕಾಣಿಕೆ ಸಿಗದಿದ್ದಲ್ಲಿ ನಿರಾಶೆಯಾಗಿ ಸಹೋದರನ ಮೇಲಿನ ಪ್ರೇಮವು ಕಡಿಮೆಯಾಗುವ ಉದಾಹರಣೆಗಳೂ ಇವೆ. ಹಾಗಾಗಿ ರಕ್ಷಾಬಂಧನದಂದು ಸಹೋದರಿಯು ತನ್ನ ಸಹೋದರನಿಂದ ಕಾಣಿಕೆಯನ್ನು ಪಡೆಯುವ ಅಪೇಕ್ಷೆಯನ್ನು ಇಟ್ಟುಕೊಂಡಿದ್ದಲ್ಲಿ, ಆಕೆಗೆ ದಿನ ಪ್ರಾಪ್ತವಾಗ ಬೇಕಿದ್ದ ಫಲಗಳಿಂದ ವಂಚಿತಳಾಗುವುದಲ್ಲದೇ ಆಕೆ ಮಾಡಿದ್ದೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತದೆ .

rakhi2

ಇಂದಿನ ದಿನಗಳಲ್ಲಿ ರಾಖಿಗಳನ್ನು ಆಕರ್ಷಣೀಯವಾಗಿಸಲು ದೇವರುಗಳ ಚಿತ್ರಗಳೂ ಇಲ್ಲವೇ ಓಂ ಅಥವಾ ಸ್ವಸ್ತಿಕ್ ನಂತರ ಧಾರ್ಮಿಕ ಸಂಕೇತಗಳನ್ನು ಅಳವಡಿಸಿಕೊಂಡಿರುತ್ತಾರೆ. ರಾಖಿಯನ್ನು ಉಪಯೋಗಿಸಿದ ಈ ರಾಖಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಅದು ನಮ್ಮ ದೇವತೆಗಳಿಗೆ ಅಥವಾ ನಮ್ಮ ಧರ್ಮದ ನಂಬಿಕೆಗಳಿಗೆ ದ್ರೋಹ ಬಗೆದಂತಾಗುವ ಕಾರಣ ದಯವಿಟ್ಟು ರಾಖಿಯನ್ನು ಹರಿಯುವ ನೀರಿನಲ್ಲಿಯೋ ಅಥವಾ ಮಣ್ಣಿನಲ್ಲಿ ವಿಸರ್ಜಿಸಿದರೆ ಉತ್ತಮ.
ನಾವೆಲ್ಲಾ ಚಿಕ್ಕವಯಸ್ಸಿನವರಾಗಿದ್ದಾಗ ಮತ್ತು‌ ಈ‌ ಪರಿಯಾಗಿ ರಾಖಿಗಳು ಅಂಗಡಿಗಳಲ್ಲಿ ಲಭ್ಯವಿರದ ಸಮಯದಲ್ಲಿ, ನಮ್ಮ ಮನೆಯಲ್ಲೇ ರೇಷ್ಮೆ ದಾರಗಳನ್ನು ತಂದು ಅವುಗಳಿಂದ ಬಣ್ಣ ಬಣ್ಣದ ರಕ್ಷೆಗಳನ್ನು ಮಾಡಿ ಕೈಗೆ ಕಟ್ಟಿಸಿಕೊಂಡು ವಾರಾನುಗಟ್ಟಲೆ ಎಲ್ಲರಿಗೂ ಮನೆಯಲ್ಲಿ ತಂಗಿ ಮಾಡಿದ ರಾಖಿ ಎಂದು ತೋರಿಸಿಕೊಂಡು ಓಡಾಡುತ್ತಿದ್ದ ಸಂತೋಷ, ಭೀಮನ ಅಮಾವಾಸ್ಯೆಯಂದು ಭಂಢಾರ ಒಡೆದಾಗ ಸಿಗುತ್ತಿದ್ದ ಹಣದಲ್ಲಿ ಕೊಂಚ ಭಾಗವನ್ನು ರಕ್ಷೆ ಕಟ್ಟಿದ ಸಹೋದರಿಯರಿಗೆ ಕೊಟ್ಟು ಸಂಭ್ರಮ ಪಡುತ್ತಿದ್ದದ್ದು ಈಗ ನೂರಾರು ರೂಪಾಯಿ ಖರ್ಚು ಮಾಡಿ ಅಂಗಡಿಯಿಂದ ಚೆಂದನೆಯ ರಾಖಿ ತಂದು ಕಟ್ಟಿದರೂ ಬಾರದು.

ಇನ್ನೊಂದು ಸವಿನಯ ಕೋರಿಕೆ ಇಲ್ಲವೇ ಪ್ರೀತಿ ಪೂರ್ವಕ ಆಗ್ರಹ ಎಂದರೂ ತಪ್ಪಾಗದು, ದಯವಿಟ್ಟು ರಕ್ಷೆ ಕೊಳ್ಳುವಾಗ ಅದು ಚೀನಾ ದೇಶದಲ್ಲಿ ತಯಾರಾದ ಇಲ್ಲವೇ ಪ್ಲಾಸ್ಟಿಕ್ ಅಥವಾ ರಬ್ಬರ್ ರಾಖಿಗಳ ಬದಲಾಗಿ ಸ್ವದೇಶೀ ರೇಶ್ಮೇ ರಾಖಿಗಳನ್ನೇ ಬಳಸುವ ಮೂಲಕ ಸಹೋದರ, ಸಹೋದರಿಯರ ಸಂಬಂಧಗಳನ್ನು ದೇಸೀತನಗೊಳಿಸುವ ಮೂಲಕ ಅನುಬಂಧವಾಗಿಸೋಣ. ತನ್ಮೂಲಕ ಪ್ರೀತಿ ಮತ್ತು ವಾತ್ಸಲ್ಯಗಳನ್ನು ಶಾಶ್ವತವಾಗಿರಿಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

ಕೂರೂನ ಮಾರಕವೋ? ಇಲ್ಲವೇ ಪೂರಕವೋ?

ಅರೇ ಚೈನಾದ ವುಹಾನ್ ನಗರದಲ್ಲಿ ಆರಂಭವಾಗಿ ಕೆಲವೇ ಕೆಲವು ದಿನಗಳಲ್ಲಿ ಇಡೀ ವಿಶ್ವಾದ್ಯಂತ ಹರಡಿರುವ ಕೂರೂನ ವೈರಸ್ಸನ್ನು ಮಹಾಮಾರಿ ಎಂದು ಎಲ್ಲರೂ ಬಣ್ಣಿಸಿ ಅದು ಮಾರಕವೇ ಸರಿ ಎಂದು ಸಾಕಷ್ಟು ಕಠೋರ ಸುದ್ದಿಗಳನ್ನು ಕೇಳುತ್ತಿರುವಾಗ ಇದೇನು ಪೂರಕ ಎಂದು ಶೀರ್ಷಿಕೆ ಇದಯಲ್ಲಾ? ಎಂದು ಆಶ್ವರ್ಯವಾಗುತ್ತಿದಯಲ್ಲವೇ? ಕರೋನ ಸೋಂಕಿನಿಂದಾಗಿ ಜಾಗತಿಕವಾಗಿ ಆಗುತ್ತಿರುವ ಸಾಕಷ್ಟು ಅಡ್ಡ ಪರಿಣಾಮಗಳು ಇಡೀ ಜಗತ್ತಿನ ಆರ್ಥಿಕ ಪರಿಣಾಮಗಳನ್ನು ಅಲ್ಲಾಡಿಸುತ್ತಿರುವುದು ಖಂಡಿತವಾಗಿಯೂ ಸತ್ಯವಾದರೂ, ಕೂರೂನಾದಿಂದ ಆಗಿರಬಹುದಾದ ಅಥವಾ ಆಗಬಹುದಾ ಅನಾಹುತಗಳ ಮಧ್ಯೆಯೇ, ಅದರಿಂದ ಒಂದಷ್ಟು ಒಳ್ಳೆಯ ಪರಿಣಾಮಗಳನ್ನು ಬೀರುತ್ತಲಿದೆ ಎಂಬುದೂ ಸತ್ಯ. ಹಾಗಾಗಿ ಆ ಪೂರಕ ಪರಿಣಾಮಗಳೇನು? ಎಂಬುದನ್ನು ಒಂದೊಂದಾಗಿ ವಿಶ್ಲೇಷಿಸೋಣ.

ಭಾರತದಲ್ಲಿ ಮಡಿ, ಹುಡಿ, ಆಚಾರ, ವಿಚಾರ ಇದೆಲ್ಲಾ ಮೂಢ ನಂಬಿಕೆಗಳು. ಇವೆಲ್ಲಾ ಕಂದಾಚಾರ ಪದ್ದತಿಗಳು. ನಮಗೆ ಹೇಗೆ ಬೇಕೋ ಹಾಗೆ ಇರುತ್ತೇವೆ. ನಮಗಿಷ್ಟ ಬಂದ ಹಾಗೆ ಜೀವಿಸುತ್ತೇವೆ. ಕೇಳಲು ನೀವು ಯಾರು ಎಂದವರು ಈಗ ಹಿಂದೂ ಸನಾತನ ಸಂಸ್ಕೃತಿಯಾದ ನಮಸ್ಕಾರ ಪದ್ದತಿಗಳು, ಆಹಾರ ಪದ್ದತಿ, ಜೀವನ ಶೈಲಿಗಳನ್ನು ಹೊಗಳಲಾರಂಭಿಸಿದ್ದಾರೆ. ವ್ಯಾಟಿಕನ್ ಸಿಟಿಯ ಪೋಪ್ ಮತ್ತು ಬ್ರಿಟಿಷರ ರಾಜ ಚಾರ್ಲ್ಸ್ ಆದಿಯಾಗಿ ಬಹುತೇಕ ವಿದೇಶಿಗರೂ ತಮ್ಮ ಕೈಕುಲುಕುವ ಪದ್ದತಿಗಳಿಗೆ ತಿಲಾಂಜಲಿ ಇಟ್ಟು ಎರಡೂ ಕೈಗಳನ್ನು ಜೋಡಿಸಿ ಶಿರ ಬಾಗಿಸಿ ನಮಸ್ಕಾರ ಎಂದು ಪರಸ್ಪರ ವಂದಿಸತೊಡಗಿದ್ದಾರೆ.

ಸಸ್ಯಾಹಾರವು ಒಂದು ಆಹಾರ ಪದ್ದತಿಯೇ? ಬೇಯಿಸಿ ಅದಕ್ಕೆ ಉಪ್ಪು ಖಾರ ಹಾಕಿ ತಿಂದರೆ ಮಾಂಸದ ರುಚಿ ಹಾಳಾಗುತ್ತದೆ ಎಂದು ನಾಡಿನಲ್ಕಿ ಸಿಕ್ಕದ್ದು ಪಕ್ಕಿದ್ದನ್ನೆಲ್ಲವನ್ನೂ, ಯಾವುದೇ ಸರೀಸೃಪಗಳನ್ನೂ ಬಿಡದೆ, ಹಸಿಯಾಗಿಯೋ ಇಲ್ಲವೇ ಅರೆಬೆಂದ ರೀತಿಯಲ್ಲಿ ತಿನ್ನುತ್ತಿದ್ದವರು ಇಂದು ಬಹಳಷ್ಟು ಮಂದಿ ಸಸ್ಯಾಹಾರಕ್ಕೆ ಮಾರು ಹೋಗುತ್ತಿದ್ದಾರೆ. ಸರಿಯಾಗಿ ಬೇಯಿಸಿ ಅದಕ್ಕೆ ತಕ್ಕ ಉಪ್ಪು ಮತ್ತು ಮಸಾಲೆಗಳನ್ನು ಹಾಕಿ ಮಾಂಸದಲ್ಲಿ ಇರಬಹುದಾದ ಕ್ರಿಮಿಕೀಟಗಳನ್ನು ನಾಶ ಮಾಡಿ ತಿನ್ನುವ ಭಾರತೀಯ ಪದ್ದತಿ ನಿಜಕ್ಕೂ ಅತ್ಯುತ್ತಮ ಎಂದು ಹಾಡಿ ಹೊಗಳುತ್ತಿದ್ದಾರೆ.

ಕೈ ಏನೂ? ಮುಖ, ತಿ.. ವನ್ನೂ ತೊಳೆಯದೇ ಎಲ್ಲವನ್ನೂ ಟಿಶ್ಯೂ ಪೇಪರಿನಲ್ಲಿ ಒರೆಸಿ ಕೊಂಡು ಹೋಗುತ್ತಿದ್ದವರು ಈಗ ನಾಲ್ಕಾರು ಬಾರಿ ಸಾಬೂನು ಹಾಕಿ ತಿಕ್ಕಿ ತಿಕ್ಕಿ ಕೈ ಏನು? ದೇಹವನ್ನೆಲ್ಲಾ ತೊಳೆಯುವಂತಾಗಿದ್ದಾರೆ. ಏನೇ ಕೆಲಸ ಮಾಡುವ ಮೊದಲು ಮತ್ತು ಮಾಡಿದ ನಂತರ ಸ್ಯಾನಿಟೈಸರ್ ಹಾಕಿ ಶುಚಿರ್ಭೂತರಾಗಿ ಸ್ವಚ್ಚತೆಯತ್ತ ಚಿತ್ತ ಹರಿಸುತ್ತಿರುವುದು ಶ್ಲಾಘನೀಯವಾದ ವಿಷಯವಾಗಿದೆ.

ಪರೀಕ್ಷೆಗಳೇ ಮಕ್ಕಳ ಬುದ್ಧಿ ಮತ್ತೆಯ ಅಳೆಯುವ ಸಾಧನವೆಂದೇ ನಂಬಿ, ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳೆಂದೇ ಭಾವಿಸಿ ಅವರ ಬಾಲ್ಯದ ಆಟ ಪಾಠಗಳನ್ನೆಲ್ಲಾ ಬದಿಗೊತ್ತಿ ಸದಾಕಾಲವೂ ಪರೀಕ್ಷೆಗೆ ತಯಾರಾಗಲೇ ಬೇಕು ಎನ್ನುತ್ತಿದ್ದವರಿಗೆ ಅಶ್ವರ್ಯಕರವಾದ ರೀತಿಯಲ್ಲಿ ಪರೀಕ್ಷೆ ಯೇ ಇಲ್ಲದೆಯೇ ಮಕ್ಕಳನ್ನು ತೇರ್ಗಡೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇದೂ ಸಹಾ ನಮ್ಮ ಸನಾತನ ಧರ್ಮದ ಗುರುಕುಲ ಪದ್ದತಿಯ ಮುಂದುವರಿದ ಭಾಗವೇ. ಅಂಕಗಳಿಗಿಂತ ವಿಧ್ಯಾರ್ಥಿಯ ಬುದ್ದಿಮತ್ತೆ ಮತ್ತು ಸಮಯೋಜಿತ ಬೌಧ್ಹಿಕ ಬೆಳವಣಿಗೆಗಳಿಗೆ ನಮ್ಮ ಗುರುಕುಲ ಪದ್ದತಿ ಒತ್ತು ನೀಡುತ್ತಾ ಪರೀಕ್ಷೆಯೂ ಇಲ್ಲದೇ ವಿದ್ಯಾಬ್ಯಾಸ ಕಲಿಸುತ್ತಿತ್ತು. ಈಗ ಅದರ ಪುನರಾವರ್ತನೆ ಆಗಿದೆಯಷ್ಟೇ.

corona5

ನೌಕರರಿಗೆ ಕಛೇರಿಯಲ್ಲಿ 8-10 ಗಂಟೆ ಕೆಲಸ ಮಾಡುದರೂ ಸುಸ್ತಾಗುತ್ತಿಲ್ಲ. ಆದರೇ ಮನೆಯಿಂದ ಕಛೇರಿ ತಲುಪಲು ಮತ್ತು ಹಿಂದಿರುಗಲು ವಾಹನ ಜಂಜಾಟಗಳ ಮಧ್ಯೆ ರಸ್ತೆಗಳಲ್ಲಿ ಕಳೆಯುತ್ತಿರುವ ನಾಲ್ಕಾರೂ ಗಂಟೆಗಳೇ ಅವರನ್ನು ಹೈರಾಣಾಗಿಸುತ್ತಿರುವುದು ಸತ್ಯವೇ ಸರೀ. ಇದಕ್ಕೆಲ್ಲಾ ಪರಿಹಾರ ಮನೆಗಳಿಂದ ಕಛೇರಿಗಳಿಗೆ ಉತ್ತಮ ಸಂಪರ್ಕವ್ಯವಸ್ಥೆ ವಹಿಸುವುದು ಇಲ್ಲವೇ ಮನೆಗಳಿಂದ ಕೆಲಸ ಮಾಡುವುದು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯವಾದರೂ ಬಹೇತೇಕ ಕಂಪನಿಗಳು ಖಡ್ಡಾಯವಾಗಿ ಎಲ್ಲರೂ ಕಛೇರಿಯಿಂದಲೇ ಕೆಲಸ ಮಾಡಬೇಕೆಂದು ತಾಕೀತು ಮಾಡುತ್ತಿದ್ದವು. ಕಛೇರಿಯಿಂದ ಕೆಲಸ ಮಾಡಿದಲ್ಲಿ ಮಾತ್ರವೇ ಹೆಚ್ಚಿನ ಸಾಮರ್ಥ್ಯದಿಂದ ಕೆಲಸ ಮಾಡಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಆದರೆ ಕಳೆದ ಎರಡು ವಾರಗಳಿಂದ ಅತ್ಯಗತ್ಯ ಕೆಲಸಗಾರರ ಹೊರತಾಗಿ ಮಿಕ್ಕೆಲ್ಲಾ ಕೆಲಸಗಾರರೂ ಮನೆಯಿಂದಲೇ ಅತ್ಯುತ್ತಮವಾಗಿ ಕೆಲಸಮಾಡಬಹುದೆಂದು ತೋರಿಸಿಕೊಟ್ಟಿದ್ದಕ್ಕಾಗಿ ಕೂರೂನ ಸೋಂಕಿಗೆ ಭೇಷ್ ಎನ್ನಲೇ ಬೇಕಾಗಿದೆ.

corona3

ವ್ಯವಹಾರ ನಡೆಸುವ ಸಲುವಾಗಿ ಪರಸ್ಪರ ಮುಖಾಮುಖಿ ಭೇಟಿಯಾಗಿಯೇ ಸಭೆಗಳನ್ನು ನಡೆಸಲೇ ಬೇಕೆಂಬ ಅಲಿಖಿತ ನಿಯಗಳಿಂದಾಗಿ ನೂರಾರು ಕಿ.ಮೀ ದೂರವನ್ನು ಪ್ರಯಾಣಿಸುತ್ತಿದ್ದವರು ಇಂದು ಆಡಿಯೋ, ವೀಡಿಯೋ ಕಾನ್ಫ್ರೆನ್ಸಗಳ ಮುಖಾಂತರವೂ ಕೋಟ್ಯಾಂತರ ರೂಪಾಯಿಗಳ ವ್ಯವಹಾರವನ್ನು ಸುಲಭವಾಗಿ ಮಾಡಬಹುದು ಎಂಬ ಸತ್ಯವನ್ನು ಮನಗಂಡಿದ್ದಾರೆ. ಇದರಿಂದಾಗಿ ಅನಗತ್ಯ ಪ್ರಯಾಣಗಳು, ಸಮಯ, ಆಹಾರ, ನೀರು, ಕಾಫಿ, ಚಹಾ, ವಿದ್ಯುತ್, ಹವಾನಿಯಂತ್ರಣಗಳ ಬಳಕೆಯನ್ನು ನಿಯಂತ್ರಣ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಉಳಿಸುವಂತಾಗಿದೆ.

corona2

ಅಂಧ ಪಾಶ್ಚಾತ್ಯೀಕರಣದ ಮತ್ತೊಂದು ಪಿಡುಗೇ ಮಾಲ್ ಸಂಸ್ಕೃತಿ. ಬೇಕೋ ಬೇಡವೂ ವಾರಾಂತ್ಯದಲ್ಲಿ ಹತ್ತಿರವಾಗಲೀ ಇಲ್ಲವೇ ದೂರದ ಮಾಲ್ಗಳಿಗೆ ಭೇತಿ ಕೊಟ್ಟು ದುಬಾರಿ ಬೆಲೆ ತೆತ್ತು ಶಾಪಿಂಗ್, ಸಿನೆಮಾ, ಊಟೋಪಚಾರ ಮಾಡುವುದೇ ಆಧುನಿಕ ಜೀವನ ಶೈಲಿ ಮತ್ತು ಅದುವೇ ಹೆಮ್ಮೆಯ ಸಂಕೇತ ಎಂದು ಕೊಂಡಿದ್ದವರಿಗೆ ಕಳೆದ ಎರಡು ವಾರಗಳಿಂದಲೂ ಅಂತಹ ಹಮ್ಮು ಬಿಮ್ಮುಗಳು ಇಲ್ಲದೆಯೇ ಜೀವನ ನಡೆಸಬಹುದೆಂದು ಕರೋನ ತೋರಿಸಿಕೊಟ್ಟಿರುವುದಂತೂ ಸತ್ಯವೇ ಸರಿ.

ಸಭೆ ಸಮಾರಂಭಗಳು ಅತ್ಯಂತ ವೈಭೋವೋಪೇತವಾಗಿರಲೇ ಬೇಕು. ಸಾವಿರಾರು ಜನರುಗಳು ಮದುವೆ ಮುಂಜಿ, ನಾಮಕರಣ , ಹುಟ್ಟು ಹಬ್ಬ ಮುಂತಾದ ಸಮಾರಂಭಗಳಿಗೇ ಬಂದಂರೆ ಅದುವೇ ನಮ್ಮ ಸಾಮಾಜಿಕ ಸ್ಥಿತಿ ಮತ್ತು ಸಂಪತ್ತನ್ನು ಪ್ರದರ್ಶಿಸುವ ಸಂಕೇತ ಎನ್ನುವಂತಾಗಿತ್ತು. ಅಲ್ಲಿಗೆ ಬರುವವರು ಅದೇ ಮನಸ್ಥಿತಿಯುಳ್ಳವರಾಗಿದ್ದು ಅಗತ್ಯಕ್ಕಿಂತಲೂ ಹೆಚ್ಚಿನ ಆಡಂಬರವನ್ನು ತೋರಿಸಿತ್ತಾ ಅನಗತ್ಯವಾಗಿ ಆಹಾರಗಳನ್ನು ವ್ಯರ್ಥ ಮಾಡುತ್ತಿದ್ದದ್ದಲ್ಲದೇ ನೀರೂ ಸಹಾ ಪೋಲಾಗುತ್ತಿತ್ತು. ಈಗ ಕರೋನ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಂತಹ ಆಡಂಬರದ ದೊಡ್ಡ ದೊಡ್ಡ ಸಭೆ ಸಮಾರಂಭಗಳನ್ನು ನಿಷೇಧಿಸಿರುವ ಕಾರಣ ಕೇವಲ ಹತ್ತಿರದ ಸಂಬಂಧಿಗಳನ್ನು ಮಾತ್ರವೇ ಕರೆದು ಸರಳವಾಗಿಯಾದರೂ ಶಾಸ್ತ್ರೋಕ್ತವಾಗಿ, ಘನತೆಯಿಂದ ಮತ್ತು ಅರ್ಥಪೂರ್ಣವಾಗಿ ಸಮಾರಂಭಗಳನ್ನು ನಡೆಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿದೆ.

temp

ದೇವಾಲಯ, ಚರ್ಚ್ ಅಥವಾ ಮಸೀದಿಗೆಗಳಿಗೆ ಹೋಗುವುದು ಭಕ್ತಿಯ ಸಂಕೇತ ಎನ್ನುವುದು ಎಂದೋ ಕಾಣೆಯಾಗಿ ಅನಗತ್ಯವಾಗಿ ಉಡುಗೆ ತೊಡುಗೆಗಳು ಆಭರಣಗಳ ಪ್ರದರ್ಶನದ ಕೇಂದ್ರಗಳಾಗಿ ಮಾರ್ಪಾಟಾಗಿ ಹೋಗಿ ಎಷ್ಟೋ ಸಮಯವಾಗಿದೆ. ಈಗ ಅಂತಹ ಧಾರ್ಮಿಕ ಸ್ಥಳಗಳಿಗೆ ಖುದ್ದಾಗಿ ಬೇಟಿ ನೀಡದಯೇ ಮನೆಯಿಂದಲೇ ಭಕ್ತಿಯಿಂದ ದೇವರೊಂದಿಗೆ ಮಾತನಾಡುವ ಕಲೆಯನ್ನು ಕಲಿತು ಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂತೆಯೇ ವಸುದೈವ ಕುಟುಂಬಕಂ ಎನ್ನುವ ನಮ್ಮ ಸಂಸ್ಕೃತಿಯಂತೇ ಇಲ್ಲಿಯೇ ಕುಳಿತು ದೂರದ ದೇಶದಲ್ಲಿ ಕರೋನದಿಂದ ಪೀಡತರಾಗಿರುವವರಿಗೆ ಗುಣ ಪಡಿಸು ಮತ್ತು ಅದೇ ರೀತಿ ಇನ್ನೂ ಹೆಚ್ಚಿನ ಜನರಿಗೆ ಹರಡಂತೆ ತಡೆಗಟ್ಟು ಭಗವಂತಾ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿರುವು ವಿಶ್ವ ಭಾವೈಕ್ಯಕ್ಕೆ ನಾಂದಿ ಹಾಡಿದೆ.

ಎಲ್ಲರೂ ತಮ್ಮ ತಮ್ಮ ಮನೆಗಳಲಿಂದಲೇ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ಕಾರಣ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಿ ನಗರ ಶಾಂತವಾಗಿದೆ. ಪರಿಸರದ ಮೇಲಿನ ದೌರ್ಜನ್ಯ, ವಾಯುಮಾಲಿನ್ಯ ಕಡಿಮೆಯಾಗಿದೆ. ಪೆಟ್ರೋಲ್, ಡೀಸೆಲ್ ಬಳೆಕೆಯು ಕಡಿಮೆಯಾಗಿ ಪರೋಕ್ಷವಾಗಿ ವಿದೇಶಿ ವಿನಿಮಯವೂ ಉಳತಾಯವಾಗುತ್ತಿರುವುದೂ ಸುಳ್ಳಲ್ಲ.

ಸೋಂಕು ಹರಡಬಹುದಾದ ಪ್ರಮುಖ ತಾಣಗಳಾದ ರಸ್ತೆ ಬದಿಯ ಆಹಾರದ ಮಳಿಗೆಗಳು, ದರ್ಶಿನಿ, ಹೋಟೆಲ್ಗಳನ್ನು ಬಂದ್ ಮಾಡಿರುವ ಸಲುವಾಗಿ ಕೆಲವರಿಗೆ ಸಣ್ಣ ಪುಟ್ಟ ತೊಂದರೆಗಳಾಗಿದ್ದರೂ ಹೆಚ್ಚಿನವರು ಮನೆಗಳಲ್ಲಿಯೇ ಆರೋಗ್ಯಕರವಾಗಿ ಶುಚಿ ರುಚಿಯಾದ ಆಹಾರಗಳನ್ನು ಮಾಡಿಕೊಂಡು ತಿನ್ನುವುದರ ಮೂಲಕ ನೈರ್ಮಲ್ಯವನ್ನು ಕಾಪಾಡಿಕೊಳ್ಳತ್ತಾ ಆರೋಗ್ಯಕರವಾಗಿ ಇರಬಹುದಾಗಿದೆ.

family

ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಮನೆಯಲ್ಲಿನ ಎಲ್ಲಾ ಸದಸ್ಯರುಗಳು 24 ಗಂಟೆಗಳ ಕಾಲ ಒಟ್ಟಾಗಿಯೇ ಇರುವ ಸುಸಂದರ್ಭವನ್ನು ಈ ಕರೋನ ಸೋಂಕು ತಂದು ಕೊಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಬೆಳಿಗ್ಗೆ ಮಕ್ಕಳು ಏಳುವ ಸಮಯಕ್ಕಾಗಲೇ ತಂದೆ ತಾಯಿಯರು ಕೆಲಸಕ್ಕೆ ಹೋಗಿಬಿಟ್ಟರೆ, ಇನ್ನು ಅವರು ಸಂಜೆ ಮನೆಗೆ ಸುಸ್ತಾಗಿ ಹಿಂದಿರುಗುವಷ್ಟರಲ್ಲಿ ಮಕ್ಕಳು ಮಲಗಿರುತ್ತಾರೆ, ಇಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದೇ ಎಲ್ಲವೂ ಯಾಂತ್ರೀಕೃತವಾಗಿಬಿಟ್ಟಿತ್ತು. ಇನ್ನು ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಒಂದೊಳ್ಳೇ ರೆಸ್ಟೋರೆಂಟಿಗೆ ಕರೆದುಕೊಂಡು ಹೋಗಿ ಊಟ ಕೊಡಿಸಿಯೋ ಇಲ್ಲವೇ ಶಾಪಿಂಗ್ ಮಾಲಿಗೆ ಕರೆದು ಕೊಂಡು ಹೋಗಿ ಸಿನಿಮಾ ತೋರಿಸಿದ್ದೇ ಕುಟುಂಬ ನಿರ್ವಹಣೆ ಎಂದು ಬೀಗುತ್ತಿದ್ದವರಿಗೆ ಅದಕ್ಕೆ ಹೊರತಾಗಿಯೂ ಮನೆಯಲ್ಲಿಯೇ ಎಲ್ಲರೂ ಒಟ್ಟಿಗೆ ಕುಳಿತು ಮನೆಯಲ್ಲಿಯೇ ಮಾಡಿದ ಬಗೆ ಬಗೆಯ ಅಡುಗೆಗಳನ್ನು ಸವಿಯುತ್ತಾ ಮಕ್ಕಳೊಡನೆ ಆಟವಾಡುತ್ತಾ, ಹಿರಿಯ, ಕಿರಿಯರೊಂದಿಗೆ, ಪೋಷಕರೊಂದಿಗೆ ಕುಳಿತು ಹರಟೆ ಹೊಡೆಯುತ್ತಲೂ ಆನಂದಮಯವಾಗಿರ ಬಹುದು ಎಂಬುದನ್ನು ಕರೋನ ತೋರಿಸಿಕೊಟ್ಟಿದೆ.

ನಮ್ಮ ದೇಶದ ವಿರೋಧ ಪಕ್ಷಗಳು ಎಲ್ಲವಕ್ಕೂ ಸಾಕ್ಷಿ ಪುರಾವೆಗಳನ್ನು ಕೇಳುತ್ತಾ, ದೇಶವಾಸಿಗಳಲ್ಲಿ ಒಂದು ರೀತಿಯಲ್ಲಿ ಕಂದಕ ಸೃಷ್ಟಿ ಮಾಡುತ್ತಿದ್ದವರು,ಇಂದು ಕರೋನಾ ತಡೆಗಟ್ಟಲು ಪ್ರಧಾನಿಗಳು ಕರೆಕೊಟ್ಟಿರುವ ಜನತಾ ಕರ್ಫೂವಿಗೆ ಕೈ ಜೋಡಿಸಿರುವುದು ದೇಶದ ಅಭಿವೃದ್ಧಿ ಮತ್ತು ಏಕತೆಯ ಬೆಳವಣಿಗೆಗೆ ಉತ್ತಮ ಮಾದರಿಯಾಗಿದೆ.

ಈ ರೀತಿಯ ಸ್ವಯಂಪ್ರೇರಿತ ಗೃಹಬಂಧನ ಹೆಚ್ಚೂ ಕಡಿಮೆ ಒಂದೆರಡು ವಾರಗಳ ವರೆಗೂ ವಿಸ್ತರಣೆಯಾಗ ಬಹುದು. ಅದರಿಂದ ಒಂದೆರಡು ತಿಂಗಳಲ್ಲಿ ಕರೋನ ಸೋಂಕು ಹೆಚ್ಚೂ ಕಡಿಮೆಯಾಗಲೂ ಬಹುದು ಅಷ್ಟರೊಳಗೆ ಅದಕ್ಕೆ ಮದ್ದನ್ನೂ ಕಂಡು ಹಿಡಿದು ಶಾಶ್ವತವಾಗಿ ಗುಣಪಡಿಸಲೂ ಬಹುದು. ಯಾವುದೇ ಒಂದು ಕೆಲಸವನ್ನು ಸತತವಾಗಿ 21 ದಿನಗಳ ಕಾಲ ಮಾಡಿದಲ್ಲಿ ಅದು ನಮ್ಮ ಜೀವನ ಶೈಲಿಯಗುತ್ತದೆ ಎಂಬುದು ಒಂದು ಆಂಗ್ಲ ಭಾಷೆಯ ನಾಣ್ಣುಡಿ. ಅಂತೆಯೇ ನಾವು ಇಂದು ಕಲಿತ ಹಲವಾರು ಉತ್ತಮ ಅಭ್ಯಾಸಗಳನ್ನು ಜೀವನ ಪೂರ್ತಿಯೂ ಹೀಗೆಯೇ ಮುಂದುವರಿಸಿಕೊಂಡು ಹೋದಲ್ಲಿ ಜೀವನವೂ ರಸಮಯವಾಗಿರುತ್ತದೆ ಮತ್ತು ಸಮಾಜದ ಸ್ವಾಸ್ಥವೂ ಉತ್ತಮವಾಗಿರುವುದರಲ್ಲಿ ಯಾವುದೇ ಸಂದೇಹವೇ ಇಲ್ಲ.

corona

ಈಗ ನೀವೇ ಹೇಳಿ ಕೂರೂನ ಮಾರಕವೋ? ಇಲ್ಲವೇ ಪೂರಕವೋ?

ಏನಂತೀರೀ?