ಹುಸ್ಕೂರು ಮದ್ದೂರಮ್ಮ ಜಾತ್ರೆ

mad2ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಭಕ್ತರನ್ನು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸುತ್ತಾಳೆ ಮತ್ತು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂಬುದೇ ಬಹುತೇಕ ಭಕ್ತಾದಿಗಳ ನಂಬಿಕೆಯಾಗಿದೆ. ಪ್ರತೀ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಇಲ್ಲಿ ನಡೆಯುವ ಅದ್ದೂರಿಯ ಜಾತ್ರಾ ಮಹೋತ್ಸವವನ್ನು ಕುಳಿತಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.

huskur2ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಜಾತ್ರೆ ಎಂದರೆ 60-80 ಅಡಿ ಎತ್ತರದ ಒಂದೋ ಇಲ್ಲವೇ ಎರಡು ರಥಗಳನ್ನು ಎಳೆಯುವುದು ಸಾಮಾನ್ಯವಾದರೆ,  ಅಪರೂಪ ಎಂಬಂತೆ ನಂಜನಗೂಡಿನಲ್ಲಿ ಪಂಚರಥೋತ್ಸವ ನಡೆದರೆ ಈ ಊರಿನ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಕೇವಲ ಆ ಊರಿನವರಲ್ಲದೇ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳ ಭಕ್ತಾದಿಗಳು ಸುಮಾರು 120 -200 ಅಡಿಗಳಷ್ಟು ಎತ್ತರದ ಮರದ ಕಂಬಗಳು, ಮರದ ಹಲಗೆ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ಕುರ್ಜುಗಳು ಎಂದು ಕರೆಯುವ 10-12 ತೇರುಗಳನ್ನು ಹಿಂದಿನ ದಿನವೇ ತಮ್ಮ ಊರುಗಳಲ್ಲಿ ಪೂಜೆ ಮಾಡಿ ಜಾತ್ರೆಯ ದಿನದಂದು ಹುಸ್ಕೂರಿಗೆ ತಂದು ಪೂಜೆ ಮಾಡುವ ವಿಶಿಷ್ಟ ಆಚರಣೆ ನಿಜಕ್ಕೂ ಅಧ್ಭುತವೇ ಸರಿ.

temp1ಸುಮಾರು 800 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಹುಸ್ಕೂರು ಮದ್ದೂರಮ್ಮ ದೇವಿಯ ಹೆಸರೇ ಹೇಳುವಂತೆ ಈ ದೇವಾಲಯದ ಮೂಲ ದೇವರು ಮಂಡ್ಯ ಜಿಲ್ಲೆಯ ಮದ್ದೂರಿನದ್ದಾಗಿದ್ದು, ಹುಸ್ಕೂರಿನ ಭಕ್ತರೊಬ್ಬರ ಭಕ್ತಿಗೆ ಮೆಚ್ಚಿ ಈ ಊರಿಗೆ ಬಂದು ನೆಲಸಿತೆಂದು ಸ್ಥಳೀಯರ ನಂಬಿಕೆಯಾಗಿದೆ. ಚೋಳರ ಕಾಲದ ದೇವಾಲಯವನ್ನು ಇತ್ತೀಚೆಗೆ ಭಕ್ತಾದಿಗಳ ಸಹಕಾರದಿಂದ ನವೀಕರಿಸಲಾಗಿದ್ದು ಗರ್ಭಗುಡಿಯಲ್ಲಿ ದೊಡ್ಡ ಮದ್ದೂರಮ್ಮ ಮತ್ತು ಚಿಕ್ಕ ಮದ್ದೂರಮ್ಮ ಎಂಬ ಎರಡು ವಿಗ್ರಹಗಳಿವೆ. ಮದ್ದೂರಮ್ಮನನ್ನು ನಂಬಿ ಪೂಜೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ, ಮಂಗಳವಾರ, ಶುಕ್ರವಾರ, ಆಶಾಢ ಮಾಸದ ಸಮಯದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹೊರ ಭಾಗದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

madd1ಸಂಕ್ರಾಂತಿ ಮುಗಿದು ಬೆಳೆದ ಫಸಲುಗಳನ್ನೆಲ್ಲಾ ಕಟಾವು ಮಾಡಿ ತಮ್ಮ ಮನೆಯ ಅಗತ್ಯಕ್ಕಿಂತಲೂ ಹೆಚ್ಚಿನದ್ದನ್ನು ಮಾರುಕಟ್ಟೆಯಲ್ಲಿ ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವಿರುವಾಗ, ಯುಗಾದಿ ಹಬ್ಬದ ನಂತರ ಬರುವ ಮಳೆಗಾಲದ ವರೆಗೂ ಯಾವುದೇ ಕೃಷಿ ಚಟುವಟಿಕೆ ಇಲ್ಲದಿರುವ ಸಮಯದಲ್ಲಿ ಈ ಊರಿನಲ್ಲಿ ಅದ್ದೂರಿಯ ಜಾತ್ರೆಯನ್ನು ನಡೆಸಲಾಗುತ್ತದೆ. ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ಎಂದರೆ ಇಡೀ ಆನೇಕಲ್ ತಾಲೂಕಿನಲ್ಲಿ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುವುದಲ್ಲದೇ ಈ ಮೂಲಕ ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ. ಹುಸ್ಕೂರಿನ ಸುತ್ತಮುತ್ತಲ ಗ್ರಾಮಗಳಾದ, ಕೊಡತಿ, ಹಾರೋಹಳ್ಳಿ, ಸಿಂಗೇನ ಅಗ್ರಹಾರ, ದೊಡ್ಡ ನಾಗಮಂಗಲ, ಹಾಗೂ ಮುತ್ತನಲ್ಲೂರ್ ಸೇರಿದಂತೆ, ಸುಮಾರು 10-12 ಗ್ರಾಮಗಳಿಂದ ಭಕ್ತಾದಿಗಳು ತಾವೇ ರಥಗಳನ್ನು ನಿರ್ಮಿಸುತ್ತಾರೆ. ಈ 10-12 ಹಳ್ಳಿಗಳಿಂದ 150 ರಿಂದ 200 ಅಡಿ ಎತ್ತರದ ರಂಗು ರಂಗಿನ ಬೃಹತ್ ಗಾತ್ರದ ಕುರ್ಜುಗಳನ್ನು ತಿಂಗಳುಗಳ ಕಾಲ ಶ್ರದ್ಧಾ ಭಕ್ತಿಯಿಂದ ಸಿದ್ಧಪಡಿಸಲಾಗಿರುತ್ತದೆ, ರಂಗುರಂಗಿನ ಬಟ್ಟೆಗಳಿಂದ ವಿಶಿಷ್ಟ ಶೈಲಿಯ ವಿನ್ಯಾಸದ ಚಿತ್ತಾರಗಳನ್ನ ಹೊದಿಕೆಯಾಗಿಸಿಕೊಂಡು ಮರದ ಅಟ್ಟಣಿಗೆಗಳಿಂದ ನಿರ್ಮಿಸಲಾಗುವ ಈ ತೇರುಗಳು ಯಾವ ಯಾವ ಗ್ರಾಮದ ತೇರು ಎಷ್ಟು ಎತ್ತರ ಇರುತ್ತದೆ ಎಂಬ ಪ್ರತಿಷ್ಠೆಯ ಸಂಕೇತವಾಗುವ ಕಾರಣ ಒಂದು ರೀತಿಯ ಅರೋಗ್ಯಕರ ಸ್ಪರ್ಧೆಗೆ ಹುಸ್ಕೂರು ಜಾತ್ರೆ ವೇದಿಕೆಯಾಗಿ ಮಾರ್ಪಡುತ್ತದೆ ಎಂದರೂ ತಪ್ಪಾಗದು.

tippuಹುಸ್ಕೂರಿನ ಮದ್ದೂರಮ್ಮನಿಗೂ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನನಿಗೂ ನಂಟಿರುವ ಕುತೂಹಲಕಾರಿಯಾದ ಕಥೆಯೊಂದಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದ ನಂತರ ಸೇನೆಯ ಸಮೇತ ಶ್ರೀರಂಗಪಟ್ಟಣಕ್ಕೆ ಹಿಂದಿರುಗುವ ಮಾರ್ಗದ ಮಧ್ಯದಲ್ಲಿ ನಡೆಯಲೂ ನಿತ್ರಾಣವಾಗಿದ್ದ ತನ್ನ ಸೇನೆಯ ದಣಿವಾರಿಸಿಕೊಳ್ಳುವ ಸಲುವಾಗಿ ಈ ಹುಸ್ಕೂರಿನ ಬಯಲಿನ ಮದ್ದೂರಮ್ಮ ದೇವಾಲಯದಲ್ಲಿ ರಾತ್ರಿ ಪೂರಾ ಕಳೆದಿದ್ದನಂತೆ. ರಾಮ ರಾವಣರ ಯುದ್ದದಲ್ಲಿ ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತಂದ ಹನುಮಂತ ಯುದ್ದದ ಸಮಯದಲ್ಲಿ ಗಾಯಗೊಂಡು ಮೂರ್ಛೆ ಹೋಗಿದ್ದ ಲಕ್ಷ್ಮಣ ಮತ್ತು ನೂರಾರು ಕಪಿ ಸೇನೆಯನ್ನು ರಕ್ಷಿಸಿದಂತೆ, ಮಾರನೇಯ ದಿನ ಬೆಳಗ್ಗೆ ಎದ್ದಾಗ ಹೊಸ ಚೈತನ್ಯದಿಂದ ಕೂಡಿದ ನವೋಲ್ಲಾಸವು ಟಿಪ್ಪು ಸೈನ್ಯದ ಸೈನಿಕರಲ್ಲಿ ಮೂಡಿದ್ದರಿಂದ ಸಂತೋಷಗೊಂಡ ಟಿಪ್ಪು ಇದು ಇಲ್ಲಿಯ ದೇವಿಯ ಮಹಿಮೆ ಎಂದು ನಂಬಿ ಅದರ ಜ್ಞಾಪಕಾರ್ಥವಾಗಿ ವಜ್ರಖಚಿತ ಕಿರೀಟದ ಜೊತೆಗೆ ದೇವಿಗೆ ಚಿನ್ನಾಭರಣಗಳನ್ನು ಅರ್ಪಸಿದ ಎಂಬ ಇತಿಹಾಸವಿದ್ದು, ಆನೇಕಲ್ ಖಜಾನೆಯಲ್ಲಿ ಭದ್ರವಾಗಿರಿಸಿರುವ ವಜ್ರಕಿರೀಟ ಚಿನ್ನಾಭರಣಗಳನ್ನು ಇಂದಿಗೂ ಜಾತ್ರೆಯ ಸಮಯದಲ್ಲಿ ತಂದು ದೇವರಿಗೆ ಮುಡಿಸಿ ಅಲಂಕರಿಸಿ ಸಂಭ್ರಮಿಸಲಾಗುತ್ತದೆ.

mad3ಹುಸ್ಕೂರಿನ ಜಾತ್ರೆಯಲ್ಲಿ ಬೃಹತ್ತಾದ ಈ ತೇರುಗಳೇ ಪ್ರಮುಖ ಆಕರ್ಷಣೆಯಾದರೂ, ಅದರ ಜೊತೆ ವಿವಿಧ ರೀತಿಯ ಜಾನಪದ ಕಲಾಮೇಳಗಳು, ಪಲ್ಲಕ್ಕಿ ಉತ್ಸವ, ಹಾಡು, ನೃತ್ಯಗಳಿಂದ ಕೂಡಿ ಜಾತ್ರೆಯನ್ನು ಮತ್ತಷ್ಟು ಆಕರ್ಷಣಿಯವನ್ನಾಗಿಸುತ್ತದೆ. ತಮ್ಮ ಕೃಷಿಯ ಫಸಲು ಮನೆಗೆ ಬಂದು ಗ್ರಾಮಕ್ಕೆ ಕೆಡುಕು ಆಗದಂತೆ ಗ್ರಾಮ ದೇವರುಗಳಿಗೆ ತೃಪ್ತಿಪಡಿಸುವ ಸಲುವಾಗಿ ದೂರದ ಊರಿನ ನೆಂಟರಿಷ್ಟರನ್ನು ಕರೆಸಿ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವುದು ಈ ಜಾತ್ರೆಯ ವೈಶಿಷ್ಠ್ಯವಾಗಿದೆ.

ಮೊದಲ ದಿನ ರಥೋತ್ಸವದ ವಿಧಿ, ದೀಪಾರತಿಗಳ ಮೆರವಣಿಗೆಯಿಂದ ಆರಂಭವಾಗಿ ಮಾರನೇಯ ದಿನ ಬೆಳಗ್ಗೆ ಹತ್ತಾರು ಎತ್ತುಗಳ ಸಹಾಯದಿಂದ 10-20 ಕಿ. ಮಿ. ದೂರದ ಊರುಗಳಿಂದ ಸಾವಿರಾರು ಭಕ್ತಾದಿಗಳ ಸಹಾಯದೊಂದಿಗೆ ದಾರಿ ಯುದ್ದಕ್ಕೂ ತೇರುಗಳನ್ನು ಎಳೆದು ಸಂಜೆಯೊಳಗೆ ಮದ್ದೂರಮ್ಮನ ಗುಡಿಯ ಮುಂದೆ ತರಲಾಗುತ್ತದೆ. ಎತ್ತುಗಳು ಅಷ್ಟು ದೂರದಿಂದ ಕುರ್ಜುಗಳನ್ನು ಎಳೆದು ದೇವಿಯ ಸಾನ್ನಿಧ್ಯಕ್ಕೆ ಬಂದಾಗ ಮಾತ್ರವೇ ದೇವಿಯು ಸಂತುಷ್ಟಳಾಗುತ್ತಾಳೆ ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ. ವರ್ಷವಿಡೀ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಎತ್ತುಗಳಿಗೆ ಈ 2 ದಿನಗಳ ಕಾಲ ಉಲ್ಲಾಸದಿಂದಿರಲೆಂದು ಈ ರೀತಿಯಾಗಿ ರಥವನ್ನು ಎಳೆಯಲಾಗುತ್ತಿದೆ ಎಂದದೂ ಸಹಾ ನಂಬಲಾಗುತ್ತದೆ. ಅಷ್ಟು ಎತ್ತರದ ಮತ್ತು ಅಷ್ಟು ಭಾರವಾದ ರಥಗಳನ್ನು ಅಷ್ಟು ದೂರದಿಂದ ಕಚ್ಚಾ ರಸ್ತೆಗಳ ಮೇಲೆ ಎಳೆದು ತರುವುದು ಖಂಡಿತವಾಗಿ ಸುಲಭದ ಮಾತಲ್ಲ. ಉತ್ಸಾಹ ಭರಿತ ಕೂಗಾಟ ಮತ್ತು ಚೀರಾಟಗಳೊಂದಿಗೆ ಅಂಕು ಡೊಂಕು ಬಳುಕುತ್ತಾ ವಯ್ಯಾರದಿಂದ ಬರುವ ರಥಗಳನ್ನು ನೋಡುವುದಕ್ಕೆ ನಿಜಕ್ಕೂ ಮುದ ನೀಡುತ್ತದೆ. ಸಾಯಂಕಾಲದ ವೇಳೆಗೆ ಒಂದೊಂದೇ ಊರಿನಂದ ಬರುವ ರಥಗಳನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಹುಸ್ಕೂರಿನಲ್ಲಿ ಸಾವಿರಾರು ಭಕ್ತರು ನೆರೆದಿರುತ್ತಾರೆ. ಸ್ವಲ್ಪ ವಿಶ್ರಮಿಸಿದ ಬಳಿಕ, ಆ ಎಲ್ಲಾ ರಥಗಳನ್ನು ಮದ್ದೂರಮ್ಮ ದೇವಿಯ ಮಂದಿರದ ಬಳಿ ಎಳೆದು ತಂದಾಗ ಭಕ್ತಾದಿಗಳು ದವನ ಚುಚ್ಚಿದ ಬಾಳೇಹಣ್ಣುಗಳನ್ನು ತೇರಿನ ಮೇಲೆ ಎಸೆಯುತ್ತಾ ಭಕ್ತಿಯಿಂದ ದೇವರನ್ನು ನೆನೆಯುವುದು ಮುಗಿಲು ಮುಟ್ಟುವಂತಿರುತ್ತದೆ. ಜಾತ್ರೆಯ 2 ದಿನ ಇಲ್ಲಿ ಕರಗ ಮಹೋತ್ಸವವೂ ನಡೆಯುತ್ತದೆ.

ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತಾದಿಗಳ ಹಸಿವನ್ನು ನಿವಾರಿಸಲು, ಅಲ್ಲಲ್ಲಿ ಮಜ್ಜಿಗೆ ಪಾನಕ ಅನ್ನದಾಸೋಹಗಳ ವ್ಯವಸ್ಥೆಯೂ ಇರುವುದರ ಜೊತೆಗೆ ಕಡಲೇ ಪುರಿ ಬೆಂಡು ಬತ್ತಾಸು, ವಿವಿಧ ರೀತಿಯ ಜಾತ್ರೆಯ ಸಿಹಿತಿನಿಸುಗಳ ಸಣ್ಣ ಹೋಟೆಲ್ಲುಗಳು ಇರುತ್ತದೆ. ಇನ್ನು ಮಕ್ಕಳಿಗೆಂದೇ ವಿವಿಧ ರೀತಿಯ ಆಟಿಕೆಗಳು, ಬಣ್ಣ ಬಣ್ಣದ ಬೆಲೂನುಗಳ ಜೊತೆ ಮನೋರಂಜನೆಗಾಗಿ ಬಗೆ ಬಗೆಯ ಗಿರಿಗಿಟ್ಟಲೆಗಳು ಮುದ ನೀಡುತ್ತದೆ. ಜಾತ್ರೆಯ ಪ್ರಯುಕ್ತ ದೇವಾಲಯದಲ್ಲಿ ಮದ್ದೂರಮ್ಮ ತಾಯಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಮಾಡಲಾಗುತ್ತದೆ.

ಹುಸ್ಕೂರಿನ ಸುತ್ತಮುತ್ತಲಿನ ಹತ್ತಾರು ಊರುಗಳ ರೈತ ಬಾಂಧವರಿಗೆ ತಮ್ಮ ಹೊಲಗಳ ಕಾರ್ಯಗಳು ಮುಗಿದ ಬಳಿಕ, ಸುಗ್ಗಿಕಾಲದಲ್ಲಿ, ಹಿಗ್ಗಿನ ಹಬ್ಬವನ್ನಾಗಿಸುವ ಈ ಮದ್ದೂರಮ್ಮ ದೇವಿಯ ರಥೋತ್ಸವವನ್ನು ಈ ಬಾರಿ ನಮ್ಮ ಛಾನೆಲ್ಲಿನಲ್ಲಿ ನೋಡಿ ಸಂಭ್ರಮಸಿದ್ದೀರಿ. ಮುಂದಿನ ವರ್ಷ ಖಂಡಿತವಾಗಿ ಸ್ವಲ್ಪ ಸಮಯಮಾಡಿಕೊಂಡು ಹುಸ್ಕೂರಿಗೆ ಹೋಗಿ ಈ ಮದ್ದೂರಮ್ಮನ ಜಾತ್ರೆಯಲ್ಲಿ ಪಾಲ್ಗೊಂಡು ವಿಶ್ವದ ಅತ್ಯಂತ ಎತ್ತರದ ತೇರುಗಳನ್ನು ಹತ್ತಿರದಿಂದ ನೋಡಿದ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಹೈಡ್ರಾಕ್ಸಿಕ್ಲೋರೊಕ್ವಿನ್

ಹೈಡ್ರಾಕ್ಸಿಕ್ಲೋರೊಕ್ವಿನ್ ಈ ಮಾತ್ರೆಗೆ ಇದ್ದಕ್ಕಿದ್ದಂತೆಯೇ ಜಗತ್ತಿನಾದ್ಯಂತ ಬೇಡಿಕೆ ಬಂದು ಬಿಟ್ಟಿದೆ. ಮಹಾಮಾರಿ ಕೂರೋನಾ ಸೋಂಕಿಗೆ ಇನ್ನೂ ಯಾವುದೇ ಮದ್ದನ್ನು ಕಂಡು ಹಿಡಿಯದ ಕಾರಣ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿ ಸ್ವಲ್ಪ ಮಟ್ಟಿಗೆ ಈ ಮಹಾಮಾರಿಯನ್ನು ತಹಬಂದಿಗೆ ತರುತ್ತದೆ ಎಂದು ಕಂಡು ಕೊಂಡಿರುವ ಪರಿಣಾಮ ಅಮೇರೀಕ, ಇಟಲಿ, ಜರ್ಮನಿ ಹೀಗೇ ನಾನಾ ದೇಶಗಳು ಭಾರತಕ್ಕೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ರಫ್ತುಮಾಡುವಂತೆ ಗೋಗರಿಯುತ್ತಿವೆ. ವಸುದೈವ ಕುಟುಬಕಂ ಎಂಬ ತತ್ವದಡಿಯಲ್ಲಿ ನಮ್ಮ ದೇಶವೂ ಈ ಎಲ್ಲಾ ದೇಶಗಳಿಗೂ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಒಪ್ಪಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹ.

ಈ ಔಷಧಿಯು ಭಾರತದಲ್ಲಿ ಏಕೆ ಮತ್ತು ಹೇಗೆ ಆಳವಾಗಿ ನೆಲೆಗೊಂಡಿದೆ ಮತ್ತು ಇದರ ಹಿಂದೆ ಯಾವುದಾದರೂ ಇತಿಹಾಸವಿದೆಯೇ? ಎಂದು ಸ್ವಲ್ಪ ಆಳವಾಗಿ ಅಧ್ಯಯನ ಮಾಡಿದಾಗ, ಈ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಕಂಡು ಹಿಡಿಯಲು ಮತ್ತು ಬೆಂಗಳೂರಿನ ಸುತ್ತ ಮದ್ಯದ ಡಿಸ್ಟಿಲರೀಸ್ ಕಾರ್ಖಾನೆಗಳು ಆರಂಭವಾಗಲು ನಮ್ಮ 1799 ರಲ್ಲಿ, ಶ್ರೀರಂಗಪಟ್ಟಣದಲ್ಲಿ. ಬ್ರಿಟಿಷರು ಮತ್ತು ಟಿಪ್ಪುವಿನ ನಡುವೆ ಕದನವೇ ಪ್ರೇರಣೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಹೌದು ಈ ರೋಚಕ ಕಥೆಯನ್ನು ವಿಸ್ತಾರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

maleriya

1799 ರಲ್ಲಿ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ನಡೆದ ಯುದ್ದದಲ್ಲಿ ಬ್ರಿಟಿಷರು ಟಿಪ್ಪೂನನ್ನು ಕೊಂದು ಹಾಕುವ ಮೂಲಕ ಇಡೀ ಮೈಸೂರು ಸಾಮ್ರಾಜ್ಯವು ಬ್ರಿಟಿಷರ ಪಾಲಾಗುತ್ತದೆ. ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣದ ಐತಿಹಾಸಿಕ ಸೊಬಗು ಮತ್ತು ಹವಾಮನಗಳು ಬ್ರಿಟೀಷರಿಗೆ ಬಹಳ ಇಷ್ಟವಾಗಿ ಕೆಲವು ದಿನಗಳವರೆಗೆ, ಬ್ರಿಟಿಷ್ ಸೈನಿಕರು ತಮ್ಮ ವಿಜಯೋತ್ಸವವನ್ನ್ನು ಸಂಭ್ರಮಿಸಲು ಇದಕ್ಕಿಂತ ಉತ್ತಮ ಜಾಗವಿಲ್ಲ ಎಂದು ನಿರ್ಧರಿಸಿದ ಲಾರ್ಡ್ ವೆಲ್ಲೆಸ್ಲಿ ಅಲ್ಲಿಯೇ ಬಿಡಾರ ಹೂಡುತ್ತಾನೆ. ಮತ್ತು ಸೈನಿಕರು ಮೋಜು ಮಸ್ತಿ ಮಾಡಲು ಯುದ್ದ ಭತ್ಯೆಯನ್ನು (War allowance) ಕೊಡುವುದನ್ನೂ ಆರಂಭಿಸುತ್ತಾನೆ. ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಕೆಲವೇ ವಾರಗಳಲ್ಲಿ ಹಲವಾರು ಬ್ರಿಟೀಷ್ ಸೈನಿಕರು ಮಲೇರಿಯಾ ರೋಗಕ್ಕೆ ತುತ್ತಾದಾಗ ಕಾರಣ ಏನೆಂದು ಹುಡುಕಿದಾಗ, ಜೌಗು ಪ್ರದೇಶವಾದ ಶ್ರೀರಂಗಪಟ್ಟಣದಲ್ಲಿದ್ದ ಸೊಳ್ಳೆಗಳಿಂದಲೇ ಮಲೇರಿಯಾ ರೋಗ ಹೆಚ್ಚುತ್ತಲಿದೆ ಎಂದು ಕಂಡು ಬರುತ್ತದೆ.

ಆದರೆ ಹೆಚ್ಚು ಹೆಚ್ಚು ಮಸಾಲೆಯುಕ್ತ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದ ಸ್ಥಳೀಯರಿಗೆ ಸ್ವಯಂ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದ ಕಾರಣ ಈ ಸಮಸ್ಯೆ ಹೆಚ್ಚಾಗಿ ಕಾಡಿರುವುದಿಲ್ಲ. ಹಾಗಾಗಿ ಸೊಳ್ಳೆ ಭೀತಿಯನ್ನು ತ್ವರಿತವಾಗಿ ನಿವಾರಿಸಲು, ಬ್ರಿಟಿಷರು ತಕ್ಷಣವೇ ಬೆಂಗಳೂರಿನ ದಂಡು ( ಕಂಟೋನ್ಮೆಂಟ್) ಪ್ರದೇಶವನ್ನು ಸ್ಥಾಪಿಸಿ ತಮ್ಮ ಸೈನ್ಯದ ಶಿಬಿರವನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಿದರಾದರೂ, ಬೆಂಗಳೂರು ಸಹಾ ಸೊಳ್ಳೆಗಳಿಂದ ಮುಕ್ತವಾಗಿರದ ಕಾರಣ ಅಲ್ಲಿಯಷ್ಟಿಲ್ಲದಿದ್ದರೂ ಅಲ್ಪ ಸ್ವಲ್ಪ ಪ್ರಮಾಣದ ಮಲೇರೀಯಾ ತುತ್ತಾಗುವರ ಸಂಖ್ಯೆ ಇದ್ದೇ ಇರುತ್ತದೆ.

ಇದೇ ಸಮಯದಲ್ಲಿ, ಯುರೋಪಿಯನ್ ವಿಜ್ಞಾನಿಗಳು ಮಲೇರಿಯಾ ಚಿಕಿತ್ಸೆಗಾಗಿ ಬಳಸಬಹುದಾದ ಕ್ವಿನೈನ್ ಎಂಬ ರಾಸಾಯನಿಕ ಸಂಯೋಜನೆಯನ್ನು ಕಂಡುಹಿಡಿದಿದ್ದರಾದರೂ ಅದನ್ನು ದೊಡ್ಡ ಪ್ರಮಾಣದಲ್ಲಿ ಪರೀಕ್ಷಿಸಿಲ್ಲದಿದ್ದ ಕಾರಣ ಇನ್ನೂ ಹೆಚ್ಚಾಗಿ ಪ್ರಚಲಿತವಾಗಿರಲಿಲ್ಲ. ಹಾಗಾಗಿ ಕ್ವಿನೈನ್ ಮಾತ್ರೆಗಳನ್ನು ಬ್ರಿಟಿಷ್ ಸೈನ್ಯವು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡು ತನ್ನ ಎಲ್ಲಾ ಸೈನಿಕರಿಗೆ ವಿತರಿಸಿ ಸೈನಿಕರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವ ಮೂಲಕ ಮಲೇರಿಯಾವನ್ನು ತಡೆಗಟ್ಟಲು ಪ್ರಯತ್ನಿಸಿತು. ಮಲೇರಿಯಾ ಪೀಡಿತ ಸೈನಿಕರು ಕ್ಚಿನೈನ್ ಮಾತ್ರೆಯಿಂದಾಗಿ ಶೀಘ್ರವಾಗಿ ಚೇತರಿಸಿಕೊಂಡರಾಡರೂ, ಇನ್ನೂ ಅನೇಕ ಸೈನಿಕರ ಪರಿಸ್ಥಿತಿ ಉಲ್ಬಣವಾಣವಾಗಲು ಹೆಚ್ಚಿನವರು ಬಹಳ ಕಹಿಯಾಗಿದ್ದ ಕ್ವಿನೈನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬ ಕಠು ಸತ್ಯದ ಅರಿವಾಯಿತು.

ಹೇಗಾದರೂ ಮಾಡಿ ತಮ್ಮ ಸೈನಿಕರಿಗೆ ಈ ಔಷಧವನ್ನು ತೆಗೆದುಕೊಳ್ಳಲು ಮನವೊಲಿಸುವ ವಿಧಾನಗಳನ್ನು ಕಂಡು ಕೊಳ್ಳಲು ಅನೇಕ ಪ್ರಯೋಗಗಳನ್ನು ಮಾಡಿ ಕಡೆಗೆ ಕ್ವಿನೈನ್ ಮಾತ್ರೆಗಳಿಗೆ ಜುನಿಪರ್ ಆಧಾರಿತ ಮದ್ಯದ ಲೇಪ ಮಾಡಿದಲ್ಲಿ ಸ್ವಲ್ಪ ಸಿಹಿಯಾಗುತ್ತದೆ ಎಂಬುದನ್ನು ಕಂಡುಕೊಂಡರು. ಆ ಜುನಿಪರ್ ಆಧಾರಿತ ಮದ್ಯವೇ ಜಿನ್ ಆಗಿದ್ದು, ಕ್ವಿನೈನ್ ನೊಂದಿಗೆ ಬೆರೆಸಿದ ಜಿನ್ ಅನ್ನು ಜಿನ್ & ಟಾನಿಕ್ ಎಂದು ಕರೆಯಲಾಯಿತು ಮತ್ತು ಇದು ತಕ್ಷಣವೇ ಬ್ರಿಟಿಷ್ ಸೈನಿಕರಲ್ಲಿ ತ್ವರಿತವಾಗಿ ಪ್ರಾಭಲ್ಯವನ್ನೂ ಪಡೆಯಿತು. ಹಾಗಾಗಿ ಸೈನ್ಯವು ತಮ್ಮ ಮಾಸಿಕ ಪಡಿತರ ಭಾಗವಾಗಿ ಟಾನಿಕ್ ವಾಟರ್ (ಕ್ವಿನೈನ್) ಜೊತೆಗೆ ಕೆಲವು ಬಾಟಲಿಗಳ ಜಿನ್‌ಗಳನ್ನು ವಿತರಿಸಲು ಪ್ರಾರಂಭಿಸಿತು.

ಬ್ರಿಟಿಷ್ ಸೈನಿಕರಲ್ಲಿ ಹೆಚ್ಚುತ್ತಿರುವ ಜಿನ್ ಮತ್ತು ಇತರ ರೀತಿಯ ಮದ್ಯದ ಬೇಡಿಕೆಯನ್ನು ಪೂರೈಸುವ ಸಲುವಾಗಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತ ಹಲವಾರು ಸ್ಥಳೀಯ ಮದ್ಯಸಾರಗಳನ್ನು ನಿರ್ಮಿಸಿ ಇಲ್ಲಿಂದ ಭಾರತದ ಇತರ ಭಾಗಗಳಿಗೆ ಸಾಗಿಸಲಾರಂಭಿಸಿತು. ಹಾಗಾಗಿಯೇ ಬೆಂಗಳೂರಿನ ಸುತ್ತ ಮುತ್ತ ಅಸಂಖ್ಯಾತ ಸಾರಾಯಿ ಮತ್ತು ಮದ್ಯ ಬಟ್ಟಿ ಇಳಿಸುವ ಕಾರ್ಖಾನೆಗಳು ಅರಂಭವಾಗಿ ಬ್ರಿಟಿಷರ ಕಾಲದಲ್ಲಿಯೇ ಬೆಂಗಳೂರು ಭಾರತದ ಪಬ್ ರಾಜಧಾನಿಯಾಗಿ ಮಾರ್ಪಟ್ಟಿತ್ತು. ಸ್ವಾತಂತ್ರ್ಯಾನಂತರ ಈ ಎಲ್ಲಾ ಕಂಪನಿಗಳನ್ನು ಈಗ ಬ್ರಿಟನ್ ದೇಶದಲ್ಲಿ ಆಡಗಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ತಂದೆ ವಿಠ್ಠಲ್ ಮಲ್ಯ ಅವರು ಬ್ರಿಟಿಷ್ ಸಂಸ್ಥೆಗಳಿಂದ ಖರೀದಿಸಿ, ಯುನೈಟೆಡ್ ಬ್ರೂವರೀಸ್ ಎಂಬ ಮದ್ಯದ ಕಂಪನಿಯನ್ನು ಮುನ್ನಡೆಸಿದರು.

rossಭಾರತೀಯ ಸೇನೆಯಲ್ಲಿ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಸರ್ ಸಿಸಿಜಿ ರಾಸ್ ಅವರ ಮಗ 1857 ರಲ್ಲಿ ಅಲ್ಮೋರಾದಲ್ಲಿ ಜನಿಸಿದ ರೋಲ್ಯಾಂಡ್ ರಾಸ್ ಅವರೂ ಸಹಾ ಭಾರತೀಯ ಸೇನಾ ವೈದ್ಯಕೀಯ ದಳದ ಕರ್ನಲ್ ಆಗಿದ್ದವರು ಮಲೇರಿಯಾ ಚಿಕಿತ್ಸೆಯಾಗಿ ಕ್ಲೋರೊಕ್ವಿನ್ ಅನ್ನು ಕಂಡುಹಿಡಿದರು. ನಂತರ ಅವರನ್ನು ಬೆಂಗಳೂರಿನಲ್ಲಿ ಸ್ಟಾಫ್ ಸರ್ಜನ್ ಆಗಿ ನೇಮಿಸಲಾಯಿತು. ಅವರು ಬರ್ಮ, ಆಂಡಮಾನ್ ಮತ್ತು ಮದ್ರಾಸ್‌ ಪ್ರಾಂತದಲ್ಲೂ ಸೇವೆ ಸಲ್ಲಿಸಿದರು. ಅವರ ಈ ಸೇವೆಗಾಗಿ ಬ್ರಿಟಿಷ್ ಸರ್ಕಾರ ಅವರಿಗೆ ಸರ್ ಗೌರವವನ್ನು ನೀಡಿ ಸನ್ಮಾನಿಸಿತ್ತು. 1902 ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿಯೂ ದೊರೆಯಿತು. ಹಾಗಾಗಿ ನೇರವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಭಾರತೀಯ ಸೈನ್ಯಕ್ಕೆ ಸಂಬಂಧಿಸಿದೆ.

WhatsApp Image 2020-04-11 at 10.10.19 AMನಂತರದ ವರ್ಷಗಳಲ್ಲಿ, ಕ್ವಿನೈನ್ ಹಲವಾರು ಪ್ರಯೋಗಗಳಿಗೆ ಒಳಾಗಾಗುತ್ತಲೇ ಹೋಯಿತು. 1861 ರ ಆಗಸ್ಟ್ 2 ರಂದು ಜನಿಸಿದ ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಶ್ರೀ ಪ್ರಫುಲ್ಲ ಚಂದ್ರ ರೇ, ಬಂಗಾಳದ ಯುವಜನರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಲು 1892 ರಲ್ಲಿ ಪ್ರಯೋಗಾಲಯದಲ್ಲಿ ವೈಯಕ್ತಿಕ ಉಪಕ್ರಮವಾಗಿ ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಅನ್ನು ಸ್ಥಾಪಿಸಿ ಇದರ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಅಂತಿಮವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಎಚ್‌ಸಿಕ್ಯು ಎಂಬ ಔಷಧವನ್ನು ಭಾರತದಲ್ಲಿ ತಯಾರಿಸಲು ಆರಂಭಿಸಿದರು. ಈ ಔಷಧಿ ಮುಂಚಿನ ಎಲ್ಲಾ ಔಷಧಿಗಳಿಗೆ ಹೋಲಿಸಿದಲ್ಲಿ ಕಡಿಮೆ ಅಡ್ಡಪರಿಣಾಮ ಹೊಂದಿದ್ದು ಇಂದಿಗೂ ಸಹಾ ಮಲೇರಿಯಾ ಸಂಬಂಧ ಪಟ್ಟ ಖಾಯಿಲೆಗೆ ಕೊಡುವ ಔಷದಿಯಾಗಿದೆ. ಹಾಗಾಗಿ ಇದು ಇಂದಿಗೂ ವಿಶ್ವದಲ್ಲೇ ಅತ್ಯಂತ ಹೆಚ್ಚು ಬೇಡಿಕೆಯಿರುವ ಔಷಧವಾಗಿದೆ.

ಮಲೇರಿಯಾದ ಈ ಅತ್ಯುತ್ತಮ ಔಷಧವನ್ನು ಭಾರತದಲ್ಲಿ ‌ತಯಾರಿಸಿದ ಪ್ರಫುಲ್ಲ ಚಂದ್ರ ರೇ ಅವರು ತಮ್ಮ 82 ನೇ ವಯಸ್ಸಿನಲ್ಲಿ ಜೂನ್ 16, 1944 ರಂದು ತಮ್ಮನಿಧನರಾದರು. ಅವರ ಈ ಸೇವೆಯಾಗಿ ತಡವಾಗಿಯಾದರೂ, 2011 ರಲ್ಲಿ ತಮ್ಮ 150 ನೇ ಜನ್ಮ ವಾರ್ಷಿಕೋತ್ಸವದಂದು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ತನ್ನ ಅಸ್ಕರ್ ಕೆಮಿಕಲ್ ಲ್ಯಾಂಡ್‌ಮಾರ್ಕ್ ಪ್ಲೇಕ್ ಪ್ರಶಸ್ತಿಯನ್ನು ಕೊಟ್ಟು ಗೌರವವಿಸಿತು. ಇದು ಯುರೋಪಿಯನ್ ಅಲ್ಲದವರಿಗೆ ಸಂದ ಮೊತ್ತ ಮೊದಲ ಪ್ರಶಸ್ತಿಯಾಗಿದೆ.

hydro2

ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ನಮ್ಮ ದೇಶದ ಖರ್ಚಿನಲ್ಲಿಯೇ ವಿದ್ಯಾಬ್ಯಾಸ ಮುಗಿಸಿ, ನಮ್ಮ ಪ್ರತಿಭೆಗೆ ಇಲ್ಲಿ ಬೆಲೆ ಇಲ್ಲಾ ಎಂದು ಹೇಳುತ್ತಾ ವಿದೇಶಗಳಿಗೆ ಪ್ರತಿಭಾ ಪಲಾಯನ ಮಾಡುವ ನಮ್ಮ ಇಂದಿನ ಯುವಜನತೆಗೆ ಟಿಪ್ಪುನ ಸೋಲು, ಸೊಳ್ಳೆ ಕಡಿತ ಮಲೇರಿಯಾ ಭೀತಿ, ಕ್ವಿನೈನ್ ಮಾತ್ರೆಗಳು, ಟಾನಿಕ್ ರೂಪದಲ್ಲಿ ಮದ್ಯ, ಪಡಿತರ ಮದ್ಯ , ವರ್ಣರಂಜಿತ ಕಾಕ್ಟೈಲ್ ನಿಂದ ಆರಂಭವಾಗಿ ಅಂತಿಮವಾಗಿ ಭಾರತೀಯ ಶ್ರೀ ಪ್ರಫುಲ್ಲ ಚಂದ್ರ ರೇ ಅವರ ಉತ್ಸಾಹದಿಂದಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್ ಭಾರತದಲ್ಲಿ ತಯಾರಾಗಿ ಈಗಲೂ ಪ್ರಪಂಚಾದ್ಯಂತ ಬೇಡಿಕೆ ಇರುವ ಕಣ್ಣು ತೆರೆಸುವಂತೆ ಈ ಹೈಡ್ರಾಕ್ಸಿಕ್ಲೋರೊಕ್ವಿನ್ ಇತಿಹಾಸ.

ಏನಂತೀರೀ?

ಗೆಳೆಯರೊಬ್ಬರು ವಾಟ್ಸಾಪ್ಪಿನಲ್ಲಿ ಕಳುಹಿಸಿದ ಆಂಗ್ಲ ಲೇಖನದಿಂದ ಪ್ರೇರಿತನಾಗಿ ಆಧ್ಯಯನ ಮಾಡಿ ಬರೆದ ಲೇಖನ