ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ ಗದ್ದೆಗಳಲ್ಲಿ ಬೆಳಿಗ್ಗೆ ಸಂಜೆ ವಿಹರಿಸುತ್ತಾ ಸವಿ ಸವಿಯಾದ ಅಜ್ಜಿಯ ಕೈರುಚಿ, ತಾತನ ಮಡಿಲಲ್ಲಿ ಕುಳಿತು ರಸವತ್ತಾಗಿ ಕೇಳುವ ಕಥೆಗಳನ್ನು ಅನುಭವಿಸಿದವರಿಗೇ ಗೊತ್ತು ಅದರ ಆನಂದ.

ಪ್ರತೀ ವರ್ಷದಂತೆ ಈ ವರ್ಷವೂ ಮೂರ್ತಿಗಳು ತಮ್ಮ ಮಗ ಶಂಕರನನ್ನು ಬೇಸಿಗೆಯ ರಜೆಗೆಂದು ತಾತನ ಮನೆಗೆ ಬಿಟ್ಟು ಬರಲು ನಿರ್ಧರಿಸಿದರು. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಶಂಕರನಿಗೆ ಪ್ರಿಯವಾದ ರೈಲಿನಲ್ಲಿ ಕರೆದುಕೊಂಡು ಹೋಗಿ ಅವನ ತಾತನ ಮನೆಯಲ್ಲಿ ಬಿಟ್ಟು ಮಾರನೇಯ ದಿನ ಮೂರ್ತಿಗಳು ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ರಜೆ ಮುಗಿದು ಇನ್ನೇನು ಶಾಲೆಗಳು ಆರಂಭವಾಗುವುದಕ್ಕೆ ಎಂಟು ಹತ್ತು ದಿನಗಳ ಮುಂಚೆ ತಾತಾ ಅಜ್ಜಿಯರೇ ಶಂಕರನನ್ನು ಕರೆದುಕೊಂಡು ಬಂದು ಮನೆಗೆ ಬಿಟ್ಟು ಒಂದೆರಡು ವಾರ ಇದ್ದು ಶಂಕರನ ಶಾಲೆ ಅರಂಭವಾದ ನಂತರ ತಮ್ಮ ಊರಿಗೆ ಮರಳುವುದು ಅಲ್ಲಿಯವರೆಗೂ ನಡೆದುಕೊಂಡು ಬಂದಿದ್ದ ವಾಡಿಕೆ.

ಶಂಕರ ಈ ಬಾರಿ 5ನೇ ತರಗತಿಯಿಂದ 6ನೇ ತರಗತಿಗೆ ತೇರ್ಗಡೆಯಾಗಿದ್ದ. ಸುಮಾರು 10 ವರ್ಷಗಳಾಗಿದ್ದು ತಕ್ಕ ಮಟ್ಟಿಗೆ ಲೋಕಜ್ಞಾನ ಮತ್ತು ವ್ಯವಹಾರಜ್ಞಾನವನ್ನು ಬೆಳಸಿಕೊಂಡಿದ್ದ. ಮನೆಗೆ ಬೇಕಾದ ಸಣ್ಣ ಪುಟ್ಟ ವಸ್ತುಗಳನ್ನು ಅಂಗಡಿಗೆ ಹೋಗಿ ತರುತ್ತಿದ್ದದಲ್ಲದೇ ಅವಶ್ಯಕತೆ ಇದ್ದಾಗ ಅದೇ ನಗರದಲ್ಲಿದ್ದ ಅವರ ಅತ್ತೆ, ಚಿಕ್ಕಪ್ಪ ಮತ್ತು ಮಾವನ ಮನಗಳಿಗೆ ಒಬ್ಬನೇ ಬಸ್ಸಿನಲ್ಲಿ ಹೋಗಿಬರುವಂತವನಾಗಿದ್ದ ಕಾರಣ ಅವನಿಗೆ ತಾನು ಎಲ್ಲಿ ಬೇಕಾದರೂ ಹೋಗಿ ಬರಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತ್ತು.

ಹಾಗಾಗಿಯೇ ಈ ಬಾರಿ ತಾತನ ಮನೆಗೆ ತಾನೋಬ್ಬನೇ ಹೋಗುತ್ತೇನೆಂದು ತನ್ನ ಜೊತೆ ಅಪ್ಪ ಬರುವುದು ಬೇಡವೆಂಬ ಪ್ರಸ್ತಾಪವನ್ನಿಟ್ಟ. ಮಗನ ಈ ಪ್ರಸ್ತಾಪ ಅಮ್ಮನಿಗೆ ಹಿಡಿಸಲಿಲ್ಲವಾದರೂ ಅಪ್ಪಾ, ಈಗಲಿಂದಲೇ ದೈರ್ಯವನ್ನು ಕಲಿಸಲಿಲ್ಲವೆಂದರೆ ಮುಂದೆ ಹೇಗೇ? ಸದಾ ನಿನ್ನ ಸೆರಗಿನಲ್ಲಿಯೇ ಮಗನನ್ನು ಎಷ್ಟು ದಿನಗಳು ಅಂತ ಹಿಡಿದಿಟ್ಟು ಕೊಳ್ಳುವೆ? ಅವನಿಗೂ ಹೊರಗಿನ ಪ್ರಪಂಚ ಮತ್ತು ಪ್ರಯಾಣದ ಅರಿವಾಗಲಿ ಎಂದಿದ್ದು ಕೇಳಿ ಶಂಕರ ಹಿರಿ ಹಿರಿ ಹಿಗ್ಗಿದ್ದ.

train1

ಈ ಬಾರಿ ಇಂತಹ ದಿನ, ಇಂತಹ ರೈಲಿನಲ್ಲಿ ಶಂಕರ ಒಬ್ಬನೇ ಊರಿಗೆ ಬರುವ ಕಾರಣ ರೈಲು ನಿಲ್ದಾಣಕ್ಕೆ ಬಂದು ಅವನನ್ನು ಕರೆದುಕೊಂಡು ಹೋಗಲು ತಮ್ಮ ತಂದೆಯವರಿಗೆ ಪತ್ರವನ್ನೂ ಬರೆದು ಅವರೂ ಸಹಾ ಸಂತೋಷದಿಂದ ಅದಕ್ಕೆ ಒಪ್ಪಿಗೆಯ ಪತ್ರವನ್ನು ಬರೆದ್ದದ್ದು ಶಂಕರನಿಗೆ ಸ್ವರ್ಗ ಮೂರೇ ಗೇಣಿನ ಅಂತರದಲ್ಲಿತ್ತು. ಎಲ್ಲವೂ ಅಂದು ಕೊಂಡಂತೆಯೇ ನಡೆದು, ಅವನ ಪ್ರಯಾಣದ ದಿನ ಬಂದೇ ಬಿಟ್ಟಿತ್ತು. ಶಂಕರ ಮತ್ತು ಅಪ್ಪಾ ಇಬ್ಬರೂ ರೈಲು ನಿಲ್ದಾಣಕ್ಕೆ ಬಂದರು. ಅದಾಗಲೇ ನಿಗಧಿತವಾಗಿದ್ದ ಸೀಟಿನಲ್ಲಿ ಶಂಕರನ್ನು ಕೂರಿಸಿ, ಪಕ್ಕದವರಿಗೆ ಸ್ವಲ್ಪ ಇವನ ಬಗ್ಗೆ ಜಾಗೃತಿ ವಹಿಸಲು ತಿಳಿಸಿ, ಕಿಟಕಿಯ ಬಳಿ ಬಂದು ಜೋಪಾನ, ಹುಷಾರಾಗಿ ಹೋಗಿ ಬಾ. ಊರಿಗೆ ಹೋದ ಕೂಡಲೇ ಪತ್ರ ಬರೆಯುವುದನ್ನು ಮರೆಯಬೇಡ. ತಾತಾ ಅಜ್ಜಿಯರು ಹೇಳಿದಂತೆ ಕೇಳು. ಅವರನ್ನು ಅನಗತ್ಯವಾಗಿ ಗೋಳು ಹುಯ್ದುಕೊಳ್ಖಬೇಡ ಎಂದೆಲ್ಲಾ ಹೇಳುತ್ತಿದ್ದರೆ, ಮೊದಲ ಬಾರಿ ಒಬ್ಬಂಟಿ ಪ್ರಯಾಣದ ಅನುಭವ ಪಡೆಯಲು ಸಿದ್ಧನಾಗಿದ್ದ ಶಂಕರಿಗೆ ಅಪ್ಪನ ಮಾತುಗಳಾವುವೂ ಕಿವಿಗೆ ಕೇಳಿಸುತ್ತಲೇ ಇರಲಿಲ್ಲ. ಸುಮ್ಮನೆ ಕಾಟಾಚಾರಕ್ಕೆ ಅಪ್ಪಾ ಹೇಳಿದ್ದಕ್ಕೆಲ್ಲಾ ಹೂಂ.. ಗುಟ್ಟುತ್ತಿದ್ದ. ರೈಲು ಇನ್ನೇನು ಹೊರಡಲಿದೆ ಎಂದಾಗ ಅಪ್ಪಾ ಕಿಟಕಿಯಿಂದ ಮಗನಿಗೆ ಒಂದು ಸಣ್ಣ ಚೀಟಿಯೊಂದನ್ನು ಕೊಟ್ಟು ಪ್ರಯಾಣದ ಮಧ್ಯೆಯಲ್ಲಿ ಭಯಭೀತನಾದಲ್ಲಿ ಅಥವಾ ಅತ್ಯಂತ ತುರ್ತಾದ ಅವಶ್ಯಕತೆ ಬಿದ್ದಲ್ಲಿ ಮಾತ್ರವೇ ಈ ಚೀಟಿಯನ್ನು ತೆಗೆದು ನೋಡು ಎಂದು ಹೇಳಿ ಅವನ ಕೈಗೆ ಚೀಟಿಯೊಂದನ್ನು ಕೊಟ್ಟರು. ಮರು ಮಾತಿಲ್ಲದ ಅದನ್ನು ತೆಗೆದುಕೊಂಡು ತನ್ನ ಜೋಬಿನೊಳಗೆ ಇಟ್ಟುಕೊಂಡ. ರೈಲು ಹೊರಡುತ್ತಿದ್ದಂತೆಯೇ ಅಪ್ಪನಿಗೆ ಟಾಟ ಮಾಡಿದ ಶಂಕರ ತನ್ನ ಭ್ರಮಾ ಲೋಕದಲ್ಲಿ ಮುಳುಗಿದ.

trr2

ಮೊದಲ ಬಾರಿಗೆ ಒಬ್ಬಂಟಿಯಾಗಿ ರೈಲಿನಲ್ಲಿ ಅಷ್ಟು ದೂರ ಪ್ರಯಾಣ ಮಾಡುತ್ತಿದ್ದಾನೆ. ಮೊದಲ ಬಾರಿಗೆ ಅಕ್ಕ ಪಕ್ಕದಲ್ಲಿ ಅಪ್ಪ ಅಮ್ಮಾ ಇಲ್ಲದೇ ಅಪರಿಚಿತರೊಂದಿಗೆ ಹೊಗುತ್ತಿರುವುದು ಸ್ವಲ್ಪ ಅಳುಕೆನಿಸಿತಾದರೂ, ಅದನ್ನು ತೋರಿಸಿಕೊಳ್ಳದೇ ಕಿಟಕಿಯಲ್ಲಿ ಹೊರಗಿನ ದೃಶ್ಯಾವಳಿಗಳನ್ನು ನೋಡುತ್ತಾ ಹೋದ. ರೈಲಿನ ಹೊರಗೆ ನಿಂತು ಟಾಟಾ ಮಾಡುತ್ತಿದ್ದ ಪುಟ್ಟ ಮಕ್ಕಳತ್ತ ಇವನೂ ಸಂತೋಷದಿಂದ ಟಾಟಾ ಮಾಡಿದ. ರೈಲು ತನ್ನ ವೇಗವನ್ನು ಹೆಚ್ಚಿಸಿಕೊಂಡತೆ ಅಕ್ಕ ಪಕ್ಕದಲ್ಲಿದ್ದ ಮರ ಗುಡ್ಡಗಳೆಲ್ಲಾ ಅವನ ಜೊತೆ ಓಡುವಂತೆ ಭಾಸವಾಗುತ್ತಿರುವುದು ಅವನಿಗೆ ಅಚ್ಚರಿ ಮೂಡಿಸಿತು. ಅಷ್ಟರಲ್ಲಾಗಲೇ ರೈಲಿನಲ್ಲಿ ಚುರುಮುರಿ, ಕಡಲೇ ಕಾಯಿ ಸೌತೇಕಾಯಿ, ಟೀ ಕಾಫೀ ಮಾರುವವರು ಒಬ್ಬೊಬ್ಬರಾಗಿ ಬರತೊಡಗಿದರು. ಚುರುಮುರಿ ಕೊಂಡು ತಿನ್ನ ಬೇಕಿನಿಸಿ, ಜೋಬಿಗೆ ಕೈ ಹಾಕಿದರೂ, ರೈಲಿನಲ್ಲಿ ಹೊರಗಿನದ್ದೇನೂ ತಿನ್ನಬಾರದು ಮತ್ತು ಪರಿಚಿತರು ಏನು ಕೊಟ್ಟರೂ ತಿನ್ನಬಾರದೆಂದು ಅಮ್ಮಾ ಹೇಳಿದ್ದು ನೆನಪಾಗಿ ಹಾಗೇ ಸುಮ್ಮನೆ ಕುಳಿತುಕೊಂಡ. ಕೂಡಲೇ ಬ್ಯಾಗಿಗೆ ಕೈ ಹಾಕಿ ಅಮ್ಮ ಮಾಡಿಕೊಟ್ಟಿದ್ದ ಖಾರದ ಅವಲಕ್ಕಿ ತಿಂದು ನೀರು ಕುಡಿದ.

tr5

ಮನೆಯಿಂದ ತಂದಿದ್ದ ಪುಸ್ತವನ್ನು ತೆರೆದು ಸ್ವಲ್ಪ ಕಾಲ ಓದುತ್ತಿದ್ದಂತೆಯೇ. ಚಲಿಸುವ ರೈಲಿನಲ್ಲಿ ಓದುವಾಗ ಕಣ್ಣು ಒಂದು ರೀತಿ ಮಂಜು ಮಂಜಾದಂತಾದಾಗ ಪುಸ್ತಕ ಮುಚ್ಚಿಟ್ಟು ಕಿಟಕಿಯ ಹೊರಗಿನ ಪ್ರಕೃತಿಯತ್ತ ಕಣ್ಣು ಹಾಯಿಸುತ್ತಾ ಸುಂದರ ಪ್ರಕೃತಿಯನ್ನು ಆಹ್ಲಾದಿಸುತ್ತಿದ್ದಂತೆಯೇ ಇದ್ದಕ್ಕಿಂದಂತೆಯೇ ರೈಲಿನಲ್ಲಿ ಕತ್ತಲಾವರಿಸಿತು. ಎಲ್ಲರೂ ಜೋರಾಗಿ ಹೋ.. ಎಂದು ಕಿರುಚತೊಡಗಿದರು. ಶಂಕರನಿಗೂ ಕೊಂಚ ಭಯವಾಗಿ ಪಕ್ಕದ್ದಲ್ಲಿದವರನ್ನು ಬಾಚಿ ತಬ್ಬಿಕೊಂಡ. ಅವರೂ ಸಹಾ ಶಂಕರನನ್ನು ಸಂತೈಸುವಷ್ಟರಲ್ಲಿ ಬೋಗಿಯಲ್ಲಿ ಬೆಳಕು ಹರಿದಿತ್ತು. ರೈಲು ಬೆಟ್ಟವನ್ನು ಕೊರೆದು ಸುರಂಗ ಮಾರ್ಗದಲ್ಲಿ ಹೋಗಿದ್ದ ಕಾರಣ ಹಾಗಾಯಿತೆಂದೂ ಮುಂದೆ ಇಂತಹ ಹತ್ತಾರು ಸುರಂಗಳಲ್ಲಿ ರೈಲು ಹೋಗುತ್ತದೆ ಎಂಬುದನ್ನು ಪಕ್ಕದವರಿಂದ ತಿಳಿದುಕೊಂಡು ಸ್ವಲ್ಪ ಸಾವರಿಸಿಕೊಂಡ.

trr3

ಅದಾದ ಸ್ವಲ್ಪ ಹೊತ್ತಿನಲ್ಲಿಯೇ ರೈಲು ಮತ್ತೊಂದು ಸುರಂಗ ಮಾರ್ಗದೊಳಗೆ ಚಲಿಸುತ್ತಿದ್ದಂತೆಯೇ ಇಡೀ ಬೋಗಿ ಕತ್ತಲಾಗಿಹೋಯಿತು. ಮತ್ತೊಮ್ಮೆ ಎಲ್ಲರ ಗಡಚಿಕ್ಕುವ ಚೀರಾಟ. ಕಳೆದ ಬಾರಿಗಿಂತಲೂ ಈ ಬಾರಿಯ ಸುರಂಗ ದೊಡ್ಡದಿದ್ದ ಕಾರಣ ಶಂಕರನಿಗೆ ನಿಜಕ್ಕೂ ಭಯ ಮೂಡಿ ಒಮ್ಮೆ ಕೈ ಕಾಲು ನಡುಗಿ ಅವನಿಗೇ ಅರಿವಿಲ್ಲದಂತೆ ಅಪ್ಪಾ ಅಮ್ಮಂದಿರ ನೆನಪಾಗಿ ಕಣ್ಣುಗಳಲ್ಲಿ ನೀರೂರಿತು. ತನಗೆ ಅರಿವಿಲ್ಲದಂತೆ ಅವನೂ ಜೋರಾಗಿ ಕೂಗಿ, ತನ್ನನ್ನು ತಾನು ಸಂತೈಸಿಕೊಳ್ಳಲು ಪ್ರಯತ್ನಿಸಿದ. ಆದರೆ ಅದು ಸಾಲದೇ, ನಿನಗೆ ಭಯ ಅಥವಾ ತುರ್ತಾದ ಸಹಾಯದ ಅವಶ್ಯಕತೆ ಇದ್ದಲ್ಲಿ ಇದನ್ನು ತೆರೆದು ನೋಡು ಎಂದು ಅಪ್ಪಾ ಕೊಟ್ಟಿದ್ದ ಚೀಟಿಯ ನೆನಪಾಗಿ, ಅಪ್ಪಾ ಆ ಚೀಟಿಯಲ್ಲಿ ಏನು ಬರೆದಿರಬಹುದು? ಎಂದು ಕೂಡಲೇ ಜೋಬಿಗೆ ಕೈ ಹಾಕಿ ಚೀಟಿಯನ್ನು ತೆಗೆಯುವಷ್ಟರಲ್ಲಿ ಮತ್ತೆ ಬೆಳಕು ಮೂಡಿ ಅಪ್ಪಾ ಬರೆದಿದ್ದು ಸ್ಪಷ್ಟವಾಗಿ ಕಾಣ ತೊಡಗಿತು. ನಡುಗುವ ಕೈಗಳಿಂದಲೇ ಅಪ್ಪಾ ಬರೆದದ್ದನ್ನು ಓದುತ್ತಿದ್ದಂತೆಯೇ ಧಾರಾಕಾರವಾಗಿ ಕಣ್ಣಿರ ಕೋಡಿ ಹರಿದು, ಕೂಡಲೇ ತನ್ನ ಸೀಟಿನಿಂದ ಇಳಿದು ಅಪ್ಪನನ್ನು ಕಾಣಲು ಓಡತೊಡಗಿದ.

ಮಗನಿಗೆ ಧೈರ್ಯ ಬರಲೆಂದು ಆತನ ಆತ್ಮ ವಿಶ್ವಾಸ ಹೆಚ್ಚಿಸಲೆಂದು ಮಗನನ್ನು ಒಬ್ಬಂಟಿಯಾಗಿ ರೈಲಿನಲ್ಲಿ ತಾತನ ಮನೆಗೆ ಕಳುಹಿಸಲು ಒಪ್ಪಿಕೊಂಡರೂ, ಒಬ್ಬ ತಂದೆಯಾಗಿ ಮಗನ ವಾತ್ಸಲ್ಯದಿಂದ ಹೊರತಾಗಿರದೇ, ಮಗನಿಗೆ ತಿಳಿಸದೇ ತಾವೂ ಸಹಾ ಅದೇ ಬೋಗಿಯ ಕಡೆಯ ಸೀಟಿನಲ್ಲಿ ಪ್ರಯಾಣ ಮಾಡುತ್ತಿದ್ದರು ಮೂರ್ತಿಗಳು.
.

ಮಗನೇ, ನಿನಗೆ ಭಯವಾದಾಗ ಮತ್ತು ತುರ್ತು ಅವಶ್ಯಕತೆ ಬಂದ ಕೂಡಲೇ ಇದೇ ಬೋಗಿಯ ಸೀಟ್ ನಂ 72ಕ್ಕೆ ಬಾ. ನಿನ್ನ ಸಹಾಯಕ್ಕಾಗಿ ನಾನು ಇರುತ್ತೇನೆ. ಎಂದು ಆ ಚೀಟಿಯಲ್ಲಿ ಬರೆದು ಮಗನ ಕೈಗೆ ಕೊಟ್ಟಿದ್ದರು ಮೂರ್ತಿಗಳು.

tr4

ರೈಲು ಸುರಂಗ ಮಾರ್ಗದಲ್ಲಿ ಹೋದಾಗ ಮಗನ ಚೀರಾಟ ಕೇಳಿ ಕರುಳು ಚುರುಕ್ ಎಂದರೂ, ಮಗನ ದೈರ್ಯ ಮತ್ತು ಸ್ಥೈರ್ಯವನ್ನು ಪರೀಕ್ಷಿಸುವ ಸಲುವಾಗಿ ತಮ್ಮ ಸೀಟಿನಲ್ಲಿ ಗಟ್ಟಿಯಾಗಿ ಕುಳಿತು ಮನಗ ಆಗಮನದ ನಿರೀಕ್ಷೆಯಲ್ಲಿಯೇ ಇದ್ದ ಮೂರ್ತಿಗಳಿಗೆ, ಶಂಕರ ಅವರ ಬಳಿ ಬಂದು ತಬ್ಬಿಕೊಂಡಾಗ ಅವರಿಗೂ ಅರಿವಿಲ್ಲದಂತೆ ಕಣ್ಣಿನಲ್ಲಿ ನೀರು ಹರಿಯ ತೊಡಗಿತು. ಅಪ್ಪಾ ಮಗ ಒಬ್ಬರನ್ನೊಬ್ಬರು ತಬ್ಬಿಕೊಂಡು ಕೆಲ ನಿಮಿಷಗಳ ಕಾಲ ಪರಸ್ಪರ ಸಂತೈಸುವ ಸಮಯದಲ್ಲಿ ಕಣ್ಣಿರ ಧಾರೆ ಕೋಡಿಯಂತೆ ಹರಿಯಿತು. ಕೆಲ ಕಾಲದ ನಂತರ ಇಬ್ಬರೂ ಸಮಾಧಾನಗೊಂಡು ಪ್ರಯಾಣ ಮುಂದುವರೆಸಿ ಸಂಜೆಯ ಹೊತ್ತಿಗೆ ತಮ್ಮ ಊರು ತಲುಪಿದರು.

ಕೇವಲ ಮೊಮ್ಮಗನ ನೀರೀಕ್ಷೆಯಲ್ಲಿದ್ದ ತಾತನವರಿಗೆ ಮಗ ಮತ್ತು ಮೊಮ್ಮಗ ಇಬ್ಬರನ್ನೂ ಕಂಡು ಅಚ್ಚರಿಗೊಂಡರು. ಅಪ್ಪಾ ಮತ್ತು ಮಗ ತಾತನ ಕಾಲಿಗೆ ಎರಗುತ್ತಿದ್ದಂತೆಯೇ ಅವರಿಬ್ಬರನ್ನೂ ಸಾವರಿಸಿಕೊಂದು ಮೇಲಕ್ಕೆ ಎತ್ತಿದ ತಾತ, ಮತ್ತೊಮ್ಮೆ ಮೂರು ಜನ ಒಬ್ಬರನ್ನೊಬ್ಬರು ತಬ್ಬಿಕೊಂಡಾಗ ಧಾರಾಕಾರವಾಗಿ ಆನಂದ ಭಾಷ್ಪ ಹರಿಯಿತು. ಸ್ವಾಮೀ.. ನಡೀರೀ.. ನಡೀರೀ.. ಕತ್ಲಾಗೊಕ್ ಮುಂಚೆ, ಊರ್ ಸೇರ್ಕೊಂಡ್ ಬುಡಾಣಾ.. ಅಮ್ಮೋರು ನಮ್ಗಾಗಿ ಊರ್ನಾಗೆ ಕಾಯ್ತಾ ಇರ್ತಾರೆ ಎಂದು ತಾತನ ಜೊತೆಗೆ ಗಾಡಿಯನ್ನು ಹೊಡೆದುಕೊಂಡು ಬಂದಿದ್ದ ತಿಮ್ಮ ಜೋರಾಗಿ ಹೇಳಿದಾಗಲೇ ಎಲ್ಲರೂ ವಾಸ್ತವ ಲೋಕಕ್ಕೆ ಎಲ್ಲರೂ ಮರಳಿದರು.

tr6

ಎಲ್ಲರೂ ಸಂತೋಷದಿಂದ ಎತ್ತಿನ ಬಂಡಿಯನ್ನೇರಿದರು. ಶಂಕರ ತಿಮ್ಮನ ಜೊತೆ ತಾನೂ ಎತ್ತುಗಳ ಹಗ್ಗವನ್ನು ಹಿಡಿದು ಹೋಯ್ ಹೋಯ್ ಹಚ್ಚಾ ಹಚ್ಚಾ.. ನಡೀ ನಡೀ.. ಎಂದು ಎತ್ತುಗಳನ್ನು ಹುರಿದುಂಬಿಸುತ್ತಾ ಊರನ್ನು ತಲುಪುವ ಹೊತ್ತಿಗೆ ಸೂರ್ಯ ಪಶ್ಚಿಮದಿಕ್ಕಿನಲ್ಲಿ ಕಿತ್ತಳೇ ಆಕಾರದಲ್ಲಿ ಮುಳುಗುತ್ತಿದ್ದ. ಮತ್ತೊಂದು ದಿಕ್ಕಿನಲ್ಲಿ ಇವರ ಆಗಮನದ ನಿರೀಕ್ಷೆಯಲ್ಲಿಯೇ ಕಾಯುತ್ತಿದ್ದಂತೆ ಚಂದ್ರನೂ ಸಹಾ ನಗುಮುಖದಲ್ಲಿ ಸ್ವಾಗತಿಸಲು ಸಿದ್ಧನಾಗಿದ್ದ.

ಅಜ್ಜಿ ಮೂವರನ್ನು ಆರತಿ ಮಾಡಿ ಒಳಗೆ ಕರೆದುಕೊಂಡರು, ಮತ್ತೆ ಅಪ್ಪಾ ಮತ್ತು ಮಗ ಅಜ್ಜಿಯ ಕಾಲಿಗೆ ನಮಸ್ಕರಿಸಿ ಆಕೆಯ ಆಶೀರ್ವಾದ ಪಡೆದು ಸೀದಾ ಬಚ್ಚಲು ಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ದೇವರ ಮನೆಗೆ ಹೋಗಿ ತಮ್ಮ ಕುಲದೈವಕ್ಕೆ ಕೈ ಮುಗಿಯುವಷ್ಟರಲ್ಲಿ, ಬಿಸಿ ಬಿಸಿ ಕಾಫೀ ಮತ್ತು ಹಾಲು ಮತ್ತು ಜೊತೆಗೆ ಮೊಮ್ಮಗನಿಗೆಂದು ಪ್ರೀತಿಯಿಂದ ಮಾಡಿದ ಕುರುಕುಲು ತಿಂಡಿಯೊಂದಿಗೆ ಅಜ್ಜಿ ಯಥಾಪ್ರಕಾರ ಹಾಜರ್. ಎಲ್ಲರೂ ಸಂತೋಷದಿಂದ ಸೇವಿಸುತ್ತಿರುವಾಗ, ಅಜ್ಜಿ, ಲೋ ಮಗೂ ಶಂಕರಾ.. ನಿಮ್ಜೊತೆ ನಿಮ್ಮಮ್ಮನನ್ನೂ ಕರೆದುಕೊಂಡು ಬಂದಿದ್ರೇ ಚೆನ್ನಾಗಿರ್ತಿತ್ತಲ್ವೇನೋ? ಅವಳನ್ನೋಬ್ಬಳೇ ಯಾಕೆ ಬಿಟ್ಟು ಬಂದ್ರೀ? ಎಂದು ಕೇಳಿದಾಗ, ಮೂರ್ತಿಗಳು ತಮ್ಮ ಮಗನ ಧೈರ್ಯ ಮತ್ತು ಶೌರ್ಯದ ಪ್ರತಾಪವನ್ನು ಪ್ರಲಾಪ ಮಾಡುತ್ತಿದ್ದಂತೆಯೇ, ಹೇ.. ಹೋಗಿಪ್ಪಾ.. ಎಂದು ಅಪ್ಪನ ಮೇಲೆ ಹುಸಿ ಕೋಪ ತೋರಿಸುತ್ತಾ ಅಜ್ಜಿನ ಸೆರಗಿನಲ್ಲಿ ಬಚ್ಚಿಟ್ಟುಕೊಂಡ ಶಂಕರ.

tr7

ಅಂದು ಅಜ್ಜಿಯ ಮನೆಗೆ ರೈಲಿನಲ್ಲಿ ಒಬ್ಬಂಟಿಯಾಗಿ ಹೋಗಲು ಭಯಪಟ್ಟವ ಇಂದು ಶತ್ರುಗಳಿಂದ ದೇಶವನ್ನು ಕಾಪಾಡುವ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತ, ನೂರಾರು ಸೈನಿಕರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿಸುವ ಪೈಲೆಟ್ ಆಗಿರುವುದಲ್ಲದೇ, ಅಗತ್ಯಬಿದ್ದಾಗ ಫೈಟರ್ ಪೈಲೆಟ್ ಆಗಿ ಖುದ್ದಾಗಿ ಶತ್ರುಗಳ ಮೇಲೆ ಆಕ್ರಮಣ ಮಾಡಿ ದೇಶವನ್ನು ರಕ್ಷಿಸಬಲ್ಲಂತಹ ಸಮರ್ಥನಾಗಿದ್ದಾನೆ. ಆತ ಎಷ್ಟೇ ಉನ್ನತ ಹುದ್ದೆಗೇರಿದ್ದರೂ ಪ್ರತೀ ಬಾರಿಯೂ ತನ್ನ ಬೆಂಬಲಕ್ಕೆ ಆಪದ್ಭಾಂಧವರಂತೆ ನಿಂತ ತಂದೆ, ತಾಯಿಯರನ್ನು ಮತ್ತು ತನಗೆ ವೀರಪುರುಷರ ಕಥೆಗಳನ್ನು ಹೇಳಿ ದೇಶದ ಬಗ್ಗೆ ಜಾಗೃತಿ ಮೂಡಿಸಿದ ಅಜ್ಜಾ ಅಜ್ಜಿಯರನ್ನು ನೆನಪಿಸಿಕೊಳ್ಳುವುದನ್ನು ಮೆರೆಯುವುದಿಲ್ಲ. ಇದೇ ಅಲ್ಲವೇ ನಮ್ಮ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿ.

tr8

ನೆನ್ನೆ ಕೆಲ ಲಜ್ಜೆಗೆಟ್ಟ ದೇಶ ವಿದ್ರೋಹಿಗಳಾದ ನಕ್ಸಲರು ಹೇಡಿಗಳಂತೆ ನಮ್ಮ ಸೈನಿಕರ ಮೇಲೆ ಹಿಂದಿನಿಂದ ಅಕ್ರಮಣ ಮಾಡಿ 20ಕ್ಕೂ ಹೆಚ್ಚಿನ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ನಿಜಕ್ಕೂ ಆಘಾತಕಾರಿ ಮತ್ತು ಖಂಡನಾರ್ಹವಾದ ಸಂಗತಿ. ಈ ದುರ್ಘಟನೆಯಲ್ಲಿ ಹುತಾತ್ಮರಾದವರ ಕುಟುಂಬದ ಕಣ್ಣೀರನ್ನು ಒರೆಸಿ ಅವರ ಸಾವಿಗೆ ಕಾರಣರಾದವರನ್ನೂ ನರಕ್ಕೆ ಅಟ್ಟಲು ಶಂಕರನಂತಹ ಲಕ್ಷಾಂತರ ವೀರ, ಧೀರ ಯೋಧರುಗಳು ಸನ್ನದ್ದರಾಗಿದ್ದಾರೆ ಎನ್ನುವುದಂತೂ ಸತ್ಯ. ಧರ್ಮ ಮತ್ತು ಅಧರ್ಮದ ಯುದ್ದದ ಆರಂಭದಲ್ಲಿ ಅಧರ್ಮೀಯರಿಗೇ ಜಯವಾದರೂ ಅಂತಿಮವಾದ ಜಯ ಧರ್ಮದ್ದೇ ಆಗಿರುತ್ತದೆ. ಅಧರ್ಮೀಯರು ಹೇಳ ಹೆಸರಿಲ್ಲದಂತೆ ನಾಶವಾಗುವುದಂತೂ ಸತ್ಯ ಸತ್ಯ ಸತ್ಯ.

ಏನಂತೀರೀ?

ನಿಮ್ಮವನೇ ಉಮಾಸುತ

ಸೂಚನೆ: ಬಹಳ ವರ್ಷಗ ಹಿಂದೆ ಓದಿದ್ದ ಸಂದೇಶ ಒಂದರಿಂದ ಸ್ಪೂರ್ತಿ ಪಡೆದು ಮೂಡಿ ಬಂದ ಕತೆ.

ಅಚ್ಚುತಾ ಅನಂತಾ ಗೋವಿಂದಾ. ಭಾಗ-1

ಭಾರತದ ದೇಶದಲ್ಲಿ ಅದೋಂದು ಸಣ್ಣ ಗ್ರಾಮ. ಆ ಗ್ರಾಮದಲ್ಲೊಬ್ಬ ವೃದ್ದ ದಂಪತಿಗಳು ವಾಸಿಸುತ್ತಿದ್ದರು. ಮನೆಯ ಹತ್ತಿರವೇ ನದಿಯೊಂದು ಹರಿಯುತ್ತಿದ್ದ ಕಾರಣ ಅವರ ಭಾವಿಯಲ್ಲಿ ಕೇವಲ  10 ಅಡಿಗಳ ಆಳದಲ್ಲಿಯೇ ನೀರಿದ್ದರಿಂದ  ಅವರ  ಮನೆಯ  ಸುತ್ತಲೂ ಮಾವು, ತೆಂಗು, ಹಲಸಿನ ಮರಗಳಲ್ಲದೇ ದಿನ ನಿತ್ಯ ಪೂಜೆಗೆ ಬೇಕಾಗುವಂತಹ ಹೂವಿನ ಗಿಡಗಳಲ್ಲದೇ, ಮನೆಗೆ ಅವಶ್ಯಕವಾಗಿದ್ದ ತರಕಾರಿಗಳನ್ನೂ ತಮ್ಮ ಕೈತೋಟದಲ್ಲಿಯೇ ಬೆಳೆಯುತ್ತಾ ಆನಂದಮಯ ಜೀವನವನ್ನು ನಡೆಸುತ್ತಿದ್ದರು.

ಇದಲ್ಲದೇ ಅವರ ಬಳಿ ಭತ್ತ ಬೆಳೆಯುವ ಫಲವತ್ತದ ಸಾಕಷ್ಟು ಗದ್ದೆಯಿದ್ದು ಜೀವನಕ್ಕೇನೂ ಕೊರತೆ ಇರರಲಿಲ್ಲವಾದರೂ, ಸದಾಕಾಲವೂ ಕಚ್ಚೆ ಪಂಚೆ ಉಟ್ಟುಕೊಂಡು ಪುರೋಹಿತ ವೃತ್ತಿಯನ್ನು ಮಾಡುತ್ತಿದ್ದರು.  ಅವರ ಪತ್ನಿಯೂ ಸಹಾ ಒಂಬತ್ತು ಗಜದ ಸೀರೆಯನ್ನು ಧರಿಸುತ್ತಾ ಬಹಳ ಶ್ರದ್ಧಾ ಭಕ್ತಿಯುಳ್ಳ ಆಸ್ತಿಕರಾಗಿದ್ದರು. ವೇದ ಮತ್ತು ಪುರಾಣಗಳನ್ನು ಚೆನ್ನಾಗಿ ತಿಳಿದು ಕೊಂಡು ಊರಿನ ಎಲ್ಲಾ ಶುಭ ಮತ್ತು ಆಶುಭ ಕಾರ್ಯಗಲು ಇವರ ಪೌರೋಹಿತ್ಯದಲ್ಲಿಯೇ ನಡೆಯುತ್ತಿತ್ತು. ಆವರೆಂದೂ ಇಷ್ಟು ಕೊಡಿ ಅಷ್ಟು ಕೊಡಿ ಎಂದು ಯಾರನ್ನೂ ಕೇಳಿದವರಲ್ಲಾ. ಊರಿನವರು ಕೊಟ್ಟಷ್ಟೇ ದಕ್ಷಿಣಿಗೆ ತೃತ್ಪಿಹೊಂದುತ್ತಿದ್ದರಲ್ಲದೇ, ಸಹಾಕಾಲವೂ ಎಲ್ಲರೀಗೂ ಒಳ್ಳೆಯದಾಗಲೀ ಎಂದೇ ಹರಸುತ್ತಿದ್ದರು. ಆ ಕಾರಣದಿಂದಾಗಿ ಊರಿನ ಎಲ್ಲರೂ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು.

ಅವರ ಏಕೈಕ ಪುತ್ರ ಮೋಹನ್ ಬಹಳ ಬುದ್ಧಿವಂತ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹೆಚ್ಚಿನ ವ್ಯಾಸಂಗಕ್ಕೆಂದು ಅಮೇರಿಕಾದ ಕ್ಯಾಲೀಫೋರ್ನಿಯಾಕ್ಕೆ ಹೋದವನು ಅಲ್ಲಿಯೇ ಕೆಲಸ ಗಿಟ್ಟಿಸಿಕೊಂಡು ಸಂಸಾರವಂದಿಗನಾಗಿ ತನ್ನ ಪತ್ನಿ ಮತ್ತು 11 ವರ್ಷದ ಮಗನೊಂಡಿಗೆ ವಾಸಿಸುತ್ತಿದ್ದನು.

ತಂದೆ ತಾಯಿಯರಿಬ್ಬರೂ ಸದಾಕಾಲವೂ ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದ ಕಾರಣ, ಕ್ಯಾಲಿಫೋರ್ನಿಯಾದಲ್ಲಿಯೇ ಜನಿಸಿದ ಆ 11 ವರ್ಷದ ಪೋರನಿಎ ತಂದೆ ತಾಯಿಯರ ನಿಜವಾದ ಪ್ರೀತಿವಾತ್ಸಲ್ಯಗಳಿಂದ ವಂಚಿತನಾಗಿ ಕಂಪ್ಯೂಟರ್ ಮತ್ತು ಟಿವಿ ಆಟಗಳಲ್ಲಿಯೇ ತನ್ನ ಕಾಲ ಕಳೆಯುತ್ತಿದ್ದ. ಇದಕ್ಕಿಂತಲೂ ಹೆಚ್ಚಾಗಿ ಆ ಹುಡುಗ, ಹುಟ್ಟಿನಿಂದಲೂ ಶ್ವಾಸಕೋಶ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ. ಅಲ್ಲಿನ ವೈದ್ಯರುಗಳೂ ಸಹಾ  ಹುಡುಗನನ್ನು ಕೂಲಕುಂಶವಾಗಿ ಪರೀಕ್ಷಿಸಿ, ಹುಡುಗನ ಶ್ವಾಸಕೋಶ ಕುಗ್ಗುತ್ತಿದೆಯಾದ ಕಾರಣ ಅವನಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಮತ್ತು ಅದಕ್ಕೆ ಬಹಳ ಖರ್ಚಾಗುತ್ತದೆ ಎಂದು ತಿಳಿಸಿದ್ದರು. ಗಂಡ ಹೆಂಡತಿಯರಿಬ್ಬರೂ ತಮ್ಮ ವೃತ್ತಿಜೀವನದ ಕಡೆಯೇ ಗಮನ ಹರಿಸಿದ್ದ ಕಾರಣ, ಭಾರತದಲ್ಲಿದ್ದ ಅವರ ವೃದ್ಧ ತಂದೆತಾಯಿಯರು ಮೊಮ್ಮಗನನ್ನು ನೋಡಲು ಕಾತರದಿಂದ ಸಾಕಷ್ಟು ಬಾರೀ ಕೋರಿಕೊಂಡಿದ್ದರೂ ಆ ದಂಪತಿಗಳಿಗೆ ಭಾರತಕ್ಕೆ ಬರಲೂ ಸಾಧ್ಯವಾಗಿರಲಿಲ್ಲ. ಸಾಧ್ಯವಾಗಿರಲಿಲ್ಲ ಎನ್ನುವುದಕ್ಕಿಂತ ಅವರು ಭಾರತಕ್ಕೆ ಬರಲು ಮನಸ್ಸು ಮಾಡಿರಲಿಲ್ಲ ಎಂದರೇ ಸೂಕ್ತವಾಗುತ್ತದೆ.

ತಮ್ಮ ಮಗ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನಾ ತನ್ನ ತಾತಾ ಅಜ್ಜಿಯರನ್ನೊಮ್ಮೆ ನೋಡಿ ಬಿಡಲಿ ಎಂದು ನಿರ್ಧರಿದ್ದರಿಂದ ಅವರೆಲ್ಲರೂ ಆ ಬೇಸಿಗೆಯಲ್ಲಿ ಭಾರತಕ್ಕೆ ಬರುತ್ತಾರೆ. ಅನೇಕ ವರ್ಷಗಳ ನಂತರ ತಮ್ಮ ಮಗ ಸೊಸೆಯನ್ನು ನೋಡುತ್ತಿದ್ದರೂ ಆ ವೃದ್ಧ ದಂಪತಿಗಳ ಗಮನವೆಲ್ಲಾ ಮೊತ್ತ ಮೊದಲ ಬಾರಿಗೆ ತಮ್ಮ ಊರಿಗೆ ಬರುತ್ತಿದ್ದ  ತಮ್ಮ ಮೊಮ್ಮಗನ ಕಡೆಗೆ ಇತ್ತು ಎಂದು ಹೇಳಬೇಕಿಲ್ಲ.

ಮೊಮ್ಮಗ ಸ್ಯಾಮ್ (ಸಂಪತ್)ನಿಗೂ ತಾತಾ ಅಜ್ಜಿಯರನ್ನು ನೋಡಿದ ಕೂಡಲೇ ಅತ್ಯಾನಂದವಾಯಿತು. ನಿಜ ಹೇಳಬೇಕೆಂದರೆ, ನಿಜವಾದ ಪ್ರೀತಿ ವಾತ್ಸಲ್ಯದ ಸುಖಃ ಮತ್ತು ಸಂತೋಷ ಹೇಗೆ ಇರುತ್ತದೆ ಎಂಬುದನ್ನು ಮೊತ್ತ ಮೊದಲಬಾರಿಗೆ ಆತ ತನ್ನ ಅಜ್ಜಿ ಮತ್ತು ತಾತನಲ್ಲಿ ಕಂಡು ಬಹಳ ಸಂಭ್ರಮದಲ್ಲಿ ತೇಲಾಡತೊಡಾಗಿದನು.

sam5ತಾತಾ ತನ್ನ ಮೊಮ್ಮಗನಿಗೇ  ಪ್ರತಿ ದಿನ ಬೆಳಿಗ್ಗೆ ಒಂದೊಂದು ಶ್ಲೋಕಗಳನ್ನು  ಕಲಿಸಿ ಕೊಡುತ್ತಿದ್ದರೇ, ಮೊಮ್ಮಗನೂ ಸಹಾ ಅತ್ಯಂತ ಶ್ರಧ್ಧೆಯಿಂದ ಅತೀ ಶೀಘ್ರದಲ್ಲೇ ತಾತಾ ಹೇಳಿ ಕೊಟ್ಟ ಶ್ಲೋಕಗಳನ್ನೆಲ್ಲಾ ಕಲಿಯುತ್ತಿದ್ದದ್ದು ತಾತನಿಗೆ ಖುಷಿ ಕೊಡುತ್ತಿತ್ತು ಮತ್ತು ಅದನ್ನು ತನ್ನ ಊರಿನ ಎಲ್ಲರ ಬಳಿಯಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ತಾತಾ ಎಲ್ಲಿಗೇ ಹೋದರೂ ಅವರನ್ನು ಹಿಂಬಾಲಿಸುತ್ತಾ ಒಂದು ರೀತಿಯಲ್ಲಿ ಮೊಮ್ಮಗ ತಾತನ ಬಾಲವಾಗಿ ಹೋಗಿದ್ದ ಎಂದರೂ ತಪ್ಪಾಗಲಾರದು. ತಾತನ ಜೊತೆ ದೇವಸ್ಥಾನ, ಹೊಲ ಗದ್ದೆಗಳಿಗೆ ಹೋಗಿ ಅಲ್ಲಿಯ ಸ್ವಚ್ಚಂದ ಪರಿಸರವನ್ನು ಅತ್ಯಂತ ಸಂತೋಷದಿಂದ ಆನಂದಿಸತೊಡಗಿದ.

ಇನ್ನು ಮೊಮ್ಮಗನನಿಗೆ  ಅವನ ಅಜ್ಜಿಯ ಆರೈಕೆಗಳಿಗೇನೂ ಕಡಿಮೆ ಇರಲಿಲ್ಲ ಪ್ರತೀ ದಿನ  ಬೆಳಿಗ್ಗೆ ಕ್ಯಾರೆಟ್ ಜ್ಯೂಸ್ ಕೊಡುವುದರೊಂದಿಗೆ ಅವರ ದಿನಚರಿ ಆರಂಭವಾದರೆ, ಮನೆಯಲ್ಲಿಯೇ ಕರೆದ ಗಟ್ಟಿಯಾದ ಹಾಲು, ಅದರಿಂದ ಮಾಡಿದ ಗಟ್ಟಿ ಮೊಸರು, ಹಸನಾದ ಬೆಣ್ಣೆ, ಶುದ್ಧವಾದ ತುಪ್ಪದಿಂದ ಮಾಡಿದ ಕುರುಕಲು ತಿಂಡಿಗಳು ಬಗೆ ಬಗೆಯ ಸಿಹಿ ತಿಂಡಿಗಳಿಂದ ಮೊಮ್ಮಗ ಸಂತುಷ್ಟನಾಗಿದ್ದ. ಅಜ್ಜಿಯ ಜೊತೆ ಹಸುಗಳನ್ನು ಹೊಳೆಯುವುದು, ಸೊರ್ ಸೊರ್ ಎಂದು ನೊರೆ ಹಾಲನ್ನು  ಕರೆಯುವಾಗ ಅಜ್ಜಿಯ ಸೆರಗನ್ನೇ ಹಿಡುದುಕೊಂಡು ಸಂಭ್ರಮಿಸುತ್ತಿದ್ದಲ್ಲದೇ, ಸಂಜೆ ದೀಪ ಹತ್ತಿಸಿದ ನಂತರ ಅಜ್ಜಿ ಹೇಳುತ್ತಿದ್ದ ದೇವರ ನಾಮ ಮತ್ತು ಭಜನೆಗಳನ್ನೂ ಸ್ಯಾಮ್ ಅತೀ ಶೀಘ್ರದಲ್ಲಿಯೇ ಕಲಿತು ಕೊಂಡಿದ್ದ.

ಆಷ್ಟರಲ್ಲಾಗಲೇ ಅತನಿಗೆ ಅಕ್ಕ ಪಕ್ಕದ ಹುಡುಗರು ಪರಿಚಯವಾಗಿದ್ದರು.  ಅವರ ಜೊತೆ ನದಿಗೆ ಹೋಗಿ ಈಜತೊಡಗಿದ. ತಮ್ಮ ತೋಟದಲ್ಲಿ ಮರಕೋತಿ ಆಟ, ಗೋಲಿ, ಬುಗುರಿ, ಕಬ್ಬಡಿ ಹೀಗೆ ವೀಡಿಯೋ ಗೇಮ್ ಗಳ ಹೊರತಾಗಿಯೂ ಇತರೇ ಆಟಗಳು ಇವೇ ಎಂಬುದನ್ನು ಆತ ತನ್ನ ಗೆಳೆಯರನ್ನು ನೋಡಿ ಕಲಿತು ಕೊಂಡಿದ್ದ. ಕೆಲವೇ ಕೆಲವು ದಿನಗಳಲ್ಲಿ ತಾತನ ಜೊತೆ ತಾತನಷ್ಟೇ ಗಟ್ಟಿ ಧ್ವನಿಯಲ್ಲಿ ಅವರಷ್ಟೇ ಸ್ಪಷ್ಟ ಉಚ್ಚಾರಗಳೊಂದಿಗೆ ಮಂತ್ರಗಳನ್ನು ಹೇಳತೊಡಗಿದ. ಈ ಎಲ್ಲಾ ಪ್ರಕ್ರಿಯೆಗಳಿಂದಾಗಿ ಅವನಿಗೇ ಅರಿವಿಲ್ಲದಂತೆ ಆತನ ಶ್ವಾಸಕೋಶಗಳು ವಿಸ್ತರಿಸಲು ಪ್ರಾರಂಭಿಸಿದ್ದವು. ತಾತನ ಮನೆಗೆ ಬಂದಾಗಲಿಂದಲೂ  ಆತನಿಗೆ ಹಿಂದಿನಂತೆ ಉಸಿರಾಟದ ಯಾವುದೇ ಸಮಸ್ಯೆಗಳಿರಲಿಲ್ಲ. ಹುಡುಗರೊಂದಿಗಿನ ಈಜು ಅವನ ತೋಳುಗಳಿಗೆ ಸಾಕಷ್ಟು ಶಕ್ತಿಯನ್ನು ನೀಡಿತ್ತು. ಎಲ್ಲಾ ಹುಡುಗರಂತೇ ಇವನೂ ಸಹಾ ನದಿಯ ನೀರಿಗೆ ಧುಮುಕಿ, ಉಳಿದ ಹುಡುಗರಂತೆಯೇ ವೇಗವಾಗಿ ಈಜುತ್ತಿದ್ದ. ಈಗ ಅವನು ಕೋತಿಯಂತೆ ಇತರ ಹುಡುಗರೊಂದಿಗೆ ಮರಗಳಿಂದ ಮರಕ್ಕೆ, ಕೊಂಬೆಗಳನ್ನು ಹಿಡಿದುಕೊಂಡು ನಿರಾಯಾಸವಾಗಿ ಹಾರುತ್ತಿದ್ದ.

ಯಾವುದೇ ಸಮಸ್ಯೆಗಳು ಎದುರಾದರೂ ಅಚ್ಚುತಾ, ಅನಂತಾ, ಗೋವಿಂದಾ ಎಂದು ಭಕ್ತಿಯಿಂದ ಪ್ರಾರ್ಥಿಸಿದರೆ ಬಂದ ಕಷ್ಟಗಳೆಲ್ಲವೂ ಸುಲಭವಾಗಿ ಪರಿಹಾರವಾಗುತ್ತದೆ ಎಂಬ ತನ್ನ ಅಜ್ಜಿಯ ಮಾತೇ ಅವನಿಗೆ ವೇದವಾಕ್ಯವಾಗಿ. Oh my God, Oh my God,  ಎನ್ನುತ್ತಿದ್ದವ ಈಗ ಸದಾಕಾಲವೂ, ಅಚ್ಚುತಾ, ಅನಂತಾ, ಗೋವಿಂದಾ ನಾಮ ಸ್ಮರಣೆ ಮಾಡುತ್ತಿದ್ದ.

ಮೋಹನ್ ದಂಪತಿಗಳ ರಜೆ ಮುಗಿದಿತ್ತು ಅವರು ಅಮೇರಿಕಾಕ್ಕೆ ಹಿಂದಿರಿಗಲು ಬಯಸಿದರು. ತಂದೆ, ತಾಯಿಯರ ಒತ್ತಾಯದ ಮೇರೆಗೆ ಅತ್ಯಂತ ಸಂತೋಷವಾಗಿ ಕಾಲಕಳೆಯುತ್ತಿದ್ದ ಸ್ಯಾಮನನ್ನು ಇನ್ನೂ ಕೆಲವು ದಿನಗಳ ಮಟ್ಟಿಗೆ ಇಲ್ಲಿಯೇ ಬಿಟ್ಟಿರಲು ನಿರ್ಧರಿಸಿ, ಇಲ್ಲಿಂದ ವಿಮಾನದಲ್ಲಿ ಹತ್ತಿಸಿ ಕೂರಿಸಿದರೆ ಕ್ಯಾಲಿಫೋರ್ನಿಯಾದಲ್ಲಿ ಅವರು ಬಂದು ಕರೆದುಕೊಂಡು ಹೋಗುವುದಾಗಿ ತಿಳಿಸಿದಾಗ ಸ್ಯಾಮ್ ಆನಂದಕ್ಕೆ ಪಾರವೇ ಇರಲಿಲ್ಲ.

ಮಗ ಮತ್ತು ಸೊಸೆ ಹಿಂದಿರುಗಿದ ಮೇಲೆ, ಮೊಮ್ಮಗನ ಆರೈಕೆ ಇನ್ನೂ ಹೆಚ್ಚಾಯಿತು ಅಜ್ಜಿಯ ಕ್ಯಾರೆಟ್ ಜ್ಯೂಸ್ಸ್, ಕೆನೆ ಭರಿತ ಹಾಲು, ಹುಡುಗರೊಡನೆ ನೈಸರ್ಗಿಕ ವ್ಯಾಯಾಮ, ತಾತನ ಜೊತೆ ಗಟ್ಟಿಯಾಗಿ ವೇದ ಪಾರಾಯಣ ಮತ್ತು ಅವರ ಜೊತೆ ಹೊಲ ಗದ್ದೆಗಳಲ್ಲಿನ ತಾಜಾ ಗಾಳಿಯ ಉಸಿರಾಟ ಅವನ ಆರೋಗ್ಯವನ್ನು ಸುಧಾರಿಸಿತ್ತು.  ಅಪ್ಪಾ ಕೊಟ್ಟಿದ್ದ ಒಂದು ತಿಂಗಳುಗಳ ಗಡುವು ಮುಗಿದು ಭಾರವಾದ ಹೃದಯದಿಂದ, ಒಲ್ಲದ ಮನಸ್ಸಿನಿಂದಲೇ ಮುಂದಿನ ವರ್ಷ ಖಂಡಿತವಾಗಿಯೂ ಬರುತ್ತೇನೆ ಎಂದು ವಾಗ್ದಾನ ಮಾಡಿ ಅಮೇರಿಕಾದ ವಿಮಾನ ಹತ್ತಿದ್ದ. ಅಜ್ಜಿಯೂ ಮುದ್ದಿನ ಮೊಮ್ಮಗನಿಗಾಗಿ ಬಗೆ ಬಗೆಯ ತಿಂಡಿಗಳನ್ನು ಮಾಡಿ ಕಳುಹಿಸಿದ್ದರು.

sam7ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ  ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣ ತಲುಪುತ್ತೇವೆ ಎಂದು ಪೈಲೆಟ್ ಹೇಳಿದ್ದು ಸ್ಯಾಮ್ ಕಿವಿಗೆ ಬಿದ್ದ ಕೆಲವೇ ಕೆಲವು ನಿಮಿಷಗಳಲ್ಲಿಯೇ ವಿಮಾನದ ಹೊರಗಿನ ಗುಡುಗು ಮತ್ತು ಮಿಂಚು ವಿಮಾನವನ್ನು ನಡುಗುವಂತೆ ಮಾಡಿತು. ವಿಮಾನ ಇದ್ದಕ್ಕಿದ್ದಂತೆಯೇ ಅಲ್ಲಾಡತೊಡಗಿ ಎಲ್ಲಾ ಪ್ರಯಾಣಿಕರೂ ಗಾಭರಿಯಾಗತೊಡಗಿದರು. ವಿಮಾನವೂ ಕೂಡಾ   ಎಟಿಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತ್ತು. ಎಲ್ಲರಿಗೂ ಉಸಿರಾಟದ ತೊಂದರೆಯಾಗಿ ಆಮ್ಲಜನಕದ ಮುಖವಾಡಗಳು ಕೆಳಗಿಳಿದವು. ಗಗನ ಸಖಿಯರು ಅತ್ತಿಂದಿತ್ತ ಗಾಭರಿಯಿಂದ ಓಡಾಡುತ್ತಾ ಎಲ್ಲರಿಗೂ ಸೀಟ್ ಬೆಲ್ಡ್ ಮತ್ತು ಮುಖವಾಡಗಳನ್ನು ಧರಿಸಿ ನೆಮ್ಮದಿಯಿಂದ ಇರಿ ಎಂದು ಹೇಳುತ್ತಾ ಹರಸಾಹಸ ಪಡುತ್ತಿದ್ದರಾದರೂ, ಅಲ್ಲಿ ಭೀತಿಯ ವಾತವಾರಣವಿತ್ತು.  ಎಲ್ಲರೂ ಪ್ರಾಣ ಭಯಭೀತರಾಗಿ ಅಳುತ್ತಿದ್ದರು.

ಅರೇ ವಿಮಾನಕ್ಕೇನಾಯಿತು? ಸ್ಯಾಮ್ ಕ್ಷೇಮವಾಗಿ ಅಪ್ಪ ಅಮ್ಮಂದಿರ ಮಡಿಲಿಗೆ ಸೇರಿದನೇ? ಈ ಕುತೂಹಲ ಮುಂದಿನ ಸಂಚಿಕೆಯಲ್ಲಿ

govinda

.

ಅಲ್ಲಿಯ ವರೆಗೂ ಅಚ್ಚುತಾ ಅನಂತಾ ಗೋವಿಂದಾ ಎಂದು ಭಗವಂತನ ನಾಮ ಸ್ಮರಣೆ ಮಾಡುತ್ತಿರೀ

 

ಏನಂತೀರಿ?