ತಿರುಪತಿ ಬೆಟ್ಟದ ನೈಸರ್ಗಿಕ ಶ್ರೀ ವೆಂಕಟೇಶ್ವರ ಸ್ವಾಮಿ

venk1ತಿರುಮಲ ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕರ ಭಾವನೆಯಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದಾದರೂ ಅದರ ಹೊರತಾಗಿಯೂ ತಿರುಮಲ ಬೆಟ್ಟ ಹಾಗೂ ತಿರುಪತಿ ನಗರದ ಸುತ್ತ ಮುತ್ತ ಸಾಕಷ್ಟು  ರಮಣೀಯವಾದ ಸ್ಥಳಗಳು ಇದ್ದು ಅವುಗಳಲ್ಲಿ ಬಹುತೇಕರು ಗಮನಿಸದಿರದ ನೈಸರ್ಗಿಕ ವೆಂಕಟೇಶ್ವರ ಸ್ವಾಮಿ ಪ್ರತಿಮೆ ಇದೆ. ನಾವಿಂದು ಕುಳಿತಲ್ಲಿಂದಲೇ  ಆ ಸ್ವಾಮಿಯ ದಿವ್ಯ ದರ್ಶನವನ್ನು ಪಡೆಯೋಣ ಬನ್ನಿ.

ಧನುರ್ಮಾಸದಲ್ಲಿ ಕೇವಲ ಒಂದು ದಿನ ವಿಷ್ಣುವಿನನ್ನು ದರ್ಶನ ಮಾಡಿದಲ್ಲಿ ಅದು ಸಾವಿರ ದಿನ ದರ್ಶನ ಮಾಡಿದಷ್ಟು ಪುಣ್ಯ ಬರುತ್ತದೆ ಎಂಬ ನಂಬಿಕೆ ಅಸ್ತಿಕರಲ್ಲಿ ಇರುವ ಕಾರಣ, ಬಹುತೇಕರು ಧನುರ್ಮಾಸದಲ್ಲಿ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ. ಅದರಲ್ಲೂ ವೈಕುಂಠ ಏಕದಶಿಯ ದಿನವಂತೂ ಕೇಳುವುದೇ ಬೇಡ. ತಿರುಮಲದಲ್ಲಿ ಒಂದು ಸೂಜಿಯಷ್ಟೂ ಜಾಗ ಇರದಂತಾಗಿರುತ್ತದೆ.  ಅದೆಷ್ಟೋ ಜನ ವಿವಿಧ ರಾಜ್ಯಗಳಿಂದ ವೈಕುಂಠ ಏಕಾದಶಿಯಂದು ತಲುಪುವ ಹಾಗೆ ಕಾಲ್ನಡಿಗೆಯಲ್ಲಿ ಪ್ರತೀ ವರ್ಷವೂ ತಿರುಪತಿಗೆ ಬರುವ ಸಂಪ್ರದಾಯವನ್ನೂ ಇಟ್ಟುಕೊಂಡಿದ್ದಾರೆ.   ನಾವು ಇಂದು ತಿಳಿಸಲು ಹೊರಟಿರುವ ನೈಸರ್ಗಿಕ ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ  ವಾಹನಗಳಲ್ಲಿ ಹೋಗುವವರಿಗೆ ಕಾಣಸಿಗದೇ, ಭಕ್ತಿಯಿಂದ ಸ್ವಾಮಿಯ ಬೆಟ್ಟವನ್ನು ಹತ್ತುವ ಭಕ್ತಾದಿಗಳಿಗೆ ಈ ಸ್ವಾಮಿಯ ದರ್ಶನದ ಭಾಗ್ಯ ಕಾಣಸಿಗುತ್ತದೆ.

govindaಒಂದೊಂದೇ ಬೆಟ್ಟಗಳನ್ನು ದಾಟುತ್ತಾ ಅರ್ಧ ದಾರಿ ಕ್ರಮಿಸುತ್ತಿದ್ದಂತೆಯೇ ವಿಶಾಲವಾದ ಎತ್ತರೆತ್ತರದ ಬೆಟ್ಟ ಗುಡ್ಡಗಳು ಮತ್ತು ಕಾಡಿನ ಮಧ್ಯದಲ್ಲಿ ಬಂಡೆಗಳಲ್ಲಿ  ಯಾರೋ   ಸ್ವಾಮಿಯ ಮೂರ್ತಿಯನ್ನು ಕೆತ್ತಿರುವಂತೆ ಭಾಸವಾಗುತ್ತದಾದರೂ ಅದು ನೈಸರ್ಗಿಕವಾಗಿ ನಿರ್ಮಾಣವಾಗಿದೆ ಎನ್ನುವುದು ಸರಿ ಎನಿಸುತ್ತದೆ.  ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಬೆಳ್ಳಗಿನ  ಮೋಡಗಳ ಮಧ್ಯೆ ಇರುವ ಈ ಸ್ವಾಮಿಯ ಬಳಿ ಹೋಗುವುದೇ  ಒಂದು ಹರಸಾಹಸವೇ ಸರಿ.  ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಭಕ್ತಾದಿಗಳು ಧೈರ್ಯದಿಂದ ಆ ಪ್ರದೇಶಕ್ಕೆ  ಹೋಗಿ, ಸೊಂಟಕ್ಕೆ  ಹಗ್ಗ ಕಟ್ಟಿಕೊಂಡು ಸ್ವಾಮಿಗೆ ಹಾರವನ್ನು ಹಾಕಿ ಹಾಲಿನಿಂದ ಅಭಿಷೇಕ ಮಾಡಿ ಪೂಜಿಸುವುದನ್ನು ನೋಡಿದರೇ ಎದೆ ಘಲ್ ಎನಿಸುವಂತಿರುವಾಗ ನಿಜವಾಗಿಯೂ  ಅಲ್ಲಿಗೆ ಹೋಗುವ ಭಕ್ತಾದಿಗಳಿಗೆ ನಿಜಕ್ಕೂ ಒಂದು ದೊಡ್ಡ  ನಮಸ್ಕಾರಗಳನ್ನು  ಹೇಳಲೇ ಬೇಕು.

ಹಬ್ಬ ಹರಿದಿನ ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈಕುಂಠ ಏಕಾದಶಿಯಂದು ತಿರುಮಲದಲ್ಲಿ ವೆಂಕಟರಮಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರೆ ಇಲ್ಲಿಯ ನೈಸರ್ಗಿಕ ಸ್ವಾಮಿಗೂ ಸಹಾ ನಾನಾ ವಿಧದಲ್ಲಿ ಅಲಂಕರಿಸಿ ಭಕ್ತಿ ಭಾವಗಳಿಂದ ಪೂಜೆ ಪುನಸ್ಕಾರಗಳನ್ನು ಮಾಡುವುದನ್ನು ವರ್ಣಿಸುವುದಕ್ಕಿಂತಲೂ ನೋಡಿದರೆ ಎದೆ ಝಲ್ ಎನಿಸುವುದಂತೂ ಸುಳ್ಳಲ್ಲಾ.  ಇನ್ನು  ಅಂತಹ ದುರ್ಗಮ ಪ್ರದೇಶಕ್ಕೆ ಹೋಗಲು ಸಾಧ್ಯವಾಗದವರು ಕೆಳಗಿನಿಂದಲೇ ಸ್ವಾಮಿಗೆ ಭಕ್ತಿಯಿಂದ ಪೂಜೆ ಮಾಡಿ ಸಕಲ ನೈವೇದ್ಯಗಳನ್ನು ಅರ್ಪಿಸಿ ಗೋವಿಂದ ಗೋವಿಂದ ಎಂದು ಭಗವಂತನ ನಾಮಸ್ಮರಣೆ ಮಾಡುವುದು ನಿಜಕ್ಕೂ ಕರ್ಣಾನಂದವೆನಿಸುತ್ತದೆ.

ಹಾಂ!! ಗೋವಿಂದ ಎಂಬ ನಾಮಸ್ಮರಣೆ ಕೇಳಿದಾಗ ಭಗವಾನ್ ವಿಷ್ಣುವಿಗೆ ಗೋವಿಂದೆ ಎಂಬ ಹೆಸರು ಹೇಗೆ ಬಂದಿತು ಎಂಬುದರ ಕುರಿತಾಗಿ ಇತ್ತೀಚೆಗೆ ವ್ಯಾಟ್ಸ್ಯಾಪಿನಲ್ಲಿ  ಓದಿದ ಒಂದು ಪ್ರಸಂಗ ನೆನಪಾಗಿ ಅದನ್ನೂ ಹೇಳೇ ಬಿಡ್ತೀನಿ.

ಎಲ್ಲರಿಗೂ ಗೊತ್ತಿರುವಂತೆ ಶಿವ ಅಭಿಷೇಕಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ, ಅದೊಮ್ಮೆ ಶಿವ ಮತ್ತು ವಿಷ್ಣು ಹಾಗೇ ಲೋಕಾಭಿರಾಮವಾಗಿ ಹರಟುತ್ತಿರುವಾಗ, ಹೇ ಪರಮೇಶ್ವರ ನಾನು ಅತಲ, ಸುತಲ, ಪಾತಾಳ, ಬ್ರಹ್ಮಾಂಡ, ದೇವಲೋಕ, ಇಂದ್ರಲೋಕ ಎಲ್ಲವನ್ನೂ ನೋಡಿರುವೆನಾದರೂ, ನೀವಿರುವ  ಕೈಲಾಸವನ್ನು  ಒಮ್ಮೆಯೂ ನೋಡಿಲ್ಲ, ಹಾಗಾಗಿ ನನಗೆ ನಿಮ್ಮ ಕೈಲಾಸ ಪರ್ವತವನ್ನು  ನೋಡಬೇಕೆಂಬ  ಆಸೆ ಇದೆ ಎಂದು ವಿಷ್ಣು ಮಹೇಶ್ವರನನ್ನು ಕೇಳಿದಾಗ, ಕೇಳಿದವರಿಗೆ ಕೇಳಿದ್ದನ್ನು ಇಲ್ಲಾ  ಎಂದು ಕೊಡುವ ಕೊಡುಗೈ ದಾನಿ ಪರಮೇಶ್ವರ ಅರೇ ಅದಕ್ಕೇನಂತೇ, ನಾಳೆಯೇ  ನಾಳೆಯೇ ನಮ್ಮ ಕೈಲಾಸವನ್ನು ನೋಡಲು ಬರಬಹುದು ಎಂದು ಆಹ್ವಾನಿಸುತ್ತಾರೆ.

ಅದಾದ ನಂತರ ಪರ ಶಿವನು ಕೈಲಾಸಕ್ಕೆ ಹಿಂದಿರುಗಿ ತನ್ನ ಸೇವಕ ಬೃಂಗಿಯನ್ನು ಕರೆದು  ನಾಳೆ ಮಹಾವಿಷ್ಣುವು ನಮ್ಮ ಕೈಲಾಸಕ್ಕೆ ಬರುತ್ತಿದ್ದಾನೆ ಹಾಗಾಗಿ ಕೈಲಾಸವನ್ನು ಸ್ವಲ್ಪ ಸ್ವಚ್ಛಮಾಡಿ ಅಂದ ಚಂದವಾಗಿ ಇಡಲು ಸೂಚಿಸುತ್ತಾನೆ.

ಆದರೆ  ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಆ ಕೈಲಾಸವನ್ನು ಹೇಗೆ ಸ್ವಚ್ಛ ಮಾಡುವುದು ಎಂಬುದನ್ನು ಅರಿಯದೇ, ಏನು ಮಾಡುವುದು ಎಂದು ದಿಗ್ಬ್ರಾಂತನಾಗಿರುವಾಗ, ಗೋಮಾತೆ  ಕಾಮಧೇನು ಅಲ್ಲಿ ಸಗಣಿಯನ್ನು” ಹಾಕಿ ಹೋಗುವುದನ್ನು ಗಮನಿಸುತ್ತಾನೆ. ಕೂಡಲೇ ಕೈಲಾಸದಲ್ಲಿರುವ  ಹೆಣ್ಣು ಮಕ್ಕಳನ್ನು ಕರೆದು, ಸುತ್ತಮುತ್ತಲೂ ಇದ್ದ ಸಗಣಿಯನ್ನು ಶೇಖರಿಸಿ ಆ ಸಗಣಿಯಿಂದಲೇ ಇಡೀ ಕೈಲಾಸವನ್ನು  ಸಾರಿಸಿ ಗುಡಿಸಿ  ರಂಗೋಲಿ ಹಾಕಿ ಅಲಂಕರಿಸಿ, ಹೆಬ್ಬಾಗಿಲಿಗೆ ತಳಿರು ತೋರಣದಿಂದ  ಸಿಂಗಾರಗೊಳಿಸುತ್ತಾನೆ.

ನಿಶ್ವಯದಂತೆ  ಮರುದಿನ ವೈಕುಂಠ ವಾಸಿ ಆಲಂಕಾರ ಪ್ರಿಯ ವಿಷ್ಣು ಕೈಲಾಸಕ್ಕೆ ಬರುವ ಮೊದಲು ಅಷ್ಟೈಶ್ವರ್ಯಗಳನ್ನು ಧರಿಸಿಕೊಂಡು  ಸುಗಂಧ ದ್ರವ್ಯಗಳಿಂದ.ಶಂಕು,ಚಕ್ರ ಗದ, ಪುಷ್ಪ, ಹಸ್ತಗಳಿಂದ ವಿರಾಜಿಸುತ್ತ ಗರುಡ ರೂಢನಾಗಿ  ಕೈಲಾಸಕ್ಕೆ ಬಂದಿಳಿಯುತ್ತಾನೆ.

ಕೈಲಾಸಕ್ಕೆ ಬಂದ ವಿಷ್ಣುವನ್ನು ಸ್ವಾಗತಿಸಲು ಶಿವನು ತನ್ನ ಗಣದೊಂದಿಗೆ ಬಂದು ಭವ್ಯವಾಗಿ ಸ್ವಾಗತಿಸಲು ಬಂದಾಗ, ಇದ್ದಕ್ಕಿದ್ದಂತೆಯೇ ವಿಷ್ಣುವಿಗೆ ಸುವಾಸನೆಯು ಮೂಗಿಗೆ ಬಡಿದು ಅರೇ, ಇಷ್ಟೊಂದು ಸುಗಂಧವಾದ ಪರಿಮಳ ಎಲ್ಲಿಂದ ಬಂತು ಎಂದು ಆಶ್ಚರ್ಯಚಕಿತನಾಗುತ್ತಾನೆ.

ಆದಕ್ಕೆ ಅಲ್ಲೇ ಇದ್ದ  ಬೃಂಗಿಯು ಸ್ವಾಮಿ ಇದು ಸುಗಂಧವಲ್ಲ ಇದು ಗೋವಿನ  ವಿಂದಾ  ಎನ್ನುತ್ತಾನೆ. ವಿಂದಾ  ಅಂದರೆ ಎಂದರೆ ಸಂಸ್ಕೃತದಲ್ಲಿ ಸಗಣಿ ಎಂದು ಅರ್ಥ. ಆ ಕೂಡಲೇ ಅಲ್ಲಿ ನೆರೆದಿದ್ದವರೆಲ್ಲರೂ ಜೋರು ಧ್ವನಿಯಲ್ಲಿ ಗೋವಿಂದಾ- ಗೋವಿಂದಾ- ಗೋವಿಂದ ಎನ್ನಲು  ಸಂತೋಷಗೊಂಡ ವೈಕುಂಠ ಪತಿಯಾದ ಶ್ರೀ ಮನ್ನಾರಾಯಣನು ಇದೇ ವೈಕುಂಠ, ಇದೇ ಕೈಲಾಸ ಎಂದು ಅಲ್ಲಿದ್ದ ಜನಗಳಿಗೆ ಆಶೀರ್ವಾದ ಮಾಡುತ್ತಾನೆ.

ಆಗ ಅಲ್ಲಿದ್ದ ಪರಶಿವನು ಇನ್ನು ಮುಂದೆ ನಿನ್ನ ಹೆಸರು ಗೋವಿಂದ ಎಂದಾಗಲಿ ಮತ್ತು ಯಾರು ಗೋವಿಂದ – ಗೋವಿಂದ ಎಂದು ನಿನ್ನನ್ನು ಭಜಿಸುತ್ತಾರೋ ಅವರಿಗೆ  ಮುಕ್ತಿ ಸಿಗಲಿ ಎಂದು ಹರಿಸುತ್ತಾನೆ. ಅಂದಿನಿಂದ  ದೇವಾನುದೇವತೆಗಳು ಮತ್ತು  ಇಡೀ ಜಗತ್ತೇ  ತಿರುಪತಿ ತಿಮ್ಮಪ್ಪನ ಪಾದಕ್ಕೆ ಗೋವಿಂದ ಗೋವಿಂದ ಎಂದು ಭಗವಂತನನ್ನು ಕೊಂಡಾಡುತ್ತಿದ್ದಾರೆ

ಹೇಗೋ ಕುಳಿತಲ್ಲಿಂದಲೇ ತಿರುಪತಿಯ ನೈಸರ್ಗಿಕವಾದ ವೆಂಕಟರಮಣಸ್ವಾಮಿಯ ದರ್ಶನವನ್ನು ಮಾಡಿದ್ದಲ್ಲದೇ ಗೋವಿಂದ ಎಂಬ ಹೆಸರು ಹೇಗೆ ಬಂದಿತು ಎಂಬ ಕಧನವನ್ನು ಕೇಳಿಯಾಯ್ತು. ಈಗ ಇನ್ನೇಕೆ ತಡಾ, ಈ ಸಾಂಕ್ರಾಮಿಕ ಮಹಾಮಾರಿ ಎಲ್ಲವೂ ಕಡಿಮೆ ಆದ ನಂತರ ತಿರುಪತಿಯಿಂದ ತಿರುಮಲಕ್ಕೆ ವಾಹನದಲ್ಲಿ ಹೋಗದೇ ಕಾಲ್ನಡಿಗೆಯಲ್ಲಿ ಮೆಟ್ಟಿಲುಗಳ ಮೂಲಕವೇ ಹೋಗಿ ಮಾರ್ಗದ ಮಧ್ಯದಲ್ಲಿ ಕಾಣಸಿಗುವ  ನೈಸರ್ಗಿಕ ವೆಂಕಟರಮಣಸ್ವಾಮಿಯ ದರ್ಶನವನ್ನು ಪಡೆದು  ಆದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರಿ?

ನಿಮ್ಮವನೇ ಉಮಾಸುತ

ತಿರುಪತಿ ವೆಂಕಟರಮಣ ಸ್ವಾಮಿ ಪಾದಕ್ಕೆ  ಗೋವಿಂದಾ ಗೋವಿಂದಾ

ಕನಕಗಿರಿ ಕನಕಾಚಲಪತಿ

ಕಾಲಿದ್ದವರು ಹಂಪೆ ಸುತ್ತಿ ನೋಡಬೇಕು ಮತ್ತು ಕಣ್ಣಿದ್ದವರು ಕನಕಗಿರಿ ನೋಡಬೇಕು ಎಂಬ ನಾನ್ನುಡಿ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಚಲಿತವಾಗಿದೆ. ಅಂದಿನ ಕಾಲದ ವಿಜಯನಗರದ ಗತವೈಭವ ಇಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಂಚಿಹೋಗಿವೆ. ಹಂಪೆಯಿಂದ ಸುಮಾರು 30 ಕಿ.ಮಿ ದೂರದಲ್ಲಿರುವ ಕೊಪ್ಪಳ ಜಿಲ್ಲೆಯ ಪ್ರಮುಖ ತಾಲ್ಲೂಕ್ ಕೇಂದ್ರವೇ ಕನಕಗಿರಿ. ಇಲ್ಲಿನ ಕನಕಾಚಲಪತಿ ದೇವಸ್ಥಾನದಿಂದಾಗಿ ಇದು ಐತಿಹಾಸಿಕ ಸ್ಥಳವಾಗಿದೆ. ಈ ಶ್ರೀಕ್ಷೇತ್ರವನ್ನು ಎರಡನೆ ತಿರುಪತಿ ಎಂಬ ನಂಬಿಕೆ ಇರುವ ಕಾರಣ ಹಂಪೆಗೆ ಬರುವ ಬಹುತೇಕ ಪ್ರವಾಸಿಗರು ಇಲ್ಲಿಯೂ ಬೇಟಿ ನೀಡಿ ಶ್ರೀ ಕನಕಾಚಲಪತಿ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಈ ಸ್ಥಳ ಗಂಗಾವತಿಯಿಂದ 21 ಕಿ.ಮಿ, ಕೊಪ್ಪಳದಿಂದ 40 ಕಿಮಿ ದೂರಲ್ಲಿದೆ.

ಹಿಂದೆ ಈ ಪುಟ್ಟ ಊರಿನಲ್ಲಿ ಸುಮಾರು 701 ಬಾವಿಗಳು ಮತ್ತು 701 ದೇವಸ್ಥಾನಗಳು ಇದ್ದವಂತೆ. ಇಂದು ಬಹುತೇಕ ಭಾವಿಗಳು ಜನರ ಭೂಮಿಯಾಸೆಯಿಂದ ಸಮತಟ್ಟಾಗಿದ್ದರೂ ಈಗಲೂ ನಮಗೆ ಬಹುತೇಕ ದೇವಾಲಯಗಳನ್ನು ಅಷ್ಟೋ ಇಷ್ಟು ಕಾಣ ಬಹುದಾಗಿದೆ. ಕನಕಗಿರಿಯಲ್ಲಿ ಒಂದು ಸಣ್ಣ ಮಗುವು ಒಂದು ಕಲ್ಲನ್ನು ಎಸೆದರೆ ಅದು ಒಂದಲ್ಲಾ ಒಂದು ದೇವಾಲಯದ ಮೇಲೆಯೇ ಬೀಳುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಕನಕಗಿರಿಯಲ್ಲಿ ಪ್ರತಿ ನಾಲ್ಕು ಹೆಜ್ಜೆಗಳಿಗೂ ಒಂದು ದೇವಸ್ಥಾನಗಳನ್ನು ನೋಡ ಬಹುದಾಗಿದೆ. ಇದೇ ಕಾರಣದಿಂದಾಗಿ ಈ ಕನಕಗಿರಿಯನ್ನು ದೇವಾಲಯಗಳ ತವರು ಎಂದರೂ ಅತಿಶಯವಲ್ಲ. ಕನಕಗಿರಿ ನರಸಿಂಹಸ್ವಾಮಿ ದೇವಾಲಯದ ಪ್ರಾಂಗಣದಲ್ಲಿಯೇ ಹತ್ತಾರು ಪುಟ್ಟ ಪುಟ್ಟ ಗುಡಿಗಳನ್ನು ನೋಡಬಹುದಾಗಿದೆ.

ಈ ಊರಿಗೆ ಕನಕಗಿರಿ ಎಂಬ ಹೆಸರು ಬರಲು ಒಂದು ಸುಂದರವಾದ ದಂತ ಕಥೆಯೇ ಇದೆ. ವಾರಾಣವಾತಿ ಎಂಬ ಹೆಸರಿನ ಈ ಪ್ರದೇಶವು ಪುಷ್ಪ ಮತ್ತು ಜಯಂತಿ ಎಂಬ ಎರಡು ನದಿಗಳ ಜೊತೆಗೆ ಗುಪ್ತಗಾಮಿನಿಯಾದ ಗೋಪಿಕಾ ನದಿಯ ಸಂಗಮ ಪ್ರದೇಶವಾಗಿ ದಟ್ಟವಾದ ಹರಿದ್ವರ್ಣ ಕಾಡಿನಿಂದ ಆವೃತ್ತಗೊಂಡಿತ್ತು. ಇಲ್ಲಿ ಜಯಂತ ನರಸಿಂಹ ಎಂಬ ದೇವರು ನೆಲೆಸಿದ್ದನು. ಈ ನದಿ ತಟದಲ್ಲಿ ಇಪ್ಪತ್ತ ನಾಲ್ಕು ಜನ ಬೌದ್ಧ ಮುನಿಗಳಲ್ಲಿ ಒಬ್ಬರಾಗಿದ್ದರೆನ್ನಲಾದ ಕನಕಮುನಿಗಳು ತಪಸ್ಸು ಮಾಡಿ ಕೆಲ ಕ್ಷಣ ಕನಕವೃಷ್ಟಿ ಅರ್ಥಾತ್ ಚಿನ್ನದ ಮಳೆ ಸುರಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕನಕಗಿರಿ ಎಂದು ಕರೆಯಲಾಯಿತು ಎಂದು ಹೇಳಲಾಗುತ್ತಿದೆ. ಅದೇ ರೀತಿ ಸ್ಕಂದ ಪುರಾಣದ ತುಂಗ ಮಹಾತ್ಮೆಯಲ್ಲಿ ಈ ಸ್ಥಳವನ್ನು ಸುವರ್ಣಗಿರಿ ಎಂದು ವಿವರಿಸಿ ಈ ಸ್ಥಳವರ್ಣನೆ ಮತ್ತು ಕನಕಾಚಲಪತಿಯ ಅಷ್ಟೋತ್ತರವೂ ಇದೆ. ಪುರಂದರದಾಸರು, ವಿಜಯದಾಸರು, ಜಗನ್ನಾಥ ದಾಸರು ಈ ದೇವರ ಬಗ್ಗೆ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ.

ಇತಿಹಾಸ ತಜ್ಞರ ಪ್ರಕಾರ ಮೌರ್ಯ ದೊರೆ ಅಶೋಕ ಚಕ್ರವರ್ತಿ ಕನಕಗಿರಿಯನ್ನು ದಕ್ಷಿಣ ಭಾರತದ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನೆಂದೂ ಅಭಿಪ್ರಾಯಪಡುತ್ತಾರೆ. 2ನೇ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ಉಲ್ಲೇಖಿಸಿರುವ ಕಲ್ಲಿಗೇರಿಸ್ ಎಂಬ ಸ್ಥಳವೇ ಕನಕಗಿರಿ ಇರಬಹುದು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಮುಂದೆ ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಳಚೂರ್ಯರು, ವಿಜಯನಗರದ ಅರಸರು, ಮರಾಠರು ಹಾಗೂ ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಆಳಿದ ಈ ನಾಡು ವಿಜಯನಗರದರಸರ ಪಾಳೆಯಗಾರ ಗುಜ್ಜಲ ವಂಶಸ್ಥರಿಂದ ಆಳಲ್ಪಟ್ಟಿದೆ. ಇತಿಹಾಸ ಪ್ರಸಿದ್ಧ ಕುಮಾರರಾಮನ ತಾಯಿ ಹರಿಯಾಲ ದೇವಿ ಈ ಗುಜ್ಜಲ ವಂಶಕ್ಕೆ ಸೇರಿದವಳೆಂದೂ ಇತಿಹಾಸಕಾರರು ಊಹಿಸುತ್ತಾರೆ. ಈ ಊರಿನ ಗ್ರಾಮದೇವತೆ ಉಡುಚುಲಮ್ಮ ಅಂದರೆ ರೋಗ ನಿರೋದಕ ದೇವತೆ ಎಂದು ಪ್ರಖ್ಯಾತಳಾಗಿದ್ದಾಳೆ.

ಇಲ್ಲಿನ ದೇವಾಲಯ ನಿರ್ಮಾಣವಾದ ಕಥೆ ನಿಜಕ್ಕೂ ರೋಚಕವಾಗಿದೆ. ಮೂರು ನದಿಗಳ ಸಂಗಮದಿಂದಾಗಿ ದಟ್ಟವಾದ ಕಾಡಿನಂತಿದ್ದ ಈ ಪ್ರದೇಶ ನಂತರ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಇಲ್ಲಿದ್ದ ಲಿಂಗಾಕಾರದ ಜಯಂತ ನರಸಿಂಹ ಸಾಲಿಗ್ರಾಮವು ಮಣ್ಣೊಳಗೆ ಹೂತು ಅದರ ಮೇಲೆ ಹುತ್ತವೊಂದು ಬೆಳೆದು ಕೊಂಡಿತ್ತು. ಅದೊಮ್ಮೆ ದನಗಾಹಿಗಳು ತಮ್ಮಲ್ಲಿದ್ದ ಹಸುವೊಂದು ಆ ಹುತ್ತಕ್ಕೆ ಹಾಲನ್ನು ಸುರಿಸುತ್ತಿರುವುದನ್ನು ಕಂಡು ಆಶ್ಚರ್ಯ ಚಕಿತರಾಗಿ ಅಲ್ಲಿನ ಗುಜ್ಜಲ ವಂಶದ ಮೊದಲ ದೊರೆ ಪರಸಪ್ಪನಿಗೆ ಈ ವಿಷಯವನ್ನು ತಿಳಿಸಿದರು. ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಪರಸಪ್ಪ ಉಡಚಿನಾಯಕನೂ ಹಸು ಹುತ್ತಕ್ಕೆ ಹಾಲೆರೆಯುವುದನ್ನು ಕಣ್ಣಾರೆ ಕಂಡು ಆ ಹುತ್ತದ ಮಹತ್ವವನ್ನು ತಿಳಿಯಲು ಹುತ್ತವನ್ನು ಕೀಳಿಸಲು ಮುಂದಾದಾಗ ಕೆಲ ಕ್ಷಣ ಮೂರ್ಛೆ ಹೋಗುತ್ತಾನೆ. ಇದರಿಂದ ಚಿಂತಿತನಾಗಿದ್ದ ಪರಸಪ್ಪನಿಗೆ ಕನಸಿನಲ್ಲಿ ಭಗವಂತನು ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ಈ ಹುತ್ತದಲ್ಲಿ ಇರುವುದಾಗಿ ತಿಳಿಸಿ ಭಕ್ತರ ಭವರೋಗ ಕಳೆಯುವುದಕ್ಕಾಗಿ ಇಲ್ಲಿ ದೇವಾಲಯ ನಿರ್ಮಾಣ ಮಾಡಲು ಸೂಚಿಸುತ್ತಾನೆ. ಆ ಕೂಡಲೇ ಪರಸಪ್ಪನು ವಿಜಯನಗರ ಅರಸ ಪ್ರೌಢ ದೇವರಾಯನಿಗೆ ತನ್ನ ಸ್ವಪ್ನದಲ್ಲಿ ವೆಂಕಟರಮಣನ ಆಗ್ರಹವನ್ನು ತಿಳಿಸುತ್ತಾನೆ. ಆಗ ವಿಜಯನಗರದ ಅರಸರು 12 ಗ್ರಾಮಗಳನ್ನು ಪರಸಪ್ಪನಿಗೆ ಉಂಬಳಿ ನೀಡಿ, ಪಾಳೆಯ ಪಟ್ಟ ಕಟ್ಟಿ, ದೇವಾಲಯ ನಿರ್ಮಿಸಿ ಈ ದೇವರನ್ನು ಕನಕರಾಯ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿ ಇದನ್ನು ಎರಡನೆ ತಿರುಪತಿ ಎಂದು ಕರೆಯಲಾಗುತ್ತದೆ.

208 ಅಡಿ ಉದ್ದ ಹಾಗೂ 90 ಅಡಿ ಅಗಲವಿರುವ ವಿಶಾಲವಾದ ದೇವಾಲಯದಲ್ಲಿ, ಶ್ರೀ ಕನಕಾಚಲ ದೇವರು ಸಾಲಿಗ್ರಾಮ ರೂಪದಲ್ಲಿದ್ದರೆ ಪ್ರಸ್ತುತ ಅದರ ಮೇಲೆ ಅಲಂಕಾರಿಕವಾಗಿ ನೋಡಲು ರಮಣೀಯವಾಗಿರುವಂತೆ ಉಗ್ರನರಸಿಂಹನ ಮುಖವಾಡವನ್ನು ಇಟ್ಟಿರುವುದು ಭಕ್ತರ ಗಮನ ಸೆಳೆಯುತ್ತದೆ, ಮೂಲ ದೇವಾಲಯದ ಪ್ರಾಂಗಣದಲ್ಲಿಯೇ ಲಕ್ಷ್ಮೀ ದೇವಾಲಯವಿದ್ದು ಸುಂದರ ಕೆತ್ತನೆಯಿಂದ ಕೂಡಿದೆ. ಇಲ್ಲಿರುವ ಕಂಬಗಳಲ್ಲಿ ದಶಾವತಾರದ ಕೆತ್ತನೆಗಳಿವೆ. ಮಧ್ಯರಂಗ ಮಂಟಪದ ಮೇಲ್ಭಾಗದಲ್ಲಿ ಉಮಾಮಹೇಶ್ವರರ ವಿವಾಹದ ಹಾಗೂ ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕದ ಹಾಗೂ ಮತ್ತಿತರ ಅಪರೂಪದ ಮಧ್ಯಕಾಲೀನ ವರ್ಣ ಶಿಲ್ಪಗಳಿವೆ. ಒಳ ಪ್ರಾಕಾರದಲ್ಲಿ ಬ್ರಹ್ಮ, ಕೃಷ್ಣ, ಹನುಮಂತ, ಶಿವ, ಗರುಡ, ಸರಸ್ವತಿ ಮಂದಿರಗಳು, ಪಾಕಶಾಲೆ, ಯಜ್ಞಶಾಲೆ, ಕಲ್ಯಾಣ ಮಂಟಪಗಳು ಇವೆ. ಕನಕಾಚಲ ದೇವಾಲಯದ ಮುಂದೆ ಗರುಡ ಗುಡಿ ಇದ್ದು, ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣಿಪಥವಿದೆ. ಬ್ರಹ್ಮ ,ವಿಷ್ಣು,ಮಹೇಶ್ವರ ಗುಡಿಗಳಿವೆ. ಆಳೆತ್ತರದ ಸುಂದರ ಮೂಲಪ್ರಾಣದೇವರಾದ ಆಂಜನೇಯನ ಸುಂದರ ವಿಗ್ರಹವಿದೆ. ಈ ದೇವಸ್ಥಾನಕ್ಕೆ ಭವ್ಯವಾದ ಮಹಾದ್ವಾರ ಮತ್ತು ಆಕರ್ಷಣೀಯ ಪಂಚ ಗೋಪುರಗಳಿದ್ದು, ಇಲ್ಲಿನ ಪಂಚ ಕಳಸ ದರ್ಶನದಿಂದ ಮಹಾ ಪಾಪ ವಿನಾಶವಾಗುತ್ತದೆ ಎಂಬ ನಂಬಿಕೆಯಿದೆ. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಹಸಿವನ್ನು ನೀಗಿಸಲು ಪ್ರತಿದಿನ ಮಧ್ಯಾಹ್ನ ಉಚಿತ ದಾಸೋಹದ ವ್ಯವಸ್ಥೆಯೂ ಇಲ್ಲಿದೆ.

kanaka6

ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ (ಮಾರ್ಚ್ -ಏಪ್ರಿಲ್ ) ಈ ಕನಕಾಚಲಪತಿಗೆ ತಿರುಪತಿಯ ತಿಮ್ಮಪ್ಪನಿಗೆ ನಡೆಯುವಂತೆಯೇ ಅತ್ಯಂತ ವೈಭವೋಪೇತವಾಗಿ ಬ್ರಹ್ಮರಥೋತ್ಸವ ನಡೆಯುತ್ತದೆ. ಹೋಳಿ ಹುಣ್ಣಿಮೆಯ ಒಂದು ದಿನದ ಮುಂಚೆ ಪಟ ಕಟ್ಟುವ ಮೂಲಕ ಜಾತ್ರೆ ಆರಂಭವಾಗಿ ಮುಂದಿನ 9 ದಿನಗಳು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಪ್ರತಿ ದಿನವು ಒಂದೊಂದು ಉತ್ಸವಗಳಾದ ಅಂಕುರಾರ್ಪಣ, ಧ್ವಜಾರೋಹಣ, ಕಲ್ಯಾಣೋತ್ಸವ, ಬಲಿ, ಬ್ರಹ್ಮರಥೋತ್ಸವ, ಶೇಷೋತ್ಸವ, ಗರುಡೋತ್ಸವ, ಉಯ್ಯಾಲೋತ್ಸವ, ಗಜೋತ್ಸವ, ಶಯನೋತ್ಸವ, ವಸಂತೋತ್ಸವ ಮೊದಲಾದ ಧಾರ್ಮಿಕ ವಿಧಿಗಳು ತಿರುಪತಿಯಲ್ಲಿ ನಡೆಯುವಂತೆ ನಿತ್ಯ ಬೆಳಗ್ಗೆ ಹಾಗೂ ಸಂಜೆ ಉತ್ಸವಗಳನ್ನು ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ನಡೆಸಲಾಗುತ್ತದೆ.
kanagagiri2

ಉಡಿಚ ನಾಯಕನ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾಗಿದ್ದ ಕನಕಗಿರಿಯ ತೇರು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ತೇರು ಎಂಬ ಖ್ಯಾತಿ ಪಡೆದಿದೆ. 1905ರಲ್ಲಿ ಪುನರ್ನಿಮಿಸಲಾದ ಬೃಹತ್ ರಥದಲ್ಲಿ ಮಹಾಭಾರತ, ರಾಮಾಯಣದ ಕಥಾನಕಗಳ ಕೆತ್ತನೆ ಇದೆ. ಜಾತ್ರೆಯ ಸಮಯದಲ್ಲಿ ರಾಜ್ಯದ ವಿವಿಧ ಕಡೆಯಿಂದ ಸರ್ವಧರ್ಮೀಯರೂ ಯಾವುದೇ ಜಾತಿ – ಧರ್ಮ ಭೇದವಿಲ್ಲದೆ ಈ ದೇವಸ್ಥಾನಕ್ಕೆ ಆಗಮಿಸಿ ಯಥಾಶಕ್ತಿ ನೈವೇದ್ಯ ಮಾಡಿ, ಹಲವರು ತಲೆಮಂಡೆ ನೀಡಿದರೆ ಇನ್ನು ಕೆಲವು ಕರ್ಮಠರು ದೀಡ ನಮಸ್ಕಾರ ಹಾಕಿ, ದೇವರಿಗೆ ಮುಡುಪು, ಬೆಳ್ಳಿ, ಬಂಗಾರ ಹಾಗೂ ವಸ್ತ್ರಾದಿಗಳನ್ನು ಮತ್ತು ಅನ್ನದಾಸೋಹಕ್ಕೆ ಮತ್ತು ಪ್ರತಿ ಅಮವಾಸ್ಯೆಗೆ ದವಸ, ಧಾನ್ಯ, ಪಾತ್ರೆಗಳನ್ನು ಕಾಣಿಕೆ ಸಲ್ಲಿಸಿಸುವ ಮುಖಾಂತರ ಆ ದೇವರ ಕೃಪಾರ್ಥಕ್ಕೆ ಪಾತ್ರರಾಗುತ್ತಾರೆ.

kanaka5

ಕೇವಲ ಈ ದೇವಸ್ಥಾನವಲ್ಲದೇ ಇನ್ನೂ ನೂರಾರು ದೇವಾಲಯಗಳು ವೆಂಕಟಾಪತಿ ಭಾವಿ, ತಿರುಪತಿಯಲ್ಲಿರುವಂತೆಯೇ ಇರುವ ಪುಷ್ಕರಣಿಯನ್ನು ಹೀಗೆ ಇಡೀ ಒಂದು ದಿನವಿಡೀ ನೋಡಬಹುದಾದ ಪುರಾಣ ಪ್ರಸಿದ್ಧ ಐತಿಹ್ಯವಾದ ಪುಣ್ಯಕ್ಷೇತ್ರವಾಗಿದೆ ಕನಕಗಿರಿ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಗಾದೆಯಂತೆ ಸಮಯ ಮಾಡಿಕೊಂಡು ವಿಜಯನಗರ ಸಾಮ್ರಾಜ್ಯದ ಸುತ್ತ ಮುತ್ತಲು ಒಂದು ವಾರ ಸುತ್ತಿ ಹಾಕಿ ನಮ್ಮ ಕನ್ನಡಿಗರ ವಾಸ್ತು, ಶಿಲ್ಪಕಲೆ ಮತ್ತು ಪರಂಪರೆಯನ್ನು ನಮ್ಮ ಮಕ್ಕಳಿಗೂ ತಿಳಿಸುವ ಪ್ರಯತ್ನ ಮಾಡೋಣ.

ಏನಂತೀರೀ?

ನಿಮ್ಮವನೇ ಉಮಾಸುತ

ಹರಕೆ

ತಮ್ಮ ನಾನಾ ರೀತಿಯ ಇಚ್ಚೆಗಳನ್ನು ಈಡೇರಿಸಲು ಭಗವಂತನ ಬಳಿ ಬೇಡಿಕೊಳ್ಳುವ ಸಮಯದಲ್ಲಿ ಭಕ್ತಿಯಿಂದ ಭಗವಂತನಿಗೆ ಏನದರೊಂದು ಕಾಣಿಕೆಯನ್ನು ಸಮರ್ಪಿಸುತ್ತೇನೆಂದು ಕೇಳಿಕೊಳ್ಳುವುದು ನಮ್ಮಲ್ಲಿರುವ ವಾಡಿಕೆ. ಆ ರೀತಿಯಾಗಿ ಕೇಳಿಕೊಳ್ಳುವ ಪದ್ದತಿಯನ್ನೇ ಹರಕೆ ಎನ್ನುತ್ತಾರೆ. ಒಂದು ಪಕ್ಷ ಅವರ ಆಭಿಪ್ಸೆಗಳು ಅವರ ಇಚ್ಚೆಯ ಅನುಗುಣವಾಗಿ ಈಡೇರಿದ ಸಮಯದಲ್ಲಿ ತಾವು ಕಟ್ಟಿಕೊಂಡ ಹರಕೆಯನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸಿ ಧನ್ಯತಾಭಾವನೆಯನ್ನು ಪಡೆಯುತ್ತಾರೆ. ಈ ರೀತಿಯಾಗಿ ಹರಕೆ ಹೊತ್ತ ಸಮಯದಲ್ಲಾದ ಮೋಜಿನ ಸಂಗತಿಯೇ ಇಂದಿನ ಕಥಾವಸ್ತು.

ಶ್ಯಾಮರಾಯರು ಅಂದಿನ ಕಾಲಕ್ಕೇ ಎಸ್. ಎಸ್.ಎಲ್.ಸಿ ಫಸ್ಟ್ ಕ್ಲಾಸಿನಲ್ಲಿ ಮುಗಿಸಿ ಮನೆಯ ಕಷ್ಟವನ್ನು ನೋಡಲಾರದೇ, ಓದನ್ನು ಮುಂದುವರಿಸಲಾಗದೇ ಯಾವುದಾರೂ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡುತ್ತಿರುವಾಗಲೇ ಅವರಿಗೆ ದೂರದ ಕೇಂದ್ರ ಸರ್ಕಾರದ ಕೆಲಸ ಸಿಗುತ್ತದೆ. ಅಯ್ಯೋ ಕಣ್ಣ ಮುಂದೆ ಇದ್ದು ಯಾವುದದರೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರೂ ಸಾಕು ಅಷ್ಟು ದೂರ ಹೋಗುವುದೇಕೆ ಎಂದು ಮನೆಯವರೆಲ್ಲರೂ ಹೇಳಿದರೂ, ಸಿಕ್ಕ ಕೆಲಸವನ್ನು ಬಿಡುವುದು ಬೇಡ. ಅಲ್ಲೇ ಸ್ವಲ್ಪ ವರ್ಷಗಳು ಕೆಲಸ ಮಾಡಿ ಅದಾದ ನಂತರ ಇಲ್ಲಿಗೇ ವರ್ಗಾವಣೆ ಮಾಡಿಸಿಕೊಳ್ಳೋಣ ಎಂದು ಮನೆಯವರಿಗಲ್ಲರಿಗೂ ಸಮಾಧಾನ ಪಡಿಸಿ ದೂರದ ದೆಹಲಿಗೆ ಪ್ರಯಾಣಿಸಿಯೇ ಬಿಟ್ಟರು ಶ್ಯಾಮರಾಯರು.

ಆರಂಭದ ಸ್ವಲ್ಪ ದಿನಗಳು ಭಾಷೆ ಮತ್ತು ಆಚಾರ ವಿಚಾರಗಳಬಗ್ಗೆ ಸ್ವಲ್ಪ ಕಷ್ಟ ಅನುಭರಿಸಿದರೂ ಕೆಲ ಸಮಯದಲ್ಲೇ ಸಂಪೂರ್ಣವಾಗಿಯೇ ಉತ್ತರ ಭಾರತೀಯರೇ ಆಗಿಹೋಗಿ ಮದುವೆಯೂ ಆಗಿ ಹೋಯಿತು. ಮದುವೆಯಾಗಿ ಸುಮಾರು ಮೂರ್ನಾಲ್ಕು ವರ್ಷಗಳಾದರೂ ಅವರಿಗೆ ಮಕ್ಕಳಾಗದ ಕಾರಣ ಮನೆಯವರೆಲ್ಲರೂ ಚಿಂತಿತರಾಗಿದ್ದರು. ಶ್ಯಾಮರಾಯರ ತಂದೆ ತಾಯಿಯರಂತೂ ನಾವು ಕಣ್ಣು ಮುಚ್ಚುವ ಹೊತ್ತಿಗೆ ಮೊಮ್ಮಕ್ಕಳನ್ನು ಆಡಿಸುವ ಭಾಗ್ಯ ನಮಗಿಲ್ಲವಾಯಿತೇ ಎಂದು ಒಂದು ರೀತಿಯಾಗಿ ಮನಸ್ಸಿಗೆ ತಾಗುವಂತೆಯೇ ಬಾಯಿ ಬಿಟ್ಟು ಮೂರ್ನಾಲ್ಕು ಬರಿ ಮಗ ಸೊಸೆಯವರ ಬಳಿ ಹೇಳಿಕೊಂಡಿದ್ದೂ ಉಂಟು. ಹೇಗೂ ಆಗಲೀ ಮನೆ ದೇವರಿಗೆ ಒಂದು ಹರಕೆ ಮಾಡಿಕೋ ಶ್ರೀಘ್ರವಾಗಿ ಮಕ್ಕಳಾಗುತ್ತದೆ ಎಂದು ಸಲಹೆಯನ್ನೂ ಇತ್ತರು. ಆದರೆ ದೇವರನ್ನು ಅಷ್ಟಾಗಿ ನಂಬದ ಶ್ಯಾಮರಾಯರು, ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ? ಎಂದು ತಿರಸ್ಕರ ಭಾವದಿಂದ ನೋಡಿ ಪತಿ ಪತ್ನಿಯರು ವೈದ್ಯರ ಬಳಿ ಹೋಗಿ ತಮ್ಮ ಅಳಲನ್ನು ತೋಡಿಕೊಂಡರು. ವೈದ್ಯರು ಅವರಿಬ್ಬರನ್ನೂ ಸಂಪೂರ್ಣವಾಗಿ ಪರೀಕ್ಷಿಸಿ ನೀವಿಬ್ಬರೂ ಆರೋಗ್ಯವಾಗಿದ್ದೀರಿ ನಿಮ್ಮಲ್ಲಿ ಮಕ್ಕಳಾಗದಿರುವುದಕ್ಕೇ ಯಾವುದೇ ಸಮಸ್ಯೆಗಳಿಲ್ಲ ಎಂದು ಕೆಲ ಔಷಧಿಗಳನ್ನು ಬರೆದು ಕೊಟ್ಟರು. ಇಷ್ಟಾದರೂ ಮನೆಯವರ ಒತ್ತಡಕ್ಕೆ ಮಣಿದು ತಮಗೆ ಮಕ್ಕಳಾದರೇ ತಮ್ಮ ಮನೆದೇವರು ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಉಂಗುರ ಮಾಡಿಸಿ ಹಾಕಿಸುತ್ತೀನೆಂದು ಹರಕೆ ಮಾಡಿಕೊಂಡರು. ದೇವರ ದಯೆಯೋ ಅಥವಾ ವೈದ್ಯರ ಚಿಕಿತ್ಸೆಯ ಫಲವೋ ಎನ್ನುವಂತೆ ವರ್ಷದೊಳಗೇ ಅವರಿಗೆ ಮುದ್ದಾದ ಗಂಡು ಮಗುವಿನ ಜನನವಾಗಿ ಎಲ್ಲರೂ ಖುಷಿ ಪಟ್ಟರು. ನದಿ ದಾಟಿದ ಮೇಲೆ ಅಂಬಿಗನ ನಂಟೇಕೆ ಎನ್ನುವಂತೆ ಮಕ್ಕಳಾದ ಮೇಲೆ ತಾವು ಹೊತ್ತಿದ್ದ ಹರಕೆಯನ್ನು ಸಂಪೂರ್ಣವಾಗಿ ಮರತೇ ಬಿಟ್ಟರು ಶ್ಯಾಮರಾಯರು.

ಕೆಲ ವರ್ಷಗಳ ನಂತರ ಕನಸಿನಲ್ಲಿ ಪುಟ್ಟ ಮಗುವಿನ ರೂಪದಲ್ಲಿ ಭಗವಂತ ಬಂದು ನಿನ್ನ ಇಚ್ಚೆಯಂತೆ ನಿನಗೆ ಮಕ್ಕಳನ್ನು ಕರುಣಿಸಿದರೂ ನನ್ನ ಹರಕೆಯನ್ನು ತೀರಿಸಿಲ್ಲ ಎಂದು ನೆನಪಿಸಿದಂತಾಯಿತು. ಬೆಳಗಿನ ಜಾವದಲ್ಲಿ ಕಂಡ ಕನಸನ್ನು ತನ್ನ ಮಡದಿ ಮತ್ತು ತಾಯಿಯ ಬಳಿ ಹೇಳಿಕೊಂಡಾಗಾ, ಅಯ್ಯೋ ರಾಮ ರಾಮ ಅಪಚಾರವಾಯಿತು. ಈ ಕೂಡಲೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಅವನಿಗೆ ಕಾಣಿಕೆ ಒಪ್ಪಿಸೋಣ ಎಂದರು. ಆದರೆ ಶ್ಯಾಮರಾಯರು ದೇವರನ್ನು ಅಷ್ಟಾಗಿ ನಂಬುತ್ತಿರಲಿಲ್ಲವಾದ್ದರಿಂದ ನಮಗೆ ದೇವರ ದಯೆಯಿಮ್ದ ಮಕ್ಕಳಾಗಲಿಲ್ಲ. ವೈದ್ಯರ ಔಷಧಿಯ ಪರಿಣಾಮವಾಗಿ ಮಕ್ಕಳಾಯಿತು ಎಂದು ಎಷ್ಟೇ ವಾದಿಸಿದರೂ ಸತಿಯ ಅಪ್ಪಣೆಯ ಮುಂದೆ ಪತಿಯ ಆಟವೇನೂ ನಡೆಯದೇ ಕಾಣಿಕೆಯನ್ನು ತೀರಿಸಲೇ ಬೇಕೆಂದು ನಿರ್ಧರಿಸಲಾಯಿತು. ದೂರದ ದೆಹಲಿಯಿಂದ ತಿರುಪತಿಗೆ ಬಂದು ಹೋಗಲು ಸಾವಿರಾರು ರೂಪಾಯಿಗಳಾಗುವ ಕಾರಣ, ಭಗವಂತ ಸರ್ವಾಂತರಿ. ಎಲ್ಲಿಂದ ಬೇಕಾದರೂ ಸಮರ್ಪಿಸಿದರೂ ಅವನಿಗೆ ಸಲ್ಲಬೇಕಾದದ್ದು ಸಲ್ಲುತ್ತದೆ ಏಂಬ ತಮ್ಮ ವಿತಂಡ ವಾದ ಮಂಡಿಸಿ ಅಲ್ಲಿಯೇ ಹತ್ತಿರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಹರಕೆ ಹೊತ್ತಿದ್ದಂತೆ ಚಿನ್ನದ ಉಂಗುರ ಸಮರ್ಪಿಸದೇ ಸ್ವಲ್ಪ ದುಡ್ಡನ್ನು ಹುಂಡಿಗೆ ಹಾಕಿ ತಮ್ಮ ಹರಕೆ ತೀರಿತೆಂದು ಭಾವಿಸಿ ಮನೆಗೆ ಹಿಂದಿರುಗಿದರು.

ಆದರೆ ಅದೇ ರಾತ್ರಿ ಮತ್ತೊಮ್ಮೆ ಭಗವಂತ ಅವರ ಸ್ವಪ್ನದಲ್ಲಿ ಬಂದು ನೀನು ಸಂಪೂರ್ಣವಾಗಿ ಕಾಣಿಕೆ ಸಲ್ಲಿಸಿಲ್ಲವೆಂದು ಜ್ಞಾಪಿಸಿದಂತಾಯಿತು. ಇದರಿಂದ ಸ್ವಲ್ಪ ಮುಜುಗೊರಗೊಂಡ ರಾಯರು, ಉಂಗುರಕ್ಕೆ ಎಷ್ಟು ದುಡ್ಡಾಗುತ್ತದೋ ಅಷ್ಟು ದುಡ್ಡನ್ನು ಕಾಣಿಕೆಯಾಗಿ ಎತ್ತಿಟ್ಟು ಅದನ್ನು ಮುಂದೆಂದಾದರೂ ತಿರುಪತಿಗೆ ಹೋದಾಗ ಅರ್ಪಿಸಿದರಾಯಿತು ಎಂದು ತೀರ್ಮಾನಿಸಿದರು. ಅದಾದ ಕೆಲ ವರ್ಷಗಳ ನಂತರ ತಿರುಪತಿಗೆ ಕುಟುಂಬ ಸಮೇತ ಹೋಗುವಾಗ ಆವರ ಮಡದಿ, ಹೇಗೋ ನಮ್ಮ ಬಳಿ ಹಣವಿದೆ ಸುಮ್ಮನೆ ಎಂದೋ ಎತ್ತಿಟ್ಟಿದ್ದ ಹಣವನ್ನು ಕಾಣಿಕೆಯನ್ನಾಗಿ ಸಮರ್ಪಿಸುವ ಬದಲು ಚಿನ್ನದ ಉಂಗುರವನ್ನೇ ಕೊಡೋಣ ಎಂದರು. ಹೂಂ.. ಚಿನ್ನ್ದ ಬೆಲೆ ಗನಗಕ್ಕೇರಿದೆ. ಈಗ ಉಂಗುರ ಮಾಡಿಸಲು ಸಾಧ್ಯವಿಲ್ಲ. ಹೇಗೋ ಅಂದಿನ ದಿನಕ್ಕೆ ಚಿನ್ನದ ಉಂಗುರಕ್ಕೆ ಸರಿಸಮಾನವಾದ ಹಣವನ್ನೇ ಗಂಟು ಕಟ್ಟಿ ಎತ್ತಿಟ್ಟಾಗಿದೆ ಅದನ್ನೇ ಕೊಟ್ಟರಾಯಿತು ಎಂದು ಮಡದಿಯ ಮೇಲೆ ಗದುರಿದರು. ಇನ್ನು ಹೆಚ್ಚು ಮಾತನಾಡಿದರೆ, ದೇವರ ಸನ್ನಿಧಾನಕ್ಕೆ ಹೋಗುವುದನ್ನೇ ರದ್ದು ಮಾಡಬಹುದೆಂಬ ಕಾರಣದಿಂದ ಸುಮ್ಮನಾದರು ಅವರ ಪತ್ನಿ.

timmappa3

ಅವರು ನಿರ್ಧರಿಸಿದ ದಿನದಂದು ದೂರದ ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿ ತಮ್ಮ ಪೋಷಕರನ್ನೂ ಕರೆದುಕೊಂಡು ಎಲ್ಲರೂ ಒಟ್ಟಿಗೆ ತಿರುಪತಿಯನ್ನು ತಲುಪಿದರು. ವಾರಾಂತ್ಯವಾದ್ದರಿಂದ ಎಂದಿಗಿಂತಲೂ ಅಧಿಕ ಜನ ಅಲ್ಲಿ ಸೇರಿದ್ದರು. ಸರತಿಯ ಸಾಲಿನಲ್ಲಿ ನೂಗು ನುಗ್ಗಾಟಗಳ ಮಧ್ಯದಲ್ಲಿಯೂ ಹಾಗೂ ಹೀಗೂ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಅಲ್ಲಿ ನೇತು ಹಾಕಿದ್ದ ದೊಡ್ಡದಾದ ಹಳದೀ ಬಣ್ಣದ ಜೋಳಿಗೆ ರೂಪದ ಹುಂಡಿಗೆ ಜೋಪಾನವಾಗಿ ಎತ್ತಿಟ್ಟಿದ್ದ ಕಾಣಿಕೆಯನ್ನು ಹಾಗಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಯಾರೂ ತಳ್ಳಿದಂತಾಗಿ ಆಯತಪ್ಪಿ ಬೀಳುವಂತಾದರೂ ಶ್ಯಾಮರಾಯರು ಕೂಡಲೇ ಆ ಜೋಳಿಗೆಯನ್ನು ಹಿಡಿದು ಕೊಳ್ಳುವ ಪ್ರಯತ್ನದಲ್ಲಿರ ಬೇಕಾದಾಗ ಅವರಿಗೇ ತಿಳಿಯದಂತೆ ಆಚಾನಕ್ಕಾಗಿ ತಮ್ಮ ಕೈಯಲ್ಲಿದ್ದ ಕಾಣಿಕೆಯನ್ನು ಹುಂಡಿಗೆ ಹಾಕಿಯೇ ಬಿಟ್ಟರು. ಅದರ ಜೊತೆ ಜೊತೆಯಲ್ಲಿಯೇ ಅವರ ಕೈ ಬೆರಳಿನಲ್ಲಿದ್ದ ಉಂಗುರವೂ ಕಳಚಿ ಹುಂಡಿಯೊಳಗೆ ಬಿದ್ದು ಹೋಯಿತು. ಅಯ್ಯೋ ನನ್ನ ಉಂಗುರ, ಉಂಗುರ ಎಂದು ಜೋರಾಗಿ ಕೂಗಿಕೊಂಡರೂ ಅಲ್ಲಿ ಯಾರೂ ಅವರ ನೆರವಿಗೆ ಬರುವ ಪರಿಸ್ಥಿತಿಯಲ್ಲಿರಲಿಲ್ಲ. ಸ್ಮಶಾನಕ್ಕೆ ಹೋದ ಹೆಣ, ತಿರುಪತಿಯ ಹುಂಡಿಯಲ್ಲಿ ಹಾಕಿದ ಹಣ ಎರಡೂ ಎಂದಿಗೂ ಹಿಂದಿರಿಗಿ ಬಾರದೂ ಎನ್ನುವಂತೆ ತಿರುಪತಿ ತಿಮ್ಮಪ್ಪನಿಗೆ ಹಣದ ಜೊತೆ ಹರಕೆ ಹೊತ್ತಿ ಕೊಂಡಿದ್ದಂತೆ ಚಿನ್ನದ ಉಂಗುರವೂ ಸಮರ್ಪಣೆಯಾಗಿ ಹೋಯಿತು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಆ ಕ್ಷಣದಲ್ಲಿ ರಾಯರ ಮುಖ ಇಂಗು ತಿಂದ ಮಂಗನಂತಾಗಿತ್ತು. ಇದನ್ನು ನೋಡುತ್ತಿದ್ದ ರಾಯರ ಕುಟುಂಬದ ಸದಸ್ಯರಿಗೆ ಅಬ್ಬಾ ಈ ರೀತಿಯಲ್ಲಾದರೂ ಅವರ ಹರಕೆ ಸಂಪೂರ್ಣವಾಗಿ ತೀರಿತಲ್ಲಾ ಎಂದು ಮನಸ್ಸಿನಲ್ಲಿಯೇ ಮಂಡಿಗೆ ತಿಂದಷ್ಟು ಸಂತೋಷವಾಯಿತಾದರೂ ಅದನ್ನು ಹೊರಗೆ ತೋರಿಸಿಕೊಂಡರೆ ಎಲ್ಲಿ ರಾಯರಿಗೆ ಬೇಸರವಾಗುತ್ತದೋ ಎಂದು ತಿಳಿಸಿ ಛೇ.. ಛೇ.. ಹೀಗೆ ಆಗಬಾರದಿತ್ತು ಎಂದು ಲೊಚಲೊಚಗುಟ್ಟುತ್ತಾ ರಾಯರನ್ನು ಸಮಾಧಾನ ಪಡಿಸುವಷ್ಟರಲ್ಲಿ ಸುಸ್ತಾಗಿ ಬಿಟ್ಟರು.

timmmapp2

ಈ ರೀತಿಯಾಗಿ ಭಗವಂತನನ್ನೇ ಬೇಸ್ತುಗೊಳಿಸಲು ಹೋಗಿ ಶ್ಯಾಮರಾಯರು ಖುದ್ದಾಗಿ ತಾವೇ ಬೇಸ್ತು ಬಿದ್ದು, ತಿರುಪತಿ ತಿಮ್ಮಪ್ಪನ ಮೂರು ನಾಮವನ್ನು ಜೋರಾಗಿಯೇ ತಮ್ಮ ಹಣೆಗೆ ಹಾಕಿಸಿಕೊಂಡು ಸರಿಯಾದ ಹರಕೆಯ ಕುರಿಯಾಗಿ ಬಿಟ್ಟರು. ದುಡ್ಡಿಗೆ ದುಡ್ಡೂ ಹೋಯಿತು ಅದರೊಂದಿಗೆ ಮದುವೆಯಲ್ಲಿ ಮಾವನವರು ಕೊಡಿಸಿದ್ದ ಉಂಗುರವೂ ಭಗವಂತನ ಪಾಲಾಗಿತ್ತು. ಅದಕ್ಕೇ ಹೇಳುವುದು. ಯಾವುದನ್ನು ನಮ್ಮಕೈಯಲ್ಲಿ ಮಾಡಲು ಸಾಧ್ಯವೋ ಆದನ್ನೇ ಆಡಬೇಕು ಮತ್ತು ಯಾವುದನ್ನು ಆಡುತ್ತೇವೆಯೋ ಅದನ್ನೇ ಕಾರ್ಯ ಸಾಧುವನ್ನಾಗಿ ಮಾಡಬೇಕು.

ಏನಂತೀರೀ?