ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ

pappu2-removebg-previewಅದೇ ಸಾರು ಹುಳೀ ಪಲ್ಯಗಳನ್ನು ತಿಂದು ಜಡ್ಡು ಹೋಗಿರುವ ನಾಲಿಗೆಗೆ ಸ್ವಲ್ಪ ಹುಳೀ ಮತ್ತು ಖಾರದ ಜೊತೆಗೆ ಒಗರು ಸೇರಿರುವ ಹುಳಿ ಮಾವಿನ ಕಾಯಿಯ ಜೊತೆಗೆ ವರ್ಷದ ಎಲ್ಲಾ ಕಾಲದದಲ್ಲಿಯೂ ಎಲ್ಲೆಡೆಯಲ್ಲಿಯೂ ಅತೀ ಸುಲಭದ ದರದಲ್ಲಿ ಸಿಗುವ, ಬಹಳ  ಔಷಧೀಯ ಗುಣಗಳಿರುವ ಮೆಂತ್ಯದ ಸೊಪ್ಪು ಸೇರಿಸಿ ಅತ್ಯಂತ ರುಚಿಕರವಾದ ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ  ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ತಯಾರಿಸಲು ಬೇಕಾಗುವ ಪದಾರ್ಥಗಳು

  • ಬೇಯಿಸಿದ ತೊಗರಿ ಬೇಳೆ – 1 ಬಟ್ಟಲು
  • ತುರಿದ/ಹೆಚ್ಚಿದ ಮಾವಿನಕಾಯಿ – 1 ಬಟ್ಟಲು
  • ಮೆಂತ್ಯ ಸೊಪ್ಪು – 1 ಬಟ್ಟಲು
  • ಮೆಣಸಿನ ಪುಡಿ –  1 ಚಮಚ
  • ಸಾಸುವೆ – 1/2 ಚಮಚ
  • ಜೀರಿಗೆ  – 1/2 ಚಮಚ
  • ಮೆಂತ್ಯ – 1/4 ಚಮಚ
  • ಚಿಟುಕಿ ಅರಿಶಿನ
  • ಚಿಟುಕಿ ಇಂಗು
  • ರುಚಿಗೆ ತಕ್ಕಷ್ಟು ಉಪ್ಪು
  • ಹಸಿರು ಮೆಣಸಿನಕಾಯಿ 5-6
  • ಕರಿ ಬೇವಿನ ಸೊಪ್ಪು – 8-10 ಎಲೆಗಳು
  • ಸ್ವಲ್ಪ ಕೊತ್ತಂಬರೀ ಸೊಪ್ಪು

ಮಾವಿನಕಾಯಿ ಮೆಂತ್ಯ ಸೊಪ್ಪಿನ ತೊವ್ವೆ ಮಾಡುವ ವಿಧಾನ

  • ಒಂದು ಕುಕ್ಕರಿನಲ್ಲಿ ತೊಗರೀಬೇಳೇ ಹಾಕಿ ಸುಮಾರು ಮೂರ್ನಾಲ್ಕು ವಿಸಿಲ್ ಬರುವವರೆಗೂ ಬೇಯಿಸಿಕೊಳ್ಳಿ.
  • ಒಂದು ಗಟ್ಟಿ ತಳದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿಕೊಂಡು ಅದಕ್ಕೆ ಜೀರಿಗೆ, ಮೆಂತ್ಯ  ಕರಿಬೇವು ಹಸಿರು ಮೆಣಸಿನಕಾಯಿಗಳ ಜೊತೆಗೆ ಚಿಟುಕಿ ಇಂಗು ಹಾಕಿ ಚೆನ್ನಾಗಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ
  • ಇದಕ್ಕೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡಿರುವ ಇಲ್ಲವೇ ತುರಿದುಕೊಂಡಿರುವ ಮಾವಿನ ಕಾಯಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ
  • ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಮೆಂತ್ಯಾ ಸೊಪ್ಪುನ್ನು ಸೇರಿಸಿ ಹಸೀ ಹೋಗುವವರೆಗೂ ಬಾಡಿಸಿಕೊಳ್ಳಿ.
  • ಚೆನ್ನಾಗಿ ಬಾಡಿದ ನಂತರ ಅದಕ್ಕೆ ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಒಂದು ಕುದಿ ಬರುತ್ತಿದ್ದಂತೆಯೇ, ಬೇಯಿಸಿಟ್ಟುಕೊಂಡ ತೊಗರೀಬೇಳೆಯನ್ನು ಬೆರೆಸಿ 5 ನಿಮಿಷಗಳಷ್ಟು  ಕುದಿಸಿ,
  • ಕತ್ತರಿಸಿದ ಕೊತ್ತಂಬರಿ ಸೊಪ್ಪು ಬೆರೆಸಿದಲ್ಲಿ, ಬಿಸಿ ಬಿಸಿಯಾದ ಮಾವಿನಕಾಯಿ, ಮೆಂತ್ಯ ಸೊಪ್ಪಿನ ತೊವ್ವೆ ಸವಿಯಲು ಸಿದ್ಧ

pappu2ಈ ತೂವ್ವೆಯನ್ನು ದೋಸೆ, ಚಪಾತಿ ಪರೋಟದೊಂದಿಗೆ ನೆಂಚಿಕೊಂಡು ತಿನ್ನಬಹುದಾಗಿದೆ. , ಹಾಗೆಯೇ  ಬಿಸಿ ಬಿಸಿ ಅನ್ನದ ಜೊತೆಗೆ ಒಂದೆರಡು ಮಿಳ್ಳೆ ತುಪ್ಪಾ ಮತ್ತು ಈ ತೊವ್ವೆಯನ್ನು ಸೇರಿಸಿಕೊಂಡು ಕಲಸಿ ತಿನ್ನುತ್ತಿದ್ದರೆ, ಸ್ವರ್ಗಕ್ಕೆ ಮೂರೇ ಗೇಣು.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ನಿಮ್ಮವನೇ ಉಮಾಸುತ

mentyaಮನದಾಳದ ಮಾತು :  ಮಾವಿನಕಾಯಿ ಮತ್ತು ಮೆಂತ್ಯ ಸೊಪ್ಪಿನಲ್ಲಿ  ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯಾಗಿ ಬಳಸಬಹುದಾಗಿದೆ.  ಮೆಂತ್ಯ ಸೊಪ್ಪಿನ ನಿರಂತರ  ಸೇವನೆಯಿಂದ  ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇನ್ನು ಮಧುಮೇಹಿಗಳಿಗಂತು ಮೆಂತ್ಯಾ ಸೊಪ್ಪು ರಾಮಬಾಣವಾಗಿದೆ. ಮೆಂತ್ಯೆಯಲ್ಲಿ ಇರುವ ನಾರಿನಾಂಶವು ಸಾಧಾರಣ ಜನರಲ್ಲಿ ಕಾರ್ಬ್ಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದಲ್ಲದೇ, ಇನ್ಸುಲಿನ್ ಚಟುವಟಿಕೆ ಸುಧಾರಣೆ ಮಾಡುವುದು. ಹಾಲುಣಿಸುವ ತಾಯಂದಿರಿಗೆ ಹಾಲನ್ನು ವೃದ್ಧಿಸಲೂ ಸಹಾ ಮೆಂತ್ಯ ಸೊಪ್ಪು ಬಹಳ ಸಹಕಾರಿಯಾಗಿದೆ.

ಈ ಪಾಕಶಾಸ್ತ್ರವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳೀಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

ಹೀರೇಕಾಯಿ ತೊವ್ವೆ

‍ಮದುವೆ. ಮುಂಜಿ, ನಾಮಕರಣ ಹೀಗೆ ಯಾವುದೇ ಸಮಾರಂಭಗಳ ಉಟದಲ್ಲಿ ತೊವ್ವೆ ಬಹಳಷ್ಟು ಮಹತ್ವವನ್ನು ಪಡೆದಿರುತ್ತದೆ. ಇಂದು ಅಂತಹ ಸಾಂಪ್ರದಾಯಕವಾದ ಹೀರೇಕಾಯಿ ತೊವ್ವೆ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಹೀರೇಕಾಯಿ ತೊವ್ವೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ

  • ತೊಗರೀ ಬೇಳೆ – 1 ದೊಡ್ಡ ಬಟ್ಟಲು
  • ಹೆಸರು ಬೇಳೆ – 1 ಸಣ್ಣ ಬಟ್ಟಲು
  • ಜೀರಿಗೆ – 1/2 ಚಮಚ
  • ಹಸಿ ಮೆಣಸಿನಕಾಯಿ 4-5
  • ಕತ್ತರಿಸಿದ ಮಧ್ಯಮ ಗಾತ್ರದ ಹೀರೇಕಾಯಿ – 1
  • ಸಣ್ಣದಾಗಿ ಕತ್ತರಿಸಿದ ಟೋಮ್ಯಾಟೋ – 1
  • ತೆಂಗಿನ ಕಾಯಿ ತುರಿ 1 ಬಟ್ಟಲು
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ತುರಿದ ಶುಂಠಿ
  • ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ

  • ಸಾಸಿವೆ – 1/2 ಚಮಚ
  • ಚಿಟುಕಿ ಇಂಗು
  • ಒಣ ಮೆಣಸಿನಕಾಯಿ 2-4
  • ಸ್ವಲ್ಪ ಕರಿಬೇವಿನ ಸೊಪ್ಪು
  • ತುಪ್ಪ – 1 ಚಮಚ

ಹೀರೇಕಾಯಿ ತೊವ್ವೆ ತಯಾರಿಸುವ ವಿಧಾನ

  • ಸಿಪ್ಪೆ ಹೆರೆದ ಹೀರೆಕಾಯಿಗಳನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಂಡು, ಚೆನ್ನಾಗಿ ತೊಳೆದ ತೊಗರೀಬೇಳೆ ಮತ್ತು ಹೆಸರುಬೇಳೆ ಜೊತೆಗೆ ಚಿಟುಕಿ ಅರಿಶಿನದ ಪುಡಿಯನ್ನು ಹಾಕಿ, ಸ್ವಲ್ಪ ನೀರನ್ನು ಬೆರೆಸಿ ಕುಕ್ಕರಿನಲ್ಲಿ ಎರಡು- ಮೂರು ಶಿಳ್ಳೆ ಬರುವ ತನಕ ಬೇಯಿಸಿಕೊಳ್ಳಿ
  • ಮಿಕ್ಸಿ ಜಾರಿಗೆ ತೆಂಗಿನ ತುರಿ, ಜೀರಿಗೆ, ಹಸೀಮೆಣಸಿನಕಾಯಿ ಮತ್ತು ಕೊತ್ತಂಬರೀ ಸೊಪ್ಪನ್ನು ಹಾಕಿಕೊಂಡು ಸ್ವಲ್ಪ ನೀರನ್ನು ಬೆರೆಸಿ, ನುಣ್ಣಗೆ ರುಬ್ಬಿಕೊಳ್ಳಿ.
  • ದಪ್ಪ ತಳದ ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಬೇಯಿಸಿಟ್ಟು ಕೊಂಡ ಬೇಳೆಯನ್ನು ಹಾಕಿ ಅದಕ್ಕೆ ರುಬ್ಬಿಕೊಂಡ ಮಿಶ್ರಣದ ಜೊತೆಗೆ, ಕತ್ತರಿಸಿಟ್ಟು ಕೊಂಡಿದ್ದ ಟೋಮ್ಯಾಟೋ ಅಥವಾ ಹುಣಸೇಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಹಸೀ ಹೋಗುವವರೆಗೂ ಕುದಿಸಿಕೊಳ್ಳಿ
  • ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಅದು ಕಾದ ನಂತರ ಸಾಸಿವೆ, ಇಂಗು, ಕರಿಬೇವು ಮತ್ತು ಒಣ ಮೆಣಸಿನಕಾಯಿಯ ಒಗ್ಗರಣೆ ಹಾಕಿಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿದಲ್ಲಿ ರುಚಿ ರುಚಿಯಾದ ಸಾಂಪ್ರದಾಯಕವಾದ ಹೀರೇಕಾಯಿ ತೊವ್ವೆ ಸವಿಯಲು ಸಿಧ್ಧ.

ಇದನ್ನು ಚಪಾತಿ, ದೋಸೆ, ಪರೋಟ ಅಲ್ಲದೇ, ರಾಗಿ ಮುದ್ದೆ ಮತ್ತು ಅನ್ನದೊಂದಿಗೂ ಕಲೆಸಿಕೊಂಡು ತಿನ್ನಬಹುದಾಗಿದೆ.

ಹೀರೇಕಾಯಿ ತೊವ್ವೆಯನ್ನು ಈ ವಿಡೀಯೋ ಮುಖಾಂತರವೂ ನೋಡಿ ಕಲಿಯಬಹುದಾಗಿದೆ.

ಇನ್ನೇಕೆ ತಡಾ, ನೋಡ್ಕೋಳ್ಳಿ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ಹೀರೇಕಾಯಿ ಬದಲಾಗಿ ಸಿಹಿ ಕುಂಬಳಕಾಯಿ ಇಲ್ಲವೇ ಪಾಲಾಕ್ ಅಥವಾ ಮೆಂತ್ಯೇ ಸೊಪ್ಪನ್ನು ಬಳಸಿಯೂ ಇದೇ ರೀತಿಯಾದ ಸಾಂಪ್ರದಾಯಕವಾದ ತೊವ್ವೆಯನ್ನು ತಯಾರಿಸಬಹುದಾಗಿದೆ.

ಹೀರೇಕಾಯಿ ಎಲ್ಲಾ ಸಮಯದಲ್ಲಿಯೂ ಮತ್ತು ಎಲ್ಲೆಡೆಯೂ ಸುಲಭವಾಗಿ ಸಿಗುತ್ತದಲ್ಲದೇ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ವಿಟಮಿನ್‌-ಸಿ, ಸತು, ಕಬ್ಬಿಣಾಂಶ, ರೈಬೋಫ್ಲಾವಿನ್‌, ಮೆಗ್ನೇಶಿಯಂ, ಥಯಾಮಿನ್‌ ಹೊಂದಿರುವ ತರಕಾರಿಯಾಗಿದ್ದು ಫ್ಯಾಟ್‌, ಕೊಲೆಸ್ಟ್ರಾಲ್‌ ಮತ್ತು ಕ್ಯಾಲೊರಿ ಹೊಂದಿರುವ ಕಾರಣ ತೂಕ ಇಳಿಸಿಕೊಳ್ಳಬಯಸುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಸಾಕಷ್ಟು ಸೆಲ್ಯುಲೋಸ್‌ ಮತ್ತು ನೀರಿನಂಶ ಹೊಂದಿದ್ದು, ಮಲಬದ್ಧತೆಯಿಂದ ಪೈಲ್ಸ್‌ ತಡೆಗಟ್ಟಲು ಸಹಹರಿಸುತ್ತದೆ. ಇನ್ನು ನಿತ್ಯ ಒಂದು ಗ್ಲಾಸ್ ಹೀರೇಕಾಯಿ ಜ್ಯೂಸ್ ಕುಡಿದರೆ ಕಾಮಾಲೆ ಕಡಿಮೆಯಾಗುತ್ತದೆ. ಮಧುಮೇಹ ರೋಗಿಗಳಿಗಳು ಹೀರೇಕಾಯಿಯನ್ನು ಹುಳಿ, ಪಲ್ಯ, ಚಟ್ನಿ ಅಥವಾ ಜ್ಯೂಸ್ ಮಾಡಿಕೊಂಡು ಹೀಗೆ ರೂಪದಲ್ಲಾದರೂ, ಸೇವಿಸಿದರೂ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.