ಕೋಯಾ-ಪಾಯ

ಅರೇ ಇದೇನಿದು! ಇದು ಯಾವ ಭಾಷೆಯ ಶೀರ್ಷಿಕೆ? ಅಂತಾ ಯೋಚಿಸ್ತಿದ್ದೀರಾ? ಇದು ಸರಳ ಸಂಸ್ಕೃತ ಭಾಷೆಯ ಪದ. ಕೋಯ ಎಂದರೆ ಕಳೆದು ಹೋದದ್ದು ಮತ್ತು ಪಾಯ ಎಂದರೆ ಸಿಕ್ಕಿದ್ದು ಅಂದರೆ ಕಳೆದುಕೊಂಡದ್ದು ಸಿಕ್ಕಿದೆ ಎಂದರ್ಧ. ದೇವರ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆಯೇ ಮಾತನಾಡಿ ದೇವಾಲಯದಿಂದ ಹೊರ ಬಂದ ಕೂಡಲೇ ದೇವರ ಶಕ್ತಿಯ (ಪವಾಡ) ಅನುಭವ ಪಡೆದ ಸರಳ ಸುಂದರ ಪ್ರಸಂಗ ಇದೋ ನಿಮಗಾಗಿ.

shiva

ಪ್ರತೀ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ನಮ್ಮ ವಿದ್ಯಾರಣ್ಯಪುರದ ಸನಾತನ ವೇದ ಪಾಠಶಾಲೆಯ ವತಿಯಿಂದ ತಿಂಗಳ ಮಾಸಶಿವರಾತ್ರಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಬಹಳ ಸುಂದರವಾಗಿ ಆಚರಿಸುವ ಪದ್ದತಿ ರೂಢಿಯಲ್ಲಿದೆ. ಮೊನ್ನೆ ಅದೇ ರೀತಿಯ ಮಾಸಶಿವರಾತ್ರಿಯ ಪೂಜೆಗೆ ಹೋಗಿ, ಪೂಜಾ ಕೈಂಕರ್ಯವೆಲ್ಲವನ್ನೂ ಮುಗಿಸಿಕೊಂಡು ಪ್ರಸಾದವನ್ನೂ ಸ್ವೀಕರಿಸಿ ಅಂದಿನ ಸತ್ಸಂಗದಲ್ಲಿ ಉಪನಿಷತ್ತಿನ ಬಗ್ಗೆ ಅತ್ಯಂತ ಸರಳವಾಗಿ, ಅಷ್ಟೇ ಮನೋಜ್ಞವಾಗಿ ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟ ನಮ್ಮ ವೇದಪಾಠಶಾಲೆಯ ವಿದ್ಯಾರ್ಥಿಗಳು ಮತ್ತು ವಯಕ್ತಿಕವಾಗಿ ಬಹಳ ವರ್ಷಗಳಿಂದ ಆತ್ಮೀಯರಾದವರೊಂದಿಗೆ ಮಾತಾನಾಡುತ್ತಾ ಏ ಕರೋನಾದ ಗೀರೋನಾ ಯಾವುದು ಇಲ್ಲಾ ರೀ.. ಅದೆಲ್ಲಾ ಈ ಭ್ರಷ್ಟ ರಾಜಕಾರಣಿಗಳು ಮತ್ತು ಆಸ್ಪತ್ರೆಯವರು ದುಡ್ಡು ಹೊಡೆಯಲು ಮಾಡುತ್ತಿರುವ ಹುನ್ನಾರ ಎಂಬುದನ್ನು ಹೀಗೇ ಯಾರೋ ನನಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಕ್ಕೆ ನನ್ನ ಪ್ರತಿಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೆವು.

mobile

ಹೌದು ನಿಜ. ಕೊರೋನ ಮತ್ತು ದೇವರು ಎರಡೂ ಸಹಾ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರೆಡೂ ಇಲ್ಲಾ ಎಂದೂ ಸ್ಪಷ್ಟವಾಗಿ ಹೇಳಲಾಗದು. ಎರಡೂ ಸಹಾ ತಮ್ಮ ತಮ್ಮ ಅಸ್ತಿತ್ವವನ್ನು ಮತ್ತು ಪ್ರಭಾವವನ್ನು ಅಗೋಚರವಾಗಿ ಮೂಡಿಸಿವೆ. ಕೊರೋನ ಎಂಬ ವೈರಾಣು ಇಲ್ಲದೇ ಇದ್ದಿದ್ದಲ್ಲಿ ಏಕಾಏಕಿ ಪ್ರಪಂಚಾದ್ಯಂತ 28 ಲಕ್ಷಕ್ಕೂ ಅಧಿಕ ಜನರು ಸಾಯುತ್ತಿರಲಿಲ್ಲ ಅದೇ ರೀತಿ ಭಗವಂತನೇ ಇಲ್ಲ ಎಂದಾದಲ್ಲಿ ಆತನ ನಂಬಿದವರಿಗೆ ಆಗುವ ದಿವ್ಯಾನುಭವವೇ ಇರುತ್ತಿರಲಿಲ್ಲ. ಹೀಗೆ ಅವರವರ ಭಾವಕ್ಕೆ ಅವರವರ ಭಕುತಿ. ಎಂಬುದಾಗಿ ಅವರಿಗೆ ವಿವರಿಸಿದೆ ಎಂದದ್ದಕ್ಕೆ ಅವರೂ ಸಹಾ ಸಹಮೋದನೆ ನೀಡುತ್ತಿದ್ದಾಗಲೇ ಎಲ್ಲರೂ ಹೊರಡುವ ಸಮಯವಾದಾಗ ಹಾಗೆಯೇ ಪೂಜೆ ನೆಡೆದ ಸ್ಥಳವನ್ನು ಒಮ್ಮೆ ಕಣ್ಣಾಡಿಸಿ ಏನಾದರೂ ಬಿಟ್ಟಿದ್ದೇವೆಯೇ ಎಂದು ನೋಡುತ್ತಿದ್ದಾಗಲೇ. ನಮ್ಮ ಮತ್ತೊಬ್ಬ ಆತ್ಮೀಯ ಸ್ನೇಹಿತರಿಗೆ ಸ್ಮಾರ್ಟ್ ಫೋನ್ ಒಂದು ಕಣ್ಣಿಗೆ ಬಿತ್ತು. ಯಾರೋ ನಮ್ಮ ಪಾಠಶಾಲೆಯ ವಿದ್ಯಾರ್ಥಿಗಳೋ ಇಲ್ಲವೇ ಪೂಜೆಗೆ ಬಂದಿದ್ದ ಭಕ್ತಾದಿಗಳು ಬಿಟ್ಟು ಹೋಗಿರಬಹುದು ಎಂದು ತಿಳಿದು ಅದರಲ್ಲಿ last dialed No. ಗಳನ್ನು ನೋಡಿದಾಗ ನನ್ನ ಪರಿಚಯಿಸ್ಥರದ್ದೇ ಮೊಬೈಲ್ ಎಂದು ತಿಳಿದು ಹಾಗೇ ಮನೆಗೆ ಹೊಗುವಾಗ ಅವರ ಮನೆಗೆ ತಲುಪಿಸಿ ಹೋದರಾಯ್ತು ಎಂದು ತೀರ್ಮಾನಿಸಿ ಮೊಬೈಲ್ ನನ್ನ ಬಳಿಯೇ ಇಟ್ಟುಕೊಂಡೆ.

ಅಷ್ಟರಲ್ಲಿ ಅದೇ ಮೊಬೈಲಿಗೆ ಕರೆಯೊಂದು ಬಂದು ಅದನ್ನು ನನ್ನ ಗೆಳೆಯರು ಸ್ವೀಕರಿಸಿದಾಗ ಸರ್, ನನ್ನ ಮೊಬೈಲ್ ಕಳೆದುಹೋಗಿದೆ ದಯವಿಟ್ಟು ಅದನ್ನು ಹಿಂದಿರುಗಿಸುವಿರಾ ಎಂದು ಅತ್ತ ಕಡೆಯಿಂದ ವಿನಮ್ರಿಸಿಕೊಂಡಾಗ, ನನ್ನ ಗೆಳೆಯರು ಮೊಬೈಲ್ ನನ್ನ ಬಳಿ ಇದೆಯೆಂದೂ ನಾನೇ ಅವರ ಮನೆಗೆ ಬಂದು ತಲುಪಿಸುತ್ತೇನೆ ಎಂದು ತಿಳಿಸಿದರು. ಅದಕ್ಕವರು. ಅಯ್ಯೋ ಸುಮ್ಮನೇ ಅವರಿಗೇಕೆ ತೊಂದರೆ, ಈ ಕೂಡಲೇ ನನ್ನ ಮಗನನ್ನು ಕಳುಹಿಸುತ್ತೇನೆ. ಅವನ ಕೈಯ್ಯಲ್ಲಿ ಕೊಟ್ಟು ಕಳುಹಿಸಿ. ಎಂದಾಗ ಸರಿ ಹಾಗೇ ಆಗಲಿ ನಾವು ಇಲ್ಲೇ ದೇವಸ್ಥಾನದ ಆವರಣದಲ್ಲೇ ಇರುತ್ತೇವೆ ಎಂದು ತಿಳಿಸಿ ದೇವಸ್ಥಾನದ ಹೊರಗೆ ಚಪ್ಪಲಿ ಹಾಕಿಕೊಳ್ಳಲು ಬಂದೆವು.

cs

ದೇವಸ್ಥಾನದ ಒಂದು ಬದಿಯಲ್ಲಿರುವ ಚಪ್ಪಲಿ ಸ್ಟಾಂಡಿನಲ್ಲಿ ಬಿಟ್ಟಿದ್ದ ನನ್ನ ಚಪ್ಪಲಿ ಆ ಸ್ಥಳದಲ್ಲಿ ಕಾಣುತ್ತಿಲ್ಲ. ಸ್ವಲ್ಪ ಸೂಕ್ಷ್ಮವಾಗಿ ತಡಕಾಡಿದಾಗ ಮತ್ತೊಂದು ಮೂಲೆಯಲ್ಲಿ ನನ್ನ ಚಪ್ಪಲಿ ಕಾಣಿಸಿದಾಗ ಅರೇ, ಸ್ಟಾಂಡಿನಲ್ಲಿ ಬಿಟ್ಟಿದ್ದ ಚಪ್ಪಲಿ ಇಲ್ಲಿಗೆ ಹೇಗೇ ಬಂತಪ್ಪಾ? ಎಂದು ಉದ್ಗಾರ ತೆಗೆದು, ಬಹುಶಃ ಯಾರೋ ತಮ್ಮ ಚಪ್ಪಲಿ ತೆಗೆಯುವ ಬರದಲ್ಲಿ ನನ್ನ ಚಪ್ಪಲಿಯನ್ನು ಈ ರೀತಿ ಮೂಲೆಗೆ ಎಸೆದಿರಬಹುದು ಎಂದು ಭಾವಿಸಿ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡ ತಕ್ಷಣವೇ, ಅದು ನನ್ನ ಚಪ್ಪಲಿಯಲ್ಲ ಎಂದು ತಿಳಿದು ಬಂದಿತು. ಛೇ.. ಯಾರೋ ತಿಳಿಯದೇ ಒಂದೇ ರೀತಿಯಿದ್ದ ನನ್ನ ಚಪ್ಪಲಿಯನ್ನು ಅವರ ಚಪ್ಪಲಿ ಎಂದು ಭಾವಿಸಿ ಹಾಕಿಕೊಂಡು ಹೋಗಿರಬಹುದು. ಬೇರೆಯವರ ಚಪ್ಪಲಿ ಹಾಕಿಕೊಳ್ಳುವುದು ಸರಿಯಲ್ಲ ಎಂದು ಹೇಳಿ ಹಾಗೇ ಸ್ನೇಹಿತರೊಂದಿಗೆ ಮಾತನಾಡುತ್ತಾ ಮೊಬೈಲ್ ತೆಗೆದುಕೊಂಡು ಹೋಗಲು ಬರುವ ಹುಡುಗನಿಗಾಗಿ ಕಾಯುತ್ತಾ ದೇವಸ್ಥಾನದ ಮುಂದೆಯೇ ನಿಂತೆವು.

ಗೆಳೆಯರೊಂದಿಗೆ ಮಾತನಾಡುತ್ತಿದ್ದರೂ ಮನಸ್ಸಿನಲ್ಲಿ ಛೇ.. ಕೆಲವೇ ದಿನಗಳ ಹಿಂದೆ ತೆಗೆದು ಕೊಂಡ ಚಪ್ಪಲಿ ಕಳೆದು ಹೋಗಬೇಕೇ? ಅದೂ ಈಗ ಕೆಲಸ ಇಲ್ಲದ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಅನಗತ್ಯವಾಗಿ ಮತ್ತೊಂದು ಹೊಸಾ ಚಪ್ಪಲಿ ಖರೀದಿಸಬೇಕೇ? ಎಂದು ಯೋಚಿಸುತ್ತಿದ್ದ ಹಾಗೆ ಚಪ್ಪಲಿ ಕಳೆದು ಕೊಂಡರೆ ಹಿಡಿದ ಶಾಪ ಹೋಗುತ್ತದೆ ಎಂದು ಅಮ್ಮಾ ಹೇಳುತ್ತಿದ್ದದ್ದು ನೆನಪಾಗಿ ನನಗೆ ನಾನೇ ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಆ ಹುಡುಗ ಬಂದು ಅಂಕಲ್ ಅಪ್ಪನ ಮೊಬೈಲ್ ಕೊಡೀ ಎಂದಾಗ ಅವನಿಗೆ ಮೊಬೈಲ್ ಕೊಟ್ಟು ಇನ್ನೇನು ಮನೆಗೆ ಹಿಂದಿರುಗಬೇಕು ಎನ್ನುವಷ್ಟರಲ್ಲಿ ಮುಚ್ಚಿದ್ದ ದೇವಸ್ಥಾನದ ಮುಂದೆ ಬಂದವರೊಬ್ಬರು ತಮ್ಮ ಪಾದರಕ್ಷೆಗಳನ್ನು ಕಳಚಿ ದೇವರಿಗೆ ಕೈ ಮುಗಿಯುತ್ತಿದ್ದನ್ನು ಗಮನಿಸಿದೆ.

cp

ಹಾಗೇ ಸುಮ್ಮನೆ ಅವರತ್ತ ಕಣ್ಣಾಡಿಸಿದರೆ ಅವರು ಬಿಟ್ಟಿದ್ದ ಚಪ್ಪಲಿ ನನ್ನದೇ ರೀತಿಯದ್ದಾಗಿತ್ತು. ಕೂಡಲೇ ಅಲ್ಲಿಗೆ ಹೋಗಿ ಅದನ್ನೊಮ್ಮೆ ಕಾಲಿಗೆ ಹಾಕಿಕೊಂಡು ನೋಡಿದರೆ ಏನಾಶ್ಚರ್ಯ ಆ ಚಪ್ಪಲಿ ನನ್ನದೇ ಆಗಿರಬೇಕೇ?. ನಾನು ಯಾವ ಚಪ್ಪಲಿಯನ್ನು ಕೆಳೆದುಕೊಂಡೇ ಎಂದು ಭಾವಿಸಿದ್ದೆನೋ ಅದೇ ಚಪ್ಪಲಿ ಕಳೆದು ಕೊಂಡ ಜಾಗದಲ್ಲಿಯೇ ಕೆಲವೇ ಕೆಲವು ಕ್ಷಣಗಳಲ್ಲಿ ನನಗೆ ಸಿಕ್ಕಿ ಬಿಟ್ಟಿತ್ತು.

ಅದೇ ಸಂತೋಷದಲ್ಲಿ ಕೂಡಲೇ ಏನು ಸ್ವಾಮೀ, ಈ ಚಪ್ಪಲಿ ನಿಮ್ಮ ಬಳಿ ಹೇಗೆ ಬಂದಿತು? ಎಂದು ಕೇಳಿದೆ. ಅದಕ್ಕವರು, ಈ ಸ್ವಲ್ಪ ಮುಂಚೆ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಹೋಗಿದ್ದೆ. ಅದೇಕೋ ಏನೋ ದೇವರ ದರ್ಶನ ಮಾಡಿದ ಸಮಾಧಾನವಾಗಿರಲಿಲ್ಲ. ಅದಕ್ಕೇ ಈಗ ಮತ್ತೊಮ್ಮೆ ದೇವರಿಗೆ ಕೈ ಮುಗಿಯುವಾ ಎಂದು ಮತ್ತೆ ಬಂದೇ ಎಂದರು. ಅದು ಸರಿ ನೀವು ಚಪ್ಪಲಿ ಹಾಕಿಕೊಂಡಾಗ ಅದು ನಿಮ್ಮ ಚಪ್ಪಲಿಯಲ್ಲಾ ಎಂದು ಗೊತ್ತಾಗಲಿಲ್ಲವೇ ಎಂದು ಕೇಳಿದಾಗ. ದಯವಿಟ್ಟು ಕ್ಷಮಿಸಿ. ನನಗೂ ವಯಸ್ಸಾಗಿದೆ. ಒಂದೇ ರೀತಿಯ ಚಪ್ಪಲಿಯಾಗಿದ್ದರಿಂದ ನನಗೂ ಗೊತ್ತಾಗಲಿಲ್ಲ ಎಂದು ಕೈ ಮುಗಿದರು. ಬಹುಶಃ ದೇವರ ದರ್ಶನವಾದ ನಂತರ ಅವರಿಗೇ ಅರಿವಿಲ್ಲದಂತೆಯೇ ಒಂದೇ ರೀತಿ ಇದ್ದ ನನ್ನ ಚಪ್ಪಲಿಯನ್ನು ಅವರು ಹಾಕಿಕೊಂಡು ಹೋಗಿದ್ದರು.

ಕೆಲವೇ ನಿಮಿಷಗಳ ಹಿಂದೆಯಷ್ಟೇ ಕಣ್ಣಿಗೆ ಕಾಣದ ದೇವರ ಅಸ್ತಿತ್ವದ ಬಗ್ಗೆ ಮಾತನಾಡಿದ್ದೆವು. ನನ್ನ ಚಪ್ಪಲಿ ಕಳೆದು ಹೋಗಿದ್ದಾಗ ಅಯ್ಯೋ ದೇವರೇ ನನ್ನ ಚಪ್ಪಲಿಯೇ ಕಳೆದುಹೋಗಬೇಕೇ? ಎಂದು ದೇವರಲ್ಲಿ ಮೊರೆ ಹೋಗಿದ್ದೆ. ಈಗ ಚಪ್ಪಲಿ ಸಿಕ್ಕ ನಂತರ ನನ್ನ ಮನಸ್ಸಿನಲ್ಲಿ ಮೂಡಿದ್ದೇನೆಂದರೆ ಬಹುಶಃ ನನ್ನ ಚಪ್ಪಲಿ ಮರಳಿ ನನಗೇ ಸಿಗಲೆಂದೇ ದೇವರು ಮೊಬೈಲ್ ಹಿಂದಿರಿಗಿಸುವ ನೆಪದಲ್ಲಿ ನನ್ನನ್ನು ಅಲ್ಲಿಯೇ ಕಾಯಿಸಿದನೇ? ಇಲ್ಲವೇ ಮತ್ತೊಬ್ಬರ ಚಪ್ಪಲಿ ಹಾಕಿಕೊಂಡು ಹೋಗಿದ್ದರ ಅರಿವಿಲ್ಲದವರು, ಮತ್ತೊಮ್ಮೆ ದೇವಸ್ಥಾನಕ್ಕೆ ಮರಳಿ ಬರುವಂತೆ ಪ್ರೇರಣೆ ನೀಡಿದನೇ?

ಬಹುಶಃ ಪೂಜೆ ಮುಗಿದ ನಂತರ ಯಾರಿಗೂ ಕಾಯುವ ಪ್ರಮೇಯವಿಲ್ಲದಿದ್ದಲ್ಲಿ, ನನ್ನ ಚಪ್ಪಲಿ ಕಾಣದಿದ್ದಾಗ ನನ್ನ ದುರ್ವಿಧಿಗೆ ನನ್ನನ್ನೇ ನಾನು ಶಪಿಸಿಕೊಂಡು ಹೋಗಿಬಿಡುತ್ತಿದೆ. ನನ್ನ ಚಪ್ಪಲಿ ಅದೇ ಸ್ಥಾನಕ್ಕೆ ಮರಳಿ ಬಂದ್ದಿದ್ದರೂ ಅದನ್ನು ದಕ್ಕಿಸಿಕೊಳ್ಳಲು ನಾನು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ.

ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎಂಬ ದಾಸರ ವಾಣಿಯಂತೆ, ಸುಖಾ ಸುಮ್ಮನೆ ದೇವರ ಅಸ್ತಿತ್ವ ಮತ್ತು ಅಸ್ಮಿತೆಗಳ ಬಗ್ಗೆ ನಿರರ್ಥಕ ವಿತಂಡ ವಾದಗಳನ್ನು ಮಾಡುತ್ತಾ ಎಲ್ಲರ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಾ ವಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಬದಲು, ನಿಷ್ಕಲ್ಮಶವಾಗಿ ಆ ಭಗವಂತನನ್ನು ಧ್ಯಾನ ಮಾಡೋಣ. ಫಲಾ ಫಲಗಳನ್ನು ನೀಡುವುದನ್ನು ಆ ಭಗವಂತನಿಗೇ ಬಿಟ್ಟು ಬಿಡೋಣ. ನಂಬಿ ಕೆಟ್ಟವರು ಇಲ್ಲವೋ ಶ್ರೀ ಹರಿಯೇ ನಿನ ನಾಮವ ಜಪಿಸಿದವರು, ನಂಬಿ ಕೆಟ್ಟವರು ಇಲ್ಲವೋ ಎನ್ನುವಂತೆ ಭಗವಂತನನ್ನು ನಂಬಿದವರಿಗೆ ಎಂದೂ ಕೆಡುಕಾಗದು ಎಂಬುದಕ್ಕೆ ಈ ಅಧ್ಭುತ ಪ್ರಸಂಗವೇ ಜ್ವಲಂತ ಸಾಕ್ಷಿಯಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಸಹೃದಯೀ, ಅಜಾತಶತ್ರು, ಶ್ರೀ ಕೆ. ಎನ್. ಸತ್ಯನಾರಾಯಣ ರಾವ್

ನಾನು ಚಿಕ್ಕವನಿದ್ದಾಗ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ || ಎಂಬ ಸುಭಾಷಿತವನ್ನು ಸಂಘದ ಶಾಖೆಯಲ್ಲಿ ಕಲಿಸಿಕೊಟ್ಟಿದ್ದರು. ಪರೋಪಕಾರಕ್ಕಾಗಿ ಮರಗಳು ಹಣ್ಣುಕೊಡುತ್ತವೆ, ನದಿಗಳು ಹರಿಯುತ್ತಾ ನೀರನ್ನು ಕೊಡುವುದೂ ಬೇರೆಯವರ ಉಪಯೋಗಕ್ಕಾಗಿ, ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರ ಮಾಡುವುದಕ್ಕಾಗಿಯೇ ಎನ್ನುವ ಅರ್ಥವಿರುವ ಆ ಶ್ಲೋಕಕ್ಕೆ ಅನ್ವರ್ಥವಾಗಿಯೇ ತಮ್ಮ ಇಡೀ ಜೀವಮಾನವನ್ನು ಸವೆಸಿದ ಹಿರಿಯ ಜೀವಿಯೊಬ್ಬರ ಪರಿಚಯ ಇದೋ ನಿಮಗಾಗಿ.

ನನ್ನ ಪ್ರಾಣ ಸ್ನೇಹಿತ ಹರಿಯವರ ದೊಡ್ಡಮ್ಮನ ಯಜಮಾನರು ಅರ್ಥಾತ್ ನನ್ನ ಕುಚಿಕು ಗೆಳೆಯ ಹರಿಯವರ ದೊಡ್ಡಪ್ಪನವರಾಗಿದ್ದ ಶ್ರೀ ಸತ್ಯನಾರಾಯಣ ರಾವ್ ಅತ್ಯಂತ ಅಜಾನುಬಾಹು ಮತ್ತು ಸುರದ್ರೂಪಿಯೂ ಹೌದು. ಸದಾಕಾಲವೂ ನಗುವನ್ನೇ ಹೊತ್ತಿರುತ್ತಿದ್ದ ಅವರ ಮುಖಾರವಿಂದದಲ್ಲಿ ಎದ್ದು ಕಾಣುತ್ತಿದ್ದದ್ದೇ ಅವರ ಒಂದೆಳೆಯ ಕರೀ ನಾಮ. ಅವರನ್ನು ಒಂದು ಕ್ಷಣ ನೋಡಿದ ತಕ್ಷಣವೇ ಮತ್ತೊಮ್ಮೆ ಅವರನ್ನು ನೋಡಬೇಕೆನಿಸುವ ಮತ್ತು ನಮಗೇ ಅರಿವಿಲ್ಲದಂತೆ ಕೈ ಎತ್ತಿ ಮುಗಿಯಬೇಕೆನಿಸುವಂತಹ ಕ್ಷಾತ್ರತೇಜದವರು ಎಂದರೂ ಅತಿಶಯೋಕ್ತಿಯೇನಲ್ಲ. ಮುಖದಲ್ಲಿ ಸದಾಕಾಲವೂ ಮಂದಹಾಸ ಬೀರುತ್ತಾ, ಗಡಿಯಾರ ಕಟ್ಟಿದ ಬಲಗೈ  ಎತ್ತಿ ನಮಸ್ಕಾರ ಹೇಳುತ್ತಿದ್ದ ಪರಿ ಸದಾಕಾಲವೂ ಕಣ್ಣ ಮುಂದೆಯೇ ಬರುತ್ತದೆ.. ಎಂತಹ ಕಠಿಣ  ಪರಿಸ್ಥಿತಿಯಲ್ಲಿಯೂ ತಾಳ್ಮೆಗೆಡದೆ ಸಮಚಿತ್ತತೆ ಇಂದ ವ್ಯವಹರಿಸುತ್ತಿದ್ದರು.   ಅವರು ಕೋಪಗೊಂಡಿದ್ದೇ ನನ್ನ ಅನುಭವಕ್ಕೆ ಬಂದಿರಲಿಲ್ಲ

ಎಂಬತ್ತರ ದಶಕದಲ್ಲಿ ನನ್ನ ಗೆಳೆಯನ ಮೂಲಕ ಪರಿಚಯವಾದ ಸತ್ಯನಾರಾಯಣ ರಾವ್ ನಂತರ ದಿನಗಳಲ್ಲಿ ಅವರೊಂದಿಗೆ ಅತ್ಮೀಯತನ ಹೆಚ್ಚುತ್ತಾ ಹೋಯಿತು. ತಮ್ಮ ನಾದಿನಿ ಮಗನನ್ನು ಪ್ರೀತಿಸುವಷ್ಟೇ ನನ್ನನ್ನೂ ಇಷ್ಟಪಡುತ್ತಿದ್ದರು.

ಮೂಲತಃ ಗೌರೀಬಿದನೂರಿನ ಕಡೆಯವರಾದ ಶ್ರೀಯುತರು, ತಮ್ಮ ಊರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಕಾಲ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ‌ ಸೇವೆ ಸಲ್ಲಿಸಿದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಕೈವಾರದಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾವಣೆಯಾದ ಕಾರಣ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸುಕೊಂಡರು. ಮೂರ್ನಾಲ್ಕು ವರ್ಷ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದ ನಂತರ ಅನೇಕ ವರ್ಷಗಳ  ಕಾಲ ವಿಕ್ಟೋರಿಯಾ ಆಸ್ಪತ್ರೆಯ ಕಛೇರಿಯಲ್ಲಿ ಮಾಡುತ್ತಾ,  ನಿವೃತ್ತರಾಗುವ ವೇಳೆಗೆ ಅದೇ ಇಲಾಖೆಯಲ್ಲಿ ಗೆಝೆಟೆಡ್ ಆಫೀಸರ್ ಆಗುವಷ್ಟರ  ಮಟ್ಟಿಗೆ ಬೆಳೆದಿದ್ದರು. ಗಂಡ ಮತ್ತು ಹೆಂಡತಿ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ, ಹೀಗೆ ನಾವಿಬ್ಬರು ನಮಗಿಬ್ಬರು ಎನ್ನುವ ಸರಳ ಸುಂದರವಾದ ಸಂಸಾರ.

ಸರ್ಕಾರೀ ಕೆಲಸದಲ್ಲಿ ಇದ್ದರೂ, ಯಾವುದೇ ರೀತಿಯ ಎಂಜಿಲು ಕಾಸಿಗೆ ಕೈ ಒಡ್ಡದೇ ಬಹಳ ಕರ್ಮನುಷ್ಠಾನುಸಾರವಾಗಿ ಸದಾ ಕಾಲವೂ ಗೋವಿಂದ, ಶ್ರೀ ಹರಿ ಎಂದು ಭಗವಂತನ ನಾಮ ಸ್ಮರಣೆ ಮಾಡುತ್ತಿದ್ದವರು. .  ಅವರ ಸರಳತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿ ಎನ್ನುವಂತಹ ಈ ಉದಾರಣೆಯನ್ನು ಹೇಳಿದಿದ್ದರೆ ಅವರ ವ್ಯಕ್ತಿತ್ವದ ಪರಿಚಯವೇ ಆಗುವುದಿಲ್ಲ. ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೂ ಗೆಝೆಟೆಡ್ ಆಫೀಸರ್ ಆಗಿ ನಿವೃತ್ತಿ ಹೊಂದುವವರೆಗೂ ಅವರು ಕಛೇರಿಗೆ ಹೋಗುತ್ತಿದ್ದದ್ದು ಸೈಕಲ್ಲಿನಲ್ಲಿಯೇ. ಇದಕ್ಕಿಂತಲೂ ಆಶ್ಚರ್ಯದ ವಿಷವೇನೆಂದರೆ ಅವರ ಕಛೇರಿಯಲ್ಲಿ ಗ್ರೂಪ್-ಡಿ ಆಗಿ ಕೆಲಸಮಾಡುತ್ತಿದ್ದವರು ಕಾರಿನಲ್ಲಿ ಕಛೇರಿಗೆ ಬರುತ್ತಿದ್ದರು. ಅದೆಷ್ಟೋ ಬಾರಿ ಬನ್ನಿ ಸ್ವಾಮೀ ನಾನೇ ಮನೆಗೆ ಬಿಡ್ತೀನಿ ಎಂದರೂ, ಛಳಿ, ಗುಡುಗು. ಮಿಂಚು, ಮಳೆ ಯಾವುದನ್ನೂ ಲೆಕ್ಕಿಸದೇ ಕಛೇರಿಗೆ ಅನುದಿನವೂ ಸೈಕಲ್ಲಿನಲ್ಲಿಯೇ ಹೋಗಿಬರುತ್ತಿದ್ದರು. ಎಂತಹದ್ದೇ ಅತ್ಯಾಧುನಿಕ ಐಶಾರಾಮ್ಯದ ವಾಹನಗಳನ್ನು ಖರೀದಿಸುವ ಶಕ್ತಿಯಿದ್ದರೂ ಕಡೆಯ ವರೆಗೂ ಸಾರ್ವಜನಿಕ ವಾಹನಗಳಲ್ಲಿಯೇ ಪ್ರಯಾಣಿಸುತ್ತಿದ್ದ ಸರಳ ಜೀವಿ.

ಅದೇ ರೀತಿಯಲ್ಲಿ ಎಂತಹ ಸನ್ನಿವೇಶಗಳು ಬಂದರೂ ತಮ್ಮ ತ್ರಿಕಾಲ ಸಂಧ್ಯಾವಂದೆನೆ ಮತ್ತು ಪೂಜೆ ಪುನಸ್ಕಾರಗಳನ್ನು ನಿಲ್ಲಿಸಿದವರಲ್ಲಾ. ಎಂತಹದ್ದೇ ಗಹನವಾದ ವಿಷಯದ ಚರ್ಚೆ ನಡೆಯುತ್ತಿದ್ದರೂ, ಎಂತಹದ್ದೇ ಸಂಭ್ರಮ ವಾತಾವರಣದಲ್ಲಿದ್ದರೂ ಸಮಯ ಬಂದ ಕೂಡಲೇ ಸದ್ದಿಲ್ಲದೇ ಹೋಗಿ ನಿತ್ಯಕರ್ಮಾನುಷ್ಠಾನಗಳನ್ನು ಚಾಚೂ ತಪ್ಪದೇ ಮಾಡುತ್ತಿದ ಕರ್ಮಠರು. ಅವರು ತಮ್ಮಮನೆಯ ಅಗ್ಗಿಷ್ಟಿಕೆಯ ನೈವೇದ್ಯದ ಅಡುಗೆ ಮತ್ತು ಮಠಗಳ ಹೊರತಾಗಿ ಪರಾನ್ನ ಸ್ವೀಕರಿಸಿದ್ದನ್ನು ನೋಡೇ ಇಲ್ಲ. ಬಂಧು ಮಿತ್ರರ ಯಾವುದೇ ಸಭೆ ಸಮಾರಂಭಗಳಿಗೆ ಕರೆದಲ್ಲಿ ಅತ್ಯಂತ ಪ್ರೀತಿಯಿಂದ ಆಗಮಿಸಿ ಪೂಜೆಗಳು ಮತ್ತು ಶಾಸ್ತ್ರಗಳು ಮುಗಿಯುವವರೆಗೂ ಎಲ್ಲರೊಂದಿಗೂ ಅತ್ಯಂತ ಆತ್ಮೀಯವಾಗಿ ಬೆರೆಯುತ್ತಲೇ ಇದ್ದವರು, ಊಟದ ಸಮಯದಲ್ಲಿ ಯಾರ ಕಣ್ಣಿಗೂ ಬೀಳದೇ, ಸದ್ದಿಲ್ಲದೇ ಹತ್ತಿರದ ಮಠಕ್ಕೆ ಹೋಗಿ ಪ್ರಸಾದವನ್ನು ಸ್ವೀಕರಿಸಿ ಸದ್ದಿಲ್ಲದೇ ಮತ್ತೆ ಸಮಾರಂಭಕ್ಕೆ ಬಂದು ಬಿಡುತ್ತಿದ್ದಂತಹ ಸರಳ ಜೀವಿ. ನನ್ನ ಸುಕೃತವೋ ಏನೋ ನನ್ನ ಮದುವೆ ಮತ್ತು ನಮ್ಮ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ಆಶೀರ್ವದಿಸಿದ್ದರು.

ಅಲ್ಲಿದೆ ನಮ್ಮನೇ ಇಲ್ಲಿ ಬಂದೆ ಸುಮ್ಮನೇ ಎನ್ನುವ ದಾಸರ ಪದ ಹಾಗೆ ತಮ್ಮ ಜೀವಮಾನಾವಧಿಯಲ್ಲಿ ತಮ್ಮದೇ ಆದ ಸ್ವಂತದ ಗೂಡೊಂದನ್ನು ಕಟ್ಟಿಕೊಳ್ಳುವಷ್ಟು ಆರ್ಥಿಕ ಸಬಲರಾಗಿದ್ದರೂ ಆಸ್ತಿ ಮಾಡುವತ್ತ ಹರಿಸಲೇ ಇಲ್ಲ ತಮ್ಮ ಚಿತ್ತ. ತಮ್ಮ ಬಂಧು-ಮಿತ್ರರು ಮನೆಗಳನ್ನು ಕಟ್ಟುವಾಗ ಮನೆಯವರಿಗೂ ತಿಳಿಯದಂತೆ ಅದಕ್ಕೂ ಹೆಚ್ಚಾಗಿ ಎಂದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಯ್ಯಿಗೂ ತಿಳಿಯದಂತೆ ಅನೇಕರಿಗೆ ಆರ್ಥಿಕವಾಗಿ ಮತ್ತು ಬಗೆ ಬಗೆಯ ರೂಪದಲ್ಲಿ ಸಹಾಯವನ್ನು ಮಾಡಿದರೂ, ಅವರು ಸ್ವಂತಕ್ಕೊಂದು ಮನೆಯನ್ನು ಕಟ್ಟಿಕೊಳ್ಳುವ ಮನಸ್ಸನ್ನು ಮಾಡಲೇ ಇಲ್ಲ. ತಮ್ಮ ಜೀವಿತಾವಧಿಯ ಬಹಳಷ್ಟು ವರ್ಷ ಬೆಂಗಳೂರಿನ ಚಾಮರಾಜ ಪೇಟೆಯ ಬಾಡಿಗೆ ಮನೆಯೊಂದರಲ್ಲೇ ಕಳೆದು, ನಂತರ ಮಗ ಬೆಳೆದು ದೊಡ್ಡವನಾಗಿ ಸಂಸ್ಕೃತದಲ್ಲಿ ಎಂ.ಎ ಮುಗಿಸಿ ಕೆಲ ಕಾಲ ಶಾಲೆಯೊಂದರಲ್ಲಿ ಸಂಸ್ಕೃತ ಶಿಕ್ಷಕನಾಗಿ ನಂತರ ತನಗೆ ಲೌಕಿಕ ಕೆಲಸ ಮಾಡುವುದರಲ್ಲಿ ಆಸಕ್ತಿ ಇಲ್ಲ. ಅದರ ಬದಲು ಆಧ್ಯಾತ್ಮಿಕವಾಗಿ ಭಗವಂತನ ಸೇವೆಯನ್ನು ಮಾಡಲು ಇಚ್ಚಿಸುತ್ತೇನೆ ಎಂದಾಗ, ಒಂದು ಚೂರು ಪ್ರತಿರೋಧಿಸದೇ ತಮ್ಮ ಮಗನಿಗೆ ಬೆನ್ನುಲುಬಾಗಿ ಆತನ ಬೆಂಬಲಕ್ಕೆ ನಿಂತಿದ್ದು ಈಗಿನ ಕಾಲದಲ್ಲಿ ಸ್ವಲ್ಪ ಅಪರೂಪವೇ ಸರಿ.

ಮಗ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜಾ ಕೈಂಕರ್ಯಕ್ಕೆ ಸೇರಿಕೊಂಡಾಗ ಇವರೂ ಸಹಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಗನ ಜೊತೆಯಲ್ಲಿ ಭಗವಂತನ ಸೇವೆ ಮಾಡತೊಡಗಿದರು. ನೋಡ ನೋಡುತ್ತಿದ್ದಂತೆಯೇ ಮಗ ಪುರಾಣ ಮತ್ತು ಪ್ರವಚನಗಳಲ್ಲಿ ಪ್ರಖ್ಯಾತಿ ಪಡೆದು ದೇಶಾದ್ಯಂತ ವಿವಿಧ ಕಡೆಗಳಲ್ಲಿ ಪ್ರವಚನಕ್ಕೆ ಪಾಠ ಪ್ರವಚನಗಳನ್ನು ಮಾಡುವಷ್ಟು ಆಚಾರ್ಯ ಪಟ್ಟಕ್ಕೆ ಏರಿದ್ದನ್ನು, ಮನಸ್ಸಿನಲ್ಲಿಯೇ ಮಗನ ವಿದ್ಯೆ, ಪಾಂಡಿತ್ಯ ಮತ್ತು ಏಳಿಗೆಗೆ ಸಂತೋಷ ಪಡುತ್ತಾ, ಸದ್ದಿಲ್ಲದೇ ಮಠದಲ್ಲಿ ಭಗವಂತಹ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಹೋಗುತ್ತಿದ್ದಂತಹ ಸಾರ್ಥಕ ಜೀವಿ.

ಬಿಡುವಿನ ವೇಳೆಯಲ್ಲಿ ತಮ್ಮ ಮೊಮ್ಮಗಳು ಮತ್ತು ಮೊಮ್ಮಗನ ಆಟ ಪಾಟ, ಲಾಲನೆ ಪೋಷಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದದ್ದಲ್ಲೇ ಮನೆಯ ಅಷ್ಟೂ ವ್ಯವಹಾರಗಳನ್ನೂ ಮಗನಿಗೆ ಕಿಂಚಿತ್ತೂ ಗೊತ್ತಾಗದಂತೆ ಸೊಸೆಯೊಂದಿಗೆ ಸದ್ದಿಲ್ಲದೇ ಮಾಡಿ ಮುಗಿಸುತ್ತಿದ್ದರು. ಮನೆಯ ಬಾಡಿಗೆ, ಮಾಸಿಕ ಖರ್ಚುಗಳು, ಮೊಮ್ಮಕ್ಕಳ ವಿದ್ಯಾಭ್ಯಾಸದ ಖರ್ಚು ಎಲ್ಲವನ್ನೂ ತಾವೇ ನಿಭಾಯಿಸುವ ಮೂಲಕ ತಮ್ಮ ಮಗ ಭಗವಂತನ ಸೇವೆಯಲ್ಲಿ ಸದಾಕಾಲವೂ ತಲ್ಲೀನರಾಗಿರುವಂತೆ ಮಾಡಿದ ಹೆಗ್ಗಳಿಗೆ ಶ್ರೀಯುತರದ್ದು ಎನ್ನುವುದು ಗಮನಾರ್ಹವಾಗಿದೆ.

ಪ್ರತೀ ದಿನವೂ ಮಲಗುವ ಮುಂಚೆ ಹೇಳಿಕೊಳ್ಳುವ ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ ! ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ | ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಂ || ಎನ್ನುವ ಶ್ಲೋಕದ ಅರ್ಥದಂತೆ, ಹೇ ಭಗವಂತಾ, ಯಾರಲ್ಲೂ ದೈನೇಸಿಯಾಗಿ ಬೇಡದಂತಹ ಜೀವನ ಮತ್ತು ಆಯಾಸವಿಲ್ಲದಂತಹ ಮರಣವನ್ನು ಕೊಡು ಎಂದು ಪ್ರಾರ್ಥಿಸುವಂತೆ, ಶ್ರೀಯುತರು ತಮ್ಮ ಅಂತಿಮ ಕಾಲದಲ್ಲಿಯೂ ದೈವ ಸ್ಮರಣೆ ಮಾಡುತ್ತಲೇ, 6.4.2021 ಮಂಗಳವಾರ ತಮ್ಮ ಎಲ್ಲಾ ಪೂಜೆ ಪುನಸ್ಕಾರಗಳನ್ನು ಮುಗಿಸಿ ವಿರಮಿಸುತ್ತಿದ್ದಾಗಲೇ, ಹರೇ ಶ್ರೀನಿವಾಸಾ.. ಹರೇ ಶ್ರೀನಿವಾಸಾ.. ಎಂದು ಎರಡು ಬಾರಿ ಹೇಳಿ ಮೂರನೇ ಬಾರಿಗೆ ಶ್ರೀನಿವಾಸನ ಧ್ಯಾನ ಮಾಡುತ್ತಿದ್ದಂತೆಯೇ  ಭಗವಂತನಲ್ಲಿ ಲೀನವಾಗಿಹೋದ್ದದ್ದು ನಿಜಕ್ಕೂ ಅಘಾತಕಾರಿಯಾದ ಸಂಗತಿಯೇ ಸರಿ. ಅವರ ಅನನ್ಯ ಸಾಧನೆ, ನಿಷ್ಕಲ್ಮಶ ಪ್ರತಿಫಲಾಪೇಕ್ಷೆಯಿಲ್ಲದೆ ಭಗವಂತನಿಗೆ ಮಾಡಿದ ಸೇವೆ ಮತ್ತು ಭಗವಂತ ಮೇಲಿದ್ದ ಅವರ ಅಪರಿಮಿತ ಭಕ್ತಿ ನಿಜಕ್ಕೂ ಅನುಕರಣೀಯ. ತಮ್ಮ ಜೀವನದುದ್ದಕ್ಕೂ ತಾವು ನಂಬಿದ್ದ ಆಚಾರ ವಿಚಾರಗಳಿಗೆ ಕಿಂಚಿತ್ತೂ ಲೋಪವಾಗದಂತೆ ಅತ್ಯಂತ ಸಂಯಮ ಮತ್ತು ಸರಳತೆಯಿಂದ ಬದುಕನ್ನು ಸಾರ್ಥಕ ಪಡಿಸಿಕೊಂಡ ರೀತಿ ನಿಜಕ್ಕೂ ಹೆಮ್ಮೆ ಮತ್ತು ಗರ್ವ ಪಡುವಂತಹ ವಿಷವಾಗಿದ್ದು ನಮ್ಮಂತಹವರಿಗೆ ದಾರಿ ದೀಪವಾಗಿದೆ ಎಂದರೂ ತಪ್ಪಾಗಲಾರದು.

ಇಂತಹ ಸರಳ, ಸಜ್ಜನ ಸತ್ಯನಾರಾಯಣ ರಾವ್ ಅವರ ಅಕಾಲಿಕ ಮರಣದ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸೋಣ ಮತ್ತು ಇಂತಹ ಸಜ್ಜನರ ಸಂಖ್ಯೆ ಈ ಸಮಾಜದಲ್ಲಿ ಅಗಣಿತವಾಗಲಿ ತಮ್ಮೂಲಕ ಧಾರ್ಮಿಕ ಶ್ರದ್ಧಾ ಭಕ್ತಿಗಳು ನಮ್ಮ ಮುಂದಿನ ಪೀಳಿಗೆಯವರಿಗೂ ಪರಿಚಯವಾಗಲಿ ಎಂದು ಆಶಿಸೋಣ.

ಭಗವಂತಹ ಅನುಗ್ರಹದಿಂದ ಆವರ ಮಕ್ಕಳು ಮತ್ತು ಮೊಮ್ಮಕ್ಕಳ ಕಾಲದಲ್ಲಿಯಾದರೂ ಅವರು ಭಗವಂತನ ಸೇವೆಗೊಂದು ಶಾಶ್ವತವಾದ ಭವನವನ್ನು ಕಟ್ಟಬೇಕೆಂಬ ಬಹುಕಾಲದ ಆಸೆಯ ಎಲ್ಲಾ ಸಮಸ್ಯೆಗಳೂ ಬಗೆ ಹರಿದು, ಈಡೇರುವ ಮೂಲಕ ಅವರಿಗೆ ವೈಕುಂಠದಲ್ಲಿ ಶಾಶ್ವತವಾದ ನೆಲೆಯೊಂದು ಸಿಕ್ಕಿ ಧೃವ ನಕ್ಷತ್ರದಂತೆ ಸದಾಕಾಲವೂ ಕಂಗೊಳಿಸಲಿ.

ಏನಂತೀರೀ?
ನಿಮ್ಮವನೇ ಉಮಾಸುತ

ದೇವರು ಎಷ್ಟು ದೊಡ್ಡವರು?

ಅದೊಂದು ಸಂಪ್ರದಾಯಸ್ಥ ಕುಟುಂಬ. ಅದೊಂದು ದಿನ ಅ ಮನೆಯ ಸಣ್ಣ ವಯಸ್ಸಿನ ಹುಡುಗನೊಬ್ಬ ತನ್ನ ತಂದೆಯನ್ನುದ್ದೇಶಿಸಿ, ಅಪ್ಪಾ, ನಾವು ನಂಬುವ ದೇವರು ದೊಡ್ಡವರಾಗಿರುತ್ತಾರೆ? ಅವರ ಗಾತ್ರವೇನು? ಎಂದು ಮುಗ್ಧತೆಯಿಂದ ಕೇಳುತ್ತಾನೆ. ಮಗನ ಪ್ರಶ್ನೆಯಿಂದ ಕೊಂಚ ಆಶ್ವರ್ಯ ಚಕಿತನಾದ ತಂದೆ ಒಂದು ಕ್ಶಣ ಮೌನವಾಗಿ ಯೋಚಿಸಿ ಇದಕ್ಕೆ ಹೇಗೆ ಉತ್ತರಿಸುವುದು ಎಂದು ನೋಡುತ್ತಿರುವಾಗಲೇ ಆಗಸದಲ್ಲಿ ವಿಮಾನವೊಂದು ಹೋಗುತ್ತಿರುತ್ತದೆ. ಕೂಡಲೇ ಮಗೂ, ಆ ವಿಮಾನದ ಗಾತ್ರ ಎಷ್ಟು ಎಂದು ಹೇಳಬಲ್ಲೆಯಾ ಎಂದು ಪ್ರಶ್ನಿಸುತ್ತಾನೆ.

ಆಗಸದತ್ತ ದಿಟ್ಟಿಸಿ ವಿಮಾನವನ್ನು ನೋಡಿದ ಹುಡುಗ, ಅಪ್ಪಾ ವಿಮಾನ ಬಹಳ ಸಣ್ನದಾಗಿದೆ ಎಂದು ಉತ್ತರಿಸುತ್ತಾನೆ. ಹೌದು ಮಗನೇ ವಿಮಾನ ಸಣ್ಣದಾಗಿಯೇ ಕಾಣಿಸುತ್ತಿದೆ ಎಂದು ಹೇಳಿ ಅಂದು ಸಂಜೆ ತನ್ನ ಮಗನನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿಂತಿದ್ದ ವಿಮಾನವನ್ನು ತೋರಿಸುತ್ತಾನೆ. ಈಗ ಹೇಳು ಮಗನೇ ವಿಮಾನದ ಗಾತ್ರ ಎಷ್ಟು ಎಂದು ಕೇಳಿದಾಗ, ನಿಂತಿರುವ ವಿಮಾನವನ್ನು ಹತ್ತಿರದಿಂದ ನೋಡಿದ ಮಗ, ಅಬ್ಬಬ್ಬಾ ವಿಮಾನ ಎಷ್ಟೊಂದು ದೊಡ್ಡದಾಗಿದೆ ಎಂದು ಉದ್ಗರಿಸುತ್ತಾನೆ.

ಆಗ ತಂದೆಯು ಹೌದು ಮಗನೇ, ನೀನು ಬೆಳಗ್ಗೆ ದೇವರ ಬಗ್ಗೆ ಕೇಳಿದ ಪ್ರಶ್ನೆಗೆ ಇದೇ ಉತ್ತರ. ದೇವರ ಗಾತ್ರವು ನಮ್ಮ ಮತ್ತು ದೇವರ ನಡುವಿನ ಅಂತರವನ್ನು ಅವಲಂಭಿಸಿರುತ್ತದೆ. ದೇವರ ಬಳಿ ನಾವು ಎಷ್ಟು ಹತ್ತಿರವಾಗುತ್ತೇವೆಯೋ ಆಗ ನಮಗೆ ತ್ರಿವಿಕ್ರಮನಂತೆ ಕಾಣುತ್ತಾನೆ ಮತ್ತು ನಾವು ಅವನ ಸಾಕ್ಷಾತ್ಕಾರವನ್ನು ಪಡೆಯಬಹುದು.. ಅದೇ ರೀತಿ ನಾವು ಅವನಿಂದ ಎಷ್ಟು ದೂರ ಹೋಗುತ್ತೇವೆಯೋ, ಆಗ ದೇವರೂ ಸಹಾ ನಮ್ಮಿಂದ ಅಷ್ಟೇ ಅಪ್ರಸ್ತುತನಾಗಿ ಬಿಂದುವಾಗಿ ಕಾಣುತ್ತಾನೆ. ಹಾಗಾಗಿ ದೇವರ ಮೇಲೆ ಅಪರಿಮಿತವಾದ ನಂಬಿಕೆ ಇಡೋಣ ಮತ್ತು ಅವನ ಕೃಪೆಗೆ ಪಾತ್ರರಾಗೋಣ ಎಂದು ಹೇಳುತ್ತಾನೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ,

ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಮಾ ಕರ್ಮಫಲ ಹೇತುರ್ಭೂ || ಮಾ ತೇ ಸಂಗೋಸ್ತ್ವ ಕರ್ಮಣಿ

ನಮ್ಮ ನಮ್ಮ ಕೆಲಸಗಳನ್ನು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಾವು ಮಾಡೋಣ. ಉಳಿದದ್ದನ್ನು ಆ ಭಗವಂತನಿಗೇ ಬಿಡೋಣ.

ನಂಬಿಕೆಯೇ ದೇವರು. ಹಾಗಾಗಿ ದೇವರನ್ನು ನಂಬಿ ಕೆಟ್ಟವರು ಯಾರು ಇಲ್ಲ ಅಲ್ಲವೇ?

ಏನಂತೀರೀ?

ಆತ್ಮೀಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶದ ಭಾವಾನುವಾದ

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ ನಮ್ಮಲ್ಲಿ 33 ಕೋಟಿಗೂ ಅಧಿಕ ದೇವರುಗಳು ಇದ್ದಾರೆ ಮತ್ತು ಪ್ರತಿಯೊಬ್ಬ ದೇವರಿಗೂ ಅದರದ್ದೇ ಅದ ಶಕ್ತಿ ಸಾಮರ್ಥ್ಯಗಳಿವೆ ಎಂದು ನಂಬಿರುವ ಕಾರಣ ಆವರವರ ನಂಬಿಕೆ ಮತ್ತು ಭಕ್ತಿಗಳ ಅನುಗುಣವಾಗಿರುವ ಭಕ್ತ ಸಮೂಹವಿದೆ. ಹಾಗಿದ್ದಲ್ಲಿ ನಿಜವಾಗಿಯೂ ದೇವರಿದ್ದಾನೆಯೇ? ಎಂದು ಕೇಳಿದರೆ ಅದನ್ನು ಪ್ರತ್ಯಕ್ಷವಾಗಿ ನೋಡಿದವರು ಇಲ್ಲದ ಕಾರಣ ಸೂಕ್ತವಾದ ಉತ್ತರವನ್ನು ಕೊಡುವುದು ಕಷ್ಟವಾದರೂ, ದೈವೀ ಶಕ್ತಿ ಎಂಬ ಅಗೋಚರವಾದ ಅನುಭವವನ್ನು ಅನೇಕರು ಅನುಭವಿಸಿದ್ದಾರೆ. ಹಾಗಾಗಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ತಮ್ಮ ತಮ್ಮ ಕಲ್ಪನೆಗೆ ಅನುಗುಣವಾದ ರೂಪಗಳನ್ನು ಭಗವಂತನಿಗೆ ಕೊಟ್ಟು ಅವುಗಳನ್ನು ಮೂರ್ತಿರೂಪದಲ್ಲಿ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾ ಬಂದಿದ್ದೇವೆ. ನಮ್ಮ ದೇವರುಗಳು ಸರ್ವಾಂತರ್ಯಾಮಿಯಾಗಿ ಎಲ್ಲಾ ಕಡೆಯಲ್ಲಿಯೂ ಇರುವಾಗ ಅವನಿಗೊಂದು ಪ್ರತ್ಯೇಕ ದೇವಾಲಯಗಳೇಕೆ? ಎಂದು ವಾದಿಸುವವರಿಗೇನೂ ಕಡಿಮೆ ಇಲ್ಲ

WhatsApp Image 2020-06-28 at 4.34.52 PMನಿಜಕ್ಕೂ ಹೇಳಬೇಕೆಂದರೆ ನಮ್ಮ ಪೂರ್ವಜರು ದೇವಾಲಯಗಳನ್ನು ಶಕ್ತಿ ಮತ್ತು ಶ್ರದ್ಧಾ ಕೇಂದ್ರಗಳಾಗಿ ನಿರ್ಮಿಸಿದ್ದರು. ಜನರನ್ನು ಧಾರ್ಮಿಕವಾಗಿ ಒಂದು ನಿರ್ಧಿಷ್ಟ ಸಮಯದಲ್ಲಿ ಒಗ್ಗೂಡಿಸುವ ಕೇಂದ್ರಗಳಾಗಿಸಿದ್ದರು. ಆಲ್ಲಿಗೆ ಬರುವ ಭಕ್ತಾದಿಗಳಿಗೆ ಒಂದು ಮನಸ್ಸು ಶುದ್ಧವಾಗುತ್ತದೆ, ಸಂತೋಷ, ನೆಮ್ಮದಿ ಸಿಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಸ್ಥಳದ ಮಹಿಮೆಯಿಂದ ಭಕ್ತರಿಗೆ ಧನಾತ್ಮಕ ಚಿಂತನಾ ಶಕ್ತಿ ಸಿಗುತ್ತಿತ್ತು ಮತ್ತು ಅವನ ಆಚಾರ-ವಿಚಾರ-ಉಚ್ಚಾರಗಳು ಶುದ್ಧವಾಗುತ್ತಿದ್ದವು.

ಹಾಗಾಗಿ ದೇವಾಲಯಗಳನ್ನು ನಿರ್ಮಿಸುವಾಗ ಸ್ಥಳೀಯ ಪರಿಸರ, ಹವಾಗುಣ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದಾಗಿ ಅನುಗುಣವಾಗಿ ಅದ್ಭುತ ವಾಸ್ತುಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಹಾಗೆ ದೇವಾಲಯಗಳ ಗರ್ಭಗುಡಿ, ಕಂಬಗಳು ಗೋಪುರ ಮತ್ತು ಕಳಸಗಳು ಕಾಂತೀಯ ಹಾಗೂ ವಿದ್ಯುತ್ ತರಂಗಗಳನ್ನು ಉತ್ಪತ್ತಿಸುತ್ತವೆ ಈ ತರಂಗಾಂತರಗಳು ದೇವಾಯಗಳಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಇನ್ನು ದೇವರ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಅವುಗಳಿಗೆ ಪ್ರಾಣಪ್ರತಿಷ್ಠಾಪನೆ ಮಾಡುವ ಮೂಲಕ ಆ ಜಾಗದಲ್ಲಿ ಕಾಂತೀಯ ಶಕ್ತಿ ಹೆಚ್ಚಾಗಿ ಕೇಂದ್ರಿತವಾಗಿರುವಂತೆ ಮಾಡುತ್ತಿದ್ದರ ಪರಿಣಾಮ ಗರ್ಗಗೃಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿರುತ್ತಿತ್ತು.

ಇನ್ನು ದೇವಸ್ಥಾನದ ದಿಕ್ಕು, ರಾಜಗೋಪುರ ಮತ್ತು ದೇವಾಲಯದಲ್ಲಿ ನೆಲಕ್ಕೆ ಬಳಸಲಾಗುವ ಹಾಸುಗಲ್ಲುಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿದ್ದು ಅವೂ ಸಹಾ ಧನಾತ್ಮಕ ತರಂಗಾಂತರಗಳು ಪ್ರವಹಿಸುವಂತೆ ಮಾಡುವುದಲ್ಲದೇ ಭಕ್ತಾದಿಗಳ ಏಕಾಗ್ರತೆಯನ್ನು ಮತ್ತು ಶಾಂತಿಯನ್ನು ಕೊಡಲು ಸಹಕರಿಸುತ್ತಿದ್ದವು.

ದೇವಸ್ಥಾನದಲ್ಲಿ ಪೂಜೆಯ ನಂತರ ಕೊಡುವ ತೀರ್ಥ ಮತ್ತು ಪ್ರಸಾದಗಳಲ್ಲಿಯೂ ಸಹಾ ಔಷಧೀಯ ಗುಣಗಳಿಂದ ಭರಿತವಾಗಿರುತ್ತದೆ. ತಾಮ್ರದ ಕಳಸದಲ್ಲಿ, ಪಚ್ಚ ಕರ್ಪೂರ, ತುಳಸಿದಳ ಬೆರೆಸಿದಂತಹ ಔಷಧೀಯ ಗುಣಗಳಿರುವ ತೀರ್ಥ ನಿಜಕ್ಕೂ ಆರೋಗ್ಯವೇ ಹೌದು. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆ ಮತ್ತು ಉದ್ದರಣೆಯ ಮೂಲಕ ಸ್ವೀಕರಿಸುವ ತೀರ್ಥವು ವಾತ, ಪಿತ್ತ ಕಫ ಎಂಬ ತ್ರಿದೋಷಗಳನ್ನು ನಿವಾರಿಸಲು ಸಹಾಯ ಮಾಡಿದರೆ, ತುಳಸಿದಳವು ಜಿಹ್ವಾ ಶಕ್ತಿಯನ್ನು ಕ್ರಿಯಾತ್ಮಕವಾಗಿಡುತ್ತದೆ. ಪ್ರಸಾದ ರೂಪದಲ್ಲಿ ಕೊಡುವ ಬೆಲ್ಲದ ಪಾಯಸ, ಮೆಣಸು, ಜೀರಿಗೆ, ಕಾಯಿ, ಅಕ್ಕಿ ಮತ್ತು ಹೆಸರು ಬೇಳೆಗಳಿಂದ ಕೂಡಿದ ಪಂಚಾನ್ನ(ಪೊಂಗಲ್) ಆರೋಗ್ಯಕ್ಕೆ ಉತ್ತಮವಾದದ್ದು.

ಮಂಗಳಾರತಿಯ ಸಮಯದಲ್ಲಿ ಮಾಡುವ ಘಂಟಾನಾದದ ತರಂಗಗಳು ಭಕ್ತಾದಿಗಳಲ್ಲಿ ಧನಾತ್ಮಕ ಕಂಪನಗಳನ್ನು ಜಾಗೃತಗೊಳಿಸಿದರೆ, ಕರ್ಪೂರದಾರತಿಯಿಂದ ಏಕಾಗ್ರತೆ ಹೆಚ್ಚಿಸುವುದಲ್ಲದೇ, ಆರತಿಯಿಂದ ಬಿಸಿಯಾದ ಕೈಗಳನ್ನು ಕಣ್ಣುಗಳಿಗೆ ಸ್ಪರ್ಶಿಸುವುದರಿಂದ ಸ್ಪರ್ಶಜ್ಞಾನ ಕ್ರಿಯಾತ್ಮಕವಾಗಿರುತ್ತದೆ ಮತ್ತು ಪಂಚೇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಇನ್ನು ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತು ಹಾಕಿದಾಗ ಭಕ್ತಾದಿಗಳ ಇಂದ್ರಿಯಗಳು ದೇವಾಲಯದ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ ಎಂದು ವೇದವಿಜ್ಞಾನ ಹೇಳುತ್ತದೆ.

ನಮ್ಮ ಪೂರ್ವಜರು ಬಹುತೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ದಟ್ಟವಾದ ಕಾಡುಗಳಲ್ಲಿ ಕಡಿದಾದ ಬೆಟ್ಟದ ತುತ್ತ ತುದಿಯಲ್ಲಿ ನಿರ್ಮಿಸುತ್ತಿದ್ದ ಹಿಂದೆಯೂ ಒಂದು ಕಾರಣವಿತ್ತು. ಆ ಗೊಂಡಾರಣ್ಯದಲ್ಲಿದ್ದ ಭಗವಂತನ ದರ್ಶನ ಮಾಡಲು ಈ ಪುಣ್ಯಕ್ಷೇತ್ರಗಳಿಗೆ ಹೋಗುವ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಮಡಿ ಹುಡಿಯಿಂದ ತಮ್ಮೆಲ್ಲಾ ಕಷ್ಟಗಳನ್ನು ಮರೆತು ಭಗವಂತನ ಸಂಕೀರ್ತನೆ ಮಾಡುತ್ತಾ ಭಕ್ತಿ ಪರವಶರಾಗಿ ಭಗವಂತನ ಧ್ಯಾನವನ್ನೇ ಮಾಡುತ್ತಲೇ ಬೆಟ್ಟವನ್ನು ಹತ್ತಲಿ ಎನ್ನುವುದು ನಮ್ಮ ಪೂರ್ವಜರ ಭಾವನೆಯಾಗಿತ್ತು. ಇನ್ನು ಆ ರೀತಿಯಲ್ಲಿ ಚಾರಣ ಮಾಡುವಾಗ ಮನಸ್ಸು ಮತ್ತು ದೇಹ ಎರಡಕ್ಕೂ ಸಾಕಷ್ಟು ಪರಿಶ್ರಮ ದೊರೆತು ಅಂತಿಮವಾಗಿ ಭಗವಂತನ ದರ್ಶನ ಮಾಡಿದಾಗ ದೊರೆಯುತ್ತಿದ್ದ ಆನಂದವೇ ಬೇರೆ. ಆ ಕಾಡಿನಲ್ಲಿ ಬರೀ ಕಾಲಿನಲ್ಲಿ ಹೋಗುತ್ತಿದ್ದಾಗ ಅಲ್ಲಿದ್ದ ಅನೇಕ ಔಷಧೀಯ ಸಸ್ಯಗಳಿಂದ ಅತ್ಯುತ್ತಮ ಆಮ್ಲಜನಕ ಅವರ ದಣಿವನ್ನು ನಿವಾರಿಸುತ್ತಿದ್ದಲ್ಲದೇ ಅವರ ಅನೇಕ ಖಾಯಿಲೆಗಳು ಪರೋಕ್ಷವಾಗಿ ನಿವಾರಣೆಯಾಗುತ್ತಿತ್ತು. ನಾವು ಎಷ್ಟೇ ದೊಡ್ಡವರಾದರೂ ದೇವರ ಮುಂದೆ ಇನ್ನೂ ಸಣ್ಣವರೇ ಎಂಬ ಸಂಕೇತವಾಗಿಯೂ ದೇವಾಲಯಗಳನ್ನು ಎತ್ತರದ ಸ್ಥಾನಗಳಲ್ಲಿ ನಿರ್ಮಿಸುತ್ತಿದ್ದರು. ಇನ್ನು ದೇವಸ್ಥಾನಗಳಲ್ಲಿ ದೇವರಿಗೆ ಶಿರಬಾಗಿ ಸಾಷ್ಟಾಂಗ ನಮಸ್ಕರಿಸುವ ಮೂಲಕ ನಮ್ಮಲ್ಲಿರುವ ಅಹಂ ದೂರವಾಗಿಸಲಿ ಎನ್ನುವುದು ನಮ್ಮ ಹಿರಿಯರ ಭಾವನೆಯಾಗಿತ್ತು. ಇನ್ನು ಹಬ್ಬ ಹರಿದಿನಗಳು ಮತ್ತು ವಿಶೇಷ ದಿನಗಳಂದು ದೇವಾಲಗಳಲ್ಲಿ ನಡೆಸುತ್ತಿದ್ದ ಹರಿಕಥೆ, ಸಂಗೀತ, ನೃತ್ಯ ಭಜನಾ ಸಂಕೀರ್ತನಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳಿಗೆ ಮನೋರಂಜನೆಯೊಂದಿಗೆ ನೆಮ್ಮದಿಯನ್ನು ಕೊಡುತ್ತಿದ್ದದ್ದಲ್ಲದೇ ಭಕ್ತಾದಿಗಳ ಭೌದ್ಧಿಕ ಮಟ್ಟವನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದ್ದವು.

temp6ದಿನ ಕಳೆದಂತೆಲ್ಲಾ ಈ ತೀರ್ಥಕ್ಷೇತ್ರಗಳನ್ನು ಅಲ್ಲಿಯ ಆಡಳಿತ ಮಂಡಳಿಗಳು ಮತ್ತು ರಾಜಕೀಯ ಧುರೀಣರು ಪ್ರಸಿದ್ಧ ಯಾತ್ರಾ ಸ್ಥಳಗಳನ್ನಾಗಿ ಪರಿವರ್ತಿಸಿ ಶ್ರದ್ಧಾಕೇಂದ್ರಗಳ ಬದಲಾಗಿ ಆದಾಯ ತರುವ ಕೇಂದ್ರಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾಡು ಮೇಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನಾಗಿ ಪರಿವರ್ತಿಸಿ ಪರಿಸರದ ಹಾನಿಗೆ ಕಾರಣೀಭೂತರಾಗಿ ನಮ್ಮ ಪೂರ್ವಜರ ಮೂಲ ಆಶಯಕ್ಕೇ ಕೊಳ್ಳಿ ಇಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ದೇವರ ಧ್ಯಾನ ಮಾಡುತ್ತಾ ಶ್ರಮದಿಂದ ಬೆವರು ಸುರಿಸಿ ಮೆಟ್ಟಲುಗಳನ್ನು ಹತ್ತಿ ದೇವರ ದರ್ಶನ ಮಾಡುವಾಗ ದೊರೆಯುವ ಆನಂದ ಬೆಟ್ಟಗಳನ್ನು ಕಡಿದು ರಸ್ತೆಗಳನ್ನು ಮಾಡಿ ತುತ್ತ ತುದಿಯವರೆಗೆ ನೇರವಾಗಿ ವಾಹನದ ಮೂಲಕ ತಲುಪಿದಾಗ ಇಲ್ಲವೇ ರೋಪ್ ಟ್ರೈನ್ ಮೂಲಕ ಆರಾಮವಾಗಿ ದೇವರ ದರ್ಶನ ಮಾಡಿದಲ್ಲಿ ಅಂತಹ ಸಾರ್ಥಕತೆ ದೊರೆಯದು ಎಂದೇ ನನ್ನ ಭಾವನೆ.

WhatsApp Image 2020-06-28 at 4.37.36 PMಇನ್ನು ದೇವಸ್ಥಾನಗಳ ಪುನರುಜ್ಜೀವನದ ಹೆಸರಿನಲ್ಲಿ ನಮ್ಮ ಪೂರ್ವಜರು ಸ್ಥಳೀಯ ಪರಿಸರ ಸಂಪ್ರದಾಯ ಮತ್ತು ಹವಾಮಾನಗಳಿಗೆ ಅನುಗುಣವಾಗಿ ನಿರ್ಮಿಸಿದ್ದ ವಾಸ್ತುಶಿಲ್ಪಗಳ ಬದಲಾಗಿ ಕರಾವಳಿ ಮಾದರಿಯ ದೇವಾಲಯಗಳನ್ನು ನಿರ್ಮಿಸುತ್ತಿರುವುದು ಸರಿಯಾದ ನಿರ್ಣಯವಲ್ಲ ಎಂದೇ ನನ್ನ ಭಾವನೆ. ದೇವಾಲಯ ನಿರ್ಮಿಸುವಾಗ ಸ್ಥಳೀಯ ಇತಿಹಾಸ ಮತ್ತು ಸಂಶೋಧಕರ ಸಲಹೆ ತೆಗೆದುಕೊಳ್ಳುವುದಕ್ಕಿಂತ, ಕರಾವಳಿ ಪ್ರಾಂತ್ಯದ ಅಷ್ಟ ಮಂಗಳ ಪ್ರವೀಣರು ಮತ್ತು ವಾಸ್ತು ಶಿಲ್ಪಿಗಳ ಸಲಹೆಯ ಮೇಲೆ ದೇವಸ್ಥಾನ ನಿರ್ಮಿಸುತ್ತಿರುವುದು ಮತ್ತು ಅದಕ್ಕೆ ಅನುಗಣವಾಗಿ ನದೀ ಪಾತ್ರಗಳನ್ನು ಬದಲಿಸುವುದು, ಭಕ್ತಾದಿಗಳು ಉಳಿದುಕೊಳ್ಳಲು ಯಾತ್ರಿನಿವಾಸ ನಿರ್ಮಿಸುವ ಭರದಲ್ಲಿ ಕಾಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ಬೆಳೆಸುತ್ತಿರುವುದು ಮತ್ತು ತೀರ್ಥಕ್ಷೇತ್ರಗಳೆಂಬುದನ್ನು ಮರೆತು ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಂದಾಗಿ ಜನರಿಗೆ ತೀರ್ಥಕ್ಷೇತ್ರಗಳ ಬಗ್ಗೆ ಒಂದು ರೀತಿಯ ಅಸಹ್ಯ ಭಾವನೆ ಮೂಡುತ್ತಿರುವುದು ನಿಜಕ್ಕೂ ದುಃಖಕರವೇ ಸರಿ.

ದೇವಾಲಯಗಳೆಂಬ ಶ್ರದ್ಧಾ ಕೇಂದ್ರಗಳು ನಮ್ಮ ಹಿಂದೂ ಧರ್ಮದ ಸಿದ್ಧಾಂತ ಮತ್ತು ಪೂರ್ವಜರ ದೂರದೃಷ್ಟಿಯ ಬುನಾದಿಯ ಮೇಲೆ ನಿಂತಿದೆ ಎಂಬುದನ್ನು ಮರೆತು, ಕಾಟಾಚಾರಕ್ಕೆ ದೇವಸ್ಥಾನಕ್ಕೋ ಇಲ್ಲವೇ ತೀರ್ಥಕ್ಷೇತ್ರಗಳಿಗೆ ಹೋಗುವುದರಿಂದ ನಮ್ಮ ಹಿಂದು ಧರ್ಮವನ್ನು ಸಂರಕ್ಷಣೆ ಮಾಡುವುದು ಸಾಧ್ಯ ಇಲ್ಲದ ಮಾತಾಗಿದೆ. ಮೊದಲು ನಾವುಗಳು ನಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿದು ಕೊಳ್ಳಬೇಕು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೋದಾಗ ವಸ್ತ್ರಸಂಹಿತೆಯೊಂದಿಗೆ ಅಲ್ಲಿಯ ಶಾಸ್ತ್ರ, ಸಂಪ್ರದಾಯಗಳ ಅನುಗುಣವಾಗಿ ನಡೆದುಕೊಂಡಲ್ಲಿ ಮಾತ್ರವೇ ನಾವು ನಮ್ಮ ಧರ್ಮವನ್ನು ಸಂರಕ್ಷಣೆ ಮಾಡಲು ಸುಲಭವಾಗುತ್ತದೆ. ಇಲ್ಲದೇ ಹೋದಲ್ಲಿ ನಮ್ಮ ಹಿಂದು ಧಾರ್ಮಿಕ ಪುಣ್ಯಕ್ಷೇತ್ರಗಳು ಕೇವಲ ಪ್ರವಾಸಿ ತಾಣವಾಗಿ ಸರ್ಕಾರಕ್ಕೆ ಆದಯ ತರುವ ತಾಣಗಳಾಗಿ ಹೋಗುತ್ತದೆ.

ಏನಂತೀರೀ?