ನುಚ್ಚಿನುಂಡೆ ಮತ್ತು ದೊಡ್ಡಪತ್ರೆ ತಂಬುಳಿ

ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ ಮತ್ತು ಅಷ್ಟೇ ರುಚಿಕರವಾದ ತಿಂಡಿಯಾದ ನುಚ್ಚಿನುಂಡೆ ಮತ್ತು ಅದರ ಜೊತೆ ನೆಂಚಿಕೊಳ್ಳಲು ದೊಡ್ಡೀಪತ್ರೆ ತಂಬುಳಿಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ನಮ್ಮ ಅನ್ನಪೂರ್ಣಾ ಮಾಲಿಯ ಮೂಲಕ ತಿಳಿಸುಕೊಳ್ಳೋಣ.

ಸುಮಾರು 3-4 ಜನರಿಗೆ ಸಾಕಾಗುವಷ್ಟು ನುಚ್ಚಿನುಂಡೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

• ತೊಗರೀಬೇಳೆ – 1 ಬಟ್ಟಲು
• ಕಡಲೇಬೇಳೆ- 1 ಬಟ್ಟಲು
• ಹೆಸರುಬೇಳೆ – 1 ಬಟ್ಟಲು
• ತೆಂಗಿನ ಕಾಯಿ ತುರಿ – 1 ಬಟ್ಟಲು
• ನುಣ್ಣಗೆ ಹೆಚ್ಚಿದ ಸಬ್ಸೀಗೆ ಸೊಪ್ಪು – 1 ಬಟ್ಟಲು
•ನುಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1/4 ಬಟ್ಟಲು
• ತುರಿದ ಶುಂಠಿ – 1 ಚಮಚ
• ಕತ್ತರಿಸಿದ ಹಸೀ ಮೆಣಸಿನಕಾಯಿ – 3-4
• ಸಣ್ಣದಾಗಿ ಹೆಚ್ಚಿದ ಮಧ್ಯಮ ಗಾತ್ರದ ಈರುಳ್ಳಿ 1-2 ( ಐಚ್ಚಿಕ)
• ರುಚಿಗೆ ತಕ್ಕಷ್ಟು ಉಪ್ಪು.

ದೊಡ್ಡಪತ್ರೆ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿಗಳು

• ಮೊಸರು – 1 ಬಟ್ಟಲು
• ತೆಂಗಿನ ಕಾಯಿ ತುರಿ – 1 ಬಟ್ಟಲು
• ಚೆನ್ನಾಗಿ ತೊಳೆದ ದೊಡ್ಡೀಪತ್ರೆ – 1 ಬಟ್ಟಲು
•ನುಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1/4 ಬಟ್ಟಲು
• ಜೀರಿಗೆ ಮತ್ತು ಕಾಳು ಮೆಣಸು – 1 ಚಮಚ
• ಕತ್ತರಿಸಿದ ಹಸೀ ಮೆಣಸಿನಕಾಯಿ – 1-2
• ರುಚಿಗೆ ತಕ್ಕಷ್ಟು ಉಪ್ಪು.

ನುಚ್ಚಿನುಂಡೆ ಮಾಡುವ ವಿಧಾನ :

 • ಸಮ ಪ್ರಮಾಣದಲ್ಲಿ ತೆಗೆದುಕೊಂಡ ತೊಗರೀಬೇಳೆ, ಕಡಲೇಬೇಳೆ ಮತ್ತು ಹೆಸರುಬೇಳೆಯನ್ನು ಮೂರ್ನಾಲ್ಕು ಘಂಟೆಗಳ ಕಾಲ ನೆನಸಿಟ್ಟುಕೊಂಡು ನಂತರ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿ ಕೊಳ್ಳಬೇಕು
 • ರುಬ್ಬಿಕೊಂಡ ಬೇಳೆಯ ಹಿಟ್ಟಿನ ಜೊತೆ, ಸಬ್ಸೀಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ಶುಂಠಿ, ಹಸೀ ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಬೇಕು.
 • ಇಷ್ಟವಿದ್ದಲ್ಲಿ ಅದಕ್ಕೆ ಹೆಚ್ಚಿದ ಈರುಳ್ಳಿಯನ್ನೂ ಸೇರಿಸಿಕೊಳ್ಳಬಹುದು.
 • ಇಡ್ಲಿ ಕುಕ್ಕರ್ ಸ್ಟಾಂಡಿಗೆ ಸ್ವಲ್ಪ ಎಣ್ಣೆ ಹಚ್ಚಿ, ಮಾಡಿಕೊಂಡ ಮಿಶ್ರಣವನ್ನು ಮುಷ್ಠಿಯಿಂದ ಉಂಡೆ ಕಟ್ಟಿ ಇಡ್ಲೀ ಸ್ಟಾಂಡಿನಲ್ಲಿ ಸುಮಾರು 10-15 ನಿಮಿಷಗಳಷ್ಟು ಕಾಲ ಹಬೆಯಲ್ಲಿ ಬೇಯಿಸಿದಲ್ಲಿ, ರುಚಿ ರುಚಿಯಾದ, ಬಿಸಿಬಿಯಾದ, ಆರೋಗ್ಯಕರವಾದ ಮತ್ತು ಅಷ್ಟೇ ಪೌಷ್ಠಿಕವಾದ ನುಚ್ಚಿನುಂಡೆ ಸವಿಯಲು ಸಿದ್ಧ.

ದೊಡ್ಡಪತ್ರೆ ತಂಬುಳಿ ಮಾಡುವ ವಿಧಾನ :

 • ಸಣ್ಣ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಜೀರಿಗೆ, ಮೆಣಸು ಮತ್ತು ಹಸೀಮೆಣಸಿನಕಾಯಿಯನ್ನು ಹುರಿದು ಕೊಳ್ಳಬೇಕು
  ನಂತರ ಚೆನ್ನಾಗಿ ತೊಳಿದು ಇಟ್ಟಿದ್ದ ದೊಡ್ಡ ಪತ್ರೆ ಸೊಪ್ಪನ್ನೂ ಸಹಾ ಬಾಣಲೆಯಲ್ಲಿ ಹಾಕಿ ಒಂದೆರಡು ನಿಮಿಷ ಹುರಿದು ಕೊಳ್ಳಬೇಕು
 • ಹುರಿದುಕೊಂಡ ಮಿಶ್ರಣದ ಜೊತೆ ಕಾಯಿತುರಿ, ಕೊತ್ತಂಬರಿ ಸೊಪ್ಪು, ಕಾಯಿತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರಿಸಿ ನುಣ್ಣಗೆ ಮಿಕ್ಸಿಯಲ್ಲಿ ಚೆಟ್ನಿಯ ರೀತಿಯಲ್ಲಿ ರುಬ್ಬಿಕೊಳ್ಳಬೇಕು
 • ರುಬ್ಬಿಕೊಂಡ ಚೆಟ್ನಿಗೆ ಮೊಸರು ಸೇರಿಸಿ ಚೆನ್ನಾಗಿ ಕಲೆಸಿದಲ್ಲಿ ಆರೋಗ್ಯಕರವಾದ ದೊಡ್ಡಪತ್ರೆ ತಂಬುಳಿ ಸಿದ್ಧ.
 • nuche2
  ಬಿಸಿಬಿಸಿಯಾದ ನುಚ್ಚಿನುಂಡೆಯನ್ನು ತಣ್ಣಗಿನ ದೊಡ್ಡಪತ್ರೆ ತಂಬುಳಿ ಜೊತೆ ನೆಂಚಿಕೊಂಡು ಸವಿಯಲು ಬಹಳ ಮಜವಾಗಿರುತ್ತದೆ

ಇದೇ ನುಚ್ಚಿನುಂಡೆ ಮತ್ತು ದೊಡ್ಡ ಪತ್ರೆ ತಂಬುಳಿಯನ್ನು ಈ ವೀಡೀಯೋ ಮೂಲಕವೂ ನೋಡಿ ಕಲಿಯಬಹುದಾಗಿದೆ.

ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ , ಮಾಡ್ಕೋಳ್ಳಿ , ತಿನ್ಕೊಳ್ಳಿ

ಏನಂತೀರೀ?

ಮನದಾಳದ ಮಾತು : ಮೂರು ತರಹದ ಬೇಳೆಗಳು ಜೊತೆಗೆ ಸಬ್ಸೀಗೆ ಸೊಪ್ಪು ಬೆರೆಸಿ ಹಬೆಯಲ್ಲಿ ಬೇಯಿಸಿದಂತಹ ನುಚ್ಚಿನುಂಡೆ ನಿಜಕ್ಕೂ ಆರೋಗ್ಯಕರ ಮತ್ತು ಪೌಷ್ಟಿದಾಯಕ ಆಹಾರವಾಗಿದೆ. ಸಾಮಾನ್ಯವಾಗಿ ನುಚ್ಚಿನುಂಡೆಯ ಜೊತೆ ಕಾಯಿ ಚೆಟ್ನಿ ಅಥವಾ ಮಜ್ಜಿಗೆ ಹುಳಿ ಜೊತೆಗೆ ನೆಂಚಿಕೊಂಡು ತಿನ್ನಲು ಚೆನ್ನಾಗಿರುತ್ತದೆ. ಈಗ ನಾವು ಮಾಡಿ ತೋರಿಸಿದ ದೊಡ್ದ ಪತ್ರೆ ಸೊಪ್ಪಿನ ತಂಬುಳಿಯ ಜೊತೆಗೆ ನೆಂಚಿಕೊಂಡಲ್ಲಿ ಇನ್ನೂ ಆರೋಗ್ಯಕರವಾಗಿರುತ್ತದೆ.

#ಅನ್ನಪೂರ್ಣ
#ನುಚ್ಚಿನುಂಡೆ
#ದೊಡ್ಡೀಪತ್ರೆ_ತಂಬುಳಿ
#ತಂಬುಳಿ
#ಏನಂತೀರೀ YouTube