ಕೊನೆಯ ಆಸೆ

babyಈ ಪ್ರಪಂಚದಲ್ಲಿ ಜನಿಸುವ ಪ್ರತಿಯೊಂದು ಜೀವಿಗೂ ಒಂದು ಆಸೆ ಇದ್ದೇ ಇರುತ್ತದೆ. ಹಾಗೆ ಆಸೆ ಪೂರೈಸಿಕೊಳ್ಳುವ ಸಲುವಾಗಿ ಅವರು ಪರಿಶ್ರಮ ಹಾಕ್ತಾನೇ ಇರ್ತಾರೆ. ಕೆಲವರಿಗೆ ಕೆಲವೊಂದು ಬಾರಿ ಅವರ ಅಸೆಗಳು ಪೂರೈಸಿಕೊಂಡಾಗ ಆಗುವ ಅನುಭವ ಇದೆಯಲ್ಲಾ ಅದು ನಿಜಕ್ಕೂ ಅವರ್ಣಿನೀಯವೇ ಸರಿ. ಅದನ್ನು ಕೇಳಿ ಅಥವಾ ನೋಡಿ ತಿಳಿಯುವುದಕ್ಕಿಂತಲೂ ಅನುಭವಿಸಿದರೆನೇ ಆನಂದ.

chrliಕಳೆದ ವಾರ ದೇಶಾದ್ಯಂತ ಬಿಡುಗಡೆಯಾ ಚಾರ್ಲಿ-777 ಸಿನಿಮಾದಲ್ಲಿ ನಾಯಕ ಧರ್ಮನಿಗೆ ಅಚಾನಕ್ಕಾಗಿ ಪರಿಚಯವಾದ ಬೀದಿ ನಾಯಿ, ಆರಂಭದಲ್ಲಿ ಅವನಿಗೆ ಕಿರಿಕಿರಿ ಎನಿಸಿದರೂ ದಿನ ಕಳೆದಂತೆಲ್ಲಾ ಅದು ಆತನನ್ನು ಪ್ರೀತಿಸುತ್ತಿರುವ ಪರಿಯನ್ನು ಕಂಡು ಆ ಚಾರ್ಲಿ ಅವನ ಜೀವನದ ಅವಿಭಾಜ್ಯ ಅಂಗವಾಗಿ ಕಡೆಗೊಮ್ಮೆ ಅದಕ್ಕೆ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಸಮಸ್ಯೆಯನ್ನು ಅರಿತು ಹಿಮಾಚ್ಚಾದಿತ ಪ್ರದೇಶದಲ್ಲಿ ಚಾರ್ಲಿ ಆಡಬೇಕು ಎನ್ನುವುದನ್ನು ಅರಿತ ನಾಯಕ ಧರ್ಮ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಿಯೂ ಅಂತಿಮವಾಗಿ ಚಾರ್ಲಿಯನ್ನು ಹಿಮಾಲಯದ ಹಿಮಾಚ್ಚಾದಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅ ನಾಯಿಯ ಅಂತಿಮ ಆಸೆಯನ್ನು ಪೂರೈಸಿದ ಪರಿಯಂತೂ ನಿಜಕ್ಕೂ ಹೃದಯ ತುಂಬಿ ಬರುತ್ತದೆ.

ch2ತನ್ನ ಪ್ರೀತಿಯ ನಾಯಿಯ ಆಸೆಯನ್ನು ಪೂರೈಸುವುದಕ್ಕಾಗಿ ಧರ್ಮ ಮಾಡಿದ ತ್ಯಾಗಗಳನ್ನು ಸಿನಿಮಾ ಮಂದಿರದಲ್ಲೇ ನೋಡಿ ಅನುಭವಿಸುವಾಗ ನಮಗೆ ಅರಿವಿಲ್ಲದಂತೆಯೇ ಕಣ್ಣು ಒದ್ದೇ ಆಗುವುದು ನಿಜಕ್ಕೂ ಅಪ್ಯಾಯಮಾನವೇ ಸರಿ.

kid7ಇಂತಹದ್ದೇ ಒಂದು ಪ್ರಸಂಗ ದೂರದ ಜರ್ಮನಿ ದೇಶದಲ್ಲಿ 2021ರಲ್ಲಿ ನಡೆದಿದ್ದು ಆ ದೃಶ್ಯಾವಳಿಗಳು ಮನಸ್ಸಿಗೆ ಇನ್ನೂ ನಾಟುವಂತಿದೆ. ಜರ್ಮನಿಯ ರೌಡರ್‌ಫೆನ್‌ನಲ್ಲಿರುವ ಸ್ಥಳೀಯ ಬೈಕರ್‌ಗಳ ಗುಂಪಿಗೆ ಸೇರಿದ ಬೈಕರ್‌ ಒಬ್ಬರ ಮಗನಾದ ಕಿಲಿಯನ್ ಸಾಸ್ ಗೆ ಬಾಲ್ಯದಿಂದಲೂ ಉಳಿದೆಲ್ಲಾ ಆಟಿಕೆಗಳಿಗಿಂತ ಮೋಟರ್ ಸೈಕಲ್ ಎಂದರೆ ಬಹಳ ಇಷ್ಟ. ಎಲ್ಲೇ ಆಗಲೀ ಹೊಸಾ ಹೊಸಾ ಮೋಟರ್ ಬೈಕ್ ಕಂಡೊಡನೆಯೇ ಅದನ್ನು ಮುಟ್ಟಿ ನೋಡಿ ಅದರ ಮೇಲೆ ಹತ್ತಿ ಕುಳಿತುಕೊಂಡು ಸಂಭ್ರಮ ಪಡುತ್ತಿದ್ದ. ಆ ಚಿಕ್ಕ ವಯಸ್ಸಿನ ಹುಡುಗನಿಗೆ ಬೈಕ್ ಮೇಲಿರುವ ಈ ಉತ್ಕಟ ಆಸೆಯನ್ನು ಕಂಡು ಅದೆಷ್ಟೋ ಬೈಕ್ ಸವಾರರು ಆ ಪುಟ್ಟ ಬಾಲಕನನ್ನು ತಮ್ಮ ಬೈಕಿನಲ್ಲಿ ಸವಾರಿ ಮಾಡಿಸಿದ್ದೂ ಉಂಟು.

b1ನಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಅದೊಮ್ಮೆ ಅಚಾನಕ್ಕಾಗಿ ಆ ಬಾಲಕ ಅನಾರೋಗ್ಯಕ್ಕೆ ಪೀಡಿತನಾದಾಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಆತನನ್ನು ಪರೀಕ್ಷಿಸಿದ ವೈದ್ಯರು ಆ ಪುಟ್ಟ ಕಂದ ಲಿಂಫೋಮಾ ದಂತಹ ಕ್ಯಾನ್ಸರ್ ಅಂತಿಮ ಘಟ್ಟದ ಮಹಾಮಾರಿಯಿಂದ ನರಳುತಿದ್ದು ಆತ ಪುಟ್ಟ ಬಾಲಕ ಕೀಲಿಯನ್ ಹೆಚ್ಚು ದಿನ ಬದುಕಲಾರ ಎಂದು ತಿಳಿಸಿದಾಗ ಅವನ ತಂದೆ ತಾಯಿಯರಿಗೆ ಬರಸಿಡಿಲು ಬಡಿದಂತಿತ್ತು.

b26 ವರ್ಷದ ಕಿಲಿಯನ್ ಸಹಾ ತನ್ನ ತಂದೆಯಂತೆ ಉತ್ಸಾಹಿ ಮೋಟೋಕ್ರಾಸ್ ರೈಡರ್ ಆಗಿದ್ದಲ್ಲದೇ ಸದಾ ಕಾಲವೂ ಬೈಕ್ ಧ್ಯಾನ ಮಾಡುತ್ತಿದ್ದರಿಂದ ತನ್ನ ಕಂದನಿಗೆ ಹುರಿದುಂಬಿಸಲು ಯಾರಾದರೂ ಮೋಟಾರುಬೈಕರ್ ಗಳು ತಮ್ಮ ಮನೆಯ ಅಕ್ಕ ಪಕ್ಕದಲ್ಲಿ ಕೆಲ ಕಾಲ ಓಡಿಸಲು ಸಾಧ್ಯವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು.

ಈ ಪ್ರಕಟಣೆಯನ್ನು ಗಮನಿಸಿದ ರಾಲ್ಫ್ ಪೀಟ್ಷ್, ಬೈಕರ್ ಕ್ಲಬ್ ಸದಸ್ಯ, ಆ ಚಿಕ್ಕ ಹುಡುಗನ ಅಂತಿಮ ಆಸೆಯನ್ನು ಪೂರೈಸುವ ಸಲುವಾಗಿ, ಕ್ರಾಚ್ ಫರ್ ಕಿಲಿಯನ್ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಕಿಲಿಯನ್ ಫಾರ್ ಕಿಲಿಯನ್ ಎಂಬ ಈ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೇವಲ ನಾಲ್ಕು ದಿನಗಳ ನಂತರ, ಜುಲೈ 24 ರಂದು, ಮಾರಣಾಂತಿಕ ಅಸ್ವಸ್ಥ ಬಾಲಕನನ್ನು ಬೆಂಬಲಿಸಲು ಬೈಕ್ ಸವಾರರು ಸಂಪೂರ್ಣ ಬಲವನ್ನು ತೋರಿಸಿದರು.

ತನ್ನ ಮಗನ ಅಂತಿಮ ಆಸೆಯನ್ನು ಪೂರೈಸಲು ಸುಮಾರು 20 ರಿಂದ 30 ಬೈಕ್ ಸವಾರರು ಬರಬಹುದು ಎಂದೇ ಎಣಿಸಿದ್ದ ಅವರ ಪೋಷಕರಿಗೆ ಅಚ್ಚರಿ ಎನಿಸುವಂತೆ ಸುಮಾರು 15,000 ಬೈಕರ್‌ಗಳು ರೌಡರ್‌ಫೆನ್‌ನ ಕಿಲಿಯನ್‌ನ ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಾ, ಆ 6 ವರ್ಷದ ಬಾಲಕನಿಗೆ ಧೈರ್ಯವನ್ನು ತುಂಬುವ ಸಲುವಾಗಿ ಜೋರಾಗಿ ಹಾರ್ನ್‌ಗಳನ್ನು ಮಾಡುತ್ತಾ ಬೈಕ್ ಮೆರವಣಿಗೆ ನಡೆಸಿದರು. ಬೆಳಗ್ಗೆ 9.30ಕ್ಕೆ ಆರಂಭವಾದ ಬೈಕ್ ಮೆರವಣಿಗೆ ಸಂಜೆ 5 ಗಂಟೆಯ ವರೆಗೂ ಮುಂದುವರೆಯಿತು.

ಅಷ್ಟೊಂದು ದ್ವಿಚಕ್ರ ವಾಹನ ಸವಾರರು ಏಕಕಾಲದಲ್ಲಿ ತನ್ನ ಮನೆಯ ಮುಂದೆ ಆಗಮಿಸಿ ಬೈಕ್ ಮೆರವಣಿಗೆ ಮಾಡುತ್ತಿರುವುದನ್ನು ವೀಲ್ ಚೇರ್ ಮೇಲೆಯೇ ಕುಳಿತು ನೋಡುತ್ತಲೇ ಕುಣಿದು ಕುಪ್ಪಳಿಸುತ್ತಿದ್ದ ಕಿಲಿಯನ್ ನಗು, ಸಂತೋಷ ಮತ್ತು ಕಿರುಚಾಟಗಳ ಆ ದೃಶ್ಯ ನಿಜಕ್ಕೂ ಮನ ಕಲಕುವಂತಿತ್ತು. ಆ ಬೈಕ್ ಸವಾರರು ಆ ಬಾಲಕನ ಬಳಿ ಬಂದಾಗ ತಮ್ಮ ಬೈಕ್ ವೇಗವನ್ನು ಕಡೆಮೆ ಮಾಡಿ ಒಂದು ಕ್ಷಣ ಅವನ ಮುಂದೆ ನಿಲ್ಲಿಸಿ Get well soon, ಶೀಘ್ರವಾಗಿ ಗುಣಮುಖನಾಗು ಎಂದು ಮನಸಾರೆ ಹಾರೈಸುತ್ತಿದ್ದದ್ದು ನೋಡುವಾಗ ನಿಜಕ್ಕೂ ಮೈಯೆಲ್ಲಾ ರೋಮಾಂಚನಗೊಂಡಿದ್ದಂತೂ ಸುಳ್ಳಲ್ಲ.

ಕಾಲ ಕೆಟ್ಟು ಹೋಯ್ತು, ಹಿಂದಿನಂತೆ ಈಗಿನ ಜನರು ಇಲ್ಲಾ ಎಂದು ಬಹುತೇಕರು ಹೇಳುವಾಗ, ಕೆಟ್ಟಿರುವುದು ಕಾಲವಲ್ಲ. ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ನಮ್ಮ ಮಾನವೀಯ ಗುಣಗಳು. ಅಂತಹದ್ದರ ಮಧ್ಯೆ ಪವಾಡ ರೀತಿಯಲ್ಲಿ ಇಂತಹ ಸದ್ಭಾವನಾ ಯಾತ್ರೆಗಳು ನಡೆಯುವ ಮೂಲಕ ಇಂತಹ ಪವಾಡಗಳು ನಡೆಯುವ ಮೂಲಕ ಕಾಲ ಇನ್ನೂ ಚೆನ್ನಾಗಿಯೇ ಇದೆ ಎಂದು ತೋರಿಸಿರುವುದು ಅದ್ಭುತ ಮತ್ತು ಅನುರೂಪವೇ ಸರಿ ಅಲ್ಬೇ?

ಏನಂತೀರೀ?
ನಿಮ್ಮವನೇ ಉಮಾಸುತ

ನಾವೆಲ್ಲರೂ ಒಂದೇ..

Gm2

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ ಅಗ್ಗಾಗ್ಗೇ ಕೆಲ ದಿನಗಳ ಮಟ್ಟಿಗೆ ಒಬ್ಬೊಬ್ಬರ ಮನೆಗಳಲ್ಲಿ ಅವರಿಗೆ ಇಷ್ಟ ಬಂದಷ್ಟು ದಿನಗಳು (ಇಷ್ಟ ಅನ್ನುವುದಕ್ಕಿಂತ ಕಷ್ಟ ಎನಿಸುವಷ್ಟು) ಇದ್ದು ಮತ್ತೊಬ್ಬರ ಮನೆಗೆ ಹೋಗುತ್ತಿದ್ದರು.

ಅಜ್ಜಿಯ ಮಕ್ಕಳು ಒಮ್ಮೆ ಕಾಶೀ ಯಾತ್ರೇ, ಎರಡು ಬಾರಿ ರಾಮೇಶ್ವರದ ಯಾತ್ರೆ, ಮೊಮ್ಮಗಳ ಮನೆಗೆಂದು ಮುಂಬೈಯ್ಯಿಗಲ್ಲದೇ, ನಾಡಿನ ಎಲ್ಲಾ ತೀರ್ಥಕ್ಷೇತ್ರಗಳಿಗೂ ಅದೆಷ್ಟೋ ಬಾರಿ ಕರೆದುಕೊಂಡು ಹೋಗಿದ್ದರು. ಅಜ್ಜಿ ಬರ್ತೇನೇ ಅಂದರೆ ಸಾಕು. ಕಾರಿನಲ್ಲಿ ಹೋಗಿ ಅಜ್ಜಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೊಗುವ ಮೊಮ್ಮಕ್ಕಳಿದ್ದರು. ಒಟ್ಟಿನಲ್ಲಿ ಜೀವನವಿಡೀ ಕಷ್ಟದಲ್ಲೇ ಬೆಂದಿದ್ದ ನಮ್ಮಜ್ಜಿಗೆ ಕಡೆಯ ದಿನಗಳಲ್ಲಿ ಎಲ್ಲಾ ರೀತಿಯ ಐಶಾರಾಮೀ ಸೌಲಭ್ಯಗಳೂ ಕೈಗೆಟುಕಿತ್ತು. ಇಷ್ಟೆಲ್ಲಾ ಇದ್ದರೂ ನಮ್ಮಜ್ಜಿಗೆ ಅದೋಕೋ ಏನೋ ಅಸಮಧಾನ. ತಾನು ಇನ್ನೂ ಏನನ್ನೂ ನೋಡಿಲ್ಲವಲ್ಲಾ, ತಾನೂ ಇನ್ನೂ ಏನನ್ನು ಅನುಭವಿಸಿಲ್ಲ ಎಂಬ ಕೊರತೆ.

Gm

ಅದೊಮ್ಮೆ ನಮ್ಮ ಮನೆಗೆ ಬಂದವರೊಬ್ಬರು ಲೋಕಾರೂಢಿಯಾಗಿ, ಅಜ್ಜೀ, ಮೊನ್ನೆ ನಮ್ಮೂರಿಗೆ ಹೋಗಿದ್ದಾಗ ಅಲ್ಲೇ ಹತ್ತಿರದ ತೀರ್ಥಕ್ಷೇತ್ರಕ್ಕೆ ಹೋಗಿದ್ದೆವು. ಆ ಪುಣ್ಯಕ್ಷೇತ್ರ ಏನು ಚೆನ್ನಾಗಿದೇ ಅಂತೀರೀ? ಅಲ್ಲಿಯ ದೇವರನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದ ತಕ್ಷಣವೇ, ನಮ್ಮಜ್ಜಿಯ ಎಂದಿನ ಡೈಲಾಗ್ ನೆನಪಾಗಿ ,ಅಯ್ಯೋ ನಮಗೆಲ್ಲಿ ಬರಬೇಕು ಅಂತಹ ಪುಣ್ಯ. ನಾನೂ ಇದ್ದೀನಿ ಭೂಮಿಗೆ ಭಾರ ಊಟಕ್ಕೆ ದಂಡ ಅಂತಾ ಹೇಳ್ಬಿಡೋದೇ? ಅರೇ ಇಷ್ಟು ಚೆನ್ನಾಗಿ ನೋಡಿ ಕೊಂಡರೂ ಬಂದವರ ಮುಂದೆ ಈ ರೀತಿಯ ಅಕ್ಷೇಪಣೆ ಮಾತುಗಳನ್ನು ಆಡಿ ನಮ್ಮಲ್ಲರನ್ನು ಮುಜುಗರಕ್ಕೆ ಈಡು ಮಾಡುತ್ತಾರಲ್ಲಾ? ಎಂದು ನಮ್ಮಮ್ಮ ಸಿಡಿಮಿಡಿಗೊಂಡಿದ್ದರು.

ತಮ್ಮ ಅಮ್ಮನ ಗುಣವನ್ನರಿತಿದ್ದ ನಮ್ಮ ತಂದೆಯವರು ಈ ರೀತಿಯ ಸಿಡಿಮಿಡಿಗಳಿಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರೇನೋ ಅವರಮ್ಮನ್ನನ್ನು ಸಹಿಸಿಕೊಳ್ಳುತ್ತಿದ್ದರು ಆದರೆ ನನಗೆ ನಮ್ಮಮ್ಮನ ಸಂಕಟವನ್ನು ಸಹಿಸಲಾಗದೇ ಇದಕ್ಕೆಲ್ಲಾ ಒಂದು ಪರಿಹಾರವನ್ನು ಕಂಡು ಹಿಡಿಯಲೇ ಬೇಕೆಂದು ಮುಂದಿನ ಬಾರಿ ಮತ್ತೊಬ್ಬರೊಂದಿಗೆ ಇದೇ ರೀತಿಯ ಸಂಭಾಷಣೆ ನಡೆಯುತ್ತಿದ್ದಾಗ ಆವರ ಮಾತಿನ ಮಧ್ಯೆಯಲ್ಲಿ ಮೂಗು ತೂರಿಸಿ, ಬಂದವನ್ನು ನೀವು ಕಾಶೀಗೆ ಹೋಗಿದ್ದೀರಾ? ರಾಮೇಶ್ವರ ಎಷ್ಟು ಬಾರಿ ನೋಡಿದ್ದೀರಿ? ಶೃಂಗೇರಿ ಜಗದ್ಗುರುಗಳ ಆಶೀರ್ವಾದ ನಿಮಗೆ ಎಷ್ಟು ಬಾರೀ ಆಗಿದೇ? ಕಂಚಿ ಮಹಾ ಗುರುಗಳನ್ನು ಪೇಜಾವರ ಶ್ರೀಗಳನ್ನು ಎಂದಿಗಾದರು ನಿಮ್ಮ ಮನೆಗೆ ಕರೆಸಿದ್ದೀರಾ? ಎಂದು ಕೇಳಿದಾಗ, ಅವರು ಅಯ್ಯೋ ನಮ್ಮ ಯಜಮಾನರ ಸಂಬಳದಲ್ಲಿ ಸಂಸಾರ ನಡೆಸೋದೇ ಕಷ್ಟ ಆಗಿತ್ತು. ಈಗ ಮಕ್ಕಳು ಈಗ ಕೆಲಸಕ್ಕೆ ಸೇರಿಕೊಂಡ ಮೇಲೆ ಸ್ವಲ್ಪ ಸುಧಾರಿಸಿ ಎಷ್ಟೋ ವರ್ಷಗಳ ನಂತರ ನಮ್ಮೂರಿಗೆ ಹೊಗಿ ಬಂದ್ವೀ, ಹಾಗೇ ಪಕ್ಕದ ಊರಿಗೂ ಹೊಗಿದ್ವೀ ಅಷ್ಟೇ ಎಂದಾಗಾ, ನಾನು ನಮ್ಮಜ್ಜಿಯ ಕಡೆ ನೋಡಿ, ಸುಮ್ಮನೇ ಮಾತನಾಡದೇ, ಏನಜ್ಜೀ? ಏನಂತೀರೀ? ಎಂದು ಹುಬ್ಬೇರಿಸಿದಾಗ, ನಮ್ಮಜ್ಜಿ ಏನೂ ಆಗೇ ಇಲ್ವೇನೋ ಎಂಬಂತೆ ಮೂತಿ ತಿರುಗಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ನಮ್ಮ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ದೇಶವಾಸಿಗಳ ಮನಸ್ಥಿತಿ ಇದಕ್ಕಿಂತಲೂ ಭಿನ್ನವಾಗಿ ಏನೂ ಇಲ್ಲಾ. ಧರ್ಮಾಧಾರಿತವಾಗಿ ದೇಶ ವಿಭಜನೆ ಆದರೂ, ಯಾರದ್ದೋ ತೆವಲಿಗೆ ಜಾತ್ಯಾತೀತ ರಾಷ್ಟ್ರವಾಗಿಯೇ ಉಳಿದು ಹೋದ ಈ ದೇಶದಲ್ಲಿಯೇ ಹುಟ್ಟಿ ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದು ಕೊಂಡು ಪ್ರತಿ ದಿನವೂ, ಈ ದೇಶವನ್ನೇ ಬೈದ್ಯಾಡಿಕೊಂಡು ಅಡ್ಡಾಡುತ್ತಾ, ತಮ್ಮ ಗಂಜಿಯನ್ನು ಬೇಯಿಸಿಕೊಳ್ಳುತ್ತಿರುವ ಮಂದಿಯನ್ನು ನೋಡುವಾಗ ಸಾಮಾಜಿಕ ಜಾಲತಾಣದಲ್ಲಿ ಓದಿದ ಈ ಪ್ರಸಂಗ ನೆನಪಿಗೆ ಬರುತ್ತದೆ.

ವ್ಯಕ್ತಿಯೊಬ್ಬ ಪಕ್ಕದೂರಿಗೆ ಹೋಗುವ ಸಲುವಾಗಿ ನದಿಯನ್ನು ದಾಟಲು ತನ್ನ ನಾಯಿಯೊಂದಿಗೆ ದೋಣಿಯನ್ನು ಏರಿದ. ಆ ನಾಯಿಗೆ ದೋಣಿಯ ಪ್ರಯಾಣ ಮೊದಲ ಬಾರಿಯಾಗಿದ್ದ ಪರಿಣಾಮ ಇದ್ದಕ್ಕಿದ್ದಂತೆಯೇ ಚಡಪಡಿಕೆಯುಂಟಾಗಿ ಅತ್ತಿಂದಿತ್ತ, ಇತ್ತಿಂದಿತ್ತ ಓಡಾಡುತ್ತಾ ಎಲ್ಲರಿಗೂ ತೊಂದರೆ ಕೊಡುತ್ತಿದ್ದದ್ದಲ್ಲದೇ, ದೋಣಿಯನ್ನೂ ಡೋಲಾಯಮಾನ ಸ್ಥಿತಿಗೆ ತಳ್ಳಿತ್ತು.

dog2

ದೋಣಿಯನ್ನು ನಡೆಸುತಿದ್ದವರು ದಯವಿಟ್ಟು ನಾಯಿಯನ್ನು ಒಂದು ಕಡೆ ಹಿಡಿದಿಟ್ಟುಕೊಳ್ಳದೇ ಹೋದಲ್ಲಿ ದೋಣಿಯೇ ಮುಳುಗಿ ಎಲ್ಲರಿಗೂ ತೊಂದರೆ ಆಗಬಹುದು ಎಂದು ಎಚ್ಚರಿಸಿದಾಗ ಆ ನಾಯಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಿದಾಗ, ಅದು ಭಯದಿಂದಲೋ ಇಲ್ಲವೇ ತನ್ನ ಬುದ್ದಿಯ ಅನುಗುಣವಾಗಿ ಸುಖಾ ಸುಮ್ಮನೇ ಬೊಗಳತೊಡಗಿದಾಗ ಎಲ್ಲರಿಗೂ ಅದರಿಂದ ತೊಂದರೆಯಾಗ ತೊಡಗಿತು. ನಾಯಿಯನ್ನು ಸುಮ್ಮನಾಗಿಸಲು ಅದರ ಮಾಲಿಕ ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತಿತ್ತು.

dog1

ಇದೆಲ್ಲವನ್ನು ಗಮನಿಸುತ್ತಿದ್ದ ಹಿರಿಯರೊಬ್ಬರು, ನೀವು ಅನುಮತಿಸಿದರೆ, ನಾನು ಈ ನಾಯಿಯನ್ನು ನಿಮ್ಮ ಮನೆಯಲ್ಲಿದ್ದಂತೆಯೇ ಶಾಂತವಾಗಿರಿಸಬಲ್ಲೇ ಎಂದಾಗ ಮಾಲಿಕನಿಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿ ಕೂಡಲೇ ಒಪ್ಪಿಕೊಂಡರು. ಮಾಲಿಕರರು ಒಪ್ಪಿಕೊಂಡ ಕೂಡಲೇ ಆ ಹಿರಿಯರು ನಾಯಿಯನ್ನು ಎತ್ತಿ ನದಿಗೆ ಎಸೆದು ಬಿಟ್ಟರು. ಅಚಾನಕ್ಕಾಗಿ ಈ ರೀತಿ ನೀರಿಗೆ ಬಿದ್ದ ನಾಯಿ ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಈಜಲಾರಂಭಿಸಿತು, ಸ್ವಲ್ಪ ಹೊತ್ತು ಈಜಿದ ನಂತರ ನಾಯಿಯ ಶಕ್ತಿಯೆಲ್ಲವೂ ಕ್ಷೀಣಿಸತೊಡಗಿದಾಗ ಹತಾಶೆಯಿಂದ ತಾನು ನೀರಿನಲ್ಲಿ ಮುಳುಗಿ ಸಾಯುತ್ತಿದ್ದೇನೆ ಎಂಬ ಅನುಭವ ಆಗ ತೊಡಗಿದಾಗ ಜೀವ ಉಳಿಸಿಕೊಳ್ಳುವುದಕ್ಕಾಗಿ ಹೆಣಗಾಡುತ್ತಿದ್ದನ್ನು ಗಮನಿಸಿದ ಆ ಹಿರಿಯರು ನಾಯಿಯತ್ತ ತಾವು ಹೊದ್ದಿಕೊಂಡಿದ್ದ ಶಲ್ಯವನ್ನು ಎಸೆದರು. ಬದುಕಿದೆಯಾ ಬಡ ಜೀವ ಎಂದು ಆ ಶಲ್ಯವನ್ನು ನಾಯಿ ಹಿಡಿದುಕೊಂಡಾಗ ನಿಧಾನವಾಗಿ ತಮ್ಮ ಶಲ್ಯವನ್ನು ಎಳೆದುಕೊಂಡು ನಾಯಿಯನ್ನು ಮತ್ತೆ ದೋಣಿಯೊಳಗೆ ಎಳೆದು ಕೊಂಡರು ಆ ಹಿರಿಯರು. ನೀರಿನಿಂದ ದೋಣಿಗೆ ಬಂದ ಕೂಡಲೇ ತನ್ನನ್ನು ಬದುಕಿಸಿದ ಆ ಹಿರಿಯರಿಗೆ ಪ್ರೀತಿಯಿಂದ ಅವರ ಪಾದಗಳನ್ನು ನೆಕ್ಕಿ ನೆಮ್ಮದಿಯಿಂದ ತನ್ನ ಮಾಲಿಕನ ಬಳಿ ಬಂದು ತೆಪ್ಪಗೆ ಬಂದು ಕುಳಿತಿದ್ದಲ್ಲದೇ, ಇಡೀ ಪ್ರಯಾಣದ ಪೂರ್ತಿ ಕಮಿಕ್ ಕಿಮಿಕ್ ಎನ್ನಲಿಲ್ಲ.

ನಾಯಿಯ ಬದಲಾದ ನಡವಳಿಕೆಯನ್ನು ಕಂಡ ಮಾಲಿಕರು ಮತ್ತು ಇತರೇ ಪ್ರಯಾಣಿಕರು ಆಶ್ಚರ್ಯಚರಾಗಿ, ದೋಣಿ ಹತ್ತಿದಾಗ ಅಷ್ಟೆಲ್ಲಾ ಹಾರಾಡುತ್ತಿದ್ದ ನಾಯಿ, ನೀರಿನಿಂದ ಹೊರಬಂದ ಕೂಡಲೇ ಶಾಂತವಾಗಿ ಹೇಗಾಯಿತು? ಎಂದು ಕೇಳಿದಾಗ, ಆ ಹಿರಿಯರು ಸಣ್ಣಗೆ ನಕ್ಕು ನಾನು ಆ ನಾಯಿಗೆ ದೋಣಿಯ ನಿಜವಾದ ಶಕ್ತಿಯ ಪರಿಚಯವನ್ನು ಮಾಡಿ ಕೊಟ್ಟೆನಷ್ಟೇ. ದೋಣಿಯಲ್ಲಿದ್ದಾಗ ಅದರ ಅವಶ್ಯಕತೆಯನ್ನು ಅರಿಯದೇ ಸುಮ್ಮನೆ ಹಾರಾಡುವ ಮೂಲಕ ಉಳಿದೆವರೆಲ್ಲರ ಜೀವಕ್ಕೆ ಕುತ್ತು ತರುತ್ತಿದ್ದೇನೆ ಎಂಬ ಅರಿವು ಆ ನಾಯಿಗೆ ಇರಲಿಲ್ಲ. ಯಾವಾಗಾ ನಾನು ಅದನ್ನು ನೀರಿಗೆ ಎಸೆದೆನೋ, ಅಗ ಅದಕ್ಕೆ ತನ್ನ ಜೀವದ ಬಗ್ಗೆ ಅರಿವಾಗಿದ್ದಲ್ಲದೇ, ಅದಕ್ಕೆ ನೀರಿನ ಶಕ್ತಿ ಮತ್ತು ದೋಣಿಯ ಉಪಯುಕ್ತತೆಯ ಅರ್ಥವಾಗಿ ಜೀವ ಉಳಿಸಿಕೊಂಡರೆ ಸಾಕು ಎನ್ನುವಂತಾದಾಗ ಅದನ್ನು ನೀರಿನಿಂದ ಎಳೆದು ದೋಣಿಗೆ ತಂದೆ ಹಾಗಾಗಿ ಅದು ಸುಮ್ಮನಾಯಿತು ಎಂದರು.

ಮೊದಲನೆಯ ಪ್ರಸಂಗದಲ್ಲಿನ ನಮ್ಮ ಅಜ್ಜಿಯವರನ್ನು ಖಂಡಿತವಾಗಿಯೂ ಎರಡನೇ ಪ್ರಸಂಗದಲ್ಲಿನ ನಾಯಿಗೆ ಹೋಲಿಸುತ್ತಿಲ್ಲವಾದರೂ, ಇಬ್ಬರ ಮನೋಭಾವನೆಯೂ ಸದ್ಯದ ಕೆಲವು ಭಾರತೀಯರ ಮನೋಭಾವನೆಗಳು ಒಂದೇ ಎಂದು ತೋರಿಸುವ ಸಲುವಾಗಿ ಈ ಎರಡೂ ಉದಾಹರಣೆಗಳನ್ನು ಹೇಳಬೇಕಾಯಿತು. ನಿಜ ಹೇಳಬೇಕೆಂದರೆ ಅವರೆಲ್ಲರಿಗೂ ತಮ್ಮ ದೇಶ/ಕುಟುಂಬ ಮತ್ತು ತಾವು ಅನುಭವಿಸುತ್ತಿರುವ ಸೌಲಭ್ಯಗಳ ಅರಿವಿರದೇ ಸದಾ ಕಾಲವೂ ಅಕ್ಕ ಪಕ್ಕದ ಮನೆಯ ಮತ್ತು ದೇಶಗಳಲ್ಲಿ ನೆಮ್ಮದಿಯಾಗಿದ್ದಾರೆ ಎಂದೇ ಭಾವಿಸಿರುತ್ತಾರೆ. ಅವರಾರಿಗೂ ಅಕ್ಕ ಪಕ್ಕದ ಕುಟುಂಬ, ರಾಜ್ಯ, ದೇಶಗಳ ಅರಿವೇ ಇರುವುದಿಲ್ಲ. ಎಲ್ಲವನ್ನೂ ಯಾರಿಂದಲೂ ಕೇಳಿಯೋ ಇಲ್ಲವೇ ಪೂರ್ವಾಗ್ರಹ ಪೀಡಿತ ಮಾಧ್ಯಮಗಳಲ್ಲಿ ಪ್ರಸಾರವಾಗುವ ತುಣುಕುಗಳನ್ನು ನೋಡಿಯೋ ಇಲ್ಲವೇ ವೃತ್ತಪತ್ರಿಕೆಗಳ ಮೂಲಕ ಅರ್ಧಂಬರ್ಧ ಕೇಳಿ, ನೋಡೀ ಓದಿ ನಮ್ಮ ಕುಟುಂಬ/ರಾಜ್ಯ/ದೇಶ ಸರಿ ಇಲ್ಲ, ಇಲ್ಲ ಬದುಕುವುದಕ್ಕೇ ಅಸಾಧ್ಯ ಎಂದು ಬೊಬ್ಬಿರಿಯುತ್ತಿರುತ್ತಾರೆ. ಹೀಗೆಯೇ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ ಖ್ಯಾ(ಕುಖ್ಯಾ)ತ ನಟನ ಮಡದಿಯೊಬ್ಬಳು ಈಗ ಅತನಿಂದಲೇ ವಿಚ್ಚೇದನ ಪಡೆದು ಇದೇ ದೇಶದಲ್ಲೇ ವಾಸಿಸಬೇಕಾದ ಅನಿವಾರ್ಯ ಪರಿಸ್ಥಿತಿಯೂ ನಮ್ಮ ಕಣ್ಣಮುಂದಿದೆ.

ind4

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರು, ಇಲ್ಲಿಯ ಭಾಷೇ, ಇಲ್ಲಿಯ ಸಂಸ್ಕಾರ ಮತ್ತು ಸಂಸೃತಿ ತಮ್ಮದ್ದಲ್ಲಾ ಎಂದು ಹೇಳುವವರನ್ನು ಎರಡನೆಯ ಪ್ರಸಂಗದಲ್ಲಿ ನೀರಿಗೆ ಎಸೆದಂತೆ, ನೆರೆಯ ಪಾಪೀಸ್ಥಾನ, ಬಾಂಗ್ಲಾದೇಶ, ಆಫ್ಗಾನೀಸ್ಥಾನ, ಅಷ್ಟೇ ಏಕೆ ಬರ್ಮಾ ಇಲ್ಲವೇ ಶ್ರೀಲಂಕ ಅದೂ ಬೇಡವೆಂದರೆ, ಉತ್ತರ ಕೊರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಸಿರಿಯಾ, ಇರಾಕ್ ದೇಶಗಳಿಗೆ 6 ತಿಂಗಳ ಕಾಲ ಕಳಿಸಿಬಿಟ್ಟರೆ ಸಾಕು.

ind6

ಅವರಿಗೆ ಭಾರತ ದೇಶದಲ್ಲಿರುವ ನಿಜವಾದ ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಸಮಾನತೆಯ ಬಗ್ಗೆಯ ಅರಿವಾಗಿ ಮುಂದೆಂದೂ ಕಮಿಕ್ ಕಿಮಿಕ್ ಎನ್ನಲಾರರು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ರಾಷ್ಟ್ರ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಎಲ್ಲರಿಗೂ ಇಲ್ಲಿ ಎಲ್ಲರಿಗೂ ನೆಮ್ಮದಿಯಾಗಿ ಸರ್ವ ಸ್ವತ್ರಂತ್ರ್ಯವಾಗಿ ಬದುಕುವ ಸಮಾನ ಹಕ್ಕಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಇಲ್ಲಿ ಎಲ್ಲಾ ಧರ್ಮ, ಜಾತಿ ಮತ್ತು ಭಾಷೆಗಳ ಜನರಿಗೂ ಬದುಕಲು ಅವಕಾಶವಿದೆ. ಆದರೆ ಅವರವರ ಧರ್ಮ, ಜಾತಿ ಎಲ್ಲವೂ ಅವರ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿದ್ದು ಮನೆಯಿಂದ ಹೊರೆಗೆ ಬಂದಾಗ, ಎಲ್ಲರಿಗೂ ದೇಶವೇ ಪ್ರಧಾನವಾಗ ಬೇಕು.

india2

ಈ ದೇಶದಲ್ಲಿ ಹುಟ್ಟಿ ಇಲ್ಲಿನ ಸಕಲ ಸೌಲಭ್ಯಗಳನ್ನು ಪಡೆದು ಬೆಳೆದು ದೊಡ್ಡವರಾಗಿ ವಿದ್ಯಾವಂತರಾದ ಮೇಲೆ ಈ ದೇಶದ ಕಾನೂನಿನ ಅನುಗುಣವಾಗಿ ನಡೆಯಬೇಕಾದದ್ದು ಅವರೆಲ್ಲರ ಕರ್ತವ್ಯವೇ ಹೌದು. ದೇಶದ ಏಕತೆ ಮತ್ತು ಅಖಂಡತೆ ಅವರೆಲ್ಲರೂ ಕಟಿಬದ್ದರಾಗಿರಬೇಕು. ದುರಾದೃಷ್ಟವಶಾತ್ ಮತಾಂಧತೆಯಿಂದಲೋ, ಭಾಷಾ ಧುರಾಭಿಮಾನದಿಂದಲೋ, ಅಥವಾ ತಮ್ಮ ಸಿದ್ದಾಂತದ ಅಮಲಿನಿಂದಲೋ ಪ್ರತಿ ದಿನವೂ ದೇಶವನ್ನು ತುಂಡರಿಸುವ ಮಾತುಗಳನ್ನಾಡುವ ಮಂದಿಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೋಗಿರುವುದು ಈ ದೇಶದ ವಿಪರ್ಯಾಸವೇ ಸರಿ.

ind1

ಕೋಟ್ಯಾಂತರ ಹೋರಾಟಗಾರ ತ್ಯಾಗ ಬಲಿದಾನಗಳಿಂದ ಸ್ವಾತ್ರಂತ್ಯ್ರಗೊಂಡ ದೇಶಕ್ಕಿಂತಲೂ ಅವರೆಲ್ಲರಿಗೂ ಅವರವರ ಧರ್ಮ, ಜಾತೀ, ಭಾಷೆ, ಮತ್ತು ಸಿದ್ಧಾಂತವೇ ಹೆಚ್ಚು ತಾವು ಈ ದೇಶದ ಕಾನೂನು, ಸಂಸ್ಕಾರ, ಸಂಸ್ಕೃತಿಗೆ ತಲೆಬಾಗುವುದಿಲ್ಲ ಎಂದು ದಿನ ಬೆಳಗಾದರೇ ದೇಶ ನಿಂದನೆ ಮಾಡುತ್ತಾ, ಜನರನ್ನು ಎತ್ತಿಕಟ್ಟಿ ಅಸಹಕಾರ ಚಳುವಳಿಗಳನ್ನು ಮಾಡುವ ಮೂಲಕ ದೇಶದಲ್ಲಿ ದೊಂಬಿ ಎಬ್ಬಿಸುತ್ತಾ, ವಿದೇಶಿಗರ ಮುಂದೇ ದೇಶದ ಮಾನವನ್ನು ಹರಾಜು ಹಾಕುವವರನ್ನು ಮುಲಾಜಿಲ್ಲದೇ ಅವರಿಗಿಷ್ಟ ಬಂದ ದೇಶಕ್ಕೆ ಈ ಕೂಡಲೇ ಗಡಿಪಾರು ಮಾಡಿದಾಗಲೇ ದೇಶ ಮತ್ತು ಸಮಾಜದ ಸ್ವಾಸ್ಥ್ಯ ನೆಮ್ಮೆದಿಯಾಗಿರುತ್ತದೆ ಮತ್ತು ದೇಶ ಅಭಿವೃದ್ಧಿಯ ಪಥಕ್ಕೆ ಮರಳುತ್ತದೆ. ಇಲ್ಲದೇ ಹೋದಲ್ಲಿ ಪ್ರತೀ ದಿನ ಇಂತಹ ಕ್ಷುಲ್ಲಕ ಸಮಸ್ಯೆಗಳನ್ನು ಪರಿಹರಿಸುವುದಕ್ಕೇ ನಮ್ಮೆಲ್ಲರ ಸಂಪನ್ಮೂಲಗಳು ವ್ಯರ್ಥವಾಗಿ ದೇಶ ಅಧೋಗತಿಗೆ ಜಾರುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ.

ಗಜ ಗಾಂಭೀರ್ಯ

ಆದೊಂದು ರಾಜನ ಅರಮನೆಯಲ್ಲಿ ಪಟ್ಟದಾನೆ ಮತ್ತು ಅರಮನೆಯಲ್ಲಿದ್ದ ನಾಯಿ ಎರಡೂ ಒಂದೇ ಸಮಯದಲ್ಲಿ ಗರ್ಭಿಣಿಯಾದವು. ಅದಾಗಿ ಮೂರು ತಿಂಗಳ ನಂತರ ಆ ನಾಯಿ ಆರು ನಾಯಿಮರಿಗಳಿಗೆ ಜನ್ಮ ನೀಡಿತು. ಮತ್ತೆ ಆರು ತಿಂಗಳ ನಂತರ ಅದೇ ನಾಯಿ ಪುನಃ ಗರ್ಭಿಣಿಯಾಗಿ ಆರು ಮರಿಗಳಿಗೆ ಜನ್ಮ ನೀಡಿ ಒಟ್ಟು ಒಂಬತ್ತು ತಿಂಗಳುಗಳೊಳಗೆ ಒಂದು ಡಜನ್ ನಾಯಿಮರಿಗಳಿಗೆ ಜನ್ಮ ನೀಡಿತು ಮತ್ತು ಅದರ ಹೆರಿಗೆಯ ಕಾರ್ಯ ಹಾಗೇ ಮುಂದುವರೆಯಿತು.

ele2ಆನೆ ಗರ್ಭಿಣಿಯಾಗಿ ಹದಿನೆಂಟು ತಿಂಗಳು ಕಳೆದರೂ ಪ್ರಸವವಾಗದಿದ್ದನ್ನು ನೋಡಿದ ನಾಯಿಗೆ ಅನುಮಾನ ಬಂದು, ಆನೆಯನ್ನು ಪ್ರಶ್ನಿಸುತ್ತಾ, ನೀವು ನಿಜವಾಗಿಯೂ ಗರ್ಭಿಣಿಯಾಗಿದ್ದೀರಿ ಎಂದು ನಿಮಗೆ ಖಚಿತವಾಗಿದೆಯೇ? ಏಕೆಂದರೇ ಹದಿನೆಂಟು ತಿಂಗಳ ಹಿಂದೆ ನಾವಿಬ್ಬರೂ ಒಟ್ಟಿಗೆ ಗರ್ಭಿಣಿಯಾದೆವು. ಈ ಸಮಯದಲ್ಲಿ ನಾನು ಡಜನ್ ಗಳಿಗೂ ಅಧಿಕ ಸಂಖ್ಯೆಯ ಮರಿಗಳಿಗೆ ಮೂರು ಬಾರಿ ಜನ್ಮ ನೀಡಿದ್ದೇನೆ ಮತ್ತು ಆ ಮರಿಗಳು ಈಗ ದೊಡ್ಡ ದೊಡ್ಡ ನಾಯಿಗಳಾಗಿ ಬೆಳೆದು ಬಿಟ್ಟಿವೆ. ಆದರೆ ನೀವಿನ್ನೂ ಗರ್ಭಿಣಿಯಾಗಿಯೇ ಇದ್ದೀರಿ. ಏನಾಗುತ್ತಿದೆ ಇಲ್ಲಿ? ಎಂದು ಕೇಳಿತು.

ele3ನಾಯಿಯ ಪ್ರಶ್ನೆಯಿಂದ ಒಂದು ಚೂರೂ ವಿಚಲಿತವಾಗದ ಆನೆ, ನಾನು ಹೊತ್ತಿರುವುದು ಆನೆ. ನಾಯಿಮರಿಗಳನ್ನಲ್ಲ. ಎಂದು ತಿಳಿಯಪಡಿಸುತ್ತೇನೆ. ಗಜಗರ್ಭದ ಪ್ರಸವ ಏನಿದ್ದರೂ ಸುಮಾರು ಎರಡು ವರ್ಷಗಳಾಗಿರುತ್ತವೆ ಮತ್ತು ಒಮ್ಮೆ ನಮ್ಮ ಮರಿ ನನ್ನ ಗರ್ಭದಿಂದ ಭೂಮಿಯ ಮೇಲೆ ಬೀಳುತ್ತಿದ್ದಂತೆಯೇ ಆ ಕ್ಷಣದಲ್ಲಿ ಅಲ್ಲಿ ಸಣ್ಣದಾಗಿ ಭೂಕಂಪನವಾಗುತ್ತದೆ. ಭೂದೇವಿಗೂ ಕೂಡಾ ನನ್ನ ಮರಿಯ ಆಗಮನದ ಅರಿವಾಗುತ್ತದೆ. ನನ್ನ ಮಗು ನೆಲಕ್ಕೆ ಬಡಿದಾಗ, ಭೂಮಿಯು ಅದನ್ನು ಅನುಭವಿಸುತ್ತದೆ. ಯಾವಾಗ ನನ್ನ ಮಗು ರಸ್ತೆ ದಾಟಲು ಆರಂಭಿಸುತ್ತದೆಯೋ, ಆಗ ಮಾನವರೂ ಸಹಾ ತಮ್ಮ ಕೆಲಸವನ್ನು ನಿಲ್ಲಿಸಿ ಪಕ್ಕಕ್ಕೆ ನಿಂತು ಮೆಚ್ಚುಗೆಯಿಂದ ನಾವು ಹೋಗುವುದನ್ನು ನೋಡುತ್ತಾರೆ. ಹಾಗಾಗಿ ನಾನು ಹೊತ್ತುಕೊಂಡಿರುವುದು ಇಡೀ ಜಗತ್ತನ್ನೇ ಗಮನವನ್ನು ಸೆಳೆಯುವ ಅದ್ಭುತವಾದ ಮತ್ತು ಆಷ್ಟೇ ಪ್ರಬಲವಾದ ಕಂದನನ್ನು ಎಂದು ಹೇಳಿ ನಾಯಿಯ ಬಾಯಿಯನ್ನು ಮುಚ್ಚಿಸಿತು.

ಇತರ ಅಲ್ಪ ಯಶಸ್ಸನ್ನೇ ಮಹಾ ಸಾಧನೆ ಎಂದುಕೊಂಡು ನಮ್ಮ ನಮ್ಮ ನಂಬಿಕೆಯನ್ನು ಕಳೆದುಕೊಳ್ಳಬಾರದು. ಅವರ ಕ್ಷಣಿಕ ಫಲಿತಾಂಶಗಳ ಬಗ್ಗೆ ಅಸೂಯೆ ಪಡಬಾರದು ಮತ್ತು ನಿರಾಶೆಯಾಗ ಬಾರದು.

ನನ್ನ ಸಮಯ ಬಂದೇ ಬರುತ್ತದೆ ಮತ್ತು ಆಗ ಇಡೀ ವಿಶ್ವವೇ ನಮ್ಮ ಕಡೆ ಗಮನ ಹರಿಸುತ್ತದೆ ಎಂಬುದನ್ನು ಸದಾಕಾಲಾವೂ ಮನಸ್ಸಿನಲ್ಲಿ ಇಟ್ಟು ಕೊಂಡು ಕಾರ್ಯನಿರತರಾಗಬೇಕು ಎಂಬುದು ಈ ಕಥೆಯ ಸಾರವಾಗಿದೆ

ಆನೆ ಅಂಬಾರಿ ಹೋಗ್ತಾ ಇದ್ರೇ ಜನ ಗೌರವದಿಂದ ನಿಂತು ಕೈ ಮುಗಿತಾರೆ. ಅದನ್ನು ನೋಡಿ ಬೊಗಳುವ ನಾಯಿಗಳಿಗೆ ಹಚ್ಚಾ ಎಂದು ಕಲ್ಲು ಒಗೀತಾರೆ. ಇದಕ್ಕೇ ಅಲ್ವೇ ಹೇಳೋದು ಗಜ ಗಾಂಭೀರ್ಯ ಎಂದು?

ಯಾಕೋ ಏನೂ? ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವರ್ಷದಲ್ಲಿ ಹತ್ತಾರು ದಿನಗಳ ಕಾಲ ಬಂದ್ ಕರೆ ನೀಡಿ ಅದನ್ನು ಬಲವಂತದಿಂದ ಜನರ ಮೇಲೇ ಹೇರಲು ಹೋಗುವವರ ಮಧ್ಯೆ , ದೇಶವಾಸಿಗಳ ಹಿತಕ್ಕಾಗಿ ಮತ್ತು ಅವರ ಆರೋಗ್ಯಕ್ಕಾಗಿ 14 ಗಂಟೆಗಳ ಕಾಲ ಜನತಾ ಕರ್ಫ್ಯೂಗೆ ಸಹಕರಿಸಲು ಸಾರ್ವಜನಿಕರನ್ನು ಕೇಳಿ ಕೊಂಡಲ್ಲಿ , ಜನರೇ ಸ್ವಪ್ರೇರಣೆಯಿಂದ ಕೇವಲ 14 ಗಂಟೆಗಳೇಕೆ 36 ಗಂಟೆ ಕಾಲ ಸಹಕರಿಸುತ್ತೇವೆ ಎಂದು ನಭೂತೋ ನಭವಿಷ್ಯತಿ ಮಾದರಿಯಲ್ಲಿ ಜನತಾ ಕರ್ಫ್ಫೂವನ್ನು ಅಭೂತ ಪೂರ್ವವಾಗಿ ಯಶಸ್ವಿಗೊಳಿಸಿದ ಸಮಯದಲ್ಲಿ ಎಂದೋ ಕೇಳಿದ ಆಥವಾ ಓದಿದ ಈ ಆನೆ ಮತ್ತು ನಾಯಿಯ ಕಥೆ ಈಗ ನೆನಪಿಗೆ ಬಂದಿತು.

ಈ ಕಥೆ ಓದಿದ ಮೇಲೆ ಆನೆ ಯಾರು ನಾಯಿ ಯಾರು? ಎಂಬುದನ್ನು ನಿಮ್ಮಗಳ ಅರಿವಿಗೇ ಬಿಟ್ಟಿದ್ದೇನೆ. ಅವರವರ ಭಾವಕ್ಕೆ ಅವರವರ ಭಕುತಿ.

Public_Ranga

ಏನಂತೀರೀ?

ಕರಿಯ

ಸಾಧಾರಣವಾಗಿ ಬಹುತೇಕರ ಮನೆಗಳಲ್ಲಿ ಬೆಕ್ಕು, ನಾಯಿ, ಬಿಳಿ ಇಲಿ, ಮೊಲ, ಗಿಣಿ, ಪಾರಿವಾಳ ಮುಂತಾದ ಪ್ರಾಣಿ ಪಕ್ಷಿಗಳನ್ನು ಸಾಕು ಪ್ರಾಣಿಗಳಾಗಿ ಬೆಳೆಸುವ ಪರಿಪಾಠವಿದೆ. ಅದರಲ್ಲೂ ಸ್ವಾಮಿ ಭಕ್ತಿಗೆ ಮತ್ತೊಂದು ಹೆಸರೇ ಶ್ವಾನಗಳು ಅದಕ್ಕಾಗಿಯೇ ನಾಯಿಗಳನ್ನು ಉಳಿದೆಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿಯೇ ಮನೆಗಳಲ್ಲಿ ಸಾಕುತ್ತಾರೆ. ಇತ್ತೀಚೆಗೆ ಅಪಘಾತದಲ್ಲಿ ಮಡಿದ ತನ್ನ ಮಾಲೀಕನ ಶವ ಬಿಟ್ಟು ಕದಲದ ನಾಯಿಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ (https://www.msgp.pl/0goFLOw) ಆಗಿದ್ದನು ನೋಡುತ್ತಿದ್ದಾಗ, ಬಾಲ್ಯದಲ್ಲಿ ನನ್ನ ಅಜ್ಜಿಯ ಮನೆಯ ಸಾಕು ನಾಯಿ ಕರಿಯನ ನೆನಪು ಬಹಳವಾಗಿ ಕಾಡಿತು.

ನನಗಾಗ ಸುಮಾರು ಐದಾರು ವರ್ಷ. ಸಮಯ ಸಿಕ್ಕಾಗಲೆಲ್ಲಾ ನನ್ನ ಅಜ್ಜಿಯ ಊರಾದ ಕೆಜಿಎಫ್ ಹೋಗುವುದೆಂದರೆ ನನಗೆ ಬಹಳ ಪ್ರೀತಿ. ಒಂದು ರೈಲಿನಲ್ಲಿ ಹೋಗುವುದು. ಎರಡನೆಯದು ಮನೆಯ ಎದುರಿಗಿದ್ದ ಚಿನ್ನದ ಗಣಿಯಲ್ಲಿ ಆಟವಾಡುವುದು (https://wp.me/paLWvR-1K) ಮತ್ತು ಅದೆಲ್ಲದ್ದಕ್ಕಿಂತಲೂ ಹೆಚ್ಚಾಗಿ ನಮ್ಮ ಮಾವ ಸಾಕಿದ್ದ ಕರಿಯ (ಕಪ್ಪಾಗಿದ್ದ ಕಾರಣ ಅವನ ಹೆಸರನ್ನು ಕರಿಯನೆಂದೇ ಇಟ್ಟಿದ್ದರು) ನೊಂದಿಗೆ ಆಟವಾಡಲೆಂದೇ ಹೋಗುತ್ತಿದೆ. ಅಜ್ಜಿಯ ಮನೆಯಲ್ಲಿ ನಾನೇ ಮೊದಲನೇ ಮೊಮ್ಮಗನಾಗಿದ್ದರಿಂದ ಅಂದಿಗೂ, ಇಂದಿಗೂ ನನ್ನ ಕಂಡರೆ ಎಲ್ಲರಿಗೂ ತುಸು ಹೆಚ್ಚಿನ ಪ್ರೀತಿಯೇ. ಹಾಗಾಗಿ ನಾನು ಕೇಳಿದ್ದಕ್ಕೆ ಇಲ್ಲಾ ಎನ್ನದೆ ನೋಡಿ ಕೊಳ್ಳುತ್ತಿದ್ದರು ನನ್ನ ಅಜ್ಜಿ, ಮಾವ ಮತ್ತು ಚಿಕ್ಕಮ್ಮಂದಿರು.

ನನ್ನ ಮಾವ ತಮ್ಮ ಸೈಕಲ್ ಕ್ಯಾರಿಯರ್ ಪಕ್ಕದಲ್ಲಿ ಸಾಮಾನುಗಳನ್ನು ಇಟ್ಟು ಕೊಳ್ಳಲು ಬುಟ್ಟಿಯೊಂದನ್ನು ಹಾಕಿಸಿದ್ದರು. ಮಾವ ಪ್ರತಿ ದಿನ ಕಛೇರಿಗೆ ಹೋಗುವಾಗ ಕರಿಯ ಮಾವ ಸೈಕಲ್ ಹತ್ತಿದೊಡನೆಯೇ ತಾನೂ ಹಾರಿ ಆ ಬುಟ್ಟಿಯೊಳಗೆ ಕುಳಿತುಕೊಂಡು ಸ್ವಲ್ಪ ದೂರ ಜಾಲೀ ರೈಡ್ ಮಾಡಿ, ಒಂದು ನಿರ್ಧಿಷ್ಟ ಜಾಗ ಬಂದೊಡನೆಯೇ, ಕರಿಯಾ ಹೋಗೋ ಮನೆಗೆ ಅಂತಾ ಮಾವಾ ಹೇಳಿದ್ದೇ ತಡಾ, ಸೈಕಲ್ಲಿನಿಂದ ಹಾರಿ ನೆಗೆದು ಮನೆಗೆ ಬಂದು ಬಿಡುತ್ತಿದ್ದ. ಅದೇ ರೀತಿ ಮಾವ ಬರುವ ಸಮಯ ಅವನಿಗೆ ಗೊತ್ತಿದ್ದು ಅವರು ಬರುವುದನ್ನೇ ಕಾಯುತ್ತಾ ಅವರನ್ನು ನೋಡಿದ ತಕ್ಷಣವೇ ಮತ್ತೊಮ್ಮೆ ಓಡಿ ಹೋಗಿ ಅದೇ ರೀತಿ ಬುಟ್ಟಿಯೊಳಗೆ ಕುಳಿತು ಮನೆಯವರೆಗೆ ಬರುತ್ತಿದ್ದನ್ನು ಹೇಳುವುದಕ್ಕಿಂತ ಅನುಭವಿಸಿದರೇ ಚೆಂದ.

ಇನ್ನು ನಮ್ಮ ತಂದೆಯವರು ಮನೆಗೆ ಬಂದರೆಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಅವರ ಮೇಲೆ ಹಾರಿ, ಅವರ ಮೈಯನ್ನೆಲ್ಲಾ ನೆಕ್ಕಿ ಅವನಿಗಾಗಿಯೇ ಅವರು ತಂದಿರುತ್ತಿದ್ದ ಬಿಸ್ಕೆಟ್ಗಾಗಿ ಅವರ ಚೀಲವನ್ನು ಹುಡುಕುತ್ತಿದ್ದ. ಕರಿಯ ಎತ್ತರದಲ್ಲಿ ಗಿಡ್ಡಗೆ ಇದ್ದರೂ ಅಗಲದಲ್ಲಿ ಬಹಳ ಉದ್ದಕ್ಕಿದ್ದ. ಹಾಗಾಗಿ ಬಿಸ್ಕೆಟ್ಟನ್ನು ಮೇಲಕ್ಕೆ ಎಸೆದರೆ ಛಂಗ್ ಎಂದು ಹಾರಿ ತಿನ್ನುವುದನ್ನು ನೋಡುವುದೇ ಕಣ್ಣಿಗಾನಂದ.

ನಮ್ಮ ಅಜ್ಜ ಬಹಳ ದೈವ ಭಕ್ತರು. ಬೆಳಿಗ್ಗೆ ಸ್ನಾನ ಮುಗಿದ ನಂತರ ಮಡಿಯಿಂದ ಸುಮಾರು ಮುಕ್ಕಲು ಗಂಟೆಗೂ ಅಧಿಕ ಅವಧಿ ಶ್ರಧ್ಧಾ ಭಕ್ತಿಯಿಂದ ಪೂಜೆಮಾಡುತ್ತಿದ್ದರು. ಕರಿಯ ಮೊದ ಮೊದಲು ಆಟವಾಡುತ್ತಾ ದೇವರ ಕೊಣೆಗೆ (ನಮ್ಮ ಅಜ್ಜಿಯ ಮನೆಯ ದೇವರ ಕೋಣೆ, ಬೆಂಗಳೂರಿನ ಸಾಧಾರಣ ಮನೆಯ ಹಾಲ್ ನಷ್ಟಿತ್ತು) ನುಗ್ಗಿದಾಗ ಬಹಳಷ್ಟು ಬಾರಿ ನಮ್ಮ ಅಜ್ಜ ಕೋಪದಿಂದ ನಮ್ಮ ಮಾವನನ್ನು ಥೂ.. ಎಷ್ಟು ಸರಿ ಹೇಳಿದ್ದೀನಿ. ನಾನು ಪೂಜೆ ಮಾಡುವಾಗ ಕರಿಯನನ್ನು ಕಟ್ಟಿ ಹಾಕು ಅಂತಾ ಬಯದ್ದೂ ಉಂಟು. ಸ್ವಲ್ಪ ದೊಡ್ದವನಾದ ಮೇಲೆ ಊದುಕಡ್ಡಿಯ ವಾಸನೆಯಾಗಲೀ, ಗಂಟೆಯ ಸದ್ದಾಗಲೀ ಕೇಳಿದ ಕೂಡಲೇ ತನ್ನ ಕೋಣೆಗೆ ಹೋಗಿ ಕುಳಿತು, ಪೂಜೆ ಮುಗಿಯುವವರೆಗೂ ಹೊರಗೇ ಬರುತ್ತಿರಲಿಲ್ಲ ನಮ್ಮ ಜಾಣ ಕರಿಯ.

ಮನೆಯ ಎಲ್ಲರೂ ಊಟ ಮಾಡುವಾಗ ಅವನಿಗೂ ಒಂದು ಮೂಲೆಯಲ್ಲಿ ಊಟದ ವ್ಯವಸ್ಥೆಯಾಗಿರುತ್ತಿತ್ತು. ಮಲಗುವಾಗಲೂ ಸಾಕಷ್ಟು ಬಾರಿ ಮಾವನ ಮಂಚದ ಕೆಳಗೆಯೇ ಬೆಚ್ಚಗೆ ಮಲಗುತ್ತಿದ್ದ. ಚಿಕ್ಕವರಾಗಿದ್ದ ನನ್ನನ್ನು ಮತ್ತು ನನ್ನ ತಂಗಿಯನ್ನು ಕಂಡರಂತೂ ಅವನಿಗೆ ಅದೇನೋ ಮಮತೆ. ಸಣ್ಣವಳಿದ್ದ ನನ್ನ ಕೊನೆಯ ತಂಗಿಗೆ ಎಣ್ಣೇ ಹಚ್ಚಿ ಬಿಸಿಲು ಕಾಯಿಸಲು ಮನೆಯ ಹಜಾರದಲ್ಲಿ ಮಲಗಿಸಿದ್ದರೆ ಅವಳನ್ನು ಕಾಯುವ ಕೆಲಸ ನಮ್ಮ ಕರಿಯನದ್ದೇ. ಪುಟ್ಟ ಮಕ್ಕಳಾದ ನಾವು ಅವನಿಗೆ ಏನೇ ಮಾಡಿದರೂ, ಅವನ ಮೇಲೆ ಸವಾರಿ ಮಾಡಿದರೂ ಅವನ ಮೈಮೇಲೆ ಬಿದ್ದರೂ ಒಂದು ಚೂರು ಬೇಸರಿಸಿಕೊಳ್ಳದೆ ಸುಮ್ಮನಿರುತ್ತಿದ್ದ. ಹೀಗೆ ನಮ್ಮ ಅಜ್ಜಿಯ ಮನೆಯಲ್ಲಿ ಕರಿಯ, ಕೇವಲ ಸಾಕು ನಾಯಿಯಾಗಿರದೇ, ನಮ್ಮ ಮಾವನಿಗೆ ಒಡ ಹುಟ್ಟಿದ ತಮ್ಮನಂತೆಯೇ ಇದ್ದ. ನಮ್ಮೆಲ್ಲರಿಗೂ ನೆಚ್ಚಿನ ಗೆಳೆಯನಾಗಿದ್ದ.

ಕರಿಯ ಹೊರಗೆಲ್ಲೇ ಹೋದರೂ ಸಂಜೆ ಕತ್ತಲಾಗುವ ಮುಂಚೆ ಮನೆಗೆ ಬಂದು ಬಿಡುತ್ತಿದ್ದ. ಅದೊಂದು ದಿನ ಇದ್ದಕ್ಕಿದ್ದಂತೆಯೇ ಕರಿಯ ಕಾಣೆಯಾಗಿ ಹೋದ. ರಾತ್ರಿಯಾದರೂ ಕರಿಯನ ಪತ್ತೆಯೇ ಇಲ್ಲ. ಹಿಂದೆಂದೂ ಆ ರೀತಿ ಮನೆಯನ್ನು ಬಿಟ್ಟು ಹೋಗದಿದ್ದರಿಂದ ಮನೆಯ ಎಲ್ಲರಿಗೂ ಆತಂಕ. ಆಷ್ಟು ತಡ ರಾತ್ರಿಯಲ್ಲೂ ನಮ್ಮ ಚಿಕ್ಕಮ್ಮಂದಿರು ಮತ್ತು ಮಾವ ಹುಡುಕದ ಜಾಗವಿಲ್ಲ. ಅಕ್ಕ ಪಕ್ಕದ ಮನೆಗೆಲ್ಲಾ ಹೋಗಿ ನಮ್ಮ ಕರಿಯ ಬಂದಿದ್ನಾ. ಅವನನ್ನು ಎಲ್ಲಿಯಾದರೂ ನೋಡಿದ್ರಾ ಎಂದು ಕೇಳಿಕೊಂಡು ಬಂದಿದ್ದರು. ನಮ್ಮ ಮಾವ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾರನೇ ದಿನ ಮುನ್ಸಿಪಲ್ ಕಛೇರಿಗೆ ಹೋಗಿ ಬೀದಿ ನಾಯಿ ಹಿಡಿದುಕೊಂಡು ಹೋಗುವಾಗ ನಮ್ಮ ಕರಿಯನನ್ನೂ ಹಿಡಿದುಕೊಂಡು ಹೋಗಿದ್ದಾರಾ ಎಂದು ವಿಚಾರಿಸಿಕೊಂಡು ಬಂದಿದ್ದರು. ಇಷ್ಟೆಲ್ಲಾ ಆಗಿ ಎರಡು ಮೂರು ದಿನಗಳಾದರೂ ಕರಿಯನ ಪತ್ತೆಯಾಗದೇ ನಮ್ಮ ಚಿಕ್ಕಮ್ಮ ಅಕ್ಷರಶಃ ಊಟವನ್ನೇ ಮಾಡಿರಲಿಲ್ಲ. ಮೂರನೇಯ ದಿನ ಜೋರಾಗಿ ಮಳೆ ಬಂದು ಮನೆಯ ಸ್ವಲ್ಪ ದೂರದಲ್ಲಿದ್ದ ದೊಡ್ಡ ಮೋರಿಯಲ್ಲಿ ಕಾಗೆಗಳ ಗುಂಪು ಕಾ ಕಾ ಕಾ ಎಂದು ಕಿರುಚುತ್ತಿದ್ದದ್ದನ್ನು ನೋಡಿ ಸಂಶಯಗೊಂಡ ನಮ್ಮ ಚಿಕ್ಕಮ್ಮ ಹೋಗಿ ನೋಡಿದರೆ, ಹೃದಯವೇ ಕಿತ್ತು ಬರುವ ಹಾಗಿ ಕರಿಯಾ ಎಂದು ಕಿರುಚಿದ್ದು ಮನೆಯವರಿಗೆಲ್ಲರಿಗೂ ಕೇಳಿಸಿ, ಓ ಕರಿಯಾ ಬಂದಿದ್ದಾನೆ ಎಂದು ತಿಳಿದು ಓಡಿ ಬಂದು ಎಲ್ಲಿ ಕರಿಯಾ ಎಲ್ಲಿ ಎಂದು ನೋಡಿದರೆ, ಚಿಕ್ಕಮ ದೊಡ್ಡ ಮೋರಿಯ ಬ್ರಿಡ್ಜ್ ಬಳಿ ಅಳುತ್ತಾ ನಿಂತಿದ್ದಾರೆ. ಎಲ್ಲರೂ ಅಲ್ಲಿಗೆ ಓಡಿ ಹೋಗಿ ನೋಡಿದರೆ, ನಮ್ಮ ಕರಿಯನ ಮೇಲೆ ಏನನ್ನು ಎತ್ತಿ ಹಾಗಿ ಜಜ್ಜಿ ಸಾಯಿಸಿಬಿಟ್ಟಿದ್ದಾರೆ ಮತ್ತು ಅವನ ಮೇಲೇ ಕಲ್ಲುಗಳನ್ನು ಹಾಕಿ ಬಿಟ್ಟಿದ್ದಾರೆ. ಕಾಗಿಗಳು ಕುಕ್ಕಿ ಕುಕ್ಕಿ ತಿಂದದ್ದರಿಂದ ಕರಿಯನ ಅರ್ಧಂಬರ್ಧ ದೇಹವಿದೆ. ಮನೆಯವರೆಲ್ಲರೂ ಬಂದೊಡನೆಯೇ, ಚೆರಂಡಿ ಎಂಬುದನ್ನೂ ಲೆಕ್ಕಿಸದೆ ನಮ್ಮ ಚಿಕ್ಕಮ್ಮ ಚೆರಂಡಿಯೊಳಗೆ ಇಳಿದು, ಕಲ್ಲುಗಳನ್ನೆಲ್ಲಾ ಪಕ್ಕಕ್ಕೆ ಸರಿಸಿ, ತಮ್ಮ ಎರಡೂ ಕೈಗಳಿಂದ ಬಾಚಿ ಕರಿಯನ್ನು ಎತ್ತಿ ಹೊರಕ್ಕೆ ತರುತ್ತಿದ್ದರೆ, ಮನೆಯವರಿಗೆಲ್ಲಾ ತಮ್ಮ ಮನೆಯ ಮಗನನ್ನು ಕಳೆದು ಕೊಂಡಷ್ಟೇ ದುಃಖವಾಗಿತ್ತು ಎಂದರೆ ಸುಳ್ಳಲ್ಲ.

ಮನೆಯ ಪಕ್ಕದ ಪೋಲೀಸ್ ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಮಾವ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಫೋನ್ ಮಾಡಿ ನೆಡೆದದ್ದೆಲ್ಲವನ್ನೂ ಅಳುತ್ತಲೇ ತಿಳಿಸಿದ ಕೂಡಲೇ, ನಮ್ಮ ಮಾವನೂ ಸಹಾ ಕೆಲವೇ ನಿಮಿಷಗಳಲ್ಲಿ ಮನೆಗೆ ಬಂದು ಕರಿಯನ್ನು ಬಾಚಿ ತಬ್ಬಿ ಅತ್ತಿದ್ದದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಸರಿ ಆದದ್ದು ಆಗಿ ಹೋಯಿತು ಎಂದು ಮನೆಯ ಮುಂದಿನ ತೋಟದಲ್ಲಿಯೇ ಗುಳಿ ತೋಡಿ ಅಲ್ಲಿಯೇ ನಮ್ಮ ಕರಿಯನನ್ನು ಶಾಶ್ವತವಾಗಿ ಮಣ್ಣು ಮಾಡಿ ಅದರ ಮೇಲೆ ಅವನ ಜ್ಞಾಪಕಾರ್ಥವಾಗಿ ಹಾಕಿದ್ದ ಮಲ್ಲಿಗೆಯ ಅಂಟು ಹಾಕಿದ್ದರು. ಕರಿಯನ ಮರಣಾ ನಂತರ ನಾವುಗಳೂ ಅಜ್ಜಿಯ ಮನೆಗೆ ಹೋಗುವುದನ್ನೇ ನಿಲ್ಲಿಸಿದೆವು. ಕರಿಯನ ನೆನಪು ಸದ ಕಾಡುತ್ತಿದ್ದರಿಂದ ನಮ್ಮ ಚಿಕ್ಕಮ್ಮಂದಿರೂ ಕೂಡಾ ಕೆಜಿಎಫ್ ಬಿಟ್ಟು ಬೆಂಗಳೂರಿಗೆ ಬಂದು ಬಿಟ್ಟರು. ಹಾಗೊಮ್ಮೆ ಎಂದಾದರೂ ಅಜ್ಜಿಯ ಮನೆಗೆ ಹೋದಾಗ ಕರಿಯನ ನೆನಪಿನ ಮಲ್ಲಿಗೆ ಗಿಡದಿಂದ ಇನ್ನೂರರಿಂದ ಮುನ್ನೂರು ಮೊಗ್ಗುಗಳನ್ನು ಬಿಡಿಸುತ್ತಲೇ ನಮ್ಮ ಕರಿಯನ್ನನ್ನು ನಾವು ನೆನಪಿಸಿ ಕೊಳ್ಳುತ್ತಿದ್ದೆವು. ನಮ್ಮ ಅಮ್ಮ ಆ ಮೊಗ್ಗುಗಳೊಂದಿಗೆ ಇತರೇ ಹೂವುಗಳನ್ನು ಮತ್ತು ಪತ್ರೆಗಳನ್ನು ಸೇರಿಸಿ ಚೆಂದನೆಯ ಹೂವಿನ ಮಾಲೆಯನ್ನು ಕಟ್ಟಿ ಅಗಲಿದ ನಮ್ಮ ತಾತನವರ ಫೋಟೋವಿಗೂ ಮತ್ತು ದೇವರ ಫೋಟೋಗಳಿಗೂ ಹಾಕುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಇರುವಾಗ ತನ್ನ ತುಂಟಾಟಗಳಿಂದ ನಮ್ಮನ್ನೆಲ್ಲಾ ರಂಜಿಸುತ್ತಿದ್ದ ನಮ್ಮ ಕರಿಯ ಸತ್ತ ನಂತರ ಮಲ್ಲಿಗೆ ಗಿಡವಾಗಿ ದೇವರ ಪದತಲದಲ್ಲಿ ಮತ್ತು ಮನೆಯವರ ಮುಡಿಯಲ್ಲಿದ್ದು ತನ್ನ ಘಂ ಎಂಬ ಸುವಾಸನೆಯಿಂದ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದ.

ಕರಿಯ ಸತ್ತ ಐದಾರು ತಿಂಗಳಿನ ನಂತರ ತಿಳಿದು ಬಂದ ವಿಷಯವೇನೆಂದರೆ, ನಮ್ಮ ಕರಿಯ ಹಾಗೆಯೇ ಆಟವಾಡುತ್ತಾ ಪಕ್ಕದ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿಟ್ಟಿದ್ದ ಕೋಳಿಯ ಮೊಟ್ಟೆಯನ್ನು ಕದ್ದು ತಿನ್ನುತ್ತಿದ್ದದ್ದನು ನೋಡಿದ ಪಕ್ಕದಮನೆಯಾಕೆ, ಕೋಪದ ಭರದಲ್ಲಿ, ಅಲ್ಲೇ ಇದ್ದ ಗುಂಡು ಕಲ್ಲನ್ನು ಕರಿಯನ ಮೇಲೆ ಎತ್ತಿ ಹಾಕಿದ್ದಾರೆ. ಮೊಟ್ಟೆ ತಿನ್ನುವ ಭರದಲ್ಲಿ ಪಕ್ಕದ ಮನೆಯಾಕೆಯನ್ನು ಗಮನಿಸದ ಕರಿಯನ ಪ್ರಾಣ ಪಕ್ಷಿ ಒಮ್ಮೆಲೆ ಹಾರಿ ಹೋಗಿದೆ. ಕತ್ತಲಾದ ಮೇಲೆ ನಮ್ಮ ಕರಿಯನನ್ನು ತೆಗೆದುಕೊಂಡು ಹೋಗಿ ಮೋರಿಯಲ್ಲಿ ಬಿಸಾಕಿ, ಕರಿಯನ ಹೆಣ ತೇಲಬಾರದೆಂದು ಅವನ ಮೇಲೆ ಒಂದೆರಡು ದೊಡ್ಡ ಕಲ್ಲುಗಳನ್ನು ಎತ್ತಿ ಹಾಕಿ ಏನೂ ತಿಳಿಯದವರಂತೆ ಸುಮ್ಮನಾಗಿ ಬಿಟ್ಟಿದ್ದಾರೆ. ಮೂರನೇ ದಿನ ಬಿದ್ದ ಭಾರಿ ಮಳೆಯಿಂದ ನೀರು ರಭಸವಾಗಿ ಬಂದ ಕಾರಣ ನಮ್ಮ ಕರಿಯನ ದೇಹ ಸ್ವಲ್ಪ ದೂರಕ್ಕೆ ಬಂದು ಕಾಗೆಗಳ ಆಹಾರವಾಗಿ ಬಿಟ್ಟಿದೆ.

ಏನೂ ಅರಿಯದ ಮೂಕ ಮುಗ್ಧ ಪ್ರಾಣಿಯು ಮಾಡಿದ ಒಂದು ಸಣ್ಣ ತಪ್ಪಿಗೆ ಅದೂ ಅಂದಿನ ಸಮಯದಲ್ಲಿ ಹೆಚ್ಚೆಂದರೆ ಹತ್ತೋ ಇಲ್ಲವೇ ಇಪ್ಪತ್ತು ಪೈಸೆಗೆ ಸಿಗುತ್ತಿದ್ದ ಒಂದು ಮೊಟ್ಟೆಗಾಗಿ ನಮ್ಮ ನೆಚ್ಚಿನ ಕರಿಯ ಬಲಿಯಾಗಿದದ್ದು ನಿಜಕ್ಕೂ ನಮ್ಮ ದೌರ್ಭ್ಯಾಗ್ಯವೇ ಸರಿ. ನಮ್ಮ ಕರಿಯ ಮಾಡಿದ್ದು ಸರಿ ಎಂದು ನಾನು ವಾದಿಸದಿದ್ದರೂ, ಮೊಟ್ಟೆ ತಿನ್ನುವಾಗ ಹಚ್ಚಾ ಎಂದು ಜೋರಾಗಿ ಕೂಗಿದ್ದಲ್ಲಿ ಒಂದು ಮುದ್ದಾದ ಪ್ರಾಣಿಯ ಜೀವವನ್ನು ಉಳಿಸಬಹುದಾಗಿತ್ತು. ನಂತರ ನಮ್ಮ ಬಳಿ ನಡೆದದ್ದನ್ನು ತಿಳಿಸಿ ಹಣವನ್ನು ಪಡೆಯ ಬಹುದಾಗಿತ್ತು. ಆದರೆ ಪ್ರತಿಯೊಬ್ಬರಿಗೂ ಹುಟ್ಟುವಾಗಲೇ ಬ್ರಹ್ಮ ಆಯಸ್ಸನ್ನು ಬರೆದು ಕಳುಹಿಸಿರುತ್ತಾನಂತೆ. ಹಾಗಾಗಿ ವಿಧಿಯ ಮುಂದೆ ನಮ್ಮದೇನೂ ನಡೆಯದು. ಅವನು ಸೂತ್ರಧಾರ ನಾವೆಲ್ಲರೂ ಪಾತ್ರಧಾರಿಗಳು ಅಷ್ಟೇ.

ಆದಾದ ನಂತರ ನಮ್ಮ ಮಾವ ಬೇರೇ ನಾಯಿಯನ್ನು ಸಾಕಲೇ ಇಲ್ಲಾ. ಕರಿಯನ ಅಕಾಲಿಕ ಅಗಲಿಕೆ ನಮ್ಮ ಮಾವ ಮತ್ತು ಚಿಕ್ಕಮ್ಮಂದಿರನ್ನು ಇಂದಿಗೂ ಕಾಡುತ್ತಲೇ ಇದೆ. ಕೇವಲ ನಮ್ಮ ಮಾವ ಏಕೆ ನಾನು ಕೂಡ ನಮ್ಮ ಮಕ್ಕಳು ಎಷ್ಟೇ ಎಷ್ಟೇ ಕಾಡಿ ಬೇಡಿದರೂ ನಾಯಿಯನ್ನು ಸಾಕಲು ನನ್ನ ಮನಸ್ಸು ಒಪ್ಪಲೇ ಇಲ್ಲ. ಏಕೆಂದರೆ ಕರಿಯನ ಸ್ಥಾನ ಬೇರೆ ಯಾರಿಂದಲೂ ತಂಬಲು ಅಸಾಧ್ಯವೇ ಸರಿ ಎಂದೇ ನನ್ನ ಭಾವನೆ.

ತಾನೊಂದು ಬಗೆದರೆ, ದೈವ ಒಂದು ಬಗೆದೀತು ಎನ್ನುವಂತೆ ಈಗ ಒಂದೆರಡು ವರ್ಷಗಳ ಹಿಂದೆ ಅದೆಲ್ಲಿಂದಲೂ ನಮ್ಮ ಬೀದಿಗೆ ಕಪ್ಪನೆಯ ನಾಯಿಯೊಂದು ಬಂದಿತು. ನೋಡಲು ಬಡಕಲಾಗಿದ್ದ ನಾಯಿಗೆ ಅಕ್ಕ ಪಕ್ಕದವರೆಲ್ಲರೂ ಅಷ್ಟೋ ಇಷ್ಟು ಊಟ ಹಾಕಿ ಸಾಕ ತೊಡಗಿದರು. ಎಲ್ಲರ ಆರೈಕೆಯಿಂದ ಕೆಲವೇ ಕೆಲವು ದಿನಗಳಲ್ಲಿ ಮೈ ತುಂಬಿ ಕೊಂಡು ದಷ್ಟಪುಷ್ಟವಾಗಿ ಎಲ್ಲರ ಅಚ್ಚುಮೆಚ್ಚಿನ ಸಾಕು ಪ್ರಾಣಿಯಾಯಿತು. ಆರಂಭದಲ್ಲಿ ನನ್ನ ಮಗಳನ್ನು ನೋಡಿ ಬೌ ಬೌ ಎನ್ನುತ್ತಿದ್ದ ಈ ಕರಿಯ ಈಗ ನನ್ನ ಮಕ್ಕಳ ಮೆಚ್ಚಿನ ಗೆಳೆಯ. ಅವನಿಗಾಗಿಯೇ ನಮ್ಮ ಮನೆಯಲ್ಲಿ ಬಿಸ್ಕೆಟ್ ಪ್ಯಾಕ್ ಸದಾ ಸಿದ್ದವಾಗಿರುತ್ತದೆ. ಇದೂ ಕೂಡಾ ನನ್ನ ಮಕ್ಕಳು ಶಾಲೆ ಕಾಲೇಜ್ ಹೋಗುವಾಗ ಅಷ್ಟು ದೂರದ ವರೆಗೂ ಹೋಗಿ ಬಿಟ್ಟು ಬರುತ್ತದೆ.ನನ್ನ ಮಗ ಬಂದೊಡನೆಯೇ ಅವನು ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತಾ ನನ್ನ ಮಗನ ನೆಚ್ಚಿನ ಬಂಟನಾಗಿ ನಮ್ಮ ಕರಿಯನ್ನು ಮತ್ತೆ ಮತ್ತೆ ನೆನಪಿಸುತ್ತಿದ್ದಾನೆ. ಈಗಲೂ ಸಹಾ ನನ್ನ ಮಗ ಯಾವುದೇ ಚೆಂದದ ನಾಯಿಯನ್ನು ನೋಡಿದರೂ ಸಾಕು ಓಡಿ ಹೋಗಿ ಅದನ್ನು ಮುದ್ದು ಮಾಡಿ ಕೆಲವೇ ಕ್ಷಣಗಳಲ್ಲಿ ಪಳಗಿಸುವುದರಲ್ಲಿ ಎತ್ತಿದ ಕೈ.ಒಂದೆರಡು ದಿನ ಅನ್ನಾ ಹಾಕಿದ ಋಣಕ್ಕಾಗಿ ನೋಡಿದಾಗಲೆಲ್ಲಾ ಬಾಲ ಅಲ್ಲಾಡಿಸುವ, ಮತ್ತು ಎಷ್ಟು ದಿನಗಳ ನಂತರ ಬಂದರೂ ಓಡಿ ಬಂದು ಮೈ ಮೇಲೆ ಎಗರಿ ಪ್ರೀತಿಯಿಂದ ಸ್ವಾಮಿ ನಿಷ್ಠೆ ತೋರಿಸುವ ಮೂಕ ಪ್ರಾಣಿ ನಾಯಿಗಳಿಂದ ಅತೀ ಬುದ್ಧಿವಂತರಾದ ನಾವು ಮನುಷ್ಯರು ಕಲಿಯುವುದು ಸಾಕಷ್ಟಿದೆ ಅಲ್ಲವೇ?

ಏನಂತೀರೀ?