ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ

ವಿದ್ಯಾರಣ್ಯಪುರದ ವಿಶ್ವಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವಪರಿಸರ ದಿನವಾದ ಜೂನ್ 6 2022ರಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿತ್ತು.

ಕಾರ್ಯಕ್ರಮದ ಅತಿಥಿಗಳಾಗಿದ್ದ ಶ್ರೀ ಗಂಗಾಧರನ್ (ಆರೋಗ್ಯ ಭಾರತಿಯ ಪ್ರಾಂತ ಸಹಕೋಶಾಧ್ಯಕ್ಷರು) ಮತ್ತು ಶ್ರೀಮತಿ ಮನಿಲಾ ರೆಡ್ಡಿ, (ಸ್ವದೇಶಿ ಚಾಗರಣ ಮಂಚ್ ಮಹಿಳಾ ಘಟಕದ ಪ್ರಮುಖ್) ಮತ್ತು ಸಭೆಯಲ್ಲಿ ಸೇರಿದ್ದ ಕೆಲವು ಮಾತೆಯರಿಂದ ದೀಪವನ್ನು ಪ್ರಜ್ವಲಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರೆ, ರಾಮಚಂದ್ರಪುರದ ಕಲಾಸದ ಅಕಾಡೆಮಿ ಮಕ್ಕಳು ಸುಶ್ರಾವ್ಯವಾಗಿ ಹಾಡಿದ ಶಾರದೆಯ ಕುರಿತಾದ ಪ್ರಾರ್ಥನೆ ಕಾರ್ಯಕ್ರಮಕ್ಕೆ ದೈವೀ ಕಳೆಯನ್ನು ತಂದು ಕೊಟ್ಟಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಡುತ್ತಾ ಅವರನ್ನು ಅಧಿಕೃತವಾಗಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ ವಿಶ್ವಗುರು ಫೌಂಡೇಷನ್ ಟ್ರಸ್ಟ್ ನ ಶ್ರೀ ಧನಂಜಯ್ ಮುರ್ದಂಬಿಲ್, ಕನ್ನಡಿಗರೇ ಬಹುಸಂಖ್ಯಾತರಾಗಿದ್ದರೂ ಕೆಲವು ಕಾಣದ ಕೈಗಳ ಕೈವಾಡದಿಂದ ಕೇರಳದ ಭಾಗವಾಗಿರುವ ಕಾಸರಗೋಡಿನ ಶ್ರೀ ಸಾಯಿ ಗೋಪಾಲಕೃಷ್ಣ ಭಟ್ ಅವರ ಸಮಾಜ ಸೇವೆಗಳಿಂದ ಪ್ರೇರಿತವಾದ ಮತ್ತು ಬಹುತೇಕ ಗೆಳೆಯರೇ ಸ್ವಸಹಾಯ ಪದ್ದತಿಯಲ್ಲಿ ಕಟ್ಟಿಕೊಂಡ ತಮ್ಮ ಟ್ರಸ್ಟ್ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಡೆಸಿದ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಮಹಿಳೆಯರಿಗಾಗಿ ನಡೆಸಿದ ಕಾರ್ಯಾಗಾರಗಳು, ಮಕ್ಕಳಿಗಾಗಿ ನಡೆಸಿದ ಶ್ರೀಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮಗಳನ್ನು ವಿವರಿಸಿದ್ದಲ್ಲದೇ, ತಮ್ಮ ಟ್ರಸ್ಟಿನ ಧ್ಯೇಯೋದ್ಧೇಶಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಅದಾದ ನಂತರ ಕಾರ್ಯಕ್ರಮದ ಮುಖ್ಯ ಉದ್ದೇಶಗಳಲ್ಲಿ ಒಂದಾದ, ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 2 ನೇ ಮತ್ತು 3ನೇ ರ್ಯಾಂಕ್ ಪಡೆದ ದೊಡ್ಡಬೊಮ್ಮಸಂದ್ರ ಬಡಾವಣೆಯ ಇಬ್ಬರು ಅಪರೂಪದ ಎಲೆಮರೆಕಾಯಿಯಂತಹ ಪ್ರತಿಭೆಗಳಿಗೆ ಟ್ರಸ್ಟಿನ ವತಿಯಿಂದ ಪ್ರಶಸ್ತಿ ಪ್ರಮಾಣ ಪತ್ರ, ನೆನಪಿನ ಕಾಣಿಕೆ ಮತ್ತಿತರ ಬಹುಮಾನದೊಂದಿಗೆ ಪರಿಸರ ದಿನದ ಅಂಗವಾಗಿ ಗಿಡವನ್ನೂ ಸಹಾ ಕೊಟ್ಟಿದ್ದು ಅರ್ಥಪೂರ್ಣವಾಗಿದ್ದಲ್ಲದೇ, ಅನನ್ಯವಾಗಿತ್ತು.

ಮೊದಲಿಗೆ 625ಕ್ಕೆ 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿರುವ ಚಿರಂಜಿವಿ ಅಭಿಷೇಕ್ ಅವರಿಗೆ ಶ್ರೀ ಗಂಗಾಧರನ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸೆಂಟ್ ಫಿಲೋಮಿನಾಸ್ ಶಾಲೆಯ ಈ ವಿದ್ಯಾರ್ಥಿ ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನ ಮತ್ತು ಸಮಾಜ ಶಾಸ್ತ್ರದಲ್ಲಿ ಪೂರ್ಣಾಂಕಗಳನ್ನು ಗಳಿಸಿ 100ಕ್ಕೆ 100 ಸುಲಭವಾಗಿ ಗಳಿಸಬಹುದಾದ ಗಣಿತದಲ್ಲಿ 99 ಅಂಕಗಳನ್ನು ಗಳಿಸುವ ಮೂಲಕ ಕೇವಲ 1 ಅಂಕದಿಂದ ರಾಜ್ಯಕ್ಕೆ ಮೊದಲನೇ ರ್ಯಾಂಕ್ ನಿಂದ ವಂಚಿತನಾಗಿದ್ದಾನೆ. ಈ ಬಾರಿ 145 ಮಂದಿ 625/625 ಗಳಿಸಿರುವುದು ದಾಖಲೆಯಾಗಿದೆ. ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಉದ್ಯೋಗ ಮಾಡುತ್ತಿರುವ ಶ್ರೀ ದಿಲೀಪ್ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲ ಕಾಲ ಶಿಕ್ಷಕಿಯಾಗಿದ್ದ ಶ್ರೀಮತಿ ಪ್ರೇಮಲತಾ ಅವರ ಪುತ್ರನಾದ ಅಭಿಷೇಕ್ ಮುಂದೆ ವಾಣಿಜ್ಯ ವಿಭಾಗದಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರೆಸಿ, ಚಾರ್ಟೆಡ್ ಅಕೌಂಟೆಂಟ್ ಆಗಲು ಇಚ್ಚಿಸಿದ್ದಾನೆ.

ಇನ್ನು 625 ಕ್ಕೆ 623 ಅಂಕಗಳನ್ನುಗಳಿಸಿ ಕೇವಲ 2 ಅಂಕಗಳಿಂದ ಮೂರನೇ ರ್ಯಾಂಕ್ ಪಡೆದಿರುವ ರಾಮಚಂದ್ರ ಪುರದ ವಿಶ್ವ ಭಾರತಿ ಶಾಲೆಯ ಚಿರಂಜೀವಿ ಶರಣ್ ಗೆ ಶ್ರೀಮತಿ ಮನಿಲಾರೆಡ್ಡಿಯವರು ಪ್ರಶಸ್ತಿ ಪುರಸ್ಕಾರಗಳನ್ನು ವಿತರಿಸಿದರು. ಕನ್ನಡ, ಹಿಂದಿ, ವಿಜ್ಞಾನ ಮತ್ತು ಸಮಾಜ ಶಾಸ್ತ್ರದಲ್ಲಿ ಪೂರ್ಣಾಂಕಗಳನ್ನು ಗಳಿಸಿ ಇಂಗ್ಲೀಷ್ ನಲ್ಲಿ 124 ಮತ್ತು ಗಣಿತದಲ್ಲಿ 99 ಅಂಕಗಳನ್ನು ಗಳಿಸಿರುವ ಶರಣ್, ವಿದ್ಯೆಗೂ ಬಡತನಕ್ಕೂ ಸಂಬಂಧವೇ ಇಲ್ಲಾ ಎಂದು ತೋರಿಸಿಕೊಟ್ಟಿದ್ದಾನೆ. ತಂದೆ ಶ್ರೀ ಸುಬ್ರಮಣಿಯವರು ಬಾರ್ ಬೆಂಡಿಗ್ ಕೆಲಸ ಮಾಡಿದರೆ, ತಾಯಿ ಶ್ರೀಮತಿ ತಿಲಗವತಿ ಕುಟುಂಬವನ್ನು ನಿರ್ವಹಿಸಲು ಟೈಲರಿಂಗ್ ಮಾಡುತ್ತಿದ್ದಾರೆ. ಇಂಜಿನೀಯರಿಂಗ್ ಪದವಿ ಪಡೆದು ಸ್ವಂತ ಉದ್ಯೋಗ ಮಾಡಿ ತನ್ನ ಹೆತ್ತ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಬಯಕೆಯನ್ನು ಹೊಂದಿದ್ದಾನೆ.

ಪ್ರಶಸ್ತಿ ಪುರಸ್ಕಾರ ಮುಗಿದ ನಂತರ ಕಾರ್ಯಕ್ರಮದ ಮುಖ್ಯ ವಕ್ರಾರರಾಗಿ ಬಂದಿದ್ದ ಶ್ರೀ ಗಂಗಾಧರನ್, Health is first every thing is next ಎಂದು ಸೂಚ್ಯವಾಗಿ ಹೇಳಿ, ವಿಪರೀತ ನಗರೀಕರಣದಿಂದಾಗಿ ಕಾಡುಗಳೆಲ್ಲಾ ನಾಡುಗಳಾಗಿ ಮಾರ್ಪಟ್ಟ ಕಾರಣ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರಿದ್ದರಿಂದಲೇ ಎಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿವೆ ಎಂಬುದನ್ನು ಕೆಲ ಉದಾಹರಣೆಗಳ ಮೂಲಕ ವಿವರಿಸಿದ್ದಲ್ಲದೇ, ಮನುಷ್ಯರ ಆಹಾರ ಪದ್ದತಿ ಬದಲಾಗಿ packed food ಸೇವಿಸಲಾರಂಭಿಸಿದ್ದು ಮತ್ತು ಅನಗತ್ಯವಾಗಿ ಎಗ್ಗಿಲ್ಲದೇ, mobile ಬಳಕೆ ಮಾಡತೊಡಗಿದ ಕಾರಣ mobile tower frequency ನಿಂದಾಗಿ ಇಂದಿನ ಮಕ್ಕಳು ಗುಬ್ಬಚ್ಚಿಯನ್ನು ಕೇವಲ ಚಿತ್ರರೂಪದಲ್ಲಿ ನೋಡಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದಾಗ ನೆರದಿದ್ದವರೆಲ್ಲರಿಗೂ ತಮ್ಮ ತಪ್ಪಿನ ಅರಿವಾಗಿದ್ದು ಸುಳ್ಳಲ್ಲ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀಮತಿ ಮನಿಲಾರೆಡ್ಡಿಯವರು ಮನೆಯಲ್ಲಿ ಮಹಿಳೆಯರು ಹೇಗೆ ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿದ್ದಾರೆ ಎಂಬುದನ್ನು ಸರಳವಾಗಿ ವಿವರಿಸಿದರು. ಹಿಂದೆ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಮತ್ತು ನೈಸರ್ಗಿಕವಾದ ಅಂಟುವಾಳಕಾಯಿಯನ್ನು ಬಳಸುತ್ತಿದ್ದರೆ, ಇಂದು ಎಲ್ಲಾ ಕಡೆಯಲ್ಲಿಯೂ ಎಗ್ಗಿಲ್ಲದೇ ರಾಸಾಯನಿಕ ಮಾರ್ಜಕಗಳನ್ನು ಬಳಸುವ ಮೂಲಕ ನೀರನ್ನು ಕಲುಷಿತ ಗೊಳಿಸುತ್ತಿರುವುದನ್ನು ಎತ್ತಿ ತೋರಿಸಿದರು. ಮನೆಯ ಮುಂದೆ ಕನಿಷ್ಟ ಪಕ್ಷ ಎರಡು ಗಿಡಗಳನ್ನಾದರೂ ನೆಡಬೇಕು ಅದು ಸಾಧ್ಯವಿಲ್ಲದೇ ಪಕ್ಷದಲ್ಲಿ ತಮ್ಮ ಸ್ವದೇಶೀ ಜಾಗರಣ ಮಂಚ್ ವತಿಯಿಂದ ತಾರಸೀ ತೋಟದ ಕಾರ್ಯಾಗಾರವನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು.

ಭಾವ, ರಾಗ ತಾಳ ಸೇರಿಯೇ ಭಾರತ ಎಂಬ ಹೆಸರು ಬಂದಿತೆಂದು ಹೇಳುವ ಈ ನಮ್ಮ ಭಾರತ ದೇಶ, ಸಂಗೀತ ಸಾಹಿತ್ಯ, ಕಲೆ ಮತ್ತು ನೃತ್ಯಗಳಿಗೆ ಖ್ಯಾತಿ ಹೊಂದಿದ್ದು ಅದನ್ನು ಪ್ರತಿಪಾದಿಸುವಂತೆ ಮತ್ತು ಪರಿಸರ ದಿನಾಚರಣೆಗೆ ಸೂಕ್ತವಾಗುವಂತೆ, ಕಲಾಸದಾ ಮಕ್ಕಳು ಮಾಯದಂತ ಮಳೆ ಬಂತಣ್ಣಾ… ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರೆ, ಅವರೆಲ್ಲರ ಹಾಡಿನಿಂದ ಉತ್ತೇಜಿತಳಾಗದ ಪುಟಾಣಿ ಕು. ವಿಜ್ಞಾತ್ರಿಯೂ ಸಹಾ ತನ್ನ ಮುದ್ದಾದ ಕಂಠದಲ್ಲಿ ಹಾಡೊಂದನ್ನು ಹಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಳು. ಮಕ್ಕಳ ಹಾಡುಗಾರಿಕೆಗೆ ತುಂಬಿದ ಸಭಾಂಗಣದ ಸಭಿಕರ ಕರತಾಡಾಣದ ಸದ್ದನ್ನು ಕೇಳಿಸಿಕೊಳ್ಳುತ್ತಿದ್ದ SSMRV ಶಾಲೆಯ ಸಂಗೀತ ಶಿಕ್ಷಕಿಯಾಗಿರುವ ಶ್ರೀಮತಿ ಪ್ರೀತಿ ಜಯಂತ್ ಅವರಿಗೆ ಅ ಮಕ್ಕಳಿಗೆ ಕಷ್ಟ ಪಟ್ಟು ಹಾಡುಗಳನ್ನು ಹೇಳಿಕೊಟ್ಟಿದ್ದ ಶ್ರಮಕ್ಕೆ ಸಾರ್ಥಕತೆ ದೊರೆತ ಭಾವದಲ್ಲಿ ಆನಂದಭಾಷ್ಪ ಜಾರಿದ್ದು ಎದ್ದು ಕಾಣುತ್ತಿತ್ತು.

ಸದ್ಯಕ್ಕೆ ನಮ್ಮ ಪರಿಸರದಲ್ಲಿ ಎಲ್ಲರಣ್ನೂ ಕಾಡುತ್ತಿರುವ ಪೆಂಡಭೂತವಾದ ಸಮಸ್ಯೆ ಎಂದರೆ ಪ್ಲಾಸ್ಟಿಕ್. ನಾವು ದೈನಂದಿನದಲ್ಲಿ ಎಗ್ಗಿಲ್ಲದೇ ಬಳಸುವ ಪ್ಲಾಸ್ಟಿಕ್ ಅತ್ಯಂತ ಕೆಟ್ಟ ವಸ್ತುವಾಗಿದ್ದು ಅವುಗಳ ಬಳಕೆಯಿಂದಾಗಿ ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳಿಗೂ ತುತ್ತಾಗುವುದಲ್ಲದೇ, ಪ್ಲಾಸ್ಟಿಕ್ ವಸ್ತುಗಳು ಸುಲಭವಾಗಿ ಮಣ್ಣಿನಲ್ಲಿ ಕರಗದೇ, ಅವುಗಳು ಕೊಳೆಯಲು ಸುಮಾರು 450 ವರ್ಷಗಳು ಬೇಕಾಗುವುದರಿಂದ ಪರಿಸರಕ್ಕೂ ಬಹಳ ಹಾನಿಕಾರಕವಾಗಿದೆ.

ಹಾಗಾಗಿ ವಿಶ್ವ ಪರಿಸರ ದಿನದಂದು ಈ ದೇಶದ ಉತ್ತಮ ಪ್ರಜೆಯಾಗಿ ಮತ್ತು ಈ ಭೂಮಿಯ ಜವಾಬ್ದಾರಿಯುತ ನಾಗರೀಕನಾಗಿ ನೆರೆದಿದ್ದ ಎಲ್ಲರೂ ತಮ್ಮ ಕೈ ಮುಂದೆ ಮಾಡಿ ಈ ಕೆಳಕಂಡಂತೆ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಮಾಡಿದ ಈ ಪ್ರತಿಜ್ಞೆ ಶ್ಲಾಘನೀಯವಾಗಿತ್ತು.

 • ನಾನು ಇಂದಿನಿಂದ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಇಂದಿನಿಂದಲೇ ನಮ್ಮ ಮನೆಯಲ್ಲಿ ಆದಷ್ಟೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವುದನ್ನು ಕ್ರಮೇಣ ಕಡಿಮೇ ಮಾಡುತ್ತಾ ಇನ್ನು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸುತ್ತೇನೆ.
 • ದೈನಂದಿನ ಕಾರ್ಯಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳಾದ ತಂಪು ಪಾನೀಯ ಕುಡಿಯುವ ಸ್ಟ್ರಾ, ಕ್ಯಾರಿ ಬ್ಯಾಗ್ಗಳು, ಚಾಕು ಕತ್ತರಿಗಳು ಇತ್ಯಾದಿಗಳ ಬಳಕೆಯನ್ನು ನಿಲ್ಲಿಸುತ್ತೇನೆ.
 • ನಾನು ಇನ್ನು ಮುಂದೆ ಬಟ್ಟೆಯ ಕೈಚೀಲ ಚೀಲ, ಮರುಬಳಕೆ ಮಾಡ ಬಹುದಾದ ಗಾಜು, ಪಿಂಗಾಣಿ ಇಲ್ಲವೇ ಲೋಹದ ಉಪಕರಣಗಳನ್ನು ಬಳಸುತ್ತೇನೆ.
 • ಮಾಲ್ ಇಲ್ಲವೇ ಬಜಾರ್ ಗಳಲ್ಲಿ ಪ್ಲಾಸ್ಟಿಕ್ ಫಿಲ್ಮ್ಗಳಲ್ಲಿ ಸುತ್ತಿದ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವುದಿಲ್ಲ.
 • ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡುವ ಬಗ್ಗೆ ಬಂಧು ಮಿತ್ರರೊಂದಿಗೆ ವಿಚಾರ ತಿಳಿಸಿ ಅವರೂ ಸಹಾ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಇಲ್ಲವೇ ಸಂಪೂರ್ಣ ನಿಷೇಧಮಾಡಲು ಕೋರಿಕೊಳ್ಳುತ್ತೇನೆ.
 • ಮರುಬಳಕೆ ಮತ್ತು ವಿಲೇವಾರಿಗಾಗಿ ನಮ್ಮ ಮನೆಯ ದೈನಂದಿನ ತ್ಯಾಜ್ಯವನ್ನು ಒಣ ಕಸ ಮತ್ತು ಹಸೀ ಕಸವನ್ನಾಗಿ ವಿಂಗಡಿಸುತ್ತೇನೆ.
 • ಹೊರಗಿನಿಂದ ಆಹಾರವನ್ನು ಪಾರ್ಸಲ್ ತರುವಾಗ ಸಾಧ್ಯವಾದಷ್ಟೂ ಮನೆಯಿಂದಲೇ ಡಬ್ಬಿ ಮತ್ತು ಪಾತ್ರೆಗಳನ್ನು ತೆಗೆದುಕೊಂಡು ಹೋಗುತ್ತೇನೆ.
 • ಆನ್ಲೈನ್ನಲ್ಲಿ ಮೂಲಕ ಆಹಾರವನ್ನು ಆರ್ಡರ್ ಮಾಡಿದಾಗ ದಯವಿಟ್ಟು ಪ್ಲಾಸ್ಟಿಕ್ ಡಬ್ಬಗಳಲ್ಲಿ ಆಹಾರವನ್ನು ಕಳುಹಿಸಬೇಡಿ ಎಂದು ರೆಸ್ಟೋರೆಂಟ್ಗಳಿಗೆ ಕೇಳಿಕೊಳ್ಳುತ್ತೇನೆ.
 • ಪ್ಲಾಸ್ಟಿಕ್ನಲ್ಲಿ ಸುತ್ತಿದ ಉಡುಗೊರೆಗಳು / ಹೂಗುಚ್ಛಗಳನ್ನು ಇನ್ನು ಮುಂದೆ ಯಾರಿಗೂ ಕೊಡುವುದಿಲ್ಲ.
 • ಈ ಮೂಲಕ ಇನ್ನು ಮುಂದೆ ನಮ್ಮ ಮನೆ ಪ್ಲಾಸ್ಟಿಕ್ ಮುಕ್ತ ಮನೆಯಾಗಿರುತ್ತದೆ ಎಂದು ಘೋಷಿಸುತ್ತೇನೆ.

ಇಂತಹ ಸುಂದರವಾದ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನಡೆಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ವಿಶ್ವಗುರು ಚಾರಿಟೆಬಲ್ ಟ್ರಸ್ಟಿನ ರಕ್ಷಿತ್ ಶೆಟ್ಟಿಯವರು ವಂದನಾರ್ಪಣೆ ಅರ್ಪಿಸುವ ಮೂಲಕ ಕಾರ್ಯಕ್ರಮ ಸುಸಂಪನ್ನವಾಯಿತು.

ಪರಿಸರದ ಕಾಳಜಿಯನ್ನು ಕೇವಲ ಈ ದಿನಕ್ಕೇ ಅಥವಾ ಈ ಕಾರ್ಯಕ್ರಮಕ್ಕೇ ಮಾತ್ರವೇ ಸೀಮಿತಗೊಳಿಸದೇ, ಮನೆಗೆ ತೆರಳುವ ಮುನ್ನಾ ಇಂದು ಮಾಡಿದ ಪ್ರತಿಜ್ಞೆಯನ್ನು ಮತ್ತೊಮ್ಮೆ ಮನನ ಮಾಡಿಕೊಂಡು ಅದನ್ನು ಯಥಾವತ್ತಾಗಿ ಅನುಷ್ಠಾನ ಮಾಡಲೇ ಬೇಕೆಂದು ಇಡೀ ಕಾರ್ಯಕ್ರಮವನ್ನು ಅತ್ಯಂತ ಚೇತೋಭರಿತವಾಗಿ ನಿರೂಪಣೆ ಮಾಡಿದ ಶ್ರೀ ಶ್ರೀಕಂಠ ಬಾಳಗಂಚಿಯವರು ಮಾಡಿದ ಆಗ್ರಹಕ್ಕೆ ಎಲ್ಲರೂ ತಲೆದೂಗಿದ್ದು ಕಾರ್ಯಕ್ರಮಕ್ಕೆ ಸಾರ್ಥಕತೆಯನ್ನು ಎತ್ತಿ ತೋರಿಸಿತ್ತು.

ಕಾರ್ಯಕ್ರಮಕ್ಕೆ ಬಂದವರಿಗೆಲ್ಲರಿಗೂ ತೀರ್ಥ ರೂಪದಲ್ಲಿ ಬಿಸಿ ಬಿಸಿ ಬಾದಾಮಿ ಹಾಲನ್ನು ಕೊಟ್ಟಿದ್ದಲ್ಲದೇ, ಇನ್ನು ಪ್ರಸಾದ ರೂಪದಲ್ಲಿ ಮರ, ಹೂವಿನ ಗಿಡಗಳು ಮತ್ತು ಹುಲ್ಲಿನ ಜೀಜದ ಉಂಡೆಯನ್ನು ಶ್ರೀ ದರ್ಶನ್ ಅವರು ವಿತರಿಸಿದರು. ಈಗ ವಿತರಿಸಿದ ಬೀಜದುಂಡೆಯನ್ನು ಮನೆಯ ಮುಂದೆ ಹಾಕಿ, ಕಾಲಕಾಲಕ್ಕೆ ಅದಕ್ಕೆ ಪೋಷಣೆಯನ್ನು ಮಾಡಿ ಮುಂದಿನ ವರ್ಷ ಇದೇ ಕಾರ್ಯಕ್ರಮದಲ್ಲಿ ಅದರ ಭಾವಚಿತ್ರಗಳನ್ನು ಹಾಕಲು ಕೇಳಿಕೊಳ್ಳುವ ಮೂಲಕ  ಅರ್ಥಪೂರ್ಣವಾಗಿ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಕಾರ್ಯಕ್ರಮಕ್ಕೆ ಭಂಗ ಬಾರದಿರಲೆಂದು ಎಲ್ಲರೂ ತಮ್ಮ ತಮ್ಮ ಮೊಬೈಲ್ ಫೋನುಗಳನ್ನು ನಿಶ್ಯಬ್ಧವಾಗಿಸಿದ್ದಲ್ಲದೇ, ಕಾರ್ಯಕ್ರಮದ ನಡುವೆ ಅನಗತ್ಯವಾಗಿ ಓಡಾಡದೇ, ಸಂಪೂರ್ಣ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಕಾಯಕ್ರಮವನ್ನು ಯಶಸ್ವಿಗೊಳಿಸಿದ್ದು ಕೊರೋನಾ ಮಹಾಮಾರಿ ಬಂದ ನಂತರ ಎಲ್ಲರೂ ಪರಿಸರ ಮತ್ತು ಸ್ವಚ್ಚತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎಂದಿನಿಸಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ವಿಶ್ವ ಪರಿಸರ ದಿನ

ಭೂಮಿ,ಸೌರಮಂಡಲದಲ್ಲಿ 5ನೇ ದೊಡ್ಡ ಗ್ರಹ. ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ. ಅದಕ್ಕಾಗಿಯೇ ಕವಿಯೊಬ್ಬರು ಎಲ್ಲರಿಗೊಂದೇ ಭೂತಲವೆಂದೆ ಎಲ್ಲರಿಗೂ ಭಗವಂತನೇ ತಂದೆ ಎಂದು ಹೇಳಿದ್ದಾರೆ. ಹಾಗಾಗಿ ಈ ಭೂಮಿ ನಮಗೆ ಆಶ್ರಯದಾತೆಯಲ್ಲದೇ ನಮ್ಮ ತಾಯಿಯೂ ಹೌದು. ಅದಕ್ಕಾಗಿಯೇ ನಮ್ಮ ಸನಾತನ ಧರ್ಮದಲ್ಲಿ ಭೂಮಿಗೆ ತಾಯಿಯ ಸ್ವರೂಪ ನೀಡಿ ಭೂಮಿತಾಯಿ ಎಂದೇ ಸಂಭೋಧಿಸುತ್ತೇವೆ. ಆದರೆ ಮನುಷ್ಯನ ದುರಸೆಯಿಂದಾಗಿ ಅದೇ ಭೂಮಿ ತಾಯಿ ಒಡಲನ್ನು ಅಗೆದು, ಬಗೆದು ರತ್ನಗರ್ಭ ವಸುಂಧರೆಯಲ್ಲಿ ಆಡಗಿದ್ದ ಖನಿಜ ಸಂಪತ್ತುಗಳನ್ನು ಬರಿದು ಮಾಡಿದ್ದಲ್ಲದೇ ಸಹಸ್ರಾರು ವರ್ಷಗಳಿಂದ ಆಕೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅಂತರ್ಜಲಕ್ಕೂ ಕೊಳವೇ ಭಾವಿಗಳನ್ನು ಕೊರೆದು ಒಂದು ರೀತಿಯಲ್ಲಿ ಆಕೆಯ ಮೇಲೆ ಅತ್ಯಾಚಾರವನ್ನು ಮಾಡಿದ್ದೇವೆ ಎಂದರೂ ತಪ್ಪಾಗಲಾರದು.

ಸಂತ ಕಬೀರರ ಒಂದು ದೋಹದಲ್ಲಿರುವಂತೆ

ವೃಕ್ಷಕ್ಕಲ್ಲ ವೃಕ್ಷದ ಫಲವು ನದಿಯ ನೀರು ನದಿಗಲ್ಲ |
ಸಂತನ ಬದುಕು ಸಂತನಿಗಲ್ಲ ಅದು ಲೋಕದ ಹಿತಕೆ – ಕಬೀರಾ ||
ಅಂದರೆ ಗಿಡ ಮರಗಳು ಹಣ್ಣು ಬಿಡುವುದು, ನದಿ ಹರಿಯುವುದೂ ಪರರ ಉಪಯೋಗಕ್ಕಾಗಿಯೇ ಹೊರತು ಅವರ ಸ್ವಾರ್ಥಕ್ಕಲ್ಲ. ಅದೇ ರೀತಿ ಋಷಿಮುನಿಗಳು ಮತ್ತು ಮಹಾ ಸಂತರು ಲೋಕದ ಹಿತಕ್ಕೋಸ್ಕರ ಬದುಕುತ್ತಾರೆಯೇ ಹೊರತು ಸ್ವಂತಕ್ಕಲ್ಲ.

ಆದರೆ ಸ್ವಾರ್ಥಿ ಮಾನವ, ಪ್ರಕೃತಿ ಮಾತೆ ನೀಡುತ್ತಿದ್ದದ್ದೆಲ್ಲವನ್ನೂ ದುರ್ಬಳಕೆ ಮಾಡಿಕೊಂಡ ಪರಿಣಾಮವಾಗಿ ಸದ್ಯದ ಪರಿಸ್ಥಿತಿಯಲ್ಲಿ ಪರಿಸರದಿಂದ ನಮಗೆ ಉಚಿತವಾಗಿ ಸಿಗುತ್ತಿದ್ದ ನೀರು, ಗಾಳಿ, ಮತ್ತು ಬೆಳಕುಗಳು ದುರ್ಲಭವಾಗುತ್ತಿದೆ. ಉಚಿತವಾಗಿ ಸಿಗುತ್ತಿದ್ದ ನೀರು ಇಂದು ಬಹಳಷ್ಟು ದುಬಾರಿಯಾಗಿ ಹೋಗುತ್ತಿದೆ. ಇನ್ನೂ ವಿಪರೀತ ನಗರೀಕರಣದಿಂದ ಕಾಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುತ್ತಿರುವ ಪರಿಣಾಮವಾಗಿ ದುರಾದೃಷ್ಟವಶಾತ್ ಗಾಳಿಯನ್ನೂ ಕಲುಶಿತಗೊಳಿಸಿದ್ದೇವೆ. ಶುಧ್ಧ ನೀರು ಮತ್ತು ಗಾಳಿ ಸಿಗುವುದೇ ಇಂದು ದುರ್ಲಭವಾಗಿದೆ. ಉದ್ಯಾನ ನಗರಿ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರಿನಲ್ಲೂ ಗಿಡಮರಗಳು ಕಾಣೆಯಾಗಿ ಗಗನಚುಂಬಿ ಕಟ್ಟಡಗಳೇ ಹೆಚ್ಚಾಗಿವೆ. ಚೀನ ದೇಶದ ರಾಜಧಾನಿ ಬೀಜಿಂಗ್ ಪ್ರದೇಶದಲ್ಲಿ ಶುಧ್ಧಗಾಳಿಯನ್ನೂ ಜನಾ ಕೊಂಡು ಕೊಳ್ಳುವ ಪರಿಸ್ಥಿತಿ ಈಗಾಗಲೇ ಬಂದಿದ್ದರೆ, ನಮ್ಮ ದೇಶದ ರಾಜಧಾನಿ ದೆಹಲಿಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರದೇ, ಆಮ್ಲಜನಕವನ್ನು ಖರೀದಿಸಿ ಉಸಿರಾಡುವಂತಹ ಸನ್ನಿವೇಶಗಳು ಅತೀ ಶೀಘ್ರದಲ್ಲಿ ಬರುವ ಎಲ್ಲಾ ಲಕ್ಷಣಗಳೂ ಸ್ವಷ್ಟವಾಗಿ ಗೋಚರಿಸುತ್ತಿದೆ.

env2

ಭಗವಂತನಿಂದ ಸೃಷ್ಟಿಯಾದ ಈ ವಿಶ್ವವನ್ನು ನಮ್ಮ ಪೂರ್ವಜರು ಎಚ್ಚರಿಕೆಯಿಂದ ಸದ್ಬಳಕೆ ಮಾಡಿಕೊಂಡು ಅದನ್ನು ಅವರಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬೆಳಸಿ ನಮಗೂ ಉಳಿಸಿಹೋಗಿದ್ದಾರೆ. ಆದರೆ ಈಗ ನಾವುಗಳು ಅವುಗಳನ್ನು ಬೆಳೆಸುವುದಿರಲಿ ಅದನ್ನು‌ ಸಂಪೂರ್ಣವಾಗಿ ಖಾಲಿ‌ಮಾಡದೇ, ಅಲ್ಪ ಸ್ವಲ್ಪವಾದರೂ ನಮ್ಮ ಮುಂದಿನ ಪೀಳಿಗೆಯವರಿಗೆ ಉಳಿಸಿ ಹೋಗಬೇಕಾದ .ಗುರುತರವಾದ ಜವಾಬ್ಢಾರಿ ನಮ್ಮ ಮೇಲೆ ಇದೆ. ಇಂತಹ ಜವಾಬ್ಧಾರಿಯನ್ನು ನೆನಪಿಸುವ ಸಲುವಾಗಿಯೇ ವಿಶ್ವಾದ್ಯಂತ ಜೂನ್ 5 ರಂದು, ವಿಶ್ವ ಪರಿಸರದ ದಿನವನ್ನಾಗಿ ಅಚರಿಸುತ್ತಾರೆ. ಹಾಗಾಗಿ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. ಈ ಪರಿಸರವನ್ನು ಉಳಿಸಿ ಬೆಳೆಸುವ ಸಲುವಾಗಿ ಈ ವಿಶ್ವ ಪರಿಸರ ದಿನದಂದು ನಾವೆಲ್ಲರೂ ಒಂದಾಗಿ ಈ ಕೆಳಕಂಡಂತೆ ಸಂಕಲ್ಪ ಮಾಡೋಣ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಕಾಯಾ ವಾಚಾ ಮನಸಾ ಪ್ರಯತ್ನಿಸೋಣ.

 • ನಮ್ಮ ಮನೆಯ ಸುತ್ತ ಮುತ್ತ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳಸಿ ನಮಗೆ ಬೇಕಾಗುವಷ್ಟು ಗಾಳಿಯನ್ನು ನಾವೇ ಸಂಪಾದಿಸಿ ಕೊಳ್ಳೋಣ.
 • ಮನೆ ಕಟ್ಟುವಾಗ ಇಡೀ ಜಾಗದಲ್ಲಿ ಕಟ್ಟಡ ಕಟ್ಡದೆ, ಸಾಕಷ್ಟು ಗಾಳಿ ಬೆಳಕು ನೈಸರ್ಗಿಕವಾಗಿಯೇ ಮನೆಯೊಳಗೆ ಬರುವಂತೆ ನೋಡಿ ಕೊಳ್ಳೋಣ.
 • ಮನೆಯ ಮುಂದೆ ಕನಿಷ್ಠ ದಿನನಿತ್ಯದ ಪೂಜೆಗಾಗುವಷ್ಟು ಹೂವಿನಗಿಡಗಳು ಮತ್ತು ಮನೆ ಔಷಧೀಯ ಗಿಡಗಳು ಅದರಲ್ಲೂ ತುಳಸೀ ಗಿಡ ಹಾಕುವಷ್ಟಾದರೂ ಜಾಗ ಮೀಸಲಿಡೋಣ. ಅದು ಸಾದ್ಯವಾಗದಿದ್ದಲ್ಲಿ ಕನಿಷ್ಟ ಪಕ್ಷ ತಾರಸೀ ತೋಟವನ್ನಾದರೂ ಮಾಡೋಣ.
 • ಗಿಡ ಮರ ಮತ್ತು ಪರಿಸರದ ಕಾಳಜಿಯನ್ನು ನಮ್ಮ ಮಕ್ಕಳಿಗೆ ತಿಳಿಸಿ ನಮ್ಮ ಸುತ್ತ ಮುತ್ತಲಿನ ಶಾಲೆಗಳಲ್ಲಿ ಮಕ್ಕಳ ಸಹಾಯದಿಂದ ಬೀಜದುಂಡೆಗಳನ್ನು ತಯಾರಿಸಿ ಮಳೆಗಾಲದ ಮುಂಚೆ ಕೆರೆ ಕಟ್ಟೆಗಳ ಸುತ್ತ ಮುತ್ತ ಬೀಜದುಂಡೆಯನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಗಿಡ ಮರಗಳನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡೋಣ.
 • ಬಿಸಿನೀರಿನ ಸ್ನಾನಕ್ಕೆ ಮತ್ತು ಮನೆಯ ದೀಪಗಳಿಗೆ ವಿದ್ಯುತ್ ಬಳಕೆ ಮಾಡದೇ ಸೌರಶಕ್ತಿಯನ್ನು ಯಥೇಚ್ಛವಾಗಿ ಬಳಸಿಕೊಳ್ಳೋಣ.
 • ಅಡುಗೆಮನೆಯಲ್ಲಿ ಉರುವಲಿಗೆ ಕಟ್ಟಿಕೆಯ ಬದಲಿಗೆ ಪರ್ಯಾಯ ಇಂಧನವನ್ನು ಬಳಸುವುದರ ಮೂಲಕ ವಾಯುಮಾಲಿನ್ಯ ತಡೆಗಟ್ಟೋಣ.
 • ದಿನ ಬಳಕೆಗೆ ಅಗತ್ಯವಿದ್ದಷ್ಟು ನೀರನ್ನು ಮಾತ್ರವೇ ಬಳಸೋಣ. ನಮ್ಮೆಲ್ಲರ ಮನೆಗಳಲ್ಲೂ ಮಳೆ ಕೊಯ್ಲು ಪದ್ದತಿಯನ್ನು ಅಳವಡಿಸಿ ಕೊಂಡು ನಮ್ಮ ಮನೆಯ ಛಾವಣಿಯ ಮೇಲೆ ಬೀಳುವ ಪ್ರತಿಯೊಂದು ಬಿಂದು ಮಳೆ ಹನಿಯನ್ನೂ ಸದ್ಬಳಕೆ ಮಾಡಿಕೊಳ್ಳೋಣ.
 • ನಮ್ಮ ಮನೆಯಂಗಳದಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಳೆ ನೀರು ಇಂಗು ಗಂಡಿಗಳನ್ನು ನಿರ್ಮಿಸಿ ಮಳೆ ನೀರು ಪೋಲಾಗಿ ಚರಂಡಿ ಮೋರಿ ಸೇರದಂತೆ ನಮ್ಮಲ್ಲಿಯೇ ಇಂಗಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸೋಣ ಮತ್ತು ಸಾಧ್ಯವಾದಷ್ಟೂ ಭಾವಿ, ಕೊಳವೇ ಭಾವಿ ಮತ್ತು ನದಿ ನೀರಿನ ಅವಲಂಬನೆಯನ್ನು ಕಡಿಮೆ ಮಾಡೋಣ.
 • ಹತ್ತಿರದ ಪ್ರದೇಶಗಳಿಗೆ ವಾಹನಗಳ ಬದಲಾಗಿ ನಡಿಗೆಯಲ್ಲೋ ಅಥವಾ ಸೈಕಲ್ಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವೂ ವೃಧ್ಧಿಸುತ್ತದೆ ಮತ್ತು ವಾಹನಗಳು ಸೂಸುವ ಹೊಗೆಯಿಂದಾಗಿ ಅನಗತ್ಯವಾದ ವಾಯುಮಾಲಿನ್ಯವನ್ನು ತಡೆಗಟ್ಟಿದಂತಾಗುತ್ತದೆ.
  ರಾಸಾಯನಿಕ ಕೃಷಿ ಪದ್ದತಿಯ ಬದಲು ನಮ್ಮ ಪೂರ್ವಜರ ಹಾಗೆ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸುತ್ತಾ ಗೋಮಯ ಮತ್ತು ಗೋಮೂತ್ರದ ಸದ್ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸೋಣ.
 • ಮನೆಗಳಲ್ಲಿ ಬಳೆಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಸುಮ್ಮನೆ ಹೊರಗೆ ಬೀಸಾಡದೆ, ನಮ್ಮ ಮನೆಯ ಕೈತೋಟದಲ್ಲಿಯೇ ಕಾಂಪೋಸ್ಟ್ ಗೊಬ್ಬರ ತಯಾರಿಕೊಳ್ಳೋಣ ಇಲ್ಲವೇ ಅದೇ ತರಕಾರಿ, ಹಣ್ಣುಗಳ ಸಿಪ್ಪೆಗಳು ಮತ್ತು ಮನೆಯಲ್ಲಿ ಅಳಿದು, ಉಳಿದು ಹೋದ ಆಹಾರ ಪದಾರ್ಥಗಳಿಂದ ನೈಸರ್ಗಿಕ ಅನಿಲವನ್ನು ತಯಾರಿಸಿ ಮನೆಗೆ ಇಂಧನವನ್ನಾಗಿ ಬಳೆಸಿಕೊಳ್ಳಲು ಪ್ರಯತ್ನಿಸೋಣ.
 • ನಮ್ಮ ಸುತ್ತ ಮುತ್ತಲಿನ ಒಣಗಿದ ಗಿಡ ಮರಗಳಿಗಾಗಲೀ ಅಥವಾ ಮನೆಯ ತ್ರಾಜ್ಯವಸ್ತುಗಳನ್ನು ಬೆಂಕಿಯಿಂದ ನಾಶ ಪಡಿಸದಿರುವ ಮೂಲಕ ವಾಯುಮಾಲಿನ್ಯವನ್ನು ತಡೆಗಟ್ಟೋಣ ಮತ್ತು ಮಣ್ಣಿನಲ್ಲಿ ಜೈವಿಕವಾಗಿ ಕರಗದಂತಹ ಯಾವುದೇ ವಸ್ತುವನ್ನು ನಾವು ದಿನಬಳಕೆಯಲ್ಲಿ ಉಪಯೋಗಿಸದೇ, ಅದರಲ್ಲೂ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಅದಷ್ಟೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸೋಣ.

ಮೇಲೆ ಸೂಚಿಸಿದಂತಹ ಎಲ್ಲಾ ಸಲಹೆಗಳು ಕೇವಲ ವಿಶ್ವ ಪರಿಸರ ದಿನಕ್ಕೆ ಮಾತ್ರವೇ ಸೀಮಿತವಾಗದೆ ಅದನ್ನು ನಮ್ಮ ದೈನಂದಿನ ಜೀವನದ ಶೈಲಿಯನ್ನಾಗಿ ಮಾಡಿಕೊಳ್ಳುವುದರ ಮೂಲಕ ನಮ್ಮ ಪೂರ್ವಜರು ನಮಗೆ ಉಳಿಸಿಹೋದ ಪರಿಸರ ಸಂಪತ್ತನ್ನು ನಾವೇ ಖಾಲಿ ಮಾಡದೆ, ನಮ್ಮ ಮುಂದಿನ ಪೀಳಿಗೆಗೂ ಉಳಿಸೋಣ ಮತ್ತು ಬೆಳೆಸೋಣ. ಪರಿಸರದ ನಾಶ ಪಡಿಸುವುದು ಎಂದರೆ ಅದು ವಿಶ್ವದ ನಾಶ ಎಂಬ ಅಂಶ ಮನದಲ್ಲಿಟ್ಟು ಕೊಳ್ಳೋಣ.

ಏನಂತೀರೀ?

ನಿಮ್ಮವನೇ ಉಮಾಸುತ