ಮೃಗವಧೆ

WhatsApp Image 2022-02-03 at 10.29.00 PMನಮ್ಮ ದೇಶದಲ್ಲಿ ಪ್ರತಿಯೊಬ್ಬರ ಹೆಸರಿನೊಂದಿಗೆ ಇರುವ ಉಪನಾಮಗಳು ಇಲ್ಲವೇ ಅವರ ಊರಿನ ಹೆಸರು ಒಂದೊಂದು ಇತಿಹಾಸವನ್ನು ಹೇಳುತ್ತವೆ. ದುರಾದೃಷ್ಟವಷಾತ್ ನಾವು ಆ ಊರಿನ ಹೆಸರು ಮತ್ತು ಇತಿಹಾಸವನ್ನು ತಿಳಿದುಕೊಳ್ಳದೇ ಅವುಗಳನ್ನು ಬದಲಾಯಿಸಲು ಮುಂದಾಗಿರುವುದು ವಿಪರ್ಯಾಸವೆನಿಸುತ್ತದೆ. ಇತ್ತೀಚೆಗೆ ನನಗೆ ಪರಿಚಿತರಾದ ಗೆಳೆಯರೊಬ್ಬರ ಹೆಸರಿನೊಂದಿಗೆ ಮೃಗವಧೆ ಎಂದಿದ್ದದ್ದನ್ನು ಕೇಳಿದಾಗ ನನ್ನ ಕಿವಿಗಳು ಚುರುಕಾಗಿ ಅವರ ಊರಿನ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗಲೇ ನಮ್ಮ ದೇಶದಲ್ಲಿ ನಡೆದ ಮತ್ತು ಈಗ ಅವುಗಳನ್ನು ಕಥೆಗಳ ರೂಪದಲ್ಲಿ ಓದುತ್ತಿರುವ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಬಹಳ ಗೌರವ ಮೂಡಿದ್ದಲ್ಲದೇ, ರಾಮಾಯಣ ಮತ್ತು ಮಹಾಭಾರತಗಳು ಈ ದೇಶದಲ್ಲಿ ನಡದೇ ಇಲ್ಲಾ ಅವುಗಳೆಲ್ಲವು ಕಟ್ಟು ಕಥೆ ಎನ್ನುವವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಐತಿಹ್ಯ ಆ ಊರಿನಲ್ಲಿತ್ತು. ನಾವಿಂದು ಅಂಥಹ ಕುತೂಹಲಕಾರಿ ಊರಾದ ಮೃಗವಧೆಯ ಸ್ಥಳ ಪುರಾಣ ಮತ್ತು ಐತಿಹ್ಯವನ್ನು ತಿಳಿಯೋಣ ಬನ್ನಿ.

ಮೃಗವಧೆ ಎಂಬ ಹೆಸರು ಕೇಳಿದ ಕೂಡಲೇ ಥಟ್ ಅಂತಾ ಹೊಳೆಯುವುದೇ ಅಲ್ಲಿ ಯಾವುದೋ ಪ್ರಾಣಿಯ ವಧೆಯಾಗಿರಬೇಕು ಎಂಬುದಾಗಿರುತ್ತದೆ. ಪ್ರಾಣಿ ವಧೆ ಎಂದು ಕೇಳಿದ ತಕ್ಶಣವೇ ನಿಮ್ಮ ಕಣ್ಮುಂದೆ ರಾಮಾಯಣ ಕಾಲದಲ್ಲಿ ಪ್ರಭು ಶ್ರೀರಾಮ 14 ವರ್ಷ ವನವಾಸವನ್ನು ಮಾಡುತ್ತಿರುವಾಗ ಸೀತಾ ದೇವಿಯ ಕೋರಿಕೆಯಂತೆ ಮಾಯಾ ಚಿನ್ನದ ಜಿಂಕೆಯನ್ನು ವಧಿಸಿದ ಕಥೆ ಮೂಡಿದಲ್ಲಿ ಖಂಡಿತವಾಗಿಯೂ ನಿಮ್ಮ ಊಹೆ ಸರಿಯಾಗಿದೆ.

shivaಹಾಗೆಂದ ಮಾತ್ರಕ್ಕೆ ಇದು ಕೇವಲ ರಾಮಾಯಣಕ್ಕೆ ಸೀಮಿತವಾಗಿರದೇ, ರಾಮಾಯಣಕ್ಕೂ ಮುಂಚೆ ಶಿವ ಪಾರ್ವತಿಯರ ಕಾಲಘಟ್ಟಕ್ಕೂ ಈ ಊರಿನ ಐತಿಹ್ಯ ಬೆರೆತುಕೊಂಡಿದೆ. ಅದೊಮ್ಮೆ ಶಿವ ಪಾರ್ವತಿಯರಿಬ್ಬರೂ ಏಕಾಂತದಲ್ಲಿ ಸಂಬೋಧಿಸುತ್ತಿರುವಾಗ, ಇದ್ದಕ್ಕಿದ್ದಂತೆಯೇ ಪಾರ್ವತಿಯು ತಾನು ಹೆಚ್ಚೋ ಇಲ್ಲವೇ ಸರಸ್ವತಿ ಹೆಚ್ಚೋ ಎಂದು ಶಿವನಲ್ಲಿ ಕೇಳಿದಾಗ, ಪರಶಿವನು ಥಟ್ ಎಂದು ಸಕಲ ವೇದಗಳು ಮತ್ತು ವಿದ್ಯೆಗೆ ಅಧಿದೇವತೆಯಾದ ವಾಣಿಯೇ ಶ್ರೇಷ್ಠ ಎಂದು ಹೇಳಿದ್ದನ್ನು ಕೇಳಿ ಬೇಸರಗೊಂಡ ಪಾರ್ವತಿಯು ಶನಿ ಬಳಿ ಹೋಗಿ ತನ್ನ ಗಂಡನಿಗೆ ಕಾಡಬೇಕೆಂದು ಕೋರಿಕೊಳ್ಳುತ್ತಾಳೆ. ಶಿವನನ್ನು ಕೆಣಕಲು ಹೋಗಿ ಶಿವನ ಮೂರನೇ ಕಣ್ಣಿನಿಂದ ಸುಟ್ಟು ಹೋದ ಮನ್ಮಥನ ಪ್ರಸಂಗವನ್ನು ಉದಾಹರಿಸಿ ತನ್ನಿಂದ ಈ ಕೆಲಸ ಅಸಾಧ್ಯ ಎಂದಾಗ, ಶಿವನಿಂದ ಯಾವುದೆ ತೊಂದರೆ ಆಗದಂತೆ ನಿನ್ನನ್ನು ಕಾಯುವುದು ನನ್ನ ಕೆಲಸ ಎಂದು ಪಾರ್ವತೀ ದೇವಿ ಅಭಯ ನೀಡಿದ ನಂತರ ಶನಿಯ ದೃಷ್ಟಿ ಶಿವನ ಮೇಲೆ ಬಿದ್ದು ಸಾಕ್ಷಾತ್ ಪರಶಿವನಿಗೂ ಶನಿಯ ಕಾಟ ಆರಂಭವಾಗುತ್ತದೆ. ಇದರ ಪರಿಣಾಮ ಶಿವನು ಚತುರ್ಮುಖ ಬ್ರಹ್ಮನಲ್ಲಿ ಅಹಂಕಾರದ ದ್ಯೋತಕವಾಗಿ ಮೂಡಿದ್ದ ಐದನೇ ತಲೆಯನ್ನು ಚ್ಛೇಧಿಸಿ ಬಹ್ಮನ ಕಪಾಲವನ್ನು ಹಿಡಿದುಕೊಂಡು ಮೂರು ಲೋಕದಲ್ಲಿಯೂ ಭಿಕ್ಷಾಟನ ಮಾಡತೊಡಗುತ್ತಾನೆ. ಹೀಗೆ ಕೈಲಾಸದಲ್ಲಿ ಬಹಳ ಕಾಲ ಶಿವನು ಇಲ್ಲದೇ ದುಃಖಿತಳಾದ ಪಾರ್ವತಿಯು ತನ್ನ ಪತಿಯಿಂದ ಶನಿಪ್ರಭಾವವನ್ನು ಹೊರದೋಡಿಸುವ ಸಲುವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಚರಿಸುತ್ತಾ ಅಂತಿಮವಾಗಿ ಮೃಗವಧೆಯ ಕ್ಷೇತ್ರದಲ್ಲಿ ಐದು ಹೋಮಕುಂಡಗಳನ್ನು ಮಾಡಿ ಅಲ್ಲೊಂದು ಲಿಂಗಕ್ಕೆ ಈಶ್ವರನನ್ನು ಆಹ್ವಾವನೆ ಮಾಡಿ ಸದ್ಯೋಜಾತಾದಿ ಐದು ಮಂತ್ರಗಳಿಂದ ಭಕ್ತಿಯಿಂದ ಪೂಜಿಸಿ ಶನಿಯು ಪರಶಿವನಿಗೆ ಮುಕ್ತಿ ಕೊಡದೇ ಹೋದಲ್ಲಿ ತಾನು ಹೋಮಕುಂಡಕ್ಕೆ ಬಿದ್ದು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಘೋಷಿಸುತ್ತಾಳೆ. ಐದು ಯಾಮಗಳಲ್ಲಿ ಆಕೆ ಪೂಜೆಮಾಡುತ್ತಿದ್ದಾಗ ಐದು ಪ್ರಾಣಿಗಳ ರೀತಿಯಲ್ಲಿ ಕೂಗಿ ಶ್ರೀ ನರಸಿಂಹಸ್ವಾಮಿಯು ಆಕೆಯ ತಪಸ್ಸನ್ನು ಪರೀಕ್ಷೇ ಮಾಡುತ್ತಾರೆ.

WhatsApp Image 2022-02-03 at 10.28.12 PMಪೂಜೆ ಎಲ್ಲವೂ ಮುಗಿದು ಇನ್ನೇನು ಪಾರ್ವತಿಯು ಅಗ್ನಿ ಕುಂಡವನ್ನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಶಿವನು ಶನಿದೋಷದಿಂದ ಮುಕ್ತನಾಗಿ ಅಲ್ಲಿ ಪ್ರತ್ಯಕ್ಷನಾಗಿ ಪಾರ್ವತಿಯ ಕೈ ಹಿಡಿಯುವುದಲ್ಲದೇ, ಯಾರು ಶನಿಯನ್ನು ಪೂಜಿಸಿ ಇಲ್ಲಿನ ಶನೈಶ್ವರನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅಂತಹವರಿಗೆ ಶನಿದೋಷ ಕಾಡಕೂಡದು ಎಂದು ಶನಿಗೆ ಪರಶಿವನು ಆಜ್ಞಾಪಿಸುತ್ತಾನೆ. ಅದೇ ರೀತಿ ನರಸಿಂಹಸ್ವಾಮಿಗೂ ತ್ರೇತಾಯುಗದಲ್ಲಿ ರಾಮನ ಅವತಾರದಲ್ಲಿ ಮಾರೀಚನೆಂಬ ರಾಕ್ಷಸನನ್ನು ವಧಿಸಿ ಇದೇ ಕ್ಷೇತ್ರದಲ್ಲಿ ನನ್ನನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಮಹಾವಿಷ್ಣುವಿಗೆ ಶಿವನು ಹೇಳುತ್ತಾನೆ ಎಂಬುದು ಇಲ್ಲಿನ ಸ್ಥಳ ಪುರಾಣವಾಗಿದೆ. ಹಾಗಾಗಿ ಅಂದಿನಿಂದ ಈ ಕ್ಷೇತ್ರ ಗೌರ್ಯಾಶ್ರಮ ಎಂದು ಪ್ರಖ್ಯಾತವಾಗಿತ್ತು ಹಾಗಾಗಿಯೇ ಇಲ್ಲಿ  ಶ್ರೀ ಶನೈಶ್ಚರ ಸ್ವಾಮಿಯ ದೇವಸ್ಥಾನವೂ ಆಕರ್ಷಣೆಯ ಕೇಂದ್ರವಾಗಿದ್ದು, ಈ ಗ್ರಾಮಕ್ಕೆ ಬರುವ ಭಕ್ತಾದಿಗಳು ಮೊದಲು ಶನೈಶ್ಚರನ ದರ್ಶನದ ಮಾಡಿದ ನಂತರವೇ ಉಳಿದೆಲ್ಲಾ ದೇವಸ್ಥಾನಗಳ ದರ್ಶನ ಪಡೆಯುವುದು ಇಲ್ಲಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಶ್ರಾವಣ ಮಾಸದ ಶನಿವಾರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಶನೈಶ್ವರ ದೇವಾಲಯಕ್ಕೆ ಆಗಮಿಸಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಮುಂದೆ ತ್ರೇತಾಯುಗದಲ್ಲಿ ಸೂರ್ಯವಂಶದ ದಶರಥನ ಮಗ ರಾಮನಾಗಿ ಅವತರಿಸಿದ ಮಹಾವಿಷ್ಣುವು ತನ್ನ ತಂದೆಯ ಅಜ್ಞೆಯನ್ನು ಪಾಲಿಸುವ ಸಲುವಾಗಿ 14 ವರ್ಷಗಳ ಕಾಲ ವನವಾಸವನ್ನು ಮಾಡಲು ಹೊರಟಾಗ ಆತನ ಜೊತೆ ಸಹಾಯಕ್ಕಾಗಿ ಅವನ ತಮ್ಮ ಲಕ್ಷಣ ಮತ್ತು ಮಡದಿ ಸೀತಾ ದೇವಿಯೂ ಸಹಾ ಸಿದ್ಧರಾಗುತ್ತಾರೆ. ಅವರು ಹೀಗೆಯೇ ಕಾಡಿನಲ್ಲಿ ಒಂದೊಂದು ಪ್ರದೇಶದಲ್ಲಿ ಕೆಲವೊಂದು ಕಾಲ ನೆಲೆಸಿದ್ದಾಗ ರಾವಣ ತಂಗಿ ಶೂರ್ಪಣಖಿಯ ಪ್ರಸಂಗದಲ್ಲಿ ಲಕ್ಷಣನಿಂದ ಮೂಗನ್ನು ಕತ್ತರಿಸಿಕೊಂಡು ಅವಮಾನಿತಳಾಗಿ ತನ್ನ ಅಣ್ಣನಾದ ರಾವಣನ ಬಳಿ ಇಲ್ಲ ಸಲ್ಲದ ಚಾಡಿಯನ್ನು ಹೇಳಿ ಆ ಅವಮಾನಕ್ಕೆ ಪ್ರತೀಕಾರವನ್ನು ತೆಗೆದುಕೊಳ್ಳಲು ಒತ್ತಾಯಿಸಿದಾಗ ತಂಗಿಯ ಕೋರಿಕೆಯನ್ನು ಮನ್ನಿಸಿ ಕಾಡಿಗೆ ಬಂದ ರಾವಣ ಸೀತೆಯನ್ನು ನೋಡಿ ಆಕೆಯಲ್ಲಿ ಮೋಹಿತನಾಗಿ (ಸೀತಾ ಸ್ವಯಂವರದಲ್ಲಿ ರಾವಣನೂ ಪಾಲ್ಗೊಂಡು ಶಿವಧನಸ್ಸನು ಎತ್ತಲಾಗದೇ ಹೋದದ್ದು ಇಲ್ಲಿ ಗಮನಾರ್ಹ) ಅಕೆಯನ್ನು ಹೇಗಾದರೂ ಮಾಡಿ ಪಡಯಲೇ ಬೇಕೆಂದು ಯೋ‍ಚಿಸಿದಾಗಲೇ ಆತನಿಗೊಂದು ಉಪಾಯ ಹೊಳೆಯುತ್ತದೆ.

ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ತನ್ನ ಸೋದರಮಾವ ಮತ್ತು ಪರಮ ಶಿವಭಕ್ತನಾದ ಮಾರೀಚನ ಸಹಾಯವನ್ನು ಕೇಳುತ್ತಾನೆ. ಅದರ ಪ್ರಕಾರ ಮಾರೀಚನು ಮಾಯಾ ಜಿಂಕೆಯ ವೇಷ ಧರಿಸಿ, ಸೀತೆಯು ಅದರಿಂದ ಆಕರ್ಷಿತಳಾಳಾಗುವಂತೆ ಮಾಡಿ, ಶ್ರೀ ಶ್ರೀರಾಮನನ್ನು ಸೀತೆಯಿಂದ ಬೇರ್ಪಡಿಸಿ ಆತನನ್ನು ದಾರಿ ತಪ್ಪಿಸುವಂತೆ ಮಾಡಿ ತಾನು ಸೀತೆಯನ್ನು ಅಪಹರಿಸುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಒಪ್ಪದ ಮಾರೀಚನು ಶ್ರೀರಾಮನಿಗೆ ಮೋಸ ಮಾಡುವ ಸ್ಸಾಹಸಕ್ಕೆ ಕೈಹಾಕಬೇಡ ಆತನ ಬಾಣದ ರುಚಿಯನ್ನು ಆತ ಚಿಕ್ಕವನಿರ ಬೇಕಾದಾಗಲೇ ನಾನು ಅನುಭವಿಸಿದ್ದಲ್ಲದೇ ನನ್ನ ತಮ್ಮ ಸುಬಾಹುವನ್ನು ಕಳೆದುಕೊಂಡಿದ್ದೇನೆ ಎಂದು ಪರಿ ಪರಿಯಾಗಿ ತಿಳಿ ಹೇಳಿದರು ಅದಕ್ಕೆ ರಾವಣನು ಒಪ್ಪದಿದ್ದಾಗ, ವಿಧಿಯಿಲ್ಲದೆ ಮಾರೀಚನು ರಾವಣನ ಆಜ್ಞೆಯಂತೆ ಮಾಯಾ ಜಿಂಕೆಯ ವೇಷಧಾರಿಯಾಗಿ ಕಾಡಿಗೆ ಬರುತ್ತಾನೆ.

seeta3ಆ ಮಾಯಾಜಿಂಕೆಯನ್ನು ನೋಡಿ ಆಕರ್ಷಿತಳಾದ ಸೀತಾ ದೇವಿಯ ಆ ಜಿಂಕೆಯನ್ನು ಹಿಡಿದುಕೊಂಡು ಬರಲು ರಾಮನನ್ನು ಕೋರಿಕೊಂಡಾಗ, ಸೀತೆಯ ಕೋರಿಕೆಯಂತೆ ಚಿನ್ನದಜಿಂಕೆಯನ್ನು ಹಿಡಿಯುವ ಸಲುವಾಗಿ ಅದನ್ನು ಬೆನ್ನಟ್ಟಿ ಕೊಂಡು ಹೋಗಿ ಕಡೆಗೆ ಜಿಂಕೆರೂಪದಲ್ಲಿ ಬಂದಿದ್ದ ಮಾಯವಿ ಮಾರೀಚನು ರಾಮನ ಬಾಣಕ್ಕೆ ಹತನಾಗುತ್ತಾನೆ. ಈ ಸಂಪೂರ್ಣ ಘಟನೆಯು ನಡೆದ ಸ್ಥಳವೇ ಮೃಗವಧಾ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿದ್ದು ಪ್ರಸ್ತುತ ಅದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಕೇವಲ 27 ಕಿಮೀ ದೂರದಲ್ಲಿದೆ.

murugavadhe3ಮಾರೀಚನನ್ನು ಕೊಂದು ಬ್ರಹ್ಮ ಹತ್ಯೆಯ ದೋಷಕ್ಕೆ ಒಳಗಾಗಿ ಆ ಕಳಂಕದಿಂದ ಪಾರಾಗಲು ರಾಮನು ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿಯೇ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದನಂತೆ. ಆ ಲಿಂಗವನ್ನು ಮೊದಲು ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಕರೆಯುತ್ತಿದ್ದು ನಂತರ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ಸುಮಾರು ನಾಲ್ಕೂವರೆ ಅಡಿ ಎತ್ತರದ ಬೃಹತ್ ಆಗಮ ಲಿಂಗ ಇಲ್ಲಿನ ವೈಶಿಷ್ಟ್ಯವಾಗಿದೆ. ಚಾಲುಕ್ಯರ ಕಾಲದ ಶಿಲ್ಪ ಕಲೆಯನ್ನು ಒಳಗೊಂಡಿರುವ ಈ ದೇವಸ್ಥಾನವನ್ನು ಚಾಲುಕ್ಯ ಅರಸ ತ್ರಿಭುವನಮಲ್ಲನು 1060ರಲ್ಲಿ ನಿರ್ಮಿಸಿದನು. ಕಾಲಾನಂತರ ಅವಸಾನದ ಹಂತದಲ್ಲಿದ್ದ ದೇವಾಲಯವನ್ನು ಕೆಳದಿ ಸೋಮಶೇಖರ ನಾಯಕನ ಕಾಲದಲ್ಲಿ ಪುನರುತ್ಥಾನ ಮಾಡಿಸಿದ ಎನ್ನುವ ಶಾಸನಗಳು ಅಲ್ಲಿ ಕಾಣಬಹುದಾಗಿದೆ.

mugavadhe2ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸುತ್ತಲೂ ಪಂಜುರ್ಲಿ, ಧೂಮಾವತಿ, ಕ್ಷೇತ್ರಪಾಲ ಸೇರಿದಂತೆ ಈಶ್ವರನ ಸಮಸ್ತ ಗಣಗಳನ್ನು ಕಾಣಬಹುದಾಗಿದೆ. ಪ್ರತಿದಿನವೂ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ತ್ರಿಕಾಲವೂ ಬಲಿಹರಣ, ಆಗಮೋಕ್ತಿ, ಹಗಲು ದೀವಟಿಗೆ,ಅಷ್ಟಾವಧಾನ ಸೇವೆಗಳಿಂದ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಕಾರ್ತಿಕ ಮಾಸದ ದೀಪೋತ್ಸವವು ಅತ್ಯಂತ ವೈಭವವಾಗಿ ನಡೆದರೆ, ಪ್ರತೀ ವರ್ಷದ ಫಾಲ್ಗುಣ ಮಾಸದ ಬಹುಳದ ಮೊದಲ ಐದು ದಿನಗಳು ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಬಹಳ ವೈಭವದಿಂದ ನಡೆಸಲಾಗುತ್ತದೆ. ಇದರ ಜೊತೆ ಈಗಾಗಲೇ ತಿಳಿಸಿದಂತೆ ಶ್ರೀ ಶನೈಶ್ವರ ಶಂಕರೇಶ್ವರ, ಉಗ್ರ ನರಸಿಂಹ ಮತ್ತು ಆಂಜನೇಯ ದೇವರುಗಳ ಚಿಕ್ಕ ದೇವಾಲಯಗಳನ್ನೂ ಈ ಊರಿನಲ್ಲಿ ಕಾಣಬಹುದಾಗಿದೆ.

ಇನ್ನು ಐತಿಹಾಸಿಕವಾಗಿ ನೋಡಿದರೆ ಮೃಗವಧೆಯಿಂದ ಕೇವಲ 2 ಕಿಮೀ ದೂರದಲ್ಲೇ ಇರುವ ಮಲ್ಲಾಪುರ ಎಂಬ ಊರಿನಲ್ಲಿ ಶಿಲಾಯುಗದ ಪಳಿಯುಳಿಕೆಯಾಗಿ ಹಳೆಯ ಕಾಲದ ನಿವೇಶನ, ಬಂಡೆ ಮೇಲಿನ ಅಪರೂಪದ ರೇಖಾಚಿತ್ರಗಳು ದೊರೆತಿದೆ. 3ನೇ ಶತಮಾನದ್ದು ಎಂದು ಅಂದಾಜಿಸಲಾಗಿರುವ ಶಾತವಾಹನರ ಕಾಲದ ಶಾಸನವು ಅಲ್ಲಿ ಸಿಕ್ಕಿರುವ ಮೂಲಕ ಅಲ್ಲೊಂದು ದೊಡ್ಡದಾದ ದೇವಸ್ಥಾನವಿತ್ತು ಎಂಬುದಾಗಿ ಇಲ್ಲಿ ಸಂಶೋಧನೆ ನಡೆಸಿದವರ ಅಭಿಪ್ರಾಯವಾಗಿದೆ. 10ನೇ ಶತಮಾನಕ್ಕೆ ಸೇರಿದ ನಂದಿಕಲ್ಲು ಶಾಸನ ಕಾಲದಲ್ಲೂ ಅಲ್ಲಿನ ದೇವಸ್ಥಾನಗಳ ಉಲ್ಲೇಖವಿದೆ. ಅದೇ ಅಲ್ಲದೇ ಈ ಹಿಂದೆ ಅಲ್ಲೊಂದು ಭವ್ಯವಾದ ಅರಮನೆ ಮತ್ತು ಅಗ್ರಹಾರಗಳಿಂದ ಕೂಡಿದ್ದ ದೊಡ್ಡದಾದ ಸುಸಜ್ಜಿತವಾದ ನಗರವಾಗಿತ್ತು ಎಂಬುದಕ್ಕೆ ಪುರಾವೆ ಎನ್ನುವಂತೆ  1 x 1 ಅಗಲದ 6 ಇಂಚುಗಳ ದಪ್ಪದ ಸಾವಿರಾರು ವರ್ಷಗಳ ಹಿಂದಿನ ಇಟ್ಟಿಗೆಗಳು ಅಲ್ಲಿ ದೊರೆತಿದ್ದು ಇಂದಿಗೂ ಅದನ್ನು ಭಾರವಾದ ಆಯುಧಗಳಿಂದಲೂ ಭಿನ್ನಮಾಡಲಾಗಷ್ಟು ಗಟ್ಟಿಮುಟ್ಟಾಗಿದೆ. ಈಗ ಆ ಪ್ರದೇಶಗಳಲ್ಲಿ ಒಂದಷ್ಟು ಮನೆಗಳು ಇದ್ದರೆ ಉಳಿದ ಪ್ರದೇಶದವು ಅರಣ್ಯವಾಗಿದ್ದು ಸರಿಯಾಗಿ ಉತ್ಖನ ಮಾಡಿದಲ್ಲಿ ಭೂಗತವಾಗಿರಬಹುದಾದ ದೇವಸ್ಥಾನ ಮತ್ತು ನಗರದ ಹೆಚ್ಚಿನ ವಿಷಯಗಳು ತಿಳಿದು ಬರಬಹುದು ಎಂದು ಸ್ಥಳೀಯರು ಮತ್ತು ಮೃಗವಧೆ ಊರಿನ ಬಗ್ಗೆ ಕಾಳಜಿಯುಳ್ಳ ಶ್ರೀ ಅಭಿನಂದನ್ ಭಟ್ ಮೃಗವಧೆ ಅವರು ತಿಳಿಸಿದರು.

murugavadhe4ತೀರ್ಥಹಳ್ಳಿಯಿಂದ 27 ಮತ್ತು ಕೊಪ್ಪದಿಂದ 17 ಕಿಮೀ, ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳ್ಳಿಯಿಂದ 25 ಕಿಮೀ ದೂರದಲ್ಲಿರುವ ಈ ಮೃಗವಧೆಗೆ ಬರಲು ಖಾಸಗಿ ಮತ್ತು ಸರ್ಕಾರಿ ವಾಹನಗಳ ಸೌಕರ್ಯವಿದ್ದು, ದೂರದ ಊರಿನಿಂದ ಬರುವ ಭಕ್ತಾದಿಗಳಿಗೆಂದೇ ಪ್ರತೀ ದಿನ ಮಧ್ಯಾಹ್ನ ದಾಸೋಹದ ವ್ಯವಸ್ಥೆಯೂ ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದೆ.

ಇಷ್ಟೆಲ್ಲಾ ಮಾಹಿತಿಗಳು ದೊರೆತ ಮೇಲೆ ಇನ್ನೇಕೆ ತಡಾ ಸ್ವಲ್ಪ ಸಮಯ ಮಾಡಿಕೊಂಡು ಮಲೆನಾಡಿನ ಕಡೆ ಪ್ರಯಾಣ ಬೆಳಸಿ ಮೃಗವಧೆಯ ಬ್ರಾಹ್ಮಿ ನದಿಯಲ್ಲಿ ಮಿಂದೆಂದು ಶ್ರೀ ಶನೈಶ್ವರ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

ನಮ್ಮ ಸನಾತನ ಧರ್ಮದಲ್ಲಿ ನಮಗೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಅಧ್ಭುತವಾದ ಪುರಾಣ ಪುಣ್ಯ ಗ್ರಂಥಗಳು ಮತ್ತು  ಕಥೆಗಳೇ ಪವಿತ್ರವಾಗಿದ್ದು ಅದರ ಆಧಾರದಲ್ಲಿ ನಮ್ಮ ಜೀವನ ಪದ್ದತಿಯನ್ನು ರೂಡಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಕೆಲವರು ಈ ರೀತಿಯ ಪುರಾಣ ಪುಣ್ಯ ಕಥೆಗಳೆಲ್ಲವೂ  ಕೇವಲ ಕಾಲ್ಪನಿಕ ಕಥೆಯಷ್ಟೇ ಆ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡದೇ ಇಲ್ಲಾ ಎನ್ನುವ ವಿತಂಡ ವಾದವೂ ಇದೆ. ಆದರೆ  ಇಂತಹವರಿಗೆ ಸೂಕ್ತವಾದ ಉತ್ತರವನ್ನು ನೀಡಬಹುದಾದ ಮತ್ತು  ಜಗತ್ತಿನಲ್ಲಿ ಅತಿ ವಿರಳವಾಗಿ ಕಂಡು ಬರುವ ಪಾರ್ವರ್ತಿ ಸಮೇತನಾಗಿ  ಶಯನ ಭಂಗಿಯಲ್ಲಿರುವ ಪರಶಿವನಿರುವ ಪವಿತ್ರ ಕ್ಷೇತ್ರ ಸುರಟಪಲ್ಲಿಯ ಶ್ರೀ ಪಳ್ಳಿಕೊಂಡೇಶ್ವರ ದೇವಾಲಯದ ಬಗ್ಗೆ ತಿಳಿಯೋಣ ಬನ್ನಿ.

sumudra4ನಮ್ಮ ಪುರಾಣದ ಪ್ರಕಾರ ದೇವತೆಗಳು ಮತ್ತು ರಾಕ್ಷಸರು ಇಬ್ಬರೂ ಸೇರಿ ಅಮೃತವನ್ನು ಪಡೆಯುವ ಸಲುವಾಗಿ   ಕ್ಷೀರಸಾಗರದ ಮಂಥನ ಮಾಡಲು ಮುಂದಾದಾಗ,  ಮಂದಾರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ಆದಿಶೇಷನನ್ನು ಹಗ್ಗವನ್ನಾಗಿಸಿ ಸಮುದ್ರ ಮಂಥನವನ್ನು ಮಾಡುವ ಸಮಯದಲ್ಲಿ ಮಹಾಲಕ್ಷ್ಮೀ, ಕಾಮಧೇನು ಮುಂತಾದವುಗಳು ದೊರೆಯುವುದರ ಜೊತೆ,  ಅಮೃತ ದೊರೆಯುವ ಮುನ್ನಾ, ಹಾಲಾಹಲ ವಿಷವೂ ಉತ್ಪತ್ತಿಯಾಗಿ ಆ  ವಿಷವು ಹೊರಸೂಸಿದ ಮಾರಕ ಧೂಮವು ಇಡೀ ಜಗತ್ತನ್ನೇ ಆವರಿಸಿಕೊಂಡು, ಸಮುದ್ರ ಮಂಥನ ಮಾಡುತ್ತಿದ್ದ ದೇವಾನು ದೇವತೆಗಳು ಮತ್ತು ಅಸುರರಲ್ಲದೇ ಇಡೀ ಮನುಕುಲಕ್ಕೇ ಮಾರಕವಾಗಿ ಎಲ್ಲರೂ  ಉಸಿರುಗಟ್ಟುವಿಕೆಯಿಂದ ಕುಸಿದು ಬೀಳುವುದನ್ನು ಗಮನಿಸಿ ಇದನ್ನು ತಡೆಯಲು ಬ್ರಹ್ಮ ವಿಷ್ಣು ಆದಿಯಾಗಿ ವಿಫಲರಾದಾಗ ಅಂತಿಮವಾಗಿ  ಎಲ್ಲರೂ ಪರಶಿವನಲ್ಲಿ ಮೊರೆ ಹೋಗುತ್ತಾರೆ.

shiva1ಭಕ್ತರ ಬೇಡಿಕೆಗಳನ್ನು ಇಲ್ಲಾ ಎನ್ನದಂತೆ ಸದಾಕಾಲವೂ ಪೂರೈಸುವ ಕರುಣಾಸಾಗರ ಪರಮೇಶ್ವರನು ಹಿಂದೂ ಮುಂದೂ ಯೋಚಿಸದೇ,  ಪ್ರಪಂಚದ ಸಕಲ ಜೀವರಾಶಿಗಳನ್ನು ರಕ್ಷಿಸುವ ಸಲುವಾಗಿ ಆ ಹಾಲಾಹಲವನ್ನು ಕುಡಿಯಲು ಮುಂದಾದ ವಿಷಯ ಪಾರ್ವತಿ ದೇವಿಗೆ ತಿಳಿದು ಆಕೆ ಕೈಲಾಸದಿಂದ ಬರುವಷ್ಟರಲ್ಲಿ ಪರಶಿವನು ಹಾಲಾಹಲವನ್ನು ಕುಡಿದು ಇನ್ನೇನು ವಿಷ ಗಂಟಲು  ದಾಟಿ ಜಠರಕ್ಕೆ ಪ್ರವೇಶಿಸುವ ಮುನ್ನವೇ ಪಾರ್ವತಿ ದೇವಿಯು ತನ್ನ ಪತಿ ಪರಮೇಶ್ವರನ ಗಂಟಲನ್ನು ಬಿಗಿಯಾಗಿ ಹಿಡಿದುಕೊಂಡು ಆ ಕಾರ್ಕೋಟಕ ವಿಷ ಜಠರವನ್ನು ತಲುಪದಂತೆ ತಡೆಯುವ ಮೂಲಕ  ಪರಶಿವನ ಪ್ರಾಣವನ್ನು ಕಾಪಾಡುತ್ತಾಳೆ. ಹೀಗೆ  ವಿಷವನ್ನು ಕುಡಿದ ಪರಶಿವ ವಿಷಕಂಠ ಎನಿಸಿಕೊಂಡಿದ್ದಲ್ಲದೇ,  ಆ ವಿಷವು ಗಂಟಲಲ್ಲೇ ಸಿಕ್ಕಿಕೊಂಡು ಕುತ್ತಿಗೆಯ ಭಾಗ ನೀಲಿ ಬಣ್ಣಕ್ಕೆ ತಿರುಗಿ ನೀಲಕಂಠ ಎಂಬ ಹೆಸರೂ ಬರುತ್ತದೆ.

suru3ಈ ಪ್ರಸಂಗದ ನಡೆದ ನಂತರ  ಶಿವ ಪಾರ್ವತಿಯರು ತಮ್ಮ ಪರಿವಾರದ ಸಮೇತರಾಗಿ  ಕೈಲಾಸಕ್ಕೆ ಹೋಗುವ ಸಮಯದಲ್ಲಿ ಪರಶಿವನಿಗೆ ಒಂದು ರೀತಿಯಲ್ಲಿ ತಲೆ ಸುತ್ತಿದಂತಾಗಿ ಆತ ವಿಶ್ರಾಂತಿಗಾಗಿ ಒಂದು ಪ್ರದೇಶದಲ್ಲಿ ತನ್ನ ಪತ್ನಿ ಪಾರ್ವತಿಯ ತೊಡೆಯ ಮೇಲೆ ವಿಶ್ರಾಂತಿ ಪಡೆದು ನಂತರ ಅಲ್ಲಿಂದ ಪ್ರಯಾಣವನ್ನು ಮುಂದುವರೆಸುತ್ತಾರೆ. ಹಾಗೆ ಪರಶಿವನು ವಿಶ್ರಾಂತಿ ಪಡೆದ ಸ್ಥಳವೇ ಇಂದು ತಮಿಳುನಾಡು ಮತ್ತು ಆಂಧ್ರ ಪದೇಶದ ಗಡಿಬಾಗದಲ್ಲಿರುವ  ಸುರುಟ್ಟುಪಳ್ಳಿ ಎಂದು ಹೇಳಲಾಗುತ್ತದೆ. ತಮಿಳುಭಾಷೆಯಲ್ಲಿ  ಸುರುಟು ಎಂದರೆ ತಲೆಸುತ್ತು ಎಂಬ ಅರ್ಥವಿರುವ ಕಾರಣ ಶಿವನಿಗೆ ತಲೆಸುತ್ತು ಬಂದ ಈ ಪ್ರದೇಶಕ್ಕೆ ಸುರುಟ್ಟುಪಳ್ಳಿ ಎಂಬ ಹೆಸರು ಬಂದಿದ್ದು ಅದರ ನೆನಪಿಗಾಗಿ  ಆ ಪ್ರದೇಶದಲ್ಲಿ ಪರಶಿವನು ಪಾರ್ವತೀ ದೇವಿಯ ಮಡಿಲಲ್ಲಿ  ಒರಗಿರುವ ಭಂಗಿಯಲ್ಲಿರುವ  16 ಅಡಿಗಳಷ್ಟು ದೊಡ್ಡದಾದ ಪ್ರತಿಮೆಯನ್ನು ಸ್ಥಾಪಿಸಿ ಅಲ್ಲೊಂದು ದೇವಾಲಯವನ್ನು ಕಟ್ಟಿ ಆ ದೇವರಿಗೆ  ಪಲ್ಲಿಕೊಂಡೇಶ್ವರ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ಪಲ್ಲಿ ಕೊಂಡೇಶ್ವರ ಎಂದರೆ ಒರಗಿರುವ ದೇವರು ದೇವರು ಎಂಬ ಅರ್ಥವೂ ಇರುವುದು ಗಮನಾರ್ಹವಾಗಿದೆ.  ಸಾಮಾನ್ಯವಾಗಿ ಭಗವಾನ್ ವಿಷ್ಣುವಿನನ್ನು  ರಂಗನಾಥ ಸ್ವಾಮಿಯ ರೂಪದಲ್ಲಿ ಈ ರೀತಿಯಾಗಿ ಮಲಗಿರುವ ದೇವಾಲಗಳನ್ನು ವಿವಿದೆಡೆಯಲ್ಲಿ ಕಾಣಬಹುದಾದರೆ, ಈ ರೀತಿ ವಿಶಿಷ್ಟವಾಗಿ ಮಲಗಿರುವ ಭಂಗಿಯಲ್ಲಿರುವ ಪರಶಿವನನ್ನು ಕಾಣುವುದು ಬಹುಶಃ ಏಕೈಕ ಸ್ಥಳ ಇದಾಗಿದೆ ಎಂದರೂ  ತಪ್ಪಾಗದು.

ಪುರಾಣ ಪ್ರಸಿದ್ಧ ಈ ಹಿಂದೂ ದೇವಾಲಯವು ಇಂದಿನ ತಮಿಳುನಾಡು ಮತ್ತು  ಆಂಧ್ರಪ್ರದೇಶದ ಗಡಿಯಲ್ಲಿ ಚಿತ್ತೂರ್ ಜಿಲ್ಲೆಗೆ ಸೇರಿರುವ  ಅರಣಿ ನದಿಯ ದಡದಲ್ಲಿ ಹಸಿರಿನಿಂದ ಕೂಡಿದ ಮತ್ತು ಬೆಟ್ಟಗಳಿಂದ ಆವೃತವಾದ ಪ್ರಶಾಂತ ವಾತಾವರಣವಿರುವ ಸುರುಟುಪಲ್ಲಿ ಎಂಬ ಹಳ್ಳಿಯಲ್ಲಿದೆ. ಸಾಮಾನ್ಯವಾಗಿ ಲಿಂಗರೂಪದಲ್ಲಿ ಕಾಣುವ ಶಿವ ಇಲ್ಲಿ ಮಲಗಿರುವ ವಿಗ್ರಹರೂಪದಲ್ಲಿರುವ ಕಾರಣ ಈ ದೇವರನ್ನು ಭೋಗ ಸಾಯನ ಶಿವ ಎಂದು ಕರೆಯಲಾಗುತ್ತದೆ.  ಪಾರ್ವತಿಯ ಮಡಿಲಲ್ಲಿ ತಲೆಯನ್ನಿಟ್ಟು ವಿಶ್ರಾಂತಿ ಪಡೆಯುತ್ತಿದ್ದ ಶಿವನ ಯೋಗಕ್ಷೇಮದ ಬಗ್ಗೆ ಚಿಂತಿಸಿದ ದೇವಾನು ದೇವತೆಗಳು ಅಲ್ಲಿ ನೆರೆದು ಶಿವನ ಸುತ್ತಲೂ ನಿಂತು, ಭಗವಂತನು ತನ್ನ ಕಣ್ಣುಗಳನ್ನು ತೆರೆಯಲು ಕಾಯುತ್ತಿದ್ದರು  ಎಂಬುದರ ಪ್ರತೀಕವಾಗಿ ಈ ದೇವಸ್ಥಾನದಲ್ಲಿ  ಗಣೇಶ, ಸುಬ್ರಹ್ಮಣ್ಯ, ಸೂರ್ಯ, ಚಂದ್ರ, ಇಂದ್ರ ಮತ್ತು ನಾರದ ಮುನಿಗಳು ಶಿವನ ಸುತ್ತಲೂ ನಿಂತಿರುವುದನ್ನು ಇಲ್ಲಿ  ಕಾಣಬಹುದಾಗಿದೆ. ಅದಲ್ಲದೇ ಕುಬೇರ, ಆದಿಶಂಕರ ಮತ್ತು ವಿವಿಧ ಋಷಿ ಮುನಿಗಳ ದೈವಿಕ ವಿಗ್ರಹಗಳು ಈ ದೇವಾಲಯದಲ್ಲಿವೆ.

ಐತಿಹಾಸಿಕ ಪುರಾವೆಗಳ ಪ್ರಕಾರ  ಈ ದೇವಾಲಯವನ್ನು 14 ನೇ ಶತಮಾನದಲ್ಲಿ  (1344-47) ವಿಜಯನಗರ ಸಾಮ್ರಾಜ್ಯದ ಹರಿ ಹರ ಮತ್ತು ಬುಕ್ಕ ರಾಯರಿಂದ ನಿರ್ಮಿಸಲಾಗಿದ್ದು ನಂತರ 1833 ರಲ್ಲಿ ಕಾಳಹಸ್ತಿ ರಾಜಕುಮಾರಿಯು ಈ ದೇವಾಲಯವನ್ನು ನವೀಕರಿಸಿದರು ಎಂದು ಹೇಳುವ ಶಾಸನವು ಇಲ್ಲಿ ಕಾಣಬರುತ್ತದೆ. ಈ ದೇವಾಲಯಕ್ಕೆ  ಚಿಕ್ಕ ರಾಜಗೋಪುರದ ಮೂಲಕ ಪ್ರವೇಶಿಸಿದಾಗ ಎಡಭಾಗದಲ್ಲಿ ವಾಲ್ಮೀಕೇಶ್ವರ ಮತ್ತು ದೇವಿ ಮರಕತಾಂಬಿಕಾ ಮತ್ತು ಬಲಭಾಗದಲ್ಲಿ ಪಲ್ಲಿಕೊಂಡೇಶ್ವರನ ಗುಡಿ ಇದ್ದು ಭಕ್ತಾದಿಗಳು ದೇವಿ ಮರಕತಾಂಬಿಕಾ ಮತ್ತು ವಾಲ್ಮೀಕೇಶ್ವರನದರ್ಶನ ಪಡೆದು ನಂತರ ಪಲ್ಲಿಕೊಂಡೇಶ್ವರರನ್ನು ಪೂಜಿಸುವುದು ರೂಢಿಯಲ್ಲಿದೆ.

ಸಕಲ ಸಂಪತ್ತಿನ ಒಡೆಯ ಕುಬೇರನು ತನ್ನ ಪತ್ನಿಯರಾದ ಕೌಬೇರಿ ಮತ್ತು ಭದ್ರನೊಂದಿಗೆ ದೇವಾಲಯದ ಪ್ರವೇಶದ್ವಾರದಲ್ಲಿ ದ್ವಾರಪಾಲಕರಾಗಿ ಇದ್ದರೆ,  ದೇವಿ ಮರಕತಾಂಬಿಕೆಯ ಎರಡೂ ಬದಿಯಲ್ಲಿ ಕಾಮಧೇನು ಮತ್ತು ಕಲ್ಪ ವೃಕ್ಷವಿದ್ದು ಮುಂಭಾಗದಲ್ಲಿ ಸಾಲಿಗ್ರಾಮ ಶಿಲೆಯ ಗಣಪತಿಯ ಮೂರ್ತಿ ಇದೆ.  ದೇವಿ ಪಾರ್ವತಿಯ ಎರಡೂ ಬದಿಯಲ್ಲಿ ಸೂರ್ಯ ಮತ್ತು ಚಂದ್ರರು ಇದ್ದಾರೆ. ಭಗವಾನ್ ಮಹಾ ವಿಷ್ಣು ಲಕ್ಶ್ಮೀ ಬ್ರಹ್ಮ ಸರಸ್ವತಿ ಅಲ್ಲದೇ, ಋಷಿಗಳಾದ  ಮಾರ್ಕಂಡೇಯ, ಅಗಸ್ತ್ಯ, ವಾಲ್ಮೀಕಿ, ಇಂದ್ರ, ನಾರದರು, ಸನಕ ಮತ್ತು ಸಾನಂದ ಮುನಿಗಳು, ನಂದಿಕೇಶ್ವರ, ಸುಬ್ರಹ್ಮಣ್ಯಸ್ವಾಮಿಯು ತನ್ನ ಪತ್ನಿಯರಾದ, ವಲ್ಲಿ ಮತ್ತು ದೇವಯಾನಿಯೊಂದಿಗೆ ಇದ್ದಾರೆ.

ಈ ದೇವಾಲಯದ ಮತ್ತೊಂದು ವಿಶೇಷತೆ ಏನೆಂದರೆ ಪಲ್ಲಿಕೊಂಡೇಶ್ವರ – ಸರ್ವ ಮಂಗಳೆ, ವಾಲ್ಮೀಕೇಶ್ವರ – ಮರಕತಾಂಬಿಕಾ; ವಿನಾಯಕ – ಸಿದ್ಧಿ-ಬುದ್ಧಿ, ಸುಬ್ರಹ್ಮಣ್ಯ – ವಲ್ಲಿ-ದೇವಯಾನಿ,  ಸಾಸ್ತಾ (ಅಯ್ಯಪ್ಪ ದೇವರು)– ಪೂರ್ಣ- ಪುಷ್ಕಲಾ, ಕುಬೇರ-ಕೌಬೇರಿ – ಭದ್ರ, ದಕ್ಷಿಣಾಮೂರ್ತಿ – ತಾರಾ, ಕಾಶೀ ವಿಶ್ವನಾಥ – ವಿಶಾಲಾಕ್ಷಿ ಹೀಗೆ ಇಲ್ಲಿರುವ ಎಲ್ಲಾ ದೇವತೆಗಳು ತಮ್ಮ ಸಂಗಾತಿಗಳೊಂದಿಗೆ ಇರುವುದರ ಜೊತೆಗೆ ಇಡೀ ಕೈಲಾಸವೇ ಈ ದೇವಾಲಯದಲ್ಲಿ ನೆರೆದಿರುವ ಅಪರೂಪದ ದೃಶ್ಯವಾಗಿದೆ. 

ರಾಮಾಯಣವನ್ನು ಬರೆಯಲು ಪ್ರಾರಂಭಿಸುವ ಮೊದಲು ಈ ಸ್ಥಳದಲ್ಲಿ  ವಾಲ್ಮೀಕಿ ಋಷಿಗಳು ಶಿವನನ್ನು ಕುರಿತು  ತಪಸ್ಸು ಮಾಡಿದರು ಎಂಬ ಕಾರಣಕ್ಕಾಗಿ ಇಲ್ಲಿನ ದೇವರಿಗೆ ವಾಲ್ಮೀಕೇಶ್ವರ ಎಂದು ಕರೆಯಲಾಗುತ್ತದೆ. ರಾವಣನನ್ನು ಕೊಂದು ಅಯೋಧ್ಯೆಯ ರಾಜನಾದ ನಂತರ ಭಗವಾನ್ ರಾಮನು ತನ್ನ ಪತ್ನಿ ಸೀತೆ, ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಂತರೊಂದಿಗೆ ಈ ದೇವಾಲಯಕ್ಕೆ ಭೇಟಿ ನೀಡಿದನೆಂದು ನಂಬಲಾಗಿದ್ದು ಭಗವಾನ್ ರಾಮನ ಮಕ್ಕಳಾದ ಲವ ಮತ್ತು ಕುಶರ ಪಾದದ ಗುರುತುಗಳನ್ನು ವಾಲ್ಮೀಕೇಶ್ವರ ದೇಗುಲದ ಮುಂಭಾಗದ ಎಡಭಾಗದಲ್ಲಿ ಕಾಣಬಹುದಾಗಿದೆ.

ಇವೆಲ್ಲದರ ಹೊರತಾಗಿ ಈ ದೇವಾಲಯವು ಪ್ರದೋಷ ಪೂಜೆಗೆ ಪ್ರಸಿದ್ಧವಾಗಿದೆ. ಪರಶಿವನು ಹಾಲಾಹಲವನ್ನು ಕುಡಿದ ನಂತರ ಸಮುದ್ರ ಮಂಥನವನ್ನು ಮುಂದುವರೆಸಿದ ದೇವರು ಮತ್ತು ದಾನವರು, ದ್ವಾದಶಿಯಂದು ಅಮೃತವನ್ನು ಪಡೆದು ಅದನ್ನು ದಾನವರಿಗೂ ಕೊಡದೇ, ಶಿವನನ್ನು  ಪ್ರಾರ್ಥಿಸುವುದು ಬಿಡಿ ಕಡೆಗೆ ಧನ್ಯವಾದವನ್ನೂ ಹೇಳದೆ ಅಮೃತವನ್ನು ಸ್ವೀಕರಿಸಿ ಈ   ವಿಜಯದ ಸಂಕೇತವಾಗಿ ನೃತ್ಯ ಮಾಡಲು ಆರಂಭಿಸುತ್ತಾರೆ.

tandava3ನಂತರ  ತ್ರಯೋದಶಿಯಂದು ತಮ್ಮ ತಪ್ಪಿನ ಅರಿವಾಗಿ, ತಮ್ಮ ಪಾಪವನ್ನು ಪರಿಹರಿಸಲು ಪರಶಿವನನ್ನು ಕೇಳಿಕೊಂಡಾಗ ಶಿವನು ಅವರ ತಪ್ಪನ್ನು ಮನ್ನಿಸಿ  ಕ್ಷಮಿಸುವುದಲ್ಲದೇ, ತನ್ನ ವಾಹನ ನಂದಿಯ ಕೊಂಬುಗಳನ್ನು ಹಿಡಿದು ದೇವಾನು ದೇವತೆಗಳ  ಜೊತೆ ನೃತ್ಯ ಮಾಡುತ್ತಾನೆ. ಹೀಗೆ ಭಗವಾನ್ ಶಿವನು ನೃತ್ಯ ಮಾಡಿದ ಸಮಯವನ್ನು ಪ್ರದೋಷ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಯಾರು ಭಗವಾನ್ ಶಿವನನ್ನು ಪ್ರಾರ್ಥಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹಾಗಾಗಿ ಪ್ರತೀ ಪಕ್ಷದ ತ್ರಯೋದಶಿಯಂದು ತಿಂಗಳಲ್ಲಿ ಎರಡು ಬಾರಿ ದಕ್ಷಿಣ ಭಾರತದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಪ್ರದೋಷ ಪೂಜೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡಲಾಗುತ್ತದೆ. ಅಂತಹ ಪ್ರದೋಷದ ಸಮಯದಲ್ಲಿ ಭೂಕೈಲಾಸ  ಎಂದೇ ಪರಿಗಣಿಸಲ್ಪಟ್ಟಿರುವ ಈ ದೇವಾಲಯದಲ್ಲಿ ಪಲ್ಲಿಕೊಂಡೇಶ್ವರನಿಗೆ ಮಾಡಲಾಗುವ ವಿಶೇಷ ಅಭಿಷೇಕ ಮತ್ತು ಪೂಜೆಯಲ್ಲಿ ಪಾಲ್ಗೊಳ್ಳುವುದು  ಫಲಪ್ರದವೆಂದು ಪರಿಗಣಿಸಲಾಗಿರುವ ಕಾರಣ ಪ್ರದೋಷ ಸಮಯದಲ್ಲಿ ಇಲ್ಲಿಗೆ ಹೆಚ್ಚಿನ ಭಕ್ತಾದಿಗಳು ಬಂದು ಪೂಜೆ ಸಲ್ಲಿಸುತ್ತಾರೆ.

ಈ ದೇವಾಲಯದಲ್ಲಿ ಬೆಳಗ್ಗೆ 6:30ಕ್ಕೆ ಉಷತ್ಕಾಲಂ, 8:00 ಗಂಟೆಗೆ ಕಲಶಾಂತಿ, 12:00 ಗಂಟೆಗೆ ಉಚ್ಚಿಕಾಳಂ, ಸಂಜೆ 5:00 ಗಂಟೆಗೆ ಸಾಯರಕ್ಷೈ, ರಾತ್ರಿ 8:00 ಗಂಟೆಗೆ ಅರ್ಧ ಜಾಮ ಹೀಗೆ ದಿನಕ್ಕೆ ಆರು ಬಾರಿ  ಅಭಿಷೇಕ, ಅಲಂಕಾರ, ನೈವೇದ್ಯ, ಮತ್ತು ದೀಪರಾರ್ತಿಯನ್ನು ವಾಲ್ಮೀಕೇಶ್ವರ ಮತ್ತು ಮರಗದಾಂಬಿಕೆ ಇಬ್ಬರಿಗೂ. ನಾಗಸ್ವರ ಮತ್ತು ತಾಳವಾದ್ಯದೊಂದಿಗೆ ಸಕಲ ಆಗಮಶಾಸ್ತ್ರದ ಪ್ರಕಾರ ನಡೆಸಲಾಗುತ್ತದೆ.  ಇದಲ್ಲದೇ,  ಸೋಮವಾರ  ಮತ್ತು ಶುಕ್ರವಾರ, ಪ್ರದೋಷದ ದಿನ, ಅಮಾವಾಸ್ಯೆ ಹುಣ್ಣಿಮೆ, ಸಂಕಷ್ಟಹರ ಚತುರ್ಥಿಯಲ್ಲದೇ ಕಾರ್ತೀಕ ಮಾಸ ಮತ್ತು ಇತರೇ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಪ್ರದೋಷ ಪೂಜೆಯ ಸಮಯದಲ್ಲಿ ಸುಮಾರು 15,000 ಮತ್ತು ಶಿವರಾತ್ರಿ ಉತ್ಸವದ ಸಮಯದಲ್ಲಿ ಸುಮಾರು 30,000- 50,000ದ ವರೆಗೂ ಈ ದೇವಲಯಕ್ಕೆ ಭಕ್ತಾದಿಗಳು ಭೇಟಿ ನೀಡಿ ಇಲ್ಲಿನ ದೇವರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಈ ದೇವಾಲಯ ಭೌಗೋಳಿಕವಾಗಿ ಆಂಧ್ರ ಪ್ರದೇಶಕ್ಕೆ ಸೇರಿದ್ದರೂ ಚೆನ್ನೈನಿಂದ ಮತ್ತು ತಿರುಪತಿಯಿಂದ ಕೇವಲ 70 ಕಿ.ಮೀ ದೂರದಲ್ಲಿರುವ ಕಾರಣ ಆರಾಮವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ. ರೈಲುಮಾರ್ಗದಲ್ಲಿ  ಸಮೀಪದ ರೈಲು ನಿಲ್ದಾಣವಾದ ಶ್ರೀಕಾಳಹಸ್ತಿಗೆ ಬಂದು ಅಲ್ಲಿಂದ  ಸುಮಾರು 57 ಕಿಮೀ ದೂರದಲ್ಲಿರುವ ಈ ದೇವಾಲಯಕ್ಕೆ  ರಸ್ತೆಯ ಮೂಲಕ ದೇವಸ್ಥಾನವನ್ನು ತಲುಪಬಹುದಾಗಿದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ  ಇನ್ನೇಕೆ ತಡಾ.  ಸ್ವಲ್ಪ ಸಮಯಮಾಡಿಕೊಂಡು ಪಾರ್ವತಿಯ ತೊಡೆಯ ಮೇಲೆ ಶಯನ ಭಂಗಿಯಲ್ಲಿರು ಪರಶಿವನದ ಜೊತೆ ಸಮಸ್ತ ಕೈಲಾಸವೇ ಇರುವ ಈ ಭೂಕೈಲಾಸವೇ ಎನ್ನಬಹುದಾದಂತಹ ದೇವಸ್ಥಾನಗಳ ಸಂಕೀರ್ಣಕ್ಕೆ ಭೇಟಿ ನೀಡಿ ಸಾರಾ ಸಗಟಾಗಿ ಎಲ್ಲಾ ದೇವರುಗಳ ಕೃಪಾಶೀರ್ವಾದಕ್ಕೆ ಪ್ರಾತರಾಗಿ ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚ್ಕೋತೀರೀ ತಾನೇ?

ಏನಂತೀರಿ?
ನಿಮ್ಮವನೇ ಉಮಾಸುತ

ತದಿಗೆ/ಸೌಭಾಗ್ಯ ಗೌರಿ ವ್ರತ

t3ಸ್ವರ್ಣಗೌರಿ ಗೌರಿ ವ್ರತ ಗೊತ್ತು, ಮಂಗಳ ಗೌರಿ ವ್ರತ ಪೂಜೆ ಗೊತ್ತು. ಅದ್ರೇ ಇದೇನಿದು ತದಿಗೆ ಗೌರಿ ವ್ರತ ಅಥವಾ ಸೌಭಾಗ್ಯ ಗೌರಿವ್ರತ ಅಂತ ಯೋಚನೆ ಮಾಡುತ್ತಿದ್ದೀರಾ? ಚೈತ್ರ ಮಾಸದ ಮೊದಲ ದಿನ ಅಂದರೆ ಪಾಡ್ಯದಂದು ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸುತ್ತೆವೆ. ಇನ್ನು ಎರಡನೇ ದಿನ ಬಿದಿಗೆ ವರ್ಷತೊಡಕನ್ನು ಆಚರಿಸುತ್ತೇವೆ ಮತ್ತು ಈ ದಿನ ಚಂದ್ರನ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಯುಗಾದಿಯಾದ ಮೂರನೇ ದಿನ ತೃತೀಯ ಅಥವಾ ತದಿಗೆಯಂದು ಕೆಲವೆಡೆ ಗೌರಿಯ ವ್ರತವನ್ನು ಮಾಡುವ ಪದ್ದತಿ ಇದ್ದು ಇದನ್ನು ಸೌಭಾಗ್ಯ ಗೌರಿವ್ರತವೆಂದೂ ಕರೆಯಲಾಗುತ್ತದೆ.

ಈ ಸೌಭಾಗ್ಯ ಗೌರಿ ವ್ರತದ ವಿಧಿವಿಧಾನಗಳು ವಿವಿಧ ಭಾಗಗಳಲ್ಲಿ ಆಲ್ಲಿಯ ಸಂಪ್ರದಾಯಗಳ ಅನುಸಾರವಾಗಿ ಆಚರಿಸಲ್ಪಡುವುದಾದರೂ ಬಹುತೇಕ ಪೂಜಾವಿಧಿಗಳು ಈ ಕೆಳಗಿನಂತಿದೆ.

 • ಕೆಲವು ಕಡೆ ಚೈತ್ರ ಗೌರಿ ವ್ರತ ಎಂದೂ ಕರೆಯಲ್ಪಡುವ ಈ ವತ್ರವನ್ನಾಚರಿಸುವ ಮಹಿಳೆಯರು ಹಿಂದಿನ ಸಂಜೆ ಉಪವಾಸ ಇಲ್ಲವೇ ಫಲಾಹಾರವನ್ನು ಸೇವಿಸುವ ಮೂಲಕ ದೇವಿಯ ಪೂಜೆಗೆ ಸನ್ನದ್ಧರಾಗುತ್ತಾರೆ.
 • ತದಿಗೆಯ ದಿನದಂದು ಬೆಳಿಗ್ಗೆ ವಿಧ್ಯುಕ್ತವಾಗಿ ಅಭ್ಯಂಜನ ಮಾಡಿ ಪೂಜೆ ಮಾಡುವ ಸ್ಥಳವನ್ನು ಶುಭ್ರಗೊಳಿಸಿ, ಅರಿಶಿನ ಕುಂಕುಮದ ಪೂಜೆ ಮಾಡಿ ಅದರ ಮೇಲೆ ಬೆಳ್ಳೆ ತಟ್ಟೆಯಲ್ಲಿ ಅಕ್ಕಿಯನ್ನು ಇಡುತ್ತಾರೆ.
 • ಅದರ ಮೇಲೆ ಪಂಚಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರ ಮೇಲೆ ವಿಳ್ಳೇದೆಲೆ ಜೋಡಿಸಿ ಅದರ ಮೇಲೆ ಅರಿಶಿನ ಮತ್ತು ಕುಂಕುಮ ಹಚ್ಚಿದ ತೆಂಗಿನ ಕಾಯಿಯನ್ನು ಕಳಸ ರೂಪದಲ್ಲಿ ಇಡುತ್ತಾರೆ.
 • ಈ ಕಳಸದ ಮುಂದೆ ಅರಿಶಿನದಲ್ಲಿ ಗೌರಮ್ಮನನ್ನು ಮಾಡಿಕೊಂಡು ಪ್ರತಿಷ್ಠಾಪಿಸಿ ಅದರ ಪಕ್ಕದಲ್ಲಿ ಬಳೆ, ಬಿಚ್ಚೋಲೆ, ಕನ್ನಡಿಯನ್ನು ಇಡುತ್ತಾರೆ.
 • ಗೌರಿ ಪೂಜೆಯನ್ನು ಪ್ರಾರಂಭಿಸುವ ಮೊದಲು ಯಥಾಪ್ರಕಾರ ವಿಘ್ನವಿನಾಶಕ ವಿಘ್ನೇಶನಿಗೆ ಪೂಜೆ ಮಾಡಿ ನಿರ್ವಿಘ್ನವಾಗಿ ಪೂಜೆಯನ್ನು ನಡೆಸಿಕೊಡುವಂತೆ ಪೂಜಿಸಲಾಗುತ್ತದೆ.
 • ಪ್ರತಿಷ್ಠಾಪಿಸಿದ ಗೌರಿಗೆ ಬಗೆ ಬಗೆಯ ಪುಷ್ಪ ಮತ್ತು ಪತ್ರೆಗಳಿಂದ ತರ ತರಹದ ಗೆಜ್ಜೆವಸ್ತ್ರಗಳಿಂದ ಅಲಂಕರಿಸಿ, ಗೌರಿ ಅಷ್ಟೋತ್ತರವನ್ನು ಜಪಿಸಿ, ಶೋಡಶೋಪಚಾರ ಪೂಜೆ ಮಾಡಲಾಗುತ್ತದೆ.
 • ಈ ಪೂಜೆಯಂದು ಸುಮಧುರಯುಕ್ತವಾದ ಧವನ, ಮರುಗ ಮತ್ತು ಮಾಚಿಪತ್ರೆಯನ್ನು ಬಳಸುವುದು ವಿಶೇಷವಾಗಿದೆ.
  ಯಥಾಶಕ್ತಿ ಫಲ ಪುಷ್ಪ ಮತ್ತು ವಿಶೇಷ ಭಕ್ಷಗಳನ್ನು ತಯಾರಿಸಿ ಅದರಲ್ಲೂ ಸಜ್ಜಿಗೆ, ಪಾಯಸ ಇಲ್ಲವೇ ಹಯಗ್ರೀವವನ್ನು ದೇವಿಗೆ ನೈವೇದ್ಯ ಮಾಡುತ್ತಾರೆ
 • ಇದಾದ ನಂತರ ನಾನಾ ದೇವೀಸ್ತುತಿಗಳನ್ನು ಭಕ್ತಿಯಿಂದ ಹಾಡುತ್ತಾರೆ.
 • ಪೂಜೆ ಎಲ್ಲವೂ ಮುಗಿದ ನಂತರ ದೇವಿಗೆ ಮಹಾ ಮಂಗಳಾರತಿ ಮತ್ತು ಆರತಿ ಎತ್ತುವ ಮೂಲಕ ಪೂಜೆ ಸಂಪನ್ನವಾಗುತ್ತದೆ.
 • ಪೂಜೆ ಮುಗಿದ ನಂತರ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮವನ್ನು ಕೊಟ್ಟು ಅವರಿಗೆ ಕೋಸಂಬರಿ ಪಾನಕವನ್ನು ನೀಡಿ ತಾಂಬೂಲವನ್ನು ನೀಡಿ ಸತ್ಕರಿಸಲಾಗುತ್ತದೆ.

ಈ ಪೂಜೆ ಮಾಡುವವರು ಅದರಲ್ಲೂ ಸಾಧಾರಣವಾಗಿ ಮಕ್ಕಳನ್ನು ಬಯಸುವವವರು ಈ ದಿನ ಶಿವ ಪಾರ್ವತಿಯರ ಪ್ರತಿಮೆಯನ್ನು ಸಣ್ಣದಾದ ಉಯ್ಯಾಲೆಯಲ್ಲಿ ಇಟ್ಟು ಡೋಲೊತ್ಸವವನ್ನು ಮಾಡುವ ರೂಢಿಯೂ ಇದೆ.

t1ಇದಾದ ನಂತರ ಎಲ್ಲಾ ಹಬ್ಬಗಳಲ್ಲಿಯೂ ಮಾಡುವಂತೆೆ ಎರಡು ಪಲ್ಯ, ಎರಡು ಕೋಸಂಬರಿ, ಗೊಜ್ಜು, ಅನ್ನಾ ಸಾರು, ಹುಳಿ ಮತ್ತು ನೈವೇದ್ಯಕ್ಕೆ ಮಾಡಿದ್ದ ಭಕ್ಷಗಳನ್ನು ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಮೂಲಕ ತದಿಗೆ ಗೌರಿ ವ್ರತ/ಸೌಭಾಗ್ಯ ಗೌರೀ ವ್ರತ/ಚೈತ್ರ ಗೌರಿ ವ್ರತ ಸಂಪನ್ನವಾಗುತ್ತದೆ.

t2ಸಂಜೆ ಪುನಃ ಕೈಕಾಲು ತೊಳೆದು ಕೊಂಡು ಶುಚಿರ್ಭೂತರಾಗಿ ದೇವಿಗೆ ಮತ್ತೊಮ್ಮೆ ಪೂಜೆ ಮಾಡಿದ ನಂತರ ಅರಿಶಿನದ ಗೌರಮ್ಮನನ್ನು ಕದಲಿಸಿ ನೀರಿನಲ್ಲಿ ವಿಸರ್ಜಿಸುತ್ತಾರೆ. ಇನ್ನೂ ಕೆಲವರ ಮನೆಗಳಲ್ಲಿ ಈ ಅರಿಶಿನ ಗೌರಮ್ಮನನ್ನು ಅಕ್ಷಯ ತದಿಗೆಯವರೆಗೂ ದೇವರ ಮೆನೆಯಲ್ಲಿಟ್ಟು ಪೂಜಿಸಿದ ನಂತರ ಸಕಲ ಮರ್ಯಾದೆಯೊಂದಿಗೆ ನೀರಿನಲ್ಲಿ ವಿಸರ್ಜಿಸುತ್ತಾರೆ.

ಈಗಾಗಲೇ ತಿಳಿಸಿದಂತೆ ಆಚರಣೆಗಳು ಮತ್ತು ಪೂಜಾವಿಧಿವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾದರೂ ಎಲ್ಲರೂ ಅಭೀಷ್ಟೆಯೂ ದೇವಿಯನ್ನು ಒಲಿಸಿಕೊಳ್ಳುವುದೇ ಆಗಿರುತ್ತದೆ. ಹಾಗಾಗಿ ಆಡಂಬರದ ತೋರಿಕೆಗಿಂತ, ಆನಂದದಿಂದ ಭಕ್ತಿ ಭಾವದಿಂದ ದೇವಿಯನ್ನು ಪೂಜೆಸುವ ಮೂಲಕ ಮತ್ತು ಅವಳ ಕೃಪೆಗೆ ಪಾತ್ರರಾಗೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ತದಿಗೆ ಪೂಜೆಯ ಫೋಟೋಗಳನ್ನು ಕಳುಹಿಸಿದ ಆತ್ಮೀಯರಾದ ಶ್ರೀಮತಿ ಬೃಂದ ಅವರಿಗೆ ಧನ್ಯವಾದಗಳು

ಮಣಿಕರಣ್ ಸಿಖ್ಖರ ಮತ್ತು ಉಳಿದ ಹಿಂದೂಗಳ ಧಾರ್ಮಿಕ ಕೇಂದ್ರ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ವಿಶಿಷ್ಟವಾದ ದೇಶ. ಇಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್, ಜೈನ, ಪಾರಸೀ ಹೀಗೆ ಸರ್ವಧರ್ಮಗಳ ಭಾವೈಕ್ಯತೆಗಳ ಸಂಗಮವಾಗಿದೆ. ದೇಶಾದ್ಯಂತ ಈ ಧರ್ಮಗಳ ನಾನಾ ಧಾರ್ಮಿಕ ಕ್ಷೇತ್ರಗಳಿದ್ದು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಅಲ್ಲಿಗೆ ಹೋಗಿ ತಮ್ಮ ಭವರೋಗಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಒಂದೇ ಪುಣ್ಯಕ್ಷೇತ್ರ ಹಲವು ಧರ್ಮಗಳಿಗೆ ಶ್ರದ್ಧಾಕೇಂದ್ರವಾಗಿದ್ದು ಎರಡೂ ಪಂಗಡದವರು ಅಲ್ಲಿಗೆ ಹೋಗುತ್ತಾರೆ. ನಾನಿಂದು ಸಿಖ್ಖರಿಗೂ ಮತ್ತು ಉಳಿದ ಹಿಂದೂಗಳಿಗೆ ಪವಿತ್ರವಾದಂತಹ ಮಣಿಕರಣ್ ಬಗ್ಗೆ ತಿಳಿದುಕೊಳ್ಳೋಣ.

mani1

ಸಿಖ್ಖರ ಮತ್ತು ಉಳಿದ ಹಿಂದೂಗಳ ಪವಿತ್ರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಮಣಿಕರಣ್ ಇರುವುದು ಅತ್ಯಂತ ಶೀತ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ. ಕುಲು ನಗರದಿಂದ 5೦ ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪುಟ್ಟ ಪ್ರದೇಶವೇ ಮಣಿಕರಣ್. ಇಲ್ಲಿ ಸಿಖ್ಖರ ಪವಿತ್ರ ಮಂದಿರ ಗುರುದ್ವಾರದ ಜೊತೆ ಜೊತೆಗೇ ಹಿಂದೂಗಳ ಶಿವನ ಪವಿತ್ರ ಸಾನಿಧ್ಯವೂ ಒಟ್ಟೊಟ್ಟಿಗೆ ಇರುವುದು ವಿಶೇಷವಾಗಿದೆ. ಇವೆರಡೂ ಧಾರ್ಮಿಕ ಸಂಗತಿಗಳ ಹೊರತಾಗಿ, ಸುಮಾರು 1835 ಮೀಟರ್ ಎತ್ತರದ ಪರ್ವತದ ಪ್ರದೇಶವಾಗಿರುವ ಇಲ್ಲಿ ಬಿಸಿ ನೀರಿನ ಬುಗ್ಗೆಯ ಕುರಿತಂತೆ ಪ್ರಸಿದ್ಧವಾಗಿದೆ. ಇದು ಪಾರ್ವತಿ ನದಿಯ ಎಡದಂಡೆಯಾಗಿದ್ದು, ಉಳಿದೆಲ್ಲ ಕಡೆ ಶಾಂತವಾಗಿ ತಣ್ಣಗೆ ಹರಿಯುವ ನದಿ, ಕಣಿವೆಯ ಸುಮಾರು ಒಂದೂವರೆ ಕಿಲೋ ಮೀಟರ್ ದೂರದವರೆಗೆ ಅಲ್ಲಲ್ಲಿ ಬಿಸಿನೀರಿನ ಬುಗ್ಗೆ (hot springs) ಭೂಮಿ ಅಡಿಯಿಂದ ಇಲ್ಲಿ ಉಕ್ಕುತ್ತಿದ್ದು ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ

ಇಲ್ಲಿರುವ ಮೂರು ಬಿಸಿ ನೀರಿನ ಬುಗ್ಗೆಗಳಲ್ಲಿ ಒಂದು ಗುರುದ್ವಾರದೊಳಗೆ ಇದ್ದರೆ ಉಳಿದೆರಡು ಪ್ರದೇಶಗಳು ಅತಿಥಿಗೃಹವಾಗಿ ಮಾರ್ಪಟ್ಟು ಸ್ನಾನ ಗೃಹಗಳಾಗಿವೆ. ಇಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಗುಡಿ ಒಳಗಡೆಯೂ ಕೊಳ ನಿರ್ಮಿಸಿ ಅಲ್ಲಿಗೆ ತಣ್ಣನೆ ನೀರನ್ನೂ ಹರಿಯಬಿಟ್ಟು ನೀರು ಹದಾ ಮಾಡಿಸಿ ಭಕ್ತರಿಗೆ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗದ ಜೊತೆಗೆ ವಾಯು ದೋಷ ಮತ್ತು ಸಂಧಿವಾತ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಈ ಪರಿಸರದಲ್ಲಿ ಅಲ್ಲಿಯ ನೆಲವೆಲ್ಲವೂ ಬಿಸಿಯಾಗಿರುವ ಕಾರಣ ನಡೆದಾಡುವ ಎಲ್ಲಾ ಸ್ಥಳದಲ್ಲಿಯೂ ಮರದ ಹಲಗೆಯನ್ನು ಹಾಸಲಾಗಿದೆ.

ವೈಜ್ಞಾನಿಕವಾಗಿ ಹೇಳಬೇಕೆಂದರೆ ಈ ಬುಗ್ಗೆಗಳಲ್ಲಿನ ನೀರು ಗಂಧಕವನ್ನು ಹೊಂದಿರುವ ಕಾರಣ, ಇದು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುಬಹುದಾದರೂ, ಜನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳನ್ನು ಹೊಂದಿದ್ದಾರೆ. ಈ ನೀರಿನಲ್ಲಿರುವ ರೇಡಿಯಮ್ ಅಂಶದಿಂದಾಗಿಯೇ ಬಿಸಿ ನೀರಿನ ಬುಗ್ಗೆಗಳು ಏಳುತ್ತಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದರೂ, ಇದಕ್ಕೆ ಪರ್ಯಾಯವಾಗಿ ಸಿಖ್ ಮತ್ತು ಹಿಂದೂಗಳ ಪೌರಾಣಿಕ ಕಥೆಗಳೂ ಇವೆ.

ಸಿಖ್ಖರ ಪ್ರಕಾರ

nanak1

ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಅವರು 1574 ರಲ್ಲಿ ಮೂರನೆಯ ಉದಾಸಿಯ ಸಮಯದಲ್ಲಿ ಅವರ ಅನುಯಾಯಿ ಭಾಯಿ ಮರ್ದಾನಾ ಅವರೊಂದಿಗೆ ಇಲ್ಲಿಗೆ ಬರುತ್ತಾರೆ. ಅವರಿಗೆ ಹಸಿವಾದ ಕಾರಣ, ಗುರುನಾನಕ್ ಅವರು ಲಂಗರ್‌ಗೆ ಆಹಾರವನ್ನು ಸಂಗ್ರಹಿಸಲು ಮರ್ದಾನ ಅವರನ್ನು ಕಳುಹಿಸುತ್ತಾರೆ. ರೊಟ್ಟಿ ಮತ್ತು ಪಲ್ಯಗಳನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ಜನರಿಂದ ದಾನ ಪಡೆದರಾದರೂ ರೊಟ್ಟಿಗೆ ಹಿಟ್ಟನ್ನು ಕಲೆಸಲು ನೀರು ಸಿಗದೆ ಆಹಾರವನ್ನು ಬೇಯಿಸಲು ಪರದಾಡುತ್ತಾರೆ.

ಆಗ ನಾನಕರು ಮರ್ದಾನರಿಗೆ ಅಲ್ಲಿರುವ ಒಂದು ದೊಡ್ಡ ಬಂಡೆಯನ್ನು ಜರುಗಿಸಲು ತಿಳಿಸುತ್ತಾರೆ. ಗುರುಗಳ ನಿರ್ದೇಶನದಂತೆ ಕಲ್ಲನ್ನು ಪಕ್ಕಕ್ಕೆ ಸರಿಸುತ್ತಲೇ ಅಲ್ಲೊಂದು ಬಿಸಿನೀರಿನ ಬುಗ್ಗೆ ಕಾಣಿಸಿಕೊಂಡು ಆ ಬುಗ್ಗೆಯಲ್ಲಿ ರೊಟ್ಟಿ ತೇಲುವುದನ್ನು ನೋಡುತ್ತಾರೆ. ಈ ರೊಟ್ಟಿಗಳು ತೇಲಿಕೊಂಡು ತಮ್ಮಲ್ಲಿಗೆ ಬಂದರೆ ಅವುಗಳಲ್ಲಿ ಒಂದನ್ನು ದೇವರ ಹೆಸರಿನಲ್ಲಿ ದಾನ ಮಾಡುವುದಾಗಿ ಪ್ರಾರ್ಥಿಸುತ್ತಾರೆ. ಆಶ್ಚರ್ಯವೆಂಬಂತೆ, ರೊಟ್ಟಿಗಳು ಅವರತ್ತ ತೇಲಿ ಬರುತ್ತದಲ್ಲದೇ, ತಿನ್ನಲು ಯೋಗ್ಯವಾಗಿರುವಂತೆ ರೊಟ್ಟಿ ಅಂದಿನಿಂದ ಆ ಕ್ಷೇತ್ರದಲ್ಲಿ ದೇವರ ಹೆಸರಿನಲ್ಲಿ ಏನನ್ನಾದರೂ ದಾನ ಮಾಡಿದರೆ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯುತ್ತೇವೆ ಎಂಬ ನಂಬಿಕೆ ಇದೆ, ಈ ಗುರುದ್ವಾರದ ಕುರಿತಂತೆ ಜ್ಞಾನಿ ಗ್ಯಾನ್ ಸಿಖ್ ಅವರು ತಮ್ಮ ಹನ್ನೆರಡನೆಯ ಗುರು ಖಲ್ಸಾದಲ್ಲಿ ಉಲ್ಲೇಖಿಸಿರುವ ಕಾರಣ ಆವರ ಶಿಷ್ಯರಿಗೆ ಈ ಗುರುದ್ವಾರ ಅತ್ಯಂತ ಹೆಚ್ಚಿನ ಮಹತ್ವದ್ದಾಗಿದೆ.

ಇನ್ನು ಹಿಂದೂಗಳ ಪ್ರಕಾರ

shiv)rmoantic

ಮಣಿಕರಣ್, ಎಂಬ ಹೆಸರೇ ಸೂಚಿಸುವಂತೆ ರತ್ನ ಅಥವಾ ಮಣಿ ಎಂಬ ಅರ್ಥಬರುತ್ತದೆ. ಅದೊಮ್ಮೆ ಕೈಲಸ ಪರ್ವತದಿಂದ ವಿಹಾರಾರ್ಥವಾಗಿ ಶಿವ ಮತ್ತು ಪಾರ್ವತಿಯರು ಭೂಲೋಕಕ್ಕೆ ಬಂದಿದ್ದಾಗ ಈ ಸ್ಥಳದ ಸೌಂದರ್ಯದಿಂದ ಆಕರ್ಷಿತರಾಗಿ ಕೆಲ ಕಾಲ ಇಲ್ಲಿಯೇ ಇರಲು ನಿರ್ಧರಿಸುತ್ತಾರೆ. ಒಮ್ಮೆ ಪಾರ್ವತಿಯು ಇಲ್ಲಿಯ ನೀರಿನ ಚಿಲುಮೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕೆಯ ಕಿವಿಯ ಮಣಿ ಚಿಲುಮೆಯಲ್ಲಿ ಬಿದ್ದು ಹೋಗುತ್ತದೆ. ಆ ಮಣಿಯನ್ನು ನೀರಿನಿಂದ ತೆಗೆಯುವಂತೆ ಪರಮೇಶ್ವರನು ತನ್ನ ಗಣಗಳಿಗೆ ಆದೇಶಿಸುತ್ತಾನೆ. ಅವರು ಎಷ್ಟೇ ಹುಡುಕಿದರೂ ಆ ಮಣಿ ಸಿಗದಿದ್ದಾಗ ಕೋಪಗೊಂಡ ಶಿವನು ತಾಂಡವ ನೃತ್ಯ ಮಾಡುತ್ತಾ, ತನ್ನ ಮೂರನೆಯ ಕಣ್ಣು ತೆಗೆದಾಗ ಅಲ್ಲಿ ಗುಡುಗು ಮಿಂಚು ಸಿಡಿಲುಗಳ ಅಬ್ಬರವಾಗಿ ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ.

shiv4

ಇದರಿಂದ ಬೆಚ್ಚಿದ ದೇವತೆಗಳು ತಾಂಡವರೂಪಿ ಶಿವನನ್ನು ಶಾಂತಗೊಳಿಸಲು ನಾಗಶೇಷನನ್ನು ಕೋರಿಕೊಳ್ಳುತ್ತಾರೆ. ದೇವಾನು ದೇವತೆಗಳ ಕೋರಿಕೆಯ ಮೇರೆಗೆ ನಾಗಶೇಷನು ಪಾತಾಳದಿಂದ ಕುದಿಯುವ ನೀರಿನ ಗುಳ್ಳೆಗಳನ್ನು ಒಮ್ಮೆಲೆ ತೀವ್ರ ರಭಸದಿಂದ ಮೇಲಕ್ಕೆ ಚಿಮ್ಮಿಸುತ್ತಾನೆ. ಹೊಳೆಯುವ ಮಣಿಗಳನ್ನು ಕಂಡ ಶಿವಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ ಎಂಬುದು ಐಹಿತ್ಯ. ಬಿಸಿನೀರಿನ ಗುಳ್ಳೆಗಳು ಪಾರ್ವತಿಯ ರತ್ನವನ್ನು ಹೋಲುವ ರೀತಿಯಲ್ಲಿ ಚಿಮ್ಮಲಾರಂಭಿಸಿದ ಕಾರಣ ಈ ಸ್ಥಳಕ್ಕೆ ಮಣಿಕರಣ್ ಎಂಬ ಹೆಸರು ಬಂದಿತೆಂದು ನಂಬಿಕೆ ಇದೆ. 1905ರಲ್ಲಿ ಈ ಪ್ರದೇಶದಲ್ಲಿ ಭೂಕಂಪ ಆಗುವವರೆಗೂ ಮಣಿಯ ರೀತಿಯ ಬಿಸಿ ನೀರಿನ ಬುಗ್ಗೆಗಳು ಚಿಮ್ಮುತ್ತಲೇ ಇದ್ದವಂತೆ.

ಶಿವನ ಮಂದಿರದಕ್ಕೆ ಭೇಟಿ ನೀಡುವ ಭಕ್ತಾದಿಗಳು ಅದರ ಪಕ್ಕದಲ್ಲೇ ಇರುವ ಸಿಖ್ಖರ ಪವಿತ್ರ ಕ್ಷೇತ್ರವಾದ ಗುರುದ್ವಾರಕ್ಕೂ ಭೇಟಿ ನೀಡುವುದು ಇಲ್ಲಿರುವ ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿಗೆ ಯಾರು ಎಷ್ಟು ಹೊತ್ತಿಗೆ ಬಂದರೂ ಊಟ ಸಿದ್ಧವಾಗಿರುತ್ತದೆ. ಇಲ್ಲಿನ ಲಂಗರ್ ಗಾಗಿ ಅಕ್ಕಿ, ಬೇಳೆ ಮತ್ತು ಕಡಲೆಕಾಳನ್ನು ಶಿವನ ಸಾನಿಧ್ಯವಿರುವ ಪಕ್ಕದಲ್ಲಿ ಪ್ರಾಕೃತಿಕವಾಗಿ ಭೂಮಿ ಅಡಿಯಿಂದ ಉಕ್ಕಿ ಬರುವ ಬಿಸಿನೀರಿನಲ್ಲೇ ಬೇಯಿಸುವುದು ಇಲ್ಲಿನ ವೈಶಿಷ್ಟ್ಯ. ತಾಮ್ರದ ಹಂಡೆಗಳಲ್ಲಿ ತೊಳೆದ ಅಕ್ಕಿಯನ್ನು ಹಾಕಿ ಅದಕ್ಕೆ ಗೋಣೀ ಚೀಲವನ್ನು ಮುಚ್ಚಿ ಬಿಸಿನೀರಿನ ಕುಂಡದೊಳಗೆ ಸುಮಾರು 20 ನಿಮಿಷದೊಳಗೆ ಇಟ್ಟಲ್ಲಿ ಊಟಕ್ಕೆ ಅನ್ನ ಸಿದ್ಧವಾಗುತ್ತದೆ. ಇದೇ ರೀತಿಯಾಗಿಯೇ ತರಕಾರಿಗಳನ್ನೂ ಸಹಾ ಬೇಯಿಸಿಯೇ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತಾದಿಗಳು ಗುರುದ್ವಾರದಲ್ಲಿ ಲಂಗರ್ ರೂಪದ ಪ್ರಸಾದವನ್ನು ಸವಿದು ಪುನೀತರಾಗುತ್ತಾರೆ.

ಭಕ್ತಾಧಿಗಳೂ ಮತ್ತು ಪ್ರವಾಸಿಗರೂ ಸಹಾ ಪ್ರಸಾದ ರೂಪದಲ್ಲಿ ಅನ್ನ ಬೇಯಿಸುವ ವ್ಯವಸ್ಥೆ ಇಲ್ಲಿದ್ದು, ಬಟ್ಟೆಯಲ್ಲಿ ಸಣ್ಣ ಸಣ್ಣದಾಗಿ ಅಕ್ಕಿಯನ್ನು ಕಟ್ಟಿ ಇಟ್ಟಿರುತ್ತಾರೆ. ಅದಕ್ಕೆ 20 ರೂಗಳನ್ನು. ನೀಡಿ ಖರೀದಿಸಿ, ಅದಕ್ಕೆ ಹಗ್ಗ ಕಟ್ಟಿ ಈ ಬಿಸಿ ನೀರಿನ ಕುಂಡದದೊಳಗಡೆ ಇಳಿಸಿದ ಕೆಲವೇ ಕ್ಷಣಗಳಲ್ಲಿ ಅಕ್ಕಿ ಅನ್ನವಾಗಿ ಬೆಂದಿರುತ್ತದೆ. ಹೆಚ್ಚಿನವರು ಅದನ್ನು ಅಲ್ಲೇ ಪ್ರಸಾದ ರೂಪದಲ್ಲಿ ಸೇವಿಸಿದರೆ, ಇನ್ನೂ ಕೆಲವರು ಪ್ರಸಾದ ರೂಪದಲ್ಲಿ ತಮ್ಮ ತಮ್ಮ ಮನೆಗಳಿಗೂ ಕೊಂಡೊಯ್ಯುತ್ತಾರೆ.

ಹಿಮಾಚಲ ಪ್ರದೇಶದಲ್ಲಿ ಇರುವ ಈ ಮಣಿಕರಣ್ ಪಟ್ಟಣ ಸಮುದ್ರ ಮಟ್ಟದಿಂದ ಸುಮಾರು 1760 ಮೀಟರ್ ಎತ್ತರದಲ್ಲಿದ್ದರೂ ವರ್ಷವಿಡೀ ತಣ್ಣನೆಯ ಹವಾಮಾನದಿಂದ ಕೂಡಿದ್ದು ಸರಾಸರಿ ತಾಪಮಾನವು ಸುಮಾರು 10 ಡಿಗ್ರಿ ಇರುತ್ತದೆ. ಈ ಕಾರಣದಿಂದಾಗಿಯೇ ಬಹುತೇಕ ಪ್ರಸಾಸಿಗರು ಏಪ್ರಿಲ್ ರಿಂದ ಜೂನ್ ವರೆಗಿನ ಬೇಸಿಗೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಬಯಸುತ್ತಾರೆ. ಶ್ರದ್ದೇಯ ಭಕ್ತಾದಿಗಳಂತೂ ಚಳಿಗಾಲ, ಮಳೆಗಾಲ, ಶೀತ ಇದಾವುದನ್ನೂ ಲೆಖ್ಖಿಸದೇ ವರ್ಷವಿಡೀ ಇಲ್ಲಿಗೆ ಭೇಟಿಕೊಡುತ್ತಾರೆ.

ರೈಲಿನಲ್ಲಿ ಬರುವುದಾದರೆ, ಇಲ್ಲಿಂದ 300 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಪಠಾಣ್‌ಕೋಟ್‌ಗೆ ಬಂದು ಅಲ್ಲಿಂದ ಸ್ಥಳೀಯ ವಾಹನದ ವ್ಯವಸ್ಥೆ ಮಾಡಿಕೊಂದು ಸುಮಾರು 8 ಗಂಟೆ ಪ್ರಯಾಣ ಮಾಡಿದಲ್ಲಿ ಮಣಿಕರಣ್ ತಲುಪಬಹುದಾಗಿದೆ. ಬಸ್ಸಿನಲ್ಲಿ ಬರುವುದಾದರೆ, ಕುಲ್ಲು ಅಥವಾ ಮನಾಲಿಗೆ ತಲುಪಿ ಅಲ್ಲಿಂದ ಕ್ಯಾಬ್ ಮೂಲಕ ಮಣಿಕರಣ್ ತಲುಪ ಬಹುದಾಗಿದೆ. ವಿಮಾನದ ಮೂಲಕ ಭುಂಟಾರ್ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಬಸ್ಸಿನಲ್ಲಿ 90 ನಿಮಿಷಗಳ ಕಾಲ ಪ್ರಯಾಣಿಸಿ 35 ಪ್ರಯಾಣಿಸಿದರೆ, ಮಣಿಕರಣ್ ತಲುಪಬಹುದಾಗಿದೆ.

ಸಿಖ್ಖರ ಮತ್ತು ಇತರೇ ಹಿಂದೂಗಳ ಭಾವೈಕ್ಯತೆಗಳ ಸಂಗಮದೊಂದಿಗೆ, ಬಿಸಿ ನೀರಿನ ಬುಗ್ಗೆಗಳ ಪ್ರಾಕೃತಿಕ ವಿಸ್ಮಯದ ಅದ್ಭುತವಾದ್ ವೀಡಿಯೋ ಇದೋ ನಿಮಗಾಗಿ

 

ಹಿಂದೂ ಸಿಖ್ ಭಾವೈಕ್ಯತೆಗಳ ಸಂಗಮದೊಂದಿಗೆ ಬಿಸಿ ನೀರಿನ ಬುಗ್ಗೆಗಳ ಪ್ರಕೃತಿಯ ವಿಸ್ಮಯವನ್ನೂ ನೋಡುವ ಸಲುವಾಗಿ ಸಮಯ ಮಾಡಿ ಕೊಂಡು ಮಣಿಕರಣ್ ನೋಡಬಹುದಲ್ಲವೇ?

ಏನಂತೀರೀ?