ಭಾರ್ಗವಿ ನಾರಾಯಣ್

ಕಳೆದ ವಾರವಿನ್ನೂ (ಫೆಬ್ರವರಿ 4) ಅವರ 84ನೇ ವರ್ಷದ ಹುಟ್ಟುಹಬ್ಬಕ್ಕೆ ಭಗವಂತನ ಅನುಗ್ರಹದಿಂದ ಆಯುರಾರೋಗ್ಯ ದೊರೆತು ನಮ್ಮಂತಹವರಿಗೆ ಮಾರ್ಗದರ್ಶಕಿಯಾಗಿರಿ ಎಂದು ಹಾರೈಸಿದ್ದ ಭಾರ್ಗವಿ ನಾರಾಯಣ್ ನೆನ್ನೆ ಸಂಜೆ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳಿದ ತಕ್ಷಣ ಥೂ.. ಜನಾ ಯಾಕೆ ಹೀಗೆ ಸುಳ್ಳು ಸುದ್ದಿ ಹರಡಿಸುತ್ತಾರಪ್ಪಾ ಎಂದು ಬೈಯ್ದಾಡುತ್ತಲೇ, ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ಸುದ್ದಿ ಸುಳ್ಳಾಗಿರದೇ ಹೋದದ್ದು ನಿಜಕ್ಕೂ ಬೇಸರವನ್ನು ಮೂಡಿಸಿತು.

ಭಾರ್ಗವಿಯವರು ಬೆಂಗಳೂರಿನ ಬಸವನಗುಡಿ ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿ ದಂಪತಿಗಳಿಗೆ 1938ರ ಫೆಬ್ರವರಿ 4ನೇ ತಾರೀಖಿನಂದು ಜನಿಸಿದರು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಭಾರ್ಗವಿಯವರು ಅಮ್ಮ ಮತ್ತು ಅಜ್ಜಿಯ ಆರೈಕೆಯಲ್ಲೇ ಬೆಳೆದರು. ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಚುರುಕಾಗಿದ್ದ ಭಾರ್ಗವಿಯವರನ್ನು ಗುರುತಿಸಿದ ಅವರ ಶಾಲಾ ಶಿಕ್ಷಕಿ ಶ್ರೀಮತಿ ವಿಮಲರವರು ಹೈಸ್ಕೂಲಿನಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಿದ್ದಲ್ಲದೇ, ಅವರದ್ದೇ ಆದ ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡು ತಮ್ಮ ಶಾಲೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದದ್ದಲ್ಲದೇ, ಅನೇಕ ಅಂತರ ಶಾಲಾ ಕಾಲೇಜುಗಳ ನಾಟಕೋತ್ಸವಗಳಲ್ಲಿ ಭಾಗವಹಿಸತೊಡಗಿದರು. ಭಾರ್ಗವಿಯವರ ನಾಟಕ ತಂಡ ಭಾಗವಹಿಸುತ್ತಿದೆ ಎಂದರೆ ಅವರ ತಂಡಕ್ಕೇ ಬಹುಮಾನ ಕಟ್ಟಿಟ್ಟ ಬುತ್ತಿ ಎಂಬುವಂತಾಗಿತ್ತು. ರಾಜ್ಯ ನಾಟಕ ಸ್ಪರ್ಧೆಗಳಲ್ಲಿ ಎರಡು ಬಾರಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದ ಭಾರ್ಗವಿಯವರು, ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದ ನಂತರದಲ್ಲಿ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ ಪಡೆದು ಇ.ಎಸ್.ಐ. ಕಾರ್ಪೊರೇಷನ್ನಿನಲ್ಲಿ ಕೆಲಸಕ್ಕೆ ಸೇರಿಕೊಂಡರೂ ರಂಗಭೂಮಿಯ ನಂಟು ಕಡಿಮೆಯಾಗಲಿಲ್ಲ.

gn1

ಇದಕ್ಕೆ ಇಂಬು ಕೊಡುವಂತೆ ಅವರ ಮನೆಯ ಔಟ್ ಹೌಸಿಗೆ ಬಾಡಿಗೆಗೆ ಎಂದು ಬೆಳವಾಡಿ ನಂಜುಡಯ್ಯ ನಾರಾಯಣ ಎಲ್ಲರ ಪ್ರೀತಿಯ ಮೇಕಪ್ ನಾಣಿ ಅವರು ಬಂದ ನಂತರವಂತೂ ಅವರ ಮನೆಯೇ ರಂಗಭೂಮಿಯ ರಿಹರ್ಸಲ್ ತಾಣವಾಗಿ ಹೋಗಿತು. ಆರಂಭದಲ್ಲಿ ಕೇವಲ ಸ್ನೇಹಿತರಾಗಿದ್ದ ಅವರಿಬ್ಬರು ಕ್ರಮೇಣ ಪ್ರೀತಿ ಮೊಳಕೆಯೊಡೆದು ಅಂದಿನ ಕಾಲದಲ್ಲಿ ಕೇವಲ ಸ್ನೇಹಿತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾದದ್ದೇ ಸುದ್ದಿಯಾಗಿತ್ತು. ಅವರಿಬ್ಬರ ಸುಖಃ ದಾಂಪತ್ಯದ ಕುರುಹಾಗಿ ಸುಜಾತಾ, ಪ್ರಕಾಶ್ ಬೆಳವಾಡಿ, ಪ್ರದೀಪ್ ಮತ್ತು ಸುಧಾ ಬೆಳವಾಡಿ ಎಂಬ ನಾಲ್ವರು ಮಕ್ಕಳಿಗೆ ಜನ್ಮನೀಡಿದ್ದರು. ತಮ್ಮ ಮಕ್ಕಳ ಜೊತೆ ಸುತ್ತಮುತ್ತಲ ಹತ್ತಾರು ಮಕ್ಕಳನ್ನು ಸೇರಿಸಿಕೊಂಡು ಅವರೇ ಬರೆದು ನಿರ್ದೇಶಿಸಿದ್ದ ಭೂತಯ್ಯನ ಪೇಚಾಟ ಎಂಬ ಮಕ್ಕಳ ನಾಟಕಕ್ಕೆ 1975ರಲ್ಲಿ ರಾಜ್ಯಮಟ್ಟದ ಪ್ರಶಸ್ತಿಯೂ ಬಂದಿತ್ತು.

bn3

ರಂಗಭೂಮಿಯ ಜೊತೆ ಜೊತೆಯಲ್ಲೇ 1955ರಿಂದಲೂ ಆಕಾಶವಾಣಿಯಲ್ಲಿ ಮೊದಲಿಗೆ ಕಲಾವಿದೆಯಾಗಿ ಆರಂಭಿಸಿ ನಂತರ ಹಲವಾರು ನಾಟಕಗಳನ್ನು ಅವರೇ ಬರೆದು ನಿರ್ದೇಶಿಸುವಷ್ಟರ ಎತ್ತರಕ್ಕೆ ಬೆಳೆದಿದ್ದರು. 70ರ ದಶಕದಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾಗಿದ್ದ ದಿ. ನರಸಿಂಹ ರಾಜು ಅವರ ಪ್ರೊಫಸರ್ ಹುಚ್ಚುರಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಭಾರ್ಗವಿಯವರು ತಾವು ಅಭಿನಯಿಸಿದ ಮೊದಲ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಲಭಿಸಿತ್ತು. ತಮ್ಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸೈ ಎನಿಸಿ, ತುಂಬು ಕುಟುಂಬ, ಗಂಡ ಮನೆ ಮಕ್ಕಳು ಜೊತೆಗೆ ಕೆಲಸದಲ್ಲೂ ಸೈ ಎನಿಸಿಕೊಂಡು ಉನ್ನತ ಭಡ್ತಿಯನ್ನು ಪಡೆದು ವ್ಯವಸ್ಥಾಪಕರ ಹುದ್ದೆಯ ಮಟ್ಟಕ್ಕೆ ಏರಿ ಕಡೆಗೆ 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.

bn2

90 ರ ದಶಕದಲ್ಲಿ ಕನ್ನದ ದೂರದರ್ಶನ ಬಂದ ಮೇಲಂತೂ ಅಲ್ಲೂ ತಮ್ಮ ತಮ್ಮ ಪ್ರತಿಭಾ ಪ್ರದರ್ಶನವನ್ನು ಮುಂದುವರೆಸಿದ ಭಾರ್ಗವಿಯವರು ಆಡು ಮುಟ್ಟದ ಸೊಪ್ಪಿಲ್ಲ ಭಾರ್ಗವಿಯವರು ಮಾಡದ ಪಾತ್ರವಿಲ್ಲ ಎಂದರೂ ಅತಿಶಯವಲ್ಲಾ ಎನಿಸುವಷ್ಟರ ಮಟ್ಟಿಗೆ ಎಲ್ಲಾ ಪಾತ್ರಗಳಲ್ಲೂ ಲೀಲಾಜಾಲವಾಗಿ ಅಭಿನಯಿಸಿದ್ದರು.

bhargavi1

ಭಾರ್ಗವಿಯವರ  ಮಗ ಪ್ರಕಾಶ್ ಬೆಳವಾಡಿ ಪತ್ರಕರ್ತನಾಗಿ, ಅಂಗ್ಲ ನಾಟಕಕಾರನಾಗಿ ನಂತರ ಕನ್ನಡ, ತಮಿಳು, ಹಿಂದೀ ಚಿತ್ರಗಳಲ್ಲಿ ಅತ್ಯಂತ ಯಶಸ್ವಿ ನಟನಾದರೆ, ಬಾಲ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಆವರ ಕಿರಿಯ ಮಗಳು ಸುಧಾ ಬೆಳವಾಡಿ, ಇಂದು ಕನ್ನಡದ ಬಹುತೇಕ ಧಾರಾವಾಹಿಗಳು ಮತ್ತು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಾಯಕರುಗಳ ತಾಯಿ, ಅತ್ತೆ, ಅಕ್ಕ, ಅತ್ತಿಗೆ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅಳಿಯ (ಸುಧಾರವರ ಪತಿ)  M. G. ಸತ್ಯಾ ಹಿಂದಿ ಸ್ವದೇಸ್ ಚಿತ್ರಕ್ಕೆ ಚಿತ್ರಕಥೆ ಬರೆಯುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೆ,  ಮೊಮ್ಮಗಳು ಸಂಯುಕ್ತಾ ಹೊರನಾಡು (ಸುಧಾ ಮತ್ತು ಸತ್ಯಾ ಅವರ ಮಗಳು)  ಕೂಡಾ ಕನ್ನಡದ ನಾಲ್ಕಾರು ಚಿತ್ರಗಳಲ್ಲಿ ನಾಯಕಿಯಾಗಿ ಆಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದರೆ, ಮತ್ತೊಬ್ಬ ಮೊಮ್ಮಗಳು  ತೇಜು ಬೆಳವಾಡಿ (ಪ್ರಕಾಶ್ ಬೆಳವಾಡಿಯವರ ಮಗಳು) ಅವರು ರೂಪ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರದಲ್ಲಿ ಅಭಿನಯಿಸಿದ್ದಾರೆ . ಹೀಗೆ ಅವರ ಇಡೀ ಕುಟುಂಬವೇ ಕಲಾ ಪ್ರಪಂಚದಲ್ಲಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹವಾಗಿದೆ.

bn6

ಟಿ. ಎನ್. ಸೀತಾರಾಮ್ ಅವರ ಮಂಥನಾ, ಮುಕ್ತಾ ಸೇರಿದಂತೆ ಬಹುತೇಕ ಧಾರವಾಹಿಗಳಲ್ಲಿ ಭಾರ್ಗವಿ ನಾರಾಯಣ್ ಮತ್ತು ಸುಧಾ ಬೆಳವಾಡಿಯವರು ಅಭಿನಯಿಸುವ ಮೂಲಕ ಸೀತಾರಾಮ್ ಅವರ ಆಸ್ಥಾನ ಕಲಾವಿದರು ಎನಿಸಿಕೊಂಡಿದ್ದಲ್ಲದೇ ಭಾರ್ಗವಿ ಅವರು ಸುಮಾರು 22 ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಧಾರಾವಾಹಿಗಳಲ್ಲಿ ಕೇವಲ ನಟಿಯಾಗಲ್ಲದೇ, ನಿರ್ದೇಶಕಿಯಾಗಿ, ಚಿತ್ರಕಥೆ, ಸಂಭಾಷಣೆಗಳನ್ನು ರಚಿಸಿರುವುದಲ್ಲದೆ, ಕ್ರಿಯಾಶೀಲ ಸಲಹೆ ಮಾರ್ಗದರ್ಶನಗಳನ್ನೂ ನೀಡಿದ್ದಾರೆ. ತಮ್ಮ ಪತಿ ಮೇಕಪ್ ನಾಣಿಯವರ ಕುರಿತಂತೆ ನಾ ಕಂಡ ನಮ್ಮವರು ಎಂಬ ಕನ್ನಡ ಪುಸ್ತಕದ ಮೂಲಕ ಲೇಖಕಿಯಾಗಿ ಖ್ಯಾತಿ ಪಡೆದ ನಂತರ, ನಾನು, ಭಾರ್ಗವಿ ಎಂಬ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದರು ಈ ಎರಡೂ ಪುಸ್ತಕಗಳು ಅಂಕಿತಾ ಪ್ರಕಾಶನದ ಮೂಲಕ ಪ್ರಕಟಗೊಂಡು ಅತ್ಯಂತ ಯಶಸ್ವಿ ಪುಸ್ತಕಗಳು ಎಂಬ ಖ್ಯಾತಿ ಪಡೆದಿತ್ತು.

ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅವರ ಜೊತೆ ರಾಜಕುಮಾರ ಚಿತ್ರದಲ್ಲೂ ಅಭಿನಯಿಸಿದ್ದ ಭಾರ್ಗವಿಯವರು, ಅದಕ್ಕೂ ಮೊದಲು ಹಾಸ್ಯ ನಟ ಜಗ್ಗೇಶ್ ಅವರ ತಾಯಿಯಾಗಿ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿನ ಅದ್ಭುತವಾದ ನಟನೆ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಅಷ್ಟು ದೊಡ್ಡ ನಟಿಯಾಗಿದ್ದರೂ ಸದಾ ಕಾಲವೂ ಅತ್ಯಂತ ಸರಳವಾಗಿ ಉಡುಗೆ ತೊಡುಗೆಗಳನ್ನು ತೊಟ್ಟು ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಸಹಜವಾಗಿ ಅಭಿನಯಿಸುತ್ತಿದ್ದ ಕಾರಣ ಕನ್ನಡ ಕಲಾರಸಿಕರ ಅಚ್ಚು ಮೆಚ್ಚಿನ ಅಭಿನೇತ್ರಿಯಾಗಿದ್ದರು ಎಂದರೂ ತಪ್ಪಾಗದು.

ಕಲೆ ಮತ್ತು ಸಾರಸ್ವತ ಲೋಕದಲ್ಲಿನ ಭಾರ್ಗವಿ ನಾರಾಯಣ್ ಅವರ ಸೇವೆಗಾಗಿ ಈ ಕೆಳಕಂಡ ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದಿದ್ದವು.

  • ಕರ್ನಾಟಕ ರಾಜ್ಯ ಚಲನಚಿತ್ರರಂಗದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
  • ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ
  • ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ
  • ಆಳ್ವಾಸ್ ನಡಿಸಿರಿ ಪ್ರಶಸ್ತಿ
  • ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ – ಅತ್ಯುತ್ತಮ ನಟಿ (ಎರಡು ಬಾರಿ)
  • ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ ಪ್ರಶಸ್ತಿ
  • ಕರ್ನಾಟಕ ಸಂಘ, ಶಿವಮೊಗ್ಗ ಮತ್ತು ಶ್ರೀಮತಿ ಗಂಗಮ್ಮ ಸೊಮಾಪ್ಪ ಬೊಮ್ಮೈ ಪ್ರತಿಷ್ಠಾನದ ಪ್ರಶಸ್ತಿ

ಸರಳ ಅಭಿನಯದ ಮೂಲಕ ಕನ್ನಡಿಗರ ಮನೆ ಮನಗಳಲ್ಲಿ ಪ್ರೀತಿ ಹಂಚಿದ್ದ ಕಿರುತೆರೆಯ ನೆಚ್ಚಿನ ಅಜ್ಜಿಯಾಗಿದ್ದ, ರಂಗಭೂಮಿ, ದೂರದರ್ಶನ ಮತ್ತು ಕನ್ನಡ ಚಿತ್ರರಂಗದಲ್ಲಿ ಮೌಲ್ಯಯುತ ಪಾತ್ರಗಳನ್ನು ನಿರ್ವಹಿಸುತ್ತಾ, ಅನುಭವಿ ಪಾತ್ರಧಾರಿ ಎಂದೇ ಪ್ರಖ್ಯಾತರಾಗಿದ್ದ, ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ತಮ್ಮ 84ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದಾಗಿ ದಿನಾಂಕ 14.02.2022 ರಂದು ತಮ್ಮ ಪತಿಯವರ ಜೊತೆ ಸೇರಿಕೊಂಡಿದ್ದಾರೆ. ಭಾರ್ಗವಿಯವರ ಕಳೇಬರವನ್ನು ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ಮಾಡದೇ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ‌ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಎತ್ತಿ ಹಿಡಿದಿರುವುದು ಅನನ್ಯ ಮತ್ತು ಅನುಕರಣೀಯವಾಗಿದೆ.

ಕಲಾವಿದರಿಗೆ ಎಂದೂ ಸಾವಿಲ್ಲ. ಕಲಾವಿದರು ಭೌತಿಕವಾಗಿ ನಮ್ಮನ್ನಗಲಿದರೂ ಅವರ ಅಭಿನಯಿಸಿದ ಧಾರಾವಾಹಿ, ನಾಟಕಗಳು, ಚಲನ ಚಿತ್ರಗಳು ಮತ್ತು ಪುಸ್ತಕಗಳ ಮೂಲಕ ಅಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ ಎನ್ನುವುದು ಸರ್ವಕಾಲಿಕ ಸತ್ಯವಾಗಿದೆ. ಅಂತಹ ಹಿರಿಯ ನಟಿಗೆ ನಮ್ಮೆಲ್ಲರ ಹೃದಯಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸುವುದಲ್ಲದೇ ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಅವಿತಿಟ್ಟ ಇತಿಹಾಸ  

WhatsApp Image 2021-12-03 at 12.49.10 PMಕಳೆದ ಭಾನುವಾರ ಬೆಂಗಳೂರಿನಲ್ಲಿ ಖ್ಯಾತ ಲೇಖಕರಾದ ಶ್ರೀ ಪ್ರವೀಣ್ ಮಾವಿನಕಾಡು ಮತ್ತು ಡಾ. ಸುಧಾಕರ್ ಹೊಸಳ್ಳಿ ಈ ಇಬ್ಬರು ಲೇಖಕರು ಬರೆದಿರುವ ಅವಿತಿಟ್ಟ ಅಂಬೇಡ್ಕರ್ ಎಂಬ ಕೃತಿ ಖ್ಯಾತ ರಂಗಕರ್ಮಿಗಳಾದ ಶ್ರೀ ಪ್ರಕಾಶ್ ಬೆಳವಾಡಿ ಶ್ರೀ ಆಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳದ ಶ್ರೀ ರಘುನಂದನ್ ಭಟ್ ಮತ್ತು ರಾಜ್ಯ ವಕೀಲರ ಪರಿಷತ್ತಿನ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಕುಮಾರ್ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಆಯಿತು.

WhatsApp Image 2021-12-03 at 12.48.06 PMಈ ಪುಸ್ತಕ ಬಿಡುಗಡೆಯ ಕುರಿತಂತೆ ನಾಡಿನ ಬಹುತೇಕ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಉತ್ತಮವಾಗಿ ವರದಿ ನೀಡಿದವಲ್ಲದೇ, ಅಂಬೇಡ್ಕರ್ ಅವರು ಬದುಕಿದ್ದಾಗ ಬಗೆ ಬಗೆಯಾಗಿ ಕಷ್ಟಗಳನ್ನು ಕೊಟ್ಟಿದ್ದಲ್ಲದೇ ಅಂಬೇಡ್ಕರ್ ಅವರನ್ನು ಎರಡು ಬಾರಿ ಸಾರ್ವಜನಿಕ ಚುನಾವಣೆಯಲ್ಲಿ ಸೋಲಿಸಿದ ಅಂದಿನ ನೆಹರು ಕಾಂಗ್ರೇಸ್ಸಿನ ಇಬ್ಬಂಧಿತನ ಹೊರಗೆ ಬರುತ್ತಿದ್ದಂತೆಯೇ ಸೆಖೆಯನ್ನು ತಾಳಲಾರದೇ ಬಿಲದಿಂದ ಹೊರ ಬರುವ ಹಾವುಗಳಂತೆ, ಈ ಕಠು ಸತ್ಯವನ್ನು ಅರಗಿಸಿ ಕೊಳ್ಳಲಾಗದ ಕೆಲವರು ಎಪ್ಪತ್ತು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಈಗ ಕೆದಕುವ ಔಚಿತ್ಯವನ್ನು ಪ್ರಶ್ನಿಸುತ್ತಿರುವುದು ನಿಜಕ್ಕೂ ಸೋಜಿಗವೆನಿಸಿತು.

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟೀಷರು ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯನ್ನೇ ಮುಂದಾಗಿಟ್ಟುಕೊಂಡು ನಮ್ಮನ್ನೇ ಒಡದು ಅಧಿಕಾರವನ್ನು ಪಡೆದು ಕೊಳ್ಳುತ್ತಿದ್ದದ್ದನ್ನು ಜನರಿಗೆ ತಿಳಿಯಪಡಿಸಲು ಮುಂದಾದ, ಅಂದಿಗೂ ಇಂದಿಗೂ ಮತ್ತು ಮುಂದೆಯೂ ಬುದ್ಧಿವಂತರು ಮತ್ತು ಶ್ರಮಜೀವಿಗಳಾಗಿರುವ ಈ ದೇಶದಲ್ಲಿ ಕೇವಲ 3% ರಷ್ಟು ಇರುವ ಬ್ರಾಹ್ಮಣರನ್ನು ಹತ್ತಿಕ್ಕುವ ಸಲುವಾಗಿ ತಲೆ ತಲಾಂತರದಿಂದಲೂ ಭಾರತದಲ್ಲಿದ್ದ ಜಾತೀ ಪದ್ದತಿ ಮತ್ತು ಅಸ್ಪೃಷ್ಯತೆಯನ್ನು ಮುಂದಾಗಿಟ್ಟು ಕೊಂಡು ಇವೆಲ್ಲದ್ದಕ್ಕೂ ಬ್ರಾಹ್ಮಣರೇ ಕಾರಣರು ಎಂಬ ಕಾಗಕ್ಕಾ ಗುಬ್ಬಕ್ಕಾ ಕಥೆಯ ಮೂಲಕ ದೇಶದಲ್ಲಿ ದಲಿತ ಮತ್ತು ಬಲಿತ ಎಂಬ ಹೊಸಾ ಸಮಸ್ಯೆಯನ್ನು ಹುಟ್ಟು ಹಾಕುವ ಮೂಲಕ ಸದ್ದಿಲ್ಲದೇ ಈ ದೇಶವನ್ನು ತಮ್ಮ ವಸಹಾತುವನ್ನಾಗಿ ಮಾಡಿಸಿಕೊಂಡರು.

ಸಾವಿರ ವರ್ಷಗಳಷ್ಟು ಸುದೀರ್ಘವಾಗಿ ಮೊಘಲರ ಸತತ ಧಾಳಿಯನ್ನು ಎದುರಿಸಿಯೂ ಗುರುಕುಲ ಪದ್ದತಿಯ ಮೂಲಕ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಬಲಾಡ್ಯವಾಗಿದ್ದ ನಮ್ಮ ಭಾರತ ದೇಶವನ್ನು ಬ್ರಿಟೀಷರ ಮೆಕಾಲೆ ಎಂಬ ವ್ಯಕ್ತಿ ತನ್ನ ಶಿಕ್ಷಣದ ಪದ್ದತಿಯ ಮೂಲಕ ಸಂಪೂರ್ಣವಾಗಿ ಛಿದ್ರ ಛಿದ್ರ ಮಾಡಿದ್ದಲ್ಲದೇ ನೋಡ ನೋಡುತ್ತಿದ್ದಂತೆಯೇ ರೂಪದಲ್ಲಿ ಭಾರತೀಯರದರೂ ಮಾನಸಿಕವಾಗಿ ಬ್ರಿಟೀಷರಾಗಿದ್ದಂತಹ ಭಾರತೀಯರನ್ನು ಹುಟ್ಟು ಹಾಕುವುದರಲ್ಲಿ ಸಫಲರಾದರು. ಅಂತಹ ಕೆಲ ಕಲಬೆರೆಕೆ ಭಾರತೀಯರೇ ತಮ್ಮ ಅಧಿಕಾರದ ತೆವಲಿಗಾಗಿ ಎಲ್ಲರ ಮುಂದೆ ಬ್ರಿಟೀಷರ ವಿರುದ್ಧ ಹೊರಾಟ ಮಾಡುವಂತೆ ನಟಿಸುತ್ತಲೇ ಆಂತರಿಕವಾಗಿ ಬ್ರಿಟೀಷರೊಂದಿಗೇ ಬೆರೆತು ಹೋಗಿದ್ದರು ಎನ್ನುವುದು ವಿಪರ್ಯಾಸ.

neh1ಇಂತಹ ಅಧಿಕಾರದಾಹಿತ್ವದ ಅಗ್ರೇಸರರಾಗಿ ಭಾರತದ ಪ್ರಥಮ ಪ್ರಧಾನಮಂತ್ರಿಗಳಾಗಿದ್ದ ಪಂಡಿತ್ ಜವಹರ್ ಲಾಲ್ ಅವರಾಗಿದ್ದರು ಎನ್ನುವುದೇ ಈ ದೇಶದ ಕಳಂಕ. ಈ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಅಖಂಡ ಭಾರತವನ್ನು ತುಂಡರಿಸಿದ್ದಲ್ಲದೇ ತನ್ನ ಧೂರಣೆಗೆ ಅಡ್ಡ ಬರುತ್ತಿದ್ದವರ ವಿರುದ್ಧ ಮಹಾತ್ಮಾ ಗಾಂಧಿ ಅವರನ್ನು ಗುರಾಣಿಯಾಗಿಸಿಕೊಂಡು ಸದ್ದಿಲ್ಲದೇ ಮಟ್ಟ ಹಾಕಿದ ಇತಿಹಾಸವನ್ನೇಕೆ ಅವಿತಿಡಬೇಕು?
nehe
ನಿಜ ಹೇಳಬೇಕೆಂದರೆ ಈ ದೇಶದ ಬಹುತೇಕ ನಾಯಕರ ಬೆನ್ನಿಗೆ ಚೂರಿ ಹಾಕಿಯೇ ನೆಹರೂ ಮತ್ತವರ ಕುಟುಂಬ ಸುಮಾರು 60 ವರ್ಷಗಳ ಕಾಲ ಈ ದೇಶವನ್ನು ತಮ್ಮ ಜಹಗೀರು ಎನ್ನುವಂತೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತಲ್ಲದೇ, ಇಂದಿಗೂ ಸಹಾ ಅದೇ ಧೋರಣೆಯಲ್ಲಿ ಈ ದೇಶದಲ್ಲಿ ಕೊಮುದಳ್ಳುರಿ ಎಬ್ಬಿಸುತ್ತಿರುವ ಇತಿಹಾಸವನ್ನೇಕೆ ಅವಿತಿಡಬೇಕು?

neh2ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ವಯಕ್ತಿಯ ತೆವಲುಗಳಿಗಾಗಿ ಈ ದೇಶ ಇಬ್ಬಾಗವಾಗುವುದು ನಿಶ್ಚಿತವಾಗಿ ಈ ದೇಶದ ಮೊದಲ ಪ್ರಧಾನಿಗಳು ಯಾರಾಗಬೇಕು ಎಂದು ನಿರ್ಧರಿಸುವ ಸಲುವಾಗಿ ಮಹಾತ್ಮಾ ಗಾಂಧಿಯವರ ನೇತೃತ್ವದ ನಡೆದ ಸಭೆಯಲ್ಲಿ, ಸರ್ದಾರ್ ವಲ್ಲಭಾಯಿ ಪಟೇಲರನ್ನೇ ಬಹುಮತದಿಂದ ಆಯ್ಕೆ ಮಾಡಿದರೂ, ಮತ್ತದೇ ಗಾಂಧಿಯವರ ಮೇಲೆ ಒತ್ತಡ ಹಾಕಿ ಈ ದೇಶಕ್ಕೆ ಪ್ರಪ್ರಥಮ ಪ್ರಧಾನಿಯಾದ ನೆಹರು ಇತಿಹಾಸವನ್ನೇಕೆ ಅವಿತಿಡಬೇಕು?

rpದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಜವಾಹರಲಾಲ್ ನೆಹರು ಅವರು ಭಾರತದ ಮೊದಲ ರಾಷ್ಟ್ರಪತಿಯನ್ನಾಗಿ ಶ್ರೀ ರಾಜೇಂದ್ರ ಪ್ರಸಾದ್ ಅವರನ್ನು ನೇಮಕ ಮಾಡಲು ಬಹುತೇಕ ಕಾಂಗ್ರೇಸ್ಸಿಗರು ನಿರ್ಧರಿದರೂ, ಪ್ರಸಾದ್ ಅವರು ವಲ್ಲಭಭಾಯಿ ಪಟೇಲರ ಆತ್ಮೀಯರು ಎನ್ನುವ ಒಂದೇ ಕಾರಣದಿಂದಾಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ವಿರೋಧಿಸಿ, ಆ ಸ್ಥಾನಕ್ಕೆ ಬ್ರಿಟೀಷರ ಆದರ್ಶಕ್ಕೆ ಸರಿ ಹೊಂದುತ್ತಾರೆ ಎನ್ನುವ ಕಾರಣದಿಂದಲೇ ಭಾರತದ ಕೊನೆಯ ವೈಸ್‌ರಾಯ್‌ ಆಗಿದ್ದ ಸಿ ರಾಜಗೋಪಾಲಾಚಾರಿಯವರಿಗೆ ಆದ್ಯತೆ ನೀಡಿದ್ದ ಇತಿಹಾಸವನ್ನೇಕೆ ಅವಿತಿಡಬೇಕು?

somanathಪದೇ ಪದೇ ಮುಸಲ್ಮಾನರ ಧಾಳಿಗೆ ಒಳಗಾಗಿದ್ದ ಗುಜರಾತಿನ ಸೋಮನಾಥ ದೇವಾಲಯದ ಪುನರ್ನಿರ್ಮಾಣ ಮಾಡಲು ದೇಶದ ಪ್ರಥಮ ಗೃಹಮಂತ್ರಿಗಳಾಗಿದ್ದ ಸರ್ದಾರ್ ಪಟೇಲ್ ಅವರು ಕೈಗೆತ್ತಿಕೊಂಡಾಗ ಮತ್ತದೇ ನೆಹರು ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಆ ದೇವಾಲಯದ ನಿರ್ಮಾಣಕ್ಕಾಗಿ ಸರ್ಕಾರದಿಂದ ಯಾವುದೇ ರೀತಿಯ ಹಣಕಾಸಿನ ನೆರವನ್ನು ನೀಡುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಸರ್ಕಾರ ಕೊಡದಿದ್ದರೇನಂತೆ ಎಂದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಬೃಹದಾದ ಸೋಮನಾಥ ದೇವಾಲಯವನ್ನು ನಿರ್ಮಿಸಿ ಅದರ ಉದ್ಭಾಟನೆಯ ಮುಂಚೆಯೇ ಪಟೇಲರು ಅಸುನೀಗಿದಾಗ, ಆ ದೇವಾಲಯದ ಉಧ್ಭಾಟನೆಗೆ ದೇಶದ ರಾಷ್ಟ್ರಪತಿಗಳಾಗಿ ಶ್ರೀ ಬಾಬು ರಾಜೇಂದ್ರ ಪ್ರಸಾದರು ಹೋಗಬಾರದೆಂದು ತಾಕೀತು ಮಾಡಿದ್ದ ನೆಹರು ಅವರ ಹಿಂದೂ ವಿರೋಧಿತನವನ್ನೇಕೆ ಅವಿತಿಡಬೇಕು?

ನೆಹರು ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಹಿಂದೂ ಕೋಡ್ ಬಿಲ್ ಜಾರಿಗೆ ತರಲು ನಿರ್ಧರಿಸಿದಕ್ಕೆ ಸಹಿಹಾಕಲು ವಿರೋಧಿಸಿದ ರಾಜೇಂದ್ರ ಪ್ರಸಾದರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಮೂಲಕ ದೇಶವಾಸಿಗಳೆಲ್ಲರಿಗೂ ಅವರ ಧಾರ್ಮಿಕ ನಿಲುವಿನ ಹೊರತಾಗಿಯೂ ಒಂದೇ ರೀತಿಯ ಕಾನೂನು ಇರಬೇಕಂದು ಬಯಸಿದರು. ಇದೇ ನಿಲುವಿಗೆ ಅಂದಿನ ಅನೇಕ ಕಾಂಗ್ರೇಸ್ಸಿಗರು ಬೆಂಬಲಿಸಿದ ಕಾರಣ ಆರಂಭದಲ್ಲಿ ತಣ್ಣಗಾಗಿದ್ದ ನೆಹರು, ರಾಜೇಂದ್ರ ಪ್ರಸಾದ್ ಅವರ ಅಧಿಕಾರದ ಅವಧಿ ಮುಗಿದ ನಂತರ ಎರಡನೇ ಬಾರಿಗೆ ಅವರನ್ನು ಮುಂದುವರೆಸಲು ನಿರಾಕರಿಸಿ ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿ 1955-56ರಲ್ಲಿ ನಾಲ್ಕು ಹಿಂದೂ ಕೋಡ್ ಬಿಲ್‌ಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಹಿಂದೂ ವಿವಾಹ ಕಾಯಿದೆ, ಹಿಂದೂ ಉತ್ತರಾಧಿಕಾರ ಕಾಯಿದೆ, ಹಿಂದೂ ಅಲ್ಪಸಂಖ್ಯಾತ ಮತ್ತು ಪಾಲಕತ್ವ ಕಾಯಿದೆ, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ, ವಿಶ್ವ ನಾಯಕನಾಗುವ ತೆವಲಿನಲ್ಲಿ ಬೆರಳಲ್ಲಿ ಬಗೆ ಹರಿಸಬಹುದಾಗಿದ್ದ ಕಾಶ್ಮೀರದ ಸಮಸೆಯನ್ನು ವಿಶ್ವ ಸಂಸ್ಥೆಯ ವರೆಗೆ ಕೊಂಡ್ಯೊಯ್ದು ಇಂದಿಗೂ ಆ ಸಮಸ್ಯೆ ಜೀವಂತವಾಗಿರುವಂತೆ ಮಾಡಿದಂತೆ, ಈ ಕಾನೂನುಗಳನ್ನು ಜಾರಿಗೆಗೊಳಿಸುವ ಮೂಲಕ ಇಂದಿಗೂ ದೇಶದಲ್ಲಿ ಅಸಮಾನತೆಯನ್ನು ಮುಂದುವರೆಯುವಂತೆ ಮಾಡಿದ ಇತಿಹಾಸವನ್ನೇಕೆ ಅವಿತಿಡಬೇಕು?

ದೂರದೃಷ್ಟಿಯ ಕೊರತೆಯಿಂದ ತನ್ನ ಅಲಿಪ್ತ ನೀತಿಯ ಭ್ರಮಾಲೋಕದಲ್ಲಿ ತೇಲಾಡುತ್ತಲೇ ನೆಹರು ಹಿಂದೀ ಚೀನೀ ಭಾಯ್ ಎಂದು ಕನವರಿಸುತ್ತಿರುವಾಗಲೇ, ಸದ್ದಿಲ್ಲದೇ ಚೀನಾ ಭಾರತದ ಮೇಲೆ ಧಾಳಿ ನಡೆಸಿ ಲಢಾಕ್ ಪ್ರದೇಶದ ಲಕ್ಷಾಂತರ ಮೀಟರುಗಳ ಭೂಭಾಗವನ್ನು ಆಕ್ರಮಿಸಿಕೊಂಡಾಗ ಅದರ ವಿರುದ್ಧ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದಾಗ ಒಂದು ಹುಲ್ಲುಕಡ್ಡಿಯೂ ಆ ಜಾಗದಲ್ಲಿ ಬೆಳೆಯುವುದಿಲ್ಲ ಆ ಜಾಗ ಎಲ್ಲಿದೆ ಎಂದೇ ನಮಗೆ ತಿಳಿದಿರಲಿಲ್ಲ ಎಂದು ಪ್ರಧಾನಿಯಾಗಿ ವ್ಯಂಗ್ಯವಾಡಿದ್ದ ಸತ್ಯವನ್ನೇಕೆ ಅವಿತಿಡಬೇಕು?

veerghatನೆಹರು ಅವರು ನಿಧನರಾದ ನಂತರ ಆವರ ಮಗಳು ಇಂದಿರಾಗಾಂಧಿಯನ್ನು ಅಧಿಕಾರಕ್ಕೆ ತರಲು ಮುಂದಾದ ನೆಹರು ಅವರ ವಂಧಿಮಾಗಧರ ಆಸೆಗೆ ತಣ್ಣೀರೆರಚಿ ಮಹಾನ್ ದೇಶಭಕ್ತ, ಸರಳ ಸಜ್ಜನ, ಅಜಾತಶತ್ರುಗಳಾಗಿದ್ದ, ಜನಾನುರಾಗಿಗಳಾಗಿದ್ದ ಶ್ರೀ ಲಾಲ ಬಹದ್ದೂರ್ ಶಾಸ್ತ್ರಿಗಳು ಈ ದೇಶದ ಪ್ರಧಾನಿಗಳಾಗಿ ಅಮೇರಿಕಾವನ್ನೂ ಎದುರು ಹಾಕಿಕೊಂಡು ಭಾರತದ ಮೇಲೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಿದ್ದ ಪಾಕೀಸ್ಥಾನಕ್ಕೆ ಮಣ್ಣುಮುಕ್ಕಿಸಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ ವಿವಾದಾತ್ಮಕವಾಗಿ ರಷ್ಯಾದಲ್ಲೇ ನಿಧನರಾದ ಶಾಸ್ತ್ರಿಗಳ ಸಮಾದಿಗೆ ದೆಹಲಿಯಲ್ಲಿ ಜಾಗವನ್ನು ನೀಡಲು ನಿರಾಕರಿಸಿ ನಂತರ ಜನರ ಒತ್ತಾಯಕ್ಕೆ ಮಣಿದ ಅಂದಿನ ಕಾಂಗ್ರೇಸ್ ಇಬ್ಬಂಧಿತನವನ್ನೇಕೆ ಅವಿತಿಡಬೇಕು?

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ಅವಿತಿಟ್ಟ ಇತಿಹಾಸಗಳು ಹೊರಗೆ ಬರುವ ಮೂಲಕ ಅದೆಷ್ಟೋ ಎಲೆಮರೆ ಕಾಯಿಯಂತಹ ಪ್ರಾಥಃ ಸ್ಮರಣೀಯ ವೀರ ಯೋಧರ ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯಕ್ಕೆ ಗೆದ್ದಲು ಹುಳಗಳು ಕಟ್ಟಿದ ಹುತ್ತದಲ್ಲಿ ಬಂದು ಸೇರಿಕೊಂಡು ಅದೇ ಗೆದ್ದಲು ಹುಳುಗಳನ್ನು ತಿಂದು ಹಾಕುವ ಹಾವಿನಂತೆ ಈ ದೇಶಕ್ಕೆ ವಕ್ಕರಿಸಿಕೊಂಡ ನೆಹರು ಮತ್ತವರ ಕುಟುಂಬದವರ ನಿಜವಾದ ಬಣ್ಣ ಬಯಲಾಗುತ್ತದೆ.

ದೇಶದ ನಿಜವಾದ ಇತಿಹಾಸವನ್ನು ಅರಿಯದಿದ್ದಲ್ಲಿ ದೇಶವನ್ನು ಸುಭಧ್ರವಾಗಿ ಕಟ್ಟಲಾಗದು ಮತ್ತು ಮುನ್ನಡೆಸಲಾಗದು ಎಂಬ ಸತ್ಯದಂತೆ ಪ್ರವೀಣ್ ಮಾವಿನ ಕಾಡು ಮತ್ತು ಡಾ. ಸುಧಾಕರ್ ಹೊಸಳ್ಳಿಯಂತಹ ನಿರ್ಭಿಡೆಯ ತರುಣರು ಧೈರ್ಯದಿಂದ ಮತ್ತಷ್ಟು ಮಗದಷ್ಟು ಅವಿತಿಟ್ಟ ಸಂಗತಿಗಳನ್ನು ಬಯಲಿಗೆಳೆದು ಅಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ದೇಶವನ್ನು ಸಧೃಢವಾಗಿ ಪಡಿಸಬಹುದಲ್ಲದೇ, ಭಾರತವನ್ನು ಮತ್ತೊಮ್ಮೆ ವಿಶ್ವಗುರುವಾಗಿ ಮೆರೆಸಬಹುದಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ