ಉಲ್ಟೇ ಹನುಮಾನ್ ಮಂದಿರ್

han5

ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಕಾಣಬಹುದಾಗಿದೆ.

temple1

ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ದೇಶದ ಮಧ್ಯಪ್ರದೇಶದ ಇಂದೋರ್ ಜಿಲ್ಲೆಗೆ ಸೇರಿದ ಸ್ಯಾನ್ವೆರ್ ಪಟ್ಟಣದಲ್ಲಿ ತಲೆಕೆಳಕಾಗಿರುವ ಅರ್ಥಾತ್ ಶೀರ್ಷಾಸನದ ಭಂಗಿಯಲ್ಲಿರುವ ವಿಶಿಷ್ಟವಾದ ಉಲ್ಟೇ ಹನುಮಾನ್ ಮಂದಿರ್ ಎಂಬ ದೇವಾಲಯವೊಂದಿದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ?

ulte

ಹೌದು ನಿಜ. ಇಂದೋರ್‌ನಿ ಜಿಲ್ಲಾ ಪ್ರಧಾನ ಕಚೇರಿಯಿಂದ ಉತ್ತರಕ್ಕೆ 30 ಕಿ.ಮೀ ಮತ್ತು ಪುರಾಣ ಪ್ರಸಿದ್ಧ ಉಜ್ಜಯಿನಿಯಿಂದ ಸುಮಾರು 30 ಕಿ.ಮೀ ದೂರದಲ್ಲಿ ಇಂತಹದ್ದೊಂದು ವಿಭಿನ್ನವಾದ ಮತ್ತು ವಿಶಿಷ್ಟವಾದ ದೇವಾಲಯವಿದೆ. ಬಹುಶಃ ಈ ರೀತಿಯಾಗಿ ತಲೆ ಕೆಳಾಗಾಗಿರುವ ವಿಶ್ವದ ಏಕೈಕ ಹನುನಂತನ ಪ್ರತಿಮೆಯಾಗಿದೆ ಎಂದರೂ ತಪ್ಪಾಗಲಾರದೇನೋ? ಸ್ಥಳೀಯ ದಂತಕಥೆಯ ಪ್ರಕಾರ, ಈ ದೇವಾಲಯವು ರಾಮಾಯಣ ಕಾಲದಿಂದಲೂ ಇದೆೆ ಎಂಬ ನಂಬಿಕೆಯಿದೆ. ಈ ದೇವಾಲಯದಲ್ಲಿರುವ ಆಂಜನೇಯನ ವಿಗ್ರಹವನ್ನು ಸದಾಕಾಲವೂ ಸಿಂಧೂರದಿಂದ ಅಲಂಕರಿಸಲಾಗಿರುವುದು ಇನ್ನೂ ಗಮನಾರ್ಹವಾಗಿದೆ.

temple9

ತಲೆಕೆಳಗಾಗಿರುವುದರಿಂದಲೋ ಏನೋ? ಈ ದೇವಾಲಯ ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳನ್ನು ತನ್ನತ್ತ ಗಮನ ಸೆಳೆಯುತ್ತಿದೆ. ಇಲ್ಲಿನ ಸ್ಥಳೀಯರ ಪ್ರಕಾರ ಮೂರು ಅಥವಾ ಐದು ಮಂಗಳವಾರಗಳು ಈ ಉಲ್ಟೇ ಹನುಮಂತನನ್ನು ಅಚಲ ಭಕ್ತಿಯಿಂದ ಪೂಜಿಸಿದರೆ ಅವರ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆಯೂ ಇರುವುದರಿಂದ ಪ್ರತೀ ಮಂಗಳವಾರವೂ ಇಲ್ಲಿ ಒಂದು ರೀತಿಯ ಜನಜಂಗುಳಿ ಸೇರಿ ಜಾತ್ರೆಯೇ ನಡೆಯುತ್ತದೆ. ಪ್ರತೀ ಮಂಗಳವಾರವೂ ಇಲ್ಲಿ ಭಕ್ತಾದಿಗಳು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ತಮ್ಮ ಶಕ್ತ್ಯಾನುಸಾರ ಹನುಮನ್ ಚಾಲಿಸವನ್ನು ಪಠಿಸಿ ತಮ್ಮ ಮನೋಕಾಮನೆಗಳನ್ನು ಪರಿಹರಿಸಿಕೊಳ್ಳುತ್ತಾರೆ.

temple7

ಎಲ್ಲಿ ಹನುಮನೋ ಅಲ್ಲಿ ರಾಮನು. ಎಲ್ಲಿ ರಾಮನೋ ಅಲ್ಲಿ ಹನುಮನೂ. ರಾಮನ ಉಸಿರೇ ಹನುಮಾ.. ಹನುಮನ ಪ್ರಾಣವೇ ರಾಮಾ.. ಎನ್ನುವಂತೆ ಈ ದೇವಾಲಯದಲ್ಲಿ ತಲೆಕೆಳಗಾದ ಹನುಮಂತನಲ್ಲದೇ, ಶ್ರೀರಾಮ, ಸೀತಾ ಮತ್ತು ಲಕ್ಷಣರ ಸುಂದರ ಮೂರ್ತಿಯಿದೆ. ಇದರ ಜೊತೆ ಬಹಳ ಹಳೆಯದಾದ ಎರಡು ಪಾರಿಜಾತದ ಮರಗಳೂ ಇವೆ. ಇಲ್ಲಿನ ಸ್ಥಳೀಯರ ಪ್ರಕಾರ, ರಾಮಾಯಣ ಕಾಲದಲ್ಲಿ, ರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿದ್ದಾಗ, ಶ್ರೀರಾಮನ ಕೈ ಮೇಲಾಗುತ್ತಿದ್ದದ್ದನ್ನು ಗಮನಿದ ರಾವಣನು ತನ್ನ ತಮ್ಮ ಅಹಿರಾವಣನನ್ನು ಕರೆದು ಹೇಗಾದರು ಮಾಡಿ ರಾಮನನ್ನು ಸೋಲಿಸಲೇ ಬೇಕು ಎಂದಾಗ, ಅಣ್ಣನ ಆಜ್ಞಾಪಾಲಕನಾಗಿ ತನ್ನ ಮಾಯಾಜಾಲದಿಂದ ವಿಭೀಷಣನ ವೇಷಧಾರಿಯಾಗಿ ಅಹಿರಾವಣನು ಶ್ರೀರಾಮ ಲಕ್ಷಣರ ತಂಡವನ್ನು ಸೇರಿಕೊಂಡು ಅದೊಂದು ರಾತ್ರಿ ರಾಮ ಲಕ್ಷ್ಮಣರು ನಿದ್ರಿಸುತ್ತಿದ್ದಾಗ ಅವರಿಬ್ಬರನ್ನೂ ತನ್ನ ಮಾಯಾಶಕ್ತಿಯಿಂದ ಪಾತಾಳ ಲೋಕಕ್ಕೆ ಹೊತ್ತೊಯ್ಯುತ್ತಾನೆ.

ravan3

ತಾನು ಪಾತಾಳಲೋಕಕ್ಕೆ ಹೋದಲ್ಲಿ ತನ್ನನ್ನು ಅಲ್ಲಿ ಯಾರೂ ಸೋಲಿಸಲಾರರು ಎಂಬ ನಂಬಿಕೆ ಅಹಿರಾವಣನಿಗೆರುತ್ತದೆ. ಬೆಳಿಗ್ಗೆ ರಾಮ ಲಕ್ಷ್ಮಣರನ್ನು ಕಾಣದೆ ಕಳವಳಗೊಂಡ ಕಪೀ ಸೇನೆ ಮತ್ತೆ ಅವರಿಬ್ಬರನ್ನೂ ಹುಡುಕಿ ಕರೆತರಲು ಆಂಜನೇಯನನ್ನು ಕೇಳಿಕೊಳ್ಳುತ್ತದೆ. ಎಲ್ಲರ ಇಚ್ಚೆಯಂತೆ ರಾಮ ಲಕ್ಷ್ಮಣನನ್ನು ಹುಡುಕುತ್ತಾ, ಹನುಮಂತನು ಪಾತಾಳವನ್ನು ತಲುಪಿ ಅಲ್ಲಿ ಅಹಿರಾವಣನೊಂದಿಗೆ ಘನಘೋರವಾದ ಯುದ್ಧವನ್ನು ಮಾಡಿ ಅವನನ್ನು ಸಂಹರಿಸಿ, ಶ್ರೀ ರಾಮ ಮತ್ತು ಲಕ್ಷ್ಮಣರನ್ನು ಭೂಲೋಕಕ್ಕೆ ಮತ್ತೆ ಹಿಂದಕ್ಕೆ ಕರೆತರುತ್ತಾನೆ.

h10

ಇಲ್ಲಿನ ಜನರ ನಂಬಿಕೆಯ ಪ್ರಕಾರ ಹನುಮಂತನು ಇದೇ ದೇವಾಲಯದ ಮೂಲಕವೇ ಪಾತಾಳವನ್ನು ತಲುಪಿದ ಎನ್ನಲಾಗಿದೆ. ಪಾತಾಳ ಲೋಕಕ್ಕೆ ಹೋಗುವಾಗ, ನೀರಿನಲ್ಲಿ ಹನುಮಂತನ ತಲೆ ಕೆಳಗಾಗಿದ್ದು ಆತನ ಪಾದಗಳು ಆಕಾಶದ ಕಡೆಗೆ ಇದ್ದ ಕಾರಣ ಅದೇ ಭಂಗಿಯಲ್ಲಿಯೇ ಇರುವ ಹನುಮಂತನ ವಿಗ್ರಹವನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.

ನಮ್ಮ ದೇಶದಲ್ಲಿ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಇಂತಹ ಅನೇಕ ವೈಶಿಷ್ಟ್ಯಗಳನ್ನು ಕಾಣಬಹುದಾದರೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ಸುಂದರವಾದ ದೇಶ ನಮ್ಮದಾಗಿದೆ ಎನ್ನುವುದೇ ನಮ್ಮ ಹೆಮ್ಮೆ ಅಲ್ವೇ? ಎಲ್ಲೇ ಇರಲಿ ಹೇಗೇ ಇರಲಿ ಎಂದೆದೂ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮಾತ್ರಾ ಮರೆಯದಿರೋಣ ಅಲ್ವೇ?.

ಏನಂತೀರೀ?
ನಿಮ್ಮವನೇ ಉಮಾಸುತ

ಈ ದೇವಾಲಯದ ಬಗ್ಗೆ ಮಾಹಿತಿ ತಿಳಿಸಿದ ನನ್ನ ತಮ್ಮ ಕುರುವಾಂಕ ಹರೀಶ್ ರಾಮಸ್ವಾಮಿಗೆ ಧನ್ಯವಾದಗಳು

ಗರಡಿ ಮನೆ

ಸುಮಾರು ಎರಡು ದಶಕಗಳ ಹಿಂದೆ ನಮ್ಮ ದೇಶದ ಬಹುತೇಕ ಹಳ್ಳಿಗಳಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿಯೇ ಅಲ್ಲೊಂದು ಸುಮಾರಾಗಿರುವ ಕಟ್ಟಡ ಅದರ ಮೇಲೊಂದು ಕೇಸರಿ ಬಾವುಟ ಎದ್ದು ಕಾಣುತ್ತಿದ್ದಲ್ಲಿ ಆ ಊರಿನಲ್ಲಿ ಯಾವುದೇ ಕಳ್ಳಕಾಕರ ಭಯವಿಲ್ಲ. ಆ ಊರಿನ ಹೆಣ್ಣುಮಕ್ಕಳು ನಿರ್ಭಿಡೆಯಾಗಿ ಯಾವ ಹೊತ್ತಿನಲ್ಲಾದರೂ ಓಡಾಡಬಹುದು. ಅಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟವಿರುವುದಿಲ್ಲ ಎಂಬ ಭರವಸೆಯನ್ನು ಮೂಡಿಸುತ್ತಿದ್ದವು. ಅರೇ, ಒಂದು ಕಟ್ಟಡದಿಂದಾಗಿ ಇಷ್ಟೊಂದು ಸಾಮಾಜಿಕ ಬದಲಾವಣೆಯೇ ಎಂದು ತಿಳಿದಲ್ಲಿ, ಆ ಕಟ್ಟಡ ಸಾಮ್ಯಾನ್ಯ ಕಟ್ಟಡವಾಗಿರದೇ, ಅದನ್ನು ಗರಡಿ ಮನೆ ಎಂದು ಕರೆಯಲಾಗುತ್ತಿತ್ತು.

gm1ಕಟ್ಟಡದ ಒಳಗೆ ಕಾಲಿಡುತ್ತಿದ್ದಂತೆಯೇ, ಅಲ್ಲೊಂದು ಆಂಜನೇಯನ ದೊಡ್ಡದಾದ ವಿಗ್ರಹ ಇಲ್ಲವೇ ಬಜರಂಗಬಲಿಯ ಆಳೆತ್ತರದ ಭಾವ ಚಿತ್ರ, ಅದರ ಮುಂದೆ ನಂದಾದೀಪ ಉರಿಯುತ್ತಿದ್ದು, ಧೂಪದ ಆಹ್ಲಾದಕರ ಸುವಾಸನೆ ಮತ್ತು ಅಲ್ಲಿರುವ ಅಖಾಡದ ಮರಳು ಮಿಶ್ರಿತ ಕೆಂಪು ಮಣ್ಣಿನ ವಾಸನೆಯ ಜೊಗೆಗೆ ಮಿಶ್ರಿಣವಾಗಿ ನಮ್ಮ ಮೂಗಿನ ಮೂಲಕ ಹಿತಕರವಾದ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಅಲ್ಲಿ ಹತ್ತಾರು ಕಟ್ಟು ಮಸ್ತಿನ ಯುವಕರುಗಳು ಹನುಮಾನ್ ಚೆಡ್ಡಿ ಅರ್ಥಾತ್ ಲಂಗೋಟಿಗಳನ್ನು ಧರಿಸಿ, ದೇಹಕ್ಕೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಮಿರಮಿರನೆ ಮಿಂಚುತ್ತಾ, ಕೈಯಲ್ಲಿ ಕಲ್ಲುಗುಂಡು, ಬಳೆ, ಮರದ ಗದೆ, ಕೊಂತ ಮುಂತಾದ ಪರಿಕರಗಳನ್ನು ಬಳಸಿಕೊಂಡು ಕಸರತ್ತು ಮಾಡುತ್ತಿದ್ದರೆ, ಮತ್ತೊಂದು ಕಡೆ ಗುರುಗಳ ಸಮ್ಮುಖದಲ್ಲಿ ದಂಡ, ಬಸ್ಕಿಹೊಡೆಯುತ್ತಿರುವುದನ್ನು ಕಾಣ ಬಹುದಾಗಿತ್ತು.

gm2ಅಲ್ಲಿರುವರೆಲ್ಲರಿಗೂ ಅದು ಕೇವಲ ಗರಡಿ ಮನೆಯಾಗಿರದೇ, ಅದೊಂದು ಶಕ್ತಿ ಕೇಂದ್ತ ಮತ್ತು ಅವರಿಗೆ ದೇವಾಲಯವಿದ್ದಂತೆ. ಅಲ್ಲಿನ ಪವನಸುತ ಹನುಮಾನ ವಿಗ್ರಹ, ಕರೇಲಾ, ಮಲ್ಲಕಂಬಗಳು ಆ ದೇವರನ್ನು ಪೂಜಿಸಲು ಬಳಸುವ ಪರಿಕರಗಳಿದ್ದಂತೆ. ಇನ್ನು ಘಮ್ ಎಂದು ಸುವಾಸನೆ ಬೀರುವ ಕೆಮ್ಮಣ್ಣು ಅವರ ಪಾಲಿಗೆ ಗರ್ಭಗುಡಿ. ಅರಿಶಿನ. ಕುಂಕುಮ, ತುಪ್ಪ ಮಿಶ್ರಿತವಾಗಿರುವ ಈ ಮಣ್ಣಿನಲ್ಲಿ ಸಾಕಷ್ಟು ಔಷಧೀಯ ಸತ್ವವಿದ್ದು ಈ ಮಣ್ಣಿನಲ್ಲಿ ಮಿಂದೇಳುವುದರಿಂದ ಮೈ ಹಗುರಾಗುವುದಲ್ಲದೆ ಚರ್ಮವ್ಯಾಧಿಯೂ ದೂರವಾಗುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರತೀ ದಿನವೂ ಭಕ್ತಿಯಿಂದ ಆ ಮಣ್ಣಿಗೆ ನಮಸ್ಕರಿಸಿ, ಅದನ್ನೇ ತಿಲವಾಗಿ ಹಣೆಗೆ ಧರಿಸಿ, ಈ ಮಣ್ಣನ್ನು ಸನಿಕೆಯಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಹಾಕಬೇಕೆಂಬ ಅಲಿಖಿತ ನಿಯಮವಿರುತ್ತದೆ. ಇದರಿಂದ ಸ್ನಾಯುಗಳ ಧೃಢತೆ ಹೆಚ್ಚುವುದಲ್ಲದೆ ದೇಹದ ನಾನಾ ಅಂಗಗಳ ಸದೃಢತೆಗೆ ನೆರವಾಗುತ್ತದೆ.

WhatsApp Image 2020-08-08 at 8.14.05 PMಈ ಮಣ್ಣಿನಲ್ಲಿ ಹೆಚ್ಚಿನ ಕಬ್ಬಿಣದ ಅಂಶವಿದ್ದು ಅದು, ಮರಳು ಸ್ನಾನದ ಚಿಕಿತ್ಸೆಯಂತೆ, ದೇಹವನ್ನು ತಣ್ಣಗಾಗಿಸಿ, ದೇಹಕ್ಕೆ ವಿಶ್ರಾಂತಿಕೊಡುತ್ತದೆ. ಈ ಕೆಮ್ಮಣ್ಣಿನ ರಾಶಿಯೇ ಕುಸ್ತಿಪಟುಗಳ ವಜ್ರಕಾಯಕ್ಕೆ ಭದ್ರ ನೆಲೆಯಾಗಿರುತ್ತದೆ. ಗರಡಿದಲ್ಲಿ ಕಸರತ್ತು ಮಾಡಿ ಬಹುವಾಗಿ ದಣಿದು ಇಲ್ಲವೇ ಒತ್ತಡಕ್ಕೆ ಸಿಲುಕಿದ ಸಂದರ್ಭದಲ್ಲಿ ಈ ಮಣ್ಣನ್ನು ಹೊದ್ದು ಮಲಗಿದರೆ ನೋವು ಕೂಡಲೇ ನಿವಾರಣೆಯಾಗುತ್ತದೆ. ಮತ್ತು ಕುಸ್ತಿಯ ಅಭ್ಯಾಸದ ವೇಳೆ ಬೆನ್ನು, ಕೈ ಕಾಲುಗಳೇನಾದರೂ ಉಳುಕಿದರೆ ಈ ಮಣ್ಣಿನಲ್ಲಿ ಮಸಾಜ್ ಮಾಡಿಸಿಕೊಂಡೆವಾದರೆ ನೋವು ಉಪಶಮನವಾಗುತ್ತದೆ ಎಂಬ ನಂಬಿಕೆ ಇದೆ.

gm5ಈ ಗರಡಿಮನೆಯ ಗುರುಗಳನ್ನು ಉಸ್ತಾದ್ ಎಂದೇ ಸಂಬೋಧಿಸುವುದು ವಾಡಿಕೆ ಅವರ ಸಾರರ್ಥ್ಯದಲ್ಲಿ ಪ್ರತೀ ದಿನವೂ ಮುಂಜಾನೆಯೇ ಗರಡಿ ಮನೆಯತ್ತ ಬರುವ ಪೈಲ್ವಾನರುಗಳು ಅಖಾಡದಲ್ಲಿ ಕುಸ್ತಿಗೆ ಇಳಿಯುವ ಮೊದಲು ಅದಕ್ಕೆ ಪೂರಕವಾದ ತಾಲೀಮುಗಳಾದ ಕಲ್ಲಿನ ಸಣ್ಣ ಚಕ್ರಗಳಿಗೆ ಅಡ್ಡ ಕೋಲಿದ್ದು, ಅದನ್ನು ಒಂದು ಕೈಯಲ್ಲಿ ಎತ್ತಿ ಕಸರತ್ತು ಮಾಡುತ್ತಾ, ದೊಡ್ಡ ದೊಡ್ಡ ಗಾತ್ರದ ಚಕ್ರಗಳನ್ನು ಕುತ್ತಿಗೆ ಅಥವಾ ಭುಜದ ಮೇಲೆ ಕೂರುವಂತೆ ಹಾಕಿಕೊಂಡು ಬಸ್ಕಿ ಹೊಡೆಯುತ್ತಾ, ದೇಹದ ಪ್ರತಿಯೊಂದು ಅಂಗಕ್ಕೂ ಸದೃಢತೆಯನ್ನು ವೃದ್ಧಿಸುವ ವಿವಿಧ ಕಸರತ್ತುಗಳನ್ನು ಮಾಡಿ ತಮ್ಮ ಮೈಗಳನ್ನು ಹುರಿಗೊಳಿಸಿ ಹುಲಿಹೆಜ್ಜೆ, ಹನುಮಾನ್ ದಂಡೆ, ಕಟಾಪ್, ಚಪ್ಪಡಿದಂಡೆ, ಸುತ್ತಂಡೆ, ನಿಕಾಲ್, ಉಕಾಡ್, ಜರಾಸಂಧಿ, ಭೀಮಸೇನಿ ಪಟ್ಟು ಮುಂತಾದ ನಾನಾ ವಿಧದ ತಾಲೀಮುಗಳ ಮುಖಾಂತರ ಪರಸ್ಪರ ಕಾದಾಡುತ್ತಾ ತಮ್ಮ ಅಭ್ಯಾಸವನ್ನು ನಡೆಸುತ್ತಾರೆ. ಉಸ್ತಾದ್ ಗಳು ನಾನಾ ರೀತಿಯ ಪಟ್ಟುಗಳ ಮುಖಾಂತರ ಎದುರಾಳಿಯನ್ನು ಹೇಗೆ ಚಿತ್ ಮಾಡಿ, ಅವರನ್ನು ಮಣ್ಣು ಮುಕ್ಕಿಸು ಬೇಕು, ಅವರನ್ನು ಹೇಗೆ ನೆಲಕ್ಕೆ ಮಕಾಡೆ ಮಲಗಿಸ ಬೇಕು ಎಂಬುದನ್ನು ಖಲೀಫರು ಅರ್ಥಾತ್ ಉಸ್ತಾದರೂ ಸಾಕಷ್ಟು ಆಸ್ಥೆ ವಹಿಸಿ ಕಲಿಸಿಕೊಡುತ್ತಾರೆ.

ಈ ಗುರುಗಳು ಕೇವಲ ದೇಹದಾಡ್ಯ ಮತ್ತು ಕುಸ್ತಿಗಳಿಗಷ್ಟೇ ಪ್ರಾಮುಖ್ಯತೆ ವಹಿಸದೇ, ತಮ್ಮ ಪೈಲ್ವಾನ್ ಶಿಷ್ಯಂದಿರ ಆಹಾರ ಕ್ರಮಗಳತ್ತವೂ ಸಾಗಷ್ಟು ಗಮನ ಹರಿಸುತ್ತಾರೆ. ಆಶ್ಚರ್ಯವೆಂಬಂತೆ ಬಹುತೇಕ ಪೈಲ್ವಾನ್ ಗಳು ಮಾಂಸಾಹಾರಿಗಳಾಗಿರದೇ, ಸಸ್ಯಾಹಾರಗಳಾಗಿರುತ್ತಾರೆ. ಬಾದಾಮಿ ಮಿಶ್ರಿತವಾದ ಲೀಟರ್ ಗಟ್ಟಲೆ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ಪದಾರ್ಥ, ಬೆಣ್ಣೆ, ಚಪಾತಿ, ರಾಗಿಮುದ್ದೆ, ಹಾಲು, ಹಣ್ಣು ಹಂಪಲುಗಳಂತಹ ಪೌಷ್ಟಿಕ ಆಹಾರವನ್ನು ಸೇವಿಸುವುದರ ಮೂಲಕ ಕಸರತ್ತಿನಿಂದ ದಣಿದ ದೇಹಕ್ಕೆ ಶಕ್ತಿಯನ್ನು ತುಂಬಿಕೊಳ್ಳುತ್ತಾರೆ. ಕುಸ್ತಿ ಪಂದ್ಯವಳಿಗಳೋ ಇಲ್ಲವೇ ವಿಶೇಷ ಸಂದರ್ಭಗಳಲ್ಲಿ ಮಾತ್ರವೇ, ಮಾಂಸಾಹಾರಕ್ಕೆ ಒತ್ತು ನೀಡಿ ಸುಮಾರು ಒಂದು ಕೆಜಿಯಷ್ಟು ಕುರಿ/ಆಡಿನ ಮಾಂಸವೋ ಇಲ್ಲವೇ ಒಂದು ಇಡೀ ನಾಟಿ ಕೋಳಿಯನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಾರೆ.

ಹಿಂದೆಲ್ಲಾ ಈ ರೀತಿಯಾದ ಪೈಲ್ವಾನರುಗಳು ತಮ್ಮ ರಾಜ್ಯದಲ್ಲಿ ಇರುವುದೇ ಹೆಮ್ಮೆಯ ಸಂಕೇತವಾಗಿರಿತ್ತಿದ್ದ ಕಾರಣ, ಅವರಿಗೆ ರಾಜಾಶ್ರಯ ಸಿಗುತ್ತಿತ್ತು. ಕಾಲ ಕಾಲಕ್ಕೆ ಕುಸ್ತೀ ಪಂದ್ಯಾವಳಿಗಳು ನಡೆದು ಪ್ರಜೆಗಳಿಗೆ ಮನೋರಂಜನೆಯಾದರೆ, ಪೈಲ್ವಾನರಿಗೆ ಬಿರುದು ಬಾವಲಿಗಳ ಜೊತೆ, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಮತ್ತು ನಗದು, ಉಂಬಳಿಗಳು ಸಿಗುತ್ತಿದ್ದಲ್ಲದೇ, ಮಹಾರಾಜರ ಅಂಗರಕ್ಷಕರಾಗಿಯೋ ಇಲ್ಲವೇ ಅವರ ಸೈನ್ಯದಲ್ಲಿ ಕೆಲಸ ಸಿಗುತ್ತಿದ್ದ ಕಾರಣ ಬಹುತೇಕ ಎಲ್ಲಾ ಊರುಗಳಲ್ಲಿಯೂ ಗರಡಿ ಮನೆಗಳು ಹೆಚ್ಚಾಗಿಯೇ ಇರುತ್ತಿದ್ದವು.

gm3ಮೈಸೂರ ಅರಸರುಗಳು ಈ ಕುಸ್ತಿ ಕಲೆಗೆ ಅತ್ಯಂತ ಪ್ರೋತ್ಸಾಹ ಕೊಟ್ಟಿದ್ದಲ್ಲದೇ, ಸ್ವತಃ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್ ಅವರೇ, ಕುಸ್ತಿ ಮಲ್ಲರಾಗಿದ್ದು ಮಾರು ವೇಷದಲ್ಲಿ ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಅಲ್ಲಿನ ಮಲ್ಲರಿಗೆ ಸವಾಲೆಸೆದು ಮಣಿಸಿದ ಘಟನೆಗಳು ಇತಿಹಾಸದ ಪುಟವಾಗಿದೆ. ಅದರಲ್ಲೂ ತಿರುಚನಾಪಳ್ಳಿಯ ಸೋಲಿಲ್ಲದ ಸರದಾರ ಎಂದೇ ಖ್ಯಾತವಾಗಿದ್ದ ಜಟ್ಟಿಯೊಬ್ಬ ತನ್ನೂರಿನ ಹೆಬ್ಬಾಗಿಲಿಗೆ ಕಟ್ಟಿದ್ದ ಆತನ ಚಲ್ಲಣವನ್ನು ಕಿತ್ತೊಗೆದು ನಂತರ ಅಖಾಡದಲ್ಲಿ ಆವನನ್ನು ಮಣ್ಣುಮುಕ್ಕಿಸಿ ಮೈಸೂರಿನ ಕೀರ್ತಿಪತಾಕೆಯನ್ನು ಹಾರಿಸಿದ ಕಥೆ ಬಹಳ ರೋಚಕವಾಗಿದೆ.

Screenshot 2020-08-14 at 11.51.10 AMಇನ್ನು ಸಿಲಿಕಾನ್‌ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿಯೂ ಸುಪ್ರಸಿದ್ದ ಪೈಲ್ವಾನರುಗಳು ಇದ್ದರು. ಮೂಲ ಬೆಂಗಳೂರಿನ ಬಳೆಪೇಟೆ, ಚಿಕ್ಕಪೇಟೆ, ತಿಂಗಳರ ಪೇಟೆ, ನಗರ್ತ ಪೇಟೆ, ಕಬ್ಬನ್‌ ಪೇಟೆ, ರಾಣಾಸಿಂಗ್‌ ಪೇಟೆ, ಪೋಲಿಸ್‌ ರಸ್ತೆ, ಶೇಷಾದ್ರಿಪುರ, ಚಿಕ್ಕಪೇಟೆ, ಶಿವಾಜಿ ನಗರದ ಆಸುಪಾಸಿನಲ್ಲಿ ಗಲ್ಲಿಗೊಂದರಂತೆ ಗರಡಿ ಮನೆಗಳಿದ್ದು ಸಾವಿರಾರು ಘಟಾನುಘಟಿ ಪೈಲ್ವಾನರನ್ನು ತಯಾರು ಮಾಡುವ ಕೇಂದ್ರಗಳಾಗಿದ್ದವು. ಇಲ್ಲಿ ಜಟ್ಟಿಗಳು ಬೆಳ್ಳಂಬೆಳಿಗ್ಗೆ ಹಾಗೂ ಸಂಜೆ ತಂಪಾದ ನಂತರ ತೊಡೆ ತಟ್ಟುವ ಸದ್ದು ತಂತಾನೇ ಕಿವಿಮೇಲೆ ಬೀಳುತ್ತಿತ್ತು. ನೂರಾರು ಯುವಕರು ಗರಡಿ ಮನೆಗೆ ಬಂದು ಬೆವರು ಇಳಿಸುತ್ತಿದ್ದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಗರಡಿ ಮನೆಗಳು ಯುವಕರಿಗೆ ದೇಹವನ್ನು ಹುರಿಗಟ್ಟಿಸಲು ಪ್ರೇರೇಪಿಸುತ್ತಿದ್ದವು. ಆದರೆ ಇಂದು ರಾಜಾಶ್ರಯ, ಸರ್ಕಾರ ಅಥವಾ ಯಾರದ್ದೇ ಆರ್ಥಿಕ ಸಹಾಯವಿಲ್ಲದೇ ಬಹುತೇಕ ಗರಡಿ ಮನೆಗಳು ದುಃಸ್ಥಿತಿಗೆ ತಲುಪಿದ್ದು ಅಲ್ಲೊಂದು ಇಲ್ಲೊಂದು ಪಳಿಯುಳಿಕೆಗಳಾಗಿ ಕಾಣಸಿಗುತ್ತದೆ. ಇಂದು ಈ ಗರಡಿ ಮನೆಗಳ ಜಾಗವನ್ನು ಮಲ್ಟಿಜಿಮ್‌ಗಳು ಆಕ್ರಮಿಸಿಕೊಂಡಿರುವ ಕಾರಣ, ನಿಧಾನವಾಗಿ ಗರಡಿ ಮನೆ ಸಂಸ್ಕೃತಿ ಮಾಯವಾಗುತ್ತಿರುವುದು ವಿಷಾಧನೀಯವಾಗಿದೆ.

ಇತ್ತೀಚಿನ ಯುವಕರುಗಳು ಗರಡಿ ಮನೆಯಲ್ಲಿ ಮೈಗೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಹನುಮಾನ್ ಲಂಗೋಟಿ ಕಟ್ಟಿಕೊಂಡು ಕೆಂಪು ಮಣ್ಣಿನಲ್ಲಿ ಕಸರತ್ತು ಮಾಡುವುದಕ್ಕೆ ಇಚ್ಚಿಸದೇ, ಮೈತುಂಬಾ ಬಟ್ಟೆ ಧರಿಸಿ, ಹವಾನಿಯಂತ್ರಿತ ಕೊಠಡಿಯೊಳಗೆ ಧಾಂ ಧೂಂ ಎಂಬ ಅಬ್ಬರದ ಸಂಗಿತ ಹಾಕಿಕೊಂಡು ಮಲ್ಟಿಜಿಮ್‌ಗಳಲ್ಲಿ ನಾನಾರೀತಿಯ ಆಧುನಿಕ ಪರಿಕರಗಳೊಂದಿಗೆ ಏರೋಬಿಕ್ಸ್ ಮಾಡುತ್ತಾ ಬೆವರು ಸುರಿಸುತ್ತಾ ಸಿಕ್ಸ್‌ಪ್ಯಾಕ್ ಮೋಹಕ್ಕೆ ಒಳಗಾಗಿರುವ ಕಾರಣ, ಯುವಕರಿಗೆ ಶ್ರದ್ಧೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಿದ್ದ ಶಕ್ತಿಯ ಪ್ರತೀಕವಾಗಿದ್ದ ದೇಸಿ ಪರಂಪರೆಯ ಕುಸ್ತಿ ಕಲೆ ಮತ್ತು ಗರಡಿ ಮನೆಗಳು ನಿಧಾನವಾಗಿ ದಿನೇ ದಿನೇ ನೇಪಥ್ಯಕ್ಕೆ ಸರಿಯುತ್ತಿರುವುದು ದುಖಃಕರವಾಗಿದೆ.

ಈಗಲೂ ಸ್ವಲ್ಪ ಹಿರಿಯರನ್ನು ಕೇಳಿದಲ್ಲಿ, ಗರಡಿ ಮನೆಯಲ್ಲಿ ಸಿಗುವ ಆನಂದ ಆಧುನಿಕ ಜಿಮ್‌ಗಳಲ್ಲಿ ಖಂಡಿತವಾಗಿಯೂ ಸಿಗಲು ಸಾಧ್ಯವೇ ಇಲ್ಲ. ಗರಡಿ ಮನೆಯಲ್ಲಿ ದೈವೀಕ ಭಾವನೆಯ ಆಯಸ್ಕಾಂತೀಯ ಗುಣವಿದ್ದು ಅಲ್ಲಿ ನಿರಂತರವಾಗಿ ಅಭ್ಯಾಸ ಮಾಡುವ ಮಜವೇ ಬೇರೆ. ಅರಿಶಿಣ, ಕುಂಕುಮ, ತುಪ್ಪ ಮಿಶ್ರಿತ ಮಣ್ಣಿನ ಘಮಲಿನಲ್ಲಿ ಮಿಂದೆದ್ದರೆ ಮನಸ್ಸಿಗೆ ಮುದನೀಡುತ್ತಿದ್ದದ್ದಲ್ಲದೇ, ಹೊಸ ಹುರುಪು ಕೂಡಾ ಬರುತ್ತಿತ್ತು. ಆದರೆ ಇಂದು ಜಿಮ್ ಗಳಲ್ಲಿ ಬೆವರಿನ ಕಮಟುವಾಸನೆ ವಾಕರಿಕೆ ತರಿಸುತ್ತದೆ. ಗರಡಿ ಮನೆಯ ಮಣ್ಣು ಚರ್ಮವ್ಯಾಧಿಯನ್ನು ದೂರ ಇಟ್ಟರೇ, ಸರಿಯಾಗಿ ನೈರ್ಮಲ್ಯವನ್ನು ಕಾಪಾಡದ ಕಾರಣ ಅದೇ ಜಿಮ್ ಗಳ ಪರಿಕರಗಳಿಂದ ಚರ್ಮ ರೋಗಗಳು ಬರಲು ಕಾರಣವಾಗುತ್ತದೆ ಎನ್ನುತ್ತಾರೆ.

gm5ಹಿಂದೆಲ್ಲಾ ವಾರಕ್ಕೊಮ್ಮೆ ನಾನಾ ಕಡೆ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದವು. ಹಾಗಾಗಿ ಸ್ಪರ್ಧಿಗಳು ಭರ್ಜರಿಯಾಗಿ ತಯಾರಾಗುತ್ತಿದ್ದರು. ಅದಕ್ಕೆ ಪೂರಕವಾಗಿ ಆಯಾಯಾ ಊರಿನ ಹಿರಿಯರು ಮತ್ತು ಶ್ರೀಮಂತರು ತಮ್ಮೂರಿನ ಘನತೆಯನ್ನು ಹೆಚ್ಚಿಸುವ ಸಲುವಾಗಿ ಸಾಧನೆ ಮಾಡುವವರಿಗೆ ಸ್ಫೂರ್ತಿ ನೀಡುತ್ತಿದ್ದದ್ದಲ್ಲದೇ ಅವರ ಎಲ್ಲಾ ಆಗುಹೋಗುಗಳನ್ನು ನೋಡಿಕೊಂಡು ಪ್ರೋತ್ಸಾಹಿಸುತ್ತಿದ್ದರು. ಆದರೆ ಇಂದು ವರ್ಷಕ್ಕೊಮ್ಮೆ ಕುಸ್ತಿ ನಡೆಯುವುದೇ ಹೆಚ್ಚು. ಮೈಸೂರಿನ ದಸರಾದಲ್ಲೂ ಸಾಂಕೇತಿಕವಾಗಿ ಕುಸ್ತಿಪಂದ್ಯಗಳು ನಡೆಯಲ್ಪಡುತ್ತದೆ. .

ಹಿಂದೆ ಹರಿಯಾಣ, ಪಂಜಾಬ್, ಮಹಾರಾಷ್ಟ್ರದಿಂದ ಜಟ್ಟಿಗಳು ಬಂದು ಇಲ್ಲಿನ ಗರಡಿಯಲ್ಲಿ ಬೆವರು ಸುರಿಸಿ, ಇಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು ಕೈತುಂಬ ಹಣ ಸಂಪಾದಿಸಿ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದರು. ಈಗಲೂ ಬೆಳಗಾವಿ, ರಾಣೆಬೆನ್ನೂರು, ದಾವಣಗೆರೆ, ಚಿತ್ರದುರ್ಗದ ಕಡೆ ಆಗಾಗ ಕುಸ್ತಿ ಸ್ಪರ್ಧೆ ನಡೆಯುತ್ತಲೇ ಇರುತ್ತವೆ. ಹೀಗಾಗಿ ಈ ಕಲೆ ಅಲ್ಲಿ ಇನ್ನೂ ಜೀವಂತವಾಗಿದೆ.

WhatsApp Image 2020-08-14 at 8.38.16 AMಕಟ್ಟುಮಸ್ತಾದ ಪೈಲ್ವಾನರು ಮಣ್ಣಿನ ಅಖಾಡದಲ್ಲಿ ದೂಳೆಬ್ಬಿಸುತ್ತಾ ಮದಗಜಗಳಂತೆ ಕಾದಾಟ ನಡೆಸುತ್ತಿದ್ದರೆ, ನೋಡುಗರು ಚಪ್ಪಾಳೆ ಹಾಗೂ ಶಿಳ್ಳೆಯ ಮೂಲಕ ಅವರನ್ನು ಹುರಿದುಂಬಿಸುತ್ತಿದ್ದರು. ಪೈಲ್ವಾನರು ಪಟ್ಟುಗಳ ಮೇಲೆ ಪಟ್ಟು ಹಾಕಿದಾಗ ಚಪ್ಪಾಳೆಯ ಸದ್ದು ಹೆಚ್ಚುತ್ತಾ ಹೋಗುತ್ತಿತ್ತು. ಪ್ರಬಲ ಪೈಪೋಟಿಯ ಬಳಿಕ ಒಬ್ಬಾತ ಇನ್ನೊಬ್ಬನನ್ನು ಚಿತ್‌ ಮಾಡಿದಾಗಲಂತೂ ಪ್ರೇಕ್ಷಕರಿಗೆ ಮೈಜುಮ್ಮೆನಿಸುವ ಅನುಭವ ಉಂಟಾಗುತ್ತಿತ್ತು. ಆದರೆ ಭಾರತದಲ್ಲಂತೂ ಕ್ರಿಕೆಟ್ ಎಂಬುದು ಧರ್ಮಕ್ಕಿಂತಲೂ ಮಿಗಿಲಾಗಿ ಹೋಗಿರುವ ಕಾರಣ, ಎಲ್ಲಾ ದೇಸೀ ಕ್ರೀಡೆಗಳನ್ನು ಕ್ರಿಕೆಟ್ ನುಂಗಿ ಹಾಕಿದೆ. ಐಪಿಎಲ್ ಮತ್ತು ಟಿ20 ಪಂದ್ಯಗಳು ಬಂದಾದ ಮೇಲಂತೂ, ಯುವಕರುಗಳು ಗರಡಿ ಮನೆ ಮತ್ತು ಕುಸ್ತಿಯತ್ತ ಆಸಕ್ತಿ ತೋರುತ್ತಿಲ್ಲ. ಇನ್ನು ಸರ್ಕಾರವೂ ಕೂಡ ಕ್ರಿಕೆಟ್ಟಿನಿಂದ ಹಣ ಮಾಡುವುದರಲ್ಲಿಯೇ ಕಳೆದುಹೋಗಿ ದೇಸೀ ಆಟಗಳ ಅಭಿವೃದ್ಧಿಗೆ ಯಾವ ಯೋಜನೆಯನ್ನೂ ಹಮ್ಮಿಕೊಂಡಿಲ್ಲ ಮತ್ತು ಪ್ರೋತ್ಸಾಹ ನೀಡದಿರುವುದು ಕುಸ್ತಿ ಮತ್ತು ಗರಡಿ ಮನೆಗಳ ಅವನತಿಗೆ ಮುಖ್ಯಕಾರಣವಾಗಿದೆ ಎಂದರೂ ತಪ್ಪಾಗಲಾರದು.

ಇಷ್ಟೆಲ್ಲಾ ಅಡ್ದಿ ಆತಂಕಗಳ ನಡುವೆಯೂ ಒಂದಷ್ಟು ಬೆರಳಣಿಕೆಯ ಜನರು ಇಂದಿಗೂ ಗರಡಿ ಮನೆಗಳು ಹಾಗೂ ಕುಸ್ತಿ ಕ್ರೀಡೆಯನ್ನು ಮುಂದಿನ ತಲೆಮಾರಿನ ಜನರಿಗೆ ಕೊಂಡೊಯ್ಯವ ನಿಟ್ಟಿನಲ್ಲಿ ಆಸ್ಥೆಯಿಂದ ಶ್ರಮವಹಿಸುತ್ತಿರುವ ಪರಿಣಾಮವಾಗಿ ಅಲ್ಲೊಂದು ಇಲ್ಲೊಂದು ಗರಡಿ ಮನೆಗಳು ಉಸಿರಾಡುತ್ತಿವೆ. ಇನ್ನು ಹಿಂದಿಯಲ್ಲಿ ಅಮೀರ್ ಖಾನರ ದಂಗಲ್ ಮತ್ತು ಕನ್ನಡದಲ್ಲಿ ಸುದೀಪರ ಪೈಲ್ವಾನ್ ಕುಸ್ತಿ ಮತ್ತು ಗರಡಿ ಮನೆಗಳ ಕುರಿತಾದ ಚಿತ್ರಗಳು ನಿರ್ಮಾಣವಾಗಿ ಯುವಕರುಗಳಲ್ಲಿ ಕುಸ್ತಿ ಬಗ್ಗೆ ಸ್ವಲ್ಪ ತಿಳುವಳಿಕೆ ಮೂಡಿಸಿರುವುದಂತೂ ಸುಳ್ಳಲ್ಲ. ಇನ್ನು ಮುಂದಾದರೂ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸ್ವಲ್ಪ ಅಸ್ಥೆ ವಹಿಸಿ ಗರಡಿ ಮನೆಗಳ ಬೆಂಬಲಕ್ಕೆ ನಿಲ್ಲುವ ಮೂಲಕ ನಮ್ಮ ಪರಂಪರೆಯನ್ನು ಎತ್ತಿ ಹಿಡಿಯಬೇಕಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ