ಬಿಟಿಎಸ್ ಫುಟ್ ಬೋರ್ಡ್ ಅನುಭವ

ಎಂಭತ್ತರ ದಶಕ ಹದಿಹರೆಯದ ವಯಸ್ಸು. ಆಗ ತಾನೆ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಸೇರಿಕೊಂಡಿದ್ದೆ. ಕಾಲೇಜಿಗೆ ಶಾಲೆಯ ತರಹ ಒಂದು ಮಣಭಾರದ ಪುಸ್ತಕಗಳನ್ನು ಹೊತ್ತುಕೊಂಡು ಹೊಗಬೇಕಿರಲಿಲ್ಲ. ಕೇವಲ ನಾಲ್ಕಾರು ಪುಸ್ತಕಗಳನ್ನು ಒಂದು ಚೆಂದನೆಯ ಚೀಲದಲ್ಲಿ ಹಾಕಿಕೊಂಡು ಬಣ್ಣ ಬಣ್ಣದ ಪ್ಯಾಂಟ್ ಶರ್ಟು ಹಾಕಿಕೊಂಡು ಕಾಲೇಜಿಗೆ ಹೋಗುವುದೆಂದರೆ ಎನೋ ಒಂದು ತರಹ ಹಿತಾನುಭವ.

ನಾವು ಇದ್ದಿದ್ದು ಬಿಇಎಲ್ ಬಳಿ ಕಾಲೇಜ್ ಇದ್ದದ್ದು ಆರ್. ಟಿ ನಗರ. ನಮ್ಮ ಕಡೆಯಿಂದ ನೇರ ಬಸ್ ಸಂಪರ್ಕ ಇಲ್ಲದಿದ್ದ ಕಾರಣ ಕನಿಷ್ಠ ಪಕ್ಷ ಎರಡು ಮೂರು ಬಸ್ಸುಗಳನ್ನಾದರೂ ಬದಲಿಸಿಕೊಂಡು  ಕಾಲೇಜಿಗೆ ಹೋಗಿ ಬಂದು ಮಾಡಬೇಕಿತ್ತು. ಹೋಗುವಾಗ ಬಿಇಎಲ್ ಬಸ್ಸಿನಲ್ಲಿ  ಮುನಿರೆಡ್ಡಿ ಪಾಳ್ಯದ ಟಿವಿ ಟವರ್ ವರೆಗೂ ಹೋಗಿ  ಅಲ್ಲಿಂದ ಮತ್ತೊಂದು ಬಸ್ಸನ್ನು ಬದಲಿಸಿದರೆ, ಬರುವಾಗ ಟಿವಿ ಟವರ್ ವರೆಗೂ ಒಂದು ಬಸ್ ಅಲ್ಲಿಂದ ಟಾಟಾ ಇನಿಸ್ಟಿಟ್ಯೂಟ್  ವರೆಗೂ ಮತ್ತೊಂದು ಬಸ್ಸು. ಅಲ್ಲಿಂದ ಅಗೊಂದು ಈಗೊಂದು ಜನಭರಿತವಾಗಿಯೇ ಬರುತ್ತಿದ್ದ 276 ಬಸ್ ಹತ್ತಬೇಕಿತ್ತು. ಇಲ್ಲದಿದ್ದಲ್ಲಿ ಬಿಇಎಲ್ ಸರ್ಕಲ್ ವರೆಗೂ ಬೇರೆ ಯಾವುದಾದರೊಂದು ಬಸ್ಸಿನಲ್ಲಿ ಬಂದು ಅಲ್ಲಿಂದ ಮನೆಗೆ ನಡೆದುಕೊಂಡು ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತಿತ್ತು.

 

bmtc3ಹೇಳಿಕೊಳ್ಳುವುದಕ್ಕೆ ಕಾಲೇಜ್ ಹುಡುಗನಾಗಿದ್ದೂ ಆಗಿನ್ನೂ ನನ್ನ ಬೆಳವಣಿಗೆ ಹೈಸ್ಕೂಲ್ ಮಕ್ಕಳಂತೆಯೇ ಇದ್ದದ್ದರಿಂದ  ಬಸ್ಸಿನೊಳಗೆ ಹಾಗೂ ಹೀಗೂ ನುಸುಳಿಕೊಂಡು  ಕಂಬವೊಂದಕ್ಕೋ ಇಲ್ಲವೇ ಯಾವುದಾದರೊಂದು ಸೀಟಿಗೆ ಒರಗಿಕೊಂಡು ನಿಂತು ಬಿಡುತ್ತಿದ್ದೆ. ಹಾಗೂ ಹೀಗೂ ಎರಡು ವರ್ಷಗಳು ಕಳೆದು ಮೂರನೇ ವರ್ಷಕ್ಕೆ ಬರುವಷ್ಟರಲ್ಲಿ ಚಿಗುರು ಮೀಸೆ ಮೂಡಿತ್ತು. ದೊಡ್ಡವನಾಗಿ ಹೋದೆ ಎಂಬ ಹಮ್ಮು ಬಿಮ್ಮು ಬೆಳೆದಿತ್ತು. ಹಾಗಾಗಿ  ಎಲ್ಲರ ಹುಡುಗರಂತೆ ನಾನೂ ಸಹಾ  ಬಸ್ ಇಳಿಯಲು ಒಂದು ಸ್ಟಾಪ್ ಮುಂಚೆಯೇ ಹಿಂಬಾಗಿಲಿನ ಫುಟ್ ಬೋರ್ಡಿನಲ್ಲಿ ನಿಂತು ಫುಟ್ ಬೋರ್ಡ್ ಅನುಭವ ಪಡೆಯತೊಡಗಿದೆ.

 

bmtc5ವಿಪರೀತ ಜನಜಂಗುಳಿಯ ಬಸ್ಸಿನಲ್ಲಿ ಉಸಿರಾಡುವುದೂ ಕಷ್ಟವಾಗುತ್ತಿದ್ದಾಗ  ಫುಟ್ ಬೋರ್ಡಿನ ಮೇಲೆ ನಿಂತಾಗ ಬರುತ್ತಿದ್ದ ಚೆಂದನೆಯ ಗಾಳಿಯ ಹಿತಾನುಭವಕ್ಕೆ ಬಲು ಬೇಗನೇ ಒಗ್ಗಿಕೊಂಡೆ. ಹಾಗಾಗಿ ಬಸ್ಸಿನೊಳಗೆ ಸೀಟ್ ಖಾಲಿ ಇಲ್ಲಾ ಅಂದ್ರೇ ಫುಟ್ ಬೋರ್ಡ್ ಮೇಲೇ ನಿಂತುಕೊಂಡು ಹೋಗುವುದನ್ನೇ ರೂಢಿ ಮಾಡಿಕೊಂಡೆ.  ಒಳ್ಳೆಯ ಕೆಲಸಕ್ಕೆ ಜೊತೆಗಿಲ್ಲದಿದ್ದರೂ ಕೆಟ್ಟ ಕೆಲಸಗಳಿಗೆ ಮಾತ್ರ ಗೆಳೆಯರು ಜೊತೆಗಿರ್ತಾರೆ ಎನ್ನುವುದನ್ನು  ದೃಢೀಕರಿಸುವಂತೆ ನನ್ನ  ಅಕ್ಕ ಪಕ್ಕದಲ್ಲಿ ಗೆಳೆಯರೂ ಸಾತ್ ಕೊಡುತ್ತಿದ್ದರಿಂದ ಫುಟ್ ಬೋರ್ಡ್ ಪ್ರಯಾಣ ಮಜವೆನಿಸುತ್ತಿತ್ತು.

 

bmtc2ಫುಟ್ ಬೋರ್ಡ್ ಪ್ರಯಾಣ ಅಪಾಯಕರ ಮತ್ತು ದಂಡ ವಿಧಿಸಲಾಗುತ್ತದೆ  ಎಂಬ ಫಲಕವನ್ನು ನೋಡಿದರೂ ಅದು ನಮಗೆಲ್ಲಾ ಎನ್ನುವ ಧೋರಣೆ ಅಂದಿನ ಕಾಲದಲ್ಲಿ  ನಮ್ಮದಾಗಿತ್ತು. ನಮ್ಮಂತಹ ಪುಂಡರನ್ನು ಹಿಡಿದು ಶಿಕ್ಷಿಸಲೆಂದೇ  ಪೋಲೀಸರೂ ಹರ ಸಾಹಸ ಪಡುತ್ತಿದ್ದದ್ದೂ ನಮಗೆ ಮೋಜನ್ನು ತರಿಸುತ್ತಿತ್ತು. ಒಂದಿಬ್ಬರು ಬುದ್ಧಿವಂತ ಪೋಲೀಸರು ಬಸ್ ಸ್ಟಾಂಡ್ ಬಳಿ ಮಫ್ತಿಯಲ್ಲಿದ್ದು ಕೈಯಲ್ಲಿ  ಇಂಕ್ ಪೆನ್ನನ್ನು ಹಿಡಿದುಕೊಂಡು ಬಸ್ಸು  ಇನ್ನೇನು ಹೋರಡುತ್ತದೆ ಎನ್ನುವಾಗ ಪುಟ್ ಬೋರ್ಡಿನಲ್ಲಿ ನಿಂತವರತ್ತ ಪೆನ್ನಿನಿಂದ ಇಂಕ್ ಹಾಕುತ್ತಿದ್ದದ್ದು ಫುಟ್ ಬೋರ್ಡಿನಲ್ಲಿ ಇದ್ದವರಿಗೆ ಗೊತ್ತೇ ಆಗುತ್ತಿರಲಿಲ್ಲ. ಮುಂದಿನ ಸ್ಟಾಪ್ ಬಂದಾಗ ಅಲ್ಲೂ ಮಫ್ತಿಯಲ್ಲಿ ಇರುತ್ತಿದ್ದ ಪೋಲೀಸರು ಶರ್ಟಿಗೆ ಇಂಕ್ ಇದ್ದವರನ್ನೆಲ್ಲಾ ಹಿಡಿದು ಫೈನ್ ಹಾಕುತ್ತಿದ್ದರುಪೋಲಿಸರು ಚಾಪೇ ಕೆಳಗೆ ತೂರಿದರೆ ಹುಡುಗರು ರಂಗೋಲಿ ಕೆಳಗೆ ತೂರುತ್ತಾರೆ ಎನ್ನುವ ಹಾಗೆ ಫುಟ್ ಬೋರ್ಡಿನ ಮೇಲೆ ನಿಂತು ಕೊಳ್ಳುತ್ತಿದ್ದ ಹುಡುಗರು  ಶರ್ಟಿನ ಮೇಲೆ ಜಾಕೆಟ್ ಹಾಕಿಕೊಂಡು ಅಕಸ್ಮಾತ್ ಬಟ್ಟೆಗೆ ಇಂಕ್ ಬಿದ್ದಿದೆ  ಅಂತಾ ಗೊತ್ತಾಗಿದ್ದೇ ತಡಾ ಜಾಕೆಟ್ ಬಿಚ್ಚಿ  ಕುಳಿತಿದ್ದವರ ಕೈಗೆ ಕೊಟ್ಟು ಅಮಾಯಕರಂತೆ ನಿಂತು ಪೋಲಿಸರಿಗೆ ಚಳ್ಳೇ ಹಣ್ಣು ತಿನ್ನಿಸುತ್ತಿದ್ದದ್ದು ಇನ್ನೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ  ಉಳಿದಿದೆ.

 

bmtc2ಅದೊಂದು ಸಂಜೆ ಕಾಲೇಜ್ ಬಿಡುವುದು ತಡವಾಗಿ  ಯಥಾ ಪ್ರಕಾರ ಟಿವಿ ಟವರ್ ವರೆಗೂ ಒಂದು ಬಸ್ಸಿನಲ್ಲಿ ಬಂದು ಅಲ್ಲಿಂದ ಮತ್ತೊಂದು ಬಸ್ ಹಿಡಿದು ಟಾಟಾ ಇನಿಸ್ಟಿಟ್ಯೂಟ್ ಸ್ಟಾಪಿನಲ್ಲಿ (ಅಗಿನ್ನೂ ಅಂಡರ್ ಪಾಸ್ ಆಗಿರಲಿಲ್ಲ) ಇಳಿದು ಬಿಹೆಇಎಲ್ ಮುಂದೆ 276 ಬಸ್ಸಿಗೆ ಸುಸ್ತಾಗಿ ಕಾದು ನಿಂತಿದ್ದೆ.  ಅರ್ಧ ಮುಕ್ಕಾಲು ಗಂಟೆಗೆ  ತುಂಬಿದ ಬಸುರಿಯಂತೆ ಭರಪೂರಿ ಜನರನ್ನು ಹೊತ್ತು ಬಂದ 276 ಬಸ್ ಅಲ್ಲಿ ನಿಲ್ಲಿಸದಿದ್ದರೂ, ತಿರುಗಿಸಿಕೊಳ್ಳಲು ಸ್ವಲ್ಪ ನಿಧಾನ ಮಾಡಿದ್ದೇ ತಡಾ ಛಕ್  ಅಂತಾ ಫುಟ್ ಬೋರ್ಡಿಗೆ ಕಾಲ್ ಹಾಕಿ ಮುಂದಿನ ಕಿಟಕಿಯನ್ನು ಹಿಡಿದು ಹಾಗೂ ಹೀಗೂ ಬಸ್ಸಿಗೆ ತಗುಲು ಹಾಕಿಕೊಂಡೆ.

 

bmtc1ಆ ಬಸ್ಸಿನ ಡ್ರೈವರ್ ಅದ್ಯಾರ ಜೊತೆ ಜಗಳ ಮಾಡಿಕೊಂಡು ಬಂದಿದ್ದರೋ ಇಲ್ಲವೇ ಜನಜಂಗುಳಿ ನೋಡಿ ಬೇಸತ್ತಿದ್ದರೋ ಕಾಣೆ ಅಂದೇಕೋ ಯರ್ರಾ ಬಿರ್ರಿ  ಅತ್ತಿಂದ್ದಿತ್ತ ಓಲಾಡಿಸುತ್ತಾ ಓಡಿಸುತ್ತಿದ್ದರು. ಬಸ್ಸಿನಲ್ಲಿ ನಾನು ಇದ್ದೆ ಅನ್ನುವುದಕ್ಕಿಂತಲೂ ಬಸ್ಸಿಗೆ ನಾನು ತಗಲಾಕಿಕೊಂಡಿದ್ದೇ ಇಲ್ಲವೇ ಅಂಟಿಕೊಂಡಿದ್ದೇ ಎನ್ನುವ ಪರಿಸ್ಥಿತಿಯಲ್ಲಿದ್ದ ನನಗೆ ಪ್ರತೀಬಾರಿಯೂ ಅತ್ತಿಂದ್ದಿತ ಬಸ್ ಅಲ್ಲಾಡುತ್ತಿದ್ದರೆ ನನ್ನ ಕೈ ಕೂಡಾ ಜಾರುತ್ತಿತ್ತು. ನಾನೂ ಸಹಾ ಗಟ್ಟಿಯಾಗಿ ಹಿಡಿದುಕೊಳ್ಳಲು ಹರ ಸಾಹಸ ಪಡುತ್ತಿದ್ದೆ. ಮುಂದೆ ಸದಾಶಿವ ನಗರದ ಪೋಲೀಸ್ ಸ್ಟೇಷನ್ ಸ್ಟಾಪಿನಲ್ಲಿಯೂ ಭಯಂಕರವಾಗಿ ತಿರುಗಿಸಿಕೊಂಡು ನಿಲ್ಲಿಸದೇ ಭರ್ ಎಂದು ಹೋದಾಗಲಂತೂ ಹೃದಯ ಬಾಯಿಗೆ ಬಂದಾಗಿತ್ತು. ಅಲ್ಲಿಂದ ಸೀದ ತನಗಾಗಿ ಯಾರೋ ಕಾಯುತ್ತಿದ್ದಾರೆ ಇನ್ನೈದು ನಿಮಿಷ ಅಲ್ಲಿಗೆ ಹೋಗದಿದ್ದರೆ ಇಡೀ ಪ್ರಪಂಚವೇ ಬಿದ್ದು ಹೋಗುತ್ತದೆ ಎನ್ನುವಂತೆ ಜರ್ ಭರ್ ಎನ್ನುವಂತೆ ಅತ್ತಿಂದಿತ್ತ ಬಸ್ ಓಲಾಡಿಸುತ್ತಿದ್ದರೆ ಕೈಗಳು ಜಾರುತ್ತಿದೆ. ಕಾಲುಗಳನ್ನು ಸಹಾ ನಡುಗುತ್ತಿದೆ. ನನ್ನ ಕತೆ ಇವತ್ತಿಗೆ ಮುಗಿದು ಹೋಯ್ತು. ಇನ್ನೊಂದು ನಿಮಿಷದಲ್ಲಿ ಕೈ ಜಾರಿ ಬಿದ್ದು ಹೊಗ್ತೀನಿ, ನಾಳೆ   ಫುಟ್ ಬೋರ್ಡ್ ನಿಂದ ಜಾರಿಬಿದ್ದ ಯುವಕನ ಸಾವು  ಎಂದು ಪೇಪರಿನ ಮೂರನೇ ಪೇಜಿನಲ್ಲಿ ಬಂದು ಬಿಡುತ್ತದೆ ಎಂದೆಲ್ಲಾ ಮನಸ್ಸು ಯೋಚಿಸ ತೊಡಗಿತು. ಹಾಗೂ ಹೀಗೂ ಅದಷ್ಟು ಕಷ್ಟ ಪಟ್ಟು ಗಟ್ಟಿಯಾಗಿ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕಾಲನ್ನೂ  ಅದಷ್ಟೂ ಒಳಗಡೆ ತೂರಿಸಲು ಪ್ರಯತ್ನಿಸುತ್ತಿದ್ದೇನೆ.  ಒಂದು ಸೊಳ್ಳೆಯೂ  ಹೋಗಲು ಜಾಗವಿರದ ಬಸ್ಸಿನಲ್ಲಿ ನನ್ನೆಲ್ಲಾ ಹರಸಾಹಸಗಳು ಫಲಿಸುತ್ತಲೇ ಇಲ್ಲಾ. ಅಷ್ಟರಲ್ಲಿ ರಪ್ ಎಂದು ಬಸ್ಸಿಗೆ ಬ್ರೇಕ್ ಹಾಕಿದ್ದು ಗೊತ್ತಾಯಿತು.  ಇದ್ದಕ್ಕಿಂದ್ದಂತೆಯೇ  ಬಸ್ ನಿಲ್ಲುತ್ತಿದ್ದಂತೆಯೇ  ಫುಟ್ ಬೋರ್ಡಿನಲ್ಲಿದ್ದ ನಾನು ಹತ್ತಾರು ಹೆಚ್ಚೆಗಳಷ್ಟೂ ದೂರ ಹಾರಿ ಹೋಗಿ  ತಟ್ಟಾಡಿಕೊಂಡು ಸಾವರಿಸಿಕೊಂಡು ಬೀಳದೆ ನಿಂತೆ.

 

ಅದು ಎಂ.ಎಸ್.ರಾಮಯ್ಯ ಬಸ್ ಸ್ಟಾಪ್ ಆಗಿದ್ದರಿಂದ ಸುಮಾರು ಜನರು ದಡಾ ದಡಾ   ಅಂತ ಬಸ್ಸಿನಿಂದ ಇಳಿದಿದ್ದೇ ತಡಾ ನಾನೂ ಹಾಗೂ ಹೀಗೂ ಮಾಡಿ ಬಸ್ಸಿನೊಳಗೆ ನುಗ್ಗಿ  ಸತ್ತೆನೋ ಬದುಕಿದೆನೋ ಎಂದು ಕಂಬವೊಂದನ್ನು ಒರಗಿಕೊಂಡು ನಿಟ್ಟುಸಿರು ಬಿಟ್ಟೆ. ಅದೇ ಕಡೇ ಮುಂದೆ ನಾನೆಂದೂ ಫುಟ್ ಬೋರ್ಡಿನಲ್ಲಿ ಪ್ರಯಾಣ ಮಾಡುವ ಸಾಹಸ ಮಾಡಲೇ ಇಲ್ಲ. ಸಾಹಸ ಮಾಡಲಿಲ್ಲ ಎನ್ನುವುದಕ್ಕಿಂತಲೂ ಬಸ್ಸಿನಲ್ಲಿ ಕಾಲೇಜಿಗೆ  ಹೋಗುವುದನ್ನೇ ನಿಲ್ಲಿಸಿಯೇ ಬಟ್ಟೆ ಕಷ್ಟಾನೋ ಸುಖಾನೋ ಸೈಕಲ್ಲಿನಲ್ಲಿಯೇ ಕಾಲೇಜಿಗೆ ಕೆಲ ತಿಂಗಳು ಹೋಗಿಬಂದು ಡಿಪ್ಲಮೋ ಮುಗಿಸಿ ಬುಕ್ ಬೈಂಡಿಗ್, ಸ್ಕ್ರೀನ್ ಪಿಂಟ್ ಮಾಡಿ ಸಂಪಾದಿಸಿದ್ದ ಹಣದೊಂದಿಗೆ ನನ್ನ ಗುರುಗಳ ಹತ್ತಿರ ಸ್ವಲ್ಪ ಹಣವನ್ನು ಸಾಲ ಮಾಡಿ ಹೀರೋ ಪುಕ್ ಕೊಂಡು ಜರ್ ಎಂದು ಓಡಾಡತೊಡಗಿದೆ. ಇನ್ನೊಮ್ಮೆ ಯಾವಾಗಲಾದರೂ ಹೀರೋ ಪುಕ್ ಅನುಭವವನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

 

bmtc4ಈಗ ಬಿಡಿ  ಅಂದಿನ ಹಾಗೆ ಪುಟ್ ಬೋರ್ಡಿನ ಅನುಭವ ಆಗುವುದೇ ಇಲ್ಲ. ಏಕೆಂದರೆ ಎಲ್ಲಾ ಬಿಎಂಟಿಸಿ ಬಸ್ಸುಗಳಿಗೂ ಹೈಡ್ರಾಲಿಕ್ ಡೋರ್ಗಳನ್ನು ಹಾಕಿಸಿ ಬಿಟ್ಟಿರುವುದಲ್ಲದೇ  ಪ್ರತೀ  ಸ್ಟಾಪಿನಲ್ಲಿಯೂ ಪ್ರಯಾಣಿಕರು ಬಸ್ ಇಳಿದು ಹತ್ತಿದ ನಂತರ ಡೋರ್ ಹಾಕಿಕೊಂಡ ನಂತರವೇ ಬಸ್ ಪ್ರಯಾಣ ಮುಂದುವರೆಸುವ ಕಾರಣ ಪುಟ್ ಬೋರ್ಡ್ ನಿಂದಾ ಆಗುತ್ತಿದ್ದ ಆಪಘಾತಗಳೆಲ್ಲವೂ ಸಂಪೂರ್ಣವಾಗಿ ನಿಂತು ಹೋಗಿರುವುದು ಅಭಿನಂದನಾರ್ಹವಾಗಿದೆ. ಅದೂ ಅಲ್ಲದೇ  ಈಗೆಲ್ಲಾ  ಸಾಕಷ್ಟು ಬಸ್ಸುಗಳು ಇರುವುದರಿಂದ ಅಂದಿನ ಜನಜಂಗುಳಿಯೂ ಇಲ್ಲವಾಗಿದೆ ಮತ್ತು ಎಲ್ಲಕ್ಕಿಂತಲೂ ಹೆಚ್ಚಿನವರು ತಮ್ಮದೇ ಸ್ವಂತ ವಾಹನದಲ್ಲಿ ಓಡಾಡುವಷ್ಟರ ಮಟ್ಟಿಗೆ ಸ್ಥಿತಿವಂತರಾಗಿರುವ ಓಡಾಡುವಷ್ಟರ ಮಟ್ಟಿಗೆ ಸ್ಥಿತಿವಂತರಾಗಿರುವ ಕಾರಣ ಅಂದಿನ ರಸಾನುಭವ ಇಂದಿನವರಿಗೆ ಇಲ್ಲವಾಗಿದೆ.  ಅದರೂ ಆಗೊಮ್ಮೇ ಈಗೊಮ್ಮೆ ಜನಜಂಗುಳಿ ಬಸ್ ನೋಡಿದಾಗ ನನ್ನ ಪುಟ್ ಬೋರ್ಡ್ ಪ್ರಯಾಣದ ನೆನಪಾಗಿ ಮನಸ್ಸಿನಲ್ಲಿಯೇ ಮಂಡಿಗೆ ತಿಂದಂತಹ  ಹಿತಾನುಭವ ಆಗುತ್ತದೆ. ಖಂಡಿತವಾಗಿಯೂ ನಿಮಗೂ ಸಹಾ ಈ ರೀತಿಯ ಅನುಭವ ಆಗಿರುತ್ತದೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ   

ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗ ಬೇಕಾದ ಅನಿವಾರ್ಯ ಸಂದರ್ಭಗಳು ಬಂದಾಗ ಎಲ್ಲೋ ಉಳ್ಳವರು ತಮ್ಮದೇ ವಾಹನಗಳಲ್ಲಿಯೋ ಇಲ್ಲವೇ, ಬಾಡಿಗೆ ವಾಹನ ಮಾಡಿಕೊಂಡು ಹೋದರೆ ಬಹುತೇಕರು ವಿಧಿ ಸರ್ಕಾರಿ/ಖಾಸಗೀ ಬಸ್ ಇಲ್ಲವೇ ರೈಲುಗಳನ್ನು ಅವಲಂಭನೆ ಮಾಡಲೇ ಬೇಕಾಗುತ್ತದೆ. ಹಾಗೆ ಪರ ಊರಿಗೆ ಹೋಗುವಾಗ ಸಮಯ ಉಳಿಸುವ ಸಲುವಾಗಿ ಬಹುತೇಕರು ರಾತ್ರಿಯ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಲೀಪರ್ ಅಥವಾ ಸೆಮಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸೀಟ್ ಬುಕ್ ಮಾಡಿ, ರಾತ್ರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಊಟ ಮಾಡಿ ಬಸ್ ಹತ್ತಿ ನಿದ್ರೆ ಮಾಡಿದ್ರೇ ಬೆಳಗಾಗುವಷ್ಟರಲ್ಲಿ ತಲುಪಬೇಕಾದ ಸ್ಥಳವನ್ನು ತಲುಪಬಹುದು ಎನ್ನುವುದು ಎಲ್ಲರ ಲೆಖ್ಖಾಚಾರ. ಹೀಗೆ ಲೆಖ್ಖಾಚಾರ ಹಾಕಿಕೊಂಡು ರಾತ್ರೀ ಪ್ರಯಾಣಿಸುವವರ ಲೆಖ್ಖಾಚಾರವನ್ನು ನಮಗೇ ಗೊತ್ತಿಲ್ಲದಂತೆ ಬುಡಮೇಲು ಮಾಡುವರು ಇರುತ್ತಾರೆ ಎನ್ನುವ ಭಯಾನಕ ಅನುಭವಗಳು ಇದೋ ನಿಮಗಾಗಿ.

ಶಂಕರನಿಗೆ ಕೆಲದ ನಿಮಿತ್ತ ಇದ್ದಕ್ಕಿಂದ್ದತೆಯೇ ಮಂಗಳೂರಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತ್ತು. ಎಷ್ಟೇ ಕಷ್ಟ ಪಟ್ಟರೂ ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಆಗದೇ, ಹೋಗುವಾಗಾ ಹೇಗೋ ತನ್ನ ಸ್ನೇಹಿತರ ಕಾರಿನಲ್ಲಿ ಮಂಗಳೂರಿಗೆ ತಲುಪಿ ತನ್ನ ಕೆಲಸವನ್ನು ಮುಗಿಸಿಕೊಂಡು ಸಂಜೆಯ ರೈಲಿನ ಟಿಕೆಟ್ ಸಿಗದ ಕಾರಣ, ಕಡೇ ಸಮಯದಲ್ಲಿ ಟಿಕೆಟ್ ಬುಕ್ ಮಾಡಿದ ಪರಿಣಾಮ ಸೆಮೀ ಸ್ಲೀಪರಿನ ಕಡೆಯ ಸೀಟ್ ಸಿಕ್ಕಿತ್ತು. ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಸೀಟ್ ಪಕ್ಕದಲ್ಲಿಯೇ ಲ್ಯಾಪ್ಟ್ಯಾಪ್ ಇಟ್ಟುಕೊಂಡು ಇನ್ನೇನು ನಿದ್ದೆಗೆ ಜಾರ ಬೇಕು ಎಂದುಕೊಳ್ಳುತ್ತಿದ್ದ ಸಮಯದಲ್ಲಿಯೇ ಬಸ್ಸಿಗೆ ಹತ್ತಿಕೊಂಡ ಮಧ್ಯ ವಯಸ್ಸಿನ ತರುಣನೊಬ್ಬ ಬ್ಯಾಗ್ ಹಿಡಿದುಕೊಂಡು ಸೀದಾ ಶಂಕರನ ಪಕ್ಕದ ಸೀಟಿಗೆ ಬಂದು ಕುಳಿತುಕೊಂಡು ನಮಸ್ಕಾರ ಸಾರ್! ಎಂದರು ನಿದ್ದೆ ಗಣ್ಣಿನಲ್ಲಿಯೇ ನಮಸ್ಕಾರಗಳನ್ನು ಹೇಳಿದ ನಂತರ, ಎಲ್ಲಿ ಬೆಂಗಳೂರಾ ಎಂದು ಕೇಳಿದಾಗ ಹೌದು ಎಂದ ಶಂಕರ ಎಲ್ಲಿ ಇಳೀತೀರೀ ಎಂದಾಗ ಮೆಜೆಸ್ಟಿಕ್ ಎಂದು ಹೇಳಿ ಹೆಚ್ಚಿನ ಮಾತು ಮುಂದುವರಿಸದೇ ನಿದ್ದೆಗೆ ಜಾರಿದ.

ಮಾರ್ಗದ ಮಧ್ಯದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಕಾಫೀಗೆಂದು ನಿಲ್ಲಿಸಿದಾಗ ಎಚ್ಚರಗೊಂಡ ಶಂಕರ, ಪಕ್ಕದ ಸೀಟಿನ ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ಇಳಿದು ಕಾಫಿ ಕುಡಿದು ತನ್ನ ಸೀಟಿನಲ್ಲಿ ಕುಳಿತಾಗಲೂ ಪಕ್ಕದ ಸೀಟಿನ ಯುವಕ ಮಲಗಿಯೇ ಇದ್ದ. ಇನ್ನೊಬ್ಬರ ಉಸಾಬರಿ ತನಗೇಕೆ ಎಂದು, ಹುಡುಗ ಹೇಗೂ ಮಲಗಿದ್ದಾನೆ ಎಂದು ಕೊಂಡು ಲ್ಯಾಪ್ಟ್ಯಾಪ್ ಬ್ಯಾಗನ್ನು ಸೀಟಿನ ಕೆಳಗೆ ಇಟ್ಟು ಕಣ್ಣು ಮುಚ್ಚಿದ್ದೇ ತಡ ನಿದ್ದೆಗೆ ಹೋಗಿದ್ದೇ ಗೊತ್ತಾಗಲಿಲ್ಲ. ಅದೇಕೋ ಏನೋ, ಯಾರೋ ಅಡ್ಡ ಬಂದರೋ ಎನ್ನುವ ಕಾರಣಕ್ಕೆ ಚಾಲಕ, ಇದ್ದಕ್ಕಿದ್ದಂತೆಯೇ ಬ್ರೇಕ್ ಹಾಕಿದಾಗಲೇ ಶಂಕರಿನಿಗೆ ಎಚ್ಚರವಾಯಿತು. ಎಚ್ಚರ ಆದ ಕೂಡಲೇ ಬೆಳಕು ಹರಿಯುತ್ತಿದ್ದರಿಂದ ಎಲ್ಲಿದ್ದೀವಿ ಎಂದು ನೋಡಲು ಪಕ್ಕಕ್ಕೆ ತಿರುಗುತ್ತಾನೆ. ಪಕ್ಕದ ಸೀಟಿನ ಯುವಕ ಅಲ್ಲಿಲ್ಲ. ಕೂಡಲೇ ಸೀಟಿನ ಕೆಳಗಿನ ಲ್ಯಾಪ್ಟ್ಯಾಪ್ ಬ್ಯಾಗ್ ಇದೆಯಾ ಅಂತ ನೋಡಲು ಕೈ ಹಾಕಿದ್ರೇ, ಎದೆ ಧಸಕ್ ಎಂದಿತು. ಅವನ ಲ್ಯಾಪ್ಟ್ಯಾಪ್ ಬ್ಯಾಗ್ ಬದಲಾಗಿ ಆ ಹುಡುಗ ತಂದಿದ್ದ ಕಿತ್ತೋಗಿರೋ ಬ್ಯಾಗ್ ಇದೆ. ಕೂಡಲೇ ಎದ್ದು ಅಯ್ಯೋ ಕಳ್ಳಾ ಕಳ್ಳಾ ಎಂದು ಜೋರಾಗಿ ಕಿರುಚುತ್ತಾ ಡ್ರೈವರ್ ಅವರ ಬಳಿ ಹೋದ ತಕ್ಷಣವೇ ಕ್ಲೀನರ್ ಏನಾಯ್ತು ಸರ್ ಎಂದು ಕೇಳಿದ್ದಾನೆ. ಕೂಡಲೇ ಎಲ್ಲವನ್ನು ವಿವರಿಸಿದಾಕ್ಷಣ, ಸರ್ ಇನ್ನೂ ಬಸ್ಸಿನಿಂದ ಯಾರೂ ಇಳ್ದಿಲ್ಲ. ನಿಮ್ಮ ಪಕ್ಕದ ಸೀಟಿನವರು ಬಸ್ ಇಳಿಯಲು ಹೋಗಿದ್ದಾರೆ ನೋಡಿ ಎಂದಿದ್ದನ್ನು ಕೇಳಿದ್ದೇ ತಡ ಧಡ ಧಡಾ ಎಂದು ಹೋಗಿ ನೋಡಿದರೇ, ಶಂಕರನ ಲ್ಯಾಪ್ ಟ್ಯಾಪ್ ಬ್ಯಾಗ್ ನೇತು ಹಾಕಿಕೊಂಡು ಇನ್ನೇನು ಬಸ್ಸು ಇಳಿಯುವುದರಲ್ಲಿ ಇದ್ದ ಆ ಯುವಕ. ಏಯ್ ನಂದೂ ಬ್ಯಾಗೂ ಎಂದು ಹೇಳಿದಾಕ್ಷಣ, ಎನೂ ಆಗೇ ಇಲ್ಲದಂತೇ ಓ, ಸಾರಿ ಸರ್, ನಿದ್ದೆಯ ಮಂಪರಿನಲ್ಲಿ ನಿಮ್ಮ ಬ್ಯಾಗ್ ತೆಗೆದುಕೊಂಡು ಬಂದಿದ್ದೀನಿ ಎಂದು ಹೇಳುತ್ತಾ ತನಗೇನೂ ಗೊತ್ತಿಲ್ಲದಂತೆ ಶಂಕರನ ಬ್ಯಾಗ್ ಕೈಗಿತ್ತು ತನ್ನ ಬ್ಯಾಗ್ ತೆಗೆದುಕೊಂಡು ಸರ ಸರನೆ ಬಸ್ ಇಳಿದು ಹೋರಟೇ ಬಿಟ್ಟ.

ಶಂಕರನ ಅದೃಷ್ಟ ಚೆನ್ನಾಗಿದ್ದ ಕಾರಣ, ಬಸ್ಸಿಗೆ ಯಾರೋ ಅಡ್ಡ ಬಂದು ಬ್ರೇಕ್ ಹಾಕಿದ ಪರಿಣಾಮ ಶಂಕರನ ಲ್ಯಾಪ್ ಟ್ಯಾಪ್ ಬ್ಯಾಗ್ ಅವನಿಗೆ ಸಿಕ್ಕಿತ್ತು ಇಲ್ಲವಾಗಿದ್ದಲ್ಲಿ ನಾಜೂಕಾಗಿ ಎತ್ತಿಕೊಂಡು ಹೋಗಿರುತ್ತಿದ್ದ ಆ ಸಹ ಪ್ರಯಾಣಿಕ.

ಅಷ್ಟು ಹೊತ್ತಿಗೆ ಇಡೀ ಬಸ್ಸಿನವರೆಲ್ಲಾ ಎಚ್ಚೆತ್ತು ಸರ್ ಸುಮ್ಮನೇ ಬಿಡ್ಬಾರ್ದಾಗಿತ್ತು ಅವನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಬೇಕಾಗಿತ್ತು ಎಂದು ತಲಾ ತಟ್ಟಿಗೆ ಒಂದೊಂದು ಸಲಹೆ ಕೊಟ್ಟರು. ಸರಿ ಹೇಗೋ ಬ್ಯಾಗ್ ಸಿಕ್ಕಿತಲ್ಲ ಎನ್ನುವ ಸಂತೋಷದಲ್ಲಿ ತನ್ನ ಸೀಟ್ನಲ್ಲಿ ಬಂದು ಕುಳಿತಾಗ ಅವನ ಸೀಟಿನ ಮುಂದೆ ಇದ್ದ ವಯೋವೃದ್ಧ್ರರು ಹೇಳಿದ ಇದೇ ರೀತಿಯ ಪ್ರಸಂಗ ಮತ್ತಷ್ಟೂ ರೋಚಕವಾಗಿತ್ತು.

ಉಡುಪಿಯ ಶ್ರೀಯುತರ ಸಂಬಂಧಿಗಳ ಮದುವೆ ಮುಗಿಸಿ ಎಲ್ಲರೂ ಇದೇ ರೀತಿ ರಾತ್ರಿಯ ಬಸ್ಸಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ. ಮದುವೆಗೆ ವಧುವಿಗೆ ಹಾಕಿದ್ದ ಆಭರಣಗಳೆಲ್ಲವನ್ನೂ ಒಂದು ಬ್ಯಾಗಿನಲ್ಲಿ ಹಾಕಿ ಅದನ್ನು ತಮ್ಮ ಸೀಟಿನ ಮೇಲೆ ಇಟ್ಟು ಎಲ್ಲರೂ ನಿದ್ದೆಗೆ ಜಾರಿ ಹೋಗಿದ್ದಾರೆ. ಬೆಳಗಿನ ಜಾವ ಬೆಂಗಳೂರಿಗೆ ಬಂದಾಗ ಎದ್ದು ನೋಡಿದರೇ ಆಭರಣಗಳಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಎಲ್ಲರೂ ಎದೆ ಎದೆ ಬಡಿದುಕೊಂಡು ಅತ್ತರೇ, ಹುಡುಗನ ತಾಯಿ ನೇರವಾಗಿ ನಮ್ಮ ಮನೆಗೆ ಮಹಾಲಕ್ಷ್ಮಿ ಆಗಿ ಬರಬೇಕಾದವಳು, ಅಪಶಕುತನದಂತೆ ದರಿದ್ರ ಲಕ್ಷ್ಮಿಯಂತೆ ಬಂದಳಲ್ಲಪ್ಪಾ ಎಂದು ಗೋಳೋ ಎಂದು ಏನೂ ಅರಿಯದ ಹುಡುಗಿಯ ಮೇಲೆ ಆಪಾದನೆ ಬಸ್ಸಿನಲ್ಲಿಯೇ ಮಾಡುತ್ತಾರೆ.

ಹುಡುಗಿಯ ಕಡೆಯವರು ತಮ್ಮದಲ್ಲದ ತಪ್ಪಿಗೆ ತಮ್ಮ ಹುಡುಗಿ ಜೀವನ ಪರ್ಯಂತ ನರಳಬೇಕಲ್ಲಾ ಎಂದು ಬೇಸರಿಗಿಕೊಂಡು ತಮಗಿದ್ದ ಅಲ್ಪ ಸ್ವಲ್ಪ ಶಿಫಾರಸ್ಸನ್ನು ಬಳಸಿ ಪೋಲೀಸ್ ಕಮಿಷಿನರ್ ಅವರ ತನಕ ಈ ಕೇಸ್ ತಲುಪುವಂತೆ ಮಾಡುತ್ತಾರೆ. ಪೋಲೀಸ್ ಕಮಿಷಿನರ್ ಖುದ್ದಾಗಿ ಆಸ್ಥೆ ವಹಿಸಿದ್ದಾರೆ ಎಂಬ ಕಾರಣದಿಂದ ತನಿಖೆ ಚುರುಕಾಗಿ ಬಸ್ಸಿನ ಮಾಲಿಕರು, ಕ್ಲೀನರ್ ಮತ್ತು ಚಾಲಕರನೆಲ್ಲಾ ಒಂದು ಸುತ್ತಿನ ತನಿಖೆ ನಡೆಸಿ ಈ ರೀತಿಯ ಪ್ರಸಂಗಗಳು ಎರಡು ಮೂರು ತಿಂಗಳಿಗೊಮ್ಮೆ ಅವರ ಬಸ್ಸಿನಲ್ಲಿ ಆಗುತ್ತಿರುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿ ದೊರೆತಲ್ಲಿ ತಮಗೆ ತಿಳಿಸಬೇಕೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಹುಡುಗಿಯ ಮನೆಯವರು ಪ್ರತೀ ವಾರಕ್ಕೊಮ್ಮೆ ಬಸ್ಸು ಮತ್ತು ಪೋಲೀಸ್ ಸ್ಟೇಷನ್ನಿಗೆ ಹೋಗಿ ಏನಾದಾರೂ ಮಾಹಿತಿ ಸಿಕ್ಕಿತೇ ಎಂದು ಪದೇ ಪದೇ ವಿಚಾರಿಸುತ್ತಾ ಕಮಿಷಿನರ್ ಕಡೆಯಿಂದಲೂ ತನಿಖಾಧಿಕಾರಿಗಳಿಗೆ ಕರೆ ಮಾಡಿಸುತ್ತಾ ಒತ್ತಡ ಹೇರುತ್ತಿದ್ದರು. ಅದೊಂದು ದಿನ ಬಸ್ಸಿನ ಚಾಲಕ ಕರೆ ಮಾಡಿ ಸರಿ ಇವತ್ತೂ ಕೂಡಾ ಅದೇ ರೀತಿಯಾದ ಪ್ರಸಂಗ ನಡೆದಿದೆ. ಎರಡೂ ಪ್ರಕರಣಗಳನ್ನು ಗಮನಿಸಿದರೇ, ಎರಡೂ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಕುಣಿಗಲ್ಲಿನಲ್ಲಿ ಇಳಿದು ಹೋಗಿದ್ದಾನೆ. ಬಹುಶಃ ಆವನದ್ದೇ ಈ ಕೃತ್ಯವಿರಬಹುದು. ಮುಂದಿನ ಬಾರಿ ಆ ವ್ಯಕ್ತಿ ನಮ್ಮ ಬಸ್ ಹತ್ತಿದರೆ ಖಂಡಿತವಾಗಿಯೂ ನಾನು ಗುರುತಿಸಬಲ್ಲೇ ಎಂದು ತಿಳಿಸಿ ಒಂದಷ್ಟು ಆಶಾಭಾವನೆ ಮೂಡಿಸಿದ ಎಂದರೂ ತಪ್ಪಾಗಲಾರದು.

ಒಂದೆರಡು ವಾರಗಳ ನಂತರ ರಾತ್ರಿ ಬಸ್ ಇನ್ನೇನು ಮೆಜೆಸ್ಟಿಕ್ಕಿನಿಂದ ಹೊರಡಬೇಕು ಎನ್ನುವಷ್ಟರಲ್ಲಿ ಅನುಮಾನಿಸುತ್ತಿದ್ದ ಅದೇ ವ್ಯಕ್ತಿ ಬಸ್ಸಿಗೆ ಹತ್ತಿದ್ದನ್ನು ಚಾಲಕ ಗಮನಿಸಿ, ಕೂಡಲೇ ಪೋಲೀಸರಿಗೆ ಕರೆ ಮಾಡಿ ಬಹುಶಃ ಅದೇ ವ್ಯಕ್ತಿ ಬಸ್ ಹತ್ತಿದ್ದಾನೆ ಪೀಣ್ಯಾದ ಬಳಿ ಬಸ್ ನಿಲ್ಲಿಸುತ್ತೇನೆ ತಾವು ಬಂದು ವಿಚಾರಣೆ ಮಾಡಬಹುದು ಎಂದು ತಿಳಿಸಿದ್ದಾನೆ. ಇಂತಹ ಮಾಹಿತಿಗಾಗಿಯೇ ಕಾಯುತ್ತಿದ್ದ ಪೋಲೀಸರೂ ಸಹಾ ಕೂಡಲೇ ಪೀಣ್ಯಾದ ಬಳಿ ಬಂದು ಬಸ್ಸಿನಲ್ಲಿದ್ದ ಆ ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಿ ಕರೆದುಕೊಂಡು ಹೋಗುತ್ತಾರೆ. ನೋಡಲು ಸುರಸುಂದರನಾಗಿ ಯಾವುದೇ ರೀತಿಯ ಅನುಮಾನ ಬಾರದಂತಿರುವ ವ್ಯಕ್ತಿಯನ್ನು ಪೋಲೀಸರು ಏಕಾ ಏಕಿ ಬಂಧಿಸಿದ್ದು ಸಹ ಪ್ರಯಾಣಿಕರಿಗೆ ಅಶ್ಚರ್ಯವಾಗುತ್ತದೆ. ಆತನೂ ಸಹಾ ಯಾಕ್ ಸಾರ್ ನನ್ನನ್ನು ಬಂಧಿಸುತ್ತಿದ್ದೀರೀ? ನಾನೇನು ತಪ್ಪು ಮಾಡಿದೆ ಎಂದು ಆರಂಭದಲ್ಲಿ ಕೊಸರಾಡಿದರೂ ಪೋಲೀಸರು ಕರೆದುಕೊಂಡು ಹೋಗಿ ತಮ್ಮ ಕಾರ್ಯಾಚರಣೆ ಮಾಡಿದಾಗ ತಿಳಿದು ಬಂದ ವಿಷಯ ಮತ್ತಷ್ಟು ಅಚ್ಚರಿಯನ್ನು ಮೂಡಿಸುತ್ತದೆ.

ಆತ ಮತ್ತು ಆತನ ಮನೆಯವರೆಲ್ಲರೂ ಪದವಿ ಪಡೆದ ವಿದ್ಯಾವಂತರಾಗಿದ್ದು, ಒಬ್ಬ ಅಕ್ಕ ಪೋಲೀಸ್ ಇಲಾಖೆಯಲ್ಲೂ ಮತ್ತೊಬ್ಬರು ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ಆರಂಭದಲ್ಲಿ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ವಯೋಸಹಜ ಸಹವಾಸದೋಷದಿಂದಾಗಿ ದುಶ್ಚಟಗಳಿಗೆ ಬಲಿಯಾಗಿ ಇದ್ದ ಕೆಲಸವನ್ನು ಬಿಟ್ಟು ಈ ರೀತಿಯಾದ ಕಳ್ಳತನಕ್ಕೆ ಇಳಿದಿದ್ದ. ನೋಡಲು ಸ್ಥಿತಿವಂತರ ಹಾಗೆ ಉಡುಪುಗಳನ್ನು ಧರಿಸಿಕೊಂಡು ಈ ರೀತಿಯಾಗಿ ರಾತ್ರಿಯ ಪ್ರಯಾಣದ ಬಸ್ಸನ್ನೇರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ತನ್ನ ಕರಾಮತ್ತಿನ ಮೂಲಕ ಲಪಟಾಯಿಸಿ, ಮಧ್ಯರಾತ್ರಿಯಲ್ಲಿಯೇ ಮಾರ್ಗದ ಮಧ್ಯದಲ್ಲಿ ಇಳಿದುಹೋಗಿಬಿಡುತ್ತಿದ್ದ. ಬಸ್ ನಿಲ್ಲಿಸಿ ಎಲ್ಲರಿಗೂ ಎಚ್ಚರವಾಗಿ ಕಳ್ಳತನ ನಡೆದ ವಿಷಯ ಎಲ್ಲರಿಗೂ ಗೊತ್ತಾಗುವಷ್ಟರಲ್ಲಿ ಆತ ತಪ್ಪಿಸಿಕೊಂಡು ಹೋಗಿ ಬಿಡುತ್ತಿದ್ದ. ತಾನು ಕದ್ದ ಆಭರಣಗಳನ್ನು ದೂರ ದೂರದ ಊರಿನಲ್ಲಿ ಆಡವಿಟ್ಟು ಕೈಯಲ್ಲಿ ದುಡ್ಡು ಖಾಲಿಯಾಗುವವರೆಗೂ ಮೋಜು ಮಸ್ತಿ ಮಾಡಿಕೊಂಡಿದ್ದು ನಂತರ ಹಣದ ಅವಶ್ಯಕತೆ ಇದ್ದಾಗ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದ. ಅಕಸ್ಮಾತ್ ಹಾಗೇನಾದರೂ ‍ಸಿಕ್ಕಿ ಹಾಕಿಕೊಂಡಲ್ಲಿ ತನ್ನ ಅಕ್ಕಂದಿರು ಬಿಡಿಸಿಕೊಂಡು ಬರುತ್ತಾರೆ ಎಂಬ ದುರಾಲೋಚನೆ ಆತನದ್ದಾಗಿತ್ತು.

ಆದರೆ ಈ ಬಾರಿ ಆತನ ಅದೃಷ್ಟ ಕೈಕೊಟ್ಟ ಪರಿಣಾಮ ಮತ್ತು ಚಾಲಕ ಚಾಕಚಕ್ಯತೆಯಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ. ಪೋಲೀಸರ ಸಹಾಯದಿಂದ ಆತ ಅಡವಿಟ್ಟಿದ್ದ ಚಿನ್ನವನ್ನೆಲ್ಲಾ ಬಿಡಿಸಿಕೊಂಡು ಬರುವಷ್ಟರಲ್ಲಿ ಮತ್ತು ಪೋಲೀಸರಿಗೆ ಮತ್ತು ಚಾಲಕನಿಗೆ ಭಕ್ಷೀಸು ಕೊಟ್ಟ ನಂತರ ಚಿನ್ನದ ಆಭರಣಗಳ ಬೆಲೆಯ ಅರ್ಧದಷ್ಟು ಖರ್ಚಾಗಿದ್ದರೂ ತಮ್ಮ ಮಗಳ ಮೇಲಿನ ಆರೋಪ ಮುಕ್ತವಾಯಿತಲ್ಲಾ ಎನ್ನುವ ಸಮಾಧಾನ ಹುಡುಗಿಯ ಮನೆಯವರದ್ದು.

ಅದಕ್ಕೇ ಹೇಳೋದು, ಹೊರಗೆ ಹೋಗುವಾಗ ಅನಾವಶ್ಯಕವಾಗಿ ಆಭರಣಗಳನ್ನು ತೆಗೆದುಕೊಂಡು ಹೋಗಲೇ ಬಾರದು. ಹಾಗೆ ತೆಗೆದುಕೊಂಡು ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಜಾಗೃತೆಯಿಂದ ಕಾಪಾಡಿಕೊಳ್ಳಬೇಕೇ ಹೊರತು, ಕಳೆದು ಕೊಂಡ ನಂತರ ವಿನಾಕಾರಣ ಮತ್ತೊಬ್ಬರ ಮೇಲೆ ಅನಾವಶ್ಯಕವಾಗಿ ಆರೋಪ ಮಾಡಬಾರದು ಮತ್ತು ಎಷ್ಟೇ ಒಳ್ಳೆಯವರಾಗಿ ಕಾಣಿಸಿದರೂ ಸಹ ಪ್ರಯಾಣಿಕರ ಮೇಲೆ ಒಂದು ಎಚ್ಚರಿಕೆಯ ಗಮನ ಇರಲೇ ಬೇಕು ಅಲ್ವೇ?

ಇದೂ ಅಲ್ದೇ ಬಸ್ಸಿನವರೂ ಮಾರ್ಗದ ಮಧ್ಯದಲ್ಲಿ ಯಾರನ್ನೂ ಇಳಿಯಲು ಬಿಡದೇ, ಹಾಗೆ ಇಳಿಯಬೇಕಾದ ಸಂದರ್ಭದಲ್ಲಿ, ಪ್ರಯಾಣಿಕರಿಗೆ ಸ್ವಲ್ಪ ತೊಂದರೆ ಆದರೂ ಪರವಾಗಿಲ್ಲ. ಎಲ್ಲರನ್ನೂ ಎಚ್ಚರಿಸಿ ಅವರ ಸಾಮಾನುಗಳು ಸರಿಯಾಗಿದೆಯೇ ಎಂದು ನೋಡಿ ಕೊಂಡ ನಂತರವೇ ಪ್ರಯಾಣಿಕರನ್ನು ಇಳಿಯಲು ಅನುವು ಮಾಡಿಕೊಟ್ಟರೆ ಈ ರೀತಿಯ ಕುಕೃತ್ಯಗಳನ್ನು ತಡೆಯಬಹುದಾಗಿದೆ.

ಏನಂತೀರೀ?