ಬಾಲ್ಯದ ಬಯಾಸ್ಕೋಪ್

ಬೇಸಿಗೆಯಲ್ಲಿ ಪರೀಕ್ಷೆ ಮುಗಿದು ಫಲಿತಾಂಶ ಬಂದಿದ್ದೇ ತಡಾ ಗಂಟು ಮೂಟೆ ಕಟ್ಟಿಕೊಂಡು ತಾತನ ಮನೆಗೆ ಹೋಗುವುದು ನಮ್ಮ ಮನೆಯ ವಾಡಿಕೆ. ನಮ್ಮೂರಿಗೆ ಹೋಗಲು ಪ್ರಮುಖ ಆಕರ್ಷಣೆಯೆಂದರೆ ಅದೇ ಸಮಯದಲ್ಲಿ ಎರಡು ವಾರಗಳ ಕಾಲ ನಡೆಯುತ್ತಿದ್ದ ಊರ ಹಬ್ಬ, ಜಾತ್ರೆ, ದೇವಸ್ಥಾನದ ಮುಂದಿದ್ದ ಕಲ್ಯಾಣಿ, ಅಜ್ಜಿ ಮಾಡಿಕೊಡುತ್ತಿದ್ದ ಕೆಂಡ ರೊಟ್ಟಿ ಗಟ್ಟಿ ಚಟ್ನಿ ಮತ್ತು ಬೆಣ್ಣೆ, ತಾತನ ತೊಡೆ ಮೇಲೆ ಕುಳಿತುಕೊಂಡು ಕೇಳುತ್ತಿದ್ದ ಕಥೆಗಳಲ್ಲದೇ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ಪ್ರೊಜೆಕ್ಷನ್.

ನಮ್ಮೂರು ಬಾಳಗಂಚಿ ಸುಮಾರು ಮುನ್ನೂರರಿಂದ ನಾಲ್ಕು ನೂರು ಕುಟುಂಬ ಇರುವಂತಹ ಸಣ್ಣ ಹಳ್ಳಿಯಾದರು, ಗುರು ವಿದ್ಯಾರಣ್ಯರು ಹುಟ್ಟಿದ ಊರು ಎಂಬ ಖ್ಯಾತಿ ಇದ್ದರೆ, ಅಷ್ಟು ಸಣ್ಣ ಹಳ್ಳಿಯಲ್ಲೇ ಸುಮಾರು ಹತ್ತು ಹದಿನೈದು ದೇವಸ್ಥಾನಗಳಿವೆ. ಗ್ರಾಮದೇವತೆ ಹೊನ್ನಾದೇವಿ ಮತ್ತು ನಮ್ಮ ಆರಾದ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿ ಪ್ರಮುಖವಾದವು.

ಇಂತಹ ಐತಿಹಾಸಿಕ ಊರಿಗೆ ರಜೆ ಬಂದ ಕೂಡಲೇ ಎಲ್ಲಾ ಹುಡುಗರೂ ಬಂದು ಸೇರುತ್ತಿದ್ದೆವು.  ನಾನು ಊರಿಗೆ ಬರುತ್ತೇನೆ ಅಂತ ಕಾಗದ ಬರೆಯುತ್ತಿದ್ದಂತೆಯೇ ನಮ್ಮಜ್ಜಿ ಬಹಳ ಚುರುಕಾಗಿ ನಮ್ಮ ಅಕ್ಕ ಪಕ್ಕದ ಸಂಬಂಧೀಕರ ಮನೆಯವರೆಲ್ಲರಿಗೂ ಮೊದಲೇ ಹೇಳಿಕೊಟ್ಟು ದೇವಸ್ಥಾನದ ಕಲ್ಯಾಣಿ ಅಥವಾ ಕೆರೆಯಲ್ಲಿ ಹಬ್ಬದ ಸಮಯ ಬಿಟ್ಟು ಉಳಿದ ಸಮಯ ಈಜಾಡಿದರೆ ದಂಡ ಹಾಕ್ತಾರಂತೆ ಅಂತ ಹೆದರಿಸಿ ಬಿಡುತ್ತಿದ್ದರು. ಆಗೆಲ್ಲಾ ನಮಗೆ ಪಂಚಾಯ್ತಿಕಟ್ಟೆಯಲ್ಲಿ ನಿಂತು ದಂಡ ಹಾಕಿಸಿಕೊಳ್ಳುವುದು ಎಂದರೆ ಅವಮಾನ  ಎಂದು ತಿಳಿದಿದ್ದ ಕಾರಣ  ಬಹಳವಾಗಿ ಅಂಜುತ್ತಿದ್ದೆವು. ಬೆಳಿಗ್ಗೆ ಸ್ವಲ್ಪ ಹೊತ್ತು ದೇವಸ್ಥಾನದ ಪೂಜೆ, ಹಸುವನ್ನು  ಮೇಯಲು ಹೊಲಕ್ಕೆ ಬಿಟ್ಟು ಬಂದ ಮೇಲೆ ಸಂಜೆಯವರೆಗೂ ಬೇಸರ ಕಳೆಯಲು  ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ, ವರಸೆಯಲ್ಲಿ ಚಿಕ್ಕಪ್ಪನಾಗಬೇಕಾದರೂ ನಮಗಿಂತ ಐದಾರು ವರ್ಷಗಳಷ್ಟು ದೊಡ್ಡವನಾದ ಸೋಮಶೇಖರ ನಮ್ಮೆಲ್ಲರ ಪ್ರೀತಿಯ ಸೋಮ,  ಏ ಬನ್ರೋ ನಿಮಗೆಲ್ಲಾ ಸಿನಿಮಾ ತೋರಿಸ್ತೀನಿ! ಎಂದು ಹೇಳಿದಾಗ ನಮಗೆಲ್ಲಾ ಕುತೂಹಲ.

ಅಜ್ಜೀ, ಸೋಮನ ಮನೆಗೆ ಹೋಗಿ ಆಟ ಆಡ್ಕೋಂಡ್  ಬರ್ತೀನಿ  ಎಂದಾಗ ಹೇ ಹುಷಾರು, ಕೊಳ ಮತ್ತು ಕೆರೆ ಕಡೆ ಹೋದ್ರೇ ದಂಡ ಹಾಕ್ತಾರೆ ಅಂತಾ ಗೊತ್ತಲ್ಲಾ ಎಂದು ಮತ್ತೊಮ್ಮೆ ಎಚ್ಚರಿಸಲು ಮರೆಯುತ್ತಿರಲಿಲ್ಲ. ಇಲ್ಲಾ ಅಜ್ಜೀ ಹೊರಗೆಲ್ಲೂ ಹೋಗೋದಿಲ್ಲ ಆವರ ಮನೆಯಲ್ಲೇ ಆಡಿಕೊಳ್ತೀವಿ ಎಂದು ಹೇಳಿ  ಅವರ ಮನೆಗೆ ಹೋಗುವಷ್ಟರಲ್ಲಿ ಅದಾಗಲೇ ಹತ್ತಾರು ಹುಡುಗರು ಅಲ್ಲಿ ಸೇರಿರುತ್ತಿದ್ದರು. ಇಡೀ ಮನೆಯೆಲ್ಲಾ ಕತ್ತಲೆ. ಒಂದು ಮೂಲೆಯಲ್ಲಿ ಅವರಪ್ಪನ ಪಂಚೆಯನ್ನು ಕಟ್ಟಿರುತ್ತಿದ್ದ ಸೋಮ. ಮಟ ಮಟ ಮಧ್ಯಾಹ್ನದ ಬಿಸಿಲು ಅವರ ಮನೆಯ ಹೆಂಚಿನ ಸಂದಿಯಲ್ಲಿ ಇಣುಕುತ್ತಿದ್ದೇ ತಡ ಅದಕ್ಕೆ ಸರಿಯಾಗಿ  ಒಂದು ಕನ್ನಡಿಯನ್ನು ಹಿಡಿದು ಅದರ ಬೆಳಕು ಪರದೆಯತ್ತ ಬೀಳುವಂತೆ ಮಾಡಿ ಅದರ ಮಧ್ಯೆ ಒಂದು ಬೂದುಕನ್ನಡಿ ಹಿಡಿದು ಆ ಬೂದುಗಣ್ಣಡಿಯ ಮುಂದೆ ಸಣ್ಣದಾದ ಫಿಲ್ಮ್ ಹಿಡಿದರೆ ಅದು ಪರದೆಯ ಮೇಲೆ ದೊಡ್ಡದಾಗಿ ಮೂಡಿದ್ದೇ ತಡ ನಮಗೆಲ್ಲರಿಗೂ ಆನಂದವೋ ಆನಂದ. ಎಲ್ಲರು ಜೋರಾಗಿ  ಕೂಗುತ್ತಾ ಚಪ್ಪಾಳೆ ತಟ್ಟಿ ಹರ್ಷೋದ್ಗಾರವನ್ನು ವ್ಯಕ್ತಪಡಿಸುತ್ತಿದ್ದೆವು.

lenseಹೀಗೆ ನಮ್ಮ ಸೋಮ ನನಗೆ ಮೊತ್ತ ಮೊದಲ ಬಾರಿಗೆ  ಸಿನಿಮಾ ಪ್ರೋಜೆಕ್ಷನ್ ಬಗ್ಗೆ ಗೀಳು ಹತ್ತಿಸಿದ.  ಊರಿನಲ್ಲಿ ಇರುವಷ್ಟು ದಿನವೂ  ಒಬ್ಬೊಬ್ಬರ ಮನೆಯಲ್ಲಿ ಇದೇ ರೀತಿಯ ಸಿನಿಮಾ ಪ್ರೊಜೆಕ್ಷನ್ ಮುಂದುವರೆಯುತ್ತಿತ್ತು. ಮೊದಲೆಲ್ಲಾ ಸಿನಿಮಾ ಪ್ರೇಕ್ಷಕನಾಗಿ ನೋಡುತ್ತಿದ್ದ ನಾನು ನಂತರದ ದಿನಗಳಲ್ಲಿ  ಕನ್ನಡಿಯಲ್ಲಿ ಬೆಳಕು ಬಿಡುವುದು ಇಲ್ಲವೇ ಬೂದುಗಾಜು  ಹಿಡಿಯುವಷ್ಟರ ಮಟ್ಟಿಗೆ ಬೆಳೆದಿದ್ದೆ. ಉಳಿದೆಲ್ಲಾ ಕೆಲಸಗಳನ್ನು ಬೇರೆಯವ ಕೈಯ್ಯಲ್ಲಿ ಮಾಡಿಸುತ್ತಿದ್ದರೂ ಫಿಲ್ಮ್ ಹಿಡಿಯುತ್ತಿದ್ದದ್ದು ಮಾತ್ರಾ  caption of the troup ಸೋಮನೇ.  ಎಷ್ಟು ಕೇಳಿದರು ಅದನ್ನು ಮಾತ್ರ ಅವನು ಬಿಟ್ಟು ಕೊಡುತ್ತಿರಲಿಲ್ಲವಾದ್ದರಿಂದ  ಊರ ಹಬ್ಬದ ಜಾತ್ರೆ ಖರ್ಚಿಗೆ ಕೊಟ್ಟ ಹಣದಲ್ಲಿ 50 ಪೈಸಾ ಕೊಟ್ಟು ಸಣ್ಣ ಬೂದುಗಾಜನ್ನು ಕೊಂಡುಕೊಂಡು ಕಡೆಗೆ ಸೋಮನನ್ನೇ ಕಾಡಿ ಬೇಡಿ ಕೆಲವು ಫಿಲ್ಮಗಳನ್ನು ಪಡೆದುಕೊಂಡು ನಮ್ಮ ಸ್ವತಃ ನಾನೇ  ನಮ್ಮ ಮನೆಯಲ್ಲಿ ಹುಡುಗರನ್ನು ಕೂಡಿ ಹಾಕಿಕೊಂಡು ಪ್ರೋಜೆಕ್ಷನ್ ಮಾಡುವಷ್ಟು ಬೆಳೆದು ಬಿಟ್ಟಿದ್ದೆ.

slide_projectorಅದೇ ಸಮಯದಲ್ಲೇ ನಮ್ಮ ಊರ ಹಬ್ಬ ಮುಗಿಸಿಕೊಂಡು ತಾತಾ ಅಜ್ಜಿ ಜೊತೆ  ಕಾಶೀ, ಗಯಾ ಯಾತ್ರೆಗೆ  ಹೋಗಿದ್ದಾಗ ಕಾಶಿಯ ಮಾರುಕಟ್ಟೆಯಲ್ಲಿ  ಸಿನಿಮಾ ಪ್ರೋಜೆಕ್ಟರ್ ಒಂದನ್ನು ನೋಡಿ ಅಪ್ಪನಿಗೆ ಜೋತು ಬಿದ್ದು8 ರೂಪಾಯಿಗೆ ಸಣ್ಣ ಪ್ರೊಜೆಕ್ಟರ್ ಖರೀದಿಸಿ,  ಕಾಶಿಯಲ್ಲಿ ನಾವು ಉಳಿದು ಕೊಂಡಿದ್ದ ಮನೆಯಲ್ಲಿಯೇ  ಅದನ್ನೊಮ್ಮೆ ಪರೀಕ್ಷಿಸಿಯೂ ನೋಡಿದ್ದೆ. ನನಗೋ ಬೇಗನೇ ಬೆಂಗಳೂರಿಗೆ ಬಂದು ನಮ್ಮ ಸ್ನೇಹಿತರಿಗೆ ತೋರಿಸಿ ಹೀರೋ ಆಗಬೇಕು  ಎಂಬ ಹಂಬಲ.

filimಬೆಂಗಳೂರಿಗೆ ಬಂದ ತಕ್ಶಣವೇ ಎಲ್ಲಾ ಗೆಳೆಯರನ್ನೂ ಕೂಡಿಸಿಕೊಂಡು  ಎಲ್ಲಾ ಬಾಗಿಲು ಕಿಟಕಿಗಳನ್ನು ಮುಚ್ಚಿ ಕತ್ತಲು ಕೋಣೆಯನ್ನು ಮಾಡಿ ಮತ್ತೆ ಅಪ್ಪನ ಪಂಚೆಯನ್ನೇ ಪರದೆಯಂತೆ ಕಟ್ಟಿ ಎಲ್ಲರಿಗೂ ಸಿನಿಮಾ ತೋರಿಸಿ ಭೇಷ್ ಎನಿಸಿಕೊಂಡಿದ್ದೆ. ಇದು ಎಲೆಕ್ಟ್ರಿಕಲ್ ಬಲ್ಚ್ ಮುಂದೆ ಬೂದು ಕನ್ನಡಿ ಜೋಡಿಸಿ ಅದರ ಮುಂದೆ  ಫಿಲ್ಮ್ ಸ್ಲೈಡ್ಗಳನ್ನು ಇಡುವ ವ್ಯವಸ್ಥೆ ಇತ್ತು. ಅರಂಭದಲ್ಲಿ ಪ್ರೊಜೆಕ್ಟರ್ ಜೊತೆ ಕೊಟ್ಟಿದ್ದ  ಐದಾರು ಹಿಂದಿ ಸಿನಿಮಾದ ಸ್ಲೈಡ್ ಗಳನ್ನೇ ತೋರಿಸಿ ತೋರಿಸಿ ಬೇಜಾರದ ನಂತರ ನಮ್ಮ ಚಿಕ್ಕಪ್ಪನ ತಮ್ಮ ಪೂರ್ಣಿಮಾ ಟಾಕೀಸಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಸಹಾಯದಿಂದ ಅವರ ಥಿಯೇಟರಿನಲ್ಲಿ ಕತ್ತರಿಸಿ ಬಿಸಾಡುತ್ತಿದ್ದ ಕನ್ನಡ, ತಮಿಳು ಸಿನಿಮಾದ ಫಿಲ್ಮ್ ಗಳನ್ನು ಪಡೆದುಕೊಂಡು ನಾನೇ ಸಿಗರೇಟ್ ಪ್ಯಾಕನ್ನು ಕತ್ತರಿಸಿ ಅದರ ಮಧ್ಯೆ ಫಿಲ್ಮ್ ಇಟ್ಟು ನನ್ನದೇ ಆದ ಸ್ಲೈಡ್ ತಯಾರಿಸಿಕೊಂಡು ಹೊಸಾ ಹೊಸಾ ಚಿತ್ರಗಳನ್ನು ತೋರಿಸುತ್ತಿದ್ದೆ.

filim_projectorಇದಾಗಿ ಕೆಲವು ತಿಂಗಳುಗಳ ನಂತರ ನಮ್ಮ ತಂದೆಯವರ ತಂಗಿ ಅರ್ಥಾತ್  ನಮ್ಮ ಅತ್ತೆಯ ಮನೆಗೆ ಎಂದು ಟಿ.ನರಸೀಪುರಕ್ಕೆ ಹೋಗಿದ್ದಾಗ ಅಲ್ಲಿ ನಮ್ಮತ್ತೆ ಮಗ ದತ್ತನ ಬಳಿ ಇದ್ದ ದೊಡ್ಡ ಪ್ರೊಜೆಕ್ಟರ್ ನನಗೆ ಬಹಳವಾಗಿ  ಇಷ್ಟವಾಗಿ ಹೋಯಿತು. ಅದುವರೆವಿಗೂ ನನ್ನ ಬಳಿ ಇದ್ದದ್ದು ಸ್ಟಿಲ್  ಪ್ರೊಜೆಕ್ಟರ್ ಆಗಿದ್ದರೆ ಇದು ಮೋಶನ್ ಪ್ರೊಜೆಕ್ಟರ್ ಆಗಿತ್ತು. ಇದೂ ಸಹಾ ಎಲೆಕ್ಟ್ರಿಕಲ್ ಬಲ್ಬು ಮುಂದೆ ಬೂದುಗನ್ಣಡಿ ಇಟ್ಟು ಅದರ ಮುಂದೆ ಸಿನಿಮಾ ರೋಲ್ ಇಡುವಂತ ವ್ಯವಸ್ಥೆ ಇತ್ತು. ಮೇಲೊಂದು ರಾಟೆ ಕೆಳಗೊಂದು ರಾಟೆಯ ಮಥ್ಯೆ ಫಿಲ್ಮ್ ರೋಲ್ ಸಿಕ್ಕಿಸಿ ಒಂದು ಕೈಯಲ್ಲಿ ರಾಟೆಯನ್ನು ತಿರುಗಿಸುತ್ತಿದ್ದರೆ ಸಿನಿಮಾ ಮೋಷನ್ ಆಗುತ್ತಿತು. ಆಗಲೇ ನನಗೆ ಗೊತ್ತಾಗಿದ್ದು ಒಂದು ಚೂರು ಚಲನವಲನ ಮಾಡಿಸಲು 24 ಫಿಲ್ಮ್ ರೋಲ್ ಆಗಬೇಕಿತ್ತು ಎಂದು.  ಅವರ ಮನೆಯಲ್ಲಿ ಇದ್ದ ಎರಡೂ ದಿನಗಳು  ಊಟ ತಿಂಡಿ ಎಲ್ಲವನ್ನೂ ಬಿಟ್ಟು ದತ್ತನ ರೂಮಿನಲ್ಲೇ ಪ್ರೊಜೆಕ್ಟರ್ ಜೊತೆಯೇ ಕಳೆದಿದ್ದೆ.

ಮತ್ತೆ ಬೆಂಗಳೂರಿಗೆ ಹಿಂದಿರುಗಿದ ನಂತರ ಆ ಬಾರಿಯ ನನ್ನ ಹುಟ್ಟಿದ ಹಬ್ಬಕ್ಕೆ ನನಗೆ ಬಟ್ಟೆ ಬೇಡ ಬೇರೆ ಯಾವುದೇ ಉಡುಗೊರೆ ಬೇಡ. ನನಗೆ ದತ್ತನದೇ ರೀತಿಯ  ಮೂಷನ್ ಪ್ರೊಜೆಕ್ಟರೇ ಕೊಡಿಸಬೇಕೆಂದು ಅಮ್ಮನ ಸೆರಗು ಹಿಡಿದುಕೊಂಡು ಜಗ್ಗ ತೊಡಗಿದೆ. ( ಅಪ್ಪನ ಬಗ್ಗೆ ಅತ್ಯಂತ ಗೌರವ ಇದ್ದ ಕಾರಣ,  ಅಮ್ಮ ಬದುಕಿರುವವರೆಗೂ ನಾನು ಅಮ್ಮನ ಮಗನೇ ಅಗಿದ್ದೆ)  ನನ್ನ ಬಳಿ ಅಷ್ಟೊಂದು ದುಡ್ಡಿಲ್ಲ ಬೇಕಿದ್ರೇ ನಿಮ್ಮಪ್ಪನನ್ನೇ ನೀನೇ ಕೇಳು ಎಂದು ಅಮ್ಮಾ ಹೇಳಿದಾಗ, ನನಗೆ ಅದೆಲ್ಲಾ ಗೊತ್ತಿಲ್ಲಾ. ನೀವೇ  ಅಣ್ಣನಿಗೆ(ನಾವು ಅಪ್ಪನನ್ನು ಅಣ್ಣಾ ಎಂದೇ ಸಂಭೋಧಿಸುತ್ತಿದ್ದೆವು) ಹೇಳಿ ಒಪ್ಪಿಸಿ ಕೊಡಿಸಬೇಕು ಎಂದು  ದಂಬಾಲು ಬಿದ್ದೆ.

ಅದೊಂದು ದಿನ ಅಮ್ಮಾ ಒಳ್ಳೆಯ ಮುಹೂರ್ತ ನೋಡಿ ರೀ, ನೋಡ್ರೀ ನಿಮ್ಮ ಮಗನ ಹುಟ್ಟು ಹಬ್ಬಕ್ಕೆ ಅದೇನೋ ಬೇಕೆಂತೆ ಎಂಬ ಪೀಠಿಕೆ ಹೇಳಿ ನನ್ನನ್ನು ಮಾತು ಮುಂದುವರೆಸಲು ಕಣ್ಸನ್ನೆ ಮಾಡಿದರು. ನಾನೋ ಅಳುಕುತ್ತಲೇ  ನನ್ನ ಮೋಷನ್ ಪ್ರೊಜೆಕ್ಟರ್ ಆಸೆ ಮುಂದಿಟ್ಟೆ. ಅದೆಲ್ಲಾ ಬೇಡ ಸುಮ್ಮನೇ ಓದು ಎಂದಾಗ. ಇಲ್ಲಾ ಅಣ್ಣಾ ನಾನು ಚೆನ್ನಾಗಿ ಓದ್ತೇನೆ ಎಂದು ಹೇಳಿ, ಅದಾದ ಮುಂದಿನ  ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಮತ್ತೊಮ್ಮೆ ನೋಡಿ ಈ ಸಲಾ ಚೆನ್ನಾಗಿಯೇ ಮಾರ್ಕ್ಸ್ ತೆಗೊಂಡಿದ್ದೀನಿ ಈಗಲಾದರೂ ಕೊಡಿಸಿ ಎಂದು ದಂಬಾಲು ಬಿದ್ದೆ.  ಸರಿ ಎಂದು ಒಪ್ಪಿಕೊಂಡು ಅಂದಿನ ಕಾಲದಲ್ಲೇ ಸುಮಾರು 300 ರೂಪಾಯಿ ಗಳಿಗೆ ಪ್ರೊಜೆಕ್ಟರ್ ಕೊಡಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು.

filim_reelಮತ್ತೆ ಗೆಳೆಯರನ್ನು ಕೂಡಿ ಹಾಕಿಕೊಂಡು  ಈ ಬಾರಿ ಮೋಷನ್ ಸಿನಿಮಾ ತೋರಿಸಿದ್ದೆ.  ಅದರ ಜೊತೆಗೆ ಬಂದ ಮುರ್ನಾಲ್ಕು ರೀಲ್ ಗಳನ್ನೇ ನೋಡಿ ನೋಡಿ ಬೇಸರವಾದಾಗ ನನ್ನ ಗುರು, ಮಾರ್ಗದರ್ಶಿ ಎಲ್ಲವೂ ಆಗಿದ್ದ ಕಣ್ಣಾ ಮಾವನ ಜೊತೆ ಭಾನುವಾರ  ಚಿಕ್ಕಪೇಟೆಯಲ್ಲಿ ನಡೆಯುತ್ತಿದ ಸಂಡೇ ಬಜಾರ್ (ಚೋರ್ ಬಜಾರ್) ಹೋಗಿ ಹುಡುಕೀ ಚೆನ್ನಾಗಿ ಚೌಕಾಸಿ ಮಾಡಿ ಸಿನಿಮಾ ರೋಲ್ ತರಲು ಪ್ರಾರಂಭಿಸಿದೆ. ನನಗೆ ಅವರಿವರು ಕೊಡುತ್ತಿದ್ದ ಎಲ್ಲಾ ಹಣವನ್ನೂ ಒಟ್ಟುಗೂಡಿಸಿ  ಹೊಸಾ ಹೊಸಾ ಫಿಲ್ಮ್ ರೋಲ್ ತರುವುದರಲ್ಲೇ ಖರ್ಚು ಮಾಡುತ್ತಿದೆ. ನಾನು ದೊಡ್ಡವನಾದ ಮೇಲೆ ಸಿನಿಮಾ ಥಿಯೇಟರಿನಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತೇನೆ  ಎಂದೆಲ್ಲಾ ಹೇಳುತ್ತಿದೆ.

ಕಡೆ ಕಡೆಗೆ ಬಿಡುವು ಸಿಕ್ಕಾಗಲೆಲ್ಲಾ ಹುಡುಗರನ್ನು ಕೂಡಿ ಹಾಕಿಕೊಂಡು ಇದ್ದ ಸಣ್ಣ ಮನೆಯಲ್ಲೇ ಕತ್ತಲಲ್ಲಿ ಸಿನಿಮಾ ತೋರಿಸುತ್ತಿದ್ದ ಸಮಯದಲ್ಲೇ ಮನೆಯಲ್ಲಿ  ಒಂದೊಂದೇ ಸಾಮಾನುಗಳು ಕಾಣದಂತೆ ಮಾಯಾವಾಗ ತೊಡಗಿದಾಗ ಅಮ್ಮಾ ಗದರಿಸತೊಡಗಿದವು. ಆರಂಭದಲ್ಲಿ ಅದನ್ನು ತಲೆಗೆ ಹಾಕಿಕೊಳ್ಳದಿದ್ದರೂ ನಂತರ ದೊಡ್ಡ ದೊಡ್ಡ ಸಾಮಾನುಗಳು ಕಾಣೆಯಾಗ ತೊಡಗಿದಾಗ ಇದ್ದವರು ಮೂರು ಕದ್ದವರು ಯಾರು ಎಂಬ ಪ್ರಶ್ನೆ ಮೂಡುವಂತಾದಾಗ ಅನಿವಾರ್ಯವಾಗಿ ನನ್ನ ಸಿನಿಮಾ ಪ್ರೋಜೆಕ್ಷನ್ ಬಿಡಬೇಕಾಯಿತು.   ಅದೇ ಸಮಯದಲ್ಲೇ ನಮ್ಮ ಕಣ್ಣಾ ಮಾವ ನನಗೆ ಎಲೆಕ್ಟ್ರಾನಿಕ್ಸ್ ಮಾಡೆಲ್ ಮಾಡುವ ಗೀಳು  ಹತ್ತಿಸಿದ ಪರಿಣಾಮ ಸದ್ದಿಲ್ಲದೇ ನನ್ನ ಸಿನಿಮಾ ಪ್ರೊಕಜೆಕ್ಟರ್ ಅಟ್ಟಕ್ಕೇರಿ ಧೂಳು ಕುಡಿಯ ತೊಡಗಿತು. ನಂತರದ ದಿನಗಳಲ್ಲಿ ಮನೆ ಖಾಲಿ ಮಾಡಿ ಬೇರೊಂದು ಮನೆಗೆ ಹೋಗುವಾಗ ನನಗೇ ಗೊತ್ತಿಲ್ಲದೇ ನನ್ನ ಪ್ರೊಜೆಕ್ಟರ್ ಗುಜರಿ ಸೇರುವ ಮುಖಾಂತರ ನಾನು ಥಿಯೇಟರ್ನಲ್ಲಿ ಪ್ರೋಜೆಕ್ಟರ್ ಬಾಯ್ ಆಗುವ ಆಸೆ ಶಾಶ್ವತವಾಗಿ ಮುಚ್ಚಿಹೋಯಿತು.

ಈಗಲೂ ಸಹಾ ಸೋಮನನ್ನು ಭೇಟಿಯಾದಾಗ, ದತ್ತನೊಂದಿಗೆ ಮಾತನಾಡುವಾಗ ಇಲ್ಲವೇ ಸಿನಿಮಾ ನೋಡಲು ಥಿಯೇಟರ್ ಗೆ ಹೋದಾಗಲೆಲ್ಲಾ ನನ್ನ ಬಾಲ್ಯದ ಸವಿ ಸವಿ ನೆನಪುಗಳು ನನ್ನ ಕಣ್ಣ ಮುಂದೆ ಬಂದು ಹೋಗುತ್ತದೆ.  ಇಂದು ಅದೆಷ್ಟೋ ಮೀಟಿಂಗ್ಸ್ ಗಳಲ್ಲಿ ನನ್ನ ಪ್ರೆಸೆಂಟೇಷನ್  ಪ್ರೋಜೆಕ್ಟರ್ ನಲ್ಲಿ ಪ್ರೊಜೆಕ್ಟ್ ಮಾಡುವಾಗ ನನಗೇ ಅರಿವಿಲ್ಲದಂತೆ  ನನ್ನಳಗೇ ಹುದುಗಿ ಹೋಗಿರುವ ಪ್ರೊಜೆಕ್ಟರ್ ಮ್ಯಾನ್ ಜಾಗೃತನಾಗಿ ತುಟಿಯಮೇಲೆ ಸಣ್ಣದಾದ ನಗೆ ಚೆಲ್ಲಿಸುತ್ತಾನೆ. ಅದಕ್ಕೇ ಹೇಳುವುದು ನಾವು ಬಯಸುವುದೇ ಒಂದು ಕಡೆಗೆ ಆಗುವುದೇ ಒಂದು. ಮೇಲೆ ಕುಂತವನು ಆಡಿಸಿದಷ್ಟು ದಿನ, ಅಡುವುದಷ್ಟೇ ನಮ್ಮ ಕೆಲಸ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ದೈವ ಸಂಕಲ್ಪ

ಈಗಾಗಲೇ ಹತ್ತು ಹಲವಾರು ಬಾರಿ ಬಾರಿ ತಿಳಿಸಿರುವಂತೆ ಬೆಂಗಳೂರಿನ ವಾಸಿಯಾಗಿದ್ದರೂ ನಮ್ಮೂರು ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣದ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರ ಜನರು ವಾಸಿಸುವ ಕೃಷಿಪ್ರಧಾನವಾದ ಗ್ರಾಮವಾದರೂ, ನಮ್ಮೂರಿನಲ್ಲಿರುವ ದೇವಾಲಯಗಳ ಸಂಖ್ಯೆ ಹತ್ತಕ್ಕೂ ಹೆಚ್ಚು. ನಮ್ಮೂರ ಗ್ರಾಮದೇವತೆಯ ಹಬ್ಬ ಪ್ರತೀ ವರ್ಷ ಯುಗಾದಿ ಕಳೆದು ಹದಿನೈದು ದಿನಗಳ ನಂತರ ಬರುವ ಗುರುವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಮೂರುವಾರಗಳ ಕಾಲ ಅದ್ದೂರಿಯಾಗಿ ನೂರಾರು ವರ್ಷಗಳಿಂದ ಸಂಭ್ರಮ ಸಡಗರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ದುರಾದೃಷ್ಟವಷಾತ್ ಈ ಬಾರೀ ಕೋವಿಡ್ ಮಹಾಮಾರಿಯ ಕಾರಣದಿಂದಾಗಿ ಎಲ್ಲಾ ಕಡೆಯಲ್ಲಿಯೂ ಊರ ಹಬ್ಬ ಮುಂದೂಡಲ್ಪಟ್ಟು ಹಬ್ಬ ನಡೆಸಬೇಕೋ ಇಲ್ಲವೋ ಎನ್ನುವ ಡೋಲಾಯಮಾನ ಪರಿಸ್ಥಿತಿ ಇತ್ತು. ಬಾಳಗಂಚಿ ನಮ್ಮೂರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾನು, ನಿಜ ಹೇಳಬೇಕೆಂದರೆ ಊರಿನ ಮಟ್ಟಿಗೆ ಉತ್ಸವ ಮೂರ್ತಿಯೇ. ಹಬ್ಬ ಹರಿದಿನಗಳಲ್ಲಿ ಮಾತ್ರವೇ ಊರಿಗೆ ಹೋಗಿ ಒಂದೆರಡು ದಿನಗಳು ಇಲ್ಲವೇ ಕೆಲವೇ ಗಂಟೆಗಳೂ ಇದ್ದು ಬರುತ್ತೇವೆ. ಈ ಬಾರಿಯ ಊರ ಹಬ್ಬ ನಡೆಯದ ಕಾರಣ ಸುಮಾರು 18 ತಿಂಗಳುಗಳ ಕಾಲ ಊರಿನ ಕಡೆ ತಲೆಹಾಕಿಯೇ ಇರಲಿಲ್ಲ. ಅದೇಕೋ ಏನೋ ಇದ್ದಕ್ಕಿಂದಂತೆಯೇ ನಮ್ಮಾಕೀ ರೀ ಊರಿಗೆ ಹೋಗಿ ಹೊನ್ನಾದೇವಿಗೆ ಮಡಿಲು ತುಂಬಿಸಿ ಬರೋಣ ಎಂದಾಗ ಸಂತೋಷದಿಂದಲೇ ಕಳೆದ ತಿಂಗಳು ಊರಿಗೆ ಹೋಗಿ ನಮ್ಮ ಗ್ರಾಮದೇವತೆ ಹೊನ್ನಮ್ಮ ಮತ್ತು ನಮ್ಮ ಆರಾದ್ಯ ದೈವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಪೂಜೆ ಮಾಡಿಸಿಕೊಂಡು ಬರುವ ಸಮಯದಲ್ಲಿಯೇ ಊರಿನ ನೆರೆಹೊರೆಯವರನ್ನು ಭೇಟಿಯಾದಾಗ ಎಲ್ಲರಿಗೂ ಊರ ಹಬ್ಬ ನಡೆಯದೇ ಬಹಳ ಬೇಸರಿಸಿಕೊಂಡಿದ್ದನ್ನು ಕೇಳಿ ಎಲ್ಲರ ಆಹವಾಲುಗಳನ್ನು ಒಟ್ಟುಗೂಡಿಸಿ ಹಬ್ಬವನ್ನು ಸರಳವಾವಾಗಿಯಾದರೂ ನಡೆಸಬೇಕೆಂದು ಮನವಿ ಪೂರ್ವಕ ಲೇಖನವೊಂದನ್ನು ಬರೆದಿದ್ದೆ.

ದೇವರ ಸಂಕಲ್ಪವೋ ಅಥವಾ ನಮ್ಮ ಮನವಿಯ ಕಾರಣವೋ ಊರ ಹಿರಿಯರೆಲ್ಲಾ ಸೇರಿ ಈ ಬಾರಿ ಸರಳವಾಗಿ ಕಾರ್ತೀಕ ಮಾಸದಲ್ಲಿ ಊರ ಹಬ್ಬ ನಡೆಸಲು ತೀರ್ಮಾನಿಸಿ ಕಳೆದ ಎರಡು ವಾರಗಳಿಂದಲೂ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಮಾಡುತ್ತಾ, ನೆನ್ನೆ ಗುರುವಾರ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಎಂದಿನಂತಿನ ಅದ್ದೂರಿಯಿಲ್ಲದಿದ್ದರೂ ಸಡಗರ ಸಂಭ್ರಮದಿಂದ ಆಚರಿಸಲ್ಪಟ್ಟಿದ್ದು ಕೇವಲ ನಮ್ಮೂರಿನ ಗ್ರಾಮಸ್ಥರಿಗಲ್ಲದೇ ಸುತ್ತಾಮುತ್ತಲಿನ ಹತ್ತಾರು ಗ್ರಾಮಸ್ಥರಲ್ಲದೇ, ದೇಶಾದ್ಯಂತ ಇರುವ ಹೊನ್ನಮ್ಮನ ಭಕ್ತಾದಿಗಳಲ್ಲಿ ಸಂಭ್ರಮ ಮೂಡಿಸಿದೆ. ಹಾಗಾಗಿ ಹಬ್ಬವನ್ನು ಅತ್ಯಂತ ಸುಗಮವಾಗಿ ನಡೆಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಯುಗಾದಿ ಹಬ್ಬ ಮುಗಿದ ತಕ್ಷಣವೇ ನಾವೆಲ್ಲರೂ ನಮ್ಮ ಕುಟುಂಬಸ್ಥರನ್ನು ಊರಿನ ಹಬ್ಬಕ್ಕೆ ಆಹ್ವಾನಿಸುವುದಲ್ಲದೇ, ನಮ್ಮ ನೆಚ್ಚಿನ ಸ್ನೇಹಿತರನ್ನೂ ಹಬ್ಬಕ್ಕೆ ಕರೆದುಕೊಂಡು ಹೋಗುವ ಸಂಪ್ರದಾಯವನ್ನು ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದೇವೆ. ಕೇವಲ ಮೂರು ವಾರಗಳ ಹಿಂದೆ ತಾನೇ ಊರಿಗೆ ಕುಟುಂಬ ಸಮೇತ ಹೋಗಿ ಬಂದಿದ್ದಲ್ಲದೇ, ಈ ಬಾರಿ ಮಕ್ಕಳಿಗೆಲ್ಲರಿಗೂ Online classes ಇದ್ದ ಕಾರಣ ನಮ್ಮ ಮನೆಯಿಂದ ನಾನೋಬ್ಬನೇ ಹೋಗಬೇಕಾದ ಪರಿಸ್ಥಿತಿ ಬಂದಾಗ, ಎಂದಿನಂತೆ ನನ್ನ ಸ್ನೇಹಿತರೊಬ್ಬರನ್ನು ಹಬ್ಬಕ್ಕೆ ಆಹ್ವಾನಿಸಿದೆ. ಅವರ ತಾಯಿಯವರ ಆರೋಗ್ಯದ ಕಾರಣ ಬರಲು ಸಾಧ್ಯವಿಲ್ಲ ಎಂದಾಗ ಮತ್ತೊಬ್ಬ ಗೆಳೆಯ ಅರಸೀಕೆರೆಯ ಶ್ರೀ ಅನಂತ ಕೃಷ್ಣ ಅವರನ್ನು ಸಂಪರ್ಕಿಸಲು ಬಹಳ ಬಾರಿ ಪ್ರಯತ್ನಿಸಿದೆನಾದರೂ ಸಾಧ್ಯವಾಗದೇ, ಕಡೆಗೆ ನನ್ನ ಚಿಕ್ಕ ತಂಗಿಗೆ ಕರೆ ಮಾಡಿ ಹಬ್ಬಕ್ಕೆ ಒಬ್ಬನೇ ಹೋಗ್ತಾ ಇದ್ದೇನೆ ಬರ್ತೀಯಾ? ಎಂದು ಕೇಳಿದರೇ, ಅರೇ ನಾವೂ ಹೊರಟಿದ್ದೇವೆ. ನೀನೇ ನಮ್ಮೊಂದಿಗೆ ಬಂದು ಬಿಡು ಒಟ್ಟಿಗೆ ನಾಲ್ಕೂ ಜನರೂ ಬೆಳಿಗ್ಗೆ ಹೋಗಿ ಸಂಜೆ ವಾಪಸ್ಸು ಬರೋಣ ಎಂದಾಗ, ಹೊನ್ನಮ್ಮಾ ಏನಮ್ಮಾ ನಿನ್ನ ಲೀಲೆ ? ಎಂದು ಮನಸ್ಸಿನಲ್ಲಿ ಅಂದುಕೊಂಡು ಬೇರೆ ಯಾವ ಗೆಳೆಯರನ್ನೂ ಊರಿಗೆ ಕರೆಯದೇ ತಂಗಿ. ಭಾವ ಮತ್ತು ಸೋದರ ಸೊಸೆಯೊಂದಿಗೆ ಹಬ್ಬಕ್ಕೆ ನೆನ್ನೆ ಬೆಳಿಗ್ಗೆ ಹೋಗಿ ಭಕ್ತಿ ಪೂರ್ವಕವಾಗಿ ಹಬ್ಬವನ್ನು ಆಚರಿಸಿಕೊಂಡು ಬಂದೆವು.

ನಮ್ಮ ಕುಟಂಬದವರಲ್ಲದೇ, ಈ ಬಾರಿ ಕೆಲವರು ಆಪರಿಚಿತರೂ ಆಗಮಿಸಿ ಹಬ್ಬದ ಉತ್ಸಾಹವನ್ನು ಮತ್ತಷ್ಟೂ ಹೆಚ್ಚಿಸಿದ್ದರು. ಹೀಗೇಯೇ ಅವರನ್ನು ಮಾತನಾಡಿಸುತ್ತಿದ್ದಾಗ ಬಂದವರಲ್ಲೊಬ್ಬರು ಅರಸೀಕೆರೆ ಸತೀಶ್ ಅವಧೂತರು ಎಂದು ಗೊತ್ತಾಗಿ ಅವರಿಗೂ ಸಹಾ ತಾಯಿ ಹೊನ್ನಮ್ಮನನ್ನು ನೋಡ ಬೇಕೆನ್ನುವ ದೈವೀ ಸಂಕಲ್ಪವಾಯಿತು ಎಂದು ಕೇಳಿ ಸಂತೋಷ ಪಟ್ಟಿದ್ದೆ. ಅವರಲ್ಲದೇ ಹಾಸನದಿಂದ ಬಂದಿದ್ದ ಮತ್ತೊಂದು ಕುಟುಂಬದವರ ಪರಿಚಯವಾಯಿತು. ಸತೀಶ್ ಅವಧೂತರು ಅರಸೀಕೆರೆಯವರಾದ್ದ ಕಾರಣ ಇಂದು ಬೆಳಿಗ್ಗೆ ಅರಸೀಕೆಯವರೇ ಆದ ಮತ್ತು ಊರಿಗೆ ಕರೆದುಕೊಂಡು ಹೋಗುವ ಸಲುವಾಗಿ ಹತ್ತಾರು ಬಾರಿ ಪ್ರಯತ್ನಿಸಿದ್ದರೂ ಸಂಪರ್ಕಿಸಲು ಸಾಧ್ಯವಾಗದಿದ್ದ ಗೆಳೆಯ ಅನಂತಕೃಷ್ಣ ಅವರಿಗೆ ಕರೆ ಮಾಡಿದ ತಕ್ಷಣವೇ ಸಂಪರ್ಕ ಸಿಕ್ಕಿ ಹಬ್ಬದ ವಿಚಾರವನ್ನೆಲ್ಲಾ ಸವಿಸ್ಥಾರವಾಗಿ ಹೇಳಿದಾಗ ತಿಳಿದು ಬಂದ ಆಶ್ವರ್ಯಕರವಾದ ಸಂಗತಿಯೆಂದರೆ ಸತೀಶ್ ಅವಧೂತರೂ ಮತ್ತು ಮತ್ತೊಂದು ಕುಟುಂಬ ನಮ್ಮ ಗೆಳೆಯರ ಹತ್ತಿರದ ಸಂಬಂಧಿಗಳೇ ಆಗಿದ್ದರು.

ಸುಮಾರು ತಿಂಗಳ ಕಾಲ ಊರಿಗೆ ಹೋಗದಿದ್ದ ನಾವು ಇದ್ದಕ್ಕಿದ್ದಂತೆಯೇ ಊರಿಗೆ ಹೋಗಿ ಊರಿನ ಹಬ್ಬ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದು, ಆ ಮೂಲಕ ಸರಳವಾಗಿ ಊರ ಹಬ್ಬ ನಡೆಸುವಂತಾಗಿದ್ದು, ನಾನು ಎಲ್ಲರನ್ನೂ ಊರಿಗೆ ಕರೆದುಕೊಂಡು ಹೋಗಬೇಕೆಂದು ಬಯಸಿದ್ದರೇ, ನನ್ನನ್ನೇ ಮತ್ತಾರೋ ಹಬ್ಬಕ್ಕೆ ಕರೆದುಕೊಂಡು ಹೋಗಿದ್ದು. ಇನ್ನು ಹಬ್ಬಕ್ಕೆ ಅರಸೀಕೆರೆಯ ಗೆಳೆಯನನ್ನು ಕರೆದುಕೊಂಡು ಹೋಗಲಾರದಿದ್ದರೇನಂತೇ ಅಚಾನಕ್ಕಾಗಿ ಅವರ ಕುಟುಂಬಸ್ಥರೇ ನಮ್ಮೂರಿನ ಹಬ್ಬಕ್ಕೆ ಅತಿಥಿಗಳಾಗಿ ಬಂದು ನಮ್ಮ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು. ಇದಕ್ಕೇ ಅಲ್ಲವೇ ಹೇಳೋದು ದೈವ ಸಂಕಲ್ಪ ಎಂದು. ಕುವೆಂಪು ಅವರೇ ಹೇಳಿದಂತೆ ತೇನವಿನಾ ತೃಣಪಮಿ ನಚಲತಿ. ಅಂದರೆ ಭಗವಂತನ ಅನುಗ್ರಹವಿಲ್ಲದೇ ಒಂದು ಹುಲ್ಲು ಕಡ್ಡಿಯೂ ಆಚೀಚೆ ಅಲುಗಾಡದು ಎಂದು. ಅದಕ್ಕಾಗಿಯೇ ಭಗವಂತನನ್ನು ಭಕ್ತಿಯಿಂದ ನಮಿಸುತ್ತಾ ಅವನ ಕೃಪಾಶೀರ್ವಾದಗಳಿಗೆ ಪಾತ್ರರಾಗೋಣ.

ಏನಂತೀರೀ?

ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಅದೊಂದು ಕುಗ್ರಾಮ. ಹೆಸರಿಗಷ್ಟೇ ಅಗ್ರಹಾರ ಎಂದಿದ್ದರೂ, ಇದ್ದದ್ದು ಎಂಕ, ನಾಣಿ, ಸೀನ ಅಂತಾ ಹತ್ತಾರು ಸಂಪ್ರದಾಯಸ್ಥರ ಮನೆ. ಕೃಷಿ ಪ್ರಧಾನವಾಗಿದ್ದ ಆ ಊರಿನಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯದ ಗಂಧವೇ ಇಲ್ಲದಿದ್ದರೂ ಜನಪದ ಸಾಹಿತ್ಯಕ್ಕೇನು ಕೊರತೆ ಇರಲಿಲ್ಲ. ಅಂತಹ ಊರಿನಲ್ಲೊಂದು ಅನರ್ಘ್ಯ ರತ್ನದಂತೆ, ತಾಯಿಯ ಕಡೆಯ ದೂರ ಸಂಬಧಿಯೊಬ್ಬರು ಮಾಡುತ್ತಿದ್ದ ಗಮಕ ವಾಚನದಿಂದ ಆಕರ್ಷಿತರಾಗಿ, ಮಹಾಭಾರತದ ಏಕಲವ್ಯನಂತೆ, ದೈವದತ್ತವಾದ ಶರೀರ ಮತ್ತು ಶಾರೀರದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿಕಥೆ, ಗಮಕ ವಾಚನ, ವ್ಯಾಖ್ಯಾನವಲ್ಲದೇ, ನಾಟಕದ ಮಟ್ಟುಗಳು ಮತ್ತು ಅನೇಕ ದೇವರ ನಾಮಗಳನ್ನು ರಚಿಸಿದ ಸರಸ್ವತೀ ಪುತ್ರರಾಗಿದ್ದ ಹರಿಕಥಾ ಸಾಮ್ರಾಟ, ಗಮಕ ವಿದ್ವಾನ್ ಬಾಳಗಂಚಿ ನಂಜುಂಡಯ್ಯನವರೇ ನಮ್ಮ ಈ ದಿನದ ಕನ್ನಡ ಕಲಿಗಳು.

ಅದು 1900ನೇ ಇಸವಿ, ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಗ್ರಾಮವಾದ ಬಾಳಗಂಚಿಯಲ್ಲಿ ನಂಜುಂಡಯ್ಯನವರು ಜನಿಸುತ್ತಾರೆ. ದುರದೃಷ್ಟವಶಾತ್ ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ತಂದೆಯವರನ್ನು ಕಳೆದುಕೊಂಡ ಶ್ರೀಯುತರು ತಮ್ಮ ತಾಯಿ ಮತ್ತು ಅಕ್ಕನ ನೆರಳಿನಲ್ಲಿಯೇ ಬೆಳೆಯುತ್ತಾರೆ. ಅವರಿಗಿನ್ನೂ ಏಳೆಂಟು ವರ್ಷ ವಯಸ್ಸಿನಲ್ಲಿದ್ದಾಗ ಅವರ ತಂದೆಯ ವೈದೀಕದಂದೇ, ಮರಣ ಹೊಂದಿ ನಂತರ ಕೆಲವು ಗಂಟೆಯೊಳಗೇ ಪುನರ್ಜನ್ಮ ಪಡೆದ ಅಪರೂಪದ ವ್ಯಕ್ತಿಯೂ ಹೌದು. (ಇದರ ಸವಿರವಾದ ಕಥೆಗೆ ಈ ಲೇಖನ ಓದಿ.) ಹೇಳೀ ಕೇಳಿ ಅವರದ್ದು ಶಾನುಭೋಗರ ಕುಟುಂಬ ಜೊತೆಗೆ ಅವರ ಪೂರ್ವಜರು ಇಷ್ಟಪಟ್ಟು ಒಪ್ಪಿಕೊಂಡು ಅಪ್ಪಿಕೊಂಡಿದ್ದ ಮನೆಯ ಹಿಂದೆಯೇ ಇದ್ದ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಅರ್ಚಕರ ವೃತ್ತಿ. ಆದಾಗಲೇ ಬೆಳೆದು ದೊಡ್ಡವರಾಗಿ ಇದ್ದ ಅವರ ಅಣ್ಣಂದಿರು ಪೂರ್ವಜರು ಮಾಡಿಟ್ಟಿದ್ದ ಆಸ್ತಿಗಳನ್ನೆಲ್ಲಾ ಕರಗಿಸಿ ನಾಲ್ಕಾರು ಮಕ್ಕಳನ್ನು ಅಕಾಲಿಕವಾದ ವಯಸ್ಸಿನಲ್ಲಿಯೇ ನಿಧನರಾಗಿದ್ದ ಕಾರಣ ಕಾರಣ, ಅರ್ಚಕವೃತ್ತಿಯ ಜೊತೆಗೆ ಶ್ಯಾನುಭೋಗತನದ ಜೊತೆ ಇಡೀ ಅವಿಭಕ್ತ ಕುಟುಂಬದ ಹೊಣೆಗಾರಿಕೆಯೂ ಚಿಕ್ಕ ವಯಸ್ಸಿನಲ್ಲಿಯೇ ನಂಜುಂಡಯ್ಯನವರ ಹೆಗಲಿಗೇರುತ್ತದೆ.

ಆಗಿನ ಕಾಲಕ್ಕೆ ಸಾವಿರದಿಂದ ಎರಡು ಸಾವಿರದೈನೂರು ಜನರು ಇದ್ದಿರಬಹುದಾದಂತಹ ಕೃಷಿಕ ಪ್ರಧಾನವಾದ ಸುಂದರವಾದ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ಸಣ್ಣ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದ್ದು, ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ ಎಂದು ಹೇಳುತ್ತಾರೆ. ಇಂತಹ ಪುರಾಣ ಪ್ರಸಿದ್ಡ ಊರಲ್ಲದೇ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಶಾನುಭೋಗರಾಗಿದ್ದ ನಂಜುಡಯ್ಯನವರು ಸ್ವಾತಂತ್ರ್ಯ ಬಂದು ಶ್ಯಾನುಭೋಗತನ ಹೋಗುವವರೆಗೂ ಅಧಿಕಾರದಲ್ಲಿ ಇದ್ದರೂ ಒಂದು ಕಳ್ಳ ಲೆಕ್ಕವಾಗಲೀ ಸುಳ್ಳು ಲೆಕ್ಕವನ್ನಾಗಲೀ ಬರೆಯದೇ, ಒಂದು ಚೂರು ದರ್ಕಾಸ್ತು ಜಮೀನನ್ನು ಮಾಡಿಕೊಳ್ಳದೇ, ದೇವಸ್ಥಾನದ ಅರ್ಚಕ ವೃತ್ತಿಯಿಂದಾಗಿ ಉಂಬಳಿಯಾಗಿ ಬಂದಿದ್ದ ಜಮೀನಿನಲ್ಲಿಯೇ ಒಟ್ಟು ಕುಟುಂಬವನ್ನು ನಡೆಸಿಕೊಂಡು ಹೋಗುತ್ತಿದ್ದರು ಎಂದರೆ ಅವರ ಪ್ರಮಾಣಿಕತೆ ಎಷ್ಟಿತ್ತು ಎಂದು ತಿಳಿಯುತ್ತದೆ.

ಅದಾಗಲೇ ಹೇಳಿದಂತೆ ಚಿಕ್ಕವಯಸ್ಸಿನಲ್ಲಿ ಅವರ ತಾಯಿಯ ಜೊತೆ ಅವರ ದೂರದ ಸಂಬಂಧಿಕರ ಮನೆಗೆ ಯಾವುದೋ ಸಭೆಗೆ ಹೋಗಿದ್ದಾಗ ಅಲ್ಲಿ ಕೇಳಿದ ಗಮಕವಾಚನದಿಂದ ಆಕರ್ಷಿತರಾಗಿ ತಾವೇ, ಸ್ವಂತ ಪರಿಶ್ರಮದಿಂದ ಗಮಕ ವಾಚನ ಮತ್ತು ವ್ಯಾಖ್ಯಾನವನ್ನು ಕರಗತ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸುತ್ತ ಮುತ್ತಲಿನ ಊರುಗಳಲ್ಲಿ ಅಗಾಗ ನಡೆಯುತ್ತಿದ್ದ ಹರಿಕಥೆಗಳನ್ನು ನೋಡಿಯೇ ಅದನ್ನೂ ಆಭ್ಯಾಸ ಮಾಡಿಕೊಂಡಿದ್ದರು. ಸುಮಾರು ಆರು ಅಡಿಗಳಷ್ಟು ಎತ್ತರ ಮತ್ತು ಅದಕ್ಕೆ ತಕ್ಕಂತೆಯೇ ಇದ್ದ ಶರೀರದ ಜೊತೆಗೆ ದೈವ ದತ್ತವಾದ ಶಾರಿರದ ಅವರ ಗಾಯನಕ್ಕೆ ಮತ್ತು ಹರಿಕಥೆಗೆ ಮರುಳಾಗದವರೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದೇನೋ? ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಿಕ್ಕಮಗಳೂರು ನಂತಹ ಇನ್ನೂ ಹಲವಾರು ಜಿಲ್ಲೆಗಳ ಪ್ರಮುಖ ಹಳ್ಳಿ, ಪಟ್ಟಣಗಳ ರಾಮೋತ್ಸವ, ಗಣೇಶೋತ್ಸವ, ಊರ ಜಾತ್ರೆಗಳಲ್ಲಿ ಶ್ರೀ ನಂಜುಂಡಯ್ಯನವರ ಹರಿಕಥೆ ಇಲ್ಲವೇ ಗಮನ ವಾಚನ ಕಡ್ಡಾಯವಾಗಿ ಇದ್ದೇ ಇರುತ್ತಿತ್ತು. ಬೇಸಿಗೆ ಮುಗಿದು, ಮಳೆ ಬಾರದಿದ್ದ ಸಮಯದಲ್ಲಿ ಇವರ ಭಕ್ತಿಯಿಂದ ನಡೆಸಿಕೊಡುತ್ತಿದ್ದ ರಾಮ ಸಂಕೀರ್ತನೆಯ ಫಲವಾಗಿ ಧಾರಾಕಾರವಾದ ಮಳೆ ಸುರಿಯುತ್ತದೆ ಎಂಬ ನಂಬಿಕೆ ಇದ್ದದ್ದರಿಂದ ಹಲವಾರು ಹಳ್ಳಿಗಳಲ್ಲಿ ಹರಿಕಥೆಗಳನ್ನು ಏರ್ಪಡಿಸಿ ತಮ್ಮ ತಮ್ಮ ಊರುಗಳಿಗೆ ಮಳೆಯನ್ನು ಸುರಿಸಿಕೊಂಡ ಹಲವಾರು ನಿದರ್ಶನಗಳಿಂದಾಗಿ ಇವರನ್ನು ಜನರು ಪ್ರೀತಿಯಿಂದ ಮಳೇ ನಂಜುಂಡಯ್ಯನವರೆಂದೇ ಕರೆಯುತ್ತಿದ್ದರು ಎನ್ನುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಹರಿಕಥೆಗೆ ಅಂದಿನ ಕಾಲದಲ್ಲಿ ಕೊಡುತ್ತಿದ್ದ ಐದರಿಂದ ಹತ್ತು ರೂಪಾಯಿಗಳಲ್ಲಿ ಮುಕ್ಕಾಲು ಪಾಲು ಹಣವನ್ನು ಪಕ್ಕವಾದ್ಯದವರಿಗೇ ಕೊಟ್ಟು ಉಳಿದ ಹಣವನ್ನು ಸ್ವಂತಕ್ಕೆ ಇಟ್ಟು ಕೊಳ್ಳುತ್ತಿದ್ದ ಮಹಾನ್ ಜನಾನುರಾಗಿಗಳಾಗಿದ್ದರು.

ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಹೆಚ್ಚಾಗಿ ಓದದಿದ್ದರೂ, ಸ್ವಕಲಿಕೆಯ ಮೇರೆಗೆ ಸಂಗೀತ ಕಲಿತುಕೊಂಡರೇ, ಸಾಹಿತ್ಯ ಎನ್ನುವುದು ಅವರಿಗೆ ಅದು ಹೇಗೆ ಒಲಿಯಿತು ಎಂದು ಆವರಿಗೇ ಗೊತ್ತಿರಲಿಲ್ಲವಂತೆ. ಪದ್ಯದ ಜೊತೆ ಗದ್ಯದಲ್ಲೂ ಅಪಾರ ಪಾಂಡಿತ್ಯ ಪಡೆದಿದ್ದ ಶ್ರೀಯುತರು ಗರಳಪುರಿ ನಂಜುಂಡ ಎಂಬ ಅಂಕಿತ ನಾಮದೊಂದಿಗೆ ಕರ್ನಾಟಕದ ಅನೇಕ ಊರುಗಳ ದೇವರುಗಳ ಮೇಲೆ ದೇವರ ನಾಮಗಳನ್ನು ಬರೆದಿರುವುದಲ್ಲದೇ ಅದಕ್ಕೆ ಸೂಕ್ತವಾದ ಸಂಗೀತವನ್ನೂ ಅವರೇ ನೀಡಿರುವುದು ಅವರ ಹೆಗ್ಗಳಿಕೆ. ಇಂದಿಗೂ ಅವರ ಅನೇಕ ಕೃತಿಗಳನ್ನು ರಾಜ್ಯದ ಅನೇಕ ದೇವಸ್ಥಾನಗಳಲ್ಲಿನ ನಾದಸ್ವರ ವಾದಕರು ನುಡಿಸುತ್ತಿದ್ದಾರೆ. ಸಂಸ್ಜೃತದಲ್ಲಿದ್ದ ಭಗವದ್ಗೀತೆಯನ್ನು ಅತೀ ಸರಳವಾದ ಕನ್ನಡಕ್ಕೆ ತರ್ಜುಮೆ ಮಾಡಿರುವುದಲ್ಲದೇ, ದೇವರ ಕೃತಿಗಳ ಹೊರತಾಗಿ ಭಗವದ್ಗೀತೆಯ ಕುರಿತಂತೆಯೇ ಗೀತೇ ಶ್ರೀಹರಿ ಮುಖ ಜಾತೇ.. ಎಂದೂ, ಕನ್ನಡದಲ್ಲಿ ಸುಲಭವಾಗಿ ಮತ್ತು ಸುಲಲಿತವಾಗಿ ಅರ್ಥವಾಗುವಂತೆ ಮಹಾಭಾರತವನ್ನು ಬರೆದ ಅವರ ಆರಾಧ್ಯ ದೈವವಾಗಿ ಕುಮಾರ ವ್ಯಾಸರ ಕುರಿತಂತೆ ಕರ್ನಾಟ ವರಚೂತ ವನಚೈತ್ರ ಲಕ್ಷ್ಮೀಶಾ.. ಎಂಬ ಕೃತಿಗಳನ್ನು ರಚಿಸಿರುವುದಲ್ಲದೇ, ಅನೇಕ ಪೌರಾಣಿಕ ನಾಟಕಗಳಿಗೆ ಸಮಯೋಚಿತ ಕಂದ ಪದ್ಯಗಳು ಮತ್ತು ಮಟ್ಟುಗಳನ್ನು ರಚಿಸಿಕೊಟ್ಟಿದ್ದು ಆ ಪದ್ಯಗಳನ್ನು ಇಂದಿಗೂ ಅನೇಕ ಪೌರಾಣಿಕ ನಾಟಕದಲ್ಲಿ ಬಳಸುತ್ತಿರುವುದು ನಂಜುಂಡಯ್ಯನವರ ಹೆಗ್ಗಳಿಗೆಯಾಗಿದೆ.

ಗಮಕ ಎಂದರೆ ಕೇವಲ ಪದ್ಯಗಳನ್ನು ಸಂಗೀತ ರೂಪದಲ್ಲಿ ಪ್ರಸ್ತುತ ಪಡಿಸದೆ ಸಾಹಿತ್ಯಕ್ಕೆ ಅನುಗುಣವಾಗಿ ರಾಗ ಸಂಯೋಜಿಸಿ ಪ್ರತೀ ಪದಗಳಿಗೆ ಅನುಗುಣವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಏರಿಳಿತಗಳೊಂದಿಗೆ ಹಾಡುತ್ತಿದ್ದದ್ದು ಇನ್ನೂ ಹಲವರ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ ಎಂದರೂ ಸುಳ್ಳಲ್ಲ. ಅರಸುಗಳಿಗಿದು ವೀ..ರಾ… ಭೂ.. ವ್ಯೋ..ಮ ಪಾತಾ..ಳ.. ಹಾಡಿರುವುದನ್ನು ಕೇಳಿದ್ದರೆ ಉಳಿದವರ ಹಾಡುವುದನ್ನು ಖಂಡಿತವಾಗಿಯೂ ಇಷ್ಟಪಡುತ್ತಿರಲಿಲ್ಲ ಎಂದೇ ಹೇಳಬಹುದು. ಕೇವಲ ತಾವೊಬ್ಬರೇ ಸಂಗೀತ, ಸಾಹಿತ್ಯದಲ್ಲಿ ಪಾರಂಗತರಾಗದೇ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಜನರಿಗೆ ಸಂಗೀತ ಮತ್ತು ದೇವರ ನಾಮಗಳನ್ನು ಹೇಳಿ ಕೊಟ್ಟಿದ್ದಾರೆ. ಇಂದಿಗೂ ಅವರಿಂದ ಸಂಗೀತ, ನಾಟಕ ಮತ್ತು ಗಮಕ ಕಲಿತ ಅನೇಕ ಶಿಷ್ಯವೃಂದ ರಾಜ್ಯದ ಹಲವಾರು ಕಡೆಗಳಲ್ಲಿ ನಮಗೆ ಕಾಣ ಸಿಗುತ್ತಾರೆ.

ಕನ್ನಡ ಪ್ರಖ್ಯಾತ ಕವಿಗಳಾಗಿದ್ದ ಗೊರೂರು ರಾಮಸ್ವಾಮಿ ಐಯ್ಯಂಗಾರರು ಮತ್ತು ಚಿಕ್ಕಮಗಳೂರಿನ ಹಿರೇಮಗಳೂರಿನ ಕೋಡಂಡರಾಮ ಸ್ವಾಮೀ ದೇವಸ್ಥಾನದ ಅರ್ಚಕರು ಮತ್ತು ವಿದ್ವಾಂಸರಾಗಿದ್ದ ಶ್ರೀ ಸವ್ಯಸಾಚಿಗಳಲ್ಲದೇ (ಕನ್ನಡದ ಪೂಜಾರಿ ಕಣ್ಣನ್ ಅವರ ತಂದೆ), ಹಿರಿಯ ಗಮಕಿಗಳಾಗಿದ್ದ ಬಿ. ಎಸ್. ಎಸ್.ಕೌಶಿಕ್ (ನಟ ನಿರ್ದೇಶಕ ಎಂ.ಡಿ. ಕೌಶಿಕ್ ಅವರ ತಂದೆ) ಮತ್ತು ಬಿಂದೂರಾಯರ ಜೊತೆ ಗಳಸ್ಯ ಗಂಟಸ್ಯ ಗೆಳೆತನ ನಂಜುಂಡ್ಯಯ್ಯನವರಿಗಿತ್ತು.

  • ಗಮಕ, ಹರಿಕಥೆ ಮತ್ತಿತರೇ ಲಲಿತಕಲೆಗಳಲ್ಲಿ ಅವರ ಈ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಎಪ್ಪತ್ತರ ದಶಕದಲ್ಲಿ ಕರ್ನಾಟಕ ರಾಜ್ಯಸರ್ಕಾರದ ಪ್ರಶಸ್ತಿಗೂ ಭಾಜರಾಗಿದ್ದಾರೆ.
  • ಕರ್ನಾಟಕ ಗಮಕಕಲಾ ಪರಿಷತ್ತು ಹೊರತಂದ ಪ್ರಖ್ಯಾತ ಗಮಕಿಗಳ ಕುರಿತಾದ ಪುಸ್ತಕದಲ್ಲಿ ಬಾಳಗಂಚಿ ನಂಜುಂಡಯ್ಯನವರ ಕುರಿತಾದ ಲೇಖನವಿದೆ
  • ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಸನ್ಮಾನಿತರಾಗಿದ್ದಾರೆ.

ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾದ ಪರಿಣಾಮ ಹಾಡುವುದಕ್ಕೂ, ಬರೆಯುವುದಕ್ಕೂ ಆಗದೇ ಪರಿತಪಿಸುತ್ತಲೇ, ತಮ್ಮ ಎಂಬತ್ಮೂರನೇ ವಯಸ್ಸಿನಲ್ಲಿ ನಿಧನರಾದರೂ ಇಂದಿಗೂ ಅವರು ರಚಿಸಿದ ಕೃತಿಗಳಿಂದಾಗಿ ಶಾಶ್ವತವಾಗಿ ಕನ್ನಡಿಗರ ಮನ ಮನೆಗಳಲ್ಲಿ ನೆಲೆಯೂರಿದ್ದಾರೆ.

ಸಂಗೀತ ಸಾಹಿತ್ಯದ ಗಂಧ ಗಾಳಿ‌ ಇಲ್ಲದ ಕುಗ್ರಾಮದ, ಕಿತ್ತು ತಿನ್ನುತ್ತಿದ್ದ ಬಡತನದ ಒಟ್ಟು ಕುಟುಂಬದ ನಡುವೆಯೂ, ಸ್ವಂತ ಪರಿಶ್ರಮದಿಂದ ಸಂಗೀತ, ಗಮಕ, ಹರಿಕಥೆಗಳಲ್ಲದೇ ವಾಗ್ಗೇಯಕಾರರಾಗಿ, ಕನ್ನಡದ ಸಾರಸ್ವತ ಲೋಕಕ್ಕೆ ಎಲೆಮರೆಕಾಯಿಯಂತೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದ, ನಾಲ್ಕಾರು ದಶಕಗಳ ಕಾಲ ನಿಸ್ವಾರ್ಥವಾಗಿ ಅರ್ಚಕರಾಗಿ ಭಗವಂತನ ಸೇವೆ ಮಾಡಿದ, ಶ್ಯಾನುಭೋಗತನ ನಡೆಸಿಯೂ ಕೈಕೆಸರು ಮಾಡಿಕೊಳ್ಳದ, ಸರಳ ಸ್ವಾಭಿಮಾನಿ ಜನಾನುರಾಗಿ, ‌ನಿಸ್ವಾರ್ಥಿಯಾಗಿದ್ದ ಬಾಳಗಂಚಿ ಶ್ರೀ ಗಮಕಿ ನಂಜುಂಡಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

ನಮ್ಮೂರು ಬಾಳಗಂಚಿಯ ಸಮಸ್ತ ಗ್ರಾಮಸ್ಥರಿಗೆ ಸಾಷ್ಟಾಂಗ ಪ್ರಣಾಮಗಳು. ಕಳೆದ ವರ್ಷ ದೊಡ್ಡ ಹಬ್ಬಕ್ಕೆ ಊರಿಗೆ ಬಂದು ಸಂಭ್ರಮಿಸಿ ಹೋದ ನಂತರ, ಊರಿಗೆ ಬರುವ ಅವಕಾಶವೇ ದೊರೆತಿರಲಿಲ್ಲ. ಈ ವರ್ಷ ಯುಗಾದಿಯ ಸಮಯದಲ್ಲಿ ಕೋರೋನಾ ಮಾಹಾಮಾರಿಯ ಸಂಬಂಧಿತವಾಗಿ ಪ್ರಪಂಚಾದ್ಯಂತವೇ ಲಾಕ್ ಡೌನ್ ಇದ್ದ ಕಾರಣ ಊರ ಹಬ್ಬ ಮುಂದೂಡಿದ್ದು ಸ್ವಲ್ಪ ಬೇಸರವೆನಿದರೂ, ಈ ವರ್ಷ ಹಬ್ಬ ನಿಲ್ಲಿಸದೇ ಮುಂದೂಡಿರುವ ವಿಷಯ ತುಸು ನೆಮ್ಮದಿ ತಂದಿದ್ದು, ಕಾಲ ಎಲ್ಲವೂ ಸರಿ ಹೋದ ನಂತರ ಪ್ರತೀ ವರ್ಷದಷ್ಟು ವಿಜೃಂಭಣೆಯಲ್ಲದಿದ್ದರೂ ಸರಳ ಸಂಭ್ರಮವಾಗಿ, ಶಾಸ್ತ್ರೋಕ್ತವಾಗಿ ಆಚರಿಸಬಹುದು ಎನ್ನುವುದು ನನ್ನನ್ನೂ ಒಳಗೊಂಡು ಭಕ್ತಾದಿಗಳ ಆಶಯವೂ ಆಗಿತ್ತು ಎನ್ನುವುದಂತೂ ಸುಳ್ಳಲ್ಲ. ಒಳ್ಳೆಯ ಕೆಲಸಗಳಿಗೆ ಭಗವತಿಯ ಪ್ರೇರಣೆ ಇರುತ್ತದೆ ಎನ್ನುವಂತೆ ಸಾಮಜಿಕ ಅಂತರವನ್ನು ಕಾಪಾಡಿಕೊಂಡು ಊರ ಹಬ್ಬ ಮಾಡಲು ಸರ್ಕಾರದ ಕಡೆಯಿಂದ ಯಾವುದೇ ಆಡ್ಡಿ ಇಲ್ಲ ಎಂಬ ಆದೇಶವನ್ನು ತಹಶೀಲ್ದಾರ್ ಹೊರಡಿಸಿದಾಗಲಂತೂ ಸಮಸ್ತ ಭಕ್ತಾದಿಗಳ ಆತಂಕ ಸರಿದು ಆಶ್ವಯುಜ ಮಾಸದಲ್ಲಿ ಸಂಭ್ರಮದ ನಾಡ ಹಬ್ಬ ದಸರ ನಂತರ ಕಾರ್ತೀಕ ಮಾಸದಲ್ಲಿ ಊರ ಹಬ್ಬ ಆಚರಿಸಬಹುದು ಎನ್ನುವುದು ಎಲ್ಲಾ ಭಕ್ತಾದಿಗಳ ಸಂಕಲ್ಪವೂ ಆಗಿತ್ತು. ಎಲ್ಲದ್ದಕ್ಕಿಂತಲೂ ಖುಷಿ ಕೊಟ್ಟ ವಿಷಯವೇನಂದರೆ, ಪ್ರಪಂಚಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚಿದ್ದ ಕೋರೋನಾದ ಅರ್ಭಟ ನಮ್ಮೂರಿನಲ್ಲಿ ಇಲ್ಲದಿರುವುದು ಮನಸ್ಸಿಗೆ ನೆಮ್ಮದಿ ಕೊಟ್ಟಿತು.

ಆದರೆ ಇಂದು ಊರಿಗೆ ಬಂದು ತಾಯಿ ಹೊನ್ನಮ್ಮ ಮತ್ತು ನಮ್ಮ ಆರಾಧ್ಯ ದೈವ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನ ಪಡೆದು, ಊರಿನಲ್ಲಿ ಭೇಟಿಯಾದ ಪ್ರತಿಯೊಬ್ಬ ಗ್ರಾಮಸ್ಥರಲ್ಲಿಯೂ, ಊರ ಹಬ್ಬದ ಕುರಿತಂತೆ, ಊರಿನ ಹಿರಿಯರಿಂದ ಯಾವುದೇ ಶುಭ ಸೂಚನೆಗಳು ಬಾರದಿರುವುದು ಆತಂಕವನ್ನು ಮೂಡಿಸಿರುವುದನ್ನು ಕೇಳಿದಾಗ ಮತ್ತು ನೋಡಿದಾಗ ಮನಸ್ಸಿಗೆ ಬೇಸರವಾಗಿದ್ದಂತೂ ಸುಳ್ಳಲ್ಲ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಜನ್ಮಿಸುವ ಪ್ರತಿಯೊಬ್ಬರಿಗೂ ತಮ್ಮ ಜೀವಿತಾಧಿಯಲ್ಲಿ ಐದು ಋಣಗಳನ್ನು ತೀರಿಸಲೇ ಬೇಕಾದ ಜವಾಬ್ಧಾರಿಯನ್ನು ಹೊಂದಿರುತ್ತಾರೆ. ಹಾಗಾಗಿಯೇ ಋಣಭಾರವೋ, ಮಣಭಾರವೋ ಎಂಬ ಗಾದೆಯ ಮಾತಿದೆ. ಆ ಐದು ಋಣಗಳಾವುವೆಂದರೆ ಪಿತೃ ಋಣ, ದೇವ ಋಣ, ಋಷಿ ಋಣ, ಭೂತ ಋಣ ಮತ್ತು ಮನುಷ್ಯ ಋಣ.

ಈ ಭೂಮಿಯಲ್ಲಿ ಜನ್ಮ ಪಡೆದ ನಂತರ ನಮಗೂ ನಮ್ಮ ಹುಟ್ಟಿದ ಊರಿಗೂ ಒಂದು ರೀತಿಯ ಅವಿನಾಭಾವ ಸಂಬಂಧವೇರ್ಪಡುತ್ತದೆ. ಹಾಗಾಗಿ ನಾವುಗಳು ನಮ್ಮನ್ನು ಪರಿಚಯಿಸಿಕೊಳ್ಳುವುದೇ ನಮ್ಮ ಹುಟ್ಟೂರಿನ ಮೂಲಕವೇ. ವಯಕ್ತಿಕವಾಗಿ ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳದಿದ್ದರೂ, ವರ್ಷಕ್ಕೊಮ್ಮೆ ಇಲ್ಲವೇ ಎರಡು ಬಾರಿ ಊರಿಗೆ ಬರುವ ಉತ್ಸವ ಮೂರ್ತಿ ಎನಿಸಿದ್ದರೂ , ನನ್ನ ಹೆಸರಾದ ಶ್ರೀಕಂಠ ಜೊತೆಗೆ ಬಾಳಗಂಚಿ ಸೇರಿಸಿಕೊಂಡಿರುವುದಲ್ಲದೇ ನಮ್ಮ ಮಕ್ಕಳ ಹೆಸರಿನೊಂದಿಗೂ ನಮ್ಮ ಪೂರ್ವಜರ ಹೆಮ್ಮೆಯ ಊರು ಬಾಳಗಂಚಿಯನ್ನು ಸೇರಿಸಿಕೊಂಡೇ ಹೆಮ್ಮೆಯಿಂದ ಮೆರೆಯುತ್ತಿದ್ದೇವೆ. ಇದೇ ರೀತಿ ನೂರಾರು ವರ್ಷಗಳ ಹಿಂದೆಯೇ ವಿವಿಧ ಕಾರಣಗಳಿಂದ ಬಾಳಗಂಚಿಯನ್ನು ಬಿಟ್ಟು ಹೋಗಿರುವ ಎಷ್ಟೋ ಮಂದಿ ಇಂದಿಗೂ ತಮ್ಮ ಹೆಸರಿನೊಂದಿಗೆ ಬಾಳಗಂಚಿಯನ್ನು ಸೇರಿಸಿಕೊಂಡಿರುವ ಅನೇಕ ಖ್ಯಾತನಾಮರ ಉದಾಹರಣೆಗಳೆಷ್ಟೋ ಇವೆ

ಹಾಗಾಗಿ ನಮಗೆಲ್ಲಾ ಊರಿಗೆ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಬರಲು ಪ್ರೇರೇಪಿಸುವಂತಹದ್ದೇ ನಮ್ಮ ಕುಲದೇವರು, ಆರಾಧ್ಯ ದೈವ ಮತ್ತು ಗ್ರಾಮದೇವತೆಗಳ ಹಬ್ಬ. ಹಾಗಾಗಿಯೇ ಪ್ರತೀ ವರ್ಷ ನಮ್ಮೂರಿನ ಊರ ಹಬ್ಬ, ಜಾತ್ರೆಗಳಿಗೆ ಎಷ್ಟೇ ಕಷ್ಟವಾದರೂ ಸಕುಟುಂಬ ಸಮೇತರಾಗಿ ಬಂದು ಗ್ರಾಮಸ್ಥರ ಜೊತೆ ಒಂದಾಗಿ ಸಂಭ್ರಮ ಸಡಗರದಿಂದ ಊರ ಹಬ್ಬದಲ್ಲಿ ಪಾಲ್ಕೊಂಡು ದೇವಋಣವನ್ನು ತೀರಿಸುತ್ತಾ ಕೃಪಾರ್ಥರಾಗುವುದು ಅನೂಚಾನವಾಗಿ ತಲೆತಲಾಂತರದಿಂದಲೂ ನಡೆದು ಬಂದಿರುವಂತಹ ಸತ್ ಸಂಪ್ರದಾಯ.

ನನಗೆ ತಿಳಿದು ಬಂದಂತೆ ನಮ್ಮ ಊರಿನ ಸುತ್ತಮುತ್ತಲಿನ ಊರ ಹಬ್ಬಗಳು ಸದ್ದು ಗದ್ದಲವಿಲ್ಲದೇ ಈಗಾಗಲೇ ಸರಳವಾಗಿ ಆಚರಿಸಿದ ವಿಷಯ ಒಂದೊಂದಾಗಿ ತಿಳಿದು ಬರುತ್ತಿದೆ. ಮೊನ್ನೆ ವಿಜಯದಶಮಿಯಂದು ಪಕ್ಕದ ಹಿರೀಸಾವೆಯ ಚೌಡೇಶ್ವರೀ ದೇವಾಲಯದಲ್ಲಿ ಬನ್ನೀ ಉತ್ಸವ ಆಚರಿ‌ಸಿ ಉತ್ಸಾಹಿತರಾಗಿ, ಸರಳವಾಗಿ ಅವರ ಊರಿನ ಜಾತ್ರೆಯನ್ನು ಅತೀ ಶೀಘ್ರವಾಗಿ ಆಚರಿಸುವ ಉಮ್ಮೇದಿನಲ್ಲಿದ್ದಾರೆ. ನಮ್ಮ ಊರಿನ ಪಕ್ಕದಲ್ಲೇ ಇರುವ ನಮ್ಮ ಊರಿನಂತೆಯೇ ಏಪ್ರಿಲ್ ತಿಂಗಳಲ್ಲಿ ನಡೆಯುತ್ತಿದ್ದ, ಹುಲಿಕೆರೆ ಅಮ್ಮನ ಹಬ್ಬ ಕೂರೋನಾ ಹಬ್ಬದ ಪ್ರಯುಕ್ತ ಮುಂದೂಡಿದ್ದವರು ಈಗ ಸಮಸ್ತ ಭಕ್ತಾದಿಗಳೆಲ್ಲರೂ ಒಗ್ಗಟ್ಟಿನಿಂದ ಸೇರಿ ಕಳೆದ ಶುಕ್ರವಾರ ದಿಂದ ಹಬ್ಬ ಮಾಡುತ್ತಿದ್ದಾರೆ‌.

ಇದೆಲ್ಲದರ ಜೊತೆ ಲಕ್ಷಾಂತರ ಜನರು ಸೇರಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ನಾಡ ಹಬ್ಬ ಮೈಸೂರಿನ ದಸರಾ ಈ ಬಾರಿ ಎಂದಿನಂತೆ ಆಡಂಭರ ಇಲ್ಲದಿದ್ದರೂ ಸರಳವಾಗಿಯಾದರೂ ಶ್ರಾಸ್ತ್ರೋಕ್ತವಾಗಿ ಸಂಭ್ರಮದಿಂದ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಯಶಸ್ವಿಯಾಗಿ ಯಾವುದೇ ಅಡೆ ತಡೆಯಿಲ್ಲದೇ ಆಚರಿಸಲ್ಪಟ್ಟು ನಮಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರೂ ತಪ್ಪಾಗಲಾರದು.

ನನಗೆ ವಯಕ್ತಿಕವಾಗಿ ತಿಳಿದ ಈ ಉದಾರಣೆಗಳನ್ನು ಸಾಂಧರ್ಭಿಕವಾಗಿ ಕೊಟ್ಟಿದ್ದೇನೆಯೇ ಹೊರತು ನಮಗೆ ನಿಮಗೆ ತಿಳಿಯದೇ ಇರುವಂತಹ ಅನೇಕ ಊರ ಹಬ್ಬಗಳು ಸದ್ದಿಲ್ಲದೇ ಸಡಗರ ಸಂಭ್ರಮದಿಂದ ಯಾವುದೇ ಗೌಜು ಗದ್ದಲವಿಲ್ಲದೇ ಆಚರಿಸಲ್ಪಟ್ಟಿದೆ. ಹಾಗಾಗಿ ದಯವಿಟ್ಟು ಹಬ್ಬಕ್ಕೆ ಸಂಬಂಧ ಪಟ್ಟವರು ಸ್ವಲ್ಪ ಆಸ್ಥೆ ವಹಿಸಿ ನಮ್ಮ ಬಾಳಗಂಚಿ ಹೊನ್ನಮ್ಮನ ಹಬ್ಬವನ್ನು ಅತೀ ಶೀಘ್ರದಲ್ಲಿ ಆಚರಿಸುವಂತೆ ಈ ಮೂಲಕ ಕಳಕಳಿಯ ವಿನಂತಿ.

ನಮಗೆಲ್ಲಾ ತಿಳಿದಂತೆ ಚೋಮನ ಹಬ್ಬದಂದು ಅಶ್ವತ್ಥ ಕಟ್ಟೆಯ ಬದಿಯಲ್ಲಿ ಹಸಿರು ಚೋಮನಿಂದ ಮಳೆ, ಬೆಳೆ ಶಾಸ್ತ್ರ ಕೇಳಿ, ಮರು ದಿನ, ರಂಗ ಮಂಟಪದ ಮುಂದೆ ಗುಡಿಗೌಡರ ಕುಟುಂಬದವರು ಹೊನ್ನಾರು‌ ಕಟ್ಟಿ ಸಾಂಕೇತಿಕವಾಗಿ ಉತ್ತಿ ಬಿತ್ತಿದ ನಂತರವೇ ಬಾಳಗಂಚಿಯ ಸುತ್ತಮುತ್ತಲಿನ ಹದಿನಾರು ಹಳ್ಳಿಗಳ ರೈತಾಪಿ ವರ್ಗ ಆರಂಭವನ್ನು ಪ್ರಾರಂಭಿಸುವುದು ಅನೂಚಾನವಾಗಿ ನಡೆದುಕೊಂಡು ಬಂದ ವಾಡಿಕೆ.ಈ ಬಾರಿ ಆ ಸಂಪ್ರದಾಯಕ್ಕೆ ಕಡಿವಾಣ ಬಿದ್ದು, ಎಲ್ಲರೂ ಕೃಷಿ ಚಟುವಟಿಕೆಗಳನ್ನು ಆರಂಭಿಸಿ, ಉತ್ತಮವಾದ ಮಳೆ ಬಂದ ಕಾರಣ ಹೆಚ್ಚಿನ ಬೆಳೆ ನಿರೀಕ್ಷಿಸಿದ್ದರು. ಕಾಕತಾಳೀಯವೋ ಅಥವಾ ದೈವೀ ಅವಕೃಪೆಯೋ ಕಾಣೇ, ಚೋಮನ ಹಬ್ಬವೇ ನಡೆಯದೇ ಹೊನ್ನಾರು‌ ಕಟ್ಟದಿದ್ದ‌ ಕಾರಣ, ಬೇಳೆ ಕಾಳುಗಳು, ಸಿರಿ ಧಾನ್ಯಗಳು ನಿರೀಕ್ಷಿಸಿದ ಮಟ್ಟಕ್ಕೆ ಬಾರದೇ ರೈತಾಪಿಜನರು ಆತಂಕಕ್ಕೆ ಈಡಾಗಿರುವ ಆಘಾತಕಾರಿ ಸುದ್ದಿಯೂ ಕೇಳಿ ಬಂದಿದೆ.

ಯಾವುದೋ ಕುಂಟು ನೆಪದಿಂದ ಹಬ್ಬವನ್ನು ನಿಲ್ಲಿಸುವ ಮೂಲಕ, ಅನಾದಿ ಕಾಲದಿಂದಲೂ ನಡೆದು ಬಂದ ಸತ್ ಸಂಪ್ರದಾಯವನ್ನು ತುಂಡರಿದ ಅಪಕೀರ್ತಿ ನಮ್ಮ ಊರಿಗೆ ಬಾರದಿರಲಿ ಮತ್ತು ನಮ್ಮ ಮುಂದಿನ ಪೀಳಿಗೆಗೆ ಹಬ್ಬವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನಿಲ್ಲಿಸಬಹುದು ಎಂಬ ‌ಕೆಟ್ಟ ಸಂಪ್ರದಾಯವನ್ನು ನಾವೇ ಹಾಕಿಕೊಟ್ಟಂತೆ ಆಗುವ ಕಾರಣ, ಯಾರೇ ಬರಲೀ, ಬಾರದಿರಲೀ, ಎಷ್ಟೇ ಕಷ್ಟ ಬಂದರೂ ಬಾಳಗಂಚಿ ಹೊನ್ನಮ್ಮನ ಹಬ್ಬ ನಿಂತಿಲ್ಲ ಮತ್ತು ನಿಲ್ಲುವುದಿಲ್ಲ ಎಂದು ಹೆಮ್ಮೆಯಿಂದ ಮತ್ತು ಗರ್ವದಿಂದ ಹೇಳಿಕೊಳ್ಳುತ್ತಿದ್ದ ಹೊನ್ನಮ್ಮನ ಭಕ್ತಾದಿಗಳ ನಂಬಿಕೆ ಚ್ಯುತಿ ಬಾರದಂತೆ ಮತ್ತು ಅಕ್ಕ ಪಕ್ಕದ ಹಳ್ಳಿಯವರು ಆಡಿಕೊಳ್ಳಂದಂತೆ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವ ಗುರುತರ ಜವಾಬ್ಧಾರಿ ಸಮಸ್ತ ಬಾಳಗಂಚಿ ಗ್ರಾಮಸ್ಥರ ಮೇಲಿದೆ ಎಂದರೂ ತಪ್ಪಾಗಲಾರದು.

ಎಂದಿನಂತೆ ವಿಜ್ರಂಭಣೆಯಿಂದ ಮಾಡಲು ಆಗದಿದ್ದರೂ, ದೇಶಾದ್ಯಂತ ಇರುವ ಹೊನ್ನಮ್ಮನ ಭಕ್ತಾದಿಗಳು, ಬಾಳಗಂಚಿ ಮತ್ತು ಸುತ್ತಮುತ್ತಲಿನ ಕೆಲವೇ ಕೆಲವು ಆಸ್ತಿಕರೊಂದಿಗೆ ಸರಳವಾಗಿ ಆದರೂ, ಶಾಸ್ತ್ರೋಕ್ತವಾಗಿ ಊರ ಹಬ್ಬವನ್ನು ಮುಗಿಸುವಲ್ಲಿ ಸಪಲರಾಗಬೇಕಾಗಿದೆ.ಇನ್ನೂ ಕಾಲ ಮಿಂಚಿಲ್ಲ ಹಾಸನಾಂಬೆಯ ಉತ್ಸವ ಚಾಮುಂಡೇಶ್ವರಿ‌ ಉತ್ಸವದಂತೆ ಸರಳವಾಗಿ ಹಬ್ಬವನ್ನು ಆಚರಿಸುವ ಮೂಲಕ ಗ್ರಾಮಸ್ಥರು ಮತ್ತು ಹೊನ್ನಮ್ಮನ ಭಕ್ತಾದಿಗಳಲ್ಲಿ ಮನೆಮಾಡಿರುವ ಆತಂಕವನ್ನು ದೂರ ಮಾಡೋಣ. ಇದರಿಂದ ಕಳೆದ ಆರು ತಿಂಗಳಿನಿಂದ ಜಡ್ಡು ಗಟ್ಟಿ ಹೋಗಿರುವ ಗ್ರಾಮಸ್ಥರಿಗೆ ಉತ್ಸಾಹ ಮೂಡುವುದಲ್ಲದೇ, ಕಳೆದು ಹೋದ ಊರಿನ ಕಳೆ ಮತ್ತೊಮ್ಮೆ ಬರುತ್ತದಲ್ಲದೇ ಊರಿನ ಶುದ್ಧಿಕರಣವಾದಂತಾಗುತ್ತದೆ.

ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಚಿಂತಿಸುತ್ತಲೇ ಕಾಲ ಕಳೆಯುವ ಬದಲು ಈ ಕಾರ್ತೀಕ ಮಾಸದಲ್ಲೇ ಹೊನ್ನಮ್ಮನ ಹಬ್ಬವನ್ನು ಆಚರಿಸುವ ಮೂಲಕ ಬಾಳಗಂಚಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲದೇ, ದೇಶಾದ್ಯಂತ ಇರುವ ಹೊನ್ನಾದೇವಿ ಭಕ್ತಾದಿಗಳಿಗೆ ಸಂಭ್ರಮವನ್ನು ಮೂಡುವಂತಾಗಲೀ ಅಲ್ವೇ?

ಏನಂತೀರೀ?

ಏನಂತೀರೀ? ಪುಸ್ತಕ ಲೋಕಾರ್ಪಣೆ

ನನ್ನೆಲ್ಲಾ ಆತ್ಮೀಯರಿಗೂ ಈಗಾಗಲೇ ತಿಳಿದಿರುವಂತೆ, ಒಬ್ಬ ಹವ್ಯಾಸೀ ಬರಹಗಾರನಾಗಿ ರಾಜಕಾರಣದ ಆಗು ಹೋಗುಗಳನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಕಾರಣ ಬೇಕೋ ಬೇಡವೋ ಗೆಳೆಯರ ಒತ್ತಾಯದ ಮೇರೆಗೆ ಸಾಮಾಜಿಕ ಜಾಲತಾಣಗಳ ನಾನಾ ಗುಂಪುಗಳ ಭಾಗವಾಗಿ ಸುಖಾ ಸುಮ್ಮನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದಕ್ಕೇ ನನ್ನ ಬರವಣಿಗೆ ಸೀಮಿತವಾಗಿತ್ತು. ಆ ಎಲ್ಲಾ ಲೇಖನಗಳಿಂದ ಮಿತ್ರತ್ವಕ್ಕಿಂತ ಶತೃತ್ವ ಗಳಿಸಿದ್ದೇ ಹೆಚ್ಚು. ಈ ಜಿದ್ದಾ ಜಿದ್ದಿ, ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಮೀಸಲಾಗಿರದೇ, ಮನೆಯವರೆಗೂ ಬಂದು, ನನ್ನ ಕುಟುಂಬದವರು ನನ್ನ ಪರವಾಗಿ ಅದೆಷ್ಟೋ ಬಾರಿ ಕ್ಷಮೆ ಯಾಚಿಸಿದ್ದೂ ಉಂಟು.

ಕಲೆ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತನವರು ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ರಾಜ್ಯಪ್ರಶಸ್ತಿ ವಿಜೇತ ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರು. ನಮ್ಮ ತಂದೆ ದಿ.ಶಿವಮೂರ್ತಿಗಳು ಖ್ಯಾತ ಗಮಕಿಗಳು, ವ್ಯಾಖ್ಯಾನಕಾರರು ಮತ್ತು ಮೋರ್ಚಿಂಗ್ ಕಲಾವಿದರಾಗಿದ್ದರು. ಅಂತಹ ದಿಗ್ಗಜರ ವಂಶವವನಾಗಿಯೂ ಅದೇಕೋ ಏನೋ ಗಮಕ ಒಲಿಯಲಿಲ್ಲ. ಒಲಿಯಲಿಲ್ಲ ಎನ್ನುವುದಕ್ಕಿಂತ ಕಲಿಯಲು ಪ್ರಯತ್ನಿಸಲಿಲ್ಲ ಎನ್ನುವುದೇ ಸೂಕ್ತ. ಹಾಗಾಗಿ ಪದ್ಯ ಒಲಿಯದಿದ್ದರೂ ಗದ್ಯವನ್ನು ಒಪ್ಪಿಕೊಂಡೆ ಅಪ್ಪಿಕೊಂಡೆ.

ಯಾವುದೋ ಸಿದ್ಧಾಂತಗಳಿಗೆ ಕಟ್ಟುಬಿದ್ದು ಲೇಖನಗಳನ್ನು ಬರೆಯುತ್ತಾ ಸಮಯ ಕಳೆಯುವ ಬದಲು ಅದೇ ಸಮಯವನ್ನು ಧನಾತ್ಮಕವಾದ ಮತ್ತು ಸಮಾಜಮುಖಿಯಾದ ಲೇಖನಗಳಿಗೆ ಏಕೆ ಉಪಯೋಗಿಸ ಬಾರದು? ಎಂದು ಮಡದಿ ಮಂಜುಳ ಮತ್ತು ನೆಚ್ಚಿನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಯವರ ಸಲಹೆಯ ಮೇರೆಗೆ ನನ್ನ ಬರವಣಿಗೆಯನ್ನು ನನ್ನ ಕಲ್ಪನೆ ಮತ್ತು ನನ್ನ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಎಲ್ಲೆಂದರಲ್ಲಿ ಪ್ರಕಟಿಸಲಾರಂಭಿಸಿದಾಗ, ಸುಮ್ಮನೆ ಎಲ್ಲೋ ನಿಮ್ಮ ಬರಹಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಬ್ಲಾಗ್ ಒಂದನ್ನು ಏಕೆ ಆರಂಭಿಸಬಾರದು? ಎಂದು ಗೆಳೆಯ ವಾಸುದೇವರವರು ಸೂಚಿಸಿದ ಪರಿಣಾಮವಾಗಿ ಆರಂಭಿಸಿದ https://enantheeri.com/ ಬ್ಲಾಗಿನಲ್ಲಿ ಈಗ 500 ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ ಕೇವಲ ಕರ್ನಾಟಕವಲ್ಲದೇ, ದೇಶ ವಿದೇಶಗಳಲ್ಲಿ ಸಾಕಷ್ಟು ಓದುಗರಸಾಕಷ್ಟು ಜನ ಮನ್ನಣೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ.

ನನ್ನೆಲ್ಲಾ ಬರಹಗಳು ಕೇವಲ ನನ್ನ ಬ್ಲಾಗಿನಲ್ಲಿ ಲಭ್ಯವಿದ್ದರೂ, ಪುಸ್ತಕದ ರೂಪದಲ್ಲಿ ಪ್ರಕಟಿಸಿದಾಗ ಮಾತ್ರವೇ ಅದು ಇನ್ನೂ ಹತ್ತು ಹಲವಾರು ಸಾಂಪ್ರದಾಯಕ ಓದುಗರಿಗೆ ತಲುಪುತ್ತದೆ ಎನ್ನುವುದು ನಮ್ಮ ಕುಟುಂಬದ ಭಾವನೆ. ಹಾಗಾಗಿ ನನ್ನ ಪುಸ್ತಕವನ್ನು ಪ್ರಕಟಿಸಲು ಸಾಧ್ಯವೇ ಎಂದು ಹತ್ತಾರು ಪ್ರಕಾಶಕರನ್ನು ವಿಚಾರಿಸಿದಾಗ, ಹೊಸಾ ಲೇಖಕರ ಕನ್ನಡ ಪುಸ್ತಕಗಳನ್ನು ಯಾರೂ ಕೊಂಡು ಓದುವುದಿಲ್ಲ ಎಂಬ ನೆಪದಿಂದ ನಮ್ಮನ್ನು ಸಾಗ ಹಾಕಿದ್ದನ್ನು ಗಮನಿಸಿದ ನನ್ನ ಮಡದಿ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯ ತ್ಯಾಗವಿರುತ್ತದೆ ಎನ್ನುವಂತೆ, ರೀ…, ನಮ್ಮ ಪುಸ್ತಕವನ್ನು ನಾವೇ ಪ್ರಕಟಿಸೋಣ. ಈ ಪುಸ್ತಕದ ಸಂಪೂರ್ಣ ಖರ್ಚು ವೆಚ್ಚಗಳೆಲ್ಲವೂ ನನ್ನದಿರಲಿ ಎಂಬ ಧೈರ್ಯ ತುಂಬಿದ ಕಾರಣವೇ, ನಮ್ಮದೇ ಆದ ಸೃಷ್ಟಿ ಪ್ರಕಾಶನ ಆರಂಭಿಸಿ ಅದರ ಅಡಿಯಲ್ಲಿ ಚೊಚ್ಚಲು ಪುಸ್ತಕವಾಗಿ, ನನ್ನ ಬರಹದ ಜನಪ್ರಿಯವಾದ, ಆಯ್ದ 20 ಲೇಖನಗಳನ್ನು ಏನಂತೀರೀ? ಎಂಬ ಪುಸ್ತಕದ ರೂಪದಲ್ಲಿ ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇವೆ.

ನಮ್ಮೀ ಚೊಚ್ಚಲು ಕಾಣಿಕೆಯನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಸಾಹಿತ್ಯ ದಿಗ್ಗಜರ ಉಪಸ್ಥಿತಿಯಲ್ಲಿ ಬಹಳ ಅದ್ದೂರಿಯ ಸಮಾರಂಭದಲ್ಲಿ ಬಿಡುಗಡೆ ಮಾಡಬೇಕೆಂದು ಬಹಳ ಹಿಂದೆಯೇ ಯೋಚಿಸಿದ್ದರೂ, ಮಹಾಮಾರಿ ಕೋವಿಡ್ ಪರಿಣಾಮವಾಗಿ ಇಂದು ಮನೆಯಲ್ಲಿಯೇ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಲೋಕಾರ್ಪಣೆ ಮಾಡುತ್ತಿದ್ದೇವೆ.

ಈ ಪುಸ್ತಕವನ್ನು ಪ್ರಕಟಿಸುವ ಹಿಂದೆಯೂ, ನಮ್ಮ ಕುಟುಂಬಸ್ಥರ ಪ್ರೀತಿ ಮತ್ತು ವಿಶ್ವಾಸಗಳು ಅಡಗಿವೆ. ನಾನು ಹುಟ್ಟಿದ್ದು 1970ರ, ಸಾಧಾರಣ ಸಂವತ್ಸರ, ಆಶ್ವಯುಜ, ಶುಕ್ಲ ಪಂಚಮಿ ಇಂದಿಗೆ ಸರಿಯಾಗಿ ನನಗೆ 50 ವರ್ಷಗಳು ತುಂಬಿದೆ. ಹಾಗಾಗಿ ಬಹಳಷ್ಟು ಆಸ್ಥೆ ವಹಿಸಿ, ಕಷ್ಟ ಪಟ್ಟು ಇಷ್ಟು ಚೆಂದವಾಗಿ ಪುಸ್ತಕವನ್ನು ನನ್ನ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡುತ್ತಿರುವ ನನ್ನ ಕುಟುಂಬದವರಿಗೆ ಯಾವ ರೀತಿಯಾಗಿ ಪ್ರತಿಕ್ರಿಯೆ ನೀಡಬೇಕು ಎನ್ನುವುದೇ ನನಗೆ ತಿಳಿಯದಾಗಿದೆ.

ಈ ಎಲ್ಲಾ ಬೆಳವಣಿಗೆಯನ್ನು ಕಣ್ಣಾರೆ ನೋಡಲುಮತ್ತು ಸಂಭ್ರಮಿಸಲು ಇಂದು ನಮ್ಮ ತಂದೆ ತಾಯಿಯವರು ನಮ್ಮೊಂದಿಗೆ ಇಲ್ಲವಲ್ಲಾ ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ನೂರಾರು ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ದೊರೆತದ್ದು ನನ್ನ ಪೂರ್ವಜನ್ಮದ ಸುಕೃತವೇ ಸರಿ. ಹಾಗಾಗಿ, ನನ್ನ ಬರಹಗಳನ್ನು ನಿರಂತರವಾಗಿ ಓದುತ್ತಿರುವ ನಿಮ್ಮಂತಹ ಸಾಹಿತ್ಯಾಸಕ್ತರಿಗೆ ಸಾವಿರ ಶರಣು. ಅರ್ಥತ್ ಸಾವು + ಇರದ= ಸಾವಿರದ, ಅಂದರೇ ಸಾವೇ ಇರದಷ್ಟು ಚಿರಋಣಿ ಆಗಿದ್ದೇನೆ.

ನೂರು ರೂಪಾಯಿ ಮುಖ ಬೆಲೆಯ ಈ ಪುಸ್ತಕವನ್ನು ದಯವಿಟ್ಟು ಕೊಂಡು ಓದುವ ಮೂಲಕ ನಮ್ಮೀ ಚೊಚ್ಚಲು ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ ಮತ್ತು ಆಶೀರ್ವಾದವಿರಲಿ. ನಿಮ್ಮೀ ನಿರಂತರ ಸಹಕಾರದಿಂದ ಇಂತಹ ಹತ್ತಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅಗಾಧವಾದ ಸಾಗರದಂತಿರುವ ಕನ್ನಡ ಸಾರಸ್ವತ ಲೋಕಕ್ಕೆ ಆದ್ಭುತವಾದ ಸಾಹಿತ್ಯ ಭಂಡಾರವನ್ನು ಸಣ್ಣ ಮಟ್ಟದಲ್ಲಿ ಕೊಡುವ ಆಸೆ ನಮ್ಮದು.

ನಮ್ಮ ಹಿರಿಯರು ನಮ್ಮ ಮಸ್ತಕದಲ್ಲಿ ತುಂಬಿದ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಪುಸ್ತಕ ರೂಪದಲ್ಲಿ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಯುವಂತೆ ಮಾಡೋಣ.

ಏನಂತೀರೀ?

ಇಂತಿ ನಿಮ್ಮ ವಿಶ್ವಾಸಿ

ಶ್ರೀಕಂಠ ಬಾಳಗಂಚಿ

ಶಾರ್ವರೀ ಸಂವತ್ಸರ, ಆಶ್ವಯುಜ, ಶುದ್ಧ ಪಂಚಮಿ

ಬಾಳಗಂಚಿ  ಹೆಬ್ಬಾರಮ್ಮ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಸುಮಾರು 400-500 ಮನೆಗಳಿರುವ ಅಂದಾಜಿನ ಪ್ರಕಾರ 3000 ಜನರು ವಾಸಿಸುತ್ತಿರುವ ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ ದೇವಿ ಗ್ರಾಮ ದೇವತೆಯಾಗಿದೆ. ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ.

ಹೊನ್ನಾದೇವಿ ಮತ್ತು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಗಳನ್ನು ಹೊರತು ಪಡಿಸಿದಲ್ಲಿ ಊರಿನಲ್ಲಿ ಎಲ್ಲರೂ ಭಯ ಭಕ್ತಿಗಳಿಂದ ಪೂಜಿಸುವುದೇ ಹೆಬ್ಬಾರಮ್ಮನಿಗೆ. ಹೆಬ್ಬಾರಮ್ಮ ದೇವಿಯಾದದ್ದೂ ಒಂದು ರೋಚಕವಾದ ಕಥೆಯೇ. ಹಿಂದೆ ಬಾಳಗಂಚಿ ಅಗ್ರಹಾರವೆಂದೇ ಪ್ರಸಿದ್ದವಾಗಿ ಸುಮಾರು ಬ್ರಾಹ್ಮಣರ ಮನೆಗಳು ಇದ್ದವಂತೆ ಅಲ್ಲಿಯ ಗ್ರಾಮದೇವತೆಗೆ ನವಮಾಸ ತುಂಬಿದ ಗರ್ಭಿಣಿಯನ್ನು ಬಲಿಯಾಗಿ ಕೊಡುವ ಪದ್ದತಿ ರೂಢಿಯಲ್ಲಿತ್ತು. ಅದೊಮ್ಮೆ ಊರಿನ ಶಾನುಭೋಗರ ಮನೆಯವರ ಪಾಳಿ ಬಂದಾಗ ಆಕೆಯ ಮನೆಯ ಹೆಣ್ಣುಮಗಳನ್ನು ದೇವಿಗೆ ಬಲಿಕೊಡಲು ಸಿದ್ಧವಾದಾಗ ಅದೊಂದು ಅಗೋಚರ ಶಕ್ತಿಯ ಪ್ರಭಾವದಿಂದಾಗಿ ಭಾರೀ ಪ್ರಕಾಶಮಾನವಾದ ಬೆಳಕೊಂದು ಬೀರಿ ಎಲ್ಲರೂ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಆಕೆ ಅದೃಶ್ಯಳಾಗಿ ಒಂದು ಪದಕವಾಗಿ ಮಾರ್ಪಟ್ಟು ಹೊನ್ನಾದೇವಿಯ ಕೊರಳಲ್ಲಿ ಹಾರವಾಗುತ್ತಾಳೆ. ಅಂದಿನಿಂದ ಊರಿನವರೆಲ್ಲರೂ ಸೇರಿ ಹೊನ್ನಾದೇವಿಗೆ ಯಾವುದೇ ನರ ಬಲಿಯಾಗಲೀ ಪ್ರಾಣಿಬಲಿಯಾಗಲೀ ಕೊಡುವುದನ್ನು ನಿಷೇಧಿಸುತ್ತಾರೆ. ಅದೊಂದು ದಿನ ಹೊನ್ನಾದೇವಿಯ ಅರ್ಚಕರು ಪ್ರಸಾದ ರೂಪದಲ್ಲಿ ದೇವಿಯ ಮೇಲಿನ ಹೂವನ್ನು ಭಕ್ತಾದಿಗಳಿಗೆ ಕೊಡುವ ಸಂದರ್ಭದಲ್ಲಿ ಹೂವಿನ ಜೊತೆ ಈ ಪದಕವನ್ನೂ ಊರಿನ ಹರಿಜನಕೇರಿಯ ಭಕ್ತರೊಬ್ಬರಿಗೆ ಕೊಟ್ಟು ಬಿಡುತ್ತಾರೆ. ಹೀಗೆ ಅಚಾನಕ್ಕಾಗಿ ಹರಿಜನ ಕೇರಿ ಪ್ರವೇಶಿಸಿದ ಆ ಪದಕವನ್ನು ಅವರು ಹಿಂದಿರುಗಿಸಲು ನಿರಾಕರಿಸಿ ತಮ್ಮನ್ನು ಉದ್ಧಾರ ಮಾಡಲು ಹೊನ್ನಾದೇವಿಯೇ ದೇವತೆಯಂತೆ ಈ ರೂಪದಲ್ಲಿ ಬಂದಿರುವಳೆಂದು ಭಾವಿಸಿ ಆಕೆಯನ್ನು ಹೆಬ್ಬಾರಮ್ಮನ ರೂಪದಲ್ಲಿ ಪೂಜಿಸಲಾರಂಭಿಸುತ್ತಾರೆ. ಕಾಲ ಕ್ರಮೇಣ ನಮ್ಮೂರಿನಲ್ಲಿ ಅಸ್ಪೃಶ್ಯತೆಯ ಪಿಡುಗು ಕಡಿಮೆಯಾಗಿ ಹೊಲೆಯರ ಹಟ್ಟಿ ಎಂದು ಕರೆಯುತ್ತಿದ್ದದ್ದನ್ನು ದೊಡ್ಡ ಕೇರಿ ಎಂದು ಮರುನಾಮಕರಣ ಮಾಡಿ, ವರ್ಷಕ್ಕೊಮ್ಮೆ ಊರ ಹಬ್ಬದ ಸಮಯದಲ್ಲಿ ಹೆಬ್ಬಾರಮ್ಮನನ್ನು ಹೊತ್ತಿರುವ ಪೂಜಾರಿಗಳು ಶಾನುಭೋಗರ ಮನೆಗಳಿಗೆ ಹೋಗಿ ಮಡಿಲು ತುಂಬಿಸಿಕೊಳ್ಳುತ್ತಾಳೆ. ಹೆಬ್ಬಾರಮ್ಮತಮ್ಮ ಮನೆಗಳಿಗೆ ಬರುವ ಸಮಯದಲ್ಲಿ ಶ್ಯಾನುಭೋಗರ ಮನೆಯವರು ತಮ್ಮ ಮನೆಯ ಹೆಣ್ಣು ಮಗಳಿಗೆ ಸಲ್ಲಬೇಕಾದ ಸಕಲ ಮರ್ಯಾದೆಯೊಂದಿಗೆ, ಸೀರೆ ಮತ್ತು ಕುಪ್ಪಸ ಮತ್ತು ಯಥಾ ಶಕ್ತಿ ದಕ್ಷಿಣೆಯೊಂದಿಗೆ ಹೆಬ್ಬಾರಮ್ಮನಿಗೆ ಮನೆಯ ಹೆಂಗಳೆಯರೆಲ್ಲರೂ ಮಡಿಲು ತುಂಬಿ ಆರತಿ ಬೆಳಗಿ ತಮ್ಮ ಮನೆಯಲ್ಲಿ ಸದಾಕಾಲವು ಸುಭಿಕ್ಷವಾಗಿರಲಿ ಎಂದು ಪುನಃ ಆಕೆಯ ಮಡಿಲಿನಿಂದ ನಾಲ್ಕು ಕಾಳು ಅಕ್ಕಿಯನ್ನು ಪಡೆದು ಕೊಳ್ಳುತ್ತಾರೆ ಎನ್ನುವುದು ಒಂದು ದೃಷ್ಟಾಂತ.

ಅದೇ ರೀತಿ ಮತ್ತೊಂದು ದೃಷ್ಟಾಂತದ ಪ್ರಕಾರ ಸಪ್ತಮಾತೃಕೆಯರಾದ ಹೊನ್ನಾದೇವಿ, ಹೆಬ್ಬಾರಮ್ಮ, ಚಾವಟಿಯಮ್ಮ, ಚೌಡೇಶ್ವರಿ, ಮಾರಿಯಮ್ಮ, ಮಸಣಕಮ್ಮ ಮತ್ತು ಮಣಿಯಮ್ಮ ದೇವತೆಗಳು ಭೂಲೋಕ್ಕೆ ಬಂದು ಅಲ್ಲೊಂದು ಕಡೆ ವಿಶ್ರಾಂತಿ ಪದೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವರಿಗೆಲ್ಲಾ ಹಸಿವಾಗಿ ಒಬ್ಬೊಬ್ಬರು ಒಂದೊಂದು ಪ್ರದೇಶಕ್ಕೆ ಊಟಕ್ಕೆ ಹೋಗುವುದಾಗಿ ನಿರ್ಧರಿಸಿ, ಬಾಳಗಂಚಿಯ ಅಗ್ರಹಾರದ ಕಡೆಗೆ ಹೊನ್ನಾದೇವಿ ಹೋದರೆ, ಹರಿಜನ ಕೇರಿಯ ಕಡೆಗೆ ಹೆಬ್ಬಾರಮ್ಮ ಮತ್ತು ಚಾವಟಿಯಮ್ಮ ಹೋಗುತ್ತಾರೆ. ಅದೇ ರೀತಿ ಚೌಡೇಶ್ವರಿ ಹಿರೀಸಾವೆಯಲ್ಲಿ ನೆಲೆಸಿದರೆ, ಮಾರಿಯಮ್ಮ ಹೊನ್ನಮಾರನಹಳ್ಳಿ ಗೌಡರ ಹಳ್ಳಿಯಲ್ಲಿ ಮಸಣಕಮ್ಮ(ಆಡು ಭಾಷೆಯಲ್ಲಿ ಮಶ್ಲಕಮ್ಮ) ನೆಲೆಸುತ್ತಾರೆ, ಕಡೆಯದಾಗಿ ಮಣಿಯಮ್ಮ ಮಾತ್ರ ಊರಿನ ಹೊರಗೆ ಉಳಿದು ಕೊಂಡು ಕಾಡಿನಲ್ಲಿ ಅಲ್ಲಿಲ್ಲಿ ಅಲೆದಾಡುತ್ತಾ ಇರುತ್ತಾಳೆ ಎಂಬ ಪ್ರತೀತಿ ಇದೆ. ವರ್ಷಕ್ಕೊಮ್ಮೆ ಊರಿನ ಹಬ್ಬದ ಸಮಯದಲ್ಲಿ ಹಿರೀಸಾವೆ ಚೌಡೇಶ್ವರಿ ಹೊರತು ಪಡಿಸಿ (ನಮ್ಮ ಊರಿನ ಹಬ್ಬದ ಒಂದು ದಿನ ಮುಂಚಿತವಾಗಿ ಆ ಊರಿನಲ್ಲಿ ಸ್ಥಳೀಯವಾಗಿಯೇ ಊರ ಹಬ್ಬವನ್ನು ಆಚರಿಸಲಾಗುತ್ತದೆ) ಉಳಿದೆಲ್ಲಾ ದೇವತೆಗಳನ್ನು ಒಟ್ಟಾಗಿ ಸೇರಿಸಿ ಹತ್ತು ಹದಿನಾರು ಹಳ್ಳಿಗಳ ಜನರ ಸಮ್ಮುಖದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಜಾತಿಯ ಬೇಧಭಾವವಿಲ್ಲದೆ ಅಸ್ಪೃಷ್ಯತೆಯ ತಾರತಮ್ಯತೆ ಇಲ್ಲದೇ ಭಾವೈಕ್ಯದಿಂದ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವ ಪದ್ದತಿ ನಮ್ಮೂರಿನಲ್ಲಿ ರೂಢಿಯಲ್ಲಿದೆ.

ನಮ್ಮೂರ ಹಬ್ಬದ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ಲೇಖನಗಳಿಂದ ತಿಳಿಯಬಹುದಾಗಿದೆ.

ಇಂತಹ ಇತಿಹಾಸವುಳ್ಳ ಶ್ರೀ ಹೆಬ್ಬಾರಮ್ಮನ ಗುಡಿ ಬಹಳ ಚಿಕ್ಕದಾಗಿದ್ದು ಶಿಥಿಲಾವಸ್ಥೆಗೆ ತಲುಪಿದ್ದದ್ದನ್ನು ಗಮನಿಸಿ ಊರಿನ ಎಲ್ಲರೂ ಸೇರಿ ಯಥಾಶಕ್ತಿ ಧನ ಸಹಾಯ ಮಾಡಿದ ಪರಿಣಾಮ ವಿಕಾರೀ ಸಂವತ್ಸರದ ಮಾಘ ಮಾಸದಲ್ಲಿ ಹೆಬ್ಬಾರಮ್ಮನ ದೇವಸ್ಥಾನ ಪುನರ್ನಿಮಾಣ ಮಾಡಿ 48 ದಿನಗಳ ಕಾಲದ ಮಂಡಲ ಪೂಜೆಯನ್ನು ಸಾಂಗೋಪಾಂಗವಾಗಿ ಪೂಜಾಕೈಂಕರ್ಯಗಳನ್ನು ಮಾಡಿ ಕೊನೆಯ ದಿನ ಊರಿನ ರಾಜ ಬೀದಿಯಲ್ಲಿ ಅದ್ದೂರಿಯಾಗಿ ಹೊನ್ನಾದೇವಿಯ ಮೆರವಣಿಗೆ ಮಾಡಿ ದೇವಿಯನ್ನು ಗುಡಿ ತುಂಬಿಸಲಾಯಿತು.

ಆ ಮೆರವಣಿಗೆಯ ರಸಕ್ಷಣಗಳನ್ನು ಈ ವೀಡೀಯೋ ಮೂಲಕ ಕಣ್ತುಂಬ ನೋಡಿ ಆನಂದಿಸಿ ಮತ್ತು ದೇವಿಯ ಕೃಪೆಗೆ ಪಾತ್ರರಾಗೋಣ.

ಏನಂತೀರೀ?

ಡಿಸೆಂಬರ್ 31 ಆ ಕರಾಳ ರಾತ್ರಿ

ಡಿಸೆಂಬರ್ 31 ಮತ್ತು ಜನವರಿ 1 ಅಂತ ನೆನಪಿಸಿಕೊಂಡರೆ ಬಹುತೇಕರಿಗೆ ರೋಮಾಂಚನವಾಗುತ್ತದೆ. ಅನೇಕರು ಒಂದು ವಾರಕ್ಕಿಂತಲೂ ಮುಂಚೆಯೇ, ಆ ದಿನಗಳು ಮತ್ತು ಆ ದಿನವನ್ನು ಹೇಗೆ ಸಂಭ್ರಮಿಸಬೇಕು ಅಂತ ನಾನಾ ರೀತಿಯ ತಯಾರಿಗಳನ್ನು ಮಾಡಿಕೊಳ್ತಾ ಇದ್ರೇ ನಮಗೆ ಮಾತ್ರ ಆ ಕರಾಳ ನೆನಪನ್ನು ಹೇಗೆ ಮರೆಯುವುದಪ್ಪಾ ಅಂತಾ ಇರ್ತೀವಿ. ಅದೇನಪ್ಪಾ ಅಂತಹ ಕರಾಳ ನೆನಪು ಅಂತೀರಾ? ತಡೀರೀ ನಾನೂ ಹೇಳ್ತಾ ಹೋಗೀನಿ. ನೀವು ಕೇಳ್ತಾ ಹೋಗಿ.

ಕೆಲ ವರ್ಷಗಳ ಹಿಂದೆ ಡಿಸೆಂಬರ್ 31 ಗುರುವಾರ, ಜನವರಿ 1 ಶುಕ್ರವಾರ ಬಂದಿತ್ತು ಮತ್ತು ಅವತ್ತು ನಮ್ಮ ಕಛೇರಿಗೆ ರಜವಿದ್ದ ಕಾರಣ. ಗುರುವಾರ ಒಂದು ದಿನ ರಜಾ ಹಾಕಿಕೊಂಡು ಬಿಟ್ರೇ, ವಾರಾಂತ್ಯ ಸೇರಿ ನಾಲ್ಕು ದಿನಗಳು ರಜ ಬರುತ್ತದೆ ಅಂತ ಯೋಚಿಸಿ, ಸರೀ ನಡೀರೀ ಹೋಗೇ ಬಿಡೋಣ, ಬೇಲೂರು, ಹಳೇಬೀಡು, ಹೊರನಾಡು, ಶೃಂಗೇರಿ, ಧರ್ಮಸ್ಥಳ, ಉಡುಪಿ ಕೊಲ್ಲೂರು ಹಾಗೆ ಹಿಂದಿರುಗಿ ಬರುವಾಗ ಒಣಗಿರೋ ಜೋಗ್ ಜಲಪಾತವನ್ನು ಮಕ್ಕಳಿಗೆ ತೋರಿಸ್ಕೊಂಡು ಶಿವಮೊಗ್ಗದ ಮುಖಾಂತರ ಬೆಂಗಳೂರಿಗ ಬರೋಣ ಎಂದು ತೀರ್ಮಾನಿಸಿದೆವು. ಇಷ್ಟೊಂದು ಜಾಗಕ್ಕೆ ನಮ್ಮ ಕಾರಿನಲ್ಲಿ ಹೋಗೋದು ಬೇಡ. ದೊಡ್ಡದಾದ ಬಾಡಿಗೆ ಗಾಡಿ ತೆಗೆದುಕೊಂಡು ಹೋದ್ರೇ ಎಲ್ಲರೂ ಆರಾಮವಾಗಿ ಸಂಭ್ರಮಿಸ ಬಹುದು ಎಂದು ನಿರ್ಧರಿಸಿ ಗುರುವಾರ ಬೆಳಿಗ್ಗೆ ಆರು ಗಂಟೆಗೆಲ್ಲಾ ಮನೆಮುಂದೆ ಬಾಡಿಗೆ ಗಾಡಿ ಹತ್ತಿ ಹಾಗೇ ನಮ್ಮ ಮಾವನವರ ಮನೆಗೂ ಹೋಗಿ ಅಲ್ಲಿ ಹೆಣ್ಣು ಕೊಟ್ಟ ಅತ್ತೆ -ಮಾವ ಕಣ್ಣು ಕೊಟ್ಟ ದೇವರು ಎನ್ನುವಂತೆ ಅತ್ತೆ ಮಾವನವರನ್ನೂ ಗಾಡಿಗೆ ಹತ್ತಿಸಿಕೊಂಡು ನೆಲಮಂಗಲ ದಾಟಿ, ಕುಣಿಗಲ್ ಮಾರ್ಗಕ್ಕೆ ಎಡಕ್ಕೆ ತಿರುಗಿದೆವು.

WhatsApp Image 2020-01-01 at 5.51.07 PMಯಾವಾಗಲೂ ಕುಣಿಗಲ್ ರಸ್ತೆಗೆ ತಿರುಗುತ್ತಿದ್ದಂತೆಯೇ ನಮ್ಮ ತಂದೆಯವರಿಗೆ ಅದೇನೋ ಸಂಭ್ರಮ. ಅಷ್ಟು ವಯಸ್ಸಾದರೂ ಚಿಕ್ಕ ಮಗುವಿನಂತೆ ಆಡುತ್ತಿದ್ದರು. ಅಂದೂ ಕೂಡಾ ಮಗೂ ಹೇಗೋ ಪುಣ್ಯಕ್ಷೇತ್ರಗಳಿಗೆ ಹೋಗ್ತಾ ಇದ್ದೀವಿ, ದಾರಿ ಮಧ್ಯೆದಲ್ಲೇ ನಮ್ಮ ಊರಿಗೂ ಹೋಗಿ ಹೊನ್ನಮ್ಮನ ದರ್ಶನ ಮಾಡಿಕೊಂಡು ಕೊಂಡು ಹೋಗೋಣ ಎಂದು ರಾಗ ತೆಗೆದರೆ, ಅದಕ್ಕೆ ಪಕ್ಕದಲ್ಲಿದ್ದ ಅಮ್ಮನೂ ಕೂಡಾ ಹೌದೂ ಕಣೋ ಅಣ್ಣಯ್ಯ. ಈ ಸಾರಿ ನಾನು ಊರ ಹಬ್ಬಕ್ಕೆ ಬರೋದಿಕ್ಕೆ ಆಗಲಿಲ್ಲ ದೇವಿ ಕಣ್ಣಿಗೆ ಕಟ್ಟಿದ ಹಾಗಿದೆ ಕಣೋ ಎಂಬ ತಾಳ ಬೇರಿ. ರಾಗ-ತಾಳ ಸಮ್ಮೇಳನವಾಗಿ ಹೋದ್ಮೇಲೆ ಮೇಳವನ್ನು ಜಾಮಾಯ್ಸದೇ ಅಂತಾ ಸರಿ ಹೋಗೋಣ ಅಂದ ಕೂಡ್ಲೇ ನಮ್ಮ ಅಪ್ಪಾ ಅಮ್ಮನ ಮುಖದಲ್ಲಿ ಸಂತೃಪ್ತಿಯ ಕಳೆ. ಅದಕ್ಕೇ ನೋಡೂ, ನಾನಾಗ್ಲೇ ಹೊನ್ನಮ್ಮನಿಗೆ ಮುಡಿ ತುಂಬೋದಕ್ಕೆ ಸೊಬ್ಲಕ್ಕಿ ಎಲ್ಲಾ ಸಿದ್ಧ ಮಾಡಿಕೊಂಡು ಬಂದಿದ್ದೀನಿ ಅಂದ್ರೂ ಅಮ್ಮ. ಬೆಳ್ಳೂರು ಕ್ರಾಸ್ ದಾಟಿ ಸಿಗುವ ಕಿರಿಸಾವೆಯಲ್ಲಿ ಬಲಕ್ಕೆ ತಿರುಗಿ ಮೂರು ಕಿಮೀ ಹೋದ್ರೇ ನಮ್ಮೂರು ಬಾಳಗಂಚಿ. ಊರ ಹೊರಗೇ ಇರುವ ಬಾಳಗಂಚಿ ಹೊನ್ನಾದೇವಿ ದೇವಸ್ಥಾನದ ಮುಂದಿರುವ ಕಲ್ಯಾಣಿಯಲ್ಲಿ ಕೈಕಾಲು ತೊಳೆದುಕೊಂಡು ಆಗಿನ್ನೂ ಬಹಳ ಚಿಕ್ಕದಾಗಿದ್ದ ಗುಡಿ (ಈಗ ಬಹಳ ಭವ್ಯವಾದ ದೇವಾಲಯ ನಿರ್ಮಿಸಲಾಗಿದೆ)ಯೊಳಗೆ ಹೋಗ್ತಾ ಇದ್ದಂತೆಯೇ ನಮ್ಮ ಬಂಧುಗಳೇ ಆಗಿರುವ ಅರ್ಚಕರೂ ತುಂಬು ಹೃದಯದಿಂದ ಸ್ವಾಗತಿಸಿ ಸಾಂಗೋಪಾಂಗವಾಗಿ ಪೂಜೆ ಪುನಸ್ಕಾರಗಳೆಲ್ಲಾ ಮುಗಿದು ಅಲ್ಲೇ ಪಕ್ಕದ ಛಾವಡಿಯಲ್ಲಿ ಕುಳಿತು ತಂದಿದ್ದ ತಿಂಡಿ ತಿಂದು ನಮ್ಮ ಪ್ರಯಾಣ ಮುಂದುವರೆಸಿದೆವು.

ಹಾಂ! ನಿಮಗೆ ಹೇಳೋದಿಕ್ಕೆ ಮರೆತಿದ್ದೆ. ನಮ್ಮ ಗಾಡಿ ಚಾಲಕ, ಸ್ವಲ್ಪ ಸೀರಿಯಸ್ ಮನುಷ್ಯ. ಮುಖದಲ್ಲಿ ನಗುವೇ ಇಲ್ಲ. ನಮ್ಮ ಮನೆಗೆ ಬಂದಾಗ ಮತ್ತು ನಮ್ಮ ಮಾವನವರ ಮನೆಗೆ ಹೋದಾಗಲೂ ಗಾಡಿಯಿಂದ ಕೆಳಗಿಳಿದು ಸುಮ್ಮನೆ ಮನೆಯನ್ನು ದಿಟ್ಟಿಸಿ ನೋಡುತ್ತಿದ್ದನೇ ಹೊರತು ಉಭಾ-ಶುಭಾ ಅಂತಾ ನಮ್ಮೊಡನೆ ಒಂದು ಮಾತಿಲ್ಲ. ಬೆಂಗಳೂರಿನಿಂದ ನಮ್ಮ ಊರಿಗೆ ಸುಮಾರು 120 ಕಿಮೀ ದೂರದ ಪ್ರಯಾಣದಲ್ಲಿ ಅವನ ಮೊಬೈಲ್ಗೆ ಕರೆ ಬರೋದು ಅವನು ಗಾಡಿ ನಿಲ್ಲಿಸಿ ದೂರಕ್ಕೆ ಹೋಗಿ ಮಾತನಾಡಿಕೊಂದು ಬರುತ್ತಿದ್ದ. ಕಂಡೋರ ಉಸಾಬರಿ ನಮಗ್ಯಾಕೆ ಅಂತಾ ನಾವೂ ಕೂಡಾ ಅದಕ್ಕೆ ಏನೂ ಹೇಳಲಿಲ್ಲ. ಅಷ್ಟೆಲ್ಲಾ ಮಾತಾನಾಡುತ್ತಾ ಗಾಡಿ ನಿಲ್ಲಿಸುತ್ತನಿದ್ದನಾದರೂ ಕುಡಿದ ನೀರು ಅಲ್ಲಾಡದ ಹಾಗಿ ಗಾಡಿ ಓಡಿಸುತ್ತಿದ್ದ. ಮಟ ಮಟ ಮಧ್ಯಾಹ್ನ ಬೇಲೂರಿಗೆ ಬಂದು ದೇವಾಲಯವನ್ನು ನೋಡಿ ಅಲ್ಲೇ ಊಟ ಮುಗಿಸಿ ಮೂಡಿಗೆರೆ ಮಾರ್ಗವಾಗಿ ಹಳ್ಳ ಕೊಳ್ಳದ ರಸ್ತೆಯಲ್ಲಿ ಮೈ ಕುಲುಕಿಸಿಕೊಂಡು ಬೆಂಡಾಗಿ ಬಸವಳಿದು ಹೊರನಾಡು ತಲುಪುವ ವೇಳೆಗಾಗಲೇ ಸೂರ್ಯಾಸ್ತವಾಗುತ್ತಿತ್ತು. ಇಷ್ಟರ ಮಧ್ಯೆ ಮತ್ತೆ ಮೂರ್ನಾಲ್ಕು ಕಡೆ ನಮ್ಮ ಡ್ರೈವರ್ ಗಾಡಿ ನಿಲ್ಲಿಸಿ ಅದ್ಯಾರ ಬಳಿಯಲ್ಲೋ ಗುಟ್ಟು ಗುಟ್ಟಾಗಿ ಮಾತನಾಡಿದ್ದ. ಅಲ್ಲಿನ ವಸತಿಯ ಹತ್ತಿರ ಹೋಗಿ ಎರಡು ರೂಮ್ ಬೇಕಿತ್ತು ಎಂದರೆ, ರೂಮ್ಸ್ ಖಾಲಿ ಇಲ್ಲಾ ಅನ್ನೋದೇ. ವರ್ಷಾಂತ್ಯವಾಗಿದ್ದರಿಂದ ನಮ್ಮಂತೆಯೇ ನೂರಾರು ಜನರು ದೇವಿಯ ದರ್ಶನಕ್ಕೆ ಬಂದಿದ್ದರಿಂದ ದೇವಾಲಯ ಭಕ್ತಾದಿಗಳಿಂದ ತುಂಬಿ ತುಳುಕುತ್ತಿತ್ತು. ಹೊಸಾ ವರ್ಷದ ಸ್ವಾಗತಕ್ಕಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿತ್ತು.

annaporneನಮ್ಮ ಮಾವನವರು ಕೂಡಲೇ ದೇವಸ್ಥಾನದ ಕಾರ್ಯಾಲಯಕ್ಕೆ ಹೋಗಿ ತಮ್ಮ ಪ್ರಭಾವ ಬಳೆಸಿ ಎರಡು ಕೊಠಡಿಗಳ ಕೀಗಳನ್ನು ತಂದಿದ್ದಲ್ಲದೇ, ಸಂಜೆಯ ವಿಶೇಷ ಪೂಜೆಗೆ ವ್ಯವಸ್ಥೆಯನ್ನೂ ಮಾಡಿಕೊಂಡು ಬಂದರು. ಆ ಕೂಡಲೇ ಎಲ್ಲರೂ ನಮ್ಮ ನಮ್ಮ ಕೊಠಡಿಗಳಿಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಸ್ವಲ್ಪ ಕಾಲ ವಿಶ್ರಮಿಸಿಕೊಂಡು, ದೇವಾಲಯಕ್ಕೆ ಕಾಲಿಡುತ್ತಿದ್ದರೆ ಜನಸಾಗರ ಕಂಡು ನಮ್ಮ ತಾಯಿಯವರು ಅಮ್ಮಾ ನನ್ನ ಕೈಯಲ್ಲಿ ಅಷ್ಟು ಹೊತ್ತು ಸರತಿಯ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲ. ನಾನು ಇಲ್ಲಿಂದಲೇ ತಾಯಿಗೆ ನಮಸ್ಕಾರ ಮಾಡಿಬಿಡುತ್ತೇನೆ. ನೀವೆಲ್ಲಾ ಹೋಗಿ ಬನ್ನಿ ಅಂದರು. ಆ ಕೂಡಲೇ ನಮ್ಮ ಮಾವನವರು ತಮ್ಮ ಪ್ರಭಾವದಿಂದ ನಮ್ಮನ್ನು ದೇವಾಲಯದ ಪಕ್ಕದ ದ್ವಾರದಿಂದ ಯಾವುದೇ ಸರದಿಯ ಸಾಲಿನಲ್ಲಿ ನಿಲ್ಲದೇ ಕೆಲವೇ ಕೆಲ ನಿಮಿಷಗಳಲ್ಲಿ ದೇವಿಯ ಮುಂದೆ ನಿಲ್ಲಿಸಿದ್ದರು. ಅನ್ನಪೂರ್ಣೇಶ್ವರಿಯ ಸಂಜೆ ಪೂಜೆಯ ಸಮಯದಲ್ಲಿ ದೇವಿಯನ್ನು ಕಣ್ತುಂಬ ತುಂಬಿಕೊಂಡು ಕೃತಾರ್ಥರಾಗಿ ಭಕ್ತಿಯಿಂದ ನಮಿಸಿ ಗರ್ಭಗುಡಿಯಿಂದ ಹೊರಬರುತ್ತಿದ್ದಂತೆಯೇ ದೇವಾಲಯದ ಆಡಳಿತಾಧಿಕಾರಿಗಳು ನಮ್ಮ ಬರುವಿಕೆಯನ್ನೇ ಕಾಯುತ್ತಿದ್ದು ನಮ್ಮನ್ನು ವಿಶೇಷ ಪ್ರಸಾದ ವಿತರಣಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಪುಷ್ಕಳವಾಗಿ ಅಮೃತದಂಹ ಊಟ ಹಾಕಿಸಿ, ಬೆಳಿಗ್ಗೆ ಸ್ನಾನ ಮುಗಿಸಿಕೊಂಡು ತಿಂಡಿಗೆ ಇಲ್ಲಿಗೇ ನೇರವಾಗಿ ಬಂದು ಬಿಡಿ. ತಿಂಡಿ ಆದ ಮೇಲೆಯೇ ಮತ್ತೊಮ್ಮೆ ದೇವಿಯ ದರ್ಶನ ಮುಗಿಸಿ ಕೊಂಡು ಶೃಂಗೇರಿಯತ್ತ ನಿಮ್ಮ ಪ್ರಯಾಣ ಬೆಳೆಸಿ ಎಂದು ತಿಳಿಸಿದರು.

ಅಬ್ಬಾ ಇಂತಹ ಜನಜಂಗುಳಿಯ ಮಧ್ಯೆಯೂ ಅಚ್ಚುಕಟ್ಟಾಗಿ ದೇವರ ದರ್ಶನ ಮತ್ತು ಪ್ರಸಾದ ಭಾಗ್ಯ ಕೊಡಿಸಿದ್ದಕ್ಕಾಗಿ ನಮ್ಮ ಮಾವನವರನ್ನು ಮನಸಾರೆ ಅಭಿನಂದಿಸಿ ಸ್ವಲ್ಪ ಹೊತ್ತು ಎಲ್ಲರೂ ಲೋಕಾಭಿರಾಮವಾಗಿ ಮಾತಾಡಿ ಇನ್ನೇನು ಮಲಗಬೇಕು ಅಂದು ಕೊಳ್ಳುವಷ್ಟರಲ್ಲಿ ಗಂಟೆ ಹತ್ತೂವರೆಯಾಗಿತ್ತು. ನಾವು ಚಿಕ್ಕವರಿದ್ದಾಗ ಸಪ್ತಸಾಗರ ದಾಟಿ ಒಂದು ಮರದ ಪೊಟರೆಯಲ್ಲಿತ್ತು ಅವನ ಜೀವ ಎನ್ನುವ ಕಥೆಯಂತೆ, ನಮ್ಮ ಮಾವನವರಿಗೂ ಎಲ್ಲೇ ಹೋದರೂ, ಎಷ್ಟೇ ಹೊತ್ತಾದರೂ ತಮ್ಮ ಮನೆಯತ್ತಲೇ ತಮ್ಮ ಚಿತ್ತ. ಹಾಗಾಗಿ ತಮ್ಮ ಮನೆಯನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಅವರ ಅಣ್ಣನವರಿಗೆ ವಹಿಸಿ ಬಂದಿದ್ದರು. ಇಷ್ಟು ಹೊತ್ತಾದರೂ ಅವರಿಂದ ಯಾವುದೇ ಸುದ್ದಿಯೇ ಇಲ್ಲವಲ್ಲಾ. ಮನೆಗೆ ಬಂದಿದ್ದಾರೋ ಇಲ್ಲವೋ ಎಂದು ವಿಚಾರಿಸಲು ಕರೆ ಮಾಡೋಣ ಎಂದು ನೋಡಿದರೆ, ನಮ್ಮೆಲ್ಲಾ ಪೋನುಗಳೂ out of network covrage area ದಲ್ಲಿದೆ.

ಪುಣ್ಯಕ್ಕೆ ಎನ್ನುವಂತೆ ನಮ್ಮ ತಂದೆಯವರದ್ದು BSNL connection ಆಗಿದ್ದರಿಂದ ಅಲ್ಪ ಸ್ವಲ್ಪ ಸಿಗ್ನಲ್ ಇದ್ದ ಕಾರಣ ಅವರ ಪೋನ್ ನಿಂದ ನಮ್ಮ ದೊಡ್ಡ ಮಾವನವರಿಗೆ ಕರೆ ಮಾಡಿ, ಏನ್ರಪ್ಪಾ, ಹೇಗಿದ್ದೀರೀ, ಮನೆಗೆ ಬಂದ್ರಾ!! ಮನೆಕಡೇ ಜೋಪಾನಾ!! ಸರಿಯಾಗಿ ಎಲ್ಲಾ ಬಾಗಿಲು ಹಾಕಿಕೊಂಡು, ಭದ್ರವಾಗಿ ಚಿಲಕ ಹಾಕಿಕೊಂಡು ಮಲ್ಕೊಳ್ಳಿ. ಬೆಳಿಗ್ಗೆ ಪೇಪರ್ ಎಲ್ಲಾ ಒಳಗೆ ಇಟ್ಟು, ಕೆಲಸದವಳು ರಂಗೋಲಿ ಹಾಕಿ ಕೆಲ್ಸ ಮುಗ್ಸಿಕೊಂಡು ಹೋದ್ಮೇಲೆ ಬಾಗಿಲು ಭದ್ರ ಪಡಿಸಿಕೊಂಡು ಹೋಗಿ ಅಂತಾ ಒಂದೇ ಉಸಿರನಲ್ಲಿ ಹೇಳ್ತಾ ಹೋದ್ರೇ, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೇ ಬರಲಿಲ್ಲ, ಇದೇನ್ರಪ್ಪಾ, ನಾನು ಮಾತಾಡ್ತಾ ಇರೋದು ಕೇಳಿಸ್ತಾ ಇದ್ಯಾ? ಒಂದೂ ಮಾತಾಡ್ತಾನೇ ಇಲ್ವೇ ಅಂದ್ರೇ! ಅದೂ ಅದೂ ಅದೂ ಅಂತಾ ಒಂದೇ ಸಮನೆ ತಡವರಿಕೆಯ ಮಾತು ನಮ್ಮ ದೊಡ್ಡ ಮಾವನವರ ಕಡೆಯಿಂದ ಬಂದದ್ದು ಕೇಳಿ ನಮಗೆಲ್ಲಾ ಗಾಬರಿ. ಅದೇನೂ ಅಂತಾ ಸರಿಯಾಗಿ ಹೇಳ್ಬಾರ್ದೇ ಅಂತಾ ಸ್ವಲ್ಪ ಏರು ಧನಿಯಲ್ಲಿ ನಮ್ಮ ಮಾವನವರು ಅವರ ಅಣ್ಣನವರಿಗೆ ಹೇಳಿದಾಗ, ಇಲ್ಲೊಂದು ಅಚಾತುರ್ಯ ನಡೆದು ಹೋಗಿದೆಯಪ್ಪಾ!! ಸುಮಾರು ಎಂಟು ಗಂಟೆಗೆ ನಾನು ಮನೆಗೆ ಬಂದು ಬಾಗಿಲು ತೆಗೆಯೋಣಾ ಅಂತಾ ಹೋದ್ರೇ ಬಾಗಿಲು ತೆಗೆದೇ ಇತ್ತು. ಅರೇ ಇದೇನಿದು ಬೀಗ ಹಾಕದೇ ಬಾಗಿಲು ತೆಗೆದೇ ಹೋಗಿಬಿಟ್ರಾ ಇವರು ಎಂದು ಒಳಗೆ ಹೋಗಿ ಸ್ವಿಚ್ ಹಾಕಿದ್ರೇ ಮನೆಯೆಲ್ಲಾ ಸಾಮಾನುಗಳೂ ಚೆಲ್ಲಾಪಿಲ್ಲಿಯಾಗಿದೆ. ಮತ್ತೂ ಒಳಗೆ ಹೋಗಿ ರೂಮ್ಗಳಿಗೆ ಹೋದ್ರೇ ಬೀರುಗಳೆಲ್ಲಾ ಒಡೆದು ಬಟ್ಟೆ ಬರೆಗಳನ್ನೆಲ್ಲ ಎಳೆದಾಡಿದ್ದಾರೆ ಅಂತಾ ಹೇಳ್ತಾ ಇದ್ರೇ ನಮ್ಮ ಮಾವನವರ ಎದೆ ಧಡ್ ಅಂದಹಾಗಾಯ್ತು. ಕೂಡಲೇ ಆವರನ್ನು ಸಮಾಧಾನ ಪಡಿಸಿ ಸ್ವಲ್ಪ ನೀರನ್ನು ಕುಡಿಸಿ ನಾನು ಫೋನ್ ತೆಗೆದುಕೊಂಡು ಅವರೊಂದಿಗೆ ಮಾತು ಮುಂದುವರಿಸಿದಾಗ ತಿಳಿದ ವಿಷಯವೇನೆಂದರೆ, ಅವತ್ತು ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಯಾರೋ ಕಳ್ಳರು ಬಾಗಿಲು ಮೀಟಿ ನುಗ್ಗಿ ಕಳ್ಳತನ ಮಾಡಿದ್ದಾರೆ. ನಮಗೆ ವಿಷಯ ತಿಳಿಸೋಣ ಎಂದರೆ ನಮ್ಮ ಫೋನ್ಗಳು ಸಿಗುತ್ತಿಲ್ಲ. ಪಕ್ಕದವರ ಮನೆಯವರ ಸಹಾಯದಿಂದ ಪೋಲಿಸರಿಗೆ ದೂರು ನೀಡಿ ಪೋಲೀಸರು ಆ ಸಮಯದಲ್ಲಿ ಮಹಜರು ನಡೆಸುತ್ತಿದ್ದರು.

ಇಷ್ಟೆಲ್ಲಾ ಅದಮೇಲೆ ನಮ್ಮ ಪ್ರವಾಸ ಹೇಗೆ ಮುಂದುವರಿಸುವುದು? ಪ್ರವಾಸವನ್ನು ಅಲ್ಲಿಗೇ ತುಂಡರಿಸಿ ಆ ಕೂಡಲೇ ಊರಿಗೆ ಹಿಂದಿರುಗುವುದು ಎಂದು ನಿರ್ಧರಿಸಿ ಆದಾಗಲೇ ನಿದ್ರೆಗೆ ಜಾರಿಹೋಗಿದ್ದ ನಮ್ಮ ತಾಯಿಯವರು ಮತ್ತು ಮಕ್ಕಳನ್ನು ಎಬ್ಬಿಸಿ ಸೂಕ್ಷ್ಮವಾಗಿ ನಡೆದದ್ದನ್ನು ತಿಳಿಸಿ ಗಾಡಿ ತೆಗೆಯಲು ನಮ್ಮ ಡ್ರೈವರ್ಗೆ ಹೇಳೋಣ ಅಂತ ಬಂದ್ರೇ ಗಾಡಿಯಲ್ಲಿ ನಮ್ಮ ಡ್ರೈವರ್ರೇ ಇಲ್ಲಾ!! ಒಂದು ಕ್ಷಣ ನನ್ನ ಮರ್ಕಟ ಮನಸ್ಸು ಏನೇನೋ ಯೋಚಿಸ ತೊಡಗಿತು. ಕೂಡಲೇ ನಮ್ಮ ದೊಡ್ಡ ಮಾವನವರಿಗೆ ಕರೆ ಮಾಡಿ ಈ ಧಾವಂತದಲ್ಲೂ ಅಪ್ಪಿ ತಪ್ಪೀ ನಮ್ಮ ಮನೆಯ ಕಡೆ ಹೋಗಿದ್ರಾ? ನಮ್ಮ ಮನೆಯ ಸಂಗತಿ ಏನು ಎಂದು ಕೇಳಿದೆ. ಅದಕ್ಕವರು ಹೌದು ಪೋಲೀಸ್ ಸ್ಟೇಷನ್ಗೆ ಕಂಪ್ಲೇಂಟ್ ಕೊಡಲು ಹೋಗುವಾಗ ನಮ್ಮ ಮನೆಯ ಮುಂದೆಯೇ ಹೋಗ ಬೇಕಾದ ಕಾರಣ ನಮ್ಮ ಮನೆಗೂ ಹೋಗಿ ನೋಡಿಕೊಂಡು ಬಂದು ನಮ್ಮ ಮನೆ ಸುರಕ್ಷಿತವಾಗಿದೆ ಎಂದು ಖಾತ್ರಿ ಪಡಿಸಿಕೊಂಡಿದ್ದನ್ನು ಹೇಳಿದಾಗ ತುಸು ನೆಮ್ಮದಿಯಾದರೂ ನನಗೆ ನಮ್ಮ ಡ್ರೈವರ್ ಮೇಲೆ ಅನುಮಾನ ಬರಲು ಶುರುವಾಯಿತು. ಗಾಡಿ ಹತ್ತಿದಾರಿಂದ ಐದಾರು ಸಲಾ ಗಾಡಿ ನಿಲ್ಲಿಸಿ ಅದ್ಯಾರೋ ಹತ್ರಾ ಗುಟ್ಟು ಗುಟ್ಟಾಗಿ ಮಾತಾಡ್ತಾ ಇದ್ದದ್ದು ನಮಗೆ ಈಗ ಅನುಮಾನ ಬರತೊಡಗಿತು. ನಾವುಗಳು ಮನೆಯಲ್ಲಿ ಇಲ್ಲದಿರುವ ವಿಷಯವನ್ನು ಅವನೇ ಅವರ ಕಡೆಯವರಿಗೆ ತಿಳಿಸಿ ಕಳ್ಳತನ ಮಾಡಿಸಿರಬಹುದೇ ಎಂಬ ಅನುಮಾನ ತಲೆಯಲ್ಲಿ ಹೊಕ್ಕಿತು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಗಾಡಿಯವರನ್ನು ಸಾರ್ ನಮ್ಮ ಡ್ರೈವರ್ ಅವರನ್ನು ಎಲ್ಲಾದ್ರೂ ನೋಡಿದ್ರಾ ಎಂದು ಕೇಳಿದಾಗ, ಹೌದು ಸಾರ್. ಅವರ ಸ್ನೇಹಿತರೊಬ್ಬರು ಸಹಾ ಬಂದಿದ್ದಾರಂತೆ ಅವರ ಗಾಡಿಯಲ್ಲಿ ಮಲಗಿಕೊಳ್ತೀನೀ ಅಂತಾ ಹೇಳಿ ಹೋದ್ರು ಅಂದು. ಅಷ್ಟು ಹೊತ್ತಿನಲ್ಲಿ ಅಲ್ಲಿ ನಿಂತಿದ್ದ ಒಂದೊಂದೇ ಗಾಡಿಯನ್ನು ಹುಡುಕಿಕೊಂಡು ನಮ್ಮ ಡ್ರೈವರ್ ಅವರ ಹೆಸರು ಕೂಗ್ತಾ ಹೋಗಿ ಸ್ವಲ್ಪ ಹೊತ್ತಾದ ಮೇಲೆ ನಮ್ಮ ಡ್ರೈವರ್ ಪತ್ತೆ ಆದ್ರು. ಅವರೂ ಸಹಾ ಗಾಢ ನಿದ್ದೆಯಲ್ಲಿದ್ದು ಎನ್ ಸಾರ್! ಯಾಕೆ ಇಷ್ಟು ಹೊತ್ತಿನಲ್ಲಿ ಹುಡುಕಿಕೊಂಡು ಬಂದ್ರೀ ಎಂದ್ರು. ಸಾರ್!! ಸ್ವಲ್ಪ ಅರ್ಜೆಂಟ್ ಬೆಂಗಳೂರಿಗೆ ವಾಪಸ್ ಹೋಗ್ಬೇಕಿದೆ. ಬರ್ತೀರಾ ಎಂದೇ. ಇಷ್ಟು ಹೋತ್ನಾಲ್ಲಾ ಸಾರ್!! ರೋಡ್ ಕೂಡಾ ಸರಿ ಇಲ್ಲಾ! ಬೆಳಿಗ್ಗೆ ಹೊತ್ತಿಗೆ ಮುಂಚೆ ಹೋಗೋಣ್ವಾ ಸಾರ್! ಅಂತಾ ಹೇಳ್ತಾ ಇದ್ರೇ ನನ್ನ ಅನುಮಾನದ ರೆಕ್ಕೆ ಪುಕ್ಕ ಮತ್ತಷ್ಟು ಬಲಿಯ ತೊಡಗಿತು. ಇಲ್ಲಾ ಸ್ವಲ್ಪ emergency call ಬಂದಿದೆ. ಈಗ್ಲೇ ಹೋಗ್ಬೇಕು ಬನ್ನಿ ಅಂದೇ. ಸರೀ ಸಾರ್ ಮುಖ ತೊಳೆದುಕೊಂಡು ಬರ್ತೀನಿ ಅಂತ ಹೇಳಿ ಒಂದು ಕಾಲು ಹತ್ತು ನಿಮಿಷದಲ್ಲಿ ಗಾಡಿ ಶುರು ಮಾಡೋವಷ್ಟರಲ್ಲಿ ಗಂಟೆ 11:15- 11:20 ಆಗಿತ್ತು.

ಗಾಡಿ ಭದ್ರಾ ಸೇತುವೆ ದಾಟುತ್ತಿದ್ದಂತೆಯೇ ಸಾರ್ ಬಂದ ದಾರಿ ಚೆನ್ನಾಗಿಲ್ಲ. ಮತ್ತೊಂದು ರೋಡ್ ಇದೇ. ಸ್ವಲ್ಪ ದೂರ ಆಗುತ್ತೆ ಆದ್ರೇ ರಸ್ತೆ ಚೆನ್ನಾಗಿದೆ ಅದ್ರಲ್ಲೇ ಹೋಗ್ಲಾ? ಅಂದಾಗ ಯಾಕೇ ಈ ಮನುಷ್ಯ ಈ ರೀತಿ ತಡಾ ಮಾಡ್ತಾ ಇದ್ದಾನೆ ಅಂತಾ ನನಗೆ ಮತ್ತು ನಮ್ಮ ಮಾವನವರಿಗೆ ಅನ್ನಿಸಿದ್ರೆ ನಮ್ಮ ತಾಯಿಯವರು ಸರಿ ಆ ರಸ್ತೆಯಲ್ಲೇ ಹೋಗಪ್ಪಾ. ಬೆಳಿಗ್ಗೆ ಮೈ ಕೈ ಎಲ್ಲಾ ನುಜ್ಜು ನೂರಾಗಿದೆ ಅನ್ನೋದೇ? ಆಷ್ಟು ಹೊತ್ತಿನಲ್ಲಿ ಸುಮ್ಮನೆ ನಮ್ಮಲ್ಲೇ ಜಟಾಪಟಿ ಮಾತೇಕೇ ಎಂದು ಕೊಂಡು ಸರಿ ಅದೇ ದಾರಿಯಲ್ಲಿ ಬೇಗ ಬೇಗ ಹೋಗಿ ಎಂದೆ. ಅಲ್ಲಿಂದ ನೋಡಿ ಅಸಲಿ ಆಟ ಶುರುವಾಯ್ತು .

church.jpegಹೇಳಿ ಕೇಳಿ ಡಿಸೆಂಬರ್ 31ರ ರಾತ್ರಿ, ದಟ್ಟದಾದ ಕಾಡು ನಮ್ಮ ಗಾಡಿ ಬಿಟ್ರೆ ಮತ್ತಾವ ನರಪಿಳ್ಳೆಯೂ ಇಲ್ಲದಂತಹ ರಸ್ತೆಯನ್ನು ಸೀಳಿಕೊಂಡು ಹೋಗ್ತಾ ಇದ್ದ ನಮ್ಮ ಗಾಡಿ ಇದ್ದಕ್ಕಿದ್ದಂತೆಯೇ ಗಕ್ ಎಂದು ಬ್ರೇಕ್ ಹಾಕಿ ನಿಲ್ತು. ಯಾಕಪ್ಪಾ ಅಂತಾ ಕೇಳಿದ್ರೇ ಅಲ್ನೋಡಿ ಸಾರ್ ಎಷ್ಟು ದೊಡ್ಡ ಹಾವು ಹೋಗ್ತಾ ಇದೆ ಅಂತ high beem head light ಹಾಕಿ ದೊದ್ಡದಾದ ಹೆಬ್ಬಾವು ರಸ್ತೆ ದಾಟು ಹೋಗುತ್ತಿದ್ದದ್ದನ್ನು ತೋರಿಸಿದ ನಮ್ಮ ಡ್ರೈವರ್. ಇದೇನಪ್ಪಾ ಅಪಶಕುನ ಎಂದು ಮುಂದು ಹೋಗುತ್ತಿದ್ದಂತೆಯೇ ಜೋರಾದ ಗಂಟೆ ಶಭ್ಧ. ಸಮಯ ನೋಡಿದ್ರೇ ಹನ್ನೆರಡಾಗಿತ್ತು ಅರೇ ಇಷ್ಟು ಹೊತ್ತಿನಲ್ಲಿ ಈ ಕಾಡಿನ ಮಧ್ಯೆ ಇದೆಂತಹಾ ಗಂಟೆ ಶಬ್ಧಾ ಎಂದು ಯೋಚಿಸಿ ಗಾಡಿ ಒಂದು ತಿರುವು ತಿರುಗುತ್ತಿದ್ದಂತೆಯೇ ಆ ಕಾಡಿನ ಮಧ್ಯೆ ವಿದ್ಯುದ್ದೀಪದಿಂದ ಹೊಳೆಯುತ್ತಿದ್ದ ಚರ್ಚಿನ ಶಿಲುಬೆ ಕಾಣಿಸಿತು. ಅರೇ ಈ ಕಾಡಿನ ಮಧ್ಯೆಯೂ ಚರ್ಚೇ ಎಂಬ ಉದ್ಗಾರ ನಮ್ಮ ತಂದೆಯವರ ಬಾಯಿಂದ ಹೊರಬಿತ್ತು. ಅಲ್ಲಿಂದ ಸ್ವಲ್ಪ ದೂರ ಹೋದಂತೆಯೇ ಮತ್ತೊಮ್ಮೆ ಗಾಡಿ ನಿಂತಾಗಾ ಈಗೇನಪ್ಪಾ ಅಂತ ನೋಡಿದ್ರೇ ಸುಮಾರು ಹತ್ತಾರು ಯುವಕರ ಗುಂಪು ಕೈಯಲ್ಲಿ ಮಧ್ಯದ ಬಾಟೆಲ್ ಹಿಡಿದುಕೊಂಡು ನಮ್ಮ ಗಾಡಿಗೆ ಅಡ್ಡಲಾಗಿ ನಿಂತಿದ್ದರು ಮೊದಲೇ ಭಯಭೀತರಾಗಿದ್ದ ನಮಗೆ ಮತ್ತಷ್ಟೂ ಭಯ. ಇದೇನಪ್ಪಾ ಅಂತ ನೋಡ್ತಾ ಇದ್ರೇ ನಮ್ಮ ಕಿಟಕಿಯ ಹತ್ತಿರ ಬಂದು ಕೈ ಚಾಚಿದ ಆ ಹುಡುಗರ ಗುಂಪು Happy New Year brother ಎಂದಾಗ ವಿಧಿ ಇಲ್ಲದೇ, Thank you & same to you ಎಂದು ಒಲ್ಲದ ಮನಸ್ಸಿನಲ್ಲೇ ಹೇಳಿ ಮುಂದೆ ಸಾಗಿದೆವು. ಅಲ್ಲಿಂದ ಪ್ರತೀ ಐದಾರು ಕಿಮೀ ದೂರಕ್ಕೊಂದರಂತೆ ಚರ್ಚುಗಳು. ಇಲ್ಲವೇ ಮನೆಯ ಮುಂದೆ ನಕ್ಷತ್ರಗಳು ತೂಗು ಹಾಕಿದ್ದದ್ದನ್ನು ನೋಡಿ ಕ್ರೈಸ್ತ ಮಿಷನರಿಗಳ ಸದ್ದಿಲ್ಲದ ವಿಸ್ತಾರ ಹೇಗೆ ಆಗಿದೆ ಎಂಬುದು ನಮ್ಮ ಅರಿವಾಯಿತಾದರೂ ನಾವಿದ್ದ ಪರಿಸ್ಥಿತಿಯಲ್ಲಿ ಅದರ ಬಗ್ಗೆ ಹೆಚ್ಚಿಗೆ ಯೋಚಿಸುವ ಹಾಗಿರಲಿಲ್ಲ. ಇದೇ ರೀತಿಯ ಅನುಭವ ಇನ್ನೂ ಮೂರ್ನಾಲ್ಕು ಕಡೆ ನಮಗಾಯಿತು.

celb2ಇಷ್ಟರ ಮಧ್ಯೆ ಡ್ರೈವರ್ ನಿದ್ದೆ ಮಾಡದೆ ಎಚ್ಚರದಿಂದ ಗಾಡಿ ಓಡಿಸುವಂತೆ ಮಾಡಲು ಡ್ರೈವರ್ ನೊಂದಿಗೆ ನಿಧಾನವಾಗಿ ಮಾತನಾಡಲು ಶುರು ಮಾಡಿದೆ. ಈ ಗಾಡಿ ನಿಮ್ಮದೇನಾ? ಎಷ್ಟು ವರ್ಷದಿಂದ ಗಾಡಿ ಓಡಿಸ್ತಾ ಇದ್ದೀರಾ? ಈ ಟ್ರಾವೆಲ್ಸ್ನಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡ್ತಾ ಇದ್ದೀರಾ ಅಂತಾ ಪ್ರಶ್ನೆಗಳನ್ನು ಕೇಳ್ತಾ ಹೋಗ್ತಾ ಇದ್ದಂತೆ ,ಡ್ರೈವರ್ ನಮ್ಮ ಅತ್ತೆಯವರ ಊರಿನವನು. ಅವರ ಮನೆ ನಮ್ಮ ಅತ್ತೆಯವರ ಮನೆಯ ಹಿಂದೆಯೇ ಇದ್ದು ಅವರ ತಂದೆ ತಾಯಿಯವರೆಲ್ಲಾ ನಮ್ಮ ಅತ್ತೆಯವರಿಗೆ ಚಿರಪರಚಯಸ್ತರು ಎಂದು ತಿಳಿದಾಗ ಮನಸ್ಸು ಹಗುರವಾಯಿತು. ಅದೂ ಅಲ್ಲದೇ ಅವರ ಸ್ನೇಹಿತರ ಮನೆಯವರೊಬ್ಬರು ಅಸ್ಪತ್ರೆಯಲ್ಲಿ ಸೀರಿಯಸ್ಸಾಗಿದ್ದ ಕಾರಣ ಪದೇ ಪದೇ ಅವರಿಂದ ಕರೆ ಬರುತ್ತಿತ್ತು. ಗಾಡಿ ಓಡಿಸ್ತಾ ಮಾತಾಡಿದ್ರೇ ನಾವೆಲ್ಲರೂ ಬೇಜಾರು ಮಾಡಿಕೊಳ್ಳಬಹುದು ಎಂದು ತಿಳಿದು ಗಾಡಿ ನಿಲ್ಲಿಸಿ ದೂರ ಹೋಗಿ ಮಾತನಾಡುತ್ತಿದ್ದದ್ದಾಗಿ ತಿಳಿಸಿದರು. ಇದೆಲ್ಲಾ ಕೇಳುತ್ತಿದ್ದಂತೆಯೇ ಡ್ರೈವರ್ ಕುರಿತಾಗಿದ್ದ ನಮ್ಮ ಅನುಮಾನಗಳು ಒಂದೊಂದೇ ಪರಿಹಾರವಾಗುತ್ತಿದ್ದಂತೆಯೇ ಬೆಳ್ಳಂಬೆಳಿಗ್ಗೆ ನಾಲ್ಕಕ್ಕೆಲ್ಲಾ ಮನೆಗೆ ತಲುಪಿ ನಮ್ಮ ಆಗಮನವನ್ನೇ ಕಾಯುತ್ತಿದ್ದ ಪೋಲಿಸರು ಮತ್ತು ನಮ್ಮ ದೊಡ್ದ ಮಾವನವರನ್ನು ಭೇಟಿಯಾಗಿ ಅಗಿದ್ದ ಅವಗಡಗಳನ್ನೆಲ್ಲಾ ಕಣ್ಣಾರೆ ನೋಡಿ ಮನನೊಂದು ಕಳೆದು ಹೋದ ವಸ್ತುಗಳ ಅಂದಾಜು ಲೆಖ್ಖವನ್ನು ಪೋಲಿಸರಿಗೆ ತಿಳಿಸಿ ಬೆಳಿಗ್ಗೆ ಬಡಗಿಯನ್ನು ಕರೆಸಿ ಒಡೆದ ಬಾಗಿಲನ್ನು ಸರಿ ಪಡಿಸಿದೆವು.

ನಮ್ಮ ಮಾವನವರ ಪ್ರಭಾವ ಮತ್ತು ದೇವರ ದೆಯೆಯಿಂದಾಗಿ ಕಳ್ಳರು ಕೆ.ಆರ್.ಪುರಂ ಸ್ಟೇಷನ್ ವ್ಯಾಪ್ತಿಯಲ್ಲಿ ಏಳೆಂಟು ತಿಂಗಳಿನಲ್ಲಿಯೇ ಸಿಕ್ಕಿ ಕೊಂಡು ಕಳೆದು ಕೊಂಡ ಅಲ್ಪ ಸ್ವಲ್ಪ ಚಿನ್ನಾಭರಣವನ್ನು ಹಿಂದುರುಗಿ ಪಡೆದುಕೊಂಡರೂ ಇಂದಿಗೂ ಕೋರ್ಟು ಕಛೇರಿ ಅಲೆಯುವುದು ತಪ್ಪಿಲ್ಲ. ಹಾಗಾಗಿ ಇಂದಿಗೂ ಡಿಸೆಂಬರ್ 31 ಮತ್ತು ಜನವರಿ 1 ಬಂತೂ ಅಂದ್ರೇ ಸಂಭ್ರಮಿಸುವ ಬದಲು ಅ ಕರಾಳ ನೆನಪೇ ನಮ್ಮ ಕಣ್ಣಿಗೆ ರಾಚುತ್ತದೆ. ಅದೂ ಅಲ್ದೇ ಜನವರಿ 1 ನಮಗೇನೂ ಹೊಸಾ ವರ್ಷ ಅಲ್ಲಾ ಅಲ್ವೇ? ನಮ್ಮ ಹೊಸವರ್ಷದ ಆಚರಣೆ ಏನಿದ್ರೂ ಯುಗಾದಿಯೇ ಅಲ್ವೇ?

ಏನಂತೀರೀ?