ಶ್ರೀ ಗುರುಭ್ಯೋ ನಮಃ

ಸೂಟು, ಕೋಟು, ಬೂಟು, ಕುತ್ತಿಗೆಯಲ್ಲಿ ಟೈ.‌ಅದಕ್ಕೆ ಮಿರಿ‌ಮಿರಿ ಮಿಂಚುವ ಟೈ ಪಿನ್, ತೆಲೆಯ ಮೇಲೊಂದು ಮೈಸೂರು ಪೇಟ, ಹಣೆಯಲ್ಲಿ ಕೆಂಪನೆಯ ಉದ್ದನೆಯ ನಾಮ, ಕಣ್ಣಿಗೆ ಅಗಲವಾದ ಕನ್ನಡಕ, ನೋಡಲು ಕುಳ್ಳಗಿರುವ ವ್ಯಕ್ತಿಯೊಬ್ಬರು ತಮಗಿಂತಲೂ ಎತ್ತರವಿದ್ದ ಸೈಕಲ್ಲನ್ನು ತುಳಿದುಕೊಂಡು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುತ್ತಿದ್ದರು. ಹೊರಗಿನಿಂದ ನೋಡಿದರೆ ಬಾರೀ ಶಿಸ್ತಿನ ಕೋಪಿಷ್ಟ ಎನ್ನುವಂತೆ ಕಾಣಿಸಿಕೊಂಡರೂ, ಸ್ವಲ್ಪ ಹೊತ್ತು ಮಾತನಾಡಿಸಿದರೆ ಅವರಷ್ಟು ಮೃದು ಸ್ವಭಾವದ ವ್ಯಕ್ತಿ ಮತ್ತೊಬ್ಬರು ಇರಲಿಕ್ಕಿಲ್ಲ ಎಂದೆಸುವಂತಹ ವ್ಯಕ್ತಿತ್ವ.

ಬಹುಶಃ ಎಪ್ಪತ್ತು, ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಬಿಇಎಲ್ ಪ್ರೌಢಶಾಲೆಯಲ್ಲಿ ಓದಿದವರು ಯಾರಾದರೂ ಈ ಲೇಖನವನ್ನು ಓದುತ್ತಿದ್ದಂತೆಯೇ ನಾನು ಯಾರ ಬಗ್ಗೆ ವಿವರಿಸುತ್ತಿದ್ದೇನೆ ಎಂದು ಅವರಿಗೆ ಥಟ್ ಅಂತ ತಿಳಿದು ಬಿಡುತ್ತದೆ. ಹೌದು ಇವತ್ತು ಸೆಪ್ಟಂಬರ್ 5ನೇ ತಾರೀಖು ಶಿಕ್ಷಕರ ದಿನಾಚರಣೆ. ಹಾಗಾಗಿ ನಾನು ನಮ್ಮ ಆತ್ಮೀಯರು ಹಾಗೂ ನೆಚ್ಚಿನ ಗುರುಗಳಾಗಿದ್ದ ದಿವಂಗತ ಶ್ರೀ ಕೆ. ಎಲ್. ಅನಂತನಾರಾಯಣ್ ಅರ್ಥಾತ್ ನಮ್ಮೆಲ್ಲರ ಪ್ರೀತಿಯ ಕೆ.ಎಲ್.ಎ. ಮೇಷ್ಟ್ರರನ್ನು ಎಲ್ಲರಿಗೂ ಪರಿಚಯಿಸುವ ಪ್ರಯತ್ನ.

ಅಪ್ಪ ಬಿ.ಇ.ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ನಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕಾಲೇಜು ವಿದ್ಯಾಭ್ಯಾಸವೆಲ್ಲವೂ ನಡೆದದ್ದು ಬಿಇಎಲ್ ವಿದ್ಯಾಸಂಸ್ಥೆಯಲ್ಲಿಯೇ. ಶಾಲೆಯ ಆಡಳಿತದ ನಿಯಂತ್ರಣವೆಲ್ಲವೂ ಕಾರ್ಖಾನೆಯ ಸುಪರ್ದಿಯಲ್ಲಿದ್ದ ಕಾರಣ ಎಲ್ಲವೂ ಕಾರ್ಖಾನೆಯಂತೆಯೇ ಶಿಸ್ತಿನಿಂದಲೇ ನಡೆಯುತ್ತಿತ್ತು. ಕಾರ್ಖಾನೆಯ ಸಿಬ್ಬಂಧಿ ವರ್ಗಕ್ಕೆ ಸಿಗುತ್ತಿದ ವಾಹನ ಸೌಕರ್ಯ, ಕಾಲೋನಿ, ಕ್ಯಾಂಟೀನ್ ಎಲ್ಲವೂ ನಮ್ಮ ಶಾಲೆಯ ಸಿಬ್ಬಂಧಿ ವರ್ಗಲ್ಲೂ ಲಭ್ಯವಾಗಿ ನಮ್ಮ ಶಾಲಾ ಕಟ್ಟಡವೂ ಆಗಿನ ಕಾಲದಲ್ಲಿಯೇ ಅದ್ದೂರಿಯಾಗಿತ್ತು.

ಇಂತಹ ಶಾಲೆಯ ತುಂಬಾ ಹಿರಿಯ ಮತ್ತು ನುರಿತ ಶಿಕ್ಷಕ ವೃಂದದವರೇ ಇದ್ದರೂ ತಮ್ಮ ಉಡುಗೆ ತೊಡುಗೆ, ಅಚಾರ, ವಿಚಾರ ಮತ್ತು ಶಿಸ್ತಿನ ಕಾರಣದಿಂದಾಗಿ ಕೆ.ಎಲ್.ಎ ಸರ್ ಇತರೇ ಶಿಕ್ಷರಿಗಿಂತಲೂ ವಿಭಿನ್ನವಾಗಿ ಮತ್ತು ವೈಶಿಷ್ಟ್ಯವಾಗಿ ಎಲ್ಲರ ಮನಸ್ಸನ್ನು ಸೆಳೆಯುತ್ತಿದ್ದರು ಎಂದರೆ ತಪ್ಪಾಗಲಾರದು. ನಾವು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಅವರ ಬಗ್ಗೆ ಕೇಳಿದ್ದ ಕಾರಣ ಅವರ ಮೇಲೆ ಬಹಳ ಪೂಜ್ಯ ಭಾವನೆ ಮೂಡಿತ್ತು.

ಎಂಟು ಮತ್ತು ಒಂಭತ್ತನೇ ತರಗತಿಯಲ್ಲಿ ನಮಗೆ ಅವರ ಪಾಠ ಕೇಳಲು ಸಾದ್ಯವಾಗಿರಲಿಲ್ಲ. ಆದರೆ ನಮ್ಮ ಸುಕೃತವೋ ಎನ್ನುವಂತೆ ಹತ್ತನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ಈ ಮೂರಕ್ಕೂ ನಮಗೆ ಕೆ.ಎಲ್.ಎ ಅವರೇ ನಿಯುಕ್ತರಾದಾಗ ನಮಗೆಲ್ಲಾ ಒಂದು ಕಡೆ ಸಂತೋಷವಾದರೇ, ಅವರ ಶಿಸ್ತು ಮತ್ತು ಕೋಪ ಕೇಳಿ ಮನಸ್ಸೊಳಗೇ ಅಳುಕೂ ಇತ್ತು. ಆದರೆ ನಮ್ಮ ತರಗತಿಗೆ ಬಂದ ಮೊದಲನೇ ದಿನವೇ ನಮ್ಮೆಲ್ಲರನ್ನೂ ಅವರು ಪರಿಚಯ ಮಾಡಿಕೊಂಡ ರೀತಿ ಅವರು ಪಾಠ ಮಾಡುವ ಮುನ್ನ ಮಾಡಿಕೊಳ್ಳುತ್ತಿದ್ದ ತಯಾರಿ ಮತ್ತು ಅವರು ಪಾಠವನ್ನು ಆರಂಭಿಸಿದ ರೀತಿ ನಮ್ಮೆಲ್ಲರನ್ನೂ ದಂಗು ಬಡಿಸಿತ್ತು. ಮೂರು ವಿಷಯಗಳನ್ನು ಹೇಳಿಕೊಡುತ್ತಿದ್ದ ಕಾರಣ ದಿನದಲ್ಲಿ ಎರಡರಿಂದ ಮೂರು ತರಗತಿಗಳು ಅವರದ್ದೇ ಇರುತ್ತಿದ್ದ ಕಾರಣ ಅವರನ್ನೇ ಕ್ಲಾಸ್ ಟೀಚರ್ ಗಿಂತಲೂ ಬಹಳ ಹೆಚ್ಚಾಗಿ ಹಚ್ಚಿಕೊಂಡಿದ್ದೆವು. ಬೇರೆಲ್ಲಾ ಶಿಕ್ಷಕರು ಸ್ಟಾಫ್ ರೂಮಿನಲ್ಲಿ ಕುಳಿತು ಕೊಳ್ಳುತ್ತಿದ್ದರೆ ಇವರು ಮಾತ್ರಾ ನಮ್ಮ ತರಗತಿಯ ಪಕ್ಕದಲ್ಲಿಯೇ ಇದ್ದ ಭೌತಶಾಸ್ತ್ರದ ಪ್ರಾಯೋಗಿಕ ಕೊಠಡಿಯಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ಹಾಗಾಗಿ ಬೆಲ್ ಹೊಡೆದ ಕೆಲವೇ ಕೆಲವು ಕ್ಷಣಗಳಲ್ಲಿ ನಮ್ಮ ತರಗತಿಯಲ್ಲಿ ಹಾಜರಾಗಿ ತಮ್ಮ ಕೋಟಿನಲ್ಲಿ ಇರುತ್ತಿದ್ದ ಮೂರ್ನಾಲ್ಕು ಪೆನ್ಗಳಲ್ಲಿ ಹಸಿರು ಇಂಕಿನ ಪೆನ್ ತೆಗೆದುಕೊಂಡು ಹಿಂದಿನ ದಿನ ಕೊಟ್ಟ ಮನೆಗೆಲಸವನ್ನು ನೋಡಿ ಅದಕ್ಕೆ ಹಸ್ತಾಕ್ಷಾರವನ್ನು ಹಾಕುವುದು ಅವರ ಆಭ್ಯಾಸ. ಅವರು ಪ್ರತಿಯೊಬ್ಬರ ಮೆನೆಗೆಲಸವನ್ನು ಖುದ್ದಾಗಿ ನೋಡುತ್ತಿದ್ದ ಕಾರಣ ಯಾವ ವಿದ್ಯಾರ್ಥಿಯೂ ಮನೆಗೆಲಸವನ್ನು ಪೂರ್ಣಗೊಳಿಸದೇ ಅವರ ತರಗತಿಗೆ ಬರುತ್ತಿರಲಿಲ್ಲ. ಇನ್ನು ಅವರು ನಮ್ಮ ಬಳಿಗೆ ಬಂದಾಗ ಅವರ ಕೋಟಿನಿಂದ ಬರುತ್ತಿದ್ದ ಸೆಂಟಿನ ವಾಸನೆ ನಮಗೆಲ್ಲರಿಗೂ ಅಪ್ಯಾಯಮಾನವಾಗುತ್ತಿತ್ತು. ಹಿಂದಿನ ದಿನ ಮಾಡಿದ ಪಾಠವನ್ನು ಒಮ್ಮೆ ಪುನರ್ಮನನ ಮಾಡಿ, ಒಮ್ಮೆ ಸೊರ್ ಎಂದು ಜೋರಾಗಿ ಎಂಜಿಲನ್ನು ನುಂಗಿಕೊಂಡು ಅಂದಿನ ಪಾಠವನ್ನು ಮಾಡಲು ಆರಂಭಿಸಿದರೆಂದರೆ ನಿರರ್ಗಳವಾಗಿ ತಮ್ಮ ಅಷ್ಟೂ ವರ್ಷದ ಆನುಭವವನ್ನು ತಮ್ಮ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದರು.

ಬೇರೆಲ್ಲಾ ಶಿಕ್ಷಕರಂತೆ ನೋಟ್ಸ್ ಕೊಡುವುದರಲ್ಲಿ ಅವರು ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿರಲಿಲ್ಲ. ಇಂದಿನಂತೆ ಆಗೆಲ್ಲಾ ಝೆರಾಕ್ಸ್ ಅಷ್ಟೋಂದು ಪ್ರಚಲಿತವಿಲ್ಲದಿದ್ದ ಕಾರಣ, ತಮ್ಮ ಮುದ್ದಾದ ಹಸ್ತಾಕ್ಷರದಲ್ಲಿ ನೋಟ್ಸ್ ಬರೆದು ಅದನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಲಚ್ಚು ಮಾಡಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಹಂಚುತ್ತಿದ್ದ ಪುಣ್ಯಾತ್ಮರು ನಮ್ಮ ಕೆ.ಎಲ್.ಎ. ಮೌಖಿಕ ಪಾಠಕಿಂತ ಪ್ರಾಯೋಗಿಕ ಪಾಠಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರಿಂದ ಕೆಲವೊಮ್ಮೆ ತರಗತಿಯಲ್ಲಿಯೇ ಇಲ್ಲವೇ ಹಲವು ಬಾರಿ ಎಲ್ಲರನ್ನೂ ಲ್ಯಾಬ್ ಗೆ ಕರೆದುಕೊಂಡು ಪ್ರತಿಯೊಂದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುವ ಮೂಲಕ ಪಾಠವು ಎಲ್ಲರಿಗೂ ಮನದಟ್ಟಾಗುವಂತೆ ಮಾಡುತ್ತಿದ್ದರು. ಇನ್ನು ಗಣಿತದಲ್ಲಿನ ಸೂತ್ರಗಳನ್ನು ಮತ್ತು ಪ್ರಮೇಯಗಳನ್ನು ಎಲ್ಲರಿಗೂ ಹೇಗೆ ಕಂಠ ಪಾಠ ಮಾಡಿಸುತ್ತಿದ್ದರು ಎಂದರೆ, ನಿದ್ದೆಯಲ್ಲಿ ಎಬ್ಬಿಸಿ ಕೇಳಿದರೂ ( a + b ) 2 = a 2 + b 2 + 2 a b ಎಂದೋ ಪೈಥಾಗೋರೆಸ್ ಪ್ರಮೇಯವಾದ AC2= AB2=BC2 ಎಂದು ಥಟ್ ಅಂತಾ ಹೇಳುವಷ್ಟು ತಯಾರು ಮಾಡಿಸುತ್ತಿದ್ದದ್ದು ಅವರ ವಿಶೇಷತೆ.

ಪರೀಕ್ಷೆ ಸಮಯದಲ್ಲಿ ಇನ್ನೂ ಪೂರ್ಣ ಪ್ರಮಾಣದ ಪಾಠಗಳು ಆಗಿಲ್ಲದಿದ್ದಲ್ಲಿ ತರಗತಿಯ ನಂತರವೋ ಅಥವಾ ಶನಿವಾರ ಮಧ್ಯಾಹ್ನ ಇಲ್ಲವೇ ಭಾನುವಾರಗಳಂದು ವಿಶೇಷ ತರಗತಿಗಳನ್ನು ತೆಗೆದುಕೊಂಡು ಸರಿಯಾದ ಸಮಯಕ್ಕೆ ಪಾಠವನ್ನು ಮುಗಿಸುತ್ತಿದ್ದರು. ಹಾಗೆ ಹೆಚ್ಚಿನ ಆವಧಿಯ ಪಾಠ ಮಾಡುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿಗಳೆಲ್ಲರಿಗೂ ತಮ್ಮ ಖರ್ಚಿನಲ್ಲಿ ಬ್ರೆಡ್, ಬನ್, ಕಪ್ ಕೇಕ್ ಇಲ್ಲವೇ ಬಾಳೇ ಹಣ್ಣುಗಳನ್ನು ತರಿಸಿಕೊಡುತ್ತಿದ್ದಂತಹ ಮಹಾನುಭಾವರು ಅವರು.

ಕಾಲೇಜ್ ಮುಗಿಸುವವರೆಗೂ ನಾನು ಬಹಳ ಕುಳ್ಳಗಿದ್ದ ಕಾರಣ ಸದಾಕಾಲವೂ ಮೊದಲನೇ ಬೆಂಚಿನ ಮೊದಲನೇ ವಿದ್ಯಾರ್ಥಿಯಾಗಿಯೇ ಕುಳುತುಕೊಳ್ಳುತ್ತಿದ್ದರಿಂದ ಮತ್ತು ಸ್ವಲ್ಪ ಚುರುಕಾಗಿದ್ದ ಕಾರಣ, ಬಹುತೇಕ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗುತ್ತಿದ್ದೆ ಅದೇ ರೀತಿ ನಮ್ಮ ಕೆ.ಎಲ್.ಎ ಅವರ ಗಮನವನ್ನು ಸೆಳೆದಿದ್ದೆ. ಅದೊಂದು ದಿನ ಮಧ್ಯಾಹ್ನ ನಮ್ಮ ಪ್ರಾಂಶುಪಾಲರು ಮಾರನೆಯ ದಿನ ಅಂದಿನ ಕೇಂದ್ರ ಸಚಿವ ಶ್ರೀ ಸುಖ್ ರಾಂ ಅವರು ನಮ್ಮ ಶಾಲೆಗೆ ಬರುತ್ತಾರೆ ಎಂದು ತಿಳಿಸಿ ಅದಕ್ಕೆ ಬೇಕಾದಂತಹ ವ್ಯವಸ್ಥೆಗಳನ್ನು ಮತ್ತು ಅಲ್ಪ ಸ್ವಲ್ಪ ಅಲಂಕಾರಗಳನ್ನು ಮಾಡಲು ಕೆ.ಎಲ್.ಎ ಮೇಷ್ಟ್ರಿಗೆ ಹೇಳಿದ ಕಾರಣ, ನನ್ನನ್ನೂ ಮತ್ತು ಇನ್ನೂ ಒಂದೆರಡು ಎತ್ತರವಾಗಿದ್ದ ಹುಡುಗರನ್ನು ಕರೆದು ಶಾಲಾ ಸಮಯದ ನಂತರ ಅವರೊಂದಿಗೆ ಸಹಾಯ ಮಾಡಲು ತಿಳಿಸಿದರು. ಶಾಲೆ ಮುಗಿದ ನಂತರ ನಾನು ಮನೆಗೆ ಸ್ವಲ್ಪ ತಡವಾಗಿ ಬರವುದಾಗಿ ನಮ್ಮ ಗೆಳೆಯನಿಗೆ ನಮ್ಮ ಮನೆಯಲ್ಲಿ ತಿಳಿಸಲು ಕೋರಿ ಕೆ.ಎಲ್.ಎ ಮೇಷ್ಟ್ರ ಸಹಾಯಕ್ಕೆ ಟೊಂಕ ಕಟ್ಟಿ ನಿಂತೆವು. ಪ್ರತಿಯೊಂದರಲ್ಲೂ ಮಿಸ್ಟರ್ ಪರ್ಫೆಕ್ಟ್ ಆಗಿದ್ದ ನಮ್ಮ ಮೇಷ್ಟು ನಿಧಾನವಾಗಿ ಎಲ್ಲವನ್ನೂ ಅಚ್ಚು ಕಟ್ಟಾಗಿ ಮಾಡುತ್ತಿದ್ದ ಕಾರಣ ಸಂಜೆ ಏಳು ಗಂಟೆಯಾದರೂ ನಮ್ಮ ಕೆಲಸ ಮುಂದುವರೆಯುತ್ತಿತ್ತು. ಇಂದಿನಂತೆ ಫೋನ್ ಅಥವಾ ಮೊಬೈಲ್ ಇಲ್ಲದಿದ್ದ ಕಾರಣ, ಗಂಟೆ ಏಳಾದರೂ ಮಗ ಮನೆಗೆ ಬಂದಿಲ್ಲ ಎಂದು ಸೈಕಲ್ಲನ್ನು ಏರಿ ನನ್ನನ್ನು ಹುಡುಕಿಕೊಂಡು ನಮ್ಮ ಶಾಲೆಗೇ ಬಂದೇ ಬಿಟ್ಟರು ನಮ್ಮ ತಂದೆ.

ಶಾಲೆಯ ಮುಂಭಾಗದ ಅಲಂಕಾರದಲ್ಲಿ ನಿರತರಾಗಿದ್ದ ನಮ್ಮೆಲ್ಲರನ್ನೂ ನೋಡಿ ನಿರಾಳರಾಗಿ ಹಾಗೇ ನಮ್ಮ ಗುರುಗಳ ಬಳಿ ತಮ್ಮ ಪರಿಚಯ ಮಾಡಿಕೊಂಡು ಮಾತನ್ನು ಮುಂದುವರೆಸುತ್ತಾ ಅದೇಕೋ ನಮ್ಮ ಊರು ಬಾಳಗಂಚಿಯ ಪ್ರಸ್ತಾಪವಾಗಿದ್ದೇ ತಡ ನಮ್ಮ ಗುರುಗಳು ನಿಮಗೆ ಬಾಳಗಂಚಿ ಗಮಕಿ ನಂಜುಂಡಯ್ಯರು ಗೊತ್ತೇ? ಎಂದು ಕೇಳಿದ್ದಾರೆ. ಅವರ ಮೊಮ್ಮಗನೇ ನಿಮ್ಮ ಶಿಷ್ಯ ಎಂದು ನಮ್ಮ ತಂದೆಯವರು ಹೇಳಿದ್ದನ್ನು ಕೇಳಿ ಬಹಳ ಸಂತೋಷ ಪಟ್ಟರು. ಮಾರನೆಯ ದಿನ ತರಗತಿಗೆ ಬಂದಿದ್ದೇ ತಡಾ, ಏನೂ ಬಾಳಗಂಚೀ.. ಹೇಗಿದ್ದೀಯಾ.. ಎಂದು ರಾಗವಾಗಿ ಕರೆದು ಅಲ್ಲಿಯವರೆಗೂ ನಮ್ಮ ಊರಿನ ಹೆಸರನ್ನೇ ಅರಿಯದ ಇಡೀ ನಮ್ಮ ತರಗತಿಯವರಿಗೆ ನಮ್ಮೂರನ್ನು ಪರಿಚಯಿಸಿದ್ದಲ್ಲದೇ, ನಾನು ಇವರ ತಾತ ಶ್ರೀ ಗಮಕಿ ನಂಜುಂಡಯ್ಯನವರ ಶಿಷ್ಯ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ನಾನು ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದೇನೆ ಅವರ ಅನೇಕ ಕೀರ್ತನೆಗಳನ್ನು ಕಲಿತಿದ್ದೇನೆ. ಎಂದು ಹೇಳಿ ಅವತ್ತಿನ ದಿನ ಇಡೀ ತರಗತಿಯಲ್ಲಿ ಹೀರೋ ಆಗಿ ಮೆರೆಯುವಂತೆ ಮಾಡಿದ್ದಲ್ಲದೇ, ಅಂದಿನಿಂದ ಅಲಿಖಿತವಾಗಿ ಅವರ ಪಟ್ಟ ಶಿಷ್ಯನಾಗಿ ಬಿಟ್ಟೆ. ಅದಲ್ಲದೇ ನನ್ನ ತಂಗಿಯ ತರಗತಿಯಲ್ಲಿ ಗಣಿತ ಹೇಳಿಕೊಡಲು ಹೋದಾಗ ಅಲ್ಲಿಯೂ ಇದೇ ವಿಷಯವನ್ನು ಪ್ರಸ್ತಾಪಿಸಿ, ನಮ್ಮ ತಾತನವರ ಒಂದೆರಡು ಹಾಡುಗಳನ್ನು ನನ್ನ ತಂಗಿಯೊಂದಿಗೆ ಹಾಡಿಯೂ ತೋರಿಸಿದ್ದರು.

ಹೈಸ್ಕೂಲ್ ಮೇಷ್ಟ್ರಾಗಿದ್ದರೂ ಕಾಲೇಜ್ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ಪಾಠವನ್ನು ತಮ್ಮ ಮನೆಯಲ್ಲಿ ಹೇಳಿಕೊಡುತ್ತಿದ್ದರು. ಮುಂಜಾನೆ ಹೈಸ್ಕೂಲ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರೆ, ರಾತ್ರಿ ಏಳರ ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಪಾಠ ಹೇಳಿಕೊಡಲು ತಿಂಗಳಿಗೆ 20-30 ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದ ಅವರು ಅದನ್ನೂ ಕೊಡಲು ಕಷ್ಟ ಇದ್ದವರಿಗೆ ಉಚಿತವಾಗಿಯೂ ಹೇಳಿಕೊಟ್ಟಿದ್ದು ಉಂಟು. ಈ ರೀತಿಯಾಗಿ ಮನೆ ಪಾಠದಿಂದ ಸಂಗ್ರಹಿಸಿದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಅನಾಥಾಶ್ರಮಕ್ಕೆ ದಾನ ನೀಡುತ್ತಿದ್ದದ್ದು ಬಹಳ ವಿಶೇಷವಾಗಿತ್ತು.

ಸರಿ ಸುಮಾರು ತಮ್ಮ ಐವತ್ತೈದು ವರ್ಷಗಳವರೆಗೂ ತಮಗಿಂತಲೂ ಎತ್ತರವಾದ ಸೈಕಲ್ಲಿನಲ್ಲಿಯೇ ಓಡಾಡುತ್ತಿದ್ದದ್ದು ವಿಶೇಷ. (ನಿವೃತ್ತಿಯ ಅಂಚಿನಲ್ಲಿ ಟಿವಿಎಸ್-50ಗೆ ಭಡ್ತಿ ಹೊಂದಿದ್ದರು) ಅಷ್ಟು ಬಳಸಿದ್ದ ಅವರ ಸೈಕಲ್ ನಿಜಕ್ಕೂ ಅತ್ಯುತ್ತಮವಾದ ಸುಸ್ಥಿತಿಯಲ್ಲಿ ಇಡುತ್ತಿದ್ದದ್ದಲ್ಲದೇ ಅವರಲ್ಲದೇ ಅದನ್ನು ಯಾರಿಂದಲೂ ಮುಟ್ಟಿಸುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಮನೆಯಿಂದ ಮಧ್ಯಾಹ್ನದ ಊಟ ತರಲು ಯಾರನ್ನಾದರೂ ಕಳುಹಿಸುತ್ತಿದ್ದರು. ಅಂತಹ ಸೌಭಾಗ್ಯ ಕೆಲವು ಬಾರಿ ನನಗೆ ದೊರೆತು ಆ ಮೂಲಕ ಅವರ ನಯವಾದ ಸೈಕಲ್ ಸವಾರಿ ಮಾಡುವಂತಾಗಿತ್ತು.

ದಸರ ಹಬ್ಬ ಬಂದಿತೆಂದರೆ ನಮ್ಮ ಕೆ.ಎಲ್.ಎ ಅವರ ಮನೆಯಲ್ಲಿ ಸಂಭಮವೋ ಸಂಭ್ರಮ. ವಿಭಕ್ತ ಕುಟುಂಬದಲ್ಲಿ ತಾಯಿ, ತಮ್ಮಂದಿರು ಮತ್ತು ತಂಗಿಯರೊಡನೆ ಬಹಳ ಸಂಪ್ರದಾಯಸ್ಥ ಕುಟುದವರಾಗಿದ್ದು ಅವರ ಮನೆಯಲ್ಲಿ ಇಡುತ್ತಿದ್ದ ಹತ್ತಾರು ಸಾಲಿನ ಗೊಂಬೆಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಬಣ್ಣ ಬಣ್ಣದ ಮೈಸೂರು ಅರಸರ ಗೊಂಬೆಗಳು ಅದಕ್ಕೆ ಬಣ್ಣ ಬಣ್ಣದ ಪೇಪರಿನಲ್ಲಿ ಮಾಡುತ್ತಿದ್ದ ಅಲಂಕಾರ, ಸೀರಿಯಲ್ ಸೆಟ್ ಹಾಕಿ ಜಗ ಮಗ ಎಂದು ಹೊಳೆಯುವಂತೆ ಮಾಡುತ್ತಿದ್ದದ್ದಲ್ಲದೇ, ಅಷ್ಟೂ ದಿನಗಳು ತಮ್ಮ ಮನೆಗೆ ಪಾಠಕ್ಕೆ ಬರುತ್ತಿದ್ದ ಹುಡುಗರಿಗೆ ಬೊಂಬೇ ಬಾಗಿಣವನ್ನು ಕೊಡುತ್ತಿದ್ದರು.

ಶಾಲೆಯಿಂದ ನಿವೃತ್ತಿ ಹೊಂದಿದ ಮೇಲೆ ನಮ್ಮ ಮನೆಯ ಹತ್ತಿರವೇ ಅವರು ಮನೆಕಟ್ಟಿ ಕೊಂಡು ಬಂದ ಮೇಲಂತೂ ನಮ್ಮ ಅವರ ಗುರು ಶಿಷ್ಯ ಮಧುರ ಬಾಂಧವ್ಯ ಮತ್ತಷ್ಟು ಮುಂದುವರೆದು ದಸರಾ ಮತ್ತು ಗೋಕುಲಾಷ್ಟಮಿಗೆ ನಾವು ಅವರ ಮನೆಗೆ ಹೋಗುತ್ತಿದ್ದರೆ, ಗೌರೀ ಗಣೇಶ ಹಬ್ಬ ಮತ್ತು ಉಳಿದ ಹಬ್ಬಗಳಲ್ಲಿ ಅವರ ಮನೆಯವರು ನಮ್ಮ ಮನೆಗೆ ಬಂದು ಹೋಗುವುದು ರೂಡಿಯಲ್ಲಿತ್ತು.

ನಿವೃತ್ತಿಯಾದ ನಂತರ ತಮ್ಮ ಸೂಟು ಬೂಟಿಗೆ ತಿಲಾಂಜಲಿ ನೀಡಿ ಕಚ್ಚೇ ಪಂಜೆ ಉದ್ದ ತೋಳಿನ ಬೀಳೀ ಶರ್ಟು ಹಣೆಯಲ್ಲಿ ಉದ್ದದ ನಾಮ ರಾರಾಜಿಸುತ್ತಿತ್ತು, ಎಲ್ಲೇ ಸಿಕ್ಕಾಗಲೂ ನಿಂತು ಏನೂ ಬಾಳಗಂಚೀ.. ಹೇಗಿದ್ದೀಯಾ… ಎಂದು ಅದೇ ಅಕ್ಕರೆಯಿಂದಲೇ ಬಾಯಿ ತುಂಬಾ ಮಾತನಾಡಿಸಿ ಮನೆಯವರೆಲ್ಲರ ಕುಶಲೋಪರಿಯನ್ನು ವಿಚಾರಿಸುತ್ತಿದ್ದರು.

ಮನೆ ಪಾಠದಲ್ಲಿಯೇ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಾ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಾ ಅಕ್ಕರೆಯಿಂದ ಪಾಠ ಹೇಳಿಕೊಟ್ಟಂತಹ ನಮ್ಮ ಕೆ.ಎಲ್.ಎ ಮಾಸ್ಟರ್ ಅವರು ಅತ್ಯಂತ ವಿಭಿನ್ನವಾಗಿ ಮತ್ತು ವಿಶಿಷ್ಠವಾಗಿ ಎದ್ದು ಕಾಣುತ್ತಾರೆ. ನಿಸ್ವಾರ್ಥವಾಗಿ ಅಕ್ಕರೆಯಿಂದ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಧಾರೆಯನ್ನು ಎರೆದಂತಹ ಆ ಮಹಾನ್ ಚೇತನವನ್ನು ಶಿಕ್ಷಕರ ದಿನಾಚರಣೆಯ ದಿನಂದಂದು ಹೃತ್ಪೂರ್ವಕವಾಗಿ ನೆನೆಸಿ ಕೊಳ್ಳುತ್ತಾ ಈ ನುಡಿ ನಮನಗಳನ್ನು ಸಲ್ಲಿಸಲು ಇಚ್ಚಿಸುತ್ತಿದ್ದೇನೆ.
ಇಂದು ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರಿಂದ ಶಿಕ್ಷಣ ಕಲಿತ ನನ್ನಂತಹ ಸಾವಿರಾರು ಶಿಷ್ಯಂದಿರ ಮುಖಾಂತರ ದೇಶ ವಿದೇಶಗಳಲ್ಲಿ ಅವರು ಕಲಿಸಿಕೊಟ್ಟ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಅವರಿನ್ನೂ ಎಲ್ಲರ ಮನಗಳಲ್ಲಿ ಜೀವಂತವಾಗಿಯೇ ಇದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇಂತಹ ಶಿಕ್ಷಕರ ಸಂಖ್ಯೆ ಅಗಣಿತವಾಗಿ ನಮ್ಮ ಮುಂದಿನ ಪೀಳಿಗೆಯವರಿಗೂ ಉತ್ತಮ ಶಿಕ್ಷಣ ದೊರೆತು ಸಮಾಜದಲ್ಲಿ ಸತ್ಪ್ರಜೆಯಾಗುವಂತಾಗಲೀ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಏನಂತೀರೀ?