ಕಾಮುಕ

ನೆನ್ನೆ ಕಳೆದ ಒಂದೂವರೆ ತಿಂಗಳು ನಡೆದ ಮಹಾಚುನಾಚಣೆಯ ಅಂತಿಮ ಫಲಿತಾಂಶದ ದಿನ. ಚುನಾವಣಾ ಸ್ಪರ್ಧಿಗಳಿಗೆ ಎಷ್ಟು ಒತ್ತಡ, ಕಾತುರ ಮತ್ತು ಕುತೂಹಲ ಇರುತ್ತದೋ ಅದಕ್ಕಿಂತಲೂ ಹೆಚ್ಚಿನ ಒತ್ತಡಕ್ಕೊಳಗಾಗಿ ರಾತ್ರಿಎಲ್ಲಾ ನಿದ್ದೆಯೇ ಬಾರದೆ, ಮುಂಜಾವ ನಾಲ್ಕುವರೆ ಘಂಟೆಗೇ ಎಚ್ಚರಗೊಂಡು ಪ್ರಾತರ್ವಿಧಿಗಳನ್ನು ಮುಗಿಸಿ, ಭಗವಂತಾ, ದೇಶಕ್ಕೆ ಸುಭದ್ರ ಮತ್ತು ಸಮರ್ಥ ನಾಯಕತ್ವ ಮತ್ತೊಮ್ಮೆ ಬರಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಚುನಾವಣಾ ನಿರ್ಗಮನ ಫಲಿತಾಂಶ ಬಿಜೆಪಿ ಪರವಾಗಿ ಬಂದಿದ್ದರಿಂದ ಚುನಾವಣೆ ಫಲಿತಾಂಶದ ದಿನ ಮನೆಯಲ್ಲಿಯೇ ಟಿವಿ ಮುಂದೆ ಕುಳಿತು ನೇರವಾಗಿ ಫಲಿತಾಂಶ ನೋಡುವ ಮನಸ್ಸಾದರೂ ಹಿಂದೆ ಹಲವಾರು ಬಾರಿ ಹಾಗೆ ಪಟ್ಟು ಹಿಡಿದು ಕುಳಿತು ನೋಡಿದ ಕ್ರಿಕೆಟ್ ಪಂದ್ಯಗಳು ಮತ್ತು ಚುನಾವಣಾ ಫಲಿತಾಂಶಗಳು ವ್ಯತಿರಿಕ್ತವಾಗಿದ್ದ ಕಾರಣ ಕಛೇರಿಗೆ ಒಲ್ಲದ ಮನಸ್ಸಿನಿಂದಲೇ ಹೊರಟೆ. ಹಾಗೆ ಹೊರಡುವ ಮೊದಲು ಆರಂಭಿಕ ಟ್ರೆಂಡ್ನಲ್ಲಿ ಬಿಜೆಪಿ 100ಗಡಿ ದಾಟಿದ್ದರ ಪರಿಣಾಮ ಮನಸ್ಸು ಸ್ವಲ್ಪ ನಿರ್ಮಲವಾಗಿತ್ತು.

ದಾರಿಯಲ್ಲಿ ಸಿಗ್ನಲ್ ಸಿಕ್ಕಾಗಲೆಲ್ಲಾ ಮೊಬೈಲ್ನಲ್ಲಿ ಫಲಿತಾಂಶ ನೋಡುವಾಗಲೆಲ್ಲಾ ಸಂಖ್ಯೆ 150 ರಿಂದ 200ರ ವರೆಗೆ ತಲುಪಿ ಕಡೆಗೆ ಕಛೇರಿಗೆ ತಲುಪುವ ವೇಳೆಗೆ 300ರ ಆಸು ಪಾಸಿಗೆ ಬಂದಾಗ ಆದ ಆನಂದ ವರ್ಣಿಸಲಸದಳ. ಯಾಂತ್ರಿಕವಾಗಿ ಕಛೇರಿಯ ಕೆಲಸ ಪ್ರಾರಂಭಿಸಿದನಾದರೂ ಮನಸ್ಸೆಲ್ಲಾ ಫಲಿತಾಂಶದ ಬಗ್ಗೆಯೇ ಇತ್ತು. ಇಂತಹ ಸಂಭ್ರಮವನ್ನು ನನ್ನ ಸಹೋದ್ಯೋಗಿಗಳೊಂದಿಗೆ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳೋಣ ಎಂದರೆ ಕಳೆದ ಬಾರಿಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಾದ ಕಹಿ ಘಟನೆಯಿಂದ ಇಡೀ ಫಲಿತಾಂಶ ಕಾದು ನೋಡಿ ನಂತರ ಪ್ರತಿಕ್ರಿಯೆ ಮಾಡಲು ನಿರ್ಧರಿಸಿದೆ. ಹೋದ ವರ್ಷ ಸರಿ ಸುಮಾರು ಇದೇ ಸಮಯದಲ್ಲಿ ವಿಧಾನ ಸಭಾ ಚುನಾವಣಾ ಫಲಿತಾಂಶದ ಸಮಯದಲ್ಲಿ ನಮ್ಮ ಕುಟುಂಬದೊಡನೆ ಅಂಡಮಾನ್ ಪ್ರವಾಸದಲ್ಲಿದ್ದೆವು. ಅಲ್ಲಿ ಯಾವುದೇ ನೆಟ್ವರ್ಕ್ ಇಲ್ಲದ ಕಾರಣ ನಾವು ಉಳಿದು ಕೊಂಡಿದ್ದ ರೆಸಾರ್ಟಿನ ಟಿವಿಯ ಮುಂದೆ ಬೆಳಿಗ್ಗೆ ತಿಂಡಿಯೂ ತಿನ್ನದೆ ಪ್ರತಿಷ್ಟಾಪಿಸಿದ್ದೆ. ಬಿಜೆಪಿಯ ಆರಂಭದಲ್ಲಿ ಅತ್ಯುತ್ತಮವಾಗಿದ್ದು, 50, 100 ರ ಗಡಿ ದಾಟುತ್ತಿದ್ದಂತೆ ಹೊಟ್ಟೆ ಹಸಿವೆಯನ್ನೇ ಮರೆತು ಹೋದೆ. ಮಧ್ಯಾಹ್ನದ ಹೊತ್ತಿಗೆ ಸರಿ ಸುಮಾರು 120- 130 ಆಸುಪಾಸಿಗೆ ಬಂದ ಕೂಡಲೇ ಇನ್ನು ಸರ್ಕಾರ ನಮ್ಮದೇ ಎಂದು ಜೋರಾಗಿ ಕೂಗಿ ಹೇಳಿ, ಬಿಜೆಪಿಯ ಅಭೂತಪೂರ್ವ ಗೆಲುವಿಗಾಗಿ ಇಂದಿನ ಊಟ ನನ್ನ ಖರ್ಚಿನಲ್ಲಿ ಎಂದು ತಿಳಿಸಿ, ನಮ್ಮ ಎಲ್ಲಾ ಸಂಬಂಧೀಕರನ್ನೂ ಕರೆದುಕೊಂಡು ಅಲ್ಲಿಯೇ ಇದ್ದ ರೆಸಾರ್ಟ್ ರೆಸ್ಟೋರೆಂಟಿಗೆ ಹೋದೆ. ಮೆನು ಜೊತೆ ಆಹಾರ ಪದಾರ್ಥಗಳ ಬೆಲೆ ನೋಡಿದಾಗ ಒಂದು ಬಾರಿ ಎದೆ ಝಲ್ ಎಂದರೂ ಗೆದ್ದ ಸಂಭ್ರಮದಲ್ಲಿ ಅದರ ಬಗ್ಗೆ ಹೆಚ್ಚಿನ ತಲೆ ಕೆಡೆಸಿಕೊಳ್ಳದೆ, ಹೊಟ್ಟೆ ಬಿರಿಯುವ ಹಾಗೆ ಸಂಭ್ರಮದಿಂದ, ಸಂತೋಷದಿಂದ ಊಟಮಾಡಿದೆವು. ಕೇವಲ ಎಂಟೇ ಜನರಿದ್ದರೂ ಊಟದ ಬಿಲ್ ಸರಿಸುಮಾರು ಐದು ಸಾವಿದಷ್ಟಾದರೂ ಹೆಚ್ಚಿಗೆ ಕೊಸರಾಡದೇ ಪಾವತಿಸಿ ರೂಮ್ಗೆ ಹಿಂದಿರಿಗಿ ಬಂದು ಟಿವಿ ನೋಡುತ್ತಿದ್ದಂತೆಯೇ ತಲೆ ಸುತ್ತಿ ಬೀಳುವ ಹಾಗೆ ಆಯಿತು ಎಂದರೆ ಅತಿಶಯೋಕ್ತಿ ಏನಲ್ಲ. ಊಟಕ್ಕೆ ಹೋಗುವಾಗ 120- 130ರ ಆಸುಪಾಸಿನಲ್ಲಿದ್ದ ಸಂಖ್ಯೆ ಊಟಮಾಡಿ ಕೊಂಡು ಹಿಂದಿರುಗಿ ಬರುವಷ್ಟರಲ್ಲಿ 110 ಕ್ಕೆ ಕಚ್ಚಿತ್ತು ಬಹಳ ಸಮಯದವರೆಗೂ ಅದೇ ಸಂಖ್ಯೆಯಲ್ಲಿ ಮುಂದುವರೆದು ನಂತರ ನಿಧಾನವಾಗಿ, 109, 108, 107, 106, 105, 104 ಬಂದು ಶಾಶ್ವತವಾಗಿ ಅಲ್ಲಿಗೇ ನಿಂತು ಹೋದಾಗಾ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೇ? ಕೇವಲ ಟ್ರೆಂಡ್ ನೋಡಿಯೇ ಸಂಭ್ರಮಿಸಿ ಬಿಟ್ಟೆನಲ್ಲಾ ಎಂಬ ಬೇಸರವಾಗಿತ್ತು.

ಈ ಬಾರಿ ಹಾಗಾಗ ಬಾರದೆಂದು ನಿರ್ಧರಿಸಿ ಇಡೀ ಫಲಿತಾಂಶಕ್ಕಾಗಿಯೇ ಜಾತಕ ಪಕ್ಷಿಯಂತೆ ಕಾಯುತ್ತ NDA 350+ ಮತ್ತು BJP 300+ ಗಡಿ ದಾಟಿ ಕರ್ನಾಟಕದಲ್ಲಿ BJP 24 ಸ್ಥಾನ ಗಳಿಸಿದ ಮೇಲಂತೂ ಸಂಪ್ರೀತನಾಗಿ ಸಂತೋಷದಿಂದ ಕಛೇರಿಯಿಂದ ಮನೆಯ ಕಡೆ ಹೊರಟೆ. ದಾರಿಯುದ್ದಕ್ಕೂ ಚಾಮರಾಜ ನಗರದ ದೃವನಾರಾಯಣ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರ ಜಿದ್ದಾ ಜಿದ್ದಿನ ಹೋರಾಟವನ್ನು ಮಾರ್ಗದ ಮಧ್ಯದಲ್ಲಿಯೇ ನೋಡುತ್ತ ಅಂತಿಮವಾಗಿ 25ಕ್ಕೆ ತಲುಪಿದಾಗ ಪರಮಾನಂದವಾಯಿತು. ಛೇ ಇಂತಹ ಸಂತೋಷದ ರಸಕ್ಷಣಗಳನ್ನು ಹಂಚಿಕೊಳ್ಳಲು ನಮ್ಮ ತಂದೆಯವರೇ ಇಲ್ಲವಲ್ಲಾ ಎಂದು ನೆನೆದು ಒಂದು ಕ್ಷ್ಣಣ ಭಾವುಕನಾದರೂ, ನಂತರ ಸಾವರಿಸಿಕೊಂಡು ಮೈಸೂರಿನಲ್ಲಿದ್ದ ನಮ್ಮ ತಂದೆಯ ತಮ್ಮ ಚಿಕ್ಕಪ್ಪನವರಿಗೆ ಕರೆ ಮಾಡಿ ಅವರೊಡನೆ ಕೆಲಕಾಲ ಸಂತೋಷವನ್ನು ಹಂಚಿಕೊಂಡು ಮನೆ ತಲುಪುವ ಹೊತ್ತಿಗೆ ಗಂಟೆ ಎಂಟಾಗಿತ್ತು. ದಾರಿಯ ಮಧ್ಯದಲ್ಲಿಯೇ ಹಲವಾರು ಸ್ನೇಹಿತರು ಕರೆ ಮಾಡಿ ಪರಸ್ಪರ ಅಭಿನಂದನೆಗಳನ್ನು ಹಂಚಿಕೊಂಡರೆ ಮನೆ ತಲುಪಿದ ನಂತರ ಮನೆಯವರೊಂದಿಗೆ, ಮಾವನವರೊಂದಿಗೆ ಅದೇ ವಿಷಯ ಮಾತನಾಡುವುದರಲ್ಲಿಯೇ ಸಮಯ ಕಳೆದು ಹೋದದ್ದು ತಿಳಿಯಲೇ ಇಲ್ಲ. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ ಮತ್ತೊಮ್ಮೆ ಟಿವಿಯಲ್ಲಿ ಫಲಿತಾಂಶದ ಕುರಿತಾದ ಚರ್ಚೆಗಳನ್ನು ಮತ್ತೆ ಮತ್ತೆ ನೋಡುತ್ತಾ ಹಾಸಿಗೆಗೆ ಹೊರಳಿ ಕಣ್ಣು ಮುಚ್ಚಿದ್ದಷ್ಟೇ ನೆನಪು. ಕಣ್ತುಂಬ ನಿದ್ದೆ.

ಬೆಳಿಗ್ಗೆ ಎಂದಿನಂತೆ ಐದಕ್ಕೆಲ್ಲಾ ಎದ್ದು ಬೆಳಗಿನ ನಿತ್ಯಕರ್ಮ ಮತ್ತು ವ್ಯಾಯಾಮಗಳನ್ನು ಮುಗಿಸಿ, ದಿನಪತ್ರಿಕೆ ಓದುತ್ತಿರುವಾಗಲೇ ನನ್ನ ತಂಗಿಯ ಕರೆ ಬಂದಿತು. ಅವಳಿಗೆ ಅಭಿನಂದನೆ ತಿಳಿಸಿ ನಿಮ್ಮ ಕಡೆಯಲ್ಲಿ ಸಂಭ್ರಮ ಹೇಗಿತ್ತು ಎಂದು ಎಲ್ಲರನ್ನೂ ಕೇಳುವಂತೆ ಸಹಜವಾಗಿ ಕೇಳಿದ್ದೇ ಮಹಾ ಅಪರಾಧವಾಯಿತು. ಥೂ!! ನಮ್ಮ ದುರಾದೃಷ್ಟ ನೋಡು ಇಡೀ ರಾಜ್ಯ, ದೇಶ ಸಂಭ್ರಮ ಪಡುತ್ತಿದ್ದರೆ ನಮ್ಮ ಕರ್ಮಾ ನೋಡು!! ನಮ್ಮ ಮನೆಯನ್ನೇ ಬದಲಿಸಬೇಕೆಂದು ತೀರ್ಮಾನಿಸಿದ್ದೇವೆ ಎಂದಳು. ಅರೇ ಏನಾಯ್ತು? ಅಷ್ಟು ದೊಡ್ಡ ಮನೆ ಅಂದ್ರೆ, ಹೌದಪ್ಪಾ ನಮ್ಮ ಕಷ್ಟ ನಿಮಗೆ ಏನು ಗೊತ್ತಾಗಬೇಕು. ಕಳೆದ ಐದು ಚುನಾವಣೆಗಳಿಂದಲೂ ನಮ್ಮ ಓಟ್ ವೇಸ್ಟ್ ಆಗ್ತಾ ಇದೆ ಅಂದಳು. ಯಾಕೇ? ಓಟ್ ಮಾಡಿದ್ಯಲ್ಲಾ ಮತ್ತೇನು ಅಂತ ಕೇಳ್ದೆ. ಕಳೆದ ಎರಡು ವಿಧಾನಸಭೆ ಮತ್ತು ಲೋಕಸಭೆ ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ನಾವು ಓಟ್ ಮಾಡ್ದವ್ರು ಗೆಲ್ತಾನೇ ಇಲ್ಲಾ. ಈಗ ನೋಡು ಮೋದಿ-ಅಮಿತ್ ಶಾ ಅವರ ಆಸೆಯಂತೆ ಇಡೀ ರಾಜ್ಯದ ಜನ ಕಾಮುಕ (ಕಾಂಗ್ರೇಸ್ ಮುಕ್ತ ಕರ್ನಾಟಕ) ದಲ್ಲಿ ಹೇಗೆ ಭಾಗಿಗಳಾಗಿ ಸಂಭ್ರಮಿಸುತ್ತಿದ್ದರೆ ನಾವು ಮಾತ್ರಾ ಸುಮ್ಮನಿರಬೇಕು ಅಂದ್ರೆ ಬೇಜಾರು ಆಗಲ್ವಾ? ಎದುರು ಮನೆಯಲ್ಲಿ ಮಗು ಹುಟ್ಟಿದರೆ ನಮ್ಮ ಮನೆಯಲ್ಲಿ ತೊಟ್ಟಿಲು ಆಡಿಸ್ಬೇಕಾ? ಮಗುನೂ ನಮ್ಮದೇ, ತೊಟ್ಟಿಲು ತೂಗೋರೂ ನಾವಾದ್ರೇನೇ ಮಜಾ ಅಂದಾಗ ಅವಳ ನಿಜವಾದ ಸಂಕಷ್ಟ ಅರಿವಾಯಿತು.

ನಮ್ಮ ತಂಗಿಯ ಮನೆ ವಿಧಾನ ಸಭೆಯಲ್ಲಿ ರಾಜ ರಾಜೇಶ್ವರಿ ನಗರ ಮತ್ತು ಲೋಕಸಭೆಯಲ್ಲಿ ಬೆಂಗಳೂರು ಗ್ರಾಮಾಂತರದ ವ್ಯಾಪ್ತಿಗೆ ಬರುವ ಕಾರಣ ಕಳೆದ ನಾಲ್ಕೂ ಚುನಾಚಣೆಯಲ್ಲಿ ಬಿಜೆಪಿಯವರ ಅಸಾಮರ್ಥ್ಯ ಮತ್ತು ನಾನಾ ರೀತಿಯ ಕಾರಣಗಳಿಂದ ಅಲ್ಲಿ ಕಾಂಗ್ರೇಸ್ಸಿಗರ ಪ್ರಾಭಲ್ಯವೇ ಹೆಚ್ಚಾಗಿರುವುದೇ ಆಕೆಯ ಬೇಸರಕ್ಕೆ ಕಾರಣ ಎಂದು ತಿಳಿದು ನಗಬೇಕೋ ಅಳಬೇಕೋ ಎಂದು ಒಂದು ಕ್ಷಣ ತಿಳಿಯದಾಯಿತು. ಅಭಿಮಾನಿಗಳು ಈ ಮಟ್ಟಕ್ಕೂ ಇರ್ತಾರೆ ಅಂತ ಪ್ರತ್ಯಕ್ಷವಾಗಿ ತಿಳಿದುಕೊಂಡ ಹಾಗಾಯ್ತು.

ಅದಕ್ಕೇ ಈಗ ನರೇಂದ್ರ ಮೋದಿ ಮತ್ತು ಅಮಿತ್ ಶಾರವರಲ್ಲಿ ಈ ಮೂಲಕ ಕೇಳಿಕೊಳ್ಳುವುದೇನೆಂದರೆ ಅಂತಾ ಅಮೇಠಿಯಲ್ಲೇ ರಾಹುಲ್ ಗಾಂಧಿಯಂತಹವನನ್ನೇ ಮಕಾಡೆ ಮಲಗಿಸುವ ಸಾಮರ್ಥ್ಯ ಇರುವ ನಿಮಗೆ ಮುಂದಿನ ಬಾರಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸಂಪೂರ್ಣವಾಗಿ ಕಾಮುಕ ಮಾಡಬಹುದಲ್ಲವೇ? ನಿಮಗೆ ಖಂಡಿತಾ ಗೊತ್ತಿದೆ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ದುಖಃ ತರಿಸಬಾರದು ಅಂತಾ. ಹಾಗಾಗಿ ಇಂದಿನಿಂದಲೇ ನಿಮ್ಮ ಲೆಖ್ಖಾಚಾರ ಶುರುವಾಗಲೀ ಮುಂದಿನಬಾರಿ ಕಾಂಗ್ರೇಸ್ ಪಳಿಯುಳಿಕೆಯಿರುವ ಈ ಕ್ಷೇತ್ರದಲ್ಲಿಯೂ ಕಮಲ ಅರಳುವಂತಾಗಲೀ.

ಏನಂತೀರೀ?