ಹುಸ್ಕೂರು ಮದ್ದೂರಮ್ಮ ಜಾತ್ರೆ

mad2ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಭಕ್ತರನ್ನು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸುತ್ತಾಳೆ ಮತ್ತು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂಬುದೇ ಬಹುತೇಕ ಭಕ್ತಾದಿಗಳ ನಂಬಿಕೆಯಾಗಿದೆ. ಪ್ರತೀ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಇಲ್ಲಿ ನಡೆಯುವ ಅದ್ದೂರಿಯ ಜಾತ್ರಾ ಮಹೋತ್ಸವವನ್ನು ಕುಳಿತಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.

huskur2ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಜಾತ್ರೆ ಎಂದರೆ 60-80 ಅಡಿ ಎತ್ತರದ ಒಂದೋ ಇಲ್ಲವೇ ಎರಡು ರಥಗಳನ್ನು ಎಳೆಯುವುದು ಸಾಮಾನ್ಯವಾದರೆ,  ಅಪರೂಪ ಎಂಬಂತೆ ನಂಜನಗೂಡಿನಲ್ಲಿ ಪಂಚರಥೋತ್ಸವ ನಡೆದರೆ ಈ ಊರಿನ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಕೇವಲ ಆ ಊರಿನವರಲ್ಲದೇ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳ ಭಕ್ತಾದಿಗಳು ಸುಮಾರು 120 -200 ಅಡಿಗಳಷ್ಟು ಎತ್ತರದ ಮರದ ಕಂಬಗಳು, ಮರದ ಹಲಗೆ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ಕುರ್ಜುಗಳು ಎಂದು ಕರೆಯುವ 10-12 ತೇರುಗಳನ್ನು ಹಿಂದಿನ ದಿನವೇ ತಮ್ಮ ಊರುಗಳಲ್ಲಿ ಪೂಜೆ ಮಾಡಿ ಜಾತ್ರೆಯ ದಿನದಂದು ಹುಸ್ಕೂರಿಗೆ ತಂದು ಪೂಜೆ ಮಾಡುವ ವಿಶಿಷ್ಟ ಆಚರಣೆ ನಿಜಕ್ಕೂ ಅಧ್ಭುತವೇ ಸರಿ.

temp1ಸುಮಾರು 800 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಹುಸ್ಕೂರು ಮದ್ದೂರಮ್ಮ ದೇವಿಯ ಹೆಸರೇ ಹೇಳುವಂತೆ ಈ ದೇವಾಲಯದ ಮೂಲ ದೇವರು ಮಂಡ್ಯ ಜಿಲ್ಲೆಯ ಮದ್ದೂರಿನದ್ದಾಗಿದ್ದು, ಹುಸ್ಕೂರಿನ ಭಕ್ತರೊಬ್ಬರ ಭಕ್ತಿಗೆ ಮೆಚ್ಚಿ ಈ ಊರಿಗೆ ಬಂದು ನೆಲಸಿತೆಂದು ಸ್ಥಳೀಯರ ನಂಬಿಕೆಯಾಗಿದೆ. ಚೋಳರ ಕಾಲದ ದೇವಾಲಯವನ್ನು ಇತ್ತೀಚೆಗೆ ಭಕ್ತಾದಿಗಳ ಸಹಕಾರದಿಂದ ನವೀಕರಿಸಲಾಗಿದ್ದು ಗರ್ಭಗುಡಿಯಲ್ಲಿ ದೊಡ್ಡ ಮದ್ದೂರಮ್ಮ ಮತ್ತು ಚಿಕ್ಕ ಮದ್ದೂರಮ್ಮ ಎಂಬ ಎರಡು ವಿಗ್ರಹಗಳಿವೆ. ಮದ್ದೂರಮ್ಮನನ್ನು ನಂಬಿ ಪೂಜೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ, ಮಂಗಳವಾರ, ಶುಕ್ರವಾರ, ಆಶಾಢ ಮಾಸದ ಸಮಯದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹೊರ ಭಾಗದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

madd1ಸಂಕ್ರಾಂತಿ ಮುಗಿದು ಬೆಳೆದ ಫಸಲುಗಳನ್ನೆಲ್ಲಾ ಕಟಾವು ಮಾಡಿ ತಮ್ಮ ಮನೆಯ ಅಗತ್ಯಕ್ಕಿಂತಲೂ ಹೆಚ್ಚಿನದ್ದನ್ನು ಮಾರುಕಟ್ಟೆಯಲ್ಲಿ ಮಾರಿ ಕೈಯಲ್ಲಿ ಅಲ್ಪ ಸ್ವಲ್ಪ ಹಣವಿರುವಾಗ, ಯುಗಾದಿ ಹಬ್ಬದ ನಂತರ ಬರುವ ಮಳೆಗಾಲದ ವರೆಗೂ ಯಾವುದೇ ಕೃಷಿ ಚಟುವಟಿಕೆ ಇಲ್ಲದಿರುವ ಸಮಯದಲ್ಲಿ ಈ ಊರಿನಲ್ಲಿ ಅದ್ದೂರಿಯ ಜಾತ್ರೆಯನ್ನು ನಡೆಸಲಾಗುತ್ತದೆ. ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ಎಂದರೆ ಇಡೀ ಆನೇಕಲ್ ತಾಲೂಕಿನಲ್ಲಿ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುವುದಲ್ಲದೇ ಈ ಮೂಲಕ ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ. ಹುಸ್ಕೂರಿನ ಸುತ್ತಮುತ್ತಲ ಗ್ರಾಮಗಳಾದ, ಕೊಡತಿ, ಹಾರೋಹಳ್ಳಿ, ಸಿಂಗೇನ ಅಗ್ರಹಾರ, ದೊಡ್ಡ ನಾಗಮಂಗಲ, ಹಾಗೂ ಮುತ್ತನಲ್ಲೂರ್ ಸೇರಿದಂತೆ, ಸುಮಾರು 10-12 ಗ್ರಾಮಗಳಿಂದ ಭಕ್ತಾದಿಗಳು ತಾವೇ ರಥಗಳನ್ನು ನಿರ್ಮಿಸುತ್ತಾರೆ. ಈ 10-12 ಹಳ್ಳಿಗಳಿಂದ 150 ರಿಂದ 200 ಅಡಿ ಎತ್ತರದ ರಂಗು ರಂಗಿನ ಬೃಹತ್ ಗಾತ್ರದ ಕುರ್ಜುಗಳನ್ನು ತಿಂಗಳುಗಳ ಕಾಲ ಶ್ರದ್ಧಾ ಭಕ್ತಿಯಿಂದ ಸಿದ್ಧಪಡಿಸಲಾಗಿರುತ್ತದೆ, ರಂಗುರಂಗಿನ ಬಟ್ಟೆಗಳಿಂದ ವಿಶಿಷ್ಟ ಶೈಲಿಯ ವಿನ್ಯಾಸದ ಚಿತ್ತಾರಗಳನ್ನ ಹೊದಿಕೆಯಾಗಿಸಿಕೊಂಡು ಮರದ ಅಟ್ಟಣಿಗೆಗಳಿಂದ ನಿರ್ಮಿಸಲಾಗುವ ಈ ತೇರುಗಳು ಯಾವ ಯಾವ ಗ್ರಾಮದ ತೇರು ಎಷ್ಟು ಎತ್ತರ ಇರುತ್ತದೆ ಎಂಬ ಪ್ರತಿಷ್ಠೆಯ ಸಂಕೇತವಾಗುವ ಕಾರಣ ಒಂದು ರೀತಿಯ ಅರೋಗ್ಯಕರ ಸ್ಪರ್ಧೆಗೆ ಹುಸ್ಕೂರು ಜಾತ್ರೆ ವೇದಿಕೆಯಾಗಿ ಮಾರ್ಪಡುತ್ತದೆ ಎಂದರೂ ತಪ್ಪಾಗದು.

tippuಹುಸ್ಕೂರಿನ ಮದ್ದೂರಮ್ಮನಿಗೂ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನನಿಗೂ ನಂಟಿರುವ ಕುತೂಹಲಕಾರಿಯಾದ ಕಥೆಯೊಂದಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದ ನಂತರ ಸೇನೆಯ ಸಮೇತ ಶ್ರೀರಂಗಪಟ್ಟಣಕ್ಕೆ ಹಿಂದಿರುಗುವ ಮಾರ್ಗದ ಮಧ್ಯದಲ್ಲಿ ನಡೆಯಲೂ ನಿತ್ರಾಣವಾಗಿದ್ದ ತನ್ನ ಸೇನೆಯ ದಣಿವಾರಿಸಿಕೊಳ್ಳುವ ಸಲುವಾಗಿ ಈ ಹುಸ್ಕೂರಿನ ಬಯಲಿನ ಮದ್ದೂರಮ್ಮ ದೇವಾಲಯದಲ್ಲಿ ರಾತ್ರಿ ಪೂರಾ ಕಳೆದಿದ್ದನಂತೆ. ರಾಮ ರಾವಣರ ಯುದ್ದದಲ್ಲಿ ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಹೊತ್ತು ತಂದ ಹನುಮಂತ ಯುದ್ದದ ಸಮಯದಲ್ಲಿ ಗಾಯಗೊಂಡು ಮೂರ್ಛೆ ಹೋಗಿದ್ದ ಲಕ್ಷ್ಮಣ ಮತ್ತು ನೂರಾರು ಕಪಿ ಸೇನೆಯನ್ನು ರಕ್ಷಿಸಿದಂತೆ, ಮಾರನೇಯ ದಿನ ಬೆಳಗ್ಗೆ ಎದ್ದಾಗ ಹೊಸ ಚೈತನ್ಯದಿಂದ ಕೂಡಿದ ನವೋಲ್ಲಾಸವು ಟಿಪ್ಪು ಸೈನ್ಯದ ಸೈನಿಕರಲ್ಲಿ ಮೂಡಿದ್ದರಿಂದ ಸಂತೋಷಗೊಂಡ ಟಿಪ್ಪು ಇದು ಇಲ್ಲಿಯ ದೇವಿಯ ಮಹಿಮೆ ಎಂದು ನಂಬಿ ಅದರ ಜ್ಞಾಪಕಾರ್ಥವಾಗಿ ವಜ್ರಖಚಿತ ಕಿರೀಟದ ಜೊತೆಗೆ ದೇವಿಗೆ ಚಿನ್ನಾಭರಣಗಳನ್ನು ಅರ್ಪಸಿದ ಎಂಬ ಇತಿಹಾಸವಿದ್ದು, ಆನೇಕಲ್ ಖಜಾನೆಯಲ್ಲಿ ಭದ್ರವಾಗಿರಿಸಿರುವ ವಜ್ರಕಿರೀಟ ಚಿನ್ನಾಭರಣಗಳನ್ನು ಇಂದಿಗೂ ಜಾತ್ರೆಯ ಸಮಯದಲ್ಲಿ ತಂದು ದೇವರಿಗೆ ಮುಡಿಸಿ ಅಲಂಕರಿಸಿ ಸಂಭ್ರಮಿಸಲಾಗುತ್ತದೆ.

mad3ಹುಸ್ಕೂರಿನ ಜಾತ್ರೆಯಲ್ಲಿ ಬೃಹತ್ತಾದ ಈ ತೇರುಗಳೇ ಪ್ರಮುಖ ಆಕರ್ಷಣೆಯಾದರೂ, ಅದರ ಜೊತೆ ವಿವಿಧ ರೀತಿಯ ಜಾನಪದ ಕಲಾಮೇಳಗಳು, ಪಲ್ಲಕ್ಕಿ ಉತ್ಸವ, ಹಾಡು, ನೃತ್ಯಗಳಿಂದ ಕೂಡಿ ಜಾತ್ರೆಯನ್ನು ಮತ್ತಷ್ಟು ಆಕರ್ಷಣಿಯವನ್ನಾಗಿಸುತ್ತದೆ. ತಮ್ಮ ಕೃಷಿಯ ಫಸಲು ಮನೆಗೆ ಬಂದು ಗ್ರಾಮಕ್ಕೆ ಕೆಡುಕು ಆಗದಂತೆ ಗ್ರಾಮ ದೇವರುಗಳಿಗೆ ತೃಪ್ತಿಪಡಿಸುವ ಸಲುವಾಗಿ ದೂರದ ಊರಿನ ನೆಂಟರಿಷ್ಟರನ್ನು ಕರೆಸಿ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವುದು ಈ ಜಾತ್ರೆಯ ವೈಶಿಷ್ಠ್ಯವಾಗಿದೆ.

ಮೊದಲ ದಿನ ರಥೋತ್ಸವದ ವಿಧಿ, ದೀಪಾರತಿಗಳ ಮೆರವಣಿಗೆಯಿಂದ ಆರಂಭವಾಗಿ ಮಾರನೇಯ ದಿನ ಬೆಳಗ್ಗೆ ಹತ್ತಾರು ಎತ್ತುಗಳ ಸಹಾಯದಿಂದ 10-20 ಕಿ. ಮಿ. ದೂರದ ಊರುಗಳಿಂದ ಸಾವಿರಾರು ಭಕ್ತಾದಿಗಳ ಸಹಾಯದೊಂದಿಗೆ ದಾರಿ ಯುದ್ದಕ್ಕೂ ತೇರುಗಳನ್ನು ಎಳೆದು ಸಂಜೆಯೊಳಗೆ ಮದ್ದೂರಮ್ಮನ ಗುಡಿಯ ಮುಂದೆ ತರಲಾಗುತ್ತದೆ. ಎತ್ತುಗಳು ಅಷ್ಟು ದೂರದಿಂದ ಕುರ್ಜುಗಳನ್ನು ಎಳೆದು ದೇವಿಯ ಸಾನ್ನಿಧ್ಯಕ್ಕೆ ಬಂದಾಗ ಮಾತ್ರವೇ ದೇವಿಯು ಸಂತುಷ್ಟಳಾಗುತ್ತಾಳೆ ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ. ವರ್ಷವಿಡೀ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಎತ್ತುಗಳಿಗೆ ಈ 2 ದಿನಗಳ ಕಾಲ ಉಲ್ಲಾಸದಿಂದಿರಲೆಂದು ಈ ರೀತಿಯಾಗಿ ರಥವನ್ನು ಎಳೆಯಲಾಗುತ್ತಿದೆ ಎಂದದೂ ಸಹಾ ನಂಬಲಾಗುತ್ತದೆ. ಅಷ್ಟು ಎತ್ತರದ ಮತ್ತು ಅಷ್ಟು ಭಾರವಾದ ರಥಗಳನ್ನು ಅಷ್ಟು ದೂರದಿಂದ ಕಚ್ಚಾ ರಸ್ತೆಗಳ ಮೇಲೆ ಎಳೆದು ತರುವುದು ಖಂಡಿತವಾಗಿ ಸುಲಭದ ಮಾತಲ್ಲ. ಉತ್ಸಾಹ ಭರಿತ ಕೂಗಾಟ ಮತ್ತು ಚೀರಾಟಗಳೊಂದಿಗೆ ಅಂಕು ಡೊಂಕು ಬಳುಕುತ್ತಾ ವಯ್ಯಾರದಿಂದ ಬರುವ ರಥಗಳನ್ನು ನೋಡುವುದಕ್ಕೆ ನಿಜಕ್ಕೂ ಮುದ ನೀಡುತ್ತದೆ. ಸಾಯಂಕಾಲದ ವೇಳೆಗೆ ಒಂದೊಂದೇ ಊರಿನಂದ ಬರುವ ರಥಗಳನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಹುಸ್ಕೂರಿನಲ್ಲಿ ಸಾವಿರಾರು ಭಕ್ತರು ನೆರೆದಿರುತ್ತಾರೆ. ಸ್ವಲ್ಪ ವಿಶ್ರಮಿಸಿದ ಬಳಿಕ, ಆ ಎಲ್ಲಾ ರಥಗಳನ್ನು ಮದ್ದೂರಮ್ಮ ದೇವಿಯ ಮಂದಿರದ ಬಳಿ ಎಳೆದು ತಂದಾಗ ಭಕ್ತಾದಿಗಳು ದವನ ಚುಚ್ಚಿದ ಬಾಳೇಹಣ್ಣುಗಳನ್ನು ತೇರಿನ ಮೇಲೆ ಎಸೆಯುತ್ತಾ ಭಕ್ತಿಯಿಂದ ದೇವರನ್ನು ನೆನೆಯುವುದು ಮುಗಿಲು ಮುಟ್ಟುವಂತಿರುತ್ತದೆ. ಜಾತ್ರೆಯ 2 ದಿನ ಇಲ್ಲಿ ಕರಗ ಮಹೋತ್ಸವವೂ ನಡೆಯುತ್ತದೆ.

ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತಾದಿಗಳ ಹಸಿವನ್ನು ನಿವಾರಿಸಲು, ಅಲ್ಲಲ್ಲಿ ಮಜ್ಜಿಗೆ ಪಾನಕ ಅನ್ನದಾಸೋಹಗಳ ವ್ಯವಸ್ಥೆಯೂ ಇರುವುದರ ಜೊತೆಗೆ ಕಡಲೇ ಪುರಿ ಬೆಂಡು ಬತ್ತಾಸು, ವಿವಿಧ ರೀತಿಯ ಜಾತ್ರೆಯ ಸಿಹಿತಿನಿಸುಗಳ ಸಣ್ಣ ಹೋಟೆಲ್ಲುಗಳು ಇರುತ್ತದೆ. ಇನ್ನು ಮಕ್ಕಳಿಗೆಂದೇ ವಿವಿಧ ರೀತಿಯ ಆಟಿಕೆಗಳು, ಬಣ್ಣ ಬಣ್ಣದ ಬೆಲೂನುಗಳ ಜೊತೆ ಮನೋರಂಜನೆಗಾಗಿ ಬಗೆ ಬಗೆಯ ಗಿರಿಗಿಟ್ಟಲೆಗಳು ಮುದ ನೀಡುತ್ತದೆ. ಜಾತ್ರೆಯ ಪ್ರಯುಕ್ತ ದೇವಾಲಯದಲ್ಲಿ ಮದ್ದೂರಮ್ಮ ತಾಯಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಮಾಡಲಾಗುತ್ತದೆ.

ಹುಸ್ಕೂರಿನ ಸುತ್ತಮುತ್ತಲಿನ ಹತ್ತಾರು ಊರುಗಳ ರೈತ ಬಾಂಧವರಿಗೆ ತಮ್ಮ ಹೊಲಗಳ ಕಾರ್ಯಗಳು ಮುಗಿದ ಬಳಿಕ, ಸುಗ್ಗಿಕಾಲದಲ್ಲಿ, ಹಿಗ್ಗಿನ ಹಬ್ಬವನ್ನಾಗಿಸುವ ಈ ಮದ್ದೂರಮ್ಮ ದೇವಿಯ ರಥೋತ್ಸವವನ್ನು ಈ ಬಾರಿ ನಮ್ಮ ಛಾನೆಲ್ಲಿನಲ್ಲಿ ನೋಡಿ ಸಂಭ್ರಮಸಿದ್ದೀರಿ. ಮುಂದಿನ ವರ್ಷ ಖಂಡಿತವಾಗಿ ಸ್ವಲ್ಪ ಸಮಯಮಾಡಿಕೊಂಡು ಹುಸ್ಕೂರಿಗೆ ಹೋಗಿ ಈ ಮದ್ದೂರಮ್ಮನ ಜಾತ್ರೆಯಲ್ಲಿ ಪಾಲ್ಗೊಂಡು ವಿಶ್ವದ ಅತ್ಯಂತ ಎತ್ತರದ ತೇರುಗಳನ್ನು ಹತ್ತಿರದಿಂದ ನೋಡಿದ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ನಾವೆಲ್ಲಾ ಚಿಕ್ಕವರಿದ್ದಾಗ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಅದೇನೋ ಸಂಭ್ರಮ. ಪ್ರಯಾಣಕ್ಕೆ ಒಂದೆರಡು ದಿನಗಳ ಮಂಚೆಯೇ, ನಮ್ಮೆಲ್ಲಾ ಸ್ನೇಹಿತರಿಗೂ ರೈಲಿನಲ್ಲಿ ಹೋಗುತ್ತಿರುವುದನ್ನು ಹೇಳೀ ಅವರ ಹೊಟ್ಟೆಯನ್ನು ಉರಿಸುತ್ತಿದ್ದಲ್ಲದೇ, ರೈಲಿನಿಂದ ಪುನಃ ಹಿಂದಿರುಗಿದ ನಂತರ ಗೆಳೆಯರ ಬಳೀ ಅದೇ ಕುರಿತಾಗಿಯೇ ಮಾತು ಕತೆ. ಇನ್ನು ಎರಡು ಮೂರು ದಿನಗಳ ಮಟ್ಟಿಗೆ ಪ್ರಯಾಣಿಸಿದರಂತೂ ರೈಲಿನ ಕುಲುಕಾಟದ ಭಾಸವೇ ನಮಗಾಗುತ್ತಿತ್ತು. ಇನ್ನು ರೈಲಿನಲ್ಲಿ ಕುಳಿತುಕೊಳ್ಳಬೇಕಾದರೇ ನಾನು ಕಿಟಕಿ ಪಕ್ಕ ನಾನು ಕಿಟಕಿ ಪಕ್ಕ ಎಂದು, ಅಣ್ಣಾ ತಮ್ಮಾ, ಅಕ್ಕತಂಗಿಯರೊಂದಿಗೆ ಶರಂಪರ ಕಿತ್ತಾಡಿದ್ದೂ ಉಂಟು.

vist9

ರೈಲಿನಲ್ಲಿ ಕಿಟಕಿ ಪಕ್ಕ ಕುಳಿತುಕೊಂಡು ನಮ್ಮ ಜೊತೆಯಯಲ್ಲಿಯೇ ವೇಗವಾಗಿ ಓಡುತ್ತಿರುವ ಮರ ಗಿಡಗಳು ನೋಡುವುದಕ್ಕೆ ಅನಂದವಾಗುತ್ತಿತ್ತು, ಇನ್ನು ರೈಲ್ವೇ ಕ್ರಾಸಿಂಗ್ ಬಳಿ ನಿಂತಿರುತ್ತಿದ್ದ ಜನರಿಗೆ ಕೈ ಬೀಸಿ ಟಾಟಾ ಮಾಡುತ್ತಿದ್ದ ಸಂಭ್ರಮವನ್ನು ಹೇಳೋದಿಕ್ಕಿಂತ ಅನುಭವಿಸಿದರೇನೇ ಚಮ್ದ. ನಿಜವಾಗಲೂ ರೈಲಿನ ಪ್ರಯಾಣವನ್ನು ಅನುಭವವಿಸಬೇಕು ಎಂದರೆ, ಬೆಂಗಳೂರಿನಿಂದ ಮಂಗಳೂರು ಇಲ್ವೇ, ಹುಬ್ಬಳ್ಳಿಯಿಂದ ಗೋವಾ ಕಡೆಗೆ ಹೋಗ್ಬೇಕು. ರೈಲು ಬೆಂಗಳೂರಿನಿಂದ ಹಾಸನ, ಸಕಲೇಶಪುರ ದಾಟಿತೂ ಅಂದ್ರೇ ನಿಜಕ್ಕೂ ಭೂಲೋಕದ ಸ್ವರ್ಗವನ್ನೇ ಕಾಣಬಹುದು. ದಟ್ಟವಾದ ಪಶ್ಚಿಮಘಟ್ಟಗಳ ಸುಂದರ ಪ್ರಕೃತಿಯನ್ನು ಸೀಳೀಕೊಂಡು ಕೂ.. ಎಂದು ಶಬ್ಧ ಮಾಡುತ್ತಾ ರೈಲು ಹೋಗುತ್ತಿರುವಾಗ ಅಕ್ಕ ಪಕ್ಕದ ರಮಣೀಯ ದೃಶ್ಯಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ರೈಲು ಕೆಲವೊಂದು ಎತ್ತರದ ಪ್ರದೇಶಗಳಲ್ಲಿ ಹೋಗುತ್ತಿದ್ದಾಗ ಕೆಳಗೆ ಬಗ್ಗಿ ಪ್ರಪಾತವನ್ನು ನೋಡಿದರೆ ಎದೆ ಝಲ್ ಎಂದರೂ ಅಚ್ಚರಿಯೇನಿಲ್ಲ. ಪ್ರಯಾಣಿಕರು ಅಂತಹ ಮನಮೋಹಕ ದೃಶ್ಯಗಳನ್ನು ನೋಡಲು ನಾಮುಂದು ತಾಮುಂದು ಎಂದು ಕಿಟಕಿಯ ಬಳಿ ಜಗಳವಾಡುತ್ತಿದ್ದದ್ದು ಉಂಟು. ಅದೇಕೋ ಏನೋ? ಯಾವುದೋ ಕಾಣದ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಬೆಂಗಳೂರು ಮತ್ತು ಮಂಗಳೂರಿನ ಹಗಲು ರೈಲನ್ನೇ ಹಾಕದೇ ರಾತ್ರೀ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಹಾಗೆ ರಾತ್ರಿಯ ರೈಲು ಗಳನ್ನು ಓಡಿಸುತ್ತಿದ್ದರಿಂದ ಈ ಎಲ್ಲಾ ರಮಣೀಯ ದೃಶ್ಯಗಳನ್ನು ನೋಡುವುದರಿಂದ ವಂಚಿತರಾಗಿ ರೈಲ್ವೇ ಇಲಾಖೆಯನ್ನು ಬೈದು ಕೊಳ್ಳುತ್ತಿದ್ದದೂ ಉಂಟು. ಬಹುಶಃ ಎಲ್ಲಾ ಸಮಸ್ಯೆಗಳೂ ನಮ್ಮ ರೈಲ್ವೇ ಇಲಾಖೆಯವರೆ ಕಿವಿಗೂ ಬಿದ್ದಿರಬಹುದೇನೋ?

vist4

ಇತ್ತೀಚಿನ ದಿನಗಳಲ್ಲಿ ರೈಲ್ವೇ ಇಲಾಖೆಯಲ್ಲಿಯೂ ಅಮೂಲಾಗ್ರವಾಗಿ ಹಲವಾರು ಬದಲಾವಣೆಯಾಗುತ್ತಿದೆ. ರೈಲಿನ ಭೋಗಿಗಳು ಹಿಂದಿಗಿಂತ ಅತ್ಯುತ್ತಮವಾಗಿದ್ದು, ಮೊದಲಿಗಿಂತ ಸ್ವಚ್ಚವಾಗಿದ್ದು ಆಕರ್ಷಣೀಯವಾಗಿದೆ ಇದಕ್ಕೆ ಉದಾಹರಣೆ ಎಂಬಂತೆ ಮಂಗಳೂರು ಮತ್ತು ಬೆಂಗಳೂರಿನ ಯಶವಂತಪುರದ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜುಲೈ 11 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್‌ ನಿಲ್ಧಾಣದಲ್ಲಿ ವಿಸ್ಟೋಡಾಮ್ ಕೋಚ್ ಅಳವಡಿಸಿರುವ ರೈಲಿಗೆ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಅಧಿಕೃತವಾಗಿ ಆರಂಭವಾಗಿರುವುದು ಸಂತಸದ ವಿಷಯವಾಗಿದೆ.

vist2

ಈ ಹಗಲು ರೈಲಿನಲ್ಲಿ ಗಾಜಿನ ಛಾವಣಿ ಹಾಗೂ ಇತರ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸುವ ಮೂಲಕ ಪ್ರಕೃತಿ ಪ್ರಿಯರಿಗೆ ಪ್ರಕೃತಿಯ ಸವಿಯನ್ನು ಭರಪೂರವಾಗಿ ಸವಿಯುವ ವ್ಯವಸ್ಥೆಯನ್ನು ಮಾಡಲಾಗಿದೆ. . ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಭಾನುವಾರ ಹೊರತು ಪಡಿಸಿ ಪ್ರತೀ ದಿನ ಬೆಳಿಗ್ಗೆ 11.30 ಕ್ಕೆ ಮಂಗಳೂರಿನಿಂದ ಬೆಂಗಳೂರು ಹೊರಡಲಿರುವ ಈ ರೈಲು ರಾತ್ರಿ 8.20 ಕ್ಕೆ ಯಶವಂತಪುರ ರೈಲ್ವೇ ನಿಲ್ದಾಣವನ್ನು ತಲುಪಲಿದೆ. ಭಾನುವಾರ ಇದೇ ರೈಲು ಮಂಗಳೂರಿನಿಂದ ಬೆಳಿಗ್ಗೆ 9.15 ಕ್ಕೆ ಹೊರಟು ರಾತ್ರಿ 8.05 ಕ್ಕೆ ಯಶವಂತಪುರಕ್ಕೆ ಬಂದು ತಲುಪಲಿದೆ ತಲುಪಲಿದೆ. ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪಶ್ಚಿಮಘಟ್ಟಗಳ ಸುಂದರ ಪ್ರಕೃತಿ ರಮಣೀಯ ದೃಶ್ಯಗಳನ್ನು ಸವಿಯುವ ಅವಕಾಶ ಲಭ್ಯವಾಗಲಿದೆ.

vist1

ಅದೇ ರೀತಿ ಈ ರೈಲು ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 6 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ನಿಜವಾದ ಮಜ ಬರುವುದೇ ಸಕಲೇಶಪುರ ಯಡಕ್ಕುಮೇರಿ ದಾಟಿ, ಸುಬ್ರಹ್ಮಣ್ಯದ ಬಂದ ಮೇಲೆಯೇ. ಸುಬ್ರಹ್ಮಣ್ಯ ದಿಂದ ದೋಣಿಗಲ್ ವರೆಗಿನ ಸುಮಾರು 60 ಕಿಲೋಮೀಟರ್ ಪ್ರಯಾಣ ಪ್ರಕೃತಿಯ ಸೌಂದರ್ಯದ ದರ್ಶನವನ್ನು ಮಾಡಿಸುತ್ತದೆ. ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ದೋಣಿಗಲ್ ನಿಲ್ದಾಣದ ಮಧ್ಯೆ ಬರುವ ಸುಮಾರು 57 ಸುರಂಗಗಳು ಮತ್ತು 225ಕ್ಕೂ ಹೆಚ್ಚಿನ ಸಣ್ಣ-ಪುಟ್ಟ ಹಾಗೂ ಉದ್ದದ ಸೇತುವೆಗಳ ಮೇಲೆ ರೈಲು ಹೋಗುವಾಗ ಸುತ್ತಮುತ್ತಲಿನ ಪ್ರಕೃತಿಯ ರಮಣೀಯ ಸೌಂದರ್ಯವನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇನೇ ಚೆಂದ. ಮಳೆಗಾಲದಲ್ಲಿ ಹರಿಯುವ ಸಣ್ಣ ಸಣ್ಣದ ಝರಿ ತೊರೆ ಗಿರಿ ಗಹ್ವರಗಳ ಪಶ್ಚಿಮ ಘಟ್ಟದ ರುದ್ರ ರಮಣೀಯತೆಯನ್ನು ಅತ್ಯಂತ ಸುಂದರವಾಗಿ ಕಾಣುವಂತಹ ಸುಂದರವಾದ ಮತ್ತು ಆರಾಮದಾಯಕವಾದ ಪ್ರಯಾಣದ ಅನುಭವವನ್ನು ನೀಡುವ ರೈಲ್ವೆ ಇಲಾಖೆ ಈ ಹೊಸ ಪ್ರಯತ್ನ ಖಂಡಿತವಾಗಿಯೂ ಪ್ರವಾಸೋದ್ಯಮವನ್ನು ಹೆಚ್ಚಿಸಲಿದೆ.

vist8

ಈ ರೀತಿಯ ವಿಸ್ಟೋಡಾಮ್ ಮಾದರಿಯ ರೈಲು ಈಗಾಗಲೇ ಡಾರ್ಜಿಲಿಂಗ್, ಶಿಮ್ಲಾ ಸೇರಿದಂತೆ ರಮ್ಯ ಮನೋಹರ ಪ್ರವಾಸಿ ತಾಣಗಳಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿದ್ದು ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಆರಂಭವಾಗಿರುವುದು ನಿಜಕ್ಕೂ ರೋಚಕವೆನಿಸಲಿದೆ.

vist5

ಸದ್ಯಕ್ಕೆ ಈ ರೈಲಿನಲ್ಲಿ 44 ಆಸನದ ಸಾಮರ್ಥ್ಯ ವಿರುವ ಎರಡು ಬೋಗಿಗಳನ್ನು ಜೋಡಿಸಲಾಗಿದೆ. ಈ ಬೋಗಿಗಳಲ್ಲಿ ಅಗಲವಾದ, ದೊಡ್ಡ ದೊಡ್ಡ ಕಿಟಕಿಗಳಿದ್ದು ಪ್ರಯಾಣಿಕರಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತದೆ. ಕೇವಲ ಪಾರದರ್ಶಕ ಕಿಟಕಿಗಳಲ್ಲದೇ, ಈ ಬೋಗಿಗಳ ಮೇಲ್ಚಾವಣಿಯೂ ಗಾಜಿನದ್ದಾಗಿರುವುದರಿಂದ ಸುರಂಗ ಮಾರ್ಗಗಳಲ್ಲಿ ಸಂಚರಿಸುವಾಗ ಇಲ್ಲವೇ ಸೇತುವೆಗಳ ಮೇಲೆ ಹೋಗುವಾಗ ಎತ್ತರದ ಪರ್ವತಗಳನ್ನು ಆರಾಮವಾಗಿ ಕಾಣಬಹುದಾಗಿದೆ. ಎಲ್‌ಇಡಿ ದೀಪ, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಸುರಕ್ಶತೆಯ ದೃಷ್ಟಿಯಿಂದ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳೊಂದಿಗೆ, ಮನೋರಂಜನೆಗಾಗಿ ಎಲ್ಇಡಿ ಟಿವಿಗಳು, ಆಹಾರವನ್ನು ಬಿಸಿ ಮಾಡಿಕೊಳ್ಳಲು ಮೈಕ್ರೋವೇವ್ ಓವನ್ ಮತ್ತು ಆಹಾರ ತಣ್ನಗಾಗಿಸಿಕೊಳ್ಳಲು ರೆಫ್ರಿಜರೇಟರ್ ಗಳು ಮಿನಿ ಪ್ಯಾಂಟ್ರಿಯಲ್ಲಿ ಅಳವಡಿಸಲಾಗಿದೆ. ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಇಡಲು ಪ್ರತ್ಯೇಕವಾದ ಸ್ಟೀಲ್ ಲಗೇಜ್ ಕಪಾಟುಗಳು ಇರುವ ಕಾರಣ ಪ್ರಯಾಣಿಕರ ಸಾಮಾನು ಸರಂಜಾಮುಗಳು ಕೈ ಕಾಲಿಗೆ ತಲುಗಲದೇ ಸುರಕ್ಷಿತವಾಗಿ ಇಡಬಹುದಾಗಿದೆ. ಸುಮಾರು ೨೨೦ ಡಿಗ್ರಿಗಳಷ್ಟು ಮಡುವುವಂತಹ 365 ಡಿಗ್ರಿಗಳಷ್ಟು ತಿರುಗಿಸಬಲ್ಲಂತಹ ಸೀಟುಗಳು ಪ್ರಯಾಣಿಕರಿಗೆ ಆನಂದದಾಯಕವಾಗಿದೆ. ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳಿದ್ದು. ವೈಫೈ ವ್ಯವಸ್ಥೆಯನ್ನೂ ಮಾಡಲಾಗಿದೆ. ಹವಾನಿಯಂತ್ರಿತವಾದ, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿರುವ ಈ ಬೋಗಿಗಳು ಪ್ರಯಾಣಿಕರಿಗೆ ರೈಲಿನಲ್ಲಿ ಕುಳಿತಿದ್ದರೂ ವಿಮಾನದಲ್ಲಿ ಪ್ರಯಾಣಿಸುತ್ತಿರುವಂತಹ ಸುಂದರ ಅನುಭವವಾಗುತ್ತದೆ ಎಂದು ಮೊದಲ ಬಾರಿಗೆ ಸಂಚಾರಿಸಿದ ಪ್ರಯಾಣಿಸಿದ ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ. ವಿಸ್ಟೋಡಾಮ್ ಕೋಚಿನಲ್ಲಿ ಪ್ರಯಾಣಿಸಿದ ಬಹುತೇಕ ಪ್ರಯಾಣಿಕರು ಇದೊಂದು ಅದ್ಭುತ ಅನುಭವವಾಗಿದ್ದು ಜೀವನದಲ್ಲಿ ಮರೆಯಲಾಗರದ ಅನುಭವವಾಗಿ ಉಳಿಯೋದರಲ್ಲಿ ಎರಡು ಮಾತಿಲ್ಲ ಎಂದಿರುವುದು ಗಮನಾರ್ಹವಾಗಿದೆ.

vist10

ಇಂತಹ ಸುಂದರವಾದ ಸುಖಾನುಭವ ನೀಡುವ, ಬೆಟ್ಟ ಗುಡ್ಡಗಳ ಮಧ್ಯೆ ಗುಹೆಗಳನ್ನು ದಾಟುತ್ತಾ ರೈಲು ಸಾಗುತ್ತಿದ್ದರೆ ಸ್ವರ್ಗದಲ್ಲಿ ಇದ್ದೆವೇನೋ ಎನ್ನುವಂತಹ ಅನುಭವ ನೀಡುವ ಈ ಸುಂದರ ಪ್ರಯಾಣ ನಿಜಕ್ಕೂ ರಮಣೀಯವಗಿರುತ್ತದೆ ಎಂದರೆ ಸುಳ್ಳಲ್ಲ. ಅದರಲ್ಲೂ ಮಳೆಗಾಲದಲ್ಲಿ ಮಂಗಳೂರು ಬೆಂಗಳೂರು ಮಧ್ಯೆ ರೈಲು ಪ್ರಯಾಣ ಒಂದು ಪ್ರವಾಸದಂತೆ ಭಾಸವಾಗುತ್ತದೆ. ಹಾಗದರೇ ಇನ್ನೇಕೆ ತಡಾ, ಹೇಗೂ ಮಳೆಗಾಲ ಈಗಷ್ಟೇ ಆರಂಭವಾಗಿದೆ. ಈ ಮಳೆಗಾಲದಲ್ಲಿ ವಿಸ್ಟೋಡಾಮ್ ಭೋಗಿಗಳಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಅನುಭವಿಸಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?
ಅಂತಹ ಸುಂದರವಾದ ಅನುಭವವನ್ನು ಕುಳಿತಲ್ಲಿಂದಲೇ ಅನುಭವಿಸೋಣ ಬನ್ನಿ.

ಏನಂತೀರೀ?

ನಿಮ್ಮವನೇ ಉಮಾಸುತ

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಆಟೋರಿಕ್ಷಾ

ಹಿಂದೆಲ್ಲಾ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವುದಕ್ಕೆ ನಡಿಗೆಯೇ ಮೂಲವಾಗಿದ್ದು ನಂತರದ ದಿನಗಳಲ್ಲಿ ಎತ್ತಿನ ಗಾಡಿಗಳು ಜನರನ್ನು ಮತ್ತು ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದರು. ಇನ್ನು ಕೆಲವರು ಸೈಕಲ್ ಮುಖಾಂತರ ಒಂದಿಬ್ಬರು ಪ್ರಯಾಣಿಸುತ್ತಿದ್ದಾಗ ಒಂದಕ್ಕಿಂತಲು ಹೆಚ್ಚಿನ ಜನರನ್ನು ಆರಾಮದಾಯಕವಾಗಿ ಪ್ರಯಾಣಿಸುವ ಸಲುವಾಗಿ ಕುದುರೇ ಗಾಡಿಗಳನ್ನು ಬಳಸಲು ಅರಂಭಿಸಿದರು ಇವು ಜಟಕಾಗಾಡಿಗಳು, ಟಾಂಗ, ಜಟ್ಕಾ (ಉರ್ದು ಭಾಷೆಯಿಂದ ಬಂದಿರುವ ಪದ) ಎಂದೇ ನಾಡಿನಾದ್ಯಂತ ಪ್ರಖ್ಯಾತವಾಯಿತು.

cylle_rikshwa

ಎತ್ತಿನಗಾಡಿ ಮತ್ತು ಕುದುರೇ ಗಾಡಿಗಳನ್ನು ಸಂಭಾಳಿಸುವುದು ಬಹಳ ತ್ರಾಸದಾಯಕ ಮತ್ತು ಪ್ರಾಣಿಗಳಿಗೇಕೆ ತೊಂದರೆ ಕೊಡುವುದು ಎಂದು ನಿರ್ಧರಿಸಿ ಮೋಟಾರು ವಾಹನಗಳ ಆವಿಷ್ಕಾರವಾಗಿ ಬಸ್, ಲಾರಿ, ಕಾರುಗಳು ದ್ವಿಚಕ್ರವಾಹನಗಳು ಯೂರೋಪಿನಲ್ಲಿ ಜನಪ್ರಿಯವಾಗ ತೊಡಗಿದಂತೆ ಭಾರತಕ್ಕೂ ಆಮದಾಯಿತು. ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಎನ್ನುವಂತೆ ಇವೆಲ್ಲವೂ ಸಿರಿವಂತರ ಪಾಲಾಗಿ ಬಡವರಿಗೆ ಮರೀಚಿಕೆಯೇ ಆಗಿತ್ತು. ಹಾಗಾಗಿ ಜನ ಸಾಮಾನ್ಯರು ಸೈಕಲ್, ಸೈಕಲ್ ರಿಕ್ಷಾ, ಜಟಕಾಗಾಡಿಗಳು ಮತ್ತು ಅಲ್ಲೊಂದು ಇಲ್ಲೊಂದು ಬರುತ್ತಿದ್ದ ಸಾರ್ವಜನಿಕ ಬಸ್ ಗಳನ್ನೇ ಅವಲಂಭಿಸಿದ್ದರು. ದುರಾದೃಷ್ಟವಷಾತ್ ಉಳಿದ ನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರಿನ ರಸ್ತೆಗಳು ಬಹಳಷ್ಟು ಉಬ್ಬು ತಗ್ಗುಗಳು ಇದ್ದದ್ದರಿಂದ ಬೆಂಗಳೂರಿನಲ್ಲಿ ಸೈಕಲ್ ರಿಕ್ಷಾ ಬಳಸುವುದು ಸರಿಯಾದ ಮಾರ್ಗವಾಗಿರದೇ ಜಟಕಾ ಗಾಡಿಯೇ ಪ್ರಮುಖವಾದ ಸಾರ್ವಜನಿಕ ಪ್ರಯಾಣಿಕರ ವಾಹನವಾಗಿತ್ತು.

jatka

1949 ರಲ್ಲಿ ಬೆಂಗಳೂರಿನಲ್ಲಿದ್ದ ಹಳೆಯ ಅಷ್ಟೂ ಪೇಟೆಗಳ ಪುರಸಭೆಗಳು ಮತ್ತು ಕಂಟೋನ್ಮೆಂಟ್ ಎಲ್ಲವೂ ವಿಲೀನಗೊಂಡು ಬೆಂಗಳೂರು ಮಹಾನಗರವಾಗಿ, 1950ರ ನವೆಂಬರ್‌ನಲ್ಲಿ ನಡೆದ ಕಾರ್ಪೋರೇಷನ್ ಚುನಾವಣೆ ನಡೆದು ಬೆಂಗಳೂರಿನ ಮೊತ್ತ ಮೊದಲ ಚುನಾಯಿತ ಮೇಯರ್ ಆಗಿ ಶ್ರೀ ಎನ್. ಕೇಶವ ಅಯ್ಯಂಗಾರ್ ಅವರು ಆಯ್ಕೆಯಾದರು. ಆಗ ಮೇಯರ್ ಅವರು ಭಾರತದ ಉಳಿದ ನಗರಗಳಲ್ಲಿದ್ದ ಯಾಂತ್ರಿಕೃತ ತ್ರಿಚಕ್ರ ರಿಕ್ಷಾಗಳನ್ನು (ಆಟೋ) ಪರಿಚಯಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಅದುವರೆವಿಗೂ ನಗರದಾದ್ಯಾಂತ ಅತ್ಯಂತ ಕಡಿಮೆ ಶುಲ್ಕದ ಜನಪ್ರಿಯ ಪರ್ಯಾಯ ಸಾರಿಗೆ ವಿಧಾನವಾಗಿದ್ದ ಅನೇಕ ಜಟಕಾ ಮಾಲಿಕರು ಈ ಪ್ರಸ್ತಾಪಕ್ಕೆ ತೀವ್ರವಾದ ಆಕ್ಷೇಪದ ಜೊತೆಗೆ ವಿರೋಧ ಮತ್ತು ಪ್ರತಿಭಟನೆಯನ್ನೂ ನಡೆಸಿದರು.

ಆಗ ಜಟಕಾ ಒಕ್ಕೂಟಗಳು ಮತ್ತು ವಕೀಲರನ್ನು ಒಟ್ಟುಗೂಡಿಸಿ ಸಂಧಾನದ ಮಾತುಕತೆಗಳನ್ನು ನಡೆಸಿದ್ದಲ್ಲದೇ, ಈ ವಿಷಯದ ಕುರಿತು ತಜ್ಞರ ಸಹಕಾರದೊಂದಿಗೆ ಅಧ್ಯಯನವನ್ನೂ ನಡೆಸಿ, ಮಧ್ಯಮ ವರ್ಗದವರ ಅನುಕೂಲವನ್ನು ಮನದಲ್ಲಿಟ್ಟುಕೊಂಡು ಪರೀಕ್ಷಾರ್ಥವಾಗಿ ಕೆಲವೇ ಕೆಲವು ಯಾಂತ್ರಿಕೃತ ವಾಹನಗಳ ಪರವಾಗಿ ತೀರ್ಪು ನೀಡಿದ್ದಲ್ಲದೇ, ಇಡೀ ನಗರಾದ್ಯಂತ 10 ಆಟೋರಿಕ್ಷಾಗಳಿಗೆ ಪರವಾನಗಿ ನೀಡುವಂತೆ ಅಂದಿನ ಕಾರ್ಪೊರೇಷನ್ ಆಯುಕ್ತರಿಗೆ ಆದೇಶ ನೀಡಿದರು, ಮೇಯರ್ ಅವರೇ ಖುದ್ದಾಗಿ ಅಸ್ಥೆವಹಿಸಿ ಆದೇಶ ಹೊರಡಿಸಿದ ಕಾರಣ, ಬೆಂಗಳೂರು ನಗರದಲ್ಲಿ ಪ್ರಪ್ರಥಮವಾಗಿ 1950ರ ಡಿಸೆಂಬರ್‌ನಲ್ಲಿ ಮೊದಲ ತ್ರಿಚಕ್ರ ವಾಹನಗಳು ನಗರದ ರಸ್ತೆಗಳಿಗೆ ಇಳಿಯುವ ಮೂಲಕ ಇತಿಹಾಸ ನಿರ್ಮಾಣವಾಯಿತು.

auto

ಭಾರತದ ಅಟೋಮೊಬೈಲ್ಸ್ ರಾಜಧಾನಿ ಪೂನಾದಲ್ಲಿ ತಯಾರಿಸಲಾಗಿದ್ದ, ಸ್ಕೂಟರಿನ ಹಿಂಭಾಗಕ್ಕೆ ಇಬ್ಬರು ಪ್ರಯಾಣಿಕರು ಸುಖಃಕರವಾಗಿ ಕೂರುವಂತೆ ವಿನ್ಯಾಸಗೊಳಿಸಲಾಗಿದ್ದ ಹಸಿರು ಮತ್ತು ಹಳದಿ ಬಣ್ಣದ ತ್ರಿಚಕ್ರದ ಹೊಸ ಆಟೋರಿಕ್ಷಾಗಳನ್ನು ಬೆಂಗಳೂರಿಗರು ಬಹಳ ಉತ್ಸಾಹದಿಂದಲೇ ಸ್ವಾಗತಿಸಿದರು. ಅಂದಿನ ಕಾರ್ಪೊರೇಷನ್ ಕಟ್ಟಡದಲ್ಲಿ ಶ್ರೀಯುತ ಕೇಶವ ಅಯ್ಯಂಗಾರ್ ಅವರೇ ಸ್ವತಃ ಆಟೋವೊಂದನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಆಟೋವಿನ ಮೊದಲ ಪ್ರಯಾಣದಲ್ಲಿ ಇಟಲಿಯ ಹೆಣ್ಣುಮಗಳನ್ನು ಮದುವೆಯಾಗಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಅಯ್ಯಂಗರರೇ ಸ್ವಯಂಪ್ರೇರಿತವಾಗಿ ಕೂರಿಸಿಕೊಂಡು ಬಳೇಪೇಟೆಯಲ್ಲಿದ್ದ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಸತ್ಕರಿಸಿ ಕಳುಹಿಸುವ ಮೂಲಕ ವಿದ್ಯುಕ್ತವಾಗಿ ಆಟೋರಿಕ್ಷಾವನ್ನು ಬೆಂಗಳೂರಿನಲ್ಲಿ ಉಧ್ಘಾಟನೆ ಮಾಡಿದ್ದರು. ನಂತರದ ದಿನಗಳಲ್ಲಿ ಪುನಃ ಸುಮಾರು 40 ಆಟೋಗಳಿಗೆ ಅನುಮತಿ ನೀಡಲಾಯಿತು. 1980ರವರೆಗೂ ಆಟೋವಿನಲ್ಲಿ ಕೇವಲ ಇಬ್ಬರು ಪ್ರಯಾಣಿಕರನ್ನು ಮಾತ್ರವೇ ಕೂರಿಸಿಕೊಂಡು ಹೋಗಲು ಅನುಮತಿ ನೀಡಲಾಗಿತ್ತು.

rikshaw3

ದಿನೇ ದಿನೇ ಆಟೋರಿಕ್ಷಾಗಳು ಸಾರ್ವಜನಿಕ ಬಸ್ಸಿನ ಹೊರತಾಗಿ ಪ್ರಯಾಣಿಕರ ಜನಪ್ರಿಯ ಸಾರಿಗೆ ವ್ಯವಸ್ಥೆಯಾಗಿ ಮಾರ್ಪಾಟಾಯಿತು. ಬ್ಯಾಂಕುಗಳು ಮತ್ತು ಸಹಕಾರ ಸಂಘಗಳೂ ಕಡಿಮೆ ಬಡ್ಡಿಯ ದರದಲ್ಲಿ ಆಟೋ ಕೊಳ್ಳಲು ಸಾಲ ಕೊಡಲು ಆರಂಭಿಸಿದ ಕಾರಣ, ಕುದುರೇ ಗಾಡಿಗಳ ನಿರ್ವಹಣೆ ಬಹಳ ತ್ರಾಸವಾಗುತ್ತಿದ್ದದ್ದನ್ನು ಗಮನಿಸಿದ ಜಟಕಾ ಓಡಿಸುತ್ತಿದ್ದ ಬಹುತೇಕರು ಆಟೋಗಳನ್ನು ಕೊಂಡು ತಮ್ಮ ಜೀವನ ನಡೆಸಲಾರಂಭಿಸಿದರು. ನಂತರದ ದಿನಗಳಲ್ಲಿ ಆಟೋ ಲಕ್ಷಾಂತರ ಜನರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಸಾವಿರಾರು ಕುಟುಂಬಗಳ ಆಧಾರಸ್ಥಂಭವಾಗಿದ್ದು ಈಗ ಇತಿಹಾಸ.

ಕೆಲ ವರ್ಷಗಳ ನಂತರ ಆಟೊಗಳ ಬಣ್ಣ ಕ್ರಮೇಣ ಹಳದಿ ಬಣ್ಣದ ಪಟ್ಟಿಯೊಂದಿಗೆ ಕಪ್ಪು ಬಣ್ಣಕ್ಕೆ ಬದಲಾಯಿತು. ಅರಂಭದ ದಿನಗಳಲ್ಲಿ ಇಂದಿನಿಂತೆ ಮೀಟರ್ ಗಳ ವ್ಯವಸ್ಥೆ ಇಲ್ಲದಿದ್ದ ಕಾರಣ ಎಲ್ಲವೂ ಬಾಯಿಮಾತಿನ ವ್ಯವಹಾರಕ್ಕೆ ಸೀಮಿತವಾಗಿದ್ದು 1972ರ ಹೊತ್ತಿಗೆ ಯೆಂಕೆ ಡ್ಯಾಶ್‌ಬೋರ್ಡ್‌ನ ಕೆಳಗೆ ಮತ್ತು ಬ್ರೇಕ್ ಪೆಡಲ್‌ಗಿಂತ ಮೇಲೆ ಆಟೋರಿಕ್ಷಾ ಮೀಟರ್ ಗಳನ್ನು ಅಳವಡಿಸಲಾಯಿತು. ಇದನ್ನು ಕಾಲು ಮೀಟರ್ ಎಂದು ಆಗ ಕರೆಯಲಾಗುತ್ತಿತ್ತು. 1980ರ ದಶಕದಲ್ಲಿ, ಫ್ಳಾಗ್ ಮೀಟರ್ ಅನ್ನು ಪರಿಚಯಿಸಲಾದರೂ ಅದರಲ್ಲಿ ಸುಲಭವಾಗಿ ಮೋಸ ಮಾಡಲು ಅವಕಾಶ ಇದ್ದ ಕಾರಣ, ಕೆಲವು ವರ್ಷಗಳ ಹಿಂದೆ ಡಿಜಿಟಲ್ ಮೀಟರ್ ಗಳಿಗೆ ಬದಲಾಯಿಸಲಾಗಿದೆ.

rikshaw2

1990 ರ ದಶಕದವರೆಗೆ ಆಟೋಗಳನ್ನು ಓಡಿಸಲು ಪೆಟ್ರೋಲ್ ಹೊರತಾಗಿ ಪರ್ಯಾಯ ಇಂಧನವಾಗಿ ಸೀಮೆಎಣ್ಣೆಯನ್ನು ಮತ್ತು ಅಡುಗೆ ಅನಿಲಗಳೊಂದಿಗೆ ಪ್ರಯತ್ನಿಸಲಾಯಿತು. ಕೆಲ ಆಟೋಚಾಲಕರ ದುರಾಲೋಚನೆಯಿಂದ ಪೆಟ್ರೋಲ್ ಜೊತೆ ಸೀಮೇಎಣ್ಣೆ ಕಲಬೆರಕೆ ಮಾಡಿ ಪರಿಸರವನ್ನು ಹಾಳು ಮಾಡುತ್ತಿದ್ದದ್ದನ್ನು ಗಮನಿಸಿ, ಪೋಲೀಸರು ಅಂತಹ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಂಡ ಪರಿಣಾಮ ಅಂತಹ ದುಷ್ಕೃತ್ಯಗಳು ಬಹುತೇಕ ಕಡಿಮೆಯಾಗಿದೆ. 2000 ರ ನಂತರ ಅಧಿಕೃತವಾಗಿ ಪೆಟ್ರೋಲ್ ಆಟೋಗಳೊಂದಿಗೆ, ಡೀಸೆಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ಆಧಾರಿತ, ಸುಧಾರಿತ ಆಟೋಗಳು ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ, ಆಟೋವಿನ ಬಣ್ಣವೂ ಹಳದಿ ಮತ್ತು ಹಸಿರು ಬಣ್ಣಕ್ಕೆ ಬದಲಾಗಿದೆ. ಕರೆದೆಡೆಗೆ ಬರಲಾರರು, ಮೀಟರ್ ಮೇಲೆ ಹೆಚ್ವಿನ ಹಣ‌ ಕೇಳುತ್ತಾರೆ ಎಂಬ ಆರೋಪಗಳಿದ್ದರೂ, ಬೆಂಗಳೂರು ನಗರದಲ್ಲಿ ಇಂದಿಗೂ ಸುಮಾರು 2 ಲಕ್ಷಕ್ಕೂ ಅಧಿಕ ಆಟೋಗಳು ರಸ್ತೆಗಳಲ್ಲಿ ಓಡಾಡುತ್ತಿವೆ ಎನ್ನುವುದು ಗಮನಾರ್ಹವಾಗಿದೆ.

ಇತ್ತೀಚಿನ ದಿನಗಳಲ್ಲಿ ಓಲಾ ಊಬರ್ ಗಳೂ ಸಹಾ ಸುಖಃಕರ ಪರ್ಯಾಯ ಸಾರಿಗೆ ವ್ಯವಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರೂ, ಮಧ್ಯಮ ವರ್ಗದವರಿಗೆ ಇನ್ನೂ ಕೈಗೆಟುಕುವ ಬೆಲೆಯಲ್ಲಿರುವ ಕಾರಣ ಇಂದಿಗೂ ಸಹಾ ಜನಸಾಮಾನ್ಯರಿಗೆ ಆಟೋ ಬಗ್ಗೆಯೇ ಹೆಚ್ಚಿನ ಒಲವಿದೆ. ಅದೂ ಅಲ್ಲದೇ, ಅನೇಕ ಕನ್ನಡ ಚಿತ್ರಗಳ ವಿವಿಧ ನಾಯಕರುಗಳು ಆಟೋ ಚಾಲಕರ ಪಾತ್ರಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ ಕಾರಣ ಇಂದಿಗೂ ಆಯಾಯಾ ನಟರುಗಳ ಅಭಿಮಾನಿಗಳಿಗೆ ಆಟೋವಿನಲ್ಲಿ ಪ್ರಯಾಣ ಮಾಡುವುದು, ತಮ್ಮ ನೆಚ್ಚಿನ ನಾಯಕನ ಗಾಡಿಯಲ್ಲೇ ಹೋಗುವಂತೆ ಭಾಸವಾಗುವಂತಾಗುವ ಕಾರಣ ಇನ್ನೂ ಆಟೋಗಳ ಕ್ರೇಜ್ ಹಾಗೆಯೇ ಇದೆ ಎಂದರೂ ತಪ್ಪಾಗದು. ಇನ್ನೂ ಆಟೋ ಹಿಂದೆ ಬರೆದಿರುವಂತಹ ಬರಹಗಳಂತೂ ಭಗ್ನ ಪ್ರೇಮಿಗಳಿಗೆ ಅದು ತಮ್ಮದೇ ಅನುಭವದ ಪಾಠವೇನೋ, ಎಂಬಂತಿರುವ ಕಾರಣ ಆಟೋಗಳು ಇನ್ನೂ ಪ್ರಸ್ತುತವೆನಿಸಿದೆ ಎಂದರೂ ತಪ್ಪಾಗಲಾರದು. ಇಂದಿಗೂ ಕನ್ನಡ ರಾಜ್ಯೋತ್ಸವ ಮತ್ತು ರಾಮನವಮಿ ಹಬ್ಬವನ್ನು ಸಾರ್ವಜನಿಕವಾಗಿ ಅದ್ದೂರಿಯಾಗಿ ಆಟೋ ಚಾಲಕರುಗಳು ಆಚರಿಸುವ ಮೂಲಕ ಒಂದು ರೀತಿಯ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. Old is always gold ಎನ್ನುವಂತೆ 70 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಆಟೋ ಅಂದು,‌ಇಂದೂ ಮುಂದೆಯೂ ಒಂದು ರೀತಿಯಲ್ಲಿ ಬಡವರ ರಾಜರಥ ಎಂದರೂ ಅತಿಶಯವಿಲ್ಲ.

ಏನಂತೀರೀ?

ನಿಮ್ಮವನೇ ಉಮಾಸುತ

ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ದಿನೇ ದಿನೇ ನೋಡ ನೋಡುತ್ತಲೇ ಬೆಳೆಯುತ್ತಲೇ ಹೊದಂತೆಲ್ಲಾ, ನಗರದ ಹಿಂದಿನ  ಎಲ್ಲದರ ಮೌಲ್ಯವನ್ನು ಕೇವಲ ಹಣದ ರೂಪದಲ್ಲಿ ಮಾತ್ರವೇ ಅಳೆಯಲಾರಂಭಿಸಿದರು. ಬೆಂಗಳೂರಿನ ಪರಂಪರೆ, ಇತಿಹಾಸ ಅಥವಾ ಸಂಸ್ಕೃತಿಗೆ ಯಾವುದೇ ಮೌಲ್ಯವಿಲ್ಲದೇ, ಎಲ್ಲವೂ ರಿಯಲ್ ಎಸ್ಟೇಟ್ ಮುಂದೆ ಅಡಿಯಾಳಾಗಿ ತಲೆಬಗ್ಗಿಸಿ  ಒಂದೊಂದೇ ಕಳೆದು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿ. ಹಿಂದಿನ ಕಲೆ ಮತ್ತು ಇತಿಹಾಸದ ಪ್ರತೀಕವಾಗಿದ್ದಂತಹ ಒಂದೊಂದೇ ಕಟ್ಟಡಗಳು ನೆಲ್ಲಕ್ಕುರುಳಿಸಿ ಆ ಜಾಗದಲ್ಲಿ ಬಹುಮಹಡಿ ಗಗನ ಚುಂಬನ ಕಟ್ಟಡಗಳು ಏಳಿಸುವುದನ್ನೇ ನಗರಾಭಿವೃಧ್ಧಿ ಎಂದೇ ಎಲ್ಲರೂ ಭಾವಿಸಿರುವುದು ನಿಜಕ್ಕೂ ದುಃಖಕರವೇ ಸರಿ. ಬೆಂಗಳೂರಿನ ಹೃದಯಭಾಗ ಎನಿಸಿಕೊಂಡಿರುವ ಅಂದಿಗೂ ಇಂದಿಗೂ ಬೆಂಗಳೂರಿನ ವೈಭವೋಪೇತ ಭಾಗವೇ ಆಗಿರುವ ಎಂ.ಜಿ ರಸ್ತೆಯ ವೃತ್ತದಲ್ಲಿದ್ದ ಕಾವೇರಿ ಎಂಪೋರಿಯಂ ಪಕ್ಕದಲ್ಲಿದ್ದ ಬೃಂದಾವನ್ ಹೋಟೆಲ್ಲಿನ ಗತವೈಭವದ ಇತಿಹಾಸದ ಬಗ್ಗೆ ಮೆಲುಕು ಹಾಕೋಣ.

ಮೊಬೈಲಿನಲ್ಲಿ ಹಾಗೆಯೇ ಮುಖಮುಟವನ್ನು ನೋಡುತ್ತಿದ್ದಾಗ 2012ರಲ್ಲಿ ಮುಚ್ಚಿಹೋದ ಬೃಂದಾವನ್ ಹೋಟೆಲ್ ಒಂದರ ಫೋಟೋವೊಂದನ್ನು ನೋಡಿದೆ. ಕೇವಲ ಫೋಟೋವೊಂದನ್ನು ಹಾಕಿದ್ದಕ್ಕೇ ಸರಿ ಸುಮಾರು  400ಕ್ಕೂ ಹೆಚ್ಚು ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದರೆ  ಆ ಹೋಟೆಲ್ಲಿನ ಖ್ಯಾತಿ ಎಷ್ಟಿತ್ತು ಎಂಬುದರ ಅರಿವಾಗುತ್ತದೆ. ತೊಂಬ್ಬತ್ತು ಮತ್ತು ಎರಡು ಸಾವಿರದ ದಶಕದಲ್ಲಿ ಆ ಹೋಟೆಲ್ಲಿನಲ್ಲಿ ಗ್ರಾಹನಾಗಿ ಅಲ್ಲಿನ ಊಟವನ್ನು ಸವಿದಿದ್ದ ಕಾರಣ ಬೃಂದಾವನ್ ಹೋಟೆಲ್ ಕುರಿತಂತೆ ಕೆಲವೊಂದು ಸವಿ ಸವಿ ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬಯಕೆಯಾಗಿದೆ.

ಕರ್ನಾಟಕದ ಕರಾವಳಿ ಪ್ರಾಂತದ ಉಡುಪಿಯ ಮೂಲದವರಾದ ಶ್ರೀ ರಾಮಕೃಷ್ಣ ರಾವ್ ಅವರು ತಮ್ಮ ಕೆಲಸವನ್ನರಸಿ ದೂರದ ಮದ್ರಾಸಿಗೆ ಹೋಗಿ ಅಲ್ಲಿ ಹೋಟೆಲ್ಲಿನಲ್ಲಿ ಕೆಲಸವನ್ನಾರಂಭಿಸಿ ಕಡೆಗೆ ತಮ್ಮದೇ ಹೋಟೆಲ್ಲೊಂದನ್ನು ಆರಂಭಿಸಿ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಾರೆ. ದೂರದ ಮದ್ರಾಸಿಗಿಂತಲೂ ತಮ್ಮ ಕರ್ನಾಟಕದಲ್ಲೇ ಹೋಟೆಲ್ಲೊಂದನ್ನು ಏಕೆ ಅರಂಭಿಸಬಾರದು? ಎಂದು ಯೋಚಿಸುತ್ತಿರುತ್ತಾರೆ. ಬೆಂಗಳೂರಿನ ಕಂಟೋನ್ಮೆಂಟ್ ಭಾಗವಾಗಿದ್ದ ಬಹುತೇಕ  ಬ್ರಿಟೀಷರ ಸಂಸ್ಕೃತಿಯನ್ನೇ ಅಳವಡಿಸಿಕೊಂಡಿದ್ದ ಇಂದಿನ ಮಹಾತ್ಮಾಗಾಂಧಿ ರಸ್ತೆಯಲ್ಲಿ ಉತ್ತಮವಾದ ದಕ್ಷಿಣ ಭಾರತ ಸಸ್ಯಾಹಾರಿ ಹೋಟೆಲ್ ಇಲ್ಲದಿದ್ದದ್ದನ್ನು ಗಮನಿಸಿ 1967 ರಲ್ಲಿ ತಮ್ಮ ಕುಟುಂಬಸ್ಥರೊಡನೆ ಹೋಟೆಲ್  ಬೃಂದಾವನವನ್ನು ಸ್ಥಾಪಿಸುತ್ತಾರೆ. ಆರಂಭದಲ್ಲಿ ಕೇವಲ ರೆಸ್ಟೋರೆಂಟ್ ಆರಂಭಿಸಿ ನಂತರ ಅಲ್ಲಿಯೇ ದೂರದ ಊರಿನಿಂದ ಬೆಂಗಳೂರಿಗೆ ಬಂದು ಉಳಿದುಕೊಳ್ಳುವವರಿಗೆ ಅನುಕೂಲವಾಗುವಂತೆ ಕೊಠಡಿಗಳನ್ನೂ ನಿರ್ಮಿಸುತ್ತಾರೆ.

ಮೂಲತಃ ಉಡುಪಿಯವರಾಗಿದ್ದು ಕೆಲ ಕಾಲ ಮದ್ರಾಸಿನಲ್ಲಿಯೂ ಹೋಟೆಲ್ ಉದ್ಯಮ ನಡೆಸಿದ್ದ ಕಾರಣ ಬೃಂದಾವನ್ ಹೋಟೇಲ್ ಉಡುಪಿ ಮತ್ತು ಮದ್ರಾಸ್  ಪಾಕಶಾಸ್ತ್ರದ ಸಮಾಗಮವಾಗಿದ್ದು  ಬಹುತೇಕ ತಿಂಡಿಗಳಾದ ಇಡ್ಲಿ, ದೋಸೇ, ಪೊಂಗಲ್ ಉಪ್ಪಿಟ್ಟುಗಳು ಮದ್ರಾಸ್ ಶೈಲಿಯದ್ದಾಗಿದ್ದರೇ, ಊಟ ಮಾತ್ರಾ ಅಪ್ಪಟ  ಉಡುಪಿಯ ಶೈಲಿಯಲ್ಲಿದ್ದ ಕಾರಣ ಬಹಳ ಬೇಗ ಜನಾಕರ್ಷಣಿಯವಾದ ಕೇಂದ್ರವಾಗುತ್ತದೆ.

ಆರಂಭದಲ್ಲಿ ಕೇವಲ ರೂ 2.50ಕ್ಕೆಲ್ಲಾ ಅನಿಯಮಿತ ಊಟವನ್ನು ಉಣ ಬಡಿಸುತ್ತಿದ್ದ ಕಾರಣ ಬಹುತೇಕ ಅವಿವಾಹಿತರ ಮೆಚ್ಚಿನತಾಣವಾಗಿ ಮಾರ್ಪಾಟಾಗುತ್ತದೆ. ವಯಕ್ತಿಕವಾಗಿ ಹೇಳಬೇಕೆಂದರೆ, 90ರ ದಶಕದಲ್ಲಿ ನಾನು ಕೆಲಸ ಮಾಡುತ್ತಿದ್ದ ಸಣ್ಣದಾದ ಸಾಫ್ಟ್ವೇರ್ ಕಂಪನಿ ಮಲ್ಲೇಶ್ವರಂನಿಂದ ಪ್ರತಿಷ್ಟಿತ ಎಂ.ಜಿ ರಸ್ತೆಗೆ ವರ್ಗಾವಣೆಯಾದಾಗಲೇ ಸಹೋದ್ಯೋಗಿಯೊಬ್ಬನಿಂದ ಈ ಬೃಂದಾವನ್ ಹೋಟೆಲ್ ಪರಿವಯವಾಗುತ್ತದೆ. ವಾರ ಪೂರ್ತಿ ಮನೆಯಿಂದ ಡಬ್ಬಿಯ ಊಟ ಮಾಡಿದರೆ, ಶನಿವಾರ ಮಧ್ಯಾಹ್ನ ಮಾತ್ರ ಗೆಳೆಯರೊಟ್ಟಿಗೆ ಬೃಂದಾವನ್ ಹೋಟೆಲ್ಲಿನಲ್ಲಿ ಊಟ ಮಾಡುವುದು ಒಂದು ರೀತಿಯ ಅಲಿಖಿತ ನಿಯಮವಾಗಿ ಹೋಗುತ್ತದೆ.

ಆಗ 25ರೂಪಾಯಿಗಳಿಗೆ ಅನಿಯಮಿತ ಊಟ ಉಣಬಡಿಸುತ್ತಿರುತ್ತಾರೆ. ಶನಿವಾರ ಮಧ್ಯಾಹ್ನ  12 ರಿಂದ 1 ಗಂಟೆಯೊಳಗೆ ಹೋದಲ್ಲಿ ಮಾತ್ರವೇ  ನೆಮ್ಮದಿಯಾಗಿ ಊಟ ಮಾಡಬಹುದಾಗಿತ್ತು. ಅಕಸ್ಮಾತ್ ತಡವಾಗಿ ಹೋದಲ್ಲಿ ಎಲ್ಲಾ ಟೇಬಲ್ಗಳೂ ಭರ್ತಿಯಾಗಿ  ಸರದಿಯಲ್ಲಿ ನಿಲ್ಲಬೇಕಿತ್ತು.  ಆನಂತರದ ದಿನಗಳಲ್ಲಿ ಅಲ್ಲಿನ ಪರಿಚಾರಕರುಗಳು ಪರಿಚಯವಾಗಿದ್ದ ಕಾರಣ ಎಷ್ಟೇ ಹೊತ್ತಿಗೆ ಹೋದರೂ ನಮಗೆ ಸ್ಥಳಾವಕಾಶ ಮಾಡಿಕೊಡುತ್ತಿದ್ದರು.

ಅಗಲವಾದ ಬಾಳೇ ಎಲೆಯನ್ನು ಹಾಸಿ ಅದರ ಮೇಲೆ ನೀರನ್ನು ಚುಮುಕಿಸಿ. ಎಲೆ ಕೊನೆಗೆ ಪಾಯಸ ಇಲ್ಲವೇ ಯಾವುದಾದರೊಂದು ಸಿಹಿ ತಿಂಡಿ, ನಂತರ ಬಗೆ ಬಗೆಯ ಪಲ್ಯಗಳು, ಉಪ್ಪಿನ ಕಾಯಿ ಬಡಿಸಿ ಮೃದುವಾದ ಕೈ ಅಗಲದ ಬಿಸಿಬಿಸಿಯಾದ ಚಪಾತಿ ಮತ್ತು ಸಾಗು ಬಡಿಸಿದ ತಕ್ಷಣವೇ ನಮ್ಮೆಲ್ಲಾ ಮಾತುಗಳಿಗೆ ಬ್ರೇಕ್ ಹಾಕಿ, ಕೈ ಬಾಯಿಗೆ ಕೆಲಸವನ್ನು ಕೊಡುತ್ತಿದ್ದೆವು, ಊಟ ಬಡಿಸುವ ಸಿಬ್ಬಂಧಿಯವರೂ ಸಹಾ ಒಂದು ಚೂರು ಬೇಸರವಿಲ್ಲದೇ, ಕೇಳಿದಷ್ಟು ಚಪಾತಿ ಮತ್ತು ಪಲ್ಯಗಳನ್ನು ನಗುಮುಖದಿಂದಲೇ ಬಡಿಸುತ್ತಿದ್ದ ಕಾರಣ ತುಸು ಹೆಚ್ಚೇ ತಿನ್ನುತ್ತಿದ್ದೆವು.  ನಮ್ಮ ಗೆಳೆಯರೊಂದಿಗೆ ಅಲ್ಲಿನ ಚಪಾತಿ ತಿನ್ನುವುದೇ ನಮ್ಮಲ್ಲಿ ಸ್ಪರ್ಧೆಯಾಗಿರುತ್ತಿತ್ತು. ಅಂತಿಮವಾಗಿ ನಾನು ಆರು ಚಪಾತಿ ತಿಂದೇ, ನಾನು ಎಂಟು, ಹತ್ತು ಎಂದು ಚಪಾತಿ ತಿನ್ನುವುದರಲ್ಲಿಯೇ ನಮ್ಮ ಪೌರುಷವನ್ನು ಕೊಚ್ಚಿಕೊಳ್ಳುತ್ತಿದ್ದೆವು. ಅಷ್ಟೆಲ್ಲಾ ಚಪಾತಿ ತಿಂದ ಮೇಲೆ ಅನ್ನ ತಿನ್ನುವುದಕ್ಕೆ ಹೊಟ್ಟೆಯಲ್ಲಿ ಜಾಗವೇ ಇಲ್ಲದಿದ್ದರೂ, ಅಲ್ಲಿಯ ಸಾರು ಮತ್ತು ಹುಳಿಯ ರುಚಿಯನ್ನು ಸವಿಯಲೆಂದೇ ಸ್ವಲ್ಪ ಸ್ವಲ್ಪ ಅನ್ನವನ್ನು ಹಾಕಿಸಿಕೊಂಡು ಗಡದ್ದಾಗಿ ತಿಂದು ಡರ್ ಎಂದು ತೇಗಿ ಕೈತೊಳೆದುಕೊಂಡು ಹೊರಬಂದರೆ ಅದೇನೋ ಸಾಧಿಸಿದ ಸಂತೃಪ್ತಿ ದೊರೆಯುತ್ತಿತ್ತು.

ಇನ್ನೂ ಸ್ವಲ್ಪ ದಿನಗಳ ನಂತರ ನಾವು ಗೆಳೆಯರು ಯಾವುದಾದರೂ ಬೆಟ್ಟಿಂಗ್  ಕಟ್ಟಬೇಕೆಂದರೆ ಅದು ಬೃಂದಾವನ್ ಹೋಟೆಲ್ಲಿನ ಊಟದ ಲೆಕ್ಕದಲ್ಲಿಿ ಇರುತ್ತಿತ್ತು. ಯಾರು ಪಂದ್ಯ ಸೋಲುತ್ತಾರೋ ಅವರು ಉಳಿದವರಿಗೆಲ್ಲರಿಗೂ ಬೃಂದಾವನ್ ಹೋಟೆಲ್ಲಿನಲ್ಲಿ ಊಟವನ್ನು ಕೊಡಿಸಬೇಕಾಗಿತ್ತು.

ಆದಾದ ಕೆಲ ವರ್ಷಗಳ ನಂತರ ಬೃಂದಾವನ್ ಹೋಟೆಲ್ಲಿನ ಪಕ್ಕದಲ್ಲಿಯೇ ಇರುವ United mansion ಕಟ್ಟದಲ್ಲಿ Zee ಸಮೂಹಕ್ಕೆ ಕೆಲಸಕ್ಕೆ ಸೇರಿದ ಮೇಲಂತೂ ಬೃಂದಾವನ್ ಹೋಟೆಲ್ಲಿಗೂ ನಮಗೂ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು, ಆ ಸಮಯದಲ್ಲಿ ಊಟಕ್ಕೆ 65 ರೂಪಾಯಿಗಳನ್ನು ನಿಗಧಿ ಪಡಿಸಿದ್ದರೂ  ಅಲ್ಲಿನ ಸವಿಸವಿಯಾದ ಊಟದ ಮುಂದೆ ಈ ಬೆಲೆ ಹೆಚ್ಚೆನಿಸದೇ  ಅದೆಷ್ಟು ಬಾರಿ ಅಲ್ಲಿನ ಊಟವನ್ನು ಸವಿದಿದ್ದೇವೋ ನೆನಪೇ ಇಲ್ಲ. ಕಾಡುಗಳ್ಳ ವೀರಪ್ಪನ್ ಭೀಮನ ಅಮವಾಸ್ಯೆಯ ಕಗ್ಗತ್ತಲಿನಲ್ಲಿ ರಾಜಕುಮಾರ್ ಆವರನ್ನು ಅವರ ಹುಟ್ಟೂರು ಗಾಜನೂರಿನಿಂದ ಅಪಹರಿಸಿಕೊಂಡು ಹೋದಾಗ ಮೂರ್ನಲ್ಕು ದಿನ ಬೆಂಗಳೂರು ಅಕ್ಷರಶಃ ಬಂದ್ ಆಗಿತ್ತು. ಇದೇ ಪ್ರಯುಕ್ತ ದಿನದ  ಇಪ್ಪನ್ನಾಲ್ಕು ಗಂಟೆ ಕೆಲಸ ಮಾಡುವ ಕೆಲ ಸಿಬ್ಬಂಧಿಗಳು ನಮ್ಮ ಕಛೇರಿಯಿಂದ ಹೊರಬರಲಾಗದೇ ಕಛೇರಿಯಲ್ಲಿಯೇ ಉಳಿಯುವಂತಾದಾಗ, ಇದೇ ಬೃಂದಾವನ್ ಹೋಟೆಲ್ಲಿನವರೇ ನಮ್ಮ ಕಛೇರಿಯ ಸಿಬ್ಬಂಧಿಗಳಿಗೆ ಹಿಂದಿನ ಬಾಗಿಲಿನಿಂದ ಊಟ ತಿಂಡಿಯ ಜವಾಬ್ಧಾರಿಯನ್ನು  ನೋಡಿಕೊಂಡಿದ್ದರು.

ಎಂ.ಜಿ ರಸ್ತೆಯಲ್ಲಿನ ಕೆಲಸ ಬಿಟ್ಟು ಕೋರಮಂಗಲದಲ್ಲಿ ಕೆಲಸ ಮಾಡುತ್ತಿದ್ದರೂ ಅಗೊಮ್ಮೆ ಈಗೊಮ್ಮೆ ಗೆಳೆಯರೊಡನೆ ಬೃಂದಾವನ್ ಹೋಟೆಲ್ಲಿಗೆ ಬಂದು ಊಟ ಮಾಡುತ್ತಿದ್ದೆವು. ಯಾವಾಗ ಎಂಜಿ ರಸ್ತೆಯಲ್ಲಿ ಮೆಟ್ರೋ ಕೆಲಸ ಆರಂಭವಾಯಿತೋ ಅಲ್ಲಿಂದ  ಎಂಜಿ ರಸ್ತೆಯ ಬಹುತೇಕರ ವ್ಯಾಪಾರಕ್ಕೆ ಹೊಡೆತ ಬಿತ್ತು.  ಅಂತಹ ಹೊಡೆತಕ್ಕೆ ಬೃಂದಾವನ್ ಹೋಟೆಲ್ಲಿನವರೂ ಹೊರಬರಲಾಗದೇ ಅಂತಿಮವಾಗಿ ಸುಮಾರು 45 ವರ್ಷಗಳ ಸುಧೀರ್ಘವಾದ ವ್ಯಾಪಾರದ  ನಂತರ 2012ರಲ್ಲಿ ಬೃಂದಾವನ್ ಹೋಟೆಲ್ಲನ್ನು ಮುಚ್ಚಲು ನಿರ್ಧರಿಸಿದ್ದರು.

ಅದೊಂದು ಮಂಗಳವಾರ, ಬೃಂದಾವನ್ ಹೋಟೆಲ್ಲಿನಲ್ಲಿ ಖಾಯಂ ಆಗಿ ಊಟ ಮಾಡುತ್ತಿದ್ದವರು ನಾಳೇ ಹೋಟೆಲ್ ಇಲ್ಲಾ ಎಂಬ ಬೋರ್ಡ್ ನೋಡಿ, ಅರೇ ಇದೇನಿದು ನಾಳೆ ಏಕೆ ಹೋಟೆಲ್ ಬಂದ್ ಎಂದು ವಿಚಾರಿಸಿದಾಗ, ಕೇವಲ ನಾಳೇ ಮಾತ್ರವಲ್ಲಾ. ಇನ್ನು ಮುಂದೆ  ಖಾಯಂ ಆಗಿ ಬೃಂದಾವನ್ ಹೋಟೆಲ್ ಮುಚ್ಚಲಾಗಿದೆ ಎಂದು ತಿಳಿಸಿದಾಗ ಅದೆಷ್ಟೋ ಜನರು ಮರುಗಿದ್ದುಂಟು.  ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರ ಇಡ್ಲಿ ಸಾಂಬಾರ್ ಚೆಟ್ನಿ, ದೋಸೆ, ಪೂರಿ ಯಂತಹ ತಿಂಡಿ ಫಿಲ್ಟರ್ ಕಾಫೀ, ಟೀಗಳನ್ನು ಕೈ ಗೆಟುಕುವ ಬೆಲೆಯಲ್ಲಿ ಸವಿಯಬಹುದಾಗಿದ್ದಂತಹ, ಬೃಂದಾವನ್ ಹೋಟೆಲ್ ಶಾಶ್ವತವಾಗಿ ಮುಚ್ಚಲಾಗಿತ್ತು.

ರಾಮಕೃಷ್ಣ ರಾವ್  ಅವರು ಆರಂಭಿಸಿದ್ದ ಬೃಂದಾವನ್ ಹೋಟೆಲ್ಲನ್ನು ಅವರ ಸಹೋದರರಾಗಿದ್ದ  ಶಂಕರ್ ರಾವ್, ಮತ್ತು  ಅವರ ಕುಟುಂಬದ ಕುಡಿಗಳಾಗಿದ್ದ ಎ. ಮೋಹನ್ ರಾವ್, ಶ್ರೀನಿವಾಸ ರಾವ್ ಮತ್ತು ನೂರಕ್ಕೂ ಹೆಚ್ಚಿನ ಸಿಬ್ಬಂದಿಗಳು ಅಕ್ಷರಶಃ ನಿರುದ್ಯೋಗಿಗಳಾಗುತ್ತಾರೆ.  ಅಲ್ಲಿನ ಸಿಬ್ಬಂಧಿಗಳಿಗೆ ತಮ್ಮ ಉಡುಪಿ ಮೂಲದ ಅನೇಕ ಹೋಟೆಲ್ಲಿನಲ್ಲಿ ಕೆಲವನ್ನು ಹುಡುಕಿಕೊಡುವ ಮೂಲಕ ತಮ್ಮೊಂದಿಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದವರ ಬದಕನ್ನು ಹಸನು ಮಾಡುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯುತ್ತಾರೆ.

ಮಹಾತ್ಮ ಗಾಂಧಿ ರಸ್ತೆಯ ಹೆಗ್ಗುರುತಾಗಿದ್ದ 1967ರಲ್ಲಿ 46,000 ಚದರ ಅಡಿ ವಿಸ್ತೀರ್ಣದ ಹೋಟೆಲ್ ಭೂಮಿಯನ್ನು ಕೇವಲ 25 ಸಾವಿರ ರೂಗಳಿಗೆ ಸ್ವಾಧೀನಪಡಿಸಿಕೊಂಡು ಬೃಂದಾವನ್ ಹೋಟೆಲನ್ನು ಆರಂಭಿಸಿದ್ದ ರಾವ್ ಕುಟುಂಬ ಅದನ್ನು 2012 ರಲ್ಲಿ ಕೇವಲ  82 ಕೋಟಿ ರೂ.ಗಳಿಗೆ ಶುಭಂ ಜ್ಯುವಲರಿ ಖ್ಯಾತಿಯ ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ಮೆಹ್ತಾರವರು ನಗರದ ಹೃದಯ ಭಾಗದಲ್ಲಿ ತಮ್ಮ  ಖಾಸಗಿ ನಿವಾಸಕ್ಕಾಗಿ ಹುಡುಕುತ್ತಿದ್ದ ಜಾಗಕ್ಕಾಗಿ ಮಾರಾಟ ಮಾಡುತ್ತಾರೆ. ನಿಜ ಹೇಳೆಬೇಕೆಂದರೆ, ಮಾರುಕಟ್ಟೆಯ ಆಸ್ತಿಯ  ಮೌಲ್ಯ ಅದಕ್ಕಿಂತಲೂ ಹೆಚ್ಚೇ ಇದ್ದರೂ. Carvery Emporium ಮತ್ತು United mansion ಕಟ್ಟಡಗಳ ನಡುವೆ ಕಿರಿದಾದ ರಸ್ತೆಯಿಂದ ಈ ಪ್ರದೇಶಕ್ಕೆ ಹೋಗಬೇಕಿರುವ ಕಾರಣದಿಂದಾಗಿ ಇದು  ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗಿರವಹುದು.

ಈ ಮೂಲಕ ದೂರದೂರದ  ಪ್ರಯಾಣಿಕರಿಗೆ ವಸತಿ ಒದಗಿಸುವುದರ ಹೊರತಾಗಿ, ಸ್ವಾದಿಷ್ಟವಾದ ಮತ್ತು ರುಚಿಕರವಾದ ಭಕ್ಷ್ಯಗಳನ್ನು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಉಣಬಡಿಸಿದ ಬೃಂದಾವನ್ ಹೋಟೆಲ್ ಅಧಿಕೃತವಾಗಿ ಇತಿಹಾಸದ ಪುಟಕ್ಕೆ ಸೇರಿಹೋಗಿದ್ದು  ಅತ್ಯಂತ ದುಃಖಕರವೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

ಅವಕಾಶವಾದಿಗಳು

ಕರ್ನಾಟಕದ ರಾಜಾಧಾನಿಯಾದ ಬೆಂಗಳೂರು ಒಂದು ರೀತಿಯ ಮಾಯಾನಗರಿಯೇ ಹೌದು. ಭಾರತದ ವಾಣಿಜ್ಯ ನಗರಿ ಮುಂಬೈ ಮತ್ತು ರಾಜಧಾನಿ ದೆಹಲಿಯ ನಂತರದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಹಾಗಾಗೀಯೇ ಪ್ರತೀ ದಿನ ಈ ನಗರಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯಕ್ಕಾಗಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಬಂದು ಹೋಗುತ್ತಿದ್ದರೂ, ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಕೈಬೀಸಿ ಕರೆಯುವ ಏಕೈಕ ನಗರ ಎಂಬ ಹೆಗ್ಗಳಿಕೆಯೂ ನಮ್ಮ ಬೆಂಗಳೂರಿನದ್ದೇ.

kemp

ಕ್ರಿ.ಶ. 1573ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿತವಾದ ಈ ಬೆಂಗಳೂರು ನಗರ ಈ ಪರಿಯಾಗಿ ಬೆಳೆಯಬಹುದು ಎಂದು ಅಂದೇ ಕಲ್ಪನೆ ಮಾಡಿಕೊಂಡಿದ್ದ ಕೆಂಪೇಗೌಡರು ಅಂದಿನ ಕಾಲಕ್ಕೆ ಬೆಂಗಳೂರಿನ ಹೊರವಲಯಗಳಾಗಿ ನಾಲ್ಕು ಗೋಪುರಗಳನ್ನು ನಿರ್ಮಿಸಿ ನಗರ ಇದಕ್ಕಿಂದ ಹೆಚ್ಚಾಗಿ ಯಾವ ಕಾರಣಕ್ಕೂ ಬೆಳೆಯಬಾರದು ಎಂದಿದ್ದರಂತೆ. ಆದರೆ ಅವರಂದು ನಿರ್ಮಿಸಿದ್ದ ಗಡಿ ಗೋಪುರಗಳು ಇಂದು ಬೆಂಗಳೂರಿನ ಹೃದಯಭಾಗವಾಗಿದ್ದು ಅದಕ್ಕಿಂತ ಅದೆಷ್ಟೋ ಪಟ್ಟು ಬೆಳೆದು ಬಿಟ್ಟಿದೆ ಮತ್ತು ನಿರಂತರವಾಗಿ ಬೆಳೆಯುತ್ತಲೇ ಇದೆ. ದೇವನಹಳ್ಳಿಯಿಂದ ಹೊಸೂರಿನವರೆಗೆ, ಹೊಸಕೋಟೆಯಿಂದ ನೆಲಮಂಗಲ ದಾಟಿ ಕುಣಿಗಲ್ ವರೆಗೂ ಒಂದು ಕಡೆಯಾದರೇ, ಮತ್ತೊಂದೆಡೆ ಬಿಡದಿ ದಾಟಿ ರಾಮನಗರವೂ ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ಭಾಗವಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುವಂತಾಗಿದೆ.

ನೂರಾರು ಕೆರೆಗಳು ಮತ್ತು ಹತ್ತಾರು ದೊಡ್ಡ ಉದ್ಯಾನವನಗಳಿಂದ ಕೂಡಿದ್ದು ಉದ್ಯಾನ ನಗರೀ ಎಂದೇ ಖ್ಯಾತವಾಗಿದ್ದ ಬೆಂಗಳೂರಿನಲ್ಲಿ ಇಂದು ಮೊದಲಿನಷ್ಟು ಕೆರೆ ಕಟ್ಟೆಗಳು ಇಲ್ಲದಿದ್ದರೂ ಇಂದಿಗೂ ಸಹಾ ಅಲ್ಪ ಸ್ವಲ್ಪ ಇರುವ ಹಸಿರಿನಿಂದಾಗಿ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಇನ್ನು ಇಲ್ಲಿನ ಜನರಾದ ಕನ್ನಡಿಗರ ಬಳಿ ಬಾಯಾರಿ, ಕುಡಿಯಲು ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನೂ ಕೊಡುವಂತಹ ಔದಾರ್ಯವಂತರು ಮತ್ತು ತಮ್ಮ ಕನ್ನಡವನ್ನೂ ಬದಿಗಿಟ್ಟು ಆಯಾಯಾ ಭಾಷೆಯಲ್ಲಿಯೇ ಉತ್ತರಿಸುವ ಭಾಷಾ ಅಭಿಮಾನವಿಲ್ಲದವರು. ಹಾಗಾಗಿಯೇ ಈ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚು

ದೇಶದಲ್ಲಿಯೇ ಅತ್ಯಂತ ಹೆಚ್ಚಾಗಿ ಡಿಪ್ಲಮೋ, ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜುಗಳು ಇರುವುದು ಬೆಂಗಳೂರಿನಲ್ಲಿಯೇ. ಇನ್ನು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ರಾಮನ್ ಇನಿಸ್ಟಿಟ್ಯೂಟ್, ಜೆ.ಎನ್.ಸಿ, ಜಿಕೆವಿಕೆ ಮತ್ತು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಮ್)ಗಳಂತಹ ವಿದ್ಯಾಸಂಸ್ಥೆಗಳು ಇಲ್ಲಿರುವ ಕಾರಣ ದೇಶ ವಿದೇಶಗಳಿಂದಲೂ ಜ್ಞಾನಾರ್ಜನೆಗಾಗಿ ಪ್ರತೀವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದು ವ್ಯಾಸಂಗ ಮಾಡುತ್ತಿದ್ದಾರೆ.

ದೇಶದ ಸಾರ್ವಜನಿಕ ಉದ್ದಿಮೆಗಳಾದ, ಐಟಿಐ, ಹೆಚ್.ಎಂ.ಟಿ. ಬಿಇಎಲ್, ಹೆಚ್.ಏ.ಎಲ್ , ಬಿ.ಹೆಚ್.ಇ.ಎಲ್ ಬಿಇಎಂಎಲ್ ಗಳಿಂದ ಹಿಡಿದು ಜಗತ್ತಿನ ಮಾಹಿತಿ ತಂತ್ರಜ್ಞಾನ ದಿಗ್ಗಜರಾದ ಇನ್ಫೋಸಿಸಿ, ವಿಪ್ರೋ, ಟಿಸಿಎಸ್ ನಂತಹ ನೂರಾರು ಸ್ವದೇಶೀ ಕಂಪನಿಗಳ ಜೊತೆಗೆ, ಸಿಸ್ಕೋ, ಹನಿವೆಲ್, ಅಕ್ಸೆಂಚರ್ ಮುಂತಾದ ಸಾವಿರಾರು ಬಹುರಾಷ್ಟ್ರೀಯ ದೊಡ್ಡ ಮತ್ತು ಸಣ್ಣ ಸಣ್ಣ ಕಂಪನಿಗಳೂ ಬೆಂಗಳೂರಿನಲ್ಲಿ ತಮ್ಮ ಶಾಖೆಯನ್ನು ಹೊಂದುವುದು ತಮ್ಮ ಘನತೆ ಎಂದು ಭಾವಿಸಿದ್ದರಿಂದ ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧವಾಗಿದೆ ನಮ್ಮ ಬೆಂಗಳೂರು ನಗರ.

ಸದಾಕಾಲವೂ ಉಷ್ಣವಲಯದ ವಾತಾವರಣವಿರುವ ಈ ನಗರದಲ್ಲಿ ಕಾಲಕಾಲಕ್ಕೆ ತಕ್ಕಷ್ಟು ಮಳೆ, ಬೇಸಿಗೆಗಾಲದಲ್ಲಿ ತಂಪಾಗಿ ತಾಪಮಾನವು 20 ರಿಂದ 36 ಡಿಗ್ರಿಯಿದ್ದು, , ಚಳಿಗಾಲದಲ್ಲಿ ಬೆಚ್ಚಗೆ 16 ರಿಂದ 27 ಡಿಗ್ರಿಯಾಗಿರುವ ಸುಂದರ ವಾತಾವರಣದಿಂದಾಗಿ ನಿವೃತ್ತಿ ಹೊಂದಿದವರ ಸ್ವರ್ಗ ಎಂದೇ ಕರೆಯುವುದರಿಂದ ನಾನಾ ಉನ್ನತ ಹುದ್ದೆಯಲ್ಲಿರುವವರು, ಕ್ರೀಡಾಪಟುಗಳು, ಚಲನಚಿತ್ರನಟರುಗಳು, ರಾಜಕಾರಣಿಗಳು, ನ್ಯಾಯಾಧೀಶರುಗಳು ತಮ್ಮ ನಿವೃತ್ತಿ ಹೊಂದಿದ ನಂತರ ಬೆಂಗಳೂರಿನಲ್ಲಿಯೇ ಐಶಾರಾಮ್ಯವಾಗಿ ಜೀವನ ನಡೆಸಲು ಬಯಸುತ್ತಿದ್ದಾರೆ.

ನಗರ ಈ ಪರಿಯಾಗಿ ಬೆಳೆಯುತ್ತಿದ್ದಂತೆಯೇ ನಮ್ಮ ಕಲೆ, ಸಂಸ್ಕೃತಿ ನಮ್ಮ ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟು ತಮಿಳರು, ತೆಲುಗರು, ಮಲಯಾಳಿಗಳು ಬೆಂಗಳೂರಿನತ್ತ ಧಾವಿಸಿ ಒಂದೊಂದು ಬಡಾವಣೆಗಳನ್ನು ಆಕ್ರಮಿಸಿತೊಡಗಿದರು. ಬೆಂಗಳೂರು ದಂಡು ಮತ್ತು ಸುತ್ತಮುತ್ತಲಿನ ಪ್ರಾಂತ್ಯ ತಮಿಳರು ಆಕ್ರಮಿಸಿಕೊಂಡರೆ, ಕೋರಮಂಗಲ, ಬೊಮ್ಮನಹಳ್ಳಿ ಒಂದು ಕಡೆಯಾದರೆ, ವೈಟ್ ಫೀಲ್ಡ್, ಯಲಹಂಕ ಸುತ್ತಮುತ್ತಲಿನ ಸಾವಿರಾರು ಎಕರೆ ಜಮೀನುಗಳು ಆಂದ್ರಾದ ರೆಡ್ಡಿಗಳ ಪಾಲಾದವು. ಅಕ್ಕೀಪೇಟೆ, ಬಳೇ ಪೇಟೆ, ತಿಗರಳ ಪೇಟೆ, ಚಿಕ್ಕಪೇಟೆ ಎಂಬು ವಾಣಿಜ್ಯ ಪ್ರದೇಶಗಳಲ್ಲಿ ಸದ್ದಿಲ್ಲದೆ ಮಾರ್ವಾಡಿಗಳ ಪಾಲಾದದ್ದು ಕನ್ನಡಿಗರ ಗಮನಕ್ಕೇ ಬರಲೇ ಇಲ್ಲ. ಹೊರಗಿನಿಂದ ಬಂದವರೆಲ್ಲರೂ ನಮ್ಮ ಬಂಧು ಬಾಂಧವರೆನೋ ಎನ್ನುವಷ್ಟರ ಮಟ್ಟಿಗೆ ಆದರ ಆತಿಥ್ಯಗಳಿಂದ ಬರಮಾಡಿಕೊಂಡು ಇದ್ದದ್ದನ್ನೆಲ್ಲವನ್ನೂ ಅವರಿಗೆ ಕೊಟ್ಟು ಅವರದ್ದೇ ಜಾಗದಲ್ಲಿ ದೊಡ್ಡ ದೊಡ್ದ ಗಗನಚುಂಬಿ ಕಟ್ಟಗಳು ಏಳಲಾರಂಭಿಸಿವು. ಈ ಕಟ್ಟಡಗಳ ಕೂಲಿ ಕೆಲಸಕ್ಕಾಗಿ ದೂರದ ರಾಜಸ್ಥಾನ ಮತ್ತು ಬಿಹಾರದಿಂದ ಲಕ್ಷಾಂತರ ಕಾರ್ಮಿಕರು ಬೆಂಗಳೂರಿಗೆ ಬಂದು ಕೈತುಂಬಾ ಕೆಲಸ , ಜೇಬು ತುಂಬಾ ಹಣ, ಹೊಟ್ಟೆ ತುಂಬಾ ಊಟ ಮತ್ತು ಕಣ್ತುಂಬಾ ನಿದ್ದೆಯನ್ನು ಕಾಣುವಂತಾಗಿದ್ದಲ್ಲದೇ ಹೆಚ್ಚಿನ ಹಣವನ್ನು ಉಳಿಸಿ ಊರಿಗೂ ಕಳುಹಿಸತೊಡಗಿದರು. ಇನ್ನು ಈ ಗಗನ ಚುಂಬಿ ಕಟ್ಟಡಗಳನ್ನು ರಕ್ಷಿಸುವವ ಕಾರ್ಯಕ್ಕೆ ಒರಿಸ್ಸಾದವರು ಹಿಂಡುಗಟ್ಟಲೆ ಬಂದರು.

ಹೀಗೆ ಎಗ್ಗಿಲ್ಲದೇ ವಲಸಿಗರು ಬಂದ ಕಾರಣ ಬೆಂಗಳೂರಿನ ಸಂಸ್ಕೃತಿಯೆಲ್ಲವೂ ಮಾಯವಾಗಿ ದೇಶದ ಹತ್ತು ಹಲವಾರು ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳೂ ಸಮ್ಮಿಲನಗೊಂಡು ಕಾಸ್ಮೊಪಾಲಿಟನ್ ಸಿಟಿ ಎಂದಾಗಿದ್ದಲ್ಲದೇ, ಈ ನಗರ ಬಹುಸಂಸ್ಕೃತಿ ಹಾಗೂ ಬಹುಜನಾಂಗೀಯ ನಗರವಾಗಿ ಕೆಲವೇ ದಿನಗಳಲ್ಲಿ ಪರಿವರ್ತಿತವಾಗತೊಡಗಿತು.

ಇನ್ನು ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ ಗಳಂತಹ ಆಕರ್ಷಣೀಯ ತಾಣಗಳು ಹಳೆಯದಾಗಿ ಹೋಗಿ ನಗರಾದ್ಯಂತ ಎಲ್ಲೆಂದರಲ್ಲಿ ಮಾಲ್ ಗಳು ತಲೆ ಎತ್ತಿ, ಅಲ್ಲಿ ಮಲ್ಟೀಪ್ಲೆಕ್ಸ್ ಸಿನಿಮಾಗಳು, ಪಬ್ ಗಳು, ಡಿಸ್ಕೋಥೆಕ್ಗಳು ತುಂಬಿ ಹೋಗಿ ಉದ್ಯಾನನಗರಿ ಕ್ರಮೇಣ ಪಬ್ ನಗರಿಯಾಗಿ ಮಾರ್ಪಾಟಾಗಿದ್ದು ವಿಪರ್ಯಾಯವೇ ಸರಿ.

ಯಾವಾಗ ಈ ಮಾಲ್ಗಳು ಬಂದವೋ ಆಗಲೇ ನಮ್ಮ ಇಡ್ಲೀ ಸಾಂಬಾರ್, ಚೆಟ್ನಿ ರಾಗಿ ಮುದ್ದೆ ಬಸ್ಸಾರುಗಳ ಹೋಟೆಲ್ಗಳು ಮಾಯವಾಗಿ ಮಾಲ್ಗಳ ಫುಡ್ ಕೋರ್ಟ್ಗಳಲ್ಲಿ ವಿವಿಧ ಬಗೆಯ ಅಂತರಾಷ್ಟ್ರೀಯ ಖಾದ್ಯಗಳ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಪೀಜ್ಜಾ ಹಟ್, ಕಾರ್ನಗಳ ಔಟ್ ಲೆಟ್ ತಲೆ ಎತ್ತಿದವು. ಈ ಎಲ್ಲಾ ಔಟ್ಲೆಟ್ಗಳಲ್ಲಿ ಬಾಣಸಿಗರಾಗಿ ಮತ್ತು ಸಹಾಯಕರಾಗಿ ಪೂರ್ವಾಂಚಲದವರು ಬೆಂಗಳೂರಿಗೆ ಬರುವುದರ ಜೊತೆಗೆ ಅವರೊಂದಿಗೆ ಬಗೆ ಬಗೆಯ ಚೈನೀಸ್ ಖಾದ್ಯಗಳು ಮೋಮೊಸ್ಗಳನ್ನು ಕನ್ನಡಿಗರಿಗೆ ಪರಿಚಯಿಸಿ ಮಧ್ಯರಾತ್ರಿ ಎರಡುಗಂಟೆಯಾದರೂ ಯುವಜನಾಂಗ ಈ ಎಲ್ಲಾ ಅಡ್ಡಾಗಳಲ್ಲಿ ಅಲೆದಾಡುವ ಮೂಲಕ ಬೆಂಗಳೂರಿನ ರಾತ್ರಿ ಜೀವನವನ್ನು ಮೋಜು ಮಾಡ ತೊಡಗಿದರು.

ಈ ರೀತಿಯಾಗಿ ದೇಶದ ಎಲ್ಲಾ ಜನರಿಗೂ ನಮ್ಮ ಬೆಂಗಳೂರು ಆಶ್ರಯ ತಾಣವಾದರೇ ಇನ್ನು ನಮ್ಮದೇ ಕರ್ನಾಟಕದ ಹಳ್ಳಿಗಳಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಮಳೇ ಬರದೇ ಯಾವಾಗ ಕೃಷಿ ಮತ್ತು ಹೈನೋದ್ಯಮಕ್ಕೆ ಹೊಡೆತ ಬಿತ್ತೋ ಆಗ ಅಲ್ಲಿಯವರೂ ತಮ್ಮ ತಮ್ಮ ಹಳ್ಳಿ ಬಿಟ್ಟು ಬೆಂಗಳೂರಿನ ಗಾರ್ಮೆಂಟ್ಸುಗಳಲ್ಲಿ ದುಡಿಯತೊಡಗಿದರು. ಇನ್ನು ಎಲ್ಲವೂ ಚೆನ್ನಾಗಿಯೇ ಇದ್ದರೂ ಮೈಮುರಿದು ದುಡಿಯಲಾಗದ ಸೋಮಾರಿಗಳಿಗೂ ಬೆಂಗಳೂರಿನಲ್ಲಿ ಅವರವರ ಇಚ್ಛೆಗೆ ಅನುಗುಣವಾದ ಕೆಲಸ ಕಾರ್ಯ ಮಾಡಿಕೊಂಡಿದ್ದವರೆಲ್ಲರಿಗೂ ಬೆಂಗಳೂರು ಸ್ವರ್ಗವಾಗಿತ್ತು.

bang2

ಆದರೆ ಯಾವಾಗ ಈ ಕೂರೋನಾ ಎಂಬ ಮಹಾಮಾರಿ ಜಗತ್ತನ್ನೇ ಆವರಿಸಿಕೊಂಡಿತೋ ಆಗಾ ಸರ್ಕಾರವೂ ಮುನ್ನೆಚ್ಚರಿಕೆಯ ಕ್ರಮವಾಗಿ ಲಾಕ್ ಡೌನ್ ಘೋಷಿಸಿ ಎಲ್ಲರೂ ದಯವಿಟ್ಟು ತಮ್ಮ ಮನೆಗಳಿಂದ ಹೊರಬರದಿರುವ ಮೂಲಕ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಿ ಎಂದು ಕೋರಿತಲ್ಲದೇ. ಪಡಿತರ ವ್ಯವಸ್ಥೆಗಳ ಮೂಲಕ ಆವರಿಗೆ ದಿನಸಿಗಳ ವ್ಯವಸ್ಥೆಯನ್ನೂ ಮಾಡಿತು. ಸರ್ಕಾರವಲ್ಲದೇ ಅನೇಕ ಸಂಘ ಸಂಸ್ಥೆಗಳು, ಸ್ಥಳೀಯ ಮಾಜೀ, ಭಾವೀ, ಹಾಲೀ ಪಾಲಿಕೆ ಸದಸ್ಯರುಗಳು, ಶಾಸಕರು, ಸಾಂಸರದರೆಲ್ಲರೂ ಅವರವರ ಕೈಲಾದ ಮಟ್ಟಿಗಿನ ಸಹಾಯವನ್ನೂ ಮಾಡುವ ಮೂಲಕ ಈ ವಲಸೇ ಕಾರ್ಮಿಕರು ಬೆಂಗಳೂರನ್ನು ಬಿಟ್ಟು ಹೊರ ಹೋಗದಂತೆ ಆರಂಭದಲ್ಲಿ ತಡೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆದರು.

ನಮ್ಮವರಿಗೆ ಹೇಳಿದ್ದರ ಹೊರತಾಗಿ ಮಾಡುವುದರಲ್ಲಿಯೇ ಏನೋ ಖುಷಿ. ಹಾಗಾಗಿ ಹೊರಗೆಲ್ಲೂ ಹೋಗಬೇಡಿ ಎಂದು ಪದೇ ಪದೇ ಎಚ್ಚರಿಸಿದರೂ ಅಂಡಲೆಯುವುದನ್ನು ಬಿಡಲೇ ಇಲ್ಲ. ಇನ್ನು ಸರ್ಕಾರ ಕೆಲ ರಾಜಕಾರಣಿಗಳ ಒತ್ತಡದ ಮೇಲೆ ಯಾವಾಗ ಅಂತರಾಜ್ಯ ಗಡಿಗಳನ್ನು ತೆರೆದರೋ ಕೂಡಲೇ ಕೂರೋನಾ ಮಹಾಮಾರಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರಣಕೇಕೆ ಹಾಕತೊಡಗಿತು. ದಿನೇ ದಿನೇ ಸಾವಿರಾರು ಪ್ರಕರಣಗಳು ದಾಖಲಾಗ ತೊಡಗಿದವೋ ಈ ಎಲ್ಲಾ ವಲಸಿಗರಿಗೂ ಬೆಂಗಳೂರು ಬೇಡದ ನಗರವಾಗಿ ಸರ್ಗವಾಗಿದ್ದ ನಗರ ಇದ್ದಕ್ಕಿದ್ದಂತೆಯೇ ಅವರಿಗೆ ನರಕವಾಗಿ‌ ಕಾಣತೊಡಗಿತು.

ಅದೇ ಭಯದಲ್ಲೇ ಆವರೆಲ್ಲರೂ ಬೆಂಗಳೂರನ್ನು ತ್ಯಜಿಸಿ ತಮ್ಮ ಊರಿನತ್ತ ಮುಖ ಮಾಡುತ್ತಿದ್ದಾರೆ. ಇಲ್ಲಿದ್ದು ಸಾಯುವ ಬದಲು ನಮ್ಮ ಊರಿನಲ್ಲೇ ಹಾಯಾಗಿ ಇರೋಣ ಎನ್ನುವ ತೀರ್ಮಾನ ಅವರದ್ದು. ಈ ಬೆಂಗಳೂರು ಸಾಕು, ಇಲ್ಲಿನ ಜೀವನಾನೂ ಸಾಕು, ಬದುಕಿದ್ರೆ ಬಸ್ ಸ್ಟಾಂಡಿನಲ್ಲಿ ಬಾಳೆ ಹಣ್ಣು ಅಥವಾ ಬಟಾಣಿ ಮಾರಿಕೊಂಡು ನಮ್ಮೂರಲ್ಲೇ ಬದುಕೋಣ ಎಂದು ಬೆಂಗಳೂರಿನಿಂದ ಗುಳೆ ಹೋಗಿತ್ತಿರುವ ಮಂದಿಯೆಲ್ಲಾ ಹೇಳುತ್ತಿದ್ದಾರೆ. ಹೀಗೆ ತಮ್ಮ ಹೊಟ್ಟೆ ಬಟ್ಟೆಗಾಗಿ, ಇನ್ನೂ ಹಲವರು ತಮ್ಮ ತೆವಲಿಗಾಗಿ ವಿವಿದೆಡೆಯಿಂದ ಬೆಂಗಳೂರಿಗೆ ಬಂದಿದ್ದವರು ಈಗ ಗಂಟು ಮೂಟೆ ಕಟ್ಟಿಕೊಂಡುಈ ಬೆಂಗಳೂರಿನ ಸಹವಾಸ ಸಾಕಪ್ಪ ಸಾಕು ಎಂದು ಲಾರಿ, ಕ್ಯಾಂಟರ್ ಅಥವಾ ಸ್ವಂತ ವಾಹನದಲ್ಲೇ ತೆರಳುವಾಗ ಬೆಂಗಳೂರನ್ನೂ ಮತ್ತು ಬೆಂಗಳೂರಿಗರನ್ನು ಬಾಯಿಗೆ ಬಂದ ಹಾಗೆ ಕ್ಯಾಕರಿಸಿ ಉಗಿದು ಹೋಗುತ್ತಿರುವುದು ಎಷ್ಟು ಸರಿ?

ತಮ್ಮ ಊರಿನಲ್ಲಿ ಕೆಲಸವಿಲ್ಲ ಎಂದೇ ಸ್ವಯಂಪ್ರೇರಿತವಾಗಿ ಇವರೆಲ್ಲಾ ಬೆಂಗಳೂರಿಗೆ ಬಂದಿದ್ದರೇ ಹೊರತು, ಬೆಂಗಳೂರಿಗರು ಇವರನ್ನೇನು ರತ್ನಕಂಬಳಿ ಹಾಸಿ ಕರೆದಿರಲಿಲ್ಲ ಅಲ್ಲವೇ? ಈಗ ಸಂಕಷ್ಟ ಇದೆ ನಿಜ ಮುಂದೆ ಸರಿ ಹೋಗಿಯೇ ತೀರುತ್ತದೆ. ಆದರೆ ಅವರಿಗೆ ಕಷ್ಟ ಇದ್ದಾಗ ಕೈ ಹಿಡಿದು ಕೈತುಂಬಾ ಕೆಲಸ, ಸಂಬಳ, ಹೊಟ್ಟೇ ತುಂಬಾ ಊಟ ಕಣ್ತುಂಬದ ಹೊತೆ ಸುಖಃ ನಿದ್ರೆಯನ್ನು ಕೊಟ್ಟಿತ್ತೋ ಈಗ ಅದೇ ನಗರ ಅವರಿಗೆ ಬೇಡವಾಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಕೂರೋನಾ ಕೇವಲ ಬೆಂಗಳೂರಿಗೆ ಮಾತ್ರಾ ವಕ್ಕರಿಸಿಲ್ಲ. ಪ್ರಪಂಚಾದ್ಯಂತ ಹರಡಿದೆ. ಸದ್ಯಕ್ಕೆ ನಗರ ಮಟ್ಟದಲ್ಲಿ ಮಾತ್ರವೇ ಇರುವ ಈ ಕೂರೋನಾ ಈಗ ಈ ರೀತಿಯಾಗಿ ಗುಳೇ ಹೋಗುತ್ತಿರುವವರ ಮೂಲಕ ಹಳ್ಳಿಗಾಡಿಗೂ ಹರಡಿದಲ್ಲಿ ಅದಕ್ಕೆ ಯಾರು ಹೊಣೆ? ಇವಾಗ ಇಲ್ಲಿ ಬದುಕುವುದು ಕಷ್ಟ ಆಗಿರಬಹುದು ನಿಜ. ಆದರೇ ಸುಮ್ಮನೇ ಕೆಲ ಕಾಲ ಇಲ್ಲಿಯೇ ಇದ್ದು ಪರಿಸ್ಥಿತಿ ಸರಿಹೋದ ಮೇಲೇ ತಮ್ಮ ಊರಿಗಳಿಗೆ ಹೋಗಬಹುತಿದ್ದಲ್ಲವೇ? ಈ ರೀತಿಯಾದ ನಿರ್ಧಾರದ ಹಿಂದೆ, ಆಡಳಿತ ಪಕ್ಷಕ್ಕೆ ಕೆಟ್ಟ ಹೆಸರು ತರಲು ಕೆಲ ರಾಜಕೀಯ ಪಕ್ಷಗಳು ಮಾಡುತ್ತಿರುವ ಹುನ್ನಾರವೂ ಇರಬಹುದು. ಆಸರೆಗಾಗಿ ಹುಟ್ಟೂರಿಗೆ ಹೋಗುವ ಜನ ಪುನಃ ಬೆಂಗಳೂರಿಗೆ ಹಿಂದಿರುಗುವುದಿಲ್ಲ ಎಂಬದನ್ನು ಹೇಗೆ ನಂಬಲು ಸಾಧ್ಯ?

bang1

ಈಗ ಸ್ವಯಂ ಪ್ರೇರಿತವಾಗಿಯೋ ಇಲ್ಲವೇ ಯಾರದ್ದೋ ಕುಮ್ಮಕ್ಕಿನಿಂದಾಗಿಯೋ ಬೆಂಗಳೂರಿನ ಸಹವಾಸ ಸಾಕು, ಯಾರಿಗೆ ಬೇಕು ಈ ಬೆಂಗಳೂರು? ಅನ್ನೋ ದುರಹಂಕಾರದ ಮಾತಾನಾಡಿ ಗುಳೇ ಹೋಗುತ್ತಿರುವ ಜನ ಮತ್ತೆ ಬೆಂಗಳೂರಿಗೆ ಹಿಂದಿರುಗುವ ಮನಸ್ಸು ಮಾಡಿದಲ್ಲಿ ಒಬ್ಬ ಕನ್ನಡಿಗನಾಗಿ, ಕನ್ನಡಿಗರ ಪರೋಪಕಾರ ಮತ್ತು ಅತಿಥಿ ಸತ್ಕಾರ್ಯದ ಔದಾರ್ಯವನ್ನೂ ಈ ಬಾರಿ ಮರೆತು ದಯವಿಟ್ಟು ನೀವು ಮತ್ತೆ ಕರ್ನಾಟಕಕ್ಕೇ ಅದರಲ್ಲೂ ಬೆಂಗಳೂರಿಗೆ ಪುನಃ ಬರಲೇ ಬೇಡಿ ಎಂದೇ ಕೇಳಿಕೊಳ್ಳುತ್ತೇನೆ. ನಿಮಗೆ ಬೇಕಾದಾಗ ಬೆಂಗಳೂರು ಬೇಕು. ಅದೇ ಸಂಕಷ್ಟ ಇದ್ದಾಗ ಬೆಂಗಳೂರು ಬೇಡ ಎನ್ನುವುದಾದರೆ, ನಿಮ್ಮಂತಹ ಅವಕಾಶವಾದಿಗಳ ಅಗತ್ಯ ನಮಗೂ ಇಲ್ಲ. a friend in need is a friend indeed ಎನ್ನುವ ಆಂಗ್ಲ ನಾಣ್ಣುಡಿಯಂತೆ ಕಷ್ಟದ ಸಮಯದಲ್ಲಿ ಸಹಾಯ ಮಾಡುವವನೇ, ನಿಜವಾಗಿಯೂ ಅವಲಂಬಿಸಬಹುದಾದ ವ್ಯಕ್ತಿ ಆದರೆ ಆ ರೀತಿಯಾಗಿ ಅಂತಹ ಆವಲಂಭಿಸುವ ವ್ಯಕ್ತಿಗಳು ನೀವಲ್ಲ ಎಂದು ನೀವೀಗ ಗುಳೇ ಹೋಗುವ ಮೂಲಕ ಸಾಭೀತುಪಡಿಸಿದ್ದೀರಿ. ಹಾಗಾಗಿ ಒಬ್ಬ ಕನ್ನಡಿಗರಾಗಿ ಅವರೆಂದೂ ಬೆಂಗಳೂರಿಗೆ ಮರಳುವುದಿರಲಿ, ಬೆಂಗಳೂರಿನತ್ತ ತಲೆ ಹಾಕಿಯೂ ಮಲಗಬೇಡಿ ಎಂದೇ ಖಡಾ ಖಂಡಿತವಾಗಿ ಎಚ್ಚರಿಸೋಣ. ನಮಗೆ ನಮ್ಮ ಬೆಂಗಳೂರಿನ ಬಗ್ಗೆ ಹೆಮ್ಮೆ ಇದೆ. ನಮ್ಮ ಬೆಂಗಳೂರು ನಮ್ಮ ಹೆಮ್ಮೆ. ಹಾಗಾಗಿ ಬೆಂಗಳೂರಿನಲ್ಲಿಯೇ ಇರೋಣ.

ಏನಂತೀರೀ?